Category Archives: ಎಚ್.ಜಯಪ್ರಕಾಶ್ ಶೆಟ್ಟಿ

ಮೈಮನದ ಹೊಲದಲ್ಲಿ ಸುಳಿದೆಗೆದ ಬನವಾಸಿ….

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಪಂಪಭಾರತದ ಆರಂಭದಲ್ಲಿ ಅರಿಕೇಸರಿಯ ವಂಶಚರಿತ್ರೆಯನ್ನು ಅನುಸರಿಸಿ ದೇಶ ವಿಷಯವೊಂದರ ವರ್ಣನೆಯಿದೆ. ಮೈತುಂಬಿಕೊಂಡ ನೀರಗಾಲುವೆ, ಬೆಳೆದೆರಗಿದ ಕೆಯ್ವೊಲಗಳನ್ನು ಸುತ್ತುವರೆದ ಪೂಗೊಳ, ಮಿಡಿದಡೆ ರಸವೊಸರುವ ಕಬ್ಬಿನಹೊಲ, ಬಿರಿದೊಂದು ಮುಗುಳ pampaಕಂಪಲ್ಲಿಯೇ ದುಂಬಿಗಳ ಮೊಗಕಿಡಿಸುವ ಪರಿಮಳವುಕ್ಕುವ ಹೂವು, ಕೊರತೆಯಿಲ್ಲದ ಮಾವುಮಲ್ಲಿಗೆಗಳಿಂದ ತುಂಬಿ, ‘ಸಂಸಾರಸುಖದಸಾರ ಇನ್ನೇನಿದೆ?’ ಎಂದು ಪ್ರಶ್ನಿಸುವಂತಿರುವ ನಾಡೊಂದರ ಚಿತ್ರವಿದೆ. ಅದನ್ನು ನಾಡ-ಕಾಡ ಬೆಳಸಿನ ಸಮೃದ್ಧ ಕುರುಜಾಂಗಣವೆಂದೂ ಕರೆಯಲಾಗಿದೆ. ರಸದ ತೊರೆಗಳಿಂದಲೂ ಮದಕರಿಗಳೇ ತುಂಬಿದ ವನಗಳಿಂದಲೂ ಕೂಡಿದ ‘ನೆಲದಸಿರಿ’ಯಾಗಿ ಪಂಪ ಮುಂದಿಡುತ್ತಿರುವ ಅರಿಕೇಸರಿಯ ಈ ನಾಡಿಗೆ ಮಹತ್ವವಿದೆ. ಮೊದಲಿಗೆ ಅದು ಆಧುನಿಕ ಅಭಿವೃದ್ಧಿ ಮೀಮಾಂಸೆಗೆ ಬದಲಿಯಾದ ನಿಸರ್ಗಕೇಂದ್ರಿತ ಅಭಿವೃದ್ಧಿ ಮೀಮಾಂಸೆಯನ್ನು ಮುಂದಿಡುತ್ತಿದೆ. ಇಲ್ಲಿ ಸಮೃದ್ಧಿಯ ಮಾನದಂಡಗಳಾಗಿರುವುದು ಅಗಲವಾದ ರಸ್ತೆ, ಎತ್ತರದ ಕಟ್ಟಡಗಳ ಕಾರ್ಪೋರೇಟ್ ನಿರೂಪಣೆಗಳಲ್ಲ. ದೇಗುಲಕಲಶ ಹಾಗೂ ಎತ್ತರದ ಕೋಟೆಕೊತ್ತಲಗಳ ಮೇಲಿನ ಆಕಾಶಕ್ಕೆ ಮುತ್ತಿಕ್ಕುವ ಧರ್ಮ ಮತ್ತು ರಾಜಪ್ರಭುತ್ವದ ಬಾವುಟಗಳ ಸಂಭ್ರಮವೂ ಅಲ್ಲ. ಅದು ಕಾಡು-ನಾಡುಗಳ ಸಹಜ ತುಂಬುವಿಕೆಯ ಸಮೃದ್ಧಿ. ಈ ನೆಲದಸಿರಿ ಪಂಪನ ಅನುಭವಲೋಕದ ಭಾಗವಾಗಿಯೇ ಬಂದಿರಬೇಕು. ಪ್ರಾಯಶಃ ಕೆರೆಕಾಲುವೆ, ಕೆಯ್ವೊಲ, ರಸಗಬ್ಬು, ಮಾವು, ಮಲ್ಲಿಗೆಯಿಂದ ತುಂಬಿ ನಳನಳಿಸುತ್ತಿರುವ ಪಂಪನ ಆ ಕುರುಜಾಂಗಣ, ಆತನೊಳಗಿನ ತೆಂಕನಾಡಿನ ಅವತರಣಿಕೆಯೇ ಇರಬೇಕು. ಅದರದು ಬನವಾಸಿ, ತೆಂಕನಾಡೆಂಬ ನಾಮ ಸಮರ್ಥನೆಯನ್ನು ಪಡೆದಿಲ್ಲ.

ಪಂಪ ಕುರುಜಾಂಗಣದ ಮುಸುಕಲ್ಲಿ ಹೀಗೆ ಕನ್ನಡ ನೆಲವೆಂಬ ದಕ್ಷಿಣ (ತೆಂಕನಾಡ) ವನ್ನು ತಂದಿರಿಸಿ ಹೂಹಾಕಿ ಕೈಮುಗಿದಷ್ಟಕ್ಕೇ ಮುಗಿಸಿದನೇ? ಇಲ್ಲ, ಆತ ತಾನು ಈಸಿದ ‘ವ್ಯಾಸಮುನೀಂದ್ರರುಂಧ್ರ ವಚನಾಮೃತವಾರ್ದಿಯಲ್ಲಿ’ ಬನವಾಸಿಯ ಬಾವುಟವನ್ನೂ ನೆಟ್ಟಗೆ ನೆಟ್ಟಿದ್ದಾನೆ! ಅದಕ್ಕೆಂದೇ ತೀರ್ಥಯಾತ್ರೆಯ ಪಾರಮಾರ್ಥಿಕಕ್ಕೆ ಹೊರಟ ಕಥಾನಾಯಕನನ್ನು ಮೈಸುಖದ ಬನವಾಸಿಯಲ್ಲಿ ಅಲೆದಾಡಿಸಿದ್ದಾನೆ. ತೆಂಕಿನಗಾಳಿ, ಮಲ್ಲಿಗೆಯ ಕಂಪು, ಕೆಂದಲಂಪುಗಳಲ್ಲಿ ತೂಗಿತೊನೆದು ಕೆನೆಗಟ್ಟಿಸಿಕೊಂಡ ತನ್ನ ಬಾಯ್ಮಾತನ್ನು ಆ ವಿಹಾರಿಯ ಬಾಯೊಳಗೆ ತುರುಕಿದ್ದಾನೆ. ‘ತೆಂಕನಾಡ ಮರೆಯಲ್ಕೇಂ ಬನಂ ಬರ್ಕುಮೇ?’ ಎಂದು ತನ್ನನ್ನೇ ತಾನು ಕೇಳಿಕೊಂಡಿದ್ದಾನೆ! ತೀರ್ಥಯಾತ್ರೆಯ ಪುಣ್ಯಸಂಚಯನಕ್ಕೆ ಬಂದವನ ಬಾಯಲ್ಲಿಯೇ ಬನವಾಸಿಯಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಹುಟ್ಟಿದರೂ ಸಾಕೆಂಬ ಲೋಕಾಕರ್ಷಣೆಯ ಮಾತು ಕಟ್ಟಿದ್ದಾನೆ! ಹೀಗೆ ಭಾರತದ ಕಥಾಭಿತ್ತಿಯ ಮೇಲೆ ಬರೆದಿಟ್ಟ ‘ಸಂಸಾರ ಸಾರ ಸರ್ವಸ್ವಫಲ’ದ ಪ್ರತಿರೂಪವಾದ ಪಂಪನ ಈ ಬನವಾಸಿ ಕನ್ನಡದ ಪಾಲಿಗೊಂದು ಅದ್ಭುತವಾದ ನೆನಪಿನಶಾಸನ. ಸಹಸ್ರಮಾನಗಳ ನಂತರವೂ ಈ ಶಾಸನದಲ್ಲಿ ಅರಳಿದ ಕನ್ನಡನೆಲ ನಮ್ಮನ್ನು ಉಲ್ಲ್ಲಾಸಗೊಳಿಸುತ್ತಿದೆ. ನಿಸರ್ಗಕೇಂದ್ರಿತ ಅಭಿವೃದ್ಧಿಯ ನಿರೂಪಣೆಯ ಈ ತೆಂಕನಾಡು ಮೂರ್ತೀಕರಣದ ಗುರುತುಗಳನಳಿದು, ದೇಶ-ರಾಷ್ಟ್ರದ ನಿಲುಗನ್ನಡಿಯನ್ನು ಮೀರಿನಿಲ್ಲುವ ಸಾಂಸ್ಕೃತಿಕ ಮಹತ್ವವನ್ನೂ ಮೆರೆದ ಬೆಲೆಯುಳ್ಳ ದಾಖಲೆಯೇ ಆಗಿದೆ.

‘ನಾವೆಲ್ಲರೂ ಒಂದೇ’ ಎನ್ನುವ ಗುಂಪೊಂದರ ಅಸ್ಮಿತೆ (Identity)ಗೆ ಬೆಸೆದುಕೊಳ್ಳುವ ಮೂಲಭೂತ ಕಲ್ಪನೆಗಳಲ್ಲಿ ನಾಡು ಕೂಡ ಒಂದು. ಮೂಲತಃ ನಾಡು ಹುಟ್ಟುವುದು ನೆನಪಿನಲ್ಲಿ. ಆಯ್ದು ಜೋಡಿಸುವ ನೆನಪುಗಳೇ ಅದರ ಬೆನ್ನೆಲುಬು. ನೆನಪುಗಳ ಮಾದರಿ ಮತ್ತು ಅವುಗಳನ್ನು ಆಯ್ದು ಜೋಡಿಸುವ ಪರಿ ಆ ನಾಡ ಸ್ವರೂಪವನ್ನೂ ನಿರ್ಧರಿಸುತ್ತವೆ. ಎಲ್ಲ ನಾಡುಗಳಿಗಿರುವಂತೆ ಪಂಪನ ತೆಂಕನಾಡಿಗೂ ನೆನಪುಗಳಿವೆ. ಆದರೆ ಈ ನೆನಪುಗಳ ಆಹಾರವಾಗಿ ಮಾನವ ನಿರ್ಮಿತ ಗುರುತುಗಳಿಲ್ಲ. ಮಾನವಮಾತ್ರರ ರಚನೆಗಳಿಲ್ಲ. ಜಡಚರಿತ್ರೆಯ ಹೊರೆಯಿಲ್ಲ. ಯುದ್ಧ ವಿಜಯಗಳ ಹೆಮ್ಮೆ, ಅಪಜಯದ ಕೊರಗುಗಳಿಲ್ಲ. ಎದುರಾಳಿ ಕುರುಹು ಮತ್ತು ಆತಂಕದ ಭಯವಿಲ್ಲ. ಸಹಜ ಅನುಭವಗಳಾಚೆಗೆ ಕಲ್ಪಿತ ಪಠ್ಯಗಳಿಲ್ಲ. ಯಾರ ಅಧಿಕಾರವಿಲ್ಲ. ಆಳಿದವರ ಕುರುಹಿಲ್ಲ. ಧರ್ಮ, ಜಾತಿಯ ಕಾರಣದ ಕಿಲುಬಿಲ್ಲ. ಜೈನಪಂಪನ ಪೂರ್ವಾಶ್ರಮ ಎನ್ನಲಾದ ವೈದಿಕದ ಮಂತ್ರಘೋಷವಿಲ್ಲ. ಬಸದಿ ಚೈತ್ಯಾಲಯಗಳ ಕುರುಹಿಲ್ಲ. ಹೀಗಾಗಿ ಹಿಂದೂ, ಮುಸ್ಲಿಂಯೆಂಬ ಮತರಾಷ್ಟ್ರದ ವಿಂಗಡನೆಗೆ ಒಗ್ಗದ ಅದು ಭಾಷಾರಾಷ್ಟ್ರದ ನಕ್ಷೆಗೂ ಬಗ್ಗದು. ಯಾಕೆಂದರೆ ಅಲ್ಲಿ ಕನ್ನಡಕ್ಕೆ ಕನ್ನಡವಲ್ಲದ ಅನ್ಯದ ನಡುವಿನ ಗೆರೆಯಿಲ್ಲ. ‘ಕನ್ನಡನೆಲ’ ಎಂಬ ಪದವೂ ಇಲ್ಲ. ಹೀಗೆ ಕೇಳಿದ ಅಂತೆ, ಓದಿದ ಕಂತೆಯಲ್ಲದ ಈ ‘ತೆಂಕನಾಡು’ ಕಾರಣಗಳಲ್ಲಿ ಕಾಣಿಸಿಕೊಳ್ಳುವ ಮೆಯ್ಸುಖದ ನಾಡು. ಕವಿರಾಜಮಾರ್ಗಕಾರನ ‘ಭಾವಿಸಿದ ಜನಪದ’ದಂತೆ’, ‘ಎಲ್ಲಾದರೂ ಇದ್ದು ಎಂತಾದರೂ ಇದ್ದು ಕನ್ನಡವಾಗಬಲ್ಲ’ ಕವಿ ಕುವೆಂಪು ಕನ್ನಡದಂತೆ ಈ ಬನವಾಸಿ, ಭೂಪಟವಲ್ಲದ ಭಾವಪಟ. ಗಡಿಗಳನ್ನು ಮೀರಿದ ಈ ನಿರಂಕುಶನಾಡಲ್ಲಿ ದೇಶಭಕ್ತಿ, ರಾಷ್ಟ್ರಭಕ್ತಿಯ ಅಮಲು ಅತಿರೇಕಗಳಿಲ್ಲ. ತ್ಯಾಗಬಲಿದಾನಗಳ ಛಾಯೆಗಳೂ ಇಲ್ಲ.

ರಸಸುಖದ ನೆಲೆಯಾಗಿ ಬನವಾಸಿ

ಅರಸು ಚರಿತ್ರೆಯ ಏರಿಳಿತ, ಧರ್ಮ-ಭಾಷೆಗಳ ಮೈಲಿಗಲ್ಲುಗಳಿರದೆ ಪಂಪಭಾರತದ ಅಲೆಮಾರಿ ಅರ್ಜುನನ ಮನದೊಳಕ್ಕೆ ನೆಲೆನಿಂತ ಪಂಪನ ಆ ಬನವಾಸಿಯ ಮೊದಲನೋಟ ತೆರೆದುಕೊಳ್ಳುವುದೇ ಲೋಕಸುಖದ ಜೊತೆಗೆ,-

ಸೊಗಯಿಸಿ ಬಂದ ಮಾಮರನೆ, ತಳ್ತ ಎಲೆವಳ್ಳಿಯೆ, ಪೂತ ಜಾತಿಸಂ
ಪಗೆಯೆ, ಕುಕಿಲ್ವ ಕೋಗಿಲೆಯೆ, ಪಾಡುವ ತುಂಬಿಯೆ, ನಲ್ಲರ ಒಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ, ನೋಳ್ಪೊಡೆ ಆವ ಬೆ
ಟ್ಟುಗಳೊಳ್ ಆವ ನಂದನವನಂಗಳೊಳಂ ಬನವಾಸಿ ದೇಶದೊಳ್. (ಪಂಭಾ.4-28)

ಪಂಪ ಮಾವುಮಲ್ಲಿಗೆಯ ಕವಿ! ಅವನ ಬನವಾಸಿಯ ಸಮೃದ್ಧಿ ಚಿಗುರೊಡೆದುದೂ ಮಾಮರದ ಮೂಲಕವೇ! ಹೀಗೆ ಚಿಗುರೊಡೆದ Shringaraದೇಶವರ್ಣನೆಯಂತೆ, ಯಾವ ಬೆಟ್ಟಗಳಲ್ಲಾಗಲೀ, ಯಾವ ಉದ್ಯಾನವನದಲ್ಲಾಗಲೀ ನೋಡುವ ಪಕ್ಷದಲ್ಲಿ ಕಾಣುವುದು ಸೊಗಸಾಗಿ ಹೂಹಣ್ಣುಗಳಿಂದ ತುಂಬಿಬಂದ ಮಾಮರಗಳೇ; ದಟ್ಟವಾಗಿ ಸೇರಿಕೊಂಡ ವೀಳ್ಯದ ಎಲೆಬಳ್ಳಿಗಳೇ; ಹೂಬಿಟ್ಟ ಶ್ರೇಷ್ಠಜಾತಿಯ ಸಂಪಗೆಯೇ; ಕೂಗುವ ಕೋಗಿಲೆಗಳೇ; ಝೇಂಕರಿಸುವ ದುಂಬಿಗಳೇ; ಪರಸ್ಪರ ಮುಖಕ್ಕೆ ಮುಖತಾಗಿಸಿ ನಗುಮೊದಲ್ಲಿ ಕೂಡುವ ಪ್ರೇಮಿಗಳೇ! ಇದು ಅರ್ಜುನ ಕಂಡ ಪಂಪನ ಬನವಾಸಿ! ಪ್ರೀತಿ-ಶೃಂಗಾರದ ಉಲ್ಲಾಸದಾಯಕ ಬನವಾಸಿ. ಬೆಟ್ಟ, ಕಾಡುಗಳ ಲೋಕಜೀವಿಗಳಾದ ಕೋಗಿಲೆ, ದುಂಬಿಗಳಂತೆ ಬದುಕಿನ ಬೇಟದಲ್ಲಿ ನಿರತ ಕನ್ನಡಿಗರ ಬನವಾಸಿ! ಕೂಡುವನಲ್ಲರ ಆಡುಂಬೊಲದ ಬನವಾಸಿ!

 ಆದರೆ ವರ್ತಮಾನದ ‘ನೈತಿಕ ಪೋಲಿಸುಗಿರಿ’ (Cultural Policing) ಪ್ರತಿಪಾದಿಸುತ್ತಿರುವ ‘ಭಾರತೀಯ ಸಂಸ್ಕೃತಿ’ಯೊಳಗೆ mangalore_moral1ಪಂಪನ ಬನವಾಸಿಯನ್ನು ಎಲ್ಲಿಡಬೇಕೋ ಹೊಳೆಯುತ್ತಿಲ್ಲ. ಪ್ರೇಮಿಗಳ ದಿನಾಚರಣೆ, ಪ್ರೇಮಿಗಳ ಭೇಟಿಯೇ ಮೊದಲಾದುವುಗಳನ್ನಿಟ್ಟು ಸಂಸ್ಕೃತಿಯ ದೇಸೀ-ಪರದೇಶೀ ಆವೃತ್ತಿಗಳನ್ನು ಕಟ್ಟುತ್ತಿರುವಲ್ಲಿ, ಪಂಪನ ‘ನೆನಪಿನಶಾಸನ’ವನ್ನು ಎಲ್ಲಿ ಹೂತಿಡಬೇಕೋ ತಿಳಿಯುತ್ತಿಲ್ಲ. ಯಾಕೆಂದರೆ ನಮ್ಮದೇ ಪಂಪ ಸಾವಿರವರ್ಷದ ಹಿಂದೆ ಬನವಾಸಿಯ ಯಾವ ಬೆಟ್ಟ, ಉಪವನವನದಲ್ಲೂ ನಲ್ಲರ ಬೇಟ(ಪ್ರಣಯ)ವನ್ನೇ ಕಂಡೆ ಎಂದು ಪ್ರೇಮಶಾಸನ ನೆಟ್ಟ. ಅಷ್ಟೇ ಅಲ್ಲ, ತನ್ನ ಧಾರ್ಮಿಕಕಾವ್ಯ ಆದಿಪುರಾಣದಲ್ಲೂ ಕೌಮುದಿಮಹೋತ್ಸವದ ಬೆಳದಿಂಗಳ ಕೂಟ ಬೆಳಗಿದ. ಆದಿಪುರಾಣದ ಹನ್ನೆರಡನೇ ಆಶ್ವಾಸದಲ್ಲಿ, ಭರತನ ದಿಗ್ವಿಜಯದ ನಡುವೆ ಶರತ್ಕಾಲದ ಬೆಳದಿಂಗಳಲ್ಲಿ ಆಚರಿಸಿದ ಆ ‘ಕೌಮುದೀಮಹೋತ್ಸವ’ದ ವರ್ಣನೆ ಬನವಾಸಿಯನ್ನೂ ಮೀರುತ್ತದೆ. ‘ಕೌಮುದಿ ಮಹೋತ್ಸವ’ ಎಂದರೆ ಕಾಮೋತ್ಸವವೇ. ಅದು ಶರತ್ಕಾಲದ ಬೆಳದಿಂಗಳ ರಾತ್ರಿಯೊಂದರಲ್ಲಿ ಬೇಟಕಾರರು(ಪ್ರಣಯಿಗಳು) ಸಾಮೂಹಿಕವಾಗಿ ಹೇಗೆ ಬೇಕೋ ಹಾಗೆ ಕುಡಿದು, ಕುಪ್ಪಳಿಸಿ, ಮುತ್ತಿಕ್ಕಿ ಕುಣಿದ ‘ನರ್ತಕೀಲೀಲೆ’! ಬನವಾಸಿಯ ಬೆಟ್ಟ ಉಪವನಗಳಂತೂ ಪ್ರೀತಿ, ಉತ್ಸಾಹವೇ ಉಕ್ಕಿಹರಿವ ಮೆಯ್ಸುಖದ ನೆಲೆ. ಒಂದು ‘ವಿಕ್ರಮಾರ್ಜುನ ವಿಜಯ’ ಎಂಬ ಭಾರತದ ಕಥೆಯಲ್ಲಿದೆ, ಇನ್ನೊಂದು ಭರತನಕತೆಯಾದ ಆದಿಪುರಾಣದಲ್ಲಿದೆ. ಹೀಗಾಗಿ ಸಂಸ್ಕೃತಿಯ ಕಲ್ಪಿತ ಸಭ್ಯತೆಯನ್ನು ಮಾತನಾಡುವ ಮುನ್ನ ನಮಗೆ ನಮ್ಮದೇ ಕವಿ ಚಿತ್ರಿಸಿದ, ನಮ್ಮದೇ ಆಗಿದ್ದ ನಾಡು-ನಲಿವುಗಳ ಅರಿವಿರುವುದೊಳಿತು. ಯಾವುದು ಹೊರಗಿಂದ ಬಂತು, ಯಾವುದು ನಮ್ಮಲ್ಲಿಯೇ ಇತ್ತೆಂಬ ಪ್ರಾಮಾಣಿಕ ಆತ್ಮಾವಲೋಕನವಿರುವುದೊಳಿತು.

ಅಂಕುಸವಿಟ್ಟರೂ ನೆನೆವ ಮರಿದುಂಬಿಯ ತವರು

ಹೀಗೆ ರಸಸುಖದ ನೆಲೆಯಾಗಿ ಬನವಾಸಿಯನ್ನು ಚಿತ್ರಿಸುವ ನಡುವೆಯೇ, ಪಂಪ ಸಾರ್ಥಕ ಮನುಷ್ಯರ ಪ್ರಸ್ತಾಪವನ್ನೂ ಮಾಡುತ್ತಾನೆ. ಆತನಿಗೆ ತ್ಯಾಗ-ಭೋಗ-ವಿದ್ಯೆ-ಗಾಯನಗೋಷ್ಠಿ ಹಾಗೂ ಅಲಂಪಿನ ಇಂಪುಗಳಿಗೆ ಆಗರವೆನಿಸಿದ ರಸಿಕರಷ್ಟೇ ಮನುಷ್ಯರು. ಮನುಷ್ಯರಾಗಿ ಹುಟ್ಟುವುದಾದರೆ ಹಾಗೆ ಹುಟ್ಟಬೇಕು. ಹಾಗೆ ಹುಟ್ಟದೆ ಏನೋ ಆಗಿ ಏನು ಪ್ರಯೋಜನ? ಇದು ಪಂಪನ ಕೊರಗು. ಆದರೆ ಆತ ಈ ಕೊರಗಿಗೇ ದಿಕ್ಕೆಟ್ಟು ನಿಂತಿಲ್ಲ. ಸಾರ್ಥಕ ಪರ್ಯಾಯವನ್ನು ಆಯ್ಕೆಮಾಡಿಕೊಳ್ಳುತ್ತಾನೆ. ರಸಿಕರಾದ ಮನುಷ್ಯರಾಗಿ ಹುಟ್ಟಲಾಗದೆ ಹೋದರೆ ಚಿಂತೆಯಿಲ್ಲ, ‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ’ ಬನವಾಸಿಯ ಉಪವನಗಳಲ್ಲಿ ಹುಟ್ಟಿ ವಿಹರಿಸಿದರೂ ಸಾಕು. ಪಂಪನ ನಿಶ್ಚಯದ ಮಾತಿದು. ಈ ಸಾರ್ಥಕಬದುಕಿನ ಕನಸು ಹುಡುಕುವುದೂ ರಸಿಕತೆಯ ಮಡುವನ್ನೇ. ಮಾವು-ಕೋಗಿಲೆ, ಮಲ್ಲಿಗೆ-ಮರಿದುಂಬಿಯ ಪ್ರೇಮರಾಗದ ಜೋಡಿತನವನ್ನೆ. ಈ ಕೂಡುರೂಪಕಗಳಲ್ಲೇ ಪಂಪ ಬನವಾಸಿಯನ್ನು ಹಂಬಲಿಸುತ್ತಿರುವ ಕಾರಣವಿದೆ. ಬದುಕಿನ ‘ಸಾರ’ ಯಾವುದು ಎಂಬ ಸೂಚನೆ ಇದೆ. ಹೀಗೆ ಪ್ರೀತಿಯ ಅಂಗಣವಾಗಿ, ಆತನೊಳಗೆ ಗಟ್ಟಿಯಾದ ಅನುಭವವಾಗಿ ಕೂತ ಬನವಾಸಿ ವಾಸವಿರುವಲ್ಲೇ ಒದಗುವ ಯಾವುದಾದರೊಂದು ಲಲಿತಸುಖದ ನೆವದಲ್ಲೇ ನೆನಪಾಗಿ ಎಚ್ಚರಗೊಳ್ಳುವಂಥದ್ದೂ ಆಗಿದೆ. ಹಾಗಾಗಿ ಎಲ್ಲೋ ಇದ್ದಾಗ ಬೀಸುವ ತೆಂಕಣದಗಾಳಿಯ ಸುಖಾನುಭವವೇ ಮುಂತಾಗಿ ಬನವಾಸಿಯನ್ನು ತೆರೆಯುವ ಕೀಲಿಕೈಗಳೂ ಹಲವು,-

ತೆಂಕಣ ಗಾಳಿ ಸೋಂಕಿದೊಡಂ, ಒಳ್ನುಡಿ ಕೇಳ್ದೊಡಂ, ಇಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ, ಬಿರಿದ ಮಲ್ಲಿಗೆ ಕಂಡೊಡಂ, ಆದ ಕೆಂದಲಂ
ಪಂ ಗೆಡೆಗೊಂಡೊಡಂ, ಮಧುಮಹೋತ್ಸವಂ ಆದೊಡಂ, ಏನನೆಂಬೆನ್, ಆರ್
ಅಂಕುಸ ಇಟ್ಟೊಡಂ ನೆನೆವುದು ಎನ್ನ ಮನಂ ವನವಾಸಿ ದೇಶಮಂ, (ಪಂ.ಭಾ 4-30)

(ಎಲ್ಲೇ ಇರಲಿ)ತೆಂಕಣದ ಗಾಳಿ ಸೋಂಕಿದರೂ, ಒಳ್ಳೆಯ ಮಾತು(ನುಡಿ) ಕೇಳಿದರೂ, ಇಂಪುಳ್ಳ ಹಾಡುಗಳು ಕಿವಿಗೆ ಹೊಕ್ಕರೂ(ಕೇಳಿಸಿದರೂ), ಬಿರಿದ ಮಲ್ಲಿಗೆ ಕಂಡರೂ, ಸ್ತ್ರೀಸಂಗದ ಸುಖದೊಂದು ನಿದ್ರೆಯನ್ನು ಸವಿದರೂ, ವಸಂತಕಾಲದ ಉತ್ಸವ ನಡೆದರೂ, ಏನೆನ್ನಲಿ? ಯಾರು ಅಂಕುಶ ಇಟ್ಟು ತಿವಿದು ತಡೆದರೂ ನಿಲ್ಲದೆ ನನ್ನ ಮನಸ್ಸು ವನವಾಸಿ ದೇಶವನ್ನು ನೆನೆದೇ ತೀರುತ್ತದೆ. – ಡಿ.ಎಲ್ ನರಸಿಂಹಾಚಾರ್ ಅವರಂತೂ ಇದನ್ನು ಪಂಪನ ದೇಶಪ್ರೇಮದ ಭಾವಗೀತೆ ಎಂದೇ ಕರೆದಿದ್ದಾರೆ. ಈ ಗಾಳಿ, ಒಳ್ನುಡಿ, ಬಿರಿದಮಲ್ಲಿಗೆ, ಮಧುಮಹೋತ್ಸವಗಳು ಕ್ರಮವಾಗಿ ಚರ್ಮ, ಕಿವಿ, ಮೂಗು ಮತ್ತು ಕಣ್ಣುಗಳೆಂಬ ಇಂದ್ರಿಯ ಸಂಬಂಧಿಗಳು. ಕೆಂದಲಂಪು ಎಂಬುದಾದರೋ ಪಂಚೇಂದ್ರಿಯ ಸುಖದ ಸಮ್ಮಿಲಿತ ಸಂಗತಿ. ಎಲ್ಲವೂ ಇಂದ್ರಿಯಗಳ ಮೂಲಕ ದತ್ತವಾಗುವ ಲೋಕಸುಖಗಳೇ. ಭಾವಸತ್ಯಗಳೇ ತುಂಬಿದ ಈ ದಿಟ ಭಾವಗೀತೆಯಲ್ಲಿ ನಾಡು ನಾದವಾಗಿ, ನೋಟವಾಗಿ, ಪರಿಮಳವಾಗಿ, ಸಂತೋಷದ ಸುರತಸುಖವಾಗುತ್ತದೆ. ಅನುಭವದ ಈ ಪರಿ, ಚರಿತ್ರೆಯ ಗಾಯ ನೆಕ್ಕುತ್ತಾ ವರ್ತಮಾನದ ದ್ವೇಷ ಕೂಡಿಡುತ್ತಾ ಹೋಗುವ ಉಗ್ರರಾಷ್ಟ್ರೀಯತೆಯ ಹತ್ತಿರವೂ ಸುಳಿಯದು. ಇದು ಏರಿದ ಮಲೆ ಸಹ್ಯಾದ್ರಿ, ಕುಡಿದ ನೀರ್ ಕಾವೇರಿಯಾಗಿಸಿ, ಇರುವುದನ್ನೇ ನಾಡಾಗಿ ಸಂಭ್ರಮಿಸಬಲ್ಲ ಸಮೃದ್ಧಿಯ ದೇಶಗೀತೆ.

ಇಂತಹ ಭಾವಗೀತೆಯೊಂದನ್ನು ಕಟ್ಟಿರುವುದಕ್ಕೂ ಆತನಲ್ಲಿ ಸಮರ್ಥನೆ ಇದೆ. ಯಾಕೆಂದರೆ ಬನವಾಸಿಯಾದರೋ, ‘ಅಮೃತವನ್ನೇ ಹಿಯಾಳಿಸುವಂತಿರುವ ರತಿಕ್ರೀಡೆಯ ಇಂಪಿಂದಲೂ, ಬೆಂಬಿಡಿದು ಬರುವ ಸಂಗೀತದಿಂದಲೂ, ವಿದ್ವಾಂಸರ ಮೇಳದಿಂದಲೂ(ಬನವಾಸಿಯು ಬಹಳ ದೊಡ್ಡ ವಿದ್ಯಾಕೇಂದ್ರವಾಗಿತ್ತು), ಚತುರರ ಒಳ್ಳೆಯ ಮಾತುಗಳಿಂದಲೂ, ಶೀತದಿಂದ ತಣ್ಣಗಿರುವ ಹೂಬಳ್ಳಿಗಳ ಜೊಂಪ(ಚಪ್ಪರ)ದಿಂದಲೂ ಕೂಡಿ ಬಯಸಿದ್ದನ್ನು ಕೊಡಬಲ್ಲ ಮೆಯ್ಸುಖದ ನೆಲೆಯೆನಿಸಿತ್ತು ಮನಸೂರೆಗೊಂಡ ತೆಂಕನಾಡ ಮರೆಯಲ್ಕೇಂ ಮನಂ ಬರ್ಕುಮೇ? ಎಂಬ ಪ್ರಶ್ನೆಯಾಗಿತ್ತು. ಹೀಗೆ ಪಂಪನ ತೆಂಕನಾಡು ಒಂದು ಕಡೆಯಿಂದ ಭಾವಿತವಾದ ನಾಡಿನ ರೂಪವಾಗುವ ಜೊತೆಗೆ ಪ್ರೇಮಸುಖದ ನಾಡೆನಿಸಿದೆ. ಅದು ಫಲತುಂಬಿಕೊಂಡ ಮಾವು, ಹೂಬಿಟ್ಟ ಜಾತಿ ಸಂಪಿಗೆ, ಕುಕಿಲ್ವ ಕೋಗಿಲೆ, ಬಿರಿದ ಮಲ್ಲಿಗೆ, ಪಾಡುವ ದುಂಬಿ, ಒಳ್ಮಾತು, ನಗುಮೊಗದಲ್ಲಿ ಮುಖಕ್ಕೆ ಮುಖವಂಟಿಸಿ ಕೂಡುವ ನಲ್ಲರ ಬೇಟ(ಪ್ರಣಯ)ಗಳಿಂದಾಗಿ ಮೆಯ್ಸುಖದ ಗಣಿಯೆನಿಸಿದೆ. ಪಂಪನಾದರೋ ‘ಸಾರಂ ಅನಂಗ ಜಂಗಮ ಲತಾ ಲಲಿತಾಂಗಿಯರಿಂದಂ ಅಲ್ತೆ ಸಂಸಾರಂ’ ಎಂದವನು. ಆತನ ಈ ಹೇಳಿಕೆಗೆ ಪೂರಕವಾಗಿ ಬನವಾಸಿಯೂ ಸಂಸಾರಸುಖದ ನೆಲೆಮನೆಯಂತೆಯೇ ಇದೆ. ಅದು ಆತನ ಅಭಿಮಾನವನ್ನು ಇಮ್ಮಡಿಸಿದೆ. ಈ ಅಭಿಮಾನ ಸಂಸ್ಕೃತಿಯ ಕುರಿತಾದ ಮಡಿವಂತಿಕೆಯ ನಿರ್ವಚನಗಳನ್ನು ಗೇಲಿ ಮಾಡುವಂತಿದೆ. ಹಾಗೆಂದು ಅದು ಅನೈತಿಕವಾದುದಲ್ಲ. ಹಾಗಾಗಿ ಪಂಪನು ಎಲ್ಲಿಯೇ ಹುಟ್ಟಿ ಬೆಳೆದಿರಲಿ, ಬನವಾಸಿಯ ಮಲೆನಾಡಿನಲ್ಲಿ ಅವನ ಜೀವಮಾನದ ಸಾರವತ್ತಾದ ಭಾಗ ಕಳೆದಿರಬೇಕು. ಅಲ್ಲಿಯ ಸೊಗಸು ಅವನ ಮನಸ್ಸನ್ನು ತಿದ್ದಿ ಕವಿತಾಶಕ್ತಿಯನ್ನು ಪುಟಗೊಳಿಸಿರಬೇಕು (ಪಂಪ,ಪು.5) ಎಂಬ ತೀನಂಶ್ರೀ ಅವರ ಮಾತು ಸರಿಯಾಗಿಯೇ ಇದೆ ಎನ್ನಬೇಕು.

ಹೀಗೆ ಕುರುಹಿನ ಹಂಗಿಲ್ಲದ ಅನುಭವಗಳಲ್ಲಿ ಅರಳಿದ ಈ ನಾಡಿಗೆ ಅಪಹರಣದ ಭಯವಿಲ್ಲ,bharath-maata ವಿದ್ರೋಹಿ ಸಂಚುಕೋರರ ಆತಂಕವಿಲ್ಲ. ಇಲ್ಲಿ ಭಜನೆಯ ತಂಡವಿಲ್ಲ. ದೊಣ್ಣೆಹಿಡಿದು ದೇಶಕಾಯುವ ವರಸೆಕಾರರೂ ಇಲ್ಲ. ‘ಯಾರೂ ಮುಖ್ಯರಲ್ಲ ಯಾವುದೂ ಅಮುಖ್ಯವೂ ಅಲ್ಲದ’ ಈ ಪ್ರಭುತ್ವಶೂನ್ಯತೆಯ ನಾಡಿಗೆ ‘ರಾಷ್ಟ್ರೀಯತೆ’ಯ ನಿಲುವಂಗಿಯೂ ಹೊಂದದು. ಏಕೆಂದರೆ ‘ರಾಷ್ಟ್ರೀಯತೆ’ಗೆ ದೇಶದ್ರೋಹಿಗಳ ಸರಕಿಲ್ಲದೆ ದೇಶಪ್ರೇಮದ ಮಾತು ತಿಳಿಯದು. ಗಂಡಾಂತರದ ಕೂಗುಹಾಕಿ ಕಟ್ಟಾಳುಗಳನ್ನು ಕಲೆಹಾಕುವ ಅದಕ್ಕೆ ಅಂಕುಶವಿಟ್ಟರೂ ತಡೆಯದೆ ನೆನೆವ ಮನದಾಳದ ಅರಿವಿರದು. ಅದಕ್ಕೆ ವರ್ತಮಾನದ ಉದ್ರೇಕಕ್ಕಾಗಿ ಗತಚರಿತ್ರೆಯ ದುಃಸ್ವಪ್ನಗಳ ಮಿಠಾಯಿ ಹಂಚುವುದು ಗೊತ್ತು. ಈ ದುಃಸ್ವಪ್ನಗಳ ಮಿಠಾಯಿಯ ಮೇಲೆ ಗತಕಾಲದ ಆತಂಕದ ಅಪರಾಧಿಗಳ ವಿಳಾಸ ಬರೆದಿಡುವದು ಗೊತ್ತು. ಉನ್ಮತ್ತ ಭಾವುಕತೆಯ ಅಮಲಲ್ಲಿ ಪ್ರೀತಿಸಬೇಕಾದ ‘ತನ್ನವರು’ ಮತ್ತು ದ್ವೇಷಿಸಬೇಕಾದ ‘ಪರರರನ್ನು’ ಗೆರೆಕೊರೆದು ವಿಂಗಡಿಸಿ ಗೊತ್ತು. ಜರ್ಮನಿಯ ಹಿಟ್ಲರ್ ನ ‘ನಾಜಿ’ಗಳು, ಇಟೆಲಿಯ ಮುಸೋಲಿನಿಯ ‘ಫ್ಯಾಸಿ’ಗಳು ಹಂಚಿದ್ದು ಈ ಮಿಠಾಯಿಯನ್ನೇ. ಆದರೆ ಈ ಮರೆಯಲಾಗದ ತೆಂಕನಾಡಲ್ಲಿ ಆ ಬಗೆಯ ದುಃಸ್ವಪ್ನಗಳಿಲ್ಲ. ‘ನಾನು’ ಮತ್ತು ‘ಅವರು’ ಎಂಬ ಎದುರಾಳಿಗಳಿಲ್ಲ. ಇಲ್ಲಿ ಗತವೂ ಗತವಲ್ಲ. ದ್ವೇಷದ ತರಬೇತಿಯೂ ಇಲ್ಲ. ಇದು ಮೈಮನದ ಹೊಲದಲ್ಲಿ ಸುಳಿದೆಗೆದು ಅರಳುತ್ತಲೇ ಇರುವ ಸಾವಿಲ್ಲದ ಬನವಾಸಿ.

ಘರ್ ವಾಪಸಿ, ಮತಾಂತರ ಮತ್ತು ಪಂಪ

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ನಮ್ಮ ಪಾರ್ಲಿಮೆಂಟ್ ಹೌಸ್ ನಲ್ಲಿ ಈಗ ಮತಾಂತರದ ಬಹುದೊಡ್ಡ ಗದ್ದಲ ನಡೆಯುತ್ತಿದೆ. ಇದು ಹೊಸತೇನೂ ಅಲ್ಲ. ಆದರೆ ಮತಾಂತರವನ್ನು ‘ಸತ್ಯದ ಮೇಲಿನ ಹಲ್ಲೆ’ ಎನ್ನುತ್ತಿದ್ದವರು ಅದನ್ನೇ ಮಾಡಿ ಅದಕ್ಕೆ ಹೊಸಹೆಸರು ಕೊಟ್ಟಿದ್ದಾರೆ. ಮತಾಂತರ ನಿಲ್ಲಿಸಿ ಅನ್ನುತ್ತಲೇ ಹೊರಗಿನವರನ್ನು ಒಳಕರೆಯುವ ghar vapsi‘ಘರ್ ವಾಪಸಿ’ಯ ಬಾಗಿಲು ತೆಗೆಯಿರಿ ಅನ್ನುತ್ತಿದ್ದಾರೆ. ವಾಪಾಸಾತಿ ಅಂದರೆ ಹೊರಹೋದವರು ಮನೆಗೆ ಮರಳುವುದು. ಕೇಳುವುದಕ್ಕೆ ಹಿತವೇ. ಆದರೆ ಜಾತಿ ಇಲ್ಲದ ಧರ್ಮದಿಂದ ಜಾತಿ ಇರುವ ಸಮಾಜಕ್ಕೆ ವಾಪಾಸಾಗುವುದೆಂದರೆ ಮನೆಯಿಂದ ಮನೆಗಳಿಗೆ ಬಂದಂತೆ. ಈ ಮನೆಗಳೋ ಒಂದರಿಂದ ಇನ್ನೊಂದಕ್ಕೆ ಗಾಳಿಬೆಳಕನ್ನೇ ಬಿಟ್ಟುಕೊಡದವುಗಳು! ಅಂಬೇಡ್ಕರ್ ಎಂದಂತೆ ಮೆಟ್ಟಿಲುಗಳೇ ಇಲ್ಲದ ಮಹಡಿಯ ಗೂಡುಗಳು. ಇಲ್ಲಿ ವಾಪಾಸಾಗುವುದು ಎಂದರೆ ಎಲ್ಲಿಗೆ? ಬರುವವರಿಗೆಲ್ಲಾ ಇರುವ ಅವರವರ ಮನೆ ಯಾವುದು? ವಾಪಾಸಾಗುವ ಘರ್ ಗಲ್ಲಿಯಲ್ಲಿದೆಯೋ? ಗಟಾರದಲ್ಲಿದೆಯೋ? ಹಳ್ಳಿಯಲ್ಲಿದೆಯೋ? ಹಾರೋಗೇರಿಯಲ್ಲಿದೆಯೋ? ಖಚಿತವಿಲ್ಲ. ಸೋಜಿಗ ಎಂದರೆ ಈ ವಾಪಾಸಾದವರೆಂದು ಹೇಳಲಾದವರೂ ಧರ್ಮದ ಹುಡುಕಾಟಕ್ಕೆ ಬಿದ್ದವರಲ್ಲ. ಬದುಕೇ ಹುಡುಕಾಟವಾದ ಬಡತನದ ಹಾದಿಯವರು. ಜುಟ್ಟಿಗಿಂತ ಹೊಟ್ಟೆ, ಧರ್ಮಕ್ಕಿಂತ ದರ್ದು ದೊಡ್ಡದಾಗಿ ಬಿಸಿಲುಬೆಂಕಿಗೆ ಮೈಸುಟ್ಟುಕೊಂಡವರು. ಮರುಕರೆದುಕೊಂಡವರು ಇವರನ್ನು ಎಲ್ಲಿ ತಂದು ನಿಲ್ಲಿಸಿದರೋ ಕಾಣೆ? ಆದರೆ ಕರೆತಂದ ಕ್ರಿಯಾವಿಧಿಗಳೆಲ್ಲವೂ ಸಮುದಾಯವೊಂದರ ಆಚರಣಾವಿಧಿಯ ರೂಪದಲ್ಲೇ ನಡೆದಿವೆ. ಹಾಗಿದ್ದರೆ ಆ ಚಿಂದಿ ಆಯುತ್ತಾ ಚಿಂದಿಯಾದವರನ್ನು ಈ ವಿಧಿಕ್ರಿಯೆಯ ವಾರಸುದಾರರು ತಮ್ಮೊಳಗೆ ತಂದುಕೊಂಡರೇ? ಕನಕನನ್ನೇ ಹೊರಗಿಕ್ಕಿದವರು ಈ ತಿರುಕರನ್ನು ಒಳಬಿಟ್ಟುಕೊಂಡರೇ? ಈ ದೇಶದ ಚರಿತ್ರೆ ಓದಿದ ಯಾರೊಬ್ಬರಿಗೂ ಈ ಭರವಸೆ ಇರದು. ಆದರೆ ಜಾತಿ ವರ್ತುಲದಿಂದ ದಾಟುವ ಮತಾಂತರವನ್ನು ನಿಷೇಧಿಸುವ ಕೂಗಿನ ಒಟ್ಟೊಟ್ಟಿಗೇ ಜಾತಿಕೂಪಕ್ಕೆ ಸೆಳೆಯುವ ಹಿಂಚಲನೆಯ ವಾಪಾಸಾತಿಯ ಸದ್ದೂ ಮೊಳಗುತ್ತಲೇ ಬಂದಿರುವುದಂತೂ ಸುಳ್ಳಲ್ಲ.

ಕನ್ನಡದ ಸಾಂಸ್ಕೃತಿಕ ಜಗತ್ತು ಮತಾಂತರ ಮತ್ತು ಘರ್ ವಾಪಸಿಯ ಈ ಎರಡೂ ಮಾದರಿಗಳನ್ನು ಒಡನಾಡಿದೆ. ಮಧ್ಯಯುಗದ ಶರಣರಚಳವಳಿ ಮೂರ್ತವಾದುದೇ ಮತಾಂತರದಲ್ಲಿ. ಕುಲನಾಮಕಳೆಯದೆ ಕುಲದ ಅವಹೇಳನವಳಿದು ದೇಹವನ್ನು ದೇಗುಲವಾಗಿಸಿದ ಈ ಚಳವಳಿ, ತಳಮೂಲದ ಪತಿತರಿಗೆ ಬಿಡುಗಡೆಯ ಭಾಗ್ಯವಾಗಿಯೇ ಒದಗಿಬಂದು, ಸಾಮೂಹಿಕ ಸಂಚಲನೆಗೆ ಕಾರಣವಾಯಿತು ಎಂಬ ವಾದವಿದೆ. ಇನ್ನು ಕವಿಗಳಾದ ಹರಿಹರ, ರಾಘವಾಂಕ, ರತ್ನಾಕರರ್ಣಿ, ಚಾಮರಸರೇ ಮುಂತಾದವರು ಈ ಬಗೆಯ ನಿರ್ಗಮನ-ಆಗಮನದ ಸರಣಿಯನ್ನೇ ತುಳಿದು ಧರ್ಮ, ಮತಗಳ ಒಳಹೊರಗನ್ನು ಹುಡುಕಾಡಿದರು ಎನ್ನಲಾಗಿದೆ. ಗುರು-ಶಿಷ್ಯಪರಂಪರೆಯ ನಡೆಕಾರರು, ಶಮಣಧಾರೆಯ ಸಿದ್ಧಪಂಥಗಳು ತಮ್ಮ ಆಧ್ಯಾತ್ಮಿಕ ಹುಡುಕಾಟಕ್ಕೆ ಬೇಕಾದ ಬಿಡುಗಡೆಗಾಗಿ ಇಂದಿಗೂ ಜಾತಿ, ಹುಟ್ಟುಗಳ ಕ್ಲೇಷವನ್ನೇ ಸದ್ದಿಲ್ಲದೆ ದಾಟುತ್ತಿವೆ. ಹೀಗೆ ತತ್ವದ ಹುಡುಕಾಟ, ಭರವಸೆಯ ಹುಡುಕಾಟಗಳೆರಡೂ ದಾಟುತ್ತಿರುವುದು ಜಾತಿಬೇಲಿಯನ್ನೇ. ಬದುಕಿರುವ ತನಕ ಬಿಡುಗಡೆಯಿಲ್ಲದ ಜಾತಿಯನ್ನು ಕೊಡವಿ ನಿರಾಳವಾಗುವುದೇ ಈ ದಾಟುವಿಕೆಗಳ ಹೂರಣವೂ ಆಗಿದೆ. ಕನ್ನಡಸಾಹಿತ್ಯದ ಲಿಖಿತಪರಂಪರೆಯ ಆರಂಭ ಬಿಂದುವಿನಲ್ಲೂ ಇಂಥದ್ದೇ ಮತಾಂತರವೊಂದಿದೆ. ಪಂಪನಿಗೆ ಸಂಬಂಧಿಸಿದ ಈ ಕಥೆಯಲ್ಲಿ ಜಾತಿಶ್ರೇಣಿಯ ಮೇಲ್ತುದಿಯ ಬ್ರಾಹ್ಮಣನಿಗೂ ಜಾತಿಯ ದಾಟುವಿಕೆಯೇ ಬಿಡುಗಡೆಯಾಗಿ ಕಂಡಿದೆ! ಆದರೆ ಕನ್ನಡದ ಸಾಂಸ್ಕೃತಿಕ ಜಗತ್ತು ಕೇವಲ ದಾಟುವುದಕ್ಕಷ್ಟೇ ಸಾಕ್ಷಿಯಾಗಿಲ್ಲ. ಮರುಹೊಂದಾಣಿಕೆಯ ಘರ್ ವಾಪಸಿಯ ಕಸರತ್ತನ್ನೂ ನಡೆಸಿದೆ. ಮನುಷ್ಯರಿಗಷ್ಟೇ ಸೀಮಿತವಾಗದೆ, ಮರುಹೊಂದಾಣಿಕೆಯ ಈ ಕಡಾಯಿಯಲ್ಲಿ ಅದು ದೇವರುಗಳನ್ನೂ ಹಾಕಿ ತಿರುವಿ ರೂಪಾಂತರಿಸಿದೆ. ರಂಗನೋ, ವಿಠ್ಠಲನೋ ಹರಿಯ ಕವಲಾದುದು; ಕಲ್ಕುಡ, ಜುಮಾದಿಗೋ ಹೊಸಹೆಸರು ದಕ್ಕಿದುದು ಈ ವರಸೆಗಳಲ್ಲೇ. ಅಂತೆಯೇ ಪಂಪನ ತಂದೆಯ ಮತಾಂತರವನ್ನು ಕನ್ನಡಜಗತ್ತು ಅಲ್ಲಿಗೇ ಕೈಬಿಟ್ಟಿಲ್ಲ. ಮರಳಿ ಮೂಲಕ್ಕೆ ಎಳೆದುಕಟ್ಟುವ ಯತ್ನವನ್ನೂ ಮಾಡಿದೆ. ಈ ಹಿನ್ನೆಲೆಯಲ್ಲಿ ಮತಾಂತರವನ್ನು ಕುರಿತ ಆದಿಕವಿಯ ನಿಲುವು ಹಾಗೂ ಕನ್ನಡದ ಕೆಲವು ಪ್ರಾತಿನಿಧಿಕ ಓದುಗಳಲ್ಲಿನ ಸೂಕ್ಷ್ಮವಾದ ಮರುಹೊಂದಾಣಿಕೆಯ ಕಸರತ್ತುಗಳನ್ನು ಒಟ್ಟೊಟ್ಟಿಗಿಟ್ಟು, ಮತಾಂತರ ಮತ್ತು ಘರ್ ವಾಪಸಿಯ ಸಾಂಸ್ಕೃತಿಕ ಜಗತ್ತಿನ ಸತ್ಯವೊಂದನ್ನು ವಿವರಿಸಿಕೊಳ್ಳುವ ಉದ್ದೇಶವಿಲ್ಲಿದೆ.

ಪಂಪನ ಕನ್ನಡದ ನಂಟು

ಪಂಪನ ಸ್ವಂತ ಬದುಕಿನ ಕೆಲವು ಮಾಹಿತಿಗಳನ್ನು ಆತನ ಕಾವ್ಯಗಳೇ ಹೇಳಿವೆ. ‘ಆದಿಪುರಾಣ’ದಲ್ಲಿ ಆತನ ರೂಪ, ಸ್ವಭಾವಗಳಿದ್ದರೆ, ‘ವಿಕ್ರಮಾರ್ಜುನ ವಿಜಯ’ದಲ್ಲಿ ವಂಶಾವಳಿ ವಿವರಗಳಿವೆ. ಪಂಪಭಾರತದ ಆರಂಭದಲ್ಲಿ ವೇಮುಲವಾಡದ ಚಾಲುಕ್ಯದೊರೆ ಅರಿಕೇಸರಿಯ ವಂಶಾವಳಿ ಇದೆ. ಕೊನೆಯಲ್ಲಿ ಕವಿಯ ಕುಲಪರಂಪರೆಯ ಉಲ್ಲೇಖವಿದೆ. ಕಾವ್ಯದ ಕೊನೆಗೆ ಸ್ವವಿಚಾರ ಪ್ರಸ್ತಾಪವು ಸಂಪ್ರದಾಯವಲ್ಲವೆಂಬ ಹಿನ್ನೆಲೆಯಲ್ಲಿ ಇದನ್ನು ಪಂಪನೇ ಹೇಳಿದನೆಂದು ನಂಬಲಾಗದು ಎನ್ನುವ ಅಭಿಪ್ರಾಯವೂ ಇದೆ. ಅದಕ್ಕೆ ಆಶ್ರಯದಾತನದನ್ನು ಮೊದಲು ಹೇಳಿ ತನ್ನದನ್ನು ಕೊನೆಯಲ್ಲಿ ಹೇಳುವ ಕ್ರಮವನ್ನು ಪಂಪ ಅನುಸರಿಸಿರಬಹುದೆಂಬ ಸಮಜಾಯಿಷಿಯೂ ಇದೆ. ಭಿನ್ನಾಭಿಪ್ರಾಯಗಳ ನಡುವೆಯೂ ಇದನ್ನು ಪಂಪನೇ ಹೇಳಿದನೆಂದು ಒಪ್ಪಿದರೆ, ಪರಂಪರೆಯಿಂದ ಆತನ ಹಿರಿಯರು ನೆಲೆಸಿದ್ದುದು ವೆಂಗಿಮಂಡಲದ ವೆಂಗಿಪಳುವಲ್ಲಿ. ಈ ವೆಂಗಿಮಂಡಲವು ಕೃಷ್ಣಾ ಗೋದಾವರೀ ನದಿಗಳ ನಡುವೆ ಪೂರ್ವಸಮುದ್ರದ ಕರೆಯ(ಕಿನಾರೆ) ತನಕ ಇದ್ದ ವಿಸ್ತಾರವಾದ ನಾಡು. ಇವೊತ್ತಿನ ಆಂಧ್ರಪ್ರದೇಶದ ಭಾಗ. ಆದರೂ ಕರ್ನಾಟಕದ ಚರಿತ್ರೆಯಲ್ಲಿ ಹೆಸರಾದ ಕನ್ನಡದ ಅನೇಕ ಹೆಮ್ಮೆಯ ಮನೆತನಗಳು ಇಲ್ಲಿ ನೆಲೆಸಿದ್ದವು. ಇದರ ಜೊತೆಗೆ ಪಂಪನ ತಾಯಿ ಬೆಳ್ವೊಲದ ಅಣ್ಣಿಗೇರಿಯ ಜೋಯಿಸಸಿಂಘನ ಮೊಮ್ಮಗಳು ಎಂಬ ಉಲ್ಲೇಖವೂ ಪಂಪನ ತಮ್ಮ ಜಿನವಲ್ಲಭನ ಕುರ್ಕ್ಯಾಲ ಶಾಸನದಲ್ಲಿದೆ. ಹೀಗಾಗಿ ವೆಂಗಿಮಂಡಲದ ವೆಂಗಿಪಳುವಿನಲ್ಲಿಯೇ ಪಂಪ ಹುಟ್ಟಿ ಬೆಳೆದನೇ ಎಂಬುದು ನಿಶ್ಚಯವಿಲ್ಲ. ಆದರೆ ಪಂಪನ ತಂದೆಯ ವಂಶದವರು ಇದ್ದ ಪರಿಸರ ಹಾಗೂ ಪಂಪ ಆಸ್ಥಾನಕವಿಯಾಗಿದ್ದ ನಾಡುಗಳು ಇಂದಿನ ಕನ್ನಡ ಸೀಮೆಗಳಲ್ಲ. ಕನ್ನಡ ಪ್ರದೇಶಕ್ಕೆ ಹೊರತಾದುವುಗಳು. ಇಲ್ಲಿದ್ದೂ ಬರೆದ ಆತನ ಎರಡೂ ಕಾವ್ಯಗಳು ಕನ್ನಡದ ಕಣ್ಣುಗಳಂತೆಯೇ ಇವೆ ಎಂಬುದು ನಿರ್ವಿವಾದ. ಹಾಗಾಗಿ ಕನ್ನಡಕುಟುಂಬಿಯಾದ ಪಂಪ ಬದುಕಿದ ನಾಡು ಕನ್ನಡನೆಲ ಹೌದೋ ಅಲ್ಲವೋ ಎಂಬ ಈ ಮಣ್ಣುಪರೀಕ್ಷೆಯ ಅಗತ್ಯವಂತೂ ಖಂಡಿತಾ ಇಲ್ಲ.

ಪಂಪನ ವಂಶ ಮತ್ತು ಮತಾಂತರ

ಭಾಷಿಕ ನೆಲೆಯಲ್ಲಿ ಕನ್ನಡಕುಟುಂಬಿಯಾಗುವ ಪಂಪ ‘ಮನುಷ್ಯಜಾತಿ ತಾನೊಂದೆವಲಂ’ ಎಂದ ವಿಶ್ವಕುಟುಂಬಿಯೂ ಹೌದು. ಆದರೆ ಪಂಪನನ್ನು ಹೀಗೆ ವಿಶಾಲವಾಗಿ ಓದಿಕೊಳ್ಳುವ ಮುಕ್ತತೆಯೇ ಕನ್ನಡದ ಓದಿನಲ್ಲಿ ತುಂಬಿದೆ ಎನ್ನಲಾಗದು. ಅದು ಮತ, ಜಾತಿಯ ಗುರುತುಹಚ್ಚಿಯೂ ಆತನ ಸತ್ವದ ನೆಲೆಯನ್ನು ವಿವರಿಸಿಕೊಂಡಿದೆ.pampa ಶ್ರದ್ಧೆಯ ನೆಲೆಯಲ್ಲಿ ಪಂಪನನ್ನು ಜೈನನಲ್ಲ ಎನ್ನಲಾಗದು. ಆತನೂ ತನ್ನನ್ನು ಜೈನನೆಂದೇ ಕರೆದುಕೊಂಡಿದ್ದಾನೆ. ಜಿನಸ್ತುತಿಯಿಂದ ಸಿಕ್ಕುವ ಬಿಡುಗಡೆಗೆ ಪ್ರಶಸ್ತಿ, ಸಮ್ಮಾನಗಳು ಸಮನಲ್ಲವೆಂದಿದ್ದಾನೆ. ಕನ್ನಡದಲ್ಲಿ ಮೊದಲ ಜಿನಪುರಾಣವನ್ನು ಬರೆದಿಟ್ಟು ಹೋಗಿದ್ದಾನೆ. ಆದರೆ ‘ವಿಕ್ರಮಾರ್ಜುನ ವಿಜಯ’ದ ಕೊನೆಯ ಕೆಲವು ಪದ್ಯಗಳ ಆಧಾರದಲ್ಲಿ ಪುನಾರಚಿಸಲಾದ ಆತನ ವಂಶಾವಳಿ ಬೇರೆಯದೇ ಕಥೆ ಹೇಳುತ್ತದೆ. ಇಲ್ಲಿರುವ ಹಿರೀಕರ ಮಾಹಿತಿ, ಪಂಪನಿಂದ ಹಿಂದಿನ ಮೂರನೆಯ ತಲೆಮಾರಿನ ಮಾಧವಸೋಮಯಾಜಿ ಎಂಬ ವೈದಿಕನವರೆಗೆ ಹೋಗಿ ನಿಂತಿದೆ. ಕಮ್ಮೆಕುಲದ ಈ ಬ್ರಾಹ್ಮಣ ಹೋಮ, ಹವನಗಳನ್ನು ಮಾಡಿ ‘ಸರ್ವಕೃತುಯಾಜಿ’ ಎನಿಸಿದಾತ. ಈತನಿಂದ ಹರಿದುಬಂದ ವಂಶನಕ್ಷೆಯಂತೆ ಇವನ ಮಗ ಅಭಿಮಾನಚಂದ್ರ. ಅಭಿಮಾನಚಂದ್ರನ ಮಗ ಕೋಮರಯ್ಯ. ಈ ಕೋಮರಯ್ಯನ ಮಗನೇ ಪಂಪನ ತಂದೆ ಭೀಮಪಯ್ಯ (ಅಭಿರಾಮದೇವರಾಯ). ‘ಜಾತಿಯೊಳೆಲ್ಲಂ ಉತ್ತಮದ ಜಾತಿಯ ವಿಪ್ರ'(ಬ್ರಾಹ್ಮಣ)ನಾಗಿದ್ದೂ, ಜಿನೇಂದ್ರ ಧರ್ಮಮೆ ವಲಂ ದೊರೆಧರ್ಮದೊಳೆಂದು ನಂಬಿ ತಜ್ಜಾತಿಯನ್ ಉತ್ತರೋತ್ತರಮೆ ಮಾಡಿದಾತ! ಜೈನಧರ್ಮಕ್ಕೆ ಮತಾಂತರವಾದಾತ. ಹೀಗೆ ಈ ವಂಶಾವಳಿ ಕಥನವು ಸೋಮಯಾಜಿಯ ಕಡುವೈದಿಕ ಕ್ರಿಯಾಚರಣೆ ಹಾಗೂ ಅದರಿಂದ ಬಿಡಿಸಿಕೊಂಡು ಜಿನಧರ್ಮಕ್ಕೆ ‘ಮತಾಂತರವಾದ’ ಗೌರವಾನ್ವಿತ ಭೀಮಪಯ್ಯನ ದಾಟುವಿಕೆ ಎರಡನ್ನೂ ಹೊಂದಿದೆ. ಅದು ಕನ್ನಡದ ಆದಿಕವಿಯನ್ನೇ ಮತಾಂತರದ ಜೊತೆಗೆ ಬೆಸೆದಿದೆ. ಮತಾಂತರವೆಂಬ ದಾಟುವಿಕೆಯನ್ನು ವ್ಯಕ್ತಿಯ ವಿವೇಕವಾಗಿ ನೋಡಿದೆ. ಆ ಕುರಿತು ಯಾವ ಬಗೆಯ ನೋವು, ಹಳಹಳಿಕೆಯಿಲ್ಲದ ಮೆಚ್ಚುಗೆ ತೋರಿದೆ. ಹಿರೀಕನಾದ ಮಾಧವಸೋಮಯಾಜಿ ಹೋಮದ ಹೊಗೆಯಿಂದ ತನ್ನ ಯಶಸ್ಸೆಂಬ ಬಳ್ಳಿಯನ್ನೇ ಕರಿದು ಮಾಡಿಕೊಂಡನಲ್ಲಾ ಎಂದು ಸಂಕಟಪಟ್ಟಿದೆ. ಆ ತಪ್ಪುಮಾಡದೆ, ಮತಾಂತರದ ಮೂಲಕ ತನ್ನ ಜಾತಿಗೆ ಮತ್ತಷ್ಟು ಪರಿಪೂರ್ಣತೆ ತಂದುಕೊಂಡ ತಂದೆಯ ಬಗೆಗೆ ಅಭಿಮಾನಪಟ್ಟಿದೆ. ಹೀಗೆ ಕವಿಯಾಗಿ ಲೌಕಿಕ-ಆಗಮಿಕಗಳನ್ನು ಕೃತಿಯ ಮೂಲಕ ಬೆಳಗಿದ ತನ್ನಂತೆಯೇ, ಮತಾಂತರವನ್ನು ಕೃತಿಗಿಳಿಸುವ ಮೂಲಕ ತಂದೆಯೂ ತನ್ನ ಜಾತಿಯನ್ನೂ ಉತ್ತರೋತ್ತರವಾಗಿ ಬೆಳಗಿಕೊಂಡ ಎಂಬ ಅಭಿಪ್ರಾಯವೇ ಪಂಪನಲ್ಲಿ ಇರುವಂತಿದೆ. ತಂದೆಯ ಬ್ರಾಹ್ಮಣ್ಯ ನಿರಾಕರಣೆ ಅಥವಾ ಬ್ರಾಹ್ಮಣ್ಯದ ಬಿಡುಗಡೆ, ಆತನಿಗೆ ಜಾತಿವ್ಯವಸ್ಥೆಯಿಂದ ಜಾತಿಯಿಲ್ಲದ ಧರ್ಮವ್ಯವಸ್ಥೆಗೆ ದಾಟಿದ ಮುಂಚಲನೆಯಾಗಿ ಕಂಡಿದೆ. ‘ಸತ್ಯದ ಮೇಲಿನ ಹಲ್ಲೆ’ ಅಥವಾ ವಿದ್ರೋಹಿ ಕೇಡಾಗಿ ಅಲ್ಲ. ಮತಾಂತರವನ್ನು ಕುರಿತ ಪಂಪನ ಈ ಅಭಿಮಾನದ ಜೊತೆಗೆ ಕನ್ನಡದ ಲಿಖಿತಸಾಹಿತ್ಯವೂ ಚಿಗುರೊಡೆದಿದೆಯಾಗಿ, ಕನ್ನಡಸಾಹಿತ್ಯಚರಿತ್ರೆಯ ಬೀಜವೇ ಉಲ್ಲಂಘನೆಯಲ್ಲಿದೆ, ಮತಾಂತರವೇ ಅದಕ್ಕೆ ಹೊಸಪ್ರತಿಭೆಯ ಹೊಸನೀರು ದಕ್ಕುವಂತೆ ಮಾಡಿದೆ ಎನ್ನಬೇಕು. ಹೀಗೆ ಈ ಕವಿಚರಿತೆ ಒಂದು ಕಡೆಯಿಂದ ಕನ್ನಡಸಾಹಿತ್ಯದ ಮೊದಲ ಬೆಳಸನ್ನೇ ಮತಾಂತರದ ಬೆಳಸಾಗಿ ಘೋಷಿಸುತ್ತದೆ. ಮತ್ತೊಂದೆಡೆಯಿಂದ ವರ್ತಮಾನದ ‘ಮತಾಂತರ ಸಂಕಥನ’ದ ಜಳ್ಳು-ಕಾಳುಗಳನ್ನೂ ಎದುರಿಗಿಡುತ್ತಿದೆ.

ಒತ್ತಾಯದ ಮರುವಲಸೆ

ಮತಾಂತರವಾದವನು ಪಂಪನಲ್ಲ ಪಂಪನ ತಂದೆ ಎನ್ನುವ ಬಗೆಗೆ ಭಿನ್ನಾಭಿಪ್ರಾಯವಿಲ್ಲ. ಆದರೆ ಈ ಮತಾಂತರವನ್ನು ಪಂಪನ ದಾಟುವಿಕೆಯಾಗಿ ಕನ್ನಡದ ಓದು ಸ್ವೀಕರಿಸಿದೆ ಎಂದೇನಲ್ಲ. ಯಾಕೆಂದರೆ ಅಲ್ಲಿ ಮತಾಂತರದ ಸ್ವರೂಪ ಚರ್ಚೆಗಿಂತ ಮತಾಂತರಪೂರ್ವದ ಅವಸ್ಥೆಯೊಂದಿಗೆ ಕವಿ ಉಳಿಸಿಕೊಂಡ ನಂಟಿನ ಪ್ರತಿಪಾದನೆಗೇ ಒತ್ತು ಸಿಕ್ಕಿದೆ. ವೆಂಗಿಮಂಡಲದ ಸೋಮಯಾಜಿಯನ್ನು ಕುರಿತ ಮಾಹಿತಿಗಳಿಗೆ ಅವಧಾರಣೆ ಸಿಕ್ಕಿದೆ. ಜಿನವಲ್ಲಭನ ಬಗೆಗೆ ಅಸಮಾಧಾನವೂ, ಪಂಪನ ಕುರಿತ ಮೆಚ್ಚುಗೆಯೂ ವ್ಯಕ್ತವಾಗಿದೆ. ಜೈನಪಂಪನದಲ್ಲದ ವೈದಿಕಪಂಪನ ಚಹರೆಯನ್ನೇ ಹುಡುಕಿ ಗುಡ್ಡೆಹಾಕುವ ಯತ್ನವಿದೆ. ಅದರ ಭಾಗವಾಗಿಯೇ ಕೆಲವು ಓದುಗಳು ಜೈನನಾಗುವ ಮುನ್ನಿನ ಸಂಸ್ಕಾರಗಳ ಉಳಿಕೆಯಲ್ಲಿಯೇ ಪಂಪನ ಶ್ರೇಷ್ಠತೆ ಇದೆ ಎಂದು ವಾದಿಸುತ್ತವೆ. ಆತನಲ್ಲಿದ್ದ ವೈದಿಕಸತ್ವದಿಂದಲೇ ಇಂತಹ ಕಾವ್ಯಸೃಷ್ಟಿಯ ಸಾಧನೆ ಸಾಧ್ಯವಾಯಿತು ಎನ್ನುತ್ತವೆ. ಹೀಗೆ ಅವು ಪಂಪನನ್ನು ಜೈನನಲ್ಲ ಎನ್ನದೆ, ಆತನ ಕಾವ್ಯವಸ್ತು ಮತ್ತದರ ನಿರ್ವಹಣೆಯಲ್ಲಿ ಮತಾಂತರದಾಚೆಗಿನ ವೈದಿಕದ ನೆರಳನ್ನೇ ಬೇಟೆಯಾಡುತ್ತವೆ. ಇದಕ್ಕೆ ಪೂರಕವಾಗಿ ಮತಾಂತರವನ್ನು ‘ಸಂಕರ’ವೆನ್ನುವ ವಾದವೂ, ಪಂಪನಲ್ಲಿ ವೈದಿಕ-ಜೈನ ಎರಡೂ ಬೆರೆತಿದೆ ಎನ್ನುವ ಮೂಲಕ ವೈದಿಕದ ಕಿಲುಬಿನಿಂದಲೇ ಆತ ಕವಿಯಾದ ಎನ್ನುವುದನ್ನೇ ಸಮರ್ಥಿಸುತ್ತದೆ. ಹೀಗೆ ಈ ಕವಿಸತ್ವದ ಮೂಲಶೋಧವು ಪಂಪನನ್ನು ಬ್ರಾಹ್ಮಣ್ಯದಲ್ಲೇ ಮರುಹೊಂದಾಣಿಕೆ ಮಾಡಿ, ಆತನ ಕಾವ್ಯಪ್ರತಿಭೆಯನ್ನು ಮತಾಂತರಕ್ಕೆ ಮೊದಲಿನ ಸಂಸ್ಕಾರದ ಮುಂದುವರಿದ ಹರಿವೆಂದೇ ದೃಢೀಕರಿಸಲೆತ್ನಿಸುತ್ತದೆ. ಇದಕ್ಕೆ ವಿರುದ್ಧವಾಗಿ ಮತಾಂತರಗೊಂಡು ಬಿಡುಗಡೆಗೊಂಡುದರಿಂದಲೇ ಪಂಪ ಅಗ್ರಹಾರದ ಗೊಡ್ಡು ಪಂಡಿತನಾಗುವುದರಿಂದ ತಪ್ಪಿಸಿಕೊಂಡು ಕವಿಯಾದ, ಹೊಸಹರಿವು ಕಂಡುಕೊಂಡ ಎಂಬ ಇನ್ನೊಂದು ವಾದವೂ ಇದೆ. ಮತಾಂತರವನ್ನು ನೆವಮಾಡಿಕೊಂಡ ಪಂಪಸತ್ವದ ಕುರಿತ ಚರ್ಚೆಗಳು ಹೀಗೆ ನಡೆದಿದ್ದರೂ, ಬಹುಮಟ್ಟಿನ ಪಂಪಪರಿಚಯ ಪಠ್ಯಗಳು ಮಾತ್ರ ಆತನಲ್ಲಿ ವೈದಿಕಸತ್ವವನ್ನೇ ನೆನಪಿಸಿವೆ. ‘ಮನುಷ್ಯಜಾತಿ ತಾನೊಂದೆವಲಂ’ ಎಂದು ವಿಶ್ವಸಹೋದರತೆ ಸಾರಿದವನು ಎನ್ನುತ್ತಲೇ, ‘ಜೈನೀಯತೆಯೊಳಗೂ ವೈದಿಕಸತ್ವ’ ಉಳಿಸಿಕೊಂಡವನೆಂದು ಜಾತಿಯೊಳಗೇ ಕಟ್ಟಿವೆ. ಹೀಗೆ ಮನುಷ್ಯರೆಲ್ಲಾ ಒಂದೇ ಎಂದು ಜಾತಿಜಡವನ್ನು ದಾಟಿ ಧರ್ಮದ ಪ್ರವಾಹ ಒಪ್ಪಿದ ಮನುಕುಲದ ಮಿತ್ರನನ್ನು ಅಗ್ರಹಾರದ ಕಲ್ಲಾಗಿಸಲು ನಡೆಸಿದ ಈ ನಿರಂತರ ಯತ್ನವೂ ಒಂದರ್ಥದಲ್ಲಿ ಸಾಂಸ್ಕೃತಿಕ ಪ್ರತಿನಿಧೀಕರಣದ ಮರುಹೊಂದಾಣಿಕೆಯ ಘರ್ ವಾಪಸಿಯೇ ಆಗಿದೆ.

ಆದರೆ ಈ ತೆರನಾದ ಸಾಂಸ್ಕೃತಿಕ ಐಕಾನ್ ಗಳ ಘರ್ ವಾಪಸಿಗೂ, ಇಂದು ಸುದ್ದಿಯಲ್ಲಿರುವ ಘರ್ ವಾಪಸಿಗೂ ಸ್ವರೂಪ ಮತ್ತು ಉದ್ದೇಶದಲ್ಲಿ ಮೂಲಭೂತ ವ್ಯತ್ಯಾಸವೊಂದಿದೆ. ಅದೇನೆಂದರೆ ಸಾಂಸ್ಕೃತಿಕ ಪ್ರತಿನಿಧೀಕರಣದ ಘರ್ ವಾಪಸಿಯಲ್ಲಿ ನಿಶ್ಚಿತತೆ ಪಾರದರ್ಶಕತೆ ಇದೆ. ಅಂದರೆ ಪಂಪನಂತಹ ಸಾಂಸ್ಕೃತಿಕ ಪ್ರತಿನಿಧಿಗಳನ್ನು RSS-mohanbhagwatಎಲ್ಲಿಗೆ ಕರೆತರಬೇಕು ಎನ್ನುವಾಗ ಮತ, ಧರ್ಮದ ಅಮೂರ್ತತೆಗಿಂತ ನಿರ್ದಿಷ್ಟವಾದ ಘರ್/ಜಾತಿಯ ಖಚಿತ ವಿಳಾಸವಿರುತ್ತದೆ. ಪಂಪನಲ್ಲಿ ಇನ್ನೂ ಉಳಿದುಕೊಂಡ ಬ್ರಾಹ್ಮಣ್ಯವನ್ನೇ ಹುಡುಕಿ ಡಿಎನ್ಎ ಪರೀಕ್ಷೆಯನ್ನೂ ಮುಗಿಸುವ ಈ ಖಚಿತ ಕಾರ್ಯತಂತ್ರದಲ್ಲಿ ಇಂದು ಕಲ್ಪಿಸಲಾಗುತ್ತಿರುವ ವಿಶಾಲವಾದ ಮತಾವರಣದ ಅಮೂರ್ತತೆ ಇಲ್ಲ. ಆತ ಯಾರು ಎನ್ನುವ ಹಕ್ಕುಪ್ರತಿಪಾದನೆಯೇ ಇದೆ. ಆದರೆ ಅಧಿಕಾರ ರಾಜಕಾರಣದ ಶಕ್ತಿಗಾಗಿ ಕಾಲಾಳುಗಳು ಖಾಲಿಯಾಗದಂತೆ ಕಾಯುವ ಘರ್ ವಾಪಸಿಯಲ್ಲಿ ಖಚಿತತೆಯೇನೋ ಇದೆ. ಆದರೆ ಅದು ಪಾರದರ್ಶಕವಾಗಿ ಪ್ರಕಟವಾಗುವುದಿಲ್ಲ. ಅದರ ಕಾರ್ಯತಂತ್ರಗಳಲ್ಲಿಯೂ ವೈವಿಧ್ಯವಿದೆ. ತಳಜಾತಿಗಳು ಬೌದ್ಧ ಮತ್ತಿತರ ಅನ್ಯಮತಗಳ ಕಡೆಗೆ ದೊಡ್ಡಸಂಖ್ಯೆಯಲ್ಲಿ ಆಕರ್ಷಿತರಾಗಿ ತಮ್ಮ ಬಿಡುಗಡೆಯ ಹಕ್ಕು ಸಾಧಿಸುತ್ತಿರುವ ಘಳಿಗೆಯಲ್ಲೇ, ಇರುವ ಕಾಲಾಳುಗಳನ್ನು ಉಳಿಸಿಕೊಳ್ಳಲು ಅದು ದಲಿತಕೇರಿಗೆ ದೀಕ್ಷೆ, ವನವಾಸಿ ಚಳವಳಿ, ದೈವಾಂತರ, ಜೀರ್ಣೋದ್ಧಾರಗಳ ಪ್ಯಾಕೇಜ್ ಗಳನ್ನು ಒಯ್ಯುತ್ತದೆ. ಇನ್ನೊಂದೆಡೆ ಬಿಸಿಲಲ್ಲಿ ಬಿದ್ದ ತಿರುಕರನ್ನು ಹುಡುಕಿ ಘರ್ ವಾಪಸಿ ಮಾಡುತ್ತಿರುವುದಾಗಿ ಘೋಷಿಸುತ್ತದೆ. ಆದರೆ ಹೀಗೆ ಕಾಯಲ್ಪಟ್ಟವರು ಮತ್ತು ಒಳಕರೆದವರನ್ನು ಎಲ್ಲಿ ತುಂಬಿಕೊಳ್ಳುವುದೆಂಬ ಪ್ರಶ್ನೆಯನ್ನಂತೂ ಮೌನವಾಗಿಯೇ ಅದು ಕೊಂದು ಮಲಗಿಸುತ್ತದೆ. ಅವರು ಊರೊಳಗೆ ಬರುತ್ತಾರೆ. ಮನೆ ಕತ್ತಲಲ್ಲಿರುತ್ತದೆ!

ಗಮನಿಸಬೇಕಾದ ಸಂಗತಿಯೆಂದರೆ ಈ ಊರು, ಮನೆಗಳ ಒಳಭೇದವನ್ನು ನಿಭಾಯಿಸುವುದು ಹೇಗೆಂಬ ತೊಡಕು ಹೊರಗಿದ್ದು ನೋಡುವವರಿಗಷ್ಟೇ. ಆದರೆ ಬೆಂಕಿಯೆದುರು ತಣ್ಣೀರು ಕುಡಿಸಿ ಒಳಕರೆದ ಭರವಸೆ ಬಿತ್ತುವವರಿಗೆ ಇದು ಯಾವ ಕಾಲದಲ್ಲೂ ಸಮಸ್ಯೆಯಾಗಿಲ್ಲ. ಯಾಕೆಂದರೆ ಈ ಮರುಮತಾಂತರದ ಕಡಾಯಿಯೊಳಗೆ ಅವರು ರಂಗನನ್ನೋ, ವಿಠ್ಠೋಭನನ್ನೋ, ಜಗನ್ನಾಥನನ್ನೋ ಹಾಕಿ ತಿರುವಿದಂತೆಯೇ, ಕರಾವಳಿಯ ಕಲ್ಕುಡ ಜುಮಾದಿ ಕೊರಗಜ್ಜರನ್ನೂ ಎಳೆದು ಮಗುಚಿಹಾಕಿದ್ದಾರೆ. ಅಷ್ಟೇ ಅಲ್ಲ, ವರ್ತುಲಕ್ಕೆ ಸೆಳೆದುಕೊಂಡ ಜುಮಾದಿ ಕಲ್ಕುಡರಿಗೆ, ರಂಗ ವಿಠ್ಠೋಭರ ಕಕ್ಷೆಗಿಂತ ಬೇರೆಯದಾದ ಸುತ್ತೋಣವನ್ನೂ ತೋರಿಕೊಟ್ಟಿದ್ದಾರೆ. ಅವು ಹಾಗೆಯೇ ಸುತ್ತಿಕೊಂಡು ಕಲಶ, ಕಾಯಕಗಳ ಪಾನಕ ಕುಡಿಯುತ್ತಿವೆ. ಹಾಗಾಗಿ ವಾಪಾಸಾತಿಯ ಈ ನಮೂನೆಗಳಲ್ಲಿ ಪಂಪನನ್ನೋ, ಕನಕನನ್ನೋ, ಚಿಂದಿ ಆಯುವ ತಿರುಕರನ್ನೋ ಯಾವ್ಯಾವ ಲಕೋಟೆಯಯಲ್ಲಿಟ್ಟು ಮೊಹರು ಒತ್ತುವುದೆಂಬ ಕುರಿತು ಅಲ್ಲಿ ಗೊಂದಲವಿಲ್ಲ. ಲಕೋಟೆ ಬೇರಾದರೇನು? ಅಂಚೆ ಕಛೇರಿ ಒಂದೇ ಎನ್ನುವ ಸಮಾಧಾನ ಬಿತ್ತಲೆಂದೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತೆಂಬ ಬೇರೆ ಬೇರೆ ಬೋಧನೆಯ ಕೋಣೆಗಳೂ ಅಲ್ಲಿವೆ. ಬ್ರಹ್ಮ ಸತ್ಯಂ ಜಗನ್ ಮಿಥ್ಯಂ………? ಇನ್ನು ಚಿಂತಿಸುವುದಕ್ಕೇನಿದೆ?

ಭಾವಿಸಿದ ಕನ್ನಡ ಮತ್ತು ಸಹನೆ, ಅಸಹನೆಯ ಸಾಂಸ್ಕೃತಿಕ ತರಬೇತಿ


-ಎಚ್.ಜಯಪ್ರಕಾಶ್ ಶೆಟ್ಟಿ


ಈಗ ತಿಳಿದಿರುವ ಮಟ್ಟಿಗೆ ಕನ್ನಡವೆಂಬ ಮೂರಕ್ಷರದ ನುಣುಪುನುಡಿ ದೇಶ, ನಾಡು, ಭಾಷೆ ಎಂಬರ್ಥದಲ್ಲಿ ಮೊದಲು ಬಳಕೆಗೊಂಡುದು ಕವಿರಾಜಮಾರ್ಗದಲ್ಲಿ. Karnatakamapಭೌತಿಕಮೇರೆಯುಳ್ಳ ಭಾವಿತ ಆವರಣದ ಕನ್ನಡಜನಪದದ ಮೊದಲ ರೇಖಾಚಿತ್ರ ಇಲ್ಲಿದೆ. ಭಾಷೆ ನೆಲ ಸಮೂಹವೆಂಬ ಬಹುಸ್ತರಗಳಲ್ಲಿ ಕಲ್ಪಿತವಾದ ಈ ‘ಕನ್ನಡ’ದಲ್ಲಿ ವಿಲೀನತೆ-ವಿಭೇದತೆಯ ದ್ವಂದ್ವಗಳ ಅತಿವಿಶಿಷ್ಟವಾದ ಬೆರೆಯುವಿಕೆ ಇದೆ. ಈ ಭಿನ್ನತೆ-ಸಾಮ್ಯತೆಗಳ ಬೆರಕೆಯನ್ನು ಕವಿರಾಜಮಾರ್ಗವೇ ನಿರ್ದೇಶಿಸಿದೆ ಎಂದಲ್ಲ. ಕನ್ನಡಮನಸ್ಸಿನ ನಿಡುಗಾಲದ ಹರಿವಿನ ಯಾವುದೋ ಸಂಧಿಯಲ್ಲಿ ಸಂಭವಿಸಿದ ಈ ಕೃತಿ ಅದರ ಜಾಯಮಾನವಾದ ಸಹನೆ, ಸಹತ್ವವನ್ನು ತನ್ನೊಳಗಿನ ಬನಿಯಾಗಿಸಿಕೊಂಡಿದೆಯಷ್ಟೆ. ಆದರೆ ಕನ್ನಡವೆಂಬ ಜನಪದ ಭೂಗೋಳವು ಈ ಅರಿವಿಗೆ ನಿಲುಕದ ಅನಾದಿಯಿಂದ ಸಾಕಷ್ಟು ದೂರ ಹರಿದುಬಂದಿದೆ. ಈ ಹರಿವಿನಲ್ಲಿ ‘ಕನ್ನಡ’ವೆನ್ನುವ ವಿಶೇಷಣವೂ ಪ್ರತಿನಿಧೀಕರಣ ರಾಜಕಾರಣದ ಹೊರಳಿಕೆಗೂ ಒಳಗಾಗಿದೆ. ಒಳಗೊಳ್ಳುವ-ಹೊರಗಿಡುವ ಮಾಪಕವೂ ಆಗಿದೆ. ಹೀಗೆ ಬಹುರೂಪಗಳಲ್ಲಿ ಪ್ರಕಟಗೊಳ್ಳುತ್ತಾ ಬಂದ ಕನ್ನಡವಿಂದು ಕರ್ನಾಟಕವಾಗಿ ನಮ್ಮೆದುರಿಗಿದೆ. ಭಾಷಾರಾಜ್ಯಗಳ ಉಗಮದಿಂದೀಚೆ ಕನ್ನಡವನ್ನು ಗುರುತಾಗಿಸಿಕೊಂಡ ಮಾದರಿಗಳು ಮುನ್ನೆಲೆಗೆ ಬಂದು ದಾಖಲಿಸಿಕೊಳ್ಳುತ್ತಿರುವ ಕ್ರಿಯಾಶೀಲತೆಯಿಂದಾಗಿ ನವೆಂಬರ್ ತಿಂಗಳಂತೂ ಕನ್ನಡಮಾಸವೆನಿಸಿದೆ.

ಕನ್ನಡದ ಪ್ರಶ್ನೆಯ ವಿವರಣೆಯಲ್ಲಿ ಕನ್ನಡದ ಬಿಕ್ಕಟ್ಟಿನ ಕುರಿತ ಚಿಂತನೆಯ ಕಾಲವಾಗಿ ಮೈದೋರಿಕೊಳ್ಳುತ್ತಿದೆ. ಆದರೆ ಭಾಷೆ, ನಾಡು ಕೇವಲ ಭಾವನಾತ್ಮಕ ಸಂಗತಿಯಾಗಬೇಕಿಲ್ಲ. ಅದಕ್ಕಿಂತ ಭಿನ್ನವಾಗಿ ಕನ್ನಡ, ಕರ್ನಾಟಕಗಳ ಕುರಿತ ನಿರೂಪಣೆಗಳನ್ನೂ, ಕನ್ನಡವೆನ್ನುವ ‘ಸ್ವ’ಕ್ಕೆ ಎದುರಾಳಿಯಾಗಿ ಕಟ್ಟಿಕೊಡುತ್ತಾ ಬಂದ ‘ಅನ್ಯ’ಗಳ ಕುರಿತ ಕನ್ನಡಸಮೂಹದ ವರ್ತನೆಯ ಹಿಂದಿನ ಸಾಂಸ್ಕೃತಿಕ ಸೂಕ್ಷ್ಮಗಳನ್ನೂ ವಿವರಿಸಿಕೊಳ್ಳುವ ಅಗತ್ಯವಿದೆ. ಕನ್ನಡ ಸೃಜನಶೀಲ ಪರಂಪರೆ ಕಟ್ಟಿಕೊಟ್ಟಿರುವ ಕನ್ನಡದ ವ್ಯಾಪಕತೆ ಮತ್ತು ಒಳಗೊಳ್ಳುವಿಕೆಯ ಗುಣವನ್ನು ವರ್ತಮಾನದ ಗುರುತಿನ ರಾಜಕಾರಣದ ಒಳಸೂಕ್ಷ್ಮಗಳ ಜೊತೆಗಿಟ್ಟು ನೋಡಬೇಕಿದೆ. ‘ಅನ್ಯ’ಗಳಾಗಿ ಕಟ್ಟಿಕೊಡಲಾಗುತ್ತಿರುವ ಸಮೂಹ, ಭಾಷೆಗಳ ಕುರಿತ ನಿರೂಪಣೆಗಳು ರಕ್ಷಿಸುತ್ತಿರುವ ಮತ್ತು ಮರೆಮಾಚುತ್ತಿರುವ ಸೂಕ್ಷ್ಮಗಳನ್ನು ಅರ್ಥೈಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮಾರ್ಗಕಾರನನ್ನೂ ಒಳಗೊಂಡು ಕನ್ನಡ ಕವಿಮನಸ್ಸುಗಳು ನಿರೂಪಿಸುತ್ತಾ ಬಂದ ‘ಕನ್ನಡ’ ಹಾಗೂ ಸಾಂಸ್ಥಿಕಶಕ್ತಿಕೇಂದ್ರಗಳು ಸಮೂಹಸಮ್ಮತಿಯ ಉತ್ಪಾದನೆಯಲ್ಲಿ ಸಾಧ್ಯವಾಗಿಸಿದ ಕನ್ನಡಗಳ ಭಿನ್ನ ಚಹರೆಗಳನ್ನು ವಿವರಿಸಿಕೊಳ್ಳುವ ಪ್ರಯತ್ನವಿಲ್ಲಿದೆ.

ಭೌತಿಕವಾಗಿದ್ದೂ ಭಾವಿತವಾಗುವ, ಸ್ಥಳೀಯವಾಗಿದ್ದೂ ವಿಶ್ವಜಗತ್ತಾಗುವ ವಿಶಿಷ್ಟ ಭೂಗೋಳ

ಕನ್ನಡವೆಂಬ ಮೂರಕ್ಷರದ ನುಣುಪು ನುಡಿಯಲ್ಲಿ ಮಾರ್ಗಕಾರ ಬರೆದ ‘ಭಾವಿಸಿದ ಜನಪದ’ದ ನಕಾಶೆಯಲ್ಲಿ ಭೌತಿಕ ಭೂಗೋಳ ಹಾಗೂ ಭಾವಿತ ಭಾವಗೋಳಗಳಿವೆ. 000ಈ ಕನ್ನಡದ ಹಿಂದೆ ಜಗತ್ತು ಭಗವಂತನಿಂದಾದುದಾಗಿ ನಂಬುವ ಸೃಷ್ಟಿವಾದಿ ವೈದಿಕ ತಾತ್ವಿಕತೆಗಿಂತ ಭಿನ್ನವಾಗಿ, ಜಗತ್ತನ್ನೊಂದು ‘ಅನಾದಿ’ಯಾಗಿ ನಂಬುವ ಜೈನತಾತ್ವಿಕತೆ ಇದೆ. ಮಾರ್ಗಕಾರ ನಿರೂಪಿಸುವ ಕನ್ನಡವೆಂಬ ಜನಪದವೂ ಸೃಷ್ಟಿವಾದಿ ನಿರೂಪಣೆಯಂತೆ ‘ಇರುವಿಕೆ’ಯಾಗದೆ ಆಗುವಿಕೆಯ ಮಾದರಿಯಲ್ಲಿದೆ. ‘ಆಗುವಿಕೆಯ’ ತಾತ್ವಿಕತೆಯಲ್ಲರಳಿದ ಈ ಕನ್ನಡ ಭೌತಿಕಚಹರೆಗಳನ್ನು ಹೊಂದಿಯೂ ಆಹ್ವಾನ-ವಿಸರ್ಜನದ ಮಾದರಿಯಲ್ಲಿ ನಾಡಾಡಿಯೊಬ್ಬ ಕಟ್ಟಿಕೊಳ್ಳುತ್ತಲೇ ಹೋಗುವ ಭಾವಿತಸತ್ಯ. ‘ಕಾವೇರಿಯಿಂದ ಗೋದಾವರಿವರೆಗೆ….’ ಎಂಬ ಪದ್ಯವಂತೂ ನಾಡು-ನುಡಿ-ಜನಪದಗಳೆಂಬ ಸಮಸ್ತವನ್ನೂ ಮೂರ್ತ-ಅಮೂರ್ತ, ಭೌತಿಕ-ಭಾವಕವೆಂಬ ವಿರುದ್ಧ ದ್ವಂದ್ವಗಳಲ್ಲಿ ಏಕತ್ರ ಗ್ರಹಿಸಿ ಕಂಡರಿಸುತ್ತದೆ. ಈ ರೇಖಾಚಿತ್ರದಲ್ಲಿನ ಕಾವೇರಿ-ಗೋದಾವರಿಗಳು ಕೇವಲ ಭೌಗೋಳಿಕ ಅಸ್ತಿತ್ವವಲ್ಲ. ಭಾರತೀಯ ಸಮಷ್ಟಿಮನಸ್ಸಿನ ಭಾವ ವಾಸ್ತವಗಳು. ಅಷ್ಟೇ ಅಲ್ಲ, ಯಾವುದೇ ಧಾರ್ಮಿಕ, ಮತೀಯ ಗುರುತಿಗೂ ಬಂಧಿಯಲ್ಲದ ಚಲನಶೀಲ ಜಲಸತ್ಯಗಳಾದ ಈ ನಿಸರ್ಗದತ್ತ ಭೌತಿಕಮೇರೆಗಳು, ಅನುಲ್ಲಂಘನೀಯವಾದ ಗಡಿಕಲ್ಪನೆಯನ್ನು ಅಪಹಾಸ್ಯಕ್ಕೂ ಗುರಿಪಡಿಸುತ್ತವೆ.

ಜೊತೆಗೆ ಮಾರ್ಗಕಾರನ ‘ಕನ್ನಡ’ ನೆಲವೆಂಬ ಏಕಸತ್ಯವಾಗದೆ, ‘ಜನಪದ’ವಾಗಿ ಜನವನ್ನು ಒಳಗೊಳ್ಳುತ್ತದೆ. ವಸುಧಾವಲಯ ವಿಲೀನವಾಗಿಯೂ, ‘ವಿಶದವಾಗುಳಿಯಬಲ್ಲ’ ಪ್ರಕಟ ಅಸ್ಮಿತೆ ಮತ್ತು ಸಹತ್ವಗಳೆರಡೂ ಅದಕ್ಕೆ ಸಾಧ್ಯವಿದೆ. ಸ್ಥಳೀಯತೆಯ ಭಿನ್ನತೆಯನ್ನು ವಿಶ್ವಾತ್ಮಕತೆಯ ಸಾಮ್ಯತೆಯಲ್ಲಿ ಹೊಂದಿಸಬಲ್ಲ ಸಂಘರ್ಷವಿಲ್ಲದ ‘ಸಹತ್ವ’ದಿಂದಾಗಿ ಅದು ವಿಷಯವಿಶೇಷವೂ ಆಗಿದೆ. ಮೂರನೇ ಪರಿಚ್ಛೇದದಲ್ಲಿ ಉದಾತ್ತಾಲಂಕಾರಕ್ಕೆ ಲಕ್ಷ್ಯನೀಡುತ್ತಾ, ‘ಪರಧರ್ಮ ಪರವಿಚಾರಗಳ ಸೈರಣೆಯನ್ನೇ ‘ಕಸವರಮೌಲ್ಯ’ವೆನ್ನುವ ಮಾರ್ಗಕಾರನ ಮಾತು, ಇಂತಹ ಜನಪದವೊಂದರ ಆಗುವಿಕೆಗೆ ಬೇಕಾದ ತಾತ್ವಿಕ ಭೂಮಿಕೆಯಂತಿದೆ. ಜನಪದ ಅಥವಾ ನಾಡೊಂದು ವಿಶ್ವಸ್ಥ-ಸ್ಥಳೀಯವೆನ್ನುವ, ವಿಲೀನ-ವಿಶದವೆಂಬ ದ್ವಂದ್ವದ ಏಕತ್ರ ಸ್ಥಿತಿಯನ್ನು ಆಗುಗೊಳಿಸಿಕೊಳ್ಳಲು, ‘ಸ್ವ’ ಮತ್ತು ‘ಅನ್ಯ’ವೆಂಬ ಭಿನ್ನತೆಗಳನ್ನು ಸಹನೆಯ ಆವರಣದಲ್ಲಿ ಸಂಬಾಳಿಸಲು ಶಕ್ತವಾಗಬೇಕು. ಹೀಗೆ ಸಹಸ್ರಮಾನಗಳ ನಂತರವೂ ಕನ್ನಡದ ಜನ ಮತ್ತೆ ಮತ್ತೆ ಚಿಂತಿಸಿ, ಕಟ್ಟಿಕೊಳ್ಳುತ್ತಲೇ ಇರಬಹುದಾದ ಕನ್ನಡದ ನಿರೂಪಣೆಯೊಂದನ್ನು ಮಾರ್ಗಕಾರ ನಮ್ಮೆದುರು ಬಿಟ್ಟುಹೋಗಿದ್ದಾನೆ. ಆತನಲ್ಲಿ ಕನ್ನಡವೆಂಬುದು ನೆಲವೇ, ಭಾಷೆಯೇ, ಜನವೇ ಎಂಬ ತಕರಾರಿಗಿಂತ ಎಲ್ಲವನ್ನೂ ಒಳಗೊಂಡು ದಾಟುತ್ತಲೇ ಹೋಗುವ ಅನಿಕೇತನವಾಗುತ್ತದೆ.

ಸುಡುವ ಕಿಚ್ಚಾಗದೆ ಸುಳಿವ ಗಾಳಿ-ಬೆಳೆವ ಬಳ್ಳಿಯಾಗಿ

ದೇಶವೆಂದರೆ ಮಣ್ಣು ಬೆಟ್ಟ ಗುಡ್ಡ ನಕ್ಷೆ ಬಾವುಟವೆಂದು ನಂಬುವುದು ಬೇರೆ. ಆ kannada_Kuvempuದೇಶ ಮತ್ತು ಭಾಷೆಯು ದಕ್ಕುವುದು ಮೂರ್ತಚಹರೆಯಲ್ಲೇ. ಅಲ್ಲಿ ಬೆಳೆಯುವ ಬಳ್ಳಿಯ ಗುಣವಾಗಲೀ, ಬೆರೆಯುವ ಗಾಳಿಯ ಗುಣವಾಗಲೀ ಇರದು. ಆದರೆ ಪುತಿನ ಹೇಳುವಂತೆ ‘ದೇಶ ಅಂದರೆ ಜನ’ ಎಂದುಕೊಳ್ಳಲು ಸಾಧ್ಯವಾಗುತ್ತಲೇ, ದೇಶ ಅಥವಾ ನಾಡಿನ ಸೀಮಿತ ಭೌತಿಕಚಹರೆ ಕಳಚಿಕೊಳ್ಳುತ್ತದೆ. ಈ ಕಣ್ಣೋಟವು ಎಲ್ಲವನ್ನೂ ಕನ್ನಡವಾಗಿಸಿ, ಕನ್ನಡಕ್ಕಾಗಿಸಿಕೊಂಡು ಬೆರೆಯುವ ಅಪೂರ್ವ ಶಕ್ತಿಯಾಗುತ್ತದೆ. ಕನ್ನಡ ಕಾವ್ಯಜಗತ್ತು ಎದುರಿಗೆ ತಂದುಕೊಳ್ಳುವ ಕನ್ನಡ ಮತ್ತು ಕರ್ನಾಟಕದಲ್ಲಿ ಇಂಥದ್ದೊಂದು ಆಹ್ವಾನ-ವಿಸರ್ಜನದ ಗುಣವಿದೆ. ಅಲ್ಲಿ ಏಕಕಾಲದಲ್ಲಿ ಸಾಮ್ಯತೆ-ಭಿನ್ನತೆಗಳು ಏಕತ್ರಗೊಳ್ಳುತ್ತಲೇ ಭಿನ್ನವಾಗಿ ಉಳಿಯುತ್ತವೆ. ಮಾರ್ಗಕಾರನಿಂದ ಹಿಡಿದು ಕವಿಶೈಲ ಕುವೆಂಪು ತನಕ ಕನ್ನಡಕಾವ್ಯದೊಳಗೆ ಈ ಮಾದರಿಯ ಹರಿವಿದೆ. ‘ನೀ ಮೆಟ್ಟುವ ನೆಲ ಅದೇ ಕರ್ನಾಟಕ, ನೀನೇರುವ ಮಲೆ ಸಹ್ಯಾದ್ರಿ, ನೀನ್ ಕುಡಿಯುವ ನೀರ್ ಕಾವೇರಿ….’ ಇತ್ಯಾದಿಯಾಗಿ ಕುವೆಂಪು ಕಲ್ಪಿಸುವ ಕನ್ನಡವೂ ಒಂದು ಭಾವವಾಸ್ತವವೇ. ಮೂರ್ತವಾಗಿ ನೆಲೆಗೊಳ್ಳದ, ಆದರೆ ಕಟ್ಟಿಕೊಳ್ಳುತ್ತಲೇ ಹೋಗಬಹುದಾದ ಈ ಕನ್ನಡ ನವನವೀನವೇ. ಈ ಕನ್ನಡಕ್ಕೆ ಗುರುತಾಗಿಯೂ ಗುರುತಿಗೆ ಹೊರತಾಗುವ ಶಕ್ತಿಯಿದೆ. ಎಲ್ಲಿಯೋ, ಹೇಗಾದರೂ ಇದ್ದೂ ಎಂದೆಂದಿಗೂ ಕನ್ನಡವಾಗುವ ಈ ಅಂತರಂಗದ ಪರಿಗೆ ಮಾರ್ಗಕಾರನ ‘ಭಾವಿಸಿದ ಕನ್ನಡದ’ ಛಾಯೆ ಇದೆ. ಇದಕ್ಕೆ ಅನ್ಯವೆಂಬ ಎದುರಾಳಿ ಕುರುಹೇ ಇರದು. ಹೀಗಾಗಿ ಅದು ಸಂಘರ್ಷರಹಿತವಾದುದೂ ಆಗುತ್ತದೆ.

ಕನ್ನಡ ಕವಿಜಗತ್ತು ಸಂಘರ್ಷಕ್ಕೆ ಕಾರಣವಾಗುವ ಅಸಹನೆಯ ನಿರಸನದಲ್ಲಿ ಲೋಕಸಮಸ್ತಕ್ಕೂ ಚಾಚಿಕೊಳ್ಳಬಯಸುತ್ತದೆ. ಆದಿಕವಿ ಪಂಪನ ಲೋಕಾನುಭವ ಭಾಗವಾದ ರಸಿಕಜೀವನದಲ್ಲಿರುವುದು ಸೀಮೋಲ್ಲಂಘನವೇ. ಆಂಧ್ರ, ಕೇರಳ, ಮಲಯ ಯುವತಿಯರ ಸ್ತನಹಾರ, ಕಟೀಸೂತ್ರ, ದರ್ಪಣವಾಗಿ ಬೆರೆತ ಪಂಪನೆಂಬ ಕನ್ನಡಮನಸ್ಸು ಕನ್ನಡದ್ದಲ್ಲದ ಹೆಣ್ತನಗಳ ತೋಳತೆಕ್ಕೆಯಲ್ಲಿ ಪಡೆದ ಸಂಸಾರಸಾರವನ್ನು ಕನ್ನಡದ ಸಂಪತ್ತಾಗಿಸಿದೆ. ನಡುಗನ್ನಡ ಕವಿ ರತ್ನಾಕರವರ್ಣಿಯಾದರೋ ತನ್ನ ಕಾವ್ಯವನ್ನು ಮೆಚ್ಚುವವರ ಸರಣಿಯಲ್ಲಿ ಕನ್ನಡಿಗರ ಜೊತೆಗೆ ತೆಲುಗ, ತುಳುವರನ್ನೂ ಸೇರಿಸಿಕೊಳ್ಳುತ್ತಾನೆ. ಅವರೆಲ್ಲರೂ ಮೈಯುಬ್ಬಿ ಕೇಳಬೇಕೆಂದೂ ಆಶಿಸುತ್ತಾನೆ. ಭಾಷೆ ಇಲ್ಲಿ ವೈವಿಧ್ಯವೇ ಹೊರತು, ಎದುರಾಳಿಯಲ್ಲ. ಉಸಿರಿನ ನಾದತರಂಗದ ಹೊಸಬಗೆಯ ಕಸುವಲ್ಲದೆ, ಉಸಿರನ್ನೇ ಹಿಚುಕುವ ಕದನ ಕಣವಲ್ಲ. ಪ್ರಾಯಶಃ ಆರೋಗ್ಯಕರವಾದ ಕವಿಮನಸ್ಸೊಂದು ಭಾಷೆಯ ಜೊತೆಗೆ ವ್ಯವಹರಿಸುವಲ್ಲಿ ಅನುಸರಿಸಬಹುದಾದ ಆರೋಗ್ಯಕರ ದಾರಿಯಲ್ಲೇ ಪಂಪ, ರತ್ನಾಕರ, ಕುವೆಂಪು ಅವರುಗಳು ಸಾಗಿದ್ದಾರೆ. ಇದು ಹೊರಗಿನದನ್ನು ದ್ವೇಷಿಸದೆ, ಎಲ್ಲಿಯೇ ಇರಲಿ ಒಳಗಿನದಾಗುವ ಅಥವಾ ಕನ್ನಡವನ್ನು ತನ್ನೊಳಗಿನ ಸತ್ಯವಾಗಿಸುವ ದಾರಿ. ಇರುವಿಕೆ ತೋರುತ್ತಲೇ ಬಯಲೊಳಗೆ ಬೆರೆತು ಬೆತ್ತಲಾಗುವ ಗಂಧಹೊತ್ತ ಗಾಳಿಯಂತೆ, ಮೆದೆಯೊಳಗೆ ಹುದುಗಿ ಮೈಮರೆತಂತಿದ್ದೂ ಟಿಸಿಲೊಡೆದ ನಿಡುಗೊರಳ ಕುಡಿಗಳಲ್ಲಿ ಅಸ್ಮಿತೆಯ ಕುರುಹು ಉಳಿಸಿಡುವ ಬಳ್ಳಿಯಂತೆ, ವಸುಧಾವಲಯ ವಿಲೀನವಾಗಿಯೂ ಸದಾಕಾಲ ವಿಶದವಾಗುಳಿಯಬಲ್ಲ ಕನ್ನಡದ ನಡೆಯಿದು.

ಸಹನೆ ಅಸಹನೆಗಳ ಸಾಂಸ್ಕೃತಿಕ ತರಬೇತಿ

ಆದರೆ ನಮ್ಮೆದುರು ಇಂದು ಪ್ರಕಟಗೊಳ್ಳುತ್ತಿರುವ ಕನ್ನಡಕ್ಕೆ ಬೇರೆ ಚಹರೆಗಳಿವೆ.bhuvaneshwari ಅದಕ್ಕೆ ಬಾವುಟ, ಬಣ್ಣ, ಪ್ರತಿಮೆಗಳೆಂಬ ಸ್ಥಿರ ರೂಪಗಳಿವೆ. ಅದು ಭಾವಸತ್ಯದಾಚೆಯ ಭೌತಿಕಸತ್ಯವಾಗಿ, ಭೂಗೋಳದ ನಕ್ಷೆ, ಭುವನೇಶ್ವರಿಯ ಆಕಾರದ ಮೂರ್ತ ಗುರುತಾಗಿ ಮತೀಯ ಚಹರೆಗೆ ಲಗತ್ತುಗೊಂಡಿದೆ. ಅನ್ಯ-ಸ್ವ ಎನ್ನುವ ಎದುರಾಳಿಗಳನ್ನು ಕಟ್ಟಿಕೊಡುವ ಮಾಧ್ಯಮವೂ ಆಗಿದೆ. ಅಂದರೆ ಕನ್ನಡವೆಂಬ ವಿಶೇಷಣವನ್ನು ಹರಳುಗಟ್ಟಿಸಿದ ಮಾರ್ಗಕಾರ ಎರಕಹೊಯ್ದಿಟ್ಟ ‘ಕಸವರ ಮೌಲ್ಯ’ವನ್ನು ಅದು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದೆ ಎಂದಲ್ಲ. ಆದರೆ ಕನ್ನಡ ಮನಸ್ಸಿನ ಈ ಸಹತ್ವ ಮತ್ತು ಸಹನೆಯು ಆಯ್ಕೆ-ನಿರಾಕರಣದ ಮಾದರಿಯಲ್ಲಿದೆ. ಇದನ್ನು ಅನೇಕ ವೇಳೆ ಸಾಮ್ರಾಜ್ಯಗಳ ಕಲ್ಪಿತಚರಿತ್ರೆಗಳು ಬೆರೆತ ಕನ್ನಡದ ಗತವಲಸೆಗಳು ನಿರ್ಧರಿಸುತ್ತಿವೆ. ಹಾಗಾಗಿ ಕನ್ನಡದ ವೈರಿಗಳ ಆಯ್ಕೆಯಲ್ಲಿ ಭೌತಿಕ ಸೀಮೆಗಳೆಂಬ ರಾಜಕೀಯ ಗಡಿಗಳ ಜೊತೆಗೆ ಮತೀಯ ಅನ್ಯತೆಯ ಗುರುತುಗಳೂ ಸೇರಿಕೊಳ್ಳುತ್ತಿವೆ. ಕನ್ನಡದ ಹೆಗಲೇರಿ ಕುಳಿತ ಸಾಂಸ್ಕೃತಿಕ ಯಾಜಮಾನ್ಯಕ್ಕೆ ತನ್ನ ವೈರಿಯನ್ನು ಹಣಿಯಲು ಕನ್ನಡವು ಚಿಮ್ಮುಹಲಗೆಯಾಗುತ್ತಿದೆ. ಹೀಗಾಗಿ ಅನೇಕ ವೇಳೆ ಭಾಷೆಯೆಂಬುದು ಪ್ರಾಣಘಾತುಕವೇ ಆಗುತ್ತಿದೆ.

ಭಾಷಾವಾರು ಪ್ರಾಂತ್ಯಗಳ ನೆಲೆಯಲ್ಲಿ ತಮಿಳು-ತೆಲುಗು-ಮಲಯಾಳಂ-ಮರಾಠಿಗಳ ಜೊತೆಗೆ ಕನ್ನಡದ ವೈಮನಸ್ಸಿಗೆ ಗಡಿಹಂಚಿಕೆ, ಅವಕಾಶದ ಅಸಮಾನತೆಯ ಆರ್ಥಿಕ ಕಾರಣಗಳಿವೆ. ಇಂಗ್ಲೀಷನ್ನೋ, ಹಿಂದಿಯನ್ನೋ ಎದುರಾಳಿಯಾಗಿ ಪರಿಭಾವಿಸಿಕೊಳ್ಳುವಲ್ಲಿಯೂ ಅವಕಾಶಗಳ ನಾಪತ್ತೆಯ ಸಾಮೂಹಿಕ ಭಯವಿದೆ. ಇಲ್ಲಿ ಭಾಷೆ ಕೇವಲ ಭಾವನೆಯ ಅಭಿವ್ಯಕ್ತಿ ಮಾಧ್ಯಮವಷ್ಟೇ ಎಂದರಾಗದು. ಆದರೆ ಕನ್ನಡದ ಆಕ್ರಮಣಶೀಲತೆ ಮತ್ತು ಸಹನೆಗಳು ಈ ನಿರ್ದಿಷ್ಟ ರಾಜಕೀಯ ಕಾರಣಗಳಿಗಷ್ಟೇ ಸೀಮಿತವಾಗಿಲ್ಲ. ಕನ್ನಡವು ತಮಿಳು-ತೆಲುಗುಗಳಂತೆ ಯಾವುದೇ ಗಡಿ, ಅವಕಾಶ ಇತ್ಯಾದಿಗಳ ತಕರಾರಿದ ಅನೇಕ ಭಾಷೆಗಳೊಂದಿಗೆ ಬದುಕುತ್ತಿದೆ. ಅವೆಲ್ಲವುಗಳ ಜೊತೆಗೆ ಅದರ ಸಂಬಂಧ ಏಕಪ್ರಕಾರವೂ ಆಗಿಲ್ಲ. ಉದಾಹರಣೆಗೆ ಕನ್ನಡದ ಯಾವ ನೆಲ-ಜಲ-ಸಾಂಸ್ಕೃತಿಕ ಆಸ್ತಿಯ ಒತ್ತುವರಿ ಮಾಡುವ ಸ್ಥಿತಿಯಲ್ಲಿರದ ಉರ್ದುವಿನೊಂದಿಗೆ ವೈರದ ಸಂಬಂಧವಿದ್ದರೆ, ಮೃತಭಾಷೆ ಎನಿಸಿಯೂ ಕನ್ನಡದ ಮೇಲೆ ಒಂದರ್ಥದ ಯಜಮಾನಿಕೆ ನಡೆಸುತ್ತಲೇ ಇರುವ ಸಂಸ್ಕೃತದ ಜೊತೆಗೆ ಅದಕ್ಕೆ ವಿನಯಶೀಲ ಸಂಬಂಧವಿದೆ. ಕೊಂಕಣಿ, ಕೊಡವ, ತುಳು ಇನ್ನೂ ಎಷ್ಟೋ ಭಾಷೆಗಳೊಂದಿಗೆ ವಿಶೇಷ ತಕರಾರುಗಳಿಲ್ಲದ, ಆದರೆ ಯಜಮಾನಿಕೆಯ ಸಂಬಂಧವಿದೆ.

ಗೋಕಾಕ್ ವರದಿಯ ಸಂದರ್ಭವೋ, ದೂರದರ್ಶನದಲ್ಲಿನ ಉರ್ದು ವಾರ್ತೆಯೋkarnataka Sanskrit University ಉರ್ದುವಿನ ವಿರುದ್ಧವಾಗಿ ಪ್ರಚೋದಿಸಿದಂತೆ, ಸಂಸ್ಕೃತವಿಶ್ವವಿದ್ಯಾಲಯದ ಪ್ರಶ್ನೆಯೋ, ನಿರಂತರವಾಗಿ ಪ್ರಸಾರವಾಗುತ್ತಿರುವ ಸಂಸ್ಕೃತ ವಾರ್ತೆಗಳೋ ಕನ್ನಡ ಮನಸ್ಸನ್ನು ಪ್ರಚೋದಿಸಿಲ್ಲ! ಕನ್ನಡಿಗರ ಯಾವ ಹಕ್ಕನ್ನೂ ಕಸಿಯದ, ಯಾವ ನೌಕರಿಯನ್ನೂ ಅಪಹರಿಸದ, ಹೆಚ್ಚೂ ಕಡಿಮೆ ಶೇ.10ಕ್ಕಿಂತ ಹೆಚ್ಚಿನ ಜನಸಂಖ್ಯೆಯ ಮನೆಮಾತಾಗಿರುವ ಭಾಷೆಯೊಂದು ಕನ್ನಡದ ಸಂದರ್ಭದಲ್ಲಿ ಉಗ್ರ ವಿರೋಧಕ್ಕೆ ಒಳಗಾಗುವುದು ಹಾಗೂ ಕನ್ನಡದ ಮೇಲೆ ಯಜಮಾನಿಕೆ ನಡೆಸಿಯೂ ಇನ್ನೊಂದು ಭಾಷೆ ಕನ್ನಡದ ವಿನಯಗೌರವವನ್ನು ಪಡೆಯುವುದು ಅಚ್ಚರಿ ಎನಿಸುತ್ತದೆ. ಕನ್ನಡದ ನಡುವೆಯೇ ಇರುವ ಅದೆಷ್ಟೋ ಭಾಷೆಗಳಿಗೆ ಕನಿಷ್ಠ ಒಂದು ಅಕಾಡೆಮಿಯೂ ಇಲ್ಲದಿರುವ ಸ್ಥಿತಿಯನ್ನು ಮೌನವಾಗಿ ಸಹಿಸಿಕೊಂಡಿರುವ ಸಮುದಾಯಗಳ ಬಗೆಗೆ ಕನಿಷ್ಠ ಸೌಜನ್ಯದ ಸಹಾನುಭೂತಿ ತೋರದ ನಾವು, ಸೀಮಿತ ಕಲಿಕಾ ಸಮೂಹವಿರುವ ಒಂದು ಭಾಷೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿತವಾಗುವುದನ್ನು ಕನ್ನಡದ ಕರ್ತವ್ಯ ಎನ್ನುವಂತೆ ಸಹಮತ ತೋರುತ್ತೇವೆ! ನಮ್ಮ ಮನಸ್ಸಿಗೆ ಈ ಮಾದರಿಯ ಅಸಹನೆ ಮತ್ತು ಸಹನೆಯ ತರಬೇತಿ ಎಲ್ಲಿಂದ ದೊರೆಯಿತೆನ್ನುವುದೇ ಅಚ್ಚರಿಯೆನಿಸುತ್ತದೆ.

ಭಾಷೆ, ಧರ್ಮ, ಜಾತಿ ಇನ್ನೂ ಏನೇನೋ ಮಾದರಿಗಳಲ್ಲಿ ವ್ಯಕ್ತವಾಗುವ ದ್ವೇಷ-ಸಹನೆಗಳು ಆಕಸ್ಮಿಕಗಳಲ್ಲ. ಅವುಗಳನ್ನು ಸಹಜವಾದ ಅಭಿವ್ಯಕ್ತಿಗಳೆಂದು ಕರೆಯಲಾಗುತ್ತದೆಯಾದರೂ, ಅವುಗಳ ಮರೆಯಲ್ಲಿ ಹದಗೊಂಡ ಸಾಂಸ್ಕೃತಿಕ ತರಬೇತಿಯ ಬೆಚ್ಚನೆಯ ಇರುವಿಕೆ ನಿರಾಕರಿಸಲಾಗದು. ನಮ್ಮ ನಡುವೆಯೇ ಸಂಭವಿಸಿಹೋದ ಎರಡು ಗಾಂಧಿಗಳ ಹತ್ಯೆಯ ನಂತರದ ಸಹನೆ, ಅಸಹನೆಗಳೇ ಇದಕ್ಕೆ ಸಾಕ್ಷಿಯಂತಿವೆ. ಇಂದಿರಾ ಗಾಂಧಿಯನ್ನು ಸಿಕ್ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಗುಂಡಿಟ್ಟು ಕೊಂದರೆ, ಗಾಂಧೀಜಿಗೆ ಗುಂಡಿಟ್ಟು ಕೊಂದುದು ಚಿತ್ಪಾವನ್ ಬ್ರಾಹ್ಮಣಧರ್ಮ/ಜಾತಿಗೆ ಸೇರಿದ ವ್ಯಕ್ತಿ. ಆದರೆ ಎರಡೂ ಸಂದರ್ಭದಲ್ಲಿ ಈ ದೇಶದ ಮನಸ್ಸುಗಳು ಪ್ರತಿಕ್ರಿಯಿಸಿದ ರೀತಿಯಲ್ಲಿ ಅಗಾಧ ವ್ಯತ್ಯಾಸವಿದೆ. ಇಂದಿರಾ ಸತ್ತಾಗ ಕೊಂದವರ ಸಮುದಾಯಕ್ಕೆ ಸೇರಿದವರೆಂಬ ಒಂದೇ ಕಾರಣಕ್ಕೆ ಸಮುದಾಯವೊಂದರ ಸಾಮೂಹಿಕ ನರಮೇಧವೇ ನಡೆಯಿತು. ಒಂದು ದೊಡ್ಡಮರ ಬೀಳುವಾಗ ಇದೆಲ್ಲವೂ ಸಾಮಾನ್ಯವೆಂಬ ಸಮಜಾಯಿಷಿಯೊಂದಿಗೆ ಕೊಲೆಮಾಡಿದ ವ್ಯಕ್ತಿಗಳ ಪಾಪವನ್ನು ಸಮುದಾಯಕ್ಕೆ ವರ್ಗಾಯಿಸಲಾಯಿತು. ಆದರೆ ಈ ದೇಶದ ಆತ್ಮಸಾಕ್ಷಿಯಂತಿದ್ದ ಗಾಂಧೀ ಕೊಲೆಯ ಅಪರಾಧವು ಸಮುದಾಯಕ್ಕೆ ವರ್ಗಾವಣೆಗೊಂಡಿತೇ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಗಾಂಧೀ ಕೊಲೆಯನ್ನು ವ್ಯಕ್ತಿಯ ಕೃತ್ಯವಾಗಿಯೇ ಸೀಮಿತಗೊಳಿಸಿ ಅದರಲ್ಲಿ ಸಂಘಟನಾತ್ಮಕ ಪಾಲನ್ನೂ ನಿರಾಕರಿಸುವ ಯತ್ನವೇ ನಡೆಯಿತು. ಪ್ರಾಯಶಃ ಇಂದಿರಾ ಗಾಂಧಿಯ ಕೊಲೆಯನ್ನೂ ಈ ದೇಶದ ಬಹುಸಂಖ್ಯಾತ ಧರ್ಮಕ್ಕೆ ಸೇರಿದ ಮೇಲ್ಜಾತಿ ಶಕ್ತಿಗಳೇ ನಿರ್ವಹಿಸಿದ್ದಲ್ಲಿ, ಸಮುದಾಯವನ್ನೇ ಹೊಣೆಮಾಡಿ ಆ ಪ್ರಮಾಣದ ರಕ್ತಪಾತ ಸಂಭವಿಸುತ್ತಿತ್ತೆನ್ನಲಾಗದು. ಏಕೆಂದರೆ ಇಂದಿಗೂ ಈ ದೇಶದ ದಲಿತ, ಅಲ್ಪಸಂಖ್ಯಾತ, ತಬ್ಬಲಿಜಾತಿಗಳಿಗೆ ಸೇರಿದವರುಗಳು ಮಾಡುವ ತಪ್ಪುಗಳು ಸಮುದಾಯದ ತಪ್ಪುಗಳಾಗುವಂತೆ, ಮೇಲ್ಜಾತಿಯ ವ್ಯಕ್ತಿಗಳ ತಪ್ಪುಗಳು ಸಮುದಾಯದ ತಪ್ಪುಗಳಾಗುತ್ತಿಲ್ಲ.

ಈ ಜಾತಿಗಳಿಗೆ ಕೆಳಜಾತಿ, ಅನ್ಯ ಸಮುದಾಯಗಳಂತೆ ವರ್ತಮಾನದ ತಪ್ಪಿನ ಜೊತೆಗೆ ಚರಿತ್ರೆಯ ಪಾಪದ ಮಣಭಾರವನ್ನೂ ಹೊರಬೇಕಾದ ಹೊಣೆಗಳಿಲ್ಲ. ಇದಕ್ಕೆ ನಮ್ಮೆದುರಿನ ಕೈರ್ಲಾಂಜಿ ಇದೆ, ಕಂಬಾಲಪಲ್ಲಿ ಇದೆ. ಇತ್ತೀಚೆಗಿನ ಉತ್ತರ ಪ್ರದೇಶದಲ್ಲಿನ ದಲಿತರ ಮೇಲಿನ ದಾಳಿಗಳಿವೆ, ನಿರಂತರವಾದ ಕೋಮುಗಲಬೆಗಳಿವೆ. ಭಾಷೆಯ ಸಂಬಂಧದಲ್ಲೂ ನಮ್ಮ ಸಹನೆ ಅಸಹನೆ ಔದಾರ್ಯಗಳು ಇದಕ್ಕಿಂತ ಭಿನ್ನವಲ್ಲ. ಆದರೆ ಇವು ನಮ್ಮವಲ್ಲ. ನಮ್ಮದೆಂದು ನಂಬಿಕೊಂಡ ತರಬೇತಿಯ ಫಲಿತಗಳು. ಪ್ರಾಯಶಃ ಈ ಅರಿವಿರುವ ಮತೀಯ ಅಲ್ಪಸಂಖ್ಯಾತನೂ ಆಗಿರಬಹುದಾದ ಶ್ರೀವಿಜಯನಿಗೆ ಭಾರತ ಮತ್ತು ಕನ್ನಡದ ಸಂದರ್ಭದಲ್ಲಿ ಯಾವುದು ‘ಕಸವರ ಮೌಲ್ಯ’ ಎಂಬುದು ಸ್ಪಷ್ಟವಾಗಿ ತಿಳಿದಿರಲೇ ಬೇಕು. ಅಷ್ಟಕ್ಕೂ ಸಹನೆ, ಔದಾರ್ಯಗಳು ಬೇಕಿರುವುದು ಅಧಿಕಾರ ಉಳ್ಳವರಿಗಲ್ಲ. ಅಧಿಕಾರ ವಂಚಿತರ ಬದುಕಿನ ಆಧಾರಗಳವು. ಅವು ಯಾವೊತ್ತೂ ‘ಕೊಲುವುದುಚಿತವೇ ಹೇಳು’ ಎಂದು ಪ್ರಶ್ನಿಸುತ್ತಲೇ ಇರಬೇಕಾಗುತ್ತದೆ. ‘ಕಸವರಮೌಲ್ಯ’ವನ್ನು ನೆನಪಿಸುತ್ತಲೇ ಇರಬೇಕಾಗುತ್ತದೆ. ಅಂತೆಯೇ ಬಿದ್ದವರ ದನಿಯಾದ ಸಾಹಿತ್ಯಕ್ಕೂ ಅಂತಹ ಹೊಣೆ ಇರುವುದರಿಂದ ಅದೂ ‘ಭಾವಿಸಿದ ಕನ್ನಡ’ವನ್ನಲ್ಲದೆ, ಭೌತಿಕವಾದ ಗೆರೆ ಎಳೆಯುವ ಗುರುತಿನ ರಾಜಕಾರಣವನ್ನು ಮಾಡಲಾಗದು. ಬೆಳಕಿನೊಳಗಣ ಬೆಂಕಿಯಾಗದೆ, ಬೆಂಕಿಯೊಳಗಣ ಬೆಳಕಾಗುವುದು ಅದರ ಹೊಣೆಯಲ್ಲವೆ?

“ಪೊಳ್ಳು ಪುರಾಣವನ್ನು ನಂಬಿ ನಿಜ ಹರಿಶ್ಚಂದ್ರನಾದ ಗಾಂಧಿಯೆಂಬ ಗಾರುಡಿ….”


 -ಎಚ್.ಜಯಪ್ರಕಾಶ್ ಶೆಟ್ಟಿ


ಮೊನ್ನೆ ಮೊನ್ನೆಯಷ್ಟೇ ಯಾಕೋ ಏನೋ ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಕೋಲಾರದಿಂದ ಅಹವಾಲು ಹೇಳಿಕೊಂಡು ಬಂದ ಶಿಕ್ಷಕರ ಸಾಮಾನ್ಯಜ್ಞಾನ ಪರೀಕ್ಷೆಗೆ ನಿಂತುಬಿಟ್ಟಿದ್ದರು. ಆ ಶಿಕ್ಷಕರು ಸಚಿವರೆದುರು ಹೋಮ್ ವರ್ಕ್kimmane-ratnakar ಒಪ್ಪಿಸಬೇಕಾದ ಮಕ್ಕಳಂತೆ ನಿಂತಿದ್ದರು. ಮಾಧ್ಯಮದ ಕ್ಯಾಮರಾದೆದುರಿಗೇ ಅವರುಗಳನ್ನು ಪ್ರಶ್ನಿಸಿದ ಸಚಿವರು ತಮ್ಮ ತಲೆ ತಲೆ ಚಚ್ಚಿಕೊಳ್ಳುತ್ತಿದ್ದರು. ‘ಅನ್ ಟು ದ ಲಾಸ್ಟ್’ ಕೃತಿಯ ಕುರಿತ ಸಚಿವರ ಪ್ರಶ್ನೆಗೆ ಶಿಕ್ಷಕರು ಉತ್ತರಿಸಲಾರದೆ ತಡವರಿಸಿದರು. ಸಜ್ಜನ ಸಚಿವ ಕಿಮ್ಮನೆ ತಾವು ಮಾಡುತ್ತಿರುವುದು ಸರಿಯಾದುದಲ್ಲ ಎನ್ನಿಸಿ ಅಲ್ಲಿಗೇ ನಿಲ್ಲಿಸಲೂ ಇಲ್ಲ. ಅದೇ ಕ್ಯಾಮರಾದೆದುರೇ ಗಾಂಧೀಜಿ ಜನ್ಮದಿನವನ್ನಾದರೂ ಹೇಳಿ ಎಂದು ಮತ್ತೆ ಪ್ರಶ್ನೆ ಎಸೆದರು. ಪ್ರಶ್ನೆ, ಪರಿಸರ, ಕ್ಯಾಮರಾ ಯಾವುದನ್ನೂ ನಿರೀಕ್ಷಿಸದೆ ಕಕ್ಕಾಬಿಕ್ಕಿಯಾದ ಮೇಷ್ಟ್ರುಗಳು ಉತ್ತರಿಸಲಿಲ್ಲ. ತಡವರಿಸತೊಡಗಿದರು. ಅಧ್ಯಾಪಕರ ಅಸಹಾಯಕತೆಯ ನಡುವೆ ಇಲಾಖೆಯ ದುಸ್ಥಿತಿಗೆ ಬೇಸ್ತುಬಿದ್ದಂತೆ ಕಿಮ್ಮನೆ ಸುಮ್ಮನೆ ತಲೆಮೇಲೆ ಕೈಹೊತ್ತು ಕುಳಿತರು. ಆದರೆ ಹೀಗೆ ಸಂಭವಿಸಿದ ಅಚಾನಕ್ ಗಾಂಧಿ ಕುರಿತ ಈ ಕ್ವಿಝ್ ಬ್ರೇಕಿಂಗ್ ನ್ಯೂಸ್ ಎಂಬ ಬಕಧ್ಯಾನದಲ್ಲೇ ಕಾದು ಕೂರುವ ಮಾಧ್ಯಮಗಳೆಂಬ ರಣಹದ್ದುಗಳಿಗೆ ಭರಪೂರ ಆಹಾರವೊದಗಿಸಿತ್ತು. ಸಚಿವರು ಕೇಳುವ ಪ್ರಶ್ನೆ, ಅದಕ್ಕೆ ಉತ್ತರಿಸಲಾರದ ಅಧ್ಯಾಪಕರ ಅಸಹಾಯಕತೆ, ತಲೆಮೇಲೆ ಕೈಹೊತ್ತು ಕುಳಿತ ಸಚಿವರ ಹತಾಶೆಯ ಭಂಗಿಗಳೆಲ್ಲವೂ ‘ಗಾಂಧೀ’ ಎಂಬ ವಿಸ್ಮಯ’ವೇ ಕಣ್ಮರೆಯಾದ ಮಾಧ್ಯಮಗಳ ಲೋಕವಿಸ್ಮಯದ ಬ್ರೇಕಿಂಗ್ ನ್ಯೂಸ್ ಎಂಬ ಟಿ ಆರ್ ಪಿ ಸರಕುಗಳಾದುವು! ಈ ಹರಾಜಿನ ಸರದಿಯನ್ನು ಅವು ಇಲ್ಲಿಗೇ ನಿಲ್ಲಿಸಲಿಲ್ಲ. ಸಚಿವರೇ ಉದ್ಘಾಟಿಸಿದ ಕ್ವಿಝ್ ನ ಸರಣಿ ಕಾರ್ಯಕ್ರಮವಾಗಿಸಿಕೊಂಡ ಮಾಧ್ಯಮಗಳು ಮರುದಿನ ಬೀದಿಗಿಳಿದಿದ್ದವು! ಬೀದಿ ಬೀದಿ ಸುತ್ತಿ ಅಧ್ಯಾಪಕರೆನಿಸಿಕೊಂಡವರನ್ನು ಬೆನ್ನು ಹತ್ತಿ ಬೇಟೆಯಾಡಿದ್ದುವು. ಕಂಡಕಂಡವರಿಗೆ ಗಾಂಧಿ ಹುಟ್ಟಿದ ಇಸವಿ, ವಿವೇಕಾನಂದರ ಜನ್ಮದಿನದ ಹಾದಿಬದಿಯ ಕ್ವಿಝ್ ನಡೆಸಿ ಸರ್ಕಾರಿ ಶಾಲೆಯ ಅಧ್ಯಾಪಕರ ತಲೆ ಖಾಲಿಯೆಂಬ ಪ್ರಮಾಣಪತ್ರ ಉತ್ಪಾದಿಸಿದ್ದುವು. ಹೀಗೆ ಈ ದೇಶದಿಂದ ಗಾಂಧಿ ಹಠಾವೋಗಾಗಿ ಅಪಾರ ನಿರೀಕ್ಷೆಯಲ್ಲಿರುವವರಿಗೆ ಪರೋಕ್ಷ ಸಮಾಧಾನ ಕೊಟ್ಟಿದ್ದುವು. ಸರ್ಕಾರಿ ಶಾಲೆಗಳ ಮೇಲೆ ಮುಗಿಬಿದ್ದು ಯುದ್ಧ ಸಾರಿರುವ ಖಾಸಗಿ ಶಿಕ್ಷಣೋದ್ಯಮಿಗಳಿಗೆ ಭರಪೂರ ಖುಷಿಕೊಟ್ಟಿದ್ದುವು. ಬಡ ಪೋಷಕರೆದೆಯಲ್ಲಿ ‘ಅಯ್ಯೋ… ತಪ್ಪು ಮಾಡಿಬಿಟ್ಟೆವು’ ಎನ್ನುವ ನರಳಾಟ ಹುಟ್ಟಿಸಿದ್ದವು. ಇಷ್ಟೆಲ್ಲಕ್ಕೂ ಅಂದು ‘ಗಾಂಧೀ’ ಸರಕಾಗಿ ಹೋಗಿದ್ದರು.

ಗಾಂಧಿಯ ವ್ಯಕ್ತಿತ್ವದಲ್ಲೇ ಹೊಸ ಪ್ರಶ್ನಾವಳಿಗೆ ಪಠ್ಯವಾಗುವ, ನೆಪವಾಗುವ, ಪ್ರಸಂಗವಾಗುವ ಒಂದುkannada-school ಗುಣವಿರುವುದಾಗಿ ಶಿವವಿಶ್ವನಾಥನ್ ಗುರುತಿಸುತ್ತಾರೆ. ಆದರೆ ಗಾಂಧಿಯನ್ನು ಹೀಗೆ ಪಠ್ಯವಾಗಿಸಿಕೊಳ್ಳುವ ವೇಳೆ ನಮಗೆ “ಶಿಕ್ಷಣವೆಂದರೆ ಬರೀ ಅಕ್ಷರವೆಂಬ ಭ್ರಾಂತಿಯಾಗಕೂಡದು” ಎಂದ ಗಾಂಧಿಯ ಮಾತು ತಿಳಿದರಬೇಕು. ಹಾಗೆಯೇ ಶಿಕ್ಷಣವೆಂದರೆ ಗಾಂಧಿಗೆ ನೆನಪಿಟ್ಟುಕೊಂಡು ಪಟ್ಟನೆ ಉತ್ತರಿಸಿಬಿಡುವ ನೆನಪಿನ ರೋಮಾಂಚನವಲ್ಲ. ಅದು ಆತ್ಮಗೌರವದ ಸ್ವಾಯತ್ತ ಬದುಕಿಗೆ ಸಂಬಂಧಿಸಿದ್ದಾಗಿತ್ತು ಎಂಬ ಅರಿವಿರಬೇಕು. ಈ ಕ್ವಿಝ್ ಗೆ ಸ್ಮೃತಿ ಪರಂಪರೆಯವರ ಭಜನೆಯಿಂದಾಚೆಗಿನ ಶಕ್ತಿಯಿಲ್ಲ. ಹೀಗೆ ಪ್ರಶ್ನಿಸುವ ವೇಳೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಗ್ರಂಥಾಲಯಗಳಲ್ಲಿ ಎಂತಹ ಪುಸ್ತಕಗಳು ತುಂಬಿಕೊಳ್ಳುತ್ತಿವೆ? ಅಲ್ಲಿ ಗಾಂಧಿ ಚಿಂತನೆಗೆ ಪೂರಕವಾದ ಎಷ್ಟು ಪುಸ್ತಕಗಳು ಪೂರೈಕೆಗೊಳ್ಳುತ್ತಿವೆ? ಅಲ್ಲಿಗೆ ಎಂತಹ ಪುಸ್ತಕಗಳು ತಲುಪಿವೆ? ಗಾಂಧಿ ಕುರಿತ ಪಠ್ಯಗಳ ಬೋಧನೆಗೆ ಇಂದಿಗೂ ಏಳುತ್ತಿರುವ ಪ್ರತಿರೋಧದ ನೆಲೆಗಳ ಹಿಂದಿನ ಕಾರಣ ಮತ್ತು ಕೈಗಳಾವುವು? ಬೀದಿ ಬೀದಿಯಲ್ಲಿ ಮೈಕ್ ಹಿಡಿದು ಕ್ವಿಝ್ ಸರಣಿ ನಡೆಸುವ ಬ್ರಹಸ್ಪತಿಗಳು ಈ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಬೇಕಿದೆ. ಒಬ್ಬ ಮಂತ್ರಿಯಾಗಿ ಕಿಮ್ಮನೆಯವರಿಗೆ ಹಾಗೂ ಪ್ರಜಾಪ್ರಭುತ್ವದ ಎಚ್ಚರದ ಕಣ್ಣಾಗಿ ಮಾಧ್ಯಮಗಳಿಗೆ ಇವೆಲ್ಲವುಗಳ ಕುರಿತ ಪ್ರ್ರಾಂಜಲವಾದ ಆತ್ಮನಿರೀಕ್ಷಣೆಯೂ ಇದ್ದಿದ್ದರೆ ಒಳ್ಳೆಯದಿತ್ತು. ಯಾಕೆಂದರೆ ಗಾಂಧಿ ತನ್ನ ಬದುಕನ್ನೇ ‘ಸತ್ಯದೊಂದಿಗಿನ ಪ್ರಯೋಗ’ ಎಂದವರು. ‘ದೇವರನ್ನು ಸತ್ಯವೆನ್ನದೆ, ಸತ್ಯವನ್ನೇ ದೇವರು’ ಎಂದವರು. ಪೊಳ್ಳು ಪುರಾಣವನ್ನು ನಂಬಿ ನಿಜ ಹರಿಶ್ಚಂದ್ರನಾದ ಗಾರುಡಿಯವರು. ಈ ಪ್ರಶ್ನೆ ಮತ್ತು ಉತ್ತರಗಳು ಏನೇ ಇರಲಿ, ಗಾಂಧಿ ಮೇಲಿನ ಪ್ರೀತಿಯ ಉಬ್ಬರದಲ್ಲಿ ಕಿಮ್ಮನೆಯವರು ಪರೋಕ್ಷವಾಗಿ ಪ್ರಾಥಮಿಕಶಾಲೆಯ ಶಿಕ್ಷಕರ ಮೆದುಳಿಂದ ಗಾಂಧೀ ಗುರುತು ಖಾಲಿಯಾದುದನ್ನು ತೋರಲು ಮಾಧ್ಯಮಗಳಿಗೆ ಅನುವು ಮಾಡಿಕೊಟ್ಟರೆಂಬುದು ಸುಳ್ಳಲ್ಲ. ಗಾಂಧಿ ಇದ್ದಿದ್ದರೆ ನಾಥೂರಾಮನ ಗುಂಡಿಗೆ ನರಳಿದಂತೆ ಇನ್ನೊಮ್ಮೆ ಖಂಡಿತವಾಗಿಯೂ ನರಳುತ್ತಿದ್ದರು. ಯಾಕೆಂದರೆ ಆತ ಮಹಾತ್ಮನಲ್ಲವೆ?

ಗಾಂಧಿ ಹುಟ್ಟಿದ ಕುಂಡಲಿಗಿಂತ ಗಾಂಧಿ ಎಂದರೇನು? ಕ್ವಿಝ್ ನ ಸರಕಾಗಿಯೋ, 200px-MKGandhi[1]ಸಂತನಾಗಿಯೋ, ದೇಶವನ್ನು ಒಡೆದ ಅಪರಾಧಿಯಾಗಿಯೋ ತುಂಡಾಗಿಸಿಕೊಂಡು ಬಳಕೆಗೆ ದಕ್ಕಿಸಿಕೊಳ್ಳುತ್ತಲೇ ಬಂದ ಈ ಗಾಂಧಿ ಎಂಬ ಗುರುತು ಮತ್ತೆ ಮತ್ತೆ ನಮ್ಮನ್ನು ಯಾಕಾದರೂ ಕಾಡುತ್ತದೆ? ಇದು ಕೇವಲ ಭಾರತೀಯರಿಗಷ್ಟೇ ಎದುರಾಗಬಹುದಾದ ಪ್ರಶ್ನೆಯಲ್ಲ. ಜಗತ್ತಿಗೆ ಎದುರಾಗಬಹುದಾದ ಪ್ರಶ್ನೆ. ಯಾಕೆಂದರೆ, ನೆಟಾಲಿನ ರಾಜಧಾನಿಯಾದ ಮೆರಿಟ್ಸ್ ಬರ್ಗ್ ನಲ್ಲಿ  ರೈಲ್ವೇ ಪ್ಲಾಟ್ ಫಾರಂನಲ್ಲಿ ಚಲ್ಲಾಪಿಲ್ಲಿಯಾದ ಹಾಸಿಗೆ ಪೆಟ್ಟಿಗೆ ಕಾಗದಗಳ ನಡುವೆ!! (ಸವಿತಾ ನಾಗಭೂಷಣ, ಸಕಾಲ ಅಕ್ಟೋಬರ್2007, ಪು.29) ಹುಟ್ಟಿದ ಈ ಗಾಂಧಿ ಮತ್ತೆ ಸಾಯಲೇ ಇಲ್ಲ!? ಆದರೆ ಹೀಗೆ, “ಒಂದೆ ಹಿಡಿಮೂಳೆ ಚಕ್ಕಳ: ಅದಕೆ ಸುರಿ ಮೂರುನಾಲ್ಕೋ ಚಮಚ ರಕ್ತ-ಮಾಂಸ-ಜೊತೆಗಿರಿಸು ಪಾಪಮಂ ನೆರೆತೊರೆದ ಕಡಲಿನಾಳದ ಮನಸ, ನೆರೆಬಂದ ಕಡಲಿನೊಲು ಪ್ರೇಮಮಂ ತುಂಬಿದೆದೆಯ, ಹಚ್ಚು- ಮೊರಕಿವಿಯೆರಡ; ಎರಡು ಪಿಳಿ ಪಿಳಿ ಕಣ್ಣ, ಹಾಲು ಹಸುಳೆಯ ಮಂದಹಾಸವನು ಲೇಪಿಸದಕೆ, ……… ಚಿಂದಿಯಂ ಸುತ್ತಿ, ಸೆಳೆಬೊಂಬಿನಾಲಂಬನವನಿತ್ತು ಬಡಿಸು ತಾ! ಅವನೆ ಕಾಣ್! ಲೋಕತಾರಕ! ನಮ್ಮ ಬಾಪೂ!” (ಟಿ.ಪಿ.ಕೈಲಾಸಂ, ಸಕಾಲ, ಅಕ್ಟೋಬರ್2007, ಪು.5) ಎಂದು ಬೇಕಾದಂತೆಲ್ಲಾ ರೇಖೆಯೆಳೆದು ಕಟ್ಟಿಕೊಳ್ಳಬಲ್ಲ ಸರಿಯಲಾರದ ಸಂತನಾಗಿ ಗಾಂಧಿ ನಮ್ಮೊಳಗೆ ಉಳಿದುದಾದರೂ ಹೇಗೆ? ರಕ್ತಮಾಂಸದ ಈ ರೂಹು ಮಾನವಪ್ರಪಂಚದಲ್ಲಿ ನಡೆದಾಡಿತ್ತೇ ಎಂಬ ವಿಜ್ಞಾನಿ ಐನ್ಸ್ ಸ್ಟಿನ್ ಉದ್ಘಾರಕ್ಕೆ ಕಾರಣವಾದ ನಿಜ ಅದ್ಭುತವೊಂದು ನಮ್ಮ ನಡುವೆಯೇ ಬಾಳಿ ಮತ್ತೀಗ ಬದುಕುತ್ತಲೇ ಉಳಿದ ಸೋಜಿಗವಾದರೂ ಹೇಗೆ ಸಾಧ್ಯವಾಯಿತು? ಕೇವಲ ಅಚ್ಚರಿ, ಅಮೂರ್ತವಷ್ಟೇ ಆಗದೆ, ಅದನ್ನೂ ಮೀರಿ ಮೂರ್ತವೂ ಮನಸ್ಸಾಕ್ಷಿಯ ಭಾಗವೂ ಆದ ನಿಜದ ಹರಿಶ್ಚಂದ್ರನಾಗಿ ಬದುಕಿ ಬಿಟ್ಟುಹೋದ ಕುರುಹುಗಳ ಸಮುಚ್ಚಯವಾದುದು ಹೇಗೆ? ಎದೆಯಾಳದ ತಂಪಿಗೆ ಕೆಂಪಾಗಿ ಕುದುರಲಾಗದೆ ಮುದಿಯೆದೆಯನ್ನು ಸುಟ್ಟು ತೂರಿದ ಆ ಬಿಸಿಗುಂಡು ಇಂದಿಗೂ ಅಸಹಾಯಕತೆಯಲ್ಲಿ ಈ ಸತ್ಯದ ಸಮಾಧಿಯೆದುರು ಯಾಕೆ ಸಲಾಮುಹಾಕಿ ಸೋಲು ಒಪ್ಪಿಕೊಳ್ಳುತ್ತಿದೆ? ನಿಜಕ್ಕೂ ಗಾಂಧಿ ಒಂದು ಪ್ರಶ್ನೆ. ಅದೊಂದು ಉತ್ತರವಲ್ಲ.

ಗಾಂಧಿ ಜಗತ್ತಿಗೊಂದು ರೋಮಾಂಚನ ಎಂಬುದು ನಿಜ. ಆದರೆ ಅದು ಭಾರತದ ಮಣ್ಣಿಗೆ ಸಹಜವೇ. ಯಾಕೆಂದರೆ ಇದು ಬುದ್ಧ, ಬಸವ, ಜ್ಯೋತಿಬಾಪುಲೆ, ಅಂಬೇಡ್ಕರ್ ಅವರುಗಳನ್ನು ಹೆತ್ತ ಮಣ್ಣು. ಈ ಮಣ್ಣಿನ ಸಹಜ ಪ್ರಸವದ ಕುಡಿ ಗಾಂಧಿ. ಮನಸಾಕ್ಷಿಯಿಲ್ಲದ ವಂಚನೆಯ ಹುಲುಸಂತಾನದ ಸಾಲು ಸಾಲು ಓಳಿಯ ನಡುವೆ ಈ ನೆಲ ಹೆತ್ತ ದೀಪದ ಬುಡ್ಡಿಗಳಿವು. ಅದರಲ್ಲಿ ಗಾಂಧಿಯಾದರೋ ಬಂದ ಬಂದವರಿಗೆಲ್ಲಾ ಕೊಟ್ಟು ಚಲ್ಲಿ ಸೂಸುವ ತನ್ನ ಮುಗುಳ್ನಗೆಯಂತೆ ಕಾಲಕಾಲಕ್ಕೆ ಲೋಕಕ್ಕೆ ಹೇಳಬೇಕಾದುದನ್ನು ದಾಖಲಿಸುತ್ತಾ ಹೋದವರು. ಕಾಲಕಾಲಕ್ಕೆ ತನ್ನನ್ನೊಡ್ಡಿಕೊಂಡ ಸತ್ಯದ ಶೋಧದಲ್ಲಿ ಕಂಡುದಕ್ಕೆ ಅನುಸಾರವಾಗಿ ಪರಿವರ್ತಿತವಾಗುತ್ತಾ ಹೋದವರು. ತಾನು ಹೇಳಿದ್ದನ್ನೇ ಬದುಕಲೆತ್ನಿಸಿದವರು. ಬದುಕಲಾರದ್ದನ್ನು ಹೇಳುವಲ್ಲಿ ಅಳುಕಿದವರು. ಪರಮ ಧಾರ್ಮಿಕನಾದ ಗಾಂಧಿ ಧರ್ಮವನ್ನು ಯಾವುದೇ ನಿರ್ದಿಷ್ಟ ಮತಕ್ಕೆ ಸಮವೆಂದು ಪರಿಗಣಿಸಿದವರಲ್ಲ. ಹಾಗಾಗಿ ಅವರಿಗೆ ಏಕಕಾಲದಲ್ಲಿ ಹಿಂದುವೂ, ಮುಸ್ಲಿಮನೂ, ಪಾರಸಿಯೂ, ಕ್ರಿಶ್ಚಿಯನನೂ ಆಗುವುದು ಅಸಾಧ್ಯವೆನಿಸಲೇ ಇಲ್ಲ. ಹೀಗೆ ಕ್ರಿಯಾಶೀಲತೆ ಮತ್ತು ಪ್ರತಿರೋಧದ ಚಿರಂತನ ರೂಪಕದಂತೆ ಉಳಿದು ಹೋದ ಗಾಂಧಿಯನ್ನೇ ತನ್ನೊಳಗೆ ಆವಾಹಿಸಿಕೊಂಡ ‘ಸೆಲೆಕ್ಟೆಡ್ ರೈಟಿಂಗ್ಸ್ ಆಫ್ ಮಹಾತ್ಮಾಗಾಂಧಿ’ ಪುಸ್ತಕದ ಸಂಪಾದಕ ರೋನಾಲ್ಡ್ ಡಂಕನ್, ತಾಜ್ ಮಹಲನ್ನು ನೋಡಬಂದವರು ಅಪ್ಪಿತಪ್ಪಿಯೂ ನೋಡದ ನಿಜವಾದ ಭಾರತವನ್ನು ಗಾಂಧೀ ತನಗೆ ಪರಿಚಯಿಸಿದ ಬಗೆಯನ್ನು ಕುರಿತು ಬರೆದ ವಿವರಗಳಂತೂ ಗಾಂಧಿಯೊಳಗಿನ ತಾಯ್ತನದ ಮಹಾರೂಪಕವನ್ನೇ ಕಟ್ಟಿಕೊಟ್ಟಂತಿದೆ (ವಿವರಗಳಿಗೆ 26-1-14ರ ಪ್ರಜಾವಾಣಿ ಸಾಪ್ತಾಹಿಕದ ಪು.2ನ್ನು ನೋಡಿ). ಹೀಗಾಗಿಯೇ ಗಾಂಧಿಯನ್ನು ಕುರಿತು ಬರೆಯುತ್ತಾ, “ಗಾಂಧೀ ಪ್ರಭೆ ಇರುವುದು ಅವರೊಬ್ಬ ಸಿದ್ಧಾಂತಿ ಎಂಬುದರಲ್ಲಿ ಅಲ್ಲ. ಅವರ ಪ್ರಶ್ನೆಬೋಧೆಗಳಲ್ಲಿ ಅಲ್ಲ. ನುಸಿ ಗುಳಿಗೆಗಳ ಮಧ್ಯೆ ಮ್ಯೂಸಿಯಂನಲ್ಲಿ ಸಂರಕ್ಷಿಸಿ ಇಟ್ಟ ಚಿಂತನೆಗಳಲ್ಲೂ ಅಲ್ಲ. ಯಾವೊತ್ತೂ ಗಾಂಧಿ ಒಂದು ಪ್ರಕ್ರಿಯೆ. ಒಂದು ಪ್ರಯೋಗ. ರಂಗದ ಒಂದು ತುಣುಕು, ಶಾಶ್ವತ ಚರ್ಚೆಯ ಒಂದು ಭಾಗ……..ಗಾಂಧಿ ಒಂದು ಪ್ರಭುತ್ವ ಅಲ್ಲ. ನೈತಿಕತೆ ಹಾಗೂ ರಾಜಕೀಯದ ನಡುವೆ ಹೊಸ ಸಂಬಂಧವನ್ನು ಕಲ್ಪಿಸುವ ಶಾಶ್ವತ ಪ್ರಕ್ರಿಯೆ” (26-1-14ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ಪು.1) ಎಂದೆನ್ನುವ ಶಿವವಿಶ್ವನಾಥನ್ ಅವರ ಮಾತಿಗೊಂದು ವಿಶೇಷ ಅರ್ಥವಿದೆ. ಈ ಪ್ರಕ್ರಿಯಾತ್ಮಕ ಗುಣದಿಂದಾಗಿಯೇ ಗಾಂಧಿಯ ಬದುಕಿಗೊಂದು ಚೌಕಟ್ಟು ಹಾಕುವುದು ಅಸಾಧ್ಯವೂ ಆಗಿದೆ. ಈ ಮಾತು ಗಾಂಧಿ ಹುಡುಕುತ್ತಾ ಹೋದ ಸತ್ಯದ ಬಗೆಗೂ, ಸ್ವಾತಂತ್ರ್ಯದ ಬಗೆಗೂ ಅನ್ವಯವಾಗುತ್ತದೆ ಎಂಬುದನ್ನು ಮರೆಯಬಾರದು.

ಗಾಂಧಿ ನೋಡಲೆಷ್ಟು ಸರಳವೋ ಅಷ್ಟೇ ನಿಷ್ಟುರಿ. ಆದರೆ ಡಿ.ಆರ್.ನಾಗರಾಜ ಅವರು ಗುರುತಿಸುವಂತೆ, mahatma_gandhi_artworkಗಾಂಧಿ ಎಂದೂ ವೀರ್ಯವತ್ತಾದ ಪರಿಭಾಷೆಯಲ್ಲಿ ಮಾತನಾಡಲಿಲ್ಲ (ಸಾಹಿತ್ಯಕಥನ, ಪು.258). ‘ಹೆಣ್ಣಿಗತನ’ವನ್ನು ಅಪಮಾನವಾಗಿ ಕಾಣದ ಈ ಅರ್ಧನಾರೀಶ್ವರ ಪ್ರತಿಮೆ ಹೇಡಿತನದ ರೂಪಕವೂ ಅಲ್ಲ. ಈ ಸತ್ವದಿಂದಾಗಿಯೇ ಅವರು ಹೇಡಿಗಳಿಗೆ ಸಾಧ್ಯವಿರದ ‘ಅಹಿಂಸೆ’ಯೆಂಬ ನಿಷ್ಠುರ ಆಯುಧವನ್ನು ಬಳಸಿದವರು. ಇಂತಹ ಗಾಂಧಿ ರೂಪುಗೊಂಡುದು ಎಲ್ಲಿ? ಈ ಪ್ರಶ್ನೆಯ ಉತ್ತರ ಮಾನವಸಂಸ್ಕೃತಿಯ ಆಳಕ್ಕೊಯ್ಯುತ್ತದೆ. ಆಗಂತುಕವಾದ ಕ್ವಿಝ್ ನ ಮೂಲಕ ತೂರಿಬಂದ ಗಾಂಧಿಯನ್ನು ಗಾಂಧೀ ಪ್ರಸ್ತಾಪವೇ ಇರದ ಇನ್ನೊಂದು ಕ್ವಿಝ್ ನ ಮೂಲಕವೇ ವಿವರಿಸಿಕೊಳ್ಳಬಹುದೋ ಏನೋ? ಅದು ಗಿಳಿಪಾಠದ ಕ್ವಿಝ್ ಅಲ್ಲ. ಅಕ್ಷರವೆಂಬ ಬ್ರಾಂತಿಯಲ್ಲಿ ಹುಟ್ಟಿದ್ದೂ ಅಲ್ಲ. ಆದರೆ ಅದು ಮಾನವಸಮಾಜವನ್ನು ನಾಗರಿಕಗೊಳಿಸುವ ಮಹತ್ ಶಕ್ತಿಯಾಗಿ ಗಾಂಧೀ ಕಂಡುಕೊಂಡ ಹೆಣ್ತನದ ಮಾದರಿಗೆ ಸಂಬಂಧಿಸಿದ್ದು. ಆಕೆಯಾದರೋ ಕೈಗೆ ನೂರರ ನೋಟಿಟ್ಟರೆ “ಇದನ್ ನಾನೇನ್ ಮಾಡ್ಲೀ” ಎಂಬಷ್ಟೂ ಎತ್ತರದವಳು. ಗಾಂಧಿ ಅಗತ್ಯಕ್ಕಿಂತ ಹೆಚ್ಚನದನ್ನು ಕಳ್ಳತನಕ್ಕೆ ಸಮವೆಂದರೆ, ಆಕೆ ಹಣದ ಅಗತ್ಯವೇ ಇಲ್ಲದೆ ಬದುಕು ಕಂಡವಳು! (ಕೃಷ್ನಮೂರ್ತಿ ಹನೂರರು ಹೇಳಿದ ಸಿರಿಯಜ್ಜಿಯ ಮಾಹಿತಿಗಳಿವು). ಈಗ ಹೇಳಹೊರಟಿರುವುದು ನೂರರ ತುಂಬು ಬದುಕು ಬದುಕಿದ ಈ ಜಾನಪದದ ಸಿರಿಯಜ್ಜಿ ನಡೆಸಿದ ಕ್ವಿಝ್! ಯಾವ ಮಾಧ್ಯಮಗಳೂ ಅದನ್ನು ಹೊತ್ತು ಮೆರೆಸಲಿಲ್ಲವೆಂಬುದು ಬೇರೆಮಾತು.

ಜಾನಪದಶ್ರೀ ಪ್ರಶಸ್ತಿ ಸಂದಾಯದ ಸಂದರ್ಭದಲ್ಲಿ ಸಿರಿಯಜ್ಜಿ ಮುಖ್ಯಮಂತ್ರಿ ಜೊತೆಗೆ ನಡೆಸಿದ ಸಂಭಾಷಣೆಯ ತುಣುಕನ್ನೇ ನಾನಿಲ್ಲಿ ಕ್ವಿಝ್ ಎಂದಿದ್ದೇನೆ ಅಷ್ಟೆ. ಜಾನಪದ ಸಂಶೋಧಕ ಡಾ.ಕೃಷ್ಣಮೂರ್ತಿ ಹನೂರ ಅವರು ನೆನಪಿಸಿಕೊಂಡಂತೆ ಅಲ್ಲಿ ನಡೆದುದಿಷ್ಟು. ತನಗೆ ಘೋಷಿತವಾದ ಪ್ರಶಸ್ತಿ ನೀಡುವ ವೇದಿಕೆಯಲ್ಲಿ ವ್ಯವಸ್ಥಾಪಕರು ಕೂರಿಸಿದಂತೆ ಅಜ್ಜಿ ಕೂತಿದ್ದರು. ಮುಖ್ಯಮಂತ್ರಿ ಬಂದಾಕ್ಷಣ ವೇದಿಕೆಯಲ್ಲಿದ್ದವರೆಲ್ಲಾ ಎದ್ದು ನಿಂತರು. ಆದರೆ ಅಜ್ಜಿಗೆ ನಿಲ್ಲುವಂತೆ ಪಿಸುಗುಟ್ಟಿದ ಹನೂರರಿಗೆ ಯಾಕೆ ನಿಲ್ಲಬೇಕು? ಎಂದು ಮರುಪ್ರಶ್ನೆ ಹಾಕಿ ಅಜ್ಜಿ ಸುಮ್ಮನೆ ಕೂತೇ ಇತ್ತು. ನಾಡಿನ ಅಧಿಕಾರದ ದೊಡ್ಡ ಗುರುತೇ ಬಂದು ಎದುರು ನಿಂತಾಗಲೂ ಏನೂ ಆಗದವಳಂತೆ ಕುಳಿತೇ ಇತ್ತು! ಅಷ್ಟೇ ಅಲ್ಲ ಮುಖ್ಯಮಂತ್ರಿಯನ್ನು ತನಗೆ ಪರಿಚಯಿಸುತ್ತಿರುವ ಹೊತ್ತು ತನ್ನೆದುರಿನ ಆ ಗಂಡುಜೀವವನ್ನು ನಿರ್ಭಾವುಕವಾಗಿ ನೋಡಿ, “ಯಾರಪ್ಪಾ ನೀನು?” ಎಂದು ಪ್ರಶ್ನಿಸುತ್ತದೆ! ಹುಷಾರಾದ ಮುಖ್ಯಮಂತ್ರಿ ನಿನ್ನ ಮಗ ಕಾಣಜ್ಜಿ ಎಂದು ಉತ್ತರಿಸುತ್ತಾರೆ. ಅದಕ್ಕೆ ಪ್ರತಿಯಾಗಿ, “ನಿನ್ನ ಹೆಂಡ್ರು ಮಕ್ಕಳೆಲ್ಲಾ ಸಂದಾಗಿದ್ದಾರೇನಪಾ?” ಎಂಬುದು ಸಿರಿಯಜ್ಜಿಯ ಇನ್ನೊಂದು ಪ್ರಶ್ನೆ. ಅದಕ್ಕೆ ಮುಖ್ಯಮಂತ್ರಿ “ಹೂಂ ಕಾಣಜ್ಜಿ” ಎಂದು ಉತ್ತರಿಸುತ್ತಾರೆ. ಇದೊಂದು ಅಪರೂಪದ ಕ್ವಿಝ್. ಇಲ್ಲಿರುವುದು ಎಲ್ಲ ಅಧಿಕಾರ, ಅಂತಸ್ತನ್ನೂ ದಾಟಿನಿಂತ ಸಾತ್ವಿಕತೆಗೆ ಸಾಧ್ಯವಾಗುವ ವಿವೇಕ ಮತ್ತು ಧೈರ್ಯ. ಕುರುಹುಗಳಿಗೆ ಲೇಶಮಾತ್ರವೂ ಬೆಲೆಕೊಡದ ಬುದ್ಧಪ್ರಜ್ಞೆಗಷ್ಟೇ ಸಾಧ್ಯವಾಗುವ ಜೀವಕರುಣೆ. ಪ್ರಾಯಶಃ ಗಾಂಧೀ ಒಳಗೆ ಜನಸಮುದಾಯದ ಈ ವಿವೇಕ ಮತ್ತು ಸಾತ್ವಿಕ ಧೈರ್ಯದ ಒಂದು ಪಾಲು ಮಡುಗಟ್ಟಿಕೊಂಡಿದ್ದರಿಂದಲೋ ಏನೋ ಅದಕ್ಕೆ ನೆಲದ ಮೇಲಿನ ರಕ್ತಮಾಂಸದ ಅದ್ಭುತವಾಗಲು ಸಾಧ್ಯವಾಯಿತು. ಗಾಂಧಿ ಸಿನಿಮಾ ನೋಡಿ “ಸಾಯಲು ಮಾನಸಿಕವಾಗಿ ದೃಢವಾಗಿ ಸಿದ್ಧನಾದವನು ಮಾತ್ರ ಗಾಂಧಿಯಾಗಬಲ್ಲ ” (ಎದೆಗೆ ಬಿದ್ದ ಅಕ್ಷರ, ಪು.292) ಎಂಬ ದೇವನೂರ ಮಹಾದೇವರ ಉದ್ಗಾರವು ಈ ಅರ್ಥದಲ್ಲಿ ಸಕಾರಣವಾದುದು. ಅದು ಸಮುದಾಯದ ವಿವೇಕದ ಕೆನೆ. ಪ್ರಾಯಶಃ ಗಾಂಧಿ ಕುರಿತ ಕ್ವಿಝ್ ಮಾಡಿದೋರು ಮತ್ತು ಅದನ್ನು ಹೊತ್ತು ಊರೆಲ್ಲಾ ಮೆರೆಸಿದವರು ಗಾಂಧಿಯೆಂಬ ಗಾರುಡಿಯನ್ನು ರೂಪುಗೊಳಿಸಿದ ಜನವಿವೇಕವನ್ನು ಒಂದಿಷ್ಟು ಇಣುಕಿ ನೋಡುವುದು ಒಳ್ಳೆಯದು. ಅದು ಅಧಿಕಾರವನ್ನೂ ಕೇಡಾಗಿಯೇ ಪರಿಭಾವಿಸುತ್ತದೆ. ಹಾಗಾಗಿ ಮಿಕ್ಕವರು ಸ್ವಾತಂತ್ರ್ಯದ ರುಚಿ ಸವಿಯುತ್ತಾ ಕೆಂಪುಕೋಟೆಯ ಮೇಲೆ ದ್ವಜಹಾರಿಸುವ ಧಾವಂತದಲ್ಲಿದ್ದರೆ, ಗಾಂಧಿಗೆ ಕೋಮುದಳ್ಳುರಿಗೆ ತುತ್ತಾದ ಕಲ್ಕತ್ತಾದ ಬೀದಿಗಳ ಬೆಂಕಿ ಆರಿಸುವುದು ಮುಖ್ಯವಾಗುತ್ತದೆ. ಹೆಂಡಿರು ಮಕ್ಕಳಿಂದ ಕೂಡಿದ ಸುತ್ತಣ ಸಂಸಾರಗಳನ್ನು ಸುಖವಾಗಿಡುವುದು ಆದ್ಯತೆಯಾಗುತ್ತದೆ.

ಆದರೆ ಗಾಂಧಿಯನ್ನು ಪ್ರಶ್ನೆಯಾಗಿಸಿಕೊಂಡು ಹುಡುಕಬೇಕಾದ ನಮಗೆ ಅವರ ಚಿಂತನೆಗಳು ಪ್ರಶ್ನೆಗೆ ಹೊರತಾಗಬೇಕಿಲ್ಲ. ಗಾಂಧಿ ಚಿಂತನೆಯ ಮಿತಿಗಳನ್ನು ನಾವು ಮುಸುಕುಹಾಕಿ ಮರೆಮಾಡಬೇಕಿಲ್ಲ. ಮುಖ್ಯವಾಗಿ ‘ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಪಾಪ’ವೆಂದು ಘೋಷಿಸಿದ ಗಾಂಧಿಯನ್ನು ಅಂಬೇಡ್ಕರ್ ಯಾಕೆ ಅನುಮಾನಿಸಿದರು ಎಂಬುದನ್ನು ನಾವು ಕೆದಕಿ ಕೇಳಿಕೊಳ್ಳುವುದೂ ತಪ್ಪಲ್ಲ. ಅಸ್ಪಶ್ಯರೋ, ಮಹಿಳೆಯರೋ ಇಂದು ಪಡೆದ ಅಲ್ಪ ಬಿಡುಗಡೆಯ ಹಿಂದೆ ಇರುವುದು ಗಾಂಧೀ ಚಿಂತನೆಯೋ, ಸಂವಿಧಾನವೋ ಎನ್ನುವುದನ್ನು ನಾವು ಪ್ರಾಂಜಲವಾಗಿಯೇ ಪ್ರಶ್ನಿಸಿಕೊಳ್ಳಬೇಕಿದೆ. ಯಾಕೆಂದರೆ ಗಾಂಧಿ ಮುಂದಿಟ್ಟ ಟ್ರಸ್ಟಿಶಿಪ್ ಇರಲಿ, ವಿಧವೆಯರ ಮತ್ತು ಮಹಿಳೆಯರ ಪ್ರಶ್ನೆಗೆ ಸಂಬಂಧಿಸಿದ ನಿಲುವುಗಳಿರಲಿ, ವರ್ಣಾಶ್ರಮ, ಜಾತಿಸಂಕರ ಕುರಿತ ನಿಲುವುಗಳಿರಲಿ, ಈ ದೇಶದ ಶತಮಾನಗಳ ಇತಿಹಾಸದ ಸಾಂಸ್ಕೃತಿಕ ಕೇಡುಗಳಿಗೆ ಅಹಿತವಾದವುಗಳು ಅಲ್ಲವೆಂಬುದನ್ನು ನಾವು ಗಮನಿಸಬೇಕಾಗಿದೆ. ಗಾಂಧಿಯನ್ನು ಸಂತನನ್ನಾಗಿಸಲು, ಮೇಕಿಂಗ್ ಮಹಾತ್ಮಕ್ಕೆ ಬೇಕಾದಷ್ಟು ಸ್ಟಫ್ ಆ ಸಣಕಲು ಶರೀರದೊಳಗೇ ಇರುವಂತೆ ಚರಿತ್ರೆಯೂ ಅಪಾರ ಕರುಣೆತೋರಿದೆ. ಆದರೆ ಗಾಂಧಿಯನ್ನು ಸಂತನನ್ನಾಗಿ ಮೂರ್ತೀಕರಿಸಿ ಆ ಚಿಂತನೆಯ ನೆರಳಿನಡಿಗೆ ನಿರಾಳವಾಗುವ ಕೇಡುಗಳನ್ನು ಮರೆತೆವೆಂದರೆ ನಾವು ವಾತಾಪಿಗರ್ಭದಲ್ಲಿ ಜೀರ್ಣವಾಗುವ ಅಪಾಯವಿದೆ. ಇದರ ಅರಿವು ನಮಗಿರಬೇಕು. ಅದನ್ನು ಸ್ವಯಂ ಗಾಂಧಿಯಂತಹ ಗಾಂಧಿಯೇ ತನ್ನ ಕೊನೆಗಾಲದಲ್ಲಿ ಕಂಡುಕೊಂಡಿದ್ದರೋ ಏನೋ? ಯಾಕೆಂದರೆ ವರ್ಣಾಶ್ರಮದ ಬಗೆಗಿನ ತಮ್ಮದೇ ನಿಲುವಿಗೆ ವ್ಯತಿರಿಕ್ತವಾಗಿ ಕೊನೆಗಾಲದಲ್ಲಿ ಅಂತರ್ಜಾತಿ ವಿವಾಹಕ್ಕಷ್ಟೇ ಹೋಗಲು ನಿರ್ಧರಿಸಿದ್ದರು. ಅವರಲ್ಲಿನ ಈ ಯೂಟರ್ನ್ ಗಳು, ಅವರ ಬಗೆಗೆ ಮಾತಾಡದೆ ಉಳಿದ ಸತ್ಯಗಳು ನಮಗಿಂದು ಮುಖ್ಯವಾಗಬೇಕಿದೆ.

ಗಾಂಧಿ-ಅಂಬೇಡ್ಕರ್ ಅವರುಗಳನ್ನು ಎದುರಾಳಿಗಳಾಗಿ ನಿಲ್ಲಿಸಿ, ದೇಶದ ಸಾಂಸ್ಕೃತಿಕ ಕೇಡುಗಳನ್ನು ಮುನ್ನೆಲೆಗೆ ತಂದು ವಿವರಿಸಿಕೊಳ್ಳುವ ಮೂಲಕವೇ Young_Ambedkarಇಬ್ಬರನ್ನೂ ಸಮರಸವಾಗಿ ನಾವು ಬಳಸಿಕೊಳ್ಳಬೇಕಿದೆ. ಇದಕ್ಕೆ ಗಾಂಧೀಜಿಯ ಬದುಕೂ ಇಂಬುಕೊಡುವಂತಿದೆ. ಯಾಕೆಂದರೆ ಗಾಂಧಿ ಬದುಕೇ ಒಂದು ಚಲನಶೀಲ ನಡೆ. ಅದು ಸರಿದಾರಿಯನ್ನು ಹುಡುಕಿ ತಡಕಾಡಿಕೊಂಡು ಹೊರಟಂತೆಯೇ ಇದೆ. ಸರಿದಾರಿಗೆ ತಲುಪಿದರೋ ಅನ್ನುವ ಹೊತ್ತಿಗೆ ಅವರನ್ನು ಹೊಡೆದುರುಳಿಸಲಾಗಿತ್ತು. ಅದು ಭಾರತ-ಪಾಕಿಸ್ತಾನದ ಕಾರಣಕ್ಕಾಗಿಯಷ್ಟೇ ಸಿಡಿದ ಗುಂಡಲ್ಲ. ದೇಶದ ಸಾಂಸ್ಕೃತಿಕ ಕೇಡುಗಳ ವಿರುದ್ಧವಾಗಿ ಕೊನೆಗಾಲದಲ್ಲಿ ಅವರೆತ್ತಿದ ಧ್ವನಿಹಿಚುಕಲು ಮಾಡಿದ ಯತ್ನವಾಗಿತ್ತು. ಅದನ್ನೇ ಬೇಂದ್ರೆ “ಕೊಂದರೋ ಲೋಕಕಾಶೀರ್ವಾದ ಪ್ರಾರ್ಥಿಸುವ ಸಮಯಕ್ಕೆ ಕೊಂದರು!” (ಔದುಂಬರಗಾಥೆ,ಸಂಪುಟ-1,ಪು.444) ಎಂದು ಸೂಚ್ಯವಾಗಿ ಬರೆಯುತ್ತಾರೆ. ಹೀಗೆ ಸತ್ತು ಶಕ್ತಿಯಾದ ಗಾಂಧಿಯನ್ನು ಸಂತನ ಪದವಿಯಲ್ಲಿಟ್ಟು ಮತ್ತೆ ಸಮಾಧಿ ಕಟ್ಟುವ ಬದಲು, ಕ್ವಿಝ್ ಮಾಡಿ ಗಿಳಿಪಾಠವನ್ನು ಪರೀಕ್ಷಿಸುವ ಬದಲು, ಸಮಾಧಿಯಾಳದ ಕೇಡಿನ ದರ್ಶನವನ್ನು ಮಾಡಿಕೊಳ್ಳಬೇಕಿದೆ. ಹಾಗಾಗಿ ಪುರಾಣದ ಪೊಳ್ಳು ಕಳೆದು ನಿಜದ ತಿರುಳಾದ ಗಾಂಧಿಯನ್ನು ಪಡೆಯಲು ನಾವು ಈ ನೆಲದ ಸಾಂಸ್ಕೃತಿಕ ಕೇಡುಗಳ ಜೊತೆಗೆ ಅಪ್ಪಟ ಜೀವಕರುಣೆಯ ಮುಖಾಮುಖಿಯೊಂದನ್ನು ನಡೆಸಲೇಬೇಕಿದೆ.

ಅತ್ಯಾಚಾರವೂ ಅತಿರಂಜಿತ ಪ್ರಚಾರವೂ….

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಕಳೆದ ಕೆಲವು ವಾರಗಳಿಂದ ನಾವಿರುವ ಕರ್ನಾಟಕ ಸುರಕ್ಷಿತವೇ ಅಥವಾ ನಾವೆಲ್ಲರೂ ಕೀಚಕರಾಗಿಬಿಟ್ಟಿದ್ದೇವೆಯೇ, ಇಲ್ಲ ಕರ್ನಾಟಕದ ತುಂಬೆಲ್ಲಾ ಅನಾಥ ಸೈರೆಂದ್ರಿಯರೇ ತುಂಬಿದ್ದಾರೆಯೇ ಎಂದು ಆತಂಕಪಡುವಂತಾಗಿದೆ. ಯಾಕೆಂದರೆ ಕರ್ನಾಟಕವನ್ನು ಕುರಿತಂತೆ ಹಿಂದೆಂದೂ ಕಂಡಿರದ ‘ಕರಾಳ ಕರ್ನಾಟಕ’, ‘ಕೀಚಕ ಕರ್ನಾಟಕ’, ‘ಕಾಮುಕ ಕರ್ನಾಟಕ’ ಎಂಬ ಸಾಮೂಹಿಕ ನೆಲೆಯ ನಾಮಫಲಕಗಳು ಈ ಅವಧಿಯಲ್ಲಿ ರಾರಾಜಿಸಿವೆ. ಆಳುವ ಸರ್ಕಾರ ಮತ್ತು ಪೋಲೀಸ್ ವ್ಯವಸ್ಥೆಗಳೇ ಸೇರಿಕೊಂಡು ಕರ್ನಾಟಕವನ್ನು ಕುಲಗೆಡಿಸಿ ಸಂಭ್ರಮಿಸುತ್ತಿವೆ ಎಂಬರ್ಥದ ಚರ್ಚಾಗೋಷ್ಠಿ rape-illustrationಹಾಗೂ ಬೀದಿ ಮಾತುಗಳನ್ನು ನಿರಂತರವಾಗಿ ಉತ್ಪಾದಿಸಲಾಗುತ್ತಿದೆ. ಇಡಿಯ ಪ್ರಚಾರದಲ್ಲಿ ಕರ್ನಾಟಕದಲ್ಲಿ ಇದೇ ಮೊದಲಬಾರಿಗೆ ಹೆಣ್ಣಿನ ಮೇಲೆ ದಾಳಿ ನಡೆಯುತ್ತಿದೆ ಎಂಬ ವರಸೆ ಇದೆ. ಟಿಆರ್‌ಪಿ ಮೇಲೆ ಕಣ್ಣಿಟ್ಟ ಮಾಧ್ಯಮಗಳಂತೂ ಎಲ್ಲವನ್ನೂ ಅತ್ಯಾಚಾರದ ಪೊಟ್ಟಣದಲ್ಲಿಯೇ ಸುತ್ತಿಟ್ಟು ಮಾರುತ್ತಿವೆ. ಈ ಎಲ್ಲಾ ಅಬ್ಬರದ ಪ್ರಚಾರಗಳು ಮನೆಯಿಂದ ಹೊರಹೋಗಿ ಬರುವ ತಮ್ಮದೇ ಮಕ್ಕಳನ್ನು ಹೆತ್ತವರು ಅನುಮಾನ ಮತ್ತು ಭಯದಿಂದ ಮೂಸಿನೋಡುವ ವಾತಾವರಣ ನಿರ್ಮಿಸಿದ್ದರೆ ಅಚ್ಚರಿಯಿಲ್ಲ. ಯಾಕೆಂದರೆ ಆ ಒಟ್ಟೂ ಪ್ರಚಾರಗಳು ಕರ್ನಾಟಕವನ್ನು ಹೆಣ್ಣಿನ ಬದುಕಿಗೆ ಅನರ್ಹವಾದ ನೆಲವೆಂದೇ ನಿರ್ಧರಿಸಿಬಿಟ್ಟಿವೆ. ಇನ್ನೊಂದು ಕಡೆಯಿಂದ ಈ ಬೊಬ್ಬೆಯನ್ನೇ ಅಪೇಕ್ಷಿಸಿದ ಕೆಲವು ಸ್ಥಾಪಿತ ಹಿತಾಸಕ್ತಿಗಳು ಹೆಣ್ಣಿನ ಮಾನ ಪ್ರಾಣದ ರಕ್ಷಣೆಯ ಹೊಣೆ ತಮ್ಮದೇ ಎಂದು ಆವಾಹನೆಗೊಳಗಾದಂತೆ ಕುಣಿದಿವೆ. ಈ ನಡುವೆ ನಿಧಾನವಾಗಿ ಒಂದೆರಡು ಖೊಟ್ಟಿ ಅತ್ಯಾಚಾರ ಪ್ರಕರಣಗಳೂ ಮೂಡಿಬಂದುವೆನ್ನಿ. ಹೆಣ್ಣ್ಣೂರಿನ ಅತ್ಯಾಚಾರದ ಸುತ್ತ ಇರುವ ಅನುಮಾನವೋ, ಬೆಳಗಾವಿಯ ಯುವಕ-ಯುವತಿಯರ ಕಿಡ್ನ್ಯಾಪ್ ತಮಾಷೆಯೋ, ಬೆಂಗಳೂರಿನ ಜ್ಯೋತಿಷಿಯ ಕಪಾಳಕ್ಕೆ ಬಾರಿಸಿದ ಮಹಿಳೆಯರ ಆಟೋಪವೋ ಸುದ್ದಿಯಾಗಿ ಸತ್ಯದ ಇನ್ನೊಂದು ಮುಖದ ಆಂಶಿಕ ದರ್ಶನವೂ ಆದುದಿದೆ. ಆದರೆ ಅಷೊತ್ತಿಗಾಗಲೇ ಕರ್ನಾಟಕಕ್ಕೆ ಆಗಬಾರದ ಅಪಮಾನವೊಂದು ಆಗಿಹೋಗಿದೆ. ಕನ್ನಡನೆಲಕ್ಕೆ ಸಲ್ಲದ ಅಪನಾಮವೊಂದನ್ನು ಅಂಟಿಸಿಯಾಗಿದೆ.

ಈ ಅಬ್ಬರದ ಪ್ರಚಾರ, ಪ್ರತಿಕ್ರಿಯೆಗಳೆಲ್ಲವನ್ನು ಬದಿಗಿರಿಸಿಕೊಂಡು ನೋಡಿದಾಗಲೂ ಲೈಂಗಿಕ ಆಕ್ರಮಣ ಮಾದರಿಯ ಘಟನಾವಳಿಗಳ ಸರಣಿಯು ಯಾವ ನಾಗರಿಕಸಮಾಜಕ್ಕೂ ಗೌರವ ತರುವಂಥದ್ದಲ್ಲ. ಅದನ್ನು ಖಂಡಿಸಿ ದಂಡಿಸುವ ಜೊತೆಗೆ ಸಂಭವಿಸದಂತೆ ತಡೆಯುವುದು, ಗೌರವದ ಬಾಳು ಬಾಳಲು ಬಯಸುವ ಎಲ್ಲರ ಕರ್ತವ್ಯ. ಅಂತಹ ಘಟನೆಗಳನ್ನು ತಹಬಂದಿಗೆ ತರುವಲ್ಲಿ ಒಂದು ಸಮೂಹವಾಗಿ ಒಟ್ಟಿಗೆ ಸೇರಿಕೊಳ್ಳಬೇಕಾದ ಜವಾಬ್ದಾರಿಯೂ ನಮಗಿದೆ. ಅತ್ಯಾಚಾರವೆಂಬ ಅನಾಗರಿಕವರ್ತನೆ ಹೊಸತಾಗಿ ನಡೆಯುತ್ತಿಲ್ಲ ಎಂಬ ಸಮರ್ಥನೆಯೂ ಇಲ್ಲಿ ಸಲ್ಲದು. ಅನಾದಿಯಿಂದ ನಡೆದು ಬಂದಿರುವ ಅಮಾನವೀಯತೆಯ ಕುರಿತ ಎಚ್ಚರಕ್ಕಾಗಿಯೇ ಈ ಎಲ್ಲಾ ಪ್ರಚಾರಗಳು ನಡೆಯುವುದಾದಲ್ಲಿ ಅದು ಸ್ವಾಗತಾರ್ಹವೇ. ಆದರೆ ಆ ವಿರೋಧವು ಯಾರನ್ನೋ ಅಪರಾಧಿಸ್ಥಾನದಲ್ಲಿ ನಿಲ್ಲಿಸಿ, ಇನ್ನಾರನ್ನೋ ಅದರ ಫಲಾನುಭವಿಯಾಗಿಸುವ ವಾಸನೆಯಿಂದ ಕೂಡಿರಬಾರದು. ‘ಹೆಣ ಇಟ್ಟುಕೊಂಡು ಹೆಗ್ಗೆ ಹುಡುಕಿದ ಹಾಗೆ ಆಗಬಾರದು’ (ಹೆಗ್ಗೆ=ಚನ್ನೆಮಾಣಿ ಆಟದಲ್ಲಿ ಬಳಕೆಯಾಗುವ ಲಾಭದ ಪರಿಭಾಷೆ). ಇದು ಆಟದ ಹೊತ್ತೂ ಅಲ್ಲ. ಆಟದ ವಿಚಾರವೂ ಅಲ್ಲ. ಇಲ್ಲಿ ಪಕ್ಷವೈರ, ಅಧಿಕಾರದ ಕುರಿತಾದ ಅಸಹನೆ ಖಂಡಿತಾ ಸಲ್ಲದು. ಮಧ್ಯರಾತ್ರಿ ಹನ್ನೆರಡರ ಅವಧಿಗೂ tv-mediaಹೆಣ್ಣೊಬ್ಬಳು ನಿರ್ಭೀತಳಾಗಿ ಸಾಗಬಹುದಾದ ಭಾರತ ನಮ್ಮದಾಗಬೇಕೆಂಬುದು ಬಾಪೂ ಕಂಡ ಕನಸು. ನಾವು ಕಾಡಿಬೇಡಿ ಪಡೆದ ಸ್ವಾತಂತ್ರ್ಯದೊಳಗೆ ಆ ಆಶಯವೂ ಇದೆ. ಅದು ಕಾಣೆಯಾಗುತ್ತಿದ್ದರೆ ನಮ್ಮ ಸ್ವಾತಂತ್ರ್ಯದ ಭಾಗವೊಂದನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದೇ ಅರ್ಥ. ಇಂತಹದ್ದೊಂದು ಎಚ್ಚರವನ್ನು ಜತನದಿಂದ ಕಾಪಾಡುವುದು ತಿಳುವಳಿಕೆಯನ್ನು ಹಂಚುವ ಹಾಗೂ ತಿಳುವಳಿಕೆಯ ರಕ್ಷಕರೆನಿಸಿದ ಎಲ್ಲ ವ್ಯಕ್ತಿ ಮತ್ತು ಕೇಂದ್ರಗಳ ಕರ್ತವ್ಯ. ಆದರೆ ಈ ಜವಾಬ್ದಾರಿಯನ್ನು ಮೂಡಿಸಬೇಕಾದ ಮಾಧ್ಯಮಗಳು ಹೇಗೆ ವರ್ತಿಸಿದುವು? ಸಮೂಹದ ನಾಗರಿಕ ಸ್ವಾಸ್ಥ್ಯವನ್ನು ತಮ್ಮದೇ ನೈತಿಕ ಮಾದರಿಯ ಮೂಲಕ ಎತ್ತರಿಸಬೇಕಾದ ಹೊಣೆಗಾರಿಕೆ ಇರುವವವರು ತಾವು ಈಗಾಗಲೇ ನಡೆದು ತೋರಿದ ದಾರಿಯನ್ನು ಮರೆತು ಮಾತನಾಡಿದ ಬಗೆ ಹೇಗಿತ್ತು? ಅದನ್ನು ನೆನೆದರೆ ನೋವೆನಿಸುತ್ತದೆ. ಅರಿವು ಮೂಡಿಸುವಂತೆ ವರ್ತಿಸುವುದಾಗಿ ಹೇಳಿಕೊಂಡ ಮಾಧ್ಯಮಗಳಾಗಲೀ, ಕಾವಲುಗಾರನಂತೆ ಕಾವಲು ಕಾಯಬೇಕಾದ ರಾಜಕಾರಣವಾಗಲೀ ತಮ್ಮ ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಂಡಂತೆ ಕಾಣಿಸಲೇ ಇಲ್ಲ. ಒಂದೇ ಸೊಲ್ಲಿಗೆ ಕರ್ನಾಟಕವನ್ನು ಕೀಚಕರ ಆಡುಂಬೊಲ ಎಂಬಂತೆ ಹೆಸರಿಸಿಬಿಡುವ ಧಾವಂತ ತೋರಿದ ಮಾಧ್ಯಮಗಳಿಗೆ, ಈ ನಾಡು ತನ್ನ ಸೀಮಿತ ವ್ಯಾಪ್ತಿಯಲ್ಲಿಯೇ ಪುರುಷ ದೌರ್ಜನ್ಯಕ್ಕೆ ದಿಟ್ಟ ಉತ್ತರವನ್ನು ಕೊಟ್ಟ ಹೆಮ್ಮಕ್ಕಳ ಸ್ಮೃತಿಯಿಂದಲೂ ಕೂಡಿದೆ ಎಂದೆನಿಸಲಿಲ್ಲ. ಸೀರೆಯ ಮಡಿಕೆ ಕಳೆದುದಕ್ಕೆ ಗಂಡನನ್ನು ತರಾಟೆಗೆ ತೆಗೆದುಕೊಳ್ಳಬಲ್ಲ ಕರಾವಳಿಯ ಸಿರಿ; ಅನುಮಾನಕ್ಕೆ ಬಲಿಯಾಗಿ ಶೀಲಕಾಯ್ದುಕೊಳ್ಳುವ ಭಾಷೆಗೆ ಆಗ್ರಹಿಸಿದ ಗಂಡನನ್ನೇ ಮೀರಬಲ್ಲ ಮಲೆಮಹದೇಶ್ವರದ ಸಂಕವ್ವ; ‘ಸಾವಕೆಡುವ ಗಂಡರನ್ನು ಒಲೆಯೊಳಗಿಕ್ಕುವಂತೆ’ ಆರ್ಭಟಿಸಿದ ಮಹಾದೇವಿಯಕ್ಕನಂಥವರ ಸ್ಮೃತಿಯನ್ನು ಬಚ್ಚಿಟ್ಟುಕೊಂಡ ನಾಡು ಎಂಬ ಅರಿವನ್ನು ಮೆಲುಕು ಹಾಕುವ ಕೆಸವೂ ಆಗಲಿಲ್ಲ.

ಯಾಕೆಂದರೆ ಇದು ಅಬಲೆಯರ ನಾಡಲ್ಲ. ತಾಯ್ತನದ ದಟ್ಟ ಚಹರೆಯೊಂದಿಗೆ ಹೆಣ್ತನಕ್ಕೆ ಹೊರೆಯಾಗುವ ಅನೇಕ ಅನಿಷ್ಟಗಳಿಂದ ತನ್ನನ್ನು ಮುಕ್ತವಾಗಿಸಿಕೊಂಡ ನಾಡು. ಕನ್ಯಾಮಾತೆಯರನ್ನೂ ಗೌರವಿಸುವ ಆಚರಣೆಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡ ನಾಡು. woman-unchainedವಿಧವಾ ವಿವಾಹವನ್ನು ಯಾವುದೇ ಸಂಕೋಚವಿಲ್ಲದೆ ಸೀರುಡಿಕೆ, ಕೂಡಾವಳಿಯೆಂಬ ಸರಳ ನೆಲೆಯಲ್ಲಿ ಆಚರಿಸಿಕೊಂಡ ಇತಿಹಾಸವೂ ಇದಕ್ಕಿದೆ. ಇಂತಹ ಚರಿತ್ರೆಯುಳ್ಳ ನಾಡಿನ ಸಾಂಸ್ಕೃತಿಕವಿನ್ಯಾಸವು ಉಜ್ವಲವಾಗಿ ಹಾಗೆಯೇ ಉಳಿದಿದೆಯೆಂದಲ್ಲ. ಪರಂಪರೆಯ ಈ ವಿನ್ಯಾಸವನ್ನು ನಿಸ್ತೇಜಗೊಳಿಸುತ್ತಿರುವ ಶಕ್ತಿಗಳು ಸಾಂಸ್ಕೃತಿಕ ವಸಾಹತೀಕರಣ ಹಾಗೂ ಆಧುನಿಕತೆಯ ರೂಪದಲ್ಲಿ ಕ್ರಿಯಾಶೀಲವಾಗಿಯೇ ಇವೆ. ಹಾಗಿದ್ದೂ ಕರ್ನಾಟಕದ ಸಂಸ್ಕೃತಿ ಕೀಚಕಸಂಸ್ಕೃತಿ ಆಗಿಲ್ಲ. ಸೀರೆ ಎಳೆದು ಸಂಭ್ರಮಿಸುವುದು ಕನ್ನಡನೆಲೆದ ಯಾವ iಹಾಕಾವ್ಯದ ವಸ್ತುವೂ ಅಲ್ಲ. ಸೀಮಂತಕ್ಕೆ ತಂದ ಸೀರೆಯನ್ನು ಸೂಳೆಗೆ ಉಡಿಸಿ ಮಡಿಕೆ ಕಳೆದನೆಂಬ ಕಾರಣಕ್ಕೆ, ಗಂಡನನ್ನೇ ಆತನ ನೈತಿಕ ದೋಷಕ್ಕಾಗಿ ದಿಕ್ಕರಿಸಬಲ್ಲ ಹೆಣ್ತನದಚರಿತೆ ಈ ನೆಲದ ಮಹಾಕಾವ್ಯ. ನಾಡಿನುದ್ದಕ್ಕೂ ಇರುವ ಶಾಸನಗಳು, ವೀರಗಲ್ಲುಗಳು ಹೆಣ್ಣಿನ ಮಾನಕ್ಕಾಗಿ ಬಲಿಯಾದವರ ಕಥನಗಳನ್ನು ಹೇಳುತ್ತಿವೆ. ಹೆಣ್ಣನ್ನು ಹೊತ್ತೊಯ್ದ ಕಥೆಯನ್ನೋ, ಹೆಣ್ಣಿನ ಸೀರೆಯೆಳೆದ ಕಥೆಯನ್ನೋ ನೆಲದ ಕಥನವಾಗಿ ಹೊಂದಿರದ ನೆಲವೊಂದನ್ನು ಕೀಚಕರ ನಾಡಾಗಿ ಹೇಗೆ ಕರೆಯಲಾದೀತು?

ಈ ಹಿನ್ನೆಲೆಯೊಂದಿಗೆ ನಾಡೊಂದರ ಅಪನಾಮಕ್ಕೆ ಆಕ್ಷೇಪವೆತ್ತುವ ನಡುವೆ ಅತ್ಯಾಚಾರದಂತಹ ಹೆಣ್ತನದ ಮೇಲಿನ ಆಕ್ರಮಣವನ್ನು ನಿರ್ಲಕ್ಷಿಸಲಾಗದು. ಹಾಗೆಯೇ ಇಂತಹ ಸಾಮಾಜಿಕ ಪಿಡುಗೊಂದು ಘಟನೆ ಘಟಿಸಿದಲ್ಲದೆ ಪೋಲೀಸ್ ವ್ಯವಸ್ಥೆಯಂತಹ ತನಿಖಾಸಂಸ್ಥೆಯ ಸುಪರ್ದಿಗೆ ಬರಲಾರದೆಂಬುದೂ ನಮಗೆ ಅರ್ಥವಾಗಬೇಕು. ಎಷ್ಟೋವೇಳೆ ಘಟನೆಯ ನಂತರವೂ ಈ ಸಂಸ್ಥೆಯ ವ್ಯಾಪ್ತಿಗೆ ಬಾರದೆಯೂ ಉಳಿಯಬಹುದು. ಘಟನೋತ್ತರವಾಗಿ ಶಾಸನಾತ್ಮಕ ರಕ್ಷಣೆ ಪಡೆಯುವ ಬಲಿಪಶುಗಳ ಬದುಕು ಮೂರಾಬಟ್ಟೆಯಾಗಬಹುದಾದ ಅಪಾಯದ ಸಾಧ್ಯತೆ ಇದೆ. ಹಾಗಾಗಿ ಇದರ ನಿಯಂತ್ರಣಕ್ಕಿರುವ ಕ್ರಿಯಾಗತಿಗಳೇ ಹೆಚ್ಚು ಮುಖ್ಯವಾಗುತ್ತವೆ. ಅದರಲ್ಲಿ ಘಟನೆಗಳೇ ಘಟಿಸದಂತೆ ತಡೆಯುವ ಸಮುದಾಯ ಮನಸ್ಥಿತಿಯನ್ನು ರೂಪಿಸಲು ಯತ್ನಿಸುವುದು ಮೊದಲಿನದು. ಮಾಧ್ಯಮ ಮತ್ತು ರಾಜಕಾರಣವೂ ಸೇರಿದಂತೆ ಸಮುದಾಯದ ಹೊಣೆಯಿದು. ಒಂದೆರಡು ದಿನಗಳಲ್ಲಿ ಸಾಧ್ಯವಾಗಿಬಿಡುವ ಸಾಧನೆ ಇದಲ್ಲ. ಯಾವುದೇ ಸರ್ಕಾರವಷ್ಟೇ ಸಾಧಿಸಿ ಬಿಡಬಹುದಾದ ಯಶಸ್ಸೂ ಅಲ್ಲ. ಇಲ್ಲಿ ಸಮೂಹದ ಭಾಗವಹಿಸುವಿಕೆ ಮತ್ತದರ ಸಾಮಾಜಿಕ ಪ್ರಾಮಾಣಿಕತೆ ಮುಖ್ಯ. ಹೀಗಾಗಬೇಕಾದರೆ ಇದನ್ನು ರಾಜಕೀಯ ಸಮಸ್ಯೆಗಿಂತ ಸಾಮಾಜಿಕ ಸಮಸ್ಯೆಯಾಗಿ, ಯಾರ ಮನೆಗಾದರೂ ಹತ್ತಿಕೊಳ್ಳಬಲ್ಲ ಬೆಂಕಿಯಾಗಿಯೇ ಪರಿಭಾವಿಸಬೇಕಿದೆ. ಹೊರಗೆನಿಂತು ಕಲ್ಲುಹೊಡೆಯುವುದು ಸರ್ವಥಾ ಉಚಿತವಲ್ಲ. ಸಮಸ್ಯೆಯನ್ನು ನಿಭಾಯಿಸಬೇಕಾದ ಪೋಲಿಸ್ ವ್ಯವಸ್ಥೆಯ ಮನೋಸ್ಥೈರ್‍ಯ ಕೆಡಿಸುವ ಕೆಲಸವಂತೂ ಆಗಲೇಬಾರದು. ಅದು ಅಪಾಯಕಾರಿ ಪರಿಣಾಮವನ್ನು ಉಂಟುಮಾಡಬಲ್ಲುದು. ಕಾನೂನನ್ನು ಕೈಗೆತ್ತಿಕೊಳ್ಳುವ ಬೇಜವಾಬ್ದಾರಿ ಹೇಳಿಕೆಗಳಂತೂ ಅನಾಹುತಕಾರಿ.

ಇನ್ನು ಎರಡನೆಯದಾಗಿ ಸಮುದಾಯಸ್ಮೃತಿಯ ಸಾಂಸ್ಕೃತಿಕ ಎಳೆಗಳ ಮೂಲಕ ಹೆಣ್ಣುಮಕ್ಕಳಲ್ಲಿ ಮನೋಸ್ಥೈರ್‍ಯ ತುಂಬಿ Kalighat_Painting_Calcutta_19th_Century_-_Woman_Striking_Man_With_Broomಸಮಾಜದ ತಪ್ಪುಗ್ರಹಿಕೆಗಳನ್ನು ತಿದ್ದುವ ಕೆಲಸವೂ ಆಗಬೇಕಿದೆ. ಯಾಕೆಂದರೆ ಪ್ರತೀ ಜೀವಿಗೂ ಗೌರವದಿಂದ ಬದುಕುವ ಹಕ್ಕಿದೆ. ನಾಡಿನ ಸಾಂಸ್ಕೃತಿಕಪರಂಪರೆಯ ಜೀವಪರ ಎಳೆಗಳನ್ನು ಮುಂಚೂಣಿಗೆ ತಂದು, ಸಮೂಹದ ದನಿಗಳನ್ನು ಬಲವರ್ಧನೆಗೊಳಿಸುವ ಮೂಲಕ ಇದು ಸಾಧ್ಯವಿದೆ. ಅಕಸ್ಮಾತ್ತಾಗಿ ಸಂಭವಿಸಿದ ಕ್ಷುಲ್ಲಕ ಘಟನೆ ಹೆಣ್ಣೊಬ್ಬಳ ಬದುಕನ್ನೇ ಆಪೋಶನ ತೆಗೆದುಕೊಳ್ಳುವ ಅನಾಹುತವೆಂದು ನಿರ್ಧರಿಸಿಬಿಡುವ ಸಾಮಾಜಿಕ ಆವರಣವನ್ನು ಇದು ಪರಿವರ್ತನೆಗೆ ಒಗ್ಗಿಸಬಲ್ಲದು. ಆಘಾತಕ್ಕೆ ಪ್ರತಿಯಾಗಿ ಹೆಣ್ಣುಮಕ್ಕಳಲ್ಲಿ ಸ್ವಾವಲಂಬಿ ಮನಸ್ಥಿತಿಯನ್ನು ತುಂಬಬಲ್ಲದು. ಮದುವೆಯಾಗದೆ ಲೈಂಗಿಕಸಂಪರ್ಕಕ್ಕೆ ಒಳಪಡುವ, ಗರ್ಭಧರಿಸುವ ಹೆಣ್ಣನ್ನು ಒಂದು ಹೊರೆಯಾಗಿ, ತ್ಯಾಜ್ಯವಾಗಿ ಪರಿಭಾವಿಸುವ ಸಾಮಾಜಿಕ ಮನಸ್ಥಿತಿಯನ್ನು ತಿದ್ದಬಲ್ಲದು. ಇದಕ್ಕೆ ಪೂರಕವಾದ ಹೆಣ್ಣಿನ ಗೌರವದ ಬದುಕಿಗೆ ಸಂಬಂಧಿಸಿದ ಎಷ್ಟೋ ಆಚರಣೆಗಳು ಈ ನೆಲದ ಚರಿತ್ರೆಯಲ್ಲಿವೆ. ಅನೇಕ ಬುಡಕಟ್ಟು ಸಮುದಾಯದ ಆಚರಣೆಯಲ್ಲಿರುವ ‘ಕನ್ಯಾಮಾತೆ’ಯ ಕಲ್ಪನೆ ಇವುಗಳಲ್ಲೊಂದು. ಈ ಆಚರಣೆಯಲ್ಲಿ ಮದುವೆಯಾಗದೇ ಗರ್ಭಧರಿಸುವ ಹೆಣ್ಣು ದೂಷಿತೆಯಾಗದೆ ‘ಕನ್ಯಾಮಾತೆ’ ಎಂಬ ಪವಿತ್ರ ಸ್ಥಾನದಲ್ಲಿ ಗೌರವಿಸಲ್ಪಡುತ್ತಾಳೆ. (ಹಾಗೆ ನೋಡಿದರೆ ಕುಂತಿಯೂ ಒಬ್ಬ ಕನ್ಯಾಮಾತೆಯೇ ಅಲ್ಲವೇ?). ಇನ್ನು ವಿಧವೆ ಎನ್ನುವ ಸಂಸ್ಥೆಯನ್ನೇ ನಿರಾಕರಿಸಿದಂತಿರುವ ಮಾತೃಪ್ರಧಾನ ಪರಂಪರೆಯ ‘ಸೀರುಡಿಕೆ’ ಆಚರಣೆ, ಹೆಣ್ಣಿನ ಗೌರವದ ಬದುಕಿಗೆ ಒದಗಿದ ಇನ್ನೊಂದು ವಿಸ್ತರಣೆ. ಗಂಡನನ್ನು ಕಳೆದುಕೊಂಡ ಹೆಣ್ಣೊಬ್ಬಳಿಗೆ ತನ್ನ ಯೌವನಕ್ಕೆ ತಕ್ಕುದಾದ ಇನ್ನೊಂದು ಸಂಬಂಧವನ್ನು ಸಹಜವಾಗಿ ಹೊಂದಲು ಇದು ಅವಕಾಶ ಮಾಡಿಕೊಡುತ್ತದೆ. ಇಲ್ಲೆಲ್ಲಾ ಲೈಂಗಿಕತೆಯ ಕುರಿತ ಅತಿಸೂಕ್ಷ್ಮ ವಿಶ್ಲೇಷಣೆ ಇಲ್ಲ. ಮದುವೆ ಎನ್ನುವ ಸಂಸ್ಥೆಯ ಅತಿವೈಭವೀಕರಣವೂ ಇಲ್ಲ. ಇಂತಹ ಆಚರಣೆಗಳು ಈ ನೆಲದ ಸಂಸ್ಕೃತಿಯ ಭಾಗ. ಇವು ಹೆಣ್ಣನ್ನು ತ್ಯಾಜ್ಯವೆಂದು ಪರಿಗಣಿಸುವುದಿಲ್ಲ. ಇಲ್ಲಿ ಅವಳೊಂದು ಅನುಭೋಗದ ವಸ್ತುವಷ್ಠೇ ಅಲ್ಲ. ತಾಯಿಯಾಗಿಯೂ ಗೌರವಾರ್ಹಳು. ಇಂತಹ ಸಮುದಾಯಸ್ಮೃತಿಯ ಅರಿವಿನ ಮೂಲಕವೂ ಹೆಣ್ಣಿನ ಕುರಿತಾದ ಸಾಮಾಜಿಕ ಮನಸ್ಥಿತಿಯನ್ನು ಗುಣಾತ್ಮಕವಾಗಿ ಬದಲಿಸಲು ಸಾಧ್ಯವಿದೆ. ಇದು ನಿಜಕ್ಕೂ ಆಗಬೇಕಾದ ಕೆಲಸ.

ಇವೆಲ್ಲವನ್ನೂ ಮರೆತುಬಿಟ್ಟು ಕರ್ನಾಟಕವನ್ನು ಸಾರ್ವಜನಿಕವಾಗಿ ಅಪಮಾನಿಸುವ ಹಾಗೆ ಕೂಗುಹಾಕಿದ ಮಾಧ್ಯಮಗಳ ವಿಚಾರಕ್ಕೆ ಬಂದರೆ ಸಹಜವಾಗಿಯೆ ಆತಂಕವೆನಿಸುತ್ತದೆ. ಯಾಕೆಂದರೆ ಇವು ಸುದ್ದಿಮಾಡುವಾಗ ವ್ಯಕ್ತಿಯ ಖಾಸಗಿತನದ ಗೌರವವನ್ನು ಕಾಪಾಡುವಲ್ಲಿ ವಹಿಸಬೇಕಾದ ಎಚ್ಚರವನ್ನು ಮರೆತೇ ಬಿಟ್ಟಿವೆ. ಅತ್ಯಾಚಾರ ಆಕ್ರಮಣದ ಬಲಿಪಶುಗಳೆನಿಸಿದವರ ಮುಖಭಾಗವನ್ನಷ್ಟೇ ಒಂದಿಷ್ಟು ಮಸುಕುಮಾಡಿ, ಉಟ್ಟ ಸೀರೆ, ಬಟ್ಟೆ, ಬದುಕುವ ಆವರಣವೆಲ್ಲವನ್ನು ಎಗ್ಗಿಲ್ಲದೆ ತೋರುವ ಹೊಣೆಗೇಡಿತನದಲ್ಲಿ ವಿಜೃಂಭಿಸಿವೆ. ಕ್ಯಾಮರಾ ಇರುವುದೇ ಎಲ್ಲವನ್ನೂ ತೋರಿಬಿಡಲು ಎಂದು tv-mediaನಿರ್ಧರಿಸಿ, ಸುದ್ದಿಯನ್ನು ರೋಚಕಗೊಳಿಸುವ ಬರದಲ್ಲಿ ಇವು ಸಾಮಾಜಿಕಸಮಸ್ಯೆ ಹಾಗೂ ಕಾನೂನು ವ್ಯವಸ್ಥೆಯ ಆತಂಕಗಳನ್ನು ಹುಟ್ಟುಹಾಕುತ್ತಿವೆ. ಇದರ ಹಿಂದೆ ಸಮುದಾಯಗಳನ್ನು ಎತ್ತಿಕಟ್ಟುವ ರಾಜಕೀಯಸೂಕ್ಷ್ಮವೇ ಇದ್ದುದು ಹೌದಾದಲ್ಲಿ, ಇದು ಹೊಣೆಗೇಡಿತನವಲ್ಲ. ಉದ್ದೇಶಿತ. ಆದರೆ ಆಪಾಯಕಾರಿ. ಮಾಧ್ಯಮಗಳಲ್ಲಿ ಈ ಕುರಿತ ಆತ್ಮಾವಲೋಕನ ನಡೆದಂತಿಲ್ಲ. ಇನ್ನು ಈ ಮಾಧ್ಯಮಗಳ ದೈನಿಕವರ್ತನೆ ಹೇಗಿದೆ? ವಿಜ್ಞಾನದ ಉತ್ಪನ್ನಗಳಾದ ವಿಜ್ಞಾನವು ಅಗತ್ಯವಾಗಿ ಅಪೇಕ್ಷಿಸುವ ವೈಚಾರಿಕ ಮನೋಧರ್ಮಕ್ಕೆ ಇವು ಅರ್ಹವಾಗಿವೆಯೇ? ಪ್ರಜಾಪ್ರಭುತ್ವದ ಇರುವಿಕೆಯ ಕುರುಹುಗಳಲ್ಲೊಂದಾಗಿ ಪ್ರಜಾಪ್ರಭುತ್ವಕ್ಕೆ ಬೇಕಾದ ಪಾರದರ್ಶಕತೆ, ನಿಷ್ಪಕ್ಷಪಾತ ನಡವಳಿಕೆಯನ್ನು ಅವು ರೂಢಿಸಿಕೊಂಡಿವೆಯೇ? ಈ ಪ್ರಶ್ನೆಗಳೂ ಇಲ್ಲಿ ಮುಖ್ಯವಾಗುತ್ತವೆ. ಯಾಕೆಂದರೆ ದಿನಬೆಳಗಾದರೆ ಜನರ ಮೆದುಳಿಗೆ ವೈಚಾರಿಕತೆಯ ಬದಲು ಮೌಢ್ಯ, ಕ್ರೌರ್‍ಯ, ಅಜ್ಞಾನದ ಕಸದರಾಶಿಯನ್ನು ತುಂಬಿಸುತ್ತಿರುವ ಮಾಧ್ಯಮಗಳಿವು. ವಿಜ್ಞಾನದ ಸಾಧನಗಳಾಗಿಯೂ ಮೌಢ್ಯ, ಹಿಂಸೆ ಮತ್ತು ಕಾಮವನ್ನು ಹಸಿಹಸಿಯಾದ ರೋಚಕ ಕಥನಗಳಾಗಿಸಿ ಬೀದಿಯಲ್ಲಿ ಬಿಕರಿಗಿಟ್ಟವುಗಳಿವು. ಈ ಅರ್ಥದಲ್ಲಿ ಸಾಮಾಜಿಕ ಸ್ವಾಸ್ಥ್ಯದ ಕುರಿತು ಮಾತನಾಡುವ ನೈತಿಕತೆ ಹಕ್ಕನ್ನೇ ಅವು ಎಂದೋ ಕಳೆದುಕೊಂಡಿವೆ. ತಾವು ತಂದು ತುಂಬುತ್ತಿರುವ ಕಸದ ಕುರಿತಾದ ಎಚ್ಚರ ಹಾಗೂ ಕರ್ನಾಟಕದ ಸಾಂಸ್ಕೃತಿಕ ಬೇರುಗಳ ಪರಿಚಯ ಎರಡೂ ಇಲ್ಲದೆ, ಅವು ಕರ್ನಾಟಕ ಕೆಟ್ಟೇ ಹೋಗಿದೆ ಎಂದು ಕೂಗುತ್ತಿವೆ. ಕರ್ನಾಟಕ ಕೆಟ್ಟಿದ್ದರೆ ಅದು ನಮ್ಮೆಲ್ಲರಿಂದ ಕೆಟ್ಟಿದೆ. ಅದನ್ನು ಸರಿಮಾಡುವ ಹೊಣೆ ಎಲ್ಲರ ಮೇಲೆಯೂ ಇದೆ. ಈ ಆತ್ಮಾವಲೋಕನ ಮಾಧ್ಯಮ ಮತ್ತು ಸಮೂಹಗಳೆರಡರಲ್ಲೂ ಉಂಟಾಗಬೇಕಾದುದು ನಾಡಿನ ನಾಳೆಗಾಗಿ ಅಗತ್ಯವಿದೆ.

ಕೊನೆಯದಾಗಿ ಈ ಮಾಧ್ಯಮಗಳು ಎಬ್ಬಿಸುತ್ತಿರುವ ಧೂಳಿನ ಆಳದಲ್ಲಿ ಅಡಗಿರುವ ಮಾರುಕಟ್ಟೆಯ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ಮರೆಯುವಂತಿಲ್ಲ. ಯಾಕೆಂದರೆ ಮಾಧ್ಯಮಗಳು ಅತ್ಯಾಚಾರದ ಸುದ್ದಿಗಳನ್ನು ಬಿತ್ತರಿಸಿದಷ್ಟೇ ವೇಗದಲ್ಲಿ ಸಿ.ಸಿ.ಕ್ಯಾಮರಾಗಳ woman-insightಅಳವಡಿಕೆಯ ಪರವಾದ ಜನಾಭಿಪ್ರಾಯವನ್ನೂ ರೂಪಿಸುತ್ತಿವೆ. ಆತ್ಮರಕ್ಷಣೆಯ ತರಬೇತಿ ಕೋರ್ಸ್‌ಗಳನ್ನು ಗರಿಗೆದರಿಸುತ್ತಿವೆ. ಇದಕ್ಕೂ ಹೆಚ್ಚಾಗಿ ಮಹಿಳೆ ಮನೆಯಿಂದ ಹೊರಗಿರುವುದು ಅಸುರಕ್ಷಿತವೆಂಬ ಸಂಪ್ರದಾಯವಾದಿಗಳ ಕೊನೆಯಾಸೆ ಈಡೇರಿಸುವ ಕೆಲಸವನ್ನೂ ಮಾಡುತ್ತಿವೆ. ಇವೆಲ್ಲದರ ಬೆಳಕಿನಲ್ಲಿ ರಾಜಕಾರಣದಲ್ಲಿ ಇರುವವರು ಅಧಿಕಾರದಲ್ಲಿ ಇಲ್ಲದಿರುವುದು ಆಪಾದನೆ ಮಾಡಲು ರಹದಾರಿಯೆಂದು ಭಾವಿಸಿಕೊಳ್ಳಬಾರದು. ಅಧಿಕಾರದಲ್ಲಿ ಇರುವವರು ಸಮರ್ಥಿಸಿಕೊಳ್ಳುವುದನ್ನಷ್ಟೇ ಮಾಡಬಾರದು. ಬದಲಿಗೆ ಇಬ್ಬರೂ ಕೂಡಿ ಶತಮಾನದಾಚೆಯ ದೂರದೃಷ್ಟಿಯ ರಾಜಕಾರಣದಲ್ಲಿ ತೊಡಗಿಕೊಳ್ಳಬೇಕಿದೆ. ಏಕೆಂದರೆ ಆರ್ಭಟಿಸುವುದಷ್ಟೇ ಸಾಮಾಜಿಕ ಕಾಳಜಿಯ ಸಂಕೇತವಲ್ಲ. ರಾಜಕಾರಣ ಮಾಡುವವರಿಗೆ ಅಧಿಕಾರದೊಳಗೆ ಇರುವಾಗ ಮತ್ತು ಹೊರಗಿರುವಾಗ ತಾವು ಸಾರ್ವಜನಿಕವಾಗಿ ನಡೆದುಕೊಂಡ ತಮ್ಮದೇ ಮಾದರಿಗಳನ್ನು ತುಲನಾತ್ಮಕವಾಗಿ ವಿವರಿಸಿಕೊಳ್ಳುವ ನೈತಿಕತೆ ಇರಬೇಕು. ಹೀಗೆ ಕರ್ನಾಟಕ ಸಂಸ್ಕೃತಿಯ ಅರಿವು ಹಾಗೂ ತಮ್ಮದೇ ನಡವಳಿಕೆಗಳ ಕುರಿತಾದ ಆತ್ಮಾವಲೋಕನದ ಮೂಲಕ ವಿಷವನ್ನೇ ಔಷಧಿ ಎಂದು ನಂಬಿಸಬಲ್ಲ ಮಾರುಕಟ್ಟೆ ಮತ್ತು ರೂಢಿವಾದದ ಹತಾರಗಳ ಕುರಿತ ಸಾತ್ವಿಕ ಆಕ್ರೋಶವೊಂದು ನಮ್ಮಲ್ಲಿ ಸಾಧ್ಯವಾಗಬೇಕು. ಮಹಿಳಾಸುರಕ್ಷತೆಯ ನೆಪದಲ್ಲಿ ಮಹಿಳೆಯನ್ನು ನೇಪಥ್ಯಕ್ಕೆ ತಳ್ಳಲು ಹವಣಿಸುತ್ತಿರುವ ಮೂಲಭೂತವಾದಿಶಕ್ತಿಗಳ ಸಂಚುಗಳನ್ನು ಬೆತ್ತಲಾಗಿಸಬೇಕು. ಹಾಗಾದಲ್ಲಿ ಮಾತ್ರ ಒಟ್ಟು ಸಂಗತಿಗಳು ಸುದ್ದಿಯ ಸಂಭ್ರಮಕ್ಕಿಂತ ಬದ್ಧತೆಯ ಬದಲಾವಣೆಗೆ ಭೂಮಿಕೆಯಾಗಬಲ್ಲವು.