Category Archives: ಎಸ್.ಬಿ.ಜೋಗುರ

ಕಥೆ : ಆಚಾರವಿಲ್ಲದ ನಾಲಿಗೆ..

– ಡಾ.ಎಸ್.ಬಿ.ಜೋಗುರ

ಖರೆ ಅಂದ್ರ ಅಕಿ ಹೆಸರು ಶಿವಮ್ಮ. ಓಣ್ಯಾಗಿನ ಮಂದಿ ಮಾತ್ರ ಅಕಿನ್ನ ಕರಿಯೂದು ಹರಕ ಶಿವಮ್ಮ ಅಂತ. ಬಾಯಿ ತಗದರ ಸಾಕು ಅಂತಾ ರಂಡೇರು..ಇಂಥಾ ಸೂಳೇರು ಅಕಿದೇನು ಕೇಳ್ತಿ ಹುಚ್ ಬೋಸ್ಡಿ ಅಂತ ಬೈಯ್ಯೋ ಶಿವಮ್ಮ ಗಂಡಸರ ಪಾಲಿಗೂ ಒಂದಿಷ್ಟು ಬೈಗುಳ ಯಾವತ್ತೂ ಸ್ಟಾಕ್ ಇಟಗೊಂಡಿರತಿದ್ದಳು. ಹಾಲು ಕೊಡುವ ಗುರಲಿಂಗನ ಸಂಗಡ ಅವತ್ತ ಮುಂಜಮುಂಜಾನೆನೇ ಕಾಲ ಕೆರದು ಜಗಳಕ್ಕ ನಿಂತಿದ್ದಳು. ‘ಯಾವ ಪಡಸಂಟನನ್ ಹಾಟಪ್ಪನೂ ಪುಗ್ಸಟ್ಟೆ ಹಾಲ ಕೊಡಲ್ಲ, ಕೊಡತಿದ್ದರ ಚುಲೋ ಹಾಲು ಕೊಡು, ಇಲ್ಲಾಂದ್ರ ಬಿಡು.’ ಅಂತ ಮನಿಮುಂದ ನಿಂತು ಒಂದು ಸವನ ಗಂಟಲ ಹರಕೋತಿದ್ದಳು. ಗಂಡ ಶಂಕ್ರಪ್ಪ ‘ಹೋಗಲಿ ಬಿಡು, ಅದೇನು ಹಚಗೊಂಡು ಕುಂತಿ..? ಮುಂಜಮುಂಜಾನೆ’ ಅಂದಿದ್ದೇ ಶಿವಮ್ಮ ಮತ್ತಷ್ಟು ನೇಟ್ ಆದಳು. ‘ನೀವು ಕೊಟ್ಟ ಸಲಿಗೆನೇ ಇವರೆಲ್ಲಾ ಹಿಂಗಾಗಿದ್ದು. ಇಂವೇನು ಪುಗ್ಸಟ್ಟೆ ಕೊಡ್ತಾನಾ..ಹಾಂಟಪ್ಪ ? ಐತವಾರಕ್ಕೊಮ್ಮ ಬಂದು ರೊಕ್ಕಾ ತಗೊಳಂಗಿಲ್ಲಾ..’? ಅಂದದ್ದೇ ಶಂಕ್ರಪ್ಪಗ ಹೆಂಡತಿ ಅಟಾಪಾಗಲಾರದ ಹೆಣಮಗಳು ಅಂತ ಗೊತ್ತಿತ್ತು. ಅಕಿ ಒಂಥರಾ ಖರೆಖರೆ ಮುಂಡೆರಿದ್ದಂಗ. ಗಂಟೀ ಚೌಡೇರಂಗ ಗಲಗಲ ಅಂತ ಬಾಯಿ ಮಾಡಿ ತಂದೇ ಖರೆ ಮಾಡವಳು ಅಂತ ಅಂವಗ ಯಾವಾಗೋ ಗೊತ್ತಾಗೈತಿ.

ಪಾಪ ಶಂಕ್ರಪ್ಪ ಅಕಿ ಎದುರಿಗಿ ಬಾಯಿ ಸತ್ತ ಮನುಷ್ಯಾ ಅನ್ನೋ ಬಿರುದು ತಗೊಂಡು ಬದುಕುವಂಗ ಆಗಿತ್ತು. ಪಡಶಂಟ..ಹಾಟ್ಯಾ..ಬಾಯಾಗ ಮಣ್ಣ ಹಾಕಲಿ ಇವೆಲ್ಲಾ ಅಕಿ ಬಾಯಾಗ ಏನೂ ಅಲ್ಲ ಸಿಟ್ಟ ನೆತ್ತಿಗೇರಿ ಖರೆಖರೆ ಬೈಗುಳದ ಶಬ್ದಕೋಶ ತಗದಳಂದ್ರ ಕಿವಿ ಮುಚಕೊಂಡು ಕೇಳುವಂಥಾ ಸೊಂಟದ ಕೆಳಗಿನ ಎಲ್ಲಾ ಬೈಗುಳನೂ ಅಕಿ ಬಳಿ ಸ್ಟಾಕ್ ಅದಾವ. ಹಂಗಾಗೇ ಓಣ್ಯಾಗಿನ ಮಂದಿ ಹೋಗಿ ಹೋಗಿ ಆ ಹರಕ ಬಾಯಿಗಿ ಯಾಕ ಹತ್ತೀರಿ ಮಾರಾಯಾ.? ಅಂತಿದ್ದರು. ಈ ಶಿವಮ್ಮಗ ಮಕ್ಕಳಾಗಿ..ಮೊಮ್ಮಕ್ಕಳಾಗಿ ಅವರು ಲಗ್ನಕ್ಕ ಬಂದರೂ ಅಕಿ ಬಾಯಿ ಮಾತ್ರ ಬದಲಾಗಿರಲಿಲ್ಲ.

ಇಂಥಾ ಶಿವಮ್ಮಗ ತನ್ನ ತವರಿಮನಿ ಮ್ಯಾಲ ವಿಪರೀತ ಮೋಹ. ಲಗ್ನ ಆಗಿ ದೇವರ ಹಿಪ್ಪರಗಿಯ ಪಾಟೀಲ ರುದ್ರಗೌಡನ ಮನಿತನಕ ನಡೀಲಾಕ ಬಂದ ದಿನದಿಂದ ಹಿಡದು ಇಲ್ಲೀಮಟ ಬರೀ ತನ್ನ ಅಣ್ಣ ತಮ್ಮದೇರು..ಅಕ್ಕ ತಂಗಿದೇರು ಅವರ ಮಕ್ಕಳು.. ಉದ್ದಾರ ಆಗೊದೇ ನೋಡತಿದ್ದಳು. ಈ ಶಿವಮ್ಮ ಬಾಗೇವಾಡಿ ತಾಲೂಕಿನ ಸಾಲವಡಗಿಯವಳು. ವಾರಕ್ಕೊಮ್ಮ ..ತಿಂಗಳಿಗೊಮ್ಮ ಅಕಿ ಅಣ್ಣ ತಮ್ಮದೇರು ಹಿಪ್ಪರಗಿ ಸಂತಿಗಿ ಬರವರು. ಅವರ ಕೈಯಾಗ ಅಕಿ ಉಪ್ಪ ಮೊದಲಮಾಡಿ ಕಟ್ಟಿ ಕಳಸೂವಕ್ಕಿ. ಇದೇನು ಕದ್ದಲೆ ನಡಿಯೂ ಕೆಲಸಲ್ಲ ಗಂಡ ಶಂಕ್ರಪ್ಪನ ಕಣ್ಣ ಎದುರೇ ಹಂಗ ಸಕ್ಕರಿ, ಅಕ್ಕಿ, ಗೋದಿ ಕಡ್ಲಿಬ್ಯಾಳಿ ಎಲ್ಲಾ ಕಟ್ಟಿ ಕಳಿಸುವಕ್ಕಿ. ಶಿವಮ್ಮಳ ಗಂಡ ಶಂಕ್ರಪ್ಪ ದೇವರಂಥಾ ಮನುಷ್ಯಾ ಒಂದೇ ಒಂದು ದಿನ ಅದ್ಯಾಕ ನೀನು ಇವೆಲ್ಲಾ ಕೊಟ್ಟು ಕಳಸ್ತಿ ಅಂತ ಕೇಳ್ತಿರಲಿಲ್ಲ. ಹಿಂಗಿದ್ದ ಮ್ಯಾಲೂ ಶಿವಮ್ಮ ಜಿಗದ್ಯಾಡಿ ಮತ್ತ ಗಂಡ ಶಂಕ್ರಪ್ಪನ ಮ್ಯಾಲೇ ಠಬರ್ ಮಾಡತಿದ್ದಳು. ತನ್ನ ತಂಗಿ ಇಂದಿರಾಬಾಯಿ ಲಗ್ನದೊಳಗ ಒಂದು ತೊಲಿ ಬಂಗಾರ ಆಯೇರಿ ಮಾಡ್ರಿ ಅಂತ ಗಂಡಗ ಹೇಳಿದ್ದಳು. ಶಂಕ್ರಪ್ಪ ಅರ್ಧ ತೊಲಿದು ಒಂದು ಉಂಗುರ ತೊಡಿಸಿ ಕೈ ತೊಳಕೊಂಡಿದ್ದ. ತಾ ಹೇಳಿದ್ದು ಒಂದು ತೊಲಿ ಅಂತ ಗಂಡನ ಜೋಡಿ ಜಗಳಾ ತಗದು, ತಿಂಗಳಾನುಗಟ್ಟಲೆ ಮಾತು ಬಿಟ್ಟ ಶಿವಮ್ಮ ಮುಂದ ‘ಕುಬಸದೊಳಗ ಮತ್ತರ್ಧ ತೊಲಿ ಹಾಕದರಾಯ್ತು ತಗೊ’ ಅಂದಾಗ ಮಾತಾಡಿದ್ದಳು.

ಅಂಥಾ ಶಿವಮ್ಮಳ ಹೊಟ್ಟೀಲೇ ಎರಡು ಗಂಡು ಮೂರು ಹೆಣ್ಣು. ಅವರ ಹೊಟ್ಟೀಲೇ ಮತ್ತ ಎರಡೆರಡು, ಮೂರ್ಮೂರು ಮಕ್ಕಳಾಗಿ ಶಿವಮ್ಮ ಮೊಮ್ಮಕ್ಕಳನ್ನೂ ಕಂಡಾಗಿತ್ತು. ಇಬ್ಬರು ಗಂಡು ಹುಡುಗರ ಪೈಕಿ ಹಿರಿ ಮಗ ರಾಚಪ್ಪ ಲಗ್ನ ಆದ ವರ್ಷದೊಳಗ ಬ್ಯಾರಿ ಆಗಿದ್ದ. ಕಿರಿ ಮಗ ಚನಬಸು ಮಾತ್ರ ಅವ್ವ-ಅಪ್ಪನ ಜೋಡಿನೇ ಇದ್ದ. ರಾಚಪ್ಪ ಕನ್ನಡ ಸಾಲಿ ಮಾಸ್ತರ ಆಗಿ ಬಿಜಾಪೂರ ಸನ್ಯಾಕ ಇರೋ ಕವಲಗಿಯಲ್ಲಿ ನೌಕರಿಗಿದ್ದ. ಮನಿ ಮಾತ್ರ ಬಿಜಾಪೂರದೊಳಗೇ ಮಾಡಿದ್ದ. ಕಿರಿ ಮಗ ಚನಬಸು ಪಿ.ಯು.ಸಿ ಮಟ ಓದಿ ಮುಂದ ನೀಗಲಾರದಕ್ಕ ದೇವರಹಿಪ್ಪರಗಿಯೊಳಗ ಒಂದು ಕಿರಾಣಿ ಅಂಗಡಿ ಹಾಕಿದ್ದ. ವ್ಯಾಪಾರನೂ ಚುಲೊ ಇತ್ತು. ಶಂಕ್ರಪ್ಪ ಆಗಿನ ಕಾಲದೊಳಗ ಮುಲ್ಕಿ ಪರೀಕ್ಷೆ ಪಾಸಾದವನು. ಮನಿಮಟ ನೌಕರಿ ಹುಡಕೊಂಡು ಬಂದರೂ ಹೋಗಿರಲಿಲ್ಲ. ಈಗ ಅಂಗಡಿ ದೇಖರೇಕಿಯೊಳಗ ಮಗನ ಜೋಡಿ ಕೈಗೂಡಿಸಿದ್ದ. ಚನಬಸುಗ ಎರಡು ಮಕ್ಕಳು ಒಂದು ಗಂಡು ಒಂದು ಹೆಣ್ಣು. ಗಂಡ ಹುಡುಗ ಸಂಗಮೇಶ ಬಿಜಾಪೂರ ಸರಕಾರಿ ಕಾಲೇಜಲ್ಲಿ ಬಿ.ಎ. ಓದತಿದ್ದ. ಹೆಣ್ಣು ಹುಡುಗಿ ಅನಸೂಯಾ ಹಿಪ್ಪರಗಿಯೊಳಗೇ ಪಿ.ಯು.ಸಿ ಮೊಅಲ ವರ್ಷ ಓದತಿದ್ದಳು.

ಶಂಕ್ರಪ್ಪನ ತಂಗಿ ಶಾರದಾಬಾಯಿ ಮಗಳು ಕಸ್ತೂರಿ ಓದಲಿಕ್ಕಂತ ಇವರ ಮನಿಯೊಳಗೇ ಬಂದು ಇದ್ದಳು. ತನ್ನ ತಂಗಿಗಿ ಕೈ ಆಡೂ ಮುಂದ ಏನೂ ಮಾಡಲಿಲ್ಲ. ಅಕಿಗಿ ಲಕ್ವಾ ಹೊಡದು ಹಾಸಿಗೆ ಹಿಡದ ಮ್ಯಾಲೂ ಅವಳಿಗೆ ಏನೂ ತಾ ಆಸರಾಗಲಿಲ್ಲ. ಕದ್ದು ಮುಚ್ಚಿ ಏನರೇ ಸಹಾಯ ಮಾಡೋಣ ಅಂದ್ರ ಎಲ್ಲಾ ಕಾರಬಾರ ಹೆಂಡತಿ ಶಿವಮ್ಮಂದು ಹಿಂಗಾಗಿ ಓಳಗೊಳಗ ಶಂಕ್ರಪ್ಪಗ ತನ್ನ ತಂಗಿಗಿ ಹೊತ್ತಿಗಾಗಲಿಲ್ಲ ಅನ್ನೂ ಸಂಗಟ ಇದ್ದೇ ಇತ್ತು. ತನ್ನ ತಂಗೀ ಮಗಳು ಕಸ್ತೂರಿ ಓದೂದರೊಳಗ ಬಾಳ ಹುಷಾರ್ ಹುಡುಗಿ. ಅಕಿ ಇನ್ನೂ ಎಂಟು ವರ್ಷದವಳು ಇದ್ದಾಗೇ ಅಕಿ ಅಪ್ಪ ಹೊಲದಾಗ ನೀರ ಹಾಯ್ಸೂ ಮುಂದ ಹಾವು ಕಡದು ತೀರಕೊಂಡ. ಅವ್ವಗ ಇದ್ದಕ್ಕಿದ್ದಂಗ ಲಕ್ವಾ ಹೊಡದು ಹಾಸಗಿಗಿ ಹಾಕ್ತು. ಮನಿಯೊಳಗ ಮಾಡವರೂ ಯಾರೂ ಇರಲಿಲ್ಲ. ಕಸ್ತೂರಿ ಅಜ್ಜಿ ಶಾವಂತ್ರವ್ವಳೇ ಅಡುಗಿ ಕೆಲಸಾ ಮಾಡವಳು. ಅಲ್ಲಿರೋಮಟ ಕಸ್ತೂರಿ ಅಕಿ ಕೈ ಕೈಯೊಳಗ ಕೆಲ್ಸಾ ಮಾಡುವಕ್ಕಿ. ಅಕಿ ಓದಾಕಂತ ಹಿಪ್ಪರಗಿಗಿ ಬಂದ ಮ್ಯಾಲ ಆ ಮುದುಕಿ ಶಾವಂತ್ರವ್ವಗೂ ಮನಿ ಕೆಲಸಾ ಬಾಳ ಆಗಿತ್ತು. ಕಸ್ತೂರಿ ಮೆಟ್ರಿಕ್ ಮಟ ತನ್ನೂರು ಇಂಗಳಗಿಯೊಳಗೇ ಓದಿ ತಾಲೂಕಿಗೇ ಫ಼ಸ್ಟ್ ಬಂದಿದ್ದಳು. ಆವಾಗ ಶಂಕ್ರಪ್ಪಗ ಬಾಳ ಖುಷಿ ಆಗಿತ್ತು. ಫ಼ೇಡೆ ಹಂಚಲಾಕಂತ ಅವನೇ ಖುದ್ದಾಗಿ ಕಸ್ತೂರಿ ಕೈಯೊಳಗ ಐದು ನೂರು ರೂಪಾಯಿ ಕೊಟ್ಟಿದ್ದ. ಅದು ಹೆಂಗೋ ಹೆಂಡತಿ ಶಿವಮ್ಮಗ ಗೊತ್ತಾಗಿ ಬೆಳ್ಳಬೆಳತನಕ ಒದರಾಡಿದ್ದಳು. ಗಂಡ ಶಂಕ್ರಪ್ಪ ‘ನಾ ಬರೀ ಐದು ನೂರು ರೂಪಾಯಿ ಕೊಟ್ಟಿದ್ದಕ ಹಿಂಗ ಮಾಡ್ತಿ, ನೀ ನನ್ನ ಎದುರೇ ಉಪ್ಪು ಮೊದಲ ಮಾಡಿ ಕಟ್ಟಿ ಕಳಸ್ತಿದಿ ನಾ ಏನರೇ ಅಂದೀನಾ..?’ ಅಂದಾಗ ಶಿವಮ್ಮಳ ಬಳಿ ಮರುಮಾತಿರಲಿಲ್ಲ. ಆ ಹುಡಗಿಗೆರೆ ಯಾರು ಅದಾರ ನಮ್ಮನ್ನ ಬಿಟ್ಟರೆ, ಪಾಪ ನಮ್ಮ ತಂಗಿ ನೋಡದರ ಹಂಗ.. ಅಪ್ಪಂತೂ ಇಲ್ಲ ನಾವೂ ಅಕಿಗೆ ಆಸರಾಗಲಿಲ್ಲ ಅಂದ್ರ ಯಾರು ಆಗ್ತಾರ ಅಂದದ್ದೇ ಶಿವಮ್ಮ ಮೂಗ ನಿಗರಿಸಿ ಆ ಆಸ್ತಿ ನಮ್ಮ ಮೊಮ್ಮಗನ ಹೆಸರಿಗಿ ಮಾಡ್ಲಿ ಇಲ್ಲೇ ಬಂದು ಇರಲಿ ತಾಯಿ ಮಗಳನ್ನ ನಾವೇ ನೋಡಕೋತೀವಿ ಅಂದಾಗ ಶಂಕ್ರಪ್ಪ ಸಿಟ್ಟೀಲೇ ಹೆಂಡತಿನ್ನ ದಿಟ್ಟಿಸಿ ನೋಡಿದ್ದ.

ತಂಗೀ ಮಗಳು ಕಸ್ತೂರಿಯನ್ನ ಇಲ್ಲಿ ಓದಲಿಕ್ಕ ತಂದು ಇಟಗೋತೀನಿ ಅಂದಿದ್ದಕ್ಕೂ ಶಿವಮ್ಮ ದೊಡ್ಡದೊಂದು ಜಗಳಾನೇ ತಗದಿದ್ದಳು. ತನ್ನ ತಮ್ಮನ ಮಗ ರಮೇಶನ್ನೂ ಕರಕೊಂಡು ಬರ್ರಿ ಅವನೂ ಓದಲಿ ಅಂತ ಪಂಟ ಹಿಡದಳು. ‘ಅಂವಾ ಉಡಾಳ ಕುರಸಾಲ್ಯಾ ಮೆಟ್ರಿಕ್ ಎರಡು ಸಾರಿ ಫ಼ೇಲ್ ಆದಂವ. ಅವನ್ನ ತಗೊಂಡು ಬಂದು ಏನು ಮಾಡ್ತಿ..? ಹುಚ್ಚರಂಗ ಮಾತಾಡಬ್ಯಾಡ ಕಸ್ತೂರಿ ಫ಼ಸ್ಟ್ ಕ್ಲಾಸ್ ಹುಡುಗಿ, ಅಂಥ ಹುಡುಗರನ್ನ ಓದಸದರ ನಮಗೂ ಹೆಸರು’ ಅಂದಾಗ ‘ಹೆಸರಿಲ್ಲ ಏನೂ ಇಲ್ಲ, ನಿಮ್ಮ ತಂಗಿ ಮಗಳು ಅಂತ ಅಷ್ಟೇ’ ಅಂದಿದ್ದಳು. ’ಹುಚಗೊಟ್ಟಿ ಹಳಾ ಹುಚಗೊಟ್ಟಿ.. ಹಂಗ ಮಾತಾಡಬ್ಯಾಡ. ಮುದುಕಿ ಆಗಲಿಕ್ಕ ಬಂದರೂ ನಿನ್ನ ಸಣ್ಣ ಬುದ್ದಿ ಬದಲ್ ಆಗಲಿಲ್ಲ ನೋಡು. ಬ್ಯಾರೇ ಯಾರಿಗರೆ ಕಲಸ್ತೀವಾ..? ಅದೂ ಅಲ್ಲದೇ ಆ ಹುಡುಗಿ ಮನಿ ಕೆಲಸಾ ಮಾಡಕೊಂಡು ಓದತಾ” ಅಂದಾಗ ಶಿವಮ್ಮ ಸುಮ್ಮ ಆಗಿದ್ದಳು. ಕಸ್ತೂರಿ ಬಂದ ದಿನದಿಂದಲೂ ಮನೀದು ಅರ್ದ ಕೆಲಸಾ ಅವಳೇ ಮಾಡಕೊಂಡು ಹೋಗತಿದ್ದಳು. ಅಷ್ಟರ ಮ್ಯಾಲೂ ಶಿವಮ್ಮಗ ಆ ಹುಡುಗಿ ಮ್ಯಾಲ ಒಂಚೂರೂ ಕರುಣೆ ಇರಲಿಲ್ಲ. ದಿನಕ್ಕ ಒಮ್ಮೆರೆ ಬಿರಸ್ ಮಾತಲಿಂದ ಕಸ್ತೂರಿಯನ್ನ ನೋಯಿಸದಿದ್ದರ ಅಕಿಗಿ ತಿಂದ ಕೂಳ ಕರಗ್ತಿರಲಿಲ್ಲ.

ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಒಂದೇ ಕ್ಲಾಸಲ್ಲಿ ಓದತಿದ್ದರು. ಸಂಗಮೆಶ ಕಾಲೇಜಿಗೇನೋ ಬರತಿದ್ದ ಆದರೆ ಕ್ಲಾಸಿಗೆ ಕೂಡ್ತಿರಲಿಲ್ಲ. ಅದೆಲ್ಲಿ ಹೋಗತಿದ್ದ ಏನು ಮಾಡತಿದ್ದ ಅಂತ ಕಸ್ತೂರಿ ಒಟ್ಟಾರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮೊದಮೊದಲ ಮನ್ಯಾಗ ತನ್ನ ಮಾವ ಶಂಕ್ರಪ್ಪನ ಮುಂದ ಹೇಳತಿದ್ದಳು. ಯಾವಾಗ ಅತ್ತೆ ಶಿವಮ್ಮ ಚಾಡಿ ಚುಗಲಿ ಹೇಳೂದು ಕಲತರ ನಿನ್ನ ಸ್ವಾಟೀನೇ ಹರೀತೀನಿ ಅಂತ ವಾರ್ನಿಂಗ್ ಮಾಡದ್ಲೋ ಅವಾಗಿನಿಂದ ಅಕಿ ಸಂಗಮೇಶನ ಚಟುವಟಿಕೆಗಳನ್ನೆಲ್ಲಾ ಕಂಡೂ ಕಾಣಲಾರದಂಗ ಇರತಿದ್ದಳು.

ಒಂದಿನ ತರಗತಿಯಲ್ಲಿ ಈ ಸಂಗಮೆಶ ಹೆಡ್ ಪೋನ್ ಹಾಕೊಂಡು ಮೊಬೈಲ್ ಸಾಂಗ್ ಕೇಳ್ತಾ ಇದ್ದಾಗ ಇಂಗ್ಲಿಷ ಅಧ್ಯಾಪಕರೊಬ್ಬರು ಎಬ್ಬಿಸಿ ನಿಲ್ಲಿಸಿ ಎಲ್ಲರೆದುರೇ ಹಿಗ್ಗಾ ಮಿಗ್ಗಾ ಬೈದು ಮೊಬೈಲ್ ಕಸಿದುಕೊಂಡಿರುವದಿತ್ತು. ಇದೆಲ್ಲಾ ಕಸ್ತೂರಿಯ ಕಣ್ಣೆದುರೇ ನಡೆದಿದ್ದರೂ ಆಕೆ ಮನೆಯಲ್ಲಿ ಬಾಯಿ ಬಿಟ್ಟಿರಲಿಲ್ಲ. ತಾನಾಯಿತು ತನ್ನ ಓದಾಯ್ತು ಎಂದಿದ್ದ ಕಸ್ತೂರಿ ಆ ವರ್ಷ ಕಾಲೇಜಿಗೆ ಪ್ರಥಮವಾಗಿ ಪಾಸಾಗಿದ್ದಳು. ಮಾವ ಶಂಕ್ರಪ್ಪ ಇಡೀ ಊರ ತುಂಬಾ ತನ್ನ ತಂಗಿ ಮಗಳು ಫ಼ಸ್ಟ್ ಕ್ಲಾಸ್ ಲ್ಲಿ ಪಾಸಾಗಿದ್ದಾಳೆ ಎಂದು ಹೇಳಿದ್ದ. ಮಗನ ಬಗ್ಗೆ ಕೇಳಿದಾಗ ಬೇಸರದ ಮೌನ ತಾಳಿದ್ದ. ಶಿವಮ್ಮಗಂತೂ ಕಸ್ತೂರಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಒಂದು ಬಗೆಯ ಸಂಕಟಕ್ಕೆ ಕಾರಣವಾಗಿತ್ತು. ಈ ಕಸ್ತೂರಿ ಓದುವದರಲ್ಲಿ ತುಂಬಾ ಜಾಣ ಹುಡುಗಿ ಇವಳು ಮುಂದೊಂದು ದಿನ ನೌಕರಿ ಹಿಡಿಯೋದು ಗ್ಯಾರಂಟಿ ಎನ್ನುವದು ಶಿವಮ್ಮಳಿಗೆ ಗೊತ್ತಾಯ್ತು. ಹೇಗಾದರೂ ಮಾಡಿ ಈ ಹುಡುಗಿಯನ್ನ ಮೊಮ್ಮಗ ಸಂಗಮೇಶಗೆ ತಂದುಕೊಂಡು ಬಿಟ್ಟರೆ ಮುಗೀತು ಅಲ್ಲಿಗೆ ಅವಳಿಗೆ ಬರೋ ಆಸ್ತಿಯೆಲ್ಲಾ ಮೊಮ್ಮಗನ ಹೆಸರಿಗೆ ಬಂದಂಗೆ. ಜೊತೆಗೆ ಇಕಿ ನೌಕರಿ ಮಾಡದರೂ ಸಂಬಳವೆಲ್ಲಾ ಮೊಮ್ಮಗನ ಕೈಗೆ ಎಂದೆಲ್ಲಾ ಯೋಚನೆ ಮಾಡಿ ಶಿವಮ್ಮ ಆ ದಿನ ರಾತ್ರಿ ಮಲಗುವಾಗ ಗಂಡನ ಮುಂದೆ ಕಸ್ತೂರಿ ಬಗ್ಗೆ ತಾನು ಯೋಚನೆ ಮಾಡಿರುವದೆಲ್ಲಾ ಹೇಳಿದಳು. ಶಂಕ್ರಪ್ಪ ಅಷ್ಟೊಂದು ಕುತೂಹಲದಿಂದ ಹೆಂಡತಿ ಮಾತನ್ನ ಕೇಳಲಿಲ್ಲ. ಬರೀ ಹಾಂ..ಹುಂ.. ಎನ್ನುತ್ತಲೇ ಮಲಗಿಬಿಟ್ಟ.

ಕಸ್ತೂರಿಯ ತಂದೆ ಮುರಗೆಪ್ಪನ ಸಹೋದರಿ ಗಂಗಾಬಾಯಿಯ ಮಗ ರಾಜಶೇಖರ ಗೋಲಗೇರಿಯಲ್ಲಿ ಹೈಸ್ಕೂಲ್ ಮಾಸ್ತರ್ ಆಗಿದ್ದ. ತನ್ನ ಮಗನಿಗೆ ಅಣ್ಣನ ಮಗಳನ್ನೇ ತಂದುಕೊಳ್ಳುವದೆಂದು ಮೊದಲಿನಿಂದಲೂ ಗಂಗಾಬಾಯಿ ಎಲ್ಲರೆದುರು ಹೇಳುತ್ತಲೇ ಬಂದಿದ್ದಳು. ಹೀಗಾಗಿ ಮತ್ತೆ ಬೇರೆ ಹುಡುಗನನ್ನು ಹುಡುಕುವ ಅವಶ್ಯಕತೆಯೇ ಇರಲಿಲ್ಲ. ರಾಜಶೇಖರ ಪ್ರತಿ ತಿಂಗಳಿಗೆ ಕಸ್ತೂರಿಯ ಓದಿನ ಖರ್ಚಿಗೆಂದು ಐದು ನೂರು ರೂಪಾಯಿಗಳನ್ನು ಕಳುಹಿಸುತ್ತಿದ್ದ. ಆ ವಿಷಯವನ್ನು ಕಸ್ತೂರಿ ತನ್ನ ಮಾವ ಶಂಕ್ರಪ್ಪನ ಮುಂದೆ ಮಾತ್ರ ಹೇಳಿರುವದಿತ್ತು. ಬೇರೆ ಯಾರ ಮುಂದೆಯೂ ಹೇಳದಿರುವಂತೆ ಶಂಕ್ರಪ್ಪನೇ ಆಕೆಗೆ ತಿಳಿಸಿದ್ದ. ಕಸ್ತೂರಿಗೆ ಒಳಗಿನ ಸಂಬಂಧದಲ್ಲಿಯೇ ಒಬ್ಬ ಹುಡುಗನಿದ್ದಾನೆ ಆ ಹುಡುಗ ತನ್ನ ಮಗನಿಗಿಂತಲೂ ನೂರು ಪಾಲು ಉತ್ತಮ ಎನ್ನುವದನ್ನು ಶಂಕ್ರಪ್ಪ ಹೇಳಿರಲಿಲ್ಲ. ಕಸ್ತೂರಿಗಂತೂ ತನ್ನ ಮದುವೆಗಿಂತಲೂ ಮುಖ್ಯವಾಗಿ ತಾನು ಏನಾದರೂ ಮಹತ್ತರವಾದುದನ್ನು ಸಾಧಿಸಬೇಕು ಎನ್ನುವ ಹಟವಿತ್ತು. ಪ್ರತಿ ವರ್ಷವೂ ಆಕೆ ಫ಼ಸ್ಟ್ ಕ್ಲಾಸಲಿಯೇ ತೇರ್ಗಡೆಯಾಗುತ್ತಾ ನಡೆದಳು. ಕಸ್ತೂರಿ ಮನೆಯಲ್ಲಿ ತನಗೆ ಒಪ್ಪಿಸುವ ಎಲ್ಲ ಕೆಲಸಗಳನ್ನು ಅತ್ಯಂತ ಚಮಕತನದಿಂದ ಮಾಡುತ್ತಿದ್ದಳು. ರಾತ್ರಿ ಎಲ್ಲರ ಊಟ ಮುಗಿದಾದ ಮೇಲೆಯೂ ಆಕೆ ಎಲ್ಲ ಪಾತ್ರೆಗಳನ್ನು ತೊಳೆದು ಮಲಗುತ್ತಿದ್ದಳು. ಬೆಳಿಗ್ಗೆ ಮತ್ತೆ ಎಲ್ಲರಿಗಿಂತಲೂ ಮುಂಚೆಯೇ ಎದ್ದು ವತ್ತಲಿಗೆ ಪುಟು ಹಾಕಿ ಓದುತ್ತಾ ಕೂಡುವ ಕಸ್ತೂರಿ ಬಗ್ಗೆ ಶಂಕ್ರಪ್ಪನಿಗೆ ತೀರಾ ಅಕ್ಕರೆ. ’ಇಷ್ಟು ಬೇಗ ಯಾಕವ್ವಾ ಏಳ್ತಿ..? ಇನ್ನೂ ನಸುಕೈತಿ ಮಲಕೊಬಾರದಾ.’ ಎಂದರೆ ’ಮಾವಾ ಇಡೀ ಜೀವನದಲ್ಲಿ ಅರ್ಧ ಭಾಗ ಬರೀ ನಿದ್ದೆಯಲ್ಲೇ ಹೋಗತೈತಿ. ಇನ್ನಿರೋ ಅರ್ಧ ಭಾಗದೊಳಗ ನಮ್ಮ ಎಲ್ಲಾ ಚಟುವಟಿಕೆ ನಡೀಬೇಕು,’ ಅಂದಾಗ ತನ್ನ ಸೊಸಿ ಹೇಳೂದು ಖರೆ ಐತಿ ಅನಿಸಿ ಕೈಯಲ್ಲಿ ತಂಬಗಿ ಹಿಡದು ಬಯಲಕಡೆಗೆ ನಡೆದಿದ್ದ. ಶಂಕ್ರಪ್ಪಗೂ ತನ್ನ ಮೊಮ್ಮಗ ಸಂಗಮೇಶಗೆ ಕಸ್ತೂರಿ ಚುಲೋ ಜೋಡಿ ಆಗ್ತಿತ್ತು. ಕಿವಿ ಹಿಂಡಿ ಅವನ್ನ ದಾರಿಗಿ ತರತಿದ್ದಳು. ಆದರ ಏನು ಮಾಡೋದು ಕಸ್ತೂರಿನ್ನ ಕರಕೊಂಡು ಬರಾಕ ಇಂಗಳಗಿಗೆ ಹೋದಾಗ ಮುದುಕಿ ಶಾವಂತ್ರವ್ವ ಗಂಗಾಬಾಯಿ ಮತ್ತ ಅಕಿ ಮಗ ರಾಜಶೇಖರನ ಕತಿ ಹೇಳಿದ್ದಳು. ಕಸ್ತೂರಿಯಂಥಾ ಹುಡುಗಿಗೆ ಆ ಹುಡುಗನೇ ಚುಲೋ. ಈಗಾಗಲೇ ಅಂವಾ ನೌಕರಿ ಮಾಡಾಕತ್ತಾನ ಇಂದಲ್ಲಾ ನಾಳೆ ಇಕಿಗೂ ನೌಕರಿ ಹತ್ತೂದು ಗ್ಯಾರಂಟಿ ಆಗ ಇವರ ಮುಂದ ಯಾರು..? ಎಂದೆಲ್ಲಾ ಯೋಚನೆ ಮಾಡತಾ ಶಂಕ್ರಪ್ಪ ನಡದಿದ್ದ. ಹಿಂದಿನ ರಾತ್ರಿ ಹೆಂಡತಿ ಶಂಕ್ರವ್ವ ಎತ್ತಿದ್ದ ಪ್ರಶ್ನೆ ಹಂಗೇ ಉಳದಿತ್ತು. ಅಕಿ ಬಿಡೂ ಪೈಕಿ ಅಲ್ಲ ಮತ್ತ ಆ ಪ್ರಶ್ನೆ ಎತ್ತೇ ಎತ್ತತಾಳ ಅವಾಗ ಎಲ್ಲಾ ಹೇಳಿಬಿಡಬೇಕು ಇಲ್ಲಾಂದ್ರ ಸುಳ್ಳೆ ನಾಳೆ ಜಗಳಾ ತಕ್ಕೊಂಡು ಕೂಡ್ತಾಳ. ತಂಗಿ ಶಾರದಾಬಾಯಿ ಬಾಳ ಚುಲೊ ಹೆಣಮಗಳು. ಅಕಿ ನಸೀಬದೊಳಗ ಇದಿ ಅದ್ಯಾಕೋ ಕೆಟ್ಟದ್ದು ಬರದು ಆಟ ಆಡಸ್ತು. ಯಾರಿಗೂ ಒಂದೇ ಒಂದಿನ ಕೆಟ್ಟದ್ದು ಬಯಸದವಳಲ್ಲ..ಲಗ್ನಕಿಂತಾ ಮೊದಲೂ ತನಗ ಇಂಥಾದು ಬೇಕು ಅಂತ ಬಯಸದವಳಲ್ಲ. ಅಂಥಾ ಹೆಣಮಗಳಿಗೆ ಲಕ್ವಾ ಹೊಡಿಯೂದಂದ್ರ ಹ್ಯಾಂಗ..? ಆ ದೇವರು ಅನ್ನವರೇ ಎಟ್ಟು ಕಠೋರ ಅದಾನ ಅಂತೆಲ್ಲಾ ಬಯಲುಕಡಿಗೆ ಕುಳಿತಲ್ಲೇ ಯೋಚನೆ ಮಾಡೂ ವ್ಯಾಳೆದೊಳಗ ಇದ್ದಕ್ಕಿದ್ದಂಗ ಎದಿಯೊಳಗ ಏನೋ ಚುಚ್ಚದಂದಾಗಿ ಶಂಕ್ರಪ್ಪ ಅಲ್ಲೇ ಉರುಳಿಬಿದ್ದಿದ್ದ. ಅವನ ಜೀವ ಅಲ್ಲೇ ಬಯಲಾಗಿತ್ತು.

ಆ ದಿವಸ ಮನಿಯೊಳಗ ಹತ್ತಾರು ಮಂದಿ ನೆರೆದಿದ್ದರು. ಚನಬಸು ಇನ್ನೂ ಅಂಗಡಿ ಬಾಗಿಲ ತಗದಿರಲಿಲ್ಲ. ಇಂಗಳಗಿಯಿಂದ ಕಸ್ತೂರಿಯ ಅಜ್ಜಿ ಶಾವಂತ್ರವ್ವ ಬಂದಿದ್ದಳು. ಸಾಲವಡಗಿಯಿಂದ ಶಿವಮ್ಮಳ ತಮ್ಮ ಸಿದ್ದಪ್ಪನೂ ಬಂದಿದ್ದ. ಕಸ್ತೂರಿ ಕಂಬದ ಮರಿಗೆ ನಿಂತಗೊಂಡಿದ್ದಳು. ಸಂಗಮೇಶ ಅಲ್ಲೇ ಜೋಳದ ಚೀಲದ ಮ್ಯಾಲ ಕುತಗೊಂಡಿದ್ದ. ಶಾವಂತ್ರವ್ವ ಶಿವಮ್ಮ ಇದರಾಬದರ ಕುತಗೊಂಡು ಮಾತಾಡಾಕ ಸುರು ಮಾಡದರು. ’ನೋಡವಾ ಯಕ್ಕಾ, ಕಸ್ತೂರಿ ನಿನಗ ಹ್ಯಾಂಗ ಮೊಮ್ಮಗಳೊ ನನಗೂ ಹಂಗೇ.. ಅವರಿಗಂತೂ ಅಕಿ ಮ್ಯಾಲ ಬಾಳ ಕಾಳಜಿ ಇತ್ತು. ಅದಕ್ಕೇ ಅವರು ಮತ್ತ ಮತ್ತ ಅಕಿ ನಮ್ಮ ಮನಿ ಸೊಸಿ ಆದರ ಚುಲೊ ಆಗತೈತಿ ಅಂತ ಬಾಳ ಸೇರಿ ಹೇಳಿದೈತಿ. ಈಗ ಅನಾಯಸ ನೀನೂ ಬಂದೀದಿ ಮನಿಗಿ ಹಿರಿ ಮನುಷ್ಯಾಳು ಬ್ಯಾರೆ, ನಮ್ಮ ಹುಡುಗ ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಕೂಡೇ ಕಲತವರು. ಕಸ್ತೂರಿ ಮ್ಯಾಲ ಅವನೂ ಬಾಳ ಜೀಂವ ಅದಾನ. ಅದಕ್ಕ ಅವನಿಗೆ ಕಸ್ತೂರಿನ್ನ ತಂದುಕೊಂಡ್ರ ಹ್ಯಾಂಗ..?’ ಅಂತ ಕೇಳಿದ್ದೇ ಶಾವಂತ್ರವ್ವ ಮೌನ ಮುರಿಲೇ ಇಲ್ಲ. ಹಿಂದೊಮ್ಮ ಈ ವಿಷಯ ತಗದು ಮಾತಾಡೂ ಮುಂದ ತನ್ನ ಗಂಡನೂ ಹಿಂಗೇ ಗಪ್ ಚುಪ್ ಆಗೇ ಇದ್ದ. ಈಗ ನೋಡದರ ಶಾವಂತ್ರವ್ವನೂ.. ಅಂತ ಯೋಚನೆ ಮಾಡಿ” ನೀ ಮಾತಾಡು.. ಏನರೇ ಹೇಳು, ಹಿಂಗ ಸುಮ್ಮ ಕುಂತರ ಹ್ಯಾಂಗ..?’
’ಅಯ್ಯ ಯಕ್ಕಾ ನಾ ಏನು ಮಾತಾಡ್ಲಿ..? ನಿನ್ನ ಗಂಡ ಏನೂ ಹೇಳಿಲ್ಲನೂ.’
’ಎದರ ಬಗ್ಗೆ’
’ಅದೇ ಕಸ್ತೂರಿ ಲಗ್ನದ ಬಗ್ಗೆ’
’ಇಲ್ಲ.. ಏನೂ ಹೇಳಲಿಲ್ಲ’
’ಅದ್ಯಾಂಗದು..’
’ಇಲ್ಲ ಖರೆನೇ ಏನೂ ಹೇಳಿಲ್ಲ.’
’ತಂಗೀ.. ಕಸ್ತೂರಿನ್ನ ತನ್ನ ತಂಗೀ ಮಗನಿಗೇ ತಂದುಕೊಳ್ಳಬೇಕು ಅಂತ ಕಸ್ತೂರಿ ಅಪ್ಪ ಸಾಯೂ ಮೊದಲೇ ಮಾತಾಗಿತ್ತು. ಕಸ್ತೂರಿ ಅತ್ತಿ ಗಂಗಾಬಾಯಿ ಕಸ್ತೂರಿನ್ನ ಯಾವಾಗಲೋ ತನ್ನ ಮನಿ ಸೊಸಿ ಅಂತ ಒಪಗೊಂಡಾಳ. ಅಕಿ ಅಣ್ಣ ಮುರಗೇಶಪ್ಪಗ ಸಾಯೂ ಮುಂದ ಮಾತು ಕೊಟ್ಟಾಳ. ಆವಾಗ ಕಸ್ತೂರಿ ಇನ್ನೂ ಬಾಳ ಸಣ್ಣದು. ಕಸ್ತೂರಿ ಅವ್ವಗ ಇದೆಲ್ಲಾ ಗೊತ್ತದ ನಿನ್ನ ಗಂಡ ಶಂಕ್ರಪ್ಪನ ಮುಂದೂ ಇದೆಲ್ಲಾ ನಾ ಹೇಳಿದ್ದೆ,’ ಅಂದದ್ದೇ ಶಿವಮ್ಮಳ ಮುಖ ಗಂಟಗಂಟಾಗಿತ್ತು.
’ನನ್ನ ಮ್ಮೊಮ್ಮಗನಿಗೆ ಏನು ಕಡಿಮೆ ಆಗೈತಿ..”
’ಕಡಿಮಿ,..ಹೆಚ್ಚ ಅಂತಲ್ಲ.. ಮಾತು ಕೊಟ್ಟ ಮ್ಯಾಲ ಮುಗೀತು.’ ಶಿವಮ್ಮ ಗರಂ ಆದಳು.’
’ಇಷ್ಟು ದಿವಸ ಹೇಳಾಕ ನಿಮಗೇನಾಗಿತ್ತು..ಧಾಡಿ?’
’ನೀ ಕೇಳಿರಲಿಲ್ಲ..ನಾವು ಹೇಳಿರಲಿಲ್ಲ.
ಚನಬಸು ಅವ್ವನ ಸನ್ಯಾಕ ಬಂದು, ’ಹೋಗಲಿ ಬಿಡವಾ, ಅವರವರ ಋಣಾನುಬಂಧ ಹ್ಯಾಂಗಿರತೈತಿ ಹಂಗಾಗಲಿ.’ ಶಿವಮ್ಮ ಕಸ್ತೂರಿ ಕಡೆ ನೋಡಿ, ’ಇವಳರೇ ಹೇಳಬೇಕಲ್ಲ ಬುಬ್ಬಣಚಾರಿ,’ ಅಂದಾಗ ಶಾವಂತ್ರವ್ವ ಅಜ್ಜಿ, ’ಅಕಿಗ್ಯಾಕ ಎಲ್ಲಾ ಬಿಟ್ಟು ಪಾಪ..!’
’ನೀವು ನೀವು ಖರೆ ಆದ್ರಿ’
’ಯಾಕ ಹಂಗ ಮಾತಾಡ್ತಿ..? ನಿನ್ನ ಮೊಮ್ಮಗ ಏನು ಕುಂಟೊ..ಕುರುಡೊ..?’
’ಅವೆಲ್ಲಾ ಬ್ಯಾಡ..’ ಅಂದಾಗ ಶಾವಂತ್ರವ್ವ ದೊಡ್ದದೊಂದು ನಿಟ್ಟುಸಿರನ್ನು ಬಿಟ್ಟು
’ಆಯ್ತು ನಾ ಇನ್ನ ಬರ್ತೀನಿ, ಸಾಡೆ ಬಾರಾಕ ಒಂದು ಬಸ್ಸೈತಿ,’ ಅಂದಾಗ ಶಿವಮ್ಮ ಅಕಿಗೆ ಹುಂ… ನೂ ಅನಲಿಲ್ಲ.. ಹಾಂ.. ನೂ ಅನಲಿಲ್ಲ. ಶಾವಂತ್ರವ್ವ ಕಸ್ತೂರಿ ಕಡೆ ನೋಡಿ, ’ಪರೀಕ್ಷೆ ಮುಗಿದದ್ದೇ ಬಂದು ಬಿಡವ. ನಿಮ್ಮವ್ವ ನಿನ್ನನ್ನ ಬಾಳ ನೆನಸತಿರತಾಳ,’ ಅಂದಾಗ ಕಸ್ತೂರಿ ಕಣ್ಣಲ್ಲಿಯ ನೀರು ದಳದಳನೇ ಕೆಳಗಿಳಿದವು. ಶಾವಂತ್ರವ್ವ ಹೊಂಟು ನಿಂತಾಗ, ಮುದುಕಿ ಶಿವಮ್ಮ ’ಹೋಗಿ ಬಾ’ ಅಂತ ಒಂದು ಮಾತ ಸೈತಾ ಆಡಲಿಲ್ಲ. ಕಸ್ತೂರಿಗೆ ಬಾಳ ಕೆಟ್ಟ ಅನಿಸಿತ್ತು. ತನ್ನ ಅಜ್ಜಿಗೆ ಚಾ ಮಾಡಿ ಕೊಡ್ತೀನಿ ಇರು ಅಂತ ಹೇಳೂವಷ್ಟು ಸೈತ ತನಗಿಲ್ಲಿ ಹಕ್ಕಿಲ್ಲ ಅಂತ ಒಳಗೊಳಗ ನೊಂದುಕೊಂಡಳು. ಶಿವಮ್ಮ ಗಂಡ ಸತ್ತು ಇನ್ನೂ ತಿಂಗಳು ಸೈತ ಕಳದಿಲ್ಲ ತನ್ನ ಮೊಮ್ಮಗನ ಲಗ್ನದ ಬಗ್ಗೆ ಯೋಚನೆ ಮಾಡ್ತಿರೋದು ಕಸ್ತೂರಿಗೆ ಅಸಹ್ಯ ಅನಿಸಿತ್ತು. ಮೊಮ್ಮಗ ಸಂಗಮೇಶ ಮತ್ತ ಮತ್ತ ’ನಾ ಅಕಿನ್ನ ಮದುವಿ ಆಗುವಂಗಿಲ್ಲ.. ನನಗ ಒಳಗಿನ ಸಂಬಂಧ ಬೇಕಾಗಿಲ್ಲ,’ ಅಂತ ಕಡ್ಡೀ ಮುರದಂಗ ಹೇಳಿದ ಮ್ಯಾಲೂ ಅಕಿ ಕೇಳಿರಲಿಲ್ಲ. ಒಂದೇ ಹುಡುಗಿ ಚುಲೋ ತೋಟ ಪಟ್ಟಿ ಲಗ್ನ ಆದರ ಸೀದಾ ಬಂದು ಮೊಮ್ಮಗನ ಉಡಿಯೊಳಗೇ ಬೀಳತೈತಿ ಹ್ಯಾಂಗರೆ ಮಾಡಿ ಈ ಸಂಬಂಧ ಮಾಡಬೇಕು ಅಂತ ಜಪ್ಪಿಸಿ ಕಾಯ್ಕೊಂಡು ಕುಂತಿದ್ದಳು. ಯಾವಾಗ ಇಕಿ ತಿಪ್ಪರಲಾಗಾ ಹಾಕದರೂ ಕಸ್ತೂರಿ ಲಗ್ನ ಬ್ಯಾರೆ ಹುಡುಗನ ಜೋಡಿ ನಡಿಯೂದೈತಿ ಅಂತ ಗೊತ್ತಾಯ್ತೋ ಆವಾಗಿಂದ ಶಿವಮ್ಮಳ ಮಾತ ಬಾಳ ಬಿರಸ್ ಆದ್ವು. ಕಸ್ತೂರಿ ಮುಖ ನೋಡಿ ಮಾತಾಡಲಾರದಷ್ಟು ಆಕಿ ಕಠೋರ ಆದಳು. ಕಸ್ತೂರಿಗೂ ಯಾವಾಗ ಪರೀಕ್ಷೆ ಮುಗದಿತ್ತು.. ಯಾವಾಗ ಊರಿಗೆ ಹೋಗ್ತೀನಿ ಅನಿಸಿತ್ತು. ಪರೀಕ್ಷೆ ಇನ್ನೊಂದೆರಡು ದಿನ ಇತ್ತು. ಮನೆಯಲ್ಲಿರೋ ಹಾಸಿಗೆಗಳನ್ನೆಲ್ಲಾ ಗುಡ್ದೆ ಹಾಕಿ ಹೋಗಿ ತೊಳಕೊಂಡು ಬರಲಿಕ್ಕ ಹೇಳಿದಳು. ಹೊತ್ತು ಹೊಂಟರೆ ಪರೀಕ್ಷೆ. ಕಸ್ತೂರಿ ಹೆದರಕೋಂತ ಅಜ್ಜಿ.. ಪರೀಕ್ಷೆ ಮುಗಿದ ದಿನಾನೇ ಎಲ್ಲಾ ಕ್ಲೀನ್ ಮಾಡ್ತೀನಿ ಅಂದಾಗ ’ಬಾಳ ಶಾಣೆ ಆಗಬ್ಯಾಡ ಹೇಳದಷ್ಟು ಕೇಳು’ ಅಂತ ರಂಪಾಟ ಮಾಡಿ ಕ್ಲೀನ್ ಮಾಡಿಸಿದ್ದಳು. ಶಿವಮ್ಮಳಿಗೆ ಕಮ್ಮೀತಕಮ್ಮಿ ಎಪ್ಪತ್ತು ವರ್ಷ. ಈ ವಯಸ್ಸಲ್ಲೂ ಈ ತರಹದ ಕೊಂಕು ಬುದ್ದಿ ಕಂಡು ಕಸ್ತೂರಿಗೆ ಅಚ್ಚರಿ ಎನಿಸಿತ್ತು. ಇನ್ನೇನು ಹೆಚ್ಚಂದರೆ ಹದಿನೈದು ದಿನ, ಸುಮ್ಮನೇ ಯಾಕ ಒಣಾ ಲಿಗಾಡು ಅಂದುಕೊಂಡು ಶಿವಮ್ಮ ಹೇಳೋ ಎಲ್ಲಾ ಕೆಲಸಗಳನ್ನ ಮರು ಮಾತಾಡದೇ ಮಾಡುತ್ತಿದ್ದಳು.

ಅದಾಗಲೇ ನಾಲ್ಕು ಪೇಪರ್ ಮುಗಿದಿದ್ದವು. ಅದು ಕೊನೆಯ ಪೇಪರ್. ಆ ದಿನ ಬೆಳ್ಳಂಬೆಳಿಗ್ಗೆ ಆ ಮನೆಯಲ್ಲಿ ಒಂದು ರಂಪಾಟ ಶುರುವಾಗಿತ್ತು. ’ಮನಿ ಒಳಗಿನವರೇ ಕಳ್ಳರಾದರ ಹ್ಯಾಂಗ ಮಾಡೂದು..? ಅಪ್ಪ ಇಲ್ಲ ಅವ್ವ ಹಾಸಗಿ ಹಿಡದಾಳ ಅಂತ ಓದಾಕ ಕರಕೊಂಡು ಬಂದ್ರ ಇಂಥಾ ಲಪುಟಗಿರಿ ಮಾಡದರ ಏನು ಹೇಳಬೇಕು..? ದುಡ್ಡಲ್ಲ ಎರಡದುಡ್ಡಲ್ಲ. ನಾಕು ತೊಲಿ ಬಂಗಾರದ ಕಾಸಿನ ಸರ ಇಲ್ಲೇ ಇದ್ದದ್ದು ಅದು ಹ್ಯಾಂಗ ಮನಿ ಬಿಟ್ಟು ಓಡಿ ಹೋಗತೈತಿ..? ನನಗ ಗೊತೈತಿ ಅದ್ಯಾರು ತಗೊಂಡಾರ ಅಂತ ನಾ ಹೇಳೋದಕಿಂತ ಮೊದಲೇ ಕೊಟ್ಟರ ಚುಲೋ.. ಇಲ್ಲಾಂದ್ರ ಪೋಲಿಸ್ ಕಂಪ್ಲೇಂಟ್ ಕೊಡಬೇಕಾಗತೈತಿ,’ ಅಂತ ಶಿವಮ್ಮ ಒಂದು ಸವನ ಚೀರಾಡತಿದ್ದಳು. ಸಂಗಮೇಶ, ಕಸ್ತೂರಿ, ಚನಬಸು ಮತ್ತವನ ಹೆಂಡತಿ, ಮಗಳು ಅನಸೂಯಾ, ಸಿದ್ದಪ್ಪನ ಮಗ ರಮೇಶ ಎಲ್ಲರೂ ದಂಗಾಗಿ ನಿಂತಿದ್ದರು. ಶಿವಮ್ಮಜ್ಜಿ ಯಾರನ್ನ ಟಾರ್ಗೆಟ್ ಆಗಿ ಮಾತಾಡಾಕತ್ತಾಳ ಅಂತ ಎಲ್ಲರಿಗೂ ಗೊತ್ತಿತ್ತು. ಚನಬಸು ’ಅವ್ವಾ ನೀ ನೋಡಿದ್ದರ ಮಾತಾಡು ಸುಮ್ಮನೇ ಆರೋಪ ಬ್ಯಾಡ.’ ಎಂದ.
’ಆರೋಪ ಯಾಕೋ.. ಇಲ್ಲಿ ನಿಂತಾಳಲ್ಲ ಮಳ್ಳೀಯಂಗ ಇಕಿನೇ ಕದ್ದಿದ್ದು.’
’ಅಕಿನೇ ಅಂತ ಹ್ಯಾಂಗ ಹೇಳ್ತಿ?’
’ಪರೀಕ್ಷೆ ಮುಗದು ಊರಿಗೆ ಹೊಂಟವರು ಯಾರು..?’
ಸಂಗಮೇಶ, ’ಅಜ್ಜಿ ಸುಮ್ ಸುಮ್ನೇ ಏನೇನೋ ಮಾತಾಡಬ್ಯಾಡ.’ ಎಂದ.
’ಯಾಕ ಮಾತಾಡಬಾರದು.? ಹಂಗಿದ್ದರ ನನ್ನ ಕಾಸಿನ ಸರ ಎಲ್ಲಿ ಹೋಯ್ತು..?’
’ನಮಗೇನು ಗೊತ್ತು..’
’ನನಗ ಗೊತೈತಿ ಅಕಿನೇ.. ಆ ಕಚ್ಚವ್ವನೇ ತಗೊಂಡಾಳ ಅದ್ಕೇ ಹಂಗ ಗುಮ್ಮನ ಗುಸಕ್ ನಿಂತಂಗ ನಿಂತಾಳ.’

ಕಸ್ತೂರಿ ಒಳಗೊಳಗೆ ತಾಪ ಆದರೂ ಮೌನ ಮುರಿಲಾರದೇ ನಿಂತಿದ್ದಳು. ಮುದುಕಿ ಶಿವಮ್ಮ ಕಸ್ತೂರಿ ಅಳು ನುಂಗಿ ನಿಂತದ್ದನ್ನ ನೋಡಿ ಮತ್ತ ಬೈಯಾಕ ಸುರು ಮಾಡಿದ್ದಳು.
’ನಮ್ಮ ಮನಿಯೊಳಗ ಬೇಕು ಬೇಕಾದ್ದು, ಬೇಕು ಬೇಕಾದಲ್ಲಿ ಬಿದಿರತೈತಿ, ಯಾರೂ ಮುಟ್ಟೂದಿಲ್ಲ. ಇಲ್ಲೀಮಟ ಒಂದೇ ಒಂದು ರೂಪಾಯಿ ಕಳುವಾಗಿದ್ದಿಲ್ಲ. ಇವತ್ತ ಲಕ್ಷ ರೂಪಾಯಿದು ಕಾಸಿನ ಸರ ಹಡಪ್ಯಾರಂದ್ರ ಹೊಟ್ಟಿ ಉರಿಯೂದಿಲ್ಲನೂ..? ಯಾರದರೇ ಮನಿ ನುಂಗವರು ಸೂಳೇರು.. ಹಳಾ ಸೂಳೇರು.’

ಇಕಿ ಬೈಯೂದು ಕೇಳಿ ಕೋಲಿಯೊಳಗಿರೋ ಶಿವಮ್ಮಳ ತಮ್ಮನ ಮಗ ರಮೇಶ ಹಲ್ಲು ಕಿಸಿತಿದ್ದ. ಇಷ್ಟು ಮಂದಿ ಮುಂದ ಕದಿಲಾರದೇ ಕವಕವ ಅಂತ ಅನಸಕೊಂಡು ಸುಮ್ಮ ನಿಂತಿರೋ ಕಸ್ತೂರಿನ್ನ ಬೇಕಂತಲೇ ಕೆದಕಿ ’ಸುಮ್ಮ ಅದನ್ನ ಎಲ್ಲಿಟ್ಟಿದಿ ಕೊಟ್ಟಿ ಚುಲೊ.. ಇಲ್ಲಾಂದ್ರ ಪೋಲಿಸರಿಗೇ ಕೊಡ್ತೀನಿ,’ ಅಂದಾಗ ಕಸ್ತೂರಿ ಹೆದರಿಬಿಟ್ಟಳು.
’ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ.’
’ಆ ಆಣಿ ಗೀಣಿ ಬ್ಯಾಡ, ಮೊದಲ ಆ ಕಾಸಿನ ಸರ ಕೊಡು.’
’ನನಗ ಗೊತ್ತಿಲ್ಲ.. ನಾ ತಗೊಂಡಿಲ್ಲ.’
’ತಗೊಂಡವರು ಯಾರರೇ ತಗೊಂಡೀನಿ ಅಂತಾರಾ..?’
’ನನ್ನ ಬ್ಯಾಗ ಚೆಕ್ ಮಾಡ್ರಿ.’
’ಅದೆಲ್ಲಾ ಬೇಕಾಗಿಲ್ಲ, ನಿನ್ನ ಲಗೇಜ್ ಪ್ಯಾಕ್ ಮಾಡ್ಕೊ, ನೀ ಇಲ್ಲಿರುದು ಬ್ಯಾಡ ನಡಿ ನಿಮ್ಮ ಊರಿಗಿ,’ ಅಂದಾಗ ಸಂಗಮೇಶ
’ಅಜ್ಜೀ ನಾಳೆ ಒಂದು ದಿನ ಲಾಸ್ಟ್ ಪೇಪರ್.’
’ಅದೆಲ್ಲಾ ಬ್ಯಾಡ ಮತ್ತ ನಾ ಪೋಲಿಸರಿಗೆ ಕರಿಯುವಂಗ ಆಗಬಾರದು ಹೋಗಲಿ ಪೀಡಾ.. ಒಂದು ಸರ ಹೋಯ್ತು ಅಷ್ಟೇ.’

ಕಸ್ತೂರಿಗೆ ತಾನು ಕಳ್ಳಿ ಅನ್ನುವ ಬಿರುದು ಹೊತಗೊಂಡು ಈ ಮನಿಯಿಂದ ಹೊರಬೀಳಬೇಕಾಯ್ತಲ್ಲ..! ಅನ್ನೋ ನೋವಿತ್ತು. ತನ್ನ ಬಟ್ಟೆ ಬರೆ, ಪುಸ್ತಕ ಎಲ್ಲವನ್ನು ತಂದು ಶಿವಮ್ಮಳ ಎದುರಲ್ಲಿಯೇ ಒಂದೊಂದಾಗಿ ಝಾಡಿಸಿ, ತನ್ನ ಬ್ಯಾಗಲ್ಲಿಟ್ಟುಕೊಂಡು ಕಣ್ಣೀರು ಸುರಿಸುತ್ತಲೇ ಮೆಲ್ಲಗೆ ನಡೆದಳು. ಹೊರಳಿ ಅಲ್ಲಿರುವ ಎಲ್ಲರನ್ನು ಒಂದು ಸಾರಿ ಗಮನಿಸಿದಳು. ಅವರೆಲ್ಲರೂ ಕಲ್ಲಿನ ಗೊಂಬೆಯಂತಾಗಿದ್ದರು. ಆಕೆ ಹೊಸ್ತಿಲು ದಾಟುತ್ತಿರುವಂತೆ ಶಿವಮ್ಮಳ ತಮ್ಮನ ಮಗ ರಮೇಶ ದೇವರ ಕೊಣೆಯಿಂದ ಹಲ್ಲುಕಿಸಿಯುತ್ತ ಹೊರಬಂದ. ಶಿವಮ್ಮಜ್ಜಿ ಅವನ ನಗುವನ್ನು ಕಂಡು ಗಡಬಡಿಸಿ ಕಣ್ಣು ಚಿವುಟುತ್ತಿದ್ದಳು. ಆ ಕಣ್ಣು ಮುಚ್ಚಾಲೆಯ ಆಟ ಉಳಿದವರ ಪಾಲಿಗೆ ನಿಗೂಢವಾಗಿತ್ತು.

ಜನನಾಯಕರೇ, ಸೆನ್ಸಾರ್ ಮಾಡಿ ಮಾತನಾಡಿ


– ಡಾ.ಎಸ್.ಬಿ. ಜೋಗುರ


ನುಡಿದರೆ ಮುತ್ತಿನ ಹಾರದಂತಿರಬೇಕು.. ಎನ್ನುವ ಶರಣರ ವಾಣಿ ಆ ಮಾತು ಹೌದು..ಹೌದು ಎಂದು ಲಿಂಗ ಮೆಚ್ಚುವಂತಿರಬೇಕು ಎನ್ನುತ್ತದೆ. ಕೊನೆಗೂ ಇಲ್ಲಿ ಲಿಂಗ ಎನ್ನುವುದು ನಮ್ಮ ಮನ:ಸಾಕ್ಷಿ ಎಂದರ್ಥ. ಮಾತು ಮನುಷ್ಯನ ಮನಸಿನ ಕನ್ನಡಿ, ವ್ಯಕ್ತಿತ್ವದ ಭಾಗ.ಹೀಗಿರುವಾಗ ಮನಸೊಪ್ಪದ ಮಾತನಾಡಿ ಪರಿತಪಿಸುವ ಅಗತ್ಯವಾದರೂ ಏನಿದೆ..? ಮಾತನಾಡುವವರಲ್ಲಿ ಮೂರು ಪ್ರಬೇಧಗಳಿವೆ ಒಂದನೆಯದು ಬರೀ ಮಾತನಾಡುತ್ತಾ ಹೋಗುವದು ಅದರ ಅಡ್ಡ ಪರಿಣಾಮ, ಉದ್ದ ಪರಿಣಾಮಗಳ ಬಗ್ಗೆ ಇವರು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದವರು. ಎರಡನೆಯವರು ಮೊದಲು ಮಾತನಾಡಿ ಆಮೇಲೆ ಅಯ್ಯೋ ಹಾಗೆ ಮಾತನಾಡಬಾರದಿತ್ತು ಎಂದು ಕರಬುವವರು. ಮೂರನೇಯವರು ಮಾತನಾಡುವ ಮುನ್ನ ಒಂದೆರಡು ಬಾರಿ ಯೋಚಿಸಿ ಈ ಮಾತಿನ ಪರಿಣಾಮ ಏನಾಗಬಹುದು ಎಂದು ಲೆಕ್ಕಿಸಿ ಮಾತನಾಡುವವರು. ಈ ಮೂರೂ ಪ್ರಬೇಧಗಳಲ್ಲಿ ಮೂರನೇಯದು ಅತ್ಯುತ್ತಮವಾದುದು. ಅಲ್ಲಿ ತಕ್ಕ ಮಟ್ಟ್ತಿಗೆ ನೀವಾಡುವ ಮಾತು ನಿಮ್ಮಿಂದಲೇ ಸೆನ್ಸಾರ್ ಆಗಿ ಹೊರಬರುತ್ತದೆ.

ನಮ್ಮನ್ನಾಳುವ ಜನನಾಯಕರು ಗ್ರಾಮ ಪಂಚಾಯತದ ವ್ಯಾಪ್ತಿಯಿಂದ ಹಿಡಿದು ರಾಷ್ಟ್ರಪತಿಗಳ ವರೆಗೆ ಮಾತನಾಡುವಾಗ ಹತ್ತಾರು ಬಾರಿ ಯೋಚಿಸಿ ಮಾತನಾಡಬೇಕು. ಯಾಕೆಂದರೆ ಅವರೆಲ್ಲಾ ಜನರ ಪ್ರತಿನಿಧಿಗಳು ಅವರಾಡುವ ಮಾತುಗಳು ಪಾಲಿಶ್ ಆಗಿಯೇ ಹೊರಬರಬೇಕು. ಮನಸಿಗೆ ಬಂದಂತೆ ಮಾತನಾಡುವದಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ಜನನಾಯಕರು ಮಾತನಾಡುವಾಗ ಕಿವಿ ಮುಚ್ಚಿಕೊಳ್ಳುವುದೇ ಒಳಿತು ಎನ್ನುವ ಭಾವನೆ ಬರತೊದಗಿದೆ. ಅದಕ್ಕಿಂತಲೂ ದೊಡ್ದ ವಿಷಾದವೆಂದರೆ ಅವರು ಮಾಧ್ಯಮ ಎದುರಲ್ಲಿ ಮಾತನಾಡುವಾಗಲೂ ನಾಲಿಗೆಗೆ ಲಗಾಮಿರುವದಿಲ್ಲ ಎನ್ನುವುದು. ನಮ್ಮ ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಅಂತರವೂ ನಮ್ಮ ಜನನಾಯಕರಿಗೆ ತಿಳಿಯದಾಯಿತೆ..? ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವ ಮಾತಿದೆ. ಮಾತಾಡುವ ಮುನ್ನ ಹತ್ತಾರು ಬಾರಿ ಸಾರಾಸಾರ ಯೋಚಿಸಿ ಬಾಯಿ ತೆಗೆಯಬೇಕು. ಪಶ್ಚಿಮದ ರಾಷ್ಟ್ರಗಳಲ್ಲಿ ಒಬ್ಬ ಜನನಾಯಕ ಮಾಧ್ಯಮದೆದುರು ಹೋಗಬೇಕಾದರೆ ಒಂದು ಶಿಸ್ತುಬದ್ಧವಾದ ತಾಲೀಮನ್ನು ಮಾಡಿ ಆಮೇಲೆ ಬಯಲಾಗುತ್ತಾನೆ. ನಮ್ಮಲ್ಲಿ ಹಾಗಿಲ್ಲ. ಮನಸಿಗೆ ಬಂದಂತೆ ಮಾತನಾಡಿ ತನ್ನ ಕುಬ್ಜತನವನ್ನು ಪ್ರದರ್ಶನ ಮಾಡುವ ಜೊತೆಗೆ ಅವನನ್ನು ಆಯ್ಕೆ ಮಾಡಿದವರು ಪಶ್ಚಾತ್ತಾಪ ಪಡುವಂತೆ ಮಾಡುವ ಮೂಲಕ ಬಯಲಾಗುತ್ತಾನೆ.ಹಣ, ಅಧಿಕಾರ, ಜಾತಿ, ಇಂಥವುಗಳ ಮದದಿಂದಲೂ ನಮ್ಮ ಜನನಾಯಕರ ಮಾತುಗಳು ವಕ್ರವಾಗುವದಿದೆ. ಹಿಂದೆ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅವರು ಮಾತನಾಡುವ ರೀತಿ ಯಾರನ್ನೂ ನೋಯಿಸುತ್ತಿರಲಿಲ್ಲ ಬದಲಾಗಿ ನಗಿಸುವಂತಿರುತ್ತಿತ್ತು. ಹಾಗಂತ ಹೇಳುವದನ್ನು ಹೇಳದೇ ಅವರು ಬಿಡುತ್ತಿರಲಿಲ್ಲ. ನನಗಿನ್ನೂ ನೆನಪಿದೆ ಬೆಂಗಳೂರಿನಲ್ಲಿ ಸೌಂದರ್ಯ ಸ್ಪರ್ಧೆಯನ್ನು ನಡೆಯಿಸುವ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ’ನಾನಂತೂ ಅದಕ್ಕೆ ಅವಕಾಶ ಕೊಡುವೆ ನೋಡುವವರು ನೋಡಲಿ ನೋಡದಿರುವವರು ಕಣ್ಣು ಮುಚ್ಚಿ ಕೊಳ್ಳಲಿ’ ಎಂದಿದ್ದರು. ಸದನದಲ್ಲಿಯೂ ಇಂಥಾ ಅನೇಕ ಮಾತುಗಳನ್ನು ತೇಲಿ ಬಿಟ್ಟು ಇಡೀ ಸದನವನ್ನೇ ನಗೆಗಡಲಲ್ಲಿ ತೇಲಿ ಬಿಡುತ್ತಿದ್ದರು. ಈಗ ಪರಿಸ್ಥಿತಿ ಎಷ್ಟು ಅತಿರೇಕಕ್ಕೆ ಹೋಗಿದೆ ಎಂದರೆ ಸದನದಲ್ಲಿ ಏನು ನಡೆಯಬಾರದೋ ಅವೆಲ್ಲವನ್ನೂ ನಮ್ಮ ಜನನಾಯಕರು ನಡೆಸಿ ಆಯಿತು. ಅವುಗಳಿಗಿಂತಲೂ ಅಗ್ಗವಾದದ್ದು ಏನೂ ಉಳಿದಿಲ್ಲ.

ನಮ್ಮ ಜನನಾಯಕರ ಮಾತು ಕೇಳಿದರೆ ಅವು ತೀರಾ ಖಾಸಗಿ ಸಂದರ್ಭದಲ್ಲಿ ಆಡಬೇಕಾದಂತವುಗಳು. ಹಾಗಿರುವಾಗಲೂ ಅವರು ಹಿಂಡು ಹಿಂಡಾಗಿರುವ ಮಾಧ್ಯಮದವರ ಎದುರು ಅತ್ಯಂತ ಅಸಹ್ಯವಾಗಿ ಮಾತನಾಡುವದನ್ನು ನೋಡಿದರೆ ಒಬ್ಬ ತೀರಾ ಜನಸಾಮಾನ್ಯನೂ ಅವರಿಗಿಂತಲೂ ತಾನು ನೂರು ಪಾಲು ಮೇಲು ಎನ್ನುವ ಸಮಾಧಾನ ಪಡುವಂತಿದೆ. ಕೈ ಕತ್ತರಿಸುವೆ, ರುಂಡ ಚಂಡಾಡುವೆ, ಒಂದು ಕೂದಲೂ ಅಲ್ಲಾಡಿಸಲಾಗಲ್ಲ, ತಾಕತ್ತಿದ್ದರೆ ಬಾ, ಇಂಥಾ ಮಾತುಗಳು ನಮ್ಮ ಜನನಾಯಕರ ಬಾಯಿಂದ ಬರಬಹುದೆ..? ಇಲ್ಲಿ ಯಾವುದೋ ಒಂದು ಪಕ್ಶವನ್ನು ಕುರಿತು ನಾನು ಹೇಳುತ್ತಿಲ್ಲ. ಎಲ್ಲ ಪಕ್ಷಗಳಲ್ಲೂ ಹೀಗೆ ಅಸಹ್ಯವಾಗಿ ಮಾತನಾಡುವವರು ಇದ್ದೇ ಇದ್ದಾರೆ. ಅವರು ತಮ್ಮ ನಾಲಿಗೆಯನ್ನು ಪಾಲಿಶ್ ಮಾಡದೇ ಸಾರ್ವಜನಿಕ ವಲಯದಲ್ಲಿ ಹರಿ ಬಿಡಬಾರದು.yeddy-eshwarappa ನಿಮ್ಮ ಮುಂದಿರುವ ಪೀಳಿಗೆಗೆ ಮಹತ್ತರವಾದುದದನ್ನು ನೀವು ಕೊಡುಗೆಯಾಗಿ ನೀಡಬೇಕೇ ಹೊರತು ಇಂಥದ್ದನ್ನಲ್ಲ. ಇಂಥವರನ್ನು ಗಮನದಲ್ಲಿಟ್ಟುಕೊಂಡೇ ಮಾತು ಬೆಳ್ಳಿ ಮೌನ ಬಂಗಾರ ಎಂದಿರುವದಿದೆ. ನಾವು ನಮ್ಮ ಮೊಬೈಲ್ ಲ್ಲಿ ರಿಂಗ ಟೋನ್ ಯಾವುದನ್ನು ಇಟ್ಟುಕೊಂಡಿದ್ದೇವೆ ಎನ್ನುವದರ ಆಧಾರದ ಮೇಲೆಯೇ ನಮ್ಮ ವ್ಯಕ್ತಿತ್ವವನ್ನು ಅಳೆಯಬಹುದು ಎನ್ನುವ ಮಾತಿನಂತೆ ನಾವಾಡುವ ಮಾತು, ವರ್ತನೆ ನಮ್ಮ ವ್ಯಕ್ತಿತ್ವದಿಂದ ಅದು ಹೇಗೆ ಭಿನ್ನವಾಗಲು ಸಾಧ್ಯ..? ಜನ ಪ್ರತಿನಿಧಿಗಳು ಯಾವುದೇ ಪಕ್ಷದವರಾಗಿರಲಿ ನಿಮ್ಮ ಮಾತುಗಳು ನಮ್ಮ ಮುಂದಿನ ಪೀಳಿಗೆಗೆ ಅನುಕರಣೀಯವಾಗಿರಬೇಕು. ಅಧಿಕಾರವಿದೆ ಮತ್ತು ಬಾಯಿ ಇದೆ ಎನ್ನುವ ಕಾರಣಕ್ಕೆ ಏನೇನೋ ಮಾತಾಡಬಾರದು. ಒಂದು ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ನಿಮ್ಮ ಮಾತುಗಳ ಪಾತ್ರ ಅಗಾಧವದುದು. ಮಾತು ಮನೆ ಕೆಡಿಸುವ ಬಗ್ಗೆ ನೀವು ತಿಳಿದಿರುವಿರಿ. ಈಗ ನಾವು ಜಾಗತೀಕರಣದ ಸಂದರ್ಭದಲ್ಲಿದ್ದೇವೆ. ನಮ್ಮ ಮಾತುಗಳು ರಾಜ್ಯ ಮತ್ತು ರಾಷ್ಟ್ರವನ್ನು ಕೆಡಿಸುವಲ್ಲಿಯೂ ಕಾರಣವಾಗಿ ಕೆಲಸ ಮಾಡಬಹುದು. ಮಾಧ್ಯಮಗಳ ಎದುರಲ್ಲಿ ಮಾತನಡುವಾಗ ನಿಮ್ಮ ಮಾತುಗಳು ಫ಼ಿಲ್ಟರ್ ಆಗದಿದ್ದರೆ ಅದು ಇಡೀ ರಾಜ್ಯವನ್ನು ನಾಚಿಸುವಂತಾಗುತ್ತದೆ. ಹಿಂಸಾತ್ಮಕವಾದ ಹೇಳಿಕೆಗಳನ್ನು, ಪುಂಡಾಟಿಕೆಯನ್ನು, ಭಂಡತನವನ್ನು ಎಂದೂ ನಮ್ಮ ಜನನಾಯಕರು ಪ್ರದರ್ಶಿಸಬಾರದು. ಟೀಕೆಯನ್ನು ಮಾಡುವಾಗ ನಮ್ಮ ಮನಸು ಸ್ಥಿತಪ್ರಜ್ಞೆಯಲ್ಲಿದ್ದರೆ ಬಳಸುವ ಭಾಷೆಯಲ್ಲಿಯೂ ಸ್ವಚ್ಚತೆಯಿರುತ್ತದೆ. ಬಾಯಿ ತೆಗೆದರೆ ಸಾಕು, ಕೊಳಕುತನದ ಪ್ರದರ್ಶನವಾಗುವಂತಿದ್ದರೆ ಅಂಥಾ ಬಾಯಿಯನ್ನು ತೆಗೆಯುವದಕ್ಕಿಂತಲೂ ತೆಗೆಯದಿರುವಾಗಲೇ ಹೆಚ್ಚು ಗೌರವ ಸಾಧ್ಯ. ಟಿ.ವಿ ವೀಕ್ಷಕರು ಇವತ್ತು ಯಾವ ಪಕ್ಷದ ಯಾವ ರಾಜಕಾರಣಿ ಕೊಳಕು ಮಾತನ್ನಾಡಿದ್ದಾನೆ ಎನ್ನುವದನ್ನು ನೊಡಲೆಂದೇ ಕುಳಿತುಕೊಳ್ಳುವ ಅಪ ಸಂಸ್ಕೃತಿಯನ್ನು ರೂಪಿಸುವ ವಕ್ತಾರರಾಗಬೇಡಿ. ಮಾತಿನಲ್ಲಿ ಮೋಡಿಯಿರಲಿ.. ಟೀಕೆಯಲ್ಲಿಯೂ ವಿನಯವಿರಲಿ. ನೀವೆಲ್ಲಾ ನಮ್ಮ ಜನನಾಯಕರು ರಾಜ್ಯದ ಜನತೆಗೆ ನೀವು ಮಾತಿನಲ್ಲಾದರೂ ಮಾದರಿಯಾಗುವುದು ಬೇಡವೇ..ನಿಮ್ಮಿಂದ ಯಾವ ಮಹತ್ತರ ಕೆಲಸಗಳನ್ನು ಮಾಡಲಾಗದಿದ್ದರೂ ಒಳ್ಳೆಯ ಮಾತುಗಳನ್ನಾಡುವುದಾದರೂ ಸಾಧ್ಯವಿದೆ. ಇನ್ನು ಮುಂದಾದರೂ ಸಾರ್ವಜನಿಕ ವೇದಿಕೆಗಳಲ್ಲಿ ಅಸಹ್ಯವಾದ ಮಾತು ಮತ್ತು ವರ್ತನೆಗಳನ್ನು ಅನಾವರಣಗೊಳಿಸದಿರಿ. ನೀವೇ ಖುದ್ದಾಗಿ ಸೆನ್ಸಾರ್ ಮಾಡಿ ಮಾತನಾಡುವ ಗುಣ ಬೆಳೆಸಿಕೊಳ್ಳಿ.

ಶೌಚಾಲಯ ಇರುವುದೇ ಮುಖ್ಯವಲ್ಲ..!


– ಡಾ.ಎಸ್.ಬಿ. ಜೋಗುರ


ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚ ಭಾರತದ ಅಡಿಯಲ್ಲಿ ಇಡೀ ದೇಶದಲ್ಲಿ ಆರೋಗ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಅನೇಕ ಬಗೆಯ ಸ್ವಚ್ಚತಾ ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಗೊಳಿಸುತ್ತಿರುವ ವೇಗದಲ್ಲಿಯೇ ದೇಶದ ಜನರು ಪರಿವರ್ತನೆಗೆ ಹೊಂದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಯಾವಾಗಲೂ ಭೌತ ಸಂಸ್ಕೃತಿಯ ವೇಗದ ಸಮಸಮನಾಗಿ ಅಭೌತ ಸಂಸ್ಕೃತಿ ಬದಲಾವಣೆ ಹೊಂದುವುದು ಸಾಧ್ಯವಿಲ್ಲ ಅಲ್ಲೊಂದು ಅಂತರ ಇದ್ದೇ ಇರುತ್ತದೆ. ನೀವು ಕೊಂಡು ತಂದ ಹೊಸ ಮೊಬೈಲ್ ಒಂದಕ್ಕೆ ನೀವು ಸೆಟ್ ಆಗಲು ತೆಗೆದುಕೊಳ್ಳುವ ಸಮಯದಂತೆ. opendefecation_women_indiaಅದೂ ಅಲ್ಲದೇ ಬಯಲು ಶೌಚಾಲಯ ಎನ್ನುವುದು ನಮ್ಮಲ್ಲಿ ಅನೇಕ ವರ್ಷಗಳಿಂದಲೂ ಒಂದು ಸಂಪ್ರದಾಯವಾಗಿ, ನಮ್ಮ ಜೀವನ ವಿಧಾನದ ಭಾಗವಾಗಿ ಉಳಿದು ಬಂದಿರುವದಿದೆ. ಅಷ್ಟು ಮಾತ್ರವಲ್ಲದೇ ಮನೆಯಲ್ಲಿಯೇ ಇಲ್ಲವೇ ಮನೆಯ ಹತ್ತಿರ ಶೌಚಾಲಯಗಳನ್ನು ಕಟ್ಟಿ ಬಳಸುವ ಕ್ರಮವನ್ನು ಇಷ್ಟಪಡದಿರುವ ಒಂದು ತಲೆಮಾರು ಇನ್ನೂ ನಮ್ಮೊಂದಿಗಿದೆ. ಅವರು ಮನೆಯಲ್ಲಿಯ ಶೌಚಾಲಯದಲ್ಲಿ ಕುಳಿತು ಶೌಚ ಮಾಡುವುದನ್ನು ಅಸಹ್ಯ ಮತ್ತು ಅಹಿತಕರ ಎಂದೇ ಬಗೆಯುತ್ತಾರೆ. ಅಷ್ಟು ಮಾತ್ರವಲ್ಲ, ಎದ್ದು ತಿರುಗಾಡಲಾಗದವರು, ವಯಸ್ಸಾದವರಿಗೆ ಮಾತ್ರ ಈ ಬಗೆಯ ಶೌಚಾಲಯಗಳು ತಾವು ಏನಿದ್ದರೂ ಬಯಲು ಕಡೆಗೆ ಹೋಗುವವರು ಎನ್ನುವ ವಿಚಾರ ಅವರದು. ಛೇ.. ಛೇ..ಮನೆಯಲ್ಲಿ ತಮಗೆ ಸರಿ ಹೊಂದುವದಿಲ್ಲ ನಾವು ಯಾವಾಗಲೂ ಹೊರಗೇ ಹೋಗುವವರು. ಮನೆಯಲ್ಲಿ ಕುಳಿತು.. ಮಾಡುವುದೇ..? ನಮ್ಮ ಮನಸು ಒಪ್ಪುವದಿಲ್ಲ ಎನ್ನುವ ಮನ:ಸ್ಥಿತಿಯವರು ನಮ್ಮ ಗ್ರಾಮೀಣ ಭಾಗಗಳಲ್ಲಿ ಈಗಲೂ ಇದ್ದೇ ಇದ್ದಾರೆ ಹೀಗಾಗಿ ಪ್ರಧಾನಿಯವರು ನಿರೀಕ್ಷಿಸುವ ವೇಗದಲ್ಲಿಯೇ ಶೌಚಾಲಯದ ವಿಷಯವಾಗಿ ಪರಿವರ್ತನೆಯನ್ನು ತರಲಾಗುವದಿಲ್ಲ. ಭಾರತೀಯ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಪ್ರಜ್ಞೆ ಇಂದಿಗೂ ನಿರೀಕ್ಷಿತ ಮಟ್ಟದಲ್ಲಿಲ್ಲ. ಗಾಂಧೀಜಿಯವರು ತಮ್ಮ ಸರ್ವೋದಯ ಸಮಾಜದ SwachhBharath_Modiಸ್ಥಾಪನೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ, ರಸ್ತೆಗಳನ್ನು ನಿರ್ಮಿಸುವ ಕನಸು ಕಂಡಿದ್ದರು ಅದು ಕೂಡಾ ಸರ್ವೋದಯ ಸಮಾಜದ ಲಕ್ಷಣಗಳಲ್ಲಿ ಒಂದಾಗಿತ್ತು. ಆದರೆ ಆ ವಿಚಾರ ಕೇವಲ ಉಟೋಪಿಯಾ ಹಂತದಲ್ಲಿಯೇ ಉಳಿದದ್ದು ವಿಷಾದನೀಯ. ಈಗೀಗ ಸ್ವಚ್ಚ ಭಾರತದ ಅಡಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಶೌಚಾಲಯಕ್ಕೆ ಸಂಬಂಧಿಸಿ ಒಂದು ಅಭೂತಪೂರ್ವವಾದ ಕ್ರಾಂತಿ, ಬದಲಾವಣೆ ಸಾಧ್ಯವಾಗತೊಡಗಿದೆ. ಆ ದಿಸೆಯಲ್ಲಿ ಅದಾಗಲೇ ಸುಮಾರು 6 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಸುಮಾರು 1.3 ಕೋಟಿ ಶೌಚಾಲಯಗಳು ಬಳಕೆಯಾಗದೇ ವ್ಯರ್ಥವಾಗಿ ಹಾಳಾಗುತ್ತಿವೆ. ಅದಕ್ಕೆ ಕಾರಣ ನಮ್ಮ ಜನತೆಯ ಮನಸ್ಥಿತಿ ಇನ್ನೂ ಸಾಕಷ್ಟು ಬದಲಾಗಿಲ್ಲ. ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವರಾದ ಬೀರೆಂದ್ರ ಸಿಂಗ್ ಚೌಧರಿ ಹೇಳುವ ಹಾಗೆ ಸ್ಚಚ್ಚ ಭಾರತದ ಅಡಿಯಲ್ಲಿ ರೂಪಿಸಲಾದ ಕಾರ್ಯಕ್ರಮಗಳ ಯಶಸ್ಸು ಜನತೆಯ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಅವರ ಮನೋಭಾವಗಳಲ್ಲಿಯ ಬದಲಾವಣೆಯನ್ನು ಅವಲಂಬಿಸಿವೆ ಎನ್ನುತ್ತಾರೆ.

ನಮ್ಮ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಇನ್ನೂ ಪರಿಸ್ಥಿತಿ ಸಾಕಷ್ಟು ಪರಿವರ್ತನೆಯಾಗಿಲ್ಲ. ಬಯಲು ಶೌಚಾಲಯವೇ Women-cleaning-toilet-in-Indiaಅವರಿಗೆ ಹಿತಕರ ಎನ್ನುವ ಮನೋಭಾವವಿರುವವರು ಇನ್ನೂ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬೆಳಿಗ್ಗೆ ಎದ್ದದ್ದೇ ಕೈಯಲ್ಲಿ ತಂಬಿಗೆ ಹಿಡಿದು ತಮ್ಮ ಗದ್ದೆ ಕಡೆ ನಡೆಯುವದೇ ಒಂದು ಪರಿಪಾಠವಾಗಿರುವ ಪ್ರದೇಶಗಳಲ್ಲಿ ಹೀಗೆ ಸರಕಾರ ನಿರ್ಮಿಸಿದ ಶೌಚಾಲಯಗಳ ಬಳಕೆ ಹೆಚ್ಚೆಂದರೆ ಆ ಕುಟುಂಬದ ಮಹಿಳೆಯರು ಮತ್ತು ವಯಸ್ಸಾದವರಿಗೆ ಸೀಮಿತ ಎನ್ನುವಂಥಾ ಸ್ಥಿತಿ ನಿರ್ಮಾಣವಾದದ್ದು ವಿಪರ್ಯಾಸ. ಇಂಥಾ ಮನೋಭಾವದವರಿಂದಾಗಿಯೇ ಈ 1.3 ಕೋಟಿ ಶೌಚಾಲಯಗಳು ಬಳಕೆಯಾಗದೇ ಹಾಳಾಗುವ ಸ್ಥಿತಿಯನ್ನು ತಲುಪಬೇಕಾಯಿತು. ಬಯಲಲ್ಲಿ ಶೌಚ ಮಾಡುವದರ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಮತ್ತು ಜಾಗೃತಿಯನ್ನು ಮೂಡಿಸುವ ಅವಶ್ಯಕತೆಯಿದೆ. 2019 ರಷ್ಟಿಗೆ ಇಡೀ ದೇಶದಲ್ಲಿ ಬಯಲು ಶೌಚಾಲಯ ಪದ್ಧತಿ ಇರದಂತೆ ಮಾಡುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿರುವದಿದೆ. ಅದರೊಂದಿಗೆ ದೇಶದ ಗ್ರಾಮೀಣ ಭಾಗಗಳಲ್ಲಿ ಕೊಳಚೆಯ ಸ್ಥಿತಿಯನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿ ಆಯಾ ಗ್ರಾಮೀಣ ಪ್ರದೇಶಗಳ ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಸುಮಾರು 7 ಲಕ್ಷ ರೂಪಾಯಿಯಿಂದ ಆರಂಭಿಸಿ 20 ಲಕ್ಷ ರೂಪಾಯಿಯವರೆಗೆ ಘನತ್ಯಾಜ್ಯ ನಿರ್ವಹಣೆಗಾಗಿಯೇ ಹಣಕಾಸಿನ ನೆರವನ್ನು ನೀಡುವ ಗುರಿಯನ್ನು ಹೊಂದಲಾಗಿದೆ. ಇಡೀ ದೇಶದಾದ್ಯಂತ 19800 ಕೋಟಿ ರೂ ಹಣವನ್ನು ಶೌಚಾಲಯಗಳ ನಿರ್ವಹಣೆಯಲ್ಲಿ ಖರ್ಚು ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ 10800 ಕೋಟಿ ರೂಪಾಯಿ ಹಣವನ್ನು ದೇಶದ ಈಶಾನ್ಯ ಭಾಗದ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಖರ್ಚು ಮಾಡಲಾಗುವುದು. ನಮ್ಮ ದೇಶದ ಗ್ರಾಮೀಣ ಪರಿಸರದಲ್ಲಿ ಇನ್ನೂ ಸಾಕಷ್ಟು ಪರಿವರ್ತನೆಗಳಾಗಬೇಕಿದೆ. ಮುಖ್ಯವಾಗಿ ಜನರ ಮನೋಭಾವದಲ್ಲಿ ಬದಲಾಗಬೇಕು. ಕೇಂದ್ರ ಸರಕಾರ ಇಲ್ಲವೇ ರಾಜ್ಯ ಸರಕಾರದ ಯಾವುದೇ ಯೋಜನೆಗಳು ಅರ್ಥವತ್ತಾಗಿ ಜಾರಿಯಾಗಬೇಕಾದರೆ ಜನಜಾಗೃತಿ ಮತ್ತು ಅವರ ಮನೋಭಾವಗಳಲ್ಲಿ ಬದಲಾವಣೆ ಅಗತ್ಯ.

ಕೇವಲ ಶೌಚಾಲಯಗಳನ್ನು ಕಟ್ಟಿಸಿಕೊಡುವುದು ಮಾತ್ರ ಮುಖ್ಯವಾಗದೇ ಅದನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವ ಬಗ್ಗೆಯೂ ಹೇಳಿಕೊಡಬೇಕು. toilet-india-awarenessಚೈನಾದಂಥಾ ರಾಷ್ಟ್ರಗಳಲ್ಲಿ ಶೌಚಾಲಯಗಳನ್ನು ಹ್ಯಾಪಿ ಹೋಮ್ ಎಂದು ಕರೆಯಲಾಗುತ್ತದೆ. ಅದೇ ಮಟ್ಟದ ವಾತಾವರಣವನ್ನು ನಮ್ಮಲ್ಲೂ ಕಾಯ್ದುಕೊಳ್ಳುವ ಅಗತ್ಯವಿದೆ. ನಮ್ಮಲ್ಲಿ ಇಂದಿಗೂ ಐದು ಲಕ್ಷಕ್ಕಿಂತಲೂ ಹೆಚ್ಚು ಹಳ್ಳಿಗಳಿವೆ. ಅಲ್ಲಿಯ ಜನರು ಈ ಬಗೆಯ ಶೌಚಾಲಯಗಳನ್ನು ಬಳಸುವಾಗ ತಾವು ಬಯಲಿಗೆ ಹೋಗುವದಕ್ಕಿಂತಲೂ ಇದು ತುಂಬಾ ಹಿತಕರವಾಗಿದೆ ಎನ್ನುವ ಮನೋಭಾವ ಮೂಡಬೇಕು. ಹಾಗಾಗಬೇಕಾದರೆ ಶೌಚಾಲಯಗಳನ್ನು ಬಳಸುವ ಬಗ್ಗೆ ಮತ್ತು ಶುಚಿಯಾಗಿಡುವ ಬಗ್ಗೆ ಗ್ರಾಮೀಣ ಭಾಗದ ಜನತೆಗೆ ಸೂಕ್ತವಾದ ತಿಳುವಳಿಕೆ ಮತ್ತು ಮಾರ್ಗದರ್ಶನ ಮಾಡಬೇಕು.

ಸಿರಿಯಾ : ಬದುಕಬೇಕು ಮತ್ತು ಬದುಕಲು ಬಿಡಬೇಕು


– ಡಾ.ಎಸ್.ಬಿ. ಜೋಗುರ


ಸಿರಿಯಾ ಹೊತ್ತಿ ಉರಿಯುತ್ತಿದೆ. ಐಸಿಸ್ ಉಗ್ರರು ಮತ್ತು ಕುದ್ರಿಸ್‌ಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಸಿರಿಯಾ ಬದುಕು ನರಕಸದೃಶವಾಗುತ್ತಿದೆ. ಸೇಡು ಮತ್ತು ಕ್ರೌರ್ಯ ಎನ್ನುವುದು ಕೇವಲ ಜನಜೀವನದ ಮೇಲೆ ಮಾತ್ರ ಬಯಲಾಗದೇ ಅಲ್ಲಿರುವ ಐತಿಹಾಸಿಕ ಸ್ಮಾರಕಗಳ ಮೇಲೂ ಬಯಲಾಗಿದೆ. ಅಲ್ಲಿರುವ ಅನೇಕ ಸ್ಮಾರಕಗಳನ್ನು ಪುಡಿ ಪುಡಿ ಮಾಡಲಾಗಿದೆ. ಅಲ್ಲಿಯ ಜನರಂತೂ ಎಲ್ಲಾದರೂ ಬೇರೆಡೆ ಬದುಕನಡೆ ಜೀವವೇ ಎಂದು ಸುತ್ತಮುತ್ತಲಿನ ಇತರೆ ಪ್ರದೇಶಗಳಿಗೆ ತೆರಳಿ ಹೊಸ ಜೀವನ ರೂಪಿಸಿಕೊಳ್ಳುವ ಭರಾಟೆಯಲ್ಲಿ ತಮ್ಮ ನೆಲೆಯನ್ನು ತೊರೆದು ಗ್ರೀಕ್ ನಡುಗಡ್ಡೆಗಳಿಗೆ ಸಮುದ್ರ ಮಾರ್ಗವಾಗಿ ತೆರಳುತ್ತಿದ್ದಾರೆ. ಹೀಗೆ ತೆರಳುವ ತವಕದಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸುತ್ತಿವೆ. migrant-child-dead-beach-turkeyಹೇಗಾದರೂ ಮಾಡಿ ಆ ಸಂಘರ್ಷಮಯ ಪರಿಸರದಿಂದ ದೂರ ತೆರಳಿ ನೆಮ್ಮದಿಯ ನಿಟ್ಟುಸಿರು ಬಿಡಬೇಕೆಂದರೂ ಸಾಧ್ಯವಾಗುತ್ತಿಲ್ಲ. ಹೀಗೆ ಅಪಾರ ಪ್ರಮಾಣದಲ್ಲಿ ನಿರಾಶ್ರಿತರಾಗಿ ಹರಿದು ಬರುವದನ್ನು ನೆರೆಯ ರಾಷ್ಟ್ರಗಳು ಖುಷಿಯಿಂದ ಬರಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗೆ ತಂಡತಂಡವಾಗಿ ತಮ್ಮ ನೆಲೆಗಳನ್ನು ನಿರಾಶ್ರಿತರಾಗಿ ನುಗ್ಗುವ ಕ್ರಮದ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅನೇಕ ಬಗೆಯ ರೋಗರುಜಿನಗಳಿಗೆ ಈ ಬಗೆಯ ನಿರಾಶ್ರಿತರ ವಲಸೆ ಕಾರಣವಾಗಲಿದೆ ಎನ್ನುವದು ನೆರಯ ರಾಷ್ಟ್ರಗಳ ಅಭಿಮತ. ಈಚೆಗೆ ಗ್ರೀಕ್ ನಡುಗಡ್ಡೆ ಕೋಸ್ ನ್ನು ತಲುಪುವ ಬರಾಟೆಯಲ್ಲಿ ಸುಮಾರು 12 ಜನ ನಿರಾಶ್ರಿತರು ನೀರಲ್ಲಿ ಮುಳುಗಿ ಅಸುನೀಗಿರುವದಿದೆ. ಅದರಲ್ಲಿ 3 ವರ್ಷದ ಒಬ್ಬ ಬಾಲಕ ಮತ್ತು 5 ವರ್ಷದ ಇನ್ನೊಬ್ಬ ಬಾಲಕ ಇಬ್ಬರೂ ಸಹೋದರರು ಅಸುನೀಗಿದ್ದು ಮನಕಲಕುವಂತಿದೆ. ಬಾಲ್ಯದ ಖುಷಿಯ ಪರಿಚಯವೂ ಆಗದೇ ಅಸು ನೀಗಿದ ಆ ಮಕ್ಕಳು ಯಾವ ತಪ್ಪಿಗಾಗಿ ಈ ಬಗೆಯ ಸ್ಥಿತಿಯನ್ನು ಅನುಭವಿಸಬೇಕಾಯಿತು..? ಈ ಬಗೆಯ ಸನ್ನಿವೇಶಗಳನ್ನು ಮುಂದಿಟ್ಟುಕೊಂಡೇ ಬರ್ಟಂಡ್ ರಸಲ್ ರಂಥಾ ಚಿಂತಕರು ದೇವರ ಅಸ್ಥಿತ್ವದ ಬಗ್ಗೆ ಸಂಶಯ ಪಡುವದಿತ್ತು. ಯಾವ ತಪ್ಪನ್ನೂ ಮಾಡದ ಈ ಮಕ್ಕಳಿಗೇಕೆ ಶಿಕ್ಷೆ ಎಂದು ರಸಲ್ ಮತ್ತೆ ಮತ್ತೆ ಕೇಳುವದಿತ್ತು.ಆತನ ನಾಸ್ತಿಕತೆಗೆ ಈ ಬಗೆಯ ಘಟನೆಗಳು ಇನ್ನಷ್ಟು ಪುಷ್ಟಿ ಕೊಟ್ಟಂತಿತ್ತು. ಹೇಗಾದರೂ ಮಾಡಿ ಬೇರೆ ಎಲ್ಲಾದರೂ ತೆರಳಿ ಬದುಕಿ siriya-migrantsಉಳಿಯಬೇಕೆಂದು ಬಯಸಿ ದಡದಲ್ಲಿ ಸಿಕ್ಕ ದೋಣಿಗಳನ್ನು ಹತ್ತಿ ಪ್ರಯಾಣ ಬೆಳೆಸಿದ ಇವರು ಮೂಲತ: ಉತ್ತರ ಸಿರಿಯಾದ ಪಟ್ಟಣ ಕೊಬಾನಿಯ ನಿವಾಸಿಗಳು. ಅಲ್ಲಿಯ ಪರಿಸ್ಥಿತಿ ಈ ಮಕ್ಕಳನ್ನು ಅಲ್ಲಿಂದ ಕಾಲು ಕೀಳುವಂತೆ ಮಾಡಿತ್ತು. ದುರಂತವೆಂದರೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಹಂಬಲದಲ್ಲಿ ಊರು ತೊರೆದ ಈ ಬಾಲಕರು ತಲುಪಬೇಕೆಂದುಕೊಂಡ ನೆಲೆಯನ್ನು ತಲುಪಲಾಗದೇ ಗ್ರೀಕ್ ನಡುಗಡ್ಡೆ ಕೊಸ್ ನ್ನು ತಲುಪಲಾಗದೇ ನೀರಲ್ಲಿ ಮುಳುಗಿ ಅಸುನೀಗಿರುವದಿದೆ.

ಸಿರಿಯಾದಲ್ಲಿ ಆವೃತವಾಗಿರುವ ಯುದ್ಧದ ವಾತಾವರಣ ಯಾರನ್ನೂ ನೆಮ್ಮದಿಯಿಂದ ಬದುಕಲು ಬಿಡುವ ಸ್ಥಿತಿಯಲ್ಲಿಲ್ಲ. ಐಶಿಷ ಉಗ್ರರು ಇಡೀ ಸಿರಿಯಾ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸುವದು ಮಾತ್ರವಲ್ಲದೇ ಅಲ್ಲಿಯ ಬದುಕನ್ನೇ ರೌರವ ನರಕ ಮಾಡಹೊರಟಿದ್ದಾರೆ. ಅದರ ಭೀಕರತೆಯನ್ನು ಸಹಿಸಲಾಗದೇ ತಮ್ಮ ನೆಲೆಯನ್ನು ಬಿಟ್ಟು ನಿರಾಶ್ರಿತರಾಗಿ ಬೇರೆಡೆ ತೆರಳುತ್ತಿದ್ದಾರೆ. ದಿನಾಲು ಈ ನಡುಗಡ್ಡೆಗಳಿಗೆ ನಿರಾಶ್ರಿತರಾಗಿ ಬರುವವರ ಪ್ರಮಾಣ ಸಾವಿರ ಸಾವಿರ ಮಟ್ಟದಲ್ಲಿದೆ. ಲೆಸ್ಬೊಸ್ ಎನ್ನುವ ಪ್ರಾಂತದಲ್ಲಿಯೇ ಸುಮಾರು 15 ಸಾವಿರಕ್ಕಿಂತಲೂ ಹೆಚ್ಚಿನ ಪ್ರಮಾಣದ ನಿರಾಶ್ರಿತರಿದ್ದಾರೆ. ಮೆಸಿಡೋನಿಯಾ, ಸರ್ಬಿಯಾ, ಹಂಗೇರಿಯಾ, ಜರ್ಮನಿ ಮುಂತಾದ ಕಡೆಗಳಲ್ಲಿಯೂ ಇದೇ ರೀತಿಯ ನಿರಾಶ್ರಿತರ ತಲೆನೋವು ಆರಂಭವಾಗಿದೆ. ಗ್ರೀಸ್ ನಡುಗಡ್ಡೆಗಳ ಮೇಲೆ ಅಸಂಖ್ಯಾತ ಪ್ರಮಾಣದ ನಿರಾಶ್ರಿತರು ವಲಸೆ ಬರುತ್ತಿದ್ದಾರೆ. ಹೀಗೆ ನಿರಾಶ್ರಿತರಾಗಿ ಬರುವವರಿಗೆ ವಸತಿ ಸೌಲಭ್ಯಗಳನ್ನು ಒದಗಿಸುವುದು ಕೂಡಾ ಸಾಧ್ಯವಾಗುತ್ತಿಲ್ಲ ಹೀಗಾಗಿ ನಿರಾಶ್ರಿತರ ಜನಜಂಗುಳಿ ಅನಾರೋಗ್ಯಕರ ಪರಿಸರದ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಜೊತೆಗೆ ಮೆಡಿಟರೇನಿಯನ್ ಮೂಲಕ ಯುರೋಪಗೆ ತೆರಳುವಾಗ ಸುಮಾರು 2500 ರಷ್ಟು ನಿರಾಶ್ರಿತರು ಅಸುನೀಗಿರುವದಿದೆ ಎಂದು ಗಾರ್ಡಿಯನ್ ಎಂಬ ಪತ್ರಿಕೆ ವರದಿ ಮಾಡಿರುವದಿದೆ. siriya-tragedyಕಾಸ್ ಮತ್ತು ಲೆಸ್ಬಾಸ್ ನಡುಗಡ್ದೆಯಲ್ಲಿ ಬಂದಿಳಿಯುವ ನಿರಾಶ್ರಿತರಾಗಿ ಅನೇಕ ಬಗೆಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಲ್ಲಿಯ ಸರಕಾರಗಳು ಯತ್ನಿಸುತ್ತಿವೆಯಾದರೂ ಸಂಪೂರ್ಣವಾಗಿ ಅವರಿಗೆ ಅವಶ್ಯಕತೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.

ಸಿರಿಯಾದಂಥಾ ನೆಲೆಗಳು ಮನುಷ್ಯರಾದವರು ವಾಸಿಸಲು ಯೋಗ್ಯವಲ್ಲ ಎನ್ನುವ ಸ್ಥಿತಿಯನ್ನು ತಲುಪಿದಂತಾಗಿದೆ. ಇಲ್ಲಿಯ ಜನರಿಗೆ ಎಲ್ಲಾದರೂ ನೆರೆಯ ಪ್ರದೇಶಗಳಲ್ಲಿ ಬದುಕಿ ಉಳಿಯುವದೇ ಒಂದು ಜೀವನದ ಮಹತ್ತರವಾದ ಗುರಿಯಂತಾಗಿದೆ. ಆ ಬದಿಯ ದಡ ತಲುಪುವ ಬಗ್ಗೆ ಯಾವ ಭರವಸೆಗಳೂ ಇಲ್ಲದಿರುವಾಗಲೂ ರಿಶ್ಕ್ ತೆಗೆದುಕೊಂಡು ತೆರಳುತ್ತಿದ್ದಾರೆ. ಹಾಗೆ ತೆರಳುವಾಗ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸುತ್ತಿವೆ. ಪ್ರಥಮ ಮತ್ತು ದ್ವಿತೀಯ ಜಾಗತಿಕ ಮಹಾಯುದ್ಧಗಳ ಸಂದರ್ಭದಲ್ಲಿ ಜರ್ಮನಿಯಿಂದ ನಿರಾಶ್ರಿತರಾಗಿ ವಲಸೆ ಹೋಗುವವರಿಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಬರ ಮಾಡಿಕೊಂಡವು. ಆಗಿನ ಸಂದರ್ಭವನ್ನು ಈಗ ನೆನೆಪಿಸಿ ಜರ್ಮನಿ ಮತ್ತು ಇತರ ಯುರೋಪಿನ ನೆಲೆಗಳಿಗೆ ನೀವು ಹಾಗೆ ಸಿರಿಯಾದಿಂದ ನಿರಾಶ್ರಿತರಾಗಿ ಬರುವವರನ್ನು ಯಾಕೆ ಸ್ವಾಗತಿಸಬಾರದು ಎಂದು ಕೇಳುವ ಪರಿಸ್ಥಿತಿಯೂ ಈಗ ಉಳಿದಿಲ್ಲ. ವಲಸೆ ಬರುವವರ ಧರ್ಮ, ಭಾಷೆ, ಜನಾಂಗಗಳು ಈಗ ತೀರಾ ಮುಖ್ಯವಾಗತೊಡಗಿವೆ. ಮುಂಚಿನಂತೆ ಮಾನವೀಯ ನೆಲೆಯಲ್ಲಿ ನಿರಾಶ್ರಿತರನ್ನು ಬರಮಾಡಿಕೊಳ್ಳುವಷ್ಟು ಸದ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ ಅಷ್ಟೊಂದು ಸಲೀಸಾಗು ಉಳಿದಿಲ್ಲ. ಧರ್ಮ ಎನ್ನುವುದು ಈಗ ಕೇವಲ ಆಚರಣೆ ಮತ್ತು ಅನುಸರಣೆಯ ಮಾರ್ಗವಾಗಿ ಮಾತ್ರ ಉಳಿಯದೇ ಆ ಮಿತಿಯನ್ನು ಮೀರುವ ಮೂಲಕ ಸಂದಿಗ್ದವಾದ ಸ್ಥಿತಿಯನ್ನು ಅವು ತಲುಪುತ್ತಿವೆ. ಇಂದು ಧರ್ಮಗಳು ಮಾನವೀಯ ಪ್ರೀತಿ ಮತ್ತು ದಯೆಯನ್ನು ಹಂಚುವ ಬದಲಾಗಿ ದ್ವೇಷ ಮತ್ತು ಭಯವನ್ನು ಸೃಷ್ಟಿಸುವ ಸಂಗತಿಗಳಾಗಿ ಕೆಲಸ ಮಾಡುತ್ತಿವೆ. ಮನುಷ್ಯ ಎಷ್ಟೇ ಉನ್ನತವಾದ ಮಾರ್ಗವಾಗಿ ಮಾತ್ರ ಉಳಿಸಾಧನೆಯನ್ನು ಮಾಡಿದ ಮೇಲೂ ನೆಮ್ಮದಿಯಿಂದ ಬದುಕುವ ಮತ್ತು ಬದುಕಲು ಬಿಡುವ ಗುಣವನ್ನು ಮಾತ್ರ ಕಲಿಯಲಿಲ್ಲ.

ಅತಿಯಾದ ಮೊಬೈಲ್ ಬಳಕೆ ನಮ್ಮ ಗ್ರಹಿಕೆಗಳನ್ನು ಕೊಲ್ಲುತ್ತದೆ..


– ಡಾ.ಎಸ್.ಬಿ. ಜೋಗುರ


ಬಾಲ್ಯದಲ್ಲಿ ನಮ್ಮ ಇಡೀ ಊರಲ್ಲಿ ಹತ್ತು ದೂರವಾಣಿ ಸಂಪರ್ಕಗಳಿರುವ ಮನೆಗಳಿದ್ದರೆ ಹೆಚ್ಚಿತ್ತು. ನಮ್ಮೂರು ಬಿಜಾಪುರ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದರೂ ಪರಿಸ್ಥಿತಿ ಹಾಗಿತ್ತು. ಯಾವುದಾದರೂ ಅರ್ಜಂಟ್ ಸುದ್ಧಿಗಳನ್ನು ತಲುಪಿಸಬೇಕಿದ್ದರೆ ಒಂದೋ ಟೆಲಿಗ್ರಾಮ್ ಕಳುಹಿಸಬೇಕು, ಇಲ್ಲವೇ ನಮ್ಮ ಒಣಿಯಲ್ಲಿರುವ ಯಾರದೋ ಒಂದು ಶ್ರೀಮಂತ ಕುಟುಂಬದ ದೂರವಾಣಿ ಸಂಖ್ಯೆಯನ್ನು ಅವಲಂಬಿಸಬೇಕಿತ್ತು. ಆ ಶ್ರೀಮಂತ ಕುಟುಂಬ ಹತ್ತಾರು ಕಾರಣಗಳಿಗಾಗಿ ಓಣಿಯವರಿಗೆ ಬೇಡವಾಗಿದ್ದರೂ ಅವರ ಮನೆಯಲ್ಲಿ ದೂರವಾಣಿ ಇದೆ ಎನ್ನುವ ಕಾರಣಕ್ಕೆ ಆತ ಬೇಕಿರುತ್ತಿದ್ದ. ಯಾವುದೋ ಒಂದು ಕರೆ ಬಂದರೆ ಅವರು ನಮ್ಮ ಮನೆಗಳಿಗೆ ಹೇಳಿ ಕಳುಹಿಸುತ್ತಿದ್ದರು. ನಮ್ಮ ಮನೆಯವರು ಅಲ್ಲಿ ಹೋಗಿ ಮತ್ತೆ ಬರುವ ರಿಂಗಣಕ್ಕಾಗಿ ಕಾದು ಕುಳಿತುಕೊಳ್ಳಬೇಕಿತ್ತು. ಅದಾಗಲೇ ಫೋನ್‌ನಲ್ಲಿ ಮಾತಾಡಲು ಬಂದವರು ಅರ್ಧ ಹೈರಾಣಾಗಿ ಹೋಗಿರುತ್ತಿದ್ದರು. ಆಗ ಫೋನ್ ಮಾಡುವದೆಂದರೆ ಏನಾದರೂ ಆಪತ್ತಿನ ವಿಷಯಗಳನ್ನು ತಿಳಿಸಲೆಂದೇ ಹಾಗೆ ಕರೆ ಮಾಡಲಾಗುತ್ತಿತ್ತು. ಕೊನೆಗೂ ನಡುಗುವ ಕೈಯಲ್ಲಿಯೇ ಫೋನನ್ನು ಎತ್ತಿ ಮಾತನಾಡಿ ಆ ಮನೆಯವರಿಗೆ ‘ನಿಮಗೆ ತೊಂದರೆ ಕೊಟ್ಟಿವಿ’ ಎನ್ನುತ್ತಲೇ ನಡೆಯುವದಿತ್ತು. ಕಾಲ ಬದಲಾಗುತ್ತಾ ಬಂತು ಮನೆಗೊಂದು ದೂರವಾಣಿ ಸಂಪರ್ಕ ಬಂತು, ಕಿಸೆಗೊಂದು ಮೊಬೈಲ್ ಬಂತು. ಒಂದೇ ಮೊಬೈಲ್ ಲ್ಲಿ ಎರಡೆರಡು, ಮೂರ್ಮೂರು ಸಿಮ್ ಹಾಕಿ ವ್ಯವಹರಿಸುವ ಮೊಬೈಲ್ ಗಳು ಬಂದವು. ನೀವು ತೀರಾ ಖಾಸಗಿಯಾಗಿರುವ ಕೆಲಸದಲ್ಲಿರುವಾಗಲೂ.. ಸ್ಥಳದಲ್ಲಿರುವಾಗಲೂ.. ಮಲಗಿ ನಿದ್ರಿಸುವಾಗಲೂ ಮೊಬೈಲ್ ರಿಂಗಣಿಸುವುದು ತಪ್ಪುವದಿಲ್ಲ. ಯಾವುದಾದರೂ ಕಾರ್ಯಕ್ರಮಗಳಲ್ಲಿ ಮೊಬೈಲ್ ರಿಂಗಣಿಸಿದರೆ ಸಾಕು ಆ ಇಡೀ ಸಭೆಯಲ್ಲಿರುವವರೆಲ್ಲಾ ಅವನೆಡೆಗೆ ಹೊರಳಿ ಮನಸಿನಲ್ಲಿಯೇ ‘ಸೈಲೆಂಟ್ ಇಡಬಾರದೇನೋ ಅಜ್ಞಾನಿ’ ಎಂದು ಬೈಯುವಂತೆ ಮುಖ ಸಿಂಡರಿಸಿ ನೋಡುತ್ತಾರೆ. ನನ್ನ ಬಳಿ ಮೊಬೈಲ್ ಇದೆ ಎನ್ನುವುದು ಈಗ ಅದು ನನ್ನ ಪಾಲಿಗೆ ಮಾತ್ರ ಕಿರಿಕಿರಿಯಾಗಿರದೇ ನನ್ನ ಸುತ್ತಮುತ್ತಲೂ ಇರುವವರಿಗೂ ಕಿರಕಿರಿಯಾಗಿರುತ್ತದೆ ಎನ್ನುವದಂತೂ ಸತ್ಯ.

ಈ ಮೊಬೈಲ್ ಎನ್ನುವ ಪುಟ್ಟ ಉಪಕರಣದೊಳಗೆ ಕಳೆದುಹೋಗುವವರಿಗೆ ಈಗಂತೂ ಲೆಕ್ಕವಿಲ್ಲ. ಜೊತೆಗಿರುವವರನ್ನೂ ಗಮನಿಸದೇ ಸದಾ ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣಾಡಿಸುವ, ಕೈಯಾಡಿಸುವವರಿಗೆ ಒಂದು ಆತಂಕದ ಸುದ್ಧಿಯಂತೂ ಹೊರಬಂದಿದೆ. mobile-phones-touchscreensಹೀಗೆ ಯಾರು ಹೆಚ್ಚಿನ ಪ್ರಮಾಣದಲ್ಲಿ ಮತ್ತೆ ಮತ್ತೆ ಮೊಬೈಲ್ ಬಳಸುವ, ಇಂಟರನೆಟ್ ಮೂಲಕ ಫೇಸ್‌ಬುಕ್, ವಾಟ್ಸ್ಯಾಪ್, ಟ್ವಿಟರ್ ಎಂದು ವ್ಯವಹರಿಸುವವರು ಹೆಚ್ಚಾಗಿ ತಮ್ಮ ಕಾಗ್ನಿಟಿವ್ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಸಂಶೋಧನೆಯೊಂದು ಪ್ರಕಟಿಸಿದೆ. ಕಾಗ್ನಿಟಿವ್ ಅಂದರೆ ಅರಿವು ಮತ್ತು ಗ್ರಹಿಕೆಯ ಸಾಮರ್ಥ್ಯದಲ್ಲಿ ಕುಂಠಿತತೆ ಆರಂಭವಾಗುತ್ತದೆ ಎನ್ನಲಾಗುತ್ತದೆ. ಸುಮಾರು ವಾರಕ್ಕೆ 22 ಘಂಟೆಗಳಿಂತಲೂ ಹೆಚ್ಚು ಕಾಲ ಡಿಜಿಟಲ್ ಜಗತ್ತಿನಲ್ಲಿ ವ್ಯವಹರಿಸುವ 18 ರಿಂದ 65 ವರ್ಷ ವಯೋಮಿತಿಯಲ್ಲಿರುವ, ಸುಮಾರು 210 ಜನರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದ್ದು ಅವರು ತಮ್ಮ ಸಂವೇದನೆ ಮತ್ತು ಗ್ರಹಿಕೆಗಳು ದುರ್ಬಲಗೊಂಡಿರುವ ಬಗ್ಗೆ ಹೇಳಿರುವ ಬಗ್ಗೆ ತಿಳಿದುಬಂದಿದೆ. ಅನೇಕ ಬಾರಿ ಅತಿಯಾಗಿ ಮೊಬೈಲ್ ಮತ್ತು ಇಂಟರನೆಟ್ ಬಳಸುವವರು ಸದಾ ತಮ್ಮದೇ ಲೋಕದಲ್ಲಿ ಮುಳುಗಿ ತಮ್ಮ ಸುತ್ತಮುತ್ತಲೂ ಏನು ನಡೆದಿದೆ ಎನ್ನುವ ಬಗ್ಗೆಯೂ ಅವರು ಮರೆತು ವ್ಯವಹರಿಸುವಂತಿರುತ್ತದೆ. ಜೊತೆಗಿರುವವರನ್ನು ಅಲ್ಲಿಯೇ ಬಿಟ್ಟು ಮಾತಡ್ತಾ ಹಾಗೇ ಮುಂದೆ ಹೋದವದರೂ ಇದ್ದಾರೆ. ಹಾಗೆ ಮಾತಾಡ್ತಾ ಹೋಗಿ ತಾನು ಬಂದು ತಲುಪಿದ ಸ್ಥಳದ ಬಗ್ಗೆ ಗೊಂದಲವಾಗಿ ಮತ್ತೆ ಹಿಂತಿರುಗಿದ ಉದಾಹರಣೆಗಳೂ ಇವೆ. ಕಿವಿಗೆ ಬ್ಲೂ‌ಟೂಥ್ ಉಪಕರಣ ಧರಿಸಿ ಮಾತನಾಡುತ್ತಾ ಹೋಗುವವರನ್ನು ಕಂಡು ನಾನೇ ಖುದ್ದಾಗಿ ಹೆದರಿರುವದಿದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟೆಯಲ್ಲಿ ಎಲ್ಲೆಂದರಲ್ಲಿ ರಾರಾಜಿಸುವ 3ಜಿ ಮತ್ತು 4 ಜಿ ನೆಟ್‍ವರ್ಕ್ ಮತ್ತು ಅದು ಹೊರಸೂಸಬಹುದಾದ ಫ್ರೀಕ್ವೆನ್ಸಿಯ ವೇಗವನ್ನು ಗಮನಿಸಿದರೆ ಖಂಡಿತ ಅದು ನಮ್ಮ ಮೆದುಳಿನ ಸೂಕ್ಷ್ಮ ಭಾಗಗಳ ಮೇಲೆ ಪ್ರಭಾವ ಬೀರುವದರಲ್ಲಿ ಎರಡು ಮಾತಿಲ್ಲ. ಇದನ್ನು ಹೇಳಲು ಸಂಶೋಧನೆಯ ಅಗತ್ಯವಿಲ್ಲ. ನಮ್ಮ ಸುತ್ತಮುತ್ತಲೂ ಅದರಲ್ಲೂ ನಗರ ಪ್ರದೇಶಗಳಿಲ್ಲಿ ರೋಬೊಟ್ ಥರಾ ಬದುಕುತ್ತಿರುವ ಜನಜೀವನವನ್ನು ನೋಡಿದಾಗ ಈ ಮೊಬೈಲ್ ಮತ್ತು ಇಂಟರನೆಟ್ ಜಗತ್ತು ನಮ್ಮನ್ನು ಭಾವಶೂನ್ಯರನಾಗಿ, ಸಂವೇದನಾರಹಿತ ಜೀವಿಗಳನ್ನಾಗಿ ರೂಪಿಸುತ್ತಿದೆ ಎನ್ನುವದರಲ್ಲಿ ಎರಡು ಮಾತಿಲ್ಲ. ಯಾವುದೇ ತಂತ್ರಜ್ಞಾನವಿರಲಿ ಅದರ ಬಳಕೆಯ ಪ್ರಮಾಣ ಮತ್ತು ಔಚಿತ್ಯತೆಯ ಮೇಲೆ ಅದರ ಗುಣಾವಗುಣಗಳು ನಿಂತಿರುತ್ತವೆ. ಊಟ ಮಾಡುವಾಗ, ಮಲಗುವಾಗ, ಟೀ ಕುಡಿಯುವಾಗ, ಕೆಲಸ ಮಾಡುವಾಗ ಎಲ್ಲ ಸಂದರ್ಭಗಳಲ್ಲಿ ಯತಾರ್ಥವಾಗಿ ಮೊಬೈಲ್ ಸ್ಕ್ರೀನ್ ಮೇಲೆ ಹರಿದಾಡುವ ಬೆರಳುಗಳು ಕೂಡಾ ಸಂವೇದನಾಶೀಲತೆಯನ್ನು ಕಳೆದುಕೊಂಡಂತೆ ತೋರುತ್ತವೆ.ಈಗಾಗಲೇ ಈ ಮೊಬೈಲ್ ಮತ್ತು ಇಂಟರನೆಟ್ ಸಹವಾಸಕ್ಕೆ ಬರದೇ ಇದ್ದರೂ ಅದಾಗಲೇ ಮರೆಗುಳಿಗಳ ಪಟ್ಟಿಯಲ್ಲಿದ್ದರೆ ಅಂಥವರ ಮೇಲಂತೂ ಹೀಗೆ ಯರ್ರಾ ಬಿರ್ರಿಯಾಗಿ ಮೊಬೈಲ್ ಮತ್ತು ಇಂಟರನೆಟ್ ಬಳಕೆಯ ಪ್ರಮಾಣ ತೀವ್ರವಾದ ಅಡ್ಡ ಪರಿಣಾಮಗಳನ್ನು ಬೀರುವದಂತೂ ಗ್ಯಾರಂಟಿ. ಕೆಲವು ಮುಂದುವರೆದ ರಾಷ್ಟ್ರಗಳು ಅದಾಗಲೇ ಶಾಲಾ ವಿದ್ಯಾರ್ಥಿಗಳ ಮೊಬೈಲ್‍ನ್ನು ಬಹುತೇಕವಾಗಿ ನಿಷೇಧಿಸಿದ ಪರಿಣಾಮವಾಗಿ ಆ ಶಾಲೆಗಳು ಉತ್ತಮ ಫಲಿತಾಂಶವನ್ನು ಸಾಧಿಸಿರುವ ಉದಾಹರಣೆಗಳೂ ಇವೆ. ಹದಿಹರೆಯದ ವಯಸು, ಹುಚ್ಚ ಖೋಡಿ ಮನಸುಗಳ ಕೈಯಲ್ಲಿರುವ ಮೊಬೈಲು ಖಂಡಿತವಾಗಿಯೂ ಚಂಚಲತೆಗೆ ಕಾರಣವಾಗುತ್ತದೆ. ಇನ್ನು ಈ ಮೊಬೈಲ್ ಬಿಟ್ಟು ಬದುಕಲು mobile-phonesಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯನ್ನು ನಿರ್ಮಿಸಿದ ಆಧುನಿಕ ತಂತ್ರಜ್ಞಾನ ಬದಲಾವಣೆ ಮತ್ತು ಸುಧಾರಣೆಯ ಜತೆಜತೆಗೆ ಅಡ್ಡ ಪರಿಣಾಮಗಳನ್ನು ತಂದಿರುವದಿದೆ. ಮೊಬೈಲ್ ಮತ್ತು ಇಂಟರನೆಟ್ ನ ಅತಿಯಾದ ಬಳಕೆ ವಾಹನ ಚಾಲಕರ ಮೇಲೆ ಇನ್ನಷ್ಟು ಅಡ್ಡ ಪರಿಣಾಮಗಳನ್ನು ಬೀರುತ್ತವೆ. ರಸ್ತೆಯಲ್ಲಿ ವಾಹನ ಚಾಲನೆಯಲ್ಲಿ ನಡೆಯುವ ಅಪಘಾತಗಳು ಮತ್ತು ಸಾವು ನೋವುಗಳಲ್ಲಿ ಈ ಬಗೆಯ ಮೊಬೈಲ್ ಮಾತುಕತೆಯೂ ಮುಖ್ಯ ಕಾರಣವಾಗಿರುತ್ತದೆ. ಅತಿಯಾದ ಮೊಬೈಲ್ ಮತ್ತು ಇಂಟರನೆಟ್ ಗೀಳು ಒಳಗೊಳಗೆ ವ್ಯಕ್ತಿಯನ್ನು ಕಾಗ್ನಿಟಿವ್ ಸಾಮಥ್ರ್ಯದಿಂದ ದೂರಸರಿಸುತ್ತದೆ. ಈ ಕುರಿತು ಡಾ ಹ್ಯಾಡಲಿಂಗಟನ್ ಎನ್ನುವವರು ನಾವು ದೈನಂದಿನ ಜೀವನದಲ್ಲಿ ಹೆಚ್ಚೆಚ್ಚು ತಾಂತ್ರಿಕತೆಯನ್ನು ಬಳಸುವದಿದೆ ಆದರೆ ಹಾಗೆ ಮಿತಿ ಮೀರಿ ಬಳಸುವಾಗಲೂ ಅದರ ಅಡ್ಡ ಪರಿಣಾಮಗಳು ನಮ್ಮ ಮೇಲೆ ಎಷ್ಟರ ಮಟ್ಟಿಗೆ ಆಗುವದಿದೆ ಎನ್ನುವ ಬಗ್ಗೆ ಗಂಭೀರವಾಗಿ ಯೋಚಿಸುವದಿಲ್ಲ ಎನ್ನುತ್ತಾರೆ. ಯೋಚಿಸಲು ಆರಂಭಿಸುವ ವೇಳೆಗಾಗಲೇ ತುಂಬಾ ದೂರ ಸಾಗಿ ಬಂದಾಗಿರುತ್ತದೆ. ವಿಶ್ವವಿದ್ಯಾಲಯವೊಂದು ಮಾಡಲಾದ ಅಧ್ಯಯನ ಮತ್ತು ಸಂಶೋಧನೆಯ ಪ್ರಕಾರ ಅತಿಯಾದ ಮೊಬೈಲ್ ಮತ್ತು ಇಂಟರನೆಟ್ ಬಳಕೆ ನಮ್ಮಲ್ಲಿರುವ ಸಂವೇದನೆಗಳನ್ನು ಮತ್ತು ಗ್ರಹಿಕಾ ಸಾಮಥ್ರ್ಯವನ್ನು ಕೊಲ್ಲುತ್ತದೆ ಎಂದಿರುವದಿದೆ. ಮೂಲಭೂತವಾಗಿ ಮೊಬೈಲ್ ಮತ್ತು ಇಂಟರನೆಟ್ ಬಳಕೆ ಎನ್ನುವುದೇ ಒಂದು ಸಮಸ್ಯೆಯಲ್ಲ… ಅವುಗಳ ಅತಿಯಾದ ಬಳಕೆ ಮತ್ತು ಅವುಗಳ ಬಗೆಗಿನ ಗೀಳು ಮಾತ್ರ ಅಪಾಯಕಾರಿ. ಎಲ್ಲ ವೇಳೆಯಲ್ಲಿಯೂ ಮೊಬೈಲ್ ಮತ್ತು ಇಂಟರನೆಟ್ ಜೊತೆಗೆ ವ್ಯವಹರಿಸುವದರಿಂದ ನೀವೂ ಕೂಡಾ ಕ್ರಮೇಣವಾಗಿ ಒಂದು ಉಪಕರಣವಾಗಿಯೇ ಮಾರ್ಪಾಡು ಹೊಂದುವ ಅಪಾಯಗಳಂತೂ ಖಂಡಿತ ಇವೆ. ಅತಿಯಾದರೆ ಎಲ್ಲವೂ ವಿಷ ಎನ್ನುವ ಸಾಮಾನ್ಯ ತಿಳುವಳಿಕೆಯಂತೂ ಎಲ್ಲರಿಗೂ ಇದ್ದೇ ಇದೆ. ಅದೇ ನಮ್ಮ ಮಾನವ ಜನಾಂಗವನ್ನು ಕಾಯಬೇಕಿದೆ.