Category Archives: ಬಸು ಬೇವಿನಗಿಡದ

“ಹಸಿವೆಯೆ ನಿಲ್ಲು ನಿಲ್ಲು” : ಪ್ರಥಮ ಬಹುಮಾನ ಪಡೆದ ಕತೆ

[ಗಾಂಧಿ ಜಯಂತಿ  ಕಥಾ ಸ್ಪರ್ಧೆ – 2012, ರಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.]

– ಡಾ.ಬಸು ಬೇವಿನಗಿಡದ

ಧಾರವಾಡ ವಿಶ್ವವಿದ್ಯಾಲಯದ ರಸ್ತೆಗೆ ಹೊಂದಿಕೊಂಡಿದ್ದ ಬಯಲಿನಲ್ಲಿ ಮಳೆ-ಬಿಸಿಲು-ಗಾಳಿಗೆ ಬಣ್ಣ ಕಳೆದುಕೊಂಡು, ಬ್ರಿಟಿಷರ ಕಾಲದಲ್ಲಿ ಜೈಲಾಗಿತ್ತೇನೊ ಎನ್ನುವ ರಾವು ಭಾವನೆ ಹುಟ್ಟಿಸುತ್ತಿದ್ದ ಅಕರಾಳ ವಿಕರಾಳ ಕಟ್ಟಡವೊಂದು ಕಲ್ಲು-ಕಸ-ಮುಳ್ಳುಕಂಟಿಗಳ ನಡುವೆ ನಿಂತಿತ್ತು. ಧಾರವಾಡದ ಬಿಡಾಡಿ ದನಗಳಿಗೆ ಊರ ಹೊರಗೆ ದೊಡ್ಡ ಕೊಂಡವಾಡವೊಂದನ್ನು ನಿರ್ಮಿಸಿರಬಹುದೆಂದು ಬಸ್ಸಿನಲ್ಲಿ ಮತ್ತು ರೈಲಿನಲ್ಲಿ ಹೋಗಿ ಬರುವ ಜನ ಅಂದುಕೊಳ್ಳುತ್ತಿದ್ದರು. ಆ ಕಟ್ಟಡದ ಸಮೀಪ ಯುನಿವರ್ಸಿಟಿ ಮತ್ತು ಹಳಿಯಾಳಕ್ಕೆ ಹೋಗುವ ರಸ್ತೆಗಳು ಕ್ರಾಸ್ ಆಗಿ ದೊಡ್ಡ ಜಂಕ್ಷನ್ ಬೇರೆ ನಿರ್ಮಾಣವಾಗಿತ್ತು. ಹಳಿಯಾಳ ಕ್ರಾಸಿನಲ್ಲಿದ್ದ ಹತ್ತಾರು ಚಹಾ-ದುಕಾನುಗಳಿಗೆ, ಆಮ್ಲೇಟ್-ಎಗ್ಗ್ ರೈಸ್ ಸೆಂಟರ್‌ಗಳಿಗೆ, ಪಾನಿಪುರಿ-ಗೋಬಿ ಮಂಚೂರಿ ಅಂಗಡಿಗಳಿಗೆ ಈ ಸರಕಾರಿ ಬಯಲು ಕಸ ಚೆಲ್ಲುವ ಕೇಂದ್ರವಾಗಿತ್ತು. ಗಿರಾಕಿಗಳು ತಿಂದು ಬಿಟ್ಟ ಮುಸುರೆ, ಕಾಯಿಪಲ್ಲೆ ಹೆಚ್ಚಿದ ಉಳಕಲು, ಸಾವಿರಾರು ಕೈ, ನೂರಾರು ಮುಸುಡಿ, ಸಾವಿರ ಸಾವಿರ ಪ್ಲೇಟಗಳನ್ನು ತೊಳೆದ ನೀರು, ಎಳನೀರು ಕುಡಿದು ಚೆಲ್ಲಿದ ಕಾಯಿ, ಚಿಕನ್ ತಿಂದು ಉಗುಳಿದ ಎಲುಬಿನ ಚೂರು, ಬೇಲಿಯ ಮರೆಗೆ ಕುಳಿತು ಕುಡಿದದ್ದರ ಪುರಾವೆ ಹೇಳುವ ಖಾಲಿ ಬಾಟಲ್‌ಗಳು, ಕಾಮದ ಹಸಿವನ್ನು ಉದ್ರೇಕಕಾರಿಯಾಗಿ ಬಣ್ಣಿಸುತ್ತಿರುವ ಕಾಂಡೋಮ್‌ಗಳ ರ್‍ಯಾಪರ್‌ಗಳು, ಗುಟಕಾ ಮತ್ತು ಪಾನ್ ತಿಂದು ಉಗುಳಿದ ರಸ, ಸಿಂಬಳದ ಗೊಣ್ಣೆ, ಕಾಣದೆದೆಯಲ್ಲಿ ಕಟ್ಟಿಕೊಂಡ ಕಫದ ತುಣುಕು ಮುಂತಾಗಿ ಮನುಷ್ಯರು ತೆರಪಿಲ್ಲದೆ ಸೃಷ್ಟಿಸುತ್ತಿದ್ದ ಮಲಿನತೆ ವಿರಳ ನೀಲಗಿರಿ ಗಿಡಗಳ ಬಯಲಿನಲ್ಲಿ ಹೋಗಿ ಬೀಳುತ್ತಿತ್ತು. ಬಸ್ಸಿಗೆಂದು ನಿಂತವರು, ಟ್ರಕ್ಕಿನಿಂದ ಇಳಿದವರು, ಮೋಟಾರು ಸೈಕಲ್ ಮೇಲೆ ಹೋಗುವವರು, ಕಾರುಗಳನ್ನು ನಿಲ್ಲಿಸಿದವರು ಎಲ್ಲರು ಅಲ್ಲಿಗೆ ಕಚಕ್ ಪಚಕ್ ಎಂದು ಉಗುಳುತ್ತ, ಹರದಾರಿ ದೂರದಿಂದಲೆ ಪ್ಯಾಂಟಿನ ಜಿಪ್ ಉಚ್ಚುತ್ತ, ಆಹಾ-ಓಹ್-ಉಹುಂ ಎಂಬಿತ್ಯಾದಿ ಶಬ್ದಗಳಲ್ಲಿ ಜಲಬಾಧೆಯನ್ನು ನೀಗಿಸಿಕೊಂಡ ತೃಪ್ತಿಯನ್ನು ಹೊರಗೆಡವುತ್ತ ಕಸದ ತಿಪ್ಪೆಯ ವ್ಯಾಸವನ್ನು ದಿನೇ ದಿನೇ ಹೆಚ್ಚಿಸುತ್ತಿದ್ದರು. ಹೊಲಸು ವಾಸನೆಯ ವರ್ತುಲ ಕ್ಷಣ ಕ್ಷಣಕ್ಕೂ ವಿಸ್ತಾರವಾಗುತ್ತ ಇಂದೊ ನಾಳೆಯೊ ಇದೀಗೊ ಬೀಳುವಂತಿದ್ದ ಆ ಕಟ್ಟಡವನ್ನು ಸಮೀಪಿಸುತ್ತಿತ್ತು. ಕಸದಷ್ಟು ಬೇಗ ಬೇರೆ ಯಾವುದೂ ಬೆಳೆಯಲಾರದೆನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆಯಂತಿತ್ತು. ಇನ್ನಷ್ಟು ದಿನ ಬಿಟ್ಟರೆ ಕಸದ ತಿಪ್ಪೆಯಲ್ಲಿ ತಾವಿರುವ ಈ ಕಟ್ಟಡವೂ ಮುಚ್ಚಿಹೋಗಬಹುದೆನ್ನುವ ಭೀತಿಯಲ್ಲಿ ಅಲ್ಲಿರುವ ಮನುಷ್ಯ ರೂಪಿ ಜೀವಿಗಳು ಬಾಯಿ ತೆರೆಯಲು ಆಹಾಹಾ… ಓ ಹೋ, ಇದೇನು ವಿಚಿತ್ರವಿದು, ಈ ನರಕ ಸದೃಶ ವಾತಾವರಣದಲ್ಲಿ ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದಾರಲ್ಲ, ಈ ಹೊಲಸು ಗಾಳಿಯು ಅವರ ಕಿಡಕಿ ಬಾಗಿಲುಗಳಿಗೆ ಹೋಗಿ ಬಡಿಯುತ್ತಿದೆಯಲ್ಲಾ, ಅಯ್ಯೋ ಮಾನವೀಯತೆಯೆಂಬುದು ಲವಲೇಶವೂ ಕಾಣಸಿಗದೆ ಮರೆಯಾಗಿ ಹೋಯಿತಲ್ಲ ಎಂದು ಜನ ಟಿ.ವಿ.ಪರದೆಗಳಲ್ಲಿ ಮತ್ತು ಪತ್ರಿಕೆಗಳ ಪುಟಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸತೊಡಗಿದರು.

ತಮ್ಮದೆ ಬಗೆಹರಿಯದ ನೂರೆಂಟು ತರಲೆ-ತಾಪತ್ರಯಗಳ ಮಧ್ಯೆ ಬದುಕಿಕೊಂಡಿದ್ದ ಆ ಕಟ್ಟಡದ ಅಕ್ಕ -ಪಕ್ಕದ ಕಾಲನಿಗಳ ಮಂದಿ ಅದ್ಯಾವ ಬಿಲ್ಡಿಂಗ್‌ವಿದ್ದೀತು ಎಂದು ಇದುವರೆಗೂ ನೋಡಲು ಹೋಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಜನ ಹಿತ್ತಲು ಮತ್ತು ಕಾಂಪೌಂಡುಗಳನ್ನು ದಾಟಿ ಹೊರಬರುವುದು ಕಡಿಮೆಯಾಗಿತ್ತು. ಏನೇ ಇದ್ದರೂ ಅದು ಟಿ.ವಿ.ಪರದೆಯಲ್ಲಿ ಬಂದ ಮೇಲೆ ಅದನ್ನು ನೋಡುವಂತಹ, ನಂಬುವಂತಹ ಸ್ಥಿತಿ ನಿರ್ಮಾಣವಾಗಿತ್ತು. ‘ಆರಾಮ ಇದ್ದೀರೇನು?, ಶಾಲೆಗೆ ರಜೆ ಇದೆಯಾ?’ ಮುಂತಾದ ಸಾಮಾನ್ಯ ಪ್ರಶ್ನೆಗಳಿಗೂ ಅವರು ಟಿ.ವಿ.ಹಾಗೂ ಪತ್ರಿಕೆಯ ಮುಖ ನೋಡುತ್ತಿದ್ದುದು ಸಾಮಾನ್ಯವಾಗಿತ್ತು. ಹೀಗಾಗಿ ‘ಮನೆ ಒಳಗೆ ಬರಬಹುದೆ? ನಿಮ್ಮ ಹೆಸರೇನು?’ ಎಂದು ಜನರನ್ನು ಕೇಳಬೇಕಾದರೆ ಯಾವುದಾದರೂ ಟಿ.ವಿ.ಚಾನೆಲ್‌ನ ರಿಪೋರ್ಟರ್ ಮತ್ತು ಕ್ಯಾಮರಾಮನ್‌ನನ್ನು ಪರಿಚಯ ಮಾಡಿಕೊಂಡು ಅವರ ಕಡೆಯಿಂದ ನಮ್ಮ ಪ್ರಶ್ನೆಗಳನ್ನು ಚಿತ್ರೀಕರಿಸಿ ಪ್ರಸಾರ ಮಾಡಿದಾಗಲೆ ಅವು ಮಂದಿಗೆ ಮುಟ್ಟುತ್ತಿದ್ದವು. ಮಂದಿ ಕೂಡ ತಮ್ಮ ಪ್ರತಿಕ್ರಿಯೆಗಳನ್ನು ಮರಳಿ ಅದೆ ರೂಪದಲ್ಲಿ ಅದು ಇಲೆಕ್ಟ್ರಾನಿಕ್ ಅಥವಾ ಮುದ್ರಣ ಅಥವಾ ಮೊಬೈಲ್ ಮೆಸೇಜ್‌ಗಳ ಮೂಲಕ ಕಳಿಸುತ್ತಿದ್ದರು.

ಮನುಷ್ಯ ಆಧುನಿಕನಾಗಿರುವುದರಿಂದ ಹಾಗೂ ಹೊಸ ಹೊಸ ಆವಿಷ್ಕಾರಗಳು ಬದುಕನ್ನು ಸರಳ ಮತ್ತು ಸುಲಭಗೊಳಿಸಿರುವುದರಿಂದ ನಾಗರಿಕ ಸಮಾಜದ ಈ ವರ್ತನೆ ತುಂಬ ಸಹಜವೆಂದು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಬೋಧಿಸುವ ಡಾ.ಆಲೂರ ಅವರು ಅಭಿಪ್ರಾಯ ಪಡುತ್ತಿದ್ದರು. ಲಕ್ಷಗಟ್ಟಲೆ ಪಗಾರ ತಗೊಂಡು ಸರಿಯಾಗಿ ಕ್ಲಾಸ್ ಎಂಗೇಜ್ ಮಾಡುವುದಿಲ್ಲ, ಮೊದಲಿನ ಟೀಚರ್‌ಗಳಂತೆ ಹುಡುಗರನ್ನು ತಿದ್ದಿ ತೀಡುವುದಿಲ್ಲ, ಪುಸ್ತಕ ಓದುವುದಿಲ್ಲ, ಜನಸಮುದಾಯದಿಂದ ದೂರ ಇರುತ್ತಾರೆ ಮುಂತಾದ ಕೆಲವು ಆಪಾದನೆಗಳು ಡಾ.ಆಲೂರರನ್ನು ಕುರಿತಂತೆ ಕಾಣಿಸಿಕೊಂಡ ಮೇಲೆ ದಿನದಿಂದ ದಿನಕ್ಕೆ ಅವರು ಮತ್ತಷ್ಟು ವ್ಯಗ್ರವಾಗಿ ಮನೆಯಲ್ಲಿ ಕುಳಿತೇ ಟೆಲೆ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು. ಶಿಕ್ಷಕರು-ವಿದ್ಯಾರ್ಥಿಗಳು ಮುಖಾ ಮುಖಿಯಾಗಬೇಕೆಂದೇನಿಲ್ಲ, ಒಟ್ಟಿನಲ್ಲಿ ಸಂವಹನವಾದರೆ ಸಾಕು ಎಂದು ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ದೀರ್ಘ ಲೇಖನ ಬರೆದು, ಮನುಷ್ಯ ದ್ವೀಪದಂತೆ ಬದುಕುವುದೇ ಈಗಿನ ವಾತಾವರಣದಲ್ಲಿ ಉತ್ತಮ ಎಂಬ ಪ್ರತಿಪಾದನೆ ಮಾಡಿದ್ದರು. ಅವರ ಮನೆಗೆಲಸಕ್ಕೆ ಬರುತ್ತಿದ್ದ ಆಳುಗಳಿಗೆ ದೂರದಿಂದಲೆ ಅವರು ದುಡ್ಡು ಎಸೆಯುತ್ತಿದ್ದರು. ಹೊರಗೆ ಹೊರಟರೆಂದರೆ ಕಾರಿನ ಗ್ಲಾಸುಗಳನ್ನು ಇಳಿಸುತ್ತಿರಲಿಲ್ಲ. ಇದರಿಂದ ಹೊರಗಿನ ಗದ್ದಲ, ಕಿರುಚಾಟ, ಅಪಘಾತ, ಚಳವಳಿ, ಸಾವು, ನೋವು, ಕೇಕೆ, ಮೆರವಣಿಗೆ ಅವರಿಗೆ ತಾಕುತ್ತಿರಲಿಲ್ಲ. ಡಾ. ಆಲೂರರು ಹಳಿಯಾಳ ಸರ್ಕಲ್‌ನಲ್ಲಿ ಎರಡು ಅಂತಸ್ತಿನ ವಿಶಾಲವಾದ ಮನೆಯನ್ನು ಕಟ್ಟಿಸಿಕೊಂಡು ವಾಸವಾಗಿದ್ದರು. ಯಾರಾದರೂ ಅವರನ್ನು ಭೆಟ್ಟಿಯಾಗಿ ಮಾತನಾಡಿಸಿದರೆ ಅವರು ತನ್ನನ್ನು ಯಾಕೆ ಮಾತನಾಡಿಸಿದರು, ಏನು ಉದ್ದೇಶವಿತ್ತು, ತನ್ನ ಬಗ್ಗೆ ಅವರಿಗೆ ಯಾವಾಗಿನಿಂದ ತಿಳಿದಿದೆ ಎಂದೆಲ್ಲ ಪ್ರಶ್ನೆ ಕೇಳಿಕೊಂಡು ವಾರಗಟ್ಟಲೆ ಅದೆ ಚಿಂತೆಯಲ್ಲಿ ಕುಳಿತಿರುತ್ತಿದ್ದರು. ಹೀಗಿರುತ್ತಿರಲಾಗಿ ಡಾ. ಆಲೂರರ ಮನೆಗೆ ಅಣತಿ ದೂರದಲ್ಲಿಯೆ ಇರುವ ಆ ದುರಾದೃಷ್ಟದ ಕಟ್ಟಡವನ್ನು ಅವರು ಹೇಗೆ ನೋಡಿರಲು ಸಾಧ್ಯ? ಅವರಿಗೆ ಅದರ ಪರಿಚಯವಿರುವುದಾದರೂ ಹೇಗೆ? ಅವರು ಕೂಡ ಎಲ್ಲರಂತೆ ದಿಗ್ಭ್ರಮೆಗೊಳಗಾಗಿ ತನ್ನ ಮನೆಯ ಹತ್ತಿರ ಈ ಕಟ್ಟಡ ಎಲ್ಲಿತ್ತು? ತನಗೆ ಕೇಡು ಬಯಸುವ ಯಾರೋ ಪ್ರಾಧ್ಯಾಪಕರು ಅಥವಾ ತಾನು ವಿಶ್ವವಿದ್ಯಾಲಯದ ಕುಲಪತಿಯಾಗಲು ಅಡ್ಡಗಾಲು ಹಾಕುತ್ತಿರುವ ಯಾವುದೊ ಖದೀಮನು ಈ ಬಿಲ್ಡಿಂಗ್‌ನ್ನು ಅನಾಮತ್ತಾಗಿ ಇಲ್ಲಿ ತಂದು ಇಟ್ಟಿರಬಹುದೆಂದು ಆಲೂರರು ಲೆಕ್ಕಹಾಕಿ ಆ ಬಿಲ್ಡಿಂಗ್‌ನಲ್ಲಿ ವಾಸಿಸುತ್ತಿದ್ದ ಮಕ್ಕಳ ಬಗ್ಗೆ ಪೇಪರ್ ಓದುವುದನ್ನು ಬಿಟ್ಟು, ಟಿ.ವಿ.ಯಲ್ಲಿ ಹರಿದುಬರುತ್ತಿದ್ದ ಚಿತ್ರಗಳ ಮೇಲೆ ಕಣ್ಣಾಡಿಸುವುದನ್ನು ಬಿಟ್ಟು ತನ್ನ ಏಳ್ಗೆಗೆ ಇದೊಂದು ಅಪಶಕುನವೆಂದೆ ಭಾವಿಸಿ ಇಂಟರ್ನೆಟ್ ತೆಗೆದು ಬೆಂಗಳೂರಿನ ಪ್ರಖ್ಯಾತ ಗುರೂಜಿಯೊಬ್ಬರ ಜೊತೆ ಚಾಟ್ ಮಾಡತೊಡಗಿದರು.

ಗುರೂಜಿ ಬಣ್ಣ ಹಚ್ಚಿದ ತಮ್ಮ ಗಡ್ಡವನ್ನು ನೀವಿಕೊಳ್ಳುತ್ತ ತಮ್ಮ ಆಕರ್ಷಕ ನಗುವನ್ನು ಸ್ವಲ್ಪವೂ ಮಾಸಗೊಡದೆ ಮನುಷ್ಯ ಜೀವನ ಮಾಡಬೇಕಾದರೆ ಬದುಕಿನ ಕಲೆ ಗೊತ್ತಿರಬೇಕೆಂದು, ಇದಕ್ಕೆ ಧರ್ಮದ ನೆರವು ಬೇಕೇ ಬೇಕೆಂದು ಅತೀವ ಆತ್ಮವಿಶ್ವಾಸದಿಂದ ಹೇಳಿದರು. ಅಷ್ಟೇ ಅಲ್ಲ ಹುಬ್ಬಳ್ಳಿಯಲ್ಲಿರುವ ತಮ್ಮ ವಲಯ ಕಚೇರಿಯಿಂದ ಡಾ.ಆಲೂರರ ಮನೆಗೆ ಒದಗಿಬಂದಿರುವ ಸಕಲ ದುಷ್ಟಗ್ರಹಗಳನ್ನು ನಿವಾರಣೆ ಮಾಡಲು ಇನ್ನು ಹದಿನೈದು ದಿನದಲ್ಲಿ ಅವರ ಮನೆಯ ಗ್ರಾನೈಟ್ ಕಲ್ಲಿನ ವಿಶಾಲವಾದ ಹಾಲ್‌ನಲ್ಲಿ ದೊಡ್ಡ ಯಜ್ಞವೊಂದನ್ನು ಮಾಡುವುದಾಗಿ ಅಭಯವಿತ್ತರು. ಅದೂ ಅಲ್ಲದೆ ವಿಶ್ವವಿದ್ಯಾಲಯದ ಎಲ್ಲ ಪ್ರಾಧ್ಯಾಪಕರಿಗಾಗಿ ಹದಿನೈದು ದಿನದ ಒಂದು ಸತ್ಸಂಗ ಯೋಗ ಅಭಿಯಾನವನ್ನು ಏರ್ಪಡಿಸುವಂತೆ ಆಲೂರರಲ್ಲಿ ವಿನಂತಿಸಿದಾಗ ಅವರು ‘ಅಯ್ಯೋ, ಗುರೂಜಿ! ಧರ್ಮ ಪ್ರಸಾರಕರೆಂದು, ಶಾಂತಿಯೋಗದ ಮಹತ್ವವನ್ನು ಸಾರಿದ ಆಚಾರ್ಯರೆಂದು ಜಗತ್ತಿನಾದ್ಯಂತ ಹೆಸರುವಾಸಿಯಾಗಿರುವ ತಾವು ಈ ಬಡ ಮಾಸ್ತರನನ್ನು ಕೇಳಿಕೊಳ್ಳುವುದೆ? ಖಂಡಿತಾ ನಡೆಸಿಕೊಡುತ್ತೇನೆ. ನಮ್ಮ ವೈಸ್ ಛಾನ್ಸೆಲರ್ ಆಜ್ಞೆ ಮಾಡಿದರೂ ಕೇಳದ ನಾನು ನಿಮ್ಮ ಮಾತನ್ನು ಮಾತ್ರ ಶಿರಸಾವಹಿಸಿ ಪಾಲಿಸುತ್ತೇನೆ,’ ಎಂದು ವಿನಮ್ರವಾಗಿ ನುಡಿಯಲು ಗುರೂಜಿ ‘ಆಯ್ತು, ಹೀಗೆ ಮಾಡಿದಾಗ ಮಾತ್ರ ನೀವು ಹುಟ್ಟಿಬಂದ ಶ್ರೇಷ್ಠ ಜಾತಿ-ಮತದ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಅದನ್ನು ನೆನಪಿನಲ್ಲಿಟ್ಟುಕೊಳ್ಳಿ,’ ಎಂದರು. ಅತಿ ವಿನಯದಿಂದ ಪ್ರಾಧ್ಯಾಪಕರು, ಸ್ವಾಮೀಜಿ ಎದುರಿಗಿದ್ದಾರೆನ್ನುವಂತೆ ಅವರಿಗೆ ಸಾಷ್ಟಾಂಗ ನಮಸ್ಕರಿಸಿದರು. ಇದರಿಂದ ಸಂತುಷ್ಟರಾದ ಮೇಲಷ್ಟೆ ಡಾ. ಆಲೂರರು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಮತ್ತು ಎಲ್ಲ ಟಿ.ವಿ. ಚಾನೆಲ್ ಪರದೆಗಳ ಮೇಲೆ ತೇಲಿ ಬರುತ್ತಿದ್ದ ದೃಶ್ಯಗಳ ಮೇಲೆ ಕಣ್ಣು ಹಾಸಿದರು.

ಹಳೆ ಶಿಲಾಯುಗದ ಕಟ್ಟಡದಲ್ಲಿ ವಾಸವಾಗಿದ್ದುದು ಮೆಟ್ರಿಕ್ ಪೂರ್ವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಎಂದು ತಿಳಿಯಲು ಈಗ ತಡವಾಗಲಿಲ್ಲ. ಈ ಹಾಸ್ಟೇಲ್ಲಿನ ಸ್ಥಿತಿಗತಿಯ ವಿವರಗಳು ಕಲರ್ ಫೋಟೊಗಳೊಂದಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದೆ ತಡ ರವಿವಾರವೆಂದು ರಜೆಯ ನಿಶೆಯಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಮತ್ತು ಅವರ ಕೈ ಕೆಳಗಿನ ಎಲ್ಲ ನೌಕರರಿಗೆ ತಲೆಯ ಮೇಲೆ ಮುಗಿಲು ಹರಿದು ಬಿದ್ದಂತಾಗಿತ್ತು. ಯಾವ ಟಿ.ವಿ. ಆನ್ ಮಾಡಿದರೂ ದನಗಳಿಗಿಂತಲೂ ಕೀಳು ಮಟ್ಟದಲ್ಲಿ ಹಳ್ಳಿಗಳ ವಿದ್ಯಾರ್ಥಿಗಳನ್ನು ನೋಡಿಕೊಂಡಿದ್ದರ ಚಿತ್ರಗಳು ನೋಡುವವರ ಮನಸ್ಸನ್ನು ಕರಗಿಸುತ್ತಿದ್ದವು.

ನುಸಿಯಲ್ಲಿ ಜೋಳವೊ ಜೋಳದಲ್ಲಿ ನುಸಿಯೊ ಎಂಬಂತೆ ಮೈಗೆಲ್ಲ ಹಿಟ್ಟು ಮೆತ್ತಿಕೊಂಡು ಹರಿದಾಡುತ್ತಿದ್ದ ನುಸಿ ತುಂಬಿದ ಜೋಳದ ಚೀಲ, ಗಂಟುಗಂಟಾದ ಹಿಟ್ಟೇ ಹರಿದಾಡುತ್ತಿದೆ ಎನ್ನುವ ಹುಳಗಳಿದ್ದ ಮೈದಾಹಿಟ್ಟು. ಎಷ್ಟು ಕುದಿಸಿದರೂ ಕುದಿಯದ ಕಲ್ಲಿನ ಚೂರುಗಳಂತಿರುವ ತೊಗರಿ ಬೇಳೆ, ಅರ್ಧ ಮಾತ್ರ ಬೇಯುವ ವಿಚಿತ್ರ ಅಕ್ಕಿ, ಪೇಟೆಯಲ್ಲಿ ರಾತ್ರಿ ಕಸವೆಂದು ಚೆಲ್ಲಿಹೋದ ಕಾಯಿಪಲ್ಲೆ, ಬೆಳಗಲಾರದೆ ಕಿಲುಬುಗಟ್ಟಿ ತಮ್ಮ ನಿಜ ಬಣ್ಣ ಕಳೆದುಕೊಂಡಿರುವ ಅಡಿಗೆಯ ಪಾತ್ರೆಗಳು, ನೆಗ್ಗಿದ ತಾಟುಗಳು, ಮುರಿದ ಸೌಟುಗಳು, ಭರಪೂರ ಭತ್ತ ಬೆಳೆದಂತೆ ಕಸ ಬೆಳೆದಿರುವ ನೀರಿನ ತೊಟ್ಟಿ, ಕಾಲಿಟ್ಟರೆ ಜಾರುವ ಪರ್ಸಿ ಕಲ್ಲು, ಕಿಡಕಿ-ಬಾಗಿಲು ಮುರಿದುಹೋಗಿ ರೇಲ್ವೆ ಕಂಪಾರ್ಟಮೆಂಟಿನಂತೆ ಸೀದಾ ಒಂದೇ ಕಾಣುವ ಕೊಂಡವಾಡದಂತಹ ಬಿಲ್ಟಿಂಗ್, ಕಿತ್ತಾಡುವ ಹಾಗೂ ಆರಾಮ ಇಲ್ಲವೆಂದು ಎಂಟು ದಿನದಿಂದ ಹೊಟ್ಟೆ ಕೆಳಗೆ ಮಾಡಿಕೊಂಡು ಮಲಗಿರುವ ಹುಡುಗರು, ಅವರ ಹರಿದ ಅಂಗಿ-ಚೊಣ್ಣ ಇಂತಹ ಹಲವಾರು ಬೇರೆ ಬೇರೆ ಚಿತ್ರಣ ಕೊಡುವ, ಬೇರೆ ಬೇರೆ ಆಯಾಮಿನ ದೃಶ್ಯಗಳು ಕಂಡೊಡನೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಜಂಘಾಬಲ ಉಡುಗಿ ಹೋದಂತಾಗಿ ಅವರು ನಿತ್ರಾಣಗೊಂಡರು. ಇನ್ನು ಕೇವಲ ಆರು ತಿಂಗಳಲ್ಲಿ ರಿಟೈರ್ ಆಗಲಿದ್ದ ವಿ.ಬಿ. ಕಲಕೇರಿ ಅರ್ಥಾತ್ ವೀರಭದ್ರಪ್ಪ ಬಸಪ್ಪ ಕಲಕೇರಿ ಎನ್ನುವ ಆಜಾನುಬಾಹು ದೇಹದ ಅವರು ‘ಸರ್ವಿಸ್ ಪೂರಾ ದಾಟಿಸಿದ್ದೆ. ಕೊನೆಯ ಚುಂಗು ಸಿಕ್ಕಿ ಹಾಕಿಕೊಂಡು ಉರಳಾಗ್ತದ ಏನೊ?’ ಎಂದು ಚಿಂತೆಗೀಡಾದರು. ಮೊನ್ನೆಯಷ್ಟೆ ಹಾಸ್ಟೇಲ್‌ಗೆ ಭೆಟ್ಟಿಕೊಟ್ಟು ಬಂದಿದ್ದವರಂತೆ ಅಲ್ಲಿಯ ಅಟೆಂಡರ್ ಸಹಿ ಮಾಡಿಸಿ ಕೊಂಡು ಹೋಗಿದ್ದ. ಅವರು ಕೂಡ ಎಂಟು ದಿನದ ಹಿಂದೆ ಧಾರವಾಡದಲ್ಲಿಯ ಎಲ್ಲ ಸರ್ಕಾರಿ ಹಾಸ್ಟೆಲ್‌ಗಳನ್ನೆಲ್ಲ ರೌಂಡ್ ಹಾಕಿಕೊಂಡು ಬಂದಿದ್ದರು. ಈಗ ಸುದ್ದಿಯಲ್ಲಿರುವ ಹಾಸ್ಟೆಲ್ಲಿಗೂ ಹೋಗಿದ್ದ ಅವರು ಪ್ರತಿಸಲದಂತೆ ಮೊನ್ನಿನ ಸಲವೂ ಒಳಗಡೆ ಹೆಜ್ಜೆಯಿಡದೆ ಅಟೆಂಡರ್ ಪಿ.ಎಲ್. ಉಳ್ಳಾಗಡ್ಡಿ ಎನ್ನುವವನು ಅಂಗಳದಲ್ಲಿ ತಂದು ಹಾಕಿದ್ದ ಪ್ಲಾಸ್ಟಿಕ್ ಚೇರ್ ಮೇಲೆ ಕುಳಿತು ‘ಎಲ್ಲಾ ಸರಿ ಐತೇನೋ?’ ಎಂದು ಕೇಳಿದ್ದರು. ಆಗಷ್ಟೆ ನಂದಿನಿ ಹಾಲಿನ ಪಾಕೀಟ್ ತಂದು ಅದರಲ್ಲಿ ನಾಲ್ಕು ರೂಪಾಯಿ ಉಳಿಸಿಕೊಂಡು ಮೂರು ರೂಪಾಯಿಯಲ್ಲಿ ಮಸ್ತಿ ಗುಟಖಾವನ್ನು ಬಾಯಿಗೆ ಇಳಿಸಿ ಇನ್ನೊಂದು ರೂಪಾಯಿ ಎಮರ್ಜೆನ್ಸಿಗೆ ಇರಲಿ ಎಂದು ಪ್ಯಾಂಟಿಗೆ ಇಳಿಸಿದ್ದ ಉಳ್ಳಾಗಡ್ಡಿ ಕರ್ರಗಾಗಿದ್ದ ಹಲ್ಲು ಗಿಂಜಿ ‘ಸರ್, ನೀವು ಕಾಳಜಿ ಬಿಡ್ರಿ’ ಎಂದು ಹಾಸ್ಟೆಲ್ ಹುಡುಗರಿಗೆಲ್ಲ ಕೇಳುವಂತೆ ನಕ್ಕಿದ್ದ. ‘ಇಪ್ಪತ್ತ ವರ್ಷ ಆತು ಸರ್, ನಾ ಇಲ್ಲಿ ಕೆಲಸ ಮಾಡ್ಲಿಕ್ಕೆ ಹತ್ತಿ. ಈ ಹುಡುಗರು ಅದಾರಲ್ಲ, ಅಷ್ಟ ಸಣ್ಣವನಿರ್‍ತಾಗಿಂದ ಇಲ್ಲಿ ದುಡ್ಯಾಕ ಹತ್ತೇನಿ. ಒಂದsರ ದಿನ ಏನರ ಕಡಿಮೆ ಆಗೇತಿ ಅಂತ ಕಂಪ್ಲೇಂಟ್ ಬಂದತೇನ್ರಿ?’ ಎಂದು ಕಲಕೇರಿ ಸಾಹೇಬರಿಗೆ ತಿರುಗಿ ಕೇಳಲು ಕತ್ತಲಿನಲ್ಲಿ ಅವನ ಮುಖ ಕಾಣದಂತಾಗಿ ಸಾಹೇಬರು, ‘ಆತ ಬಿಡ ಹಂಗಾರ. ಹುಷಾರ ಇರು. ಹುಡುಗರು ಉಂಡು ಅಭ್ಯಾಸ ಮಾಡ್ಲಿಕ್ಕೆ ಹತ್ಯಾರೇನು ನೋಡು,’ ಎಂದು ಅಡಿಗೆಯವನು ಸ್ಪೆಷಲ್ಲಾಗಿ ಮಾಡಿ, ,ಹಿಡೀರಿ ಸಾಹೇಬ್ರ, ಎಂದು ತಂದು ಕೊಟ್ಟ ಚಹಾವನ್ನು ಗುಟುಕರಿಸಿದ್ದರು. ಈ ಅಟೆಂಡರ್ ಮತ್ತು ಅಡಿಗೆಯವನು ಹಾಸ್ಟೆಲಿನಿಂದ ಹತ್ತು ಕಿ.ಮೀ. ದೂರವಿರುವ ಕಲಕೇರಿ ಎನ್ನುವ ಊರವರಾಗಿದ್ದುದರಿಂದ ಅವರ ಬಗ್ಗೆ ವಿಶೇಷ ನಂಬಿಕೆ ಮತ್ತು ಪ್ರೀತಿ ಸಾಹೇಬರಿಗಿತ್ತು. ಸಾಹೇಬರ ಅಡ್ಡೆಸರು ಕಲಕೇರಿ ಇದ್ದುದು ಅದಕ್ಕೆ ಕಾರಣವಾಗಿತ್ತು.

ಹಾಗೆ ನೋಡಿದರೆ ಸಾಹೇಬರು ಈ ಊರವರಾಗಿರಲಿಲ್ಲ. ಬಿಜಾಪೂರ ಜಿಲ್ಲೆ ಇಂಡಿ ತಾಲೂಕಿನ ಕಲಕೇರಿ ಎನ್ನುವ ಕುಗ್ರಾಮದಲ್ಲಿ ಬಾಲ್ಯದ ದಿನಗಳನ್ನು ಕಳೆದ ನೆನಪು ಸಾಹೇಬರನ್ನು ಆಗಿಂದಾಗ ಭಾವೋದ್ವೇಗಕ್ಕೆ ಒಳಗಾಗುವಂತೆ ಮಾಡುತ್ತಿತ್ತು. ಕಲಕೇರಿಯ ಹೆಸರನ್ನು ಮುಂದು ಮಾಡಿ ತನ್ನ ಬಡತನದ ನೆನಪುಗಳನ್ನು ಕಲಕುವ ಈ ಇಬ್ಬರನ್ನೂ ತಬ್ಬಿಕೊಳ್ಳಬೇಕೆನಿಸುತ್ತಿತ್ತು. ಇದಕ್ಕಿಂತಲೂ ಹತ್ತು ಪಾಲು ಕೆಟ್ಟಿದ್ದ ಹಾಸ್ಟೆಲ್ಲಿನಲ್ಲಿ ಬೆಳದು, ವಿಜಾಪೂರದ ಗೋಳಗುಮ್ಮಟದ ಹಿಂದೆ ಹೋಗಿ ಕಾಯಿಪಲ್ಲೆ ಮಾರುವವರ ಉಳಕಲು ಗಜ್ಜರಿ ತಿಂದು ಹೊಟ್ಟೆ ತುಂಬಿಸಿಕೊಂಡು, ಯಾವುದೇ ಪರಿಸ್ಥಿತಿಯಲ್ಲಿ ತಾನು ಬೆಳೆದು ಮುಂದೆ ಬಂದೇ ಬರುವೆನೆಂದು ಗೆಳೆಯರೊಟ್ಟಿಗೆ ಪ್ರತಿಜ್ಞೆ ಮಾಡಿದ್ದು, ಆ ಪ್ರತಿಜ್ಞೆ ದಿನವೂ ಏಳೇಳು ಸಲ ಕೇಳಿಸಿದಂತಾಗಿ, ಯಾರ ಸಹಾಯವಿಲ್ಲದೆ ನೌಕರಿ ಹಿಡಿದು, ಈಗ ಹಸಿರು ಇಂಕಿನಲ್ಲಿ ಸಹಿ ಮಾಡುವ ಗೆಜೆಟೆಡ್ ಆಫೀಸರ್ ಆಗಿರುವುದು ಕಣ್ಮುಂದೆ ಬರುತ್ತಿತ್ತು. ನೂರೆಂಟು ಕೆಲಸಗಳ ಮಧ್ಯೆ ತಮ್ಮ ಹುಟ್ಟಿದೂರಿಗೆ ಹೋಗಲು ಅವರಿಗೆ ಸವಡು ಸಿಗುತ್ತಿರಲಿಲ್ಲ. ಧಾರವಾಡದಂತಹ ಮಲೆನಾಡ ಸೆರಗಿನ ಊರನ್ನು ಬಿಟ್ಟು ಆ ಕೆಟ್ಟ ಬಿಸಿಲಿನ ಹಳ್ಳಿಗೆ ಹೋಗುವದೆಂದರೆ ಅವರಿಗೆ ಜೀವ ವಕ್ ಎನ್ನುತ್ತಿತ್ತು. ಕಾರು ಮಾಡಿಕೊಂಡು ಹೋದರೂ ಈ ಕಡು ಬಿಸಿಲಿಗೆ ಅವರ ತಲೆ ತಿರುಗಿದಂತಾಗಿ ಒಂದೆರಡು ಸಲ ವಾಂತಿ ಆಗುತ್ತಿತ್ತು. ತಲೆ ಹಿಡಿದುಕೊಂಡೆ ತಾವು ಹುಟ್ಟಿದ್ದ ಮನೆಯಲ್ಲಿ ಒಂದೆರಡು ತಾಸು ಕುಳಿತು ಅಣ್ಣ-ತಮ್ಮರ ಜೊತೆ ಅದು-ಇದು ಮಾತನಾಡಿ ಹೊತ್ತು ಮುಳುಗುವ ಮುನ್ನ ಊರು ಬಿಟ್ಟು ವಾಪಸ್ ಧಾರವಾಡದ ಹಾದಿ ಹಿಡಿಯುತ್ತಿದ್ದರು. ಅಲ್ಲಿ ಮಲಗಿದರೆ ಅವರಿಗೆ ನಿದ್ದೆಯೆ ಬರುತ್ತಿರಲಿಲ್ಲ. ಹೀಗಾಗಿ ಎಷ್ಟೇ ರಾತ್ರಿಯಾದರೂ ಧಾರವಾಡಕ್ಕೆ ಬಂದು ಮಲಗಬೇಕು. “ಯಾವಾಗಿದ್ರೂ ನಿಂದು ಇದೆ ಹಣೆ ಬರಹ ಆತು ಹೋಗು. ಅಣ್ಣ-ತಮ್ಮರನ್ನ ನೋಡ್ಲಿಲ್ಲ. ಹಡದ ತಂದಿ-ತಾಯಿ ನೋಡ್ಲಿಲ್ಲ. ಈ ನೆಲದಾಂವ ಅಲ್ಲ ಅನ್ನುವಂಗ ಆಗೀದಿ,” ಎಂದು ಮುದುಕನಾಗಿದ್ದ ಹಿರಿಯಣ್ಣ ಸಾಹೇಬರಿಗೆ ಬೈದು ಕಳಿಸುತ್ತಿದ್ದ. ತಾವು ಎಷ್ಟು ಸಹಾಯ ಮಾಡಿದರೂ ತಮಗೆ ಹೊಲ-ಮನೆ ಬೇಡವೆಂದು ಅಣ್ಣ-ತಮ್ಮ, ಅಕ್ಕ-ತಂಗಿಯರಿಗೆ ತಮ್ಮ ಪಾಲಿನ ಆಸ್ತಿಯನ್ನು ಬಿಟ್ಟು ಕೊಟ್ಟಿದ್ದರೂ ಇವರು ಅನ್ನುವುದು ಬಿಡಲಿಲ್ಲ ಎಂದು ಕಲಕೇರಿ ಸಾಹೇಬರಿಗೆ ಊರಿಗೆ ಹೋಗಿ ಬಂದ ಎರಡು ಮೂರು ದಿನ ನಿದ್ದೆಯೆ ಬರುತ್ತಿರಲಿಲ್ಲ. ಅಣ್ಣ-ತಮ್ಮರಿಗೆ ಯಾವ ಸಹಾಯವನ್ನೂ ಮಾಡಬಾರದು ಎಂದು ತಮ್ಮ ಸಹೋದ್ಯೋಗಿಗಳಿಗೆ ನೊಂದುಕೊಂಡು ಬುದ್ಧಿ ಹೇಳುತ್ತಿದ್ದರು. ಅವ್ವ-ಅಪ್ಪ ಸತ್ತ ಮೇಲೆ ಊರಲ್ಲಿ ಏನಿದೆ ಎಂದು ಇತ್ತೀಚೆಗೆ ಆ ಕಡೆ ಕಾಲು ಹಾಕಿ ಸೈತ ಮಲಗುವುದಿಲ್ಲ. ಅಷ್ಟಾದರೂ ಹೆಂಡತಿಯೊಡನೆ ಯಾವ ವಿಷಯಕ್ಕಾದರೂ ಮನಸ್ತಾಪ ಬಂತೆಂದರೆ ಮೊನ್ನೆ ಮೊನ್ನ ಬಂದ ಇವಳಿಗೆ ಇಷ್ಟೊಂದು ಮಾಡಿದೆ ಆದರೆ ಒಡ ಹುಟ್ಟಿದವರಿಗೆ ಏನೂ ಮಾಡಲಿಲ್ಲ ಎಂಬ ಪಾಪಪ್ರಜ್ಞೆ ಕಾಡಿ ಉದ್ವಿಗ್ನತೆಯಿಂದ ಹಾಸ್ಟೆಲ್ಲಿನ ರಸ್ತೆಯಲ್ಲಿರುವ ವಿನಾಯಕ ಬಾರ್ ಆಂಡ್ ರೆಸ್ಟೊರೆಂಟ್‌ಗೆ ಹೋಗಿ ಒಂದು ಪೆಗ್ ಜಾಸ್ತಿ ಹಾಕುವರು.

ಅಂತಹ ಮನಸ್ತಾಪದ ಒಂದು ದಿನ ಅಟೆಂಡರ್ ಉಳ್ಳಾಗಡ್ಡಿಯನ್ನು, ಅಡುಗೆಭಟ್ಟ ಗುರುಬಸಯ್ಯನನ್ನು ಕರೆದುಕೊಂಡು ತಮ್ಮ ಗೆಜೆಟೆಡ್ ಸ್ಥಾನವನ್ನು ಮರೆತು ಅವರನ್ನು ಕುಡಿಯಲು ಕರೆದುಕೊಂಡು ಹೋಗಿದ್ದರು. ‘ಹಾಸ್ಟೆಲಿನಲ್ಲಿ ಹೋಗಿ ಉಣ್ಣೋಣ ಸಾರ್, ಫಸ್ಟ್‌ಕ್ಲಾಸ್ ಅಡಿಗೆ ಮಾಡಿದೀನಿ’ ಎಂದು ಗುರುಬಸಯ್ಯ ನಿಶೆಯಲ್ಲಿ ಅಂದ. ‘ಇಂವನ್ನ ಊಟ ನಾ ಕಂಡಿಲ್ವಾ ಸರ್, ನೀವು ಅಕಸ್ಮಾತ್ ಉಂಡ್ರೆ, ಕುಡಿದಿದ್ದು ಕೂಡ ಉಲ್ಟಾ ಆಗ್ತದ,’ ಎಂದು ಉಳ್ಳಾಗಡ್ಡಿಯು ಸಾಹೇಬರಿಗೆ ಹೊಟೇಲಿನಲ್ಲಿಯೆ ಉಣ್ಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದನು. ಸಾಹೇಬರು ತಮ್ಮ ಅಣ್ಣ-ತಮ್ಮರ ವಿಷಯವನ್ನು ಅವರ ಮುಂದೆ ಕಣ್ಣೀರು ತಂದು ಅರುಹಲು ಅವರಿಬ್ಬರೂ ಕೂಡ ಜೋರಾಗಿ ಅಳುತ್ತ ತಾವು ಕೂಡ ಅಣ್ಣ-ತಮ್ಮರ ಕಾಟದಿಂದಾಗಿಯೆ ಇಂತಹ ಬಿಕನಾಶಿ ನೌಕರಿಗೆ ಬಂದಿರುವುದಾಗಿ, ಬೇರೆ ಯಾವುದೂ ಸಿಗುವುದಿಲ್ಲವಾದ್ದರಿಂದ ಇದಕ್ಕೆ ಅಂಟಿಕೊಂಡಿರುವುದಾಗಿ, ಸಾಹೇಬರು ಹೊಡೆಯುವ ಪರ್ಸೆಂಟೇಜ್‌ನಲ್ಲಿ ತಮಗೂ ಸ್ವಲ್ಪ ಸಿಂಪಡಿಸಬೇಕೆಂದೂ ಎಲ್ಲರೆದುರು ಕಾಲು ಮುಗಿದು ಕೇಳಿಕೊಳ್ಳಲು ತುಂಬಿದ ಹೃದಯ ಹಗುರಾದ ಖುಶಿಯಲ್ಲಿದ್ದ ಸಾಹೇಬರು ’ಏ, ಉಳ್ಳಾಗಡ್ಡಿ ಆತೊ ಮಾರಾಯ, ನೀನು ನನ್ನ ತಮ್ಮ ಇದ್ದಂಗ,’ ಎಂದು ರೊಟ್ಟಿ ಮುರಿದು ಬಾಯಿಗಿಟ್ಟುಕೊಂಡರು. ಉಳ್ಳಾಗಡ್ಡಿಗೂ ಒಂದು ತುತ್ತು ತಿನ್ನಿಸಿದರು. ಸಾಹೇಬರ ಜೊತೆ ಇಷ್ಟೊಂದು ಸಲುಗೆ ಬೆಳೆಸಿದ ಉಳ್ಳಾಗಡ್ಡಿ ಆಗಿಂದಾಗ ಅವನಿಗೆ ಹೊಳೆದ ವಿಚಾರವೊಂದನ್ನು ಸಲಹಾ ರೂಪದಲ್ಲಿ ಅವರ ಮುಂದೆ ಇಟ್ಟನು. “ಸಾಹೇಬ್ರ, ನಾ ಹೀಂಗ ಹೇಳಲಿಕ್ಕೆ ಹತ್ತೀನಿ ಅಂತ ತಪ್ಪ ತಿಳೀಬ್ಯಾಡ್ರಿ. ಹುಟ್ಟಿದೂರು ಯಾವಾಗ್ಲೂ ಮರೀಬಾರ್‍ದು. ನಿಮ್ಮ ಅಣ್ಣ-ತಮ್ಮರು ಹೆಂಗರ ಇರವೊಲ್ರು. ಆದರ ತಂದಿ-ತಾಯಿ ನೆನಪ ಕಡೀತನಕ ಇರಬೇಕು. ಅದಕ್ಕ ಒಂದ ಕೆಲಸ ಮಾಡ್ರಿ. ನಿಮ್ಮ ಊರ ಸಾಲಿಯೊಳಗ ಮ್ಯಾಟ್ರಿಕ್‌ಗೆ ಯಾರು ಫಸ್ಟ್, ಸೆಕೆಂಡ್ ಬರ್‍ತಾರೊ ಅವರಿಗೆ ಇಂತಿಷ್ಟು ರೊಕ್ಕ ಅಂತ ನಿಮ್ಮ ಅಪ್ಪ, ಅವ್ವನ ಹೆಸರಲೆ ಬಹುಮಾನ ಇಡ್ರಿ. ನೀವೂ ವರ್ಷಕ್ಕೊಮ್ಮೆ ಊರಿಗೆ ಹೋದಾಂಗ ಆಗ್ತದ. ಮಂದಿನೂ ನಿಮ್ಮನ್ನ ಹೊಗಳ್ತಾರ. ನೀವು ಕಲಿತ ಹಾಸ್ಟೆಲ್‌ನ್ಯಾಗೂ ಹಂಗ ಮಾಡಬಹುದು.”

“ಅಲೆಲೆಲೆ ಉಳ್ಳಾಗಡ್ಡಿ, ಹೌದಲ್ಲೊ, ಇಷ್ಟ ದಿನಾ ನನಗ ಈ ವಿಚಾರ ಹೊಳಿಲಿಲ್ಲಲ್ಲೊ. ನಿಂದೂ ಭಾರಿ ತಲಿ ಬಿಡಪಾ. ನಮ್ಮ ಹಾಸ್ಟೇಲ್‌ದಾಗ, ಅದರಾಗೂ ನನ್ನ ಕೈ ಕೆಳಗ ಕೆಲಸ ಮಾಡಿದ್ದು ಸಾರ್ಥಕ ಆತು ನೋಡು. ಹೀಂಗs ಮಾಡೋಣು. ನೀ ಹೇಳಿದಂತ ಹುಡುಗರಿಗೆ ನಮ್ಮ ಅಪ್ಪ-ಅವ್ವನ ಹೆಸರಿಲೆ ಬಹುಮಾನ ಕೊಡೋಣು. ಒಂದು ದೊಡ್ಡ ಫಂಕ್ಸ್‌ನ್ ಮಾಡಿ ಸುರು ಮಾಡೋಣಂತ. ಆ ಕಾರ್ಯಕ್ರಮಕ್ಕ ನೀನs ಮುಖ್ಯ ಅತಿಥಿ. ಇಲ್ಲಿಂದ ಎಲ್ಲ್ಯಾರೂ ಕೂಡೇ ಹೋಗೋಣು. ಏನಂತಿ? ಏನಂತೀರಿ ಮುಖ್ಯ ಅತಿಥಿಗಳೆ?” ಎಂದು ದೊಡ್ಡ ದನಿಯಲ್ಲಿ ಕಲಕೇರಿ ಸಾಹೇಬರು ಉಳ್ಳಾಗಡ್ಡಿಗೆ ಕೈ ಮುಗಿಯಲು ಸುತ್ತಲೂ ಕುಳಿತು ಕುಡಿಯುತ್ತಿದ್ದ ಮಂದಿ ಇವರನ್ನೆ ಕ್ಷಣ ಹೊತ್ತು ನೋಡಿದರು. ಸಾಹೇಬರ ಎದುರು ಕುಳಿತು ಕುಡಿದಿದ್ದೆ ತನ್ನ ಜೀವಮಾನದ ಸಾಧನೆ ಎಂದು ಇದುವರೆಗೆ ನಂಬಿಕೊಂಡಿದ್ದ ಉಳ್ಳಾಗಡ್ಡಿಯು ಈಗ ಏಕಾಏಕಿ ಒದಗಿಬಂದ ಮತ್ತೊಂದು ಗೌರವಕ್ಕೆ ಸಂಪೂರ್ಣ ನಾಚಿ ನೀರಾದನು. ಲಜ್ಜೆ, ಹೆಮ್ಮೆ ಅವನ ಮೈಯ ಕಣ ಕಣದಲ್ಲಿಯೂ ಕುಣಿದು ’ಸಾಹೇಬ್ರ, ನಾನ್ಯಾಕ್ರಿ, ಬ್ಯಾರೆ ಯಾರಾದ್ರೂ ದೊಡ್ಡವರನ್ನ ನೋಡ್ರಿ,’ ಎಂದು ಅಧ ಅನುಮಾನ, ಅರ್ಧ ಖುಶಿಯಿಂದ ಹೇಳಲು ಸಾಹೇಬರು ’ನೀನೂ ದೊಡ್ಡಾಂವs. ಸಣ್ಣಾಂವ ಅಂತ ತಿಳ್ಕೊಂಡಿಯೇನು? ಗ್ವಾಡಿ ಕಟ್ಟಬೇಕಾದ್ರ ದೊಡ್ಡ ಕಲ್ಲು ಬೇಕಾಗ್ತಾವ, ಸಣ್ಣ ಕಲ್ಲೂ ಬೇಕಾಗ್ತವ. ನೀನು ಸುಮ್ನಿರು. ಈಗ ಊಟ ಮಾಡು,’ ಎಂದು ಊಟದತ್ತ ಗಮನಹರಿಸಿದ್ದರು.

* * *

ಸ್ವತಃ ದೇವರೆ ಇಂಥ ಸಾಹೇಬರ ರೂಪದಲ್ಲಿ ಬಂದಿರಬಹುದೆಂದು ಅಟೆಂಡರ್ ಉಳ್ಳಾಗಡ್ಡಿಯು ಅಂದಿನಿಂದ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡತೊಡಗಿದನು. ಹಾಸ್ಟೇಲ್‌ದಲ್ಲಿ ಮಾಡುವ ದುಪ್ಪಟ್ಟು ಕೆಲಸವನ್ನು ಅವರ ಮನೆಯಲ್ಲಿ ಮಾಡತೊಡಗಿದನು. ಕಲಕೇರಿಯವರ ಕಂಪೌಂಡ್ ಈಗ ಕಂಗೊಳಿಸತೊಡಗಿತು. ಉಳ್ಳಾಗಡ್ಡಿ ಹೊಸ ಹೊಸ ಶೋ ಗಿಡ ಹಚ್ಚುವನು. ಕುಂಡಗಳಿಗೆ ನೀರು ಹಣಿಸುವನು. ಗಿರಣಿಗೆ ಹೋಗಿ ಹಿಟ್ಟು ಬೀಸಿಕೊಂಡು ಬರುವನು. ಸಾಹೇಬರು ಮತ್ತು ಹೆಂಡತಿ ಹೊರಗೆ ಹೋದರೆ ಅವರ ಮನೆ ಕಾಯುವನು. ಒಮ್ಮೊಮ್ಮೆ ಬೇಸರವಾದಾಗ ಅಮೇರಿಕೆಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಸಾಹೇಬರ ಮಗ ನಿಜಲಿಂಗಪ್ಪ ಅಲ್ಲಿಂದ ಕೊಟ್ಟು ಕಳಿಸಿದ ಫೋಟೊ ಅಲ್ಬಮ್ ನೋಡುತ್ತ ಕೂಡ್ರುವನು. ಹಾಳೆಯಂತಿರುವ ಇಲೆಕ್ಟ್ರಾನಿಕ್ ಕಾರ್ಡ್ ಮೇಲೆ ಫೋಟೊಗಳು ಒಂದಾದ ಮೇಲೊಂದರಂತೆ ಮೂಡಿ ಮಾಯವಾಗುತ್ತವೆ. ಸಾಹೇಬರು ಸಣ್ಣವರಾಗಿದ್ದಾಗಿನಿಂದ ಹಿಡಿದು ಇಲ್ಲಿಯವರೆಗಿನ, ಒಂದಕ್ಕಿಂತ ಒಂದು ಚೆಂದ ಇರುವ ಅವರ, ಮನೆಯವರ, ಮಕ್ಕಳ, ಅಪ್ಪ-ಅವ್ವನ, ಹಳ್ಳಿಯ ಮನೆಯ, ಆ ರಸ್ತೆಯ, ಆ ಊರ ಪಂಚಾಯತಿಯ ಫೋಟೊಗಳು ಬಂದು ಹೋಗುತ್ತಿದ್ದವು. ಒಂದು ಫೋಟೊದಲ್ಲಿ ಸಾಹೇಬರು ಉಳ್ಳಾಗಡ್ಡಿಯ ಹೆಗಲ ಮೇಲೆ ಕೈ ಹಾಕಿ ತೆಗಿಸಿಕೊಂಡ ಚಿತ್ರವಿತ್ತು. ಅದರ ಪ್ರತಿಯನ್ನು ಮಾಡಿಸಿಕೊಂಡು ತನ್ನ ಮನೆಯಲ್ಲಿ ತೂಗು ಹಾಕಬೇಕೆಂದು ಉಳ್ಳಾಗಡ್ಡಿ ಯೋಚಿಸುವನು. ಹೇಗಿದ್ದರೂ ಹಳ್ಳಿಗೆ ಗೆಸ್ಟ್ ಆಗಿ ಹೋಗುವದಿದೆಯಲ್ಲ, ಆ ಫೋಟೊವನ್ನೂ ಸೇರಿಸಿ ಕೇಳಿದರಾಯಿತು ಎಂದು ತನ್ನ ಮುಂದೆ ತೇಲಿಬಂದ ಅಮೇರಿಕೆಯ ನಯಾಗಾರ ಜಲಪಾತದ ಸದ್ದಿನಲ್ಲಿ ಸುಮ್ಮನಾದನು. ಹಾಸ್ಟೆಲಿಗೆಂದು ತಂದಿದ್ದ ಅಕ್ಕಿ, ಹಿಟ್ಟುಗಳಲ್ಲಿ ಸ್ವಲ್ಪ ಕದ್ದುಕೊಂಡು ಹೋದರೂ ಕಲಕೇರಿ ಸಾಹೇಬರು ಸುಮ್ಮನಿರುವುದನ್ನು ಕಂಡು ಉಳ್ಳಾಗಡ್ಡಿ ’ದೇವರೆ, ಇಂತಹ ಟೈಮು ಕಡೇತನಕ ಇರಲಿ,’ ಎಂದು ಅವರ ಹೃದಯವಂತಿಕೆಯನ್ನು ತನ್ನ ಹೆಂಡತಿ-ಮಕ್ಕಳ ಎದುರು ಕೊಂಡಾಡುವನು. ಅವರನ್ನೂ ಒಂದು ಸಲ ಸಾಹೇಬರ ಮನೆಗೆ ಕರೆದುಕೊಂಡು ಬಂದು ಮೂಡಿ ಮರೆಯಾಗುವ ಅಮೇರಿಕಾದ ಫೋಟೊಗಳನ್ನು ತೋರಿಸಬೇಕೆಂದು ಮನಸ್ಸು ಮಾಡುವನು. ಹಾಸ್ಟೇಲ್ ಹುಡುಗರನ್ನು ಒಂದು ಸಂಜೆ ಸಾಹೇಬರ ಮನೆಗೆ ಕರೆದುಕೊಂಡು ಬಂದು ಅವರ ಕಣ್ಣುಗಳಲ್ಲಿ ಧನ್ಯತೆಯ ಭಾವ ಮೂಡಿಸಿದ್ದ. ತಮಗೆ ಊಟ ಸಿಕ್ಕರೆ ಸಿಗಲಿ, ಇಲ್ಲದಿದ್ದರೆ ಬಿಡಲಿ ತಾವು ಇಂತಹ ಮನೆ, ಮಾಳಿಗೆ, ಹಿತ್ತಿಲು, ಹೂದೋಟ, ರಂಗೋಲಿ, ಫೋಟೋ ಅಲ್ಬಮ್ ನೋಡಿದ್ದೆ ದೊಡ್ಡ ಪುಣ್ಯವೆಂದು ಆ ಮಕ್ಕಳು ತಮ್ಮ ತಮ್ಮ ಮನೆಗಳಿಗೆ ’ನನ್ನ ಊಟ-ವಸತಿಯ ಬಗ್ಗೆ ಏನು ಕಾಳಜಿ ಮಾಡಬಾರದು. ನಾನಿಲ್ಲಿ ಆರಾಮದಿಂದ ಇದ್ದೇನೆ,’ ಎಂದು ಪತ್ರ ಬರೆದು ಹಾಕಿದ್ದಲ್ಲದೆ ಫೋನು ಮಾಡಿ ಹೇಳಿದ್ದರು. ಇನಸ್ಪೆಕ್ಷನ್‌ಗೆ ದೊಡ್ಡ ಸಾಹೇಬರು ಬಂದಾಗ ಅದನ್ನೆ ಮುತ್ತಿನಂತೆ ಮತ್ತು ಮಾಣಿಕ್ಯದ ದೀಪ್ತಿಯಂತೆ ನುಡಿದು ಶಹಭಾಸ್‌ಗಿರಿ ಪಡೆದಿದ್ದರು.

ಹೀಗೆಯೆ ದಿನಗಳು ಸಾಗಿರುತ್ತಿರಲಾಗಿ ಒಂದು ಮುಂಜಾನೆ ಅಟೆಂಡರ್ ಉಳ್ಳಾಗಡ್ಡಿಯು ದೊಡ್ಡ ಲೋಟದಲ್ಲಿ ಚಹಾ ಕುಡಿಯುತ್ತ ಪೇಪರ್ ಓದುತ್ತಿದ್ದನು. ಯಾರೊ ತನ್ನ ಮುಂದೆ ಬಂದಂತಾಗಿ ತಲೆ ಎತ್ತಿ ನೋಡಲು ಕಲಕೇರಿ ಸಾಹೇಬರ ಆರಡಿ ಎತ್ತರದ ಭವ್ಯ ದಿವ್ಯ ವ್ಯಕ್ತಿತ್ವದ ಪ್ರತಿಮೆ ಕಂಡಂತಾಗಿ, ಗಡಬಡಿಸಿ ಎದ್ದು ’ಬರ್ರಿ ಸಾಯೇಬ್ರ’ ಎಂದು ತೊದಲಿದನು. ಅವರು ಬಂದವರೆ ಅವನ ಕೈಗೆ ಒಂದಷ್ಟು ಕಾರ್ಡುಗಳನ್ನು ಕೊಟ್ಟು ’ಶುಕ್ರವಾರ ದಿನ ನಮ್ಮೂರಿಗೆ ಹೋಗೋಣು. ಎಲ್ಲಾ ತಯಾರಿ ಮಾಡು. ಇವಷ್ಟ ಕಾರ್ಡ್ ಪೋಸ್ಟ್ ಮಾಡು,’ ಎಂದರು. ಹಿಗ್ಗಿ ಹಿರೇಕಾಯಿಯಾದ ಅವನು ಕಾರ್ಡು ತೆರೆದು ನೋಡಿದ. ಸಾಹೇಬರ ಊರಿನಲ್ಲಿ ಸ್ಕಾಲರ್‌ಶಿಪ್ ಹಾಗೂ ಬಹುಮಾನ ವಿತರಣಾ ಸಮಾರಂಭದ ಆಮಂತ್ರಣ ಅದಾಗಿತ್ತು. ಧಾರವಾಡ ವಿಶ್ವವಿದ್ಯಾಲಯದ ಕುಲಪತಿಗಳು ಬಿಜಾಪುರದವರಾಗಿದ್ದರಿಂದ ಅವರನ್ನು ಒತ್ತಾಯ ಮಾಡಿ ಸಾಹೇಬರು ಉದ್ಘಾಟನೆಗೆ ಕರೆದಿದ್ದರು. ಅವರೆ ಸೂಚಿಸಿದ ಇನ್ನೊಂದು ಹೆಸರು ಡಾ.ಆಲೂರು ಅವರದಾಗಿತ್ತು. ಹೀಗಾಗಿ ಉಳ್ಳಾಗಡ್ಡಿಯನ್ನು ಅನಿವಾರ್ಯವಾಗಿ ಕೈ ಬಿಡಬೇಕಾಯಿತು ಎಂದು ಅತ್ಯಂತ ನೋವಿನಲ್ಲಿ ಸಾಹೇಬರು ಹೇಳಿದಾಗ ಉಳ್ಳಾಗಡ್ಡಿಗೂ ಅವರ ಮಾತು ಖರೆ ಇರಬೇಕು ಅನಿಸಿತು. ’ನೀನೂ ಆವತ್ತು ನಾ ಒಲ್ಲೆ ಅಂದೆದ್ದಲ್ಲೊ. ಅದಕ್ಕ ಬ್ಯಾಡ ಬಿಡು ಅನಿಸ್ತು. ಬೇಕಾದ್ರ ಮುಂದ ಯಾವಾಗಾದ್ರೂ ಈ ಹಾಸ್ಟೇಲದಾಗ ಒಂದು ಸಣ್ಣ ಫಂಕ್ಸ್‌ನ್ ಇಟ್ಟುಕೊಂಡರಾಯ್ತು. ನೀ ಏನ ಬ್ಯಾಸರ ಮಾಡ್ಕೋಬ್ಯಾಡ,’ ಎಂದು ಸಾಹೇಬರು ಮುಂದಿನ ಕೆಲಸ ಕಾರ್ಯಗಳಿಗೆ ಅನುವಾದರು. ಉಳ್ಳಾಗಡ್ಡಿ ಕುಡಿಯುತ್ತಿದ್ದ ಚಹಾದಲ್ಲಿ ಅವನಿಗರಿವಿಲ್ಲದಂತೆ ಬಿದ್ದ ಕಣ್ಣೀರಿನ ಹನಿ ಚಹಾವನ್ನು ಮತ್ತಷ್ಟು ಆರಿಸಿತು.

* * *

ಎಂದಾದರೊಂದು ದಿನ ತಾನು ಗೆಸ್ಟ್ ಆಗೇ ಆಗುತ್ತೇನೆಂದು ಇನ್ನೂ ಆಸೆ ಇಟ್ಟುಕೊಂಡಿದ್ದ ಉಳ್ಳಾಗಡ್ಡಿಯು ಯಾವಾಗ ಹಾಸ್ಟೇಲಿನ ಭೀಕರ ಚಿತ್ರಣ ಬಯಲಿಗೆ ಬಂದಿತೊ ಆಗ ಅವನ ಅದಮ್ಯ ಆಸೆ ಕಮರಿ ಹೋಯಿತು. ಕಲಕೇರಿ ಸಾಹೇಬರಿಗೆ ಉಗಿದು ಬರೆದಿದ್ದ ಪತ್ರಿಕೆಗಳ ವಿಷಯದ ಕಡೆಗೆ ಅವನ ಗಮನವಿರಲಿಲ್ಲ. ಈ ಕೇಸಿನಲ್ಲಿ ಸಾಹೇಬರಿಗಾಗಲಿ, ತನಗಾಗಲಿ, ಅಡುಗೆಭಟ್ಟನಿಗಾಗಲಿ ಅಥವಾ ಇನ್ನಿತರ ಸಂಬಂಧಪಟ್ಟ ಮಂದಿಗಾಗಲಿ ಶಿಕ್ಷೆ ಆಗುವ ಬಗ್ಗೆ ತಲೆ ಕೆಡಿಸಿಕೊಳ್ಳದ ಅವನು ತನ್ನ ಕತೆ ಇನ್ನು ಮುಗಿದಂತೆಯೆ, ಗೆಸ್ಟ್ ಆಗುವುದು ಅಸಾಧ್ಯ ಎಂದು ಕುಗ್ಗಿ ಹೋದನು. ಇತ್ತ ಪತ್ರಿಕೆ-ಟಿ.ವಿ.ಗಳಲ್ಲಿ ಇದು ವರದಿಯಾಗಬೇಕಾದರೆ, ಉಳ್ಳಾಗಡ್ಡಿಯ ಕೈವಾಡ ಇರಬೇಕೇನೊ ಆಲೂರನು ಸೇಡು ತೀರಿಸಿಕೊಂಡನೇನೋ ಎಂದು ಕಲಕೇರಿ ಸಾಹೇಬರು ಚಿಂತಿತರಾದರೂ ಮರುಕ್ಷಣ ದೇವರಿದ್ದಾನೆಂದು ದೇವರ ಖೋಲಿಗೆ ಹೋಗಿ ಕೈ ಮುಗಿದರು. ಮರುದಿನ ಮತ್ತೆ ಪೇಪರನಲ್ಲಿ ಮತ್ತಷ್ಟು ಸುದ್ದಿಯೊಂದಿಗೆ ’ಕಲಕೇರಿ ಅಮಾನತ” ಎಂಬ ಸುದ್ದಿಯ ತುಣುಕನ್ನು ಹೆಂಡತಿ ನೋಡಿಯಾಳೆಂದು ಕತ್ತರಿಸುತ್ತಿದ್ದರು. ’ಅದನ್ನ್ಯಾಕ ಕಟ್ ಮಾಡ್ತೀರಿ ಬಿಡ್ರಿ. ಟಿ.ವಿ.ಯೊಳಗೆ ನಿಮ್ಮ ಕ್ಲೋಸ್ ಆಪ್ ಫೋಟೋ ತೋರಿಸ್ಲಿಕ್ಕೆ ಹತ್ತ್ಯಾರ, ನಾವು ಮಕ ಎತ್ಕೊಂಡು ಅಡ್ಡಾಡಲಾರದಂಗ ಮಾಡ್ತೀರಿ,’ ಎಂದು ಹೆಂಡತಿ ಟಿ.ವಿ.ಯನ್ನ ಆಫ್ ಮಾಡಿ ಅಲ್ಲಿಯೆ ಸೋಫಾ ಮೇಲೆ ಚಾದರ ಹೊದ್ದುಕೊಂಡು ಮಲಗಿದರು.

* * *

ಕಲಕೇರಿಯವರ ಮಗ ಸಾಫ್ಟವೇರ್ ಇಂಜಿನಿಯರ್ ಎಂದು ಅಮೇರಿಕಾಕ್ಕೆ ವಿಮಾನ ಹತ್ತಿದ ದಿನ ಡಾ. ಆಲೂರರ ಮಗ ನಿಖಿಲ್ ಅಮೇರಿಕಾದ ಸಾಫ್ಟ್‌ವೇರ್ ನೌಕರಿಯಿಂದ ಬೇಸತ್ತು ಬೆಂಗಳೂರಿಗೆ ಬಂದಿಳಿದಿದ್ದ. ಇಂಡಿಯಾ ಟ್ರಾನ್ಸಫಾರ್ಮೇಶನ್ ಗ್ರೂಪ್ ಎಂಬ ಸಂಸ್ಥೆಯನ್ನು ತನ್ನ ಸ್ನೇಹಿತರೊಂದಿಗೆ ಹುಟ್ಟು ಹಾಕಿ ಸರಕಾರಿ ಕೆಲಸಗಳನ್ನು ಔಟ್ ಸೋರ್ಸೀಂಗ್ ಮಾಡಿ ಕೊಡುವಲ್ಲಿ ಆಗಲೆ ಹೆಸರು ಗಳಿಸಿದ್ದ. ಸರಕಾರದ ಕೈಯಿಂದ ಆಗದ ಕೆಲಸವನ್ನು ಕೇವಲ ನಾಲ್ಕೈದು ಮಂದಿ ತಂತ್ರಜ್ಞರ ಗುಂಪು ಮಾಡಿ ತೋರಿಸುತ್ತಿತ್ತು. ಪಾವರ್ ಪಾಯಿಂಟ್ ಪ್ರಸೆಂಟೇಶನ್ ಮಾಡಿ ತಮ್ಮ ಸಂಸ್ಥೆ ಹೇಗೆ ಕೆಲಸ ಮಾಡುತ್ತಿದೆ, ಹೇಗೆ ಸರಕಾರದಲ್ಲಿ ಎಷ್ಟೊಂದು ಮಂದಿ ಅನವಶ್ಯಕವಾಗಿ ತುಂಬಿಕೊಂಡಿದ್ದಾರೆಂದು ಬಿಡಿಸಿ ಹೇಳಿದಾಗ ನೌಕರರಿಗೆಂದು ದುಡ್ಡು ಎಷ್ಟೊಂದು ಅನವಶ್ಯಕವಾಗಿ ಪೋಲಾಗುತ್ತಿದೆ ಎಂದು ಸರಕಾರ ಚಿಂತಿಸುತ್ತಿತ್ತು. ದಿನದ ಇಪ್ಪತ್ನಾಲ್ಕು ಗಂಟೆ ಎಚ್ಚರಿರುವ ನಿಖಿಲ್ ಮತ್ತು ಅವರ ಗೆಳೆಯರು ಇಂತಹ ಅವ್ಯವಸ್ಥೆ ಕಂಡ ಕೂಡಲೆ ಅದಕ್ಕೆ ಸೂಕ್ತ ಪರಿಹಾರದ ಯೋಜನೆಯನ್ನು ಸರ್ಕಾರಕ್ಕೆ ಇಮೇಲ್ ಮೂಲಕ ರವಾನಿಸುತ್ತಿದ್ದರು. ಅವರ ಯೋಜನೆಯನ್ನು ಮೆಚ್ಚಿಕೊಂಡು ದೇಶ ವಿದೇಶದ ಮಂದಿ ಫೇಸ್‌ಬುಕ್, ಯುಟ್ಯೂಬ್, ಟ್ವೀಟ್‌ಗಳಲ್ಲಿ ಸಂದೇಶ ರವಾನಿಸುತ್ತಿದ್ದರು.

ಧಾರವಾಡ ಹಳಿಯಾಳ ರಸ್ತೆಯ ಹಾಸ್ಟೆಲಿನ ವಿವರಗಳು ಸರ್ಕಾರದ ಮಾನವನ್ನು ಹರಾಜು ಹಾಕಿದ್ದರಿಂದ ಮತ್ತು ವಿಧಾನಸಭೆಯಲ್ಲಿ ಈ ಕುರಿತು ಗದ್ದಲ ಆಗಿದ್ದರಿಂದ ಸರ್ಕಾರ ತಾಬಡ ತೋಬಡ ನಾಲ್ಕು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿತ್ತು. ಅಲ್ಲಿದ್ದ ಹುಡುಗರನ್ನು ಸದ್ಯದ ಮಟ್ಟಿಗೆ ಸ್ಥಳೀಯ ಹಾಸ್ಟೆಲ್‌ಗಳಲ್ಲಿ ಹರಿದು ಹಂಚಿ ಊಟ-ವಸತಿಗೆ ಏರ್ಪಾಡು ಮಾಡಿತು. ರಾಜ್ಯದ ಎಲ್ಲ ಹಾಸ್ಟೆಲ್‌ಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಒಂದು ಸಮಿತಿ ರಚನೆ ಮಾಡಿ ಅದಕ್ಕೆ ತತ್ವಶಾಸ್ತ್ರದ ಶ್ರೇಷ್ಠ ಉಪನ್ಯಾಸಕರಾಗಿದ್ದ ಡಾ. ಆಲೂರರನ್ನು ಅಧ್ಯಕ್ಷರನ್ನಾಗಿ ಮಾಡಿತು. ದೆವ್ವಿನಂತಹ ಮನೆಯಲ್ಲಿ ಒಬ್ಬನೆ ವಾಸಿಸುತ್ತಿರುವ ಆಲೂರ ಸಹಬಾಳ್ವೆಯ ಪ್ರತೀಕವಾಗಿರುವ ಹಾಸ್ಟೆಲಿನ ಬಗ್ಗೆ ಇನ್ನಾವ ರೀತಿಯ ವರದಿ ಕೊಟ್ಟಾನು ಎಂದು ಕಲಕೇರಿ ಕಿಡಿಕಿಡಿಯಾದ. ಆಲೂರ ಕೊಡುವ ವರದಿಯ ಮೇಲೆ ಕಲಕೇರಿ ಮತ್ತಿತರರ ಭವಿಷ್ಯ ನಿರ್ಧಾರ ಆಗಬೇಕಿತ್ತು. ಹಿಂದೆ ಆಲೂರರನ್ನು ಗೆಸ್ಟ್ ಆಗಿ ಕರೆದುಕೊಂಡ ಹೋದ ಪರಿಚಯದಿಂದಾಗಿ ಅವರು ತನ್ನ ವಿರುದ್ಧ ಏನೂ ಬರೆಯಲಿಕ್ಕಿಲ್ಲವೆಂದು ಕಲಕೇರಿ ಸಾಹೇಬರು ಭಾವಿಸಿದ್ದರಾದರೂ ಹಿಂದಿನ ಘಟನೆಯನ್ನು ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ. ವೈಸ್ ಛಾನ್ಸೆಲರರ ಒತ್ತಾಯದ ಮೇರೆಗೆ ಅವರನ್ನು ಕರೆಯಲು ಹೋಗಿದ್ದ ಕಲಕೇರಿಯನ್ನು ಆಲೂರರು ಮನೆಯ ಒಳಗೆ ಕರೆಯದೆ ಗೇಟಿನಲ್ಲಿ ಮಾತನಾಡಿಸಿ ಸಾಗ ಹಾಕಿದ್ದ ಅಮಾನವೀಯ ಹಾಗೂ ಅವಮಾನದ ಪ್ರಸಂಗವನ್ನು ಕಲಕೇರಿಯವರು ಮರೆತಿರಲಿಲ್ಲ. ಅದಕ್ಕೆ ಪ್ರತೀಕಾರವೆಂಬಂತೆ ಆಲೂರರ ಮನೆಯ ಕಾಂಪೌಂಡಿನ ಹತ್ತಿರ ಒಂದು ಡಬ್ಬಿ ಕಾಂಡೋಮ್‌ಗಳನ್ನು ಉಳ್ಳಾಗಡ್ಡಿಯಿಂದ ರಾತ್ರಿ ಒಗೆಸಿದ್ದರು. ಮಂದಿ ತಮ್ಮನ್ನು ಬಹಳ ಹೊತ್ತಿನ ತನಕ ನೋಡುವುದು, ಮುಸಿಮುಸಿ ನಗುವುದು ಮಾಡುತ್ತಿದ್ದಾರೆಂದರೆ ಈ ಕಂಡೋಮ್‌ಗಳನ್ನು ಅವರು ನೋಡಿರಲೆಬೇಕು ಎಂದು ಆಲೂರರು ವ್ಯಗ್ರರಾಗಿ ಹಗಲು ರಾತ್ರಿ ಹೊರಗೆ ಬಂದು ಮನೆ ಮತ್ತು ಕಂಪೌಂಡ್ ಕಾಯತೊಡಗಿದರು. ಹೆಂಡತಿ ಸತ್ತಿರುವ ಅವರ ಮನೆಯಲ್ಲಿ ಯಾವುದೋ ಹೆಂಗಸೊಂದು ಬಹಳ ದಿನಗಳಿಂದ ಇದ್ದಾಳೆಂದೂ ಅದಕ್ಕಾಗಿಯೆ ಅವರು ಮನೆಯೊಳಗೆ ಯಾರನ್ನೂ ಬಿಟ್ಟುಕೊಡುವದಿಲ್ಲವೆಂದೂ ರಾತ್ರಿ ಮುಲುಕಾಟದ ಶಬ್ದ ಕೇಳುತ್ತಿರತ್ತಿತ್ತೆಂದೂ ಗಾಳಿಸುದ್ದಿಗಳು ಆ ಸರ್ಕಲ್ಲಿನಲ್ಲಿ ಮತ್ತು ವಿನಾಯಕ ಬಾರ್‌ನಲ್ಲಿ ಹರಿದಾಡುತ್ತಿದ್ದವು. ಪಾತ್ರೆ ತಿಕ್ಕುವ ಹೆಂಗಸಿಗೂ ಒಳಗಿರುವ ಹೆಂಗಸಿಗೂ ಒಮ್ಮೆ ದೊಡ್ಡ ಜಗಳವಾಗಿ ಕಂಪೌಂಡ್ ಹೊರಗೆ ಬಂದಿದ್ದರಂತೆ. ಆಲೂರರೆ ಸಮಾಧಾನ ಮಾಡಿ ಒಳಗೆ ಕರೆದೊಯ್ದರಂತೆ. ಇವರಿಗೆ ಪಾಠ ಕಲಿಸಲೆಂದು ಮನೆಗೆಲಸದವಳು ಕೆಲಸಕ್ಕೆ ಚಕ್ಕರ್ ಹೊಡೆದಾಗ ಡಾ.ಆಲೂರರು ಪಾತ್ರೆ ತೊಳೆಯಲು ಹಿಂದೆ ಮುಂದೆ ನೋಡುವುದಿಲ್ಲವಂತೆ ಎನ್ನುವ ಮಾತು ಸುತ್ತಲೂ ಸುಳಿಯುತ್ತಿದ್ದವು.

ಹಾಸ್ಟೆಲ್ ಪ್ರಕರಣ ಇಟ್ಟಕೊಂಡು ಏನೂ ಸಂಬಂಧವಿಲ್ಲದ ತನ್ನ ಜೀವನವನ್ನು ಆಲೂರರು ಹಾಳು ಮಾಡುತ್ತಿದ್ದಾರೆಂದು ಕಲಕೇರಿಯವರು ಹಲ್ಲು ಮಸೆದರೆ, ತನ್ನ ಬಗ್ಗೆ ಗುಪ್ತ ಸುದ್ದಿಗಳು ಹರಡಲು- ರಾಜ್ಯಪಾಲರಿಗೆ ಅನಾಮಧೇಯ ಪತ್ರ ಬರೆದು ಕುಲಪತಿ ಹುದ್ದೆ ತಪ್ಪುವಂತಾಗಲು ಕಲಕೇರಿ ಮತ್ತು ಕಾಣದ ಕೈಗಳೆ ಕಾರಣರಾಗಿದ್ದಾರೆಂದು ಆಲೂರರು ಕಿಡಿ ಕಾರುತ್ತಿದ್ದರು.

* * *

ಸಮಿತಿ ರಚನೆ ಮಾಡಿ ಆರು ತಿಂಗಳು ಕಳೆದರೂ ವರದಿ ತಯಾರಾಗಲಿಲ್ಲ. ಜನ ಶ್ರೀನಗರ ಸರ್ಕಲ್‌ನಲ್ಲಿಯ ಈ ಹಾಸ್ಟೆಲ್‌ನ್ನು ಮರೆತುಬಿಟ್ಟಂತಾಗಿತ್ತು. ಕಲಕೇರಿಯವರು ಧಾರವಾಡ ಸಮೀಪ ಕೊಂಡುಕೊಂಡಿದ್ದ ಹೊಲವನ್ನು ತೋಟ ಮಾಡುವುದರಲ್ಲಿ ನಿರತರಾಗಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ಒಂದು ಮಾತು ಅವರು ಹೇಳಿ ಇಟ್ಟಿದ್ದರಿಂದ ನಿರಾಳವಾಗಿದ್ದರು. ಉಳ್ಳಾಗಡ್ಡಿಯು ಆಗಾಗ ಸಾಹೇಬರ ಮನೆಗೆ ಬಂದು ’ಸಾಹೇಬ್ರ, ನಿಮ್ಮನ್ನ ನಂಬೇನ್ರಿ. ನನ್ನ ನೌಕರಿ ಕಳೀಬ್ಯಾಡ್ರಿ, ಉಳಸ್ರಿ,’ ಎಂದು ಹೇಳಿ ಹೋಗುತ್ತಿದ್ದ. ಆಲೂರರು ವರದಿ ಸಿದ್ಧಪಡಿಸುವ ನೆಪದಲ್ಲಿ ನಾಲ್ಕೈದು ಸಲ ಬೆಂಗಳೂರಿಗೆ ಹೋಗಿ ಬಂದರು. ತಮ್ಮ ಆಪ್ತ ಸ್ವಾಮೀಜಿಯನ್ನು ಭೆಟ್ಟಿಯಾದಾಗ ’ನಾವು ಹೇಳಿದ್ದು ಏನು ಮಾಡಿದಿರಿ” ಎಂದು ಕೇಳಿದರು. ’ತಡೀರಿ ಪೂಜ್ಯರೆ, ನಿಮಗ ಅಗದಿ ಖುಶಿ ಆಗುವಂತ ಸುದ್ದಿ ಹೇಳತೇನಿ,’ ಎಂದು ಮಗನಿಗೆ ಫೋನ್ ಹಚ್ಚಲು ಅವನು ಬಂದು ತಮ್ಮ ಸಂಸ್ಥೆ ಧಾರವಾಡದ ಹಾಸ್ಟೆಲ್ ಇದ್ದ ಜಾಗದಲ್ಲಿ ಮಾಡಲು ಉದ್ದೇಶಿಸಿರುವ ಯೋಜನೆಯನ್ನು ವಿವರಿಸಿದನು. ಇದರಿಂದ ತುಂಬ ಸಂತೃಪ್ತರಾದ ಗುರೂಜಿ ’ಭಗವಂತ, ನಿಮಗೆ ಕಲ್ಯಾಣ ಮಾಡಲ” ಎಂದರು. ’

* * *

ಒಂದು ದಿನ ಇದ್ದಕ್ಕಿದ್ದಂತೆ ಶ್ರೀನಗರ ಸರ್ಕಲ್ಲಿನ ಹಾಳು ಬಿದ್ದ ನಾಲ್ಕು ಎಕರೆ ಜಮೀನಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಾಸ್ಟೆಲ್‌ನ್ನು ಕೆಡವಿ ಅದರ ಜಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಆಧ್ಯಾತ್ಮ ಕೇಂದ್ರವನ್ನು ಸ್ಥಾಪಿಸುವುದು, ಆಧ್ಯಾತ್ಮ ಕೇಂದ್ರದ ವತಿಯಿಂದ ನೂರು ಉತ್ಕೃಷ್ಟ ಮಟ್ಟದ ರೂಮುಗಳನ್ನು ನಿರ್ಮಾಣ ಮಾಡಿ ಅವುಗಳಲ್ಲಿ ಎಲ್ಲ ಜಾತಿಯ ಬಡ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಯ ಅವಕಾಶ ಮಾಡಿಕೊಡುವುದು, ವಿದ್ಯಾರ್ಥಿಗಳು ಯಾವುದೆ ಫೀ ಕೊಡಬೇಕಾಗಿಲ್ಲ, ಬದಲಾಗಿ ಮುಂಜಾನೆ ಹಾಗೂ ಸಂಜೆ ಎರಡು ಹೊತ್ತು ಭಗವಂತನ ಸ್ಮರಣೆಯಲ್ಲಿ ಪಾಲ್ಗೊಂಡು ಭಜನೆ ಹೇಳುವುದು, ದೇವರ ನಾಮವನ್ನು ಕಂಠಪಾಠ ಮಾಡಿ ತಮ್ಮ ಕೆಳಗಿನ ವಿದ್ಯಾರ್ಥಿಗಳಿಗೆ ಹೇಳುತ್ತ ಹೋಗುವುದು, ಆಧ್ಯಾತ್ಮ ಕೇಂದ್ರದ ಸುತ್ತಮುತ್ತಲಿನ ಡಬ್ಬಿ ಅಂಗಡಿಗಳನ್ನು ಕಿತ್ತು ಹಾಕಿ ಸ್ವಚ್ಛ ವಾತಾವರಣ ನಿರ್ಮಾಣ ಮಾಡುವುದು. ಐದು ಕಿ.ಮಿ. ನಷ್ಟು ವ್ಯಾಪ್ತಿಯಲ್ಲಿ ಯಾವುದೇ ಮಾಂಸಾಹಾರ ಅಂಗಡಿ ಇಲ್ಲದಂತೆ ನೋಡಿಕೊಳ್ಳುವುದು, ಶುದ್ಧ ಶಾಖಾಹಾರಿ ಉಪಹಾರ ಮಂದಿರವನ್ನು ಆಧ್ಯಾತ್ಮ ಕೇಂದ್ರವೆ ಸ್ಥಾಪಿಸುವುದು, ವಿಶ್ವವಿದ್ಯಾಲಯ, ಶಾಲೆ-ಕಾಲೇಜುಗಳ ಪ್ರಾಧ್ಯಾಪಕರು-ವಿದ್ಯಾರ್ಥಿಗಳು ರಜೆಯ ದಿನಗಳಲ್ಲಿ ಕೇಂದ್ರಕ್ಕೆ ಬಂದು ಸತ್ಸಂಗದಲ್ಲಿ ಪಾಲ್ಗೊಳ್ಳುವುದು-ಇವೇ ಮುಂತಾದ ಶಿಫಾರಸುಗಳನ್ನು ಡಾ.ಆಲೂರ ಅವರ ನೇತೃತ್ವದ ಸಮಿತಿ ಮಾಡಿದ್ದು ದೊಡ್ಡ ಸುದ್ದಿಯಾಯಿತು.

ನಿಖಿಲ್ ನೇತೃತ್ವದ ಇಂಡಿಯಾ ಟ್ರಾನ್ಸ್‌ಫಾರ್ಮೇಶನ್ ಗ್ರೂಪ್ ಬೆಂಗಳೂರಿನ ಗುರೂಜಿಯವರ ಸಹಯೋಗದಲ್ಲಿ ಆಧ್ಯಾತ್ಮ ಕೇಂದ್ರವನ್ನು ಸ್ಥಾಪಿಸಲು ಮುಂದೆ ಬಂದಿತು. ಇದರಲ್ಲಿ ಲಾಭ-ಹಾನಿಯ ಪ್ರಶ್ನೆಯಿರದೆ ಭಾರತವನ್ನು ಮತ್ತೆ ಮೊದಲಿನಂತೆ ಗುರು-ಶಿಷ್ಯ ಪರಂಪರೆಯಲ್ಲಿ ಹಾಗೂ ಆಧ್ಯಾತ್ಮಿಕ ಹಾದಿಯಲ್ಲಿ ಕೊಂಡೊಯ್ಯಬೇಕೆಂಬ ಕಳಕಳಿ ಮಾತ್ರ ಇರುವುದಾಗಿ ವಿಶೇಷ ಸೂಚನೆಯಲ್ಲಿ ಅದು ಹೇಳಿತು. ಕೆಲವು ಹಿತಾಸಕ್ತಿಗಳು ಡಾ.ಆಲೂರರ ನೇತೃತ್ವದಲ್ಲಿ ದೇಶವನ್ನು ಮತ್ತೆ ಹಿಂದಕ್ಕೆ ಒಯ್ಯುತ್ತಿದ್ದಾರೆಂದು, ಬಡವರ ಅನ್ನವನ್ನು ಕಸಿಯುತ್ತಿದ್ದಾರೆಂದು, ಆಹಾರದ ಹಕ್ಕನ್ನು ನುಂಗುತ್ತಿದ್ದಾರೆಂದು, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಮಠದ ಹೆಸರಲ್ಲಿ ನುಂಗಿ ಹಾಕುತ್ತಿದ್ದಾರೆಂದು ಆರೋಪಿಸಿ ಧಾರವಾಡದ ನಾಲ್ಕೈದು ಮಂದಿ ಸ್ಟುಡೆಂಟ್ ಯೂನಿಯನ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಮಠ, ಭಜನೆ, ಆಧ್ಯಾತ್ಮ ಕೇಂದ್ರ ತಪ್ಪಲ್ಲವೆಂದೂ ಗಾಂಧೀಜಿಯಂತಹ ಮಹಾನ ವ್ಯಕ್ತಿಗಳು ಭಜನೆಗಳಿಂದ ಪ್ರೇರಿತರಾಗಿದ್ದರೆಂದೂ ಮತ್ತೊಂದು ವಿದ್ಯಾರ್ಥಿ ಗುಂಪು ಬೀದಿಗಿಳಿಯಿತು. ಮೊದಲಿದ್ದ ಹಾಸ್ಟೆಲ್‌ನ್ನೆ ಮುಂದುವರೆಸಬೇಕೆಂದು ಆಗ್ರಹಿಸುತ್ತಿದ್ದ ಗುಂಪಿನಲ್ಲಿ ಕಾಣಿಸಿಕೊಂಡ ಉಳ್ಳಾಗಡ್ಡಿ ಮೊದಲಿನ ಹುಡುಗರನ್ನು ಹುಡುಕಿಕೊಂಡು ಬಂದು ಚಳವಳಿಗೆ ಬಲ ತುಂಬಿದನು. ’ಆಲೂರನಿಗೆ ಧಿಕ್ಕಾರ’, ’ಹಸಿದವರ ಅನ್ನ ಕಸಿಯುವ ಆಲೂರನಿಗೆ ಧಿಕ್ಕಾ” ಎಂದು ಕೂಗುತ್ತಿದ್ದ ಗುಂಪು ಅವರ ಮನೆಯ ಮುಂದೆ ಬಂದು ದೊಡ್ಡದಾಗಿ ಕೂಗಲು ಡಾ. ಆಲೂರ ದಢಾರನೆ ಬಾಗಿಲು ಮುಚ್ಚಿಕೊಂಡರು.