Category Archives: ವಿವೇಕಾನಂದ ಟಿ.ಎಸ್.

ಕಾಲವ್ಯಾಧಿ– ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ


-ಡಾ. ಟಿ.ಎಸ್. ವಿವೇಕಾನಂದ


I

“ನಿಮ್ಮ ಸ್ಪೆಷಲಿಸ್ಟ್ ಜಸ್ಟ್ ಏರೋ ಡ್ರಂ ಬಿಟ್ಟಿದ್ದಾರಂತೆ” ಎಂದು ಅದೇತಾನೆ ಒಳಬಂದ ಕಿರಿಯ ವೈದ್ಯೆ ಹೇಳಿದಳು, ಮಾತಿನಲ್ಲಿ ಕಿಡಿಗೇಡಿತನವಿತ್ತು. ಸದಾ ನನ್ನನ್ನು ತಿವಿಯುವ ಹುನ್ನಾರವಿರುತಿತ್ತು. ಅವಳು ಹೊಸದಾಗಿ ತಂದಿದ್ದ ಸಲಕರಣೆಗಳನ್ನು ಜೋಡಿಸಲು ನನ್ನ ಕಾಲಿನ ಕಡೆಯಿದ್ದ ಟೇಬಲ್ ಬಳಿಗೆ ಹೋದಳು. ಅವಳಿಗೆ ನಾನು ‘ಕಡವೆ’ ಎಂದು ಹೆಸರಿಟ್ಟಿದ್ದೆ. ನನ್ನ ಕಣ್ಣುಗಳು ಒಮ್ಮೆ ಅವಳ ಮುಖನೋಡಿ, ಕಿಡಿಗೇಡಿತನವನ್ನು ಓದಿಕೊಂಡು, ಬೇಡವೆಂದರೂ ಅವಳ ಪೀನೋನ್ನತ ಶಿಖರಗಳನ್ನು ಸವರಿಕೊಂಡು ಅವಳ ಉದರಹೊಂಡದತ್ತ ಇಳಿದವು. ಸಾಗುವಾನಿಯ ದಬ್ಬೆಯಲ್ಲಿ ತೋಡಿದಂಥ ಆ ಹೊಂಡದ ಧಗೆಯಲ್ಲಿ ಹೆಚ್ಚು ಹೊತ್ತು ವಿಶ್ರಮಿಸಲಾಗದೆ, ಅಲ್ಲಿಂದ ಮೇಲೆದ್ದು ಮತ್ತೆ ಶಿಖರಾಗ್ರಗಳತ್ತ ಚಲಿಸಲು ಚಡಪಡಿಸುತ್ತಿದ್ದವು. ನಾನು ಅವುಗಳ ಬೇಡಿಕೆಯನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿ ಕಿಟಕಿಯಾಚೆಗೆ ಅಟ್ಟಿದೆ. ಅವಳ ಶ್ವೇತ ಶುಭ್ರ ಏಪ್ರಿನ್ ಟೇಬಲ್ಲಿನ ಮೇಲೆ ನಿರ್ಲಿಪ್ತವಾಗಿ ಮಲಗಿತ್ತು. ಸಂಜೆಯಾದರೂ ದಿಕ್ಕೆಟ್ಟು ಉರಿಯುತ್ತಿದ್ದ ಸೂರ್ಯನ ಧಗೆಯಲ್ಲಿ ಮರಗಿಡಗಳೆಲ್ಲಾ ಉಬ್ಬೆಗೆ ಹಾಕಿದಂತಾಗಿ, ಒಳಗಿನ ಕಾವನ್ನೂ ನೂರ್ಮಡಿಗೊಳಿಸುತ್ತಾ ಸವರಿ ಚೆಲ್ಲಿದ ಕೊಂಬೆರೆಂಬೆಗಳಂತೆ ಮನಸ್ಸು ಅಸ್ತವ್ಯಸ್ತವಾಗಿ ಚೆಲ್ಲಿಕೊಂಡಿತು. ಫ್ಯಾನಿನ ಗಾಳಿ ಗುಪ್ತವಾಗಿ ಧಗೆಯ ಪಕ್ಷ ವಹಿಸಿತ್ತು. ನಾನು ಬೆವರುತ್ತಿದ್ದರೆ ಅವಳು ದೇವಕನ್ನಿಕೆಯಂತೆ ಒಂದಿಷ್ಟೂ ಬೆವರದೆ ನನ್ನ ಧಗೆಯನ್ನು ನೂರ್ಮಡಿಗೊಳಿಸುತ್ತಿದ್ದಳು.

ಹೀಗೇ, ದಿನದಿಂದ ದಿನಕ್ಕೆ ಈ ಧಗೆ ಉಲ್ಭಣಗೊಳ್ಳುತ್ತಾ…. ಮೂವತ್ತನಾಲ್ಕು ದಿನಗಳು ಕಳೆದಿವೆ. ಆರು ತಿಂಗಳ ಹಿಂದಿನಿಂದಲೂ ಈ ನರವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಹೊರ ರೋಗಿಯಾಗಿದ್ದೆ. ಈ ಮೂವತ್ತನಾಲ್ಕು ದಿನಗಳಲ್ಲಿ ಅಂತಿಮ ಹಂತದ ಒಳರೋಗಿಯಾಗಿ ಚಿಕಿತ್ಸೆ ಮುಂದುವರಿಸಿದ್ದಾರೆ. ಹಾಗೆ ನೋಡಿದರೆ ನನಗೆ ಚಿಕಿತ್ಸೆಯನ್ನೂ ನೀಡಲಾಗುತ್ತಿಲ್ಲ. ಏಕೆಂದರೆ ಈವರೆಗೂ ನನ್ನ ಖಾಯಿಲೆ ಏನೆಂಬುದೇ ನಿರ್ಧಾರವಾಗಿಲ್ಲ. ನನ್ನ ಖಾಯಿಲೆಯನ್ನು ನಿರ್ಧರಿಸಲು ಇಂಗ್ಲೆಂಡಿನಿಂದ ಡಾ. ಸ್ಟಾನ್ಲಿ ಬರುತ್ತಿದ್ದಾರೆ. ಇಂದಿನದು ಅಂತಿಮ ಪ್ರಯತ್ನ. ಇವರಿಂದ ಏನಾದರೂ ಆದೀತಾ? ಪ್ರಶ್ನೆ ಚೂರಿಯಂತೆ ತೂರಿ ಬಂದಿತ್ತು. ಹಿಂದೆಯೇ ಉತ್ತರವಾಗಿ ಮತ್ತೊಂದು ಚೂರಿ; ನನ್ನಲ್ಲಿ ಹತಾಷೆ ಇಣುಕುತ್ತಿದ್ದೆಯೇ?

ಕಣ್ಣುಗಳು ಉದ್ದೇಶವೇ ಇಲ್ಲದೆ ಎಲ್ಲೆಲ್ಲೋ ಅಲೆದಾಡುತ್ತಿದ್ದವು. ‘ಡಾ. ಸ್ಟಾನ್ಲಿ ಇಲ್ಲಿಗೆ ಬರ್ತಾ ಇರೋದು ಇದೇ ಮೊದಲಾ?’ ನಾನು ಅವಳನ್ನು ಮಾತನಾಡಿಸಿದ್ದೇ ತಡ ಅವು ರೊಯ್ಯನೆ ಬಂದು ಟೇಬಲ್ಲಿಗೆ ಒತ್ತಿ ನಿಂತಿದ್ದ ಅವಳ ಉದರ ವಿಸ್ತಾರದ ಹೊಂಡದಲ್ಲಿ ಸ್ಥಿರವಾದವು. ನಿಧಾನವಾಗಿ ನನ್ನ ಕಣ್ಣುಗಳತ್ತ ನೋಡಿದ ಅವಳು,

‘ಎರಡು ಮೂರು ಸಾರಿ ಬಂದಿದ್ದಾರಂತೆ …. ನಾನು ನೋಡ್ತಾ ಇರೋದು ಇದೇ ಫಸ್ಟ್ ಟೈಮ್!’ ಅಂದಳು.

ನಾನು ನನ್ನ ಎಡಗಾಲಿನ ಮೇಲಿದ್ದ ಹೊದಿಕೆಯನ್ನು ಪಕ್ಕಕ್ಕೆ ಸರಿಸಿ, ಕುಳಿತುಕೊಳ್ಳುತ್ತಾ…. ‘ಅದೇ ನೀನು ನಿನ್ನ ಫಿಯಾನ್ಸಿ ನೋಡ್ದಂಗೆ…!?’ art-1ಎಂದು ಕೇಳಬೇಕೆನಿಸಿತು. ಇವಳ ಅನೇಕ ವಿವರಗಳನ್ನು ಡ್ಯೂಟಿ ನರ್ಸ್ ಗಳು ನನಗೆ ಒದಗಿಸಿದ್ದರು. ಅಲ್ಲದೆ ನಯಾಪೈಸೆಯ ಕೆಲಸವಿಲ್ಲದೆ ಅಲ್ಲಿ ಕುಳಿತಿದ್ದ ನನಗೆ ಬೇರೆ ಮಾಡುವುದೇನಿದೆ? ಇವಳಿಗೆ ಅಮೆರಿಕಾದ ಸೀಫೋರ್ಡ್ ಆಸ್ಪತ್ರೆಯ ದಂತ ವಿಭಾಗದಲ್ಲಿ ಡಾಲರ್ ಮೌಲ್ಯಕ್ಕಾಗಿ ದುಡಿಯುತ್ತಿದ್ದ ಒಬ್ಬನ ಜೊತೆ ಮದುವೆಯ ನಿಶ್ಚಯವಾಗಿತ್ತು. ಅವನಿಗಂತೂ ‘ಸೈಕೋ ನ್ಯೂರಾಲಜಿಸ್ಟೇ’ ಬೇಕಾಗಿತ್ತಂತೆ. ಯಾವ ದಕ್ಷಿಣೆಯೂ ಇಲ್ಲದೆ ಅಂತಹವಳನ್ನು ಅವನು ಮದುವೆಯಾಗಲು ಸಿದ್ಧನಿದ್ದನಂತೆ. ಅದಕ್ಕಾಗಿಯೇ ಅವಳು ‘ಸೈಕೋ ನ್ಯೂರಾಲಜಿಯಲ್ಲಿ’ ಪೀಜಿ ಮುಗಿಸಿ ಎಕ್ಸ್ಪೀರಿಯನ್ಸ್ ಸರ್ಟಿಫಿಕೇಟ್  ಗಾಗಿ ಇಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಗೇ ಯಾಕೆ ಎಂದರೆ, ಈ ಮಾದರಿಯ ಕೇಸುಗಳ ಸಂಖ್ಯೆ ಅಮೆರಿಕಾದಲ್ಲಿ ಹೆಚ್ಚುತ್ತಿದೆಯಂತೆ. ನಾನು ಇದನ್ನು ಕೇಳದೆ…. ‘ಅವರು ಅಷ್ಟೋಂದು ಫೇಮಸ್ಸಾ? ರಿಯಲಿ ವಾಟ್ ಈಸ್ ಹೀ?’ ಎಂದೆ.

‘ಸೈಕೋ ನ್ಯೂರಾಲಜಿಸ್ಟ್! ಜೀನಿಯಸ್!

‘ಹೋ…. ಅಂಥದ್ದೂ ಒಂದು ಇಂಟರ್ ಡಿಸಿಪ್ಲಿನ್ ಇದೆಯಾ?’

‘ಹಾಂ…. ಅದು ನಿಮ್ಮ ಕಣ್ಣುಗಳ ಥರಾ ಪ್ರಾಬ್ಲಂಗಾಗಿ ಅಲ್ಲಾ! ನಿಮ್ಮ ಲೆಫ್ಟ್ ಸೈಡ್ ಥರಾ ಪ್ರಾಬ್ಲಂಗಾಗಿ!!’ ಮತ್ತದೇ ಕಿಡಿಗೇಡಿ ಮಾತುಗಳು.

ಆ ಹೊತ್ತಿಗಾಗಲೇ ನನ್ನ ಕಣ್ಣುಗಳು ಯಾವುದೋ ಮಾಯದಲ್ಲಿ ಅವಳ ಗಿರಿಶಿಖರಗಳ ನಡುವೆ ಹೂತು ಹೋಗಿದ್ದವು. ನಾನು ಗಲಿಬಿಲಿಗೊಂಡು ತಕ್ಷಣ ಒತ್ತಾಯ ಪೂರ್ವಕವಾಗಿ ಅವುಗಳನ್ನು ಅಲ್ಲಿಂದ ಬಿಡಿಸಿ ಪಕ್ಕಕ್ಕೆಳೆದು ಗೋಡೆಯಮೇಲೆ ಪಾರ್ಕ್ ಮಾಡಲು ಪ್ರಯತ್ನಿಸಿದೆ.

ಈ ಕಣ್ಣುಗಳನ್ನು ಹದ್ದುಬಸ್ತಿನಲ್ಲಿಡಲು ನಾನು ಪಡುತ್ತಿರುವ ಕಷ್ಟವನ್ನು ಗಮನಿಸಿಯೋ ಏನೋ, ಕುಕ್ಕೆಯಲ್ಲಿನ ಹೂವುಗಳು ಕುಲುಕಿದಂತೆ ನಗುತ್ತಿದ್ದಳು.

‘ಇವತ್ತೇನೂ ಮೆಡಿಸಿನ್ನೇ ಕೊಟ್ಟಿಲ್ಲ!?’

‘ಟೀಂ ಇವತ್ತೇನೂ ಬೇಡಾಂತ ಡಿಸೈಡ್ ಮಾಡಿದೆ! ಅದೇನಿದ್ರೂ ನಾಳೆ ಡಾ. ಸ್ಟಾನ್ಲಿ ಬಂದಮೇಲೇ!!’

‘ಅವರು ನನ್ನ ಪ್ರಾಬ್ಲಂನ ಡಯಾಗ್ನೋಸ್ ಮಾಡ್ತಾರಾ?’

‘ಹೇಳೋಕಾಗೋಲ್ಲ! ಇಂಥಾ ಬೇಕಾದಷ್ಟು ಪೆಕ್ಯುಲಿಯರ್ ಪ್ರಾಬ್ಲಂಗಳನ್ನ ಅವರು ಸಾಲ್ವ್ ಮಾಡಿದ್ದಾರೆ ಅಂತಾ ಕೇಳಿದ್ದೀವಿ!!’

‘ನನ್ನ ಪ್ರಾಬ್ಲಂ ಪೆಕ್ಯುಲಿಯರ್ ಅಂತಾ ನಿಮಗೆ ಅನ್ಸುತ್ತಾ?’

‘ಹಾಗೇನಿಲ್ಲ…..’ ಎಂದವಳು ಸ್ವಲ್ಪಹೊತ್ತು ತಡೆದು, ‘ನಿಮ್ಮ ಪ್ರಾಬ್ಲಂ ಪೆಕ್ಯುಲಿಯರ್ರೋ…. ಇಲ್ಲಾ ನೀವೇ ಪೆಕ್ಯುಲಿಯರ್ರೋ.. ಇನ್ನೂ ಅರ್ಥ ಆಗಿಲ್ಲ. ಈವರೆಗೂ ನಮ್ಮ ತಂಡದ ಸೀನಿಯರ್ಸೂ ಇಂಥದ್ದನ್ನು ನೋಡಿಲ್ಲ!! ಅದ್ಸರೀ… ನಾನು ಪರ್ಟಿಕ್ಯುಲರ್ರಾಗಿ ಏನಾದರೂ ಪ್ರಶ್ನೆ ಕೇಳಿದ್ರೆ ನೀವ್ಯಾಕೆ ಉತ್ತರ ಹೇಳೋಲ್ಲ?’ ಅವಳ ಧೋರಣೆಯಲ್ಲಿ ಆಕ್ಷೇಪವಿತ್ತು.

ಪ್ರಶ್ನೆಯಲ್ಲಿದ್ದ ‘ಪರ್ಟಿಕ್ಯುಲರ್” ಎನ್ನುವ ಪದವನ್ನು ಬಿಟ್ಟರೆ ಇಂಥ ನೂರಾರು ಪ್ರಶ್ನೆಗಳಿಗೆ ಈವರೆಗೂ ಉತ್ತರಿಸಿ, ಉತ್ತರಿಸೀ ನನಗೆ ಸಾಕಾಗಿ ಹೋಗಿತ್ತು. ಎಷ್ಟೋಂದು ಪ್ರಶ್ನೆಗಳು ಬಂದುಹೋಗಿವೆ? ಎಂತೆಂಥಾ ಹೇಮಾಹೇಮಿ ವೈದ್ಯರು ಹೇಗೆಲ್ಲಾ ಪ್ರಶ್ನಿಸಿದ್ದಾರೆ? ಎಲ್ಲರಿಗೂ ಸಮರ್ಪಕವಾಗಿಯೇ ಉತ್ತರಿಸಿದ್ದೇನೆ. ಆರಂಭದಲ್ಲಿ ಅಗೋಚರ ರೋಗಕ್ಕೀಡಾದ ಗಂಭೀರ ರೋಗಿಯಂತೆ, ಕೆಲವೊಮ್ಮೆ ಮೌಖಿಕ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯಂತೆ, ಕೆಲವೊಮ್ಮೆ ಗುಪ್ತರೋಗಕ್ಕೀಡಾದ ಲೈಂಗಿಕ ವ್ಯಸನಿಯಂತೆ, ಬರುಬರುತ್ತಾ ಅನುಭವಿಯಂತೆ, ಈಗೀಗ ನಾನು ಉತ್ತರಿಸುವುದನ್ನು ಬಿಟ್ಟುಬಿಟ್ಟಿದ್ದೇನೆ. ಅಂತಹ ಪ್ರಶ್ನೋತ್ತರಗಳಿಂದ ನನ್ನ ಖಾಯಿಲೆ ವಾಸಿಯಾಗುವುದಿರಲಿ, ಅದು ಏನೆಂದೇ ಯಾರಿಗೂ ಅರ್ಥವಾಗದೇ ಇದ್ದಾಗ ನಾನೇನು ಮಾಡಲಿ? ಹಾಗಾಗಿ ನಾನು ಈಗ ಉಪನ್ಯಾಸ ಮಾಡುತ್ತೇನೆ. ಒಂದು ನಿಗೂಢ ರೋಗದ ತಜ್ಞ ಸಂಶೋಧಕನಂತೆ.

ನಾನು ಅವಳತ್ತ ನೋಡದೆ ಸಿಡುಕಿನ ಧ್ವನಿಯಲ್ಲಿ ಕೇಳಿದೆ ‘ಇದು ಸೈಕಾಲಜಿಕಲ್ ಅನ್ಸುತ್ತಾ?!’

‘ಗೊತ್ತಿಲ್ಲ….! ಆದ್ರೆ ಬೇರೆ ಯಾವುದೇ ಫ್ಯಾಕಲ್ಟಿಗಳಲ್ಲಿ ಡಯಾಗ್ನೋಸ್ ಆಗದೆ ಇಲ್ಲಿಗೆ ರೆಫರ್ ಮಾಡಿವೆ ಅಂದ್ರೆ, ಇದ್ರೂ ಇರಬಹುದು!?’

‘ಗೊತ್ತಿಲ್ಲ….! ಇರಬಹುದು…! ಏನಿದು? ಶಕುನ ಹೇಳ್ತಿದ್ದೀರಾ? ಹೋಗ್ಲಿ… ಡಾಕ್ಟರ್ ಆಗಿ ಬೇಡ, ಕಾಮನ್ ಸೆನ್ಸ್ ಇರೋ ಹ್ಯೂಮನ್ ಆಗಿ ಹೇಳಿ!’ ನನ್ನ ಧ್ವನಿಯಲ್ಲಿದ್ದ ಸಿಡುಕು ಮತ್ತೂ ತೀಕ್ಷ್ಣಗೊಂಡಿತ್ತು.

ಅದಕ್ಕವಳು ‘ಕಾಮನ್ ಸೆನ್ಸ್ ಬಳಸಿ ಹೇಳೋದು ಕಲ್ಪನೆ ಆಗುತ್ತೆ, ಸೈನ್ಸ್ ಅದನ್ನು ಅಕ್ಸೆಪ್ಟ್ ಮಾಡೋಲ್ಲ. ಅದಕ್ಕೆ ಫಲಿತಾಂಶಾನಾ ಯಾವಹೊತ್ತಿನಲ್ಲಿ ಬೇಕಾದರೂ ಪ್ರೂವ್ ಮಾಡುವಂಥ ಪರೀಕ್ಷೆ ಬೇಕಾಗುತ್ತೆ. ಪರೀಕ್ಷೆನಾ ಮರು ಪರೀಕ್ಷೆ ಮಾಡೋ ಅಂತ ನಿಖರವಾದ ಮೆಥೆಡಾಲಜಿ ಬೇಕಾಗುತ್ತೆ’ ಅಂದಳು.

‘ನಿಮ್ಮಜ್ಜಿ…. ಎಲೆಕ್ಟ್ರಾನಿಕ್ ಸ್ಕೇಲಿನ ಮೇಲೆ ಕೊಳೆತ ಬದನೆಕಾಯಿ ತೂಗಿದ ಹಾಗೆ!’ ನನ್ನ ಒಳಗಿದ್ದ ಸಿಡುಕು ಸಿಟ್ಟಾಗತೊಡಗಿತ್ತು. ‘ಇಷ್ಟೆಲ್ಲಾ ಹೇಳ್ತೀರಾ… ಆದ್ರೂ ಒಂದು ಪುಟಗೋಸಿ ಪ್ರಾಬ್ಲಂನ ಸಾಲ್ವ್ ಮಾಡೋದಿರಲಿ, ಅದು ಏನಂತ ಕಂಡು ಹಿಡಿಯೋಕೆ ಇಷ್ಟು ದಿನಾ ಬೇಕಾ?’ ಎಡಗೈಯನ್ನು ಒರಟಾಗಿ ಸವರಿಕೊಳ್ಳುತ್ತಾ ಕೇಳಿದೆ. ಹಾಗೆ ಸವರಿಕೊಳ್ಳುವುದರಿಂದ ದೇಹದ ಎಡಭಾಗ ವಿಚಿತ್ರ ಹಿತಕ್ಕೀಡಾಗುತ್ತಿತ್ತು.

ನನ್ನ ಕೇಸ್ ಫೈಲಿನಲ್ಲಿ ಏನೋ ಬರೆಯುತ್ತಿದ್ದ ಅವಳು ತಲೆ ಎತ್ತಿ ತೀಕ್ಷ್ಣವಾಗಿ ನನ್ನತ್ತ ನೋಡಿದಳು. ನನ್ನ ಪದಪ್ರಯೋಗದ ಬಗ್ಗೆ ಅವಳಿಗೆ ಅಸಮಾಧಾನವಿದ್ದಂತಿತ್ತು. ನನ್ನ ಕಣ್ಣುಗಳು ಅವಳ ಮುಖದ ಮೇಲೆನಿಂತು ‘ಸಾರಿ’ ಎನ್ನುವಂತೆ ರೆಪ್ಪೆ ಬಾಗಿಸಿದವು. ಮುಂದಿನ ಅವಳ ರೆಪ್ಪೆಯ ಬಡಿತ ನನ್ನ ‘ಸಾರಿ’ಯನ್ನು ಧಿಕ್ಕರಿಸಿದಂತೆ ಕಂಡಿತು.

ಕ್ಷಣಕಾಲ ಮೌನವಾಗಿ ನನ್ನನ್ನೇ ದಿಟ್ಟಿಸಿ ನೋಡುತ್ತಾ….. ನಿಧಾನವಾಗಿ ರೆಪ್ಪೆ ಮುಚ್ಚಿ ಹೇಳಿದಳು…’ಇದೊಂದು ಎಸ್ಎಂಎಸ್ ಸ್ಟೋರಿ. ಒಂದು ಹಳ್ಳೀಲಿ ಬಹಳಾ ದಿನ ಮಳೇನೇ ಬರಲಿಲ್ವಂತೆ, ಎಲ್ಲಾ ಸೇರಿ ನಾಳೆ ಸಂಜೆ ಮಳೆಗಾಗಿ ಪ್ರಾರ್ಥನೆ ಮಾಡಬೇಕು ಅಂತಾ ನಿರ್ಧಾರ ಮಾಡಿದ್ರಂತೆ, ಮರುದಿನ ಸಂಜೆ ಎಲ್ಲಾ ಒಂದು ಕಡೆ ಸೇರಿದ್ರಂತೆ. ಆಲ್ಲಿ ಒಬ್ಬನೇ ಒಬ್ಬ ಚಿಕ್ಕ ಹುಡುಗ ಕೊಡೆ ಹಿಡಕೊಂಡು ಬಂದಿದ್ನಂತೆ….! ಇದು ಮನುಷ್ಯನಿಗಿರಬೇಕಾದ ನಂಬಿಕೆ!!’ ಎಂದು ಮಾತು ನಿಲ್ಲಿಸಿ. ‘ಏನಂತೀರಿ?’ ಎನ್ನುವಂತೆ ನನ್ನ ಮುಖ ನೋಡಿದಳು.

‘ಇನೋಸೆಂಟ್…. ಪ್ರಾರ್ಥನೆ ಮಾಡೋದ್ರಿಂದ ಮಳೇ ಬರೋಲ್ಲ ಅಂತ ಆ ಹುಡುಗನಿಗೆ ಗೊತ್ತಿಲ್ಲ ಅಷ್ಟೇ!’ ಅಂದೆ.

ಅದಕ್ಕವಳು ‘ಅಲ್ಲಿದ್ದವರಲ್ಲಿ ಪ್ರಾರ್ಥನೆ ಮಾಡಿದರೆ ಮಳೆ ಬಂದೇ ಬರುತ್ತೆ ಅಂತಾ ನಂಬಿಕೆ ಇದ್ದೋನು ಅವನೊಬ್ಬನೇ!! ಅಂತಾನೂ ಹೇಳಬಹುದು ಅಲ್ವಾ ….?!’ ಅಂದಳು.

ಮಳೆಬಂತಾ?! ಕೇಳಿದೆ. ಗೊಂದಲದ ನೋಟವನ್ನು ನನ್ನತ್ತ ಚೆಲ್ಲುತ್ತಾ… ‘ಕಥೇಲಿ ಅದಿಲ್ಲ’ ಅಂದಳು.

”ಕಥೆ ಅದನ್ನ ಹೇಳೋಲ್ಲ? ಅದು ನಂಬಿಕೆ; ಬದುಕುವ ಕಲೆ, ಸೈನ್ಸ್ ಅಲ್ಲ. ಇದನ್ನ ನಂಬಿಕೆ ಅಂತಾ ಗ್ರಹಿಸೋದು ‘ಕಾಮನ್ಸೆನ್ಸ್’. ಅಂದ್ರೆ ನಿಮ್ಮ ಸೈನ್ಸ್ ಕಾಮನ್ಸೆನ್ಸ್ನ ನಂಬದಿದ್ರೂ ‘ನಂಬಿಕೆನಾ’ ನಂಬುತ್ತಾ?!” ಎಂದೆ. ಅವಳು ಗಲಿಬಿಲಿಗೊಂಡಳು, ನನ್ನ ಮಾತುಗಳು ಅವಳಿಗೆ ಅರ್ಥವಾದಂತಿರಲಿಲ್ಲ. ಅವಳಿಗೇ ಏನು; ನನಗೇ ಅರ್ಥವಾಗಿರಲಿಲ್ಲ. ಏಕೆಂದರೆ ಅಂಥದ್ದೇನೋ ಒಂದು ಅಸ್ಪಷ್ಟವಾದ ಭ್ರೂಣ ನನ್ನ ತಲೆಯಲ್ಲಿತ್ತೇ ವಿನಃ, ಅದಕ್ಕಿನ್ನೂ ಆಕಾರ ಮೂಡಿರಲಿಲ್ಲ. ಆ ಮಾತು ಬೇರೆ. ಅವಳು ಬಾಗಿಲಿನ ಹತ್ತಿರವಿದ್ದ ಸ್ಟಾಂಡಿನ ಬಳಿಗೆ ಹೋಗುತ್ತಾ ಇಂಗ್ಲಿಷ್ನಲ್ಲಿ ಏನೋ ಗೊಣಗುತ್ತಿದ್ದಳು ‘ಡಾಕ್ಟರ್ ಇನ್ ಸೈನ್ಸ್ ….’ ‘ಸೆಕ್ಸಸ್ ಫುಲ್ ರೈಟರ್…’ ‘ಆರೋಗೆಂಟ್….ಈಡಿಯಟ್ ….’ಇತ್ಯಾದಿ. ಅಲ್ಲಿಂದ ನನ್ನ ಕಡೆಗೆ ಬರುತ್ತಾ ಜಗಳವಾಡುವವಳಂತೆ ‘ನೀವು ಮಾತಾಡುವುದು ಸರಿ ಇಲ್ಲ? ವಿಜ್ಞಾನವನ್ನು ಹೇಗೆ ಅನುಮಾನಿಸುತ್ತೀರಿ?’ ಅಂದಳು. ಅವಳ ಚಿಕ್ಕಮಕ್ಕಳಂಥ ಜಗಳದ ವರ್ತನೆಗೆ ನನಗೆ ನಿಜಕ್ಕೂ ನಗು ಬಂತು. ಅವಳು ಗೊಣಗುತ್ತಲೇ ನನ್ನ ರೊಟೀನ್ ಚೆಕ್ಅಪ್ಗಳಲ್ಲಿ ನಿರತಳಾಗಿದ್ದಳು.

ಅವಳ ಅಷ್ಟೋಂದು ಸಮೀಪ್ಯ ಎಂದಿಗಿಂತ ಇಂದು ನನ್ನಲ್ಲಿ ವಿಚಿತ್ರ ಉದ್ವೇಗವನ್ನು ಉಂಟುಮಾಡಿತ್ತು. ಅವಳ ಉದರದ ಬೆತ್ತಲೆಗೆ ತೀರಾ ಸಮೀಪವಾಗಿದ್ದ ನನ್ನ ಎಡಗೈ ನೋವಿನ ಯಾವ ಕುರುಹೂ ಇಲ್ಲದಂತಾಗಿ…. ಅಲ್ಲಿಂದ ಸ್ವಲ್ಪಸ್ವಲ್ಪವೇ ಮೇಲೇಳಲು ಚಡಪಡಿಸಹತ್ತಿತು. ಇದರಿಂದಾಗುವ ಶಿಷ್ಠಾಚಾರದ ಉಲ್ಲಂಘನೆಯನ್ನು ಅರಿತ ಬಲಗೈ ತಟ್ಟನೆ ನನ್ನ ದೇಹವನ್ನು ಬಳಸಿ ಬಂದು ಎಡಗೈಯನ್ನು ಅದುಮಿಕೊಂಡಿತು.

ಅವಳು ಚಕಿತಳಾಗಿ ನೋಡುತ್ತಿದ್ದಳು, ನನ್ನ ಈ ಸರ್ಕಸ್ಸು ಅವಳಿಗೆ ಅರ್ಥವಾಯಿತೇ?. ನಾನು ಗಾಬರಿಬಿದ್ದೆ. ಗಾಬರಿಯಲ್ಲೇ ಹೇಳಿದೆ, ‘ನನಗೆ ವಿಜ್ಞಾನದ ಮೂಲ ಆಶಯಗಳ ಬಗ್ಗೆ ಅನುಮಾನ ಇದೆ ಅಂತಾ ನಿಮಗೆ ಅನ್ಸುತ್ತಾ? ನಾನು ಮಾತಾಡ್ತಾ ಇರೋದು ಅದರ ಈಡಿಯಾಟಿಕ್ ಇಂಟರ್ಪ್ರಿಟೇಶನ್ ಮತ್ತು ಇಂಪ್ಲಿಮೆಂಟೇಶನ್ ಬಗ್ಗೆ ಮಾತ್ರ. ನಿಜ ಹೇಳಬೇಕು ಅಂದ್ರೆ…. ಅದೂ ಸರಿ ಅಲ್ಲ! ಮೂರ್ಖರೂ, ಸ್ವಾರ್ಥಿಗಳೂ… ತಲೆಹಿಡುಕರ ಕೈಗೆ ಸಿಕ್ಕಿ ಅದು ಪೊಲ್ಯೂಟ್ ಆಗಿರೋದ್ರ ಬಗ್ಗೆ…. ಜೀವ ಜಗತ್ತಿನ ಬಗ್ಗೆ ಅದಕ್ಕಿರೋ ತಿರಸ್ಕಾರದ ಬಗ್ಗೆ… ಅಂಥ ತಿರಸ್ಕಾರ ಇಲ್ಲಾ ಅಂದ್ರೂ…!! ಜೀವಿಯೊಂದರ ಸಮಗ್ರತೆಯ ಬಗ್ಗೆ ಅದಕ್ಕಿರುವ ದಿವ್ಯ ನಿರ್ಲಕ್ಷ್ಯದ ಬಗ್ಗೆ?!’ ಅಂದೆ. ಅವಳು ಚರ್ಚೆಯ ಮೂಡಿನಿಂದ ಹೊರಬಂದಂತಿತ್ತು. ಅವಳು ನನ್ನ ಮುಖವನ್ನೇ ಬಿಗುವು ಮಿಶ್ರಿತ ಮುನಿಸಿನಿಂದ ನೋಡುತ್ತಾ ನನ್ನ ಬಲಗೈಯನ್ನು ಬಿಡಿಸಿ ಸ್ವಸ್ಥಾನಕ್ಕಿಟ್ಟು, ಬೀಪಿ ಪರೀಕ್ಷೆಗೆ ಎಡತೋಳಿಗೆ ಪಟ್ಟಿಸುತ್ತಲು ಬಂದಳು. ನಾನು ಅದನ್ನು ತಡೆಯುತ್ತಾ  ‘ಈಗ ಬೇಡ ಸ್ವಲ್ಪ ಹೊತ್ತು ಬಿಟ್ಟು ಮಾಡಿ’ ಎಂದೆ. ಕ್ಷಣಕಾಲ ಗೊಂದಲಗೊಂಡ ಅವಳು ‘ಏಕೆ’ ಎನ್ನುವಂತೆ ನನ್ನ ಮುಖ ನೋಡಿದಳು. ನಾನು ಹುಬ್ಬೇರಿಸಿ, ಅವಳಂಥದ್ದೇ ಕಿಡಿಗೇಡಿ ಮುಖಮಾಡಿ, ಪಟಪಟನೆ ಕಣ್ಣುಗಳನ್ನು ಮಿಟುಕಿಸಿದೆ. ನನ್ನ ಕೀಟಲೆಯ ಅರ್ಥ ಹೊಳೆಯುತ್ತಿದ್ದಂತೆ ಎಡಗೈ ಮೇಲೆ ಛಟೀರೆಂದು ಹೊಡೆದು, ನಕ್ಕಳು. ಆ ನಗುವನ್ನು ವರ್ಣಿಸುವುದು ಕಷ್ಟ.

II

ಮುಂಜಾನೆ ಎದ್ದಾಗ ಸೂರ್ಯನ ಹೊಂಬಣ್ಣದ ಕಿರಣಗಳು ಅರೆತೆರೆದಿದ್ದ ಕಿಟಕಿಯಿಂದ ತೂರಿ ನನ್ನೆದುರಿಗಿದ್ದ ಗೋಡೆಯ ಮೇಲೆ ಚೆಲ್ಲಿಕೊಂಡಿದ್ದವು. ನನಗೆ ಆ ಗೋಡೆಗೂ-ಛಾವಣಿಗೂ ನಡುವಿದ್ದ ಬಿರುಕಿನಲ್ಲಿ ಹರಿದಾಡುತ್ತಿದ್ದ ಹುಳುವೊಂದು ಕಾಣುತಿತ್ತು. ಇಡೀ ಕೊಟಡಿಯ ಗೋಡೆಯುದ್ದಕ್ಕೂ ಆ ಬಿರುಕು ಹರಿದಿತ್ತು. ಅದು ಅತ್ತ ಛಾವಣಿಗೆ ಹಾರಿಕೊಳ್ಳಲಾಗದೇ…. ಇತ್ತ ಗೋಡೆಯ ಇಳಿಜಾರಿಗೆ ಜಾರಿಕೊಳ್ಳಲಾಗದೇ ಪರದಾಡುತ್ತಿತ್ತು. ಅದರ ಪರದಾಟದ ಗಾಂಭೀರ್ಯವನ್ನು ನೋಡಿದರೆ ಸಾವು-ಬದುಕಿನ ಹೋರಾಟದಂತೆ ಕಾಣುತ್ತಿತ್ತು. ನೋಡುತ್ತಿದ್ದ ನನಗೆ ಅದರ ಇಡೀ ನಡವಳಿಕೆ ಹಾಸ್ಯಾಸ್ಪದವಾಗಿ ಕಾಣುತ್ತಿತ್ತು. ಏಕೆಂದರೆ ಅಲ್ಲಿಂದ ಕೆಲವೇ ಅಡಿ ಎಡಕ್ಕೆ ಸರಿದರೂ ಅದಕ್ಕೆ ವೆಂಟಿಲೇಟರ್ ಸಿಗುತ್ತಿತ್ತು. ಅಲ್ಲಿಂದಾಚೆಗೆ ತೆರೆದ ಜಗತ್ತು. ಎದ್ದು ಬಚ್ಚಲಿನತ್ತ ನಡೆದೆ. ನಡಿಗೆ ಎಂದಿನಂತೆಯೇ ಇತ್ತು. ಆದರೆ ಯಾತನೆಯ ತೀಕ್ಷ್ಣತೆ ಸ್ವಲ್ಪ ಕಡಿಮೆಯಾದಂತೆ ಅನಿಸುತ್ತಿತ್ತು.

ಈ ಹಿಂದೆಯೂ ಅನೇಕ ಬಾರಿ ಹೀಗೆ ಕಡಿಮೆಯಾದಂತೆ ಅನಿಸಿದ್ದು ನೆನಪಾಯಿತು. ಮುಖ್ಯವಾಗಿ ಚಿಲಿಯಲ್ಲಿದ್ದಾಗ. ಚಿಲಿಯಲ್ಲಾಗಿದ್ದ ಭೂಕಂಪದ ಪಾರಿಸಾರಿಕ ಪರಿಣಾಮಗಳನ್ನು ವರದಿ ಮಾಡಲು ಹೋಗಿದ್ದೆ. ಮನೆ ಬಿಟ್ಟು 10-15 ದಿನಗಳಾಗಿದ್ದವು. ಆಗ ಇದೇ ರೀತಿ ಒಂದು ಮುಂಜಾನೆ ಎದ್ದಾಗ ಆವರೆಗೂ ನನ್ನನ್ನು ಪೀಡೆಯಂತೆ ಕಾಡುತ್ತಿದ್ದ ಹಿಂಸೆ ಹಠಾತ್ತಾಗಿ ಮಾಯವಾದಂತಾಗಿಬಿಟ್ಟಿತ್ತು. ನಾಲ್ಕೈದು ಬಾರಿ ರೂಮಿನಲ್ಲೇ ಸುತ್ತು ಹೊಡೆದು ನೋಡಿದೆ. ಮತ್ತೂ ನಂಬಿಕೆ ಬರದೆ ಹೋಟೆಲಿನ ಕಾರಿಡಾರಿನ ಉದ್ದಕ್ಕೂ ಹುಚ್ಚನಂತೆ ವೇಗವಾಗಿ ಓಡಿ ನೋಡಿದ್ದೆ, ಆ ಖುಷಿಯನ್ನು ತಡೆಯಲಾಗದೆ ತಕ್ಷಣ ರೂಮೀಗೆ ಫೋನ್ ಮಾಡಿ ‘ರೂಮೀ….ಯಸ್ ಐಆಮ್  ರಿಲೀಸ್ಡ್’ ಎಂದು ಕೂಗಿದಂತೆ ಹೇಳಿದ್ದೆ. ಈ ನನ್ನ ಸಮಸ್ಯೆಯ ಬಗ್ಗೆ ಈವರೆಗೂ ಯಾವ ತಿಳುವಳಿಕೆಯೂ ಇಲ್ಲದ ಅವಳು, ‘ವಾಟ್ ರಿಲೀಸ್ಡ್….? ಫ್ರಂ ಹೂಂಮ್….?’ ಎಂದು ಅಷ್ಟೇ ಅತಂಕದಿಂದ ಕೇಳಿದಾಗ, ತಟ್ಟನೆ ಹಲ್ಲು ಕಚ್ಚಿಕೊಂಡು, ‘ಫ್ರಂ ದಿಸ್ ಬ್ಲಡಿ ಅಸೈನ್ಮೆಂಟ್’ ಎಂದು ಹೇಳಿ ಜಾರಿಕೊಂಡಿದ್ದೆ. ಅವಳಿಂದಲೇ ಅಲ್ಲ ಈ ಜಗತ್ತಿನಲ್ಲಿ ನನ್ನನ್ನು ಬಲ್ಲ ಎಲ್ಲರಿಂದ ನಾನು ಇದನ್ನು ಮರೆಮಾಚಿದ್ದೆ. ಹೆಚ್ಚೂ ಕಡಿಮೆ ಕಳೆದ ಒಂದು ವರ್ಷದಿಂದ ನನ್ನೊಂದಿಗೆ ಪ್ರೇಮದ ಗಣಿಗಾರಿಕೆಗಿಳಿದು ತೋಡಿ ತೋಡಿ, ಅಗೆದು ಬಗೆದು ಬಾಚಿತಬ್ಬಿ ಅದನ್ನೇ ಉಂಡುಟ್ಟು ಬದುಕುತ್ತಿದ್ದ ಅವಳಿಗೆ ಇದನ್ನು ಹೇಳುವುದು ನನ್ನಿಂದಾಗಿರಲಿಲ್ಲ.

ಬೆಳಕು ವಿಸ್ತರಿಸಿಕೊಳ್ಳುತ್ತಿತ್ತು. ಅವರು ಕಾಫಿ ತರುವುದಕ್ಕೆ ಮೊದಲು ನಾನೇ ಕ್ಯಾಂಟೀನಿಗೆ ಹೋಗಲು ನಿರ್ಧರಿಸಿ ಹೊರಟೆ. ಡಾ. ಸ್ಟಾನ್ಲಿ ಸ್ವಲ್ಪಹೊತ್ತಿನಲ್ಲಿ ಬರುವ ನಿರೀಕ್ಷೆ ಇದ್ದರೂ ನನ್ನ ರಿಲೀಫನ್ನು ಪರೀಕ್ಷಿಸುವ ಹುಮ್ಮಸ್ಸಿನಲ್ಲಿದ್ದೆ. ಅವಳೂ ಹಾಗೇ, ನೇಣಿಗಂಬಂದೆದುರು ನಿಂತು ಹುಮ್ಮಸ್ಸಿನಿಂದ ಚೌಕಾಶಿ ಮಾಡುತ್ತಿದ್ದಳು. ಕೇಡಿ ಹೆಂಗಸು. ಗಾಢವಾಗಿ ಪ್ರೀತಿಸುತ್ತಿದ್ದಳು, ಅಪಾರವಾಗಿ ಕಾಡುತ್ತಿದ್ದಳು. ಎಂಥ ಘನಘೋರ ಜಗಳವಾಡಿದ್ದರೂ ಕಾಫಿಯೊಂದಿಗೆ ನನ್ನನ್ನು ಎಬ್ಬಿಸುತ್ತಿದ್ದಳು. ನಾನು ಅವಳನ್ನು ಘಾಸಿ ಗೊಳಿಸುತ್ತಿದ್ದುದೇ ಈ ಹೊತ್ತಿನಲ್ಲಿ. ಒಮ್ಮೊಮ್ಮೆ ಅವಳ ಕಾಫಿ ಕರೆಗೆ ಓಗೊಡುತ್ತಿರಲಿಲ್ಲ, ಕೆಲವೊಮ್ಮೆ ಇಟ್ಟ ಕಾಫಿಯನ್ನು ಕುಡಿಯುತ್ತಿರಲಿಲ್ಲ. ಮತ್ತೊಮ್ಮೆ ಕುಡಿದ ಕಾಫಿಗೊಂದು ಹೆಸರಿಟ್ಟು, ಮತ್ತೆ ಅವಳು ಬೆತ್ತಲಾಗಿ ಸಂತೈಸುವವರೆಗೂ ಗೋಳು ಹೊಯ್ದುಕೊಳ್ಳುತ್ತಿದ್ದೆ. ವಿಜ್ಞಾನ ಮತ್ತು ಕಾಫಿ ಅವಳ ಅಬ್ಸೆಶನ್ ಗಳಾಗಿದ್ದವು. ಈಗ ಅವುಗಳೊಂದಿಗೆ ನಾನೂ ಸೇರ್ಪಡೆಯಾಗಿದ್ದೆ. ಹಾಗೆಂದು ಅವಳೇ ಬರೆದುಕೊಂಡಿದ್ದಳು.

ಅವಳ ಅಮ್ಮ ಐರ್ಲೆಂಡಿನವಳು, ಅಪ್ಪ ಭಾರತೀಯ. ಹುಟ್ಟು ಅಪ್ಪನಂತಿದ್ದರೂ ಗುಣಾವಗುಣಗಳೆಲ್ಲಾ ಶುದ್ಧ ಯೂರೋಪಿಯನ್. ಸ್ವಲ್ಪ ಮುಂಚೆ ಹುಟ್ಟಿದ್ದರೆ ಹಿರೋಶಿಮಾ ಮೇಲೆ ಬಾಂಬು ಹಾಕುವ ಗುಂಪಿನಲ್ಲಿ ಇವಳಿರುತ್ತಿದ್ದಳು. ಅಷ್ಟರ ಮಟ್ಟಿಗೆ ಪ್ರಭುತ್ವ ಪೋಷಕ ವಿಜ್ಞಾನದ ಪ್ರತಿಪಾದಕಿ. ವಿಜ್ಞಾನವನ್ನು ಸಿಂಹಾಸನದ ಮೇಲಿಟ್ಟು, ಜಗತ್ತು ಅದರ ಆದೇಶದೊಂದಿಗೆ ನಡೆಯಬೇಕೆಂದು ವಾದಿಸುತ್ತಿದ್ದವಳು. ಅವಳು ನನ್ನ ವಿಭಾಗಕ್ಕೆ ಬಂದ ನಲವತ್ತೇ ದಿನದಲ್ಲಿ ನಾನಾಗಿಯೇ ರಾಜೀನಾಮೆ ಕೊಡುವಂತೆ ಮಾಡಿದ್ದಳು. ‘ಬದುಕೇ ಒಂದು ವಿಜ್ಞಾನ, ವಿಜ್ಞಾನವಿರುವುದು ಬದುಕಿಗಾಗಿಯೇ ವಿನಹ ಬದುಕು ವಿಜ್ಞಾನಕ್ಕಾಗಿ ಅಲ್ಲ’ ಎಂಬುದು ನನ್ನ ವಾದ. ಆಧುನಿಕ ವಿಜ್ಞಾನ, ಜೀವ ಜಗತ್ತಿನ ಮೇಲೆ ಎಸೆಗಿದ್ದ ಘೋರಪಾತಕಗಳನ್ನೆಲ್ಲಾ ತೆರೆದ ಕಣ್ಣಿನಿಂದ ಕಂಡವನು. ಆವರೆಗೂ ನನ್ನ ಸಿದ್ಧಾಂತಗಳನ್ನು ಒಪ್ಪಿದ್ದ ಚಾನಲ್ನ ಮ್ಯಾನೇಜ್ಮೆಂಟ್ ಜಾಗತೀಕರಣದ ಗಾಳಿಯೊಂದಿಗೆ ಬೆರೆತು ನಿಧಾನವಾಗಿ ಇವಳ ವಾದದತ್ತ ಜರಿಯತೊಡಗಿತ್ತು….., ನಲವತ್ತು ದಿನದಲ್ಲಿ ಇವಳ ಆರ್ಭಟ ತಾರಕಕ್ಕೇರಿತ್ತು.

ಅಷ್ಟು ಹೊತ್ತಿಗೆ ಇವಳ ಮೂರ್ನಾಲ್ಕು ಸ್ಟೋರಿಗಳನ್ನು ಅವಳೆದುರೇ ಚಿಂದಿಮಾಡಿ ಬಿಸಾಕಿದ್ದೆ. ಇವಳು ವಿಜ್ಞಾನನದ ಬಗ್ಗೆ ಇರಲಿ ಜೀವಿಗಳಿಗೆ ಸಂಬಂಧಿಸಿದ ಯಾವುದರ ಬಗ್ಗೆಯೂ ಸ್ಟೋರಿಮಾಡಲು ಅನರ್ಹಳೆಂದು ಎಡಿಟೋರಿಯಲ್ ಮೀಟಿಂಗಿನಲ್ಲಿ ಆಧಾರಸಹಿತವಾಗಿ ವಾದಿಸಿದ್ದೆ. ಅವಳ ಪ್ರತಿವಾದವೂ ಹಾಗೇ ಇತ್ತು. ಯಾರನ್ನಾದರೂ ಸರಿ ದಿಕ್ಕುಗೆಡಿಸುವಂತಿತ್ತು. ಅವಳ ವಾದದ ನಡುವೆ ಹಾರ್ಡೆನ್, ಯೂಂಕ್, ಥಾಮಸ್, ಹಾಬ್ಸ್ ಗಳೆಲ್ಲಾ ಬಂದು ಹೋದರು. ಕಾರ್ಲ್ ಮಾರ್ಕ್ಸ್, ಆಗಸ್ಟ್ ಕಾಮ್ಟೆ, ಗಾಂಧಿಗೂ ಅಲ್ಲಿ ಜಾಗವಿತ್ತು. ದಿಕ್ಕೆಟ್ಟ ಮೇನೇಜ್ಮೆಂಟ್ ಅವಳ ಸ್ಟೋರಿಗಳನ್ನು ನಾನು ಎಡಿಟ್ ಮಾಡದೆ ಏರ್ ಮಾಡಬೇಕೆಂದು ಅಂತಿಮ ತೀರ್ಪು ನೀಡಿತು. ಅದಕ್ಕೆ ಸಿದ್ಧನಿಲ್ಲದ ನಾನು ರಾಜೀನಾಮೆ ಬಿಸಾಕಿ ಹೊರಬಂದಿದ್ದೆ. ಅವಳ ವಾದ, ಇವರ ತೀರ್ಮಾನ ಎರಡೂ ಸರಿಯಾಗಿಯೇ ಇದ್ದವು, ಜೀವಸೆಲೆಯ ಕೊರತೆಯೊಂದನ್ನು ಬಿಟ್ಟು.

ಮರುದಿನ ಇಳಿಸಂಜೆಯ ಹೊತ್ತಿನಲ್ಲಿ ನನ್ನ ಬಟ್ಟೆಗಳನ್ನು ಪ್ಯಾಕ್ ಮಾಡುತ್ತಿದ್ದೆ. ಊರಿಗೆ ಹೋಗಿ ಶತಮಾನಗಳೇ ಕಳೆದಂತೆ ಅನಿಸುತ್ತಿತ್ತು. ಊರಾಚೆಯ ಹೊಂಗೇ ತೋಪಿನ ನೆನಪಾಗುತ್ತಿತ್ತು. ಅಮ್ಮ ನೋಡಿದ್ದ ಹೆಣ್ಣಿನ ಬಗ್ಗೆ ನನಗೆ ತಕರಾರಿದ್ದರೂ ಸಹ! ಯಾಕೋ ಅಲ್ಲಿಗೆ ಹೋಗಬೇಕು ಅನಿಸುತ್ತಿತ್ತು. abstract-painting-sexಅಷ್ಟರಲ್ಲಿ ಮನೆಯ ಬಾಗಿಲು ತಟ್ಟಿದ ಸದ್ದು. ಹೋಗಿ ನೋಡಿದರೆ ಬಾಗಿಲಲ್ಲಿ ಪೂರಾ ಲಗೇಜಿನೊಂದಿಗೆ ಅವಳೇ ನಿಂತಿದ್ದಾಳೆ. ಇರುವ ಹಲ್ಲುಗಳನ್ನೆಲ್ಲಾ ಹೊರಚೆಲ್ಲಿ; ಕೈಯನ್ನು ಮುಂದೆ ಚಾಚಿ, ನಾಟಕೀಯವಾಗಿ  ‘ಹಾಯ್…. ಆಮ್ ನಾನ್ಸಿರೂಮೀ, ಮೇ ಐ ಕಮಿನ್’ ಎಂದವಳು ನನ್ನ ಪ್ರತಿಕ್ರಿಯೆಗೂ ಕಾಯದೆ ಒಳ ಬಂದಳು. ಬಂದವಳು ಅಲ್ಲೇ ಬೇರೂರಿಬಿಟ್ಟಳು. ಆರಂಭದ ದಿನಗಳಲ್ಲಿ ಸುಮ್ಮನೆ ಮಾತನಾಡುತ್ತಾ….ಅದೂ ಇದೂ ಹೇಳುತ್ತಾ…. ಮನೆಯ ಎಲ್ಲ ಕೆಲಸಗಳನ್ನೂ ತಾನೇ ಮಾಡಿಕೊಳ್ಳುತ್ತಾ…. ಬದುಕಿದ್ದಳು. ಆದರೂ ಅಫೀಸಿನಲ್ಲಿ ನನ್ನ ಚೇಂಬರ್ ಈಗ ಇವಳದಾಗಿತ್ತು. ಕ್ರಮೇಣ…. ಮನೆಯಲ್ಲಿ ಇವಳ ವಿಜ್ಞಾನದ ಕೊರೆತ ತಪ್ಪಿಸಿಕೊಳ್ಳಲು ಎಲ್ಲೆಲ್ಲಿಗೋ ಹೋಗಿ ನಾನು ನಡು ರಾತ್ರಿಯಲ್ಲಿ ಹಿಂತಿರುಗಿದಾಗ ದಂಡಿಸುವ ಮಟ್ಟಕ್ಕೇರಿದಳು. ತಾಯಿಯಂತೆ ಪ್ರೀತಿಸುತ್ತಿದ್ದಳು, ಗೆಳತಿಯಂತೆ ರಮಿಸುತ್ತಿದ್ದಳು, ಸೂಳೆಯಂತೆ ಜಗಳಕಾಯುತ್ತಿದ್ದಳು. ತೀವ್ರ ಸಂಭೋಗದಿಂದ ಘಾಸಿಗೊಂಡು, ಹಿತವಾದ ಆಯಾಸದಲ್ಲಿ ಎಡಭಾಗದ ಅಸ್ತಿತ್ವ ಕಳೆದುಕೊಂಡವನಂತೆ ಮಲಗಿದ್ದಾಗ ಹೆಂಡತಿಯಾಗುವ ಮಾತು ತಗೆಯುತ್ತಿದ್ದಳು. ಆ ಮಾತೇ ಮರು ಕೂಡಿಕೆಗೆ ಮುನ್ನುಡಿಯಾಗಿ ಮದುವೆಯ ಮಾತುಗಳು ಮುಂಡೂಡಲ್ಪಡುತ್ತಿದ್ದವು. ನನ್ನ ಎಡಭಾಗ ಮತ್ತಷ್ಟು ಅಸ್ತಿತ್ವರಹಿತವಾಗುತ್ತಿತ್ತು.

ಇವೆಲ್ಲದರ ನಡುವೆ ದಿಕ್ಕೆಟ್ಟವನಂತೆ ಅಲೆಯತೊಡಗಿದ್ದೆ. ನನಗೆ ನಿರೀಕ್ಷಿಸಿದಂತಹ ಅವಕಾಶಗಳು ಸಿಗುತ್ತಿರಲ್ಲಿಲ್ಲವೋ ಇಲ್ಲಾ ನನ್ನ ಆಳದಲ್ಲೇ ಅಂತಹಾ ಅವಕಾಶಗಳನ್ನು ಒಪ್ಪಿಕೊಳ್ಳುವ ಇಷ್ಟ ಇರಲಿಲ್ಲವೋ… ಅಥವಾ ನನಗೆ ಇಂಥದ್ದೊಂದು ಬದುಕೇ ಬೇಕಿರಲಿಲ್ಲವೋ…? ಅಂತೂ ನೆಲೆನಿಲ್ಲದೆ ಬಳಲುತ್ತಿದ್ದೆ. ವೃತ್ತಿಜೀವನದ ಅತ್ಯಂತ ಕ್ರೂರ ಮಗ್ಗಲುಗಳನ್ನು ಒಡೆದ ಗಾಜುಗಳ ಹರಿತ ಏಣುಗಳಿಂದ ಉಜ್ಜುತ್ತಾ ಸಾಗುತ್ತಿದ್ದೆ. ಯಾಕೋ ಆ ಹೊತ್ತಿನಲ್ಲಿ ಮನೆಯ ಹಿತ್ತಲಿನಲ್ಲಿ ಅಮ್ಮ ಅರಳು ಬೇಯಿಸುತ್ತಿದ್ದದ್ದು ನೆನಪಾಗುತ್ತಿತ್ತು. ಆಳೆತ್ತರದ ಹಿತ್ತಾಳೆ ಕೊಳಗದಲ್ಲಿ ಕೊತಕೊತ ಕುದಿಯುತ್ತಿದ್ದ ಮಂದ ದ್ರವದೊಳಗೆ ನನ್ನ ಮುಖ ಕಂಡಂತಾಗುತ್ತಿತ್ತು. ತಬ್ಬಲಿನತ ಕೌದಿಗಿಂತ ದಟ್ಟವಾಗಿ ಕವುಚಿಕೊಳ್ಳುತ್ತಿತ್ತು.

III

ಕ್ಯಾಂಟೀನಿನ ಮುಂದಿನ ವಿಸ್ತಾರದಲ್ಲಿ ತಲೆಗೆದರಿಕೊಂಡು ನಿಂತ ಅನೇಕ ಮರಗಳಿದ್ದವು. ಬೆಳಗಿನ ತಂಪು, ಮರಗಳ ನೆರಳಿನೊಂದಿಗೆ ಬೆರೆತು ಒಳಹೊರಗೆ ಹಿತವಾಗಿ ಆಡುತ್ತಿತ್ತು. ಖಾಲಿ ಗ್ಲಾಸು ತೆಗೆದುಕೊಂಡು ಹೋಗಲು ಹುಡುಗರು ಬಂದಾಗಲೆಲ್ಲಾ ಹೊಸ ಕಾಫಿಗೆ ಆರ್ಡರ್ ಮಾಡಿ, ಅವಳ ನೆನಪಿನಲ್ಲಿ ಮೂರ್ನಾಲ್ಕು ಕಾಫಿ-ಸಿಗರೇಟು ಮುಗಿಸಿದ್ದೆ. ಆಕಸ್ಮಿಕ ತಲೆ ಎತ್ತಿ ನೋಡಿದಾಗ ನನ್ನ ಮುಂದೆ ಒಂದು ವೈದ್ಯರ ತಂಡವೇ ಇತ್ತು. ನನ್ನ ಸಮಸ್ಯೆಯನ್ನು ಅಧ್ಯಯನ ಮಾಡುತ್ತಿದ್ದ ಈ ತಂಡದಲ್ಲಿ ಘಟಾನುಘಟಿಗಳಿದ್ದರು. ಇವರ ನಡುವೆ ಮುಖದ ಮೇಲೆ ಸಿಡುಬಿನ ಕಲೆಗಳಿದ್ದ ನೀಳಕಾಯದ ಹೊಸ ಆಕೃತಿಯೇ ಡಾ. ಸ್ಟಾನ್ಲಿ ಎಂದು ಊಹಿಸಿದೆ. ಅಷ್ಟರಲ್ಲಿ ತಂಡದ ನಾಯಕ ಡಾ. ಮುನಿ ನನ್ನನ್ನು ಅವರಿಗೆ ಪರಿಚಯಿಸಿದರು. ಇವರಿಬ್ಬರ ನಡುವಿದ್ದ ಕಿರಿಯ ವೈದ್ಯೆ ಕಾದಾಟಕ್ಕೆ ಸಿದ್ಧವಾದ ಕಡವೆಯಂತೆ ನಿಂತಿದ್ದಳು. ಯಾಕೆ ಹಾಗೆ ಮುಖಮಾಡಿಕೊಂಡಿದ್ದಳೋ ಅರ್ಥವಾಗಲಿಲ್ಲ. ನನ್ನ ಕೇಸ್ ಫೈಲಿನಲ್ಲಿಲ್ಲದ ಅನೇಕ ವಿಚಾರಗಳು ನನ್ನಲ್ಲಿ ಇನ್ನೂ ಉಳಿದುಕೊಂಡಿವೆ ಎಂಬ ಗುಮಾನಿ ಅವಳಿಗೆ ಇದ್ದಂತಿತ್ತು. ಅಥವಾ ಆ ಕೇಸ್ ಫೈಲೇ ನನ್ನದಲ್ಲ, ಈ ರೋಗ ಮೂಲದ ನಿಜವಾದ ಕಾರಣಗಳನ್ನು ನಾನು ಇನ್ನೂ ಹೇಳಿಯೇ ಇಲ್ಲ ಎಂದು ಅವಳು ಭಾವಿಸಿದಂತಿತ್ತು. ಒಮ್ಮೆ ಮಾತುಮಾತಿನ ನಡುವೆ ಬಾಯಿತಪ್ಪಿ ಅವಳು ಹಾಗೆ ಹೇಳಿದ್ದುಂಟು. ಆದರೆ ನಾನು ಅಪ್ಪಿ ತಪ್ಪಿಯೂ ಅವಳ ‘ಪರ್ಟಿಕ್ಯುಲರ್’ ಪ್ರಶ್ನೆಗಳಿಗೆ ಉತ್ತರಿಸಿದವನಲ್ಲ.

ಡಾ. ಸ್ಟಾನ್ಲಿ ಹಿಂತಿರುಗಿ ತಮ್ಮ ತಂಡವನ್ನುದ್ದೇಶಿಸಿ… ‘ಓಕೆ… ಥ್ಯಾಂಕ್ಸ್’ ಎಂದರು. ಮೊದಲೇ ಒಪ್ಪಂದವಾಗಿದ್ದವರಂತೆ ಎಲ್ಲರೂ ಅಲ್ಲಿಂದ ಹಿಂತಿರುಗಿದರು. ಈ ಕಡವೆ ಮಾತ್ರ ನಿಂತಲ್ಲೇ ನಿಂತು ನನ್ನ ಮುಖ ನೋಡುತ್ತಿತ್ತು. ಡಾ. ಸ್ಟಾನ್ಲಿ ನನ್ನ ಮುಖವನ್ನೇ ದಿಟ್ಟಿಸುತ್ತಾ ‘ಕೆನ್ ವೀ ಸಿಟ್ ಹಿಯರ್ ಫಾರ್ ಫ್ಯೂ ಮಿನಿಟ್ಸ್’ ಎಂದರು. ನಾನು ವಿನಯದಿಂದಲೇ ‘ಶ್ಯೂರ್’ ಎಂದೆ. ಪಕ್ಕದಲ್ಲಿ ನನ್ನ ಕಡೆಗೆ ಮುಖಮಾಡಿ ಕುಳಿತುಕೊಂಡರು. ಅವರು ಕುಳಿತುಕೊಳ್ಳುತ್ತಿದ್ದಂತೆ ಹವೆ ಮತ್ತಷ್ಟು ತಂಪಾದಂತೆ ಅನಿಸಿತು. ಕುಳಿತುಕೊಂಡವರು ಅಲ್ಲೇ ಇನ್ನೂ ತಿವಿಯುವ ಮೂಡಿನಲ್ಲೇ ನಿಂತಿದ್ದ ಕಡವೆಯನ್ನು ಕಂಡು ಪ್ರಶ್ನಾರ್ಥಕವಾಗಿ ಅವಳ ಮುಖ ನೋಡಿದರು. ಅವಳು ತಕ್ಷಣ ಮುಖದ ಭಾವ ಬದಲಿಸಿ ‘ನಾನೂ ಇರುತ್ತೇನೆ’ ಎಂಬಂತೆ ನನ್ನತ್ತ ನೋಡಿದಳು. ನಾನು ಸ್ಟಾನ್ಲಿಯ ಕಡೆ ತಿರುಗಿ ‘ಇರಲಿ ಬಿಡಿ’ ಎನ್ನುವಂತೆ ಮುಖಮಾಡಿದೆ. ನನ್ನ ಇನ್ನೊಂದು ಬದಿಗೆ ಕಡವೆ ಅಂಟಿಕೊಂಡಂತೆ ನೆಲೆಯೂರಿತು. ಇತ್ತ ಕಡೆಯಿಂದ ಆಗಾಧವಾದ ಧಗೆ ಆರಂಭವಾಯಿತು.

ಸ್ಟಾನ್ಲಿ ನಿಧಾನವಾಗಿ ಮಾತನಾಡುತ್ತಿದ್ದರು, ಸಂತನಂತೆ. ಅವರ ಯಾವ ಮಾತುಗಳೂ ಪ್ರಶ್ನೆಯ ರೂಪದಲ್ಲಿರಲಿಲ್ಲ. ನನ್ನ ಕೇಸ್ ಹಿಸ್ಟರಿಯಲ್ಲಿದ್ದ ವಿವರಗಳು ಅವರ ತಲೆಯಲ್ಲಿ ಖಚಿತವಾಗಿ ದಾಖಲಾದಂತಿದ್ದವು. ಈಗ ಆ ಕೇಸ್ ಹಿಸ್ಟರಿ ಕಡವೆಯ ತೊಡೆಯಮೇಲಿತ್ತು. ಅವರು ಇನ್ನೇನನ್ನೊ ಹುಡುಕುತ್ತಿದ್ದಂತಿತ್ತು. ಅವರ ಮಾತುಗಳು ಮನುಷ್ಯ ಬದುಕಿಗೆ ಇಂಥದ್ದೊಂದು ಆಯಾಮ ಇರಲು ಸಾಧ್ಯವೇ ಅನಿಸುವಷ್ಟು ಹೊಸದಾಗಿದ್ದವು. ನನ್ನ ಬಾಲ್ಯ, ನನ್ನ ತಂದೆ, ತಾಯಿ, ಊರು, ಗೆಳೆಯರು/ಗೆಳತಿಯರು, ವೃತ್ತಿ-ಪ್ರವೃತ್ತಿ, ಇಷ್ಟ-ಕಷ್ಟ, ಹೋರಾಟ-ತಾಕಲಾಟ…ಇತ್ಯಾದಿ ಎಲ್ಲದರ ಬಗ್ಗೆಯೂ ಕೇಳಿದರು. ಹೇಳಲಾಗದೇ ಇರುವ ರೀತಿಯಲ್ಲಿ. ನಾನು ಪ್ರಾಮಾಣಿಕವಾಗಿ ಇದ್ದದ್ದನ್ನು ಇದ್ದಂತೆ ಹೇಳಿದೆ. ಕಿರಿಯ ವೈದ್ಯೆ ನನ್ನ ಬದುಕಿನ ವಿಸ್ತಾರ-ವೈವಿಧ್ಯಗಳಿಗೆ ಬೆಚ್ಚಿಬೆರಗಾದಂತೆ ಕುಳಿತಿದ್ದಳು. ಅವಳು ಭಾವಿಸಿದ್ದಂತೆ ನನ್ನ ಕೇಸ್ ಹಿಸ್ಟರಿಯಲ್ಲಿ ಈಗ ನಾನು ಹೇಳುತ್ತಿದ್ದ ಬಹುಪಾಲು ಅಂಶಗಳು ದಾಖಲಾಗಿರಲಿಲ್ಲ. ಏಕೆಂದರೆ ಈ ಆಯಾಮದಿಂದ ಈವರೆಗೂ ಯಾರೂ ನನ್ನನ್ನು ಪ್ರಶ್ನಿಸಿರಲೇ ಇಲ್ಲ, ಈ ಕಡವೆಯನ್ನು ಹೊರತು ಪಡಿಸಿ. ನನಗೆ ಆಶ್ಚರ್ಯವಾಗುವಂತೆ ಇವಳು ಈ ಹಿಂದೆ ಕೇಳಿದ್ದ ಅನೇಕ ಪ್ರಶ್ನೆಗಳು ಬಹುಪಾಲು ಸ್ಟಾನ್ಲಿಯ ಟ್ರಾಕಿನಲ್ಲೇ ಇದ್ದವು. ಆದರೆ ಕೇಳುವ ಶೈಲಿಯಲ್ಲಿ ಕಚ್ಛಾತನವಿತ್ತಷ್ಟೇ. ನಾನು ಅದನ್ನು ಕಿಡಿಗೇಡಿತನವೆಂದು ಬಗೆದೆನೇ?

ಡಾ. ಸ್ಟಾನ್ಲಿ ಮೂರು ಗಂಟೆಗಳಿಗೂ ಮೀರಿದ ಮಾತುಕತೆಯಲ್ಲಿ ನನ್ನ ಅನೇಕ ಸಂದೇಹಗಳನ್ನು ನಿವಾರಿಸಿದ್ದರು. ಅನೇಕ ಗೊಂದಲಗಳನ್ನು ಹುಟ್ಟಿಹಾಕಿದ್ದರು. ನನ್ನ ಬದುಕಿನ ದೃಷ್ಟಿಕೋನ ಮತ್ತು ಒತ್ತಡಗಳ ಬಗ್ಗೆ ವಿವಿಧ ಕೋನಗಳಿಂದ ವಿಚಾರಿಸಿದ್ದರು. ಅನೇಕ ವಿಚಿತ್ರವಾದ ಪ್ರಶ್ನೆಗಳನ್ನು ಕೇಳಿದ್ದರು. ನೀವು ತುಂಬಾ ಮಾನಸಿಕ ಒತ್ತಡದಲ್ಲಿದ್ದಾಗ ಏನು ಮಾಡಬೇಕೆಂದು ಸಹಜವಾಗಿ ಅನಿಸುತ್ತದೆ. ಎಲ್ಲೋ ಏನೋ ಆಗುತ್ತಿದ್ದೆ, ಅದು ನಿಮಗೆ ಇಷ್ಟವಾಗುತ್ತಿಲ್ಲ, ಅದನ್ನು ನಿಯಂತ್ರಿಸಲು ನಾನು ಅಸಹಾಯಕ ಅನಿಸಿದಾಗ ತಕ್ಷಣ ಏನನಿಸುತ್ತದೆ? ಇತ್ಯಾದಿ. ‘ನೀವು ಅನ್ಯಮನಸ್ಕರಾಗಿದ್ದಾಗ ತಟ್ಟನೆ ನಿಮ್ಮ ನೆನಪಿಗೆ ಬರುವ ವ್ಯಕ್ತಿ ಮತ್ತು ಸ್ಥಳ ಯಾವುದು?’ ಇದು ಸ್ಟಾನ್ಲಿಯ ಕೊನೆಯ ಪ್ರಶ್ನೆ. ನನ್ನ ಉತ್ತರ ‘ವ್ಯಕ್ತಿಯಾಗಿ ಬುದ್ಧ ಮತ್ತು ಸ್ಥಳವಾಗಿ ಹೊಂಗೆತೋಪು’. ನಿಜಕ್ಕೂ ಸ್ಟಾನ್ಲಿ ಚಕಿತರಾದರು! ತಮ್ಮಷ್ಟಕ್ಕೆ ತಾವೇ ಏನೇನೋ ಅಂದುಕೊಳ್ಳುತ್ತಾ…. ಪರೀಕ್ಷಿಸುವಂತೆ ನನ್ನತ್ತ ನೋಡಿದರು. ನನ್ನ ರೋಗದ ನಿಗೂಢ ಮೂಲ ಅವರಿಗೆ ಹೊಳೆದಿರಬಹುದೇ? ಎನಿಸಿ, ನಿರಾಶೆಯಾಯಿತು. ಅವರು ಹಾಗೇ ಮೌನವಾಗಿ ನನ್ನ ಮುಖವನ್ನೇ ದಿಟ್ಟಿಸುತ್ತಿದ್ದರು, ಪರವಶಗೊಳಿಸುವಂತೆ ನಗುತ್ತಾ. ನಾನು ಗಲಿಬಿಲಿಗೊಂಡೆ. ಸ್ವಲ್ಪಹೊತ್ತು ಸತ್ತಂತ ಮೌನ, ‘ಓಕೇ…., ನನಗಿನ್ನೂ ಕೆಲವು ವಿಷಯಗಳ ಬಗ್ಗೆ ಕ್ಲಾರಿಟಿ ಬೇಕಿದೆ. ಟೀಂ ಜೊತೇಲಿ ಡಿಸ್ಕಸ್ ಮಾಡಿ ನೋಡ್ತೀನಿ, ಇನ್ನೂ ಕೆಲವು ಅಡಿಷನಲ್ ಟೆಸ್ಟ್ಗಳಾಗಬೇಕಿದೆ. ಎನಿವೇ… ಐ ವಿಲ್ ಮೀಟ್ ಯು ಇನ್ ಈವಿನಿಂಗ್’ ಎಂದವರು ಅಲ್ಲಿಂದ ಎದ್ದರು.

ಎದ್ದವರು ಸ್ವಲ್ಪದೂರ ನಡೆದು, ಹಿಂತಿರುಗಿ ಕಿರಿಯ ವೈದ್ಯೆಯನ್ನು ಕರೆದು ಇನ್ನೊಂದು ಮರದ ನೆರಳಿನತ್ತ ನಡೆದರು. ಅಲ್ಲಿ ನಿಂತು ಅವಳೊಂದಿಗೆ ಮೆಲು ಧ್ವನಿಯಲ್ಲಿ ಮಾತಿಗಿಳಿದರು. ಇವಳು ಬಿಗುವಿನಿಂದಲೇ ಉತ್ತರಿಸುತ್ತಿರುವಂತೆ ಕಾಣುತ್ತಿತ್ತು. ಸ್ವಲ್ಪಹೊತ್ತಿನ ನಂತರ ಅವರು ಏನು ಕೇಳಿದರೋ ಏನೋ!? ಕಡವೆ, ಒಮ್ಮೆಲೇ ಅವಳ ಹೆಣ್ತನವೆಲ್ಲಾ ಜಗ್ಗನೆ ಜಾಗೃತಗೊಂಡಂತೆ ನಾಚಿ ನೀರಾಗಿ ಒಮ್ಮೆ ನನ್ನತ್ತ ನೋಡಿ, ಪಕ್ಕನೆ ದೃಷ್ಟಿಯನ್ನು ಪಕ್ಕಕ್ಕೆ ಹೊರಳಿಸಿ ದಟ್ಟ ಹಸಿರಿನ ಪೊದೆಯಲ್ಲಿ ನೆಟ್ಟು, ಏನನ್ನೋ ಹೇಳುತ್ತಿದ್ದಳು!! ಈ ವೈದ್ಯಲೋಕದ ಸಹಜ ಸಲಿಗೆ-ಸುಲಿಗೆಗಳ ಆಳದ ಅರಿವಿದ್ದ ಯಾರಾದರೂ ಆ ಸಂದರ್ಭವನ್ನು ಹೇಗೆಬೇಕಾದರೂ ಆರ್ಥೈಸಬಹುದಿತ್ತು. ಅಷ್ಟರಲ್ಲಿ ಸ್ಟಾನ್ಲಿ ತದ್ವತ್ ಗಾಂಭೀರ್ಯದಿಂದ ಅಲ್ಲಿಂದ ಹೊರಟು ಲ್ಯಾಬೊರೇಟರಿಯ ಕಡೆಗೆ ಮುಖಮಾಡಿದರು. ಇನ್ನೂ ಸಹಜತೆಗೆ ಮರುಳದ ಗುಲಾಬಿ ಕೆನ್ನೆಗಳೊಂದಿಗೆ ಏನನ್ನೋ ಗೊಣಗುತ್ತಾ ನನ್ನತ್ತ ಬಂದ ಕಡವೆ ಒಂದು ಕ್ಷಣ ಪರೀಕ್ಷಾರ್ಥವಾಗಿ ನನ್ನನ್ನೇ ದಿಟ್ಟಿಸಿ, ಏನನ್ನೂ ಆಡದೆ ಸೀದಾ ನರ್ಸಿಂಗ್ ಸೆಕ್ಷನ್ ಕಡೆಗೆ ಹೆಜ್ಜೆ ಹಾಕಿತು, ದೈವಕ್ಕೊಪ್ಪಿಸಿದ ವೀಳೆಯದಂತೆ ನನ್ನೊಬ್ಬನನ್ನೇ ಅಲ್ಲಿ ಬಿಟ್ಟು.

IV

ಸಂಜೆ ಡಾ. ಸ್ಟಾನ್ಲಿ ತಂಡದೊಂದಿಗೆ ನನ್ನ ಕೊಟಡಿಗೆ ಬಂದಾಗ ನಾನು ಕುರ್ಚಿಯಲ್ಲಿ ಕುಳಿತು ಓದುತ್ತಿದ್ದೆ. ಅವರು ಬೆಳಿಗ್ಗೆ ಎಷ್ಟು ಹಸನ್ಮುಖರಾಗಿದ್ದರೋ ಈಗಲೂ ಹಾಗೇ ಇದ್ದರು. ಅವರ ಮುಖದಲ್ಲಿ ಒಂದು ಬಗೆಯ ‘ದಿವ್ಯ’ ಎನ್ನಬಹುದಾದ ಶಾಂತಿ ನೆಲೆಸಿತ್ತು. ನನ್ನ ಹೊರ ಕಣ್ಣುಗಳು ಸ್ಟಾನ್ಲಿಯನ್ನೇ ಹಿಂಬಾಲಿಸುತ್ತಿದ್ದವು. ಆದರೆ ಒಳ ಕಣ್ಣುಗಳು ಬೇರೇನನ್ನೋ ಅರಸುತ್ತಿದ್ದವು. ಸ್ಟಾನ್ಲಿ ಟೇಬಲ್ಲಿನ ಮೇಲಿದ್ದ ನನ್ನ ಇತರ ಪುಸ್ತಕಗಳನ್ನು ಬಿಡಿಸಿ ನೋಡುತ್ತಿದ್ದರು. ಅಷ್ಟು ಹೊತ್ತಿಗೆ ಕಡವೆ ಒಳ ಪ್ರವೇಶಿಸಿತು. ಏಕೋ ನನ್ನತ್ತ ನೇರವಾಗಿ ನೋಡಲು ಹಿಂಜರಿದಂತಿತ್ತು. ನಾನು ಓದುತ್ತಿದ್ದ ಪುಸ್ತಕವನ್ನೇ ದಿಟ್ಟಿಸುತ್ತಿತ್ತು. ಅವಳ ನೋಟ ನಿನ್ನೆಯಂತಿರಲಿಲ್ಲ. ಅವಳ ಗಾಂಭೀರ್ಯವನ್ನು ನೋಡಿ ಆಶ್ಚರ್ಯವಾಯಿತು. ಒಮ್ಮೆ ಕಣ್ಣುಹೊಡೆದು ಬಿಡಲೇ ಅನಿಸಿತು. ಆದರೆ ಹೊಡೆಯಲಿಲ್ಲ. ಆದರೂ ಅವಳು ನಕ್ಕಂತಾಯಿತು. ನಾನು ಅಂದುಕೊಂಡಿದ್ದು ಅವಳಿಗೆ ಕೇಳಿಸಿತೇ?! ನಿಜಕ್ಕೂ ನಕ್ಕಳೇ?! ಗೊತ್ತಿಲ್ಲ!!. ಸ್ಟಾನ್ಲಿ ನನಗೆದುರಾಗಿ ಮಂಚದ ಒಂದು ತುದಿಯಲ್ಲಿ ಕುಳಿತರು. ಕಡವೆ ನನ್ನ ಬದಿಗಿದ್ದ ಟೇಬಲ್ಲಿಗೆ ಒರಗಿಕೊಂಡು ಒಮ್ಮೆ ನನ್ನತ್ತ ಒಮ್ಮೆ ಬಾಗಿಲಿನತ್ತ ನೋಡಲಾರಂಭಿಸಿತು. ಅವಳ ಮುಖದಲ್ಲಿ ಎಂದಿಲ್ಲದ ಅಸಹನೆ, ಚಡಪಡಿಕೆಗಳಿದ್ದವು.

ಸ್ವಲ್ಪ ಹೊತ್ತಿನಲ್ಲಿ ಎಂತೆಂಥದೋ ಯಂತ್ರೋಪಕರಣಗಳನ್ನು ಹೊತ್ತು ತಂಡವೊಂದು ಕೊಟಡಿ ಪ್ರವೇಶಿಸಿತು. ಮಂಚದ ಸುತ್ತ ಅವುಗಳನ್ನು ಪ್ರತಿಷ್ಠಾಪಿಸಿ, ನನ್ನನ್ನು ಆಹ್ವಾನಿಸಿದರು. ನಾನು ಹರಕೆಯ ಕುರಿಯಂತೆ ಮಂಚವೇರಿದೆ. ಅಡಿಯಿಂದ ನೆತ್ತಿಯವರೆಗೆ ಅಸಂಖ್ಯ ವೈರು-ಪೈಪುಗಳ ಮೂಲಕ ಆ ಯಂತ್ರಗಳಿಗೂ ನನಗೂ ಸಂಪರ್ಕ ಕಲ್ಪಿಸಿದರು. ಒಬ್ಬೊಬ್ಬರು ಒಂದೊಂದು ಮಾನೀಟರ್ ಪರದೆಯ ಮುಂದೆ ಜಾಗ ಮಾಡಿಕೊಂಡರು. ಸ್ಟಾನ್ಲಿ ನನ್ನ ಬದಿಗೆ ಕುರ್ಚಿ ಎಳೆದುಕೊಂಡು, ನನ್ನ ಎಡಗೈ ನಾಡಿಯಮೇಲೆ ಸ್ಟೆತಾಸ್ಕೋಪ್ ಇಟ್ಟು ಕುಳಿತರು. ಸ್ಟಾನ್ಲಿಯದು ಒಂದೇ ಆದೇಶ ‘ಕ್ಲೋಸ್ ಯುವರ್ ಐಸ್…ಟೇಕ್ ಡೀಪ್ ಬ್ರೀತ್ …., ಕಣ್ಣು ಮುಚ್ಚಿ…. ದೀರ್ಘವಾಗಿ ಉಸಿರಾಡಿ…. ದೀರ್ಘವಾಗಿ…. ನ್ಯಾಚುರಲ್ ಆಗಿ…. ಇನ್ನೂ ದೀರ್ಘವಾಗಿ…… ನ್ಯಾಚುರಲ್ ಆಗಿ….. ಹಾಂ…. ಗುಡ್…. ಗುಡ್…. ಹಾಗೆ… ಹಾಗೇ… ಹಾಗೇ….’ ಹಿಪ್ನಟೈಸ್ ಮಾಡುತ್ತಿದ್ದಾರೆಯೇ?. ನಾನು ಕಣ್ಣು ಮುಚ್ಚುವ ಮೊದಲು ಅವಳತ್ತ ನೋಡಿದಾಗ, ಅವಳು ಬಂದಾಗ ಎಲ್ಲಿ ಹೇಗೆ ನಿಂತಿದ್ದಳೋ ಹಾಗೇ ನಿಂತಿದ್ದಳು. ಆ ಕ್ಷಣಕ್ಕೆ ಅವಳ ಭಾವವನ್ನು ಓದಲಾಗಲಿಲ್ಲ.

ಎಲ್ಲೊ…. ಯಾರೋ ಮಾತನಾಡುತ್ತಿರುವ ಸದ್ದು…. ಕನಸಿನಲ್ಲೇ….? ನಿಧಾನವಾಗಿ ಎಚ್ಚರಗೊಂಡೆ. ನಾನು ಸುಮ್ಮನೆ ಮಲಗಿದ್ದೇನೆ. ಏಕೆ ಮಲಗಿದ್ದೆ? ಓಹ್…. ನೆನಪಾಯಿತು. ಆದರೆ ಈಗ ನನಗೆ ಹಾಕಿದ್ದ ಎಲ್ಲಾ ಸಂಪರ್ಕಗಳನ್ನೂ ತಗೆದುಹಾಕಲಾಗಿತ್ತು. ನಾನು ಮಲಗುವ ಮುನ್ನ ಆಗಿದ್ದೆಲ್ಲಾ ಕನಸೇ ಎಂದುಕೊಳ್ಳುವ ಹೊತ್ತಿಗೆ ಸ್ಟಾನ್ಲಿಯ ಮಾತುಗಳು ಕೇಳಿಸಿದವು. ಅತ್ತ ನೋಡಿದೆ, ಇಡೀ ತಂಡ ಸ್ಟಾನ್ಲಿಯ ಮುಂದೆ ನೆರೆದಿದೆ. ಕಿರಿಯ ವೈದ್ಯೆ ಡಾ.ಮುನಿಯ ಪಕ್ಕದಲ್ಲಿ ಗಂಭೀರವಾಗಿ ನಿಂತಿದ್ದಾಳೆ. ಯಾರೂ ನನ್ನತ್ತ ನೋಡುತ್ತಿಲ್ಲ. ಹೊರಗೆ ನೋಡಿದೆ. ಆಗಲೇ ಮಬ್ಬುಗತ್ತಲಾಗಿದೆ. ಕಿಟಕಿಗೆ ಬೆನ್ನುಮಾಡಿ ಕುಳಿತಿರುವ ಸ್ಟಾನ್ಲಿಯ ಹಿಂದಿನಿಂದ ಬೀಳುತ್ತಿರುವ ಮಂದ ಬೆಳಕು ಅವರಿಗೊಂದು ಪ್ರಭಾವಳಿ ನಿರ್ಮಿಸಿದೆ. ಇಡಿಯ ಸನ್ನಿವೇಶ ಹೇಗಿದೆಯೆಂದರೆ…. ಒಂದಷ್ಟು ಅನುಯಾಯಿಗಳನ್ನು ಉದ್ದೇಶಿಸಿ ದೇವಧೂತನೊಬ್ಬ ಪ್ರವಚನ ನೀಡುತ್ತಿರುವಂತಿದೆ. ಒಂದುಕ್ಷಣ ನಾನು ಗೊಂದಲಕ್ಕೊಳಗಾದೆ. ತಲೆಕೊಡವಿ ಮತ್ತೊಮ್ಮೆ ನೋಡಿದೆ. ಇದು ಭ್ರಮೆಯಲ್ಲ. ನಿಜಕ್ಕೂ ಸ್ಟಾನ್ಲಿ ಮಾತನಾಡುತ್ತಿದ್ದಾರೆ…. ಮಂದಗಾಮಿ ನದಿಯ ಹರಿವಿನಂತೆ …. ಪುಷ್ಪ ಪ್ರಫುಲ್ಲದಂತೆ…..! ಕೆಲವೇ ಗಂಟೆಗಳ ಹಿಂದೆ ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳ ತನಿಖೆಗೊಳಗಾಗಿದ್ದ ನನಗೆ ಈ ಸಭೆಯ ಸನ್ನಿವೇಶ ವಿರುದ್ಧ ಧ್ರುವಗಳಂತಾಗಿ ಗೊಂದಲಗೊಂಡೆ. ನನ್ನ ಸಮಸ್ಯೆ ಇಷ್ಟೋಂದು ಜಟಿಲವಾದದ್ದೇ? ನಿಜಕ್ಕೂ ಇದಕ್ಕೆ ಪರಿಹಾರವುಂಟೇ?

ಏನೋ ಒಂದು ಬಗೆಯ ಮಂಪರು…. ಕಣ್ಣುಗಳು ತಂತಾನೆ ಮುಚ್ಚಿಕೊಳ್ಳುತ್ತಿವೆ. ತೆರೆದಿಡುವ ನನ್ನ ಪ್ರಯತ್ನ ಫಲಿಸುತ್ತಿಲ್ಲ. ಸ್ಟಾನ್ಲಿ ಏನೋ ಹೇಳುತ್ತಿದ್ದಾರೆ…., ಅವರು ಹೇಳುತ್ತಿರುವ ಕಥೆ ನನಗೆ ಗೊತ್ತಿರುವಂತಿದೆ…., ಯಾವುದದು? ನೆನಪಾಗುತ್ತಿಲ್ಲ. ಅಲ್ಲ, ನೆನಪು ಮಾಡಿಕೊಳ್ಳಲು ಮಂಪರು ಬಿಡುತ್ತಿಲ್ಲ. ಕಥೆ ನನಗೆ ಗೊತ್ತು…. ಮಂಪರು….. ನನಗೆ ಗೊತ್ತು…. ಹಾಂ…. ಅದು….!?

ಯಾರೋ ನನ್ನನ್ನು ಎಬ್ಬಿಸುತ್ತಿರುವ ಧ್ವನಿ. ಆರೂವರೆ ಅಕ್ಷರಗಳ ನನ್ನ ಹೆಸರಿನ ಹಿಂದೆ ಗೌರವ ಸೂಚಕ ಪೂರ್ವಪದದೊಂದಿಗೆ ಆರಂಭವಾದ ಕರೆತ, ಬರುಬರುತ್ತಾ ತುಂಡಾಗಿ, ತುಂಡಾಗಿ ಕೊನೆಗೆ ಎರಡಕ್ಷರಕ್ಕೆ ಇಳಿದಂತಾಯಿತು. ಅದೇ ಎರಡಕ್ಷರದಲ್ಲಿ ಅನೇಕ ಬಾರಿ ಮೆಲುವಾಗಿ ಕರೆದಂತೆ ಕೇಳುತ್ತಿದೆ. ನನ್ನ ಬಾಲ್ಯದ ಆತ್ಮೀಯರಿಗಲ್ಲದೆ ಈ ರಾಕ್ಷಸ ನಗರದ ಇನ್ನೊಬ್ಬರಿಗೆ ತಿಳಿಯದ ಹೆಸರಿನಲ್ಲಿ!! ಯಾರದು? ಹನುಮಂತ, ತಿಮ್ಮಣ್ಣ, ನಾಗ, ಮೂರ್ತಿ, ಲಾವಣಿ ಅಯ್ಯ, ಅಮ್ಮ, ಇಲ್ಲಾ…. ರೂಮಿ ಇರಬಹುದೇ? ಹಾಂ…ಇಲ್ಲಿ ಅವಳೊಬ್ಬಳಿಗೆ ಮಾತ್ರ ಈ ಹೆಸರು ಗೊತ್ತು. ಅವಳು ಹಾಗೆ ಕರೆದರೆ ಕಿರಿಕಿರಿಯಾಗುವಷ್ಟು ಕೃತಕವಾಗಿರುತ್ತಿತ್ತಲ್ಲಾ?! ನಿಧಾನವಾಗಿ ಕಣ್ಣು ತೆರೆದೆ. ಕೊಟಡಿಯಲ್ಲಿ ಮಂದವಾದ ಬೆಳಕು ಹಬ್ಬಿದೆ. ಯಾರೂ ಇಲ್ಲ! ನಾನೊಬ್ಬನೇ!! ಎಲ್ಲಿ ಹೋದರು ಎಲ್ಲಾ ? ಒಂದುಕ್ಷಣ ಯಾಕೋ ಅಧೀರತೆ ಉಂಟಾಯಿತು. ಇಂಥ ಅನುಭವ ಹಿಂದೆಂದೂ ಆಗಿದ್ದಿಲ್ಲ. ಪಕ್ಕಕ್ಕೆ ಹೊರಳಲು ಹೋದೆ, ಯಾರೋ ನನ್ನ ಎಡಗೈ ಹಿಡಿದುಕೊಂಡಿದ್ದಾರೆ. ಕಣ್ಣು ಹೊರಳಿಸಿ ನೋಡಿದೆ. ಅರೆ….ರೂಮಿ…!? ಅಲ್ಲಾ… ಕಡವೆ!! ಈ ಹೊತ್ತಿನಲ್ಲಿ ಒಬ್ಬಳೇ?! ನನ್ನ ಎಡಗೈ ನಾಡಿ ಹಿಡಿದು ಕುಳಿತಿದ್ದಾಳೆ, ಸಂಜೆ ಸ್ಟಾನ್ಲಿ ಕುಳಿತಿದ್ದ ಕುರ್ಚಿಯಲ್ಲಿ. ನನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿರಬಹುದೇ? ಗಾಬರಿಬಿದ್ದು ತಟ್ಟನೆ ಎದ್ದು ಕುಳಿತೆ. ತಕ್ಷಣ ನನ್ನ ಎಡಗೈಯನ್ನು ಭದ್ರವಾಗಿ ಹಿಡಿದುಕೊಂಡು, ‘ಏನಾಯಿತು’ ಎನ್ನುವಂತೆ ಕಣ್ಣರಳಿಸಿ ನನ್ನತ್ತ ನೋಡಿದಳು. ಏನೂ ಅಂದವರಿಯದ ನಾನು ಪೆದ್ದುಪೆದ್ದಾಗಿ ನಗುತ್ತಾ ಅವಳ ಮುಖ ನೋಡಿದೆ. ಅವಳು ನನ್ನ ಮುಖ ನೋಡುತ್ತಿದ್ದಳಾದರೂ ಅವಳು ಏನನ್ನೋ ಹೇಳಲೋ…. ಕೇಳಲೋ… ಧೇನಿಸುವಂತಿತ್ತು.

ಡಾ. ಸ್ಟಾನ್ಲಿ ಏನು ಹೇಳಿದರು….? ನನ್ನ ಖಾಯಿಲೆಯ ಬಗ್ಗೆ!.

ಅವಳು ಮೌನವಾಗಿ ನನ್ನ ಮುಖ ನೋಡುತ್ತಿದ್ದಾಳೆ… ದಿಟ್ಟಿಸಿ. ತದ್ವತ್ ಹಾಗೇ, ಸ್ಟಾನ್ಲಿಯಂತೆಯೇ….! ಪರವಶಗೊಳಿಸುವಂತೆ ನಗುತ್ತಾ….!! ಸ್ಟಾನ್ಲಿಯನ್ನು ಮಿಮಿಕ್ರಿ ಮಾಡುತ್ತಿದ್ದಾಳೆಯೇ?

ಅದನ್ನು ಗಮನಿಸದವನಂತೆ ‘ಇಂದಿನ ಟೆಸ್ಟ್ನಂತರ ಸಭೆ ನಡೆಯಿತಲ್ಲಾ? ಸ್ಟಾನ್ಲಿ ನಿಮ್ಮೆಲ್ಲರೊಂದಿಗೆ ಏನನ್ನೋ ಗಾಢವಾಗಿ ಚರ್ಚಿಸುತ್ತಿದ್ದರಲ್ಲಾ?’ ಅಂದೆ.

ಅದಕ್ಕೆ ಅವಳು ‘ಹೌದಾ, ನೀವು ಅದನ್ನು ಕಂಡಿರಾ?!’ ಎನ್ನುವಂತೆ ತನ್ನ ಬಟ್ಟಲುಗಣ್ಣುಗಳನ್ನು ಹಿಗ್ಗಲಿಸಿ, ಹಾಗೇ ನಗುವನ್ನು ಸ್ವಲ್ಪ ಕಿರಿದುಗೊಳಿಸಿ, ‘ಈವನ್ ನೌ, ಐ ನೀಡ್ ಸಮ್ ಮೋರ್ ಟೈಮ್ ಟು ಡಯಾಗ್ನೋಸ್ ದಿಸ್. ರೈಟ್ ನೌ ಆಮ್ ಅನೇಬಲ್ ಟು ಸೇ ವೆದರ್ ಇಟ್ ಈಸ್ ಸೈಕಾಲಜಿಕಲ್ ಆರ್ ನ್ಯೂರಾಲಜಿಕಲ್ ಆರ್ ಸೈಕೋ ನ್ಯೂರಾಲಜಿಕಲ್. ಹ್ಯೂಮನ್ ಬೀಯಿಂಗ್ ಈಸ್ ದ ಮೋಸ್ಟ್ ಕಾಂಪ್ಲಿಕೇಟೆಡ್ ಕ್ರಿಯೇಚರ್ ಆನ್ ದಿಸ್ ಅರ್ಥ್’ ಎಂದು ಥೇಟ್ ಸ್ಟಾನ್ಲಿಯ ಸ್ಟೈಲಿನಲ್ಲಿ ಹೇಳಿದಳು. ನನಗೆ ನಗು ತಡೆಯಲಾಗಲಿಲ್ಲ. ನನ್ನ ಎಡಗೈ ಮೇಲಿಟ್ಟಿದ್ದ ಅವಳ ಕೈಮೇಲೆ ಛಟೀರನೆ ಒಂದು ಕೊಟ್ಟೆ. ಅವಳು ಪಕ್ಕನೆ ಕುಲುಕಿದಂತೆ ನಗುತ್ತಾ…. ನನ್ನ ಕೈ ಬಿಟ್ಟು ಎದ್ದು ಹಿಂದಕ್ಕೆ ಹೋದಳು. ಅಲ್ಲೇ ನಿಂತು ಹಾಗೇ ನಗುತ್ತಾ ಇದ್ದವಳು ಹಠಾತ್ತಾಗಿ ನಗುವನ್ನು ನಿಲ್ಲಿಸಿ, ‘ಸ್ನೋ ಊಲ್ಫ್, ಇದಕ್ಕೆ ಕನ್ನಡದಲ್ಲಿ ಏನನ್ನುತ್ತಾರೆ’ ಎಂದಳು. ಅಸಂದರ್ಭಿಕವಾಗಿ ಬಂದ ಈ ಪ್ರಶ್ನೆಗೆ ತಬ್ಬಿಬ್ಬಾದ ನಾನು ಗೊಂದಲದಲ್ಲಿಯೇ ‘ಹಿಮತೋಳ’ ಎಂದೆ. ‘ಗುಡ್, ಗುಡ್, ರೈಟ್ ನೇಮ್…’ ಎಂದವಳು ನನ್ನ ಹತ್ತಿರಕ್ಕೆ ಬಂದು ಛೇಡಿಸುವ ಧ್ವನಿಯಲ್ಲಿ ‘ಸಕತ್ತಾಗೈತೆ ಅಲ್ವಾ….!? ಬಾ….’ ಎಂದು ಬಾಗಿಲಾಚೆಗೆ ಹೋದವಳು ಮತ್ತೆ ಹಿಂತಿರುಗಿ ‘ಚಂದ್ರಮ್ಮ ನಾಳೆಯಿಂದ ಮತ್ತೆ ಡ್ಯೂಟಿಗೆ ಜಾಯಿನ್ ಆಗ್ತಾ ಅವಳೆ’ ಎಂದು ಹೇಳಿ ಹೊರಟು ಹೋದಳು. ನನಗಂತೂ ಇದ್ದ ಮಂಪರೆಲ್ಲಾ ಹಾರಿಹೋಗಿತ್ತು. ಏನಿವಳ ಕಥೆ? ಏನಿವಳ ಸ್ಟೈಲು? ಯಾವ ಹಿಮತೋಳ? ಯಾರು ಈ ಚಂದ್ರಮ್ಮ? ಅವಳು ನಾಳೆ ಡ್ಯೂಟಿಗೆ ಜಾಯಿನ್ ಆಗಿ ನನಗೇನಾಗಬೇಕಾಗಿದೆ? ಒಂದೂ ಅಂದವರಿಯಲಿಲ್ಲ. ಆದರೆ ಅವಳು  ‘ಸಕತ್ತಾಗೈತೆ ಅಲ್ವಾ’ ಎನ್ನುವಾಗಿ ಅವಳ ಧ್ವನಿಯಲ್ಲಿ ಎಂಥದೋ ಸಿನುಗು ಹೊಡೆದಿದ್ದಂತೂ ನಿಜ. ಅದೇನು ಮತ್ಸರದ ಸಿನುಗೇ? ಯಾರೊಂದಿಗೆ?!

V

ಯಾವುದೋ ಕೆಟ್ಟ ಕನಸಿನಿಂದಾಗಿ ತಟ್ಟನೆ ಎಚ್ಚರವಾದಾಗ ಇನ್ನೂ ಬೆಳಕಾಗಿರಲಿಲ್ಲ. ಮಬ್ಬುಗತ್ತಲಿನಲ್ಲಿ ಮರಗಿಡಗಳೆಲ್ಲಾ ಕಾವಳಹೊದ್ದು ಕುಳಿತಿವೆ. ಮಂದಗಾಳಿ ದೈವಿಕ ದಿಕ್ಕುಗಳನ್ನರಸಿ ಚಲಿಸುತ್ತಿದೆ. ಈ ಮುಂಜಾವು-ಸಂಜೆಗಳು ನನ್ನ ನಿತ್ಯ ಬದುಕಿನ ಎರಡು ಸ್ವರ್ಗೀಯ ಮುಹೂರ್ತ ಗಳು. ಇವು ನನ್ನ ಕನಸುಗಳ ಹಕ್ಕಿ ಕಾವಿಗೆಕೂರುವ ಹೊತ್ತು. ಎಂದೋ ಇಟ್ಟ ತತ್ತಿಗಳಲ್ಲಿ ಒಂದಷ್ಟು ಒಡೆದು ಇಂದಿಗೊಂದೆರಡು ಕನಸಿನ ಮರಿಯನ್ನು ನನ್ನ ಮನದಂಗಳಕ್ಕೆ ಬಿಡುವ ಮುಹೂರ್ತ. ಹಾಗಾಗಿಯೇ ನಾನು ಈ ಹೊತ್ತುಗಳಲ್ಲಿ ಮೃತ್ಯು ಸ್ವರೂಪಿಯಾದ ಊರಾಚೆಯ ಹೊಂಗೆಯ ನಡುವೆ ಏಕಾಂಗಿಯಾಗಿ ಓಡಾಡುತ್ತಿದ್ದೆನೇ? ಸಾವಿನ ಸನ್ನಿಧಿಯಲ್ಲಿ!! ಇದೆಂಥ ವಿಚಿತ್ರ!!. ಈ ಕ್ಷಣವೂ ಇದು ನನ್ನ ಪ್ರಜ್ಞೆಗೆ ಅನುಭವವಾಗುತ್ತಿದ್ದಂತೆ ಮತ್ತೆ ಆ ಭೀತಿಯ ಗಾಢತೆ ಮರುಕಳಿಸಿ, ನನ್ನನ್ನು ಕಾಡುತ್ತಿದೆ. ಸೂಳೆಕೆರೆಯ ಹಿನ್ನೀರಿನ ಅಗಾಧ ವಿಸ್ತಾರದಲ್ಲಿ ಹಾಸಿ ಬಿದ್ದಿರುವ ಮರಳಿನ ಮೇಲೆ ಹರಡಿಕೊಂಡಿರುವ ಹೊಂಗೆ ನಿಜಾರ್ಥದಲ್ಲಿ ತೋಪಲ್ಲ. ಹಾಗೆಂದು ಕಾಡೂ ಅಲ್ಲ. ಇದು ನನ್ನ ಸಮಸ್ಯೆಯ ಹಾಗೆ, ಹೆಸರಿಲ್ಲದ್ದು.

ನಾನು ಕ್ಯಾಂಟೀನಿನಿಂದ ನನ್ನ ಕೊಟಡಿಗೆ ಹಿಂತಿರುಗುವ ಹೊತ್ತಿಗಾಗಲೇ ಇಡೀ ವೈದ್ಯರ ತಂಡ ಅಲ್ಲಿ ನೆರೆದಿತ್ತು. ಮಂಚದ ಸುತ್ತ ನಿನ್ನೆಯಂತೆಯೇ ಒಂದು ಯಂತ್ರಾಗಾರವನ್ನು ನಿರ್ಮಿಸಲಾಗಿತ್ತು. ಇಂದು ತಂಡದೊಂದಿಗೆ ಇನ್ನೂ ಕೆಲವು ಹೊಸ ಮುಖಗಳಿದ್ದವು. ಎಲ್ಲರೂ ಕೂಡಿ ನನ್ನನ್ನು ತುಂಬಾ ಹಾರ್ದಿಕವಾಗಿ ಸ್ವಾಗತಿಸಿದರು. ಸ್ಟಾನ್ಲಿ ಹೊಸಬರಿಗೆ ನನ್ನನ್ನು ಪರಿಚಯಿಸುತ್ತಾ…. ಇಂದು ಕ್ಯಾಂಟೀನಿನಲ್ಲಿ ಮಾಡಿರುವ ಉಪ್ಪಿಟ್ಟಿನ ರುಚಿಯಬಗ್ಗೆ ಹೇಳುತ್ತಾ…. ನಿಮಗೇನನಿಸಿತು? ಎಂದರು. ನಾನು ಬಾಯಿಬಿಡುವಷ್ಟರಲ್ಲಿ ಮಂಚದ ತುದಿಗೆ ಒರಗಿ ನಿಂತಿದ್ದ ಕಡವೆ ನನ್ನತ್ತ ನೋಡದೆ ‘ಅವರಿಗೆ ಕಂದು ಬಣ್ಣದ ಏನೂ ಇಷ್ಟವಾಗುವುದಿಲ್ಲ. ಏನಿದ್ದರೂ ವೈಟ್ ಅಂಡ್ ವೈಟ್. ಹೀ ಲೈಕ್ಸ್ ಇಡ್ಲಿ, ವೈಟ್ ಅಂಡ್ ವೈಟ್’ ಎಂದಿತು. ಮತ್ತದೇ ಕ್ಯಾತೆ. ಎಲ್ಲರೂ ಚಕಿತರಾಗಿ ಕಂತುಗಳಲ್ಲಿ ಅವಳನ್ನೂ-ನನ್ನನ್ನೂ ನೋಡಹತ್ತಿದರು. ನನಗೆ ಸ್ವಲ್ಪ ಇರುಸುಮುರುಸಾಯಿತು. ಆದರೆ ಅವಳು ಯಾವುದೋ ಲಹರಿಯಲ್ಲಿದ್ದಳು. ನನಗೆ ಇಡ್ಲಿ ಇಷ್ಟವೆಂಬುದು ನಿಜವಾದರೂ ಅದು ಬೆಳ್ಳಗಿದೆ ಎಂಬ ಕಾರಣದಿಂದ ನಾನು ಅದನ್ನು ಇಷ್ಟ ಪಡುತ್ತೇನೆಂದು ಅವಳು ಮಾಡುತ್ತಿದ್ದ ಆಪಾದನೆ ಸೀದಾಸಾದಾ ಅಲ್ಲ. ಅದರ ಹಿಂದೆ ಮತ್ತೇನೋ ಇದ್ದಂತಿತ್ತು. ಅವಳ ಕ್ಯಾತೆಯ ಉದ್ದೇಶ ನನಗೆ ಹೊಳೆಯಲಿಲ್ಲ.

ಇದಕ್ಕೆ ಪ್ರತಿಕ್ರಿಯೆಯಾಗಿ ಸ್ವಲ್ಪ ವಿಸ್ತಾರವಾಗಿಯೇ ನಗುತ್ತಿದ್ದ ಸ್ಟಾನ್ಲಿ ನನ್ನ ಮುಖ ನೋಡಿ ಮಂಚವೇರಲು ಸೂಚಿಸಿದರು. ಯಥಾವತ್ ನಿನ್ನೆಯಂತಹುದೇ ಸ್ಥಿತಿ, ಅದೇ ವೈರು ಪೈಪುಗಳನ್ನು ನನಗೆ ಲಗತ್ತಿಸಿಯಾದಮೇಲೆ ಸ್ಟಾನ್ಲಿಯದು ಅದೇ ಆದೇಶ ‘ಕ್ಲೋಸ್ ಯುವರ್ ಐಸ್…ಟೇಕ್ ಡೀಪ್ ಬ್ರೀತ್….’ ಇಂದು ನನ್ನ ಕಣ್ಣುಗಳು ಮುಚ್ಚಿದವಾದರೂ ನಿನ್ನೆಯಂತೆ ವಶೀಕರಣಕ್ಕೊಳಗಾಗಲು ಮನಸ್ಸು ವಿರೋಧಿಸಹತ್ತಿತು. ಹಾಗಾಗಿ ನೋಡುವವರಿಗೆ ನಾನು ನಿನ್ನೆಯ ಫೀಲ್ ನೀಡುತ್ತಿದ್ದರೂ, ಎಚ್ಚರವಾಗಿದ್ದೆ. ತಂಡದ ಉಳಿದವರು ಸ್ಟಾನ್ಲಿಯೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು. ಸ್ಟಾನ್ಲಿ ಈ ಸೈಕೋ ನ್ಯೂರಾಲಜಿಯ ಅನಿಶ್ಚಯತೆಗಳ ಬಗ್ಗೆ ಹೇಳುತ್ತಿದ್ದಾರೆ. ಒಂದು ಕೇಸಿನಲ್ಲಿ ಗೆದ್ದವು ಎಂದು ಕೊಂಡರೆ ಇನ್ನೊಂದು ಕೇಸಿನಲ್ಲಿ ಹೇಗೆ ದಿಕ್ಕುತಪ್ಪಿ ಅಸಹಾಯಕರಾಗಿ ಬಿಡುತ್ತೇವೆ ಎಂದು ವಿವರಿಸುತ್ತಿದ್ದಾರೆ. ಹಾಗಾಗಿ ಒಂದು ಕೇಸಿಗೆ ಅನ್ವಯಿಸುವ ಲ್ಯಾಬ್ ರಿಸಲ್ಟುಗಳನ್ನು ಇನ್ನೊಂದು ಕೇಸಿಗೆ ಹೇಗೆ ಅನ್ವಯಿಸಲಾಗದು ಮತ್ತು ಯಾಕೆ ಎಂದೆಲ್ಲಾ ಹೇಳುತ್ತಿದ್ದಾರೆ. ತಂಡದ ಕಡೆಯಿಂದ ಅನೇಕಾನೇಕ ಪ್ರಶ್ನೆಗಳು ಬರುತ್ತಿವೆ, ಎಲ್ಲಕ್ಕೂ ಸ್ಟಾನ್ಲಿಯ ಉತ್ತರ ಸಮಂಜಸವಾಗಿಯೇ ಇದ್ದಂತೆ ಕಾಣುತ್ತಿದೆ. ನಡುನಡುವೆ ಯಾವ್ಯಾವುದೋ ಕೇಸಿನ ದುಷ್ಠಾಂತಗಳನ್ನು ಹೇಳುತ್ತಿದ್ದಾರೆ. ಸಮಯ ಸರಿಯುವುದೇ ತಿಳಿಯುತ್ತಿಲ್ಲ. ನಡುನಡುವೆ ಮೌನ.

ಒಂದು ದೀರ್ಘ ಮೌನದ ನಂತರ ಕಡವೆಯ ಧ್ವನಿ. ‘ಈ ದೇಶದಲ್ಲಿ ಮತ್ತು ಬೇರೆಕಡೆ ಇಂಥ ಕೇಸುಗಳು ಇವೆಯೇ?’

ಸ್ಟಾನ್ಲಿ: ‘ದೇರ್ ಈಸ್, ಬಟ್ ನಾಟ್ ಟಿಪಿಕಲ್’.

ಇನ್ನೊಂದು ಧ್ವನಿ: ‘ಒಂದಾದ್ರೂ ಡಯಾಗ್ನೋಸ್ ಆಗಿದೆಯಾ?’

ಸ್ಟಾನ್ಲಿ: ‘ನಾಟ್ ಶ್ಯೂರ್, ಇನ್ನೇನು ಡಯಾಗ್ನೋಸ್ ಆಗ್ತಾ ಇದೆ, ಎಸ್… ಫೈಂಡ್ ಔಟ್ ಆಯಿತು ಎನ್ನೋಹೊತ್ತಿಗೆ ಅದಲ್ಲಾ ಅಂತಾ ಪ್ರೂವ್ ಆಗಿರೋದೇ ಹೆಚ್ಚು’.

ಡಾ. ಮುನಿ: ‘ಡಾ. ಸ್ಟಾನ್ಲಿ …ದೆನ್ ವೇರ್ ಈಸ್ ದ ಪ್ರಾಬ್ಲಮ್? ಹೂಸ್?’

ಸ್ಟಾನ್ಲಿ: ‘ಯಾರದು ಬೇಕಾದ್ರೂ, ಎಲ್ಲಿ ಬೇಕಾದ್ರೂ ಪ್ರಾಬ್ಲಮ್ ಇರಬಹುದು! ಪೇಶಂಟ್, ಡಾಕ್ಟರ್, ಮೆಡಿಕಲ್ ಸಿಸ್ಟಂ, ಡಯಾಗ್ನೋಸಿಂಗ್ ಸಿಸ್ಟಂ… ಹೀಗೇ… ಪರ್ಸಪ್ಷನ್ನಲ್ಲೇ ಪ್ರಾಬ್ಲಮ್ ಇರಬಹುದು’.

ಕಡವೆ: ‘ಇದು ನಿಜಕ್ಕೂ ಏನು… ಸೈಕಾಲಜಿಕಲ್ ಆರ್ ನ್ಯೂರಾಲಜಿಕಲ್?’ ತಟ್ಟನೆ ಎಲ್ಲರೂ ನಗುತ್ತಿದ್ದಾರೆ. ಸ್ಟಾನ್ಲಿ ಸಹಿತವಾಗಿ.

ಸ್ಟಾನ್ಲಿ: ‘ಲಿಸನ್ ಯಂಗ್ ಲೇಡಿ. ಯು ಆರ್ ರೈಟ್, ಬಟ್ ಪ್ರಾಬ್ಲಮ್ ಇರೋದೇ ಅಲ್ಲಿತಾನೆ? ಅದೇ ತಾನೇ ಈಗ ಡಯಾಗ್ನೋಸ್ ಆಗಬೇಕಾಗಿರೋದು’ ಅಂದವರು ಸ್ವಲ್ಪ ಹೊತ್ತು ಮಾತು ನಿಲ್ಲಿಸಿದರು.

ನಂತರ, ನಿಮಗೆ ಹಿಟ್ಲರ್ ಗೊತ್ತಲ್ಲಾ? ದಿ ಗ್ರೇಟ್ ಡಿಕ್ಟೇಟರ್. ಅವನ ನೆಕ್ಸ್ಟ್ ಪ್ಲೇಸಲ್ಲಿ ಇನ್ನೊಬ್ಬ ಇದ್ದ. ಅವನ ಹೆಸರು ಹಿಮ್ಲರ್ ಅಂತಾ, ಹೆನ್ರಿಚ್ ಹಿಮ್ಲರ್. ಈತ ಜರ್ಮನಿಯ ಗೂಢಾಚಾರ ವಿಭಾಗದ ಮುಖ್ಯಸ್ಥ ಸಹ. ಹಿಟ್ಲರನ ಎಲ್ಲಾ ದುಷ್ಟ ಆಲೋಚನೆಗಳನ್ನು ಇಂಪ್ಲಿಮೆಂಟ್ ಮಾಡ್ತಾ ಇದ್ದವನು ಇವನೇ. ಎಲ್ಲ ಮಾರಣಹೋಮಕ್ಕೂ ಅಧಿಕೃತವಾಗಿ ಆದೇಶ ನೀಡುತ್ತಿದ್ದವನು ಇವನೇ! ಇವನಿಂದಾಗಿಯೇ ಅಲ್ಲಿ ಲಕ್ಷಾಂತರ ಜನ ಸತ್ತಿದ್ದು. ಇವನಿಗೆ ಒಂದು ಖಾಯಿಲೆ ಇತ್ತು, ಇವನಿಗೆ ಆಗಾಗ ಹೊಟ್ಟೆನೋವು ಬರೋದು. ಹಿಂಸಾತ್ಮಕ ಹೊಟ್ಟೆನೋವು. ಇದರಿಂದ ತುಂಬಾ ನರಳ್ತಾ ಇದ್ದ. ಎಲ್ಲಾ ಥರದ ಟ್ರೀಟ್ಮೆಂಟ್ ಗಳೂ ಮುಗಿದಿದ್ವು. ಆದ್ರೂ ಅವನ ಹೊಟ್ಟೆನೋವು ಮಾತ್ರಹೋಗಲಿಲ್ಲ. ಒಂದು ಸಾರಿ ಒಬ್ಬ ವಿಶೇಷ ವೈದ್ಯನ ಬಗ್ಗೆ ಇವನಿಗೆ ಮಾಹಿತಿ ಸಿಗುತ್ತೆ. ಆತ ಇಂಥಾ ಪೆಕ್ಯೂಲಿಯರ್ ಖಾಯಿಲೆಗಳನ್ನು ಟ್ರೀಟ್ ಮಾಡೋದ್ರಲ್ಲಿ ತುಂಬಾ ಫೇಮಸ್ ಆಗಿರ್ತಾನೆ. ನಿಜಹೇಳಬೇಕು ಅಂದ್ರೆ ಅವನೊಬ್ಬ ಮಸಾಜ್ ವೈದ್ಯ. ಅವನು ಬರ್ತಾನೆ. ಇವನ ಕಚೇರಿಯಲ್ಲಿಯೇ ಹಿಮ್ಲರ್ಗೆ ಟ್ರೀಟ್ ಮೆಂಟ್ ಕೊಡ್ತಾನೆ. ಕ್ಷಣಾರ್ಧದಲ್ಲಿ ಅವನಿಗೆ ಹೊಟ್ಟೆನೋವು ಹೊರಟು ಹೋಗುತ್ತೆ. ಇವನು ಬೇರೆ ದೇಶದವನು. ಆದರೂ ಹಿಮ್ಲರ್ ಇವನನ್ನು ತನ್ನ ಖಾಸಾ ವಲಯಕ್ಕೆ ಸೇರಿಸಿಕೊಳ್ಳುತ್ತಾನೆ. ಈ ವೈದ್ಯ ಹಿಮ್ಲರ್ ಗೆ ನೋವು ಬಂದಾಗಲೆಲ್ಲಾ ಬಂದು ಟ್ರೀಟ್ ಮೆಂಟ್ ಕೊಡ್ತಾನೆ. ಈ ಮಧ್ಯೆ ವೈದ್ಯ ಒಂದನ್ನು ಗಮನಿಸುತ್ತಾನೆ. ಯಾವುದೇ ಯುದ್ಧ, ಮಾರಣಹೋಮ ಅಥವಾ ಇನ್ನಾವುದೇ ಕ್ರೂರ ನಿರ್ಧಾರಗಳನ್ನು ತಗೆದುಕೊಳ್ಳುವಾಗ ಅಥವಾ ಅದನ್ನು ಇಂಪ್ಲಿಮೆಂಟ್ ಮಾಡುವಾಗ ಮತ್ತು ಮಾಡಿದ ನಂತರ ಅನೇಕ ದಿನಗಳು ಇವನಿಗೆ ನೋವು ಕಾಣಿಸಿಕೊಳ್ಳುತ್ತೆ. ಇವನು ಟ್ರೀಟ್ ಮಾಡಿದರೆ ವಾಸಿಯಾಗುತ್ತೆ. ಇಲ್ಲಿನ ಇಷ್ಯೂ ಅಂದ್ರೆ…. ಈ ವೈದ್ಯ ಅವನಿಗೆ ಯಾವ ಔಷಧಗಳನ್ನೂ ಕೊಡುವುದಿಲ್ಲ. ಕೇವಲ ತನ್ನ ಕೈಯನ್ನು ಅವನ ನೋವಿರುವ ಭಾಗದಲ್ಲಿ ಆಡಿಸುವ ಮೂಲಕ ಅವನ ನೋವು ಕಡಿಮೆ ಆಗ್ತಾ ಇರುತ್ತೆ.

ಸ್ಟಾನ್ಲಿ ಸ್ವಲ್ಪ ಹೊತ್ತು ಮೌನವಾಗುತ್ತಾರೆ. ಇಡೀ ಕೊಟಡಿಯಲ್ಲಿ ಎಲ್ಲರೂ ಸತ್ತಂತೆ ಕುಳಿತಿದ್ದರು.

ಸ್ವಲ್ಪ ಹೊತ್ತಿನ ನಂತರ ಸ್ಟಾನ್ಲಿ : ಈಗ ಹೇಳಿ ಇದೇನು? ಸೈಕಾಲಜಿಕಲ್ಲಾ, ನ್ಯೂರಾಲಜಿಕಲ್ಲಾ ಅಥವಾ ಸೈಕೋ ನ್ಯೂರಾಲಜಿಕಲ್ಲಾ? ಅಥವಾ ಅವನ ಜೀವನ ಶೈಲೀನಾ, ಬದುಕಿನ ಒತ್ತಡಾನಾ, ದೃಷ್ಟಿಕೋನಾನಾ? ಇಲ್ಲಾ… ಈ ಎಲ್ಲಾ ಸೇರಿದ ಒಂದು ನಿರ್ದಿಷ್ಟ ಕಾಲ ಘಟ್ಟ ಒಂದು ವ್ಯಕ್ತಿತ್ವವನ್ನು ಆವರಿಸುವ ರೀತೀನಾ… ಏನು? ಮಸಾಜಿನಿಂದ ಅಥವಾ ಸ್ಪರ್ಷದಿಂದ ಹೊಟ್ಟೆನೋವಿನ ಥರದ ಫಿಸಿಕಲ್ ಪ್ರಾಬ್ಲಂ ವಾಸಿ ಆಗೋಕೆ ಸಾಧ್ಯಾನಾ, ನಿಮ್ಮ ಮೆಡಿಕಲ್ ಸೈನ್ಸ್ ಪ್ರಕಾರ? ಮತ್ತೆ ಅವನಿಗೆ ಹೇಗೆ ರಿಲೀಫ್ ಆಗ್ತಾ ಇತ್ತು. ಇದನ್ನು ಏನಂತಾ ಡಯಾಗ್ನೋಸ್ ಮಾಡೋದು?
ಮತ್ತೆ ಸುದೀರ್ಘ ಮೌನ. ನಿಧಾನವಾಗಿ ಸ್ವಲ್ಪವೇ ಕಣ್ಣು ಹೊರಳಿಸಿ ನೋಡಿದೆ. ಎಲ್ಲ ಗರಬಡಿದವರಂತೆ ಕುಳಿತಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ಒಬ್ಬ ಕಿರಿಯ ವೈದ್ಯ: ಡಾಕ್… ವಾಟ್ ಈಸ್ ದ ನೇಮ್ ಆಫ್ ದಟ್ ಡಾಕ್ಟರ್? ಎಂದು ಧ್ವನಿ ತೆಗೆದ.

ಸ್ಟಾನ್ಲಿ: ನೇಮ್ ಆಫ್ ದಟ್ ಡಾಕ್ಟರ್, ದಟ್ ಡಾಕ್ಟರ್, ಎನ್ನುತ್ತಾ…. ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.

ಅಷ್ಟರಲ್ಲಿ ನಾನು ಪೂರ್ಣವಾಗಿ ಕಣ್ಣು ಬಿಡುತ್ತಾ… ಡಾ. ಫೆಲಿಕ್ ಕ್ರೆಸ್ಟೆನ್, ಫಿನ್ಲೆಂಡ್ ಸಿಟಿರುುನ್ ಎಂದೆ. ಎಲ್ಲರ ಕಣ್ಣುಗಳೂ ವಿಚಿತ್ರ ಪ್ರಾಣಿಯನ್ನು ನೋಡುವಂತೆ ತಟ್ಟನೆ ನನ್ನತ್ತ ದೃಷ್ಟಿ ಹೊರಳಿಸಿದರು. ಕಡವೆಯ ಕಣ್ಣುಗಳಂತೂ ಕೆರೆಯಂತಾಗಿ ಹಾಗೇ ಸ್ಥಿರವಾಗಿದ್ದವು.

ಸ್ಟಾನ್ಲಿ ನನ್ನ ಭುಜದ ಮೇಲೆ ಬಲವಾಗಿ ಕೈಯೂರಿ ಏನನ್ನೋ ಗೆದ್ದವರಂತೆ ನನ್ನನ್ನು ನೋಡುತ್ತಿದ್ದರು. ನನಗೆ ಮತ್ತದೇ ಮಂಪರು ಮಂಪರು…. ನಿಧಾನವಾಗಿ ಕಣ್ಣು ಮುಚ್ಚಿದೆ.

VI

ಮತ್ತೆ ಎಚ್ಚರವಾದಾಗ ಸುತ್ತ ನೋಡಿದೆ. ಕಡೆವೆ ನನ್ನ ಟೇಬಲ್ಲಿನ ಮೇಲೆ ಚಕ್ಕಳಬಕ್ಕಳ ಹಾಕಿ ನನ್ನದೊಂದು ನೋಟ್ ಪುಸ್ತಕದಲ್ಲಿ ತಲ್ಲೀನವಾದಂತೆ ಕುಳಿತಿದ್ದಾಳೆ, ತೊಡೆಯ ಮೇಲಿರುವ ಕೈಗಳ ಭಂಗಿಯನ್ನು ಬಿಟ್ಟರೆ ತದ್ವತ್ ಚಿತ್ರದಲ್ಲಿರುವ ದೇವತೆಯಂತೆ. ಬಾಗಿಲ ಕಡೆಗೆ ನೋಡಿದೆ. ಅಲ್ಲಿ ಈ ಕೇಂದ್ರದ ಯೂನಿಫಾರಂನಲ್ಲಿರುವ ಇನ್ನೊಂದು ಹೆಂಗಸು ಕುಳಿತಿದೆ. ಐವತ್ತರ ಆಜೂಬಾಜಿನ ದಿಟ್ಟ ಮುಖದ ಆರೋಗ್ಯವಂತ ಮುಖಭಾವದ ಹೆಂಗಸು. ಹೋ… ಚಂದ್ರಮ್ಮ ಇರಬೇಕು. ಇವಳ ಆಪ್ತ ಸಖಿ!? ನಾನು ಎದ್ದುಕೂರುತ್ತಿರುವುದನ್ನು ಕಂಡ ಕಡವೆ ಧಡಕ್ಕನೆ ಇಳಿದು ನನ್ನತ್ತ ಬಂದಿತು. ನನ್ನ ಕಾಲಿನ ಕಡೆಗಿದ್ದ ಕುರ್ಚಿಯನ್ನು ಹತ್ತಿರಕ್ಕೆ ಎಳೆದುಕೊಂಡು ನನ್ನತ್ತ ಮುಖಮಾಡಿ ಸಾವಧಾನವಾಗಿ ಕುಳಿತು, ಮಂಚದ ಮೇಲೆ ಒಂದು ಕೈ ಚೆಲ್ಲುತ್ತಾ ‘ಕಾಫಿ’ ಎಂದಿತು. ‘ಟೀ’ಎಂದೆ. ಅವಳು ಆ ಹೆಂಗಸಿನತ್ತ ನೋಡಿದಳು. ಅವಳು ಹತ್ತಿರಕ್ಕೆ ಬಂದಳು. ‘ಇವರು ಚಂದ್ರಮ್ಮ’ ಎಂದಳು. ನಾನು ‘ಗೊತ್ತು, ಸೀನಿಯರ್ ಸ್ಟಾಫ್ ನರ್ಸ್’ ಎಂದೆ. ಮತ್ತದೇ ಬಟ್ಟಲುಗಣ್ಣುಗಳನ್ನು ಅರಳಿಸಿ ಚಕಿತಳಾಗಿ ನನ್ನತ್ತ ನೋಡಿದಳು. ನಾನು ವಿಶ್ವಾಸದ ನಗುವನ್ನು ಚೆಲ್ಲಿ ಚಂದ್ರಮ್ಮನತ್ತ ನೋಡಿದೆ. ಆಕೆಯ ಮುಖಭಾವ ಸ್ನೇಹಪೂರ್ವಕವಾಗಿ ಅರಳಿತು. ನಂಬುವಂಥ ನೋಟ. ಕಡವೆ ಮತ್ತೆ ಅವಳತ್ತ ನೋಡಿತು. ಚಂದ್ರಮ್ಮ ಟೇಬಲ್ಲಿನ ಮೇಲಿದ್ದ ಫ್ಲಾಸ್ಕ್ ತಗೆದುಕೊಂಡು ಹೊರಹೋದಳು.

ಕಡವೆ ಎದುರಿಗಿದ್ದ ಗೋಡೆಯನ್ನು ನೋಡುತ್ತಾ ಒಂದು ಬಗೆಯ ಲಹರಿಯಲ್ಲಿ ಏನೋ ಅಸ್ಪಷ್ಟವಾಗಿ ಗುನಗುನಿಸುವಂತೆ ಮಾಡುತ್ತಿದ್ದವಳು ನನ್ನತ್ತ ನೋಡುತ್ತಾ ‘ಈಗ ಹೇಗಿದೆ?’ ಎಂದಳು. ನಾನು ‘ಏನು’ ಎನ್ನುವಂತೆ ಅವಳತ್ತ ನೋಡಿದೆ. ಅವಳು ನನ್ನ ಎಡಭಾಗದತ್ತ ವೇದನೆಯಿಂದೆಂಬಂತೆ ನೋಡಿದಳು. ಈವರೆಗೂ ಅತ್ತ ಗಮನವಿಲ್ಲದೆ ಕುಳಿತಿದ್ದ ನನಗೆ ಇದ್ದಕ್ಕಿದ್ದಂತೆ ಆ ಭಾಗದ ಯಾತನೆ ಮರುಕಳಿಸಿದಂತಾಯಿತು. ನಾನು ನನ್ನ ಎಡಗಾಲನ್ನು ಸವರಿಕೊಳ್ಳುತ್ತಾ ನಿರ್ಲಿಪ್ತನಾಗಿ ನೋಡಿದೆ. ಈಗಾಗಲೇ ಹಾಸಿಗೆಯ ಮೇಲೆ ಚೆಲ್ಲಿದ್ದ ಕೈಯನ್ನು ನನ್ನ ಎಡಗಾಲಿನ ಮೇಲಿಟ್ಟು…. ‘ಈಗ ನಿಮಗೆ ನೋವು ಕಡಿಮೆಯಾಗಿರಬೇಕು, ಅಲ್ಲವೇ?’ ಎಂದಳು’. ನಾನು ಗಲಿಬಿಲಿಗೊಂಡು ಅವಳತ್ತ ನೋಡಿದೆ. ಅವಳು ಎಂಥದ್ದೋ ಓದಲಾಗದ ಮುಖಭಾವದಲ್ಲಿ ‘ನೀವು ಮನೆಬಿಟ್ಟು ಎಷ್ಟುದಿನಗಳಾದವು?’ ಎಂದಳು. ‘ನಿಮಗೇ ಗೊತ್ತಲ್ಲ’ ಎಂದೆ. ಅವಳು ‘ಅದಕ್ಕೆ ಮುಂಚೆ ಮನೆಯಲ್ಲಿ ನೀವೊಬ್ಬರೇ ಇದ್ದಿರಾ? ಅಥವಾ ಇನ್ಯಾರಾದರೂ?’ ಎಂದಳು. ಅವಳ ಪ್ರಶ್ನೆಯ ಹಿನ್ನೆಲೆ ತಿಳಿಯದೆ ಮತ್ತದೇ ಗೊಂದಲದಿಂದ ಅವಳತ್ತ ನೋಡಿದೆ. ಸ್ವಲ್ಪ ಹೊತ್ತು ಮೌನ.

ಅವಳು: ‘ಅಲ್ಲಾ ಅದಕ್ಕೆ ಮುಂಚೆ ಎಷ್ಟು ದಿನಗಳವರೆಗೆ ನೀವೋಬ್ಬರೇ ಇದ್ದಿರಿ?’

ನಾನು: ‘8-10 ದಿನಗಳು’

ಅವಳು: ಸೋ …. ಒಟ್ಟಾರೆ 44-45 ದಿನಗಳು. ಹೀಗೆ ಈ ಹಿಂದೆ ನೀವು ಅನೇಕ ದಿನಗಳು ಹೀಗೇ ಒಂಟಿಯಾಗಿದ್ದಾಗ ನಿಮಗೆ ಎಂದಾದರೂ ರಿಲೀಫ್ ಅನ್ನಿಸಿದುಂಟೇ?. ಅನ್ನಿಸಿದ್ದು ‘ಇಲ್ಲ-ಹೌದು’ ಆಗಿದ್ದರಿಂದ ನಾನು ‘ಹಾಗೇನಿಲ್ಲ’ ಎಂದೆ.

ಅವಳು: ‘ಸುಳ್ಳು ಹೇಳುತ್ತಿದ್ದೀರಿ’ ಎಂಬಂತೆ ತೀಕ್ಷ್ಣವಾಗಿ ನನ್ನ ಮುಖ ನೋಡುತ್ತಾ…. ‘ನೀವು ಒಮ್ಮೆ ಚಿಲಿಗೆ ಹೋಗಿದ್ದಾಗ….’ ಎಂದವಳು, ಮಾತನ್ನು ಅರ್ಧಕ್ಕೇ ನಿಲ್ಲಿಸಿ ನನ್ನತ್ತ ಪರೀಕ್ಷಾರ್ಥನೋಟ ಬೀರಿದಳು.
ಅಯ್ಯೋ ದೇವರೇ…. ಈ ವಿವರಗಳೆಲ್ಲಾ ಇವಳಿಗೆ ಸಿಕ್ಕಿದ್ದು ಹೇಗೆ? ಆತ್ಮಕ್ಕೇ ಕೈ ಹಾಕುತ್ತಿದ್ದಾಳಲ್ಲ!. ನನ್ನ ತೀರಾ ಖಾಸಗಿಯಾದ ಇಂಥ ವಿಚಾರಗಳನ್ನು ಇವಳು ಇಷ್ಟು ಸುಲಭವಾಗಿ ಪ್ರಸ್ತಾಪಿಸುತ್ತಿರುವ ಬಗ್ಗೆ ಯಾಕೋ ಕಸಿವಿಸಿಯಾಗುತ್ತಿತ್ತು. ಆ ಭಾವದಲ್ಲೇ ಕೇಳಿದೆ ‘ಇದೇನು ಮೆಡಿಕಲ್ ಇನ್ವೆಸ್ಟಿಗೇಷನ್ನಾ ಇಲ್ಲಾ ಪೋಲೀಸ್ ಇಂಟರಾಗೇಷನ್ನಾ’ ಅದಕ್ಕೆ ಅವಳು ಕೊಂಚವೂ ವಿಚಲಿತವಾಗದೆ, ತಟ್ಟನೆ ಆದರೆ ಖಚಿತವಾಗಿ ‘ಎರಡೂ ಅಲ್ಲ’ ಅಂದಳು. `ಮತ್ತೇನು?’ ಎಂಬಂತೆ ಅವಳತ್ತ ನೋಡಿದೆ. ನನ್ನ ಕಾಲುಗಳ ಮೇಲಿದ್ದ ಅವಳ ಕೈಯನ್ನು ಮೇಲಕ್ಕೆ ಸರಿಸಿ ನನ್ನ ಕೈಯನ್ನು ಅದುಮಿ ಹಿಡಿದು ‘ಇದು ನಿಮಗೆ ಸೈಕಾಲಜಿಕಲ್ ಅನ್ಸುತ್ತಾ?!’

‘ಗೊತ್ತಿಲ್ಲ….! ಆದ್ರೆ ಬೇರೆ ಯಾವುದೇ ಫ್ಯಾಕಲ್ಟಿಗಳಲ್ಲಿ ಡಯಾಗ್ನೋಸ್ ಆಗದೆ ಇಲ್ಲಿಗೆ ರೆಫರ್ ಮಾಡಿವೆ ಅಂದ್ರೆ, ಇದ್ರೂ ಇರಬಹುದು!?’ ಎಂದೆ. ಅವಳು ತನ್ನ ಕೈ ಹಿಡಿತವನ್ನು ಮತ್ತೂ ಬಿಗಿಗೊಳಿಸುತ್ತಾ ನನ್ನತ್ತ ನೋಡಿದಾಗ ತೀರಾ ವಿಚಲಿತಗೊಂಡ ಮನಸ್ಸು ಈ ಅನಿಶ್ಚಿತ ಸ್ಥಿತಿಯಿಂದ ಹೊರಬರಲು ಚಡಪಡಿಸುತ್ತಿತ್ತು. ಈ ನಡುವೆ ನನ್ನತ್ತ ಬಾಗಿದಂತೆ ಕುಳಿತಿದ್ದ ಅವಳ ದೇಹದ ನಿಶೇಧಿತ ಪ್ರದೇಶಗಳತ್ತ ನುಗ್ಗಲು ತವಕಿಸುತ್ತಿದ್ದ ಕಣ್ಣುಗಳನ್ನು ನಿಯಂತ್ರಣದಲ್ಲಿಡಲು ಕಷ್ಟವಾಗುತ್ತಿತ್ತು. ನನ್ನ ಈ ಕಷ್ಟದ ಅರಿವೇ ಇಲ್ಲದವಳಂತೆ ಒಂದು ಬಗೆಯ ಧ್ಯಾನಸ್ಥ ಸ್ಥಿತಿಯಲ್ಲಿದ್ದಂತೆ ಕಂಡ ಅವಳು ನನ್ನತ್ತ ನೋಡದೆ ‘ಮದುವೆಯಾದ ಹೊಸದರಲ್ಲಿ ಚಂದ್ರಮ್ಮನ ಗಂಡನಿಗೂ ಹೀಗೇ….’ ಎನ್ನುವುದರೊಳಗೆ ಚಂದ್ರಮ್ಮ ಬಾಗಿಲಲ್ಲಿ ಕಾಣಿಸಿಕೊಂಡಳು. ಅವಳು ಮಾತು ನಿಲ್ಲಿಸಿದಳು. ಆದರೆ ಅವಳಿದ್ದ ಭಂಗಿಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಅವಳ ಕೈ ನನ್ನನ್ನು ಹಿಡಿದೇ ಇತ್ತು. ಅವಳು ಹಾಗೆ ನನ್ನತ್ತ ಬಾಗಿಯೇ ಇದ್ದಳು. ಚಂದ್ರಮ್ಮ ಸಹ ತೀರಾ ಸಹಜವಾಗಿ ಟೀ ಬಗ್ಗಿಸಿಕೊಟ್ಟಳು. ನಾನು ಕೈಬಿಡಿಸಿಕೊಂಡು ಚಂದ್ರಮ್ಮನತ್ತ ಚಾಚಿದೆ. ನನಗೆ ತಿಳಿಯದ ಏನೋಒಂದು ಪರಸ್ಪರರಿಗೆ ತಿಳಿದಂತಿತ್ತು. ನಾನು ಎದ್ದು ವರಾಂಡಕಡೆಗೆ ನಡೆದೆ.

ಹೊರಗೆ ಮೋಡಮುಚ್ಚಿಕೊಂಡಿತ್ತು. ಅಕಾಲಿಕ ಮಳೆಯ ಲಕ್ಷಣಗಳು. ತಂಪುಗಾಳಿ ಕ್ಯಾಂಪಸ್ಸಿನ ಸಂದುಗೊಂದುಗಳಲ್ಲಿ ತೂರಿ ತಿಳ್ಳೆಯಾಡುತ್ತಿತ್ತು. ಚಳಿ ಅನಿಸುವಷ್ಟು ತಣ್ಣನೆಯ ಹವೆ. ಬಿಸಿಬಿಸಿ ಟೀ ಬೆಚ್ಚಗಾಗಿಸುತ್ತಿದೆ, ನಾಲಿಗೆಯನ್ನು. ಲೋಟ…. ಅಂಗೈಯನ್ನು. ಅದರಾಚೆಗೆ ಇದರ ಬಿಸಿ ವಿಸ್ತರಿಸುತ್ತಿಲ್ಲ, ವಿಸ್ತರಿಸಲಾಗದು. ಪ್ರಾಕ್ಟಿಕಲ್ಲಾಗಿ ಅದರ ಸಾಮಥ್ರ್ಯ ಅಷ್ಟೇ. ಉಳಿದಂತೆ ಮೈಯಿಡೀ ಬಿಸಿಯಾಗುವುದು ನಮ್ಮ ನಮ್ಮ ಭ್ರಮೆಯೇ?. ಹೊರಬಂದ ಕಡವೆ ಅಂಟಿಕೊಂಡಂತೆ ನಿಂತಿತು, ಈಗ ಮೈಯಿಡೀ ಬಿಸಿಯಾಗುವುದು ಸಾಧ್ಯವೇನೋ…!! ಅಥವಾ ಇದೂ ಭಾವನೆಗಳ ಕರಾಮತ್ತೇ?! `ಇಂದಿನಿಂದ ನಿಮ್ಮ ಟ್ರೀಟ್ಮೆಂಟಲ್ಲಿ ಒಂದು ಸಣ್ಣ ಬದಲಾವಣೆ: ನಿಮಗೆ ಒಂದು ಮಾತ್ರೆ ಹೆಚ್ಚು ಕೊಡಲಾಗುತ್ತೆ, ಡಯಟ್ಲ್ಲೂ ಒಂದು ಸ್ಮಾಲ್ ಛೇಂಜ್, ಊಟ-ತಿಂಡಿ ಮನೆಯಿಂದ ಬರುತ್ತದೆ. ಎನಿ ಪ್ರಾಬ್ಲಮ್?’ಎಂದಳು. ನಾನೇನೂ ಮಾತನಾಡಲಿಲ್ಲ. ಕೈಯನ್ನು ಒಮ್ಮೆ ಅದುಮಿ ‘ಇದು ಆಫ್ ದ ರೆಕಾರ್ಡ್’ ಅಂದವಳು ಸೀದಾ ಅಲ್ಲಿಂದ ಹೊರಟು ಹೋದಳು.

ಈ ಸಣ್ಣ ಬದಲಾವಣೆಗೆ ನನಗೆ ಬಹುದೊಡ್ಡ ಪ್ರಾಬ್ಲಮ್ ಇರಲು ಸಾಧ್ಯವಿರಲಿಲ್ಲ. ಅದೇನು ಅಂಥ ವ್ಯತ್ಯಾಸವನ್ನೇನೂ ಮಾಡುವುದಿಲ್ಲವೆಂದು ನನಗೆ ಗೊತ್ತು. ಆದರೆ ಇವಳೇಕೆ ಹೀಗೆ ವರ್ತಿಸುತ್ತಿದ್ದಾಳೆ? ತಂಡದ ಪ್ರಯತ್ನದ ಮೇಲೆ, ಸ್ಟಾನ್ಲಿಯ ಮೇಲೆ ಇವಳಿಗೆ ನಂಬಿಕೆ ಹೋಗುತ್ತಿದೆಯೇ? ಅಥವಾ ಈ ಎರಡನ್ನೂ ಮೀರಿ ಇವಳ ಸ್ವಂತವಾಗಿ ಏನನ್ನಾದರೂ ರುಜುವಾತು ಮಾಡಲು ಹೊರಟಿದ್ದಾಳೆಯೇ? ಅಥವಾ ನನ್ನಲ್ಲಿ ನನಗೇ ತಿಳಿಯದ ಹತಾಷೆಯ ಅಂಶವೇನಾದರೂ ಅವಳ ಅನುಭವಕ್ಕೆ ಬರುತ್ತಿದೆಯೇ? ಎಲ್ಲಕ್ಕೂ ಮಿಗಿಲಾಗಿ ಇವಳು ಕೇವಲ ಒಬ್ಬ ವೈದ್ಯೆಯಾಗಿ ನನ್ನ ಸಮಸ್ಯೆಯನ್ನು ನೋಡುತ್ತಿದ್ದಾಳೋ… ಇಲ್ಲಾ….!?. ಇಲ್ಲಿನ ಪರಿಸ್ಥಿತಿಗೋ… ಚಳಿಗೋ ಇಲ್ಲಾ ಗೊಂದಲಕ್ಕೋ ನನ್ನ ಎಡಭಾಗ ಮತ್ತೆ ಮರಗಟ್ಟಿಹತ್ತಿತು.

VII

ಮಧ್ಯಾಹ್ನ ಚಂದ್ರಮ್ಮಲಂಚ್ ಬಾಕ್ಸಿನೊಂದಿಗೆ ಒಳ ಬಂದಾಗ ಅಸಂಖ್ಯ ವಿರುದ್ಧ ಭಾವಗಳ ಘರ್ಷಣೆಯಲ್ಲಿ ದಿಕ್ಕೆಟ್ಟು ಕಣ್ಮುಚ್ಚಿ ಕುಳಿತಿದ್ದೆ. ಅವಳ ಲಘುವಾದ ಕೆಮ್ಮಿನೊಂದಿಗೆ ಕಣ್ಬಿಟ್ಟಾಗ ಅವಳ ಎಡಗೈಯಲ್ಲಿದ್ದ ಬ್ಯಾಗು ಹಠಾತ್ತಾಗಿ ನನ್ನ ಗಮನ ಸೆಳೆಯಿತು. ‘ಇದು ಈಯಮ್ಮನ ಕೈಗೆ ಹೇಗೆಪ್ಪಾ ಬಂತು?’ ಎಂದು ಆಶ್ಚರ್ಯಪಡುವಷ್ಟರಲ್ಲಿ ಅದನ್ನು ನನ್ನತ್ತ ಚಾಚುತ್ತಾ ‘ಡಾಕ್ಟರ್ ಕೊಟ್ಟರು’ ಎಂದಳು. ಅವಳು ಹಾಗೆನ್ನುತ್ತಿದ್ದಂತೆ ಡಾ. ಮುನಿ ಅಥವಾ ಡಾ.ಸ್ಟಾನ್ಲಿಯ ಮುಂದೆ ಕುಳಿತು ನನ್ನ ಪ್ರಸ್ತುತ ಸ್ಥಿತಿಗತಿಯ ವಿವರಗಳನ್ನು ಆತಂಕದಿಂದ ಆಲಿಸುತ್ತಿರುವ ರೂಮಿಯ ಚಿತ್ರ ಸುಳಿದು ಹೋಯಿತು. ಆದರೂ ಕುತೂಹಲಕ್ಕೆ ‘ಯಾವ ಡಾಕ್ಟರ್’ ಎಂದೆ. ಅದಕ್ಕೆ ಚಂದ್ರಮ್ಮ ‘ನಮ್ಮ ಡಾಕ್ಟರ್’ ಅಂದಳು. ನನಗೆ ಶಾಕ್ ಅಯಿತು. ಅವಳೇಕೆ ಇವಳನ್ನು ಭೇಟಿಯಾದಳು? ಸಾಮಾನ್ಯವಾಗಿ ರೂಮಿ ಹೈರಾರ್ಕಿಯನ್ನು ಉಲ್ಲಂಘಿಸುವವಳಲ್ಲವಲ್ಲ?! ಇವಳನ್ನು ಭೇಟಿ ಮಾಡಿದವಳು ನನ್ನನ್ನೇಕೆ ನೋಡಲಿಲ್ಲ?! ಪರಿಸ್ಥಿತಿ ತುಂಬಾ ಗೋಜಲಾಗಿದ್ದಂತೆ ಕಾಣುತ್ತಿತ್ತು.

ತಲೆಎತ್ತಿ ತೀಕ್ಷ್ಣವಾಗಿ ಚಂದ್ರಮ್ಮನತ್ತ ನೋಡಿದೆ. ನನ್ನ ತುಮುಲ ಅರ್ಥವಾದವಳಂತೆ ಚಂದ್ರಮ್ಮ: ನಿಮ್ಮನ್ನು ನೋಡಕ್ಕೆ ಒಬ್ಬ ಬಿಳೀ ಮೇಡಂ ಬಂದಿದ್ರು. ನಮ್ಮ ಡಾಕ್ಟ್ರೇ ಕಾರತ್ರ ಹೋಗಿ ಅವರನ್ನು ಇಲ್ಲಿಗೆ ಕರ್ಕೊಂಡು ಬಂದ್ರು. ಅವ್ರು ಬಂದಾಗ ನೀವು ಮಲಗಿದ್ರಿ. ಅದಕ್ಕೆ ನಮ್ಮ ಡಾಕ್ಟ್ರು ‘ನೀವು ಇದೀಗತಾನೆ ಟ್ರೀಟ್ ಮೆಂಟ್ ತಗೆದುಕೊಂಡು ಮಲಗಿದ್ದೀರಿ, ನಿಮ್ಮನ್ನು ಎಬ್ಬಿಸಬಾರದು’ ಎಂದು ಹೇಳಿದರು. ಆ ಮೇಡಂ ನೀವು ಏಳಬಹುದೆಂದು ಬಹಳಹೊತ್ತು ಕಾಯ್ದರು, ಆದರೆ ನೀವು ಏಳಲಿಲ್ಲ. ಅವರು ‘ಅವನು ಹಾಗೇ…. ನಿದ್ದೆ ಹೋದನೆಂದರೆ ಮುಗಿಯಿತು, ದೇವರು ಬಂದರೂ ಎಚ್ಚರವಾಗೋದಿಲ್ಲ, ಸ್ಟುಪಿಡ್…’ ಎನ್ನುತ್ತಾ ಮತ್ತೂ ಸುಮಾರು ಹೊತ್ತು ಕಾಯ್ದರು. ಕೊನೆಗೆ ‘ನನಗೆ ಫ್ಲೈಟ್ ಗೆ ಹೊತ್ತಾಗಿ ಬಿಡುತ್ತದೆ, ನಾನು ಹೊರಡುತ್ತೇನೆ, ಎದ್ದ ಮೇಲೆ ಈ ಬ್ಯಾಗ್ ಅವನಿಗೆ ಕೊಟ್ಟು ಬಿಡಿ’ ಎಂದರು, ಎಂದು ಹೇಳಿ ಸುಮ್ಮನಾದಳು. ನಾನು ಬಗ್ಗಿಸಿದ್ದ ತಲೆಯನ್ನು ಎತ್ತಿ ‘ಅಷ್ಟೇನಾ’ ಎನ್ನುವಂತೆ ಚಂದ್ರಮ್ಮನ ಮುಖ ನೋಡಿದೆ. ಸ್ವಲ್ಪ ಗಾಬರಿಯಾದಂತಾದ ಚಂದ್ರಮ್ಮ ‘ಅವರು ಬಾಳಾಸಾರಿ ಎಬ್ಬಿಸಲು ಹೇಳಿದ್ರೂ ಇವರು ಎಬ್ಬಿಸ್ಲಿಲ್ಲ. ಈ ಮಧ್ಯೆ ಇಬ್ರೂ ತುಂಬಾ ಮಾತನಾಡುತ್ತಿದ್ರು. ಅವರು ಹೊರಟಾಗ, ಕಳುಹಿಸಿ ಬರೋಕೆ ನನಗೆ ಹೇಳಿದ್ರು. ನಾನು ಟ್ಯಾಕ್ಸಿ ಹತ್ತಿಸಿ ವಾಪಾಸ್ ಬಂದಾಗ ನೀವಿಬ್ರೂ ಮಾತನಾಡುತ್ತಾ ಕೂತಿದ್ರಿ, ಅದನ್ನು ನೋಡಿ ನಾನು ಹೊರಟ್ಹೋದೆ’. ಅಂದಳು.

ನನ್ನ ಭಾವನೆಗಳ ಏರಿಳಿತಳು ಚಂದ್ರಮ್ಮನಿಗೆ ಅರ್ಥವಾದವೋ ಇಲ್ಲವೋ ಗೊತ್ತಿಲ್ಲ . ಆದರೆ ಚಂದ್ರಮ್ಮ ‘ಅದೆಲ್ಲಾ ಬಿಡಿ…, ಏಳಿ ಊಟ ಮಾಡಿ’ ಎಂದಳು. ದ್ವಿಸಂಧಾನ ಕಾವ್ಯದ ಸಾಲಿನಂತಿದ್ದ ಅವಳ ಮಾತಿನಲ್ಲಿ ‘ಈ ಹೆಂಗಸರ ರಾಜಕೀಯ ನಿನ್ಗೆ ಅರ್ಥ ಆಗಲ್ಲ… ಬಾ ಮಗಾ’ ಎಂಬ ಭಾವವೂ ಇದ್ದಂತಿತ್ತು. ಅದು ಅನುಕಂಪ ಮಿಶ್ರಿತವಾಗಿತ್ತೇ? ಸ್ಪಷ್ಟವಾಗಿ ಹೇಳಲಾರೆ. ನಾನು ‘ಹಸಿವಿಲ್ಲ, ಆ ಮೇಲೆ ಮಾಡುತ್ತೇನೆ’ ಎಂದೆ. ‘ಇಲ್ಲಾ… ನೀವು ಅಂಗೆ ಮಾಡಬಾರ್ದೂ… ಇಂಗೆ ಮಾಡೀಮಾಡೇ ನೀವು….’ ಎಂದವಳು ಮಾತು ಬದಲಿಸಿ ‘ಟೈಮಿಗೆ ಸರಿಯಾಗಿ, ಸರಿಯಾದ ಊಟ ಮಾಡಿ… ಎಲ್ಲಾ ಸರಿಹೋಗುತ್ತೆ’ ಎನ್ನುತ್ತಾ ಬುಟ್ಟಿಯಿಂದ ತಟ್ಟೆ ತಗೆದು ಟೇಬಲ್ಲಿಗಿಟ್ಟಳು. ಊಟಕ್ಕೆ ಕೂರುವುದು ಅನಿವಾರ್ಯವಾಯಿತು. ಬಡಿಸಿದಳು. ಬೇಳೆ-ನುಗ್ಗೆಕಾಯಿ ಸಾರು, ನುಗ್ಗೇಸೊಪ್ಪಿನ ಪಲ್ಯ, ಬಿಸಿ ರಾಗಿ ಮುದ್ದೆ….. ಥೇಟ್ ನನ್ನ ಮನೆಯಂಥದ್ದೇ ಊಟ. ಅದೇ ಘಮಲು. ಅದೇ ರುಚಿ. ತಟ್ಟನೆ ಅಮ್ಮ, ಮನೆ, ಊರು ಎಲ್ಲಾ ನನ್ನ ಮನದಂಗಳದಲ್ಲಿ ಮೆರೆವಣಿಗೆ ಹೊರಟವು. ಉಲ್ಕೆ ಬಿದ್ದ ಸರೋವರದಂತಾಗಿದ್ದ ನನ್ನ ಮನಸ್ಸು ಅಪರೂಪದ ಈ ಊಟದ ಸವಿಗೆ ಸಮಸ್ಥಿತಿಗೆ ಬರತೊಡಗಿತು. ಶಾಂತವಾಗಿ ಅವಳತ್ತ ನೋಡಿ, ಸಾರಿನೊಳಗಿದ್ದ ನುಗ್ಗೆಕಾಯಿ, ಪಲ್ಯದಲ್ಲಿದ್ದ ನುಗ್ಗೆಸೊಪ್ಪನ್ನು ಎತ್ತಿ ತೋರಿಸುತ್ತಾ…. ‘ಇದೆಂದರೆ ನಿಮಗೆ ಅಷ್ಟೋಂದು ಇಷ್ಟವೇ?’ಎಂದೆ. ‘ಇಲ್ಲಾ ನಿಮಗಾಗೇ….’ ಅಂದವಳು ತಟ್ಟನೆ ಮಾತು ಬದಲಿಸಿ, ನಗುತ್ತಾ `ನಮಗೆಲ್ಲಾ ತುಂಬಾ ಇಷ್ಟ’ ಅಂದಳು, ನಿಗೂಢವಾಗಿ, ನಿನ್ನೆಯಿಂದ ಇವಳ ಡಾಕ್ಟರಮ್ಮ ಮಾತಾಡುತ್ತಿರುವಂತೆ.

ಚಂದ್ರಮ್ಮ ಹೋಗುವುದನ್ನೇ ನಿರೀಕ್ಷಿಸುತ್ತಿದ್ದ ನಾನು ಅವಳು ಹೊರ ಹೋಗಿ ಮೆಟ್ಟಿಲಿಳಿದಿದ್ದನ್ನು ಖಚಿತಪಡಿಸಿಕೊಂಡು ನನ್ನ ಕೊಟಡಿಯ ಬಾಗಿಲು ಮುಚ್ಚಿದೆ. ಅದೇನೇ ಕಾರಣಗಳಿದ್ದರೂ ಒಂದೂವರೆ ವರ್ಷದಿಂದ ಒಟ್ಟಿಗೇ ಇದ್ದ ನಮಗೆ ಯಾರೋ ಅಡ್ಡಿ ಬಂದರು ಎಂಬ ಕಾರಣದಿಂದ ಒಂದು ಮಾತನ್ನೂ ಹೇಳದೇ ಹೋದ ರೂಮಿಯ ಬಗ್ಗೆ ತೀವ್ರ ಸಮಸ್ಯೆ ಶುರುವಾಗಿತ್ತು. ಮನುಷ್ಯ ಸಂಬಂಧದ ಸ್ವಾರ್ಥ, ಶಿಥಿಲತೆಗಳು ನನ್ನನ್ನು ಕಾಡ ಹತ್ತಿದವು. ಬ್ಯಾಗು ತೆರೆದಾಗ ಮೊದಲಿಗೆ ಕೈಗೆ ಸಿಕ್ಕಿದ ದೊಡ್ಡ ಕವರೊಂದನ್ನು ಒಡೆದೆ. ಯಾವ್ಯಾವುದೋ ದಾಖಲೆ ಪತ್ರಗಳು, ಕಾರು ಮತ್ತು ಮನೆಯ ಕೀ ಮಾತ್ರ ಅದರಲ್ಲಿದ್ದವು.

ಆದರೆ ಇವೆಲ್ಲದರ ನಡುವೆ ನಾನು ಬೇರೇನನ್ನೋ ಹುಡುಕುತ್ತಿದ್ದೆ. ಅವಳ ಪತ್ರ, ಇದೆ, ಪ್ರತ್ಯೇಕ ಕವರಿನಲ್ಲಿ ಸೀಲ್ ಮಾಡಿ ಇಟ್ಟಿದ್ದಾಳೆ. ಒಡೆದೆ. ಪೂರ್ತಿ ಓದಿದೆ. ಓದದಿದ್ದರೂ ಏನೋ ನಷ್ಟವಾಗುತ್ತಿತ್ತು ಅನಿಸಲಿಲ್ಲ. ಎರಡು ವರ್ಷಗಳ ಹಿಂದೆಯೇ ನಿಶ್ಚಯವಾಗಿದ್ದ ಮದುವೆ ಮುಂದಿನ ತಿಂಗಳು ಇರುವುದರಿಂದ ಐರ್ಲೆಂಡಿಗೆ ಹೋಗುತ್ತಿರುವುದಾಗಿಯೂ, ಹಿಂತಿರುಗುವ ಉದ್ದೇಶವಿಲ್ಲವೆಂದೂ ಸುತ್ತಿಬಳಸಿ ಹೇಳಿದ್ದಳು. ಯಾಕೋ ಅಸಹ್ಯವೆನಿಸಿತು. ನಂತರ ಒಂದಷ್ಟು ಮೆಚ್ಚುಗೆಗಳು, ಒಂದಷ್ಟು ಸಾರಿಗಳು, ಒಂದಷ್ಟು ಅಪಾದನೆ-ತಕರಾರುಗಳಿದ್ದವು. ಅಂತಿಮವಾಗಿ ಒಂದು ಆಫರ್ ಲೆಟರ್ ನ ಪ್ರಸ್ತಾಪವಿತ್ತು, ನಾನು ಅಲ್ಲಿಗೆ ಸೇರಲೇಬೇಕೆಂಬ ಇವಳ ಆದೇಶದೊಂದಿಗೆ. ಅಲ್ಲಿದ್ದ ಸೂಚನೆಯಂತೆ ಇನ್ನೊಂದು ತೆಳು ನೀಲಿ ಬಣ್ಣದ ಕವರ್ ತೆರೆದು ನೋಡಿದೆ. ಹೊಸದಾಗಿ ಆರಂಭಗೊಳ್ಳಲಿದ್ದ ನ್ಯೂಸ್ ಚಾನಲ್ ಬ್ಯೂರೋ ಚೀಫ್ಆಗಿ ಕರೆದಿದ್ದಾರೆ. ಅಪಾರ ಸಂಬಳ, ಸವಲತ್ತುಗಳ ಪ್ರಸ್ತಾಪವೂ ಇದೆ. ಆದರೆ ಈ ಚಾನಲ್ನ ಬೋರ್ಡ್ ಅಫ್ ಡೈರೆಕ್ಟರ್ಸ್ನಲ್ಲಿ ಇವಳ ಕಸಿನ್ ಒಬ್ಬರು ಇದ್ದಾರಲ್ಲವೇ? ಹಾಗಾದರೆ ಈ ಆಯ್ಕೆ?. ಇವಳ ಸಹವಾಸವೇ ಬೇಡವೆನಿಸಿತು. ಕೊನೆಯದಾಗಿ ಬ್ಯಾಗನ್ನು ತಲೆಕೆಳಗು ಮಾಡಿ ಕೊಡವಿದೆ. ಎರಡು ಅಂಚೆ ಕಾರ್ಡುಗಳು ತುಪುಕ್ ತುಪುಕ್ ಒಂದು ಕೆಳಗೆ ಬಿದ್ದವು. ನನ್ನ ಹಳೇ ಕಚೇರಿ ವಿಳಾಸಕ್ಕೆ ಬಂದವು. ಹದಿನೈದು ದಿನಗಳ ಅಂತರದಲ್ಲಿ. ಯಾರವು ಎಂದು ಊಹಿಸುವ ಅಗತ್ಯವೇ ಇಲ್ಲ. ಅಲ್ಲಿರುವ ಮೋಡಿ ಅಕ್ಷರಗಳ ಶಿಲ್ಪಿ ನಮ್ಮೂರಿನ ಲಾವಣಿ ಅಯ್ಯನಲ್ಲದೆ ಇನನೊಬ್ಬನಿರಲು ಸಾಧ್ಯವೇ ಇಲ್ಲ.

VIII

ಈಗಾಗಲೇ ಪರ್ವತೋಪಮವಾದ ಅಲೆಗಳನ್ನು ಎದುರಿಗಿಟ್ಟುಕೊಂಡು ಅನಿಶ್ಚಯದ ದೋಣಿಯಲ್ಲಿ ಸಾಗುತ್ತಿದ್ದ ನನ್ನ ಮುಂದೆ ಆ ಎರಡು ಪುಟ್ಟ ಕಾರ್ಡುಗಳು ಇನ್ನೂ ಭೀಕರಾಕಾರದ ಅಲೆಗಳ ಪಂಕ್ತಿಯನ್ನೇ ತಂದು ಮಲಗಿಸಿದ್ದವು. ನಾನು ಅವನ್ನು ದಾಟಲರಿಯದವನಾಗಿದ್ದೆ. ಲಾವಣಿ ಅಯ್ಯ ಹೇಳುತ್ತಿರುವ ಮಾಹಿತಿ, ಕೇವಲ ಮಾಹಿತಿ ಮಾತ್ರ ಆಗಿಲ್ಲ. ಅದು ನನ್ನ ಕಡೆಯಿಂದ ಅವನ ಪರಿಹಾರದ ನಿರೀಕ್ಷೆ ಸಹ ಆಗಿದೆ. ಇದೇ ನಾನು ಇಷ್ಟೋಂದು ಪ್ರಕ್ಷುಬ್ದಗೊಳ್ಳಲು ಕಾರಣವಾಗಿತ್ತೇ? ಅವನು ಹೇಳುತ್ತಿರುವ ಪ್ರಕಾರ ಊರಾಚೆಯ ಹೊಂಗೆ ಅದು ಸಕರ್ಾರದ್ದಾಗಲೀ, ಪಂಚಾಯ್ತಿಯದಾಗಲೀ ಅಂತಿಮವಾಗಿ ಯಾವುದೇ ರೀತಿಯಲ್ಲಿ ಸಾರ್ವಜನಿಕದ್ದಾಗಲೀ ಅಲ್ಲ. ಈಗಾಗಲೇ ಅದು ಪೂರ್ಣವಾಗಿ ಒಬ್ಬನ ಹೆಸರಿಗೆ ಖಾತೆಯಾಗಿ ಎಷ್ಟೋ ವರ್ಷಗಳು ಕಳೆದಿವೆ. ಅದನ್ನು ಒತ್ತೆಯಾಗಿಸಿ ಆತ ವೆನಿಲ್ಲಾ ಬೆಳೆಯುವ ಯೋಜನೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ. ಬಂದ ಲಾಭವನ್ನೆಲ್ಲಾ ನಗರದಲ್ಲಿ ಸೈಟು-ಮನೆಗಳ ಮೇಲೆ ಹಾಕಿದ್ದಾನೆ. ಕ್ರಮೇಣ ಸಾಲ ಹಲವು ಲಕ್ಷಗಳಾಗಿ ಈಗ ಹೊಂಗೆ ಹರಾಜಿಗೆ ಬಂದಿದೆ. ಇದು ಹರಾಜಾಗಲಿ ಎಂಬುದೇ ಅವನ ಒಳ ಉದ್ದೇಶ್ಯವಾಗಿದೆ, ಅದು ಅವನ ಕಷ್ಟದ್ದಲ್ಲ. ಅಡಪಾಯಿಸಿಕೊಂಡಿರುವ ಸಾರ್ವಜನಿಕ ಆಸ್ತಿ. ಅದನ್ನು ಹರಾಜಿನಲ್ಲಿ ಕೊಳ್ಳಲು ಹತ್ತಾರು ಶ್ರೀಮಂತ ಕುಳಗಳು ಕಾದು ಕುಳಿತಿವೆ. ಒಂದೆರಡು ಕಂಪನಿಗಳೂ ಇದರಲ್ಲಿ ಭಾಗವಹಿಸಲು ಮುಂದಾಗಿವೆ. ಒಂದು ಕಂಪನಿಯ ಸವರ್ೆ ಪ್ರಕಾರ ಅದರ ಕೆಳಗೆ ತಾಮ್ರದ ನಿಕ್ಷೇಪವಿದೆಯಂತೆ. ಇನ್ನೊಂದು ಕಂಪನಿ ಫೈವ್ಸ್ಟಾರ್ ರೆಸಾರ್ಟ್ ಮಾಡುವ ಯೋಜನೆ ಇಟ್ಟುಕೊಂಡಿದೆಯಂತೆ.

ಅಯ್ಯೋ…ದೇವರೇ?! ಯಾರೋ ಒಬ್ಬ ಸೂಳೆ ತನ್ನ ದೇಹಮಾರಿದ ಹಣದಲ್ಲಿ ಊರಹಿತಕ್ಕಾಯೋ, ಪ್ರಾಯಶ್ಚಿತ್ತಾರ್ಥವಾಗಿಯೋ ಕಟ್ಟಿದ ಕೆರೆ ಅದು. ಈಗ ನೀರಿನ ದಾರಿಯನ್ನೇ ಕಳೆದುಕೊಂಡು ಅದು ಬದುಕುವುದಾದರೂ ಹೇಗೆ? ಶತಮಾನಗಳ ಇತಿಹಾಸವಿರುವ ಕರೆಯ ನೀರಿನ ದಾರಿ ಒಬ್ಬನ ಸ್ವತ್ತಾಗಲು ಹೇಗೆ ಸಾಧ್ಯ? ಈಗ ಅದನ್ನು ಯಾವನೋ ಒಬ್ಬ ಶ್ರೀಮಂತ ಅಥವಾ ಒಂದು ಕಂಪನಿ ಕೊಳ್ಳುತ್ತದಾದರೆ ಅದನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಅವರಿಗೇನು ಹುಚ್ಚೇ? ಈಗಾಗಲೇ ಅರ್ಧಕ್ಕರ್ಧ ಹೊಂಗೆಮರಗಳನ್ನು ಇಟ್ಟಿಗೆ ಗೂಡಿನವರಿಗೆ ಮಾರಿಕೊಂಡಾಗಿದೆಯಂತಲ್ಲ!! ಕರುಳಿಗೆ ಬೆಂಕಿ ಬಿದ್ದಂತಾಯಿತು.

ಇದೆಲ್ಲಾ ಸರಿ, ಇದರಲ್ಲಿ ನನ್ನ ಪಾತ್ರವೇನಿದೆ? ಭಾವನಾತ್ಮಕ ಸಂಬಂಧವನ್ನು ಬಿಟ್ಟರೆ!!. ಅದನ್ನು ಹರಾಜಿನಲ್ಲಿ ಕೊಳ್ಳುವ ಸಾಮಥ್ರ್ಯವಂತೂ ನನಗಿಲ್ಲ. ಪಿತ್ರಾರ್ಜಿತವಾದದ್ದನ್ನೇ ನಿರ್ಲಕ್ಷಿಸಿ ಬಂದಿದ್ದ ನನಗೆ ಇನ್ನೊಂದು ಸ್ವಯಾರ್ಜಿತ ಆಸ್ತಿಯ ಆಸಕ್ತಿ ಹುಟ್ಟುವುದಾರೂ ಹೇಗೆ? ಆ ಅಯ್ಯನಿಗೆ ನನ್ನ ಬಗ್ಗೆ ಗೊತ್ತಿದ್ದೂ ನನ್ನನ್ನೇಕೆ ಈ ಇಕ್ಕಿಟ್ಟಿನಲ್ಲಿ ಸಿಕ್ಕಿಸಿದ್ದಾನೆ? ಬಗೆಹರಿಯುತ್ತಿಲ್ಲ. ಈ ತಾಟಲಾಟದಲ್ಲಿಯೇ ಕ್ಯಾಂಟೀನಿಗೆ ಹೋದಾಗ ಸ್ಟಾನ್ಲಿ ಮತ್ತು ಮುನಿ ಯಾವುದೋ ಗಹನವಾದ ಚರ್ಚೆಯಲ್ಲಿ ತೊಡಗಿದ್ದವರು ನಾನು ಹೋಗುತ್ತಿದ್ದಂತೆಯೇ ನನಗಾಗೇ ಕಾದಿದ್ದವರಂತೆ ನನ್ನನ್ನು ಆಹ್ವಾನಿಸಿದರು. ನಾನು ಟೀ ತರುವಂತೆ ಹೇಳಿ, ಸ್ಟಾನ್ಲಿಯೊಂದಿಗೆ ಸಿಗರೇಟು ಸೇದುತ್ತಾ ಕುಳಿತೆ.

ತಲೆ ಬಗ್ಗಿಸಿ ಟೀ, ಸೀಗರೇಟಿನಲ್ಲಿ ಮಗ್ನವಾಗಿದ್ದ ನನ್ನ ಮುಂದೆ ಡಾ.ಮುನಿ ಗಂಭೀರವಾಗಿ ನನ್ನ ರೋಗದ ನಿಗೂಢತೆಯ ಬಗ್ಗೆ ಮಾತನಾಡುತ್ತಿದ್ದರು. ಸ್ಟಾನ್ಟಿ ಅದಕ್ಕೆ ವಿಸ್ತಾರವಾದ ವೈಜ್ಞಾನಿಕ ಚೌಕಟ್ಟುಗಳನ್ನು ತೊಡಿಸುತ್ತಿದ್ದರು. ನಾನು ಮೌನಿಯಾಗಿದ್ದೆ. ನನ್ನ ಬಗ್ಗೆ ನನಗೇ ಜಿಗುಪ್ಸೆ ಆರಂಭವಾಗಿತ್ತು. ಇಷ್ಟೋಂದು ಚಿಕ್ಕ ವಯಸ್ಸಿಗೇ ನನ್ನ ಬದುಕು ಎಲ್ಲೋ ದುರಂತದಲ್ಲಿ ಕಳೆದು ಹೋಗುವ ಭೀತಿ ನನ್ನನ್ನಾವರಿಸಿ ಖಿನ್ನತೆ ಧಾಳಿಮಾಡಿತು. ಈ ನಡುವೆ ಹೆಚ್ಚಿನ ಪರೀಕ್ಷೆಗಾಗಿ ನನ್ನನ್ನು ನ್ಯೂಯಾರ್ಕ್ ಗೆ ಕಳುಹಿಸಿ ಕೊಡುವ ಪ್ರಸ್ತಾಪವನ್ನು ಡಾ.ಮುನಿ ನನ್ನ ಮುಂದಿಟ್ಟರು. ಸ್ಟಾನ್ಲಿ ಅದನ್ನು ಅನುಮೋದಿಸುತ್ತಿದ್ದಾಗ… ಆತಂಕದಿಂದ ಅವರತ್ತ ನೋಡಿದ ನನ್ನ ನೋಟದ ಭಾವವನ್ನು ಗ್ರಹಿಸಿದವರಂತೆ ‘ಡೊಂಟ್ ಬಾದರ್ ಎಬೌಟ್ ಫಂಡ್ಸ್, ಅವರ್ ಅಮೆರಿಕನ್ ಸೆಂಟರ್ ವಿಕ್ ಟೇಕ್ ಕೇರ್ ಆಫ್ ದಟ್’ ಎಂದರು. ‘ಯಾವಾಗ’ ಎಂದೆ. ‘ಅದಷ್ಟು ಬೇಗ, ಮೂರ್ನಾಲ್ಕು ದಿನಗಳಲ್ಲಿ, ಹೇಗಿದ್ದರೂ ನಿಮ್ಮ ಪಾಸ್ಪೋರ್ಟ್ ಇದೆ’ ಎಂದರು ಡಾ.ಮುನಿ. ‘ಐ ವಿಲ್ ಟೇಕ್ ಕೇರ್ ಅಫ್ ಮೆಡಿಕಲ್ ವೀಸಾ’ ಎಂದರು ಡಾ. ಸ್ಟಾನ್ಲಿ. ಹೊರಡುವಾಗ ‘ಏನದು ನಿಮ್ಮ ಆ ಹೊಂಗೆತೋಪಿನ ವಿವಾದ’ ಎಂದರು ಡಾ.ಮುನಿ. ಕಥೆ ಹೇಳಿದೆ. ‘ಪೂರ್ ಟ್ರೀಸ್’ ಎಂದರು. ‘ಇಂಟ್ರೆಸ್ಟಿಂಗ್… ಫ್ಲೈಟಲ್ಲಿ ಹೋಗುವಾಗ ಈ ಬಗ್ಗೆ ಚರ್ಚಿಸೋಣ’ ಎಂದರು ಡಾ. ಸ್ಟಾನ್ಲಿ. ಸಿದ್ಧವಾಗಲು ಹೇಳಿ ಅವರಿಬ್ಬರೂ ಹೊರಟರು. ಇಲ್ಲಿಗೆ ನನ್ನೆಲ್ಲಾ ಕನಸುಗಳ ಅಂತ್ಯ ಸಂಸ್ಕಾರ ಮುಗಿದಂತಾಗಿ ಗರಬಡಿದವನಂತೆ ಕುಳಿತೆ.

ಎಡಭಾಗದ ಜೋಮು ಮಿದುಳಿಗೂ ವಿಸ್ತರಿಸಿಕೊಂಡಿತ್ತು. ಹಾಗೇ ಸುಮ್ಮನೆ ಕುಳಿತಿದ್ದೆ. ಎಷ್ಟು ಹೊತ್ತು ಹಾಗಿದ್ದೇನೋ ತಿಳಿಯದು. ಹುಡುಗ ಬಂದು ‘ಟೀ ಸಾರ್’ ಎಂದ. ನೋಡಿದೆ, ಅವನ ಕೈಯಲ್ಲಿ ಹೊಗೆಯಾಡುತ್ತಿದ್ದ ಕಪ್ ಇತ್ತು. ಅವನನ್ನೇ ಕೆಕ್ಕರಿಸಿ ನೋಡುತ್ತಾ ‘ನಾನು ಹೇಳಿದ್ದೆನೇ, ನಿಮಗೆ ಇಷ್ಟ ಬಂದಂಗೆ ಮಾಡ್ತೀರಾ… ಸ್ಟುಪಿಡ್ಸ್’ ಎಂದೆ. ನನ್ನ ಧ್ವನಿ ಕರ್ಕಶವಾಗಿತ್ತು. ಹುಡುಗ ಬೆಚ್ಚಿ ಬಿದ್ದು, ಪೆಚ್ಚುಮೋರೆಯೊಂದಿಗೆ ಹಿಂದಕ್ಕೆ ಹೊರಟ. ಮತ್ತೆ ಅವನತ್ತ ನೋಡಿದೆ…. ಅವನ ಬ್ಯಾಕ್ಗ್ರೌಂಡಿನಲ್ಲಿ ಕಡವೆ ಓಡಿದಂತೆ ಬರುತ್ತಿರುವುದು ಕಾಣಿಸಿತು. ‘ಬಾ ಇಲ್ಲಿ, ಆ ಟೀ ಕೊಡು, ಇನ್ನೊಂದು ಟೀ ತಗೆದುಕೊಂಡು ಬಾ… ಸಾರಿ’ ಅಂದೆ. ಹುಡುಗನ ಮುಖದಲ್ಲಿ ಸಣ್ಣ ನಗುವೊಂದು ಸುಳಿದು ಹೋಯಿತು. ಆ ನಗುವಿನ ಅರ್ಥ `ಹುಚ್ನನ್ ಮಕ್ಳು ಸವಾಸ’ ಎಂದಿರಬೇಕು.

ಓಡಿದಂತೆ ನನ್ನಲ್ಲಿಗೆ ಬಂದ ಕಡವೆ ಹೊಗೆಯುಗುಳುತ್ತಿದ್ದ ನನ್ನ ಬಾಯನ್ನೇ ದಿಟ್ಟಿಸುತ್ತಾ…. ‘ನಿಮ್ಮ ಮೊಬೈಲ್ ಎಲ್ಲಿ’ ಎಂದಳು. ಅಯ್ಯಪ್ಪಾ…. ಅದೆಂಥಾ ಲುಕ್ಕು, ಅದೆಂಥಾ ಕಮ್ಯಾಂಡು. ಅವಳ ನೋಟ ನನ್ನ ಯಾವುದೇ ಪ್ರಶ್ನೆಯನ್ನು ನಿಶೇಧಿಸಿಬಿಟ್ಟಿತ್ತು. ‘ಬ್ರೀಫ್ ಕೇಸಲ್ಲಿದೆ’ ಅಂದೆ. ಅಷ್ಟು ಹೇಳುವ ಹೊತ್ತಿಗಾಗಲೇ ಅವಳು ನನ್ನ ಕೊಟಡಿಯತ್ತ ಹೊರಟಾಗಿತ್ತು. ನನ್ನ ಮನಸ್ಸು ಯಾವುದೋ ಅಪಶಕುನವನ್ನು ಊಹಿಸಿ ಅಧೀರಗೊಂಡಿತು. ಅಮ್ಮನಿಗೇನಾದರೂ….?! ಸಾಧ್ಯವಿಲ್ಲ. ಅಂಥಾ ವಿಚಾರಗಳಿಗೆಲ್ಲಾ ನನಗೆ ಬೇರೆ ಸುದ್ದಿ ಮೂಲಗಳಿದ್ದವು. ಇಲ್ಲಿಗೆ ಬಂದಾಗಿನಿಂದ ಅನಗತ್ಯ ಕಿರಿಕಿರಿಯಲ್ಲದೆ ಇನ್ನೊಂದನ್ನು ನೀಡದ ನನ್ನ ಸೆಲ್ ಫೋನನ್ನು ಸೈಂಲೆಂಟಿಗಾಕಿ ಮೂಲೆಗೆಸೆದು ಅನೇಕ ದಿನಗಳಾಗಿದ್ದವು.

IX

ಅಕಾಲಿಕ ಮಳೆ ದಿಕ್ಕೆಟ್ಟಂತೆ ವರ್ತಿಸುತ್ತಿತ್ತು, ನನ್ನಂತೆಯೇ. ಕಡವೆ ಸೃಷ್ಟಿಸಿದ ಅನಗತ್ಯ ರಾಯಭಾರದಿಂದಾಗಿ ನಾನು ಲಾವಣಿ ಅಯ್ಯ ನೊಡನೆ ಫೋನಿನಲ್ಲಿ ಮಾತನಾಡಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿತ್ತು. ವಿನಾಕಾರಣ ನನ್ನನ್ನು ಈ ನೈತಿಕ ಬಿಕ್ಕಟ್ಟಿನಲ್ಲಿ ಸಿಕ್ಕಿಸಿದ ಇವಳ ಮೇಲೆ ನನಗೆ ಅಸಾಧ್ಯ ಕೋಪ ಬಂದಿತ್ತು. ಇದು ಇವಳಿಗೆ ಬೇಕಾಗಿತ್ತೇ?. ಜೊತೆಗೆ ಅಯ್ಯನ ಮಾತುಗಳು ಸಹ ಹಾಗೇ ಇದ್ದವು. ಸುಮಾರು ಹೊತ್ತಿನ ನಮ್ಮ ಮಾತುಕತೆಯ ನಡುವೆ ಅಯ್ಯ ‘ಹೊಂಗೆಯ ಅಮೂಲ್ಯತೆ, ಅದರೊಂದಿಗೆ ನನ್ನ, ಅವನ ಮತ್ತು ಊರವರ ಸಂಬಂಧಗಳು, ಅವು ಉಳಿಯಬೇಕಾದ ಮಹತ್ವಗಳ’ ಬಗ್ಗೆ ಮಾತನಾಡುತ್ತಾ… ಅದರ ಉಳಿವು ಊರಿನ ಮತ್ತು ನನ್ನ ನೈತಿಕ ಹೊಣೆ, ಅಷ್ಟೂ ಮಾಡಲಾಗದ ನಾವು ಏನಾಗಿದ್ದರೇನಂತೆ?! ಎಂಬ ಜಿಜ್ಞಾಸೆ ಹುಟ್ಟಿಹಾಕಿದ್ದ. ಅವನ ಈ ಧೋರಣೆಯೇ ನನ್ನನ್ನು ಇನ್ನಷ್ಟು ಪ್ರಕ್ಷುಬ್ದಗೊಳಿಸಿತೇ? ಅವನ ಇಂಥ ನಿರೀಕ್ಷೆಯನ್ನು ನಾನು ನಿರೀಕ್ಷಿಸಿರಲಿಲ್ಲವೇ?!. ‘ನಂಗೆ ಗೊತ್ತು ಬಿಡಪ್ಪಾ, ನಿನಗೆ ಸ್ವಂತ ಆಸ್ತಿಪಾಸ್ತಿ ಮೇಲೆ ಯಾವ ಆಸೆನೂ ಇಲ್ಲ. ಆದ್ರೆ….’ ಎಂಬ ಅವನ ಮಾತಿಗೆ ಇನ್ನೇನಾದರೂ ಅರ್ಥವಿತ್ತೇ? ಇಲ್ಲವೆಂದಾದರೆ ನಾನು ಕಡವೆ ವಿರುದ್ಧ ಹರಿಹಾಯ್ದಿದ್ದೇಕೆ? ಅವಳ ಕಾಳಜಿಯನ್ನು ಅನಗತ್ಯ ಉಸಾಬರಿ ಎಂದು ಅವಳನ್ನು ನಿಂದಿಸಿದ್ದೇಕೆ? ಆ ನಿಂದನೆಯ ನಂತರವೂ ಅವಳು ಎಂದಿನ ತರಲೆ ಬಿಟ್ಟು ‘ನೀವು ಅಮೆರಿಕಾಕ್ಕೆ ಹೋಗುತ್ತಿದ್ದೀರಾ?’ ಎಂದಾಗ ನಾನು ಅಷ್ಟೋಂದು ವ್ಯಘ್ರವಾಗಿ ಮುಖಮಾಡಿಕೊಂಡು ‘ಬೇರೆಯವರೆಲ್ಲಾ ಅಲ್ಲಿಗೆ ಹೋಗಬಹುದು, ಮದುವೆಯಾಗಿ ಪರ್ಮನೆಂಟಾಗಿ ಅಲ್ಲೇ ಕುಳಿತು ಮಜಾ ಮಾಡಬಹುದು, ನಾನು ರೋಗವಾಸಿಮಾಡಿಕೊಳ್ಳಲು ಅಲ್ಲಿಗೆ ಹೋದರೆ ಯಾರಿಗೇನು ಕಷ್ಟ?’ ಎಂಬಂಥ ಮಾತುಗಳು ನನ್ನ ಬಾಯಿಂದ ಬಂದಿದ್ದಾದರೂ ಹೇಗೆ?. ಈ ನನ್ನ ಮಾತುಗಳಿಗೆ ಉತ್ತರಿಸದೆ, ನನಗೆ ಮುಖವನ್ನೂ ತೋರಿಸದೆ ಸುರಿವ ಮಳೆಯಲ್ಲೇ ಅವಳು ಹೊರಟು ಹೋದಾಗ ನಾನು ಅಗ್ನಿ ಪರ್ವತದಂತೆ ಸಿಡಿದು, ಹಠಾತ್ತಾಗಿ ಅವಳ ವಿರುದ್ಧದಿಕ್ಕಿಗೆ ಹೊರಟು ಹೋಗಿದ್ದೇಕೆ? ಸುರಿವ ಮಳೆಯಲ್ಲಿ ನೆನೆಯುವುದು ನನಗೆ ಖುಷಿಯ ಸಂಗತಿಯಾದರೂ ಇಂಥ ಭೀಕರ ಮಳೆಯಲ್ಲಿ ಎಂದಾದರೂ ನಾನು ವಾಕಿಂಗ್ ಹೋಗಿದ್ದುಂಟೇ? ಹಾಗಾದರೆ ನಾನು ಮಾಡುತ್ತಿರುವುದೇನು? ಯಾರಿಗಾಗಿ, ಯಾಕಾಗಿ?

ಈ ಯೋಚನೆಯಲ್ಲಿಯೇ ಹಾವುತುಳಿದು ಹಿಂತಿರುಗಿದ ನಾನು ಕ್ಯಾಂಟೀನಿನಿಂದ ಸ್ವಲ್ಪ ದೂರದ ಮರೆಯಲ್ಲಿದ್ದ ಬೆಂಚುಕಲ್ಲಿನ ಮೇಲೆ ಕುಳಿತೆ. ಮಳೆ ಭೀಕರವಾಗಿ ಸುರಿಯುತ್ತಲೇ ಇದೆ. ನೀರು ರೋಮರಂಧ್ರಗಳಿಗೆ ಇಳಿದು ನೆಲದತ್ತ ಸಾಗುತ್ತಿದೆ. ಆದರೂ ಸುಮ್ಮನೆ ಕುಳಿತಿದ್ದೇನೆ, ಆ ಕ್ಯಾಂಪಸ್ಸಿನ ಒಂದು ನಿರ್ಜೀವ ಭಾಗದಂತೆ. ಹದಗೊಳ್ಳಲು ತನ್ನನ್ನು ತಾನು ಒಡ್ಡಿಕೊಳ್ಳುವ ಗಿಡಮರಗಳಂತೆ, ನೆಲದಂತೆ ನಿಶ್ಚಲನಾಗಿ. ಪ್ರತಿನಿತ್ಯ ಹೊಸ ಹೊಸ ಪ್ರಯೋಗಗಳಿಗೆ ನನ್ನನ್ನು ಒಡ್ಡಿಕೊಳ್ಳುತ್ತಾ ಅತ್ಯಾಧುನಿಕ ಎನ್ನುವ ರೀತಿಯಲ್ಲಿ ಕಟ್ಟಿಕೊಂಡ ನನ್ನ ಬದುಕಿನ ಬಂಡಿಯಲ್ಲಿ ಕುಳಿತು ಈ ದೋರ್ಧಂಡ ಮಳೆಯಿಂದ ತಪ್ಪಿಸಿಕೊಂಡು ಹೋಗಲು ಇಚ್ಚಿಸಿ ಕೈಯಾಡಿಸಿದರೆ ನನ್ನ ಮುಂದೆ ಚುಕ್ಕಾಣಿ ಚಕ್ರವೇ ಕಾಣುತ್ತಿಲ್ಲವಲ್ಲ. ಯಾರ ಕೈಯಲ್ಲಿದೆ? ಹಿಂತಿರುಗಿ ನೋಡಿದರೆ ಅಸ್ಪಷ್ಟವಾದ ಚಿತ್ರಗಳು…. ಮುಂದೆ ನೋಡಿದರೆ ಏನೂ ಕಾಣುತ್ತಿಲ್ಲ. ಆದರೂ ಬಂಡಿ ಚಲಿಸುತ್ತಿದೆ. ಯಾರು ನಡೆಸುತ್ತಿದ್ದಾರೆ?. ಇಲ್ಲಿ ನಾನು ಹರಕೆಯಕುರಿ ಮಾತ್ರವೇ?!. ಇಲ್ಲದೆ ಹೋದರೆ ನನ್ನ ವೃತ್ತಿಯಲ್ಲಿ ನನಗಿಂತ ದುರ್ಬಲರಾದ ಜನರನ್ನು ನನ್ನ ವಿರುದ್ಧ ಎತ್ತಿಕಟ್ಟಿದ್ದು ಹೇಗೆ? ಈ ಸಂಶೋಧನಾ ಕೇಂದ್ರ ನನಗೆ ಉಚಿತ ಸೇವೆ ಒದಗಿಸುತ್ತಿರುವುದು ಹೇಗೆ? ಲಕ್ಷಾಂತರ ರೂಪಾಯಿ ಖರ್ಚುಮಾಡಿ ನನ್ನನ್ನು ಅಮೆರಿಕೆಗೆ ಕರೆದುಕೊಂಡು ಹೋಗುತ್ತಿರುವುದೇಕೆ? ಅರೆ… ಈವರೆಗೂ ಇವೆಲ್ಲಾ ನನಗೇಕೆ ಹೊಳೆದಿರಲಿಲ್ಲ? ಕಡವೆ ‘ಇದು ಆಫ್ ದ ರೆಕಾರ್ಡ್’ ಎಂದು ಹೇಳಿದ್ದೇಕೆ. ಅವಳಿಗೆ ಇದು ಮೊದಲೇ ಹೊಳೆದಿತ್ತೇ?. ದಿಗ್ಮೂಢನಾದೆ.

ಹಠಾತ್ತಾಗಿ ಮಳೆ ನಿಂತಂತಾಗಿ ತಲೆ ಎತ್ತಿದೆ. ಎದುರಿಗೆ ಕಡವೆ ನನ್ನ ತಲೆಗೂ ಕೊಡೆ ವಿಸ್ತರಿಸಿ ನಿಂತಿದೆ. ಕೈಯಲ್ಲೊಂದು ಶಾಲಿದೆ. ಸ್ವಲ್ಪ ದೂರದಲ್ಲಿ ಚಂದ್ರಮ್ಮನಿಂತಿದ್ದಾಳೆ. ಒಂದು ಕ್ಷಣ ನಾಚಿಕೆಯೆನಿಸಿತು. ಮರುಕ್ಷಣದಲ್ಲಿಯೇ ಈಗಾಗಲೇ ಒಳಗೆ ಹರಳುಗಟ್ಟುತ್ತಿದ್ದ ಸ್ಪಷ್ಟತೆ ತುಳಿಕಿದಂತಾಗಿ ‘ಯಸ್… ಹೇಳಿ…! ಇಲ್ಲಿಂದ ಎದ್ದು ಬರಬೇಕು…. ಅಷ್ಟೇತಾನೆ?’ ಎಂದು ಕೇಳಿ, ಪೋಲಿಯಂತೆ ನಗುಬೀರುತ್ತಾ ಅವಳತ್ತ ನೋಡಿದೆ. ಈಗ ದಿಗ್ಮೂಢಳಾಗುವ ಸರದಿ ಅವಳದ್ದು. ನನ್ನ ಧ್ವನಿಯಲ್ಲಿ ಜೀವಂತಿಕೆಯ ಸೆಲೆ ಚಿಮ್ಮುತ್ತಿತ್ತು. ಈ ಕ್ಯಾಂಪಸ್ಸಿಗೆ ಬಂದ ದಿನದಿಂದ ಇಂಥ ಸೆಲೆಯನ್ನು ನನ್ನಲ್ಲಿ ಅವಳು ಕಂಡಿರಲಿಲ್ಲ. ಬೆರಗುಗಣ್ಣುಗಳಿಂದ ನನ್ನನ್ನೇ ನೋಡುತ್ತಾ ಶಾಲನ್ನು ಬಿಚ್ಚಿ ಹೊದ್ದಿಸಿ, ತೋಳಿಗೆ ಕೈ ಹಾಕಿದಳು. ನಾನು ಏಳುವುದನ್ನು ಕಂಡ ಚಂದ್ರಮ್ಮ ಪೈಲೆಟ್ ವಾಹನದಂತೆ ಹಿಂತಿರುಗಿ ಮುಂದೆ ಹೊರಟಳು. ಕೊಟಡಿಗೆ ಬರುತ್ತಿದ್ದಂತೆಯೇ ನನ್ನ ಬಟ್ಟೆ ಬದಲಿಸಿ, ತಲೆ ಒರಸಿಕೊಳ್ಳಲು ಟವಲ್ ಕೊಡಬಂದವಳು ಕೊಡದೆ, ಅವಳೇ ಒರಸಲು ಮುಂದಾದಳು. ಒರಸುತ್ತ ಹಾಗೇ ಮುಖವನ್ನು ಎದೆಗೆ ಅವುಚಿಕೊಂಡಳು. ಆಗ ಅವಳ ಕಣ್ಣುಗಳಲ್ಲಿ ಕಂಡ ಸಂಭ್ರಮ ನನ್ನ ಭ್ರಮೆ ಇರಬೇಕು!!.

ಚಂದ್ರಮ್ಮ ಬಾಗಿಲಲ್ಲಿ ಕೆಮ್ಮಿದಾಗ ಎಷ್ಟೋ ಶತಮಾನಗಳಿಂದ ಹಾಗೇ ಕುಳಿತಂತೆನಿಸಿ ತಟ್ಟನೆ ಅಲ್ಲಿಂದ ತಲೆ ಎತ್ತಿದೆ. art-2ಆದರೆ ಅವಳು ತಾನಿದ್ದ ಭಂಗಿಯಿಂದ ಸ್ವಲ್ಪವೂ ಸರಿಯದೆ, ಕಣ್ಣಲ್ಲೇ ಏನೋ ಹೇಳಿದಳು. ಚಂದ್ರಮ್ಮ ಫ್ಲಾಸ್ಕಿನಿಂದ ಹೊಗೆಯಾಡುತ್ತಿದ್ದ ಕಾಫಿ ಬಗ್ಗಿಸಿ ಕೊಟ್ಟಳು. ಕ್ಷಣ ತಡಮಾಡಿದರೂ ಅವಳೇ ಕಪ್ ತಗೆದುಕೊಂಡು ಕುಡಿಸಿಬಿಟ್ಟಾಳು ಎನಿಸಿ, ಅವಳಿಗೂ ಮುಂದಾಗಿ ನಾನೇ ಕೈಚಾಚಿದೆ. ಚಂದ್ರಮ್ಮನೊಂದಿಗೆ ಇವಳೂ ನಿಗೂಢವಾಗಿ ನಗುತ್ತಾ ಇನ್ನೊಂದು ಕುಚರ್ಿಯನ್ನೆಳೆದುಕೊಂಡು ಎದುರಿಗೆ ಕುಳಿತು ಮತ್ತೆ ಚಂದ್ರಮ್ಮನತ್ತ ನೋಡಿದಳು. ಕೂಡಲೇ ಚಂದ್ರಮ್ಮ ಅಲ್ಲಿಂದ ಮಾಯವಾದಳು. ದಿನಾ ಅಫಿಶಿಯಲ್ ಡ್ರೆಸ್ನಲ್ಲಿ ನೋಡಿದ್ದ ನನಗೆ ಇಂದು ಜಂಪ್ ಸ್ಯೂಟ್ನಲ್ಲಿದ್ದ ಇವಳು `ಅವಳೇನೇ?’ ಎನ್ನುವಷ್ಟು ಹೊಸದಾಗಿ ಕಾಣುತ್ತಿದ್ದಳು. ಜೊತೆಗೆ ಮಳೆ ಹಾಗೂ ನನ್ನ ಕಾರಣದಿಂದ ನೀರಿನ ಸಂಪರ್ಕಕ್ಕೆ ಬಂದಿದ್ದ ತೊಯ್ದ ಬಟ್ಟೆಗಳು ನನ್ನನ್ನು ತಲ್ಲಣಗೊಳಿಸುತ್ತಿದ್ದವು. ಇದನ್ನೆಲ್ಲಾ ಗಮನಿಸುತ್ತಿದ್ದ ಅವಳು ಇದರ ಪರಿವೆಯೇ ಇಲ್ಲವೇನೋ ಎಂಬಂತೆ ನನ್ನದೊಂದು ಟಿಪ್ಪಣಿ ಪುಸ್ತಕದಲ್ಲಿ ಕಣ್ಣು ನೆಟ್ಟಂತೆ ಕುಳಿತಿದ್ದಳು.

ಅವಳು ಓದುತ್ತಿರುವುದು ನಿಜವಲ್ಲ ಎಂದು ಕೊಳ್ಳುತ್ತಿದ್ದಾಗ…. ನನ್ನ ಮುಂದೆ ಅವಳು ಈಗಾಗಲೇ ಗುರುತು ಮಾಡಿದ್ದ ಒಂದು ಪುಟವನ್ನು ತೋರಿಸುತ್ತಾ ‘ಇದನ್ನು ಓದಿ’ ಎಂಬಂತೆ ಒಡ್ಡಿದಳು. ಅವಳ ನೋಟ ಓದುವುದನ್ನು ಅನಿವಾರ್ಯ ಮಾಡಿತ್ತು. ಓದಿದೆ…

”ಇಲ್ಲಿ ಹೊಂಗೆಯೊಂದಿಗೆ ಮುತ್ತುಗ, ತುಗ್ಗಲಿ, ತಾರೆ, ದಿಂಡಿಗ, ಜಗಳಗಂಟಿ, ಹಾಲೆ ಇತ್ಯಾದಿ ಗಿಡಗಳು ನಾವು ಸುಲಭಕ್ಕೆ ಗುರುತು ಹಚ್ಚಲಾಗದಂತೆ ಬೃಹತ್ತಾಗಿ ಬೆಳೆದು ನಿಂತಿವೆ. ಇವನ್ನೆಲ್ಲಾ ಬಾಡುಬಕ್ಕ, ಲಾಂಟಾನಾದ ಪೊದೆಗಳು ಒಟ್ಟುಗೂಡಿಸಿ ನೇಯ್ದು, ಚಕ್ರವ್ಯೂಹವೂ ಬೆಚ್ಚಿಬೀಳುವಂಥ ಜಟಿಲವ್ಯೂಹಗಳನ್ನು ರಚಿಸಿವೆ. ಅದಕ್ಕೇ ನನ್ನ ಹಿರಿಯರು ನಗರಗಳಿಗೆ ಹೋಗುವ ಮಕ್ಕಳಿಗೆ ಹೇಳುತ್ತಿದ್ದ ಎಚ್ಚರವನ್ನೇ ಈ ಇದರ ಬಗ್ಗೆಯೂ ಹೇಳುತ್ತಿದ್ದರು. ‘ಹೊಂಗೆಯಲ್ಲಿ ಹುಶಾರಾಗಿರಿ! ಅದೊಂದ್ಥರಾ ಸಾವಿದ್ದಂಗೆ! ಕಣ್ಣಲ್ಲಿ ಬೆಳಕಿದ್ದಂಗೇ ಹೊರಗೆ ಬಂದುಬಿಡ್ರಿ! ಸ್ವಲ್ಪ ಮಿಸ್ಟೀಕಾದ್ರೂ ದಾರಿ ತಪ್ಪಿಸ್ಕೊಂಡು ಬಿಡ್ತೀರಾ!!’. ‘ಕಣ್ಣಲ್ಲಿ ಬೆಳಕಿದ್ದಂಗೆ’ ಎಂದು ಅವರು ಹೇಳುತ್ತಿದ್ದುದು ವಿಷಸರ್ಪಗಳು, ಕಾಡುಹಂದಿಗಳು ಕಣ್ಣಿಗೆ ಕಾಣುವಂಥ ಬೆಳಕನ್ನು. ನಡು ಮಧ್ಯಾಹ್ನದಲ್ಲೂ ಹೊರಗೆ ಸಂಜೆ ಹೊತ್ತಿನಲ್ಲಿದ್ದಷ್ಟು ಬೆಳಕು ಮಾತ್ರ. ಸಂಜೆ ಹೊತ್ತಿಗೆ ಗಾಢ ಕತ್ತಲು, ಪಕ್ಕದಲ್ಲಿದ್ದವರನ್ನು ಮುಟ್ಟದ ಹೊರತು ಕಾಣದಷ್ಟು ಸ್ನಿಗ್ಧ. ಇದು ತಂಪುತಂಪು…. ಜಟಿಲ… ದುರ್ಗಮ…. ಅಪಾಯಕಾರಿ… ಚೇತೋಹಾರಿ. ಇವೆಲ್ಲಾ ಸೇರಿ ಬಾಲ್ಯದಿಂದಲೂ ಇದು ತಂದೊಡ್ಡುತ್ತಿದ್ದ ಭೀತಿಯಿಂದಾಗಿ ಇದರಿಂದ ತಪ್ಪಿಸಿಕೊಂಡು ದೂರ ಹೋಗಲು ಆಶಿಸುತ್ತಿದ್ದೆ. ನಿಜಕ್ಕೂ ಹೋದಾಗ ಅದಕ್ಕಾಗಿ ಹಂಬಲಿಸತೊಡಗಿದೆ. ಯಾಕೆ ಹೀಗೆ? ಎನ್ನುವ ಪ್ರಶ್ನೆಗೆ ನಾನು ಹಲವಾರು ಬಾರಿ ಮುಖಾಮುಖಿಯಾಗಿದ್ದೇನೆ. ಅದರಾಳದ ನಿಗೂಢ ಭೀತಿಯ ಹೊರತು ಇನ್ನೊಂದು ಕಾರಣ ಹೊಳೆದಿಲ್ಲ. ಇಂಥದ್ದೊಂದು ಭೀತಿಯೂ ಮನುಷ್ಯನ ಆಕರ್ಷಣೆಯಾಗಲು ಸಾಧ್ಯವೇ?”

ಓದಿ ಮುಗಿಸುತ್ತಿದ್ದಂತೆ ನನ್ನ ಮುಖವನ್ನೇ ದಿಟ್ಟಿಸುತ್ತಾ…. ಕೈಚಾಚಿದಳು. ಪುಸ್ತಕ ಕೊಡಲು ಹೋದೆ, ಪುಸ್ತಕದೊಂದಿಗೆ ಕೈಯನ್ನೂ ಹಿಡಿದುಕೊಂಡಳು, ಬಲವಾಗಿ. ಅಷ್ಟರಲ್ಲಿ ಚಂದ್ರಮ್ಮ ಎರಡು ಅಗಲವಾದ ಕವರ್ಗಳನ್ನು ತಂದು ತನ್ನ ಯಜಮಾನಿಯ ಕೈಗೆಕೊಟ್ಟಳು. ಅವಳು ಗಾತ್ರದಿಂದಲೇ ತಿಳಿದವಳಂತೆ ಮೊದಲು ದಪ್ಪಗಿದ್ದ ಕವರನ್ನು ತೆರೆದು ನನ್ನ ಮುಂದೆ ಚಾಚಿದಳು. ಸಾವಕಾಶವಾಗಿ ನೋಡಿದೆ. ಅಲ್ಲಿ ಅಮೆರಿಕನ್ ಲ್ಯಾಬಿನ ಹೆಸರಿನಲ್ಲಿದ್ದ ಅಗ್ರಿಮೆಂಟ್ ಪತ್ರಗಳು ಹಾಗೂ ನನ್ನ ವೀಸಾ ಅಜರ್ಿಗಳಿದ್ದವು. ಅವನ್ನು ಟೇಬಲ್ಲಿನ ಮೇಲಿಡುತ್ತಾ ಮತ್ತೆ ಅವಳತ್ತ ನೋಡಿದೆ. ಅವಳು ಇನ್ನೊಂದು ಕವರಿನಲ್ಲಿದ್ದ ಕಾಗದಗಳನ್ನು ಕೊಟ್ಟಳು. ಅವು ಡಿಸ್ಚಾರ್ಜ್ ಫಾರಂಗಳಾಗಿದ್ದವು. ಅವುಗಳನ್ನು ಮೊದಲಿಟ್ಟ ಕಾಗದಗಳ ಪಕ್ಕದಲ್ಲಿಟ್ಟು ಅವಳತ್ತ ನೋಡಿದೆ. ಅವಳ ನೋಟ ಪ್ರಶ್ನಾರ್ಥಕವಾಗಿತ್ತು. ನಾನು ತುಟಿತೆರೆಯದಂತೆ ನಕ್ಕು ಅಲ್ಲಿಂದ ಎದ್ದು ರೂಮಿಕೊಟ್ಟಿದ್ದ ದಪ್ಪ ಕವರಿನಿಂದ ದಪ್ಪ ಕೀ ತಗೆದುಕೊಂಡು ಹೊರಗೆ ನಡೆದೆ.

X

ಪಾರ್ಕಿಂಗ್ ಲಾಟಿನಲ್ಲಿ ಮೈತುಂಬಾ ಧೂಳುಹೊದ್ದು ನಿಂತಿದ್ದ ನನ್ನ ಗಾಡಿಯನ್ನು ನೋಡಿ ಒಂದು ಕ್ಷಣ ನಿಜಕ್ಕೂ ನೋವಾಯಿತು. ನಾನೆಂದೂ ನನ್ನ ಗಾಡಿಯನ್ನು ಹೀಗಿಟ್ಟುಕೊಂಡವನಲ್ಲ. ಕೇಡಿ ಹೆಂಗಸು, ಕೊಳಕಿ, ಯಾವಾಗಲೂ ಹೀಗೇ…., ಎಂದು ರೂಮಿಯನ್ನು ಬೈದುಕೊಳ್ಳುತ್ತಾ; ಮುಂದಿದ್ದ ಧೂಳನ್ನು ಕೊಡವಿ; ಒಳಗೆ ಹೋಗಿ ಸ್ಟಾರ್ಟ್ ಮಾಡಿ, ಗಾಜನ್ನು ತೊಳೆದುಕೊಂಡು ಮುಂದೆ ಹೊರಟೆ. ಅರೆ… ಎದುರಿಗೆ ಕಡವೆ ಅಡ್ಡ ನಿಂತಿದೆ. ಗೊಂದಲದ ಮುಖದಲ್ಲಿ. ನಾನು ಸರ್ರನೆ ಗಾಡಿಯನ್ನು ಹಿಂದೆ ತಗೆದುಕೊಂಡು ತುಂಬಾವೇಗವಾಗಿ ಅವಳತ್ತ ನುಗ್ಗಿದೆ ಅವಳು ಕಿಂಚಿತ್ ಕದಲದೆ ನಿಂತಿದ್ದಾಳೆ. ಅವಳ ಪಕ್ಕಕ್ಕೆ ಗಾಡಿ ಹಾಕಿ, ಹತ್ತುವಂತೆ ಸೂಚಿಸಿದೆ. ಹತ್ತುವಾಗ ‘ಎದೆಗಾರ್ತಿ’ ಎಂದೆ. ಏನೋ ಬೈದಳು, ಬಾಗಿಲು ಮುಚ್ಚಿದ ಸದ್ದಿನಲ್ಲಿ ಕೇಳಿಸಲಿಲ್ಲ.

ಗಾಡಿ ಕ್ಯಾಂಪಸ್ಸಿನ ಉದ್ದಗಲಕ್ಕೆ ಹರಿದಿದ್ದ ಕಚ್ಛಾ ದಾರಿಗಳಲ್ಲಿ ಮಿಂಚಿನಂತೆ ನುಗ್ಗುತ್ತಿತ್ತು. ಕಟ್ಟಡಗಳನ್ನೆಲ್ಲಾ ದಾಟಿ ಸಂಜೆ ನಾನು ನಡೆದು ಹೋಗಿದ್ದ ರಸ್ತೆಯನ್ನರಸಿ ಹೋಗುತ್ತಿದೆ. ಪ್ರಳಯಾಂತಕ ಮಳೆ, ಕಗ್ಗತ್ತಲ ನಡುವೆ ಎರಡು ಬೆಳಕಿನ ಕೋಲುಗಳನ್ನು ಹಿಂಬಾಲಿಸಿ ಸಾಗುತ್ತಾ ಕೊನೆಗೆ ಕ್ಯಾಂಪಸ್ಸಿನ ಹಿಂದಿನ ಗೇಟನ್ನೂ ದಾಟಿ ಮುಂದುವರೆಯಿತು. ಅರೆ… ನಾನು ಇಷ್ಟು ದೂರ ಬಂದಿದ್ದೆನೇ? ಅಥವಾ ಕತ್ತಲಲ್ಲಿ ದಾರಿ ತಪ್ಪಿದೆನೇ? ಸಾಧ್ಯವಿಲ್ಲ ನನಗೆ ಆ ಜಾಗ ಸ್ಟಷ್ಟವಾಗಿ ನೆನಪಿದೆ, ಮತ್ತೂ ಮುಂದೆ ಸಾಗಿದೆ. ಬೆಚ್ಚಿದ ಖುಷಿಯಲ್ಲಿ ಮಕ್ಕಳಂತೆ ನೋಡುತ್ತಾ ಕುಳಿತಿದ್ದಾಳೆ. ಅವಳ ಒಂದು ಕೈ ಗೇರ್ಲಿವರ್ ಮೇಲಿರುವ ನನ್ನ ಕೈ ಹಿಡಿದಿದೆ. ಅದು ಅವಳ ಭಾವಸ್ಪಂದನಗಳನ್ನು ನನಗೆ ರವಾನಿಸುತ್ತಿದೆ. ಒಂದು ಕಡೆ ಬಂದು ಸರ್ರನೆ ಗಾಡಿಯನ್ನು ಬಲಕ್ಕೆ ತಿರುಗಿಸಿ ಮತ್ತೆ ಎಡಕ್ಕೆ ತಿರುಗಿಸಿ ನಿಲ್ಲಿಸಿ, ನಿಲ್ಲಿಸಿದ ವೇಗದಲ್ಲೇ ಬಾಗಿಲು ತಗೆದು ಕೆಳಕ್ಕೆ ನೆಗೆದೆ. ಗಾಡಿ ಮುಂದಕ್ಕೆ ಬಂದು, ಸಮೀಪದಲ್ಲಿ ಬಿದ್ದಿದ್ದ ಒಂದು ಉದ್ದನೆಯ ಕಡ್ಡಿಯನ್ನು ತಗೆದುಕೊಂಡು ಪಕ್ಕದಲ್ಲಿದ್ದ ಹುಲ್ಲಿನ ಪೊದೆಯಿಂದ ಒಂದು ಅರ್ಧಮಾರುದ್ಧದ ಕೊಳಕು ಮಂಡಲದ ಹಾವನ್ನು ಎತ್ತಿ ಹೆಡ್ಲೈಟಿನ ಬೆಳಕಿಗಿಡಿದೆ. ಅದನ್ನು ನೋಡಿದ್ದೇ ತಡ ಅವಳು ಎಷ್ಟು ಜೋರಾಗಿ ಚೀರಿದಳೆಂದರೆ ಕಿಟಕಿಗಳ ಗಾಜು ಹೊಡೆದು ಹೋಗದಿದ್ದುದು ಆಶ್ಚರ್ಯ. ಗಾಡಿಯಿಂದ ಇಳಿದು ತನ್ನ ಕಾಲಿನ ಸುತ್ತಮುತ್ತ ಹತ್ತಾರು ಸಾರಿ ನೋಡುತ್ತಾ ನನ್ನತ್ತ ಬಂದವಳೇ ಓಡಿಬಂದು ಹಠಾತ್ತಾಗಿ ನನ್ನ ತಬ್ಬಿಕೊಂಡಳು. ಅವಳಿಂದ ಬಿಡಿಸಿಕೊಳ್ಳಲು ನಾನು ಸತ್ತ ಹಾವನ್ನು ಬಿಸಾಕಲೇಬೇಕಾಯ್ತು.

ಅನಂತರ ಅವಳ ಒಂದು ಕೈ ನನ್ನ ತೋಳನ್ನು ಭದ್ರವಾಗಿ ಹಿಡಿದಿತ್ತು. ಸ್ವಲ್ಪ ಹೊತ್ತಾದ ಮೇಲೆ, ತೋಳನ್ನು ಅದುಮಿ ನನ್ನತ್ತ ‘ಏನಾಯಿತು’ ಎಂಬಂತೆ ಕಣ್ಣು ಪಿಳುಕಿಸಿದಳು. ಸಂಜೆ ಅವಳೊಂದಿಗೆ ಕಿತ್ತಾಡಿ ಹೊರಟವನು ಉದ್ವೇಗದ ಭರದಲ್ಲಿ ಇಲ್ಲಿನವರೆಗೂ ಬಂದಿದ್ದೆ. ಯಾವುದೋ ಮೂಡಿನಲ್ಲಿ ದಾರಿಯಲ್ಲಿ ಮಲಗಿದ್ದ ಆ ಹಾವಿನ ಮಧ್ಯಕ್ಕೆ ಒಂದು ಕಾಲನ್ನಿಟ್ಟುಬಿಟ್ಟೆ. ತಟ್ಟನೆ ಹಾವು ಕಾಲಿಗೆ ಬಾಯಿಹಾಕಿತು. ನಾನು ಕ್ಷಣಾರ್ಧದಲ್ಲಿ ಇನ್ನೊಂದು ಕಾಲನ್ನು ಅದರ ತಲೆಯಮೇಲಿಟ್ಟು ಅದುಮಿದೆ. ಜೀವ ಭಯದಲ್ಲಿ ಎಷ್ಟು ಜೋರಾಗಿ ತುಳಿದೆನೋ ಗೊತ್ತಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅದು ಸ್ತಬ್ಧವಾಯಿತು. ಇಷ್ಟನ್ನೂ ಅವಳಿಗೆ ಅಭಿನಯದಲ್ಲಿಯೇ ಹೇಳಿದೆ. ಅದಕ್ಕೆ ಪ್ರತಿಕ್ರಿಯೆಯಾಗಿ ತೋಳನ್ನು ಒಮ್ಮೆ ಬಲವಾಗಿ ಹಿಂಡಿ, ನಂತರ ಹಿಂಬದಿಯಮೇಲೆ ಛಟೀರನೆ ಒಂದು ಕೊಟ್ಟಳು. ಯಾವುದಕ್ಕೆ ಯಾವುದು ಎಂದು ಅರ್ಥವಾಗಲಿಲ್ಲ. ನಂತರದ ಅವಳ ನೋಟಕ್ಕೆ ನನ್ನ ಬಳಿ ವಿವರಣೆ ಇಲ್ಲ.

ಅವಳ ಆ ನೋಟದ ನಡುವಿನಿಂದಲೇ ನನ್ನಲ್ಲಿ ತಕ್ಷಣ ಹುಟ್ಟಿದ ಪ್ರಶ್ನೆಯೊಂದನ್ನು ಹಾಗೇ ಕೇಳಿದೆ, ‘ನನ್ನ ಖಾಯಿಲೆ?’. ಅವಳು ಅಷ್ಟೇ ಖಚಿತವಾಗಿ ‘ಎಲ್ಲಿದೆ?’ ಅಂದವಳು ಸ್ವಲ್ಪ ತಡೆದು ‘ನನ್ನ ಮಟ್ಟಿಗೆ!’ ಅಂದಳು. ನಾನು ಚಕಿತನಾಗಿ ‘ಅದೇಗೆ ಹೇಳುತ್ತೀ’ ಅಂದೆ. `ಅದು ಹೇಳುವುದಲ್ಲ, ಅನುಭವದಲ್ಲಿ ಕಂಡುಕೊಳ್ಳುವುದು’ ಅಂದಳು. ನಾನು ಮತ್ತೂ ಗೊಂದಲದಲ್ಲಿ ‘ಯಾರು’ ಅಂದೆ. ಸಿಟ್ಟಾದವಳಂತೆ ‘ಇನ್ಯಾರು, ನಾನೇ’ ಅಂದಳು. ‘ಹಾಗಾದರೆ ಈಗಲೇ ಕಂಡುಕೊಳ್ಳಿ’ ಅಂದೆ. ಒಮ್ಮೆಲೇ ಅವಳ ಹೆಣ್ತನವೆಲ್ಲಾ ಜಗ್ಗನೆ ಜಾಗೃತಗೊಂಡಂತೆ ನಾಚಿದವಳು, ತಕ್ಷಣ ಚುಡಾಯಿಸುವವಳಂತೆ ‘ಐಯಾಮ್ ನಾಟ್ ಸ್ನೋ ಊಲ್ಫ್’ ಅಂದಳು. ಇಂಥದ್ದೊಂದು ಉತ್ತರದ ಊಹೆಯೂ ಇಲ್ಲದ ನಾನು ಬೆಚ್ಚಿ ಮುಂದೆ ಹೊರಟೆ. ಇವಳ ‘ಹಿಮತೋಳ’ದ ಹಿನ್ನೆಲೆ ಹೊಳೆದಿತ್ತು. ಆದರೆ ಎಲ್ಲಿಗೆ, ಹೇಗೆ ಕೈಚಾಚುತ್ತಿದ್ದಾಳೋ ಹೊಳೆಯಲಿಲ್ಲ.

ಗಾಡಿಯನ್ನು ನನ್ನ ಕೊಟಡಿಯಿದ್ದ ಕಟ್ಟಡದ ಮುಂದೆ ತಂದು, ಇವಳ ಗಾಡಿಯ ಹಿಂದೆ ನಿಲ್ಲಿಸಿದೆ. ಅವಳು ತಟ್ಟನೆ ಕೆಳಕ್ಕೆ ಧುಮುಕಿ ಹರಕೆ ಹೊತ್ತವಳಂತೆ ಕಾರಿನ ಒಳಗಿನ ಮ್ಯಾಟುಗಳನ್ನೆಲ್ಲಾ ಕಿತ್ತು ಹೊರಹಾಕತೊಡಗಿದಳು. ಗಾಡಿ ಕಮುಟುವಾಸನೆ ಹೊಡೆಯುತ್ತಿತ್ತು. ಇದರಲ್ಲಿ ಅವಳಿಗೆ ಹಿಮತೋಳದ ವಾಸನೆ ಕಂಡಿರಬಹುದೇ? ಗಾಡಿಯ ತುಂಬಾ ಫಾಸ್ಟ್ಫುಡ್ಡಿನ ಡಬ್ಬಗಳು, ಕೂಲ್ ಡ್ರಿಂಕ್ಸಿನ ಖಾಲಿ ಟಿನ್ನುಗಳು ಪಿಜ್ಜಾ, ಬರ್ಗರ್ಗಳ ಚೂರುಗಳು ಚದುರಿದಂತೆ ಬಿದ್ದಿದ್ದವು. artಅವಳು ಏನು ಮಾಡಲು ಹೊರಟಿದ್ದಾಳೆ ಎಂದು ತಿಳಿಯುತ್ತಿದ್ದಂತೆ ನಾನು ಮ್ಯಾಟುಗಳನ್ನು ಕ್ಲೀನ್ ಮಾಡತೊಡಗಿದೆ. ಅವಳು ಗಾಡಿಯ ಒಳಾಂಗಣವನ್ನು ಸ್ವಚ್ಛಮಾಡತೊಡಗಿದಳು,ಸೂತಕದ ಮನೆಯ ಶುದ್ಧೀಕರಣದಂತೆ. ಇವಳ ತಲ್ಲೀನತೆ ಕಂಡು ನಾನು ಬೆರಗಾದೆ. ನಿಂತಲ್ಲಿಂದಲೇ ಡ್ಯಾಶ್ ಬೋರ್ಡಿನ ಬಾಕ್ಸ್ ಕಡೆಗೆ ಬೆರಳು ತೋರಿಸಿದೆ. ಅದನ್ನು ತೆರೆದು ಒಂದೊಂದೇ ವಸ್ತುಗಳನ್ನು ನನಗೆ ತೋರಿಸಿ, ತೋರಿಸಿ ನಾನು ತಲೆಯಾಡಿಸಿದ್ದನ್ನೆಲ್ಲಾ ಹೊರಗೆಸೆದಳು. ಕೊನೆಗೆ ಒಂದು ಅರೆಬರೆ ಬಳಸಿದ್ದ ಮಾತ್ರೆಗಳ ಶೀಟು ಸಿಕ್ಕಿತು. ಅದನ್ನು ಓದಿ, ಕಿವುಚಿದಂತೆ ಮುಖಮಾಡಿಕೊಂಡು ನನ್ನನ್ನು ಕೇಳದೇ ದೂರ ಎಸೆದು, ಮ್ಯಾಟುಗಳನ್ನು ಹಾಕಲು ಶುರುಮಾಡಿದಳು. ನಾನು ನನ್ನ ರೂಮಿನತ್ತ ಓಡಿದೆ.

ನನ್ನ ಸಾಮಾನುಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಕೆಳಗೆ ತಂದಾಗ ಗಾಡಿ ಹಿಂದಿನೆಲ್ಲಾ ದುರ್ಗಂಧಗಳನ್ನೂ ನೀಗಿಕೊಂಡು ಫ್ರೆಷ್ಷಾಗಿ ಘಂ ಎನ್ನುತ್ತಿತ್ತು. ಆ ಹೊಸ ಸುವಾಸನೆಯ ಮೂಲವನ್ನು ಹುಡುಕಿದೆ. ನನ್ನ ಗಾಡಿಯಲ್ಲಿದ್ದ ಬತ್ತಿಹೋಗಿದ್ದ ಏರ್ಫ್ರೆಶ್ನರ್ರನ್ನು ತಗೆದುಹಾಕಿ ಹೊಸದನ್ನು ಹಾಕಿದ್ದಳು. ಅದು ಈವರೆಗೂ ಅವಳ ಕಾರಿನಲ್ಲಿತ್ತಲ್ಲವೇ?. ಸಾಮಾನುಗಳನ್ನೆಲ್ಲಾ ಜೋಡಿಸಿ, ಅವಳಿಗಾಗಿ ಸುತ್ತ ನೋಡಿದೆ. ಸ್ವಲ್ಪ ದೂರದ ಬೆಂಚಿನಮೇಲೆ ಗಲ್ಲಕ್ಕೆ ಕೈ ಆನಿಸಿ ಕುಳಿತು ಬಯಲಿನತ್ತ ನೋಡುತ್ತಿದ್ದಾಳೆ. ಥೇಟ್ ಪೈಂಟಿಂಗ್ನಲ್ಲಿದ್ದಂತೆ. ಒಂದು ಕ್ಷಣ ಚಕಿತನಾದೆ. ಇಂಥದ್ದೊಂದು ಪೈಂಟಿಂಗ್ ಅವಳ ಚೇಂಬರಿನಲ್ಲಿತ್ತು. ಒಂದು ಅಗಾಧ ಬಯಲು, ಮರುಭೂಮಿಯನ್ನು ಹೋಲುತ್ತಿದ್ದರೂ ಮರುಭೂಮಿಯಲ್ಲ. ಅಲ್ಲಲ್ಲಿ ಸಣ್ಣಸಣ್ಣ ಗಿಡಗಳು ಕಂಡರೂ ಅದು ಬಯಲೇ. ಆ ಬಯಲಿನಾಚೆಯ ಆ ದಿಗಂತದಲ್ಲೊಂದು ಸಣ್ಣ ಹಸಿರಿನ ಪಟ್ಟಿ. ಈ ತುದಿಗೆ ಅಲ್ಲಲ್ಲಿ ಹಸಿರು ಎಲೆಗಳಿರುವ ಒಂದು ಸಣ್ಣ ಮರ. ಅದರ ಕೆಳಗೆ ಹೆಣ್ಣೊಂದು ಗಲ್ಲಕ್ಕೆ ಕೈಯೂರಿ ದಿಗಂತದಲ್ಲಿ ಕಾಣುವ ಹಸಿರಿನ ಪಟ್ಟೆಯತ್ತ ದೃಷ್ಟಿಚೆಲ್ಲಿ ಕುಳಿತಿದೆ. ಹೆಪ್ಪುಗಟ್ಟಿ ಕೂತಿರುವ ನಿರೀಕ್ಷೆ ಕಣ್ಣಿಂದ ಇನ್ನೇನು ಜಿನುಗಿ ಬಿಡುವಂತಿದೆ. ನಿಜಕ್ಕೂ ಅದ್ಭುತವಾದ ವರ್ಣ ಸಂಯೋಜನೆಯ ಅಪೂರ್ವ ಕಲಾಕೃತಿ ಅದು. ಅದರ ಕೆಳಗೆ ಹೆಸರಿಗಾಗಿ ಹುಡುಕಾಡಿದೆ, ಕಾಣಲಿಲ್ಲ. ಇವಳನ್ನು ಕೇಳಬೇಕು ಅನ್ನುವಷ್ಟರಲ್ಲಿ ಡಾ. ಮುನಿ ಒಳಗೆ ಬಂದಿದ್ದರಿಂದ ಕೇಳಿರಲಿಲ್ಲ.

ಹತ್ತಿರಕ್ಕೆ ಹೋಗಿ ಅವಳ ಹೆಗಲಮೇಲೆ ಕೈಯಿಟ್ಟ ‘ನಿಮ್ಮ ಚೇಂಬರಿನಲ್ಲಿರುವ ಪೈಂಟಿಂಗ್ನಿಂದ ತುಂಬಾ ಇನ್ಫ್ಲೂಯನ್ಸ್ ಆದಂತಿದೆ’ ಎಂದೆ. ತಲೆಯೆತ್ತಿ ಆಶ್ಚರ್ಯದಿಂದ ಮುಖ ನೋಡಿದಳು. ನಗು ಮಾಯವಾಗಿತ್ತು. ‘ಯಾರದು ಅದು’ ಅಂದೆ. ನನ್ನ ಇನ್ನೊಂದು ಕೈಯನ್ನು ಎರಡೂ ಕೈಗಳಲ್ಲಿ ಹಿಡಿದುಕೊಳ್ಳುತ್ತಾ…. ಅದನ್ನು ಅವಳೆದೆಗೆ ಒತ್ತಿಕೊಂಡಳು. ನನಗಾದ ಬೆರಗಿನ ಪರಿಗೆ ನಾನು ಕರಗಿಹೋಗದಿದ್ದುದೇ ಆಶ್ಚರ್ಯ. ಈ ಕಡವೆಯಂಥ ಒರಟು ಹೆಣ್ಣಿನೊಳಗೊಬ್ಬಳು ಅಂಥ ಸೂಕ್ಷ್ಮ ಕಲಾವಿದೆಯಿರುವುದನ್ನು ನನ್ನಿಂದ ಊಹಿಸಲೂ ಸಾಧ್ಯವಾಗಿರಲಿಲ್ಲ. ಅವಳನ್ನು ಎತ್ತಿ ನಿಲ್ಲಿಸಿ ಅವಳ ಬಲಗೈಯನ್ನು ಹಗುರವಾಗಿ ಎತ್ತಿ ಕಣ್ಣಿಗೊತ್ತಿಕೊಂಡೆ. ನಿಧಾನವಾಗಿ ಅವಳ ತಲೆಯನ್ನು ನನ್ನ ಹಣೆಗಾನಿಸಿ ನಿಂತಳು. ಒಮ್ಮೆ ಬಿಕ್ಕಿದ ಸದ್ದು, ಇವಳದ್ದೋ… ಆಕಾಶದ್ದೋ… ತಿಳಿಯಲಿಲ್ಲ. ಮತ್ತೆ ಮಳೆ ಹನಿಯಲಾರಂಭಿಸಿತು.

ಪರಿಸ್ಥಿತಿ ಯಾಕೋ ಕೈ ಮೀರುತ್ತಿದೆ ಅನಿಸತೊಡಗಿತು. ಕೂಡಲೇ ತಲೆಕೊಡವಿ, ಒರಟಾಗಿ ಅವಳ ಕೈ ಹಿಡಿದು ಕರೆದುಕೊಂಡು ಬಂದು ಅವಳು ಕೊಟ್ಟಿದ್ದ ಎರಡು ಸೆಟ್ ಕಾಗದಗಳನ್ನು ತಗೆದು, ಅದರಲ್ಲಿ ಒಂದು ಸೆಟ್ಟಿಗೆ ಸಹಿ ಮಾಡಿ ಅವಳ ಕೈಗೆ ಕೊಟ್ಟೆ. ಅದನ್ನು ನೋಡಿದ್ದೇ ಅವಳ ಕಣ್ಣುಗಳಲ್ಲಿ ಮಿಂಚೊಂದು ಸುಳಿದು ಹೋಯಿತು. ಅವಳ ಕೈಹಿಡಿದು ತಿರುಗಿಸಿ ವಾಚ್ ನೋಡಿದೆ. ಮಧ್ಯರಾತ್ರಿ ಮೀರುತ್ತಿತ್ತು. ಕೂಡಲೇ ಅವಳನ್ನು ಪಕ್ಕಕ್ಕೆ ಸರಿಸಿ ಗಾಡಿಯೊಳಗೆ ಕುಳಿತು, ಸ್ಟಾರ್ಟ್ ಮಾಡಿ ಅವಳತ್ತ ನೋಡಿದೆ. ಅವಳು ನನ್ನತ್ತ ನೋಡದೇ ಸೀದಾ ಅವಳ ಕಾರಿನ ಬಳಿಹೋಗಿ ಹಿಂದಿನ ಬಾಗಿಲನ್ನು ತಗೆದು ಅವಳ ತೋಳುಗಳು ತಬ್ಬಲಾಗದಷ್ಟು ಅಗಲವಾದ ಒಂದು ಚೌಕಾಕಾರದ ವಸ್ತುವನ್ನು ನನ್ನತ್ತ ತಂದಳು. ಅದನ್ನು ನನ್ನ ಕಾರಿನ ಬ್ಯಾನೆಟ್ ಮೇಲಿಟ್ಟು ಅದಕ್ಕೆ ಸುತ್ತಿದ್ದ ಕಾಗದವನ್ನು ಕಿತ್ತು ಹಾಕಿದಳು. ವಾಹ್…. ಎಂಥ ಮಹೋನ್ನತ ಕಲಾಕೃತಿ. ಕಣ್ಣಿಗೆ ಕಾಣುವಷ್ಟೂ ದೂರವೂ ಹಬ್ಬಿಹರಡಿರುವ ದಟ್ಟ ಹಸಿರಿನ ತೋಪು. ಆ ಅಪಾರ ದಟ್ಟಣಿಗೆ ಮುಖ ಮಾಡಿ ಧ್ಯಾನಮುದ್ರೆಯಲ್ಲಿ ಕುಳಿತಿರುವ ಪರ್ವತಾಕಾರದ ಶುದ್ಧ ಬಿಳಿಯ ಬುದ್ಧ. ಇಡೀ ದೃಶ್ಯವೇ ಸ್ಫಟಿಕಶುದ್ಧ. ನೆರಳು-ಬೆಳಕುಗಳ ವರ್ಣ ಸಂಯೋಜನೆಯಂತೂ ಮಂತ್ರಮುಗ್ಧಗೊಳಿಸುವಂತಿದೆ. ಅರೆ… ಆ ಬುದ್ಧನಿಂದ ಸುಮಾರು ದೂರದಲ್ಲಿ ಒಂದು ಸಣ್ಣ ಕುಟೀರವಿದ್ದಂತಿದೆ, ಅದರ ಮುಂದೊಂದು ದೊಡ್ಡ ಹೊಂಗೆ ಮರ. ಅದರ ಕೆಳಗೊಂದಷ್ಟು ಮಂದಿ ಮಕ್ಕಳು, ಮಕ್ಕಳೊಂದಿಗೆ ಸಂವಾದಿಸುತ್ತಿರುವ ಒಬ್ಬ ವ್ಯಕ್ತಿ. ಅದರಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಕುಟೀರದಂಥ ಆಕೃತಿ, ಅಲ್ಲಿನ ಇನ್ನೊಂದು ಹೊಂಗೆ ಮರದ ಕೆಳಗೆ ಹೆಂಗಸರು ಮಕ್ಕಳೆಲ್ಲಾ ಸಾಲಾಗಿ ನಿಂತಿದ್ದಾರೆ. ಆ ಸರತಿ ಸಾಲಿನ ಮುಂದಿರುವ ಕಲ್ಲುಹಾಸಿನ ಮುಂದೆ ಒಂದು ಸ್ತ್ರೀ ಆಕೃತಿ ಕುಳಿತಿದೆ. ಏನು ಮಾಡುತ್ತಿದೆಯೋ ತಿಳಿಯಲಿಲ್ಲ. ಇಳಿದು ಬಂದು ಹೆಚ್ಚು ಬೆಳಕಿದ್ದ ಕಡೆಗೆ ತಿರುಗಿಸಿ ನೋಡಿದೆ. ಅರೆ…. ಅದು ಕಿವಿಗೆ ಸ್ಟೆತಾಸ್ಕೋಪ್ ಹಾಕಿಕೊಂಡು ಯಾರನ್ನೋ ಪರೀಕ್ಷಿಸುತ್ತಿರುವಂತಿದೆ. ಕೆಳಗೆ ಸಹಿ ಇದೆ ‘ಕಡವೆ’. ನಾನು ಒಳಗಿನ ಅಗಾಧ ಒತ್ತಡವನ್ನು ನಿಭಾಯಿಸಲಾಗದೇ ಥ್ಯಾಂಕ್ಯೂ…. ಥ್ಯಾಂಕ್ಯೂ…. ಗ್ರೇಟ್…. ಥ್ಯಾಂಕ್ಯೂ…. ಎನ್ನುತ್ತಾ ಅವಳತ್ತ ನೋಡಿದೆ. ಕಣ್ಣಾಲಿಗಳಲ್ಲಿ ನೀರು ಕಂಡಂತಾಯಿತು. ನನ್ನತ್ತ ನೋಡದೆ ಕಷ್ಟಪಟ್ಟು ಅದನ್ನು ತಗೆದುಕೊಂಡು ಹೋಗಿ ಇಷ್ಟು ಹೊತ್ತೂ ಅವಳು ಕುಳಿತಿದ್ದ ಸೀಟಿನಲ್ಲಿಟ್ಟಳು. ನಾನು ಬಾ… ಬಾ… ಬಾ… ಎನ್ನುತ್ತಾ ಗಾಡಿಯನ್ನು ಮುಂದಕ್ಕೆ ಚಲಿಸಲು ಬಿಟ್ಟೆ. ಹಿಂದಿನಿಂದ ಓಡಿ ಬಂದವಳು ತನ್ನ ಎರಡೂ ಕೈಗಳಲ್ಲಿ ಸ್ಟಿಯರಿಂಗ್ ಮೇಲಿದ್ದ ನನ್ನ ಬಲಗೈಯನ್ನು ಬಿಗಿಯಾಗಿ ಹಿಡಿದು ಕ್ಷಣಕಾಲ ಸುಮ್ಮನೆ ನಿಂತಳು. ಧ್ಯಾನಿಸುವವಳಂತೆ, ಏನನ್ನೋ ಜೀಣರ್ಿಸಿಕೊಳ್ಳುವವಳಂತೆ. ನಂತರ ಉಸಿರನ್ನು ನೀಳವಾಗಿ ಬಿಟ್ಟು ಅವಳ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುತ್ತಾ `ನಾನು ಅಮೆರಿಕಾಗೆ ಹೋಗುತ್ತಿಲ್ಲ’ ಅಂದಳು. ನಾನು ಭಾವನೆಗಳ ಒತ್ತಡದಲ್ಲಿ ತತ್ತರಿಸತೊಡಗಿದೆ. ಮಾತುಗಳು ಸತ್ತುಹೋಗಿದ್ದವು. ಇನ್ನೊಂದು ಕ್ಷಣ ಇಲ್ಲಿದ್ದರೂ ಕುಸಿದುಹೋಗುವ ಭೀತಿ ಅವರಿಸಿ ಅಲ್ಲಿಂದ ಹೊರಟೆ. ಹಿಂತಿರುಗಿ ನೋಡುವ ಧೈರ್ಯವಾಗಲಿಲ್ಲ.