Category Archives: ಶಾಂತರಾಜು ಎಸ್.ಮಳವಳ್ಳಿ

ಫ್ರೆಂಚ್ ಸಿನಿಮಾದ ಹಣೆಬರಹಗಾರ ಟ್ರೋಫೋ…

– ಶಾಂತರಾಜು ಎಸ್.ಮಳವಳ್ಳಿ

ಅದು ಎರಡನೇ ಮಹಾಯುದ್ಧದ ನಂತರದ ಕಾಲ. ಇಡೀ ಜಗತ್ತಿಗೆ ಮಂಕುಕವಿದಂತಾಗಿತ್ತು. ಯುದ್ಧದಲ್ಲಿ ನೇರವಾಗಿ ಭಾಗವಹಿಸಿ ಗೆದ್ದ ಅಥವಾ ಸೋತ ದೇಶಗಳ ಗೋಳು ಒಂದೇ ತೆರನಾದದ್ದಾಗಿತ್ತು. ದೇಶವೊಂದು ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗಾಗಿಯೇ ಆರ್ಥಿಕ ದಿಗ್ಭಂಧನ ಎಂಬ ಅಸಹಕಾರ ಅಸ್ತ್ರಕ್ಕೆ ಯಾವುದೇ ದೇಶಗಳು ಹೆದರುವುದು (ಕ್ಯೂಬಾದಂತಹ ದೇಶಗಳನ್ನೊರೆತುಪಡಿಸಿ). ಜಾಗತಿಕ ಯುದ್ಧದಲ್ಲಿ ಅಮೇರಿಕಾ-ಇಂಗ್ಲೆಂಡ್‌ ಅನ್ನು ಬೆಂಬಲಿಸಿದ ದೇಶಗಳಲ್ಲಿ ಫ್ರಾನ್ಸ್ ಕೂಡ ಒಂದು. ಯುದ್ಧದ ಬರ್ಬರತೆಯನ್ನು ಕಂಡ ದೇಶದ ಜನರು ಬಹಳ ಲೋಲುಪರಾಗಿ ದೈಹಿಕ ವಾಂಛೆಗೆ ಬಲಿಯಾಗುವುದೂ ಸೇರಿದರಂತೆ ನೈತಕ ಅಧಃಪತನ ಹಿಡಿಯುವುದು ಸಾಮಾನ್ಯ ಪ್ರಕ್ರಿಯೆ. ಇಂಥಹ ನಿದರ್ಶನಗಳನ್ನು ಜರ್ಮನ್ ನಾಟಕಕಾರ ಬ್ರೆಕ್ಟ್‌ನ ನಾಟಕಗಳಲ್ಲಿ ಬಿಂಬಿಸಲು ಪ್ರಯತ್ನಿಸಿದ್ದಾನೆ.

1940 ರಷ್ಟೊತ್ತಿಗಾಗಲೇ ಫ್ರಾನ್ಸ್‌ನ ಸಿನಿಮಾ ಜಗತ್ತಿಗೆ ಇಟಾಲಿಯನ್ ’ನಿಯೋರಿಯಲಿಸ್ಂ’ ಪ್ರಭಾವ ಬೀರಿರುತ್ತದೆ. ’ನಿಯೋರಿಯಲಿಸ್ಂ’ ಅಂದರೆ ಸಿನಿಮಾವನ್ನು ಸಾಧ್ಯವಾದಷ್ಟು ವಸ್ತುನಿಷ್ಠವಾಗಿ ಮಾಡುತ್ತಾ ನೈಜತೆಯನ್ನು ಮೆರೆಸುವುದು. ಅತೀ ವರ್ಣರಂಜಿತ ಕಾಲ್ಪನಿಕ ಕಥಾನಕದ ಬದಲು, ತೀರಾ ಸಾಮಾನ್ಯವಾದ ಕಥೆಯೇ ಆದರೂ ಆ ವಸ್ತುವಿಗೆ ತಕ್ಕಂತೆ ವಾತವರಣ ಸೃಷ್ಠಿಸಿ, ನಾಟಕೀಯತೆಗಿಂತ ನೈಜತೆಯನ್ನು ತುಂಬುವುದು. ಜಗತ್ತಿನೆಲ್ಲೆಡೆ, ಜೀನ್ ರೆನಾಯ್ರ್, ವಿಟ್ಟೊರಿಯಾ ಡಿ ಸಿಕಾರನ್ನು ನಿಯೋರಿಯಲಿಂನ ಪ್ರವರ್ತಕರೆಂದು ಗುರುತಿಸುತ್ತಾರೆ. ಫ್ರಾನ್ಸ್‌ನ ಚಿತ್ರಪ್ರೇಮಿಗಳ ಒಂದು ಗುಂಪು ನಿಯೋರಿಯಲಿಸ್ಂನನ್ನು ಒಪ್ಪಿಕೊಳ್ಳಲಾಗಲಿಲ್ಲ. ಸಿನಿಮಾ ಇರುವುದು ಪ್ರೇಕ್ಷಕನ ನಂಬುಗೆಗಳನ್ನು ಒಡೆದು, ಹೊಸ ಸತ್ಯವನ್ನು ಕಟ್ಟಿಕೊಡಲೇ ಹೊರತು ಕೇವಲ ನೈಜತೆಯನ್ನು ಪ್ರತಿಫಲಿಸಲು ಅಲ್ಲ ಎಂಬುದು ಈ ಗುಂಪಿನ ವಾದ. ಫ್ರಾಂಕೊಸ್ ರೋಲ್ಯಾಂಡ್ ಟ್ರೋಫೋ (François Truffaut), ಜೀನ್ ಲೂಕ್ ಗೊದಾರ್‍ಡ್, ಕ್ಲೌಡ್ ಚಾರ್ಬೆಲ್, ಜಾಕ್ವೆಸ್ ರಿವಟ್ಟೆ ಈ ಗುಂಪಿನ ಪ್ರಮುಖ ಸಿನಿಮಾ ನಿರ್ದೇಶಕರು. ಫ್ರಾಂಕೊಸ್ ರೋಲ್ಯಾಂಡ್ ಟ್ರೋಫೋನ The400blows“ದಿ 400 ಬ್ಲೋಸ್” (1959) ನಿಂದ ಆರಂಭವಾದ ಹೊಸ ಚಿಂತನೆಯ, ಪ್ರಯೋಗಾತ್ಮಕ ಸಿನಿಮಾದ ಕಾಲಘಟ್ಟವನ್ನು ’ಹೊಸಅಲೆ’ ಅಥವಾ ’ನ್ಯೂವೇವ್ ಸಿನಿಮಾ’ ಎಂದು ಕರೆಯಲಾಯಿತು. ಈ ಹೊಸ ಅಲೆಯ ನಿರ್ದೇಶಕರ ಸಿನಿಮಾಗಳು ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತಾ, ಸಣ್ಣ ಮಗುವಿನಿಂದಿಡಿದು ಕಮ್ಯೂನಿಸ್ಟ್ ಸಿದ್ಧಾಂತ-ಚಳುವಳಿಯ ಭಾಷಣದವರೆಗೆ ಎಲ್ಲಾ ರೀತಿಯ ವಿಭಿನ್ನ ದೃಶ್ಯಗಳನ್ನು-ಕಥನಗಳನ್ನು ಒಳಗೊಳ್ಳುತ್ತವೆ. ನಿಯೋರಿಯಲಿಸ್ಂ ಬಹಳ ಸುಲಭವಾಗಿ ಹಾಲಿವುಡ್ ಸಿನಿಮಾದ ಸರಕಾಗಿಬಿಟ್ಟಿತು. ಆದರೆ ನ್ಯೂ ವೇವ್ ಸಿನಿಮಾಗಳು ಹಾಲಿವುಡ್‌ನ ಅಡ್ಡಾದಿಡ್ಡಿ ಸಿನಿಮಾಕರ್ತರಿಗೆ ಪ್ರತ್ಯುತ್ತರ-ಪಾಠವಾಗಿಬಿಟ್ಟಿತು.

ಜೈಲಿನಲ್ಲಿ ಕೊಳೆಯುತಿದ್ದ ಹದಿಹರೆಯದ ಫ್ರಾಂಕೊಸ್ ರೋಲ್ಯಾಂಡ್ ಟ್ರೋಫೋ, ಪ್ರಪಂಚದ ಅಗ್ರಮಾನ್ಯ ಸಿನಿಮಾಕಾರನಾಗಿ ಬೆಳದದ್ದು ಒಂದು ರೋಚಕ ಕಥೆ. ನಿರ್ದೇಶಕ, ನಟ, ನಿರ್ಮಾಪಕ ಮತ್ತು ಕಥೆಗಾರ ಟ್ರೋಫೋನ ದುರ್ಗಮ ಬಾಲ್ಯವೇ ಆತನ ಅನೇಕ ಸಿನಿಮಾದ ಮುಖ್ಯ ಜೀವಾಳ. ಟ್ರೋಫೋನ ತಾಯಿಯ ಬಸುರಿಯಾಗಿದ್ದಾಗ, ರೋಲ್ಯಾಂಡ್ ಎಂಬವವ ಆಕೆಯ ಎರಡನೇ ಗಂಡನಾಗುತ್ತಾನೆ. ಮಲತಂದೆಯಾದರೂ ಟ್ರೋಫೋನನ್ನ ಆದರದಿಂದ ಕಾಣುತ್ತಾನೆ ರೋಲ್ಯಾಂಡ್. ಬಹುಶಃ ಈ ಕಾರಣಕ್ಕಾಗಿಯೇ ಏನೋ ಟ್ರೋಫೋನ ಅನೇಕ ಸಿನಿಮಾಗಳಲ್ಲಿ ತಾಯಿಯಿಲ್ಲದ ನಾಯಕ ಅಥವಾ ತಾಯಿ ಪ್ರೀತಿಯ ಕನವರಿಕೆಯ ಪಾತ್ರಗಳು ಕಾಣಸಿಗುತ್ತವೆ. ಮನೋವೈಜ್ಞಾನಿಕವಾಗಿ ಇದೊಂದು ಭೂತದಲ್ಲಿ ನರಳುವ ಖಾಯಿಲೆ. ಭೂತದಲ್ಲಿ ಸಿಗದ ಕನವರಿಕೆ ವರ್ತಮಾನದಲ್ಲಿ ಅನೇಕ ರೀತಿ ವ್ಯಕ್ತವಾಗುವುದಂತೆ. ಟ್ರೋಫೋ ’ಸ್ಮಾಲ್ ಚೇಂಜ್ (1976)’ ಸಿನಿಮಾದಲ್ಲಂತೂ ಎಲ್ಲ ರೀತಿಯ ತಾಯಿಯನ್ನು ಬಿಂಬಿಸುತ್ತಾನೆ. ಶಾಲೆಗೆ ಹೋಗುವ ಮಗನನ್ನು ಪ್ರತಿದಿನ ಹೊಡೆದು, ಹೇಗಾದರೂ ಸರಿ ಸಾರಾಯಿ ಸಂಪಾದಿಸಿ ತರುವಂತೆ ಮಾಡುವ ತಾಯಿಯೂ ಕೂಡ ಈ ಸಿನಿಮಾದಲ್ಲಿ ಬರುತ್ತಾಳೆ. ಚಿತ್ರದ ಕೊನೆಯಲ್ಲಿ ಆಕೆ ಜೈಲು ಸೇರಿ, ಕಳ್ಳತನವನ್ನು ರೂಢಿಸಿಕೊಂಡ ಹುಡುಗನನ್ನು ಸಮಾಜ ಕಲ್ಯಾಣ ಇಲಾಖೆ ಓದಿಸುತ್ತದೆ.

ತನ್ನ ಬಾಲ್ಯದ ಕಹಿಯಿಂದ ಪೋಲಿಯಾದ ಟ್ರೋಫೋ, ಮುಂದೆ ಇಷ್ಟವಿಲ್ಲದ ಫ್ರೆಂಚ್ ಸೇನೆಯನ್ನು ಸೇರಿ, ಎರಡು ವರ್ಷಗಳ ಕಾಲ ನಿರಂತರವಾಗಿ ಅಲ್ಲಿಂದ ಕಂಬಿ ಕೀಳುವ ಪ್ರಯತ್ನದಲ್ಲಿದ್ದಾಗ ಜೈಲುವಾಸ ಅನುಭವಿಸಬೇಕಾಗುತ್ತದೆ. ಆಗ, ಆಂದ್ರೆ ಬಾಝಿನ್ ಎಂಬ ಮಹಾನ್ ಸಿನಿಮಾ ವಿಮರ್ಶಕನಿಂದಾಗಿ ಟ್ರೋಫೋ ಕ್ರಿಮಿನಲ್ ಕೇಸ್‌ನಿಂದ ಮುಕ್ತನಾಗುತ್ತಾನೆ. ಜೊತೆಗೆ ಆರ್ಥಿಕವಾಗಿ ಸದೃಢವಾಗಲು ಪತ್ರಕರ್ತನಾಗಿ ಕೆಲಸವೊಂದು ದೊರೆಯುತ್ತದೆ. ಬಾಝಿನ್‌ನ ’ಆಯ್ಟ್‌ರ್ ಸಿದ್ಧಾಂತ’ ಸಿನಿಮಾದ ಇತಿಹಾಸದಲ್ಲಿ ಓದಲೇಬೇಕಾದ ಮುಖ್ಯ ಸಿದ್ಧಾಂತ. ಅಕಿರೋ ಕುರುಸೋವಾ ಅಥವಾ ಜೀನ್ ರೇನಾಯ್ರ್‌ರಂಥವರ ಸಿನಿಮಾಗಳು ನಿರ್ದೇಶಕರ ಸಿನಿಮಾವಾಗಿ ಹೇಗೆ ಭಿನ್ನವಾಗಿ ನಿಲ್ಲುತ್ತವೆ ಎಂಬ ಅಂಶವನ್ನು ಗಮನಿಸಿದರೆ ’ಆಯ್ಟ್‌ರ್ ಸಿದ್ಧಾಂತ’ ಅರ್ಥವಾಗುತ್ತದೆ. ಸಿನಿಮಾವೆಂಬುದು ನಿರ್ದೇಶಕನ ಮಾಧ್ಯಮ ಎಂಬ ಪ್ರಬಲ ಅಂಶವನ್ನೊಳಗೊಂಡ ಈ ಸಿದ್ಧಾಂತ ಮುಂದೆ François_Truffaut_(1965)ಟ್ರೋಫೋ, ಗೊದಾರ್‍ಡ್ ನಿರ್ದೇಶಕರಿಂದ ಇನ್ನೂ ಶ್ರೀಮಂತವಾಗುತ್ತದೆ. ಬಾಝಿನ್‌ರ ಒಲವಿನಿಂದ ಟ್ರೋಫೋ ಸಿನಿಮಾ ಪತ್ರಿಕೆಯಾದ ’ಕಹೇರ್‍ಸ್ ದು ಸಿನಿಮಾ’ದಲ್ಲಿ ವಿಮರ್ಶಕನಾಗಿ ಮುಂದೆ ಅದೇ ಪತ್ರಿಕೆಯ ಸಂಪಾದಕನೂ ಆಗುತ್ತಾನೆ. ಇದೇ ಪತ್ರಿಕೆ ಹಲವಾರು ’ನ್ಯೂ ವೇವ್’ ಸಿನಿಮಾಕರ್ತರ ಬೌದ್ಧಿಕ ಮೂಲವಾಗುತ್ತದೆ. ವಿಮರ್ಶಕನಾಗಿ ಟ್ರೋಫೋ ಯಾವ ಮಟ್ಟಕ್ಕೆ ಪ್ರಸಿದ್ಧಿಯಾಗುತ್ತಾನೆ ಎಂದರೆ, ಈತನ ಎರಡು ಸಾಲು ವಿಮರ್ಶೆ, ಸಿನಿಮಾವೊಂದರ ಹಣಬರಹವನ್ನೇ ಬದಲಾಯಿಸುವಷ್ಟು ಖ್ಯಾತಿ ಪಡೆಯುತ್ತಾನೆ. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ವಿರೋಧಿಗಳನ್ನೂ ಸಂಪಾದಿಸುತ್ತಾನೆ.

ಫ್ರಾನ್ಸ್‌ನಲ್ಲೇ ನಡೆಯುವ ಕ್ಯಾನ್ಸ್ ಚಲನಚಿತ್ರೋತ್ಸವಕ್ಕೆ 1958 ರಲ್ಲಿ ಆಹ್ವಾನಿಸದ ಏಕೈಕ ಪತ್ರಕರ್ತನೆಂದರೆ ಟ್ರೋಫೋ. ಅಷ್ಟೊತ್ತಿಗಾಗಲೇ 30 ರ ಹಾಸುಪಾಸಿನಲ್ಲಿದ್ದ ಟ್ರೋಫೋ, ವಿಮರ್ಶಿಸುತ್ತಲೇ ಸ್ವತಃ ತಾನೇಕೆ ಸಿನಿಮಾದಲ್ಲಿ ಒಂದು ಕೈ ನೋಡಬಾರದು ಎಂದು ತೀರ್ಮಾನಿಸುತ್ತಾನೆ. 1955-57ರ ನಡುವೆ ’ಉನ್ ವಿಸಿಟೆ’ ಮತ್ತು ’ಲೆಸ್ ಮಿಸ್‌ಟೋನ್ಸ್’ ಎಂಬ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾನೆ. ಇದೇ ಸಮಯದಲ್ಲಿ ಕಾಕತಾಳೀಯವಾಗಿ ಫ್ರಾನ್ಸ್‌ನ ಅತೀ ದೊಡ್ಡ ಸಿನಿಮಾ ವಿತರಕನ ಮಗಳಾದ ಲೈನ್ ಮಾರ್ಗೈನ್‌ಸ್ಟರ್‍ನ್‌ಳನ್ನು 1957ರಲ್ಲಿ ವರಿಸುತ್ತಾನೆ. ಹಾಗಾಗಿ 1965 ರ ಸಂಸಾರಿಕ ಜೀವನ ಹದಗೆಡುವ ಹಂತದವರೆಗೆ ಈತನ ಚಿತ್ರಗಳಿಗೆ ನಿರ್ಮಾಣದ ಕೊರತೆ ಇರಲಿಲ್ಲ. ಮುಂದೆ ಆತನ ಬಹುತೇಕ ನಟಿಯರೊಂದಿಗೆ ಕೆಲಕಾಲ ಬದುಕಿದ್ದನ್ನು ಹೊರೆತುಪಡಿಸಿ ಮತ್ತೆ ವಿವಾಹವಾಗಲಿಲ್ಲ. ವಿವಾಹ ಜೀವನ ಮುರಿಯುವಷ್ಟೊತ್ತಿಗೆ 400 ಬ್ಲೋಸ್ (1959), ಶೂಟ್ ದಟ್ ಪಿಯನೋ ಪ್ಲೇಯರ್ (1960), ಜೂಲ್ಸ್ ಅಂಡ್ ಜಿಮ್ (1962), ಫ್ಯಾರನ್‌ಹೀಟ್ 451 (1965) ಚಿತ್ರಗಳ ಮೂಲಕ ಪ್ರಖ್ಯಾತಿ ಗಳಿಸಿರುತ್ತಾನೆ. ಮೊದಲ ಸಿನಿಮಾ 400 ಬ್ಲೋಸ್, ಬಾಲಾಪರಾಧಿಯಾಗುವ ಹುಡುಗನೊಬ್ಬನ ಕಥೆ. ತನ ನಿಜ ಜೀವನದಂತೆ ಚಿತ್ರದಲ್ಲೂ ತಾಯಿಗೆ ಎರಡನೇ ಗಂಡನಿರುತ್ತಾನೆ. ತಾಯಿಗಿಂತ, ಮಲತಂದೆಯೇ ಆತ್ಮೀಯವಾಗಿರುತ್ತಾನೆ. ಶಾಲೆಯಿಂದ ತಪ್ಪಿಸಿಕೊಂಡು ಕಳ್ಳತನ, ವೇಶ್ಯೆಯರ ಓಣಿಯಲ್ಲಿ ಓಡಾಡುವಂತಾಗುತ್ತದೆ. 1976 ರ ’ಸ್ಮಾಲ್ ಚೇಂಜ್’ ಸಿನಿಮಾ ಕೂಡ ಇದರ ಪಡಿಯಚ್ಚಿನಂತೆ ಇದ್ದರೂ, ಇದು ದೊಡ್ಡ ಬಜೆಟ್‌ನಿಂದಗಿ, ಬಣ್ಣದ ಸಿನಿಮಾವಾಗಿ ರೂಪುಗೊಂಡಿದೆ. ಅಪಾರ್ಟ್‌ಮೆಂಟಿನೊಳಗಿನ ಕಾಗೆಗೂಡಿನ ಸಂಸಾರ, ಚಿಕ್ಕವರ ಅವಶ್ಯಕತೆಗಳು-ದೊಡ್ಡವರ ಸಣ್ಣತನಗಳು, ಹದಗೆಟ್ಟ ಶಾಲೆಗಳೂ ಹೀಗೆ ಅನೇಕ ವಸ್ತುಗಳು ಇಣುಕುವ ’ಸ್ಮಾಲ್ ಚೇಂಜ್’ ಮಕ್ಕಳಿಗೆ ಚುನಾವಣಾ ಹಕ್ಕಿರಬೇಕೆಂಬ ನೀತಿಯನ್ನು ಪ್ರತಿಪಾದಿಸುತ್ತದೆ. ಮಕ್ಕಳಿಗೆ ಈ ಹಕ್ಕು ಕೊಟ್ಟರೆ ತಮಗೆ ಬೇಕಾದ ಶಾಲೆ, ಕಾಲೇಜು, ಮೈದಾನ, ಅಧ್ಯಯನದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರ ದೊರೆಯುತ್ತದೆ ಎನ್ನುತ್ತಾನೆ ಟ್ರೋಫೋ.

1965 ರ ’ಫ್ಯಾರನ್‌ಹೀಟ್ 451’ ಟ್ರೋಫೋನ ಇದರಿಂದಿನ ಮತ್ತು ಮುಂದಿನ ಸಿನಿಮಾಗಳಿಗೆ ಒಂದು ಗೆರೆ ಎಳೆಯುತ್ತದೆ. ಮುಂದಿನ ಬಹುತೇಕ ಸಿನಿಮಾಗಳು ಟ್ರೋಫೋನ ಸಾಂಸಾರಿಕ ಅಂಶಗಳನ್ನು ಒಳಗೊಂಡಿದ್ದರೆ, ಹಿಂದಿನ ಸಿನಿಮಾಗಳು ಬಾಲ್ಯದಿಂದ ಪ್ರೇರಿತವಾಗಿವೆ. ’ಫ್ಯಾರನ್‌ಹೀಟ್ 451’, ಪುಸ್ತಕ ಪ್ರಿಯರ ಮತ್ತು ಪುಸ್ತಕವನ್ನು ನಾಶ ಮಾಡಲು ಸಿದ್ಧಪಡಿಸಿದ ವಿಶೇಷ ತಂಡದ ನಡುವೆ ನಡೆಯುವ ಪ್ರಹಸನದ ಕಾಲ್ಪನಿಕ ಚಿತ್ರ. Fahrenheit451ವ್ಯಕ್ತಿಯ ಆಲೋಚನೆಯನ್ನು ವಿಸ್ತರಿಸುವ ಪುಸ್ತಕಗಳು ಪ್ರಭುತ್ವದ ವಿರೋಧಿ ಎಂದು ಪರಿಗಣಿಸಿ, ಪುಸ್ತಕವನ್ನು ಓದು ಮತ್ತು ಸಂಗ್ರಹಿಸುವುದು ಅಪರಾಧವಾಗಿರುವ ದೇಶದಲ್ಲಿ, ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಕದ್ದು, ಸಂಗ್ರಹಿಸಿ, ಓದಲು ಕೊಡುವ ಗುಂಪೊಂದನ್ನು ಪ್ರಧಾನ ಪಾತ್ರಗಳು ಪ್ರವೇಶಿಸುವುರೊಂದಿಗೆ ಸಿನಿಮಾ ಮುಗಿಯುತ್ತದೆ. ಹಿಟ್ಲ್‌ರ್‌ನ ಅಥವಾ ಮುಸಲೋನಿ ಕಾಲದಲ್ಲಿ ಅಲ್ಲಲ್ಲಿ ಇಂಥಹ ಪ್ರಯತ್ನಗಳು ನಡೆದಿರುಬಹುದಾದ ನೆನಪನ್ನು ಮರುಕಳಿಸುತ್ತವೆ.
ದ ಬ್ರೈಡ್ ವೋರ್ ಬ್ಲಾಕ್ (1968), ದಿ ಸ್ಟೋಲನ್ ಕಿಸೆಸ್ (1968), ಮೆಸಿಸಿಪ್ಪಿ ಮೆರ್‌ಮೇಯ್ಡ್, ಟೂ ಇಂಗ್ಲೀಷ್ ಗರ್ಲ್ಸ್(1971), ಡೇ ಫಾರ್ ನೈಟ್ (1973), ದ ವುಮನ್ ನೆಕ್ಟ್ ಡೋರ್ (1981), ಬೆಡ್ ಅಂಡ್ ಬೋರ್‍ಡ್, ಕಾನ್ಪೀಡೆನ್ಷಿಯಲಿ ಯುವರ್‍ಸ್ ಇನ್ನಿತರ ಚಿತ್ರಗಳು ಟ್ರೋಫೋಗೆ ಆಸ್ಗರ್ ಸೇರಿದಂತೆ ಜಾಗತಿಕವಾದ ಬಹುತೇಕ ಪ್ರಶಸ್ತಿಗಳನ್ನು ತಂದುಕೊಟ್ಟ ಸಿನಿಮಾಗಳು. ಇಲ್ಲಿನ ಬಹುತೇಕ ಚಿತ್ರಗಳು ಮಾನವನ ಪಂಚೇಂದ್ರಿಯಗಳ ಅಳತೆ ಮೀರಿದ ವಿಚಾರಗಳನ್ನು ಗ್ರಹಿಸಲೆತ್ನಿಸುತ್ತವೆ. ಸಿನಿಮಾ ತಯಾರಿಸಲು ಹೋದ ಗುಂಪೊಂದರ ವೈಯಕ್ತಿಕ ಸಮಸ್ಯೆಗಳು (ಡೇ ಫಾರ್ ನೈಟ್), ವೈವಾಹಿಕ ಜೀವನದಾಚೆಗಿನ ಸಂಬಂಧದಿಂದ ತನ್ನ ಜೀವನದಲ್ಲಿ ತಂದೊಡ್ಡುವ ಅನಾಹುತಗಳು… ಹೀಗೆ ಮೇಲಿನ ಚಿತ್ರಗಳ ತಿರುಳು ಭಿನ್ನ ಮತ್ತು ಅಲ್ಲಲ್ಲಿ ಟ್ರೋಫೋನ ವೈಯಕ್ತಿಕ ಜೀವನದ ಮಜಲುಗಳೇನೋ ಎನ್ನುವಂತಿವೆ. ’ದ ವುಮನ್ ನೆಕ್ಟ್ ಡೋರ್’ನಲ್ಲಿ ಕಾಮದ ನೆರಳಲ್ಲಿ ಬೆವರು ಸುರಿಸುವ ಅನ್ಯವಿವಾಹಿತ ಜೋಡಿ ಸಾರ್ವಜನಿಕ ಮುಗ್ಧತೆ ಮತ್ತು ಅಪರಾಧಿ ಮನೋಭಾವದಲ್ಲಿ ನರಳಿ, ಕೊನೆಗೆ ಕಾಮದ ತುತ್ತತುದಿಯಲ್ಲಿರುವ ಘಳಿಗೆಯಲ್ಲಿ ಒಬ್ಬರ ಕೊಲೆ ಮತ್ತೊಬ್ಬರ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾಗುವ ದೃಶ್ಯ ಸರಮಾಲೆಗಳು ಎಂಥವರನ್ನೂ ಅಲುಗಾಡಿಸಿಬಿಡುತ್ತವೆ.

ಟ್ರೋಫೋನ ಹಿಂದಿನ ಸಿನಿಮಾ ’ದಿ ಸಾಫ್ಟ್ ಸ್ಕಿನ್’, ಜನಮೆಚ್ಚುಗೆಯ ಬುದ್ಧಿಜೀವಿಯೊಬ್ಬ ಯುವತಿಯ ಪ್ರೇಮಪಾಶದಲ್ಲಿ ತನ್ನ ಪತ್ನಿಯಿಂದ ದೂರಾಗ ಬಯಸುತ್ತಾನೆ. ಇನ್ನೇನೋ ವಿಚ್ಛೇದನ ತೆಗೆದುಕೊಂಡು ಮದುವೆಯಾಗುವ ಹೊತ್ತಿನಲ್ಲಿ, ಆ ಯುವತಿಗೆ ಈ ಸಂಬಂಧ ಸರಿಹೊಂದುವುದಿಲ್ಲ ಎನಿಸಿ ದೂರಾಗುತ್ತಾಳೆ. ನಾಯಕನಿಗೆ ತನ್ನ ತಪ್ಪಿನ ಅರಿವಾಗಿ ಪರಿತಪಿಸಿ, ಹೆಂಡತಿಯಲ್ಲಿ ಕ್ಷಮೆಯಾಚಿಸಲು ತೀರ್ಮಾನಿಸುತ್ತಾನೆ. ಗಂಡನನ್ನು ತನ್ನ ರಕ್ತದ ಕಣಕಣದಲ್ಲೂ ಪ್ರೀತಿಸಿದ ಆಕೆಗೆ, ಆತ ಇನ್ನೊಂದು ಹೆಣ್ಣಿಗಾಗಿ ತನ್ನನ್ನು ದೂರಮಾಡುತ್ತಿರುವ ವಿಷಯ ಅರಗಿಸಿಕೊಳ್ಳಲಾಗುವುದಿಲ್ಲ. ಮನೆಗೆ ಬಂದು ದೊಡ್ಡದೊಂದು ಗನ್‌ನ್ನು ತನ್ನ ಉದ್ದನೆಯ ಕೋಟ್‌ನೊಳಗೆ ಇರಿಸಿಕೊಂಡು, ಮಗುವನ್ನು ಸ್ನೇಹಿತೆಯ ಮನೆಯಲ್ಲಿ ಬಿಟ್ಟು ಹೊರಡುತ್ತಾಳೆ. ಮತ್ತೆ ಹೆಂಡತಿಗೆ ಮುಖ ತೋರಲು ಅಳುಕುವ ನಾಯಕ, ಅಂಜಿಕೆಯಿಂದಲೇ ಹೋಟೆಲ್‌ವೊಂದರಿಂದ ಹೆಂಡತಿಗೆ ಕರೆಮಾಡಲು ಯತ್ನಿಸಿದರೂ ಆಕೆ ಮಾತಿಗೆ ಸಿಗುವುದಿಲ್ಲ. ಇವನನ್ನೇ ಹುಡುಕಿಕೊಂಡು ಹೋಗಿರುತ್ತಾಳೆ. ಏನೂ ತೋಚದೆ, ಹೋಟೆಲ್‌ವೊಂದರಲ್ಲಿ ಕುಳಿತಿರುವ ಗಂಡನಲ್ಲಿಗೆ ಬಂದು, ಒಂದು ಮಾತಾಡುವ ಮೊದಲೇ ಗನ್ ತೆಗೆದು ಗುಂಡು ಹಾರಿಸಿಬಿಡುತ್ತಾಳೆ. ಅಲ್ಲೇ ನೆಲದ ಮೇಲೆ ನಡುಗುತ್ತಾ ನಿಶ್ಯಬ್ಧವಾಗಿ ಕುಳಿತುಕೊಳ್ಳುತ್ತಾಳೆ. ಅತ್ತ ಪೋಲಿಸ್ ಸೈರನ್ ಸದ್ದು ಮಾಡುತ್ತದೆ. ಪ್ರೀತಿಸುವ ವ್ಯಕ್ತಿ ಕೊಲ್ಲುವ ಹಂತಕ್ಕೆ ಹೋಗುವ ಈ ದೃಶ್ಯ ಎಂಥವರ ಭಾವನೆಗಳನ್ನು ಒಮ್ಮೆ ವಿಮರ್ಶೆಗೆ ಒಳಪಡಿಸುತ್ತದೆ.

ಈ ಮೇಲಿನ ಚಿತ್ರಗಳು ಕೊಂಚ ಆಟೋಬಯೋಗ್ರಾಫಿಕಲ್ ಎನಿಸಿ, ಪ್ರಖ್ಯಾತಿ ಮತ್ತು ಕುಖ್ಯಾತಿ ಎರಡನ್ನೂ ಪಡೆದಿದ್ದ ಗೊದಾರ್‍ಡ್ ಗೆಳೆಯ ಟ್ರೋಫೋನೊಂದಿಗೆ ಜಗಳವಾಡಿಕೊಳ್ಳುತ್ತಾನೆ. ನಿನ್ನ ಸಿನಿಮಾಗಳು ಸಿನಿಮಾವೇ ಅಲ್ಲವೆನ್ನುವ ಮಟ್ಟಕ್ಕೆ ಅಲ್ಲಗೆಳೆಯುತ್ತಾನೆ. ಗೊದಾರ್‍ಡ್‌ನ ಮೊದಲ ಸಿನಿಮಾ ’ಬ್ರೆತ್‌ಲೆಸ್’ನ ಸ್ಕ್ರಿಪ್ಟ್ ಟ್ರೋಫೋನದೇ ಆಗಿದ್ದರೂ ಮುಂದಿನ ಸಿನಿಮಾಗಳಲ್ಲಿ ಇಬ್ಬರೂ ಭಿನ್ನ ಹಾದಿಯನ್ನೇ ಹಿಡಿದರು. ಗೊದಾರ್‍ಡ್ ಪ್ರಯೋಗಗಳು ಹಾಲಿವುಡ್ಡಿನ ತಿಕ್ಕಲುತನಕ್ಕೆ ಪ್ರತ್ಯುತ್ತರವಾದರೂ ಪ್ರಯೋಗತ್ಮಾಕ ಮಟ್ಟದಿಂದ ಮುಂದುವರಿದು ಜನರ ಸಿನಿಮಾ ಆಗಲಿಲ್ಲ. ಗೋದಾರ್‍ಡ್‌ಗೆ ಹಣಕಾಸಿನ ಮುಗ್ಗಟ್ಟಿನಿಂದಾಗಿ ಸಿನಿಮಾ ಮಾಡುವುದೇ ಕಷ್ಟವಾಗಿಬಿಟ್ಟಿತು. ಇದೇ ಗೊದಾರ್‍ಡ್ ಅಮೆರಿಕಾದ್ಯಂತ ಸಂಚರಿಸಿ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸಿನಿಮಾದ ಭ್ರಾಮಕತೆ ಬಗ್ಗೆ ಉಪನ್ಯಾಸ ನೀಡಿ ಹಣ ಸಂಗ್ರಹಿಸಿ ಸಿನಿಮಾ ಮಾಡಲೆತ್ನಿಸಿದ. ಆದರೂ ಕ್ರಮೇಣ ಗೊದಾರ್‍ಡ್‌ನ ಸಿನಿಮಾಗಳು ಸೋಲುತ್ತಲೇ ಬಂದು, ಇಂದು ಗೋದಾರ್‍ಡ್ ಬದುಕಿದ್ದಾನಾ ಅಥವಾ ಸತ್ತಿದ್ದಾನಾ? ಎಂಬಷ್ಟು ಅಗೋಚರವಾಗಿಬಿಟ್ಟಿದ್ದಾನೆ. ಆದರೆ ಇದೇ ಗೋದಾರ್‍ಡ್ ತನ್ನ ಇರುವಿಕೆಯನ್ನು ಕಳೆದ ವರ್ಷ ಒಂದು ಸಿನಿಮಾವನ್ನು ತಯಾರಿಸಿ ಬಿಡುಗಡೆ ಮಾಡುವ ಮೂಲಕ ತೋರಿದರೂ, ಅದು ಜನಪ್ರಿಯವಾಗಲಿಲ್ಲ. ಗೊದಾರ್‍ಡ್ ಸಿನಿಮಾ ಆತನೇ ಹೇಳುವಂತೆ ರಾಜಕೀಯ ಪ್ರಬಂಧದಂತೆ. ಆದ್ದರಿಂದ ಪ್ರತೀ ಅಕ್ಷರ, ದೃಶ್ಯವನ್ನೂ ಸೂಕ್ಷ್ಮವಾಗಿ ನೋಡಿದರೇನೇ ಅರ್ಥವಾಗುವುದು.

ಬಹುಶಃ ಟ್ರೋಫೋ ಸಿನಿಮಾದ ಆರ್ಥಿಕ ಕಾರಣಗಳಿಗಾಗಿ ಭಿನ್ನ ಹಾದಿಯನ್ನು ತುಳಿದ ಎನ್ನಿಸುತ್ತದೆ. ಇಲ್ಲದಿದ್ದರೆ ಗೋದಾರ್‍ಡ್‌ನಂತೆಯೇ ಟ್ರೋಫೋನೋ ಆಗಿಬಿಡುತ್ತಿದ್ದನೇನೊ. 52 ವಸಂತಗಳನ್ನು ಕಳೆದು ಮರೆಯಾದ ಟ್ರೋಫೋ 20 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ ಮತ್ತು ಇತರರ ಸಿನಿಮಾಗಳಿಗೆ ಬರವಣಿಗೆಯನ್ನೂ ನಿರಂತರವಾಗಿ ಮುಂದುರೆಸಿದ್ದ. ಟ್ರೋಫೊನ ಸಿನಿಮಾಗಳು ಒಮ್ಮೆಮ್ಮೆ ಆತನ ಇತರೆ ಚಿತ್ರಗಳ ಪುನಾರವರ್ತಿ ಎನಿಸಿದರೂ, ನೋಡಲೇಬೇಕಾದ ಸಿನಿಮಾಗಳೆಂದರೆ ತಪ್ಪಿಲ್ಲ. ಎಂಥಹ ಭಾವನೆಗಳನ್ನೂ ನಾಟಕೀಯವಲ್ಲದ ಸ್ಮಿತಪ್ರಜ್ಞೆಯಿಂದ ತೋರಿಬಿಡುವ ಟ್ರೋಫೋನ ಮೊಂಟ್ಯಾಜ್‌ಗಳು ಪ್ರೇಕ್ಷಕನ ಮೇಲೆ ಬೀರುವ ಪ್ರಭಾವ ಅಗಾಧವಾದದ್ದು. ಸಿನಿಮಾ ನೋಡಿದ ಅನೇಕ ದಿನಗಳೂ ಕೂಡ ಕಳೆದರೂ ಆತನ ದೃಶ್ಯ ಜಗತ್ತಿನಿಂದ ಆಚೆ ಬರಲು ಕಷ್ಟವಾಗಿಬಿಡಬಹುದು.