Category Archives: ಶೌರೀಶ್ ಕುದ್ಕುಳಿ

ನಮ್ಮ ಪ್ರಜಾಪ್ರಭುತ್ವ: ಒಂದೆರಡು ಪ್ರಶ್ನೆಗಳು

– ಶೌರೀಶ್ ಕುದ್ಕುಳಿ

ನಾವು ಒಪ್ಪಿಕೊಂಡಿರುವ ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಇಂದು ಎರಡು ಸಾಂವಿಧಾನಿಕ ಪ್ರಶ್ನೆಗಳು ಕಾಣಿಸಿಕೊಂಡಿವೆ. ಲಿಖಿತ ಸಂವಿಧಾನದ ಆಶಯಕ್ಕೆ ವಿರೋಧವಾಗಿ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ರಾಜಕೀಯ ಪಕ್ಷಗಳು grass-map-indiaಘೋಷಿಸಿಕೊಂಡಿರುವುದು ಮತ್ತು ಓರ್ವ ಸಾಮಾನ್ಯ (ಚಹಾ ಮಾರುವ/ಮಾರುತ್ತಿದ್ದ) ವ್ಯಕ್ತಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ನಿರ್ವಹಿಸಬಹುದೇ? ಎಂಬುದು ಆ ಎರಡು ಪ್ರಶ್ನೆಗಳು. ಈ ಲೇಖನದಲ್ಲಿ, ಭಾರತದ ಪ್ರಜಾಪ್ರಭುತ್ವದ ಬಗೆಗಿನ ತಾತ್ವಿಕ ಅಡಿಪಾಯವನ್ನು ಚರ್ಚಿಸುತ್ತಾ, ಈ ಎರಡು ಸಾಂವಿಧಾನಿಕ ಪ್ರಶ್ನೆಗಳನ್ನು ವಿಶ್ಲೇಷಿಸಲಾಗಿದೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ 66 ವರ್ಷಗಳನ್ನು ಪೂರೈಸಿದೆ. ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ ದೇಶ ಎಂಬುದನ್ನು ಒಪ್ಪಿಕೊಂಡು, ಅನುಷ್ಠಾನಗೊಳಿಸಿದ ಭಾರತ, ಈ ಸುದೀರ್ಘ ಸಮಯದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದೆ. ನಮಗೆ ನಾವೇ ಲಿಖಿತ ಸಂವಿಧಾನವನ್ನು ರಚಿಸಿಕೊಂಡು, ನಮ್ಮ ಪ್ರಜಾಪ್ರಭುತ್ವ ಈ ದಿಕ್ಕಿನಲ್ಲಿಯೇ ಸಾಗಬೇಕೆಂಬ ಚೌಕಟ್ಟನ್ನೂ ಹಾಕಿಕೊಂಡಿದ್ದೇವೆ. ಅಂದರೆ ಸಂವಿಧಾನದ ಆಶಯಗಳನ್ನು ನಮಗೆ ನಾವೇ ಒಪ್ಪಿಕೊಂಡಿರುವಂತಹದ್ದು. ಪರೋಕ್ಷ ಪ್ರಜಾಪ್ರಭುತ್ವದ ಸಂಸದೀಯ ಮಾದರಿಯನ್ನು ಆರಿಸಿಕೊಂಡ ನಾವು, ನಮ್ಮ ಆಡಳಿತವನ್ನು ನಮ್ಮ ಪ್ರತಿನಿಧಿಗಳ ಮೂಲಕ ಜಾರಿಗೊಳಿಸಿಕೊಳ್ಳುತ್ತಿದ್ದೇವೆ.

ಈ ಸುದೀರ್ಘ ಅವಧಿಯಲ್ಲಿ, ನಮ್ಮ ಪ್ರಜಾಪ್ರಭುತ್ವವು ಹಲವು ಸಿದ್ಧಾಂತಗಳ ಅಡಿಯಲ್ಲಿ ಪರೀಕ್ಷಿಲ್ಪಟ್ಟಿದೆ. ಇದು ಬಹಳ ಕುತೂಹಲಕಾರವಾದ ಸಂಗತಿ. ರಾಜ್ಯಶಾಸ್ತ್ರವನ್ನು ಅಧ್ಯಯನ ವಿಷಯವಾಗಿ ಅಭ್ಯಸಿಸುವ ವಿದ್ಯಾರ್ಥಿಗಳಿಗಂತೂ ಪ್ರಜಾಪ್ರಭುತ್ವದ ಹಬ್ಬಕ್ಕೆ ಬೇಕಾದ ತುಣುಕುಗಳು ಒಂದರ ಮೇಲೊಂದರಂತೆ ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ ಲಭ್ಯವಿದೆ. ಅವುಗಳಲ್ಲಿ ಪ್ರಮುಖವಾಗಿ, ಪ್ರಜಾಪ್ರಭುತ್ವದ ಮೂಲಭೂತ ತಳಹದಿಗಳಾದ ಚುನಾವಣೆ, ಪ್ರತಿನಿಧಿಗಳ ಆಯ್ಕೆ, ಸರಕಾರ ಮತ್ತು ಮಂತ್ರಿ ಮಂಡಲದ ರಚನೆ, ಪ್ರಧಾನಮಂತ್ರಿ-ಮುಖ್ಯಮಂತ್ರಿಗಳ ನೇಮಕ, ರಾಷ್ಟ್ರಪತಿ-ರಾಜ್ಯಪಾಲರ ಆಯ್ಕೆ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಕಾರ್ಯವೈಖರಿ, ಮೂಲಭೂತ ಹಕ್ಕುಗಳ ಪ್ರಜ್ಞೆ, ಮಾಧ್ಯಮಗಳ ಪಾತ್ರ, ಸರಕಾರೇತರ ಸಂಸ್ಥೆಗಳ ಗಮನಿಸುವಿಕೆ, ಜನತೆಯ ರಾಜಕೀಯ ಚಲನಶೀಲತೆ ಮತ್ತು ಅರಿವು ಇತ್ಯಾದಿಗಳಲ್ಲಿ ಆಗುತ್ತಿರುವ ಏರಿಳಿತಗಳ ಬಗ್ಗೆ ಭಾರತದ ಪ್ರತಿ ಪ್ರಜೆಯೂ ಗಮನಿಸಲೇಬೇಕಾದ ಸ್ಪಂದನವಿದೆ. ರಾಜಕೀಯ ಪಂಡಿತರು, ವಿದ್ಯಾರ್ಥಿಗಳು ಈ ಬಗ್ಗೆ ತಾತ್ವಿಕ ಮತ್ತು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ, ನಮ್ಮ ಪ್ರಜಾಪ್ರಭುತ್ವವನ್ನು ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಪ್ರಜಾಪ್ರಭುತ್ವದ ಜೀವಂತ ನೆಲೆಯಾಗಿರುವ ಮುಂಬರುವ ಲೋಕಸಭಾ ಚುನಾವಣೆಯ ಒಟ್ಟು ಪ್ರಕ್ರಿಯೆಯ ನೆರಳಲ್ಲಿ, ನಮ್ಮ ರಾಜಕೀಯ ವ್ಯವಸ್ಥೆಯಾದ ಪ್ರಜಾಪ್ರಭುತ್ವವನ್ನು ಇಂದು ಒಳಹೊಕ್ಕು ನೋಡಬೇಕಾಗಿದೆ. ಇಲ್ಲಿ ಜನತೆ ತಮ್ಮ ಹಕ್ಕನ್ನು ಮತದಾನ ಮಾಡುವ ಮೂಲಕ ಚಲಾಯಿಸುತ್ತಿದ್ದಾರೆ. ಅಂದರೆ ಜನತೆಯ ನೇರ ಪಾಲ್ಗೊಳ್ಳುವಿಕೆಯನ್ನು ನಮ್ಮ ಚುನಾವಣೆಗಳು ದೃಢೀಕರಿಸುತ್ತವೆ. ಸಂಸದೀಯ ಮಾದರಿಯ ಸರಕಾರದಲ್ಲಿ, ಜನತೆಯ ನೇರ ಪಾಲ್ಗೊಳ್ಳುವಿಕೆಗೆ ಇದೇ ಉತ್ತಮ ಅವಕಾಶ.

ಬಹುಪಕ್ಷೀಯ ಪದ್ಧತಿಯನ್ನು ಹೊಂದಿರುವ ಭಾರತದ ರಾಜಕೀಯ ವ್ಯವಸ್ಥೆಯು, ಭಿನ್ನ ಭಿನ್ನವಾದ ಸಿದ್ಧಾಂತಗಳನ್ನು, ರಾಜಕೀಯ ಪಕ್ಷಗಳ ಸಿದ್ಧಾಂತಗಳನ್ನಾಗಿ ಹೊಂದಿವೆ. ಈ ರೀತಿ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವಲ್ಲಿ, ಸಂವಿಧಾನದ ಮೂಲ ಆಶಯಗಳನ್ನು ಬದಿಗೆ ಸರಿಸುವ ಪ್ರಯತ್ನಗಳೂ ನಡೆದಿವೆ. ಪ್ರಮುಖವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಭಾರತೀಯ ಜನತಾ ಪಕ್ಷಗಳು, ಪ್ರಮುಖ ರಾಷ್ಟ್ರೀಯ ಪಕ್ಷಗಳಾಗಿರುವ ಕಾರಣಕ್ಕಾಗಿ ಅನುಕೂಲ ರಾಜಕಾರಣವನ್ನು ಮಾಡಿಕೊಂಡು ಬಂದಿವೆ.

ಪ್ರಸ್ತುತ ಎದುರಾಗಿರುವುದು ಲೋಕಸಭಾ ಚುನಾವಣೆಯ ಪೂರ್ವ ತಯಾರಿ. ಹೆಚ್ಚಿನ ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಪ್ರಾರಂಭದ ತಾಲೀಮನ್ನು ನಡೆಸುತ್ತಿವೆ. ಜಾತಿ, ಧರ್ಮ, ವರ್ಗ, ಪ್ರಾದೇಶಿಕವಾದಗಳು ಪಕ್ಷಗಳ ಮೂಲ ಆಶಯಗಳಿಗಿಂತ ಹೆಚ್ಚಿನ ಪ್ರಚಾರ ಮತ್ತು ಪರಿಣಾಮಕಾರಿ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಈ ಪ್ರಕ್ರಿಯೆಗೆ ಮಾಧ್ಯಮಗಳೂ ಹೆಚ್ಚಿನ ಒತ್ತನ್ನು ನೀಡುತ್ತಿವೆ. ಮಾಧ್ಯಮಗಳು, ಭಾರತದ ಪ್ರಜಾಪ್ರಭುತ್ವದ ದಿಕ್ಕನ್ನು ಮುನ್ನಡೆಸುವ ವಾಹಕಗಳಾಗಿಯೂ ಗೋಚರಿಸುತ್ತಿವೆ. ನಮ್ಮ ಪ್ರಜಾಪ್ರಭುತ್ವ ಎತ್ತ ಕಡೆ ಸಾಗುತ್ತಿದೆ ಎಂಬ ಅರಿವೂ ಸಿಗದ ರೀತಿಯಲ್ಲಿ ಮತ್ತು ಕೆಲವೊಂದು ಸಂದರ್ಭಗಳಲ್ಲಿ ವಿವೇಚನಾರಹಿತವಾಗಿ ನಮ್ಮ ಮಾಧ್ಯಮಗಳು ಕಾರ್ಯಾಚರಿಸುತ್ತಿರುವುದನ್ನು ನಾವು ಕಾಣಬಹುದು.

ಯಾವುದೇ ರಾಜಕೀಯ ಪಕ್ಷವು ಇಂದು ಪ್ರಧಾನಮಂತ್ರಿಯನ್ನು ಚುನಾವಣಾ ಪೂರ್ವದಲ್ಲಿಯೇ ಘೋಷಣೆ ಮಾಡಬಹುದೇ ಎಂಬುದು ಲಿಖಿತ ಸಂವಿಧಾನದಲ್ಲಿ ನಮೂದಿಸಲ್ಪಟ್ಟಿಲ್ಲ. ಆದರೆ ನಮ್ಮ ರಾಜಕೀಯ ಪಕ್ಷಗಳು ಅಧಿಕೃತವಾಗಿಯೇ ಇದನ್ನು ಘೋಷಿಸಿಬಿಟ್ಟಿವೆ. rahul-gandhi-ordinanceಸಂವಿಧಾನ ಹೇಳುವ ಪ್ರಕಾರ, ಕೆಳಮನೆಗೆ (ಲೋಕಸಭೆ), ಜನರಿಂದ ಆಯ್ಕೆಯಾದ ಸದಸ್ಯರು ಒಗ್ಗೂಡಿ ತಮ್ಮ ನಾಯಕನನ್ನು ಆರಿಸಿಕೊಳ್ಳುತ್ತಾರೆ. ಹೀಗೆ ಆರಿಸಲ್ಪಟ್ಟ ನಾಯಕ ಒಂದು ರಾಜಕೀಯ ಪಕ್ಷದ ಮುಖಂಡನೂ ಆಗಿರುತ್ತಾನೆ. ಕೆಳಮನೆಯ ಒಟ್ಟು ಸದಸ್ಯರಲ್ಲಿ ಬಹುಮತ ಹೊಂದಿದ ರಾಜಕೀಯ ಪಕ್ಷವು ಇಂತಹ ನಾಯಕನ ನೇತೃತ್ವದಲ್ಲಿ, ರಾಷ್ಟ್ರಪತಿಯವರಲ್ಲಿ ಸರಕಾರ ರಚನೆಗೆ ಅವಕಾಶವನ್ನು ಕೋರುತ್ತದೆ. ಆತನ ಪಕ್ಷಕ್ಕಿರುವ ಬಹುಮತವನ್ನು ಪರಿಗಣಿಸಿ, ರಾಷ್ಟ್ರಪತಿಯವರು ಕೇಂದ್ರದಲ್ಲಿ ಸರಕಾರ ರಚನೆಗೆ ಆಹ್ವಾನವನ್ನು ನೀಡುತ್ತದೆ. ಆದರೆ ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿಯವರನ್ನು, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ರಾಹುಲ್ ಗಾಂಧಿ (ಭಾಗಶ:) ಯವರನ್ನು ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿಗಳನ್ನಾಗಿ ಘೋಷಿಸಿವೆ. ಜನತೆಯ ತೀರ್ಪನ್ನು ಇನ್ನೂ ಪಡೆಯದ ಈ ಇಬ್ಬರೂ ನಾಯಕರೂ ವ್ಯಕ್ತಿಗತವಾಗಿ ಮುಂಬರುವ 16 ನೇ ಲೋಕಸಭೆಯ ಜನಪ್ರತಿನಿಧಿಗಳೇ ಅಲ್ಲ! ಇಂತಹ ವ್ಯಕ್ತಿಗಳನ್ನು ಭಾರತದ ಪ್ರಧಾನಮಂತ್ರಿ ಅಭ್ಯರ್ಥಿಗಳು ಎಂದು ಘೋಷಿಸಿರುವುದು ಅಸಂವಿಧಾನಿಕ. ಇದು ಸಂವಿಧಾನಕ್ಕೆ ವಿರುದ್ಧವಾದದ್ದು. ಇಂತಹ ವ್ಯವಸ್ಥೆ ಸಂಸದೀಯ ಮಾದರಿ ಸರಕಾರದಲ್ಲಿ ಕಾಣಸಿಗುತ್ತದೆ ಎಂದಾದಲ್ಲಿ ಅದು ನೈಜ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ರಾಷ್ಟ್ರಪತಿ ಮಾದರಿಯ ಸರಕಾರದಲ್ಲಿ (ಉದಾ: ಅಮೆರಿಕಾ) ಇಂತಹ ಮಾದರಿಗಳು ಕಾಣಸಿಗುತ್ತವೆ.

ಎರಡನೇ ಪ್ರಮುಖ ಪ್ರಶ್ನೆ ಚಹಾ ಮಾರುತ್ತಿದ್ದವನು ಈ ದೇಶದ ಪ್ರಧಾನಿಯಾಗಬಲ್ಲನೇ ಎನ್ನುವಂತಹದ್ದು. 395 ಪರಿಚ್ಚೇದಗಳು, 22 ವಿಭಾಗಗಳು ಮತ್ತು 12 ಶೆಡ್ಯೂಲ್‌ಗಳನ್ನು ಹೊಂದಿರುವ ನಮ್ಮ ಲಿಖಿತ ಸಂವಿಧಾನದಲ್ಲಿ, Narendra_Modiಭಾರತೀಯ ಸಾಮಾನ್ಯ ಪ್ರಜೆಯೂ ದೇಶದ ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ರಾಜಕೀಯ ಪಕ್ಷಗಳ ಇಂತಹ ಹೇಳಿಕೆಗಳು, ನಮ್ಮ ಪ್ರಜಾಪ್ರಭುತ್ವದ ದಿಕ್ಕನ್ನು ಸಂವಿಧಾನಕ್ಕೆ ವಿರುದ್ಧವಾಗಿ ತೆಗೆದುಕೊಂಡು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರ್ಯ ಪಕ್ಷಾತೀತ ನೆಲೆಗಟ್ಟಿನಲ್ಲಿ ಆಗಬೇಕಾಗಿದೆ. ದೇಶದಲ್ಲಿ ಇಂದು ನಡೆಯುತ್ತಿರುವ ರಾಜಕೀಯ ಸಮಾವೇಶಗಳು, ಪ್ರಜಾಪ್ರಭುತ್ವದ ಆತ್ಮದಂತಿರುವ ರಾಜಕೀಯ ಪಕ್ಷಗಳ ಮುಖಂಡರು ಮತ್ತು ನಾಯಕರಿಂದ ಹೊರಹೊಮ್ಮುವ ಹೇಳಿಕೆಗಳು, ನಾವು ಒಪ್ಪಿಕೊಂಡಿರುವಂತಹ ಸಂವಿಧಾನಕ್ಕೆ ಪೂರಕವಾಗಿರಬೇಕು. ಆಗ ಮಾತ್ರ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಂತಾಗುತ್ತದೆ. ಅಂದರೆ ಜನತೆಯ ಆಶೋತ್ತರಗಳನ್ನು ಗೌರವಿಸಿದಂತೆ ಆಗುತ್ತದೆ.

ಈ ನಿಟ್ಟಿನಲ್ಲಿ, ದೇಶದ ಜನತೆ ರಾಜಕೀಯ ಪಕ್ಷಗಳ ಒಟ್ಟು ಕಾರ್ಯವೈಖರಿಯ ಕುರಿತು ಚರ್ಚಿಸಬೇಕಾದ ಅನಿವಾರ್ಯತೆ ಇದೆ. ಏಕೆಂದರೆ, ಭಾರತದ ಪ್ರಜಾಪ್ರಭುತ್ವ ಎಂದರೆ ಪ್ರತಿಯೋರ್ವ ಭಾರತೀಯನ ಪ್ರಜಾಪ್ರಭುತ್ವ. ಇದರ ಲಕ್ಷಣಗಳನ್ನು ನಾವು ಜನಪ್ರತಿನಿಧಿಯನ್ನು ಆರಿಸುವ ಪ್ರಕ್ರಿಯೆ, ಚುನಾವಣೆ, ಸರಕಾರ ರಚನೆಯ ಸಂದರ್ಭ, ಯೋಜನೆಗಳನ್ನು ಜಾರಿಗೊಳಿಸಿ, ಅನುಷ್ಠಾನಿಸುವ ಹಂತಗಳಲ್ಲಿ ಕಾಣುತ್ತೇವೆ. ನ್ಯಾಯಯುತವಾಗಿ, ಜಾತ್ಯಾತೀತವಾಗಿ, ಸಮಾನವಾಗಿ, ಗಣರಾಜ್ಯವಾಗಿ ನಮಗೆ ನಾವೇ ಒಪ್ಪಿಕೊಂಡಿರುವ ರಾಜಕೀಯ ವ್ಯವಸ್ಥೆ ನಮ್ಮದು. ಇದನ್ನು ರಾಜಕೀಯ ವ್ಯವಸ್ಥೆಯ ಸಮಾಜಕ್ಕೆ ಮಾತ್ರವೇ ಸೀಮಿತಗೊಳಿಸಿಕೊಳ್ಳದೇ, ಪ್ರಜಾಪ್ರಭುತ್ವದ ಪರಿಣಾಮಕಾರಿ ಅನುಷ್ಠಾನಕ್ಕೆ ನಾವೆಲ್ಲಾ ಕೈಜೋಡಿಸಬೇಕಿದೆ. ಇಲ್ಲದೇ ಹೋದಲ್ಲಿ, ಪ್ರಜಾಪ್ರಭುತ್ವವನ್ನು ಕಳೆದ ಆರು ದಶಕಗಳಿಂದ ಅರ್ಥೈಸಿಕೊಳ್ಳುವುದಕ್ಕೆ ಹೆಣಗಾಡುತ್ತಿರುವ ನಾವು ಇನ್ನಷ್ಟು ಹಿಂದಕ್ಕೆ ಹೋಗಬಹುದು. ಇದು ಬಹುಸಂಸ್ಕೃತಿ, ಬಹುಭಾಷೆ, ಬಹುಜನಾಂಗ ಮತ್ತು ಬಹು ಪಕ್ಷಗಳಿಂದ ಕೂಡಿದ ಭಾರತಕ್ಕೆ ಅಪಾಯವನ್ನೇ ತಂದೊಡ್ಡಬಹುದು. ಪ್ರಜಾಪ್ರಭುತ್ವ ಸಿದ್ಧಾಂತಗಳಿಗೆ ಒಗ್ಗಿಕೊಂಡು ಸಂವಿಧಾನ ರಚನೆಗೊಂಡಿರುವಾಗ, ಅದರ ಅನುಷ್ಠಾನ ಹಂತದಲ್ಲಿ ರಾಜಕೀಯ ಪಕ್ಷಗಳು ವಿಭಿನ್ನ ನಿಲುವು ತಾಳುತ್ತಿರುವುದನ್ನು ಬಹಳಷ್ಟು ಸಂದರ್ಭಗಳಲ್ಲಿ ಗಮನಿಸಲಾಗಿದೆ. ಸಂವಿಧಾನದ ಆಶಯ ಮತ್ತು ನೈಜವಾಗಿ ಘಟಿಸುವ ಇಂತಹ ಕಾರ್ಯಗಳ ನಡುವೆ ಕಂದಕ ಅಗಲವಾಗುತ್ತಾ ಹೋದಂತೆ, ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕೇವಲ ಆಶಯವಾಗಿಯೇ ಉಳಿಯಬೇಕಾದ ಪ್ರಮೇಯ ಬರಬಹುದು.

ಸೌಜನ್ಯ ಹತ್ಯೆ: ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು

– ಶೌರೀಶ್ ಕುದ್ಕುಳಿ

ಪ್ರಜ್ಞಾಪೂರ್ವಕವಾಗಿ ಎಸಗಿದಂತಹ ಒಂದು ಮೃಗೀಯ ಕಾರ್ಯವನ್ನು ಮರೆಮಾಚುವ ಕೆಲಸ ಇಂದು ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಒಂದು ವರ್ಷದ ಹಿಂದೆ ಸೌಜನ್ಯ ಎಂಬ ಅಮಾಯಕ ಹೆಣ್ಣು ಮಗಳ ದಾರುಣ ಹತ್ಯೆಯಾಯಿತು. ಕೆಲವು ಕಾಮುಕರು ಆಕೆಯನ್ನು ಮೃಗೀಯ ರೀತಿಯಲ್ಲಿ ಬಳಸಿಕೊಂಡು, ಕೊಂದು ಹಾಕಿದರು. ಆ ಹೊತ್ತಲ್ಲಿ, ದೇಹದಲ್ಲಿ ಜೀವಾತ್ಮವಿದ್ದ ಪ್ರತಿ ಮಾನವನೂ ಯಾವ ರೀತಿ ಪ್ರಾಣ ಮತ್ತು ಮಾನ ಉಳಿಸಿಕೊಳ್ಳಲು sowjanya-murderedಒದ್ದಾಡುತ್ತಾನೆಯೋ, ಅದೇ ರೀತಿ ಆಕೆಯೂ ತನ್ನ ಪ್ರಾಣರಕ್ಷಣೆಗೆ ವಿಲವಿಲ ಒದ್ದಾಡಿದ ಕುರುಹುಗಳು ನಿಖರವಾಗಿ ಕಾಣಿಸಿವೆ. ತನ್ನ ಅರಿವಿಗೆ ಸಾವಿನ ಕೊನೆಗಳಿಗೆ ಕಾಣಿಸುತ್ತಿದ್ದು, ಅದನ್ನು ಇನ್ನಾರೋ ಬಲಾತ್ಕಾರವಾಗಿ ಹೇರುತ್ತಿರುವಾಗ, ಅದರಿಂದ ಬಿಡುಗಡೆ ಪಡೆಯುವ ಹೊತ್ತಿನಲ್ಲಿ ನಡೆಸುವ ಫಲಕಾರಿಯಲ್ಲದ ಹೋರಾಟ ಮತ್ತು ಆ ವೇದನೆ ಊಹಿಸಿಕೊಂಡರೆ ಎದೆ ನಡುಗುವಂತಹುದು.

ಧರ್ಮವೇ ನೆಲೆನಿಂತ ಬೀಡಾದ ತುಳುನಾಡು ಮತ್ತು ಕರ್ನಾಟಕದಾದ್ಯಂತ ಮನೆಮಾತಾದ ಶ್ರೀ ಮಂಜುನಾಥನಿರುವ ಧರ್ಮಸ್ಥಳದಲ್ಲಿ ಕಾಮುಕರು ಆಕೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದರು. ಮನೆಗೆ ತೆರಳುವ ಹಾದಿ ಬದಿಯಲ್ಲಿ, ಸಂಜೆ ಸುಮಾರು 5 ಗಂಟೆ ಹೊತ್ತಿಗೆ ನಡೆದ ಈ ಘಟನೆಯ ಸ್ಥಳ ಆ ಸಂದರ್ಭದ ಭೀಕರತೆಯ ಕರಾಳತೆಗೆ ಸಾಕ್ಷಿ. ಮಾನರಕ್ಷಣೆ ಮತ್ತು ಜೀವರಕ್ಷಣೆಗಾಗಿ ಆಕೆ ಒದ್ದಾಡಿರಬಹುದಾದ ಪರಿ, ಆಕೆಯ ಶವ ಬಿದ್ದಿದ್ದ ಜಾಗದಲ್ಲಿರುವ ಕುರುಹುಗಳು ಎಂತಹವರನ್ನೂ ಬೆಚ್ಚಿ ಬೀಳಿಸುವಂತಹದ್ದು. ಕೈ ಕಾಲುಗಳನ್ನು ಮರಕ್ಕೆ ಕಟ್ಟಿ ಹಾಕಿದ ಭೀಭತ್ಸ ಚಿತ್ರ ಹಾಗೆಯೇ ಇತ್ತು. ಕಾಲೇಜಿನ ಗುರುತುಪತ್ರದ ದಾರವೇ ಕತ್ತು ಹಿಸುಕಿ ಕೊಲೆ ಮಾಡಲು ಬಳಸಿದ ಹಗ್ಗವಾಗಿತ್ತು.

ಈ ಘಟನೆಗೆ ಹಲವು ಸಂಘಟನೆಗಳು ಅದರಲ್ಲೂ ವಿದ್ಯಾರ್ಥಿ ಸಂಘಟನೆಗಳು ಮೌನವಾಗಿ ಕಣ್ಣೀರು ಸುರಿಸಿದವು. ಬೀದಿಗಿಳಿದು ಪ್ರತಿಭಟನೆ ಮಾಡಿದವು. ಆದರೆ ಸಾರ್ವಜನಿಕ ಸ್ಮರಣೆ ಅಥವಾ ನೆನಪು ಕ್ಷಣಕಾಲ ಎನ್ನುವಂತೆ, ಸಾರ್ವಜನಿಕರ ರೋಷದ ಬೆಂಕಿ ಇಂದು ತಣ್ಣಗಾಗುತ್ತಿದೆ. ಕಟುಕರು ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ.

ಇವುಗಳ ಅರಿವಿರುವ ಜನತೆ ನ್ಯಾಯಾಲಯ, ಪೋಲಿಸ್ ವ್ಯವಸ್ಥೆ ಮತ್ತು ಅಂತಿಮವಾಗಿ ಸರಕಾರದ ಮೇಲೆ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಹಿಳಾ ಸಂಘಟನೆಗಳು ಮೂಕ ವೇದನವನ್ನು ಅನುಭವಿಸುತ್ತಿವೆಯೋ ಎನ್ನುವಂತೆ ಭಾಸವಾಗುತ್ತಿದೆ! ಮಂಗಳೂರಿನ ಪಬ್ ದಾಳಿಗೊಳಗಾದ ಹೆಣ್ಣು ಮಕ್ಕಳಿಗೆ ದೊರಕಿದ್ದ ಬೆಂಬಲ ಮೈಸೂರಿನಲ್ಲಿ ರೈಲಿನಿಂದ ತಳ್ಳಲ್ಪಟ್ಟ ಹೆಣ್ಣು ಮಗಳಿಗೆ ದೊರಕಿಲ್ಲ! JusticeForSowjanyaಹಾಗೆಯೇ ಧರ್ಮಸ್ಥಳದ ಸೌಜನ್ಯಳ ಅಮಾನುಷ ಕೊಲೆಯ ಖಂಡಿಸಿ ಹೋರಾಟ ಮಾಡಿದವರ ವಿರುದ್ಧ ಕೇಸ್ ದಾಖಲು ಮಾಡಿಕೊಂಡ ಉಡುಗೋರೆ ಮಾತ್ರವೇ ಬೆಳ್ತಂಗಡಿಯ ನಾಗರಿಕರಿಗೆ ದೊರಕಿತು!

ನಮ್ಮ ವ್ಯವಸ್ಥೆ ಹೇಗಿದೆ ಮತ್ತು ಎತ್ತ ಸಾಗುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಪ್ರತಿ ವ್ಯಕ್ತಿ ಯಾ ಸಂಘಟನೆಗೆ ಇಂದು ಸಾರ್ವಜನಿಕವಾಗಿ ಅಜೆಂಡಾ ಬೇಕಾಗಿದೆ. ಕೆಲವೊಮ್ಮೆ ಇವರು ರಾಜಕೀಯ ಪಕ್ಷಗಳ ಮುಖವಾಣಿಯಂತೆ ವರ್ತಿಸುತ್ತವೆ. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಸಾರ್ವಜನಿಕ ಸಂಸ್ಥೆಗಳು ವಿಷಯಾಧಾರಿತ ಚಳುವಳಿಗಳನ್ನು ಮಾಡುತ್ತವೆ. ಇಡೀ ಮನುಕುಲದ ಬುಡಕ್ಕೇ ಪೆಟ್ಟು ಬಿದ್ದಾಗಲೂ, ಸಾರ್ವಜನಿಕರು ಕ್ಷಣ ಕಾಲ ಮಾತ್ರ ವಿಚಲಿತರಾಗಿ ಖಂಡಿಸುತ್ತಾರೆ. ಆದರೆ ಅದರ ಮುಂದಿನ ಬೆಳವಣಿಗೆಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಸೌಜನ್ಯ ಪ್ರಕರಣವೂ ಈ ರೀತಿಯಾಗಿ ಜನರಿಂದ ಮರೆಯಾಗುತ್ತಿರುವ ವೇದನೆಯ ಪ್ರಕರಣ. ಮರೆಯಾಗುವ ರೀತಿಯಲ್ಲಿ ಕೊಲೆಯ ವಿಚಾರಣೆಯ ಗತಿಯೂ ಸಾಗಿದೆ! ಆರೋಪ ಪ್ರತಿ ಆರೋಪಗಳು ನಡೆಯುತ್ತಿವೆ. ಸೌಜನ್ಯ ಹೆತ್ತವರಿಗೆ ಪ್ರಚಾರ ಬೇಕಿಲ್ಲ, ನ್ಯಾಯ ಬೇಕಿದೆ. ಮೂಲತ: ಕೃಷಿ ಕುಟುಂಬವಾಗಿರುವ ಇವರು ನ್ಯಾಯಪರತೆಯಿಂದ ಜೀವಿಸುತ್ತಿರುವವರು. ಆಂತರಿಕ ಕಥೆಗಳು ಧರ್ಮದ ನೆಲೆವೀಡಾದ ಧರ್ಮಸ್ಥಳದಲ್ಲಿ ಹರಿದಾಡುತ್ತಿದ್ದರೂ, ಪೋಲಿಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತಿದ್ದರೂ, ಕಳೆದು ಹೋದ ಸೌಜನ್ಯ ಬರಲಾರಳು ಎಂಬುದು ಅವರ ಅರಿವಿನಲ್ಲಿದೆ. ಸಮಾಜ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸಿದ್ದೂ ಅವರ ಗಮನದಲ್ಲಿದೆ. Sowjanya-Rape-Murderಆದರೆ ವಿಕೃತವಾಗಿ ಕೊಲೆಗೈದ ಪರಮ ಪಾಪಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನ್ಯಾಯ ಮರೀಚಿಕೆಯಾಗಿರುವುದು ಪ್ರತಿದಿನವನ್ನೂ ನರಕ ಮಾಡಿದೆ.

ಮೂರು ನಾಲ್ಕು ವ್ಯಕ್ತಿಗಳ ಕುಕೃತ್ಯ ಇದು ಎಂಬುದು ಅನೇಕರ ಅಭಿಮತ. ಮನೋರೋಗಿ ಈ ಕೃತ್ಯ ಮಾಡಿರಲಾರ ಎಂಬುದು ಸ್ಥಳೀಯರ ಅಭಿಪ್ರಾಯ. ಪೋಲಿಸ್ ಇಲಾಖೆಯ ಕಸ್ಟಡಿಯಲ್ಲಿ ಸದ್ಯಕ್ಕೆ ಇರುವ ವ್ಯಕ್ತಿ ಮನೋರೋಗಿ. ಜಗತ್ತಿನ ವ್ಯವಹಾರದಲ್ಲಿ ಹುಚ್ಚರಾಗಿರುವ ಪ್ರತಿ ಮಾನವನಿಗೆ ಸೌಜನ್ಯ ಪ್ರಕರಣ ಕ್ಷುಲಕವೆಂದೆನಿಸಬಹುದು. ಆದರೆ ಈ ಘಟನೆಯನ್ನು ನಗಣ್ಯ ಮಾಡಿದ್ದಲ್ಲಿ, ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು ಎಂಬ ಸಂದೇಶ ಸಮಾಜಕ್ಕಿದೆ.