Category Archives: ಸಿನೆಮಾ

ಸಿನೆಮಾ-ಕಿರುತೆರೆಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಅಣ್ಣಾ ಹಜಾರೆ, ರಾಮಚಂದ್ರ ಗುಹಾ, ಗಂಗಾಧರ ಮೊದಲಿಯಾರ್‌

ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಇಂದಿನ ಎರಡು ಅಂಕಣ ಲೇಖನಗಳು ಬಹಳ ಗಂಭೀರ ವಿಚಾರಗಳನ್ನು ಪ್ರಬುದ್ಧವಾಗಿ ಮತ್ತು ತೀಕ್ಷಣವಾಗಿ ಮಂಡಿಸಿವೆ.

ಇತಿಹಾಸಕಾರ ಮತ್ತು ಲೇಖಕ ರಾಮಚಂದ್ರ ಗುಹಾರ “ಅಣ್ಣಾ ಹಜಾರೆ ಹೋರಾಟದ ಶಕ್ತಿ ಮತ್ತು ಮಿತಿ” ಲೇಖನ ಹಜಾರೆಯವರ ಹೋರಾಟವನ್ನಷ್ಟೆ ಅಲ್ಲದೆ ಅವರ ಕೆಲವು ಚಿಂತನೆಗಳನ್ನೂ ಸಹ ವಿಮರ್ಶೆಗೆ ಒಡ್ಡಿದೆ. ನನ್ನ ಪ್ರಕಾರ ಆ ಲೇಖನದ ಬಹುಮುಖ್ಯ ಅಂಶಗಳು ಇವು:

“ಹಾಗೆ ಹೇಳಿದ ನಂತರವೂ ಅಣ್ಣಾ ಜೊತೆಗೆ ಅತಿಯಾಗಿ ಗುರುತಿಸಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಹಜಾರೆ  ಒಳ್ಳೆಯ ವ್ಯಕ್ತಿ. ಬಹುಶಃ ಸಂತನಂತಹ ವ್ಯಕ್ತಿ. ಆದರೆ ಅವರ ಗ್ರಹಿಕೆ, ಗ್ರಾಮದ ಹಿರಿಯನ ಮಟ್ಟದಲ್ಲಷ್ಟೇ ಉಳಿದುಬಿಡುತ್ತದೆ.

ಅಣ್ಣಾ ಹಜಾರೆ ಅವರ ಶಕ್ತಿ ಹಾಗೂ ಮಿತಿಗಳೆರಡನ್ನೂ  ಈ ವರ್ಷದ ಕೊನೆಗೆ ಬಿಡುಗಡೆ ಆಗಲಿರುವ ಮುಕುಲ್ ಶರ್ಮಾ ಅವರ `ಗ್ರೀನ್ ಅಂಡ್ ಸ್ಯಾಫ್ರನ್` ಪುಸ್ತಕದಲ್ಲಿ ಚೆನ್ನಾಗಿ ಗುರುತಿಸಲಾಗಿದೆ. ಶರ್ಮಾ ಅವರು ಬಹಳ ಜನ ಮೆಚ್ಚುವಂತಹ ಪರಿಸರ ಪತ್ರಕರ್ತ.

ರಾಲೇಗಾಂವ್ ಸಿದ್ಧಿಯಲ್ಲಿ ವ್ಯಾಪಕ ಕ್ಷೇತ್ರಕಾರ್ಯವನ್ನು ಅವರು ಮಾಡಿದ್ದಾರೆ. ಅಲ್ಲಿ ಕಂಡ ಸಂಗತಿಗಳಿಂದ ಅವರು ಪ್ರಭಾವಿತರಾಗಿದ್ದಾರೆ. ಸಮರ್ಪಕ  ಜಲ ನಿರ್ವಹಣೆ ಬೆಳೆ ಇಳುವರಿಯನ್ನು ಸಾಕಷ್ಟು ಹೆಚ್ಚಿಸಿದೆ. ಇದರಿಂದಾಗಿ ಆದಾಯ ಹೆಚ್ಚಿ ಸಾಲದ ಹೊರೆಗಳನ್ನೂ  ಜನರಿಗೆ ಕಡಿಮೆ ಮಾಡಿದೆ. ಬದಲಿಗೆ, ಅಣ್ಣಾ ಹಜಾರೆ ಅವರ ಮಾರ್ಗ `ಆಳದಲ್ಲಿ ಬ್ರಾಹ್ಮಣಿಕೆ`ಯದು ಎಂಬುದನ್ನೂ ಅವರು ಕಂಡುಕೊಂಡಿದ್ದಾರೆ.

ಮದ್ಯ, ತಂಬಾಕು ಹಾಗೂ ಕೇಬಲ್ ಟಿವಿಗೂ ಅಲ್ಲಿ ನಿಷೇಧವಿದೆ. ಸಸ್ಯಾಹಾರವನ್ನೇ ಅಳವಡಿಸಿಕೊಳ್ಳಲು ದಲಿತ ಕುಟುಂಬಗಳಿಗೆ ಒತ್ತಾಯಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದವರನ್ನು ಕಂಬಕ್ಕೆ ಕಟ್ಟಿ  ಹೊಡೆಯಲಾಗಿದೆ.

ಹಜಾರೆಯವರ ಸೂಚನೆಗಳ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಗಳೇ ನಡೆದಿಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ಚುನಾವಣೆಗಳ ಸಂದರ್ಭಗಳಲ್ಲಿ, ರಾಲೇಗಾಂವ್ ಸಿದ್ಧಿಯಲ್ಲಿ ಪ್ರಚಾರಕ್ಕೇ ಅವಕಾಶ ನೀಡಿರಲಿಲ್ಲ. `ಆಧುನಿಕ ಪ್ರಜಾಪ್ರಭುತ್ವದ ಅನೇಕ ನಿರ್ಣಾಯಕ ಆದರ್ಶಗಳಿಗೆ ಹೊರತಾಗಿರುವುದು, ಈ ಪ್ರಾಮಾಣಿಕ ಸುಧಾರಣಾ ಪ್ರಯೋಗದಲ್ಲಿ ಬಹುಮುಖ್ಯವಾದದ್ದು` ಎಂದು ಈ ವರದಿಗಾರ ಬರೆದಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಅಣ್ಣಾ ಹಜಾರೆ ಅವರು ಸ್ವಯಂಪ್ರೇರಿತರಾಗಿ ನೀಡುತ್ತಿರುವ ಹೇಳಿಕೆಗಳು ವಿಶ್ವಾಸವನ್ನು ಮೂಡಿಸುವುದಿಲ್ಲ.”

ಪೂರ್ತಿ ಲೇಖನ ಇಲ್ಲಿ ಲಭ್ಯವಿದೆ.

ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕಕ್ಕೆ ಇಷ್ಟೇ ಮುಖ್ಯವಾದ ಲೇಖನ ಗಂಗಾಧರ ಮೊದಲಿಯಾರ್‌ರ “ಸಿನಿಮಾದೊಳಗೇ ಒಬ್ಬ `ಅಣ್ಣಾ’ ಇದ್ದಾನಲ್ಲಾ” ಅಂಕಣ ಲೇಖನ. It’s a shame that something of this importance and critical had to be published in a cinema supplement rather in the op-ed page. ಈ ಲೇಖನ ಹಜಾರೆಯವರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವ ಸಿನಿಮಾ ಲೋಕದ ವ್ಯಕ್ತಿಗಳ ಹಿನ್ನೆಲೆಯಲ್ಲಿ ಕೆಲವು ಕೇಳಲೇಬೇಕಿದ್ದ ಪ್ರಶ್ನೆಗಳನ್ನು ಎತ್ತಿರುವುದೇ ಅಲ್ಲದೆ ಹೇಳಲೇಬೇಕಾದ ಉತ್ತರಗಳನ್ನೂ ಕೊಡುತ್ತದೆ. ಆ ಲೇಖನದ ಕೆಲವು ಸಾಲುಗಳು:

“ಲಾಂಗು ಮಚ್ಚುಗಳನ್ನು ಹಿಡಿದು, ಭೂಗತ ಲೋಕದ ಡಾನ್ ಆಗಿ, ಯುವಕರು ಕತ್ತಿ, ಚಾಕು ಚೂರಿ ಹಿಡಿಯಲು ಪ್ರೇರಣೆಯಾಗುವ `ಜೋಗಯ್ಯ` ಚಿತ್ರದ ಬಿಡುಗಡೆಗೆ ಎರಡು ದಿನ ಮುಂಚೆ ನಟ ಶಿವರಾಜ್‌ಕುಮಾರ್ ಅವರು ಬೆಂಗಳೂರಿನ ಸ್ವಾತಂತ್ರ್ಯಯೋಧರ ಉದ್ಯಾನವನದಲ್ಲಿ ನಡೆಯುತ್ತಿರುವ ನಿರಶನ ವೇದಿಕೆಯಲ್ಲಿ ಕಾಣಿಸಿಕೊಂಡರು.

ಸಿನಿಮಾ ನಟರು ಹೀಗೆ ದೇಶ ಸೇವೆಗೆ ಮುಂದಾಗುತ್ತಿರುವ ವೇಳೆಯಲ್ಲೇ ಕೆಲ ದಿನಗಳ ಹಿಂದೆ ನಡೆದ ಕೆಲವು ಘಟನೆಗಳನ್ನು ಸ್ವಲ್ಪ ಗಮನಿಸಿ.  ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ನಿರ್ಮಾಪಕ ಕೆ.ಮಂಜು ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ಕಿರುತೆರೆ ನಟರೂ, ನಿರ್ಮಾಪಕರೂ, ನಿರ್ದೇಶಕರೂ ಆಗಿರುವ ಸಿಹಿಕಹಿ ಚಂದ್ರು, ರವಿಕಿರಣ್ ಅವರುಗಳ ಭವ್ಯ ಬಂಗಲೆಗಳನ್ನು ಜಾಲಾಡಲಾಯಿತು. ಕೆಲವು ನಟರು, ನಿರ್ದೇಶಕರು, ನಟಿಯರು ಟಿವಿ ಚಾನಲ್ ಕಚೇರಿಗೆ ನುಗ್ಗಿ, ದಾಂದಲೆ ಮಾಡಿ ಸುದ್ದಿ ಮಾಡಿದರು. ಅತ್ತ ಕೇರಳದಲ್ಲಿ ಸೂಪರ್‌ಸ್ಟಾರ್‌ಗಳೆಂದೇ ಅಭಿಮಾನಿಗಳು ಆರಾಧಿಸುವ ಮುಮ್ಮಟಿ, ಮೋಹನ್‌ಲಾಲ್ ಅವರುಗಳ ಮನೆಗಳ ಮೇಲೆ ಸತತ ಮೂರುದಿನ ಆದಾಯ ತೆರಿಗೆ ವಂಚನೆ ಶಂಕೆಯಿಂದ ದಾಳಿ ನಡೆಸಿದ ತನಿಖಾಧಿಕಾರಿಗಳು ತಲಾ 30 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ನಗದನ್ನು ವಶಪಡಿಸಿಕೊಂಡರು. ಇಂತಹ ಜನ ಇಂದು `ಜನಲೋಕಪಾಲ`ಕ್ಕೆ ಒತ್ತಾಯಿಸಿ, ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರ ತೊಲಗಿಸಲು ರಾಷ್ಟ್ರಧ್ವಜ ಹಿಡಿದು ಬೀದಿಗೆ ಬಂದಿರುವುದನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ

ಆರಂಭದ ದಶಕಗಳಲ್ಲಿ ಸಿನಿಮಾದಲ್ಲಿ ಜಮೀನ್ದಾರಿ ಪದ್ಧತಿ, ಅಲ್ಲಿನ ಕ್ರೌರ್ಯ ರೀತಿ ನೀತಿಗಳನ್ನು ವಿಶ್ಲೇಷಿಸುವ ಚಿತ್ರಗಳನ್ನು ಕಾಣಬಹುದಿತ್ತು. ಸ್ವಾತಂತ್ರ್ಯಾ ನಂತರ ತಲೆದೋರಿದ ನಿರುದ್ಯೋಗ ಸಮಸ್ಯೆ, ವರದಕ್ಷಿಣೆ ಸಮಸ್ಯೆ, ಬಡತನ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮೊದಲಾದ ಸಮಸ್ಯೆಗಳ ಕಡೆ ಸಿನಿಮಾ ಮಂದಿ ಗಮನ ಹರಿಸಿದ್ದರು.

70ರ ದಶಕದ ನಂತರ ಸಿನಿಮಾಕ್ಕೆ ಯಾವುದೇ ಸ್ಪಷ್ಟ ನಿಲುವೇ ಇಲ್ಲದೆ, ಸಾಮಾಜಿಕಬದ್ಧತೆಯೇ ಇಲ್ಲದೆ ಜನರಿಗೆ ಮನರಂಜನೆ ಒದಗಿಸುವುದೊಂದೇ ಸಿನಿಮಾ ಉದ್ದೇಶ ಎನ್ನುವಂತಾಯಿತು. ಗಾಂಧೀಜಿ ಅವರನ್ನು ತೋರಿಸುವುದು, ಅವರ ಆದರ್ಶಗಳನ್ನು ಹೇಳುವುದು ಈಗ ಒಂದು ಫ್ಯಾಷನ್ ಆಗಿ ಪರಿವರ್ತನೆ ಆಗಿದೆ. `ಲಗೇ ರಹೋ ಮುನ್ನಾಬಾಯಿ` ನೆನಪಿಸಿಕೊಳ್ಳಿ. ಗೂಂಡಾಗಿರಿ ಮಾಡುತ್ತಿದ್ದವನು ಗಾಂಧೀಗಿರಿ ಮಾಡಲಾರಂಭಿಸುವುದು ಗಾಂಧೀಜಿಯವರನ್ನು ವಿಡಂಬಿಸಿದಂತೆಯೇ ಅಲ್ಲವೇ? ನಮ್ಮ ಬಹುತೇಕ ಸಿನಿಮಾಗಳಲ್ಲಿ ಕೆಟ್ಟ ರಾಜಕಾರಣಿಗಳನ್ನು ತೋರಿಸುವುದು ಅವರ ಗಾಂಧೀ ಟೋಪಿ ಮೂಲಕವೇ! ಈಗ ಸಿನಿಮಾ ನಟರು ಗಾಂಧೀ ಟೋಪಿ ಹಾಕಿಕೊಂಡು ಬೀದಿಗಿಳಿದಿದ್ದಾರೆ!

ಸಮಾಜವನ್ನು ಪರಿವರ್ತಿಸುವ, ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಮೌಢ್ಯವನ್ನು ತೊಲಗಿಸುವ, ನೈತಿಕ ವಾತಾವರಣ ಸೃಷ್ಟಿಸುವ, ಭ್ರಷ್ಟಾಚಾರದ ವಿರುದ್ಧ ಜನರನ್ನು ಕೆರಳಿಸುವ ಪ್ರಬಲ ಹಾಗೂ ಪ್ರಖರ ಶಕ್ತಿ ಸಿನಿಮಾ ಮಾಧ್ಯಮಕ್ಕಿದೆ ಎನ್ನುವ ವಾಸ್ತವ ಸತ್ಯವೇ ನಮ್ಮ ಸಿನಿಮಾ ಜನಕ್ಕೆ ಗೊತ್ತಿಲ್ಲವಲ್ಲಾ ಎಂದು ಮರುಕವಾಗುತ್ತಿದೆ. ಭಾರತದಲ್ಲಿ ಪ್ರತಿಯೊಬ್ಬ ಸಿನಿಮಾ ನಿರ್ದೇಶಕನೂ ಅಣ್ಣಾ ಹಜಾರೆ ಆಗಬಹುದು ಎನ್ನುವ  ಮಾಧ್ಯಮಶಕ್ತಿಯನ್ನೇ ನಮ್ಮ ಸಿನಿಮಾ ಮಂದಿ ಮನವರಿಕೆ ಮಾಡಿಕೊಂಡಿಲ್ಲ.

ಸಿನಿಮಾದ ಪ್ರಭಾವೀ ಆಯಸ್ಕಾಂತ ಶಕ್ತಿಯನ್ನು ಬಳಸಿಕೊಳ್ಳಲು ನಮ್ಮವರು ವಿಫಲರಾದರೆಂದೇ ಹೇಳಬೇಕು. ಸಿನಿಮಾ ಒಂದು ದೇಶವನ್ನೇ ಕಟ್ಟಲು ಏಣಿ ಆಗಬಹುದು ಎನ್ನುವುದನ್ನು ರಷ್ಯಾ ನೋಡಿ ಕಲಿಯಬೇಕು. ಬಡತನ, ಅನಕ್ಷರತೆ, ನಿರುದ್ಯೋಗ, ಮೌಢ್ಯ ಎಲ್ಲವೂ ತುಂಬಿತುಳುಕುತ್ತಿದ್ದ ಭಾರತ ದೇಶಕ್ಕೆ ಸಿನಿಮಾ ಪರಿವರ್ತನೆಯ ಹಾದಿಗಳನ್ನು ತೋರಬಹುದಿತ್ತು. ಭಾರತದಲ್ಲಿ ಸಿನಿಮಾ ತನ್ನ ಮೂಲ ಉದ್ದೇಶಕ್ಕೆ ವ್ಯತಿರಿಕ್ತ ದಾರಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು.”

ಪೂರ್ತಿ ಲೇಖನ ಇಲ್ಲಿ ಲಭ್ಯವಿದೆ.

Screenshot courtesy: ಪ್ರಜಾವಾಣಿ

ರವಿ ಕೃಷ್ಣಾ ರೆಡ್ಡಿ

“ವರ್ತಮಾನ”ಕ್ಕೊಂದು ಪೀಠಿಕೆ…

ಸ್ನೇಹಿತರೆ,

ಕರ್ನಾಟಕದ ರಾಜಕೀಯ ವ್ಯವಸ್ಥೆ ಮತ್ತು ಸಮಾಜ ಇಂದು ಒಂದು ವಿಶಿಷ್ಟವಾದ ಚಲನಾವಸ್ಥೆಯಲ್ಲಿರುವುದು ತಮಗೆಲ್ಲ ತಿಳಿದಿರುವ ಸಂಗತಿಯೇ. ಪ್ರಪಂಚದಾದ್ಯಂತ ಅನೇಕ ದೇಶಗಳು ಮತ್ತು ಸಮುದಾಯಗಳು ಆಧುನಿಕತೆಯತ್ತ ಮತ್ತು ಒಂದು ಉತ್ತಮ ಆಡಳಿತ ವ್ಯವಸ್ಥೆಯತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಯಾರಿಗಾದರೂ ಅನ್ನಿಸಿದರೆ ಅದು ಸಹಜವಾದದ್ದೆ. ಅದನ್ನು ಪುಷ್ಟೀಕರಿಸುವಂತಹ ಅನೇಕ ಘಟನೆಗಳು ನಮ್ಮ ಮಧ್ಯೆ ಪ್ರತಿನಿತ್ಯ ನಡೆಯುತ್ತಿವೆ. ವೈಯಕ್ತಿಕ ನೈತಿಕತೆ ಉಳಿಸಿಕೊಳ್ಳುವುದೇ ಈ ಸಂದರ್ಭದಲ್ಲಿ ಒಂದು ಸವಾಲಾಗಿ ಹೋಗಿದೆ. ಹಾಗೆಯೇ, ಆಶಾವಾದವನ್ನೂ ಸಹ.

ಹೀಗಿರುವಾಗಲೂ, ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಅನೇಕ ಪ್ರಾಮಾಣಿಕ ಜನರು ತಮ್ಮದೇ ನೆಲೆಯಲ್ಲಿ ಸಮಾಜ ಮತ್ತು ವ್ಯವಸ್ಥೆಯನ್ನು ಸುಧಾರಿಸುವ ಕೆಲಸಗಳನು ಮಾಡುತ್ತಲೇ ಇದ್ದಾರೆ. ಆದರೆ ಸಮಾಜ ಇಂದು ಅಂತಹ ಕೆಲಸಗಳನ್ನು ಪ್ರಶಂಸಿಸುತ್ತಿದೆಯೇ ಎನ್ನುವುದು ಸಂಶಯಕ್ಕೂ ಆಸ್ಪದವಿಲ್ಲದಷ್ಟು ನಿರಾಶಾದಾಯಕವಾಗಿದೆ. ಸಂಪತ್ತಿನ ಮತ್ತು ದೊಡ್ಡಸ್ತಿಕೆಯ ಹುಡುಕಾಟದಲ್ಲಿ ಇಂದಿನ ಸಮಾಜ ನ್ಯಾಯಾನ್ಯಾಯದ ವಿವೇಚನೆಯಿಲ್ಲದೆ ಸುಲಭಮಾರ್ಗಗಳ ಹುಡುಕಾಟದಲ್ಲಿದೆ. ಭ್ರಷ್ಟಾಚಾರ ಎಲ್ಲಿಯೋ ಕೆಲವರಿಗೆ ಸಂಬಂಧಪಟ್ಟ ವಿಷಯವಾಗಿ, ಬಹುತೇಕ ಜನ ಅದರೊಡನೆ ರಾಜಿ ಮಾಡಿಕೊಂಡುಬಿಟ್ಟಿದ್ದಾರೆ. “ಭ್ರಷ್ಟರು ಯಾರಿಲ್ಲ?” ಎನ್ನುವ ಘೋಷ ವಾಕ್ಯವೇ ಇಂದು ಎಲ್ಲಾ ಜನರು ತಮ್ಮನ್ನು ಸಮರ್ಥಿಸಿಕೊಳ್ಳಲು ಬಳಸುತ್ತಿರುವ ವಾದವಾಗಿದೆ. ಹಾಗೆ ಹೇಳುವುದೇ ಒಂದು ನೈತಿಕ ಅಧ:ಪತನ ಎಂದು ಹೇಳುವವರಾಗಲಿ ಮತ್ತು ಅದನ್ನು ಕೇಳಿಸಿಕೊಂಡು ಒಪ್ಪಿಕೊಳ್ಳುವವರಿಗಾಗಲಿ ಅರ್ಥವಾಗುತ್ತಿಲ್ಲ. ಅಥವ ಅವರು ಬೇಕೆಂತಲೇ ಅದನ್ನು ನಿರಾಕರಿಸುತ್ತಿದ್ದಾರೆ. ಇದೆಲ್ಲ ಹೇಗೆ ನಮ್ಮ ಸಮಾಜದಲ್ಲಿ ಸ್ವಾತಂತ್ರ್ಯ, ಪ್ರಗತಿ, ಸಮಾನತೆಯ ಸಾಧನೆಗೆ ಮಹಾಗೋಡೆಯಾಗಿ ನಿಂತಿವೆ ಎಂದು ವಿವರಿಸುವುದೇ ಇಂದಿನ ಬಹುಮುಖ್ಯ ಸವಾಲಾಗಿದೆ.

ಹಾಗೆಯೇ ಹೇಳಿದ ಹಾಗೆ, ನಮ್ಮ ವ್ಯವಸ್ಥೆಯಲ್ಲಿನ ದುಷ್ಟಶಕ್ತಿಗಳ ಜೊತೆ ಇಂದು ನಮ್ಮ ಸಮಾಜ ರಾಜಿ ಮಾಡಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕವಾಗಿ ಹೋಗಿದೆ ಎಂದರೆ ಇಂದಿನ ನಮ್ಮ ಬಹುತೇಕ ಸಮೂಹ ಮಾಧ್ಯಮಗಳೂ ಇಂದು ಆ ದುಷ್ಟಶಕ್ತಿಗಳ ಪೋಷಕರಾಗಿ ಪರಿವರ್ತಿತರಾಗಿಬಿಟ್ಟಿದ್ದಾರೆ. ಎಂತಹ ಗಂಭೀರ ವಿಷಯವನ್ನೂ ರಂಜನೀಯ ಮಾಡುವಲ್ಲಿ ಮತ್ತು ತನ್ಮೂಲಕ ತಾವು ಪ್ರಸ್ತುತತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳ ಕೆಲಸ ನಡೆದಿದೆ. ಮತ್ತು ನಮ್ಮ ಸಮಾಜದ ಸಾಕ್ಷಿಪ್ರಜ್ಞೆಯಾಗಬೇಕಿದ್ದ ನಮ್ಮ ಅನೇಕ ಪ್ರಗತಿಪರ ಚಿಂತಕರೂ ಇಂದು ವೈಯಕ್ತಿಕ ನೆಲೆಯಲ್ಲಿ ಪ್ರಾಮಾಣಿಕತೆ ಮತ್ತು ಆದರ್ಶಗಳನ್ನು ಉಳಿಸಿಕೊಳ್ಳಲಾಗದ ಸ್ಥಿತಿ ಮುಟ್ಟಿದ್ದಾರೆ. ಗುಂಪಿನಲ್ಲಿರುವಾಗಲಾದರೂ ನೈತಿಕತೆ ಉಳಿಸಿಕೊಳ್ಳುವ ಮತ್ತು ಅದರ ಅವಶ್ಯಕತೆ ಬಗ್ಗೆ ಮಾತನಾಡುವ ಈ ಜನರೂ ಇಂದು ಕಮ್ಮಿಯಾಗುತ್ತಾ ಹೋಗುತ್ತಿದ್ದಾರೆ. ಇದು ನಮ್ಮ ಸಮಕಾಲೀನ ಸಂದರ್ಭದ ಮಹಾದುರಂತಗಳಲ್ಲೊಂದು.

ಇಂತಹ ಸಂದರ್ಭದಲ್ಲಿ ನಮ್ಮ ವರ್ತಮಾನದ ಆಗುಹೋಗುಗಳನ್ನು ಮತ್ತು ಸವಾಲುಗಳನ್ನು ಗಂಭೀರವಾಗಿ ವಿಶ್ಲೇಷಿಸಿ ಮತ್ತು ವಿಮರ್ಶಿಸಿ, ಹಾಗೆಯೇ ಭವಿಷ್ಯದ ದಿನಗಳು ಮತ್ತು ಕಾರ್ಯಗಳು ಹೇಗಿರಬೇಕು ಎಂದು ಸ್ಪಷ್ಟವಾಗಿ ಹೇಳುವ ತುರ್ತು ಇಂದಿನ ನಮ್ಮ ಸಮಾಜಕ್ಕಿದೆ ಎಂದು ನನಗನ್ನಿಸಿತು. ಆ ನಿಟ್ಟಿನಲ್ಲಿ ಒಂದು ಪರ್ಯಾಯ ಮಾಧ್ಯಮದ ಹುಡುಕಾಟದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಯೋಚಿಸುತ್ತಿದ್ದೆ. ಇತ್ತೀಚೆಗೆ ಅದು ಸ್ಪಷ್ಟವಾಯಿತು. ಅದು ಇಂಟರ್ನೆಟ್ ಮಾಧ್ಯಮದಲ್ಲಿ ಹಲವಾರು ಸಮಾನಮನಸ್ಕರ ಸಾಂಘಿಕ ಪ್ರಯತ್ನದಿಂದ ಸಾಧ್ಯ ಎನ್ನಿಸಿತು. ಅದರ ಕಾರ್ಯರೂಪವೇ “ವರ್ತಮಾನ”.

ಯಾರು ಒಪ್ಪಲಿ ಬಿಡಲಿ, ಕಳೆದ ನಾಲ್ಕೈದು ಸಾವಿರ ವರ್ಷಗಳ ತನ್ನ ವಿಕಾಸದ ಹಾದಿಯಲ್ಲಿ ಮನುಷ್ಯ ಕೆಲವೊಂದು ಸಾರ್ವತ್ರಿಕ ಮೌಲ್ಯಗಳನ್ನು ಒಪ್ಪಿಕೊಂಡು ಬಂದಿದ್ದಾನೆ. ವ್ಯಕ್ತಿ ಮತ್ತು ಸಮುದಾಯಗಳ ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ, ಪ್ರಜಾಪ್ರಭುತ್ವ; ಇತ್ಯಾದಿ. ಇಲ್ಲಿ “ವರ್ತಮಾನ”ದಲ್ಲಿಯೂ ಅಂತಹ ಮೌಲ್ಯಗಳನ್ನು ಒಪ್ಪಿಕೊಂಡವರಿಗೆ ಮಾತ್ರ ಸ್ಥಾನವಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ವೈಜ್ಞಾನಿಕ ಮನೋಭಾವ, ವೈಚಾರಿಕ ದೃಷ್ಟಿಕೋನ, ಸಮಾನತೆ ಮತ್ತು ಅದನ್ನು ನಮ್ಮ ಕಾಲಘಟ್ಟದಲ್ಲಿ ಸಾಧಿಸಿಕೊಳ್ಳಲು ಯತ್ನಿಸುವ ಸಾಮಾಜಿಕ ನ್ಯಾಯ; ಇವು ನಾವು ಒಪ್ಪಿಕೊಂಡ ಸಾರ್ವಜನಿಕ ಮೌಲ್ಯಗಳು. ವೈಯಕ್ತಿಕ ಜೀವನದಲ್ಲಿ ಮೌಲ್ಯಗಳಿಗೆ ಬದ್ಧವಾಗಿ ಜೀವನ ಸಾಗಿಸುವುದು ಮತ್ತು ಪ್ರಾಮಾಣಿಕತೆ ಉಳಿಸಿಕೊಳ್ಳುವುದು ನಮ್ಮ ಜೀವನ ಮೌಲ್ಯಗಳಾಗಬೇಕು. ಈ ಒಟ್ಟೂ ನೆಲೆಯಲ್ಲಿ ನಮಗೆ ಬಹುಶಃ ಗಾಂಧಿಗಿಂತ ಮತ್ತೊಬ್ಬ ಆದರ್ಶಪ್ರಾಯರಿಲ್ಲ. ಇಂತಹ ಒಂದು ಸಮಾನಮನಸ್ಕರ ಕ್ರಿಯಾಶೀಲ ಗುಂಪಿನಿಂದ ಏನೂ ಸಾಧ್ಯವಿದೆ ಎನ್ನುವುದು ನನ್ನ ನಂಬಿಕೆ.

ಈ ಎಲ್ಲವುಗಳ ಹಿನ್ನೆಲೆಯಲ್ಲಿ, ನಮ್ಮ ವರ್ತಮಾನದ ಸಂದಿಗ್ಧ ಸ್ಥಿತಿಯನ್ನು ನಮ್ಮದೇ ನೆಲೆಯಲ್ಲಿ ಅವಲೋಕಿಸುತ್ತ, ಭವಿಷ್ಯದ ದಿನಗಳು ಹೇಗಿರಬೇಕು ಎಂದು ಪರಿಭಾವಿಸುತ್ತ, ಅದರ ಕಾರ್ಯಸಾಧನೆಗೆ ಕ್ರಿಯಾಶೀಲರಾಗಲು ದಾರಿಗಳನ್ನು ಹುಡುಕುವ ಈ “ವರ್ತಮಾನ”ದ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನಿರಿಕ್ಷಿಸುತ್ತೇವೆ. ಕನ್ನಡ ಮತ್ತು ಕರ್ನಾಟಕದ ನೆಲೆಯಲ್ಲಿ ಪರ್ಯಾಯ ಸಮೂಹ ಮಾಧ್ಯಮವೊಂದರ ಕಾರ್ಯಸಾಧ್ಯತೆಯ ಈ ಪ್ರಯತ್ನದಲ್ಲಿ ನಮ್ಮ ಜೊತೆ ನೀವು ಹಲವಾರು ರೀತಿಯಲ್ಲಿ ತೊಡಗಿಸಿಕೊಳ್ಳಬಹುದು.

  • ಈ “ವರ್ತಮಾನ”ದ ಚೌಕಟ್ಟಿನಲ್ಲಿ ಸೇರುವ ಯಾವುದೇ ವಿಷಯದ ಬಗ್ಗೆ ನಿಮ್ಮ ಲೇಖನ, ಆಡಿಯೋ, ಅಥವ ವಿಡಿಯೋವನ್ನು ನಮಗೆ ಕಳುಹಿಸಬಹುದು.
  • ಇಲ್ಲಿರುವ ಲೇಖನಗಳ ಕುರಿತ ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.
  • ಓದಿ, ನೋಡಿ, ಮೆಚ್ಚಿಗೆಯಾದದ್ದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
  • ತಮಗೆ ಸಾಧ್ಯವಾದಲ್ಲಿ ಕೆಲವೊಂದು ಕಾರ್ಯಗಳಿಗೆ ಅನುಕೂಲವಾಗುವಂತೆ ಹಣದ ಸಹಾಯ ಸಹ ಮಾಡಬಹುದು.

ಲೇಖನಗಳನ್ನು ಕಳುಹಿಸಲು ಅಥವ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:

editor@vartamaana.com

ಅಥವ

“ವರ್ತಮಾನ”
ನಂ. ೨೨೨, B4, ತುಂಗಭದ್ರ ಬ್ಲಾಕ್,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ
ಬೆಂಗಳೂರು – ೫೬೦೦೪7

ದೂ: ೯೬೮೬೦೮೦೦೦೫

 

 

ತಮ್ಮ ವಿಶ್ವಾಸಿ,
ರವಿ ಕೃಷ್ಣಾ ರೆಡ್ಡಿ