Category Archives: Earth

Documentary

ಭೂಮಿ ಹುಟ್ಟಿದ್ದು ಹೇಗೆ? : ಭಾಗ -1

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಭೂಮಿಗೆ 450 ಕೋಟಿ ವರ್ಷಗಳ ಇತಿಹಾಸವಿದೆ. ಅನಂತವಾದ ವಿಶ್ವದಲ್ಲಿ ಭೂಮಿಯ ಹೊರತಾಗಿ ಮತ್ತೊಂದು  ಹಸಿರು, ಉಸಿರು, ನೀರು ಕಾಣುವ ಮತ್ತು ಜೀವಿಗಳು ವಾಸಿಸುತ್ತಿರುವ ನೆಲ ಕಾಣಿಸುವುದಿಲ್ಲ. ಆದರೆ ಹಲವು ಗೆಲಾಕ್ಸಿಗಳು, ಅಸಂಖ್ಯ ನಕ್ಷತ್ರಗಳು, ಕೋಟ್ಯಂತರ ಆಕಾಶ ಕಾಯಗಳಿವೆ. ಇಂಥ ವಿಶ್ವದಲ್ಲಿ ಭೂಮಿ ಸಣ್ಣ ಕಣವಷ್ಟೆ. ಆದರೆ ಅದರ ವೈಶಿಷ್ಟ್ಯಗಳಿಂದಾಗಿ ಭೂಮಿ ಅಸಾಮಾನ್ಯ ಗ್ರಹವಾಗಿ ನಿಲ್ಲುತ್ತದೆ. ವಿಶ್ವದಲ್ಲಿ ಹೋಲಿಕೆಗೆ ಮತ್ತೊಂದು ಗ್ರಹ ಇದುವರೆಗೂ ಸಿಕ್ಕಿಲ್ಲ. ಇಂಥ ಅನನ್ಯವಾದ ಗ್ರಹದ ಹುಟ್ಟಿನ ಮೂಲವನ್ನು ಪರಿಚಯಿಸುವ ಒಂದು ಸಣ್ಣ ಪ್ರಯತ್ನವಿದು.

ಭೂಮಿ ಇಡೀ ವಿಶ್ವದಲ್ಲಿ ಒಂದು ಸಣ್ಣ ಕಣವಷ್ಟೆ. ಭೂಮಿಯಂತೆ ವಿಶಿಷ್ಟವಾಗಿಲ್ಲದಿದ್ದರೂ, ಅಸಂಖ್ಯವೂ, ಅಗಾಧವೂ ಆದ ಕಾಯಗಳನ್ನು ವಿಶ್ವವು ಹೊಂದಿದೆ. ಒಂದು ಕಾಲಕ್ಕೆ ಈ ವಿಶ್ವ ಎನ್ನುವುದೇ ಇರಲಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ನಿಮಗೆ ಅಚ್ಚರಿಯಾಗಬಹುದು. ಸೌರವ್ಯೂಹ, ಕ್ಷೀರಪಥದಂತಹ ಗೆಲಾಕ್ಸಿಗಳು, ನಕ್ಷತ್ರಗಳು, ನಕ್ಷತ್ರಪುಂಜಗಳು, ಕ್ಷುದ್ರಗ್ರಹಗಳು, ಕಪ್ಪು ಕುಳಿಗಳು, ಧೂಮಕೇತುಗಳು.. ಹೀಗೆ ಏನನ್ನೋ ಒಳಗೊಂಡಿರುವ ವಿಶ್ವ ಕೂಡ ಇರಲೇ ಇಲ್ಲ ಎನ್ನುತ್ತಾರೆ.. ಭೂಮಿ ಹುಟ್ಟುವ ಮುನ್ನ ಭೂಮಿಯ ತಾಯಿಯಂತೆ ಇರುವ ವಿಶ್ವ ಹೇಗೆ ಹುಟ್ಟಿತು?

ವಿಶ್ವದ ಉಗಮ:

ಮೊದಲಿಗೆ ಏನೂ, ಏನೇನೂ ಇರಲಿಲ್ಲ. ಒಂದು ರೀತಿಯಲ್ಲಿ ಏಕಮೇವ ಶೂನ್ಯತೆ. ಆ ಏಕಶೂನ್ಯದ ಸುತ್ತಲೂ ಏನೂ ಇರಲಿಲ್ಲ. ಅಲ್ಲಿ ಅಂತರಿಕ್ಷವಾಗಲಿ, ಖಾಲಿ ಜಾಗವಾಗಲಿ… ಕೊನೆಗೆ ಕತ್ತಲಾಗಲಿ, ಏನೂ ಇರಲಿಲ್ಲ. ಅದು ಅಂತಹ ಸ್ಥಿತಿಯಲ್ಲಿ ಹೇಗೆ ಎಷ್ಟು ದಿನ ಇತ್ತು ಅಂತಲೂ ಗೊತ್ತಿಲ್ಲ. ಏಕೆಂದರೆ ಆಗ ಕಾಲವೂ ಇರಲಿಲ್ಲ. ಹಾಗಾಗಿ ಅದಕ್ಕೆ ಭೂತಕಾಲವಾಗಲಿ, ಇತಿಹಾಸವಾಗಲಿ ಇರಲಿಲ್ಲ…

ಇಂಥ ಏನೂ ಇಲ್ಲದ ಸ್ಥಿತಿಯಲ್ಲಿ ನಮ್ಮ ಈ ಬ್ರಹ್ಮಾಂಡ ಉದಯಿಸಿತು. ಯಾವಾಗ ಎಂದು ಕೇಳಬಹುದು.  ಬ್ರಹ್ಮಾಂಡ ವಿಜ್ಞಾನಿಗಳು (ಖಗೋಳ ವಿಜ್ಞಾನಿಗಳು) ಹೇಳುವ ಪ್ರಕಾರ ಸುಮಾರು 1370 ಕೋಟಿ ವರ್ಷಗಳ ಹಿಂದೆ..

ಅದು ಆಗಿದ್ದಾದರೂ ಹೇಗೆ? ಅಂತಹ ಒಂದು ಏಕಶೂನ್ಯತೆಯಿಂದ, ಪದಗಳಲ್ಲಿ ವರ್ಣಿಸಲಾಗದ ಅಗಾಧತೆಯಲ್ಲಿ, ಅನಂತ ಆಯಾಮಗಳಲ್ಲಿ, ಕಲ್ಪಿಸಿಕೊಳ್ಳಲಾಗದಷ್ಟು ವಿಸ್ತಾರ ವ್ಯೋಮಾಕಾಶದಲ್ಲಿ ಈ ಬ್ರಹ್ಮಾಂಡ ಕ್ಷಣಾರ್ಧದಲ್ಲಿ ಅಸ್ತಿತ್ವಕ್ಕೆ ಬಂದುಬಿಟ್ಟಿತು.

ಆ ಮೊದಲ ಸೆಕೆಂಡಿನಲ್ಲಿ ಗುರುತ್ವಾಕರ್ಷಣೆ ಮತ್ತು ಇತರ ಭೌತಶಾಸ್ತ್ರದ ಪ್ರಮುಖ ಬಲಗಳು ಉದಯಿಸಿದವು. ಒಂದು ನಿಮಿಷಕ್ಕಿಂತ ಕಮ್ಮಿ ಅವಧಿಯಲ್ಲಿ ಈ ಬ್ರಹ್ಮಾಂಡ ಲಕ್ಷಾಂತರ ಕೋಟಿ ಮೈಲುಗಳ ಅಗಲದಲ್ಲಿ ಬೆಳೆದು, ವಿಸ್ತಾರವಾಗಿ ಚಾಚಿಕೊಂಡಿತು. ಅದರ ಜೊತೆಗೆ ಸಹಸ್ರ ಕೋಟಿ ಡಿಗ್ರಿಗಳ ಶಾಖವೂ ಇತ್ತು. ಅದು ಪರಮಾಣು ಪ್ರಕ್ರಿಯೆಗಳನ್ನು ಸಾಧ್ಯವಾಗಿಸುವ ಶಾಖ. ಆ ಸಮಯದ ಪರಮಾಣು ಪ್ರಕ್ರಿಯೆಗಳು ಹಗುರ ಮೂಲಧಾತುಗಳಾದ ಜಲಜನಕ ಮತ್ತು ಹೀಲಿಯಂ ಅನ್ನು ಸೃಷ್ಟಿಸಿದವು. ಹೀಗೆ ಸಾಗುವ ಸೃಷ್ಟಿಕ್ರಿಯೆ ಮುಂದಕ್ಕೆ ವಿಶ್ವದಲ್ಲಿ ಇದ್ದಿರಬಹುದಾದ ಎಲ್ಲಾ ಭೌತವಸ್ತುಗಳಲ್ಲಿ ಶೇ. 98ನ್ನು ಕೇವಲ ಮೂರೇ ನಿಮಿಷಗಳಲ್ಲಿ ಉತ್ಪನ್ನ ಮಾಡಿತು.

ಕೇವಲ ಎರಡು-ಮೂರು ನಿಮಿಷಗಳಲ್ಲಿ ಏನೂ ಇಲ್ಲದ ಸ್ಥಿತಿಯಿಂದ ಅಗಾಧ, ಅನಂತ, ಸುಂದರ, ಅಪರಿಮಿತ ಸಾಧ್ಯತೆಗಳ ಬ್ರಹ್ಮಾಂಡ ಆಸ್ತಿತ್ವಕ್ಕೆ ಬಂದಿದ್ದು. ಇದನ್ನೆ (ಖಗೋಳ) ಬ್ರಹ್ಮಾಂಡವಿಜ್ಞಾನದ ವಿಜ್ಞಾನಿಗಳು ಬಿಗ್-ಬ್ಯಾಂಗ್, ಮಹಾ ಸ್ಫೋಟ ಎಂದು ಕರೆಯುವುದು. ಅದು ಸ್ಫೋಟಕ್ಕಿಂತ ಹೆಚ್ಚಾಗಿ ಇದ್ದಕ್ಕಿದ್ದಂತೆ ಬೃಹತ್ ಪ್ರಮಾಣದಲ್ಲಿ ಘಟಿಸಿದ ಮಹಾವಿಸ್ತರಣೆ.

ಭೂಮಿ ಎಂಬ ಬೆರಗು

ಹೀಗೆ ಉದ್ಭವವಾದ ಅಗಾಧ ವಿಶ್ವದಲ್ಲಿ ಭೂಮಿಯೇನು ಏಕಾಏಕಿ ಪ್ರತ್ಯಕ್ಷವಾಗಲಿಲ್ಲ. ವಿಶ್ವವು ಕೋಟಿ ವರ್ಷಗಳ ಕಾಲ ವಿಸ್ತರಿಸಿಕೊಳ್ಳುತ್ತಾ ಇರುವಾಗಲೇ ಭೂಮಿ ನಿಧಾನವಾಗಿ ತನ್ನನ್ನು ರೂಪಿಸಿಕೊಳ್ಳುತ್ತಿತ್ತು.. ಕಲ್ಪನಾತೀತವಾದ ವಿಸ್ತಾರವಾದ ವಿಶ್ವದಲ್ಲಿ ಭೂಮಿ ಹುಟ್ಟಿದ್ದು ಒಂದು ಬೆರಗೇ…

1370 ಕೋಟಿ ವರ್ಷಗಳಷ್ಟು ಹಳೆಯದಾದ ಬ್ರಹ್ಮಾಂಡದಲ್ಲಿ ಸುಮಾರು 460 ಕೋಟಿ ವರ್ಷಗಳ ಹಿಂದೆ ನಮ್ಮ ಸೌರಮಂಡಲ ರೂಪಗೊಂಡಿತು. ಸುಮಾರು 2400 ಕೋಟಿ ಕಿಲೋಮೀಟರ್ ಗಳ ಉದ್ದಗಲದ ಅಂತರಿಕ್ಷದಲ್ಲಿ ಅನಿಲ ಮತ್ತು ಧೂಳು ಗುಂಪಾಗುತ್ತ ಬಂದು ಒಂದಾಗಿ ಸೇರಲು ಆರಂಭವಾಯಿತು.

ಅದರಲ್ಲಿ ಬಹುಪಾಲು ಎಲ್ಲವೂ ಅಂದರೆ ಶೇ. 99.9 ರಷ್ಟು ಸೂರ್ಯನ ಸೃಷ್ಟಿಗೇ ಬಳಕೆಯಾಯಿತು. ಇನ್ನೂ ತೇಲುತ್ತಿದ್ದ ಅಳಿದುಳಿದ ವಸ್ತುಗಳಲ್ಲಿ ಒಂದು ಕಣ ತನ್ನ ಹತ್ತಿರ ತೇಲುತ್ತಿದ್ದ ಇನ್ನೊಂದು ಕಣದೊಂದಿಗೆ ಎಲೆಕ್ಟ್ರೊಸ್ಟಾಟಿಕ್ ಬಲದಿಂದಾಗಿ ಕೂಡಿಕೊಳ್ಳಲು ಆರಂಭಿಸಿದವು. ಹಾಗೆ ಕೂಡಿಕೊಳ್ಳುತ್ತ ಅವೇ ಗ್ರಹಗಳಾಗಿ, ಉಪಗ್ರಹಗಳಾಗಿ ಆಕಾಶಕಾಯಗಳಾಗಿ ಬದಲಾಗುತ್ತ ಹೋದವು.

ಸೌರಮಂಡಲದ ಉದ್ದಗಲಕ್ಕೂ ಈ ವಿದ್ಯಮಾನ ದೀರ್ಘ ಕಾಲ ನಡೆಯಿತು. ಒಂದಕ್ಕೊಂದು ಡಿಕ್ಕಿಹೊಡೆದ ಧೂಳಿನ ಕಣಗಳು ಕ್ರಮೇಣ ಇನ್ನೊಂದಕ್ಕೆ ಡಿಕ್ಕಿ ಹೊಡೆದು, ಒಂದಕ್ಕೊಂದು ಅಂಟಿಕೊಳ್ಳುತ್ತ ದೊಡ್ಡವಾಗುತ್ತ ಹೋದವು. ಅವೇ ಕ್ರಮೇಣ ತಟ್ಟೆಯಾಕಾರದಲ್ಲಿ ಹರಡಿ ಕೊಂಡ ಗ್ರಹಾರಿಕೆ ಅಥವಾ ಪ್ಲಾನೆಟೆಸಿಮಲ್ಸ್ ಎಂದು ಕರೆಯಲ್ಪಡಬಲ್ಲಷ್ಟು ದೊಡ್ಡದಾದ ಧೂಳಿನ ಕಾಯಗಳಾದವು. ಇದು ಅದೇ ಗತಿಯಲ್ಲಿ ಅನಿಶ್ಚಿತ ಕ್ರಮದಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಬಹಳ ಡಿಕ್ಕಿಗಳನ್ನು ಕಂಡ ಆಕಾಶಕಾಯಗಳು ಕ್ರಮೇಣ ಎಷ್ಟು ದೊಡ್ಡವಾದವೆಂದರೆ ತಾವು ಚಲಿಸುತ್ತಿದ್ದ ಕಕ್ಷೆಯೊಳಗೆ ಕ್ರಮೇಣ ಅವೇ ಮೇಲುಗೈ ಸಾಧಿಸಿದವು.

ಇದೆಲ್ಲವೂ ಆಗಲು ಯುಗಗಳೇನೂ ಹಿಡಿಯಲಿಲ್ಲ. ವಿಜ್ಞಾನಿಗಳ ಪ್ರಕಾರ, ಸಣ್ಣ ಕಣಗಳ ಗುಂಪೊಂದು ನೂರಾರು ಮೈಲು ಅಗಲದ ಪುಟ್ಟದೊಂದು ಗ್ರಹವಾಗಿ ಬದಲಾಗಲು ಹಿಡಿದ ಅವಧಿ ಕೇವಲ ಹತ್ತಾರು ಸಾವಿರ ವರ್ಷಗಳು ಮಾತ್ರ. ನಮ್ಮ ಭೂಮಿ ಹೀಗೆ ಸುಮಾರು 20 ಕೋಟಿ ವರ್ಷಗಳಲ್ಲಿ ನಿರ್ಮಾಣವಾಯಿತು.

ಆಗಲೂ ಅದು ಬೆಂಕಿಯ ಲಾವಾರಸದಿಂದ ತುಂಬಿ ತುಳುಕುತ್ತಿತ್ತು ಮತ್ತು ಇನ್ನೂ ಸೌರಮಂಡಲದ ಅಂತರಿಕ್ಷದಲ್ಲಿ ತೇಲುತ್ತಿದ್ದ ಧೂಳು ಮತ್ತಿತರ ಆಕಾಶಕಾಯಗಳು ಅದಕ್ಕೆ ಬಂದು ಡಿಕ್ಕಿ ಹೊಡೆಯುತ್ತಲೇ ಇದ್ದವು. ಈ ಅವಧಿಯಲ್ಲಿಯೇ, ಅಂದರೆ ಸುಮಾರು 440 ಕೋಟಿ ವರ್ಷಗಳ ಹಿಂದೆ, ಈಗಿನ ಮಂಗಳ ಗ್ರಹದಷ್ಟು ದೊಡ್ಡದಾಗಿದ್ದ ಆಕಾಶಕಾಯವೊಂದು ಭೂಮಿಗೆ ಬಂದು ಡಿಕ್ಕಿ ಹೊಡೆಯಿತು. ಆ ಡಿಕ್ಕಿ ಎಷ್ಟು ಬಲವಾಗಿತ್ತೆಂದರೆ ಭೂಭಾಗದ ಮೇಲ್ಪದರ ಸಾಕಷ್ಟು ಛಿದ್ರವಾಗಿ ಅಂತರಿಕ್ಷಕ್ಕೆ ಚೆಲ್ಲಿತು.

ಅದಾದ ಕೆಲವೇ ವಾರಗಳ ಅವಧಿಯಲ್ಲಿ ಭೂಮಿಯಿಂದ ಚಿಮ್ಮಿ ಹೋದ ಭಾಗಗಳೆಲ್ಲ ಆಕಾಶದಲ್ಲಿ ಒಂದಾಗಿ ಕೂಡಿಕೊಂಡವು. ಮತ್ತು ಭೂಮಿಯ ಗುರುತ್ವಾಕರ್ಷಣಾ ಬಲದಿಂದಾಗಿ ಅದು ಭೂಮಿಯನ್ನು ಸುತ್ತುಹಾಕಲು ಆರಂಭಿಸಿತು.

ಒಂದೇ ವರ್ಷದ ಅವಧಿಯಲ್ಲಿ ಅದು ಗೋಳದ ರೂಪ ಪಡೆದುಕೊಂಡಿತು. ಆ ಗೋಳವೇ ಇವತ್ತಿಗೂ ಭೂಮಿಯನ್ನು ಸುತ್ತುತ್ತ ನಮ್ಮ ಜೊತೆಗಿರುವ ಚಂದ್ರ.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – ಅಂತಿಮ ಅಧ್ಯಾಯ)


– ಡಾ.ಎನ್.ಜಗದೀಶ್ ಕೊಪ್ಪ


 

[ಸ್ನೇಹಿತರೆ, ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಆಂಗ್ಲ ದಂಪತಿಗಳ ಮಗನಾಗಿ ಹುಟ್ಟಿ, ಇಲ್ಲಿಯೇ ತನ್ನ ಜೀವನದ ಬಹುಪಾಲು ಸಮಯವನ್ನು ಕಳೆದು, ವಿಶ್ವಮಾನವನಾಗಿ ಬೆಳೆದ  ಜಿಮ್ ಕಾರ್ಬೆಟ್‌ ಎಂಬ ಅಸಾಮಾನ್ಯ ಮನುಷ್ಯನ ಕುರಿತು ಜಗದೀಶ್ ಕೊಪ್ಪರವರು ಕಳೆದ 29 ವಾರಗಳಿಂದ ನಮಗೆ ಬಹಳ ಆಪ್ತವಾಗಿ ಮತ್ತು ವಸ್ತುನಿಷ್ಟವಾಗಿ ಹೇಳುತ್ತ ಬಂದ ಲೇಖನ ಸರಣಿಯ ಕೊನೆಯ ಕಂತು ಇದು. ಕನ್ನಡದಲ್ಲಿ ಜಿಮ್ ಕಾರ್ಬೆಟ್ ಬಗ್ಗೆ ಇಷ್ಟು ವಿಷದವಾಗಿ  ಬರೆದಿರುವ ಇನ್ನೊಂದು ಕೃತಿ ಇಲ್ಲ. ಹಾಗಾಗಿಯೇ ಇದು ಸಹಜವಾಗಿ ವಿಶಿಷ್ಟವಾದದ್ದು. ಆದಷ್ಟು ಬೇಗ ಇದು ಪುಸ್ತಕವಾಗಿ “ವರ್ತಮಾನ.ಕಾಮ್” ಮತ್ತು ಕನ್ನಡದ ಅಂತರ್ಜಾಲದ ಹೊರಗಿರುವ ಕನ್ನಡ ಓದುಗರಿಗೂ ತಲುಪಲಿ ಎಂದು ಬಯಸುತ್ತೇನೆ. ಇದನ್ನು ವರ್ತಮಾನ.ಕಾಮ್‌ನಲ್ಲಿ ಸರಣಿ ರೂಪದಲ್ಲಿ ಬರೆದಿದ್ದಕ್ಕೆ ಮತ್ತು ವರ್ತಮಾನ.ಕಾಮ್‌ನ ಆರಂಭದ ದಿನಗಳಿಂದಲೂ ನಮ್ಮ ಜೊತೆಗಿದ್ದು ನಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತ ಇರುವ ಶ್ರೀ ಕೊಪ್ಪರವರಿಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳನ್ನು ಈ ಮೂಲಕ ಸಲ್ಲಿಸಬಯಸುತ್ತೇನೆ. -ರವಿ ಕೃಷ್ಣಾರೆಡ್ಡಿ]

ಕೀನ್ಯಾದ ನೈರಿ ಪಟ್ಟಣದ ಸಮೀಪ ಪರ್ವತದ ತಪ್ಪಲಿನಲ್ಲಿ ಇದ್ದ ಔಟ್ ಸ್ಪಾನ್ ಹೆಸರಿನ ಹೊಟೇಲ್‌ನ ವಿಶೇಷ ಕಾಟೇಜ್‌ನಲ್ಲಿ ಉಳಿದುಕೊಂಡ ಬಳಿಕ, ಕಾರ್ಬೆಟ್ ಮತ್ತು ಸಹೋದರಿ ಮ್ಯಾಗಿಯ ಅಲೆದಾಟದ ಬದುಕಿಗೆ ಅಂತಿಮ ತೆರೆಬಿದ್ದಿತು. ಸುಂದರ ಹೂದೋಟ ಮತ್ತು ಹಿಮ ಪರ್ವತದ ಹಿನ್ನಲೆಯಿದ್ದ ಈ ಹೋಟೆಲ್ ಇಬ್ಬರ ಮನಸಿಗೆ ಹಿಡಿಸಿತು. ನೈನಿತಾಲ್ ಗಿರಿಧಾಮದ ವಾತಾವರಣವನ್ನು ಅವರು ಅಲ್ಲಿ ಕಂಡುಕೊಂಡರು.

ಭಾರತದಿಂದ ಕೀನ್ಯಾಕ್ಕೆ ಬಂದ ಮೇಲೆ ವೃದ್ಧಾಪ್ಯದ ವಯಸ್ಸಿನ ಕಾರಣದಿಂದ ಕಾರ್ಬೆಟ್ ಆರೋಗ್ಯದಲ್ಲಿ ಏರು ಪೇರು ಕಾಣತೊಡಗಿತು. ಮಲೇರಿಯಾ ರೋಗದಿಂದ ಚೇತರಿಸಿಕೊಂಡ ನಂತರವೂ ಕಾರ್ಬೆಟ್‌ನ ಎದೆಯಲ್ಲಿ ಕಫ ಕಟ್ಟಿಕೊಂಡು ತೊಂದರೆ ಕೊಡತೊಡಗಿತು. ಆತನ ನಡಿಗೆಯಲ್ಲಿ ಮೊದಲಿನ ವೇಗ ಇರಲಿಲ್ಲ. ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ. ಬೇಸರವಾದಾಗ ಅರಣ್ಯಕ್ಕೆ ಹೋಗಿ ಬಗೆ ಬಗೆಯ ಪ್ರಾಣಿ, ಪಕ್ಷಿಗಳ ಛಾಯಾಚಿತ್ರ ತೆಗೆಯುವ ಹವ್ಯಾಸ ರೂಢಿಸಿಕೊಂಡಿದ್ದ. ಉಳಿದ ವೇಳೆ ಅಕ್ಕ ತಮ್ಮ ಇಬ್ಬರೂ ತಮ್ಮ ಕಾಟೇಜ್ ವರಾಂಡದಲ್ಲಿ ಕೂರುತ್ತಿದ್ದರು, ಇಲ್ಲವೇ ಸಣ್ಣ ವಾಕ್ ಮಾಡುತ್ತಿದ್ದರು. ವಾರಾಂತ್ಯದಲ್ಲಿ  ಕಾರ್ಬೆಟ್ ಒಬ್ಬನೇ ಕೀನ್ಯಾದ ಉತ್ತರ ಭಾಗದಲ್ಲಿದ್ದ ಕಡಲತೀರಕ್ಕೆ ಹೋಗಿ ಅಲ್ಲಿ ಮಲಿಂಡಿ ಎಂಬ ನಗರದ ಹೊಟೇಲ್‌ನಲ್ಲಿ ಉಳಿದುಕೊಂಡು ಮೀನು ಶಿಕಾರಿ ಮಾಡುತ್ತಿದ್ದ. ಇಷ್ಟೆಲ್ಲಾ ಹವ್ಯಾಸಗಳ ನಡುವೆ ಅವನಿಗೆ ಭಾರತದಲ್ಲಿದ್ದಂತೆ ಸಾಮಾಜಿಕ ಬದುಕನ್ನು ಅಲ್ಲಿ ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಇದೊಂದು ಕೊರತೆ ಸದಾ ಕಾರ್ಬೆಟ್‌ನನ್ನು ಕಾಡುತಿತ್ತು.

ಕೀನ್ಯಾದ ಅರಣ್ಯಕ್ಕೆ ಭೇಟಿ ನೀಡಲು ವಿಶ್ವಾದ್ಯಂತ ಪ್ರವಾಸಿಗರು ಬರುತ್ತಿದ್ದದನ್ನು ಗಮನಿಸಿದ ಜಿಮ್ ಕಾರ್ಬೆಟ್ ತನ್ನ ಗೆಳೆಯ ಇಬ್ಬೊಟ್‌ಸನ್  ಹಾಗೂ ಮತ್ತೊಬ್ಬ ಗೆಳೆಯನ ಜೊತೆಗೂಡಿ ಅರಣ್ಯ ಸಫಾರಿಗಾಗಿ ಪ್ರವಾಸಿ ಸಂಸ್ಥೆಯನ್ನು 1948 ರಲ್ಲಿ ಹುಟ್ಟು ಹಾಕಿದ. ಪ್ರವಾಸಿಗರು ನೇರವಾಗಿ ಅರಣ್ಯಕ್ಕೆ ನುಸುಳಿ ಅಲ್ಲಿನ ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆ ಕೊಡುವುದರ ಜೊತೆಗೆ ಕೆಲವೊಮ್ಮೆ ತಾವೇ ಅಪಾಯದ ಸ್ಥಿತಿಗೆ ಸಿಲುಕಿಕೊಳ್ಳತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಆರಂಭಿಸಿದ ಪ್ರವಾಸಿ ಸಂಸ್ಥೆ “ಸಫಾರಿ ಲ್ಯಾಂಡ್” ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿತು. ಇದರಿಂದ ಬಂದ ಲಾಭದಿಂದ ಕಾರ್ಬೆಟ್ ಒಂದು ಐಷಾರಾಮಿ ಕಾರು ಖರೀದಿಸಿದ. ಅವನ ಓಡಾಟದ ಖರ್ಚಿಗೆ ತಾನು ಬರೆದಿದ್ದ ಕೃತಿಗಳಿಂದ ಆ ಕಾಲಕ್ಕೆ ಲಕ್ಷ ರೂಪಾಯಿಗೂ ಮೀರಿ ಬರುತ್ತಿದ್ದ ಲೇಖಕನ ಸಂಭಾವನೆ ಹಣವನ್ನು ವಿನಿಯೋಗಿಸುತ್ತಿದ್ದ.

1950 ರ ವೇಳೆಗೆ ಕೀನ್ಯಾದಲ್ಲೂ ಕೂಡ ಬ್ರಿಟಿಷರಿಂದ ಬಿಡುಗಡೆಗೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದಿಂದ ಹಿಂಸಾತ್ಮಕ ಹೋರಾಟಗಳು ಆರಂಭಗೊಂಡವು. ಕೀನ್ಯಾದಲ್ಲಿ ಇದ್ದ ಯುರೋಪಿಯನ್ನರ ಕೃಷಿ ತೋಟಗಳು, ಕಾಫಿ, ಚಹಾ ಎಸ್ಟೇಟ್‌ಗಳು ದಾಳಿಗೆ ತುತ್ತಾದವು. ಬ್ರಿಟಿಷರ ಬಳಿ ಕೆಲಸ ಮಾಡುತ್ತಿದ್ದ ಆಫ್ರಿಕನ್ನರು ಹಿಂಸೆಯ ಹೋರಾಟದಲ್ಲಿ ಕೊಲ್ಲಲ್ಪಟ್ಟರು.

ಕಾರ್ಬೆಟ್ ಮತ್ತು ಮ್ಯಾಗಿ ಇವರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. ಎರಡೂ ವೃದ್ಧ ಜೀವಗಳು ಸಾವಿನ ಭಯದಿಂದ ತತ್ತರಿಸಿ ಹೋದವು. ಕಿಕಿಯೂ ಎಂಬ ಬುಡಕಟ್ಟು ಜನಾಂಗ ಪ್ರಾರಂಭಿಸಿದ ಈ ಹೋರಾಟಕ್ಕೆ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಪ್ರೇರಣೆಯಾಗಿತ್ತು. ಕಾರ್ಬೆಟ್ ಮತ್ತು ಮ್ಯಾಗಿ ಇಬ್ಬರೂ ಸ್ವಲ್ಪ ಕಾಲ ಕೀನ್ಯಾ ತೊರೆದು ಇಂಗ್ಲೆಂಡ್‌ಗೆ ಬಂದು ವಾಸವಾಗಿದ್ದರು. ಭಾರತದಲ್ಲಿ ಪರಿಚಯವಾಗಿ ಇಂಗ್ಲೆಂಡ್‌ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಅವನ ಅನೇಕ ಅಧಿಕಾರಿ ಮಿತ್ರರು ನೆರವಾದರು.

1951 ರಿಂದ 1953ರ ನಡುವೆ ಕೀನ್ಯಾದಲ್ಲಿ ಹೋರಾಟ ತೀವ್ರವಾದಾಗಲೆಲ್ಲಾ ಇಂಗ್ಲೆಂಡ್‌ಗೆ ಬಂದು ಅಕ್ಕ ತಮ್ಮ ವಾಸಿಸುತ್ತಿದ್ದರು. ಈ ನಡುವೆ ಕಾರ್ಬೆಟ್‌ಗೆ ಭಾರತದ ನೆನಪು ಕಾಡತೊಡಗಿತು. ಅವನ ಸೇವಕರು, ಅವನ ಹಳ್ಳಿಯ ಜನ, ಕುಮಾವನ್ ಪ್ರಾಂತ್ಯದ ಘರ್ವಾಲ್ ಬುಡಕಟ್ಟು ಜನಾಂಗದ ಅನೇಕ ಹಳ್ಳಿಯ ರೈತರು ಅವನ ಸ್ಮೃತಿಯಲ್ಲಿ ಬರತೊಡಗಿದರು. ಇದರ ಪ್ರಭಾವದಿಂದ ಅವನು 1952 ರಲ್ಲಿ “ಮೈ ಇಂಡಿಯ” ಎಂಬ ಕೃತಿಯನ್ನು ಬರೆಯಲು ಸಾಧ್ಯವಾಯಿತು. ಇದನ್ನೂ ಕೂಡ ಆಕ್ಸಫರ್ಡ್ ಪ್ರಕಾಶನ ಸಂಸ್ಥೆ ಪ್ರಕಟಿಸಿತು. ಈ ಕೃತಿಯಲ್ಲಿ ಜಿಮ್ ಕಾರ್ಬೆಟ್ ಭಾರತದ ಬಗ್ಗೆ, ಇಲ್ಲಿನ ಜನರ ಔದಾರ್ಯದ ಬಗ್ಗೆ, ಶ್ರೀಮಂತ ಜಮೀನ್ದಾರರು, ಮತ್ತು ಹಣದ ಲೇವಾದೇವಿದಾರರ ಕೌರ್ಯದ ಬಗ್ಗೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಹಳ್ಳಿಗಳ ಸಾಮಾನ್ಯ ಜನ ಕಾರ್ಬೆಟ್‌ನ ಈ ಕೃತಿಯಲ್ಲಿ ನಾಯಕರಂತೆ ವಿಜೃಂಭಿಸಿದ್ದಾರೆ. ಈ ಕೃತಿ ಕೂಡ ವಿಶ್ವ ಪ್ರಸಿದ್ಧಿ ಪಡೆಯಿತು. “ಮೈ ಇಂಡಿಯ” ಕೃತಿಯ ಮೂಲಕ  ಕಾರ್ಬೆಟ್, ಪಾಶ್ಚಿಮಾತ್ಯ ಜಗತ್ತಿಗೆ ಭಾರತೀಯರ ಬಗ್ಗೆ ಇದ್ದ ಕೆಟ್ಟ ಭಾವನೆಗಳನ್ನು ಹೋಗಲಾಡಿಸಿದ. ಅಷ್ಟೇ ಅಲ್ಲ, ಭಾರತದ ಬಹು ಸಂಸ್ಕೃತಿಯ ನಡುವೆ ಇಲ್ಲಿ ಮುಗ್ಧ ಜನ ಸರಳವಾಗಿ ಬದುಕುವ ಕಲೆಯನ್ನ, ಅವರ ಔದಾರ್ಯವನ್ನು ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ಕಾರ್ಬೆಟ್ ಕಟ್ಟಿಕೊಟ್ಟಿರುವುದು ವಿಶೇಷ. ಇದು ಅವನ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಈ ಕೃತಿಯ ನಂತರ ಕಾರ್ಬೆಟ್ ನೈನಿತಾಲ್ ಮತ್ತು ಕಲಾದೊಂಗಿ, ಚೋಟಿಹಲ್ದಾನಿ ಹಳ್ಳಿಗಳಲ್ಲಿ ಕಳೆದ ತನ್ನ ಬಾಲ್ಯವನ್ನು ಮತ್ತು ಅರಣ್ಯ ಮತ್ತು ಪರಿಸರಕ್ಕೆ ತನಗೆ ಪ್ರೇರಣೆಯಾದ ಬಗೆಯನ್ನು ವಿವರಿಸುವ “ಜಂಗಲ್ ಲೋರ್” ಕೃತಿಯನ್ನು ಬರೆದ. ಕಾರ್ಬೆಟ್‌ನ ಕೃತಿಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಾಗುತ್ತಿದ್ದಂತೆ ತನ್ನ ಶಿಕಾರಿಯ ಅನುಭವಗಳನ್ನೆಲ್ಲ ದಾಖಲಿಸಿದ. ಇಂತಹ ಕೃತಿಗಳಲ್ಲಿ “ಟೆಂಪಲ್ ಟೈಗರ್” ಪ್ರಮುಖವಾದುದು.

ಜಿಮ್ ಕಾರ್ಬೆಟ್ ಬರೆದ ಕೊನೆಯ ಪುಸ್ತಕವೆಂದರೆ, “ಟ್ರೀ ಟಾಪ್” ಎನ್ನುವ ಪುಟ್ಟ ಕೃತಿ. ಈಗಿನ ಇಂಗ್ಲೆಂಡಿನ ಎಲಿಜಬತ್ ರಾಣಿ (ಕಳೆದ ಜೂನ್‌ನಲ್ಲಿ ಈ ರಾಣಿಯ ಪಟ್ಟಾಭಿಷೇಕದ 60 ನೇ ವರ್ಷದ ಆಚರಣೆಯನ್ನು ಇಂಗ್ಲೆಂಡ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು) ಈಕೆ ತನ್ನ 22 ನೇ ವಯಸ್ಸಿನಲ್ಲಿ ತನ್ನ ಪತಿ ರಾಜಕುಮಾರ ಪಿಲಿಪ್ ಜೊತೆ 1952ರಲ್ಲಿ ಕೀನ್ಯಾ ಪ್ರವಾಸ ಕೈಗೊಂಡಿದ್ದಾಗ ಒಂದು ರಾತ್ರಿ ಮರದ ಮೇಲೆ ನಿರ್ಮಿಸುವ ಮಚ್ಚಾನಿನ ಮೇಲೆ ಕುಳಿತು ವನ್ಯ ಮೃಗಗಳನ್ನು ವೀಕ್ಷಿಸಬೇಕು ಎಂದು ಅಪೇಕ್ಷೆಪಟ್ಟಳು. ಅವಳ ಆಸೆಯಂತೆ ಕೀನ್ಯಾದ ಅರಣ್ಯದ ನಡುವೆ ಮರಗಳ ಮೇಲೆ 50 ಅಡಿ ಉದ್ದ ಮತ್ತು 20 ಅಡಿ ಅಗಲದ ವಿಶಾಲವಾದ ವೇದಿಕೆ ನಿರ್ಮಿಸಿ, ರಾಣಿ ಮತ್ತು ಅವಳ ಪರಿವಾರದ ನಲವತ್ತು ಸದಸ್ಯರಿಗೆ ರಾತ್ರಿ ಕಳೆಯಲು ವ್ಯವಸ್ಥೆ ಮಾಡಲಾಗಿತ್ತು. ರಾಣಿ ಕುಟುಂಬದ ಸುರಕ್ಷತೆ ಮತ್ತು ಉಸ್ತುವಾರಿಯನ್ನು ಕಾರ್ಬೆಟ್ ಹೊತ್ತಿದ್ದ. ಇಡೀ ರಾತ್ರಿ ರಾಣಿ ಕುಟುಂಬಕ್ಕೆ ಪ್ರಾಣಿಗಳ ಚಲನ ವಲನ, ಅವುಗಳ ಜೀವನ ವೈಖರಿ ಎಲ್ಲವನ್ನು ವಿವರಿಸಿದ. ನೀರಿನ ಹೊಂಡವಿದ್ದ ಸಮೀಪ ವೇದಿಕೆ ನಿರ್ಮಿಸಿದ್ದರಿಂದ ರಾತ್ರಿ ನೀರು ಕುಡಿಯಲು ಬಂದ ಪ್ರಾಣಿಗಳನ್ನು ನೋಡುವ ಅವಕಾಶ ರಾಣಿಗೆ ದೊರೆಯಿತು. ಇದು ಆಕೆಯ ಪಾಲಿಗೆ ಅತ್ಯಂತ ಸ್ಮರಣೀಯವಾದ ದಿನ. ಈ ಅನುಭವಗಳನ್ನು ಕುರಿತು. ಸುಮಾರು ನಲವತ್ತು ಪುಟಗಳಿರುವ ಕೃತಿ ಕಾರ್ಬೆಟ್ ಪಾಲಿಗೆ ಕೊನೆಯ ಕೃತಿಯಾಯಿತು.

1953ರ ವೇಳೆಗೆ ಸತತ ಅನಾರೋಗ್ಯದಿಂದ ಬಳಲಿದ ಕಾರ್ಬೆಟ್ ಕ್ಷಯ ರೋಗಕ್ಕೆ ಬಲಿಯಾಗಿ ನರಳತೊಡಗಿದ. ಅಂತಿಮವಾಗಿ 1955ರ ಏಪ್ರಿಲ್ 18 ರಂದು ಹೃದಯಾಘಾತಕ್ಕೆ ತುತ್ತಾಗಿ ಮರು ದಿನ 19ರಂದು ನೈರಿ ಆಸ್ಪತ್ರೆಯಲ್ಲಿ ತನ್ನ ಅಕ್ಕ ಮ್ಯಾಗಿಯ ತೊಡೆಯ ಮೇಲೆ ತಲೆ ಇಟ್ಟು ತನ್ನ 79 ವರ್ಷದ ವರ್ಣರಂಜಿತ ಬದುಕಿಗೆ ವಿದಾಯ ಹೇಳಿದ. ಸಾಯುವ ಮುನ್ನ ಕಾರ್ಬೆಟ್ ತನ್ನ ಅಕ್ಕನಿಗೆ ಹೇಳಿದ ಕೊನೆಯ ಮಾತುಗಳಿವು: “ಧೈರ್ಯವಾಗಿರು, ಇತರರು ಸುಖದಿಂದ ಬಾಳುವೆ ಮಾಡಲು, ಜಗತ್ತು ಸದಾ ಸಂತೋಷದಿಂದ ಇರುವಂತೆ ನೋಡಿಕೊ.” ಯುರೋಪ್ ಮೂಲದ ಕುಟುಂಬದಿಂದ ಭಾರತದಲ್ಲಿ ಹುಟ್ಟಿ, ನಂತರ ಆಫ್ರಿಕಾ ಖಂಡದಲ್ಲಿ ಸಾವನ್ನಪ್ಪಿದ ಕಾರ್ಬೆಟ್, ಒಂದರ್ಥದಲ್ಲಿ ಯುರೋಪ್, ಏಷ್ಯಾ, ಮತ್ತು ಆಫ್ರಿಕಾ ಖಂಡಗಳನ್ನು ತನ್ನ ಬದುಕಿನ ಮೂಲಕ ಬೆಸೆದು, ವಿಶ್ವಮಾನವನಾಗಿ, ಜಗತ್ತಿನಲ್ಲಿ ಚಿರಸ್ಥಾಯಿಯಾದ. ಜಿಮ್ ಕಾರ್ಬೆಟ್‌ನ ಶವವನ್ನು ನೃತಿ ಪಟ್ಟಣದ ಚರ್ಚ್‌ಗೆ ತಂದು ಅಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿ ಕ್ರೈಸ್ತರ ರುಧ್ರಭೂಮಿಯಲ್ಲಿ ಹೂಳಲಾಯಿತು.

ಜಿಮ್ ಕಾರ್ಬೆಟ್‌ನ ಸಾವಿನ ಸುದ್ಧಿಯನ್ನು ಜಗತ್ತಿನಾದ್ಯಂತ ಪತ್ರಿಕೆಗಳು ಸುದ್ದಿ ಮಾಡಿ, ಶ್ರದ್ಧಾಂಜಲಿಯ ಲೇಖನ ಬರೆದವು. ಟೈಮ್ಸ್ ನಿಯತಕಾಲಿಕೆ ತನ್ನ ಮೇ ತಿಂಗಳ ಸಂಚಿಕೆಯನ್ನು ಕಾರ್ಬೆಟ್‌ಗಾಗಿ ಮೀಸಲಿಟ್ಟು, ಅವನ ಒಡನಾಡಿಗಳಿಂದ ಲೇಖನಗಳನ್ನು ಬರೆಸಿ ಅವನನ್ನು ಹಾಡಿ ಹೊಗಳಿತು. ಕಾರ್ಬೆಟ್ ನಿಧನದ ನಂತರ ಅವನ ಆಸೆಯಂತೆ ಸಹೋದರಿ ಮ್ಯಾಗಿ ಭಾರತದ ಚೋಟಿ ಹಲ್ದಾನಿಯ ಹಳ್ಳಿಯ ಕಂದಾಯವನ್ನು ರೈತರ ಪರವಾಗಿ ಭರಿಸುತ್ತಾ ಬಂದಳು. 1957ರಲ್ಲಿ ಆಕೆಯ ನಿಧನಾನಂತರ ಭಾರತ ಸರ್ಕಾರ, ಅಲ್ಲಿನ ಭೂಮಿ ಮತ್ತು ನಿವೇಶನವನ್ನು ಕಾರ್ಬೆಟ್‌ನ ಕೊನೆಯ ಆಸೆಯಂತೆ ರೈತರ ಹೆಸರಿಗೆ ವರ್ಗಾಯಿಸಿತು. ಅವನು ವಾಸವಾಗಿದ್ದ ಚೋಟಿ ಹಲ್ದಾನಿಯ ಬಂಗಲೆಯನ್ನು ಸ್ಮಾರಕವನ್ನಾಗಿ ಮಾಡಿ, ಹಳ್ಳಿಯ ಜನರ ಉಸ್ತುವಾರಿಗೆ ವಹಿಸಿತು. ಇದಲ್ಲದೆ, ಹಿಂದೊಮ್ಮೆ ಜಿಮ್ ಕಾರ್ಬೆಟ್ ಆಸಕ್ತಿ ವಹಿಸಿ ಅಭಯಾರಣ್ಯ ಮಾಡಿದ್ದ ಅರಣ್ಯ ಪ್ರದೇಶವನ್ನು ಭಾರತ ಸರ್ಕಾರ ಅಧಿಕೃತವಾಗಿ “ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್” ಎಂದು ಘೋಷಿಸಿ ಕಾರ್ಬೆಟ್‌ಗೆ ಗೌರವ ಸೂಚಿಸಿತು.

ಇಂದು ಕೂಡ ಕಲದೊಂಗಿ ಮತ್ತು ಚೋಟಹಲ್ದಾನಿ ಹಳ್ಳಿಗಳ ಜನರ ಪಾಲಿಗೆ ದಂತ ಕಥೆಯಾಗಿರುವ, ತಮ್ಮ ಬದುಕಿಗೆ ಭೂಮಿ ಮತ್ತು ಮನೆ ನಿರ್ಮಿಸಿಕೊಟ್ಟು ದೈವವಾಗಿರುವ ಕಾರ್ಬೆಟ್ ಬಗ್ಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಈ ತಲೆಮಾರು ಕಾರ್ಬೆಟ್‌ನನ್ನು ನೋಡದಿದ್ದರೂ, ಬಾಯಿಂದ ಬಾಯಿಗೆ, ಎದೆಯಿಂದ ಎದೆಗೆ ಹರಿದು ಬಂದ ಅವನ ಗುಣವನ್ನು ಕಾಪಿಟ್ಟುಕೊಂಡು ಬಂದಿದೆ. ಹಾಗಾಗಿ ರಾಮನಗರ್, ಕಲದೊಂಗಿ, ಚೋಟಿ ಹಲ್ದಾನಿ ಹಳ್ಳಿಗಳಲ್ಲಿ, ಕಾರ್ಬೆಟ್ ಹೆಸರಿನ ಟೈಲರಿಂಗ್ ಶಾಪ್, ಸೇವಿಂಗ್ ಶಾಪ್, ಹೊಟೇಲ್, ಮೊಬೈಲ್ ಶಾಪ್ ಮತ್ತು ಬಡಾವಣೆಗಳನ್ನು ಕಾಣಬಹುದು. ಆದರೆ. ನೈನಿತಾಲ್ ಗಿರಿಧಾಮದಲ್ಲಿ ಜಿಮ್ ಕಾರ್ಬೆಟ್ ಹೆಸರು ಹೇಳಿದರೆ, ಹಾಗಂದರೇನು ಎಂದು ಪ್ರಶ್ನಿಸುವ ಜನರಿದ್ದಾರೆ. ಸ್ವತಃ ಕಾರ್ಬೆಟ್‌ನ ತಂದೆ ಕ್ರಿಸ್ಟೊಪರ್ ಹಾಗೂ ಕಾರ್ಬೆಟ್ ನಾಲ್ಕು ದಶಕಗಳ ಕಾಲ ಅಲ್ಲಿನ ಪುರಸಭೆಯ ಪ್ರತಿನಿಧಿಗಳಾಗಿ, ಉಪಾಧ್ಯಕ್ಷರಾಗಿ ದುಡಿದಿದ್ದರೂ ಕೂಡ ಈ ಕುರಿತು ಒಂದು ಸಣ್ಣ ದಾಖಲೆಯಿಲ್ಲ. ಇವತ್ತಿಗೂ ಉತ್ತರ ಭಾರತದ ಜನ ನೈನಿತಾಲ್ ಗಿರಿಧಾಮವನ್ನು ಕಾರ್ಬೆಟ್ ನೈನಿತಾಲ್ ಎಂದು ಕರೆಯುವುದು ವಾಡಿಕೆಯಲ್ಲಿದೆ. ಆದರೆ, ನೈನಿತಾಲ್ ಜನಕ್ಕೆ ಈ ಬಗ್ಗೆ  ಇತಿಹಾಸದ ಪ್ರಜ್ಞೆಯೇ ಇಲ್ಲ. ಇದು ನಿಜಕ್ಕೂ ನೋವಿನ ಸಂಗತಿ.

(ಮುಗಿಯಿತು.)

ಇನ್ನೂ ಮುಟ್ಟಿಸಿಕೊಳ್ಳದ ಭಾರತೀಯ ಮಾಧ್ಯಮಗಳು

– ರಾಬಿನ್ ಜೆಫ್ರಿ
ಕನ್ನಡಕ್ಕೆ: ಕೆ.ಎಲ್.ಚಂದ್ರಶೇಖರ್ ಐಜೂರ್

1992ರಲ್ಲಿ ಹಾಗೆ ಸುಮ್ಮನೆ ಇಣುಕಿ ನೋಡಿದ್ದೆ, ಅವತ್ತೂ ಅಲ್ಲೊಬ್ಬ ದಲಿತ ಸಿಗಲಿಲ್ಲ; ಇವತ್ತೂ ಅಲ್ಲಿ ಸಿಗಲಾರ. ಅದು ಭಾರತೀಯ ಮಾಧ್ಯಮ ರಂಗ. ದಲಿತರನ್ನು ಇನ್ನೂ ಮುಟ್ಟಿಸಿಕೊಳ್ಳಲು ಹೆಣಗುತ್ತಿರುವ ಬೃಹತ್ ಮಾಧ್ಯಮ. ಇಂಡಿಯಾದ ಒಟ್ಟು ಜನಸಂಖ್ಯೆಯ ಶೇಕಡಾ ಇಪ್ಪತ್ತೈದರಷ್ಟಿರುವ ದಲಿತರ ಬದುಕನ್ನು ಸಣ್ಣ ಕುತೂಹಲಕ್ಕಾದರೂ ನೋಡುವುದಿರಲಿ, ಭಾರತೀಯ ಮಾಧ್ಯಮ ತನ್ನ ಸುದ್ದಿಮನೆಗಳಿಂದಲೇ ದಲಿತರನ್ನು ದೂರವಿಟ್ಟಿದೆ.

ದಲಿತರನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಂದ ದೂರವಿಡಲು ಕಾರಣಗಳೇನು? ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು, ಭಾರತೀಯ ಸಂವಿಧಾನದ ಮೂಲಧರ್ಮವಾದ ಸಮಾನತೆ ಮತ್ತು ಭ್ರಾತೃತ್ವವನ್ನು ಈ ದೇಶದ ಎಲ್ಲ ರಂಗಗಳು ನಿರಾಕರಿಸಿರುವಂತೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವೂ ನಿರಾಕರಿಸಿದೆ. ಹೀಗಾಗಿಯೇ ಮಾಧ್ಯಮದ ಮಂದಿ ಮಾಧ್ಯಮದಲ್ಲಿ ಭ್ರಾತೃತ್ವ ಎಂದರೆ ದೂರ ಸರಿಯುತ್ತಾರೆ.ಎರಡನೆಯದು, ಸುದ್ದಿಮನೆಗಳಲ್ಲಿರುವ ಮಂದಿ ಸದಾ ರೋಚಕತೆಗೆ ಮಣೆಹಾಕಿ ಹೆಚ್ಚು ಜನರನ್ನು ಆಕರ್ಷಿಸುವುದರತ್ತಲೇ ಗಮನಕೊಡುವುದರಿಂದ, ಮಾಧ್ಯಮದ ವ್ಯಾಪಾರಿ ಜಗತ್ತಿಗೆ ದೇಶದ ಕಾಲುಭಾಗದಷ್ಟಿರುವ ದಲಿತರು ಯಾವತ್ತೂ ಮಾರಾಟದ ಸರಕಾಗುವುದಿಲ್ಲ. ಸದಾ ಸಾರ್ವಜನಿಕ ಸಮ್ಮತಿ ಉತ್ಪಾದಿಸುವುದರತ್ತಲ್ಲೇ ಹೆಚ್ಚು ಚಡಪಡಿಸುವ ಈ ಮಾಧ್ಯಮ, ಸಮಾಜದ ಅಂಚಿನಲ್ಲಿದ್ದು ದಿವ್ಯನಿರ್ಲಕ್ಷ್ಯಕ್ಕೊಳಗಾಗಿರುವ ದಲಿತರ ತಾರತಮ್ಯದ ಪ್ರಶ್ನೆಗಳನ್ನು ಇದುವರೆವಿಗೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಪೂರ್ವ ಮತ್ತು ಈಶಾನ್ಯ ಭಾಗದ ಅನೇಕ ರಾಜ್ಯಗಳಲ್ಲಿ ದೊಡ್ಡಪ್ರಮಾಣದಲ್ಲಿ ಜನಪರ ಹೋರಾಟಗಳು ನಡೆದರೂ ಇಂಡಿಯಾದ ಪತ್ರಿಕೆಗಳಿಗೆ ಅವು ಸುದ್ದಿಯೇ ಅನ್ನಿಸಿಲ್ಲ.

ಮೂರನೆಯದು, ಬಹಳ ಹಿಂದೆ ಅಮೆರಿಕಾದ ಕಟ್ಟಾ ಮಾಧ್ಯಮದ ಮಂದಿ ಸುದ್ದಿ ಅನ್ನಿಸುವುದೆಲ್ಲ ಪ್ರಿಂಟಾಗಬೇಕು ಎನ್ನುವ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯ ಟ್ಯಾಗ್‌ಲೈನನ್ನು ಹೆಚ್ಚು ನಂಬಿಕೊಂಡಿದ್ದರು. ಆದರೆ ದೇಶದ ಕಾಲುಭಾಗದಷ್ಟು ಜನರನ್ನು ಅವರ ಮೇಲೆ ಯಾವುದಾದರೂ ಹಿಂಸೆ, ಬರ್ಬರ ಅನ್ನಿಸುವ ಕೃತ್ಯಗಳು ಜರುಗಿದ ಸಂದರ್ಭಗಳಲ್ಲಿ ಮಾತ್ರ ಮುಟ್ಟಿ ನಂತರ ಅವರನ್ನು ಮಾಧ್ಯಮದ ಗಡಿಗಳಿಂದಲೇ ದೂರ ನೂಕುವ ಪತ್ರಿಕೆಗಳು ಹೆಚ್ಚುಕಾಲ ನೆಲೆನಿಲ್ಲಲಾರವು ಎಂಬ ಪರಮಸತ್ಯ ಇದೇ ಮಾಧ್ಯಮದ ಮಂದಿಗೆ ಬಹುಬೇಗ ಗೊತ್ತಾಯಿತು.

ಭಾರತೀಯ ಮಾಧ್ಯಮಗಳಲ್ಲಿ ದಲಿತರ ಗೈರುಹಾಜರಿ ಕುರಿತ ಚರ್ಚೆಗಳು ೧೯೯೬ರಿಂದ ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಖುದ್ದು ಒಬ್ಬ ಆಫ್ರೋ-ಅಮೆರಿಕನ್ ಆಗಿರುವ ವಾಷಿಂಗ್ಟನ್ ಪೋಸ್ಟ್ನ ವರದಿಗಾರರಾದ ಕೆನ್ನೆತ್ ಜೆ.ಕೂಪರ್ ಮೊದಲಿಗೆ ದೆಹಲಿಯ ಮಾಧ್ಯಮದಲ್ಲಿ ದಲಿತರನ್ನು ಹುಡುಕುವ ಪ್ರಯತ್ನ ನಡೆಸಿದರು. ಅವರ ಹುಡುಕಾಟದಲ್ಲಿ ಅಂಥ ಲಾಭವೇನೂ ಆಗಲಿಲ್ಲ. ಕಡೆಗೆ ಅವರು ಬೇಸತ್ತು ಪಾಯ್‌ನೀರ್ ಪತ್ರಿಕೆಗೆ ಬರೆದ ತನಿಖಾ ಲೇಖನವನ್ನು ಬಿ.ಎನ್.ಉನಿಯಾಲ್ ಪ್ರಕಟಿಸಿದರು. ಲೇಖನದ ಕೊನೆಗೆ ಕೂಪರ್ ನೊಂದು ಬರೆದಿದ್ದರು: ನನ್ನ ಮೂವತ್ತು ವರ್ಷಗಳ ಜರ್ನಲಿಸ್ಟ್ ಬದುಕಿನಲ್ಲಿ ಒಬ್ಬೇ ಒಬ್ಬ ದಲಿತನನ್ನು ಇಂಡಿಯಾದ ಸುದ್ದಿಮನೆಗಳಲ್ಲಿ ನೋಡಲು ಸಾಧ್ಯವೇ ಆಗಲಿಲ್ಲ.

ಒಬ್ಬ ದಲಿತನೂ ಸಿಗಲಿಲ್ಲ…

ನಾನು 2000ದಲ್ಲಿ ಇಂಡಿಯಾದ ಪತ್ರಿಕಾ ಕ್ರಾಂತಿ ಎಂಬ ಪುಸ್ತಕ ಬರೆದಾದ ನಂತರವೂ ಇಲ್ಲಿ ಅಂಥ ದೊಡ್ಡ ಬದಲಾವಣೆಗಳೇನೂ ಆಗಿಲ್ಲ. ಕೂಪರ್-ಉನಿಯಾಲ್ ತನಿಖಾ ವರದಿಯಲ್ಲಿ ಹೇಳಿರುವಂತೆ ಭಾರತದ ಮೂನ್ನೂರಕ್ಕೂ ಹೆಚ್ಚಿನ ಪತ್ರಿಕೆಗಳಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬೇ ಒಬ್ಬ ಪತ್ರಕರ್ತ ಸಿಗುವುದಿಲ್ಲ. ಆ ವರದಿಗೆ 2006ರಲ್ಲಿ ಹತ್ತು ವರ್ಷಗಳು ತುಂಬಿದವು. ಕಳೆದ ವರ್ಷವಷ್ಟೇ ತಮಿಳು ಪತ್ರಕರ್ತ ಜೆ.ಬಾಲಸುಬ್ರಹ್ಮಣ್ಯಮ್ ಇಂಗ್ಲಿಷ್ ದೈನಿಕವೊಂದರ ಸಂದರ್ಶನದಲ್ಲಿ ತಮಗಾದ ಹಸಿಹಸಿ ಅನುಭವಗಳನ್ನು ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಬರೆದುಕೊಂಡಿದ್ದರು. ಬಾಲಸುಬ್ರಹ್ಮಣ್ಯಮ್ ದಲಿತ ಅನ್ನುವ ಕಾರಣಕ್ಕೆ ಹಾಗೂ ಅವರು ಸಂದರ್ಶನಕ್ಕೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ದಲಿತರ ಪರವಾದ ಲೇಖನಗಳು ಅವರ ಪಾಲಿಗೆ ಆ ಇಂಗ್ಲಿಷ್ ದೈನಿಕದ ಬಾಗಿಲು ಸಂಪೂರ್ಣವಾಗಿ ಮುಚ್ಚುವಂತೆ ಮಾಡಿತು.

ಕೆನೆತ್ ಕೂಪರ್ ಈ ಸದ್ಯ ಬೋಸ್ಟನ್‌ನಲ್ಲಿ ನೆಲೆಗೊಂಡಿದ್ದು, ಆಫ್ರಿಕನ್-ಅಮೆರಿಕನ್ ಜನರ ಬದುಕನ್ನು ಬಿಂಬಿಸುತ್ತಿರುವ ಸೆಂಟ್ ಲೂಯಿಸ್ ಅಮೆರಿಕನ್ ಎಂಬ ಯಶಸ್ವಿ ಪತ್ರಿಕೆಗೆ ಸಂಪಾದಕರಾಗಿದ್ದಾರೆ. ಇಂಡಿಯಾದ ದಲಿತರು, ಆಫ್ರಿಕಾ-ಅಮೆರಿಕಾ ದೇಶಗಳ ಕಪ್ಪು ಜನಾಂಗದವರು ಒಂದೇ ಬಗೆಯ ತಾರತಮ್ಯ ಮತ್ತು ಅವಮಾನಗಳನ್ನು ಸಾಮಾಜಿಕವಾಗಿ ಅನುಭವಿಸಿದ್ದಾರೆ ಎಂಬುದು ನಮಗೆಲ್ಲ ಗೊತ್ತಿದೆ. ಎಬೋನಿ, ಎಸ್ಸೆನ್ಸ್, ಸೆಂಟ್ ಲೂಯಿಸ್ ಅಮೆರಿಕನ್ ಮತ್ತು ಚಿಕಾಗೋ ಡಿಫೆಂಡರ್ ತರಹದ ಪತ್ರಿಕೆಗಳು ಅಲ್ಲಿನ ಶೋಷಿತರನ್ನು ಹತ್ತಿರಕ್ಕೆ ಬಿಟ್ಟುಕೊಂಡಂತೆ ಇಂಡಿಯಾದ ಪತ್ರಿಕೆಗಳಿಗೇಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಕಣ್ಣೆದುರು ಬಂದು ನಿಲ್ಲುತ್ತದೆ.

ಇದಕ್ಕೆ ಉತ್ತರವೂ ಇದೆ. ಇಂಡಿಯಾದ ದಲಿತರು ಮುಟ್ಟದ ಜಗತ್ತೊಂದನ್ನು ಅಮೆರಿಕಾದ ಶೋಷಿತರು 1920ರಲ್ಲಿ ಮುಟ್ಟಿದರು. ಬಹಳ ಮುಖ್ಯವಾಗಿ ಈ ದಶಕದಲ್ಲಿ ಕಪ್ಪು ಜನಾಂಗದಿಂದ ಮಧ್ಯಮ ವರ್ಗವೊಂದು ರೂಪುಗೊಂಡು ಅನೇಕ ಅಂಗಡಿ, ವ್ಯಾಪಾರ-ವಹಿವಾಟುಗಳ ಮಾಲೀಕತ್ವವನ್ನು ಪಡೆದುಕೊಂಡಿತ್ತು. ಮಧ್ಯಮ ವರ್ಗದ ಈ ಪುಟ್ಟ ಕಪ್ಪು ಜನಾಂಗವೇ ಮುಂದೆ ಕಪ್ಪು ಅಮೆರಿಕವಾಗಿ ತನ್ನ ಹೊಸ ಹುಟ್ಟನ್ನು ಪಡೆದುಕೊಂಡಿತು. ಈ ವರ್ಗ ತನ್ನ ಆರ್ಥಿಕ ಯಶಸ್ಸಿಗೆ ಆಯ್ದುಕೊಂಡದ್ದು ಪತ್ರಿಕೆಗಳ ಜಾಹೀರಾತು. ಜಾಹೀರಾತು ಪಡೆಯುವ ಸಲುವಾಗಿಯಾದರೂ ಅಮೆರಿಕಾದ ಪತ್ರಿಕೆಗಳು ಈ ಕಪ್ಪು ಮಧ್ಯಮ ವರ್ಗದ ಎದುರು ಮಂಡಿಯೂರಿ ನಿಂತಿತು. ಇಡೀ ಅಮೆರಿಕಾ ಉಸಿರಾಡುತ್ತಿದ್ದ ಇಂಗ್ಲಿಷ್ ಭಾಷೆಯನ್ನು ಅಲ್ಲಿನ ಶೋಷಿತರು ಕಷ್ಟಪಟ್ಟು ತಮ್ಮದಾಗಿಸಿಕೊಂಡರು. ಆ ಭಾಷೆಯ ಸಂಪರ್ಕದಿಂದಾಗಿ ಚರ್ಚ್‌ನ ಒಳಗೆ ನಡೆಯುತ್ತಿದ್ದ ವಿದ್ಯಮಾನಗಳೆಲ್ಲ ಹೊರಗಿದ್ದ ಶೋಷಿತರಿಗೆ ತಲುಪಿತು. ಇಂಥ ಹೊತ್ತಲ್ಲೇ ಅಲ್ಲೊಬ್ಬ ಮಾರ್ಟಿನ್ ಲೂಥರ್ ಕಿಂಗ್ ಹುಟ್ಟಿಕೊಂಡದ್ದು. ತಮ್ಮ ಚರ್ಮಗಳು ಎಷ್ಟೇ ಭಿನ್ನ ದನಿ ಹೊರಡಿಸಿದರೂ ಕಪ್ಪು ಅಮೆರಿಕಾದ ಆಳದಲ್ಲಿ ಹೆಚ್ಚು ಬಿರುಕು ಕಾಣಿಸಿಕೊಳ್ಳಲಿಲ್ಲ. ಆಫ್ರಿಕಾ ಮತ್ತು ಅಮೆರಿಕಾದಲ್ಲಿ ಈಗ ಜನಾಂಗೀಯ ತಾರತಮ್ಯ ಅನ್ನುವುದು ಮೊದಲಿನಂತೆ ಗುಣಪಡಿಸಲಾಗದ ಗಾಯದಂತೇನೂ ಇಲ್ಲ.

ಮಾಧ್ಯಮದಲ್ಲಿ ದಲಿತರ ಪ್ರಾತಿನಿಧ್ಯದ ಪ್ರಶ್ನೆಗಳು ಬಂದಾಗಲೆಲ್ಲ ಇಂಡಿಯಾದ ಮಾಧ್ಯಮಗಳು ಎರಡು ಸಿದ್ಧ ಉತ್ತರಗಳನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುತ್ತವೆ: ಒಳ್ಳೆಯ ಪತ್ರಕರ್ತ ಸುದ್ದಿಯ ವಸ್ತುನಿಷ್ಠತೆಯನ್ನು ನೋಡುತ್ತಾನೆಯೇ ಹೊರತು ಜಾತಿಯನ್ನಲ್ಲ  ಮತ್ತು ಮೀಸಲಾತಿ ಎನ್ನುವುದು ಆಧುನಿಕ ಭಾರತಕ್ಕೆ ಮಾರಕ, ಜಾತಿಯನ್ನು ಪಕ್ಕಕ್ಕಿಟ್ಟು ಪ್ರತಿಭೆಯನ್ನಷ್ಟೆ ಪರಿಗಣಿಸಬೇಕು. ಬ್ರಿಟಿಷ್ ಆಳ್ವಿಕೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಇಲ್ಲಿನ ಪುರಾತನ ಶ್ರೀಮಂತರು ದಿ ಸ್ಟೇಟ್ಸ್‌ಮ್ಯಾನ್ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆಂದೇನಾದರೂ ತಿಳಿದಿರುವಿರಾ? ಖಂಡಿತ ಇಲ್ಲ. ದಿ ಹಿಂದೂ, ಅಮೃತಾ ಬಜಾರ್ ಪತ್ರಿಕಾ, ಹಿಂದೂಸ್ತಾನ್ ಟೈಮ್ಸ್, ಯಂಗ್ ಇಂಡಿಯಾ ಮೊದಲಾದ ಪತ್ರಿಕೆಗಳು ಇಲ್ಲಿನ ಶೋಷಿತರನ್ನು ಅಷ್ಟಾಗಿ ಪ್ರತಿನಿಧಿಸಲಿಲ್ಲ ಎಂಬುದನ್ನು ಆ ಪತ್ರಿಕೆಗಳು ದಕ್ಕಿಸಿಕೊಂಡ ವ್ಯಾಪಾರಿ ಯಶಸ್ಸಿನಿಂದಲೇ ಅಂದಾಜಿಸಬಹುದು. ನಿಮ್ಮ ಕೈಯಲ್ಲೊಂದು ಪತ್ರಿಕೆ ಇದ್ದರೆ ನೀವು ರಾತ್ರೋರಾತ್ರಿ ಒಬ್ಬ ಹೀರೋನನ್ನು ತಯಾರಿಸಬಹುದು ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತಿನಲ್ಲಿ ಹೆಚ್ಚು ಸತ್ಯವಿದೆ.

ಎರಡು ಸಲಹೆಗಳು…

ಹಾಗಿದ್ದರೆ ಇಂಡಿಯಾದ ಮಾಧ್ಯಮಗಳಲ್ಲಿ ದಲಿತರನ್ನು ಕಾಣುವುದು ಹೇಗೆ? ಎರಡು ಸಲಹೆಗಳಿವೆ. ಬಹುಶಃ ಇವು ಉತ್ತರವಾಗಲಾರವು; ಆದರೆ ಇವೆರಡು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬಹುದು. 1978ರಲ್ಲಿ ಸುದ್ದಿಮನೆಯೊಳಗಿನ ಭಿನ್ನತೆಯನ್ನು ಗಣತಿ ಮಾಡಲು ಅಮೆರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಎಂಬ ಸಂಸ್ಥೆಯೊಂದು ಸ್ಥಾಪನೆಯಾಯಿತು. ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 30ರಷ್ಟಿದ್ದರೂ ಆ ವರ್ಷ ಶೇಕಡಾ 4ರಷ್ಟು ಕಪ್ಪು ವರ್ಣೀಯರು ಅಲ್ಲಿನ ಸುದ್ದಿಮನೆಗಳಲ್ಲಿ ಕೆಲಸಮಾಡುತ್ತಿದ್ದರು. 2000ದ ಹೊತ್ತಿಗೆ ಗುರಿ ಶೇಕಡಾ 20 ಮುಟ್ಟಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ಗುರಿ ಮುಟ್ಟಲಿಲ್ಲ. 2011ರಲ್ಲಿ ಅಮೆರಿಕಾದ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವ ಕಪ್ಪು ವರ್ಣೀಯರು ಶೇಕಡಾ 13ರಷ್ಟು ಹುದ್ದೆಗಳನ್ನು ಅಮೆರಿಕಾದ ಸುದ್ದಿಮನೆಗಳಲ್ಲಿ ಪಡೆದುಕೊಂಡಿದ್ದರು. ಈಗ ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಅಲ್ಲಿನ ಶೋಷಿತರು ಶೇಕಡಾ 36ರಷ್ಟಿದ್ದಾರೆ. ಇದರಲ್ಲಿ ಆಫ್ರಿಕನ್-ಅಮೆರಿಕನ್, ಲ್ಯಾಟಿನೋಸ್, ನೇಟಿವ್ ಅಮೆರಿಕನ್ಸ್ ಮತ್ತು ಏಷ್ಯಾದವರು ಸೇರಿದ್ದಾರೆ. ಈಗ ನ್ಯೂಸ್ ಎಡಿಟರ್ಸ್ ಸಂಸ್ಥೆ  ತನ್ನ ಗುರಿಯನ್ನು 2020ಕ್ಕೆ ನಿಗದಿಪಡಿಸಿಕೊಂಡಿದೆ.

ಬಹುಶಃ ಈ ತರಹದ ಗುರಿ ನಿಗದಿಪಡಿಸುವ ವಿಚಾರಗಳು ಇಂಡಿಯಾದಲ್ಲಿ ಕಷ್ಟ. (ನೆನಪಿಡಿ, ಇಲ್ಲಿ ಗುರಿಯನ್ನು ಕುರಿತು ಮಾತನಾಡುತ್ತಿದ್ದೇನೆ, ಮೀಸಲಾತಿ ಅಥವಾ ಕೋಟಾ ಕುರಿತಾಗಲಿ ಅಲ್ಲ). ಇಂಡಿಯಾದಲ್ಲಿ ಜಾತಿ ಅನ್ನುವುದು ತುಂಬಾ ಸೂಕ್ಷ್ಮವಾದ ಸಂಗತಿ. ಈ ದೇಶಕ್ಕೆ ಈಗ ಒಂದು ಸಾಮಾಜಿಕ ಅಕೌಂಟೆಬಲಿಟಿ ನಡೆಸುವ ಸಂಸ್ಥೆಯೊಂದರ ಅಗತ್ಯವಿದೆ. ಇದಕ್ಕೆ ದೊಡ್ಡ ಸಂಸ್ಥೆಯ ಅಗತ್ಯವಿದೆ. ಇಂಡಿಯಾದ ಸುದ್ದಿಮನೆಗಳಲ್ಲಿನ ಭಿನ್ನತೆ ಅಂದರೆ ಇಲ್ಲಿರುವ ದಲಿತರು, ಮುಸ್ಲಿಮರು ಮತ್ತು ಮಹಿಳೆಯರ ಸಂಖ್ಯೆಗಳನ್ನು ಒಟ್ಟುಗೂಡಿಸಿ ಲೆಕ್ಕಹಾಕಬೇಕಿದೆ. ಅನೇಕ ಮಾಧ್ಯಮ ಸಂಸ್ಥೆಗಳು ಇದನ್ನು ಖಂಡಿತ ಒಪ್ಪಲಾರವು. ಬೇಕಿದ್ದರೆ ಜಾತಿವಾರು ಪತ್ರಕರ್ತರ ಮಾಹಿತಿ ನೀಡಿದ ಮತ್ತು ನೀಡದ ಮಾಧ್ಯಮ ಸಂಸ್ಥಗಳ ಕುರಿತು ಸಾಮಾಜಿಕ ಆಡಿಟಿಂಗ್ ನಡೆಯಲಿ.

ಪಿರಮಿಡ್ ಆಕಾರದಲ್ಲಿರುವ ಇಂಡಿಯಾದ ಸಮಾಜದೊಳಗೆ ನಿಧಾನವಾಗಿಯಾದರೂ ಮಧ್ಯಮ ವರ್ಗವೆಂಬುದು ಬೆಳೆಯುತ್ತಿದೆ. ಪಿರಮಿಡ್‌ನ ತಳದಲ್ಲಿರುವ ದಲಿತರಿಗೆ ಅವರ ಜಗತ್ತನ್ನು ಅವರದೇ ಕಣ್ಣಿನಿಂದ ಪ್ರಕಟಪಡಿಸಲು ಅಮೆರಿಕಾದ ಎಬೋನಿ, ಎಸ್ಸೆನ್ಸ್‌ನಂತಹ ಪತ್ರಿಕೆಗಳ ಅಗತ್ಯವಿದೆ. ಈ ಎರಡು ಪತ್ರಿಕೆಗಳು ಕಪ್ಪು ಅಮೆರಿಕಾದ ಯಶಸ್ಸಿನ ಮುಖವಾಣಿಯಾಗಿವೆ.

ನವಯಾನಗಳು ಬೇಕು…

ಭಾರತೀಯ ಮಾಧ್ಯಮಗಳು ದಲಿತರನ್ನು ಒಳಗೊಳ್ಳದ ಇದೇ ಸಂದರ್ಭದಲ್ಲಿ ದಲಿತಪರ ಕಾಳಜಿಯನ್ನು ಕೇಂದ್ರೀಕರಿಸಿ ನವಯಾನ ಪ್ರಕಾಶನ ಹೊರತರುತ್ತಿರುವ ಅನೇಕ ಪುಸ್ತಕಗಳ ಕುರಿತು ನಾವು ಗಂಭೀರವಾಗಿ ನೋಡಬೇಕಿದೆ. ಈ ತರಹದ ಪ್ರಕಾಶನ ಸಂಸ್ಥೆಗಳು ಮಧ್ಯಮ ವರ್ಗದ ದಲಿತರ ಆರ್ಥಿಕ ಬೆಂಬಲದಿಂದ ಟ್ರಸ್ಟ್‌ನಂತೆ ಬೆಳೆಯಬೇಕಾದ ಅನಿವಾರ್ಯವಿದೆ. ಆದರೂ ಇಂಥ ಸಂಸ್ಥೆ ಕಟ್ಟಲು ಬರೀ ದಲಿತರ ಹಣವೇ ಸಾಲದು. ತಳ ಸಮುದಾಯಗಳ ಕುರಿತು ನಿಜವಾದ ಪ್ರೀತಿ ಹೊಂದಿರುವ ಎಲ್ಲ ಜಾತಿ ಸಮುದಾಯಗಳಿಂದಲೂ ಹಣ ಸಂಗ್ರಹಿಸಿ, ಸಾಧ್ಯವಾದರೆ ಸರ್ಕಾರದಿಂದ ಹಣದ ಸೌಲಭ್ಯ ಸಿಗುವುದಾದರೆ ಅಲ್ಲಿಂದಲೂ ಪಡೆದು ಅದನ್ನು ಟ್ರಸ್ಟ್‌ನಲ್ಲಿ ಕಾರ್ಪಸ್ ರೂಪದಲ್ಲಿ ಸಂಗ್ರಹಿಸಿ ಇಡಬೇಕಿದೆ. ಹೀಗೆ ಕೂಡಿಟ್ಟ ಹಣದಿಂದ ಮಾತ್ರ ಪ್ರಕಾಶನದಂತಹ ದೊಡ್ಡ ಸಂಸ್ಥೆಗಳನ್ನು ಕಟ್ಟಲು ಸಾಧ್ಯ.

ಮುದ್ರಣ ಮಾಧ್ಯಮವಾಯಿತು, ಈ ಟಿ.ವಿ. ಮಾಧ್ಯಮಗಳ ಕತೆ ಏನು? 1967ರಲ್ಲಿ ನಾನು ಮೊದಲ ಸಲ ಭಾರತಕ್ಕೆ ಬಂದಿದ್ದೆ. ಆ ಸಂದರ್ಭದಲ್ಲಿ ಟಲಿವಿಷನ್ ಮಾಧ್ಯಮದ ಕುರಿತು ಪಶ್ಚಿಮ ಕೆನಡಾದ ಸಣ್ಣ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದೆ. ಅಷ್ಟೊತ್ತಿಗಾಗಲೇ ನಾನು ಕೆನಡಾ ಮತ್ತು ಅಮೆರಿಕಾದ ಅನೇಕ ಟಿ.ವಿ. ಕಾರ್ಯಕ್ರಮಗಳನ್ನು ನೋಡಿದ್ದೆ. ಆಗ ಕಪ್ಪು ಮುಖಗಳೇ ನನಗೆ ಟಿ.ವಿ.ಯಲ್ಲಿ ಕಾಣಲಿಲ್ಲ. 1970ರಲ್ಲಿ ನಾನು ಉತ್ತರ ಅಮೆರಿಕಾಗೆ ಹಿಂತಿರುಗಿದಾಗ ಫ್ಲಿಪ್ ವಿಲ್ಸನ್ ಎಂಬ ಆಫ್ರಿಕನ್-ಅಮೆರಿಕನ್ ಹಾಸ್ಯ ಕಲಾವಿದ ಟಿ.ವಿ. ಶೋಗಳಲ್ಲಿ ಬಹಳ ಜನಪ್ರಿಯನಾಗಿರುವುದನ್ನು ಕಂಡೆ. ಮುಂದೆ ಅಮೆರಿಕಾ ನೆಲದಲ್ಲೇ ಅನೇಕ ನಾಟಕೀಯ ಬೆಳವಣಿಗೆಗಳು ನಡೆದವು. ಕಪ್ಪು ಜನರನ್ನು ಟಿ.ವಿ.ಯಲ್ಲಿ ನೋಡುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅಮೆರಿಕಾ ದೇಶವೇ 38 ವರ್ಷಗಳ ನಂತರ ಕಪ್ಪು ಜನಾಂಗಕ್ಕೆ ಸೇರಿದ ಅಧ್ಯಕ್ಷನನ್ನು ಪಡೆಯಿತು.

ಇಂಡಿಯಾದ ಟಿ.ವಿ. ಚಾನಲ್‌ಗಳಲ್ಲಿ ದಲಿತರು ಯಾವುದಾದರೂ ಕಾರ್ಯಕ್ರಮದ ನಿರೂಪಕರಾಗಿ ಕ್ಯಾಮೆರಾದ ಮುಂದೆ ಕಾಣಿಸಿಕೊಂಡಿದ್ದಾರೆಯೇ? ನನ್ನ ಸಂಪರ್ಕದಲ್ಲಿದ್ದ ಅನೇಕರನ್ನು ವಿಚಾರಿಸಿದೆ. ಇಲ್ಲ ಎಂಬ ಉತ್ತರ ಬಂತು. ಮಾಧ್ಯಮಗಳು ದಲಿತರನ್ನು ಮುಟ್ಟಿಸಿಕೊಂಡ ದಿನ ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿತೆಂದೇ ಅರ್ಥ.

ನನಗನ್ನಿಸುತ್ತಿದೆ ಆಫ್ರಿಕನ್-ಅಮೆರಿಕನ್ ಕಪ್ಪು ಜನ ತುಳಿದ ಕಷ್ಟದ ಹಾದಿಗಿಂತಲೂ ಇಂಡಿಯಾದಲ್ಲಿ ದಲಿತರ ಹಾದಿ ಕಡುಕಷ್ಟದಲ್ಲಿದೆ. ಇಲ್ಲಿ ಸಮಾನತೆ ಮತ್ತು ಭ್ರಾತೃತ್ವಗಳನ್ನು ಕಾಣುವುದು ಅಷ್ಟ ಸಲೀಸಲ್ಲ. ಇಲ್ಲಿ ಎಲ್ಲವೂ ಛಿದ್ರಗೊಂಡಿದೆ, ದಲಿತರಿಗೆ ಇಲ್ಲಿ ದಕ್ಕುವ ಸಂಪನ್ಮೂಲ ಕಮ್ಮಿಯಾದರೆ ತಾರತಮ್ಯ ಮುಗಿಲು ಮುಟ್ಟಿದೆ. ಸಂವಿಧಾನದ ಆಶಯಗಳು ಅಷ್ಟು ಸುಲಭವಾಗಿ ಜಾರಿಯಾಗಲಾರವೇನೋ. ಸಾಮಾಜಿಕ ನ್ಯಾಯದ ಮೇಲೆ ರಾಷ್ಟ್ರದ ಸ್ವ-ಹಿತಾಸಕ್ತಿಗಳು ನಿಂತರೆ ಮಾತ್ರ ಮಾಧ್ಯಮದಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ದಲಿತರನ್ನು ನಾವೆಲ್ಲ ಕಾಣಬಹುದೇನೋ.

(ರಾಬಿನ್ ಜೆಫ್ರಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಪೂರ್‌ನ ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆ ಮತ್ತು ಏಷ್ಯಾ ಸಂಶೋಧನಾ ಸಂಸ್ಥೆಯಲ್ಲಿ ಸಂದರ್ಶಕ ಸಂಶೋಧನಾ ಪ್ರಾಧ್ಯಾಪಕರಾಗಿದ್ದಾರೆ. ಈ ಲೇಖನ ಜೆಫ್ರಿಯವರು 31ನೇ ಮಾರ್ಚ್ 1012ರಂದು ನವದೆಹಲಿಯ ರಾಜೇಂದ್ರ ಮಾಥೂರ್ ನೆನಪಿನ ಕಾರ್ಯಕ್ರಮದಲ್ಲಿ ಮಂಡಿಸಿದ ಭಾಷಣದ ಬರಹರೂಪ.)