Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ಸಿದ್ಧಾಂತಗಳು: ಸ್ವರೂಪ ಮತ್ತು ಮಾದರಿಗಳು

– ಬಿ.ಶ್ರೀಪಾದ ಭಟ್

“My social philosophy may be said to be enshrined in three words: liberty, equality and fraternity. My philosophy has roots in religion and not in political science. I have derived them from the teachings of my master, the Buddha.” – ಡಾ.ಬಿ.ಆರ್.ಅಂಬೇಡ್ಕರ್

1912ರಲ್ಲಿ ಬಾಂಬೆ ವಿಶ್ವ ವಿದ್ಯಾಲಯದಿಂದ ಎಕನಾಮಿಕ್ಸ್, ರಾಜಕೀಯ ಶಾಸ್ತ್ರದಲ್ಲಿ ಪದವಿ ಗಳಿಸಿದ ಅಂಬೇಡ್ಕರ್ 1915ರಲ್ಲಿ ಕೊಲಂಬಿಯಾ ವಿಶ್ವ ವಿದ್ಯಾಲಯದಿಂದ ಎಕನಾಮಿಕ್ಸ್, ಸಾಮಾಜಿಕ ಶಾಸ್ತ್ರ, ಮಾನವ ಶಾಸ್ತ್ರ,ಫಿಲಾಸಫಿ ಯಲ್ಲಿ ಸ್ನಾತಕ್ಕೋತ್ತರ ಪದವಿ ಗಳಿಸಿದ್ದರು. ಕೊಲಂಬಿಯಾ ವಿ.ವಿ.ಯಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪ್ರಸಿದ್ಧ ಫಿಲಾಸಫರ್ ‘ಜಾನ್ ಡೇವೇ’ ಅವರ ಗುರುಗಳಾಗಿದ್ದರು. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಸ್ವರೂಪವನ್ನು ಅಧ್ಯಯನ ಮಾಡಿದಾಗ ಅವರು “liberal thinker with orientation sociologist” ಆಗಿದ್ದರು ಎಂದು ತಿಳಿದುಬರುತ್ತದೆ. ಅಂಬೇಡ್ಕರ್ ಅವರು ಸಾಮಾಜಿಕ-ಮಾನವಿಕ-ಆರ್ಥಿಕ ತಜ್ಞರಾಗಿದ್ದರು. ಅಂಬೇಡ್ಕರ್ ಅವರ ಆರ್ಥಿಕ ಸಿದ್ಧಾಂತವು ಶಾಸ್ತ್ರೀಯ ಆರ್ಥಿಕ ತತ್ವಾಧಾರಿತ ಅಭಿವೃದ್ಧಿ, ಮಾರ್ಕ್ಸ್ ತತ್ವಾಧಾರಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಬಂಡವಾಳಶಾಹಿ ತೊಡಕುಗಳು, ಕೃಷಿ ಆರ್ಥಿಕ ಅಭಿವೃದ್ಧಿ, ಭೂ ಸುಧಾರಣೆ, Young_Ambedkarಉತ್ಪಾದನಾ ಸಾಮರ್ಥ್ಯದ ಹೆಚ್ಚಳ, ಕೈಗಾರೀಕರಣಗಳನ್ನು ಒಳಗೊಂಡಿತ್ತು. ಚಿಂತಕ ಆನಂದ್ ತೇಲ್ತುಂಬ್ಡೆ ಅವರು ಅಂಬೇಡ್ಕರ್ ಸೋಷಿಲಿಸ್ಟ್ ಆಗಿದ್ದರು ಎಂದು ಅಭಿಪ್ರಾಯ ಪಡುತ್ತಾರೆ. ಅಂಬೇಡ್ಕರ್ ಅವರ ಸೋಷಿಯಲಿಸಂ ಚಿಂತನೆಗಳನ್ನು ಕುರಿತು ತೇಲ್ತುಂಬ್ಡೆ ಅವರು ‘ಅಂಬೇಡ್ಕರ್ ಅವರ ಮೊಟ್ಟ ಮೊದಲ ರಾಜಕೀಯ ಪಕ್ಷ ‘ಇಂಡಿಯನ್ ಲೇಬರ್ ಪಾರ್ಟಿ’ ಫೇಬಿಯನ್ ಮಾದರಿಯ ಸೋಷಿಯಲಿಸ್ಟ್ ಪಕ್ಷವಾಗಿತ್ತು. ಅಂಬೇಡ್ಕರ್ ಅವರು ಈ ಮೊದಲು ಸಹ ‘ಬ್ರಾಹ್ಮಿನಿಸಂ ಮತ್ತು ಕ್ಯಾಪಿಟಲಿಸಂ’ ತಳಸಮುದಾಯಗಳ ಮೊದಲ ಶತೃಗಳು ಎಂದು ಹೇಳಿದ್ದರು. ಇವೆರೆಡೂ ಪರಸ್ಪರ ಪೂರಕವಾಗಿ ವರ್ತಿಸುತ್ತವೆ ಎಂದು ವಿವರಿಸಿದ್ದರು. ಇಂಡಿಯನ್ ಲೇಬರ್ ಪಕ್ಷವು ಕಾರ್ಮಿಕರ ಪಕ್ಷವಾಗಿತ್ತು ಮತ್ತು ಸಶಕ್ತ ಸಂಘಟನೆಯಿಂದ ಜಾತಿ ಮತ್ತು ವರ್ಗಗಳನ್ನು ನಾಶಮಾಡಬಹುದು ಎಂದು ಹೇಳಿದ್ದರು. ಮುಂದಿನ ವರ್ಷಗಳಲ್ಲಿ ರಾಜಕೀಯ ವ್ಯವಸ್ಥೆಯು ಕೋಮುವಾದಿ ಕಡೆಗೆ ತಿರುಗುತ್ತಿರುವುದನ್ನು ಮನಗಂಡ ಅಂಬೇಡ್ಕರ್ ಇಂಡಿಯನ್ ಲೇಬರ್ ಪಕ್ಷವನ್ನು ವಿಸರ್ಜಿಸಿದ್ದರು’ ಎಂದು ಬರೆಯುತ್ತಾರೆ.

ಇಂದಿನ ದಿನಗಳಲ್ಲಿ ಅಥವಾ ಕಳೆದ ಕೆಲವು ವರ್ಷಗಳಿಂದ ಅಂಬೇಡ್ಕರ್ ಅವರು ಮುಕ್ತ ಮಾರುಕಟ್ಟೆ ಮತ್ತು ಜಾಗತೀರಣದ ಪರವಾಗಿದ್ದರು ಎನ್ನುವ ಸಂಪೂರ್ಣ ತಪ್ಪು ಗ್ರಹಿಕೆಗಳನ್ನು ಹೇಳಲಾಗುತ್ತಿದೆ. ಆದರೆ ಮುಕ್ತ ಮಾರುಕಟ್ಟೆ, ಉದಾರೀಕರಣ ಅಥವಾ ಜಾಗತೀಕರಣ ವ್ಯವಸ್ಥೆಯಲ್ಲಿ ನೇರವಾದ ಕೊಡುಕೊಳ್ಳುವ ಪದ್ಧತಿ ಇರುತ್ತದೆ. ಇಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯಗಳನ್ನು, ಅನುಕೂಲವನ್ನು ಪಡೆದಂತಹ ವ್ಯಕ್ತಿ ಅಥವಾ ಸಂಸ್ಥೆ ಅದೇ ಸ್ತರದ ಮತ್ತೊಂದು ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ವ್ಯವಹಾರ, ಸಂಬಂಧಗಳನ್ನು ಬೆಳೆಸಿಕೊಳ್ಳಲು ಮಾತ್ರ ಅವಕಾಶವಿರುತ್ತದೆ. ಪ್ರತಿಯೊಂದು ಹಣಕಾಸಿನ ವಹಿವಾಟು ಕೇಂದ್ರೀಕೃತ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುತ್ತದೆ. ಪ್ರಜೆಗಳಿಂದ ಆಯ್ಕೆಯಾಗಿ ಪ್ರಜೆಗಳಿಗಾಗಿ ಜವಬ್ದಾರಿ ಹೊರಬೇಕಿದ್ದ ಸರ್ಕಾರವು ಈ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ತನ್ನ ಎಲ್ಲಾ ನಿಯಂತ್ರಣ ಮತ್ತು ಹಿಡಿತವನ್ನು ಕಳಚಿಕೊಳ್ಳುತ್ತ ಅದನ್ನು ಮಾರುಕಟ್ಟೆಗೆ, ಖಾಸಗಿ ಬಂಡವಾಳಶಾಹಿಗೆ ಹಸ್ತಾಂತರಿಸುತ್ತದೆ. ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು, ಕೈಗೆತ್ತಿಕೊಳ್ಳಲು ಈ ಖಾಸಗಿ ಮಾರುಕಟ್ಟೆ ನಿರಾಕರಿಸುತ್ತದೆ ಮತ್ತು ಕೇವಲ ತನ್ನ ಸಂಪತ್ತನ್ನು ವೃದ್ಧಿಸುವಂತಹ ವಲಯಗಳಲ್ಲಿ ಮಾತ್ರ ವಹಿವಾಟನ್ನು ನಡೆಸುತ್ತದೆ. ಈ ಉದಾರೀಕರಣದ ಆರ್ಥಿಕ ನೀತಿಯು ವ್ಯಕ್ತಿ ಅಥವಾ ಸಂಸ್ಥೆಯ ಬಳಿ ಸಂಪತ್ತಿನ ಕ್ರೋಢೀಕರಣಕ್ಕೆ ಪುಷ್ಟಿ ನೀಡುತ್ತದೆ. ಸಂಪತ್ತು ಕೆಲವೇ ಜನ/ಸಂಸ್ಥೆಗಳ ಬಳಿ ಕೇಂದ್ರೀಕೃತಗೊಂಡ ಈ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಈ ರೀತಿಯ ಸಂಬಂಧಗಳಿಂದಾಗಿ ಮೇಲ್ವರ್ಗಗಳು / ಮಧ್ಯಮವರ್ಗಗಳು ಮತ್ತು ಬಡಜನರ ನಡುವೆ ಉಂಟಾಗುವ ದೊಡ್ಡ ಕಂದಕ ಅಸಮಾನತೆ ಮತ್ತು ಪ್ರತ್ಯೇಕತೆಯನ್ನು ಹೆಚ್ಚಿಸುತ್ತದೆ. ಇದು ಸಾಮಾಜಿಕ ನ್ಯಾಯದ ಆಶಯಗಳಿಗೂ ಮಾರಕ.

ಆದರೆ ಅಸಮಾನತೆ, ಪ್ರತ್ಯೇಕತೆ ಮತ್ತು ತಾರತಮ್ಯವನ್ನು ವಿರೋಧಿಸಿದ ಅಂಬೇಡ್ಕರ್ ಸಹಜವಾಗಿಯೇ ಈ ಮುಕ್ತ ಮಾರುಕಟ್ಟೆ ಮತ್ತು ಜಾಗತೀಕರಣದ ವಿರೋಧಿಯೂ ಆಗಿದ್ದರು. ಅಂಬೇಡ್ಕರ್ ಈ ಸಂಪತ್ತಿನ ಕ್ರೋಢೀಕರಣವನ್ನು ಟೀಕಿಸುತ್ತಿದ್ದರು ಮತ್ತು State Socialism ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು. ಸರ್ಕಾರದ ನೀತಿಗಳು ಈ ಮುಕ್ತ ಮಾರುಕಟ್ಟೆ ಮಾದರಿಯ ಬೂಜ್ರ್ವ ವ್ಯವಸ್ಥೆಯ ಬೆಳೆವಣಿಗೆಯನ್ನು ಕಡಿವಾಣ ಹಾಕುವಂತಹ ನೀತಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸುತ್ತಿದ್ದ ಅಂಬೇಡ್ಕರ್ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ.

ಆನಂದ ತೇಲ್ತುಂಬ್ಡೆ ಅವರು ‘ವೈಯುಕ್ತಿಕ, ಸಾಮಾಜಿಕ-ಆರ್ಥಿಕ, ಸಾಮಾಜಿಕ-ರಾಜಕೀಯ, ಸಾಮಾಜಿಕ-ಸಾಂಸ್ಕೃತಿಕ’ ಎನ್ನುವ ನಾಲ್ಕು ಮಾದರಿಯ ಸಬಲೀಕರಣವನ್ನು ಗುರುತಿಸುತ್ತಾರೆ. ಈ ನಾಲ್ಕೂ ನೆಲೆಯ ಸಬಲೀಕರಣವು ಕೈಗೂಡಿದರೆ ತಳ ಸಮುದಾಯಗಳಿಗೆ ವಿಮೋಚನೆ ದೊರಕಿದಂತೆ. ಇಲ್ಲಿ ಶಿಕ್ಷಣ ಮತ್ತು ಆರೋಗ್ಯ ವೈಯುಕ್ತಿಕ ಸಬಲೀಕರಣ, ಭೂ ಸುಧಾರಣೆ ಮತ್ತು ಉದ್ಯೋಗ ಸಾಮಾಜಿಕ-ಆರ್ಥಿಕ ಸಬಲೀಕರಣ, ಪ್ರಜಾಪ್ರಭುತ್ವದ ವ್ಯವಸ್ಥೆಯು ಸಾಮಾಜಿಕ-ರಾಜಕೀಯ ಸಬಲೀಕರಣ ಮತ್ತು ಆಧುನಿಕತೆ ಸಾಮಾಜಿಕ-ಸಾಂಸ್ಕೃತಿಕ ಸಬಲೀಕರಣಕ್ಕೆ ಪ್ರಮುಖವಾಗಿವೆ ಎಂದು ಗುರುತಿಸುತ್ತಾರೆ. ಆದರೆ ನವ ಉದಾರೀಕರಣದ ಇಂದಿನ ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯ ವಲಯಗಳು ಸಂಪೂರ್ಣವಾಗಿ ಖಾಸಗೀಕರಣಗೊಳ್ಳುತ್ತಾ ಸಾರ್ವಜನಿಕ ಸೇವಾ ವಲಯದಿಂದ ಕಣ್ಮರೆಯಾಗಿವೆ ಮತ್ತು ಇಂದು ಈ ಎರಡೂ ವಲಯಗಳು ಖಾಸಗೀಕರಣದ ದೊಡ್ಡ ಶಕ್ತಿ ಕೇಂದ್ರಗಳಾಗಿವೆ. ಇಂದು ಭೂಸುಧಾರಣೆಯು ತನ್ನ ಜನಪರವಾದ ಸೋಷಿಯಲಿಸಂ ನೀತಿಯಿಂದ ಕಳಚಿಕೊಂಡು ಭೂ ಮಾಲೀಕರು ಮತ್ತು ಬಂಡವಾಳಶಾಹಿಗಳ, ಮಧ್ಯವರ್ತಿಗಳ ರಿಯಲ್ ಎಸ್ಟೇಟ್ ವ್ಯವಹಾರವಾಗಿದೆ. ದಲಿತರಿಗೆ ಏಕೈಕ ಆಶಾದೀಪವಾಗಿದ್ದ ಸರ್ಕಾರಿ ಉದ್ಯೋಗಗಳು ಕುಂಠಿತಗೊಳ್ಳುತ್ತಾ ಮೀಸಲಾತಿಯ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕ್ರಮೇಣವಾಗಿ ಮೂಲೆಗುಂಪಾಗಿದೆ ಮತ್ತು ಪ್ರಜಾಪ್ರಭುತ್ವವು ಇಂದು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ತನ್ನ ಐಡೆಂಟಿಟಿ ಉಳಿಸಿಕೊಂಡಿದೆ ಮತ್ತು ಚುನಾವಣೆಯ ಹೊರತಾಗಿ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸ್ಪೇಸ್ ಇಲ್ಲ. ಈ ಎಲ್ಲಾ ಸಂಕೀರ್ಣ ಸ್ವರೂಪಗಳ ಮೂಲಕಾರಣಗಳೇ ಜಾತಿ ಪದ್ಧತಿ ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ಹೇಳುತ್ತಿದ್ದರು. ಇದಕ್ಕೆ State Socialism ಸಿದ್ಧಾಂತದ ಮೂಲಕ ಪರಿಹಾರ ಕಂಡುಕೊಳ್ಳಬಹುದೆಂದು ಪ್ರತಿಪಾದಿಸಿದ್ದರು. ಇದರ ಎಲ್ಲಾ ದುಷ್ಪರಿಣಾಮಗಳನ್ನು ಜಾಗತೀಕರಣದ ಎರಡು ದಶಕಗಳ ನಂತರ ಇಂದು ಇಂಡಿಯಾದಲ್ಲಿನ ಪ್ರಸ್ತುತ ಸಂದರ್ಭದವನ್ನು ಅಧ್ಯಯನ ಮಾಡಿದರೆ ಅರಿವಾಗುತ್ತದೆ. ಇದಕ್ಕೆ ಮೊದಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗಿದ್ದು ತಳ ಸಮುದಾಯಗಳು.

ಆರ್ಥಿಕ ಚಿಂತನೆಗಳ ಕುರಿತಾಗಿ ಅಂಬೇಡ್ಕರ್ ಅವರು ಮೂರು ಪುಸ್ತಕಗಳನ್ನು ಬರೆದಿದ್ದರು. ಅವು:

  1. ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮತ್ತು ಹಣಕಾಸು
  2. ಬ್ರಿಟೀಷ್ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸಿನ ವಿಕಸನ ( 1925)
  3. ರೂಪಾಯಿಯ ಮಗ್ಗಟ್ಟು: ಅದರ ಉಗಮ ಮತ್ತು ಅದರ ಅರ್ಥ ವಿವರಣೆ ( 1923)

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳನ್ನು ಕೆಳಗಿನ ಕೆಲವು ಪ್ರಮುಖ ವಲಯಗಳ ಮೂಲಕ ಅಧ್ಯಯನ ಮಾಡಬಹುದೆಂದು ಪ್ರೊ. ಜಯಶ್ರೀ ಸರೋದೆ ಅವರು ಹೇಳುತ್ತಾರೆ. ಅವೆಂದರೆ:

  1. ಕೃಷಿ ಮತ್ತು ಭೂ ಸುಧಾರಣೆ
  2. ಭಾರತದ ಹಣಕಾಸಿನ ಬಿಕ್ಕಟ್ಟು
  3. ಸಾರ್ವಜನಿಕ ಹಣಕಾಸಿನ ತೊಂದರೆಗಳು
  4. ತೆರಿಗೆ ನೀತಿಗಳು
  5. ಕೈಗಾರಿಕೆಗಳ ರಾಷ್ಟ್ರೀಕರಣ
  6. ಆರ್ಥಿಕ ಅಭಿವೃದ್ಧಿಯ ರಣನೀತಿಗಳು
  7. ಮುಕ್ತ ಮಾರುಕಟ್ಟೆ
  8. ಜನಸಂಖ್ಯಾ ನಿಯಂತ್ರಣ
  9. ಮಹಿಳೆಯರ ಆರ್ಥಿಕ ಸಬಲೀಕರಣ
  10. ಮಾನವ ಬಂಡವಾಳ ತತ್ವ
  11. ಹಿಂದೂ ಆರ್ಥಿಕ ಪದ್ಧತಿಯ ವಿರೋಧ

ಕೃಷಿ ಮತ್ತು ಭೂ ಸುಧಾರಣೆ : ಅಂಬೇಡ್ಕರ್ ಅವರ ಚಿಂತನೆಗಳು

  • ಹೆಚ್ಚುವರಿ ಭೂಮಿಯನ್ನು (Surplus Land) ಯನ್ನು ಬಳಸಿಕೊಂಡು ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುವ ಜಮೀನ್ದಾರಿ ಮಾದರಿಯ ಕೃಷಿ ಪದ್ಧತಿಯನ್ನು ತಿರಸ್ಕರಿಸಬೇಕು.
  • ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದನೆ ಮತ್ತು ಉತ್ಪಾದನಾ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳಬೇಕು
  • ಭೂ ಮಾಲೀಕರು, ಸಣ್ಣ ಹಿಡುವಳಿದಾರರು,ಕೂಲಿ ಕಾರ್ಮಿಕರ ನಡುವೆ ಅಸಮಾನತೆ ಮತ್ತು ತಾರತಮ್ಯ ನೀತಿಗಳನ್ನು ರದ್ದು ಪಡಿಸಬೇಕು
  • ಭೂ ಸುಧಾರಣೆಯಾಗಬೇಕು ಮತ್ತು ಭೂಮಿಯು ಸಮಾನವಾಗಿ ಹಂಚಿಕೆಯಾಗಬೇಕು ಮತ್ತು ಭೂಮಿಯನ್ನು ರಾಷ್ಟ್ರೀಕರಣಗೊಳಿಸಬೇಕು
  • ಕೃಷಿ ಸಾಗುವಳಿ ಮತ್ತು ವ್ಯವಸಾಯವನ್ನು ಸಹಕಾರ ಸಂಘಗಳ ತತ್ವದ ಅಡಿಯಲ್ಲಿ ನಡೆಸಬೇಕು.ಇದಕ್ಕಾಗಿ ಭೂಮಿಯು ರಾಷ್ಟ್ರೀಕರಣಗೊಳ್ಳಬೇಕು
  • ಕೃಷಿ, ಕೈಗಾರಿಕೆ,ಆರ್ಥಿಕ ವಲಯಗಳಲ್ಲಿ State Socialism ಸಿದ್ಧಾಂತವು ಜಾರಿಗೊಳ್ಳಬೇಕು.
  • ಭೂಮಿಯ ಮೇಲೆ ಖಾಸಗಿಯವರ ಒಡೆತನ ರದ್ದುಗೊಳ್ಳಬೇಕು ಮತ್ತು ಸಾಮೂಹಿಕ, ಸಮುದಾಯದ ಕೃಷಿ ಪದ್ಧತಿಯು ಜಾರಿಗೆ ಬರಬೇಕು
  • ವ್ಯವಸಾಯವನ್ನು ರಾಜ್ಯ ಕೈಗಾರಿಕೆ ಎಂದು ಮಾನ್ಯತೆ ಕೊಡಬೇಕು
  • ವ್ಯವಸಾಯ ಉತ್ಪನ್ನಗಳು ಮತ್ತು ಅದರ ಮೌಲ್ಯಗಳ ಮುಕ್ಕಾಲು ಭಾಗ ನೇರವಾಗಿ ರೈತರಿಗೆ, ಕೃಷಿ ಕಾರ್ಮಿಕರಿಗೆ ತಲುಪಬೇಕು. ಉಳಿದ ಭಾಗ ಸರ್ಕಾರಕ್ಕೆ ಲೆವಿಯ ರೂಪದಲ್ಲಿ ಸಂದಾಯವಾಗಬೇಕು. ಈ ಧಾನ್ಯ-ಕಾಳುಗಳನ್ನು ಸರ್ಕಾರವು ಸಬ್ಸಿಡಿ ದರದಲ್ಲಿ ಬಡವರಿಗೆ ಹಂಚಬೇಕು (ಇದೇ ಇಂದಿನ ನ್ಯಾಯ ಬೆಲೆ ಪದ್ಧತಿ) ಈ ಮೂಲಕ ಸರ್ಕಾರವೇ ಕೃಷಿ ಕೈಗಾರಿಕೆಯನ್ನು ನಿಯಂತ್ರಿಸಬೇಕು
  • ಭೂ ಸ್ವಾಧೀನದ ಪರಿಹಾರ ಮೊತ್ತವನ್ನು ಬಾಂಡ್‍ಗಳ ರೂಪದಲ್ಲಿ ಕೊಡಬೇಕು

State Socialism ಸಿದ್ಧಾಂತವನ್ನು ಸಂವಿಧಾನದಲ್ಲಿ ಅಳವಡಿಸಲು ಅಂಬೇಡ್ಕರ್ ಅವರು ಬಹಳ ಪ್ರಯತ್ನ ನಡೆಸಿದರು. ಅಂಬೇಡ್ಕರ್ ಅವರ ಈ ಚಿಂತನೆಗಳನ್ನು ಮುಂದಿನ ವರ್ಷಗಳಲ್ಲಿ Land Ceiling Act ನ ಮೂಲಕ ಜಾರಿಗೊಳಿಸಲಾಯಿತು.

1926ರಲ್ಲಿ ಬಾಂಬೆ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾಗ ಗ್ರಾಮೀಣ ಬಡವರ, ಕೃಷಿ ಕಾರ್ಮಿಕರ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿದ್ದರು. ಆಗ ಮಹಾರಾಷ್ಟ್ರದಲ್ಲಿ “ಕೋಥೀ” ಪದ್ಧತಿ ಜಾರಿಯಲ್ಲಿತ್ತು. ಇದರ ಅನುಸಾರ ಸರ್ಕಾರದಿಂದ ನೇಮಕಗೊಂಡ ತೆರಿಗೆ ಸಂಗ್ರಹಕಾರರು ಗೇಣೀದಾರರು, ಸಣ್ಣ ಹಿಡುವಳಿದಾರರು, ಕೂಲಿ ಕಾರ್ಮಿಕರು, ಬಡ ರೈತರಿಂದ ತೆರಿಗೆಯನ್ನು ಸಂಗ್ರಹಿಸಿ ಅದನ್ನು ಸರ್ಕಾರಕ್ಕೆ ಪಾವತಿಸುತ್ತಿದ್ದರು. ತಮ್ಮ ಈ ಅಧಿಕಾರವನ್ನು ಬಳಸಿಕೊಂಡು ಕೂಲಿ ಕಾರ್ಮಿಕರನ್ನು ಶೋಷಿಸುತ್ತಿದ್ದರು. ಅವರೆಲ್ಲ ಮನೆಮಠಗಳನ್ನು ಕಳೆದುಕೊಂಡು ಬೀದಿಪಾಲಾಗುತ್ತಿದ್ದರು. ಈ “ಕೋಥಿ” ಪದ್ಧತಿಯ ವಿರುದ್ಧ ಮೊಟ್ಟಮೊದಲು ದನಿಯೆತ್ತಿದ್ದು ಅಂಬೇಡ್ಕರ್. 17,ಸೆಪ್ಟೆಂಬರ್ 1937ರಂದು ಬಾಂಬೆ ವಿಧಾನ ಪರಿಷತ್ತಿನಲ್ಲಿ ಈ ಕೋಥೀ ಪದ್ಧತಿಯನ್ನು ರದ್ದು ಪಡಿಸುವ ವಿಶೇಷ ಮಸೂದೆಯನ್ನು ಮಂಡಿಸಿದ್ದರು. ಮತ್ತು ಅದಕ್ಕೆ ಬಹುಮತ ದೊರಕಿಸಲೂ ಯಶಸ್ವಿಯಾದರು
(ಆಧಾರ : ಸಣ್ಣ ಹಿಡುವಳಿದಾರರು ಮತ್ತು ಪರಿಹಾರ ( 1917) ಸಂಪುಟ 1,2,3 , ಅಂತಸ್ತಿನ ಸ್ಥಾನಮಾನ ಮತ್ತು ಅಲ್ಪಸಂಖ್ಯಾತರು (1947) – ಬಿ.ಆರ್.ಅಂಬೇಡ್ಕರ್)

ಸಾರ್ವಜನಿಕ ಹಣಕಾಸಿನ ತೊಂದರೆಗಳು : ಅಂಬೇಡ್ಕರ್ ಚಿಂತನೆಗಳು

ಕೇಂದ್ರೀಕೃತ ಹಣಕಾಸಿನ ವ್ಯವಸ್ಥೆಯನ್ನು ಟೀಕಿಸಿದ ಅಂಬೇಡ್ಕರ್ 1833-1871ರ ವರೆಗಿನ ಸಾಮ್ರಾಜ್ಯಶಾಹಿ ಹಣಕಾಸು ಪದ್ಧತಿಯನ್ನು ಉದಾಹರಿಸುತ್ತಾರೆ. ಇಂಡಿಯಾದಲ್ಲಿ 1833ರಲ್ಲಿ ಕಲೋನಿಯಲ್ ಫೈನಾನ್ಸ್ ಪದ್ಧತಿ ಪ್ರಾರಂಭವಾಯಿತು. ಇದನ್ನು ವಿವರಿಸುತ್ತಾ ಅಂಬೇಡ್ಕರ್ ಅವರು ‘1858ರ ನಂತರದ ಬ್ರಿಟೀಷ್ ಆಡಳಿತದಲ್ಲಿ (ಈಸ್ಟ್ ಇಂಡಿಯಾ ಕಂಪನಿಯ ನಂತರ) ಕಲೋನಿಯಲ್ ಸರ್ಕಾರದ ಬಳಿ (ಕೇಂದ್ರ ಸರ್ಕಾರ) ಲಾ & ಆರ್ಡರ್ ಮತ್ತು ರಕ್ಷಣಾ ಇಲಾಖೆಯ ಸಂಪೂರ್ಣ ಜವಬ್ದಾರಿ ಮತ್ತು ಹಿಡಿತಗಳಿದ್ದರೆ ಪ್ರಾಂತೀಯ ಸರ್ಕಾರಗಳಿಗೆ ಕೇವಲ ಆಡಳಿತದ ಜವಬ್ದಾರಿ ಮಾತ್ರ ಕೊಡಲಾಗಿತ್ತು. ಪ್ರಾಂತೀಯ ಸರ್ಕಾರಗಳು ಮುಂಗಡಪತ್ರವನ್ನು ಸಿದ್ಧಪಡಿಸಿದರೆ ಕಲೋನಿಯಲ್ ಸರ್ಕಾರವು ಹಣಕಾಸಿನ ಹಂಚಿಕೆಯನ್ನು ನಿರ್ವಹಿಸುತ್ತಿತ್ತು.ಪ್ರಾಂತೀಯ ಸರ್ಕಾರಗಳಿಗೆ ಅಭಿವೃದ್ಧಿ, ಬದಲಾವಣೆ, ರಕ್ಷಣಾ ವ್ವವಸ್ಥೆ, ಕಾನೂನು ವ್ಯವಸ್ಥೆಗಳ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಆದರೆ ಕಲೋನಿಯಲ್ ಸರ್ಕಾರವು ಪ್ರಾಂತೀಯ ಸರ್ಕಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿತ್ತು’ ಎಂದು ಗುರುತಿಸುತ್ತಾರೆ. 1871ರ ನಂತರ ಪ್ರಾಂತೀಯ ಸರ್ಕಾರಗಳಿಗೆ ಹಣಕಾಸಿನ ವಿನಿಮಯದ ಅಧಿಕಾರ ದೊರಕಿತು ಎಂದು ಅಭಿಪ್ರಾಯಪಡುತ್ತಾರೆ. ಆದರೆ ಈ ಕೇಂದ್ರೀಕೃತ ಹಣಕಾಸು ವ್ಯವಸ್ಥೆಯಿಂದ ವಿತ್ತೀಯ ಕೊರತೆ ಹೆಚ್ಚಾಗಿ ಆ ಕೊರತೆಯನ್ನು ತುಂಬಿಸಲು ತೆರಿಗೆ ಸಂಗ್ರಹಣೆ ಕಾರ್ಯವನ್ನು ತೀವ್ರಗೊಳಿಸಲಾಯಿತು. ಇದರ ದುಷ್ಪರಿಣಾಮಗಳು ಸಣ್ಣ ಹಿಡುವಳಿದಾರರು, ಕೂಲಿ ಕಾರ್ಮಿಕರ ಮೇಲೆ ಉಂಟಾಯಿತು ಎಂದು ಹೇಳುತ್ತಾರೆ. ಅಂಬೇಡ್ಕರ್ ಅವರ ಈ ಆರ್ಥಿಕ ಚಿಂತನೆಗಳು ಮುಂದೆ ಸ್ವಾತಂತ್ರೋತ್ತರ ಭಾರತದಲ್ಲಿ ಕೇಂದ್ರ – ರಾಜ್ಯ ಸರ್ಕಾರಗಳ ಸಂಬಂಧಗಳ ಕುರಿತಂತೆ ಹೊಸ ಸಂವಾದಗಳಿಗೆ ಬುನಾದಿಯಾಯ್ತು.

ತೆರಿಗೆ ನೀತಿಗಳು : ಅಂಬೇಡ್ಕರ್ ಚಿಂತನೆಗಳು

1936ರ ಪ್ರಾಂತೀಯ ಚುನಾವಣೆಯ ಸಂದರ್ಭದಲ್ಲಿ ಅಂಬೇಡ್ಕರ್ ಅವರು ತೆರಿಗೆ ನೀತಿಗಳನ್ನು ತಮ್ಮ ‘ಇಂಡಿಯನ್ ಲೇಬರ್ ಪಕ್ಷ’ದ ಮಾನಿಫೆಸ್ಟೋದಲ್ಲಿ ಅಳವಡಿಸಿದ್ದರು. 1938ರಲ್ಲಿ ಬಾಂಬೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಭೂ ಕಂದಾಯದ ತೆರಿಗೆಯ ಮೌಲ್ಯವನ್ನು ಹೆಚ್ಚಿಸಿರುವುದಕ್ಕೆ ಮತ್ತು ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ವಿಧಿಸಲು ವಿಫಲವಾದ ಆಗಿನ ಬಾಂಬೆ ಸರ್ಕಾರವನ್ನು ಟೀಕಿಸಿದ್ದರು.

ಅಂಬೇಡ್ಕರ್ ಅವರ ಪ್ರಮುಖ ಚಿಂತನೆಗಳು:

  1. ವೈಯುಕ್ತಿಕ ತೆರಿಗೆಯ ಮಾನದಂಡವನ್ನು ಆ ವ್ಯಕ್ತಿಯ ತೆರಿಗೆಯನ್ನು ಪಾವತಿಸುವ ಸಾಮರ್ಥ್ಯದ ಮೇಲೆ ನಿರ್ಧರಿಸಬೇಕು ಹೊರತಾಗಿ ಆತನ ಆದಾಯದ ಮೇಲೆ ಅಲ್ಲ
  2. ತೆರಿಗೆ ನೀತಿ ಮತ್ತು ಮೌಲ್ಯಗಳು ಪ್ರಗತಿಪರವಾಗಿರಬೇಕು ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ಬಡವರಿಗೆ ಕಡಿಮೆ ತೆರಿಗೆಯನ್ನು ವಿಧಿಸಬೇಕು
  3. ಒಂದು ಹಂತದ ಆದಾಯದವರೆಗೆ ತೆರಿಗೆ ವಿನಾಯ್ತಿಯನ್ನು ನಿಗದಿಗೊಳಿಸಬೇಕು
  4. ತೆರಿಗೆ ಪದ್ಧತಿಯು ಸಮಾನತೆಯನ್ನು ಸಾಧಿಸಬೇಕು ಹೊರತಾಗಿ ಅಸಮಾನತೆಯನ್ನು ಸೃಷ್ಟಿಸಬಾರದು
  5. ತೆರಿಗೆ ಪದ್ಧತಿಯು ಸಾಮಾನ್ಯ ಜನರ ಬದುಕಿನ ಗುಣಮಟ್ಟವನ್ನು ಕಳಪೆಗೊಳಿಸುವಂತಾಗಬಾರದು
  6. ಮಾರಾಟ ತೆರಿಗೆಯನ್ನು ಸಂಗ್ರಹಿಸುವ ಅಧಿಕಾರ ಪ್ರಾಂತೀಯ ಸರ್ಕಾರಗಳ ಬಳಿ ಇರಬೇಕು
  7. ಸಮಾಜದ ಅರ್ಥ ವ್ಯವಸ್ಥೆಯನ್ನು ಸಮತೋಲದಲ್ಲಿ ಕಾಪಾಡಿಕೊಳ್ಳುವುದು ಸರ್ಕಾರದ ಜವಬ್ದಾರಿ ಮತ್ತು ಅದರ ಹೊಣೆಯನ್ನು ಮಾರುಕಟ್ಟೆಯ ನೀತಿ ನಿಯಮಗಳಿಗೆ, ಖಾಸಗಿ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಬಾರದು

ಕೈಗಾರಿಕೆಗಳು ಮತ್ತು ರಾಷ್ಟ್ರೀಕರಣ : ಅಂಬೇಡ್ಕರ್ ಚಿಂತನೆಗಳು

  1. ದೊಡ್ಡ ಮತ್ತು ಅತಿ ದೊಡ್ಡ ಕೈಗಾರಿಕೆಗಳು ಸರ್ಕಾರದ ಒಡೆತನದಲ್ಲಿರಬೇಕು
  2. ಗೃಹ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳು ಖಾಸಗಿ ಒಡೆತನದಲ್ಲಿರಬೇಕು
  3. ಜೀವ ವಿಮೆ,ಸಾರಿಗೆ ವ್ಯವಸ್ಥೆ ರಾಷ್ಟ್ರೀಕರಣಗೊಳ್ಳಬೇಕು
  4. ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಾಪಾಡಲು,ಅದಕ್ಕೆ ಧಕ್ಕೆ ಒದಗಿದರೆ ಪ್ರತಿಭಟಿಸಲು ಮುಷ್ಕರಗಳಿಗೆ ಮುಕ್ತ ಅವಕಾಶಗಳಿಬೇಕು
  5. ಈ ಎಲ್ಲಾ ಹಕ್ಕುಗಳು ಮತ್ತು ಅವಕಾಶಗಳು ಸರ್ಕಾರಿ ನೀತಿಗಳ Directive Principles ನ ಅಡಿಯಲ್ಲಿ ಸೇರಿಸಬೇಕು
  6. ಸಾಮಾಜಿಕ ನ್ಯಾಯದ ತತ್ವಕ್ಕೆ ಬದ್ಧವಾದಾಗ ಮಾತ್ರ Industrial Peace ಸಾಧಿಸಬಹುದು

ಅಂಬೇಡ್ಕರ್ ಅವರ ಮೇಲಿನ ಚಿಂತನೆಗಳು ಫೇಬಿಯನ್ ಸೋಷಿಯಲಿಸ್ಟ್ ಮಾದರಿಯಾಗಿವೆ. State Socialism ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ.

ಅಂಬೇಡ್ಕರ್ ಅವರು ಇಂಡಿಯನ್ ಎಕಾನಮಿಯನ್ನು ಹಿಂದೂ ಪ್ರಭಾವಿತ ಎಕಾನಮಿ ಎಂದು ತಿರಸ್ಕರಿಸಿದ್ದರು. ಅದರ ಎಲ್ಲಾ ಲೋಪದೋಷಗಳನ್ನು ವಿವರಿಸಿದ್ದರು. ಜಾತಿ ಪದ್ಧತಿಯು ಕೇವಲ ಅಂತಸ್ಥಿನ, ಸ್ಥಾನಮಾನದ ನಡುವಿನ ಅಂತರವಲ್ಲ ಅದು ಕೂಲಿ ಕಾರ್ಮಿಕರ ನಡುವಿನ ಅಂತರವೂ ಹೌದು. ಇದು ಆರ್ಥಿಕ ಅಭಿವೃದ್ಧಿಗೆ ದೊಡ್ಡ ಅಡಚಣೆ. ಇದು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುವ ನೀತಿ ಎಂದು ಹೇಳಿದ್ದರು.

ಇಂದು ಮತೀಯವಾದಿ ಸಂಘಟನೆ ಆರೆಸ್ಸಸ್ ಅಂಬೇಡ್ಕರ್ ಅವರನ್ನು Appropriation ಮಾಡಿಕೊಳ್ಳುತ್ತಿದೆ. ಬಂಡವಾಳಶಾಹಿಗಳ ವಕ್ತಾರ ಮತ್ತು ಮುಕ್ತ ಮಾರುಕಟ್ಟೆಯ ಬೆಂಬಲಿಗರಾದ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಅವರನ್ನು ರಾಜಕೀಯ ಅಸ್ಪøಶ್ಯತೆಯಂದ ಬಿಡುಗಡೆಗೊಳಿಸುತ್ತೇನೆ, ಅವರ ಹಾದಿಯಲ್ಲಿ ಸಾಗುತ್ತೇನೆ ಎಂದು ಭಾಷಣ ಮಾಡಿದ್ದಾರೆ. ಆದರೆ ಅಂಬೇಡ್ಕರ್ ಅವರು ಮುಕ್ತ ಮಾರುಕಟ್ಟೆ ಮಾದರಿಯ ಆರ್ಥಿಕ ವ್ಯವಸ್ಥೆಗೆ ವಿರೋಧಿಯಾಗಿದ್ದರು, ಫೇಬಿಯನ್ ಮಾದರಿಯ ಸೋಷಿಯಲಿಸಂನಲ್ಲಿ ನಂಬಿಕೆ ಇಟ್ಟಿದ್ದರು ಮತ್ತು State Socialism ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು. ಈ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆ 2014, ಅಂಬೇಡ್ಕರ್ ಅವರ ಭೂಸುಧಾರಣೆ ಮತ್ತು ಭೂ ರಾಷ್ಟ್ರೀಕರಣ ತತ್ವಕ್ಕೆ ವಿರುದ್ಧ ದಿಕ್ಕಿನಲ್ಲಿದೆ. ಮೋದಿ ಸರ್ಕಾರದ ಬಂಡವಾಳಶಾಹಿಪರವಾದ ಸಂಪೂರ್ಣ ಖಾಸಗೀಕರಣದ ಕೈಗಾರಿಕೆ ನೀತಿಗೂ ಅಂಬೇಡ್ಕರ್ ಅವರ ಫೇಬಿಯನ್ ಸೋಷಿಯಲಿಸಂ ಮಾದರಿಯ ಕೈಗಾರೀಕರಣ ಸಿದ್ಧಾಂತಕ್ಕೂ ಸ್ವಲ್ಪವೂ ಸಾಮ್ಯತೆ ಇಲ್ಲ. ಸಂಘ ಪರಿವಾರದ ಸನಾತನವಾದ ಮತ್ತು ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಗಳಿಗೂ ಅಂಬೇಡ್ಕರ್ ಅವರ State Socialism ಸಿದ್ಧಾಂತದ ಆರ್ಥಿಕ ನೀತಿಗೂ ಯಾವುದೇ ಸಾಮ್ಯತೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಲೋಕಾಯುಕ್ತ ಹಗರಣದಲ್ಲಿ ಪತ್ರಕರ್ತರು

– ಮೋಹನ್‌ರಾಜ್

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪಗಳ ತನಿಖೆಯ ಹಾದಿಯಲ್ಲಿ ಒಬ್ಬ ಮಾಜಿ ಪತ್ರಕರ್ತ ಎಂ.ಬಿ. ಶ್ರೀನಿವಾಸಗೌಡ ಸೇರಿದಂತೆ ಮೂರು-ನಾಲ್ಕು ಮಂದಿಯ ಬಂಧನವಾಗಿದೆ. ಸುದ್ದಿವಾಹಿನಿಗಳು, ಪತ್ರಿಕೆಗಳು ಈ ಬಗ್ಗೆ ವಿವರವಾಗಿ ಸುದ್ದಿ ಬಿತ್ತರಿಸುತ್ತಿವೆ. ಇತ್ತೀಚೆಗಷ್ಟೆ ಆರಂಭವಾಗಿರುವ ಪ್ರಜಾ ಟಿವಿ ಗುರುವಾರ ಸಂಜೆ, ಬಂಧಿತರು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಎದುರು ನೀಡಿರುವ ಹೇಳಿಕೆಗಳು ಎಂಬ lokayukta_karnatakaತಲೆಬರಹದಡಿಯಲ್ಲಿ ಕೆಲ ಟಿಪ್ಪಣಿಗಳನ್ನು ಉಲ್ಲೇಖಿಸಿತು. ಶ್ರೀನಿವಾಸಗೌಡನ ಹೇಳಿಕೆ ಎಂದು ತೋರಿಸಿದ ಟಿಪ್ಪಣಿಯಲ್ಲಿ ಒಂದು ವಿಶೇಷವಾದ ಸಾಲಿತ್ತು. “ಕಚೇರಿಯಲ್ಲಿ ನನ್ ಮೇಲಿನವರು ಸೂಚನೆ ಮೇರೆಗೆ ಕೆಲ ಅಕ್ರಮಗಳ ಬಗ್ಗೆ ಮಾಹಿತಿ ಕೇಳಿ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಹಾಕಿದ್ದೆ. ಬಂದ ಉತ್ತರಗಳಲ್ಲಿ ಕೆಲವು ಸುದ್ದಿಯಾದವು, ಮತ್ತೊಂದಿಷ್ಟು ಜಾಹಿರಾತಿನ ರೂಪದಲ್ಲಿ ಕಂಪನಿಗೆ ಲಾಭವಾಯಿತು” (ಚಾನೆಲ್ ತೋರಿಸಿದ ಟಿಪ್ಪಣಿಯನ್ನು ನೆನಪಿನ ಆಧಾರದ ಮೇಲೆ ದಾಖಲಿಸಿದ್ದೇನೆ. ಪದಗಳು ಅಲ್ಲಲ್ಲಿ ಬದಲಾಗಿರಬಹುದು, ಆದರೆ ಅರ್ಥ ಅದೇ). ಶ್ರೀನಿವಾಸಗೌಡ ಮಾಡಿರಬಹುದಾದ (??) ಅಪರಾಧ ಕೃತ್ಯಗಳಲ್ಲಿ ಅವನ ಹಿರಿಯ ಸಹೋದ್ಯೋಗಿಗಳದು ಹಾಗೂ ಅವರನ್ನು ನೇಮಕಮಾಡಿಕೊಂಡಿರುವ ಕಂಪನಿಯದೂ ಪಾತ್ರವಿದೆ ಎಂದು ಈ ಮಾತು ಸ್ಪಷ್ಟವಾಗಿ ಹೇಳುತ್ತದೆ.

ಮಾಧ್ಯಮ ಸಂಸ್ಥೆಗಳು ಪ್ಯಾಕೇಜ್ ಸಂಸ್ಕೃತಿಗೆ ತೆರೆದುಕೊಂಡು ತುಂಬಾ ದಿನಗಳೇ ಆಗಿದ್ದವು. ಸಿನಿಮಾ ಪ್ರಮೋಷನ್, ರಾಜಕೀಯ ಕಾರ್ಯಕ್ರಮಗಳು.. ಇತರೆ ಸುದ್ದಿಗಳು ಪ್ಯಾಕೇಜ್ ರೂಪದಲ್ಲಿ ಬಿತ್ತರಗೊಳ್ಳುವುದು ಗೊತ್ತಿರುವ ಸಂಗತಿ. ಚುನಾವಣೆ ಸಮಯದಲ್ಲಿ ಸಂಸ್ಥೆಗಳೇ ಪೇಯ್ಡ್ ನ್ಯೂಸ್ ಪ್ರಕಟಿಸಿ ದುಡ್ಡು ಮಾಡಿಕೊಳ್ಳುವುದೂ ಗೊತ್ತು. ಇಲ್ಲಿ, ಈ ಪ್ರಸ್ತುತ ಸಂಸ್ಥೆ ಒಂದು ಹೆಜ್ಜೆ ಮುಂದೆ ಹೋದಂತಿದೆ. ಮೊದ ಮೊದಲು, ಕೆಲ ಪತ್ರಕರ್ತರು ಆರ್.ಟಿ.ಐ ಅಡಿ ದಾಖಲೆ ಪಡೆದು ಬ್ಲಾಕ್ ಮೇಲ್ ಮಾಡಿ ಹಣ ಮಾಡುತ್ತಾರೆelection-paid-news ಎಂಬ ಮಾತು ಕೇಳಿ ಬರುತ್ತಿತ್ತು. ಈ ‘ಅವಕಾಶ’ ವನ್ನು ಪತ್ರಕರ್ತರಿಂದ ಕಸಿದು ಕಂಪನಿಯೇ ಮಾಡುವಂತಾದರೆ, ಆ ಮೂಲಕವೂ ಸಂಸ್ಥೆಗೆ ಆದಾಯ ಬರುತ್ತದೆ ಎಂಬ ಆಲೋಚನೆ ಈ ಸಂಸ್ಥೆಗೆ ಬಹಳ ಹಿಂದೆಯೇ ಬಂದಂತಿದೆ.

ಪೇಯ್ಡ್ ನ್ಯೂಸ್ ಎಂಬ ಭ್ರಷ್ಟ ಚಟುವಟಿಕೆ ಹುಸಿ ಅಧಿಕೃತತೆಯನ್ನು ಪಡೆದದ್ದೂ ಹೀಗೆ. ಪತ್ರಕರ್ತರು ದುಡ್ಡು ಪಡೆದು ಸುದ್ದಿ ಮಾಡ್ತಾರೆ ಎಂಬ ಆರೋಪಗಳು ಇದ್ದ ಕಾಲದಲ್ಲಿ, ಮಾರ್ಕೆಟಿಂಗ್ ವಿಭಾಗದವರಿಗೆ ಬಂದ ಐಡಿಯಾವೇ ಪೇಯ್ಡ್ ನ್ಜೂಸ್. ಈಗ – ಆರ್.ಟಿ.ಐ ಅಡಿ ದಾಖಲೆ ಪಡೆಯಿರಿ, ಹೆದರಿಸಿ, ಬೆದರಿಸಿ ಸುದ್ದಿ ಮಾಡಿ. ಅಂತಹ ಕೆಲಸ ಮಾಡಲೆಂದೇ ಸಿಬ್ಬಂದಿ ನೇಮಿಸಿಕೊಳ್ಳಿ. ಅವರಿಗೆ ಒಳ್ಳೆಯ ಸಂಬಳ ಕೊಡಿ. ಹಾಗೂ, ಹೀಗೂ, ಅವರೇನಾದ್ರೂ ಇಂತಹದೇ ಚಟುವಟಿಕೆಗಳಿಂದ ಸ್ವಂತಕ್ಕೆ ದುಡ್ಡು ಮಾಡಿಕೊಳ್ಳುತ್ತಿದ್ದರೆ, ಕಣ್ಣು ಮುಚ್ಚಿಕೊಂಡು ಸುಮ್ಮನಿರಿ, ಆದರೆ ಕಂಪನಿಗೆ ಸಂದಾಯವಾಗುವುದನ್ನು ಮುಲಾಜಿಲ್ಲದೆ ಪಡೆಯಿರಿ ಎಂಬ ಸಂದೇಶ ಕಂಪನಿ ನಡೆಸುವವರಿಂದಲೂ ಬಂದಿರಬಹುದಲ್ವಾ?

ಶ್ರೀನಿವಾಸಗೌಡ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಈ ಹಿಂದೆ ಹಾಸನ, ಬೆಂಗಳೂರು, ನವದೆಹಲಿಗಳಲ್ಲಿ ಕೆಲಸ ಮಾಡಿದ್ದಾನೆ. ಪತ್ರಿಕೋದ್ಯಮದ ತನ್ನ ಅನುಭವಗಳನ್ನು ಕುರಿತಂತೆ ಮೀಡಿಯಾ ಡೈರಿ ಎಂಬ ಪುಸ್ತಕವನ್ನೂ ಬರೆದಿದ್ದಾನೆ. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಅನೇಕ ಉತ್ಸಾಹಿ ತರುಣ ಪತ್ರಕರ್ತರಂತೆ, ಭ್ರಷ್ಟರನ್ನು ಕಂಡು ಕ್ರುದ್ಧನಾಗಿದ್ದಾನೆ, ಅವರ ವಿರುದ್ಧ ಸುದ್ದಿ ಮಾಡಿದ್ದಾನೆ. ಅವನ ಪುಸ್ತಕದಲ್ಲಿನ ಕೆಲವು ಬರಹಗಳು ಅವನ ಈ ವ್ಯಕ್ತಿತ್ವವನ್ನು ತೆರೆದಿಡುತ್ತವೆ. ಬಹುಶಹ ಅಂತಹದೇ ಕಾರಣಕ್ಕೆ ಸುದ್ದಿವಾಹಿನಿಯೊಂದು ದೆಹಲಿಯಂತಹ ಊರಿಗೆ ವರ್ಗಮಾಡಿ ಕೆಲಸ ಮಾಡಿಸಿಕೊಳ್ಳುತ್ತೆ. ಆದರೆ ನಂತರ ಅವನ ದಿಕ್ಕು ಬದಲಾದಂತೆ ಕಾಣುತ್ತದೆ. ಮಾಧ್ಯಮವಲಯದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಆತ ಈ ಹಿಂದೆ ಒಬ್ಬ ಮಾಜಿ ಮಂತ್ರಿಯೊಬ್ಬರ ಪಾಲುದಾರಿಕೆಯಲ್ಲಿದ್ದ ಸುದ್ದಿವಾಹಿನಿಯೊಂದಕ್ಕೆ ಕೆಲಕಾಲ ಕೆಲಸ ಮಾಡಿದ. ಮಾಲೀಕರಲ್ಲಿ ಒಬ್ಬರಾದ ಮಂತ್ರಿಯ ಮೇಲೆ ಆರೋಪಗಳು ಕೇಳಿ ಬಂದಾಗ, ಆ ಬಗ್ಗೆ ಸುದ್ದಿ ಮಾಡುತ್ತಿದ್ದ ಪತ್ರಿಕೆಗಳಲ್ಲಿ ಪತ್ರಕರ್ತರನ್ನು ಸಂಪರ್ಕಿಸಿ ಅವರಿಗೆ ಮಂತ್ರಿಯ ಹೇಳಿಕೆಗಳನ್ನು ತಲುಪಿಸುವ ಕೆಲಸ ಮಾಡಿದ್ದೂ ಉಂಟು. ಒಲ್ಲದ ಮನಸ್ಸಿನಿಂದಲೇ, ಮಾಲೀಕರ ಮಾತಿಗೆ ಮಣೆ ಹಾಕುತ್ತಿದ್ದ. ಆದರೆ ಆ ಹೊತ್ತಿಗಾಗಲೇ ಸುದ್ದಿಯ ಜಾಡು ಹಿಡಿಯಬೇಕಾದ ಪತ್ರಕರ್ತನ ಅಭ್ಯಾಸ ಬಿಟ್ಟವನಂತೆ ಕಾಣುತ್ತಿದ್ದ. ಉತ್ತರ ಪ್ರದೇಶದ ನಾಯಕಿ ಮಾಯಾವತಿಯನ್ನು ಸಂಸತ್ ನಲ್ಲಿ ಪಕ್ಕ ಕೂರಿಸಿಕೊಳ್ಳಲು ಆಕೆ ಬಾಡಿ ಸ್ಪ್ರೇ ಹಾಕುವುದಿಲ್ಲ ಎಂದು ದೂರುತ್ತಿದ್ದ ಮೇಲ್ಜಾತಿಯ ರಾಜಕಾರಣಿಗಳ ಬಗ್ಗೆ ತನ್ನ ಸಿಟ್ಟನ್ನು ದಾಖಲಿಸುತ್ತಿದ್ದ ಶ್ರೀನಿವಾಸಗೌಡ, ತನ್ನ ಬೆವರಿನ ಶ್ರಮದ ಹೊರತಾಗಿ ಗಳಿಸುವುದೆಲ್ಲವೂ ಅಮೇಧ್ಯ ಎಂಬುದನ್ನು ಮರೆಯಲಾರಂಭಿಸಿದ್ದೂ ಆಗಲೇ ಇರಬೇಕು.

ಸುವರ್ಣ ಸುದ್ದಿ ವಾಹಿನಿ ಗುರುವಾರ ‘ಪತ್ರಕರ್ತ ದೊಡ್ಡವನಲ್ಲ’ ಎಂಬ ಹೆಸರಿನಡಿ ಚರ್ಚೆ ನಡೆಸಿತು. ಟಿ.ಕೆ.ತ್ಯಾಗರಾಜ್,kannada-news-channels ಡಿ.ವಿ.ರಾಜಶೇಖರ್, ದಿನೇಶ್ ಅಮಿನ್ ಮಟ್ಟು ಹಾಗೂ ವಾಹಿನಿಯ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಚರ್ಚೆ ನಡೆಸಿದರು. ದಿನೇಶ್ ಒಂದು ಮಾತು ಹೇಳಿದರು, ’ದುಡ್ಡು ಮಾಡುವ ಉದ್ದೇಶ ಇದ್ದರೆ, ಈ ಕ್ಷೇತ್ರಕ್ಕೆ ಬರಬೇಡಿ. ಇಲ್ಲಿ ದುಡ್ಡಿಲ್ಲ. ಬೇಕಾದರೆ ಯಾವುದಾದರೂ ಬುಸಿನೆಸ್ ಮಾಡಿ, ಅಲ್ಲಿ ನಿಮಗೆ ಹೆಚ್ಚು ದುಡ್ಡು ಮಾಡಲು ಸಾಧ್ಯವಾಗಬಹುದು. ಇಲ್ಲಿ, ದುಡ್ಡು ಮಾಡುವುದಿರಲಿ, ಸಂಜೆಗಳೇ ನಿಮ್ಮ ದಿನಚರಿಯಿಂದ ಮಾಯವಾಗಿರುತ್ತವೆ.’ ಬಹುಶಃ ಇಂತಹ ಹಿರಿಯರ ಮಾತು ಕೇಳಿಯೇ ಅನ್ನಿಸುತ್ತೆ, ಶ್ರೀನಿವಾಸಗೌಡ ತನ್ನ ಗೆಳೆಯರ ಜೊತೆ ಸೇರಿ ಬಿರಿಯಾನಿ ಅಡ್ಡಾ ಎಂಬ ಹೋಟೆಲ್ ಮಾಡಿದ್ದು. ರುಚಿಕಟ್ಟಾದ ಬಿರಿಯಾನಿ ಮಾಡಿಕೊಟ್ಟರೆ, ಉಂಡವರು ಕಾಸು ಕೊಡ್ತಾರೆ. ಅದು ಪಕ್ಕಾ ಬ್ಯುಸಿನೆಸ್. ನಿಯತ್ತಾಗಿ ಹಣ ಗಳಿಸಬಹುದು.

ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಟಿವಿ ಮಾಧ್ಯಮಕ್ಕೆ ಹಿಂತಿರುಗಿದ. ಮೇಲಾಗಿ, ಸುದ್ದಿವಾಹಿನಿ ಬಿತ್ತರಿಸಿದ ಹೇಳಿಕೆ ನಿಜವೇ ಆಗಿದ್ದಲ್ಲಿ, ಕೆಲಸ ಕೊಟ್ಟ ಕಂಪನಿ, ಬಾಸ್ ಗಳು ಆರ್.ಟಿ.ಐ ಅಡಿ ಅರ್ಜಿ ಹಾಕಲು ಹೇಳಿದರು! ಒಬ್ಬ ವ್ಯಕ್ತಿ ಭ್ರಷ್ಟನಾಗುತ್ತಾನೆಂದರೆ, ಅವನ ತಪ್ಪುಗಳಲ್ಲಿ ಅವನ ಸುತ್ತಲಿನವರು ಪ್ರಚೋದಿಸದೇ ಇರಬಹುದು. ಆದರೆ ಎಚ್ಚರಿಸದೇ ಇರುವುದೂ ತಪ್ಪಲ್ಲವೇ?

ಇತರೆ ಭ್ರಷ್ಟರು:
ಪತ್ರಕರ್ತರ ಮಧ್ಯೆ ಇರುವ ಭ್ರಷ್ಟರ ಬಗ್ಗೆ ಚರ್ಚೆ ಇದು ಮೊದಲಲ್ಲ. ಕೆಲ ತಿಂಗಳುಗಳ ಹಿಂದಷ್ಟೆ ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಮಾಧ್ಯಮದವರ ಮುಂದೆ ಆನ್ ರೆಕಾರ್ಡ್ ಹೇಳಿದ್ದ ಮಾತು ನೆನಪಿಗೆ ಬರುತ್ತೆ. “ಒಬ್ಬ “ಸಂಪಾದಕರು” (ಕುಮಾರಸ್ವಾಮಿ ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರು) ನನ್ನ ಬಳಿ ಬಂದು ಮೈನಿಂಗ್ ಮಾಡಲು 500 ಎಕರೆಯಷ್ಟು ಜಮೀನು ಮಾಡಿಕೊಡಿ ಎಂದು ಕೇಳಿದ್ದರು” ಎಂದು ಹೇಳಿದ್ದರು.Deccan Herald - Mining Payments ಆ ಬಗ್ಗೆ ಚರ್ಚೆಯಾಗಲೇ ಇಲ್ಲ. ಎರಡು ಮೂರು ವರ್ಷಗಳ ಹಿಂದೆ ಕಬ್ಬಿಣದ ಅದಿರು ಹಗರಣದ ರೂವಾರಿಗಳಿಂದ ಅನೇಕರಿಗೆ ಹಣ ಸಂದಾಯವಾದ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಬಂದಾಗಲೂ, ಕೆಲ ಹೆಸರುಗಳು ಬಹಿರಂಗವಾಗಿದ್ದವು. ಆ ಮಾಹಿತಿ ಕೂಡಾ ಲೋಕಾಯುಕ್ತರ ಕಡತಗಳಲ್ಲಿದೆ. ಅವೆಲ್ಲವೂ ಎಂದೋ ಬಹಿರಂಗವಾಗಬೇಕಿತ್ತು ಮತ್ತು ಚರ್ಚೆಯಾಗಬೇಕಿತ್ತು. ಆದರೆ, ಕೆಲವರು ಅಂತಹವರ ಬಗ್ಗೆ ಹಾಡುಕಟ್ಟಿಕೊಂಡು ಭಜನೆಗೆ ಇಳಿದಿದ್ದಾರೆ. ತಪ್ಪು-ಸರಿಗಳ ವ್ಯತ್ಯಾಸ ಗೊತ್ತಿಲ್ಲದವರಿಂದ ಪತ್ರಿಕೋದ್ಯಮಕ್ಕೆ ಏನೂ ಲಾಭ ಇಲ್ಲ; ನಷ್ಟವೇ ಎಲ್ಲ.

ಹಸಿದ ಹೊಟ್ಟೆ ಅನ್ನವನ್ನು ಮಾತ್ರ ಹುಡುಕುತ್ತದೆ


– ಡಾ.ಎಸ್.ಬಿ. ಜೋಗುರ 


“ಅನ್ನ ಭಾಗ್ಯ” ಯೋಜನೆಯ ಬಗ್ಗೆ ಅನೇಕ ಹೊಟ್ಟೆ ತುಂಬಿದವರು ಮಾತನಾಡಿದ್ದಾಯಿತು. ಹಾಗೆಯೇ ಜನ ಸೋಮಾರಿಗಳಾಗುತ್ತಾರೆ ಎನ್ನುವ ಕಳಕಳಿಯನ್ನೂ ತೋರಿದ್ದಾಯಿತು. ಸೋಮಾರಿಗಳಾಗಿದ್ದವರು ಎಲ್ಲ ಭಾಗ್ಯಗಳನ್ನು ಮೀರಿಯೂ ಸೋಮಾರಿಗಳಾಗಿರುತ್ತಾರೆ. ನಿರಂತರವಾಗಿ ದುಡಿಯುವವರು ಎಲ್ಲ ವರ್ಗಗಳಲ್ಲಿ ಇರುವ ಹಾಗೆ, ಎಲ್ಲ ಸಂದರ್ಭಗಳಲ್ಲಿಯೂ ಸೋಮಾರಿಗಳಾಗಿ ಬದುಕುವವರು ಕೂಡಾ ಎಲ್ಲ ವರ್ಗಗಳಲ್ಲಿ ಇದ್ದೇ ಇದ್ದಾರೆ. ಈ ಎರಡೂ ಬಗೆಯ ಜನ ಸಮೂಹಗಳು ಸರ್ಕಾರದ ಯಾವುದೇ ಸೌಲಭ್ಯಗಳಿಗೆ ಸೀಮಿತವಾಗಿಲ್ಲ. ಚರಿತ್ರೆಯುದ್ಧಕ್ಕೂ ಆಹಾರ ಧಾನ್ಯಗಳ ಬೆಲೆ ಮತ್ತು ಪೂರೈಕೆ ಅನೇಕ ಬಗೆಯ ನಾಗರಿಕ ಸಂಘರ್ಷಗಳಿಗೆ ಎಡೆಮಾಡಿಕೊಟ್ಟಿರುವ ಸತ್ಯವನ್ನು ನಾವಾರೂ ಮರೆಯಬಾರದು. 18 ನೇ ಶತಮಾನದಲ್ಲಿ ಜರುಗಿದ ಮ್ಯಾಡ್ರಿಡ್ ಹಿಂಸೆ, ಪ್ರೆಂಚ್ ಕದನಗಳು ಆಹಾರದ ಹಾಹಾಕಾರವನ್ನೇ ಆಧರಿಸಿದ್ದವು. ರೋಮ್ ಮತ್ತು ಈಜಿಪ್ತಗಳಲ್ಲಿಯೂ ಈ ಬ್ರೆಡ್ ಗಾಗಿ ಹೋರಾಟಗಳು ನಡೆದಿವೆ. ಆಹಾರದ ಕೊರತೆ ಮತ್ತು ಬೆಲೆ ಏರಿಕೆ ಹಿಂಸೆಗೆ ಎಡೆ ಮಾಡಿಕೊಟ್ಟಿರುವದಿದೆ. 2008 ರ ಸಂದರ್ಭದಲ್ಲಿ ಆಹಾರಕ್ಕಾಗಿ ಕದನಗಳು, ಹಿಂಸೆಗಳು ಬಾಂಗ್ಲಾದೇಶದಲ್ಲಿ, ಹೈತಿಯಲ್ಲಿ ಇಂಡೋನೇಶಿಯಾದಲ್ಲಿ, ಉಜಬೆಕಿಸ್ಥಾನದಲ್ಲಿ, ಬೊಲಿವಿಯಾದಲ್ಲಿ, ಮೊಜಾಂಬಿಕ್ ಮತ್ತು ಕೆಮರೂನ್ ದಲ್ಲಿ ಜರುಗಿರುವದನ್ನು ಮರೆಯುವದಾದರೂ ಹೇಗೆ..? ಆಗ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿರುವದಿದೆ. india-poverty-hungerಆಹಾರಧಾನ್ಯಗಳ ಬೆಲೆಗಳು ನೇರವಾಗಿ ರಾಜಕೀಯ ಚಟುವಟಿಕೆಗಳನ್ನು ಪ್ರಭಾವಿಸುವ, ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಜಾಗೃತವಾಗಿ ಆಹಾರದ ಬೆಲೆಗಳನ್ನು ಕಡಿಮೆ ಮಾಡುವಲ್ಲಿ, ನಿಯಂತ್ರಿಸುವಲ್ಲಿ ಹರಸಾಹಸ ಮಾಡುತ್ತಲಿವೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಜುಟ್ಟಕ್ಕೆ ಮಲ್ಲಿಗೆ ಹೂ ಎನ್ನುವ ಮಾತು ಸಾರ್ವತ್ರಿಕವಲ್ಲ. ಹಸಿದವನ ಮುಂದೆ ಅನ್ನವನ್ನಿಡಬೇಕೇ ಹೊರತು ವೇದಾಂತವನ್ನಲ್ಲ ಎನ್ನುವ ಮಾತು ಮಾತ್ರ ಸಾರ್ವತ್ರಿಕ.

2008 ರ ಮೇ ತಿಂಗಳಲ್ಲಿ ರೋಮ್ ದಲ್ಲಿ ಜರುಗಿದ ವಿಶ್ವ ಆಹಾರ ಸಮ್ಮೇಳನದಲ್ಲಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ನಾಯಕರು ತಮ್ಮಲ್ಲಿಯ ಆಹಾರ ಸಮಸ್ಯೆಯನ್ನು ಕುರಿತು ಮಾತನಾಡಿದರು. ಎಲ್ಲರಿಗಿಂತಲೂ ವಿಶಿಷ್ಟವಾದ ರೀತಿಯಲ್ಲಿ ಮತ್ತು ಗಮನ ಸೆಳೆಯುವ ಹಾಗೆ ಮಾತನಾಡಿದವರು ಜಿಂಬ್ವಾಬೆಯ ಅಧ್ಯಕ್ಷ ಮುಗಾಬೆ. ತನ್ನ ಜನರ ಹಸಿವು ಮತ್ತು ಅಲ್ಲಿಯ ಆಹಾರ ಸಮಸ್ಯೆಯ ಬಗ್ಗೆ ವಸ್ತುನಿಷ್ಟವಾಗಿ ಮಾತನಾಡಿ ಇಡೀ ವಿಶ್ವದ ಗಮನ ಸೆಳೆದರು. ಭಾರತ ಮತ್ತು ಚೈನಾದಂತ ರಾಷ್ಟ್ರಗಳು ತಮ್ಮ ದೇಶಕ್ಕೆ ಬೇಕಾಗಬಹುದಾದ ಆಹಾರವನ್ನು ಉತ್ಪಾದಿಸುವಲ್ಲಿ ಸಮರ್ಥರಾಗುವ ಜೊತೆಯಲ್ಲಿ ಸ್ವಾವಲಂಬನೆಯನ್ನೂ ಸಾಧಿಸಿಕೊಂಡವು. ಅಂದ ಮಾತ್ರಕ್ಕೆ ಭಾರತ ಮತ್ತು ಚೈನಾಗಳಲ್ಲಿ ಹಸಿವು, ಬಡತನ ಇಲ್ಲವೆಂದಲ್ಲ. ಒಂದು ದೇಶದ ರಾಜಕೀಯ ಸುಭದ್ರತೆಯಲ್ಲಿ ಆಹಾರ ಉತ್ಪಾದನೆಗಳ ಬೆಲೆ ಇಳಿಕೆ ಇಲ್ಲವೇ ಬಡವರಿಗಾಗಿ ಈ ಬಗೆಯ ಯೋಜನೆಗಳು ತೀರಾ ಅವಶ್ಯಕ. ಇನ್ನು ಅನ್ನಭಾಗ್ಯ ಎನ್ನುವುದು ಯಾವುದೋ ಒಂದು ಐಷಾರಾಮಿ ಯೋಜನೆಗೆ ಸಂಬಂಧಿಸಿಲ್ಲ. ಸರಕಾರ ಒಂದೊಮ್ಮೆ ಬಡವರಿಗೆ ಒಂದಷ್ಟು ಮೈಸೂರ ಸ್ಯಾಂಡಲ್ ಸೋಪ್ ಉಚಿತವಾಗಿ ಕೊಡುತ್ತಿದ್ದರೆ ಅಪಸ್ವರ ಎತ್ತಬಹುದು, ರೇಷ್ಮೆ ಸೀರೆ ಕೊಡುತ್ತಿದ್ದರೆ ಆಗಲೂ ಅಪಸ್ವರ ಎತ್ತಬಹುದು ಅನ್ನ Streetchildrenಎನ್ನುವುದು ಪಾಪಿ ಪೇಟ್ ಕಾ ಸವಾಲಿಗೆ ಸಂಬಂಧಿಸಿದೆ. ನಮ್ಮಲ್ಲಿ ಇಂದಿಗೂ ಅಪೌಷ್ಟಿಕತೆಯಿಂದ ಸಾಯುವ ಮಕ್ಕಳ ಪ್ರಮಾಣ ಕಡಿಮೆಯಿಲ್ಲ. ಅಪೌಷ್ಟಿಕತೆ ಎನ್ನುವುದು ಆಹಾರದ ಕೊರತೆಯಿಂದ ಉಧ್ಬವವಾಗಬಹುದಾದ ಸಮಸ್ಯೆ.

ಅಪೌಷ್ಟಿಕತೆಯಲ್ಲಿ ಇಡಿಯಾಗಿ ಎರಡು ಪ್ರಕಾರಗಳಿವೆ ಒಂದನೆಯದು ಪ್ರೋಟೀನ್ ಎನರ್ಜಿ ಮ್ಯಾಲ್‌ನ್ಯುಟ್ರಿಶನ್ ಅಂದರೆ ಸೇವಿಸುವ ಕ್ಯಾಲೊರಿ ಮತ್ತು ಪ್ರೋಟಿನ್ ಕೊರತೆಯಿಂದಾಗಿ ಸೃಷ್ಟಿಯಾಗುವ ಅಪೌಷ್ಟಿಕತೆ. ಇನ್ನೊಂದು ಮೈಕ್ರೊನ್ಯುಟ್ರಿಯಂಟ್ ಡೆಫಿಸಿಯನ್ಸಿ ಅಂದರೆ ವಿಟಾಮಿನ್ ಮತ್ತು ಮಿನರಲ್ ಗಳ ಕೊರತೆಯಿಂದ ಉದ್ಭವವಾಗುವ ಅಪೌಷ್ಟಿಕತೆ. ಮೊದಲನೆಯದು ಶರೀರದ ಬೆಳವಣಿಗೆಯಲ್ಲಿ ಬಹಳ ಮುಖ್ಯ ಅದರ ಕೊರತೆಯುಂಟಾದರೆ ಶರೀರ ಕೃಷವಾಗತೊಡಗುತ್ತದೆ ಅದು ಬೇರೆ ಬೇರೆ ತೊಂದರೆಗಳಿಗೂ ಕಾರಣವಾಗುತ್ತದೆ. ಸಂಯುಕ್ತರಾಷ್ಟ್ರ ಸಂಘದ ವರದಿಯಂತೆ 2012-2014 ರ ಅವಧಿಯಲ್ಲಿ ಇಡೀ ವಿಶ್ವದಲ್ಲಿ ಸುಮಾರು 805 ಮಿಲಿಯನ್ ಜನತೆ ಈ ಬಗೆಯ ಅಪೌಷ್ಟಿಕತೆಯ ಕೊರತೆಯಿಂದ ಬಳಲುವವರಿದ್ದಾರೆ. ಪ್ರತಿ 9 ಜನರಲ್ಲಿ ಒಬ್ಬಾತ ಆಹಾರ ಕೊರತೆಯಿಂದ ಬಳಲುವವನಿದ್ದಾನೆ. ಈ 805 ಮಿಲಿಯನ್ ಜನಸಂಖ್ಯೆಯಲ್ಲಿ 790 ಮಿಲಿಯನ್ ಜನರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಯೇ ಇದ್ದಾರೆ. ಸಬ್ ಸಹರಾನ್ ಆಫ್ರಿಕಾ ಮತ್ತು ಆಫ್ರಿಕಾ, ಏಶ್ಯಾ ಅದರಲ್ಲೂ ದಕ್ಷಿಣ ಏಷ್ಯಾದ ಭಾಗಗಳಲ್ಲಿ ಆಹಾರದ ಕೊರತೆ ತೀವ್ರವಾಗಿದೆ. 2012 ರ ಸಂದರ್ಭದಲ್ಲಿ ಜಾಗತಿಕ ಹಸಿವಿನ ಸೂಚ್ಯಾಂಕ ಮಾಡಿದ ಸಮೀಕ್ಷೆಯಲ್ಲಿ ಮೂರು ಮುಖ್ಯ ಸಂಗತಿಗಳನ್ನು ಗಮನಹರಿಸಿ ಅದು ಅಧ್ಯಯನ ಮಾಡಿತ್ತು. ಒಂದನೆಯದು ಸತ್ವಭರಿತ ಆಹಾರದ ಕೊರತೆಯ ಜನಸಮೂಹದ ಪ್ರಮಾಣ, ಎರಡನೆಯದು ಶಿಶುವಿನ ಮ್ರಣ ಪ್ರಮಾಣ, ಮೂರನೇಯದು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಮಕ್ಕಳ ಪ್ರಮಾಣ. cooked-riceಈ ಮೂರು ಸಂಗತಿಗಳನ್ನು ಆದರಿಸಿ ಮಾಡಲಾದ ಸಮೀಕ್ಷೆಯ ಪ್ರಕಾರ 79 ರಾಷ್ಟ್ರಗಳ ಪೈಕಿ ಭಾರತ 65 ನೇ ಸ್ಥಾನದಲ್ಲಿರುವ ಬಗ್ಗೆ ವರದಿಯಾಗಿದೆ. 2008 ರ ಸಂದರ್ಭದಲ್ಲಿ ಭಾರತೀಯ ರಾಜ್ಯಗಳ ಹಸಿವಿನ ಸೂಚ್ಯಾಂಕದ ಪ್ರಕಾರ ದೇಶದ ಬೇರೆ ಬೇರೆ ರಾಜ್ಯಗಳ ಸ್ಥಿತಿ ಬೇರೆ ಬೇರೆಯಾಗಿದೆ. ದೇಶದ ಸುಮಾರು 12 ರಾಜ್ಯಗಳು ಆಹಾರದ ವಿಷಯವಾಗಿ ಸಂಕಷ್ಟದಲ್ಲಿವೆ. ಅದರಲ್ಲೂ ಮಧ್ಯಪ್ರದೇಶ ತೀರ ಗಂಭೀರವಾದ ಸ್ಥಿತಿಯಲ್ಲಿದೆ ಎಂದು ವರದಿ ಆಗಿರುವದಿದೆ. ಸತ್ವಭರಿತ ಆಹಾರ ಮತ್ತು ಅಭಿವೃದ್ಧಿ ಸೂಚ್ಯಾಂಕದ ವಿಷಯದಲ್ಲಿ ದೇಶದ 12 ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲಾಗಿದೆ. ಅದರಲ್ಲಿ ಹತ್ತು ರಾಜ್ಯಗಳ ಶ್ರೇಣಿ ಹೀಗಿದೆ. ಮೊದಲ ಸ್ಥಾನದಲ್ಲಿ ಕೇರಳ, ಎರಡನೆಯ ಸ್ಥಾನ ಹರಿಯಾಣಾ, ಮೂರನೇಯ ಸ್ಥಾನ ತಮಿಳುನಾಡು, ನಾಲ್ಕನೇಯ ಸ್ಥಾನದಲ್ಲಿ ಗುಜರಾತ, ಐದನೇಯ ಸ್ಥಾನದಲ್ಲಿ ಮಹಾರಾಷ್ಟ್ರ, ಆರನೇಯ ಸ್ಥಾನದಲ್ಲಿ ಕರ್ನಾಟಕ, ಏಳನೇ ಸ್ಥಾನದಲ್ಲಿ ಆಂದ್ರಪ್ರದೇಶ, ಎಂಟನೆಯ ಸ್ಥಾನದಲ್ಲಿ ಆಸ್ಸಾಂ, ಒಂಬತ್ತನೇಯ ಸ್ಥಾನದಲ್ಲಿ ಓಡಿಸಾ ಹತ್ತನೇಯ ಸ್ಥಾನದಲ್ಲಿ ರಾಜಸ್ಥಾನ ಇತ್ತು. ಆದರೆ ಯುನಿಸೆಫ್ನ ರಾಪಿಡ್ ಸರ್ವೆ ಆಫ್ ಚಿಲ್ಡ್ರನ್ ಎನ್ನುವ ಸಂಸ್ಥೆ ದೇಶವ್ಯಾಪಿ ಕೈಗೊಂಡ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ 2013-14 ರಲ್ಲಿ ಪರಿಸ್ಥಿತಿ ತೀರಾ ಭಿನ್ನವಾಗಿಲ್ಲ. ಈಗಲೂ ಸುಮರು 53 ಪ್ರತಿಶತ 5 ವರ್ಷದಳಗೊಳ ಹೆಣ್ಣು ಮಕ್ಕಳು ಕಡಿಮೆ ತೂಕದವರಾಗಿದ್ದಾರೆ. ಉತ್ತರಪ್ರದೇಶದಲ್ಲಿ ಸುಮರು 50 ಪ್ರತಿಶತ ಮಕ್ಕಳ ಬೆಳವಣಿಗೆ ಕೃಶವಾಗಿದೆ ಎನ್ನುವ ಅಂಶವನ್ನು ಹೊರಹಾಕಿದೆ ಜೊತೆಗೆ ಗ್ರಮೀಣ ಭಾಗಗಳಲ್ಲಿ ನಗರ ಪ್ರದೇಶಗಳಿಗಿಂತಲೂ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಪ್ರಮಾಣ ಹೆಚ್ಚಿಗಿದೆ. ಗ್ರಾಮೀಣ ಭಾಗಗಳಲ್ಲಿ ಸುಮಾರು 42 ಪ್ರತಿಶತ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುವವರಿದ್ದಾರೆ.

ಆಹಾರದ ವಿಷಯವಾಗಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಮೂರು ರೀತಿಯ ಸಮೂಹಗಳನ್ನು ಗುರುತಿಸಿರುವದಿದೆ ಒಂದನೆಯದಾಗಿhunger04-061 ವರ್ಷವಿಡೀ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದಿರುವ ಕುಟುಂಬಗಳು, ಎರಡನೆಯದಾಗಿ ವರ್ಷದ ಕೆಲವು ತಿಂಗಳುಗಳಲ್ಲಿ ತೊಂದರೆಯನ್ನು ಎದುರಿಸುವ ಕುಟುಂಬಗಳು, ಮೂರನೆಯದು ವರ್ಷದುದ್ದಕ್ಕೂ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದದೇ ಇರುವವರು. ಇನ್ನು ಈ ಮೇಲಿನ ಮೂರು ಪ್ರಕಾರಗಳು ದೇಶದ ಉದ್ದಗಲಕ್ಕೂ ಕಂಡು ಬರುವ ಸಮೂಹಗಳು. ಮೊದಲನೆಯ ಸಮೂಹಗಳಿಗೆ ಈ ಆಹಾರ ಸುಭದ್ರತೆಯ ಪ್ರಶ್ನೆಯೇ ಬರುವದಿಲ್ಲ. ಇನ್ನು ಎರಡನೆಯವರಿಗೆ ಸಂಕಟ ಬಂದಾಗ ವೆಂಕಟರಮಣ. ನಿಜವಾಗಿಯೂ ಆಹಾರದ ಸುಭದ್ರತೆ ಮತ್ತು ಹಕ್ಕಿನ ಪ್ರಶ್ನೆ ಇದ್ದದ್ದೇ ಮೂರನೇಯ ಜನಸಮೂಹದವರಿಗಾಗಿ. ಇವರು ಹಸಿವು ಮತ್ತು ಕೊರತೆಗಳ ನಡುವೆಯೇ ದಿನದೂಡುವವರು. ಎರಡನೆಯ ಮತ್ತು ಮೂರನೇಯ ಪ್ರರೂಪದ ಕುಟುಂಬದ ವಿಷಯಗಳ ಪ್ರಶ್ನೆ ಬಂದರೆ ವರ್ಷದ ಕೆಲವು ತಿಂಗಳುಗಳಲ್ಲಿ ಆಹಾರ ಧಾನ್ಯಗಳ ಕೊರತೆಯ ವಿಷಯವಾಗಿ ಪಶ್ಚಿಮ ಬಂಗಾಲ ಮೊದಲ ಸ್ಥಾನದಲ್ಲಿದ್ದರೆ, ವರ್ಷವಿಡೀ ಆಹಾರ ಧಾನ್ಯಗಳ ಕೊರತೆ ಎದುರಿಸುವ ರಾಜ್ಯಗಳ ಸಾಲಲ್ಲಿ ಆಸ್ಸಾಂ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಪೌಷ್ಟಿಕತೆಯ ಕೊರತೆ ಮತ್ತು ಕಡಿಮೆ ತೂಕದ ಮಕ್ಕಳ ವಿಷಯವಾಗಿ ಮಾತನಾಡುವದಾದರೆ ಭಾರತದಲ್ಲಿ 217 ಮಿಲಿಯನ ಜನಸಂಖ್ಯೆ ಹೆಚ್ಚೂ ಕಡಿಮೆ ಇಂಡೊನೇಷಿಯಾದ ಒಟ್ಟು ಜನಸಂಖೆಯಷ್ಟು ಜನ ನಮ್ಮಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವ ಬಗ್ಗೆ ಸಮೀಕ್ಷೆಯಲ್ಲಿ ವರದಿಯಾಗಿದೆ. ಹಸಿರು ಕ್ರಾಂತಿಗಿಂತಲೂ ಮೊದಲು ದೇಶದಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ ಜನ ಅಪಾರವಾಗಿ ಸಾಯುತ್ತಿದ್ದರು. ಆಗ ಮರಣ ಪ್ರಮಾಣ ಸಹಜವಾಗಿ ಹೆಚ್ಚಾಗುತ್ತಿತ್ತು. ಈಗ ಅಂಥ ಬರಗಾಲಗಳಿಲ್ಲ. ಆದರೆ ಈ ಬಗೆಯ ಸತ್ವಭರಿತ ಆಹಾರದ ಕೊರತೆಯಿಂದಾಗಿ ಸಾಯುವವರ ಪ್ರಮಾಣ ಆಗಿನ ಬರಗಾಲಗಳಿಗಿಂತಲೂ ಹೆಚ್ಚಾಗಿದೆ. child-labourಇದನ್ನು ಗಮನದಲ್ಲಿಟ್ಟುಕೊಂಡೇ ಜನೆವರಿ 2011 ರ ಸಂದರ್ಭದಲ್ಲಿ ಪ್ರಧಾನಿ ಮನಮೋಹನ ಸಿಂಗ್ ರವರು ‘ನಮ್ಮಲ್ಲಿ ಹಸಿವು ಮತ್ತು ಅಪೌಷ್ಟಿಕತೆ ಎನ್ನುವದು ರಾಷ್ಟ್ರ ತಲೆತಗ್ಗಿಸುವಂತಿದೆ’ ಎಂದಿದ್ದರು.

ಹಾಗೆ ನೋಡಿದರೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ಇರಲಿ ಇಲ್ಲವೇ ಅನ್ನ ಭಾಗ್ಯ ಯೋಜನೆ ಇರಲಿ ನಮಗಿಂತಲೂ ಮೊದಲು ಆರಂಭಿಸಿದವರು ನೆರೆಯ ತಮಿಳುನಾಡು. ನಮ್ಮಲ್ಲಿ ಈಗ ಆಹಾರ ಉತ್ಪಾದನೆಯ ಕೊರತೆಯಿಲ್ಲ. ಸಾಕಷ್ಟು ಆಹಾರಧಾನ್ಯವನ್ನು ಸಂಗ್ರಹಿಸಿಡಲಾಗದೇ ಹಾಳಾಗುವದನ್ನು ನಾವೇ ನೋಡಿದ್ದೇವೆ. ಹುಳ ಹಿಡಿದು ಹಾಳಾಗಿ ತಿಪ್ಪೆ ಸೇರುವ ಬದಲು ಬಡ ಜನತೆಯ ಹೊಟ್ಟೆ ಸೇರುವದರಲ್ಲಿಯೇ ಒಂದರ್ಥವಿದೆ ಎನಿಸುವದಿಲ್ಲವೆ..? ಸಾಕಷ್ಟು ನಿರರ್ಥಕವಾದ ಕಾರಣಗಳಿಗಾಗಿ ಕೊಟಿಗಟ್ಟಲೆ ದುಡ್ಡು ಸುರಿಯುವಾಗ, ನಮ್ಮದೇ ಬಡ ಜನರಿಗೆ ಅನ್ನವನ್ನು ನೀಡುವ ಯೋಜನೆ ಅದು ಹೇಗೆ ವ್ಯರ್ಥವಾಗಿ ಕಂಡಿತೊ ಗೊತ್ತಿಲ್ಲ. ಕೆಲ ಬಾರಿಯಾದರೂ ನಾವು ರಾಜಕೀಯದಿಂದ ದೂರ ನಿಂತು ಯೋಚಿಸುವ, ಮಾತನಾಡುವ ಅಗತ್ಯವಿದೆ ಎನಿಸುವದರಲ್ಲಿಯೇ ನಮ್ಮ ಸಾಕ್ಷರತೆಗೆ ಬೆಲೆಯಿದೆ.

ಅಭಿವೃದ್ಧಿಯ ಫಲ ಕೃಷಿಕನನ್ನು ತಲುಪಬಲ್ಲುದೆ?

– ಪ್ರಸಾದ್ ರಕ್ಷಿದಿ

ಇಂದು ಎಲ್ಲ ಸರ್ಕಾರಗಳೂ ಅಭಿವೃಧ್ದಿಯ ಮಾತನ್ನು ನಿತ್ಯ ವಿಧಿಯ ಮಂತ್ರದಂತೆ ಪಠಿಸುತ್ತಿವೆ. ದೇಶ ಅಭಿವೃದ್ಧಿಯಾದರೆ ಉಳಿದೆಲ್ಲ ಸಮಸ್ಯೆಗಳೂ ತಾನಾಗಿಯೇ ನಿವಾರಣೆಯಾಗುತ್ತದೆ ಎಂಬಂತ ಮಾತನ್ನು ಅನೇಕ ರಾಜಕಾರಣಿಗಳು. ಹಲವರು ಸಾಮಾಜಿಕ ಕಾರ್ಯಕರ್ತರೂ ಆಡುತ್ತಿದ್ದಾರೆ. ಆದರೆ ಅಭಿವೃದ್ಧಿ ಎಂದರೇನು ಎಂಬುದಕ್ಕೆ ರಾಜಕೀಯ ಪಕ್ಷಗಳಲ್ಲಿ ಸಾಮಾಜಿಕ ಕಾರ್ಯಕರ್ತರಲ್ಲಿ ಚಿಂತಕರಲ್ಲಿ ಹಲವಾರು ನಮೂನೆಗಳು, ವಿಭಿನ್ನ ಅಭಿಪ್ರಾಯಗಳೂ ಇವೆ. ಇವೆರಡರಲ್ಲಿ ಎರಡು ಮುಖ್ಯಧಾರೆಯ ಚಿಂತನೆಯನ್ನು ನಾವು ಗಮನಿಸಬಹುದು.

ಮೊದಲನೆಯದಾಗಿ ಅಭಿವೃದ್ಧಿ ಎಂದರೆ, ಜನ ಸಾಮಾನ್ಯನ ಜೀವನ ಮಟ್ಟವನ್ನು ಸುಧಾರಿಸುವುದು ಅದಕ್ಕಾಗಿ ಹಲವು ಜನಪರ farmersಯೋಜನೆಗಳು, ಎಲ್ಲರಿಗೂ ಉದ್ಯೋಗ, ವಸತಿ, ಆಹಾರ ಭದ್ರತೆ, ವೈದ್ಯಕೀಯ ಸೌಲಭ್ಯ. ವಿದ್ಯಾಭ್ಯಾಸದ ಅವಕಾಶ ಇತ್ಯಾದಿಯನ್ನು ಸರ್ಕಾರದ ಮೂಲಕ ಒದಗಿಸುವುದು. ಹಲವು ಕ್ಷೇತ್ರಗಳಲ್ಲಿ ಅನಗತ್ಯ ಸ್ಪರ್ಧೆಯನ್ನು ನಿಯಂತ್ರಿಸಿ, ಸರ್ಕಾರವೇ ಹಲವು ಉದ್ಯಮಗಳನ್ನು ನಡೆಸುವುದು, ಸೇವಾ ಸೌಲಭ್ಯಗಳನ್ನುಗಳನ್ನು ಒದಗಿಸುವುದು,ಇತ್ಯಾದಿಗಳು.

ಎರಡನೇ ಮಾದರಿಯೆಂದರೆ, ಮೊದಲು ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಮಾಡುತ್ತ ಹೋಗುವುದು. ಅದಕ್ಕಾಗಿ ಸರ್ಕಾರದ ನಿಯಂತ್ರಣವನ್ನು ಕನಿಷ್ಟಗೊಳಿಸಿ ಖಾಸಗಿಯವರಿಗೆ ಉತ್ತೇಜನ ನೀಡುವುದು. ಉದ್ಯೋಗವಕಾಶಗಳು ಹೆಚ್ಚಿದಂತೆಲ್ಲ, ಎಲ್ಲಕಡೆ ಸ್ಪರ್ಧೆಗೆ ಅವಕಾಶ ನೀಡುವುದರಿಂದ ಉತ್ತಮ ಗುಣಮಟ್ಟದ ಸೇವೆ ಹಾಗೂ ಉತ್ಪನ್ನಗಳು, ಎರಡೂ ಜನರಿಗೆ ದೊರಕಿ ಅವನ ಜೀವನ ಮಟ್ಟ ತಾನಾಗಿಯೇ ಸುಧಾರಿಸುತ್ತದೆ. ಎನ್ನುವುದು.

ಭಾರತ ಸ್ವತಂತ್ರವಾದ ಮೊದಲ ಮೂವತ್ತೈದು ವರ್ಷಗಳು ಮೊದಲನೆಯ ಅಂದರೆ ಸಮಾಜವಾದಿ ನಮೂನೆಯ –ಚಿಂತನೆಯ ಸರ್ಕಾರಗಳಿದ್ದರೆ, ನಂತರದ ವರ್ಷಗಳಲ್ಲಿ ಎರಡನೆಯ, ಬಲಪಂಥೀಯ ವಾದದ ಆಡಳಿತವನ್ನು ಕಾಣುತ್ತಿದ್ದೇವೆ. ವಿಷೇಶವೆಂದರೆ ಎರಡೂ ಮಾದರಿಯ ಸರ್ಕಾರ- ಆಡಳಿತಗಳೂ ಅಭಿವೃದ್ಧಿಯನ್ನೇ ಮೂಲಗುರಿಯಾಗಿಸಿಕೊಂಡು ಆಡಳಿತ ನಡೆಸಿವೆ. ನಾನು ಉದ್ಧೇಶ ಪೂರ್ವಕವಾಗಿಯೇ ಯಾವುದೇ ಪಕ್ಷಗಳನ್ನು ಹೆಸರಿಸುತ್ತಿಲ್ಲ. ಯಾಕೆಂದರೆ ಮೇಲ್ನೋಟಕ್ಕೆ ಕಾಣುವ ಕೆಲವು ಮುಖವಾಡ ಸದೃಶ ಕಾರ್ಯಕ್ರಮಗಳನ್ನು ಹೊರತು ಪಡಿಸಿದರೆ ನಮ್ಮ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ದೊಡ್ಡಮಟ್ಟದ ಸೈದ್ಧಾಂತಿಕ ವೆತ್ಯಾಸವೂ ಇಲ್ಲ. ಆಡಳಿತಾತ್ಮಕ ಭಿನ್ನತೆಯೂ ಇಲ್ಲ.

ಹೀಗಿದ್ದರೂ ಭಾರತದ ಹಲವಾರು ಸಮಸ್ಯೆಗಳ ನಡುವೆಯೂ ಯಾವುದೇ ಅಭಿವೃದ್ದಿ ಆಗಿಯೇ ಇಲ್ಲವೆ? ಎಂದರೆ ಖಂಡಿತ ಇಂದು ನಾವು ಹಲವಾರು ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿ ಗಣನೀಯವಾಗಿಯೇ ಇದೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಕಲೆ, ಕ್ರೀಡೆ, ಉದ್ಯಮ ಹೀಗೆ ಎಲ್ಲ ವಿಚಾರಗಳಲ್ಲೂ ನಮ್ಮ ಸಾಧನೆ ಖಂಡಿತ ವಿಶ್ವವೇ ಗಮನಿಸುವಂತೆ ಇದೆ. ರಾಷ್ಟ್ರೀಯ ಉತ್ಪನ್ನ ಹಲವಾರು ಪಟ್ಟು ಹೆಚ್ಚಾಗಿದೆ. ಹಾಗೇ ಉದ್ಯೋಗಾವಕಾಶಗಳು ಹೆಚ್ಚಿವೆ. ಶ್ರೀಮಂತ ವರ್ಗ ಬಲೂನಿನಂತೆ ಉಬ್ಬಿದ್ದರೆ, ಮಧ್ಯಮ ವರ್ಗವೂ ದೊಡ್ಡ ಪ್ರಮಾಣದ ಫಲಾನುಭವಿಯಾಗಿದೆ. ಆದರೆ ಒಟ್ಟು ಏರಿಕೆಯಾಗಿರುವ ನಮ್ಮ ಜನಸಂಖ್ಯೆಯ ಪ್ರಮಾಣ ಮತ್ತು ತಲಾ ಆದಾಯವನ್ನು ಹೋಲಿಸಿದರೆ. ಕೆಳವರ್ಗದ, ಸಣ್ಣರೈತರ, ಕೂಲಿಕಾರ್ಮಿಕರ ಆದಾಯದಲ್ಲೂ ಸಾಕಷ್ಟು ಏರಿಕೆಯಾಗಿದ್ದು ಅವರ ಜೀವನ ಮಟ್ಟದಲ್ಲೂ ಬದಲಾವಣೆಯಾಗಿರುವುದು ಕಂಡುಬರುತ್ತದೆ. ಆದರೆ ನಮ್ಮ ಜನಸಂಖ್ಯೆಯ ಗಣನೀಯ ಭಾಗವಿನ್ನೂ ಬಡತನದಲ್ಲೇ ಉಳಿದಿದೆ. ಹಾಗೂ ಒಟ್ಟು ಸಂಪತ್ತಿನ ಹಂಚಿಕೆಯ ಅನುಪಾತ ಹಿಂದೆಂದಿಗಿಂತ ವಿಷಮವಾಗಿದೆ. ಇದು ಭಾರತದಾದ್ಯಂತ ರಾಜ್ಯದಿಂದ ರಾಜ್ಯಕ್ಕೆ ಮತ್ತೆ ರಾಜ್ಯಗಳೊಳಗೆ ಪ್ರಾದೇಶಿಕವಾಗಿಯೂ ಭಿನ್ನವಾಗಿದೆ. ಆದ್ದರಿಂದ ಸರ್ಕಾರ ಯೋಜಿಸುವ ಯಾವದೇ ಜನಪರ-ಅಭಿವೃದ್ದಿ ಯೋಜನೆಗಳು ನಮ್ಮ ಅಪಾರ ಪ್ರಾದೇಶಿಕ ಭಿನ್ನತೆ ಹಾಗೂ ಸಾಂಸ್ಕøತಿಕ ಬಹುತ್ವಗಳನ್ನು ಗಮನದಲ್ಲಿಟ್ಟುಕೊಂಡು. ಸ್ಥಳೀಯವಾಗಿ ರೂಪಿತವಾಗದಿದ್ದರೆ ನಿಶ್ಚಿತ ಪರಿಣಾಮವನ್ನು ಬೀರಲು ಅಸಮರ್ಥವಾಗುತ್ತದೆ. (ಉದಾ: ಉದ್ಯೋಗ ಖಾತ್ರಿಯಂತಹ ಯೋಜನೆಗಳು, ಪ್ರಾದೇಶಿಕ ಭಿನ್ನತೆ ಮತ್ತು ಅಗತ್ಯಗಳನ್ನು ಪರಿಗಣಿಸದೆ ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ತಂದದ್ದರಿಂದ ನಿಶ್ಚಿತ ಫಲವನ್ನೂ ನೀಡದೆ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಯಿತು.)

ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಅಭಿವೃದ್ಧಿಯು ಕೃಷಿಕ್ಷೇತ್ರವನ್ನು ಹೇಗೆ ತಲುಪಿದೆ, ಅದರ ಪರಿಣಾಮಗಳೇನಾಗಿವೆ ಎಂದು ಪರಿಶೀಲಿಸಬೇಕಾಗಿದೆ.

ಕೃಷಿವಲಯವೆಂದರೆ, ರೈತಾಪಿವರ್ಗ ಮಾತ್ರವಲ್ಲ ಭೂರಹಿತ, ಅಲ್ಪಸ್ವಲ್ಪ ಭೂಮಿಹೊಂದಿದ ಕೃಷಿ ಕೂಲಿಗಾರರು, ಕೃಷಿಕರನ್ನೇ ಅವಲಂಬಿಸಿ ಬದುಕುತ್ತಿರುವ ಕಮ್ಮಾರ, ಬಡಗಿ, ಗಾರೆಯವರು, ಹಳ್ಳಿಗಳಲ್ಲಿರುವ ಯಂತ್ರೋಪಕರಣಗಳ ರಿಪೇರಿಯವರು, ದರ್ಜಿಗಳು ಇತರ ಸಣ್ಣಪುಟ್ಟ ಉಪಕಸುಬುದಾರರು ಎಲ್ಲರೂ ಬರುತ್ತಾರೆ. ಇವರೆಲ್ಲರೂ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವುದರಿಂದ ಕೃಷಿಯ ಮೇಲಾಗುವ ಯಾವುದೇ ಪರಿಣಾಮವೂ ಇವರನ್ನೂ ಆವರಿಸಿಕೊಳ್ಳುತ್ತದೆ.

ಇದರೊಂದಿಗೆ ಗಮನಿಸಬೇಕಾದ ಮುಖ್ಯವಾದ ಸಂಗತಿಯೆಂದರೆ. ದೇಶದಲ್ಲಿ ಸಮಾಜವಾದೀ ಮಾದರಿಯ ಸರ್ಕಾರ ಇದ್ದ ಕಾಲದಲ್ಲಿ. ನಮ್ಮ ಹಳ್ಳಿಗಳಲ್ಲಿ ಪಾಳೇಗಾರೀ-ಜಮೀನ್ದಾರೀ ಸಂಬಂಧಗಳೇ ಮುಂದುವರೆದಿದ್ದವು. ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಭೂಸುಧಾರಣೆ ಜಾರಿಗೆ ಬಂದ ನಂತರವೂ, ಹಳ್ಳಿಗಳಲ್ಲಿ ಭೂರಹಿತ ಕೃಷಿಕೂಲಿಗಾರರ ಬದುಕಿನಲ್ಲಿ ಮಹತ್ತರ ಬದಲಾವಣೆಯೇನೂ ಆಗಿರಲಿಲ್ಲ. ಭೂಸುಧಾರಣೆಯ ಫಲಾನುಭವಿಗಳಾದ ಗೇಣಿದಾರರು, ಕೂಲಿಗಾರ ಪಾಲಿಗೆ ಭೂಮಾಲಿಕರಾಗಿ ಹಳೆಯ ಜಮೀನ್ದಾರೀ ಸಂಬಂಧಗಳಲ್ಲೇ ಮುಂದುವರೆದರು. ಆದರೆ ಈ ಪಾಳೇಗಾರೀ ಸ್ವರೂಪದ ಸಂಬಂಧಗಳು ಬದಲಾಗಲು ಪ್ರಾರಂಭವಾದದ್ದು. ಭಾರತ ಸಮಾಜವಾದಿ ಮಾದರಿಯನ್ನು ಬಿಟ್ಟು ಬಲಪಂಥೀಯ ಮಾದರಿ ಆಡಳಿತವನ್ನು ಪ್ರಾರಂಭಿಸಿದ ನಂತರವೇ. ಇದಕ್ಕೆ ಅನೇಕ ಕಾರಣಗಳಿವೆ.

ಇತ್ತೀಚಿನ ಎಲ್ಲ (ರಾಜ್ಯ-ಕೇಂದ್ರಗಳ) ರೈತರಬಗ್ಗೆ, ಕೃಷಿವಲಯದ ಬಗ್ಗೆ ಬಹಳ ಮಾತನಾಡುತ್ತಿವೆ. ಪ್ರತ್ಯೇಕ ಬಜೆಟ್ಟನ್ನೂ ತಂದಿವೆ. farmer-land-acquisition-2ಕೃಷಿವಲಯಕ್ಕೆಂದೇ ಹಲವಾರು ಯೋಜನೆಗಳನ್ನು-ಕಾರ್ಯಕ್ರಮಗಳನ್ನೂ ಘೋಷಣೆ ಮಾಡುತ್ತಿದೆ. ಆದರೆ ಹಳ್ಳಿಗಳು ಬರಡಾಗುತ್ತ, ದುಡಿಯುವ ಶಕ್ತಿಯಿರುವ ಯುವಜನತೆ ನಗರ ವಲಸೆ ಹೋಗುತ್ತಿದ್ದಾರೆ. ಯಾವ ಹಳ್ಳಿಯನ್ನು ಪ್ರವೇಶಿಸಿ ಪ್ರತಿಯೊಂದು ಮನೆಯಲ್ಲಿ ಪ್ರಶ್ನಿಸಿದರೆ ಮನೆಯಲ್ಲಿ ಒಬ್ಬನಾ(ಳಾ)ದರೂ ಬೆಂಗಳೂರು, ಮುಂಬೈ ಅಥವಾ ಇನ್ನಾವುದೇ ನಗರ ಇಲ್ಲವೇ ವಿದೇಶದಲ್ಲಿದ್ದಾರೆ. ಇವರಲ್ಲೂ ಅನೇಕರು ತಮ್ಮ ಜೀವನಾವಶ್ಯಕತೆ ತಕ್ಕಷ್ಟು ಮಾತ್ರ ಗಳಿಸುತ್ತಿದ್ದು ಹಳ್ಳಿಯಲ್ಲಿರುವ ತಮ್ಮ ಕುಟುಂಬದವರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಆದರೆ ಹೀಗೆ ಹೊರ ಹೋದವರಲ್ಲಿ ಗಣನೀಯವಾದ ಸಂಖ್ಯೆಯ ಜನ ತಮ್ಮ ಗಳಿಕೆಯ ಒಂದು ಪಾಲನ್ನು ತಮ್ಮ ಕುಟುಂಬಕ್ಕೆ ನೀಡುತ್ತಿದ್ದಾರೆ. ಇದರಿಂದಾಗಿ ಅವರ ಆರ್ಥಿಕ ಮಟ್ಟವೂ ಸುಧಾರಿಸಿದೆ. ಜೊತೆಯಲ್ಲೇ ಹಳ್ಳಿಗಳಲ್ಲೇ ಕೂಲಿಕಾರ್ಮಿಕರ ಕೊರತೆ ಉಂಟಾಗಿರುವುದರಿಂದ, ಭೂರಹಿತ ಕೂಲಿಯಾಳುಗಳು ಕೂಲಿಗಾಗಿ ಭೂಮಾಲಿಕರ ಮುಂದೆ ದೈನೇಸಿಯಾಗಿ ನಿಲ್ಲಬೇಕಾದ ಪರಿಸ್ಥಿತಿ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿ ದೇಶಾದ್ಯಂತ ಕೆಲವು ರಾಜ್ಯ-ಭಾಗಗಳಲ್ಲಿ ಕಂಡುಬಂದರೆ ಇನ್ನು ಕೆಲವು ಭಾಗಗಳಲ್ಲಿ ತೀವ್ರ ಬಡತನ ನಿರುದ್ಯೋಗವೇ ಮುಂದುವರೆದಿದೆ. ಈ ಪ್ರದೇಶಗಳಿಂದ ಜನರು ಕೂಲಿ-ಕೆಲಸಗಳಿಗಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು ನಿರಂತರವಾಗಿದೆ. ಉದಾಹರಣೆಗೆ ಕರ್ನಾಟಕದ ದಕ್ಷಿಣ ಒಳನಾಡು ,ಮಲೆನಾಡು ಹಾಗೂ ಕರಾವಳಿಯ ಭಾಗಗಳಲ್ಲಿ ಕೇವಲ ಮೂರು -ನಾಲ್ಕು ವರ್ಷಗಳ ಹಿಂದೆ ಕೃಷಿ ಸಾಧ್ಯವೇ ಇಲ್ಲವೆನ್ನುವಷ್ಟು ಕಾರ್ಮಿಕರ ಕೊರತೆ ಉಂಟಾಗಿತ್ತು. ಈಗ ಉದ್ಯೋಗವಕಾಶಗಳು ಕಡಿಮೆ ಇರುವ ಬಿಹಾರ, ಒರಿಸ್ಸಾ ಹಾಗೂ ಅಸ್ಸಾಮಿನಿಂದ ಸಾಕಷ್ಟು ಜನರು ವಲಸೆ ಬರುತ್ತಿದ್ದಾರೆ. ಆದರೆ ಇವರಿಗೆ ಈ ನೆಲದಲ್ಲಿ ಯಾವುದೇ ಸಂಬಂಧಗಳಿಲ್ಲದಿರುವುದರಿಂದ, ಇವರಿಗೆ ಸಂಬಳ ಸಾರಿಗೆ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಆಯ್ಕೆಯ ಸ್ವಾತಂತ್ರ್ಯ ಇದೆ. ಇಲ್ಲೇ ಇರುವ ಸ್ಥಳೀಯ ಕುಶಲ ಕರ್ಮಿಗಳು-ಕೂಲಿಕಾರರಿಗೂ ಸ್ವಲ್ಪಮಟ್ಟಿಗೆ ಚೌಕಾಸಿಯ ಬಲ ಬಂದಿರುವುದರಿಂದ ತಮ್ಮ ಕೂಲಿ ಮತ್ತು ಕೆಲಸದ ಪರಿಸ್ಥಿತಿ ಇನ್ನಿತರ ವಿಷಯಗಳ ಬಗ್ಗೆ ಮಾಲೀಕರೊಂದಿಗೆ ಮಾತು ಕತೆಗೆ ನಿಲ್ಲಬಲ್ಲರು. ಇವೆಲ್ಲದರಿಂದ ಹಳೆಯ ಪಾಳೇಗಾರೀ ಸಂಬಂಧಗಳಿಗೆ ಬದಲಾಗಿ ಭಂಡವಾಳಶಾಹಿ ವ್ಯವಸ್ಥೆಯ ಮಾಲೀಕ ನೌಕರ ಸಂಬಂಧಗಳು ಏರ್ಪಡುತ್ತಿವೆ. ಮತ್ತು ಹಣ ಮುಖ್ಯ ಭೂಮಿಕೆಗೆ ಬಂದಿದೆ.

ಇದರಿಂದಾಗಿ ತಮ್ಮ ಬೆಳೆಗೆ ತಾವೇ ಬೆಲೆ ನಿರ್ಧರಿಸಲಾಗದ ಅಸಹಾಯಕತೆಯಲ್ಲಿರುವ ಕೃಷಿಕರು,farmers-suicide ಕೂಲಿಕಾರ್ಮಿಕರು ಕೂಲಿ ಮತ್ತು ಇತರ ಸೌಲಭ್ಯಗಳಿಗಾಗಿ ಚೌಕಾಸಿ ಮಾಡುವುದನ್ನು ಕಂಡು “ಕೂಲಿಗಾರರೆಲ್ಲ ಹೆಚ್ಚಿಹೋಗಿದ್ದಾರೆಂದೂ ಯಾರೂ ಕೆಲಸ ಮಾಡುತ್ತಿಲ್ಲವೆಂದೂ, ಸರ್ಕಾರ ಅನೇಕ ಯೋಜನೆಗಳ ಮೂಲಕ ಇವರನ್ನು ಇನ್ನಷ್ಟು ಸೋಮಾರಿಗಳಾಗಿ ಮಾಡುತ್ತಿದೆ”ಯೆಂದೂ ದೂರುತ್ತಿರುತ್ತಾರೆ. ಎಲ್ಲ ವಿದ್ಯಮಾನಗಳ ಅರಿವಿರುವ ದೊಡ್ಡ ಭೂಮಾಲಕರೂ ಮತ್ತು ಕೆಲವರು ನಗರಪ್ರದೇಶದ ಮಧ್ಯಮ ವರ್ಗದವರು ಇವರೊಂದಿಗೆ ಅಲಂಕಾರಿಕವಾಗಿ ದನಿಗೂಡಿಸುತ್ತಾರೆ. ಇದರಿಂದಾಗಿಯೇ ಮಾಧ್ಯಮಗಳಲ್ಲಿ ಸರ್ಕಾರದ ಆಹಾರ ಭದ್ರತಾ ಕಾರ್ಯಕ್ರಮ ಮತ್ತು ಇತರ ಜನಪ್ರಿಯ ಯೋಜನೆಗಳ ಬಗ್ಗೆ ಪರ-ವಿರೋಧಗಳ ಯುದ್ಧವೇ ನಡೆಯುತ್ತಿರುತ್ತದೆ.

ಇಂದು ಯಾವುದೇ ಹಳ್ಳಿಗೆ ಹೋದರೂ, ಅಂಗಡಿಗಳಲ್ಲಿ ನೇತುಹಾಕಿರುವ ಹಲವಾರು ಬಗೆಯ ಬಣ್ಣಗಳ ಪ್ಯಾಕೆಟ್‍ಗಳು. ಖರ್ಚಾಗುವ, ಪೆಪ್ಸಿ-ಕೋಕಾಕೋಲಾ ಬಾಟಲಿಗಳು. ಅಲ್ಲೇ ಗುಟ್ಟಾಗಿ ಮಾರಾಟವಾಗುವ ಮಧ್ಯದ ಪ್ರಮಾಣ, ಮನೆಮನೆಗಳನ್ನು ತಲುಪಿರುವ ಸ್ಮಾರ್ಟ್‍ಫೋನ್‍ಗಳು, (ಹಳ್ಳಿಗಳಲ್ಲಿಂದು ಆಹಾರ ಪಧಾರ್ಥಗಳಿಗಿಂತ ಹೆಚ್ಚಿನ ಮೊತ್ತದ ಹಣ ಮೊಬೈಲ್ ಕರೆನ್ಸಿಗೆ ಖರ್ಚಾಗುತ್ತಿದೆ) ಇದನ್ನು ಕಂಡಾಗ, ಹೊರಗಿನಿಂದ ಬಂದವರಿಗೆ ಹಳ್ಳಿಗಳಿಂದು ಸಮೃದ್ಧವಾಗಿದೆ ಎನ್ನಿಸದೆ ಇರದು.

ಆದರೆ ನಿಜವಾದ ಸಮಸ್ಯೆಯಿರುವುದು ಹೊರಗಿನ ಯಾವ ಆದಾಯವೂ ಇಲ್ಲದ, ಕೃಷಿಯನ್ನು ಮಾತ್ರ ನಂಬಿ ಬದುಕುತ್ತಿರುವವರಲ್ಲಿ, ಮತ್ತು ನಾನಾ ಕಾರಣಗಳಿಂದ ದುಡಿಯಲು ಅಸಮರ್ಥರಾಗಿರುವ ಕೂಲಿಕಾರ್ಮಿಕರಲ್ಲಿ, ಹಾಗೂ ಮಿತ ಆದಾಯ ಆಥವಾ ನಿಶ್ಚಿತ ಆದಾಯವಿಲ್ಲದ ದರ್ಜಿ, ಟ್ಯಾಕ್ಸಿ-ರಿಕ್ಷಾ ಓಡಿಸುವವರು, ಸಣ್ಣ ಉದ್ಯೋಗಿಗಳು ಮುಂತಾದವರಲ್ಲಿ. ಇವರ ಸಂಖ್ಯೆಯೂ ಗಣನೀಯವಾಗಿದೆ. ಸಾಮಾನ್ಯವಾಗಿ ಕಷ್ಟನಷ್ಟಗಳಲ್ಲಿ ಸೋತು ಆತ್ಮಹತ್ಯೆಯೋ ಪಲಾಯನವೋ ಮಾಡುವವರು. ಇಲ್ಲವೇ ಎಲ್ಲವನ್ನೂ ಮಾರಿ ಬೀದಿ ಪಾಲಾಗುವವರು ಇವರಲ್ಲೇ ಹೆಚ್ಚಾಗಿದ್ದಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಆಬಿವೃದ್ಧಿ ಫಲ ಕೃಷಿಕ್ಷೇತ್ರಕ್ಕೆ ದೊರೆತಿದೆಯೆ ಅಥವಾ ಅದರ ಪರಿಣಾಮಗಳೇನು ಎಂದು ನೋಡಬೇಕಾದರೆ. ಇದನ್ನು ಮಾತ್ರ ಗಮನಿಸಿದರೆ ಸಾಲದು. naxalite24fo4ಅನ್ಯ ಆದಾಯಗಳನ್ನು ಹೊರತು ಪಡಿಸಿದರೆ ಕೃಷಿಕ್ಷೇತ್ರ ಹೇಗಿದೆ. ನಿಜವಾಗಿಯೂ ಅಭಿವೃಧ್ಧಿಯ ಫಲ “ಕೃಷಿಭಾರತ’ ವನ್ನು ತಲಪಿದೆಯೆ? ಇಲ್ಲದಿದ್ದರೆ ಮುಂದೇನು ಎಂದು ಪರಿಶೀಲಿಸೋಣ.

ಎಲ್ಲ ಸರ್ಕಾರಗಳೂ ಕೃಷಿಗೆ ಉತ್ತೇಜನ ನೀಡುತ್ತೇವೆಂದು ಹೇಳುತ್ತ ಆಧುನಿಕ ತಂತ್ರಜ್ಞಾನದ ಫಲ ರೈತನಿಗೆ ಸಿಗಬೇಕೆಂದು ಹೇಳುತ್ತ ಅದಕ್ಕಾಗಿಯೇ ಒಂದಷ್ಟು ಹಣವನ್ನು ಮೀಸಲಿಡುತ್ತಿವೆ; ಜೊತೆಯಲ್ಲಿಯೇ ಸಾವಯವ ಕೃಷಿಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಪ್ರಚಾರವನ್ನೂ ಮಾಡುತ್ತವೆ. ಇದೆಲ್ಲದರ ಹಿನ್ನೆಲೆನ್ನೂ ಪರಿಶೀಲಿಸಿದರೆ ಅನೇಕ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ.

ಒಂದೆಡೆ ಸಾವಯವ ಕೃಷಿಯ ಬಗ್ಗೆ ಮಾತನಾಡುವ ಸರ್ಕಾರ, ಹೈಟೆಕ್ ಕೃಷಿಗೆ ನೀಡುತಿರ್ತುವ ಸವಲತ್ತು ಮತ್ತು ಪ್ರಚಾರ ಊಹೆಗೂ ಮೀರಿದ್ದು. ಈ ಹೈಟೆಕ್ ತಂತ್ರಜ್ಞಾನವೆಂಬುದು ನಮ್ಮ ಜೀವನದ ಎಲ್ಲ ರಂಗಗಳನ್ನು ಪ್ರವೇಶಿಸಿದಂತೆಯೇ ಅಗಾಧ ಪ್ರಮಾಣದಲ್ಲಿ ಕೃಷಿ ವಲಯವನ್ನು ಆವರಿಸಿಕೊಳ್ಳುತ್ತಿದೆ. ಸರ್ಕಾರದ ಕೃಷಿ ಇಲಾಖೆಯ ವಿಜ್ಷಾನಿಗಳು, ಅಧಿಕಾರಿಗಳು, ತಂತ್ರಜ್ಷರ ಸಾಲು ಸಾಲುಗಳಲ್ಲದೆ, ಈ ಹೈಟೆಕ್ ತಂತ್ರಜ್ಞಾನದ ಪ್ರಚಾರ, ಮಾರಾಟ, ನಿರ್ವಹಣೆ ಮತ್ತು ತಾಂತ್ರಿಕಸಲಹೆಗಾಗಿ ದೊಡ್ಡ ಪಡೆಯನ್ನೇ ನಿರ್ಮಿಸಿರುವ ಬೃಹತ್ ವ್ಯಾಪಾರಿ ಸಂಸ್ಥೆಗಳು, ಇವರೆಲ್ಲರೂ ಸೇರಿ ಕೃಷಿಕರಿಗೆ ಒಡ್ಡುತ್ತಿರುವ ಆಮಿಷಗಳು ಹಲವಾರು. ನೀಟಾಗಿ ಡ್ರೆಸ್‍ಮಾಡಿ ಸರ್ಜರಿ ಆಪರೇಷನ್‍ಗೆ ಹೊರಟ ತಜ್ಞವೈದ್ಯರಂತೆ ಕಂಗೊಳಿಸುತ್ತ “ಕೃಷಿ ಕ್ಷೇತ್ರ’ಕ್ಕೆ ಭೇಟಿನೀಡುವ ‘ತಾಂತ್ರಿಕ ಸಲಹೆಗಾರರು’, ‘ಕ್ಷೇತ್ರ ಪರಿವೀಕ್ಷಕರು’ ಇವರನ್ನೆಲ್ಲ ಕಂಡಾಗ, ನಮ್ಮ ಕೃಷಿವಲಯ ಇಷ್ಟೊಂದು ಸಮೃದ್ಧವಾಗಿದೆಯೇ? ಎಂದು ಅನ್ನಿಸದೆ ಇರದು. ಅವರು ಬಳಸುವ ನುಡಿಗಟ್ಟುಗಳನ್ನು ಗಮನಿಸಿ, ತೋಟ ಹೊಲ ಗದ್ದೆಗಳ ಬದಲಾಗಿ. ‘ಕೃಷಿ ಕ್ಷೇತ್ರ’ ‘ಕೃಷಿಉದ್ಯಮ’ ಜೊತೆಗೆ ‘ಅಗ್ರಿಕ್ಲಿನಿಕ್’ ‘ಅಗ್ರಿಟೆಕ್ನಿಕ್’ ಇತ್ಯಾದಿ ಮಾಯಾಜಾಲದ ತಾಂತ್ರಿಕ ಪದಗಳು. ಇವುಗಳೊಂದಿಗೆ ಅವರು ತಯಾರಿಸಿಕೊಂಡ ತಜ್ಞವರದಿಗಳು, ಸಂಶೋಧನಾ ಪ್ರಬಂಧಗಳು. ಇವುಗಳೆಲ್ಲವೂ ಸೇರಿ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡದ ‘ತೋಟ, ಗದ್ದೆ, ಹೊಲ’ ಗಳೆಲ್ಲ ಮಾಯವಾಗಿಬಿಟ್ಟರೆ ಆಶ್ಚರ್ಯವೇನೂ ಇಲ್ಲ. ಸದ್ಯಕ್ಕೆ ಇವರನ್ನೆಲ್ಲ ನೋಡುತ್ತ ರೈತ ದಂಗಾಗಿರುವುದಂತೂ ನಿಜ.

ಸಾವಯವ ಕೃಷಿ ಮತ್ತು ಹೈಟೆಕ್ ಕೃಷಿ ಇವುಗಳು, ಪೂರ್ವ ಪಶ್ಚಿಮ ತುದಿಗಳಾದರೆ, ಇನ್ನೊಂದು ನಾವೀಗ ಹೆಚ್ಚಾಗಿ ರೂಪಿಸಿಕೊಂಡಿರುವ guj-agricultureಆಧುನಿಕ ಕೃಷಿ. ಸಾಕಷ್ಟು ರಸಗೊಬ್ಬರ, ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು, ಹೆಚ್ಚು ನೀರು, ತರಹೇವಾರಿ ಕೃಷಿವಿಷಗಳನ್ನೆಲ್ಲ ಬಳಸಿ ಬೆಳೆಯುವ, ಸಾಕಷ್ಟು ಯಂತ್ರೋಪಕರಣಗಳನ್ನು ಉಪಯೋಗಿಸಲು ಅವಕಾಶವಿರುವ ಕೃಷಿಯೇ ಈ ಆಧುನಿಕ ಕೃಷಿ.

ಆಧುನಿಕ ಕೃಷಿಯ ಸಮರ್ಥಕರು ನೀಡುವ ಅತಿ ಮುಖ್ಯ ಉದಾಹರಣೆಯೆಂದರೆ ಸ್ವಾತಂತ್ರ್ಯೋತ್ತರ ಭಾರತದ ಆಹಾರ ಪರಿಸ್ಥಿತಿ. ಸುಮಾರು ಎಪ್ಪತ್ತರ ದಶಕದವರೆಗೂ ಭಾರತದ ಆಹಾರ ಮಂತ್ರಿಯೆಂದರೆ ಭಿಕ್ಷಾನ್ನ ಮಂತ್ರಿಯೆಂದೇ ಪ್ರಖ್ಯಾತ!. ಆಗ ಅಮೆರಿಕಾ ಕೊಟ್ಟರೆ ಮಾತ್ರ ನಮಗೆ ಅನ್ನ ಎಂಬ ಪರಿಸ್ಥಿತಿ, “ಆದರೆ ಈಗ ನೋಡಿ ನಾವು ಆಹಾರವನ್ನು ರಫ್ತು ಮಾಡುತ್ತಿದ್ದೇವೆ… ಜನಸಂಖ್ಯೆಯ ಅಗಾಧ ಏರಿಕೆಯ ಜೊತೆಯಲ್ಲೇ ಆಹಾರ ದಾಸ್ತಾನು ಕೂಡಾ ಅದೇ ಪ್ರಮಾಣದಲ್ಲಿ ಹೆಚ್ಚಿದೆ ………..” ಇತ್ಯಾದಿ. ಇದು ಅಂಕಿ ಅಂಶಗಳ ಮತ್ತು ಆಹಾರದ ಲಭ್ಯತೆಯ ಮಟ್ಟದಲ್ಲಿ ಖಂಡಿತ ನಿಜ. ಆದರೆ ಇದಕ್ಕೆ ಆಧುನಿಕ ಕೃಷಿಪದ್ಧತಿ ಒಂದೇ ಕಾರಣವಲ್ಲ. ಇತ್ತೀಚಿನ ವರ್ಷಗಳಲ್ಲಿ ಆದ ನಮ್ಮ ಅನೇಕ ಹೊಸ ನೀರಾವರಿ ಯೋಜನೆಗಳು ಮತ್ತು ಅದರಿಂದಾದ ಕೃಷಿ ಭೂಮಿಯ ವಿಸ್ತರಣೆ, ಹಾಗೂ ನಾವು ಹೊಸದಾಗಿ ಕೃಷಿಗೆ ಒಳಪಡಿಸಿದ ಅರಣ್ಯ ಭೂಮಿಯ ಪ್ರಮಾಣ ಇವುಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ಮಾಡಿದರಷ್ಟೇ ಸರಿಯಾದ ಚಿತ್ರಣ ದೊರೆತೀತು. ಈ ಆಧುನಿಕ ಕೃಷಿಯನ್ನೇ ವೈಜ್ಞಾನಿಕವೆಂದು ನಂಬಿಕೊಂಡವರಿಂದ ಈ ಸಮೀಕ್ಷೆ- ಅಧ್ಯಯನಗಳು ನಡೆದಲ್ಲಿ ಯಾವುದೇ ಪ್ರಯೋಜನವಿಲ್ಲ. ಕೆಲವು ವರ್ಷಗಳ ಹಿಂದೆಯೇ, ನಮ್ಮ ಹತ್ತಿರದ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯೊಬ್ಬರಿಗೆ ಅವರ ಸಂಶೋಧನೆಯ ಕೆಲವು ಲೇಖನಗಳನ್ನು ಪ್ರಕಟಿಸಲು ಅವರ ನಿರ್ದೇಶನಾಲಯದಿಂದ ಅನುಮತಿ ಸಿಗಲಿಲ್ಲ. ಯಾಕೆಂದರೆ ಅವರ ಸಂಶೋಧನೆಯ ಫಲಶ್ರುತಿ, ಸರ್ಕಾರ ಪ್ರಚಾರ ಮಾಡುತ್ತಿದ್ದ ವಿಷಯಗಳ ಹಾಗೂ ಕೆಲವು ಕಂಪೆನಿಗಳ ಹಿತಾಸಕ್ತಿಯ ವಿರುದ್ಧವಾಗಿತ್ತು. ಅವರ ಅಭಿಪ್ರಾಯ ಹೀಗಿತ್ತು “ಈಗ ನಮ್ಮ ಮುಂದಿರುವುದು ಕೆಲವು ಕೃಷಿ ಪದ್ಧತಿಗಳು, ಸಾಂಪ್ರದಾಯಿಕ ಕೃಷಿ, ಸಾವಯವ ಕೃಷಿ, ಮತ್ತು ಆಧುನಿಕ ಕೃಷಿ ಇತ್ಯಾದಿ… ವೈಜ್ಞಾನಿಕ ಕೃಷಿ ಎನ್ನುವುದು ನಾವಿನ್ನು ಕಂಡುಕೊಳ್ಳಬೇಕಾದ ಮತ್ತು ನಿರಂತರ ಹುಡುಕಾಟದಲ್ಲಿರಬೇಕಾದ ಮಾರ್ಗ ಅಷ್ಟೆ”. ಈ ನಿರಂತರ ಹುಡುಕಾಟದ ಕ್ರಿಯೆ ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯವಾಗಬೇಕಾದ ವಿಷಯ. ಅದಲ್ಲದೆ ಆ ವಿಜ್ಞಾನಿ ಮತ್ತೂ ಮುಂದುವರಿದು “ಆಧುನಿಕ ಕೃಷಿಯೆನ್ನುವುದು ದೊಡ್ಡ ಪ್ರಮಾಣದ ಕೃಷಿಗೆ ಅನುಕೂಲಕರವಾಗಿದೆ, ಯಾಕೆಂದರೆ ಯಂತ್ರಗಳು, ನೀರಾವರಿ, ಸುಧಾರಿತ ಬೀಜಗಳು, ಹಾಗೇ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ-ಕೀಟನಾಶಕ, ಕಳೆನಾಶಕ ಮುಂತಾದವುಗಳ ಬಳಕೆ ಇದಕ್ಕೆ ಬೇಕಾಗುವ ದೊಡ್ಡ ಪ್ರಮಾಣದ ಭಂಡವಾಳ ಹೂಡಿಕೆ ಎಲ್ಲವನ್ನೂ ಒಳಗೊಂಡು ಕೈಗಾರಿಕೆ ಆಧಾರಿತ ಕೃಷಿಯಾಗಿದೆ” ಎಂದಿದ್ದರು. ಈ ಎಲ್ಲ ಕಾರಣಗಳಿಗಾಗಿಯೇ ಈ ಆಧುನಿಕ ಕೃಷಿ ನಮ್ಮನ್ನಾಳುವವರಿಗೂ ಅತ್ಯಂತ ಆಪ್ಯಾಯಮಾನವಾದದ್ದಾಗಿದೆ.

ಇದೀಗ ಇನ್ನೊಂದು ಮಧ್ಯಮ ಮಾರ್ಗವಾದ ‘ಸಾವಯವ ಕೃಷಿ’ಯನ್ನು ಗಮನಿಸೋಣ. ಈಗ ಸರ್ಕಾರವೇ ಸಾವಯವ rural-indiaಕೃಷಿಯ ಬಗ್ಗೆ ಆಸಕ್ತಿ ತೋರಿದೆಯೆಂದರೆ, ಸರ್ಕಾರಕ್ಕೆ ಈ ಆಧುನಿಕ ಕೃಷಿಯ ಅನಾಹುತಗಳು ಅರ್ಥವಾಗಿ ಸಾವಯವ ಕೃಷಿಯ ಪ್ರತಿಪಾದಕನಾಗಿದೆ ಎಂದುಕೊಂಡರೆ ಅದು ನಮ್ಮ ದಡ್ಡತನವಷ್ಟೆ. ಯಾವುದೇ ಸರ್ಕಾರಕ್ಕೂ ಯಾವಾಗಲೂ ಬೃಹತ್ ಯೋಜನೆಗಳೇ ಅಚ್ಚುಮೆಚ್ಚು. ಯೋಜನೆಗಳ ಗಾತ್ರ ಹಿರಿದಾದಷ್ಟೂ ಆಳುವವರ ಹಿತವೂ ದೊಡ್ಡ ಪ್ರಮಾಣದಲ್ಲಿ ರಕ್ಷಣೆಯಾಗುತ್ತದೆ. ಇದಕ್ಕೆ ಆಧುನಿಕ ಹಾಗೂ ಹೈಟೆಕ್ ಕೃಷಿಯ ದೊಡ್ಡ ಕಂಪೆನಿಗಳೇ ಸೂಕ್ತವಾದದ್ದು. ಹೀಗಿದ್ದೂ ಸರ್ಕಾರ ಈಗೇಕೆ ಸಾವಯವದ ಧ್ವನಿಯೆತ್ತಿದೆ? ವೈಯಕ್ತಿಕ ಮಟ್ಟದಲ್ಲಿ ಈ ರೀತಿ ಯೋಚಿಸುವ ಕೆಲವರು ಶಾಸಕರೋ ಮಂತ್ರಿಗಳೋ ಇರಬಹುದು, ಆದರೆ ಒಟ್ಟೂ ಆಡಳಿತ ಯಂತ್ರ ಯಾವತ್ತೂ ದೊಡ್ಡ ಪ್ರಮಾಣದ ಆಧುನಿಕ ಕೃಷಿಯ ಪರವೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರ್ಯಾಯ ಕೃಷಿಗೆ ಮತ್ತು ಪರ್ಯಾಯ ಆರೋಗ್ಯ ಪದ್ಧತಿಗೆ ಸಿಗುತ್ತಿರುವ ಪ್ರಚಾರ ಜೊತೆಗೆ ಅಂತಾರಾಷ್ಟ್ರೀಯಮಟ್ಟದಲ್ಲೂ ಈ ಬಗ್ಗೆ ಮೂಡುತ್ತಿರುವ ಜಾಗೃತಿ ಹಾಗೂ ನಮ್ಮಲ್ಲೂ ಕೃಷಿಕರಲ್ಲಿ ಹಾಗೂ ಸಮಾಜದ ಅನೇಕ ವಲಯಗಳಲ್ಲಿ ಹೆಚ್ಚುತ್ತಿರುವ ತಿಳುವಳಿಕೆ, ಇವೆಲ್ಲವುಗಳಿಂದ ಸರ್ಕಾರದ ಮೇಲೆ ಬೀಳುತ್ತಿರುವ ಒತ್ತಡದಿಂದಾಗಿ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆಯಷ್ಟೆ.

ಇರಲಿ, ಸರ್ಕಾರದ ಉದ್ದೇಶ ಒಳ್ಳೆಯದೆಂದೇ ಇಟ್ಟುಕೊಳ್ಳೋಣ. ಸರ್ಕಾರ ಹೇಳುವಂತಹ ಅಥವಾ ನಾವು ಅಂದುಕೊಂಡಿರುವಂತಹ ಸಾವಯವ ಕೃಷಿ ಅಂದರೇನು? ರಾಸಾಯನಿಕ ವಸ್ತುಗಳನ್ನು ಅಂದರೆ ರಸಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳನ್ನು ಉಪಯೋಗಿಸದೆ, ಹಟ್ಟಿಗೊಬ್ಬರ- ಸಸ್ಯಜನ್ಯ ಕೀಟನಾಶಕಗಳು, ಸಾವಯವಗೊಬ್ಬರ ಇತ್ಯಾದಿಗಳನ್ನು ಮಾತ್ರ ಬಳಸಿ ಆದಷ್ಟೂ ಸ್ಥಳೀಯವಾಗಿ ಲಭ್ಯವಾಗುವ ಸಾವಯವ ತ್ಯಾಜ್ಯವಸ್ತುಗಳನ್ನು ಉಪಯೋಗಿಸಿ ಮಾಡುವ ಕೃಷಿ. (ರಾಸಾಯನಿಕಗಳೇ ಆಗಿರುವ ಸುಣ್ಣ, ಬೋರ್ಡೋ ಮಿಶ್ರಣ ಇವುಗಳ ಬಳಕೆ ಇಲ್ಲಿ ನಿಷಿದ್ಧವಲ್ಲ ಕೆಲವರು ರಂಜಕಯುಕ್ತ ಗೊಬ್ಬರವಾದ ರಾಕ್ ಫಾಸ್ಫೇಟಿಗೂ ಅದು ಕಲ್ಲಿನ ಪುಡಿಯೆಂದು ವಿನಾಯಿತಿ ನೀಡಿದ್ದಾರೆ) ಇದರೊಂದಿಗೆ ಇತರ ಪೂರಕ ಚಟುವಟಿಕೆಗಳನ್ನು ಅಂದರೆ ಹೈನುಗಾರಿಕೆ, ಕೋಳಿಸಾಕಣೆ ಇತ್ಯಾದಿಗಳನ್ನು ಮಾಡಿದರೆ ಇನ್ನೂ ಒಳ್ಳೆಯದು. ಸಣ್ಣ ಮತ್ತು ಮಧ್ಯಮ ಗಾತ್ರದ ಹಿಡುವಳಿಗಳು ಇದಕ್ಕೆ ಹೆಚ್ಚು ಅನುಕೂಲದ್ದಾಗಿರುತ್ತವೆ.

ಹೀಗಿರುವಾಗ ಸಣ್ಣ ಮತ್ತು ಮಧ್ಯಮ ಕೃಷಿಕರು ಒಂದೆರಡು ದನಕರುಗಳನ್ನು ಜೊತೆಯಲ್ಲಿ ಕುರಿಕೋಳಿಗಳನ್ನು ಸಾಕುತ್ತ ಸಾವಯವ ಗೊಬ್ಬರ ತಯಾರಿಸಿ ಉಪಯೋಗಿಸುತ್ತಾ, ಅತಿ ಕಡಿಮೆ ರಾಸಾಯನಿಕ ಅಥವಾ ರಾಸಾಯನಿಕರಹಿತ ಕೃಷಿ ಮಾಡುತ್ತಾ ತಾನೂ ಆರೋಗ್ಯವಂತನಾಗಿ- ಭೂಮಿ ಮತ್ತು ಸಮಾಜದ ಎಲ್ಲರ ಆರೋಗ್ಯವನ್ನು ಕಾಪಾಡುತ್ತ ಸುಖವಾಗಿ ಇರಬಹುದಾಗಿತ್ತಲ್ಲವೇ?.

ಆದರೆ ನಾವೆಂದುಕೊಂಡಂತೆ ಪರಿಸ್ಥಿತಿ ಅಷ್ಟು ಸರಳವಾಗಿ ಖಂಡಿತ ಇಲ್ಲ. ಒಂದೆಡೆ ಪರಿಸರ ಪ್ರಿಯರು, ಕೃಷಿಪಂಡಿತರುಗಳು, ಭಾನುವಾರದ ಕೃಷಿಕರು, ಹವ್ಯಾಸಿ ಕೃಷಿಕರು, ಹಾಗೂ ಅನೇಕ ಸಂಘಟನೆಗಳು-ಸಹಜಕೃಷಿ, ಸಾವಯವ ಕೃಷಿ, ನೆಲಜಲ ಸಂರಕ್ಷಣೆ ಮುಂತಾದುವುಗಳ ಬಗ್ಗೆ ನಡೆಸುವ ಕಾರ್ಯಕ್ರಮಗಳು, ವಿಚಾರಸಂಕಿರಣಗಳು, ಚಳುವಳಿಗಳು, ಜೊತೆಗೆ ಹಲವು ಕೃಷಿಪತ್ರಿಕೆಗಳಲ್ಲಿ ನಿರಂತರವಾಗಿ ಬರುತ್ತಿರು ಲೇಖನಗಳು, ಇವೆಲ್ಲವುಗಳಿಂದ ಸಾವಯವ ಕೃಷಿಗೆ ಸಿಕ್ಕಿದ ಪ್ರಚಾರದಿಂದಾಗಿ, ಸಾವಯವ ಪರಿಸರ ಸ್ನೇಹಿವಸ್ತುಗಳ ದೊಡ್ಡ ಉತ್ಪಾದಕರುಗಳೇ ಹುಟ್ಟಿಕೊಂಡಿದ್ದಾರೆ. Tilling_Rice_Fieldsಇವರುಗಳು ಮುದ್ರಿಸಿ ಹಂಚುತ್ತಿರುವ ಕರಪತ್ರಗಳು ಯಾವುದೇ ದೊಡ್ಡ ರಾಸಾಯನಿಕ ಕಂಪೆನಿಗಳ ಪ್ರಚಾರ ಸಾಮಗ್ರಿಯನ್ನೂ ನಾಚಿಸುವಂತಿದೆ. ರಾಸಾಯನಿಕ ವಸ್ತುಗಳಿಗೆ ಹೋಲಿಸಿದರೆ ಇವುಗಳ ಬೆಲೆಯೂ ದುಬಾರಿಯಾಗಿದೆ. ಈ ವಿಚಾರ ಆಯುರ್ವೇದ ಔಷಧಿಗಳಂತಹ ವೈದ್ಯಕೀಯ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಸದ್ಯಕ್ಕಂತೂ ಇವುಗಳಲ್ಲಿ ಯಾವುದು ನಿಜವಾದ ಸಾವಯವ ಅಥವಾ ಪರಿಸರ ಸ್ನೇಹಿ ಎಂದು ನಿರ್ಧರಿಸಲು ಯಾವುದೇ ಮಾನದಂಡವೂ ಇಲ್ಲ. ವೈಯಕ್ತಿಕ ಪರಿಚಯ, ಅನುಭವ ನಂಬಿಕೆಗಳನ್ನಾಧರಿಸಿ ಇವುಗಳನ್ನು ಕೊಳ್ಳಬೇಕಷ್ಟೆ.

ನಮ್ಮ ರೈತರು ಸಾವಯವ-ಸುಸ್ಥಿರ ಕೃಷಿಯ ವಿರೋಧಿಗಳಂತೂ ಖಂಡಿತ ಅಲ್ಲ. ಇಂದು ಸಾಮಾನ್ಯನಿಗೂ ಭೂಮಿ ಬರಡಾಗುತ್ತಿರುವುದು, ಆಹಾರದಲ್ಲಿ ರುಚಿ ಸತ್ವ ಎರಡೂ ಇಲ್ಲದಿರುವುದು ಚೆನ್ನಾಗಿಯೇ ತಿಳಿದಿದೆ. ನಾಟಿ ಕೋಳಿಮಾಂಸದ ಮತ್ತು ನಾಟಿ ಹಸುಗಳಹಾಲಿನ ರುಚಿ ಹಾಗೇ ಸೆಗಣಿಯ ಶಕ್ತಿಯೂ ತಿಳಿದಿದೆ. ಎಲ್ಲಿಯವರೆಗೆ ಎಂದರೆ ಘನಘೋರ ವಿಷಸುರಿದು ಶುಂಠಿ ಬೆಳೆಯುತ್ತಿರುವ ರೈತ ತಾನು ಅದನ್ನು ತಪ್ಪಿಯೂ ಉಪಯೋಗಿಸುವುದಿಲ್ಲ. ಸ್ವಂತಕ್ಕೆ ತನ್ನ ಜಮೀನಿನ ಮೂಲೆಯಲ್ಲೊಂದಿಷ್ಟು ನಾಟಿ ಶುಂಟಿಯನ್ನು ವಿಷವುಣಿಸದೆ ಬೆಳೆದುಕೊಂಡಿರುತ್ತಾನೆ. ಕೃಷಿವಲಯದ ಆರ್ಥಿಕ ಪರಿಸ್ಥಿತಿಯೇ ಅವನನ್ನು ಸುಸ್ಥಿರ-ಸಾವಯವ ಕೃಷಿಯಿಂದ ದೂರವಿರುವಂತೆ ಮಾಡುತ್ತಿದೆ.

ನಮ್ಮ ರೈತರು ಇಂದು ಸಹಜ ಕೃಷಿಯ ಋಷಿ ಮುನಿಗಳಂತೆ ಬದುಕಲು ಖಂಡಿತ ಸಾಧ್ಯವಿಲ್ಲ. ಇಂದು ವಿದ್ಯುತ್, ಫೋನು, ಟಿ.ವಿ., ಸಾಧ್ಯವಾದರೆ ಕನಿಷ್ಟ ಒಂದು ಬೈಕು ಇತ್ಯಾದಿಗಳು ಆತನಿಗೂ ಬೇಕು. ಇಂದು ಟಿ.ವಿ. ಆಧುನಿಕ ಜಗತ್ತನ್ನು ಅವನ ಮನೆಯೊಳಗೇ ತಂದು ತೋರಿಸುತ್ತ ಹಲವು ಆಮಿಷಗಳನ್ನು ಒಡ್ಡುತ್ತಿದೆ. ಅಭಿವೃಧ್ದಿಗಿಂದ ಹೆಚ್ಚಾಗಿ ಕೊಳ್ಳುಬಾಕ ಸಂಸ್ಕøತಿ ಇಂದು ಹಳ್ಳಿಗಳನ್ನೂ ಆವರಿಸಿಬಿಟ್ಟಿದೆ. ಹೇಗಾದರೂ ಮಾಡಿ ಹಣ ಗಳಿಸಬೇಕಾದ ಒತ್ತಡದಲ್ಲಿ ಇಂದು ರೈತನೂ ಸಿಕ್ಕಿಬಿದ್ದಿದ್ದಾನೆ.

ಯಾವುದೇ ಬೆಳೆಯನ್ನು ಬೆಳೆಯುವಾಗ ಎಕರೆವಾರು ಖರ್ಚು ಮತ್ತು ಆದಾಯವನ್ನು ನೋಡಿದರೆ. ಸಧ್ಯದಲ್ಲಿ ರಾಸಾಯನಿಕಗಳನ್ನು paddy-rice-cropಬಳಸಿ ಮಾಡುವ ಕೃಷಿಯೇ ಅಗ್ಗದ್ದಾಗಿದ್ದು ರೈತನಿಗೆ ಸ್ವಲ್ಪಮಟ್ಟಿನ ಲಾಭವನ್ನು ತಂದುಕೊಡುತ್ತಿದೆ. ಅಲ್ಲದೇ ಅಧಿಕ ಇಳುವರಿ ನೀಡುತ್ತದೆಂದು ಹೇಳಲಾಗುವ ಹೈಬ್ರಿಡ್ ತಳಿಗಳು ರಾಸಾಯನಿಕ ಕೃಷಿಯನ್ನೇ ಅವಲಂಬಿಸಿವೆ.

ಶುದ್ಧ ಸಾವಯವವೆಂದು ಪ್ರಮಾಣೀಕರಿಸಿದ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೆಲೆ ದೊರಕುತ್ತದೆಂಬ ವಿಚಾರ ನಮ್ಮ ರೈತರಿಗೂ ತಿಳಿದಿದೆ. ಆದರೆ ಅದನ್ನು ಪ್ರಮಾಣೀಕರಿಸಲು ಇರುವ ವಿಧಿ ವಿಧಾನಗಳು ಮತ್ತು ಅವರ ಮಾನದಂಡಗಳು ಅದಕ್ಕೆ ತಕ್ಕಂತೆ ಅನುಸರಿಸ ಬೇಕಾದ ಕ್ರಮಗಳು, ಇಡಬೇಕಾದ ಠೇವಣಿ ಹಣ ಮತ್ತಿತರ ವೆಚ್ಚಗಳು ನಮ್ಮ ರೈತರ ಪಾಲಿಗೆ ತುಂಬ ದುಬಾರಿಯಾದವು.

ಇದನ್ನೆಲ್ಲ ನೋಡುತ್ತ ನೋಡುತ್ತ ಸಾಮಾನ್ಯ ಕೃಷಿಕ- ರೈತರು ಮೊದಲ ಬಾರಿಗೆ ಜಾತ್ರೆಗೆ ಹೋದ ಮಗುವಿನಂತಾಗಿ ಹೋಗಿದ್ದಾರೆ. ಎಲ್ಲವನ್ನೂ ನೋಡುತ್ತ ಬೆರಗುಗೊಳ್ಳುತ್ತ ಅಪ್ಪ ಕೊಟ್ಟ ಒಂದೇ ಒಂದು ರೂಪಾಯಿಯನ್ನು ಜೇಬೊಳಗಿಟ್ಟುಕೊಂಡು, ಕೈಹಾಕಿ ಅಲ್ಲೇ ಮುಟ್ಟಿ ನೋಡಿಕೊಳ್ಳುತ್ತ ಏನನ್ನೂ ಕೊಳ್ಳದೆ, ಏನನ್ನೂ ತಿನ್ನದೆ ಮನೆಗೆ ಬರುವಂತಹ ಸ್ಥಿತಿಯಲ್ಲಿದ್ದಾರೆ.

ಹೀಗಾಗಿ ಒಂದುವೇಳೆ ಸಾವಯವ ವಿಧಾನದಿಂದ ಬೆಳೆ ಬೆಳೆದರೂ ಸಹ ಇದರಿಂದ ಲಾಭ ಪಡೆಯುವ ಸ್ಥಿತಿಯಲ್ಲಿ ರೈತರು ಖಂಡಿತ ಇಲ್ಲ. ಆದ್ದರಿಂದ ಎಲ್ಲ ತೊಂದರೆಗಳ ಅರಿವಿದ್ದರೂ ಹೆಚ್ಚು ಲಾಭ ಬರಬಹುದೆಂಬ ಆಸೆಯಿಂದ ರಾಸಾಯನಿಕಗಳನ್ನು ಬಳಸಿ ಮಾಡುವ ಆಧುನಿಕ ಕೃಷಿಯತ್ತ ವಾಲುತ್ತಾರೆ. ದುಬಾರಿ ಬಡ್ಡಿಯ ಖಾಸಗಿ ಸಾಲಕ್ಕೆ ತಲೆಯೊಡ್ಡುತ್ತಾರೆ. ಸರೀಕರೊಡನೆ ತಲೆಯೆತ್ತಿ ನಿಲ್ಲಬೇಕೆಂದು, ವಾಹನ ಕೊಳ್ಳುತ್ತಾರೆ, ಸರಿಯಾದ ಯೋಜನೆಗಳಿಲ್ಲದೆ ಮನೆ ಕಟ್ಟಿಕೊಳ್ಳುತ್ತಾರೆ, ಮದುವೆ ಮುಂಜಿಗಳಲ್ಲಿ ಅಂದಾದುಂದಿ ಖರ್ಚು ಮಾಡುತ್ತಾರೆ. ಬೆಳೆ ಮತ್ತು ಬೆಲೆ ಅಥವಾ ಎರಡೂ ಕೈಕೊಟ್ಟರೆ ದಿಕ್ಕು ತೋಚದೆ ಆತ್ಮಹತ್ಯೆಯಂತಹ ವಿಪರೀತ ಕ್ರಮಕ್ಕೆ ಮುಂದಾಗುತ್ತಾರೆ.

ಹಿಂದಿನ ಕಾಲದಂತೆ ರೈತರು ತಮಗೆ ಬೇಕಾದ ಆಹಾರ, ತರಕಾರಿ, ಹಾಲು, ಮಾಂಸ, ಹಣ್ಣುಹಂಪಲು ಎಲ್ಲವನ್ನು ತಾವೇ ಬೆಳೆದುಕೊಳ್ಳುತ್ತ, ತಮ್ಮ ಅಗತ್ಯಕ್ಕೆ ಹೆಚ್ಚಿನದನ್ನು ಮಾರುತ್ತ ಬದುಕುವುದು ಇಂದಿನ ಆರ್ಥಿಕತೆಗೆ ಒಗ್ಗುವ ಸಂಗತಿಯಾಗಿ ಉಳಿದಿಲ್ಲ. ಇಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುವಂತೆ ಪ್ರತಿಯೊಂದನ್ನು ದೊಡ್ಡ ಪ್ರಮಾಣದಲ್ಲಿ ‘ಉತ್ಪಾದಿಸುವುದು’ ಅನಿವಾರ್ಯವಾಗುವಂತ ಸನ್ನಿವೇಶ ಸೃಷ್ಟಿಯಾಗಿದೆ. ಆದ್ದರಿಂದ ತರಕಾರಿ ಬೆಳೆಯುವವರು, ಮೆಣಸಿನಕಾಯಿ ಬೆಳೆಯುವವರು, ಶುಂಠಿ ಬೆಳೆಯುವವರು, ಹೈನೋಧ್ಯಮದವರು, ಕೋಳಿಫಾರಂಗಳು, ಹೀಗೆ ಎಲ್ಲವೂ ಸಣ್ಣ ಪ್ರಮಾಣದಿಂದ ನಿಧಾನವಾಗಿ ದೊಡ್ಡ ಪ್ರಮಾಣಕ್ಕೆ ಬೆಳೆಯುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತ ಉತ್ಪಾದನೆ, ಸ್ಪರ್ಧಾತ್ಮಕ ಬೆಲೆಗಳು, ಬ್ರಾಂಡೆಡ್ ಉತ್ಪಾದನೆ ಇತ್ಯಾದಿಗಳ ಜಾಗತೀಕರಣದ ಉನ್ಮಾದದ ಮಾರುಕಟ್ಟೆಯಲ್ಲಿ ಹೆಚ್ಚು ‘ಉತ್ಪಾದನೆ’ಯ ಒತ್ತಡಕ್ಕೊಳಗಾದ ಕೃಷಿಕ ಸಾವಯವ ಕೃಷಿಯತ್ತ ತಿರುಗಿ ನೋಡುವುದೂ ಇಲ್ಲ. ದ್ವೀಪಗಳಂತೆ ಅಲ್ಲಲ್ಲಿ ಕೆಲವು ಸ್ಥಳಗಳಲ್ಲಿ ಕೆಲವು ವಸ್ತುಗಳನ್ನು- ಅದೂ ಮುಖ್ಯ ಆಹಾರ ಪದಾರ್ಥಗಳನ್ನಲ್ಲ, ಅವುಗಳಿಗೆ ಅಸಾಮಾನ್ಯ ಕೆಲವೊಮ್ಮೆ ಊಹೆಗೂ ನಿಲುಕದಂತಹ ಹೆಚ್ಚನ ಬೆಲೆ ಬಂದಾಗ ಸಾವಯವ ವಿಧಾನದಲ್ಲಿ ಬೆಳೆ ಬೆಳೆಯಲು ತೊಡಗಬಲ್ಲರು. ಉದಾ: ವೆನಿಲ್ಲಾ, ಆ್ಯಂತೋರಿಯಂ ನಂತಹ ರಫ್ತು ಆಧಾರಿತ ಬೆಳೆಗಳು.

ಅಧಿಕ ಉತ್ಪಾದನೆಯ ಮಂತ್ರ ಜಪಿಸುವುದು, ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳ ಬಳಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲದರ ಮೇಲೆ ಮೂಗಿಗೆ ತುಪ್ಪ ಸವರಿದಂತೆ ಒಟ್ಟು ಉತ್ಪನ್ನದ ಸ್ವಲ್ಪಭಾಗಕ್ಕೆ ವಿಶೇಷ ಬೆಲೆ ನೀಡಿ, ಉಳಿದದ್ದನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೊಳ್ಳುವುದು, ಇದರಿಂದ ಬೆಳೆಗಾರ ಗಳಿಸಿದ ಅಲ್ಪಸ್ವಲ್ಪ ಹೆಚ್ಚವರಿ ಹಣವನ್ನು ಯಂತ್ರೋದ್ಯಮದ ಮೂಲಕ ತಮ್ಮಲ್ಲಿಗೇ ಬರುವಂತೆ ಮಾಡುವುದು, ಇದೆಲ್ಲಕ್ಕಿಂತ ಅಧಿಕ ಉತ್ಪಾದನೆಯಿಂದ ಬೆಳೆಗಾರ ಮಾರುಕಟ್ಟೆಯಲ್ಲಿ ಕ್ಯೂ ನಿಲ್ಲುವಂತ ಪರಿಸ್ಥಿತಿ ನಿರ್ಮಾಣ ಮಾಡಿ ಯಾವಾಗಲೂ ಕೊಳ್ಳುವವರ ಮರ್ಜಿಯನ್ನೇ ಕಾಯಬೇಕಾದ ಸ್ಥಿತಿಯಲ್ಲಿಡುವುದು, ಇವುಗಳೆಲ್ಲಾ ಅವರ ಉದ್ದೇಶವಾಗಿದೆ. ಅಧಿಕ ಉತ್ಪಾದನೆಯಿಂದ ರೈತನಿಗೆ ಲಾಭವಾಗುದೆನ್ನುವುದು ನಿಜವಲ್ಲವೆನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. (ನಮ್ಮ ದೇಶದ ಹಾಗೂ ವಿಯೆಟ್ನಾಂನ ಕಬ್ಬು ಬೆಳೆಗಾರರನ್ನು ನೋಡಿ)

ಮುಂದುವರೆದ ದೇಶಗಳಿಂದ ನಮ್ಮಲ್ಲಿಗೆ ಆಮದಾಗುವ ಹಲವಾರು ಔಷಧಿಗಳು, ಕ್ರಿಮಿನಾಶಕಗಳು, ತಳುಕಿನ ಐಷಾರಾಮೀ ಸಾಮಗ್ರಿಗಳು, Working_in_the_rice_paddyಅಷ್ಟೇಕೆ ಅಲ್ಲಿನ ಸಾವಯವ ಗೊಬ್ಬರಗಳು ಕೂಡಾ ಅಲ್ಲೇ ನಿಷೇಧಿಸಲ್ಪಟ್ಟವುಗಳು. ಅವುಗಳನ್ನು ಹಿಂದುಳಿದ ದೇಶಗಳಿಗೆ ಸಹಾಯದ- ದಾನದ ಹೆಸರಲ್ಲಿ ಸಾಗಹಾಕುವಾಗ ಇಲ್ಲದಿರುವ ನೈತಿಕತೆ-ಗುಣಮಟ್ಟ ಕಾಳಜಿ, ಅವರಲ್ಲಿಗೆ ಆಮದಾಗುವ ಹಿಂದುಳಿದ ದೇಶಗಳ ವಸ್ತುಗಳ ಬಗ್ಗೆ ಪ್ರತ್ಯಕ್ಷವಾಗಿಬಿಡುತ್ತದೆ. ಯಾವುದೋ ಒಂದು ಸಾರಿ ಕಳುಹಿಸಿದ ವಸ್ತುವಿನಲ್ಲಿ ಕಲಬೆರಲಕೆ ಕಂಡುಬಂದರೂ ಸಹ (ಕಲಬೆರಕೆ ಸರಿಯೆಂದು ನನ್ನ ವಾದವಲ್ಲ) ಇಡೀ ದೇಶದ ಉತ್ಪನ್ನವನ್ನೇ ತಿರಸ್ಕರಿಸುವ ಬೆದರಿಕೆ ಹಾಕುವ ಅಂತಾರಾಷ್ಟ್ರೀಯ ಮಾರುಕಟ್ಟೆ ಮುಂದುವರಿದ ದೇಶಗಳ ಹಾನಿಕಾರಕ ವಸ್ತುಗಳ ಬಗ್ಗೆ ದಿವ್ಯಮೌನ ವಹಿಸುತ್ತದೆ. ತೆಂಗಿನೆಣ್ಣೆಯಲ್ಲಿ ಕ್ಯಾನ್ಸರ್‍ಕಾರಕ ಗುಣವಿರುವುದನ್ನು ಸಂಶೋಧನೆ ಮಾಡುವ ಇವರು, ಕ್ರಿಮಿನಾಶಕವಾಗಿರುವ ಪೆಪ್ಸಿ- ಕೋಕಾಕೋಲಾ ಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಹಾಲಿನ ಪುಡಿಯಲ್ಲಿ ಡಿ.ಡಿ.ಟಿ. ಪತ್ತೆಹಚ್ಚುವ ಇವರು ಆ ಡಿ.ಡಿ.ಟಿ.ಯನ್ನು ಪ್ರಪಂಚಕ್ಕೆಲ್ಲಾ ಹಂಚಿದ್ದು ತಾವೇ ಎನ್ನುವುದನ್ನು ಮರೆಯುತ್ತಾರೆ!.

ಇತ್ತೀಚಿನ ಇನ್ನು ಕೆಲವು ಬೆಳವಣಿಗೆಗಳನ್ನು ಗಮನಿಸಿ. ನೂರೈವತ್ತು ರೂಗಳಿಗೆ ಒಂದು ಟೀ ಶರ್ಟು ದೊರೆಯುತ್ತದೆಂದು ನಾವು ಖುಷಿ ಪಡುತ್ತಿರುವಾಗಲೇ, ಸಣ್ಣ ಊರುಗಳ- ಹಳ್ಳಿಗಳ ಟೈಲರ್‍ಗಳು ಅಂಗಡಿ ಮುಚ್ಚುತ್ತಿದ್ದಾರೆ. ಈಗಾಗಲೇ ಸಣ್ಣ ಸಣ್ಣ ಗರಾಜ್‍ಗಳು ಕೆಲಸವಿಲ್ಲದೆ ಒದ್ದಾಡುತ್ತಿವೆ. ಸಣ್ಣ ಹಿಡುವಳಿಯ ರೈತರು ಜಮೀನನ್ನು ಮಾರಿ ನಗರ ಸೇರುವ ಧಾವಂತದಲ್ಲಿದಾರೆ. ಹಲವು ಪ್ಲಾಂಟೇಷನ್ ಕಂಪೆನಿಗಳು ನಿರಂತರವಾಗಿ ತೋಟಗಳ ವಿಸ್ತರಣಾ ಖರೀದಿಯಲ್ಲಿ ತೊಡಗಿವೆ. ಈ ಸಂಗತಿಗಳಲ್ಲಾ ಏನನ್ನು ಸೂಚಿಸುತ್ತವೆ? ನಮ್ಮ ಕೃಷಿ ಭೂಮಿ ಪರಭಾರೆ ಕಾನೂನು ಮತ್ತು ಭೂಮಿತಿ ಕಾನೂನನ್ನು ಸಂಪೂರ್ಣವಾಗಿ ತೆಗೆದುಹಾಕಿದಲ್ಲಿ ಏನಾಗಬಹುದು? ಯೋಚಿಸಿ.

ಗುಣಮಟ್ಟದ ಹೆಸರಿನಲ್ಲಿ ಇವರು ಸೂಚಿಸುವ ಒತ್ತಾಯಿಸುವ ಕೃಷಿ ಪದ್ಧತಿಗಳು ಇನ್ನೂ ವಿಚಿತ್ರವಾಗಿವೆ. ಉದಾಹರಣೆಗೆ; Organic_farm_Turmericಕಾಫಿ ಒಣಗಿಸುವ ಕಣದ ಸುತ್ತಲೂ ನೀಲಗಿರಿ ಮರಗಳಿರಬಾರದು, ಮೆಣಸಿನ ಬಳ್ಳಿಗಳಿರಬಾರದು, ಕಾಫಿ ಒಣಗಿಸುವ ಕಣಕ್ಕೆ ಸೆಗಣಿಸಾರಿಸಬಾರದು ಇತ್ಯಾದಿ ಪ್ರತಿಬಂಧಗಳಿವೆ. (ಕಾಫಿಯ ಇಡಿಯ ಹಣ್ಣನ್ನು ನೇರವಾಗಿ ಒಣಗಿಸುವಾಗ ಮಾತ್ರ ಸೆಗಣಿ ಸಾರಿಸಿದ ಕಣವನ್ನು ಬಳಸುತ್ತಾರೆ. ಪಲ್ಪಿಂಗ್ ಮಾಡಿದ ಕಾಫಿಯನ್ನು ಯಾರೂ ಸೆಗಣಿಸಾರಿಸಿದ ಕಣದಲ್ಲಿ ಒಣಗಿಸುವದಿಲ್ಲ) ನಾವು ಸಾವಿರಾರು ವರ್ಷಗಳಿಂದ ಸೆಗಣಿ ಸಾರಿಸಿದ ಕಣದಲ್ಲೇ ಆಹಾರ ಧಾನ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಒಣಗಿಸುತ್ತಿದ್ದೇವೆ. ಸೆಗಣಿಯಿಂದಾಗಿ ಕಾಫಿಗೆ ಕೆಟ್ಟ ವಾಸನೆ ಬರುತ್ತದೆಂದು ದೂರುವ ಇವರು ಯಂತ್ರಗಳಲ್ಲಿ ಬಳಕೆಯಾಗುವ ಪೈಂಟ್‍ಗಳ ಬಗ್ಗೆಯಾಗಲೀ ಒಟ್ಟು ಉದ್ಯಮದಲ್ಲಿ ಬಳಕೆಯಾಗುವ ಇತರ ರಾಸಾಯನಿಕಗಳ ಬಗ್ಗೆಯಾಗಲೀ ಮಾತನಾಡುವುದಿಲ್ಲ.

ಈಗಾಗಲೇ ಅಕ್ಕಿಯಲ್ಲಿ- ಅಕ್ಕಿಯ ಗಾತ್ರ, ಉದ್ದ, ಬಣ್ಣಗಳ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಮುಂದೆ ಇಂತಿತಹ ಕಂಪೆನಿಗಳು ಒದಗಿಸಿದ ನೀರಿನಿಂದ ಬೆಳೆದ ಇಂತಿಂತಹ ಬೆಳೆಗಳು ಮಾತ್ರ ಪರಿಶುದ್ಧವಾದವು ಎಂದು ಪ್ರಮಾಣ ಪತ್ರ ನೀಡುವ ದಿನಗಳೂ ಬರಬಹುದು. ಆದ್ದರಿಂದ ಜಾಗತೀಕರಣವೆಂದರೆ ಮುಂದುವರಿದ ದೇಶಗಳ ಇನ್ನಷ್ಟು ಸಬಲೀಕರಣವಲ್ಲದೆ ಇನ್ನೇನೂ ಅಲ್ಲ. ನಾವು ಅಲ್ಲೊಂದು ಇಲ್ಲೊಂದು ಕ್ಷೇತ್ರದಲ್ಲಿ ಇವರೊಂದಿಗೆ ಸ್ಪರ್ಧಿಸುತ್ತಿದ್ದೇವೆಂದು ಹೆಮ್ಮೆ ಪಟ್ಟುಕೊಳ್ಳುತ್ತಾ, ನಮ್ಮ ಬೆನ್ನನ್ನೇ ನಾವು ತಟ್ಟಿಕೊಳ್ಳುತ್ತಾ ಕುಳಿತಿದ್ದೇವೆ ಅಷ್ಟೆ!

ಇವೆಲ್ಲವನ್ನೂ ಮೀರಿ ನಾವು ಕೆಲವು ಕ್ಷೇತ್ರಗಳಲ್ಲಿ ಅಥವಾ ಕೆಲವು ವಸ್ತುಗಳ ಉತ್ಪಾದನೆಯಲ್ಲಿ ಮುಂದುವರಿದ ದೇಶಗಳೊಂದಿಗೆ ಸ್ಪರ್ಧೆಗೆ ಇಳಿದೆವೆಂದರೆ, ಆಗ ಇನ್ನೂ ಕೆಲವು ಅಸ್ತ್ರಗಳು ಹೊರ ಬರುತ್ತವೆ. ಕೆಲವು ವಸ್ತುಗಳ ತಯಾರಿಕೆಯಲ್ಲಿ ಬಾಲ ಕಾರ್ಮಿಕರ ದುಡಿಮೆಯಿದೆ ಎಂದೂ ಇನ್ನು ಕೆಲವು ಉತ್ಪನ್ನಗಳು ಪ್ರಾಣಿ ಹಿಂಸೆಯಿಂದ ಕೂಡಿದ್ದೆಂದೂ ನಿಷೇಧಕ್ಕೆ ಒಳಗಾಗುತ್ತವೆ. ಅನೇಕ ಹಿಂದುಳಿದ ದೇಶಗಳಲ್ಲಿ ಇಂದು ಮಕ್ಕಳ ದುಡಿಮೆ ಅನಿವಾರ್ಯ ಅಗತ್ಯವೆನ್ನುವುದನ್ನು ಮರೆಯದಿರೋಣ. ದುಡಿಯದಿದ್ದಲ್ಲಿ ಅವರ ಹೊಟ್ಟೆಪಾಡಿಗೆ ಗತಿಯೇ ಇಲ್ಲದಿರುವ ಪರಿಸ್ಥಿತಿ ಅನೇಕ ದೇಶಗಳಲ್ಲಿ ಇದೆ. ಅವರು ದುಡಿದೂ ವಂಚನೆಗೊಳಗಾಗದಿರುವ-ದುಡಿಯುತ್ತ ಸ್ವಲ್ಪ ಮಟ್ಟಿಗಾದರೂ ವಿದ್ಯೆ ಕಲಿಯುವ ಬೇರೆ ಮಾರ್ಗಗಳತ್ತ ನಾವು ಯೋಚಿಸಬೇಕಾಗಿದೆ. ಅದನ್ನು ಬಿಟ್ಟು ದುಡಿಯುವ ಮಕ್ಕಳ ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸದೆ ದುಡಿಮೆಯಿಂದ ಹೊರಗಿಡುವುದೆಂದರೆ ಅವರನ್ನು ಹಸಿವಿನತ್ತ ದೂಡುವುದೇ ಆಗಿದೆ. Indian-Cow-calfಇನ್ನು ಪ್ರಾಣಿ ಹಿಂಸೆಯ ಬಗ್ಗೆ ಹೇಳುವುದಾದರೆ ಯಾವುದೇ ಜಾತಿಯ ಪ್ರಾಣಿಗೆ ಸಾಂಕ್ರಾಮಿಕ ರೋಗವೊಂದು ಬಂದಿದೆಯೆಂದರೆ ಅದರ ಕುಲವನ್ನೇ ಗುಂಡಿಟ್ಟು ಸಾಯಿಸಿಬಿಡುವ ದೇಶಗಳು- ಪ್ರಾಣಿಹಿಂಸೆಯ ಮಾತನಾಡುತ್ತವೆ!

ಇವೆಲ್ಲವೂ ತಿಳಿದಿದ್ದರೂ ಸಹ ಈ ಮುಂದುವರಿದ ದೇಶಗಳು ಸಹಾಯದ ಹೆಸರಿನಲ್ಲೋ ಇನ್ನಾವುದೇ ರೀತಿಯಲ್ಲೋ ನಮ್ಮಲ್ಲಿಗೆ ಕಳಹಿಸುವ ಯಾವುದೇ ವಸ್ತುವನ್ನು ಅದು ಎಷ್ಟೇ ಹಾನಿಕಾರಕವಾಗಿದ್ದರೂ ಅದನ್ನು ನಿಷೇಧಿಸುವ ಧೈರ್ಯವನ್ನಾಗಲೀ, ಪ್ರಾಮಾಣಿಕತೆಯನ್ನಾಗಲೀ ಯಾವುದೇ ಹಿಂದುಳಿದ-ಅಭಿವೃದ್ಧಿಶೀಲ ದೇಶಗಳು ತೋರುವುದಿಲ್ಲ. ಯಾಕೆಂದರೆ ಈ ದೇಶಗಳ ರಾಜಕೀಯ-ಸಾಮಾಜಿಕ ಪರಿಸ್ಥಿತಿಗಳೇ ಇದಕ್ಕೆ ಅವಕಾಶ ನೀಡುವುದಿಲ್ಲ.

ಹೀಗಿರುವಾಗ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ಸಾವಯವ ಕೃಷಿಯ ಬಗ್ಗೆ ಒಲವು ತೋರುತ್ತಿದೆಯೆಂದು ನಾವು ನಂಬಿಕೊಂಡರೆ ನಮ್ಮ ದಡ್ಡತನವಷ್ಟೆ. ಇದೂ ಕೂಡಾ ಅಂತರಾಷ್ಟ್ರೀಯ ಮಟ್ಟದ ಹುನ್ನಾರದ ಭಾಗ. ಇದರ ಅಂಗವಾಗಿ ಭಾರತ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಸಾವಯವ ಕೃಷಿಯ ಬೊಬ್ಬೆಯಲ್ಲಿ ತೊಡಗಿವೆ ಅಷ್ಟೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೈಟೆಕ್ ಸಾವಯವ ಕೃಷಿ ಮೇಳವನ್ನು ಗಮನಿಸಿ, ಈ ಬಗ್ಗೆ ವರದಿ ಮಾಡಿದ ಹಲವು ಪತ್ರಿಕೆಗಳು “ಭಾರತದ ಸಾವಯವ ಕೃಷಿಗೆ ಸಿದ್ಧತೆ- ಸಾವಯವ ಕೃಷಿ ಮೇಳ” ಎಂದು ದೊಡ್ಡದಾಗಿ ಬರೆದವು. ಅವು ವರದಿ ಮಾಡಿದ ರೀತಿ ಭಾರತ ದೇಶಕ್ಕೆ ಸಾವಯವ ಕೃಷಿ ಅನ್ನುವ ಸಂಗತಿಯೇ ಹೊಸತೇನೋ ಅನ್ನುವಂತಿತ್ತು. ಅದೃಷ್ಟವಷಾತ್ ಕೆಲವು ಪತ್ರಿಕೆಗಳು ಈ ಮೇಳದ ವಿರುದ್ಧವಾಗಿದ್ದ ಅನೇಕ ಕೃಷಿಕರ ಅಭಿಪ್ರಾಯಗಳನ್ನೂ ಪ್ರಕಟಿಸಿದ್ದವು.

ಈ ಸರ್ಕಾರಿ ಸಾವಯವ ಕೃಷಿ ಪ್ರಚಾರದ ಹಿಂದೆ ಬೆಕ್ಕಿನಂತೆ ಹೊಂಚುಹಾಕುತ್ತ ನಿಂತಿದೆ, ಬಯೋಟೆಕ್ನಾಲಜಿ ಉದ್ದಿಮೆದಾರರ ಗುಂಪು! ಈ ದೃಷ್ಟಿಯಿಂದಲೇ ಈ ‘ಸಾವಯವ ಕೃಷಿ’ಎನ್ನುವುದು ಈಗ ಆಧುನಿಕ ಕೃಷಿಗಿಂತಲೂ ಅಪಾಯಕಾರಿಯಾಗಿ ಕಾಣುತ್ತಿರುವುದು.

ನಮ್ಮ ಕೃಷಿಕರ ಅಗತ್ಯ ಮತ್ತು ಆಕಾಂಕ್ಷೆಗಳನ್ನು ಅಂದರೆ ಅನ್ನ, ವಸತಿ, ವಸ್ತ್ರ, ವಿದ್ಯೆಗಳಂತಹ ಮೂಲಭೂತ ಅಗತ್ಯಗಳ ಜೊತೆಗೆ ಆಧುನಿಕ ವಿಜ್ಞಾನದ ಕೊಡುಗೆಗಳ ಕನಿಷ್ಟ ಬಳಕೆಯೂ ಸೇರಿದಂತೆ, ಈಗ ನಾವು ಅನುಭವಿಸುತ್ತಿರುವ ವಾಹನ ಸೌಕರ್ಯ, ವಿದ್ಯುತ್, ಕನಿಷ್ಟ ವೈದ್ಯಕೀಯ ಸೌಲಭ್ಯಗಳು, ಟಿ.ವಿ., ಕಂಪ್ಯೂಟರ್, ಫೋನು ಇವುಗಳನ್ನು ನಿರಾಕರಿಸದೆ, ನಮ್ಮ ಪರಿಸರವನ್ನು ಸಂರಕ್ಷಿಸುವ ಚಿಂತನೆ ಮಾಡಬೇಕಾಗುತ್ತದೆ. ಮತ್ತು ಈ ಕನಿಷ್ಟ ಸೌಲಭ್ಯಗಳನ್ನು ಹೊಂದಲು ಕೃಷಿಕ-ಕೃಷಿ ಕೂಲಿಗಾರ ಸೇರಿದಂತೆ, ಸಾಮಾನ್ಯನೊಬ್ಬನಿಗೆ ಇರಬೇಕಾದ ಆದಾಯ ಮತ್ತು ಅದನ್ನು ಗಳಿಸಬಹುದಾದ ರೀತಿಯ ಬಗ್ಗೆಯೂ ಯೋಚಿಸ ಬೇಕಾಗುತ್ತದೆ.

ಕನಿಷ್ಟ ಖರ್ಚಿನಲ್ಲಿ ಮಾಡಬಹುದಾದ ಕೃಷಿ, ಮತ್ತು ಎಲ್ಲವನ್ನೂ ನಿರಾಕರಿಸದೆ ಬದುಕಬಹುದಾದ ಸಾಧ್ಯತೆಯನ್ನು ಸಮೀಕರಿಸಿ ಮಾಡಬಹುದಾದ ಯಾವುದೇ ಕೃಷಿ ಆಧಾರಿತ ಉದ್ಯಮ- ಉದ್ಯೋಗಗಳ ಶೋಧನೆ ಅಗತ್ಯವಾಗಿದೆ. ಇದಕ್ಕೆ ಬರೀ ಕೃಷಿ ವಲಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡರೆ ಸಾಧ್ಯವಾಗಲಾರದು. ಇದಕ್ಕೆ ಮುಖ್ಯ ಕಾರಣವೆಂದರೆ. ನಮ್ಮ ಕೃಷಿಕ್ಷೇತ್ರ ಅನುಭವಿಸುವ ನಷ್ಟವೇ ಕೈಗಾರಿಕಾರಂಗದ ಲಾಭವಾಗಿ ಪರಿವರ್ತನೆಯಾಗುತ್ತಿರುವುದು. ರೈತ ಭೂಮಿ ಕಳೆದುಕೊಳ್ಳಲಿ ಅಥವಾ ಆತನ ಉತ್ಪನ್ನದ ಬೆಲೆ ಕಳೆದುಕೊಳ್ಳಲಿ ಅದರ ಲಾಭ ಸದಾ ದೊರೆಯುತ್ತಿರುವುದು ಉದ್ಯಮ ರಂಗಕ್ಕೆ. ಇದನ್ನು ತಿಳಿಯಲು ಮಹತ್ತರವಾದ ಆರ್ಥಿಕ ತಜ್ಞತೆಯೇನೂ ಬೇಕಾಗಿಲ್ಲ. ಈ ವೈರುಧ್ಯವನ್ನು ನಿವಾರಿಸದೆ ನಾವು ಮಾಡುವ ಯಾವುದೇ ಆಭಿವೃದ್ಧಿ ಕೃಷಿಕನನ್ನು ತಲುಪಲಾರದು. ಆದ್ದರಿಂದ ಕೈಗಾರಿಕಾ ಮತ್ತಿತರ ಉದ್ಯಮರಂಗ ಗಳಿಸುತ್ತಿರುವ ಲಾಭದ ಗಣನೀಯ ಅಂಶ ಕೃಷಿಕ್ಷೇತ್ರಕ್ಕೆ ಅಂದರೆ ರೈತ-ಕಾರ್ಮಿಕರಿಗೆ ಮರಳಿಸುವ ಕೆಲಸವನ್ನು ಮಾಡಬೇಕಾಗಿದೆ. ಮತ್ತು ಭೂಮಿಯ ಅತ್ಯುತ್ತಮ ಬಳಕೆಗಾಗಿ ಹಿಡುವಳಿಗಳ ಅಸಮಾನ ಹಂಚಿಕೆಯನ್ನು ನಿವಾರಿಸಬೇಕಾಗಿದೆ. ಈ ವೈರುಧ್ಯಗಳನ್ನು ನಿವಾರಿಸದೆ ಕೃಷಿ ಉತ್ಪನ್ನಗಳಿಗೆ ನೀಡುವ ಯಾವ ಬೆಲೆಯೂ ರೈತನ ಪಾಲಿಗೆ ನ್ಯಾಯಬೆಲೆ ಆಗಲಾರದು.

ನಮ್ಮ ಎಲ್ಲ ಉದ್ಯೋಗಗಳ ತಳಹದಿಯಾದ ಕೃಷಿಯನ್ನು ಮೂಲವಾಗಿಟ್ಟುಕೊಂಡು ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, harohalli-slaughter-house-areaಉದ್ಯಮಗಳು, ವಿದ್ಯಾಭ್ಯಾಸ, ಹೀಗೆ ಎಲ್ಲವನ್ನೂ ಒಳಗೊಂಡ ಪರ್ಯಾಯ ಸಂಸ್ಕೃತಿಯನ್ನು ಕಟ್ಟುವುದು ಅನಿವಾರ್ಯ. ಇಡೀ ಪ್ರಪಂಚವನ್ನು ಮಾರುಕಟ್ಟೆಯನ್ನಾಗಿ ನೋಡುವ, ಭೂಮಿಯಿರುವುದೇ ಮನುಷ್ಯನ ಉಪಯೋಗಕ್ಕಾಗಿ ಎಂದು ಯೋಚಿಸುವ ಮುಂದುವರಿದ ದೇಶಗಳ ಉದ್ದಿಮೆದಾರರು, ವ್ಯಾಪಾರಿಗಳು (ಮುಂದುವರಿದ ದೇಶಗಳಲ್ಲೂ ರೈತರು ಕೆಲಮಟ್ಟಿಗೆ ಬೇರೆಯೇ ಆಗಿ ಉಳಿದಿದ್ದಾರೆ. ಅವರಿಗೂ ಅವರದ್ದೇ ಆದ ಸಮಸ್ಯೆಗಳಿವೆ.) ಅವರ ಮಾರುಕಟ್ಟೆ ವಿಸ್ತರಣೆ ಯೋಜನೆಯ ಅಂಗವಾಗಿಯೇ ಅವರ ಕ್ರೀಡೆಗಳು, ಸಂಗೀತ, ನೃತ್ಯ, ಕಲೆ, ಭಾಷೆ, ಜೀವನಶೈಲಿ ಎಲ್ಲವೂ ಇತರರಿಗಿಂತ ಉತ್ತಮವಾದದ್ದು ಮತ್ತು ಇತರರಿಗೆ ಅನುಕರಣೆಗೆ ಯೋಗ್ಯವಾದದ್ದೆಂದು ವಿಶ್ವಾದ್ಯಂತ ಭ್ರಮೆ ಹುಟ್ಟಿಸುತ್ತಿರುವಾಗ- ನಾವು ನಿಜವಾದ ಜಾಗತೀಕರಣಕ್ಕೆ ಸಿದ್ಧವಾಗುವುದು ಅಗತ್ಯ. ಆ ನಿಟ್ಟಿನ ಪ್ರಯತ್ನಗಳು ವೈಯಕ್ತಿಕವಾಗಿರುವುದಂತೂ ಸಾಧ್ಯವೇ ಇಲ್ಲ. ಸಾಂಘಿಕ- ಸಾಂಸ್ಥಿಕ ಹಾಗೂ ಜಾಗತಿಕ ಮಟ್ಟದ ಅರಿವು-ಎಚ್ಚರಗಳಿಂದ ಯೋಚಿಸಿ ಕಾರ್ಯಕ್ರಮಗಳನ್ನು ಯೋಜಿಸಬೇಕಾಗುತ್ತದೆ. ಇದೊಂದು ರೀತಿಯಲ್ಲಿ Think globally act locally ಎಂಬ ಮಾತಿಗೆ ಬದಲಾಗಿ Think locally act globally ಇರಬಹುದೇನೋ? ನಮ್ಮ ಸಾಮಾಜಿಕ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಉಳಿಸಿಕೊಂಡೂ ಪರ್ಯಾಯ ಕೃಷಿ, ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ, ಉದ್ಯಮ, ವಿದ್ಯೆ ಹೀಗೆ ಎಲ್ಲವನ್ನೂ ಒಳಗೊಂಡ ಸಂಸ್ಕೃತಿಯೊಂದನ್ನು ಕಟ್ಟುತ್ತಾ ಅದನ್ನು ಜಾಗತೀಕರಿಸುತ್ತಾ ಹೋಗುವ ಮೂಲಕ ನಮ್ಮ ನೆಲ, ಜಲ, ಆಕಾಶಗಳನ್ನು ಉಳಿಸಿಕೊಳ್ಳಲು ಸಾಧ್ಯವಾದೀತು.

ಒಕ್ಕಲು ಮಗ ಬಿಕ್ಕದಂತೆ ಕಾಯಬೇಕು


– ಡಾ.ಎಸ್.ಬಿ. ಜೋಗುರ


ಭಾರತದ ಕೃಷಿಯಲ್ಲಿ 1990 ರ ದಶಕದ ನಂತರ ಸಾಕಷ್ಟು ಸ್ಥಿತ್ಯಂತರಗಳು ಉಂಟಾದವು. ಮುಖ್ಯವಾಗಿ ಆರ್ಥಿಕ ಉದಾರೀಕರಣದ ಹಿನ್ನೆಲೆಯಲ್ಲಿ ಆರಂಭವಾದ ಬದಲಾವಣೆಗಳು ನಮ್ಮ ಕೃಷಿಯ ಮೇಲೂ ಪ್ರಭಾವ ಬೀರಿದವು. ತೊಡಗಿಸಿರುವ ಹಣಕ್ಕಿಂತಲೂ ಕಡಿಮೆ ಆದಾಯ, ಸಾಲ, ಒಕ್ಕಲುತನ ಮಾಡಲು ತಗಲುವ ಖರ್ಚು ವೆಚ್ಚ, ಕೃಷಿ ಸಾಲ ಸೌಲಭ್ಯಗಳ ಅಸಮರ್ಪಕ ವಿತರಣೆ, ಮಾರುಕಟ್ಟೆಯ ಅಹಿತಕರ ವಾತಾವರಣ, ದುರ್ಬರವಾದ ಖಾಸಗಿ ಬದುಕು ಮುಂತಾವುಗಳು ಸಂಯುಕ್ತವಾಗಿ ರೈತನ ಜೀವವನ್ನೇ ಬಲಿ ತೆಗೆದುಕೊಳ್ಳುತ್ತಿವೆ. ಸೂಕ್ತ ಸಮಯಕ್ಕೆ ಸಿಗಬೇಕಾಗದ ನೆರವು ಕೂಡಾ ಆತನಿಗೆ ಒದಗದ ಕಾರಣ ಆತ್ಮಹತ್ಯೆಯಂಥಾ ತೀರ್ಮಾನವನ್ನು farmers-suicideಆತ ತೆಗೆದುಕೊಳ್ಳುತ್ತಿದ್ದಾನೆ. ಆತ್ಮಹತ್ಯೆ ಯಾವುದೇ ಸಮಸ್ಯೆಗಾಗಲೀ, ಯಾರಿಗೇ ಆಗಲೀ ಪರಿಹಾರವಂತೂ ಆಗುವದಿಲ್ಲ. ಕರ್ನಾಟಕದಲ್ಲಿ ಕಳೆದ ಕೆಲ ವರ್ಷಗಳಿಂದ ಈ ಕಬ್ಬು ಬೆಳೆದ ರೈತರ ಸ್ಥಿತಿ ಮಾತ್ರ ಮತ್ತೆ ಮತ್ತೆ ಅನೇಕ ಬಗೆಯ ಸಂದಿಗ್ಧಗಳನ್ನು ಸೃಷ್ಟಿ ಮಾಡುತ್ತಿದೆ. ಸರಕಾರ ಯಾವುದೇ ಇರಲಿ ರೈತರ ಸಮಸ್ಯೆಗಳು ಮಾತ್ರ ನಿರಂತರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವದಂತೂ ಹೌದು. ಒಕ್ಕಲುತನದಲ್ಲಿ ಯಾವ ಸುಖವೂ ಇಲ್ಲ ಎನ್ನುವ ಮತು ನಾನು ಹುಟ್ಟಿದಾಗಿನಿಂದಲೂ ಕೇಳುತ್ತಲೇ ಬೆಳೆದಿರುವೆ. ಬರುವ ಇಳುವರಿ ಬರೀ ಲಾಗೋಡಿಗೂ [ಕೃಷಿ ಖರ್ಚು ವೆಚ್ಚ] ಸಾಲುವದಿಲ್ಲ ಎನ್ನುವ ಮಾತು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರಿಗೆಲ್ಲರಿಗೂ ತಿಳಿದಿದೆ. ಒಂದು ಕ್ವಿಂಟಲ್ ಹತ್ತಿ ಬೆಳೆಯಲು ಒಬ್ಬ ರೈತ 6000 ರೂಪಾಯಿ ಖರ್ಚು ಮಾಡಿದರೆ, ಅವನಿಗೆ ಇಳುವರಿ ಬಂದ ಮೇಲೆ ಒಂದು ಕ್ವಿಂಟಲ್ ಗೆ 4000 ರೂಪಾಯಿ ದರ ನಿಗದಿ ಮಾಡಿದರೆ ಆತನ ಮನಸ್ಥಿತಿ ಏನಾಗಬೇಡ..? ಬೇರೆ ಬೇರೆ ಮೂಲಗಳಿಲ್ಲದೇ ಕೇವಲ ಕೃಷಿ ಇಳುವರಿಯನ್ನೇ ಅವಲಂಬಿಸಿರುವ ರೈತ ಸಹಜವಾಗಿ ತನ್ನ ಕುಟುಂಬದ ಇತರೆ ಖರ್ಚು ವೆಚ್ಚಗಳಿಗಾಗಿ ಸಾಲ ಮಾಡುವುದು ಸಾಮಾನ್ಯ ಸ್ಥಿತಿ. ಇದ್ದಕ್ಕಿದ್ದಂತೆ ಬಂದೆರಗುವ ಬರಗಾಲ, ಇಳುವರಿ ಬಂದಾಗ ಉಂಟಾಗುವ ಬೆಲೆ ಕುಸಿತ, ಅವೈಜ್ಞಾನಿಕವಾದ ಬೆಂಬಲ ಬೆಲೆ, ಸಾಲಗಾರರ ಕಿರಕಿರಿ ಈ ಮುಂತಾದ ಕಾರಣಗಳಿಂದಾಗಿ ರೈತ ಆತ್ಮಹತ್ಯೆಯಂಥಾ ತೀರ್ಮಾನ ತೆಗೆದುಕೊಳ್ಳುವದಿದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಗಳು ಮಹಾರಾಷ್ಟ್ರದಲ್ಲಿ ಜರುಗುವದಿದೆ. ಅದಕ್ಕಿರುವ ಕಾರಣಗಳು ಮಾತ್ರ ಸಾರ್ವತ್ರಿಕ. 2014 ರಲ್ಲಿ ಜರುಗಿದ ಒಟ್ಟು 1109 ರೈತರ ಆತ್ಮಹತ್ಯೆಗಳಲ್ಲಿ ಸುಮಾರು 986 ಪ್ರಕರಣಗಳು ಮಹಾರಾಷ್ಟ್ರ ಒಂದರಲ್ಲಿಯೆ ಜರುಗಿರುವದಿತ್ತು. ಅದರ ನಂತರದ ಸ್ಥಾನವನ್ನು ಆಂಧ್ರಪ್ರದೇಶ ಮತ್ತು ಜಾರ್ಖಂಡ ರಾಜ್ಯಗಳು ಪ್ರತಿನಿಧಿಸುವದಿತ್ತು. ಈ ಬಗೆಯ ಸಂಗತಿಗಳ ಪಟ್ಟಿಯಲ್ಲಿ ರಾಜ್ಯವೊಂದರ ಹೆಸರು ಇಲ್ಲದಿರುವದೇ ಉಚಿತ. ಆದರೆ ಈಗೀಗ ಕರ್ನಾಟÀಕದಲ್ಲಿ ರೈತರ ಆತ್ಮಹತ್ಯೆಗಳು ಸುದ್ಧಿಯಾಗುತ್ತಿವೆ. farmer-land-acquisition-2ಈ ವರ್ಷದ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಅನೇಕ ರೈತರು ಸರಣಿ ರೂಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದು ಹೀಗೇ ಮುಂದುವರೆದರೆ ಕರ್ನಾಟಕ ಮಹಾರಾಷ್ಟ್ರವನ್ನು ಈ ವಿಷಯವಾಗಿ ಹಿಂದಿಕ್ಕಬಹುದು. ರೈತರಲ್ಲಿ ಈ ಆತ್ಮಹತ್ಯೆ ಎನ್ನುವುದು ಸಮೂಹಸನ್ನಿಯಾಗಿ ಮಾರ್ಪಡುವಂತೆ ತೋರುತ್ತಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಕಾಲಿಕ ನೆರವಿನ ಅಗತ್ಯವಿದೆ. ನಮ್ಮ ದೇಶದಲ್ಲಿ 2012 ರಲ್ಲಿ ಒಟ್ಟು 1246 ರೈತರ ಆತ್ಮಹತ್ಯೆಯ ಪ್ರಕರಣಗಳು ವರದಿಯಾದರೆ, 2013 ರಲ್ಲಿ 879 ಆತ್ಮಹತ್ಯೆಗಳು ವರದಿಯಾಗಿದ್ದವು. ನೆರೆಯ ರಾಜ್ಯಗಳೊಂದಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳು ಹಿಂದೆಂದಿಗಿಂತಲೂ ಕಡಿಮೆಯೇ.. ಆದರೆ ಈಗಿನ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ರಾಜ್ಯ ಸರಕಾರ ಎಚ್ಚರ ವಹಿಸುವ ಅಗತ್ಯವಿದೆ.

1990 ರ ದಶಕದ ನಂತರ ಆರಂಭವಾದ ಆರ್ಥಿಕ ಸುಧಾರಣೆಯ ನೀತಿಗಳು ಮತ್ತು ಜಾಗತೀಕರಣದ ಹಾವಳಿಯೂ ತೀವ್ರವಾಗಿ ಕೃಷಿ ಮತ್ತು ಅದರ ಉತ್ಪಾದನೆಗಳ ಮೇಲೆ ಪ್ರಭಾವ ಬೀರಲು ಆರಂಭಿಸಿದವು. ಮುಕ್ತ ಮಾರುಕಟ್ಟೆಯ ಹೆಸರಲ್ಲಿ ರೈತರ ಬೆಳೆಗೆ ಯೋಗ್ಯ ದರ ದೊರೆಯದ ಸ್ಥಿತಿ ನಿರ್ಮಾಣವಾಯಿತು. ಆಂಧ್ರಪ್ರದೇಶದಲ್ಲಂತೂ ಈ ಮಾತು ಬಹುತೇಕ ಸತ್ಯ. ಆಂದ್ರದ ನೆಲ್ಲೂರು ಭಾಗದಲ್ಲಿ ಬಹುತೇಕ ಕೃಷಿಕರು ವಾಣಿಜ್ಯ ಬೆಳೆಯನ್ನು ಬೆಳೆಯುವ ಭರಾಟೆಗೆ ಇಳಿದರು ಆ ಬೆಳೆಗೆ ಪೂರಕವಾಗಿ ನಿಲ್ಲಬಹುದಾದ ದುಬಾರಿ ಬೆಲೆಯ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡರು. ಅವರ ನಿರೀಕ್ಷೆಗೆ ತಕ್ಕಂತೆ ಇಳುವರಿ ಬಂತಾದರೂ ಸೂಕ್ತವಾದ ಬೆಲೆ ಬಾರದ ಸ್ಥಿತಿ ನಿರ್ಮಾಣವಾಯಿತು. ಆರ್ಥಿಕ ಸುಧಾರೀಕರಣ ಎನ್ನುವುದು ರೈತರ ಪಾಲಿಗೆ ವರವಾಗದೇ ಶಾಪವಾಗಿ ಪರಿಣಮಿಸಿತು. ಪಂಜಾಬ, ಮಹಾರಾಷ್ಟ್ರ, ಆಂದ್ರಪ್ರದೇಶ,ಕರ್ನಾಟಕ ಮುಂತಾದ ಕಡೆಗಳಲ್ಲಿ ಕೇಳಿ ಬರುವ ರೈತರ ಆತ್ಮಹತ್ಯೆಯ ಹಿಂದಿನ ಕಾರಣ ಹೆಚ್ಚು ಖರ್ಚು, ಹೆಚ್ಚು ಇಳುವರಿ ಆದರೆ ಕಡಿಮೆ ಆದಾಯವೇ ಆಗಿದೆ. ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳ ಮಾಲಿಕರು ಬಾಕಿ ಹಣವನ್ನು ನೀಡದೇ ಸತಾಯಿಸುತ್ತಿರುವದು ರೈತರು ಅನುಭವಿಸುತ್ತಿರುವ ಇತರೆ ಸಮಸ್ಯೆಗಳ ಜೊತೆಯಲ್ಲಿ ಒಂದು ವಿಶಿಷ್ಟ ಸಮಸ್ಯೆ.ಉಳ್ಳವರ ಬಳಿ ಯಪ್ಪಾ farmersಯಣ್ಣಾ ಅಂದು ಸಾಲ ಪಡೆದು ಕಬ್ಬು ಬೆಳೆದು ಅದನ್ನು ಜ್ವಾಕಿ ಜತ್ತನ ಮಾಡಿ ಬೆಳೆದ ಇಳುವರಿಯನ್ನು ಸಕ್ಕರೆ ಕಾರ್ಖಾನೆಗಳಿಗೆ ಸುರುಹಿದರೆ ಹಣವೇ ಕೊಡದ ಸ್ಥಿತಿ ಇರುವಾಗ ಮಾಡಿದ ಖರ್ಚಿಗೆ ಎಲ್ಲಿಂದ ಸುರಿಯುವದು..? ಆ ರೈತನನ್ನು ಅವಲಂಬಿಸಿ ಒಂದು ಕುಟುಂಬವೇ ಇದೆ ಅವರ ಖರ್ಚು ವೆಚ್ಚಗಳಿಗೆ ಆತ ಮತ್ತೆ ಸಾಲ ಮಾಡಬೇಕು. ಒಟ್ಟಿನಲ್ಲಿ ಸಾಲದ ಸಹವಾಸದಲ್ಲಿ ಅವನನ್ನು ಇಟ್ಟು ವೇದಿಕೆಗಳಲ್ಲಿ ‘ಉಳುವಾ ಯೋಗಿಯ ನೋಡಲ್ಲಿ’ ಎಂದು ಹಾಡುವುದೇ ದೊಡ್ಡ ಮುಜುಗರ ಎನಿಸುವದಿಲ್ಲವೆ..? ಒಬ್ಬ ರೈತ ತಾನೇ ಕಷ್ಟ ಪಟ್ಟು ಬೆಳೆದ ಕಬ್ಬಿನ ಪಡಕ್ಕೆ ಬೆಂಕಿ ಇಡುವ ಮಟ್ಟದ ಕಠೋರ ಮನ:ಸ್ಥಿತಿಯನ್ನು ತಲುಪುತ್ತಾನೆ ಎಂದರೆ ಅವನ ಪಡಪಾಟಲು ಹೇಗಿರಬಹುದು..? ರೈತರಿಗೆ ಕೃಷಿ ಸಾಂಸ್ಥಿಕ ಮೂಲಗಳಿಂದ ಹಣÀಕಾಸಿನ ನೆರವನ್ನು ಸಕಾಲದಲ್ಲಿ ಒದಗಿಸುವದು ಮಾತ್ರ ಸಾಲದು ಅದರ ಜೊತೆಯಲ್ಲಿಯೇ ಕೃಷಿ ಎನ್ನುವುದು ಒಂದು ಲಾಭದಾಯಕ ಉದ್ಯೋಗ ಎನ್ನುವ ಖಾತ್ರಿ ಮನ:ಸ್ಥಿತಿಯನ್ನು ರೂಪಿಸುವಂತಾಗಬೇಕು. ಬೆಳಗಾವಿಯಲ್ಲಿ ಅಧಿವೇಶನ ನಡೆಯುವದಿದೆ ಎನ್ನುವದನ್ನು ಗಮನದಲ್ಲಿರಿಸಿಕೊಂಡು ಆಳುವ ಪಕ್ಷಗಳು ಮತ್ತು ವಿರೋಧಿ ಪಕ್ಷಗಳು ಒಂದು ತಾತ್ಕಾಲಿಕ ತಾಲೀಮು ಮಾಡಿಕೊಂಡು ರೈತರ ಸಂಕಷ್ಟಗಳ ಬಗ್ಗೆ ಯೋಚಿಸದೇ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಶಾಶ್ವತವಾದ ಯೋಜನೆಯನ್ನು ರೂಪಿಸಿ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ರೈತನನ್ನು, rural-karnataka-2ಅವನ ಬದುಕು ಮತ್ತು ವೃತ್ತಿಯನ್ನು ರಾಜಕೀಯ ಸಂಗತಿಗಳಿಗೆ ಸಿಲುಕಿಸಿದೇ ಒಂದು ಪ್ರಾಮಾಣಿಕವಾದ ಕಳಕಳಿಯಿಂದ ರೈತನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಒಂದು ನೈತಿಕ ಇಚ್ಛಾ ಶಕ್ತಿಯನ್ನು ಮೆರೆಯುವ ಅವಶ್ಯಕತೆಯಿದೆ.

ಕೃಷಿಯನ್ನು ಸಾಧ್ಯವಾದಷ್ಟು ನೈಸರ್ಗಿಕ ಅವಲಂಬನೆಯಿಂದ ವಿಚಲಿತಗೊಳಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. ರಾಜ್ಯಗಳು ತಮ್ಮಲ್ಲಿಯ ನೀರನ್ನು ಅತ್ಯಂತ ವೈಜ್ಞಾನಿಕವಾಗಿ ಬಳಸಿಕೊಳ್ಳುವ, ಕೃಷಿಗೆ ಪೂರಕವಾಗಿ ವಿನಿಯೋಗವಾಗುವ ಹಾಗೆ ಕ್ರಮ ಕೈಗೊಳ್ಳಬೇಕು. ಇನ್ನು ಕೃಷಿಗೆ ಕೆಲ ಸಾಂಸ್ಥಿಕ ಮೂಲಗಳಿಂದ ಸಾಲವನ್ನು ಒದಗಿಸುವಾಗ ದೊಡ್ಡ ರೈತರು ಮತ್ತು ಸಣ್ಣ ರೈತರ ನಡುವೆ ತಾರತಮ್ಯ ಎಸಗದೇ ಎಲ್ಲ ಬಡ ರೈತರಿಗೂ ಸಾಂಸ್ಥಿಕ ಮೂಲಗಳ ಸಾಲವನ್ನು ಸಮನಾಗಿ ಒದಗಿಸುವಲ್ಲಿ ನೆರವಾಗÀಬೇಕು. ಜೊತೆಗೆ ಸಾಲ ನೀಡಿದ ಕಾರಣಕ್ಕೆ ಸರಿಯಗಿ ಬಳಕೆ ಯಾಗುವಂತೆ ನಿಗಾ ವಹಿಸಬೇಕು. ಬೆಳೆ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರೈತರಿಗೆ ಕೃಷಿ ಇಲಾಖೆಯ ಮೂಲಕ ಇಲ್ಲವೇ ಸಂಬಂಧಿಸಿದ ಇಲಾಖೆಯ ಮೂಲಕ ತಿಳುವಳಿಕೆಯನ್ನು ನೀಡಬೇಕು. rural-indiaಸಣ್ಣ ಹಿಡುವಳಿದಾರರು ಕೂಡಾ ಲಾಭದಾಯಕ ಕೃಷಿಯಲ್ಲಿ ತೊಡಗಲು ಅನುಕೂಲವಾಗುವ ಹಾಗೆ ನೆರವು ನೀಡಬೇಕು. ರೈತರಿಗೆ ಕೃಷಿಗೆ ಪೂರಕವಾಗಿರುವ ಇತರೆ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೂಢೀಕರಿಸುವ ಕೌಶಲ್ಯಗಳನ್ನು ಕಲಿಸಬೇಕು. ಬರಗಾಲದ ಸಂದರ್ಭದಲ್ಲಿ ಆ ಬಗೆಯ ವಿದ್ಯೆ ಅವರ ಕುಟುಂಬವನ್ನು ಸಲಹುವಂತಾಗಬೇಕು. ತೊಂದರೆಗೆ ಸಿಲುಕಿದ ರೈತರನ್ನು ಗುರುತಿಸಿ ಅವರು ಆತ್ಮ ಹತ್ಯೆ ಮಾಡಿಕೊಂಡ ನಂತರ ಪರಿಹಾರ ಕೊಡುವ ಬದಲಾಗಿ ಆತ ಇನ್ನೂ ಬದುಕಿರುವಾಗಲೇ ಆತ ಸಮಸ್ಯೆಯ ಸುಳಿಯಿಂದ ಹೊರಬರುವಲ್ಲಿ ನೆರವಾಗಬೇಕು. ಈ ಸಂಗತಿಗಳ ಜೊತೆಯಲ್ಲಿ ಕೆಲವು ಸಂಘ-ಸಂಸ್ಥೆಗಳು ಬರಗಾಲದ ಸಂದರ್ಭದಲ್ಲಿ ಆ ಭಾಗದ ರೈತರ ಕುಟುಂಬಗಳಿಗೆ ನೆರವಾಗುವ ಮೂಲಕ ಅವರ ಮನೋಸ್ಥೈರ್ಯವನ್ನು ವೃದ್ಧಿಸಬೇಕು. ಹೀಗೆ ರೈತರ ಬಗೆಗಿನ ಒಂದಷ್ಟು ಪ್ರಾಮಾಣಿಕ ಕಳಕಳಿಯಿಂದ ಈ ಬಗೆಯ ಆತ್ಮಹತ್ಯೆಗಳನ್ನು ನಾವು ತಡೆಯಬಹುದಾಗಿದೆ. ಒಕ್ಕಲು ಮಗ ಬಿಕ್ಕದಂತೆ ಕಾಯುವ ಹೊಣೆಗಾರಿಕೆ ಸರಕಾರದ ಮೇಲಿರುವಂತೆ ಸಮಾಜದ ಪ್ರತಿಯೊಂದು ಸಂಘ-ಸಂಸ್ಥೆಯ ಮೇಲೂ ಇದೆ.