Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ದಲಿತರ ಮೇಲೆ ದೌರ್ಜನ್ಯ ನಡೆಸುವ ವ್ಯವಸ್ಥೆಯ ಹೆಸರು – ಸರಕಾರ!

ಭೂಮಿ ಬಾನು

ಇಂದು ಒಂದು ದುರಂತ ನಡೆದು ಹೋಗಿದೆ. ಕೆಜಿಎಫ್ ನಲ್ಲಿ ಮಲದ ಗುಂಡಿ ಶುಚಿಗೊಳಿಸಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸೋ ಕಾಲ್ಡ್ ನಾಗರಿಕ ಸಮಾಜ ತಲೆ ತಗ್ಗಿಸುವುದಷ್ಟೇ ಅಲ್ಲ, ಮಂಡಿ ಊರಿ ಕೂರಬೇಕು. ಸರಕಾರ, ಉಳ್ಳವರು ಎಲ್ಲರೂ ಇದಕ್ಕೆ ಹೊಣೆ.

ಊರಿನ ರಸ್ತೆ ಸರಿಯಿಲ್ಲ, ಕುಡಿವ ನೀರಿಲ್ಲ, ಬಸ್ ನಿಲ್ದಾಣದಲ್ಲಿ ಶೆಡ್ ಇಲ್ಲ, ಎಂದೆಲ್ಲಾ ಪ್ರತಿಭಟನೆ ಮಾಡುವ ‘ಮರ್ಯಾದಸ್ಥ’ ಜನ ನಮ್ಮೂರಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಮಲದ ಗುಂಡಿಗಳನ್ನು ಶುಚಿಗೊಳಿಸಲು ಯಂತ್ರಗಳಿಲ್ಲ ಎಂದು ದನಿ ಎತ್ತಿದ್ದು ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ಅಲ್ಲಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಬಸವಲಿಂಗಯ್ಯ ಮಲಹೊರುವ ಪದ್ಧತಿಯನ್ನು ರದ್ದು ಮಾಡುವ ಬಗ್ಗೆ ಮಂತ್ರಿ ಮಂಡಲ ಸಭೆಯಲ್ಲಿ ಮಾತೆತ್ತಿದಾಗ ಜೊತೆಯಲ್ಲಿದ್ದ ಕೆಲವರು “ಆ ಅಸಹ್ಯದ ಬಗ್ಗೆ ಎಷ್ಟು ಹೊತ್ತು ಮಾತಾಡ್ತೀರಿ?” ಎಂದು ಮೂದಲಿಸಿದರಂತೆ. ಬಸವಲಿಂಗಯ್ಯ ಪ್ರತಿಕ್ರಿಯಿಸಿ “ಆ ವಿಷಯ ಮಾತನಾಡೋಕೇ ಇಷ್ಟು ಅಸಹ್ಯ ಪಡ್ತೀರಲ್ಲ, ಅದೇ ಅಸಹ್ಯವನ್ನು ತಲೆಯಲ್ಲಿ ಹೊತ್ತು ಸಾಗಿಸೋರ ಪಾಡೇನು”, ಎಂದು ಪ್ರಶ್ನಿಸಿದ್ದರು. ಆ ‘ಕೆಲ ಮಂತ್ರಿಗಳಂಥದೇ’ ಮನಸುಗಳು ಈ ಹೊತ್ತಿನ ಪರಿಸ್ಥಿತಿಗೆ ಕಾರಣ.

ಕೇಂದ್ರ ಸರಕಾರ 1993 ರಲ್ಲಿಯೇ ಮಲ ಹೊರುವ ಪದ್ಧತಿಯನ್ನು ಕಾನೂನು ತಂದು ನಿಷೇಧಿಸಿತು. ವಿಪರ್ಯಾಸ ನೋಡಿ, ಇದುವರೆಗೆ ಯಾವ ಸರಕಾರಗಳೂ ಆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಕಾನೂನು ತಂದರಷ್ಟೆ ಸಾಕೆ?

ಮಲ ಹೊರುವ ಪದ್ಧತಿ ನಿಷೇಧ ಎಂದಾಕ್ಷಣ ಮಲದ ಗುಂಡಿಗಳು ತುಂಬುವುದು ನಿಲ್ಲುತ್ತದೆಯೆ? ಒಳ ಚರಂಡಿ ವ್ಯವಸ್ಥೆ ಇಲ್ಲದ ಮಂದಿ ಎಂದಿನಂತೆ ಆ ಕೆಲಸ ಮಾಡುವವರನ್ನು ಹುಡುಕಿ ಹೋಗುತ್ತಾರೆ. ಅವರಿಗೆ ಒಂದಿಷ್ಟು ಹಣ ಕೊಟ್ಟು ಗುಂಡಿ ಖಾಲಿ ಮಾಡಿಸುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದೆ ಬದುಕಬೇಕಾದ ಸ್ಥಿತಿಯಲ್ಲಿರುವ ಅನೇಕ ದಲಿತ ಕುಟುಂಬಗಳು ಅನ್ನಕ್ಕಾಗಿ ಅನಿವಾರ್ಯವಾಗಿ ಆ ಕೆಲಸಕ್ಕೆ ಹೋಗುತ್ತಾರೆ. ಹೀಗೆ ಸಾಯುತ್ತಾರೆ. (ಆದರೆ ಅದೇ ಮೇಲ್ಜಾತಿಯ ಯಾರೇ ಆಗಲಿ ಎಷ್ಟೇ ಬಡತನವಿದ್ದರೂ, ಎಷ್ಟೇ ದುಡ್ಡು ಕೊಡುತ್ತೇನೆಂದರೂ ಈ ಕೆಲಸಕ್ಕೆ ಕೈ ಹಾಕುವುದಿಲ್ಲ ಎನ್ನುವುದು ವಾಸ್ತವ).
ಕಾನೂನು ತಂದು ಒಂದು ದಶಕವಾಯಿತು. ಇನ್ನಾದರೂ ಕರ್ನಾಟಕದ ಬಹುಪಾಲು ನಗರ, ಪಟ್ಟಣಗಳಲ್ಲಿ ಯಂತ್ರಗಳನ್ನು ಬಳಸಿ ಮಲದ ಗುಂಡಿಗಳನ್ನು ಶುಚಿಗೊಳಿಸುವ ಪದ್ಧತಿ ಜಾರಿಯಾಗಿಲ್ಲ.

ಹಾಸನ ಜಿಲ್ಲೆ ಆಲೂರಿನಂತ ತಾಲೂಕು ಕೇಂದ್ರದದಲ್ಲಿ ಒಳ ಚರಂಡಿ ವ್ಯವಸ್ಥೆಯೂ ಇಲ್ಲ, ತುಂಬಿದ ಗುಂಡಿಗಳನ್ನು ಶುಚಿಗೊಳಿಸಲು ಯಂತ್ರಗಳೂ ಇಲ್ಲ. ರಾಜ್ಯದಾದ್ಯಂತ ಇಂತಹ ಅದೆಷ್ಟೋ ತಾಲೂಕುಗಳಿವೆ.

ನೂತನ ಕಾನೂನಿನ ಪ್ರಕಾರ ಮಲದ ಗುಂಡಿಯನ್ನು ಶುಚಿಗೊಳಿಸಲು ದಲಿತರನ್ನು ನಿಯೋಜಿಸಿಕೊಂಡರೆ, ದಲಿತರ ಮೇಲೆ ನಡೆಸಿದ ದೌರ್ಜನ್ಯ ಎಂದು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬಹುದು. ಆದರೂ ಈ ಪದ್ದತಿ ನಿಲ್ಲದೇ ಇರಲು ಪ್ರಮುಖ ಕಾರಣ ಸರಕಾರದ ನಿರ್ಲಕ್ಷ್ಯ.

ದಲಿತರ ಮೇಲೆ ದೌರ್ಜನ್ಯ ನಡೆಸಿದ ಬಹುದೊಡ್ಡ ವ್ಯವಸ್ಥೆ – ಸರಕಾರ!

ಚಿತ್ರ: persecution.in

ದಂತಗೋಪುರದ ದಂಡನಾಯಕರು

 ಡಾ.ಎನ್. ಜಗದೀಶ್ ಕೊಪ್ಪ

                   ಅವರು ಈ ಕಗ್ಗತ್ತಲಿನಲ್ಲಿ ಹಾಡಬಲ್ಲರೆ?
ಹೌದು ಹಾಡಬಲ್ಲರು
ಕಗ್ಗತ್ತಲನ್ನು ಕುರಿತು ಮಾತ್ರ
ಅವರು ಹಾಡಬಲ್ಲರು
ಬರ್ಟೋಲ್ ಬ್ರೆಕ್ಟ್

ಈ ಅಂಕಿ ಅಂಶವನ್ನು ನೀವು ನಂಬಲೇಬೇಕು. ಈ ದೇಶದ ನಗರ ಪ್ರದೇಶದ ವ್ಯಕ್ತಿ ದಿನವೊಂದಕ್ಕೆ 33 ರೂಗಳನ್ನು ಹಾಗೂ ಗ್ರಾಮಾಂತರ ಪ್ರದೇಶದ ವ್ಯಕ್ತಿ 26 ರೂ ಗಿಂತ ಹೆಚ್ಚು ಖರ್ಚು ಮಾಡಿದರೆ, ಅವರು ಬಡವರಲ್ಲ. ಭಾರತದ ಜನತೆ ಬೆಚ್ಚಿ ಬೀಳಿಸುವ ಈ  ವರದಿಯನ್ನು ನಮ್ಮ ಕೇಂದ್ರ ಯೋಜನಾ ಆಯೋಗ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರದ ಮೂಲಕ ಸಲ್ಲಿಸಿದೆ.

ನಮ್ಮನ್ನಾಳುವ ಜನನಾಯಕರು ವಾಸ್ತವದ ಬದುಕಿನಿಂದ ಎಷ್ಟು ದೂರವಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕು. ಅತ್ಯಂತ ನೋವಿನ ಸಂಗತಿಯೆಂದರೆ, ಈ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಡಾ. ಮನಮೋಹನ್‌ ಸಿಂಗ್ ಸಾಧಾರಣ ವ್ಯಕ್ತಿಯಲ್ಲ. ಜಗತ್‌ಪ್ರಸ್ದಿದ್ಧ ಲಂಡನ್ ಸ್ಕೂಲ್ ಆಪ್ ಎಕಾನಾಮಿಕ್ಸ್ ಸಂಸ್ಥೆಯಿಂದ ಡಾಕ್ಟರೇಟ್ ಪಡೆದವರು. ಜೊತೆಗೆ ಅರ್ಥಶಾಸ್ರದ ಪಿತಾಮಹ ಎನಿಸಿಕೊಂಡ ಆಡಂ ಸ್ಮಿತ್ ಹೆಸರಿನಲ್ಲಿ ಇರುವ ಚಿನ್ನದ ಪದಕ ಪಡೆದ ಪ್ರಥಮ ಏಷ್ಯಾದ ವ್ಯಕ್ತಿ. ಇವೆಲ್ಲಕಿಂತ ಹೆಚ್ಚಾಗಿ ಇಡೀ ಜಗತ್ತೇ  ಗೌರವಿಸುವ ಶ್ರೇಷ್ಟ ಆರ್ಥಿಕ ತಜ್ಙ. ಇಂತಹ ವ್ಯಕ್ತಿಯ ಉಸ್ತುವಾರಿಯಲ್ಲಿರುವ , ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಮತ್ತೋರ್ವ ಆರ್ಥಿಕ ತಜ್ಙ ಮೊಂಟೆಕ್ ಸಿಂಗ್ ಅಹ್ಲುವಾಲಿಯ ನ್ಯಾಯಲಯಕ್ಕೆ ನೀಡಿರುವ ವರದಿ ಇಡೀ ದೇಶಾದ್ಯಂತ ನಗೆಪಾಟಲಿಗೀಡಾಗಿದೆ.

1921 ರ ಡಿಸಂಬರ್ 12 ರಂದು ನಡೆದ ಕಾಂಗ್ರೆಸ್ ಅಧೀವೇಶನದಲ್ಲಿ ಮಾತನಾಡಿದ್ದ ಗಾಂಧೀಜಿ ಹೇಳಿದ್ದ ಮಾತುಗಳು ಇವು, “ಒಂದು ದೇಶ ಎಷ್ಡು ಸದೃಡವಾಗಿದೆ ಎಂಬುದು ನಿರ್ಧಾರವಾಗುವುದು ಆ ದೇಶದಲ್ಲಿರುವ ಕೋಟ್ಯಾಧೀಶ್ವರರ ಆಧಾರದ ಮೇಲಲ್ಲ, ಆ ದೇಶದಲ್ಲಿ ಎಷ್ಟು ಮಂದಿ ಬಡವರು ಬಡತನದ ಸುಳಿಯಿಂದ ಹೊರ ಬಂದಿದ್ದಾರೆ ಎಂಬುವುದರ ಆಧಾರದ ಮೇಲೆ.” ಇಂತಹ ಕಟು ವಾಸ್ತವದ ಗ್ರಹಿಕೆಗಳನ್ನು ಮರೆತ ನಮ್ಮ ನಾಯಕರ ಬೌದ್ಧಿಕ ಸ್ಥಿರತೆ ಬಗ್ಗೆ ಈಗ ಸಂಶಯ ಉಂಟಾಗುತ್ತಿದೆ.

ಸ್ವತಃ ಕೇಂದ್ರ ಸರ್ಕಾರ ಧೃಡಪಡಿಸಿರುವ ಅಂಕಿ ಅಂಶದ ಆಧಾರದ ಪ್ರಕಾರ ಭಾರತದಲ್ಲಿ ಶೇ.49ರಷ್ಟು ಮಂದಿ ಬಡವರಿದ್ದಾರೆ. ಸರ್ಕಾರದ ಮಾಹಿತಿಯನ್ನು ಹೊರತು ಪಡಿಸಿದರೆ, ವಾಸ್ತವವಾಗಿ ಈ ದೇಶದಲ್ಲಿ ಶೇ.72 ರಷ್ಟು ಮಂದಿ ಬಢವರು ಇರುವುದು ಸತ್ಯ.

ಬಡತನದ ಬಗ್ಗೆ ಯಾವ ಅನುಭವವಾಗಲಿ, ತಿಳಿದುಕೊಳ್ಳುವ ಮನಸ್ಸಾಗಲಿ ಇಲ್ಲದಿರುವ ಈ ನಾಯಕರು ಒಮ್ಮೆ ತಮ್ಮ ಕುಟುಂಬದ ಪರವಾಗಿ ದಿನಸಿ ಅಂಗಡಿಗೆ, ಅಥವಾ  ತರಕಾರಿ ಅಂಗಡಿಗೆ ಇಲ್ಲವೇ, ಮಧ್ಯಮ ವರ್ಗದ ಹೊಟೇಲ್ ಗೆ ಹೋಗಿ ಬಂದಿದ್ದರೆ ವಾಸ್ತವ ಸ್ಥಿತಿ ಏನೆಂಬುದು ಅರ್ಥವಾಗುತಿತ್ತು.

ಬಡತನ ಕೇವಲ ಹಸಿವಿನ ವಿಚಾರ ಮಾತ್ರವಲ್ಲ, ಅದೊಂದು ಸಮಾಜದ ಬಹುಮುಖಿ ಕೊರತೆ, ಜೊತೆಗೆ ಮೈ ಮತ್ತು ಮನಸ್ಸುಗಳನ್ನು ನಿರಂತರವಾಗಿ ಸುಡುವ ಸಮಸ್ಯೆ ಎಂದು ವಿಶ್ಲೇಷಿಸಿದವರು ಅಮಾರ್ತ್ಯ ಸೇನ್. ಅಲ್ಲಿಯವರೆಗೆ ಜಾಗತೀಕರಣದ ಹುಚ್ಚು ಹೊಳೆಯಲ್ಲಿ ತೇಲುತ್ತಿರುವ ಈ ಜಗತ್ತಿಗೆ ಬಡತನದ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ, ಇಂದಿಗೂ ಇಲ್ಲ.

ಇವತ್ತಿಗೂ ಭಾರತದ 120 ಕೋಟಿ ಜನಸಂಖೈಯಲ್ಲಿ ಶೇ.70 ರಷ್ಟು ಮಂದಿ ಬಡವರಾಗಿ ಉಳಿದಿದ್ದಾರೆ. ಇದು ವಾಸ್ತವಿಕ ಆಧಾರದ ಸಂಖ್ಯೆ. ಆದರೆ ಸರ್ಕಾರದ ಅಂಕಿ ಅಂಶಗಳಲ್ಲಿ ಶೇ 44 ರಷ್ಟು ಮಾತ್ರ. ಈಗ ಇದು ಶೇ. 37 ಕ್ಕೆ ಇಳಿದಿದೆಯಂತೆ.  ಹೆಬ್ಬೆಟ್ಟಿನ ಸಹಿ ಹಾಕುತಿದ್ದ ಅನಕ್ಷರಸ್ತನಿಗೆ ಅವನ ಹೆಸರು ಬರೆಯಲು ಕಲಿಸಿ ಸಾಕ್ಷರ ಎಂದು ಹಣೆಪಟ್ಟಿ ಕಟ್ಟಿ  ದೇಶದಲ್ಲಿ ಅನಕ್ಷರತೆ ತೊಲಗಿತು ಎಂದು ಅಂತರಾಷ್ಟೀಯ ಮಟ್ಟದಲ್ಲಿ ಡಂಗೂರ ಸಾರಿದ ಕಥೆಯಷ್ಟು ಸುಲಭವಲ್ಲ ಈ ಸಂಗತಿ. ಭಾರತದ ಬಡ ಬೊರೇಗೌಡ ಅವಿದ್ಯಾವಂತ ಅಥವಾ ವಿದ್ಯಾವಂತ ಯಾವ ವರ್ಗಕ್ಕೆ ಸೇರಿದರೂ ಗಳಿಸುವುದು ಇಲ್ಲವೇ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ನಿಜವಾದ ಬಡವನನ್ನು ಬಡವನಲ್ಲವೆಂದು ಘೋಷಿಸಿ ಅವನ ಸವಲತ್ತುಗಳನ್ನು ಕಿತ್ತುಕೊಳ್ಳುವುದು ಅಮಾನವೀಯ ಮತ್ತು ಅಮಾನುಷ ಕೃತ್ಯ.

ಈ ಕಾರಣಕ್ಕಗಿಯೆ ಪತ್ರಕರ್ತ ಪಿ.ಸಾಯಿನಾಥ್ ಕಳೆದ 20 ವರ್ಷಗಳಲ್ಲಿ ನಮ್ಮ ಅರ್ಥಶಾಸ್ರ ಮತ್ತು ಅರ್ಥಶಾಸ್ರಜ್ಞರುಗಳ ಯಶಸ್ಸ್ಸು ಎಂದರೆ, ಜನಸಾಮಾನ್ಯರ ಬದುಕಿಗೆ ಸಂಬಂಧವಿರದಂತೆ ಅರ್ಥವ್ಯವಸ್ಥೆಗಳನ್ನು ರೂಪಿಸಿರುವುದು ಎಂದು ಗೇಲಿ ಮಾಡಿದ್ದಾರೆ.

ತೆಂಡೂಲ್ಕರ್ ಸಮಿತಿಯ ಆಧಾರದ ಮೇಲೆ ವರದಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ, ಜೊತೆಗೆ ಈ ಅಂಕಿ ಅಂಶ ಬದಲಾಗುವ ಸಾಧ್ಯತೆ ಕೂಡ ಇದೆ. ಭಾರತದ ನಾಗರೀಕ ತೆಗೆದುಕೊಳ್ಳುವ ಆಹಾರದ ಪ್ರಮಾಣದ ಆಧಾರದ ಮೇಲೆ ಆಂದರೆ, ಮನುಷ್ಯನೊಬ್ಬನಿಗೆ  ದಿನವೊಂದಕ್ಕೆ ನಗರ ಪ್ರದೇಶದಲ್ಲಿ 2100 ಕ್ಯಾಲೋರಿ ಮತ್ತು ಗ್ರಾಮೀಣ ಪ್ರದೇಶದಲ್ಲಿ 2400 ಕ್ಯಾಲೋರಿ ಗಳಷ್ಟು ಪ್ರಮಾಣದ ಆಹಾರದ ಅಗತ್ಯವಿದೆ. ಸಧ್ಯ ಭಾರತದಲ್ಲಿ1100 ರಿಂದ  1600 ರಷ್ಟು ಕ್ಯಾಲೋರಿ ಅಹಾರ ಮಾತ್ರ ದೊರೆಯುತ್ತಿದೆ. ಇವತ್ತಿಗೂ ಹಸಿವಿನಿಂದ ದಿನವೊಂದಕ್ಕೆ 10 ಸಾವಿರಕ್ಕೂ ಅಧಿಕ ಮಕ್ಕಳು ಭಾರತದಲ್ಲಿ ಸಾಯುತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ವಿಭಾಗದ ವರದಿಯಲ್ಲಿ ತಿಳಿಸಲಾಗಿದೆ. ಈವರೆಗೆ 2ಲಕ್ಷದ 45 ಸಾವಿರದ ಅಧಿಕ ರೈತರು ಸಾವಿಗೆ ಶರಣಾಗಿದ್ದಾರೆ. ಇಂತಹ ಕಟು ವಾಸ್ತವ ಸಂಗತಿಗಳು ನಮ್ಮೆದುರು ಇದ್ದಾಗಲೂ ಕೂಡ ಅಂತರಾಷ್ಟೀಯ ಸಮುದಾಯದೆದುರು ಭಾರತದಲ್ಲಿ ಬಡತನವಿಲ್ಲ ಎಂದು ತೋರ್ಪಡಿಸಿಕೊಳ್ಳಲು ಈ ನಾಟಕದ ಅವಶ್ಯಕತೆ ಇರಲಿಲ್ಲ. ಇಲ್ಲಿಯ ಬಡವನೊಬ್ಬ ಸಾಯಲು ನಿರ್ಧರಿಸಿ ವಿಷ ಕೊಳ್ಳಲು ಹೋದರೆ, ಮಾರುಕಟ್ಟೆಯಲ್ಲಿ ಆತನಿಗೆ  26 ರೂಪಾಯಿಗೆ ವಿಷ ಕೂಡ ಸಿಕ್ಕುವುದಿಲ್ಲ.

ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ಅರ್ಥಶಾಸ್ರಜ್ಞೆ ಉತ್ಸಾ ಪಟ್ನಾಯಕ್ ವರ್ತಮಾನದ ಬೆಲೆ ಸೂಚ್ಯಂಕ ಆಧರಿಸಿ ಆಹಾರಕ್ಕಾಗಿ ಕನಿಷ್ಠ ಗ್ರಾಮಾಂತರ ಪ್ರದೇಶದಲ್ಲಿ 36 ರೂಪಾಯಿಗಳು, ನಗರ ಪ್ರದೇಶದಲ್ಲಿ 60 ರೂಪಾಯಿಗಳನ್ನು ಮನುಷ್ಯನೊಬ್ಬ ಖರ್ಚು ಮಾಡಬೇಕಾಗಿದೆ ಎಂದಿದ್ದಾರೆ.

ಈ ದೇಶದ ಅಸಮಾನತೆಯ ಬಗ್ಗೆ ಎಲ್ಲಗೂ ತಿಳಿದಿದೆ. ಜಿಂದಾಲ್ ಸಮೂಹದ ಅಧ್ಯಕ್ಷ ನವೀನ್ ಜಿಂದಾಲ್ ವಾರ್ಷಿಕವಾಗಿ 69 ಕೋಟಿ, ರಿಲೆಯನ್ಸ್ ಸಮೂಹದ ಮುಖೇಶ್ ಅಂಬಾನಿ 42 ಕೋಟಿ, ಅನಿಲ್ ಅಂಬಾನಿ 35 ಕೋಟಿ ಸಂಬಳ ಪಡೆಯುತಿದ್ದಾರೆ. ನಮ್ಮ ಕೆಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿ ತಿಂಗಳಿಗೆ ಪ್ರವಾಸ ಭತ್ಯ, ಮನೆಬಾಡಿಗೆ ಭತ್ಯ ಹೊರತುಪಡಿಸಿ, 1ಲಕ್ಷದ 20 ಸಾವಿರ ಸಂಬಳ ಪಡೆಯುತಿದ್ದಾನೆ.

ಇದೇ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ದಿನವೊಂದಕ್ಕೆ ಕನಿಷ್ಟ 100 ಕೂಲಿ ನಿಗದಿಪಡಿಸಿರುವಾಗ , ಆಹಾರಕ್ಕಾಗಿ 26 ರುಪಾಯಿಯನ್ನು ಹೇಗೆ ನಿರ್ಧರಿಸಿತು?

ಮುಕ್ತ ಮಾರುಕಟ್ಟೆಯ ಪ್ರಭುತ್ವದ ಈ ಜಗತ್ತಿನಲ್ಲಿ ಬಡವರಿಗೆ ನೀಡುವ ಉಚಿತ ಶಿಕ್ಷಣ ಆರೋಗ್ಯ, ಸಬ್ಸಿಡಿಯುಕ್ತ ಆಹಾರಧಾನ್ಯ ಎಲ್ಲವೂ ವಿಶ್ವ ವಾಣಿಜ್ಯ ಸಂಘಟನೆ ಹಾಗೂ ಅದರ ಕೂಸುಗಳಾದ ವಿಶ್ವಬ್ಯಾಂಕ್ ಮತ್ತು ಅಂತರಾಷ್ಟೀಯ ನಿಧಿ  ಸಂಸ್ಥೆ ಇವುಗಳ ಕೆಂಗಣ್ಣಿಗೆ ಗುರಿಯಾಗಿವೆ. ಭಾರತ ಈಗ ಎಲ್ಲಾ ಸಬ್ಸಿಡಿಗಳನ್ನು ತೆಗೆದುಹಾಕಬೇಕಾಗಿದೆ. ಆ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆ ಇದಾಗಿದೆ. 12 ನೇ ಪಂಚವಾರ್ಷಿಕ ಯೋಜನೆಯ ರೂಪು ರೇಷೆಗಳನ್ನು ಗಮನಿಸಿದರೆ, ಭಾರತದ ಪ್ರಜಾಪ್ರಭುತ್ವವನ್ನು ಬಂಡವಾಳಶಾಹಿಗಳ  ಮಾರುಕಟ್ಟೆಯ ಪ್ರಭುತ್ವಕ್ಕೆ ಬಲಿ ಕೊಡುವ ಸಂಚು ನಡೆದಿದೆ ಎಂದು ಊಹಿಸಬಹುದು.

1990 ರ ದಶಕದಲ್ಲಿ ಜಾಗತೀರಣಕ್ಕೆ ಬಾರತದ ಹೆಬ್ಬಾಗಿಲನ್ನು ತೆರೆದವರು ಇದೇ ಮನಮೋಹನ್ ಸಿಂಗ್. ಜಾಗತೀಕರಣದ ಒಳಿತು, ಕೆಡಕುಗಳು ಏನೇ ಇರಲಿ, ವೈರುಧ್ಯಗಳನ್ನು ಸೃಷ್ಟಿಸಿ, ಉಳ್ಳವರ ಭಾರತ ಮತ್ತು ನರಳುವವರ ಭಾರತ ಎಂಬ ಎರಡು ಭಾರತ ಗಳು ಸೃಷ್ಟಿಯಾಗಿರುವುದು ಸತ್ಯ. ಬಡವರ ನಿರ್ಮೂಲನೆ ಮಾಡುವುದರ ಮೂಲಕ ಬಡತನ ನಿರ್ಮೂಲನೆ ಮಾಡುವುದು ಈಗಿನ ಗುರಿಯಾಗಿದೆ.

ಇಲ್ಲಿ ಗಾಳಿ, ನೀರು, ಸೇರಿದಂತೆ ಎಲ್ಲವೂ ಮಾರಾಟದ ಸರಕುಗಳಾಗಬೇಕು. ಆಗಲೇ ಜಾಗತೀಕರಣಕ್ಕೆ, ಹಾಗೂ ಅದರ ಪ್ರತಿಪಾದಕರಿಗೆ ನೆಮ್ಮದಿ.

ಸ್ಟೀವ್ ಜಾಬ್ಸ್, Apple, ಮತ್ತು ಅಮೇರಿಕ…

-ರವಿ ಕೃಷ್ಣಾ ರೆಡ್ಡಿ.

ಸ್ಟೀವ್ ಜಾಬ್ಸ್ ಇಂದು ತೀರಿಕೊಂಡ ಸುದ್ದಿ ಬಹಳಷ್ಟು ಜನರಿಗೆ ಅನಿರೀಕ್ಷಿತವಾಗಿರಲಿಲ್ಲ. ಕಳೆದ ಒಂದೆರಡು ವರ್ಷದಿಂದ ಇಂತಹುದನ್ನು ಆಗಾಗ ನಿರೀಕ್ಷಿಸಲಾಗುತ್ತಿತ್ತು. ಕೇವಲ ಊಹಾಪೋಹಗಳನ್ನು ಹಬ್ಬುವ ವೆಬ್‌ಸೈಟುಗಳಷ್ಟೇ ಅಲ್ಲದೆ, ನಂಬಿಕೆಗೆ ಪಾತ್ರವಾದ ವೆಬ್‌ಸೈಟುಗಳೂ ಈ ಬಗ್ಗೆ ಬರೆಯುತ್ತಿದ್ದವು. ಮಾರಣಾಂತಿಕ ಕ್ಯಾನ್ಸರ್‌ಗೆ ಸಿಲುಕಿದ್ದ ಸ್ಟೀವ್ ಜಾಬ್ಸ್ ಕಾಯಿಲೆಯ ನಂತರ ಇಷ್ಟು ದಿನ ಬದುಕಲು ಸಾಧ್ಯವಾಗಿದ್ದೇ ಬಹುಶಃ ಆಧುನಿಕ ವೈದ್ಯಕೀಯದಿಂದ ಇರಬೇಕು. ಬಿಲ್ ಗೇಟ್ಸ್ ಮತ್ತು ಸ್ಟೀವ್ ಜಾಬ್ಸ್, ಪ್ರತ್ಯೇಕವಾಗಿ ಮತ್ತು ಸವಾಲಿನಿಂದೆಂಬಂತೆ ಜಾಗತಿಕ ಜೀವನಶೈಲಿಗಳನ್ನು ಮತ್ತು ತಂತ್ರಜ್ಞಾನ ಬಳಕೆಯನ್ನು ಬದಲಾಯಿಸಿದ್ದು ಚಾರಿತ್ರಿಕವಾದದ್ದು. ಈ ಶತಮಾನದಿಂದ ಇತಿಹಾಸ ಕೇವಲ ರಾಜರಿಗೆ, ಆಡಳಿತಗಾರರಿಗೆ, ರಾಜಕಾರಣಿಗಳಿಗೆ, ಮತ್ತು ಯುದ್ದಗಳಿಗೆ ಸಂಬಂಧಿಸಿದುದಷ್ಟೇ ಅಲ್ಲ, ಇಂತಹ ವ್ಯಕ್ತಿಗಳದೂ ಮತ್ತು ಅವರು ಜನಜೀವನದ ಮೇಲೆ ಬೀರುವ ಪ್ರಭಾವದ್ದೂ ಆಗಿರುತ್ತದೆ.

ಐದು ದಿನಗಳ ಪ್ರವಾಸದಿಂದ ಸ್ವಲ್ಪ ದಣಿದಿದ್ದ ನಾನು ರಾತ್ರಿ ಮನೆಗೆ ಬಂದಿದ್ದೇ ಹತ್ತರ ನಂತರ. ಮಲಗುವುದಕ್ಕೆ ಮೊದಲು iPadನಲ್ಲಿ ಸ್ವಲ್ಪ “ವರ್ತಮಾನ”ದ ಕೆಲಸ ಮಾಡಿದ್ದೆ. iOS ಆಪರೇಟಿಂಗ್ ಸಿಸ್ಟಮ್‌ ಇರುವ iPad/iPhoneಗಳಲ್ಲಿ ಸುಂದರವಾಗಿ ಯೂನಿಕೋಡ್ ಕನ್ನಡ ಮೂಡುತ್ತದೆ. ಇಂದು ಬೆಳಿಗ್ಗೆ ಎದ್ದ ತಕ್ಷಣ iPhone ನಲ್ಲಿ ಸುದ್ದಿ ನೋಡಿ ಕೂಡಲೆ ಅದೇ ಫೋನಿನಲ್ಲಿ New York Times ಪತ್ರಿಕೆಯ ವೆಬ್‌ಸೈಟಿಗೆ ಹೋಗಿ ಭರ್ತಿ ಐದು ಪುಟಗಳ ಲೇಖನ ಓದಿದೆ. ಆತನ ಜೀವನ ಮತ್ತು ಸಾಧನೆಯನ್ನು ಚೆನ್ನಾಗಿ ಹಿಡಿದಿರುವ ಲೇಖನ ಇದು. ನಿಮಗೂ ಇಷ್ಟವಾಗಬಹುದು ಎಂದು ಅದರ ಕೊಂಡಿ ಇಲ್ಲಿ ಕೊಡುತ್ತಿದ್ದೇನೆ.

http://www.nytimes.com/2011/10/06/business/steve-jobs-of-apple-dies-at-56.html?_r=1&hp

Apple ಕಂಪನಿ ಹೇಗೆ ಬೇರೆ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕಂಪನಿಗಳಿಗಿಂತ ಭಿನ್ನ ಎಂದು ನಾನು “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯ ಡಿಸೆಂಬರ್ 22, 2006 ರ ಸಂಚಿಕೆಗೆ ಬರೆದ ಲೇಖನದಲ್ಲಿ ಪ್ರಸ್ತಾಪಿಸಿದ್ದೆ. ಈ ಸಂದರ್ಭದಲ್ಲಿ ಅದು ಸೂಕ್ತವಾಗಬಹುದು ಎಂದು ಇಲ್ಲಿ ಕೊಡುತ್ತಿದ್ದೇನೆ. ಈ ಲೇಖನದಲ್ಲಿ ಸ್ಟೀವ್ ಜಾಬ್ಸ್ ಮತ್ತು ಆತನ ಕಂಪನಿ ಅಪ್ರಾಸಂಗಿಕವಾಗಿ ಬಂದಿದ್ದರೂ, ಇಲ್ಲಿ ಅದು ಅಪ್ರಸ್ತುತವೇನೂ ಅಲ್ಲ ಎಂದು ಭಾವಿಸುತ್ತೇನೆ. (ಹಾಗೆಯೇ, ಈ ಲೇಖನವನ್ನು iMac ಕಂಪ್ಯೂಟರ್‌ ಮೇಲೆ, VirtualBox VM ಸಾಫ್ಟ್‌ವೇರ್ ಮೇಲೆ ಅನುಸ್ಥಾಪಿಸಿರುವ Windows 7 ನಲ್ಲಿ ಟೈಪ್ ಮಾಡುತ್ತ, ಸ್ಟೀವ್ ಜಾಬ್ಸ್ ಸ್ಥಾಪಿಸಿದ ಮತ್ತೊಂದು ಕಂಪನಿ NeXT Computer ನ ಕಂಪ್ಯೂಟರ್‌ನಿಂದ ಆರಂಭವಾದ www ಗೆ ಏರಿಸುತ್ತಿದ್ದೇನೆ. ನನ್ನ ಮತ್ತು ನಿಮ್ಮಂತಹವರ ಜೀವನ ಮತ್ತು ಜೀವನಶೈಲಿಯ ಮೇಲೆ ಈ ತಂತ್ರಜ್ಞಾನ ಹೇಗೆಲ್ಲಾ ಪರಿಣಾಮ ಬೀರಿದೆ, ಅಲ್ಲವೇ?)

ಅಮೇರಿಕ ಎಂದರೆ ಭುವಿಯ ಮೇಲಿನ ಸ್ವರ್ಗವೇನಲ್ಲ!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 22, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಮೂರು ವಾರದ ಹಿಂದೆ, (2006ರ) ನವೆಂಬರ್ ಹದಿನಾಲ್ಕರಂದು ಮೈಕ್ರೊಸಾಫ್ಟ್ ಕಂಪನಿ Zune ಎಂಬ ಒಂದು ಹೊಸ ಡಿಜಿಟಲ್ ಮ್ಯೂಸಿಕ್ ಪ್ಲೇಯರ್ ಅನ್ನು ಬಿಡುಗಡೆ ಮಾಡಿತು. ಆಪಲ್ ಕಂಪನಿಯ ಐಪಾಡ್‌ಗೆ ಉತ್ತರವಾಗಿ ಕಳೆದೆರಡು ವರ್ಷಗಳಿಂದ ಈ ಪ್ಲೇಯರ್ ಅನ್ನು ಮೈಕ್ರೊಸಾಫ್ಟ್ ಸಿದ್ದಪಡಿಸುತ್ತಿತ್ತು. ಕಂಪ್ಯೂಟರ್ ಪ್ರಪಂಚದ ಆಗುಹೋಗುಗಳು ಬಹಳಷ್ಟು ಗೊತ್ತಿಲ್ಲದವರಿಗೆ ಗೊತ್ತಿರದೆ ಇರಬಹುದಾದ ವಿಚಾರ ಏನೆಂದರೆ, ಆಪಲ್ ಕಂಪನಿ ಕೆಲವರ ದೃಷ್ಟಿಯಲ್ಲಿ ಮೈಕ್ರೋಸಾಫ್ಟ್‌ನ ವಿಂಡೋಸ್ ಆಪರೇಟಿಂಗ್ ಸಿಸ್ಟಂಗಿಂತ ಉತ್ಕೃಷ್ಟವಾದ ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಅನ್ನು ತಯಾರಿಸುತ್ತದೆ ಎನ್ನುವುದು. ಆದರೆ ಮೈಕ್ರೊಸಾಫ್ಟ್ ಮಾಡದ ಒಂದನ್ನು ಹೆಚ್ಚುವರಿಯಾಗಿ ಆಪಲ್ ಮಾಡುತ್ತದೆ. ಅದೇನೆಂದರೆ, ತನ್ನ ಆಪರೇಟಿಂಗ್ ಸಿಸ್ಟಮ್ ತಂತ್ರಾಂಶವನ್ನು ಅದು ತಾನು ಸಿದ್ದಪಡಿಸಿದ ಕಂಪ್ಯೂಟರ್ ಹಾರ್ಡ್‌ವೇರ್‌ನೊಂದಿಗೆ ಮಾತ್ರ ಮಾರುತ್ತದೆ. ಮೈಕ್ರೋಸಾಫ್ಟ್‌ನ ವಿಂಡೋಸ್ ಅನ್ನು x86 ಪ್ರೊಸೆಸರ್ ಆಧಾರಿತವಾದ ಯಾವ ಕಂಪ್ಯೂಟರ್ ಮೇಲಾದರೂ ಉಪಯೋಗಿಸಬಹುದು. ನಮ್ಮಲ್ಲಿಯೆ ಎಚ್.ಸಿ.ಎಲ್, ವಿಪ್ರೊ, ಝೆನಿತ್, ಮುಂತಾದ ಹಾಗು ವಿದೇಶಗಳಲ್ಲಿ ಡೆಲ್, ಎಚ್.ಪಿ., ಟೊಷಿಬ, ಏಸರ್ ಮುಂತಾದ ಕಂಪನಿಗಳು ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಹಾರ್ಡ್‌ವೇರ್ ಸಿದ್ಧಪಡಿಸಿ, ಅದಕ್ಕೆ ಮೈಕ್ರೋಸಾಫ್ಟ್‌ನ ವಿಂಡೋಸ್ ಅನುಸ್ಥಾಪಿಸಿ ಮಾರುತ್ತಾರೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಎಲೆಕ್ಟ್ರಾನಿಕ್ಸ್ ಡಿಪ್ಲೊಮ ಮಾಡಿರುವವವರೂ ಸಹ ಇದಕ್ಕೆ ಬೇಕಾದ ಮದರ್ ಬೋರ್ಡ್, ಮೆಮೊರಿ, ಮುಂತಾದವುಗಳನ್ನು ಬೆಂಗಳೂರಿನ ಎಸ್.ಪಿ. ರೋಡಿನಲ್ಲಿ ಕೊಂಡುಕೊಂಡು ತಾವೆ ಅಸೆಂಬ್ಲ್ ಮಾಡಿ, ವಿಂಡೋಸ್ ಅನ್ನು ಇನ್ಸ್‌ಟಾಲ್ ಮಾಡಬಹುದು. ಆದರೆ ಆಪಲ್‌ನ ಮ್ಯಾಕ್ ಕಂಪ್ಯೂಟರ್ ಅನ್ನು ಮಾಡುವುದು, ಮಾರುವುದು, ಆಪಲ್ ಕಂಪನಿ ಮಾತ್ರ.

ಆದರೂ ಹಲವಾರು ಕಾರಣಗಳಿಗೆ ಟೆಕ್ನಾಲಜಿ ಪ್ರಪಂಚದಲ್ಲಿ ಆಪಲ್‌ನ ಪ್ರಭಾವ ಮೈಕ್ರೋಸಾಫ್ಟ್‌ಗಿಂತ ಕಮ್ಮಿ ಇಲ್ಲ. ಯಾವುದೆ ಹಾಲಿವುಡ್ ಸಿನೆಮಾದಲ್ಲಿ ಕಂಪ್ಯೂಟರ್ ಅನ್ನು ಉಪಯೋಗಿಸುತ್ತಿರುವ ಸೀನ್ ಇದ್ದರೆ ಆ ಸೀನ್‌ನಲ್ಲಿ ಆಪಲ್ ಕಂಪ್ಯೂಟರ್ ಕಾಣಿಸುವ ಸಾಧ್ಯತೆಗಳೆ ಹೆಚ್ಚು. ಆದರೆ ಪರ್ಸನಲ್ ಕಂಪ್ಯೂಟರ್ ಉಪಯೋಗಿಸುವವರಲ್ಲಿ ಶೇ.90 ಕ್ಕೂ ಹೆಚ್ಚು ಜನ ಮೈಕ್ರೊಸಾಫ್ಟ್ ಬಳಸಿದರೆ, ಪ್ರಪಂಚದ ಕಂಪ್ಯೂಟರ್ ಬಳಕೆದಾರರಲ್ಲಿ ಆಪಲ್ ಬಳಸುವವರು ಶೇ. 2 ರಿಂದ 3 ಮಾತ್ರ. ಆದರೆ ಈ ಆಪಲ್ ಬಳಸುವ ಬಹುಪಾಲು ಜನರ ಆಪಲ್‌ನೆಡೆಗಿನ ನಿಷ್ಠೆ ಮತ್ತು ಮೈಕ್ರೋಸಾಫ್ಟ್‌ನೆಡೆಗಿನ ದ್ವೇಷ ವಿಶ್ವಪ್ರಸಿದ್ಧವಾದದ್ದು! ಇದೊಂದು ಕಲ್ಟ್ ಸಂಸ್ಕೃತಿ! ಐದಾರು ವರ್ಷಗಳ ಹಿಂದೆ ಈ ಆಪಲ್ ಕಂಪನಿ ಹೋಗಿಯೇ ಬಿಟ್ಟಿತು ಎಂದು ಎಲ್ಲರೂ ಬೊಬ್ಬಿಡುತ್ತಿದ್ದಾಗ ಅದರ ಸ್ಥಾಪಕ ಮತ್ತು ಸಿ.ಇ.ಒ. ಸ್ಟೀವ್ ಜಾಬ್ಸ್ ಬಯಲಿಗೆ ಬಿಟ್ಟ ಅಸ್ತ್ರ “Apple iPod” ಎಂಬ ಪುಟ್ಟ, ಮುದ್ದಾದ, ಡಿಜಿಟಲ್ ಮ್ಯೂಸಿಕ್ ಪ್ಲೇಯರ್. ಇದು ಆಪಲ್ ಕಂಪನಿಯನ್ನು ಮತ್ತೆ ಲಾಭಕ್ಕೆ ತಂದಿದ್ದೆ ಅಲ್ಲದೆ ಪರೋಕ್ಷವಾಗಿ ಆಪಲ್ ಕಂಪ್ಯೂಟರ್‌ನ ಮಾರಾಟ ಹೆಚ್ಚಾಗುವುದಕ್ಕೂ ಕಾರಣವಾಯಿತು. ಇಂದು ಐಪಾಡ್‌ನಷ್ಟು ಪ್ರಸಿದ್ಧವಾದ, ಲಾಭದಾಯಕವಾದ ಇನ್ನೊಂದು ಉತ್ಪನ್ನವಿಲ್ಲವೇನೊ! ಇಂತಹ ಉತ್ಪನ್ನಗಳನ್ನು ಬ್ಯುಸಿನೆಸ್ ಪರಿಭಾಷೆಯಲ್ಲಿ Killer Product ಎನ್ನುತ್ತಾರೆ.

ಮೈಕ್ರೊಸಾಫ್ಟ್‌ನವರು ಹೆಚ್ಚಾಗಿ ಹಾರ್ಡ್‌ವೇರ್ ತಯಾರಿಸುವುದಿಲ್ಲ. ಹಲವಾರು ವರ್ಷಗಳ ಹಿಂದಿನ ತನಕ ಮೌಸು, ಕೀಬೋರ್ಡ್ ನಂತಹ ಸಣ್ಣಪುಟ್ಟವನ್ನು ಮಾತ್ರ ಮಾಡುತ್ತಿದ್ದರು. ಅದು ಹಾರ್ಡ್‌ವೇರ್ ಉತ್ಪನ್ನಗಳಲ್ಲಿ ಸ್ವಲ್ಪ ಗಂಭೀರವಾಗಿ ತೊಡಗಿಸಿಕೊಂಡಿದ್ದು ವಿಡಿಯೋ ಗೇಮ್ ಕನ್ಸೋಲ್ ಆದ Xbox ತಯಾರಿಕೆಯಲ್ಲಿ ಮಾತ್ರ. ಇಲ್ಲಿ ಗಮನಿಸಬೇಕಾದ ಒಂದು ಅಂಶ ಇದೆ. Xboxನ ಹಾರ್ಡ್‌ವೇರ್ ಮಾರಾಟದಿಂದ ಮೈಕ್ರೊಸಾಫ್ಟ್‌ನವರಿಗೆ ಏನೇನೂ ಲಾಭವಿಲ್ಲ. ಅದಕ್ಕೆ ಬೀಳುವ ಖರ್ಚಿಗಿಂತ ಅರ್ಧಕ್ಕೂ ಕಮ್ಮಿ ಬೆಲೆಗೆ ಅದನ್ನು ಮಾರುತ್ತಾರೆ. ಆದರೆ ದುಡ್ಡಿರುವುದು ಸಾಫ್ಟ್‌ವೇರ್‌ನಲ್ಲಿ. ಅಂದರೆ Xboxಗೆಂದು ಮೈಕ್ರೋಸಾಫ್ಟ್ ಸಿದ್ದಪಡಿಸುವ ಗೇಮ್‌ಗಳಲ್ಲಿ. ಈ ಗೇಮ್‌ಗಳನ್ನು ಒಂದು ಸಲ ಡಿಸೈನ್ ಮಾಡಿ, ಡೆವಲಪ್ ಮಾಡಿದರೆ ಸಾಕು; ಆಮೇಲೆ ಒಂದೊಂದು ಕಾಪಿಗೆ ಬೀಳುವ ಖರ್ಚು ಹತ್ತಿಪ್ಪತ್ತು ರೂಪಾಯಿ ಮಾತ್ರ–ಸೀಡಿ ಅಥವ ಡಿವಿಡಿ ಬರ್ನ್ ಮಾಡಲಿಕ್ಕಾಗಿ ಹಾಗೂ ಅದನ್ನು ಪ್ಯಾಕ್ ಮಾಡಲಿಕ್ಕಾಗಿ. ಆದರೆ ಅದರ ಮಾರಾಟ ಬೆಲೆ ಸಾವಿರ ರೂಪಾಯಿಂದ ಮೂರು ಸಾವಿರ ರೂಪಾಯಿ ತನಕ ಇರುತ್ತದೆ. ವಿಡಿಯೊ ಗೇಮ್ ಮಾರುಕಟ್ಟೆಯಲ್ಲಿ ಸೋನಿ ಕಂಪನಿಯ PlayStation ನ ಏಕಸ್ವಾಮ್ಯ ಮುರಿಯಲು ಹಾಗೂ ತನಗಾಗಿ ಮತ್ತೊಂದು ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳುವ ಮೈಕ್ರೊಸಾಫ್ಟ್ ಆ ರಂಗಕ್ಕೆ ಇಳಿತು. ಹೆಚ್ಚುಕಮ್ಮಿ ಅದೇ ಉದ್ದೇಶದಿಂದಲೆ ಆಪಲ್ ಐಪಾಡ್‌ಗೆ ಪ್ರತಿಸ್ಪರ್ಧಿಯಾಗಿ Zune ಮ್ಯೂಸಿಕ್ ಪ್ಲೇಯರ್ ಅನ್ನು ಮೈಕ್ರೊಸಾಫ್ಟ್ ತಿಂಗಳ ಹಿಂದೆ ಬಿಡುಗಡೆ ಮಾಡಿದ್ದು.

ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವುದಕ್ಕೆ ಮುಂಚೆ ಬಹಳ ಪ್ರಚಾರ ಮಾಡಲಾಗಿತ್ತು. ಹಾಗಾಗಿ ಜನರಲ್ಲಿಯೂ ಕುತೂಹಲವಿತ್ತು. CNETNews.com ಎನ್ನುವುದು ಟೆಕ್ನಾಲಜಿ ವಿಷಯಗಳಿಗೆ ಬಹಳ ಜನಪ್ರಿಯವಾದ ವೆಬ್‌ಸೈಟ್. ಆ ವೆಬ್‌ಸೈಟಿನಲ್ಲಿ ಇಂತಹ ಉತ್ಪನ್ನಗಳನ್ನು ಪರೀಕ್ಷಿಸಿ, ಒಂದೆರಡು ನಿಮಿಷಗಳ ರಿವ್ಯೂ ವಿಡಿಯೊ ಹಾಕುತ್ತಾರೆ. ಈ ಕಂಪನಿ ಇರುವುದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ. Zune ಮಾರುಕಟ್ಟೆಗೆ ಬರುವ ಎರಡು ವಾರಗಳ ಹಿಂದೆಯೆ ಅದನ್ನು ಪಡೆದುಕೊಂಡು, ಅದರ ಗುಣಾವಗುಣಗಳನ್ನು ವಿಶ್ಲೇಷಿಸಿ ಅದರ ವಿಡಿಯೊ ಅನ್ನು ಇದರ ವೆಬ್‌ಸೈಟಿನಲ್ಲಿ ಪೋಸ್ಟ್ ಮಾಡಿದ್ದರು. ವಿಶ್ಲೇಷಿಸಿದಾತನ ಹೆಸರು ಜೇಮ್ಸ್ ಕಿಮ್. ಈತ ಇಂತಹ ಅತ್ಯಾಧುನಿಕ ಡಿಜಿಟಲ್ ಉತ್ಪನ್ನಗಳನ್ನು ವಿಶ್ಲೇಷಿಸುವ CNET ನ ಹಿರಿಯ ಸಂಪಾದಕ. Zune ನ ಬಗ್ಗೆ ಸಹಜವಾಗಿಯೆ ಕುತೂಹಲ ಬೆಳೆಸಿಕೊಂಡಿದ್ದ ನಾನು ಆ ವಿಡಿಯೋವನ್ನು ಮೊದಲ ವಾರವೆ ನೋಡಿದ್ದೆ.

ನವೆಂಬರ್‌ನ ನಾಲ್ಕನೆ ಗುರುವಾರವನ್ನು ಅಮೇರಿಕದಲ್ಲಿ ಥ್ಯಾಂಕ್ಸ್‌ಗಿವಿಂಗ್ ದಿನ ಎಂದು ಆಚರಿಸುತ್ತಾರೆ. ನಾಲ್ಕು ಶತಮಾನಗಳ ಹಿಂದೆ ಯೋರೋಪಿನಿಂದ ವಲಸೆ ಬಂದ ಕೆಲವು ಬಿಳಿಯರು ಇಲ್ಲಿನ ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿ, ರೋಗರುಜಿನಗಳಿಗೆ ತುತ್ತಾಗಿ ಊಟಕ್ಕಿಲ್ಲದೆ ಸಾಯುವಂತಹ ಸ್ಥಿತಿ ಕೆಲವು ಕಡೆ ಉದ್ಭವಿಸಿದಾಗ ರೆಡ್ ಇಂಡಿಯನ್ನರು, ಅಂದರೆ ಕೆಂಪಗಿರುವ ಭಾರತೀಯರು ಎಂದು ಕೊಲಂಬಸ್‌ನಿಂದ ಕರೆಸಿಕೊಂಡ ಇಲ್ಲಿನ ಮೂಲನಿವಾಸಿಗಳು, ಅವರಿಗೆ ಆಹಾರ ಪದಾರ್ಥಗಳನ್ನು ಒದಗಿಸಿ ಸಹಾಯ ಮಾಡಿದರು. ಆ ಕಾರಣಕ್ಕಾಗಿ ಕೃತಜ್ಞತಾಪೂರ್ವಕವಾಗಿ ಆಚರಿಸುವ ಹಬ್ಬ ಥ್ಯಾಂಕ್ಸ್‌ಗಿವಿಂಗ್ ಡೆ. ಮಾರಾಟದ ಅಂಗಡಿಗಳನ್ನು ಬಿಟ್ಟು ಇನ್ನೆಲ್ಲರಿಗೂ ಶುಕ್ರವಾರವೂ ರಜಾ ಇರುತ್ತದೆ. ಹೇಗೂ ಇಲ್ಲಿ ಶನಿವಾರ, ಭಾನುವಾರ ರಜಾ ಇದ್ದೇ ಇರುತ್ತದೆ. ಹಾಗಾಗಿ ಬಹಳ ಜನ ಆ ಲಾಂಗ್ ವೀಕೆಂಡ್‌ನಲ್ಲಿ ಪ್ರವಾಸಕ್ಕೆ ಹೋಗುತ್ತಾರೆ. ಇಡೀ ವರ್ಷದಲ್ಲೆಲ್ಲ ಜನ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡುವುದು ಈ ನಾಲ್ಕು ದಿನಗಳಲ್ಲಿಯೆ.

ಈ ಬಾರಿಯ ರಜಾದಲ್ಲಿ ಮೇಲೆ ಹೇಳಿದ CNET News.com ನ ಜೇಮ್ಸ್ ಕಿಮ್ ತನ್ನ ಹೆಂಡತಿ ಕೇಟಿ ಹಾಗು ತಮ್ಮ ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಸ್ಯಾನ್ ಫ್ರಾನ್ಸಿಸ್ಕೊದಿಂದ ನಾಲ್ಕೈದು ನೂರು ಮೈಲಿ ದೂರ, ಉತ್ತರಕ್ಕೆ ಪ್ರವಾಸ ಹೊರಟ. ಒಂದೆರಡು ದಿನ ಒರೆಗಾನ್ ರಾಜ್ಯದಲ್ಲೆಲ್ಲ ಸುತ್ತಾಡಿಕೊಂಡು, ಹಿಮ ತುಂಬಿದ ದಟ್ಟ ಕಾಡುಬೆಟ್ಟಗಳ ರಸ್ತೆಯೊಂದರಲ್ಲಿ ಹೋಗುತ್ತಿದ್ದಾಗ ಆತನ ಕಾರು ಹಿಮದಲ್ಲಿ ಸಿಕ್ಕಿಹಾಕಿಕೊಂಡು ಹೂತು ಹೋಯಿತು. ಹಿಮ ಬೀಳುವ ಋತುವಿನಲ್ಲಿ ಆ ರಸ್ತೆಯಲ್ಲಿ ಸಂಚಾರ ಇರುವುದಿಲ್ಲ. ಅದು ಜೇಮ್ಸ್‌ಗೆ ಗೊತ್ತಿರಲಿಲ್ಲ. ಸೆಲ್ ಪೋನ್ ಸಿಗ್ನಲ್ ಬೇರೆ ಇರಲಿಲ್ಲ. ಕೇವಲ ಏಳು ತಿಂಗಳಾಗಿದ್ದ ಒಂದು ಪುಟ್ಟ ಮಗು, ನಾಲ್ಕು ವರ್ಷದ ಇನ್ನೊಂದು ಮಗು, ಮಗುವಿಗೆ ಹಾಲೂಡಿಸುತ್ತಿರುವ ತಾಯಿ ಹಾಗೂ ಜೇಮ್ಸ್ ಯಾರಾದರು ಆ ರಸ್ತೆಯಲ್ಲಿ ಬರುತ್ತಾರೆ ಎಂದು ಕಾಯಲಾರಂಭಿಸಿದರು. ಹೀಗಾಗುತ್ತದೆ ಎಂದು ಮೊದಲೆ ಊಹಿಸಿಲ್ಲದ ಕಾರಣವಾಗಿ ಕಾರಿನಲ್ಲಿ ಹೆಚ್ಚಿನ ನೀರಾಗಲಿ, ಆಹಾರವಾಗಲಿ ಇರಲಿಲ್ಲ. ಹೊರಗೆ ರಾತ್ರಿ ಹೊತ್ತು ನೀರು ಮಂಜುಗಡ್ಡೆಯಾಗುವಷ್ಟು ಚಳಿ. ಜನಸಂಪರ್ಕ ಸಾಧ್ಯವೆ ಇಲ್ಲದಷ್ಟು ದೂರ ಇವರು ಹೋಗಿಬಿಟ್ಟಿದ್ದಾರೆ.

ಹೀಗಾಗಿದ್ದೆ, ಪೆಟ್ರೋಲ್ ಮುಗಿಯುವ ತನಕವೂ ಕಾರನ್ನು ಆನ್ ಮಾಡಿಟ್ಟುಕೊಂಡು, ಅದರಲ್ಲಿನ ಹೀಟರ್ ಹಾಕಿಕೊಂಡು ಕಾಲ ಹಾಕಿದ್ದಾರೆ. ಪೆಟ್ರೋಲ್ ಒಂದು ದಿನಕ್ಕೆಲ್ಲ ಮುಗಿದಿರಬೇಕು. ಸಾಲದೆಂದು ಆಗಾಗ ಹಿಮ ಮತ್ತು ಮಳೆ ಬೀಳುತ್ತಲೆ ಇದೆ. ಎಲ್ಲಿಯೂ ಸಹಾಯದ ಸುಳಿವಿಲ್ಲ. ಆ ರಸ್ತೆಯಲ್ಲಿ ಯಾವ ವಾಹನವಾಗಲಿ, ನರಪಿಳ್ಳೆಯಾಗಲಿ ಸುಳಿಯಲಿಲ್ಲ. ಕಾರಿನಲ್ಲಿ ಇದ್ದಬದ್ದ ಸ್ನ್ಯಾಕ್ಸ್ ಎಲ್ಲ ಮುಗಿದವು. ಹೆಂಡತಿಗೆ, ಜೇಮ್ಸ್‌ಗೆ ಊಟವಿಲ್ಲ. ಬೇಬಿ ಪುಡ್ ಸಹ ಮುಗಿದ ಮೇಲೆ ತಾಯಿ ಏಳು ತಿಂಗಳ ಕೂಸಿನ ಜೊತೆಗೆ ನಾಲ್ಕು ವರ್ಷದ ಮಗಳಿಗೂ ಹಾಲೂಡಿಸಲು ಪ್ರಾರಂಭಿಸಿದಳು. ಬೆಚ್ಚಗಿರಲು ನಾಲ್ಕೂ ಜನ ತಬ್ಬಿಕೊಂಡು ಕಾರಿನಲ್ಲಿ ಮಲಗುತ್ತಿದ್ದರು. ತೀರಾ ಚಳಿಯಾದಾಗ ಕಾರಿನ ಒಂದೊಂದೆ ಚಕ್ರವನ್ನು ಕಳಚಿ ಅದರ ಟೈರನ್ನು ಸುಟ್ಟರು. ನಾಲ್ಕು ಚಕ್ರಗಳ ಜೊತೆಗೆ ಸ್ಪೇರ್ (ಹೆಚ್ಚುವರಿ) ಟೈರನ್ನೂ ಸುಟ್ಟರು. ಜೇಮ್ಸ್ ಸುತ್ತಮುತ್ತಲಿನ ಕಾಡುಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿದ. ಕೊನೆಕೊನೆಗೆ ಯಾವುದು ವಿಷ ಯಾವುದು ವಿಷವಲ್ಲ ಎಂಬುದು ಗೊತ್ತಾಗದ್ದರಿಂದಾಗಿ ಅವುಗಳನ್ನು ತಿನ್ನುವುದನ್ನು ನಿಲ್ಲಿಸಿದ. ರಾತ್ರಿ ಹಗಲುಗಳು ಉರುಳಿದವು. ಮೂರಾಯಿತು, ಐದಾಯಿತು, ಕೊನೆಗೆ ಏಳು ದಿನಗಳಾದವು! ಜೇಮ್ಸ್ ಧೈರ್ಯ ಮಾಡಿ, ಇದ್ದಬದ್ದ ಶಕ್ತಿಯೆನ್ನೆಲ್ಲ ಒಟ್ಟುಗೂಡಿಸಿಕೊಂಡು, ಹೆಂಡತಿಮಕ್ಕಳನ್ನು ಕಾರಿನಲ್ಲಿಯೆ ಬಿಟ್ಟು ಸಹಾಯ ತರುತ್ತೇನೆಂದು ಹೊರಟ.

ಜೇಮ್ಸ್ ಹೋಗಿ ಎರಡು ದಿನಗಳಾದರೂ ವಾಪಸು ಬರಲಿಲ್ಲ. ದಟ್ಟವಾದ ಕಾಡು. ಮೈಕೊರೆಯುವ ಚಳಿ. ಕೇಟಿಯ ಎರಡು ಕಾಲ್ಬೆರಳುಗಳು ಶೀತದಿಂದಾಗಿ ಪ್ರಾಸ್ಟ್‌ಬೈಟ್‌ಗೆ ತುತ್ತಾಗಿದ್ದವು. ತನ್ನ ಹೊಟ್ಟೆಗೆ ಏನಿಲ್ಲದಿದ್ದರೂ ಈ ತಾಯಿ ಎರಡೂ ಮಕ್ಕಳಿಗೆ ಎದೆ ಬಸಿದು ಹಾಲೂಡಿಸುತ್ತಿದ್ದಳು. ಒಂಬತ್ತನೆ ದಿನ ತಾವಿದ್ದ ಜಾಗದ ಮೇಲೆ ಹೆಲಿಕಾಪ್ಟರ್ ಒಂದು ಸುತ್ತು ಹಾಕುತ್ತಿರುವುದನ್ನು ಗಮನಿಸಿ ತಮ್ಮಲ್ಲಿದ್ದ ಕೊಡೆಯನ್ನು ಹಿಡಿದುಕೊಂಡು ಹೊರಗೆ ಬಂದು ಅದನ್ನು ಅತ್ತ ಇತ್ತ ಬೀಸಲಾರಂಭಿಸಿದಳು. ಆ ಹೆಲಿಕಾಪ್ಟರ್ ಸ್ಯಾನ್ ಫ್ರಾನ್ಸಿಸ್ಕೊದ ಜೇಮ್ಸ್‌ನ ಮನೆಯವರು ಅವರನ್ನು ಹುಡುಕಲು ಬಾಡಿಗೆಗೆ ಪಡೆದದ್ದಾಗಿತ್ತು. ಪೈಲಟ್ ಕಣ್ಣಿಗೆ ಕೊಡೆ ಬೀಸುತ್ತಿರುವುದು ಕಾಣಿಸಿತು. ಮುಂದಿನ ಒಂದೆರಡು ಗಂಟೆಗಳಲ್ಲಿ ತಾಯಿ ಮತ್ತು ಮಕ್ಕಳಿಬ್ಬರೂ ಸುರಕ್ಷಿತ ಸ್ಥಾನ ಸೇರಿಕೊಂಡರು.

ನಂತರ ಎರಡು ದಿನಗಳ ಕಾಲ ಕುದುರೆಗಳ ಮೇಲೆ, ಸ್ನೋಮೊಬೈಲ್‌ಗಳ ಮೇಲೆ, ಹೆಲಿಕಾಪ್ಟರ್ ಬಳಸಿ, ಕೊನೆಗೆ ಉಪಗ್ರಹಗಳನ್ನು ಸಹ ಬಳಸಿ ಜೇಮ್ಸ್‌ನನ್ನು ಹುಡುಕುವ ಕಾರ್ಯ ಮೊದಲಾಯಿತು. ನಾನಿರುವ ಸಿಲಿಕಾನ್ ಕಣಿವೆಯ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ, ಇಲ್ಲಿನವರು ಓದುವ ವೆಬ್‌ಸೈಟ್‌ಗಳಲ್ಲಿ ಇದೇ ಸುದ್ದಿ. ಕೊನೆಕೊನೆಗೆ ರಾಷ್ಟ್ರೀಯ ಸುದ್ದಿಯೂ ಆಗಿಬಿಟ್ಟಿತು. ಒಂದು ದಿನದ ನಂತರ ಜೇಮ್ಸ್‌ನ ಪ್ಯಾಂಟೊಂದು ಸಿಕ್ಕ ಸುದ್ದಿ ಬಂತು. ಇದು ಆತ ತಮ್ಮನ್ನು ಹುಡುಕುವವರಿಗಾಗಿ ಬಿಟ್ಟಿರುವ ಕ್ಲೂ ಇರಬಹುದು ಎಂದರು ಪೋಲಿಸರು. ಇನ್ನೊಂದು ದಿನ ಅಲ್ಲೆಲ್ಲ ಅಂಗುಲಂಗುಲ ಜಾಲಾಡಿಸಿದ ಮೇಲೆ ಕಡಿದಾದ ಆಳವಾದ, ದುರ್ಗಮವಾದ ಕಮರಿಯೊಂದರಲ್ಲಿ ಜೇಮ್ಸ್‌ನ ಶವ ಸಿಕ್ಕಿತು. ಜೇಮ್ಸ್‌ನ ಶವ ಸಿಕ್ಕಿದ ಜಾಗ ಆತನ ಕಾರು ಇದ್ದ ಸ್ಥಳದಿಂದ ಕೇವಲ ಅರ್ಧ ಮೈಲಿ ಮಾತ್ರ ದೂರವಿತ್ತು. ಆದರೂ, 40 ಕ್ಕಿಂತ ಹೆಚ್ಚು ಪೋಲಿಸರು ಆತನ ಹೆಂಡತಿಮಕ್ಕಳು ಸಿಕ್ಕ ಎರಡು ದಿನಗಳ ನಂತರ ಆತನನ್ನು ಹುಡುಕಲು ಸಾಧ್ಯವಾಯಿತು ಅಂದರೆ ಅ ಬೆಟ್ಟಗುಡ್ಡಗಳ ಕಾಡಿನ ದಟ್ಟತೆ, ಅಲ್ಲಿನ ಕಡಿದಾದ ಕಮರಿಗಳು, ಹಿಮ, ಇವೆಲ್ಲವನ್ನೂ ನಾವು ಊಹಿಸಿಕೊಳ್ಳಬಹುದು! ಆಷ್ಟೇ ದೂರದಲ್ಲಿ ಆತನ ಶವ ಸಿಕ್ಕರೂ, ಅಲ್ಲಿ ಹೆಣವಾಗಿ ಬೀಳುವುದಕ್ಕಿಂತ ಮೊದಲು ಜೇಮ್ಸ್ 17 ಕಿ.ಮಿ. ದೂರ ಹಿಮಾವೃತ ಬೆಟ್ಟಗುಡ್ಡಗಳನ್ನೆಲ್ಲ ಅಲೆದಿದ್ದನಂತೆ!

ಅಮೇರಿಕ ಎಂದ ತಕ್ಷಣ ಅದೊಂದು ಸಮೃದ್ಧವಾದ, ಅವಕಾಶಗಳು ಎಲ್ಲೆಂದರಲ್ಲಿ ಹುಡುಕಿಕೊಂಡು ಬರುವ, ಸುಲಭವಾಗಿ ಜೀವನ ಸಾಗಿಸಬಹುದಾದ ಶ್ರೀಮಂತ ದೇಶ ಎಂಬ ಕಲ್ಪನೆ ಹೊರಗಿನ ಬಹಳ ಜನರಿಗೆ ಇರುವುದು ಸುಳ್ಳಲ್ಲ. ಭಾರತಕ್ಕಿಂತ ಸುಮಾರು ಮೂರ್ನಾಲ್ಕು ಪಟ್ಟು ದೊಡ್ಡದಾದ ಈ ದೇಶದ ಕೆಲವು ಕಡೆಗಳಲ್ಲಿ ಜೀವನ ಬಹಳ ಸವಾಲಿನದ್ದು. ಇದು ಜನರೊಡ್ಡುವ ಅಪಾಯವಾಗಲಿ, ಸವಾಲಾಗಲಿ ಅಲ್ಲ–ಪ್ರಕೃತಿ ಒಡ್ಡುವುದು. ನಮ್ಮಲ್ಲಿಯೇ ಯಾಕೆ, ಇಲ್ಲಿಯೂ ಸಹ ಪ್ರತಿ ವರ್ಷ ಬೇಸಿಗೆಯ ಕಡುಬಿಸಿಲಿಗೆ ಜನ ಸಾಯುತ್ತಿರುತ್ತಾರೆ. ಕೇವಲ 50 ಲಕ್ಷ ಜನಸಂಖ್ಯೆಯ ಅರಿಜೋನಾ ರಾಜ್ಯದಲ್ಲಿ ಕಡುಬಿಸಿಲಿನ ಝಳಕ್ಕೆ ಸಿಕ್ಕಿ ಪ್ರತಿ ವರ್ಷ 30 ರಿಂದ 50 ಜನ ಸಾಯುತ್ತಾರೆ. ಬೇಸಿಗೆ ಕೊನೆಯಾದ ತಕ್ಷಣ ಬರುವ ಟೊರ್ನೆಡೊಗಳು, ಅಂದರೆ ಭಯಂಕರ ಸುಂಟರಗಾಳಿಗಳು, ಊರೂರುಗಳನ್ನೆ ಬುಡಮೇಲು ಮಾಡಿ ಹತ್ತಾರು ಜನರ ಜೀವ ತೆಗೆಯುವುದಲ್ಲದೆ ಸಾವಿರಾರು ಜನರ ಜೀವಮಾನದ ದುಡಿಮೆಯನ್ನೆ ನಾಶ ಮಾಡುತ್ತವೆ. ಟೊರ್ನೆಡೋಗಳನ್ನು ಆಧರಿಸಿದ ಪ್ರಸಿದ್ಧ ಚಲನಚಿತ್ರ ಟ್ವಿಸ್ಟರ್‌ನಲ್ಲಿ ಬರುವ ದೃಶ್ಯಗಳು ಅವಾಸ್ತವಿಕವೇನಲ್ಲ! ಅದೇ ಸಮಯದಲ್ಲಿ ಪೂರ್ವದಲ್ಲಿ ಮತ್ತು ಆಗ್ನೇಯದ ಕರಾವಳಿಯಲ್ಲಿ ಅಪ್ಪಳಿಸುವ ಚಂಡಮಾರುತಗಳದ್ದು ಇನ್ನೂ ಭೀಕರ ಆಟಾಟೋಪ. ಜನ ಎದ್ದುಬಿದ್ದು ಮನೆಮಠ ತೊರೆದು ನೂರಾರು ಮೈಲಿ ಹೋಗುವ ಸ್ಥಿತಿ ಬಂದು ಬಿಡುತ್ತದೆ ಕೆಲವೊಮ್ಮೆ. ಕಳೆದ ವರ್ಷ ಅಪ್ಪಳಿಸಿದ ಕತ್ರೀನಾ ಅಮೇರಿಕವನ್ನು ಮೊಣಕಾಲ ಮೇಲೆ ನಿಲ್ಲಿಸಿದ್ದೆ ಇದಕ್ಕೆ ತಾಜಾ ಉದಾಹರಣೆ.

ಇನ್ನು ಹಿಮ ಬೀಳುವ ಕತೆ. ಉತ್ತರದ ಕಡೆಗಿರುವ ರಾಜ್ಯಗಳಲ್ಲಿ ಚಳಿಗಾಲದಲ್ಲಿ ಒಂದೆರಡು ಗಂಟೆಗಳಲ್ಲಿ ಒಂದೆರಡು ಅಡಿಯಷ್ಟು ಎತ್ತರದ ಹಿಮ ಬಿದ್ದು ಬಿಡುತ್ತದೆ. ಕೆಲವು ಸಲ ಮೂರ್ನಾಲ್ಕು ಅಡಿ ಬಿದ್ದು ಮನೆಯ ಬಾಗಿಲು ತೆರೆದು ಹೊರಬರಲಾಗದ ಹಾಗೆ ಮಾಡಿಬಿಡುತ್ತದೆ. ಕಾರಿನಲ್ಲಿ ಕುಳಿತಿದ್ದರೂ ಶೀತಚಳಿ ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಅಂತಹ ಹಿಮದಲ್ಲಿ ಸಂಪೂರ್ಣವಾಗಿ ಅನೇಕ ಪದರುಗಳ ಬಟ್ಟೆಗಳನ್ನು ಧರಿಸಿ ಸಂಪೂರ್ಣವಾಗಿ ಮೈಮುಚ್ಚಿಕೊಳ್ಳದೆ ಹೊರಗೇನಾದರೂ ಬಂದರೆ ಹತ್ತಾರು ನಿಮಿಷಗಳಲ್ಲಿ frostbite ಬರುತ್ತದೆ. ಇದೇನೆಂದರೆ, ಶೀತಕ್ಕೆ ಸಿಕ್ಕಿದ ಭಾಗಕ್ಕೆ ರಕ್ತಚಲನೆ ಸ್ಥಗಿತಗೊಂಡು, ಆಮ್ಲಜನಕವಿಲ್ಲದೆ, ಅಲ್ಲಿನ ಜೀವಕೋಶಗಳೆಲ್ಲ ಸತ್ತು ಹೋಗಿ ಆ ಭಾಗ ಕಪ್ಪು ಬಣ್ಣಕ್ಕೆ ತಿರುಗಿ, ಸಂಪೂರ್ಣ ಸ್ವಾಧೀನತೆ ಕಳೆದುಕೊಳ್ಳುತ್ತದೆ. ಹಿಮದಲ್ಲಿ ಗಾಡಿ ಸಿಕ್ಕಿ ಹಾಕಿಕೊಂಡರೆ ನಮ್ಮಲ್ಲಿ ಹಳ್ಳಿಗಾಡಿನ ಕೆಸರಿನಲ್ಲಿ ತುಂಬಿದ ಲಾರಿ ಹೂತುಕೊಂಡ ಹಾಗೆ. ಸ್ಟ್ಯಾಂಡ್ ಹಾಕಿದ ಸೈಕಲ್‌ನ ಹಿಂದಿನ ಚಕ್ರ ತಿರುಗುವಷ್ಟು ಸರಾಗವಾಗಿ ಚಕ್ರಗಳು ತಿರುಗುತ್ತವೆ, ಅಷ್ಟೆ. ಮೇಲಕ್ಕೆಳೆಯಲು ಇನ್ನೊಂದು ಗಾಡಿಯೆ ಬರಬೇಕು. ಭೂಕಂಪವಾಗಿ ವಾರದ ಬಳಿಕವೂ ಬದುಕುಳಿದವರ ಕತೆಗಳಂತೆ ಹಿಮದಲ್ಲಿ ಎಲ್ಲೊ ಕಳೆದುಹೋಗಿ ಬದುಕಿದವರ, ಸತ್ತವರ ಕತೆಗಳು ಪ್ರತಿ ವರ್ಷವೂ ಇಲ್ಲಿ ಕೇಳಿಬರುತ್ತಿರುತ್ತವೆ.

ಇಂತಹ ಹಿಮ ಸುರಿಯುವ ವಿಸ್ಕಾನ್ಸಿನ್ ರಾಜ್ಯದಲ್ಲಿ ಒಂದು ಚಳಿಗಾಲವನ್ನು ನಾನು ಕಳೆದಿದ್ದೆ. ಆಗ ಅಲ್ಲಿದ್ದ ಅಮೇರಿಕನ್ ಸಹೋದ್ಯೋಗಿಗಳೆಲ್ಲರು ನನಗೆ ಒಂದು ಹಿತವಚನ ಹೇಳುತ್ತಿದ್ದರು: “ಕಾರಿನಲ್ಲಿ ಯಾವಾಗಲು ಒಂದು ಬ್ಲ್ಯಾಂಕೆಟ್ ಇಟ್ಟಿರು, ಲೈಟರ್ ಇಟ್ಟಿರು, ಒಂದಷ್ಟು ಸ್ನ್ಯಾಕ್ಸ್ ಮತ್ತು ಚಾಕೊಲೆಟ್ ಇಟ್ಟಿರು, ಯಾವಾಗ ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೊ ಗೊತ್ತಿಲ್ಲ, ಎಲ್ಲಾದರು ಹೀಗೆ ಕಳೆದುಹೋದರೆ ಸಹಾಯ ಬರುವ ತನಕ ಕಾರಿನಲ್ಲೆ ಇರಬೇಕಾಗುತ್ತದೆ, ಮೊದಲೆ ಸಿದ್ಧವಾಗಿರುವುದು ಒಳ್ಳೆಯದು,” ಇತ್ಯಾದಿ. ನಾನು ಇದ್ದದ್ದು ಕೇವಲ ಹತ್ತು ಸಾವಿರ ಜನಸಂಖ್ಯೆ ಇದ್ದ ಪಟ್ಟಣದಲ್ಲಿ. ಅಂತಹ ಊರುಗಳಿಂದ ಹತ್ತಾರು ಮೈಲಿ ದೂರ ಹೋದರೆ ಸಾಕು ಗಂಟೆಗಟ್ಟಲೆ ಜನ ಸಂಚಾರ ಕಾಣಿಸುವುದಿಲ್ಲ. ಕಾರು ಓಡಿಸುವಾಗ ಸ್ವಲ್ಪ ಯಾಮಾರಿ ಬದಿಯಲ್ಲಿರುವ ಹಿಮದ ಮೇಲೇನಾದರು ಚಕ್ರ ಹತ್ತಿದರೆ ಕಾರು ಕಂಟ್ರೋಲಿಗೆ ಸಿಗುವುದಿಲ್ಲ. ಕಾರಿನ ಚಕ್ರಗಳು ಸ್ನೋಟೈರ್ ಆಗಿಲ್ಲದಿದ್ದಲ್ಲಿ, ಅವುಗಳಿಗೆ ಸ್ಟೀಲ್ ಚೈನ್ಸ್ ಹಾಕಿಲ್ಲದಿದ್ದಲ್ಲಿ, ಅಥವ ಆ ಕಾರು 4-ವ್ಹೀಲರ್ ಆಗಿಲ್ಲದಿದ್ದಲ್ಲಿ, ಮತ್ತೆ ರಸ್ತೆಯ ಮೇಲಕ್ಕೆ ಬರುವುದು ಕನಸೇ ಸರಿ. ಸೆಲ್ ಫೋನ್ ಇದ್ದು, ಅದು ಕೆಲಸ ಮಾಡುತ್ತಿದ್ದರೆ ಪರವಾಗಿಲ್ಲ. ಇಲ್ಲದಿದ್ದಲ್ಲಿ ಆಗ ಮಾಡಬಹುದಾದದ್ದೇನೆಂದರೆ ಆ ರಸ್ತೆಯಲ್ಲಿ ಓಡಾಡುವ ಯಾರ ಕಣ್ಣಿಗಾದರೂ ಬೀಳುವ ಆಸೆಯಿಟ್ಟುಕೊಂಡು, ಹಾಕಿಕೊಂಡಿರುವ ಜಾಕೆಟ್ ಸಾಲದೆ ಇದ್ದರೆ ಚಾದರವನ್ನು ಹೊದ್ದಿಕೊಂಡು, ಕಾರಿನಲ್ಲಿರುವುದನ್ನು ತಿಂದುಕೊಂಡು, ಆದಷ್ಟು ಬೆಚ್ಚಗಿರಲು ಎಲ್ಲಾ ಪ್ರಯತ್ನ ಮಾಡುತ್ತ ಕಾಲ ತಳ್ಳುವುದು. ಅಲ್ಲೇನಾದರು ಮತ್ತೆ ಜೋರಾಗಿ ಹಿಮ ಸುರಿಯಲು ಪ್ರಾರಂಭವಾದರೆ ಐದತ್ತು ಅಡಿಗಿಂತ ಮುಂದಕ್ಕೆ ಏನಿದೆ ಎಂದೇ ಕಾಣಿಸುವುದಿಲ್ಲ. ರಸ್ತೆಯಿಂದ 20-30 ಅಡಿ ದೂರಕ್ಕೆ ಇಳಿದುಬಿಟ್ಟಿದ್ದರೆ ಕೆಲವೊಮ್ಮೆ ಆ ರಸ್ತೆಯಲ್ಲಿ ನಿಧಾನಕ್ಕೆ ಚಲ್ಲಿಸುವ ವಾಹನಗಳ ಕಣ್ಣಿಗೂ ಬೀಳುವುದು ಕಷ್ಟ. ಪರಮ ಅದೃಷ್ಟ ಹೀನತೆ ಎಂದರೆ ಇದೇನೆ.

ಜೀವನವನ್ನು ಹಿಮ ಇಷ್ಟು ಕಠೋರವಾಗಿಸುವ ಭಾಗಗಳಿಂದ ಬಂದವರು ಬೇಕಾದಷ್ಟು ಮುಂಜಾಗರೂಕತೆ ತೆಗೆದುಕೊಂಡಿರುತ್ತಾರೆ. ಜೇಮ್ಸ್‌ನ ಅನುಭವ ಮತ್ತು ಆತನ ಹಿಂದಿನ ಪ್ರವಾಸಾನುಭವಗಳನ್ನು ನೋಡಿದರೆ ಇವೆಲ್ಲ ಗೊತ್ತಿರುವ ಸಾಧ್ಯತೆ ಇದ್ದೇ ಇದೆ. ಆದರೆ ಆತ ತಾನು ಹೋಗುತ್ತಿರುವ ರಸ್ತೆಯಲ್ಲಿ ಕಾರು ಸಿಕ್ಕಿಹಾಕಿಕೊಳ್ಳುವುದನ್ನು ಊಹಿಸಿರದೆ ಇರಬಹುದು. ಯಾಕೆಂದರೆ ಹಿಮ ಋತು ಈಗ ತಾನೆ ಪ್ರಾರಂಭವಾಗಿದೆ. ಆತ ಹೋದ ಭಾಗದಲ್ಲಿ ಇಲ್ಲಿಯತನಕ ಒಂದೆರಡು ಸಾರಿ ಮಾತ್ರ ಹಿಮ ಬಿದ್ದಿರಬಹುದು. ಬಿದ್ದದ್ದು ಕರಗಿ ಹೋಗಿರಬಹುದು. ಹಾಗೆಂದು ಧೈರ್ಯ ಮಾಡಿ ಹೋಗಿದ್ದೆ ಜೇಮ್ಸ್‌ನ ಸಾವಿಗೆ ಮತ್ತು ಆತನ ಕುಟುಂಬ ಅನುಭವಿಸಿದ ಆ 9 ದಿನಗಳ ನರಕಾನುಭವಕ್ಕೆ ಕಾರಣವಾಯಿತೇನೊ. ಎಷ್ಟೊ ಸಲ ನಮ್ಮ ಲೆಕ್ಕಾಚಾರಗಳು ಕೈಕೊಡುತ್ತವೆ. ಆದರೆ ಸಣ್ಣಪುಟ್ಟ ಎಂದು ಭಾವಿಸುವ ಇಂತಹವುಗಳೆ ಜೀವ ತೆಗೆಯುವ ದುಬಾರಿ ಲೆಕ್ಕಾಚಾರಗಳಾಗಿ ಬಿಡುವುದೊಂದು ದೌರ್ಭ್ಯಾಗ್ಯ.

ಅಮೇರಿಕ ಎಲ್ಲಾ ಕಾಲದಲ್ಲಿಯೂ ಸ್ವರ್ಗವೇನಲ್ಲ. ಇಲ್ಲೂ ಅಪಾಯಗಳಿವೆ. ಈ ದೇಶದಲ್ಲಿಯೂ, ಅರ್ಧ ಮೈಲಿ ದೂರದಲ್ಲಿರುವವನನ್ನು 40 ಕ್ಕೂಹೆಚ್ಚು ಜನ ಹಿಮದ ಮೇಲೆ ಓಡುವ ಸ್ನೋಮೊಬೈಲ್ ವಾಹನ ಬಳಸಿ, ಕುದುರೆಗಳನ್ನು ಉಪಯೋಗಿಸಿ, ಹೆಲಿಕಾಪ್ಟರ್ ಏರಿ, ಉಪಗ್ರಹಗಳ ಸಹಾಯ ಪಡೆದು, ಮೈಶಾಖವನ್ನು ಕಂಡುಹಿಡಿಯುವ ಹಾಟ್‌ಸ್ಪಾಟ್‌ನಂತಹ ಓದಿಬರೆದರೂ ಅರ್ಥವಾಗದಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿಯೂ ಎರಡು ದಿನಗಳ ನಂತರವಷ್ಟೆ ಕಂಡುಹಿಡಿಯಲು ಸಾಧ್ಯವಾಯಿತು. ಇದೇನೂ ಉತ್ಪ್ರೇಕ್ಷೆಯಲ್ಲ! ಪ್ರಕೃತಿಯ ಮುಂದೆ ಮಾನವ ಕುಬ್ಜಾತಿಕುಬ್ಜ, ಅಲ್ಲವೆ?

(ಚಿತ್ರಕೃಪೆ: ವಿಕಿಪೀಡಿಯ)

Three Gorges Dam

ಜೀವನದಿಗಳ ಸಾವಿನ ಕಥನ – 4

– ಡಾ.ಎನ್.ಜಗದೀಶ್ ಕೊಪ್ಪ

ಎರಡನೇ ಮಹಾಯುದ್ಧದ ನಂತರ ರಷ್ಯಾದಲ್ಲಿ ಸ್ಟಾಲಿನ್ ಅಧಿಕಾರದ ಅವಧಿಯಲ್ಲಿ, ರಷ್ಯಾ ಮತ್ತು ಉಕ್ರೇನ್ ಪ್ರದೇಶಗಳಲ್ಲಿ ಜಲವಿದ್ಯುತ್ಗಾಗಿ ಅಸಂಖ್ಯಾತ ಅಣೆಕಟ್ಟುಗಳು ನಿರ್ಮಾಣಗೊಂಡವು. ರಷ್ಯಾದ ಮಹಾನದಿಯಾದ ವೋಲ್ಗಾ ನದಿಯೊಂದಕ್ಕೇ ಆರು ಅಣೆಕಟ್ಟೆಗಳನ್ನು ನಿರ್ಮಿಸಲಾಯಿತು.

ಯೂರೋಪ್, ಅಮೆರಿಕಾ, ರಷ್ಯಾವನ್ನು ಹೊರತುಪಡಿಸಿದರೆ, ಏಷ್ಯಾದ ಬಹುತೇಕ ರಾಷ್ಟ್ರಗಳು 19 ಮತ್ತು 21ನೇ ಶತಮಾನದಲ್ಲಿ ಬ್ರಿಟೀಷ್ ವಸಾಹತು ಪ್ರದೇಶಗಳಾಗಿದ್ದ ಕಾರಣ, ಇಲ್ಲಿ ಬ್ರಿಟೀಷರ ಅವಶ್ಯಕತೆಗೆ ತಕ್ಕಂತೆ (ಭಾರತವೂ ಸೇರಿ) ಹಲವು ರಾಷ್ಟ್ರಗಳಲ್ಲಿ ಅಣೆಕಟ್ಟುಗಳ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.

ಬ್ರಿಟೀಷರು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ, ಒಣ ಪ್ರದೇಶಗಳನ್ನು ನೀರಾವರಿಗೆ ಒಳಪಡಿಸಿ, ರೈತರಿಗೆ ಕಬ್ಬು ಮತ್ತು ಹತ್ತಿ ಬೆಳೆಯಲು ಪ್ರೋತ್ಸಾಹಿಸಿದರು. ಇದರಲ್ಲಿ ಅವರ ಸ್ವ-ಹಿತಾಸಕ್ತಿಯೂ ಅಡಗಿತ್ತು. ಇಂಗ್ಲೆಂಡ್‌ನ ಕೈಗಾರಿಕೆಗಳಿಗೆ ತಮ್ಮ ವಸಾಹತು ಪ್ರದೇಶಗಳಿಂದ ಕಚ್ಛಾ ವಸ್ತುಗಳನ್ನು ಸರಬರಾಜು ಮಾಡುವುದು ಅವರ ಗುರಿಯಾಗಿತ್ತು.

1902ರಲ್ಲಿ ಇದೇ ಬ್ರಿಟೀಷರು ಈಜಿಪ್ಟ್‌ನ ನೈಲ್ ನದಿಗೆ ಐಸ್ವಾನ್ ಅಣೆಕಟ್ಟು ನಿರ್ಮಿಸಿ, ಅಲ್ಲಿ ಹತ್ತಿ ಬೆಳೆಯುವಂತೆ ಪ್ರೋತ್ಸಾಹಿಸಿ, ಲಂಕಾಷ್ವರ್ ಮಿಲ್‌ಗಳಿಗೆ ಹತ್ತಿ ಪೂರೈಕೆಯಾಗುವಂತೆ ನೋಡಿಕೊಂಡರು.

ಎರಡನೇ ಮಹಾಯುದ್ಧದ ನಂತರ ಜಾಗತಿಕ ಮಟ್ಟದಲ್ಲಿ ಉಂಟಾದ ರಾಜಕೀಯ ವಿದ್ಯಾಮಾನಗಳಿಂದ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಬ್ರಿಟೀಷರಿಂದ ಮುಕ್ತಿ ಪಡೆದವು. ಅಷ್ಟರ ವೇಳೆಗೆ ರಷ್ಯಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಅಣೆಕಟ್ಟುಗಳ ನಿರ್ಮಾಣವೊಂದೇ ಮಾರ್ಗ ಮತ್ತು ಮುಕ್ತಿ ಎಂಬ ಪರಿಕಲ್ಪನೆ ಚಾಲ್ತಿಯಲ್ಲಿದ್ದ ಕಾರಣ, ಇದು ಸ್ವಾತಂತ್ರ್ಯಾ ನಂತರ ಭಾರತದ ನಾಯಕರ ಮೇಲೂ ಪ್ರಭಾವ ಬೀರಿತು. ಈ ಕಾರಣಕ್ಕಾಗಿಯೇ 1947 ರಿಂದ 1980 ರವರೆಗೆ ರಾಷ್ಟ್ರದ ಒಟ್ಟು ಖರ್ಚಿನಲ್ಲಿ ಶೇ.15 ರಷ್ಟನ್ನು ಭಾರತ ಸರಕಾರ ಅಣೆಕಟ್ಟುಗಳ ನಿರ್ಮಾಣಕ್ಕೇ ಮೀಸಲಾಗಿಟ್ಟಿತು. 1980 ರ ವೇಳೆಗೆ ಭಾರತದಾದ್ಯಂತ ಸಾವಿರಕ್ಕೂ ಹೆಚ್ಚು ಮಧ್ಯಮ ಹಾಗೂ ಬೃಹತ್ ಗಾತ್ರದ ಅಣೆಕಟ್ಟುಗಳು ನಿರ್ಮಾಣಗೊಂಡವು.

ಇದರ ಪರಿಣಾಮವೆಂದರೆ, ರಷ್ಯಾ ಮತ್ತು ಅಮೆರಿಕಾದ ತಂತ್ರಜ್ಞರಿಗೆ ಅಣೆಕಟ್ಟುಗಳ ನಿರ್ಮಾಣ ಕುರಿತಂತೆ ಸಲಹೆ, ತಂತ್ರಜ್ಞಾನ ನೀಡುವ ವೃತ್ತಿ ಒಂದು ಬೃಹತ್ ದಂಧೆಯಾಗಿ ಬೆಳೆಯಿತು. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಿಸಿರುವ ಚೀನಾ ದೇಶಕ್ಕೆ 1949 ರವರೆಗೆ ರಷ್ಯಾ, ಹಾಗೂ 1960 ರವರೆಗೆ ಅಮೆರಿಕಾದ ಇಂಜಿನಿಯರ್ಗಳು ಸಲಹೆ ನೀಡಿದ್ದಾರೆ.

ಚೀನಾದಲ್ಲಿ 1960 ರಿಂದ 1990 ರವರೆಗೆ ವರ್ಷವೊಂದಕ್ಕೆ 600 ಅಣೆಕಟ್ಟುಗಳು ನಿರ್ಮಾಣಗೊಂಡವು. ಅಲ್ಲಿನ ಹಳದಿ ನದಿಗೆ ನಿರ್ಮಿಸಲಾದ ಜಗತ್ತಿನ ಬೃಹತ್ ಅಣೆಕಟ್ಟು 2005 ರಲ್ಲಿ ಪೂರ್ಣಗೊಂಡಿತು.

ಜಗತ್ತಿನಾದ್ಯಂತ ಅಣೆಕಟ್ಟುಗಳ ನಿರ್ಮಾಣಕ್ಕೆ ವಿಶ್ಚಬ್ಯಾಂಕ್ ಆರ್ಥಿಕ ನೆರವು ನೀಡುವ ಸಂಸ್ಥೆಯಾಗಿದೆ. ಇಂದು ವಿಶ್ವದಾದ್ಯಂತ 100 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಣೆಕಟ್ಟುಗಳ ನಿರ್ಮಾಣಕ್ಕಾಗಿ 75 ಶತಕೋಟಿ ಡಾಲರ್ ಹಣವನ್ನು ವಿಶ್ವಬ್ಯಾಂಕ್ ಸಾಲವಾಗಿ ನೀಡಿದೆ. ಇದಲ್ಲದೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾದ ಆಹಾರ ಮತ್ತು ಕೃಷಿ ಸಂಘಟನೆ(ಎಫ್.ಎ.ಒ.), ವಿಶ್ವ ಸಂಸ್ಥೆ ಅಭಿವೃದ್ಧಿ ಯೋಜನೆಯಡಿ(ಯು.ಎನ್.ಡಿ.ಪಿ.), ಅಮೆರಿಕಾದ ವಿಎಸ್.ಎ.ಐ.ಡಿ. ಸಂಸ್ಥೆ, ಇಂಗ್ಲೆಡ್ನ ಓವರ್ ಸೇಸ್ ಡೆವಲಪ್ಮೆಂಟ್ ಏಡ್ ಸಂಸ್ಥೆಗಳು ಸಹ ಸಾಲದ ನೆರವು ನೀಡುತ್ತಿವೆ.

ಈ ರೀತಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸಹಾಯ ನೀಡುತ್ತಿರುವ ದೇಶಗಳ ಬಹುರಾಷ್ಟ್ರೀಯ ಕಂಪನಿಗಳು, ಅಣೆಕಟ್ಟುಗಳ ಕಾಮಗಾರಿಯಲ್ಲಿ ತೊಡಗಿಕೊಳ್ಳುವುದು ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಅಣೆಕಟ್ಟುಗಳ ನಿರ್ಮಾಣ ವೆಚ್ಚ ನಿರೀಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟು ಆಗುತ್ತಿರುವುದು  ಸಹ ಟೀಕೆಗೆ ಗುರಿಯಾಗಿದೆ.

ಬ್ರೆಜಿಲ್, ಪೆರುಗ್ವೆ ರಾಷ್ಟ್ರಗಳ ಗಡಿಭಾಗದಲ್ಲಿ ನದಿಯೊಂದಕ್ಕೆ 12,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಒಂದು ಅಣೆಕಟ್ಟು (ಇದರ ವೆಚ್ಚ 20 ಶತಕೋಟಿ ಡಾಲರ್) ಹಾಗೂ ಚೀನಾದಲ್ಲಿ 18,200 ಮೆಗಾವ್ಯಾಟ್ ವಿದ್ಯುತ್ ಉತ್ಫಾದನೆಗೆ ನಿರ್ಮಿಸಿದ ಮೂರು ಅಣೆಕಟ್ಟುಗಳು (ಇವುಗಳ ವೆಚ್ಚ 50 ಶತಕೋಟಿ ಡಾಲರ್), ಇವುಗಳ ಹಿಂದೆ ವ್ಯಾಪಕ ಭ್ರಷ್ಟಾಚಾರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಿಕ್ ಬ್ಯಾಕ್ ವ್ಯವಹಾರ ನಡೆದಿದೆ ಎಂದು ಆರೋಪಗಳು ಕೇಳಿಬಂದಿವೆ. ಆಯಾ ರಾಷ್ಟ್ರಗಳ ರಾಜಕೀಯ ಅಸ್ಥಿರತೆ, ಬದಲಾಗುವ ಸರಕಾರದ ಜನಪ್ರತಿನಿಧಿಗಳ ಮನೋಭಾವದಿಂದಾಗಿ ಯಾವುದೇ ಅಣೆಕಟ್ಟು ನಿಗದಿತ ವೇಳೆಗೆ ಪೂರ್ಣಗೊಂಡ ಇತಿಹಾಸವೇ ಇಲ್ಲ. ಈಗಾಗಿ ಅಂದಾಜು ವೆಚ್ಚ ಮಿತಿಮೀರಿ, ಸಾಲದ ಮೇಲಿನ ಬಡ್ಡಿಯಿಂದಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಕೂಡ ಮಿತಿ ಮೀರುತ್ತಿದೆ.

ಹಿಂದೊಮ್ಮೆ ಅಣೆಕಟ್ಟುಗಳು ಭಾರತದ ಪಾಲಿನ ಗುಡಿ-ಗೋಪುರಗಳು ಎಂದು ಹಾಡಿ ಹೊಗಳಿದ್ದ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ “ಬೃಹತ್ ಅಣೆಕಟ್ಟುಗಳ ಬಗ್ಗೆ ನಾನು ಮರುಚಿಂತನೆ ನಡೆಸುತ್ತಿದ್ದೇನೆ ಎಂದಿದ್ದರಲ್ಲದೇ, ನಾವು ದೊಡ್ಡ ಕಾರ್ಯ ಯೋಜನೆಗಳನ್ನು ನಿರ್ಮಿಸಬಲ್ಲೆವು ಅಷ್ಟೆ. ಆದರೆ ಇವುಗಳಿಂದ ಅರ್ಧದಷ್ಟು ಪ್ರಮಾಣದ ಪ್ರತಿಫಲವಿಲ್ಲ ಎಂಬುದು ಮನದಟ್ಟಾಗಿದೆ” ಎಂದು ಸಂಸತ್ತಿನಲ್ಲಿ ತಮ್ಮ ಮನದಾಳದ ಮಾತನ್ನು ತೋಡಿಕೊಂಡಿದ್ದರು (1958).

ಇಂತಹದ್ದೇ ಭಾವನೆಯನ್ನು ರಷ್ಯಾದ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿಕಿತಾ ಕೃಶ್ನೇವ್ ವೋಲ್ಗಾ ನದಿಗೆ ಕಟ್ಟಲಾದ ಅಣೆಕಟ್ಟನ್ನು ನಾಡಿಗೆ ಅರ್ಪಿಸುವ ಸಂದರ್ಭದಲ್ಲಿ “ಇಂತಹ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳಿಗಿಂತ, ನದಿಗಳ ನೈಜ ಸ್ಥಿತಿಯನ್ನು ನಾಶ ಮಾಡುವುದರಿಂದ ಉಂಟಾಗುವ ದುಷ್ಪರಿಣಾಮ ಹಾಗೂ ನೈಸರ್ಗಿಕ ವಿನಾಶಕ್ಕೆ ಬೆಲೆಕಟ್ಟಲಾಗದು” ಎಂದು ನೋವನ್ನು ವ್ಯಕ್ತಪಡಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಪರಿಸರವಾದಿಗಳಿಂದ ಹುಟ್ಟಿಕೊಂಡ ಪ್ರತಿಭಟನೆಯಿಂದಾಗಿ  ಬೃಹತ್ ಅಣೆಕಟ್ಟುಗಳ ಭ್ರಮೆ ನಿಧಾನವಾಗಿ ಕಳಚತೊಡಗಿದೆ. ಪರಿಸರವಾದಿಗಳ ಉಗ್ರ ಹೋರಾಟದ ಫಲವಾಗಿ ಆಸ್ಟ್ರೇಲಿಯಾದ ಪ್ರಾಂಕ್ಲಿನ್ ಅಣೆಕಟ್ಟು, ಥೈಲಾಂಡ್ನ ನಾಮ್ ಚೊಹಾನ್, ಹಂಗೇರಿಯ ನ್ಯಾಗಿ ಮರೇಗ್, ಭಾರತದ ಕೇರಳ ರಾಜ್ಯದ ಮೌನ ಕಣಿವೆಯ ಅಣೆಕಟ್ಟು, ಬ್ರೆಜಿಲ್ನ ಬಾಬಾಕ್ಸರ್, ರಷ್ಯಾದ ಕಟೂನ್, ಪ್ರಾನ್ಸ್ನ ಸರ್ರೆಡಿ-ಲ-ಪೆರ್ರೆ ಹೀಗೆ ಅನೇಕ ಅಣೆಕಟ್ಟುಗಳ ನಿರ್ಮಾಣ ಯೋಜನೆ ರದ್ದಾಗಿ, ಅಲ್ಲಿನ ಜೀವನದಿಗಳ ಸಹಜ ಹರಿಯುವಿಕೆಗೆ ವರದಾನವಾಗಿದೆ.

ನಮ್ಮ ಗುಜರಾತ್ ರಾಜ್ಯದಲ್ಲಿ ನರ್ಮದಾ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟಿನ ಬಗೆಗಿನ ವಿರೋಧ ಜಾಗತಿಕ ಮಟ್ಟದಲ್ಲಿ ಬಿಂಬಿತವಾಗಿ (ನರ್ಮದಾ ಬಚಾವ್ ಆಂಧೋಲನ-ಮೇಧಪಾಟ್ಕರ್ ನೇತೃತ್ವದಲ್ಲಿ), ಈ ಯೋಜನೆಗೆ ಹಣಕಾಸಿನ ನೆರವು ನೀಡಿದ್ದ ವಿಶ್ವಬ್ಯಾಂಕ್ ಯೋಜನೆ ಕುರಿತಂತೆ ಮರುಚಿಂತನೆ ನಡೆಸಿದೆ. ಇದೇ ರೀತಿ ನೇಪಾಳದಲ್ಲಿ ಕೂಡ ಅರುಣ್ ಎಂಬ ಅಣೆಕಟ್ಟು ಯೋಜನೆ ರದ್ದಾಯಿತು.

ಅಣೆಕಟ್ಟುಗಳ ನಿರ್ಮಾಣದಿಂದ ಪರಿಸರದ ಏರು-ಪೇರು, ಅರಣ್ಯನಾಶ, ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಪ್ರದೇಶ, ಅಲ್ಲಿನ ಜೈವಿಕ ವೈವಿಧ್ಯತೆ, ಸಸ್ಯ ಪ್ರಭೇದಗಳು, ಯೋಜನೆಯಿಂದ ನಿರ್ವಸತಿಗರಾಗುವ ಲಕ್ಷಾಂತರ ಕುಟುಂಬಗಳ ಬದುಕು, ಅವರ ಪುನರ್ವಸತಿಯ ಸವಾಲುಗಳು ಇವೆಲ್ಲವೂ ಬೃಹತ್ ಅಣೆಕಟ್ಟಿನ ವಿರೋಧಕ್ಕೆ ಕಾರಣವಾಗಿರುವ ಪ್ರಧಾನ ಅಂಶಗಳು.

1950 ರಿಂದ 70 ರ ದಶಕದವರೆಗೆ ವಿಶ್ವಬ್ಯಾಂಕ್ ನೆರವಿನಿಂದ ಜಾಗತಿಕವಾಗಿ ವರ್ಷವೊಂದಕ್ಕೆ ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗುತ್ತಿದ್ದವು. ಈಗ ಇದರ ಪ್ರಮಾಣ 200 ಕ್ಕೆ ಕುಸಿದಿದೆ. ಅಂದರೆ ಬೃಹತ್ ಅಣೆಕಟ್ಟುಗಳ ಬಗೆಗಿನ ಭ್ರಮೆ ಕಳಚುತ್ತಿದ್ದು, ವಾಸ್ತವಿಕ ಕಟು ಸತ್ಯಗಳು ಮನದಟ್ಟಾಗುತ್ತಿವೆ.

ಅಣೆಕಟ್ಟಿನಿಂದಾಗಿ ಜಲಾಶಯದಲ್ಲಿ ಶೇಖರವಾಗುವ ನೀರಿನ ಪ್ರಮಾಣ, ಅದರಲ್ಲಿನ ಬದಲಾವಣೆ, ಉಷ್ಣಾಂಶದ ಏರಿಳಿತ, ಅಲ್ಲಿನ ಜಲಚರಗಳ ಸ್ಥಿತಿ-ಗತಿ ಮತ್ತು ಅಣೆಕಟ್ಟು ನಿರ್ಮಾಣದಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಆಗಬಹುದಾದ ನೈಸರ್ಗಿಕ ಬದಲಾವಣೆ ಕುರಿತಂತೆ ಇತ್ತೀಚಿನ ವರ್ಷಗಳಲ್ಲಿ ಗಂಭೀರ ಅಧ್ಯಯನಗಳು ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ.

ಇಂತಹ ಅಣೆಕಟ್ಟುಗಳಿಗೆ ಪರ್ಯಾಯವಾಗಿ ಪರಿಸರಕ್ಕೆ ಹಾಗೂ ನದಿ ನೀರಿನ ಸಹಜ ಹರಿಯುವಿಕೆಗೆ ಅಡ್ಡಿಯಾಗದ ಸಣ್ಣ-ಸಣ್ಣ ಅಣೆಕಟ್ಟು ಮತ್ತು ಜಲಾಶಯಗಳ ಬಗ್ಗೆ ಚಿಂತನೆ ಆರಂಭವಾಗಿದೆ. ಅಲ್ಲದೆ ಈಗಾಗಲೇ ಹಲವಾರು ರಾಷ್ಟ್ರಗಳಲ್ಲಿ ಜೀವ ವೈವಿಧ್ಯತೆ ಹಾಗೂ ನದಿಗಳ ನೈಜ ಸ್ವರೂಪವನ್ನು ಕಾಪಾಡುವ ಉದ್ದೇಶದಿಂದ ಹಲವಾರು ನದಿಗಳನ್ನು ಅಣೆಕಟ್ಟು ಮುಕ್ತ ನದಿಗಳೆಂದು ಘೋಷಿಸಲಾಗಿದೆ.

ಸ್ಪೀಡನ್ ಮತ್ತು ನಾರ್ವೆ ರಾಷ್ಟ್ರಗಳು ಈ ದಿಶೆಯಲ್ಲಿ ದೃಢ ಹೆಜ್ಜೆ ಇಟ್ಟ ಪ್ರಥಮ ರಾಷ್ಟ್ರಗಳಾಗಿವೆ. ಈಗ ಅಮೆರಿಕಾ ಕೂಡ ಕೆಲವು ನದಿಗಳ 16 ಸಾವಿರ ಕಿ.ಮೀ. ಉದ್ದದ ಮಾರ್ಗದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ನಿಷೇಧ ಹೇರಿದೆ. ಬೃಹತ್ ಅಣೆಕಟ್ಟು ಎಂಬ ಪರಿಕಲ್ಪನೆ ಹುಟ್ಟುಹಾಕಿ, ಅಂತಹ ಸಾಹಸಕ್ಕೆ ಚಾಲನೆ ನೀಡಿದ್ದ ಅಮೆರಿಕಾ ದೇಶವೇ ಈಗ, ನದಿಗಳು ಮತ್ತು ಅಣೆಕಟ್ಟು ನಿರ್ಮಾಣ ಕುರಿತಂತೆ ತನ್ನ ಆಲೋಚನಾ ದಿಕ್ಕನ್ನೇ ಬದಲಿಸತೊಡಗಿರುವುದು ಸಧ್ಯದ ಸ್ಥಿತಿಯಲ್ಲಿ ಒಂದು ರೀತಿಯ ಸಮಾಧಾನಕರ ಸಂಗತಿ.

(ಚಿತ್ರಕೃಪೆ: ವಿಕಿಪೀಡಿಯ)