Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

Symptoms of acute HIV infection

ನಿಜ ಭಾರತದ ನೋವುಗಳು – ಕೈಗೆಟುಕದ ಜೀವರಕ್ಷಕ ಔಷಧಗಳು

ಜಾಗತೀಕರಣ ಕುರಿತಂತೆ ಬರಗೂರು ರಾಮಚಂದ್ರಪ್ಪ ಹೇಳಿರುವ ಜಾಗತೀಕರಣವೆಂಬುದು ಶಬ್ದವಿಲ್ಲದ ನಿಶ್ಯಬ್ಧ ಯುದ್ಧ ಎಂಬ ಮಾತು ನನಗೆ ಪದೇ, ಪದೇ ನೆನಪಿಗೆ ಬರುತ್ತದೆ. ಮುಕ್ತಮಾರುಕಟ್ಟೆಯ ನೆಪದಲ್ಲಿ ನಮ್ಮ ದೇಶದೊಳಕ್ಕೆ ನುಸುಳಿರುವ ಬಹುರಾಷ್ಟ್ರೀಯ ಕಂಪನಿಗಳು ಔಷದ ರಂಗದಲ್ಲಿ ಸೃಷ್ಟಿಸಿರುವ ಅಲ್ಲೋಲ ಕಲ್ಲೋಲ ಜನಸಾಮಾನ್ಯರಿಗೆ ಇಂದಿಗೂ ಅರ್ಥವಾಗದ ಸಂಗತಿ.

Prescription Symbolಭಾರತದ ಬಗ್ಗೆ, ಇಲ್ಲಿನ ಬಡತನ, ಅಜ್ಞಾನದ ಬಗ್ಗೆ, ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ನಮ್ಮ ತಕರಾರುಗಳು ಏನೇ ಇರಲಿ, ಇಲ್ಲಿನ ಬಡವರಿಗೆ ಕೈಗೆಟುಕುವ ಅಗ್ಗದ ದರದಲ್ಲಿ ಜೀವರಕ್ಷಕ ಔಷಧಗಳನ್ನು ತಯಾರು ಮಾಡುತ್ತಿರುವುದು ಭಾರತದಲ್ಲಿ ಮಾತ್ರ. ಇದು ಈ ದೇಶದ ಹೆಗ್ಗಳಿಕೆ. ಇಲ್ಲಿ 15 ರೂಪಾಯಿಗೆ ಸಿಗುವ ಮಾತ್ರೆ ನೆರೆಯ ಪಾಕಿಸ್ತಾನದಲ್ಲಿ 45 ರೂಪಾಯಿ.  ಅಂದರೆ, ಮೂರು ಪಟ್ಟು ಅಧಿಕ. ಇನ್ನು ಯುರೋಪಿನಲ್ಲಿ ನೂರು ಪಟ್ಟು ಅಧಿಕ.

ಹಾಗಾಗಿ ನೆರೆಯ ಅರಬ್ ರಾಷ್ಟ್ರಗಳಿಂದ, ಪಾಕಿಸ್ತಾನದಿಂದ, ಇರಾಕ್, ಇರಾನ್‌ನಿಂದ ರೋಗಿಗಳು ಚಿಕಿತ್ಸೆಗಾಗಿ ಕೇರಳಕ್ಕೆ, ಯುರೋಪ್ ರಾಷ್ಟಗಳಿಂದ ಮುಂಬೈ, ದೆಹಲಿಗೆ ರೋಗಿಗಳು ಬರುತ್ತಿದ್ದಾರೆ. ನಮ್ಮ ನೆರೆಯ ಚಿಕ್ಕ ರಾಜ್ಯವಾದ ಕೇರಳದಲ್ಲಿ 500 ಕ್ಕೂ ಹೆಚ್ಚು ಸುಸಜ್ಜಿತ ಆಸ್ಪತ್ರೆಗಳಿವೆ. ಈ ಕಾರಣಕ್ಕಾಗಿ ಹೆಲ್ತ್ ಟೂರಿಸಂ ಹೆಸರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಏಜೆಂಟರು ಹುಟ್ಟಿಕೊಂಡು ಭಾರತಕ್ಕೆ ರೋಗಿಗಳನ್ನು ಕರೆತರುತ್ತಿದ್ದಾರೆ.

ಭಾರತದ ವೈದ್ಯಲೋಕದ ಹಾಗೂ ಔಷದ ವಲಯದ ಇಂತಹ ಅವಕಾಶಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ಕಲ್ಲು ಹಾಕಿದ್ದು ಔಷಧ ರಂಗದಲ್ಲಿ ಏಕಸ್ವಾಮ್ಯತೆ ಸಾಧಿಸಲು ಹೆಜ್ಜೆ ಇಟ್ಟಿವೆ. ಇದಕ್ಕೆ ಕಾರಣವಾದದ್ದು 2004 ರಲ್ಲಿ ನಡೆದ ಒಂದು ಘಟನೆ.

ದುಬಾರಿ ವೆಚ್ಚದ ಚಿಕಿತ್ಸೆಯ ಕಾರಣ ಏಡ್ಸ್ ರೋಗಿಗಳು ತೃತೀಯ ಜಗತ್ತಿನ ರಾಷ್ಟ್ರಗಳೂ ಸೇರಿದಂತೆ, ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಸಾಯುತ್ತಿರುವುದನ್ನು ಮನಗಂಡ ವಿಶ್ವ ವ್ಯಾಪಾರ ಸಂಘಟನೆ(W.T.O.) 2004 ರಲ್ಲಿ ತುರ್ತು ಸಭೆ ನಡೆಸಿ ಪೇಟೆಂಟ್ ಸ್ವಾಮ್ಯ ಕುರಿತಂತೆ ಇರುವ ಹಕ್ಕು ಮತ್ತು ಮಾನದಂಡಗಳನ್ನು ಸಡಿಲಿಸಿ, ತುರ್ತು ಸಂದರ್ಭದಲ್ಲಿ ಯಾವುದೇ ರಾಷ್ಟ್ರ ಪೇಟೆಂಟ್ ಹಂಗಿಲ್ಲದೆ ಔಷಧಗಳನ್ನು ತಯಾರಿಸಬಹುದು, ಜೊತೆಗೆ ಔಷದ ತಯಾರಿಕೆಗೆ ಸೌಕರ್ಯಗಳಿಲ್ಲದ ರಾಷ್ಟ್ರಗಳಿಗೆ ಸರಬರಾಜು ಮಾಡಬಹುದು ಎಂದು ಆದೇಶ ಹೊರಡಿಸಿತು.

ಅಲ್ಲಿಯವರೆಗೆ ಒಂದು ತಿಂಗಳಿಗಾಗುವ ಏಡ್ಸ್ ಔಷಧಿಯ ಕಿಟ್ ಒಂದನ್ನು 1 ಲಕ್ಷದ 20 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಕಂಪನಿಗಳಿಗೆ ಪೆಟ್ಟು ನೀಡಿದ ಭಾರತ ಕೇವಲ 8 ಸಾವಿರ ರೂಪಾಯಿಗೆ ಔಷಧ ಕಿಟ್ ಒದಗಿಸಲು ಪ್ರಾರಂಭಿಸಿತು. ವಿಶ್ವ ಸಂಸ್ಥೆಯ ಸಹಾಯ ನಿಧಿ, ಬಿಲ್ ಗೇಟ್ಸ್‌ನ ಫೌಂಡೇಷನ್ ಮುಂತಾದ ಸಂಸ್ಥೆಗಳು ಸಬ್ಸಿಡಿ ರೂಪದಲ್ಲಿ ಈ ಕಿಟ್‌ಗಳನ್ನು ಹಂಚಿದ್ದರಿಂದ ಬಡ ಏಡ್ಸ್ ರೋಗಿಗಳು ಚೇತರಿಸಿಕೊಳ್ಳಲು ಸಾಧ್ಯವಾಯಿತು.

ಇದರಿಂದ ವಿಚಲಿತಗೊಂಡ ಬಹುರಾಷ್ಟ್ರೀಯ ಕಂಪನಿಗಳು ಈಗ ಅಗ್ಗದ ಔಷಧ ತಯಾರು ಮಾಡುವ ಭಾರತಕ್ಕೆ ಲಗ್ಗೆ ಇಟ್ಟಿವೆ. ಮುಕ್ತ ಮಾರುಕಟ್ಟೆಯ ಈ ದಿನಗಳಲ್ಲಿ ನಮ್ಮ ಕೇಂದ್ರ ಸರಕಾರ ತೆಗೆದುಕೊಂಡ ಮೂರ್ಖತನದ ನಿರ್ಧಾರದಿಂದಾಗಿ ಬಡವರು ಅಗ್ಗದ ಜೀವ ರಕ್ಷಕ ಔಷಧಗಳಿಂದ ವಂಚಿತರಾಗಬೇಕಾಗಿದೆ.

ದೇಶದ ಹಲವು ಉದ್ಯಮ ವಲಯಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣದ ಬಗ್ಗೆ ಮಿತಿ ಹೇರಿರುವ ಕೇಂದ್ರ ಸರಕಾರ ಔಷಧ ರಂಗದಲ್ಲಿ ಶೇ.100 ರಷ್ಟು ಹೂಡಿಕೆಗೆ ಅವಕಾಶ ಕಲ್ಪಿಸಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಅಗ್ಗದ ದರದಲ್ಲಿ ಔಷಧ ತಯಾರು ಮಾಡುವ ಎಲ್ಲ ಕಂಪನಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. 2006 ರಿಂದ 2010 ರವರೆಗೆ ದೇಶದ ಬಹುತೇಕ ಕಂಪನಿಗಳು ವಿದೇಶಿ ಕಂಪನಿಗಳ ಪಾಲಾಗಿವೆ.

ದೇಶದ ಪ್ರಸಿದ್ಧ ಕಂಪನಿಗಳಾದ ಮ್ಯಾಟ್ರಿಕ್ ಲ್ಯಾಬ್ ಮೈಲಾನ್ ಕಂಪನಿಗೆ, ಡಾಬರ್ ಫಾರ್ಮ ಪ್ರೆಸ್ನಿಯಸ್ ಕಬಿ ಕಂಪನಿಗೆ, ರ್‍ಯಾನ್‌ಬಾಕ್ಸಿ ಲ್ಯಾಬ್ ಡೈಚಿ ಸ್ಯಾಂಕಿಯೊ ಕಂಪನಿಗೆ, ಶಾಂತಾ ಬಯೋಟೆಕ್ ಸ್ಯಾನೊಪಿ ಅವಂತಿಸ್ ಕಂಪನಿಗೆ, ಆರ್ಚಿಡ್ ಕೆಮಿಕಲ್ಸ್ ಹಾರ್ಸ್‌ಸಿರ ಕಂಪನಿಗೆ, ಪಿರಮಾಲ್ ಹೆಲ್ತ್‌ಕೇರ್ ಸಂಸ್ಥೆ ಅಬೋಟ್ ಕಂಪನಿಗೆ ಮಾರಾಟವಾಗಿವೆ. ಇದರ ಪರಿಣಾಮ ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಔಷಧಿಗಳ ದರ ಶೇ.25 ರಿಂದ ಶೆ.40ರವರೆಗೆ ದುಭಾರಿಯಾಗಿದೆ. ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಂತೆ ಜನಸಾಮಾನ್ಯರಿಗೆ ಔಷಧಗಳ ಬೆಲೆ ಏರಿಕೆ ತಕ್ಷಣ ಗೋಚರಿಸುವುದಿಲ್ಲ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳು ಬಡವರ ಸುಲಿಗೆಗೆ ಸದ್ದಾಗದಂತೆ ಮುಂದಾಗಿವೆ.

ಜಾಗತೀಕರಣದ ಮುದ್ದಿನ ಕೂಸುಗಳಾದ ಈ ಕಂಪನಿಗಳಿಗೆ ಯಾವಾಗಲೂ ಲಾಭವೇ ಮುಖ್ಯ ಗುರಿ. ಜಾಗತೀಕರಣದ ಮೂಲ ಮಂತ್ರವೇ ಲಾಭಕೋರತನವಾಗಿದೆ. ಬಡವರು ನಿರ್ನಾಮವಾದರೆ ಬಡತನ ನಿವಾರಣೆಯಾಗುತ್ತದೆ ಎಂಬುದು ಇದರ ನಂಬಿಕೆ. ಒಂದರ್ಥದಲ್ಲಿ ಇದು ನಿಜವೂ ಹೌದು. ಬಡವರೇ ಇಲ್ಲವಾದ ಮೇಲೆ ಬಡತನದ ಪ್ರಶ್ನೆ ಎಲ್ಲಿಯದು?

ಇನ್ನೊಂದು ಆಘಾತಕಾರಿ ಸಂಗತಿಯೆಂದರೆ ಬಡರಾಷ್ಟ್ರಗಳ ಏಡ್ಸ್ ರೋಗಿಗಳಿಗೆ ಅಗ್ಗದ ಔಷಧ ತಯಾರು ಮಾಡುತ್ತಿರುವ ಭಾರತ ಸರಕಾರದ ವಿರುದ್ಧ ಏಡ್ಸ್ ಔಷಧಿಗೆ ಪೇಟೆಂಟ್ ಹೊಂದಿರುವ ಸ್ವಿಟ್ಜರ್‌ಲೆಂಡ್ ಮೂಲದ ನೋವರ್ಟಿಸ್ ಎಂಬ ಸಂಸ್ಥೆ ಮೊಕದ್ದಮೆ ದಾಖಲಿಸಿದೆ. 2006 ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾದಾಗ ನ್ಯಾಯಾಲಯ ಈ ಕಂಪನಿಯ ಅರ್ಜಿಯನ್ನು ವಜಾ ಮಾಡಿತ್ತು. ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಇದೇ 6-9-2001 ರ ಮಂಗಳವಾರದಿಂದ ವಿಚಾರಣೆ ಪ್ರಾರಂಭವಾಗಿದೆ.

Symptoms of acute HIV infection
ಒಂದು ವೇಳೆ ಸುಪ್ರೀಂ ಕೋರ್ಟ್ ಕಂಪನಿಯ ಪೇಟೆಂಟ್ ಹಕ್ಕನ್ನು ಎತ್ತಿ ಹಿಡಿದರೆ ಜಗತ್ತಿನಾದ್ಯಂತ ಶೇ.80 ರಷ್ಟು ಏಡ್ಸ್ ರೋಗಿಗಳು, ಶೆ.92 ರಷ್ಟು ಹೆಚ್.ಐ.ವಿ. ಪೀಡಿತ ಮಕ್ಕಳ ಬದುಕು ಅಂಧಕಾರದಲ್ಲಿ ಮುಳುಗಿಹೋಗುತ್ತದೆ. ಇಂತಹ ಅಮಾಯಕರ, ಅಸಹಾಯಕರ ಸಾವಿಗೆ ನಾವೆಲ್ಲಾ ಮೂಕ ಸಾಕ್ಷಿಯಾಗ ಬೇಕಾಗುತ್ತದೆ. ಏಕೆಂದರೆ ಈ ನತದೃಷ್ಟರ ಪಾಲಿಗೆ ದುಬಾರಿ ಔಷಧಕ್ಕಿಂತ ಸಾವೇ ಲೇಸು.

ಡಾ. ಎನ್.  ಜಗದೀಶ ಕೊಪ್ಪ

(ಚಿತ್ರಕೃಪೆ: ವಿಕಿಪೀಡಿಯ)

ಜೀವನದಿಗಳ ಸಾವಿನ ಕಥನ – 1

ಡಾ.ಎನ್. ಜಗದೀಶ್ ಕೊಪ್ಪ

ಇದು ಜೀವನದಿಗಳ ಸಾವಿನ ಕಥನವಷ್ಟೇ ಅಲ್ಲ, ಮನುಕುಲದ ಅವಸಾನದ ಕಥನ ಕೂಡ ಹೌದು. ಒಬ್ಬನ ಹಿತಕ್ಕಾಗಿ ಹಲವರ ಬದುಕನ್ನು ಬಲಿಕೊಡುವ ವಿಕೃತ ದುರಂತಗಾಥೆ. ಯಾವ ಜಾಗದಲ್ಲಿ ಮನುಕುಲದ ನಾಗರೀಕತೆ ಜನ್ಮತಾಳಿತೋ, ಅದೇ ಜಾಗದಲ್ಲಿ ಸಂಸ್ಕೃತಿ ಅವಸಾನಗೊಳ್ಳುತ್ತಿರುವ ನೋವಿನ ಕಥೆ.

ಹರಿಯುವ ನೀರಿಗೆಲ್ಲಾ ಗಂಗೆಯೆಂದು ಹೆಸರಿಟ್ಟು ಪೂಜಿಸಿದ ಈ ನೆಲದಲ್ಲಿ ಮಾತೃ ಸ್ವರೂಪದ ನದಿ ಎಂಬಾಕೆಯ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಹಂತ-ಹಂತವಾಗಿ ನಡೆಯುತ್ತಿರುವ ಅತ್ಯಾಚಾರ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಪೃಥ್ವಿಯ ಎಲ್ಲೆಡೆ ಇತಿಹಾಸದುದ್ದಕ್ಕೂ ನಿರಂತರವಾಗಿ ಅಡೆ ತಡೆಯಿಲ್ಲದೆ ಸಾಗಿದ ಅವಿರತ ಅನಾಚಾರ.

ಮನುಷ್ಯನ ಜ್ಞಾನ ವಿಕಾಸವಾದಂತೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಪ್ರಯೋಗಗಳು ಯಶಸ್ವಿಯಾದಂತೆ, ಆಧುನಿಕ ಜಗತ್ತಿನ ಮಾನವನಲ್ಲಿ ಪ್ರಕೃತಿಯನ್ನು ಮಣಿಸಬೇಕೆಂಬ ಅಹಂಕಾರ ತಲೆ ಎತ್ತಿದೆ. ಇದರ ಫಲವಾಗಿ ನಿಸರ್ಗದ ಕೊಡುಗೆಗಳ ಜೊತೆಜೊತೆಯಲ್ಲಿ ಪ್ರಕೃತಿ ವಿಕೋಪಗಳನ್ನೂ ಅವನು ಅನುಭವಿಸಬೇಕಾಗಿದೆ.

ನಾವು ಈ ಭೂಮಿಯ ಒಡೆಯರಲ್ಲ, ಕೇವಲ ವಾರಸುದಾರರು ಮಾತ್ರ. ಅದನ್ನು ರಕ್ಷಿಸಿ ಮುಂದಿನ ತಲೆಮಾರಿಗೂ ಉಳಿಸಬೇಕಾದದ್ದು ನಮ್ಮ ಹೊಣೆ ಎಂಬ ಪ್ರಜ್ಞೆ ವಿಸ್ಮೃತಿಗೆ ಜಾರಿರುವುದೇ ಪರಿಸರದ ದುರಂತಕ್ಕೆ ಮೂಲ ಕಾರಣವಾಗಿದೆ.

ನಾಗರೀಕ ಸಮಾಜದಲ್ಲಿ ಹೆಚ್ಚಿದ ಅನುಭೋಗ ಪ್ರವೃತ್ತಿ ಪರಿಸರದ ಮೇಲಿನ ಪೈಶಾಚಿಕ ದಾಳಿಗೆ ಮೂಲವಾಗಿದ್ದು,  ಕಳೆದ 20 ಲಕ್ಷ ವರ್ಷಗಳಲ್ಲಿ ನಡೆದ ಪರಿಸರದ ಮೇಲಿನ ದಾಳಿಯಿಂದ ಆಗಿದ್ದ ನಷ್ಟದಷ್ಟು ಪ್ರಮಾಣ ಈಗ ಕೇವಲ 50 ವರ್ಷಗಳಲ್ಲಿ ಜರುಗಿದೆ.

ಮನುಷ್ಯ ಕಾಲಿಟ್ಟ ಜಾಗ ಅದು ಅರಣ್ಯವಿರಲಿ, ಪರ್ವತವಿರಲಿ, ನದಿಯಿರಲಿ ಸುರಕ್ಷಿತವಾಗಿಲ್ಲ. ಮನುಕುಲದ ವಾರಸುದಾರರೆಂದು ಹೇಳಿಕೊಳ್ಳುವ ನಾವು ಕಾಲಿಟ್ಟ ಸ್ಥಳಗಳಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯಲಾರದು ಎಂಬ ವಾಸ್ತವಿಕ ಕಟು ಸತ್ಯವನ್ನು ನೆನಪಿಗೆ ತಂದುಕೊಳ್ಳಲಾಗದಷ್ಟು ಅಹಂಕಾರದ ಅಟ್ಟಕ್ಕೆ ದೂಡಲ್ಪಟ್ಟಿದ್ದೇವೆ.

ನಾವು ತಿನ್ನುವ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು, ಬದುಕುವ ಪರಿಸರ ಎಲ್ಲವನ್ನೂ ವಿಷಮಯಗೊಳಿಸಿ, ಭೂಮಿಯನ್ನು ಸುಡುಗಾಡನ್ನಾಗಿ ಮಾಡಿ ನಾಗರೀಕತೆಯ ಸೋಗಿನಲ್ಲಿ ಅನಾಗರೀಕತೆಯ ಬದುಕು ನಡೆಸುತ್ತಿದ್ದೇವೆ.

ಈ ಭೂಮಿಯ ಮೇಲೆ ಪ್ರಾಣಿಗಳ ಜೊತೆ ಜೊತೆಯಲ್ಲಿ ಮನುಷ್ಯ ಜೀವಿ ಅಸ್ತಿತ್ವಕ್ಕೆ ಬಂದಿದ್ದು 20 ಸಾವಿರ ವರ್ಷಗಳ ಹಿಂದೆ. ಪ್ರಾರಂಭಿಕ ದಿನಗಳಲ್ಲಿ ಪ್ರಾಣಿಯಂತೆ ಬದುಕಿದ್ದ ಆತನ ಮೆದುಳೊಳಗೆ ವಿವೇಚನೆ ಮೂಡಿ, ಪ್ರಕೃತಿಯ ಎಲ್ಲಾ ವಿದ್ಯಮಾನಗಳನ್ನು ಅವಲೋಕಿಸುವ ಬುದ್ಧಿ ಮೊಳೆತದ್ದು ಕೇವಲ 10 ಸಾವಿರವರ್ಷಗಳ ಹಿಂದೆ. ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿ, ಗುಡುಗು-ಸಿಡಿಲು, ಮಳೆ-ಗಾಳಿಗೆ ಅಂಜಿ ಗುಹೆಗಳಲ್ಲಿ ವಾಸವಾಗಿದ್ದ ಅವನ ಕೈಗೆ ಕಬ್ಬಿಣದ ಲೋಹ ಯಾವಾಗ ಆಯುಧವಾಗಿ ದೊರೆಯಿತೊ, ಅಂದೇ ನಾಗರೀಕತೆಯ ಅಧ್ಯಾಯ  ಕೂಡ ಪ್ರಾರಂಭವಾಯಿತು.

ಶಿಲಾಯುಗದಿಂದ ಲೋಹಯುಗಕ್ಕೆ ಸ್ಥಿತ್ಯಂತರಗೊಂಡ ಮಾನವನ ಬದುಕಿನಲ್ಲಿ ನಾಗರೀಕತೆಯ ಬೀಜ ಮೊಳಕೆಯೊಡೆದದ್ದೇ ತಡ, ತನ್ನ ಜೊತೆಯಲ್ಲಿ ಬದುಕಿದ್ದ ಸಾಧು ಪ್ರಾಣಿಗಳನ್ನು ಪಳಗಿಸಿ, ಗೆಡ್ಡೆ-ಗೆಣಸುಗಳನ್ನು ಆರಿಸುವ ಬದುಕಿಗೆ ವಿದಾಯ ಹೇಳಿ, ತಾನಿದ್ದ ಜಾಗದಲ್ಲೇ ಉತ್ತಿ, ಬಿತ್ತಿ ಬೆಳೆಯಬಾರದೇಕೆ ಎಂಬ ಪ್ರಶ್ನೆಯ ಮಿಂಚು ಅವನ ತಲೆಯೊಳಗೆ ಸುಳಿದಾಗ ಪ್ರಕೃತಿಯ ಮೇಲಿನ ದಾಳಿಯ ಮೊದಲ ಅಧ್ಯಾಯಕ್ಕೆ ನಾಂದಿಯಾಯಿತು.

ಜಗತ್ತಿನ ಯಾವುದೇ ನಾಗರೀಕತೆಯ ಹುಟ್ಟು ಮತ್ತು ಅವಸಾನಗಳ ಇತಿಹಾಸವನ್ನು ಅವಲೋಕಿಸಿದಾಗ ಎಲ್ಲವೂ ನದಿ ತೀರದಲ್ಲಿಯೇ ಜನಿಸಿ, ಅಲ್ಲೇ ಅವಸಾನಗೊಂಡಿವೆ. ಹಾಗಾಗಿ ನದಿಗಳೆಂದರೆ ಕೇವಲ ನೀರಿನ ಮೂಲವಲ್ಲ, ಅವು ಮನುಕುಲದ ಹುಟ್ಟು-ಸಾವಿನ ತೊಟ್ಟಿಲುಗಳು ಕೂಡ ಹೌದು.

ಐದು ಸಾವಿರ ವರ್ಷಗಳ ಹಿಂದೆ ಟೈಗ್ರಿಸ್ ಮತ್ತು ಯೂಪ್ರಟೀಸ್ ನದಿಗಳ ತೀರದಲ್ಲಿ ಹುಟ್ಟಿದ ಮೆಸಪೊಟೋಮಿಯಾ ನಾಗರೀಕತೆ, ಈಜಿಪ್ಟ್‌ನ ನೈಲ್ ನದಿ ಬಳಿ ಜನಿಸಿದ ಈಜಿಪ್ಟ್ ನಾಗರೀಕತೆ, ದಕ್ಷಿಣ ಅಮೆರಿಕದ ಇಂಕಾ ಮತ್ತು ಮಾಯಾ ನಾಗರೀಕತೆ, ಗ್ರೀಕ್‌ನ ರೋಮ್ ನಾಗರೀಕತೆ, ಭಾರತದ ಸಿಂಧೂ ನದಿ ತೀರದ ಹರಪ್ಪ, ಮೆಹಂಜೋದಾರೊ ನಾಗರೀಕತೆ ಇವುಗಳ ಮೂಲ ಬೇರುಗಳು ಜಗತ್ತಿನ ಹಲವಾರು ನದಿಗಳಲ್ಲಿ ಅಡಕವಾಗಿದೆ. ಮನುಷ್ಯ ಸಂಸ್ಕೃತಿಯ ಜನನಕ್ಕೆ ಕಾರಣವಾದ ಇದೇ ಜೀವ ನದಿಗಳು ಅವನ ಸಂಸ್ಕೃತಿ ಮತ್ತು ನಾಗರೀಕತೆಯ ಅವಸಾನಕ್ಕೂ ಕಾರಣವಾಗಿವೆ. ಈ ಸಂದರ್ಭದಲ್ಲಿ ಲೆವಿಸ್ ಮಮ್‌ಪೆಡ್ ಎಂಬ ಲೇಖಕ ತನ್ನ “ಟೆಕ್ನಿಕ್ ಅಂಡ್ ಸಿವಿಲೈಜೇಷನ್” ಕೃತಿಯಲ್ಲಿ “ಕಬ್ಬಿಣ ಮತ್ತು ಕಲ್ಲಿದ್ದಲಿನ ಆವಿಷ್ಕಾರ ನಾಗರೀಕತೆ ವಿಕಾಸ ಮತ್ತು ವಿನಾಶಕ್ಕೆ ಕಾರಣಮಯ” ಎನ್ನುವ ಮಾತು ಇಲ್ಲಿ ಪ್ರಸ್ತುತ.

ಹುಟ್ಟು, ವಿನಾಶ, ಮರುಹುಟ್ಟುಗಳ ಹೋರಾಟದಲ್ಲಿ ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲಿನ ಅವಲಂಬನೆ ಮತ್ತು ಅದರ ದುರ್ಬಳಕೆ ಕೂಡ ಹೆಚ್ಚಾಯಿತು. ಪ್ರಕೃತಿಯ ಒಂದು ಭಾಗವಾಗಿಯೇ ಬದುಕಿದ ನಮ್ಮ ಮೂಲನಿವಾಸಿಗಳು, ಪರಿಸರಕ್ಕೆ ಧಕ್ಕೆಯಾಗದ ರೀತಿ ಬದುಕಿದ್ದರು. ಇಂದಿಗೂ ಕೂಡ ಅರಣ್ಯವಾಸಿಗಳಲ್ಲಿ ಇಂತಹ ಸಂಸ್ಕೃತಿಯನ್ನು ನಾವು ನೋಡಬಹುದು. ಅವರು ಒಂದು ಮರ ಕಡಿಯುವ ಮುನ್ನ ಅದಕ್ಕೆ ಪ್ರತಿಯಾಗಿ ಎರಡು ಸಸಿ ನೆಡುವ ಸಂಸ್ಕೃತಿ ಹಾಗೂ ಬೇಸಾಯ ಮಾಡಿದ ಭೂಮಿಯನ್ನು ಹಲವಾರು ವರ್ಷ ತೊರೆದು ಬೇರೆಡೆ ಬೇಸಾಯ ಮಾಡುವ ಕ್ರಮವನ್ನು ನಾವು ಆದಿವಾಸಿಗಳ ಬದುಕಿನಲ್ಲಿ ಇಂದೂ ಸಹ ಕಾಣಬಹುದಾಗಿದೆ. ಪ್ರಕೃತಿಯ ಕುರಿತಾದ ಈ ಜ್ಞಾನ ಪರಂಪರೆಯನ್ನು ಅವರಿಗೆ ಯಾರೂ ಧಾರೆ ಎರೆಯಲಿಲ್ಲ. ಪರಿಸರದ ಮಕ್ಕಳಂತೆ ಬದುಕಿದ ಅವರ ಎದೆಯೊಳಗೆ ಈ ಜ್ಞಾನ ತಾನಾಗಿಯೇ ಮೊಳೆತದ್ದು. ಈ ನೆಲದ ನಿಜ ಮಕ್ಕಳನ್ನು ನಾಗರೀಕ ಸೋಗಿನ ನಾವು “ಅನಾಗರೀಕರೆಂದು” ಕರೆಯುವ ಪ್ರವೃತ್ತಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಗ್ರೀಕ್ ದಾರ್ಶನಿಕ ಸಾಕ್ರೆಟೀಸ್ “ಪ್ರಕೃತಿ ಜೀವ ಸಂಕುಲಗಳನ್ನು ಪೋಷಿಸಿಕೊಂಡು ಬಂದಿರುವುದು ಮಾನವನ ಒಳಿತಿಗಾಗಿ ಇದರ ದುರುಪಯೋಗ ಸಲ್ಲದು” ಎಂದಿದ್ದ.

ಎಲ್ಲವೂ ತನ್ನ ಕಾಲಡಿಯಲ್ಲಿರಬೇಕು ಎಂಬ ಭ್ರಮೆಯನ್ನು ಬೆನ್ನತ್ತಿರುವ ಮನುಕುಲ ತಾನು ಸವೆಸಿದ ಹಾದಿಯನ್ನು, ನಡೆದ ಹೆಜ್ಜೆ ಗುರುತುಗಳನ್ನು ಹಿಂತಿರುಗಿ ನೋಡಲಾರದ ಸೊಕ್ಕನ್ನು ಬೆಳೆಸಿಕೊಂಡಿದೆ.

ಲೇಖಕರಾದ ಯಜ್ರೊಹೈಲಾ ಮತ್ತು ರಿಚರ್ಡ್ ಲೇಪಿನ್ಸ್ ತಮ್ಮ “ಹ್ಯೂಮನಿಟಿ ಅಂಡ್ ನೇಚರ್” ಕೃತಿಯಲ್ಲಿ 15ನೇ ಶತಮಾನದಲ್ಲಿ ಉದ್ಭವವಾದ ಊಳಿಗಮಾನ್ಯ ಪದ್ಧತಿ ಮತ್ತು 17ನೇ ಶತಮಾನದಲ್ಲಿ ಜನ್ಮತಾಳಿದ ಬಂಡವಾಳಶಾಹಿ ಯುಗದಿಂದ ಪರಿಸರದ ದುರ್ಬಳಕೆಗೆ ದಾರಿಯಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರಾನ್ಸಿಸ್ ಬೇಕನ್ ಎಂಬಾತ “ಪ್ರಕೃತಿಯನ್ನು ಮಣಿಸಿ ಅದರ ಮೇಲೆ ಪ್ರಭುತ್ವ ಸಾಧಿಸುವುದು ಮಾನವನ ಕರ್ತವ್ಯ. ಇದರಲ್ಲಿ ಅವನ ಭವಿಷ್ಯ ಅಡಗಿದೆ. ಮಾನವನ ಅಭ್ಯದಯಕ್ಕಾಗಿ ಪ್ರಕೃತಿಯನ್ನು ಪಳಗಿಸುವುದು ತಪ್ಪಲ್ಲ” ಎಂದು ವಾದಿಸಿದ್ದಾನೆ.

ಇಂತಹ ಅಪಕ್ವ ಪಾಶ್ಚಿಮಾತ್ಯ ಚಿಂತನೆಯ ಧಾರೆಗಳನ್ನು ನಿರಾಕರಿಸಿದ್ದ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ “ಯೂರೋಪಿಯನ್ನರು ಯಾವ ನೆಲವನ್ನು ಮೆಟ್ಟಲಿ, ಸಾವು ಆ ನೆಲವನ್ನು, ಆ ನೆಲದ ಪರಿಸರವನ್ನು ಮತ್ತು ಅಲ್ಲಿನ ಮೂಲನಿವಾಸಿಗಳನ್ನು ಬೆನ್ನಟ್ಟುತ್ತದೆ” ಎಂದು ಮಾರ್ಮಿಕವಾಗಿ ನುಡಿದಿದ್ದಾನೆ.

ಮನುಕುಲದ ಇಂತಹ ನಿರಂತರ ದಾಳಿಯ ಚರಿತ್ರೆಯನ್ನು ಅವಲೋಕಿಸಿರುವ ಇತಿಹಾಸ ತಜ್ಞ ಎಲಿಂಗ್‌ಟನ್ ಮನುಕುಲದ ಐದು ಶತಮಾನಗಳನ್ನು “ಸಾಮ್ರಾಜ್ಯಶಾಹಿ, ವಸಹಾತುಶಾಹಿ, ಕೈಗಾರಿಕಾಶಾಹಿ, ಬಂಡವಾಳಶಾಹಿ, ಜನಾಂಗಶಾಹಿ ಯುಗ” ಎಂದು ವಿಂಗಡಿಸಿದ್ದು, ಈಗ ಮನುಕುಲ ಹಾಗೂ ಪರಿಸರದ ಉಳಿವಿಗಾಗಿ ಪರಿಸರಶಾಹಿ ಯುಗ ರೂಪುಗೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾನೆ.

ಪಾಶ್ಚಿಮಾತ್ಯ ಪ್ರೇರಿತ ಅಭಿವೃದ್ಧಿ ಹಾಗೂ ಆರ್ಥಿಕ ಸಿದ್ಧಾಂತಗಳು ಇದೀಗ ಮನುಕುಲವನ್ನು ಭೋಗದ ಹುಚ್ಚುಕುದುರಯನ್ನೇರುವಂತೆ ಮಾಡಿವೆ. ಎಲ್ಲವನ್ನೂ ವ್ಯಾಪಾರದ ಸರಕುಗಳಂತೆ ನೋಡುವ ನಮ್ಮ ಆರ್ಥಿಕ ತಪ್ಪು ಪರಿಕಲ್ಪನೆಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಸುತ್ತಿರುವ ಪ್ರಕೃತಿ ಮೇಲಿನ ಪೈಶಾಚಿಕ ದಾಳಿ ವರ್ತಮಾನದ ಜಗತ್ತನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ.

(ಮುಂದುವರಿಯುವುದು)

ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

ಸ್ನೇಹಿತರೆ,

ಹೇಳಬೇಕಾದ ಎಲ್ಲವನ್ನೂ ಈ ಕೆಳಗಿರುವ ಡಾ. ಜಗದೀಶ್ ಕೊಪ್ಪರವರ ಮುನ್ನುಡಿಯೇ ಹೇಳುತ್ತಿದೆ. ಈ ಲೇಖನ ಸರಣಿ ಇನ್ನು ಮುಂದೆ ಪ್ರತಿ ಭಾನುವಾರ “ವರ್ತಮಾನ”ದಲ್ಲಿ ಪ್ರಕಟವಾಗಲಿದೆ. ನಾಳೆ ಮೊದಲ ಕಂತು. ಜಗದೀಶ್‌ರವರು “ವರ್ತಮಾನ”ದ ಪ್ರಯತ್ನಕ್ಕೆ ಕೊಡುತ್ತಿರುವ ಬೆಂಬಲವನ್ನು ಶ್ಲಾಘಿಸುತ್ತ, ಈ ಲೇಖನ ಸರಣಿ ನಮ್ಮೆಲ್ಲರ ಅರಿವನ್ನು ವಿಸ್ತರಿಸಲಿ ಎಂದು ಆಶಿಸುತ್ತೇನೆ.

ರವಿ ಕೃಷ್ಣಾ ರೆಡ್ಡಿ


ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

ಹರಿಯುವ ನೀರಿಗೆ ಗಂಗೆಯೆಂದು ಕೈಯೆತ್ತಿ ಮುಗಿದವರ ನೆಲದ ಸಂಸ್ಕೃತಿಯಿಂದ ಬಂದ ನನ್ನಂತಹವನಿಗೆ ಇಂದಿನ ಅಭಿವೃದ್ಧಿಯ ಅಂಧಯುಗದಲ್ಲಿ ಇಲ್ಲಿನ ಗಾಳಿ, ನೀರು ಮಾರಾಟದ ಸರಕಾಗಿ ಬಿಕರಿಯಾಗುತ್ತಿರುವುದು ನೋವಿನ ಸಂಗತಿ.

ಜಗತ್ತಿನ ಜೀವನದಿಗಳನ್ನು ಅಣೆಕಟ್ಟುಗಳ ಹೆಸರಿನಲ್ಲಿ ಕೊಂದು ಹಾಕುತ್ತಿರುವ ಕಥನವೇ ಈ ” ಜೀವನದಿಗಳ ಸಾವಿನ ಕಥನ”. ಎಂಟು ವರ್ಷಗಳ ಹಿಂದೆ ಡಾಕ್ಟರೇಟ್ ಪದವಿಗಾಗಿ ಜಾಗತೀಕರಣ ಕುರಿತಂತೆ ಅಧ್ಯಯನ ಮಾಡುತಿದ್ದ ಸಮಯದಲ್ಲಿ ಸಿಕ್ಕ ಮಾಹಿತಿಯನ್ನು ನಿಮ್ಮೆದುರು ಅನಾವರಣಗೊಳಿಸುತಿದ್ದೇನೆ.

ಈ ಸಂದರ್ಭದಲ್ಲಿ ಪೆಟ್ರಿಕ್ ಮೆಕ್ಕಲಿಯವರ “ಸೈಲೆನ್ಸ್‌ಡ್ ರಿವರ್‍ಸ್” (ಸ್ಥಬ್ದವಾದ ನದಿಗಳು) ಹಾಗೂ ಮೌಡೆ ಬಾರ್‍ಲೋ ಅವರ “ಬ್ಲೂ ಕವನೆಂಟ್” (ನೀಲಿ ಒಂಪ್ಪಂಧ) ಮತ್ತು “ಬ್ಲೂ ಗೋಲ್ಡ್” (ನೀಲಿ ಚಿನ್ನ) ಕೃತಿಗಳಿಂದ ಪ್ರೇರಣೆ ಪಡೆದು ಈ ಲೇಖನ ಮಾಲೆ ರಚಿಸಿದ್ದೇನೆ.

ಈ ಲೇಖನ ಮಾಲೆಯ ಬಗ್ಗೆ ನಿಮ್ಮ ತಕರಾರುಗಳು ಏನೇ ಇರಲಿ, ನದಿಗಳ ಬಗ್ಗೆ, ನೀರಿನ ಬಗ್ಗೆ ನಿಮ್ಮ ಆಲೋಚನಾ ಕ್ರಮ ಬದಲಾದರೆ, ನನ್ನ ಶ್ರಮ ಸಾರ್ಥಕ.

ಡಾ.ಎನ್.ಜಗದೀಶ ಕೊಪ್ಪ
ಧಾರವಾಡ

ಪೋಸ್ಕೋ ಪಲಾಯನದ ಹಿಂದಿನ ರಾಜಕಾರಣ ಮತ್ತು ಕಾಡುತ್ತಿರುವ ಪ್ರಶ್ನೆಗಳು

ಹು.ಬಾ. ವಡ್ಡಟ್ಟಿ

ಪೋಸ್ಕೋ ಎಂಬ ಸ್ಟೀಲ್ ಉತ್ಪಾದಿಸುವ ದ.ಕೋರಿಯಾದ ಕಂಪನಿ ಗದಗ ಜಿಲ್ಲೆಯ ಹಳ್ಳಿಗುಡಿಯ ರೈತರ ಹೊಲಗಳಲ್ಲಿ ಸ್ಟೀಲ್ ಉತ್ಪಾದನೆ ಮಾಡುವ ಘಟಕವನ್ನು ಸ್ಥಾಪನೆ ಮಾಡುತ್ತಾರೆ ಎನ್ನುವ ಗಾಳಿ ಸುದ್ಧಿ ಮೊದಲು ದಲ್ಲಾಳಿಗಳ ಕಿವಿ ತಲುಪಿದಾಗ ದಲ್ಲಾಳಿಗಷ್ಟು ಖುಷಿ ಪಟ್ಟವರು ಈ ಜಗತ್ತಿನಲ್ಲಿ ಯಾರು ಇರಲಾರರು ಅನಿಸುತ್ತದೆ. ಆದರೆ 2011 ರ ಜೂನ್ ಕೊನೆಯ ವಾರದಲ್ಲಿ ಧಾರವಾಡದ ಕೆಐಎಡಿಬಿ(ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿ)ಯಿಂದ ರೈತರ ಮನೆ ಬಾಗಿಲಿಗೆ “ನಿಮ್ಮ ಭೂಮಿಯನ್ನು ಪೋಸ್ಕೋಗಾಗಿ ವಶಪಡಿಸಿಕೊಳ್ಳಲಾಗುತ್ತದೆ, ಆಕ್ಷೇಪಣೆಗಳು ಇದ್ಧರೆ ಧಾರವಾಡಕ್ಕೆ ಬಂದು ಕೆಐಎಡಿಬಿ ಗೆ ಸಲ್ಲಿಸಬಹುದು,” ಅನ್ನುವ ಸೂಚನೆಯು ತಲೆತಲಾಂತರಿಂದ ಭೂಮಿ ನಂಬಿ ಬದುಕಿರುವ ರೈತಾಪಿ ಜೀವಗಳಿಗೆ ಒಮ್ಮಿ೦ದೊಮ್ಮೆಲೆ ಬರಸಿಡಿಲು ಬಡಿದಂತೆ ಆಗಿ, ರೈತರು ಭೂಮಿ ಜೊತೆ ಹೊಂದಿರುವ ಭಾವನಾತ್ಮಾಕವಾದ ಸಂಬಂಧ ಹಾಗೂ ಭೂಮಿ ಆಧರಿಸಿ ಬದುಕು ಸಾಗಿಸುವುದಕ್ಕೆ ಕೊಡಲಿ ಪೆಟ್ಟುಬೀಳುತ್ತದೆ, ಆದ್ದರಿಂದ ಬದುಕು ಮುಂದೇನು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿತು.

ಅಭಿವೃದ್ದಿಯೆಂಬ ಬಿಸಿಲುಕುದುರೆಯ ನಾಗಾಲೋಟಕ್ಕೆ ಹಳ್ಳಿಗುಡಿ, ಜಂತ್ಲಿಶಿರೂರ್ , ಮೇವುಂಢಿ, ರೈತರು ಭೂಮಿಯನ್ನು ಕೊಡುವದರ ಮೂಲಕ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬಹುದೆಂಬ ಹುಸಿ ಕಲ್ಫನೆಯನ್ನು ಆಡಳಿತಾರೂಢ ಬಿಜೆಪಿಯ ಬೆಂಬಲಿಗರು ಜನರಲ್ಲಿ ಹುಟ್ಟುಹಾಕಿದರು. ಆದರೆ ಪೋಸ್ಕೋ ಆಗಮನದಿಂದ ಇಲ್ಲಿನ ಜನರ ಬದುಕಿಗೆ ನೆಮ್ಮದಿ ಸಿಗುತ್ತಾ ಮೂಲಭೂತ ಕಾಳಜಿಯಿಂದ ಪರಿಸರದ ಮೇಲೆ ಎಂಥ ಪರಿಣಾಮ ಉಂಟಾಗಬಹುದು ಎಂಬ ಆತಂಕ ಪರಿಸರವಾದಿಗಳು, ಪ್ರಗತಿಪರರು, ಮಠಾಧೀಶರದ್ದಾಗಿತ್ತು.ಆದರೂ ಪೋಸ್ಕೋ ಕಂಪನಿಯು ಉಕ್ಕು ಘಟಕ ಸ್ಥಾಪಿಸಲು ಪೂರಕವಾದ ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು, ನೀರು ಸುಲಭವಾಗಿ ಕೈ ಅಳತೆಯಲ್ಲಿ ನಿರಾಯಾಸವಾಗಿ ದೊರಕುವುದು ಎಂದು ರಾಜಕಾರಣಿಗಳು, ದಲ್ಲಾಳಿಗಳು, ಅಭಿವೃದ್ದಿಯ ಮಂತ್ರ ಜಪಿಸುವ ಭೂಮಾಫೀಯಾದ ಕುಳಗಳು, ಪೋಸ್ಕೋ “ಯಜ್ಙ”ಕ್ಕೆ ಹಳ್ಳಿಗುಡಿಯ ರೈತರನ್ನು, ಭೂಮಿಯನ್ನು ಸಮಿತ್ತಾಗಿ ಸಿದ್ದಗೊಳಿಸತೊಡಗಿದರು.

ಇದರ ಹಿಂದಿರುವ ಹುನ್ನಾರ ಎಂದರೆ ಪಕ್ಕದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿ – 63 ಹುಬ್ಬಳ್ಳಿ- ಗುಂಟಕಲ್ಲನ್ನು ಜೊಡಿಸುವ ಬ್ರಾಡಗೇಜ್ ರೈಲು ಅದಕ್ಕಿಂತಲು, ಶಿಂಗಟಾಲುರುಗಳಂತಿರುವ  ಏತ ನೀರಾವರಿಯ ನೀರನ್ನು ಉಕ್ಕು ಘಟಕಕ್ಕೆ ಬಳಸಬಹುದು. ಜೊತೆಗೆ ಉಕ್ಕು ಘಟಕಕ್ಕೆ ಬೇಕಾಗುವ ಆದಿರನ್ನು 15 ಕಿ ಮೀ ಅಂತರದಲ್ಲಿರುವ ಕಪ್ಪತ್ತ ಗುಡ್ಡದಿಂದ ಕೊಳ್ಳೆಹೂಡೆಯಲು ಅನೂಕೂಲವಾಗುತ್ತದೆ ಎನ್ನುವ ದೂ(ದು)ರಾಲೊಚನೆಯೊಂದಿಗೆ ಪೋಸ್ಕೋ ಕಂಪನಿಗೆ, ಭೂಮಿ ಕಬಳಿಸುವ ದುಷ್ಟ ಯೋಜನೆಗೆ, ಸರ್ಕಾರವು ಕೈ ಹಾಕಿತು.

ಸರ್ಕಾರವು 2011 ರ ಮಾರ್ಚನಲ್ಲಿ ಕೈಗಾರಿಕೆಯ ಸಲುವಾಗಿ ಲ್ಯಾಂಡ್ ಬ್ಯಾಂಕ್ ಮಾಡಲು ಭೂಮಿ ಒಳಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಿ ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ಈ ಪ್ರಕಟಣೆಯು ಜನರಿಗೆ, ರೈತರ ಗಮನಕ್ಕೆ ಬಂದಿರಲಿಲ್ಲ. ಈ ಮೊದಲೇ ಗದಗ್ ಜಿಲ್ಲಾ ಉಸ್ತಾವಾರಿ ಸಚಿವಾರಾಗಿದ್ದ ಬಿ.ಶ್ರೀ ರಾಮುಲು ಅವರು ಹಳ್ಳಿಗುಡಿ – ಹಳ್ಳಿಕೇರಿ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲಿಯೇ 2 ಸಾವಿರ ಕೋಟಿ ರೂಪಾಯಿವೆಚ್ಚದಲ್ಲಿ ಉಕ್ಕು ಕಾರ್ಖಾನೆಯನ್ನು  ಸ್ಥಾಪಿಸಲಾಗುತ್ತದೆ  ಎನ್ನುವ ಮುನ್ಸುಚನೆ, 2009 ರಲ್ಲಿಯೇ ನೀಡಿದ್ದರಲ್ಲದೆ, ಉಕ್ಕು ಕಾರ್ಖಾನೆಯು ಗದಗ್ ಜಿಲ್ಲೆಯನ್ನು  ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ, ಗದಗ್ ಜಿಲ್ಲೆಯಲ್ಲಿ ಕಾರ್ಖಾನೆಯಿಂದಾಗಿ  , ಅಭಿವೃದ್ಧಿಯು, ತಾನೇ-ತಾನಾಗಿ ಜನರ ಬದುಕಿನಲ್ಲಿ  ಫಲಗಳನ್ನು ತಂದುಹಾಕುತ್ತದೆ. ಇನ್ನು ಮುಂದೆ ಸುಖದ, ನೆಮ್ಮದಿಯ ದಿನಗಳು ಬರಲಿವೆ ಎನ್ನುವ ಕನಸು ಕಾಣ ತೊಡಗಿದರು.

ಇದಕ್ಕೆ ಪೂರಕವಾಗುವಂತೆ ಎಪ್ರಿಲ್ 15-2011 ರಲ್ಲಿ ಮೊದಲ ನೋಟಿಸ್, ‘1966 ರ ಕಲಂ 28 (2) ಮೇರೆಗೆ ಭೂಮಿಯು ಸ್ವಾಧೀನಪಡಿಸಿಕೊಳ್ಳುವ  ದಿಶೆಯಲ್ಲಿ ರೈತರಿಗೆ  ನಿಮ್ಮ ಆಕ್ಷೇಪಣೆಗಳಿದ್ದರೆ ಲಿಖಿತ ರೂಪದಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಲು,’ ಕೆಐಎಡಿಬಿಯ ಧಾರವಾಡದ ಕಾರ್ಯಾಲಯವು ಗಡುವು ನೀಡಿತ್ತು.

ಜೂನ್ 23-2011 ರಂದು ಧಾರವಾಡ ಕೆಐಎಡಿಬಿಯು ಪುನಃ ರೈತರ ಮನೆಯಬಾಗಿಲಿಗೆ ಬಂದಾಗ, ಆ ನೋಟಿಸ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದಂತೆ ಕೈಗಾರಿಕೆ ಸ್ಥಾಪನೆ ಸಂಬಂಧಿಸಿ, ಹಳ್ಳಿಗುಡಿ ಗ್ರಾಮದ 3382-ಏಕರೆ ಭೂಮಿಯನ್ನು ಪೋಸ್ಕೋ ಇಂಡಿಯ ಪ್ರೈ.ಲಿ. ಕೈಗಾರಿಕೆ ಸ್ಥಾಪನೆಗೆ ಬೇಕಾಗಿದೆ ಅದರ ಸಲುವಾಗಿ ಆಪೇಕ್ಷೇಣೆಗಳನ್ನು ಸಲ್ಲಿಸಲು, ರೈತರಿಗೆ 10 ದಿನಗಳ ಗಡುವು ನೀಡಿತು. ರೈತರು, ಮಠಾಧೀಶರು, ಪ್ರಗತಿಪರ ಸಂಘಟನೆ, ರೈತರ ಸಂಘಟನೆಯವರು , ಐತಿಹಾಸಿಕ ಹೋರಾಟಕ್ಕೆ ಸಜ್ಜಾಗತೊಡಗಿದರು.  ಪೋಸ್ಕೋ  ಉಕ್ಕು ಕಾರ್ಖಾನೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಕುರಿತು ಹಲವು ಸುದ್ದಿಗಳು ಪ್ರಕಟವಾದವು.

ರೈತರು ಸರ್ಕಾರಕ್ಕೆ ಭೂಮಿ ಕೊಡದಿರುವ ಗಟ್ಟಿ ನಿರ್ಧಾರಕ್ಕೆ  ಮಠಾಧೀಶರು, ಪ್ರಗತಿಪರರು, ಮಾಧ್ಯಮದವರು ಬೆಂಬಲವಾಗಿ  ನಿಂತರು. ಹೋರಾಟವು ಮುಂದುವರೆಯಲು ಹೇಗೆ ಸಾಧ್ಯವಾಯಿತು? ಜೊತೆಗೆ ಅಭಿವೃದ್ದಿಯ ಟೊಳ್ಳು-ಗಟ್ಟಿಯು ಜನರ, ರೈತರ, ಬದುಕಿನೊಂದಿಗೆ ಹೇಗೆ ಚೆಲ್ಲಾಟವಾಡುತ್ತಿದೆ ಎನ್ನುವ ಮುಂದಿರುವ ಪ್ರಶ್ನೆಗಳನ್ನು ಇಟ್ಟುಕೊ0ಡು ಮುಂದಿನ ಭಾಗದಲ್ಲಿ ನೊಡೋಣ.

  • ಗದಗ ಜಿಲ್ಲೆಯ ಅಭಿವೃದ್ದಿಗೆ ಪೋಸ್ಕೋ ಬೇಕೆ?
  • ಕೃಷಿ ಆಧಾರಿತ ಕೈಗಾರಿಕೆಗಳು, ಅನುಕೂಲಕರವೇ?
  • ಪೋಸ್ಕೋದಿಂದ ಪರಿಸರ – ಕಪ್ಪತಗುಡ್ಡದ ಮೇಲಾಗುವ ದುಷ್ಟಪರಿಣಾಮಗಳು ಏನು?
  • ಕಳೆದ 50 ವರ್ಷಗಳಿಂದ ಕೈಗಾರಿಕೆ ಏಕೆ ಸ್ಥಾಪನೆ ಆಗಿರಲಿಲ್ಲ?
  • ಸಿಂಗಾಟಲೂರು ಏತ ನೀರಾವರಿ ಈ ಭಾಗದಲ್ಲಿ ಕನಿಷ್ಟ ರೈತರ ಬದುಕಿಗೆ ಆಸರೆಯಾಗಲಿದೆಯೇ?
  • ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸರ್ಕಾರ ಹಣವನ್ನು ರೈತರಿಗೆ ನೀಡಿದರೆ ರೈತರ ಬದುಕಿನ ಪಯಣ ಯಾವ ದಿಕ್ಕಿನ ಕಡೆಗೆ?
  • ಭೂಸ್ವಾಧೀನ, “ಹಣ ಕೊಡುವ-ತೆಗೆದುಕೊಳ್ಳುವ” ಪ್ರಕ್ರಿಯೆಗಷ್ಟೆ ಸೀಮಿತವೆ?
  • ಪೋಸ್ಕೋ ಕಂಪನಿಯಿಂದ ಗದಗ್ ಜಿಲ್ಲೆಯಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ?
  • ಭೂಸ್ವಾಧೀನದಿಂದ ಭೂಹೀನವಾಗುವ ರೈತರ ಕುಟುಂಬಗಳು ಎಷ್ಟು? ಅವರು ಬದುಕಿನ ನೆಲೆ ಕಳೆದುಕೊಂಡಾಗ ಪರ್ಯಾಯ ಉದ್ಯೋಗ ಕಲ್ಪಿಸುವರು ಯಾರು?
  • ಪೋಸ್ಕೋಗೆ ಕೊಡುತ್ತಿರುವ ರೈತರ ಭೂಮಿಯು ಕೃಷಿ ಯೋಗ್ಯವಲ್ಲದ ಬಂಜರು, ಭೂಮಿ – ಕೈಗಾರಿಕೆ ಸಚಿವ ನಿರಾಣಿಯವರ ಹೇಳಿಕೆ.
  • ಪೋಸ್ಕೋಗೆ ತುಂಗಾಭದ್ರೆಯಿಂದ ನೀರು ಕೊಡದೇ, ಆಲಮಟ್ಟಿದಿಂದ ನೀರು ಕೊಡುತ್ತೆವೆ – ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ.

(ಮುಂದುವರೆಯುವುದು…)

ಚಿತ್ರಗಳು: ಲೇಖಕರವು