Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಕಥೆ : ಕತೆಗಾರನೇ ಕಥೆಯಾದ ಪ್ರಸಂಗ


-ಡಾ.ಎಸ್.ಬಿ. ಜೋಗುರ


ಬಣ್ಣ ಮಾಸಿದ ಕರೀ ರಟ್ಟಿನ ಟೊಪ್ಪಿಗಿ, ಅದರ ಸುತ್ತಲೂ ಹಿಮಾಲಯ ಪರ್ವತ ಶ್ರೇಣಿಗಳನ್ನ ಬಿಡಿಸಿರೋ ಥರಾ ಕಾಣೋ ಒಣಗಿದ ಬೆವರಿನ ಗುರುತು, ಕಮಟುಗಟ್ಟಿದ ಮಂಜರಪಟ್ಟ ಅಂಗಿಯ ಕಾಲರು, ಇಲಿಯೊಂದು ಹಲ್ಲು ಮಸೆಯಲು ಕತ್ತರಿಸಿದಂತೆ ಕಾಣೊ ಅಂಗಿಯ ಕೈ ಕಪ್ಪು, ಹೊಗೆ ಸುತ್ತಿದಂತೆ ಕಾಣೊ ದೋತರ, ಮತ್ತೆ ಮತ್ತೆ ಮೊಳೆ ಜಡಿಸಿಕೊಂಡ ಮೆಟ್ಟುಗಳು, ರಣಹದ್ದಿನಂಥಾ ಮೂಗು, ಗುಳಿ ಬಿದ್ದ ಕಣ್ಣು, ಹೊಂದಾಣಿಕೆಯಿಲ್ಲದ ಹಲ್ಲು, ನೆರಿಗೆಗಳನ್ನೇ ಹೊತ್ತುಗೊಂಡಿರೋ ಮುಖ, ಪೊರೆಬಿಡುವ ಮುದಿ ಗೋಧಿ ಬಣ್ಣದ ನಾಗರಹಾವಿನಂಥಿರೋ ಈ ಮನುಷ್ಯನಿಗೀಗ ಅಜಮಾಸು ತೊಂಬತ್ತರ ಆಸುಪಾಸು.

ಹನುಮಂತ ದೇವರ ಕಟ್ಟೆಯ ಮೇಲೆ ಕುಂತು, ಮುಷ್ಟಿ ಮಾಡಿ, ಅದರ ನಡುವ ಗಚ್ಯಾಗಿ ಬೀಡಿ ಹಿಡದು, ಕಿರುಬೆರಳು ಮತ್ತು ಹೆಬ್ಬರಳನ್ನು ನಿಮಿರಿಸಿ ಉಷ್..! ಅಂತ ದಮ್ಮು ಎಳದು ಬೆರಳಿಂದ ಚಟ್ ಚಟ್… ಅಂತ ಚಿಟಕೀ ಹಾರಸಿ ಬೂದಿ ಉದುರಿಸಿ, ಮೂಗಿಂದ ಹೊಗಿ ಬಿಡೋ ಆ ಹಿರಿ ಮನುಷ್ಯಾನೇ ಕತೀ ಹೇಳೋ ತಿಪ್ಪಣ್ಣ. ಬರೀ ನನಗ ಮಾತ್ರ ಕತೀ ತಿಪ್ಪಣ್ಣ ಅಲ್ಲ, ಆ ಮನಿಯೊಳಗಿನ ನಾಕಿಪ್ಪತ್ತು ಮಂದಿ, ಮಕ್ಕಳು, ಮೊಮ್ಮಕ್ಕಳಿಗೂ ಅಂವಾ ಕತಿ ತಿಪ್ಪಣ್ಣನೇ.. ನನಗ ತಿಳುವಳಿಕೆ ಬಂದ ದಿನದಿಂದ ಅವನ್ನ ನಾ ನೋಡಾಕತ್ತೀನಿ ಅಂವಾ ಅವಾಗೂ ಹಂಗೇ ಇದ್ದ, ಈಗಲೂ ಹಂಗೇ ಅದಾನ. ಫ್ಲರಕ್ ಏನಂದರ ಅವಾಗ ಅಂವಗ ಕಣ್ಣ ನಿಚ್ಚಳಾಗಿ ಕಾಣತಿದ್ವು ಈಗ ಕಾಣೂದಿಲ್ಲ ಅಷ್ಟೇ. ನಾ ಮುಂದ ನಿಂತರೂ ನನ್ನ ಗುರುತು ಅಂವಗ ಸಿಗುವಂಗಿಲ್ಲ. ಅವನ ಮಗಾ ಅಲ್ಲೇ ಇದ್ದರೂ ಅವನ ಎದುರಲ್ಲೇ ಅವನ್ನ ಹಿಗ್ಗಾ ಮುಗ್ಗಾ ಬೈದು, ’ಅದು ಬಾಳ ಖೋಡಿ ಐತಿ, ಅದರ ಮುಂದ ನಿಮ್ಮಪ್ಪ ಹಿಂಗ ಬೈಯಾಕತ್ತಿದ್ದ ಅಂತ ಹೇಳಬ್ಯಾಡ್ರಿ’ ಅಂದಿದ್ದು ಕೇಳಿ ಅವನ ಮಗ ಮಲಕಾಜಿಗೆ ನಗು ತಡಿಲಾರದೇ ’ಆಯ್ತು ತಗೋರಪಾ ಹೇಳೂವಂಗಿಲ್ಲ’ ಅನ್ಕೊಂತ ನಡದಿದ್ದ. ಈ ತಿಪ್ಪಣ್ಣನಿಗಿಂತ ಸಣ್ಣವರು ಅವನ ಬೆನ್ನ ಮ್ಯಾಲ ಮತ್ತ ಮೂರು ಮಂದಿ ಇದ್ದರು. ಅವರೆಲ್ಲಾ ಸತ್ತು ಸ್ವರ್ಗ ಸೇರದ ಮ್ಯಾಲೂ ಈ ತಿಪ್ಪಣ್ಣ ಇನ್ನೂ ಭೇಷ ಗಟ್ ಮುಟ್ಟಿದ್ದ.  ಆ ಚೋಳಗಿಯವರ ಮನಿತನದೊಳಗ ಇಂವಾ ಅಂದ್ರ ಹಳೀ ಬೇರ ಇದ್ದಂಗ ಆಗಿತ್ತು. ತಿಪ್ಪಣ್ಣನ್ನ ಅವನ ಮಕ್ಕಳು ಸೈತ ಕತೀ ತಿಪ್ಪಣ್ಣ ಅಂತೇ ಕರೀತಿದ್ರು. ಅಷ್ಟೇ ಅಲ್ಲ ಓಣ್ಯಾಗಿನ ಚುಕ್ಕೋಳು ಸೈತ ಅವನ್ನ ಹಂಗೇ ಕರೀತಿದ್ದರು.

ಚೋಳಗಿ ಲಕ್ಷ್ಮಣನ ಮನೆತನದೊಳಗ ಐದು ಮಕ್ಕಳು. ಅದರಾಗ ನಾಕು ಗಂಡು, ಒಂದು ಹೆಣ್ಣು. ಈ ಗಂಡು ಮಕ್ಕಳ ಪೈಕಿ ಎಲ್ಲರಿಗಿಂತ ಹಿರೀ ಮನುಷ್ಯಾನೇ ಈ ತಿಪ್ಪಣ್ಣ ಅರ್ತಾರ್ಥ ಕತೀ ತಿಪ್ಪಣ್ಣ. ಇವನ ತಮ್ಮದೇರು ತೀರಿ ಹೋಗಿ ಹತ್ತಿಪ್ಪತ್ತು ವರ್ಷ ಆಗಲಿಕ್ಕ ಬಂದರೂ ಈ ತಿಪ್ಪಣ್ಣ ಮಾತ್ರ ಇನ್ನೂ ಭೇಷ ಇದ್ದ. ಅದಕ್ಕ ಕಾರಣ ಅಂವಾ ಯಾವದರ ಬಗ್ಗೆನೂ ತಲೀ ಕೆಡಸಕೋತಿರಲಿಲ್ಲ ಅನ್ನೂದು ಆ ಓಣಿಯೊಳಗಿನ ಮಂದೀ ಮಾತು. ಅದು ಖರೆನೂ ಇತ್ತು. ನನಗ ತಿಳದಂಗ ತಿಪ್ಪಣ್ಣ ಮೈ ಬಗ್ಗಿಸಿದ್ದು ಬಾಳ ಕಡಿಮಿ. ಮುಂಜಮುಂಜಾನೆ ಎದ್ದು ನಾಕು ಬಿಸಿ ರೊಟ್ಟಿ ಕತ್ತರಿಸಿ, ಬಯಲಿಗಿ ಬಿದ್ದ ಅಂದರ ಮುಗೀತು ಅಲ್ಲೀಟು ಕುಂತೆ, ಕತಿ ಹೇಳದೆ. ಇಲ್ಲೀಟು ಕುಂತೆ, ಕತೀ ಹೆಳದೆ. ಅನ್ಕೊಂಡು ದೇಶಾವರಿ ಮಾತಾಡಿ ಮತ್ತ ಹೊಟ್ಟಿ ಕವ್ ಕವ್….  ಅಂದಾಗಲೇ ಮನಿಕಡಿ ಹಾಯ್ತಿದ್ದ. ತಿಪ್ಪಣ್ಣನ ಹೆಂಡತಿ ಗುರನಿಂಗವ್ವ ಮತ್ತು ಮಕ್ಕಳೇ ಕಟಿಬಿಟಿ ಮಾಡಿ ಇವನ ಹೊಟ್ಟೀ ತುಂಬಬೇಕು. ಹೀಂಗ ಇದ್ದ ಮ್ಯಾಲೂ ತಿಪ್ಪಣ್ಣ ಮತ್ತ ಮತ್ತ ಅವರ ಮ್ಯಾಲೇ ಜಿಗದಾಡೂದು ಇತ್ತು. ಮಾತೆತ್ತದರ. ’ಮಕ್ಕಳೇ ಈ ಹೊಲ ಮನಿ ನಂದು, ನನಗೇನು ಪುಗ್ಸಟ್ಟೆ ಕೂಳ ಹಾಕ್ತೀರೆನೂ..?’ ಅಂತಿದ್ದ.

ತಿಪ್ಪಣ್ಣನ ಅಪ್ಪ ಲಕ್ಷ್ಮಣ ಚುಲೋ ಆಸ್ತಿ ಮಾಡಿದ್ದ. ನಾಲ್ಕೂ ಮಕ್ಕಳಿಗಿ ತಲಾಗ ಐದೈದು ಎಕರೆ ಜಮೀನ ಬಂದಿದ್ವು. ದುಡದರ ಕಡಿಮಿ ಇರಲಿಲ್ಲ. ಆದರ ಈ ತಿಪ್ಪಣ್ಣ ಹೊಲದಕಡಿ ಹಾಯೂದು ವರ್ಷದಾಗ ಒಂದೇ ಸಾರಿ ಆಗಿತ್ತು. ಅದೂ ಮಾವಿನ ಗಿಡಕ ಹೂವ ಆಗ್ಯಾವೋ, ಇಲ್ಲೋ ಅಂತ ನೋಡಾಕ. ಹಂಗೇನಾರೇ ಹೂ ಭರ್ಚಕ್ ಅಗ್ಯಾವ ಅಂದ್ರ ಅವನ್ನ ಭಾಗವಾನರ ನಬೀಸಾಬಗ ಗುತ್ತಗಿ ಕೊಟ್ಟು ಆ ರೊಕ್ಕ ಖಾಲೀ ಆಗೂಮಟ ಮನಿಕಡಿ ಹಾಯ್ತಿರಲಿಲ್ಲ. ಅವಾಗ ತಿಪ್ಪಣ್ಣ ಪಕ್ಕಾ ಕತೆಗಾರನೇ.. ಕುಡದು ಬಂದು ಓಣ್ಯಾಗಿನ ಎಲ್ಲಾ ಚುಕ್ಕೋಳಗಿ ಸುತ್ತಾ ಕೂಡಸಕೊಂಡು ಅವುಕ್ಕ ಎರಡೆರಡು ಕಾಳು ಹುರಕಡ್ಲಿ ಕೊಟ್ಟು ನಶೆ ಇಳಿಯೂಮಟ ಕುತಗೊಂಡು ಕತಿ ಹೇಳತ್ತಿದ್ದ. ಇಂಥಾ ತಿಪ್ಪಣ್ಣ ಈಗ ಇದ್ದಕ್ಕಿದ್ದಂಗ ನನಗ ನೆನಪಾಗಲಿಕ್ಕ ಕಾರಣಿತ್ತು…

  *******************

ಅವತ್ತೊಂದಿನ ಕಾನ್ವೆಂಟ್‍ನಲ್ಲಿ ಮೂರನೇ ಕ್ಲಾಸಲ್ಲಿ ಓದೋ ನನ್ನ ಮಗ, ಹಗೂರಕ ನಾ ಕುಳಿತ ಕುರ್ಚಿ ಬಾಜೂ ಬಂದು, ’ಪಪ್ಪಾ.. ಒಂದು ಕತಿ ಹೇಳು’ ಅಂದ. ಆದರೆ… ಟರ್ಮ್ಸ್ ಆಂಡ್ ಕಂಡಿಶನ್ಸ್ ಅಪ್ಲೈ ಅನ್ನೋ ಥರಾ ಕರಾರು ಹಾಕಾಕ ಶುರು ಮಾಡದ. ಅವನ ಕಂಡೀಶನ್ನು ಹೀಗಿದ್ವು.

’ನೋಡು, ನಂಗಂತೂ ಕಾಗಕ್ಕ ಗುಬ್ಬಕ್ಕನ ಕತೀ ಬ್ಯಾಡ..

ದೆವ್ವ ಭೂತದ್ದೂ ಬ್ಯಾಡ..

ಅಜ್ಜಿ -ಮೊಮ್ಮಗನ ಕತೀನೂ ಬ್ಯಾಡ..

ಬಂಗಾರದ ಕೂದಲು.. ಬೆಳ್ಳೀ ಅರಮನಿ ಕತೀನೂ ಬ್ಯಾಡ..

ಮಂತ್ರದ ಬಡಿಗಿ, ದನಾ ಕಾಯೋ ಹುಡುಗನೂ ಬ್ಯಾಡ..

ನರಿ ಮತ್ತ ದ್ರಾಕ್ಷಿದೂ ಬ್ಯಾಡ.’

ಇವೆಲ್ಲವುಗಳ ಹಂಗು ಹರಿದು, ಅಂವಾ ದಿನ್ನಾ ಪೋಗೋ ಚ್ಯಾನೆಲ್‍ದಲ್ಲಿ ನೋಡೋ ’ಮಿ. ಬೀನ್ ಕಥಿ ಬೇಕು’ ಅನ್ನೋ ಕಂಡೀಶನ್ನು. ಹಿಂಗ ಕರಾರ್ ಮಾಡಿ, ತಕರಾರು ತಗದು ಕಥಿ ಕೇಳೋ ಜಮಾನಾದಾಗಿರೋ ನನ್ನ ಮಗಾ, ನನ್ನನ್ನ ಇದ್ದಕ್ಕಿದ್ದಂಗ ತನ್ನ ವಯಸ್ಸಿಗಿ ಕರಕೊಂಡು ಹೋಗಿದ್ದ……

**********************

ನಾ ಅವಾಗಿನ್ನೂ ನಾಕನೆತ್ತೆ ಇದ್ದಿರಬೇಕು. ಎಡವಿ ಬಿದ್ರ ಮನಿ ಬಾಜೂನೇ ಸಾಲಿ. ಸಾಲೀಗಿ ಹೋಗೂದಂದ್ರ ನನಗ ಬಾಳ ಬಿರಿ ಬರತಿತ್ತು, ಸಾಲಿ ಅಂದಕೂಡಲೇ ಅಂಗಾಲಿಗೆಲ್ಲಾ ಮುಳ್ಳ ನಟ್ಟಂಗ ಆಗತ್ತಿತ್ತು. ಗಣಿತ ಕಲಸೋ ಕುಲ್ಕರ್ಣೆ ಮಾಸ್ತರ ನೋಡದರ ಹಸಿಹಾಗಲಕಾಯಿ ತಿಂದಂಗ ಆಗ್ತಿತ್ತು. ಅಪ್ಪ ಪೆಪ್ಪರಮಿಂಟ್ ತಿನ್ನಲಿಕ್ಕ ಹತ್ತು ಪೈಸೆ ಕೊಟ್ಟು, ಪುಸಲಾಯಿಸಿ ಕಳಸತ್ತಿದ್ದ. ಅಟ್ಟಾಗಿನೂ ನಾ ಮತ್ತ ರಿಪಿ ರಿಪಿ ಮಾಡದರ, ನನ್ನ ರಟ್ಟಿ ಹಿಡಕೊಂಡು, ದರದರ ಎಳಕೊಂಡು ಹೋಗಿ ಬಿಟ್ಟು ಬರತಿದ್ದ. ಅಟ್ಟೇ ಅಲ್ಲ ಹೊಳ್ಳಿ ಬರೂಮುಂದ ಮಾಸ್ತರಗ ಒಂದು ಮಾತ ಹೇಳಿ ಬರತಿದ್ದ. ’ಸರ್, ಅಂವಾ ಏನಾರೆ ಕಂಯಕ್… ಅಂದ್ರ ಝಾಡಿಸಿ ಮುಕುಳಿ ಮ್ಯಾಲ ಒದೀರಿ, ಜರ್ ಕರತ್ ಕೇಳಲಿಲ್ಲ ಅಂದ್ರ ನನಗ ಹೇಳ್ರಿ ಕಾಲೇ ಮುರಿತೀನಿ’ ಅಂತ ಖಡಕ್ ಆಗಿ ತಾಕೀತ್ ಮಾಡಿ ಬರತಿದ್ದ. ನನಗ ಕಲಸೋ ಸರ್‌ಗಳು ನನಗ ಇಕಾಡಿದಿಕಾಡಿ ಮುಟ್ಟಲಿಕ್ಕೇ ಹೆದರತ್ತಿದ್ದರು. ಅದ್ಯಾಕ ಹಂಗ ಅನ್ನೂದು ನನಗೂ ಗೊತ್ತಿರಲಿಲ್ಲ. ’ಯವ್ವಾ ಅದ್ಯಾಕ ಹಂಗ? ನೀ ಹೇಳದರೆ ಅಟ್ಟೇ ನಾ ಸಾಲೀಗಿ ಹೋಗಂವ’ ಅಂತ ಅವ್ವಗ ಕಿರಕಿರಿ ಮಾಡದಮ್ಯಾಲ ಅಕಿ ನಕ್ಕೋಂತ ’ನೀ ಒಂದನೆತ್ತೆ ಇದ್ದಾಗ ಒಂದಿನ ನಾಯಕ್ ಮಾಸ್ತರು ಬೆನ್ನೀಗಿ ರಿಮಕ್..! ಅಂತ ಗುದ್ದದರು. ನೀ ಚಡ್ಯಾಗೇ ತೆಕ್ಕಿಗಟ್ಟಲೇ ಹೇತಿದ್ದಿ…! ನಿನಗ ನೆನಪಿಲ್ಲ, ನಾ ಹೋಗಿ ಬಳದು ಬಂದೀನಿ’ ಅಂದದ್ದೇ ನನ್ನ ತಲೆಯೊಳಗ ಪಕ್ ಅಂತ ಲೈಟ್ ಹತ್ತದಂಗ ಆಯಿತು. ಅದ್ಕೇ ಸರ್ ಈಗ ಹೊಡದರ ಮತ್ತೆಲ್ಲಿ ಇಂವಾ ಚಡ್ಯಾಗೇ. ಅನ್ನೋ ಕಾರಣಕ್ಕ ನನಗ ಹೊಡಿತಿರಲಿಕ್ಕಿಲ್ಲ ಅಂತ ತಿಳಕೊಂಡೆ. ಅವತ್ತೊಂದಿನ ನನ್ನದೇ ಜೋಡಿ ಓದೋ ಬಡಿಗೇರ ಈರಣ್ಣನ ಸೀಸ್ ಪೆನ್ಸಿಲ್ ಕದ್ದರೂ ನಮ್ಮ ಸರ್ ಗುದ್ದದೆನೇ ’ಇನ್ನೊಂದ್ಸಾರಿ ಹಿಂಗ ಮಾಡದರ ನಿಮ್ಮ ಅಪ್ಪನ ಮುಂದೇ ಹೇಳತೀನಿ ನೋಡು’ ಅಂದಾಗಂತೂ ನನಗ ಹೊಡೀದೇ ಇರಲಿಕ್ಕ ಖರೆ ಕಾರಣ ಸಿಕ್ಕಿತ್ತು.

          ***********************

ನನಗೂ ಮೊದಲಿಂದಲೂ ಕತಿ ಕೇಳೂದು ಅಂದ್ರ ಬಾಳ ಮಜಾ ಅನಿಸುತ್ತಿತ್ತು. ’ಹುಂ’ ಅನ್ನಲಿಕ್ಕ ನಾ ಎಂದೂ ಹೈರಾಣಾದಂವಲ್ಲ. ಸಾಲಿ ಸೂಟಿ ಬಿಟ್ಟಿದ್ದೇ ಹೊಲದ ಕಡಿ ಹೋಗೂದು ಮಾಮೂಲು. ನಮ್ಮ ಹೊಲದಾಗ ಈ ತಿಪ್ಪಣ್ಣ ಅನ್ನವನು ಕೆಲಸಕ್ಕ ಇದ್ದ. ಅವನ ಬುತ್ತಿ ತಗೊಂಡು ನಾನು ಮತ್ತ ನಮ್ಮ ದೊಡ್ದಪ್ಪನ ಮಗಾ ಹೊಲದ ಕಡಿ ಹೋಗತ್ತಿದ್ದಿವಿ. ಈ ತಿಪ್ಪಣ್ಣ ಅಂದ್ರ ನಮ್ಮ ಪಾಲಿಗಿ ನಡದಾಡೊ ಪಂಚತಂತ್ರದ ಕತಿ ಪುಸ್ತಕ ಇದ್ದಂಗ. ಅಂವಾ ಊಟಾ ಮಾಡೂ ಮಟಾ ಅಷ್ಟೇ ನಾವು ಸುಮ್ಮನಿರತಿದ್ವಿ. ಅವನ ಊಟ ಮುಗದಿದ್ದೇ ‘ ತಿಪ್ಪಣ್ಣ ಒಂದು ಕತಿ ಹೇಳೊ’ ಅಂತ ಬೆನ್ನ ಬೀಳತಿದ್ವಿ. ’ಮಾಲಕರ, ಈಗ ಬ್ಯಾಡ್ರಿ ದೊಡ್ಡ ಸಾವುಕಾರು ಬೈತಾರ, ಕೆಲಸಾ ಬಿಟ್ಟು ಕತೀ ಹೇಳಾಕತ್ತೀಯೇನೋ ಬೋಳಿ ಮಗನ ಅಂತಾ ಅವತ್ತು ಬೈದಿದ್ದು ನಿಮಗ ನೆನಪೈತೋ.. ಇಲ್ಲೋ? ಬೇಕಾದ್ರ ಆಮ್ಯಾಲ ಹೇಳತೀನಿ. ಈಗ ಹ್ಯಾಂಗೂ ಬಾರಾ, ಸಾಡೇ ಬಾರಾ ಆಗಾಕ ಬಂದೈತಿ. ಸಾವುಕಾರ ಈಗ ಗೆಳೆ ಬಿಟ್ಟು ಊಟಾ ಮಾಡಿ ಮಲಗತಾರ, ಅವಾಗ ಗ್ಯಾರಂಟೀ ಹೇಳ್ತೀನಿ’ ಅಂತಿದ್ದ. ಅಂವಾ ಓದ್ದಂವ ಅಲ್ಲ, ಬರದಂವ ಅಲ್ಲ ಆದ್ರ ಬಾಳ ಚುಲೋ ಚುಲೋ ಕತಿ ಅವನ ನಾಲಗಿ ತುದಿ ಮ್ಯಾಲ ಒಂದು ಸವನ ಹರದಾಡತ್ತಿದ್ವು. ಹಂಗಾಗೇ ಅಂವಗ ಕತೀ ತಿಪ್ಪಣ್ಣ ಅಂತ ಹೆಸರ ಬಿದ್ದಿತ್ತು. ಅಪ್ಪ ಸಿಟ್ಟೀಲೇ ಅವನ್ನ ತಿಪಲದ ತಿಪ್ಯಾ ಅಂತ ಕರೀತಿದ್ದ.

ಮಲತಾಯಿ ಮಲಮಕ್ಕಳಿಗೆ ತ್ರಾಸು ಕೊಡೋ ಕತಿ..

ಜಾದೂ ಕೋಲು ತೊಗೋಂಡು ಎಮ್ಮೀ ಕೋಡಿಗಿ ಮುಟ್ಟಿದ್ದೇ ಬೇಕಂದಿದ್ದು ಪಟ್ಟಂತ ಸಿಗೋ ಕತಿ..

ಮೂರು ಕೋಡಿನ ಆಕಳ ಕತಿ..

ಹಾವು ಮತ್ತು ಮುಂಗಸಿ ಕತಿ..

ದೇವರು ಮತ್ತು ಕುಡ್ಡ ಭಕ್ತನ ಕತಿ..

ಬಂಗಾರದ ಕೊಡ್ಲಿ ಕತಿ..

ಹಿಂಗ ಒಂದೋ.. ಎರಡೊ .. ನೂರಾರು ಕತಿ ಅವನ ನೆನಪಿನ ಗಂಟಿನೊಳಗ ಕಾಲಮುರಕೊಂಡು ಅಂಗಾತ ಬಿದಿದ್ವು. ನನ್ನ ವಯಸ್ಸಿನ ಚುಕ್ಕೊಳಿಗೆಲ್ಲಾ ತಿಪ್ಪಣ್ಣ ಅಂದ್ರ ಬಾಳ ಜೀವ. ಅಂವಾ ಒಂದೇ ಒಂದು ದಿನ ಕತಿ ಹೇಳಾಕ ಬೇಜಾರ ಮಾಡಕೊಂಡಂವ ಅಲ್ಲ. ಆದರ ಅಂವಗ  ತೂಕಡಕಿಯೊಳಗೂ ಭೇಷನ್ಯಾಗೆ ’ಹುಂ’ ಅನ್ನವರು ಬೇಕು, ಇಲ್ಲಾಂದ್ರ ಕತಿ ಅರ್ಧಕ್ಕೇ ತುಂಡು ಮಾಡಿ ಬಿಡತ್ತಿದ್ದ. ಒಂದು ಕತಿ ಮುಗದ ಮ್ಯಾಲ ಪ್ರತಿ ಸಾರೀನೂ ’ನಾ ಹಾಲು ಕುಡದು ಹಾಸಗ್ಯಾಗ ಮಲಗದ್ಯಾ, ನೀವು ತುಪ್ಪ ಕುಡದು ತಿಪ್ಪ್ಯಾಗ ಮಲಗದರಿ’ ಅನ್ನಂವ. ನಮಗಂತೂ ಒಂಚೂರೂ ಬ್ಯಾಸರ ಅನಸತಿರಲಿಲ್ಲ. ಅವನ ಥರಾ ಕತಿ ಹೇಳವರಿದ್ದರ ತಿಪ್ಪ್ಯಾಗ ಮಲಗಲಿಕ್ಕೂ ನಾವು ಸಜ್ಜಾಗಿದ್ದಿವಿ. ಹಂಗಾಗೇ ಹಂತಿ ಮಾಡೋ ಮುಂದ ನಾವು ತಪ್ಪಿನೂ ಬೆಚ್ಚಗ ಗುಡಸಲದಾಗ ಮಲಗತಿರಲಿಲ್ಲ. ಜೋಳದ ಕಣಕಿಯೊಳಗ, ತಿಪ್ಪಣ್ಣನ ಜೋಡಿನೇ ಮಲಗತ್ತಿದ್ದವಿ. ತಿಪ್ಪಣ್ಣನ್ನ ಅಪ್ಪ ಸುಮ್ಮ ಹಿಂಗೇ ಹೊಲದ ಕಡಿ ಇರಲಿ. ಸೈರೇ ದನ ಬರ್ತಾವ ನೋಡಕೊಂಡು ಕೂಡಲಿ ಅಂತ ಕೆಲಸಕ್ಕ ಇಟಗೊಂಡಿದ್ದ. ತಿಪ್ಪಣ್ಣ ಬರೀ ಕತಿ ಹೇಳಂವ, ಮೈ ಬಗ್ಗಿಸಿ ಕೆಲಸಾ ಮಾಡಂವಲ್ಲ. ಅಪ್ಪ-ಅವ್ವ ಇಬ್ಬರೂ ಅಂವಾ ಅಂದ್ರ ಬಾಳ ಚುಲೋ ಮಾಡತ್ತಿದ್ದರು. ಒಂದೇ ದಿನ ಅಂವಗ ತಂಗಳು ರೊಟ್ಟಿ ಕಟ್ಟತಿರಲಿಲ್ಲ. ಅಂವಾ ಆಳು ಮನುಷ್ಯಾ ಅಂತ ಹೇಳಿ ಅಂವಗೊಂದು, ನಮಗೊಂದು ಮಾಡತಿರಲಿಲ್ಲ. ಹಿಂಗಾಗಿ ತಿಪ್ಪಣ್ಣ ನಮ್ಮ ಮನಿ ಮನಷ್ಯಾನೇ ಆಗಿದ್ದ. ನಾವು ಕತಿ ಹೇಳು ಅಂದಾಗೆಲ್ಲಾ ಅಂವಾ ಹೇಳಂವಲ್ಲ ಅಂವಗ ಮೂಡ್ ಬರಬೇಕು. ಇಲ್ಲಾಂದ್ರ ನಾವು ಹೊರಳಾಡಿ, ಕಾಲು ಹೊಸತು ಅತ್ತರೂ ಕತಿ ಹೇಳಂವಲ್ಲ. ಅಂವಾ ಸಿಂದಗಿ ತಾಲೂಕಿನ ಚಾಂದಕವಟೆಯವನು. ಹಬ್ಬ ಹರಿದಿನ, ಜಾತ್ರಿಗಿ ಸೈತಾ ಊರಿಗೆ ಹೋಗೋ ಮನುಷ್ಯಾ ಅಲ್ಲ. ’ನನ್ನ ಹೆಂಡತಿ ಬಾಳ ಸುಮಾರ ಅದಾಳ್ರಿ ಎರಡು ರೊಟ್ಟೀ ಹಾಕಲಾಕ ಒಂದು ಸವನ ಹೊಯ್ಕೊಂತಾಳ’ ಅನ್ನಂವ. ಈಗ ಅಂವಾ ಫುಲ್ ಹಣ್ಣಾಗ್ಯಾನ ಮೊದಲ ಹೊಲದಿಂದ ಮನಿಗಿ ಬರೋ ಮುಂದ ನನಗ ತನ್ನ ಹೆಗಲ ಮ್ಯಾಲ ಎರಡೂ ಕಡಿ ಕಾಲ ಇಳಿಬಿಟಗೊಂಡು, ಕೂಡಿಸಿಕೊಂಡು ಓಡಕೊಂತ ಬರವನು. ಮನಿ ಸನ್ಯಾಕ ಬಂದಿಂದ ಅಪ್ಪ-ಅವ್ವ ನೋಡದರ ಬೈತಾರ ಅಂತ ಹೇಳಿ ಅಲ್ಲೇ ಬಾವಿ ಬಾಜೂ ಇಳಿಸಿ, ’ಸಾವುಕಾರ ಮುಂದ ಹೇಳಬ್ಯಾಡ್ರಿ’ ಅನ್ನಂವ. ಇಂಥಾ ಗಟ್ಟೂಳ ತಿಪ್ಪಣ್ಣ ಅದ್ಯಾಂಗ ಮೈಗಳ್ಳ ಆದ ಅನ್ನೂದೇ ತಿಳೀದಂಗ ಆಗಿತ್ತು. ಅಂವಾ ಸಾಲೀಕಟ್ಟೀ ಸೈತಾ ಹತ್ತದಂವ ಅಲ್ಲ. ದೊಡ್ಡಾಟದಾಗ ನಿಶುಂಬನ ಪಾರ್ಟ್ ಮಾಡಿ, ವಾರದೊಳಗ ಎಲ್ಲಾ ಮಾತ ಬಾಯ್‍ಪಾಠ ಮಾಡಿ ನಮ್ಮ ಕೈಯಾಗ ಪುಸ್ತಕ ಕೊಟ್ಟು. ’ಅಲೆಲೆ ಶಹಬ್ಬ.. ಇಂದ್ರ ಸಖಿಯರಾದ ರಂಬೆ ಮೆನಕೆಯರೇ ಪರಿಪರಿಯಿಂದ ಕೇಳಿದರೂ ನನಗೆಂದೂ ಕನಿಕರ ಬರದು’ ಎಂದು ಡೈಲಾಗ್ ಹೆಳಾಕ ಸುರು ಮಾಡದರ ಅಟ್ಟೂ ಮುಗಿಯೂಮಟ ಬಿಡಂವಲ್ಲ. ಬಯಲಾಟ ದಿವಸ ಅಪ್ಪ ಅವನಿಗೆ ಮೈತುಂಬಾ ಬಟ್ಟೆ ಆಯೇರಿ ಮಾಡತ್ತಿದ್ದ. ’ಕಾಕಾ ನೀವೇನ್ರಿ ದರಾಸಾರಿ ನನಗ ಬಾಳ ವಜ್ಜಿ ಮಾಡ್ತೀರಿ, ವರ್ಷಾ ದೀಪಾವಳಿಗೆ ಎರಡು ಜೋಡು ಇಸಗೂಟುದು ಅಲ್ದೇ, ಮತ್ಯಾಕ ಸುಮ್ಮನೇ ಈ ಒಜ್ಜಿ.’ ಅಂತ ಬಾಳ ಬಿಡೆ ಮಾಡಕೊಳ್ಳಂವ. ’ಏ ತಿಪ್ಪಣ್ಣ ಅದಕ್ಯಾಕ ಅಷ್ಟು ಬಿಡೆ ಮಾಡಕೊಂತಿಯೋ.. ಬ್ಯಾರೇ ಯಾರರೇ ಕೊಟ್ಟಾರನೂ..? ಕೊಟ್ಟವರು ನಿಮ್ಮ ಕಾಕಾನೇ ಹೌದಿಲ್ಲೋ.’  ಅಂತ ಅವ್ವ ಅಂದಾಗ ನಕ್ಕೊಂತ ಸುಮ್ಮ ಆಗತ್ತಿದ್ದ.

                                         ****************************

ತಿಪ್ಪಣ್ಣ ಲಗ್ನ ಆಗಿಂದ ಬಿಟ್ಟು ಹೋಗತಾನ ಅಂದಾಗ ನನಗ ಆದಷ್ಟು ಬ್ಯಾಸರ ಬ್ಯಾರೇ ಯಾರಿಗೂ ಆಗಿರಲಿಲ್ಲ. ಅಂವಾ ಹೋದ ಮ್ಯಾಲೂ ಆಳುಗಳು ಕೆಲಸಕ್ಕ ಬಂದೇ ಬರ್ತಾರ ಆದರ ಅವನಂಗ ಕತಿ ಹೇಳವರು ಬರಬೇಕಲ್ಲ..? ಹಂಗಂತ ಅಪ್ಪನ ಮುಂದೂ ಹೇಳುವಂಗಿಲ್ಲ. ಆದರ ಅವ್ವಗ ಅದು ಗೊತ್ತಿತ್ತು. ಹಿಂಗಾಗಿ ತಿಪ್ಪಣ್ಣ ಹೋಗೋ ಮುಂದ  ’ನೀ ಅವಾಗಾವಾಗ ಬಂದು ನಮ್ಮ ರಾಜುಗೆ ಕತಿ ಹೇಳಬೇಕು’ ಅಂದಾಗ ’ಏ ಅದಕ್ಕೇನ್ರಿ ಅವ್ವಾರ, ಇಲ್ಲೇ ಎಡವಿ ಬಿದ್ದರ ಚಾಂದಕವಟೆ, ಸಂತಿಗಿ ಬಂದಾಗೊಮ್ಮ ನಮ್ಮ ಸಾವುಕಾರಗ ಮನಿ ಮಟ ಬಂದು ಕತಿ ಹೇಳೇ ಹೋಗತೀನ್ರಿ’ ಅಂದಾಗ ನಾ ಮುಖಾ ಸಣ್ಣ ಮಾಡಕೊಂಡು ನಿಂತಿದ್ದು ನೋಡಿ, ನನ್ನ ಸನ್ಯಾಕ ಬಂದು ಬಾಗಿ ’ಸುಮ್ನೇ ಅಲ್ಲರೀ ಸಾವುಕಾರ, ನೀವು ನೋಡುವಂತ್ರಿ, ಐತಾರ ದಿನ ಬಂದು ನಿಮಗ ಕತಿ ಹೇಳಿ ಹೋಗಲಿಲ್ಲ ಅಂದ್ರ ಆಮ್ಯಾಲ ಮಾತಾಡ್ರಿ’ ಅಂತ ಹೇಳಿ ಎರಡು ವರ್ಷ ಕಳಿಲಿಕ್ಕ ಬಂದರೂ ಪತ್ತೆನೇ ಇರಲಿಲ್ಲ. ಅಂವಾ ಹೋದ ವಾರದೊಳಗ ಅಪ್ಪ ಸಿದ್ದಣ್ಣ ಅನ್ನೋ ಬ್ಯಾರೇ ಒಬ್ಬನನ್ನು ಕೆಲಸಕ್ಕ ಅಂತ ಕರಕೊಂಡು ಬಂದ. ಅಂವಾ ಬೋರಗಿ ಊರವನು. ಅಪ್ಪ ಎಮ್ಮಿ ಖರೀದಿಗಿ ಅಂತ ಹೋದಾಗ ಕುರುಬರ ಲಕ್ಕಪ್ಪನ ಮುಂದ ’ನಮಗೊಂದು ಚುಲೋ ಆಳು ಇದ್ದರ ನೋಡು’ ಅನ್ನೋದರೊಳಗ ಲಕ್ಕಪ್ಪ ಅವನ್ನ ಕರಕೊಂಡು ಬಂದು, ಅಪ್ಪನ ಜೊತೆ ಮಾಡಿ ಎಮ್ಮೀ ಜೋಡಿನೇ ಕಳಸಿಕೊಟ್ಟಿದ್ದ. ಕೆಲಸದ ವಿಷಯದಾಗ ಸಿದ್ದಪ್ಪ ದೆವ್ವ ಇದ್ದಂಗ ಅಂತ ಅಪ್ಪ ಅವ್ವನ ಮುಂದ ಹೇಳೂದನ್ನ ನಾನು ಕೇಳಿದ್ದಿತ್ತು. ’ಕತಿ ವಿಷ್ಯದಾಗ ಹ್ಯಾಗಂತ..?’ ಅಂಥ ಕೇಳಬೇಕು ಅಂದಕೊಂಡಿದ್ದೆ. ಅಪ್ಪನ ಭಯಕ್ಕ ಸುಮ್ಮ ಆಗಿದ್ದೆ. ಅಂವಾ ಬಂದು ಇನ್ನೂ ಒಂದು ವಾರನೂ ಕಳದಿರಲಿಲ್ಲ. ಹಗೂರಕ ಬುತ್ತಿ ಕೊಡೊ ನೆಪದಾಗ ಅವನ ದೋಸ್ತಿ ಮಾಡಕೊಂಡೆ. ನೋಡೆರೆ ನೋಡಮ್ಮು ಅಂವಾ ಹ್ಯಾಂಗ ಕತಿ ಹೇಳ್ತಾನ ಅಂತ ಕೇಳಬೇಕು ಅಂದ್ಕೊಂಡು.

’ಸಿದ್ದಣ್ಣ ಒಂದು ಕತಿ ಹೇಳೋ’

’ಯಾವ ಕತೀರಿ..?’ ಅಂದ.

’ಯಾವದರೇ, ನಿನಗ ಯಾವುದು ಬರತೈತಿ ಅದು’

’ನನಗ ಬರಲ್ಲರೀ ಸಾವುಕಾರ’

’ಎಷ್ಟು ಬರತೈತಿ ಅಷ್ಟು’

’ಎತ್ತಗೊಳಿಗಿ ನೀರ ಕುಡಿಸಿ ಕಟ್ಟಿ ಬರ್ತೀನಿ ನಿಲ್ಲರಿ’

’ನಾ ಇಲ್ಲೇ ಗುಂಡ ಮಾವಿನ ಗಿಡದ ಕೆಳಗ ಕುತಗೊಳ್ಯಾ..?’

’ಕೂಡ್ರಿ ಈ ಸದ್ಯೇ ಬಂದ್ಯಾ’ ಎಂದವನೇ ಬಾವಿ ಕಡಿ ನಡದ. ಅಪ್ಪ ಗುಡಸಲದಾಗ ಮಲಗಿದ್ದ. ಮಟಮಟ ಮಧ್ಯಾಹ್ನ. ನಾನು ನಮ್ಮ ದೊಡ್ದಪ್ಪನ ಮಗ ಇಬ್ಬರೂ ಸಿದ್ದಪ್ಪಣ್ಣ ಬಂದು ಕತಿ ಹೇಳ್ತಾನ ಅಂತ ಕಾಯ್ಕೊಂಡು ಕುಂತಿದ್ದಿವಿ. ಅಷ್ಟರೊಳಗ ಖಾಲಿ ಬಕೀಟ ಕೈಯಾಗ ಹಿಡಕೊಂಡು ಗಿಡದ ಕಡಿ ಬಂದ. ಟವಲ್ಲಿಂದ ಮುಖಾ ಒರಸಗೊಂತ

’ಅನಗಾಡ ಬಿಸಲ ಬಿಡ್ರಿ ಸಾಹುಕಾರ… ಈ ಬಿಸಲಹೊತ್ತಿನ್ಯಾಗ ಅದೆಂಥಾ ಕತೀರಿ, ಹೋಗಿ ಕಾಕಾ ಅವರ ಜೋಡಿ ಗುಡಸಲದಾಗ ಮಲಗಬಾರದೇನ್ರಿ..?’

’ಅದೆಲ್ಲಾ ಬ್ಯಾಡ, ಈಗ ಮೊದಲ ನಮಗೊಂದು ಕತಿ ಹೇಳು’

’ಖರೆ ಹೇಳಬೇಕಂದ್ರ ಇನ್ನೂ ನಂದು ಊಟ ಆಗಿಲ್ಲರೀ..’

’ಮಾಡು ಯಾರು ಬ್ಯಾಡ ಅಂದ್ರು’

’ಹಂಗಂದರ ನೀವಿಬ್ಬರೂ ಇಲ್ಲೇ ತುಸು ಹೊತ್ತು ಏನರೇ ಆಡ್ರಿ.. ಪಟ್ಟಂತ ಒಂದು ರೊಟ್ಟಿ ತಿಂತೀನಿ’ ಅಂದ. ಕಿಸೆಯೊಳಗ ಕೈ ಹಾಕಿದೆ. ಮನಿಯಿಂದ ತಗೊಂಡು ಬಂದಿದ್ದ ಗೋಟಿ ಆಡಾಕ ಶುರು ಮಾಡದವಿ. ಒಂದು ಆಟಾ ಆಡೋದರೊಳಗ ಇಬ್ಬರಿಗೂ ಬ್ಯಾಸರ ಬಂದು, ಗೋಲಿಗುಂಡ ಕುರಿ ಹಿಕ್ಕಿ ಕಂಡಂಗ ಆಗಾಕತ್ವು. ಅಷ್ಟರೊಳಗ ಸಿದ್ದಪ್ಪಣ್ಣ ’ಸಾಹುಕಾರ ಬರ್ರಿ’ ಅಂತ ಕರದ. ಚಂಗ್ ಅಂತ ಓಡಿ ಬಂದು ಅವನ ಬಾಜೂ ಕುಂತವಿ. ತನ್ನ ತಲಿಗಿ ಸುತಗೊಂಡಿದ್ದ ಟವಲ್ ತಗದು, ಝಾಡಿಸಿ ’ಇದರ ಮ್ಯಾಲ ಕುಂದರ್ರಿ’ ಅಂದ. ನಾವು ಅಂವಾ ಹೇಳದಂಗೇ ಮಾಡದವಿ.

‘ಈಗ ಕತಿ ಸುರು ಮಾಡಲೇನ್ರಿ..?.’ ಅಂದ.

’ಲಗೂ ಲಗು ಹೇಳು’

’ನನಗೇನು ಅಂಥಾ ಕತಿ ಬರಲ್ಲರೀ’ ಅನ್ಕೋಂತ ಶುರು ಮಾಡದ. ’ಅವತ್ತು ಬಾದಮಿ ಅಮಾಶಿ ಇತ್ತರಿ. ಹಿಂಗೇ ಮಟಮಟ ಮಧ್ಯಾಹ್ನದಾಗ ನಮ್ಮೂರ ಹೊರಗಿರೋ ಹುಂಚೀ ಗಿಡದ ಕಡಿಗೆ ಹೊಂಟಿದ್ಯಾರಿ. ದಿನ್ನಾ ಅಲ್ಲಿ ಒಬ್ಬರಿಲ್ಲಾ ಒಬ್ಬರು ಇರವರು. ಆದರ ಅವತ್ತು ನಿಮಗ ಹೇಳಬೇಕಂದರ ಒಂದೇ ಒಂದು ನರಪಿಳ್ಳೆನೂ ಕಣ್ಣಿಗೆ ಬೀಳಲಿಲ್ಲರಿ. ಗಿಡದ ಸನ್ಯಾಕ ಬಂದಿದ್ದೇ ಅದು ಗವ್.. ಅಂದಂಗ ಆಯಿತು. ಮ್ಯಾಲ ಮುಖಾ ಎತ್ತಿ ನೋಡದರ ತೆಕ್ಕಿಗಟ್ಟಲೆ ತೊಗಲು ಬಾವಲಿ ಹಕ್ಕಿ ಮುಖಾ ಕೆಳಗ ಮಾಡಿ ಜೋತಾಡತ್ತಿದ್ವು. ಅಮವಾಶಿ ಕತ್ತಲ ಪೂರಾ ಗಿಡದ ಹೊಟ್ಟ್ಯಾಗೇ ದಟ್ಟಾಗಿ ಹೊಕ್ಕಂಗ ಕಾಣತ್ತಿತ್ತು. ಮೈಲಗಟ್ಟಲೆ ದೂರ ಕಣ್ಣ ಹರಸಿದರೂ ಒಂದೇ ಒಂದು ಕಾಗಿ ಕಾಣ್ಲಿಲ್ಲ. ನನಗೂ ತುಸು ಅಂಜಿಕಿ ಬಂದಂಗ ಆಯಿತು. ಗಿಡದ ಕೆಳಗ ಕೂಡಲಿಕ್ಕೂ ಮನಸು ಬರಲಿಲ್ಲರಿ. ತಿರುಗಿ ಮನಿಗಿ ನಡದರ ಆಯ್ತು ಅಂತ ಹೊಂಟೆ. ಎದುರಗಿ ಒಂದು ಕುರಿ ಕಂಡಂಗ ಆಯ್ತು. ನೋಡಲಿಕ್ಕ ಬಾಳ ಮಜಬೂತಾಗಿತ್ತು. ಅದರ ಹಿಂದ ಮುಂದ, ಆಜೂ ಬಾಜೂ ಯಾರೂ ಇರಲಿಲ್ಲ. ಅದು ತಿರುಗಾಡೊ ಜಾಗಾ ನೋಡದರ ಸುಡಗಾಡು. ನನ್ನ ಸನ್ಯಾಕ ಬಂದದ್ದೇ ಅದು ಮಂಗಮಾಯ..! ನನಗಂತೂ ಬಾಳ ಅಂಜಿಕಿ ಬಂದಂಗ ಆಯ್ತು. ಅಕಾಡಿ ಇಕಾಡಿ ನಾಕೂ ನಿಟ್ಟ ನೋಡದ ಮ್ಯಾಲೂ ಅದು ಕಾಣಲಿಲ್ಲ.. ’ಅಂತ ಕಣ್ಣಗಲ ಮಾಡಿ, ಗಾಭರಿಯಾಗಿ ಹೇಳತ್ತಿದ್ದ.

ನಾವಿಬ್ಬರೂ ಬಿಟ್ಟ ಕಣ್ಣ.. ಬಾಯಿ ಬಿಟಗೊಂಡೇ ಕೇಳತಿದ್ದಿವಿ. ನಮ್ಮ ದೊಡ್ದಪ್ಪನ ಮಗ ’ಮುಂದ ಏನಾಯಿತು.?’ ಅಂದ. ’ಹೇಳತೀನಿ ಆದರ ಹೆದರಬ್ಯಾಡ್ರಿ’ ಅಂದ. ನನಗ ಅದಾಗಲೇ ಒಳಗ ಟುಕುಟುಕು ಶುರು ಆಗಿತ್ತು. ಉಗುಳು ನುಂಕೋಂತೇ ‘ಹೆದರೂದಿಲ್ಲ ಹೇಳು’ ಅಂದೆ.

’ಆ ಕುರಿ ಎಲ್ಲಿ ಹೋಯ್ತು ಅಂತ ಸುಡಗಾಡ ತುಂಬಾ ಹುಡುಕದ್ಯಾರಿ ಕಾಣಲಿಲ್ಲ. ಹಂಗೇ ತುಸು ಮುಂದು ಹೋದ್ಯಾ.. ಅಲ್ಲಿ ಒಂದು ಗೋರಿ ಮ್ಯಾಲ ಒಬ್ಬಳು ಅಗಲ ಹೆಂಗಸು ಚಪಗಾಲು ಹಾಕಿ ಕುತಗೊಂಡಿದ್ದಳು. ಇಂಥಾ ಮಟಮಟ ಮಧ್ಯಾಹ್ನದಾಗ ಅದ್ಯಾಕ ಇಲ್ಲಿ ಕುಂತಾಳ ಅಂತ ಸನ್ಯಾಕ ಹೋಗಿ ನೋಡುದರೊಳಗ ಅಕಿನೂ ಮಂಗ ಮಾಯ..’ ಅಂತ ಹೇಳಿ ನಮ್ಮಿಬ್ಬರ ಮುಖಾ ನೋಡದ. ಒಳಗೊಳಗ ಒಂಥರಾ ನಡುಕ ಹುಟ್ಟೈತಿ ಅನ್ನೂದನ್ನು ಸಿದ್ದಣ್ಣ ಲೆಕ್ಕಾ ಹಾಕಿ ’ಮುಂದಿಂದು ಹೇಳಲೋ ಬ್ಯಾಡ್ರಿ..?’ ಅಂತ ಕೇಳದ. ಖರೆನೇ ನಾವು ಹೆದರಿದ್ದರೂ ’ಹೇಳು’ ಅಂದಿವಿ.

’ಆಮ್ಯಾಲ ನನಗ ಗೊತ್ತಾಯಿತು. ಆ ಕುರಿ.. ಮತ್ತ ಆ ಹೆಂಗಸು ಸುಡಗಾಡದಾಗೇ ಮಂಗ ಮಾಯ ಆದರು. ಅಂದ ಮ್ಯಾಲ ಅವೆರಡೂ ಗ್ಯಾರಂಟೀ ದೆವ್ವೇ ಅದಾವ ಅಂತ ಹೇಳಿ ಅಲ್ಲಿಂದ ಏಳಕೊಂತ ಬೀಳಕೊಂತ ಓಡಲಿಕ್ಕ ಸುರು ಮಾಡದವನು, ಮನಿ ಮುಟ್ಟೂ ಮಟ ಎಲ್ಲೂ ನಿಲ್ಲಲಿಲ್ಲರೀ.’ ಅಂತ ಹೇಳಿ ಕತಿ ಮುಗಸದ. ನಮಗ ಸಿದ್ದಣ್ಣ ಬಾಳ ಧೈರ್ಯವಾನ್ ಅದಾನ ಅನಿಸಿತ್ತು. ನಾವು ಹೊಲದಿಂದ ಮನಿಗೆ ಹೋಗೋವಾಗ ಸುಡುಗಾಡ ದಾಟಿಕೊಂಡೇ ಹೋಗಬೇಕು ಹಂಗ ಹೋಗೋ ಮುಂದ ನಮಗ ಎದುರಿಗಿ ಒಂದೇ ಒಂದು ಕುರಿ ಬಂದರೆ, ಇಲ್ಲಾಂದ್ರ ಅಡ್ಡಾಲಕ ಕುಂಕುಮ ಹಚಕೊಂಡು ಯಾವದರೇ ಹೆಂಗಸು ಬಂದರೂ ನಮ್ಮ ಬಾಯಿ ಬರಬರ… ಬಿರಿಬಿರಿ ಒಣಗತಿತ್ತು.

ಈ ಸಿದ್ದಪ್ಪಣ್ಣನ ಕತಿಗಳಂದ್ರ ಎಲ್ಲಾ ಇಂಥಾವೇ.. ತಾನು ದೆವ್ವನ್ನ ಒಂದೇ ಮಾರು ದೂರದಿಂದ ನೋಡೀನಿ ಅದರ ಕಾಲು ಉಲ್ಟಾ ಇರ್ತಾವ.. ಬಿಳಿ ಸೀರಿ ಉಟ್ಗೊಂಡಿರ್ತಾವ.. ಹಣಿ ತುಂಬ ಅರಿಶಿಣ ಕುಂಕುಮ ಬಡ್ಕೋಂಡಿರ್ತಾವ ಅಂತ ಹೇಳಿದ್ದ. ಒಂದು ದಿನ ಮನಿಗಿ ಥೇಟ್ ಇದೇ ಥರಾ ರೂಪ ಇರೋ ಗೊಲ್ಲರ ಹೆಂಗಸು ಒಬ್ಬಳು ಭಿಕ್ಷೆ ಬೇಡಲಿಕ್ಕ ಬಂದಿದ್ದಳು. ಮನ್ಯಾಗ ಇದ್ದದ್ದು ನಾನು ಮತ್ತ ನಮ್ಮ ತಂಗಿ. ಹೋಗಿ ನೀಡೂ ಮುಂದ ಸಿದ್ದಪ್ಪಣ್ಣ ಹೇಳಿದ್ದ ದೆವ್ವಿನ ರೂಪ ತಟ್ಟ್ ಅಂತ ನೆನಪಾಗಿ, ಹೆದರ್ಕೊಂತ ಅಕಿ ಪಾದ ನೋಡಿದ್ದೆ. ಅವು ಸೀದಾನೇ ಇದ್ದು ಹಿಂಗಾಗಿ ಸನ್ಯಾಕ ಹೋಗಿ ಭಿಕ್ಷೆ ಹಾಕಲಿಕ್ಕ ಧೈರ್ಯ ಬಂದಿತ್ತು. ಸಿದ್ದಪ್ಪಣ್ಣಂದು ಒಂದೆರಡಲ್ಲ. ಅಮವಾಶ್ಯೆ ದಿನ ಅದರಲ್ಲೂ ನಡುರಾತ್ರಿಯೊಳಗ ಸುಡಗಾದದೊಳಗ ಹೋಗಿ, ಗೋರಿ ಮ್ಯಾಲ ಇಟ್ಟ ಹೋಳಿಗಿ ಉಂಡು, ನೂರು ರೂಪಾಯಿ ಬಹುಮಾನ ಗೆದ್ದ ಕತೀನೂ ಒಂದು ಹೇಳಿದ್ದ. ಅಂವಾ ಇನ್ನೂ ಒಂದು ಹೇಳಿದ್ದ. ಸುಡಗಾಡು ದಾಟಿ ಬರೋ ಮುಂದ ಗೋರಿ ಕಡೆ ಕೈ ಮಾಡಬಾರದು ಅಂತ. ಹಂಗೇನಾರೆ ಮಾಡದರ ಕಾಲ ಒಳಗಿಂದ ಕೈ ಹಾಕಿ ಐದೂ ಬೆರಳನ್ನ ಹಗೂರಾಗಿ ಬಾಯಾಗ ಹಿಡದು, ಕಡಕೋಬೇಕು ಅಂತ. ನಾ ಮೆಟ್ರಿಕ್ ಮುಗಿಯೋ ಮಟ ಹಂಗ ಮಾಡಿದ್ದೈತಿ. ಬರ್ತಾ ಬರ್ತಾ ಸಿದ್ದಣ್ಣ ಮತ್ತವನ ಕತಿ ನಮ್ಮಂತಾ ಹುಡುಗರ ಪಾಲಿಗೆ ಬೆನ್ನಿಗಿ ಬಿದ್ದ ಬೇತಾಳ ಆಗಿದ್ವು. ಅದರ ಪರಿಣಾಮ ನಾವು ರಾತ್ರಿ ಉಚ್ಚೆ ಬಂದರೂ ಒಬ್ಬನೇ ಎದ್ದು ಒಯ್ಯುವಂಗಿರಲಿಲ್ಲ. ಅಮವಾಶ್ಯೆ ಹಿಂದಾಮುಂದ ಸಿದ್ದಣ್ಣ ಹೇಳಿದ್ದ ಕತಿಗಳೇ ಸುತ್ತ-ಮುತ್ತಲೂ ಬಿಚ್ಚಕೊತಿದ್ವು. ನಡುರಾತ್ರಿಯೊಳಗ ಎಚ್ಚರಾಗಿ ಹಿಂಗ ಕಣ್ಣ ಬಿಟ್ಟರೂ ಮನಿ ಗ್ವಾಡಿ ಮ್ಯಾಲ ಥೈ ಥೈ ಅಂತ ಕುಣದಂಗ ಕಾಣಸತ್ತಿತ್ತು. ಉಸರ ಬಿಗಿ ಹಿಡದು, ಮುಸಕ ಹಾಕಿ ಮಲಗಿದ್ದೂ ಐತಿ. ಮಟಮಟ ಮಧ್ಯಾಹ್ನ ಸಂಡಾಸ್ ಬಂದರೂ ಎದಿ ಧಸಕ್ ಅಂತಿತ್ತು. ದೆವ್ವ ಯಾವ ರೂಪದಾಗ ಬರ್ತಾವ ಅಂತ ಹೇಳೂವಂಗಿಲ್ಲ ಅದಕ್ಕೇ ಕಿಸೆಯೊಳಗ ಒಂದು ದೇವರ ಪೋಟೊ ಇಟ್ಗೋಬೇಕು ಅಂತ ತನ್ನ ಕಿಸೆಯೊಳಗಿದ್ದ ಎಲ್ಲಮ್ಮನ ಪೋಟೋ ತಗದು ತೋರಿಸಿದ್ದ. ದೆವ್ವ ಬಡದರ ತಮಗ ಬರಲಾರದ ಬಾಷೆ ಸೈತಾ ಮಾತಡತಾರ ಅಂದಿದ್ದ. ಅಂವಾ ಹೇಳದಂಗೇ ಅದು ಖರೆ ಆಗಿತ್ತು. ನಮ್ಮ ಬಾಜೂ ಮನಿಯೊಳಗ ಶರಣವ್ವ ಅನ್ನೋ ಹೆಂಗಸಿಗಿ ಗಾಳಿ ಆಗ್ಯಾದ ಅನ್ನೋ ಸುದ್ದಿ ಇಡೀ ಓಣಿಗೆ ಓಣಿನೇ ಅವಾಜ್ ಮಾಡಿತ್ತು. ಅವ್ವ ಅಕಾಡಿ ಹೋಗಬ್ಯಾಡ್ರಿ ಅಂತ ತಾಕೀತು ಮಾಡಿದ ಮ್ಯಾಲೂ ನಾವು ಮೂರ್ನಾಕು ಹುಡುಗರು ಶರಣವ್ವಳ ಮನಿ ಸನ್ಯಾಕ ಹೋಗಿದ್ದೇ ಅಕಿ ಜೋರಾಗಿ ವದರೂದು ಕೇಳತ್ತಿತ್ತು. ಅಕಿ ಕನ್ನಡಾನೇ ತೊಡರ್ ಬಡರ್ ಮಾತಾಡುವಕ್ಕಿ, ಅಂತದರೊಳಗ ಉರ್ದುದಾಗ ವಟಾ ವಟಾ ಅನ್ನೂದು ಕೇಳಿ ಸಿದ್ದಪ್ಪಣ್ಣ ಖರೆ ಹೇಳಿದ್ದ ಅನಿಸಿತ್ತು. ಹಂಗೆನೇ ಆ ಶರಣವ್ವನ ಅತ್ತಿ  ಮುಂದ ವರ್ಷ ಒಪ್ಪತ್ತಿನ್ಯಾಗ ನೆಗದು ಬಿದ್ದಿದ್ದೇ ದೆವ್ವ ಶರಣವ್ವನ ಮೈಯಾಂದು ಖರೆ ಖರೆನೆ ಓಡಿ ಹೋದಂಗಿತ್ತು

ಸುಗ್ಗಿದಿಂದಾಗ ಒಂದೆರಡು ದಿನ ರಾಶಿ ಮಾಡೂ ಮುಂದ ನಾನೂ ಹೊಲದಾಗ ಮಲಗತಿದ್ದೆ. ಅಪ್ಪ ’ಹುಚ್ಚ ಖೋಡಿಯಂಗ ಮಾಡಬ್ಯಾಡ, ನಸುಕಿನ್ಯಾಗ ಬಾಳ ಥಂಡಿ ಇರತ್ತೈತಿ ಸುಮ್ಮ ಮನ್ಯಾಗ ಇರು’ ಅಂದರೂ ಕೇಳತಿರಲಿಲ್ಲ. ಅವತ್ತೊಂದಿನ ಹಂತಿ ಮಾಡೂ ಮುಂದ ಸಿದ್ದಣ್ಣ ನನಗ ದೂರದಲ್ಲಿ ಲಮಾಣಿಗೇರ ತಾಂಡಾ ಹೊರಗ ಬ್ಯಾಟರಿ ಹಿಡಕೊಂಡು ತಿರುಗಾಡೊದನ್ನು ತೋರಿಸಿ, ಅದು ಕೊಳ್ಳಿದೆವ್ವ. ಮೊನ್ನೆ ನಾ ಹಿಂಗೇ ಮಲಗದಾಗ ನಾ ಹೊದುಕೊಂಡು ಮಲಗಿದ್ದ ಕಂಬಳಿ ಜೋಡಿನೇ ನನಗ ಎತ್ತಿ ವಗೀತು.. ಎದ್ದು ನೋಡದರ ಮಂಗ ಮಾಯ..! ಬೆಳ್ಳ ಬೆಳತನಕ ಆ ಕೊಳ್ಳಿ ದೆವ್ವ ತಿರಗತಿರತೈತಿ. ನಸುಕಿನ ವ್ಯಾಳೆದಾಗ ಕೋಳಿ ಕೂಗೋ ಮೊದಲೇ ಮಂಗಮಾಯ ಆಗಿ, ಮುಗಲಾಗ ಹೋಗಿ ಒಂದು ಚುಕ್ಕಿ ಆಗಿ ಮುಗಲಿಗಿ ಮೆತ್ತಕೊಂಡು ಬಿಡತೈತಿ, ಮತ್ತ ಮರುದಿನ ರಾತ್ರಿ ಹಿಂಗ ಕೊಳ್ಳಿ ದೆವ್ವ ಆಗಿ ತಿರಗತೈತಿ ಅಂತ ಹೇಳಿದ್ದ. ಹುಣಸೀಗಿಡ ಅಂದ್ರ ಆ ದೆವ್ವಗೋಳು ಬಾಳ ಹುರುಪ ಆಗ್ತಾವ. ಹಗಲ ಹೊತ್ತಿನ್ಯಾಗೂ ತಂಪಂತ ಹೇಳಿ, ಅವು ಅಲ್ಲೇ ಮಲಗೂದು, ತಾ ನೋಡೀನಿ ಅಂತ ಹೇಳಿದ್ದ. ಆ ದಿನದಿಂದ ಅಂವಗ ನಾವು ಹುಣಸೀಕಾಯಿ ಹರದುಕೊಡು ಅನ್ನೂದೇ ಬಿಟ್ಟಿದ್ದಿವಿ. ಇಂಥಾ ಸಿದ್ದಣ್ಣ ಬರತಾ ಬರತಾ ನಮ್ಮನ್ನ ಬೀಡಿ ತರಲಿಕ್ಕ. ತಂಬಾಕ ತರಲಿಕ್ಕ ಬಳಸಿಕೊಳ್ಳಾಕ ಶುರುಮಾಡದ. ಎಲ್ಲೀವರಿಗೆಂದ್ರ ನಾವು ರಾತ್ರಿ ಕತಿ ಕೇಳತಾ ಕೇಳತಾ ಅಂಜಕೊಂಡು ಅವನ ಹಾಸಿಗಿಯೊಳಗೇ ಮುದಡಿ ಆಗಿ ಮಲಗತಿದ್ದಿವಿ. ನಾವು ಅಂವಗ ಇನ್ನೂ ಗಟ್ಟಿ ಆಗಿ ಹಿಡೀಲಿ ಅಂತ ಹೇಳಿ ಮತ್ತೂ ಹೆದರಿಕಿ ಆಗೂವಂಥಾ ಕತಿ ಹೇಳಂವ. ನಾವು ಸಾಕು ಅಂದರೂ ಬಿಡ್ತಿರಲಿಲ್ಲ. ಎಲ್ಲೀವರೆಗಂದರ ನಾವು ನಮ್ಮವ್ವ ಹಾಗೂ ಅಪ್ಪ ಹೇಳೊ ಕೆಲಸ ಒಲ್ಲೆ ಅಂತಿದ್ದೀವಿ ಸಿದ್ದಪ್ಪಣ್ಣ ಹೇಳಿದರ ಮರು ಮಾತಾಡದೇ ಮಾಡತಿದ್ದಿವಿ. ಸಿದ್ದಪ್ಪಣ್ಣ ನೋಡಲಿಕ್ಕೂ ಒಂಥರಾ ರಾವ್ ಇದ್ದ. ಅವನ ಕಾಲಿನ ಮೀನಗಂಡದ ಮ್ಯಾಲ ಉಬ್ಬಿದ ನರಗೋಳೇ ಭಯ ಹುಟ್ಟಿಸುವಂಗ ಇದ್ವು. ಕೋರೆ ಮೀಸೆ, ಗುಂಗರಗೂದಲು, ದಢೂತಿ ದೇಹ, ಗಡಸು ಧ್ವನಿ ಒಟ್ಟಿನ್ಯಾಗ ಅಂವಾ ದೆವ್ವಿನ ಕಥಿ ಹೇಳಲಾಕ ಹೇಳಿ ಮಾಡಸದಂಗ ಇದ್ದ.

 *******************************

ಗೌರೀ ಹುಣ್ಣವಿ ಜಾತ್ರಿ ಮುಂದ ಹೊಲದಾಗ ಕಡ್ಲಿ ರಾಶಿ ಇತ್ತು. ಜಾತ್ರಿ ಸಲಾಗಿ ಎರಡು ದಿನ ಸಾಲಿ ಸೂಟಿ ಕೊಟ್ಟಿದ್ದಿತ್ತು. ಅಪ್ಪ ಬ್ಯಾಡ ಅಂದರೂ ನಾನೂ ರಾತ್ರಿ ಹೊಲದಾಗೇ ಇರತೀನಿ ಅಂತ ಪಂಟ ಹಚ್ಚದೆ. ಥಂಡಿ ಬಾಳ ಇರತೈತಿ ಬರೂದಿದ್ದರ ಒಂದು ಕೌದಿ ತಗೊಂಡು ಬಾ ಅಂದ. ಬಾಳಂದ್ರ ಬಾಳ ಖುಷಿ ಆಯಿತು. ಸಿದ್ದಣ್ಣ ರಾಶಿ ದಿನ ಕತಿ ಹೇಳ್ತೀನಿ ಅಂತ ಮಾತು ಕೊಟ್ಟಿದ್ದ. ಕೊಟ್ಟ ಮಾತು ತಪ್ಪದರ ನಾ ಬಿಡೂವಂಗಿಲ್ಲ ಅಂತ ಅಂವಗೂ ಗೊತ್ತಿತ್ತು. ರಾತ್ರಿ ಉರಿ ಹಚ್ಚಿ ಕಡ್ಲಿ ಗಿಡ ಸುಟ್ಟು ಕಟರುಂ ಕುಟರುಂ ಅಂತ ಭೇಷ ರಾತ್ರಿ ಬಾರಾ, ಸಾಡೇ ಬಾರಾತನ ಅಪ್ಪ. ಸಿದ್ದಣ್ಣ, ಬಾಜೂ ಹೊಲದ ಚಿನ್ನಪ್ಪ ಕಟದೇ ಕಟದರು. ಹುಣ್ಣವಿ ಬೆಳದಿಂಗಳ ಹೊಲದ ತುಂಬಾ ಸುರವಿದಂಗ ಕಾಣ್ತಿತ್ತು. ಅಪ್ಪ ’ನಿನಗ ನಿದ್ದಿ ತಡಿಯೂದಿಲ್ಲ ಹೋಗಿ ಗುಡಸಲದಾಗ ಮಲಕೊ’ ಅಂದ. ನಾ ಸುಮ್ಮ ಕುಂತೆ. ’ಪುಕ್ಕಲ ಕುರಸಾಲ್ಯಾ ಹೆದರಿ ಸಾಯ್ತಾನ. ಸಿದ್ಯಾ, ಅವಂಗ ಕರಕೊಂಡು ಹೋಗು ನೀನೂ ಅಲ್ಲೇ ಮಲಕೊ’ ಅಂದಾಗ ಅಂವಾ ’ನೀವು ಕತಿ ಹೇಳು ಅನಬಾರದು ನೋಡ್ರಿ’ ಅಂದ. ನಾನು ’ಒಂದೇ ಒಂದು’ ಅನ್ಕೊಂತ ಅವನ ಜೋಡಿ ನಡದೆ ಬೆಳದಿಂಗಳು ಗುಡಿಸಲ ಬಾಗಿಲಕ ಪರದೆ ಹಾಕದಂಗ ಮೂಡಿತ್ತು. ಬಾಳಂದ್ರ ಬಾಳ ಥಂಡಿ. ಸಿದ್ದಣ್ಣ ಹಾಸಗಿ ಹಾಸೂ ಪುರಸತ್ತಿಲ್ಲದೇ ’ಕತಿ ಹೇಳು ಕತಿ ಹೇಳು’ ಅಂತ ಬೆನ್ನಿಗಿ ಬಿದ್ದೆ. ಅಂವಾ ಮತ್ತ ಹುಣಸೀ ಗಿಡ.. ಹಾಳು ಬಿದ್ದ ಬಾವಿ.. ಸುಡಗಾಡು ಅಂತ ಸುರು ಮಾಡದ. ನಾ ಅಲ್ಲೇ ಉಗುಳು ನುಂಗ್ತಾ ಮೆತ್ತಗ ಹುಂ..ಹುಂ..ಅನ್ನಾಕತ್ತಿದ್ದೆ. ಹಂಗ ಅನ್ಕೊಂತ ಕಣ್ಣ ಮುಚ್ಚದಂಗ ಮಾಡದೆ. ’ನಿದ್ದಿ ಬಂತು ಕತಿ ಸಾಕು’ ಅಂದೆ. ಅಂವಾ ಎದ್ದು ಕಂದೀಲು ಆರಸದ. ನನಗ ಹಗೂರಕ ಕೌದಿ ಹೊಚ್ಚಿ ತಾನೂ ಅದರಾಗೇ ಹೊಕ್ಕೊಂಡ. ನನ್ನ ಮ್ಯಾಲ ಕಾಲು ಹಾಕದ, ನನಗ ಜೋರಾಗಿ ಹಿಡ್ಕೊಂಡ. ಹಿಂದ ಹಂಗ ಎಂದೂ ಅಂವಾ ನನಗ ಹಿಡದಿರಲಿಲ್ಲ. ಎಲ್ಲಿ ಬೇಕು ಅಲ್ಲಿ ಕೈಆಡ್ಸಾಕತ್ತದ. ನಾ ಕಣ್ಣ ತಿಕ್ಕೊಂತ ಎದ್ದು ಕುಂತೆ. ತನಗ ಬಾಳ ಜೋರ್ ನಿದ್ದಿ ಹತ್ತಿತ್ತು ಅನ್ನೂವಂಗ ನಾಟಕ ಮಾಡ್ಕೊಂತ ಎದ್ದ.

’ಯಾಕ್ರಿ ಏನಾಯ್ತು..?’ ಅಂದ.

’ನಾ ನಮ್ಮಪ್ಪನ ಹತ್ಯಾಕ ಹೋಗ್ತೀನಿ’ ಅಂದೆ.

’ಏನಾಯ್ತು ಹೇಳ್ರಿ..’ ಅಂದ.

’ನನ್ನ ಚಡ್ಯಾಗ ಎಲ್ಲಾ ಕೈ ಹಾಕತೆಲ್ಲೋ..?’

’ಓ ಅದಾ..? ಈ ದೆವ್ವಿನ ಕತೀನೇ ಹಂಗರಿ. ಕನಸಿನ್ಯಾಗ ಬಂದು ಹಂಗೆಲ್ಲಾ ಮಾಡಸ್ತಾವ. ಅದು ನಾ ಮಾಡಿದ್ದಲ್ಲ. ಅವು ಮಾಡಸಿದ್ದು. ಏನು ಮಾಡಾಕತ್ತೀನಿ ಅಂತ ನನಗೇ ನೆನಪಿರೂದಿಲ್ಲ. ಯಾರ ಮುಂದೂ ಹೇಳಬ್ಯಾಡ್ರಿ. ಹೇಳದರ ನಿಮ್ಮ ಕನಸ್ನ್ಯಾಗೂ ಹಂಗೇ ಸುರು ಆಗತೈತ’ ಅಂದ. ನಾ ಹೇಳೂದಿಲ್ಲ ಅಂದ್ಕೊಂಡು ಸುಮ್ಮ ಮಲಗದೆ. ಅಪ್ಪ ಅಲ್ಲೇ ಕಡ್ಲಿಗಿಡ ಒಟ್ಟದಲ್ಲೇ ಮಲಗಿದ್ದ. ಮುಂಜಾನೆ ಎದ್ದು ನೋಡದರ ಸಿದ್ದಪ್ಪನ ಕಾಲ. ಕೈ ಎರಡೂ ನನ್ನ ಮ್ಯಾಲೇ ಇದ್ವು. ಹಗೂರಕ ಸರಿಸಿ, ಎದ್ದು ಹೊರಗ ಬಂದೆ. ಅಪ್ಪ ಅಲ್ಲೇ ಉರಿ ಕಾಯ್ಸ್ಕೊಂತ ಬೀಡಿ ಸೇದತಿದ್ದ. ’ಸಿದ್ಯಾಗ ಎಬ್ಬಸು. ಅಪ್ಪ ಕರಿಯಾಕತ್ತಾನ ಅಂತ ಹೇಳು.’ ಅಂದ. ಜೋರಾಗಿ ಅಲ್ಲಿಂದಲೇ ಸಿದ್ದಪ್ಪಣ್ಣ. ಸಿದ್ದಪ್ಪಣ್ಣ ಅಂತ ಒದರದೆ. ಹುಂ ಇಲ್ಲ ಉಹುಂ.. ಇಲ್ಲ. ಅಪ್ಪ ಜೋರಾಗಿ ’ಸಿದ್ಯಾ ಹೊತ್ತ ನೋಡೊಲೇ ಎಷ್ಟಾಗೈತಿ. ಏಳು..ಏಳು..’ ಅಂದ. ಅವಾಗೂ ಅಂವಾ ಏಳಲಿಲ್ಲ. ’ಅದ್ಯಾವ ನಮನಿ ನಿದ್ದಿ ಅಂವಂದು..! ನೀರ ಉಗ್ಗು ಮುಖಕ್ಕ’ ಅಂದಾಗ ಗುಡಸಲ ಕಡಿ ಹೊಂಟೆ ಬಾಗಿಲದೊಳಗ ಕಾಲ ಹಾಕೂದರೊಳಗ ಎದುರಿನ ಬುತ್ತೀ ಸಿಗಸೋ ಕಟಿಗಿ ರಿಕ್ಕಿಗಿ ದೊಡ್ಡ ನಾಗರಹಾಂವ ಬುಶ್..! ಅಂತ ಜೋತ್ಯಾಡತಿತ್ತು. ಎದಿ ಝಲ್ ಅಂತು. ಅದು ಚಮಕೀಲೇ ಸರಸರ ಮ್ಯಾಲ ನಿರಕಿಯೊಳಗ ಹೊಯ್ತು. ನನ್ನ ಬಾಯಾಗ ಮಾತೇ ಬರಲಿಲ್ಲ. ನಾ ಹಂಗೇ ಹೌ ಹಾರಿ ಓಡಿ ಬರೂದು ನೋಡಿ ’ಯಾಕ ಏನಾಯಿತು..?’ ಅಂತ ಅಪ್ಪನೇ ಎದ್ದು ಬಂದ. ನನ್ನ ಮೈ ಒಂದು ಸವನ ನಡಗತಿತ್ತು. ಅಷ್ಟು ದೊಡ್ಡ ಹಾವು ನೋಡಿ, ಮಾತ ಸತ್ತಂಗ ಆಗಿದ್ದೆ. ತುಸು ಹೊತ್ತಿನ ಮ್ಯಾಲ ನಾ ಗುಡಸಲದೊಳಗ ನೋಡಿದ್ದು ಹೇಳದೆ. ಅಪ್ಪ ಬಂದು ಅವನ ಮೈ ಕೈ ಹಿಡದು ಅಲ್ಲಾಡಿಸಿದ ಮ್ಯಾಲೂ ಅಂವಾ ಏಳಲಿಲ್ಲ. ಹೊತ್ತ ಏರದಂಗ ಅವನ ಮೈ ಬಣ್ಣಾನೂ ಫ್ಲರ್ಕ್ ಆಗಿ, ಹಚ್ಚಗ ಆಗಾಕತ್ತಿತ್ತು. ಮತ್ಯಾರೂ ಅವನಿಗಿ ಏಳಸೋ ಉಸಾಬರಿನೇ ಮಾಡಿರಲಿಲ್ಲ.

          *********************

ನನ್ನ ಮಗ ’ನೀ ಕತಿ ಹೇಳಂದ್ರೆ ಏನು ಯೋಚನೆ ಮಾಡಾಕತ್ತಿ..?’ ಅಂತ  ನನ್ನ ಹಿಡಿದು ಅಲ್ಲಾಡಿಸಿದಾಗಲೇ ನಾ ಮತ್ತ  ಮೂರು ದಶಕ ಮುಂದ ಬಂದು, ಹೀಂಗ್ ಒಂದು ಊರಲ್ಲಿ… ಅಂತ ಕತೀ ಸುರು ಮಾಡೂ ಮೊದಲೇ ’ಇದು ಬ್ಯಾಡ ನನಗೆ ಪೋಗೋ ಚಾನೆಲ್‍ನಲ್ಲಿ ಬರ್ತಾನಲ್ಲ, ಮಿ.ಬೀನ್, ಅವನ ಕತಿ ಹೇಳು ಅಂದ. ನನಗ ನೋಡದರೆ ಆ ಮಿ.ಬೀನ್ ಆಗಲೀ.. ಅವನ ಕತೆಯಾಗಲೀ ಯಾವುದೂ ಗೊತ್ತಿಲ್ಲ. ಇವನಿಗಿ ಹ್ಯಾಂಗ ಹೇಳೂದು ಅನ್ನೂದರೊಳಗ ’ಪೋಗೊ ಚಾನೆಲ್‍ನಲ್ಲಿ ,ಮಿ.ಬೀನ್ ಕಾರ್ಟೂನ್ ಎನಿಮೇಶನ್ ಬಂತ್ನೋಡು ಬಾ’ ಅಂತ ಅವಳು ಕರದಿದ್ದೇ, ನಾನೊಂದು ದೊಡ್ಡ ನಿಟ್ಟುಸಿರನ್ನು ಬಿಟ್ಟು ಬಚಾವಾಗಿದ್ದೆ.

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಹೊಸ ಕವಲುಗಳು


-ಶ್ರೀಮತಿ ದೇವಿ


ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದ ಸುದೀರ್ಘ ಪರಂಪರೆಯಲ್ಲಿ ಅನೇಕ ಪ್ರತಿಭಾವಂತ ಕಲಾವಿದರು ಬೆಳಗಿ ಮರೆಯಾಗಿದ್ದಾರೆ. ಸಂಗೀತ, ನೃತ್ಯಗಳಿಗೆ ಸಮಾಜದಲ್ಲಿ ಯಾವುದೇ ರೀತಿಯ ಪ್ರೋತ್ಸಾಹ, ಗೌರವಯುತವಾದ ಸ್ಥಾನ ಇಲ್ಲದ ಕಾಲದಲ್ಲಿ ಈ ಕಲಾವಿದರು ತಮ್ಮ ಜೀವನದುದ್ದಕ್ಕೂ ಉತ್ತಮ ಸಂಗೀತಕ್ಕಾಗಿ, ಅದನ್ನು ಕೇಳಬಲ್ಲ ಸಹೃದಯಿ ಶ್ರೋತೃಗಳ ಒಂದು ಪುಟ್ಟ ಗುಂಪಿಗಾಗಿ, ಸಮಾಜದಲ್ಲಿ ಶಾಸ್ತ್ರೀಯ ಸಂಗೀತಕ್ಕೊಂದು ಅಸ್ತಿತ್ವ ಕಲ್ಪಿಸಿ ಕೊಡುವುದಕ್ಕಾಗಿ ಹಂಬಲಿಸಿ, ದುಡಿದು ಇಂದು ನಾವು ನಿಂತಿರುವ ದೃಢವಾದ ನೆಲೆಗಟ್ಟನ್ನು ನಿರ್ಮಿಸಿಕೊಟ್ಟಿದ್ದಾರೆ.

ಯಾವುದೇ ಒಂದು ವಿಚಾರವನ್ನು ಪ್ರತಿಕೂಲಗಳಿಗೆ ಎದುರಾಗಿ ನಿಂತು ಹೆಣಗಾಡಿ, ಹೋರಾಡಿ ಸ್ಥಾಪಿಸುವುದು ತುಂಬಾ ಕಠಿಣವಾದ ಕೆಲಸ. ಆದರೆ ಅಷ್ಟೇ ಸವಾಲಿನಿಂದ ಕೂಡಿದ್ದು, ಹಾಗೆ ಸ್ಥಾಪಿಸಿದ ವಿಚಾರವನ್ನು ಅದರ ಮೂಲ ಸತ್ವಕ್ಕೆ ಧಕ್ಕೆ ಬಾರದಂತೆ ಬಹಳಕಾಲ ಜನಮಾನಸದಲ್ಲಿ ಉಳಿಸಿಕೊಂಡು ಮುನ್ನಡೆಸುವುದು. ಹಾಗೆಯೇ ಏಕತಾನತೆ ಎಂದೂ ಅನಿಸದಂತೆ ಕಾಲಕ್ಕನುಗುಣವಾಗಿ ವಿಚಾರದಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡುವುದೂ ಅಷ್ಟೇ ಮುಖ್ಯವಾಗುತ್ತದೆ. ಒಂದು ದೇಶದ ಸಾಂಸ್ಕೃತಿಕ ಚರಿತ್ರೆಯ ಯಾವುದೇ ಒಬ್ಬ ವಿದ್ಯಾರ್ಥಿಗೆ ಇದರ ಅಧ್ಯಯನ ಬಹಳ ಮಹತ್ವಪೂರ್ಣವಾದದ್ದು ಎಂದೆನಿಸುತ್ತದೆ.

ಭಾರತೀಯ ಶಾಸ್ತ್ರೀಯ ಸಂಗೀತ, ಭರತನಾಟ್ಯ ಮುಂತಾದ ನೃತ್ಯ ಪ್ರಕಾರಗಳು, ಶಿಲ್ಪಕಲೆ ಇವುಗಳೆಲ್ಲಾ ಬಹಳ ಪುರಾತನ, ಪಾರಂಪರಿಕ ಹಾಗೂ ದೈವಿಕ ಕಲೆಗಳು ಎಂದು ನಂಬಲ್ಪಟ್ಟವು. ಕಲಿಯ ಬಯಸುವವನ ಸಂಪೂರ್ಣ ಸಮರ್ಪಣೆಯನ್ನು ಬೇಡುವಂಥವು.

ಹಿಂದುಸ್ಥಾನೀ ಸಂಗೀತವು ನಾದಪ್ರಧಾನವಾಗಿದ್ದು ‘ಶಬ್ದಕ್ಕೆ ಮೀರಿದ’ ಸಂಗೀತವೆಂದು ಗುರುತಿಸಲ್ಪಟ್ಟಿದೆ. ಹಿಂದಿನ ಗುರುಶಿಷ್ಯ ಪರಂಪರೆಯಲ್ಲಿ ಲೇಖನಿ ಪುಸ್ತಕಗಳು ಇಲ್ಲದ ಕಾಲದಲ್ಲಿ ಗುರುವಿನಿಂದ ಶಿಷ್ಯನಿಗೆ ಬಾಯ್ದೆರೆಯಾಗಿ ಬಂದಿಷ್‍ಗಳ ಪಾಠಾಂತರವಾಗುತ್ತಿತ್ತು. ಸಾವಿರಾರು ಬಂದಿಷ್ ಗಳನ್ನು ನೆನಪಿಟ್ಟುಕೊಂಡು ಹಾಡುವ ಉಸ್ತಾದ್‍ಗಳು, ಗವಾಯಿಗಳು ಇದ್ದರು.

ಹೀಗೆ ಮೌಖಿಕ ಪರಂಪರೆಯನ್ನು ಹೊಂದಿ, ಶಬ್ದಕ್ಕೆ ಮೀರಿದ ‘ಅಮೂರ್ತ’ವಾದ ನಮ್ಮ ಸಂಗೀತ, ವೀಡಿಯೋ, ಮೈಕ್ರೋಫೋನ್, ರೆಕಾರ್ಡರ್‌ಗಳಿಂದ ಕೂಡಿದ ಸಂಪೂರ್ಣವಾಗಿ ದಾಖಲೆಗೊಳಗಾಗಿರುವ (documentation) ಇಂದಿನ ಯುಗದವರೆಗೆ ಸಾಗಿ ಬಂದ ಪಯಣದಲ್ಲಿ ತನ್ನ ‘ಶಬ್ದದಾಚೆಗಿನ ತುಡಿತ’ವನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಆತಂಕವೂ ಒಮ್ಮೊಮ್ಮೆ ನಮ್ಮನ್ನು ಕಾಡುತ್ತದೆ.

ಜಾನಪದ ಸಂಗೀತದ ತಳಹದಿಯಿಂದ ಮೈದಳೆದ ಈ ಸಂಗೀತ ಇವತ್ತು ಅತ್ಯಂತ ಕ್ರಮಬದ್ಧವಾಗಿ, ಪರಿಷ್ಕೃತವಾಗಿ, ‘ಶಾಸ್ತ್ರೀಯ’ ಎಂಬ ಹೆಸರಿನೊಂದಿಗೆ ವೇದಿಕೆ ಏರಿ ಕುಳಿತ ಪರಿ ಅಚ್ಚರಿ ಮೂಡಿಸುತ್ತದೆ. ಆದರೆ ಅದರೊಂದಿಗೇ ಒಬ್ಬ ಮಹಿಳೆ ತಾನು ಗೌರವಯುತವಾಗಿ ಸಂಸಾರದ ಚೌಕಟ್ಟಿನೊಳಗೆ ಇದ್ದುಕೊಂಡು ಉತ್ತಮವಾದ ಸಾಮಾಜಿಕ ಜೀವನವನ್ನೂ ಕಾಪಾಡಿಕೊಂಡು ಸಂಗೀತ ಕಲಿಯ ಬಹುದಾದ ಹಾಗೂ ವೇದಿಕೆ ಏರಬಹುದಾದ ವಾತಾವರಣ ಇಂದು ನಿರ್ಮಾಣಗೊಂಡಿದೆ. ಹಾಗೇಯೇ ಸಮಾಜದ ಮುಖ್ಯವಾಹಿನಿಯಲ್ಲಿ ವೈದ್ಯರು, ಶಿಕ್ಷಕರು, ಇಂಜಿನಿಯರುಗಳು ಮೊದಲಾದವರೊಂದಿಗೆ ಸಮಾನವಾಗಿ ಸಂಗೀತಗಾರರೂ ಗುರುತಿಸಿಕೊಳ್ಳುವಂತಾದದ್ದು ಸಮಾಧಾನವನ್ನು ನೀಡುತ್ತದೆ.

ಸಂಗೀತ ಕ್ಷೇತ್ರದ ಈ ಎಲ್ಲಾ ಬದಲಾದ ಸಂದರ್ಭದಲ್ಲಿ ನಿಂತು, ಇತ್ತೀಚೆಗೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿರುವ ಪ್ರತಿಭಾವಂತ ಯುವ ಗಾಯಕರುಗಳನ್ನು ಗುರುತಿಸಲು ಹೊರಟಾಗ ಮನಸ್ಸಿಗೆ ಸಂತೋಷವಾಗುವುದರೊಂದಿಗೆ, ಶಾಸ್ತ್ರೀಯ ಸಂಗೀತದ ಮುಖ್ಯ ಪ್ರವಾಹಕ್ಕೆ ಬಂದು ಸೇರುತ್ತಲೇ ಇರುವ ಚಿಕ್ಕ ಚಿಕ್ಕ ಧಾರೆ, ಒಳ ಹರಿವುಗಳ ಅನುಭವವೂ ಆಯಿತು. ಈ ಧಾರೆ, ಹರಿವುಗಳನ್ನು ‘ಮಾಡರ್ನ್ ಟ್ರೆಂಡ್ಸ್’ ಅಥವಾ ‘ವೈಯಕ್ತಿಕ ಕೊಡುಗೆ’ ಎಂಬ ಹೆಸರಿನಡಿಯೂ ಗುರುತಿಸಬಹುದೇನೋ… ಆದರೆ ನಾನು, ನನ್ನ ಕೇಳ್ಮೆ ಹಾಗೂ ಅರ್ಥೈಸಿಕೊಳ್ಳುವ ಮಿತಿಯೊಳಗೆ ಕೇವಲ ಗಾಯನ ಪ್ರಕಾರದಲ್ಲಿ ಉಂಟಾಗುತ್ತಿರುವ ಕೆಲವು ಗುರುತಿಸಲೇಬೇಕಾದ ಬದಲಾವಣೆಗಳನ್ನು, ಹೊಸದಾರಿಯಲ್ಲಿ ಸಾಗಿ ಬರುತ್ತಿರುವ ಕೆಲವು ಚಿಂತನೆಗಳನ್ನು, ನನ್ನ ಮನಮುಟ್ಟಿದ ಕೆಲವು ಅಪರೂಪದ ಪ್ರತಿಭೆಗಳನ್ನು ಈ ಬರಹದಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಹೊರಟಿದ್ದೇನೆ.

ಹಿಂದೂಸ್ಥಾನಿ ಸಂಗೀತದ ಇತಿಹಾಸವನ್ನು ಸಂಪೂರ್ಣವಾಗಿ ಗಮನಿಸಿದಾಗ, ಇದು ಹೆಚ್ಚಾಗಿ ಪುಣೆ, ಮುಂಬೈ, ಕಲ್ಕತ್ತಾ, ಬನಾರಸ್, ಲಖ್ನೊ, ಗ್ವಾಲಿಯರ್, ಧಾರವಾಡ, ಗೋವಾ ಮುಂತಾದ ಪಟ್ಟಣಗಳಲ್ಲೇ ಬೆಳೆದು ಬಂದಿರುವುದು ಕಂಡು ಬರುತ್ತದೆ. ಈ ಪಟ್ಟಣಗಳು ಸಂಗೀತವನ್ನು ಬಯಸಿ ಬರುವ ಗ್ರಾಮೀಣ ಪ್ರದೇಶದ, ಏನೂ ಸಂಗೀತದ ಹಿನ್ನಲೆಯಿಲ್ಲದಿರುವ ವಿದ್ಯಾರ್ಥಿಗಳಿಗೂ ನೂರಾರು ವರ್ಷಗಳಿಂದ ಅನ್ನ, ವಿದ್ಯೆ ನೀಡಿ ಪೊರೆದಿವೆ, ಪೊರೆಯುತ್ತಿವೆ. ಸಂಗೀತದ ತೀರ್ಥಸ್ಥಾನಗಳು ಎನಿಸಿದ ಫುಣೆ, ಕಲ್ಕತ್ತಾ, ಮುಂಬಯಿ, ಗ್ವಾಲಿಯರ್ ಇತ್ಯಾದಿ ನಗರಗಳ ಇಂದಿನ ಸಂಗೀತದ ವಾತಾವರಣವನ್ನು ನೋಡಿದಾಗ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರು ಯಾವತ್ತೂ ಹೇಳುತ್ತಿದ್ದ ‘ಸಂಗೀತವೆಂದರೆ ತೊಟ್ಟಿಲು ಇದ್ದ ಹಾಗೆ. ನಾವು ತೂಗುವುದು ನಿಲ್ಲಿಸಿದರೆ, ನಮ್ಮ ಹಿಂದೆ ಬಂದವರು ತೊಟ್ಟಿಲಿಗೆ ಕೈ ಹಚ್ಚುತ್ತಾರೆ’ ಎಂಬ ಮಾತು ನಿಜವೆನಿಸುತ್ತದೆ. ಈಗಿರುವ ಹಿರಿಯ ತಲೆಮಾರಿನ ಸಂಗೀತಗಾರರಾದ ಕಿಶೋರಿ ಅಮೋನ್ಕರ್, ಅಶ್ವಿನಿ ಭಿಡೆ ದೇಶಪಾಂಡೆ, ವೀಣಾ ಸಹಸ್ರಬುಧ್ಧೆ, ಉಲ್ಲಾಸ್ ಕಶಾಲ್ಕರ್, ಮಾಲಿನಿ ರಾಜುರ್ಕರ್, ರಶೀದ್ ಖಾನ್, ಅಜಯ್ ಚಕ್ರವರ್ತಿ, ಜಸ್‍ರಾಜ್, ಪದ್ಮಾ ತಲ್ವಾಲ್ಕರ್, ಸಂಜೀವ್ ಅಭ್ಯಂಕರ್ ಇವರೆಲ್ಲರ ನಂತರದ ತಲೆಮಾರಿನ ಗಾಯಕರಲ್ಲಿ ಹಲವರು ಭರವಸೆಯನ್ನು ಮೂಡಿಸುತ್ತಾರೆ.

ಈ ನಿಟ್ಟಿನಲ್ಲಿ ಗುರುತಿಸಲೇಬೇಕಾದ ಕೆಲವು ಹೆಸರುಗಳನ್ನು ಕೆಳಗೆ ಚರ್ಚಿಸಿದ್ದೇನೆ.

ಕೌಶಿಕಿ ಚಕ್ರವರ್ತಿ: ಪಂ.ಅಜಯ್ ಚಕ್ರವರ್ತಿ ಅವರ ಮಗಳೂ ಹಾಗೂ ಶಿಷ್ಯೆಯೂ ಆದ ಕೌಶಿಕಿಯ ಹೆಸರು ಕೇಳದ ಸಂಗೀತ ಪ್ರಿಯರಿಲ್ಲ. ಎಳೆವೆಯಿಂದಲೇ ಸಂಗೀತದ ಗಂಭೀರ ಅಭ್ಯಾಸ ನಡೆಸಿ, ಕಲ್ಕತ್ತಾದಲ್ಲಿರುವ ಪ್ರಸಿದ್ಧ ಸಂಗೀತ ಸಂಸ್ಥೆಯಾದ ಐಟಿಸಿಯ ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಹೆಚ್ಚಿನ ಅಭ್ಯಾಸ ಮಾಡಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರತಿಷ್ಠಿತ ಸಂಗೀತ ಸಭೆಗಳಲ್ಲೆಲ್ಲಾ ಹಾಡಿ, ಅನೇಕ ಬಾರಿ ವಿದೇಶ ಪ್ರಯಾಣವನ್ನೂ ಮಾಡಿದವರು ಕೌಶಿಕಿ. ಶಾಸ್ತ್ರೀಯ ಸಂಗೀತದಷ್ಟೇ ಸಮರ್ಥವಾಗಿ ಠುಮ್ರಿ, ದಾದ್ರಾಗಳನ್ನೂ ಹಾಡಬಲ್ಲವರು. ಲಯದ ಮೇಲಿನ ಪ್ರಭುತ್ವ, ತಮ್ಮ ಕಂಠಸಿರಿಯನ್ನು ದುಡಿಸಿಕೊಂಡ ರೀತಿ ಶ್ಲಾಘನೀಯವದುದು. ಇವರು ಪಟಿಯಾಲ ಘರಾಣೆಯ ಹಾಡುಗಾರ್ತಿ.

ಅರ್ಶದ್ ಅಲಿ ಖಾನ್: ಅರ್ಶದ್ ಐ.ಟಿ.ಸಿ ಯಿಂದ ಹೊರಬಂದ ಮತ್ತೋರ್ವ ಪ್ರತಿಭೆ. ಸಾರಂಗಿ ಮಾಂತ್ರಿಕ ಎನಿಸಿದ್ದ ಉ.ಶಕೂರ್ ಖಾನರ ಮೊಮ್ಮಗ, ಇವರು.  4 ವರ್ಷದ ಬಾಲಕನಾಗಿದ್ದಾಗಲೇ 40ರಾಗಗಳ ಪರಿಚಯ ಹೊಂದಿದ್ದರು.  8 ವರ್ಷದವನಾದಾಗ ಕಲ್ಕತ್ತಾದ ಐಟಿಸಿ ಸಂಸ್ಥೆ ಸೇರಿ, ಅಲ್ಲಿ ಉ.ಮಶ್ಕುರ್ ಅಲಿ ಖಾನ್ ಹಾಗೂ ಉ.ಮುಬಾರಕ್ ಅಲಿ ಖಾನ್ ಅವರ ಬಳಿ ಕಿರಾಣಾ ಸಂಪ್ರದಾಯದಲ್ಲಿ ಸಂಗೀತಾಭ್ಯಾಸ ಮಾಡಿದರು. ತಮ್ಮ ಘರಾಣೆಯ ವೈಶಿಷ್ಟ್ಯಗಳನ್ನು ಗಾಯನದಲ್ಲಿ ಯಶಸ್ವಿಯಾಗಿ ಪಡಿಮೂಡಿಸುತ್ತಾರೆ.

ಪುಶ್ಕರ್ ಲೇಲೆ: ಗುರುಮುಖೇನ ಪಡೆದ ವಿದ್ಯೆಯನ್ನು ತಮ್ಮ ಪ್ರತಿಭೆಯ ಮೂಸೆಯಲ್ಲಿ ತಿದ್ದಿ, ಸಂಗೀತವಾಗಿ ಹೊರತಂದವರು, ಪುಶ್ಕರ್. ಆರಂಭದಲ್ಲಿ ಶ್ರೀ ಗಂಗಾಧರ ಬುವಾ ಪಿಂಪಳ್ಕರ್  ಇವರ ಬಳಿ ಗ್ವಾಲಿಯರ್ ಶೈಲಿಯಲ್ಲಿ ಅಭ್ಯಾಸ ಆರಂಭಿಸಿ, ಮುಂದೆ ಶ್ರೀ ವಿಜಯ್ ಕೊಪರ್ಕರ್ ಹಾಗೂ ಹಲವಾರು ವರ್ಷ ಶ್ರೀ ವಿಜಯ್ ಸರದೇಶ್‍ಮುಖ್ ಅವರ ಬಳಿ ಅಭ್ಯಾಸ ಮಾಡಿದ್ದಾರೆ. ಸರದೇಶ್‍ಮುಖ್  ಅವರು ಸಂಗೀತದ ಆಧುನಿಕ ಯುಗದ ನೇತಾರರಾದ ಪಂ.ಕುಮಾರ ಗಂಧರ್ವರ ಪ್ರಮುಖ ಶಿಷ್ಯರಾಗಿದ್ದಾರೆ. ಇಂದಿನ ದಿನಮಾನದಲ್ಲಿ ಇರುವ ಕೆಲವೇ ಟಪ್ಪಾ ಗಾಯಕರಲ್ಲಿ ಪುಶ್ಕರ್ ಕೂಡಾ ಒಬ್ಬರು. ಸಂಗೀತಕ್ಕೆ ಸಂಬಂಧಿಸಿದ ಅನೇಕ ಉತ್ತಮ ವಿಚಾರಗಳನ್ನು ಹೊಂದಿರುವ ಇವರು, ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಅಪೂರ್ವ ಗೋಖಲೆ: ಅಪೂರ್ವ, ಗ್ವಾಲಿಯರ್ ಘರಾಣೆಯ ಹಿರಿಯ ಗಾಯಕ-ವಯೋಲಿನ್ ವಾದಕ-ಶ್ರೇಷ್ಠ ಗುರುವೂ ಆಗಿದ್ದ ಪಂ.ಗಜಾನನ ಬುವಾ ಜೋಶಿ ಅವರ ಮೊಮ್ಮಗಳು. ತಮ್ಮ ಅಜ್ಜನ ಬಳಿಯೇ ಅಭ್ಯಾಸ ಆರಂಭಿಸಿ, ನಂತರ ಮಾವ ಮಧುಕರ್ ಜೋಶಿ ಅವರ ಬಳಿ ಮುಂದುವರಿಸಿದರು. ಉನ್ನತ ಅಭ್ಯಾಸವನ್ನು ಪಂ.ಉಲ್ಲಾಸ್ ಕಶಾಲ್ಕರ್ ಅವರ ಬಳಿ ಮಾಡಿ, ಸದ್ಯ ಅಶ್ವಿನಿ ಭಿಡೆ ಅವರ ಮಾರ್ಗದರ್ಶನದೊಂದಿಗೆ ಮುಂದೆ ಸಾಗುತ್ತಿದ್ದಾರೆ. ತಮ್ಮ ಸಹೋದರಿ ಪಲ್ಲವಿ ಜೋಶಿ ಜೊತೆಗೂ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಸಹೋದರಿಯರಿಬ್ಬರೂ ಪ್ರತಿಭಾವಂತರಾಗಿದ್ದು ಪಾರಂಪರಿಕ ಝುಮ್ರಾ, ತಿಲವಾಡ ತಾಳಗಳಲ್ಲಿ ರಾಗಗಳನ್ನು ಸುಂದರವಾಗಿ ಹಿಡಿದಿಡುತ್ತಾರೆ.

ಮಂಜೂಷಾ ಕುಲಕರ್ಣಿ ಪಾಟೀಲ್: ಆಗ್ರಾ-ಗ್ವಾಲಿಯರ್ ಘರಾಣೆಯ ಗಾಯಕಿ, ಮಂಜೂಷಾ. ಚಿಂಟುಬುವಾ ಮೈಸ್ಕರ್ ಹಾಗೂ ಡಿ.ವಿ. ಖಾನೆಬುವಾ ಅವರ ಬಳಿ, ಗುರು-ಶಿಷ್ಯ ಪರಂಪರೆಯಲ್ಲಿ ಹಲವಾರು ವರ್ಷ ಅಭ್ಯಾಸ ಮಾಡಿ, ಪ್ರಸ್ತುತ ಶ್ರೀ ವಿಕಾಸ ಕಶಾಲ್ಕರ್ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಕಲಾವಿದೆಯಾದ ಇವರ ಗಾಯನ, ಶಕ್ತಿಯುತವಾದ ಗಾಯನವೆಂದೇ ಗುರುತಿಸಲ್ಪಡುತ್ತದೆ. ಇವರ ಗಾಯನದಲ್ಲಿ ಲಯದ ಬಗೆಗಿನ ಆತ್ಮ ವಿಶ್ವಾಸ, ರಾಗಶುದ್ಧತೆ, ತಾನ್‍ಗಳ  ಸಂಕೀರ್ಣತೆ ಎದ್ದು ಕಾಣುತ್ತದೆ. ಉತ್ತಮವಾಗಿ ಮರಾಠಿ ನಾತ್ಯ ಗೀತೆಗಳನ್ನು, ಅಭಂಗಗಳನ್ನು ಹಾಡುತ್ತಾರೆ.

ಶಾಶ್ವತಿ ಮಂಡಲ್-ಪಾಲ್: ಮಧ್ಯ ಪ್ರದೇಶದ ಗ್ವಾಲಿಯರ್, ಸಂಗೀತದ ಪ್ರಮುಖ ಘರಾಣೆಗಳಲ್ಲಿ ಒಂದಾದ ಗ್ವಾಲಿಯರ್ ಘರಾಣೆಯ ಜನ್ಮ ಭೂಮಿ. ಇಂಥಹ ಗ್ವಾಲಿಯರ್ ಹಾಗೂ ಅದರ ನೆರೆಯ ಭೋಪಾಲ್ ಶಾಶ್ವತಿಯ ಕರ್ಮಭೂಮಿ. ಶಾಶ್ವತಿ, ಆರಂಭದ ಶಿಕ್ಷಣವನ್ನು ತಮ್ಮ ತಾಯಿ ಕಮಲಾ ಮಂಡಲ್ ಬಳಿ ಪಡೆದರು. ನಂತರ, ಘರಾಣೆಯ ಹಿರಿಯ ಗಾಯಕರಾದ ಬಾಳಾ ಸಾಹೇಬ ಪೂಛ್‍ವಾಲೆ ಅವರ ಬಳಿ ಖ್ಯಾಲ್  ಹಾಗೂ ಟಪ್ಪಾ ಗಾಯಕಿಯ ಅಭ್ಯಾಸ ಮಾಡಿದರು. ಕೆಲವು ಕಾಲ ಗುಂಡೇಚಾ ಸಹೋದರರಿಂದಲೂ ಮಾರ್ಗದರ್ಶನ ಪಡೆದಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಕಲಾವಿದೆಯಾದ ಇವರು, ಟಪ್ಪಾ ಗಾಯನದಲ್ಲಿ ಪರಿಣತಿಯನ್ನು ಸಾಧಿಸಿದ್ದಾರೆ.

ಸಾವನಿ ಶೆಂಡೆ: ಪ್ರಸ್ತುತ ವೀಣಾ ಸಹಸ್ರಬುದ್ಧೆ ಅವರಿಂದ ಉನ್ನತ ಮಾರ್ಗದರ್ಶನ ಪಡೆಯುತ್ತಿರುವ ಸಾವನಿ ಜನಿಸಿದ್ದು ಸಂಗೀತಗಾರರ ಮನೆಯಲ್ಲೇ. ಇವರ ಅಜ್ಜಿ ಹಿರಿಯ ಖ್ಯಾಲ್ ಹಾಗೂ ಠುಮ್ರಿ ದಾದ್ರಾಗಳ ಗಾಯಕಿ, ಕುಸುಮ್ ಶೆಂಡೆ. ಸಾವನಿಯ ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದರೂ, ಅತ್ಯುತ್ತಮ ಗಾಯಕರು. ಹೀಗೆ ಎಳವೆಯಿಂದಲೇ ಆರಂಭಗೊಂಡ ಸಂಗೀತಾಭ್ಯಾಸ ಇಂದು ಆಕೆಯನ್ನು ಉತ್ತಮ ಕಲಾವಿದೆಯನ್ನಾಗಿ ಮಾಡಿದೆ. ಸಾವನಿ, ಹಲವಾರು ಮರಾಠಿ ಸಿನಿಮಾಗಳಿಗೆ ಕಂಠ ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದುವು, ಸಾವಲೀ, ಕೈರೀ ಇತ್ಯಾದಿ. ಜಸರಾಜ್ ಗೌರವ ಪುರಸ್ಕಾರ, ಮಾಣಿಕ್ ಭಿಡೆ ಪ್ರಶಸ್ತಿ, ಸುರಮಣಿ ಮುಂತಾದ ಹಲವು ಪುರಸ್ಕಾರ ಪಡೆದಿದ್ದಾರೆ.

ಮಂಜಿರಿ ಅಸಾನಾರೆ ಕೇಳ್ಕರ್: ಮರಾಠಿ ಭಾಷೆಯ ಹೆಸರಾಂತ ಲೇಖಕರಾದ ಪು.ಲಾ.ದೇಶಪಾಂಡೆ ಅವರು ಮಂಜಿರಿಯನ್ನು ‘ಭವಿಷ್ಯದ ಕೇಸರಿಬಾಯಿ’ ಎಂದು ಗುರುತಿಸಿದ್ದಾರೆ. ಇವರ ತಂದೆ ಆನಂದ ಕೇಳ್ಕರ್, ತಬಲಾ ವಾದಕರು. ಮಂಜಿರಿ ತಮ್ಮ ಸಂಗೀತದ ಆರಂಭವನ್ನು, ಜೈಪುರ್ ಅತ್ರೌಲಿ ಘರಾಣೆಯ ಬುರ್ಜಿ ಖಾನರ ಶಿಷ್ಯರಾದ ಪಂ.ಖಾನೆಟಕರ್ ಬುವಾ ಅವರ ಬಳಿ ಆರಂಭಿಸಿದರು. ಮುಂದೆ ಸಿ ಟಿ ಮೈಸ್ಕರ್ ಅವರ ಬಳಿ ಮುಂದುವರಿಸಿದರು. ಇಂದು ತಮ್ಮ ಯಾವುದೇ ರೀತಿಯ ಚಮತ್ಕಾರಗಳಿಲ್ಲದ, ಶುದ್ಧ ಸಂಗೀತದಿಂದ ಹೆಸರಾಗಿರುವ ಮಂಜಿರಿ, ಮೂಲತಃ ಉತ್ತಮ ಕಥಕ್ ನೃತ್ಯಗಾರ್ತಿ. ತಮ್ಮ ಗಾಯನದ ಮುಂದುವರಿಕೆಗಾಗಿ, ಜೈಪುರ್ ಘರಾಣೆಯ ಮೇರು ಕಲಾವಿದೆ, ಸ್ವರಶ್ರೀ ಕೇಸರಬಾಯಿ ಕೇರ್ಕರ್ ವಿದ್ಯಾರ್ಥಿ ವೇತನವನ್ನೂ ಪಡೆದಿದ್ದಾರೆ.

ಶೌನಕ್ ಅಭಿಶೇಕಿ: ಶೌನಕ್,  ಪಂ.ಜಿತೇಂದ್ರ ಅಭಿಶೇಕಿ ಅವರ ಮಗ ಹಾಗೂ ಶಿಷ್ಯ. ಆಗ್ರಾ-ಜೈಪುರ್ ಘರಾಣೆಯ ಗಾಯಕ. ತಮ್ಮ ತಂದೆಯ ರಚನೆಗಳನ್ನು ಆಧರಿಸಿದ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸಿ ಪ್ರಸ್ತುತಪಡಿಸಿದ್ದಾರೆ. ಸರಸ್ವತಿ ರಾಣೆ ಪುರಸ್ಕಾರ್, ಪುಣೆ ಕಿ ಆಶಾ ಇತ್ಯಾದಿ ಹಲವು ಗೌರವಕ್ಕೆ ಪಾತ್ರರಾಗಿದ್ದಾರೆ.

ಅನುರಾಧಾ ಕುಬೇರ್: ಇಂದು ಹೆಚ್ಚು ಪ್ರಸಿದ್ಧಿಯಲ್ಲಿ ಇಲ್ಲದ ‘ಬೆಂಡಿ ಬಜಾರ್ ಘರಾಣೆ’ಯ ಗಾಯಕಿ, ಅನುರಾಧಾ. ಶಾಂತವಾದ ರಾಗ ವಿಸ್ತಾರ, ಸ್ವರದೆಡೆಗಿನ ಪ್ರೀತಿಯಿಂದ ಕೇಳುಗರ  ಮನಸ್ಸನ್ನು ಗೆದ್ದಿದ್ದಾರೆ. ಸುಮಾರು 15 ವರ್ಷಗಳ ಕಾಲ, ಘರಾಣೆಯ ಪಂ. ಟಿ ಡಿ ಜನೋರಿಕರ್ ಬುವಾ ಬಳಿ ಉತ್ತಮವಾದ ತಾಲೀಮನ್ನು ಪಡೆದಿದ್ದಾರೆ. ಪ್ರಸ್ತುತ ಶ್ರೀ ಅರವಿಂದ ಥಟ್ಟೆ ಯವರ ಬಳಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಗಾಯಕಿ. ತಮ್ಮ ಘರಾಣೆಯ ಖಾಸ್ ಬಂದಿಷ್‍ಗಳನ್ನು ಸಮರ್ಥವಾಗಿ ಹಾಡಬಲ್ಲವರು, ಅನುರಾಧಾ.

ಜಯತೀರ್ಥ ಮೇವುಂಡಿ: ಕರ್ನಾಟಕದ ಹೆಸರನ್ನು ದೇಶಾದ್ಯಂತ ಮೆರೆಸುತ್ತಿರುವ  ಅಪರೂಪದ ಕಲಾವಿದ, ಮೇವುಂಡಿ. ಕಿರಾಣಾ ಸಂಪ್ರದಾಯದ ತಾಲೀಮು ಹಾಗೂ ತಮ್ಮ ಪ್ರತಿಭೆ ಎರಡರ ಅದ್ಭುತವಾದ ಪಾಕವನ್ನು ಪ್ರತೀ ಕಾರ್ಯಕ್ರಮದಲ್ಲೂ ಉಣಬಡಿಸುತ್ತಿದ್ದಾರೆ.  ಆರಂಭಿಕ ಶಿಕ್ಷಣವನ್ನು, ಗಾನಭಾನು ಎಂದೇ ಹೆಸರಾಗಿದ್ದ, ಕಿರಾಣಾ ಘರಾಣೆಯ ಪಂ. ಅರ್ಜುನ್‍ಸಾ ನಾಕೋಡ್ ಅವರ ಬಳಿ ಪಡೆದು, ಮುಂದೆ ಭೀಮಸೇನ್ ಜೋಶಿ ಅವರ ಶಿಷ್ಯರಾದ ಶ್ರೀಪತಿ ಪಾಡಿಗಾರ್ ಅವರ ಶಿಷ್ಯತ್ವ ಮಾಡಿದರು. ಗಂಭೀರವಾದ ಅಲಾಪ್, ತಾನ್‍ಗ‍ಳ ಕುಸುರಿ ಕೆಲಸ, ಮಧುರವಾದ ಅಭಂಗ್‍ಗಳಿಂದ ಸಭೆ ಗೆಲ್ಲಬಲ್ಲವರು, ಮೇವುಂಡಿ. ಜಸರಾಜ್ ಪ್ರಶಸ್ತಿ, ಐ ಟಿ ಸಿ ನೀಡುವ ಗೌರವ, ಹೀಗೆ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

ಗೌರಿ ಪಠಾರೆ: ಮುಂಬೈ ನಿವಾಸಿಯಾಗಿರುವ ಗೌರಿ, ಆರಂಭಿಕ ಅಭ್ಯಾಸವನ್ನು ಪಂ. ಗಂಗಾಧರ ಪಿಂಪಳ್ಕರ್ ಅವರ ಬಳಿ ಮಾಡಿದ್ದಾರೆ. ಮುಂದೆ ಆರು ವರ್ಷಗಳ ಕಾಲ ಜಿತೇಂದ್ರ ಅಭಿಶೇಕಿ ಅವರಲ್ಲಿ ಅಭ್ಯಾಸ ಮಾಡಿ, ಪ್ರಸ್ತುತ 10-15 ವರ್ಷಗಳಿಂದ ಪುಣೆಯ ಪದ್ಮಾ ತಲವಾಲ್ಕರ್ ಅವರ ಬಳಿ ವಿದ್ಯಾಭ್ಯಾಸ ನಡೆಸಿದ್ದಾರೆ. ಇವರ ಗಾಯನದ ಗತ್ತುಗಾರಿಕೆ, ಗಾಯನದಿಂದ ಸಭೆಯನ್ನು ತುಂಬುವ ರೀತಿ ಶ್ರೋತೃಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ರಾಮಕೃಷ್ಣ ಬುವಾ  ವಝೆ ಪ್ರಶಸ್ತಿಯೇ ಮೊದಲಾದ ಹಲವು ಗೌರವಗಳನ್ನು ಗೌರಿ ಪಡೆದಿದ್ದಾರೆ.

ಚೇತನಾ ಬನಾವತ್: ಕಿರಾಣಾ ಘರಾಣೆಯ ಹಿರಿಯ ಗಾಯಕಿ ಡಾ.ಪ್ರಭಾ ಅತ್ರೆಯವರ ಶಿಷ್ಯೆಯಾಗಿರುವ ಚೇತನಾ ಜನಿಸಿದ್ದು, ಉದಯಪುರದಲ್ಲಿ. ಆರಂಭಿಕ ಶಿಕ್ಷಣವನ್ನು ತಮ್ಮ ತಾಯಿ ಮದನಾ ಬನಾವತ್ರಿಂದ ಪಡೆದು, ನಂತರದಲ್ಲಿ ಪ್ರಭಾ ತಾಯಿಯ ಶಿಷ್ಯೆಯಾಗಿ ಇಂದು ದೇಶದೆಲ್ಲೆಡೆ ಹೆಸರಾಗಿದ್ದಾರೆ. ಪ್ರಭಾ ಅತ್ರೆಯವರು ರಚಿಸಿದ ಬಂದಿಷ್‍ಗಳು ಇರುವ ಸಿ.ಡಿಯಾದ ‘ಸ್ವರಾಂಗಿನಿ’ ಹಾಗೂ ‘ಸ್ವರಾಂಜಿನಿ’ ಗಳಲ್ಲಿ ಪ್ರಭಾ ತಾಯಿಯವರು, ಚೇತನಾ ಅವರಿಂದಲೇ ಹಾಡಿಸಿರುವುದು, ಅವರ ಪ್ರತಿಭೆಗೆ ನಿದರ್ಶನ. ಚೇತನಾ ಸಂಗೀತ ನಾಟಕ ಅಕಾಡೆಮಿಯ ಯುವ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

ಸಾನಿಯಾ ಪಾಠನ್ಕರ್: ಜೈಪುರ್-ಅತ್ರೌಲಿ ಘರಾಣೆಯ ಮೇರು ಕಲಾವಿದೆಯಾದ ಅಶ್ವಿನಿ ಭಿಡೆ ದೇಶ್‍ಪಾ0ಡೆ ಅವರ ಶಿಷ್ಯೆಯಾದ ಸಾನಿಯಾ, ಸಿ.ಎಸ್ ಮುಗಿಸಿದ್ದಾರೆ. ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡಿರುವ ಸಾನಿಯಾ, ಭವಿಷ್ಯದಲ್ಲಿ ಹೆಸರಾಂತ ಉತ್ತಮ ಗಾಯಕಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಾನಿಯಾ, ವಿಷ್ಣು ದಿಗಂಬರ ಪ್ರಶಸ್ತಿ, ಜಸರಾಜ್ ಪ್ರಶಸ್ತಿ, ರಾಮಕೃಷ್ಣ ಬುವಾವಝೆ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅನೇಕ ರಿಯಾಲಿಟಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಠುಮ್ರಿ ದಾದ್ರಾಗಳನ್ನೂ ಸಮರ್ಥವಾಗಿ ಹಾಡ ಬಲ್ಲವರು.

ಶಶಾಂಕ್ ಮಕ್ತೇದಾರ್:  ಪ್ರಸ್ತುತ ಗೋವಾದ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಶಶಾಂಕ್, ವಿದ್ವಜ್ಜನರ ಹಾಗೂ ಸಹೃದಯಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದ ಕಲಾವಿದರು. ತಂದೆ ಶಾಮರಾವ್ ಮಕ್ತೇದಾರ್ ರಿಂದ ಆರಂಭಿಕ ಶಿಕ್ಷಣ ಪಡೆದು, 1991ರಲ್ಲಿ ಐ ಟಿ ಸಿ ಸೇರಿ, ಉಲ್ಲಾಸ್ ಕಶಾಲ್ಕರ್ ಅವರ ಬಳಿ ಹೆಚ್ಚಿನ ಅಭ್ಯಾಸ ಮಾಡಿದರು.  ತಮ್ಮ ಗುರುಗಳ ಗುರುಗಳಾದ ‘ಪಂ.ಗಜಾನನ ಬುವಾ ಜೋಶಿ ಅವರ ಸಾಂಗೀತಿಕ ಕೊಡುಗೆ’ ಎಂಬುದು ಅವರ  ಪಿಹೆಚ್‍ಡಿ ಅಧ್ಯಯನದ ವಿಷಯ.

ಕುಮಾರ್ ಮರಡೂರ್: ಪ್ರಸ್ತುತ ಕಲ್ಕತ್ತಾದ ಐ ಟಿ ಸಿ ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕುಮಾರ್, ಧಾರವಾಡದ ಮಣ್ಣಿನ ಮಗ. ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆಯಿಂದ ಸಂಗೀತಾಸಕ್ತರ ಗಮನ ಸೆಳೆದವರು. ಕುಮಾರ್ ತಮ್ಮ ತಂದೆ ಪಂ.ಸೋಮನಾಥ ಮರಡೂರ ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದಾರೆ. ಸವಾಯ್ ಗಂಧರ್ವ ಉತ್ಸವವೇ ಮೊದಲಾದ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕುಮಾರ್ ತಬಲಾ ವಾದನವನ್ನೂ ಚೆನ್ನಾಗಿ ಬಲ್ಲವರು. ಇವರ ಕಂಠವು ಕಂಚಿನ ಗಟ್ಟಿತನ, ಗಂಭೀರತೆ ಗಳ ಜೊತೆಗೆ ಹೂವಿನ ಮೃದುತ್ವವನ್ನೂ ಹೊಂದಿದೆ.

ಆರತಿ ಠಾಕೂರ್ ಕುಂಡಲ್ಕರ್:  ಪುಣೆ ನಿವಾಸಿಯಾದ ಆರತಿ, ಭರವಸೆ ಮೂಡಿಸುತ್ತಿರುವ ಗಾಯಕಿ. ಡಾ.ಪ್ರಭಾ ಅತ್ರೆ ಅವರ ಶಿಷ್ಯೆ. ಕಿರಾಣಾ ಘರಾಣೆಯ ಪದ್ಧತಿಯಲ್ಲಿ ಕಲಿತ ಇವರು ಖ್ಯಾಲ್ ಜೊತೆಗೆ ಠುಮ್ರಿ, ದಾದ್ರಾಗಳನ್ನೂ ಹಾಡುತ್ತಾರೆ. ಇವರ ಪತಿ ಸುಯೋಗ್ ಕುಂಡಲ್ಕರ್, ಪ್ರತಿಭಾವಂತ ಯುವ ಹಾರ್ಮೋನಿಯಂ ವಾದಕ.

ಇವರಷ್ಟೇ ಅಲ್ಲದೇ ತುಶಾರ್ ದತ್ತ್, ಶಿವಾನಿ ಮಾರುಲ್ಕರ್, ರುಚಿರಾ ಕೇದಾರ್, ಗಾಯತ್ರಿ ವೈರಾಗ್ಯಕರ್, ಯಶಸ್ವಿ ಸಾಠೆ, ರಂಜನಿ ರಾಮಚಂದ್ರನ್, ಶೌನಕ್ ಚಟರ್ಜಿ ಮುಂತಾದವರೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ.  ಇಲ್ಲಿ, ಯಾವುದೇ ಸಂಗೀತವು ‘ಆಧುನಿಕ’ ಎಂದು ಕರೆಯಲ್ಪಡುವುದು ಕೇವಲ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಅಲ್ಲ. ಯಾರೇ ಒಬ್ಬ ಸಂಗೀತಗಾರ ಪರಂಪರೆ ಹೇಳುವ ಶಿಸ್ತು, ನಿಯಮಗಳನ್ನು ಉಳಿಸಿಕೊಂಡೂ ಹೆಚ್ಚು ಸಂವೇದನಾ ಶೀಲವಾದ, ಹಾಗೆಯೇ ಹೆಚ್ಚು ಪ್ರಸ್ತುತವೆನಿಸುವ ಹೊಸತೊಂದನ್ನು ಕಂಡುಕೊಂಡಾಗ ಆತ ಮತ್ತೆ ಪ್ರಸ್ತುತನಾಗುತ್ತಾ ಹೋಗುತ್ತಾನೆ. ಹೀಗಾಗಿ ಆಧುನಿಕತೆ ಎನ್ನುವುದು ಮನೋಧರ್ಮಕ್ಕೆ ಸಂಬಂಧಿಸಿದ್ದು. ಹೀಗೆ ತನ್ನ ಬೇರನ್ನು ಭದ್ರವಾಗಿಟ್ಟುಕೊಂಡೇ, ಆಧುನಿಕತೆಯೆಡೆಗೆ ಸಾಗುತ್ತಿರುವ ಇವತ್ತಿನ ಸಂಗೀತದಲ್ಲಿ ಉಂಟಾಗಿರುವ ಕೆಲವು ಉತ್ತಮವಾದ, ನನಗೆ ಧನಾತ್ಮಕ ಎನಿಸಿದ ಮಾರ್ಪಾಟುಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೇನೆ.

ನನಗನಿಸುವಂತೆ ಇಂದಿನ ಹಲವು ಗಾಯಕರಿಗೆ ‘ಬಂದಿಶ್’ ಬಗ್ಗೆ ಒಲವು ಹೆಚ್ಚುತ್ತಿದೆ. ಹಲವಾರು ಸಂದರ್ಭಗಳಲ್ಲಿ ಅಶ್ಲೀಲ, ಅಸಹ್ಯ ವೆನಿಸುವ ಅರ್ಥವನ್ನು ಕೊಡುವ ಹಳೆಯ ಬಂದಿಷ್‍ಗಳ ಬದಲಿಗೆ ಒಳ್ಳೆಯ ಅರ್ಥದ ಹೊಸ ಬಂದಿಷಗಳ ಹುಡುಕಾಟ ನಡೆಯುತ್ತಿದೆ. ಇದರಿಂದಾಗಿ ಪಾರಂಪರಿಕ ಬಂದಿಷ್‍ಗಳ ಜೊತೆ ಸೇರಿ ಹೋದ ಕುಮಾರಜಿ, ನಾತು ಬುವಾ, ರಾತಾಂಜನಕರ್, ರತ್ನಕಾಂತ್ ರಾಮನಾಥಕರ್ ಮುಂತಾದವರ ಬಂದಿಷ್‍ಗಳು ಹೆಚ್ಚೆಚ್ಚು ಬೆಳಕಿಗೆ ಬರುತ್ತಿವೆ. ಇವುಗಳೊಂದಿಗೆ ಶಂಕರ ಅಭ್ಯಂಕರ್, ಕಿಶೋರಿ ಅಮೋನ್ಕರ್, ಅಶ್ವಿನಿ ಭಿಡೆ, ಪ್ರಭಾ ಅತ್ರೆ ಮೊದಲಾದವರ ಅನೇಕ ವಿಶಿಷ್ಟ ರಚನೆಗಳೂ ಪ್ರಸಿದ್ಧಿ ಪಡೆಯುತ್ತಿವೆ. ಹೊಸದಾದ ‘ಭಾವ ಸೌಂದರ್ಯವಾದ’ವನ್ನು ಪ್ರತಿಪಾದಿಸುವ ನಾರಾಯಣ ಪಂಡಿತರಂಥವರ ಬಂದಿಷ್‍ಗಳು ಸಂಗೀತದ ‘ಆಧುನಿಕತೆ’ಗೆ ಸಂದ ದೊಡ್ಡ ಕೊಡುಗೆ. ಯುವಪೀಳಿಗೆಯಲ್ಲಿ ಇಂಥಹ ಕಾರ್ಯ ಮುಂದುವರಿಸಿ, ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವವರು ಪುಣೆಯ ಯುವ ಹಾರ್ಮೋನಿಯಂ ವಾದಕ-ವಾಗ್ಗೇಯ ಕಾರರಾದ ಶ್ರೀ ಚೈತನ್ಯ ಕುಂಟೆ. ಇವರು ಹಲವಾರು ಬಂದಿಷ್‍ಗಳ ರಚನೆ ಮಾಡುವುದರೊಂದಿಗೆ, ಹಲವಾರು ವಿಚಾರಾಧಾರಿತ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉದಾಹರಣೆಗಾಗಿ; ಮೆಘ್-ರಂಗ್, ಬಸಂತ್-ರಂಗ್, ನಾಯಿಕಾ ಭಾವ-ತರಂಗ್, ಭೈರವಿ ದರ್ಶನ್, ಸಾಜ್ ಠುಮರೀಚಾ ಇತ್ಯಾದಿ. ಕಥಕ್ ಹಾಗೂ ಭರತನಾಟ್ಯ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿರುವ ಇವರು, ಟಪ್ಪಾ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ್ದಾರೆ.

ಇಂದಿನ ಹೆಚ್ಚಿನ ಯುವ ಗಾಯಕರು ಸಂಗೀತದ ಕ್ಷೇತ್ರಕ್ಕೆ ಸಂಪೂರ್ಣ ಸಮರ್ಪಣೆ ಮಾಡಿಕೊಂಡಿದ್ದರೂ, ಉನ್ನತ ಮಟ್ಟದ ಔಪಚಾರಿಕ ಶಿಕ್ಷಣವನ್ನೂ ಪಡೆದವರಾಗಿದ್ದಾರೆ. ಸಾಹಿತ್ಯ, ಗಣಿತ, ವಿಜ್ಞಾನ ಹೀಗೆ ವಿಭಿನ್ನ ವಿಭಾಗದಲ್ಲಿ ಹೆಚ್ಚಿನ ತಿಳುವಳಿಕೆ ಹೊಂದಿದ್ದು, ಈ ತಿಳುವಳಿಕೆಯಿಂದ ಅವರು ಸಂಗೀತವನ್ನು ನೋಡುವ ದೃಷ್ಟಿಯೂ ಬದಲಾಗುತ್ತಿರುವುದನ್ನು ಗುರುತಿಸಬಹುದಾಗಿದೆ. ತಮ್ಮ ಈ ಔಪಚಾರಿಕ ಶಿಕ್ಷಣದಿಂದ ಉತ್ತಮವಾದ ವಿಶ್ಲೇಷಣಾ ಶಕ್ತಿ ಹಾಗೂ ಘನತೆಯಿಂದ ಹಾಡುವುದು, ಬದುಕುವುದು ಇವುಗಳನ್ನು ಪಡೆದುಕೊಂಡಿದ್ದಾರೆ.

ಧ್ವನಿ ವರ್ಧಕ ಇಲ್ಲದ ಕಾಲದಲ್ಲಿ ರೂಪುಗೊಂಡ ‘ಜೋರ್‌ದಾರ್’ ಗಾಯನ ಅದರ ಕುರುಡು ಅನುಕರಣೆಯಿಂದ ಮುಂದಿನ ಪೀಳಿಗೆಗೂ ಸಾಗಿ ಬಂದದ್ದನ್ನು ಕಾಣುತ್ತೇವೆ. ಈ ಅಂಶ ಇಂದಿನ ಕಾಲದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಮೈಕ್ ಅನ್ನು ಬಳಸಿ ಸಂಗೀತದಲ್ಲಿ ಮಾಡಬಹುದಾದ ಬದಲಾವಣೆ, ಅದರಿಂದಾಗುವ ಉಪಯೋಗ ಇವೆಲ್ಲವನ್ನೂ ಅಭ್ಯಾಸ ಮಾಡಿ ಸ್ವರಸಂಸ್ಕಾರ (voice culture) ಕ್ಷೇತ್ರದಲ್ಲಿ ಮಹತ್ವಪೂರ್ಣವಾದ ಬದಲಾವಣೆಯನ್ನು ಮಾಡಲಾಗಿದೆ.

ಪುರುಷರು ಗುರುಗಳಾಗಿದ್ದಾಗ, ಅವರಿಂದ ಕಲಿಯುತ್ತಿದ್ದ ಸ್ತ್ರೀಯರ ಶಾರೀರ ತನ್ನ ಮೂಲ ಸ್ವರೂಪಕ್ಕೆ ಹೊರತಾದ, ಹೆಣ್ಣು ಕಂಠಕ್ಕೆ ಶೋಭಿಸದ ಗಮಕಗಳು, ತಾನ್‍ಗಳು ಇತ್ಯಾದಿಗಳನ್ನು ಅನುಕರಿಸುತ್ತದೆ. ಇವುಗಳನ್ನೆಲ್ಲಾ ಗುರುತಿಸಿ, ಪರಿಷ್ಕರಿಸಿ ‘ femininity’’ ಎಂಬ ಹೆಸರಿನಡಿ ಇಂದು ಗುರುತಿಸಲಾಗಿದೆ. ಹೆಚ್ಚಿನ ಗಮಕಗಳಿಂದ ಸ್ತ್ರೀಕಂಠದ ಮೇಲೆ ಬೀಳುವ ಅನವಶ್ಯಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಚಿಕ್ಕವಯಸ್ಸಿನಲ್ಲಿಯೇ ಸ್ವರವನ್ನು ಕಳೆದುಕೊಳ್ಳುವುದು ತಪ್ಪುತ್ತದೆ ಎಂದೂ ಗುರುತಿಸಲಾಗಿದೆ.

ಇಂದಿನ ಮಲ್ಟಿಮೀಡಿಯ ಯುಗದಲ್ಲಿ ಹಿಂದಿನ ಉಸ್ತಾದ್, ಗವಾಯಿಗಳು ಮಾಡುತ್ತಿದ್ದ ಹಾವಾಭಿನಯಗಳ ಅಬ್ಬರ ಕಡಿಮೆಯಾಗಿ ಸೂಕ್ಷ್ಮತೆ ಜಾಗ ಪಡೆಯುತ್ತಿದೆ. ಶಾರೀರದ ಅದೇ ಬಾಗು ಬಳುಕುಗಳನ್ನು ಆಂಗಿಕ ಅಭಿನಯ, ಅಬ್ಬರಗಳಿಲ್ಲದೆ ನಯವಾಗಿ ಸಾಧಿಸುವ ಬಗೆ ಇಂದಿನ ಸಂಗೀತಗಾರರಲ್ಲಿ ಕಾಣುತ್ತದೆ. ಪಾರಂಪರಿಕ ಧೀಮಾ, ಏಕ್ತಾಲ್, ತ್ರಿತಾಲ್‍ಗಳೊಂದಿಗೆ ಇಂದಿನ ವೇಗದ ಯುಗದಲ್ಲಿ ಮಧ್ಯ ಲಯದ ಝಪ್ತಾಲ್, ರೂಪಕ್‍ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಈ ಮಧ್ಯಲಯದ ತಾಳಗಳಿಂದ ರಾಗನಿರೂಪಣೆಯಲ್ಲಿ ಚುಟುಕು ಹಾಗೂ ಚುರುಕುತನಗಳು ಬರುವುದರೊಂದಿಗೆ ರಾಗದ ಸಾರವನ್ನು ಸಂಗ್ರಹಿಸಿ ಸುಂದರವಾಗಿ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ.

ಒಟ್ಟಿನಲ್ಲಿ ಹಳೆ ಬೇರಿನಿಂದ ಚಿಗುರೊಡೆದ ಹೊಸ ಕವಲುಗಳು ಕೆಳಗೆ ಭದ್ರವಾಗಿ ಬೇರೂರಿಕೊಂಡೇ ಗಗನಗಾಮಿಯಾಗಿ ಬೆಳೆಯುತ್ತಿರುವುದು ಆಶಾದಾಯಕವಾಗಿ ಕಂಡುಬರುತ್ತದೆ. ಎಲ್ಲ ಸಂಗತಿಗಳ ಜೊತೆಗೆ ಕಲೆಯೂ ಒಂದು ‘ಮಾರಾಟದ ಸರಕಾಗಿ’ ಬಿಡುವ ಎಚ್ಚರದಲ್ಲೇ ಇವರು ಕಲೆಯ ಮೂಲಕ ತಮ್ಮತನದ ಹುಡುಕಾಟದ ಇಕ್ಕಟ್ಟಿನಲ್ಲಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಇವುಗಳ ನಡುವೆಯೇ ಪರಂಪರೆಯ ನೆಲಗಟ್ಟಿನೊಂದಿಗೆ ಬಹುಮಾಧ್ಯಮಗಳ ಸಾಧ್ಯತೆಗಳನ್ನು ದುಡಿಸಿಕೊಂಡು ಕಲೆಯನ್ನು ಹಲವು ಆಯಾಮಗಳಲ್ಲಿ ಯುವ ಗಾಯಕರು, ವಾದಕರು ಬೆಳೆಸುತ್ತಿದ್ದಾರೆ; ಕಾಲದ ಗತಿಯಲ್ಲಿ ದನಿಗೂಡಿಸುತ್ತಾ ನಡೆಯುತ್ತಿದ್ದಾರೆ.

ಸಾಮುದಾಯಿಕ ಹಾದಿಯಾಗಿ ಸಂಗೀತ

-ಭಾರತೀ ದೇವಿ. ಪಿ

ಸಂಗೀತ ಕುರಿತಾದ ಸಂಕಥನಗಳಲ್ಲಿ ನಾವು ಮತ್ತೆ ಮತ್ತೆ ‘ಸಂಗೀತ ಆತ್ಮದ ಭಾಷೆ, ಅದಕ್ಕೆ ಕಾಲ ದೇಶಗಳ ಹಂಗಿಲ್ಲ, ಅದರ ಭಾಷೆ ವಿಶ್ವಾತ್ಮಕವಾದುದು’ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಹೀಗೆ ದೇಶ ಭಾಷೆಗಳಾಚೆಗೆ ಎಲ್ಲರನ್ನು ತಲುಪುವ ವಿಶೇಷ ಗುಣ ಸಂಗೀತಕ್ಕಿದೆ, ಏಕೆಂದರೆ ಅದು ಭಾಷೆಯನ್ನು ಸಂಕೋಲೆಯಾಗಿ ಮಾಡಿಕೊಂಡಿಲ್ಲ. ಆದರೆ ತಾಂತ್ರಿಕವಾಗಿ ಸುಸಜ್ಜಿತವಾದ, ಶ್ರೇಷ್ಠ ಅಭಿರುಚಿ ತಮ್ಮದೆಂದುಕೊಂಡ ಕೇಳುಗರಿಂದ ತುಂಬಿಕೊಂಡಿರುವ ಸಭಾಂಗಣದಲ್ಲಿ ಕುಳಿತಾಗೆಲ್ಲ ಈಚೆಗೆ ವಿಚಿತ್ರ ಕಸಿವಿಸಿಯಾಗುತ್ತದೆ. ಇಂತಹ ವಿಶ್ವಾತ್ಮಕ ಭಾಷೆಯಾದ ಸಂಗೀತದ ಒಂದು ಪ್ರಭೇದವಾದ ‘ಶಾಸ್ತ್ರೀಯ’ ಎನಿಸಿಕೊಂಡಿರುವ ಸಂಗೀತ ಕೆಲವೇ ನಿರ್ದಿಷ್ಟ ಗುಂಪಿನ ಜನರ ಅಭಿರುಚಿಯ ಸಂಗತಿಯಾಗಷ್ಟೇ ಸೀಮಿತಗೊಳ್ಳುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಹೀಗೆ ನನ್ನಲ್ಲಿ ಎದ್ದ ಹಲವು ಪ್ರಶ್ನೆ ಮತ್ತು ಆತಂಕಗಳನ್ನು ಅವಲೋಕಿಸುವ ಲೌಡ್ ಥಿಂಕಿಂಗ್‍ನ ರೂಪದಲ್ಲಿ ಇಲ್ಲಿನ ನನ್ನ ಅಭಿಪ್ರಾಯಗಳಿವೆ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸುತ್ತೇನೆ.

ಕಲೆಯ ಹಾದಿ ಆತ್ಮಸಾಕ್ಷಾತ್ಕಾರದ ಹಾದಿ ಎಂದು ಭಾವಿಸಿಕೊಂಡಾಗ ಅದು ವೈಯಕ್ತಿಕ ಸಾಧನೆಯ ಪಥವಾಗುತ್ತದೆ. ತನ್ನ ಸಾಧನೆ, ಅದರ ಮೂಲಕ ಪಡೆಯುವ ಪಕ್ವತೆ, ಸಹೃದಯನೊಂದಿಗೆ ನಡೆಸುವ ಅನುಸಂಧಾನ ಇವು ಒಂದು ವಲಯದೊಳಗೆ ನಡೆಯುವಂಥವು. ಇದರಾಚೆಗೆ ಒಂದು ಸಾಮುದಾಯಿಕ ಆಯಾಮ ಸಂಗೀತ ಸೇರಿದಂತೆ ಲಲಿತಕಲೆಗಳಿಗೆ ಇದೆ. ಇದು ಸಂಸ್ಕಾರ, ರಂಜನೆ, ಭಕ್ತಿ, ಆತ್ಮ ನಿರೀಕ್ಷಣೆಯಾಚೆಗಿನ ಎಲ್ಲರೊಂದಿಗೆ ಒಂದಾಗಿ ತನ್ನನ್ನು ಗುರುತಿಸಿಕೊಳ್ಳುವ ಬಗೆ. ಆದರೆ ಶಾಸ್ತ್ರೀಯ ಸಂಗೀತದ ಇಂದಿನ ಬೆಳವಣಿಗೆಯನ್ನು ಕಂಡಾಗ ಅದು ವೈಯಕ್ತಿಕ ಸಾಧನೆಯ, ಶೋಧನೆಯ ದಾರಿಯಾಗಿ ಕಾಣುತ್ತಿದೆ. ಒಂದೇ ಬಗೆಯ ಶ್ರೋತೃಗಳು, ಸಂಘಟನೆ, ಪ್ರಸ್ತುತಿಯಲ್ಲಿ ಏಕರೂಪತೆ ಕಾಣುತ್ತಿದೆ. ಇವುಗಳು ಬಹುತ್ವದಿಂದ ದೂರವಾಗಿವೆ.

ವೈವಿಧ್ಯ ಮತ್ತು ಬಹುತ್ವ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಗಮನಾರ್ಹವಾದ ಮತ್ತು ಮುಖ್ಯವಾದ ಸಂಗತಿಗಳು. ಕೇವಲ ಹಾಡುವ ಬಗೆ, ಕೌಶಲಗಳಲ್ಲಿ ಮಾತ್ರ ವೈವಿಧ್ಯ ವ್ಯಕ್ತವಾದರೆ ಸಾಕೆ? ಕುಮಾರ ಗಂಧರ್ವರು ತತ್ವಪದಗಳೊಂದಿಗೆ ಮಾಡಿಕೊಂಡ ಅನುಸಂಧಾನ, ಹಿಂದೆ ಶಾಸ್ತ್ರೀಯ ಸಂಗೀತದೊಡನೆ ನಾಟ್ಯ ಸಂಗೀತದ ಅಂಶಗಳು ಬೆರೆತು ಪರಸ್ಪರ ಕೊಡುಕೊಳ್ಳುಗಳ ಮೂಲಕ ಶ್ರೀಮಂತಗೊಂಡ ಬಗೆ ಇವುಗಳಿಂದ ಕಲಿಯುವುದು ಸಾಕಷ್ಟಿದೆ. ವೈವಿಧ್ಯ ಮತ್ತು ಒಳಗೊಳ್ಳುವಿಕೆ ಶಾಸ್ತ್ರೀಯ ಸಂಗೀತದ ಕಸುವನ್ನು ಹೆಚ್ಚಿಸುತ್ತದೆ.

ಶಾಸ್ತ್ರೀಯ ಸಂಗೀತದ ಬೇರುಗಳಿರುವುದು ಸಮುದಾಯದಲ್ಲಿ. ಆದರೆ ಇಂದು ಅದು ಬೇರಿನಿಂದ ಸಾಕಷ್ಟು ದೂರ ಕ್ರಮಿಸಿದೆ. ತಂತ್ರಜ್ಞಾನದ ಬೆಂಬಲದೊಂದಿಗೆ ಹೊಸತನಕ್ಕೆ ಒಡ್ಡಿಕೊಂಡಿರುವ ಸಂಗೀತ ಮತ್ತೆ ಬೇರುಗಳೆಡೆಗೆ ಸಾಗದ ಹೊರತು ಶುಷ್ಕವಾಗಿಬಿಡುತ್ತದೆ. ಹಿಂದಿನ ಗಂಗೂಬಾಯಿಯವರಲ್ಲಾಗಲೀ, ಭೀಮಸೇನ ಜೋಶಿಯವರಲ್ಲಾಗಲೀ ಕಾಣುವ ಕಸುವು ಇಂದಿನ ಹಾಡುಗಾರರಲ್ಲಿ ಕಾಣಲಾಗುತ್ತಿಲ್ಲ ಎಂದು ಹೇಳುವಾಗ ನಮ್ಮ ಗಮನ ಸಾಗಬೇಕಾದುದು ಈ ಕಡೆಗೆ. ವಿಶಾಲವಾಗುವ, ಎತ್ತರಕ್ಕೇರುವ ಹುಮ್ಮಸ್ಸಿನಲ್ಲಿ ಆಳಕ್ಕಿಳಿಯುವ, ಬೇರುಗಳನ್ನು ತಡಕುವ ಹಾದಿ ಹಿನ್ನಡೆಯ ಹಾದಿಯಲ್ಲ; ಅದು ಜೀವರಸವನ್ನು ಮತ್ತೆ ಪಡೆಯುವ ಹಾದಿಯಾಗುತ್ತದೆ. ಹೀಗೆ ಮತ್ತೆ ಮತ್ತೆ ಅದು ಭೇಟಿ ನೀಡಬೇಕಾಗಿರುವುದು ಮರಳಿ ಸಮುದಾಯದ ಕಡೆಗೇ.

ಸಂಗೀತ ಹೃದಯದ ಭಾಷೆ ಎನ್ನುವುದು ಅದರ ನಿರೂಪಣೆಗೆ ಸಂಬಂಧಿಸಿದ ಸಂಗತಿ. ಹೃದಯದ ಭಾಷೆಗೆ ವಿಚಾರದ ಹಂಗಿಲ್ಲ ಎನ್ನುವುದೂ ನಿಜ. ಆದರೆ ಹೃದಯ ತಟ್ಟುವುದರಾಚೆಗೆ ನಮ್ಮ ಪ್ರಜ್ಞೆಯನ್ನು ತಟ್ಟಬಲ್ಲ ಗುಣ, ಶಕ್ತಿ ಸಂಗೀತಕ್ಕಿಲ್ಲವೇ? ಆದರೆ ಇಂದು ಸಂಗೀತ ಬಲ್ಲವರಲ್ಲಿ ಬಹುಪಾಲು ಜನ ಅದರ ವೈಚಾರಿಕ ಆಯಾಮದ ಕುರಿತು ಯೋಚಿಸಿದಂತಿಲ್ಲ. ಯಾವುದೇ ಸಾಮಾಜಿಕ ಸಂಗತಿಗಳ ಬಗೆಗೆ ಅವರ ದನಿ ಕೇಳುವುದಿಲ್ಲ. ಇಂದಿನ ರಿಯಾಲಿಟಿ ಶೋಗಳ, ಸಿನೆಮಾಗಳ ಜನಪ್ರಿಯ ಹಾಡುಗಾರರಿಂದ ಹಿಡಿದು ಶಾಸ್ತ್ರೀಯ ಸಂಗೀತಗಾರರವರೆಗೆ ಸಾಮಾಜಿಕ ಸಂಗತಿಗಳಿಗೆ ಸಂಗೀತಗಾರರು ಸ್ಪಂದಿಸಿದ್ದು ಕಡಿಮೆ. ಸಂಗೀತಕ್ಕಿರುವ ಸಾಮಾಜಿಕ ಆಯಾಮ ಸಹೃದಯರ ರಂಜನೆಗಷ್ಟೇ ಸೀಮಿತವೇ? ಅದರಾಚೆಗೆ ಸಮಾಜದೊಂದಿಗೆ ಸಂಗೀತಗಾರರು ಯಾವ ಬಗೆಯಲ್ಲಿ ಸ್ಪಂದಿಸಬಹುದು? ಸಂಗೀತ ಕಲಿಕೆ, ಕೇಳ್ಮೆ ಮತ್ತು ಪ್ರಸ್ತುತಿಯಲ್ಲಿ ಸಂಗೀತದ ಪ್ರಜಾಪ್ರಭುತ್ವೀಕರಣ ನಡೆಸಬಹುದಾದ ಬಗೆ ಯಾವುದು?

ಈ ಪ್ರಶ್ನೆಗಳೊಂದಿಗೆ ಹೊರಟಾಗ ಸಂಗೀತ ದೈವಿಕವಾದದ್ದು, ಅದು ಆತ್ಮದ ಭಾಷೆ ಎಂಬೆಲ್ಲ ಮಾತುಗಳನ್ನು ಮರುಪ್ರಶ್ನೆಗೊಳಪಡಿಸಬೇಕಾಗುತ್ತದೆ. ಸಂಗೀತ ಶ್ರೇಷ್ಠವಾದ ಕಲೆ ನಿಜ, ಅದಕ್ಕೆ ಅದರದೇ ಆದ ಸ್ಥಾನ, ಗೌರವ ಇದೆ. ಆದರೆ ಯಾವುದನ್ನೇ ಆಗಲಿ ಅದು ಉಳಿದವುಗಳಿಗಿಂತ ಶ್ರೇಷ್ಠ ಎನ್ನುವ ಮಾತು ಶ್ರೇಣೀಕರಣವನ್ನು ಪೋಷಿಸುವ ಮಾತಾಗುವಂತೆಯೇ ನಿಧಾನಕ್ಕೆ ಶ್ರೇಷ್ಠವೆನಿಸಿಕೊಂಡದ್ದರ ಬೇರನ್ನು ಶಿಥಿಲಗೊಳಿಸುವ ಬಗೆಯೂ ಆಗುತ್ತದೆ. ನಮ್ಮ ಶಾಸ್ತ್ರೀಯ ಪ್ರಭೇದಗಳು ಶ್ರೇಷ್ಠತೆಯ ಕಲ್ಪನೆ ಮತ್ತು ವ್ಯಸನದಿಂದ ಹೊರಬಂದ ಹೊರತು ಅವುಗಳಿಂದ ಹೊಸದೇನನ್ನೂ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ.

ಇಂದಿಗೂ ಶಾಸ್ತ್ರೀಯ, ಜನಪದ ಮತ್ತು ಜನಪ್ರಿಯ ಸಂಗೀತ ಇವುಗಳ ನಡುವೆ ಸ್ಪಷ್ಟ ಶ್ರೇಣೀಕರಣ ಮನೆ ಮಾಡಿರುವುದು ಕಾಣುತ್ತದೆ. ಯಾವುದೇ ಸಾಂಸ್ಕೃತಿಕ ಉತ್ಸವ ನಡೆಯಲಿ, ಇವುಗಳಿಗೆ ದೊರೆಯುವ ವೇದಿಕೆಗಳೇ ಬೇರೆ, ಇವುಗಳ ಕೇಳುಗ ವರ್ಗವೇ ಬೇರೆ. ಅವುಗಳ ನಡುವಣ ವೈಶಿಷ್ಟ್ಯವನ್ನು ಮೆಚ್ಚುತ್ತಲೇ ಒಂದು ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ. ಈ ಬಗೆಯ ‘ವಾಟರ್ ಟೈಟ್ ಕಂಪಾರ್ಟ್‍ಮೆಂಟ್ಸ್’ ಪರಸ್ಪರ ಪ್ರಭಾವ ಪಡೆಯುವುದರಿಂದ ನಮ್ಮನ್ನು ತಡೆಯುತ್ತದೆಯೇ? ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಜನರಿಗೆ ಬೇಕಾದಂತೆ ಹಾಡುವವರನ್ನು ಜನರನ್ನು ಓಲೈಸುವವರು ಎಂದು ಅಸಡ್ಡೆಯಿಂದ ಕಾಣುವವರಿದ್ದಾರೆ. ಕಟ್ಟುನಿಟ್ಟಾಗಿ ಪಾಠಾಂತರಕ್ಕೆ ಕಟ್ಟುಬಿದ್ದವರಿದ್ದಾರೆ. ಇವು ಸಂಗೀತವನ್ನು ಸದಾ ಒಂದು ಅಲ್ಪಸಂಖ್ಯಾತ ವರ್ಗದ ಚಟುವಟಿಕೆಯಾಗಿ ನಿರ್ದಿಷ್ಟಗೊಳಿಸುತ್ತದೆಯೇ? ಇದರಿಂದ ಸಂಗೀತ ಕ್ಷೇತ್ರ ಪಡೆಯುವುದೇನು ಮತ್ತು ಕಳೆದುಕೊಳ್ಳುವುದೇನು?

ಈ ಬಗ್ಗೆ ಇಂದು ಸಂಗೀತ ಕ್ಷೇತ್ರದಲ್ಲಿ ಮನೆಮಾಡಿರುವುದು ತುಂಬಾ ಸರಳೀಕೃತವಾದ ಗ್ರಹಿಕೆ. ಜನರನ್ನು ಮೆಚ್ಚಿಸಲು ಹೋದಾಗ ಸಂಗೀತ ಜಾಳುಜಾಳಾಗುತ್ತದೆ, ಜನಪ್ರಿಯತೆಗೆ ಮಾರುಹೋದ ಸಂಗೀತಗಾರ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತಾನೆ ಎಂಬ ಭಾವನೆ. ಈ ತಿಳುವಳಿಕೆಯನ್ನು ಮರುಪರಿಶೀಲನೆಗೆ ಒಡ್ಡಬೇಕಾಗುತ್ತದೆ. ಶುದ್ಧ ಎಂಬುದು ಯಾವುದು? ಸಂಗೀತ ಹಿಂದೆಂದೋ ಇದ್ದಂತೆ ಇಂದು ಇಲ್ಲ. ಕಾಲಕ್ಕನುಗುಣವಾಗಿ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಬದಲಾವಣೆಗಳನ್ನು ಒಳಗು ಮಾಡಿಕೊಂಡಿದೆ. ಅಲ್ಲದೆ, ತಮ್ಮ ತನವನ್ನು ಬಿಟ್ಟುಕೊಡದೆಯೂ ಜನರನ್ನು ಸೆಳೆಯುವ ಅನ್ನುವುದಕ್ಕಿಂತ ಹೆಚ್ಚಾಗಿ ಒಳಗು ಮಾಡಿಕೊಳ್ಳುವ ಬಗೆಯಲ್ಲಿ ಸಂಗೀತದ ಪ್ರಸ್ತುತಿ ಸಾಧ್ಯವಿಲ್ಲವೇ? ಒಂದು ನಿರ್ದಿಷ್ಟ  ವರ್ಗಕ್ಕೆ ಸೀಮಿತವಾಗಿದ್ದಾಗ ಅದು ಬಹಳ ಮುಂದೆ ಹೋಗುವುದು ಕಷ್ಟವಾಗುತ್ತದೆ. ಕಾಲಕ್ಕನುಗುಣವಾಗಿ ಬದಲಾಗುವ ಬಗೆಯಲ್ಲಿ ಸಂಗೀತ ಹೆಚ್ಚು ಜನಮುಖಿಯಾಗಬೇಕು. ಇಂದಿನ ಸಂಗೀತದ ಕುರಿತು ಹಳಹಳಿಕೆಯ ಮಾತಾಡುವಾಗ ಈ ಸಂಗತಿ ನಮ್ಮ ದೃಷ್ಟಿಯಿಂದ ತಪ್ಪಿ ಹೋಗಬಾರದು. ಸಂಗೀತದ ಎಲ್ಲ ಪ್ರಭೇದಗಳ ಪ್ರಜಾಪ್ರಭುತ್ವೀಕರಣ ಸಮಾನತೆಯ ದೃಷ್ಟಿಯಿಂದ ಮಾತ್ರವಲ್ಲ, ಸಂಗೀತದ ಬೆಳವಣಿಗೆಯ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ.

ವಿಶ್ರಾಂತ ಕುಲಪತಿ ಡಾ.ಮುರಿಗೆಪ್ಪರವರಿಗೆ ಕೆಲವು ಪ್ರಶ್ನೆಗಳು…


– ಪರಶುರಾಮ ಕಲಾಲ್


ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಒಂದುವರ್ಷ ಹೆಚ್ಚುವರಿಯಾಗಿ ರಾಜ್ಯಪಾಲರಿಂದ ಅವಕಾಶ ಪಡೆದು, ಒಟ್ಟು ನಾಲ್ಕು ವರ್ಷ ಅವಧಿಪೂರ್ಣಗೊಳಿಸಿ, ಡಾ.ಎ. ಮುರಿಗೆಪ್ಪ ಈಗ ವಿಶ್ರಾಂತ ಕುಲಪತಿಗಳಾಗಿದ್ದಾರೆ. ಪ್ರಭಾರಿ ಕುಲಪತಿಯಾಗಿ ಡಾ.ಹಿ.ಚಿ.ಬೋರಲಿಂಗಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.

ಡಾ.ಹಿ.ಚಿ.ಬೋರಲಿಂಗಯ್ಯ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು, ಅವರ ಮೇಲೆ ತನಿಖೆ ನಡೆಸಬೇಕೆಂದು ಸಿಂಡಿಕೇಟ್ ಸಭೆ ತೀರ್ಮಾನಿಸಿದೆ. ಈ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಈಗ ಪ್ರಭಾರಿ ಕುಲಪತಿಗಳಾಗಿಯೇ ಡಾ.ಹಿ.ಚಿ.ಬೋರಲಿಂಗಯ್ಯ ಕೆಲಸ ನಿರ್ವಹಿಸಬೇಕಿದೆ. ಇದು ಆಡಳಿತಾತ್ಮಕವಾಗಿ ಎಷ್ಟು ಸರಿ ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ.

ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಬುಧವಾರ ಕನ್ನಡ ವಿವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಸಂಕಷ್ಟದ ದಿನಗಳನ್ನು ಹೀಗೆ ನೆನಪಿಸಿಕೊಂಡಿದ್ದಾರೆ:

  1. ಹಂಪಿ ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಭೂಮಿಯನ್ನು ವಿಜಯನಗರ ಪುನಃಶ್ಚೇತನ ಟ್ರಸ್ಟ್‌ಗೆ ಥೀಮ್ ಪಾರ್ಕ್‌ಗಾಗಿ ನೀಡಲು ನನ್ನನ್ನು ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದರು ಎಂದಿದ್ದಾರೆ. ಥೀಮ್ ಪಾರ್ಕ್ ಅನ್ನು ಕನ್ನಡ ವಿವಿ ಪಕ್ಕ ಮಾಡುತ್ತೇವೆ. ಕನ್ನಡ ವಿವಿಯ 80 ಏಕರೆಯಲ್ಲಿ ರಿಸರ್ಚ್ ಸೆಂಟರ್ ಬಿಲ್ಡಿಂಗ್ ಕಟ್ಟಿ ಕನ್ನಡ ವಿವಿ.ಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿ ಆ ಮೇಲೆ ಈ ಮಾತಿಗೆ ವಿರುದ್ಧವಾಗಿ ನಡೆದುಕೊಂಡರು. ದಾರಿ ತಪ್ಪಿಸಿದರು.
  2. ಯು.ಆರ್. ಅನಂತಮೂರ್ತಿ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಿದಾಗ, “ಅವರಿಗೆ ಯಾಕೆ ನಾಡೋಜ ಗೌರವ ಪದವಿ ನೀಡುತ್ತೀರಿ. ಅದನ್ನು ಕೈ ಬಿಡಿ, ಬೇರೆಯವರನ್ನು ಆಯ್ಕೆ ಮಾಡಿ, ಇಲ್ಲವಾದರೆ ನುಡಿಹಬ್ಬದಲ್ಲಿ ಗಲಾಟೆ ಮಾಡಿಸಬೇಕಾಗುತ್ತದೆ,” ಎಂದು ಸಚಿವರಾದ ಜಿ.ಜನಾರ್ಧನ ರೆಡ್ಡಿ, ಬಿ.ಶ್ರೀರಾಮುಲು, ಶಾಸಕ ಆನಂದ್ ಸಿಂಗ್ ಒತ್ತಾಯಿಸಿದರು. ಅವರಿಗೆ ಸಮರ್ಪಕ ಉತ್ತರ ಹೇಳಿ ನಿಭಾಯಿಸಿದೆ.
  3. ನಾಡೋಜ ಗೌರವ ಪದವಿಯನ್ನು ತಾವು ಸೂಚಿಸಿದವರಿಗೆ ಕೊಡಬೇಕೆಂದು ರಾಜ್ಯಪಾಲ ಹಂಸರಾಜ ಭಾರದ್ವಾಜ, ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಬೇರೆ ಬೇರೆ ಹೆಸರನ್ನು ಸೂಚಿಸಿದರು. ಅದನ್ನು ಪರಿಗಣಿಸಲಿಲ್ಲ. ಇದರಿಂದ ಕುಲಾಧಿಪತಿಯಾಗಿದ್ದ ರಾಜ್ಯಪಾಲರು, ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನುಡಿಹಬ್ಬ ಘಟಿಕೋತ್ಸವಕ್ಕೆ ಬರಲಿಲ್ಲ.
  4. ಸಿಂಡಿಕೇಟ್ ಸದಸ್ಯರಾದವರಿಗೆ ದೂರದೃಷ್ಠಿ ಇರಬೇಕು. ಕನಸು ಇರಬೇಕು. ಅದು ಇಲ್ಲದವರು ಸದಸ್ಯರಾದರೆ ಸಮಸ್ಯೆ ಸೃಷ್ಠಿಯಾಗುತ್ತದೆ. (ಹೀಗೆ ಹೇಳುವ ಮೂಲಕ ಸಿಂಡಿಕೇಟ್ ಸದಸ್ಯರ ಆಯ್ಕೆ ಸರಿ ಇರಲಿಲ್ಲ ಎಂದು ಹೇಳಿದಂತಾಯಿತು. ಅಲ್ಲವೆ?)

ಈ ಸಂದರ್ಭಗಳಲ್ಲಿ ಕುಲಪತಿಗಳಾಗಿ ಡಾ.ಎ.ಮುರಿಗೆಪ್ಪ ಯಾವ ರೀತಿ ದಿಟ್ಟಕ್ರಮ ಕೈಗೊಂಡರು?
ಯಾಕೆ ಈ ಕುರಿತಂತೆ ತಮ್ಮ ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿಲ್ಲ?
ಎಲ್ಲರನ್ನೂ ಸರಿದೂಗಿಸುವ ಪ್ರಯತ್ನ ನಡೆಸುವ ಅಗತ್ಯ ಏನಿತ್ತು? ಇದು ಸರಿಯಾದ ಕ್ರಮವೇ?

ಇಂತಹ ಪ್ರಶ್ನೆಗಳು ಬರುವುದು ಸಹಜ. ಕಠಿಣವಾಗಿಯೇ ನಡೆದುಕೊಂಡೆ ಎಂದೇ ಈಗ ಡಾ.ಎ.ಮುರಿಗೆಪ್ಪ ಹೇಳುತ್ತಾರೆ. ಕನ್ನಡ ವಿವಿಯ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದವರು, ಅವರೂ ಏನನ್ನೂ ಮಾಡಲಿಲ್ಲ, ಎಲ್ಲದಕ್ಕೂ ಬೆಂಡಾದರು ಎಂದೇ ಹೇಳುತ್ತಾರೆ.

ಕನ್ನಡ ವಿವಿ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಮೊಟ್ಟ ಮೊದಲು ಕುವೆಂಪು ಅವರಿಗೆ ಮರಣೋತ್ತರವಾಗಿ ಕೊಡುವ ಮೂಲಕ ಆರಂಭವಾಯಿತು. ಕನ್ನಡ ನಾಡು, ನುಡಿಗೆ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ಕೊಡಬೇಕೆನ್ನುವುದು ಇದರ ಉದ್ದೇಶವಾಗಿತ್ತು. ಇದು ಬರುತ್ತಾ ಹಿಗ್ಗಿಸಿಕೊಂಡು ಏರುತ್ತಾ ಹೋಗಿ ರಾಜ್ಯೋತ್ಸವ ಪ್ರಶಸ್ತಿಯಂತೆ ಅಗ್ಗವಾಗಿ ಬಿಟ್ಟಿತು. ಜಾತಿ, ಪ್ರದೇಶವಾರು ಗುರುತಿಸಲು ಆರಂಭವಾಯಿತು. ನಾ ಎಂಬ ಡೋಜು ಹೆಚ್ಚಾದವರಿಗೆ ಈ ನಾಡೋಜ ಎಂಬ ಅನ್ವರ್ಥನಾಮಕ್ಕೆ ತಿರುಗಿ ಬಿಟ್ಟಿತು. ಹೀಗಾಗಿ ಕಳೆದ ವರ್ಷ ಯೋಗಪಟು ಒಬ್ಬರಿಗೆ ನಾಡೋಜ ದೊರೆಯಿತು. ಜ್ಯೋತಿಷಿಗಳಿಗೆ ಮುಂದಿನ ವರ್ಷ ಕೊಟ್ಟರೂ ಕೊಡಬಹುದು ಎನ್ನುವಲ್ಲಿಗೆ ಬಂದಿದೆ.

ಈ ಗೌರವ ಪದವಿಗೆ ಗೌರವ ಸಿಗುವಂತೆ ಮಾಡಬೇಕಿದೆ.

ಕನ್ನಡ ವಿವಿ ಕುಲಪತಿಗಳಾಗಲು ದೊಡ್ಡ ಲಾಬಿಯೇ ಪ್ರಾರಂಭಗೊಂಡಿದೆ. ಈಗಾಗಲೇ 14 ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಯುಜಿಸಿ ಒಬ್ಬ ಸದಸ್ಯರ ಹೆಸರನ್ನು ಸೂಚಿಸಿಲ್ಲವಾದ್ದರಿಂದ ಇನ್ನೂ ಆಯ್ಕೆ ಸಮಿತಿ ಪೂರ್ಣಗೊಂಡಿಲ್ಲ. ಸಮಿತಿ ರಚನೆಯಾದ ಮೇಲೆ ಅರ್ಜಿ ಸಲ್ಲಿಸುವ ಇನ್ನಷ್ಟು ಅಕಾಂಕ್ಷಿಗಳು ಇದ್ದಾರೆ.

ಕನ್ನಡ ವಿಶ್ವವಿದ್ಯಾಲಯ ಈಗ ಸಂಕಷ್ಟದಲ್ಲಿದೆ. ಜಡವಾಗಿದೆ. ಅಲ್ಲಿ ಗುಂಪುಗಾರಿಕೆಗೆ ಹೆಚ್ಚಾಗಿ ಪರಸ್ಪರ ಟೀಕೆ, ಅಪಸ್ಪರಗಳು ಹೊರ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕನ್ನಡ ವಿವಿಯನ್ನು ಸಾಂಸ್ಕೃತಿಕವಾಗಿ, ಸಂಶೋಧನಾತ್ಮಕವಾಗಿ, ಆಡಳಿತಾತ್ಮಕವಾಗಿ ಮುನ್ನೆಡೆಸುವ ಛಾತಿ ಇರುವವರು ಕುಲಪತಿಗಳಾಗಿ ಬರಬೇಕಿದೆ. ಕನ್ನಡ ವಿವಿ.ಗೆ ಹೊಸ ಸ್ವರೂಪ ಕೊಟ್ಟ ಮೊದಲಿನ ಉತ್ಸಾಹ, ಕನ್ನಡ ನಾಡು-ನುಡಿ ಕಟ್ಟುವ ಕೆಲಸ ಆರಂಭವಾಗಬೇಕಿದೆ. ಇದನ್ನು ಮಾಡಬೇಕಾದವರು ಯಾರು? ಇದು ಪ್ರಶ್ನೆಯಾಗಿಯೇ ಇದೆ.

ಒಂದು ಕೆಂಪು ಸಂಜೆ

“ಒಂದು ಕೆಂಪು ಸಂಜೆ”

ಕಿಶೋರಿ ಚರಣ್ ದಾಸ
ಅನುವಾದ: ಬಿ. ಶ್ರೀಪಾದ್ ಭಟ್

[ಉನ್ನತ ಸರ್ಕಾರಿ ಅಧಿಕಾರಿಯಾಗಿದ್ದ ಕಿಶೋರಿ ಚರಣ್ ದಾಸ ಒರಿಯಾದಲ್ಲಿ ನವ್ಯ ಲೇಖಕರೆಂದೇ ಪ್ರಸಿದ್ದಿಯಾಗಿದ್ದರು. ಅವರ ಕತೆಗಳು ನವ್ಯದ ಅಭಿವ್ಯಕ್ತಿಯನ್ನು ಮೈಗೂಡಿಸಿಕೊಂಡಿದ್ದರೂ ಅವರ ಕತೆಗಳ ಹೂರಣ, ಗ್ರಹಿಕೆಗಳು ಮಾತ್ರ ಸಾಮಾಜಿಕತೆಯನ್ನು, ಅದರ ಅಸಹಾಯಕತೆಯನ್ನು, ತಳಮಳವನ್ನೂ ಒಳಗೊಂಡಿತ್ತು. ನಾನು ಇಲ್ಲಿ ಅನುವಾದಿಸಿದ 1970 ರಲ್ಲಿ ಬರೆದ  “ಒಂದು ಕೆಂಪು ಸಂಜೆ”  ಕಥೆ ಮಧ್ಯಮ, ಮೇಲ್ಮಧ್ಯಮ ವರ್ಗಗಳ ಸ್ವಾರ್ಥ, ಆತ್ಮವಂಚನೆಯ ಮನೋಭಾವನೆಯನ್ನು ಬಯಲಾಗಿಸುತ್ತದೆ. 42 ವರ್ಷಗಳ ನಂತರವೂ ಈ ಕಥೆ ತನ್ನ ಅನನ್ಯತೆಯಿಂದ ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಇದಕ್ಕಾಗಿಯೇ ಇದನ್ನು ಮರು ಓದಿದಾಗ ಅನುವಾದಿಸಬೇಕೆನಿಸಿತು. – ಬಿ. ಶ್ರೀಪಾದ್ ಭಟ್]


“ದಯವಿಟ್ಟು ನನಗಾಗಿ ಕಾಯುತ್ತೀಯ ತಾನೆ?”
“ಖಂಡಿತ, ನಿಧಾನವಾಗಿ ಬಾ. ಅವಸರವೇನಿಲ್ಲ”

ಮತ್ತೇನಿಲ್ಲ, ನನ್ನ ಬಲಗಾಲಿನ ಶೂ ಒಳಗೆ ಮೊಳೆಯೋ, ಕಲ್ಲೋ ಸಿಕ್ಕಿಕೊಂಡು ನನ್ನ ಕಾಲಿನ ಹೆಬ್ಬೆರಳನ್ನು ಒತ್ತುತ್ತಿದೆ. ಅದನ್ನು ವಿವರವಾಗಿ ನೋಡಲೂ ನನಗೆ ವ್ಯವಧಾನವಿಲ್ಲ. ನಾನು ಸದ್ಯಕ್ಕೆ ದತ್ತ ಅವರನ್ನು ಕೂಡಿಕೊಳ್ಳಬೇಕು. ಅವರು ಪರವಾಗಿಲ್ಲ ನಿಧಾನಕ್ಕೆ ಬನ್ನಿ ಎನ್ನುತ್ತಿದ್ದರೂ ನನಗಾಗಿ ಕಾಯದೆ ತಾವು ಮಾತ್ರ ದಾಪುಗಾಲಲ್ಲಿ ಅತ್ಯಂತ ವೇಗವಾಗಿ ನಡೆಯುತ್ತಿದ್ದರು. ನಾನು ಅವರನ್ನು ನನ್ನ ದೃಷ್ಟಿಯಳತೆಯಲ್ಲಿ ಇರಿಸಿಕೊಂಡು ನನ್ನಿಂದ ಕಣ್ಮರೆಯಾಗದಂತೆ ಆಗಾಗ ಅವರನ್ನು ಕೂಗಿ ಕರೆಯುತ್ತಾ ನನ್ನ ಕಣ್ಣಳತೆಯಲ್ಲೇ ಇರುವಂತೆ ನೋಡಿಕೊಳ್ಳುತ್ತಿದ್ದೆ. ನಾನು ಅವರ ಹತ್ತಿರ ಹೋದಾಗಲೆಲ್ಲ ಅತ್ಯಂತ ನಿರ್ಭಾವುಕದಿಂದ ನನ್ನೆಡೆ ನೋಡುತ್ತಾ, “ನನ್ನನ್ನು ಕ್ಷಮಿಸಿ. ನನ್ನ ಕಾರನ್ನು ಆ ಬದಿಯ ಮೂಲೆಯ, ಡ್ರೈ ಕ್ಲೀನರ್ ಅಂಗಡಿಯ ಎದುರಿನಲ್ಲಿ ನಿಲ್ಲಿಸಿದ್ದೇನೆ. ನಾವು  ಅಲ್ಲಿಗೆ ತಲುಪಬೇಕಾಗಿದೆ’  ಎಂದು ಹೇಳಿದರು. ಅದರಲ್ಲಿ ನನಗೆ ನನ್ನ ನಡಿಗೆಯನ್ನು ತೀವ್ರಗೊಳಿಸಲು ಸೂಚನೆಯಿತ್ತು.

ನಾನು ಅವನ ಯಾವುದೇ ರೀತಿಯ ತೋರಿಕೆಯ ಸಭ್ಯ ನಡುವಳಿಕೆಗಳಿಗೆ ಅಷ್ಟೊಂದು ಗಮನ ಕೊಡಲಿಲ್ಲ. ಏಕೆಂದರೆ ಇವನೂ ಕೂಡ ತನ್ನ ಈ ವರ್ಗಗಳ ಜನರಂತೆಯೇ ಎಂದು ನನಗೆ ಗೊತ್ತಿತ್ತು. ನಾನು ಅವನನ್ನು ಹಿಂಬಾಲಿಸುತ್ತಿರುವುದಕ್ಕೆ ಮೂಲಭೂತ ಕಾರಣ ಈ ದತ್ತ ಎನ್ನುವವನು ಈ ಕ್ರಾಂತಿಕಾರಿ ನಗರ ಕಲ್ಕತ್ತಕ್ಕೆ ಸೇರಿದವನಾಗಿದ್ದಕ್ಕಾಗಿ ಹಾಗೂ ಇಲ್ಲಿಗೆ ನಾನು ಹೊಸಬನಾಗಿದ್ದಕ್ಕಾಗಿ. ಇವನ ಈ ಕಲ್ಕತ್ತ ನಗರದೊಂದಿಗಿನ ಚಿರಪರಿಚತೆಯೇ ನನಗೆ ತನ್ನಿಷ್ಟ ಬಂದಂತೆ ಮಾರ್ಗದರ್ಶನ ಮಾಡುವ ಅರ್ಹತೆಯನ್ನು ದೊರಕಿಸಿತ್ತು. ಆದರೆ ಇವೆಲ್ಲದರ ಮಧ್ಯೆ ನನ್ನ ಬಲಗಾಲಿನ ಶೂ ನನಗೆ ತೊಂದರೆ ಕೊಡುತ್ತಲೇ ಇತ್ತು. ನಗರದ ಅಂಗಡಿ, ಮುಂಗಟ್ಟುಗಳು ತಮ್ಮ ದೈನಂದಿನ ವ್ಯವಹಾರವನ್ನು ಮಾಡದೆ ಮುಚ್ಚಿದ್ದವು. ಇದು ಒಂದು ಸಣ್ಣ ಕ್ರಾಂತಿಗಾಗಿ ತೆರಬೇಕಾದ ಬೆಲೆಯೇನೊ. ಆದರೆ ಇದೇ ಕಾರಣಕ್ಕಾಗಿ ಬೀದಿ ಬದಿಯ ಸಣ್ಣ ಸಣ್ಣ ವಸ್ತುಗಳನ್ನು ವ್ಯಾಪಾರ ಮಾಡುವ ಬಡವರು ಕೂಡ ಈ ಸಣ್ಣ ಕ್ರಾಂತಿಗಾಗಿ ಅಲ್ಲಿಂದ ಕಣ್ಮರೆಯಾಗಿದ್ದು ಮಾತ್ರ ನನ್ನಲ್ಲಿ ಆಕ್ರೋಶವನ್ನುಂಟು ಮಾಡಿತ್ತು. ಆದರೆ ಆ ಗಲಭೆಪೀಡಿತ ರಸ್ತೆಯ ಮಧ್ಯದಲ್ಲಿ ಕೇವಲ ಒಂದು ಬೀದಿ ನಾಯಿ ಮಾತ್ರ ಸ್ವಾತಂತ್ರದ್ಯೋತಕವಾಗಿ ಬಾಲವನ್ನು ಅಲ್ಲಾಡಿಸುತ್ತಾ ನಿಂತಿತ್ತು. ಸಹಜವಾಗಿಯೇ ಈ ಪ್ರಮುಖ ನಗರದಲ್ಲಿ ಮನುಷ್ಯರಿಗೆ ಬದುಕುವ ಹಕ್ಕನ್ನು ಕಲ್ಪಿಸಲಾಗಿತ್ತು. ಆದರೆ ಅವರು ನಿಜವಾದ ಅರ್ಥದಲ್ಲಿ ಬದುಕಿದ್ದರೇ?  ಅಲ್ಲಿ ಬೀದಿ ದೀಪಕಂಬದ ಹಿಂದೆ ಕಾಣಿಸುತ್ತಿರುವ ಮನುಷ್ಯನಾರು? ಅವನು ತನ್ನ ಕಳಚಿಬೀಳುತ್ತಿರುವ ಲುಂಗಿಯನ್ನು ಮರೆತು ಕೈಯ್ಯಲ್ಲಿ ಕಲ್ಲನ್ನು ಹಿಡಿದು ನಿಂತಿದ್ದಾನೆಯೇ? ಆ ತರಹ ಕಾಣಿಸುತ್ತಿದೆ?  ಅಂದರೆ ಈ ನಿರ್ಜನ ನಗರ ಒಂದು ದೊಡ್ಡ ಕ್ರಾಂತಿಗಾಗಿ ತಯಾರಾಗುತ್ತಿರುವುದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿ ಹೋಯ್ತು. ಇಲ್ಲಿ ಕಳಚಿ ಬೀಳುತ್ತಿರುವ ಲುಂಗಿಯುಟ್ಟ ಒಬ್ಬ ವ್ಯಕ್ತಿ, ಅಲ್ಲಿ ಮೊಣಕಾಲು ಮಟ್ಟಕ್ಕೆ ಧೋತಿಯುಟ್ಟ ವ್ಯಕ್ತಿ ದಾಳಿ ನಡೆಸಲು ತಯಾರಾಗಿದ್ದರು. ಅವರು ಶೋಷಕರ ಪ್ರತಿನಿಧಿಯಂತಿದ್ದ ಪೋಲೀಸ್ ನವನ ಮೇಲೆ ದಾಳಿ ನಡೆಸಿ ನಂತರ ಜನಜಂಗುಳಿಯಲ್ಲಿ ಕರಗಿ ಹೋಗುವ ತಯಾರಿಯಲ್ಲಿದ್ದಂತಿತ್ತು. ನಾನು ಈ ಸಾಮಾನ್ಯ ಜನರ ನಿಸ್ವಾರ್ಥ, ಸಮರ್ಪಣಾ ಮನೋಭಾವದ ಕ್ರಾಂತಿಗೆ ಮೆಚ್ಚಿಕೊಳ್ಳುತ್ತಿರುವಂತೆಯೇ ಈ ಕ್ರಾಂತಿಯ ಆಗಮನವನ್ನು ಸೂಚಿಸುವಂತೆ ಒಂದು ದೊಡ್ಡ ಶಬ್ದ ನನ್ನ ಕಿವಿಗಪ್ಪಳಿಸಿತು,  ಜೊತೆ ಜೊತೆಗೇ ದೂರದಿಂದ ಚೀರಾಟದ, ಹೆಜ್ಜೆಯ ದಡಬಡ ಶಬ್ದ ಕೂಡ ಕೇಳಿಸಲಾರಂಬಿಸಿತು. ನಾನೂ ಕೂಡಲೇ ಓಡಿದೆ.

ಆಗ ದತ್ತ ಅಪಾದಮಸ್ತಕವಾಗಿ ನನ್ನನ್ನು ಪರೀಕ್ಷಿಸುತ್ತಾ ನನ್ನ ಕಣ್ಣಲ್ಲಿ ಕಣ್ಣಿಟ್ಟು ಆಳದ ಆ ದೊಡ್ದ ಶಬ್ದದ ಧ್ವನಿಯಂತೆಯೇ ಹೇಳಿದ  “ನೀನು ಈ ರೀತಿ ಓಡಿದರೆ ಪೋಲೀಸರ ಕೋಲು ನಿನ್ನನ್ನು ಹಿಂಬಾಲಿಸುತ್ತದೆ, ಅಥವಾ ಬೇಕಿದ್ದರೆ ಬಂದೂಕು ಸಹ.”  “ನೀನೊಬ್ಬ ಬಂಡವಾಳಶಾಹಿ, ಬೂರ್ಜ್ವ ವರ್ಗಗಳ ಪ್ರತಿನಿಧಿ, ದುಡಿಯುವ ವರ್ಗಗಳ ಶೋಷಕ,” ಎಂದು ನನ್ನೊಳಗೆ ನಾನು ಗೊಣಗಿಕೊಂಡೆ, ಅಷ್ಟರಲ್ಲಿ ಮತ್ತೊಂದು ದೊಡ್ಡ ಶಬ್ದ, ಮತ್ತೆ ಮನುಷ್ಯರ ಚೀರಾಟದ ಧ್ವನಿಗಳು ನನ್ನ ಕಿವಿಗಪ್ಪಳಿಸಿತು. ನಾನು ಒಂದು ದೊಡ್ಡ ಗಲಭೆಯಲ್ಲಿ ಸಿಲುಕಿಕೊಂಡಿರುವುದು ಖಾತ್ರಿಯಾಯ್ತು. ಆದರೆ ನಾನು ಭಯದಿಂದ ಕಂಪಿಸಲಿಲ್ಲ. ನನ್ನ ಧೀರೋಧಾತ್ತ ನಡವಳಿಕೆಯನ್ನು ತೋರಿಸಲು ಈ ಸಂದರ್ಭಕ್ಕಾಗಿ ಎದುರು ನೋಡುತ್ತ. ಆದರೆ ಚೀರಾಟ ದೊಡ್ಡದಾಗ ತೊಡಗಿತು. ಜನರ ಓಡುತ್ತಿರುವ ಹೆಜ್ಜೆಯ ಸಪ್ಪಳದೊಂದಿಗೆ ಕುದುರೆಗಳ ಖರಪುಟ ಸದ್ದು ಮಿಳಿತವಾಗತೊಡಗಿತ್ತು. ಹೊಗೆ ಕೇವಲ ವಾಸನೆಯಾಗಿರದೆ ಕಣ್ಣಿಗೆ ಕಾಣತೊಡಗಿತ್ತು. ಈ ಹೊಗೆ ನನ್ನ ಕಣ್ಣನ್ನು, ಕಿವಿಯನ್ನು, ಶ್ವಾಸಕೋಶವನ್ನು ಆವರಿಸಿಕೊಳ್ಳತೊಡಗಿತು. ನಾನು ಕೆಮ್ಮುತ್ತಾ ದಾರಿಯಲ್ಲಿ ಬಿದ್ದ ಬುಟ್ಟಿಯೊಂದಕ್ಕೆ ಅಡ್ಡಗಾಲು ಹಾಕಿ ಎಡವಿ ದತ್ತನ ಕೈ ಹಿಡಿದುಕೊಂಡೆ. ಅದರೆ ಇದರರ್ಥ ನಾನು ಭಯಗೊಂಡಿದ್ದೇನೆಂತಲ್ಲ. ಅಥವಾ ಸ್ವಲ್ಪ ಹೊತ್ತಿನ ಮುಂಚೆ ನಾನು ಓಡಲೆತ್ನಿಸಿದ್ದು ಭಯದಿಂದಲ್ಲ.  ಬದಲಾಗಿ ನಿಜ ಹೇಳಬೇಕೆಂದರೆ ನನ್ನೊಳಗೆ ಉದ್ವೇಗವಿತ್ತು.  ಈ ಗಲಭೆಯ  ಸಂದರ್ಭದಲ್ಲಿ ಏನನ್ನಾದರೂ ಮಾಡಬೇಕೆನ್ನುವ ಹುಮ್ಮಸ್ಸಿತ್ತು. ಕ್ರಾಂತಿಗಾಗಿ ಕನಿಷ್ಟ ಒಂದು ಚಪ್ಪಲಿಯನ್ನು ತೂರುವುದರ ಮೂಲಕವಾದರು.

ಆ ಹೊಗೆಯಲ್ಲಿ ಕೆಲವು ಜನರನ್ನು ಪೋಲೀಸರು ಆಟ್ಟಿಸಿಕೊಂಡು ಹೋಗುತ್ತಿರುವುದು ಕಾಣಿಸಿತು. ನಾನು ಪೋಲೀಸರತ್ತ ಉಗುಳಿದೆ. ನಾನು ಪೋಲಿಸರ ವಿರುದ್ಧ ಉಗುಳಿದ್ದನ್ನು ದತ್ತ ನೋಡಬೇಕೆಂಬುದು ನನ್ನ ಅಭಿಲಾಷೆಯಾಗಿತ್ತು. ಅವನಿಗೆ ಈ ಬಂಡವಾಳಶಾಹಿಗಳ ವಿರುದ್ಧದ ನನ್ನೊಳಗಿನ ಆಕ್ರೋಶ ಅರಿವಾಗಬೇಕೆಂಬುದು ನನ್ನ ಆಸೆ. ಅದರೆ ಅವನು ಇದ್ಯಾವುದನ್ನು ಗಮನಿಸದೆ ಯಂತ್ರದಂತೆ ನೆಟ್ಟಗೆ ನಡೆಯುತ್ತಿದ್ದ. ಅವನ ನೇರವಾದ, ಗೊಂದಲವಿಲ್ಲದ ಈ ನಡಿಗೆ ಯಾವುದೋ ಸೆಮಿನಾರ್ ನ  ಭಾಷಣಕ್ಕೆ ಹೋಗುವಂತಿತ್ತು. ನನಗೆ ಅಸಹ್ಯವೆನಿಸಿತು.  ನಾನು ತಿರುವಿನ ಬಳಿ ಸಾಗುತ್ತಿದ್ದಂತೆಯೇ ಗಲಭೆ ನಮ್ಮೆಲ್ಲರ ಕೈಮೀರಿದಂತಿತ್ತು. ಹಠಾತ್ತಾಗಿ ಬೀದಿಯ ಮದ್ಯೆ, ಮನೆ, ಅಂಗಡಿಗಳ ಮೇಲೆ ಎಲ್ಲೆಲ್ಲಿಯೂ ಜನರು ಕಾಣಿಸಕೊಳ್ಳತೊಡಗಿದರು. ನಾನು ಈ ಜನಸಮೂಹದಲ್ಲಿ, ಈ ಸಮೂಹ ಸನ್ನಿಯಲ್ಲಿ ಸಿಕ್ಕಿಕೊಂಡಿರುವುದು ಖಾತ್ರಿಯಾಯಿತು. ನನ್ನ ಅಸಹಾಯಕತೆಯನ್ನು ಹಳಿದುಕೊಂಡೆ. ನಾನು ಉತ್ತೇಜನಕ್ಕಾಗಿ ರೋಧಿಸತೊಡಗಿದೆ. ನಾನು ಈ ಜನ ಸಮೂಹವನ್ನು ಪ್ರಚೋದಿಸುತ್ತಾ, ಅದರ ನಾಯಕತ್ವ ವಹಿಸಿಕೊಳ್ಳಲು ಬಯಸಿದ್ದೆ…. ಆದರೆ ಈ ಜನ ಸಮೂಹ ನನ್ನನ್ನು ನೆಲದ ಮೇಲೆ ಕಾಲಿಡದಂತೆ ತಳ್ಳತೊಡಗಿತು. ನಾನು ಹರಸಾಹಸ ಮಾಡಿ ದತ್ತನಿಗೆ ಅಂಟಿಕೊಂಡು ಇಲ್ಲ ನಾನು ಈ ರೀತಿಯ ಅಸಹಾಯಕ ಮನುಷ್ಯನಲ್ಲ ! ನನಗೆ ಈ ಶೋಷಣೆ ವಿರುದ್ದ ಹೋರಾಟಕ್ಕೆ ಒಂದು ಅಸ್ತ್ರವನ್ನು ಕೊಡಿ !! ಒಂದು ಬಾಂಬನ್ನು ಕೊಡಿ!! ಇಲ್ಲವೇ ನಿಮ್ಮ ಕಾರೊಳಗೆ ತೂರಿಕೊಳ್ಳಲು ಬಿಟ್ಟುಬಿಡಿ !! ಇಲ್ಲಿ ಏನನ್ನೂ ಮಾಡಲಿಕ್ಕಾಗದ ಅವಮಾನಕ್ಕಿಂತ ನಿಮ್ಮ ಕಾರಲ್ಲಿ ತೂರಿಕೊಳ್ಳುವುದು ಉತ್ತಮವೆಂದು ನನಗನ್ನಿಸುತ್ತಿದೆ!!! ಹೌದು ಮಿ.ದತ್ತರ ಬಳಿ ಈ ರೀತಿಯ ಒಂದು ಹುಚ್ಚು ಹುಚ್ಚಾದ ಮೌನ ಕೋರಿಕೆಯನ್ನು ಮಾಡಿದೆ.

ನನಗೆ ಈ ದತ್ತನ ಜಾಣತನದ ಬಗೆಗೆ ಮೆಚ್ಚುಗೆಯಾಯ್ತು. ಇಷ್ಟೊಂದು ಗಲಭೆ, ಕಲ್ಲು ತೂರಾಟ, ಬೆಚ್ಚಿಬೀಳಿಸುವ ಶಬ್ದಗಳ ನಡುವೆಯೂ ಇವನು ಚಾಣಾಕ್ಷತನದಿಂದ ನನ್ನನ್ನು ಈ ಗಲಭೆಪೀಡಿತ ರಸ್ತೆಯಿಂದ ಪಾರುಮಾಡಿಸಿ ಅಲ್ಲಿ ಮೂಲೆಯಲ್ಲಿದ್ದ ತನ್ನ ಕಾರ್‌ನ ಬಳಿಗೆ ಕರೆದೊಯ್ದಿದ್ದ. ಆ ಅತ್ಯಂತ ದೊಡ್ಡ ಮಿರಮಿರ ಮಿಂಚುವ ಕಪ್ಪು ಕಾರು ನೋಡಿದ ತಕ್ಷಣ ನನಗೆ ಒಂದು ರೀತಿಯಲ್ಲಿ ಅದು ಅತಿ ಘೋರವೆನಿಸಿತು. ಹಾಗೂ ಈ ದತ್ತನ ಶ್ರೀಮಂತ ಪ್ರದರ್ಶನಕ್ಕೆ ಹೀಯಾಳಿಸಬೇಕೆನಿಸಿತು. ನೀನು ಇಂದಿನ ಈ ಗಲಭೆ, ಸಾವು ನೋವಿನ ದಿನದಂದೂ ಕೂಡ ಸೂಟ್ ಹಾಗೂ ಟೈ ಅನ್ನು ಧರಿಸಿ, ಇದರ ಜೊತೆಗೆ ಇಂತಹ ಐಷಾರಾಮಿ ಕಾರನ್ನು ಇಟ್ಟುಕೊಂಡು ಶ್ರೀಮಂತಿಕೆಯಿಂದ ಓಡಾಡುತ್ತಿರುವುದು ಈ ಗಲಭೆಯಿಂದ ತೊಂದರೆಗೊಳಗಾದ ಸಾವಿರಾರು ಜನರನ್ನು ಅವಮಾನ ಮಾಡಿದಂತಾಗಲಿಲ್ಲವೇ ಎಂದು ಕೇಳಬೇಕೆನಿಸಿತು. ಅಲ್ಲಿ ಅ ರಸ್ತೆಯ ಅಂಚಿನಲ್ಲಿ ಒಂದು ಗಾಡಿ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತಿತ್ತು. ಆದರೆ ದತ್ತ ಇದನ್ನು ಕಡೆಗಣಿಸಿ ಕಾರನ್ನೇರಿದ. ಅವನ ಜೊತೆಗೆ ನಾನೂ ಕಾರೊಳಗೆ ತೂರಿಕೊಂಡೆ ಆರಾಮಾಗಿ!

(ಈ ಬಾರಿ ನನ್ನಲ್ಲಿ ಅಂತಹ ಗೊಂದಲಗಳಿದ್ದಂತಿರಲಿಲ್ಲ.)  ಚಲಿಸುವ ಕಾರಿನೊಳಗೆ ನನ್ನನ್ನು ನಾನು ಹಿಂಬದಿಯ ಕನ್ನಡಿಯೊಳಗೆ ನೋಡಿಕೊಂಡೆ. ಅಲ್ಲಿನ ಪ್ರತಿಬಿಂಬ ನನಗೆ ಧೈರ್ಯವನ್ನು ಕೊಡುತ್ತಿತ್ತು. ಅದೇ ಪರಿಚಿತ ಗುಳಿಬಿದ್ದ ಕೆನ್ನೆಗಳು, ಉಬ್ಬಿದ ಹಣೆ, ಆತಂಕದ ಕಣ್ಣುಗಳು. ಅಥವಾ ಅದೇ ಉಪೇಂದ್ರ ದಾಸ್‌ನ ಕ್ರಾಂತಿಕಾರಿ ಚಹರೆ. ಒಂದು ಕಾಲದಲ್ಲಿ ಹಳ್ಳಿಯ ಶಾಲೆಯಲ್ಲಿ ಇಂಗ್ಲೀಷನ್ನು ಭೋದಿಸುತ್ತಿದ್ದ ಈ ಉಪೇಂದ್ರ ದಾಸ್ ಈಗ ಕಲ್ಕತ್ತದ ಸರ್ಕಾರಿ ಕಛೇರಿಯಲ್ಲಿ ಪ್ರಥಮ ದರ್ಜೆಯ ಗುಮಾಸ್ತ. ನನ್ನ ಈ ಚಹರೆಯನ್ನು ಎಣ್ಣೆ ಮುಖದ ಕಾರೊಳಗಿನ ನನ್ನ ಸಂಗಾತಿಯೊಂದಿಗೆ ಯಾರಾದರೂ ಹೋಲಿಸಿ ಗೊಂದಲಗೊಂಡರೆ??  ಒಂದು ವೇಳೆ ಹೋಲಿಸಿದರೂ ಅವರಿಗೆ ವ್ಯತ್ಯಾಸಗಳು ಗೊತ್ತಾಗುತ್ತವೆ. ಏಕೆಂದರೆ ನಾನು ಅಲ್ಲಿ ಬೀದಿಗಳಲ್ಲಿ ಗಲಭೆಯಲ್ಲಿ ಹೋರಾಡುತ್ತಿರುವ ಸಾವಿರಾರು ಜನರೊಂದಿಗೆ ಬಾಯಲ್ಲಿ ಹೇಳಲಾರದ ಹೃದಯದ ಮೌನ ಭಾಷೆಯನ್ನು ಬಳಸಿ ಮಾತನಾಡಿದ್ದೇನೆ.

“ಕಾಮ್ರೇಡ್ಸ್, ನಾನು ಇವನೊಂದಿಗೆ ಇರುವುದು ತಾತ್ಕಾಲಿಕ ಮಾತ್ರ. ನಾನು ಎಂದಿಗೂ ನಿಮ್ಮವನೇ.  ಇವನೊಂದಿನ ಈ ತಾತ್ಕಾಲಿಕ ಐಷಾರಾಮಿ ಸ್ನೇಹ ನಿಮ್ಮೊಂದಿಗಿನ ಸಂಬಂಧವನ್ನು ಕಡಿದು ಹಾಕಲಾರದು !! ನನ್ನ ಪ್ರಿಯ ಕಾಮ್ರೇಡ್ ಸ್ನೇಹಿತರೇ, ನಾನು ಸಧ್ಯಕ್ಕೆ ಸ್ಥಗಿತಗೊಂಡಿದ್ದೇನೆ!!  ಆದರೂ ನಾನು ನಿಮ್ಮೊಂದಿಗಿದ್ದೇನೆ!!  ಕ್ರಾಂತಿ ಚಿರಾಯುವಾಗಲಿ!!!” ಅತ್ಯಂತ ಸುಖಮಯವಾಗಿ ಈ ವಿದೇಶಿ ಕಾರು ಚಲಿಸುತ್ತಿರುವಾಗಲೂ ಕೂಡ ನನ್ನಲ್ಲಿ ಅನೇಕ ಪ್ರಶ್ನೆಗಳೇಳುತ್ತಿದ್ದವು.   “ನಾವು ಸಾಗುತ್ತಿರುವ ರಸ್ತೆ ಗಲಭೆಗ್ರಸ್ತ ರಸ್ತೆಗೆ ಸಮಾನಂತರದಲ್ಲಿದೆ. ಯಾರಿಗೆ ಗೊತ್ತು ಇಲ್ಲಿಯೂ ಕೂಡ ಲುಂಗಿಯನ್ನು ಧರಿಸಿದ ಯುವಕರು ಕೈಯಲ್ಲಿ ಕಲ್ಲು ಹಿಡಿದು ಮರದ, ಕಟ್ಟಡದ ಮರೆಯಲ್ಲಿ ನಿಂತಿದ್ದರೆ ? ನಮ್ಮ ಸುರಕ್ಷತೆಯ ಬಗೆಗೆ ಯಾವ ಗ್ಯಾರಂಟಿ ?  ಇಲ್ಲಿ ನಮ್ಮ ಅಂದರೆ ಈ ಬೂರ್ಜ್ವ ದತ್ತನ ಸುರಕ್ಷತೆ ಹೇಗೆ ಎಂದರ್ಥ.” ಹೀಗೆ ಪ್ರಯಾಣ ಮುಂದುವರಿಯುತ್ತಿದ್ದಾಗ ದಾರಿಯಲ್ಲಿ ಗುಡಿಸಲುಗಳು, ಬಡತನವನ್ನು ಹೊದ್ದುಕೊಂಡು ನಿಂತಿದ್ದ ಅರೆಬೆತ್ತಲಿನ ಸಣ್ಣ ಹುಡುಗರು, ಟೀ ಅಂಗಡಿ, ಅದಕ್ಕೆ ನೇತುಬಿದ್ದ ಒಣಗಿದ ಬಾಳೆ ಹಣ್ಣು, ಟೀ ಪೊಟ್ಟಣಗಳು ಕಣ್ಣಿಗೆ ಬಿದ್ದವು. ಒಂದು ರೀತಿಯಲ್ಲಿ ಮಂಕು ಕವಿದ ನೀರವತೆ! ಈ ಮಧ್ಯೆ ಅಂಬುಲೆನ್ಸ್ ನಮ್ಮನ್ನು ದಾಟಿ ಮುಂದೆ ಚಲಿಸಿದ್ದನ್ನು ಬಿಟ್ಟರೆ ಸಧ್ಯಕ್ಕೆ ಅಂತಹ ವಿಶೇಷವಾದುದ್ದೇನು ಕಾಣಿಸಲಿಲ್ಲ. ಅಂದರೆ ನಾವು ಗಲಭೆಪೀಡಿತ ಪ್ರದೇಶವನ್ನು ದಾಟಿದ್ದೇವೆಂದಾಯ್ತು. ದಾರಿ ಮುಂದೆ ಸಾಗಿದಂತೆ ಇಲ್ಲಿ ಯಾವುದೇ ಹೊಗೆ ಕಾಣಿಸುತ್ತಿರಲಿಲ್ಲ. ಅದರ ಬದಲಿಗೆ ಆಕಳುಗಳು, ಬಾತುಕೋಳಿಗಳು ಕಣ್ಣಿಗೆ ಬಿದ್ದವು. ಹಸಿರು ಕಣ್ಣಿಗೆ ಮುದಗೊಳಿಸುತ್ತಿದೆ. ಆದರೆ ನನ್ನೊಳಗಿನ ಅಂತರಾತ್ಮ ನನ್ನನ್ನು ಕೆಣಕುತ್ತಿದ್ದ.  “ಉಪೇಂದ್ರ ದಾಸ್, ನೀನು ಆ ಚಳುವಳಿಯಲ್ಲಿ ಭಾಗವಹಿಸದೆ ತಪ್ಪು ಮಾಡಲಿಲ್ಲವೇ?  ಈ ಬೂರ್ಜ್ವ ಕ್ರಿಮಿಯ ಜೊತೆ ಸೇರಿ ನಿನ್ನನ್ನು ನೀನು ಈ ಗಲಭೆಯಿಂದ ರಕ್ಷಿಸಿಕೊಂಡೆಯಲ್ಲವೇ?  ಇಲ್ಲಿ ಗೆದ್ದದ್ದು ಆ ಬೂರ್ಜ್ವ ದತ್ತ !!  ಇವನು ಬಲಶಾಲಿಯಾದಂತಹ ಆನೆ ಇರುವೆಗಿಂತಲೂ ಶಕ್ತಿಶಾಲಿ ಎಂದು ಸಾಬೀತುಪಡಿಸಿಬಿಟ್ಟ. ಈ ಎಲ್ಲ ಪ್ರಶ್ನೆಗಳನ್ನು ಆ ಗಲಭೆಗ್ರಸ್ತ ಜನ ನಿನ್ನನ್ನು ಕೇಳುತ್ತಾರೆ.”

ನಾನು ಆಪಾದನೆ ಮುಕ್ತಗೊಳ್ಳುವ ಭರವಸೆಯಿದ್ದರೂ ನನಗೆ ಸುಸ್ತಾಗತೊಡಗಿತು. “ಆ ಬಾತು ಕೋಳಿಗಳನ್ನು ನೋಡಿದಾಗ ಆ ಬಾತು ಕೋಳಿಯಂತಹ ಕತ್ತಿನ ನನ್ನ ಜೊತೆಗಾರನ ಕತ್ತನ್ನು ತಿರುಚಲು ನನಗೆ ಮನಸ್ಸಾಗಿತ್ತೆಂದು ನಾನು ಆ ಹೋರಾಟಗಾರರಿಗೆ ಹೇಗೆ ಹೇಳಲಿ?” ಈ ಸುಖಕರ ಪ್ರಯಾಣ ಕ್ಷಣಿಕವಾಗಿತ್ತು. ಒಂದು ಕಲ್ಲು ಎಲ್ಲಿಂದಲೋ ತೂರಿ ಬಂದು ನಾವು ಕುಳಿತಿದ್ದ ವಿದೇಶಿ ಕಾರಿಗೆ ಬಡಿಯಿತು. ಮತ್ತೊಂದು ಕಲ್ಲು ನಾನು ಕುಳಿತ ಸೀಟಿನ ಬಾಗಿಲಿಗೆ ಬಂದಪ್ಪಳಿಸಿತು. ನಮ್ಮ ಕಣ್ಣೆದುರಿಗೆ ಈ ಕೃತ್ಯವನ್ನು ಎಸುಗಿದ ವ್ಯಕ್ತಿ ಗೋಚರಿಸತೊಡಗಿದ. ಆದರೆ ಇವನು ಲುಂಗಿ ಅಥವಾ ಧೋತಿಯನ್ನು ಉಟ್ಟಿರಲಿಲ್ಲ. ಬದಲಿಗೆ ಇವನ ಕಣ್ಣಲ್ಲಿ ಮೃಗದ ಬೇಟೆಯ ಛಾಯೆಯಿತ್ತು. ಅಲ್ಲಿ ಅಪಾರವಾದ ಸಿಟ್ಟಿತ್ತು. ನಾನು ನಡುಗಲಾರಂಬಿಸಿದೆ. ಆದರೆ ಜೊತೆಗಾರ ದತ್ತ ಇದರಿಂದ ವಿಚಲಿತನಾಗದೆ ತಣ್ಣಗೆ ಕಾರು ಓಡಿಸುತ್ತಿದ್ದ. ಇವನ ಕೆನ್ನೆ, ತುಟಿ ಹಾಗೂ ಕಣ್ಣುಗಳಲ್ಲಿ ಒಂದು ರೀತಿಯ ವಿಚಿತ್ರವಾದ ತಣ್ಣಗಿನ ಧೃಡತೆಯಿತ್ತು. ಇವನಲ್ಲಿ ಈ ಹಲ್ಲೆಗಾರನನ್ನು ಮುಗಿಸುವಂತಹ ಯೋಜನೆಯಿದ್ದಂತಿತ್ತು. ಆದರೆ ಕಲ್ಲುಗಳ ಮೇಲೆ ಕಲ್ಲುಗಳು ಇದೇ ರೀತಿ ಬಂದು ಈ ಕಾರಿನ ಮೇಲೆ, ಇವನ ಮೇಲೆ ಅಪ್ಪಳಿಸಲಿ, ಈ ಬೂರ್ಜ್ವ ದತ್ತ ಅಪಾರವಾಗಿ ನರಳಿ ಮಂಡಿಯೂರಿ ಪ್ರಾಣಭಿಕ್ಷೆ ಬೇಡುವಂತಾಗಲಿ ಎಂದು ನಾನು ಮೌನವಾಗಿ ಪ್ರಾರ್ಥಿಸುತ್ತಿದ್ದೆ. ಅಷ್ಟರಲ್ಲಿ ಮತ್ತೊಂದು ದೊಡ್ಡ ಕಲ್ಲು ನೇರವಾಗಿ ಬಂದು ಕಾರಿನ ಮುಂಬದಿಯ ಗಾಜಿಗೆ ಬಂದಪ್ಪಳಿಸಿತು.  ಗಾಜು ಸಂಪೂರ್ಣವಾಗಿ ಬಿರುಕು ಬಿಟ್ಟುಕೊಂಡರೂ ಛಿದ್ರ ಛಿದ್ರವಾಗಲಿಲ್ಲ. ಈ ದತ್ತ  “ಈ ಗಲಭೆಕೋರರಿಗೆ ಈ ಗಾಜು ಒಡೆಯಲಾರದಂತೆ ಪುಲ್ ಪ್ರೂಫ್ ಆಗಿದೆ ಎಂದು ಗೊತ್ತಿಲ್ಲ,”  ಎಂದು ಗೊಣಗುತ್ತಿದ್ದುದು ಕಿವಿಗೆ ಬಿತ್ತು.  ಎಂತಹ ಅವಮಾನ!!  ಅಷ್ಟರಲ್ಲಿ ಆ ಹಲ್ಲೆಗಾರ ಕೈಯಲ್ಲಿ ದುಂಡನೆಯ ಲೋಹವನ್ನು ಹಿಡಿದುಕೊಂಡು ನೇರವಾಗಿ ನಮ್ಮ ಕಾರಿನ ಮುಂಭಾಗಕ್ಕೇ ಬಂದು ನಿಂತ.  ಅದು ಬಾಂಬ್!!!  ಆದರೆ ಕಿರುಚಿಕೊಳ್ಳಲೂ ಸಮಯವಿಲ್ಲ!!  ಅರೆ ನಿಲ್ಲು ನಿಲ್ಲು ನಾನೂ ಕೂಡ ನಿನ್ನ ಜೊತೆಗಿದ್ದೇನೆ, ಈ ಬಾಂಬ್ ಏತಕ್ಕೆ??  ಇದು ಹೇಡಿತನದ ಕೃತ್ಯ ಎಂದು ಕಿರುಚಲಾರಂಬಿಸಿದೆ. ಅಷ್ಟರಲ್ಲಿ ದತ್ತ ಹಾವಿನಂತೆ ಬುಸುಗುಡುತ್ತಾ ಮೆಲ್ಲಗೆ ಸರಿಯಲಾರಂಭಿಸಿದ.

ಅಷ್ಟರಲ್ಲಿ ಒಬ್ಬ ಪೋಲೀಸ್ ಬಂದೂಕಿನೊಂದಿಗೆ ಬರುತ್ತಿರುವುದು,  ರಸ್ತೆಯಲ್ಲಿ ರಕ್ತ ಚೆಲ್ಲಿದ್ದು ಎಲ್ಲವೂ ನನಗೆ ಮುಸುಕಾಗಿ ಕಾಣಲಾರಂಬಿಸಿತು.  ಆಗಲೇ ನಾನು ಎಚ್ಚರ ತಪ್ಪಿ ಕೆಳಗೆ ಬಿದ್ದಿದ್ದೆ. ನಾನು ಎಚ್ಚರಗೊಂಡಾಗ ಒಂದು ಮುರುಕು ಗ್ಯಾರೇಜಿನಲ್ಲಿ ಬಿದ್ದಿರುವುದು ಗೊತ್ತಾಯಿತು. ಜೊತೆಗಾರ ದತ್ತ ಜೋರಾಗಿ ಉಸಿರಾಡುತ್ತಿರುವುದು ಕಿವಿಗೆ ಬೀಳುತ್ತಿತ್ತು. ಜೊತೆಗೆ ಅಲ್ಲಿ ಒಬ್ಬ ಸರ್ದಾರ್‌ಜಿ ಇದ್ದ. ಬಹುಶ ಆ ಗ್ಯಾರೇಜಿನ ಮಾಲೀಕನಿರಬಹುದು. ಈ ಸರ್ದಾರ್‌ಜಿ ನನ್ನನ್ನು ಉದ್ದೇಶಿಸಿ ಹೇಳತೊಡಗಿದ,  “ನೀನು ನಿಜಕ್ಕೂ ಅದೃಷ್ಟಶಾಲಿ, ನೀನು ಅವನಂತೆ ಸಾಯಲಿಲ್ಲ … ” ಎಂದು ಅರ್ಧದಲ್ಲೇ ಮಾತು ನಿಲ್ಲಿಸಿ ದತ್ತನೆಡೆಗೆ ನೋಡಿದ.  ಅವರಿಬ್ಬರ ನಡುವೆ ಅಲ್ಲೇನೋ ಕಣ್ಣುಗಳ ಮೂಲಕ ಸಂಭಾಷಣೆ ನಡೆದಂತಾಯ್ತು. ಇದಕ್ಕೆ ಅಷ್ಟು ಗಮನ ಕೊಡದೆ ನಾನು ನಡೆಯಿರಿ ಇಲ್ಲಿಂದ ಹೊರಡೋಣ ಎಂದೆ.  ಆಗ ದತ್ತ ನನ್ನ ಭುಜದ ಸುತ್ತ ಕೈ ಹಾಕಿ ಸಂಕ್ಷಿಪ್ತವಾಗಿ ಹೇಳಿದ  “ನನ್ನ ಕಾರು ಹಾಳಾಗಿದೆ,  ನನ್ನ ನಾದಿನಿಯ ಮನೆಗೆ ನಡೆದೇ ಹೋಗೋಣ, ಈ ಸರ್ದಾರ್‌ಜಿಯ ಸಹಕಾರದಿಂದ ನಿನ್ನ ಪ್ರಾಣ ಉಳಿಯಿತು.”  ಸರ್ದಾರ್‌ಜಿ ನಿಮ್ಮಿಂದಲೂ ಸಹ ಎಂದು ದತ್ತನಿಗೆ ಹೇಳಿದ. ಒಟ್ಟಿನಲ್ಲಿ ಇವರಿಬ್ಬರೂ ನನ್ನನ್ನು ಉಳಿಸಿದರೆಂದಾಯ್ತು.  (ಸಾಯಿಸಿದ್ದು ಯಾರನ್ನ??)  ಆ ಸಂಜೆ ಕತ್ತಲಿನ ದಾರಿಯನ್ನು ನಾವು ನಡೆದು ದತ್ತನ ನಾದಿನಿ ಅನುರಾಧ ಅವರ ಮನೆ ತಲುಪಿದೆವು. ಅವರ ಮನೆಯ ಸೋಫಾದಲ್ಲಿ ನಾನು ನಿಶ್ಯಕ್ತನಾಗಿ ಕುಸಿದು ಕುಳಿತೆ. ದೊಡ್ಡದಾದ ಕಣ್ಣುಗಳನ್ನು ಹೊಂದಿದ್ದ ದತ್ತನ ನಾದಿನಿ ಅನುರಾಧ ತೆಳ್ಳಗೆ ಎತ್ತರವಿದ್ದಳು. ಪಟ ಪಟನೆ ಮಾತನಾಡುತ್ತಿದ್ದಳು. ಅವಳ ಮಾತಿನಲ್ಲಿ ಸ್ತ್ರೀವಾದದ ಛಾಯೆ ಇಣುಕುತ್ತಿತ್ತು. ಅವಳು ನೀಡಿದ ಕಾಫಿಯನ್ನು ಕುಡಿಯುತ್ತಾ ಅನುರಾಧಳನ್ನು ಗಮನಿಸಿದಾಗ ಅವಳು ಒಂದು ರೀತಿಯಲ್ಲಿ ಉತ್ಸಾಹದ ಬುಗ್ಗೆಯಂತೆಯೂ ಮಗದೊಮ್ಮೆ ನನ್ನ ನಾದಿನಿಯಂತೆಯೂ ಮತ್ತೊಮ್ಮೆ ಅಪ್ತ ಸ್ನೇಹಿತಳಂತೆಯೂ ಗೋಚರಿಸುತ್ತಿದ್ದಳು. ಪರಿಚಯವಾದ ಕೆಲವೇ ಕ್ಷಣಗಳಲ್ಲಿ ನನ್ನೊಂದಿಗೆ ಬೆರೆತು ಮಾತನಾಡುವ ರೀತಿ ನನ್ನಲ್ಲಿ ಇನ್ನಿಲ್ಲದ ಉತ್ಸಾಹವನ್ನು ಹುಟ್ಟಿಹಾಕಿದಂತಿತ್ತು.

ಆ ಮನೆಯನ್ನೊಮ್ಮೆ ಕಣ್ಣಾಡಿಸಿದಾಗ ಅಲ್ಲಿ ಇಕೆಬಾನದ ಹೂವುಗಳು, ವ್ಯಾನ್‌ಗೋವನ ಪೇಂಟಿಂಗಳೂ, ಮೊಘಲರ, ಟಾಲ್‌ಸ್ಟಾಯ್, ಠ್ಯಾಗೂರ್ ರವರ ಭಾವಚಿತ್ರಗಳೂ ಕಣ್ಣಿಗೆ ಬಿದ್ದವು. ಅಂದರೆ ಈ ಅನುರಾಧ ನನಗಿಂತಲೂ ಬುದ್ಧಿಜೀವಿಯೇ??  ಹಿಂದೊಮ್ಮೆ ನಮ್ಮಿಬ್ಬರ ಪ್ರಥಮ ಭೇಟಿಯ ಸಂದರ್ಭದಲ್ಲಿ ದತ್ತನಿಗೆ ನಾನು ಇಂಗ್ಲೀಷ್ ಕ್ಲಾಸಿಕ್ ನಾಟಕದ ಪುಸ್ತಕವೊಂದನ್ನು ತೋರಿಸಿ ಅದನ್ನು ಓದಲು ಶಿಫಾರಸ್ಸನ್ನು ಮಾಡಿದ್ದೆ.  ಆ ಪುಸ್ತಕವನ್ನು ಈಗ ಅವನ ನಾದಿನಿ ಅನುರಾಧಳ ಮನೆಯಲ್ಲಿ ನೋಡಿದೆ. ಇದನ್ನು ಆ ದತ್ತ ಇವಳಿಗೆ ಉಡುಗೊರೆಯಾಗಿ ಕೊಟ್ಟನೆ??  ಅಷ್ಟರಲ್ಲಿ ದತ್ತ ನನಗೆ ಮತ್ತಷ್ಟು ಉಪಚಾರ ಮಾಡತೊಡಗಿದ. ಈ ಮಧ್ಯೆ ದತ್ತ ಹಾಗೂ ಅನುರಾಧಾ ಅವರ ನಡುವೆ ಸರಸದ ಸಂಭಾಷಣೆಗಳು ವಿನಿಮಯವಾಗುತ್ತಿದ್ದವು. ಅಲ್ಲಿ ಸಾಹಿತ್ಯವಿತ್ತು, ಚರಿತ್ರೆಯಿತ್ತು. ಈ ದತ್ತನಿಗೆ ಈ ಸ್ಥಿಥಪ್ರಜ್ಞಾತೆ ಹೇಗೆ ಸಾಧ್ಯವಾಯಿತು??  ಇದರ ಮಧ್ಯೆ ನನಗೆ ದತ್ತನನ್ನು ಕೇಳಬೇಕೆನಿಸಿದ  “ಆ ಹಲ್ಲೆಕೋರನನ್ನು ಕೊಂದಿದ್ದು ನೀನೋ ಅಥವಾ ಪೋಲೀಸನೋ??  ನನಗೆ ನಿಜಕ್ಕೂ ಆಗಿದ್ದೇನು??  ಈ ಮಧ್ಯೆ ಆ ಸರ್ದಾರ್ಜಿ ಎಲ್ಲಿಂದ ಬಂದ ??” ಎನ್ನುವ ಪ್ರಶ್ನೆಗಳು ನನ್ನೊಳಗೇ ಉಳಿದವು. ಒಂದು ವೇಳೆ ಕೇಳಿದರೆ ಪ್ರತ್ಯುತ್ತರವಾಗಿ ದತ್ತ ಇದನ್ನೆಲ್ಲಾ ಕೇಳಲು ಹಾಗೂ ಹೇಳಲು ಇದು ಸಂದರ್ಭವಲ್ಲ ಎಂದರೆ ಏನು ಮಾಡುವುದು?. ಇಷ್ಟರಲ್ಲಾಗಲೇ ಕಾಫಿ ತಣ್ಣಗಾಗುತ್ತಿತ್ತು. ಅತಿಥೇಯಳು ಕೊಂಚ ದುಗುಡದಲ್ಲಿದ್ದಂತಿತ್ತು. ನನ್ನೊಳಗಿನ ಅಂತರಾತ್ಮ ಮತ್ತೆ ನನ್ನನ್ನು ಕೆಣಕತೊಡಗಿದ. “ದತ್ತ ನಿನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವನೇ?? ನಿನಗಿಂತಲೂ ಅವನು ಅನುಭವಸ್ಥ.  ನೀನಿನ್ನೂ ಎಳಸು.” ನನ್ನಲ್ಲಿ ಗೋಜಲಾಗತೊಡಗಿತು. ಆ ಗಲಭೆಪೀಡಿತ ರಸ್ತೆಗಳು, ಯಾವ ಬಾಂಬ್ ಗೂ ಒಡೆಯದ ಕಾರಿನ ಗಾಜು, ರಕ್ಷಣೆಗಾಗಿ ಮೊರೆಯಿಡುತ್ತಿರುವ ಹತ್ಯೆಗೊಳಗಾದ ಜನ, ಈ ಸುಂದರ ಮನೆ, ಇಲ್ಲಿನ ಕವಿಗಳ, ಚಿತ್ರಕಾರರ ಭಾವಚಿತ್ರಗಳು, ಮನಮೋಹಕ ಅನುರಾಧ … ಅಷ್ಟರಲ್ಲಿ ನನ್ನ ಗಮನ ತೆರೆದ ಕಿಟಿಕಿಯೆಡೆಗೆ ಹರಿಯಿತು. ಹೊರಗಡೆಯಿಂದ ಗಲಭೆಯ ಸದ್ದಿಗೆ ಕಾತರಿಸಿದೆ. ಆದರೆ ಎಲ್ಲವೂ ನಿಶ್ಯಬ್ದವಾದಂತಿತ್ತು. ಅಂದರೆ ಪ್ರತಿಭಟನೆಯ ಧ್ವನಿಗಳು ಸತ್ತು ಹೋದವೆ??  ಅದರ ಪ್ರತಿಧ್ವನಿಗಳೂ ಸಹ??  ಈ ದತ್ತನನ್ನು ಕೇಳಲೆ ? ಅವನ ನಾದಿನಿ ಅನುರಾಧಳನ್ನು??  ಇವೆಲ್ಲವನ್ನೂ ಮರೆತೂ ನಾನೂ ಇಲ್ಲಿನಂತೆ ಹವಾನಿಯಂತ್ರಿತ ಮನೆಯನ್ನು, ಸುಂದರ ತೋಟವನ್ನು ಹೊಂದಬೇಕೆನಿಸುತಿತ್ತು. ಏಕೆಂದರೆ ನಾನೂ ಮನುಷ್ಯನಲ್ಲವೇ !!  ನಾನು ನನ್ನ ಬದುಕಿನ ಅಂತಸ್ಥಿನಲ್ಲಿ ಮೇಲೇರಿದಾಗಲೇ ನಿಮ್ಮ ಕ್ರಾಂತಿಗೆ ನಾನು ಸಹಾಯ ಮಾಡಲು ಸಾಧ್ಯ. ನಿಮ್ಮನ್ನು ಮುನ್ನಡೆಸಲು ಸಾಧ್ಯ.  ಓಹ್ ಎಲ್ಲಾ ಗೋಜಲುಗಳು!!  ದತ್ತ ಹಾಗೂ ಅವನ ನಾದಿನಿ ಪದೇ ಪದೇ ತಮ್ಮ ಗಡಿಯಾರವನ್ನೂ ಆ ತೆರೆದ ಕಿಟಿಕಿಯನ್ನೂ ಆತುರದಿಂದ ನೋಡುತ್ತಿದ್ದರು. ನಾನು ಇದರ ಬಗ್ಗೆ ವಿಚಾರಿಸಿದಾಗ ಇವರಿಬ್ಬರೂ ಹೇಳಿದರು.

“ಅವನು ಬರುವುದು ಇಂದು ತಡವಾಗಬಹುದು. ಏಕೆಂದರೆ ಬಹಳಷ್ಟು ತಲೆಗಳನ್ನು ಎಣಿಸಬೇಕಲ್ಲವೇ?” ನನಗೆ ತಬ್ಬಿಬ್ಬಾಯಿತು. ಯಾರೀತ??  ಕುರಿಗಳ ತಲೆ ಎಣಿಸುವ ಕುರುಬನೇ?  ನನ್ನ ಗೊಂದಲವನ್ನು ಅರ್ಥ ಮಾಡಿಕೊಂಡ ದತ್ತ ಹೇಳಿದ. “ಆತನ ಹೆಸರು ನಾರಿಯನ್ ಬೋಸ್. ನನ್ನ ನಾದಿನಿ ಅನುರಾಧಾಳ ಪತಿ. ಆತ ಪೋಲೀಸ್ ವಿಶೇಷ ಪಡೆಗಾಗಿ ಕೆಲಸ ಮಾಡುತ್ತಿದ್ದಾನೆ. ನೀನು ಅವನ ಬಗೆಗೆ ಕೇಳಿರಬೇಕಲ್ಲವೇ?”  ಇಲ್ಲ ಆತನ ಹೆಸರನ್ನು ನಾನು ಕೇಳಿರಲಿಲ್ಲ. ಮುಂದೆಯೂ ತಿಳಿದುಕೊಳ್ಳುವುದೂ ಬೇಡ. ನನಗೆ ಇವರಿಬ್ಬರೂ ನನ್ನನ್ನು ಇಲ್ಲಿಂದ ಹೊರಕಳುಹಿಸಲು ಪಿತೂರಿ ನಡೆಸುತ್ತಿರುವಂತಿತ್ತು. ಮತ್ತೆ ನನ್ನಲ್ಲಿ ರಕ್ತ,  ಆ ಎದೆಯನ್ನು (ಅಥವಾ ಹೊಟ್ಟೆಯನ್ನೋ ಅಥವಾ ಗಂಟಲನ್ನೋ) ಚಿಮ್ಮಿಕೊಂಡು ಬಂದಂತಹ ರಕ್ತ ತಲೆಯಲ್ಲಿ, ಕಣ್ಣಲ್ಲಿ ಹರಿದಾಡತೊಡಗಿತು. ಮತ್ತೆ ಸ್ವಲ್ಪ ಕಾಫೀ ಬೇಕೆ ಎಂದು ಅನುರಾಧಾ ಕೇಳುತ್ತಿದ್ದುದು ದೂರದಲ್ಲೆಲ್ಲೋ ಕೇಳಿಸುತ್ತಿತ್ತು. ಅಷ್ಟರಲ್ಲಿ ದತ್ತ ನನ್ನ ಬಳಿ ಬಂದು ಅನುಕಂಪದ ಧ್ವನಿಯಲ್ಲಿ ಹೇಳತೊಡಗಿದ  “ಈಗ ಹೇಗಿದ್ದೀಯ? ನಿನಗೆ ತಡವಾಗುತ್ತಿದೆ. ಮನೆಗೆ ಹೋಗಲ್ಲವೇ?  ನೀನಿರುವುದು ಮೋಮಿಪುರದಲ್ಲವೇ? ಕೆಳಗಿನ ವೃತದ ರಸ್ತೆಯನ್ನು ಬಳಸಿ ನಂತರ ಎಡಕ್ಕೆ ತಿರುಗಿದಾಗ ಈ ರಸ್ತೆಯ ಕೊನೆ ಸಿಗುತ್ತದೆ. ಅಲ್ಲಿಂದ ನಿಧಾನವಾಗಿ ಕೆಳಗೆ ನಡೆದುಕೊಂಡು ಹೋಗು.  ಹಿಂತಿರುಗಿ ಮಾತ್ರ ನೋಡಬೇಡ.”  ಆದರೆ ನಾನು ಹೊರಡುವ ಗಡಿಬಿಡಿಯನ್ನು ತೋರಿಸಲಿಲ್ಲ. ನನ್ನಲ್ಲಿ ಒಳಗೊಳಗೇ ನಡುಕವುಂಟಾಗತೊಡಗಿತು. ಅನುರಾಧ ಮತ್ತೊಮ್ಮೆ ಬರಲು ಆಹ್ವಾನಿಸಿದಳು. ದತ್ತ ನನ್ನನ್ನು ಗೇಟಿನವರೆಗೂ ಬಿಡಲಿಕ್ಕೆ ಬಂದ. ಕೆಳಗಿನ ವೃತ್ತದ ರಸ್ತೆಯಲ್ಲಿ ಬೆಳಕು ಚೆಲ್ಲಿತ್ತು. ಅಲ್ಲಿ ಸುತ್ತಲೂ ಕಲ್ಲು, ಮುರಿದ ಗಾಜಿನ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಯಾರಾದರೂ ಬಂದು ಅವುಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ಕಾಯುತ್ತಿದ್ದವು …..