Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಕಥನಕ್ಕೊಂದು ಮುನ್ನುಡಿ

-ಡಾ. ಜಗದೀಶ್ ಕೊಪ್ಪ

ಕಳೆದ ಒಂದು ವರ್ಷದಿಂದ ನನ್ನನ್ನು ಕಾಡುತ್ತಾ ಬರೆಯದೆ ಉಳಿದಿದ್ದ ಜಗತ್ ಪ್ರಸಿದ್ಧ ಬೇಟೆಗಾರ ಜಿಮ್ ಕಾರ್ಬೆಟ್‌ನ ಕಥನಕ್ಕೆ ಈಗ ಕಾಲ ಕೂಡಿ ಬಂದಿದು ಈಗ ಕೈ ಹಾಕಿದ್ದೇನೆ. ಕನ್ನಡಕ್ಕೆ ಜಿಮ್ ಕಾರ್ಬೆಟ್ ಹೊಸಬನೇನಲ್ಲ. “ರುದ್ರ ಪ್ರಯಾಗದ ನರಭಕ್ಷಕ” ಎಂಬ ರೋಮಾಂಚನ ಕಥನದ ಮೂಲಕ ತೇಜಸ್ವಿ ಕನ್ನಡಿಗರಿಗೆ ಪರಿಚಯಿಸಿದ್ದಾರೆ.

ನಾನಿಲ್ಲಿ ಬರೆಯುತ್ತಿರುವುದು ಆತನ ಶಿಖಾರಿ ಕಥೆಗಳನ್ನಲ್ಲ. ಕಾರ್ಬೆಟ್‌ನ ಬದುಕು, ಬಾಲ್ಯ, ಭಾರತ ಹಾಗೂ ಇಲ್ಲಿನ ಜನರ ಬಗ್ಗೆ ಆತನಿಗೆ ಇದ್ದ ಅನನ್ಯ ಪ್ರೀತಿ, ನಿಸರ್ಗ ಕುರಿತಾದ ಅವನ ಅಸಾಮಾನ್ಯ ಜ್ಙಾನ, ಇವುಗಳ ಕುರಿತಾಗಿ.ಮಾತ್ರ. ಭಾರತದಲ್ಲೇ ಹುಟ್ಟಿ, ಬೆಳೆದರೂ ಕೂಡ, ಭಾರತಕ್ಕೆ ಸ್ವಾತಂತ್ರ್ಯ ಹತ್ತಿರವಾಗುತಿದ್ದಂತೆ ಬ್ರಿಟೀಷರ ಬಗ್ಗೆ ಇಲ್ಲಿನ ಜನರಿಗೆ ಇದ್ದ ದ್ವೇಷಕ್ಕೆ ಹೆದರಿ ತಾನು ಬದುಕಿ ಬಾಳಿದ ನೈನಿತಾಲ್ ಗಿರಿಧಾಮದ ಸಮೀಪದ ಕಲದೊಂಗಿ ಮನೆಯನ್ನು ಹಳ್ಳಿಯವರ ವಶಕ್ಕೆ ಒಪ್ಪಿಸಿ ತಲ್ಲಣ ಮತ್ತು ತಳಮಳಗಳೊಂದಿಗೆ ತನ್ನ ಅವಿವಾಹಿತ ಸಹೋದರಿಯೊಂದಿಗೆ ದೇಶ ತೊರೆದ ದುರ್ದೈವಿ. ಇವತ್ತಿಗೂ ಆ ಹಳ್ಳಿಯ ಜನ ಕಾರ್ಪೆಟ್ ಸಾಹೇಬ ( ಸ್ಥಳೀಯರು ಆತನನ್ನು ಕರೆಯುತಿದ್ದುದು ಹಾಗೆ) ಬರುತ್ತಾನೆಂದು ಆತನ ಐದು ಎಕರೆ ವಿಸ್ತೀರ್ಣದ ಮನೆಯನ್ನ ಜತನದಿಂದ ಕಾಯುತಿದ್ದಾರೆ. ( ಪಕ್ಕದ ಚಿತ್ರದಲ್ಲಿರುವ ಮನೆ)

ಉತ್ತರಾಂಚಲದಲ್ಲಿ ವಿಶೇಷವಾಗಿ ನೈನಿತಾಲ್, ಅಲ್ಮೋರ, ರಾಮ್‌ನಗರ್, ಕಥಮ್‌ಗೊಡ, ರುದ್ರಪ್ರಯಾಗ, ಹೃಷಿಕೇಶ, ಚೋಟಹಲ್ದಾನಿ, ಕಲದೊಂಗಿ ಮುಂತಾದ ಪ್ರದೇಶಗಳಲ್ಲಿ ಇವತ್ತಿಗೂ ದಂತಕಥೆಯಾಗಿರುವ ಕಾರ್ಬೆಟ್‌ನ ಕಥನಕ್ಕಾಗಿ ಕಳೆದ ವರ್ಷ 16 ದಿನಗಳಲ್ಲಿ 28 ಸಾವಿರ ಚದುರ ಕಿಲೋಮೀಟರ್ ಹುಚ್ಚನಂತೆ ಅಲೆದು ಸಂಗ್ರಹಿಸಿದ ಮಾಹಿತಿ ಹಾಗೂ ಆತನೇ ಬರೆದ ಬಾಲ್ಯ ಮತ್ತು ಭಾರತದ ಅನುಭವಗಳನ್ನ ಇದೀಗ ಸರಣಿ ಲೇಖನಗಳ ಮುಖಾಂತರ ನಿಮ್ಮ ಮುಂದೆ ಇಡುತಿದ್ದೇನೆ. ( ಜನವರಿ ಮೊದಲ ವಾರದಿಂದ “ವರ್ತಮಾನ.ಕಾಮ್” ಅಂತರ್ಜಾಲತಾಣದಲ್ಲಿ ಪ್ರಕಟವಾಗಲಿದೆ.)

ನನಗೆ ಕಾರ್ಬೆಟ್ ಕುರಿತು ಗುಂಗು ಹಿಡಿಸಿದವರು, ನನ್ನ ಪ್ರೀತೀಯ ಮೇಷ್ಟರಾದ ಪಿ.ಲಂಕೇಶ್. ಅವು 1993ರ ಮಳೆಗಾಲದ ನಂತರದ ದಿನಗಳು. ಆವಾಗ ಪ್ರತಿ ಬುಧವಾರ ಲಂಕೇಶ್ ಪತ್ರಿಕೆ ಮುದ್ರಣವಾಗಿ ಗುರುವಾರ ನಾಡಿನೆಲ್ಲೆಡೆ ದೊರೆಯುತಿತ್ತು. ಬುಧವಾರ ಬೆಳಿಗ್ಗೆ 11 ಘಂಟೆಗೆ ಸರಿಯಾಗಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಸಂಜೆವಾಣಿ ಪತ್ರಿಕೆಯ ಕಛೇರಿಗೆ ಶಿಷ್ಯ ಬಸವರಾಜು ಜೊತೆ ಬರುತಿದ್ದ ಮೇಷ್ಟ್ರು ಮಾಲಿಕ ಮಣಿ ಮತ್ತು ಅವರ ಮಗ ಅಮುದಮ್  ಜೊತೆ ಮಾತನಾಡಿ ಚಹಾ ಕುಡಿದು ಪತ್ರಿಕೆಯನ್ನ ಮುದ್ರಣಕ್ಕೆ ಕಳಿಸಿ ನಂತರ ಮಧ್ಯಾಹ್ನ 2 ಗಂಟೆವರೆಗೆ ಪ್ರೆಸ್‌ಕ್ಲಬ್ ನಲ್ಲಿ ಬಿಯರ್ ಕುಡಿಯುತ್ತಾ ಕುಳಿತು ಕೊಳ್ಳುವುದು ವಾಡಿಕೆಯಾಗಿತ್ತು. ಆ ದಿನಗಳಲ್ಲಿ ತೇಜಸ್ವಿಯವರ ರುದ್ರಪ್ರಯಾಗದ ನರಭಕ್ಷಕ ಲೇಖನ ಮಾಲೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.

ಒಮ್ಮೆ ಅನಿರಿಕ್ಷಿತವಾಗಿ ಕ್ಲಬ್‌ನಲ್ಲಿ ಸಿಕ್ಕ ಲಂಕೇಶರ ಜೊತೆ ಕಾರ್ಬೆಟ್‌ನ ಸಾಹಸ ಕುರಿತು ಪ್ರಸ್ತಾಪಿಸಿದೆ. ಆ ದಿನ ತುಂಬಾ ಒಳ್ಳೆಯ ಮೂಡ್‌ನಲ್ಲಿ ಇದ್ದ ಅವರು ನನಗೆ ಅರ್ಧ ಘಂಟೆ ಕಾರ್ಬೆಟ್ ಕುರಿತು ಉಪದೇಶ ಮಾಡಿದರು. ಅವರ ಮಾತಿನ ದಾಟಿ ಹೀಗಿತ್ತು:

“ಇಲ್ಲ ಕಣೊ ಇಡೀ ಜಗತ್ತು ಅವನನ್ನ ಅದ್ಭುತ ಶಿಖಾರಿಕಾರ ಎಂದು ತಿಳಿದುಕೊಂಡಿದೆ. ಆದರೆ ನಿಜಕ್ಕೂ ಕಾರ್ಬೆಟ್ ಅದನ್ನೂ ಮೀರಿದ ನಿಸರ್ಗಪ್ರೇಮಿ. ಜೀವ ಜಾಲಗಳ ನೈಜ ಚಟುವಟಿಕೆಗಳ ಬಗ್ಗೆ ಅವನಿಗೆ ಇದ್ದ ಅರಿವು ಜಗತ್ತಿನಲ್ಲಿ ಯಾರಿಗೂ ಇರಲಿಲ್ಲ. ಪ್ರಾಣಿ ಹಾಗೂ ಪಕ್ಷಿಗಳ ಚಲನ ವಲನ ಅವುಗಳ ಅಭಿವ್ಯಕ್ತಿಯ ಬಾಷೆ ಇವುಗಳನ್ನ ಆತ ಅರಿತಿದ್ದ. ಕಾಡಿನಲ್ಲಿ ದಿಕ್ಕು ತಪ್ಪಿ ಹೋದರೆ ಅರಳಿ ನಿಂತಿರುವ ಹೂಗಳು ಯಾವ ದಿಕ್ಕಿಗೆ ಮುಖ ಮಾಡಿ ನಿಂತಿವೆ ಎಂಬುದರ ಮೇಲೆ ದಿಕ್ಕುಗಳನ್ನು ಗುರುತಿಸುವ ಶಕ್ತಿ ಅವನಲ್ಲಿತ್ತು. ಸೊಳ್ಳೆ ಅಥವಾ ಕ್ರಿಮಿ ಕೀಟಗಳ ಕಡಿತದಿಂದ ತಪ್ಪಿಸಿಕೊಳ್ಳಲು ಯಾವ ಸೊಪ್ಪಿನ ರಸವನ್ನು ಮೈಗೆ ಲೇಪಿಸಿಕೊಳ್ಳಬೇಕು, ದೀರ್ಘಾವಧಿ ಕಾಲ ಕಾಡಿನಲ್ಲಿರುವ ಸಂದರ್ಭದಲ್ಲಿ ಹಸಿವು, ನೀರಡಿಕೆ ಹೋಗಲಾಡಿಸಲು ಯಾವ ಹಣ್ಣು, ಯಾವ ಬೇರು ತಿನ್ನಬೇಕು ಇವಗಳ ಬಗ್ಗೆ ಕಾರ್ಬೆಟ್‌ಗೆ ಅಪಾರ ಜ್ಞಾನವಿತ್ತು. ಈ ಕಾರಣಕ್ಕಾಗಿ ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಜಪಾನ್ ವಿರುದ್ಧ ಹೊರಾಡುವ ಸಂದರ್ಭದಲ್ಲಿ, ಬ್ರಿಟೀಷ ನೇತೃತ್ವದ ಭಾರತೀಯ ಸೇನೆ ಬರ್ಮಾ ದೇಶದ ಕಾಡಿನಲ್ಲಿ ಹೋರಾಟ ನಡೆಸುತಿದ್ದಾಗ ಸೈನಿಕರಿಗೆ ಕಾರ್ಬೆಟ್ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ.” ಹೀಗೆ ಕಾರ್ಬೆಟ್ ಕುರಿತಂತೆ ರೊಮಾಂಚಕಾರಿ ಕಥೆಯ ಮಹಾಪೂರವನ್ನೇ ಹರಿಸಿದ ಲಂಕೇಶರು ಆತನ ಕೃತಿಗಳ ಕುರಿತಂತೆ ಮಾಹಿತಿಯನ್ನ ನನಗೆ ಒದಗಿಸಿದರು. ಮುಂದಿನ ವಾರ ಅಚ್ಚರಿ ಎಂಬಂತೆ ಈ ಬಗ್ಗೆ ಪತ್ರಿಕೆಯಲ್ಲಿ ಮರೆಯುವ ಮುನ್ನ ಎಂಬ ಕಾಲಂ ನಲ್ಲಿ ಬರೆದರು.

ಈ ಘಟನೆ ಮತ್ತೆ ನನಗೆ ನೆನಪಾದ್ದು 2009 ಅಕ್ಟೋಬರ್‌ನಲ್ಲಿ. ಆ ಅಕ್ಟೋಬರ್ 5 ನೇ ತಾರೀಖು ಮಂಡ್ಯದಲ್ಲಿ ನನ್ನ ಅತ್ತಿಗೆ ಅನಿರೀಕ್ಷಿತವಾಗಿ ತೀರಿಹೋದರು. 6 ರಂದು ಅವರ ಅಂತ್ಯಕ್ರಿಯೆ ಮುಗಿಸಿ ನಾನು, ನನ್ನ ಮಕ್ಕಳು ಧಾರವಾಡಕ್ಕೆ ವಾಪಾಸಾಗುತಿದ್ದ ಸಂದರ್ಭದಲ್ಲಿ ರೈಲಿನಲ್ಲಿ ಓದಲು ಇರಲಿ ಎಂಬ ಉದ್ದೇಶದಿಂದ ಸ್ಟೇಶನ್ ನಲ್ಲಿ ಮಯೂರ, ಸುಧಾ, ಲಂಕೇಶ್ ಪತ್ರಿಕೆಯನ್ನು ತೆಗೆದುಕೊಂಡೆ. ಅವರಿಬ್ಬರಿಗೂ ಸುಧಾ, ಮಯೂರ ಕೊಟ್ಟು ನಾನು ಲಂಕೇಶ್ ಪತ್ರಿಕೆಯ ಪುಟ ತೆರದಾಗ ಆ ವಾರದ ಸಂಚಿಕೆಯಲ್ಲಿ ಮೇಷ್ಟ್ರು ಕಾರ್ಬೆಟ್ ಕುರಿತು ಬರೆದಿದ್ದ ಅಂಕಣ ಮತ್ತೆ ಪ್ರಕಟವಾಗಿತ್ತು.  ಬದುಕಿನ ಜಂಜಾಟದಲ್ಲಿ ಜಿಮ್ ಕಾರ್ಬೆಟ್‌ನನ್ನು ನಾನು ಮರೆತಿದ್ದರ ಬಗೆ ಆ ಕ್ಷಣದಲ್ಲಿ ಬೇಸರ ಮೂಡಿತು. ಬೆಳಿಗ್ಗೆ 6 ಘಂಟಗೆ ಮನೆಗೆ ಬಂದವನೇ  ಮಾಡಿದ ಮೊದಲ ಕೆಲಸವೆಂದರೆ, ಅಂತರ್ಜಾಲದ ಮೂಲಕ ಅವನ ಎಲ್ಲಾ ಕೃತಿಗಳ ವಿವರ ತೆಗೆದು ಆ ಕ್ಷಣವೇ ಪೆಂಗ್ವಿನ್ ಪ್ರಕಾಶನ ಮತ್ತು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ಗೆ ಆರ್ಡರ್ ಮಾಡಿದೆ. ಒಂದು ವಾರದಲ್ಲಿ ಕಾರ್ಬೆಟ್ ಬರೆದ “ಮೈ ಇಂಡಿಯಾ”, “ಜಂಗಲ್ ಲೋರ್”, “ಮ್ಯಾನ್ ಈಟರ್ಸ್ ಆಫ್ ಕುಮಾವನ್”, “ದ ಮ್ಯಾನ್ ಈಟಿಂಗ್ ಲೆಪಾರ್ಡ್ ಆಪ್ ರುದ್ರಪ್ರಯಾಗ್”, “ದ ಟೆಂಪಲ್ ಟೈಗರ್ ಅಂಡ್ ಮೋರ್ ಮ್ಯಾನ್ ಈಟರ್ಸ್ ಆಪ್ ಕುಮಾವನ್”, “ಟ್ರೀ ಟಾಪ್” ಮತ್ತು ಕಾರ್ಬೆಟ್ ಬಗ್ಗೆ ಬ್ರಿಟೀಷ್ ಲೇಖಕ ಮತ್ತು ಪತ್ರಕರ್ತ ಮಾರ್ಟಿನ್ ಬೂತ್ ಬರೆದ “ಕಾರ್ಪೆಟ್ ಸಾಹೇಬ್” ಕೃತಿಗಳು ನನ್ನ ಕೈ ಸೇರಿದವು.

ಒಂದು ತಿಂಗಳ ಕಾಲ ರಾತ್ರಿ ವೇಳೆ ಅವುಗಳನ್ನ ಓದಿ ಮುಗಿಸಿದ ತಕ್ಷಣ ನಾನೊಂದು ನಿರ್ಧಾರಕ್ಕೆ ಬಂದೆ. ಆಪ್ತವಾಗಿ ಕಾರ್ಬೆಟ್‌ನ ವ್ಯಕ್ತಿ ಚಿತ್ರವನ್ನು ಕನ್ನಡದಲ್ಲಿ ಕಟ್ಟಿಕೊಡಬೇಕು ಎಂದು. ಕೇವಲ ಪುಸ್ತಕ ಓದಿ ಆತನ ಬಗ್ಗೆ ಬರೆಯುವ ಬದಲು ಆತ ನಡೆದಾಡಿದ ನೆಲ, ಒಡನಾಡಿದ ಜನರನ್ನ ಕಂಡು ಬಂದು ಬರೆದರೆ ಉತ್ತಮ ಎಂದು ಅನಿಸಿದಕೂಡಲೆ, ಕಳೆದ ವರ್ಷ ಪೆಬ್ರವರಿ ತಿಂಗಳಿನಲ್ಲಿ ನಾನು ಅವನ ನೆಲದಲ್ಲಿದ್ದೆ. ಅಲ್ಲಿ ನಾನು ಅನುಭವಿಸಿದ ಸಂತಸ, ನೋವು, ಎಲ್ಲವನ್ನು ಕೃತಿಯಲ್ಲಿ ದಾಖಲಿಸಿದ್ದೇನೆ. ಮೊದಲ ಏಳು ಅಥವಾ ಎಂಟು ಅಧ್ಯಾಯಗಳಲ್ಲಿ ಅವನ ಬದಕಿನ ಚಿತ್ರಣ, ತಲ್ಲಣಗಳಿದ್ದರೆ, ಮುಂದಿನ ಅಧ್ಯಾಯಗಳಲ್ಲಿ ಅವನು ಕಂಡ ಭಾರತ ಮತ್ತು ಇಲ್ಲಿನ ಜನರ ಬಗ್ಗೆ ಪ್ರೀತಿಯನ್ನ ಅವನ ಮಾತುಗಳಲ್ಲೇ ದಾಖಲಿಸಿದ್ದೇನೆ. ಅವನ ಹೃದಯವಂತಿಕೆಗೆ ಅವನ ಈ ಮಾತು ಸಾಕ್ಷಿಯಾಗಿದೆ: “ಭಾರತದ ಜನರಲ್ಲಿ ಬಡತನವಿದೆ, ಅಜ್ಞಾನವಿದೆ, ನಿಜ. ಆದರೆ ಅವರಷ್ಟು ಪ್ರ್ರಾಮಾಣಿಕರು, ನಂಬಿದವರನ್ನು ಕೈಬಿಡದ ಹೃದಯವಂತರು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ.” ಇದು ಸುಮಾರು 75 ವರ್ಷಗಳ ಹಿಂದೆ ಆತ ಆಡಿದ ಮಾತು. ಅವನ ನಂಬಿಕೆಯನ್ನ ನಿಜವಾಗಿಸುವಂತೆ ಅವನು ಬದುಕಿದ್ದ ಕಲದೊಂಗಿಯ ಹಳ್ಳಿಯ ಜನ ಬಂಗಲೆಯನ್ನು, ಅವನು ಬಳಸುತಿದ್ದ ಕುರ್ಚಿ, ಮೇಜು, ಸಮವಸ್ತ್ರ ಹಾಗೂ ಲಾಟೀನು ಇನ್ನಿತರೆ ವಸ್ತುಗಳನ್ನ ಜೋಪಾನದಿಂದ ಕಾಪಾಡಿದ್ದಾರೆ. ಐದು ಎಕರೆ ವಿಸ್ತೀರ್ಣದ ಅವನ ಬಂಗಲೆ, ಅಲ್ಲಿನ ಗಿಡ ಮರ, ಹಸಿರು, ಪಕ್ಷಿಗಳ ಕಲರವ ಎಲ್ಲವೂ ನಮ್ಮನ್ನು ಅವನ ಪ್ರಕೃತಿಯ ಲೋಕಕ್ಕೆ ಕರೆದೊಯ್ಯುತ್ತವೆ.

ನೈನಿತಾಲ್ ಗಿರಿಧಾಮಕ್ಕೆ ಹೋಗುವ ರಸ್ತೆಯಲ್ಲಿ ಈ ಹಳ್ಳಿ ಇರುವುದರಿಂದ  ಕಾರ್ಬೆಟ್ ಬಗ್ಗೆ ತಿಳಿದ ಪ್ರವಾಸಿಗರು ಇಲ್ಲಿ ಬೇಟಿ ನೀಡುತ್ತಾರೆ.  ಪ್ರತಿ ಪ್ರವಾಸಿಗನಿಗೂ ಸಿಹಿ ಮೊಸರು (ಲಸ್ಸಿ) ನೀಡಿ ಸ್ವಾಗತಿಸುವ ಆ ಹಳ್ಳಿಯ ಹೆಣ್ಣು ಮಕ್ಕಳ ಪ್ರೀತಿ ತಾಯಿತನದಿಂದ ಕೂಡಿರುವುದು ವಿಶೇಷ.

ಕಲ್ಬುರ್ಗಿಯವರ ಕನ್ನಡದ ಕನಸುಗಳು

-ಡಾ.ಎನ್. ಜಗದೀಶ್ ಕೊಪ್ಪ

ಇದೇ ನವಂಬರ್ 11ರಿಂದ ಮೂಡಬಿದರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಈ ಬಾರಿ ಕನ್ನಡದ ಹಿರಿಯ ಸಂಶೋಧಕ, ಚಿಂತಕ, ಡಾ.ಎಂ.ಎಂ. ಕಲ್ಬುರ್ಗಿಯವರಿಗೆ ದೊರೆತಿದೆ. ಕನ್ನಡದ ಅತ್ಯುನ್ನುತ ಪ್ರಶಸ್ತಿಯಾದ ನೃಪತುಂಗ ಪ್ರಶಸ್ತಿಗೂ ಪಾತ್ರರಾಗಿರುವ ಇವರು ನುಡಿ ಸಮ್ಮೇಳನಕ್ಕೆ ಮುನ್ನ ತಮ್ಮ ಕನ್ನಡದ ಕನಸುಗಳನ್ನ ಧಾರವಾಡದ ತಮ್ಮ ಮನೆಯಲ್ಲಿ ನನ್ನೊಂದಿಗೆ ಹಂಚಿಕೊಂಡರು.

ತಮ್ಮ ಶಿಸ್ತುಬದ್ಧ ಬರವಣಿಗೆ, ಸಂಶೋಧನೆ, ಚಿಂತನೆಯ ಬದುಕಿನ ಮೂಲಕ ಕರ್ನಾಟಕದಲ್ಲಿ ಮನೆ ಮಾತಾದವರು ಡಾ.ಎಂ.ಎಂ.ಕಲ್ಬುರ್ಗಿಯವರು. ಕನ್ನಡ ಪ್ರಾದ್ಯಾಪಕರಾಗಿ, ಹಂಪಿ ಕನ್ನಡ ವಿ.ವಿ ಯ ಉಪಕುಲಪತಿಯಾಗಿ, ಇವಲ್ಲಕಿಂತ ಹೆಚ್ಚಾಗಿ ಸಂಶೋಧಕರಾಗಿ ನಿರಂತರ 50 ವರ್ಷಗಳ ಕಾಲ ಕನ್ನಡದ ನಾಡು, ನುಡಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಕಲ್ಬುಗಿಯವರ ಸಾಧನೆಗೆ ಈ ಬಾರಿಯ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನೃಪತುಂಗ ಪ್ರಶಸ್ತಿ  ನಿಜವಾದ ಪ್ರತಿಫಲಗಳೆಂದರೆ ತಪ್ಪಾಗಲಾರದು.

ಕನ್ನಡನಾಡಿನ ಇತಿಹಾಸ, ಭಾಷೆ, ಶಾಸನ ಮತ್ತು ಸಾಂಸ್ಕೃತಿಕ ಚರಿತ್ರೆಗಳನ್ನ ಅಧ್ಯಯನ ನಡೆಸಿ  ತಮ್ಮ ಖಚಿತ ಅಭಿಪ್ರಾಯಗಳನ್ನು ಕನ್ನಡಕ್ಕೆ ನೀಡಿರುವ ಇವರು ಇಂದಿಗೂ ಕನ್ನಡದ ಬೆಳವಣಿಗೆಯ ಬಗ್ಗೆ ಅಪಾರ ಕನಸುಗಳನ್ನು ಹೊಂದಿದ್ದಾರೆ. ಮಾರ್ಗ ಎಂಬ ಹೆಸರಿನಲ್ಲಿ ನಾಲ್ಕು ಬೃಹತ್ ಸಂಪುಟಗಳಲ್ಲಿ ಪ್ರಕಟವಾಗಿರುವ ಇವರ ಸಂಶೋಧನಾ ಲೇಖನಗಳು ಕನ್ನಡದ ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಇವತ್ತಿಗೂ  ದಿಕ್ಸೂಚಿಯಾಗಬಲ್ಲವು.

ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಅಳವಡಿಸಲು ಮೀನ ಮೇಷ ಎಣಿಸುತ್ತಿರುವ ಸರ್ಕಾರದ ಬಗ್ಗೆ ತಮ್ಮ ಅತೃಪ್ತಿಯನ್ನ ಹೊರ ಹಾಕಿದ ಕಲ್ಬುರ್ಗಿಯವರು, “ಕನ್ನಡದ ಅಸ್ಮಿತೆಯ ಬಗ್ಗೆ ನಮ್ಮೆಲ್ಲರಿಗೂ ವಿಸ್ಮೃತಿ ಆವರಿಸಿಕೊಂಡಿದೆ ಎಂದರಲ್ಲದೆ, ಸರ್ಕಾರಕ್ಕೆ ಮತ್ತು ಕನ್ನಡದ ಶಿಕ್ಷರಿಗೆ ಇಚ್ಛಾಶಕ್ತಿಯ ಕೊರತೆಯಿದೆ, ನನ್ನ ಅಧ್ಯಕ್ಷೀಯ ಭಾಷಣ ಇದೇ ವಿಷಯವನ್ನು ಒಳಗೊಂಡಿರುತ್ತದೆ,” ಎಂಬ ಸೂಚನೆ ನೀಡಿದರು.

“ನಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನಾವು ಕನ್ನಡದಲ್ಲಿ ಕೊಡದೇ ಹೋದರೆ ಕನ್ನಡ ಭಾಷೆಗೆ ಭವಿಷ್ಯವಿಲ್ಲ ಎಂಬುದನ್ನ ಕನ್ನಡಿಗರು ಅರಿಯಬೇಕಲ್ಲದೆ, ಯಾವ ಕಾರಣಕ್ಕೂ ಕನ್ನಡ ಶಾಲೆಗಳನ್ನು ಸರ್ಕಾರ ಮುಚ್ಚಕೂಡದು,” ಎಂದ ಕಲ್ಬುರ್ಗಿಯವರು, ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ನಮ್ಮ ಜನ ಸಾಮಾನ್ಯರಲ್ಲಿ ಇರುವ ನಕರಾತ್ಮಕ ಧೋರಣೆಯನ್ನ ಹೋಗಲಾಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕೆಂದರು.

ಶಿವಶರಣರ ವಚನಗಳನ್ನು ಬಾರತೀಯ ಇತರೆ ಭಾಷೆಗೆ ಅನುವಾದಿಸುತ್ತಿರುವ ಯೋಜನೆ ಬಗ್ಗೆ ಮಾಹಿತಿ ನೀಡುತ್ತಾ, “ವಚನಗಳು ಯಾವುದೇ ಒಂದು ಧರ್ಮಕ್ಕೆ ಅಥವಾ ಜಾತಿಯ ಸಮುದಾಯಕ್ಕೆ ಸೀಮಿತವಾಗಿಲ್ಲ, ಜಾತಿ ಧರ್ಮ, ಶ್ರೇಣೀಕೃತ ಸಮಾಜದ ಗಡಿ ರೇಖೆಗಳನ್ನು ದಾಟಿ ನಮ್ಮ ಶರಣರು ವಚನ ರಚನೆ ಮಾಡಿದ್ದಾರೆ. ಇವುಗಳ ಮೂಲಕ  ನಿಜವಾದ ಕನ್ನಡದ ಧರ್ಮವನ್ನು ಭಾರತಕ್ಕೆ ಮತ್ತು ಇಡೀ ಜಗತ್ತಿಗೆ ತೋರಿಸಬೇಕು, ಇದು ನನ್ನಾಸೆ,” ಎನ್ನುತ್ತಾ ಕ್ಷಣ ಕಾಲ ಕಲ್ಬುರ್ಗಿಯವರು ಭಾವುಕರಾದರು.

ಗದಗದ ತೊಂಟದಾರ್ಯ ಮಠದ ಸ್ವಾಮೀಜಿ ಹಾಗೂ ಮೈಸೂರಿನ ಜೆ.ಎಸ್.ಎಸ್. ಮಠದ ಸ್ವಾಮೀಜಿ ಈ ಇಬ್ಬರೂ ಕಲ್ಬುರ್ಗಿಯವರ ಶಿಷ್ಯರು. (ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಕನ್ನಡ ಎಂ.ಎ. ಮಾಡಿದವರು.) ಹಾಗಾಗಿ ಈ ಎರಡು ಮಠಗಳ ಮೂಲಕ ವಚನಕಾರರ ಬಗ್ಗೆ, ಅವರ ಚಿಂತನೆಗಳ ಬಗ್ಗೆ ಹಲವಾರು ಕೃತಿಗಳು ಹೊರಬಂದಿದ್ದು ಇದಕ್ಕೆ ಪ್ರೇರಣೆಯಾದವರು ಕಲ್ಬುರ್ಗಿಯವರು.

ಕಟು ವಾಸ್ತವ ಸತ್ಯಗಳನ್ನು ಮುಚ್ಚು ಮರೆಯಿಲ್ಲದೆ ಹೇಳುವ ಇವರು ಕಳೆದ ತಿಂಗಳು ಅಲೆಮಾರಿ ಬುಡಕಟ್ಟು ಜನಾಂಗದ ಸಮಾವೇಶ ಧಾರವಾಡದಲ್ಲಿ ನಡೆದಾಗ, ಹಿಂದುಳಿದ ಜಾತಿಯ ಬೇಡ ಜಂಗಮರ ಉದ್ಯೋಗದ ಹಕ್ಕುಗಳನ್ನು ಕಸಿದ ಲಿಂಗಾಯತ ಜಂಗಮರನ್ನು ನೇರವಾಗಿ ತರಾಟೆಗೆ ತಗೆದುಕೊಂಡರು.

ಧಾರವಾಡದಲ್ಲಿ ಶತಮಾನದ ಇತಿಹಾಸವುಳ್ಳ ಹಾಗೂ ಇದೀಗ ಕೃಷಿ ವಿ.ವಿ.ಯ ಮೇಲ್ವಿಚಾರಣೆಯಲ್ಲಿರುವ ಕಲೆಗೇರಿ ಎಂಬ ಕೆರೆಗೆ, ವಿಶ್ವೇಶ್ವರಯ್ಯನವರ ಹೆಸರಿಡಲು ಜಿಲ್ಲಾಡಳಿತ ಮುಂದಾದ ಸಂದರ್ಭದಲ್ಲಿ, ಕಲ್ಲ ಎಂಬ ಅನಕ್ಷರಸ್ತ ರೈತ ಕಟ್ಟಿಸಿದ ಈ ಕೆರೆಗೆ ಕಲಗೇರಿ ಎಂಬ ಹೆಸರು ಬಂದಿದೆ. ಯಾವ ಕಾರಣಕ್ಕೂ ಹೆಸರು ಬದಲಿಸಿ ಇತಿಹಾಸಕ್ಕೆ ಅಪಚಾರವೆಸಗಕೂಡದು ಎಂದು ಇವರು ಹೇಳಿಕೆ ನೀಡಿದ ಕೂಡಲೇ ಧಾರವಾಡ ಜಿಲ್ಲಾಡಳಿತ ತನ್ನ ನಿರ್ಣಯ ಕೈಬಿಟ್ಟಿತು.  ಇಂತಹ ಸಂಶೋಧನೆಗಳ ಮೂಲಕ ಚಿತ್ರದುರ್ಗ ಜಿಲ್ಲೆಯ ಸೂಳೆಕೆರೆ ಹೆಸರನ್ನು ಶಾಂತಿಸಾಗರ ವೆಂದು ಕರೆಯಲು ಹೊರಟಿದ್ದ ಸರ್ಕಾರದ ನಡೆಯನ್ನು ತಡೆದವರು ಕಲ್ಬುರ್ಗಿಯವರು. ಅವರ ದೃಷ್ಟಿಯಲ್ಲಿ ದೇಹ ಮಾರುವ ವೃತ್ತಿಯಲ್ಲಿದ್ದರೂ ಕೂಡ ತನ್ನ ಜನರಿಗೆ ಒಳಿತಾಗಲೆಂದು ಬಯಸಿ ದುಡಿದ ಹಣವನ್ನು ಕೆರೆ ಕಟ್ಟಲು ಬಳಸಿದ ಆಕೆಯ ಹೃದಯವಂತಿಕೆಯನ್ನು ನಾವು ಮರೆಯಬಾರದು. ಇದು ಒಂದರ್ಥದಲ್ಲಿ ನಿಜ ಕೂಡ ಹೌದು.

(ದಿನಾಂಕ 9-11-11 ರಂದು ಉದಯ ಟಿ.ವಿ ಗೆ ನಡೆಸಿದ ಸಂದರ್ಶನದ ಸಂಕ್ಷಿಪ್ತ ಮಾತುಕಥೆಯ ಸಾರಾಂಶ)

(ಚಿತ್ರಗಳು: ಲೇಖಕರದು ಮತ್ತು ಹು.ಭಾ.ವಡ್ಡಟ್ಟಿ)

ಬಾಪೂ ನಮನ

 ಮಾನ್ಯರೆ,

“ಗಾಂಧಿ” ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತೆ ಮತ್ತೆ ಮತ್ತೆ ನಮ್ಮನೆಚ್ಚರಿಸುವ, ಕಾಡಿಸುವ ಒಳ ಬೆಳಕು. ಸೂಕ್ಷ್ಮತೆಯುಳ್ಳ ಪ್ರತಿಯೊಬ್ಬ ನಾಡಿನ ಹಿತಚಿಂತಕ, ಸಾಹಿತಿ, ಕವಿ ಗಾಂಧಿಯೊಂದಿಗೆ ಅನುಸಂಧಾನಿಸಿದ್ದಾರೆ, ಮುಖಾಮುಖಿಯಾಗಿದ್ದಾರೆ. ಪ್ರಶ್ನಿಸಿಕೊಳ್ಳುತ್ತಾ, ಎಚ್ಚರಿಸಿಕೊಳ್ಳುತ್ತಾ ತಮ್ಮನ್ನು ತಾವೇ ನಿಕಷಕ್ಕೊಡ್ಡಿಕೊಂಡಿದ್ದಾರೆ. ಹೀಗೆ “ಗಾಂಧಿ” ಯನ್ನು ವಸ್ತುವಾಗುಳ್ಳ ಕವಿತೆ ರಚಿಸಿರುವ ಹಿರಿ-ಕಿರಿಯ ಕವಿಗಳ ಕವಿತೆಯನ್ನೊಳಗೊಂಡ ಒಂದು ಪ್ರಾತಿನಿಧಿಕ ಸಂಕಲನವನ್ನು ಹೊರತರಬೇಕೆಂಬ ಇಚ್ಛೆ ಇದ್ದು ಅಂತಹ ಕವಿತೆಗಳನ್ನು ಜನವರಿ 1, 2012ರ ಒಳಗೆ ತಲುಪುವಂತೆ

ರೂಪ ಹಾಸನ,
ಪ್ರೇರಣಾ, ಉತ್ತರ ಬಡಾವಣೆ,
ಹಾಸನ-೫೭೩೨೦೧

ಅಥವಾ
rupahassan@gmail.com

ಕಳುಹಿಸಿಕೊಡಬೇಕೆಂದು ಕೋರುತ್ತೇವೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ
ಸುಬ್ಬು ಹೊಲೆಯಾರ್-೯೪೮೩೯೭೪೦೮೯ ಅಥವಾ
ರೂಪ ಹಾಸನ-೦೮೧೭೨-೨೬೩೮೮೧
ಸಂಪರ್ಕಿಸಬಹುದಾಗಿದೆ.

 ರೂಪ ಹಾಸನ
ಸುಬ್ಬು ಹೊಲೆಯಾರ್

ವ್ಯಂಗ್ಯ (ವಿ)ಚಿತ್ರ

-ಕೆ.ಎಲ್.ಚಂದ್ರಶೇಖರ್ ಐಜೂರ್

ದಿನೇಶ್ ಅಮಿನ್‌ಮಟ್ಟು ಅವರ ಲೇಖನ ಮತ್ತ ಪಿ.ಮಹಮ್ಮದ್ ಅವರ ಕಾರ್ಟೂನ್ ನೋಡಲಿಕ್ಕೆಂದೇ ಅನೇಕರು ಪ್ರಜಾವಾಣಿ ಕೊಳ್ಳುವುದನ್ನು ತೀರಾ ಹತ್ತಿರದಂತೆ ಕಂಡಿದ್ದೇನೆ. ಒಮ್ಮೊಮ್ಮೆ ನಮ್ಮ ಅಕಾಡೆಮಿಕ್ ಚರ್ಚೆಯಾಚೆಗೂ ದಾಟಿ ಗೆಳೆಯರ ವಲಯಗಳಲ್ಲಿ ಇನ್ನೇನೂ ಮಾತುಗಳೆಲ್ಲ ತೀರಿಕೊಂಡವು ಎಂಬ ಹೊತ್ತಿನಲ್ಲಿ ಹಠಾತ್ ದಿನೇಶರ ಬರಹಗಳು, ಮಹಮ್ಮದ್ ಅವರ ಕಾರ್ಟೂನ್ ವಿಷಾದ ತುಂಬಿಕೊಂಡ ಗಳಿಗೆಗಳಲ್ಲಿ ವಿಶ್ವಾಸ ತುಂಬಲು ಯತ್ನಿಸಿವೆ. ಬರೀ ತೌಡು ಕುಟ್ಟುವ ಸಭೆ ಸೆಮಿನಾರುಗಳು ಬೇಸರ ತರಿಸುವ ಹೊತ್ತಿನಲ್ಲಿ ಆ ದಿನ ಬೆಳಿಗ್ಗೆ ಕಂಡ ಮಹಮ್ಮದರ ಕಾರ್ಟೂನ್ ನೆನಪಾಗಿ ನಗೆ ತರಿಸುವುದು ಉಂಟು. ಡಾ.ಬಿ.ಎಸ್.ಯಡಿಯೂರಪ್ಪನವರ ಚೂಪು ಮೀಸೆ, ಚದುರಿದ ಹುಬ್ಬು ನಡುವೆ ಕೇಸರಿ ತಿಲಕ, ಬಿಳಿಬಣ್ಣದ ಡ್ರೆಸ್‌ಕೋಡ್, ಸಿಟ್ಟುಮಾಡಿಕೊಂಡಾಗ ಕಾಣುವ ಹಣೆಯ ಮೇಲಿನ ಗೆರೆಗಳು… ಕಳೆದ ನಾಲ್ಕು ವರ್ಷಗಳಲ್ಲಿ ಮಹಮ್ಮದ್ ಅವರ ಕೈಗೆ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಸಲವಾದರೂ ಸಿಕ್ಕಿವೆ. ಯಡಿಯೂರಪ್ಪನವರು ಮಹಮ್ಮದ್ ಅವರ ಕೈಯಲ್ಲಿ ಸಿಕ್ಕಿ ನಕ್ಕಿದ್ದು ಕಮ್ಮಿ.

ಶಾಸಕರನ್ನು ಗಣಿ ಲಾರಿಯಲ್ಲಿ ತುಂಬಿಕೊಂಡು ಬಂದು “ಸ್ಥಿರ ಸರ್ಕಾರಕ್ಕೆ ಇನ್ನೊಂದು ಲೋಡ್ ತರ್‍ಲಾ ಸಾರ್” ಎನ್ನುತ್ತಿರುವ ಬಳ್ಳಾರಿ ದೇಶದ ಡ್ರೈವರ್, ಮತ್ತೊಂದು ವ್ಯಂಗ್ಯ ಚಿತ್ರದಲ್ಲಿ 1992ರ ದುರಂತದ ನಂತರ “ಶಿಕ್ಷಣ, ಉದ್ಯೋಗ ಮತ್ತು ರಕ್ಷಣೆ ಕೊಡಿ” ಎಂದು ಅಂಗಲಾಚುತ್ತಿರುವ ಒಬ್ಬ ನಿರ್ಗತಿಕ ಮುಸ್ಲಿಮ್ ಯುವಕನಿಗೆ ವಾಜಪೇಯಿ “ದುಃಖಿಸಬೇಡ ಮಸೀದಿಯನ್ನು ಮತ್ತೆ ನಿರ್ಮಿಸಿ ಕೊಡುತ್ತೇವೆ” ಎಂದು ಹೇಳುವ ಭಂಗಿಯಲ್ಲಿ ನಿಂತಿದ್ದರೆ ಪಕ್ಕದಲ್ಲಿ “ಎಲ್ಲರೂ ನೋಡಿ ಸರಕಾರ ಮತ್ತೆ ಮುಸ್ಲಿಮರನ್ನು ಸಂತುಷ್ಟಿಗೊಳಿಸುವ ತಂತ್ರ ನಡೆಸಿದೆ…” ಎಂದು ಮತ್ತೊಬ್ಬ ರಾಜಕಾರಣಿ ಜೋರು ದನಿ ತೆಗೆದು ಕೂಗುತ್ತಿದ್ದಾನೆ. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದ ದಿನಗಳಲ್ಲಿ ದೇವೇಗೌಡರಿಗೆ ಪ್ರಚಂಡ ಐಡಿಯಾಗಳನ್ನು ಕೊಟ್ಟು ಸರ್ಕಾರ ಉರುಳಿಸಲು ನೆರವಾದ ಮಹಮ್ಮದರ ಕಾರ್ಟೂನ್‌ಗಳನ್ನು ಪ್ರಜಾವಾಣಿ ಓದುಗರು ಮರೆತಿರಲಿಕ್ಕಿಲ್ಲ. ಮಹಮ್ಮದ್ ಅವರ ಪೆನ್ನು ಗೆರೆಗಳಾಗಿ, ವ್ಯಂಗ್ಯ ಚಿತ್ರಗಳಾಗಿ ದುಡಿದಿರುವುದನ್ನು ಕಾಣಲು ಓದುಗರು “ವ್ಯಂಗ್ಯ (ವಿ)ಚಿತ್ರ”ವನ್ನು ನೋಡಲೇ ಬೇಕು. “ಮಹಮ್ಮದ್ ಪ್ರಾಯಶಃ ಇವತ್ತು ಕರ್ನಾಟಕದ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದರಲ್ಲಿ ಯಾರಿಗೂ ಹೆಚ್ಚಿನ ಅನುಮಾನವಿರಲಾರದು. ವಿರೋಧ ಪಕ್ಷಗಳು ತಮಗೆ ಅನುಕೂಲವಾದಾಗ ಮಾತ್ರ ವಿರೋಧ ಪಕ್ಷಗಳಾಗುವ ಈ ಕೆಟ್ಟ ಕಾಲದಲ್ಲಿ ಮಹಮ್ಮದ್ ಕರ್ನಾಟಕದ ಸಮರ್ಥ ವಿರೋಧಪಕ್ಷವಾಗಿದ್ದಾರೆ. ಖಚಿತ ಪ್ರಗತಿಪರ ದೃಷ್ಟಿಕೋನವುಳ್ಳ ವ್ಯಾಖ್ಯಾನಕಾರರಾಗಿ ಹಾಗೂ ಏಕಕಾಲಕ್ಕೆ ಮೂಲಭೂತವಾದಿಗಳನ್ನೂ ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವ ಸ್ವತಂತ್ರ ಬುದ್ಧಿಜೀವಿಯಾಗಿಯೂ ಮಹಮ್ಮದ್ ರೂಪುಗೊಂಡಿದ್ದಾರೆ,” ಎಂಬ ಡಾ.ನಟರಾಜ್ ಹುಳಿಯಾರರ ಪ್ರಸ್ತಾವನೆಯ ಮಾತುಗಳು ಮಹಮ್ಮದರ ಕಾರ್ಟೂನ್ ಶಕ್ತಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತವೆ.

ವ್ಯಂಗ್ಯ (ವಿ)ಚಿತ್ರ
ಲೇಖಕರು :ಪಿ.ಮಹಮ್ಮದ್

ಪ್ರಕಾಶಕರು
ಚಿಂತನ ಪುಸ್ತಕ
ನಂ.1863, 11ನೇ ಮುಖ್ಯರಸ್ತೆ, 38ನೇ ಅಡ್ಡರಸ್ತೆ,
4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041

ಪುಟಗಳು:140 ಬೆಲೆ:ರೂ.140 ಪ್ರಕಟಣೆ:2010

ಮಂಟೇಸ್ವಾಮಿ ಪರಂಪರೆಯೂ ಆಧ್ಯಾತ್ಮಿಕ ದಂಗೆಕೋರ ಮಾರ್ಗವೂ

ಕೆ.ಎಲ್.ಚಂದ್ರಶೇಖರ್ ಐಜೂರ್

ಲಂಕೇಶರ ಸಂಕ್ರಾಂತಿ ನಾಟಕದಲ್ಲಿ ಉಜ್ಜನನ್ನು ಶಿವಶರಣನನ್ನಾಗಿಸಲೇಬೇಕೆಂಬ ಹಟವಿಡಿದಿರುವ ರುದ್ರನ ಅಸಹಾಯಕತೆ ಮತ್ತು ಹೆಂಡ ಮಾಂಸ ಬಿಟ್ಟು ಶಿವಶರಣನಾಗಲು ಒಪ್ಪದ ಉಜ್ಜ ನಮ್ಮನ್ನು ಕಾಡುವಷ್ಟೇ “ನನ್ನನ್ನು ಪ್ರೀತಿಸುವಾಗ ಹೊಲೆಯರ ರುದ್ರನಾಗಿದ್ದವ ಬಲಾತ್ಕಾರಿಸುವಾಗ ಶಿವಶರಣ ರುದ್ರನಾಗಿದ್ದ,” ಎಂದು ಹೇಳಿ ಬಸವಣ್ಣನನ್ನೇ ಬೆಚ್ಚಿಬೀಳಿಸಿ ರುದ್ರನ ತಲೆದಂಡಕ್ಕೆ ಕಾರಣವಾಗುವ ಉಷಾ ಕೂಡ ನಮ್ಮನ್ನು ಕಾಡಬಲ್ಲಳು. ಎಲ್ಲ ಕಾಲದ ಮುಳ್ಳಿನ ಮೇಲೂ ನಿಂತುಪ್ರಶ್ನೆ ಮಾಡಬಲ್ಲ ಹೆಣ್ಣಿನಂತೆ ಕಾಣುವ ಉಷಾ ಹೊಲೆಯರ ರುದ್ರನನ್ನು ಪ್ರೀತಿಸಿ ಶಿವಶರಣ ರುದ್ರನನ್ನು ಕಳೆದುಕೊಳ್ಳುವ ದಿಟ್ಟೆ. ಕೆಲವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ “ನಿಮ್ಮ ಜಾತಿಯ ಬಗ್ಗೆ ಕೀಳರಿಮೆ ಇತ್ತಾ? ಇದೆಯಾ?” ಎಂಬ ಪ್ರಶ್ನೆಯೊಂದಕ್ಕೆ ದೇವನೂರ ಮಹಾದೇವ ಅವರು “ಇತ್ತು. ಈಗ ಮೇಲರಿಮೆ ಇದೆ. ನನ್ನ ಜಾತಿ ಯಾರನ್ನೂ ಕೊಂದಿಲ್ಲ. ಅವಮಾನಿಸಿಲ್ಲ. ಸುಲಿದಿಲ್ಲ, ತಿಂದಿಲ್ಲ,” ಎಂಬ ಉತ್ತರ ನೀಡಿದ್ದರು. ದೇವನೂರರು ಹೀಗೆ ಉತ್ತರ ಕೊಡುವವರೆಗೂ ಯಾವ ದಲಿತನಿಗೂ ತನ್ನ ಜಾತಿಯನ್ನು ಮೇಲರಿಮೆಯ ಕಣ್ಣುಗಳಿಂದ ನೋಡಬಹುದೆಂಬ ಸ್ಪಷ್ಟ ಆಕಾರಗಳೆ ದಕ್ಕಿರಲಿಲ್ಲ.

ನಮ್ಮನಡುವಿನ ಸೂಕ್ಷ್ಮಗಣ್ಣಿನ ಲೇಖಕ ಹುಲಿಕುಂಟೆ ಮೂರ್ತಿ ತಮ್ಮ ಸ್ನಾತಕೋತ್ತರಪದವಿಯ ಸಲುವಾಗಿ “ಮಂಟೇಸ್ವಾಮಿ ಪರಂಪರೆಯಲ್ಲಿ ’ಜಾತಿ’ ಕುರಿತ ಅಧ್ಯಯನ”ವನ್ನೇ ತಮ್ಮ ಸಂಶೋಧನೆಯ ವಸ್ತುವಾಗಿಸಿಕೊಂಡಿದ್ದಾರೆ. ಸಂಶೋಧನೆಯೆಂದರೆ ಸಮುದಾಯವೊಂದು ಕಳೆದುಕೊಂಡ ಹಾಡನ್ನು ಹುಡುಕಿ ಹೊರಡುವುದು. ಇಂಥದೊಂದು ಪ್ರಯತ್ನಕ್ಕೆ ತಾವು ನಿಂತ ನೆಲದಿಂದಲೇ ಶೋಷಿತ ಸಮುದಾಯದ ಸಾಂಸ್ಕೃತಿಕನಾಯಕರನ್ನು ಹುಡುಕುವ ಭಾಗವಾಗಿ ಆದಿಮ ಸಂಸ್ಕೃತಿಯ ನೆಲಮೂಲದ ಜಾತಿಯ ಬಾಗಿಲುಗಳಿಂದಲೇ ಲೇಖಕರು ಪ್ರವೇಶಿಸಿದ್ದಾರೆ. ಲೇಖಕರು ಕಟ್ಟಿಕೊಟ್ಟಿರುವ ಈ ಪಠ್ಯ “ಮಂಟೇಸ್ವಾಮಿ ಕಾವ್ಯ, ಧರೆಗೆ ದೊಡ್ಡವರ ಕತೆ, ಮಂಟೇಸ್ವಾಮಿ ಪರಂಪರೆ, ನೀಲಗಾರರು-ಸಾಂಸ್ಕೃತಿಕ ಪದಕೋಶ ಮತ್ತು ಚಿಕ್ಕಲ್ಲೂರು ಜಾತ್ರೆ”ಗಳಂತೆ ವಿಶಾಲ ಚೌಕಟ್ಟಿನ ಕೃತಿಯಲ್ಲದಿದ್ದರೂ ಕೂಡ “ಪರಂಜ್ಯೋತಿ” ಆ ಕೃತಿಗಳ ದೊಂದಿ ಹಿಡಿದು ತಳ ಸಮುದಾಯಗಳ ಪರಂಪರೆಯೊಂದರ ಜಾತಿ ಕಥಾನಕವನ್ನು ಸರಾಗವಾಗಿ ಹೇಳಿದೆ. ಈ ಕೃತಿಗಳೆಲ್ಲದರಿಂದಲೂ ಪಡೆದ ಸ್ಫೂರ್ತಿ ಮಂಟೇಸ್ವಾಮಿ ಪರಂಪರೆಯನ್ನು ಶೋಷಿತ ಸಮುದಾಯಗಳೇ “ಪರಂಜ್ಯೋತಿ”ಯಾಗಿ ಸೃಷ್ಟಿಸಿಕೊಳ್ಳುತ್ತವೆ ಎಂಬುದಕ್ಕೆ ಲೇಖಕರು ಹೆಚ್ಚಿನ ಪುರಾವೆಗಳನ್ನು ಒದಗಿಸಿದ್ದಾರೆ. “ಯಾವ ಬಸವಣ್ಣ ಅಸ್ಪೃಶ್ಯರಿಗೆ ತಮ್ಮ ಅಸ್ಮಿತೆಯ ಭಾಗವಾಗಿದ್ದ ಆಹಾರ ಮತ್ತು ಆಚರಣೆಗಳನ್ನು ಬಿಟ್ಟು ಬಂದು ಶರಣರಾಗಿ ಎಂದು ಕರೆ ನೀಡಿದನೋ ಆ ಪ್ರಕ್ರಿಯೆಯನ್ನು ಮಂಟೇದರು ಲೇವಡಿ ಮಾಡಿ ’ನಾವು ನಮ್ಮ ಯಾವುದನ್ನೂ ಬಿಡಬೇಕಾಗಿಲ್ಲ; ನಮ್ಮ ಬದುಕಿನ ಮೌಲ್ಯಗಳು ಕೀಳೇನಲ್ಲ; ಅವೇ ನಿಜ ಶ್ರೇಷ್ಟತೆಯನ್ನು ಹೊಂದಿರುವಂತಹವು.’ ಎಂದರು. ಅದೇ ನಡೆಯಲ್ಲಿ ಈಗಾಗಲೇ ವಿಕಲತೆಗೆ ಒಳಗಾಗಿದ್ದ ಸಮುದಾಯಗಳಿಗೆ ಮರಳಿ ಶಕ್ತಿ ತುಂಬುತ್ತಾರೆ,” ಎಂಬ ಕೋಟಿಗಾನಹಳ್ಳಿ ರಾಮಯ್ಯನವರ ಮಾತುಗಳು ಮಂಟೇಸ್ವಾಮಿ ಪರಂಪರೆಯೆಡೆಗೆ ಬೆರಗು ಮೂಡಿಸುತ್ತವೆ.

“ಹೆಂಡ, ಮಾಂಸ ಎಲ್ಲವನ್ನೂ ಉನ್ನತೀಕರಿಸುವ, ಆಧ್ಯಾತ್ಮೀಕರಿಸುವ ಮೂಲಕ ಜಾತಿಪದ್ಧತಿಯ ಅವಮಾನಗಳನ್ನೂ ದಾಟುವ ಪ್ರಯತ್ನವನ್ನು ಮಂಟೇಸ್ವಾಮಿ ಮಾಡುತ್ತಾರೆ. ಜಾತಿ ಒಳಗಡೆ ಇದ್ದು ಜಾತಿಯಿಂದ ಆಚೆಗೆ ಹೋಗುವ ಒಂದು ಆಧ್ಯಾತ್ಮಿಕ ದಂಗೆಯ ಮಾರ್ಗವನ್ನುಮಂಟೇಸ್ವಾಮಿ ಪರಂಪರೆ ಹೇಳುತ್ತದೆ,” ಎಂಬ ಡಿ.ಆರ್.ನಾಗರಾಜರ ಮಾತುಗಳು ಮಂಟೇಸ್ವಾಮಿ ಪರಂಪರೆಯ ಮರುಹುಡುಕಾಟಕ್ಕೆ ನಮ್ಮನ್ನು ಸಜ್ಜುಗೊಳಿಸಬಲ್ಲದು.

ಪರಂಜ್ಯೋತಿ
ಲೇಖಕರು: ಹುಲಿಕುಂಟೆ ಮೂರ್ತಿ
ಪ್ರಕಾಶಕರು
ಅಂಕ ಪ್ರಕಾಶನ
ನಂ.೯೫೫, ಕಾಳಿದಾಸನಗರ, ೪ನೇ ಮುಖ್ಯರಸ್ತೆ,
ಹೊಸಕೆರೆ ಹಳ್ಳಿ, ಬನಶಂಕರಿ ೩ನೇ ಹಂತ,
ಬೆಂಗಳೂರು-೮೫.
ಪುಟಗಳು:೭೯ ಬೆಲೆ:ರೂ.೫೦ ಪ್ರಕಟಣೆ:೨೦೦೯