Category Archives: ಮಾಧ್ಯಮ

ಸಮೂಹ ಮಾಧ್ಯಮಕ್ಕೆ ಸಂಬಂಧಿಸಿದ ಲೇಖನಗಳು, ವಿಡಿಯೋಗಳು…

“ಲಕ್ಷ್ಮಿಪತಿಯರಿಗೆ ಗಂಡಾಂತರ” ಮತ್ತು “ತಪ್ಪು, ಆದರೆ ಮಹಾಪರಾಧವೇನಲ್ಲ”

-ಭಾರತಿ ದೇವಿ ಪಿ.

‘ರಾಮಾಯಣ ಯುದ್ಧಕ್ಕೆ ಸೀತೆಯ ಚಪಲವೇ ಕಾರಣ, ಮಹಾಭಾರತದ ದುರಂತಕ್ಕೆ ನಾಂದಿ ಹಾಡಿದ್ದು ದ್ರೌಪದಿಯೇ’ ಎಂಬ ಹುಂಬ ವಾದದ ಮುಂದುವರಿಕೆಯಂತೆ ‘ಲಕ್ಷ್ಮಿಪತಿಯರಿಗೆ ತಪ್ಪಿದ್ದಲ್ಲ ಗಂಡಾಂತರ’ ಎಂಬ ಫರ್ಮಾನನ್ನು ಕನ್ನಡದ ಸುದ್ದಿ ವಾಹಿನಿಯೊಂದು ಹೊರಡಿಸಿದೆ. ಜೊತೆಗೆ, ನಿಮ್ಮ ಹೆಂಡತಿಯ ಹೆಸರು ಲಕ್ಷ್ಮಿಯೇ? ಎಂದು ಕೇಳುವುದರ ಮೂಲಕ ‘ನೀವು ಹುಶಾರಾಗಿರಿ’ ಎಂಬ ಎಚ್ಚರಿಕೆಯನ್ನೂ ನೀಡಿದೆ. ಹೀಗಾಗಿ, ಇಲ್ಲಿಗೆ ಗಂಡಂದಿರು ಮಾಡಿದ ಅನಾಚಾರಕ್ಕೆಲ್ಲ ಅವರ ದುರಾಸೆ,  ಅಧಿಕಾರ ಲಾಲಸೆ, ದುಷ್ಟತನ ಕಾರಣವಲ್ಲ, ಪತ್ನಿಯ ಹೆಸರು ಲಕ್ಷ್ಮಿ ಎಂದು ಇರುವುದೇ ಕಾರಣ ಎಂಬ ಅಪೂರ್ವ ಸಂಶೋಧನೆ ನಡೆಸಿ ತೀರ್ಮಾನ ಹೊರಡಿಸಿದೆ.

ಸ್ವಾತಂತ್ರ್ಯ ದೊರೆತು 64 ವರ್ಷಗಳಾದ ಮೇಲಾದರೂ ಸಮಾಜದಲ್ಲಿ ದಲಿತರ, ಮಹಿಳೆಯರ ಸ್ಥಾನಮಾನ ಉತ್ತಮಗೊಂಡಿದೆ ಎಂಬ ಭರವಸೆ ಹುಸಿಯಾಗುವ ಬಗೆಯಲ್ಲಿ ಈ ಬಗೆಯ ಘಟನೆಗಳು ಕಾಣಿಸುತ್ತವೆ. ಇತ್ತೀಚೆಗಿನ ದರ್ಶನ್ ಪ್ರಕರಣದಲ್ಲಿ ಒಂದೆಡೆ ಚಿತ್ರರಂಗದ ‘ಗಣ್ಯರು’ ಅವರ ಪತ್ನಿ ವಿಜಯಲಕ್ಷ್ಮಿಗೆ ಬಾತ್‌ರೂಮ್‌ನಲ್ಲಿ ಬಿದ್ದುದಾಗಿ ಹೇಳಿಕೆ ನೀಡುವಂತೆ ಒತ್ತಡ ಹೇರಿದರೆ ಇನ್ನೊಂದೆಡೆ ಇದಕ್ಕೆಲ್ಲ ಕಾರಣ ನಿಖಿತಾ ಎಂದು ಅವರಿಗೆ ಚಿತ್ರರಂಗದಿಂದ ಬಹಿಷ್ಕಾರ ಹಾಕುತ್ತದೆ. ಏಕೆಂದರೆ ‘ಗಂಡ ಹೆಂಡತಿಗೆ ಹೊಡೆಯುವುದು ಸಹಜ’ವಾದ ಸಂಗತಿ ಎಂದು ಇವರಿಗೆ ಕಾಣುತ್ತದೆ. ಗಂಡಸಿನದು ಯಾವುದೇ ತಪ್ಪಿಲ್ಲದೆ ಅವನನ್ನು ತನ್ನ ಮೈಮಾಟಗಳಿಂದ ಸೆಳೆದು, ಸಂಸಾರಕ್ಕೆ ಹುಳಿ ಹಿಂಡುವವಳು ಇನ್ನೊಬ್ಬ ಹೆಣ್ಣು ಎಂದು ಅವರಿಗೆ ಅನಿಸುತ್ತದೆ. ಕನ್ನಡ ಚಿತ್ರರಂಗದ ಅಪ್ರಬುದ್ಧತೆ ಹೊಸದೇನೂ ಅಲ್ಲ ಎಂದಿಟ್ಟುಕೊಳ್ಳೋಣ. ಆದರೆ ಕರ್ನಾಟಕದ ಹೆಸರಾಂತ ಪತ್ರಿಕೆಯೊಂದು ಜನರ ಸಮೀಕ್ಷೆ ನಡೆಸಿ ದರ್ಶನ್ ಮಾಡಿದ್ದು ‘ತಪ್ಪು, ಆದರೆ ಮಹಾಪರಾಧವೇನಲ್ಲ’ ಎಂಬ ನಿಲುವಿಗೆ ಬಂದಿರುವುದು ಆಘಾತವುಂಟುಮಾಡುತ್ತದೆ. ಮಾಧ್ಯಮಗಳು ನ್ಯಾಯಾಧೀಶರಂತೆ ತಮ್ಮ ಮೂಗಿನ ನೇರಕ್ಕೆ ತೀರ್ಮಾನ ಕೊಡುತ್ತಿರುವುದು ಆತಂಕ ಹುಟ್ಟಿಸುತ್ತದೆ.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಿಡಬೇಕಾದ ಮಾಧ್ಯಮಗಳು ಸ್ವಾತಂತ್ರ ದೊರೆತು ಇಷ್ಟು ವರ್ಷಗಳಾದ ಹಂತದಲ್ಲಿ ಪ್ರಬುದ್ಧತೆಯನ್ನು ಮೆರೆಯಬೇಕಿತ್ತು. ಬದಲಿಗೆ ಇಂದು ಜನರಲ್ಲಿ ಬೇರೂರಿರುವ ಮೌಢ್ಯಗಳನ್ನು ಬಲಪಡಿಸುತ್ತಾ ಹಣ ಗಳಿಸುವತ್ತ ಸಾಗುತ್ತಿವೆ. ಅಷ್ಟೇ ಅಲ್ಲ, ಜನಸಾಮಾನ್ಯರ ಬದುಕಿನಲ್ಲಿ ಆಟ ಆಡುತ್ತಿವೆ. ‘ಲಕ್ಷ್ಮಿ ಪತಿಯರಿಗೆ ಕಾಟ ತಪ್ಪಿದ್ದಲ್ಲ’ ಕಾರ್ಯಕ್ರಮ ನಡೆದಾಗ ಬಂದ ಹಲವಾರು ಆತಂಕಿತ ಫೋನ್ ಕರೆಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಈ ಕಾರ್ಯಕ್ರಮದಿಂದಾಗಿ ಲಕ್ಷ್ಮಿ ಎಂಬ ಹೆಂಗಸಿನ ಗಂಡ ತನ್ನ ಸೋಲಿಗೆ ಅನುದಿನವೂ ಪತ್ನಿಯನ್ನು ದೂರುತ್ತಿದ್ದರೆ ಆಕೆಗಾಗುವ ಮಾನಸಿಕ ಹಿಂಸೆಯನ್ನು ಈ ಕಾರ್ಯಕ್ರಮದ ರೂವಾರಿಗಳು ಸರಿಪಡಿಸುತ್ತಾರೆಯೇ? ಅಥವಾ ಲಕ್ಷ್ಮಿ ಎಂಬ ಹೆಸರಿರುವ ಹುಡುಗಿಗೆ ಮದುವೆಯಾಗುವುದು ಕಷ್ಟವಾದರೆ ಅದರ ಹೊಣೆಯನ್ನು ಇವರು ಹೊರುತ್ತಾರೆಯೇ?

ಹಿರಿಯ ಪತ್ರಕರ್ತ ದಿನೇಶ್ ಅಮಿನಮಟ್ಟು ಅವರು ‘ಮಾಧ್ಯಮಗಳ ಕೆಲಸ ಜನರು ಏನು ಬಯಸುತ್ತಾರೆ, ಅದನ್ನು ಕೊಡುವುದಲ್ಲ. ಜನರಿಗೆ ಏನು ಬೇಕು ಅದನ್ನು ನೀಡುವುದು’ ಎಂದು ಒಂದೆಡೆ ಹೇಳಿದ್ದರು. ಇದಕ್ಕೆ ತದ್ವಿರುದ್ಧವಾಗಿ ಇಂದಿನ ಮಾಧ್ಯಮಗಳು ಜನರ ಬದುಕಿಗೆ ಬೇಕಾದ ತಿಳುವಳಿಕೆ ಕೊಡುವುದಕ್ಕೆ ಬದಲಾಗಿ ಅವರ ಬದುಕನ್ನು ಈ ಬಗೆಯಲ್ಲಿ ಕಲಕುವ ಪ್ರಯತ್ನ ಮಾಡುತ್ತಿವೆ. ಜೊತೆಗೆ, ಇನ್ನೊಬ್ಬರ ವೈಯಕ್ತಿಕ ಬದುಕಿಗೆ ಎಷ್ಟರ ಮಟ್ಟಿಗೆ ಪ್ರವೇಶಿಸಬಹುದು ಎಂಬ ವಿವೇಕ ಮಾಧ್ಯಮಗಳಲ್ಲಿ ಇಲ್ಲದಿರುವುದು ವ್ಯಕ್ತಿಯ ಬದುಕಿನ ಘನತೆ, ಪಾವಿತ್ರ್ಯವನ್ನೇ ಅಲ್ಲಗಳೆಯುವ ಪ್ರಜಾಪ್ರಭುತ್ವ ವಿರೋಧಿ ಮೌಲ್ಯ.

ವಾಸ್ತವವಾಗಿ, ಜನಾರ್ದನ ರೆಡ್ಡಿಯ ಪತ್ನಿ, ಗ್ಯಾನಳ್ಳಿ ತಮ್ಮಯ್ಯ ಇವರೆಲ್ಲರ ಪತ್ನಿಯರು ತಮ್ಮ ಗಂಡಂದಿರು ಮಾಡಿದ ತಪ್ಪಿನಿಂದ ಈ ಪಡಬಾರದ ಸಂಕಟ ಪಡುತ್ತಿರುವುದೂ ಅಲ್ಲದೆ, ಈಗ ತಮ್ಮ ಹೆಸರುಗಳಿಂದ ತಾವೇ ಗಂಡಂದಿರ ಅನಾಚಾರಕ್ಕೆ ಹೊಣೆಯನ್ನೂ ಹೊತ್ತುಕೊಳ್ಳಬೇಕಾಗಿದೆ. ಅವರ ಮೇಲೆ ಅನ್ಯಥಾ ಆರೋಪ ಹೊರಿಸುವಾಗ ಕನಿಷ್ಟ ವಿವೇಕವನ್ನೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ತೋರಿಸಿಲ್ಲ.

ಕಾರ್ಲ್ ಸಾಗನ್ ತನ್ನ “ದಿ ಡೆಮನ್ ಹಾಂಟೆಡ್ ವರ್ಲ್ಡ್” ಎಂಬ ಪುಸ್ತಕದಲ್ಲಿ ವೈಜ್ಞಾನಿಕ ಮನೋಧರ್ಮ ಮತ್ತು ಪ್ರಜಾಪ್ರಭುತ್ವ ಇವೆರಡೂ ಪ್ರತಿಪಾದಿಸುವ ಮೌಲ್ಯಗಳು ಒಂದೇ ಎಂದು ಹೇಳುತ್ತಾನೆ. ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳುವುದು ಪ್ರಜಾಪ್ರಭುತ್ಚದ ಮೌಲ್ಯಗಳನ್ನು ಬಲಪಡಿಸುತ್ತದೆ. ಅದರ ಬದಲಿಗೆ ಇಂದು ಅಧ್ಯಯನ ನಡೆಸಬೇಕಾಗಿರುವುದು ಮೌಢ್ಯವನ್ನೇ ಪ್ರತಿಪಾದಿಸುತ್ತಾ ಪಾಳೇಗಾರಿಕೆಯ ಮೌಲ್ಯಗಳನ್ನೇ ಬಲಪಡಿಸುವತ್ತ ಮಾಧ್ಯಮಗಳು ಸಾಗುತ್ತಿರುವುದರ ಬಗೆಗೇ ಹೊರತು ಯಾರ ಹೆಸರು ಏನು, ಅದು ಹಾಗಿರುವುದರಿಂದಲೇ ಏನು ಅನರ್ಥವಾಗಿದೆ ಎಂಬ ತಳವಿಲ್ಲದ ಸಂಗತಿಗಳ ಬಗೆಗೆ ಅಲ್ಲ.

ಟಿಆರ್‌ಪಿ ಆಧಾರದಲ್ಲಿ ಜನಪ್ರಿಯತೆಯನ್ನು ನಿರ್ಧರಿಸುವ ಕಾಲದಲ್ಲಿ ಇಂದು ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಿರುವುದರ ಮಾನದಂಡ ಅದನ್ನು ಎಷ್ಟು ಹೆಚ್ಚು ಜನ ಮೆಚ್ಚಿದ್ದಾರೆ ಎಂಬುದಷ್ಟೇ ಆಗಿಲ್ಲ. ಅದನ್ನು ಅತಿ ಹೆಚ್ಚು ಜನ ತೆಗಳಿದರೂ ಆ ಕಾರ್ಯಕ್ರಮ ಯಶಸ್ವಿಯಾಯಿತೆಂದೇ ಭಾವಿಸಲಾಗುತ್ತದೆ. ಒಟ್ಟಿನಲ್ಲಿ ಒಳ್ಳೆಯ ರೀತಿಯಲ್ಲೇ ಆಗಲೀ, ಕೆಟ್ಟ ರೀತಿಯಲ್ಲೇ ಅಗಲಿ, ಅತಿ ಹೆಚ್ಚು ಜನರನ್ನು ಸೆಳೆದು ನೋಡುವಂತಾಗಿಸುವುದೇ ಚಾನೆಲ್ಗಳ ಗುರಿ. ಹೀಗಾಗಿ ಈ ಬಗೆಯ ಕಾರ್ಯಕ್ರಮಗಳನ್ನು ವಿಮರ್ಶಿಸುವ ನಾವೂ ಪರೋಕ್ಷವಾಗಿ ಅದನ್ನು ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತೇವೆ ಎಂಬುದೇ ಇಲ್ಲಿನ ವ್ಯಂಗ್ಯ.

ಈ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳು, ಸಂಖ್ಯಾಶಾಸ್ತ್ರಜ್ಞರನ್ನು ಕರೆದು ಮಾತಾಡಿಸಿದಂತೆ ಒಬ್ಬ ವಿಚಾರವಾದಿಗೆ ಅವಕಾಶ ಇರಲಿಲ್ಲ. ಅದರಲ್ಲೂ ಅಲ್ಲಿಗೆ ಬಂದಿದ್ದ ಜ್ಯೋತಿಷಿಯೊಬ್ಬರು ‘ಲಕ್ಷ್ಮಿ ಅನ್ನುವ ಹೆಸರು ಶುಭವಾದದ್ದೇ ಆಗಿದ್ದರೂ ಗಂಡ ಹೆಂಡತಿಯನ್ನು ಲಕ್ಷ್ಮಿ, ಬಾರೇ ಹೋಗೇ ಅನ್ನುವುದರಿಂದ ಆ ಹೆಸರು ಅಪಮೌಲ್ಯಗೊಂಡು ತೊಂದರೆಯುಂಟಾಗುತ್ತದೆ’ ಎಂದೆಲ್ಲ ಬಾಲಿಶವಾಗಿ ಮಾತಾಡಿದ್ದರು. ಇಡೀ ಕಾರ್ಯಕ್ರಮವನ್ನು ಟಿಆರ್‌ಪಿಗಾಗಿಯೇ ಮಾಡಿದ್ದರೂ ಇಡೀ ಚರ್ಚೆಯಲ್ಲಿ ಒಂದು ಭಿನ್ನ ದನಿಗೆ ಅವಕಾಶ ಮಾಡಿಕೊಡುವ ಅವಕಾಶವಿತ್ತು. ಆದರೆ ಹಾಗಾಗಲಿಲ್ಲ.

ಮುರ್ಡೋಕ್ ಪ್ರಕರಣದ ಬಗ್ಗೆ ಜಿ.ಎನ್.ಮೋಹನ್ ಬರೆಯುತ್ತಾ “ಸಿಟಿಜನ್ ಕೇನ್” ಎಂಬ ಚಿತ್ರದ ಉದಾಹರಣೆ ನೀಡಿ ಅದರಲ್ಲಿ ‘ಪತ್ರಿಕೆಗೆ ಅತಿರಂಜಿತ ಸುದ್ದಿ ಸಿಗದಾಗ ಮಾಲೀಕ ತಾನೇ ಕೊಲೆ ಮಾಡಿಸಿ ಸುದ್ದಿ ಮಾಡುವ ಸ್ಥಿತಿ’ಗೆ ತಲುಪುವುದನ್ನು ವಿವರಿಸಿದ್ದರು. ಆದರೆ ಅವರೇ ಮುಖ್ಯಸ್ಥರಾಗಿರುವ ಸಮಯ ವಾಹಿನಿಯಲ್ಲಿ ಟಿಆರ್‌ಪಿಗಾಗಿ ಇಂತಹ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದು ನಿರಾಸೆ ಹುಟ್ಟಿಸುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕೆಂದು ಬಯಸುವ ನಾವು ನೋಡುಗರಾಗಿ, ಓದುಗರಾಗಿ ಹುರುಳಿಲ್ಲದ ಕಾರ್ಯಕ್ರಮಗಳನ್ನು, ಬರಹಗಳನ್ನು ಗಟ್ಟಿದನಿಯಿಂದ ವಿರೋಧಿಸುವ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

ಮಲ ಸುರಿದುಕೊಂಡವರಿಗೆ ಇನ್ನೂ ನೆಲೆ ಇಲ್ಲ: ಮಲ ಹೊರುವುದು ನಿಂತಿಲ್ಲ

-ಹನುಮಂತ ಹಾಲಿಗೇರಿ

ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದ ಸವಣೂರು ಪುರಸಭೆ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ತಲೆ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ಸವಣೂರಿನ ಭಂಗಿ ಸಮುದಾಯಕ್ಕೆ ಇನ್ನೂ ನೆಲೆ ಸಿಕ್ಕಿಲ್ಲ! ಮಲ ಹೊರುವ ಅನಿಷ್ಟ ಪದ್ದತಿಯೂ ನಿಂತಿಲ್ಲ.

ಮಲ ಸುರಿದುಕೊಂಡು ಒಂದು ವರ್ಷದ ಮೇಲೆ ಎರಡು ತಿಂಗಳು ಕಳೆದಿದ್ದು,  ಇಷ್ಟೊಂದು ದಿನಗಳಲ್ಲಿ ನಡೆದ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ವಾರ್ತಾಭಾರತಿಯು ಭಂಗಿ ಸಮುದಾಯದ ಮಂಜುನಾಥ್ ಭಂಗಿಯವರಿಂದ ಮಾಹಿತಿ ಸಂಗ್ರಹಿಸಿತು. ಒಂದು ರೀತಿಯ ಉದಾಸೀನತೆಯಿಂದಲೆ ಮಾತಿಗಿಳಿದ ಮಂಜುನಾಥ್ ಅವರು ಪತ್ರಿಕೆಯೊಂದಿಗೆ ಮಾತಿಗಿಳಿದರು.

ಮಲ ಸುರಿದುಕೊಂಡ ವಿಷಯವು ದೇಶದಾದ್ಯಂತ ಬಿಸಿಬಿಸಿಯಾಗಿ ಸುದ್ದಿಯಾಗುತ್ತಿರುವಾಗ ಸವಣೂರು ಪುರಸಭೆಯು ನಗರದ ಹೊರಗೆ ಮನೆ ಕಟ್ಟಿಸಿ ಕೊಡುವುದಾಗಿ ಹೇಳಿತ್ತು. ಅದರಂತೆ ಜನತಾ ಮನೆಗಳನ್ನು ಕಟ್ಟಿಸಿದ್ದರೂ ಕೂಡ ಅವುಗಳ ಗೊಡೆಗಳು ಕಟ್ಟಿದ ತಿಂಗಳುಗಳಲ್ಲಿಯೆ ಬಿರುಕುಬಿಟ್ಟು ಬೀಳತೊಡಗಿದ್ದರಿಂದ ನಮ್ಮವರ್ಯಾರು ಈ ಬಿರುಕುಬಿಟ್ಟ ಮನೆಗೆ ಹೋಗಿಲ್ಲ. ಆ ಜನತಾ ಮನೆಗಳಿಗೆ ವಿದ್ಯುತ್ ದೀಪದ ವ್ಯವಸ್ಥೆಯನ್ನೂ ಮಾಡಿಲ್ಲ. ಹೀಗಾಗಿ ನಾವು ಇನ್ನು ಕೂಡ ಅದೆ ಮುರುಕಲು ಗುಡಿಸಲುಗಳಲ್ಲಿ ಕಾಲ ತಳ್ಳುತ್ತಿದ್ದೇವೆ ಎಂದು ಅವರು ಅಲವತ್ತುಕೊಂಡರು.

ಕೈ ಎತ್ತಿದ ಮುರಘಾ ಶರಣರು: `ನೀವು ಮತ್ತೆ ಮಲ ಸುರಿದುಕೊಳ್ಳುವ ಪ್ರಯತ್ನ ಮಾಡಬೇಡಿ. ನಿಮಗೆ ಮಠದ ಖರ್ಚಿನಲ್ಲಿಯೆ ಮನೆ ಕಟ್ಟಿಸಿಕೊಡಲಾಗುವುದು’ ಎಂದು ಮಾಧ್ಯಮಗಳ ಮುಂದೆ ಚಿತ್ರದುರ್ಗದ ಮುರುಘಾ ಶರಣರು ಘೋಷಿಸಿದ್ದರು. ಆದರೆ ಘೋಷಿಸಿ ವರ್ಷ ಕಳೆದಿದ್ದರೂ ಶ್ರೀಗಳು ಸವಣೂರಿನತ್ತ ತಲೆ ಹಾಕಲಿಲ್ಲ. “ಈ ಬಗ್ಗೆ ಶರಣರನ್ನೆ ಕೇಳಲು ನಾವೆಲ್ಲರೂ ಒಂದು ದಿನ ಶ್ರೀಗಳ ಮಠಕ್ಕೆ ಪಾದ ಬೆಳೆಸಿದೆವು. ಶ್ರೀಗಳನ್ನು ಕಂಡು ಅವರು ನೀಡಿದ್ದ ವಚನವನ್ನು ನೆನಪಿಸಿದೆವು. ಆದರೆ ಶ್ರೀಗಳು `ನಾನು ಕಟ್ಟಿಸಿಕೊಡುತ್ತೇನೆ ಎಂದು ಹೇಳಿರಲಿಲ್ಲ. ಸರಕಾರದಿಂದ ಕಟ್ಟಿಸಿಕೊಡುತ್ತೇನೆ’ಎಂದು ಹೇಳಿದ್ದೆ ಎಂದು ಜಾರಿಕೊಂಡರು,” ಎಂದು ಮಂಜುನಾಥ್ ಹೇಳಿದರು.

ಮಲ ಹೊರುವುದು ಇನ್ನು ನಿಂತಿಲ್ಲ: ಪುರಸಭೆ ಮಲ ಹೊರುವ ಪದ್ದತಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ ಕೂಡ ಈ ಅನಿಷ್ಟ ಪದ್ದತಿ ಇನ್ನೂ ನಿಂತಿಲ್ಲ. ನಗರದ ಜನರು ತಮ್ಮ ಮನೆಗಳಲ್ಲಿನ ಶೌಚಾಲಯಗಳು ತುಂಬಿ ಬಾಯಿ ಕಟ್ಟಿದರೆ ನಮ್ಮ ಮನೆಗಳ ಹತ್ತಿರ ಬಂದು, ಹೆಚ್ಚು ಹಣದ ಆಸೆ ತೋರಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಕಹಿಸತ್ಯವನ್ನು ಅವರು ಒಪ್ಪಿಕೊಂಡರು.

ಮನೆ ಕೇಳಿದರೆ ದನ ಕೊಡಿಸಿದರು: ನಾವು ಮನೆ ಕೇಳಿದರೆ ಪುರಸಭೆಯವರು ಸಾಲದ ಮೇಲೆ ನಮಗೆ ದನ, ಕುರಿ, ಮೇಕೆಗಳನ್ನು ಕೊಡಿಸಿದರು. ನಮಗೆ ಮನೆ ಇಲ್ಲದ್ದರಿಂದ ಅವುಗಳನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ನಮಗೆ ಅವುಗಳನ್ನು ಸಾಕುವ ವಿಧಾನ ಗೊತ್ತಿರಲಿಲ್ಲ. ಅವುಗಳಿಗೆ ಮೇವು ಕೂಡ ಇಲ್ಲದ್ದರಿಂದ ಅವುಗಳಲ್ಲಿ ಕೆಲವು ಸತ್ತವು. ಉಳಿದವುಗಳನ್ನು ನಾವೆ ಮಾರಿದೆವು. ಈಗ ಅವುಗಳ ಮೇಲಿನ ಸಾಲ ತೀರಿಸಿ ಎಂದು ಪುರಸಭೆ ಪೀಡಿಸುತ್ತಿದೆ ಎಂದು ಅವರು ದೂರಿದರು.

ಖಾಯಂ ಕೆಲಸ ಕೊಟ್ಟಿಲ್ಲ: ಖಾಯಂ ಕೆಲಸ ಕೊಡುತ್ತೇವೆ ಎಂದು ಸರಕಾರದ ಮಂತ್ರಿಗಳು ಹೇಳಿದ್ದರು. ಆದರೆ ಇಂದು ಗುತ್ತಿಗೆ ಆಧಾರದ ಮೇಲೆ ಕಡಿಮೆ ಸಂಬಳ ನೀಡಿ ಪೌರ ಕಾಮರ್ಿಕರಾಗಿ ದುಡಿಸಿಕೊಳ್ಳುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನವೀಯ ಆಧಾರದ ಮೇಲೆ `ಒಂದು ಸಲ ವಿಶೇಷ ನೇಮಕಾತಿ’ ಯೋಜನೆ ಅಡಿಯಲ್ಲಿ ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಈ ಬಗ್ಗೆ ಈಗ ಸರಕಾರದವರು ಮಾತನಾಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಸರಕಾರದ ಕಣ್ಣು ತೆರೆಯಲಿ
ಕಳೆದ ರವಿವಾರ ನಾಡಿನ ಹಿರಿಯ ಕವಿ ಎಸ್.ಜಿ.ಸಿದ್ದರಾಮಯ್ಯ ಅವರು ತಮ್ಮ ಇತ್ತೀಚಿಗಿನ `ಅರಿವು ನಾಚಿತ್ತು’ ಆಧುನಿಕ ವಚನಗಳ ಕೃತಿಯನ್ನು ಇದೆ ಸವಣೂರಿನ ಭಂಗಿ ಸಮುದಾಯದ ಮಂಜುನಾಥ್ ಅವರಿಂದ ಮಲ ಸುರಿದಕೊಂಡ  ಸ್ಥಳದಲ್ಲಿಯೆ ಬಿಡುಗಡೆ ಮಾಡಿಸಿದ್ದರು.

ಅವರು ಈ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿ, “ಭಂಗಿ ಸಮುದಾಯದವರ ಬೇಡಿಕೆಗಳಿಗೆ ಒತ್ತಾಸೆಯಾಗಿ ನಿಲ್ಲಬೇಕು ಮತ್ತು ಅವರ ಬೇಡಿಕೆಗಳು ಮತ್ತೊಮ್ಮೆ ನಾಡಿನಾದ್ಯಂತ ಚರ್ಚೆಯಾಗಬೇಕು. ಆ ಮೂಲಕ ರಾಜ್ಯ ಸರಕಾರದ ಕಣ್ಣು ತೆರೆಸಬೇಕು ಎಂಬ ಉದ್ದೇಶದಿಂದ ಬೆಂಗಳೂರಿನಿಂದ ದೂರವಿರುವ ಸವಣೂರಿಗೆ ಹೋಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,” ಎಂದು ತಿಳಿಸಿದರು.

ಮೀನುಗಳ ದುರ್ವಾಸನೆಯಲ್ಲಿ ದಿನದ ಬದುಕು: ನಾವು ವಾಸಿಸುವ ಬಡಾವಣೆಯ ಮುಂದೆಯೆ ಕೆಲವರು ಹಸಿ ಮೀನುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಅದರ ದುರ್ವಾಸನೆಯಿಂದಾಗಿ ಹಲವಾರು ರೋಗಗಳು ನಮ್ಮ ಮನೆಯ ಹೆಣ್ಣ್ಣುಮಕ್ಕಳನ್ನು ಸದಾ ಹಾಸಿಗೆಯಲ್ಲಿಯೆ ಇರುವಂತೆಯೆ ಮಾಡುತ್ತಿದ್ದವು. ಇದು ಕೂಡ ಮಲ ಸುರಿದುಕೊಳ್ಳಲು ಕಾರಣವಾಗಿತ್ತು. ಆದರೆ ಪ್ರತಿಭಟನೆಯ ನಂತರ ಮೀನು ವ್ಯಾಪಾರವನ್ನು ಬಂದ್ ಮಾಡಿದ್ದರು. ಈಗ ಮತ್ತೆ ಮೀನು ವ್ಯಾಪಾರ ನಮ್ಮ ಗುಡಿಸಲುಗಳ ಮುಂದೆಯೆ ಪ್ರಾರಂಭವಾಗಿದೆ. ಇದರ ಬಗ್ಗೆ ಪುರಸಭೆ ಯಾವ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.

ಮಲ ಸುರಿದಕೊಂಡ ಸಂದರ್ಭದಲ್ಲಿ ಇಡಿ ಆಡಳಿತ ಯಂತ್ರವೇ ಸವಣೂರಿಗೆ ಪಾದ ಬೆಳೆಸಿ ಹಲವಾರು ಭರವಸೆಗಳನ್ನು ನೀಡಿತ್ತು. ಆದರೆ ನಿಧಾನಕ್ಕೆ ಮಲ ಸುರಿದಕೊಂಡ ಸುದ್ದಿ ರದ್ದಿ ಸೇರಿದ ಮೇಲೆ ಸರಕಾರ ತಾನು ನೀಡಿದ್ದ ಭರವಸೆಯನ್ನು ಮರೆತು ನಿದ್ರೆಗೆ ಜಾರಿರುವುದು ದುರದೃಷ್ಟಕರ. ಸವಣೂರಿನ ಭಂಗಿಗಳು ರೋಸಿ ಹೋಗಿ ಮತ್ತೊಮ್ಮೆ ಮಲ ಸುರಿದುಕೊಳ್ಳುವ ಮುನ್ನವೆ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ಮಾನವೀಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿ
ಈ ಹಿಂದೆ ಗ್ರಾಮೀಣ ಕೃಪಾಂಕ ಯೋಜನೆಯಡಿ ನೇಮಕ ಮಾಡಿಕೊಂಡಿದ್ದ ನೌಕರರನ್ನು ಕಾನೂನು ತೊಡಕಿನಿಂದ ಮತ್ತೆ ರದ್ದುಪಡಿಸಿ ಮನೆಗೆ ಕಳುಹಿಸಲಾಗಿತ್ತು. ಆಗ ಬಹಳಷ್ಟು ನೌಕರರು ಸರಕಾರದ ನಿರ್ಧಾರದಿಂದ ರೋಸಿಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರಕಾರ ಕೂಡಲೆ ಕಾರ್ಯೋನ್ಮುಖವಾಗಿ ಅಳಿದುಳಿದ ನೌಕರರನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನವೀಯ ಆಧಾರದ ಮೇಲೆ `ಒಂದು ಸಲ ವಿಶೇಷ ನೇಮಕಾತಿ’ ಯೋಜನೆ ಅಡಿಯಲ್ಲಿ  ನೇಮಕ ಮಾಡಿಕೊಂಡಿತ್ತು. ಅದೆ ರೀತಿಯಲ್ಲಿ ಈ ಸವಣೂರಿನ ಬಂಗಿ ಸಮುದಾಯದ ಯುವಕರನ್ನು ನೇಮಕ ಮಾಡಿಕೊಳ್ಳಬೇಕಿದೆ
-ಬಿ.ಶ್ರೀನಿವಾಸ್, ಜಿಲ್ಲೆಯ ಕಥೆಗಾರರು

 

ವ್ಯಂಗ್ಯ (ವಿ)ಚಿತ್ರ

-ಕೆ.ಎಲ್.ಚಂದ್ರಶೇಖರ್ ಐಜೂರ್

ದಿನೇಶ್ ಅಮಿನ್‌ಮಟ್ಟು ಅವರ ಲೇಖನ ಮತ್ತ ಪಿ.ಮಹಮ್ಮದ್ ಅವರ ಕಾರ್ಟೂನ್ ನೋಡಲಿಕ್ಕೆಂದೇ ಅನೇಕರು ಪ್ರಜಾವಾಣಿ ಕೊಳ್ಳುವುದನ್ನು ತೀರಾ ಹತ್ತಿರದಂತೆ ಕಂಡಿದ್ದೇನೆ. ಒಮ್ಮೊಮ್ಮೆ ನಮ್ಮ ಅಕಾಡೆಮಿಕ್ ಚರ್ಚೆಯಾಚೆಗೂ ದಾಟಿ ಗೆಳೆಯರ ವಲಯಗಳಲ್ಲಿ ಇನ್ನೇನೂ ಮಾತುಗಳೆಲ್ಲ ತೀರಿಕೊಂಡವು ಎಂಬ ಹೊತ್ತಿನಲ್ಲಿ ಹಠಾತ್ ದಿನೇಶರ ಬರಹಗಳು, ಮಹಮ್ಮದ್ ಅವರ ಕಾರ್ಟೂನ್ ವಿಷಾದ ತುಂಬಿಕೊಂಡ ಗಳಿಗೆಗಳಲ್ಲಿ ವಿಶ್ವಾಸ ತುಂಬಲು ಯತ್ನಿಸಿವೆ. ಬರೀ ತೌಡು ಕುಟ್ಟುವ ಸಭೆ ಸೆಮಿನಾರುಗಳು ಬೇಸರ ತರಿಸುವ ಹೊತ್ತಿನಲ್ಲಿ ಆ ದಿನ ಬೆಳಿಗ್ಗೆ ಕಂಡ ಮಹಮ್ಮದರ ಕಾರ್ಟೂನ್ ನೆನಪಾಗಿ ನಗೆ ತರಿಸುವುದು ಉಂಟು. ಡಾ.ಬಿ.ಎಸ್.ಯಡಿಯೂರಪ್ಪನವರ ಚೂಪು ಮೀಸೆ, ಚದುರಿದ ಹುಬ್ಬು ನಡುವೆ ಕೇಸರಿ ತಿಲಕ, ಬಿಳಿಬಣ್ಣದ ಡ್ರೆಸ್‌ಕೋಡ್, ಸಿಟ್ಟುಮಾಡಿಕೊಂಡಾಗ ಕಾಣುವ ಹಣೆಯ ಮೇಲಿನ ಗೆರೆಗಳು… ಕಳೆದ ನಾಲ್ಕು ವರ್ಷಗಳಲ್ಲಿ ಮಹಮ್ಮದ್ ಅವರ ಕೈಗೆ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಸಲವಾದರೂ ಸಿಕ್ಕಿವೆ. ಯಡಿಯೂರಪ್ಪನವರು ಮಹಮ್ಮದ್ ಅವರ ಕೈಯಲ್ಲಿ ಸಿಕ್ಕಿ ನಕ್ಕಿದ್ದು ಕಮ್ಮಿ.

ಶಾಸಕರನ್ನು ಗಣಿ ಲಾರಿಯಲ್ಲಿ ತುಂಬಿಕೊಂಡು ಬಂದು “ಸ್ಥಿರ ಸರ್ಕಾರಕ್ಕೆ ಇನ್ನೊಂದು ಲೋಡ್ ತರ್‍ಲಾ ಸಾರ್” ಎನ್ನುತ್ತಿರುವ ಬಳ್ಳಾರಿ ದೇಶದ ಡ್ರೈವರ್, ಮತ್ತೊಂದು ವ್ಯಂಗ್ಯ ಚಿತ್ರದಲ್ಲಿ 1992ರ ದುರಂತದ ನಂತರ “ಶಿಕ್ಷಣ, ಉದ್ಯೋಗ ಮತ್ತು ರಕ್ಷಣೆ ಕೊಡಿ” ಎಂದು ಅಂಗಲಾಚುತ್ತಿರುವ ಒಬ್ಬ ನಿರ್ಗತಿಕ ಮುಸ್ಲಿಮ್ ಯುವಕನಿಗೆ ವಾಜಪೇಯಿ “ದುಃಖಿಸಬೇಡ ಮಸೀದಿಯನ್ನು ಮತ್ತೆ ನಿರ್ಮಿಸಿ ಕೊಡುತ್ತೇವೆ” ಎಂದು ಹೇಳುವ ಭಂಗಿಯಲ್ಲಿ ನಿಂತಿದ್ದರೆ ಪಕ್ಕದಲ್ಲಿ “ಎಲ್ಲರೂ ನೋಡಿ ಸರಕಾರ ಮತ್ತೆ ಮುಸ್ಲಿಮರನ್ನು ಸಂತುಷ್ಟಿಗೊಳಿಸುವ ತಂತ್ರ ನಡೆಸಿದೆ…” ಎಂದು ಮತ್ತೊಬ್ಬ ರಾಜಕಾರಣಿ ಜೋರು ದನಿ ತೆಗೆದು ಕೂಗುತ್ತಿದ್ದಾನೆ. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದ ದಿನಗಳಲ್ಲಿ ದೇವೇಗೌಡರಿಗೆ ಪ್ರಚಂಡ ಐಡಿಯಾಗಳನ್ನು ಕೊಟ್ಟು ಸರ್ಕಾರ ಉರುಳಿಸಲು ನೆರವಾದ ಮಹಮ್ಮದರ ಕಾರ್ಟೂನ್‌ಗಳನ್ನು ಪ್ರಜಾವಾಣಿ ಓದುಗರು ಮರೆತಿರಲಿಕ್ಕಿಲ್ಲ. ಮಹಮ್ಮದ್ ಅವರ ಪೆನ್ನು ಗೆರೆಗಳಾಗಿ, ವ್ಯಂಗ್ಯ ಚಿತ್ರಗಳಾಗಿ ದುಡಿದಿರುವುದನ್ನು ಕಾಣಲು ಓದುಗರು “ವ್ಯಂಗ್ಯ (ವಿ)ಚಿತ್ರ”ವನ್ನು ನೋಡಲೇ ಬೇಕು. “ಮಹಮ್ಮದ್ ಪ್ರಾಯಶಃ ಇವತ್ತು ಕರ್ನಾಟಕದ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದರಲ್ಲಿ ಯಾರಿಗೂ ಹೆಚ್ಚಿನ ಅನುಮಾನವಿರಲಾರದು. ವಿರೋಧ ಪಕ್ಷಗಳು ತಮಗೆ ಅನುಕೂಲವಾದಾಗ ಮಾತ್ರ ವಿರೋಧ ಪಕ್ಷಗಳಾಗುವ ಈ ಕೆಟ್ಟ ಕಾಲದಲ್ಲಿ ಮಹಮ್ಮದ್ ಕರ್ನಾಟಕದ ಸಮರ್ಥ ವಿರೋಧಪಕ್ಷವಾಗಿದ್ದಾರೆ. ಖಚಿತ ಪ್ರಗತಿಪರ ದೃಷ್ಟಿಕೋನವುಳ್ಳ ವ್ಯಾಖ್ಯಾನಕಾರರಾಗಿ ಹಾಗೂ ಏಕಕಾಲಕ್ಕೆ ಮೂಲಭೂತವಾದಿಗಳನ್ನೂ ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವ ಸ್ವತಂತ್ರ ಬುದ್ಧಿಜೀವಿಯಾಗಿಯೂ ಮಹಮ್ಮದ್ ರೂಪುಗೊಂಡಿದ್ದಾರೆ,” ಎಂಬ ಡಾ.ನಟರಾಜ್ ಹುಳಿಯಾರರ ಪ್ರಸ್ತಾವನೆಯ ಮಾತುಗಳು ಮಹಮ್ಮದರ ಕಾರ್ಟೂನ್ ಶಕ್ತಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತವೆ.

ವ್ಯಂಗ್ಯ (ವಿ)ಚಿತ್ರ
ಲೇಖಕರು :ಪಿ.ಮಹಮ್ಮದ್

ಪ್ರಕಾಶಕರು
ಚಿಂತನ ಪುಸ್ತಕ
ನಂ.1863, 11ನೇ ಮುಖ್ಯರಸ್ತೆ, 38ನೇ ಅಡ್ಡರಸ್ತೆ,
4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041

ಪುಟಗಳು:140 ಬೆಲೆ:ರೂ.140 ಪ್ರಕಟಣೆ:2010

ಭ್ರಷ್ಟಾಚಾರ ವಿರೋಧೀ ಹೋರಾಟ – ಉತ್ತರಿಸದೇ ಉಳಿದ ಪ್ರಶ್ನೆಗಳು

-ಸಂಜ್ಯೋತಿ ವಿ.ಕೆ.

ಅಣ್ಣಾ ಹಜಾರೆ, ಅವರ ಉಪವಾಸ ಸತ್ಯಾಗ್ರಹ, ಅವರ ತಂಡದ ಸದಸ್ಯರುಗಳ ತರಹೇವರಿ ಹೇಳಿಕೆಗಳು, ಕೇಂದ್ರ ಸರ್ಕಾರದ ಪ್ರತಿನಿಧಿಗಳ ಅಸಂಬದ್ಧ ಪ್ರತಿಕ್ರಿಯೆಗಳು ಇವೆಲ್ಲ “ಸ್ಫೋಟಕ  ಸುದ್ದಿ”ಗಳಾಗಿ ಎಲ್ಲಾ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಹರಿದಾಡಿದ ನೆನಪುಗಳು ಕರಗುತ್ತಿರುವ ಈ ಗಳಿಗೆಯಲ್ಲಿ ಒಂದು ಪುನರಾವಲೋಕನ…

ಹಾಲಿ ಇರುವ ಕಾನೂನುಗಳನ್ನು ಪ್ರಾಮಾಣಿಕವಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವುದರ ಹೊರತಾಗಿಯೂ ಕೇಂದ್ರದ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲ ಒಂದು ಪ್ರಬಲ ಮಸೂದೆಯ ಅಗತ್ಯವಂತೂ ಖಂಡಿತವಾಗಿಯೂ ಇದೆ. ಈ  ನಿಟ್ಟಿನಲ್ಲಿ ಜವಹರಲಾಲ ನೆಹರುರವರ ಕಾಲದಲ್ಲಿಯೇ ರಚಿತವಾಗಿ ಹಲವು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಲೋಕಪಾಲ ಮಸೂದೆ, ವಿವಿಧ ಕೇಂದ್ರ ಸರ್ಕಾರಗಳ ಕಾಲದಲ್ಲಿ ಇಣುಕಿ, ಹಣಕಿ ಮತ್ತೆ ಧೂಳು ತಿನ್ನುತ್ತಾ ಕುಳಿತಿತ್ತು. ಕಾಂಗ್ರೆಸ್ ನೇತ್ರತ್ವದ ಯು.ಪಿ.ಎ. ಸರ್ಕಾರ ತನ್ನ “ಕನಿಷ್ಟ ಸಾಮಾನ್ಯ ಕಾರ್ಯಸೂಚಿ”ಯಲ್ಲಿ (ಕಾಮನ್ ಮಿನಿಮಮ್ ಪ್ರೋಗ್ರಾಮ್) ಇದರ ಪ್ರಸ್ತಾಪ ಮಾಡಿತ್ತಾದರೂ, ಕಾಂಗ್ರೆಸ್ ಪಕ್ಷವೂ ಸೇರಿದಂತೆ ಯು.ಪಿ.ಎ.ನ ಯಾವುದೇ ಅಂಗ ಪಕ್ಷಗಳಿಗಾಗಲಿ, ಯು.ಪಿ.ಎ. ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ದೊಡ್ಡ ದನಿಯಲ್ಲಿ ಗುಲ್ಲೆಬ್ಬಿಸುತ್ತಿರುವ ಆದರೆ ತನ್ನದೇ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಕುರುಡು, ಕಿವುಡು, ಮೂಕಾಗಿರುವ ಬಿ.ಜೆ.ಪಿ.ಗಾಗಲೀ ಒಂದು ಪ್ರಬಲವಾದ ಮಸೂದೆಯನ್ನು ಮಂಡಿಸುವ ಮನಸ್ಸಿಲ್ಲ ಎಂಬುದು ಸುಸ್ಪಷ್ಟ.

ಭ್ರಷ್ಟಾಚಾರವೆಂಬ ಆಕ್ಟೋಪಸ್ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನೆಲ್ಲಾ ವ್ಯಾಪಿಸುತ್ತಾ ತನ್ನ ಬಾಹುಗಳನ್ನು ದಶದಿಕ್ಕುಗಳಲ್ಲೂ ಚಾಚಿ ಮೇರೆ ಮೀರಿ ಬೆಳೆಯುತ್ತಿರುವಾಗ ಅಣ್ಣಾ ಹಜಾರೆ ಎಂಬ ಪ್ರಾಮಾಣಿಕ ಮನುಷ್ಯನೊಬ್ಬ ಜನಲೋಕಪಾಲ ಮಸೂದೆಗಾಗಿ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಉಪವಾಸ ಕೂತಾಗ, ಬೇಸತ್ತಿದ್ದ ಜನರಿಗೆ ಇದೊಂದು ಆಶಾಕಿರಣವಾಗಿ ಕಂಡಿತ್ತು. ದೊಡ್ಡ ಸಂಖ್ಯೆಯಲ್ಲಿ ಜನ ಬಹಿರಂಗವಾಗಿ ಸೇರಲಿಲ್ಲವಾದರೂ ಒಂದು ಅವ್ಯಕ್ತ ಸಹಮತ ಬಹುಪಾಲು ಜನರಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಕೇಂದ್ರ ಸರ್ಕಾರದ ಗ್ರಹಿಕೆ ಏನಿದ್ದಿತೋ, ಮಸೂದೆಯ ರೂಪುರೇಷೆಗಳನ್ನು ಚರ್ಚಿಸಲು ನಾಗರಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡಂತೆ ಒಂದು ಜಂಟಿ ಸಮಿತಿಯನ್ನು ರಚಿಸುವ ಇಂಗಿತ ವ್ಯಕ್ತಪಡಿಸಿತು. ಅದಕ್ಕೆ ಒಪ್ಪಿದ ಅಣ್ಣಾ ಸಹಾ “ಸಮಿತಿಯ ವತಿಯಿಂದ ಉತ್ತಮ ಮಸೂದೆಯನ್ನು ಪ್ರಸ್ತುತ ಪಡಿಸುತ್ತೇವೆ. ಅದನ್ನು ಚರ್ಚಿಸಿ ಅಂಗೀಕಾರ ಮಾಡುವ ಅಧಿಕಾರ ಸಂಸತ್ತಿನದ್ದು” ಎಂದು ಮಾಧ್ಯಮಗಳ ಮುಂದೆ ಹೇಳಿದರು. ಅಲ್ಲಿಯವರಗೆ ಎಲ್ಲವೂ ಸುಸೂತ್ರವಾಗಿತ್ತು. ಆದರೆ ಅದರ ಮುಂದಿನ ಘಟ ನಾವಳಿಗಳು ನಾಡಿನ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರಿಗೆ, ಸಂವಿಧಾನದ ಬಗ್ಗೆ ನಂಬಿಕೆಯಿಟ್ಟ ಪ್ರತಿಯೊಬ್ಬ ಪ್ರಜ್ಞಾವಂತನಿಗೆ ಗಾಬರಿ ಹುಟ್ಟಿಸುವಂತವು.

ಈ ಹಿನ್ನೆಲೆಯಲ್ಲಿ ಅಣ್ಣಾ ಪರ ಅಥವಾ ವಿರುದ್ಧ ಎಂಬ ಪೂರ್ವಾಗ್ರಹಗಳಿಗೆ ಸಿಲುಕದೆಯೇ ಇಡೀ ಪ್ರಕರಣವನ್ನು ವಿಶ್ಲೇಷಿಸುವಾಗ ಕೆಲವು ಪ್ರಶ್ನೆಗಳನ್ನು ಎತ್ತಲೇಬೇಕಿದೆ.

ಮೊದಲಿಗೆ – ‘ನಾಗರಿಕ ಸಮಾಜದ ಪ್ರತಿನಿಧಿಗಳು’ ಎಂಬ ಅಣ್ಣಾ ತಂಡದ ಆಯ್ಕೆಯ ಮಾನದಂಡಗಳೇನು? ದೇಶದ ವಿವಿಧ ಭಾಗಗಳ, ವರ್ಗಗಳ ಪ್ರಾತಿನಿಧ್ಯವಿಲ್ಲದೆ ಇದು ಕೇವಲ ‘ಅಣ್ಣಾ ತಂಡ’ವಾಯಿತೇ ಹೊರತು ನಿಜವಾದ ಸಮಾಜದ ಪ್ರತಿನಿಧಿಗಳ ತಂಡವಾಗಲಿಲ್ಲ. ‘ಇದು ಕೇವಲ ಆಕಸ್ಮಿಕ ಅಥವಾ ಇಂತಹ ಚರ್ಚೆಗಳಲ್ಲಿ ಹೋರಾಟದ ಮೂಲ ಉದ್ದೇಶವನ್ನು ಮುಕ್ಕಾಗಿಸುವುದು ಬೇಡ’ ಎನ್ನುವ ವಾದವನ್ನು ವಾದಕ್ಕಾಗಿಯಾದರೂ ಒಪ್ಪಿಬಿಡಬಹುದಿತ್ತು- ಸಾಮಾಜಿಕ ನ್ಯಾಯದ ಬಗೆಗಿನ ಅಣ್ಣಾರ ನಿಲುವು ಸಮರ್ಪಕವಾಗಿದ್ದಿದ್ದರೆ.

Sansad_Bhavan

Sansad_Bhavan

ಪತ್ರಕರ್ತ ಮುಕುಲ್ ಶರ್ಮ ಅವರು ರಾಳೇಗಾಂವ್ ಸಿದ್ಧಿಯಲ್ಲಿನ ಅಣ್ಣಾರ ಸುಧಾರಣಾ ಕ್ರಮಗಳಿಂದ ಪ್ರಭಾವಿತರಾಗಿದ್ದರೂ, ಅವರ ‘ಬ್ರಾಹ್ಮಣಿಕೆ’ಯ ಧೋರಣೆಯನ್ನೂ ಗುರುತಿಸುತ್ತಾರೆ.  ಅಣ್ಣಾ ತಂದಿರುವ ಜಲ ಸಂರಕ್ಷಣೆ ಮತ್ತು ಸಮರ್ಪಕ ಜಲ ನಿರ್ವಹಣೆ, ಅದರಿಂದ ಹೆಚ್ಚಿದ ಬೇಸಾಯಗಾರರ ಇಳುವರಿ ಮತ್ತು ಆದಾಯ, ಪಾನ ನಿಷೇಧ ಇವೆಲ್ಲಾ ನಿಜಕ್ಕೂ ಅನುಕರಣ ಯೋಗ್ಯ. ಆದರೆ ಜೊತೆಗೇ ದಲಿತರ ಆಹಾರ ಕ್ರಮಗಳ ಬಗೆಗಿನ ಅವರ ಋಣಾತ್ಮಕ ಧೋರಣೆ ಪ್ರಶ್ನಾರ್ಹ. ಅಂತೆಯೇ “ಪ್ರತೀ ಹಳ್ಳಿಯಲ್ಲಿ ಒಬ್ಬ ಚಮ್ಮಾರ, ಕಂಬಾರ, ಝಾಡಮಾಲಿ ಇರಲೇಬೇಕು ಮತ್ತು ಅವರೆಲ್ಲಾ ತಮ್ಮ ಪಾತ್ರ, ಕಸುಬಿನಂತೆ ದುಡಿಯಬೇಕು. ಇದೇ ರಾಳೇಗಾಂವ್ ಸಿದ್ಧಿಯ ಮಾದರಿ” ಎನ್ನುವ ಅಣ್ಣಾರ ಮನಸ್ಸತ್ವ ಇಂತಹ ವಾದವನ್ನು ಒಪ್ಪುವುದನ್ನು ಅಸಾಧ್ಯವಾಗಿಸುತ್ತದೆ. ಮೀಸಲಾತಿಯನ್ನು ವಿರೋಧಿಸುವವರು ಅಣ್ಣಾರ ಹೋರಾಟದೊಡನೆ ತಮ್ಮನ್ನು ಗುರುತಿಸಿಕೊಳ್ಳುವುದು ಕಾಕತಾಳೀಯವಲ್ಲ.

ಎರಡನೆಯದು – ಸರ್ಕಾರ ಪ್ರಸ್ತಾಪಿಸಿದ ಲೋಕಪಾಲ ಮಸೂದೆ ಕೇವಲ ಕಾಗದದ ಮೇಲೂ ಘರ್ಜಿಸಲಾರದಷ್ಟು ದುರ್ಬಲವೆಂಬುದು ನಿಜ. ಆದರೆ ಅಣ್ಣಾ ತಂಡ ರಚಿಸಿದ ಜನಲೋಕಪಾಲ ಮಸೂದೆ ಅದಕ್ಕೆ ಪರ್ಯಾಯವಾಗಬಲ್ಲುದೇ?

  1.  ‘ಜನಲೋಕಪಾಲವನ್ನು ಯಥಾವತ್ತಾಗಿ ಅಂಗೀಕರಿಸಿದರೂ ಭ್ರಷ್ಟಾಚಾರವನ್ನು ಸಂಪೂರ್ಣ ತೊಲಗಿಸಿಬಿಡಲು ಸಾಧ್ಯವಿಲ್ಲ’ ಎಂಬುದನ್ನು ಅದರ ಪರವಾಗಿರುವ ಪರಿಣಿತರೇ ಒಪ್ಪುತ್ತಾರೆ.
  2. ಸಂವಿಧಾನಬದ್ಧವಾಗಿ ಪ್ರಜೆಗಳಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಗಳೆಲ್ಲರ ಮೇಲೆ (ನ್ಯಾಯಾಂಗವನ್ನೂ ಒಳಗೊಂಡಂತೆ!) ಒಂದು ಸರ್ವತಂತ್ರ ಸ್ವತಂತ್ರವಾದ ಸರ್ವಾಧಿಕಾರಿಯನ್ನು ಸ್ಥಾಪಿಸುವುದು ಪ್ರಜಾಪ್ರಭುತ್ವದ ಮೂಲತತ್ವಕ್ಕೇ ಅಪಾಯಕಾರಿಯಾದದ್ದಲ್ಲವೇ?
  3. ಭ್ರಷ್ಟಾಚಾರವೆಂಬುದು ಮನುಕುಲದ ಇತಿಹಾಸದಷ್ಟೇ ಹಳೆಯ ವಿಷಯವಾದರೂ ಅದರ ವ್ಯಾಪ್ತಿ ಮತ್ತು ಪ್ರಮಾಣ ಇಂದು ಹಿಂದೆಂದಿಗಿಂತಲೂ ಸಹಸ್ರಾರು ಪಟ್ಟು ಹೆಚ್ಚಿದ್ದು, ಜನಸಾಮಾನ್ಯರ  ಕಲ್ಪನೆಗೂ ಮೀರಿದ್ದಾಗಿದೆ. ಇದೇ ಭ್ರಷ್ಟ ಹಣ ಚುನಾವಣೆಗಳನ್ನು ಮತದ ಮಾರುಕಟ್ಟೆಯಾಗಿ ಪರಿವರ್ತಿಸುತ್ತಿದೆ; ನ್ಯಾಯಾಂಗವನ್ನೂ ಭ್ರಷ್ಟಗೊಳಿಸುತ್ತಾ ನ್ಯಾಯವನ್ನು ಬಿಕರಿಯ ವಸ್ತುವನ್ನಾಗಿಸುವ ಧಾಷ್ಟ್ರ್ಯ  ತೋರುತ್ತಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಭಷ್ಟಾಚಾರಗಳೆಲ್ಲ ಇಂದು ಒಂದೇ ಸರಪಣಿಯ ಕೊಂಡಿಗಳಾಗಿದ್ದು, ಅದರ ಮೂಲವಿರುವುದು ಕಾರ್ಪೊರೇಟ್ ಲಾಬಿ, ಕಾರ್ಪೊರೇಟ್ ಭಷ್ಟಾಚಾರದಲ್ಲಿ. ಹೀಗಿರುವಾಗ ಜನಲೋಕಪಾಲ ಮಸೂದೆ ಕಾರ್ಪೊರೇಟ್ ವಲಯವನ್ನು ತನ್ನ ಪರಿಧಿಯಿಂದ ಸಂಪೂರ್ಣ ಹೊರಗಿಟ್ಟಿರುವುದು, ಕೇವಲ ರೋಗದ ಲಕ್ಷಣಗಳನಷ್ಟೇ ಉಪಚರಿಸುತ್ತಾ ಅದರ ಮೂಲವನ್ನು ಕಡೆಗಣಿಸುವ ಕಸರತ್ತಾಗಿದೆ. ಈ ಹಿನ್ನೆಲೆಯಲ್ಲಿಯೇ ಅನಿವಾರ್ಯವಾಗಿ ಅಣ್ಣಾ ತಂಡಕ್ಕೆ ಕಾರ್ಪೊರೇಟ್ ವಲಯದ ಮತ್ತು ಮೇಲ್ಮಧ್ಯಮ ವರ್ಗದ ಕಾರ್ಪೊರೇಟ್ ನೌಕರರ ಬೆಂಬಲವನ್ನು ಅನುಮಾನಿಸಬೇಕಿದೆ. ತನ್ನ ನೌಕರರಿಗೆ ತಮ್ಮದೇ ಸಂಘಟನೆ ರೂಪಿಸಿಕೊಳ್ಳುವ, ತನ್ನ ಹಕ್ಕುಗಳಿಗಾಗಿ ಪ್ರತಿಭಟಿಸುವ ಕನಿಷ್ಟ ಹಕ್ಕನ್ನೂ ಪ್ರತ್ಯಕ್ಷ/ಪರೋಕ್ಷವಾಗಿ ನಿರಾಕರಿಸುವ ಕಾರ್ಪೊರೇಟ್ ಕಂಪನಿಗಳು ಅಣ್ಣಾ ತಂಡದ ಹೋರಾಟವನ್ನು ಬೆಂಬಲಿಸುವ ಸಲುವಾಗಿ ತನ್ನ ನೌಕರರಿಗೆ ಬಿಡುವು ಮಾಡಿಕೊಟ್ಟು ಫ್ರೀಡಂ ಪಾರ್ಕ್‌ಗೆಗೆ ಕಳಿಸುವುದು ಅರಿಯಲಾಗದ ದೊಡ್ಡ ರಹಸ್ಯವೇನಲ್ಲ. ‘ಭ್ರಷ್ಟಾಚಾರ ವಿರುದ್ಧ ಭಾರತ’ ಹೋರಾಟಕ್ಕೆ ಲಕ್ಷಾಂತರ ರೂಪಾಯಿಗಳ ದೇಣಿಗೆ ನೀಡುತ್ತಿರುವುದು ಇಂತಹ ಹಲವಾರು ಕಾರ್ಪೊರೇಟ್ ಕಂಪನಿಗಳೇ.
  4. ಈ ಜನಲೋಕಪಾಲ ಮಸೂದೆ ಸರ್ಕಾರೇತರ ಸಂಸ್ಥೆ(ಎನ್.ಜಿ.ಓ.)ಗಳನ್ನೂ ತನ್ನ ವ್ಯಾಪ್ತಿಯಿಂದ ಹೊರಗಿಡಲು ಬಯಸುತ್ತದೆ. ಎಲ್ಲೋ ಕೆಲವು ಎನ್.ಜಿ.ಓ.ಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆಯಾದರೂ ಇಂದಿನ ಮುಕ್ಕಾಲುವಾಸಿ ಎನ್.ಜಿ.ಓ.ಗಳು ದುಡ್ಡು ಮಾಡುವ ಸಲುವಾಗಿಯೇ ಹುಟ್ಟಿಕೊಳ್ಳುತ್ತವೆಂಬ ವಿಷಯ ಎಲ್ಲರಿಗೂ ತಿಳಿದಿರುವ ಒಂದು ತೆರೆದ ರಹಸ್ಯವಷ್ಟೆ. ಲಕ್ಷಾಂತರ, ಕೋಟ್ಯಾಂತರ ರೂಗಳನ್ನು ನಾನಾ ಮೂಲಗಳಿಂದ (ವಿದೇಶಿ ದೇಣಿಗೆಯೂ ಸೇರಿದಂತೆ) ಸಾರ್ವಜನಿಕ ಉದ್ದೇಶಗಳಿಗಾಗಿ ದೇಣಿಗೆಯಾಗಿ ಪಡೆವ ಈ ಸಂಸ್ಥೆಗಳಿಗೆ ಉತ್ತರದಾಯಿತ್ವವಿರಬೇಕಲ್ಲವೇ? ಎನ್.ಜಿ.ಓ.ಗಳ ಬಹುತೇಕ ದೇಣಿಗೆ ಕಾರ್ಪೊರೇಟ್ ಮೂಲಗಳಿಂದ ಬರುವುದು ಸಹಾ ಈ ಅಪವಿತ್ರ ವರ್ತುಲವನ್ನು ಹಿರಿದಾಗಿಸುತ್ತದೆ. ಅಣ್ಣಾ ತಂಡದ ಅರವಿಂದ ಕೇಜ್ರಿವಾಲ, ಕಿರಣ್ ಬೇಡಿ ತಮ್ಮದೇ ಎನ್.ಜಿ.ಓ.ಗಳನ್ನು ಹೊಂದಿರುವುದು ಮತ್ತು ಈ ತಂಡ ಎನ್.ಜಿ.ಓ.ಗಳನ್ನು ಜನಲೋಕಪಾಲದ ವ್ಯಾಪ್ತಿಗೆ ತರುವುದನ್ನು ವಿರೋಧಿಸುವುದು ಸಹಜವಾಗಿಯೇ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.
  5. ಕೋಟಗಟ್ಟಲೆ ಸಾರ್ವಜನಿಕ ಹಣವನ್ನು ಕೂಡಿಟ್ಟಿರುವ ಮತ್ತು ಅನೇಕ ರಾಜಕಾರಣಿಗಳ ಕಪ್ಪು ಹಣಕ್ಕೆ ದೇಸೀ ಸ್ವಿಸ್ ಬ್ಯಾಂಕ್‌ಗಳಾಗಿರುವ ಮಠಗಳು, ಧಾರ್ಮಿಕ ಕೇಂದ್ರಗಳ ಭ್ರಷ್ಟಾಚಾರದ  ಜನಲೋಕಪಾಲದ ಕಣ್ಣಿಗೇ ಕಾಣದಿರುವುದು ಹೇಗೆ?

ಮೂರನೆಯದಾಗಿ – ಒಂದು ಗಳಿಗೆಯ ಮಟ್ಟಿಗೆ ಈ ಎಲ್ಲಾ ದೂರುಗಳನ್ನೂ, ಅನುಮಾನಗಳನ್ನೂ ಪಕ್ಕಕ್ಕಿಟ್ಟು, ಈ ಇಡೀ ಹೋರಾಟ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧವೆಂದೂ, ಇದರಿಂದ ಭ್ರಷ್ಟಾಚಾರವನ್ನು ಸಾಕಷ್ಟು ಮಟ್ಟಿಗೆ ನಿಗ್ರಹಿಸಬಹುದೆಂದೂ ನಂಬೋಣ. ಹಾಗಿದ್ದಾಗ್ಯೂ ಈ ಹೋರಾಟದ ರೀತಿ ನಮ್ಮದೇ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಲೇವಡಿ ಮಾಡುವಂತಿದ್ದುದನ್ನು ಒಪ್ಪಬಹುದೇ?

ಜಂಟಿ ಸಮಿತಿಯ ಮೂಲಕ ಜನದನಿಯನ್ನು ನೇರವಾಗಿ ಸಂಸತ್ತಿಗೆ ತಲುಪಿಸಬಹುದಾದ ಒಂದು ಅಪರೂಪದ ಅವಕಾಶ ಅಣ್ಣಾ ಹಜಾರೆಗೆ ದೊರೆತರೂ, ತಮ್ಮ ದೂರದೃಷ್ಟಿಯ ಕೊರತೆಯಿಂದ ಅವರು ಇದನ್ನು ತುಂಬಾ ಅಪ್ರಬುದ್ಧವಾಗಿ ನಿರ್ವಹಿಸಿದಂತೆ ಕಾಣುತ್ತದೆ.

ಸಮಿತಿಯಲ್ಲಿ ಸರ್ಕಾರ ಮತ್ತು ಅಣ್ಣಾ ತಂಡದ ನಡುವೆ ಸಮನ್ವಯ ಸಾಧ್ಯವಾಗದೇ ಹೋದಾಗ ತಾನೇ ಒಂದು ಕರಡು   ಮಸೂದೆ ರಚಿಸಲು ಮುಂದಾದ ಅಣ್ಣಾ ತಂಡ, ಅದನ್ನು ನಿಜವಾದ ಅರ್ಥದಲ್ಲಿ ಜನರ ಲೋಕಪಾಲ ಮಸೂದೆಯಾಗಿ ರೂಪಿಸುವಲ್ಲಿ ಸೋತಿತೆಂದೇ ಹೇಳಬೇಕು. ಇಡೀ ದೇಶಕ್ಕೆ ಸಂಬಂಧಿಸಿದ, ಅದರಲ್ಲೂ ಭ್ರಷ್ಟಾಚಾರದಂತಾ ಆಳ ಬೇರುಗಳುಳ್ಳ ವಿಷಯದಲ್ಲಿ ಮಸೂದೆ ರಚಿಸುವಾಗ ದೇಶದ ವಿವಿಧ ಭಾಗಗಳ ಜನರ, ಪರಿಣಿತರ ಜೊತೆಗೆ ಚರ್ಚಿಸಿ ಅದನ್ನು ರೂಪಿಸಬೇಕಿತ್ತು. ಅದನ್ನು ಜನರ ನಡುವೆ ಒಯ್ದು ಸಾರ್ವಜನಿಕ ಅರಿವು ಮೂಡಿಸುವ ಬಹಿರಂಗ ಚರ್ಚೆಗೆ ಒಡ್ಡಿ, ಒಂದು ಉತ್ತಮ ಮಸೂದೆಯನ್ನಾಗಿ ಬೆಳೆಸಬೇಕಿತ್ತು. ಅಂತಹ ಒಂದು ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಚರ್ಚೆಗೆ ಇಟ್ಟಾಗ ಅದಕ್ಕೊಂದು ಸಮಗ್ರತೆ ಬರುತ್ತಿತ್ತು. ಅದು ದೇಶದ ಒಟ್ಟೂ ಜನರ ಅಭಿಪ್ರಾಯ ಮಂಡನೆಯಾಗಿರುತ್ತದಾದ್ದರಿಂದ ಸಹಜವಾಗಿಯೇ ಸರ್ಕಾರಕ್ಕೆ ಅದನ್ನು ಅನುಮೋದಿಸುವ ಒತ್ತಡವೇರ್ಪಡುತಿತ್ತು. ಇಷ್ಟಾಗಿಯೂ ಒಂದು ಪ್ರಬಲ ಮಸೂದೆ ಅಂಗೀಕಾರವಾಗದೇ ಇದ್ದಿದ್ದರೆ ತಿದ್ದುಪಡಿಗಳ ಮೂಲಕ ಅದನ್ನು ಬಲಪಡಿಸಲು ತಂತಮ್ಮ ಕ್ಷೇತ್ರದ ಜನ ಪ್ರತಿನಿಧಿಗಳ ಮೇಲೆ ಜನರೇ ಒತ್ತಡ ಹೇರುವಂತಾ ಪ್ರಜಾಸತ್ತಾತ್ಮಕ ಮಾರ್ಗದ ಬಗ್ಗೆ ಯೋಚಿಸಬಹುದಿತ್ತು. ಆದರೆ ಅಣ್ಣಾ ತಂಡಕ್ಕೆ ಇದಾವುದಕ್ಕೂ ವ್ಯವಧಾನವೇ ಇದ್ದಂತೆ ತೋರಲಿಲ್ಲ.

ಆದರೆ ಇಂತಹ ಒಂದು ಮಹತ್ವದ ವಿಷಯ ಮತ್ತು ಹೋರಾಟವನ್ನು ಹೀಗೆ ಹಾದಿ ತಪ್ಪಿಸುವಲ್ಲಿ ಪ್ರಸ್ತುತ ಕೇಂದ್ರ ಸರ್ಕಾರದ ಧೋರಣೆಗಳು ಮತ್ತು ತಿಳಿಗೇಡಿತನ, ಎಲ್ಲ ರಾಜಕೀಯ ಪಕ್ಷಗಳ ಅನುಕೂಲಸಿಂಧು ರಾಜಕಾರಣ ಮತ್ತು ಅವಕಾಶವಾದಿ, ಬೇಜವಾಬ್ದಾರಿ ಮಾಧ್ಯಮಗಳ ಪಾತ್ರವೂ ಅಷ್ಟೇ ಇದೆ.

ಒಂದು ಪ್ರಬಲ ಭ್ರಷ್ಟಾಚಾರಿ ವಿರೋಧೀ ಮಸೂದೆ ತರುವ ವಿಷಯದಲ್ಲಿ ಅಪ್ರಾಮಾಣಿಕವಾದ ಕೇಂದ್ರ ಸರ್ಕಾರ, ತನ್ನ ನ್ನು ಶಾಂತಿಯುತವಾಗಿ ಆಗ್ರಹಿಸುವುದನ್ನೂ ಸಹಿಸದೆ ಉಪವಾಸ ಕೂರುವ ಮೊದಲೇ ಅಣ್ಣಾರನ್ನು ಬಂಧಿಸಿ ತನ್ನ ದಮನಕಾರಿ ಮನೋಭಾವ ಪ್ರದರ್ಶಿಸಿತು. ಶಾಂತಿಯುತವಾಗಿ ಬೇರೆ ಬೇರೆ ಹೋರಾಟಗಳಲ್ಲಿ ತೊಢಗಿಕೊಂಡಿದ್ದವರಿಗೂ ತಮ್ಮ ಯಾವ ಹೋರಾಟಗಳಿಗೂ ಯಾವುದೇ ಸರ್ಕಾರ ಸ್ಪಂದಿಸದೇ ಇರುವುದು ಒಂದು ರೀತಿಯ ಹತಾಶೆ ಮೂಡಲು ಕಾರಣವಾಗಿತ್ತು. ಅಂತಹ ಸಂದರ್ಭದಲ್ಲಿಯೇ ನಡೆದ ಈ ಘಟನೆ ಜನರನ್ನು ‘ನಾವು ಹೀಗಲ್ಲದೆ ಮತ್ತೇನು ಮಾಡಿ ರಾಜಕಾರಣಿಗಳಿಗೆ ಚುರುಕು ಮುಟ್ಟಿಸಲು ಸಾಧ್ಯ’ ಎಂಬ ಒಂದು ತಪ್ಪಾದ ಚಿಂತನಾ ಕ್ರಮಕ್ಕೆ ದೂಡಿತು. ಕಾಂಗ್ರೆಸ್ಸಿನ ಕಪಿಲ್ ಸಿಬಾಲ್, ಮನೀಶ್ ತಿವಾರಿಯಂತಹವರು ಬಾಲಿಶ ಹೇಳಿಕೆಗಳನ್ನು ನೀಡುವುದು, ಮತ್ತದನ್ನು ಹಿಂಪಡೆಯುವುದು ಇಂತಹ ಅಪ್ರಬುದ್ಧ ನಡವಳಿಕೆಗಳು ಜನರಲ್ಲಿ ಗೊಂದಲ ಹೆಚ್ಚಿಸಿತು.

Anna_Hazare

Anna_Hazare

ಕಾಂಗ್ರೆಸ್ ಜನಲೋಕಪಾಲದ ವಿರೋಧಿ ಎಂದು ಅಣ್ಣಾ ತಂಡ ಟೀಕಿಸುತ್ತಿದ್ದಾಗ ಕಾಂಗ್ರೆಸ್‌ನ ದಮನಕಾರಿ ನಿಲುವನ್ನು ಟೀಕಿಸುವ ನೆಪದಲ್ಲಿ ರಂಗಕ್ಕಿಳಿದ ಬಿ.ಜೆ.ಪಿ. ಜನರ ಭ್ರಷ್ಟಾಚಾರೀ ವಿರೋಧವನ್ನು ಕಾಂಗ್ರೆಸ್ ವಿರೋಧವನ್ನಾಗಿಸಿ ರಾಜಕೀಯ ಲಾಭ ಗಳಿಸುವ ಹುನ್ನಾರದಲ್ಲಿ ತೊಡಗಿತು. ಅಷ್ಟಕ್ಕೂ ಯು.ಪಿ.ಎ.ಗೆ ಲೋಕಸಭೆಯಲ್ಲಿ ಬಹುಮತವಿದ್ದರೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ಬಹುಮತವಿದೆ. ಆದರೆ ಜನಲೋಕಪಾಲದ ಬಗ್ಗೆ  ವಿರೋಧ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸುವ ಕೆಲಸವನ್ನು ಅಣ್ಣಾ ತಂಡ ಮಾಡಲಿಲ್ಲ. ಕೊನೆಗೆ ಟಿ. ವಿ. ವಾಹಿನಿಯೊಂದು ಜನಲೋಕಪಾಲದ ಬಗ್ಗೆ ನಿಮ್ಮ ನಿಲುವೇನೆಂದು ಬಿ.ಜೆ.ಪಿ.ಯನ್ನು ಜಗ್ಗಿಸಿ ಕೇಳಿದಾಗ “ನಮಗೂ ಜನಲೋಕಪಾಲದ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಒಪ್ಪಿಗೆಯಿಲ್ಲ” ಎಂದು ಹೇಳಿಯೂ ಹೇಳದ ಹಾಗೆ ನುಣಿಚಿಕೊಂಡಿದ್ದನ್ನ ಗಮನಿಸಬೇಕಿದೆ.

ಎಲ್ಲೋ ಕೆಲವು ಅಪವಾದಗಳನ್ನು ಹೊರತುಪಡಿಸಿ ಮಾಧ್ಯಮಗಳು ಈ ಇಡೀ ಪ್ರಸಂಗವನ್ನು ಕಾಂಗ್ರೆಸ್ ವರ್ಸಸ್ ಅಣ್ಣಾ ಎಂಬಂತೆ ಬಾಲಿಶವಾಗಿ ( ಅಥವಾ ಪ್ರಜ್ಙಾಪೂರ್ವಕವಾಗಿ) ಚಿತ್ರಿಸಿದವು. ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಅಥವಾ ತಮ್ಮ ಕಾರ್ಪೊರೇಟ್ ದೊರೆಗಳ ಹಿತಕಾಯುವುದನ್ನೇ ಪರಮ ಕರ್ತವ್ಯವಾಗಿಸಿಕೊಂಡಿರುವ ಮಾಧ್ಯಮಗಳು ಈ ವಿಷಯದ ಬಗ್ಗೆ ಜನರನ್ನು ಆಳವಾದ ಚಿಂತನೆಗೆ ಹಚ್ಚುವ ಬದಲಿಗೆ, ದೇಶಭಕ್ತಿ ಎಂದರೆ ಭ್ರಷ್ಟಾಚಾರವನ್ನು ವಿರೋಧಿಸುವುದು; ಭ್ರಷ್ಟಾಚಾರವನ್ನು ವಿರೋಧಿಸುವುದೆಂದರೆ ಅಣ್ಣಾ ಟೊಪ್ಪಿ ತೊಟ್ಟು, ಮೇಣದ ಬತ್ತಿ ಹಿಡಿದು ಸಾಗುವುದು, ಎಂಬಂತ ತೆಳು ಚಿಂತನೆಗಳನ್ನೇ ಹಬ್ಬಿಸಿದವು.

ಇನ್ನು ಅಣ್ಣಾ ತಂಡ ಗಾಂಧೀಜಿಯವರ ಉಪವಾಸ ಸತ್ಯಾಗ್ರಹದಂತಹ ಅಹಿಂಸಾತ್ಮಕ ಅಸ್ತ್ರವನ್ನು ಅದರ ಪಾವಿತ್ರ್ಯತೆ, ಘನತೆಗಳ ಅರಿವೇ ಇಲ್ಲದೆ ಒಂದು ಬೆದರಿಕೆಯ ತಂತ್ರವಾಗಿ ಬಳಸುವುದು, ಚರ್ಚೆ, ಸಂವಾದಗಳ ಪ್ರಸ್ತುತತೆಯನ್ನೇ ಕಡೆಗಣಿಸಿ, ತಾನು ಪ್ರಸ್ತಾಪಿಸಿದ ಮಸೂದೆಯನ್ನೇ ಸಂಸತ್ತು ಅಂಗೀಕರಿಸಬೇಕಂದು ಆಗ್ರಹಿಸುವುದು, ಅದಕ್ಕೊಂದು ಗಡುವು ವಿಧಿಸಿ ಇಡೀ ಸಂಸತ್ತು ತನ್ನ ಅಣತಿಯಂತೆ ನಡೆಯಬೇಕೆಂದು ಸರ್ವಾಧಿಕಾರಿ ಧೋರಣೆ ತೋರುವುದು; ಇದೆಲ್ಲದರ ಒಟ್ಟಾರೆ ಪರಿಣಾಮ, ನಮ್ಮ ಸಂವಿಧಾನ, ಪ್ರಜಾಪ್ರಭುತ್ವದ ತತ್ವಗಳ ನಂಬಿಕೆಯ ತಳಪಾಯವನ್ನೇ ಅಲುಗಿಸುವ ಪ್ರಯತ್ನ. ಇದನ್ನು ಒಪ್ಪಿದರೆ ‘ಹೋರಾಟದ ಕಾರಣ ಒಳ್ಳೆಯದಿದ್ದರೆ ಆಯಿತು, ಮಾರ್ಗದ ಬಗ್ಗೆ ಚಿಂತಿಸಬೇಕಿಲ್ಲ’ ಎನ್ನುವಂತ ತಪ್ಪು ಸಂದೇಶ ರವಾನಿಸಿದಂತಲ್ಲವೇ?

ಹಾಗಾದರೆ ಭ್ರಷ್ಟಾಚಾರವನ್ನು ತೊಲಗಿಸುವುದಾದರೂ ಹೇಗೆ? ಇದು ಅಹೋರಾತ್ರಿ ಆಗಿಬಿಡುವ ಕೆಲಸವಲ್ಲ ಮತ್ತು ಸಿನಿಕರಾಗುವ ಅವಶ್ಯಕತೆಯೂ ಇಲ್ಲ. ಭ್ರಷ್ಟಾಚಾರದ ನಿರ್ಮೂಲನೆಗೆ ಒಂದು ಪ್ರಬಲ ಕಾನೂನು ರಚಿಸುವ ಜೊತೆಗೇ ಚುನಾವಣಾ ಸುಧಾರಣೆಯೂ ಆಗಬೇಕಾದ್ದು ಅವಶ್ಯ. ಅಲ್ಲದೆ ಜನ ಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ “ಭ್ರಷ್ಟಾಚಾರ ಸಹಾ ಒಂದು ಮಿತಿಯಲ್ಲಿದ್ದರೆ ಒಂದು ಒಪ್ಪಿತ ಮೌಲ್ಯ” ಎಂಬ ಮನೋಭಾವ ಬದಲಾಗಬೇಕಾದುದು ಬಹು ಮುಖ್ಯ.

(ಚಿತ್ರಕೃಪೆ: ವಿಕಿಪೀಡಿಯ)

ರಾಜಕಾರಣ – ರಜೆಕಾಲದಲ್ಲಿ ಹೋಗಿ ಬರುವ ರಮ್ಯ ತಾಣವಲ್ಲ!

-ಭೂಮಿ ಬಾನು

ಚಿತ್ರ ನಟಿ ರಮ್ಯ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಕಾಂಗ್ರೆಸ್ನ ಕೆಲ ನಾಯಕರಿಗೆ ಇದು ಅರಗಿಸಿಕೊಳ್ಳಲಾಗದ ಬೆಳವಣಿಗೆ. ಅವರು ತಮ್ಮ ಅಸಹನೆಯನ್ನು ಅಲ್ಲಲ್ಲಿ ಹೊರಹಾಕಿದ್ದಾರೆ. ಸಂಸದ ಹೆಚ್.ವಿಶ್ವನಾಥ್ ಲಘುವಾಗಿ ಕಮೆಂಟ್ ಪಾಸ್ ಮಾಡಿದರೆ, ಉಗ್ರಪ್ಪ ತುಸು ಗಂಭೀರವಾಗಿಯೇ ಅಸಮಾಧಾನ ತೆರೆದಿಟ್ಟಿದ್ದಾರೆ.

ಅಸಹನೆ, ಅಸಮಾಧಾನಕ್ಕೆ ಮುಖ್ಯ ಕಾರಣ ರಮ್ಯ ಎಲ್ಲಿಂದಲೋ ಬಂದವರು ಎನ್ನುವ ಕಾರಣಕ್ಕೆ. ಸಿನಿಮಾಗಳಿಂದ ಪಡೆದ ಪಾಪುಲಾರಿಟಿಯ ಲಾಭ ಪಡೆದು ತನ್ನ ರಾಜಕೀಯ ಪ್ರವೇಶವನ್ನು ಕಾಂಗ್ರೆಸ್ ಮಟ್ಟಿಗೆ ಬಹು ಮುಖ್ಯ ಘಟನೆಯೇನೋ ಎನ್ನುವಂತೆ ಮಾಧ್ಯಮಗಳ ಮೂಲಕ ಬಿಂಬಿಸುವಲ್ಲಿ ರಮ್ಯ ಯಶಸ್ವಿಯಾದರು. ಅವರ ಹಿಂದೆ ಟಿವಿ ಸಂದರ್ಶಕಿಯಾದ ತೇಜಸ್ವಿನಿಯನ್ನು ಚುನಾವಣೆಗೆ ನಿಲ್ಲಿಸಿ ದೇವೇಗೌಡರಂತಹ ಪ್ರಬಲ ಸ್ಪರ್ಧಿಯನ್ನು ಸೋಲಿಸಲು ಕಾರಣಕರ್ತರಾಗಿದ್ದ ಡಿ.ಕೆ.ಶಿವಕುಮಾರ್ ಇದ್ದರು ಎನ್ನುವುದೂ ಪಕ್ಷದ ಇತರೆ ನಾಯಕರ ಅಸಮಾಧಾನಕ್ಕೆ ಕಾರಣ. ಕಾಲ ಕ್ರಮೇಣ ಚಿತ್ರನಟಿಗೆ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನಗಳು ಸಿಕ್ಕಬಹುದು. ಹಾಗೆಲ್ಲ ಆದರೆ, ಎಷ್ಟೋ ವರ್ಷಗಳಿಂದ ಊರಿನ ಹಿರಿಯರಿಗೆ ವೃದ್ಧಾಪ್ಯ ವೇತನ ಮಾಡಿಸಿ, ಗಂಗಾ-ಕಲ್ಯಾಣ ಯೋಜನೆ ಅಡಿ ಬೋರ್ ಕೊರೆಸಿ ಕರೆಂಟು ಕೊಡಿಸಲು ಓಡಾಡಿ, ಚುನಾವಣೆ ಬಂದಾಗ ಬ್ಯಾನರ್ ಕಟ್ಟಿ, ಬಾವುಟ ಹಿಡಿದು ಊರೂರು ಅಲೆದವರ ಪಾಡೇನು ಎನ್ನುವುದು ಸಹಜವಾಗಿಯೇ ಏಳುವ ಪ್ರಶ್ನೆ. ಇದೇ ಪ್ರಶ್ನೆ ಅಪ್ಪ, ಅಜ್ಜ ಮಾಡಿದ ಹೆಸರಿನ ಬಲದ ಮೇಲೆ ಪಕ್ಷ ಸೇರಿ, ಟಿಕೆಟ್ ಗಿಟ್ಟಿಸುವ ಸಂಬರ್ಭಗಳು ಬಂದಾಗೆಲ್ಲಾ ಎದುರಾಗಿದೆ.

ಸಾಮಾನ್ಯ ಕಾರ್ಯಕರ್ತರಿಗೆ ಮತ್ತು ಸಿನಿಮಾ ಪಾಪುಲಾರಿಟಿ ಅಥವಾ ನಾಮ ಬಲದಿಂದ ಪಕ್ಷ ರಾಜಕಾರಣದಲ್ಲಿ ಮನ್ನಣೆಗಳಿಸಿದವರಿಗೆ ಇರುವ ವ್ಯತ್ಯಾಸಗಳೆಲ್ಲಾ ಅವರು ಎದುರಿಸುವ ಮೊದಲ ಚುನಾವಣೆ ನಂತರ ಮುರಿದು ಬೀಳುತ್ತವೆ. ಮೊದಲ ಚುನಾವಣೆಯಲ್ಲಿ ಅವರು ಇತರೆ ಸಾಮಾನ್ಯ ಕಾರ್ಯಕರ್ತರಂತೆ ಪರಿಚಯಿಸಿಕೊಳ್ಳುವ ಅಗತ್ಯ ಬೀಳದೆ ಇರಬಹುದು. ಆದರೆ ನಂತರದ ಚುನಾವಣೆಗಳಲ್ಲಿ ಆತ ಅಥವಾ ಆಕೆ ಕೇವಲ ರಾಜಕಾರಣಿ. ಸಿನಿಮಾ ಖ್ಯಾತಿ, ಟಿವಿ ಆಂಕರ್ ಖ್ಯಾತಿ ಯಾವುದೂ ಲಾಭಕ್ಕೆ ಬರುವುದಿಲ್ಲ. ಅಧಿಕಾರಾವಧಿಯಲ್ಲಿ ಅವರ ನಡೆ, ನುಡಿ ಅಷ್ಟೇ ಮುಖ್ಯ.ಪಕ್ಷ ಅಥವಾ ಆಡಳಿತದಲ್ಲಿ ಮೇಲೇರಲು ಕೂಡಾ ಸಿನಿಮಾ ಜಗತ್ತಿನ ಜನಪ್ರಿಯತೆ ಸಹಾಯಕ್ಕೆ ಬರುವುದಿಲ್ಲ. ಉದಾಹರಣೆಗೆ ಅಂಬರೀಷ್ ಅಥವಾ ಸಿ.ಪಿ ಯೋಗೇಶ್ವರ ಮಂತ್ರಿ ಸ್ಥಾನ ಪಡೆದದ್ದು ಅವರು ಚಿತ್ರನಟರೆಂದಲ್ಲ. ಅದಕ್ಕೆ ಅವರ ಸೀನಿಯಾರಿಟಿ (ಅಂಬರೀಷ್) ಮತ್ತು ಪಕ್ಷಾಂತರ (ಯೋಗೇಶ್ವರ) ಕಾರಣಗಳಿದ್ದವು.

ಕರ್ನಾಟಕದಲ್ಲಿ ಚಿತ್ರನಟರು ಆಗಾಗ ರಾಜಕಾರಣ ಪ್ರವೇಶಿಸಿದ್ದುಂಟು. ಆದರೆ ಪಕ್ಕದ ರಾಜ್ಯಗಳಲ್ಲಿ ನಡೆದಿರುವಂತೆ ಯಾರೊಬ್ಬರೂ ಬಹುಕಾಲ ಅಧಿಕಾರದಲ್ಲಿಲ್ಲ. ಹಾಗೆ ಚುನಾವಣೆ ಎದುರಿಸಿ ಅಧಿಕಾರ ಹಿಡಿದವರು ತಮ್ಮ ಕ್ಷೇತ್ರದಲ್ಲಿ, ತಮಗೆ ಕೊಟ್ಟ ಜವಾಬ್ದಾರಿಯನ್ನು ಶಿಸ್ತಿನಿಂದ ಪೂರೈಸಿದವರೂ ಅಲ್ಲ. ಉದಾಹರಣೆಗೆ ಅಂಬರೀಷ್. ತಾನು ಹಿರಿಯ, ಜನಪ್ರಿಯ ನಾಯಕ ಆದರೂ ಕೇಂದ್ರದಲ್ಲಿ ಮಂತ್ರಿ ಪಟ್ಟ ಕೊಟ್ಟಿಲ್ಲ ಎಂದು ಅಸಮಾಧಾನ ಪಟ್ಟುಕೊಂಡೇ ಇದ್ದವರು, ಮಂತ್ರಿಯಾದಾಗ ಮಾಡಿದ್ದೇನು – ರಾಜೀನಾಮೆಯ ನಾಟಕ. ಅವರು ಆ ಸಂದರ್ಭದಲ್ಲಿ ತಮ್ಮ ನಡೆ ನಾಟಕ ಅಲ್ಲ ಎಂದು ಎಷ್ಟು ಬಾರಿ ಹೇಳಿದರೂ ಅದು ನಾಟಕವೇ ಆಗಿತ್ತು ಎನ್ನಲು ಕಾರಣವೆಂದರೆ ಅವರು ರಾಜೀನಾಮೆಯನ್ನು ಅಂಗೀಕರಣವಾಗುವಂತೆ ನೋಡಿಕೊಳ್ಳಲೇ ಇಲ್ಲ. ತಾಂತ್ರಿಕವಾಗಿ ಮಂತ್ರಿ ಸ್ಥಾನದಲ್ಲಿ, ಸಂಸದರಾಗಿ ಮುಂದುವರಿದರು. ಯಾರಾದರೂ ಕೇಳಿದರೆ ನಾನಾಗಲೇ ರಾಜೀನಾಮೆ ಕೊಟ್ಟಾಗಿದೆ ಎನ್ನುತ್ತಿದ್ದರು. ಆದರೆ ಅದೇ ಸಂದರ್ಭದಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಮತ ಹಾಕಲು ಬಂದರು. ನೀವು ರಾಜೀನಾಮೆ ನೀಡಿದ್ದೀರಲ್ಲ ಎಂದು ಪತ್ರಕರ್ತರು ಕೇಳಿದಾಗ ಒಂದಿಷ್ಟೂ ಭಿಡೆ ಇಲ್ಲದೆ ‘ನಾನಿನ್ನೂ ಸದಸ್ಯ, ಇಲ್ಲಿದೆ ನೋಡಿ ಐಡೆಂಟಿಟಿ ಕಾರ್ಡ್’ ಎಂದು ಕೆಮರಾ ಮುಂದೆ ಕೈ ತೋರಿದರು.

ಬಹಳ ಕಾಲ ರಾಜಕಾರಣದಲ್ಲಿ ಬೇರು ಮಟ್ಟದಿಂದ ಕೆಲಸ ಮಾಡಿದವರಿಗೆ ಇಂತಹ ನಡೆವಳಿಕೆಗಳು ಬೇಸರ ಹುಟ್ಟಿಸುತ್ತವೆ. ಸಿನಿಮಾದವರು ಸೀರಿಯಸ್ಸಾಗಿ ರಾಜಕಾರಣ ಮಾಡುವುದು ಯಾವಾಗ? ಮತ್ತೊಬ್ಬ ನಟ ಶಶಿಕುಮಾರ್ ದೂ ಇದೇ ನಡವಳಿಕೆ. ಒಂದು ಚಿತ್ರದ ಶೂಟಿಂಗ್ ಗೆಂದು ಚಿತ್ರದುರ್ಗದ ಹತ್ತಿರ ಬಂದಿದ್ದ ಸಮಯದಲ್ಲಿಯೇ ಜೆ.ಎಚ್ ಪಟೇಲರು ಫೋನ್ ಮಾಡಿ ನೀನು ಚಿತ್ರದುರ್ಗ ಲೋಕಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸು ಎಂದರು. ಶಶಿಕುಮಾರ್ ನಾಮಪತ್ರ ಸಲ್ಲಿಸದರು. ಗೆದ್ದೂ ಬಿಟ್ಟರು. ಅಲ್ಲಿವರೆಗೆ ಆ ನಟ ಜೆಡಿ(ಯು) ಸೇರಿರಲಿಲ್ಲ. ಚಿತ್ರನಟನೆಂಬ ಖ್ಯಾತಿ ಮತ್ತು ಮೂರು ಬಾರಿ ಒಂದೇ ವ್ಯಕ್ತಿಯನ್ನು ಆರಿಸಿದ್ದ ಮತದಾರರು ಹೊಸಮುಖಕ್ಕೆ ಮಣೆ ಹಾಕಿದರು. ಮೇಲಾಗಿ ಜಾತಿಬೆಂಬಲವೂ ಇತ್ತು. ಆದರೆ ನಂತರದ ದಿನಗಳಲ್ಲಿ ಈ ಚಿತ್ರನಟನಿಗೆ ಅದೇ ಖ್ಯಾತಿ ಉಳಿಯಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತರು. ಸಂಸದರಾಗಿದ್ದ ವೇಳೆ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಖರ್ಚು ಮಾಡಿ ಅಲ್ಲಲ್ಲಿ ಸಮುದಾಯ ಭವನ ಕಟ್ಟಿಸಿ ಕಮಿಷನ್ ಪಡೆದರು ಎಂಬ ಆರೋಪಗಳಿವೆ. ಆದರೆ ಅವರೆಂದೂ ಚಿತ್ರದುರ್ಗದ ಜನತೆ ಅನುಭವಿಸುತ್ತಿರುವ ನೀರಾವರಿ ಸಮಸ್ಯೆ ಬಗ್ಗೆ ಗಂಭೀರವಾಗಿ ಮಾತನಾಡಲೇ ಇಲ್ಲ.

ಇನ್ನು ಜಗ್ಗೇಶ್. ಕಾಡಿಬೇಡಿ ಕಾಂಗ್ರೆಸ್ ಟಿಕೆಟ್ ಪಡೆದವರು, ಬೇಡಿ-ಕಾಡಿ ಗೆದ್ದರು. ಆದರೆ ಈ ಕಾಮಿಡಿ ನಟನಿಗೆ ಮತದಾರನ ಬಗ್ಗೆ ಗೌರವ ಇರಲಿಲ್ಲ. ಯಡಿಯೂರಪ್ಪ, ಅಶೋಕ್ ತಮ್ಮ ಕ್ಷೇತ್ರ ಉದ್ಧಾರ ಮಾಡ್ತಾರೆ ಅಂದ್ರು ಎನ್ನುವ ಕಾರಣಕ್ಕೆ ಕೆಲವೇ ದಿನಗಳಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ಇಂತಹವರಿಂದ ಜನರು ತಾನೇ ಏನು ನಿರೀಕ್ಷಿಸಿಯಾರು? ಈಗ ರಮ್ಯ ರಾಜಕೀಯ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಒಂದು ಪಕ್ಷದ ಕಾರ್ಯಕರ್ತೆ ಎಂದರೆ, ನಾಯಕಿ ಆದರೆ ಅಥವಾ ಜನಪ್ರತಿನಿಧಿ ಯಾದರೆ ದಿನದ ಬಹುಕಾಲ ಜನರ ಮಧ್ಯೆ ಇರಬೇಕು. ಹಿರಿಯ ನಾಯಕರ ಜೊತೆ ಸಭೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಕ್ಷೇತ್ರದಲ್ಲಿ ಪಕ್ಷ ಸೋತರೆ ಹೊಣೆ ಹೊರಬೇಕು. ಮಗನ ಸ್ಕೂಲ್ ಅಡ್ಮಿಷನ್ ಶಿಫಾರಸ್ಸು ಕೇಳುವವರಿಂದ ಹಿಡಿದು, ರಸ್ತೆ ಮೂಲೆಯಲ್ಲಿ ಕಸದ ಗುಂಡಿ ಕ್ಲೀನ್ ಮಾಡಿಲ್ಲ ಎಂದು ದೂರುವವರನ್ನೂ ತಾಳ್ಮೆಯಿಂದ ಕೇಳಬೇಕು. ಏಕೆಂದರೆ ಡಿ.ಕೆ.ಶಿವಕುಮಾರ್ ಈಗಾಗಲೇ ಸೂಚನೆ ಕೊಟ್ಟಿದ್ದಾರೆ, ಅವರು ರಮ್ಯ ಅವರನ್ನು ಒಕ್ಕಲಿಗ ಡಾಮಿನೆಂಟ್ ಕ್ಷೇತ್ರದಲ್ಲಿ ಲೋಕಸಭೆಗೆ ನಿಲ್ಲಿಸುತ್ತಾರಂತೆ. ಬೆಂಗಳೂರಿನ ಯಾವುದೋ ಒಂದು ಕ್ಷೇತ್ರದಲ್ಲಿ ಮುಂದೆ ನಿಂತರೆ ಅಚ್ಚರಿಯೇನಿಲ್ಲ. (ಅವರು ಸದ್ಯ ಶಾಂತಿನಗರ ಬ್ಲಾಕ್ ಸದಸ್ಯೆ).

ರಾಜಕಾರಣ ರಜೆಕಾಲದಲ್ಲಿ ಹೋಗಿ ಬರುವ ರಮ್ಯತಾಣವಲ್ಲ. ಅದು ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಅಪೇಕ್ಷಿಸುವ ಕ್ಷೇತ್ರ. ರಮ್ಯ ಅವರಾದರೂ ಗಂಭೀರ ರಾಜಕಾರಣಿಯಾಗಲಿ.