Category Archives: ಮಾಧ್ಯಮ

ಸಮೂಹ ಮಾಧ್ಯಮಕ್ಕೆ ಸಂಬಂಧಿಸಿದ ಲೇಖನಗಳು, ವಿಡಿಯೋಗಳು…

ಒಡೆದ ಚೂರುಗಳನ್ನು ಆಯ್ದು ಕಟ್ಟುವ ಪ್ರಯತ್ನ

(ಇರ್ಷಾದ್  ಉಪ್ಪಿನಂಗಡಿಯವರ ಅನೇಕ ಲೇಖನಗಳು ಮೊದಲು ಪ್ರಕಟಗೊಂಡಿದ್ದು ವರ್ತಮಾನದಲ್ಲಿಯೇ. ಈಗ ಅಹರ್ನಿಶಿ ಪ್ರಕಾಶನ ಈ ಯುವ ಪತ್ರಕರ್ತನ ಬರಹಗಳನ್ನು ಒಟ್ಟು ಮಾಡಿ ಪ್ರಕಟಿಸಿದೆ. ಹಿರಿಯ ಪತ್ರಕರ್ತರು ಹಾಗೂ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಈ ಲೇಖನಗಳ ಗುಚ್ಚಕ್ಕೆ ಅರ್ಥಪೂರ್ಣ ಮುನ್ನುಡಿಯ ಮಾತುಳನ್ನಾಡಿದ್ದಾರೆ. ಅವರ ಮುನ್ನುಡಿ ಇಲ್ಲಿದೆ.)

 

ಬರೆಯುವುದೇ ಅಪರಾಧವೆಂಬಂತೆ ಬರಹಗಾರರನ್ನು, ನಿಂದಿಸಿ, ಹಂಗಿಸಿ, ಗೇಲಿಮಾಡಿ ಮಾನಸಿಕವಾಗಿ ಕುಗ್ಗಿಹೋಗುವಂತೆ ಮಾಡುವ ಹುನ್ನಾರಗಳ ಈ ದಿನಗಳಲ್ಲಿ ಬರವಣಿಗೆ ಕಷ್ಟದ ಕೆಲಸ. ಅದರಲ್ಲೂ ಒಬ್ಬ ಮುಸ್ಲಿಮ್ ಲೇಖಕ ಬರೆಯುವುದು ಹೆಚ್ಚು ಕಷ್ಟದ ಕೆಲಸ. ಇತ್ತೀಚಿನ ದಿನಗಳಲ್ಲಿ ‘ಕೋಮುವಾದಿಗಳ ಪ್ರಯೋಗ ಶಾಲೆ’ ಎಂಬ ಕುಖ್ಯಾತಿಗೆ ಒಳಗಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಮಕ್ಕಳಾಗಿ ಬರೆಯುವುದು ಇನ್ನೂ ಕಷ್ಟದ ಕೆಲಸ.
ಗೆಳೆಯ ಇರ್ಷಾದ್ ಉಪ್ಪಿನಂಗಡಿಯವರಂತಹ ಲೇಖಕರ ಕಷ್ಟಗಳು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಇವರೊಬ್ಬ ಟಿವಿ ಮಾಧ್ಯಮದ ಪತ್ರಕರ್ತ. ಮಾತನ್ನೇ ಬಂಡವಾಳ ಮಾSwargadahadi-3ಡಿಕೊಳ್ಳಬೇಕಾದ ಅನಿವಾರ್ಯತೆಯ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಅಕ್ಷರರೂಪದಲ್ಲಿ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದು ಒಂದು ಸವಾಲು. ಇಷ್ಟು ಮಾತ್ರವಲ್ಲ ಸೃಜನಶೀಲ ಬರವಣಿಗೆಗಳೆಂದು ಹೇಳುವ ಕತೆ-ಕವನ-ಕಾದಂಬರಿಗಳನ್ನು ಬರೆಯುವವರಿಗೆ ಇರುವ ಸೂಕ್ಷ್ಮ ವಿಷಯಗಳನ್ನು ರೂಪಕ-ಪ್ರತಿಮೆಗಳ ಮೂಲಕ ಹೇಳುವ ಸುರಕ್ಷತೆಯ ಕವಚ ಕೂಡಾ ಒಬ್ಬ ಪತ್ರಕರ್ತನಿಗೆ ಇಲ್ಲವೇ ಸೃಜನೇತರ ಲೇಖಕನಿಗೆ ಇರುವುದಿಲ್ಲ. ಈತ ಹೇಳುವುದನ್ನುನೇರವಾಗಿ, ಸ್ಪಷ್ಟವಾಗಿ ಹೇಳಬೇಕಾಗುತ್ತದೆ.

 

ಇರ್ಷಾದ್ ಉಪ್ಪಿನಂಗಡಿಯವರ ಲೇಖನಗಳು ಈ ಕಷ್ಟಗಳ ಸರಮಾಲೆಯ ವಿರುದ್ದದ ಹೋರಾಟದಂತೆ ಕಾಣಿಸುತ್ತದೆ. ಲೇಖನಗಳನ್ನು ಓದುತ್ತಾ ಹೋದಂತೆ ಇರ್ಷಾದ್ ಮೈಗೂಡಿಸಿಕೊಂಡಿರುವ ಸತ್ಯ ಹೇಳಲೇಬೇಕೆಂಬ ಛಲ, ನ್ಯಾಯದ ಪರವಾಗಿ ಇರಬೇಕೆಂಬ ಬದ್ಧತೆ ಮತ್ತು ಸಾಮಾಜಿಕವಾದ ಕಳಕಳಿ ನಮ್ಮನ್ನು ತಟ್ಟುತ್ತದೆ. ಮುಜುಗರ ಸ್ವಭಾವದ, ನೋಡಲು ಚಾಕಲೇಟ್ ಹೀರೋನಂತಿರುವ, ಇನ್ನೂ ಕಿರಿ ವಯಸ್ಸಿನ ಇರ್ಷಾದ್ ಗೆ ಇಂತಹ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಧೈರ್ಯ ಎಲ್ಲಿಂದ ಬಂತು ಎಂಬ ಪ್ರಶ್ನೆ ಈ ಲೇಖನಗಳನ್ನು ಓದುವವರನ್ನು ಕಾಡದೆ ಇರದು.

 

ಮನುಷ್ಯನನ್ನು ಇಂತಹ ಧೈರ್ಯದ ಕೆಲಸ ಮಾಡಿಸುವುದು ಅವನೊಳಗಿರುವ ಆತ್ಮಬಲ. ಅದು ತಾನು ಬಡಿದುಕೊಳ್ಳುವ 56 ಇಂಚಿನ ಎದೆಯಿಂದ ಬರುವುದಿಲ್ಲ. ಅದು ಆತನ ಸತ್ಯಸಂಧತೆ, ಬದ್ದತೆ, ಪ್ರಾಮಾಣಿಕತೆ ಮತ್ತು ತನ್ನವರಿಗಾಗಿ ಮಿಡಿಯುವ ಕಳಕಳಿಗಳಿಂದ ಹರಿದುಬರುವಂತಹದ್ದು. ಇದನ್ನು ಇರ್ಷಾದ್ ನಂತಹ ಲೇಖಕರು ಮತ್ತು ನಿಜವಾದ ಮನುಷ್ಯರು ಸಾಬೀತು ಪಡಿಸುತ್ತಲೇ ಬಂದಿದ್ದಾರೆ..

 

ಈ ಪುಸ್ತಕದಲ್ಲಿ ಹತ್ತು ಲೇಖನಗಳಿದ್ದು ಅದರಲ್ಲಿ ಎಂಆರ್ ಪಿಎಲ್ ನ ಸಂತ್ರಸ್ತರ ಸಮಸ್ಯೆಯ ಲೇಖನವೊಂದನ್ನು ಹೊರತುಪಡಿಸಿ ಉಳಿದೆಲ್ಲವು ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿಸಿದ್ದಾಗಿದೆ. ಈ ರೀತಿ ಬರೆಯುವವರನ್ನು ಸಹಜವಾಗಿಯೇ ನಾವು ಮುಸ್ಲಿಮ್ ಲೇಖಕರೆಂಬ ಆವರಣದೊಳಗೆ ಸೇರಿಸಿಬಿಡುತ್ತೇವೆ. ಹೆಸರುಗಳ ಉಲ್ಲೇಖ ಇಲ್ಲಿ ಅಪ್ರಸ್ತುತ, ಆದರೆ ಹಿಂದೂ ಸಮುದಾಯದ ಬಗ್ಗೆ ಬರೆಯುವವರನ್ನು ಮಾತ್ರ ಹಿಂದೂ ಲೇಖಕರು ಎಂದು ಯಾರೂ ಬ್ರಾಂಡ್ ಮಾಡುವುದಿಲ್ಲ. ಬರಹಗಾರರು, ಸಾಹಿತಿಗಳು, ಕಲಾವಿದರನ್ನು ಅವರ ಕೃತಿಗಳ ಮೂಲಕ ನೋಡಬೇಕೇ ಹೊರತು ಅವರು ಹುಟ್ಟಿದ ಜಾತಿ- ಧರ್ಮದ ಮೂಲಕ ಅಲ್ಲ ಎನ್ನುವುದನ್ನು ಹೇಳುತ್ತಲೇ ಇಂತಹ ಆತ್ಮವಂಚನೆಗಳನ್ನು ಮಾಡುತ್ತಿರುತ್ತೇವೆ.

 

ಮುಸ್ಲಿಮ್ ಲೇಖಕನೊಬ್ಬ ಹಿಂದೂ ಧರ್ಮದ ಹುಳುಕುಗಳ ಬಗ್ಗೆ ಬರೆದರೆ; ಬೇರೆ ಧರ್ಮಗಳ ಉಸಾಬರಿ ಯಾಕೆ? ನಿಮ್ಮ ಧರ್ಮದ ಬಗ್ಗೆಯೇ ಬರೆಯಿರಿ ಎಂದು ಅಪ್ಪಣೆ ಕೊಡಿಸುವುದೂ ಉಂಟು. ಇದನ್ನು ಹಿಂದೂ ಧರ್ಮದಲ್ಲಿ ಹುಟ್ಟಿರುವ ಲೇಖಕರ ಬಗ್ಗೆ ಮುಸ್ಲಿಮರೂ ಹೇಳುವುದನ್ನು ನಮ್ಮಂತಹವರು ಕೇಳಿದ್ದೇವೆ. ನಾನೊಮ್ಮೆ ಬುರ್ಖಾದ  ಬಗ್ಗೆ ಮಾತನಾಡಿ ವಿವಾದ ಹುಟ್ಟಿಕೊಂಡಾಗ, ನಾನು ಬಹಳ ಮೆಚ್ಚಿಕೊಂಡ ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ಯುವಪತ್ರಕರ್ತರೊಬ್ಬರು ನಮ್ಮ ಹೆಂಗಸರ ಬಟ್ಟೆಗೆ ಯಾಕೆ ಕೈ ಹಾಕುತ್ತೀರಿ? ಎಂದು ಕೇಳಿದಾಗ ಒಂದು ಕ್ಷಣ ಬೆಚ್ಚಿಬಿದ್ದಿದ್ದೆ. ಭಾರತದ ಸಂದರ್ಭದಲ್ಲಿ ಜಾತಿ ಮತ್ತು ಧರ್ಮಗಳ ವಾಸ್ತವದ ಬಗ್ಗೆ ಕುರುಡಾಗಿ ವ್ಯಕ್ತಿ-ವಿಷಯಗಳನ್ನು ಚರ್ಚಿಸುವುದು ಅಸಾಧ್ಯವೆನಿಸುವಂತಹ ವಾತಾವರಣವನ್ನು ನಾವೇ ನಿರ್ಮಿಸಿಬಿಟ್ಟಿದ್ದೇವೆ.

 

ಪತ್ರಕರ್ತನಾಗಿ, ಲೇಖಕನಾಗಿ ಇರ್ಷಾದ್ ಎದುರಿಸಬೇಕಾಗಿ ಬಂದಿರುವ ಬಹಿರಂಗ ವಿರೋಧ ಮತ್ತು ಆಂತರಿಕ ಒತ್ತಡದ ಅರಿವಾಗಬೇಕಾದರೆ ಅವರು ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಕಣ್ಣುಹಾಯಿಸಬೇಕು. ಬಹುಸಂಸ್ಕೃತಿಯ ತೊಟ್ಟಿಲಾಗಿದ್ದ, ಕೋಮುಸೌಹಾರ್ದdineshತೆಯನ್ನೇ ಜೀವನಕ್ರಮವಾಗಿ ಪಾಲಿಸುತ್ತಾ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಕೋಮುಕಾಳಗದ ರಣರಂಗವಾಗಿದೆ. ಹಿಂದಿನ ತಲೆಮಾರು ಕೂಡಿ ಕಟ್ಟಿದ್ದನ್ನು ಇಂದಿನ ತಲೆಮಾರಿನ ಒಂದು ಗುಂಪು ಒಡೆದು ಮುರಿದುಹಾಕಿದ್ದಾರೆ. ಜಗವೆಲ್ಲ ಹೆಮ್ಮೆ ಪಡುತ್ತಿದ್ದ, (ಸ್ವಲ್ಪ ಅಸೂಯೆಯಿಂದಲೂ ನೋಡುತ್ತಿದ್ದ) ದಕ್ಷಿಣ ಕನ್ನಡ ಜಿಲ್ಲೆಯ ಅಂತರಂಗಕ್ಕೆ ಈಗ ಇಣುಕಿನೋಡಿದರೆ ಒಡಕಲು ಬಿಂಬಗಳು ಕಾಣಿಸತೊಡಗಿವೆ. ಈ ರೀತಿ ಒಡೆದು ಹಾಕಿರುವವರನ್ನು ಗುರುತಿಸುವುದಷ್ಟೇ ಅಲ್ಲ, ಒಡೆದ ಚೂರುಗಳನ್ನು ಆಯ್ದು, ಜೋಡಿಸಿ ಮತ್ತೆ ಕಟ್ಟುವ ಪ್ರಯತ್ನ ಇರ್ಷಾದ್ ಅವರ ಲೇಖನಗಳಲ್ಲಿ ಕಾಣಬಹುದು.

 

ಹಿಂದೂ-ಮುಸ್ಲಿಮ್ ಎರಡೂ ಧರ್ಮಗಳಿಗೆ ಸೇರಿದ ಕೋಮುವಾದದ ಪ್ರಯೋಗಶಾಲೆ ಎಂಬ ಕುಖ್ಯಾತಿಗೊಳಗಾಗಿರುವ ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ಪ್ರಗತಿಪರ ಲೇಖಕರ ಪರಂಪರೆ ಬೆಳೆದುಬಂದಿರುವುದನ್ನು ಈಗ ನೆನಪುಮಾಡಿಕೊಂಡರೆ ಇತಿಹಾಸದ ವ್ಯಂಗ್ಯದಂತೆ ಕಾಣಬಹುದು. ಈ ಲೇಖಕರೆಲ್ಲ ಧರ್ಮ ಸೂಕ್ಷ್ಮಗಳನ್ನು ಬಿಡಿಸಿಹೇಳುತ್ತಲೇ ಒಳಗಿರುವ ಪುರೋಹಿತಶಾಹಿಯ ಆತ್ಮವಂಚನೆ, ಸ್ವಾರ್ಥ ಮತ್ತು ಅಜ್ಞಾನಗಳನ್ನು ಬಯಲುಗೊಳಿಸಿದವರು. ಇದರಿಂದಾಗಿ ನಾನಾ ಬಗೆಯ ಕಷ್ಟನಷ್ಟಗಳನ್ನು ವೈಯಕ್ತಿಕ ಜೀವನದಲ್ಲಿಯೂ ಎದುರಿಸಿದವರು. ಇವರಲ್ಲಿ ಕೆಲವರು ಮೌನವಾಗಿ ಹೋಗಿದ್ದಾರೆ, ಇನ್ನು ಕೆಲವರು ಸಮನ್ವಯತೆಯ ಹರಿಕಾರರಾಗಿದ್ದಾರೆ.
ಈ ಲೇಖಕರ ಮೌನವನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ಅವಧಿಯಲ್ಲಿ ನಡೆದ ಗದ್ದಲವನ್ನು ಕೂಡಾ ತಿಳಿದುಕೊಳ್ಳಬೇಕಾಗುತ್ತದೆ. ಕಾರಣಗಳೂ ನಮ್ಮ ವರ್ತಮಾನದ ರಾಜಕೀಯ ಬೆಳವಣಿಗೆಗಳಲ್ಲಿದೆ ಎನ್ನುವುದನ್ನು ಕೂಡಾ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಬಾಬರಿಮಸೀದಿಯ ನಂತರ ಬದಲಾಗಿರುವುದು ದೇಶದ ರಾಜಕೀಯ ಕ್ಷೇತ್ರ ಮಾತ್ರವಲ್ಲ, ಅದರ ಅಡ್ಡಪರಿಣಾಮಗಳಿಂದಾಗಿ ನಮ್ಮ ಸಾಹಿತ್ಯ, ಕಲೆ, ಸಂಗೀತ ಸೇರಿದಂತೆ ಒಟ್ಟು ಸಾಂಸ್ಕೃತಿಕ ಲೋಕ ಕೂಡಾ ಕೋಮುಬಣ್ಣ ಬಳಿದುಕೊಂಡದ್ದನ್ನು ಕಾಣಬಹುದು. ಈ ಬದಲಾವಣೆಗೆ ಕನ್ನಡ ಸಾಹಿತ್ಯ ಕ್ಷೇತ್ರ ಹೊರತಾಗಿರಲಿಲ್ಲ. ತುರ್ತು   ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಮುಸ್ಲಿಮ್ ಸಮುದಾಯದ ಲೇಖಕರ ಬೆನ್ನು ತಟ್ಟಿದವರು, ಅದೇ ಲೇಖಕರು ಕೋಮುವಾದದ ವಿರುದ್ಧ ಬರೆದಾಗ ಧರ್ಮದ ಕನ್ನಡಕ ಹಾಕಿಕೊಂಡು ತೀರ್ಪು ನೀಡಲು ಶುರುಮಾಡಿದರು.

 

ಇದರಿಂದಾಗಿ ಎಂಬತ್ತರ ದಶಕದಲ್ಲಿ ಮುಸ್ಲಿಮ್ ಮೂಲಭೂತವಾದದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದ ಬರೆಯುತ್ತಿದ್ದ ಮುಸ್ಲಿಮ್ ಸಮುದಾಯದ ಲೇಖಕ-ಲೇಖಕಿಯರ ದನಿ ಕ್ಷೀಣವಾಗುತ್ತಾ ಹೋಯಿತು. ಹಿಂದುಕೋಮುವಾದದ ಅಬ್ಬರ ಮತ್ತು ಅದನ್ನು ಎದುರಿಸಲು ಮುಸ್ಲಿಮ್ ಮೂಲಭೂತವಾದ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣದ ನಡುವೆ ಸಿಕ್ಕ ಪ್ರಗತಿಪರ ಲೇಖಕರು ಈ ಗೊಂದಲದಲ್ಲಿಯೇ ತುಸು ಅಂಚಿಗೆ ಸರಿದು ನಿಲ್ಲುವಂತಾಯಿತು. ಇಸ್ಲಾಂ ಧರ್ಮದೊಳಗಿನ ಸಂಪ್ರದಾಯವಾದದ ಬಗ್ಗೆ ಪ್ರಗತಿಪರ ಮುಸ್ಲಿಮರು ಎತ್ತಿದ ಪ್ರಶ್ನೆಗಳನ್ನು ಹಿಂದೂ ಮೂಲಭೂತವಾದಿಗಳು ಮುಸ್ಲಿಮರ ವಿರುದ್ದ ಜನಾಭಿಪ್ರಾಯ ರೂಪಿಸಲು ಮತ್ತು ಹಿಂದೂಗಳನ್ನು ಎತ್ತಿಕಟ್ಟುವ ಹುನ್ನಾರಕ್ಕೆ ದುರ್ಬಳಕೆ ಮಾಡುವಂತಹ ಪ್ರಸಂಗಗಳು ಕೂಡಾ ನಡೆಯುತ್ತಿವೆ.

 

ನಾವಿಂದು ಉತ್ತರ ಹುಡುಕಬೇಕಾಗಿರುವುದು ಹಿಂದೆ ಬರೆಯುತ್ತಿದ್ದವರು ಈಗಲೂ ಹಿಂದಿನಂತೆಯೇ ಯಾಕೆ ಬರೆಯುವುದಿಲ್ಲ ಎನ್ನುವ ಪ್ರಶ್ನೆಗೆ ಅಲ್ಲ. ಈ ರೀತಿಯ ದಣಿವು, ವಿಶ್ರಾಂತಿ, ಆರೋಪಿತ ಹೊಂದಾಣಿಕೆಯ ಬಗ್ಗೆಯೂ ಅಲ್ಲ. ಇಂತಹ ಬೆಳವಣಿಗೆ ಕೇವಲ ಮುಸ್ಲಿಮ್ ಸಮುದಾಯದಿಂದ ಬಂದಿರುವ ಲೇಖಕರಿಗೆ ಮಾತ್ರ ಸೀಮಿತವಾಗಿಲ್ಲ, ಎಂಬತ್ತರ ದಶಕದಲ್ಲಿ ಪ್ರಜ್ವಲಿಸಿದ ದಲಿತ, ರೈತ ಮತ್ತು ಭಾಷಾ ಚಳುವಳಿಯನ್ನು ಮುನ್ನಡೆಸಿದ್ದ ಎಲ್ಲ ಗುಂಪುಗಳಲ್ಲಿಯೂ ನಾಯಕತ್ವದ ಇಂತಹ ಬಿಕ್ಕಟ್ಟುಗಳನ್ನು ಕಾಣಬಹುದು. ನಾವಿಂದು ಉತ್ತರ ಹುಡುಕಬೇಕಾಗಿರುವುದು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಪ್ರಗತಿಪರ ಲೇಖಕರ ಪರಂಪರೆಯ ವಾರಸುದಾರರು ಯಾಕೆ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಗೆ.
ಪ್ರಗತಿಪರ ಮುಸ್ಲಿಮ್ ಲೇಖಕರ ಪರಂಪರೆಯ ಸರಪಳಿ ಇದ್ದಕ್ಕಿದ್ದ ಹಾಗೆ ಮುರಿದುಬಿತ್ತೇ ಎಂಬ ಆತಂಕದ ಪ್ರಶ್ನೆ ಈಗಲೂ ನಮ್ಮ ಮುಂದಿದ್ದರೂ ಹೊಸ ತಲೆಮಾರಿನ ಅನೇಕ ಮುಸ್ಲಿಮ್ ಯುವಕ-ಯುವತಿಯರು. ಧರ್ಮದ ಬಗೆಗಿನ ಕುರುಡುತನವನ್ನು ಮೀರಿ ಒಂದಿಷ್ಟು ಅಧ್ಯಯನ, ಆತ್ಮಾವಲೋಕನದ ಮೂಲಕ ದಿಟ್ಟತನದಿಂದ ಬರೆಯುತ್ತಿದ್ದಾರೆ, ಹೋರಾಟ ನಡೆಸುತ್ತಿದ್ದಾರೆ. ಇಷರ್ಾದ್ ಉಪ್ಪಿನಂಗಡಿ ಈ ಸಾಲಿನಲ್ಲಿರುವ ಯುವ ಬರಹಗಾರ.

 

ಈ ಸಂಕಲನದಲ್ಲಿರುವ ಲೇಖನಗಳು ಆಯಾ ಸಂದರ್ಭದ ವಿದ್ಯಮಾನಗಳಿಗೆ ಥಟ್ಟನೆ ಪ್ರತಿಕ್ರಿಯೆ ರೂಪದಲ್ಲಿ ಬರೆದಿರುವಂತಹದ್ದು. ಈ ದೃಷ್ಟಿಯಿಂದ ಇದನ್ನು ಪತ್ರಿಕಾ ಲೇಖನಗಳೆಂದು ಹೇಳಬಹುದಾದರೂ ಇರ್ಷಾದ್ ಅಧ್ಯಯನ-ಸಂಶೋಧನೆಯ ಮೂಲಕ ಲೇಖನಗಳನ್ನು ಅವಸರದ ಬರವಣಿಗೆಯ ಆಚೆಗೆ ವಿಸ್ತರಿಸುವ ಪ್ರಯತ್ನ ಮಾಡಿದ್ದಾರೆ. ಇಷರ್ಾದ್ ಭಿನ್ನಾಭಿಪ್ರಾಯವನ್ನು ದಾಖಲಿಸಿ ಓಡಿಹೋಗುವುದಿಲ್ಲ, ತಾನು ಹೇಳುವುದನ್ನು ದಾಖಲೆಗಳ ಸಮೇತ ಮಂಡಿಸುತ್ತಾರೆ. ತಲಾಖ್, ಬುರ್ಖಾ, ಸಹಶಿಕ್ಷಣಕ್ಕೆ ಸಂಬಂಧಿಸಿದಂತೆ ಧರ್ಮಗ್ರಂಥ ಕುರಾನ್ ಏIrshadನು ಹೇಳಿದೆ ಎನ್ನುವುದನ್ನು ಎದುರಾಳಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ತಾಳ್ಮೆಯಿಂದ ಮಾಡುತ್ತಾರೆ.

 

ಇರ್ಷಾದ್ ಅವರನ್ನು ಮತ್ತೆಮತ್ತೆ ಕಾಡುವುದು ಧರ್ಮದೊಳಗೆ ಹೆಚ್ಚು ಶೋಷಣೆಗೊಳಗಾಗಿರುವ ಮುಸ್ಲಿಮ್ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಎನ್ನುವುದು ಗಮನ ಸೆಳೆಯುತ್ತದೆ. ಹೀಗಾಗಿಯೇ ಈ ಪುಸ್ತಕದ ಹತ್ತರಲ್ಲಿ ಐದು ಲೇಖನಗಳು ತಲಾಖ್, ಬುರ್ಖಾ, ಹುಡುಗಿಯರ ಪ್ರತಿಭೆಯ ದಮನ ಮೊದಲಾದ ವಿಷಯಗಳ ಬಗ್ಗೆ ಇದೆ. ಹಿಂದೊಮ್ಮೆ ನನ್ನ ಮಾತುಗಳಿಂದಾಗಿ ಹುಟ್ಟಿಕೊಂಡ ವಿವಾದಕ್ಕೆ ಪ್ರತಿಕ್ರಿಯಿಸಿ ಬರೆದಿರುವ ಬುರ್ಖಾದೊಳಗೆ ಆಕೆಯ ಮೌನಕ್ಕೆ ದನಿಯಾದಾಗ ಎನ್ನುವ ಲೇಖನವನ್ನು ಮುಸ್ಲಿಮ್ ಸೋದರಿಯ ಪರಕಾಯ ಪ್ರವೇಶ ಮಾಡಿಬರೆದಿರುವುದು ಮನಮಿಡಿಯುವಂತಿದೆ.
ಇರ್ಷಾದ್ ಅವರು ಬಹುತೇಕ ಬರವಣಿಗೆಗಳಿಗೆ ಆಯ್ದುಕೊಂಡಿರುವುದು ಧರ್ಮ ಎನ್ನುವ ಸೂಕ್ಷ್ಮವಾದ ಮತ್ತು ಬಹುಬೇಗ ಭಾವನೆಗಳನ್ನು ಕೆರಳಿಸಬಲ್ಲ ವಿಷಯವನ್ನು. ಈ ಬಗ್ಗೆ ಬರೆಯುವವರು ಸಹಜವಾಗಿಯೇ ಭಾವುಕರಾಗಿಬಿಡುತ್ತಾರೆ, ತಮಗರಿವಿಲ್ಲದೆಯೇ ಆವೇಶ, ಆಕ್ರೋಶಗಳು ಹೊರಹೊಮ್ಮುತ್ತವೆ. ಆದರೆ ಇರ್ಷಾದ್ ಬರೆದಿರುವ ಲೇಖನಗಳನ್ನು ಓದುವಾಗ ಮನೆ ಹಿರಿಯನೊಬ್ಬನ ಕೈಹಿಡಿದು ಜಗ್ಗುತ್ತಿರುವ ಪುಟ್ಟಬಾಲಕ ಹೀಗ್ಯಾಕೆ ಮಾಡುತ್ತಿದ್ದೀರಿ? ಇದು ತಪ್ಪಲ್ಲವೇ? ಎಂದು ಮುಗ್ಧತೆಯಿಂದ ಕೇಳುತ್ತಿರುವಂತಿದೆ. ಇದು ಪ್ರೀತಿಸುವವರನ್ನು ಉದ್ದೇಶಿಸಿ ಪ್ರೀತಿಯಿಂದ ಬರೆದ ಲೇಖನಗಳು. ಹೀಗೆಯೇ ಎಲ್ಲರೂ ಓದಿಕೊಂಡರೆ ಲೇಖಕರ ಆಶಯ ಸಾರ್ಥಕ.

 

ಗಂಭೀರ ವಿಷಯಗಳಿಗೆ ಒಗ್ಗದ ಟಿವಿ ಮಾಧ್ಯಮದ ವರದಿಗಾರರಾಗಿ ತನ್ನೊಳಗಿನ ಲೇಖಕನನ್ನು ಕಳೆದುಕೊಳ್ಳುತ್ತಾರೋ ಏನೋ ಎನ್ನುವುದಷ್ಟೇ ಇರ್ಷಾದ್ ಬಗ್ಗೆ ಇರುವ ನನ್ನ ಏಕೈಕ ದೂರು. ನಾನು ಮುದ್ರಣ ಮಾಧ್ಯಮದ ಪಕ್ಷಪಾತಿ ಎನ್ನುವದಷ್ಟೇ ಇದಕ್ಕೆ ಕಾರಣ ಅಲ್ಲ, ಇಷರ್ಾದ್ ಅವರ ಗ್ರಹಿಕೆಯ ಸಾಮರ್ಥ್ಯ, ಬರವಣಿಗೆಯ ಶಕ್ತಿಯನ್ನು ನೋಡಿದರೆ ಅವರು ಕನ್ನಡದ ಒಬ್ಬ ಉತ್ತಮ ಪತ್ರಕರ್ತ-ಲೇಖಕರಾಗಬಹುದೆಂಬ ಭರವಸೆ ಮೂಡುತ್ತದೆ. ಇದು ನಿಜವಾಗಲಿ ಎಂದು ಹಾರೈಸುತ್ತೇನೆ.
ಅಲ್ಲೆಲ್ಲೋ ಇರುವ ಉಪ್ಪಿನಂಗಡಿಯ ಇಷರ್ಾದ್ ಅವರನ್ನು ಗುರುತಿಸಿ, ಕಳೆದುಹೋಗಬಹುದಾದ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಿರುವ ಮತ್ತು ಭಾಷಣಗಳಲ್ಲಿ ಕಳೆದುಹೋಗುತ್ತಿರುವ ನನ್ನ ಮೇಲೆ ಒತ್ತಡ ಹೇರಿ ನಾಲ್ಕು ಸಾಲು ಬರೆಯುವಂತೆ ಮಾಡಿದ ಅಹರ್ನಿಶಿಯ ಕೆ.ಅಕ್ಷತಾ ಅವರಿಗೂ ಥ್ಯಾಂಕ್ಸ್.

– ದಿನೇಶ್ ಅಮೀನ್ ಮಟ್ಟು

ಲೇಖನಗಳ ಸಂಗ್ರಹ: ಸ್ವರ್ಗದ ಹಾದಿಯಲ್ಲಿ…

ಲೇಖಕ:  ಇರ್ಷಾದ್ ಉಪ್ಪಿನಂಗಡಿ

ಪ್ರಕಾಶನ: ಅಹರ್ನಿಶಿ

ಬೆಲೆ: 70/-

ಪ್ರತಿಗಳಿಗಾಗಿ: 94491-74662

 

ಕಂಬಳ ಮತ್ತು ಫ್ಯೂಡಲ್ ವ್ಯವಸ್ಥೆಯ ಹುನ್ನಾರ


-ಎನ್.ಎಸ್


 

ಜಲ್ಲಿಕಟ್ಟು ಎಂಬ ಹಿಂಸಾವಿನೋದಿ ಕ್ರೀಡೆಯ ಬಗ್ಗೆ ಜನರ ಸಮೂಹ ಸನ್ನಿಗೆ ಕೇಂದ್ರ ಸರಕಾರ ಮಣಿದಿರುವ ಬೆನ್ನಿಗೇ ತುಳುವನಾಡಿನkambala-mangalore ಕಂಬಳದ ಪರವಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟಗಳು ಪ್ರಾರಂಭವಾಗಿವೆ. ಕಂಬಳ ಎನ್ನುವುದು ತುಳುವರ ಜನಪದ ಕ್ರೀಡೆ, ತುಳುವರ ಸಾಂಸ್ಕೃತಿಕ ಆಸ್ಮಿತೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಫ್ಯೂಡಲ್ ವ್ಯವಸ್ಥೆಯ ಪಳೆಯುಳಿಕೆಯಂತಿರುವ ಕಂಬಳದ ಪರ ಹೋರಾಟಗಳಲ್ಲಿ ಜಾತಿ ಆಧಾರಿತ ಅಸಮಾನತೆ ಮತ್ತು ಸಾಂಸ್ಕೃತಿಕ ಯಜಮಾನ್ಯದ ಪಾರಂಪರಿಕ ಆಚರಣೆಗಳನ್ನು ಇನ್ನೂ ಜಾರಿಯಲ್ಲಿಡುವ ವ್ಯವಸ್ಥಿತ ಹುನ್ನಾರವಿದೆ. ಒಂದು ನಿರ್ದಿಷ್ಟ ಜಾತಿಯ ಮೆರೆದಾಟಕ್ಕೆ ಮತ್ತು ಕೆಳಜಾತಿ, ಕೆಳವರ್ಗಗಳ ದಬ್ಬಾಳಿಕೆಗೆ ಮಾಧ್ಯಮವಾಗಿದ್ದ ಕಂಬಳವನ್ನು ಇಡೀ ತುಳುನಾಡಿನ ಸಾಂಸ್ಕೃತಿಕ ಐಡೆಂಟಿಟಿಯ ರೂಪದಲ್ಲಿ ಬಿಂಬಿಸಲು ಹೊರಟಿರುವ ಪ್ರಯತ್ನಗಳು ಆಘಾತಕಾರಿಯಾಗಿವೆ.

ರೈತರು ತಮ್ಮ ಕೃಷಿ ಕಾಯಕದ ಬಿಡುವಿನ ವೇಳೆಯಲ್ಲಿ, ಕಂಬಳದ ಗದ್ದೆಯಲ್ಲಿ ಕೋಣಗಳನ್ನು ಓಡಿಸುವುದರ ಮೂಲಕ ಮನರಂಜನೆಯನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ಕಂಬಳದ ಸಮರ್ಥನೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಂಬಳದಲ್ಲಿ ಕಂಡುಬರುವ ‘ಸ್ಪರ್ಧೆ’ ಅಥವಾ ‘ಕ್ರೀಡೆ’ ಅನ್ನುವುದು ಕುಂಟಾಬಿಲ್ಲೆ ಅಥವಾ ಕಬ್ಬಡ್ಡಿಯಂತಹ ಸಹಜ ಮನೋರಂಜಕ ಪಂದ್ಯಾಟವಲ್ಲ. ಬದಲಿಗೆ ಅದು ಉಳ್ಳವರ ಆಟ- ಮೇಲಾಟದ, ಪೌರುಷದ ಮತ್ತು ಯಜಮಾನಿಕೆಯ ಅಭಿವ್ಯಕ್ತಿಯಾಗಿದೆ. ಮೂಲದಲ್ಲಿ ಕಂಬಳ ಬಂಟರ ಗುತ್ತಿನ ಅಧಿಕಾರವನ್ನು ಪ್ರತಿಷ್ಠಾಪಿಸಲು ಮತ್ತು ಅದಕ್ಕೆ ಸಾಂಸ್ಕೃತಿಕ ಮಾನ್ಯತೆಯನ್ನು ದಕ್ಕಿಸಿಕೊಳ್ಳುವ ಸಲುವಾಗಿ ಸೃಷ್ಠಿಯಾದ ಒಂದು ಆಚರಣೆಯಾಗಿದೆ. ಅಂದರೆ ಕಂಬಳ ಪ್ರಾರಂಭವಾಗಿದ್ದೇ ಒಕ್ಕಲು ರೈತರನ್ನು ಸುಲಿಯಲು ಮತ್ತು ಕೆಳ ಸಮುದಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಲುವಾಗಿ. ತುಳುನಾಡಿನಲ್ಲಿ ಜಾತಿ ಶ್ರೇಣೀಕರಣದ ಉಳಿವು ಮತ್ತು ಮುಂದುವರಿಕೆಯಲ್ಲಿ ಕಂಬಳದ ಪಾತ್ರ ಅಧ್ಯಯನಾರ್ಹ ವಿಚಾರವಾಗಿದೆ.  

ಮೂಲದಲ್ಲಿ ಕಂಬಳದ ಕೋಣಗಳು ಬಂಟರ ಗುತ್ತಿನ ಮನೆಗಳಲ್ಲಿ ಮಾತ್ರ ಇರುತ್ತಿದ್ದವು. ಉಳುಮೆ ಮಾಡದ ಕೋಣಗಳನ್ನುkambala-2 ಕಂಬಳಕ್ಕಾಗಿಯೇ ಸಾಕುವುದು ಗುತ್ತಿನ ಮನೆಯ ಫ್ಯಾಶನ್ ಆಗಿತ್ತು. ದಷ್ಟಪುಷ್ಟವಾಗಿ ಕೊಬ್ಬಿರುತ್ತಿದ್ದ ಕಂಬಳದ ಕೋಣಗಳು ಗುತ್ತಿನ ಮನೆಗಳ ಗತ್ತಿಗೆ, ಪೌರುಷಕ್ಕೆ ಸಾಕ್ಷಿಯಾಗಿರುತ್ತಿದ್ದವು. ಅಂತಹ ಕೋಣಗಳನ್ನು ಸಾಕಿ ಸಲಹುವ ತಾಕತ್ತಿಲ್ಲದ ಬಡ ಹಾಗೂ  ಸಣ್ಣ ರೈತರ, ಒಕ್ಕಲುದಾರರ ಮತ್ತು ಕೆಳಜಾತಿಗಳ ನಡುವೆ ಕಂಬಳ ಬಂಟರ ಗುತ್ತಿನ ಮನೆಗಳಿಗೆ ಕಲಿತನದ ಹಿರಿಮೆಯನ್ನೂ, ಫ್ಯೂಡಲ್ ಅಧಿಕಾರದ ಛತ್ರವನ್ನೂ ನೀಡುತಿತ್ತು; ಮತ್ತು ಇದೇ ಫ್ಯೂಡಲ್ ಅಧಿಕಾರದ ಬಲದಲ್ಲಿ ಗುತ್ತಿನ ಮನೆಗಳು ಸಮುದಾಯಗಳ ಸಂಪನ್ಮೂಲ ಹಾಗೂ ಉತ್ಪಾದನೆಯ ಮೇಲೂ ನಿಯಂತ್ರಣ ಸಾಧಿಸುತ್ತಿದ್ದವು. ಕಂಬಳದ ಕೋಣಗಳನ್ನು ಕೊಬ್ಬಿಸಲು, ಅವುಗಳಿಗೆ ಅಕ್ಕಿಯಲ್ಲಿ ಗಂಜಿ ಮಾಡಿ ತಿನ್ನಿಸಲು ದ್ರವ್ಯಗಳನ್ನು ಒಕ್ಕಲಿನ ರೈತರಿಂದ ಸಂಗ್ರಹಿಸಿಲಾಗುತ್ತಿತ್ತು. ಕೋಣಗಳಿಗೆ ತೆಂಗಿನ ಎಣ್ಣೆ ಹಚ್ಚಿ ರೈಕೆ ಮಾಡಲೆಂದೇ ಬಿಲ್ಲವರು, ದಲಿತರು ಮತ್ತಿತರ ಕೆಳವರ್ಗಗಳ ಹತ್ತಾರು ಸಂಖ್ಯೆಯ ಆಳುಗಳನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಒಕ್ಕಲುದಾರ ಬಡ ರೈತ ಹಾಗೂ ಕೆಳಜಾತಿಗಳ ಶ್ರಮ ಹಾಗೂ ಸಂಪನ್ಮೂಲಗಳ ಮೇಲೆ ಹತೋಟಿ ಸಾಧಿಸಲು ಕಂಬಳ ಒಂದು ಮಾಧ್ಯಮದಂತೆ ಬಳಕೆಯಾಗುತಿತ್ತು. ಹೀಗಾಗಿಯೇ ಆ ಕಾಲದಲ್ಲಿ ರೈತ ಹಸಿವಿನಿಂದ ಸಾಯುತ್ತಿದ್ದರೂ ಊರ ಗುತ್ತಿನ ಕಂಬಳದ ಕೋಣಗಳಿಗೆ ಅಕ್ಕಿ ಗಂಜಿ, ಹುರುಳಿ ಕಾಳಿನ ಗಂಜಿಗೆ ಕೊರತೆಯಾಗುತ್ತಿರಲಿಲ್ಲ.

ಹೀಗೆ ಕಂಬಳ ಜಾತಿ ಶ್ರೇಣೀಕರಣದ ಅಸಮಾನ ಮತ್ತು ಶೋಷಕ ಸ್ವರೂಪದೊಂದಿಗೆ ಅವಿಭಾಜ್ಯ kambala-5 ಸಂಬಂಧವನ್ನು ಹೊಂದಿದೆ. ಹಲವು ಅಮಾನವವೀಯ ಅಸ್ಪೃಶ್ಯತಾ ಆಚರಣೆಗಳು ಮತ್ತು ಅಜಲು ಪದ್ದತಿ ಈ ಕಂಬಳ ಕ್ರೀಡೆಯ ಮೂಲಕ ತೀರಾ ಇತ್ತಿಚ್ಚಿನವರೆಗೂ ನಡೆಯುತ್ತಿದ್ದವು. ಕಂಬಳ ಅನ್ನೋದು ಹಲವು ಊರಿನ ಗುತ್ತು ಮನೆತನಗಳ ನಡುವೆ ನಡೆಯುತ್ತಿದ್ದ ಪ್ರತಿಷ್ಟಿತ ಸ್ಪರ್ಧೆಯಾಗಿದ್ದರಿಂದ ಪ್ರತಿಸ್ಪರ್ಧಿ ಗುತ್ತಿನ ಜನರು ಬಂದು ಕಂಬಳದ ಗದ್ದೆಯನ್ನು ಹಾಳು ಮಾಡಬಹುದು ಎಂಬ ಕಾರಣಕ್ಕಾಗಿ ಕೊರಗ ಎಂಬ ಅತಿ ಶೋಷಿತ ಸಮುದಾಯ ‘ಪನಿ ಕುಲ್ಲುನು’ ಎಂಬ ಸಂಪ್ರದಾಯವನ್ನು ಆಚರಿಸಬೇಕಿತ್ತು. ‘ಪನಿ ಕುಲ್ಲುನು’ ಅಂದರೆ ಕೊರಗರು ತಮ್ಮ ಹೆಂಡತಿ ಮಕ್ಕಳ ಜೊತೆ ಇಡೀ ರಾತ್ರಿ ಕಂಬಳ ಗದ್ದೆಯನ್ನು ಕಾಯಬೇಕು. ಇದಕ್ಕಿಂತಲೂ ಅಮಾನುಷವೆಂದರೆ, ಕಂಬಳ ನಡೆಯುವ ಒಂದೆರಡು ಗಂಟೆಗಳ ಮೊದಲು ಕಂಬಳ ಗದ್ದೆಯಲ್ಲಿ ಕೊರಗರು ಓಡಬೇಕು. ಕಂಬಳ ಗದ್ದೆಯಲ್ಲಿ ಗುತ್ತಿನ ಮನೆಯ ವೈರಿಗಳು ಗಾಜು, ಕಲ್ಲುಗಳನ್ನು ಹಾಕಿರುವ ಸಾಧ್ಯತೆ ಹಿನ್ನಲೆಯಲ್ಲಿ ಕೊರಗರು ಓಡಿ ಪರಿಶೀಲನೆಯನ್ನು ಮಾಡಬೇಕು. ಗುತ್ತಿನ ಕೊಣಗಳಿಗೆ ಗಾಜು ಚುಚ್ಚುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಜಮೀನ್ದಾರಿ ಕುಟುಂಬಗಳ ಮಧ್ಯೆ ನಡೆಯುವ ಪಕ್ಕಾ ಫ್ಯೂಡಲ್ ಕ್ರೀಡೆಯಾಗಿರುವ ಕಂಬಳ ಈಗ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಡುಗಳನ್ನು ಹೊಂದಿದೆಯಾದರೂ ಆಳದಲ್ಲಿ ಫ್ಯೂಡಲ್ ವ್ಯವಸ್ಥೆಯನ್ನು ಜಾರಿಯಲ್ಲಿಡುವ ತಂತ್ರವೇ ಆಗಿದೆ.

ಸದ್ಯ ಕರಾವಳಿಯ ಹಲವೆಡೆ ನಡೆಯುತ್ತಿರುವ ಕಂಬಳದ ಸಂಚಾಲಕ ಸಮಿತಿಗಳನ್ನು ನೋಡಿದಲ್ಲಿ ಅದರ ವರ್ಗೀಯ ಮತ್ತು ಜಮೀನ್ದಾರಿkambala-1 ಸ್ವರೂಪ ಮನದಟ್ಟಾಗುತ್ತದೆ. ಕರಾವಳಿಯ ಬಾರಾಡಿ ಬೀಡು (ಕಾರ್ಕಳದ ಸಮೀಪ), ಈದು (ಕಾರ್ಕಳ), ಮಿಯಾರು (ಕಾರ್ಕಳದ ಸಮೀಪ), ಐಕಳ ಬಾವ (ಮೂಡುಬಿದಿರೆ-ಮುಲ್ಕಿ ಮಧ್ಯೆ), ಬಂಗಾಡಿ (ಬೆಳ್ತಂಗಡಿ), ಹೊಕ್ಯಾಡಿಗೋಳಿ (ಬಂಟ್ವಾಳ), ಪಜೀರು (ಬಂಟ್ವಾಳ), ಪಿಲಿಕುಳ ನಿಸರ್ಗಧಾಮ (ಮಂಗಳೂರ ಸಮೀಪ), ಜಪ್ಪಿನಮೊಗರು (ಮಂಗಳೂರ ಸಮೀಪ), ತಲಪಾಡಿ ಪಂಜಾಳ (ಮಂಗಳೂರ ಸಮೀಪ), ಅಲ್ತಾರು (ಉಡುಪಿ), ಕಟಪಾಡಿ (ಉಡುಪಿ), ಅಡ್ವೆ, ನಂದಿಕೂರು, ಮೂಡುಬಿದಿರೆ, ಮುಲ್ಕಿ, ವೇಣೂರು, ಉಪ್ಪಿನಂಗಡಿ, ಪುತ್ತೂರು, ತೋನ್ಸೆಯಲ್ಲಿ ಕಂಬಳಗಳು ನಡೆಯುತ್ತಿದೆ. ಎಲ್ಲಾ ಕಂಬಳಗಳಲ್ಲಿ ಒಂದೋ ಬಂಟರು ಮುಖ್ಯಸ್ಥರಾಗಿರುತ್ತಾರೆ ಅಥವಾ ಜೈನರು ಸಂಚಾಲಕರಾಗಿರುತ್ತಾರೆ. ಕೋಣ ಓಡಿಸುವವರು, ಕೋಣದ ಚಾಕರಿ ಮಾಡುವವರು, ಕಂಬಳದ ಸ್ವಯಂಸೇವಕರೆಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಮುಲ್ಕಿ ಪಯ್ಯೊಟ್ಟು ಸದಾಶಿ ಸಾಲಾನ್ ಹೊರತುಪಡಿಸಿದಲ್ಲಿ ಬಹುತೇಕ ಕೋಣಗಳ ಮಾಲೀಕರು ಮಾತ್ರ ಈಗಲೂ ಗುತ್ತಿನ ಬಂಟರೇ ಆಗಿದ್ದಾರೆ ಎಂಬುದು ಗಮನಾರ್ಹ.

ಕಂಬಳ ಎಂಬುದು ಕೇವಲ ಕ್ರೀಡೆಯಾಗಿ ಪ್ರಾರಂಭವೂ ಆಗಿಲ್ಲ.‌ ಮುಂದುವರಿಕೆಯೂ ಅಲ್ಲ. ಕಂಬಳ ಎಂಬುದು ಜಮೀನ್ದಾರಿಗಳ ಐಶಾರಾಮಿ ಬದುಕಿನ ಪಳಿಯುಳಿಕೆಯಾಗಿ ಮುಂದುವರೆಯುತ್ತಿದೆ. ಕಂಬಳ ಎಂಬುದು ಬಹುಜನರ ಸಂಸ್ಕೃತಿಯೂ ಅಲ್ಲ. ಜನಪದ ಕ್ರೀಡೆಯೂ ಅಲ್ಲ. ಕಂಬಳ ಎಂಬುದು ಪಕ್ಕಾ ಬಹುಜನ ವಿರೋಧಿ ಫ್ಯೂಡಲ್ ವರ್ಗದ ಮೋಜಿನ ಆಟವಷ್ಟೆ.

 

ನಟ ನಟಿಯರ ವಿವಾದಗಳು ಮತ್ತು ಮಾಧ್ಯಮ

Naveen Soorinje


ನವೀನ್ ಸೂರಿಂಜೆ


 

“ಪತ್ರಕರ್ತರ ಕತೆ ಹೇಗಿದೆ ಅಂದ್ರೆ, ಕಾವೇರಿ ವಿಷಯದಲ್ಲಿ ತುಟಿ ಬಿಚ್ಚದೇ ಇದ್ದ ಅಂಬರೀಷ್ ಪತ್ರಿಕಾಗೋಷ್ಠಿ ಮಾಡಿದ ತಕ್ಷಣ ಸುಮ್ನೆ ಬಿಟ್ಟು ಕಳ್ಸಿದ್ರಿ. ಅದೇ ಸಂಬಂಧವೇ ಪಡದ ಪ್ರಕಾಶ್ ರೈಗೆ ತರಾಟೆಗೆ ತಗೋತೀರಿ. ರಮ್ಯಾ ಪಾಕ್ ನಲ್ಲೂ ಒಳ್ಳೆಯವರಿದ್ದಾರೆ ಎಂದಿದ್ದಕ್ಕೆ ನೇಣಿಗೆ ಹಾಕಿದ್ರಿ. ನೀವು ಒಂದೋ ಜಾತಿ ಕಾರಣಕ್ಕೆ ಬೆನ್ನು ಬೀಳ್ತೀರಿ. ಅಥವಾ ಹೆಣ್ಣು ಅನ್ನೋ ಕಾರಣಕ್ಕೆ ಅಟ್ಟಾಡಿಸ್ತೀರಿ” ಎಂದು ಫೋನ್ ಮಾಡಿ ಬೈದ್ರು ಪ್ರಕಾಶಕರೂ ಆಗಿರುವ ಕವಿ ಅಕ್ಷತಾ ಹುಂಚದಕಟ್ಟೆ. ಅಕ್ಷತಾ ಅವರು ಹೇಳಿದ ಅಷ್ಟೂ ಮಾತುಗಳು ನಿಜ. ಆದರೆ ಅದಷ್ಟೇ ಸತ್ಯವಲ್ಲ. ಅಂಬರೀಷ್ ರನ್ನು ಬಚಾವ್ ಮಾಡುವ, ರಮ್ಯಾರನ್ನು ಬಲಿಪಶು ಮಾಡುವ, ಪ್ರಕಾಶ್ ರೈ ಕಾಂಟ್ರವರ್ಸಿ ಒಂದೇ ಚಾನೆಲ್ಲಿಗೆ ಸೀಮಿತವಾಗಿರೋ ಕಾರಣದ ಹಿಂದೆ ಆರ್ಥಿಕ ಕಾರಣಗಳೂ ಇವೆ.

ಹೌದು. ಸಿನೇಮಾ, ರಾಜಕೀಯ, ಮಾಧ್ಯಮದಲ್ಲಿರುವಷ್ಟು ಜಾತಿಗಳ ಜೊತೆಗಿನ ಕೊಂಡಿ ಬಹುಷಃ ಬೇರಾವ ಕ್ಷೇತ್ರದಲ್ಲೂ ಇರಲಿಕ್ಕಿಲ್ಲವೇನೋ?

ಅದರಲಿ. ಮಾಧ್ಯಮದಲ್ಲಿ ಸಿನೇಮಾ ಮಂದಿಯನ್ನು ನಿಜಜೀವನದಲ್ಲೂ ಹೀರೋ ಮಾಡುವುದು, ನಿರ್ಲಕ್ಷ್ಯ ಮಾಡುವುದು ಕೇವಲ ಜಾತಿ ಕಾರಣಕ್ಕಾಗಿ ಅಲ್ಲ. ಅದರ ಹಿಂದೆ ಆರ್ಥಿಕ ಕಾರಣವೂ ಕೆಲಸ ಮಾಡುತ್ತೆ.

ಈಗ ಅಂಬರೀಷ್ ವಿಚಾರವನ್ನೇ ತಗೊಳ್ಳಿ. ಕಾವೇರಿ ವಿವಾದ ಪ್ರಾರಂಭಕ್ಕೂ ಮುನ್ನವೇ ಅಂಬರೀಷ್ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಅಮೇರಿಕಾ ತೆರಳಿದ್ದರು. ಅಲ್ಲಿಂದಲೇ ಚಿಕಿತ್ಸೆ ಪಡೆದು ವಾಪಸ್ ಬರುವಷ್ಟರಲ್ಲಿ ಇಲ್ಲಿ ಕಾವೇರಿ ವಿಷಯ ಕಾವೇರಿತ್ತು. ಸರ್ವಪಕ್ಷ ಸಭೆ, ವಿಶೇಷ ಅಧಿವೇಶನಕ್ಕೆ ಬಂದಿಲ್ಲ. ಕನಿಷ್ಠ ಹೇಳಿಕೆಯನ್ನೂ ಕೊಟ್ಟಿಲ್ಲ ಎಂದು ರೈತರು ಪ್ರತಿಭಟಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಯ್ತು. ವಿಮಾನ ನಿಲ್ದಾಣದಿಂದ ನೇರವಾಗಿ ಬಂದ ಅಂಬರೀಷ್ ಪತ್ರಿಕಾಗೋಷ್ಠಿ ನಡೆಸಿ ಜನರ ಕ್ಷಮೆ ಕೇಳಿದ್ರು. ಮಾಧ್ಯಮಗಳು ಅಷ್ಟಕ್ಕೆ ಸುಮ್ಮನಾದ್ವು.

ಹಾಗಂತ ಅಂಬರೀಷ್ ಪತ್ರಿಕಾಗೋಷ್ಠಿ ಮಾಡಿ ಕ್ಷಮೆ ಕೇಳಿದ್ದು ಮಾಧ್ಯಮಗಳ ಹೆದರಿಕೆಯಿಂದ ಅಲ್ಲ. ಮಾದ್ಯಮಗಳ ಸಲಹೆಯಿಂದ. ಅಂಬರೀಷ್prakash ಅಭಿನಯದ ‘ದೊಡ್ಮನೆ ಹುಡುಗ’ ಸಿನೇಮಾ ರಿಲೀಸ್ ಆಗೋದಿತ್ತು. ಸಿನೇಮಾ ಪ್ರಮೋಶನ್ ಗಾಗಿ ಮಾಧ್ಯಮಗಳಿಗೆ ಲಕ್ಷಗಟ್ಟಲೆ ಸುರಿಯಲಾಗಿತ್ತು. ಅಷ್ಟರಲ್ಲಿ ಮಂಡ್ಯ ರೈತರು ದೊಡ್ಮನೆ ಹುಡುಗ ಸಿನೇಮಾದ ಬ್ಯಾನರ್ ನಲ್ಲಿ ಹಾಕಲಾಗಿದ್ದ ಅಂಬರೀಷ್ ಚಿತ್ರವನ್ನು ಹರಿಯಲಾರಂಬಿಸಿದ್ರು. ದೊಡ್ಮನೆ ಚಿತ್ರದ ಪ್ರಚಾರಕ್ಕಾಗಿ ಹಣ ಪಡೆದುಕೊಂಡರೂ ರೈತರ ಹೋರಾಟ ಈ ಸಂಧರ್ಭದಲ್ಲಿ ಮುಚ್ಚಿ ಹಾಕುವಂತಿರಲಿಲ್ಲ. ಅದಕ್ಕಾಗಿ ಪತ್ರಕರ್ತರನೇಕರ ಆತ್ಮೀಯ ಸಲಹೆಯಂತೆ ಅಂಬರೀಷ್ ಪತ್ರಿಕಾಗೋಷ್ಠಿ ನಡೆಸಿದ್ರು. ಪತ್ರಕರ್ತರು ಮತ್ತೆಂದೂ ಅವರ ರಾಜೀನಾಮೆ ಕೇಳಲಿಲ್ಲ. ರಾಜೀನಾಮೆಗೆ ಆಗ್ರಹಿಸುವಂತೆ ರೈತರನ್ನು ಪ್ರಚೋದಿಸಲಿಲ್ಲ. ಅಲ್ಲಿ ಜಾತಿ ಕಾರಣದ ಜೊತೆ ಜೊತೆಗೇ ಬಲವಾಗಿ ಹೆಜ್ಜೆ ಹಾಕಿದ್ದು ಆರ್ಥಿಕ ಕಾರಣ.

ರಮ್ಯಾ ವಿಚಾರವೂ ಇದಕ್ಕಿಂತ ಹೊರತಲ್ಲ. ಪಾಕಿಸ್ತಾನದಲ್ಲಿ ನಮ್ಮ ನಿಮ್ಮಂತೆಯೇ ಒಳ್ಳೆಯ ಜನರಿದ್ದಾರೆ. ಸ್ವರ್ಗ ನರಕ ಅಲ್ಲೂ ಇದೆ ಇಲ್ಲೂ ಇದೆ ಎಂದು ಹೇಳಿಕೆ ಕೊಟ್ಟಿದ್ದನ್ನು ಮಾದ್ಯಮಗಳು ಹಿಂದುತ್ವ ಅವಾಹಿಸಿಕೊಂಡು ಸುದ್ದಿ ಮಾಡಿದ್ದವು. ಕೆಲವು ಟಿವಿ ಚಾನೆಲ್ ಗಳಂತೂ ರಮ್ಯಾಗೆ ಪಾಕ್ ನಲ್ಲಿ ಸ್ವರ್ಗ ತೋರಿಸಿದವರು ಯಾರು ? ಎಂದು ಕೀಳಾಗಿ ಪ್ರಶ್ನಿಸಿದ್ರು. ರಮ್ಯಾ ಜಾತಿಯಲ್ಲಿ ಒಕ್ಕಲಿಗರಾದರೂ ಆಕೆ ಮಹಿಳೆ ಎಂಬ ಕಾರಣಕ್ಕೆ ಹೀಗೆ ಬೆನ್ನುಬಿದ್ದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಮಹಿಳೆಯೊಬ್ಬಳು ಇಷ್ಟು ನಿಷ್ಠುರವಾಗಿ ಮಾತಾಡುವುದನ್ನು ಒಂದು ವೇಳೆ ಸಮಾಜ ಸಹಿಸಿದ್ರೂ ಕನ್ನಡ ಮಾಧ್ಯಮಗಳು ಸಹಿಸುವಷ್ಟು ಪ್ರಬುದ್ದತೆಯನ್ನು ಬೆಳೆಸಿಕೊಂಡಿಲ್ಲ.

ಅದಿರಲಿ, ರಮ್ಯಾ ಇದೇ ಹೇಳಿಕೆ ಕೊಡುವಾಗ ರಮ್ಯಾ ಬಳಿ ಹೈ ಬಜೆಟ್ಟಿನ ಸಿನೀಮಾ ಒಂದಿದ್ದರೆ ಮಾದ್ಯಮಗಳ ವರ್ತನೆ ಹೇಗಿರುತ್ತಿತ್ತು? ಆ ಸಿನೇಮಾ ಪ್ರಮೋಶನ್ ಗುತ್ತಿಗೆ ಪಡೆದುಕೊಂಡವನ ಹಣ ದಿಕ್ಕರಿಸಿ ರಾಷ್ಟ್ರಪ್ರೇಮ ಮೆರೆಯುತ್ತಿದ್ದವಾ ? ಖಂಡಿತ ಇಲ್ಲ. ದರ್ಶನ್ ತನ್ನ ಹೆಂಡತಿಗೆ ಹೊಡೆದಾಗ ಎಕ್ಸ್ ಕ್ಲೂಸಿವ್ ನ್ಯೂಸ್ ಹಾಕುತ್ತಿದ್ದ ಚಾನೆಲ್ ಗಳು ನಿರ್ಮಾಪಕ ಕಡೆಯಿಂದ ಫೋನ್ ಬಂದ ತಕ್ಷಣ ಮೌನ ವಹಿಸಿದ ಉದಾಹರಣೆ ನಮ್ಮ ಮುಂದಿದೆ. ಶಾರುಕ್ ಖಾನ್ ಅಸಹಿಷ್ಣುತೆ ವಿವಾದವು ತಾರಕಕ್ಕೇರಲು ಮಾದ್ಯಮಗಳನ್ನು ಜಾಹೀರಾತು ಕಂಪನಿಗಳು, ಸಿನೇಮಾ ಪ್ರಮೋಶನ್ ಕಂಪನಿಗಳು ಬಿಡಲಿಲ್ಲ. ಕೈಯ್ಯಲ್ಲಿ ಜಾಹೀರಾತು ಇಲ್ಲದ, ಸಿನೇಮಾ ಇಲ್ಲದ ಶಾರೂಕ್ ಖಾನ್ ಅಸಹಿಷ್ಣುತೆಯ ಹೇಳಿಕೆ ನೀಡಿದ್ದರೆ ಮಾದ್ಯಮಗಳು ಆತನನ್ನು ಗಡಿಪಾರು ಮಾಡದೆ ಬಿಡುತ್ತಿರಲಿಲ್ಲವೇನೋ?

ಈಗ ಪ್ರಕಾಶ ರೈ ರಾಮಾಯಣದ ಮೂಲ ವಿಚಾರಕ್ಕೆ ಬರೋಣಾ. ಇದೊಳ್ಳೆ ರಾಮಾಯಣ ಎಂಬ ಚಿತ್ರದ ಪ್ರಮೋಶನ್ ಕಂಪನಿ ಆಹ್ವಾನದ ಮೇರೆಗೆ ಹೆಚ್ಚಿನ ಎಲ್ಲಾ ಚಾನೆಲ್ ಗಳು ಪ್ರಕಾಶ್ ರೈ ಸಂದರ್ಶನ ಮಾಡಿದ್ದವು. ಪ್ರಮೋಶನ್ ಕಂಪನಿಯಿಂದ ಚಾನೆಲ್ ಗಳಿಗೆ ಸಲ್ಲಿಕೆಯಾಗಿರೋ ಹಣಕ್ಕನುಗುಣವಾಗಿ ಅರ್ಧ ಗಂಟೆ, ಒಂದು ಗಂಟೆ ವಿಶೇಷ ಕಾರ್ಯಕ್ರಮ, ಸಂದರ್ಶನ ನಡೆಸುತ್ತಿದ್ದವು. ನಿಜ ಹೇಳಬೇಕೆಂದರೆ, ಲೋಗೋ ಬಳಸದೆ ಲ್ಯಾಪಲ್ ಹಾಕಿ ಇಂಟರ್ ವ್ಯೂ ಮಾಡುವುದರಿಂದ ಪ್ರಕಾಶ್ ರೈಗೆ ಯಾವ ಚಾನೆಲ್ ಗೆ ಸಂದರ್ಶನ ಕೊಡುತ್ತಿದ್ದೇನೆ ಎಂಬ ಅರಿವೂ ಇರುವುದಿಲ್ಲ!

ಜನಶ್ರಿ ಚಾನೆಲ್ ಅ್ಯಂಕರ್ ಕೇಳಬಾರದ್ದೇನೂ ಕೇಳಿರಲಿಲ್ಲ. ಇದೊಳ್ಳೆ ರಾಮಾಯಣ ಎಂಬ ಟೈಟಲ್ ನಂತೆಯೇ ಕಾವೇರಿ ಸಮಸ್ಯೆ ಇದೊಳ್ಳೆ ರಾಮಾಯಣ ಆಗಿದೆ.kannada-news-channels ಕಾವೇರಿ ಜಲವಿವಾದ ಕುರಿತು ನಿಮ್ಮ ಅಭಿಪ್ರಾಯ ಏನು? ಎಂದು ಕೇಳಿದ್ರು. ತನ್ನ ಸಿನೇಮಾದ ಬಗೆಗಿನ ಪೇಯ್ಡ್ ಕಾರ್ಯಕ್ರಮದಲ್ಲಿ ಈ ಅಂಶ ಬೇಡ ಎಂದರೆ ಅದನ್ನು ಸಂಸ್ಥೆಗೆ ಮನವಿ ಮಾಡಿದರಾಯ್ತು. ಕಾವೇರಿ ವಿಚಾರವಾಗಿ ಕನ್ನಡದ ನಟ ನಟಿಯರು ಬೀದಿಗಿಳಿದಿದ್ದ ಮಾಹಿತಿ ಹೊಂದಿದ್ದ ಅ್ಯಂಕರ್ ಅಮಾಯಕರಾಗಿ ಈ ಪ್ರಶ್ನೆ ಕೇಳಿದ್ದಿರಬಹುದು. ಪ್ರಶ್ನೆ ಬೇಡ ಎಂದರೆ ಅದನ್ನಷ್ಟೇ ಕಟ್ ಮಾಡಿ ಮುಂದಿನ ಪ್ರಶ್ನೆಗೆ ಹೋಗಬಹುದಿತ್ತು. ಆದರೆ ಪ್ರಕಾಶ್ ರೈ ಹಾಗೆ ಮಾಡಲಿಲ್ಲ. ಲ್ಯಾಪಲ್ ಮೈಕ್ ಕಿತ್ತೆಸೆದು “ಏನ್ರೀ, ನಿಮಗೆ ಕಾಂಟ್ರವರ್ಸಿ ಬೇಕಾ? ನಿಮ್ಮ ಬಗೆಗಿನ ಕಾಂಟ್ರವರ್ಸಿ ಹೇಳಬೇಕಾ” ಎಂದು ಸಿನೇಮಾ ವಾಯ್ಸ್ ತಂದುಕೊಂಡು ಬೊಬ್ಬೆ ಹಾಕಿದ್ರು. ಉದ್ದೇಶಪೂರ್ವಕವಾಗಿ ಕೇಳಿಲ್ಲ ಸರ್ ಎಂದು ಅ್ಯಂಕರ್ ಪದೇ ಪದೇ ಹೇಳಿದ್ರೂ ಕೇಳದಿದ್ದಾಗ ಕೊನೆಗೆ ಜವಾಬ್ದಾರಿಯುತ ವ್ಯಕ್ತಿ ಬಳಿ ಕೇಳಿದ್ದೀನಿ ಅಷ್ಟೆ ಅಂದುಕೊಂಡು ಅ್ಯಂಕರ್ ಹೊರನಡೆದ್ರು.

ಈ ವಿಡಿಯೋ ವೈರಲ್ ಆದ್ರೂ ಜನಶ್ರೀ ಹೊರತುಪಡಿಸಿ ಬೇರಾವ ಮಾಧ್ಯಮಗಳು ಇದನ್ನೆತ್ತಿಕೊಂಡು ಸುದ್ದಿ ಮಾಡಿಲ್ಲ. ಕಾರಣ, ಎಲ್ಲಾ ಮಾಧ್ಯಮಗಳಿಗೆ ಇದೊಳ್ಳೆ ರಾಮಾಯಣ ಚಿತ್ರದ ಪ್ರಮೋಶನ್ ಗೆ ಹಣ ಸಂದಾಯ ಆಗಿರುತ್ತದೆ.

ಹೀಗೆ ಜಾತಿ, ಧರ್ಮದ ಕಾರಣವನ್ನೇ ಟಿ ಆರ್ ಪಿ ಯನ್ನಾಗಿಸಿ ಸಿನೇಮಾ ಮಂದಿಯ ಬೆನ್ನು ಬೀಳುವ ಮಾಧ್ಯಮದ ಮಂದಿ ಹಣದ ವಿಷಯ ಬಂದಾಗ ತಮ್ಮ ಹುಸಿ ರಾಷ್ಟ್ರಪ್ರೇಮ, ನಾಡಪ್ರೇಮಕ್ಕೆ ಬೆನ್ನು ತಿರುಗಿಸುತ್ತಾರೆ. ಜಾತಿ, ಧರ್ಮ, ಲಿಂಗ ತಾರತಮ್ಯದ ತನ್ನದೇ ಮನಸ್ಥಿತಿಯನ್ನು ಹಣ ಸಂಪಾದಿಸುವ ಸರಕನ್ನಾಗಿ ಪರಿವರ್ತಿಸುವ ಕಲೆ ಗೊತ್ತಿರೋದು ಬಹುಷಃ ಪತ್ರಕರ್ತರಿಗೆ ಮಾತ್ರವೆಂದು ಕಾಣುತ್ತದೆ.

ವಾಟ್ಸಾಪ್ ನಲ್ಲಿ ಜೊತೆಯಾದವರು ಒಟ್ಟಿಗೆ ಕುಳಿತು ಸಿನಿಮಾ ನೋಡಿದರು

  • – ಶಿವರಾಂ ಕೆಳಗೋಟೆ

‘ಚೋಮನ ದುಡಿ’ ಸಿನಿಮಾ ಪ್ರದರ್ಶನ ಮುಗಿಯಿತು. ಅಭಿಪ್ರಾಯ ಹಂಚಿಕೊಳ್ಳುವ ಸಮಯ. ಹೊಸಪೇಟೆ ಮೂಲದ ವಿದ್ಯಾರ್ಥಿನಿ ಮಾತನಾಡುತ್ತಾ, “ಈ ಸಿನಿಮಾ ನಾನು ಎರಡು-ಮೂರು ಬಾರಿ ನೋಡಿದ್ದೇನೆ. ಚೋಮನನ್ನು ನೋಡಿದಾಗಲೆಲ್ಲಾ ನನಗೆ ನನ್ನೂರಲ್ಲಿರುವ ದೊಡ್ಡಪ್ಪ ನೆನಪಾಗುತ್ತಾರೆ. ನಾನು ಚಿಕ್ಕಂದಿನಿಂದ ನೋಡುತ್ತಿದ್ದೇನೆ, ಅವರು ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಾರೆ. ತುಂಡು ಭೂಮಿಯನ್ನು ಹೊಂದುವ ಅವರ ಕನಸು ಇಂದಿಗೂ ಈಡೇರಿಲ್ಲ. ಈ ಸಿನಿಮಾ ನಮ್ಮದೇ ಕತೆ ಅನ್ನಿಸುತ್ತೆ” ಎಂದರು.

 

ನೆನಪಿರಲಿ – ಶಿವರಾಮ ಕಾರಂತರುwhatsapp-image-2016-09-24-at-10-35-50 ಚೋಮನ ದುಡಿ ಕಾದಂಬರಿ ಬರೆದದ್ದು 1930 ರ ದಶಕದಲ್ಲಿ. ಅದು ಬಿ.ವಿ.ಕಾರಂತರ ನಿರ್ದೇಶನದಲ್ಲಿ ಸಿನಿಮಾ ಆದದ್ದು 1975 ರಲ್ಲಿ. ಮೊನ್ನೆಯಷ್ಟೆ ಮಂಗಳೂರಲ್ಲಿ ಈ ಸಿನಿಮಾ ಪ್ರದರ್ಶನ ನಡೆಯಿತು. ಈ ಸುದೀರ್ಘ ಕಾಲಾವಧಿಯಲ್ಲಿ ನೇತ್ರಾವದಿ ಸಾಕಷ್ಟು ಹರಿದಿದ್ದಾಳೆ, ಚೋಮನಂತಹವರ ಬದುಕಲ್ಲಿ ಬದಲಾವಣೆ ಆದದ್ದು ಕಡಿಮೆ. ಅದೇ ಚೋಮನದುಡಿ ಕಾದಂಬರಿ ಬರೆದು, ಚೋಮನ ಭೂಮಿ ಹೊಂದುವ ಕನಸನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟ ಶಿವರಾಮ ಕಾರಂತರು 1970 ರ ದಶಕದ ಭೂಸುಧಾರಣೆ ಕಾಯಿದೆ ಜಾರಿ ಹೊತ್ತಿಗೆ ಬದಲಾಗಿದ್ದಂತೆ ಕಾಣುತ್ತಾರೆ. ಅವರು ‘ಒಬ್ಬರಿಂದ ಕಿತ್ತು ಮತ್ತೊಬ್ಬರಿಗೆ ಭೂಮಿ ಕೊಡುವ’ ಬಗ್ಗೆ ಟೀಕೆಯ ಧಾಟಿಯಲ್ಲಿ ಮಾತನಾಡಿದ್ದರು ಎಂದು ಉಡುಪಿಯ ಉಪನ್ಯಾಸಕಿ ನೆನಪಿಸಿಕೊಂಡರು.

ಈ ಮೇಲಿನ ಸಂದರ್ಭ ನಡೆದದ್ದು ಕಳೆದ ಶನಿವಾರ ಮತ್ತು ಭಾನುವಾರ (ಸೆ.24-25) ಮನುಜಮತ ವಾಟ್ಸಾಪ್ ಗುಂಪು ಮತ್ತು ಮಂಗಳೂರಿನ ಸಹಮತ ಫಿಲ್ಮ್ ಸೊಸೈಟಿ ಒಟ್ಟಿಗೆ ಆಯೋಜಿಸಿದ್ದ ಸಿನಿ ಉತ್ಸವದಲ್ಲಿ. ಸೋಷಿಯಲ್ ಮೀಡಿಯಾದ ಫೇಸ್ ಬುಕ್, ವಾಟ್ಸಾಪ್ ಗಳ ಬಗ್ಗೆ ಅಲ್ಲಲ್ಲಿ ನೆಗೆಟಿವ್ ಕಾಮೆಂಟುಗಳನ್ನು ಕೇಳುತ್ತಿರುತ್ತೇವೆ. ಆದರೆ ಪಾಸಿಟಿವ್ ಬೆಳವಣಿಗೆಗಳೂ ಈ ಸೋಷಿಯಲ್ ಮೀಡಿಯಾ ಟೂಲ್ ಗಳಿಂದ ಸಾಧ್ಯವಾಗಿದೆ ಎನ್ನುವುದಕ್ಕೆ ಮನುಜಮತ ಗುಂಪೂ ಒಂದು ಸಾಕ್ಷಿ. 2015 ರಲ್ಲಿ ಸಮಾನ ಮನಸ್ಕರು ಎಂಬ ಕಾರಣಕ್ಕೆ ಒಂದು ಗುಂಪು ರೂಪ ಪಡೆಯಿತು. ಅದರ ಕರ್ತೃ ಬರಹಗಾರ ಹರ್ಷಕುಮಾರ್ ಕುಗ್ವೆ. ನಾಡಿನಾದ್ಯಂತ ಬೇರೆ ಬೇರೆ ಹಿನ್ನೆಲೆಯ ಜನರನ್ನು ಒಂದೆಡೆ ಸೇರಿಸಿದರು. ಚರ್ಚೆಗಳು ಬಿರುಸಾಗಿ ನಡೆದವು. ಕೆಲ ಹಿರಿಯರಂತೂ ರಾತ್ರಿಯೆಲ್ಲಾ ಹಲವು ವಿಚಾರಗಳ ಚರ್ಚೆಗಳಲ್ಲಿ ಪಾಲ್ಗೊಂಡ ಉದಾಹರಣೆಗಳು ಬೇಕಾದಷ್ಟಿವೆ. ಅಲ್ಲಲ್ಲಿ ಈ ಗುಂಪಿನ ಚಟುವಟಿಕೆಗಳು ಚರ್ಚೆಗೆ ಬರುತ್ತಿದ್ದವು. ಆ ಬಗ್ಗೆ ಕೇಳಿ ತಿಳಿದಿದ್ದ ಹಲವwhatsapp-image-2016-09-25-at-20-02-00ರಂತೂ ಹೇಗಾದರೂ ಮಾಡಿ ಈ ಗುಂಪಿಗೆ ಸೇರಿಕೊಳ್ಳಬೇಕೆಂದು ನಾನಾ ಪ್ರಯತ್ನ ಮಾಡಿದರು. ಕೆಲವರು ಅಡ್ಮಿನ್ ಗಳಿಗೆ ಬೇರೆಯವರ ಮೂಲಕ ಶಿಫಾರಸ್ಸು ಮಾಡಿಸಿದಂತಹ ಸಂದರ್ಭಗಳೂ ಇದ್ದವು.

ಈ ಗುಂಪಿನ ವಿಶೇಷ ಎಂದರೆ, ಇಲ್ಲಿಯವರು ಮೊಬೈಲ್ ಆಚೆಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿದ್ದು. ಬೆಂಗಳೂರು ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಎಂ.ಬಿ.ರಾಮಮೂರ್ತಿಯವರೂ ಈ ಗುಂಪಿನ ಆಕ್ಟಿವ್ ಸದಸ್ಯ. ಅವರಿಗೆ ಸೇರಿದ್ದ ಭೂಮಿಯಲ್ಲಿ ಸದಸ್ಯರೆಲ್ಲಾ ಸೇರಿ ವನಮಹೋತ್ಸವ ಕಾರ್ಯಕ್ರಮ ಮಾಡಿದರು. ಸದಸ್ಯರು ಖುದ್ದು ಹೋಗಿ ನೆಟ್ಟ ಗಿಡಗಳ ಬಗ್ಗೆ ಆಗಾಗ ಅಪ್ ಡೇಟ್ ಈ ಗುಂಪಿನಲ್ಲಿರುತ್ತೆ. ಸುಂದರ ಮಲೆಕುಡಿಯ ಎಂಬ ಕಾರ್ಮಿಕನನ್ನು ಮಾಲೀಕ ಹೀನಾಯವಾಗಿ ಹಿಂಸಿಸಿದಾಗ, ಮಾನವೀಯ ನೆಲೆಯಲ್ಲಿ ಈ ಗುಂಪಿನ ಸದಸ್ಯರು ಹಣ ಸಂಗ್ರಹಿಸಿ ಕೊಟ್ಟರು. ದೀನ ದಲಿತರ ಶೋಷಣೆಯಂತ ಪ್ರಕರಣಗಳು ನಡೆದಾಗ ಇಲ್ಲಿಯ ಸದಸ್ಯರು ಬೀದಿಗಿಳಿದು ಪ್ರತಿಭಟನೆಯನ್ನೂ ಮಾಡಿದ್ದಾರೆ.whatsapp-image-2016-09-25-at-21-30-38

 

ಈ ಚಟುವಟಿಕೆಗಳ ಮುಂದುವರಿದ ಭಾಗವೇ ಸಿನಿ ಉತ್ಸವಗಳು. ಮೊದಲ ಬಾರಿಗೆ ಶಿವಮೊಗ್ಗ ಹತ್ತಿರದ ಸದಸ್ಯರು ಕುಪ್ಪಳಿಯಲ್ಲಿ ಎರಡು ದಿನದ ಸಿನಿ ಉತ್ಸವ ಮಾಡಿದರು. ನಂತರ ಸಿನಿ ತೇರು ಹಾಸನ ತಲುಪಿತು. ಕಳೆದ ಮೇ ತಿಂಗಳಲ್ಲಿ ಉಡುಪಿಯಲ್ಲಿಯೂ ಉತ್ಸವ ಇತ್ತು. ಸದ್ಯ ಮಂಗಳೂರಿನಲ್ಲಿ ನಡೆದದ್ದು ನಾಲ್ಕನೆಯದು. ಹರ್ಷ ಕುಮಾರ್ ಕುಗ್ವೆ, ಕಿರಣ್ ಕುಮಾರ್ ಮಾರಶೆಟ್ಟಿಹಳ್ಳಿ, ಪ್ರತಿಭಾ ಸಾಗರ, ಹಿರಿಯರಾದ ಕೆ.ಫಣಿರಾಜ್, ಸುಮಾ, ಉಡುಪಿಯ ಬಲ್ಲಾಳ್ ಅವರು, ಸುಮಾ, ಹಾಸನದ ರೋಹಿತ್ ಇಂತಹ ಅನೇಕ ಮಂದಿ (ಕೆಲವರ ಹೆಸರು ಇಲ್ಲಿ ಬಿಟ್ಟಿರಬಹುದು) ಈ ಹಬ್ಬಗಳನ್ನು ಯಶಸ್ವಿಯಾಗಿ ಆಯೋಜಿಸುವುದರಲ್ಲಿ ಪರಿಶ್ರಮ ಪಟ್ಟಿದ್ದಾರೆ.

whatsapp-image-2016-09-25-at-09-40-35

ನಾಲ್ಕೂ ಹಬ್ಬಗಳಲ್ಲಿ ಸರಾಸರಿ 50-60 ಮಂದಿ ಪಾಲ್ಗೊಂಡರು. ಹಾಗಂತ ಇಲ್ಲಿ ಬರುವವರೆಲ್ಲಾ ಸಿನಿ ಪ್ರಿಯರು ಅಥವಾ ಸಿನಿಮಾ ಬಗ್ಗೆ ಆಸಕ್ತಿ ಉಳ್ಳವರು ಎಂದಷ್ಟೇ ಹೇಳಿದರೆ ನ್ಯಾಯ ಸಲ್ಲಿಸಿದಂತಾಗುವುದಿಲ್ಲ. ಎಲ್ಲಾ ಜನಪರ ಮನಸುಗಳು ಬಯಸುವ ಬದಲಾವಣೆಗೆ ಸಿನಿಮಾಗಳು ಬಹುಮುಖ್ಯ ಮಾಧ್ಯಮ ಎಂದು ನಂಬಿರುವವರು ಹಾಗೂ ಗೆಳೆಯರೊಂದಿಗೆ ಸಿನಿಮಾ ನೋಡುವ ಕ್ರಿಯೆಯೇ ಒಂದು ವಿಶೇಷ ಎಂದು ತಿಳಿದುಕೊಂಡವರು.

ಮಲಯಾಳಂನ ಜಯನ್ ಚೇರಿಯನ್ ನಿರ್ದೇಶಿದಿ ಪಾಪಿಲಾನ್ ಬುದ್ಧ ಸಿನಿಮಾ ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು. ಸಿನಿಮಾ ಒಂದು ವಿಷಾದದ ನಿಶಬ್ದದೊಂದಿಗೆ ಮುಗಿಯುತ್ತದೆ. ನಿರ್ದೇಶಕನ ಯಶಸ್ಸು ಎಂದರೆ, ಪ್ರೇಕ್ಷಕರು ಕೂಡ ಅದೇ ನಿಶಬ್ದವನ್ನು ಮತ್ತಷ್ಟು ಕಾಲ ಕೊಂಡೊಯ್ಯುತ್ತಾರೆ. ಸಿನಿಮಾ ನೋಡಿ ಮಲಗಿದವರಿಗೆ ರಾತ್ರಿ ಅಸ್ಪಷ್ಟ ಕನಸುಗಳಲ್ಲಿ ಅದೇ ಸಿನಿಮಾದ ದೃಶ್ಯಗಳು ಬಂದಿದ್ದೂ ಸುಳ್ಳಲ್ಲ. ಮರಾಠಿ ಸಿನಿಮಾ ಸೈರಟ್ ನಿರ್ದೇಶಕ ನಾಗರಾಜ್ ಮಂಜುಳೆಯವರ ಈ ಮೊದಲ ಚಿತ್ರ ಫಂಡ್ರಿ ಕೂಡಾ ನೋಡುಗರನ್ನು ಹಿಡಿದಿಟ್ಟಿದ್ದು ಮಾತ್ರವಲ್ಲ, ಆwhatsapp-image-2016-09-25-at-09-12-17ತ್ಮಾವಲೋಕನ ಮಾಡಿಕೊಳ್ಳಿರೋ ಎಂಬಂತೆ ‘ಕಲ್ಲಲ್ಲಿ ಹೊಡೆದು’ ಹೇಳಿತು. To Kill a Mocking Bird, The Day after Everyday, Never Judge People by their Appearance – ಇವು ಭಾಗವಹಿಸಿದವರು ನೋಡಿದ ಇತರ ಚಿತ್ರಗಳು. ಜಾತಿ, ಲಿಂಗ ಹಾಗೂ ಬಣ್ಣದ ಕಾರಣಗಳಿಗಾಗಿ ಶೋಷಣೆಗೆ ತುತ್ತಾದವರ ಕತೆಗಳನ್ನು ಆಧರಿಸಿದ ಸಿನಿಮಾಗಳಿವು. ಕಾರ್ಯಕ್ರಮ ಆರಂಭವಾಗಿದ್ದು ನಂಗೇಲಿ ನಾಟಕದೊಂದಿಗೆ. ಚಿಂತಕ ಚಂದ್ರ ಪೂಜಾರಿ ಆರಂಭದ ಮಾತುಗಳನ್ನಾಡಿದರು.

ಮಂಗಳೂರು ಸಹಮತದ ಐವಾನ್ ಡಿಸಿಲ್ವಾ, ನಾದ, ವಾಣಿ, ಕಿಟ್ಟಣ್ಣ ಮತ್ತಿತರರು ಉತ್ಸಾಹದಿಂದ ಕಾರ್ಯಕ್ರಮ ಆಯೋಜಿಸಿದ್ದರು. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಮಾಡುವ ಉದ್ದೇಶ ಈ ಬಳಗದ ಸದಸ್ಯರದು.

ಫೋಟೋಗಳು: ಐವಾನ್ ಡಿಸಿಲ್ವಾ.

ಚಿತ್ರದುರ್ಗ: ಹಿಂದೂ ಮಹಾಗಣಪತಿ – ದಲಿತ ಮಹಾಗಣಪತಿ

– ಶಿವರಾಂ ಕೆಳಗೋಟೆ

ಗಣೇಶ ವಿಸರ್ಜನೆ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಇದೇ 24 ರಂದು ಚಿತ್ರದುರ್ಗದ ಹಿಂದೂ ಮಹಾ ಗಣಪತಿ ವಿಸರ್ಜನೆ ನಿಗದಿಯಾಗಿದೆ. ದಿನ ಹತ್ತಿರವಾಗುತ್ತಿದ್ದಂತೆಯೇ ಚಿತ್ರದುರ್ಗದ ಜನರಲ್ಲಿ ಅವ್ಯಕ್ತ ಆತಂಕ, ಏನಾಗುತ್ತದೆಯೋ ಎಂಬ ಭಯದ ವಾತಾವರಣ. ಏಕೆಂದರೆ, ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನೆ ಆರಂಭವಾದ ಕಳೆದ ಮೂರು ವರ್ಷಗಳಿಂದಲೂ ವಿಸರ್ಜನೆ ದಿನದ ಮೆರವಣಿಗೆಗಳಲ್ಲಿ ಬೇರೆ ಬೇರೆ ಊರುಗಳಿಂದ ನೂರಾರು ಜನ ನಗರಕ್ಕೆ ಬಂದು ಕೇಸರಿ ವಸ್ತ್ರ ಧರಿಸಿ ಪಾಲ್ಗೊಳ್ಳುತ್ತಾರೆ. ಕೋಮು ಭಾವನೆ ಕೆರಳಿಸುವ, ಹಿಂದೂ ಉನ್ಮಾದದ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಾರೆ. ಮೆರವಣಿಗೆ ಮುಗಿವ ಹೊತ್ತಿಗೆ ನಗರದ ಯಾವ ಭಾಗದಲ್ಲಾದರೂ ಹಿಂಸೆಯ ಕಿಡಿ ಹಬ್ಬುತ್ತದೇನೋ ಎಂಬ ಆತಂಕದಲ್ಲಿ ಜನರು ಇರುತ್ತಾರೆ.

ಸಮಾಜದ ನೆಮ್ಮದಿ ಹಾಗೂ ಶಾಂತಿಗಾಗಿ ದೇವರ ಪೂಜೆ ನಡೆಸುವುದು ಪದ್ಧತಿ. ವಿಪರ್ಯಾಸ ಎಂದರೆ ಇಂತಹ ಸಂದರ್ಭದಲ್ಲಿಯೇ ಶಾಂತಿ ಕದಡಬಹುದೇನೋ ಎಂಬ ಆತಂಕದಿಂದ ಪೊಲೀಸ್ ಇಲಾಖೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ ಬಂದೋಬಸ್ತ್ ಗೆ ನಿಯೋಜಿಸುತ್ತಾರೆ. ಸ್ವತಃ ಜಿಲ್ಲಾ ರಕ್ಷಣಾಧಿಕಾರಿಯೇ ಕಂಟ್ರೋಲ್ ರೂಮ್ganesh-ugra ನಲ್ಲಿ ಕೂತು ಡ್ರೋನ್ ಕೆಮರಾಗಳ ಮೂಲಕ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುತುವರ್ಜಿ ವಹಿಸುತ್ತಾರೆ. ಕಳೆದ ವರ್ಷಗಳಲ್ಲಿ ಮೆರವಣಿಗೆ ವೇಳೆ ಸಣ್ಣ ಪುಟ್ಟ ಗಲಭೆಗಳೂ ನಡೆದಿವೆ.

ಇದೆಲ್ಲವನ್ನೂ ಕಂಡು ಬೇಸತ್ತ ಕೆಲ ದಲಿತ ಪರ ಸಂಘಟನೆಗಳು ಹಾಗೂ ಪ್ರಗತಿಪರ ಹೋರಾಟಗಾರರು ಈ ಬೆಳವಣಿಗೆಯನ್ನು ಎದುರಿಸುವುದು ಹೇಗೆ ಎಂಬ ಗೊಂದಲಕ್ಕೆ ಬಿದ್ದು ಈ ಬಾರಿ ದಲಿತ ಗಣಪತಿ ಎಂದು ಪರ್ಯಾಯ ಉತ್ಸವಕ್ಕೆ ನಾಂದಿ ಹಾಡಿದ್ದಾರೆ. ಅವರು ಹಳೇ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಇದೇ 22 ರಂದು ವಿಸರ್ಜನೆ ಹಮ್ಮಿಕೊಂಡಿದ್ದಾರೆ. ಆ ವೇಳೆ ನಡೆಯುವ ಮೆರವಣಿಗೆಗೆ ಏಕತಾ ಯಾತ್ರೆ ಎಂಬ ಹೆಸರಿಟ್ಟಿದ್ದಾರೆ. ಪ್ರತಿಷ್ಟಾಪನೆ ನಂತರ ಪ್ರ ತಿ ದಿನ ವಿವಿಧ ಧಾರ್ಮಿಕ ಮುಖಂಡರು (ಅನ್ಯ ಧರ್ಮೀಯರೂ ಸೇರಿದಂತೆ) ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ದಲಿತ ಸಂಘರ್ಷ ಸಮಿತಿಯ ಮಹಾಲಿಂಗಪ್ಪ ಈ ವ್ಯವಸ್ಥೆ ಮಾಡುವಲ್ಲಿ ನೇತೃತ್ವ ವಹಿಸಿದ್ದಾರೆ.

“ಹಿಂದೂ ಮಹಾ ಗಣಪತಿ ಆಯೋಜಕರಿಗೆ ಬೆಂಗಾವಲಾಗಿ ನಿಂತು ಅವರ ಮೆರವಣಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಅವರ ಘೋಷಣೆಗಳನ್ನು ಏರಿದ ದನಿಯಲ್ಲಿ ಕೂಗುತ್ತಿದ್ದವರು ನಮ್ಮದೇ ಮನೆಯ ದಲಿತ ಹಾಗೂ ಹಿಂದುಳಿದ ಹುಡುಗರು. ಆದರೆ, ಅಲ್ಲಿಯ ಆಚರಣೆ ರೀತಿ-ನೀತಿಗಳಿಂದ ಆಗುವ ಅಪಾಯಗಳ ಪರಿಚಯ ಆ ಹುಡುಗರಿಗೆ ಇಲ್ಲ. ಅವರನ್ನು ಇತ್ತ ಸೆಳೆಯಬೇಕೆಂದರೆ, ಅವರಿಗೆ ಪರ್ಯಾಯ ಬೇಕು. ದಲಿತ ಮಹಾಗಣಪತಿ ಪ್ರತಿಷ್ಟಾಪನೆ ಒಂದು ವೈಚಾರಿಕ ಪರ್ಯಾಯ ಅಲ್ಲದಿರಬಹುದು, ಆದರೆ, ಆರಂಭದಲ್ಲಿ ಅವರನ್ನು ಸರಿದಾರಿಗೆ ಸೆಳೆಯುವುದಕ್ಕೆ ಒಂದು ತಂತ್ರವಾಗಿಯಾದರೂ ಇಂತಹದೊಂದು ಕಾರ್ಯಕ್ರಮದ ಅಗತ್ಯವಿದೆ” ಎನ್ನುತ್ತಾರೆ ದಲಿತ ಮಹಾಗಣಪತಿ ಉತ್ಸವದ ಸಮರ್ಥಕರೊಬ್ಬರು.

ಜನರಿಗೆ ತಪ್ಪು, ಸರಿಗಳ ಸ್ಪಷ್ಟ ಅರಿವಿದೆ. ಆದರೆ, ಒಂದು ತಪ್ಪಿನ ಎದುರಿಗೆ ಮತ್ತೊಂದು ಸರಿಯನ್ನು ತೋರಿಸಿದಾಗಲೇ ಅವರು ತಪ್ಪಿನ ಬಗ್ಗೆ ಮಾತನಾಡಲಾರಂಭಿಸುವುದು. ಎಲ್ಲರಿಗೂ ಗೊತ್ತು, ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ ದಿನ, ಅವರೊಂದಿಗೆ ಅನ್ಯಧರ್ಮಿಯರು ಪಾಲ್ಗೊಳ್ಳಲು ಸಾಧ್ಯವಿಲ್ಲ. ಅದೊಂದು ದಿನ ನಗರದಲ್ಲಿ ಏನೋ ಘಟಿಸಬಹುದು ಎಂಬ ಆತಂಕದಿಂದ ಕೆಲವರು ಊರು ಬಿಡುವ ಸಂದರ್ಭಗಳೂ ಇವೆ. ಆದರೆ, ಅವರಿಗೆ ‘ಏಕತಾ ಯಾತ್ರೆ’ ಯಂತಹ ಕಾರ್ಯಕ್ರಮದಲ್ಲಿ ಅಂತಹ ಆತಂಕಗಳಿರುವುದಿಲ್ಲ. ಮೇಲಾಗಿ ಬಹುಸಂಖ್ಯಾತ ಜನರಿಗೆ, ಸಮಾಜವನ್ನು ಒಡೆಯುವ ಯಾತ್ರೆಗಿಂತ ಏಕತಾ ಯಾತ್ರೆಯೇ ನಮ್ಮ ಆಯ್ಕೆಯಾಗಬೇಕು ಎಂದು ಮನವರಿಕೆ ಆಗುತ್ತದೆ, ಎನ್ನುವುದು ಅವರ ವಾದ.

ಹೀಗೆ ಮಾತನಾಡುತ್ತಿರುವಾganesh-dalitಗಲೆ ಇಪ್ಪತ್ತರ ಆಸುಪಾಸಿನಲ್ಲಿರುವ ಹುಡುಗನೊಬ್ಬ ತನ್ನ ಪಲ್ಸರ್ ಗಾಡಿಯಲ್ಲಿ ದಲಿತ ಮಹಾಗಣಪತಿ ಪೆಂಡಾಲ್ಗೆ ಬಂದ. ಅವನ ಗಾಡಿಯ ಮುಂಭಾಗ ಭಗತ್ ಸಿಂಗ್ ಚಿತ್ರ ಇತ್ತು. ಹಿಂದೆ ಜೈ ಹನುಮಾನ್ ಚಿತ್ರ. ‘ನಾನೇಕೆ ನಾಸ್ತಿಕ?’ ಎಂದು ಪುಸ್ತಕ ಬರೆದ ಭಗತ್ ಸಿಂಗ್ ಹಾಗೂ ಜೈ ಹನುಮಾನ್ ಚಿತ್ರ ಒಟ್ಟಿಗೆ ಹೋಗಲಾರವು. ಆ ಹುಡುಗನ ಅಸ್ಪಷ್ಟ, ಗೊಂದಲಕಾರಿ ಮನಸ್ಥಿತಿ ಇದುವರೆಗೆ ಹಿಂದೂ ಮಹಾಗಣಪತಿಗೆ ಪ್ರಮುಖ ಕಾರ್ಯಕರ್ತನನ್ನಾಗಿ ಮಾಡಿತ್ತು. ಈ ವರ್ಷವೂ ಅಲ್ಲಿಯೇ ಕೆಲಸ ಮಾಡುತ್ತಿದ್ದ ಹುಡುಗ ವಿರಾಮದ ವೇಳೆ ದಲಿತ ಮಹಾಗಣಪತಿ ಪೆಂಡಾಲ್ ಭೇಟಿ ಕೊಟ್ಟಿದ್ದ. ದಲಿತ ಸಂಘಟನೆ ಕಾರ್ಯಕರ್ತರು ಬಯಸಿದ್ದು ಇದನ್ನೇ.

ವಿಗ್ರಹ ಸ್ವರೂಪ:
ಎರಡೂ ಗುಂಪಿನವರು ಪ್ರತಿಷ್ಟಾಪಿಸಿರುವ ಗಣೇಶನ ವಿಗ್ರಹಗಳು ವಿಶಿಷ್ಟವಾಗಿವೆ. ದಲಿತ ಮಹಾಗಣಪತಿ ಹೆಗಲ ಮೇಲೆ ನೇಗಿಲು ಇದೆ. ಪ್ರತಿಷ್ಟಾಪನೆ ದಿನವೇ ರೈತ ಸಂಘದವರು ಭೇಟಿ ನೀಡಿ ವಿಗ್ರಹಕ್ಕೆ ಹಸಿರು ಶಾಲು ಹೊದಿಸಿ, ಆತನನ್ನು ರೈತ ಗಣಪತಿಯನ್ನಾಗಿ ಮಾಡಿದರು. ಈ ನೆಲದ ಬಹುಜನರ ಪ್ರತಿನಿಧಿಯಾಗಿ ಆ ಗಣಪ ಕಂಡರೆ ಅಚ್ಚರಿಯೇನಿಲ್ಲ.

ಆದರೆ ಹಿಂದೂ ಮಹಾಗಣಪತಿ ಹಾಗಲ್ಲ. ಆತ ಬೃಹದಾಕಾರವಾಗಿರುವ ಉಗ್ರನರಸಿಂಹನ ವಿಗ್ರಹದ ಮೇಲೆ ಸಣ್ಣದಾಗಿ ಗಣಪ ಕೂತಿದ್ದಾನೆ. ಉತ್ಸವ ಗಣೇಶನದೋ ಉಗ್ರನರಸಿಂಹನದೋ ಎಂಬ ಸಂಶಯ ಬರುತ್ತದೆ. ಜೊತೆಗೆ ಈ ರೂಪಕ್ಕೆ ಏನಾದರೂ ಹಿನ್ನೆಲೆ ಇದೆಯೇ ಎಂದು ಯೋಚಿಸಿದರೆ, ಏನೂ ತಿಳಿಯುತ್ತಿಲ್ಲ. ಉಗ್ರ ನರಸಿಂಹನಿಗೂ, ಶಿವನ ಮಗನಾದ ಗಣಪನಿಗೂ ಸಂಬಂಧವೆಲ್ಲಿ?