Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ನಮ್ಮ ಪ್ರಜಾಪ್ರಭುತ್ವ: ಒಂದೆರಡು ಪ್ರಶ್ನೆಗಳು

– ಶೌರೀಶ್ ಕುದ್ಕುಳಿ

ನಾವು ಒಪ್ಪಿಕೊಂಡಿರುವ ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಇಂದು ಎರಡು ಸಾಂವಿಧಾನಿಕ ಪ್ರಶ್ನೆಗಳು ಕಾಣಿಸಿಕೊಂಡಿವೆ. ಲಿಖಿತ ಸಂವಿಧಾನದ ಆಶಯಕ್ಕೆ ವಿರೋಧವಾಗಿ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ರಾಜಕೀಯ ಪಕ್ಷಗಳು grass-map-indiaಘೋಷಿಸಿಕೊಂಡಿರುವುದು ಮತ್ತು ಓರ್ವ ಸಾಮಾನ್ಯ (ಚಹಾ ಮಾರುವ/ಮಾರುತ್ತಿದ್ದ) ವ್ಯಕ್ತಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ನಿರ್ವಹಿಸಬಹುದೇ? ಎಂಬುದು ಆ ಎರಡು ಪ್ರಶ್ನೆಗಳು. ಈ ಲೇಖನದಲ್ಲಿ, ಭಾರತದ ಪ್ರಜಾಪ್ರಭುತ್ವದ ಬಗೆಗಿನ ತಾತ್ವಿಕ ಅಡಿಪಾಯವನ್ನು ಚರ್ಚಿಸುತ್ತಾ, ಈ ಎರಡು ಸಾಂವಿಧಾನಿಕ ಪ್ರಶ್ನೆಗಳನ್ನು ವಿಶ್ಲೇಷಿಸಲಾಗಿದೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ 66 ವರ್ಷಗಳನ್ನು ಪೂರೈಸಿದೆ. ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ ದೇಶ ಎಂಬುದನ್ನು ಒಪ್ಪಿಕೊಂಡು, ಅನುಷ್ಠಾನಗೊಳಿಸಿದ ಭಾರತ, ಈ ಸುದೀರ್ಘ ಸಮಯದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದೆ. ನಮಗೆ ನಾವೇ ಲಿಖಿತ ಸಂವಿಧಾನವನ್ನು ರಚಿಸಿಕೊಂಡು, ನಮ್ಮ ಪ್ರಜಾಪ್ರಭುತ್ವ ಈ ದಿಕ್ಕಿನಲ್ಲಿಯೇ ಸಾಗಬೇಕೆಂಬ ಚೌಕಟ್ಟನ್ನೂ ಹಾಕಿಕೊಂಡಿದ್ದೇವೆ. ಅಂದರೆ ಸಂವಿಧಾನದ ಆಶಯಗಳನ್ನು ನಮಗೆ ನಾವೇ ಒಪ್ಪಿಕೊಂಡಿರುವಂತಹದ್ದು. ಪರೋಕ್ಷ ಪ್ರಜಾಪ್ರಭುತ್ವದ ಸಂಸದೀಯ ಮಾದರಿಯನ್ನು ಆರಿಸಿಕೊಂಡ ನಾವು, ನಮ್ಮ ಆಡಳಿತವನ್ನು ನಮ್ಮ ಪ್ರತಿನಿಧಿಗಳ ಮೂಲಕ ಜಾರಿಗೊಳಿಸಿಕೊಳ್ಳುತ್ತಿದ್ದೇವೆ.

ಈ ಸುದೀರ್ಘ ಅವಧಿಯಲ್ಲಿ, ನಮ್ಮ ಪ್ರಜಾಪ್ರಭುತ್ವವು ಹಲವು ಸಿದ್ಧಾಂತಗಳ ಅಡಿಯಲ್ಲಿ ಪರೀಕ್ಷಿಲ್ಪಟ್ಟಿದೆ. ಇದು ಬಹಳ ಕುತೂಹಲಕಾರವಾದ ಸಂಗತಿ. ರಾಜ್ಯಶಾಸ್ತ್ರವನ್ನು ಅಧ್ಯಯನ ವಿಷಯವಾಗಿ ಅಭ್ಯಸಿಸುವ ವಿದ್ಯಾರ್ಥಿಗಳಿಗಂತೂ ಪ್ರಜಾಪ್ರಭುತ್ವದ ಹಬ್ಬಕ್ಕೆ ಬೇಕಾದ ತುಣುಕುಗಳು ಒಂದರ ಮೇಲೊಂದರಂತೆ ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ ಲಭ್ಯವಿದೆ. ಅವುಗಳಲ್ಲಿ ಪ್ರಮುಖವಾಗಿ, ಪ್ರಜಾಪ್ರಭುತ್ವದ ಮೂಲಭೂತ ತಳಹದಿಗಳಾದ ಚುನಾವಣೆ, ಪ್ರತಿನಿಧಿಗಳ ಆಯ್ಕೆ, ಸರಕಾರ ಮತ್ತು ಮಂತ್ರಿ ಮಂಡಲದ ರಚನೆ, ಪ್ರಧಾನಮಂತ್ರಿ-ಮುಖ್ಯಮಂತ್ರಿಗಳ ನೇಮಕ, ರಾಷ್ಟ್ರಪತಿ-ರಾಜ್ಯಪಾಲರ ಆಯ್ಕೆ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಕಾರ್ಯವೈಖರಿ, ಮೂಲಭೂತ ಹಕ್ಕುಗಳ ಪ್ರಜ್ಞೆ, ಮಾಧ್ಯಮಗಳ ಪಾತ್ರ, ಸರಕಾರೇತರ ಸಂಸ್ಥೆಗಳ ಗಮನಿಸುವಿಕೆ, ಜನತೆಯ ರಾಜಕೀಯ ಚಲನಶೀಲತೆ ಮತ್ತು ಅರಿವು ಇತ್ಯಾದಿಗಳಲ್ಲಿ ಆಗುತ್ತಿರುವ ಏರಿಳಿತಗಳ ಬಗ್ಗೆ ಭಾರತದ ಪ್ರತಿ ಪ್ರಜೆಯೂ ಗಮನಿಸಲೇಬೇಕಾದ ಸ್ಪಂದನವಿದೆ. ರಾಜಕೀಯ ಪಂಡಿತರು, ವಿದ್ಯಾರ್ಥಿಗಳು ಈ ಬಗ್ಗೆ ತಾತ್ವಿಕ ಮತ್ತು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ, ನಮ್ಮ ಪ್ರಜಾಪ್ರಭುತ್ವವನ್ನು ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಪ್ರಜಾಪ್ರಭುತ್ವದ ಜೀವಂತ ನೆಲೆಯಾಗಿರುವ ಮುಂಬರುವ ಲೋಕಸಭಾ ಚುನಾವಣೆಯ ಒಟ್ಟು ಪ್ರಕ್ರಿಯೆಯ ನೆರಳಲ್ಲಿ, ನಮ್ಮ ರಾಜಕೀಯ ವ್ಯವಸ್ಥೆಯಾದ ಪ್ರಜಾಪ್ರಭುತ್ವವನ್ನು ಇಂದು ಒಳಹೊಕ್ಕು ನೋಡಬೇಕಾಗಿದೆ. ಇಲ್ಲಿ ಜನತೆ ತಮ್ಮ ಹಕ್ಕನ್ನು ಮತದಾನ ಮಾಡುವ ಮೂಲಕ ಚಲಾಯಿಸುತ್ತಿದ್ದಾರೆ. ಅಂದರೆ ಜನತೆಯ ನೇರ ಪಾಲ್ಗೊಳ್ಳುವಿಕೆಯನ್ನು ನಮ್ಮ ಚುನಾವಣೆಗಳು ದೃಢೀಕರಿಸುತ್ತವೆ. ಸಂಸದೀಯ ಮಾದರಿಯ ಸರಕಾರದಲ್ಲಿ, ಜನತೆಯ ನೇರ ಪಾಲ್ಗೊಳ್ಳುವಿಕೆಗೆ ಇದೇ ಉತ್ತಮ ಅವಕಾಶ.

ಬಹುಪಕ್ಷೀಯ ಪದ್ಧತಿಯನ್ನು ಹೊಂದಿರುವ ಭಾರತದ ರಾಜಕೀಯ ವ್ಯವಸ್ಥೆಯು, ಭಿನ್ನ ಭಿನ್ನವಾದ ಸಿದ್ಧಾಂತಗಳನ್ನು, ರಾಜಕೀಯ ಪಕ್ಷಗಳ ಸಿದ್ಧಾಂತಗಳನ್ನಾಗಿ ಹೊಂದಿವೆ. ಈ ರೀತಿ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವಲ್ಲಿ, ಸಂವಿಧಾನದ ಮೂಲ ಆಶಯಗಳನ್ನು ಬದಿಗೆ ಸರಿಸುವ ಪ್ರಯತ್ನಗಳೂ ನಡೆದಿವೆ. ಪ್ರಮುಖವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಭಾರತೀಯ ಜನತಾ ಪಕ್ಷಗಳು, ಪ್ರಮುಖ ರಾಷ್ಟ್ರೀಯ ಪಕ್ಷಗಳಾಗಿರುವ ಕಾರಣಕ್ಕಾಗಿ ಅನುಕೂಲ ರಾಜಕಾರಣವನ್ನು ಮಾಡಿಕೊಂಡು ಬಂದಿವೆ.

ಪ್ರಸ್ತುತ ಎದುರಾಗಿರುವುದು ಲೋಕಸಭಾ ಚುನಾವಣೆಯ ಪೂರ್ವ ತಯಾರಿ. ಹೆಚ್ಚಿನ ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಪ್ರಾರಂಭದ ತಾಲೀಮನ್ನು ನಡೆಸುತ್ತಿವೆ. ಜಾತಿ, ಧರ್ಮ, ವರ್ಗ, ಪ್ರಾದೇಶಿಕವಾದಗಳು ಪಕ್ಷಗಳ ಮೂಲ ಆಶಯಗಳಿಗಿಂತ ಹೆಚ್ಚಿನ ಪ್ರಚಾರ ಮತ್ತು ಪರಿಣಾಮಕಾರಿ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಈ ಪ್ರಕ್ರಿಯೆಗೆ ಮಾಧ್ಯಮಗಳೂ ಹೆಚ್ಚಿನ ಒತ್ತನ್ನು ನೀಡುತ್ತಿವೆ. ಮಾಧ್ಯಮಗಳು, ಭಾರತದ ಪ್ರಜಾಪ್ರಭುತ್ವದ ದಿಕ್ಕನ್ನು ಮುನ್ನಡೆಸುವ ವಾಹಕಗಳಾಗಿಯೂ ಗೋಚರಿಸುತ್ತಿವೆ. ನಮ್ಮ ಪ್ರಜಾಪ್ರಭುತ್ವ ಎತ್ತ ಕಡೆ ಸಾಗುತ್ತಿದೆ ಎಂಬ ಅರಿವೂ ಸಿಗದ ರೀತಿಯಲ್ಲಿ ಮತ್ತು ಕೆಲವೊಂದು ಸಂದರ್ಭಗಳಲ್ಲಿ ವಿವೇಚನಾರಹಿತವಾಗಿ ನಮ್ಮ ಮಾಧ್ಯಮಗಳು ಕಾರ್ಯಾಚರಿಸುತ್ತಿರುವುದನ್ನು ನಾವು ಕಾಣಬಹುದು.

ಯಾವುದೇ ರಾಜಕೀಯ ಪಕ್ಷವು ಇಂದು ಪ್ರಧಾನಮಂತ್ರಿಯನ್ನು ಚುನಾವಣಾ ಪೂರ್ವದಲ್ಲಿಯೇ ಘೋಷಣೆ ಮಾಡಬಹುದೇ ಎಂಬುದು ಲಿಖಿತ ಸಂವಿಧಾನದಲ್ಲಿ ನಮೂದಿಸಲ್ಪಟ್ಟಿಲ್ಲ. ಆದರೆ ನಮ್ಮ ರಾಜಕೀಯ ಪಕ್ಷಗಳು ಅಧಿಕೃತವಾಗಿಯೇ ಇದನ್ನು ಘೋಷಿಸಿಬಿಟ್ಟಿವೆ. rahul-gandhi-ordinanceಸಂವಿಧಾನ ಹೇಳುವ ಪ್ರಕಾರ, ಕೆಳಮನೆಗೆ (ಲೋಕಸಭೆ), ಜನರಿಂದ ಆಯ್ಕೆಯಾದ ಸದಸ್ಯರು ಒಗ್ಗೂಡಿ ತಮ್ಮ ನಾಯಕನನ್ನು ಆರಿಸಿಕೊಳ್ಳುತ್ತಾರೆ. ಹೀಗೆ ಆರಿಸಲ್ಪಟ್ಟ ನಾಯಕ ಒಂದು ರಾಜಕೀಯ ಪಕ್ಷದ ಮುಖಂಡನೂ ಆಗಿರುತ್ತಾನೆ. ಕೆಳಮನೆಯ ಒಟ್ಟು ಸದಸ್ಯರಲ್ಲಿ ಬಹುಮತ ಹೊಂದಿದ ರಾಜಕೀಯ ಪಕ್ಷವು ಇಂತಹ ನಾಯಕನ ನೇತೃತ್ವದಲ್ಲಿ, ರಾಷ್ಟ್ರಪತಿಯವರಲ್ಲಿ ಸರಕಾರ ರಚನೆಗೆ ಅವಕಾಶವನ್ನು ಕೋರುತ್ತದೆ. ಆತನ ಪಕ್ಷಕ್ಕಿರುವ ಬಹುಮತವನ್ನು ಪರಿಗಣಿಸಿ, ರಾಷ್ಟ್ರಪತಿಯವರು ಕೇಂದ್ರದಲ್ಲಿ ಸರಕಾರ ರಚನೆಗೆ ಆಹ್ವಾನವನ್ನು ನೀಡುತ್ತದೆ. ಆದರೆ ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿಯವರನ್ನು, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ರಾಹುಲ್ ಗಾಂಧಿ (ಭಾಗಶ:) ಯವರನ್ನು ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿಗಳನ್ನಾಗಿ ಘೋಷಿಸಿವೆ. ಜನತೆಯ ತೀರ್ಪನ್ನು ಇನ್ನೂ ಪಡೆಯದ ಈ ಇಬ್ಬರೂ ನಾಯಕರೂ ವ್ಯಕ್ತಿಗತವಾಗಿ ಮುಂಬರುವ 16 ನೇ ಲೋಕಸಭೆಯ ಜನಪ್ರತಿನಿಧಿಗಳೇ ಅಲ್ಲ! ಇಂತಹ ವ್ಯಕ್ತಿಗಳನ್ನು ಭಾರತದ ಪ್ರಧಾನಮಂತ್ರಿ ಅಭ್ಯರ್ಥಿಗಳು ಎಂದು ಘೋಷಿಸಿರುವುದು ಅಸಂವಿಧಾನಿಕ. ಇದು ಸಂವಿಧಾನಕ್ಕೆ ವಿರುದ್ಧವಾದದ್ದು. ಇಂತಹ ವ್ಯವಸ್ಥೆ ಸಂಸದೀಯ ಮಾದರಿ ಸರಕಾರದಲ್ಲಿ ಕಾಣಸಿಗುತ್ತದೆ ಎಂದಾದಲ್ಲಿ ಅದು ನೈಜ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ರಾಷ್ಟ್ರಪತಿ ಮಾದರಿಯ ಸರಕಾರದಲ್ಲಿ (ಉದಾ: ಅಮೆರಿಕಾ) ಇಂತಹ ಮಾದರಿಗಳು ಕಾಣಸಿಗುತ್ತವೆ.

ಎರಡನೇ ಪ್ರಮುಖ ಪ್ರಶ್ನೆ ಚಹಾ ಮಾರುತ್ತಿದ್ದವನು ಈ ದೇಶದ ಪ್ರಧಾನಿಯಾಗಬಲ್ಲನೇ ಎನ್ನುವಂತಹದ್ದು. 395 ಪರಿಚ್ಚೇದಗಳು, 22 ವಿಭಾಗಗಳು ಮತ್ತು 12 ಶೆಡ್ಯೂಲ್‌ಗಳನ್ನು ಹೊಂದಿರುವ ನಮ್ಮ ಲಿಖಿತ ಸಂವಿಧಾನದಲ್ಲಿ, Narendra_Modiಭಾರತೀಯ ಸಾಮಾನ್ಯ ಪ್ರಜೆಯೂ ದೇಶದ ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ರಾಜಕೀಯ ಪಕ್ಷಗಳ ಇಂತಹ ಹೇಳಿಕೆಗಳು, ನಮ್ಮ ಪ್ರಜಾಪ್ರಭುತ್ವದ ದಿಕ್ಕನ್ನು ಸಂವಿಧಾನಕ್ಕೆ ವಿರುದ್ಧವಾಗಿ ತೆಗೆದುಕೊಂಡು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರ್ಯ ಪಕ್ಷಾತೀತ ನೆಲೆಗಟ್ಟಿನಲ್ಲಿ ಆಗಬೇಕಾಗಿದೆ. ದೇಶದಲ್ಲಿ ಇಂದು ನಡೆಯುತ್ತಿರುವ ರಾಜಕೀಯ ಸಮಾವೇಶಗಳು, ಪ್ರಜಾಪ್ರಭುತ್ವದ ಆತ್ಮದಂತಿರುವ ರಾಜಕೀಯ ಪಕ್ಷಗಳ ಮುಖಂಡರು ಮತ್ತು ನಾಯಕರಿಂದ ಹೊರಹೊಮ್ಮುವ ಹೇಳಿಕೆಗಳು, ನಾವು ಒಪ್ಪಿಕೊಂಡಿರುವಂತಹ ಸಂವಿಧಾನಕ್ಕೆ ಪೂರಕವಾಗಿರಬೇಕು. ಆಗ ಮಾತ್ರ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಂತಾಗುತ್ತದೆ. ಅಂದರೆ ಜನತೆಯ ಆಶೋತ್ತರಗಳನ್ನು ಗೌರವಿಸಿದಂತೆ ಆಗುತ್ತದೆ.

ಈ ನಿಟ್ಟಿನಲ್ಲಿ, ದೇಶದ ಜನತೆ ರಾಜಕೀಯ ಪಕ್ಷಗಳ ಒಟ್ಟು ಕಾರ್ಯವೈಖರಿಯ ಕುರಿತು ಚರ್ಚಿಸಬೇಕಾದ ಅನಿವಾರ್ಯತೆ ಇದೆ. ಏಕೆಂದರೆ, ಭಾರತದ ಪ್ರಜಾಪ್ರಭುತ್ವ ಎಂದರೆ ಪ್ರತಿಯೋರ್ವ ಭಾರತೀಯನ ಪ್ರಜಾಪ್ರಭುತ್ವ. ಇದರ ಲಕ್ಷಣಗಳನ್ನು ನಾವು ಜನಪ್ರತಿನಿಧಿಯನ್ನು ಆರಿಸುವ ಪ್ರಕ್ರಿಯೆ, ಚುನಾವಣೆ, ಸರಕಾರ ರಚನೆಯ ಸಂದರ್ಭ, ಯೋಜನೆಗಳನ್ನು ಜಾರಿಗೊಳಿಸಿ, ಅನುಷ್ಠಾನಿಸುವ ಹಂತಗಳಲ್ಲಿ ಕಾಣುತ್ತೇವೆ. ನ್ಯಾಯಯುತವಾಗಿ, ಜಾತ್ಯಾತೀತವಾಗಿ, ಸಮಾನವಾಗಿ, ಗಣರಾಜ್ಯವಾಗಿ ನಮಗೆ ನಾವೇ ಒಪ್ಪಿಕೊಂಡಿರುವ ರಾಜಕೀಯ ವ್ಯವಸ್ಥೆ ನಮ್ಮದು. ಇದನ್ನು ರಾಜಕೀಯ ವ್ಯವಸ್ಥೆಯ ಸಮಾಜಕ್ಕೆ ಮಾತ್ರವೇ ಸೀಮಿತಗೊಳಿಸಿಕೊಳ್ಳದೇ, ಪ್ರಜಾಪ್ರಭುತ್ವದ ಪರಿಣಾಮಕಾರಿ ಅನುಷ್ಠಾನಕ್ಕೆ ನಾವೆಲ್ಲಾ ಕೈಜೋಡಿಸಬೇಕಿದೆ. ಇಲ್ಲದೇ ಹೋದಲ್ಲಿ, ಪ್ರಜಾಪ್ರಭುತ್ವವನ್ನು ಕಳೆದ ಆರು ದಶಕಗಳಿಂದ ಅರ್ಥೈಸಿಕೊಳ್ಳುವುದಕ್ಕೆ ಹೆಣಗಾಡುತ್ತಿರುವ ನಾವು ಇನ್ನಷ್ಟು ಹಿಂದಕ್ಕೆ ಹೋಗಬಹುದು. ಇದು ಬಹುಸಂಸ್ಕೃತಿ, ಬಹುಭಾಷೆ, ಬಹುಜನಾಂಗ ಮತ್ತು ಬಹು ಪಕ್ಷಗಳಿಂದ ಕೂಡಿದ ಭಾರತಕ್ಕೆ ಅಪಾಯವನ್ನೇ ತಂದೊಡ್ಡಬಹುದು. ಪ್ರಜಾಪ್ರಭುತ್ವ ಸಿದ್ಧಾಂತಗಳಿಗೆ ಒಗ್ಗಿಕೊಂಡು ಸಂವಿಧಾನ ರಚನೆಗೊಂಡಿರುವಾಗ, ಅದರ ಅನುಷ್ಠಾನ ಹಂತದಲ್ಲಿ ರಾಜಕೀಯ ಪಕ್ಷಗಳು ವಿಭಿನ್ನ ನಿಲುವು ತಾಳುತ್ತಿರುವುದನ್ನು ಬಹಳಷ್ಟು ಸಂದರ್ಭಗಳಲ್ಲಿ ಗಮನಿಸಲಾಗಿದೆ. ಸಂವಿಧಾನದ ಆಶಯ ಮತ್ತು ನೈಜವಾಗಿ ಘಟಿಸುವ ಇಂತಹ ಕಾರ್ಯಗಳ ನಡುವೆ ಕಂದಕ ಅಗಲವಾಗುತ್ತಾ ಹೋದಂತೆ, ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕೇವಲ ಆಶಯವಾಗಿಯೇ ಉಳಿಯಬೇಕಾದ ಪ್ರಮೇಯ ಬರಬಹುದು.

ಹೆಚ್ಚುತ್ತಿರುವ ವರ್ತಮಾನ.ಕಾಮ್ ಓದುಗ ವಲಯ ಮತ್ತು ಪ್ರಸ್ತುತತೆ…

ಪ್ರಿಯ ವರ್ತಮಾನ.ಕಾಮ್‌ನ ಲೇಖಕರೆ ಮತ್ತು ಓದುಗರೇ,

ನಾನು ಭಾರತಕ್ಕೆ ಹಿಂದಿರುಗಿ ಮೂರು ವರ್ಷವಾಗುತ್ತ ಬಂತು. ಈ ಮೊದಲೆಲ್ಲ ಯಾವುದಾದರೂ ಸಾಹಿತ್ಯಕ ಕಾರ್ಯಕ್ರಮಗಳಿಗೆ ಹೋದಾಗ ಪರಿಚಯ ಮಾಡಿಕೊಳ್ಳುತ್ತಿದ್ದ ಅಪರಿಚಿತರು “ನೀವು ’ವಿಕ್ರಾಂತ ಕರ್ನಾಟಕ’ದ ರವಿಯವರಲ್ಲವೇ? ಅದರಲ್ಲಿ ನಿಮ್ಮ ’ಅಮೆರಿಕದಿಂದ ರವಿ’ ಅಂಕಣ ಓದುತ್ತಿದ್ದೆವು,” ಎನ್ನುತ್ತಿದ್ದರು. ಆದರೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ನನಗೆ ಬೇರೆಯದೇ ಅನುಭವವಾಗುತ್ತಿದೆ. “ವಿಕ್ರಾಂತ ಕರ್ನಾಟಕ” ಓದುತ್ತಿದ್ದ ಜನ ಈಗಲೂ ಮರೆತಿಲ್ಲ. ಆದರೆ ಹೊಸ ತಲೆಮಾರಿನ ಮತ್ತು ಅಂತರ್ಜಾಲದಲ್ಲಿ ಸಕ್ರಿಯರಾಗಿರುವ ಅಪರಿಚಿತ ಓದುಗರು “ನೀವು ವರ್ತಮಾನ.ಕಾಮ್‌ನ ರವಿಯವರಲ್ಲವೇ?” ಎನ್ನುತ್ತಿದ್ದಾರೆ.

ವರ್ತಮಾನ.ಕಾಮ್ ದಿನದಿನಕ್ಕೂ ಹೊಸಹೊಸ ಓದುಗರನ್ನು ಪಡೆದುಕೊಳ್ಳುತ್ತಿದೆ. ಇಂದಿನ ಸಂದರ್ಭದಲ್ಲಿ ಅದು ನಿಜಕ್ಕೂ ಪ್ರಸ್ತುತವಾಗುವಲ್ಲಿ ಯಶಸ್ವಿಯಾಗಿದೆ. ಅದು ಸಾಧ್ಯವಾಗಿರುವುದು ನಮ್ಮ ಬಳಗದ ಎಲ್ಲಾ ಲೇಖಕರ ಮತ್ತು ಬೆಂಬಲಿಗರ ನಿರಂತರ ಬೆಂಬಲ ಮತ್ತು ಪ್ರಯತ್ನದಿಂದಾಗಿಯೇ. ಅಷ್ಟೇ ಅಲ್ಲ, ನಮ್ಮಲ್ಲಿ ಬರೆಯಲು ಆರಂಭಿಸಿದ ಹಲವು ಲೇಖಕರು ಇಂದು ಬೇರೆಬೇರೆ ವೇದಿಕೆ/ಪತ್ರಿಕೆಗಳಲ್ಲೂ ಬರೆಯಲಾರಂಭಿಸಿರುವುದು ಮತ್ತು ಹಲವು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿರುವುದು ನಮಗೆಲ್ಲ ಖುಷಿಯ ವಿಷಯವಾಗಿದೆ. ವರ್ತಮಾನ.ಕಾಮ್ ಈ ಹಂತಕ್ಕೆ ಏರಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತಿರುವ ಎಲ್ಲರಿಗೂ ನಾನು ಧನ್ಯವಾದ ಮತ್ತು ಕೃತಜ್ಞತೆ ಅರ್ಪಿಸುತ್ತೇನೆ. ವರ್ತಮಾನ ಬಳಗದ ಎಲ್ಲರಿಗೂ ಇದು ನಿಜಕ್ಕೂ ಸಂತೋಷದ ವಿಚಾರ.

ಒಂದು ಅಂಕಿಅಂಶವನ್ನು ಹೆಸರಿಸಬಹುದಾದರೆ, ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಿರುವ ಹಲವಾರು ಲೇಖನಗಳು ನಾಲ್ಕೈದು ಸಾವಿರದಿಂದ ಹಿಡಿದು ಹದಿನೈದು ಸಾವಿರಕ್ಕೂ ಹೆಚ್ಚು ಸಲ ಓದಲ್ಪಟ್ಟಿವೆ. ನಮ್ಮಲ್ಲಿ ಪ್ರಕಟವಾಗುವ ರೀತಿಯದೇ ಲೇಖನಗಳು ಪ್ರಕಟವಾಗುವ ಕನ್ನಡದ ಕೆಲವು ವಾರಪತ್ರಿಕೆಗಳಲ್ಲೂ ಅಲ್ಲಿಯ ಪ್ರಮುಖ ಲೇಖನಗಳೂ ಇಷ್ಟು ಜನರಿಂದ ಓದಲ್ಪಡುವುದಿಲ್ಲ ಎಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ ಎನ್ನುವುದು ನಿಮ್ಮಲ್ಲಿ ಬಹುಜನರಿಗೆ ಗೊತ್ತು. ಜೊತೆಗೆ, ಇದು ಇಂತಹ ಗಂಭೀರ ಓದಿಗೆ ವಿಕಾಸವಾಗಿರುವ ಕನ್ನಡದ ವಿಸ್ತಾರ ಅಂತರ್ಜಾಲ ಪ್ರಪಂಚವನ್ನೂ ಮತ್ತು ಅಲ್ಲಿ ವರ್ತಮಾನ.ಕಾಮ್‌ನ ಪ್ರಸ್ತುತತೆಯನ್ನೂ ಬಿಂಬಿಸುತ್ತದೆ.

ಇದಿಷ್ಟೇ ಅಲ್ಲ, ನಾನು ಹಿಂದೊಮ್ಮೆ ಪ್ರಸ್ತಾಪಿಸಿದಂತೆ, ಕರ್ನಾಟಕದ ಅನೇಕ ಕಡೆಯ ಸ್ಥಳೀಯ ಪತ್ರಿಕೆಗಳು “ವರ್ತಮಾನ”ದಲ್ಲಿ ಪ್ರಕಟವಾಗುವ ಲೇಖನಗಳನ್ನು ಪ್ರಕಟಿಸುತ್ತವೆ. ಹಾಗಾಗಿ ಇಲ್ಲಿ ಪ್ರಕಟವಾಗುವ ಲೇಖನಗಳು ಕೇವಲ ಆನ್‌ಲೈನ್ ಓದುಗರಿಗೆ ಮಾತ್ರ ಮುಟ್ಟುತ್ತದೆ ಎನ್ನುವ ಹಾಗೆ ಇಲ್ಲ. ಮುದ್ರಣ ಮಾಧ್ಯಮದ ಮೂಲಕವೂ ವರ್ತಮಾನ.ಕಾಮ್‌ನ ಲೇಖನಗಳು ಕರ್ನಾಟಕದ ಸಾವಿರಾರು–ಕೆಲವೊಮ್ಮೆ ಲಕ್ಷಾಂತರ–ಓದುಗರನ್ನು ತಲುಪುತ್ತಿವೆ. ಹಾಗೆ ಪ್ರಕಟಿಸುವ ಅನೇಕ ಪತ್ರಕರ್ತರು ಹಾಗೊಮ್ಮೆ ಈಗೊಮ್ಮೆ ಆಕಸ್ಮಿಕವಾಗಿ ಸಿಕ್ಕಾಗ ತಮ್ಮಲ್ಲಿ ಪ್ರಕಟಮಾಡುವ ವಿಚಾರವನ್ನು ಪ್ರೀತಿಯಿಂದ ಹೇಳುತ್ತಾರೆ.

ಕಳೆದ ಎರಡು ವರ್ಷಗಳಿಂದ (ವರ್ತಮಾನ.ಕಾಮ್ ಆರಂಭಿಸಿದಾಗಿನಿಂದ) ನಾನು ಯಾವುದೇ ಪತ್ರಿಕೆಗಳಿಗೆ ಬರೆಯುತ್ತಿಲ್ಲ. ರಾಜ್ಯಮಟ್ಟದ ಒಂದೆರಡು ದಿನಪತ್ರಿಕೆಗಳಿಗೆ ಬರೆಯಲು ಕೆಲವು ಸಲ ಆಹ್ವಾನ ಬಂದರೂ ವರ್ತಮಾನ.ಕಾಮ್ ಬಿಟ್ಟು ಬೇರೆ ಕಡೆ ಬರೆಯಬಾರದು ಎಂಬ ಸ್ವಯಂನಿರ್ಧಾರದ ಕಾರಣಕ್ಕೆ ಬರೆಯಲಿಲ್ಲ. (ಒಂದೆರಡು ಪತ್ರಿಕೆಗಳ ವಿಶೇಷಾಂಕಗಳಿಗೆ ಲೇಖನ ಬರೆಯುತ್ತೇನೆ ಎಂದು ಒಪ್ಪಿಕೊಂಡಿದ್ದರೂ ಸಮಯ ಮತ್ತು ಸಂದರ್ಭ ಒದಗದೆ ಅದೂ ಆಗಲಿಲ್ಲ.) ಈ ತರಹದ ಸ್ವಯಂ‌ನಿಯಂತ್ರಣ ಹೇರಿಕೊಂಡಿದ್ದರೂ ವರ್ತಮಾನ.ಕಾಮ್‌ನಲ್ಲೂ ನಾನು ನಿಯಮಿತವಾಗಿ ಬರೆಯುತ್ತಿಲ್ಲ ಮತ್ತು ಇದರ ಬೆಳವಣಿಗೆಗೆ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿತ್ತು ಎನ್ನುವುದನ್ನೂ ನಾನು ನಿರಾಕರಿಸುತ್ತಿಲ್ಲ. ಬಹುಶಃ ನನ್ನ ಜಡತೆಗೆ ಕೆಲವೊಮ್ಮೆ ’ಅದು ತಾನಾಗಿಯೇ ವಿಕಾಸವಾಗಲಿ’ ಎಂಬ ಸಬೂಬನ್ನು ನೀಡುತ್ತೇನೆ ಎನ್ನಿಸುತ್ತದೆ. ಆದರೆ ಕೆಲವೊಮ್ಮೆ ಜೀವನದ ಬೇರೆಬೇರೆ ಸ್ತರಗಳಲ್ಲಿ ನಡೆಯುವ ಚಟುವಟಿಕೆಗಳೂ ಇಂತಹ ಕ್ರಿಯಾರಾಹಿತ್ಯ ಮತ್ತು ಕ್ರಿಯಾಶೀಲತೆಯನ್ನು ನಿರ್ದೇಶಿಸುತ್ತದೆ ಎನ್ನುವುದು ನಮಗೆಲ್ಲ ತಿಳಿದಿರುವುದೆ, ನನ್ನ ಉದ್ಯೋಗ, ವೈಯಕ್ತಿಕ ಬದುಕು, ಓಡಾಟ, ಓದು, ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳು ನನ್ನ ಅಶಿಸ್ತು ಮತ್ತು ಅನಿಯಮಿತತೆಗೆ ಕಾರಣವಾಗಿವೆ. ಆದರೆ ಅದಕ್ಕಾಗಿ ಅವ್ಯಾವುದನ್ನೂ ಹೊಣೆ ಮಾಡಲಾಗದು.

ಈ ನಿಟ್ಟಿನಲ್ಲಿ ನಮ್ಮ ಬಳಗವನ್ನೂ ವಿಸ್ತರಿಸಬೇಕಿದೆ. ನಾನು ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಮತ್ತು ನಮ್ಮ ಬಳಗದ ಇತರೆ ಸದಸ್ಯರೂ ಕಾರ್ಯನಿಮಿತ್ತ ಬ್ಯುಸಿಯಾಗಿರುವ ಸಂದರ್ಭಗಳಲ್ಲಿ ನಮಗೆ ಬರುವ ಲೇಖನಗಳು ನಿಯಮಿತವಾಗಿ ಅಪ್‌ಡೇಟ್ ಆಗುವಂತಹ ವ್ಯವಸ್ಥೆಯನ್ನು ರೂಪಿಸಬೇಕಿದೆ. ಹಾಗಾಗಿ ಇದಕ್ಕೆ ಸಹಕರಿಸಬಹುದಾದ ಜನರನ್ನು ಗುರುತಿಸುವ ಮತ್ತು ಸಹಾಯ ಮಾಡಲು ಕೋರುವ ಕೆಲಸವನ್ನು ಇಷ್ಟರಲ್ಲೇ ಕೈಗೊಳ್ಳಬೇಕಿದೆ.

ಇದೇ ಸಂದರ್ಭದಲ್ಲಿ ನಾನು ನಮ್ಮಲ್ಲಿ ಬರೆಯುತ್ತಿರುವ ಮತ್ತು ಬರೆಯುತ್ತಿದ್ದ ಎಲ್ಲಾ ಲೇಖಕರಿಗೂ ಕೃತಜ್ಞತೆಗಳನ್ನು ತಿಳಿಸುತ್ತಲೇ, ಒಂದು ಮನವಿ ಮಾಡಿಕೊಳ್ಳಬಯಸುತ್ತೇನೆ. ದಯವಿಟ್ಟು ಸಾಧ್ಯವಾದಾಗಲೆಲ್ಲ ಬರೆಯಿರಿ. ನೀವು ವಾರಕ್ಕೆ ಒಂದು ಲೇಖನವಾದರೂ ಬರೆದರೆ ವರ್ತಮಾನ.ಕಾಮ್‌ ಪ್ರತಿನಿತ್ಯ ಹೊಸಹೊಸ ವಿಚಾರಗಳಿಂದ ತುಂಬುತ್ತದೆ. ಇದರಿಂದಾಗಿ ಪ್ರತಿನಿತ್ಯವೂ ಭೇಟಿ ಕೊಡುವ ಓದುಗರ ಸಂಖ್ಯೆ ಹೆಚ್ಚಾಗುತ್ತದೆ. ಅದು ಹೆಚ್ಚಾದಂತೆಲ್ಲ ವರ್ತಮಾನ.ಕಾಮ್‍ನ ಹರವು ಮತ್ತು ವಿಸ್ತಾರ ಹೆಚ್ಚಾಗುತ್ತದೆ. ಆ ಮೂಲಕ ಇಲ್ಲಿ ನಾವು ಎತ್ತುವ ನಾಡಿನ ಅನೇಕ ಪ್ರಮುಖ ವಿಷಯಗಳು ಸಾರ್ವಜನಿಕವಾಗಿ ಮುನ್ನೆಲೆಗೆ ಬರುತ್ತವೆ. ನೀವೆ ನೋಡಿದ ಹಾಗೆ ಮತ್ತು ಸ್ವತಃ ನೀವೆ ಬರೆದಿರುವ ಅನೇಕ ಲೇಖನಗಳು ಮತ್ತು ಪ್ರಸ್ತಾಪಿಸಿರುವ ವಿಚಾರಗಳು ರಾಜ್ಯದ ಬೇರೆ ಯಾವುದೇ ಪತ್ರಿಕೆಗಳಲ್ಲಿ ಪ್ರಕಟವಾಗದವು ಮತ್ತು ಇಲ್ಲಿ ಪ್ರಕಟವಾದ ನಂತರವೇ ಬೇರೆ ಕಡೆ ಪ್ರಸ್ತಾಪವಾಗಿರುವಂತಹವು. ಅಂತಹ ಲೇಖನಗಳನ್ನು ಪ್ರಕಟಿಸುವ ಸ್ವಾತಂತ್ರ್ಯ ಮತ್ತು ದಿಟ್ಟ ನಿಲುವು ತೆಗೆದುಕೊಳ್ಳುವ ನಿರ್ಧಾರಗಳನ್ನು ವರ್ತಮಾನ.ಕಾಮ್ ಕಾಲಕಾಲಕ್ಕೆ ನಿರೂಪಿಸುತ್ತಲೇ ಬಂದಿದೆ. ನಾವು ಒಂದು ನಿರ್ದಿಷ್ಟ ಸೈದ್ಧಾಂತಿಕ ನಿಲುವು ಉಳ್ಳವರಾಗಿರಬಹುದು, ಆದರೆ ಯಾರನ್ನಾದರೂ ಕಾರಣವಿಲ್ಲದೇ ವಿಮರ್ಶಿಸುವುದಾಗಲಿ, ಹೊಗಳುವುದಾಗಲಿ, ಅಥವ ತುಷ್ಟೀಕರಣವಾಗಲಿ ಮಾಡುವುದಿಲ್ಲ ಎಂದು ತಮಗೆಲ್ಲ ತಿಳಿದಿದೆ. ಹಾಗೆಯೇ ಮಾಧ್ಯಮ ಲೋಕದ ಮತ್ತು ಸಾಹಿತ್ಯಕ-ಸಾಂಸ್ಕೃತಿಕ ಲೋಕದ ಪ್ರಗತಿಪರ ಮುಖಗಳಾಗಿದ್ದವರ ಮುಖವಾಡಗಳು ಕಳಚಿಬೀಳುತ್ತಿರುವ ಈ ಸಂದರ್ಭದಲ್ಲಿ ನಮ್ಮೆಲ್ಲರ ಜವಾಬ್ದಾರಿಗಳು, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಪ್ರಾಮಾಣಿಕತೆ ಕಾಪಾಡಿಕೊಳ್ಳುವ ಹೊಣೆಗಾರಿಕೆ, ಮತ್ತು ಕ್ರಿಯಾಶೀಲರಾಗಬೇಕಾದ ಅಗತ್ಯತೆ ಇನ್ನೂ ಹೆಚ್ಚಾಗಿದೆ.

ಕೊನೆಯದಾಗಿ, ಇಲ್ಲಿಯತನಕ ಬರೆದವರು ಮಾತ್ರವಲ್ಲ, ಬರೆಯಬೇಕು ಎಂದುಕೊಂಡವರು ಮತ್ತು ಬರೆಯುತ್ತೇನೆ ಎಂದು ಹೇಳಿದವರೂ ಸಹ ಬರೆಯಲು ಆರಂಭಿಸಿದರೆ ಅಷ್ಟರಮಟ್ಟಿಗೆ ಹೊಸ ವಿಚಾರಗಳು ಮತ್ತು ಸಂವೇದನೆಗಳು ವರ್ತಮಾನ.ಕಾಮ್ ಅನ್ನು ಬೆಳೆಸುತ್ತವೆ. ದಯವಿಟ್ಟು ಬರೆಯಲು ಆರಂಭಿಸಿ. ಲೇಖನಗಳನ್ನು ಕಳುಹಿಸಬೇಕಾದ ಇಮೇಲ್ ವಿಳಾಸ : editor@vartamaana.com

ನಮಸ್ಕಾರ,
ರವಿ ಕೃಷ್ಣಾರೆಡ್ದಿ
ಸಂಪಾದಕ, ವರ್ತಮಾನ.ಕಾಮ್

ಕಂಚಿ ಸ್ವಾಮೀಜಿ ಮತ್ತು ಪ್ರಜಾಪ್ರಭುತ್ವ : ಒಂದು ನೈತಿಕ ಬಿಕ್ಕಟ್ಟು

– ಬಿ.ಶ್ರೀಪಾದ ಭಟ್

2004 ರಲ್ಲಿ ಕಂಚಿ ಕಾಮಕೋಟಿ ಪೀಠದ ಉದ್ಯೋಗಿಯಾಗಿದ್ದ ಶಂಕರರಾಮನ್ ಕೊಲೆಯಾಗಿದ್ದ. ನಂತರ ಅದೇ ಮಠದ ಪೀಠಾದಿಪತಿಯಾಗಿದ್ದ ಜಯೇಂದ್ರ ಸರಸ್ವತಿ ಸ್ವಾಮಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಯಿತು. kanchi-seer-arrestedಆಗ ಈ ದಿಟ್ಟ ನಿರ್ಣಯವನ್ನು ಕೈಗೊಂಡಿದ್ದು ಬ್ರಾಹ್ಮಣ ಮುಖ್ಯಮಂತ್ರಿ ಜಯಲಲಿತ. ಆಗ ಬ್ರಾಹ್ಮಣ್ಯದ ಜಾತೀವಾದವನ್ನು, ಶೋಷಣೆಯನ್ನು ವಿರೋಧಿಸುತ್ತಲೇ ಬಂದಿದ್ದ ಡಿಎಂಕೆ ಪಕ್ಷ ಈ ಬಂಧನವನ್ನು ರಾಜಕೀಯ ಕಾರಣಗಳಿಗಾಗಿ ಟೀಕಿಸಿದರೆ ಸಂಘ ಪರಿವಾರ ವರ್ಣಾಶ್ರಮದ ಬದ್ಧತೆಯ ಕಾರಣಗಳಿಗಾಗಿ ಈ ಬಂಧನವನ್ನು ತೀವ್ರವಾಗಿ ಖಂಡಿಸಿ ಸದರಿ ಸ್ವಾಮಿಯ ಬೆಂಬಲಕ್ಕೆ ನಿಂತಿತ್ತು. ಕಾಂಗ್ರೆಸ್ ಎಂದಿನಂತೆ ಮುಗುಮ್ಮಾಗಿತ್ತು. 2005 ರಲ್ಲಿ ಇದೇ ಸ್ವಾಮಿ ಜಾಮೀನಿನ ಮೇಲೆ ಹೊರಬಂದಿದ್ದಾಯಿತು. ನಂತರ ಇಡೀ ಪ್ರಕರಣದ ವಿಚಾರಣೆಯನ್ನು ನಿಷ್ಪಕ್ಷಪಾತದ ತನಿಖೆಗಾಗಿ ಪಾಂಡಿಚೆರಿಗೆ ವಗಾಯಿಸಲಾಯಿತು. ಒಟ್ಟು 181 ಸಾಕ್ಷಿಗಳ ಹೇಳಿಕೆ ಪಡೆಯಲಾಯಿತು. ಅದರಲ್ಲಿ 80 ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿ ಇಡೀ ತನಿಖೆಯನ್ನು ಹಾದಿ ತಪ್ಪಿಸುವಲ್ಲಿ ಯಶಸ್ವಿಯಾದರು. ಏಳು ವರ್ಷಗಳ ಬಳಿಕ ಈಗ ಕೋರ್ಟ್ ತೀರ್ಪು ಪ್ರಕಟಗೊಂಡಿದೆ.

ಯಾವುದೇ ಸಾಕ್ಷಾಧಾರಗಳಿಲ್ಲದ ಕಾರಣ ಜಯೇಂದ್ರ ಸರಸ್ವತಿ ಸ್ವಾಮಿಗಳನ್ನು ಆರೋಪಮುಕ್ತಗೊಳಿಸಲಾಗಿದೆ. ಏಕೆಂದರೆ ಈ ಪ್ರಕರಣದ ಪ್ರಮುಖ ಸಾಕ್ಷಿಗಳೆಲ್ಲವೂ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಪೋಲೀಸರಿಗೆ ತಿರುಗಿಬಿದ್ದವು. ಆಗಲೇ ಈ ಪ್ರಕರಣದ ಹಣೆಬರಹ ಗೊತ್ತಾಗಿತ್ತು. ಇಂದು ಬ್ರಾಹ್ಮಣರ ವಲಯದಲ್ಲಿ ಹರ್ಷೋಲ್ಲಾಸವು ತುಂಬಿ ತುಳುಕಾಡುತ್ತಿದ್ದರೆ ನಾವೆಲ್ಲ ಗೌರವಿಸುವ, ಪ್ರೀತಿಸುವ “ದ ಹಿಂದೂ” ದಿನಪತ್ರಿಕೆ ಇಂದಿನ (28/11/2013) ತನ್ನ ದಿನಪತ್ರಿಕೆಯಲ್ಲಿ ಈ ಕಂಚಿ ಜಯೇಂದ್ರ ಸರಸ್ವತಿ ಸ್ವಾಮಿ ತನ್ನ ವಿಜಯವನ್ನು ಕೊಚ್ಚಿಕೊಂಡಿರುವ ಒಂದು ಪುಟದ ಜಾಹಿರಾತನ್ನು ಪ್ರಕಟಿಸಿದೆ. ಇದು ನಿಜಕ್ಕೂ ಖೇದಕರ.

ಈ ಶಂಕರರಾಮನ್ ಕೊಲೆಯ ಹಿಂದಿನ ಕೆಲವು ಸೂಕ್ಷ್ಮ ಸಂಗತಿಗಳು:

  • ಕಂಚಿ ಕಾಮಕೋಟಿ ಪೀಠದಲ್ಲಿ ಉದ್ಯೋಗಿಯಾಗಿದ್ದ ಈ ಶಂಕರರಾಮನ್ ಜಯೇಂದ್ರ kanchi-seer-acquittedಸರಸ್ವತಿ ಸ್ವಾಮಿಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ. ಅದರ ಹಿಂದಿನ ರಹಸ್ಯ ಆತನ ಕೊಲೆಯೊಂದಿಗೆ ಮುಚ್ಚಿಹೋಯಿತು. ಒಂದು ವೇಳೆ ಆತನ ಬ್ಲಾಕ್‌ಮೇಲ್ ಹಿಂದಿನ ರಹಸ್ಯವನ್ನು ಬೇಧಿಸಿದ್ದರೆ ಇಡೀ ಕೊಲೆ ಪ್ರಕರಣ ಮತ್ತೊಂದು ಆಯಾಮಕ್ಕೆ ತೆರೆದುಕೊಳ್ಳುತ್ತಿತ್ತು. ಆದರೆ ಈ ದಿಕ್ಕಿನಲ್ಲಿ ತನಿಖಾ ಸಂಸ್ಥೆಗಳು ಗಮನ ಹರಿಸಲಿಲ್ಲ.
  • 181 ಸಾಕ್ಷಿಗಳ ಪೈಕಿ ಸುಮಾರು 80 ಸಾಕ್ಷಿಗಳು ವಿಚಾರಣೆಯ ಸಂದರ್ಭದಲ್ಲಿ ಪೋಲೀಸರ ವರದಿಗಳಿಗೆ ವ್ಯತಿರಿಕ್ತ ಹೇಳಿಕೆಗಳನ್ನು ದಾಖಲಿಸಿ ಇಡೀ ಪ್ರಕರಣವೇ ದಾರಿತಪ್ಪುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದರ ಹಿಂದಿನ ತಂತ್ರಗಳನ್ನು ತನಿಖೆಗೆ ಒಳಪಡಿಸಲು ತನಿಖಾ ಸಂಸ್ಥೆಗಳು ಆಸಕ್ತಿ ತೋರಲಿಲ್ಲ.
  • ಶಂಕರರಾಮನ್ ಅವರ ಕುಟುಂಬ ಇಡೀ ಪ್ರಕರಣದ ಆರಂಭದಲ್ಲಿ ಜಯೇಂದ್ರ ಸ್ವಾಮಿಯನ್ನು ಕೊಲೆಯ ಆರೋಪಿಯೆಂದು ಹೇಳಿಕೆ ನೀಡಿ ಕೆಲವು ವರ್ಷಗಳ ನಂತರ ಇದೇ ಸ್ವಾಮಿ ನಿರ್ದೋಷಿಯೆಂದು ಹೇಳಿಕೆ ನೀಡಿ ತನಿಖೆಯನ್ನು ದಿಕ್ಕುತಪ್ಪಿಸಿದರು.
  • ಕೆಲವು ತಿಂಗಳುಗಳ ಹಿಂದೆ ಅಂದರೆ 21 ನೇ ಮಾರ್ಚ 2013 ರಂದು ಶಂಕರರಾಮನ್ ಹತ್ಯೆಯ ಆರೋಪಿಗಳಲ್ಲೊಬ್ಬನಾದ ಕಾಥೀವರನ್ನನ್ನು ಚೆನ್ನೈನಲ್ಲಿ ಮರ್ಡರ್ ಮಾಡಲಾಗುತ್ತದೆ.
  • ಇದೇ ಸಂದರ್ಭದಲ್ಲಿ ವಿಚಾರಣೆ ನಡೆಸುತ್ತಿರುವ ಜಡ್ಜ್ ಅವರ ಮೊಬೈಲ್ ಫೋನ್‌ಗೆ ಬೆದರಿಕೆ ಕರೆಗಳು ಬಂದಿತ್ತು ಎಂದು ಸಹ ಆಗ ಸುದ್ದಿಯಾಗಿತ್ತು.

2004 ರಂದು (ಆದರ ಹಿಂದಿನ ಉದ್ದೇಶಗಳೇನೆ ಇರಲಿ) ಅಂದಿನ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತ ಈ ಜಯೇಂದ್ರ ಸರಸ್ವತಿ ಸ್ವಾಮಿಯಂತಹ ಪ್ರಭಾವಶಾಲಿಯನ್ನು ಬಂಧಿಸುವ ದಿಟ್ಟತನ ತೋರಿದ್ದರು. ಸರಿಯಾಗಿ ಒಂಬತ್ತು ವರ್ಷಗಳ ನಂತರ ಇಂದುjayalalitha ಜಯಲಲಿತ ಅವರು ಮತ್ತೆ ಮುಖ್ಯಮಂತ್ರಿಯಾಗಿರುವಂತಹ ಸಂದರ್ಭದಲ್ಲಿಯೇ ಈ ಕಂಚಿಪೀಠದ ಸ್ವಾಮಿಯನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಲಾಗಿದೆ. ಈಗ ಮುಖ್ಯಮಂತ್ರಿ ಜಯಲಲಿತ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವರೇ?? ಆ ಮೂಲಕ 2004 ರ ತಮ್ಮ ನಿರ್ಣಯವನ್ನು ಎತ್ತಿ ಹಿಡಿಯುವರೇ?? ಈ ಪ್ರಶ್ನೆ ಇಂದು ಹೊರಳು ದಾರಿಯಲ್ಲಿ ನಿಂತಿದೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ, ಜಯಲಲಿತ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ಕೈಗೊಂಡರೆ ಸದ್ಯಕ್ಕೆ ಈ ಕಂಚಿ ಸ್ವಾಮಿ ನಿಟ್ಟುಸಿರುಬಿಡಬಹುದು.

ಆದರೆ ಮಠಗಳು ಅದರ ಸ್ವಾಮಿಗಳು ಈ ರೀತಿ ಸಾಕ್ಷಾಧಾರಗಳ ಕೊರತೆಯಿಂದಾಗಿ ಆರೋಪಮುಕ್ತಗೊಂಡರೆ ಪ್ರಜಾಪ್ರಭುತ್ವದ ಆಶಯಗಳು ಭಗ್ನಗೊಳ್ಳುತ್ತವೆ. ಏಕೆಂದರೆ ಪವರ್ ಪಾಲಿಟಿಕ್ಸ್‌ನಲ್ಲಿ ಪಳಗಿದ ಈ ಜಯೇಂದ್ರ ಸರಸ್ವತಿ ಸ್ವಾಮೀಜಿ ಈ ತೀರ್ಪಿನಿಂದ ಮರಳಿ ಅಖಾಡಕ್ಕೆ ಇಳಿಯುವ ಸಾಧ್ಯತೆಗಳಿವೆ. ಆರೆಸಸ್ ಮತ್ತು ಬಿಜೆಪಿಗೆ ಹತ್ತಿರದಲ್ಲಿರುವ ಈ ಸ್ವಾಮಿ ಮುಂದಿನ ದಿನಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳು ಇವೆ. ಮಸಲ 2014 ರ ಚುನಾವಣಾ ಫಲಿತಾಂಶ ಅತಂತ್ರವಾಗಿದ್ದ ಪಕ್ಷದಲ್ಲಿ ಈ ಜಯೇಂದ್ರ ಸರಸ್ವತಿ ಸಂಘಪರಿವಾರದ ಪರವಾಗಿ ಸಂಧಾನಕಾರನಾಗಿ ನಿಯೋಜಿತಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ 1999 ರಿಂದ 2004 ರವರೆಗೆ ಈ karunanidhi_dynastyಸ್ವಾಮಿಯ ದೆಹಲಿಯ ಹಾರಾಟಗಳನ್ನು ಒಮ್ಮೆ ಅವಲೋಕಿಸಿದರೆ ಇದು ಸ್ಪಷ್ಟವಾಗುತ್ತದೆ. ಆಗ ವಾಜಪೇಯಿ ಮತ್ತು ಅಡ್ವಾನಿ ಮತ್ತು ಸುಷ್ಮಾ ಸ್ವರಾಜ್‌ರಂತಹ ಪ್ರಮುಖ ರಾಜಕಾರಣಿಗಳಿಗೆ ಹತ್ತಿರವಾಗಿದ್ದ ಈ ಸ್ವಾಮಿ ಆ ದಿನಗಳಲ್ಲಿ ಅನೇಕ ಬಗೆಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಕಡೆಗೆ ಧರ್ಮನಿರಪೇಕ್ಷಿತ, ಸೆಕ್ಯುಲರ್ ರಾಷ್ಟ್ರವಾದ ಇಂಡಿಯಾದಲ್ಲಿ ಈ ಬ್ರಾಹ್ಮಣ ಹಿಂದುತ್ವದ ಶಕ್ತಿಗಳು ಮರಳಿ ವ್ಯವಸ್ಥೆಯ ಕೇಂದ್ರಕ್ಕೆ ಬಂದು ತಲುಪುತ್ತಿವೆ. ಮತ್ತೊಂದು ಕಡೆ ಫ್ಯಾಸಿಸಂ ಹೂಂಕರಿಸುತ್ತಿದೆ. ಈ ಎರಡೂ ದುಷ್ಟ ಶಕ್ತಿಗಳು ಮೇಳೈಸುವ ದಾರಿಗಳು ಮಾತ್ರ ಇಂದಿಗೂ ತೊಡಕಿನದಾಗಿದ್ದು ಅಷ್ಟರ ಮಟ್ಟಿಗೆ ಈ ದೇಶ ಸೇಫ್.

[ಈ ಹಿನ್ನೆಲೆಯಲ್ಲಿ ಚಿಂತಕ ಕಂಚ ಐಲಯ್ಯನವರು 29 ನೇ ಜನವರಿ, 2005 ರಂದು ’ತೆಹೆಲ್ಕ’ ಪತ್ರಿಕೆಗೆ ಬರೆದ ಲೇಖನವನ್ನು ಇಂದಿಗೂ ಪ್ರಸ್ತುತವೆನ್ನುವ ಕಾರಣಕ್ಕಾಗಿ ಇಲ್ಲಿ ಅನುವಾದಿಸಿ ಕೊಡಲಾಗಿದೆ. ಇದು ಜಯೇಂದ್ರ ಸರಸ್ವತಿ ಸ್ವಾಮಿಯ ಬಂಧನದ ಹಿನ್ನೆಲೆಯಲ್ಲಿ ಬರೆದ ಲೇಖನ:]

– ಕಂಚ ಐಲಯ್ಯ

ಹಿಂದೂ ಬ್ರಾಹ್ಮಣತ್ವ ಇಂದು ಆಳವಾದ ನೈತಿಕ ಮತ್ತು ಆಧ್ಯಾತ್ಮಿಕ ಬಿಕ್ಕಟ್ಟಿನಲ್ಲಿದೆ. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ (1999-2004) ಕಂಚಿ ಪೀಠದ ಸ್ವಾಮಿ ಜಯೇಂದ್ರ ಸರಸ್ವತಿಗಳು ಬಿಜೆಪಿಯೊಂದಿಗಿನ ಪ್ರಭಾವಳಿಯನ್ನು ಬಳಸಿಕೊಂಡು ಸಾಮಾಜಿಕ-ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ನಡೆಸಿದರೆನ್ನಲಾದ ಅನೇಕ misdeeds ಇಂದು ಅವರ ಕೊರಳಿಗೇ ಗಂಟಾಗುತ್ತಿದೆ. ಆಗಿನ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಈ ಕಂಚಿ ಜಯೇಂದ್ರ ಸ್ವಾಮಿಗಳು ಪ್ರಧಾನ ಮಂತ್ರಿಗಳ ಕಛೇರಿಯೊಂದಿಗೆ ಮತ್ತು ಗೃಹ ಇಲಾಖೆಯೊಂದಿಗೆ ನೇರ ಸಂಪರ್ಕವಿರಿಸಿಕೊಂಡಿದ್ದರು. ಈ ಕಾರಣದಿಂದಾಗಿಯೇ ದೆಹಲಿಯ power centre ಈ ಕಂಚಿ ಸ್ವಾಮಿಗಳಿಗೆ ಅತ್ಯಂತ ಅಪ್ತವಾಗಿತ್ತು. ಆಗಿನ ಸಂದರ್ಭದಲ್ಲಿ ಈ ಕಂಚಿ ಸ್ವಾಮಿಗಳು advani-kanchi-seerಹಿಂದುತ್ವ ಮತ್ತು ಮುಸ್ಲಿಂ ನಾಯಕರ ನಡುವೆ ಸಂಪರ್ಕ ಸೇತುವೆಯಾಗಿದ್ದರು ಮತ್ತು ಆ ಸಂಧಾನಕಾರನ ಅನಭಿಷಿಕ್ತ ಪಟ್ಟವನ್ನು ಸಂಪೂರ್ಣವಾಗಿ ಅನುಭವಿಸಿದ್ದರು. ಆದರೆ ಶಂಕರರಾಮನ್ ಕೊಲೆ ಆರೋಪದ ಮೇಲೆ ಈ ಕಂಚಿ ಸ್ವಾಮಿಗಳ ಬಂಧನ ಮತ್ತು ಸದರಿ ಸ್ವಾಮಿಗಳ ಅಧಿಕಾರದೊಂದಿಗೆ ಅಪವಿತ್ರ ಸಂಬಂಧಗಳು ಇಂದು ಹಿಂದೂ ಸ್ವಾಮಿಗಳು ಶತಮಾನಗಳಿಂದ ಕೊಚ್ಚಿಕೊಳ್ಳುತ್ತಿರುವ ಸೋ ಕಾಲ್ಡ್ ನೈತಿಕತೆಯನ್ನೇ ನಾಶಮಾಡಿದ್ದಲ್ಲದೆ ಈ ಹಿಂದೂ ಸ್ವಾಮಿಗಳನ್ನು ಬೆಂಬಲಿಸುತ್ತಿರುವ ಆರೆಸಸ್ / ಬಿಜೆಪಿ / ವಿಎಚ್‌ಪಿ ಪಕ್ಷಗಳ ನೈತಿಕತೆಯೂ ಅಧ%ಪತನಕ್ಕೀಡಾಗಿದೆ. ಇಂದು ಇವರ ಮಾತುಗಳನ್ನು ತಮಿಳುನಾಡಿನಲ್ಲಾಗಲೀ ಅಥವಾ ಇಂಡಿಯಾದಲ್ಲಿ ಯಾರೂ ನಂಬುತ್ತಿಲ್ಲ.

ಸತ್ಯ ಸಾಯಿಬಾಬ ಅಥವಾ ಮಾತಾ ಅಮೃತಾನಂದಮಯಿರಂತಹವರ ಆಶ್ರಮಗಳಲ್ಲಿ ಯಾವುದೇ ಬಗೆಯ ಬಿಕ್ಕಟ್ಟುಗಳು ತಲೆದೋರಿದರೂ ಅದು ಇಡೀ ಹಿಂದೂ ಧರ್ಮದ ಬಿಕ್ಕಟ್ಟೆಂದು ಪರಿಗಣಿಸುವುದಿಲ್ಲ. ಆದರೆ ಬ್ರಾಹ್ಮಣರ ಕಂಚಿ ಕಾಮಕೋಟಿ ಪೀಠದಲ್ಲಿ ತಲೆದೋರಿರುವ ಬಿಕ್ಕಟ್ಟುಗಳಿಂದ ಇಡೀ ಬ್ರಾಹ್ಮಣ ಹಿಂದುತ್ವಕ್ಕೆ ತೀವ್ರ ಹಿನ್ನಡೆಯುಂಟಾಗಿದೆ .ಇಲ್ಲಿ ಜಯೇಂದ್ರ ಸರಸ್ವತಿಗಳು ಲಕ್ಷಾಂತರ ಭಕ್ತರನ್ನು ನಿಯಂತ್ರಿಸುವ ಅತ್ಯಂತ ಪ್ರಭಾವಶಾಲಿ ಪೀಠವನ್ನು ಅಲಂಕರಿಸಿದ್ದಾರೆ. ಆದಿಶಂಕರರು ಸ್ಥಾಪಿಸಿದ ಐದು ಶಂಕರ ಪೀಠಗಳಲ್ಲಿ ಈ ಕಂಚಿ ಕಾಮಕೋಟಿ ಪೀಠವು ಅತ್ಯಂತ ಕನ್ಸರ್ವೇಟಿವ್ ಆಗಿದೆ. ಆದರೆ ಇಂದು ಈ ಪೀಠ ತೀವ್ರ ಬಿಕ್ಕಟ್ಟಿನಲ್ಲಿದೆ.

ಮತ್ತೊಂದು ಮುಖ್ಯವಾಗಿ ನಮ್ಮನ್ನು ಕಾಡುವುದೇನೆಂದರೆ ಪರಸ್ಪರ ಉತ್ತಮ ಭಾಂಧವ್ಯವನ್ನು ಹೊಂದಿದ್ದ ಈ ಕಂಚಿ ಸ್ವಾಮಿಗಳು ಮತ್ತು ಜಯಲಲಿತರ ನಡುವೆ ಭಿನ್ನಾಭಿಪ್ರಾಯವೇತಕೆ ತಲೆದೋರಿತು? ಆದರೆ ಇದಕ್ಕಿಂತಲೂ ಪ್ರಮುಖವಾದ ಸಮಸ್ಯೆಯೆಂದರೆ ಈ ಕಂಚಿ ಸ್ವಾಮಿಗಳು ಅಧಿಕಾರದ ಶಕ್ತಿಕೇಂದ್ರಗಳ ಬಳಿ, ಅಧಿಕಾರದಲ್ಲಿರುವ ರಾಜಕಾರಣಿಗಳ ಬಳಿ ಪದೇ ಪದೇ ಒಡನಾಡುವುದೇತಕ್ಕೆ? ಈ ದೇಶದ ದೇವಸ್ಥಾನಗಳು ಮತ್ತು ಮಠಗಳು ಇನ್ನೆಷ್ಟು ದಿನಗಳ ಕಾಲ ಈ ಬಗೆಯ ಕೈಮ್‌ಗಳಿಗೆ ಸಾಕ್ಷಿಯಾಗಬೇಕು?

ಈ ಕಂಚಿ ಕಾಮಕೋಟಿ ಪೀಠವನ್ನು ಹಿಂದುತ್ವದ ವ್ಯಾಟಿಕನ್ ಎಂದು ಹೇಳಲಾಗುತ್ತದೆ. ಕ್ರಿಶ್ಚಿಯನ್ನರಲ್ಲಿ ಇರುವಂತಹ ಕ್ಯಾಥೋಲಿಕ್ಸ್ ಮತ್ತು ಪ್ರೊಟೆಸ್ಟಂಟ್ ಪಂಗಡಗಳಂತೆಯೇ ಈ ಬ್ರಾಹ್ಮಣರಲ್ಲಿಯೂ ಶೈವರು ಮತ್ತು ವೈಷ್ಣವರು ಎನ್ನುವ ಎರಡು ವಿಭಿನ್ನ ಕುಲಗಳಿವೆ. ಈ ಕಂಚಿ ಸ್ವಾಮಿಗಳ ಬಂಧನವನ್ನು ಬಿಜೆಪಿ ಪಕ್ಷವು ರಾಜಕೀಯಗೊಳಿಸುತ್ತಿದೆ (2005 ರಲ್ಲಿ). kanchi-seer-jayalalithaಏಕೆಂದರೆ ಈ ಕಂಚಿ ಜಯೇಂದ್ರ ಸ್ವಾಮಿಗಳು ಹಿಂದುತ್ವ ಐಡಿಯಾಲಿಜಿಯ ಪ್ರತಿಪಾದಕರು. ಮೊನ್ನೆಯವರೆಗೂ ಜಯಲಲಿತರನ್ನು ಹಿಂದೂ ಧರ್ಮದ ರಕ್ಷಕಿ ಎಂದು ಹೊಗಳುತ್ತಿದ್ದ ಬಿಜೆಪಿ ಪಕ್ಷ ಇಂದು ಈ ಸ್ವಾಮಿಗಳನ್ನು ಬಂಧಿಸಿದ್ದಕ್ಕಾಗಿ ಅವರನ್ನು ಟೀಕಿಸುತ್ತಿದೆ. ಮನುವಾದವು ಬ್ರಾಹ್ಮಣನನ್ನು ಕಾನೂನಿಗಿಂತಲೂ ಮಿಗಿಲಾದ, ಕಾನೂನನ್ನು ಮೀರಿದ ದೈವಾಂಶವುಳ್ಳವನು ಎಂದು ಪ್ರತಿಪಾದಿಸತ್ತದೆ. ಇಂದು ಕಂಚಿ ಜಯೇಂದ್ರ ಸರಸ್ವತಿ ಸ್ವಾಮಿಗಳನ್ನು ಬೆಂಬಲಿಸುವುದರ ಮೂಲಕ ಬಿಜೆಪಿ ಪಕ್ಷವೂ ಸಹ ಈ ಮನುವಾದವನ್ನು ಅನುಮೋದಿಸುತ್ತದೆ. ಈ ಬಿಜೆಪಿಯಂತಹ ಪ್ರಮುಖ ರಾಜಕೀಯ ಪಕ್ಷವು ಬ್ರಾಹ್ಮಣತ್ವದ, ಮನುಧರ್ಮ ಪ್ರತಿಪಾದಿಸುವ ಪಕ್ಷವಾಗಿ ಹೊರಹೊಮ್ಮಿದರೆ ಇಂಡಿಯಾದ ಸಂವಿಧಾನದ ಹಿತಾಸಕ್ತಿಗಳೇ ನಾಶಗೊಳ್ಳುತ್ತವೆ.

ಐತಿಹಾಸಿಕವಾಗಿ ಹಿಂದೂ ಧರ್ಮದ ಶಂಕರ ಪೀಠಾದಿಪತಿಗಳು ತಮ್ಮನ್ನು ಆದರ್ಶಪುರುಷರೆಂದೇ ಬಿಂಬಿಸಿಕೊಳ್ಳುತ್ತಾರೆ. ಆದರೆ ಇಂದು ಕೊಲೆ ಆಪಾದನೆಗೊಳಗಾಗಿರುವ ಕಂಚಿ ಜಯೇಂದ್ರ ಸ್ವಾಮಿಗಳ ನಡತೆಗಳು ಬೇರೆಯದನ್ನೇ ಮನವರಿಕೆ ಮಾಡಿಕೊಡುತ್ತವೆ. ಅಷ್ಟೇಕೆ ಮನುವಾದವನ್ನು ಉಸಿರಾಡುತ್ತಿರುವ ಇಂಡಿಯಾದ ವ್ಯವಸ್ಥೆಯೂ ಸಹ ಈ ಶಂಕರಾಚಾರ್ಯರು ಮತ್ತು ಅವರ ಪೀಠಗಳು ಪ್ರಶ್ನಾತೀತರು ಎಂದೇ ಜನತೆಗೆ ಬೋಧಿಸುತ್ತಿದ್ದರು. ಹಾಗಿದ್ದಲ್ಲಿ ಇಂದು ಕೊಲೆ ಆರೋಪಕ್ಕೆ ಒಳಗಾಗಿರುವ ಸ್ವಾಮಿಗಳ ಪರವಾಗಿ ಮೃದು ಧೋರಣೆ ವ್ಯಕ್ತಪಡಿಸುತ್ತಿರುವ ಇಲ್ಲಿನ ವ್ಯವಸ್ಥೆ ಮುಂದಿನ ತಲೆಮಾರಿಗೆ ಯಾವ ಸಂದೇಶವನ್ನು ರವಾನಿಸುತ್ತಿದೆ?

ಉದಾಹರಣೆಗೆ ಈ ಮಠಗಳ ಸಾಂಸ್ಕೃತಿಕ ಪರಂಪರೆಯನ್ನೇ ಗಮನಿಸಿ. ಸಮುದ್ರವನ್ನು ದಾಟಬಾರದೆಂದು ಇವರ ಒಂದು ಕಟ್ಟುಪಾಡು. ಒಂದು ಶಾಸನ. ಆದರೆ 2001 ರಲ್ಲಿ ಪುರಿ ಪೀಠದ ಸ್ವಾಮಿಗಳು ಸಮುದ್ರವನ್ನು ದಾಟಿ ಅಮೇರಿಕಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಹಿಂದೂ ಧರ್ಮದ ಪರವಾಗಿ ಉಪನ್ಯಾಸಗಳನ್ನು ನೀಡಿದ್ದರು. ಇಂದು ಈ ಕಂಚಿ ಸ್ವಾಮಿಗಳು ಕೊಲೆ ಆರೋಪ ಎದುರಿಸುತ್ತಿದ್ದಾರೆ. ಆದರೆ ಸಮಾಜ ಮಾತ್ರ ಇಂದು ಇವರ ಬೆಂಬಲಕ್ಕಿದೆ!! ತಮಗೆ ಅನುಕೂಲವಾಗುವ ಹಾಗಿದ್ದಲ್ಲಿ ಧರ್ಮದ ಕಟ್ಟುಪಾಡುಗಳನ್ನು ಬದಲಾಯಿಸಬಲ್ಲ ಈ ವ್ಯವಸ್ಥೆ ಅಸ್ಪೃಶ್ಯತೆ ಮತ್ತು ಸ್ತ್ರೀ ವಿಮೋಚನೆ ಕುರಿತಾಗಿ ಮಾತ್ರ ಧರ್ಮಶಾಸ್ತ್ರದ ನೀತಿನಿಯಮಗಳನ್ನು ಬೋಧಿಸುತ್ತದೆ. ಅದನ್ನು ಬದಲಾಯಿಸಲಾಗುವುದಿಲ್ಲ ಎಂದು ಹಟ ಹಿಡಿಯುತ್ತದೆ. ಇದೆಂತಹ ವಿಪರ್ಯಾಸ!

ಎಲ್ಲೆ ಮೀರಿದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ನೈತಿಕ ಪೊಲೀಸ್ ಗಿರಿ

– ನಸೂ

ಕರ್ನಾಟಕದ ಕರಾವಳಿಯಲ್ಲಿ ಹಿಂದೂ ಕೋಮುವಾದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಈಗ ಮಂಗಳೂರಿಗೆ ಹಿಂದೂ ಕೋಮುವಾದಕ್ಕಿಂತಲೂ ಅಪಾಯಕಾರಿಯಾಗಿ ಬೆಳೆಯುತ್ತಿರುವುದಕ್ಕೆ ನಿನ್ನೆ ಮಂಗಳೂರಿನಲ್ಲಿ ನಡೆದ ಎರಡು ಘಟನೆಗಳು ಸಾಕ್ಷಿ. ಮುಸ್ಲಿಂ ಸಂಘಟನೆಗಳ ಕೋಮುವಾದ ಇಂದು ನಿನ್ನೆಯದ್ದಲ್ಲ. ಇಂತಹ ಘಟನೆಗಳ ಬಗ್ಗೆ ಮೂರು ವರ್ಷದ ಹಿಂದೆಯೇ ನಾವು ವರದಿಯನ್ನು ಮಾಡಿದ್ದೆವು. vt-prasad-PFI-attackಆಗೆಲ್ಲಾ ಮುಸ್ಲಿಂ ಕೋಮುವಾದಿ ಸಂಘಟನೆಗಳ ವೇದಿಕೆಯಲ್ಲಿ ನಿಂತು ಮಾನವ ಹಕ್ಕು, ಕೋಮುವಾದದ ಬಗ್ಗೆ ಮಾತನಾಡುವ ಜಾತ್ಯಾತೀತರು, ಬುದ್ದಿಜೀವಿಗಳಲ್ಲಿ ಕೇಳಿದರೆ “ದಾಳಿಯನ್ನು ಪಿಎಫ್‌ಐ ಮಾಡಿದೆ ಎನ್ನುವುದಕ್ಕೆ ಸ್ಟ್ರಾಂಗ್ ಎವಿಡೆನ್ಸ್” ಕೇಳಿದ್ದರು. ಈಗ ನಾವು ಪಿಎಫ್‌ಐ‌ಯನ್ನು ಪ್ರಶ್ನಿಸುತ್ತಿಲ್ಲ. ಪಿಎಫ್‌ಐ‌ಯನ್ನು ಕೋಮು ಸೌಹಾರ್ದದ ಹೆಸರಲ್ಲಿ ಸಮರ್ಥಿಸುತ್ತಿರುವ ಸೆಕ್ಯೂಲರಿಸ್ಟ್‌ಗಳನ್ನು ಪ್ರಶ್ನಿಸುತ್ತೇವೆ….

ನಿನ್ನೆ ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಮೂಡಬಿದ್ರೆಯ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಮಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಗೆಳೆಯರಾಗಿದ್ದು ಮಂಗಳೂರಿಗೆ ಕಾರ್‍ಯನಿಮಿತ್ತ ಹೊರಟಿದ್ದರು. ಇದನ್ನು ತಿಳಿದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್‍ಯಕರ್ತರು ಯುವಕ ಮತ್ತು ಯುವತಿ ಇದ್ದ ಬಸ್ಸನ್ನು ಹತ್ತಿದ್ದಾರೆ. ಬಸ್ಸು ಮಂಗಳೂರಿನ ಹಂಪನಕಟ್ಟೆಯ ಬಳಿ ನಿಂತಾಗ ಯುವಕ ಮತ್ತು ಯುವತಿ ಬಸ್ಸಿನಿಂದ ಇಳಿದಿದ್ದನ್ನು ಗಮನಿಸಿದ ಕಾರ್‍ಯಕರ್ತರು ಕೂಡಾ ಬಸ್ಸಿನಿಂದ ಇಳಿದು ಹಿಂದೂ ಯುವಕನಿಗೆ ಥಳಿಸಿದ್ದಾರೆ. ತಕ್ಷಣ ಸ್ಥಳೀಯರು ದಾಳಿಗೊಳಗಾದ ಹಿಂದೂ ಯುವಕನನ್ನು ರಕ್ಷಣೆ ಮಾಡಿದ್ದರಿಂದ ಹೆಚ್ಚಿನ ಜೀವಾಪಾಯಗಳು ಆಗಿಲ್ಲ. ಮುಸ್ಲಿಂ ಯುವತಿಯನ್ನು ಅಪಹರಿಸಿದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್‍ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಬಂದರು ಪೊಲೀಸರು ಸ್ಥಳಕ್ಕೆ ಬಂದು ಸೇರಿದ್ದ ಜನರನ್ನು ಚದುರಿಸಿದ್ದಾರೆ.

ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಗೆಳೆಯರಾಗಿರಬಹುದು ಅಥವಾ ಇನ್ನೇನಾಗಿದ್ದರೂ ಆಗಿರಬಹುದು. PFI-mangaloreಅದನ್ನು ಕೇಳುವ ಅಧಿಕಾರ ಈ ಸಂಘಟನೆಗಳಿಗೆ ಕೊಟ್ಟವರ್‍ಯಾರು? ಯುವತಿ ಮುಸ್ಲಿಮಳು ಎಂಬ ಒಂದೇ ಮಾನದಂಡದಲ್ಲಿ ಆಕೆಯನ್ನು ಬಲಾತ್ಕಾರವಾಗಿ ವಾಹನದಲ್ಲಿ ಕುಳ್ಳಿರಿಸಿ ಅವರಿಗೆ ಬೇಕಾದ ಸ್ಥಳಗಳಿಗೆ ಕೊಂಡೊಯ್ದು ಬುದ್ದಿ ಹೇಳುವ ಅಥಾರಿಟಿಯನ್ನು ಸಂಘಟನೆಗಳಿಗೆ ನೀಡಿದವರ್‍ಯಾರು? ಈ ಬಗ್ಗೆ ಬಂದರು ಪೊಲೀಸ್ ಠಾಣೆಯನ್ನು ಕೇಳಿದರೆ “ಇಂತಹ ಘಟನೆ ಆಗಿರುವ ಬಗ್ಗೆ ಮಾಹಿತಿಯೇ ಇಲ್ಲ” ಎನ್ನುತ್ತಾರೆ. ಅದಕ್ಕೂ ಕಾರಣವಿದೆ. ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆದರೆ ಆಯಾ ಠಾಣೆಯ ಅಧಿಕಾರಿಯನ್ನು ಹೊಣೆ ಮಾಡಲಾಗುವುದು ಎಂದು ಸರಕಾರ ಹೇಳಿರುವುದರಿಂದ ಈಗ ಪೊಲೀಸರು ನೈತಿಕ ಪೊಲೀಸ್ ಗಿರಿ ನಡೆದಿದೆ ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ. ಒಂದೋ ನೈತಿಕ ಪೊಲೀಸ್ ಗಿರಿ ಘಟನೆಯನ್ನು ಯಾರಾದರೂ ಚಿತ್ರೀಕರಿಸಿ ಸಾಕ್ಷ್ಯ ಇಟ್ಟುಕೊಂಡಿರಬೇಕು ಇಲ್ಲವಾದರೆ ನೈತಿಕ ಪೊಲೀಸ್ ಗಿರಿಗೆ ಒಳಗಾದ ಸಂತ್ರಸ್ತರು ದೂರು ಕೊಡಬೇಕು. ಇಲ್ಲವಾದರೆ ಪೊಲೀಸರೇ ಘಟನೆಯನ್ನು ಮುಚ್ಚಿ ಹಾಕಿಬಿಡುತ್ತಾರೆ.

ಇದಾದ ಸ್ವಲ್ಪ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದಿಂದ ಭೀಕರವಾದ ಇನ್ನೊಂದು ನೈತಿಕ ಪೊಲೀಸ್ ಗಿರಿ ನಡೆದಿದೆ.

ಮಂಗಳೂರಿನಿಂದ ಪ್ರಸಾರವಾಗುವ “ಕರಾವಳಿ ಅಲೆ” ಪತ್ರಿಕೆಯ ವಿಟ್ಲ ವರದಿಗಾರ ವಿ.ಟಿ. ಪ್ರಸಾದ್ ಎಂಬವರು ತನ್ನ ಮನೆಯ ಪಕ್ಕದ ಮುಸ್ಲಿಂ ಮಹಿಳೆ ಅಲೀಮಾ ಎಂಬವರ ಮನೆ ಬೀಳುವ ಸ್ಥಿತಿಯಲ್ಲಿರುವುದನ್ನು ಕಂಡು ಪತ್ರಿಕೆಯಲ್ಲಿ ಸುದ್ದಿ ಮಾಡಿದ್ದರು. ಸುದ್ದಿಗೆ ಸ್ಪಂದಿಸಿದ vt-prasad-PFI-attack-mangaloreವಿಟ್ಲದ ಮುಸ್ಲಿಂ ಉದ್ಯಮಿಗಳು ಹಣದ ಸಹಕಾರ ನೀಡುವ ಭರವಸೆ ನೀಡಿದ್ದರು. ತನ್ನ ಮನೆಯ ಪಕ್ಕದಲ್ಲಿರುವ ಮನೆಯಾಗಿದ್ದರಿಂದ ಈ ಬಗ್ಗೆ ಕಾಳಜಿ ವಹಿಸಿದ್ದ ವಿ.ಟಿ. ಪ್ರಸಾದ್ ಮನೆಯ ರಿಪೇರಿಗೆ ಹಣವನ್ನು ದಾನಿಗಳಿಂದ ಸಂಗ್ರಹಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದಕೊಂಡ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್‍ಯಕರ್ತರು ಪ್ರಸಾದ್ ರನ್ನು ಭೇಟಿಯಾಗಿ “ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಮನೆಗೆ ಬೇಕಾದಷ್ಟು ಮರ ಒದಗಿಸುತ್ತೇವೆ. ನೀವು ಈ ಬಗ್ಗೆ ವರದಿ ಮಾಡಬೇಕು” ಎಂದಿದ್ದರಂತೆ. ಆದರೆ ಅಲೀಮಾರ ಮನೆ ನಿರ್ಮಾಣಕ್ಕೆ ಬೇಕಾದಷ್ಟು ಹಣವನ್ನು ಮುಸ್ಲಿಂ ಉಧ್ಯಮಿಗಳು ಅದಾಗಲೇ ನೀಡಿದ್ದರಿಂದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕೊಡುಗೆಯನ್ನು ತಿರಸ್ಕರಿಸಿದ್ದರು. ಇದು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಆಕ್ರೋಶಕ್ಕೆ ಕಾರಣವಾಗಿತ್ತು. ಮುಸ್ಲಿಂ ಮಹಿಳೆಯ ಮನೆ ರಿಪೇರಿ ಮಾಡಲು ಈತ ಯಾರು ಎಂಬ ಪ್ರಶ್ನೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಮಧ್ಯೆ ಎದ್ದಿತ್ತು.

ನಿನ್ನೆ ಮದ್ಯಾಹ್ನ 12 ಗಂಟೆಯ ವೇಳೆಗೆ ವಿ.ಟಿ. ಪ್ರಸಾದ್ ತನ್ನ ಮನೆಯ ಪಕ್ಕದಲ್ಲಿದ್ದ ಶಾಲೆಯ ಸಿಬ್ಬಂದಿಗಳ ಬಳಿ ಮಾತನಾಡುತ್ತಿದ್ದಾಗ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್‍ಯಕರ್ತನೊಬ್ಬ ಕರೆ ಮಾಡಿ ಭೇಟಿಯಾಗುವಂತೆ ತಿಳಿಸಿದ್ದ. ಸುದ್ದಿಯ ಯಾವುದಾದರೂ ವಿಷಯವಿರಬಹುದೆಂಬ ಊಹೆಯಲ್ಲಿ ವಿ.ಟಿ. ಪ್ರಸಾದ್ ಆತನನ್ನು ಭೇಟಿಯಾದರು. ಆದರೆ ಆತ ಸುಮಾರು 40 ಜನರ ಗುಂಪಿನೊಂದಿಗೆ ಬಂದಿದ್ದ. ತಕ್ಷಣವೇ ಆ 40 ಕ್ಕೂ ಅಧಿಕ ಮಂದಿ ವಿ.ಟಿ. ಪ್ರಸಾದ್ ಮೇಲೆ ದಾಳಿ ನಡೆಸಿದ್ದಾರೆ. ತಲೆ, ಮುಖ, ಸೊಂಟಕ್ಕೆ ಮಾತ್ರವಲ್ಲದೆ ಎಲ್ಲೆಂದರಲ್ಲಿ ತುಳಿದು ಮೈ ಮೇಲೆ ಅನೇಕ ಮಂದಿ ನಿಂತು, ಕುಣಿದು ಅಮಾನವೀಯವಾಗಿ ವರ್ತಿಸಿದ್ದಾರೆ. ವಿ.ಟಿ. ಪ್ರಸಾದ್‌ಗೆ ಪ್ರಜ್ಞೆ ತಪ್ಪಿದ ನಂತರ ರಿಕ್ಷಾವೊಂದರಲ್ಲಿ ಹಾಕಿ ಅಲೀಮಾನ ಮನೆಯ ಅಂಗಳಕ್ಕೆ ಎಳೆದುಕೊಂಡು ಹೋಗಿ ಮತ್ತೆ ಹಲ್ಲೆ ನಡೆಸಿದ್ದಾರೆ. ಪ್ರಜ್ಞೆ ತಪ್ಪಿದ್ದ ಒರ್ವ ವ್ಯಕ್ತಿಯ ಮೇಲೆ 40 ಜನರ ಗುಂಪು ಅಮಾನವೀಯವಾಗಿ ಹಲ್ಲೆ ನಡೆಸಿದೆ. ನಂತರ ಪ್ರಸಾದ್‌ರನ್ನು ಅಂಬ್ಯೂಲೆನ್ಸ್‌ನಲ್ಲಿ ಸಾಗಿಸುವ ಸಂದರ್ಭದಲ್ಲಿ ಅಂಬ್ಯೂಲೆನ್ಸ್ ನಿಲ್ಲಿಸಿ ಪ್ರಜ್ಞೆ ತಪ್ಪಿ ಮಲಗಿದ್ದ ಪ್ರಸಾದ್‌ರನ್ನು ಮತ್ತೆ ಎಳೆದು ಹಲ್ಲೆ ನಡೆಸಿದೆ. ಈ ಬಗ್ಗೆ ಅಂಬ್ಯೂಲೆನ್ಸ್ ಚಾಲಕ ದೂರು ಕೊಡಲು ನಿರ್ಧರಿಸಿದ್ದಾರೆ.

ಈ ಎರಡೂ ಘಟನೆಗಳನ್ನೂ ಪಾಪ್ಯೂಲರ್ ಫ್ರಂಟ್ ಅಫ್ ಇಂಡಿಯಾ ಸಕ್ರಿಯವಾಗಿ ಕೆಲಸ ಮಾಡಿದೆ. ದಾಳಿಯನ್ನು ಸಂಘಟಿಸಿದೆ. PFI_mangalore_protestವಿಪರ್ಯಾಸ ಎಂದರೆ ಈ ಮೂಲಭೂತವಾದಿ ಮತ್ತು ಕೋಮುವಾದಿ ಸಂಘಟನೆಗಳ ವೇದಿಕೆಯಲ್ಲೇ ನಿಂತುಕೊಂಡು ಕೆಲವೊಂದು ಜಾತ್ಯಾತೀತರು ಕೋಮುವಾದದ ವಿರುದ್ದ ಮತ್ತು ಮಾನವ ಹಕ್ಕಿನ ಬಗ್ಗೆ ಭಾಷಣ ಹೊಡೆಯುತ್ತಿರುವುದು. ಮೂರು ವರ್ಷಗಳ ಹಿಂದೆ ಇದೇ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ನಗರದ ಕೇಂದ್ರ ಭಾಗದಲ್ಲಿ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ಮೇಲೆ ಹಲ್ಲೆ ನಡೆಸಿತ್ತು. ಈ ಬಗ್ಗೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ಗುರುತಿಸಿಕೊಂಡಿರುವ ಮಾನವ ಹಕ್ಕು ಕಾರ್‍ಯಕರ್ತರನ್ನು ಕೇಳಿದರೆ “ನಮಗೆ ಸ್ಟ್ರಾಂಗ್ ಎವಿಡೆನ್ಸ್ ಕೊಡಿ” ಎನ್ನುತ್ತಾರೆ. ಅದೆಷ್ಟೋ ಅಮಾಯಕ ಯುವಕ ಯುವತಿಯರ ಮೇಲೆ ನಡೆದ ಹಲ್ಲೆ, ಸುರಿದ ರಕ್ತ, ಹರಿದ ಕಣ್ಣೀರು, ಆದ ಅವಮಾನಗಳು ಇವರುಗಳಿಗೆ ಎವಿಡೆನ್ಸ್ ಆಗಿ ಕಾಣದಿದ್ದರೆ ಅಂತವರಿಗೆ ಎವಿಡೆನ್ಸ್ ನೀಡುವ ಅಗತ್ಯ ಇಲ್ಲ.

ಇಂಥಾ ಪ್ರಗತಿಪರರು ವಿರಳವಾಗಲಿ


– ಡಾ.ಎಸ್.ಬಿ. ಜೋಗುರ


 

ಒಂದು ಸಂಸ್ಥೆಯನ್ನು ಕಟ್ಟುವಲ್ಲಿ, ಅದರ ಹೆಸರು ಹಸನಾಗಿಡುವಲ್ಲಿ ಅನೇಕರು ಹಗಲಿರುಳು ಶ್ರಮಿಸಿರುತ್ತಾರೆ. ಸಮುದಾಯದಲ್ಲಿ ಈಗಾಗಲೇ ಕುಲಗೆಟ್ಟ ಇತರೆ ಸಂಸ್ಥೆಗಳನ್ನು ಶುಭ್ರವಾಗಿರುವ ಸಂಸ್ಥೆಯೊಂದಿಗೆ ಹೋಲಿಸಿ ಇದ್ದರೆ ಹಾಗಿರಬೇಕು ಎಂದು ನಿರೀಕ್ಷೆ ಮಾಡುವ ಹಂತ ತಲುಪಿದ ವೇಳೆಯಲ್ಲಿಯೇ ಮಕಾಡೇ ಮಲಗುವ, ಒಟ್ಟೂ ಮೌಲಿಕ ಮರ್ಯಾದೆಯನ್ನು ಸಾಸಿವೆಯಷ್ಟು ಸುಖಕ್ಕೆ ಹರಾಜು ಹಾಕುವ ಕ್ರಮವೇ ಅತ್ಯಂತ ತುಛ್ಚವಾದುದು. ಗಾಜಿನ ಮನೆಯಲ್ಲಿರುವವರು ತುಂಬಾ ಹುಷಾರಾಗಿರಬೇಕು. tehelka-tarun-tejpalತೆಹಲ್ಕಾ ದಂತಹ ಪ್ರಗತಿಪರ ಪತ್ರಿಕೆಯೊಂದರ ಸಂಪಾದಕನಾಗಿದ್ದ ತರುಣ ತೇಜಪಾಲ್ ಮಾಧ್ಯಮ ಜಗತ್ತಿನಲ್ಲಿ ತನ್ನದೇಯಾದ ಒಂದು ವಿಶೇಷ ಇಮೇಜನ್ನು ಆ ಪತ್ರಿಕೆಯ ಮೂಲಕವೇ ಗಳಿಸಿಕೊಂಡವನು. ಇಂದು ಯಾವುದೇ ಒಬ್ಬ ವ್ಯಕ್ತಿ ತುಂಬಾ ಪ್ರಗತಿಪರನೆಂದು ಹೇಳುತ್ತಾ ಆತ ಮಾಡುವುದನ್ನೆಲ್ಲಾ ಸಹಿಸಿಕೊಳ್ಳುವ ಸಹನಿಕೆ ಒಟ್ಟು ಸಮಷ್ಟಿಗಿರುವುದಿಲ್ಲ. ಆತ ಪ್ರಗತಿಪರ ಮಣ್ಣ್ನು..ಮತ್ತೊಂದು ಅದೆಲ್ಲಾ ನಮ್ಮ ನೈತಿಕತೆ ಚೆನ್ನಾಗಿರುವಾಗ ಮಾತ್ರ. ಆತ ತನ್ನ ತಂದೆಯ ಸಮಾನ, ಅವನ ಮಗಳು ಮತ್ತು ತಾನು ಸ್ನೇಹಿತೆಯರು. ಹೀಗಿರುವುದು ಗೊತ್ತಿದ್ದೂ… ಇದು ಆ ಯುವತಿಯ ಮಾತು. ತರುಣ ತೇಜಪಾಲ್ ಆ ಯುವತಿಯನ್ನು ತನ್ನ ಲೈಂಗಿಕ ಕಾಮನೆಗಾಗಿ ಬಳಸಿಕೊಂಡದ್ದು ತಪ್ಪು ಎನ್ನುವುದು ಖಡಾಖಂಡಿತ. ಅದೇ ವೇಳೆಗೆ ಈ ಬಗೆಯ ಲೈಂಗಿಕ ಹಗರಣಗಳು ಹಿಂದೆಂದೂ ನಡೆದಿಲ್ಲವೇ..? ಎಂದು ಕೇಳುವವರಿಗೆ ಇಲ್ಲಿ ಅವಕಾಶವಿಲ್ಲ. ಯಾಕೆಂದರೆ ತೇಜಪಾಲ್ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸದಾ ಜಾಗೃತವಾಗಿ ಉಳಿದು ಕಾಯಬೇಕಾದವನು. ಮನೆ ಕಾಯುವವನೇ ಕಳ್ಳತನ ಮಾಡುವ ಕ್ರಮವಿದೆಯಲ್ಲ, ಅದು ನಿಜವಾಗಿಯೂ ಅನೈತಿಕವಾದುದು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವ ಹಾಗೆ ಇಂಥಾ ವರ್ತನೆಯಿಂದ ತೆಹಲ್ಕಾ ದಂತಹ ಒಂದು ಪತ್ರಿಕೆಯ ಇಮೆಜನ್ನೇ ಋಣಾತ್ಮಕವಾಗಿ ಬದಲಾಯಿಸಿದ ಅಪಕೀರ್ತಿ ತೇಜಪಾಲಗಲ್ಲದೇ ಇನ್ನಾರಿಗೂ ಅಲ್ಲ. ಆರು ತಿಂಗಳು ತಾನು ಸಂಪಾದಕ ಹುದ್ದೆಯಿಂದ ಕೆಳಗಿಳಿಯುವ ಕ್ರಮ, ಹಾಗೆಯೇ ಏನೋ ಘಟಿಸಬಾರದ್ದು ಘಟಿಸಿತು ಅದಕ್ಕೆ ಕ್ಷಮೆಯಾಚಿಸುವ ರೀತಿ ತರುಣನನ್ನು ಬಾಲಕನಾಗಿಸುವಂತೆ ಮಾಡಿವೆ. ಬೇರೆಯವರು ಈ ಬಗೆಯ ಕೃತ್ಯಗಳಲ್ಲಿ ತೊಡಗಿದಾಗ ಏರು ಧ್ವನಿಯಲ್ಲಿ ಮಾತನಾಡುವವರೇ ಈಗ ಮೆಲುದನಿಯಲ್ಲಿ ಕೆಳಗೆ ಮುಖ ಮಾಡಿ ಮಾತನಾಡುವ ಪ್ರಸಂಗ ಬಂದದ್ದು ದೊಡ್ದ ವಿಪರ್ಯಾಸ. ಕೊನೆಗೂ ಇಲ್ಲಿ ಯಾರೂ ನೆಟ್ಟಗಿಲ್ಲ ಎನ್ನುವ ಭಾವನೆ ತೆಹಲ್ಕಾ ಪತ್ರಿಕೆಯ ಧೊರಣೆಯನ್ನು ಒಪ್ಪಿಕೊಂಡು ಓದುವ ಅನೇಕರಲ್ಲಿ ಬಂದಿರಲಿಕ್ಕೆ ಸಾಕು.

ಕಾಮ ಎನ್ನುವುದು ನಮ್ಮನ್ನು ಮತಿಭ್ರಷ್ಟರನ್ನಾಗಿಸುತ್ತದೆ ಅದಕ್ಕೆ ಸಾಕ್ಷಿಯಾಗಿ, ಈ ಬಗೆಯ ಅನೇಕ ಘಟನೆಗಳು ನಮಗೆ ಮತ್ತೆ ಮತ್ತೆ ಸಾಬೀತು ಪಡಿಸಿದ ಮೇಲೆಯೂ ನಮ್ಮ ಮಾನಸಿಕ ಸ್ಥಿತಿ ಬದಲಾಗಲಿಲ್ಲ ಎಂತಾದರೆ ನಮ್ಮ ಸಮರ್ಥನೆಗೆ, ಪಶ್ಚಾತ್ತಾಪಕ್ಕೆ ಯಾವ ಅರ್ಥವೂ ಇರುವುದಿಲ್ಲ. ದೇಶದ ಬೇರೆ ಬೇರೆ ಕಡೆಗಳಲ್ಲಿ ಥಿಂಕ್ ಟ್ಯಾಂಕ್ ಅನ್ನೊ ಕಾರ್ಯಕ್ರಮ ಸಂಘಟಿಸುವ ತೆಹಲ್ಕಾ ಸಮೂಹಕ್ಕೆ ತನ್ನ ಬುಡದಲ್ಲಿಯೇ ಒಂದು ಮುಳ್ಳಿದೆ ಎನ್ನುವ ಅರಿವಿರಲಿಲ್ಲವೇ..? ಅಥವಾ ಜಾಣ ಕುರುಡು.. ಕಿವುಡು ಇಲ್ಲೂ ಕೆಲಸ ಮಾಡಿದೆಯೋ ಹೇಗೋ ಗೊತ್ತಿಲ್ಲ. ತೀರ ಇತ್ತೀಚೆಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಯವರ ಮೇಲೆ ಇದೇ ಬಗೆಯ ಲೈಂಗಿಕ ಕಿರುಕುಳದ ಆರೋಪದ ಧ್ವನಿ ಎದ್ದಿರುವುದಿತ್ತು.sexual_harassment_work ಆಗ ಈ ತರುಣ ತೀರಾ ಪ್ರಗತಿಪರನಂತೆ ಮಾತನಾಡಿರುವುದು ಸುಳ್ಳಂತೂ ಅಲ್ಲ. ಈಗ ತನ್ನಿಂದಲೇ ಆ ಬಗೆಯ ಪ್ರಮಾದ ಜರುಗಿದಾಗ ಪ್ರಗತಿಪರತೆಯ ಧ್ವನಿಯೇ ಉಡುಗಿ ಹೋಗಿದ್ದು ವಿಷಾದನೀಯ. ಆ ತರುಣಿಯ ಕ್ಷಮೆ ಕೋರಿದ್ದು, ತನ್ನಿಂದ ತಪ್ಪಾಗಿದೆ ಎಂದು ಹೇಳಿದ್ದನ್ನೂ ಕೂಡಾ ಪ್ರಗತಿಪರತೆಯ ಲಕ್ಷಣವೇ ಎಂದು ಬಿಂಬಿಸುವ ಅಗತ್ಯವಿಲ್ಲ. ಒಬ್ಬ ಸಾಮಾನ್ಯ ಮನುಷ್ಯ ಈ ಬಗೆಯ ಲೈಂಗಿಕ ಕಿರುಕುಳದಲ್ಲಿ ಸಿಲುಕಿಬೀಳುವುದಕ್ಕೂ ಮಹತ್ತರವಾದ ಸಾಧನೆ ಮಾಡಿ, ದೇಶದ ಆಗು ಹೋಗುಗಳ ಬಗ್ಗೆ ನೈಜವಾಗಿ ಬಿಂಬಿಸುವ ಹೊಣೆಗಾರಿಕೆಯುಳ್ಳ ಒಂದು ಪ್ರತಿಷ್ಟಿತ ಪತ್ರಿಕೆಯ ಸಂಪಾದಕನಾಗಿ ಹೀಗೆ ಮಾಡುವುದಕ್ಕೂ ತುಂಬಾ ಅಂತರಗಳಿವೆ. ಒಬ್ಬ ಸಾಮಾನ್ಯನ ಆ ಬಗೆಯ ಕೃತ್ಯ ಆತನನ್ನು ವ್ಯಕ್ತಿಗತವಾಗಿ ಮಾತ್ರ ಬಾಧಿಸುತ್ತದೆ. ಆದರೆ ತರುಣ ತೇಜಪಾಲ್ ಕೃತ್ಯ ಹಾಗಲ್ಲ. ಇದು ಆತನ ವ್ಯಕ್ತಿಗತ ಬಾಧೆಗಿಂತಲೂ ಮುಖ್ಯವಾಗಿ ಒಂದು ಸಂಸ್ಥೆಯ ಬುಡವನ್ನೇ ಪೊಳ್ಳು ಮಾಡಿದ ಕೆಲಸ. ಇದು ಅತ್ಯಂತ ಅಪಾಯದ್ದು.

ಇನ್ನು ತೇಜಪಾಲ್ ಎಸಗಿದ ಈ ಕೃತ್ಯವನ್ನು ಒಂದು ಸಮಾಜದ ಆರೋಗ್ಯದ ನಿಟ್ಟಿನಲ್ಲಿ ನೀಡಬಹುದಾದ ಚಿಕಿತ್ಸೆಯಂತೆ ಪರಿಗಣಿಸಿ ವ್ಯವಹರಿಸಬೇಕು. ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಮಾತ್ರ ಇಲ್ಲಿ ಸರಿಯಲ್ಲ. ಉರಿವ ಮನೆಯ ಗಳ ಹಿರಿಯುವ, ಇಲ್ಲವೇ ಬೆಂಕಿ ಬಿದ್ದ ಗಳಿಗೆಯಲ್ಲಿಯೇ ಮೈ ಕಾಯಿಸಿಕೊಳ್ಳುವ ಚಪಲ ರಾಜಕೀಯ ವಲಯದಲ್ಲಿದ್ದವರಿಗೆ ತುಸು ಜಾಸ್ತಿ. ಅದಾಗಬಾರದು. ಯಾವುದೇ ಹಳೆಯ ಕಾಲದ ಜೀರ್ಣವಾಗಿ ಹೋದ ಸಂಗತಿಗಳಿಗೆ ತಾಜಾ ನೆನಪು ತಂದು ಕೊಡುವ, ಸೇಡು ತೀರಿಸಿಕೊಳ್ಳುವ ಕಸರತ್ತನ್ನು ಮಾತ್ರ ಇಲ್ಲಿ ಮಾಡಬಾರದು. ತರುಣ ತೇಜಪಾಲ್ ಮಾಡಿರುವ ಈ ಕೃತ್ಯವನ್ನು ಒಂದು ಅಪವರ್ತನೆಯನ್ನಾಗಿ ಪರಿಗಣಿಸಿ ತನಿಖೆಯಾಗುವುದು ಸೂಕ್ತ. ಆ ತರಣಿ ಈ ತರುಣ ತೇಜಪಾಲ್ ಬಗ್ಗೆ ಕಂಪ್ಲೇಂಟ್ ಫ಼ೈಲ್ ಮಾಡದಿರುವ ಬಗ್ಗೆಯೂ ಪ್ರಬಲವಾದ ಕಾರಣಗಳಿರಬಹುದು. ಅದು ಆಕೆಯ ತೀರ್ಮಾನಕ್ಕೆ ಬಿಡುವುದು ಉತ್ತಮ. sexual_harassmentಅವಳ ಮೇಲೆ ಒತ್ತಡ ಹೇರುವುದು ಎರಡೂ ಕಡೆಯಿಂದ ನಡೆಯಬಾರದು. ಈ ತೇಜಪಾಲ್ ತುಂಬಾ ಪ್ರಗತಿಪರ ಮನುಷ್ಯ. ಹಾಗೆ ಬರೆಯುವ, ಮಾತನಾಡುವ ಕ್ರಮದಿಂದಲೇ ಅವನು ಹಾಗೆ ಗುರುತಿಸಿಕೊಂಡದ್ದು. ಅದನ್ನು ಅನುಲಕ್ಷಿಸಿಯೇ ತೇಜಪಾಲನನ್ನು ಪ್ರಸಾರ ಭಾರತಿಯ ಕಮಿಟಿಯ ಸದಸ್ಯನನ್ನಾಗಿ ಕಳೆದ ಬುಧುವಾರವಷ್ಟೇ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ನೇಮಕ ಮಾಡಿರುವುದಿತ್ತು. ಆತನ ಈ ಬಗೆಯ ಘನಂಧಾರಿ ಕೆಲಸದಿಂದ ಆ ಸದಸ್ಯತ್ವವನ್ನು ಕೈ ಬಿಡಲಾಯಿತು.

ಬೇರೆ ಯಾವುದೋ ಒಂದು ಅಪವರ್ತನೆಯಾದರೂ ತೇಜಪಾಲನನ್ನು ಈ ಮಟ್ಟಕ್ಕೆ ಇಳಿಸುತ್ತಿರಲಿಲ್ಲ. ಅದೇ ಒಂದೊಮ್ಮೆ ಆ ತರುಣಿಯ ಸಮ್ಮತಿಯಿದ್ದು, ಈ ಘಟನೆ ಜರುಗಿದ್ದರೆ ಈ ರೀತಿಯ ತಿರುವು ಪಡೆಯುತ್ತಿರಲಿಲ್ಲ. ದೇಶದಲ್ಲಿ ದೆಹಲಿಯ ಅತ್ಯಾಚಾರದ ಘಟನೆಯ ನಂತರ ನಿರಂತರವಾಗಿ ನಡೆಯುತ್ತಿರುವ ಈ ಬಗೆಯ ಲೈಂಗಿಕ ದೌರ್ಜನ್ಯಗಳ ಬಗ್ಗೆ ಸಾಕಷ್ಟು ವಸ್ತುನಿಷ್ಟ ವರದಿ ಮಾಡಿ, ಆ ಬಗ್ಗೆ ತುಂಬಾ ಪ್ರಗತಿಪರ ನಿಲುವನ್ನು ಪ್ರದರ್ಶಿಸಿ ಈಗ ಇದ್ದಕ್ಕಿದ್ದಂತೆ ತನ್ನಿಂದ ತಪ್ಪಾಗಿದೆ, ಆರು ತಿಂಗಳು ತಾನು ಮನೆಯಲ್ಲಿ ಉಳಿಯುವೆ ಎನ್ನುವ ಮಾತೇ ಬಾಲಿಶವಾದುದು. ಎಲ್ಲ ವಿಷಯಗಳಲ್ಲೂ ಜನರ ಮೆಮೊರಿ ಶಾರ್ಟ್ ಆಗಿರುವುದಿಲ್ಲ. ತೆಹಲ್ಕಾ ಬಳಗವನ್ನೂ ತೇಜಪಾಲ್ ನ ಈ ಕೃತ್ಯ ಬಾಧಿಸುವಲ್ಲಿ ಎರಡು ಮಾತಿಲ್ಲ. ಈಗಾಗಲೇ ತರುಣ ಮೇಲೆ ಎಫ಼್.ಆಯ್.ಆರ್.ದಾಖಲಾಗಿದೆ. ಬಂಧನದ ಸಾಧ್ಯತೆ ಸನ್ನಿಹಿತವಾಗಿದೆ. ನಿರೀಕ್ಷಣಾ ಜಾಮೀನಿಗಾಗಿ ತಡಕಾಡುವಂತಾದದ್ದು ವಿಪರ್ಯಾಸ. ಕಿರುಕುಳವನ್ನು ಅನುಭವಿಸಿದ ಯುವತಿ ಅದಾಗಲೇ ತೆಹಲ್ಕಾ ತೊರೆದದ್ದೂ ಆಯಿತು. ಇಂಥಾ ಪ್ರಗತಿಪರರು ವಿರಳವಾಗುವುದರಲ್ಲಿಯೇ ಸಮಾಜದ ಯೋಗಕ್ಷೇಮ ಅಡಗಿದೆ.