Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಆರೆಸಸ್ ಅಂದರೆ ಏನು?

ಹಿಂದಿ ಮೂಲ : ಮಧು ಲಿಮಯೆ
ಇಂಗ್ಲೀಷ್ ಅನುವಾದ : ಜಾವೇದ್ ಆನಂದ್
ಅನುವಾದ : ಬಿ.ಶ್ರೀಪಾದ ಭಟ್

(ಹಿರಿಯ ಸಮಾಜವಾದಿ ನಾಯಕ, ಲೋಹಿಯಾವಾದಿ ದಿವಂಗತ ಮಧು ಲಿಮಯೆ 1979 ರಲ್ಲಿ, ಅಂದರೆ ಜನತಾ ಪಕ್ಷ ಹೋಳಾದ ನಂತರದ ದಿನಗಳಲ್ಲಿ ಹಿಂದಿ ವಾರ ಪತ್ರಿಕೆ “ರವಿವಾರ್”ಗೆ ಬರೆದ ಲೇಖನ. ಇಂದಿಗೆ ಇದು 34 ವರ್ಷಗಳಷ್ಟು ಹಳೆಯದಾದರೂ ಅದರ ವಿವರಗಳು ಇಂದಿಗೂ ಪ್ರಸ್ತುತ ಎನ್ನುವ ಕಾರಣಕ್ಕೆ ಆಂಶಿಕವಾಗಿ ಅನುವಾದಿಸಲಾಗಿದೆ.)

ನಾನು 1937 ರಲ್ಲಿ ರಾಜಕೀಯವನ್ನು ಪ್ರವೇಶಿಸಿದೆ. madhu-limaye-postal-stampಆಗ ತರುಣನಾಗಿದ್ದ ನಾನು ಚಿಕ್ಕ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್ ಪಾಸಾಗಿದ್ದೆ ಮತ್ತು ಕೂಡಲೇ ಕಾಲೇಜಿಗೆ ಪ್ರವೇಶವನ್ನು ಪಡೆದಿದ್ದೆ. ಆ ಕಾಲದಲ್ಲಿ ಪುಣೆಯಲ್ಲಿ ಒಂದು ಕಡೆ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು (ವಿನಾಯಕ್ ದಾಮೋದರ್ ಸಾವರ್ಕರ್ ಬೆಂಬಲಿಗರು) ಮತ್ತೊಂದು ಕಡೆ ಸೋಷಿಯಲಿಷ್ಟರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕಮ್ಯುನಿಷ್ಟರು ಕ್ರಿಯಾಶೀಲರಾಗಿದ್ದರು. 1 ನೇ ಮೇ 1937 ರಂದು ನಾವೆಲ್ಲ ಮೇ ದಿನವನ್ನು ಆಚರಿಸುತ್ತಿದ್ದೆವು. ಆಗ ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆಗಾರರ ಮೇಲೆ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು ಏಕಾಏಕಿ ಹಲ್ಲೆ ನಡೆಸಿದರು. ಈ ಹಲ್ಲೆಯಿಂದ ಕ್ರಾಂತಿಕಾರಿ ಸೇನಾಪತಿ ಬಾಪಟ್ ಮತ್ತು ಸಮಾಜವಾದಿ ನಾಯಕ ಎಸ್.ಎಂ.ಜೋಶಿ ಗಾಯಗೊಂಡರು. ಈ ಘಟನೆಯ ನಂತರ ಅಂದಿನಿಂದ ಇಂದಿನವರೆಗೂ ಈ ಆರೆಸಸ್ ಮತ್ತು ಸಾವರ್ಕರ್‌ವಾದಿಗಳೊಂದಿಗೆ ನಾವೆಲ್ಲ ತೀವ್ರವಾಗಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ.

ಆರೆಸಸ್‌ನೊಂದಿಗೆ ನಮ್ಮ ಮೊದಲ ತಕರಾರು ಶುರುವಾದದ್ದು ರಾಷ್ಟ್ರೀಯತೆಯ ಕುರಿತಾಗಿ. ನಾವೆಲ್ಲ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುಗಳಿವೆ ಎಂದು ನಂಬಿದ್ದರೆ ಈ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು ಹಿಂದೂ ರಾಷ್ಟ್ರದ ಕನಸನ್ನು ಪ್ರತಿಪಾದಿಸುತ್ತಿದ್ದರು. ಜಿನ್ನಾ ಅವರು ಸಹ ಈ ಪರಿಕಲ್ಪನೆಯ ಬಲಿಪಶುವಾಗಿದ್ದರು. savarkar-golwalkarಇಂಡಿಯಾ ಎರಡು ದೇಶಗಳಿಂದ ರೂಪಿಸಲ್ಪಟ್ಟಿದೆ, ಅದು ಮುಸ್ಲಿಂ ದೇಶ ಮತ್ತು ಹಿಂದೂ ದೇಶ ಎಂದು ಜಿನ್ನಾ ವಾದಿಸುತ್ತಿದ್ದಾಗ ಅದನ್ನು ಸಾವರ್ಕರ್ ಅನುಮೋದಿಸುತ್ತಿದ್ದರು.

ಅವರೊಂದಿಗಿನ ಮತ್ತೊಂದು ಭಿನ್ನಮತವೆಂದರೆ ನಾವು ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯವನ್ನು ಪ್ರತಿಪಾದಿಸುತ್ತಿದ್ದರೆ ಈ ಆರೆಸಸ್ ಪಕ್ಷವು ಪ್ರಜಾಪ್ರಭುತ್ವ ಮಾದರಿಯು ಪಶ್ಚಿಮ ರಾಷ್ಟ್ರಗಳ ಪರಿಕಲ್ಪನೆಯೆಂದೂ ಹಾಗೂ ಇದೆಂದೂ ಇಂಡಿಯಾಕ್ಕೆ ಸರಿ ಹೊಂದುವುದಿಲ್ಲವೆಂದೂ ವಾದಿಸುತ್ತಿತ್ತು. ಹಾಗೆಂದು ಅದರ ಸ್ವಯಂಸೇವಕರು ಬಲವಾಗಿ ನಂಬಿದ್ದರು. ಆ ದಿನಗಳಲ್ಲಿ ಆರೆಸಸ್ ಸಂಚಾಲಕರು ಹಿಟ್ಲರ್‌ನನ್ನು, ಗುರೂಜಿ ಗೋಳ್ವಲ್ಕರ್‌ರನ್ನು ಆರಾಧಿಸುತ್ತಿದ್ದರು ಮತ್ತು ಅವರ ಐಡಿಯಾಲಜಿಗಳನ್ನು ನಂಬುತ್ತಿದ್ದರು.

ಈ ಗುರೂಜಿ ಗೋಳ್ವಲ್ಕರ್ ಮತ್ತು ನಾಜಿಗಳ ನಡುವೆ ಅಪಾರ ಸಾಮ್ಯತೆ ಇತ್ತು. ತಮ್ಮ ಪುಸ್ತಕ “ನಾವು ಮತ್ತು ನಮ್ಮ ರಾಷ್ಟ್ರೀಯತೆ”ಯಲ್ಲಿ ಬರೆಯುತ್ತ ಗೋಳ್ವಲ್ಕರ್ ಅವರು ಹೇಳುತ್ತಾರೆ, “ಭಾರತದಲ್ಲಿರುವ ಅನ್ಯಧರ್ಮೀಯರು ಹಿಂದೂ ಧರ್ಮದ ಆಚರಣೆಗಳನ್ನು ಮತ್ತು ಸಂಸ್ಕೃತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಹಿಂದೂ ಧರ್ಮವನ್ನು ಗೌರವಿಸಬೇಕು. ಹಿಂದೂ ಧರ್ಮವನ್ನಲ್ಲದೆ ಬೇರೇನನ್ನೂ ಪ್ರಚಾರ ಮಾಡಬಾರದು. ಈ ದೇಶದ ಕುರಿತಾದ ಅಸಹನೆಯನ್ನು ಬಿಟ್ಟುಕೊಡಬೇಕು. ಭಾರತದಲ್ಲಿ ಅನ್ಯಧರ್ಮೀಯರನ್ನು ವಿದೇಶಿಯರೆಂದೇ ಪರಿಗಣಿಸಬೇಕು. ಅನ್ಯಧರ್ಮೀಯರು ಈ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರಂತೆ ಬದುಕಬೇಕು. ಇವರಿಗೆ ಯಾವುದೇ ವಿಶೇಷ ಸೌಕರ್ಯಗಳನ್ನು ನೀಡಲಾಗುವುದಿಲ್ಲ .ಇವರಿಗೆ ಸಮಾನ ನಾಗರಿಕ ಹಕ್ಕುಗಳಿರುವುದಿಲ್ಲ.”

ಈ ಆರೆಸಸ್ ಸದಸ್ಯರು ಮತ್ತು ಸಂಚಾಲಕರು ಹಿಟ್ಟರ್‌ನ ಹಿಂಬಾಲಕರಾಗಿದ್ದರು. ಇವರೆಲ್ಲ ಜರ್ಮನಿಯಲ್ಲಿ ಹಿಟ್ಲರ್ ನಾಜಿಗಳನ್ನು ನಡೆಸಿಕೊಂಡ ರೀತಿಯಲ್ಲಿಯೇ ಇಂಡಿಯಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರನ್ನು ನಡೆಸಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದರು.

ಗೋಳ್ವಲ್ಕರ್ ಅವರು ಬರೆದ “ನಾವು ಅಥವಾ ನಮ್ಮ ರಾಷ್ಟ್ರೀಯತೆ” ಪುಸ್ತಕ ಒಂದು ಭಾಗ “ತನ್ನ ಬಣ್ಣದ ಮತ್ತು ಸಂಸ್ಕೃತಿಯ ಪರಿಶುದ್ಧತೆಯನ್ನು ಕಾಪಾಡಬೇಕಾದಂತಹ ಸಂದರ್ಭದಲ್ಲಿ ತನ್ನ ದೇಶದ ಅನ್ಯಧರ್ಮೀಯರಾದ ಯಹೂದಿಗಳನ್ನು ಸಂಪೂರ್ಣವಾಗಿ ನಾಶ ಮಾಡುವುದರ ಮೂಲಕ ಜರ್ಮನಿ ಜಗತ್ತನ್ನೇ ನಿಬ್ಬೆರಗಾಗಿಸಿತು. ಇದು ಇಂದು ನಮಗೆ ಆದರ್ಶವಾಗಬೇಕು” ( ಪುಟ 42, ನಾವು ಅಥವಾ ನಮ್ಮ ರಾಷ್ಟ್ರೀಯತೆ, 1947 ) ಎನ್ನುತ್ತದೆ. KZ Mauthausen, Sowjetische Kriegsgefangeneನೀವು ಇದನ್ನು ಹಳೆ ಕಾಲದ, ಸ್ವಾತಂತ್ರ ಪೂರ್ವದ ಪುಸ್ತಕವೆಂದು ವಾದಿಸಬಹುದು. ಆದರೆ ಗೋಳ್ವಲ್ಕರ್ ಅವರ ಮತ್ತೊಂದು ಪುಸ್ತಕ “ಚಿಂತನ ಗಂಗಾ” 1966 ರಲ್ಲಿ ಪ್ರಕಟವಾಯಿತು. ಆ ಪುಸ್ತಕದಲ್ಲಿ ಗೋಳ್ವಲ್ಕರ್ ಭಾರತದ ಪ್ರತಿಯೊಬ್ಬ ಮುಸ್ಲಿಂರು, ಕ್ರಿಶ್ಚಿಯನ್ನರು, ಕಮ್ಯುನಿಷ್ಟರನ್ನು ಅಂತರಿಕ ಶತೃಗಳೆಂದು, ಅವರು ದೇಶದ ಭದ್ರತೆಗೆ ಅಪಾಯಕಾರಿಗಳೆಂದು ಬರೆಯುತ್ತಾರೆ. ಇದು ಈ ಗುರೂಜಿಯ ಐಡಿಯಾಲಜಿ.

ಜಾತೀಯತೆಯ ಕುರಿತಾಗಿ ಈ ಆರೆಸಸ್ ಮತ್ತು ಗೋಳ್ವಲ್ಕರ್ ಅವರೊಂದಿಗೆ ನಮ್ಮ ಮತ್ತೊಂದು ಭಿನ್ನಮತವಿತ್ತು. ಈ ಆರೆಸಸ್ ಮತ್ತು ಗೋಳ್ವಲ್ಕರ್ ಜಾತಿ ಪದ್ಧತಿಯನ್ನು ಬೆಂಬಲಿಸುತ್ತಿದ್ದರು. ಆದರೆ ಸಮಾಜವಾದಿಗಳಾದ ನಮಗೆ ಈ ಜಾತಿ ಪದ್ಧತಿ ಒಂದು ಶತೃವಾಗಿತ್ತು. ನಾನು ಈ ಜಾತೀಯತೆ ಮತ್ತು ಬ್ರಾಹ್ಮಣತ್ವದ ಚಿಂತನೆಗಳನ್ನು ವಿರೋಧಿಸುತ್ತಿದ್ದೆ. ಇವೆರೆಡೂ ನಾಶವಾಗುವವರೆಗೂ ನಮ್ಮ ಸಮಾಜದಲ್ಲಿ ಸಮಾನತೆ ಸಾಧ್ಯವಿಲ್ಲವೆಂಬುದು ನನ್ನ ಅಚಲ ನಂಬಿಗೆಯಾಗಿತ್ತು. ಆದರೆ ಈ ಗೋಳ್ವಲ್ಕರ್ ತಮ್ಮ “ಚಿಂತನ ಗಂಗಾ” ಪುಸ್ತಕದಲ್ಲಿ ಬರೆಯುತ್ತಾರೆ, “ನಮ್ಮ ಸಮಾಜದ ವಿಶಿಷ್ಟತೆಯೆಂದರೆ ಅದು ವರ್ಣಾಶ್ರಮ ಪದ್ಧತಿ. ಈ ಸಮಾಜವು ಶಕ್ತಿಯುತ ದೇವರನ್ನು ಒಳಗೊಂಡಿದೆ. ಈ ದೇವರನ್ನು ಸಮಾಜದ ವಿವಿಧ ಸ್ತರಗಳಲ್ಲಿರುವವರಿಗೆ ವಿಭಿನ್ನ ನೆಲೆಗಳಲ್ಲಿ ಪೂಜಿಸಲು ಅವಕಾಶ ನೀಡಲಾಗುತ್ತದೆ. ಸಕಲ ಜ್ಞಾನವನ್ನು ಹೊಂದಿದ ಬ್ರಾಹ್ಮಣರು ಶ್ರೇಷ್ಠರೆಂದು ಪರಿಗಣಿಸಲಾಗುತ್ತದೆ. ಕ್ಷತ್ರಿಯರನ್ನು ಸಹ ಅದೇ ಮಟ್ಟದ ಶ್ರೇಷ್ಠರೆಂದೇ ಗುರತಿಸಲಾಗುತ್ತದೆ, ಏಕೆಂದರೆ ಅವರು ಶತೃಗಳನ್ನು ಸಂಹರಿಸುತ್ತಾರೆ. ವೈಶ್ಯರೂ ಸಹ ಅಷ್ಟೇ ಮುಖ್ಯರಾಗುತ್ತಾರೆ, ಏಕೆಂದರೆ ಅವರು ವ್ಯಾಪಾರದ ಮೂಲಕ ಸಮಾಜವನ್ನು ಸಮತೋಲನದಲ್ಲಿಡುತ್ತಾರೆ. ತಮ್ಮ ಕೌಶಲ್ಯದ ಆಧರಿಸಿ ಸಮಾಜದ ಅವಶ್ಯಕತೆಗಳನ್ನು ಪೂರೈಸುವುದರ ಮೂಲಕ ಶೂದ್ರರೂ ಮುಖ್ಯರಾಗುತ್ತಾರೆ.” ಆದರೆ ಇಲ್ಲಿ ಗೋಳ್ವಲ್ಕರ್ ಅವರು ಚಾಣಕ್ಯನ ಆರ್ಥಿಕ ನೀತಿಯನ್ನು ಅನುಮೋದಿಸುತ್ತ ಶೂದ್ರನ ಕಾಯಕವನ್ನು ಅವನ ಕರ್ತವ್ಯವೆಂದೇ ಷರಾ ಬರೆಯುತ್ತಾರೆ. ಅವರ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಸೇವೆ ಮಾಡುವುದು ಶೂದ್ರರ ಧರ್ಮ. ಅವರ ಧಾರ್ಮಿಕ ಕರ್ತವ್ಯ.

ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರೊಂದಿಗೆ ನಮ್ಮ ಮತ್ತೊಂದು ಪ್ರಮುಖ ಭಿನ್ನಾಭಿಪ್ರಾಯವೆಂದರೆ ಅವರು ಪ್ರತಿಪಾದಿಸುವ ಭಾಷೆ. ಗೋಳ್ವಲ್ಕರ್ ಅವರ ಪ್ರಕಾರ ಹಿಂದಿಯನ್ನು ಸಾರ್ವಜನಿಕ ಭಾಷೆಯನ್ನಾಗಿಯೂ, ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು. ತಮ್ಮ ಚಿಂತನ ಗಂಗಾ ಪುಸ್ತಕದಲ್ಲಿ ಗೋಳ್ವಲ್ಕರ್ ಅವರು “ಸಧ್ಯದ ಅನುಕೂಲಕ್ಕಾಗಿ ಹಿಂದಿ ಭಾಷೆಯನ್ನು ಸಂಪರ್ಕ ಭಾಷೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಸಂಸ್ಕೃತವು ರಾಷ್ಟ್ರ ಭಾಷೆಯಾಗಬೇಕೆಂಬುದೇ ನಮ್ಮ ಅಂತಿಮ ಗುರಿ.” ಎಂದು ಬರೆಯುತ್ತಾರೆ. ಆದರೆ ಮಹಾತ್ಮ ಗಾಂಧಿ ಮತ್ತು ಟಿಳಕರಂತೆ ನಾವೆಲ್ಲರೂ ಪ್ರಾಂತೀಯ ಭಾಷೆಗಳನ್ನು ಬೆಂಬಲಿಸುತ್ತಿದ್ದೆವು. ನಾಗರಿಕರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವುದನ್ನು ನಾವು ವಿರೋಧೀಸುತ್ತಿದ್ದೆವು. ತಮಿಳುನಾಡಿನಲ್ಲಿ ತಮಿಳು, ಆಂಧ್ರದಲ್ಲಿ ತೆಲುಗು, ಕರ್ನಾಟಕದಲ್ಲಿ ಕನ್ನಡ, ಪಶ್ಚಿಮ ಬಂಗಾಲದಲ್ಲಿ ಬೆಂಗಾಲಿ, ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಗಳ ಬಳಕೆಗೆ ನಮ್ಮ ಬೆಂಬಲವಿತ್ತು. ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿಸುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತಿದ್ದೆವು. ಏಕೆಂದರೆ ಅದು ಮೇಲ್ಜಾತಿಯವರ ಭಾಷೆಯಾಗಿತ್ತು.

ಸ್ವಾತಂತ್ರ ಹೋರಾಟದ ರಾಷ್ಟ್ರೀಯ ಚಳುವಳಿಯು ಭಾರತದ ಗಣರಾಜ್ಯ ಸ್ವರೂಪವನ್ನು ಒಪ್ಪಿಕೊಂಡಿತ್ತು. ಕೆಲವು ಪ್ರಮುಖ ಇಲಾಖೆಗಳ ಅಧಿಕಾರವು ದೇಶದ ಹಿತರಕ್ಷಣೆಯ ದೃಷ್ಟಿಯಿಂದ ಕೇಂದ್ರದ ಸುಪರ್ದಿಯಲ್ಲಿದ್ದರೆ ಇತರೇ ವಿವಿಧ ಇಲಾಖೆಗಳ ಜವಬ್ದಾರಿಯು ರಾಜ್ಯ ಸರ್ಕಾರಗಳಗೆ ಸೇರಬೇಕೆಂಬ ವಿಕೇಂದ್ರಿಕರಣದ ನೀತಿ ನಮ್ಮ ನಿಲುವಾಗಿತ್ತು. ಗಣರಾಜ್ಯದ ಈ ಪರಿಕಲ್ಪನೆಯನ್ನು ಸ್ವಾತಂತ್ರ ನಂತರ ರಚಿತವಾದ ಸಂವಿಧಾನವೂ ಅನುಮೋದಿಸಿತ್ತು.

ಪ್ರಜಾಪ್ರಭುತ್ವದ, ವಿಕೇಂದ್ರೀಕರಣದ ಈ ಗಣರಾಜ್ಯ ಮಾದರಿಯನ್ನು, ಅದರ ಸಂವಿಧಾನವನ್ನು ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ನಿರಂತರವಾಗಿ ವಿರೋಧಿಸಿದರು. ಈ ಗುಂಪು ಗಣರಾಜ್ಯಗಳ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡುತ್ತಿದ್ದವು. ಈ ಗಣರಾಜ್ಯಗಳ ಬಹುರೂಪಿ ತತ್ವಗಳನ್ನು ಪ್ರತಿಪಾದಿಸುವ ಭಾರತದ ಸಂವಿಧಾನವನ್ನೇ ರದ್ದುಗೊಳಿಸಬೇಕೆಂದು ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ಒತ್ತಾಯಿಸುತ್ತಿದ್ದರು. ತಮ್ಮ ಚಿಂತನಗಂಗಾ ಪುಸ್ತಕದಲ್ಲಿ ಗೋಳ್ವಲ್ಕರ್ ಬರೆಯುತ್ತಾರೆ, “ಸಂವಿಧಾನವನ್ನು ಪುನರ್ವಿಮರ್ಶಿಸಬೇಕು. ಕೇಂದ್ರಾಡಳಿತ ರಾಜ್ಯವನ್ನು ಸಂವಿಧಾನದಲ್ಲಿ ಸೇರಿಸಬೇಕು.” ಗೋಳ್ವಲ್ಕರ್ ಬಯಸುವುದು ಒಂದು ದೇಶ, ಒಂದು ರಾಜ್ಯ, ಒಂದು ಪಾರ್ಲಿಮೆಂಟ್, ಒಂದು ಕಾರ್ಯಾಂಗ ಮಾತ್ರ. ಇವರು ವಿಭಿನ್ನ ರಾಜ್ಯಗಳ ವಿಧಾನ ಸಭೆಗಳನ್ನು ಮತ್ತು ಮಂತ್ರಿಮಂಡಳಿಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸುತ್ತಾರೆ. ಅಂದರೆ ಇವರ ಗುರಿ ಸರ್ವಾಧಿಕಾರದ ಆಡಳಿತ. ಕೇಂದ್ರಾಡಳಿತ ರಾಜ್ಯಭಾರ.

ಮತ್ತೊಂದು ವಿವಾದವೆಂದರೆ ತ್ರಿವರ್ಣಧ್ವಜ. ಈ ತ್ರಿವರ್ಣ ಧ್ವಜವನ್ನು ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಭಾರತದ ಬಿಡುಗಡೆಯ ಸಂಕೇತವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ತ್ರಿವರ್ಣ ಧ್ವಜವನ್ನು ಸ್ವಾತಂತ್ರದ ಸಂಕೇತವಾಗಿ ಹೋರಾಟಗಳಲ್ಲಿ ಬಳಲಾಗುತ್ತಿತ್ತು. ಅದರ ಘನತೆಯನ್ನು ಕಾಪಾಡಲು ಸಾವಿರಾರು ದೇಶಾಭಿಮಾನಿಗಳು ಪ್ರಾಣ ತ್ಯಾಗ ಮಾಡಿದರು. ಆಶ್ಚರ್ಯವೆಂದರೆ ಆರೆಸಸ್ ಈ ತ್ರಿವರ್ಣ ಧ್ಜಜವನ್ನು ರಾಷ್ಟ್ರ ಧ್ವಜವನ್ನಾಗಿ ಎಂದಿಗೂ ಮಾನ್ಯ ಮಾಡಲೇ ಇಲ್ಲ. ಆರೆಸಸ್ ಮಾನ್ಯ ಮಾಡಿದ್ದು ಕೇಸರೀ ಧ್ಜಜವನ್ನು. ಭಗವಧ್ವಜವನ್ನು. ಈ ಕೇಸರೀ ಧ್ವಜವು ಹಿಂದೂ ರಾಷ್ಟ್ರದ ಸಂಕೇತವೆಂದು ಆರೆಸಸ್ ಬಲವಾಗಿ ನಂಬಿತ್ತು.

ಗಣರಾಜ್ಯ ಮಾದರಿಯ ವಿಕೇಂದ್ರೀಕರಣ ತಿರಸ್ಕರಿಸಿದಂತೆಯೇ ಈ ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೂ ತಿರಸ್ಕರಿಸಿದ್ದರು. ಈ ಪ್ರಜಾಪ್ರಭುತ್ವ ವ್ಯವಸ್ಥೆಯು ಪಶ್ಚಿಮ ದೇಶಗಳಿಂದ ನಕಲು ಮಾಡಲಾಗಿದ್ದು ಅದು ಭಾರತದ ಚಿಂತನೆಗಳೊಂದಿಗೆ ಬೆರೆಯುವುದಿಲ್ಲವೆಂದು ಇವರು ನಂಬಿದ್ದರು. ಇವರಿಗೆ ಸೋಷಿಯಲಿಸಂ ಅಂತೂ ಸಂಪೂರ್ಣ ಪರಕೀಯವಾಗಿತ್ತು. ಗೋಳ್ವಲ್ಕರ್ ಅವರು ಈ ಎಲ್ಲಾ ಇಸಂಗಳು ವಿದೇಶಿ ಸಂಸ್ಕೃತಿಗಳೆಂದೂ ಇವನ್ನೆಲ್ಲವನ್ನೂ ತಿರಸ್ಕರಿಸಬೇಕೆಂದೂ ಕರೆ ಕೊಟ್ಟಿದ್ದರು.

1975 ರಲ್ಲಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದಾಗ ಅದನ್ನು ವಿರೋಧಿಸಿ ನಾವೆಲ್ಲಾ ಈ ಆರೆಸಸ್‌ನವರೊಂದಿಗೆ ಕೈಜೋಡಿಸಬೇಕಾದಂತಹ ಸಂದರ್ಭ ಬಂದಿತು. ಚೌಧುರಿ ಚರಣ ಸಿಂಗ್ ಅವರೂ ಸಹ ಇದೇ ಅಭಿಮತವನ್ನು ವ್ಯಕ್ತಪಡಿಸಿದರು. ಎಲ್ಲರೂ ಒಂದಾಗಿ ಒಂದೇ ಪಕ್ಷದ ಅಡಿಯಲ್ಲಿ ಕಾಂಗ್ರೆಸ್ ವಿರುದ್ಧದ ಚುನಾವಣೆಯನ್ನು ಎದುರಿಸಬೇಕೆಂದು ಚರಣ ಸಿಂಗ್ ಒತ್ತಾಯಿಸುತ್ತಿದ್ದರು. ಜಯಪ್ರಕಾಶ ನಾರಾಯಣ ಮತ್ತು ಇತರ ನಾಯಕರೂ ಇದನ್ನು ಅನುಮೋದಿಸಿದ್ದರು. Jayaprakash Narayanಆಗ ನಮ್ಮೆಲ್ಲರ ಆಯ್ಕೆಗಳೆಂದರೆ ಜನಸಂಘ, ಸೋಷಲಿಸ್ಟ್ ಪಕ್ಷಗಳು, ಕಾಂಗ್ರೆಸ್ ( ಓ ), ಭಾರತೀಯ ಲೋಕದಳ, ಮತ್ತು ಭಿನ್ನಮತೀಯ ಕಾಂಗ್ರೆಸ್ ಪಕ್ಷಗಳ ಗುಂಪು. ಈ ಸಂದರ್ಭದಲ್ಲಿಯೂ ನಾವೆಂದೂ ಆರೆಸಸ್ ಜೊತೆಗೆ ಕೈ ಜೋಡಿಸಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಚರಣಸಿಂಗರು ಸುಮಾರು ಜುಲೈ 7, 1976 ರಂದು ಜೈಲಿನಿಂದ ಬರೆದ ಪತ್ರದಲ್ಲಿ ನಮ್ಮ ಮೇಲಿನ ಆಯ್ಕೆಗಳಲ್ಲಿರುವ ಪ್ರಮುಖ ಬಿಕ್ಕಟ್ಟಾದ ದ್ವಿಸದಸ್ಯದ ಕುರಿತಾಗಿ ವಿವರಿಸಿದರು. ಆರೆಸಸ್‌ನ ಸಂಚಾಲಕರಾದ ಜನಸಂಘದ ಸದಸ್ಯರು ಹೊಸ ಪಕ್ಷದ ಸದಸ್ಯರಾಗಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸುತ್ತಾ ಆಗಿನ ಜನಸಂಘದ ಕಾರ್ಯದರ್ಶಿ ಓಂ ಪ್ರಕಾಶ್ ತ್ಯಾಗಿ ಅವರು ಇದನ್ನು ಮುಕ್ತ ಮನಸ್ಸಿನಿಂದ ಚರ್ಚಿಸಲು ಜನಸಂಘವು ಸಿದ್ಧವೆಂದೂ ಹೇಳುತ್ತಾ, ಅಂತಹ ಬಿಕ್ಕಟ್ಟು ಎದುರಾದಲ್ಲಿ ಆರೆಸಸ್ ಅನ್ನು ವಿಸರ್ಜಿಲೂ ಸಹ ತಯಾರು ಎಂದು ಆಶ್ವಾಸನೆ ಕೊಟ್ಟರು.

ಆದರೆ ಜನತಾ ಪಕ್ಷದ ಸಂವಿಧಾನವನ್ನು ರಚಿಸುವ ಜವಾಬ್ದಾರಿ ಹೊತ್ತುಕೊಂಡ ಉಪಸಮಿತಿಯು ಹೊಸ ಪಕ್ಷದ ತತ್ವಗಳಿಗೆ, ಚಿಂತನೆಗಳಿಗೆ, ವಿಚಾರಗಳಿಗೆ ಭಿನ್ನವಾಗಿರುವವರಿಗೆ ದ್ವಿಸದಸ್ಯತ್ವವನ್ನು ಕೊಡಬಾರದೆಂದು ಅಭಿಪ್ರಾಯ ವ್ಯಕ್ತಪಡಿಸಿತು. ಇದರ ಮಹತ್ವವನ್ನು ಅರಿತುಕೊಂಡ ಎಲ್ಲರೂ ಇದನ್ನು ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಇದಕ್ಕೆ ವಿರೋಧ ಬಂದಿದ್ದು ಜನಸಂಘದ ಸುಂದರ್ ಸಿಂಗ್ ಭಂಡಾರಿ ಅವರಿಂದ. ಆಗ ಜನಸಂಘ ಮತ್ತು ಆರೆಸಸ್‌ನ ಪರವಾಗಿ ಅಟಲ್ ಬಿಹಾರಿ ವಾಜಪೇಯಿಯವರು ಪತ್ರವನ್ನು ಬರೆದು ಜನತಾ ಪಕ್ಷದ ಸದಸ್ಯರ ನೊಂದಣಿಯ ಸಂದರ್ಭದಲ್ಲಿ ಆರೆಸಸ್ ಕುರಿತಾದ ಚರ್ಚೆಯೇ ಅಪ್ರಸ್ತುತ ಎಂದು ಹೇಳಿದರು. ಆಗ ನಾನು ಜೈಲಿನಲ್ಲಿದ್ದೆ. ಹೀಗಾಗಿ ಆಗ ನಡೆದ ತೀರ್ಮಾನಗಳಿಗೆ ನಾನು ಜವಾಬ್ದಾರನಾಗಿರಲಿಲ್ಲ.

ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ ಬರೆಯುವಂತಹ ಸಂದರ್ಭದಲ್ಲಿ ಆರೆಸಸ್ ಬಗ್ಗೆ ನಾವೆಲ್ಲ ಅಂತಹ ಆತಂಕವನ್ನು ಹೊಂದಿರಲಿಲ್ಲ. ಪ್ರತಿಯೊಂದು ವಾಕ್ಯವನ್ನು ಸ್ಪಷ್ಟವಾಗಿ ವಿವರಿಸಲಾಗಿತ್ತು. ನಿಜಕ್ಕೂ ಹೇಳಬೇಕೆಂದರೆ ಜನತಾ ಪಕ್ಷದ ಪ್ರಣಾಳಿಕೆಯು ಸೋಷಿಯಲಿಸ್ಟ್ ಸಮಾಜದ, ಸೆಕ್ಯುಲರ್ ಪ್ರಜಾಪ್ರಭುತ್ವದ, ಗಾಂಧಿ ಕನಸಿನ ಆದರ್ಶಗಳನ್ನು ಹೊಂದಿತ್ತಲ್ಲವೇ? ಅಲ್ಲಿ ಹಿಂದೂ ರಾಷ್ಟ್ರದ ಪ್ರಸ್ತಾಪವೇ ಇರಲಿಲ್ಲ. ಮಿಗಿಲಾಗಿ ನಮ್ಮ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಸಮಾನ ನಾಗರಿಕತೆಯನ್ನು ಧೃಡೀಕರಿಸಿದ್ದೆವು. ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರಿಯಲ್ಲಿ ಹಿಂದುಳಿದ ಜಾತಿಗಳಿಗೆ ಶೇಕಡಾ 25-33 ಮೀಸಲಾತಿಯನ್ನು ಕಲ್ಪಿಸುವುದಾಗಿ ಹೇಳಿದ್ದೆವು.

ಆದರೆ ಆರೆಸಸ್ ಸದಸ್ಯರು ಜನತಾ ಪಕ್ಷದ ಈ ಪ್ರಣಾಳಿಕೆಯನ್ನು ಮನಃಪೂರ್ವಕವಾಗಿ ಒಪ್ಪಿರಲಿಲ್ಲ. ಈ ಸಂದರ್ಭದಲ್ಲಿ ಕುಶುಭಾವು ಠಾಕ್ರೆ ಅವರಿಗೆ ಪತ್ರವನ್ನು ಬರೆದು ಜನಸಂಘ ಮತ್ತು ಆರೆಸಸ್‌ನ ದ್ವಂದವನ್ನು ವಿವರಿಸಿ ಇದರಿಂದ ನಿಮ್ಮ ಕಾರ್ಯಸೂಚಿಗಳ ಕುರಿತಾಗಿಯೇ ಅನುಮಾನ ಮೂಡುತ್ತದೆ ಎಂದು ಹೇಳಿದ್ದೆ. ಆದರೂ ಸಂಯುಕ್ತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಅನ್ನು ಎದುರಿಸಲು ನಾವೆಲ್ಲ ಒಂದಾಗಲೇಬೇಕೆಂಬ ಜಯಪ್ರಕಾಶ ನಾರಾಯಣರ ಅನಿಸಿಕೆಯನ್ನು ಒಪ್ಪಿಕೊಳ್ಳಬೇಕೆಂದರೆ ಎರಡು ಮುಖ್ಯ ವಿಷಯಗಳ ಕುರಿತಾಗಿ ನನ್ನಲ್ಲಿ ಖಚಿತತೆ ಇತ್ತು. ಈ ಸಂಯುಕ್ತ ವಿರೋಧ ಪಕ್ಷ ಚಾಲ್ತಿಗೆ ಬರಬೇಕೆಂದರೆ ಆರೆಸಸ್ ತನ್ನ ಸಿದ್ಧಾಂತಗಳನ್ನು ಬದಲಿಸಿಕೊಳ್ಳಬೇಕು. ಅದು ಸೆಕ್ಯುಲರ್ ಐಡಿಯಾಲಜಿಯನ್ನು ಒಪ್ಪಿಕೊಳ್ಳಬೇಕು. ಎರಡನೇಯದಾಗಿ ಆರೆಸಸ್‌ನ ಇತರೇ ಅಂಗ ಪಕ್ಷಗಳು ವಿಸರ್ಜನೆಗೊಂಡು ಸೆಕ್ಯುಲರ್ ಪಕ್ಷಗಳೊಂದಿಗೆ ವಿಲೀನಗೊಳ್ಳಬೇಕು. ಇದನ್ನು ನಾನು ಅರೆಸಸ್‌ನ ಪ್ರಮುಖರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದೆ. ಆಗ ಆರೆಸಸ್‌ನ ಪ್ರಮುಖರು ಈ ನಿಬಂಧನೆಗಳನ್ನು ಈ ಕೂಡಲೆ ಪಾಲಿಸಲು ಕಷ್ಟ, ಅದರೆ ಹಂತಹಂತವಾಗಿ ತಾವು ಬದಲಾಗುತ್ತೇವೆಂದು ಆಶ್ವಾಸನೆಯನ್ನು ಕೊಟ್ಟರು. ಮುಂದಿನ ದಿನಗಳಲ್ಲಿ ಇದರ ಕುರಿತಾಗಿ ಪ್ರಶ್ನಿಸಿದಾಗ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು. ಇವರ ಈ ದ್ವಂದ ವರ್ತನೆಗಳಿಂದ ನನಗೆ ಖಚಿತವಾಗಿದ್ದು ಇವರು ಬದಲಾಗಲು ತಯಾರಿಲ್ಲ ಎಂದು. ಅದರಲ್ಲೂ 1977 ರ ನಂತರ ನಡೆದ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರಾಂತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಂಘ ಪರಿವಾರ ಈ ಜನಬೆಂಬಲವಿದ್ದರೆ ನಾವು ಬದಲಾಗುವ ಅಗತ್ಯವೇ ಇಲ್ಲವೆಂದು ಬೀಗಿತ್ತು. ಇದೇ ತಂತ್ರಗಾರಿಕೆಯ ಮೂಲಕ ದೇಶದ ಇತರೇ ರಾಜ್ಯಗಳಲ್ಲಿಯೂ ಅಧಿಕಾರವನ್ನು ಕಬ್ಜಾ ಮಾಡಿಕೊಳ್ಳಬೇಕೆಂದು ಮಹತ್ವಾಕಾಂಕ್ಷೆಯಿಂದಿತ್ತು ಸಂಘ ಪರಿವಾರ. ಕಡೆಗೆ ಕೇಂದ್ರ ಮೇಲೆ ಸಹ ಅದು ಕಣ್ಣಿಟ್ಟಿತ್ತು.

ಆರೆಸಸ್‌ನ ಮುಖವಾಣಿ ಪಾಂಚಜನ್ಯದಲ್ಲಿ ಲೇಖನಗಳಲ್ಲಿ ನನ್ನನ್ನೂ ಒಳಗೊಂಡು ಆರೆಸಸ್‌ನ ನೀತಿಗಳನ್ನು ವಿರೋಧಿಸುವ ಪ್ರತಿಯೊಬ್ಬ ಜನತಾ ಪಕ್ಷದ ಸದಸ್ಯನನ್ನೂ ಟೀಕಿಸಲಾಗಿತ್ತು.

ಈ ಸಂದರ್ಭದಲ್ಲಿ ಆರೆಸಸ್‌ನ ಸರಸಂಚಾಲಕ ಬಾಬಾ ಸಾಹೇಬ್ ದೇವರಸ್ ಅವರು ನನ್ನ ಮನೆಗೆ ಬಂದಿದ್ದರು. morarji-desaiಆದರೆ ಹೊಸ ಬಗೆಯ ಬದಲಾವಣೆಗಳಿಗೆ ಅವರು ಮುಕ್ತ ಮನಸ್ಸಿನವರಾಗಿರಲಿಲ್ಲ. ಅವರೊಂದಿಗೆ ನಿರಂತರ ಸಂಭಾಷಣೆ ನಡೆಸುತ್ತ ಅವರನ್ನು ಬದಲಾಯಿಸಲು ನಾನು ನಡೆಸಿದ ನನ್ನ ಎಲ್ಲ ಪ್ರಯತ್ನಗಳು ವಿಫಲಗೊಂಡವು. ಅರೆಸಸ್‌ನ ಅಂಗ ಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಎಬಿವಿಪಿ, ಯುವ ಮೋರ್ಚ ಮುಂತಾದ ಸಂಘಟನೆಗಳೊಂದಿಗೆ ನಡೆಸಿದ ಮಾತುಕತೆಗಳು ಫಲ ನೀಡಲಿಲ್ಲ. ಇದಕ್ಕೆ ಪ್ರತಿಯಾಗಿ ನನಗೆ ಅವರಿಂದ ತೆಗಳಿಕೆಗಳು ಉತ್ತರ ರೂಪದಲ್ಲಿ ದೊರೆತವು.

ಅವರ ಉದ್ದೇಶಗಳು ಸ್ಪಷ್ಟವಾಗಿದ್ದವು. ಅವರು ಉದ್ದೇಶ ಜನಜೀವದ ಪ್ರತಿಯೊಂದು ಘಟ್ಟಗಳಲ್ಲೂ ತಾವು ಭಾಗಿಗಳಾಗಬೇಕು ಮತ್ತು ಅವರನ್ನು ನಿಯಂತ್ರಿಸಬೇಕೆಂಬುದಾಗಿತ್ತು. ಅವರ ಮೊದಲ ಗುರಿ ಜನತಾ ಪಕ್ಷವನ್ನು ಕಬ್ಜಾ ಮಾಡಿಕೊಳ್ಳುವುದು. ಇದಕ್ಕಾಗಿಯೇ ಸಂಘ ಪರಿವಾರವು ಹಲವಾರು ಜನತಾ ಪಕ್ಷದ ನಾಯಕರ ಮುಂದೆ ಅಧಿಕಾರದ ಕ್ಯಾರೆಟ್ ಅನ್ನು ಅಲ್ಲಾಡಿಸುತ್ತಿದ್ದರು. ಒಂದು ಕಡೆ ಮುರಾರ್ಜಿ ದೇಸಾಯಿಯವರಿಗೆ ನೀವೇ ನಮಗೆ ಪ್ರಶ್ನಾತೀತ ನಾಯಕರೆಂದು ಬಣ್ಣಿಸುತ್ತಿದ್ದರು. ಆದರೆ ಮತ್ತೊಂದು ಕಡೆ ಚರಣಸಿಂಗ್ ಅವರಿಗೆ ನೀವು ಪ್ರಧಾನಿ ಪಟ್ಟಕ್ಕಾಗಿ ಬಯಸಿದರೆ ನಿಮಗೆ ನಮ್ಮ ಬೆಂಬಲ ಖಾತ್ರಿ ಎಂದು ಆಸೆ ಹುಟ್ಟಿಸುತ್ತಿದ್ದರು. ಈಗಲೂ (1979) ಅವರು ಚಂದ್ರಶೇಖರ್, ಜಗಜೀವನ್ ರಾಂ ಮತ್ತು ಜಾರ್ಜ ಫರ್ನಾಂಡೀಸ್ ಅವರಿಗೆ ಈ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಒಮ್ಮೆಯೂ ಅವರು ನನ್ನ ಹೆಸರನ್ನು ಎತ್ತಲಿಲ್ಲ!! ಅವರಿಗೆ ಗೊತ್ತಾಗಿರಬೇಕು ಈ ಮನುಷ್ಯನನ್ನು ಮೂರ್ಖನಾಗಿಸಲು ಸಾಧ್ಯವಿಲ್ಲವೆಂದು. ಅದರೆ ಬದಲಾಗಿ ಅಂತಹ ಪ್ರಯತ್ನಗಳು ಆತನನ್ನು ( ಲಿಮಯೆ) ಮತ್ತಷ್ಟು ಹುಷಾರುಗೊಳಿಸುತ್ತದೆ ಎಂದು ಆರೆಸಸ್ ಮಂದಿಗೆ ಗೊತ್ತಿತ್ತು.

ಈ ಆರೆಸಸ್ ಮಂದಿ ಜೈಲಿನಲ್ಲಿದ್ದಾಗ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು, ರಾಜ ನಾರಾಯಣ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ಇಂದಿರಾ ಗಾಂಧಿಯವರ ಪರ ತೀರ್ಪು ನೀಡಿದಾಗ ಆರೆಸಸ್ ಸರಸಂಚಾಲಕ ಬಾಳಾಸಾಹೇಬ ದೇವರಸರು ಇಂದಿರಾ ಗಾಂಧಿಯವರಿಗೆ ಶುಭ ಕೋರಿದ್ದರು. ಇವರ ಕುರಿತಾಗಿ ನನಗೆ ನಂಬುಗೆ ಇಲ್ಲ.

ಪ್ರಶ್ನೆಗಳಿರುವುದು ಡಿ. ವೀರೇಂದ್ರ ಹೆಗ್ಗಡೆಗೆ!!

– ಸುಧಾಂಶು ಕಾರ್ಕಳ

ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಧರ್ಮಸ್ಥಳ ಪುಣ್ಯಕ್ಷೇತ್ರ. ವರ್ಷಕ್ಕೊಮ್ಮೆ ಮಕ್ಕಳು-ಮರಿ ಕಟ್ಟಿಕೊಂಡು, ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಸುವಾಗ ಹಿಂಸೆ ಅನುಭವಿಸಿಯಾದರೂ, ಅಲ್ಲಿಗೆ ಹೋಗದಿದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಅಷ್ಟೇ ಏಕೆ, ಈ ಭಾಗದ ಸಾವಿರಾರು ಮಂದಿ ಬಾಲ್ಯದಲ್ಲಿ ಕೂದಲು ಕೊಡುವ ಶಾಸ್ತ್ರ ಮಾಡಿಸಿಕೊಂಡಿದ್ದು ಇಲ್ಲಿಯೇ. ಬಡ ಬಗ್ಗರ ಮನೆಗಳಲ್ಲಿ ಸರಳ ವಿವಾಹದ ಮಾತು ಬಂದರೆ, dharmasthala-veernedra-heggadeಅವರಿಗೆ ನೆನಪಾಗುವುದು ಧರ್ಮಸ್ಥಳ.

ಪ್ರತಿ ಭಾನುವಾರ ರಾತ್ರಿ ಈ ಭಾಗಗಳ ಕಡೆಯಿಂದ ಧರ್ಮಸ್ಥಳಕ್ಕೆ ಹೊರಡುವ ಎಲ್ಲಾ ಬಸ್ ಗಳು ಭರ್ತಿಯಾಗುವುದಕ್ಕೆ ಇದೇ ‘ಭಕ್ತಿ’ ಕಾರಣ. ಊರಲ್ಲಿ ಯಾರದರು ಒಬ್ಬರು ಧರ್ಮಸ್ಥಳಕ್ಕೆ ಹೋಗುತ್ತಾರೆಂದರೆ ಮನೆಗೊಬ್ಬರು ಮಂಜುನಾಥನಿಗೆ ತಮ್ಮದೂ ಕಾಣಿಕೆ ಇರಲಿ ಎಂದು ತಮ್ಮ ಕೈಲಾದಷ್ಟು ಹಣ ಕೊಟ್ಟು ಕಳುಹಿಸುವುದುಂಟು. ವೀರೇಂದ್ರ ಹೆಗ್ಗಡೆಯವರು ಜನೋಪಕಾರಿ ಕೆಲಸ ಮಾಡಿ ಸಜ್ಜನ, ಸಂಭಾವಿತ, ಮಾತನಾಡುವ ಮಂಜುನಾಥ ಎಂಬೆಲ್ಲಾ ಬಿರುದುಗಳನ್ನು ಗಳಿಸುವುದು ಸಾಧ್ಯವಾಗಿದ್ದು ಇಂತಹ ಲಕ್ಷಾಂತರ ಭಕ್ತರ ಸಾವಿರಾರು ಕೋಟಿಗಳ ದಾನದಿಂದ.

ಇದೇ ಭಾನುವಾರ (ಅ.13) ರಂದು ನೂರಾರು ಮಂದಿ ವಿವಿಧ ವಾಹನಗಳಲ್ಲಿ ಧರ್ಮಸ್ಥಳಕ್ಕೆ ಧಾವಿಸಿ ಹೆಗ್ಗಡೆಯವರ ವಿರುದ್ಧ ಪ್ರತಿಭಟನೆ ನಡೆಸಿದರು ಎಂಬ ಸುದ್ದಿ ಟಿವಿಯಲ್ಲಿ ನೋಡಿದಾಗ ಇಂತಹದೊಂದು ಸನ್ನಿವೇಶ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಇದೇ ಮೊದಲಿರಬೇಕಲ್ಲವೇ ಎನಿಸಿತು. ಖಾವಂದರಿಗೆ ಬಿಸಿ ಮುಟ್ಟಿದೆ. ಮಾತನಾಡುವ ಮಂಜುನಾಥನ ಬಗ್ಗೆ ನೇರಾ ನೇರಾ ಮಾತನಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೀಗಾಗಿದ್ದು ಆಶಾದಾಯಕ ಬೆಳವಣಿಗೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಒಂದು ವರ್ಷದಿಂದ ಸತತವಾಗಿ ಅಬ್ಬರವಿಲ್ಲದೆ ಪ್ರತಿಭಟನೆ ನಡೆಯುತ್ತಲೇ ಇತ್ತು.JusticeForSowjanya ಫೇಸ್‌ಬುಕ್ ನಲ್ಲಿ ಈ ಪ್ರತಿಭಟನೆಗೆ ಅನೇಕರು ಬೆಂಬಲ ಸೂಚಿಸುತ್ತಲೇ ಬಂದಿದ್ದರು. ಬೆಳ್ತಂಗಡಿ, ಮಂಗಳೂರು ಭಾಗಗಳಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರಕರಣ ಆಗಿ ಒಂದು ವರ್ಷದ ನಂತರ ಟಿ.ವಿ9 ಸ್ಟುಡಿಯೋದಲ್ಲಿ ಸೌಜನ್ಯ ಪೋಷಕರು ಏನನ್ನು ಇದುವರೆಗೆ ಮುಚ್ಚಿಡಲಾಗಿತ್ತೋ..ಅದನ್ನು ಹೊರಹಾಕಿದರು.

ಆ ಮೂಲಕ ಸೌಜನ್ಯ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಎರಡು ಬಾರಿ ಪ್ರಕರಣದ ತನಿಖೆಯಾದರೂ, ನಿಜ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿಲ್ಲ. ಮಾನಸಿಕ ಅಸ್ವಸ್ಥನೊಬ್ಬನ ತಲೆಗೆ ಈ ಪ್ರಕರಣವನ್ನು ಕಟ್ಟಿ ತನಿಖೆಯ ಶಾಸ್ತ್ರವನ್ನು ಮುಗಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿದೆ ಎನ್ನುವುದು ಆರೋಪ. ಇನ್ನೂ ಗಂಭೀರವಾದ ವಿಚಾರವೆಂದರೆ ಇಂತಹ ಅದೆಷ್ಟೊ ಪ್ರಕರಣಗಳು ಧರ್ಮಸ್ಥಳ ಸುತ್ತ-ಮುತ್ತ ಆಗಿಹೋಗಿವೆ ಎಂಬ ಸುದ್ದಿ. ಸೌಜನ್ಯಳ ತಾಯಿ ಟಿ.ವಿ ಸ್ಟುಡಿಯೋದಲ್ಲಿ ಕೇಳಿದರು.. ನೇತ್ರಾವತಿ ನದಿಯಲ್ಲಿ ಆಗಾಗ ತೇಲಿ ಬರುತ್ತಿದ್ದ ಅನಾಥ ಹೆಣಗಳು ಸೌಜನ್ಯ ಪ್ರಕರಣದ ನಂತರ ನಿಂತಿದ್ದಾದರೂ ಹೇಗೆ?

ಹಾಗಾದರೆ ಈ ಮೊದಲು ನೇತ್ರಾವತಿ ನದಿಯಲ್ಲಿ ಹೇರಳವಾಗಿ ಹೆಣಗಳು ತೇಲಿಬರುತ್ತಿದ್ದವೆ? ಇದುವರೆಗೆ ಯಾಕೆ ಸುದ್ದಿಯಾಗಲಿಲ್ಲ? ಆಯುರ್ವೇದ, ಯೋಗ, ಸ್ವ ಉದ್ಯೋಗ ತರಬೇತಿ, ಪ್ರಕೃತಿ ಚಿಕಿತ್ಸೆ, ಶಿಕ್ಷಣ ಸಂಸ್ಥೆಗಳು, ಪಾಳುಬಿದ್ದ ದೇವಸ್ಥಾನಗಳ ಪುನರುತ್ಥಾನ – ಹೀಗೆ ನಾನಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ದೊಡ್ಡ ಸಾಮ್ರಾಜ್ಯದ ಮೇಲೆ ಈಗ ಅನೇಕ ಪ್ರಶ್ನೆಗಳಿವೆ.

ಸೌಜನ್ಯ ಹತ್ಯೆ ಅಷ್ಟೇ ಅಲ್ಲ..ಇದುವರೆಗೆ ಆಗಿ ಹೋಗಿರುವ ನಾನಾ ಪ್ರಕರಣಗಳ ಬಗ್ಗೆಯೂ ತಕ್ಕ ತನಿಖೆ ನಡೆಯಬೇಕು. sowjanya-rape-murderಪಾಪಕ್ಷೇತ್ರ, ಪುಣ್ಯಕ್ಷೇತ್ರ ಎಂದು ಯಾವ ಸ್ಥಳವೂ ಇರುವುದಿಲ್ಲ. ಆದರೆ ಅಲ್ಲಿ ನೆಲೆಸಿರುವವರು ಆ ಸ್ಥಳಕ್ಕೆ ಒಂದು ಘನತೆ ತರಲು ಸಾಧ್ಯ. ತಮ್ಮ ಮಗಳ ಹತ್ಯೆಗೆ ಸೂಕ್ತ ತನಿಖೆ ಕೋರಲು ಪ್ರತಿಭಟನೆ ನಡೆಸುವುದನ್ನೂ ಬೇಡ ಎಂದು ಫರ್ಮಾನು ಹೊರಡಿಸುವವರಿಂದ ಯಾವ ಕ್ಷೇತ್ರಕ್ಕಾಗಲಿ ಯಾವ ಘನತೆ ದಕ್ಕೀತು? ಧರ್ಮಸ್ಥಳಕ್ಕೆ ಭೇಟಿ ನೀಡುವ ಎಲ್ಲರೂ ಈ ಪ್ರಶ್ನೆಗಳನ್ನು ಕೇಳಬೇಕಿದೆ. ಅವರ ದೇಣಿಗೆ ಹಣ ವಿನಿಯೋಗ ಆಗುತ್ತಿರುವುದು ಹೇಗೆ ಎನ್ನುವುದನನ್ನು ಕೇಳಲೇಬೇಕಲ್ಲವೆ.

ಸರಕಾರ ಸೂಕ್ತ ತನಿಖೆ ಆದೇಶಿಸುವ ಮೂಲಕ ಮುಚ್ಚಿ ಹೋಗಿರಬಹುದಾದ ಸತ್ಯಗಳನ್ನು ಹೊರತರಲೇಬೇಕು. ಅವ್ಯವಹಾರ, ಅನಾಚಾರಗಳು ಬಯಲಾದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ದೇವಸ್ಥಾನವನ್ನು ತನ್ನ ವಶಕ್ಕೆ ಅಂದರೆ ಜನತೆಯ ಆಡಳಿತಕ್ಕೆ ತೆಗೆದುಕೊಳ್ಳಬೇಕು.

“ಮಹಾತ್ಮ” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

 – ವಿಶ್ವಾಸ್ ಪ್ರಭಾಕರ್ ಭಾರದ್ವಾಜ್

ಕಳೆದ ಮೂರು ದಿನಗಳಿಂದ ‘ಗಾಂಧಿ’ ಎನ್ನುವ ಮನುಷ್ಯ ನಿತ್ಯವೂ ತಪ್ಪದಂತೆ ಕನಸಿನಲ್ಲಿ ಸಂಭಾಷಿಸುತ್ತಿದ್ದಾನೆ. ನನಗೆ ಗೊತ್ತಿದೆ ಅದು ಸ್ವಪ್ನ. ಹಗಲಿನಲ್ಲಿ ಗಾಂಧಿಯ ಕುರಿತಂತೆ ಅವಿರತವಾಗಿ ಎಡಬಿಡದೆ ಚಿಂತಿಸಿದ್ದರ ಫಲವಾಗಿ ರಾತ್ರಿ ಕನಸ್ಸಿನಲ್ಲಿಯೂ ಆವರಿಸಿಕೊಂಡುಬಿಟ್ಟಿದ್ದಾನೆ ಪುಣ್ಯಾತ್ಮ. ಗಾಂಧಿ ಒಳ್ಳೆಯವನಾಗಿದ್ದನೆ? ಗಾಂಧಿಯಲ್ಲಿಯೂ ಸಣ್ಣತನಗಳಿದ್ದವೆ? ಈ ವಿಚಾರಗಳಿಗಾಗಿಯೇ ಅನೇಕ ಪುಸ್ತಕಗಳನ್ನು ಓದತೊಡಗಿದ್ದೆ. ತಕ್ಕಮಟ್ಟಿಗೆ ಗಾಂಧಿ ಅರ್ಥವಾದ ಎಂದುಕೊಳ್ಳುತ್ತಿದ್ದಂತೆಯೇ ಹಿಂಬಾಲಿಸುತ್ತಿದ್ದ ಪರಿಚಿತ ಗಾಂಧಿ ಅಪರಿಚಿತ ನೆರಳಿನಂತೆ ಹಿಂದೆ ಸರಿದುಬಿಡುತ್ತಿದ್ದ.

ಈ ಗಾಂಧಿ ಎನ್ನುವ ಇತಿಹಾಸದ ಮಹಾಪುರುಷ ನನ್ನ ಚಿಂತನೆಗೆ ಆಹಾರವಾಗಿದ್ದು ಎಂದಿನಿಂದ? ನನಗೆ ತಿಳುವಳಿಕೆ ಬಂದ ನಂತರದ ಈ ಎರಡು ದಶಕಗಳಿಂದ ಒಂದಿಲ್ಲೊಂದು ಸಂದರ್ಭಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಗಾಂಧೀ-ಮೇನಿಯಾದಲ್ಲಿ ಬಿದ್ದು ಒದ್ದಾಡಿದ್ದಿದೆ. ನಿಖರವಾಗಿ ಹೇಳುವುದಾದರೆ,…

ಹೌದು! ನನಗೆ ನೆನಪಿದೆ ನಾನು ಚಿಕ್ಕವನಿದ್ದಾಗ ಅಜ್ಜಿ-ತಾತ ತೊಡೆಯ ಮೇಲೆ ಕೂರಿಸಿಕೊಂಡು ಭಾರತದ ಸ್ವತಂತ್ರ್ಯ ಸಂಗ್ರಾಮದ ಕಥೆಗಳನ್ನು ಹೇಳುತ್ತಿದ್ದರು. mahatma_gandhi_artworkನಮ್ಮ ದೇಶವನ್ನು ಹಿಂದೆ ಬ್ರಿಟೀಶರು ಆಳುತ್ತಿದ್ದರು, ಅವರಿಂದ ನಮಗೆ ಸ್ವಾತಂತ್ರ್ಯ ಕೊಡಿಸಿದ್ದ ಮಹಾಮಹಿಮ, ಅವರೆಲ್ಲರ ಪ್ರಕಾರ ಗಾಂಧಿ. ಉಪವಾಸ-ವನವಾಸ ಮಾಡಿದ ಬರಿಮೈ ಪಕೀರ ನಿಸ್ವಾರ್ಥ ದೃಷ್ಠಿಕೋನದಿಂದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿ, ಕೊನೆಗೆ ಗೋಡ್ಸೆಯ ಗುಂಡಿಗೆ ಬಲಿಯಾಗಿ ಹುತಾತ್ಮನಾದ. ನನ್ನ ಬಾಲ್ಯದಲ್ಲಿ ನಾನು ಗೋಡ್ಸೆಯನ್ನು ಪರಮ ನೀಚ, ಭ್ರಷ್ಟ, ರಾಕ್ಷಸನಂತೆ ನನ್ನ ಕಲ್ಪನಾ ವಿಸ್ತಾರದಲ್ಲಿ ಚಿತ್ರಿಸಿಕೊಂಡಿದ್ದೆ. ಆಗೆಲ್ಲ ದೇಶದ ಸ್ವಾತಂತ್ರ್ಯದ ವಿಚಾರ ಬಂದಾಗ ಮೊದಲು ನೆನಪಾಗುತ್ತಿದ್ದ ಹೆಸರು ಹಾಗೆಯೇ ಕೊನೆಯ ಹೆಸರೂ ಸಹ ಗಾಂಧಿಯದ್ದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನ ಚರ್ವಿತಚರ್ವಣ ಭಾಷಣ ಕೇಳುತ್ತಿದ್ದಾಗ, ಅಂದು ಶಾಲಾ ಮೈಧಾನವನ್ನು ಸ್ವಚ್ಛಗೊಳಿಸುವಾಗ, ಗಾಂಧಿಯ ಸೇವಾ ಮನೋಭಾವನೆಯ ಮತ್ತು ದೀನದಲಿತರ ಕುರಿತಾದ ಕಾಳಜಿ ಮುಂತಾದ ವಿವರಣೆಗಳನ್ನು ಕೇಳುತ್ತಿದ್ದ ಸಂದರ್ಭದಲ್ಲಿ ಗಾಂಧಿ ದೈವೀ ಸ್ವರೂಪಿಯಾಗಿರುತ್ತಿದ್ದ. ಫೋಟೋದಲ್ಲಿ ಇಷ್ಟಗಲ ಬೊಚ್ಚು ಬಾಯಗಲಿಸಿ ನಗುವ ಕನ್ನಡಕಧಾರಿ ಅರೆಬೆತ್ತಲೆ ಸಂತ ಸಾಕ್ಷಾತ್ ಸ್ವಯಂಪ್ರಭೆಯ ಸೂರ್ಯನಂತೆ ಮನದಂಗಳದಲ್ಲಿ ಬೆಳಗುತ್ತಿದ್ದ. ಅಜ್ಜಯ್ಯ ಭಾಗವತ ಹಾಗೂ ಪುರಾಣಗಳನ್ನು ಓದುವಾಗೆಲ್ಲ ಹೇಳುತ್ತಿದ್ದರು ಲೋಕಕಲ್ಯಾಣಕ್ಕಾಗಿ ಭಗವಂತ ಮತ್ತೆ ಮತ್ತೆ ಅವತರಿಸಿ ಬರುತ್ತಾನೆ. ಅವನದು ಈಗಾಗಲೆ ಒಂಬತ್ತು ಅವತಾರಗಳು ಮುಗಿದಿವೆ. ಕಲಿಯುಗದಲ್ಲಿ ಕಲ್ಕಿಯಾಗಿ ಉದ್ಭವಿಸುತ್ತಾನೆ. “ಸಂಭವಾಮಿ ಯುಗೆ ಯುಗೆ”.

ಅಲ್ಲಿಗೆ ಕಲ್ಕಿಯ ಅವತಾರ ಗಾಂಧಿಯೇ ಇರಬಹುದೆ? ಅದೆಷ್ಟು ಬಾರಿ ಈ ಕುರಿತಾಗಿ ನಾನು ಯೋಚಿಸಿದ್ದೆ. ಮನೆಯಲ್ಲಿ ಅಮ್ಮನ ಬಳಿ ಇದನ್ನು ಹೇಳಿದ್ದಾಗ, ಅವಳು ಫೋಟೋದಲ್ಲಿನ ಗಾಂಧಿಯಷ್ಟೆ ಇಷ್ಟಗಲ ಬಾಯಿಕಳೆದು ನಕ್ಕು ಬಿಟ್ಟಿದ್ದಳು. ಅದಕ್ಕಿಂತ ಅವಮಾನವಾಗಿದ್ದು ಆನಂತರ ಇದೇ ಕಥೆಯನ್ನು ಸಂಘಪರಿವಾರದ ಬೈಠಕ್ಕಿನಲ್ಲಿ ಹೇಳಿದ್ದಾಗ ಅಲ್ಲಿ ನಮಗೆ ಶಾಖೆ ಮಾಡಿಸುತ್ತಿದ್ದ ’ಜಿ’ ಒಬ್ಬರು ನಕ್ಕಿದ್ದ ಸಂದರ್ಭದಲ್ಲಿ.

ಆನಂತರ ಗಾಂಧಿ ಬೇರೆಯದೇ ಸ್ವರೂಪದಲ್ಲಿ ಅರ್ಥವಾಗತೊಡಗಿದ. ಗಾಂಧಿಯ ಪಕ್ಕದಲ್ಲಿ ಸೇರಿಸುತ್ತಿದ್ದ ’ಜಿ’ ಯನ್ನು ಕಿತ್ತುಹಾಕಿದ ಹಾಗೂ ಗಾಂಧಿಯ ಸಂಬೋಧನೆಯಲ್ಲಿ ಬಹುವಚನದ ಬದಲಿಗೆ ಏಕವಚನ ಬಳಸಿದ ದಿನಗಳವು. ಆಗ ಪ್ರಾಯಶಃ ನನಗೆ ಹನ್ನೆರಡು ವರ್ಷಗಳಿದ್ದಾವು. ಸ್ವಾತಂತ್ರ್ಯ ಸಂಗ್ರಾಮದ ಹೊಸ ಹೊಸ ಚರಿತ್ರೆಗಳ ಪರಿಚಯವಾಗತೊಡಗಿತ್ತಾಗ. ಪ್ರತಿನಿತ್ಯ ಬೈಠಕ್‌ಗೆ ತೆರಳುತ್ತಿದ್ದೆ. ಅಲ್ಲಿ ಭಗತ್ ಸಿಂಗ್, ಶಹೀದ್ ಉದ್ದಮ್ ಸಿಂಗ್, ಚಂದ್ರಶೇಖರ್ ಆಜಾದ್, ಭಟುಕೇಶ್ವರ್ ದತ್ತಾ, ಸುಖ್‌ದೇವ್, ರಾಜ್‌ಗುರು, ತಿಲಖ್, ಲಾಲಾಜಿ, ಬಿಪಿನ್ ಚಂದ್ರಪಾಲ್, ಹೀಗೆ ಅನೇಕ ಹೆಸರುಗಳ ಪರಿಚಯವಾಯಿತು. ಕೇವಲ ಹೆಸರುಗಳು ಮಾತ್ರವಲ್ಲ ಅದರ ಹಿನ್ನಲೆಯಲ್ಲಿ ಆವರೆಗೆ ಅಪರಿಚಿತವಾಗಿದ್ದ ಭಾರತ ಸ್ವತಂತ್ರ್ಯ ಕದನದ ರಕ್ತಸಿಕ್ತ ಅಧ್ಯಾಯಗಳ ಅಧ್ಯಯನ ಆರಂಭವಾಯಿತು. ದೇಶಕ್ಕೆ ಸ್ವತಂತ್ರ್ಯ ಬಂದಿದ್ದು ಕೇವಲ ಗಾಂಧಿಯ ಉಪವಾಸ ಸತ್ಯಾಗ್ರಹದಿಂದಲ್ಲ. ಮೊಂಡ ಬ್ರಿಟೀಶರೇನು ಸತ್ಯಾಗ್ರಹಕ್ಕೆ ಬಗ್ಗುವವರಾಗಿರಲಿಲ್ಲ. ಅಜಾದ್ ಹಿಂದ್ ಫೌಜ್ ಎನ್ನುವ ಸ್ವತಂತ್ರ್ಯ ಸೈನ್ಯ ಕಟ್ಟಿದ ಹಾಗೂ ಜಪಾನಿನಲ್ಲಿ ಭಾರತದ್ದೆ ಆದ ಒಂದು ಪರ್ಯಾಯ ಸರ್ಕಾರ ರಚನೆ ಮಾಡಿದ್ದ ಬಂಗಾಲಿ ಸುಭಾಷ್ ಬಾಬು ಕಥೆ ಕೇಳಿದ್ದ ದಿನ ನಿಜಕ್ಕೂ ಮೈನವಿರೇಳಿಸಿಕೊಂಡಿದ್ದೆ. ಬೋಸರ ಬದುಕಿನಾದ್ಯಂತ ಅವರನ್ನು ವಿರೋಧಿಸಿದ ಗಾಂಧಿ ಮೊತ್ತ ಮೊದಲ ಬಾರಿಗೆ ನನಗೆ ಬೇರೆಯದೇ ದೃಷ್ಠಿಯಲ್ಲಿ ಕಂಡಿದ್ದ. ಜಪಾನ್ ಹಾಗೂ ಬ್ರಹ್ಮ ದೇಶಗಳ ಬೆಂಬಲ ಪಡೆದುಕೊಂಡು ಸ್ವತಃ ದಂಡನಾಯಕನಾಗಿ ಇರಾವತಿ ನದಿ ತಟದಲ್ಲಿ ವೀರಾವೇಶದಿಂದ ಕಾದಿದ್ದ ಸುಭಾಷ್ ಚಂದ್ರ ಬೋಸ್ ಆಗ ನಿಜವಾದ ಹೀರೋ ಎನ್ನಿಸಿಕೊಂಡಿದ್ದರು. ಗಾಂಧಿಯ ಬದಲು ಕೃಷ್ಣನ ಹತ್ತನೆ ಅವತಾರ ಸುಭಾಷ್ ಬಾಬುವಿಗೆ ರೀಪ್ಲೇಸ್ ಆಗಿಬಿಟ್ಟಿತ್ತು. ಇಂಫಾಲ ಹಾಗೂ ಮಣಿಪುರದ ಬಳಿ ಬಂದುಬಿಟ್ಟಿದ್ದ ಸುಭಾಷರ ಅಜಾದ್ ಹಿಂದ್ ಫೌಜ್‌ನ ಮುಂದಿನ ನಡೆ ಚಲೋ ದಿಲ್ಲಿ ಎನ್ನುವುದನ್ನು ತಿಳಿದಾಗ ಸ್ವತಃ ಆಗಿನ ಬ್ರಿಟನ್ ವೈಸ್‌ರಾಯ್ ಮೌಂಟ್ ಬ್ಯಾಟನ್ ಸಹ ಬೆವತುಬಿಟ್ಟಿದ್ದನಂತೆ. ಮಾಸ್ಕೋಗೆ ತೆರಳುತ್ತಿದ್ದ ವಿಮಾನ ಅಪಘಾತದಲ್ಲಿ ಸುಭಾಷ್ ಮೃತರಾದರು ಎನ್ನುವ ಸಂಗತಿ ಅನೇಕ ಸಂಶಯಗಳ ಸುತ್ತಾ ಪ್ರವಹಿಸಿ ಆನಂತರವೂ ಅರ್ಥವೇ ಆಗದೆ ದ್ವಂದ್ವವಾಗಿ ಉಳಿದು ಹೋಯಿತು. ಕೊನೆಗೆ ಸುಭಾಷರ ಅಕಾಲಿಕ ಮೃತ್ಯು ಮಿಲಿಯನ್ ಡಾಲರ್ ಪ್ರಶ್ನೆಯಂತಾಗಿ ಉಳಿದು ಹೋಯಿತು. ಅದೇನೇ ಇದ್ದರೂ ಬದುಕಿದ್ದ ಸಂದರ್ಭದಲ್ಲಿ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಮೈ ಹಣ್ಣಾಗಿಸಿ ಬಡಿದಾಡಿದ ಸುಭಾಷ್‌ರನ್ನು ಹೆಜ್ಜೆ ಹೆಜ್ಜೆಗೂ ವಿರೋಧಿಸಿದ್ದ ಗಾಂಧಿ ಮಾತ್ರ ನನ್ನ ದೃಷ್ಠಿಯಲ್ಲಿ ಪಾಪಿ ಜೀವಾತ್ಮನಾಗಿಬಿಟ್ಟಿದ್ದ. ತಪ್ಪು ತಪ್ಪಾಗಿ ಇತಿಹಾಸ ಬೋಧಿಸಿದ ಶಾಲೆಯ ಅಧ್ಯಾಪಕರಿಂದ, ಅಜ್ಜಿ ತಾತರವರೆಗೂ ಯಾರು ಯಾರು ಗಾಂಧಿಯನ್ನು “ಅವರ್ ಫಾದರ್ ಆಫ್ ನೇಷನ್” ಎಂದು ಸಮರ್ಥಿಸಿದ್ದರೋ ಅವರ ಮೇಲೆಲ್ಲ ಕೋಪ ತಾರಕಕ್ಕೇರಿಬಿಟ್ಟಿತು. ಗಾಂಧಿ, ನೆಹರೂ ಸೇರಿದಂತೆ ಯಾವ ಮಹಾಪುರುಷರುಗಳು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದಂದು ಭಾಷಣಗಳಿಗೆ ವಸ್ತುವಾಗುತ್ತಿದ್ದರೋ ಅವರುಗಳ ಮೇಲೆ ಏನೋ ಒಂದು ಬಗೆಯ ಅಸಹ್ಯ ಮೂಡತೊಡಗಿಬಿಟ್ಟಿತ್ತು. ಹೀಗೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಅಜ್ಞಾತವಾಗಿ ಉಳಿದಿದ್ದ ಕೆಲವು ಧ್ಯೇಯನಿಷ್ಠ ಹೋರಾಟಗಾರರ ಹೆಸರ ನಡುವೆ ಅದೊಂದು ಹೆಸರು ನನಗೆ ತಿಳಿಯದಂತೆ ಆಪ್ತವಾಗಿಬಿಟ್ಟಿತ್ತು. ವಿನಾಕಾರಣ ಆ ವ್ಯೆಕ್ತಿಯ ಮೇಲೆ ಅಭಿಮಾನ ಉಕ್ಕತೊಡಗಿತ್ತು. ಆ ಹೆಸರೇ “ನಾಥೋರಾಂ ವಿನಾಯಕ್ ಗೋಡ್ಸೆ”.

“ಯಾವ ಪುಣ್ಯನದಿಯ ತಟದಲ್ಲಿ ತಪಸ್ವಿಗಳು ಕುಳಿತು ಧ್ಯಾನ-ತಪವನ್ನಾಚರಿಸಿದ್ದರೋ, ಯಾವ ಪುಣ್ಯವಾಹಿನಿ ಅಖಂಡ ಭಾರತದ ಶ್ರೇಷ್ಠ ನದಿಯೆಂದು Mahatma-Gandhiಕರೆಸಿಕೊಂಡಿತ್ತೊ ಆ ಪರಮ ಪಾವನೆ ಸಿಂಧೂ ಪ್ರಸ್ತುತ ಪಾಕಿಸ್ತಾನದಲ್ಲಿ ಹರಿಯುತ್ತಿದ್ದಾಳೆ. ಎಂದು ಆ ನದಿ ಪುನಃ ಹಿಂದೂಸ್ತಾನದ ಧ್ವಜದಡಿಯಲ್ಲಿ ಹರಿಯತೊಡಗುತ್ತಾಳೋ ಅಂದು ನನ್ನ ಚಿತಾಭಸ್ಮವನ್ನು ಅದರಲ್ಲಿ ವಿಸರ್ಜಿಸಬೇಕು. ನನ್ನ ಮರಣ ಕಾಲದ ನಂತರವೂ ನನ್ನ ಚಿತಾಭಸ್ಮವನ್ನು ಶೇಖರಿಸಿಡಬೇಕು. ಮರಳಿ ಅಖಂಡಭಾರತ ರಚನೆಗೆ ಶತಮಾನಗಳು ಕಳೆದರೂ ಚಿಂತೆಯಿಲ್ಲ. ಆದರೆ ನನ್ನ ಆಸೆ ಈಡೇರಲೇಬೇಕು ಎನ್ನುವುದಾದರೆ ಮತ್ತೆ ಭಾರತ ಭೂಮಿ ಅಖಂಡತೆಯನ್ನು ಹೊಂದಬೇಕು.”-ಗೋಡ್ಸೆಯ ಈ ಅಂತಿಮ ಹೇಳಿಕೆ ಓದಿದ ದಿನದಿಂದಲೂ ಅವನಲ್ಲಿದ್ದ ದೇಶಭಕ್ತ ನನ್ನನ್ನು ಬಹುತೇಕ ಆವರಿಸಿಕೊಂಡಿದ್ದ. “ನಾನೇಕೆ ಗಾಂಧಿಯನ್ನು ಕೊಂದೆ”-ಎನ್ನುವ ಸ್ವತಃ ಗೋಡ್ಸೆ ಹೇಳಿಕೆಯನ್ನು ಕೇಳಿದ ನಂತರ ಹಾಗೂ ಅದರ ಕಡತಗಳನ್ನು ತಕ್ಕಮಟ್ಟಿಗೆ ಅಧ್ಯಯನ ಮಾಡಿದ ತರುವಾಯ ನನಗೇಕೋ ಗಾಂಧಿಯ ಬಗ್ಗೆ ತುಚ್ಛ ಭಾವ ಮೂಡತೊಡಗಿತ್ತು. ಯಾವುದೋ ಒಂದು ಹಂತದಲ್ಲಿ ಗಾಂಧಿ ಹತ್ಯೆ ಸಹ ಸಮಯೋಚಿತ ಹಾಗೂ ಅನಿವಾರ್ಯವಾಗಿತ್ತು ಎಂದು ಒಪ್ಪಿಕೊಳ್ಳುವ ಹಂತ ತಲುಪಿದ್ದಾಗ ನನಗೆ ಬಿಸಿರಕ್ತದ ತಾರುಣ್ಯ.

ಹಾಗಂತ ಗಾಂಧಿಯನ್ನು ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲವಲ್ಲ. ಗಾಂಧಿಯ ಗ್ರಾಮ ಸ್ವರಾಜ್ಯ, ರಾಮರಾಜ್ಯದ ಕಲ್ಪನೆಗಳು, ಸೆಕ್ಯುಲರಿಸಂ ಧೋರಣೆ, ಆಧುನಿಕರಣವನ್ನು ವಿರೋಧಿಸುವ ನಿಲುವುಗಳು ಇತ್ಯಾದಿ ವಿಚಾರಗಳು ನಾವು ಎಷ್ಟೇ ಬೇಡವೆಂದರೂ ನಮ್ಮನ್ನು ಬಿಡಲಾರವು. ಭಾರತದಂತಹ ಬಹುಸಂಸ್ಕೃತಿ, ಬಹುಜನಾಂಗೀಯ ಹಾಗೂ ಬಹುಭಾಷೀಯ ರಾಷ್ಟ್ರದಲ್ಲಿ ಗಾಂಧಿ ಎಂದಿಗೂ ಪ್ರಸ್ತುತ. ಗಾಂಧಿ ಎನ್ನುವ ವ್ಯಕ್ತಿ ಕೇವಲ ಓರ್ವ ಐತಿಹಾಸಿಕ ಲೆಜೆಂಡ್ ಎನ್ನಿಸಿಕೊಳ್ಳಲಿಲ್ಲ, ಬದಲಿಗೆ ಈ ಎರಡು-ಮೂರು ತಲೆಮಾರುಗಳ ಜನತೆಗೆ ಎಂದಿಗೂ ಅರ್ಥವಾಗದ, ಅರ್ಥಮಾಡಿಕೊಳ್ಳಲೇಬೇಕಾದ ಸಂದಿಗ್ದ ದ್ವಂದ್ವವಾಗಿ ಉಳಿದು ಹೋಗಿಬಿಟ್ಟ ಎನ್ನುವ ವಿಷಯದಲ್ಲಿ ಯಾವುದೇ ಸಂದೇಹಗಳಿರಲಿಲ್ಲ. ಪ್ರತಿ ವರ್ಷವೂ ಗಾಂಧಿ ಅನೇಕ ವೇದಿಕೆಗಳಲ್ಲಿ ಚರ್ಚೆಗೆ ಬರುತ್ತಾನೆ. ಕೆಲವರು ಗಾಂಧಿ ವಿಚಾರಧಾರೆಯ ಪರವಾಗಿ ಇನ್ನೊಂದಷ್ಟು ಜನ ಅದರ ವಿರುದ್ದವಾಗಿ ದ್ವನಿಯೆತ್ತುತ್ತಾರೆ. ಒಂದಿಲ್ಲೊಂದು ವಿಶ್ವವಿದ್ಯಾನಿಲಯಗಳು ಗಾಂಧಿಯನ್ನು ಮರಳಿ-ಹೊರಳಿ ಅನ್ವೇಶಿಸುತ್ತಲೇ ಇವೆ. ನಿರಂತರ ಸಂಶೋಧನೆಗಳೂ ಸಾಗಿವೆ. ಅನೇಕ ವಿದ್ಯಾ ಕೇಂದ್ರಗಳಲ್ಲಿ ಗಾಂಧಿ ಎನ್ನುವ ವಿಷಯದ ಮೇಲೆಯೇ ಅಧ್ಯಯನ ಕೇಂದ್ರ ತೆರೆಯಲಾಗಿದೆ. ಇತಿಹಾಸದ ಕೆಲವು ಅವಿತಿದ್ದ ಸತ್ಯಗಳನ್ನು ಅರಿತ ನಂತರ ಉದ್ದೇಶಪೂರ್ವಕವಾಗಿ ಗಾಂಧಿಯನ್ನು ನಾನು ವಿರೋಧಿಸುವ ನಿರ್ಧಾರಕ್ಕೆ ಬಂದಿದ್ದೆ. ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ದಾಖಲೆಗಳನ್ನು, ಪುಸ್ತಕಗಳನ್ನು, ಇತಿಹಾಸದ ಹೊತ್ತಿಗೆಗಳನ್ನು ತಿರುಗಿಸತೊಡಗಿದ್ದೆ. ಕೊನೆಗೆ ಯಾವುದೇ ವೇದಿಕೆಯಲ್ಲಾದರೂ, ಯಾವ ಮಹಾ ಮೇಧಾವಿ ಬುದ್ದಿಜೀವಿಯ ಎದುರಲ್ಲಾದರೂ ನಿಂತು ವಾದ ಮಾಡಲು ಸಿದ್ದನಾಗತೊಡಗಿದ್ದೆ.

ಅದ್ಯಾವುದು ಗಾಂಧಿಯನ್ನು ನನ್ನ ಕನಸಿಗೆ ಕರೆತರಲಿಲ್ಲ. ಹೊಲಸೆದ್ದು ಹೋಗಿರುವ ವ್ಯವಸ್ಥೆಯ ಭ್ರಷ್ಟತಾಂಡವದ ನಡುವೆ ಸದ್ಯ ಗಾಂಧಿ ಸಹ ಅಪ್ರಸ್ತುತರೆನಿಸಿಕೊಂಡಿದ್ದಾನೆ. ತೀರ ಇತ್ತೀಚೆಗೆ ಒಂದು ಸಿನಿಮಾ ನೋಡಿದೆ. ಪ್ರಾಯಶಃ ಅದರ ನಿರ್ದೇಶಕರು ಮಣಿರತ್ನಂ ಎಂದೆನಿಸುತ್ತದೆ. ತಮಿಳಿನ ಮೇರು ನಟ ಕಮಲ್ ಹಸನ್ ನಾಯಕನಾಗಿದ್ದ ಅದರ ಹೆಸರು “ಹೇ ರಾಮ್”. ಗಾಂಧಿಯ ಹತ್ಯೆಯ ಸಂದರ್ಭವನ್ನು ಆಧಾರದಲ್ಲಿಟ್ಟುಕೊಂಡು ತಯಾರಿಸಿದ್ದ ಚಿತ್ರ. ದೇಶವಿಭಜನೆಯ ಸಂದರ್ಭದಲ್ಲಿ ಹಿಂದು ಮತ್ತು ಮುಸಲ್ಮಾನರ ನಡುವೆ ನಡೆದ ಮಾರಣ ಹೋಮ, ಕೊಲೆ, ಅತ್ಯಾಚಾರ ಇತ್ಯಾಧಿಗಳನ್ನು ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಚಿತ್ರದ ಮುಕ್ತಾಯ ಹೇಗೇ ಇರಲಿ, ಪೂರ್ವಾರ್ಧದ ಕಥೆ ಇಷ್ಟವಾಗಿ ಹೋಗಿತ್ತು. ಮತ್ತೆ ಮತ್ತೆ ಅದೇ ಚಿತ್ರವನ್ನು ನೋಡಿದೆ. ಗಾಂಧಿ ಹಾವಳಿಯಿಡಲು ಶುರುವಿಟ್ಟೇಬಿಟ್ಟ.

ನಮ್ಮಲ್ಲಿ ಬಹುತೇಕರಿಗೆ ದೇಶವಿಭಜನೆಯ ಹಿಂದಿನ ಚರಿತ್ರೆಯೇ ತಿಳಿದಿಲ್ಲ. ಪಾಕಿಸ್ತಾನ ಎನ್ನುವ ಕಲ್ಪನೆಗೆ ರೆಕ್ಕೆ ಮೂಡಿದ್ದು ಮುಸ್ಲಿಂ ಲೀಗ್‌ನ ಸ್ಥಾಪನೆಯಾದ ಕೆಲವೇ ಕಾಲದ ನಂತರ. ಬಹುಸಂಖ್ಯಾತ ಹಿಂದೂಗಳೊಂದಿಗೆ ಅಲ್ಪಸಂಖ್ಯಾತ ಮುಸಲ್ಮಾನರು ಬದುಕುವುದು ದುಸ್ತರ ಎನ್ನುವ ವಿಷ ಬೀಜವನ್ನು ಅದ್ಯಾರೋ ಪಾಪಿಗಳು ಬಿತ್ತಿದ್ದರು. ಹತ್ತೊಂಬತ್ತನೆಯ ಶತಮಾನದ ನಲ್ವತ್ತರ ದಶಕದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಖಚಿತವಾಗಿ ದೊರೆಯುತ್ತದೆ ಎನ್ನುವ ಸನ್ನಿವೇಶವೂ ಸೃಷ್ಠಿಯಾಗತೊಡಗಿತ್ತು. ಜೊತೆಗೆ ಗಾಂಧಿಯಂತಹ ಗಾಂಧಿಯೇ ಖಿಲಾಫತ್ ಆಂದೋಲನದಲ್ಲಿ ಮುಸಲ್ಮಾನರ ಪರವಾಗಿ ನಿಂತಿದ್ದೂ ಸಹ ಸ್ವತಂತ್ರ ಪಾಕಿಸ್ತಾನದ ಕನಸು ಹೊತ್ತಿದ್ದ ಕೆಲವು ಮುಸ್ಲಿಂ ನಾಯಕರಿಗೆ ಪೂರಕವಾಗಿ ಪರಿಣಮಿಸಿತ್ತು. ಬ್ಯಾರಿಸ್ಟರ್ ಮೊಹಮದ್ ಅಲಿ ಜಿನ್ನಾ ವಿಭಜನೆಯಾಗಲೇ ಬೇಕು ಎಂದು ಪಟ್ಟು ಹಿಡಿದಿದ್ದ. ಆದರೆ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವ ಧೋರಣೆಯನ್ನು ಅನುಸರಿಸಿದ ಕಾಂಗ್ರೆಸ್ ಇದೇ ವಿಷಯವನ್ನು ಹಿಗ್ಗಾಮುಗ್ಗಾ ಎಳೆದಾಡಿದತು. ಗಾಂಧಿ ನೇರವಾಗಿ ವಿರೋಧಿಸಲೂ ಇಲ್ಲ, ಪರವಾಗಿ ಮುಕ್ತ ಮಾತನಾಡಲೂ ಇಲ್ಲ. ಇಂತಹ ಆಷಾಡಭೂತಿತನದಿಂದ ಕಲ್ಕತ್ತಾ, ಲಾಹೋರ್ ಪಂಜಾಬ್‌ಗಳಲ್ಲಿ ಭೀಕರ ಕೋಮುಗಲಭೆಗಳಾದವು. ಸತ್ತವರೆಷ್ಟೋ, ಗಾಯಗೊಂಡವರೆಷ್ಟೋ, ಮನೆ-ಮಠಗಳನ್ನು ಕಳೆದು ಬೀದಿಯಲ್ಲಿ ಬಿಕಾರಿಗಳಂತೆ ನಿಂತವರೆಷ್ಟೋ. ಅವರೆಲ್ಲರ ಒಕ್ಕೊರಲಿನ ಶಾಪ ಜಿನ್ನಾ ಮೇಲಿರಲಿಲ್ಲ, ಅದಿದ್ದಿದ್ದು ಗಾಂಧಿಯ ಮೇಲೆ.

ಪ್ರತಿ ಬಾರಿಯೂ ಒಂದಿಲ್ಲೊಂದು ಸ್ಥಳದಲ್ಲಿ ಕೋಮುಗಲಭೆಗಳಾದಾಗ ಗಾಂಧಿ ನೀಡುತ್ತಿದ್ದ ಹೇಳಿಕೆ ಒಂದೆ, ಹಿಂದೂ-ಮುಸಲ್ಮಾನ ಸಹೋದರರಂತೆ ಬದುಕಬೇಕು. mahatma_gandhi_in_type_by_dencii-d1ucmsiನೀವು ಹಿಂದೂಗಳು ನಿಮ್ಮ ಸಂಗಡ ಮುಸ್ಲೀಂ ಸಹೋದರರಿಗೂ ಬದುಕಲು ಅವಕಾಶ ಮಾಡಿಕೊಡಬೇಕು. ಒಂದು ಕಡೆ ಹಿಂದೂಗಳು ಕಗ್ಗೊಲೆಯಾಗತೊಡಗಿದ್ದರು. ಮನೆಗಳಿಗೆ ನುಗ್ಗುವ ಭಯೋತ್ಪಾದಕರು ಹೆಂಗಸರು, ಅಬಾಲ ಮಕ್ಕಳ ಮೇಲೆ ಅತ್ಯಾಚಾರವೆಸಗತೊಡಗಿದ್ದರು. ಇದಕ್ಕೆ ಪ್ರತಿಯಾಗಿ ಹುಟ್ಟಿಕೊಂಡ ಹಿಂದೂ ಸಂಘಟನೆಯೊಂದು ಸೇಡಿನ ಸರಣಿ ಮುಂದುವರಿಸುವ ಸಲುವಾಗಿ ಮುಸಲ್ಮಾನರನ್ನು ಗುರಿಯಾಗಿಸಿ ಕೊಲ್ಲುತ್ತಿತ್ತು. ರಸ್ತೆಗಳು ರಕ್ತದ ಓಕುಳಿಯಿಂದ ಕೆಂಪಾಗಿಬಿಟ್ಟಿದ್ದವು. ಊರಿಗೆ ಊರು ಸ್ಮಶಾನ ಸದೃಶ್ಯವಾಗಿತ್ತು. ಪ್ರತ್ಯಕ್ಷವಾಗಿಯಲ್ಲದಿದ್ದರೂ ತನ್ನ ಉದಾಸೀನ ಹಾಗೂ ಕಾರಣವೇ ಇಲ್ಲದ ಮೌನ ಧಾರಣೆಯಿಂದಾಗಿ ಪರೋಕ್ಷವಾಗಿ ಅದಕ್ಕೆಲ್ಲಾ ಕಾರಣವಾಗಿದ್ದ ವ್ಯೆಕ್ತಿಯ ಹೆಸರು ’ಬ್ಯಾರಿಸ್ಟರ್ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ’.

ಅಂದು ಗಾಂಧಿ ಒಂದು ಮಾತು ಹೇಳಿದ್ದರೂ ಸಾಕಿತ್ತು ಪಾಕಿಸ್ತಾನದ ಕಲ್ಪನೆ ಸಾಕಾರಗೊಳ್ಳುತ್ತಿರಲಿಲ್ಲ. ಅಥವಾ ಪಾಕಿಸ್ತಾನ ಸ್ವತಂತ್ರ್ಯ ರಾಷ್ಟ್ರವಾಗಿ ಘೋಷಣೆಯನ್ನಾದರೂ ಕೂಡಲೆ ಮಾಡಿದ್ದರೆ, ಅಮಾಯಕರ ಮೇಲಿನ ದೌರ್ಜನ್ಯ-ಹಿಂಸಾಚಾರಗಳನ್ನು ತಪ್ಪಿಸಬಹುದಿತ್ತು. ಮೊದಮೊದಲು ದೇಶವಿಭಜನೆಗೆ ಕಡುವಿರೋಧ ವ್ಯೆಕ್ತಪಡಿಸಿದ್ದ ಬಾಪೂ ಆನಂತರ ಹಿಂಸಾಚಾರ ಹೆಚ್ಚಾದ ಮೇಲೆಯೇ ಒಪ್ಪಿಗೆ ನೀಡಿದ್ದಂತೆ. ಈ ವಿಷಯಗಳು ದೇಶದ ಆಂತರಿಕ ಗೌಪ್ಯ ದಾಖಲೆಗಳ ಕಡತ-ಹೊತ್ತಿಗೆಗಳಿಂದಲೂ ನಾಪತ್ತೆಯಾಗಿಬಿಟ್ಟಿದ್ದವು. ಸ್ವಾತಂತ್ರ್ಯಾ ನಂತರ ಗಾಂಧಿ ಪರಾಕುಗಳ ಭರಾಟೆ ಗಾಂಧಿಪ್ರಭೆಯ ಸುತ್ತಮುತ್ತಲಿನ ಸ್ಪಷ್ಟ ಕಪ್ಪು ಅಪರಾಧಿ ಛಾಯೆಯನ್ನೂ ಮರೆಯಾಗಿಸಿಬಿಟ್ಟಿತ್ತು. ಅದು ಆನಂತರದ ಕೆಲವು ದಶಕಗಳ ನಂತರ ಹೊರಬಂದಿತಷ್ಟೆ. ಇತ್ತೀಚೆಗೆ ನಾನು ಅರ್ಥ ಮಾಡಿಕೊಂಡಿದ್ದ ಗಾಂಧಿ ಹೀಗಿದ್ದ.

ಹೀಗೆ ಗಾಂಧಿ ಎನ್ನುವ ಲೆಜೆಂಡ್ ಎನ್ನಿಸಿಕೊಳ್ಳುವ ಬೊಚ್ಚುಬಾಯಿಯ ಸಾಬರಮತಿಯ ಸಂತ ನನ್ನ ಕನಸಿಗೆ ನಿತ್ಯವೂ ಬಂದು ವೈಚಾರಿಕ ದಾಂಗುಡಿಯಿಡುತ್ತಿದ್ದಾನೆ ಎಂದು ಯಾರ ಬಳಿಯಾದರೂ ಹೇಳಿದರೆ ಕೂಡಲೆ ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ. ನನಗೆ ಅತೀವವಾಗಿ ಆಶ್ಚರ್ಯಕ್ಕೆ ಈಡು ಮಾಡಿರುವುದು, ಈ ಎರಡು ರಾತ್ರಿ ಕನಸಿನಲ್ಲಿ ನಾನು ಮತ್ತು ಗಾಂಧಿ ನಡೆಸಿದ ಸಂಭಾಷಣೆ, ಬೆಳಿಗ್ಗೆ ಎಚ್ಚರವಾದ ನಂತರವೂ ಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿದೆ ಎನ್ನುವುದು. ಇವತ್ತು ಮೂರನೆಯ ದಿನ. ಇವತ್ತೂ ಸಹ ಗಾಂಧಿಯ ಬಗ್ಗೆ ಇಷ್ಟೆಲ್ಲಾ ಯೋಚಿಸಿದ್ದೇನೆ. ಅಲ್ಲಿಗೆ ಮತ್ತೆ ಗಾಂಧಿ ರಾತ್ರಿ ಕನಸಿನಲ್ಲಿ ಪ್ರತ್ಯಕ್ಷವಾಗುವುದು ಶತಃಸಿದ್ದ. ನಿನ್ನೆ, ಮೊನ್ನೆ ನಮ್ಮ ಮಾತುಕತೆಗೆ ಒಂದು ಸ್ಪಷ್ಟ ತಾರ್ಕಿಕ ಅಂತ್ಯ ದೊರೆತಿರಲಿಲ್ಲ. ಇಂದಿಗೆ ಮುಗಿಸಲೇಬೇಕು ಈ ವಿಚಾರವನ್ನು ಎನ್ನುವ ನಿರ್ಧಾರವಂತೂ ಮಾಡಿಬಿಟ್ಟಿದ್ದೆ. ಅದಾಗಲೆ ರಜನಿಯ ಕತ್ತಲ ಕವಳ ಪಸರಿಸಿಬಿಟ್ಟಿತ್ತು. ಯೋಚಿಸುತ್ತಲೆ ತಾಸುಗಟ್ಟಲೆ ಕಳೆದುಬಿಟ್ಟಿದ್ದೆ. ಅಮ್ಮ ಊಟಕ್ಕೆ ಬಡಿಸಿದ್ದೇನೆ ಎಂದು ಮೂರು ಬಾರಿ ಕರೆದು ಹೋಗಿದ್ದಳು. ಹೊಟ್ಟೆಯಲ್ಲಿ ಹಸಿವಿನ ಪೀಕಲಾಟ ಕಾಣಿಸಿತು. ಗಾಂಧಿ ನನ್ನ ಮನಸ್ಸನ್ನು ಹಾಗೆ ಯರ್ರಾಬಿರ್ರಿ ಹಾಳು ಮಾಡಿದ್ದರ ಫಲವೋ ಏನೋ ಈ ಎರಡು ದಿನಗಳಿಂದ ಸರಿಯಾಗಿ ಉದರಪೋಷಣೆಯನ್ನೇ ಮಾಡಿರಲಿಲ್ಲ. ಇಂದೇ ಗಾಂಧಿಯ ವಿಷಯವನ್ನು ಕೊನೆಯಾಗಿಸಬೇಕು ಎಂದು ಗಟ್ಟಿನಿರ್ಧಾರ ತೆಗೆದುಕೊಂಡ ಸಂಭ್ರಮದೊಂದಿಗೆ ಪುಷ್ಕಳ ಭೋಜನವೂ ಆಯಿತು. ಆತುರಾತುರದಲ್ಲಿಯೇ ಹಾಸಿಗೆಗೆ ಮಗ್ಗುಲಾನಿಸಿದೆ. ನಿದ್ರೆ ಮಾಡಬೇಕು, ಆದರೆ ನಿದ್ರೆ ಗಾಢವಾಗಬಾರದು, ನಿದ್ರೆ ನಿದ್ರೆಯಂತಿರಬಾರದು. ಇಂದು ಗಾಂಧಿಯೊಂದಿಗೆ ನನ್ನ ಅಂತಿಮ ಸಂಭಾಷಣೆ. ಇವತ್ತಿಗೆ ಗಾಂಧಿ ಯೋಚನೆ ಮುಗಿಯಬೇಕು, ಆತ ನನ್ನ ಚಿಂತನೆಯಿಂದ ದೂರ ಸರಿಯಬೇಕು. ಭವಿಷ್ಯದಲ್ಲಿ ಇನ್ಯಾವತ್ತಿಗೂ ಆ ವ್ಯೆಕ್ತಿಯ ಹೆಸರು ತೆಗೆಯಬಾರದು ಅದಕ್ಕಾಗಿಯಾದರೂ ಇಂದು ಗಾಂಧಿ ಬರಬೇಕು ಮಾತಿಗೆ. ಅಸಲಿಗೆ ಗಾಂಧಿ ಇಂದು ನನ್ನ ಕನಸಿನಲ್ಲಿ ನಿಜವಾಗಿಯೂ ಬರುತ್ತಾನಾ? ಸ್ಪಷ್ಟತೆಯಂತೂ ಇರಲಿಲ್ಲ.

ಮಲಗಿದ ನಂತರ ಬಹಳ ಹೊತ್ತು ಮಗ್ಗುಲು ಹೊರಳಿಸುತ್ತಲೇ ಇದ್ದೇ. ನಿನ್ನೆ ಮೊನ್ನೆಯೆಲ್ಲ, ಪುಣ್ಯಾತ್ಮ ಗಾಂಧಿ ಮಲಗಿದ ಕೂಡಲೆ ಸ್ವಪ್ನದಲ್ಲಿ ಪ್ರತ್ಯಕ್ಷನಾಗುತ್ತಿದ್ದವನು ಇಂದೇಕೋ ಬಹಳ ಹೊತ್ತು ಸತಾಯಿಸಿದ. ಆದರೂ ಗಾಂಧೀ ಬರಲೇಬೇಕಿತ್ತು. ಬಂದೇ ಬರುತ್ತಾನೆ ಎನ್ನುವ ನಂಬಿಕೆಯಿಂದಲೇ ವಿಧಿಯಿಲ್ಲದೆ ಅತ್ತಿತ್ತ ಹೊರಳುತ್ತಲೇ ಇದ್ದೆ. ವಿರೋಧಿ ಭಾವನೆಯಿದ್ದರೂ ವಿನಾಕಾರಣ ಗಾಂಧಿ ನಿರೀಕ್ಷಣೆಯಲ್ಲಿ ಕಾಯುತ್ತಿದ್ದ ನನ್ನ ಮನಃಸ್ಥಿತಿ ನನಗೆ ಆಶ್ಚರ್ಯ ಮೂಡಿಸತೊಡಗಿತ್ತು. ಸುಮಾರು ಗಂಟೆ ಹನ್ನೆರಡಾಗಿತ್ತು ಎನಿಸುತ್ತದೆ. ಗಾಂಧಿಯ ಜಪ ಮಾಡುತ್ತಲೆ ನಿಧಾನವಾಗಿ ನಿದ್ರಾದೇವಿಯ ತೆಕ್ಕೆಗೆ ಜಾರಿದೆ. ಲಘುವಾಗಿ ಸ್ವಪ್ನ ಸಂಚಾರದ ಹೆಜ್ಜೆಗಳನ್ನಿಡುತ್ತಾ ವಾರ್ಮ್ ಅಪ್ ಆಗುತ್ತಿದ್ದೆ. ಮನೆಯ ಮಾಳಿಗೆಯ ಖಾಲಿ ಜಾಗದಲ್ಲಿ ವರಚ್ಚಾಗಿ ನಿಂತಿದ್ದ ಆಳೆತ್ತರದ ಪುರಾನಾ ಜಮಾನದ ಗಡಿಯಾರ ಟಣ್ ಎಂದು ಬಾರಿಸಿದ ಸದ್ದಾಯಿತು. ಆ ಗಡಿಯಾರದ ಮೇಲ್ಮುಖದಲ್ಲಿಯೂ ಗಾಂಧಿಯ ಭಾವಚಿತ್ರವಿರುವುದು ಈಗ ಅಪ್ರಸ್ತುತವೆನಿಸುವಂತಹ ಕಾಕತಾಳೀಯ.

ಹನ್ನೆರಡು ಗಂಟೆಯ ನನ್ನ ಪಾಲಿನ (ಅ?)ಶುಭ ಮಹೂರ್ತದಲ್ಲಿ ಗಾಂಧಿಯ ಆಗಮನವಾಯಿತು. ಮೊದಲಿಗೆ ಕೋಲಿನ ಕಟ್ ಕಟ್ ಶಭ್ದ, ಆನಂತರ ಗಾಂಧಿ ಮೆಟ್ಟಿದ್ದ ಚರ್ಮದ ಚಪ್ಪಲಿಯ ಪಟ್-ಪಟ್ ಸದ್ದು. ಅಸ್ಪಷ್ಟವಾಗಿ ಕಾಣಿಸುತ್ತಿದ್ದ ಬಿಳಿಯ ಧೋತಿ, ಚಕ್ಕಡ-ತೊಗಲು ಮಾತ್ರ ತುಂಬಿದ್ದ ಎದೆ, ಬೋಳು ತಲೆ, ಅದೇ ನಿರ್ವಿಕಾರದ ಲೋಕಪ್ರಸಿದ್ದ ಬೊಚ್ಚುಬಾಯಿ. “ಬಾ ತಂದೆ ನಿನ್ನನ್ನೆ ಕಾಯುತ್ತಿದ್ದೆ” ಎಂದೆ.

“ಹ್ಹ ಹ್ಹ ಹ್ಹ…ನೀನು ನನ್ನ ಹಾದಿ ಕಾಯುವಂತಾಗಿದ್ದು ನನ್ನ ಸುಕೃತ.” ಕೊಂಕಿಸಿ ಮಾತನಾಡಿದ ಗಾಂಧಿ.

“ವ್ಯಂಗ್ಯ ಬೇಡ ಬಾಪೂ, ನನಗೆ ಇಂದಿಗೆ ಕೆಲವು ಸಂಶಯಗಳು, ದ್ವಂದ್ವಗಳು ನಿವಾರಣೆಯಾಗಲೇಬೇಕಿವೆ. ನಿನ್ನೆ ಮೊನ್ನೆ ಮಾತನಾಡಿದ ಹಾಗೆ ಅಡ್ಡಗೋಡೆಯ ಮೇಲೆ ದೀಪವಿಡುವ ಮಾತನಾಡಬೇಡ. ನೇರವಾದ ಮಾತು, ನಿಖರವಾದ ನಿನ್ನ ಅಂತರಂಗ ನನಗಿಂದು ತಿಳಿಯಬೇಕು. ಇವತ್ತಿಗೆ ನನ್ನ ನಿನ್ನ ಸಂಬಂಧ ಮುಗಿಯುತ್ತದೆ. ಇನ್ನು ಮೇಲೆ ಅಪ್ಪಿತಪ್ಪಿಯೂ ನಿನ್ನ ವಿಚಾರ ಎತ್ತಲಾರೆ. ಅದು ಒಳ್ಳೆಯದೂ ಕೆಟ್ಟದ್ದೋ, ನಿನ್ನ ಪರವಾಗಿಯೂ ಮಾತನಾಡಲಾರೆ, ವಿರುದ್ಧವಾಗಿಯೂ ಮಾತನಾಡಲಾರೆ. ನಿನ್ನನ್ನು ಸಮರ್ಥಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ. ನನ್ನ ಚಿಂತನಾ ಪರಿಧಿಯಲ್ಲಿ ಇನ್ನು ಮುಂದೆ ಗಾಂಧಿ ವಿಚಾರಧಾರೆಗೆ ಜಾಗವಿಲ್ಲ. ಇವತ್ತಿನ ಸಂಭಾಷಣೆ ನಮ್ಮ ಕೊನೆಯ ಸಂಭಾಷಣೆಯಾಗಬೇಕು. ಹಾಗೆ ಇವತ್ತಿನ ಸಂಭಾಷಣೆಯನ್ನೂ ಮರೆತು ಬಿಡುತ್ತೇನೆ. ಆದರೆ ಅದೆಲ್ಲದಕ್ಕೂ ಮೊದಲು ನನಗೆ ಒಂದಷ್ಟು ಸ್ಪಷ್ಟೀಕರಣ ಬೇಕಿದೆ. ನಿನ್ನನ್ನು ಆರಾಧಿಸುವ, ಪೂಜಿಸುವ, ನೀನೆ ಸರಿ ಎಂದು ವರ್ಣಮಯವಾಗಿ ವೇದಿಕೆಗಳಲ್ಲಿ ಹೊಗಳುವ ಬುದ್ದಿಜೀವಿಗಳ ವಾದ ಸತ್ಯವೋ? ಅಥವಾ ತಕ್ಕಮಟ್ಟಿಗೆ ಇತಿಹಾಸವನ್ನೂ, ಅದರ ಕರಾಳ ಸತ್ಯಗಳನ್ನು ತಿಳಿದುಕೊಳ್ಳುತ್ತಿರುವ ಮತ್ತು ನಿನ್ನ ಬಗ್ಗೆ ಅಧ್ಯಯನ ಮಾಡಿರುವ ನನ್ನ ಲಾಜಿಕ್ ಸತ್ಯವೋ? ಇವತ್ತಿಗೆ ಇದು ನನಗೆ ತಿಳಿಯಬೇಕಿದೆ.” ನೇರವಾಗಿ ಪ್ರಸ್ತಾಪ ಮಂಡಿಸಿದೆ.

ನಿಧಾನವಾಗಿ ಮಂಚದೆಡೆಗೆ ನೆಡೆದು ಬಂದ ಆ ವೃದ್ದ, ಮಂಚದ ಪಕ್ಕದಲ್ಲಿದ್ದ ಖುರ್ಚಿಯನ್ನು ಪ್ರಯಾಸಪಟ್ಟು ಎಳೆದು ಕುಳಿತುಕೊಂಡ. ಖೇದವೆನಿಸಿತು. ಗಾಂಧಿ ಏನೇ ಮಾಡಿದ್ದರೂ ಪಾಪ ಜೀವ ತನಗಾಗಿ ಏನೂ ಮಾಡಿಕೊಳ್ಳಲಿಲ್ಲ. ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಲೆಕ್ಕವಿಲ್ಲದಷ್ಟು ಬಾರಿ ಒಂದು ಹನಿ ನೀರೂ ಕುಡಿಯದೆ ಉಪವಾಸ ಕುಳಿತುಕೊಂಡಿದ್ದ ಹಾಗೂ ಯಾವುದೇ ಪ್ರತಿಫಲವನ್ನು ಬಯಸಿರಲಿಲ್ಲ. ಸಾಕಷ್ಟು ವಯಸ್ಸಾಗಿದೆ. ದೇಹ ಮುದಿ ಬಿದ್ದಿದೆ, ಹಲ್ಲುಗಳು ಉದುರಿವೆ, ತನು ಬಾಗಿದೆ. ಚರ್ಮ ಸುಕ್ಕುಗಟ್ಟಿದೆ. ಒಂದು ಕ್ಷಣ ಸಹಾನುಭೂತಿ ವ್ಯಕ್ತವಾಯಿತು. ಅದರ ಹಿಂದೆಯೇ ಕಷ್ಟ ಪಟ್ಟು ಮನಸ್ಸನ್ನು ಕಲ್ಲಾಗಿಸಿಕೊಂಡೆ.

ಕುಳಿತ ನಂತರ ನಿಧಾನ ಉಸಿರು ಬಿಟ್ಟು ಸಾವಕಾಶವಾಗಿ “ಹೇಳು ಮಗು, ನಿನ್ನಂತೆ ಇನ್ನೂ ಅನೇಕರಿಗೆ ನನ್ನ ಬಗೆಗೆ ಅಗಣಿತ ಸಂಶಯಗಳು ಕಾಡಿವೆ, ಕಾಡುತ್ತಲೇ ಇವೆ, ಮುಂದೆಯೂ ಕಾಡುತ್ತಲೇ ಇರುತ್ತವೆ. ನನಗೂ ನನ್ನ ನಿರ್ಧಾರಗಳನ್ನು, ಧ್ಯೇಯ-ಸಿದ್ದಾಂತ ಹಾಗೂ ವೈಚಾರಿಕತೆಯ ನಿಲುವನ್ನು ಸಮರ್ಥಿಸಿಕೊಳ್ಳುವ ಇಂತಹ ಅವಕಾಶ ದೊರಕುವುದು ವಿರಳ. ನಿನ್ನ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸಲು ಸಿದ್ದ. ನನಗೆ ಯಾವ ಹಿಂಜರಿಕೆಯೂ ಇಲ್ಲ, ಭಯವೂ ಇಲ್ಲ, ಲಜ್ಜೆಯೂ ಇಲ್ಲ. ಪ್ರಾರಂಭಿಸು.”

ಗಾಂಧಿಯ ಒಪ್ಪಿಗೆ ದೊರೆತ ಸಂಭ್ರಮದಲ್ಲಿ ಒಂದೇ ಉಸಿರಿನಲ್ಲಿ ಆರಂಭಿಸಿಬಿಟ್ಟೆ. “ಸ್ವಾತಂತ್ರ್ಯ ಹೋರಾಟ ನಿನ್ನ ಕೈ ಮುಷ್ಠಿಯಲ್ಲಿ ಉಳಿಯಬೇಕೆಂದು ಏಕೆ ಬಯಸಿದೆ ನೀನು? ಹೋರಾಟದ ರೂಪುರೇಷೆ ನಿನ್ನ ಸಾಬರಮತಿ ಆಶ್ರಮದಲ್ಲಿಯೇ ನಿರ್ಧರಿತವಾಗಬೇಕು, ಹೋರಾಟಗಾರರು ನಿನ್ನ ಹಾದಿಯಲ್ಲಿಯೇ ಸಾಗಬೇಕು, ನಿನ್ನ ಮಾತೆ ಅಂತಿಮವಾಗಬೇಕು ಎಂದು ನೀನೇಕೆ ಅಪೇಕ್ಷಿಸುತ್ತಿದ್ದೆ? ಆಮೆಲೆ… ” ಇನ್ನೂ ನನ್ನ ಪ್ರಶ್ನೆಗಳು ಬಾಕಿಯಿತ್ತು. ಗಾಂಧಿ ಮುಗುಳುನಗುತ್ತಾ ತಲೆಯಾಡಿಸಿ ಕೈ ಎತ್ತಿ ನಿಲ್ಲಿಸುವಂತೆ ಸೂಚಿಸಿದ. ನಾನು ನಿಲ್ಲಿಸಿದೆ.

“ಅರೆ ಬಚ್ಚೆ, ಇತನಾ ಜಲ್ದಿ ಕ್ಯೂ? ನೀನಿಷ್ಟು ಅವಸರಿಸಿದರೆ ನನಗೆ ಉತ್ತರಿಸಲು ಕಷ್ಟವಾಗುತ್ತದೆ. ಒಂದು ವೇಳೆ ಉತ್ತರಿಸಿದರೂ ಅದು ನಿನಗೆ ಅರ್ಥವಾಗುವುದಿಲ್ಲ. ಕೊಂಚ ನಿಧಾನಿಸು. ಸಾವಕಾಶವಾಗಿ ಒಂದೊಂದಾಗಿ ಪ್ರಶ್ನೆಗಳನ್ನು ಕೇಳು. ನನಗೆ ಗೊತ್ತಿದೆ ನೀನು ಈ ಇಡೀ ದಿನ ನನಗೆ ಕೇಳಬೇಕಾದ ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡು ಪೂರ್ವತಯಾರಿಯನ್ನೂ ಮಾಡಿಕೊಂಡಿದ್ದೀಯ.” ನಗುತ್ತಲೆ ಗಾಂಧಿ ಹೇಳಿದ.

ಸತ್ತವರು ದೇವರಾಗುತ್ತಾರಂತೆ. ದೇವರಿಗೆ ಮಾತ್ರ ಮನುಷ್ಯರ ಮನಸ್ಸು ಅರ್ಥವಾಗುತ್ತದೆ. ಈ ಗಾಂಧಿಯೂ ದೇವರಾಗಿರಬಹುದೇ? ತಕ್ಷಣ ಆಲೋಚನೆ ಬಂದಿತಾದರೂ ಹಿಂದೆಯೇ ನಗುವೂ ಬಂದಿತು.

ಅರೆನಿಮಿಷ ಸುಮ್ಮನಿದ್ದ ಗಾಂಧಿ ಉತ್ತರಿಸತೊಡಗಿದ. “ಮೊದಲಿಗೆ ನಿನಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕಿದೆ. ನಾನು ಅಹಿಂಸಾ ಮಾರ್ಗ ಹಾಗೂ ಸತ್ಯಾಗ್ರಹದಲ್ಲಿ ನಂಬಿಕೆಯಿಟ್ಟವನು. ನನ್ನ ದಾರಿ ಅದಾಗಿತ್ತು. ಹಿಂಸೆಗಿಂತ ಶಾಂತಿ, ಸಹನೆ ಹಾಗೂ ವಿವೇಕ ಉತ್ತಮ ಎಂದು ಸದಾ ನನ್ನ ಮಾತಿನಲ್ಲಿ ಹೇಳುತ್ತಿದ್ದೆ. ಪ್ರತಿಭಟನೆ, ಹರತಾಳಗಳು ಶಾಂತಿಯುತವಾಗಿ ಸಾಗಬೇಕು ಎನ್ನುವುದು ನನ್ನ ಮನೋಭಿಲಾಷೆಯಾಗಿತ್ತು ಅಷ್ಟೆ. ನಾನು, ಗುರುದೇವ ರವೀಂದ್ರನಾಥ ಟ್ಯಾಗೋರ್, ವಿವೇಕಾನಂದರು ಸಮಕಾಲೀನರು ಎನ್ನುವುದು ನಿನಗೆ ತಿಳಿದಿರಬಹುದು. ನಮ್ಮ ಮೂವರ ದೃಷ್ಠಿಕೋನವೂ ಒಂದೇ ಆಗಿತ್ತು. ವಿಶ್ವದ ಸರ್ವ ಮಾನವರಲ್ಲಿಯೂ ಮಾನವತೆಯನ್ನು ಮೂಲಭಾವವನ್ನು ಹುಟ್ಟುಹಾಕಬೇಕು ಎಂದು ನಾವು ಬಯಸಿದ್ದೆವು. ಪಾಶ್ಚಿಮಾತ್ಯ ಭಾಗದ ಕೆಲವು ಮೇಧಾವಿಗಳ ಅಭಿಪ್ರಾಯವೂ ಇದೇ ಆಗಿತ್ತು. ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟಿನ್, ಸುಪ್ರಸಿದ್ದ ನಟ ಚಾರ್ಲಿ ಸ್ಪೆನ್ಸರ್ ಚಾಪ್ಲಿನ್, ಇನ್ನೂ ಅನೇಕರಿದ್ದರು. ಅವರೆಲ್ಲರ ಮತ್ತು ನನ್ನ ಮಧ್ಯೆ ಉತ್ತಮ ಸಂಬಂಧವಿತ್ತು ಎನ್ನುವ ಹಿಂದೆ ಇದ್ದ ಕಾರಣ ನನ್ನ ಅಹಿಂಸಾತ್ಮಕ ಹಾಗೂ ಶಾಂತಿಪ್ರಧಾನ ಧೋರಣೆಯೇ ಆಗಿತ್ತು. ನಾನು ನನ್ನ ಹೋರಾಟದ ಬದುಕಿನಲ್ಲಿ ಎಂದಿಗೂ ಯಾರೂ ನನ್ನ ಹಾದಿಯಲ್ಲೆ ಸಾಗಬೇಕು ಎಂದು ಬಯಸಿರಲಿಲ್ಲ. ನನ್ನನ್ನು ಒಪ್ಪಲೇಬೇಕು ಎಂದೂ ನಿರೀಕ್ಷಿಸಿರಲಿಲ್ಲ. ಆದರೆ ಹೋರಾಟಗಾರರು ಯಾರೇ ಆಗಿರಲಿ ಅವರ ಮಾರ್ಗಗಳು ಯಾವುದೇ ಆಗಿರಲಿ ಅವರ ಪ್ರಥಮ ಆದ್ಯತೆ ಶಾಂತಿ, ಸಂಯಮ ಹಾಗೂ ಅಹಿಂಸೆಯಾಗಿರಬೇಕು ಎನ್ನುವುದು ನನಗಿದ್ದ ಆಸೆಯಾಗಿತ್ತು.”

“ಸರಿ; ಹಾಗಿದ್ದರೆ ನೀನು ಸುಭಾಷ್ ಬಾಬುವಿನ ವಿರುದ್ದ ಹೇಳಿಕೆಗಳನ್ನೇಕೆ ನೀಡುತ್ತಿದ್ದೆ. ಬೊಸ್‌ರ ಕಾರ್ಯಾಚರಣೆಯ ವಿರುದ್ದ ಹರಿಜನ ಪತ್ರಿಕೆಯಲ್ಲಿ ಸಂಪಾದಕೀಯ ಏಕೆ ಬರೆಯುತ್ತಿದ್ದೆ?” ನಾನು ಸಮಾಧಾನದಲ್ಲೆ ಕೇಳಿದೆ.

“ಮಗು. ಇತಿಹಾಸ ಎನ್ನುವುದು ಇದೆಯಲ್ಲ ಅದು ಯಾವತ್ತಿಗೂ ಅರ್ಥವಾಗದ ಸಂಕೀರ್ಣ ದಾಖಲೆಗಳ ಸಮೂಹ. ನೀನು ಓದುವುದು ಒಂದಾದರೆ ಅದು ಅರ್ಥವಾಗುವ ಬಗೆ ಇನ್ನೊಂದು ತರ. ಇದರ ನಡುವೆ ಜರುಗಿರುವ ಇತಿಹಾಸವೇ ಬೇರೆಯದ್ದಾಗಿರುತ್ತದೆ. ಅದನ್ನು ಬರೆಯುವವರು ಒಂದಷ್ಟು ತಿರುಚುತ್ತಾರೆ. ಆಮೇಲೆ ಆ ತಿರುಚಲ್ಪಡುವ ಮೂಲ ಇತಿಹಾಸವನ್ನು ಬರೆಯುವಾತ ತನ್ನ ಸ್ವಂತಿಕೆಯನ್ನು ಬಳಸಿಕೊಂಡು ಇನ್ನೊಂದಷ್ಟು ತಿರುಚುತ್ತಾನೆ. ಈಗ ನೀನು ಅರ್ಥಮಾಡಿಕೊಂಡಿರುವ ಹಾಗೂ ಚಿಂತಿಸುತ್ತಿರುವ ದಾಟಿಯಿದೆಯಲ್ಲ ಅದು ಮೂಲ ಇತಿಹಾಸದಿಂದ ಬಹುಪಾಲು ರೂಪಾಂತರಗೊಂಡು ಮಾರ್ಪಾಡಾಗಿರುವ ಸರಕು ಅಷ್ಟೆ. Mahatma-artಇದರ ಅಷ್ಟೂ ಕರ್ಮ ಹಾಗೂ ಶ್ರೇಯ ನಿಮ್ಮ ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳ ಮಹಾ ಮೇಧಾವಿ ಪ್ರೊಫೆಸರ್‌ಗಳಿಗೆ ಸಲ್ಲಬೇಕು. ನೋಡು ಸತ್ಯ ಹೇಳುತ್ತಿದ್ದೇನೆ, ಮಾತೃಭೂಮಿಯ ಬಿಡುಗಡೆಗಾಗಿ ಸುಭಾಷ್ ಬಾಬುವಿನ ಆಂತರಿಕ ತುಡಿತ ಇತ್ತಲ್ಲ ಅದನ್ನು ಒಂದಲ್ಲ ನೂರು ಬಾರಿ ಪ್ರಾಮಾಣಿಕವಾಗಿ ಮೆಚ್ಚಿದ್ದೇನೆ. ಬಾ ಬಳಿ ಈ ಬಗ್ಗೆ ಅನೇಕ ಬಾರಿ ಪ್ರಸ್ತಾಪಿಸಿದ್ದೇನೆ. ನಮ್ಮ ಸಾಬರಮತಿ ಆಶ್ರಮ ಇತ್ತಲ್ಲ, ಅಲ್ಲಿ ವಿದೇಶಿ ಪದ್ದತಿಗಳಿಗೆ ಅವಕಾಶವಿರಲಿಲ್ಲ. ವಿದೇಶಿ ಪದ್ದತಿಗಳೆಂದರೆ ಧೂಮಪಾನ, ಮಧ್ಯಪಾನ, ಚಹಾ ಸೇವನೆ, ವಿದೇಶಿ ವಸ್ತ್ರಗಳು-ಉಡುಗೆ ತೊಡುಗೆ ಇತ್ಯಾಧಿ. ನಮ್ಮ ಆಶ್ರಮದಲ್ಲಿ ಕೆಲವು ಪದ್ದತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿತ್ತು. ನೀವು ನನ್ನ ಹಿಂಬಾಲಕರು, ಅನುಯಾಯಿಗಳೆಂದು ಕರೆಯುತ್ತೀರಲ್ಲ ಅಂತಹ ರಾಜಾಜಿ, ಸರ್ದಾರ್ ಪಟೇಲರು, ಆಚಾರ್ಯ ಕೃಪಲಾನಿ, ಜವಾಹರ ಇವರಿಗೂ ಈ ನಿಯಮಗಳು ಅನ್ವಯವಾಗುತ್ತಿತ್ತು. ಜವಾಹರನಂತೂ ಆಶ್ರಮಕ್ಕೆ ಬರಲು ಪ್ರಾರಂಭಿಸಿದ ಮೇಲೆಯೇ ಖಾದಿ ವಸ್ತ್ರಗಳನ್ನು ತೊಡಲು ಶುರು ಮಾಡಿದ್ದ. ಅಂತಹದರಲ್ಲಿ ಈ ಎಲ್ಲಾ ನಿಯಮಗಳನ್ನು ನಾನು ಒಬ್ಬ ವ್ಯಕ್ತಿಗೆ ಮಾತ್ರ ಅನ್ವಯಿಸಿರಲಿಲ್ಲ. ಸಡಿಲಿಸಿದ್ದೆ. ಮತ್ತು ಆ ವ್ಯಕ್ತಿ ಅಷ್ಟೇನೂ ನನ್ನ ಆತ್ಮೀಯ ವಲಯದಲ್ಲಯೂ ಇರಲಿಲ್ಲ. ಅನುಭವದಲ್ಲಿ ಹಾಗೂ ವಯಸ್ಸಿನಲ್ಲಿ ಆತ ನನಗಿಂತ ಚಿಕ್ಕವನು. ಆ ವ್ಯಕ್ತಿ ಯಾರು ಗೊತ್ತೆ? ಬಂಗಾಳಿ ಸುಭಾಷ್ ಚಂದ್ರ ಬೋಸ್. ಸಾಬರಮತಿಗೆ ಆತ ಮೊದಮೊದಲು ವಿದೇಶಿ ಸೂಟು ತೊಟ್ಟಿಕೊಂಡು ಬರುತ್ತಿದ್ದಾಗಲೂ ನನಗೆ ಇರಿಸುಮುರಿಸು ಆಗಿರಲಿಲ್ಲ. ಇಂಗ್ಲೆಂಡಿನಲ್ಲಿ ಐಸಿಎಸ್ ಕಲಿಯುತ್ತಿದ್ದಾಗ ಸುಭಾಷ್ ಚಹಾ ಸೇವನೆಯ ಅಭ್ಯಾಸ ಕಲಿತಿದ್ದು ನನಗೆ ತಿಳಿದಿತ್ತು. ಬಾ, ಹಾಗಾಗಿ ಆಶ್ರಮವಾಸಿಗಳಿಗೆ ತಿಳಿಯದಂತೆ ಸುಭಾಷ್ ಬಾಬುವಿಗೆ ಚಹಾ ಮಾಡಿಕೊಡುತ್ತಿದ್ದರು. ಇದು ನನ್ನ ಗಮನಕ್ಕೂ ಬಂದಿತ್ತು. ಆದರೂ ನನಗದು ಸಹ್ಯವಾಗಿತ್ತು. ಅದಕ್ಕೆ ಕಾರಣ ಸುಭಾಷ್ ಬಾಬೂವಿನ ಧ್ಯೇಯನಿಷ್ಠ ಹಾಗೂ ರಾಷ್ಟ್ರಭಕ್ತಿಯ ನಿಸ್ವಾರ್ಥ ವ್ಯಕ್ತಿತ್ವ. ನಾನು ಸುಭಾಷರು ಅನುಸರಿಸಿದ ಮಾರ್ಗವನ್ನು ತಪ್ಪು ಎಂದು ಮಾತ್ರ ಹೇಳಿದ್ದೆ. ಒಂದರ್ಥದಲ್ಲಿ ಅದು ದುಡುಕಿನ ಮಾರ್ಗವೇ ಹೊರತು ತಪ್ಪಾಗಿರಲಿಲ್ಲ. ಹಾಗಾಗಿ ಅದನ್ನು ತಪ್ಪು ಎಂದು ಖಡಾಖಂಡಿತವಾಗಿ ಹೇಳಲು ಈಗಲೂ ಹಿಂಜರಿಯುತ್ತೇನೆ. ಸುಭಾಷರ ಆಜಾದ್ ಹಿಂದ್ ಫೌಜ್ ಸೈನ್ಯದ ಕಾರ್ಯಾಚರಣೆಯಿಂದ ಸಾವು ನೋವುಗಳಾಗುವ ಸಾಧ್ಯತೆಯಿತ್ತು. ಹಾಗಾಗಿ ಶಾಂತಿ ಮಾರ್ಗದಿಂದ ಸ್ವಾತಂತ್ರ್ಯಕ್ಕೆ ಆಗ್ರಹ ಪಡಿಸಬೇಕು ಎನ್ನುವ ವಾದ ನನ್ನದಾಗಿತ್ತು. ಇದು ನಾನು ಹರಿಜನ ಪತ್ರಿಕೆಯಲ್ಲಿ ಬರೆದಿದ್ದ ಸಂಪಾದಕೀಯದ ಸಾರಾಂಶ. ಇದನ್ನು ಕಾಲಾಂತರದಲ್ಲಿ ತಪ್ಪಾಗಿ ಅಧ್ಯಯನಿಸಿ, ವಿಮರ್ಶಿಸಿ, ಅರ್ಥೈಸಿಕೊಳ್ಳಲಾಯಿತೇ ಹೊರತು ನನಗೆ ಬೋಸರ ಬಗ್ಗೆ ಯಾವುದೇ ಕಹಿ ಇರಲೇ ಇಲ್ಲ.” ಮಾತಿನಲ್ಲಿ ಎಲ್ಲಿಯೂ ತಡವರಿಸದೆ, ಉದ್ವೇಗಗೊಳ್ಳದೆ ಗಾಂಧಿ ಮಾತನಾಡಿದ್ದ.

“ಆಯಿತು ಬಾಪೂ, ಸುಭಾಷರ ವಿಚಾರ ಬಿಡೋಣ. ನಿನಗೆ ನಿನ್ನ ಉತ್ತರಾಧಿಕಾರವನ್ನು ನೀಡಲು ಎರಡು ಆಯ್ಕೆಗಳಿದ್ದವು. ಮೊದಲೆಯದು ಸಮರ್ಥ ಸರ್ದಾರ್ ಪಟೇಲ್ ಹಾಗೂ ಎರಡನೆಯದು ಪಂಡಿತ್ ನೆಹರೂ. ನೆಹರೂರವರಿಗೆ ಹೋಲಿಕೆ ಮಾಡಿದಲ್ಲಿ ಪಟೇಲರು ಸಮರ್ಥರು ಎನ್ನುವುದನ್ನು ನೀನು ಒಪ್ಪಿಕೊಳ್ಳಲೇಬೇಕು. ಆದಾಗ್ಯೂ ನೀನು ಪಟೇಲರನ್ನು ದೂರವಿಟ್ಟು ನೆಹರೂರನ್ನೆ ಹೆಚ್ಚು ಓಲೈಕೆ ಮಾಡಿದ್ದೇಕೆ?” ಬಾಣ ಬಿಟ್ಟಂತೆ ಪ್ರಶ್ನಿಸಿದೆ ಎನ್ನುವ ಅಹಂಕಾರ ಈಗ ನನ್ನದಾಯಿತು.

ಮೊಗದಲ್ಲಿನ ನಸುನಗೆಯನ್ನು ಜೋಪಾನವಾಗಿಟ್ಟುಕೊಂಡೆ ಗಾಂಧಿ ಉತ್ತರಿಸಿದ, “ಇದು ನನ್ನ ಆಯ್ಕೆಯೇನಲ್ಲ. ನಾನು ಕಾಂಗ್ರೆಸ್ ಪಕ್ಷವನ್ನು ಕಟ್ಟಲಿಲ್ಲ. ಉತ್ತರಾಧಿಕಾರವನ್ನು ನೀಡಲು ನಾನು ರಾಜನೂ ಅಲ್ಲ. ನನಗೆ ರಾಜಕಾರಣವೂ ಬೇಕಿರಲಿಲ್ಲ. ನಾನೊಬ್ಬ ಸ್ವಾತಂತ್ರ್ಯದ ಪರವಾಗಿ ವಾದಿಸುವ, ಅದಕ್ಕಾಗಿ ಶತಾಯಗತಾಯ ಹೊರಾಟ ಮಾಡುವ ಸಾಮಾನ್ಯ ಹೋರಾಟಗಾರನಾಗಿದ್ದೆ. ಮೊತಿಲಾಲರು ಬಂದು ಜವಾಹರನಿಗೆ ಹೋರಾಟದ ತಿಳುವಳಿಕೆ ಮತ್ತು ಸಂಘಟನೆಯ ಜವಬ್ದಾರಿಯನ್ನು ನೀಡಲು ಕೋರಿಕೊಂಡರು. ತಾರುಣ್ಯದಲ್ಲಿದ್ದ ಜವಾಹರನಿಗೆ ರಾಷ್ಟ್ರದ ಹೊಣೆಗಾರಿಕೆಯ ಪಾಠ ಹೇಳಿಕೊಡುವುದಾಗಿ ನಾನು ಅವರಿಗೆ ಮಾತು ಕೊಟ್ಟೆ. gandhi-artಕೊಟ್ಟ ಮಾತಿನಂತೆಯೇ ನನ್ನ ಆಂದೋಲನಗಳಿಗೆ ಜವಾಹರರನ್ನು ಕರೆದೊಯ್ಯುತ್ತಿದ್ದೆ. ಬಿಡುವಿನ ವೇಳೆಯಲ್ಲಿ ಸ್ವಾತಂತ್ರ್ಯದ ಹೋರಾಟ ನೀತಿಗಳು ಹಾಗೂ ಕಾರ್ಯಚಟುವಟಿಕೆಗಳ ಕುರಿತಾಗಿ ಆಶ್ರಮದಲ್ಲಿ ಒಟ್ಟಿಗೆ ಕುಳಿತು ಚರ್ಚಿಸಿದ್ದಿದೆ. ಆ ವಿಚಾರದಲ್ಲಿ ನನಗೆ ಪಟೇಲರು ಒಂದೇ ಜವಾಹರನೂ ಒಂದೇ ಹಾಗೂ ದೇಶದ ಅಸಂಖ್ಯ ಸಾಮಾನ್ಯ ನಾಗರೀಕರೂ ಒಂದೇ. ವಿದೇಶದಲ್ಲಿ ಓದಿದ್ದ ಜವಾಹರ ಆಂಗ್ಲರೊಂದಿಗೆ ಆಂಗ್ಲರಷ್ಟೆ ಸಮರ್ಥವಾಗಿ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದ. ನನಗೆ ಇದರಿಂದ ಅನೇಕ ಕಡೆ ಅನುಕೂಲವೂ ಆಗಿತ್ತು. ಆದರೆ ಸ್ವಾತಂತ್ರ್ಯ ನಂತರದ ಭಾರತದ ರಾಜಕಾರಣ ಜವಾಹರ್ ಲಾಲ್ ನೆಹರೂರವರನ್ನು ಆರಿಸಿತು ಪಟೇಲರನ್ನು ನೇಪಥ್ಯಕ್ಕೆ ಸರಿಸಿತು ಎಂದರೆ ಅದಕ್ಕೆ ಹೇಗೆ ನಾನು ಕಾರಣನಾಗುತ್ತೇನೆ? ಇಷ್ಟಕ್ಕೂ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೇಸ್ಸನ್ನು ಬರ್ಕಾಸ್ತುಗೊಳಿಸಬೇಕು ಎಂದು ನಾನೇ ಬಯಸಿದ್ದೆ ಎನ್ನುವುದು ನಿನಗೆ ಗೊತ್ತಿದೆಯಾ? ಇದೆಲ್ಲವೂ ಒಂದು ವ್ಯವಸ್ಥಿತ ದಾರಿ ತಪ್ಪಿಸುವ ತಂತ್ರವಷ್ಟೆ. ಅದನ್ನು ಯಾರು ಮಾಡುತ್ತಾರೆ, ಏಕೆ ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಇದರಿಂದ ಇತಿಹಾಸದ ಸಾರ ಬದಲಾಗುತ್ತದೆ ಎನ್ನುವುದಷ್ಟೆ ನನ್ನ ವಾದ.”

ಗಾಂಧಿಯ ಮಾತಿನ ಮೋಡಿಗೆ ನಿಧಾನವಾಗಿ ನಾನು ಆಕರ್ಷಿತಗೊಳ್ಳುತ್ತಿದ್ದೆ, ಆದರೆ ಕೆಲವು ದ್ವಂದ್ವಗಳನ್ನು ಪರಿಹರಿಸಿಕೊಳಲೇಬೇಕಿತ್ತು. ಹಾಗಾಗಿ ಬಿಗುಮಾನ ಬಿಡದೆ ಪ್ರಶ್ನೆಗಳನ್ನು ಮುಂದುವರಿಸಿದೆ. “ಅದೂ ಆಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಯಕಃಶ್ಚಿತ್ ಚೌರಿಚೌರಾ ಪ್ರಕರಣವನ್ನು ನೆಪವನ್ನಾಗಿಟ್ಟುಕೊಂಡು ನೀನು ಅಸಹಕಾರ ಚಳವಳಿಯನ್ನು ಅರ್ಧದಲ್ಲಿ ಕೈಬಿಟ್ಟೆದ್ದೇಕೆ? ಇದು ಸರ್ವಾಧಿಕಾರದ ಅಥವಾ ಏಕಪ್ರಭುತ್ವದ ಧೋರಣೆಯಲ್ಲವೇ? ನೀನು ಹಾಗೆ ಮಾಡಿದ್ದರಿಂದ ನಿನ್ನ ಒಂದು ಕರೆಗೆ ಓಗೊಟ್ಟು ಬೀದಿಗಿಳಿದಿದ್ದ ಭಾರತೀಯರನ್ನು ನೀರಸವಾಗಿ ನಿರಾಸೆಗೆ ಒಳಪಡಿಸಿದ್ದು ತಪ್ಪು ಅಲ್ಲವೆ?”

“ನೋಡು ಮಗು ನೀನು ತಾರುಣ್ಯದಲ್ಲಿದ್ದೀಯ, ಹಾಗಾಗಿ ನಿನಗೆ ಈ ಸಂಗತಿ ಅತಿರೇಕ ಎನ್ನಿಸಬಹುದು. ಆದರೆ ನಾನು ದಕ್ಷಿಣ ಆಫ್ರಿಕದಿಂದ ಬರುವಾಗಲೇ ಈ ಹೋರಾಟಗಳ ಬಗ್ಗೆ ಒಂದು ಮೂರ್ತ ರೂಪ ಹಾಕಿಕೊಂಡು ಬಂದಿದ್ದೆ. ಮೊದಲೆ ಹೇಳುವಂತೆ ನನಗೆ ಹಿಂಸೆ ಎಂದರೆ ವರ್ಜ್ಯ. ಚೌರಿಚೌರಾದಲ್ಲಿ ಪೋಲೀಸ್ ಠಾಣೆಗೆ ಬೆಂಕಿಯಿಡುವ ಮೂಲಕ ಜನ ಹಿಂಸೆಗಿಳಿದರು. ಅದೇ ಸಂದರ್ಭದಲ್ಲಿ ನಾನು ಚಳವಳಿ ಮುಂದುವರೆಸಿದ್ದರೆ ಅದು ಒಂದರ್ಥದಲ್ಲಿ ಆ ಬೆಂಕಿಯಿಟ್ಟ ಮಂದಿಗೆ ನನ್ನ ಬೆಂಬಲವಿದೆ ಎನ್ನುವಂತಾಗುತ್ತಿತ್ತು. ಮುಂದೆ ಅವರು ಇನ್ನು ಹೆಚ್ಚಿನ ಹಾನಿ ಮಾಡುವವರಿದ್ದರು. ಹಾಗೆ ನಾನು ಚಳುವಳಿಯನ್ನು ಕೈಬಿಡುವ ಮೂಲಕ ನನ್ನ ಅಸಮಧಾನವನ್ನು ನೇರವಾಗಿ ವ್ಯೆಕ್ತಪಡಿಸಿದಂತಾಯಿತಲ್ಲ. ಆನಂತರದ ದಿನಗಳಲ್ಲಿ ಆ ಪ್ರಮಾಣದ ಹಿಂಸೆ ಎಲ್ಲಾದರೂ ಕಂಡುಬಂದಿತಾ? ಒಂದು ವೇಳೆ ಅಲ್ಲಲ್ಲಿ ನಡೆದರೂ ನಾನು ಅದನ್ನೂ ಹರಿಜನದಲ್ಲಿ ಉಗ್ರವಾಗಿ ವಿರೊಧಿಸುತ್ತಿದ್ದೆ ಅಲ್ಲವೆ? ಈ ದೃಷ್ಠಿಯಲ್ಲಿ ನೀನೇಕೆ ಯೋಚನೆ ಮಾಡಲಾರೆ?”

“ಅಲ್ಲ ಬಾಪೂ, ಜನರಲ್ ಡಯರ್ ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ನರಮೇಧ ಮಾಡಿದ್ದು ಹಿಂಸೆಯಲ್ಲವೇ? ಅವರು ಹಿಂಸಾ ದಾರಿ ಹಿಡಿದಾಗ ನೀನು ಅಹಿಂಸೆ ಅಹಿಂಸೆ ಎನ್ನುತ್ತಿದ್ದರೆ ಅದಕ್ಕೆ ಅರ್ಥವಿತ್ತಾ?” ಈ ಬಾರಿ ನನಗೆ ಉದ್ವೇಗ ತಡೆಯಲಾಗಲಿಲ್ಲ.

“ಆಂಗ್ಲರ ಆ ಕೃತ್ಯವನ್ನು ನಾನೆಲ್ಲಾದರೂ ಸಮರ್ಥಿಸಿದ್ದೆನಾ? ಆ ಪ್ರಕರಣವನ್ನು ನನ್ನ ಎಲ್ಲಾ ಸಾರ್ವಜನಿಕ ಭಾಷಣಗಳಲ್ಲಿ ಖಂಡಿಸಿದ್ದೇನೆ. ಹರಿಜನ, ಯಂಗ್ ಇಂಡಿಯಾದಲ್ಲಿ ಕಟುವಾಗಿ ಟೀಕಿಸಿದ್ದೇನೆ. ನನ್ನ ದೇಶವಾಸಿಗಳು ಹಿಂಸಾಚಾರದಲ್ಲಿ ತೊಡಗುವುದು ನನಗೆ ಇಷ್ಟವಿಲ್ಲ ಎಂದಷ್ಟೇ ಹೇಳಲು ಹೊರಟೆ. ನೋಡು ಸತ್ಯ, ನ್ಯಾಯದ ಮಾರ್ಗದಲ್ಲಿ ಎಂದಿಗೂ ಜಯವಿದೆ. ಇದನ್ನೆ ನಿಜವಾದ ಧರ್ಮ ಎನ್ನುತ್ತಾರೆ. ಇದನ್ನು ನಾನು ಹೇಳಿದ್ದು ಎಂದುಕೊಳ್ಳಬೇಡ. ನೀನು ಪುರಾಣಗಳನ್ನು ನಂಬುತ್ತೀಯಾ ಎಂದಾದರೆ ಇದನ್ನು ಹೇಳಿದ್ದು ಶ್ರೀ ರಾಮಚಂದ್ರ ಪ್ರಭು ಎಂದಿಟ್ಟುಕೊ. ಅದೇ ಕಾರಣಕ್ಕೆ ನಾನು ಹಿಂದೂಸ್ತಾನವನ್ನು ರಾಮರಾಜ್ಯವನ್ನಾಗಿಸಬೇಕು ಎನ್ನುವ ಕನಸು ಕಂಡಿದ್ದೆ. ಹಿಂಸೆಯಿಂದ ವ್ಯಥಾ ಸಾವುನೋವುಗಳಾಗುತ್ತವೆ. ಇದರಿಂದಲೂ ಮುಕ್ತಿ ಸಾಧ್ಯವಿದೆ. ಆದರೆ ಕೊನೆಗೆ ಸ್ವಾತಂತ್ರ್ಯದ ನಂತರ ನಾವು ಈ ಹಿಂಸಾಮಾರ್ಗದಿಂದ ಸ್ವಾತಂತ್ರ್ಯ ಗಳಿಸಿಕೊಂಡೆವು ಎನ್ನುವುದನ್ನು ಇತಿಹಾಸ ದಾಖಲಿಸಿಕೊಳ್ಳುತ್ತದೆ. ಇವತ್ತಿನ ದಿವಸ ನೀನು ಬದುಕುತ್ತಿರುವ ಭಾರತಕ್ಕೆ ಅಂತರ್ರಾಷ್ಟ್ರೀಯವಾಗಿ ಶಾಂತಿಗೆ ಆದ್ಯತೆ ನೀಡುವ ರಾಷ್ಟ್ರ ಎಂದು ಗೌರವ ನೀಡಲಾಗುತ್ತಿದೆ. ಅದಕ್ಕೆ ಕಾರಣ ನಾನು ಅನುಸರಿಸಿದ್ದ ಅಹಿಂಸಾ ಸತ್ಯಾಗ್ರಹ ಎನ್ನುವುದು ನನಗೆ ಸಮಾಧಾನ ತರುವ ವಿಷಯ. ನೀನು ನನ್ನ ಮೇಲಿನ ಕೋಪಕ್ಕೆ ಅದನ್ನು ಒಪ್ಪದಿದ್ದರೂ ಅದೇ ಸತ್ಯ.” ಅತ್ಯಂತ ಸ್ಪುಟವಾಗಿ ಹಾಗೂ ಆತ್ಮವಿಶ್ವಾಸದಿಂದ ಗಾಂಧಿ ಮಾತನಾಡುತ್ತಲೇ ಇದ್ದ.

ಅಸ್ಖಲಿತ ಹಿಂದಿ ಹಾಗೂ ಅಗತ್ಯಕ್ಕೆ ತಕ್ಕ ಉತ್ತಮ ಇಂಗ್ಲೀಷ್ ಬಳಸುತ್ತಿದ್ದ ಗಾಂಧಿಯ ಮಾತುಗಳು ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇದ್ದವು. ಆ ಹೊತ್ತಿಗಾಗಲೆ ನನಗೆ ಏನೋ ಕಾರಣರಹಿತ ತಳಮಳ ಪ್ರಾರಂಭವಾಗಿತ್ತು. ಗಾಂಧಿ ಸರಿಯಿದ್ದನೆ? ಎನ್ನುವ ಅನುಮಾನಗಳು ಮತ್ತೆ ಆಂತರ್ಯದಲ್ಲಿ ಹಳೆಯ ಮಾಮೂಲಿ ತರ್ಕ ಮತ್ತೆ ಕಾಣಿಸತೊಡಗಿತ್ತು. ಇನ್ನೊಂದು ಪ್ರಶ್ನೆಯನ್ನು ಕೇಳಿ ನಿರ್ಧಾರಕ್ಕೆ ಬರೋಣ ಎಂದು ಗಾಂಧಿಯತ್ತ ತಿರುಗಿದೆ. ಗಾಂಭೀರ್ಯದಿಂದ ಕುಳಿತಿದ್ದ ಆ ವದನದಲ್ಲಿ ಅದೇ ಮಂದಹಾಸ. ಸ್ವಲ್ಪವೂ ಮಾಸಿರಲಿಲ್ಲ.

“ಈ ಪ್ರಶ್ನೆ ನನ್ನನ್ನು ಅತಿಯಾಗಿ ಕಾಡುತ್ತಲೇ ಇದೆ ಬಾಪೂ, ದೇಶವಿಭಜನೆಯನ್ನು ಅತ್ಯುಗ್ರವಾಗಿ ವಿರೋಧಿಸಿದ್ದ ನೀನು, ಆನಂತರ ಪಾಕಿಸ್ತಾನ ರಚನೆಗೆ ಸಮ್ಮತಿಸಿದ್ದೇಕೆ? ಅದೂ ತಡವಾಗಿ. ಅಷ್ಟರಲ್ಲಾಗಲೆ ದೇಶದ ಮುಖ್ಯ ನಗರಗಳೆಲ್ಲ ಕೋಮುದಳ್ಳುರಿಯಿಂದ ಹೊತ್ತಿ ಉರಿದಿದ್ದವು. ಅನೇಕ ಹಿಂದೂ ಮುಸಲ್ಮಾನ ಕುಟುಂಬಗಳು ಬೀದಿಗೆ ಬಿದ್ದಿದ್ದವು. ಸಾವು ನೋವುಗಳಾಗಿದ್ದವು. ಇದಕ್ಕೆಲ್ಲಾ ಯಾರು ಹೊಣೆ? ನೀನೇ ಹೊಣೆಯೆಂದು ನಾನು ನಿನ್ನನ್ನು ಆಪಾದಿಸುತ್ತೇನೆ. ಪಾಕಿಸ್ತಾನಕ್ಕೆ ಆರ್ಥಿಕ ಸ್ವಾವಲಂಬನೆ ನೀಡಬೇಕು ಎಂದು ನೀನು ಉಪವಾಸ ಕುಳಿತೆಯಲ್ಲಾ ಅದು ತಪ್ಪಲ್ಲವೇ? ಅಷ್ಟೆಲ್ಲಾ ರಾದ್ಧಾಂತವಾದ ಮೇಲೆ ಒಪ್ಪಿಗೆ ನೀಡುವ ಬದಲು ಮೊದಲೇ ನೀಡಿದ್ದರೆ ಆ ಪ್ರಮಾಣದ ಹಿಂಸೆಯನ್ನು ನೀನು ತಡೆಯಬಹುದಿತ್ತಲ್ಲವೇ?” ಒಂದು ಸುದೀರ್ಘ ನಿಟ್ಟುಸಿರು ಅದಾಗೆ ಹೊರಬಂದಿತು.

ಆ ಪ್ರಶ್ನೆಯಿಂದ ಗಾಂಧಿ ಕೊಂಚ ವಿಚಲಿತನಾದಂತೆ ಕಂಡುಬಂದಿತು. ತುಸು ಗಂಭೀರ ಧ್ವನಿಯಿಂದ ಉತ್ತರಿಸತೊಡಗಿದ, “ಅದು ಈಗಲೂ ನನ್ನನ್ನು ಕಾಡುತ್ತಲೇ ಇದೆ. ಅದಕ್ಕೆ ಸತ್ಯವಾಗಿಯೂ ನಾನು ಕಾರಣನಲ್ಲ. ಬ್ಯಾರಿಸ್ಟರ್ ಮೊಹಮದ್ ಅಲಿ ಜಿನ್ನಾನೂ ಕಾರಣ ಎಂದು ಹೇಳಲಾರೆ. ಇದು ನಮ್ಮ ರಾಷ್ಟ್ರದ ನಿಜವಾದ ದುರಂತ. ಅಖಂಡ ಭಾರತ ಛಿದ್ರವಾಗುವುದನ್ನು ಓರ್ವ ದೇಶಭಕ್ತನಾಗಿ ನಾನು ಹೇಗೆ ನೋಡಿಕೊಂಡು ಸುಮ್ಮನಿರಲಿ. ಹಾಗಾಗೆ ಅದನ್ನು ವಿರೋಧಿಸಿದ್ದೆ. ವಿಭಜನೆ ಮಾಡುವುದಾದರೆ ನನ್ನ ಮೃತ ದೇಹದ ಮೇಲೆ ಮಾಡಿ ಎಂದು ಹೇಳಿದ್ದೆ. ಜಿನ್ನಾರನ್ನು ಒಪ್ಪಿಸಲು ಅನೇಕ ಬಾರಿ ಪ್ರಯತ್ನಿಸಿದ್ದೆ. ಇದೇ ಪ್ರಯತ್ನವನ್ನು ಸುಭಾಷ್ ಬಾಬೂ ಸಹ ಮಾಡಿದ್ದರು. ಆದರೆ ಆತ ಮೊಂಡ ತನ್ನ ಹಠ ಬಿಡಲೇ ಇಲ್ಲ. ನನಗೆ ಅಸಮಾಧಾನವಾಗಿತ್ತು, ನೋವಾಗಿತ್ತು. ಸ್ವಾತಂತ್ರ್ಯ ಗಳಿಸಿಕೊಳ್ಳುವ ಮೊದಲು ಅಣ್ಣ-ತಮ್ಮಂದಿರಂತೆ ಜೊತೆಯಿದ್ದ ಹಿಂದೂಗಳು ಮತ್ತು ಮುಸಲ್ಮಾನರು ಆನಂತರ ಕುರುಡು ವ್ಯಾಮೋಹಕ್ಕೆ ದಾಸರಾಗಿ ಬಡಿದಾಡಿಕೊಂಡರು. ಆಗ ನಾನು ಮುಸಲ್ಮಾನ ನಾಯಕರನ್ನೂ ಭೇಟಿಯಾಗಿದ್ದೆ, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೆ. ಹಿಂದೂಗಳಲ್ಲಿಯೂ ಅದೇ ಪ್ರಾರ್ಥನೆ ಮಾಡಿಕೊಂಡಿದ್ದೆ. ಆದರೆ ಪರಿಸ್ಥಿತಿ ಕೈ ಮೀರುವ ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ ನಾನು ಮಣಿಯಲೇ ಬೇಕಾಯಿತು. ಬಂಗಾಲದ ಅಸಲು ವಿಚಾರ ನಿನಗೆ ಗೊತ್ತಾ? ಓರ್ವ ಹಿಂದೂವಾಗಿಯೂ ನಾನು ಮುಸಲ್ಮಾನರ ಮನೆಯಲ್ಲಿ ಉಣ್ಣುತ್ತಿದ್ದೆ ಉಳಿದುಕೊಳ್ಳುತ್ತಿದ್ದೆ. ಆ ದಿನ ಬಂಗಾಲದಲ್ಲಿ ವಿಭಜನೆಯ ವಿಷಯ ಇಟ್ಟುಕೊಂಡು ಮುಸಲ್ಮಾನ ಬಾಂಧವರು ಹಿಂದೂಗಳ ವಿರುದ್ದ ದಂಗೆಯೆದ್ದಿದ್ದರು. ಪೂರ್ಣ ಬಂಗಾಲ ನರಕಸದೃಶ್ಯವಾಗಿತ್ತು. ಇನ್ನೂ ಹಿಂಸಾಚಾರವನ್ನು ಮುಂದುವರಿಸಿದರೆ ನಾನು ನನ್ನ ದೇಹದ ಅಷ್ಟೂ ರಕ್ತವನ್ನು ಹಿಂಡಿ-ದೇಹತ್ಯಾಗ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಸಿದ್ದರ ಪರಿಣಾಮವಾಗಿ ಮುಸಲ್ಮಾನರು ನನ್ನ ಮೇಲಿನ ಗೌರವದಿಂದ ಆ ದಿನ ಹಿಂಸಾಚಾರ ನಿಲ್ಲಿಸಿದರು. ಗಾಂಧಿಯೆಂಬ ಏಕಾಂಗಿ ಯೋಧನ ವಿನಃ ಬೇರೆ ಯಾವ ರಕ್ಷಣಾ ವ್ಯವಸ್ಥೆಯೂ ಆ ದಿನ ಹಿಂಸಾಚಾರ ತಡೆಯಲಿಲ್ಲ ಎನ್ನುವ ಸತ್ಯವನ್ನು ಹೇಳಿದರೆ ನಿನಗೆ ಅಹಂಕಾರವೆನಿಸುತ್ತದೆಯಾ? ನೀನು ಹಾಗೆಂದುಕೊಂಡರೂ ಇದು ಸತ್ಯ, ಹಾಗೂ ನನ್ನ ಸಮರ್ಥನೆಯಂತೆ ನನಗೆ ಸಿಕ್ಕಿದ್ದ ಆತ್ಮಸಮಾಧಾನ. ನಾನು ವಿಭಜನೆಗೆ ಒಪ್ಪಿಗೆ ನೀಡದಿದ್ದರೆ ದೇಶ ಹೊತ್ತಿ ಉರಿಯುತ್ತಿತ್ತು. ಅಂತಹ ಒಂದು ವ್ಯವಸ್ಥಿತ ಮನೆಹಾಳು ಯೋಜನೆಯನ್ನು ಬ್ರಿಟೀಶರು ಹೋಗುವ ಮುಂಚೆಯೇ ಮಾಡಿಟ್ಟು ಹೋಗಿದ್ದರು. ಸೌಹಾರ್ದಯುತವಾದ ಹಾಗೂ ನೆಮ್ಮದಿಯಾದ ಬೆಚ್ಚಗಿನ ಜೀವನ ನೆಡೆಸಲು ಪಾಕಿಸ್ತಾನ ಎನ್ನುವ ಸ್ವತಂತ್ರ್ಯ ರಾಷ್ಟ್ರಕ್ಕೆ ಆರ್ಥಿಕ ನೆರವು ಬೇಕಿತ್ತು. ಅದಕ್ಕಾಗಿ ನಾನು ಆಗ್ರಹಿಸಿದೆ ಅಷ್ಟೆ. ಹಾಗೆಂದ ಮಾತ್ರಕ್ಕೆ ನನ್ನನ್ನು ಒಂದು ಧರ್ಮದ ಪರವಾದ ನಿಲುವಿನವನು ಎಂದು ನೀನು ತೀರ್ಮಾನಿಸಿದರೆ ನಿನ್ನಂತಹ ಶತಮೂರ್ಖ ಬೇರೊಬ್ಬ ಇಲ್ಲ ಎನ್ನುವ ನಿರ್ಧಾರಕ್ಕೆ ನಾನೂ ಬರಬೇಕಾಗುತ್ತದೆ. ನನಗೆ ಜಾತಿ, ಮತ, ಪಂಥ, ಬಣ ಇತ್ಯಾದಿಗಳ ಮೇಲೆ ನಂಬಿಕೆಯೂ ಇಲ್ಲ ಆದರವೂ ಇಲ್ಲ. ಮುಖ್ಯವಾಗಿ ಮಾನವತೆಗೆ ಬೆಲೆ ನೀಡುವವ ನಾನು.” ತಣ್ಣಗಿದ್ದ ಗಾಂಧಿಯ ಮುಖ ಸಿಟ್ಟಿಗೆದ್ದದ್ದು ನೋಡಿ ನನಗೆ ಆಶ್ಚರ್ಯ ಹಾಗೂ ಕೊಂಚ ಆಘಾತವೂ ಆಯಿತು.

ಕೊಂಚ ನಿಲ್ಲಿಸಿ ನಿಟ್ಟುಸಿರು ಬಿಟ್ಟ ಗಾಂಧಿ ಮತ್ತೆ ಮೊಗದಲ್ಲಿನ ಅಸಮಾಧಾನ ಮುಂದುವರೆಸುತ್ತಲೇ, “ಇನ್ನೊಂದು ಸೂಕ್ಷ್ಮ ಹಾಗೂ ವಿವಾದಾತ್ಮಕ ಸಂಗತಿ ಹೇಳುತ್ತೇನೆ ಕೇಳು. ಇದು ಈ ಸಂದರ್ಭದಲ್ಲಿ ಹೇಳಬೇಕಾಗಿರುವ ಪ್ರಸ್ತುತ ಅಂಶವೂ ಹೌದು. ನಮ್ಮ ಜವಾಹರನಿಗೆ ಸ್ವಲ್ಪ ಅಧಿಕಾರದ ಲಾಲಸೆಯಿತ್ತು. ವಿಶ್ವದ ಪ್ರಸಿದ್ಧ ನಾಯಕನಾಗಬೇಕು ಎನ್ನುವ ಅತಿಯಾದ ಮಹಾತ್ವಾಕಾಂಕ್ಷೆಯಿತ್ತು. ಒಂದರ್ಥದಲ್ಲಿ ಆತ ಆ ಸಂದರ್ಭದಲ್ಲಿ ಅದಕ್ಕೆ ಪಟೇಲರಷ್ಟೆ ತಕ್ಕ ವ್ಯಕ್ತಿಯೂ ಆಗಿದ್ದ ಎಂದಿಟ್ಟುಕೋ. ವಿದೇಶದಲ್ಲಿ ಪದವಿ ಮುಗಿಸಿದ್ದ. ಹಲವಾರು ದೇಶಗಳನ್ನು ಸುತ್ತಿದ್ದ. ಅನೇಕ ಹೆಸರಾಂತ ಗ್ರಂಥಗಳ ಅಧ್ಯಯನ ಮಾಡಿದ್ದ. ನನ್ನ ಜೊತೆಯಲ್ಲಿ ಆಂದೋಲನದಲ್ಲಿ ಭಾಗವಹಿಸಿದ್ದ. ಎರಡು ಅವಧಿಗೆ ಕಾಂಗ್ರೆಸ್ ಅಧ್ಯಕ್ಷನಾಗಿದ್ದ. ಉತ್ತಮ ವಾಗ್ಮಿ, ಅತ್ಯುತ್ತಮ ಸಂಘಟಕ, ದೂರದೃಷ್ಟಿಯುಳ್ಳ ನಾಯಕ. ಅನೇಕಬಾರಿ ಜೈಲುವಾಸ ಎದುರಿಸಿದ್ದ. ಆದರೆ ಜವಾಹರನಷ್ಟೆ ಸಮರ್ಥ ಇನ್ನೊಬ್ಬ ಅವಿಭಜಿತ ಭಾರತದಲ್ಲಿದ್ದ. ಆತನೂ ವಕೀಲ, ಆತನೂ ಉತ್ತಮ ಸಂಘಟಕ, ವಾಗ್ಮಿ, ಅವನ ಮಾತನ್ನೂ ಕಿವಿಗೊಟ್ಟು ಆಲಿಸಿ ಚಾಚೂತಪ್ಪದೆ ಪಾಲಿಸುತ್ತಿದ್ದ ಒಂದು ಸಮುದಾಯವಿತ್ತು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅವನ ರಾಜಕಾರಣವೂ ನಡೆಯುತ್ತಿತ್ತು. ಅವನ್ಯಾರು ಗೊತ್ತಾ?-ಬ್ಯಾರಿಸ್ಟರ್ ಮೊಹಮ್ಮದಾಲಿ ಜಿನ್ನಾ. ಅವನು ನಿಜಾರ್ಥದಲ್ಲಿ ಜವಾಹರನಿಗೆ ಅತ್ಯಂತ ಪ್ರಬಲ ಪೈಪೋಟಿಯಾಗುತ್ತಿದ್ದ. ವಿಭಜನೆಯಾಗದಿದ್ದರೆ ಆತ ಜವಾಹರನೊಂದಿಗೆ ಪ್ರಧಾನಿ ಸ್ಥಾನಕ್ಕೂ ಸ್ಪರ್ಧೆ ನೀಡುವ ಸಾಧ್ಯತೆಯಿತ್ತು. ಈ ರೇಖೆಯಲ್ಲಿ ತಕಿಸಿದಾಗ ಅಖಂಡ ಭಾರತ ವಿಭಜನೆಯಾಗುವ ಹಿಂದೆ ಜವಾಹರನ ಸ್ವಾರ್ಥವೂ ಇದ್ದಿರಬಹುದೇನೋ? ಜವಾಹರನೇನಾದರೂ ಈ ರೀತಿ ಅವಿತಿದ್ದ ತನ್ನ ಮನದಿಂಗಿತವನ್ನು ನನ್ನೆದುರು ತೆರೆದಿಟ್ಟಿದ್ದರೆ, ಖಂಡಿತವಾಗ್ಯೂ ನಾನು ಅವನನ್ನು ನೇರವಾಗಿ ಖಂಡಿಸುತ್ತಿದ್ದೆ. ಜವಾಹರ್‌ಲಾಲ್ ಅದನ್ನೆಂದು ತೆರೆದಿಡಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದರೂ ಕೂಡ ಅದಕ್ಕೆ ನಾನು ಕಾರಣನಲ್ಲ. ಹೇಗೆ ನೀನು ಭಾರತಭೂಮಿ ವಿಭಜನೆಗೆ ನಾನು ಕಾರಣ ಎಂದು ತೀರ್ಮಾನಿಸಿಬಿಟ್ಟೆ. ಇಷ್ಟು ವರ್ಷಗಳ ಅಧ್ಯಯನದಲ್ಲಿ ನೀನು ನನ್ನ ಅರ್ಥಮಾಡಿಕೊಂಡಿದ್ದು ಇಷ್ಟೆಯೇ?”

“ಅರೆ ಬಾಪೂ ನಿನಗೂ ಸಿಟ್ಟು ಬರುತ್ತದೆ ಎಂದಾಯಿತು. ಹೋಗಲಿ ಬಿಡು. ಯಾವ ದೇಶವನ್ನು ಒಬ್ಬ ಸಾಮಾನ್ಯ ವ್ಯೆಕ್ತಿಯ ಹೆಸರಿನಿಂದ ಗುರುತಿಸುತ್ತಾರೋ ಆ ದೇಶ ಭಾರತ ಮತ್ತು ಆ ವ್ಯಕ್ತಿ ಗಾಂಧಿ ಎನ್ನುವುದು ನಿರ್ವಿವಾದಿತ ಸತ್ಯ. ಇಲ್ಲಿಗೆ ನನ್ನ ಪ್ರಶ್ನೆಗಳು ಮುಗಿಯಿತು. ಈಗ ನಾಥೋರಾಂ ಗೋಡ್ಸೆಯ ಬಗ್ಗೆ ಏನು ಹೇಳುತ್ತೀಯಾ? ಅದಷ್ಟನ್ನು ಹೇಳು ಮತ್ತೆ ನಿನಗೆ ತೊಂದರೆ ನೀಡಲಾರೆ.” ನಗುತ್ತಲೆ ಕೇಳಬೇಕಾಗಿದ್ದ ಅತ್ಯಂತ ಕುತೂಹಲಕಾರಿ ಮಾತು ಕೇಳಿದ್ದೆ.

“ಆ ವ್ಯಕ್ತಿ ಈಗ ನನ್ನ ಚಿತ್ತದಲ್ಲಿ ತಿಲಕರು ಹಾಗೂ ಸುಭಾಷರ ನಂತರದ ಸ್ಥಾನದಲ್ಲಿದ್ದಾನೆ. ಆತ ನನಗೆ ಗುಂಡು ಹಾರಿಸುವ ಮೊದಲು gandhiಆತನ ಬಗ್ಗೆ ನನಗೆ ಅಲ್ಪ ಸ್ವಲ್ಪ ತಿಳಿದಿತ್ತು. ಸಾವರ್ಕರ್ ಗರಡಿಯಲ್ಲಿ ಕಲಿತಿದ್ದ ಯುವಕ. ಬಿಸಿರಕ್ತ, ಉಗ್ರ ವಿಚಾರಧಾರೆ, ಅದ್ವಿತೀಯ ದೇಶಭಕ್ತಿ. ಹೀಗೆ ಆತ ನನ್ನನ್ನು ಆಕರ್ಷಿಸಿದ್ದನೇನೋ? ಆತ ನನ್ನ ಮುಂದೆ ಕೇವಲ ಮೂರು ಅಡಿಯಲ್ಲಿ ನಿಂತು ಪಿಸ್ತೂಲು ತೆಗೆದು ’ಸಾರಿ ಬಾಪೂ..’ ಎಂದು ಗುಂಡು ಹಾರಿಸುವಾಗ ಸ್ಪಷ್ಟವಾಗಿ ಹಾಗೂ ಹತ್ತಿರದಿಂದ ಅವನ ಮುಖ ನೋಡಿದ್ದೆ. ಅದೆಂತಹ ತೇಜಸ್ಸಿತ್ತು ಅವನ ಮುಖದಲ್ಲಿ. ಅದೇನೊ ಆತ್ಮವಿಶ್ವಾಸ. ಸಾಧನೆಗೆ ಹತ್ತಿರದಲ್ಲಿರುವ ಸಾಧಕನ ಮುಖದಲ್ಲಿ ದಿಢೀರನೆ ಉದ್ಭವಿಸುತ್ತಲ್ಲ ಅಂತಹ ತೇಜಸ್ಸದು. ಆತನ ಚಿತಾಭಸ್ಮ ಇನ್ನೂ ವಿಸರ್ಜನೆಯಾಗಿಲ್ಲ ಎಂದು ಕೇಳಿದ್ದೇನೆ. ಅಂತಹ ವ್ಯಕ್ತಿಗಳು ಬಹು ವಿರಳ. ಆತನ ಆತ್ಮಕ್ಕೆ ಈಶ್ವರ ಶಾಂತಿಯನ್ನು ನೀಡಲಿ.”

ಮಾತೆ ಹೊರಡಲಿಲ್ಲ. ದಿಙ್ಮೂಡನಾಗಿ ಗಾಂಧಿ ಮುಖ ನೋಡುತ್ತಾ ಕುಳಿತುಬಿಟ್ಟೆ. ನಿಜ ಗಾಂಧಿ ಹೀಗೆಯೇ ಇದ್ದನೇನೂ. ನಾನು ತಪ್ಪಾಗಿ ಅರ್ಥ ಮಾಡಿಕೊಂಡನೇನೋ? ಅಥವಾ ಅದೂ ಗಾಂಧಿ ಎನ್ನುವ ವಿಷಯದ ಸಹ ಕಲಿಕೆಯ ಒಂದು ಭಾಗವೇನೋ?

“ನಿನ್ನ ಪ್ರಶ್ನೆಗಳು ಮುಗಿದಿವೆ ಎಂದು ಭಾವಿಸುತ್ತೇನೆ. ನಾನಿನ್ನು ಹೊರಡುತ್ತೇನೆ. ನಿನ್ನ ಆಸೆಯಂತೆ ಮತ್ತೆ ನಾನು ಮರಳಿ ಬರಲಾರೆ. ನನ್ನ ಆತ್ಮ ಸದಾ ಸಂಚಾರದಲ್ಲಿರುತ್ತದೆ. ಆಗ ನಾನು ದೈಹಿಕವಾಗಿ ಪಾದಯಾತ್ರೆ ಮಾಡಿದ್ದೆ. ಈಗ ನನ್ನ ಆತ್ಮ ಭಾರತದಾದ್ಯಂತ ಸಂಚರಿಸುತ್ತಿದೆ. ಇಂದು ಇಲ್ಲಿ ನಾಳೆ ಮತ್ತೆಲ್ಲೋ. ನಾನು ದೇವರಲ್ಲ. ನಿನ್ನಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದ್ದವನು. ನನ್ನ ವಿಚಾರಧಾರೆಯನ್ನು ಸಾಧ್ಯವಾದರೆ ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡು. ನನ್ನ ಸತ್ಯಾನ್ವೇಷಣೆಯನ್ನು ಕೂಲಂಕಷವಾಗಿ ಓದು. ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವವರನ್ನು ಸಾಧ್ಯವಾದರೆ ಸರಿಪಡಿಸು.” ಮಾತುಗಳು ಅಸ್ಪಷ್ಟವಾಗಿ ಕಿವಿಗೆ ಬೀಳುತ್ತಿತ್ತು. ನಿಧಾನವಾಗಿ ಗಾಂಧಿ ಪ್ರತಿಮೆ ಮಾಯವಾಯಿತು. ಅಶರೀರವಾಣಿಯೂ ಕೇಳದಂತಾಯಿತು. ಆನಂತರ ಗಾಢ ನಿದ್ರೆ ಆವರಿಸಿಕೊಂಡುಬಿಟ್ಟಿತು.

“ಎದ್ದೇಳೋ ಸೋಂಬೇರಿ.”-ಅಮ್ಮ ಬಯ್ದು ಎಬ್ಬಿಸಿದಾಗ ಸಮಯ ಅದಾಗಲೆ ಎಂಟಾಗಿಬಿಟ್ಟಿತ್ತು. ರಾತ್ರಿಯ ಗಾಂಧಿ ಜೊತೆಗಿನ ಸಂಭಾಷಣೆಯನ್ನು ಮೆಲುಕು ಹಾಕುತ್ತಿದ್ದಾಗಲೆ ಗಾಂಧಿ ಚಿತ್ರಪಟ ನೋಡುವ ಮನಸ್ಸಾಯಿತು. ಮಾಳಿಗೆಯ ಹಳೆಯ ದೊಡ್ಡ ಗಡಿಯಾರದ ಬಳಿಗೆ ಬಂದೆ. ಅದರಲ್ಲಿ ಗಾಂಧಿ ಫೋಟೋ ಅಂಟಿಸಲಾಗಿತ್ತಲ್ಲ. ಆ ದೃಶ್ಯ ನೋಡಿ ನನಗೆ ಶಾಕ್ ತಡೆದುಕೊಳ್ಳಲೇ ಆಗಲಿಲ್ಲ. ಅಲ್ಲಿದ್ದ ಗಾಂಧಿ ಫೋಟೋ ಒಡಿದು ಚೂರಾಗಿತ್ತು. ಗಾಂಧಿಯ ಚಿತ್ರಪಟವೂ ಅಲ್ಲಲ್ಲಿ ಹರಿದು ಹೊಗಿತ್ತು.

ಅಲ್ಲಿಗೆ ಬಂದ ಅಮ್ಮ, “ನೋಡು ನೀನು ಮುದ್ದಿಂದ ಸಾಕಿದ್ದೀಯಲ್ಲ ಆ ಬೆಕ್ಕಿನ ಮರಿ ನಿನ್ನೆ ರಾತ್ರಿ ಇದರ ಮೇಲೆ ಸರ್ಕಸ್ಸು ಮಾಡಿ ಗಾಂಧೀಜೀಯ ಪೋಟೊ ಒಡೆದು ಹಾಕಿದೆ” ಎಂದಳು.

ಹಾಗೆ ಆ ಫೋಟೊ ಒಡೆದುಹೋಗಿದ್ದು ಗಾಂಧಿ ಕನಸ್ಸಿನಿಂದ ಮಾಯವಾದ ನಂತರ ಎನ್ನುವ ಸ್ಪಷ್ಟೀಕರಣ ಕೂಡಲೆ ದೊರೆಯಿತು. ಆದರೆ ಅದಕ್ಕೆ ಕಾರಣ ಮಾತ್ರ ತಿಳಿಯಲೇ ಇಲ್ಲ. ತಲೆಯಲ್ಲಿ ಹೊಸದೊಂದು ಪ್ರಶ್ನೆ ಹುಟ್ಟಿಕೊಂಡಿತ್ತು-“ಗಾಂಧಿ ಫೋಟೋ ಒಡೆದುಹೋಗಿದ್ದು ಕಾಕತಾಳೀಯವೇ?”.

ಮರೆತು ಹೋದ 1949ರಲ್ಲಿ ಕೊಟ್ಟ ವಾಗ್ದಾನ

ಮೂಲ : ವಿದ್ಯಾ ಸುಬ್ರಮಣ್ಯಂ
ಅನುವಾದ : ಬಿ.ಶ್ರೀಪಾದ ಭಟ್

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತಾನು ಸಕ್ರಿಯ ರಾಜಕಾರಣದಿಂದ ದೂರವಿರುತ್ತೇನೆ ಎಂದು ತನ್ನ ಪಕ್ಷದ ಸಂವಿಧಾನದಲ್ಲಿ ಅತ್ಯಂತ ಸ್ಪಷ್ಟವಾಗಿ ಬರೆದಿದೆ. ತನ್ನ ಪಕ್ಷದ ಸಂವಿಧಾನವನ್ನು ಸಹ ಅನಿವಾರ್ಯವಾಗಿ ಆಗಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಒತ್ತಾಯದ ಮೇರೆಗೆ 1949 ರಲ್ಲಿ ಬರೆದಿತ್ತು ಆರೆಸಸ್. ಆದರೆ ಭಾರತದ ಆ ಕಾಲದ ಇತಿಹಾಸವನ್ನು 2013ರ ಘಟನೆಗಳು ಸಂಪೂರ್ಣವಾಗಿ ಅಳಸಿಹಾಕುತ್ತವೆ. Sardar_patelಇಂದು ಆರೆಸಸ್ ಭಾರತೀಯ ಜನತಾ ಪಕ್ಷವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ತನ್ನ ಪಕ್ಷದೊಳಗಿನ ಅಂತರಿಕ ಭಿನ್ನಮತವನ್ನು ಸಂಪೂರ್ಣವಾಗಿ ತಳ್ಳಿಹಾಕಿ ನರೇಂದ್ರ ಮೋದಿಯನ್ನು ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಹಿರಂಗವಾಗಿ ಘೋಸಿತು. ರಾಜಕೀಯವಾಗಿ ತಾನು ಸನ್ನಧ್ಧ ಎಂದು ಇದಕ್ಕಿಂತಲೂ ಮಿಗಿಲಾಗಿ ಹೇಳಲು ಸಾಧ್ಯವಿಲ್ಲ

ಒಂದು ಕಾಲದ ಜನಸಂಘ ಮತ್ತು ಈಗಿನ ಬಿಜೆಪಿಯನ್ನು ಹುಟ್ಟಿ ಹಾಕಿದ್ದು ಆರೆಸಸ್. ಆಗಿನ ಜನಸಂಘದ ಸಾಂಸ್ಕೃತಿಕ ಮತ್ತು ರಾಜಕೀಯ ಘಟಕಗಳಾಗಿ ಅದರ ಸ್ವಯಂಸೇವಕರು ನೇಮಕಗೊಂಡಿದ್ದರು. ತನ್ನ ಪಕ್ಷದ ಸಂವಿಧಾನದಲ್ಲಿ ತಾನು ರಾಜಕೀಯದಿಂದ ದೂರವಿರುವುದನ್ನು ಸ್ಪಷ್ಟವಾಗಿ ಹೇಳಿದ್ದ ಆರೆಸಸ್ ತನ್ನ ಸ್ವಯಂಸೇವಕರಿಗೆ ಮಾತ್ರ ರಾಜಕೀಯವನ್ನು ಪ್ರವೇಶಿಸುವುದಕ್ಕೆ ಅನುಮತಿಯನ್ನು ನೀಡಿತ್ತು. ಇದನ್ನೇ ತನ್ನ ಅನುಕೂಲಸಿಂಧು ರಾಜಕಾರಣಕ್ಕೆ ಬಳಸಿಕೊಂಡ ಆರೆಸಸ್ ತನ್ನ ಸ್ವಯಂಸೇವಕರನ್ನು ಜನಸಂಘ/ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸಿತು. ಆರೆಸಸ್‌ನ ತಳಮಟ್ಟದ ಕಾರ್ಯಕರ್ತರಾಗಿ ಜನಸಂಘ/ಬಿಜೆಪಿಯನ್ನು ಪ್ರವೇಶಿಸಿದ ಲಾಲ್‌ಕೃಷ್ಣ ಅಡ್ವಾನಿಯವರಿಂದ ನರೇಂದ್ರ ಮೋದಿಯವರೆಗೂ ಪ್ರತಿಯೊಬ್ಬ ನಾಯಕರೂ ನಂತರ ದೆಹಲಿ ಮತ್ತು ನಾಗಪುರದ ಆರೆಸಸ್ ಕಛೇರಿಗೆ ತೀರ್ಥಯಾತ್ರೆಯಂತೆ ಭೇಟಿಕೊಡುತ್ತಿದ್ದುದು ಒಂದು ಕಡ್ಡಾಯವಾದ ಪಠ್ಯಕ್ರಮವಾಗಿತ್ತು. ಆದರೆ ಆರೆಸಸ್‌ನ ಮುಖ್ಯಸ್ಥ ಸರಸಂಚಾಲಕ ಮಾತ್ರ ಬಹಿರಂಗವಾಗಿ ತನ್ನ ಹಕ್ಕನ್ನು ಪ್ರತಿಪಾದಿಸುವಂತಿಲ್ಲವೆಂಬುದು ಬಿಜೆಪಿ ಮತ್ತು ಆರೆಸಸ್ ನಡುವಿನ ಒಂದು ಆನಧಿಕೃತ ವಿಷಯವಷ್ಟೇ. ಈ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರೊಂದಿಗೆ ಮಾಡಿಕೊಂಡ ಒಪ್ಪಂದಂತೆ 1977-79 ಮತ್ತು 1998-2004 ಸಂದರ್ಭದ ಕೇಂದ್ರ ಸರ್ಕಾರಗಳಲ್ಲಿ ಆರೆಸಸ್ ಬಹಿರಂಗ ರಾಜಕಾರಣದಿಂದ ದೂರವುಳಿದತ್ತು. 2013 ರ ರಾಜಕೀಯ ವಿದ್ಯಮಾನಗಳು ವಿಚಿತ್ರ ತಿರುವುಗಳನ್ನು ಪಡೆದುಕೊಂಡು ತೆರೆಮರೆಯಲ್ಲಿದ್ದ ಆರೆಸಸ್ ಹಠಾತ್ತಾನೆ ಮುನ್ನೆಲೆಗೆ ಬಂದು ಅಧಿಕಾರದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿತು.

2005 ರಿಂದೀಚಿಗಿನ ಕಳೆದ ಕೆಲವು ವರ್ಷಗಳ ವಿದ್ಯಮಾನಗಳನ್ನು ಅವಲೋಕಿಸಿದಾಗ ಅಡ್ವಾನಿಯವರು ತಮ್ಮ ಪಾಕಿಸ್ತಾನದ ಭೇಟಿಯ ಸಂದರ್ಭದಲ್ಲಿ ಜಿನ್ನಾರನ್ನು ಪ್ರಶಂಸಿಸಿ ಮಾತನಾಡಿದ್ದು ಸಂಘಪರಿವಾರವನ್ನು ಎಷ್ಟರಮಟ್ಟಿಗೆ ಕೆರಳಿಸಿತೆಂದರೆ ಅಡ್ವಾನಿಯವರನ್ನು ಬಿಜೆಪಿಯ ಅಧ್ಯಕ್ಷ ಪದವಿಯಿಂದ ನಿರ್ಗಮಿಸುವವರೆಗೂ ಬಿಡಲಿಲ್ಲ. ತದನಂತರ 2009 ರಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯೆಂದು ಬಿಂಬಿತವಾದರೂ ಅಡ್ವಾನಿಯವರ ವರ್ಚಸ್ಸು ಸಂಘಪರಿವಾರದಲ್ಲಿ ಸಂಪೂರ್ಣವಾಗಿ ಕಳೆಗುಂದಿತ್ತು. Advaniಅಡ್ವಾನಿಯವರ ಕಡೆಗಣಿಸುವಿಕೆಯ ಪ್ರಕ್ರಿಯೆ 2005 ರಿಂದ ಶುರುವಾಗಿ ಅದು ಇಂದು ಅವರನ್ನು ಪಕ್ಷದೊಳಗೆ ಸಂಪೂರ್ಣವಾಗಿ ಏಕಾಂಗಿಯನ್ನಾಗಿ ಮೂಲೆಗುಂಪು ಮಾಡುವವರೆಗೂ ಬಂದು ತಲುಪಿದೆ. ಇದರಿಂದ ಹತಾಶರಾಗಿದ್ದ ಅಡ್ವಾನಿಯವರು 2005ರ ಸೆಪ್ಪೆಂಬರ್‌ನಲ್ಲಿ ಚೆನ್ನೈಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯ ಅಂತಿಮ ದಿನದಂದು ಮಾತನಾಡುತ್ತ “ತನ್ನ ಪಕ್ಷ ಬಿಜೆಪಿಯು ಆರೆಸಸ್‌ನೊಂದಿಗೆ ಸಮಾಲೋಚಿಸದೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಈ ನೀತಿಯು ಪಕ್ಷಕ್ಕಾಗಲೀ ಆರೆಸಸ್‌ಗಾಗಲಿ ಯಾವುದೇ ಒಳಿತನ್ನು ಮಾಡುವುದಿಲ್ಲ. ಈ ನೀತಿಯಿಂದ ಆರೆಸಸ್‌ನ ಧ್ಯೇಯವಾದ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಹಿನ್ನೆಡೆ ಉಂಟಾಗುತ್ತದೆ. ಆರೆಸಸ್ ಮತ್ತು ಬಿಜೆಪಿ ಈ ಭಾವನೆಯನ್ನು ಹೋಗಲಾಡಿಸಲು ಒಂದಾಗಿ ಪ್ರಯತ್ನಿಸಬೇಕು.” ಎಂದು ಹೇಳಿದರು. ಆಡ್ವಾನಿಯವರು ದಾಕ್ಷಿಣ್ಯವಿಲ್ಲದೆ ಆಗ ಆರೆಸಸ್ ಅನ್ನು ತಂಟೆಕೋರನೆಂದು ಕರೆದರು. ಆದರೆ ಏಳು ವರ್ಷಗಳ ನಂತರ ನರೇಂದ್ರ ಮೋದಿಯನ್ನು ಮೊದಲು ಚುನಾವಣಾ ಪ್ರಚಾರದ ಅಧ್ಯಕ್ಷನನ್ನಾಗಿಯೂ ನಂತರ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿಯೂ ಪಟ್ಟ ಕಟ್ಟಿದ ಆರೆಸಸ್ ಆ ಮೂಲಕ ಮತ್ತೊಮ್ಮೆ ಬಿಜಿಪಿ ಮೇಲಿನ ತನ್ನ ಆಧಿಕಾರವನ್ನು ದಾಖಲಿಸಿತು. ಜೂನ್ 11, 2013ರಲ್ಲಿ ಸಂಘಪರಿವಾರವು ಈಗಿನ ಸರಸಂಚಾಲಕರಾದ ಮೋಹನ ಭಾಗವತ್ ಅವರು ಅಡ್ವಾನಿಯವರನ್ನು ಮಾತನಾಡಿಸಿ ಬಿಜೆಪಿಯ ಸಂಸದೀಯ ಮಂಡಳಿಯ ನಿರ್ಣಯವನ್ನು ಗೌರವಿಸಬೇಕೆಂದು, ರಾಷ್ಟ್ರದ ಹಿತವನ್ನು ಗಮನದಲ್ಲಿರಿಸಿಕೊಂಡು ಪಕ್ಷವನ್ನು ಮುನ್ನಡೆಸಬೇಕೆಂದು ಹೇಳಿದರು ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿತು. ಬಿಜೆಪಿಯಿಂದ ಅಡ್ವಾನಿಯವರಿಗೆ ಬೇಡಿಕೆಯನ್ನು ಸಲ್ಲಿಸಿದ್ದರೆ ಆರೆಸಸ್ ಮುಖ್ಯಸ್ಥ ಮೋಹನ್ ಭಾಗವತ್‌ರು ಅಡ್ವಾನಿಯವರಿಗೆ ಆಜ್ಞೆಯನ್ನು ನೀಡಿದ್ದರು. ಪದಗಳು ಸೌಜನ್ಯತೆಯಿಂದ ಕೂಡಿದ್ದರೂ ಆ ಮೂಲಕ ತಲುಪಿಸಿದ ಸಂದೇಶ ಮಾತ್ರ ಕಟುವಾಗಿತ್ತು. ಈ ರೀತಿಯಾಗಿ 2005 ರಲ್ಲಿ ಶುರುವಾದ ಬಿಜೆಪಿಯ ಕಬ್ಜಾ ಪ್ರಕ್ರಿಯೆ 2013 ರ ವೇಳೆಗೆ ಸಂಪೂರ್ಣಗೊಂಡು ತನ್ನ ಲಾಜಿಕಲ್ ಗುರಿಯನ್ನು ಮುಟ್ಟಿದೆ.

1949 ರಲ್ಲಿ ಪಟೇಲರಿಗೆ ಕೊಟ್ಟ ಮಾತಿನ ಪ್ರಕಾರ ತನ್ನ ಪಕ್ಷದ ಸಂವಿಧಾನವನ್ನು ರಚಿಸಿದ ಆರೆಸಸ್ ಅದರಲ್ಲಿ ರಾಜಕೀಯವನ್ನು ಪ್ರವೇಶಿಸುವುದಿಲ್ಲವೆಂದೂ ತನ್ನನ್ನು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತಗೊಳಿಸಿಕೊಳ್ಳುವುದೆಂದೂ ಸ್ಪಷ್ಟವಾಗಿ ತಿಳಿಸಿತ್ತು. 1948 ರಲ್ಲಿ ಗಾಂಧಿ ಹತ್ಯೆಯ ಸಂದರ್ಭದಲ್ಲಿ ಆರೆಸಸ್‌ನ ಮೇಲೆ ವಿಧಿಸಿದ ನಿರ್ಬಂಧನೆಯನ್ನು ಹಿಂತೆಗುದುಕೊಳ್ಳುವ ಸಂದರ್ಭದಲ್ಲಿ ಮೇಲಿನ ಕಂಡೀಶನ್ ಅನ್ನು ಪ್ರ್ರಮುಖವಾಗಿ ಪ್ರತಿಪಾದಿಸಿದ್ದರು ಆಗಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್. ಆರೆಸಸ್ gandhi_dead_bodyಅನ್ನು ಗಾಂಧಿಯವರ ಹತ್ಯೆಗೆ ನೇರವಾಗಿ ಕಾರಣವೆಂದು ಆಪಾದಿಸದಿದ್ದರೂ ಆರೆಸಸ್‌ನ ಹಿಂಸಾತ್ಮಕ ನಡುವಳಿಕೆ ಮತ್ತು ಪ್ರಚೋದನಾತ್ಮಕ ಚಿಂತನೆಗಳೇ ಗಾಂಧಿಯವರ ಹತ್ಯೆಗೆ ಕಾರಣಗಳಲ್ಲೊಂದು ಎಂದು ಪಟೇಲರು ನಂಬಿದ್ದರು. ಗಾಂಧೀಜಿಯವರ ಹತ್ಯೆಯ ನಂತರ ಆರೆಸಸ್ ಅನ್ನು ನಿಷೇಧಿಸಲು 4 ನೇ ಫೆಬ್ರವರಿ 1948 ರಂದು ಹೊರಡಿಸಿದ ನೋಟಿಫಿಕೇಶಿನಿನಲ್ಲಿ ಆಗಿನ ಸರ್ಕಾರವು “ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಮೂಲಭೂತ ಆದರ್ಶಗಳಾದ ಭ್ರಾತೃತ್ವ, ಪ್ರೀತಿ, ಸಮಾನತೆಗಳನ್ನು ಪಾಲಿಸಲಿಲ್ಲ. ಬದಲಾಗಿ ಸಂಘಪರಿವಾರದ ಸದಸ್ಯರು ಗುರುತರವಾದ ಭಯ ಹುಟ್ಟಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಸಂಘಪರಿವಾರದ ಸದಸ್ಯರು ವ್ಯವಸ್ಥೆಯಲ್ಲಿ ಹಿಂಸೆಯನ್ನು ಹುಟ್ಟುಹಾಕಿದರು. ದರೋಡೆ, ಗಲಭೆ, ಹತ್ಯೆಗಳನ್ನು ನಡೆಸಿದರು. ಶಸ್ತ್ರಗಳನ್ನು, ಹಣವನ್ನು ವಸೂಲಿ ಮಾಡಿದರು. ದ್ವೇಷಮಯವಾದ, ಗಲಭೆಗಳನ್ನು ನಡೆಸುವಂತೆ ಕರೆಕೊಡುವಂತಹ, ಭಯೋತ್ಪಾದಕ ಪಾಠಗಳನ್ನು ತಿಳಿಸುವಂತಹ ಕರಪತ್ರಗಳನ್ನು ಸಾರ್ವಜನಿಕವಾಗಿ ಹಂಚಿದರು. ಈ ಕಾರ್ಯತಂತ್ರಗಳನ್ನು ಗುಪ್ತವಾಗಿ ನಡೆಸಿದರು,” ಎಂದು ಅಭಿಪ್ರಾಯಪಟ್ಟಿತು.

4 ನೇ ನವೆಂಬರ್‌ನಲ್ಲಿ ಪಟೇಲ್ ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ, “ಇತರೇ ರಾಜ್ಯಗಳಿಂದಲೂ ಈ ಆರೆಸಸ್ ವಿರುದ್ಧ ನಮಗೆ ದೂರುಗಳು ಬಂದಿವೆ. ಆ ದೂರುಗಳ ಪ್ರಕಾರ ಆರೆಸಸ್ ಸದಸ್ಯರು ನಡಾವಳಿಗಳು ದೇಶ ವಿರೋಧಿ ಲಕ್ಷಣಗಳನ್ನು ಹೊಂದಿದ್ದು. ಸದಾ ಗಲಭೆಗಳನ್ನು ಪ್ರಚೋದಿಸುತ್ತಿದ್ದರು,” ಎಂದು ತಿಳಿಸಿದ್ದರು.

ಇದಕ್ಕೂ ಮುಂಚೆ ಗೃಹಮಂತ್ರಿ ಎರಡು ಪತ್ರಗಳನ್ನು ಬರೆದಿದ್ದರು. ಮೊದಲನೇ ಪತ್ರವನ್ನು ಜುಲೈ 1948ರಲ್ಲಿ ಆಗಿನ ಆರೆಸಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಬರೆದಿದ್ದರು. ಅದರಲ್ಲಿ ಆರೆಸಸ್ ಚಟುವಟಿಕೆಗಳು ಸರ್ಕಾರದ ವಿರುದ್ಧದ ಪಿತೂರಿಯಾಗಿದೆ. ಸರ್ಕಾರದ ಇರುವಿಕೆಗೇ ಭಂಗ ತರುವಂತಿದೆ. ಬುಡಮೇಲು ಮಾಡುವಂತಹ ಅದರ ಕೃತ್ಯಗಳು ದಿನಗಳೆದಂತೆ ಹೆಚ್ಚಾಗುತ್ತಿವೆ ಎಂದು ಸ್ಪಷ್ಟವಾಗಿ ಬರೆದಿದ್ದರು.

11 ನೇ ಸೆಪ್ಟೆಂಬರ್ 1948 ರಂದು ಗೋಳ್ವಾಲ್ಕರ್ ಅವರಿಗೆ ಬರೆದ ಎರಡನೇ ಪತ್ರದಲ್ಲಿ ಪಟೇಲರು “Gandhi's Funeralಇಂದು ಆರೆಸಸ್ ಹುಟ್ಟುಹಾಕಿದ ದ್ವೇಷದ ಚಿಂತನೆಗಳಿಂದಾಗಿ ದೇಶದಲ್ಲಿ ಸೃಷ್ಟಿಗೊಂಡ ಕಮ್ಯೂನಲ್‌ನ ವಿಷಯುಕ್ತ ವಾತಾವರಣ ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ಗಾಂಧೀಜಿವರು ತೀರಿಕೊಂಡ ಬಳಿಕ ಆರೆಸಸ್ ಸದಸ್ಯರು ಸಿಹಿಯನ್ನು ಹಂಚಿದರು. ಇದು ನಾಗರಿಕರಲ್ಲಿ ತಿರಸ್ಕಾರವನ್ನು ಹುಟ್ಟಿಸಿದೆ,” ಎಂದು ಬರೆಯುತ್ತಾರೆ.

ಈ ಎಲ್ಲ ಹಿನ್ನೆಲೆಗಳಲ್ಲಿ ಆಗಿನ ಗೃಹಮಂತ್ರಿ ವಲ್ಲಭಭಾಯಿ ಪಟೇಲರು ಆರೆಸಸ್‌ನಿಂದ ದೇಶದ ಧ್ವಜವನ್ನು ಗೌರವಿಸುವಂತೆ ಆದೇಶಿಸುತ್ತಾರೆ (ಕಡೆಗೂ ಆರೆಸಸ್ ಗೌರವಿಸುವುದು ತನ್ನದೇ ಆದ ಭಗವದ್ವಜವನ್ನು). ತನ್ನ ಎಲ್ಲಾ ಚಟುವಟಿಕೆಗಳನ್ನು ಬಹಿರಂಗವಾಗಿ ಕಾನೂನಿನ ಅಡಿಯಲ್ಲಿ ನಡೆಸಬೇಕೆಂತಲೂ, ಸಕ್ರಿಯ ರಾಜಕಾರಣದಿಂದ ದೂರವಿರಬೇಕೆಂತಲೂ ಆರೆಸಸ್‌ನಿಂದ ವಾಗ್ದಾನ ಪಡೆಯುತ್ತಾರೆ.

ಆದರೆ ಇಂದು ಆರೆಸಸ್ ಸಕ್ರಿಯ ರಾಜಕಾರಣಕ್ಕೆ ಮರಳುವ ಮೂಲಕ 1949 ರಲ್ಲಿ ವಲ್ಲಭಭಾಯಿ ಪಟೇಲರಿಗೆ ನೀಡಿದ ವಾಗ್ದಾನವನ್ನು ಭಂಗಗೊಳಿಸಿದೆ.

( ಕೃಪೆ : ದಿ ಹಿಂದೂ, 8ನೇ ಅಕ್ಟೋಬರ್, 2013)

ಧರ್ಮಾಧಾರಿತ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ಒಂದು ಕಂಟಕ – ಸೈಯದ್ ಹೈದರ್ ಫರೂಕ್ ಸಿದ್ದಿಕಿ

ಸರ್ಕಾರವೊಂದು ಧರ್ಮವನ್ನು ಬಹಿರಂಗವಾಗಿ ಪ್ರತಿಪಾದಿಸಿದರೆ ಅದು ಪ್ರಜಾಪ್ರಭುತ್ವವನ್ನು ಪಾಲಿಸುತ್ತಿಲ್ಲ, ಬೇರೇನನ್ನೋ ಎತ್ತಿ ಹಿಡಿಯುತ್ತಿದೆ ಎಂದರ್ಥ. – ಸೈಯದ್ ಹೈದರ್ ಫರೂಕ್ ಸಿದ್ದಿಕಿ

ಸೈಯದ್ ಹೈದರ್ ಫರೂಕ್ ಸಿದ್ದಿಕಿಯವರು ಜಮಾತೆ ಎ-ಇಸ್ಲಾಮಿ ಸ್ಥಾಪಕ ಸೈಯದ್ ಅಬ್ದುಲ್ಲ ಮೌದೂಡಿಯ ಮಗ. ಇಂದು ಪಾಕಿಸ್ತಾನದ ಲಾಹೋರಿನ ಪತ್ರಿಕೆಯೊಂದರ ಅಂಕಣಕಾರ. 69 ವರ್ಷದ ಇವರು ಒಂದು ಕಾಲದಲ್ಲಿ ಪೈಲಟ್ ಆಗಿದ್ದರು. ತಮ್ಮ ವಿದ್ಯಾಭ್ಯಾಸವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಮಾಡಿದ್ದರೂ ಇಂಗ್ಲೀಷಿನಲ್ಲಿ ಮಾತನಾಡಲು ನಿರಾಕರಿಸುವ ಫರೂಕ್ ಸಿದ್ದಿಕಿ ಉಪಖಂಡದಲ್ಲಿ ಜಮಾತೆಯ ರಾಜಕಾರಣದ ಕುರಿತಾಗಿ, ಇಸ್ಲಾಂನ ರಾಜಕೀಯ, ಮಿಲಿಟೆನ್ಸಿ, ರಾಜ್ಯದ ಧರ್ಮ, ಬಾಂಗ್ಲ ದೇಶದ ಯುದ್ಧ ಕಾಲದ ಅಪರಾಧಗಳು ಮತ್ತು ಅವುಗಳ ಕುರಿತಾದ ಟ್ರಿಬ್ಯೂನಲ್ ವಿಚಾರಣೆಗಳನ್ನು “ಢಾಕಾ ಟ್ರಿಬ್ಯೂನ್” ಪತ್ರಿಕೆಯೊಂದಿಗೆ ನಡೆಸಿದ ಸಂದರ್ಶನದುದ್ದಕ್ಕೂ ಹಂಚಿಕೊಂಡಿದ್ದಾರೆ.

ನಿಮ್ಮ ತಂದೆ ಅಬುಲ್ ಅಲಾ ಮೌದೂನಿ ಜಮಾತ್-ಎ-ಇಸ್ಲಾಮಿಯ ಸ್ಥಾಪಕರು. ನೀವಾಗಲಿ ಅಥವಾ ನಿಮ್ಮ ಅಣ್ಣತಂಗಿಯರಾಗಲೀ ಈ ಜಮಾತೆಯೊಂದಿಗೆ ಗುರುತಿಸಿಕೊಂಡಿದ್ದೀರ?
ಇಲ್ಲ. ನಾವೆಂದೂ ರಾಜಕಾರಣದಲ್ಲಾಗಲಿ, ಜಮಾತೆಯಾಗಲಿ ಅಥವಾ ಬೇರಾವುದೇ ಪಕ್ಷದೊಂದಿಗಾಗಲಿ ಗುರುತಿಸಿಕೊಂಡಿಲ್ಲ. syed-haiderನನ್ನ ತಂದೆ ನಾವು ರಾಜಕಾರಣದಲ್ಲಿ ಪ್ರವೇಶಿಸಲು ಅನುಮತಿ ಕೊಡಲಿಲ್ಲ. ಅವರ ಮನಸ್ಸಿನಲ್ಲಿ ಏನಿತ್ತೋ ನಮಗೆ ಗೊತ್ತಿಲ್ಲ, ನನ್ನ ತಂದೆ ಮಾತ್ರವಲ್ಲ ಬೇಕಿದ್ದರೆ ಇತರೇ ಜಮಾತೆ ನಾಯಕರನ್ನು ಗಮನಿಸಿ, ಅವರೂ ಸಹ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಅಥವಾ ಪಕ್ಷದ ಚಟುವಟಿಕೆಗಳಿಗೆ ತೊಡಗಿಕೊಳ್ಳಲು ಪ್ರೋತ್ಸಾಹಿಸಲಿಲ್ಲ.

ಜಮಾತೆ ನಾಯಕರ ಮಕ್ಕಳು ಇತರೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಅವೆಲ್ಲವೂ ಜಮಾತೆ ಪಕ್ಷದ ಕಾರ್ಯಗಳಿಗೆ ಹೊರತಾದವು. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಬಹುಶಃ ಒಮ್ಮೆ ನೀವು ಧರ್ಮಾಧಾರಿತ ರಾಜಕಾರಣ ಮಾಡಿದ ತಕ್ಷಣ ನಿಮ್ಮ ಕೆಲವು ವೈಯುಕ್ತಿಕ ಗುರಿಗಳನ್ನು ಸಾಧ್ಯವಾಗಿಸಿಕೊಳ್ಳಬಹುದು. ಅದರೆ ಧರ್ಮದ ಆಧಾರಿತ ರಾಜಕಾರಣದಲ್ಲಿ ಕಡೆಗೂ ನೀವು ಶತೃಗಳನ್ನು ಸೃಷ್ಟಿಸಿಕೊಳ್ಳುವುದಂತೂ ಖಂಡಿತ. ತಾನು ಸತ್ತ ನಂತರ ತನ್ನ ಮಕ್ಕಳಿಗೆ ಆತ ಬಿಟ್ಟುಹೋಗುವುದು ಶತೃಗಳನ್ನು ಮಾತ್ರ.

ಬಾಂಗ್ಲಾ ದೇಶದ ಜಮಾತೆಯ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ಬಾಂಗ್ಲಾ ದೇಶದ ಹುಟ್ಟಿಗೆ ವಿರೋಧ ವ್ಯಕ್ತಪಡಿಸಿದ ಜಮಾತೆಗೆ ಬಾಂಗ್ಲಾ ದೇಶದಲ್ಲಿ ರಾಜಕೀಯ ಅಥವಾ ರಾಜಕಾರಣ ಮಾಡಲು ಯಾವುದೇ ಹಕ್ಕಿಲ್ಲ. ಇವರಿಗೆ ಇಲ್ಲಿ ರಾಜಕೀಯ ಮಾಡಲು ಅವಕಾಶ ನೀಡಬಾರದು. ಆದರೆ ವಾಸ್ತವ ಪರಿಸ್ಥಿತಿ ಬೇರೆ ಇದೆ. ಸ್ವಾತಂತ್ರದ ನಂತರ ನಿಮ್ಮಲ್ಲಿನ ರಾಜಕೀಯ ನಾಯಕರೇ ಜಮಾತೆಗೆ ರಾಜಕೀಯ ಮಾಡಲು ಪ್ರೇರಣೆ ನೀಡಿದರು. ಅದು ನಿಮ್ಮ ನಾಯಕರದೇ ತಪ್ಪು. ನೀವು ಜಮಾತೆಗೆ ರಾಜಕೀಯದಲ್ಲಿ ಪ್ರವೇಶಕ್ಕೆ ಅನುಮತಿ ಕೊಟ್ಟಿದ್ದೀರೆಂದರೆ ಧರ್ಮ ಆಧಾರಿತ ರಾಜಕಾರಣಕ್ಕೆ ನಿಮ್ಮ ಅನುಮತಿ ಇದೆಯೆಂದರ್ಥ. ಆದರೆ ಬಾಂಗ್ಲಾ ದೇಶದ ಇಂದಿನ ಪರಿಸ್ಥಿತಿಗೆ ಯಾರು ಹೊಣೆಗಾರರು?

ನೋಡಿ, ಷೇಕ್ ಮುಜೀಬುರ್ ರೆಹಮಾನ್ ಅವರು ರಚಿಸಿದ ಸಂವಿಧಾನ ಇಂದು ಬಾಂಗ್ಲಾ ದೇಶದಲ್ಲಿಲ್ಲ. ಇದು ಹೇಗೆ ಸಾಧ್ಯವಾಯಿತು? ಇದನ್ನು ಯಾರು ಬದಲಾಯಿಸಿದರು? ಈ ವಿಷಯಗಳನ್ನು ಕುರಿತಾಗಿ ಚಿಂತಿಸಬೇಕಾಗಿದೆ. ನಿಜಕ್ಕೂ ಜನತೆ ಜಮಾತೆಯ ಪರವಾಗಿ ಮತದಾನ ಮಾಡುವುದಿಲ್ಲ. ಎಪ್ಪತ್ತರ ದಶಕದಲ್ಲೂ ಅವರಿಗೆ ಬೆಂಬಲವಿಲ್ಲ, ಈಗಲೂ ಬೆಂಬಲವಿಲ್ಲ, ಅವರ ಬಹುತೇಕ ಅಭ್ಯರ್ಥಿಗಳು ಹೀನಾಯ ಸೋಲು ಕಂಡರು. ಜಮಾತೆ ರಾಜಕಾರಿಣಿಗಳಿಗೆ ಎಷ್ಟು ಕಡಿಮೆ ಮತಗಳು ಬಡವೆಂದರೆ ಅವರು ಡೆಪಾಸಿಟ್ ಸಹ ಪಡೆಯಲಾಗದಷ್ಟು.

ಷೇಕ್ ಸಾಹೇಬರು ಜಮಾತೆಯನ್ನು ನಿಷೇಧಿಸಿದ್ದರು, ಅಲ್ಲವೇ? ಹಾಗಿದ್ದಲ್ಲಿ ಮರಳಿ ಅವರನ್ನು ರಾಜಕಾರಣಕ್ಕೆ ಕರೆದು ತಂದವರು ಯಾರು? ನೀವು, ಈ ದೇಶದ ಪ್ರಜೆಗಳು, ಯೋಚಿಸಿ. ಬಾಂಗ್ಲಾ ದೇಶದಲ್ಲಿ ಜಮಾತೆಯ ಬೆಂಬಲದ ಮೂಲಗಳಾವುವು? ಅವರ ಶಕ್ತಿ ಕೇಂದ್ರಗಳಾವುವು ? ಇವೆಲ್ಲವನ್ನೂ ಪತ್ತೆ ಹಚ್ಚದೆ ಸಂಕಷ್ಟಗಳ ಮೂಲವನ್ನು ಸಹ ಪತ್ತೆ ಹಚ್ಚಲಾಗದು.

ಒಂದು ವೇಳೆ ಯದ್ಧ ಕಾಲದ ಅತ್ಯಾಚಾರಗಳ ಕುರಿತಾಗಿ ಈಗ ನಡೆಯುತ್ತಿರುವ ವಿಚಾರಣೆಗಳು ಇವರ ಬಲವನ್ನು ಕುಗ್ಗಿಸುತ್ತದೆಯೆಂದುಕೊಂಡರೆ ನೀವು ಸಂಪೂರ್ಣವಾಗಿ ದಿಕ್ಕುತಪ್ಪಿದ್ದೀರ ಅಷ್ಟೆ. ಏಕೆಂದರೆ ಈ ವಿಚಾರಣೆಯು ಅವರಿಗೆ ವರವಾಗಿ ಪರಿಣಮಿಸಿದೆ. ಇದನ್ನು ಬಳಸಿಕೊಂಡು ಈ ಜಮಾತೆಯವರು ಜನರ ಬಳಿ ಹೋಗಿ ನಾವು ಇಸ್ಲಾಂ ಅನ್ನು ಬೆಂಬಲಿಸಿದ್ದರಿಂದ ನಮ್ಮನ್ನು ವಿಚಾರಣೆಗೆ ಗುರಿಪಡಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಹಿಂದಿನಂತೆಯೂ ಈ ವಿಚಾರಣೆಗಳು ಮತ್ತು ಇಸ್ಲಾಂ ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ.

ಈ ಉಪಖಂಡದ ರಾಜಕಾರಣದಲ್ಲಿ ಇಸ್ಲಾಂನ ಪಾತ್ರದ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ರಾಜಕಾರಣದೊಳಗೆ ಧರ್ಮ ಪ್ರವೇಶಿಸಿದಾಕ್ಷಣ ಇದು ಮನುಷ್ಯರನ್ನು ಮತ್ತು ಮಾನವತೆಯನ್ನು ಕೊಂದು ಹಾಕುತ್ತದೆ. ಬುದ್ಧಿಸಂ, ಇಸ್ಲಾಂ, ಕ್ರಿಶ್ಚಿಯನ್, ಸಿಖ್ಖಿಸಂ ಹೀಗೆ ಯಾವುದೇ ಧರ್ಮಗಳಾಗಲಿ ವೈಯುಕ್ತಿಕ ನೆಲೆಯಲ್ಲಿ ಆಚರಣೆಯಲ್ಲಿದ್ದಾಗ ಅವು ಪ್ರತಿಯೊಬ್ಬನನ್ನೂ ಮಾನವಂತನಾಗುವಂತೆ ರೂಪಿಸಬಲ್ಲವು. ಪವಿತ್ರ ಖುರಾನ್ ರಾಜಕಾರಣದ ಕುರಿತಾಗಿ ಏನನ್ನೂ ಹೇಳುವುದಿಲ್ಲ, ಬದಲಾಗಿ ಮನುಷ್ಯತ್ವದ ಕುರಿತಾಗಿ ಮಾತನಾಡುತ್ತದೆ.

ಧರ್ಮಾಧಾರಿತ ರಾಜಕಾರಣವು ಸಮಾಜದೊಳಗೆ ವಿಘಟನೆಯನ್ನು ಹುಟ್ಟಿಹಾಕುತ್ತದೆ. ಪವಿತ್ರ ಖುರಾನ್ ಕೇವಲ ಮನುಷ್ಯರ ಕುರಿತಾಗಿ ಮಾತನಾಡುತ್ತದೆ. ಅದು ಆಡಳಿತ, ಅಧಿಕಾರದ ಕುರಿತಾಗಿ ಮಾತನಾಡುವುದಿಲ್ಲ. ಒಂದು ವೇಳೆ ಖುರಾನ್ ಅಧಿಕಾರದ ಕುರಿತಾಗಿ ಮಾತನಾಡಿದ್ದರೆ ಆಗ ಅದು ಖಲೀಫನನ್ನು ಹೇಗೆ ನೇಮಕ ಮಾಡಿಕೊಳ್ಳಬಹುದು, ಖಲೀಫನನ್ನು ಅಧಿಕಾರದಿಂದ ಹೇಗೆ ಪದಚ್ಯುತಗೊಳಿಸಬಹುದು, ಶುರಾವನ್ನು ಹೇಗೆ ಸ್ಥಾಪಿಸಬಹುದು, ಶುರಾವನ್ನು ಹೇಗೆ ವಿಲೀನಗೊಳಿಸಬಹುದು, ಶುರಾಗೆ ಯಾವ ಬಗೆಯ ಅಧಿಕಾರ ಕೊಡಬಹುದು, ಖಲೀಫಾ ಮತ್ತು ಶುರಾ ನಡುವಿನ ಸಂಬಂಧವೇನು? ಖಲೀಫಾ ಯಾವಾಗ ಅಧಿಕಾರವನ್ನು ಚಲಾಯಿಸಬಹುದು, ಶುರಾದ ಸರದಿ ಯಾವಾಗ? ಹೀಗೆ ಇಂತಹ ವಿಷಯಗಳ ಕುರಿತಾಗಿ ಚರ್ಚಿಸಬಹುದಿತ್ತು. ಆದರೆ ಖುರಾನ್ ಇದೆಲ್ಲದರ ಬಗ್ಗೆ ಮಾತನಾಡುತ್ತದೆಯೇ? ಇಲ್ಲ. ದೇವರು ಪವಿತ್ರ ಖುರಾನ್ ಅನ್ನು ಗಮನಿಸುವ ಹಾಗಿದ್ದರೆ ಖಿಲಾಫತ್ (ರಾಜಕೀಯ ವಾರಸುದಾರರು) ಅನ್ನೂ ನೋಡಿಕೊಳ್ಳುತ್ತಿದ್ದ. ಧರ್ಮವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಧರ್ಮದ ಉದ್ದೇಶ ದೇಶವನ್ನು ಆಳುವುದಂತೂ ಖಂಡಿತ ಅಲ್ಲವೇ ಅಲ್ಲ.

ಬಾಂಗ್ಲಾದಲ್ಲಿ ವೈಯುಕ್ತಿಕ ಲಾಭಕ್ಕಾಗಿ ಧರ್ಮವನ್ನು ರಾಜಕಾರಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ರಾಜಕಾರಣಿಗಳ ಉದ್ದೇಶ ಜನತೆ ತಮ್ಮ ಧಾರ್ಮಿಕ ನಂಬುಗೆಗಳು ಮತ್ತು ಭಾವನೆಗಳನ್ನು ಆಧರಿಸಿ ಮತವನ್ನು ನೀಡುವಂತೆ ಪ್ರೇರೇಪಿಸುವುದು. ಧಾರ್ಮಿಕ ನಂಬಿಕೆಗಳನ್ನು ದುರ್ಲಾಭ ಪಡೆದುಕೊಳ್ಳುವುದಷ್ಟೇ ಇವರ ಉದ್ದೇಶ.

ಜಿನ್ನಾ ಸಾಹೇಬರು ವಿಭಜನೆಗೂ ಮುಂಚೆ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. 1931 ರಲ್ಲಿ ಖಿಲಾಫತ್ ಚಳುವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಮೌಲಾನ ಅಬ್ದುಲ್ ಕಲಾಮ್ ಅವರ ಚಳುವಳಿಯನ್ನು ಬೆಂಬಲಿಸಿದ್ದರು. ಆದರೆ ಅದನ್ನು ಜಿನ್ನಾ ವಿರೋಧಿಸಿ ಕಾಂಗ್ರೆಸ್‌ಗೆ ರಾಜಿನಾಮೆ ನೀಡಿದರು. jinnahಆ ಸಂದರ್ಭದಲ್ಲಿ ಜಿನ್ನಾ ಸಾಹೇಬರು ಗಾಂಧೀಜಿಯವರಿಗೆ ಬರೆದ ಪತ್ರದ ಸಾರಾಂಶ ಹೀಗಿತ್ತು: “ನೀವು ಧರ್ಮವನ್ನು ರಾಜಕಾರಣದೊಳಗೆ ಬಳಸಿಕೊಳ್ಳುತ್ತಿದ್ದೀರಿ. ಆದರೆ ಇದು ರಕ್ತಪಾತವನ್ನಷ್ಟೇ ಉಂಟು ಮಾಡುತ್ತದೆ. ಈ ಬಗೆಯ ಧರ್ಮದ ಬಳಕೆಯಿಂದ ಭಾರತ ಇಬ್ಭಾಗವಾಗುವುದು ಖಂಡಿತ.” ಆದರೆ ದುರಂತವೆಂದರೆ ಇದೇ ಜಿನ್ನಾ ಸಾಹೇಬರು ಮುಂದೆ ಮಾಡಿದ್ದು ಇದನ್ನೇ. ಮುಸ್ಲೀಂ ಲೀಗನ್ನು ಸ್ಥಾಪಿಸಿದರು. ನಂತರ ಏನಾಯಿತು? ಇಂಡಿಯಾ ಮತ್ತು ಪಾಕಿಸ್ತಾನ ಬೇರೆ ಬೇರೆ ಆಯಿತು.

ಕೇವಲ ಎರಡು ಧರ್ಮಗಳ ಆಧಾರದ ಮೇಲೆ ಈ ಎರಡ್ಯ್ ದೇಶಗಳ ಸ್ಥಾಪನೆ ಆಯಿತು. ಆದರೆ ಅದು ಸರಿ ಇತ್ತೇ? ಹಿಂದುಸ್ತಾನದಲ್ಲಿ ಸುಮಾರು 17 ಧರ್ಮಗಳಿದ್ದವು/ವೆ. ಅಂದರೆ ಇಂಡಿಯಾವನ್ನು 17 ಭಾಗಗಳಾಗಿ ಮಾಡಬೇಕೆ? ಇದು ಎಂತಹ ಭಯಂಕರ ಅಲ್ಲವೆ? ವಿಭಜನೆ ಯಾರು ಮುಸ್ಲಿಮ್, ಯಾರು ಮುಸ್ಲಿಮ್ ಅಲ್ಲ ಎನ್ನುವ್ ಆಧಾರದ ಮೇಲೆ ಆಯಿತು. ಹಿಂದು, ಬೌಧ್ಹರು, ಸಿಖ್ಖರು, ಪಾರ್ಸಿಗಳು, ಇವರೆಲ್ಲ ಹಿಂದುಗಳಾಗಿದ್ದರೆ? ಧರ್ಮದ ಟೊಳ್ಳು ಅರ್ಥೈಸುವಿಕೆಯಿಂದ ಅಂತಹ ವಿಭಜನೆ ಆಗಿದ್ದು ನಿಜಕ್ಕೂ ನಿಜಕ್ಕೂ ಅಪಾಯಕಾರಿ. ಇದೇ ಬಗೆಯ ಬೇಧೀಯ ನೀತಿಯು ಇಸ್ಲಾಂ ಧರ್ಮವನ್ನೇ ನಾಶ ಮಾಡುತ್ತದೆ.

ಧರ್ಮವನ್ನು ಆಧರಿಸಿದ ಎಲ್ಲ ಪಕ್ಷಗಳ ನೀತಿಯು ಒಂದೇ ಆಗಿರುತ್ತದೆ. ಮುಸ್ಲಿಂ ಲೀಗನ್ನೇ ತೆಗೆದುಕೊಳ್ಳಿ. ಅವರ ಪ್ರಕಾರ ನೀನು ಮುಸ್ಲಿಂ ಆಗಿದ್ದರೆ ನೀನು ಮುಸ್ಲಿಂ ಲೀಗ್ ಅನ್ನು ಸೇರಬೇಕು. ಅಂದರೆ ಇನ್ನೊಂದು ರೀತಿಯಲ್ಲಿ ಇವರು ನೀನು ಮುಸ್ಲಿಂ ಲೀಗ್‌ಗೆ ಸೇರಿಲ್ಲವಾದ್ದರಿಂದ ನೀನು ಮುಸ್ಲಿಂನಲ್ಲ ಎಂದು ಹೇಳುತ್ತಿದ್ದಾರಲ್ಲವೇ? ಇದೇ ಮಾದರಿಯಲ್ಲಿ ಈ ಧರ್ಮಾಧಾರಿತ ರಾಜಕಾರಣವು ಜನರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ. ದುರಂತವೆಂದರೆ ಈ ರಾಜಕಾರಣಿಗಳನ್ನು ಟೀಕಿಸಿದರೆ ಅವರು ತಮ್ಮ ವಿರುದ್ಧದ ಈ ಟೀಕೆಯನ್ನು ಇಸ್ಲಾಂನ ವಿರುದ್ಧದ ಟೀಕೆಯೆಂದು ಪ್ರತಿಬಿಂಬಿಸುತ್ತಾ ಜನತೆಯನ್ನು ಉದ್ರೇಕಿಸುತ್ತಾರೆ. ಇದು ಧರ್ಮಾಧಾರಿತ ರಾಜಕಾರಣದ ಬಲು ದೊಡ್ಡ ಅಪಾಯ. ನೀವೆಂದಾದರು ಮೌಲ್ವಿಗಳು ತಮ್ಮಲ್ಲಿನ ತಪ್ಪುಗಳನ್ನು ಒಪ್ಪಿಕೊಂಡಿದ್ದನ್ನು ಕಂಡಿದ್ದೀರ? ಇಲ್ಲ, ಏಕೆಂದರೆ ಅವರು ಇಸ್ಲಾಂ ಅನ್ನು ರಕ್ಷಣೆಯಾಗಿ ಬಳಸಿಕೊಳ್ಳುತ್ತಾರೆ. ತಪ್ಪು ಮಾಡಿಯೂ ತಪ್ಪೊಪ್ಪಿಕೊಳ್ಳದವರು ಈಗಾಗಲೆ ನರಕದಲ್ಲಿದ್ದಾರೆಯೆ ಹೊರತು ಇಸ್ಲಾಮನ್ನು ಕೆಟ್ಟದ್ದಕ್ಕಾಗಿ ಬಳಸಿಕೊಳ್ಳುವುದರ ಬಗ್ಗೆ ಮಾತನಾಡುವವರು ಅಲ್ಲ.

ನಮಗೆಲ್ಲ ತಿಳಿದಿರುವಂತೆ ಇಸ್ಲಾಂ ಧರ್ಮವು ಶಾಂತಿಯನ್ನು ಬೋಧಿಸುತ್ತದೆ. ಆದರೆ 1971 ರ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಜಮಾತೆಯು ಪಾಕಿಸ್ತಾನ್ ಆಕ್ರಮಿತ ಸೈನ್ಯದೊಂದಿಗೆ ಬೆರೆತು ಆಗಿನ ಅತ್ಯಾಚಾರಗಳಲ್ಲಿ ಭಾಗಿಯಾಗುತ್ತದೆ. ನೀವು ಈ 1971 ಮತ್ತು ಇಸ್ಲಾಂ ನಡುವಿನ ಸಂಬಂಧವನ್ನು ಹೇಗೆ ವಿವರಿಸುತ್ತೀರಿ?
1970 ರ ಚುನಾವಣೆಯಲ್ಲಿ ಜಮಾತೆಯು ಧರ್ಮದ ಆಧಾರದ ಮೇಲೆ ರಾಷ್ಟ್ರೀಯ ಚುನಾವಣೆಗಳಲ್ಲಿ ಭಾಗವಹಿಸಿತ್ತು. ಆದರೆ ಅವರಿಗೆ ಗೆಲ್ಲಲಾಗಲಿಲ್ಲ. ಅಗ ಪಾಕಿಸ್ತಾನ್ ಆಕ್ರಮಿತ ಸೈನ್ಯವು ಅವರನ್ನು ಬಳಸಿಕೊಂಡಿತು. ಈ ಎಲ್ಲ ಗುಂಪುಗಳನ್ನು ಪಾಕಿಸ್ತಾನ್ ಆಕ್ರಮಿತ ಸೈನ್ಯವೇ ಸ್ಥಾಪಿಸಿದ್ದು. ಆ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಡೆದ ಸಭೆಯೊಂದರಲ್ಲಿ ಪಾಕಿಸ್ತಾನದ ಜನರಲ್ ನಿಯಾಜಿ ಬಾಂಗ್ಲಾದೇಶ ಜಮಾತ್ ಎ- ಇಸ್ಲಾಂನ ನಾಯಕರಿಗೆ ಹೇಳಿದ್ದು ನಾವು ಅಲ್- ಬಾದ್ರ್, ಅಲ-ಶಾಮ್ಸ ಅನ್ನು ಸ್ಥಾಪಿಸಿದ್ದೇವೆ. ನಿಮಗೆ ಹಣವನ್ನು, ಶಸ್ತ್ರಗಳನ್ನು, ತರಬೇತಿಯನ್ನು ನೀಡುತ್ತೇವೆ. ಈ ಗುಂಪುಗಳನ್ನು ನಿಮ್ಮದೆಂದು ಹೇಗೆ ವಾದಿಸುತ್ತೀರಿ?”

ಈ ಅಲ್- ಬಾದ್ರ್, ಅಲ-ಶಾಮ್ಸ ಗುಂಪುಗಳ ಪ್ರಾಂತೀಯ ನಾಯಕ ಮೋತಿರ್ ರೆಹಮಾನ್ ನಿಜಾಮಿ. ಆತನ ಮೇಲಧಿಕಾರಿ ಕುರ್ರುಮ್ ಝಾ ಮುರಾದ್. ತನಿಖಾ ತಂಡವೊಂದರ ವರದಿಯ ಪ್ರಕಾರ ಕುರ್ರುಮ್ ಝಾ ಮುರಾದ್ 15 ಬಾಂಗ್ಲಾ ದೇಶಿಯರನ್ನು ಸಾಯಸಿದ್ದ. ಇಸ್ಲಾಮ್ ಆಧರಿತ ಗುಂಪುಗಳು ಪಾಕಿಸ್ತಾನಿ ಆರ್ಮಿಯ ಪರವಾಗಿ ಕೆಲಸ ಮಾಡಿದ್ದವು.

ನಾವು ಈ ವಿದ್ಯಾಮಾನಗಳನ್ನು ಅರ್ಥ ಮಾಡಿಕೊಳ್ಳಲು ಮತ್ತಷ್ಟು ಹಿಂದಕ್ಕೆ ಹೋಗಬೇಕು. ರೂಸ್‌ವೆಲ್ಟ್ ಅವರಿಂದ ಚರ್ಚಿಲ್ ಅವರಿಗೆ ಪತ್ರವೊಂದು ಬರುತ್ತದೆ. ಅದರಲ್ಲಿ ರೂಸ್‌ವೆಲ್ಟ್ ಅವರು ಚರ್ಚಿಲ್ ಅವರಿಗೆ “ನೀವು ಎರಡನೇ ಮಹಾಯುದ್ಧದಲ್ಲಿ ನಿಮಗೆ ಬೆಂಬಲಿಸಬೇಕೆಂದು ನಮ್ಮನ್ನು ಕೇಳಿದ್ದೀರಿ. ಸರಿ. ನಾವು ಬೆಂಬಲಿಸುತ್ತೇವೆ. ಆದರೆ ನಮ್ಮ ಕರಾರೆಂದರೆ ನೀವು ಇಂಡಿಯಾವನ್ನು ದುರ್ಬಲಗೊಳಿಸಬೇಕು ಮತ್ತು ಇದನ್ನು ಇಬ್ಭಾಗವಾಗಿಸಿ ಎರಡು ಮಿಲಿಟರಿ ರಾಜ್ಯಗಳನ್ನು ಸ್ಥಾಪಿಸಬೇಕು,” ಎಂದು ಹೇಳುತ್ತಾರೆ. ಈಗ ಅರ್ಥವಾಗಿರಬೇಕಲ್ಲವೇ ಇಲ್ಲಿ ಯಾರು ಪ್ರಮುಖ ಪಾತ್ರ ವಹಿಸಿದ್ದಾರೆಂದು.

ಯುದ್ಧ ಕಾಲದ ಅತ್ಯಾಚಾರಗಳ ವಿಚಾರಣೆಗಾಗಿ ನಿಯುಕ್ತಗೊಂಡ ಟ್ರಿಬ್ಯೂನಲ್ 1971 ರ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಅಪರಾಧಗಳನ್ನೆಸಿಗಿದ ಕ್ರಿಮಿನಲ್‌ಗಳ ವಿರುದ್ಧ ಮೊಕದ್ದಮೆಗಳನ್ನು ನಡೆಸುತ್ತಿದೆ. ಈ ಕ್ರಿಮಿನಲ್‌ಗಳ ಪಟ್ಟಿಯನ್ನು ಗಮನಿಸಿದಾಗ ಈ ಬಹುಪಾಲು ಆರೋಪಿಗಳು ಜಮಾತ್ ಎ- ಇಸ್ಲಾಂನ ಬಾಂಗ್ಲಾ ದೇಶದ ಅಂಗವಾಗಿರುತ್ತಾರೆ. ಇದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ಮೊದಲಿಗೆ ಮಾನವತೆಯ ವಿರುದ್ಧವಾಗಿ ಯಾರೇ ಅತ್ಯಾಚಾರ ಮಾಡಲಿ ಅವರು ಶಿಕ್ಷೆಗೆ ಒಳಪಡಲೇಬೇಕು. ಸ್ಥಳೀಯ ಬಾಂಗ್ಲಾ ದೇಶೀಯರ ಹೊಣೆಯೇನೆಂದರೆ ಈ ಕ್ರಿಮಿನಲ್‌ಗಳಿಗೆ ರಾಜಕೀಯ ಪ್ರವೇಶವನ್ನು ನಿರಾಕರಿಸುವುದು. ಷೇಕ್ ಸಾಹೇಬರು ಗತಿಸಿದ ನಂತರ ಅಧಿಕಾರ ವಹಿಸಿಕೊಂಡ ಪಕ್ಷದವರೇ ಈ ಅಪರಾಧಿಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು. ಇಂದು ಖಲೀದ ಜಿಯಾ ಚುನಾವಣೆಗೆ ಸ್ಪರ್ಧಿಸಿದರೆ ಜಮಾತೆಯು ಆಕೆಯ ಬೆಂಬಲಕ್ಕಿರುತ್ತದೆ. ಇವರು ಅಧಿಕಾರಕ್ಕೆ ಬಂದರೆ ಏನಾಗಬಹುದೆಂದು ಈಗಾಗಲೇ ನಿಮ್ಮ ಅನುಭವಕ್ಕೆ ಬಂದಿರುತ್ತದೆ.

ನೀವು ಬಾಂಗ್ಲಾ ಮತ್ತು ಪಾಕಿಸ್ತಾನ ದೇಶಗಳ ಜಮಾತೆಯ ಚಟುವಟಿಕೆಗಳನ್ನು ಅಧ್ಯಯನ ಮಾಡಿದ್ದೀರಾ? ನಿಮಗೇನಾದರೂ ಇವೆರಡರ ನಡುವೆ ಸಾಮ್ಯತೆ ಗೋಚರಿಸಿದೆಯೇ?
ಎರಡೂ ದೇಶಗಳಲ್ಲಿರುವ ಜಮಾತೆಯ ಎರಡೂ ಪಕ್ಷಗಳು ವ್ಯಕ್ತಿಯೊಬ್ಬನ ಎಡಗೈ ಮತ್ತು ಬಲಗೈಯಂತೆ. ಆದರೆ ಇವೆರಡನ್ನು ನಿಯಂತ್ರಿಸಲು ಎರಡು ಅಧಿಕಾರ ಕೇಂದ್ರಗಳಿಲ್ಲ, ಬದಲಾಗಿ ಇವೆರೆಡನ್ನು ನಿಯಂತ್ರಿಸುವುದು ಮಾತ್ರ ಒಂದೇ ಕೈ. ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಾಂಗ್ಲಾದೇಶದ ವಿದ್ಯಮಾನಗಳ ಕುರಿತಾಗಿ ಬರೆಯುವಾಗ ಅಲ್ಲಿನ ಜಮಾತೆಯ ಬಗೆಗೂ ಬರೆಯುತ್ತಾರೆ. ಅಲ್ಲಿನ ಸರ್ಕಾರದ ವಿರೋಧದ ವರದಿಗಳನ್ನು ಪ್ರಟಿಸುತ್ತಾರೆ.ಉದಾಹರಣೆಗೆ ನೋಡಿ ಆ ಸೆಕ್ಯುಲರ್ ಬಾಂಗ್ಲಾ ದೇಶದಲ್ಲಿ ಇಸ್ಲಾಂ ಅನ್ನು ಹೇಗೆ ಅಪಮಾನಗೊಳಿಸುತ್ತಿದ್ದಾರೆ ಎಂದು ಬರೆಯುತ್ತಾ ಈ ಸೆಕ್ಯುಲರ್ ಬಾಂಗ್ಲಾದಲ್ಲಿ ಇಸ್ಲಾಂ ಅನ್ನು ಮಾತನಾಡಿದ್ದಕ್ಕೆ ಶಿಕ್ಷಿಸುತ್ತಾರೆ ಎಂದು ಸಹ ವರದಿ ಮಾಡುತ್ತಾರೆ.

ಯುದ್ಧ ಕಾಲದ ಅತ್ಯಾಚಾರಗಳ ವಿಚಾರಣೆಗಾಗಿ ನಿಯುಕ್ತಗೊಂಡ ಟ್ರಿಬ್ಯೂನಲ್‌ನ ವಿಚಾಣೆಯಲ್ಲಿ ಕೇವಲ ಬಾಂಗ್ಲಾ ದೇಶದ ಅಪರಾಧಿಗಳ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಜೊತೆಗೆ ಪಾಕಿಸ್ತಾನದ ಸೈನ್ಯ ಮತ್ತು ಇತರೇ ದೇಶದ ಯುದ್ಧ ಕಾಲದ ಅಪರಾಧಿಗಳನ್ನು ಸಹ ವಿಚಾರಣೆಗೆ ಒಳಪಡಿಸಬೇಕಲ್ಲವೇ? ಕನಿಷ್ಟ ಅಂತರಾಷ್ಟ್ರೀಯ ಕೋರ್ಟಗಳಲ್ಲಿ.
ಕ್ರೈಮ್ ಟ್ರಿಬ್ಯೂನಲ್ ತನ್ನ ಆದೇಶವನ್ನು ಪ್ರಕಟಿಸಿದಾಗ ಪಾಕಿಸ್ತಾನದ ಜಮಾತ್ ಅಮೀರ್ ಸೈಯದ್ ಮುನಾವರ್ ಹಸನ್ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನ ಸರ್ಕಾರಕ್ಕೆ ಷೇಕ್ ಹಸೀನಾ ಅವರ ಬಳಿ ನಿಯೋಗವನ್ನು ಕಳಿಸಬೇಕೆಂದು ಸೂಚಿಸುತ್ತಾರೆ. ಮುಂದುವರೆದು “ನಾವು ಮುಜೀಬರ್ ಅವರೊಂದಿಗೆ ಯುದ್ಧ ಕಾಲದ ಖೈದಿಗಳನ್ನು ವಿಚಾರಣೆ ನಡೆಸಬಾರದೆಂದು ಒಪ್ಪಂದ ಮಾಡಿಕೊಂಡಿದ್ದೇವೆ. ಹಾಗಿದ್ದಲ್ಲಿ ಅವರು ಹೇಗೆ ಈ ಒಪ್ಪಂದವನ್ನು ಧಿಕ್ಕರಿಸಿ ಅಪರಾಧಿಗಳನ್ನು ವಿಚಾರಣೆ ನಡೆಸುತ್ತಾರೆ?” ಎಂದು ಹೇಳುತ್ತಾರೆ. ಈಗ ನಾನು ಕೇಳುವ ಪ್ರಶ್ನೆ ಆ ಒಪ್ಪಂದ ಯಾವುದು? ನಿಜಕ್ಕೂ ಆ ಒಪ್ಪಂದದಲ್ಲಿ ಯುದ್ಧ ಕಾಲದ ಅಪರಾಧಿಗಳನ್ನು ವಿಚಾರಣೆಗೆ ಗುರಿಪಡಿಸಬಾರದೆಂದು ಹೇಳಿದ್ದಾರೆಯೇ?

ವಾಸ್ತವದಲ್ಲಿ ಆ ಬಗೆಯ ಒಪ್ಪಂದವೊಂದು ಜಾರಿಯಲ್ಲಿದೆ. ಅದರಲ್ಲಿ ಸುಮಾರು 195 ಯುದ್ಧಕಾಲದ ಅಪರಾಧಿಗಳನ್ನು ತನ್ನ ದೇಶದಲ್ಲಿ ವಿಚಾರಣೆ ನಡೆಸಬುಹುದೆಂದು ತಿಳಿಸಲಾಗಿದೆ. ಆದರೆ ಆ ರೀತಿ ಇದುವರೆಗು ಪಾಕಿಸ್ತಾನ ನಡೆದುಕೊಂಡಿದೆಯೇ?1971_Surrender_of_Pakistan ಕೊನೆವರೆಗೂ ಜನರಲ್ ನಿಯಾಜಿ ಹೇಳುತ್ತಿದ್ದದ್ದು “ನಾನು ಕೇವಲ ಆರ್ಮಿ ಅಧಿಕಾರಿ. ಮೇಲಿನವರ ಆದೇಶಗಳನ್ನು ಪಾಲಿಸಿದ್ದೇನಷ್ಟೆ.” ಈ ಆದೇಶಗಳನ್ನು ಪಾಲಿಸಿದ್ದಕ್ಕೆ ಆರ್ಮಿಯನ್ನು ಇದೇ ಬಗೆಯಲ್ಲಿ ವಿಚಾರಣೆಗೆ ಗುರಿಪಡಿಸಿದ್ದಲ್ಲಿ ಆರ್ಮಿಯ ಅವಶ್ಯಕತೆ ಎಲ್ಲಿದೆ? ನಿಯಾಜಿ ಇದನ್ನು ಹಮಿದುರ್ ರೆಹಮಾನ್ ಕಮಿಷನ್‌ಗೆ ಹೇಳಿದ್ದು.

ಆದರೆ ಅದೇ ಸಂದರ್ಭದಲ್ಲಿ ಲೆಫ್ಟಿನೆಂಟ್ ಜನರಲ್ ಶಹಬಾಜಾ ಯಾಕೂಬ್ ಅಲಿ ಖಾನ್ ಈ 1971 ಯುದ್ಧದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿ ಪಾಕಿಸ್ತಾನ ಆರ್ಮಿಯಿಂದ ನಿವೃತ್ತಿ ಹೊಂದುತ್ತಾರೆ. ಆದರೆ ಇವರಿಗೆ ಆರ್ಮಿಯ ಆದೇಶವನ್ನು ಧಿಕ್ಕರಿಸಿದ್ದಾರೆಂದೇನು ಶಿಕ್ಷೆಯನ್ನು ನೀಡುವುದಿಲ್ಲ. ಬದಲಾಗಿ ಜುಲ್ಫೀಕರ್ ಅಲಿ ಭುಟ್ಟೋ ಅವರು ಶಹಬಾಜಾ ಅವರನ್ನು ವಿದೇಶಾಂಗ ಮಂತ್ರಿಯಾಗಿ ನೇಮಿಸುತ್ತಾರೆ.

ಲಾಹೋರಿನಲ್ಲಿ ಸೆಮಿನಾರ್ ಒಂದರಲ್ಲಿ ಈ ಸೇನಾಧಿಕಾರಿ ನಿಯಾಜಿಯ ಮಗಳು ಪ್ರೆಸಿಡೆಂಟ್ ಮುಷರಫ್ ಅವರ ಸಮ್ಮುಖದಲ್ಲಿ ತನ್ನ ತಂದೆ (ನಿಯಾಜಿ)ಯವರಿಗೆ ಕಿರುಕಳ ಕೊಡುತ್ತಿದ್ದಾರೆ .ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪೆನ್ಷನ್ ಅನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿಸುತ್ತಾರೆ

ಕೆಲವೊಮ್ಮೆ ಈ ಧಾರ್ಮಿಕ ನಾಯಕರು ಅಧಿಕಾರಸ್ತರ ಷಡ್ಯಂತ್ರಕ್ಕೆ ಬಲಿಯಾಗುತ್ತಾರೆ. ಇದರಿಂದ ಹೊರಬರಲಾಗದೆ ಸೋತು ಹೋಗುತ್ತಾರೆ. ಅಲ್- ಬಾದ್ರ್, ಅಲ-ಶಾಮ್ಸ ಗುಂಪಿನ ಸದಸ್ಯರು ಬಾಂಗ್ಲಾ ಸ್ವತಂತ್ರದ ನಂತರ ಪಾಕಿಸ್ತಾನಕ್ಕೆ ವಲಸೆ ಹೋದರು. ಇಂದಿಗೂ ಅವರು ಅಲ್ಲಿ ಭಿಕ್ಷೆ ಬೇಡುತ್ತಿದ್ದಾರೆ.ಇವರೆಲ್ಲ ಶೋಷಿಸಲ್ಪಟ್ಟವರು. ಇಲ್ಲಿ ವ್ಯಕ್ತಿ ಮುಖ್ಯವಾಗುವುದಿಲ್ಲ. ಆದರೆ ಧರ್ಮಾಧಾರಿತ ಸಂಸ್ಥೆಗಳು ವಿಚಾರಣೆಗೊಳಗಾಬೇಕು.

ಜಮಾತೆ ಸಹ 1971ರ ಯುದ್ಧಕಾಲದ ಅಪರಾಧಗಳಿಗಾಗಿ ಟ್ರಿಬ್ಯೂನಲ್‌ನ ವಿಚಾರಣೆಗೆ ಒಳಪಟ್ಟಿದೆ. ಇದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ನನ್ನ ಗ್ರಹಿಕೆಯ ಪ್ರಕಾರ 1971 ರಲ್ಲಿ ತಾವು ನಡೆಸಿದ ಕೃತ್ಯದ ಬಗ್ಗೆ ಜಮಾತೆಗೆ ಪಶ್ಚತ್ತಾಪವಿಲ್ಲ. ಬದಲಾಗಿ ಅದರ ಕುರಿತಾಗಿ ಅಭಿಮಾನವಿದೆ. ಅವರ ಪ್ರಕಾರ ಇಸ್ಲಾಂಗೆ ಅನುಗುಣವಾಗಿಯೇ ನಡೆದುಕೊಂಡಿದ್ದೇವೆಂದೇ ವಾದಿಸುತ್ತಾರೆ. ಇವರು ಇಸ್ಲಾಂ ರಾಷ್ಟ್ರವನ್ನು ಪ್ರತಿಪಾದಿಸುತ್ತಾರೆ. ಬಾಂಗ್ಲಾ ದೇಶವು ಇಸ್ಲಾಂ ರಾಷ್ಟ್ರವಾಗದೆ ಸೆಕ್ಯುಲರ್ ದೇಶವೆಂದು ಘೋಷಿಸಿಕೊಂಡಿದ್ದು ಇದರ ವಿರುದ್ಧ ಧಾರ್ಮಿಕ ಅನುಕಂಪವುಳ್ಳ ಜನರ ವಿಶ್ವಾಸ ಗಳಿಸುತ್ತಿದ್ದಾರೆ. ಇವರಾಗಲೇ ಸೆಕ್ಯುಲರ್ ಎನ್ನುವ ಪದವನ್ನು ಒಂದು ಬಯ್ಗಳ ಪದವಾಗಿ ಚಾಲ್ತಿಗೆ ತಂದಿದ್ದಾರೆ.

ಸೆಕ್ಯುಲರ್ ಎನ್ನುವ ಪದವನ್ನು ಧರ್ಮವಿರೋಧಿ ಪದವೆಂದು ಅಪಪ್ರಚಾರ ನಡೆಸಿದ್ದು ನನ್ನ ಪ್ರಕಾರ ಜಮಾತೆಯ ಬಲು ದೊಡ್ಡ ಕ್ರೈಮ್. ಏಕೆಂದರೆ ಸೆಕ್ಯುಲರ್ ಅಂದರೆ ಅದು ಒಂದು ಧೋರಣೆ. ಒಂದು ಮನೋವೃತ್ತಿ. ಅದರ ಭಾವಾರ್ಥ ನಿನ್ನ ಒರಿಜಿನಾಲಿಟಿಯನ್ನು ಕಳೆದುಕೊಳ್ಳಬೇಡ, ಹಾಗೆಯೇ ಬೇರೊಬ್ಬರ ನಂಬಿಕೆಯನ್ನು ಘಾಸಿಗೊಳಿಸಬೇಡ. ಆದರೆ ಜಮಾತೆಯ ಪ್ರಕಾರ ಇಸ್ಲಾಂ ಅನ್ನು, ಅದರ ರಾಜಕಾರಣವನ್ನು ಬೆಂಬಲಿಸದವರೆಲ್ಲರನ್ನೂ ನಾಶಮಾಡಬೇಕು.

ತನ್ನ ಪತಿ ಜಿಯಾ ಉರ್ ರೆಹಮಾನ್ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದಿಂದ ಖಲೀದಾ ಜಿಯಾ ತೋರಿಕೆಗಾಗಿ ಪ್ರಜಾಪ್ರಭುತ್ವದ ಕಡೆಗೆ ವಾಲಿದ್ದಾರಷ್ಟೆ.

ಜಮಾತ್ ಎ- ಇಸ್ಲಾಮಿಯಂತಹ ಪಕ್ಷವು ಪಾಕಿಸ್ತಾನ, ಇಂಡಿಯಾ, ಬಾಂಗ್ಲಾದೇಶದಲ್ಲಿ ಇಸ್ಲಾಂ ಮಿಲಿಟೆನ್ಸಿಯಂತಹ ರಾಡಿಕಲ್ ಚಳುವಳಿಗೆ ತನ್ನ ಕೊಡುಗೆಯನ್ನು ನೀಡಿದೆಯೇ ?
ಕಡೆಗೆ ಜಮಾತೆಯ ಗುರಿ ಏನೆಂದರೆ ಇಸ್ಲಾಂ ಅನ್ನು ವಿವಾದಾಸ್ಪದ ಧರ್ಮವನ್ನಾಗಿಸುವುದು. ಇವರ ಈ ಕೃತ್ಯಗಳು ಪಾಕಿಸ್ತಾನದಲ್ಲಿ ಜುಲ್ಫೀಕರ್ ಅಲಿ ಭುಟ್ಟೋ ಅವರ ವಿರುದ್ಧದ ಚಳುವಳಿಗಳಾಗಿ ಸಹ ರೂಪುಗೊಂಡವು. ಅಲ್ಲಿ ಇಸ್ಲಾಂ ಮುರ್ದಾಬಾದ್ ಎನ್ನುವ ಘೋಷಣೆಯೂ ಕೇಳಿಬರುತ್ತಿತ್ತು. ಅಂದರೆ ಇಸ್ಲಾಂ ಅನ್ನು ರಾಜಕಾರಣಕ್ಕೆ ಬಳಿಸಿಕೊಂಡಿದ್ದಕ್ಕಾಗಿ ನಾವೆಲ್ಲ ಇಸ್ಲಾಂ ಮುರ್ದಾಬಾದ್ ಘೋಷಣೆಯನ್ನು ಕೇಳಬೇಕಾಯಿತು.

ಹಾಗಿದ್ದಲ್ಲಿ ನಿಮ್ಮ ಪ್ರಕಾರ ಇಸ್ಲಾಮಿಕ್ ರಾಜ್ಯ ಮತ್ತು ಸೆಕ್ಯುಲರ್ ರಾಜ್ಯದ ಅರ್ಥವೇನು ?
ಒಂದು ದೇಶವು ಇಸ್ಲಾಂ ಅನ್ನು ಆಧರಿಸಿ ಕಟ್ಟಿದ್ದೇವೆ ಎಂದು ವಾದಿಸುವುದಾದರೆ, ಅದು ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶವಾಗಿದ್ದರೆ dhaka-tribuneಅಲ್ಲಿ ತಾಲಿಬಾನ್‌ಗಳಿಗೆ ಅಧಿಕಾರವನ್ನು ಗಳಿಸಲು ಹಕ್ಕಿದೆ. ಯಾವುದೇ ದೇಶವೊಂದರಲ್ಲಿ ಧರ್ಮವು ಜನತೆಗಾಗಿ ಇರಬೇಕೇ ಹೊರತು ಜನತೆ ಧರ್ಮಕ್ಕಾಗಿ ಅಲ್ಲ. ತನ್ನ ಛಾವಣೆಯಡಿಯಲ್ಲಿ ವಿಭಿನ್ನ ಧರ್ಮಗಳು ಒಂದಾಗಿ ಬದುಕುವಂತಹ ಅವಕಾಶ ಕಲ್ಪಿಸುವ ದೇಶ ಬದುಕುಳಿಯುತ್ತದೆ. ದೇಶವೊಂದು ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕೆಂದರೆ ಅಲ್ಲಿ ಧರ್ಮವಿರುವುದಿಲ್ಲ. ಪ್ರಜಾಪ್ರಭುತ್ವ ಯಾವಾಗಲೂ ಸೆಕ್ಯುಲರ್ ಆಗಿರುತ್ತದೆ. ನೀವು ಸೆಕ್ಯುಲರ್ ಆಗದಿದ್ದರೆ ನಿಮ್ಮನ್ನು ಪ್ರಜಾಪ್ರಭುತ್ವವಾದಿಗಳೆಂದು ಕರೆಯಲು ಸಾಧ್ಯವಿಲ್ಲ. “ಒಬ್ಬ ಮನುಷ್ಯ, ಒಂದು ಪದ” ಎಂದರೆ ಎಲ್ಲರೂ ಸಮಾನರು ಎಂದರ್ಥ. ಅಂದರೆ ವಿಭಿನ್ನ ಧರ್ಮದವರಾಗಿದ್ದರೂ ಎಲ್ಲರೂ ಸಮಾನರೆಂದರ್ಥ. ಯಾರು ಮುಸ್ಲಿಂ ಯಾರು ಮುಸ್ಲಿಮ ಅಲ್ಲ ಎಂಬುದು ಮುಖ್ಯವೇ ಅಗುವುದಿಲ್ಲ.

ಆದರೆ ಇಸ್ಲಾಂ ಅಂದರೆ ರಾಜಕೀಯವೆಂದೇ ಇಸ್ಲಾಂ ರಾಜಕೀಯ ಪಕ್ಷಗಳು ವಾದಿಸುತ್ತಾವಲ್ಲ?
(ನಗುತ್ತ) ಇಸ್ಲಾಂ ಮತ್ತೇನಲ್ಲದೇ ರಾಜಕೀಯವಷ್ಟೆ ಎಂಬುದಾದಲ್ಲಿ ಅವರಿಗೆ ಮತ ಹಾಕದವರೆಲ್ಲರೂ ಕಾಫಿರರು ಹಾಗಾದರೆ.

ನಿಮ್ಮ ತಂದೆಯವರು ಜಮಾತೆಯ ಸ್ಥಾಪಕರಲ್ಲೊಬ್ಬರು. ಇಂದಿಗೂ ಬಾಂಗ್ಲಾ ದೇಶದಲ್ಲಿ ಅದರ ಸ್ಥಾಪಕರೆಂದೇ ಗುರುತಿಸಲ್ಪಡುತ್ತಾರೆ. ಈ ಜಮಾತೆಯ ಸ್ಥಾಪಕರ ಮಗನಾಗಿ ಅವರಿಗೆ ಏನಾದರೂ ಉಪದೇಶಿಸ ಬಯಸುತ್ತೀರ?
(ನಗುತ್ತ) ಇಂದು ಅವರೆಲ್ಲ ಸಲಹೆಗಳನ್ನು ಸ್ವೀಕರಿಸುವ ಮಟ್ಟವನ್ನು ಮೀರಿದ್ದಾರೆ. ನನಗನ್ನಿಸುತ್ತದೆ ಇಂದು ಅವರಿಗೆ ಯಾರ ಅವಶ್ಯಕತೆಯೂ ಬೇಕಾಗಿಲ್ಲ.

– ಕೃಪೆ : ಢಾಕಾ ಟ್ರಿಬ್ಯುಲ್; ಅಕ್ಟೋಬರ್ 6, 2013.
ಸಂದರ್ಶಕರು : ಜುಲ್ಫೀಕರ್ ಅಲಿ ಮನಿಕ್, ಮಕ್ತಾಶ್ರೀ ಚಕ್ಮಾ ಸಾಥಿ
ಅನುವಾದ: ಬಿ. ಶ್ರೀಪಾದ ಭಟ್