Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಪ್ರಕೃತಿ ಕೇಂದ್ರಿತ ಅಭಿವೃದ್ಧಿ ನಮ್ಮದಾಗಲಿ


– ರೂಪ ಹಾಸನ


 

ಯಾವುದೇ ಪರಿಸರ ಸಂಬಂಧಿ ಯೋಜನೆಗಳ ಕುರಿತು ಸರ್ಕಾರದಿಂದ ಚರ್ಚೆ ಪ್ರಾರಂಭವಾದೊಡನೆ ಪರಿಸರವಾದಿಗಳು ಅದು ಸಲ್ಲದು ಎಂದು ತಮ್ಮ ಗಲಾಟೆ ಪ್ರಾರಂಭಿಸುತ್ತಾರೆ. ಅಭಿವೃದ್ಧಿವಾದಿಗಳು ಯೋಜನೆಯ ಅವಶ್ಯಕತೆಯನ್ನು ಪ್ರತಿಪಾದಿಸಿ ತಮ್ಮ ವಾದ ಮುಂದಿಡುತ್ತಾರೆ. ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರು ಪರ-ವಿರೋಧ ಚರ್ಚೆ ನಡೆಸುತ್ತಾರೆ. ಎಲ್ಲರಿಗೂ ಅವರವರದೇ ಒಂದೊಂದು ಸಿದ್ಧಾಂತ. ಮತ್ತೆ ಯೋಜನೆ ಕಾರ್ಯರೂಪಕ್ಕೆ ಬರದೇ ನೆನೆಗುದಿಗೆ ಬೀಳುತ್ತದೆ. ಆಗೀಗ ಪ್ರಸ್ತಾಪಗೊಂಡು ಮತ್ತೆ ಮರೆತೂ ಹೋಗುತ್ತದೆ. ಆದರೆ ಮೂಲ ಸಮಸ್ಯೆ? ಅದು ಒಂದಿಂಚೂ ಕದಲದೇ ಹಾಗೇ ಇರುತ್ತದೆ. ಜೊತೆಗೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಾ ಹೋಗುತ್ತದೆ. ಇದರ ಮಧ್ಯೆ ಸಿಕ್ಕಿಕೊಳ್ಳುವ ಸಾಮಾನ್ಯ ಜನರು ಪರಿತಪಿಸುತ್ತಲೇ ಇರಬೇಕಾಗುತ್ತದೆ.

ಇದೆಲ್ಲಾ ಮತ್ತೆ ನೆನಪಾದದ್ದು ಎತ್ತಿನಹೊಳೆ ತಿರುವು ಯೋಜನೆಯ ಕುರಿತು ವರದಿ, ಪೂರ್ವ-ಪರ ಚರ್ಚೆಗಳು ಪ್ರಕಟವಾಗುತ್ತಿರುವುದನ್ನು ಕಂಡಾಗ. p3-24 city.inddಈ ಹಿಂದೆ ನೇತ್ರಾವತಿ ತಿರುವು ಯೋಜನೆಯ ಕುರಿತು ಹೀಗೇ ಪೂರ್ವ-ಪರ ಚರ್ಚೆಗಳಾಗಿ ನಿಂತು ಹೋಗಿತ್ತು. ಈಗ ಹೆಸರು ಬದಲಾದ, ಅದೇ ಉದ್ದೇಶ ಹೊಂದಿದ ಮತ್ತೊಂದು ಯೋಜನೆಯ ಚರ್ಚೆ. ಯೋಜನೆಯ ಸಂಪೂರ್ಣ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ ಪಶ್ಚಿಮಘಟ್ಟದ ಒಡಲೊಳಗೆ ಮೈಲಿಗಟ್ಟಲೆ ನಡೆಯಬೇಕಿರುವ ಇದರ ಕಾರ್ಯಾಚರಣೆಯಲ್ಲಿ ಒಡ್ಡು ನಿರ್ಮಾಣಕ್ಕೆ, ಪೈಪ್‌ಲೈನ್ ಅಳವಡಿಕೆಗೆ, ಪಂಪಿಂಗ್ ಮೋಟರ್ ಸ್ಥಾಪನೆಗೆ, ಜಲ ಸಂಗ್ರಹಣೆಗೆ, ಕಾಲುವೆ, ಅಣೆಕಟ್ಟೆ ನಿರ್ಮಾಣಕ್ಕೆ,…. ಹೀಗೆ ಪಶ್ಚಿಮಘಟ್ಟದಲ್ಲಿ ಏನೆಲ್ಲಾ ಅಲ್ಲೋಲಕಲ್ಲೋಲ ಆಗಬಹುದೆಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿದೆ. ಈ ಇಡೀ ಕಾರ್ಯಾಚರಣೆ ನಡೆವ ಅರಣ್ಯ, ಪ್ರಾಣಿ-ಪಕ್ಷಿ ಪ್ರಭೇದಗಳನ್ನು ಮತ್ತೆ ಎಲ್ಲಾದರೂ ಸ್ಥಳಾಂತರಿಸಲು, ಪುನರ್ ಸೃಷ್ಟಿಸಲು ಸಾಧ್ಯವೇ? ಮನುಷ್ಯನನ್ನು ಸೃಷ್ಟಿಸುವುದು ಸುಲಭ. ಹೀಗೆಂದೇ ಮನುಷ್ಯ ಸಂತತಿ ಮಿತಿಮೀರಿ ಬೆಳೆಯುತ್ತಿದೆ. ಅವನ ಅಗಾಧ ಹಸಿವು ಹಿಂಗಿಸಲು ಪ್ರಕೃತಿಯ ಒಡಲು ಲೂಟಿಯಾಗುತ್ತಿದೆ. ಆದರೆ ವೈವಿಧ್ಯಮಯವಾದ ಪ್ರಕೃತಿಯನ್ನು ಸೃಷ್ಟಿಸುವುದು ಹೇಗೆ? ಒಂದು ಮರವನ್ನು ಸೃಷ್ಟಿಸಲು ಹತ್ತೆಂಟು ವರ್ಷಗಳೇ ಬೇಕು. ಒಂದು ಕಾಡು ಸೃಷ್ಟಿಯಾಗಲು ಶತಮಾನವೇ ಬೇಕಾಗಬಹುದು. ಅದೂ ಸೃಷ್ಟಿಸುವ ಮನಸ್ಸು ಮತ್ತು ಜಾಗವಿದ್ದರೆ ಮಾತ್ರ!

ಮುಖ್ಯವಾಗಿ ನಾವು ಗಮನಿಸಬೇಕಿರುವುದು ಅಭಿವೃದ್ಧಿಗಾಗಿ ನಾವು ತೆರುತ್ತಿರುವ ಬೆಲೆ ಏನು? ಹಾಗೂ ಪರಿಸರ ಸಂರಕ್ಷಣೆಗಾಗಿ ನಾವು ತೆರಬೇಕಿರುವ ಬೆಲೆ ಏನು? ಎಂಬುದು. ಪರಿಸರವನ್ನು ನಾಶಮಾಡದೇ ಕಟ್ಟಿಕೊಳ್ಳುವ ಅಭಿವೃದ್ಧಿ ಹಾಗೂ ಅಭಿವೃದ್ಧಿಗೆ ಪೂರಕವಾಗುವಂತೆ ಉಳಿಸಿಕೊಳ್ಳುವ ಪರಿಸರ ಎರಡೂ ನಮಗಿಂದು ಮುಖ್ಯವಾಗಬೇಕು. ಏಕೆಂದರೆ ಪರಿಸರ ಹಾಗೂ ಅಭಿವೃದ್ಧಿ ಎರಡೂ ಯಾವುದೇ ಒಂದು ಪ್ರದೇಶದ ಜನರಿಗೆ ಸೇರಿದ ವಿಷಯವಲ್ಲ. ಅದು ಸಾರ್ವತ್ರಿಕವಾದುದು ಹಾಗು ಸಾರ್ವಕಾಲಿಕವಾದುದು. ಅಭಿವೃದ್ಧಿ ಪ್ರಕೃತಿ ಕೇಂದ್ರಿತವಾಗಿದ್ದಾಗ ಅದು ಮಾನವೀಯವೂ, ಸಕಲ ಜೀವಪರವೂ ಆಗಿರುತ್ತದೆ. ಆದರೆ ನಾವಿಂದು ಮಾಡುತ್ತಿರುವ ಅಭಿವೃದ್ಧಿ ಮನುಷ್ಯ ಕೇಂದ್ರಿತವಾಗಿರುವುದರಿಂದ ರೂಕ್ಷವೂ, ಅಮಾನವೀಯವೂ ಆಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ, ಅಸೂಕ್ಷ್ಮವಾಗಿ ಕೈಗೊಳ್ಳುವ ಯಾವುದೇ ಯೋಜನೆಯಿಂದ ದೀರ್ಘಕಾಲೀನ, ಹಲವು ಬಾರಿ ಶಾಶ್ವತ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪಶ್ಚಿಮಘಟ್ಟದಲ್ಲಿ ಇದುವರೆಗೆ ನಡೆದ ರಸ್ತೆಮಾರ್ಗ, ರೈಲುಮಾರ್ಗ, ವಿದ್ಯುತ್‌ಮಾರ್ಗ, ಪೆಟ್ರೋಲಿಯಂ ಪೈಪ್‌ಲೈನ್, ಅಣೆಕಟ್ಟೆ, ಜಲವಿದ್ಯುತ್ ಘಟಕಗಳ ನಿರ್ಮಾಣ ಕಾರ್ಯದಲ್ಲಿ ತೋರಿದ ಇಂತಹ ದುಡುಕುತನಗಳು ಶಾಶ್ವತ ಪಶ್ಚಾತ್ತಾಪಕ್ಕೆ ಕಾರಣವಾಗಿವೆ. ಅನೇಕ ನದಿ ಹಾಗೂ ಜಲಮೂಲಗಳು ಬತ್ತಿ ಹೋಗುವಂತೆ ಅವೈಜ್ಞಾನಿಕವಾಗಿ ನಡೆಸಿದ ಅಭಿವೃದ್ಧಿ ಕಾರ್ಯಗಳು, ದಕ್ಷಿಣ ಭಾರತದ ಹೆಚ್ಚಿನ ನದಿಗಳಿಗೆ ಜನ್ಮಸ್ಥಳವಾದ ಪಶ್ಚಿಮಘಟ್ಟವನ್ನು ಬರಡಾಗಿಸುತ್ತಿದೆ. ಮೊದಲಿಗೆ ಇಲ್ಲೀಗ ಆ ಜಲಮೂಲಗಳನ್ನು ಪುನರ್ ಸೃಷ್ಟಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಪರಿಸರವಾದಿಗಳು ಪಶ್ಚಿಮಘಟ್ಟಗಳ ಕಾಡು, ಅನನ್ಯ ಬೆಲೆಬಾಳುವ ಗಿಡ-ಮರ, ಅಮೂಲ್ಯ ಜೀವವೈವಿಧ್ಯ, heritage_western_ghatsಅಸಂಖ್ಯಾತ ಪ್ರಾಣಿಪಕ್ಷಿ ಪ್ರಭೇದಗಳು, ನೈಸರ್ಗಿಕ ನದಿ-ಝರಿ-ಜಲಪಾತಗಳ ಕುರಿತು ಭಾವುಕರಾಗಿ ಮಾತ್ರ ಮಾತನಾಡುತ್ತಿಲ್ಲ. ಮುಖ್ಯವಾಗಿ ಒಮ್ಮೆ ನಾಶವಾದರೆ ಇಂತಹ ಪ್ರಕೃತಿಯದ್ಭುತಗಳನ್ನು ನಾವು ಮರುಸೃಷ್ಟಿಸಲು ಸಾಧ್ಯವಿಲ್ಲ ಎಂಬ ಎಚ್ಚರ ಸದಾ ಅವರನ್ನು ಕಾಡುತ್ತಿದೆ. ಇದರ ಜೊತೆಗೆ ಪಶ್ಚಿಮಘಟ್ಟದ ಸಮೀಪದಲ್ಲಿ ವಾಸಿಸುತ್ತಿರುವ ನಮ್ಮಂಥ ಜನರಿಗೆ ಬೇರೆಯದೇ ಆದ ಸಮಸ್ಯೆಗಳು ಕಾಡುತ್ತಿರುತ್ತವೆ. ಪ್ರಮುಖವಾಗಿ ಆನೆ ಹಾಗೂ ಚಿರತೆಯಂಥಾ ವನ್ಯಜೀವಿಗಳು ಕಾಡು ನಾಶವಾದಂತೆಲ್ಲಾ ನಾಡಿಗೆ ನುಗ್ಗಿ ಬೆಳೆ, ಮನೆ-ಮಠಗಳನ್ನು, ಜನರು ಕಟ್ಟಿಕೊಂಡ ಬದುಕನ್ನು ನಾಶಮಾಡುವ ಕೆಲಸಕ್ಕೆ ತೊಡಗಿಕೊಳ್ಳುತ್ತವೆ. ಅವುಗಳನ್ನು ಹಿಡಿಯುವ, ಅಥವಾ ಕೊಂದು ಮನುಷ್ಯರ ಪ್ರಾಣ ರಕ್ಷಿಸಲೆಂದೇ ಅರಣ್ಯ ಇಲಾಖೆಯ ಸಿಬ್ಬಂದಿ ತಾವು ಮಾಡುವ ಕೆಲಸ ಬಿಟ್ಟು, ಹಲವು ಬಾರಿ ವನ್ಯಜೀವಿ ರಕ್ಷಣೆಯ ಕಾನೂನನ್ನು ಮೀರಿ ತಿಪ್ಪರಲಾಗ ಹಾಕಬೇಕಾಗಿದೆ. ಇದರಿಂದ ಈಗಾಗಲೇ ಕೋಟ್ಯಾಂತರ ರೂಪಾಯಿಗಳಷ್ಟು ಸರ್ಕಾರಿ ಹಣ ಹಾಗೂ ರೈತರ, ಬೆಳೆದು ನಿಂತ ಫಸಲು ನಷ್ಟವಾಗುವುದರೊಂದಿಗೆ, ಗಣನೀಯ ಪ್ರಮಾಣದಲ್ಲಿ ಜೀವ ಹಾನಿಯೂ, ವನ್ಯಜೀವಿ ಹತ್ಯೆಯೂ ಆಗುತ್ತಿದೆ. ಇದರೊಂದಿಗೆ ಕಾಡಿನಿಂದ ನಾಡಿಗೆ ವಲಸೆ ಬರುವ ಸಣ್ಣ-ಪುಟ್ಟ ಪ್ರಾಣಿ, ಪಕ್ಷಿ, ಕೀಟ, ಕ್ರಿಮಿಗಳ ದಾಳಿ ನಿರಂತರವಾಗಿ ಮಲೆನಾಡಿನ ಜನರನ್ನು ಕಾಡುತ್ತಿದೆ. ಇದು ಕಾಡಿನಲ್ಲೇ ತಮ್ಮ ಪಾಡಿಗೆ ತಾವು ವಾಸಿಸುತ್ತಾ ಬಂದಿರುವ ವನ್ಯಜೀವಿಗಳ, ಕ್ರಿಮಿ-ಕೀಟಗಳ ತಪ್ಪಲ್ಲ. ಪ್ರಕೃತಿಯ ಸಂಪತ್ತೆಲ್ಲಾ ತನಗಾಗಿ ಮಾತ್ರವೇ ಇರುವುದೆಂಬಂತೆ ಅದನ್ನು ಅಮಾನವೀಯವಾಗಿ ಲೂಟಿ ಮಾಡುತ್ತಿರುವ ಮನುಷ್ಯನ ಪರಮ ಸ್ವಾರ್ಥದ ಮಹಾಪರಾಧದ ಫಲ. ಇದು ಕಣ್ಣಿಗೆ ಕಾಣುವ ವಾಸ್ತವದ ಒಂದು ಮುಖ. ತಕ್ಷಣಕ್ಕೆ ಕಾಣದಂತಾ ಸೃಷ್ಟಿ ವೈಪರೀತ್ಯಗಳು ಲೆಕ್ಕವಿಲ್ಲದಷ್ಟಿರಬಹುದು.

ಹಾಗೇ ಬಯಲುಸೀಮೆಯ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿ ಜನರು ಬಳಲುತ್ತಿರುವುದು, ದಿನಬಳಕೆಯ ಅಗತ್ಯತೆಗಳಿಗೆ, ವ್ಯವಸಾಯಕ್ಕೆ ನೀರಿಲ್ಲದೇ ಕಂಗಾಲಾಗಿರುವುದು, ವಾಸ್ತವದ ಇನ್ನೊಂದು ಮುಖ.

ಆದರೆ ಆ ವಾಸ್ತವ ಹಾಗೂ ಈ ವಾಸ್ತವ ಒಂದಕ್ಕೊಂದು ಮುಖಾಮುಖಿಯಾಗಿ ನಿಂತು ಯುದ್ಧವಾಡುವುದಾದರೆ ಪರಿಹಾರ ಹೇಗೆ ಸಾಧ್ಯ? ಈ ವೈರುಧ್ಯದ ನಡುವೆಯೇ ನಾವೊಂದು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ನಮಗಿಂದು ಸುಲಭದ, ತಕ್ಷಣದ, ದುಬಾರಿಯಾದ ಪರಿಹಾರಗಳ ಕಡೆಗೆ ಗಮನವೇ ಹೊರತು, ನೈಸರ್ಗಿಕವಾದ, ಕಡಿಮೆ ಖರ್ಚಿನ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ ಪರಿಹಾರಗಳ ಕಡೆಗೆ ಹೆಚ್ಚಿನ ಗಮನವಿಲ್ಲ. ಈ ದಿಕ್ಕಿನಲ್ಲಿ ಪ್ರಯತ್ನಗಳು ಆಗುತ್ತಿವೆಯಾದರೂ ಅದು ಅತ್ಯಲ್ಪ ಪ್ರಮಾಣದ್ದು. ಅಂಥಹ ಕೆಲವು ಮಾದರಿಗಳು ಇಲ್ಲಿವೆ.

ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ, ರಾಜಸ್ಥಾನದ ಆಳ್ವಾರ್‌ನ ರಾಜೇಂದ್ರಸಿಂಗ್ ಅವರ ಭಗೀರಥ ಪ್ರಯತ್ನ ಪ್ರಕೃತಿಯಿಂದಲೇ rajendra-singh-check-damಪ್ರಕೃತಿಯನ್ನು ಸೃಷ್ಟಿಸುವ ಒಂದು ಮಾದರಿ. ಅವರು ತರುಣ ಭಾರತ ಸಂಘವೆಂಬ ಸ್ವಯಂ ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಿ, ಮಳೆ ನೀರನ್ನು ಸಂಗ್ರಹಿಸಲು ಹಳ್ಳಿ ಹಳ್ಳಿಗಳಲ್ಲಿ 4500 ಜೋಹಡ್‌ಗಳನ್ನು [ಮಣ್ಣಿನ ತಡೆಗೋಡೆಗಳು] ನಿರ್ಮಿಸಿ, ಬತ್ತಿ ಹೋಗಿದ್ದ 5 ನದಿಗಳನ್ನು ಪುನರುತ್ಥಾನಗೊಳಿಸಿ, ಪೂರ್ವ ರಾಜಸ್ಥಾನದ ಮರುಭೂಮಿಯಿಂದ ಆವೃತವಾದ 850 ಹಳ್ಳಿಗಳಲ್ಲಿ ಯತೇಚ್ಛ ನೀರು ಉಕ್ಕಿಸಿ ಹಸಿರು ಸೃಷ್ಟಿಸಿದ ಹರಿಕಾರರಾಗಿದ್ದಾರೆ. ನೀರುಸಂತ, ನೀರುಸಂರಕ್ಷಕನೆಂಬ ಬಿರುದಿಗೆ ಪಾತ್ರರಾಗಿ ಮಳೆ ನೀರಿನ ಕೊಯ್ಲಿಗೆ ಹೊಸ ಭಾಷ್ಯ ಬರೆದ ಆಧುನಿಕ ಕ್ರಾಂತಿ ಭಗೀರಥ ಅವರಾಗಿದ್ದಾರೆ. ಅವರ ತಾಳ್ಮೆ, ಸಂಘಟನಾ ಕೌಶಲ್ಯ, ಪ್ರಕೃತಿ ಸೂಕ್ಷ್ಮತೆಯನ್ನೊಳಗೊಂಡು, ಕಡಿಮೆ ವೆಚ್ಚದಲ್ಲಿ ನಮ್ಮ ದೇಸೀ ಪರಂಪರಾಗತ ಜಾಣ್ಮೆಯನ್ನು ಬಳಸಿ ಮಾಡಿದ ಈ ಸಾಧನೆ, ನಮ್ಮ ಶೈಕ್ಷಣಿಕ ಶಿಸ್ತಿನ ಪಾಂಡಿತ್ಯಕ್ಕಿಂಥಾ ಸಮರ್ಥವಾದುದೆಂದು ಸಾಬೀತಾಗಿದೆ.

ಅದೇ ಉತ್ತರ ರಾಜಸ್ಥಾನದ ಲಾಪೋಡಿಯಾದ ಲಕ್ಷ್ಮಣಸಿಂಗ್ ಅವರದು ಬರಕ್ಕೇ ಬೇಲಿ ಹಾಕಿದ ಇನ್ನೊಂದು ನೀರಿನ ಗಾಥೆ. ರಾಜಸ್ಥಾನದ ಈ ಅವಿದ್ಯಾವಂತ ರೈತ ಊರವರನ್ನು ಸಂಘಟಿಸಿ ಬರಡು ಮರುಭೂಮಿಯ ಹಳ್ಳಿಯಲ್ಲಿ ಹಸಿರು ಸೃಷ್ಟಿಸಿದ್ದು, ಅಕ್ಕಪಕ್ಕದ 20 ಗ್ರಾಮಗಳ 31 ಕೆರೆಗಳನ್ನು ಜೋಡಿಸಿ, ಬರ ಹಾಗೂ ನೆರೆಗಳನ್ನು ಏಕಕಾಲಕ್ಕೆ ನಿಯಂತ್ರಿಸಿ, ಸುತ್ತಲ 350 ಹಳ್ಳಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿರುವುದು ಈಗ ಒಂದು ಇತಿಹಾಸ. ಈ ಭಾಗದ ಹಳ್ಳಿಗಳಿಗೆ ಸೂಕ್ತವಾಗುವ ನೆಲ-ಜಲ ಸಂರಕ್ಷಣೆಯ OLYMPUS DIGITAL CAMERAಮಾದರಿಯೊಂದನ್ನು ಲಕ್ಷ್ಮಣ್ ಅಭಿವೃದ್ಧಿಪಡಿಸಿದ್ದಾರೆ. ಅದು ಚೌಕ ವಿಧಾನವೆಂದೇ ಜನಪ್ರಿಯವಾಗಿದೆ. ಹುಲ್ಲುಗಾವಲಿನಲ್ಲಿ ಚೌಕಗಳನ್ನು ನಿರ್ಮಿಸಿ ನೀರನ್ನು ಇಂಗಿಸಿ, ಸಂಗ್ರಹಿಸುವ ವಿಧಾನ ಇದಾಗಿದೆ. ಇಲ್ಲೂ ಗ್ರಾಮೀಣ ವಿಕಾಸ ನವ್ ಯುವಕ್ ಮಂಡಲ್ ಎಂಬ ಸಂಘಟನೆಯಿಂದಲೇ ಇಷ್ಟೆಲ್ಲಾ ಸಾಧ್ಯವಾಗಿದ್ದು ಎಂಬುದು ಗಮನಾರ್ಹ. ಮಳೆ ನೀರನ್ನು ಶೇಖರಿಸಿ, ಇಂಗಿಸಿ ಅಂತರ್ಜಲ ಮರುಪೂರಣಕ್ಕಾಗಿ ಕೆರೆಗಳನ್ನು ನಿರ್ಮಿಸಿ ಇವರು ದಾಖಲೆ ಬರೆದಿದ್ದಾರೆ. ಇದಾವುದೂ ಪವಾಡಗಳಲ್ಲ. ಪ್ರಕೃತಿಯಲ್ಲೇ ಇರುವ ಉತ್ತರಗಳು. ಅದನ್ನು ಕಂಡುಕೊಳ್ಳುವ ಸೂಕ್ಷ್ಮತೆಯಷ್ಟೇ ನಮಗಿಂದು ಬೇಕಿರುವುದು. ನಿಸರ್ಗದ ಒಂದೊಂದೇ ಗುಟ್ಟುಗಳನ್ನರಿತು ನಮ್ಮ ಸೋಲಿನ ಮೂಲ ಎಲ್ಲಿದೆ ಎಂದು ಅರಿತೆ ಎನ್ನುವ ಲಕ್ಷ್ಮಣ್ ಅವರ ಮಾತು ನಮಗೆಲ್ಲರಿಗೂ ಪ್ರೇರಣೆಯಾಗಬೇಕಿದೆ.

ಇದು ದೂರದ ರಾಜಸ್ಥಾನದ ಮಾತಾಯ್ತು. ನಮ್ಮಲ್ಲಿ ಇಂಥ ಪ್ರಯತ್ನಗಳು ಆಗಿಯೇ ಇಲ್ಲವೇ? ಎಂದು ಹುಡುಕಲು ಹೊರಟರೆ, ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ನೀರಿನಜೋಗಿ ಎಂದೇ ಹೆಸರು ಮಾಡಿರುವ ಕೃಷಿ ಪಂಡಿತ ಶಿವಕುಮಾರ ಸ್ವಾಮೀಜಿ, ಬರದ ನಾಡಿನಲ್ಲೂ ಮಳೆ ನೀರು ಸಂಗ್ರಹ ಮಾಡಿ, ಹಸಿರು ಸೃಷ್ಟಿಸಿ ಸುತ್ತಲಿನ ಹಳ್ಳಿಗಳಿಗೆ ಜೀವ ಚೈತನ್ಯ ತುಂಬಿದ್ದಾರೆ.

ಮಳೆಕುಯ್ಲು ಹಾಗೂ ಸಂಗ್ರಹಣಾ ವಿಧಾನವನ್ನು ಸಮರ್ಥವಾಗಿ ಅಳವಡಿಸಿಕೊಂಡರೆ ನಮ್ಮ ಬಹಳಷ್ಟು ನೀರಿನ ಸಮಸ್ಯೆ ನೀಗಿಹೋಗುತ್ತದೆ ಎನ್ನುತ್ತಾರೆ ನಮ್ಮ ನೀರಿನ ತಜ್ಞರು. ಸರ್ಕಾರದ ಸುವರ್ಣ ಜಲ ಯೋಜನೆ ಈಗಾಗಲೇ 23683 ಸರ್ಕಾರಿ ಶಾಲೆಗಳಲ್ಲಿ ಅಳವಡಿಕೆಯಾಗಿ ಸಮರ್ಥ ಮಳೆಕೊಯ್ಲು ವಿಧಾನದಿಂದ ನೀರಿನ ಕೊರತೆ ನೀಗಿಕೊಂಡಿದೆ. ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮಳೆನೀರಿನ ಒಟ್ಟು ಸಂಗ್ರಹಣಾ ಸಾಮರ್ಥ್ಯ 8000 ದಿಂದ 15000 ಲೀಟರ್‌ಗಳಷ್ಟಿವೆ. water-harvestingಮನೆ, ಶಾಲೆ, ಯಾವುದೇ ಬೃಹತ್ ಕಟ್ಟಡದ ಮೇಲ್ಚಾವಣಿಗಳಿಂದ ಮಳೆ ನೀರು ಸಂಗ್ರಹಿಸಿ, ಅದರ ಪುನರ್ ಬಳಕೆಯ ಮೂಲಕ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಈ ಕುರಿತು ಒಂದು ಆಂದೋಲನದ ರೀತಿಯಲ್ಲಿ, ಸಾರ್ವತ್ರಿಕವಾಗಿ ಜನರಲ್ಲಿ ಜಲ ಜಾಗೃತಿಯನ್ನೂ, ಅದನ್ನು ಪ್ರತಿಯೊಂದು ಕಟ್ಟಡದಲ್ಲೂ ಅಳವಡಿಸುವ ಕುರಿತು ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಕೈಗೊಂಡಾಗ ನಮ್ಮ ಜನರಲ್ಲೂ ಅದರ ಅರಿವು ಮೂಡುತ್ತದೆ. ಬೆಂಗಳೂರು ಜಲಮಂಡಳಿ ಈಗಾಗಲೇ ಮಳೆನೀರು ಕೊಯ್ಲು ಮಾದರಿ ಉದ್ಯಾನವನವನ್ನು ರೂಪಿಸಿ ಪ್ರಚಾರ ಕಾರ್ಯ ಆರಂಭಿಸಿರುವುದೂ ಒಂದು ಗಮನಾರ್ಹ ಪ್ರಯತ್ನ. ಇದಲ್ಲದೇ ಹಳ್ಳಿಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಮಳೆ ನೀರಿನ ಸಮರ್ಥ ಬಳಕೆ ಕುರಿತು ಕೃಷಿ ಹಾಗೂ ಪರಿಸರ ತಜ್ಞರು ಜಾಗೃತಿ ಮೂಡಿಸುತ್ತಿದ್ದಾರೆ.

ಇಂತಹ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ, ಪ್ರಕೃತಿ ಕೇಂದ್ರಿತ ನೈಸರ್ಗಿಕ ಪ್ರಯತ್ನಗಳು ಭೂಮಿಯ ಮೇಲೆ ಮನುಷ್ಯ ಇನ್ನಷ್ಟು ವರ್ಷ ನೆಮ್ಮದಿಯಾಗಿ ಬದುಕಲು ಅನುವು ಮಾಡಿಕೊಡುತ್ತವೆ. ಅದಿಲ್ಲದೇ ಪ್ರಕೃತಿಯ ವಿರುದ್ಧವಾಗಿ ನಾವಿಡುವ ಪ್ರತಿ ಹೆಜ್ಜೆಯೂ ನಮ್ಮ ನಾಶಕ್ಕೆ ಕಂದಕವನ್ನು ನಾವೇ ತೋಡಿಕೊಳ್ಳುವಂತಾ ಮೂರ್ಖತನವಾದೀತು. ಸಹನಾಮಯಿ ಧರಿತ್ರಿ ತನ್ನ ಮೇಲಿನ ಅತ್ಯಾಚಾರಗಳಿಗೆ, ವರ್ತಮಾನವಷ್ಟೇ ಮುಖ್ಯ, ಎಂಬ ನಮ್ಮ ಹುಂಬತನಕ್ಕೆ, ಈಗಾಗಲೇ ನಾವು ಚೇತರಿಸಿಕೊಳ್ಳಲಾಗದಂತಾ ಪೆಟ್ಟುಗಳನ್ನು ಕೊಡುತ್ತಿದ್ದಾಳೆ. ಅವಳೊಂದಿಗಿನ ಪ್ರೀತಿಯ ಅನುಸಂಧಾನದಿಂದ ಮಾತ್ರ ನಾವು ನೆಮ್ಮದಿಯ ನಾಳೆಗಳನ್ನು ಕಾಣಲು ಸಾಧ್ಯ.

ಮರೆಯಲಾಗದ ಕೋಮು ಹತ್ಯಾಕಾಂಡಗಳ ಗಾಯಗಳು – ಮರೆಯೆಂದರೂ ಮರೆಯಲಿ ಹ್ಯಾಂಗ?

– ಬಿ.ಶ್ರೀಪಾದ ಭಟ್

1989 ಅಕ್ಟೋಬರ್ 24: ಬಿಹಾರ್ ರಾಜ್ಯದ ಭಾಗಲ್ಪುರ್ ಜಿಲ್ಲೆ ಮತ್ತು ಸುತ್ತಮುತ್ತಲ 250 ಹಳ್ಳಿಗಳಲ್ಲಿ ಸಂಭವಿಸಿದ ಹಿಂದೂ ಮತ್ತು ಮುಸ್ಲಿಂರ ನಡುವಿನ ಕೋಮುಗಲಭೆಯಲ್ಲಿ ಸುಮಾರು 1000 ನಾಗರಿಕರು ಸಾವನ್ನಪ್ಪಿದರು. ಇವರಲ್ಲಿ ಅಂದಾಜು 900 ಮುಸ್ಲಿಂ ನಾಗರಿಕರು. ಅಧಿಕೃತ ಮಾಹಿತಿಗಳ bhagalpur-riotsಪ್ರಕಾರ ಸುಮಾರು ಎರಡು ತಿಂಗಳುಗಳ ಕಾಲ ನಿರಂತರವಾಗಿ ನಡೆದ ಈ ಕೋಮು ಗಲಭೆಯ ಹಿಂಸೆಯ ಕರಾಳತೆ ಅಂದಾಜು 250 ಹಳ್ಳಿಗಳಿಗೆ ವ್ಯಾಪಿಸಿತ್ತು. ಈ ಹಳ್ಳಿಗಳ 15000 ಮನೆಗಳು ಧ್ವಂಸಗೊಂಡವು. 50000 ನಾಗರಿಕರು ನಿರಾಶ್ರಿತರಾದರು. ಜಿಲ್ಲೆಯಾದ್ಯಾಂತ ಬಹುಪಾಲು ಮುಸ್ಲಿಂ ಸಮುದಾಯದ ಜೀವನೋಪಾಯವಾಗಿದ್ದ ಸುಮಾರು 1700 ಕೈಮಗ್ಗಗಳು, 700 ಪವರ್‌ಲೂಂಗಳನ್ನು ಸಂಪೂರ್ಣವಾಗಿ ಸುಟ್ಟು ಬೂದಿ ಮಾಡಲಾಯಿತು. ಸುಮಾರು 70 ಮಸೀದಿಗಳನ್ನು ಧ್ವಂಸಗೊಳಿಲಾಯಿತು.

ಚಿಂತಕ ಫ್ರೊ.ವಾರಿಶಾ ಫರತ್ ಬರೆದ The Forgotten Carnage of Bhagalpur (January 19, 2013, Economic & Political Weekly ) ಲೇಖನದ ಸಾರಾಂಶ:

“ಅಧಿಕೃತ ಸುದ್ದಿಯ ಪ್ರಕಾರ ಕೋಮು ಗಲಭೆಗಳು 1989 ರ ಅಕ್ಟೋಬರ್ 24 ರಂದು ಪ್ರಾರಂಭಗೊಂಡು 30 ನೇ ನವೆಂಬರ್ 1989 ರವರೆಗೆ ಮುಂದುವರೆಯಿತು. ಮತ್ತೆ 1990 ರ ಮಾರ್ಚ 22-23 ರಂದು ಇದೇ ಕೋಮುಗಲಭೆಗಳು ಪುನರಾವರ್ತನೆಗೊಂಡವು. 12 ಮತ್ತು 22 ನೇ ಆಗಸ್ಟ್ 1989 ರಂದು ಅಂದರೆ ಈ ಗಲಭೆಯ ಎರಡು ತಿಂಗಳು ಮೊದಲು ಕೋಮು ಗಲಭೆಗಳಿಗೆ ಕುಖ್ಯಾತವಾಗಿದ್ದ ಭಾಗಲ್ಪುರ ಜಿಲ್ಲೆಯಲ್ಲಿ ತೀವ್ರವಾದ ಕೋಮುದ್ವೇಷದ ವಾತಾವರಣವು ನಿರ್ಮಾಣಗೊಂಡಿತ್ತು. ಆದರೆ ಆಗ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಐದು ದಿನಗಳ ರಾಮಶಿಲಾ ಕಾರ್ಯಕ್ರಮ ಭಾಗಲ್ಪುರದ ಈ ಗಲಭೆಗಳಿಗೆ ಬೀಜವನ್ನು ಬಿತ್ತಿತ್ತು. ಆಗ ದೇಶಾದ್ಯಾಂತ ವ್ಯಾಪಿಸಿದ್ದು ಮಂದಿರ ನಿರ್ಮಾಣದ ರಾಮಜನ್ಮಭೂಮಿ ಚಳುವಳಿ ಮತ್ತು ಅದರ ಭಾಗವಾದ ಇಟ್ಟಿಗೆಯ ಮೆರವಣಿಗೆ.ಈ ಇಟ್ಟಿಗೆಯ ಮೆರವಣಿಗೆಯನ್ನು ಭಾಗಲ್ಪುರ ಟೌನ್ ಮತ್ತು ಸುತ್ತಲ ಹಳ್ಳಿಗಳಲ್ಲಿ ನಡೆಸಲಾಗಿತ್ತು. ಧರ್ಮದ ಆಧಾರದ ಮೇಲೆ ಜನರನ್ನು ಧ್ರುವೀಕರಣಗೊಳಿಸುವ ಈ ಬಲಪಂಥೀಯ ಪಕ್ಷಗಳ ಧೋರಣೆಗಳು ಭಾಗಲ್ಪುರ ಜಿಲ್ಲೆಯಾದ್ಯಾಂತ ಸೂಕ್ಮವಾದ, ಪ್ರಚೋದನಾತ್ಮಕವಾದ ವಾತಾವರಣವನ್ನು ನಿರ್ಮಿಸಿತ್ತು. ಈ ಹಿನ್ನೆಯಲ್ಲಿ ಗಲಭೆಗಳು ಸ್ಪೋಟಗೊಂಡಂತಹ ಸಂದರ್ಭದಲ್ಲಿಯೇ ಕೆಲವು ಫೆನಟಿಕ್ ಗುಂಪುಗಳು ಭಾಗಲ್ಪುರ ಪಟ್ಟಣದ ಲಾಡ್ಜ್‌ಗಳಲ್ಲಿ ವಾಸಿಸುತ್ತಿರುವ ಸುಮಾರು 200 ಹಿಂದೂ ವಿಧ್ಯಾರ್ಥಿಗಳನ್ನು ಮುಸ್ಲಿಂರು ಕೊಂದಿದ್ದಾರೆ ಎಂದು ಸುಳ್ಳು ವಂದಂತಿಗಳನ್ನು ಹಬ್ಬಿಸಿದವು. ಇನ್ನೂ ಮುಂದುವರೆದು 31 ಹಿಂದೂ ಹುಡುಗರನ್ನು ಕೊಂದು ಸಂಸ್ಕೃತ ಕಾಲೇಜಿನ ಬಾವಿಯಲ್ಲಿ ಎಸೆದಿದ್ದಾರೆ ಎಂಬಂತಹ ಮಾತುಗಳನ್ನು ಸಹ ತೇಲಿ ಬಿಡಲಾಗಿತ್ತು. ನಂತರ ಇದಕ್ಕೆ ಯಾವ ಪುರಾವೆ ಇಲ್ಲ, ಇದು ಸಂಪೂರ್ಣವಾಗಿ ಕಪೋಲಕಲ್ಪಿತವಾದದೆದ್ದಂದು ಪತ್ರಿಕೆಗಳಲ್ಲಿ ವರದಿಯಾದರೂ, ಅಷ್ಟರಲ್ಲಿ ಇಡೀ ಭಾಗಲ್ಪುರ ಜಿಲ್ಲೆ Communal violence ನ ಹಿಂಸಾತ್ಮಕ ವಾತಾವರಣಕ್ಕೆ ಸಜ್ಜಾಗಿತ್ತು (Minority Commission,1990 : 242). ಬಿಹಾರ ಸರ್ಕಾರವು ರಚಿಸಿದ್ದ ಮೂವರು ಸದಸ್ಯರ ತನಿಖಾ ತಂಡವು ಇಡೀ ಕೋಮು ಗಲಭೆಗೆ ರಾಮಶಿಲಾನ್ಯಾಸಕ್ಕಾಗಿ ನಡೆದ ಮೆರವಣಿಗೆಯೇ ಕಾರಣವೆಂದು ತನ್ನ ವರದಿಯಲ್ಲಿ ತಿಳಿಸಿತ್ತು (ಸಿನ್ಹ & ಹಸನ್ 1995:14). bhagalpur_setencing_313ಅಲ್ಲದೆ ಆಗಿನ ಪೋಲೀಸ್ ಸೂಪರಿಂಟೆಂಡೆಂಟ್ ದ್ವಿವೇದಿ ಮತ್ತು ಇತರೇ ಪೋಲೀಸ್ ಅಧಿಕಾರಿಗಳೂ ಸಹ ಈ ಕೋಮುಗಲಭೆಯ ಹೊಣೆಗಾರರು ಎಂದು ತನಿಖಾ ತಂಡವು ಅಭಿಪ್ರಾಯ ಪಟ್ಟಿತ್ತು. 1989ರಲ್ಲಿ ಭಾಗಲ್ಪುರದಲ್ಲಿ ಈ ಕೋಮುಗಲಭೆ ಜರುಗಿದಾಗ ರಾಜೀವ್ ಗಾಂಧಿ ಇಂಡಿಯಾದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ಕಾಂಗ್ರೆಸ್‌ನ ಜಗನ್ನಾಥ್ ಮಿಶ್ರಾ ಬಿಹಾರ್‌ನ ಮುಖ್ಯಮಂತ್ರಿಯಾಗಿದ್ದರು. ಆಗ ಗಲಭೆಗ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಿದ್ದ ರಾಜೀವ್ ಗಾಂಧಿ ಗಲಭೆಗಳ ಸಂದರ್ಭದಲ್ಲಿ ಹಿಂದೂಗಳ ಪರವಾಗಿ ಪಕ್ಷಪಾತದಿಂದ ಕಾರ್ಯನಿರ್ವಹಿಸಿದ ಪೋಲೀಸ್ ಅಧಿಕಾರಿ ದ್ವಿವೇದಿಯನ್ನು ಕೂಡಲೆ ಅಲ್ಲಿಂದ ಬದಲಾಯಿಸುವಂತೆ ಆದೇಶಿಸಿದರು. ಆದರೆ ವಿಶ್ವಹಿಂದೂ ಪರಿಷತ್ ಮತ್ತು ಸಂಘ ಪರಿವಾರದ ಗುಂಪುಗಳು ಇದನ್ನು ತೀವ್ರವಾಗಿ ವಿರೋಧಿಸಿ ದ್ವಿವೇದಿಯ ವರ್ಗಾವಣೆಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾದವು (ಛೋಪ್ರ & ಝಾ 2012). ಅಂದಿನ ಗಲಭೆಗಳಿಂದ ಬದುಕುಳಿದ ಕೆಲವರ ಪ್ರಕಾರ ಒಂದು ವೇಳೆ ಈ ಪೋಲೀಸ್ ಅಧಿಕಾರಿ ದ್ವಿವೇದಿಯ ವರ್ಗಾವಣೆಯನ್ನು ತಡೆಹಿಡಿಯದಿದ್ದರೆ ಅನೇಕ ನಾಗರಿಕರ ಪ್ರಾಣವನ್ನು ಉಳಿಸಬಹುದಾಗಿತ್ತೆಂದು ಅಭಿಪ್ರಾಯ ಪಡುತ್ತಾರೆ. (The subsequent Commission of Inquiry constituted to probe the riots indicted Dwivedi and noted in its report: “We would hold Dwivedi, the then superintendent of police, Bhagalpur, wholly responsible for whatever happened before 24 October 1989, on 24th itself and [after the] 24th. His communal bias was fully demonstrated not only by his manner of arresting the Muslims and by not extending them adequate help to protect them (Sinha and Hasan 1995: 114).”)

“ಆದರೆ ಆಗಿನ ಕಾಂಗ್ರೆಸ್ ಸರ್ಕಾರವೂ ಕೂಡ ಈ ಕೋಮು ಗಲಭೆಗಳನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಅಥವಾ ಗಲಭೆಯಿಂದ ನಿರಾಶ್ರಿತರಾದವರಿಗೆ ಸೂಕ್ತ ಪುನರ್ವಸತಿಯನ್ನು ಸಹ ಕಲ್ಪಿಸಲಿಲ್ಲ. ಅಷ್ಟೇಕೆ 1990 ರಲ್ಲಿ ಸೆಕ್ಯುಲರ್‌ನ ಪ್ಲಾಟ್‌ಫಾರ್ಮ ಮೇಲೆ ಅಧಿಕಾರಕ್ಕೆ ಬಂದ ಲಾಲೂ ಪ್ರಸಾದ್ ಯಾದವ್ ಸಹ ಆರೋಪಿಗಳಿಗೆ ಶಿಕ್ಷೆಯನ್ನು ಕೊಡಿಸಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಏಕೆಂದರೆ ಬಹುಪಾಲು ಆರೋಪಿಗಳು ಲಾಲೂಪ್ರಸಾದರ ಯಾದವ್ ಜಾತಿಗೆ ಸೇರಿದವರಾಗಿದ್ದರು. ಕಳೆದ ಎಂಟು ವರ್ಷಗಳಿಂದ ಅಧಿಕಾರದಲ್ಲಿರುವ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವೂ ಸಹ ಗಲಭೆಗಳಿಂದ ಬುದುಕುಳಿದ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡಲಿಲ್ಲ. 23 ವರ್ಷಗಳ ನಂತರವೂ ಭಾಗಲ್ಪುರ ಕೋಮು ಗಲಭೆಯ ಗಾಯಗಳು ಇನ್ನೂ ಹಸಿಯಾಗಿವೆ. ಕೋಮು ಗಲಭೆಗಳಿಂದ ಬಲಿಪಶುಗಳಾಗಿ ಬದುಕುಳಿದ ಸಾವಿರಾರು ನಿರಾಶ್ರಿತರು ಆ ದಿನಗಳನ್ನು ನೆನೆಸಿಕೊಂಡು ಇಂದಿಗೂ ಬೆಚ್ಚಿಬೀಳುತ್ತಾರೆ. 23 ವರ್ಷಗಳ ನಂತರವೂ ಅವರ ಅಸಹಾಯಕತೆ, ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳು ಕೊನೆಗೊಂಡಿಲ್ಲ. ಚಾಂದೇರಿ ಹಳ್ಳಿಯೊಂದರಲ್ಲಿ 65 ಮುಸ್ಲಿಂರನ್ನು ಕೊಲೆಗೈಯಲಾಯಿತು ಮತ್ತು ಆ ಮೃತ ದೇಹಗಳನ್ನು ಕೆರೆಗೆ ಎಸೆಯಲಾಗಿತ್ತು. bhagalpur_case_study_313ಮಲ್ಲಿಕಾ ಬೇಗಂ ಇಂದು ಆ ಹತ್ಯಾಕಾಂಡದಲ್ಲಿ ಬದುಕುಳಿದ ಏಕೈಕ ಸಾಕ್ಷಿ. ಆಕೆ ಎದೆಗುಂದೆ ಧೈರ್ಯದಿಂದ ಎಲ್ಲಾ ಬಗೆಯ ಬೆದರಿಕೆಗಳು ಮತ್ತು ಪ್ರಲೋಭನೆಗಳನ್ನು ಎದುರಿಸಿ ಹತ್ಯಾಕಾಂಡಕ್ಕೆ ಹೊಣೆಗಾರರಾದ ಸುಮಾರು 16 ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಳು.

“ಲೋಗೇನ್ ಹಳ್ಳಿಯಲ್ಲಿ 118 ನಾಗರಿಕರನ್ನು ಹತ್ಯೆ ಮಾಡಲಾಯಿತು. ತಮ್ಮ ಹತ್ಯಾಕಾಂಡವನ್ನು ಮುಚ್ಚಿ ಹಾಕಲು ಕೊಲೆಗಾರರು ಹೆಣಗಳನ್ನು ಹೊಲಗಳಲ್ಲಿ ಹೂಳಿ ಆ ಶವಗಳ ಮೇಲೆ ತರಕಾರಿಯ ಗಿಡಗಳನ್ನು ಬೆಳೆಸಿದರು. ಗಲಭೆಗಳಿಂದ ಬದುಕುಳಿದ ಅನೇಕ ಕುಟುಂಬಗಳು ಇಂದಿಗೂ ಭಯದ ನೆರಳಿನಲ್ಲಿ ಬದುಕುತ್ತಿವೆ. ಉದಾಹರಣೆಗೆ ಹತ್ತಾರು ಕೊಲೆಗಳಲ್ಲಿ ಭಾಗಿಯಾಗಿದ್ದ ಕಮಲೇಶ್ವರ್ ಯಾದವ್ ಎನ್ನುವ ಕೊಲೆಗಾರ ಕುಖ್ಯಾತ ಪಾರ್ಬತ್ತಿ ಕೇಸಿನಲ್ಲಿ ಮಹಮದ್ ಮುನ್ನಾ ಎನ್ನುವವರ ಹತ್ಯೆಯಲ್ಲಿ ಆರೋಪಿಯೆಂದು ಸಾಬೀತಾಗಿದೆ. ಆದರೆ ಕೊಲೆಯಾದ ಮುನ್ನಾನ ಕುಟುಂಬಕ್ಕೆ ಇಂದಿಗೂ ರಕ್ಷಣೆ ಒದಗಿಸಿಲ್ಲ. ಆದರೆ 23 ವರ್ಷಗಳ ಹಿಂದಿನ ಅಸಹಾಯಕ ಮುಸ್ಲಿಂ ನಾಗರಿಕರ ವಿರುದ್ಧದ ಆ ಸಾಮೂಹಿಕ ಅತ್ಯಾಚಾರದ ಆ ಭೀಕರತೆ ಸಾರ್ವಜನಿಕರ ನೆನಪಿನ ಭಿತ್ತಿಯಿಂದ ಅಳಿಸಿಹೋಗಿದ್ದರೂ, ಭಾಗಲ್ಪುರ ಕೋಮುಗಲೆಭೆಗಳ ತುತ್ತಾಗಿ ತಮ್ಮ ಮಕ್ಕಳು, ಸಂಬಂಧಿಕರನ್ನು ಕಳೆದುಕೊಂಡು ಇಂದಿಗೂ ಅನಾಥರಾಗಿ ಬದುಕುತ್ತಿರುವ ಬಹುಪಾಲು ನಿರಾಶ್ರಿತರಿಗೆ 23 ವರ್ಷಗಳ ನಂತರವೂ ಆ ಹತ್ಯಾಕಾಂಡದ ಗಾಯಗಳಿಂದ, ಅದರ ಕರಾಳತೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅದನ್ನು ಮರೆಯಲು ನಡೆಸಿದ ಪ್ರಯತ್ನಗಳೇ ಯಾತನಾಮಯವಾದವುಗಳು. ಆ ಕೋಮು ಗಲಭೆಗಳಲ್ಲಿ ಅತ್ಯಾಚಾರಕ್ಕೆ, ಹಲ್ಲೆಗೆ ತುತ್ತಾಗಿ ಮೃತರಾದ 10000 ಮುಸ್ಲಿಂ ಗಂಡಸರು, ಹೆಂಗಸರು, ಮಕ್ಕಳು ಇವರೆಲ್ಲರ ನೆನಪಿರುವುದು ಇಂದು ಒಂಟಿಯಾಗಿ ಹೋರಾಟ ಮಾಡುತ್ತಿರುವ ಅವರ ಸಂಬಂಧಿಕರಿಗಷ್ಟೇ.

“ದೆಹಲಿ ಮೂಲದ The People’s Union for Democratic Rights (PUDR) ಈ ಭಾಗಲ್ಪುರ ಕೋಮುಗಲಭೆಗಳ ಕುರಿತಾಗಿ ಸುಧೀರ್ಘವಾದ, ವಿವರವಾದ ಡಾಕ್ಯುಮೆಂಟರಿಯನ್ನು ತಯಾರಿಸಿದೆ. ಅದರಲ್ಲೂ ಅಲ್ಲಿನ ಪೋಲೀಸ್ ವ್ಯವಸ್ಥೆಯು ಒಂದು ಕೋಮಿನ ಪರವಾಗಿ ಬೆಂಬಲಕ್ಕೆ ನಿಂತಿರುವುದನ್ನು ಎಳೆಎಳೆಯಾಗಿ,ಸಾಕ್ಷಿ ಸಮೇತ ಚಿತ್ರಿಸಿದೆ.

“ಇಂದಿಗೂ ಆ ಶಾಪಗ್ರಸ್ಥ ಪಟ್ಟಣವು ಪ್ರತ್ಯೇಕವಾದ, ಒಡಕಿನ ಪಟ್ಟಣವಾಗಿಯೇ ಉಳಿದಿದೆ. ಇಂದು ಬಿಜೆಪಿಯ ಮುಸ್ಲಿಂ ಮುಖವಾಡ ಶಾನವಾಜ್ ಹುಸೇನ್ ಈ ಭಾಗಲ್ಪುರ ಕ್ಷೇತ್ರದ ಪಾರ್ಲಿಮೆಂಟ್ ಶಾಸಕ. ಬಿಜೆಪಿಯ ಈ ಮುಖವಾಡ ಕಳೆದೆರೆಡು ಬಾರಿ ಸತತವಾಗಿ ಈ ಕ್ಷೇತ್ರದಿಂದ ಗೆಲವು ಸಾಧಿಸಿರುವುದು ಕೋಮು ಸೌಹಾರ್ದತೆಗೆ ಸಾಕ್ಷಿ ಎಂದು ಬಣ್ಣಿಸಲಾಗುತ್ತಿದೆ. ಆದರೆ ವಾಸ್ತವದ ಚಿತ್ರಣವೇ ಬೇರೆಯಾಗಿದೆ. ನ್ಯಾಯ ಗಳಿಸುವ ಸಾಧ್ಯತೆಗಳು ಕ್ಷೀಣಿಸುತ್ತಿರುವ ಈ ಘಟ್ಟದಲ್ಲಿ ಮತ್ತೊಮ್ಮೆ ಈ ಕೋಮು ಗಲಭೆ ನಡೆಯಬಾರದು ಎನ್ನವಷ್ಟಕ್ಕೆ ಮಾತ್ರ ವ್ಯವಸ್ಥೆ ತನ್ನನ್ನು ಸೀಮಿತಗೊಳಿಸಿಕೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಆ ಕರಾಳವಾದ ಕೋಮು ಗಲಭೆಗಳು ಮರಳುವ ಆತಂಕಗಳು ಕಡಿಯಿದ್ದರೂ ಸಹ ಕೋಮು ಗಲಭೆಗಳು ಘಟಿಸುವುದಕ್ಕಾಗಿ ನೂರಾರು ದಾರಿಗಳು ಇಂದಿಗೂ ನಿಚ್ಛಳವಾಗಿವೆ.

“1990 ರಲ್ಲಿ ಲಾಲೂ ಪ್ರಸಾದರ ನೇತೃತ್ವದ ಆಗಿನ ಬಿಹಾರ ಸರ್ಕಾರವು Commission of Inquiry Act (1952) ಅಡಿಯಲ್ಲಿ ಕೋಮು ಗಲಭೆಗಳನ್ನು ಕುರಿತಾದ ವರದಿಯನ್ನು ನೀಡಲು, ಈ ಕೋಮು ಗಲಭೆಗಳಿಗೆ ಕಾರಣಗಳನ್ನು, ವ್ಯಕ್ತಿಗಳು, ಸಂಘಟನೆಗಳ ಜವಾಬ್ದಾರಿಗಳು ಮತ್ತು ಕೋಮು ಗಲಭೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಸೂಚಿಸಲು ತನಿಖಾ ತಂಡವನ್ನು ರಚಿಸಿತ್ತು. ಇದರ ಭಾಗವಾಗಿ 126 ಸಾಕ್ಷಿಗಳನ್ನು ಪರೀಕ್ಷಿಸಲಾಯಿತು. ಕೂಲಂಕಷ ತನಿಖೆಯ ನಂತರ ತನಿಖಾ ತಂಡದ ಅಧ್ಯಕ್ಷ ಜಸ್ಟೀಸ್ ರಾಮ ನಂದನ ಪ್ರಸಾದ್‌ರ ವರದಿ ಮತ್ತು ತನಿಖಾ ತಂಡದ ಸದಸ್ಯರಾದ ಜಸ್ಟೀಸ್ ಚಂದ್ರ ಪ್ರಸಾದ ಸಿನ್ಹಾ ಮತ್ತು ಎಸ್.ಶಾಮ್ಸುಲ್ ಹಸನ್ ಅವರ ವರದಿ ಹೀಗೆ ಮೂರು ಭಿನ್ನ ವರದಿಗಳು ಬಿಡುಗಡೆಗೊಂಡವು. ಇವುಗಳ ಹೊರತಾಗಿ ಅಲ್ಪಸಂಖ್ಯಾತ ಆಯೋಗದ ಎಸ್.ಎಂ.ಭುರೆ ಮತ್ತು ಅವರ ಸದಸ್ಯರ ನೇತೃತ್ವದ ತಂಡವು ಸಹ ತನಿಖಾ ವರದಿಯನ್ನು ರೂಪಿಸಿತು. ತನಿಖಾ ತಂಡಗಳಿಂದ, ನ್ಯಾಯಾಂಗದಿಂದ ಈ ಕೋಮು ಗಲಭೆಗೆ ಪ್ರಚೋದಿಸಿದ್ದಾರೆ ಮತ್ತು ಮುಸ್ಲಿಂರ ವಿರುದ್ಧ ಕರ್ತವ್ಯಲೋಪ ಎಸೆಗಿದ್ದಾರೆ ಎಂದು ಆರೋಪಕ್ಕೆ ಒಳಗಾಗಿರುವ ಪೋಲೀಸ್ ಸೂಪರಿಂಟೆಂಡೆಂಟ್ ಕೆ.ಎಸ್.ದ್ವಿವೇದಿಗೆ ನಿತೀಶ್ ಕುಮಾರ್ ಸರ್ಕಾರ 2011 ರಲ್ಲಿ ಅಡಿಶನಲ್ ಡೈರೆಕ್ಟರ್ ಜನರಲ್ ಆಗಿ ಭಡ್ತಿಯನ್ನು ನೀಡಿತು. ಇದೇ ಬಗೆಯ ಕರ್ತವ್ಯ ಲೋಪದ ಆರೋಪ ಎದುರಿಸುತ್ತಿರುವ ಇತರೇ ಪೋಲೀಸ್ ಅಧಿಕಾರಿಗಳಿಗೂ ಪ್ರಮೋಶನ್ ನೀಡಲಾಗಿದೆ.”

2013 ಸೆಪ್ಟೆಂಬರ್: ಭಾಗಲ್ಪುರದ ಚಾಮನಗರದ ಅಂಗಡಿಯ ಮುಂದೆ ಕುಳಿತಿರುವ ಜಿಯಾವುದ್ದೀನ್ ಮತ್ತು ಚಂಪಾನಗರದ ರಾಜಕೀಯ ಆಕ್ಟಿವಿಸ್ಟ್ ಮೆಜಾಹತ್ ಅನ್ಸಾರಿ ಹೇಳುವುದೇನೆಂದರೆ ಮೊನ್ನೆ ಮುಜಫರ್ ನಗರದಲ್ಲಿ ನಡೆದ ಕೋಮುಗಲಭೆಗಳನ್ನು ನೋಡಿದಾಗ ನಮಗೆ ಭಾಗಲ್ಪುರದ ಕರಾಳತೆ ನೆನಪಾಗುತ್ತದೆ. ಅಂದು ನಮಗೆಲ್ಲಾ ಆಗಿದ್ದೇ ಇಂದು ಮುಜಫರ್ ನಗರದ ನಾಗರಿಕರಿಗೆ ಆಗುತ್ತಿದೆ. ಇದಕ್ಕೆ ಕೊನೆಯೆಂದೋ? (ದಿ ಹಿಂದೂ, 3 ನೇ ಅಕ್ಟೋಬರ್, 2013)

30 ನೇ ಸೆಪ್ಟೆಂಬರ್ 2013 : ಕರ್ನಾಟಕದ ಶಿರಾ ತಾಲೂಕಿನಲ್ಲಿ ಇದ್ದಕ್ಕಿಂದ್ದಂತೆ ಕೋಮುಗಲಭೆಗಳು ಶುರುವಾಗಿ ಇಡೀ ಪಟ್ಟಣವೇ ಭಯಗ್ರಸ್ಥವಾಯಿತು. sira-communal-clash1996 ರ ಜನವರಿಯಲ್ಲಿ ಜರುಗಿದ ಕೋಮು ಗಲಭೆಗಳ ನಂತರ ಇದೇ ಮೊದಲ ಬಾರಿಗೆ ಶಿರಾ ಪಟ್ಟಣ ಗಲಭೆಗೀಡಾಗಿದೆ. ಇದು ದಿಢೀರನೆ ಉಧ್ವವಿಸಿದ್ದಲ್ಲ. ಅಲ್ಲಿನ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಾಗವೊಂದರಲ್ಲಿ ವ್ಯಾಪಾರದ ಮಳಿಗೆಗಳನ್ನು ಕಟ್ಟಲಾಯಿತು. ಆದರೆ ಇದು ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ. ಈ ಚೆಡ್ಡಿಗಳು ಕೂಗುಮಾರಿಗಳಂತೆ ಕಿರುಚಾಡುತ್ತಾ ಅದು ಸ್ಮಶಾನಕ್ಕೆ ಸೇರಿದ ಜಾಗವೆಂತಲೂ ಅಲ್ಲಿ ಮಳಿಗೆಗಳನ್ನು ನಿರ್ಮಿಸಿರುವುದು ಕಾನೂನುಬಾಹಿರವೆಂತಲೂ ಪಟ್ಟಣದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದ್ದಾರೆ. ಆದರೆ ತಮಾಶೆಯೆಂದರೆ ಇಂದು ಆ ಜಾಗ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು. ಆದರೆ ಈ ಬಿಜೆಪಿ ಏತಕ್ಕೆ ಅದರಲ್ಲಿ ಮೂಗು ತೂರಿಸುತ್ತಿದೆ? ಮತ್ತೇನಕ್ಕೆ, ಕೋಮು ಗಲಭೆಗಳನ್ನು ಹುಟ್ಟು ಹಾಕಲಿಕ್ಕೆ. ಶಿರಾ ಪಟ್ಟಣದ ಪ್ರಗತಿಪರ ಹೋರಾಟಗಾರರ ಪ್ರಕಾರ ಇಂದಿನ ಇಲ್ಲಿನ ಗಲಭೆಗೂ, ಕಳೆದ ತಿಂಗಳು ಮುಜಫರ್ ನಗರದ ಗಲಭೆಗೂ ಸಾಮ್ಯತೆ ಇದೆ. ಹಿಂದೂ ಹುಡುಗಿಯೊಬ್ಬಳನ್ನು ಮುಸ್ಲಿಂ ಯುವಕರಿಬ್ಬರು ಚುಡಾಯಿಸಿದರೆಂಬ ಗುಲ್ಲೇ ಶಿರಾ ಗಲಭೆಯ ಹುಟ್ಟಿಗೆ ಕಾರಣ. ಇದನ್ನು ಮುಂದು ಮಾಡಿ ಇಡೀ ಪಟ್ಟಣದ ಶಾಂತಿ ಕದಡುವಂತೆ ಮಾಡಿತು ಈ ಸಂಘ ಪರಿಪಾರ. ಮುಸ್ಲಿಂ ಮಳಿಗೆಗಳನ್ನು ಈ ಬೆಂಕಿಗೆ ತುಪ್ಪದಂತೆ ಬಳಸಿಕೊಳ್ಳುತ್ತಿದೆ ಈ ಬಿಜೆಪಿ. ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಇಚ್ಛಾಶಕ್ತಿಯಿದ್ದರೆ ಇದನ್ನು ಸಣ್ಣದರಲ್ಲೇ ತುಂಡು ಮಾಡಬಹುದೆಂದು ಅಲ್ಲಿನ ಪ್ರಗತಿಪರ ಹೋರಾಟಗಾರರು ನೊಂದು ನುಡಿಯುತ್ತಾರೆ.deccanherald-sira-town-clash ಆದರೆ ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ಈ ಕಮ್ಯೂನಲ್ ಗಲಭೆಗಳ ಆಳಗಳ ಕುರಿತಾದ ಇರುವ ಸೆನ್ಸಿಟಿವಿಟಿಯ ಕೊರತೆ ಇಂದಿನ ಸಂದರ್ಭದಲ್ಲಿ ಗೋಚರವಾಗುತ್ತಿದೆ. ಮತ್ತೊಂದು ಆತಂಕದ ವಿಚಾರವೆಂದರೆ ಗಲಭೆಯ ಹಿನ್ನೆಲೆಯಲ್ಲಿ ಸಂಘ ಪರಿವಾರದಿಂದ ಬಂಧಿತರಾದ ಹುಡುಗರ ಸರಾಸರಿ ವಯಸ್ಸು ಸುಮಾರು 20 ರಿಂದ 23. ಈ ಲುಂಪೆನ್ ಗುಂಪೆಲ್ಲ ಓಬಿಸಿ ಗುಂಪಿಗೆ ಸೇರಿದವರು. ಪ್ರಗತಿಪರ ಹೋರಾಟಗಾರರು ಹೇಳಿದ್ದು ಈ ಹುಡುಗರು ಮೋದಿಯ ಮಂತ್ರವನ್ನು ಕತ್ತಿಯಂತೆ ಝಳಪಿಸುತ್ತಿದ್ದಾರೆ.

ನೆನಪಿರಲಿ ಗುಜರಾತ್ ಹತ್ಯಾಕಾಂಡದಲ್ಲೂ ಸಂಘ ಪರಿವಾರದ ಪರವಾಗಿ ಹೋರಾಡಿದವರು ಓಬಿಸಿ ಮತ್ತು ದಲಿತ ಹುಡುಗರು. ಇಡೀ ಕೋಮು ಗಲಭೆಗಳ ರಕ್ತಸಿಕ್ತ ಹಿತಿಹಾಸದುದ್ದಕ್ಕೂ ಇದು ನಿಜ. ಕಳೆದ ಎಂಬತ್ತು ವರ್ಷಗಳಲ್ಲಿ ಮೇಲ್ಜಾತಿ ಆರೆಸಸ್‌ನ ರಾಜಕೀಯ ಆಕಾಂಕ್ಷೆಗೆ ಬಾಣಗಳಾಗಿ ಬಳಕೆಗೊಂಡು ಗೋಣು ಮರಿದುಕೊಂಡು ಹಳ್ಳಕ್ಕೆ ಬೀಳುತ್ತಿರುವುವರು ಓಬಿಸಿ ಮತ್ತು ದಲಿತರು.

2002 ರಲ್ಲಿ ಜರುಗಿದ ಗುಜರಾತ್ ಹತ್ಯಾಕಾಂಡವನ್ನು ಒಳಗೊಂಡು ಇಂಡಿಯಾದಲ್ಲಿ ಕಳೆದ ಎಂಬತ್ತು ವರ್ಷಗಳಲ್ಲಿ ಘಟಿಸಿದ ನೂರಾರು ಕೋಮು ಗಲಭೆಗಳಿಗೂ ಒಂದಕ್ಕೊಂದು ಅಪಾರ ಸಾಮ್ಯತೆಗಳಿವೆ. ಈ ಎಲ್ಲ ಗಲಭೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶವೆಂದರೆ ಸಂಘ ಪರಿವಾರದ ಪಾತ್ರ. ಸಂಘ ಪರಿವಾರದ ಎಲ್ಲ ಅಂಗ ಪಕ್ಷಗಳು ಒಂದಕ್ಕೊಂದು ಪೂರಕವಾಗಿ, ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತ ಹತ್ಯಾಕಾಂಡಗಳ ಷಡ್ಯಂತ್ರಗಳನ್ನು ರೂಪಿಸುತ್ತವೆ. ಈಗ ಹೇಳಿ, ಇಂದು ಈ ಮತೀಯವಾದಿಗಳ ಗುಂಪಿನ ನಾಯಕನಾದ ನರೇಂದ್ರ ಮೋದಿಯ ನೇತೃತ್ವದಲ್ಲಿ ಗುಜರಾತ್‌ನಲ್ಲಿ ಜರುಗಿದ ಹತ್ಯಾಕಾಂಡಗಳನ್ನು ಒಂದು ಘಟನೆಯಷ್ಟೇ ಅದನ್ನು ಮರೆತುಬಿಡಿ ಎಂದು ಮಾನವಿಲ್ಲದೆ ಬೊಗಳುತ್ತಿರುವ ಮಾಧ್ಯಮಗಳು ಮತ್ತು ಮಧ್ಯಮವರ್ಗಗಳಿಗೆ ಆತ್ಮಸಾಕ್ಷಿಯೆಂಬುದಿದೆಯೇ? ಇವರೆಂದಾರೂ ಈ ಕೋಮು ಗಲಭೆಗಳಿಗೆ ತುತ್ತಾಗಿದ್ದವರೇ? ಓಬಿಸಿ ಮತ್ತು ದಲಿತರನ್ನು ಬಳಸಿಕೊಂಡು ಈ ಬ್ರಾಹ್ಮಣ್ಯದ ಆರೆಸಸ್ ಅಧಿಕಾರದ ಹತ್ತಿರಕ್ಕೆ ನಿಧಾನವಾಗಿ ತೆವಳುತ್ತಿದೆ. ಮೋದಿ ಕಂಡ ಕಂಡಲ್ಲಿ ಮತಾಂಧತೆಯ ಬೆಂಕಿಯುಗುಳುತ್ತಿದ್ದಾನೆ. ಕಳೆದ ದಶಕದಲ್ಲಿ ಹೆಚ್ಚೂ ಕಡಿಮೆ ತಣ್ಣಗಿದ್ದ ಕೋಮುವಾದ ಇಂದು ದೇಶದ ಅನೇಕ ಭಾಗಗಳಲ್ಲಿ ಪುನರಾವರ್ತನೆಯಾಗುತ್ತಿದೆ. ಇಂದು ಮೋದಿಯ ಬೆಂಬಲಿಗರು ಸಂವಿಧಾನವನ್ನೇ ತಿರಸ್ಕರಿಸುತ್ತಿದ್ದಾರೆ. ಮಧ್ಯಮ ವರ್ಗಕ್ಕೆ ಇಂದು ಸರ್ವಾಧಿಕಾರ ಅಪ್ಯಾಯಮಾನವಾಗಿ ಗೋಚರಿಸುತ್ತಿದೆ. ಫ್ಯಾಸಿಸ್ಟ್ ನಾಯಕ ಹಿಂದೂ ಧರ್ಮದ ಪುನರುದ್ಧಾರಕನಂತೆ ಕಂಗೊಳಿಸುತ್ತಿದ್ದಾನೆ.

ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರು ಅರ್ಚಕಿಯರಾಗುತ್ತಿರುವುದು…


– ಚಿದಂಬರ ಬೈಕಂಪಾಡಿ


 

ಮಂಗಳೂರು ದಸರಾ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮೂಲಕ ಈಗ ಮನೆ ಮಾತಾಗಿದೆ. ಸಾಮಾಜಿಕ ಸುಧಾರಕ ನಾರಾಯಣಗುರುಗಳ ಮೂಲಕ kudroli-temple-wodows-facilitated-poojaryಸ್ಥಾಪನೆಯಾದ ಈ ಕ್ಷೇತ್ರದಲ್ಲಿ ಈಗ ಬದಲಾವಣೆಯ ಬೆಳಕು ಕಾಣಿಸುತ್ತಿದೆ. ಇತಿಹಾಸ ಪ್ರಸಿದ್ಧಿ ಪಡೆದ ಈ ಕ್ಷೇತ್ರ ಈಗ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾಗಿದೆ. ವಿಧವೆಯರು ಸಾಮಾಜಿಕವಾಗಿ ಯಾವುದೇ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಸಮಾಜ ಸಮ್ಮತವಲ್ಲ. ಇದು ಮನುಷ್ಯರೇ ಹಾಕಿರುವ ಬಂಧನ. ಆದರೆ ಈ ಬಂಧವನನ್ನು ಕಳಚಿಕೊಂಡು ವಿಧವೆಯರು ಕೂಡಾ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು ಎನ್ನುವುದಷ್ಟೆ ಅಲ್ಲ, ದೇವರ ಪೂಜೆ ಮಾಡುವ ಅರ್ಚಕರ ಸ್ಥಾನಕ್ಕೂ ಅರ್ಹರು ಎನ್ನುವುದನ್ನು ಈ ಬಾರಿಯ ದಸರಾದಲ್ಲಿ ಜಾರಿಗೆ ತರಲಾಗುತ್ತಿದೆ.

ಇಬ್ಬರು ವಿಧವೆಯರು ಇನ್ನು ಮುಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶಾಶ್ವತ ಅರ್ಚಕರಾಗಿ ದೇವರ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಿದ್ದಾರೆ. ಈ ಮೊದಲು ವಿಧವೆಯರು ಗೋಕರ್ಣನಾಥ ಕ್ಷೇತ್ರದಲ್ಲಿ ರಥ ಎಳೆದಾಗ ಸಂಪ್ರದಾಯವಾದಿಗಳು ಹೌಹಾರಿದ್ದರು. ಮತ್ತೊಮ್ಮೆ ಈ ಕ್ಷೇತ್ರದಲ್ಲಿ ವಿಧವೆಯರೇ ಚಂಡಿಕಾಯಗದಲ್ಲಿ ಪಾಲ್ಗೊಳ್ಳುವ ಮೂಲಕ ವಿಧವೆಯರು ಅಮಂಗಳೆಯರಲ್ಲ ಎನ್ನುವ ಸಂದೇಶ ಸಾರಿದ್ದರು. ಈಗ ವಿಧವೆಯರು ಅರ್ಚಕರಾಗಿ ನಿತ್ಯವೂ ಇಲ್ಲಿ ಪೂಜೆ ನೆರವೇರಿಸಲಿದ್ದಾರೆ. ಈಗಾಗಲೇ ಇಬ್ಬರು ವಿಧವೆಯರನ್ನು ಆಯ್ಕೆ ಮಾಡಿ ಕಳೆದ ಆರು ತಿಂಗಳಿನಿಂದ ಅರ್ಚಕರ ತರಬೇತಿ ಪಡೆಯುತ್ತಿದ್ದಾರೆ.

ಇದೆಲ್ಲವೂ ಸಾಧ್ಯವಾಗಿರುವುದು ಮಾಜಿ ಕೇಂದ್ರ ಸಚಿವ ಹಾಗೂ ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ಧನ ಪೂಜಾರಿ ಅವರ ಛಲ ಮತ್ತು ಸ್ವತಂತ್ರ ನಿಲುವಿನಿಂದ.

ಶತಮಾನಗಳ ಇತಿಹಾಸವಿರುವ ಕುದ್ರೋಳಿ ಕ್ಷೇತ್ರವನ್ನು ನವೀಕರಿಸಲು ಜನಾರ್ಧನ ಪೂಜಾರಿ ಅವರು ಅದಕ್ಕಾಗಿ ನಾಡಿನಾದ್ಯಂತ ಸಂಚರಿಸಿ ಜನರಿಂದ kudroli-templeದೇಣಿಗೆ ಸಂಗ್ರಹಿಸಿದರು. ತಾವೇ ನವೀಕರಣದ ಸಂದರ್ಭದಲ್ಲಿ ಕಲ್ಲು, ಮಣ್ಣು ಹೊರುವ ಮೂಲಕ ಕರಸೇವೆಯಲ್ಲಿ ಜನಸಾಗರವೇ ಪಾಲ್ಗೊಳ್ಳುವಂತೆ ಮಾಡಿದರು. ಇದೆಲ್ಲವನ್ನೂ ಒಂದು ವರ್ಗ ಪೂಜಾರಿಯವರ ಇಮೇಜ್ ವೃದ್ಧಿಗೆಂದು ಗೇಲಿ ಮಾಡಿತ್ತು. ನಂತರ ಮಂಗಳೂರು ದಸರಾ ಮೆರವಣಿಗೆಗೆ ಹೊಸ ರೂಪಕೊಟ್ಟು ಪ್ರತೀ ವರ್ಷ ಅದ್ದೂರಿ ದಸರಾಕ್ಕೆ ಸ್ಫೂರ್ತಿಯಾಗಿದ್ದಾರೆ. ಇವಿಷ್ಟೇ ಆಗಿದ್ದರೆ ಮಾಮೂಲಿ ಅಂದುಕೊಳ್ಳಬಹುದಿತ್ತು.

ಶೂದ್ರರಿಗೆ ದೇವಸ್ಥಾನ ಮೆಟ್ಟಿಲು ಹತ್ತುವ ಅವಕಶಾವಿಲ್ಲ ಎನ್ನುವ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಹಿಂದುಳಿದವರು ಅಸ್ಪೃಶ್ಯರಿಗೂ ದೇವಸ್ಥಾನಕ್ಕೆ ಹೋಗುವ ಹಕ್ಕಿದೆ, ದೇವರನ್ನು ಪೂಜಿಸುವುದಕ್ಕೆ ಅವಕಾಶವಿದೆ ಎನ್ನುವ ಮೂಲಕ ಈ ಕ್ಷೇತ್ರ ಸ್ಥಾಪನೆ ಮಾಡಿದರು ನಾರಾಯಣಗುರುಗಳು. ಮಾನವತಾವಾದದ ಪ್ರತಿಪಾದಕರಾಗಿ, ಮೇಲು-ಕೀಳು ಎನ್ನುವ ಮನುಷ್ಯ ನಿರ್ಮಿತ ಗೋಡೆಗಳನ್ನು ಕೆಡವಿ ಕೆಳವರ್ಗದವರಲ್ಲೂ ಸ್ವಾಭಿಮಾನದ ಬೀಜ ಬಿತ್ತಿದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೇವಲ ಆರಾಧನಾ ಸ್ಥಳವಾಗಲಿಲ್ಲ, ಸ್ವಾಭಿಮಾನದ ಪ್ರತೀಕವಾಗಿ ಬೆಳೆಯಿತು. ಈಗ ಅಂಥ ಸ್ವಾಭಿಮಾನವನ್ನು ಬೆಳೆಸುವ ಭಾಗವಾಗಿ hindu-widowವಿಧವೆಯರಿಗೂ ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶವಿದೆ ಎನ್ನುವುದನ್ನು ಪ್ರತಿಪಾದಿಸಿದ ಜನಾರ್ಧನ ಪೂಜಾರಿ ವಿಧವೆಯರಿಂದಲೇ ರಥ ಎಳೆಯಿಸಿ ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾದರು. ಚಂಡಿಕಾ ಯಾಗದಲ್ಲಿ ವಿಧವೆಯರೇ ಪಾಲ್ಗೊಳ್ಳುವಂತೆ ಮಾಡಿ ಸಾಮಾಜಿಕ ಅಸಮಾನತೆಯಲ್ಲಿ, ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರ ಮುಖದಲ್ಲಿ ಮುಗುಳು ನಗು ಅರಳಲು ಕಾರಣರಾದರು. ಹೆತ್ತ ತಾಯಿ ವಿಧವೆಯಾದರು ಮಕ್ಕಳಿಗೆ ಆಕೆ ಪೂಜ್ಯಳು ಎಂದು ಪ್ರತಿಪಾದಿಸುತ್ತೇವೆ. ಆದರೆ ಆಕೆಯನ್ನು ಮಂಗಳ ಕಾರ್ಯಗಳಿಂದ ದೂರ ಇಟ್ಟು ಸಂಪ್ರದಾಯದ ಹೆಸರಲ್ಲಿ ಪ್ರತ್ಯೇಕಿಸುತ್ತೇವೆ. ಮಾನಸಿಕವಾಗಿ ವಿಧವೆಯರನ್ನು ಕುಬ್ಜರಾಗಿಸುವ ನಮ್ಮ ನಂಬಿಕೆ, ಆಚರಣೆಗಳು ಅಮಾನವೀಯ ಎನ್ನುವ ಪರಿವೆಯೇ ಇಲ್ಲದವರಂತೆ ವರ್ತಿಸುತ್ತೇವೆ.

ಕನ್ನಡದ ಮೊಟ್ಟಮೊದಲ ಕಾದಂಬರಿ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ’ ಓರ್ವ ವಿಧವೆಯ ಬದುಕನ್ನು ಮನಮಿಡಿಯುವಂತೆ ಹೇಳುತ್ತದೆ. ಆಕೆಗೆ ಮರುಮದುವೆ ಮಾಡಿಸುವ ಮೂಲಕ ನಿಜವಾದ ಧರ್ಮದ ವಿಜಯ ಎನ್ನುವ ಸಂದೇಶ ಸಾರುತ್ತಾರೆ. ಶತಮಾನಗಳ ಹಿಂದೆಯೇ ಇಂಥ ಕ್ರಾಂತಿಕಾರಿ ನಿಲುವು ತಳೆಯುವ ಎದೆಗಾರಿಕೆ ಓರ್ವ ಲೇಖಕರು ತೋರಿಸಿದ್ದಾರೆ. ಸಂಪ್ರದಾಯ, ಆಚರಣೆಗಳೇ ಅತೀಮುಖ್ಯ ಎನ್ನುವ ಕಾಲಘಟ್ಟದಲ್ಲಿ ಗುಲ್ವಾಡಿ ಅವರು ಸಂಪ್ರದಾಯದ ಗೋಡೆ ಕೆಡವುವ ಸಾಹಸ ಮಾಡಿದ್ದರು.

ಜನಾರ್ಧನ ಪೂಜಾರಿ ಓರ್ವ ರಾಜಕಾರಣಿಯಾಗಿ ಕೇಂದ್ರದಲ್ಲಿ ಹಣಕಾಸು ಖಾತೆ ಮಂತ್ರಿಯಾಗಿ ಸಾಲಮೇಳ ನಡೆಸುವ ಮೂಲಕ ಸುದ್ದಿಯಾದರು ಎನ್ನುವುದು ಕ್ಲೀಷೆಯ ಮಾತಾಗುತ್ತದೆ. ಬಡವರು, ಮಹಿಳೆಯರು ಸ್ವಾವಲಂಬಿಯಾಗಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕವಾಗಿ ಸಾಲಮೇಳ ನಡೆಸುವ poojaryಮೂಲಕ ಬ್ಯಾಂಕಿನ ಬಾಗಿಲುಗಳು ಬಡವರಿಗೆ ಮುಕ್ತವಾಗುವಂತೆ ಮಾಡಿದವರು ಎನ್ನುವುದನ್ನು ನಿರಾಕರಿಸಲಾಗದು. ಈ ಸಾಲಮೇಳದ ಕಾನ್ಸೆಪ್ಟ್ ಪರಿಷ್ಕರಣೆಗೆ ಒಳಪಡಬೇಕಿತ್ತು ಎನ್ನುವುದು ಚರ್ಚೆಯ ಭಾಗವಾಗಿದ್ದರೂ ದೇಶದಲ್ಲಿ ಕ್ರಾಂತಿಕಾರಿ ಹೆಜ್ಜೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಅಂತೆಯೇ ಮಂಗಳೂರು ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವೆಯರಿಗೆ ಪೂಜಾರಿ ಅವರು ಕಲ್ಪಿಸಿಕೊಟ್ಟಿರುವ ಹೊಸ ಅವಕಾಶಗಳು ಮತ್ತು ತೆಗೆದುಕೊಂಡಿರುವ ನಿಲುವುಗಳು ನಾರಾಯಣಗುರುಗಳ ತತ್ವ, ಆದರ್ಶ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳಿಗೆ ಪೂರಕ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಮನುಷ್ಯರೇ ಮಾಡಿದ ಕಟ್ಟುಪಾಡುಗಳಿಗೆ ದೇವರು ಪರಿಹಾರ ಕೊಡಲು ಸಾಧ್ಯವಿಲ್ಲ, ಮನುಷ್ಯರೇ ಪರಿಹಾರ ಕೊಡಬೇಕಾಗಿದೆ. ಮಂಗಳ ಕಾರ್ಯಗಳಿಂದ ದೂರ ಇಟ್ಟು ಸಂಪ್ರದಾಯದ ಹೆಸರಲ್ಲಿ ಪ್ರತ್ಯೇಕಿಸಿ, ಸಾಮಾಜಿಕ ಅಸಮಾನತೆಯಲ್ಲಿ, ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರ ವಿಚಾರದಲ್ಲಿ ಜನಾರ್ಧನ ಪೂಜಾರಿ ಅವರು ತಳೆದಿರುವ ನಿಲುವುಗಳು ಮನುಷ್ಯತ್ವ, ಮಾನವೀಯತೆಯನ್ನು ಪ್ರತಿಪಾದಿಸುವವರು ಮೆಚ್ಚಿದರೆ ಅತಿಶಯೋಕ್ತಿಯಲ್ಲ ಮತ್ತು ಅಪರಾಧವೂ ಅಲ್ಲ.

ಕಳಂಕಿತರಿಗೆ ಆಕಸ್ಮಿಕ ಹಿನ್ನಡೆ


– ಚಿದಂಬರ ಬೈಕಂಪಾಡಿ


 

ಕಳಂಕಿತರನ್ನು ರಕ್ಷಿಸುವ ಪ್ರಯತ್ನದಲ್ಲಿ ಕೇಂದ್ರ ಯುಪಿಎ ಸರ್ಕಾರ ಎಡವಟ್ಟು ಮಾಡಿಕೊಂಡಿತು. ತಾನೇ ಅವಸರವಾಗಿ ಜಾರಿಗೆ ತರಲುದ್ದೇಶಿಸಿದ್ದ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯುವ ಮೂಲಕ ಸೋಲೊಪ್ಪಿಕೊಂಡಿದೆ.

ನಿಜಕ್ಕೂ ಕಳಂಕಿತರಿಗೆ ಯುಪಿಎ ಸರ್ಕಾರದ ಈ ನಡೆ ಹಿನ್ನಡೆಯಾಗಿದೆ. ಹೇಗಾದರೂ ಸರಿ ತಾವು ಅಧಿಕಾರದಲ್ಲೇ ಉಳಿಯಬೇಕೆಂಬ ಧಾವಂತದ ಜೊತೆಗೆ ತಾವು ಏನೇ ಮಾಡಿದರೂ ಪ್ರಶ್ನಿಸುವಂತಿಲ್ಲ ಎನ್ನುವಂಥ ಮನಸ್ಥಿತಿಗೆ ಕಡಿವಾಣ ಬಿದ್ದಿದೆ.

ಪ್ರಧಾನಿ ಡಾ.ಮನಮೋಹನ್ ಸಿಂಗ್ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರಿರುವ ಅರ್ಥಶಾಸ್ತ್ರಪಂಡಿತರು ಹೊರತು ರಾಜಕೀಯ ಪಂಡಿತರಲ್ಲ obama-manamohansinghಎನ್ನುವುದು ಕೂಡಾ ಜಾಗತಿಕವಾಗಿ ಗೊತ್ತಿರುವ ಸಂಗತಿ. ಸೋನಿಯಾ ಗಾಂಧಿ ಅವರ ಇಶಾರೆಯಂತೇ ಕೆಲಸ ಮಾಡುವ ನಿಷ್ಠಾವಂಥರಲ್ಲಿ ಡಾ.ಮನಮೋಹನ್ ಮುಂಚೂಣಿಯಲ್ಲಿದ್ದಾರೆ. ಪ್ರಧಾನಿ ಪಟ್ಟವನ್ನು ಮನಮೋಹನ್ ಸಿಂಗ್ ಅವರ ಬದಲು ಅವರದ್ದೇ ಪಕ್ಷದ ಬೇರೆ ಯಾರಿಗಾದರೂ ಕಟ್ಟುತ್ತಿದ್ದರೆ ಇಷ್ಟುಹೊತ್ತಿಗೆ ಸ್ವತ: ಸೋನಿಯಾ ಅವರನ್ನು ಜೈಲಿಗೆ ಕಳುಹಿಸುತ್ತಿದ್ದರೇನೋ ಎನ್ನುವುದು ಅತಿಶಯೋಕ್ತಿಯಲ್ಲ. ಪ್ರಧಾನಿಯಂಥ ಒಂದೇ ಒಂದು ಅವಕಾಶ ಸಿಕ್ಕಿದರೆ ಅಮರಿಕೊಳ್ಳುತ್ತಿದ್ದರು. ನೆಲ, ಜಲವನ್ನು ಕೊಳ್ಳೆಹೊಡೆಯುವ ಈಗಿನ ಕಾಲದಲ್ಲಿ ಚಿನ್ನದಂಥ ಅವಕಾಶ ಸಿಕ್ಕಿದ್ದರೆ ಇನ್ನಷ್ಟು ಹಗರಣಗಳಿಗೇನೂ ಕೊರತೆಯಾಗುತ್ತಿರಲಿಲ್ಲ. ಆ ಮಟ್ಟಿಗೆ ಸೋನಿಯಾ ಕುಟುಂಬ ಬಚಾವ್ ಮನಮೋಹನ್ ಸಿಂಗ್ ಅವರಿಂದಾಗಿ.

ಕೇಂದ್ರ ಸರ್ಕಾರ ಅಧ್ಯಾದೇಶವನ್ನು ಹಿಂದಕ್ಕೆ ಪಡೆದಿರುವುದು ಒತ್ತಡದ ಕಾರಣಕ್ಕೆ, ಅದರಲ್ಲೂ ಕಾಂಗ್ರೆಸ್ ಯುವರಾಜನ ಕಾರಣಕ್ಕೆ ಎನ್ನುವುದು ಸ್ಪಷ್ಟ. ಈ ನಡೆಯಿಂದ ಯಾರು ಗೆದ್ದರು, ಯಾರು ಬಿದ್ದರು ಎನ್ನುವುದು ಬಹಳ ಮುಖ್ಯವೆನಿಸುತ್ತಿಲ್ಲ. ದೇಶದ ಜನರ ಮುಂದೆ ಕಳಂಕಿತರ ಮುಖಗಳು ಕೊನೆಗೂ ಅನಾವರಣವಾಗಲು ಸಾಧ್ಯವಾಯಿತು.

ಒಂದು ವೇಳೆ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯದೇ ಇದ್ದಿದ್ದರೆ ಎರಡು ಅನಾಹುತಗಳು ಸಂಭವಿಸುತ್ತಿದ್ದವು. Rahul_Gandhi_Ajay_Makenಕಳಂಕಿತರನ್ನು ಮಟ್ಟ ಹಾಕುವುದು ಅಸಾಧ್ಯವಾಗುತ್ತಿತ್ತು. ಕಳಂಕಿತರನ್ನು ರಕ್ಷಣೆ ಮಾಡಿದ ಅಪಕೀರ್ತಿಗೆ ಯುಪಿಎ ಸರ್ಕಾರ ಭಾಗಿಯಾಗುತ್ತಿತ್ತು. ಕಳಂಕಿತರನ್ನು ಚುನಾವಣೆಯಿಂದ ದೂರ ಇಡಬೇಕೆಂದು ಚಿಂತನೆ ಮಾಡಿದ ರಾಜಕಾರಣಿಗಳು ಬಹುಬೇಗ ನೇಪಥ್ಯ ಸೇರಿಕೊಂಡಿದ್ದಾರೆ. ಕಳಂಕಿತರು ತಮ್ಮನ್ನು ದೂರ ಇಡುವ ಮನಸ್ಥಿತಿಯವರನ್ನು ಎಂದೆಂದಿಗೂ ಸಹಿಸುವುದಿಲ್ಲ. ಇದಕ್ಕೆ ಯಾರೂ ಹೊರತಲ್ಲ.

ಯಾವ ರಾಜ್ಯದ ಯಾವ ಪಕ್ಷದ ರಾಜಕಾರಣಿಯ ಚರಿತ್ರೆಯನ್ನು ಅವಲೋಕಿಸಿದರೂ ಒಂದಷ್ಟು ಕಪ್ಪು ಚುಕ್ಕೆಗಳು ಗೋಚರಿಸುತ್ತವೆ. ಖಾದಿಯಷ್ಟೇ ಶುಭ್ರ ಅವರ ಚಾರಿತ್ರ್ಯ ಅಂದುಕೊಳ್ಳುವುದು ಸುಲಭ ಸಾಧ್ಯವಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕ್ರಿಮಿನಲ್ ಚಟುವಟಿಕೆಗಳು ರಾಜಕೀಯದಲ್ಲಿ ಚಲಾವಣೆಯಲ್ಲಿರಬೇಕಾದರೆ ಅನಿವಾರ್ಯ ಎನ್ನುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಹಸಿವೆಯನ್ನು ಸಹಿಸಿಕೊಂಡು ಸುಮ್ಮನಿದ್ದರೂ ಎಂಜಲು ಕೈಯನ್ನು ಮೂತಿಗೆ ಒರೆಸಿ ಹೊಟ್ಟೆತುಂಬಾ ಉಂಡಿರಬೇಕು ಎನ್ನುವಂತೆ ಮಾಡಿಬಿಡುತ್ತಾರೆ ಸ್ವಲ್ಪ ಯಾಮಾರಿದರೂ, ಇದಕ್ಕೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮೇಲಿನ ಆಪಾದನೆಗಳೇ ಸಾಕ್ಷಿ. ಹಾಗೆಂದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ, ಅದು ಈ ಬರಹದ ಉದ್ದೇಶವೂ ಅಲ್ಲ. ಜಿ ಕೆಟಗರಿ ಸೈಟಿನಿಂದ ಹಿಡಿದು ಅರಣ್ಯ, ಕೆರೆ, ಗೋಮಾಳ ಒತ್ತುವರಿ ತನಕ ತಮ್ಮವರ ಹೆಸರಲ್ಲಿ ಕಬ್ಜ ಮಾಡಿಕೊಂಡಿರುವ ರಾಜಕಾರಣಿಗಳನ್ನು ಮತ್ತೆ ಮತ್ತೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟರೆ ಮುಂದೊಂದು ದಿನ ಈ ದೇಶದ ಪ್ರತಿಯೊಂದು ಇಂಚು ಭೂಮಿಯೂ ರಾಜಕಾರಣಿಗಳ ಕುಟುಂಬದವರ ಪಾಲಾಗಿರುತ್ತದೆ. ಭೂಮಿತಿ ಕಾಯಿದೆಯನ್ನು ಜಾರಿಗೆ ತಂದಿದ್ದರೆ ರಾಜಕಾರಣಿಗಳ ಬಣ್ಣ ಬಯಲಾಗುತ್ತಿತ್ತು, ಆದ ಕಾರಣವೇ ಅಂಥ ಕಾಯಿದೆ ಯಾರ ತಲೆಯೊಳಗೆ ಸುಳಿಯದಂತೆ ಮಾಡಿದ್ದಾರೆ. ಸಮಾಜದ ಕಟ್ಟ ಕಡೆಯ ದಟ್ಟ ದರಿದ್ರರ ಭೂಮಿಯನ್ನು ಕಬ್ಜ ಮಾಡಿಕೊಂಡವರು ಮಾಧ್ಯಮಗಳ ಬೆಳಕಲ್ಲಿ ಹೊಳೆಯುತ್ತಾರೆ, ಅವರೂ ಸಾಮಾಜಿಕ ನ್ಯಾಯದ ಬಗ್ಗೆ ನೀತಿ ಪಾಠ ಹೇಳುತ್ತಾರೆ. ಇಂಥವರನ್ನು ಅಧ್ಯಾದೇಶ ಜಾರಿಗೆ ತಂದು ರಕ್ಷಣೆ ಮಾಡಿದರೆ ದೇವರು ಮುನಿಸಿಕೊಳ್ಳುತ್ತಿದ್ದ ಖಂಡಿತಕ್ಕೂ. ಯಾಕೆಂದರೆ ದೇವಸ್ಥಾನವನ್ನೇ ಕಬ್ಜ ಮಾಡಿಕೊಂಡ ಉದಾಹರಣೆಗಳು ಕಣ್ಣಮುಂದಿವೆಯಲ್ಲವೇ?

ಪಕ್ಷದ ಅಂಗಿತೊಟ್ಟುಕೊಂಡಿರುವವರು ಅದನ್ನು ಕಳಚಿ ಯೋಚಿಸಿದರೆ ಕಾಂಗ್ರೆಸ್, ಬಿಜೆಪಿ ಅಥವಾ ಮತ್ತೊಂದು ಪಕ್ಷದ ನಡುವೆ shettar-yed-sada-eshwar-ananthಭ್ರಷ್ಟಾಚಾರ, ಸ್ವಜನಪಕ್ಷಪಾತ, ಕ್ರಿಮಿನಲ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ ಇಂಥ ವಿಚಾರಗಳಲ್ಲಿ ಅಷ್ಟೇನೂ ವ್ಯತ್ಯಾಸ ಗುರುತಿಸಲಾಗದು. ಯಾಕೆಂದರೆ ಎಲ್ಲರ ಗುರಿ ಒಂದೇ. ವೇಗದಲ್ಲಿ ವ್ಯತ್ಯಾಸವಿರಬಹುದೇ ಹೊರತು ಸಾಗುವ ದಿಕ್ಕು ಎಲ್ಲರದ್ದೂ ಒಂದೇ ಆಗಿರುತ್ತದೆ. ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು. ಹಂಚಿ ತಿಂದರೆ ಸ್ವರ್ಗ ಸುಖ ಎನ್ನುವುದನ್ನು ಎಲ್ಲರೂ ಅರಿತಿದ್ದಾರೆ. ಆದ್ದರಿಂದಲೇ ದಿಲ್ಲಿಯಿಂದ ಹಿಡಿದು ಬೆಂಗಳೂರು ತನಕ ಅದೆಷ್ಟು ಜನ ರಾಜಕಾರಣಿಗಳು ಜೈಲಲ್ಲಿ ರಾತ್ರಿ ಕಳೆದು ಬರುತ್ತಿದ್ದಾರೆ, ಕೋರ್ಟ್ ಮೆಟ್ಟಿಲು ಹತ್ತಿ-ಇಳಿಯುತ್ತಿದ್ದಾರೆ. ಇಂಥವರನ್ನು ಪ್ರಶ್ನೆ ಮಾಡಬಾರದು, ಪ್ರಶ್ನೆ ಮಾಡುವುದು ತಪ್ಪು ಎನ್ನುವ ಮನಸ್ಥಿತಿಯರನ್ನು ಏನೆಂದು ಕರೆಯಬೇಕು?

ಈ ಅಧ್ಯಾದೇಶ ರದ್ಧಾದ ಕ್ರೆಡಿಟ್ ಯಾರು ತೆಗೆದುಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಕಳಂಕಿತರನ್ನು ರಕ್ಷಿಸಬೇಕಿತ್ತು ಎನ್ನುವ ಜನರನ್ನು ತುಂಬಾ ಜಾಗರೂಕರಾಗಿ ನೋಡಿ. ಇವರು ಕಳಂಕಿತರಿಗಿಂತಲೂ ಅಪಾಯಕಾರಿಗಳು.

ರಾಹುಲ್ ಮತ್ತು ಅಧ್ಯಾದೇಶ : ಯಾರ ಮೌನಕ್ಕೆ ಯಾವ ಅರ್ಥ?


– ಚಿದಂಬರ ಬೈಕಂಪಾಡಿ


 

ದೇಶದ ಜನ ಅದೆಷ್ಟು ರೋಸಿ ಹೋಗಿದ್ದಾರೆ ಎನ್ನುವುದಕ್ಕೆ ಕಳಂಕಿತರನ್ನು ರಕ್ಷಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಅಧ್ಯಾದೇಶ ಜಾರಿಗೆ ತಂದಾಗ ವ್ಯಕ್ತವಾದ ಪ್ರತಿಕ್ರಿಯೆಗಳೇ ಸಾಕ್ಷಿ. ಸದಾ ಮಗುಮ್ಮಾಗಿರುವ ದೇಶದ ಪ್ರಧಾನಿ ಕೂಡಾ ಒಂದು ಕ್ಷಣಕ್ಕೆ ಸೆಟೆದಂತೆ ಕಂಡು ಬಂದರು. ಅದಕ್ಕೆ rahul-gandhi-ordinanceರಾಹುಲ್ ಹರಿಹಾಯ್ದದ್ದೇ ಕಾರಣ. ಬೇರೆ ಯಾರಾದರೂ ಅದ್ಯಾದೇಶವನ್ನು ಹರಿದು ಹಾಕಲು ಲಾಯಕ್ಕು ಎಂದಿದರೆ ಪ್ರಧಾನಿ ಗಡ್ಡದ ಮರೆಯಲ್ಲಿ ನಕ್ಕು ಹಗುರಾಗುತ್ತಿದ್ದರೇನೋ?

ರಾಹುಲ್ ಸರ್ಕಾರದ ಅಧ್ಯಾದೇಶ ಹೊರಬೀಳುವ ತನಕವೂ ಸುಮ್ಮನಿದ್ದು ಕಾಂಗ್ರೆಸ್ ಪಕ್ಷದ ನಾಯಕನಾಗಿ ಚೀರಾಡಿರುವುದನ್ನು ಬುದ್ಧುವಂತಿಕೆ ಅನ್ನಿ, ದಡ್ಡತನ ಅಂತಾದರೂ ಕರೆಯಿರಿ, ಆದರೆ ಕಳಂಕಿತರನ್ನು ರಕ್ಷಿಸುವ ಪ್ರಕ್ರಿಯೆಗೆ ತಡೆಬಿತ್ತು ಎನ್ನಲು ಅಡಿಯಿಲ್ಲ. ಯಾಕೆಂದರೆ ರಾಹುಲ್ ಅವರನ್ನು ಹೀರೋ ಎಂದಾಕ್ಷಣ ಕೆಲವರು ಮೈಮೇಲೆ ದೆವ್ವ ಬಂದಂತೆ ಪ್ರತಿಕ್ರಿಯಿಸಿ ತಮ್ಮ ಒಂದು ಸಾಲಿನ ಅನಿಸಿಕೆ ಮೂಲಕ ಘನಂಧಾರಿ ಚಿಂತಕರೆನಿಸಿಕೊಳ್ಳುತ್ತಾರೆ. ಆದರೆ ತಮ್ಮ ಪ್ರತಿಕ್ರಿಯೆ ವಿದೂಷಕ ಹಾಸ್ಯಕ್ಕಿಂತಲೂ ಕನಿಷ್ಠದ್ದು ಎನ್ನುವ ಅರಿವಿಯೇ ಇಲ್ಲ ಎನ್ನುವುದು ಮಾತ್ರ ವಾಸ್ತವ.

ರಾಹುಲ್ ಯಾಕೆ ಸರ್ಕಾರದ ವಿರುದ್ಧ ಹರಿಹಾಯ್ದರು ಎನ್ನುವುದನ್ನು ತಮ್ಮ ವಿವೇಚನೆ ಮೂಲಕ ಮತ್ತಷ್ಟು ಒಳನೋಟ ಕೊಡುವ ಬುದ್ಧಿವಂತಿಕೆ ತೋರಿಸಿದರೆ ಸಾಮಾಜಿಕ ತಾಣಗಳಲ್ಲಿ ಬರುವ ಬರಹಗಳಿಗೂ ಹೆಚ್ಚು ಅರ್ಥಬರುತ್ತದೆ.

ಒಂದು ವೇಳೆ ರಾಹುಲ್ ಗಾಂಧಿ ಮೌನವಾಗಿರುತ್ತಿದ್ದರೆ ಇಷ್ಟುಹೊತ್ತಿಗೆ ಅಧ್ಯಾದೇಶದ ಪ್ರಯೋಜನವನ್ನು ಕಳಂಕಿತರು ಪಡೆದುಕೊಳ್ಳುತ್ತಿರಲಿಲ್ಲವೇ ಎನ್ನುವುದು ಮುಖ್ಯವೇ ಹೊರತು ಅವರ ನಡೆಯಲ್ಲಿ ಬುದ್ಧಿವಂತಿಕೆಯೋ, ಕುಟಿಲ ತಂತ್ರವೋ ಎನ್ನುವುದು ಚರ್ಚೆಗೆ ಸೂಕ್ತವಾದ ವಿಚಾರ. ಕಳಂಕಿತರು ಎನ್ನುವ ಪದಕ್ಕೇ ಸರಿಯಾದ ವಿವರಣೆ ಇನ್ನೂ ಸಿಕ್ಕಿಲ್ಲ. lalu_prasad_yadavಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಳನ್ನು ಮಾತ್ರ ಪ್ರಸ್ತಾಪಿಸಿ ಹೇಳುವುದಾದರೆ ಸಧ್ಯಕ್ಕೆ ಸಮಾಧಾನಪಟ್ಟುಕೊಳ್ಳಬಹುದು.

ಸಂಸತ್ ಸದಸ್ಯರಾಗಿ, ಶಾಸಕರಾಗಿ ಒಂದು ಅವಧಿ ಮುಗಿಸುವಷ್ಟರಲ್ಲಿ ಅವರ ಆದಾಯದ ಮೂಲಗಳಲ್ಲಿ ಹಲವು ಟಿಸಿಲುಗಳು ಕಾಣಿಸಿಕೊಂಡು ಬಿಡುತ್ತವೆ. ಚುನಾವಣೆ ಕಾಲದಲ್ಲಿ ಘೋಷಣೆ ಮಾಡಿದ್ದ ಒಟ್ಟು ಸಂಪತ್ತಿನ ಗಾತ್ರ ಮೂರು ಪಟ್ಟಾಗಿರುತ್ತದೆ. ಇದು ಹೇಗೆ ಸಾಧ್ಯವಾಗುತ್ತದೆ ಎನ್ನುವ ಮೂಲವನ್ನು ಶೋಧಿಸಿದರೆ ಭ್ರಷ್ಟಾಚಾರದ ವಾಸನೆ ಮೂಗಿಗೆ ಬಡಿಯದೆ ಇರಲಾರದು. ಕ್ರಿಮಿನಲ್ ಎನ್ನುವುದೂ ಕೂಡಾ ಈಗಿನ ರಾಜಕಾರಣದಲ್ಲಿ ತೀರಾ ಸಹಜ ಎನ್ನುವಂತಾಗಿದೆ. ಈಗಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಹಣ ಹೊಂದಿಸಿಕೊಳ್ಳುವುದು ಕಷ್ಟದ ಕೆಲಸ ಎನ್ನುವ ಅಭಿಪ್ರಾಯ ಕೊಡುವ ರಾಜಕಾರಣಿಗಳೂ ಇದ್ದಾರೆ. ಅವರ ಮನಸ್ಥಿತಿಯನ್ನು ತಳ್ಳಿಹಾಕುವಂತಿಲ್ಲ. ಚುನಾವಣಾ ಆಯೋಗ ಕೈಗೊಳ್ಳುವ ಕಠಿಣ ಕಣ್ಗಾವಲಿನ ಹೊರತಾಗಿಯೂ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುವುದು ಕಣದಲ್ಲಿದ್ದವರಿಗೆ ಅನಿವಾರ್ಯ ಹಾಗೂ ಅವರು ಅಂಥ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಾರೆ. ಹಣ ಖರ್ಚು ಮಾಡುವ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷ ಹಿಂದೆ ಬೀಳುವುದು ಈಗಿನ ಚುನಾವಣೆ ವ್ಯವಸ್ಥೆಯಲ್ಲಿ ಅಸಾಧ್ಯ ಎನ್ನುವುದನ್ನು ನಿರಾಕರಿಸುವಿರಾ?

ರಾಜಕೀಯ ಸಮಾಜ ಸೇವೆಗೆ ಎನ್ನುವ ಕಾಲ ಇದಲ್ಲ. ಬಹುತೇಕ ಮಂದಿಗೆ ರಾಜಕೀಯ ಒಂದು ವೃತ್ತಿ, ಅದುವೇ ಅವರ ಉದ್ಯೋಗವಾಗಿದೆ. ಸಾಮಾಜಿಕವಾಗಿ, ರಾಜಕೀಯವಾಗಿ ಹೊಸ ವ್ಯವಸ್ಥೆಯನ್ನು ಹುಟ್ಟು ಹಾಕಲು ಮುಂದಾದ ಅಣ್ಣಾ ಹಜಾರೆ ಕೂಡಾ ಕೆಲವೇ ತಿಂಗಳುಗಳಲ್ಲಿ ಹತಾಶರಾದರು ಯಾಕೆ? ಅಣ್ಣಾ ಅವರ ಯೋಚನೆ, ಚಿಂತನೆ, ಸೈದ್ಧಾಂತಿಕ ನಿಲುವು ಛಿದ್ರವಾಗುವುದಕ್ಕೆ ಕಾರಣಗಳು ಹಲವು. ಬಾಬಾ ರಾಮ್‌ದೇವ್ ಅಣ್ಣಾ ಅವರ ಜೊತೆ ಕೈಜೋಡಿಸಲು ಮುಂದಾದಾಗ ಏನಾಯಿತು? ಪರಸ್ಪರ ಅಪನಂಬಿಕೆ, ಗುಮಾನಿಯಿಂದ ನೋಡುವ ಸನ್ನಿವೇಶ ನಿರ್ಮಾಣವಾಯಿತು.

ಭ್ರಷ್ಟಾಚಾರವನ್ನು ತೊಡೆದು ಹಾಕುವುದು, ಕ್ರಿಮಿನಲ್‌ಗಳನ್ನು ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಪ್ರತ್ಯೇಕಿಸುವುದು rasheed-masood-first-lawmaker-to-be-disqualified-from-parliamentಸುಲಭದ ಕೆಲಸವಲ್ಲ ಎನ್ನುವುದು ನನ್ನ ಅನಿಸಿಕೆ. ಇದಕ್ಕೆ ನನಗಿರುವ ಮಿತಿಯೂ ಕಾರಣವಿರಬಹುದು ಅಥವಾ ಬೌದ್ಧಿಕವಾಗಿ ಆಸ್ಥಾನ ಪಂಡಿತರಿಗೆ ಇರುವ ಚಾಣಾಕ್ಷತೆಯ ಕೊರತೆಯೂ ಇರಬಹುದು. ಆದರೆ ಅನಿಸಿಕೆ ಹೇಳಿಕೊಳ್ಳಲು ಸರ್ವ ಸ್ವತಂತ್ರ ಎನ್ನುವುದನ್ನು ಬೇರೆಯವರು ಹೇಳಬೇಕಾಗಿಲ್ಲ.

ಈ ಮಾತು ರಾಹುಲ್ ಗಾಂಧಿ ಅವರ ನಡೆಯ ಬಗ್ಗೆ ನಾನು ಹೇಳುವ ಮಾತಿಗೂ ಅನ್ವಯಿಸುತ್ತದೆ. ರಾಹುಲ್ ಗಾಂಧಿ ಈ ದೇಶದ ಮಹಾನ್ ನಾಯಕರ ವ್ಯಕ್ತಿತ್ವಕ್ಕೆ ಸರಿಸಮಾನ ಎನ್ನುವಷ್ಟು ಮೂರ್ಖತನವನ್ನು ಯಾರೂ ಪ್ರದರ್ಶಿಸಬಾರದು. ಆದರೆ ರಾಜಕೀಯವಾಗಿ ಅವರ ಇಂಥ ನಡೆಗಳನ್ನು ಒಪ್ಪಿಕೊಳ್ಳಲೇಬೇಕು ಎನ್ನುವುದಾಗಲೀ, ಅದನ್ನು ಚರ್ಚೆಗೆ ಒಳಪಡಿಸಬಾರದು ಎನ್ನುವುದಾಗಲೀ ಸರಿಯಲ್ಲ. ಅಧ್ಯಾದೇಶವನ್ನು ತಿರಸ್ಕರಿಸಲಾಗದೇ, ಒಪ್ಪಿಕೊಳ್ಳುವುದಕ್ಕೂ ಆಗದೆ ಸಂಕಟಪಟ್ಟುಕೊಳ್ಳುತ್ತಿದ್ದ ರಾಜಕೀಯ ನಾಯಕರನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಅಧ್ಯಾದೇಶ ಸರ್ಕಾರದ ನಿಲುವು, ರಾಹುಲ್ ಗಾಂಧಿ ಅವರ ಅನಿಸಿಕೆ ಪಕ್ಷದ್ದು ಎನ್ನುವ ಮೂಲಕ ಎರಡನ್ನೂ ಪ್ರತೇಕಿಸುವ ಈಗಿನ ಪ್ರಯತ್ನವನ್ನು ಬುದ್ಧಿವಂತರು ಚರ್ಚಿಸಬೇಕಾಗಿದೆ.

ರಾಹುಲ್ ಹೊರತಾಗಿ ಬೇರೆ ಯಾರೇ ಆದರೂ ಅಧ್ಯಾದೇಶದ ವಿರುದ್ಧ ಧ್ವನಿಎತ್ತಿದ್ದರೆ ಇಷ್ಟು ಹೊತ್ತಿಗೆ ಅವರ ಸ್ಥಿತಿ ಏನಾಗುತ್ತಿತ್ತು ಕಾಂಗ್ರೆಸ್ ಪಕ್ಷದಲ್ಲಿ? ಅಥವಾ ಯುಪಿಎ ಸರ್ಕಾರದಲ್ಲಿ? ಪಕ್ಷ ಮತ್ತು ಸರ್ಕಾರ ಎರಡರಲ್ಲೂ ರಾಹುಲ್ ಗಾಂಧಿಗೆ ಹಿಡಿತವಿದೆ ಎನ್ನುವುದು ಅಪರಾಧವಲ್ಲ. ಪ್ರತಿಪಕ್ಷಗಳು ಧ್ವನಿ ಎತ್ತಿದ್ದರೂ ಯುಪಿಎ ಸರ್ಕಾರ ತನ್ನ ನಿಲುವು ಸಡಿಲಿಸುತ್ತಿತ್ತು ಎನ್ನಲಾಗದು. ಅಂಥ ಧ್ವನಿ ದುರಾದೃಷ್ಟಕ್ಕೆ ಪ್ರತಿಪಕ್ಷಗಳಿಂದ ಕೇಳಿಬರಲಿಲ್ಲ. ಹಾಗಾದರೆ ಈ ಮೌನದ ಅರ್ಥವೇನು?

ಕಳಂಕಿತರನ್ನು ರಕ್ಷಿಸುವಂಥ ಅಧ್ಯಾದೇಶವನ್ನು ಕಸದ ಬುಟ್ಟಿಗೆ ಹಾಕಿಸುವುದಕ್ಕೆ ಯಾರ ಪಾತ್ರ ಎಷ್ಟು ಎನ್ನುವುದನ್ನು ಚರ್ಚಿಸಲು ಇದು ಸಕಾಲವಲ್ಲವೇ?