Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಜೈಲಿನಲ್ಲಿ ಮಾಜಿ ಮುಖ್ಯಮಂತ್ರಿಗಳು – ಸಂಪೂರ್ಣ ಪತನದಿಂದ ಹಿಂದೆ ಸರಿಯುತ್ತಿರುವ ಭಾರತ


– ರವಿ ಕೃಷ್ಣಾರೆಡ್ದಿ


 

ಹದಿನೇಳು ವರ್ಷಗಳ ಹಿಂದೆ ಬಯಲಿಗೆ ಬಂದ ಹಗರಣ. ಈಗ ಶಿಕ್ಷೆಯಾಗುತ್ತಿದೆ. ಓಮ್ ಪ್ರಕಾಶ್ ಚೌತಾಲ, ಲಾಲೂ ಪ್ರಸಾದ್ ಯಾದವ್; ದೇಶದ ಎರಡು ಮಾಜಿ ಮುಖ್ಯಮಂತ್ರಿಗಳು ಈಗ ಜೈಲಿನಲ್ಲಿದ್ದಾರೆ. ಜಗನ್ನಾಥ್ ಮಿಶ್ರಾ; ಮೂರನೆಯ ಮಾಜಿ ಆಸ್ಪತ್ರೆ-ಆರೋಗ್ಯ ಎಂದು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ತಾವು ಎಂತಹವರನ್ನು ಆರಿಸಿ ಕಳುಹಿಸುತ್ತಿದ್ದೇವೆ ಎಂದು ಜನ ಗಂಭೀರವಾಗಿ lalu_prasad_yadavಯೋಚಿಸಲು ಆರಂಭಿಸಿ ದಶಕಗಳೇ ಆಗಬೇಕಿತ್ತು. ಆಗಲಿಲ್ಲ. ಆಗಿದ್ದಿದ್ದರೆ ಮುಂದಿನ ದಿನಗಳಲ್ಲಿ ಜೈಲಿನ ಹೊಸ್ತಿಲಲ್ಲಿರುವ ಜಯಲಲಿತ, ಯಡ್ಡಯೂರಪ್ಪ, ಇಂತಹವರೆಲ್ಲ ಮತ್ತೊಮ್ಮೆ ಆರಿಸಿ ಬರುತ್ತಿರಲಿಲ್ಲ. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಅನಿಲ್ ಲಾಡ್, ಶ್ರೀರಾಮುಲು, ಸಂತೋಷ್ ಲಾಡ್, ಜಗನ್ ಮೋಹನ್ ರೆಡ್ಡಿ, ಕರುಣಾನಿಧಿ ಮತ್ತವರ ಸಂತತಿ, ದೇವೇಗೌಡರ ಮನೆಯ ಒಂದಿಬ್ಬರು, ಇತ್ಯಾದಿ ಇತ್ಯಾದಿ ಅನೇಕ ಜನ ಇಂದು ಮಾಜಿಗಳಾಗಬೇಕಿತ್ತು. ಆಗಿಲ್ಲ ಎಂದುಕೊಂಡರೂ ಇದು ಹೀಗೆಯೇ ಮುಂದುವರೆಯುತ್ತದೆ ಎಂದುಕೊಳ್ಳುವುದು ಬೇಡ.

ಹಿಂದೂಸ್ಥಾನದ ಕ್ರೂರ ಮತ್ತು ಅಮಾನವೀಯ ಜಾತಿವ್ಯವಸ್ಥೆಯಲ್ಲಿ ದಲಿತ, ಹಿಂದುಳಿದ, ಬ್ರಾಹ್ಮಣೇತರ ಜಾತಿಗಳಲ್ಲಿ ಸ್ವಾಭಿಮಾನದ ಕಿಚ್ಚು ಮತ್ತು ಕೀಳರಿಮೆಯಿಲ್ಲದ ಮನೋಭಾವ ಹುಟ್ಟಿಸಿದವರು ಎನ್ನುವ ಕಾರಣಕ್ಕೆ ಲಾಲೂ ಪ್ರಸಾದ್ ಯಾದವ್, ಮಾಯಾವತಿ, ಮುಲಾಯಮ್ ಸಿಂಗ್ ಯಾದವ್, ಇನ್ನಿತರರು ಒಂದು ಸಂದರ್ಭದಲ್ಲಿ ದೇಶದಲ್ಲಿ ಸಮಾನತೆ ಬಯಸುವ, ಪ್ರಗತಿಪರ ಆಲೋಚನೆಗಳ, ಪ್ರಜಾಪ್ರಭುತ್ವವಾದಿ ಜನರಲ್ಲಿ ಹೆಮ್ಮೆ ಹುಟ್ಟಿಸಿದ್ದು ನಿಜ. ಚಳವಳಿಗಳ ಮೂಲಕ, ವೈಚಾರಿಕತೆಯ ಮೂಲಕ, ಜನಬೆಂಬಲದ ಮೂಲಕ ಅಧಿಕಾರಕ್ಕೆ ಬಂದ ಈ ಜನ ತಮ್ಮ ಮೊದಲ ಚುನಾವಣೆಗಳಲ್ಲಿ ಹಣಬಲವಿಲ್ಲದೆಯೇ ಅಧಿಕಾರಕ್ಕೆ ಬಂದವರು. ಆದರೆ, ಅಧಿಕಾರಕ್ಕೆ ಬಂದನಂತರ ತಾವು ಅಲ್ಲಿಯವರೆಗೆ ಯಾರನ್ನು ಮತ್ತು ಯಾವುದನ್ನು ವಿರೋಧಿಸುತ್ತ ಬಂದಿದ್ದರೋ ಅದನ್ನೇ ತಾವೂ ಪಾಲಿಸಲು ಆರಂಭಿಸಿದ್ದು ಅಕ್ಷಮ್ಯ. ಹಣವಿಲ್ಲದೇ ಗೆದ್ದವರು ಮುಂದಿನ ಚುನಾವಣೆಗಳಲ್ಲಿ ಗೆಲ್ಲಲು ಮತ್ತು ತಮ್ಮ ವೈಯಕ್ತಿಕ ಆಸ್ತಿ ಹೆಚ್ಚಿಸಿಕೊಳ್ಳಲು ಅಧಿಕಾರ ದುರುಪಯೋಗಕ್ಕೆ ಮತ್ತು jds-kumaraswamy-anita-devegowdaಭ್ರಷ್ಟಾಚಾರಕ್ಕೆ ಇಳಿದಿದ್ದು ಅವರ ವೈಯಕ್ತಿಕ ಪತನ ಮಾತ್ರವಲ್ಲ, ದೇಶ ಮುಂದುವರೆಯಲು ಮತ್ತು ಬದಲಾಗಲು ಇದ್ದ ಅತ್ಯುತ್ತಮ ಅವಕಾಶವನ್ನು ಕಳೆದುಹಾಕಿದ ದೌರ್ಭಾಗ್ಯ ಸಹ. ಈ ಕಾರಣಕ್ಕೆ ಅವರು ತಮ್ಮ ಮೇಲಿರುವ ಮೊಕದ್ದಮೆಗಳ ಕಾರಣವಾಗಿ ಕಾನೂನಿನ ಪ್ರಕಾರವೇ ಅಪರಾಧಿಗಳು ಮಾತ್ರವಲ್ಲ, ದೇಶದ ನೈತಿಕತೆಯ ದೃಷ್ಟಿಯಿಂದಲೂ ಅಪರಾಧಿಗಳು.

ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ದೇಶದ ಬಹುತೇಕ ಜಾತಿವಾದಿ ಮನಸ್ಸುಗಳು ತಮ್ಮ ಜಾತಿಯ ರಾಜಕೀಯ ನಾಯಕರನ್ನಾಗಿ ಆರಿಸಿಕೊಂಡಿರುವ ಜನರ ಹೆಸರು ಕೇಳಿದರೆ ವಾಕರಿಕೆ ಬರುತ್ತದೆ. ತಮ್ಮದೇ ಆದ ಪರಿವಾರ ಮತ್ತು ಸಾಮ್ರಾಜ್ಯವನ್ನು ಕಟ್ಟಿದ, ಪಕ್ಷವನ್ನು ತಮ್ಮ ಮನೆಯ ಆಸ್ತಿ ಮಾಡಿಕೊಂಡಿರುವ ದೇವೇಗೌಡರು ಒಕ್ಕಲಿಗರ ನಾಯಕ. ಕರ್ನಾಟಕ ಕಂಡರಿಯದ ಭ್ರಷ್ಟಾಚಾರ ಎಸಗಿ ವಿಚಾರಣಾಧೀನ ಕೈದಿಯಾಗಿಯೂ ಇದ್ದುಬಂದ ಯಡ್ಡಯೂರಪ್ಪ ಲಿಂಗಾಯತರ ನಾಯಕ. ನ್ಯಾಯ ಮತ್ತು ನೀತಿಯ ಪರಿಜ್ಞಾನಗಳಿರದಿದ್ದ, ಮದತುಂಬಿದ ಮಾತುಗಳನ್ನಾಡುತ್ತಿದ್ದ ಜನಾರ್ಧನ ರೆಡ್ಡಿ ರೆಡ್ಡಿಗಳ ನಾಯಕ. ಪಕ್ಕದ ಆಂಧ್ರದಲ್ಲಿ ಬಹುಶಃ ಇಡೀ ದೇಶದಲ್ಲಿ ಯಾವೊಬ್ಬ ರಾಜಕಾರಣಿಯೂ ಮಾಡದಷ್ಟು ಅಧಿಕಾರ ದುರುಪಯೋಗ ಮಾಡಿಕೊಂಡು YS-Jagan-Mohan-Reddy-in-Jailಹತ್ತಾರು ಸಾವಿರ ಕೋಟಿ ರೂಪಾಯಿಗಳ ಆಸ್ತಿ ಮಾಡಿದ ಜಗನ್ ಮೋಹನ್ ರೆಡ್ಡಿ ರೆಡ್ಡಿಗಳ ಪರಮೋಚ್ಚ ನಾಯಕ. ತನ್ನ ಅಧಿಕಾರಾವಧಿಯಲ್ಲಿ ಸಾವಿರಾರು ಕೋಟಿ ಆಸ್ತಿ ಮಾಡಿದ ಆರೋಪಗಳಿರುವ ಚಂದ್ರಬಾಬು ನಾಯ್ಡು ಕಮ್ಮರ ನಾಯಕ. ಉತ್ತರದಲ್ಲಿ ಪ್ರಜಾಪ್ರಭುತ್ವ ಎಂದರೆ ನನ್ನ ಮನೆಯ ವಂಶಪಾರಂಪರ್ಯ ಆಡಳಿತ ಎನ್ನುವ ಮುಲಾಯಮ್, ಲಾಲೂ, ಯಾದವರ ನಾಯಕರು ಮತ್ತು ಸಾಬೀತಾದ ಭ್ರಷ್ಟರು. ಮರಾಠರ ನಾಯಕ ಪವಾರ್. ಹೀಗೆ, ಯಾವುದೇ ರಾಜ್ಯಕ್ಕೆ ಹೋಗಿ ಅಲ್ಲಿಯ ಬಲಿಷ್ಟ ಜಾತಿಗಳ ನಾಯಕರನ್ನು ನೋಡಿ, ದುಷ್ಟರು, ಭ್ರಷ್ಟರು, ಕಿಡಿಗೇಡಿಗಳು, ಅಪ್ರಬುದ್ಧರು, ಅನಾಗರೀಕರೇ ಆಯಾಯ ಜಾತಿಗಳ ಬಲಿಷ್ಟ ನಾಯಕರಾಗಿದ್ದಾರೆ. ಮೂರ್ನಾಲ್ಕು ದಶಕಗಳ ಹಿಂದೆ ಹೀಗೆ ಇರಲಿಲ್ಲ. ತಮ್ಮ ಜಾತಿಯ ಬಗ್ಗೆ ಹೇಳಬಹುದಾದ/ಹೇಳಿಕೊಳ್ಳಲಾಗದ ಕಾರಣಕ್ಕೆ ಒಲವಿದ್ದ, ನಿಷ್ಠೆಯಿದ್ದ ಜನ ಆದಷ್ಟು ಒಳ್ಳೆಯವರನ್ನು, ಸಜ್ಜನರನ್ನು ತಮ್ಮ ಜಾತಿ-ನಾಯಕನನ್ನಾಗಿ ಒಪ್ಪಿಕೊಳ್ಳುತ್ತಿದ್ದರು.

ಐನ್ ರ್‍ಯಾಂಡ್ ಎನ್ನುವ ಅಮೆರಿಕದ ಲೇಖಕಿ 1957 ರಲ್ಲಿ ಹೀಗೆ ಹೇಳುತ್ತಾಳೆ: “ಯಾವಾಗ ನೀವು ಉತ್ಪಾದನೆ ಮಾಡಲು ಏನನ್ನೂ ಉತ್ಪಾದಿಸದ ಜನರಿಂದ ಒಪ್ಪಿಗೆ ಪಡೆಯಬೇಕಿದೆಯೋ, ಯಾವಾಗ ಹಣವು ವಸ್ತುಗಳ ಮಾರಾಟಗಾರರಿಗೆ ಬದಲಾಗಿ ಅನೈತಿಕವಾಗಿ ಅನುಗ್ರಹಗಳನ್ನು ಮಾರಾಟಮಾಡುವವರತ್ತ ಹರಿಯುತ್ತದೆಯೋ, Ayn-Randಯಾವಾಗ ಜನ ತಮ್ಮ ದುಡಿಮೆಗೆ ಬದಲಾಗಿ ಲಂಚ ಮತ್ತು ತಮಗಿರುವ ಪ್ರಭಾವದ ಕಾರಣಕ್ಕಾಗಿ ಶ್ರೀಮಂತರಾಗುತ್ತಾರೋ, ಮತ್ತು ಯಾವಾಗ ನಿಮ್ಮ ಕಾನೂನುಗಳು ನಿಮ್ಮನ್ನು ಅಂತಹವರಿಂದ ರಕ್ಷಿಸುವುದಿಲ್ಲವೋ. ಮತ್ತು ಅದೇ ಕಾನೂನುಗಳು ಅವರನ್ನು ನಿಮ್ಮಿಂದ ರಕ್ಷಿಸುತ್ತವೆಯೋ, ಯಾವಾಗ ಭ್ರಷ್ಟಾಚಾರಕ್ಕೆ ಪುರಸ್ಕಾರಗಳು ದೊರೆತು ಪ್ರಾಮಾಣಿಕತೆ ಎನ್ನುವುದು ತನ್ನನ್ನೇ ತಾನು ಹಾಳುಮಾಡಿಕೊಳ್ಳುವುದು ಎಂದು ತೋರುತ್ತದೋ, ಅಂದು ಆ ನಿಮ್ಮ ಸಮಾಜ ಪತನವಾಗುತ್ತಿದೆ ಎನ್ನುವುದು ನಿಮಗೆ ಗೊತ್ತಿರಲಿ.”

ನಮ್ಮ ಸಮಾಜ ಪತನದತ್ತ ಬಿರುಸಿನಿಂದ ನಡೆಯಲು ಆರಂಭಿಸಿ ದಶಕಗಳೇ ಆಗಿವೆ. ಆದರೆ, ಕಳೆದ ಎರಡು ಮೂರು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಅನೇಕ ಪರ್ಯಾಯ ವಿದ್ಯಮಾನಗಳು ಅದನ್ನು ಸಂಪೂರ್ಣ ಪತನದಿಂದ ತಡೆಯಲು ಪ್ರಯತ್ನಿಸುವ ಹೋರಾಟಗಳಾಗಿವೆ. ಬುದ್ಧ, ಬಸವಣ್ಣ, ಗಾಂಧಿ, ಪಟೇಲ್, ಅಂಬೇಡ್ಕರ್, ನೆಹರೂ, ಲೋಹಿಯಾ, ಜಯಪ್ರಕಾಶ್ ನಾರಾಯಣರ ಈ ದೇಶ ಅಷ್ಟು ಸುಲಭವಾಗಿ ಕುಬ್ಜತೆಗೆ ಮಂಡಿಯೂರದು. ದಮನಿಸಲಾಗದ ಆತ್ಮಸ್ಥೈರ್ಯ ಈ ದೇಶವನ್ನು ಸಹಸ್ರಾರು ವರ್ಷಗಳಿಂದ ಮಾನವನ ಸಾಮಾಜಿಕ ವಿಕಾಸದ ಯಾತ್ರೆಯಲ್ಲಿ ಬಹುದೊಡ್ಡ ಭಾಗವಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಬರುವ ಮತ್ತು ಬದಲಾಗುವ ಕಾನೂನುಗಳು, ಜೈಲಿಗೆ ಹೋಗುವ ದುಷ್ಟರು, ಒಳ್ಳೆಯದರ ಪರ ನಿಲ್ಲುವ ಮನುಷ್ಯನ ಮೂಲಭೂತ ಮನಸ್ಥಿತಿ, ಈ ದೇಶ ಪತನದಿಂದ ಸಂಪೂರ್ಣ ವಿರುದ್ಧ ದಿಕ್ಕಿಗೆ ತಿರುಗುವಂತೆ ಮಾಡುತ್ತವೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಚಲನೆ ರಾಜಕೀಯವನ್ನೂ ಮೇಲೆತ್ತಲಿದೆ. ಒಂದು ಸಂಪೂರ್ಣ ನೈತಿಕ ಕ್ರಾಂತಿಗೆ ದೇಶ ಮುಂದಾಗಲಿದೆ.

ಇಂದು ವಾಸ್ತವ ಏನೇ ಇರಲಿ, ಭಾರತದ ಭವಿಷ್ಯದ ಬಗ್ಗೆ ನನ್ನದೊಂದು ಭವಿಷ್ಯವಿದೆ. ಇವತ್ತು ಯಾರೇ ಮೆರೆಯುತ್ತಿರಲಿ, ಇನ್ನು ಹತ್ತು ವರ್ಷಗಳಿಗೆಲ್ಲ ಜೈಲಿಗೆ ಹೋಗಿಬಂದ ನಾಯಕರುಗಳು ಮತ್ತು ಅವರ ಪರಿವಾರವನ್ನು, ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಮೊಕದ್ದಮೆಗಳಿರುವ ಜನಪ್ರತಿನಿಧಿಗಳು ಮತ್ತವರ ಪರಿವಾರವನ್ನು ಜನ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾರೆ. ಇಡೀ ಸಮಾಜ ಆ ನಿಲುವಿನತ್ತ ವಿಕಾಸವಾಗುತ್ತಿದೆ. ಮುಂದೆಯೂ ಹೀಗೆಯೆ ಎಂದುಕೊಂಡ ಭ್ರಷ್ಟರು ಮತ್ತು ದುಷ್ಟರಿಗೆ ಭವಿಷ್ಯ ಭಯಾನಕವಾಗಿರುತ್ತದೆ. ಆದರೆ, ಅವರ ಸ್ಥಾನಗಳಿಗೆ ಬರುವವರು ಒಳ್ಳೆಯವರಷ್ಟೇ ಅಲ್ಲ, ಸಮರ್ಥರೂ ಆಗಿರುವಂತೆ ನೋಡಿಕೊಳ್ಳುವುದೇ ನಮ್ಮ ಆಗಿನ ಸವಾಲು.

“ಸಮಾನ ಶಿಕ್ಷಣ ದಿನ”ವಾಗಿ ತಾಯಿ ಸಾವಿತ್ರಿಬಾಯಿ ಫುಲೆ ಜನ್ಮದಿನ

– ರೂಪ ಹಾಸನ

“ನಿಜವಾಗಿ ನೋಡಿದರೆ ಈ ಅಭಿನಂದನೆ ನಿನಗೆ ಸಲ್ಲತಕ್ಕದ್ದು. ನಾನು ಕೇವಲ ಬೇರೆ ಬೇರೆ ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತ. ಆದರೆ ನೀನು ಮಾತ್ರ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿರುವೆ. ಅದರಿಂದಾಗಿ ಬಂದಂತಹ ಬಹುಪರಿಯ ದುಃಖಗಳನ್ನು ನುಂಗಿಕೊಳ್ಳುತ್ತಾ ಪ್ರತಿಯೊಂದು ಶಾಲೆಗೂ ಹೊಸ ರೂಪ ಮತ್ತು ಚೈತನ್ಯವನ್ನು ತುಂಬಿರುವೆ. ಅದಕ್ಕಾಗಿ ಇದೋ ನನ್ನ ಮನಃಪೂರ್ವಕ ಅಭಿನಂದನೆಗಳು” ಎನ್ನುತ್ತಾ ಸ್ವಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾ ದಾನ ಮಾಡಿದ ತಮಗೆ, ಬ್ರಿಟಿಷ್ ಸರ್ಕಾರ ಹೊದಿಸಿ ಗೌರವಿಸಿದ ಶಾಲನ್ನು ಮಹಾತ್ಮ ಜ್ಯೋತಿಬಾ ಫುಲೆ ತಮ್ಮ ಮಡದಿಗೆ ನೀಡಿದಾಗ, ಇಡೀ ಸಭೆಗೆ ಸಭೆಯೇ ಎದ್ದು ನಿಂತು, ಸಮರ್ಥ ಶಿಕ್ಷಕಿ, ದೇಶದ ಮೊದಲ ಮಹಿಳಾ ಶಿಕ್ಷಣತಜ್ಞೆಗೆ ಕರತಾಡನದೊಂದಿಗೆ ಗೌರವ ಸೂಚಿಸಿತು.
[‘ಸಾಮಾಜಿಕ ಕ್ರಾಂತಿ ಜ್ಯೋತಿ ಮಹಾತ್ಮ ಜ್ಯೋತಿಬಾ ಫುಲೆ’- ಲೇ; ರವಿ ರಾ. ಅಂಚನ್]

ಹೀಗೆ ಪತಿಯಿಂದ ಸಾಮಾಜಿಕವಾಗಿ ಪ್ರಶಂಸೆ ಮತ್ತು ಗೌರವವನ್ನು ಪಡೆದ ಧೀಮಂತ ಮಹಿಳೆ, ತಾಯಿ ಸಾವಿತ್ರಿಬಾಯಿ ಫುಲೆ!

ತಳಸಮುದಾಯ ಹಾಗೂ ಹೆಣ್ಣುಮಕ್ಕಳು ಮೇಲ್ಜಾತಿಗೆ ಸಮಾನವಾದ ಶಿಕ್ಷಣ ಪಡೆಯಬೇಕೆಂಬ ಕನಸನ್ನು 19 1998-savitribai_phule[1]ನೇ ಶತಮಾನದ ಪ್ರಾರಂಭದಲ್ಲೇ ಕಂಡು ಅದರ ಸಾಕಾರಕ್ಕಾಗಿ ಅನೇಕ ನೋವು, ಅಪಮಾನ, ಸಂಕಟಗಳನ್ನು ಅನುಭವಿಸಿದ ಮೊತ್ತ ಮೊದಲ ಮಹಿಳೆ, ನಾವ್ಯಾರೂ ಮರೆಯಬಾರದ- ತಾಯಿ ಸಾವಿತ್ರಿಬಾಯಿ ಫುಲೆ. ಇಂದು ತಳ ಸಮುದಾಯಗಳು ಹಾಗೂ ಮಹಿಳೆಯರು ಒಂದಿಷ್ಟಾದರೂ ಮುಕ್ತವಾಗಿ ವಿದ್ಯಾಭ್ಯಾಸ ಪಡೆಯುವಂತಾಗಿರುವುದರ ಹಿಂದೆ ಬಹು ದೊಡ್ಡ ಹೋರಾಟವೇ ಇದೆ. ಒಂದೆಡೆ ಬ್ರಿಟಿಷ್ ಸಾಮ್ರಾಜ್ಯದ ಪ್ರಾಬಲ್ಯ, ಇನ್ನೊಂದೆಡೆ ತಲೆತಲಾಂತರದಿಂದ ಬಂದ ಪರಂಪರೆಯಂತೆ, ಹಿಂದೂ ಮೇಲ್ಜಾತಿಗಳು ಜಾತಿ-ದೇವರುಗಳ ಹೆಸರಿನಲ್ಲಿ ತಳಸಮುದಾಯಗಳನ್ನು ತುಳಿಯುತ್ತಿದ್ದ ಕಾಲ. ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕಿಲ್ಲದಂತಾ, ವಿದ್ಯೆ ಪಡೆಯುವುದೇ ಮಹಾ ಪಾಪವೆಂಬಂತಿದ್ದ ಸಂದರ್ಭ. ಹೆಣ್ಣಿಗೆ ಮದುವೆಯೊಂದೇ ಅಂತಿಮ. ಅವಳೇನೂ ಹೇಳುವಂತಿಲ್ಲ. ಕೇಳುವಂತಿಲ್ಲ. ಯಾವುದನ್ನೂ ನಿರಾಕರಿಸದಂತಾ ಸ್ಥಿತಿ. ಇಂತಹ ಸಂದರ್ಭದಲ್ಲಿ ಅವರಲ್ಲಿ, ಜ್ಯೋತಿಬಾ ಫುಲೆ ದಂಪತಿಗಳು ಹತ್ತಿಸಿದ ಶಿಕ್ಷಣದ ಅರಿವಿನ ಕಿಡಿ ಇಂದು ಬೆಳಕಾಗಿ ಪಸರಿಸುತ್ತಿದೆ.

ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ 3ನೇ ಜನವರಿ 1831ರಲ್ಲಿ ತಳಸಮುದಾಯದ ಕುಟುಂಬವೊಂದರಲ್ಲಿ ಜನಿಸಿದ ಸಾವಿತ್ರಿಬಾಯಿಗೆ 9 ವರ್ಷವಾಗಿದ್ದಾಗಲೇ ಜ್ಯೋತಿಬಾ ಅವರೊಂದಿಗೆ ವಿವಾಹವಾಗಿ ಪುಣೆಗೆ ಬಂದರು. ಹಸುಗೂಸಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ಜ್ಯೋತಿಬಾ ಅವರ ವಿದ್ಯಾಭ್ಯಾಸ ಅನೇಕ ಜಾತಿ ತಾರತಮ್ಯದ ವಿಘ್ನಗಳೊಂದಿಗೆ ಕುಂಟುತ್ತಾ ಸಾಗಿತ್ತು. ತಾಯಿಯ ದೂರದ ಸಂಬಂಧಿಯಾಗಿದ್ದ ಬಾಲವಿಧವೆ ಸಗುಣಾಬಾಯಿ ಇವರ ಸಾಕುತಾಯಿಯೂ ಆಗಿದ್ದು, ಅವರಿಗೆ ಶಿಕ್ಷಣದ ಬಗ್ಗೆ ಅಪರಿಮಿತ ಆಸಕ್ತಿ ಇತ್ತು. ಇವರು ಸಂಪ್ರದಾಯ, ಕಟ್ಟುಕಟ್ಟಲೆಗಳ ಕುರಿತು ಆಳದಲ್ಲಿ ಪ್ರತಿಭಟನಾತ್ಮಕ ಮನೋಭಾವ ಹೊಂದಿದ್ದರು. ಹೀಗೆಂದೇ ಸಾವಿತ್ರಿಬಾಯಿ ಹಾಗೂ ತಮಗೆ ಪಾಠವನ್ನು ಹೇಳಿಕೊಡಲು ಜ್ಯೋತಿಬಾ ಅವರನ್ನೇ ಒಪ್ಪಿಸಿದರು! ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯೆಯನ್ನು ದಕ್ಕಿಸಿಕೊಂಡ ಈ ಇಬ್ಬರು ಹೆಣ್ಣುಮಕ್ಕಳು ಜ್ಯೋತಿಬಾ ಅವರೊಡಗೂಡಿ, ಬಹುಜನರಿಗೆ ಅಕ್ಷರವನ್ನು ನಿರಾಕರಿಸಿದ್ದ ರೋಗಗ್ರಸ್ತ ಸಮಾಜವನ್ನು ಎದುರು ಹಾಕಿಕೊಂಡು ಹೆಣ್ಣುಮಕ್ಕಳಿಗೆ ಹಾಗೂ ತಳ ಸಮುದಾಯದವರಿಗೆ ಶಿಕ್ಷಣದ ಬಾಗಿಲನ್ನು ತೆರೆದರು!

1847 ರಲ್ಲಿ ನಾರ್‍ಮನ್ ಶಾಲೆಯಲ್ಲಿ ಕೇವಲ 17 ವರ್ಷದೊಳಗೆ ಶಿಕ್ಷಕಿ ತರಬೇತಿಯನ್ನು ಪಡೆದ ಸಾವಿತ್ರಿಬಾಯಿಯವರು ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲಿಂದ ಮುಂದೆ 1848 ರಲ್ಲಿ Jyotirao Phuleಜ್ಯೋತಿಬಾ ಅವರು ಪುಣೆಯಲ್ಲಿ ತೆರೆದ ಮೊಟ್ಟಮೊದಲ ಹೆಣ್ಣುಮಕ್ಕಳ ಶಾಲೆಗೆ [ಭಾರತದಲ್ಲಿ ಎರಡನೆಯದು, ಮೊದಲನೆಯದು ಅದಾಗಲೇ ಕಲ್ಕತ್ತಾದಲ್ಲಿ ಜನ್ಮತಾಳಿತ್ತು] ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಪ್ರಾರಂಭಿಸಿದರು. ಮೊದಲ ದಿನವೇ ಮೇಲ್ಜಾತಿಗೆ ಸೇರಿದ ಹೆಣ್ಣುಮಕ್ಕಳೂ ಸೇರಿದಂತೆ ತಳಸಮುದಾಯಕ್ಕೆ ಸೇರಿದ ಕೇವಲ 9 ಜನ ಹೆಣ್ಣುಮಕ್ಕಳಿಂದ ಪ್ರಾರಂಭವಾದ ಶಾಲೆ, ಮುಂದೆ ಅನೇಕ ಬಾಲೆಯರಿಗೆ ವಿದ್ಯಾದಾನದ ಕೇಂದ್ರವಾಯ್ತು. ಆದರೆ ಆ ಕಾಲದಲ್ಲಿ ಬ್ರಾಹ್ಮಣ ಪುರುಷರ ಹೊರತಾಗಿ ಬೇರೆಯವರಿಗೆ ಅಕ್ಷರ ಕಲಿಯುವ ಅವಕಾಶ ತೀರಾ ಕಡಿಮೆ ಇತ್ತು. ಅಂಥಹ ಸಂದರ್ಭದಲ್ಲಿ ಹೆಣ್ಣೊಬ್ಬಳು ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆದು ಶಿಕ್ಷಕಿಯಾಗಿ, ಉಚಿತ ವಿದ್ಯಾದಾನ ನೀಡಲಾರಂಭಿಸಿದ್ದು ಸಂಪ್ರದಾಯಸ್ಥ ಮೇಲ್ಜಾತಿಯವರಿಗೆ ನುಂಗಲಾರದ ತುತ್ತಾಯ್ತು. ಸಾವಿತ್ರಿಬಾಯಿಯವರು ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಿ ಕಲ್ಲು, ಕೆಸರು, ತೊಪ್ಪೆಗಳನ್ನೆಸೆದು ಹೆದರಿಸಿ, ಕೊಲೆ ಬೆದರಿಕೆ ಹಾಕಿದರು. ಇವರು ಯಾವುದಕ್ಕೂ ಬಗ್ಗದಿದ್ದಾಗ, ಇವರ ಶಾಲೆಗೆ ಸೇರಿದ್ದ ಹೆಣ್ಣುಮಕ್ಕಳಿಗೆ ಜಾತಿ ಹಾಗೂ ಸಮಾಜ ಬಹಿಷ್ಕಾರದ ಬೆದರಿಕೆಯನ್ನು ಹಾಕತೊಡಗಿದರು. ಸಾವಿತ್ರಿಬಾಯಿ ಮನೆ ಮನೆಗಳಿಗೆ ಹೋಗಿ ಪೋಷಕರ ಮನವೊಲಿಸಿ, ಶಿಕ್ಷಣದ ಔನತ್ಯವನ್ನು ತಿಳಿ ಹೇಳಿ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ನೀಡಿದರು. ಹೀಗೆ ನಿಜವಾದ ಅರ್ಥದಲ್ಲಿ ಆಧುನಿಕ ಭಾರತದ ಶಿಕ್ಷಣ ಮಾತೆಯಾದರು.

ಇದೇ ಕಾರಣಕ್ಕೆ ಜ್ಯೋತಿಬಾ ತಮ್ಮ ಸ್ವಂತ ಮನೆ ತೊರೆದು ಹೊರಬೀಳಬೇಕಾದ, ಸಾವಿತ್ರಿಬಾಯಿಯವರು ತವರಿನಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾದ ಪ್ರಸಂಗಗಳು ಎದುರಾದರೂ ಇದನ್ನೆಲ್ಲಾ ಕೆಲವು ಪ್ರಗತಿಪರ ಸ್ನೇಹಿತರೊಡಗೂಡಿ ದಿಟ್ಟವಾಗಿ ಎದುರಿಸಿದ ದಂಪತಿಗಳು 1848 ರಿಂದ 1852 ರವರೆಗೆ ಹದಿನೆಂಟಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ತೆರೆದು ಸಾವಿರಾರು ಹೆಣ್ಣುಮಕ್ಕಳು ಹಾಗೂ ತಳಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಿದ ದಾಖಲೆಗಳಿವೆ. ಈ ಎಲ್ಲ ಶಾಲೆಗಳ ಆಡಳಿತ ಜವಾಬ್ದಾರಿಯನ್ನು ಹೊತ್ತು, ನಿರಂತರವಾದ ಸಾಮಾಜಿಕ ಸಂಘರ್ಷಕ್ಕೆ ಈಡಾಗಿಯೂ ಉತ್ತಮ ಶಿಕ್ಷಣತಜ್ಞೆಯಾಗಿ, ಯಶಸ್ವಿ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿದ್ದು ಇತಿಹಾಸ ಗರ್ಭದಲ್ಲಿ ಹೂತುಹೋಗಿದೆ. ಕ್ರಾಂತಿಕಾರಿ ಕವಿಯಾಗಿ ಹೋರಾಟದ ಹಾಡುಗಳನ್ನು ರಚಿಸಿದ ಸಾವಿತ್ರೀಬಾಯಿಯವರ ತೀವ್ರವಾದ ತುಡಿತ ಸಮಾನ ಶಿಕ್ಷಣದ ಕಡೆಗಿದ್ದುದು ಅವರ ಈ ಕವಿತೆಯಿಂದ ಗೋಚರವಾಗುತ್ತದೆ.

ನಡೆ! ಶಿಕ್ಷಣ ಪಡೆ! ನಿಲ್ಲು! ನಿನ್ನ ಕಾಲ ಮೇಲೆ ನೀನು ನಿಲ್ಲು ಪಡೆ ವಿವೇಕ! ಪಡೆ ಸಂಪತ್ತು! ಇದಕಾಗಲಿ ನಿನ್ನಯ ದುಡಿಮೆ
ಅರಿವಿಲ್ಲದವರಾಗಿ ನಮಗೆ ಕೈ ಜಾರಿತು ಸಕಲವೂ ಪಶುವಾದೆವು, ಇಲ್ಲದಾಗಿ ವಿವೇಕವೂ ಸಾಕಿನ್ನು ಈ ಜಡತೆ ಸಾಕು ನಡೆನಡೆ ಶಿಕ್ಷಣ ಪಡೆ! ಆಗಲಿ ಕೊನೆ, ದಮನಿತರ ಕಣ್ಣೀರ ಸಂಕಟಕ್ಕೂ ಕೊನೆ
ಇದೊ ಇಲ್ಲಿದೆ! ನಿಮ್ಮ ಕಣ್ಮುಂದೆಯೆ ಬಿದ್ದಿದೆ ಶಿಕ್ಷಣದ ರೂಪದಲಿ ಚಿನ್ನದ ಗಣಿಯು ತಡವೇಕೆ? ನಡೆನಡೆ ಶಿಕ್ಷಣ ಪಡೆ! ಜಾತಿಯ ಸಂಕೋಲೆ ಕತ್ತರಿಸಿ ನಡೆ. ವೈದಿಕ ಶಾಸ್ತ್ರದ ಕಾಲ್ತೊಡರ ಕಿತ್ತೆಸೆದು ನಡೆ ನಡೆ!

ಅನಕ್ಷರತೆಯ ವಿರುದ್ಧ ಮಾತ್ರವಲ್ಲದೇ ಅನೇಕ ಸಾಮಾಜಿಕ ಅನಿಷ್ಟಗಳ ಎದುರಿಗೂ ಫುಲೆ ದಂಪತಿಗಳು ಉಗ್ರ ಹೋರಾಟ ನಡೆಸಿದರು. Savitribai-Phuleಹೆಣ್ಣುಮಕ್ಕಳೆಡೆಗೆ ಒಂದು ಸರ್ಕಾರ ವಹಿಸಬಹುದಾದಂಥಾ ಸೂಕ್ಷ್ಮ ಎಚ್ಚರ, ಕಾಳಜಿಗಳನ್ನು ಅವರು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಿದರು. ಹೆಣ್ಣುಮಕ್ಕಳ ಶಿಕ್ಷಣದ ಜೊತೆಗೆ, ವಿಧವೆಯರ ಕೇಶಮುಂಡನವನ್ನು ವಿರೋಧಿಸಿ, ಅವರ ಪುನರ್ ವಿವಾಹಗಳನ್ನು ಏರ್ಪಡಿಸಿದರು. ಕಾಮುಕ ಪುರುಷರಿಗೆ ಬಲಿಯಾಗಿ ಗರ್ಭಧರಿಸುವ ವಿಧವೆಯರಿಗಾಗಿ, ಅವರಿಗೆ ಹುಟ್ಟುವ ಮಕ್ಕಳಿಗಾಗಿ 1863 ರಲ್ಲಿ “ಬಾಲಹತ್ಯೆ ಪ್ರತಿಬಂಧಕ ಗೃಹ”ಗಳನ್ನು ತೆರೆದರು. ಅನಾಥ ವಿಧವೆಯರ ಸುರಕ್ಷಿತ ಹೆರಿಗೆಗಾಗಿ “ಗುಪ್ತ ಪ್ರಸೂತಿ ಗೃಹ”ಗಳನ್ನು ಸ್ಥಾಪಿಸಿದರು. ಅನೇಕ ಅನಾಥಾಶ್ರಮಗಳೂ ಸ್ಥಾಪನೆಯಾದವು. ಸ್ವಂತ ಮಕ್ಕಳನ್ನು ಹೊಂದದೇ ಈ ದಂಪತಿಗಳು ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕಿ ಬೆಳೆಸಿದರು. ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅವರು ರೂಪಿಸಿದ “ಸತ್ಯಶೋಧಕ ಚಳವಳಿ” ಸಾಮಾಜಿಕ ಪಿಡುಗುಗಳ ವಿರುದ್ಧದ ಒಂದು ಅಸ್ತ್ರವೇ ಆಗಿತ್ತು. ದೇಶದಲ್ಲೇ ಅದೇ ಪ್ರಥಮ ಬಾರಿಗೆ ಮಹಿಳಾ ಸೇವಾ ಮಂಡಳಿಯೊಂದನ್ನು ಸಾವಿತ್ರಿಬಾಯಿಯವರ ನಾಯಕತ್ವದಲ್ಲಿ ಸ್ಥಾಪಿಸಿದ್ದೂ ಒಂದು ದಾಖಲೆ.

ಪತಿ ಜ್ಯೋತಿಬಾ ಫುಲೆಯವರ ಮರಣದ ನಂತರವೂ ಇಷ್ಟೆಲ್ಲಾ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ದಿಟ್ಟೆ ಸಾವಿತ್ರಿಬಾಯಿ ಫುಲೆಯವರನ್ನು ನಾವಿಂದು ಮರೆತು ಹೋಗಿದ್ದೇವೆಂಬುದೇ ವಿಪರ್ಯಾಸ. ಮಹಿಳೆ ಹಾಗೂ ದಲಿತ ಶಿಕ್ಷಣದ ಕಿಡಿಯೊಂದಿಗೆ ಪ್ರಾರಂಭಿಸಿ ಅನೇಕ ಸಾಮಾಜಿಕ ಅನಿಷ್ಟಗಳ ವಿರುದ್ಧದ ಪ್ರಬಲ ದನಿಯಾಗಿ ಹೊರಹೊಮ್ಮಿದ ಸಾವಿತ್ರಿಬಾಯಿಯವರ ಅಂತಃಶಕ್ತಿಯ ಧೀಮಂತಿಕೆಗೆ ನಾವವರಿಗೆ ಇಂದಿಗೂ ತಲೆ ಬಾಗಲೇಬೇಕು. ಅವರಿಗೆ ಇದೆಲ್ಲವೂ ಸಾಧ್ಯವಾಗಿದ್ದು ಶಿಕ್ಷಣದ ಅರಿವು ಮತ್ತು ಪತಿಯ ಸಹಯೋಗದಿಂದ ಎಂಬುದನ್ನು ನೆನಪಿಸಿಕೊಳ್ಳುವುದು ಯೋಗ್ಯವೆನ್ನಿಸುತ್ತದೆ.

ವ್ಯಾಪಕವಾಗಿ ಹರಡಿದ್ದ ಪ್ಲೇಗ್ ಕಾಯಿಲೆಗೆ ತುತ್ತಾದ ರೋಗಿಗಳ ಸೇವೆಯಲ್ಲಿ ಸಾವಿತ್ರಿಬಾಯಿಯವರು ನಿಸ್ವಾರ್ಥವಾಗಿ ತೊಡಗಿಕೊಂಡು, ನಿರ್ಗತಿಕರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು. ಕ್ಷಾಮದ ಸಂದರ್ಭದಲ್ಲಿ ಹೆಣ್ಣುಮಕ್ಕಳು ದೇಹ ಮಾರಿಕೊಳ್ಳುವುದನ್ನು ತಪ್ಪಿಸಿ ಘನತೆಯಿಂದ ಬದುಕಲು ದಾರಿಗಳನ್ನು ಹುಡುಕಿಕೊಟ್ಟರು. ಕೊನೆಗೆ ಈ ನಮ್ಮ ಶಿಕ್ಷಣದ ತಾಯಿ ತೀವ್ರ ಪ್ಲೇಗ್ ಖಾಯಿಲೆಗೆ ತುತ್ತಾಗಿ ತಮ್ಮ 66 ನೇ ವಯಸ್ಸಿನಲ್ಲಿ, 10 ಮಾರ್ಚ್ 1897 ರಲ್ಲಿ ಸಾವನ್ನಪ್ಪಿದರು.

ಸಮಾನ ಶಿಕ್ಷಣ, ಸಮ ಸಮಾಜದ ಕನಸು ಕಂಡ ಫುಲೆ ದಂಪತಿಗಳು ಇನ್ನಿಲ್ಲವಾಗಿ phuleಶತಮಾನವೇ ಕಳೆದುಹೋದರೂ ಅವರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ! ಜಾಗತೀಕರಣದ ಬಿರುಗಾಳಿ ಮತ್ತು ಉಳ್ಳವರ ಪರವಾದ ಶೈಕ್ಷಣಿಕ ನೀತಿಗಳಿಂದಾಗಿ ಮಹಿಳೆ ಮತ್ತು ತಳ ಸಮುದಾಯ ಇಂದಿಗೂ ಸಮಾನ ಶಿಕ್ಷಣವನ್ನು ಪಡೆಯಲಾಗದೇ ಶಿಕ್ಷಣದ ಹಕ್ಕಿನಿಂದ ವಂಚನೆಗೊಳಗಾಗುತ್ತಾ ಅಂಚಿಗೆ ಒತ್ತರಿಸಲ್ಪಡುತ್ತಿದೆ. ಸಮಾನತೆಯನ್ನು ಸಾಧಿಸಲು ಸಮಾನ ಶಿಕ್ಷಣ ವ್ಯವಸ್ಥೆಯೊಂದು ಪ್ರಬಲ ಅಸ್ತ್ರ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದು “ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ”ಯನ್ನು ಅಳವಡಿಸಿಕೊಳ್ಳುತ್ತಿರುವ ಬಗ್ಗೆ ಹೆಮ್ಮೆಪಡುತ್ತಿವೆ. ಆದರೆ ಸಮಾನ ಶಿಕ್ಷಣದ ಜಾರಿಗೆ ಬೇಕಾದಂತಾ ಇಚ್ಛಾಶಕ್ತಿಯ ಕೊರತೆಯಿಂದ ಮನ ಬಂದಂತೆ ಶಿಕ್ಷಣ ನೀತಿಯನ್ನು ರೂಪಿಸಿಕೊಂಡು, ಶಿಕ್ಷಣ ಖಾಸಗೀಕರಣಕ್ಕೆ ತನ್ನನ್ನು ಒತ್ತೆ ಇಟ್ಟುಕೊಂಡು, ವಿದ್ಯೆಯೆಂಬ ಮೂಲಭೂತ ಹಕ್ಕನ್ನೂ ಮಾರಾಟದ ಸರಕಾಗಿಸಿದೆ. ತಾಯ್ತನದ ತುಡಿತವಿರದ ಲಾಭಕೋರ ಸರ್ಕಾರ, ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಾ ಶಾಲೆಗಳನ್ನೇ ಮುಚ್ಚುತ್ತಿದೆ. ಕೊಳ್ಳುವ ಬಲವಿರುವವರಿಗೆ ಒಳ್ಳೆಯ ಶಿಕ್ಷಣ. ಇಲ್ಲದವರು ಬೀದಿಪಾಲು ಎಂಬುದು ಸರ್ಕಾರದ ಗೋಪ್ಯ ಕಾರ್ಯಸೂಚಿಯೇ? ಎಂದು ಗಾಬರಿಯಾಗುತ್ತಿದೆ.

ಸಾವಿತ್ರಿಬಾಯಿಯವರ ಅಂದಿನ ಶ್ರಮ ಸಾರ್ಥಕವಾಗಬೇಕಾದರೆ ಪ್ರಾದೇಶಿಕ ಭಾಷೆಯನ್ನು ಪ್ರಾಥಮಿಕ ಹಂತದಲ್ಲಾದರೂ ಮಾಧ್ಯಮವಾಗುಳ್ಳ ಸಮಾನ ಶಾಲೆ, ಸಮಾನ ಪಠ್ಯಕ್ರಮ, ಸಮಾನ ಮೂಲಭೂತ ಸೌಕರ್ಯಗಳಿರುವ ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. ಅದರ ಮೊದಲ ಭಾಗವಾಗಿ ಸರ್ಕಾರ, ಸಾವಿತ್ರಿಬಾಯಿಯವರು ಜನಿಸಿದ ಜನವರಿ 3 ನ್ನು ರಾಷ್ಟ್ರೀಯ ಸಮಾನ ಶಿಕ್ಷಣ ದಿನವೆಂದು ಘೋಷಿಸಬೇಕು. ಈ ಘೋಷಣೆ ಭಾರತದ ಕಗ್ಗತ್ತಲೆಗೆ ಬೆಳಕಾದ ತಾಯಿಯೊಬ್ಬಳ ದಿನಾಚರಣೆಯಾಗಿಬಿಡುತ್ತದೆ. ಧೀಮಂತ ಐತಿಹಾಸಿಕ ಮಹಿಳೆಯೊಬ್ಬಳ ಹೆಸರಿನಲ್ಲಿ ಒಂದೇ ಒಂದು ದಿನಾಚರಣೆಯಿಲ್ಲದ ಭಾರತಕ್ಕೆ ತಾಯಿ ಸಾವಿತ್ರಿಬಾಯಿ ಫುಲೆ ಹುಟ್ಟಿದ ದಿನವು ಸಮಾನತೆಯ ತಾಯ್ತನದ ತುಡಿತವನ್ನು ನೆನಪಿಸಿಕೊಳ್ಳದ ನಮ್ಮ ಪುರುಷಪ್ರಧಾನದ ಅಹಂಗೆ ಮದ್ದಾಗಬಹುದು. ಅಂದು ಮಾಮೂಲಿನಂತೆ ಸಾರ್ವತ್ರಿಕ ರಜೆಯನ್ನೇನೂ ಸರ್ಕಾರ ನೀಡುವುದು ಬೇಡ. ರಜೆಯ ಹೆಸರಿನಲ್ಲಿ ಆರಾಮ, ಮೋಜು-ಮಜ ಮಾಡಿ ಕಾಲಹರಣ ಮಾಡುವುದೂ ಬೇಡ. [ಹೆಣ್ಣುಮಕ್ಕಳಿಗೆ ಯಾವ ರಜಾ ದಿನಗಳಲ್ಲೂ, ನಿವೃತ್ತಿಯ ನಂತರವೂ ಬಿಡುವೆಂಬುದಿರುವುದೇ ಇಲ್ಲ!] ಅದರ ಬದಲು ಆ ದಿನದಲ್ಲಿ “ಸಮಾನ ಶಿಕ್ಷಣ”ದ ಕುರಿತು ಸರ್ಕಾರ ಮತ್ತು ಇತರ ಪ್ರಗತಿಪರ ಸಂಸ್ಥೆಗಳವತಿಯಿಂದ, ಚರ್ಚೆ, ಕಾರ್ಯಾಗಾರ, ಸಂವಾದ, ವಿಚಾರ ಸಂಕಿರಣಗಳು, ಪ್ರಚಾರ ನಡೆಸುವಂತಾಗಬೇಕಾಗಿದೆ. ಇದರ ಫಲಶ್ರುತಿಯನ್ನು ಪಡೆದು, ಸರ್ಕಾರ ಸಮಿತಿಯೊಂದನ್ನು ರಚಿಸಿ ಮುಂದಿನ ವರ್ಷಗಳಲ್ಲಿ ಅದರ ಯಶಸ್ವಿ ಅಳವಡಿಕೆಯಾದರೆ ಮಾತ್ರ ಸಂವಿಧಾನದ ಸಮಾನತೆಯ ಆಶಯಕ್ಕೆ ಜೀವಂತಿಕೆ ಬರಬಹುದೇನೋ?

ಮಾಟ-ಮಂತ್ರ ನಿಷೇಧಿಸುವ ಜೊತೆ ಜೊತೆಗೆ ವೈಚಾರಿಕತೆ ಬೆಳಸಿ!

– ಬಿ.ಜಿ.ಗೋಪಾಲಕೃಷ್ಣ

ಮಾಟ-ಮಂತ್ರ ನಿಷೇಧಿಸುವ ಕಾನೂನು ಜಾರಿಮಾಡುವ ಜೊತೆ ಜೊತೆಯಲ್ಲಿ, ಸಮಾಜದಲ್ಲಿ ವೈಚಾರಿಕತೆಯನ್ನೂ ಬೆಳಸಬೇಕಾಗಿದೆ. ಮಾನಸಿಕ ಖಿನ್ನತೆಯಿಂದ ಹೂರ ಬರಲು ದೆವ್ವ, ಭೂತ ಬಿಡಿಸುವವರ ಮೂರೆ ಹೋಗುತ್ತಿದ್ದವರು, ಆ ದಾರಿಯೂ ಮುಚ್ಚಿದಾಗ ಮತ್ತಷ್ಟು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.

ಅಕ್ಷರದಿಂದ ವಂಚಿತರಾಗಿ ಪ್ರಾಪಂಚಿಕ ಜ್ಞಾನವಿಲ್ಲದೇ ಅಂಧಾಕಾರದಯಲ್ಲಿರುವ ಮುಗ್ಧ, ಬಡ ಜನರಲ್ಲಿ ಅಂಧಶ್ರದ್ಧೆಯನ್ನು ಬಿತ್ತಿ dhabolkarಭಯಭೀತರನ್ನಾಗಿಸಿ ಅವರ ತೊಳಲಾಟದಲ್ಲಿ ತಮ್ಮ ಹೊಟ್ಟೆ ಹೊರೆಯುತ್ತಿರುವ ಸ್ವಯಂಘೋಷಿತ ದೇವಮಾನವರ ಉಪಟಳಕ್ಕೆ ಕಡಿವಾಣ ಹಾಕಲು ಹೊರಟಿರುವ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹ.

ಭಾರತೀಯರನ್ನು ತಲತಲಾಂತರದಿಂದ ಕಾಡುತ್ತಿರುವ ಅಂಧಶ್ರದ್ಧೆ , ಬಾನಾಮತಿ, ಮಾಟ-ಮಂತ್ರ , ಪವಾಡ, ವಶೀಕರಣ, ಜ್ಯೋತಿಷ್ಯ, ಮೂಢನಂಬಿಕೆಗಳು, ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳಲು ನರಬಲಿ, ಪ್ರಾಣಿಬಲಿ, ದೇವಸ್ಥಾನಗಳಿಗೆ ಶೂದ್ರರಿಗೆ, ದಲಿತರಿಗೆ ಮತ್ತು ಸ್ತ್ರೀಯರಿಗೆ ಪ್ರವೇಶ ನಿರಾಕರಣೆ, ಪಾದಪೂಜೆ, ಪಾಪ ಪರಿಹಾರಕ್ಕೆ ಅಥವಾ ಶಾಂತಿಗಾಗಿ ಪೂಜೆಗಳು, ಸ್ತ್ರೀಯರ ನೈಸರ್ಗಿಕ ಕ್ರಿಯೆಗಳಿಗಾಗಿ ಊರಾಚೆ ಇರಿಸುವುದು. ಹೀಗೆ ಹತ್ತು ಹಲವು ಅನಿಷ್ಟ ಪದ್ಧತಿಗಳು ಜನಮಾನಸದಲ್ಲಿ ಮನೆ ಮಾಡಿ, ಕುಬ್ಜ ಮಾನವನನ್ನು ಮತ್ತಷ್ಟು ಕುಬ್ಜನನ್ನಾಗಿಸುತ್ತಿವೆ.

ಜನಸಾಮಾನ್ಯರನ್ನು ಮೌಢ್ಯತೆಯಿಂದ ಹೊರತರಲು ಅನೇಕ ಸಂಘ ಸಂಸ್ಥೆಗಳು ಶ್ರಮಿಸುತ್ತಿವೆಯಾದರೂ ರಾಜಕೀಯ ಇಚ್ಛಾಶಕ್ತಿಯ ಮುಂದೆ ಎಲ್ಲವೂ ಶೂನ್ಯವೇ ಸರಿ. ಈ ಒಂದು ನಿಟ್ಟಿನಲ್ಲಿ ಸರ್ಕಾರವೇ ಮುಂದಾಗಿ ಕಾನೂನು ರೂಪಿಸುತ್ತಿರುವುದು ಪ್ರಶಂಸನೀಯ ಸಂಗತಿ.

ಅಕ್ಷರಸ್ಥರೂ ಅಂಧಶ್ರದ್ಧೆಯ ಮೊರೆ ಹೋಗುತ್ತಾರೆಂದರೆ ಅದು ಪಾಪಪ್ರಜ್ಞೆಯಿಂದಲೇ ಹೊರತು ಬೇರೇನೂ ಇರಲಾರದು. ಒಬ್ಬ ಮನುಜ ಈ ಜಗತ್ತಿನಲ್ಲಿ ಹುಟ್ಟಿದಾಗ ಅವನೊಬ್ಬ ಪಾಪ-ಪುಣ್ಯಗಳಿಲ್ಲದ ಪರಿಪೂರ್ಣ ವ್ಯಕ್ತಿತ್ವದವನಾಗೇ ಇರುತ್ತಾನೆ. ನಂತರದ ದಿನಗಳಲ್ಲಿ ಅವನಲ್ಲಿ ಪಾಪಪ್ರಜ್ಞೆ ಕಾಡುತ್ತಿದೆ ಎಂದರೆ, ಆ ಪಾಪದ ಕೆಲಸವನ್ನು ಈ ಭೂಮಿಯ ಮೇಲೆ ಅವತರಿಸಿದ ನಂತರವಷ್ಟೇ ಮಾಡಿರಲು ಸಾಧ್ಯ. ಅವನ ಕರ್ಮದ ಫಲವೇ ಅವನಲ್ಲಿ ಪಾಪಪ್ರಜ್ಞೆ ಕಾಡಲು ಆರಂಭಿಸುತ್ತದೆ. ಅದರ ಪ್ರತಿಫಲವೇ ಅಂಧಶ್ರದ್ಧೆಯ ಮೂರೆ ಹೋಗುತ್ತಾನೆ. ಇಲ್ಲವಾದಲ್ಲಿ ಈ ಸಮಾಜ ಅಥವಾ superstitionsನಮ್ಮ ಸುತ್ತಮುತ್ತಲಿನ ಬಂಧು-ಮಿತ್ರರು ಅವನ/ಅವಳನ್ನು ನಡೆಸಿಕೊಂಡ ರೀತಿ ಅಥವಾ ಹೇರಿದ ಮಾನಸಿಕ ಒತ್ತಡಗಳೂ ಕಾರಣವಾಗಿರುವ ಸಾಧ್ಯತೆ ಇದೆ. ಅಂತಹವರಿಗೆ ಮಾನಸಿಕ ತಜ್ಞರ ಸಲಹೆ ಸೂಚನೆ ಅಥವಾ ಚಿಕಿತ್ಸೆಗಳು ಅವಶ್ಯಕತೆ ಇರುತ್ತದೆಯೇ ಹೊರತು, ದೆವ್ವ-ಭೂತ ಬಿಡಿಸುವ ದುಷ್ಟ ರಾಕ್ಷಸರ ಚಿಕಿತ್ಸೆಯಲ್ಲ.

ಇಂದಿನ ವಿದ್ಯಾರ್ಥಿಗಳು ವಿಜ್ಞಾನವನ್ನು ಒಂದು ಪಠ್ಯಕ್ರಮವನ್ನಾಗಿ ಆಭ್ಯಾಸಿಸುತ್ತಿದ್ದಾರೆಯೇ ಹೊರತು, ವಸ್ತುನಿಷ್ಠವಾಗಿ ಆಭ್ಯಾಸಿಸದೇ ಇರುವುದು ಜನಮಾನಸದಲ್ಲಿ ಮೌಢ್ಯತೆ ಮನೆ ಮಾಡಲು ಕಾರಣವಾಗಿದೆ. ವಿಜ್ಞಾನ ಮತ್ತು ಸಾಮಾಜಿಕ ಬದುಕಿನ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ವಿಜ್ಞಾನದ ವಿಧ್ಯಾರ್ಥಿಗಳು ಸಮಾಜಿಕ ವ್ಯವಸ್ಥೆಯ ಇತಿಹಾಸ ವ್ಯಾಸಂಗ ಮಾಡುತ್ತಿಲ್ಲ. ಕಲಾ ವಿದ್ಯಾರ್ಥಿಗಳು ವಿಜ್ಞಾನ ತಿಳಿಯತ್ತಿಲ್ಲ. ಈ ಸಮನ್ವಯದ ಕೊರತೆ ಸಾಮಾಜಿಕ ಆಂಧಕಾರಕ್ಕೆ ಮತ್ತೊಂದು ಪರ್ಯಾಯ ಕಾರಣೀಭೂತವಾಗಿದೆ.

ದೆವ್ವ-ಭೂತ ಬಿಡಿಸುವುದು ವೈಜ್ಞಾನಿಕವೊ ಅವೈಜ್ಞಾನಿಕವೊ ಬೇರೆಯದೇ ವಿಚಾರ, ಮಾನಸಿಕ black-magic-indiaಆಯಾಸದಿಂದ ಬಳಲುತ್ತಿರುವವರನ್ನು ಬೇವಿನಸೊಪ್ಪು ಅಥವಾ ಚಾವಟಿಗಳಿಂದ ಹೊಡೆಯುವುದು, ಕಾದ ಹಲಿಗೆಗಳ ಮೇಲೆ ನಡೆಸುವುದು, ಅರೆಬೆತ್ತಲೆಗೊಳಿಸುವುದು, ಕೊಠಡಿಯ ತುಂಬ ಧೂಮಹಾಕಿ ಉಸಿರಾಟಕ್ಕೆ ತೊಂದರೆ ನೀಡುವುದು, ಮುಖ / ಕಣ್ಣುಗಳ ಮೇಲೆ ಕೈಗೆ ಸಿಕ್ಕಸಿಕ್ಕ ಬೂಧಿ, ಅರಿಷಿಣ, ಕುಂಕುಮ ಎರಚುವುದು, ಈ ಎಲ್ಲಾ ದೈಹಿಕ ಹಿಂಸೆಗಳನ್ನು ಸಹಿಸಲು ಸಾಧ್ಯವಾಗದೆ, ಅಲ್ಲಿಗೆ ಹೋಗಿಬಂದ ಮಾನಸಿಕ ರೋಗಿ ಸಾಮಾನ್ಯ ಸ್ಥಿತಿಗೆ ಬಂದಂತೆ ಕಂಡರೂ ಅದು ಶಾಶ್ವತ ಪರಿಹಾರವಾಗಿರದೆ ಮುಂದಿನ ದಿನಗಳಲ್ಲಿ ಪುನರಾವರ್ತನೆಯಾಗುವ ಅಥವಾ ಶಾಶ್ವತವಾಗಿ ಮನೊರೋಗಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದಕ್ಕೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರವೆಂದರೆ ಮನೊವೈದ್ಯರನ್ನು ಕಂಡು ಚಿಕಿತ್ಸೆಕೊಡಿಸಿ, ಆ ರೋಗಿಯ ಪರಿಸರವನ್ನು ಬದಲಾಯಿಸಬೇಕು, ಆ ಪರಿಸರ ನಾವೇ ಆಗಿದ್ದ ಪಕ್ಷದಲ್ಲಿ ನಾವುಗಳು ಬದಲಾಗಬೇಕು.

ಗೆದ್ದ ರಾಹುಲ್ ಮುಗ್ಗರಿಸಿದ ಪ್ರತಿಪಕ್ಷಗಳು


– ಚಿದಂಬರ ಬೈಕಂಪಾಡಿ


 

ಸದಾ ಮೌನವಾಗಿರುವ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮೌನ ಮುರಿಯುವಂತೆ ಮಾಡುವುದು ಯಾರಿಗೆ ಸಾಧ್ಯವೆನ್ನುವುದು ಈಗ ಜಗತ್ತಿಗೇ ಗೊತ್ತಾಗಿದೆ. ಯಾಕೆಂದರೆ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಡಾ.ಸಿಂಗ್ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ನಂಬರ್ 2 ನಾಯಕ rahul-gandhiರಾಹುಲ್ ಗಾಂಧಿ ಕಳಂಕಿತರನ್ನು ರಕ್ಷಿಸುವ ಕೇಂದ್ರ ಸರ್ಕಾರದ ತರಾತುರಿ ಅಧ್ಯಾದೇಶವನ್ನು ಹರಿದು ಹಾಕಲು ಲಾಯಕ್ಕು ಎಂದದ್ದೇ ತಡ ಮೌನ ಮುರಿದು ಹೇಳಿಕೆ ನೀಡಿದ್ದಾರೆ.

ನಿಜ, ಕೇಂದ್ರದ ಯುಪಿಎ ಸರ್ಕಾರ ಕಳಂಕಿತರನ್ನು ರಕ್ಷಿಸಲು ಮುಂದಾಗಿದ್ದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ. ಸುಪ್ರಿಂಕೋರ್ಟ್ ಕ್ರಿಮಿನಲ್ ಜನಪ್ರತಿನಿಧಿಗಳನ್ನು ಸಂಸತ್ತು ಮತ್ತು ಶಾಸನ ಸಭೆಗಳಿಂದ ಹೊರಗಿಡಲು ಕೈಗೊಂಡ ಪ್ರಮುಖ ತೀರ್ಮಾನದ ತೀರ್ಪು ದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಆದರೆ ಅದು ಹೆಚ್ಚು ದಿನ ಕಾವನ್ನು ಉಳಿಸಿಕೊಳ್ಳಲಿಲ್ಲ. ಸುಪ್ರಿಂಕೋರ್ಟ್ ತೆಗೆದುಕೊಂಡ ಐತಿಹಾಸಿಕ ನಿಲುವಿಗೆ ಪ್ರತಿಯಾಗಿ ಕೇಂದ್ರ ಯುಪಿಎ ಸರ್ಕಾರ ಅಷ್ಟೇ ತರಾತುರಿಯಾಗಿ ಅಧ್ಯಾದೇಶ ಹೊರಡಿಸಿ ಕ್ರಿಮಿನಲ್ ಹಿನ್ನೆಲೆಯ ಪ್ರತಿನಿಧಿಗಳು ಮತ್ತೆ ಅಖಾಡದಲ್ಲಿ ಉಳಿಯುವಂಥ ಚಾಣಾಕ್ಷ ನಡೆಗೆ ಮುಂದಾಯಿತು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಧ್ಯಾದೇಶಕ್ಕೆ ಸಹಿ ಹಾಕಬಾರದು ಎನ್ನುವ ನಿಲುವು ಸಾರ್ವತ್ರಿಕವಾಗಿ ಜನ ಸಾಮಾನ್ಯರದ್ದಾಗಿತ್ತು. ಆದರೆ ಅವರು ಸಹಿ ಹಾಕುತ್ತಿದ್ದರೋ, ಇಲ್ಲವೋ ಎನ್ನುವುದು ಈಗ ಅಪ್ರಸ್ತುತ. ಯಾಕೆಂದರೆ ಅಧ್ಯಾದೇಶವನ್ನೇ ಯುಪಿಎ ಸರ್ಕಾರ ಹಿಂದಕ್ಕೆ ಪಡೆಯಲು ನಿರ್ಧರಿಸಿ ಆಗಿದೆ. ರಾಷ್ಟ್ರಪತಿಗಳು ನಿಜಕ್ಕೂ ಒತ್ತಡಕ್ಕೆ ಒಳಗಾಗುತ್ತಿದ್ದರು ಒಂದು ವೇಳೆ ಸರ್ಕಾರ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯಲು ಮನಸ್ಸು ಮಾಡದೇ ಇದ್ದಿದ್ದರೆ ಎನ್ನುವುದನ್ನು ನಿರಾಕರಿಸುವಂತಿಲ್ಲ.

ಈಗ ಪ್ರತಿಪಕ್ಷಗಳು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿ ಪ್ರತಿಕ್ರಿಯೆಸುತ್ತಿವೆ ರಾಹುಲ್ ಚೀರಾಡಿದ ಮೇಲೆ. ಅಧ್ಯಾದೇಶ ಹಿಂದಕ್ಕೆ ಪಡೆಯುವಂತೆ ಮಾಡಿದ್ದು ಪ್ರತಿಪಕ್ಷಗಳಲ್ಲ ರಾಹುಲ್. ಆಡಳಿತ ಪಕ್ಷದಲ್ಲಿದ್ದರೂ ಪ್ರತಿಪಕ್ಷದ ನಾಯಕರಂತೆ ರಾಹುಲ್ ಕೆಲಸ ಮಾಡಿದರು ಎನ್ನುವುದು ಪ್ರತಿಕ್ಷಗಳ ಟೀಕೆಯೂ ಆಗಿದೆ. ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ ಪ್ರತಿಪಕ್ಷಗಳು ಅಷ್ಟೇನೂ ಗಂಭೀರವಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದವು ಎನ್ನುವಂತಿಲ್ಲ. ಇದಕ್ಕೆ ಕಾರಣ ಸರಳ ಅವರು ಸನ್ಯಾಸಿಗಳಲ್ಲ,Rahul_Gandhi_Ajay_Maken ಅವರಿಗೂ ಅಧಿಕಾರ ಬೇಕು. ಕ್ರಿಮಿನಲ್ ಹಿನ್ನೆಲೆ ಎನ್ನುವುದು ಈಗಿನ ರಾಜಕೀಯಕ್ಕೆ ತೀರಾ ಅಗತ್ಯವಾದ ಮತ್ತು ಹೆಚ್ಚು ಫಲ ತಂದುಕೊಡಬಲ್ಲ ಅರ್ಹತೆ ಎನ್ನುವಂತಾಗಿದೆ. ಕ್ರಿಮಿನಲ್ ಕೇಸುಗಳಿಲ್ಲದ ರಾಜಕಾರಣಿಗಳ ಸಂಖ್ಯೆ ತೀರಾ ವಿರಳ ಎನ್ನುವುದಕ್ಕಿಂತಲೂ ಕ್ರಿಮಿನಲ್ ಕೇಸಿಲ್ಲದವರು ರಾಜಕೀಯಕ್ಕೆ ನಾಲಾಯಕ್ಕು ಎನ್ನುವಂಥ ಭಾವನೆ ನೆಲೆಗೊಂಡಿದೆ. ಆದ್ದರಿಂದಲೇ ಬಿಜೆಪಿ ಸಹಿತ, ಈ ದೇಶದ ಎಲ್ಲಾ ವಿರೋಧಪಕ್ಷಗಳು ಯುಪಿಎ ತರಾತುರಿಯಲ್ಲಿ ತಂದ ಅಧ್ಯಾದೇಶವನ್ನು ಬಹಿರಂಗವಾಗಿ ವಿರೋಧಿಸುವಂಥ ಮನಸ್ಥಿತಿಗೆ ಬರಲಾಗಲಿಲ್ಲ.

ತೋರಿಕೆಗೆ ಲಾಲು ಪ್ರಸಾದ್ ಯಾದವ್ ಮೇಲೆ ಸುಪ್ರೀಂಕೋರ್ಟ್ ತೀರ್ಪು ಮುಳುವಾಗಲಿದೆ ಎನ್ನುವ ಭಾವನೆ ಹುಟ್ಟು ಹಾಕಲಾಯಿತೇ ಹೊರತು ಪ್ರತಿಪಕ್ಷಗಳು ತಮ್ಮಲ್ಲೂ ಇರಬಹುದಾದ ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಪರೋಕ್ಷವಾಗಿ ಯುಪಿಎ ಜೊತೆಗೆ ಕೈಜೋಡಿಸಿದ್ದವು ಎನ್ನುವುದರಲ್ಲಿ ಅನುಮಾನಗಳಿಲ್ಲ.

ಬಲವಾಗಿ ವಿರೋಧಿಸುತ್ತಿದ್ದಂಥ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಅವರೂ ಕೂಡಾ ಸುಪ್ರೀಂಕೋರ್ಟ್ ತೀರ್ಪಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ಮೌನಕ್ಕೆ ಶರಣಾಗಿದ್ದರು. ಪ್ರಧಾನಿಯದ್ದು ನಿರಂತರ ಮೌನ, ಇವರದು ಅನಿರೀಕ್ಷಿತ ಮೌನ. ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಮತ್ತು ರಾಹುಲ್ ಮಾತಿಗಷ್ಟೇ ಮಣೆ-ಮನ್ನಣೆ ಎನ್ನುವುದು ಗೊತ್ತಿರುವುದರಿಂದ ಮತ್ತೆ ಮತ್ತೆ ಅದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ.

ಈ ದೇಶದಲ್ಲಿ ಒಬ್ಬನೇ ಒಬ್ಬ ರಾಜಕಾರಣಿ ಯುಪಿಎ ಸರ್ಕಾರದ ಅಧ್ಯಾದೇಶವನ್ನು ಬಹಿರಂಗವಾಗಿ, ಖಡಾಖಂಡಿತವಾಗಿ ವಿರೋಧಿಸುವಂಥ ಎದೆಗಾರಿಕೆ ತೋರಿಸಲ್ಲಿಲ್ಲ ಎನುವುದು ಎಷ್ಟು ಸತ್ಯವೋ ಸುಪ್ರೀಂಕೋರ್ಟ್ ತೀರ್ಪನ್ನು ಆತ್ಮಪೂರ್ವಕವಾಗಿ ಸ್ವಾಗತಿಸಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಮಾಧ್ಯಮಗಳು ಕೂಡಾ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಕಟಿಸಿ ಗಮನ ಸೆಳೆದವು, ಯುಪಿಎ ಸರ್ಕಾರ ಹೊರಡಿಸಿದ ಅಧ್ಯಾದೇಶವನ್ನು ವ್ಯಾಪಕವಾಗಿ ಪ್ರಚಾರ ಮಾಡಿದವು. ರಾಹುಲ್ ಗಾಂಧಿ ಈ ಅಧ್ಯಾದೇಶವನ್ನು ಹರಿದು ಬಿಸಾಡಿ ಎನ್ನುವ ತನಕವೂ ಕೇವಲ ಒಂದು ಸುದ್ದಿಯಾಗಿ ನೋಡಿದ ಮಾಧ್ಯಮಗಳು ಈಗ ತಾವೂ ಎಡವಟ್ಟು ಮಾಡಿದೆವು ಎನ್ನುವ ಮನಸ್ಥಿತಿಗೆ ಬಂದಿವೆ.

ರಾಹುಲ್ ಗಾಂಧಿ ಅಧ್ಯಾದೇಶವನ್ನು ವಿರೋಧಿಸಿರುವುದು ಅದನ್ನು ಕಸದ ಬುಟಿಗೆ ಹಾಕಿಸಿರುವುದು ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಒಂದು ಪ್ರಬಲ ರಾಜಕೀಯ ತಂತ್ರಗಾರಿಕೆಯ ನಡೆ ಎನ್ನುವುದನ್ನು ಯಾರೇ ಆದರೂ ಒಪ್ಪಿಕೊಳ್ಳಲೇ ಬೇಕು. ರಾಜಕಾರಣದಲ್ಲಿ ಸಕ್ರಿಯರಾಗಿರುವ advani-sushma-jaitleyರಾಹುಲ್ ಗಾಂಧಿ ಅವರಿಂದ ರಾಜಕೀಯ ನಡೆಗಳನ್ನು ನಿರೀಕ್ಷೆ ಮಾಡುವುದರಲ್ಲಿ ತಪ್ಪಿಲ್ಲ ಎನ್ನುವುದಾದರೆ ಅವರು ಅರಿವಿದ್ದೇ ಅಧ್ಯಾದೇಶದ ಬಗ್ಗೆ ಮೌನ ವಹಿಸಿರಬಹುದು, ಈಗ ಉದ್ದೇಶಪೂರ್ವಕವಾಗಿ ಅದನ್ನು ವಿರೋಧಿಸಿರಬಹುದು. ವಾಸ್ತವ ಈ ಅಧ್ಯಾದೇಶದಿಂದ ರಾಜಕೀಯದಲ್ಲಿರುವವರಿಗೆ ನಡುಕವಾಗಿರುವುದು ಮತ್ತು ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿರುವುದು.

ಪ್ರತಿಪಕ್ಷಗಳು ಮಾಡಬೇಕಿದ್ದ ಕೆಲಸವನ್ನು ತಮ್ಮ ಸರ್ಕಾರದ ಮುಂಚೂಣಿಯಲ್ಲಿರುವ ನಾಯಕ ರಾಹುಲ್ ಗಾಂಧಿ ಮಾಡಿದ್ದಾರೆ ಎನ್ನುವುದಾದರೆ ಅದು ಅವರ ಮುಂದಿನ ರಾಜಕೀಯದ ನಡೆಗೆ ದಿಕ್ಸೂಚಿ. ರಾಹುಲ್ ಗಾಂಧಿ ತಮ್ಮ ಪಕ್ಷದ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿರಬಹುದು, ಆದರೆ ಮತದಾರರ ಮನಗೆದ್ದಿದ್ದಾರೆ, ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾದ ಸನ್ನಿವೇಶವಿತ್ತು. ರಾಹುಲ್ ಗಾಂಧಿ ಗುಟುರು ಹಾಕಿರುವುದರಿಂದ ಅಂಥವರಿಗೆ ಹಿನ್ನಡೆಯಾಗಿದೆ. ಆದರೆ ಈಗ ರಾಜಕೀಯದಲ್ಲಿ ಹೊಸರಕ್ತದ ಹರಿವಿಗೆ ಅವಕಾಶ ಸಿಕ್ಕಿದರೂ ಸಿಗಬಹುದು ಎನ್ನುವ ಆಶಾಭಾವನೆ ಮೂಡುತ್ತಿದೆ.

ಸುಪ್ರೀಂಕೋರ್ಟ್ ತೀರ್ಪು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಬಲ ಅಸ್ತ್ರವಾಗುತ್ತಿತ್ತು ಬಳಸಿಕೊಂಡಿದ್ದರೆ, ಆದರೆ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿಬಿಟ್ಟವು. ಕಾಂಗ್ರೆಸ್ ಯುವರಾಜ ಈಗ ಚಾಲಾಕಿತನ ತೋರಿಸಿ ಸಂಚಲನ ಉಂಟು ಮಾಡಿದ್ದಾರೆ. ಈಗ ಉಂಟಾಗಿರುವ ಸಂಚಲನ ಯುಪಿಎ ಸರ್ಕಾರಕ್ಕಿಂತಲೂ ಪ್ರತಿಪಕ್ಷಗಳಿಗೆ ಆತಂಕ ತಂದಿದೆ. ಒಂದು ವೇಳೆ ಸುಪ್ರೀಂ ತೀರ್ಪು ಸುಪ್ರೀಂ ಆಗಿಯೇ ಮುಂದಿನ ಚುನಾವಣೆಯಲ್ಲಿ ಚಾಲ್ತಿಯಲ್ಲಿದ್ದರೆ ರಾಹುಲ್ ಹೀರೋ ಆಗುವುದನ್ನು ಅಷ್ಟು ಸುಲಭವಾಗಿ ತಪ್ಪಿಸಲಾಗದು.

CET ಮತ್ತು ಕಾಮೆಡ್-ಕೆ ಗಳಲ್ಲಿ ಡ್ರಾಪ್‌ಔಟ್ ಅಕ್ರಮ : ಅರ್ಹರಿಗೆ ಮತ್ತು ಪ್ರತಿಭಾವಂತರಿಗೆ ಅನ್ಯಾಯ


– ರವಿ ಕೃಷ್ಣಾರೆಡ್ದಿ


 

ಇದು ಬಹಳ ವರ್ಷಗಳಿಂದ ನಡೆದು ಬರುತ್ತಿರುವ ಮೋಸ ವಂಚನೆಗಳ ಕರ್ಮಕಾಂಡ. ಸಾರ್ವಜನಿಕರಿಗೆ ಗೊತ್ತಿರಲಿಲ್ಲ ಅಷ್ಟೇ. ಪ್ರತಿವರ್ಷ ನೂರಾರು ಮೆಡಿಕಲ್ ಸೀಟುಗಳನ್ನು ಅರ್ಹರಿಗೆ ಮತ್ತು ಪ್ರತಿಭಾವಂತರಿಗೆ ವಂಚಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯವರು ಅಕ್ರಮವಾಗಿ ಮಾರಿಕೊಳ್ಳುವ ಒಂದು ವ್ಯವಸ್ಥಿತ ಜಾಲವೇ ಇಲ್ಲಿದೆ.

ಇದು ಮೊದಲಿಗೆ ಬಯಲಾಗಿದ್ದು 2011 ರಲ್ಲಿ, ಲೇಖಕ ಬೇದ್ರೆ ಮಂಜುನಾಥರವರ ಮೂಲಕ. Bedre-Photoಬೇದ್ರೆ ಮಂಜುನಾಥರವರ ಪ್ರತಿಭಾವಂತ ಮಗನಿಗೆ ಸಿಇಟಿಯಲ್ಲಿ ಎಂಬಿಬಿಎಸ್‌ಗೆ ಉಚಿತ ಸೀಟು ದೊರಕಿತ್ತು. ಆದರೆ ಆ ಹುಡುಗನಿಗೆ ಪಶುವೈದ್ಯಕೀಯ ಓದಲು ಮನಸ್ಸಿತ್ತು. ಅದನ್ನು ಹೇಗೋ ತಿಳಿದುಕೊಂಡ ಖದೀಮರು ಆ ಹುಡುಗನನ್ನು ಸಂಪರ್ಕಿಸಿ ಲಕ್ಷಾಂತರ ರೂಪಾಯಿಗಳ ಆಮಿಷ ಒಡ್ಡಿ, ಆತ ತಾವು ಸೂಚಿಸಿದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್‌ಗೆ ಅಡ್ಮಿಷನ್ ಮಾಡಿಕೊಳ್ಳುವಂತೆಯೂ, ಹಾಗೆಯೇ ತನಗೆ ಬೇಕಾದ ಪಶುವೈದ್ಯಕೀಯ ಕೋರ್ಸ್‌ಗೂ ಸೇರಿಕೊಳ್ಳುವಂತೆಯೂ, ಅದಾದ ನಂತರ್ ಸಿಇಟಿ ಕೌನ್ಸೆಲಿಂಗ್ ಮುಗಿಯುತ್ತಿರುವಂತೆ ಮೆಡಿಕಲ್ ಕಾಲೇಜಿನಿಂದ ಡ್ರಾಪ್‌ಔಟ್ ಆಗುವಂತೆಯೂ ಸೂಚಿಸಿತು. ಆಗ ಇದ್ದ ನಿಯಮಗಳ ಪ್ರಕಾರ ಸಿಇಟಿ ಕೌನ್ಸೆಲಿಂಗ್ ಮುಗಿದ ನಂತರ ಹೀಗೆ ಡ್ರಾಪ್‌ಔಟ್ ಆದರೆ ಆ ಖಾಲಿ ಉಳಿಯುವ ಸೀಟು ಖಾಸಗಿ ಕಾಲೇಜಿನ ಆಡಳಿತ ಮಂಡಳಿಗೆ ಸೇರುತ್ತದೆ. ಅದನ್ನವರು ಎಂದಿನಂತೆ ಮಾರುಕಟ್ಟೆ ದರದಲ್ಲಿ ಐವತ್ತು ಲಕ್ಷದಿಂದ ಕೋಟಿ ರೂಪಾಯಿಗಳ ತನಕ ಮಾರಿಕೊಳ್ಳಬಹುದು. ಆದರೆ ಇಂತಹ ವಂಚನೆಯ ಜಾಲಕ್ಕೆ ಬೀಳುವ ಮನಸ್ಸಿಲ್ಲದ ಆ ಹುಡುಗ ತನ್ನ ನೈತಿಕ ಪ್ರಜ್ಞೆಯ ಕಾರಣಕ್ಕೆ ಅಂತಹ ಕೆಲಸ ಮಾಡಲು ನಿರಾಕರಿಸಿದ. ಈ ವಿಷಯ ತಿಳಿದ ಬೇದ್ರೆ ಮಂಜುನಾಥರು ಈ ವಂಚನೆಯ ಜಾಲದ ಬಗ್ಗೆ ಮತ್ತು ಅದರಿಂದ ಅರ್ಹರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪತ್ರಿಕೆಗಳ ವಾಚಕರ ವಾಣಿಗೆ 2011 ಜುಲೈ-ಆಗಸ್ಟ್‌ನಲ್ಲಿ ಪತ್ರ ಬರೆದರು. ಆ ಮೂಲಕ ಅದು ಸಾರ್ವಜನಿಕವಾಗಿ ಬಯಲಾಯಿತು. ನಂತರ ಸಿಇಟಿಯ ಮೂಲಕ ಇಂತಹ ಅಕ್ರಮಗಳು ಮತ್ತು ಮೋಸಗಳು ಆಗದಂತೆ ಕ್ರಮಕೈಗೊಳ್ಳುವ ಘೋಷಣೆಗಳು ಸರ್ಕಾರದ ಕಡೆಯಿಂದ ಆದವು.

bedre-manjunath-cet
ಆದರೆ, ಮುಂದಿನ ವರ್ಷ, ಅಂದರೆ 2012 ರಲ್ಲಿ ಇದರ ತೀವ್ರತೆ ಕಾಣಿಸಿಕೊಂಡಿತು. ರಂಗೋಲಿಯ ಕೆಳಗೆ ತೂರುವ ಮೋಸಗಾರರು ಆ ವರ್ಷ ಸುಮಾರು 800 ಮೆಡಿಕಲ್ ಸೀಟುಗಳನ್ನು ಹೀಗೆ ಡ್ರಾಪ್‌ಔಟ್ ಮಾಡಿಸಿದ್ದರು. ಬದಲಾದ ಸಿಇಟಿ ನಿಯಮಗಳಿಂದಾಗಿ ಮತ್ತು ಹಗರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವಿದ್ದ ಕಾರಣದಿಂದಾಗಿ ಅನೇಕ ಕಾಲೇಜುಗಳಲ್ಲಿ ಇಂತಹ ಅಕ್ರಮ ಸೀಟುಗಳನ್ನು ತುಂಬಲಾಗಲಿಲ್ಲ. ಆ ಮೂಲಕ ಕೇವಲ ಪ್ರತಿಭಾವಂತರಿಗೆ ಅನ್ಯಾಯವಾಗಿದ್ದೇ ಅಲ್ಲದೆ, ನೂರಾರು ವಿದ್ಯಾರ್ಥಿಗಳು ವೈದ್ಯರಾಗುವ ಅವಕಾಶವನ್ನೇ ನಿರಾಕರಿಸಲಾಯಿತು.

ಇದು ಸಿಇಟಿ ಕತೆ. ಈ ವರ್ಷ ಏನಾಗಿದೆಯೋ ನನಗೆ ಮಾಹಿತಿ ಇಲ್ಲ. ಆದರೆ ಇದು ಕಾಮೆಡ್‌-ಕೆ ಯಲ್ಲೂ ಅವ್ಯಾಹತವಾಗಿ ನಡೆಯುತ್ತ ಬಂದಿದೆ comdekಎಂದು ಇತ್ತೀಚೆಗೆ ತಿಳಿಯಿತು. ನಿಮಗೆ ಗೊತ್ತಿರಬಹುದು, ಕಾಮೆಡ್‌-ಕೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರದ ಸಿಇಟಿಯನ್ನು ಧಿಕ್ಕರಿಸಿ ತಮ್ಮ ಪಾಲಿನ ಪೇಮೆಂಟ್ ಸೀಟುಗಳನ್ನು (ಮ್ಯಾನೇಜ್‌ಮೆಂಟ್ ಸೀಟುಗಳನ್ನಲ್ಲ) ತುಂಬಿಕೊಳ್ಳಲು ಮಾಡಿಕೊಂಡ ಒಂದು ತಂತ್ರ. ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾದ ಪೇಮೆಂಟ್ ಸೀಟುಗಳಿಗೆ ನಾವೇ ಪರೀಕ್ಷೆ ಮಾಡಿ ತುಂಬಿಸಿಕೊಳ್ಳುತ್ತೇವೆ ಎಂದು ಖಾಸಗಿ ಕಾಲೇಜುಗಳು ಸಿಇಟಿಗೆ ಪರ್ಯಾಯವಾಗಿ ಇವನ್ನು ನಡೆಸುತ್ತವೆ. ಇಲ್ಲಿಯೂ ಸಹ ಕೆಲವು ಆಡಳಿತ ಮಂಡಳಿಯವರು ಪ್ರತಿಭಾವಂತರಿಗೆ ವಂಚಿಸಿ ಸಿಇಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಅಕ್ರಮವಾಗಿ ಮಾರಿಕೊಳ್ಳುತ್ತಿದ್ದಾರೆ.

ಈ ವರ್ಷವೂ ಅದು ಮುಂದುವರೆದಿದೆ. ನಂಬಬಲ್ಲ ಮೂಲಗಳ ಪ್ರಕಾರ ಹೀಗೆ ಡ್ರಾಪ್‌ಔಟ್ ಮಾಡಿಸಿದ ಸುಮಾರು ಹತ್ತು ವೈದ್ಯಕೀಯ ಸೀಟುಗಳಿಗೆ ಜಾತಿ ಸಂಘವೊಂದು ಬೆಂಗಳೂರಿನಲ್ಲಿರುವ ತನ್ನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಇಂದು “ಸ್ಪಾಟ್ ಅಡ್ಮಿಷನ್” ಸಂದರ್ಶನ ನಡೆಸುತ್ತಿದೆ. ಈ ಹತ್ತೂ ಸೀಟುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೋಗಬೇಕಿತ್ತು. ಇದು ಒಂದು ಕಾಲೇಜಿನ ಕತೆ. ರಾಜ್ಯದ ಇತರೆ ಅನೇಕ ಖಾಸಗಿ ಕಾಲೇಜುಗಳಲ್ಲಿ ಹೀಗೆ ಅದೆಷ್ಟು ಸ್ಥಾನಗಳು ಬಿಕರಿ ಆಗುತ್ತಿವೆಯೋ? ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.

ಈಗಾಗಲೆ ಇಂಜಿನಿಯರಿಂಗ್, ಮೆಡಿಕಲ್ ಓದುತ್ತಿರುವ ಉತ್ತಮ ಅಂಕ ಪಡೆದಿರುವ ಪ್ರತಿಭಾವಂತ ಹುಡುಗರನ್ನು ಐದತ್ತು ಲಕ್ಷ ಕೊಟ್ಟು ಹಿಡಿದುಕೊಂಡು ಬಂದು ಅವರಿಂದ ಕಾಮೆಡ್-ಕೆ ಪರೀಕ್ಷೆ ಬರೆಸಿ, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಿ, ಮತ್ತೆ ಡ್ರಾಪ್‌ಔಟ್ ಮಾಡಿಸುವ ಧಂಧೆ ಮತ್ತು ಅಕ್ರಮದ ಬಗ್ಗೆ ನಗರದ ಸೆಂಟ್ರಲ್ ಪೊಲೀಸ್ ಠಾಣೆಯವರು ವಿಚಾರಣೆ ನಡೆಸಿ ಸಿದ್ದಪಡಿಸಿರುವ ಸುಮಾರು 642 ಪುಟಗಳ ಚಾರ್ಜ್‍ಷೀಟ್ ನನ್ನ ಮುಂದಿದೆ. 2011 ನೇ ಸಾಲಿನಲ್ಲಿ ಕಾಮೆಡ್-ಕೆ ಪರೀಕ್ಷೆ ಬರೆದು ಕೆಂಪೇಗೌಡ ಮೆಡಿಕಲ್ ಕಾಲೇಜನ್ನು ಆಯ್ಕೆ ಮಾಡಿಕೊಂಡು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ನಂತರ ಕೊನೆಯ ದಿನಾಂಕದಂದು ಡ್ರಾಪ್‌ಔಟ್ ಆದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಡ್ರಾಪ್‌ಔಟ್ ದಂಧೆ ಪತ್ತೆ ಹಚ್ಚಲು ಒಬ್ಬರು ಕೊಟ್ಟ ದೂರಿನ ಆಧಾರದ ಮೇಲೆ kims-chargesheet-1ಪೋಲಿಸರು ಸುಮಾರು 110 ಜನರನ್ನು ವಿಚಾರಣೆಗೆ ಕರೆದು ಸಿದ್ದಪಡಿಸಿದ ದೋಷಾರೋಪಣೆ ಪಟ್ಟಿ ಇದು. ಕೆಳಹಂತದ ನ್ಯಾಯಾಲಯದಲ್ಲಿದ್ದ ಈ ಮೊಕದ್ದಮೆಯ ವಿರುದ್ಧ ಕಾಲೇಜಿನ ಆಡಳಿತ ಮಂಡಳಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ ಎನ್ನುವುದು ಸುದ್ದಿ.

ಇಂತಹ ಅಕ್ರಮಗಳು ಹೀಗೆ ಸಾರ್ವಜನಿಕವಾಗಿ ಬಯಲಾಗುತ್ತಿದ್ದರೂ ನಮ್ಮ ಸರ್ಕಾರಗಳ ಕುಸಿದ ನ್ಯಾಯಪ್ರಜ್ಞೆ ಮತ್ತು ನೈತಿಕತೆಯ ಕಾರಣವಾಗಿ ಇದ್ಯಾವುದೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಕೈಸನ್ನೆ-ಬಾಯ್ಸನ್ನೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯುತ್ತಿಲ್ಲ. ಅನ್ಯಾಯಕ್ಕೊಳಗಾದ ಪೋಷಕರು ಮತ್ತು ಪ್ರಜ್ಞಾವಂತರು ಎಚ್ಚೆತ್ತುಕೊಂಡು ಈ ಅಕ್ರಮಗಳನ್ನು ಅನ್ಯಾಯಗಳನ್ನು ತಡೆಯಬೇಕಿದೆ.

kims-chargesheet-2