Category Archives: ಸಾಮಾಜಿಕ

ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ತ್ರಿಪುರಾದಲ್ಲಿ ಬುದ್ದ, ಭೀಮರ ಕಮ್ಯೂನಿಸಂ : ರಕ್ತಚರಿತೆಯಲ್ಲಿ ಚಿರಸ್ಥಾಯಿ ಸೌಹಾರ್ದದ ಹೆಸರುಗಳು

Naveen Soorinje


ನವೀನ್ ಸೂರಿಂಜೆ


ತ್ರಿಪುರಾದಲ್ಲಿ ಎಡಪಂಥೀಯರ ಮೇಲೆ ಇಷ್ಟೊಂದು ರೀತಿಯ ದಾಳಿ ನಡೆಯುತ್ತಿದ್ದರೂ ಅವರ ಸಹನೆ ಅಚ್ಚರಿ ಮೂಡಿಸುತ್ತೆ. ಬುದ್ದ, ಅಂಬೇಡ್ಕರ್ ಜೊತೆಗೆ ಲೆನಿನ್ ಕ್ರಾಂತಿಗೆ ಮುಂದಾದರೆ ಬಹುಶಃ ತ್ರಿಪುರಾದ ಕಮ್ಯುನಿಷ್ಟರಾಗಬಹುದು. ಐಪಿಎಫ್’ಟಿ, ಎನ್.ಎಲ್.ಎಫ್.ಟಿ, ಎಟಿಟಿಎಫ್ ದಾಳಿ ಇವತ್ತಿನದ್ದಲ್ಲ. ಈಗಿನದ್ದಕ್ಕಿಂತಲೂ ಕರಾಳ ದಾಳಿ ಪ್ರತ್ಯೇಕತಾವಾದಿಗಳಿಂದ ನಡೆದಿತ್ತು. ಈಗ ನಡೆಯುತ್ತಿರೋದು ಪ್ರಭುತ್ವದ ಜೊತೆಗೂಡಿದ ಬಂದೂಕುದಾರಿಗಳ ದಾಳಿ. ವಿಚಿತ್ರ ಎಂದರೆ ಬುಡಕಟ್ಟು ಪ್ರತ್ಯೇಕ ರಾಜ್ಯ ಅಥವಾ ದೇಶಕ್ಕಾಗಿ ನಡೆಯುತ್ತಿದ್ದ ಬುಡಕಟ್ಟುಗಳ ಬಾಂಗ್ಲಾ ಪ್ರೇರಿತ ಸಶಸ್ತ್ರ ಹೋರಾಟಕ್ಕೆ ಬಲಿಯಾಗಿರೋದು ಎಡಪಂಥದ ಬುಡಕಟ್ಟು ನಾಯಕರೇ ಅತ್ಯಧಿಕ. ಬುಡಕಟ್ಟು ಅಲ್ಲದ ಮುಸ್ಲೀಮರು ಮತ್ತು ದಲಿತರನ್ನು ಬುಡಕಟ್ಟು ಉಗ್ರರು ಕೊಲೆ ಮಾಡಲು ಬಂದಾಗ ಅದಕ್ಕೆ ಎದುರು ನಿಂತು ಕೊಲೆಯಾದವರೆಲ್ಲರೂ ಸಿಪಿಐಎಂ ನ ಬುಡಕಟ್ಟು ನಾಯಕರು, ಶಾಸಕರು, ಸಚಿವರು. ಇದಕ್ಕೊಂದು ಧೀರ್ಘ ರಕ್ತಸಿಕ್ತ ಇತಿಹಾಸವೇ ಇದೆ.

ಅದು 1996 ಜನವರಿ ತಿಂಗಳು. ಸಿಮ್ನ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಶಾಸಕ ಪ್ರಣಬ್ ದೆಬ್ಬರ್ಮಾರನ್ನು ಹಾಡುಹಗಲೇ ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ಭಯೋತ್ಪಾದನೆ ಮಾಡುತ್ತಿರುವ ಪ್ರತ್ಯೇಕತಾವಾದಿಗಳು ಅಪಹರಣ ಮಾಡಿದರು. ಬರೋಬ್ಬರಿ ಹನ್ನೊಂದು ತಿಂಗಳ ಬಳಿಕ ಪ್ರಣಬ್ ದೆಬ್ಬರ್ಮಾ ತಪ್ಪಿಸಿಕೊಂಡು ಬಂದರು.

1996 ಮೇ 12 ರಂದು ಎಟಿಟಿಎಫ್ ( ಆಲ್ ತ್ರಿಪುರ ಟೈಗರ್ಸ್ ಫೋರ್ಸ್) ಬಂದೂಕುದಾರಿಗಳು ಬುಡಕಟ್ಟು ಅಲ್ಲದ ದಲಿತರ ಮೇಲೆ ದಾಳಿ ಮಾಡುತ್ತಾರೆ. ಅದನ್ನು ತಡೆಯಲು ಹೋದ ಸಿಪಿಐಎಂ ಹಿರಿಯ ಮುಖಂಡರೂ ಆಗಿರುವ ಬುಡಕಟ್ಟು ಸಮುದಾಯದ ಚಂದ್ರ ಮೋಹನ್ ದೆಬ್ಬರ್ಮಾ ಕೊಲೆಗೀಡಾಗುತ್ತಾರೆ. ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ನಡೆದ ಹೋರಾಟದಲ್ಲಿ ಬುಡಕಟ್ಟು ಅಲ್ಲದ ಏಳು ಜನರನ್ನು ರಕ್ಷಿಸಲು ಸಿಪಿಐಎಂ ನ ಬುಡಕಟ್ಟು ನಾಯಕ ಪ್ರಾಣತ್ಯಾಗ ಮಾಡುತ್ತಾರೆ.

ವಿಪರ್ಯಾಸ ಎಂದರೆ 1997 ಮೇ ಯವರೆಗೆ ಒಟ್ಟು ಒಂದು 300 ಜನ ಸಿಪಿಐಎಂ ಅಥವಾ ಸಿಪಿಐಎಂ ಬೆಂಬಲಿತ ಬುಡಕಟ್ಟು ಜನರು ಪ್ರತ್ಯೇಕತಾವಾದಿಗಳ ದಾಳಿಗೆ ಒಳಗಾಗಿ ಸತ್ತಿದ್ದಾರೆ ಎಂದು ಸರಕಾರ ಅಧಿಕೃತವಾಗಿ ಘೊಷಿಸಿತು.

ಅದು ತ್ರಿಪುರಾದ ಚಮನು ಗ್ರಾಮ. ಟೀ ಎಸ್ಟೇಟ್ ಮತ್ತು ಕಾಡಂಚಿನ ಕೃಷಿಯಲ್ಲಿ ತೊಡಗಿಕೊಂಡಿದ್ದ ಅಸಂಘಟಿತ ಕೃಷಿ ಕಾರ್ಮಿಕರನ್ನು ಎಡಪಂಥೀಯ ಕಾರ್ಮಿಕ ಚಳುವಳಿ ಸಂಘಟಿಸುತ್ತಿತ್ತು. 1997 ಜೂನ್ 09 ರಂದು ಎನ್.ಎಲ್.ಎಫ್.ಟಿ ಪ್ರತ್ಯೇಕತಾವಾದಿಗಳು ಗುಡ್ಡದ ತುದಿಯಿಂದ ಗೆರಿಲ್ಲಾ ಮಾದರಿಯಲ್ಲಿ ಎರಡು ಬಾರಿ ದಾಳಿ ನಡೆಸಿ ಚಮನು ಗ್ರಾಮದಲ್ಲಿ ಕಾರ್ಮಿಕ ಸಂಘಟನೆಯ 9 ಕಾರ್ಯಕರ್ತರನ್ನು ಬಲಿ ತೆಗೆದುಕೊಂಡಿತು. ಆ ಬಳಿಕ ನಡೆದ ಸಂಘರ್ಷದಲ್ಲಿ ಪ್ರತ್ಯೇಕತಾವಾದಿಗಳು ಗಡಿ ಭದ್ರತಾ ಪಡೆಯ ಸಿಬ್ಬಂದಿಗಳನ್ನು ಕೊಲ್ಲುತ್ತಾರೆ.

ಅಕ್ಟೋಬರ್ 1998 ರಲ್ಲಿ ಎಟಿಟಿಎಫ್ ( ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್) ಉಗ್ರರು 34 ಸಿಪಿಐಎಂ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದರು. ಸಾವಿಗೀಡಾದವರಲ್ಲಿ ಇಬ್ಬರು ಸಿಪಿಐಎಂ ನ ಹಿರಿಯ ನಾಯಕರು. ಅದರಲ್ಲಿ ಒಬ್ಬರು ಸಿಪಿಐಎಂ ನ ಬುಡಕಟ್ಟು ನಾಯಕರೂ ಆಗಿದ್ದ ಮಾಜಿ ಶಾಸಕರು. ಈ ಘಟನೆಯ ಬಳಿಕವೂ ಸುಮಾರು 47 ಎಡಪಂಥದ ಬೆಂಬಲಿಗ ನಾಗರಿಕರನ್ನು ಎಟಿಟಿಎಫ್ ಉಗ್ರರು ಅಪಹರಿಸಿದರು.

1997 ಮಾರ್ಚ್ 20 ರಂದು ಸಿಪಿಐಎಂ ಹಿತೈಷಿ ಮಾಜ್ ಸಂತೋಷ್ ಪ್ರವಕರ್ ಮತ್ತು ನೈಕ್ ಕೋಟ್ ಶಿವಾಜಿ ತುಕಾರಾಂ ಎಂಬವರನ್ನು ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಕಾರ್ಯಕರ್ತರು ಗುಂಡಿಕ್ಕಿ ಕೊಲೆ ಮಾಡಿದರು.

1998 ರಲ್ಲಿ ತ್ರಿಪುರಾ ಸರಕಾರದ ಆರೋಗ್ಯ ಮತ್ತು ನಗರ ಅಭಿವೃದ್ದಿ ಸಚಿವರಾಗಿದ್ದ ಬಿಮಲ್ ಸಿನ್ಹರವರ ದತ್ತು ಸಹೋದರ ಬಿಕ್ರಂ ಸಿನ್ಹರನ್ನು ಎಟಿಟಿಎಫ್ ಉಗ್ರರು ಅಪಹರಿಸುತ್ತಾರೆ. ತನ್ನ ದತ್ತು ಸಹೋದರನನ್ನು ಬಿಡಿಸಿಕೊಂಡು ಬರಲು ಆರೋಗ್ಯ ಸಚಿವ ಬಿಮಲ್ ಸಿನ್ಹರು ಮಾತುಕತೆಗಾಗಿ ತನ್ನ ಮತ್ತೊಬ್ಬ ಸಹೋದರ ಬಿದ್ಯುತ್ ಸಿನ್ಹ ಜೊತೆ ಪ್ರತ್ಯೇಕತಾವಾದಿಗಳ ಅಡಗುತಾಣಕ್ಕೆ ತೆರಳುತ್ತಾರೆ. ಅವಾಂಗ ಘಾಟ್ ಬಳಿಯ ದಲೈ ನದಿ ಬಳಿಯ ತೀರದಲ್ಲಿ ಮಾತುಕತೆ ನಡೆಯುತ್ತದೆ. ದತ್ತು ಸಹೋದರನ ಬಿಡುಗಡೆಗೆ ಎಲ್ಲಾ ಷರತ್ತುಗಳಿಗೆ ಒಪ್ಪಲು ಸಿಪಿಐಎಂ ಸಚಿವ ಬಿಮಲ್ ಸಿನ್ಹ ಸಿದ್ದರಿದ್ದರೂ ಕಮ್ಯೂನಿಷ್ಠ್ ಸಿದ್ದಾಂತವನ್ನೇ ಬಿಡಬೇಕು ಮತ್ತು ಪ್ರದೇಶದಲ್ಲಿ ಸಂಘಟನೆ ಮಾಡಬಾರದು ಎಂಬ ಷರತ್ತಿಗೆ ಸಚಿವರು ಒಪ್ಪಲಿಲ್ಲ. ಕೊನೆಗೆ ಮಾರ್ಚ್ 31 ರಂದು ಎಟಿಟಿಎಫ್ ಉಗ್ರರು ಸಚಿವ ಬಿಮಲ್ ಸಿನ್ಹ ಮತ್ತು ಸಹೋದರ ಬಿದ್ಯುತ್ ಸಿನ್ಹರನ್ನು ಗುಂಡಿಕ್ಕಿ ಸಾಯಿಸುತ್ತಾರೆ.

ಇದಾದ ಬಳಿಕ ತ್ರಿಪುರಾ ಸರಕಾರವು ಕೇಂದ್ರ ಗೃಹ ಇಲಾಖೆಗೆ ನೀಡಿದ ಮಾಹಿತಿಯಂತೆ 1998 ರವರೆಗೆ ಪ್ರತ್ಯೇಕತಾವಾದಿಗಳು ಸಿಪಿಐಎಂ ಬೆಂಬಲಿಸುವ 800 ನಾಗರಿಕರ ಕೊಲೆ ಮಾಡಿದ್ದಾರೆ. ಅದರಲ್ಲಿ ಒಬ್ಬರು ಸಿಪಿಐಎಂ ಸರಕಾರದ ಆರೋಗ್ಯ ಸಚಿವರೂ ಸೇರಿದ್ದರು. ಅಲ್ಲಿಯವರೆಗೆ ಒಟ್ಟು 2000 ಜನರನ್ನು ಅಪಹರಿಸಲಾಗಿದ್ದು, ಅದರಲ್ಲಿ ಬಹುತೇಕರು ಹಿಂದಿರುಗಿ ಬಂದಿಲ್ಲ ಎಂದು ಘೊಷಿಸಲಾಯಿತು.

1998 ರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಆರಂಭವಾಗಿ ಸೆಪ್ಟೆಂಬರ್ ವರೆಗೆ ಎನ್ ಎಲ್ ಎಫ್ ಟಿ ಮತ್ತು ಎಟಿಟಿಎಫ್ ತನ್ನ ಹತ್ಯಾಕಾಂಡವನ್ನು ನಡೆಸುತ್ತದೆ. 32 ಎಡ ಕಾರ್ಯಕರ್ತರನ್ನು ಈ ಅವಧಿಯಲ್ಲಿ ಪ್ರತ್ಯೇಕತಾವಾದಿ ಉಗ್ರರು ಕೊಲೆ ಮಾಡಿದ್ದರು. ಅದರಲ್ಲಿ ಸಿಪಿಐಎಂ ಹಿರಿಯ ಮುಖಂಡ ಅನಿಲ್ ಬೈದ್ಯ ಕೂಡಾ ಸೇರಿದ್ದಾರೆ. ಇದೇ ಅವಧಿಯಲ್ಲಿ 28 ಸಿಪಿಐಎಂ ಬೆಂಬಲಿತರನ್ನು ಎಟಿಟಿಎಫ್ ಒತ್ತೆಯಾಳಾಗಿ ಇರಿಸಿಕೊಂಡಿತು.

ಸಿಪಿಐಎಂ ನಾಯಕ ಕಿಶೋರ್ ದೆಬ್ಬರ್ಮಾ ಎಂಬವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ಮಧ್ಯೆ ಸಂಘರ್ಷ ನಡೆಸುತ್ತಿದ್ದ ಪ್ರತ್ಯೇಕತಾವಾದಿಗಳು ಸಕ್ರೀಯರಾಗಿದ್ದ ಪ್ರದೇಶದಲ್ಲಿ ಬುಡಕಟ್ಟು ಮತ್ತು ಬುಡಕಟ್ಟೇತರರ ಮಧ್ಯೆ ಸೌಹಾರ್ದಕ್ಕಾಗಿ ಕೆಲಸ ಮಾಡುತ್ತಿದ್ದರು. ಇದು ಪ್ರತ್ಯೇಕತಾವಾದಿಗಳ ಆಕ್ರೋಶಕ್ಕೆ ಗುರಿಯಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯ್ತು. ಈ ರೀತಿ ಹುತಾತ್ಮರಾದ ಎಡನಾಯಕ ಕಿಶೋರ್ ದೆಬ್ಬರ್ಮಾ ಸ್ಮರಣಾರ್ಥ 1998 ಆಗಸ್ಟ್ 24 ರಂದು ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಈ ಕ್ರಿಕೆಟ್ ಟೂರ್ನಮೆಂಟ್ ಅನ್ನು ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ನಡುವಿನ ಸೌಹಾರ್ಧದ ಕ್ರೀಡಾಕೂಟ ಎಂದು ಸಿಪಿಐಎಂ ಕರೆಯಿತು. ಈ ಕ್ರೀಡಾಕೂಟವನ್ನು ಗುರಿಯಾಗಿರಿಸಿ ಪ್ರತ್ಯೇಕತಾವಾದಿ ಉಗ್ರರು ದಾಳಿಯನ್ನು ನಡೆಸುತ್ತಾರೆ. ಎಡ ವಿದ್ಯಾರ್ಥಿ ಚಳುವಳಿಯಲ್ಲಿ ಸಕ್ರೀಯರಾಗಿದ್ದ ಹದಿನೇಳರ ಹರೆಯದ ಮಹಿಳಾ ಕ್ರಿಕೆಟರ್ ಕಾಜಲ್ ದೆಬ್ಬರ್ಮಾ ಮತ್ತು ಇಬ್ಬರನ್ನು ಎನ್ ಎಲ್ ಎಫ್ ಟಿ ಬಂದೂಕುದಾರಿಗಳು ಗುಂಡಿಟ್ಟು ಕೊಲೆ ಮಾಡಿದರು. ಇದು ಇಂದಿಗೂ ಕಮ್ಯನಿಷ್ಟರ ಸ್ಮೃತಿಪಟಲದಲ್ಲಿ ಹಾಗೇ ಉಳಿದುಕೊಂಡ ನೋವಾಗಿದೆ.

1998 ಆಗಸ್ಟ್ 16 ರಂದು ಬಂದೂಕುದಾರಿಗಳು ಸಾದರ್ ಉಪವಿಭಾಗದ ನರೇಂದ್ರಪುರ ಟಿ ಎಸ್ಟೇಟ್ ನಲ್ಲಿ ಕಾರ್ಮಿಕರನ್ನು ಸಂಘಟಿಸುತ್ತಿದ್ದ ಐದು ಜನ ಬುಡಕಟ್ಟು ಅಲ್ಲದ ಸಿಪಿಐಎಂ ಬೆಂಬಲಿಗರನ್ನು ಕೊಲೆ ಮಾಡಿದರು.

ಪ್ರತ್ಯೇಕತಾವಾದಿಗಳು ಪ್ರಬಲವಾಗಿರುವ ಟಕರ್ಜಾಲ ಮತ್ತು ಕಂಚಾನ್ಮಾಲ ಪ್ರದೇಶದಲ್ಲಿ 1999 ಫೆಬ್ರವರಿ 02 ರಂದು ಎಡಚಳುವಳಿಗೆ ಬೆಂಬಲ ಕೊಡುತ್ತಿದ್ದ 6 ಸಣ್ಣ ಉದ್ಯಮಿಗಳನ್ನು ಕೊಲೆ ಮಾಡಿ ಅವರ ಮನೆಗಳನ್ನು ಸುಟ್ಟು ಹಾಕಲಾಯ್ತು. ಅದರ ಮುಂದುವರಿದ ಭಾಗವಾಗಿ ಸಿಪಿಐಎಂನ ಇಬ್ಬರು ಬುಡಕಟ್ಟು ನಾಯಕರನ್ನು ಕೊಲೆ ಮಾಡಲಾಯ್ತು. 500 ಗುಡಿಸಲುಗಳಿಗೆ ಬೆಂಕಿ ಹಾಕಲಾಯ್ತು. 600 ಜನರು ಆ ಊರನ್ನೇ ತೊರೆದರು ಎಂದು ಪೊಲೀಸ್ ಕಡತದಲ್ಲಿ ದಾಖಲಾಗಿದೆ.

2000 ನೇ ಇಸವಿಯ ಎಪ್ರಿಲ್ 15 ರಂದು ಕಲ್ಯಾಣ್ಪುರ ಗ್ರಾಮದಲ್ಲಿ ಸುಮಾರು 25 ರಷ್ಟಿದ್ದ ಎನ್ ಎಲ್ ಎಫ್ ಟಿ ಉಗ್ರರ ದಾಳಿಗೆ ಹಲವು ಮನೆ ಅಂಗಡಿಗಳು ದ್ವಂಸ ವಾದವು. 12 ಜನರನ್ನು ಗುರುತಿಸಿ ಎಡ ಬೆಂಬಲಿತರು ಅನ್ನೋ ಕಾರಣಕ್ಕಾಗಿ ಕೊಲೆ ಮಾಡಲಾಯಿತು. ಈ ದಾಳಿಗೆ 7 ಜನ ಗಾಯಗೊಂಡರು.

ಇದಾದ ಬಳಿಕ ಎಪ್ರಿಲ್ 27 ರಂದು ಘಾರ್ಜಿ ಎಂಬ ಊರಲ್ಲಿ ಎನ್ ಎಲ್ ಎಫ್ ಟಿ ಉಗ್ರರು 24 ಗಂಟೆಯಲ್ಲಿ ನಾಲ್ಕು ಜನರನ್ನು ಗುಂಡಿಕ್ಕಿ ಕೊಲೆ ಮಾಡುತ್ತಾರೆ. ಅದರಲ್ಲಿ ಸಿಪಿಐಎಂ ನಾಯಕನ ಸಹೋದರನಾಗಿರುವ ನರಾಯ್ ಸರ್ಕಾರ್ ಕೂಡಾ ಸೇರಿದ್ದರು. ಸಿಪಿಐಎಂ ಮುಖಂಡರ ಇಬ್ಬರು ಅಕ್ಕ ತಂಗಿಯರನ್ನು ಉಗ್ರರು ಅತ್ಯಾಚಾರ ಮಾಡಿ ಕೊಲೆ ಮಾಡುವ ಹೀನ ಕೃತ್ಯವನ್ನೂ ನಡೆಸುತ್ತಾರೆ.

ಮೇ 18 ರಂದು ಕೊವೈ ಮತ್ತು ತೆಲಿಯಮುರ ಪ್ರದೇಶದಲ್ಲಿ ಒಂದು ವಾರದ ಕಾಲ ನಡೆದ ಜನಾಂಗಿಯ ಘರ್ಷಣೆಯಲ್ಲಿ 50 ಜನ ಸಾಯುತ್ತಾರೆ. ಅದರಲ್ಲಿ ಹೆಚ್ಚಿನವರು ಬೆಂಗಾಲಿ ದಲಿತರು ಮತ್ತು ಮುಸ್ಲೀಮರಾಗಿದ್ದು ಹಲವರು ಸಿಪಿಐಎಂ ಕಾರ್ಯಕರ್ತರು. ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ಮಧ್ಯೆ ಸಂಘರ್ಷ ಸೃಷ್ಟಿಸಿ ಪ್ರತ್ಯೇಕ ದೇಶಕ್ಕಾಗಿ ಆಗ್ರಹಿಸುವ ಸಿಐಎ ಪ್ರೇರಿತ ಪ್ರತ್ಯೇಕತಾವಾದಿಗಳು ಈ ಕೃತ್ಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇರ ಆರೋಪ ಮಾಡಿದ್ದರು.

ಈ ದಾಳಿಗಳ ಸಂಧರ್ಭದಲ್ಲೇ ಟಿಟಿಎಎಡಿಸಿಗೆ ನಡೆದ ಚುನಾವಣೆಯಲ್ಲಿ ಐಪಿಎಫ್ ಟಿ ಪ್ರತ್ಯೇಕತಾವಾದಿಗಳು ಗೆಲುವು ಸಾಧಿಸುತ್ತಾರೆ. ಆಗ ಇನ್ನಷ್ಟೂ ಗಲಾಟೆಗಳಾಗುತ್ತೆ. ಟಿಟಿಎಎಡಿಸಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಾಸವಿರುವ ಬುಡಕಟ್ಟು ಅಲ್ಲದ ದಲಿತ ಮತ್ತು ಮುಸ್ಲಿಮರನ್ನು ಓಡಿಸಲು ಐಪಿಎಫ್ ಟಿ ನಿರ್ಧರಿಸುತ್ತದೆ. ಅದರ ಭಾಗವಾಗಿ ಬಾಗ್ಬೇರ್, ರತಿಯಾ, ಚಕ್ಮಾ ಘಾಟ್ ನಲ್ಲಿ ಜನವಸತಿ ಪ್ರದೇಶದಲ್ಲಿ ಐಪಿಎಫ್ ಟಿ ಪ್ರೇರಿತ ಎಟಿಟಿಎಫ್ ಉಗ್ರರು ಏಕಕಾಲದಲ್ಲಿ ದಾಳಿ ನಡೆಸುತ್ತಾರೆ. ಈ ದಾಳಿಯಲ್ಲಿ 45 ಜನ ಸಾವಿಗೀಡಾಗುತ್ತಾರೆ. 60 ಜನರು ಎನ್ ಎಲ್ ಎಫ್ ಟಿ ಬಂದೂಕುದಾರಿಗಳಿಂದ ತಪ್ಪಿಸಿಕೊಂಡು ಬಾಗ್ಬೇರ್ ನಿಂದ ಕಾಂಚಾಪುರ್ ಗೆ ತೆರಳುತ್ತಿದ್ದರು. ಅವರನ್ನೂ ಸುತ್ತುವರಿದ ಉಗ್ರರು ಮತ್ತೆ 25 ಮುಸ್ಲೀಮರನ್ನು ಕೊಲೆ ಮಾಡುತ್ತಾರೆ.

2000 ನೇ ಇಸವಿಯ ಸೆಪ್ಟೆಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಎನ್ ಎಲ್ ಎಫ್ ಟಿ ಗೆರಿಲ್ಲಾ ಸೇನೆ ದಾಳಿಗೆ 30 ಎಡ ಕಾರ್ಯಕರ್ತರು ಸಾವಿಗೀಡಾಗುತ್ತಾರೆ. ಅದರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು.

2001 ಕ್ಕೆ ಕಾಲಿರಿಸುತ್ತಿದ್ದಂತೆ 9 ಬುಡಕಟ್ಟು ಜನಾಂಗದವರನ್ನು ಎಡ ಚಳುವಳಿಯಲ್ಲಿ ಇದ್ದಾರೆ ಎನ್ನುವ ಕಾರಣಕ್ಕಾಗಿ ಫಲ್ಗುಂಜ್ಯೊ ಪಾರ ಎಂಬ ಊರಲ್ಲಿ ಕೊಲೆ ನಡೆಸಲಾಯ್ತು. ಮೂರು ದಿನ ಊರಲ್ಲಿ ಕರ್ಫ್ಯೂ ಹೇರಲಾಯ್ತು.

2001 ರ ಮಾರ್ಚ್ 3 ರವರೆಗೆ ಮೂರು ತಿಂಗಳು ಪ್ರತ್ಯೇಕತಾವಾದಿಗಳ ಗನ್ನು ಸ್ಬಲ್ಪ ವಿಶ್ರಾಂತಿ ಪಡೆದಿತ್ತು. ಮಾರ್ಚ್ ಮೂರರಂದು ಸಿಪಿಐಎಂ ಪ್ರಭಾವ ಹೆಚ್ಚಿರುವ ಬಾಂಪುರ್ ನಲ್ಲಿ 13 ಜನರನ್ನು ಉಗ್ರರು ಗುಂಡಿಕ್ಕಿ ಕೊಲೆ ಮಾಡುತ್ತಾರೆ. ಸಾವಿಗೀಡಾದವರಲ್ಲಿ 9 ಜನ ಪೊಲೀಸರು.

2002 ಅಕ್ಟೋಬರ್ ತಿಂಗಳಲ್ಲಿ ಪ್ರತ್ಯೇಕತಾವಾದಿ ಗಳು ಆರ್ಮಿ ಡ್ರೆಸ್ ನಲ್ಲಿ ಬಂದು ಧರ್ಮನಗರದಲ್ಲಿ ಎಡ ಕಾರ್ಯಕರ್ತನ ಮನೆ ಮೇಲೆ ದಾಳಿ ಮಾಡಿ ಒಬ್ಬನನ್ನು ಕೊಂದು 15 ಜನರನ್ನು ಕಿಡ್ನಾಪ್ ಮಾಡುತ್ತಾರೆ.

2003 ಮೇ ಯಲ್ಲಿ ಒಟ್ಟು 32 ಜನರನ್ನು ಎಟಿಟಿಎಫ್ ಕೊಲೆ ಮಾಡುತ್ತೆ. ಅದರಲ್ಲಿ ಏಳು ಜನ ಮಕ್ಕಳು, ಎಂಟು ಜನ ಹೆಂಗಸರು ಕೂಡಾ ಕೊಲೆಯಾಗುತ್ತಾರೆ. ಇದೇ ತಿಂಗಳು ಸಮ್ನ ಜಿಲ್ಲೆಯ ಜೋಗೇಶ್ವರ್ ನಗರದಲ್ಲಿ ಸಿಪಿಐಎಂ ರಚನೆ ಮಾಡಿದ್ದ ನಿರಾಶ್ರಿತರ ಕಾಲನಿಗೆ ನುಗ್ಗಿ 20 ಬೆಂಗಾಲಿಗಳನ್ನು ಬುಡಕಟ್ಟು ಪ್ರತ್ಯೇಕತಾವಾದಿಗಳು ಕೊಲೆ ಮಾಡುತ್ತಾರೆ.

ಸಧ್ಯ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅಡಳಿತ ನಡೆದುತ್ತಿರುವ ಐಪಿಎಫ್’ಟಿ ಸಹೋದರ ಸಂಘಟನೆ ಎಟಿಟಿಎಫ್ ಮತ್ತು ಬಾಂಗ್ಲಾದೇಶದ ಮುಸ್ಲಿಂ ಮೂಲಭೂತವಾದಿಗಳು ಬಹುತೇಕ ಜಂಟಿ ಕಾರ್ಯಾಚರಣೆ ನಡೆಸುತ್ತಾರೆ. ಬಾಂಗ್ಲಾ ನುಸುಳುಕೋರರ ಕ್ಯಾಂಪ್ ಆಗಿರುವ ಸಚ್ಚಾರಿ ಗ್ರಾಮದಿಂದ ಬಂದ ಎಟಿಟಿಎಫ್ ಉಗ್ರರು ಮಹರ್ಚುರ್ ಮಾರುಕಟ್ಟೆ ಪ್ರದೇಶದ ಗುಡಿಸಲು ಸುಟ್ಟು ಹಾಕಿ ಗುಂಡಿನ ಸುರಿಮಳೆಗೈಯುತ್ತಾರೆ. ಅದರಲ್ಲಿ ಹಲವು ಮಕ್ಕಳನ್ನು ಕ್ಲೋಸ್ಡ್ ರೇಂಜ್ ಶೂಟ್ ಮಾಡಿ ಕೊಲ್ಲಲಾಗುತ್ತದೆ. ಅದೊಂದೇ ರಾತ್ರಿ 9 ಜನ ಸಾವಿಗೀಡಾದರು.

ಇದಾದ ಬಳಿಕ ಸಿಪಿಐಎಂ ಮಹಿಳಾ ನಾಯಕಿ ರಸ್ಮಾಲಾ ದೆಬ್ಬರ್ಮಾ ಅವರನ್ನು ಕೊಲೆ ಮಾಡಲಾಯ್ತು. ಮೇ 07 ಉತ್ತರ ತ್ರಿಪುರಾದ ಕೈಲಾಶ್ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫಾಟಿಕ್ರೆಯಲ್ಲಿ ಸಿಪಿಐಎಂ ಕಾರ್ಯಕರ್ತ ನಿಲಿಮೇಶ್ ಪೌಲ್ ಮತ್ತು ಅವರ ಪತ್ನಿ ಅಲ್ಪನಾ ಪೌಲ್ ಅವರನ್ನು ಕೊಲೆ ಮಾಡಲಾಯಿತು.

2004 ಜೂನ್ 8 ರಂದು ದಲೈ ಜಿಲ್ಲೆಯ ಅಂಬಾಸದಲ್ಲಿ ಎನ್ ಎಲ್ ಎಫ್ ಟಿ ಮುಖಂಡ ರಾಣಮಾಯಿ‌ ನೇತೃತ್ವದ ಗುಂಪು ಒಬ್ಬರನ್ನು ಕೊಂದು ಮೂವರನ್ನು ಕಿಡ್ನಾಪ್ ಮಾಡ್ತಾರೆ.

ಜೂನ್ 13 ರಲ್ಲಿ ಕಾನ್ಪುಯಿ ಜಿಲ್ಲೆಯಲ್ಲಿ ಎಡ ಚಳುವಳಿಯನ್ನು ಬೆಂಬಲಿಸುತ್ತಿದ್ದ ಎರಡು ಉದ್ಯಮಿಗಳನ್ನು ಕೊಲೆ ಮಾಡಿ 24 ಜನರನ್ನು ಅಪಹರಿಸಲಾಯಿತು.

2004 ಅಕ್ಟೋಬರ್ 22 ರಂದು ಸಿಪಿಐಎಂ ಹಿರಿಯ ನಾಯಕರಾಗಿದ್ದ ಮಾಜಿ ಶಾಸಕ ಆನಂದ್ ರೊಹಾಜ ಮತ್ತು ಅವರ ಪುತ್ರ ಜೋಯ್ ರೊಹಾಜ ಸೇರಿದಂತೆ ನಾಲ್ಕು ಜನರನ್ನು ದಲೈ ಜಿಲ್ಲೆಯಲ್ಲಿ ಎನ್ ಎಲ್ ಎಫ್ ಟಿ ಉಗ್ರರು ಕೊಲೆ ಮಾಡಿದರು. ಇದಲ್ಲದೆ 1993 ರಿಂದ 2000 ಇಸವಿಯವರೆಗೆ ನಡೆದ 389 ದಾಳಿ ಘಟನೆಯಲ್ಲಿ 49 ಸೈನಿಕರು ಹತರಾಗಿದ್ದಾರೆ.

ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ಬಂದೂಕು ಹೋರಾಟ ನಡೆಸುತ್ತಿರುವ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಸಿಪಿಐಎಂ ಸರಕಾರದ ಬುಡಕಟ್ಟು ಶಾಸಕರು, ಮಾಜಿ ಶಾಸಕರು, ಸಚಿವರು, ಎಡ ಕಾರ್ಯಕರ್ತರ ಮನೆ ಮಕ್ಕಳನ್ನು ಸುಟ್ಟು ಹಾಕಿದ್ದಾರೆ. ಆದರೆ ಭೂಗತ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ನ ಯುವಕ ಮನೆ ಕುಟುಂಬಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಿಪಿಐಎಂ ಸರಕಾರ ಭದ್ರತೆ ನೀಡಿದೆ. 25 ವರ್ಷ ಆಡಳಿತ ನಡೆಸುತ್ತಿರುವ ಎಡ ಸರಕಾರ ತನ್ನ ಕಾರ್ಯಕರ್ತರ ಮೇಲೆ ನಿಯಂತ್ರಣವನ್ನು ಸ್ವಲ್ಪ ಸಡಿಲಗೊಳಿಸಿತ್ತಿದ್ದರೂ ಸಹ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಪ್ರಾಬಲ್ಯ ಹೊಂದಿರುವ ಟಕರ್ಜಾಲ, ಸಚಿಯಬಾರಿಯಂತಹ ಗ್ರಾಮಗಳು, ಅವರನ್ನು ಬೆಂಬಲಿಸುವ ಕುಟುಂಬಗಳು ಬೆಂಕಿಗೆ ಆಹುತಿಯಾಗುತ್ತಿದ್ದವು. ಆದರೆ ಸಿಪಿಐಎಂ ಸರಕಾರ ಉಗ್ರರ ದಾಳಿಯನ್ನು ಸಂವಿದಾನಾತ್ಮಕವಾಗಿ ಎದುರಿಸಿತ್ತು. ಯಾರು ದಾಳಿ ಮಾಡಿದ್ದಾರೋ ಅವರ ಮೇಲೆ ಮಾತ್ರ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿತ್ತೇ ಹೊರತು ಎಡ ಕಾರ್ಯಕರ್ತರು ದಾಳಿಕೋರರ ಮಾದರಿಯಲ್ಲೇ ಉತ್ತರ ಕೊಟ್ಟಿಲ್ಲ. ಬುಡಕಟ್ಟು ಉಗ್ರರ ಮೇಲಿನ ದಾಳಿ ಅಮಾಯಕ ಬುಡಕಟ್ಟುಗಳ ಮಾರಣ ಹೋಮಕ್ಕೆ ಕಾರಣವಾಗಬಾರದು ಎಂಬ ಸಿಪಿಐಎಂ ನಿಲುವು ಇದಕ್ಕೆ ಕಾರಣವಾಯ್ತು. ಅಂಬೇಡ್ಕರ್, ಬುದ್ದರನ್ನು ಒಳಗೊಂಡ ಮಾರ್ಕ್ಸ್ ವಾದ ತ್ರಿಪುರಾದ ಎಡಚಳುವಳಿಯನ್ನು ಸಧ್ಯದ ದಿನದಲ್ಲಿ ಸಂಕಷ್ಟಕ್ಕೆ ದೂಡಿದರೂ ಅಂತಿಮವಾಗಿ ಜಯಗಳಿಸುತ್ತದೆ ಎಂಬ ನಿರೀಕ್ಷೆ.

ತ್ರಿಪುರಾದಲ್ಲಿ ಸಿಪಿಐಎಂ ಮತ್ತು ಬುಡಕಟ್ಟು ಪ್ರತ್ಯೇಕತಾವಾದಿಗಳ ಸಂಘರ್ಷ ! ಐಪಿಎಫ್ ಟಿ ನೆರಳಲ್ಲಿ ಬಿಜೆಪಿ !

                                                                                                                  – ನವೀನ್ ಸೂರಿಂಜೆ

 

ತಕರ್ಜಾಲಕ್ಕೆ ದಾರಿ ಎಂಬ ಬೋರ್ಡ್ ಕಾಣಿಸುತ್ತಿದ್ದಂತೆ ಮಿಲಿಟರಿ ಪಡೆ ಮರಳು ಮೂಟೆಯ ಹಿಂದೆ ಶಸ್ತ್ರಸಜ್ಜಿತರಾಗಿ ನಿಂತ ದೃಶ್ಯ ಕಾಣಿಸುತ್ತದೆ. ಯಾವುದೋ ದೇಶದ ಗಡಿ ಭಾಗಕ್ಕೆ ಬಂದಿದ್ದೇವೆಯೇನೊ ಅನ್ನಿಸುವಷ್ಟರ ಮಟ್ಟಿಗೆ ಇಲ್ಲಿ ಮಿಲಿಟರಿ ಆಡಳಿತವಿದೆ. AFSPA  ಸಶಸ್ತ್ರಕಾಯ್ದೆಯನ್ನು ತ್ರಿಪುರಾ ಸರಕಾರ ಹಿಂಪಡೆದ ಬಳಿಕವೂ ತಕರ್ಜಾಲಕ್ಕೆ ಮಿಲಿಟರಿ ಭದ್ರತೆ ಒದಗಿಸಲಾಗಿದೆ.

ನಾವು ತ್ರಿಪುರಾಕ್ಕೆ ಬಂದಿಳಿದ ಮರುದಿನವೇ ತಕರ್ಜಾಲದ ಅಮರೇಂದ್ರ ನಗರದಲ್ಲಿ ಗಲಭೆಯಾಗಿ ಸಿಪಿಐಎಂ ಕಚೇರಿ ದ್ವಂಸ ಮಾಡಲಾಗಿದೆ ಎಂಬ ಸುದ್ದಿ ದೊರಕಿತು. ನೇರ ತಕರ್ಜಾಲಕ್ಕೆ ತೆರಳಿದೆವು. ಕೃಷಿ ಮತ್ತು ಕಾಡನ್ನು ನಂಬಿಕೊಂಡ ಬುಡಕಟ್ಟುಗಳೇ ಇರುವ ಪ್ರದೇಶ ತಕರ್ಜಾಲ. ಇಲ್ಲಿ 41 ಸಾವಿರ ಮತದಾರರಿದ್ದಾರೆ. ಅದರಲ್ಲಿ ಶೇಕಡಾ 95 ರಷ್ಟು ಬುಡಕಟ್ಟು ಸಮುದಾಯ. ಉಳಿದಂತೆ 5 ಶೇಕಡಾ ಮುಸ್ಲೀಮರು ಮತ್ತು ಬೆಂಗಾಲಿಗಳು. 

ತ್ರಿಪುರಾ ಭಾರತದಿಂದ ಪ್ರತ್ಯೇಕವಾಗಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಬಾಂಗ್ಲಾದೇಶದಿಂದ ನಿರ್ವಹಣೆ ಮಾಡಲಾಗುತ್ತಿರುವ ಭಯೋತ್ಪಾದಕ ಸಂಘಟನೆಗಳಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾ (ಎನ್ಎಲ್ಎಫ್ಟಿ) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ (ಎಟಿಟಿಎಫ್)  ತಕರ್ಜಾಲದಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಇದೇ ಕಾರಣದಿಂದ ಪ್ರತ್ಯೇಕ ತ್ರಿಪರ್ಲ್ಯಾಂಡ್ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಐಪಿಎಫ್ ಟಿ (ಇಂಡಿಜಿನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ) ಕೂಡಾ ಬಲವಾಗಿ ನೆಲೆಯೂರಿದೆ. ಇದಲ್ಲದೆ ಐಎನ್ ಪಿಟಿ ( ಇಂಡಿಜಿನಿಯಸ್ ನ್ಯಾಶನಲಿಸ್ಟ್ ಪಾರ್ಟಿ ಆಫ್ ತ್ರಿಪುರಾ), ಟಿ ಎಸ್ ಪಿ ( ತ್ರಿಪರ್ಲ್ಯಾಂಡ್ ಸ್ಟೇಟ್ ಪಾರ್ಟಿ) ಕೂಡಾ ಅಸ್ತಿತ್ವದಲ್ಲಿದೆ. ಈ ರೀತಿ ಬುಡಕಟ್ಟು ಪ್ರದೇಶವೊಂದರಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರತ್ಯೇಕತಾವಾದಿಗಳು ನೆಲೆಯೂರಲು ಸಿಪಿಐಎಂ ಪಾತ್ರ ಇಲ್ಲವೇ ಇಲ್ಲ ಎಂದರೆ ಸುಳ್ಳಾಗುತ್ತದೆ.

 

ತ್ರಿಪುರಾದಲ್ಲಿರುವ ಬಹುತೇಕ ಬುಡಕಟ್ಟು ಸಮುದಾಯಗಳು ತಕರ್ಜಾಲದಲ್ಲಿ ಕಾಣಸಿಗುತ್ತಾರೆ. ದೆಬ್ಬರ್ಮಾ, ಜೊಮಾಟಿಯಾ, ಮಲ್ಸಾಮ್, ಕೈಪಂಗ್, ಮೊರಾಂಕಲ್, ರೂಪಾನಿ, ರಿಯಾಂಗ್, ಗಾರೋ, ಮುಂಡಾ, ಕೊಲಾಯ್, ರುವಾಟಿಯಾ ಬುಡಕಟ್ಟು ಸಮುದಾಯಗಳು ಇವೆ. ಈ ಎಲ್ಲಾ ಬುಡಕಟ್ಟು ಸಮುದಾಯದ ಮಧ್ಯೆ ಕೇಡರ್ ಬೇಸ್ಡ್ ಪೊಲಿಟಿಕ್ಸ್ ಮಾಡಿಕೊಂಡಿದ್ದ ಸಿಪಿಐಎಂ ಇತ್ತಿಚ್ಚಿನ ವರ್ಷಗಳಲ್ಲಿ ಈ ಬುಡಕಟ್ಟು ಗ್ರಾಮಗಳನ್ನು ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪಗಳು ಇದೆ. ಹೆಚ್ಚಿನ ಬುಡಕಟ್ಟು ಹಾಡಿಗಳನ್ನು ನೋಡಿದಾಗ ಅದು ಡಾಳಾಗಿ ಕಾಣಿಸುತ್ತದೆ. ಶೌಚಾಲಯವೂ ಇಲ್ಲದ, ರಸ್ತೆಯೂ ಇಲ್ಲದ, ನೀರಿನ ಸಂಪರ್ಕವೂ ಇಲ್ಲದ ಬುಡಕಟ್ಟು ಕಾಲನಿಗಳೇ ಬಹುತೇಕ ಇವೆ. ನಮ್ಮನ್ನು ಸರಕಾರಗಳು ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಧೋರಣೆ ಬರಲು ಇದು ಕಾರಣವಾಗಿದೆ.

 

 “ನಾನೂ ಹಿಂದೆ ಸಿಪಿಐಎಂ ಜೊತೆ ಇದೆ. ಮೂವತ್ತು ವರ್ಷಗಳಿಂದ ಸರಕಾರ ನಮಗಾಗಿ ಏನೇನೂ ಮಾಡಿಲ್ಲ. ನಮಗೆ ಸಿಪಿಐಎಂ ಕಲಿಸಿಕೊಟ್ಟ ಸಂಘರ್ಷದ ಮಾರ್ಗವನ್ನು ಸಿಪಿಐಎಂ ವಿರುದ್ದವೇ ಮಾಡಬೇಕಿದೆ” ಎನ್ನುತ್ತಾನೆ ಪ್ರಮೀಸ್ ದೆಬ್ಬರ್ಮಾ.
ತಕರ್ಜಾಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕತಾವಾದಿ ಐಪಿಎಫ್ ಟಿಯ ರಾಜ್ಯಾಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ ಸ್ಪರ್ಧೆ ಮಾಡುತ್ತಿದ್ದಾರೆ. ಆದ್ದರಿಂದ ಇದು ತ್ರಿಪುರಾ ಪ್ರತ್ಯೇಕತಾವಾದಿಗಳಿಗೆ ಪ್ರತಿಷ್ಟೆ ಮತ್ತು ಅಸ್ತಿತ್ವದ ಪ್ರಶ್ನೆ. ಇಲ್ಲಿ ನಿರಂತರವಾಗಿ ಗೆದ್ದು ಬರುತ್ತಿದ್ದ ಸಿಪಿಐಎಂನ ಹಾಲಿ ಶಾಸಕ ನಿರಂಜನ ದೆಬ್ಬರ್ಮಾಗೆ ಈ ಬಾರಿ ಸಿಪಿಐಎಂ ಟಿಕೆಟ್ ನೀಡಿಲ್ಲ. ನಿರಂಜನ್ ದೆಬ್ಬರ್ಮಾರ ಕಳಪೆ ಸಾಧನೆ, ಬುಡಕಟ್ಟುಗಳ ಮದ್ಯೆ ಸಂಘಟನೆ ಮಾಡದಿರುವುದು, ಬುಡಕಟ್ಟುಗಳ ಅಭಿವೃದ್ದಿಗೆ ಒತ್ತು ನೀಡದಿರುವುದು ನಿರಂಜನ್ ದೆಬ್ಬರ್ಮಾಗೆ ಟಿಕೆಟ್ ನಿರಾಕರಿಸಲು ಕಾರಣಗಳು. ಈ ಬಾರಿ ಸಿಪಿಐಎಂ ನಿಂದ ರಮೀಂದ್ರ ದೆಬ್ಬರ್ಮಾ ಸ್ಪರ್ಧೆ ನಡೆಸುತ್ತಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಾಂಗ್ರೆಸ್ ನಿಂದ ಸ್ಯಾಮ್ಸಂಗ್ ದೆಬ್ಬರ್ಮಾ, ಐಎನ್ ಪಿಟಿಯಿಂದ ಓಮಿಯಾ ಕುಮಾರ್ ದೆಬ್ಬರ್ಮಾ, ಟಿಎಸ್ ಪಿಯಿಂದ ಚಿತ್ತರಂಜನ್ ದೆಬ್ಬರ್ಮಾ ಕಣದಲ್ಲಿದ್ದಾರೆ. ಪ್ರತ್ಯೇಕತಾವಾದಿಗಳೇ ಆಗಿರುವ ಐಎನ್ ಪಿಟಿ ಮತ್ತು ಟಿಎಸ್ ಪಿ ಬುಡಕಟ್ಟುಗಳ ಮತ ಸೆಳೆದಷ್ಟೂ ಆಡಳಿತರೂಢ ಸಿಪಿಐಎಂಗೆ ಲಾಭವಾಗಲಿದೆ. ಇಲ್ಲದೇ ಇದ್ದಲ್ಲಿ ತಕರ್ಜಾಲದಲ್ಲಿ ಐಪಿಎಫ್ ಟಿ ರಾಜ್ಯಾಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ ಸುಲಭದಲ್ಲಿ ಗೆಲುವು ಸಾಧಿಸಲಿದ್ದಾರೆ.
ತಿಪುರಾದಲ್ಲಿ ತಕರ್ಜಾಲವೇ ಪ್ರತಿಷ್ಟೆಯ ಕಣವಾಗಿದೆ. ಇಡೀ ತ್ರಿಪುರಾದ ರಾಜಕೀಯ ಚಿತ್ರಣವನ್ನು ತಕರ್ಜಾಲ ನೀಡುತ್ತದೆ. ತ್ರಿಪುರಾದಲ್ಲಿ ಎದ್ದ ಪ್ರತ್ಯೇಕತಾವಾದಿಗಳ ಕೂಗು, ಸರಕಾರದ ಸ್ಪಂದನೆ, AFSPA ಕಾಯ್ದೆ, ಅಟಾನಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್ ನ ಕಾರ್ಯವೈಖರಿ ಮತ್ತು ಇವೆಲ್ಲದರ ಪರಿಣಾಮದ ಇಂದಿನ ತ್ರಿಪುರಾದ ಬದಲಾದ ರಾಜಕಾರಣವನ್ನು ಇದೊಂದೇ ಕ್ಷೇತ್ರದಲ್ಲಿ ನೋಡಿಬಿಡಬಹುದು.
ನಾವು ತಕರ್ಜಾಲ ವಿಧಾನಸಭಾ ಕ್ಷೇತ್ರದ ನಬಚಂದ್ರಪರ ಬುಡಕಟ್ಟು ಗ್ರಾಮಕ್ಕೆ ತೆರಳಿದೆವು. ಅಲ್ಲಿ ಫೆಬ್ರವರಿ 11 ರ ರವಿವಾರ ಸಿಪಿಐಎಂ ರ‌್ಯಾಲಿ ಆಯೋಜಿಸಿತ್ತು. ಬೂತ್ ಕಚೇರಿಯಿಂದ ಇನ್ನೇನು ರ‌್ಯಾಲಿ ಹೊರಡಬೇಕು ಅನ್ನುವಷ್ಟರಲ್ಲಿ ಕಲ್ಲು, ದೊಣ್ಣೆಗಳಿಂದ ಸಿಪಿಐಎಂ ಕಚೇರಿ ಮೇಲೆ ಐಪಿಎಫ್ ಟಿ ಕಾರ್ಯಕರ್ತರು ದಾಳಿ ನಡೆಸಿದರು. ನಾಲ್ಕು ಜನ ಸಿಪಿಐಎಂ ಕಾರ್ಯಕರ್ತರಿಗೆ ಗಾಯಗಳಾದವು. ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಐಪಿಎಫ್ ಟಿ ಕಾರ್ಯಕರ್ತರಿಗೂ ಗಾಯಗಳಾದವು.
ಸಿಪಿಐಎಂ ಕಚೇರಿಯ ಮೇಲೆ ದಾಳಿ ನಡೆಸಿದ ಐಪಿಎಫ್ ಟಿ ತಂಡದ ಪ್ರಮುಖನಾಗಿದ್ದ ಅರಬಿಂದೋ ದೆಬ್ಬರ್ಮಾರನ್ನು ಮಾತನಾಡಿಸಿದ್ವಿ. “ಇನ್ನೂ ಎಷ್ಟು ದಿನ ಅಂತ ನೋಡೋದು ? ದಾಳಿ ಮಾಡಿದ್ವಿ. ಇನ್ನೂ ಮಾಡ್ತೀವಿ. ಇನ್ನು  ಸುಮ್ಮನಿರೋಕೆ ಆಗಲ್ಲ” ಎಂದರು.

 

“ಸಿಪಿಐಎಂ ಅಭ್ಯರ್ಥಿಯೇ ನೇರವಾಗಿ ನಮ್ಮ ಐಪಿಎಫ್ ಟಿ ಕಚೇರಿ ಎದುರು ಬಂದು ಕಾರು ನಿಲ್ಲಿಸಿದ್ರು. ಕಾರಿನಿಂದ ಇಳಿದ ಸಿಪಿಐಎಂ ಕಾರ್ಯಕರ್ತರು ನೇರ ಕಚೇರಿಗೆ ನುಗ್ಗಿದ್ರು. ಕಚೇರಿಯಿಂದ ನಾವು ಹೊರಬರಲೂ ಸಾಧ್ಯವಾಗಲಿಲ್ಲ. ಇನ್ನಷ್ಟೂ ಜನ ಬಂದು ಐಪಿಎಫ್ ಟಿ ಕಚೇರಿ ದ್ವಂಸ ಮಾಡಿದ್ರು. ನಮ್ಮ ಕಚೇರಿ ದ್ವಂಸವಾದ ಬಳಿಕವಷ್ಟೇ ನಾವು ಸಿಪಿಐಎಂ ಕಚೇರಿಗೆ ದಾಳಿ ಮಾಡಿದ್ವಿ” ಎನ್ನುತ್ತಾರೆ ಶೊಮಂತೊ ದೆಬ್ಬರ್ಮಾ. ಪ್ರತ್ಯೇಕತಾವಾದಿ ಐಪಿಎಫ್ ಟಿ ಯಾವ ಪ್ರಚೋದನೆಯೂ ಇಲ್ಲದೆ ನಮ್ಮ‌ ಮೇಲೆ ದಾಳಿ ನಡೆಸಿತು. ಈ ಹಿಂದಿನಿಂದಲೂ ಉಗ್ರವಾದಿ ಚಟುವಟಿಕೆ ನಡೆಸುತ್ತಿರುವ ಐಪಿಎಫ್ ಟಿ ಗೆ ಈ ಬಾರಿ ಸಿಪಿಐಎಂ ಮೇಲೆ ದಾಳಿ ನಡೆಸಲೆಂದೇ ಬಿಜೆಪಿಯಿಂದ ಹಣ ಹರಿದು ಬಂದಿದೆ ಎನ್ನುತ್ತಾರೆ ಸ್ಥಳೀಯ ಸಿಪಿಐಎಂನ  ಧೀರೆಂದ್ರ ದೆಬ್ಬಾರ್ಮಾ.

 

ಐಪಿಎಫ್ ಟಿ ಪಕ್ಷವು ಬಿಜೆಪಿಯ ಮೈತ್ರಿಯೊಂದಿಗೆ 9 ಎಸ್ ಟಿ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐಎನ್ ಪಿಟಿ ಪಕ್ಷವು ಕಾಂಗ್ರೆಸ್ ಮೈತ್ರಿಯಲ್ಲಿ ಸ್ಪರ್ಧೆ ನಡೆಸಿತ್ತು. ಈ ಬಾರಿ ಐಪಿಎಫ್ ಟಿ ಪಕ್ಷದ ಮೂಲಕ ತ್ರಿಪುರಾದ ಕಾಡಿನ  ಗ್ರಾಮಗಳಿಗೆ ಬಿಜೆಪಿ ಪ್ರವೇಶ ಮಾಡಿದೆ. ತ್ರಿಪುರಾದ ಬುಡಕಟ್ಟು ಮಕ್ಕಳು ಮೋದಿ ಮುಖವಾಡ ಧರಿಸಿ ಆಟವಾಡುವ ದೃಶ್ಯಗಳು ಗುಡ್ಡಗಾಡು ಬುಡಕಟ್ಟು ಕಾಲನಿಯಲ್ಲಿ ಕಾಣಸಿಗುತ್ತಿದೆ. ಇದು ಭವಿಷ್ಯದ ತ್ರಿಪುರಾದ ಸೂಚನೆಯೇ ಎಂಬ ಪ್ರಶ್ನೆಗಳು ಮೂಡುತ್ತವೆ.

 

(ಪತ್ರಕರ್ತ ನವೀನ್ ಸೂರಿಂಜೆ ಗೆಳೆಯರೊಂದಿಗೆ ಚುನಾವಣೆ ಸಮಯದಲ್ಲಿರುವ ತ್ರಿಪುರ ಪ್ರವಾಸದಲ್ಲಿದ್ದಾರೆ.)

ಬಿಲ್ಲವರ ರಾಮಮಂದಿರ, ಧರ್ಮ ಸಂಸತ್ತು ಮತ್ತು ಧರ್ಮಸ್ಥಳ

Naveen Soorinje


ನವೀನ್ ಸೂರಿಂಜೆ


ಉಡುಪಿಯಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಧರ್ಮ ಸಂಸತ್ತು ನಡೆಯುತ್ತಿದೆ. ನವೆಂಬರ್ 24, 25, 26 ರಂದು ಮೂರು ದಿನಗಳ ಕಾಲ ಹಿಂದೂ ಧರ್ಮದ ಕುರಿತು ಕಾಲಕ್ಷೇಪ ನಡೆಯಲಿದೆ. ಈ ಧರ್ಮಸಂಸತ್ತಿನಲ್ಲಿ ರಾಮ ಮಂದಿರದ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ವಿಹಿಂಪ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಾಯ್ ತೊಗಾಡಿಯಾ ಈಗಾಗಲೇ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ರಾಮ ಮಂದಿರದ ಗೋಷ್ಠಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.

ಉತ್ತರ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೂ ಉಡುಪಿಗೂ ಸಂಬಂಧವೇ ಇಲ್ಲ. ಬಾಬರಿ ಮಸೀದಿ ಕೆಡವುದರ ಭಾಗವಾಗುವುದರ ಮೂಲಕ ರಾಮಮಂದಿರ ಪ್ರಕರಣದಲ್ಲಿ ಸಂಬಂಧ ಬೆಳೆಸಿದ್ದಾರಷ್ಟೆ. ಅದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರಿಗೂ ರಾಮ ಮಂದಿರಕ್ಕೂ ನೇರ ಸಂಬಂಧವಿದೆ. ಬಿಲ್ಲವರಿಗೆ ಮಾತ್ರವಲ್ಲ ಕರ್ನಾಟಕದ ಅಷ್ಟೂ ಬಿಲ್ಲವ ಜಾತಿಗಳು, ಉಪಜಾತಿಗಳಿಗೂ ರಾಮ ಮಂದಿರ ಮತ್ತು ಧರ್ಮ ಸಂಸತ್ತಿನ ಸಂಬಂಧವಿದೆ.

ರಾಮ ಮಂದಿರಕ್ಕಾಗಿನ ಧರ್ಮ ಸಂಸತ್ತನನ್ನು ವಿರೋಧಿಸುವುದರ ಮೂಲಕ ಬಿಲ್ಲವರು, ಈಡಿಗರು ತಮ್ಮ ಸ್ವಾಭಿಮಾನದ ರಾಮ ಮಂದಿರವನ್ನು ಮುನ್ನಲೆಗೆ ತರಬೇಕಿದೆ. ಹೊಸ ತಲೆಮಾರಿನ ಬಿಲ್ಲವ ಯುವಕರಿಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ.

ಈ ಧರ್ಮ ಸಂಸತ್ತಿನ ರೂವಾರಿ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳಾಗಿದ್ದರೆ ಆಕ್ಷೇಪವಿರಲಿಲ್ಲ. ಅವರು ಅದನ್ನು ಮಾಡಿಕೊಂಡೇ ಬಂದಿದ್ದಾರೆ. ಪೇಜಾವರ ಸ್ವಾಮೀಜಿ ಜೊತೆಗೆ ಮುಂಡಾಸುದಾರಿ ಧಾರ್ಮಿಕ ವ್ಯಕ್ತಿ ಕೂಡಾ ಧರ್ಮ ಸಂಸತ್ತಿನ ರುವಾರಿಯಾಗಿದ್ದಾರೆ. ಇದು ಬಿಲ್ಲವರ ಆತ್ಮಾಭಿಮಾನವನ್ನು ಜಾಗೃತಗೊಳಿಸಬೇಕಿದೆ.

ಅದು 1989 ನೇ ಇಸವಿ. ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿ ಚಿಕ್ಕದಾದ ನಿತ್ಯಾನಂದ ಮಂದಿರವೊಂದನ್ನು ಪ್ರಾರಂಭಿಸುತ್ತಾರೆ. ನಾರಾಯಣ ಗುರುಗಳ ಪರಮ ಭಕ್ತರಾಗಿರುವ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ಕೇರಳದ ಶಿವಗಿರಿಯಲ್ಲಿ ಆಧ್ಯಾತ್ಮಿಕ ಪಾಂಡಿತ್ಯವನ್ನು ಪಡೆದಿದ್ದರು. ಆಗಷ್ಟೇ ಭೂಸುಧಾರಣೆಯ ಲಾಭವನ್ನು ಪಡೆಯುತ್ತಿದ್ದ ಬಿಲ್ಲವರಲ್ಲಿ ಶಿಕ್ಷಣ, ಉದ್ಯೋಗ, ಸಂಘಟನೆಯ ಜಾಗೃತಿಯನ್ನು ತನ್ನ ಪುಟ್ಟ ಆಶ್ರಮದ ಮೂಲಕ ಮಾಡುತ್ತಿದ್ದರು.

ಬಿಲ್ಲವರು ಬ್ರಾಹ್ಮಣರ ದೇವಸ್ಥಾನಗಳಿಗೆ ನಡೆದುಕೊಳ್ಳುವುದನ್ನು ಗಮನಿಸಿದ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು 2003 ರಲ್ಲಿ ಕನ್ಯಾಡಿಯಲ್ಲಿ ಬೃಹತ್ ರಾಮ ಮಂದಿರ ಕಟ್ಟಲು ಯೋಜನೆ ಸಿದ್ದಪಡಿಸುತ್ತಾರೆ. ಈ ರಾಮ ಮಂದಿರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಿಂದ ಕೇವಲ ನಾಲ್ಕು ಕಿಮಿ ದೂರದಲ್ಲಿರುತ್ತದೆ.

ಯಾವಾಗ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ವೈಭವಪೋತ ರಾಮಮಂದಿರವನ್ನು ನಿರ್ಮಿಸಲು ಯೋಜನೆ ಸಿದ್ದಪಡಿಸಿದ್ದಾರೆ ಎಂದು ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿಗೆ ತಿಳಿಯುತ್ತದೋ ಅಲ್ಲಿಂದ ಇನ್ನಿಲ್ಲದ ಅಡ್ಡಿಗಳು ಪ್ರಾರಂಭವಾಗುತ್ತವೆ. ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿ ಬಿಲ್ಲವರ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ತಿಳಿದ ಬಿಲ್ಲವ ಸಮಾಜದ ಪ್ರಮುಖರು, ಜನಾರ್ಧನ ಪೂಜಾರಿ, ವಸಂತ ಬಂಗೇರರಂತಹ ರಾಜಕಾರಣಿಗಳು ಸ್ವಾಮೀಜಿ ಜೊತೆ ನಿಲ್ಲುತ್ತಾರೆ.

ಯಾವಾಗ ಆತ್ಮಾನಂದ ಸರಸ್ವತಿ ಸ್ವಾಮೀಜಿಯ ರಾಮ ಮಂದಿರದ ಜೊತೆ ಜನಾರ್ಧನ ಪೂಜಾರಿಯಂತಹ ರಾಜಕಾರಣಿಗಳು ನಿಂತರೋ ಆಗ ಈ ಮುಂಡಾಸುಧಾರಿಗೆ ಆತ್ಮನಂದ ಸ್ವಾಮಿಯನ್ನು ದೈಹಿಕವಾಗಿ ಅಶಕ್ತನನ್ನಾಗಿಸುವುದು ಒಂದೇ ದಾರಿಯಾಗಿ ಉಳಿದಿತ್ತು. ಇಲ್ಲದೇ ಇದ್ದರೆ ತನ್ನ ಪ್ರತಿಷ್ಠಿತ, ಪ್ರಖ್ಯಾತ ದೇವಸ್ಥಾನದ ಆದಾಯಕ್ಕೆ ಬಿಲ್ಲವರ ರಾಮ ಮಂದಿರ ಅಡ್ಡಿಯಾಗುತ್ತಿತ್ತು. ಈ ಕಾರಣಕ್ಕಾಗಿ ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿ ಅಕ್ಷರಶ ಆತ್ಮಾನಂದ ಸರಸ್ವತಿ ಮೇಲೆ ದಾಳಿ ಮಾಡಿಸಿದರು. ಎಲ್ಲಾ ದಾಳಿಗಳ ಹೊರತಾಗಿಯೂ ಆತ್ಮಾನಂದ ಸರಸ್ವತಿ ಸ್ವಾಮೀಜಿ ದೃತಿಗೆಡಲಿಲ್ಲ. 2003 ರಲ್ಲಿ ಭವ್ಯವಾದ ಕನ್ಯಾಡಿ ರಾಮ ಮಂದಿರ ನಿರ್ಮಾಣವಾಯ್ತು. ಈಗಲೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಹೋಗುವ ದಾರಿಯಲ್ಲಿ ಸುಂದರವಾದ ಬಿಲ್ಲವರ ರಾಮ ಮಂದಿರ ಸಿಗುತ್ತದೆ.

ಇಂತಹ ಸಾಧಕ ಆತ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ಬಿಲ್ಲವರು, ಈಡಿಗರ 24 ಉಪಜಾತಿಗಳು ಕುಲಗುರುವಾಗಿ ಒಪ್ಪಿಕೊಳ್ಳುತ್ತದೆ. ಕನ್ನಡ ಕುಲಕೋಟಿ ಗೌರವಿಸುವ, ಕನ್ನಡದ ಮತ್ತೊಂದು ಹೆಸರು ಎಂದು ಬಣ್ಣಿಸಲಾಗುವ ವರನಟ ಡಾ ರಾಜ್ ಕುಮಾರ್ ಕೂಡಾ ಆತ್ಮಾನಂದ ಸರಸ್ವತಿ ಸ್ವಾಮೀಜಿ ಶಿಷ್ಯರಾಗಿದ್ದರು. ಡಾ ರಾಜ್ ಕುಮಾರ್ ಈ ರಾಮಮಂದಿರಕ್ಕೆ ಅಪಾರವಾದ ಕೊಡುಗೆಗಳನ್ನೂ ಕೊಟ್ಟಿದ್ದಾರೆ.

ಬಿಲ್ಲವರ ಸ್ವಾಭಿಮಾನದ ಪ್ರತೀಕವಾಗಿರುವ ಕನ್ಯಾಡಿ ರಾಮ ಮಂದಿರ ಸ್ಥಾಪನೆಗೆ ಅಡ್ಡಿಯಾಗಿದ್ದ, ಬಿಲ್ಲವರ ಗುರುವೊತ್ತಮ ಆತ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ಬದುಕಿನುದ್ದಕ್ಕೂ ಇನ್ನಿಲ್ಲದಂತೆ ಕಾಡಿದ ವ್ಯಕ್ತಿಯ ನೇತೃತ್ವದಲ್ಲಿ ಉತ್ತರ ಪ್ರದೇಶದ ರಾಮಮಂದಿರಕ್ಕಾಗಿ ಉಡುಪಿಯಲ್ಲಿ ಧರ್ಮ ಸಂಸತ್ತು ನಡೆಯುತ್ತಿದೆ. ಉಡುಪಿ ಮಂಗಳೂರು ಬಿಲ್ಲವರು ಬಹುಸಂಖ್ಯಾತರಾಗಿರೋ ನಾಡು. ಧರ್ಮಸಂಸತ್ತಿನ ಬಹುತೇಕ ಸ್ವಯಂ ಸೇವಕರೂ ಬಿಲ್ಲವರೇ. 2003 ರಿಂದ 2017 ಬಹಳ ದೀರ್ಘ ಸಮಯವಲ್ಲ. ಶೋಷಿತ ಬಿಲ್ಲವ ಸಮುದಾಯವೊಂದು ಅಷ್ಟು ಬೇಗ ಇತಿಹಾಸವನ್ನು ಮರೆಯುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ.

ಕಮ್ಯುನಿಷ್ಟರು, ಮದರ್ ತೆರೆಸಾ, ಕ್ರಿಶ್ಚಿಯನ್ನರು ಮತ್ತು ಪ್ರತಿಕ್ರಿಯಾತ್ಮಕ ಕೋಮುವಾದ

Naveen Soorinje


ನವೀನ್ ಸೂರಿಂಜೆ


ಆರ್.ಎಸ್.ಎಸ್ ಮತ್ತು ಪಿ.ಎಫ್.ಐ ಚರ್ಚೆಯ ವೇಳೆ ಹಲವು ಚಿಂತಕರು ಒಂದು ಸಾಮಾನ್ಯ ವಾದವನ್ನು ಮುಂದಿಡುತ್ತಾರೆ. ಪಿ.ಎಫ್.ಐ ಮತ್ತು ಆರ್.ಎಸ್.ಎಸ್ ಅನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ; ಪಿ.ಎಫ್.ಐ ನ ಕೋಮುವಾದ ಕ್ರಿಯೆಗೆ ಪ್ರತಿಕ್ರಿಯೆಯಷ್ಟೇ ಎನ್ನುವುದು. ಇದೇ ಚರ್ಚೆಯನ್ನು ಮುಂದುವರೆಸಿದಲ್ಲಿ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಹಾಗಾದರೆ ಕ್ರಿಶ್ಚಿಯನ್ ಸಮುದಾಯದಲ್ಲಿ ಯಾಕೆ ಆರ್.ಎಸ್.ಎಸ್ ಗೆ ಪ್ರತಿಕ್ರಿಯೆಯಾಗಿ ಪಿ.ಎಫ್.ಐ ರೀತಿಯ ಪ್ರತಿಕ್ರಿಯಾತ್ಮಕ ಸಂಘಟನೆಗಳು ಬೆಳೆದಿಲ್ಲ?

ಹಲವರಿಗೆ ತಿಳಿದಿರಲಿಕ್ಕಿಲ್ಲ. ಆರ್.ಎಸ್.ಎಸ್, ಪಿ.ಎಫ್.ಐ ರೀತಿಯಲ್ಲಿ ಕ್ರಿಶ್ಚಿಯನ್ನರಲ್ಲೂ ಒಂದು ಪ್ರತಿಗಾಮಿ, ಪ್ರತಿಕ್ರಿಯಾತ್ಮಕ ಸಂಘಟನೆ ಹುಟ್ಟಿಕೊಂಡಿತ್ತು. ಅದರ ಹೆಸರು ಸ್ಯಾಕ್ ! ಮಂಗಳೂರಿನಲ್ಲಿ ಚರ್ಚ್ ಗಳ ಮೇಲೆ ಭಜರಂಗದಳ ದಾಳಿ ಮಾಡಿದ ಸಂಧರ್ಭದಲ್ಲಿ ಈ ಸ್ಯಾಕ್ ಸಂಘಟನೆ ಸ್ವಲ್ಪ ಸದ್ದು ಮಾಡಿತ್ತು. ಆಗ ನೈತಿಕ ಪೊಲೀಸ್ ಗಿರಿಯೂ ಸುದ್ದಿಯಲ್ಲಿತ್ತು. ಹಿಂದೂ ಹುಡುಗಿಯರು ಮುಸ್ಲಿಂ ಯುವಕನ ಜೊತೆ ಇದ್ದರೆ ಭಜರಂಗದಳದ ದಾಳಿ, ಮುಸ್ಲಿಂ ಹುಡುಗಿ ಹಿಂದೂ ಹುಡುಗನ ಜೊತೆ ಇದ್ದರೆ ಪಿ.ಎಫ್.ಐ ದಾಳಿಗಳು ವ್ಯಾಪಕವಾಗಿ ನಡೆಯುತ್ತಿದ್ದವು. ಆಗ ಕ್ರಿಶ್ಚಿಯನ್ ಹುಡುಗಿಯರು ಹಿಂದೂ ಮುಸ್ಲಿಂ ಸಮುದಾಯದ ಹುಡುಗರ ಜೊತೆ ಇದ್ದರೆ ನಾವು ಸಹಿಸೋದಿಲ್ಲ ಎಂದು ಸ್ಯಾಕ್ ಹೇಳಿಕೊಂಡಿತ್ತು.

ಇವತ್ತು ಆರ್.ಎಸ್.ಎಸ್ ಅನ್ನು ನಿಷೇಧ ಮಾಡಬೇಕೆಂದು ಪಿ.ಎಫ್.ಐ ಆಗ್ರಹಿಸಿದರೆ, ಪಿ.ಎಫ್.ಐ ಅನ್ನು ನಿಷೇದಿಸಬೇಕು ಎಂದು ಆರ್.ಎಸ್.ಎಸ್ ಆಗ್ರಹಿಸುತ್ತಿದೆ. ಈ ಎರಡೂ ಸಂಘಟನೆಗಳು ನಿಯಂತ್ರಣಕ್ಕೆ ಅರ್ಹವಾಗಿವೆ ಎಂದು ಪ್ರಗತಿಪರರ ವಾದವಾಗಿರುವಂತದ್ದು. ಆದರೆ ಸ್ಯಾಕ್ ಅನ್ನು ನಿಷೇದಿಸಬೇಕು ಎಂದು ಯಾರೂ ಆಗ್ರಹಿಸುವ ಪ್ರಮೇಯವೇ ಬಂದಿಲ್ಲ. ಅದಕ್ಕೆ ಕಾರಣ ಕ್ರಿಶ್ಚಿಯನ್ ಸಮುದಾಯದಲ್ಲಿ ಸಹಜವಾಗಿಯೇ ಇರುವ ಆಧುನಿಕತೆ, ಶಿಸ್ತು, ಸ್ವನಿಯಂತ್ರಣ ಮತ್ತು ಮಾನವಪ್ರೇಮ. ಅಂತಹ ಅದಮ್ಯ ಜೀವಪ್ರೇಮ ಮತ್ತು ಶಿಸ್ತಿಗೆ ಕಾರಣ ಅಲ್ಲಿ ಆಗಿಹೋಗಿರುವ ಮದರ್ ತೆರೇಸಾರಂತಹ ಅಸಂಖ್ಯ ಅಸಂಖ್ಯ ಮಾನವ ಪ್ರೇಮಿಗಳು.

ಕಲ್ಲಡ್ಕ ಪ್ರಭಾಕರ ಭಟ್ಟ ಜಗದೀಶ ಕಾರಂತ ಸೇರಿದಂತೆ ಯಾವುದೇ ಹಿಂದುತ್ವವಾದಿಗಳ ಭಾಷಣ ಕೇಳಿದಲ್ಲಿ ಅಲ್ಲೊಂದು ವಾಕ್ಯ ಬರುತ್ತದೆ. ಮುಸ್ಲೀಮರ ರೀಚಾರ್ಜ್ ಅಂಗಡಿಯಲ್ಲಿ ಮೊಬೈಲ್ ರೀಚಾರ್ಜ್ ಮಾಡಬೇಡಿ, ಹಿಂದೂಗಳ ಗೂಡಂಗಡಿಯಲ್ಲಿ ಮುಸ್ಲೀಮರನ್ನು ಹೆಚ್ಚು ಹೊತ್ತು ನಿಲ್ಲಿಸಬೇಡಿ ಎಂಬ ಕ್ಷುಲ್ಲಕ ಮಾತುಗಳು ಸಾಮಾನ್ಯ. ಆದರೆ ಚರ್ಚ್ ದಾಳಿಯ ಸಂಧರ್ಭದಲ್ಲಿ ಇಳಿ ವಯಸ್ಸಿನ ಸನ್ಯಾಸಿನಿಯರ ಮೇಲೆ ಬಾಸುಂಡೆ ಬರುವಂತೆ ಬಾರಿಸಿದರೂ ಅನಾಥಾಲಯಗಳಲ್ಲಿ ಹಿಂದೂಗಳ ಸೇವೆ ಮಾಡಬೇಡಿ, ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಬೇಡಿ, ಬುದ್ದಿಮಾಂದ್ಯ ಹಿಂದೂ ಮಕ್ಕಳಿಗೆ ಉಚಿತ ವಿದ್ಯಾಬ್ಯಾಸ ಕೊಡಬೇಡಿ ಎಂಬ ಮಾತುಗಳು ಎಲ್ಲೂ ಕೇಳಿಬರಲಿಲ್ಲ. ಇಂತಹ ಸೇವಾ ಮನೋಭಾವವೇ ಆ ಸಮುದಾಯವನ್ನು ಹಲವು ಸಂಕಟಗಳಿಂದ ಪಾರುಮಾಡಿದೆ.

ಚರ್ಚ್ ಗಳ ಮೇಲೆ ದಾಳಿ ನಡೆದಾಗ ಬೆರಳೆಣಿಕೆಯ ಹುಡುಗರು ಕಲ್ಲು ತೂರಾಟ ನಡೆಸಿದ್ದು ಬಿಟ್ಟರೆ ಕ್ರಿಶ್ಚಿಯನ್ನರು ಪ್ರತಿದಾಳಿಗಿಳಿಯಲಿಲ್ಲ. ದಾಳಿಗೊಳಗಾದ ಚರ್ಚ್ ಗಳ ಜಾಗದಲ್ಲಿ ಬೇರೆ ಧರ್ಮದ ಧಾರ್ಮಿಕ ಕೇಂದ್ರಗಳನ್ನು ಕಲ್ಪಿಸಿಕೊಂಡರೆ ದಕ್ಷಿಣ ಕನ್ನಡದ ಸ್ಥಿತಿ ಊಹಿಸಲೂ ಅಸಾದ್ಯವಾಗಿರುತಿತ್ತು. ಅಲ್ಲಿವರೆಗೂ ಬೀದಿಗಿಳಿಯದ ಕ್ರಿಶ್ಚಿಯನ್ನರು ಮೊದಲ ಬಾರಿಗೆ ಆಕ್ರೋಶಭರಿತರಾಗಿ ಬೀದಿಗಿಳಿದಿದ್ದರು. ಕೆಲವರು ಕಲ್ಲು ತೂರಾಟ ನಡೆಸಿದ್ದರೂ ಯಾವುದೇ ಚರ್ಚ್ ನ ಮುಖ್ಯಸ್ಥರು ಅದನ್ನು ಬೆಂಬಲಿಸಲಿಲ್ಲ ಮತ್ತು ಮುಂದುವರಿಸಲು ಬಿಡಲಿಲ್ಲ.

ಅವತ್ತು ಚರ್ಚ್ ದಾಳಿ ಸಂಬಂಧ ಬಿಷಪ್ ಅಲೋಶಿಯಸ್ ಪ್ಲಾವ್ ಡಿಸೋಜಾ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಅಷ್ಟರಲ್ಲಿ ಬಿಜೈ ಚರ್ಚ್ ನೊಳಗೆ ಪೊಲೀಸರು ನುಗ್ಗುತ್ತಿದ್ದಾರೆ ಎಂಬ ಮಾಹಿತಿ ಬಂತು. ತಕ್ಷಣ ಬೈಕನ್ನೇರಿ ಹೊರಟೆ. ಮಾಜಿ ಸಚಿವ ನಾಗರಾಜ ಶೆಟ್ಟರ ಮನೆ ದಾಟುತ್ತಿದ್ದಂತೆ ಚರ್ಚ್ ಬಳಿಯ ಸ್ಮಶಾನದಲ್ಲಿ ಒಂದು ಗುಂಪು ಕಲ್ಲು ತೂರಾಟ ನಡೆಸಲಾರಂಬಿಸಿತ್ತು. ಕಲ್ಲು ನೇರವಾಗಿ ನನ್ನ ಬೈಕ್ ಡೂಂಗೆ ಬಿದ್ದು ಡೂಮ್ ಪುಡಿಯಾಯ್ತು. ಇದರ ಮಾಹಿತಿ ತಿಳಿದ ಕಿರಿಯ ಫಾದರ್ ಒಬ್ಬರು ನನಗೆ ಕರೆ ಮಾಡಿ ಬೈಕ್ ಡ್ಯಾಮೇಜ್ ನ ಪರಿಹಾರ ಕೊಡುತ್ತೇನೆ ಎಂದಿದ್ದಲ್ಲದೆ ಯುವಕರ ಕೃತ್ಯಕ್ಕೆ ಕ್ಷಮೆ ಕೇಳಿದ್ದರು. “ಮೊದಲು ಕ್ರಿಶ್ಚಿಯನ್ ಯುವಕರಿಗೆ ಪ್ರತಿಭಟನೆಯನ್ನು ಕಲಿಸಬೇಕು. ಮೊದಲ ಬಾರಿ ಬೀದಿಗಿಳಿದಿರೋದ್ರಿಂದ ಹೀಗಾಗಿದೆ. ಸ್ವಲ್ಪ ಎಡಪಂಥೀಯರ ಜೊತೆ ನಿಮ್ಮ ಯುವಕರನ್ನು ಬೆರೆಸಿ” ಅಂದಿದ್ದೆ.

ಆ ನಂತರದ ಬೆಳವಣಿಗೆಯಲ್ಲಿ ಚರ್ಚ್ ದಾಳಿ ಸಂತ್ರಸ್ತರ ಜೊತೆ ನಿಂತಿದ್ದು ಎಡಪಂಥೀಯರು ಮಾತ್ರ. ಕ್ರಿಶ್ಚಿಯನ್ ಸಮುದಾಯವನ್ನು ಅಭದ್ರತೆಯಿಂದ ಹೊರತರುವ, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಆಗ್ರಹಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಮಾಡುವ ಜವಾಬ್ದಾರಿ ಎಡಪಂಥೀಯರದ್ದೇ ಆಗಿದೆ. ಈ ಸಂಧರ್ಭದಲ್ಲಿ ಕ್ರಿಶ್ಚಿಯನ್ನರ ಅತ್ಯುನ್ನತ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನುಡಿದ ‘ಕಮ್ಯುನಿಷ್ಟರು ಕ್ರಿಶ್ಚಿಯನ್ನರಂತೆಯೇ ಚಿಂತಿಸುತ್ತಾರೆ’ ಎಂಬ ಮಾತುಗಳು ಉಲ್ಲೇಖನೀಯ. ಈ ಹಿನ್ನಲೆಯಲ್ಲಿ  ಕ್ರಿಶ್ಚಿಯನ್ ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ನವಂಬರ್ ೬ ರಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಮದರ್ ತೆರೇಸಾ ವಿಚಾರ ವೇದಿಕೆ ಅಶ್ರಯದಲ್ಲಿ ನಡೆಯಲಿರುವ ಮದರ್ ತೆರೆಸಾ ನೆನಪಿನ ಕಾರ್ಯಕ್ರಮ ಹೆಚ್ಚು ಪ್ರಸ್ತುತತೆಯನ್ನು ಪಡೆದುಕೊಂಡಿದೆ.

ಮಂಗಳೂರಿನ ಚರ್ಚ್ ಗಳನ್ನು ದ್ವಂಸ ಮಾಡಿದ್ದನೇ ಟಿಪ್ಪು? ಇತಿಹಾಸ ಏನು ಹೇಳುತ್ತೆ?

Naveen Soorinje


ನವೀನ್ ಸೂರಿಂಜೆ


ಟಿಪ್ಪು ಕೊಡವರ ಹತ್ಯಾಕಾಂಡ ನಡೆಸಿರುವುದು ಸುಳ್ಳು ಎಂದು ಇತಿಹಾಸಕಾರರು ಹೇಳಿದ ನಂತರ ಇದೀಗ ಕರಾವಳಿ ಭಾಗದಲ್ಲಿ ಟಿಪ್ಪು ಕ್ರಿಶ್ಚಿಯನ್ನರ ಮರಣಹೋಮ ನಡೆಸಿದ್ದ ಎಂದು ಸುದ್ದಿ ಹರಿಬಿಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 27 ಚರ್ಚುಗಳನ್ನು ಕೆಡವಿದ್ದ ಎಂದು ಸುದ್ದಿ ಹಬ್ಬಿಸಲಾಗ್ತಿದೆ. 1750 ರಲ್ಲಿ ಜನಿಸಿದ ಟಿಪ್ಪು ಸುಲ್ತಾನ್ ಕರಾವಳಿಯಲ್ಲಿ 1784 ರಿಂದ 1799 ರವರೆಗೆ ಅಧಿಪತ್ಯವನ್ನು ಸ್ಥಾಪಿಸಿದ್ದ. ಈ ಸಂಧರ್ಭದಲ್ಲಿ ಕರಾವಳಿಯಲ್ಲಿ ಬ್ರಿಟೀಷರು ಹೆಚ್ಚು ಸಕ್ರೀಯಗೊಂಡಿದ್ದನ್ನು ಅರಿತಿದ್ದ. ಆ ಕಾರಣಕ್ಕಾಗಿ ಬ್ರಿಟೀಷರ ಪ್ರಾರ್ಥನಾ ಮಂದಿರಗಳ ಬಗ್ಗೆ ಒಂದು ರೀತಿಯ ಸಂಶಯದ ಗಮನವನ್ನು ಇಡುವುದು ಆಗಿನ ರಾಜನೀತಿಯಾಗಿತ್ತು. ಆದರೆ 27 ಚರ್ಚುಗಳನ್ನು ಕೆಡವಿದ್ದ ಎಂಬುದು ಸುಳ್ಳು ಇತಿಹಾಸ. ಅದಕ್ಕಾಗಿ 1784 ರಿಂದ ಟಿಪ್ಪು ಮರಣದವರೆಗೆ ಕರಾವಳಿಯಲ್ಲಿ ಇದ್ದ ಚರ್ಚುಗಳು ಯಾವುದು ಮತ್ತು ಅದರ ಇತಿಹಾಸ ಏನು ಹೇಳುತ್ತದೆ ಎಂಬುದನ್ನು ನೋಡಬೇಕು.

ಕರಾವಳಿಯ ಅತೀ ಪುರಾತನ ಚರ್ಚುಗಳಲ್ಲಿ ಮೊದಲನೆಯದಾಗಿ ಕಾಣುವುದು 1680 ರಲ್ಲಿ ಕಟ್ಟಲ್ಪಟ್ಟ ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಚರ್ಚ್. ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚನ್ನು ಟಿಪ್ಪು ಒಡೆದು ಹಾಕಿರೋ ಬಗ್ಗೆ ಎಲ್ಲೂ ಇತಿಹಾಸ ಹೇಳುವುದಿಲ್ಲ. ಟಿಪ್ಪು ಮರಣದ ನಂತರ ಬ್ರಿಟೀಷರು ಮಿಲಾಗ್ರಿಸ್ ಚರ್ಚನ್ನು ಹೆಚ್ಚು ದೊಡ್ಡದಾಗಿ ಕಟ್ಟಿದರು ಎಂದಷ್ಟೇ ಹೇಳುತ್ತದೆ. ಅದಕ್ಕಿಂತಲೂ ಹೆಚ್ಚು ಕುತೂಹಲಕರವಾಗಿರೋದು ಮಿಲಾಗ್ರಿಸ್ ವ್ಯಾಪ್ತಿಯ ಸಾಲ್ವಡಾರ್ ಪಿಂಟೋ ಎಂಬ ಅಧಿಕಾರಿಯೇ ಟಿಪ್ಪುವಿನ ಕಾರ್ಯದರ್ಶಿ ಆಗಿದ್ದರು. ಟಿಪ್ಪು ಮರಣದ ನಂತರ ಫಾದರ್ ಮೆಂಡೇಝ್ ಮತ್ತು ಟಿಪ್ಪುವಿನ ಮಾಜಿ ಮುನ್ಶಿ(ಕಾರ್ಯದರ್ಶಿ) ಸಾಲ್ವಡಾರ್ ಪಿಂಟೋ ಜೊತೆ ಸೇರಿ 600 ರೂಪಾಯಿಗಳನ್ನು ಸಂಗ್ರಹಿಸಿ 1811 ರಲ್ಲಿ ವಿಶಾಲ ಮಿಲಾಗ್ರಿಸ್ ಚರ್ಚನ್ನು ಪುನರ್ ನಿರ್ಮಾಣ ಮಾಡಿದರು ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಮುಖ್ಯವಾದುದು ಟಿಪ್ಪುವಿನ ಕಾರ್ಯದರ್ಶಿ ಒಬ್ಬ ಕ್ರಿಶ್ಚಿಯನ್ ಆಗಿದ್ದರು ಮತ್ತು ಅವರು ಧರ್ಮಾಭಿಮಾನಿಯಾಗಿದ್ದರು ಎನ್ನುವುದು. ಇನ್ನು ಉಡುಪಿಯ ಕಲ್ಯಾಣಪುರ ಚರ್ಚ್ ಕೂಡಾ 1680 ರಲ್ಲಿ ಪ್ರಾರಂಭವಾದರೂ ಟಿಪ್ಪುನಿಂದ ಕೆಡವಲ್ಪಟ್ಟಿಲ್ಲ. 1784 ರ ಅವಧಿಯಲ್ಲಿ ಟಿಪ್ಪು ಕರಾವಳಿಯ ಬ್ರಿಟೀಷರ ಆಶ್ರಯತಾಣವನ್ನು ಹುಡುಕಿಕೊಂಡು ಚರ್ಚುಗಳಿಗೆ ಬಂದಾಗ ಕಲ್ಯಾಣಪುರ ಚರ್ಚನ್ನು ಕೆಡವಿದ ಬಗ್ಗೆ ದಾಖಲೆಗಳು ಇಲ್ಲ. ಇತಿಹಾಸ ಬದಿಗಿಟ್ಟು ಪವಾಡವನ್ನು ಗಮನಿಸಿದರೂ ಕಲ್ಯಾಣಪುರ ಮಿಲಾಗ್ರಿಸ್ ಚರ್ಚಿನ ಪವಾಡದ ಕತೆ ಹೀಗೆ ಹೇಳುತ್ತದೆ : ಟಿಪ್ಪು ಸುಲ್ತಾನ್ ಎಂಬ ರಾಜ ಬ್ರಿಟೀಷರನ್ನು ಹುಡುಕಿಕೊಂಡು ಕಲ್ಯಾಣಪುರ ಪವಾಡ ಮಾತೆಯ ಮಿಲಾಗ್ರಿಸ್ ಚರ್ಚಿಗೆ ದಾಳಿ ಮಾಡಲು ಬಂದ. ಆಗ ಎಲ್ಲೋ ಇದ್ದ ಜೇನು ನೊಣಗಳು ಟಿಪ್ಪುವಿನ ಸೈನ್ಯದ ಮೇಲೆ ಮುತ್ತಿಗೆ ಹಾಕಿದವು. ಸೈನಿಕರು ಓಡಿ ನದಿಯಲ್ಲಿ ಮುಳುಗಿದರೂ ಜೇನುನೊಣಗಳು ಬಿಡಲಿಲ್ಲ. ಕೊನೆಗೂ ಕಲ್ಯಾಣಪುರ ಪವಾಡ ಮಾತೆಯ ಚರ್ಚನ್ನು ಕೆಡವಲಾಗಲಿಲ್ಲ. ಇದು ಊರಿಡೀ ಪ್ರತೀತಿಯಾಗಿ ಹಿಂದೂಗಳು ಕೂಡಾ ಈ ಚರ್ಚನ್ನು ಮಿಲಾಗ್ರಿಯಮ್ಮನ ದೇವಸ್ಥಾನ ಎನ್ನಲಾರಂಬಿಸಿದ್ರು ಎಂಬುದು ಜನಪದೀಯ ಕತೆಯಾಗಿದೆ.

ಇದರ ಬಳಿಕ ಅತ್ಯಂತ ಪುರಾತನ ಚರ್ಚುಗಳ ಪೈಕಿ ನಮಗೆ ಕಾಣಸಿಗುವುದು ಮೂಡಬಿದ್ರೆಯ ಹೊಸಬೆಟ್ಟು ಚರ್ಚ್. 1761 ರಲ್ಲಿ ನಿರ್ಮಾಣಗೊಂಡ ಚರ್ಚಿನ ಇತಿಹಾಸವನ್ನು ಓದಿದಾಗ ಟಿಪ್ಪುವಿನ ಉಲ್ಲೇಖಗಳು ಬರುತ್ತದೆ. ಮೂಡಬಿದ್ರೆಯ ಜೈನ ಅರಸನ ವ್ಯಾಪ್ತಿಗೂ ಬರುತ್ತಿದ್ದ ಈ ಚರ್ಚು ಸ್ಥಳೀಯ ಅರಸನ ಕೆಂಗಣ್ಣಿಗೆ ಗುರಿಯಾಗಿತ್ತು. ಟಿಪ್ಪು ಹಲವು ಚರ್ಚುಗಳ ಬಗ್ಗೆ ಅಸಮಾದಾನ ಹೊಂದಿದ್ದರೂ ಈ ಚರ್ಚಿನ ಉಸಾಬರಿಗೆ ಬಂದಿಲ್ಲ ಎಂದು ಚರ್ಚ್ ಇತಿಹಾಸ ಸ್ಪಷ್ಟವಾಗಿ ಹೇಳುತ್ತದೆ.

1784 ಎಂಬುದು ಟಿಪ್ಪು ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸಂಧರ್ಭ. ಇದೇ ಇಸವಿಯಲ್ಲಿ ಆತ ಬ್ರಿಟೀಷರನ್ನು ಹತ್ತಿಕ್ಕುವುದಕ್ಕಾಗಿ ಚರ್ಚ್ ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿರ್ಧಾರ ಮಾಡಿ ಕರಾವಳಿಯಾದ್ಯಂತ ಸೈನಿಕರ ಜೊತೆ ಪರ್ಯಟಣೆ ಮಾಡುತ್ತಾನೆ. ಇದೇ ಸಮಯದಲ್ಲಿ ಅಂದರೆ 1784 ರಲ್ಲಿಯೇ ಕಿನ್ನಿಗೋಳಿ ಸಮೀಪ ಐಕಳದಲ್ಲಿ ಕಿರೆಂ ಚರ್ಚ್ ಅನ್ನು ಕಟ್ಟಲಾಗುತ್ತದೆ. ಚರ್ಚ್ ಕಟ್ಟುತ್ತಿರೋ ಬಗ್ಗೆ ಟಿಪ್ಪು ಗಮನಕ್ಕೆ ಬಂದು ಚರ್ಚ್ ಸ್ಥಳಕ್ಕೆ ಟಿಪ್ಪು ಸೈನಿಕರ ಜೊತೆ ಬರುತ್ತಾನೆ. ನೇರವಾಗಿ ಚರ್ಚಿಗೆ ದಾಳಿ ಮಾಡುವ ಎಲ್ಲಾ ಅವಕಾಶಗಳು ಟಿಪ್ಪುವಿನಂತಹ ರಾಜನಿದ್ದರೂ ಆತ ಅದನ್ನು ಮಾಡದೇ ಸ್ಥಳೀಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಐಕಳಬಾವ, ತಾಳಿಪಾಡಿ ಗುತ್ತು, ಏಳಿಂಜೆ ಗುತ್ತಿನ ಬಂಟ ಮನೆತನದವರನ್ನು ಕರೆಸಿ ಮಾತನಾಡುತ್ತಾನೆ. ಬಂಟ ಮನೆತನಗಳವರು ಚರ್ಚಿನ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಲ್ಲದೆ, ಈ ಚರ್ಚಿಗೆ ನಡೆದುಕೊಳ್ಳುವ ಕ್ರಿಶ್ಚಿಯನ್ನರು ಯಾರೂ ಕೂಡಾ ಬ್ರಿಟೀಷರ ಜೊತೆ ಕೈ ಜೋಡಿಸಿಲ್ಲ ಮತ್ತು ಇವರೂ ನಮ್ಮಂತೆ ಕೃಷಿಕರು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ. ತನ್ನ ರಾಜ್ಯದ ಹಿತದೃಷ್ಟಿಯಿಂದ ತನಿಖೆ ನಡೆಸಿದ ಟಿಪ್ಪು, ಆ ಚರ್ಚಿಗೆ ಯಾವ ತೊಂದರೆಯನ್ನೂ ಮಾಡದೇ ಮರಳುತ್ತಾನೆ. ಅದರ ನೆನಪಿಗಾಗಿ ಈಗಲೂ ಪ್ರತೀ ವರ್ಷ ನವೆಂಬರ್ 25 ರಂದು ಈ ಗುತ್ತಿನ ಮನೆತನಗಳಿಗೆ ಬಾಳೆಗೊನೆಯನ್ನು ಇಲ್ಲಿನ ಧರ್ಮಗುರುಗಳು ನೀಡುತ್ತಾ ಬಂದಿದ್ದಾರೆ.

ಟಿಪ್ಪು ಕ್ರಿಶ್ಚಿಯನ್ ವಿರೋಧಿಯಾಗಿರಲಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಜಮಲಾಬಾದ್ ಕೋಟೆ
ಮತ್ತು ಅದರ ಸನಿಹದಲ್ಲಿರುವ ಚರ್ಚ್. 1682 ರಲ್ಲಿ ಹಿಂದೂ ಮರಾಠ ರಾಜ ಸಾಂಭಾಜಿ ಗೋವಾವನ್ನು ಆಕ್ರಮಿಸಿದಾಗ ಕ್ರಿಶ್ಚಿಯನ್ನರು ನಿರಾಶ್ರಿತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಗಡಾಯ್ ಕಲ್ಲು ಎಂಬಲ್ಲಿ ಆಶ್ರಯ ಪಡೆಯುತ್ತಾರೆ. ಅದೇ ಗಡಾಯಿಕಲ್ ಪ್ರದೇಶದಲ್ಲಿ ಟಿಪ್ಪು ಜಮಲಾಬಾದ್ ಕೋಟೆಯನ್ನು ಕಟ್ಟುತ್ತಾನೆ. ಆ ಕೋಟೆಯ ಸುತ್ತಮುತ್ತ ಹಳ್ಳಿಗಳಲ್ಲಿ ಕ್ರಿಶ್ಚಿಯನ್ನು ಇರುತ್ತಾರೆ. ಟಿಪ್ಪು ಕ್ರಿಶ್ಚಿಯನ್ ವಿರೋಧಿ ಆಗಿದ್ದಿದ್ರೆ ಜಮಲಾಬಾದ್ ಕೋಟೆಯ ಸುತ್ತಾಮುತ್ತ ಕ್ರಿಶ್ಚಿಯನ್ನರು ಯಾಕೆ ವಾಸವಾಗ್ತಿದ್ರು ಎಂಬ ಪ್ರಶ್ನೆ ಬರುತ್ತದೆ. ಅಲ್ಲೇ ಸಣ್ಣ ಗುಡಿಸಲು ರೀತಿಯಲ್ಲಿ ಚರ್ಚ್ ಕೂಡಾ ನಿರ್ಮಿಸಿ ಪ್ರಾರ್ಥನೆ ನಡೆಸುತ್ತಿರುತ್ತಾರೆ. ಯಾವ ಯುದ್ದವೂ ಕ್ರಿಶ್ಚಿಯನ್ನರ ಮೇಲಾಗಲೀ, ಗುಡಿಸಲಿನ ಚರ್ಚಿನ ಮೇಲಾಗಲೀ ಪರಿಣಾಮ ಬೀರದಂತೆ ಟಿಪ್ಪು ನೋಡಿಕೊಳ್ಳುತ್ತಾನೆ. ಟಿಪ್ಪು 1799 ರಲ್ಲಿ ಮರಣ ಹೊಂದಿದ ಬಳಿಕವೂ ಚರ್ಚ್ ಅಲ್ಲೇ ಇರುತ್ತದೆ. 1885 ರ ವೇಳೆಗೆ ಜಮಲಾಬಾದ್ ಕೋಟೆಯ ಸುತ್ತ ಇದ್ದ ಪ್ರದೇಶದಲ್ಲಿ ಕಾಯಿಲೆ ವ್ಯಾಪಿಸಿದ್ದರಿಂದ ಚರ್ಚ್ ಅನ್ನು ಸ್ವಲ್ಪ ದೂರಕ್ಕೆ ಸ್ಥಳಾಂತರಿಸಲಾಯ್ತು.

1784 ರಿಂದ 1799 ರವರೆಗೆ ಕರಾವಳಿಯಲ್ಲಿದ್ದ ಚರ್ಚ್ ಗಳು ಮೂರ್ನಾಲ್ಕು ಮಾತ್ರ. ಉಳಿದಂತೆ ಹಳ್ಳಿಗಳಲ್ಲಿ ಇದ್ದ ಕ್ರಿಶ್ಚಿಯನ್ನರು ದೊಡ್ಡ ಮನೆಯನ್ನು ಆಯ್ಕೆಮಾಡಿಕೊಂಡು ಸಾಮೂಹಿಕ ಪ್ರಾರ್ಥನೆಗೆ ಒಂದೆಡೆ ಸೇರುತ್ತಿದ್ದರು. ಉದಾಹರಣೆಗೆ ಎಸ್ ಇ ಝಡ್ ವಿರೋಧಿ ಹೋರಾಟಗಾರ ಕಳವಾರಿನ ಗ್ರೆಗೋರಿ ಪತ್ರಾವೋ ಮನೆ.

ನಂತರದ ಚರ್ಚುಗಳಿಗೂ ಟಿಪ್ಪುವಿಗೂ ಸಂಬಂಧವೇ ಇಲ್ಲ. ಕಿನ್ನಿಗೋಳಿ ಚರ್ಚ್ 1804 ರಲ್ಲೂ, ಕುಲಶೇಖರ ಕೋರ್ಡೆಲ್ ಚರ್ಚ್ ಮತ್ತು ಬೋಂದೆಲ್ ಚರ್ಚ್ 1873 ರಲ್ಲೂ, ಬೆಳ್ಮನ್ ಚರ್ಚ್ 1894, ಪಾಲಡ್ಕ ಚರ್ಚ್ 1913, ಬಳ್ಕುಂಜೆ ಚರ್ಚ್ 1915, ನಿಡ್ಡೋಡಿ ಚರ್ಚ್ 1937, ನೀರುಡೆ ಚರ್ಚ್ 1945, ಬೋಳ ಚರ್ಚ್ 1964, ಕಟೀಲು ಚರ್ಚ್ 1971, ಮುಂಡ್ಕೂರು ಚರ್ಚ್ 1998 ರಲ್ಲೂ ಪ್ರಾರಂಭವಾಯ್ತು. ಇದ್ಯಾವುದೂ ಟಿಪ್ಪು ಕಾಲಮಾನದಲ್ಲಿ ಸ್ಥಾಪನೆಯಾದ ಚರ್ಚುಗಳು ಅಲ್ಲ. ಟಿಪ್ಪು ಕಾಲಮಾನದ ಯಾವ ಚರ್ಚಿನ ಇತಿಹಾಸವೂ ಚರ್ಚು ಕೆಡವಿದ ಕತೆಯನ್ನು ಹೇಳುವುದಿಲ್ಲ. ಬದಲಾಗಿ ಬ್ರಿಟೀಷರ ಕಾರಣಕ್ಕಾಗಿ ಚರ್ಚುಗಳ ಪರಿಶೀಲನೆ ನಡೆಸಿದ್ದ ಮತ್ತು ಮನವರಿಕೆಯಾದ ನಂತರ ರಕ್ಷಣೆ ಮಾಡಿದ್ದ ಎಂದಷ್ಟೇ ಇತಿಹಾಸ ಮತ್ತು ಕ್ರಿಶ್ಚಿಯನ್ ಪ್ರಚಲಿತ ಪವಾಡದ ಕತೆಗಳು ಹೇಳುತ್ತದೆ. ಟಿಪ್ಪು ಚರ್ಚ್ ಗಳನ್ನು ಕೆಡವಿದ್ದ ಎನ್ನುವುದು ಇತಿಹಾಸಕ್ಕೂ, ಚರ್ಚಿನ ಪವಾಡಕ್ಕೂ ಮಾಡುವ ಅಪಚಾರವಾಗುತ್ತದೆ.