Category Archives: ಸಾಮಾಜಿಕ

ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಚಿತ್ರದುರ್ಗ: ಹಿಂದೂ ಮಹಾಗಣಪತಿ – ದಲಿತ ಮಹಾಗಣಪತಿ

– ಶಿವರಾಂ ಕೆಳಗೋಟೆ

ಗಣೇಶ ವಿಸರ್ಜನೆ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಇದೇ 24 ರಂದು ಚಿತ್ರದುರ್ಗದ ಹಿಂದೂ ಮಹಾ ಗಣಪತಿ ವಿಸರ್ಜನೆ ನಿಗದಿಯಾಗಿದೆ. ದಿನ ಹತ್ತಿರವಾಗುತ್ತಿದ್ದಂತೆಯೇ ಚಿತ್ರದುರ್ಗದ ಜನರಲ್ಲಿ ಅವ್ಯಕ್ತ ಆತಂಕ, ಏನಾಗುತ್ತದೆಯೋ ಎಂಬ ಭಯದ ವಾತಾವರಣ. ಏಕೆಂದರೆ, ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನೆ ಆರಂಭವಾದ ಕಳೆದ ಮೂರು ವರ್ಷಗಳಿಂದಲೂ ವಿಸರ್ಜನೆ ದಿನದ ಮೆರವಣಿಗೆಗಳಲ್ಲಿ ಬೇರೆ ಬೇರೆ ಊರುಗಳಿಂದ ನೂರಾರು ಜನ ನಗರಕ್ಕೆ ಬಂದು ಕೇಸರಿ ವಸ್ತ್ರ ಧರಿಸಿ ಪಾಲ್ಗೊಳ್ಳುತ್ತಾರೆ. ಕೋಮು ಭಾವನೆ ಕೆರಳಿಸುವ, ಹಿಂದೂ ಉನ್ಮಾದದ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಾರೆ. ಮೆರವಣಿಗೆ ಮುಗಿವ ಹೊತ್ತಿಗೆ ನಗರದ ಯಾವ ಭಾಗದಲ್ಲಾದರೂ ಹಿಂಸೆಯ ಕಿಡಿ ಹಬ್ಬುತ್ತದೇನೋ ಎಂಬ ಆತಂಕದಲ್ಲಿ ಜನರು ಇರುತ್ತಾರೆ.

ಸಮಾಜದ ನೆಮ್ಮದಿ ಹಾಗೂ ಶಾಂತಿಗಾಗಿ ದೇವರ ಪೂಜೆ ನಡೆಸುವುದು ಪದ್ಧತಿ. ವಿಪರ್ಯಾಸ ಎಂದರೆ ಇಂತಹ ಸಂದರ್ಭದಲ್ಲಿಯೇ ಶಾಂತಿ ಕದಡಬಹುದೇನೋ ಎಂಬ ಆತಂಕದಿಂದ ಪೊಲೀಸ್ ಇಲಾಖೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ ಬಂದೋಬಸ್ತ್ ಗೆ ನಿಯೋಜಿಸುತ್ತಾರೆ. ಸ್ವತಃ ಜಿಲ್ಲಾ ರಕ್ಷಣಾಧಿಕಾರಿಯೇ ಕಂಟ್ರೋಲ್ ರೂಮ್ganesh-ugra ನಲ್ಲಿ ಕೂತು ಡ್ರೋನ್ ಕೆಮರಾಗಳ ಮೂಲಕ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುತುವರ್ಜಿ ವಹಿಸುತ್ತಾರೆ. ಕಳೆದ ವರ್ಷಗಳಲ್ಲಿ ಮೆರವಣಿಗೆ ವೇಳೆ ಸಣ್ಣ ಪುಟ್ಟ ಗಲಭೆಗಳೂ ನಡೆದಿವೆ.

ಇದೆಲ್ಲವನ್ನೂ ಕಂಡು ಬೇಸತ್ತ ಕೆಲ ದಲಿತ ಪರ ಸಂಘಟನೆಗಳು ಹಾಗೂ ಪ್ರಗತಿಪರ ಹೋರಾಟಗಾರರು ಈ ಬೆಳವಣಿಗೆಯನ್ನು ಎದುರಿಸುವುದು ಹೇಗೆ ಎಂಬ ಗೊಂದಲಕ್ಕೆ ಬಿದ್ದು ಈ ಬಾರಿ ದಲಿತ ಗಣಪತಿ ಎಂದು ಪರ್ಯಾಯ ಉತ್ಸವಕ್ಕೆ ನಾಂದಿ ಹಾಡಿದ್ದಾರೆ. ಅವರು ಹಳೇ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಇದೇ 22 ರಂದು ವಿಸರ್ಜನೆ ಹಮ್ಮಿಕೊಂಡಿದ್ದಾರೆ. ಆ ವೇಳೆ ನಡೆಯುವ ಮೆರವಣಿಗೆಗೆ ಏಕತಾ ಯಾತ್ರೆ ಎಂಬ ಹೆಸರಿಟ್ಟಿದ್ದಾರೆ. ಪ್ರತಿಷ್ಟಾಪನೆ ನಂತರ ಪ್ರ ತಿ ದಿನ ವಿವಿಧ ಧಾರ್ಮಿಕ ಮುಖಂಡರು (ಅನ್ಯ ಧರ್ಮೀಯರೂ ಸೇರಿದಂತೆ) ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ದಲಿತ ಸಂಘರ್ಷ ಸಮಿತಿಯ ಮಹಾಲಿಂಗಪ್ಪ ಈ ವ್ಯವಸ್ಥೆ ಮಾಡುವಲ್ಲಿ ನೇತೃತ್ವ ವಹಿಸಿದ್ದಾರೆ.

“ಹಿಂದೂ ಮಹಾ ಗಣಪತಿ ಆಯೋಜಕರಿಗೆ ಬೆಂಗಾವಲಾಗಿ ನಿಂತು ಅವರ ಮೆರವಣಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಅವರ ಘೋಷಣೆಗಳನ್ನು ಏರಿದ ದನಿಯಲ್ಲಿ ಕೂಗುತ್ತಿದ್ದವರು ನಮ್ಮದೇ ಮನೆಯ ದಲಿತ ಹಾಗೂ ಹಿಂದುಳಿದ ಹುಡುಗರು. ಆದರೆ, ಅಲ್ಲಿಯ ಆಚರಣೆ ರೀತಿ-ನೀತಿಗಳಿಂದ ಆಗುವ ಅಪಾಯಗಳ ಪರಿಚಯ ಆ ಹುಡುಗರಿಗೆ ಇಲ್ಲ. ಅವರನ್ನು ಇತ್ತ ಸೆಳೆಯಬೇಕೆಂದರೆ, ಅವರಿಗೆ ಪರ್ಯಾಯ ಬೇಕು. ದಲಿತ ಮಹಾಗಣಪತಿ ಪ್ರತಿಷ್ಟಾಪನೆ ಒಂದು ವೈಚಾರಿಕ ಪರ್ಯಾಯ ಅಲ್ಲದಿರಬಹುದು, ಆದರೆ, ಆರಂಭದಲ್ಲಿ ಅವರನ್ನು ಸರಿದಾರಿಗೆ ಸೆಳೆಯುವುದಕ್ಕೆ ಒಂದು ತಂತ್ರವಾಗಿಯಾದರೂ ಇಂತಹದೊಂದು ಕಾರ್ಯಕ್ರಮದ ಅಗತ್ಯವಿದೆ” ಎನ್ನುತ್ತಾರೆ ದಲಿತ ಮಹಾಗಣಪತಿ ಉತ್ಸವದ ಸಮರ್ಥಕರೊಬ್ಬರು.

ಜನರಿಗೆ ತಪ್ಪು, ಸರಿಗಳ ಸ್ಪಷ್ಟ ಅರಿವಿದೆ. ಆದರೆ, ಒಂದು ತಪ್ಪಿನ ಎದುರಿಗೆ ಮತ್ತೊಂದು ಸರಿಯನ್ನು ತೋರಿಸಿದಾಗಲೇ ಅವರು ತಪ್ಪಿನ ಬಗ್ಗೆ ಮಾತನಾಡಲಾರಂಭಿಸುವುದು. ಎಲ್ಲರಿಗೂ ಗೊತ್ತು, ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ ದಿನ, ಅವರೊಂದಿಗೆ ಅನ್ಯಧರ್ಮಿಯರು ಪಾಲ್ಗೊಳ್ಳಲು ಸಾಧ್ಯವಿಲ್ಲ. ಅದೊಂದು ದಿನ ನಗರದಲ್ಲಿ ಏನೋ ಘಟಿಸಬಹುದು ಎಂಬ ಆತಂಕದಿಂದ ಕೆಲವರು ಊರು ಬಿಡುವ ಸಂದರ್ಭಗಳೂ ಇವೆ. ಆದರೆ, ಅವರಿಗೆ ‘ಏಕತಾ ಯಾತ್ರೆ’ ಯಂತಹ ಕಾರ್ಯಕ್ರಮದಲ್ಲಿ ಅಂತಹ ಆತಂಕಗಳಿರುವುದಿಲ್ಲ. ಮೇಲಾಗಿ ಬಹುಸಂಖ್ಯಾತ ಜನರಿಗೆ, ಸಮಾಜವನ್ನು ಒಡೆಯುವ ಯಾತ್ರೆಗಿಂತ ಏಕತಾ ಯಾತ್ರೆಯೇ ನಮ್ಮ ಆಯ್ಕೆಯಾಗಬೇಕು ಎಂದು ಮನವರಿಕೆ ಆಗುತ್ತದೆ, ಎನ್ನುವುದು ಅವರ ವಾದ.

ಹೀಗೆ ಮಾತನಾಡುತ್ತಿರುವಾganesh-dalitಗಲೆ ಇಪ್ಪತ್ತರ ಆಸುಪಾಸಿನಲ್ಲಿರುವ ಹುಡುಗನೊಬ್ಬ ತನ್ನ ಪಲ್ಸರ್ ಗಾಡಿಯಲ್ಲಿ ದಲಿತ ಮಹಾಗಣಪತಿ ಪೆಂಡಾಲ್ಗೆ ಬಂದ. ಅವನ ಗಾಡಿಯ ಮುಂಭಾಗ ಭಗತ್ ಸಿಂಗ್ ಚಿತ್ರ ಇತ್ತು. ಹಿಂದೆ ಜೈ ಹನುಮಾನ್ ಚಿತ್ರ. ‘ನಾನೇಕೆ ನಾಸ್ತಿಕ?’ ಎಂದು ಪುಸ್ತಕ ಬರೆದ ಭಗತ್ ಸಿಂಗ್ ಹಾಗೂ ಜೈ ಹನುಮಾನ್ ಚಿತ್ರ ಒಟ್ಟಿಗೆ ಹೋಗಲಾರವು. ಆ ಹುಡುಗನ ಅಸ್ಪಷ್ಟ, ಗೊಂದಲಕಾರಿ ಮನಸ್ಥಿತಿ ಇದುವರೆಗೆ ಹಿಂದೂ ಮಹಾಗಣಪತಿಗೆ ಪ್ರಮುಖ ಕಾರ್ಯಕರ್ತನನ್ನಾಗಿ ಮಾಡಿತ್ತು. ಈ ವರ್ಷವೂ ಅಲ್ಲಿಯೇ ಕೆಲಸ ಮಾಡುತ್ತಿದ್ದ ಹುಡುಗ ವಿರಾಮದ ವೇಳೆ ದಲಿತ ಮಹಾಗಣಪತಿ ಪೆಂಡಾಲ್ ಭೇಟಿ ಕೊಟ್ಟಿದ್ದ. ದಲಿತ ಸಂಘಟನೆ ಕಾರ್ಯಕರ್ತರು ಬಯಸಿದ್ದು ಇದನ್ನೇ.

ವಿಗ್ರಹ ಸ್ವರೂಪ:
ಎರಡೂ ಗುಂಪಿನವರು ಪ್ರತಿಷ್ಟಾಪಿಸಿರುವ ಗಣೇಶನ ವಿಗ್ರಹಗಳು ವಿಶಿಷ್ಟವಾಗಿವೆ. ದಲಿತ ಮಹಾಗಣಪತಿ ಹೆಗಲ ಮೇಲೆ ನೇಗಿಲು ಇದೆ. ಪ್ರತಿಷ್ಟಾಪನೆ ದಿನವೇ ರೈತ ಸಂಘದವರು ಭೇಟಿ ನೀಡಿ ವಿಗ್ರಹಕ್ಕೆ ಹಸಿರು ಶಾಲು ಹೊದಿಸಿ, ಆತನನ್ನು ರೈತ ಗಣಪತಿಯನ್ನಾಗಿ ಮಾಡಿದರು. ಈ ನೆಲದ ಬಹುಜನರ ಪ್ರತಿನಿಧಿಯಾಗಿ ಆ ಗಣಪ ಕಂಡರೆ ಅಚ್ಚರಿಯೇನಿಲ್ಲ.

ಆದರೆ ಹಿಂದೂ ಮಹಾಗಣಪತಿ ಹಾಗಲ್ಲ. ಆತ ಬೃಹದಾಕಾರವಾಗಿರುವ ಉಗ್ರನರಸಿಂಹನ ವಿಗ್ರಹದ ಮೇಲೆ ಸಣ್ಣದಾಗಿ ಗಣಪ ಕೂತಿದ್ದಾನೆ. ಉತ್ಸವ ಗಣೇಶನದೋ ಉಗ್ರನರಸಿಂಹನದೋ ಎಂಬ ಸಂಶಯ ಬರುತ್ತದೆ. ಜೊತೆಗೆ ಈ ರೂಪಕ್ಕೆ ಏನಾದರೂ ಹಿನ್ನೆಲೆ ಇದೆಯೇ ಎಂದು ಯೋಚಿಸಿದರೆ, ಏನೂ ತಿಳಿಯುತ್ತಿಲ್ಲ. ಉಗ್ರ ನರಸಿಂಹನಿಗೂ, ಶಿವನ ಮಗನಾದ ಗಣಪನಿಗೂ ಸಂಬಂಧವೆಲ್ಲಿ?

ಮಾಜಿ ಮಂತ್ರಿ ಸುರೇಶ್ ಕುಮಾರ್ ಅವರಿಗೆ ಬಹಿರಂಗ ಪತ್ರ

ಸಹೃದಯರಾದ ಶ್ರೀ ಸುರೇಶ್ ಕುಮಾರ್ ಅವರಿಗೆ

ಪ್ರೀತಿಯ ನಮಸ್ಕಾರಗಳು.

ಈ ಬಹಿರಂಗ ಪತ್ರದ ಉದ್ದೇಶ ತಾವು ಆಗಸ್ಟ್ 30ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬರೆದ ಎರಡು ಪ್ರತ್ಯೇಕ ಸ್ಟೇಟಸ್ಗಳು. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದು ಕೆಲವೇ ಸಮಯದಲ್ಲಿ ಅಳಿಸಿ ಹಾಕಿದ ಒಂದು ಸಾಲು ಮಾತಿನ ಕುರಿತು ಆ ನಡುರಾತ್ರಿಯಲ್ಲಿ ತಾವು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೀರಿ. ನಿಮ್ಮ ಕನ್ನಡದ ಸ್ಟೇಟಸ್ ಹೀಗೆ ಹೇಳುತ್ತದೆ: ತನ್ನ ಶತ್ರುವಿಗೂ ಈ ರೀತಿ ಅವಹೇಳನಾಕಾರಿ ಮಾತುಗಳನ್ನು ಹೇಳಬಾರದಲ್ಲವೇ ದಿನೇಶ್. ಪ್ರತಾಪ್ ಸಿಂಹರ ಪತ್ನಿಯವರ ದುರದೃಷ್ಟಕರ ದೈಹಿಕ ಸ್ಥಿತಿಯನ್ನು ಉಪಯೋಗಿಸಿ ಪ್ರತಾಪಸಿಂಹರ ಮೇಲೆ ನಿಮ್ಮ ಬೌದ್ಧಿಕ(?) ಹಲ್ಲೆ ನಿಮ್ಮ ಬಗ್ಗೆಯೇ ಕನಿಕರ ಹುಟ್ಟಿಸುತ್ತಿದೆ. ಇದು ಬೌದ್ಧಿಕ ವಿಕಾರತೆಯ ಅನಾವರಣ.

ಅದೇ ರೀತಿ ನೀವು ಇಂಗ್ಲಿಷ್ ನಲ್ಲಿ ಬರೆದ ಸಾಲುಗಳು ಹೀಗಿವೆ: It is crass crudity of the Media Advisor to CM of Karnataka to ridicule a woman’s unfortunate physical condition sureshto attack her husband.

ಈ ಕುರಿತು ನಿಮ್ಮ ವಾಲ್ ನಲ್ಲಿ ಕಮೆಂಟ್ ಮಾಡಬಹುದಿತ್ತು. ಆದರೆ ಹೇಳಬೇಕಾದ ವಿಷಯಗಳು ತುಸು ಹೆಚ್ಚೇ ಇರುವುದರಿಂದ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನಿಮ್ಮ ಸ್ಟೇಟಸ್ಗಳ ವಿಷಯಕ್ಕೆ ಮತ್ತೆ ಬರುತ್ತೇನೆ. ಈಗ ಹಿಂದೆ ನಡೆದ ಎರಡು ಘಟನೆಗಳನ್ನು ನೆನಪಿಸಲು ಬಯಸುತ್ತೇನೆ.

ಮೊದಲನೆಯ ಘಟನೆ ನಡೆದಿದ್ದು 2014ರ ನವೆಂಬರ್ 8ರಂದು. ತೀರ್ಥಹಳ್ಳಿಯ ನಂದಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲವದು. ನಿಮ್ಮ ಪಕ್ಷದ ನೇತಾರರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಒಂದು ಹೇಳಿಕೆ ನೀಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಪುತ್ರಿಯರ ಮೇಲೆ ಅತ್ಯಾಚಾರವಾಗುವವರೆಗೆ ಇವರಿಗೆ ಬುದ್ಧಿಬರಲ್ಲ ಎಂದು ಹೇಳಿದ್ದರು ನಿಮ್ಮ ಈಶ್ವರಪ್ಪನವರು. ಕುತೂಹಲಕ್ಕೆ ನಿಮ್ಮ ಟೈಮ್ ಲೈನ್ಗೆ ಹೋಗಿ ಆ ದಿನಗಳಲ್ಲಿ ಈ ಕುರಿತು ನೀವು ಏನನ್ನಾದರೂ ಬರೆದಿದ್ದೀರಾ ಎಂದು ಪರೀಕ್ಷಿಸಿದೆ. ನಿಮ್ಮ ಮೌನವಷ್ಟೇ ಕಣ್ಣಿಗೆ ರಾಚಿತು. ಇದು ಈಶ್ವರಪ್ಪನವರ ಬೌದ್ಧಿಕ ವಿಕಾರತೆಯ ಅನಾವರಣ ಎಂದು ನೀವು ಬರೆದಿರಬಹುದು ಅಥವಾ It is crass crudity of the former DCM ಎಂದು ಬರೆದಿರಬಹುದು ಎಂದು ನಿರೀಕ್ಷೆ ಮಾಡಿದ್ದೆ. ನನ್ನ ನಿರೀಕ್ಷೆ ಸುಳ್ಳಾಯಿತು.

ಇನ್ನೊಂದು ಘಟನೆ ಇನ್ನೊಂದು ವರ್ಷದ ನಂತರ ನಡೆದದ್ದು. 2015ರ ಅಕ್ಟೋಬರ್ 17ರಂದು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಮಲ್ಲಾಪುರಕ್ಕೆ ಇದೇ ನಿಮ್ಮ ಕೆ.ಎಸ್ ಈಶ್ವರಪ್ಪನವರು ತೆರಳಿದ್ದರು. ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಹೆಚ್ಚಾಗುತ್ತಿದೆ, ವಿರೋಧ ಪಕ್ಷದ ಮುಖಂಡರಾದ ನಿಮ್ಮ ಪ್ರತಿಕ್ರಿಯೆ ಏನು ಎಂದು ಚಾನಲ್ ಒಂದರ ಮಹಿಳಾ ವರದಿಗಾರರು ಈಶ್ವರಪ್ಪನವರನ್ನು ಪ್ರಶ್ನಿಸಿದ್ದರು. ನಿಮ್ಮ ಮುಖಂಡರ ಉತ್ತರ ಹೀಗಿತ್ತು: ಅಲ್ಲಮ್ಮಾ, ನಿನ್ನನ್ನು ಯಾವನೋ ಕರೆದುಕೊಂಡು ಹೋಗಿ ರೇಪ್ ಮಾಡಿದರೆ ನಾವೇನು ಮಾಡಕ್ಕಾಗುತ್ತೆ. ನಾನು ಎಲ್ಲೋ ಇರ್ತೀನಿ.

ಈ ವಿಷಯಕ್ಕೆ ಸಂಬಂಧಿಸಿದಂತೆಯೂ ನೀವು ಏನನ್ನಾದರೂ ಬರೆದಿರಬಹುದು ಎಂಬ ಕುತೂಹಲದಿಂದ ನಿಮ್ಮ ಟೈಮ್ ಲೈನ್ ತಡಕಾಡಿದೆ. ಅಲ್ಲಿ ಅಕ್ಟೋಬರ್ 18ರಂದು ಸಿಕ್ಕಿದ್ದು ಇಷ್ಟು, ನೀವು ಬರೆದಿರೋದೇ ಇಷ್ಟು: ಮಾತನಾಡಲು ಕಲಿಯಲು – ಪ್ರಾರಂಭಿಸಲು ಬಾಲ್ಯದಲ್ಲಿ 3 ಮೊದಲ ವರ್ಷಗಳು ಬೇಕು. ಏನು ಮಾತನಾಡಬೇಕು – ಏನು ಮಾತನಾಡಬಾರದು ಎಂಬುದನ್ನು ಅರಿಯಲು ಇಡೀ ಜೀವಮಾನವೇ ಸಾಲದು.

ನೀವು ಈಶ್ವರಪ್ಪನವರ ಕುರಿತೇ ಈ ಸ್ಟೇಟಸ್ ಹಾಕಿದ್ದೀರೆಂಬುದು ಗೊತ್ತಾಗಿದ್ದು ಅಲ್ಲಿ ನಿಮ್ಮ ಸ್ನೇಹಪಟ್ಟಿಯಲ್ಲಿರುವವರು ಮಾಡಿರುವ ಕಮೆಂಟುಗಳಿಂದ! ಏನನ್ನು ಮಾತನಾಡಬೇಕು, ಏನನ್ನು ಮಾತನಾಡಬಾರದು ಎಂಬುದನ್ನು ಅರಿಯಲು ಇಡೀ ಜೀವಮಾನವೇ ಸಾಲದು ಎಂಬ ಈ ಆತ್ಮವಿಮರ್ಶೆಯ ಮಾತುಗಳು ಈಶ್ವರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆಯಾ ಎಂದೆನಿಸಿ ಆಶ್ಚರ್ಯವೆನಿಸಿತು.

ಮುಖ್ಯಮಂತ್ರಿ, ಗೃಹಸಚಿವರ ಪುತ್ರಿಯರು,dinesh ಚಾಲನ್ ಒಂದರ ವರದಿಗಾರ್ತಿಯ ಕುರಿತು ಅತ್ಯಾಚಾರದಂಥ ಅತಿಸೂಕ್ಷ್ಮ ವಿಷಯಗಳನ್ನು ಇಟ್ಟುಕೊಂಡು ಆಡಿದ ಮಾತುಗಳು ತಮಗೆ ಬೌದ್ಧಿಕ ವಿಕಾರತೆ ಎನಿಸದೇ ಹೋಗಿದ್ದು ನಿಜಕ್ಕೂ ಆಶ್ಚರ್ಯ. ಅಥವಾ ಅತಿ ಸುಲಭವಾಗಿ ಒಂದು ನಿರ್ಣಯಕ್ಕೆ ಬರಬಹುದು. ನಿಮ್ಮ ಪಕ್ಷದವರು ಮಾಡಿದರೆ ಅದು ಆತ್ಮಾವಲೋಕನಕ್ಕೆ ದಾರಿ, ಬೇರೆಯವರು ಮಾಡಿದರೆ ಮಾತ್ರ ತೀವ್ರ ಸ್ವರೂಪದ ಟೀಕೆ-ವಿಮರ್ಶೆಗಳಿಗೆ ಅವಕಾಶ. ಇಂಥ ವಿಷಯಗಳಲ್ಲೂ ನೀವು ಎಷ್ಟು ಸೆಲೆಕ್ಟಿವ್ ಆಗಿರಲು ಬಯಸುತ್ತೀರಿ ನೋಡಿ. ರಾಜಕೀಯ ಅಂದರೆ ಇಷ್ಟೇನಾ ಸರ್? ಅಥವಾ ಸುರೇಶ್ ಕುಮಾರ್ ಅವರನ್ನು ಈ ಕೊಳಕು ರಾಜಕಾರಣದಿಂದ ಹೊರತಾಗಿರುವ ಮನುಷ್ಯ ಎಂದು ನಾವು ಭಾವಿಸಿದ್ದೇ ತಪ್ಪಾ?

ಈಗ ಮುಖ್ಯವಾದ ವಿಷಯಕ್ಕೆ ಬಂದುಬಿಡುತ್ತೇನೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ಮೈಸೂರಿನ ಸಂಸದ ಪ್ರತಾಪ ಸಿಂಹ ಅವರನ್ನು ಕುರಿತು ಬರೆಯುವಾಗ “ಮನೆಯಲ್ಲೇ ಅಂಗವಿಕಲ ಪತ್ನಿ ಇರುವಾಗ ಬೇರೆಯವರ ಬೋಳುಮಂಡೆಯಲ್ಲಿ ಕೂದಲು ಹುಡುಕುವಾತ ಎಂದು ಬರೆದಿದ್ದರು, ನಂತರ ಒಬ್ಬ ಹೆಣ್ಣುಮಗಳು ಈ ಉಲ್ಲೇಖ ಸರಿಯಿಲ್ಲವೆಂದು ಹೇಳಿದ ನಂತರ ಆ ಸಾಲನ್ನು ಕೂಡಲೇ ಡಿಲೀಟ್ ಮಾಡಿದ್ದರು. ಕನ್ನಡ ಬಲ್ಲ ಯಾರಿಗೇ ಆದರೂ ಅರ್ಥವಾಗುವುದು ಏನೆಂದರೆ ಮನೆಯಲ್ಲೇ ಅಂಗವೈಕಲ್ಯದ ಸಮಸ್ಯೆಯನ್ನು ಎದುರಿಸುತ್ತಿರುವವರ ಬೇರೆಯವರ ದೇಹದ ವೈಕಲ್ಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ, ಏಕೆಂದರೆ ಬೇರೆಯವರನ್ನು ಮೂದಲಿಸುವಾಗ ಅದೇ ಸ್ಥಿತಿಯಲ್ಲಿರುವ ಮನೆಯವರು ಏನೆಂದುಕೊಂಡಾರು ಎಂಬ ಬಗ್ಗೆ ಕನಿಷ್ಟ ಪ್ರಜ್ಞೆ ಇರಬೇಕು – ಎಂಬುದು. ಆದರೂ ಇಲ್ಲಿ `ಅಂಗವಿಕಲ ಪತ್ನಿ ಎಂಬ ಉಲ್ಲೇಖ ಬಹಳಷ್ಟು ಜನರಿಗೆ ಇಷ್ಟವಾಗಲಿಲ್ಲ, ದಿನೇಶ್ ಅವರು ಅದನ್ನು ಕೂಡಲೇ ಸರಿಪಡಿಸಿದರು ಕೂಡ.

ಈಗ ಬೋಳುಮಂಡೆ ವಿಷಯಕ್ಕೆ ಬರೋಣ ಸರ್. ಇದರ ಹಿನ್ನೆಲೆಗಳನ್ನು ಸ್ವಲ್ಪ ವಿವರವಾಗಿಯೇ ನಿಮಗೆ ಹೇಳಬೇಕು. ಪ್ರತಾಪಸಿಂಹ ಅವರು ಪತ್ರಿಕೆಯೊಂದರ ಅಂಕಣದಲ್ಲಿ ದಿನೇಶ್ ಅಮೀನ್ ಮಟ್ಟು ಅವರನ್ನು ಕುಟುಕುವ ಸಲುವಾಗಿ ಮೊದಲು ಈ `ಬೋಳುಮಂಡೆ’ ಪದವನ್ನು ಬಳಸಿದ್ದರು. ಅದನ್ನೂ ಒಂದು ವೈಕಲ್ಯ ಎಂದಿಟ್ಟುಕೊಳ್ಳೋಣ. ದಿನೇಶ್ ಅವರನ್ನು ಟೀಕಿಸಲು ಪ್ರತಾಪ್ ಅವರಿಗೆ ಎಲ್ಲ ಹಕ್ಕುಗಳೂ ಇವೆ. ಅವರು ಟೀಕಿಸಲಿ, ಅವರ ದೇಹದ ಊನದ ಕುರಿತು ಮಾತನಾಡುವ ಅಗತ್ಯವೇನಿತ್ತು? ಪ್ರತಾಪಸಿಂಹ ಅವರು ಹೀಗೆ ಬರೆದ ನಂತರ ಅವರನ್ನು ಅನುಸರಿಸುವ ನೂರಾರು ಮಂದಿ ಬಲಪಂಥೀಯರು ಸಾಮಾಜಿಕ ಜಾಲತಾಣಗಳಲ್ಲಿ ಈ `ಬೋಳುಮಂಡೆ ಪದವನ್ನು ಪದೇಪದೇ ಬಳಸಿ ಅಣಕಿಸಿದರು, ಈಗಲೂ ಅಣಕಿಸುತ್ತಲೇ ಇದ್ದಾರೆ.

ದಿನೇಶ್ ಅವರನ್ನು ಹೀಗೆ `ಬೋಳುಮಂಡೆ ಎಂದು ಟ್ರಾಲ್ ಮಾಡಲು ಒಂದು ಕಾರಣವಿದೆ ಸರ್. ಅದು ಬಹುಶಃ ನಿಮಗೆ ಗೊತ್ತಿಲ್ಲದೆಯೇ ಇರಬಹುದು. ಸ್ವತಃ ನಿಮ್ಮ ಪಕ್ಷದ ದೊಡ್ಡ ನಾಯಕರಾದ ಎಲ್.ಕೆ.ಅಡ್ವಾನಿ, ವಿಎಚ್ಪಿ ಮುಖಂಡರಾದ ಪ್ರವೀಣ್ ತೊಗಾಡಿಯಾ ಅಂಥವರಿಗೂ ತಲೆಯಲ್ಲಿ ಕೂದಲಿಲ್ಲ. ಇದು ಗೊತ್ತಿದ್ದೂ ದಿನೇಶ್ ಅವರನ್ನು `ಬೋಳುಮಂಡೆ ಎಂದು ಕರೆಯಲು ಕಾರಣವಿದೆ. ದಿನೇಶ್ ಅಮೀನ್ ಮಟ್ಟು ಅವರು ಕ್ಯಾನ್ಸರ್ ಎಂಬ ಭೀಕರ ಕಾಯಿಲೆಯಿಂದ ನರಳಿದವರು. ಪ್ರಜಾವಾಣಿಯಲ್ಲಿ ಅವರು ಕಾರ್ಯನಿರ್ವಹಿಸುವಾಗಲೇ ಅವರಿಗೆ ಈ ರೋಗವಿತ್ತು. ಸತತ ಔಷಧೋಪಚಾರಗಳ ನಂತರ ಅವರು ಗುಣಮುಖರಾದರು. ಕ್ಯಾನ್ಸರ್ನಿಂದ ಪಾರಾಗಲು ಇರುವ ಐದುವರ್ಷಗಳ `ಅಪಾಯಕಾರಿ ಅವಧಿಯನ್ನು ಅವರು ದಾಟಿದ್ದಾರೆ. ಇದು ಗೊತ್ತಿದ್ದೇ ನಾವೆಲ್ಲ ಭಕ್ತರೆಂದು ಕರೆಯುವ ಬಲಪಂಥೀಯ ಶಕ್ತಿಗಳು `ಕ್ಯಾನ್ಸರ್ನಿಂದ ಈತನ ತಲೆ ಬೋಳಾಗಿದೆ, ಆದರೂ ಬುದ್ಧಿಬಂದಿಲ್ಲ ಎಂದು ಬರೆದರು. ಅದಕ್ಕೆ ಸಾಕ್ಷಿಗಳನ್ನು ಒದಗಿಸಬಲ್ಲೆ.

ಕ್ಯಾನ್ಸರ್ ಕುರಿತು ತಮಗೆ ವಿವರವಾಗಿ ಹೇಳಬೇಕಾಗಿ ಇಲ್ಲ ಸರ್. ಆದರೂ ಇದು ಬಹಿರಂಗ ಪತ್ರವಾದ್ದರಿಂದ ಗೊತ್ತಿಲ್ಲದವರಿಗೆ ಒಂದಷ್ಟು ವಿಷಯಗಳು ತಿಳಿಯಲಿ ಎಂಬ ಕಾರಣಕ್ಕೆ ಒಂದೆರಡು ಸಾಲುಗಳನ್ನು ಹೇಳಿಬಿಡುತ್ತೇನೆ. ಇಡೀ ಜಗತ್ತಿನಲ್ಲಿ ಕ್ಯಾನ್ಸರ್ನಷ್ಟು ಭೀಕರವಾದ ಖಾಯಿಲೆ ಇನ್ನೊಂದಿಲ್ಲ. ಅದನ್ನು ಜಯಿಸುವುದು ಅಷ್ಟು ಸುಲಭವೂ ಅಲ್ಲ. ಅದಕ್ಕೆ ಈಗಲೂ ಇರುವ ಸಾಂಪ್ರದಾಯಿಕ ಚಿಕಿತ್ಸೆಗಳೆಂದರೆ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ರೇಡಿಯೋಥೆರಪಿಗಳು ಮಾತ್ರ. ಕ್ಯಾನ್ಸರ್ ರೋಗದ ಹಾಗೆಯೇ ಈ ಚಿಕಿತ್ಸೆಗಳೂ ಸಹ ರೋಗಿಯನ್ನು ಜೀವಂತ ಶವ ಮಾಡಿಬಿಡುತ್ತವೆ. ಕ್ಯಾನ್ಸರ್ ಬಹುತೇಕ ರೋಗಿಗಳನ್ನು ಕೊಲ್ಲುತ್ತದೆ, ಆದರೆ ಈ ಕೊಲ್ಲುವ ಮಾದರಿಯೂ ಭೀಕರ. ದೇಹದ ಒಂದೊಂದೇ ಅವಯವಗಳನ್ನು ಅದು ನಿಷ್ಕ್ರಿಯಗೊಳಿಸುತ್ತ ಇಂಚುಇಂಚಾಗಿ ಮನುಷ್ಯನನ್ನು ಕೊಲ್ಲುತ್ತದೆ.

ನೀವು ಒಮ್ಮೆ ಕಿದ್ವಾಯಿ ಆಸ್ಪತ್ರೆಗೋ ಅಥವಾ ಶೃಂಗೇರಿ ಶಂಕರಮಠದವರು ನಡೆಸುವ ಶಂಕರ ಕ್ಯಾನ್ಸರ್ ಆಸ್ಪತ್ರೆಗೋ ಒಮ್ಮೆ ಹೋಗಿಬನ್ನಿ. ಅಲ್ಲಿ ಸಾವಿರ ಸಾವಿರಗಟ್ಟಲೆ ಕ್ಯಾನ್ಸರ್ ರೋಗಿಗಳನ್ನು ನೋಡಬಹುದು. ಎಲ್ಲರ ತಲೆಯೂ ಕೀಮೋಥೆರಪಿ ಎಂಬ ಭಯಾನಕ ಚಿಕಿತ್ಸೆಗೆ ಒಳಗಾಗಿ ಬೋಳಾಗಿರುತ್ತದೆ. ಬಹುಶಃ ನಿಮ್ಮ ಸಂಸದರ ಭಾಷೆಯಲ್ಲಿ ಹೇಳುವುದಾದರೆ ಇವರೆಲ್ಲರೂ ಬೋಳುಮಂಡೆಗಳೇ. ಕ್ಯಾನ್ಸರ್ ಕಣಗಳನ್ನು ಸಾಯಿಸಲೆಂದೇ ದೇಹಕ್ಕೆ ವಿಷವನ್ನು ಹರಿಸುವ ಚಿಕಿತ್ಸೆಯೇ ಕೀಮೋಥೆರಪಿ. ಅದು ಕ್ಯಾನ್ಸರ್ ಕಣಗಳ ಜತೆ ಗುದ್ದಾಡುವುದರ ಜತೆಗೆ ದೇಹದ ಇನ್ನಿತರ ಜೀವಕಣಗಳನ್ನೂ ಘಾಸಿಗೊಳಿಸುತ್ತದೆ. ಅದರ ಪರಿಣಾಮವಾಗಿಯೇ ಕ್ಯಾನ್ಸರ್ ರೋಗಿಗಳು ತಮ್ಮ ಕೂದಲು ಕಳೆದುಕೊಳ್ಳುತ್ತಾರೆ. ಕೂದಲು ಮಾತ್ರವಲ್ಲ, ಅವರ ದೇಹದ ಇಮ್ಯುನಿಟಿಯನ್ನೇ ಅದು ಕೊಲ್ಲುತ್ತ ಬರುತ್ತದೆ.

ಕೂದಲು ಕಳೆದುಕೊಳ್ಳುವುದೇನು ದೊಡ್ಡ ವಿಷಯವಲ್ಲ ಬಿಡಿ ಸರ್, ಜೀವ ಉಳಿಯಬೇಕಲ್ಲ. ಅದಕ್ಕಾಗಿ ಕೋಟ್ಯಂತರ ಕ್ಯಾನ್ಸರ್ ರೋಗಿಗಳು ಬಡಿದಾಡುತ್ತಲೇ ಇರುತ್ತಾರೆ. ಕಂಡಕಂಡ ಕಡೆ ಚಿಕಿತ್ಸೆಗೆ ಹೋಗುತ್ತಾರೆ. ಇದೊಂಥರ ಸಾವಿನ ಜತೆಗಿನ ಯುದ್ಧ. ಇಂಥ ಜೀವಗಳನ್ನು `ಬೋಳುಮಂಡೆಗಳು ಎಂದು ಕರೆಯಲು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಾ ಸರ್? ಇದೊಂದು ಪ್ರಶ್ನೆಗೆ ನೀವು ಉತ್ತರ ಕೊಟ್ಟರೆ ಸಾಕು, ಈ ಸುದೀರ್ಘ ಪತ್ರ ಬರೆದಿದ್ದೂ ಸಾರ್ಥಕವಾಗುತ್ತದೆ.

ದಿನೇಶ್ ಅವರು ಕ್ಯಾನ್ಸರ್ ಜತೆ ಗುದ್ದಾಡಿ, ನಂತರ ಅದರಿಂದ ಪಾರಾದ ನಂತರ ನನಗೆ ಗೊತ್ತಿರುವಂತೆ ವಾರಕ್ಕೆ ಇಬ್ಬರು ಕ್ಯಾನ್ಸರ್ ರೋಗಿಗಳು, ಸಂಬಂಧಿಗಳ ಜತೆಗಾದರೂ ಮಾತನಾಡುತ್ತಾರೆ. ಗಂಟೆಗಟ್ಟಲೆ ಅವರ ಅನುಭವವನ್ನು ಹೇಳುತ್ತ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ವೈದ್ಯರ ಜತೆ ಮಾತನಾಡಿ ರೋಗಿಗಳಿಗೆ ಸಹಾಯ ಮಾಡಲು ಮನವಿ ಮಾಡುತ್ತಾರೆ. ಸಕರ್ಾರದಿಂದ ಚಿಕಿತ್ಸಾ ವೆಚ್ಚವನ್ನು ಕೊಡಿಸಲು ಯತ್ನಿಸುತ್ತಾರೆ. ಇದೆಲ್ಲವನ್ನೂ ಅವರು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ನೊಂದ ನೋವು ನೋಯದವರಿಗೇನು ಗೊತ್ತು ಅಲ್ವಾ ಸರ್?

ಇದೆಲ್ಲ ವಿಷಯ ಒಂದೆಡೆ ಇರಲಿ, ಈಗ ಇಷ್ಟೆಲ್ಲ ವಿವರವಾಗಿ ಹೇಳಿದ ಮೇಲೂ ನೀವು ನಿಮ್ಮ ಸಂಸದರಿಂದ ಈ `ಬೋಳುಮಂಡೆ ಪ್ರಯೋಗದ ಬಗ್ಗೆ ಒಂದು ವಿಷಾದದ ಹೇಳಿಕೆ ಕೊಡಿಸುವಿರಾ? ಅದು ನಿಮ್ಮಿಂದ ಸಾಧ್ಯವಾ? ದಿನೇಶ್ ಅವರೇನೋ ತಾವು ಬರೆದ ಸಾಲಿನ ಧ್ವನಿ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡು ಅದನ್ನು ಡಿಲೀಟ್ ಮಾಡಿದರು. ಪ್ರತಾಪ್ ಸಿಂಹ ಅವರಿಂದ ಇದೇ ಕೆಲಸ ಮಾಡಿಸಲು ಸಾಧ್ಯವೇ ನಿಮ್ಮಿಂದ?

ಅದೆಲ್ಲ ಹೋಗಲಿ, ನೀವಾದರೂ ಬಲಪಂಥೀಯ ಹುಡುಗರು ತೀರಾ ಕೆಟ್ಟಾಕೊಳಕಾಗಿ ದಿನೇಶ್ ಅವರ ಕುರಿತು ಬರೆಯುವುದನ್ನು ನಿಲ್ಲಿಸಿ ಎಂದು ಒಂದು ಮನವಿ ಮಾಡಬಲ್ಲಿರಾ? ಖಂಡಿತಾ ಇಲ್ಲ. ನಿಮ್ಮ ಸ್ಟೇಟಸ್ಗೆ ಒಬ್ಬಾತ ದಿನೇಶ್ ಅವರ ದೇಹವನ್ನು ಸೀಳಿ, ಸಿದ್ಧರಾಮಯ್ಯ ಅವರ ಕೊರಳಿಗೆ ನೇತುಹಾಕಬೇಕು ಎಂದು ಕಮೆಂಟು ಬರೆಯುತ್ತಾನೆ. ನೀವು ಅದನ್ನು ಡಿಲೀಟ್ ಮಾಡುವ ಗೋಜಿಗೂ ಹೋಗುವುದಿಲ್ಲ. ಹೀಗೆಲ್ಲ ಬರೀಬೇಡ್ರಪ್ಪ ಎಂದು ನೀವು ಮನವಿ ಮಾಡಿದರೆ, ರಾಕೇಶ್ ಸಿದ್ಧರಾಮಯ್ಯ ತೀರಿಕೊಂಡಾಗ ಸಾವಿನ ಸಂಭ್ರಮ ಕೂಡದು ಎಂದು ಬರೆದ ಮಾಜಿ ಮುಖ್ಯಮಂತ್ರಿ ಶ್ರೀ ಸದಾನಂದಗೌಡರ ಮೇಲೆ ನಡೆದ ಅಕ್ಷರದಾಳಿಯೇ ನಿಮ್ಮ ಮೇಲೂ ನಡೆಯುತ್ತದೆ. ಯಾಕೆಂದರೆ ಈ ಹುಚ್ಚುಪಡೆಯ ವಿಕಾರಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಲೇ ಇದೆ. ಈ ಪಡೆಗೆ ಇವತ್ತು ಅಮೀನ್ ಮಟ್ಟು ಅವರು ಗುರಿ, ನಾಳೆ ಸ್ವತಃ ನರೇಂದ್ರ ಮೋದಿಯವರೇ ಆದರೂ ಆಶ್ಚರ್ಯವಿಲ್ಲ. ನಮಗೆ ಕನಿಕರ ಹುಟ್ಟಬೇಕಿರುವುದು ನಮ್ಮ ಬಗ್ಗೆಯೇ ಸರ್. ಇಂಥ ವಿಷವನ್ನು ಸಮಾಜದಲ್ಲಿ ಹರಡುತ್ತ ಹೋದ ನಮ್ಮ ಬೇಜವಾಬ್ದಾರಿಯ ಕುರಿತು.

ನಮ್ಮ ಮೌDinesh-1ನವೇ ನಮ್ಮಲ್ಲಿ ಅಸಹ್ಯವನ್ನು ಹುಟ್ಟಿಸಬೇಕು ಸರ್. ಡಾ.ಯು.ಆರ್.ಅನಂತಮೂರ್ತಿ, ಡಾ.ಎಂ.ಎಂ.ಕಲ್ಬುರ್ಗಿ, ರಾಕೇಶ್ ಸಿದ್ಧರಾಮಯ್ಯ ಅವರುಗಳು ತೀರಿಕೊಂಡಾಗ ಈ ವಚರ್ುಯಲ್ ಜಗತ್ತಿನಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಬರಬರುತ್ತ ಇದೊಂದು ಟ್ರೆಂಡ್ ಖಾಯಂ ಆಗಿ ಜಾರಿಯಲ್ಲಿರಲಿದೆ. ನಿಮ್ಮಂಥವರು ಇಂಥ ಸಂದರ್ಭಗಳಲ್ಲಿ ಮೌನಕ್ಕೆ ಶರಣಾಗುತ್ತೀರಿ, ಯಾಕೆಂದರೆ ನೀವೂ ಕೂಡ ಸದಾನಂದಗೌಡರ ಹಾಗೆ ದಾಳಿಗೆ ಒಳಗಾಗುವ ಭೀತಿಯಲ್ಲಿರಬಹುದು. ಆದರೂ ನನ್ನದೊಂದು ಮನವಿ. ಈ ವಿಕಾರಗಳ ಕುರಿತು ಯಾವಾಗಲಾದರೂ ಮಾತನಾಡಿ ಸರ್; ಪಕ್ಷ-ಸಂಸ್ಥೆ-ಸಿದ್ಧಾಂತಗಳಿಂದ ಆಚೆ ಬಂದು.

ನೀವು ರಾಜಕಾರಣದಲ್ಲಿ ಇದ್ದರೂ ಮಾನವೀಯ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಬಲ್ಲವರು ಎನ್ನುವ ಕಾರಣಕ್ಕೆ ಇಷ್ಟನ್ನು ಬರೆದಿದ್ದೇನೆ. ಉತ್ತರಿಸುತ್ತೀರಿ ಎಂಬ ನಿರೀಕ್ಷೆಗಳೇನೂ ಇಲ್ಲ.

ಸಾವಿತ್ರಿ ಮೇಡಂಗೆ ನನ್ನ ನಮಸ್ಕಾರಗಳನ್ನು ತಿಳಿಸಿ.

ಪ್ರೀತಿಯಿಂದ
ದಿನೇಶ್ ಕುಮಾರ್ ಎಸ್.ಸಿ. (ದಿನೂ)

ಬುರ್ಕಾ ಧರಿಸಿದ ವಿದ್ಯಾರ್ಥಿನಿ : ವಿವಾದದ ಹಿಂದಿರುವ ಕೇಸರಿ ಸಂಚು

ನವೀನ್ ಸೂರಿಂಜೆ

ಅವತ್ತು ಆಯಿಶಾ ಆಸ್ಮಿನ್ ಎಂಬ ವಿದ್ಯಾರ್ಥಿನಿಗೆ ಬುರ್ಕಾ ಧರಿಸಿ ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಸುದ್ದಿ ಬಂದ ತಕ್ಷಣ ನಾನು ಸುದಿಪ್ತೋ ಮೊಂಡಲ್ , ಶ್ರೀನಿಧಿ, ವಿನೋಭ, ಸತ್ಯ ಬಂಟ್ವಾಳದ ಎಸ್ ವಿ ಎಸ್ ಕಾಲೇಜಿಗೆ ತೆರಳಿದ್ದೆವು. ಸುದ್ದಿ ಮಾಡುವ ಉದ್ದೇಶದಿಂದ ತೆರಳಿದ್ದ ನಮಗೆ ಅಲ್ಲಿನ ಪ್ರಾಂಶುಪಾಲರು ಅಧಿಕೃತವಾಗಿ ಹೇಳಿಕೆ ಕೊಟ್ಟಿದ್ದೇನೆಂದರೆ, ”ನೋಡಿ ಇವತ್ತು ಬುರ್ಕಾ ಹಾಕಿಕೊಂಡು ಬರಲು ಅನುಮತಿ ಕೊಟ್ಟರೆ, ನಾಳೆಯಿಂದ ಕಾಲೇಜಿನ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ. ಶಾಲೆಯ ಶಿಸ್ತು ಹಾಳಾಗುತ್ತದೆ. ಅದಕ್ಕೆ ಬುರ್ಕಾ ಹಾಕಿಕೊಂಡು ಪ್ರವೇಶ ಬೇಡ”.

 
ಅವತ್ತು ಬಂಟ್ವಾಳದ ಎಸ್ ವಿ ಎಸ್ ಕಾಲೇಸುರಿಂಜೆ-1ಜಿನ ಪ್ರಾಂಶುಪಾಲರು ಹೇಳಿದಂತೆ ಆಗಲಿಲ್ಲ. ವಿದ್ಯಾರ್ಥಿನಿ ನಾಳೆಯಿಂದ ಬುರ್ಕಾ ಹಾಕಿಕೊಂಡು ಬರಬಾರದು ಎಂದರೆ ಆಕೆಯ ಶೈಕ್ಷಣಿಕ ಭವಿಷ್ಯವೇ ತುಂಡಾಗುತ್ತದೆ. ಬುರ್ಕಾ ಬೇಕೇ ಬೇಡವೇ ಎನ್ನುವುದು ಬೇರೆಯದ್ದೇ ಚರ್ಚೆ. ನಾಳೆಯಿಂದಲೇ ತೆಗೆಯಬೇಕು ಎಂದು ನಿರ್ಭಂಧ ವಿಧಿಸೋದ್ರಿಂದ ಆಕೆಯ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದುಕೊಂಡು ನಾವು ಆಯಿಶಾ ಆಸ್ಮಿನ್ ಗೆ ಬುರ್ಕಾ ಧರಿಸಿ ಕಾಲೇಜು ಪ್ರವೇಶ ನಿರಾಕರಣೆಯ ಸುದ್ದಿ ಮಾಡಿದ್ವಿ. ಅದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಕೊನೆಗೆ ಕಾಲೇಜು ಆಡಳಿತ ಮಂಡಳಿ ಬುರ್ಕಾದೊಂದಿಗೆ ಆಯಿಶಾ ಆಸ್ಮಿನ್ ಗೆ ಪ್ರವೇಶಕ್ಕೆ ಅವಕಾಶ ನೀಡಿತ್ತು. ಆದರೆ ಅವತ್ತು ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದನ್ನು ಇಂದು ಸುಳ್ಯ ತಾಲೂಕಿನ ಪೆರ್ವಾಜೆಯ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಗಳು ಜಾರಿಗೆ ತಂದಿದ್ದಾರೆ. ಬುರ್ಕಾ ಹಾಕಿಕೊಂಡು ಬರುವುದಾದರೆ ನಾವೂ ಕೂಡಾ ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಹಠ ಹಿಡಿದಿದ್ದಾರೆ.

 

ಸುಳ್ಯದ ಪೆರುವಾಜೆ ಕಾಲೇಜಿನಲ್ಲಿ ಎಬಿವಿಪಿಯ ಸೂಚನೆಯಂತೆ ಬುರ್ಕಾ ನಿಷೇದಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ತೊಟ್ಟಿದ್ದರು. ಸ್ವಲ್ಪ ಹಿಂದಕ್ಕೆ ಹೋಗೋಣ. ಅಂದು ಜೆ ಎನ್ ಯು ನಲ್ಲಿ ಕನ್ಹಯ್ಯ ಕುಮಾರ್ ಬಡತನ, ಹಸಿವು, ಅಸಮಾನತೆಯಿಂದ ಸ್ವಾತಂತ್ರ್ಯ ಬೇಕು ಎಂದು ಕೇಳಿದಾಗ ಇದೇ ಎಬಿವಿಪಿಯವರು ಬೊಬ್ಬೆ ಹಾಕಿದ್ದರು. ಜೆ ಎನ್ ಯು ವಿದ್ಯಾರ್ಥಿಗಳಿಗೆ ನಮ್ಮ ತೆರಿಗೆಯ ಹಣದಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅವರಿಗೆ ಶಿಕ್ಷಣ ಪಡೆಯುವುದರ ಹೊರತಾಗಿ ಇದೆಲ್ಲಾ ರಾಜಕೀಯ ಏಕೆ ಬೇಕು ಎಂದು ಎಬಿವಿಪಿ ಪ್ರಶ್ನೆ ಮಾಡಿತ್ತು. ಪೆರುವಾಜೆ ಸರಕಾರಿ ಕಾಲೇಜಿನಲ್ಲಿ ಕೂಡಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುತ್ತಿರುವುದು ನಮ್ಮದೇ ತೆರಿಗೆ ಹಣದಲ್ಲಿ. ಇಲ್ಯಾಕೆ ರಾಜಕೀಯ ಬೇಕಿದೆ ಎಂದು ಎಬಿವಿಪಿ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂಬುದು ಬೇರೆ ವಿಚಾರ. ಇರಲಿ.

 

ಶಬರಿಮಲೆ ವೃತದ ಸಂಧರ್ಭದಲ್ಲಿ ಕಪ್ಪು ಶಾಲನ್ನು ಧರಿಸಿಕೊಂಡು ಹಲವು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ಮುಸ್ಲಿಂ ವಿದ್ಯಾರ್ಥಿಗಳಾಗಲೀ, ತರಗತಿ ಉಪನ್ಯಾಸಕರಾಗಲೀ, ಆಡಳಿತ ಮಂಡಳಿಯಾಗಲೀ ವಿರೋಧ ವ್ಯಕ್ತಪಡಿಸಿದ ಉದಾಹರಣೆಗಳು ಇಲ್ಲ. ಕೆಲವೇ ದಿನಗಳ ಕಾಲ ಹಾಕುವ ಧಾರ್ಮಿಕ ವಸ್ತ್ರಾಧಾರಣೆಯ ಬಗ್ಗೆ ಆಕ್ಷೇಪ ಎತ್ತುವುದು ಕೂಡಾ ಸರಿಯಾದುದಲ್ಲ. ಬುರ್ಕಾದ ವಿಚಾರ ಹಾಗಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಆವರಣದೊಳಗೆ ಬುರ್ಕಾ ಹಾಕಿದರೂ ತರಗತಿಯಲ್ಲಿ ಬುರ್ಕಾ ಹಾಕಿಕೊಂಡು ಕೂರುವುದಿಲ್ಲ. ಎಲ್ಲಾ ವಿದ್ಯಾರ್ಥಿನಿಯರಂತೆ ಸಮವಸ್ತ್ರದಲ್ಲೇ ಪಾಠ ಕೇಳುತ್ತಾರೆ.
ಬುರ್ಕಾ ಎನ್ನುವುದು ಪುರುಷ ಮನಸ್ಥಿತಿಯ ಹೇರಿಕೆ ಎನ್ನುವುದು ಮತ್ತೊಂದು ವಾದ. ಹಾಗಂತ ಏಕಾಏಕಿ ಒಬ್ಬರ ವಸ್ತ್ರವನ್ನು ತಕ್ಷಣದಿಂದಲೇ ಬದಲಾಯಿಸಬೇಕು ಎಂದು ತಾಕೀತು ಮಾಡುವುದು ಯಾವ ನ್ಯಾಯ ?

 

ಮೂಡಬಿದ್ರೆಯ ಜೈನ್ ಕಾಲೇಜಿನಲ್ಲೂ ಇಂತಹುದೇ ಪ್ರಸಂಗ ಎದುರಾಗಿತ್ತು. ವಿದ್ಯಾರ್ಥಿನಿಯರು ಬುರ್ಕಾ ಧರಿಸಿಕೊಂಡು ಕಾಲೇಜಿಗೆ ಬರಬಾರದು ಎಂದು ದಿಢೀರನೆ ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು. ಬುರ್ಕಾ ಧರಿಸಿ ಕಾಲೇಜಿಗೆ ಪ್ರವೇಶವಿಲ್ಲ ಎಂದು ಕಾಲೇಜಿಗೆ ವಿದ್ಯಾರ್ಥಿನಿ ಸೇರುವ ದಿನವೇ ಖಾತ್ರಿ ಪಡಿಸಿದ್ದರೆ ಅಥವಾ ಕಾಲೇಜಿನ ನಿಯಮಾವಳಿ ಪುಸ್ತಕದಲ್ಲೇ ಅದನ್ನು ಸ್ಪಷ್ಟಪಡಿಸಿ, ನಂತರ ವಿದ್ಯಾರ್ಥಿನಿ ಕಾಲೇಜಿಗೆ ಪ್ರವೇಶಾತಿಯನ್ನು ಪಡೆದಿದ್ದರೆ ಆಡಳಿತ ಮಂಡಳಿಯ ತಾಕೀತಿಗೊಂದು ಅಸುರಿಂಜೆ-2ರ್ಥ ಇರುತ್ತಿತ್ತು. ಆದರೆ ಈವರೆಗೂ ಇಲ್ಲದ ಒಂದು ಆಕ್ಷೇಪ ಒಮ್ಮಿಂದೊಮ್ಮೆಲೆ ಬಂದಾಗ ಅದರ ಹಿಂದೆ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಿಸಬಾರದು ಎಂದು ಬಯಸುವ ಮನಸ್ಥಿತಿಗಳ ಕೈವಾಡ ಇರುವುದು ಖಚಿತವಾಗುತ್ತದೆ. ಹಾಗಾಗಿಯೇ ಮೂಡಬಿದ್ರೆ ಜೈನ್ ಕಾಲೇಜಿನ ಬುರ್ಕಾ ನಿಷೇಧವನ್ನು ನಾವು ಒಂದು ತಂಡವಾಗಿ ಸುದ್ದಿ ಮಾಡಿದ್ದೆವು. ಸುದ್ದಿ ಬಂದ ನಂತರ ಕಾಲೇಜಿನ ಪರ ಅಥವಾ ಬಲಪಂಥೀಯರ ಪರ ಇದ್ದ ಕೆಲ ಪತ್ರಕರ್ತರು ಸಾಹಿತಿ ಸಾರಾ ಅಬುಬಕ್ಕರ್ ಹೇಳಿಕೆಯನ್ನು ಪಡೆದುಕೊಂಡರು. ಸ್ತ್ರೀವಾದಿ ಸಾರ ಅಬೂಬಕ್ಕರ್ ಬುರ್ಕಾ ವಿರೋಧಿ. ಹಾಗಂತ ಅವರು ಘಟನೆಯ ಹಿನ್ನಲೆಯನ್ನು ಅಭ್ಯಸಿಸದೇ “ಬುರ್ಕಾ ನಿಷೇದ ಮಾಡಿದ್ದು ಕಾಲೇಜು ಆಡಳಿತ ಮಂಡಳಿಯ ಉತ್ತಮ ನಿಲುವು” ಎಂದು ಬಿಟ್ಟರು. ಇದನ್ನೇ ಕಾಯುತ್ತಿದ್ದ ಪತ್ರಕರ್ತರು ಸಾರಾ ಅಬೂಬಕ್ಕರ್ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಂಡರು.

 

ಇಷ್ಟಕ್ಕೂ ಬುರ್ಕಾವನ್ನು ಪ್ರಗತಿಪರರು ಸ್ತ್ರಿವಾದದ ನೆಲೆಯಲ್ಲಿ ವಿರೋಧಿಸುತ್ತಾರೆ. ಈ ಎಬಿವಿಪಿಗೆ ಸೇರಿದ ಹುಡುಗರು ಯಾಕೆ ವಿರೋಧಿಸುತ್ತಾರೆ ಎಂಬ ಸ್ಪಷ್ಟನೆಯನ್ನು ಕೊಡಬೇಕು. ವಿದ್ಯಾರ್ಥಿನಿಯರು ಚಿಕ್ಕ ಚಿಕ್ಕ ಡ್ರೆಸ್ ಗಳನ್ನು ಹಾಕಿಕೊಂಡು ಬಂದರೆ ಅದನ್ನು ನೈತಿಕತೆಯ ಹೆಸರಲ್ಲಿ ಇದೇ ಎಬಿವಿಪಿಯವರು ವಿರೋಧಿಸುತ್ತಾರೆ. ಪೂರ್ತಿ ಮೈಮುಚ್ಚಿಕೊಂಡು ಬಂದರೆ ಬುರ್ಕಾದ ಹೆಸರಿನಲ್ಲಿ ವಿರೋಧಿಸುತ್ತಾರೆ. ಇದು ಎಂತಹ ದ್ವಂದ್ವತೆ ? ಬುರ್ಕಾ ಎನ್ನುವುದು ಪುರುಷರು ಮಹಿಳೆಯರ ಮೇಲೆ ಹೇರಿರುವ ವಸ್ತ್ರ ಸಂಹಿತೆ ಅನ್ನೋ ಕಾರಣಕ್ಕಾಗಿ ಎಬಿವಿಪಿ ವಿರೋಧಿಸುತ್ತದೆ ಎಂದಾದರೆ, ವಸ್ತ್ರದ ವಿಷಯದಲ್ಲಿ ಆರ್ ಎಸ್ ಎಸ್ ನಿಲುವುಗಳೆಲ್ಲವನ್ನೂ ಎಬಿವಿಪಿ ವಿರೋಧ ಮಾಡಬೇಕಾಗುತ್ತದೆ. ಆದರೆ ಕಾರಣವೇ ಇಲ್ಲದೆ ಬುರ್ಕಾವನ್ನು ವಿರೋಧಿಸುವುದು, ಬುರ್ಕಾ ಧರಿಸಿಕೊಂಡು ವಿದ್ಯಾರ್ಥಿನಿಯರು ಕಾಲೇಜಿಗೆ ಬರಬಾರದೆಂದು ತಡೆಯುವುದು ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿಸುವ ಸಂಚಲ್ಲದೆ ಬೇರೇನೂ ಅಲ್ಲ ಎಂಬುದಂತೂ ಸ್ಪಷ್ಟ.

ಸ್ವರ್ಗ ಹಾಗೂ ನರಕದ ಕಲ್ಪನೆ ಮತ್ತು ರಮ್ಯಾ ಹೇಳಿಕೆ


-ಇರ್ಷಾದ್ ಉಪ್ಪಿನಂಗಡಿ


 

ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ಪಾಕಿಸ್ತಾನ ನರಕ ಎಂಬ ಹೇಳಿಕೆಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ನರಕವಲ್ಲ ಅಲ್ಲೂ ನಮ್ಮಂತಹಾ ಒಳ್ಳೆಯ ಮನಸ್ಸಿನ ಜನರಿದ್ದಾರೆ ಎಂಬ ಮಾಜಿ ಸಂಸದೆ ನಟಿ ರಮ್ಯಾ ನೀಡಿದ ಹೇಳಿಕೆ ಸದ್ಯ ವಿವಾದದ ಕೇಂದ್ರ ಬಿಂದು. ಪಾಕಿಸ್ತಾನದ ಜನರ ಪರವಾಗಿ ರಮ್ಯಾ ನೀಡಿದ ಹೇಳಿಕೆ ಇಂದು ಅವರನ್ನು “ದೇಶದ್ರೋಹಿ” ಪಟ್ಟಕ್ಕೆ ಏರಿಸಿದೆ.

ಹೇಳಿಕೆಗಳನ್ನು ಖಂಡಿಸಿ ಅಲ್ಲಲ್ಲಿ ಸಂಘಪರಿವಾರದ ಪ್ರತಿಭಟನೆಗಳನ್ನು ನಡೆಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ರಮ್ಯಾramya-siddaramaiah ವಿರುದ್ಧ ಕೀಳು ಮಟ್ಟದ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಭಕ್ತರ ವಲಯ. ಅಷ್ಟಕ್ಕೂ ಪಾಕಿಸ್ತಾನದ ಭಾರತದ ಶತ್ರು ರಾಷ್ಟ್ರವಾಗಿರಹುದು. ಎರಡೂ ದೇಶಗಳ ನಡುವೆ ಗಡಿಯಲ್ಲಿ ಘರ್ಷಣೆ ನಡೆಯುತ್ತಿರಬಹುದು. ಇದು ಎರಡೂ ದೇಶಗಳ ನಡುವಿನ ರಾಜಕೀಯ ಸಂಘರ್ಷ. ಆದರೆ ಅಲ್ಲೂ ಜನಪರ, ಜೀವಪರ ಜ್ಯಾತ್ಯಾತೀತ ಮನಸ್ಸುಗಳಿವೆ. ತಮ್ಮ ಹಾಡಿನ ಮೂಲಕ ಜನರ ಮನಸ್ಸಿನಲ್ಲಿ ಶಾಂತಿ, ಪ್ರೀತಿಯನ್ನು ಬಿತ್ತುವ ಆಬಿದಾ ಪರ್ವೀನ್ , ನುಸ್ರತ್ ಫತೇ ಅಲಿಖಾನ್, ಗುಲಾಮ್ ಅಲಿ ಹಾಗೂ ಇತ್ತೀಚೆಗೆ ಉಗ್ರರ ಕೈಯಿಂದ ಹತರಾದ ಅಜ್ಮದ್ ಸಾಬ್ರಿಯಂತಹಾ ಸೂಫಿ ಗಾಯಕರನ್ನು ಶತ್ರುಗಳಾಗಿ ಕಾಣಲು ಸಾಧ್ಯವೇ ?

ಪಾಕಿಸ್ತಾನದ ಜನಸಂಖ್ಯೆಯಲ್ಲಿ ಶೇ. 2 ರಷ್ಟಿರುವ ಅಲ್ಪಸಂಖ್ಯಾತ ಹಿಂದೂಗಳು ಹಾಗೂ ಕ್ರೈಸ್ತರು ಹಾಗೂ ಮಹಿಳಾ ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಿರುವ ಅಸ್ಮಾ ಜಹಾಂಗೀರ್, ಅನ್ಸಾರ್ ಬರ್ನಿ, ಮಲಾಲ ಯೂಸುಫ್ ಝೈನಿ ಹಾಗೂ ಇತ್ತೀಚೆಗೆ ಮೂಲಭೂತವಾದಿಗಳಿಂದ ಹತ್ಯೆಗೊಳಗಾದ ಸಬೀನ್ ಮೆಹಮೂದ್ ರಂತಹಾ ನೂರಾರು ಹೋರಾಟಗಳನ್ನು ತಿರಸ್ಕರಿಸಲು ಸಾಧ್ಯವೇ ? ಆದರೆ ಪಾಕಿಸ್ತಾನದಲ್ಲಿ ಬೆಳೆದು ನಿಂತ ಮುಸ್ಲಿಮ್ ಮೂಲಭೂತವಾದಿ ಶಕ್ತಿಗಳು ಆ ದೇಶವನ್ನು ನರಕ ಮಾಡಲು ಹೊರಟಿವೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಅಭಿವ್ಯಕ್ತಿಯ ಹರಣವಾಗುತ್ತಿವೆ. ಮೂಲಭೂತವಾದಿಗಳ ವಿರುದ್ಧ ಧ್ವನಿ ಎತ್ತುವ ಪ್ರಗತಿಪರ, ಜ್ಯಾತ್ಯಾತೀತ ಹೋರಾಟಗಾರರನ್ನು ಸಂಗೀತಗಾರರನ್ನು ಹತ್ಯೆಮಾಡಲಾಗುತ್ತಿದೆ. ಧರ್ಮ ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯರ ಮೇಲೂ ದೌರ್ಜನ್ಯಗಳು, ಉಗ್ರವಾದಿ ಚಟುವಟಿಕೆಗಳು ಪಾಕಿಸ್ತಾನದಲ್ಲಿ ಮಿತಿಮೀರುತ್ತಿವೆ ಎಂಬುವುದು ಆತಂಕಕಾರಿ ವಿಚಾರ.

ಇದು ಕೇವಲ ಪಾಕಿಸ್ತಾನದ ಸಮಸ್ಯೆ ಮಾತ್ರವಲ್ಲ. ಭಾರತದಲ್ಲೂ ಇಂತಹದ್ದೇ ಸನ್ನಿವೇಶವನ್ನು ಇಲ್ಲಿರುವ ಮತಾಂಧ ಶಕ್ತಿಗಳು ಸೃಷ್ಟಿಸುತ್ತಿವೆ. ಪಾಕಿಸ್ತಾನ ನರಕವಾದರೆ ಭಾರತ ಸ್ವರ್ಗವೇ ಎಂಬ ಪ್ರೆಶ್ನೆಗೆ ನಮ್ಮ ಮುಂದೆ ನಡೆಯುವ ನೂರಾರು ನಿದರ್ಶನಗಳು ಉತ್ತರವಾಗಿವೆ. ಪ್ರತಿದೇಶದಲ್ಲೂ ಉಳ್ಳವರ ಪಾಲಿಗೆ ಖಂಡಿತಾ ಸ್ವರ್ಗವಿದೆ. ಆ ದೇಶದಲ್ಲಿ ನರಕದ ಪರಿಸ್ಥಿತಿಯನ್ನು ಅನುಭವಿಸುವವರು ಅಲ್ಲಿರುವ ಬಡವರು, ನಿರ್ಗತಿಕರು, ಶೋಷಿತರು ಹಾಗೂ ದುರ್ಬಲರು.

ಅಷ್ಟಕ್ಕೂ ನಮ್ಮ ಭವ್ಯ ಭಾರತ ಸ್ವರ್ಗಾನಾ..? ಹೌದು ಖಂಡಿತಾ ಸ್ವರ್ಗ. ಅದು ಯಾರ ಪಾಲಿಗೆ ಅಂದರೆ. ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಧನಿಗಳINDIA-BHOPAL-POLLUTION-ACCIDENT-25YRS ಪಾಲಿಗಷ್ಟೇ. ಬದಲಾಗಿ ಒಡಿಸ್ಸಾದ ದಾನಾ ಸಿಂಗ್ ಮಾಝಿ ಪಾಲಿಗಲ್ಲ. ಊನಾದ ದಲಿತರ ಪಾಲಿಗೂ ಅಲ್ಲ. ಮಜಾಫರನಗರದ ಮುಸ್ಲಿಮರ ಪಾಲಿಗೂ ಅಲ್ಲ. ಕಂದಮಾಲಿನ ಕ್ರೈಸ್ತರ ಪಾಲಿಗೂ ಅಲ್ಲ. ಒಡಿಸ್ಸಾದ ಭುವನೇಶ್ವರದಲ್ಲಿ ನಡೆದ ಘಟನೆ ಸದ್ಯ ಭವ್ಯ ಭಾರತದ ನರಕದ ಬದುಕನ್ನು ನಮ್ಮ ಮುಂದೆ ತೆರೆದಿಟ್ಟಿದೆ. ದಾನಾ ಸಿಂಗ್ ಮಾಝಿ ಎಂಬ ಬಡ ವ್ಯಕ್ತಿ, ಕ್ಷಯ ರೋಗದಿಂದ ಬಳಲಿ ಸಾವನ್ನಪ್ಪಿದ ತನ್ನ ಪತ್ನಿಯ ಶವವನ್ನು ಆಸ್ಪತ್ರೆಯಿಂದ ಮನೆಗೆ ಸಾಗಿಸಲು ವಾಹನವನ್ನು ನೀಡಲು ಸರ್ಕಾರಿ ಆಸ್ಪತ್ರೆ ನಿರಾಕರಿಸಿತ್ತು. ಪರಿಣಾಮ ಹೆಂಡತಿಯ ಶವವನ್ನು ಹೆಗಲಲ್ಲೇ ಹೊತ್ತು 10 ಕಿಲೋ ಮೀಟರ್ ನಡೆದುಕೊಂಡು ಊರಿನತ್ತ ತೆರಳುವ ದೃಶ್ಯ ಸ್ವರ್ಗದಲ್ಲಿ ಕಾಣಲು ಸಾಧ್ಯವೇ ? ಸತ್ತ ತಾಯಿಯ ಹೆಣವನ್ನು ಹೊತ್ತುಕೊಂಡು ಹೋಗುವ ತಂದೆ ಜೊತೆಯಲ್ಲಿ ಕಣ್ಣೀರಿಡುತ್ತಾ ನಡೆಯುತ್ತಿದ್ದ ದಾನಾ ಸಿಂಗ್ ಮಾಝಿ ಮಗಳಲ್ಲಿ ಸ್ವರ್ಗ ಯಾವುದು ನರಕ ಯಾವುದು ಎಂದು ಕೇಳಿದ್ರೆ ಸ್ಪಷ್ಟ ಉತ್ತರ ಎಲ್ಲರಿಗೂ ಸಿಗಬಹುದು. ಮಾಯಾ ನಗರಿ ಮುಂಬಯಿನಲ್ಲಿರುವ ಧಾರಾವಿ ಸ್ಲಮ್ ಬಗ್ಗೆ ನಿಮಗೂ ತಿಳಿದಿರಬಹುದು. ಭವ್ಯ ಮುಂಬಯಿ ನಗರದ ಮಧ್ಯ ಭಾಗದಲ್ಲೇ ಇರುವ ಈ ಸ್ಲಮ್ ಏಷ್ಯಾದಲ್ಲೇ ಅತೀ ದೊಡ್ಡ ಸ್ಲಮ್ ಎಂಬ “ಹೆಗ್ಗಳಿಕೆಯನ್ನು” ಪಡೆದುಕೊಂಡಿದೆ. ಈ ಸ್ಲಮ್ ಇರುವುದು ನಮ್ಮ ಭವ್ಯ ಭಾರತದಲ್ಲೇ ಅಲ್ಲವೇ ? ಸ್ಲಮ್ ನಲ್ಲಿ ಜೀವನ ನಡೆಸುತ್ತಿರುವ ನಿವಾಸಿಗಳಲ್ಲಿ ಹೋಗಿ ನೀವು ಸ್ವರ್ಗದಲ್ಲಿ ಬದುಕುತ್ತೀದ್ದೀರಾ ಅಥವಾ ನರಕದಲ್ಲಾ ಎಂದು ಪ್ರಶ್ನಿಸಿದರೆ ಬಹುಷಃ ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ಗೂ ಉತ್ತರ ಸಿಗಬಹುದೇನೋ !.

ಇಂದಿಗೂ ಬಡವರು , ಆದಿವಾಸಿಗಳು ಕನಿಷ್ಠ ಮೂಲಸೌಕರ್ಯವಿಲ್ಲದೆ ನರಕದಂತಹಾ ಬದುಕನ್ನೇ ಸಾಗಿಸುತ್ತಿದ್ದಾರೆ. ಇದು ಒಂದೆಡೆಯಾದರೆ Kalburgiಇನ್ನೊಂದೆಡೆ ಮತಾಂಧರು ಸೃಷ್ಟಿಸಿದ ನರಕ ಅತ್ಯಂತ ಭಯಾನಕವಾದುದು. ಗುಜರಾತ್ ಹತ್ಯಾಕಾಂಡ, ಸಿಖ್ ಹತ್ಯಾಕಾಂಡ, ಮತಾಂತರದ ಆರೋಪದಲ್ಲಿ ನಡೆದ ಓಡಿಸ್ಸಾ ಕಂದಮಾಲ್ ಹತ್ಯಾಕಾಂಡ, ಮುಝಫರ್ ನಗರ್, ಖೈರ್ಲಾಂಜಿ ಹಾಗೂ ಕಂಬಾಲಪಳ್ಳಿಯಲ್ಲಿ ಹತ್ಯಾಕಾಂಡಗಳಲ್ಲಿ ಕಾಣುವ ಭೀಕರತೆಗಳು ಸ್ವರ್ಗದ ಕಲ್ಪನೆಯಲ್ಲಿ ಖಂಡಿತಾ ಕಾಣೋದಕ್ಕೆ ಸಿಗುವುದಿಲ್ಲ. ಈ ಕರಾಳ ಅನುಭವಗಳನ್ನು ಅನುಭವಿಸಿದ ಜನರಲ್ಲಿ ಹೋಗಿ ವಿಚಾರಿಸಿದರೆ ಅವರು ಅನುಭವಿಸಿದ ನರಕದ ಬದುಕಿನ ದರ್ಶನವಾಗಬಹುದು. ಪಾಕಿಸ್ತಾನದ ಮೂಲಭೂತವಾದಿಗಳು ನಡೆಸುವ ಕೃತ್ಯದಂತೆ ನಮ್ಮ ದೇಶದಲ್ಲೂ ನಡೆದ ವಿಚಾರವಾದಿಗಳ ಹತ್ಯೆ ಏನನ್ನು ಸೂಚಿಸುತ್ತದೆ. ದಾಭೋಲ್ಕರ್, ಪನ್ಸಾರೆ ಹಾಗೂ ಡಾ.ಕಲಬುರ್ಗಿಯವರ ಹತ್ಯೆಗಳನ್ನು ನಡೆಸೋ ಮೂಲಕ ಭಾರತವನ್ನು ನರಕವನ್ನಾಗಿ ಮಾಡಲು ಹೊರಟಿಲ್ಲವೇ ನಮ್ಮ ದೇಶದ ಕೋಮುವಾದಿಗಳು.

ಇನ್ನು ಮಂಗಳೂರಿನ ವಿಚಾರಕ್ಕೆ ಬರೋಣ. ಖಾಸಗಿ ವಾಹಿನಿಯೊಂದಕ್ಕೆ ನಟಿ ರಮ್ಯಾ ನೀಡಿದ ಸಂದರ್ಶನದಲ್ಲಿ ಮಂಗಳೂರಿನಲ್ಲೂ ನರಕ ಇದೆ ಎಂಬ ಹೇಳಿಕೆ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ಗುರುವಾರ ಮಂಗಳೂರಿನಲ್ಲಿ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ರಮ್ಯಾ ಬಂದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರಿವಾರದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಮುಂದುವರಿದು ರಮ್ಯಾ ಪ್ರಯಾಣಿಸುತ್ತಿದ್ದ ಕಾರಿಗೂ ಮೊಟ್ಟೆ ಎಸೆದದ್ದು ಅಲ್ಲದೆ ಮಂಗಳೂರಿನ ಕದ್ರಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ವೇದಿಕೆಯತ್ತ ಮೊಟ್ಟೆ ಎಸೆದು “ಪೌರುಷ” ಪ್ರದರ್ಶಿಸಿದ್ದರು.

ನಟಿ ರಮ್ಯಾ ಯಾವ ಅರ್ಥದಲ್ಲಿ ಮಂಗಳೂರಿನಲ್ಲಿ ನರಕ ಇದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಮಂಗಳೂರು ಒಂದು ವರ್ಗದ ಜನರ ಪಾಲಿಗೆ ಖಂಡಿತವಾಗಿಯೂ ನರಕ. ಒಂದು ಭಾಗದಲ್ಲಿ ಪಶ್ವಿಮ ಘಟ್ಟದ ಹಚ್ಚ ಹಸುರಿನ ಸುಂದರ ಪ್ರದೇಶ, ಇನ್ನೊಂದೆಡೆ ಕಡಲ ತೀರದ ವೈಭವ. ಜೊತೆಗೆ ಮಂಗಳೂರು ಕಲೆ ಸಂಸ್ಕೃತಿ ತಿಂಡಿತಿನಿಸುಗಳಲ್ಲಿ ಪ್ರಸಿದ್ದಿ ಪಡೆದ ಜಿಲ್ಲೆ. ಹೀಗೆ ನೋಡಲು ಸ್ವರ್ಗದಂತಿರುವ ಈ ಜಿಲ್ಲೆಯನ್ನು ಇಲ್ಲಿಯ ಹಿಂದೂ ಮುಸ್ಲಿಮ್ ಮತಾಂಧರು ನರಕ ಮಾಡಲು ಹೊರಟಿದ್ದಾರೆ. ಅದರಲ್ಲಿ ಯಶಸ್ಸನ್ನೂ ಕಾಣುತ್ತಿದ್ದಾರೆ.

ಕಲ್ಲಡ್ಕದಲ್ಲಿ ಹಿಂದೂ ಹುಡುಗಿ ಹಾಗೂ ಮುಸ್ಲಿಮ್ ಹುಡುಗಿ ಜೊತೆಯಲ್ಲಿ ನಡೆದಾಡುವುದೂ ತಪ್ಪು. ಅವರನ್ನು ಸುತ್ತುವರಿಸಿದು ಪ್ರಶ್ನಿಸಿ ಮತಾಂಧರುmangalore_moral1 ನೈತಿಕ ಪೊಲೀಸ್ ಗಿರಿ ನಡೆಸುತ್ತಾರೆ. ಹಿಂದೂ ಯುವತಿಯ ಜೊತೆ ಕಾರಲ್ಲಿ ಪ್ರಯಾಣಿಸಿದ ಎಂಬ ಕಾರಣಕ್ಕಾಗಿ ಮಂಗಳೂರಿನ ಅತ್ತಾವರದಲ್ಲಿ ಯುವಕನೊಬ್ಬನ ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸುತ್ತಾರೆ. ಮುಸ್ಲಿಮ್ ಯುವತಿಯ ಜೊತೆ ಮಾತನಾಡಿದ ಎಂಬ ಕಾರಣಕ್ಕಾಗಿ ಪತ್ರಕರ್ತನೊಬ್ಬರನ್ನು ಹಿಗ್ಗಾಮುಗ್ಗಾ ಥಳಿಸುತ್ತಾರೆ. ಯುವಕ ಯುವತಿಯರು ಹುಟ್ಟುಹಬ್ಬದ ಪಾರ್ಟಿ ಆಚರಣೆ ಮಾಡಿದಾಗಲೂ ದಾಳಿ ನಡೆಸಿ ಸುಸಂಸ್ಕೃತಿಯ ಪ್ರದರ್ಶನ ಮಾಡ್ತಾರೆ. ದನ ಸಾಗಾಟ ಮಾಡಿದ್ದಾರೆಂಬ ಆರೋಪ ಹೊರಿಸಿ ಆದಿ ಉಡುಪಿಯಲ್ಲಿ ಹಾಜಬ್ಬ ಹಸನಬ್ಬರನ್ನು ಬೆತ್ತಲೆಗೊಳಿಸಿ ಅಮಾನವೀಯತೆಯನ್ನ ಮೆರೆಯುತ್ತಾರೆ. ದನ ಸಾಗಾಟದ ಆರೋಪದಲ್ಲಿ ಮನಬಂದಂತೆ ಹಲ್ಲೆ ನಡೆಸಿ ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡುತ್ತಾರೆ. ಸಾಯುವ ಸಂಧರ್ಭದಲ್ಲಿ ಕುಡಿಯಲು ಸ್ವಲ್ಪ ನೀರು ಕೇಳಿದಾಗಲೂ ಕರುಣೆ ತೋರದೆ ಮನುಷ್ಯತ್ವವನ್ನೇ ಮರೆಯುವ ಇಂಥಹಾ ಘಟನೆಗಳು ಖಂಡಿತಾ ಸ್ವರ್ಗದ ಕಲ್ಪನೆಯಲ್ಲಿ ಕಾಣಲು ಸಾಧ್ಯವಿಲ್ಲ. ಇವುಗಳು ಮತಾಂಧರು ಮಂಗಳೂರನ್ನು ಹೇಗೆ ನರಕವನ್ನಾಗಿ ಪರಿವರ್ತಿಸಿದ್ದಾರೆ ಎಂಬುವುದರ ಉದಾಹರಣೆಗಳಷ್ಟೇ.. ಸ್ವರ್ಗವೆಂದರೆ ಅಲ್ಲಿ ಯಾವ ಭಯವೂ ಇಲ್ಲವಂತೆ. ವಿಪರ್ಯಾಸವೆಂದರೆ ಮಂಗಳೂರಿನಲ್ಲಿ ಭಯದಲ್ಲೇ ಜೀವನ ನಡೆಸುವಂತಾ ನರಕದ ಬದುಕನ್ನು ಇಲ್ಲಿಯ ಮತಾಂಧರು ಸೃಷ್ಟಿಮಾಡ್ತಿದ್ದಾರೆ.

ಮತಾಂಧರು ಸೃಷ್ಟಿಸುತ್ತಿರುವ ನರಕ ಒಂದೆಡೆಯಾದರೆ. ಮಂಗಳೂರಿನಲ್ಲಿ ಕಂಡುಬರುತ್ತಿರುವಂತಹಾ ಆರ್ಥಿಕ ಅಸಮಾನತೆಯ ವ್ಯಾಪಕತೆ ಇಲ್ಲಿ ನರಕದ ಇರುವಿಕೆಯತ್ತಲೇ ಬೊಟ್ಟುಮಾಡಿ ತೋರಿಸುತ್ತಿದೆ. ಆರ್ಥಿಕ ಬೆಳೆವಣಿಗೆಯಲ್ಲಿ ಶಿಕ್ಷಣ ಆರೋಗ್ಯ, ಬ್ಯಾಂಕಿಂಗ್, ಬೃಹತ್ ಕೈಗಾರಿಕೆ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳು ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ದಿ ಕಂಡಿದೆ. ಆದರೆ ಈ ಅಭಿವೃದ್ದಿಯ ಫಲ ಸಮಾನವಾಗಿ ಹಂಚಿಕೆಯಾಗಿದೆಯೇ ? ಮಂಗಳೂರಿನಲ್ಲಿ ಈ ಅಭಿವೃದ್ಧಿಯ ಫಲಗಳನ್ನುಂಡ ಸಮುದಾಯಗಳಾವುವು ? ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅಪಾರ ಸಂಪನ್ಮೂಲಗಳನ್ನು ಸೃಷ್ಟಿಸುತ್ತಿರುವ ಈ ಕ್ಷೇತ್ರಗಳಲ್ಲಿ ಹಿಂದುಳಿದವರ, ದಲಿತರ, ಕೊರಗರ, ಮಲೆಕುಡಿಯರ ಹಾಗೂ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಎಷ್ಟಿದೆ? ಈ ಕ್ಷೇತ್ರಗಳಲ್ಲಿ ನಿರ್ವಾಹಕ ಹುದ್ದೆ ಮತ್ತು ಕೂಲಿಕಾರ ಹುದ್ದೆಗಳ ಸಾಮಾಜಿಕ ಸಂರಚನೆ ಯಾವ ರೂಪದಲ್ಲಿದೆ? ಮಂಗಳೂರಿನಲ್ಲಿ ಬೇಕಾದಷ್ಟು ಹೈಟೆಕ್ ಮಲ್ಟೀ ಸ್ಪೆಶಾಲಿಟಿ ಆಸ್ಪತ್ರೆಗಳಿವೆ. ರಾಜ್ಯದ ವಿವಿಧ ಮೂಲೆಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಹಣ ಚೆಲ್ಲಲು ತಾಕತ್ತಿದ್ದರಿಗೆ ಇಲ್ಲಿಯ ಆಸ್ಪತ್ರೆಗಳಲ್ಲಿ ಯೋಗ್ಯ ರೀತಿಯ ಚಿಕಿತ್ಸೆಯೂ ದೊರಕುತ್ತದೆ. ಆದ್ರೆ ಬಡವನ ಪಾಲಿಗಂತ್ತೂ ಇದು ದೂರದ ಮಾತು.

ಇದೇ ಮಂಗಳೂರಿನಲ್ಲಿ ಬಡ ರೋಗಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಲ್ಲಿ ಆಸ್ಪತ್ರೆಯ ದುಬಾರಿ ಬಿಲ್ ಪಾವತಿಸಲಾಗದೆ ಹೆಣವನ್ನುMRPL ಪಡೆದುಕೊಳ್ಳಲು ಸಾಧ್ಯವಾಗದೆ ಪರದಾಡುವಂತಹಾ ಪರಿಸ್ಥಿತಿಯೂ ಇಲ್ಲಿದೆ. ಹೆಣ ಪಡೆದುಕೊಳ್ಳಲೂ ಸಾಲಕ್ಕೆ ಮೋರೆ ಹೋಗುವ ಬಡವನಲ್ಲಿ ಕೇಳಿದ್ರೆ ಮಂಗಳೂರಿನ ವೈದ್ಯಕೀಯ ದಂಧೆಯ ನರಕ ದರ್ಶನವನ್ನು ನಿಮ್ಮ ಕಣ್ಣ ಮುಂದೆ ಕಟ್ಟಿಕೊಡಬಹುದು. ಇದರ ಜೊತೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೂ ಮಂಗಳೂರಿನಲ್ಲಿ ಕೊರತೆಯಿಲ್ಲ. ಸಮಾಜ ಸೇವೆಯ ಮುಖವಾಡ ತೊಟ್ಟು ಶಿಕ್ಷಣವನ್ನ ದಂಧೆ ಮಾಡುವ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಯಂತೆ ಮಂಗಳೂರಿನಲ್ಲಿ ತಲೆಎತ್ತುತ್ತಿವೆ. ಮಗುವಿಗೆ ಎಲ್.ಕೆ.ಜಿ ಶಿಕ್ಷಣ ಕೊಡಿಸಲು ಲಕ್ಷ ಲಕ್ಷ ರೂಪಾಯಿ ಡೊನೇಷನ್ ಕೊಡಬೇಕಾದ ಪರಿಸ್ಥಿತಿ ಇಲ್ಲಿಯ ಪೋಷಕರದ್ದು. ಇನ್ನು ಮಂಗಳೂರಿನಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳಿವೆ ಆದ್ರೆ ಈ ಜಿಲ್ಲೆಯ ಬಡವನೊಬ್ಬನ ಮಗ ಅಥವಾ ಮಗಳು ಡಾಕ್ಟರ್ ಆಗಬೇಕು ಎಂಬ ಕನಸು ಅವನಲ್ಲಿ ನರಕದ ಅನುಭವವನ್ನು ಮೂಡಿಸುವುದರಲ್ಲಿ ಸಂಶಯವಿಲ್ಲ.

ಇನ್ನು ಅಭಿವೃದ್ದಿಯ ಪಥದತ್ತ ದಾಪುಗಾಲಿಡುತ್ತಿರುವ ಮಂಗಳೂರಿನ ಧಾರಣಾ ಸಾರರ್ಥ್ಯವನ್ನು ಮೀರಿ ಕೈಗಾರಿಕೆಗಳು ಹಾಗೂ ಸುಸ್ತಿರವಲ್ಲದ ಆರ್ಥಿಕ ಚಟುವಟಿಕೆಗಳು ಕಾಲಿಡುತ್ತಿವೆ. ಮಂಗಳೂರು ಒಂದು ಸೂಕ್ಷ್ಮ ಪರಿಸರ ವಲಯ. ಆದರೆ ಅಂಕೆ ಮೀರಿದ ಹಾಗೂ ಪರಿಸರದ ನಿಯಮಾವಳಿಗಳನ್ನು ಗಾಳಿಗೆ ತೂರುವ ಆರ್ಥಿಕ ಅಭಿವೃದ್ಧಿ ಮಂಗಳೂರಿನ ಸೂಕ್ಷ್ಮ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಂಗಳೂರಿನಲ್ಲಿ ಸ್ವರ್ಗ ನಿರ್ಮಿಸುತ್ತೇವೆ ಎಂಬ ಭ್ರಮೆಯನ್ನು ಸೃಷ್ಟಿಸಿ ಮಂಗಳೂರಿಗೆ ಕಾಲಿಟ್ಟ ಎಸ್.ಇ.ಜೆಡ್, ಎಮ್.ಆರ್.ಪಿ.ಎಲ್ ಕೈಗಾರಿಕೆಗಳು ಸೃಷ್ಟಿಸಿದ ಸ್ವರ್ಗ ಹೇಗಿದೆ ಎಂಬುವುದನ್ನು ತಿಳಿಯಬೇಕಾದರೆ ಒಂದುಬಾರಿ ಮಂಗಳೂರಿನ ಜೋಕಟ್ಟೆ ಪರಿಸರಕ್ಕೆ ಭೇಟಿ ಕೊಡಬೇಕು. ಸ್ವರ್ಗದಲ್ಲಿ ಸಿಗುವ ಶುದ್ಧಜಲವಂತೂ ಇಲ್ಲಿ ಹುಡುಕಿದರೂ ಸಿಗುವುದಿಲ್ಲ ಬಿಡಿ. ಏರುತ್ತಿರುವ ಬಿಸಿ ವಾತಾವರಣ, ಮೂಗುಮುಚ್ಚೋ ಕೆಟ್ಟ ವಾಸನೆ ಹಾಗೂ ಕೋಕ್ ಸಲ್ಫರ್ ಹಾರುಬೂದಿಗಳು ಇಲ್ಲಿಯ ವಾತಾವರಣವನ್ನು ಅಕ್ಷರಸಃ ನರಕವನ್ನಾಗಿಸಿದೆ.

ಇದೀಗ ಮತ್ತೆ ಎಮ್.ಆರ್.ಪಿ.ಎಲ್ ತನ್ನ ನಾಲ್ಕನೇ ಹಂತದ ವಿಸ್ತರಣೆಗಾಗಿ 1050 ಎಕರೆ ಭೂಮಿಯ ಬೇಡಿಕೆ ಇಟ್ಟಿದೆ. ಇದು ಜಾರಿಯಾದಲ್ಲಿ ಸ್ವರ್ಗದ ಉದ್ಯಾನವನಗಳಂತಿರುವ ಪೆರ್ಮುದೆ, ಕುತ್ತೆತ್ತೂರು ಗ್ರಾಮಗಳ ಜನರೂ ನರಕವಾಸಿಗಳಾಗಿ ಜೀವಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಜೊತೆಗೆ ಪಶ್ವಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುವ ಎತ್ತಿನಹೊಳೆ ಯೋಜನೆಯೂ ಚುರುಕುಪಡೆದುಕೊಳ್ಳುತ್ತಿದೆ.

ಆದರೆ ಇದ್ಯಾವುದರ ಬಗ್ಗೆ ಯೂ ತಲೆಕೆಡಿಸಿಕೊಳ್ಳದ ಮತಾಂಧ ಸಂಘಟನೆಗಳು ಇದೀಗ ಮಂಗಳೂರಿನಲ್ಲೂ ನರಕವಿದೆ ಎಂದು ನಟಿ ರಮ್ಯಾ ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ ಮೊಟ್ಟೆ ಬಿಸಾಡುತ್ತಿದ್ದಾರೆ. ರಮ್ಯಾಳಿಗೆ ಮೊಟ್ಟೆ ಬಿಸಾಡಿದ ಯುವಕರೇ ನಿಮ್ಮ ತಂದೆ –ತಾಯಂದಿರ ಬಳಿ ಹೋಗಿ ಒಮ್ಮೆ ವಿಚಾರಿಸಿ ಮಂಗಳೂರು ನಿಮ್ಮ ಪಾಲಿಗೆ ಸ್ವರ್ಗವೇ ಎಂದು ? ಬಹುಷಃ ನಿಮಗೂ ಉತ್ತರ ಸಿಗಬಹುದು.

ಆಂದಹಾಗೆ, ಮಂಗಳೂರು ಹಾಗೂ ಕಾಸರಗೋಡು ಗಡಿ ಭಾಗದಲ್ಲಿ ಒಂದು ಊರಿದೆ. ಆ ಊರಿನ ಹೆಸರೇ ಸ್ವರ್ಗ. ಊರ ಹೆಸರು ನೋಡಿ ಅಲ್ಲಿಗೆendosulfan-250 ಭೇಟಿ ಕೊಟ್ಟರೆ ಆ ಗ್ರಾಮದ ನರಕ ಸದೃಶ್ಯ ಬದುಕಿನ ಅರಿವು ನಿಮಗಾಗುತ್ತದೆ. ಗ್ರಾಮದ ಜನರು ಎಂಡೋಸಲ್ಪಾನ್ ಕೀಟನಾಶಕ ಸಿಂಪಡನೆಯ ಪರಿಣಾಮ ಅನುಭವಿಸುತ್ತಿರುವ ಕರಾಳ ಅನುಭವ ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಊರಿನ ಬಹುತೇಕ ಮನೆಗಳಲ್ಲಿ ಎಂಡೋ ಪೀಡಿತ ಮಕ್ಕಳು ನಿಮಗೆ ಕಾಣಲು ಸಾಧ್ಯ. ಅಸಲಿಗೆ ಈ ಸ್ವರ್ಗ ಎಂಬ ಊರು ಅಲ್ಲಿನ ಗ್ರಾಮಸ್ಥರ ಪಾಲಿಗೆ ನಿಜಕ್ಕೂ ನರಕ. ಆದ್ದರಿಂದ ಮಂಗಳೂರಿನಲ್ಲೂ ನರಕವಿದೆ ಎಂದು ನಟಿ ರಮ್ಯಾ ನೀಡಿದ್ದಾರೆಂಬ ಹೇಳಿಕೆಯಲ್ಲಿ ಖಂಡಿತಾ ತಪ್ಪಿಲ್ಲ. ಸುಂದರ ಜಿಲ್ಲೆಯನ್ನು ನರಕ ಮಾಡಲು ಹೊರಟಿರುವ ಈ ಎಲ್ಲಾ ದುಷ್ಟ ಶಕ್ತಿಗಳನ್ನು ಹೇಗೆ ಸೋಲಿಸಬಹುದೆಂಬುವುದು ನಮ್ಮ ಮುಂದಿರುವ ಸವಾಲು.

“ದೇವಸ್ಥಾನ ತೊರೆದು ಗರಡಿಗೆ ಬರದಿದ್ದರೆ ಬಿಲ್ಲವರಿಗೆ ಉಳಿಗಾಲವಿಲ್ಲ..”

Naveen Soorinje


ನವೀನ್ ಸೂರಿಂಜೆ


 

ಉಡುಪಿಯಲ್ಲಿ ಕಳೆದ ಹದಿನೈದು ದಿನಗಳ ಅಂತರದಲ್ಲಿ ಎರಡು ಕೊಲೆಗಳು ಸುದ್ದಿ ಮಾಡಿದವು. ಒಂದು ಬಹುಕೋಟಿ ಒಡೆಯ ಬಾಸ್ಕರ ಶೆಟ್ಟಿ ಕೊಲೆ. ಎರಡನೆಯದ್ದು ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ. ಭಾಸ್ಕರ ಶೆಟ್ಟಿಯದ್ದು ತೀPoojaryರಾ ವೈಯುಕ್ತಿಕ ಕಾರಣಕ್ಕಾಗಿ ನಡೆದ ಕೊಲೆ. ಪ್ರವೀಣ್ ಪೂಜಾರಿಯದ್ದು ಸಾಮಾಜಿಕ, ರಾಜಕೀಯ ಕಾರಣಕ್ಕಾಗಿ ನಡೆದ ಕೊಲೆ. ಚರ್ಚೆ ಇರುವುದು ಎರಡೂ ಕೊಲೆಗಳನ್ನು ಆಯಾ ಸಮಾಜ ತೆಗೆದುಕೊಂಡ ರೀತಿಯ ಬಗ್ಗೆ. ಭಾಸ್ಕರ ಶೆಟ್ಟಿಯ ವೈಯುಕ್ತಿಕ ಕಾರಣದ ಕೊಲೆಯನ್ನು ಬಂಟರ ಸಂಘಟನೆ ಗಂಭೀರವಾಗಿ ತೆಗೆದುಕೊಂಡು ಸಭೆಗಳ ಮೇಲೆ ಸಭೆ ನಡೆಸ್ತು. ಸ್ಥಳೀಯ ಪೊಲೀಸರು ನಡೆಸುತ್ತಿದ್ದ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವಂತೆ ಮಾಡಿತ್ತು. ಆದರೆ ಪ್ರವೀಣ್ ಪೂಜಾರಿ ಕೊಲೆ ? ಪ್ರವೀಣ್ ಪೂಜಾರಿ ಸಾವು ಯಾವುದೋ ವೈಯುಕ್ತಿಕ ಕಾರಣಕ್ಕಾಗಿ ನಡೆದ ಸಾವಲ್ಲ. ಪ್ರವೀಣ್ ಪೂಜಾರಿಯನ್ನು ಕೊಲೆ ಮಾಡಿದ ಆರೋಪಿಗಳ ಮುಖ್ಯಸ್ಥರು ಹಿಂದೆಯೂ ಹಲವು ಬಿಲ್ಲವರ ಆಹುತಿ ತೆಗೆದುಕೊಂಡಿದ್ದರು. ಮುಂದೆಯೂ ತಮ್ಮ ಅಜೆಂಡಾ ಜಾರಿಗಾಗಿ ಹಲವು ಬಿಲ್ಲವರ ರಕ್ತತರ್ಪಣಕ್ಕಾಗಿ ಈ ಕೊಲೆಗಡುಕರ ಮುಖ್ಯಸ್ಥರು ಕಾಯುತ್ತಿದ್ದಾರೆ. ಆದರೂ ಬಿಲ್ಲವ ಸಂಘಟನೆಗಳು ತುಟಿಪಿಟಿಕ್ ಎನ್ನುತ್ತಿಲ್ಲ. ಅಗಾಧ ಸಂಖ್ಯೆಯ ವಿದ್ಯಾವಂತ ಬಿಲ್ಲವ ಯುವಕರ ಸದಸ್ಯತ್ವವನ್ನು ಹೊಂದಿರುವ ಬಿಲ್ಲವ ಯುವ ವಾಹಿನಿಯೂ ಮಾತನಾಡುತ್ತಿಲ್ಲ. ಇದು ನಿಜಕ್ಕೂ ದುರಂತ. ಕರಾವಳಿಯ ಅತಿ ದೊಡ್ಡ ಸಮುದಾಯವಾಗಿರುವ ಬಿಲ್ಲವರು ಇತ್ತಿಚೆಗೆ ಒಂದೋ ಕೋಮುಸಂಬಂಧಿ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾಗುತ್ತಿದ್ದಾರೆ. ಅಥವಾ ಜೈಲು ಸೇರುತ್ತಾರೆ. ಮಂಗಳೂರು ಮತ್ತು ಉಡುಪಿಯ ಜೈಲುಗಳಲ್ಲಿ ಮುಸ್ಲೀಮರನ್ನು ಹೊರತುಪಡಿಸಿದ್ರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಗಳಾಗಿರುವವರು ಬಿಲ್ಲವರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರು ಮತ್ತು ಬಂಟರು ಅತ್ಯಂತ ಹೆಚ್ಚು ಪ್ರಾಬಲ್ಯವನ್ನು ಹೊಂದಿರುವ ಸಮುದಾಯ. narayana-guruಇತೀಚ್ಚೆಗೆ ಎಲ್ಲಾ ಕ್ಷೇತ್ರದಲ್ಲೂ ಬಿಲ್ಲವರು ಬಂಟರಿಗೆ ಪೈಪೋಟಿ ಕೊಡುತ್ತಿದ್ದಾರೇನೋ ಎಂದು ಕಂಡು ಬಂದರೂ ಅದು ತೋರಿಕೆಗೆ ಮಾತ್ರ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಂಟರು ತುಂಬಿ ಹೋಗಿದ್ದರೆ ಬಿಲ್ಲವರು ಎಲ್ಲಿದ್ದಾರೆ ಎಂದು ಹುಡುಕಬೇಕಿದೆ. ಸ್ವಾತಂತ್ರ್ಯಾ ನಂತರದ ಕರಾವಳಿಯಲ್ಲಿ ಬ್ಯಾಂಕಿಂಗ್, ಔದ್ಯಮಿಕ, ಹೊಟೇಲ್, ವಲಸೆ ಕ್ಷೇತ್ರದಲ್ಲಿ ಅಭಿವೃದ್ದಿಯಾದ್ರೂ ಇದರ ಭರಪೂರ ಲಾಭ ಪಡೆದಿದ್ದು ಮೇಲ್ವರ್ಗಗಳಾಗಿರುವ ಬಂಟರು ಮತ್ತು ಬ್ರಾಹ್ಮಣರು. ಆದರೆ ಎಲ್ಲಾ ಕ್ಷೇತ್ರಗಳಲ್ಲಿ ಬಿಲ್ಲವರು ಇದ್ದಾರೆ ಅನ್ನುವಂತೆ ಕಂಡು ಬಂದರೂ ಅದು ತೀರಾ ಕೆಳ ದರ್ಜೆಯ ಕೆಲಸಗಳಲ್ಲಿ ಅಥವಾ ತೀರಾ ನಗಣ್ಯ ಸಂಖ್ಯೆಯಲ್ಲಿ.

ಸಿನೇಮಾ ಕ್ಷೇತ್ರದಿಂದ ಹಿಡಿದು ಅಂಡರ್ ವಲ್ಡ್ ವರೆಗೆ ಬಂಟರಿಗೆ ಪೈಪೋಟಿ ಕೊಡುವ ಬಿಲ್ಲವರು ಕಂಡು ಬರುತ್ತಾರೆ. ಆದರೆ ಅಂಡರ್ ವಲ್ಡ್ ಡಾನ್ ಆಗಿರುವ ಬಂಟರೆಲ್ಲರೂ ನಿಧಾನಕ್ಕೆ ಉದ್ಯಮಿಗಳಾದರೆ, ಬಿಲ್ಲವ ಡಾನ್ ಗಳಿಗೆ ವಯಸ್ಸಾದರೂ ಅಂಡರ್ ವಲ್ಡ್ ನಿಂದ ಹೊರಗೆ ಬರಲಾಗದ ಸ್ಥಿತಿ ಇದೆ. ಇದೇ ರೀತಿ ಭಜರಂಗದಳ ಸೇರಿದ ಬಂಟರ ಹುಡುಗರು ತನ್ನಿಂತಾನೇ ಬಿಜೆಪಿ ನಾಯಕರಾಗುತ್ತಾರೆ. ಆದರೆ ಬಿಲ್ಲವ ಹುಡುಗರು ಸಾಯುವಾಗಲೂ ಭಜರಂಗದಳದಲ್ಲೇ ಇದ್ದು ಅದಕ್ಕಾಗಿ ಸಾಯಬೇಕಾಗುತ್ತದೆ.

ಎಲ್ಲಾ ಕೆಳಜಾತಿಗಳಂತೆ ಬಿಲ್ಲವ ಸಮುದಾಯ ಕೂಡಾ ಕಿರುಸಂಸ್ಕೃತಿಯ ಸಮುದಾಯ. ಭೂತಾರಾಧನೆ, ಪೂರ್ವಜರ ಆರಾಧನೆಯೇ ಬಿಲ್ಲವರ ಸಂಸ್ಕೃತಿಯಾಗಿತ್ತು. ಆದರೆ ವೈದಿಕ ಧರ್ಮದ ಪ್ರಭಾವಕ್ಕೊಳಗಾಗಿ ದೇವಸ್ಥಾನ ಆರಾಧನೆಯ ಪ್ರಧಾನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿತು. ಗರ್ಭಗುಡಿಯ ಹೊರಗಡೆ ಅಂಗಿ ಹಾಕದೆ ಕೆಲಸ ಮಾಡುವುದೇ ಬಿಲ್ಲವರ ಅದೃಷ್ಟವಾಯಿತು. ಬಿಲ್ಲವರಂತೆ ಬಂಟರೂ ಕೂಡಾ ಗರ್ಭಗುಡಿಯ ಹೊರಗೇ ಇದ್ದರೂ ಬಿಳಿ ವಸ್ತ್ರಧಾರಿಯಾಗಿ ಇಡೀ ಕಾರ್ಯಕ್ರಮದ ಯಜಮಾನಿಕೆಯನ್ನು ಪಡೆದುಕೊಂಡರು. ಈಗಲೂ ದೇವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ ಸಂಧರ್ಭದಲ್ಲಿ ಕೇಸರಿ ಲುಂಗಿದಾರಿಯಾಗಿ ಸ್ವಯಂ ಸೇವಕರಾಗಿದ್ದರೆ, ಬಂಟರು ಕಾರ್ಯಕ್ರಮದ ಗೌರವಾಧ್ಯಕ್ಷರಾಗಿರುತ್ತಾರೆ.

ದೇವಸ್ಥಾನಗಳ ಬ್ರಹ್ಮಕಲಶ, ಜೀರ್ಣೋದ್ದಾರಗಳಲ್ಲಿ ಕಾಲಕಳೆಯುವ, ಆ ಮೂಲಕ ಕೇಸರಿ ವಸ್ತ್ರಧಾರಿಗಳಾಗಿ, ಗೊತ್ತಿದ್ದೋ ಗೊತ್ತಿಲ್ಲದೆಯೋkoti-chennay ಹಿಂದೂ ಸಂಘಟನೆ ಸೇರುವ ಬಿಲ್ಲವ ಯುವಕರು ಇದೀಗ ಮದುವೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದೇವಸ್ಥಾನದ ಕೆಲಸಗಳಲ್ಲಿ ಬಹುಪಾಲು ಸಮಯವನ್ನು ಸ್ವಯಂಸೇವಕರಾಗಿಯೋ, ಹಿಂದೂ ಸಂಘಟನೆಗಳ ಕಾರ್ಯಕರ್ತರಾಗಿರುವ ಬಿಲ್ಲವ ಯುವಕರು ತಮ್ಮ ಕುಟುಂಬದ ಆರ್ಥಿಕ ಅಭಿವೃದ್ದಿಯತ್ತಾ ಗಮನ ಕೊಡುವುದಿಲ್ಲ. ಹಿಂದೊಮ್ಮೆ ನೈತಿಕ ಪೊಲೀಸ್ ಗಿರಿ ಮಾಡಿ 40 ಜನ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಜೈಲು ಸೇರಿದಾಗ, ಅವರ ಕುಟುಂಬದ ಹಿನ್ನಲೆ ಅಧ್ಯಯನ ನಡೆಸಿದ್ದೆ. ಅದರಲ್ಲಿ ಬಂಧಿಯಾಗಿದ್ದ ಮೂವರು ಬಿಲ್ಲವ ಯುವಕರ ಮನೆಯಲ್ಲಿ ಈ ದಿನಗಳಲ್ಲೂ ವಿದ್ಯುತ್ ಸಂಪರ್ಕ ಇಲ್ಲ. ಅವರ ಮನೆಯ ದೇವರ ಫೋಟೋಗೆ ದೀಪ ಇಡಲೂ ಎಣ್ಣೆಗೆ ದುಡ್ಡಿಲ್ಲದ ಪರಿಸ್ಥಿತಿ ಇದೆ. ಆದರೆ ಅವರ ಮನೆಯ ಯುವಕ ದೇವಸ್ಥಾನದಲ್ಲಿ ಬ್ರಾಹ್ಮಣರ ಹೊಟ್ಟೆ ತುಂಬಿಸಲು, ಧರ್ಮ ರಕ್ಷಣೆಗಾಗಿ ದುಡಿದು ಜೈಲು ಸೇರುತ್ತಾರೆ ಅಥವಾ ಕೊಲೆಯಾಗುತ್ತಾನೆ.

ಈಗ ಬಿಲ್ಲವ ಸಮುದಾಯ ಯೋಚಿಸಬೇಕಾದ ಸಮಯ. ಉದಯ ಪೂಜಾರಿಯಿಂದ ಪ್ರಾರಂಭವಾಗಿ ಪ್ರವೀಣ್ ಪೂಜಾರಿಯವರೆಗೆ ಕೋಮು ಕಾರಣಕ್ಕಾಗಿ ಸತ್ತ ಬಿಲ್ಲವರೆಷ್ಟು, ಬಂಟರೆಷ್ಟು, ಬ್ರಾಹ್ಮಣರೆಷ್ಟು ಎಂದು ಲೆಕ್ಕ ಹಾಕಬೇಕಿದೆ. ಇದಕ್ಕೆಲ್ಲಾ ಕಾರಣ ಕೇಸರಿ ಲುಂಗಿ ಧರಿಸುವಂತೆ ಮಾಡುವ ದೇವಸ್ಥಾನ ಸಂಸ್ಕೃತಿ. ಬಿಲ್ಲವರು ಮತ್ತೆ ತಮ್ಮ ಕಿರು ಸಂಸ್ಕೃತಿಯಾದ ಗರಡಿಯತ್ತಾ ತೆರಳಬೇಕಿದೆ. ಗರಡಿ ಎನ್ನುವುದೇ ಬಿಲ್ಲವರ ಸ್ವಾಭಿಮಾನದ ಸಂಕೇತ. ದೇವಸ್ಥಾನ ಎನ್ನುವುದು ಬಿಲ್ಲವರನ್ನು ಅಧೀನರಾಗಿಸುವ ಸಂಕೇತ. ದೇವಸ್ಥಾನವೆಂಬ ವೈದಿಕ ಸಂಸ್ಕೃತಿಯಿಂದ ದೂರವಾಗಿ ಸಮುದಾಯದ ಸ್ವಾಭಿಮಾನದ ಸಂಕೇತವಾಗಿರುವ ಗರಡಿಯತ್ತಾ ತೆರಳದಿದ್ದರೆ ಬಿಲ್ಲವ ಸಮುದಾಯಕ್ಕೆ ದುರಂತಮಯ ಭವಿಷ್ಯವನ್ನು ಕಾಣಲಿದೆ.