Tag Archives: ಅಂತರ್ಜಾತಿ ವಿವಾಹ

ಮರ್ಯಾದೆ ಹತ್ಯೆ ಮತ್ತು ಅಂತರ್ಜಾತಿ ವಿವಾಹ

-ಡಾ.ಎಸ್.ಬಿ.ಜೋಗುರ

ಮರ್ಯಾದೆ ಹತ್ಯೆಯ ಬೇರುಗಳ ಹುಡುಕಾಟ…

ಜಾಗತೀಕರಣದ ಸಂದರ್ಭದಲ್ಲಿಯೂ ಜಾತಿ ಪದ್ಧತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆಯೇ? ಎಂಬ ಪ್ರಶ್ನೆಯ ಉತ್ತರ ಒಂದೇ ದಿಕ್ಕಿನತ್ತ, ಎಲ್ಲರೂ ಒಪ್ಪಬಹುದಾದ ರೀತಿಯಲ್ಲಿ ಸಾಧ್ಯವಿಲ್ಲ. ರಾಜಕೀಯ ರಂಗದಲ್ಲಿ ನಿಂತು ಈ ಪ್ರಶ್ನೆಗೆ ಉತ್ತರಿಸುವಾಗ ಸಾಧ್ಯವಾಗಬಹುದಾದ ಸಾರೂಪ್ಯ ಸಂಗತಿಗಳು ಸಾಮಾಜಿಕ, ಆರ್ಥಿಕ ಸಾಂಸ್ಕೃತಿಕ ವಲಯದಲ್ಲಿ ನಿಂತು ಅರ್ಥೈಸುವಾಗ, ಉತ್ತರಿಸುವಾಗ ವಿಭಿನ್ನವಾದ ವಿವರಣೆಗಳ ಮೂಲಕ ಬಿಚ್ಚಿಕೊಳ್ಳುತ್ತದೆ. ಸುಮಾರು ಐದಾರು ದಶಕಗಳ ಹಿಂದೆ ಆಧುನಿಕ ಶಿಕ್ಷಣ ಪಡೆದ ಭಾರತೀಯರು ಮುಂದೊಂದು ದಿನ ಬಲಾಢ್ಯ ಪ್ರಜಾಸತತ್ತೆಯ ಹಿನ್ನೆಲೆಯಲ್ಲಿ ಭಾರತದ ಸಾಂಪ್ರದಾಯಿಕ ಜಾತಿ ಎನ್ನುವ ಸಂಸ್ಥೆ ಮಂಕಾಗಬಹುದು ಎಂದು ನುಡಿದ ಭವಿಷ್ಯ ಸುಳ್ಳಾಗಿದೆ. 1957 ರ ಸಂದರ್ಭದಲ್ಲಿ ಭಾರತೀಯ ಸಮಾಜಶಾಸ್ತ್ರಜ್ಞ ಎಮ್.ಎನ್. ಶ್ರೀನಿವಾಸ ಅವರು “ಆಧುನಿಕ ಸಂದರ್ಭದಲ್ಲಿ ಜಾತಿಯ ಒಂದು ಹೊಸ ಬಗೆಯ ಸ್ಥಿತ್ಯಂತರಗಳೊಂದಿಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲಿದೆ,”  ಎಂದದ್ದು ಮಾತ್ರ ಹುಸಿ ಹೋಗಲಿಲ್ಲ. ಜಾತಿ ಪದ್ಧತಿಯು ತನ್ನ ಪೊರೆ ಕಳಚಿಕೊಳ್ಳುವ ಪ್ರಯತ್ನ ಮಾಡಿರುವುದಿದೆಯೇ ಹೊರತು ಬದಲಾವಣೆ ಹೊಂದಿರುವುದು ತೀರಾ ಕಡಿಮೆ. ಶ್ರೀನಿವಾಸರ ಮಾತಿನ ತಾತ್ಪರ್ಯವೂ ಇದೇ ಆಗಿದೆ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಜಾತಿ ಎನ್ನುವದು ಒಂದು ಪದ್ಧತಿಯಾಗಿ, ಭಾರತೀಯ ಸಮಾಜದ ಒಂದು ಅತ್ಯಂತ ನಿರ್ಣಾಯಕ ಸಂಸ್ಥೆಯಾಗಿತ್ತು. ಈಗಿನಂತೆ ಅದು ಆಗ ರಾಜಕೀಯ ಚಟುವಟಿಕೆಗಳ ಮೂಗುದಾರವಾಗಿರುವ ಬಗ್ಗೆ ಚಾರಿತ್ರಿಕವಾಗಿ ಚರ್ಚಿತವಾದ ಉಲ್ಲೇಖಗಳು ತೀರಾ ಕಡಿಮೆ. ಅದೇನಿದ್ದರೂ ಮಡಿ-ಮೈಲಿಗೆ, ಆಚರಣೆ, ಸಾಮಾಜಿಕ ಸಂಪರ್ಕ, ದೇವಸ್ಥಾನಗಳ ಪ್ರವೇಶ, ಭೌತಿಕ ಸಾಮಿಪ್ಯ, ಭೋಜನ ಇಂಥವುಗಳ ಸುತ್ತಲೇ ಅದು ಹೆಚ್ಚೆಚ್ಚು ಕೇಂದ್ರೀ ಕೃತವಾಗಿರುವುದಿತ್ತು.  ಸ್ವಾತಂತ್ರ್ಯೋತ್ತರ ಭಾರತದ ಸಂದರ್ಭದಲ್ಲಿ ಪಾರಂಪರಿಕ ಜಾತಿಯಾಧಾರಿತ ಉದ್ಯೋಗಗಳ ಪ್ರಭಾವ ಕಳೆಗುಂದುತ್ತಾ ಬಂದು ಉದ್ಯೋಗದ ಮುಕ್ತ ಆಯ್ಕೆಗೆ ಅವಕಾಶ ಸಾಧ್ಯವಾಯಿತು. ಪರಿಣಾಮವಾಗಿ ಮೇಲ್ಜಾತಿಯ ಜನರು ಕೂಡಾ ಪಾದರಕ್ಷೆಗಳ ಅಂಗಡಿಯನ್ನು ನಿರ್ವಹಿಸುವಂತಾದರು. ಕುಂಬಾರನ ಮಗ ಕುಂಬಾರ, ಕಂಬಾರನ ಮಗ ಕಂಬಾರ, ಸಿಂಪಿಗನ ಮಗ ಸಿಂಪಿಗ ಹೀಗೆ ಅಪಾರ ಸಾಮರ್ಥ್ಯವಿರುವವರೂ ಜಾತಿಯಾಧಾರಿತ ಉದ್ಯೋಗದ ಪಾರಂಪರಿಕ ಸಂಕೋಲೆಗಳಿಗೆ ಸಿಲುಕಬೇಕಿತ್ತು. ಆಧುನಿಕ ಶಿಕ್ಷಣ ಪಡೆದವರು ಈ ಬಗೆಯ ಸಂಕೋಲೆಗಳನ್ನು ಹರಿದೊಗೆದರು. ಜಾತಿಯಾಧಾರಿತ ಉದ್ಯೋಗ ಇಂದಿನ ಸಂಕೀರ್ಣ ಶ್ರಮ ವಿಭಜನೆಯ ಸಂದರ್ಭದಲ್ಲಂತೂ ಅದು ಸಾಧ್ಯವೂ ಇಲ್ಲ ಸಾಧ್ಯವೂ ಅಲ್ಲ. ಹಾಗೆಯೇ ಉತ್ತರ ಭಾರತದ ಬದಿಗಿದ್ದ ಕಚ್ಚಾ ಆಹಾರ ಹಾಗೂ ಪಕ್ಕಾ ಆಹಾರದ ಪರಿಪಾಠಗಳೂ ಈಗ ಇಲ್ಲ.  (ಕಚ್ಚಾ ಆಹಾರ ನೀರಿನಲ್ಲಿ ತಯಾರಿಸುವ ಆಹಾರ, ಪಕ್ಕಾ ಆಹಾರ ತುಪ್ಪದಲ್ಲಿ ತಯಾರಿಸುವ ಆಹಾರ.)  ಕಚ್ಚಾ ಆಹಾರ ಕೆಳಜಾತಿಗಳು ಹಾಗೂ ಪಕ್ಕಾ ಆಹಾರವನ್ನು ಮೇಲ್ ಜಾತಿಗಳು ಸೇವಿಸಬೇಕು ಎನ್ನುವ ಜಾತಿಯ ನಿರ್ಬಂಧಗಳೂ ಈಗಿಲ್ಲ. ಈ ಬಗೆಯ ಹತ್ತು ಹಲವಾರು ಸಾಮಾಜಿಕ ಧಾರ್ಮಿಕ ದೌರ್ಬಲ್ಯಗಳನ್ನು ಜಾತಿ ಕಳೆದುಕೊಂಡಿದೆಯಾದರೂ ಅದಿನ್ನೂ ಒಂದು ಮುಚ್ಚಿದ ವ್ಯವಸ್ಥೆಯಾಗಿಯೇ ಉಳಿದಿರುವುದು ಈ ಶತಮಾನದ ಬಹುದೊಡ್ಡ ವಿಪರ್ಯಾಸ..!

ಕೇವಲ ಉದ್ಯೋಗದ ಸ್ವಾತಂತ್ರ್ಯ ಆಯ್ಕೆ ಮಾತ್ರವಲ್ಲ ಊಟೋಪಚಾರ, ಸಾಮಾಜಿಕ ಸಂಪರ್ಕ, ಧಾರ್ಮಿಕ ದೌರ್ಬಲ್ಯ, ಸಹಭೋಜನ ಮುಂತಾದ ಸಂಗತಿಗಳಲ್ಲಿ ತಕ್ಕ ಮಟ್ಟಿಗಿನ ಬದಲಾವಣೆಗಳಾಗಿವೆ. (ಹೀಗೆ ಹೇಳುವಾಗ ಮಡೆಸ್ನಾನದಂತಹ ಅನಿಷ್ಟ ಪದ್ಧತಿ ನೆನಪಾಗದೇ ಇರದು.)  ಈ ಊಟೋಪಚಾರ ಹಾಗೂ ಸಾಮಾಜಿಕ ಸಂಪರ್ಕಗಳಲ್ಲಾದ ಬದಲಾವಣೆಯ ವೇಗ ವಿವಾಹ ಎನ್ನುವ ಸಂಸ್ಥೆಯಲ್ಲಿ ಆಗಲಿಲ್ಲ ಎನ್ನುವದು ಅಷ್ಟೇ ಸತ್ಯ. ಜಾತಿಯ ಪ್ರಭಾವಳಿಯನ್ನು ಸಂಪೋಷಿಸಿಕೊಂಡು ಬಂದ ಒಂದು ಪ್ರಮುಖ ಸಂಸ್ಥೆಯಾಗಿ ವಿವಾಹದ ಅಸ್ಥಿತ್ವವಿದೆ.  ಮೂಲತ: ಒಂದು ಒಳಬಾಂಧವ್ಯ ವಿವಾಹ ಸಮೂಹವಾದ ಜಾತಿಪದ್ಧತಿ ಹೊರಬಾಂಧವ್ಯವನ್ನು ಸಹಿಸುವುದಿಲ್ಲ. ರಾಜಕೀಯ ವಲಯವನ್ನು ಮೀರಿಯೂ ಜಾತಿ ತನ್ನ ಗಡುಸುತನವನ್ನು ವಿವಾಹ ಸಂಸ್ಥೆಯಲ್ಲಿ ಕಾಪಾಡಿಕೊಂಡಿದೆ. ಇಂದಿಗೂ ವಧು-ವರರ ಅನ್ವೇಷಣೆಯಲ್ಲಿ ತನ್ನ ಉಪಜಾತಿಯನ್ನು ಕೋಟ್ ಮಾಡಿಯೇ ತಮಗೊಂದು ಕನ್ಯೆ, ವರ ಬೇಕಾಗಿದೆ ಎಂದು ಹೇಳುವುದಿದೆ. 19ನೇ ಶತಮಾನದ ಅಂತ್ಯದವರೆಗೆ ಹಾಗೂ 20ನೇ ಶತಮಾನದ ಆದಿ ಭಾಗದವರೆಗೆ ಜಾತಿಯ ನಿಯಮಗಳನ್ನು ಧಿಕ್ಕರಿಸಿ ಮದುವೆಯಾಗುವುದು ಅತ್ಯಂತ ದುಸ್ಸಾಹಸವಾಗಿತ್ತು. ಹೀಗಿರುವಾಗ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವಿಸಿದ ಕಿರಿಕಿರಿ ಹೇಗಿರಬೇಡ. 19 ಹಾಗೂ 20ನೇ ಶತಮಾನದಲ್ಲಿ ಅಂತರ್ಜಾತಿಯ ಮದುವೆಯಾದವರನ್ನು ಜಾತಿಯಿಂದಲೇ ಬಹಿಷ್ಕರಿಸುವುದಿತ್ತು ಇಲ್ಲವೇ ಊರಿಂದ ಹೊರಹಾಕುವುದಿತ್ತು.  ಕೆಲ ಬಾರಿ ಈಗ ನಾವು ಓದುವ , ಕೇಳುವ ಮರ್ಯಾದೆ ಹತ್ಯೆಗಳೂ ಜರುಗುತ್ತಿದ್ದವೆಂದೇ ಅರ್ಥ.

ಸಾಮಾಜಿಕ ರಚನೆಯಲ್ಲಾಗುವ ಬದಲಾವಣೆಗಳು ಅದು ಒಳಗೊಂಡಿರುವ ಸಂಘ-ಸಂಸ್ಥೆಗಳಲ್ಲಿಯೂ ಬದಲಾವಣೆಯನ್ನು ತರುವುದಿದೆ. ಹೀಗಾಗಿ ಜಾತಿಪದ್ಧತಿ ಮತ್ತು ವಿವಾಹ ಎನ್ನುವ ಸಂಸ್ಥೆ ಈ ಬದಲಾವಣೆಯಿಂದ ತಪ್ಪಿಸಿಕೊಳ್ಳಲಾಗದು. ಇಂದು ಇಂಟರ್ನೆಟ್ ಮೂಲಕ ಸಂಗಾತಿಗಳನ್ನು ಅರಿಸುವಷ್ಟು ನಾವು ಬದಲಾಗಿದ್ದೇವೆ. ಅದೇ ವೇಳೆಗೆ ಈಗೀಗ ಅಂತರ್ಜಾತಿಯ ವಿವಾಹಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಧ್ಯಮ ವರ್ಗದ ಜನರು ಮಾತ್ರ ಇವತ್ತಿಗೂ ಗುರು-ಹಿರಿಯರ ಸಮ್ಮುಖದ ಸಾಂಪ್ರದಾಯಿಕ ಮದುವೆಗಳನ್ನೇ ಇಷ್ಟಪಡುವುದಿದೆ. ವಿವಾಹ ಸಂಸ್ಥೆಯಲ್ಲಿಯ ಬದಲಾವಣೆಗಳಿಗೆ ಸಾಕ್ಷಿಯಾಗಿ ಪತ್ರಿಕೆಗಳಲ್ಲಿ ಬರುವ ವೈವಾಹಿಕ ಅಂಕಣಗಳ ಜಾಹೀರಾತುಗಗಳಿವೆ. ಸಂಗಾತಿಗಳ ಆಯ್ಕೆಯ ವಿಷಯದಲ್ಲಿ ಅಲ್ಲಿ ಸಾಕಷ್ಟು ಸಡಿಲತೆಗಳಿವೆ. ಹಿಂದೆ ಲಿಂಗಾಯಿತನೊಬ್ಬ ವಿವಾಹ ಸಂದರ್ಭದಲ್ಲಿ ತನ್ನದೇ ಉಪಜಾತಿಯಲ್ಲಿ ಮದುವೆಯಾಗಬೇಕಿತ್ತು. ಉದಾಹರಣೆಗೆ ಒಬ್ಬ ಪಂಚಮಸಾಲಿ, ಬಣಜಿಗ, ಗಾಣಿಕ ಯುವಕ ಅದೇ ಜಾತಿಯ ಕನ್ಯೆಯನ್ನು ಮದುವೆಯಾಗಬೇಕಿತ್ತು. ಈಗ ಹಾಗಿಲ್ಲ.  ಕನ್ಯಾನ್ವೇಷಣೆಯ ಸಂದರ್ಭದಲ್ಲಿಯೇ ಬಣಜಿಗ, ಗಾಣಿಗ, ಸಾದರ ಹೀಗೆ ಒಟ್ಟಿನಲ್ಲಿ ಯಾವುದೇ ಲಿಂಗಾಯಿತ ಉಪಜಾತಿಯಾದರೆ ಆಯಿತು ಅನ್ನುವಷ್ಟು ಧಾರಾಳತೆ ಈಗ ಮೂಡಿದೆ. ಇದು ಜಾತಿಯಂಥ ಗಡುಸಾದ ವ್ಯವಸ್ಥೆಯಲ್ಲಿ ಒಂದು ಮಹತ್ತರವಾದ ಬದಲಾವಣೆಯು ಹೌದು.

ಒಳಬಾಂಧವ್ಯ, ಅನುಲೋಮ ವಿವಾಹ  [ಮೇಲ್ಜಾತಿಯ ವರ ಕೆಳಜಾತಿಯ ಕನ್ಯೆ]  ಹಾಗೂ ಪ್ರತಿಲೋಮ ವಿವಾಹ  [ಕೆಳಜಾತಿಯ ವರ ಮೇಲ್ಜಾತಿಯ ಕನ್ಯೆ]  ಈ ಬಗೆಯ ವಿವಾಹಗಳಿಗೆ ಸಂಬಂಧಿಸಿ ಜಾತಿಯಲ್ಲಿ ಅದರದೇಯಾದ ಕೆಲವು ನಿರ್ಬಂಧಗಳಿದ್ದವು. ಈಗಲೂ ಕೂಡಾ ಕೆಲ ಸಮುದಾಯಗಳಲ್ಲಿ ಈ ಬಗೆಯ ಅನುಲೋಮ ಮತ್ತು ಪ್ರತಿಲೋಮ ವಿವಾಹಗಳು ಅಂತರ್ಜಾತಿಯ ವಿವಾಹ ಪದ್ಧತಿಯ ಸ್ವರೂಪದಲ್ಲಿ ಅಸ್ಥಿತ್ವದಲ್ಲಿವೆ. ಆದರೆ ಅವು ಎದುರಿಸಬಹುದಾದ ಒತ್ತಡ ಮತ್ತು ಪರಿಣಾಮಗಳು ಎಲ್ಲ ಸಮುದಾಯ ಮತ್ತು ರಾಜ್ಯಗಳಲ್ಲಿ ಒಂದೇ ತೆರನಾಗಿಲ್ಲ. ಇವತ್ತಿಗೂ ಕೆಲ ಸಮುದಾಯಗಳು ಜಾತಿಯ ನಿರ್ದೇಶನದಂತೆಯೇ ಜೀವನ ವಿಧಾನವನ್ನು ರೂಪಿಸಿಕೊಂಡಿರುವುದಿದೆ. ಜಾತಿಗೆ ವಿರುದ್ಧವಾದ ತೀರಾ ಸಣ್ಣ ಪ್ರಮಾಣದ ಪ್ರತಿರೋಧಗಳು ಕೂಡಾ ಮರ್ಯಾದೆಯ ಹತ್ಯೆಯಲ್ಲಿ ಮುಕ್ತಾಯವಾಗುವುದಿದೆ. ಬಹಳಷ್ಟು ಮರ್ಯಾದೆಯ ಹತ್ಯೆಯಲ್ಲಿ ಜಾತಿ ಒಂದು ಪ್ರಮುಖ ಕಾರಣವಾಗಿ ಕೆಲಸ ಮಾಡಿರುವುದಿದೆ. ಅದರಲ್ಲೂ ಪ್ರಬಲ ಜಾತಿಗಳ ಆರ್ಭಟವೇ ಹೆಚ್ಚು. ಕೆಳ ಜಾತಿಯ ಹುಡುಗ ಇಲ್ಲವೇ ಹುಡುಗಿ ಮೇಲ್ಜಾತಿಯ ಹುಡುಗ ಇಲ್ಲವೇ ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ ಎಲ್ಲ ಬಗೆಯ ರಿಸ್ಕ್ ಗಳಿಗೂ ತಯಾರಿರಬೇಕು ಎನ್ನುವಂತಹ ಆಹ್ವಾನವನ್ನು ಈ ಜಾತಿಪದ್ಧತಿ ನೀಡುವುದಿದೆ. ಇದನ್ನು ಇತ್ಯಾತ್ಮಕ ಬದಲಾವಣೆ ಅನ್ನಬೇಕೋ ಇಲ್ಲವೇ ನಿಷೇಧಾತ್ಮಕ ಬದಲಾವಣೆ ಅನ್ನಬೇಕೋ ಎನ್ನುವುದೇ ತಿಳಿಯದಾಗಿದೆ. ಪ್ರತಿಗಾಮಿಗಳಿಗೆ ಇದು ಇತ್ಯಾತ್ಮಕವೇ ಹೌದು. ಆದರೆ ಪ್ರಗತಿಗಾಮಿಗಳಿಗಲ್ಲ.

(ಚಿತ್ರಕೃಪೆ: ವಿಕಿಮೀಡಿಯ)