Tag Archives: ಕಾಂಗ್ರೆಸ್

ಬಯಲಿನಲ್ಲಿರುವ ದೀಪ

– ಬಿ.ಶ್ರೀಪಾದ ಭಟ್

ನಾನು ವಾಸವಿರುವ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ಆಶೋಕ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಚೇತನ್ ಗೌಡ. ಆರ್ ಅಶೋಕ್ ಕುರಿತಾಗಿ ಹೆಚ್ಚಿಗೆ ಹೇಳುವುದಕ್ಕೇನಿಲ್ಲ. ಆದರೆ ಯಾರೀತ ಚೇತನ್ ಗೌಡ ?? ಕೇವಲ ಒಂದು ತಿಂಗಳ ಹಿಂದಷ್ಟೇ  ಧೂಮಕೇತುವಂತೆ ಉದುರಿದ ಈ ಅಭ್ಯರ್ಥಿಯ ಹಿನ್ನೆಲೆ ಏನು ? ಕೆದಕಿದಾಗ ಗೊತ್ತಾಗಿದ್ದು ಈ ಚೇತನ್ ಗೌಡ ನಾಗಮಂಗಲದ ಶಿವರಾಮೇ ಗೌಡರ ಮಗ. ಯಾವ ಶಿವರಾಮೇ ಗೌಡ ?? ಇಪ್ಪತ್ತು ವರ್ಷಗಳ ಹಿಂದೆ ನಡೆದ ಕಂಚುಗನಹಳ್ಳಿ ಗಂಗಾಧರ ಮೂರ್ತಿಯ ಕೊಲೆ ಕೇಸಿನ ಆರೋಪಿ. ಕಳೆದ ಇಪ್ಪತ್ತು ವರ್ಷಗಳಲ್ಲಿ, ಅಧಿಕಾರದ ಲಾಲಸೆಯಲ್ಲಿ ಹೆಚ್ಚೂ ಕಡಿಮೆ ಕರ್ನಾಟಕದ ಮೂರು ಪ್ರಮುಖ ಪಕ್ಷಗಳಲ್ಲಿ ಸುತ್ತಾಡಿ ಸದ್ಯಕ್ಕೆ ಪಕ್ಷೇತರರು. ಇನ್ನೂ ಇವರು ಕಾಂಗ್ರೆಸ್ ಸೇರಿದಂತಿಲ್ಲ. ಆದರೆ ಅಷ್ಟರಲ್ಲೇ ಅವರ ಮಗನಿಗೆ ಕಾಂಗ್ರೆಸ್ ಸೀಟು ದಕ್ಕಿಸಿಕೊಂಡಿದ್ದಾರೆ, ಕಾಂಗ್ರೆಸ್ಸಿನವರಲ್ಲದೆಯೂ !!!

ಇದು ಕಾಂಗ್ರೆಸ್ ತಲುಪಿರುವ ಅನೈತಿಕ ಮಟ್ಟಕ್ಕೆ, ಭ್ರಷ್ಟತೆಯ ಗಂಗೋತ್ರಿಗೆ ಸಾವಿರಾರು ಉದಾಹರಣೆಗಳಲ್ಲೊಂದು. ನಾನು ನಗರಗೆರೆ ರಮೇಶ ಅವರೊಂದಿಗೆ ಸುಮಾರು ಸಲ ಚರ್ಚಿಸಿದೆ. ಈಗ ನಾವ್ಯಾರಿಗೆ ಓಟು ಮಾಡಬೇಕು ?? ಕಳೆದರೆಡು ಚುನಾವಣೆಗಳಲ್ಲಿ ಅಮಾಯಕ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್ನ ಗುರುಪಾದ ನಾಯ್ಡು ಅವರಿಗೆ ಮತ ಹಾಕುತ್ತಿದ್ದ ನಾವೆಲ್ಲ ಈ ಬಾರಿ ಪಕ್ಷೇತರ ಆಭ್ಯರ್ಥಿಗೆ ಮತ ನೀಡಬೇಕಾದಂತಹ ಪರಿಸ್ಥಿತಿ.

ಕೋಮುವಾದಿ, ಭ್ರಷ್ಟ ಪಕ್ಷವಾದ ಬಿಜೆಪಿಗೆ ಅನಿವಾರ್ಯವಾಗಿಯೇ ಪರ್ಯಾಯ ಪಕ್ಷವೆಂದು ಇಂದು ನಮ್ಮ ಹಿರಿಯ ಪ್ರಗತಿಪರ ಕಾಮ್ರೇಡರಿಂದ ಸಮರ್ಥನೆ ಪಡೆದುಕೊಂಡಿರುವ ಈ ಕಾಂಗ್ರೆಸ್ ಇಂದು ಕರ್ನಾಟಕದಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಆನುಸರಿಸಿರುವ ಮಾನದಂಡ, ಆಯ್ಕೆ87393882ಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದಾಗ ಇದು ಭ್ರಷ್ಟತೆಯಲ್ಲಿ, ಅನೈತಿಕತೆಯಲ್ಲಿ ಬಿಜೆಪಿಗೆ ಯಾವುದೇ ಬಗೆಯಲ್ಲಿಯೂ ಕಡಿಮೆ ಇಲ್ಲವೆಂದು ಸಾಬೀತಾಗಿದೆ.

ಬೆಂಗಳೂರಿನಲ್ಲಿ ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಹೆಚ್ಚೂ ಕಡಿಮೆ ಇಪ್ಪತ್ತರಿಂದ ಇಪ್ಪತ್ತೆರಡರವರೆಗಿನ ಕ್ಷೇತ್ರಗಳ ಅಭ್ಯರ್ಥಿಗಳು ಆಯ್ಕೆಗೆ ಅರ್ಹರೇ ಅಲ್ಲ. ಸುದರ್ಶನರಂತಹ ಹಿರಿಯ ಪ್ರಜ್ಞಾವಂತ, ಸೆಕ್ಯುಲರ್ ರಾಜಕಾರಣಿಗೆ ಸೀಟು ನೀಡಲಾಗದಷ್ಟು ಭ್ರಷ್ಟಗೊಂಡಿರುವ ಕಾಂಗ್ರೆಸ್, ನಮ್ಮ ಮತ್ತೊಬ್ಬ ಸೆಕ್ಯುಲರ್ ಮತ್ತು ಸಾಹಿತಿಗಳಾದ ಎಲ್.ಹನುಮಂತಯ್ಯನವರಿಗೆ ಸೀಟು ನೀಡಲಾಗದಷ್ಟು ಅನೈತಿಕತೆಯಲ್ಲಿ ಮುಳುಗಿರುವ ಕಾಂಗ್ರೆಸ್, ಯಾವ ಬಗೆಯಲ್ಲಿ ಅನಿವಾರ್ಯ ?? ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ ಯಾವ ಪುರುಷಾರ್ಥಕ್ಕೆ ಗೆಲ್ಲಬೇಕು ?? ಒಂದು ವೇಳೆ ಈ ಭ್ರಷ್ಟತೆಯ ಆರೋಪಕ್ಕೊಳಗಾಗಿರುವ, ಯಾವುದೇ ಕನಿಷ್ಟ ಅರ್ಹತೆಗಳಿಲ್ಲದ ಅನಿಲ್ ಲಾಡ್ ಗೆದ್ದರೆ, ಗಣಿ ಚೋರರಾದ ರೆಡ್ಡಿಗಳನ್ನು ಸೋಲಿಸಿದ್ದಕ್ಕೆ ಸಮರ್ಥನೆ ನೀಡಬೇಕಾಗುತ್ತದೆ. ದಾವಣಗೆರೆಯಲ್ಲಿ ಎಂಬತ್ತರ ಹರೆಯದ ಶ್ಯಾಮನೂರು ಒಂದು ಕಡೆಗೆ ಅಭ್ಯರ್ಥಿ, ಮತ್ತೊಂದು ತುದಿಯ ದಾವಣಗೆರೆಗೆ ಅವರ ಮಗ ಮಲ್ಲಿಕಾರ್ಜುನ ಅಭ್ಯರ್ಥಿ  ಬೆಂಗಳೂರಿನ ವಿಜಯನಗರ ಮತ್ತು ಗೋವಿಂದರಾಜ ನಗರದಲ್ಲೂ ಇದೇ ಕರ್ಮಕಾಂಡ. ಇವೆರಡರಲ್ಲಿ ಅಪ್ಪ ಕೃಷ್ಣಪ್ಪ ಮಗ ಪ್ರಿಯಾ ಕೃಷ್ಣ ಅಭ್ಯರ್ಥಿಗಳು. ಡಿ.ಕೆ.ಶಿವ ಕುಮಾರ್ ಅವರನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾವ ಬಗೆಯಲ್ಲಿ ಸಹಿಸಿಕೊಳ್ಳಲು ಸಾಧ್ಯ?? ಇಂತಹ ನೂರಾರು ಉದಾಹರಣೆಗಳಿವೆ.

ಮಸಲ ಕಾಂಗ್ರೆಸ್ ಏನಾದರೂ ಬಹುಮತ ಗಳಿಸಿ ಅಧಿಕಾರಕ್ಕೆ ಬಂದರೆ ಮಂತ್ರಿಮಂಡಲ ರಚನೆಗೆ ಬೇಕಾಗುವ ಕನಿಷ್ಟ ಮೂವತ್ತು ಮಂತ್ರಿಗಳನ್ನು ಆಯ್ಕೆ ಮಾಡಬೇಕಾದರೆ ನೈತಿಕವಾಗಿ, ಅನುಭವದ ಸಾಂದ್ರತೆಯ ಹಿನ್ನೆಲೆಯಲ್ಲಿ ಕನಿಷ್ಟ ಅರ್ಹತೆಗಳಿರುವ ಹದಿನೈದು ಶಾಸಕರು ದೊರಕುವುದು ಸಹ ಕಡುಕಷ್ಟ !! ಕಾಂಗ್ರೆಸ್ ಆಧಿಕಾರಕ್ಕೆ ಬಂದರೆ ಕೋಮುವಾದದ ಭೂತ ಇಲ್ಲವಾಗುತ್ತದೆ ಎಂಬ ಒಂದೇ ಅರ್ಹತೆಯನ್ನು ತನ್ನ ಹೆಗಲೇರಿಸಿಕೊಂಡಿರುವ ಈ ಕಾಂಗ್ರೆಸ್ ಕಳೆದ ಎಂಟು ವರ್ಷಗಳ ತನ್ನ ವಿರೋಧ ಪಕ್ಷದ ಜವಾಬ್ದಾರಿಯನ್ನು ಅತ್ಯಂತ ಹೊಣೆಗೇಡಿಯಾಗಿ, ದಿಕ್ಕೆಟ್ಟ, ಹಾದಿ ತಪ್ಪಿದ ಪಕ್ಷವಾಗಿಯೇ ಕಾರ್ಯ ನಿರ್ವಸಿತು. ಈ ಕಾಲ ಘಟ್ಟದಲ್ಲಿ ಅನೇಕ ಕೋಮು ಗಲಭೆಗಳು, ಮಹಿಳೆಯರ ಮೇಲೆ ಅತ್ಯಾಚಾರಗಳು, ಹಲ್ಲೆ ನಡೆದಾಗಲೂ ಬೆರಳೆಣಿಕೆಯಷ್ಟು ಶಾಸಕರನ್ನು ಬಿಟ್ಟು ಒಂದು ಪಕ್ಷವಾಗಿ ಕಾಂಗ್ರೆಸ್ ಅನುಸರಿಸಿದ ಜಾಣ ಮೌನ ಮತ್ತು ನಿರ್ಲಕ್ಷತೆಯನ್ನು ಕ್ಷಮಿಸಲು ಸಾಧ್ಯವೇ ?? ಮಂಗಳೂರಿನ ಸ್ಟೇ ಹೋಂ ಪ್ರಕರಣದ ಕುರಿತಾಗಿ ನನಗೆ ಪರಿಚಯದ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರೊಬ್ಬರೊಂದಿಗೆ ಚರ್ಚಿಸಿದಾಗ ಅವರ ಉದಾಸೀನತೆಯನ್ನು, ಘಟನೆಯ ಕುರಿತಾದ ಮಾಹಿತಿಯ ಕೊರತೆಯನ್ನು ಕಂಡು ದಂಗು ಬಡಿದೆ !! ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಇಲಾಖೆಯಲ್ಲಿ ಕಣ್ಣಿಗೆ ಕಾಣುವಂತೆಯೇ,ಕಣ್ಣಿಗೆ ಕಾಣದಂತೆಯೇ ತುಂಬಿಕೊಂಡಿರುವ ಸಂಘಪರಿವಾದ ಗುಂಪನ್ನು ಹೇಗೆ ಹುಡುಕಿ ಹುಡುಕಿ ತೆಗೆದು ಹೇಗೆ ಸ್ವಚ್ಛಗೊಳಿಸುತ್ತೀರಿ ಇದಕ್ಕೆ ಈಗಲೇ ಯೋಜನೆಗಳಿವೆಯೇ ಎಂದು ಇದೇ ನಾಯಕರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಇವೆಲ್ಲ ಆಗದ ಮಾತು,ಸಧ್ಯಕ್ಕೆ ನಾವು ಆಧಿಕಾರದ ಚುಕ್ಕಾಣಿ ಹಿಡಿಯೋಣ ಅಷ್ಟೇ ಎಂದು ಉತ್ತರಿಸಿದ್ದು ಇಡೀ ಕಾಂಗ್ರೆಸ್ನ ಮನೋಸ್ಥಿತಿಯನ್ನು ಬಿಂಬಿಸುತ್ತದೆ.

ರಾಷ್ಟ್ರೀಯತೆಯನ್ನು ಮತೀಯವಾದದೊಂದಿಗೆ ಸಮೀಕರಿಸುವ ಸಂಘ ಪರಿವಾರಕ್ಕೆ ನಿಜಕ್ಕೂ ಪರ್ಯಾಯವಾಗಿ ಕಾಂಗ್ರೆಸ್ ಬೆಳೆಯಬೇಕೆಂದರೆ ಅದು ಈಗಿನ ಮಾದರಿಯಲ್ಲಂತೂ ಅಲ್ಲವೇ ಅಲ್ಲ. ದೇಶಪ್ರೇಮದ ಹೆಸರಿನಲ್ಲಿ ಸಮಾಜವನ್ನು ಒಡೆದು ತುಂಡು ಮಾಡಿದ ಬಿಜೆಪಿಯ ವಿರುದ್ಧ ಪರ್ಯಾಯ  ರಾಜಕಾರಣವನ್ನು ಕಟ್ಟಲು ಕಾಂಗ್ರೆಸ್ನ ಬತ್ತಳಿಕೆಯಲ್ಲಿ ಯಾವುದೇ ಹತಾರಗಳಿಲ್ಲ. ದಲಿತರು ಮತ್ತು ಮುಸ್ಲಿಂರು ಕಾಂಗ್ರೆಸ್ ಆಳ್ವಿಕೆಯಲ್ಲಿ ಸುರಕ್ಷಿತರು ಎಂದು ನಾವು ಎಷ್ಟೇ ಸಮಜಾಸಿಕೊಂಡರೂ ಇಂದು ಇಪ್ಪತ್ತೊಂದನೇ ಶತಮಾನದ ಎರಡನೇ ದಶಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಬಳ್ಳಿಯ ಹೂವುಗಳಾಗಿ ಕಣ್ಣಿಗೆ ರಾಚುತ್ತಿರುವುದು ಮಾತ್ರ ಸತ್ಯ. ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನನ್ನೂ ನೀಡದಿದ್ದರೂ, ಅವರಿಗೆ ಅಂಗೈಯಲ್ಲಿ ಅರಮನೆ ತೋರಿಸಿ ಮೋಸಗೊಳಿಸಿದ್ದರೂ ಮಾನವಾಗಿ, ಆತ್ಮಸ್ಥೈರ್ಯದಿಂದ, ತಲೆಯೆತ್ತಿ ಬದುಕಲಿಕ್ಕಾದರೂ ಸಾಧ್ಯವಿರುವುದು ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಎಂಬ ನುಡಿ ಮೂವತ್ತು ವರ್ಷಗಳ ಹಿಂದೆ ನಿಜವಿತ್ತು. ಇಂದು ಇದೆಲ್ಲ ಮತ್ತೊಂದು ಮಜಲನ್ನು ಮುಟ್ಟಿ ಅಪಾಯದ ಅನೇಕ ದಾರಿಗಳಿಗೆ ಬಂದು ತಲುಪಿದೆ.

ಸಂತೆಗೆ ತಕ್ಕ ಬೊಂತೆಯ ಸಿದ್ಧಾಂತದ ಅಡಿಯಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಪ್ರತಿ ಕ್ಷಣಕ್ಕೂ ಕೊಳೆಯುತ್ತಾ ನಾರುವ ಗುಣಗಳನ್ನು ಇಂದು ಮೈಗೂಡಿಸಿಕೊಂಡಿದೆ. ಇಂದು ಕಾಂಗ್ರೆಸ್ ಯಾವುದೇ ಕ್ಷಣದಲ್ಲಿ ಪ್ರತಿಗಾಮಿ ನಿಲುವು ತಳೆಯುವಷ್ಟು ಅಪಾಯದ ಜಾರುಬಂಡೆಯಲ್ಲಿ ಬಂದು ನಿಂತಿದೆ. ಒಂದು ಗಟ್ಟಿಯಾದ ತಾತ್ವಿಕ ನೆಲೆಯನ್ನು ಕಟ್ಟಲು ಇಂದು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ ಇಲ್ಲ. ತನ್ನೊಡಲೊಳಗೆ ಎಷ್ಟೇ ಬಗೆಯ ವಿರೋಧಾಭಾಸದ ನೆಲೆಗಳನ್ನು ಇಟ್ಟುಕೊಂಡಿದ್ದರೂ ಬಹಿರಂಗವಾಗಿ ರೈತ ಸಂಘದೊಂದಿಗೆ, ದಲಿತ ಸಂಘಟನೆಗಳೊಂದಿಗೆ ಸಮೀಕರಿಸಿಗೊಂಡು ರಾಜಕೀಯ ಮಾಡಲೇಬೇಕಾದಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ತನಗೆ ತಾನು ಸೃಷ್ಟಿಸಿಕೊಳ್ಳಲೇ ಇಲ್ಲ. ಇಂದು ಮೀಸಲು ಕ್ಷೇತ್ರಗಳಲ್ಲಿ ಅನೇಕ ಕಡೆ ಅಸ್ಪೃಶ್ಯರನ್ನು ಕಡೆಗಣಿಸಿ ಕಾಂಗ್ರೆಸ್ ಸ್ಪೃಶ್ಯ ಜಾತಿಗಳಿಗೆ ಟಿಕೇಟು ನೀಡಿರುವುದೇ ಇದಕ್ಕೆ ಸಾಕ್ಷಿ.ಇದು ಬಿಜೆಪಿಗೆ ಕಾಂಗ್ರೆಸ್ ಪರ್ಯಾಯವಾಗಿ  ಬೆಳೆಯುವ ಪರಿ !!!! ಭಾರತವನ್ನು ದಲಿತರ ಪರವಾದ ದೇಶವನ್ನು ಕಟ್ಟಲು ಮತ್ತು ದಲಿತರ ಮೂಲಕವೇ ಮುಸ್ಲಿಂರಿಗೆ ಬೆಳಕಿನ ದಾರಿ ಕಾಣಿಸುವ ಶಕ್ತಿ ಕಾಂಗ್ರೆಸ್ಗೆ ಇತ್ತು. ಆದರೆ ಅದನ್ನು ಸಂಪೂರ್ಣವಾಗಿ ಕೈಚೆಲ್ಲಿ ಇಂದು ದಿಕ್ಕೇಡಿಯಾಗಿ, ಕಕ್ಕಾಬಿಕ್ಕಿಯಾಗಿ ಬಯಲಿನಲ್ಲಿನ ದೀಪದಂತೆ ನಿಂತಿದೆ ಕಾಂಗ್ರೆಸ್.

ಇಂದು ನಾವೆಲ್ಲ ಕಹಿ ಸತ್ಯವನ್ನು ಹೇಳುವ,ಹೇಳಿ ಅರಗಿಸಿಕೊಳ್ಳುವ ಗುಣಗಳನ್ನು ಮೈಗೂಡಿಕೊಳ್ಳದಿದ್ದರೆ ಹಳ್ಳ ಹಿಡಿಯುವುದಂತೂ ಗ್ಯಾರಂಟಿ. ನಮ್ಮ ಹೊಂದಾಣಿಕೆಯ ಮಟ್ಟವನ್ನು ಅನಿವಾರ್ಯತೆಯ ನೆಪದಲ್ಲಿ ಸಂಯಮ ಮೀರಿ ಕೆಳಕ್ಕೆ ಮತ್ತಷ್ಟು ಕೆಳಕ್ಕೆ ಇಳಿಸುವುದು ವ್ಯವಸ್ಥೆಯನ್ನು ಅಭದ್ರಗೊಳಿಸಿದಂತೆಯೇ ಸರಿ. ಎಂಬತ್ತರ ದಶಕದಲ್ಲಿ ಹೆಗಡೆಯ ನರಿ ಬುದ್ದಿಗೆ ಇಡೀ ಪ್ರಗತಿಪರ ಗುಂಪು ಬಲಿಯಾದ ರೀತಿನೀತಿಗಳು ನಮ್ಮ ನೆನಪಿನಿಂದ ಮುಸುಕಾಗದಿರಲಿ. ಒಂದು ವೇಳೆ ಮಂಪರು ಕವಿದಿದ್ದೇ ನಿಜವಾದರೆ ಇಡೀ ಪ್ರಜ್ಞಾವಂತ ಸಮಾಜಕ್ಕೆ ಲಕ್ವ ಹೊಡೆಯಲು ಬಹಳ ಕಾಲವೇನು ಬೇಕಾಗಿಲ್ಲ.

ಬಳ್ಳಾರಿ (ಗ್ರಾ) ಉಪ ಚುನಾವಣೆ: ಗಣಿ ಎಂಜಲೆಲೆಯ ಮೇಲೆ ಉರುಳಾಡಿದ ರಾಜಕಾರಣಿಗಳು

-ಪರುಶುರಾಮ ಕಲಾಲ್

ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಕೊಳಕುತನವನ್ನು ಮತ್ತೊಮ್ಮೆ ಬಯಲು ಮಾಡಿದ್ದು, ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆ.

ಗಣಿಯ ಕಪ್ಪ ಪಡೆಯದ ರಾಜಕಾರಣಿ ಯಾರು? ಎನ್ನುವಂತೆ ಎಲ್ಲಾ ಪಕ್ಷಗಳು ಗಣಿಧಣಿಗಳೊಂದಿಗೆ ಗುರುತಿಸಿಕೊಂಡೆ ಉಪ ಚುನಾವಣೆಯನ್ನು ಎದುರಿಸಿದರು. ಹೆಚ್ಚು ಗಣಿ ಹಣ ಖರ್ಚು ಮಾಡಿದ ಬಿ. ಶ್ರೀರಾಮುಲು ಬಿಜೆಪಿಯನ್ನು ಅವರೇ ಸೃಷ್ಠಿಸಿಕೊಂಡ “ಆಪರೇಷನ್ ಕಮಲ”ದ ತಂತ್ರದ ಮೂಲಕವೇ ಆಪರೇಷನ್ ಮಾಡಿ, ಚಿಂದಿ ಮಾಡಿ ಹಾಕಿದರು.

ಬಳ್ಳಾರಿ ಉಪ ಚುನಾವಣೆಯ ಮತದಾರರಿಗೆ ಆಯ್ಕೆಗಳೇ ಇರಲಿಲ್ಲ. ಅವರಾದರೂ ಏನು ಮಾಡಿಯಾರು? ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಪೈಕಿ ಯಾರನ್ನಾದರೂ ಆಯ್ಕೆ ಮಾಡಲೇ ಬೇಕಿತ್ತು. ಅವರಿಗೆ ರಾಮುಲು ಹೆಚ್ಚು ಸಭ್ಯನಾಗಿ ಕಂಡಿರಬೇಕು.

ಈ ಚುನಾವಣೆಯಲ್ಲಿ ಮತದಾರರು ಕುಕ್ಕೆ ಸುಬ್ರಮಣ್ಯಂ ದೇವಾಲಯದ ಮಲೆಕುಡಿಯರಂತೆ ಆಗಿದ್ದರು. ಗಣಿಯ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳನ್ನೇ ನೋಡಿದ ಮೇಲೆ ನಾವು ಅದರಲ್ಲಿ ಉರುಳಾಡಿದರೆ ತಪ್ಪೇನೂ ಇಲ್ಲ ಎಂದೇ ಅನ್ನಿಸಿಬಿಟ್ಟಿತು. ಬೇರೆ ಆಯ್ಕೆಯೇ ಇಲ್ಲದಾಗ ಅಸಹಾಯಕ ಸ್ಥಿತಿ ನಿರ್ಮಾಣವಾಗುತ್ತದೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಇಳಿಯುತ್ತಾರೆ. ಮತದಾರರು ಕೂಡಾ ಇದೇ ಹಾದಿ ತುಳಿದರು. ರಾಮುಲು ಮತ್ತೊಮ್ಮೆ ಗೆದ್ದರು. ಮತದಾರರು ಮಾತ್ರ ಸೋತು ಸುಣ್ಣವಾದರು.

ಬಿ.ಶ್ರೀರಾಮುಲು ಗೆಲುವಿಗೆ ನಾಲ್ಕು ಮುಖ್ಯ ಕಾರಣಗಳು ಇವೆ. ಮೊದಲನೆಯದು ಹಣದ ಬಲ, ತೋಳ್ಬಲ. ಈ ಚುನಾವಣೆಯಲ್ಲಿ ಬರೊಬ್ಬರಿ 120 ಕೋಟಿಯಷ್ಟು ಹಣವನ್ನು ಅವರು ಖರ್ಚು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಳ್ಳಿ ಹಳ್ಳಿಗಳಿಗೆ ತೆರಳಿ ಹಣದ ಬಟವಾಡೆಯನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಎಲ್ಲವೂ ಎಷ್ಟು ವ್ಯವಸ್ಥಿತವಾಗಿ ಮಾಡಲಾಯಿತು ಎಂದರೆ ಮತದಾರರ ಸಹಿ ಮೂಲಕವೇ ಹಣ ವಿತರಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಸಹಿ, ಹೆಬ್ಬಟ್ಟಿನ ಗುರುತು ಅಂದರೆ ಅದಕ್ಕೆ ಬಹಳ ಮಹತ್ವವಿದೆ. ಆಸ್ತಿ ಮಾರಾಟ, ಕೊಟ್ಟ ಮಾತು ಎಲ್ಲವನ್ನೂ ಅದು ಧ್ವನಿಸುತ್ತದೆ. ಸಹಿ ಮಾಡಿದ ಮೇಲೆ ಅದಕ್ಕೆ ಅವರು ಬದ್ಧ ಎನ್ನುವ ಸಂದೇಶವೊಂದನ್ನು ಅದು ರವಾನಿಸುತ್ತದೆ. ಊಳಿಗಮಾನ್ಯ ಸಮಾಜದ ಗುಣಲಕ್ಷಣಗಳನ್ನು ಮೈಗೊಡಿಸಿಕೊಂಡಿರುವ ಈ ಕ್ಷೇತ್ರದ ಮತದಾರರು ರಾಮುಲುಗೆ ಬದ್ಧತೆ ತೋರಿಸಬೇಕಿತ್ತು.

ಎರಡನೆಯ ಕಾರಣವೆಂದರೆ ವಾಲ್ಮೀಕಿ ನಾಯಕ ಸಮಾಜದ ಮತದಾರರು (ಇದು ಪರಿಶಿಷ್ಟ ಪಂಗಡದ ಕ್ಷೇತ್ರವೂ ಹೌದು) ರಾಮುಲು ಅವರನ್ನು ಪಕ್ಷಾತೀತವಾಗಿ ತಮ್ಮ ನಾಯಕನೆಂದು ಒಪ್ಪಿಕೊಂಡರು. ವಾಲ್ಮೀಕಿ ಸಮಾಜದಲ್ಲಿ ರಾಮುಲು ಒಬ್ಬರೇ ನಾಯಕರಿಲ್ಲ. ಆದರೆ ರಾಮುಲು ಗಣಿಧಣಿಗಳ ಜೊತೆ ಗುರುತಿಸಿಕೊಂಡು ತಮ್ಮದೇ ಆದ ಪ್ರಭಾವ ಗಳಿಸಿಕೊಂಡಿದ್ದಾರೆ. ರಾಮುಲು ಪವರ್ ಏನೆಂದು ಇವರಿಗೆ ಗೊತ್ತು. ಹೀಗಾಗಿ ಇತನೇ ನಮ್ಮ ನಾಯಕ ಎಂದು ಮತದಾರರು ಭಾವಿಸಿದರು. ಇವರ ಜೊತೆಗೆ ಭೋವಿ ಸಮಾಜ ಕೈಗೂಡಿಸಿತು.

ಮೂರನೆಯ ಕಾರಣ, ಬಳ್ಳಾರಿಯ ಮುಸ್ಲಿಂ ಮತದಾರರು. ಇವರು ರೆಡ್ಡಿ ಬ್ರದರ್ಸ್‌ರನ್ನು ಮೊದಲಿಂದಲೂ, ಅವರು ಬಿಜೆಪಿಯಲ್ಲಿದ್ದಾಗಲೇ ಬೆಂಬಲಿಸಿದ್ದರು. ಇದಕ್ಕೆ ಸ್ಥಳೀಯ ಕಾರಣಗಳು ಮುಖ್ಯವಾಗಿವೆ. ರೆಡ್ಡಿ ಬ್ರದರ್ಸ್ ಎಷ್ಟೇ ರಾಜಕಾರಣ ಮಾಡಲಿ, ಕೋಮುವಾದ ರಾಜಕಾರಣಕ್ಕೆ ಆಸ್ಪದ ಕೊಟ್ಟಿರಲಿಲ್ಲ. ರೆಡ್ಡಿ ಬ್ರದರ್ಸ್ ಮತ್ತು ರಾಮುಲುರವರಿಗೆ ತಾಯಿ ಸುಷ್ಮಾ ಸ್ವರಾಜ್‌ರನ್ನೇ ದರ್ಗಾಕ್ಕೆ ಕರೆದುಕೊಂಡು ಹೋಗಿ ನಮಸ್ಕಾರ ಮಾಡಿಸಿ, ತಲೆಯ ಮೇಲೆ ಹಸಿರು ಟವೆಲ್ ಹಾಕಿಸಿದ ಕೀರ್ತಿಯೂ ಸೇರುತ್ತದೆ. ರಾಮುಲು ಬಿಜೆಪಿಯಿಂದ ಹೊರ ಬಂದಿದ್ದು ಅವರಿಗೆ ಇನ್ನೂ ಹೆಚ್ಚು ಖುಷಿ ಕೊಟ್ಟ ವಿಷಯವಾಗಿತ್ತು. ಮರು ಆಲೋಚನೆ ಮಾಡದೇ ರಾಮುಲು ಅವರನ್ನು ಮತ್ತೊಮ್ಮೆ ಅಪ್ಪಿಕೊಂಡರು.

ನಾಲ್ಕನೆಯದು, ಜೆಡಿಎಸ್.

ಜೆಡಿಎಸ್ ಜಾತ್ಯಾತೀತತೆ:
ಜೆಡಿಎಸ್ ಬಿಜೆಪಿ ಮಧುಚಂದ್ರದ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹೊಸಪೇಟೆಯಲ್ಲಿ ಬೃಹತ್ ನಾಯಕ ಸಮಾಜದ ರಾಜ್ಯಮಟ್ಟದ ಸಮಾವೇಶ ನಡೆಸಿದರು. ನಾಯಕ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ದೇವೇಗೌಡರು ಪ್ರಧಾನಿಯಾಗಿದ್ದಾಗ ಪ್ರಯತ್ನ ನಡೆಸಿದ್ದರು. ರಾಜ್ಯದ ರಾಜಕಾರಣದಲ್ಲಿ ಕುರುಬ ಸಮುದಾಯ ತಮ್ಮ ನಾಯಕನೆಂದೇ ಭಾವಿಸಿರುವ ಸಿದ್ಧರಾಮಯ್ಯ ಅವರನ್ನು ಹಿಂದಕ್ಕೆ ಸರಿಸಲು ಇದು ಅವರಿಗೆ ಅತ್ಯಗತ್ಯವಾಗಿತ್ತು.  “ಅಹಿಂದ”ವನ್ನು ಒಡೆಯಲು ಸಹ ಇದು ಅಗತ್ಯವಾಗಿತ್ತು. ನಾಯಕ ಸಮುದಾಯ ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆಯಾದ ಕೀರ್ತಿಯನ್ನು ಈ ಹಿನ್ನೆಲೆಯಲ್ಲಿ ಪಡೆಯಲು ಕುಮಾರಸ್ವಾಮಿ ಪ್ರಯತ್ನ ನಡೆಸಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಒಂದು ನೆಲೆ ಕಂಡುಕೊಳ್ಳುವುದೇ ಆಗಿತ್ತು. ಆದರೆ ನಂತರ ನಡೆದ ರಾಜಕೀಯ ಬದಲಾವಣೆಗಳು ಈ ಪ್ರಯೋಗಕ್ಕೆ ಆಸ್ಪದ ಕೊಡಲಿಲ್ಲ. ಪರಿಶಿಷ್ಟ ಪಂಗಡದ ಶಾಸಕರು ಬಿಜೆಪಿ ತೆಕ್ಕೆಗೆ ಸೇರಿಕೊಂಡರು. ನಾಯಕ, ಲಂಬಾಣಿ, ಭೋವಿ ಸಮಾಜಗಳು ಬಿಜೆಪಿಯಲ್ಲಿ ಗುರುತಿಸಿಕೊಂಡವು. ಈ ಹಿಂದೆ ಕಾಂಗ್ರೆಸ್ ಮತಬ್ಯಾಂಕ್ ಆಗಿದ್ದ ಈ ಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಜೆಡಿಎಸ್ ಪ್ರಯತ್ನ ವಿಫಲವಾಗಿತ್ತು

ಈ ಉಪ ಚುನಾವಣೆಯಲ್ಲಿ ರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಂತೆ ಜೆಡಿಎಸ್ ತನ್ನ ಹಳೆಯ ಪ್ರಯೋಗವನ್ನು ಇಲ್ಲಿ ಪ್ರಯೋಗಿಸಲು ರಾಮುಲುವನ್ನೇ ಅಸ್ತ್ರ ಮಾಡಿಕೊಂಡರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ರಾಮುಲು ಹೊಸ ಪಕ್ಷ ಸ್ಥಾಪಿಸಲು ಇವರೇ ನೀರು ಎರೆಯುತ್ತಿದ್ದಾರೆ. ಜೆಡಿಎಸ್ ಪಕ್ಷ ಸೇರ್ಪಡೆಗಿಂತ ಹೊಸ ಪಕ್ಷವೇ ಅವರಿಗೆ ಖುಷಿ ಕೊಡುವ ಸಂಗತಿಯಾಗಿದೆ. ಹೊಂದಾಣಿಕೆ ಮಾಡಿಕೊಂಡು ರಾಜ್ಯದ ರಾಜಕಾರಣವನ್ನು ನಿರ್ವಹಿಸಲು ಯೋಜಿಸಿದ್ದಾರೆ. ಬಿಜೆಪಿ ಮತ ಬ್ಯಾಂಕ್ ಛಿದ್ರಗೊಳಿಸುವ ಯಾವುದೇ ಶಕ್ತಿ ಇರಲಿ. ಅದು ಜೆಡಿಎಸ್ ಮಿತ್ರ ಪಕ್ಷ.

ಜೆಡಿಎಸ್ ಜಾತ್ಯಾತೀತತೆ ಅಂದರೆ ಜಾತಿ ಲೆಕ್ಕಚಾರವೇ ಆಗಿದೆ.

ಇನ್ನು, ಪಾಪ ಕಾಂಗ್ರೆಸ್ ಪಕ್ಷ ಮಾತ್ರ ಒಂದು ಶತಮಾನದಷ್ಟು ಹಿಂದಿನ ಗತ ವೈಭವದಲ್ಲಿಯೇ ಇನ್ನೂ ಲೆಕ್ಕಚಾರ ಹಾಕುತ್ತಾ ಕುಳಿತುಕೊಂಡಿದೆ.