Tag Archives: ಕುಮಾರಸ್ವಾಮಿ

ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ

ಬಿ.ಶ್ರೀಪಾದ ಭಟ್

ಇಂಡಿಯಾ ದೇಶ ಜಾಗತೀಕರಣಕ್ಕೆ ತುತ್ತಾಗಿ 20 ವರ್ಷಗಳು ತುಂಬಿದ ಗಳಿಗೆಯಲ್ಲಿ, ಇಲ್ಲಿನ ಹತಾಶ ವ್ಯವಸ್ಥೆ ಭ್ರಷ್ಟ ಮಂತ್ರಿ ಶರದ್ ಪವಾರ್ ಗೆ ಕಪಾಳ ಮೋಕ್ಷ ಮಾಡುವುದರ ಮೂಲಕ ಜಾಗತೀಕರಣದ ಹೆಮ್ಮಾರಿ ತನ್ನ  20ನೇ ವಾರ್ಷಿಕೋತ್ಸವವನ್ನು ಸಾಂಕೇತಿಕವಾಗಿ ಆರಂಬಿಸಿದೆ. ಇನ್ನೂ ಮುಂದೆ ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ.

ದೃಶ್ಯ 1 : ಕುಪಿತ ಸಿಖ್ ವ್ಯಕ್ತಿಯೊಬ್ಬನಿಂದ ಕಪಾಳ ಮೋಕ್ಷಕ್ಕೆ ಒಳಗಾದ ಕೇಂದ್ರದ ವ್ಯವಸಾಯ ಮಂತ್ರಿ ಶರದ್ ಪವಾರ್ ಅವರ ಮಗಳಾದ ಸುಪ್ರಿಯಾ ಹೇಳಿದ್ದು ” ನನ್ನ ತಂದೆಯವರ ಆಪರೇಶನ್ ಮಾಡಿಸಿಕೊಂಡ ಕಪಾಳಕ್ಕೆ ಏಟು ಬಿದ್ದಿದೆ. ಅದು ಇನ್ನು ಯಾವ ಸ್ವರೂಪ ಪಡೆಯುತ್ತದೆಯೋ ಹೇಳಲಿಕ್ಕಾಗದು” ಇಷ್ಟು ಹೇಳುವಷ್ಟರಲ್ಲಾಗಲೆ ಅವರ ಕಣ್ಣು ತುಂಬಿ ಬಂದಿದ್ದವು. ಇದು ಸಹಜ.ಆದರೆ ಮಾನ್ಯ ಶರದ ಪವಾರ್ ಮತ್ತು ಸುಪ್ರಿಯಾರವರೆ ಅಷ್ಟೇ ಸಹಜವಾದದ್ದು ಈ ಕೆಳಗಿನ ಅಂಶಗಳು:

1997 ರಿಂದ ಇಲ್ಲಿಯವರೆಗೂ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗಿದ್ದು ಸರ್ಕಾರಗಳು ಇವರ ನೆರವಿಗೆ ಬಾರದೆ ಇದ್ದದ್ದಕ್ಕೆ. ಜಾಗತೀಕರಣದ ಅಮಲಿನಲ್ಲಿ ದೇಶದ ಬೆನ್ನೆಲೆಬು ಎನಿಸಿಕೊಂಡ ವ್ಯವಸಾಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದಕ್ಕೆ. ಈ ಸರ್ಕಾರ ಕುರುಡಾಗಿ, ಯಾವ ಪೂರ್ವಭಾವಿ ಸಿದ್ಧತೆಗಳು, ಮುಂದಾಲೋಚನೆಗಳು, ತರ್ಕಬದ್ಧವಾದ ಚಿಂತನೆಗಳು ಇಲ್ಲದೆ, ಈ ದೇಶದ ಶೇಕಡ 70 ರಷ್ಟಿರುವ ಬಡಜನತೆಯ, ರೈತರ, ತಳಸಮುದಾಯಗಳ ಹಿತಾಸಕ್ತಿಗಳು, ಎಲ್ಲವನ್ನೂ ಕಡೆಗಣಿಸಿ ಒಂದು ರೀತಿಯಲ್ಲಿ ಗೊತ್ತು ಗುರಿಯಿಲ್ಲದೆ ರೂಪಿಸಿದ ಮುಕ್ತ ಮಾರುಕಟ್ಟೆಯ ನೀತಿಯ ಫಲವಾಗಿ ಕಳೆದ 20 ವರ್ಷಗಳಲ್ಲಿ ಮೇಲಿನ ಎಲ್ಲ ಸಮುದಾಯಗಳು ನೆಲ ಕಚ್ಚಿದವು.

ಈ ಸಂಧರ್ಭದಲ್ಲಿ ಸಂಪೂರ್ಣ ಸೋತುಹೋದ ರೈತ ಏನು ಮಾಡಬಹುದಿತ್ತು? ಹೋರಾಡಬಹುದಿತ್ತೇ? ಯಾರ ಬಲದಿಂದ? ಪ್ರಭುತ್ವದ ಎದುರು ಏಕಾಂಗಿಯಾಗಿ ಎಷ್ಟು ದೀರ್ಘ ಕಾಲ? ಶಾಸಕರತ್ತ, ಮಂತ್ರಿಗಳತ್ತ ಚಪ್ಪಲಿ ತೂರಬಹುದಾಗಿತ್ತೇ? ಅವರ ಕಪಾಳ ಮೋಕ್ಷ ಮಾಡಬಹುದಾಗಿತ್ತೇ? ಆದರೆ ಪ್ರಜಾಪ್ರಭುತ್ವದ ಎಲ್ಲಾ ದಾರಿಗಳು ಮುಚ್ಚಿಕೊಂಡಂತಹ ಸಂಧರ್ಭದಲ್ಲಿ ಇದಾವುದನ್ನು ಮಾಡದ ನಮ್ಮ ನೆಲದ ಸಂಪನ್ನ ರೈತ  ಸ್ವತಃ ತನ್ನ ಜೀವವನ್ನೇ ಬಲಿ ಕೊಟ್ಟು ವ್ಯವಸ್ಥೆಗೆ, ಸರ್ಕಾರಕ್ಕೆ, ಅವರ ಆತ್ಮಸಾಕ್ಷಿಗೆ, ನೈತಿಕತೆಗೆ, ಸವಾಲು ಎಸೆದಿದ್ದಾನೆ. ಆದರೆ ಭ್ರಷ್ಟಚಾರದ ಹಿನ್ನೆಲೆಯುಳ್ಳ ಶರದ ಪವಾರ್ ರಂತಹ ರಾಜಕಾರಣಿಗಳು ನಿರ್ಲಜ್ಜೆಯಿಂದ ತನ್ನ ಇಲಾಖೆಗೆ ಸೇರಿದ, ಈ ದೇಶದ ಬೆನ್ನೆಲುಬಾದ ವ್ಯವಸಾಯರಂಗವನ್ನು ಸಂಪೂರ್ಣವಾಗಿ ತುಳಿದು ನಾಚಿಕೆಯಿಲ್ಲದೆ ಅದೇ ಖಾತೆಯಲ್ಲಿ ಮುಂದುವರೆದಿರುವುದಕ್ಕೆ ನಾವೆಲ್ಲ ಹತಾಶೆಯಿಂದ, ಸೋಲಿನಿಂದ ತಲೆತಗ್ಗಿಸಬೇಕಷ್ಟೆ. ಯಾವುದೇ ಕೆಚ್ಚೆದೆಯುಳ್ಳ, ಮಾನವಂತ ಸಮಾಜ ಈ ಶರದ ಪವಾರ್ ರಂತಹವರನ್ನು ಎಂದೋ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತಿತ್ತು. ಈ ಪವಾರ್ ಎಂದೋ ನ್ಯಾಯದೇವತೆಯ ಕಪಾಳ ಮೋಕ್ಷಕ್ಕೆ ತುತ್ತಾಗಬಹುದಾದಿತ್ತು. ಆದರೆ ನಮ್ಮದು ಅನುಕೂಲಸಿಂಧು, ಸೋತ, ದಣಿದ ಸಮಾಜವಲ್ಲವೇ?

ದೃಶ್ಯ 2 : ನಮ್ಮ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ರವರನ್ನು ಆರ್ಥ ಮಾಡಿಕೊಳ್ಳದೆ ಈ ಯುಪಿಎ -2 ಸರ್ಕಾರದ ಕರ್ಮಕಾಂಡಗಳಾಗಲಿ, ಆತ್ಮಹತ್ಯಾತ್ಮಕ ನಿಲುವುಗಳಾಗಲಿ, ಭ್ರಷ್ಟಾಚಾರಗಳಾಗಲಿ ಅರ್ಥವಾಗುವ ಸಾಧ್ಯತೆಗಳು ಕೇವಲ ಅಪೂರ್ಣ ಅಥವಾ ಅರ್ಧ ಸತ್ಯ ಅಥವಾ ಅರ್ಧ ಸುಳ್ಳು. ಸರಿಯಾಗಿ 20 ವರ್ಷಗಳ ಹಿಂದೆ ಇಂಡಿಯಾದ ರಾಜಕಾರಣದಲ್ಲಿ, ಅದರಲ್ಲೂ ದಿಲ್ಲಿ ಎನ್ನುವ ಮಾಯಾವಿಯ ಗದ್ದುಗೆಗೆ ಹತ್ತಿರದ ರಾಜಕಾರಣದಲ್ಲಿ ಕಂಡೂ ಕಾಣದಂತೆ ಗೋಚರಿಸಿದ ಮನಮೋಹನ್ ಸಿಂಗ್ ಬಗ್ಗೆ ಆಗೆಲ್ಲ ಒಬ್ಬ ಹಣಕಾಸು ತಜ್ಞರು ಎನ್ನುವ ಭಾವನೆ ಇತ್ತು. 5 ವರ್ಷಗಳ ನಂತರ ಮನಮೋಹನ್ ಸಿಂಗ್ ರವರ ಮುಕ್ತ ಮಾರುಕಟ್ಟೆ ನೀತಿಯ ಫಲವಾಗಿ ಜಾಗತೀಕರಣವೆನ್ನುವ ಡೈನೋಸಾರ್ ತನ್ನ ದಾಪುಗಾಲನ್ನಿಡಲಾರಂಬಿಸಿತು. ಅದರ ಹರಿಕಾರರಾದ ಮನಮೋಹನ್ ಸಿಂಗ್ ತಮ್ಮ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವ ದಿಂದಾಗಿ ನಿಧಾನವಾಗಿ ಆದರೆ ಗಟ್ಟಿಯಾಗಿ ಮಧ್ಯಮ, ಮೇಲ್ವರ್ಗಗಳ ಕಣ್ಮಣಿಯಾಗಿ ಮಿಂಚತೊಡಗಿದರು. ಈ ಮಧ್ಯಮ ವರ್ಗಗಳು ಯಾವಾಗಲೂ ಬಯಸುವ ಸಂತೃಪ್ತಿ ಬದುಕಿನ ಕನಸಿಗೆ, ತಮ್ಮ ಕೊಳ್ಳುಬಾಕತನ ಸಂಸ್ಕೃತಿಗೆ ಈ ಮನಮೋಹನ ಸಿಂಗ್ ಸಾಕ್ಷಾತ್ಕಾರಗೊಳಿಸುವ ದೂತರಂತೆಯೇ ಕಂಡರು.

ಆಮೇಲೆ ನಡೆದಿದ್ದು ಇತಿಹಾಸ ಅಥವಾ ಅಧಃಪತನಗಳ ಸರಣಿ. ಅದು ಮೌಲ್ಯಗಳ ಅಧಃಪತನ, ಸ್ವಂತಿಕೆಯ ಅಧಃಪತನ, ಈ ನೆಲದ, ಮಣ್ಣಿನ ಸಂಸ್ಕೃತಿಯ ,ಜನಪದ ಲೋಕದ, ಹಳ್ಳಿಗಳ ಅವಸಾನದ ಪ್ರಕ್ರಿಯೆ, ಸರ್ಕಾರ ಉದ್ದಿಮೆಗಳು ಈ ದೇಶವನ್ನು ದಿವಾಳಿ ಎಬ್ಬಿಸಿವೆ ಎನ್ನುವ  ಖಳನ ಪಟ್ಟ ಹೊತ್ತುಕೊಂಡಿತು ( ಇದೂ ಕೂಡ ಅರ್ಧ ಸತ್ಯ ಹಾಗೂ ಅರ್ಧ ಸುಳ್ಳು). ಉತ್ತಮ ಖಾಸಗೀಕರಣವೆನ್ನುವುದೇ ಒಂದು ಲೊಳಲೊಟ್ಟೆ ಎನ್ನುವ ನಿಜದ ಮಾತನ್ನು ಸಂಪೂರ್ಣವಾಗಿ ಮರೆತರು.

ನಮ್ಮ ರಾಜ್ಯದ ಒಂದು ಉದಾಹರಣೆಯೊಂದಿಗೆ ಇದನ್ನು ವಿವರಿಸಬಹುದು. ಸರ್ಕಾರಿ ಒಡೆತನದ ಗೃಹ ನಿರ್ಮಾಣ ಮಂಡಳಿಗಳು ನಿರ್ಮಿಸಿ ನಂತರ ಜನತೆಗೆ ಮಾರುವ L.I.G., M.I.G., H.I.G., ಬಡಾವಣೆಗಳನ್ನುನಾವು ಅವಲೋಕಿಸಬಹುದು. ಹೌದು ಸರ್ಕಾರದ ಆರ್ಥಿಕತೆಯ ಭ್ರಷ್ಟಾಚಾರದಿಂದ ಆ ಮನೆಗಳ ಗುಣಮಟ್ಟ ಯಾವತ್ತೂ ಕಳಪೆಯಾಗಿರುತ್ತದೆ. ಈ ಮನೆಗಳನ್ನು ಕೊಂಡವರು ಮತ್ತೆ ಅದನ್ನು ಪುನರ್ ನಿರ್ಮಾಣ ಮಾಡಿಸಿಕೊಳ್ಳುತ್ತಾರೆ. ಆದರೆ ಅಲ್ಲಿರುವ ಜ್ಯಾತ್ಯಾತೀತ ವ್ಯವಸ್ಥೆ ಮಾತ್ರ ಅಪೂರ್ವವಾದದ್ದು. ಅಲ್ಲಿ ಬ್ರಾಹ್ಮಣರ ಮನೆ ಪಕ್ಕ ಮುಸ್ಲಿಂರ ಮನೆ ಇರುತ್ತದೆ, ಅಥವಾ ಲಿಂಗಾಯತರ ಮನೆ ಪಕ್ಕ ದಲಿತರ ಮನೆ ಇರುತ್ತದೆ. ಒಟ್ಟಿನಲ್ಲಿ ಅಲ್ಲಿ ಎಲ್ಲಾ ಜಾತಿಯ ಸಂಸಾರಗಳು ಒಂದು ಕಾಲನಿಯಲ್ಲಿ ಬಾಳುತ್ತಿರುತ್ತವೆ. ಇದು ಯಾವುದೇ ಉದ್ದೇಶಪೂರ್ವಕ ಒತ್ತಡಗಳಿಲ್ಲದೆ ತಂತಾನೆ ಆದದ್ದು. ಇದು ಸಾಧ್ಯವಾದದ್ದು ಸರ್ಕಾರದ ಸಂಸ್ಥೆಗಳು ಸಹಜವಾಗಿಯೇ, ಅನಿರ್ವಾಯವಾಗಿಯೇ ಸಂವಿಧಾನದ ಜಾತ್ಯಾತೀತ, ಸಾಮಾಜಿಕ ನ್ಯಾಯದ, ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಅದರ ಫಲವೇ ಮೇಲಿನ ಒಂದು ಉದಾಹರಣೆ.

ಇದೇ ರಾಜ್ಯದ ಅನೇಕ ಖಾಸಗಿ ಒಡೆತನದ ಕೆಲವು ಲೇಔಟ್ ಗಳನ್ನು ನೋಡಿದರೆ ಅಲ್ಲಿನ ಜಾತೀಯತೆಯ ದುರ್ನಾತ ಕಣ್ಣಿಗೆ ರಾಚುತ್ತದೆ. ಏಕೆಂದರೆ ಖಾಸಗಿಯವರಿಗೆ ಸಂವಿಧಾನ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಕೂಡ ಅನ್ವಯಿಸಬಹುದು. ಇವರು ಕೇವಲ ಗುಣಮಟ್ಟದ ಹೆಸರಿನಲ್ಲಿ ಈ ದೇಶದ ಸಂವಿಧಾನದ ಚೌಕಟ್ಟಿಗೇ ಕೊಡಲಿ ಪೆಟ್ಟು ಕೊಟ್ಟಿರುವುದು, ಈಗಲೂ ಕೊಡುತ್ತಿರುವುದು ಸರ್ವರಿಗೂ ವಿದಿತವಾಗಿದೆ.

ಇಷ್ಟೆಲ್ಲ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದೆಯೆ, ತನ್ನ ಒಡೆತನದ ಉದ್ದಿಮೆಗಳನ್ನು, ಸಂಸ್ಥೆಗಳನ್ನು ಭ್ರಷ್ಟತೆಯಿಂದ, ಜಾತೀಯತೆಯಿಂದ ಮುಕ್ತಗೊಳಿಸುವ ನಿರ್ದಿಷ್ಟ ಕಾರ್ಯ ಸೂಚಿಗಳು, ಯೋಜನೆಗಳಿಲ್ಲದೆಯೆ, ನೆಗಡಿ ಬಂದರೆ ಮೂಗನ್ನು ಕೊಯ್ಯುವ ನೀತಿಯನ್ನು ಅನುಸರಿಸಿ ಈ ಸರ್ಕಾರಗಳು ಸರ್ವರೋಗಕ್ಕೂ ಖಾಸಗೀಕರಣವೇ ಮದ್ದು ಎನ್ನುವ ಒಂದು ಸರ್ಕಾರೀ ದೋರಣೆ, ಹಾಗೂ ನಮಗೆ ಬೇಕು ಖಾಸಗೀಕರಣ ಎನ್ನುವ ಮಧ್ಯಮ, ಮೇಲ್ವರ್ಗಗಳ, ಖಾಸಗೀ ಉದ್ದಿಮೆದಾರರ ಹಪಾಹಪಿತನ ಎಲ್ಲವೂ ಒಂದಂಕ್ಕೊಂದು ಪೂರಕವಾಗಿ ಸಮಾನರೂಪಿಯಾಗಿ ಹೊಂದಿಕೊಂಡು ಇದು ಕಳೆದ 20 ವರ್ಷಗಳಿಂದ ಈ ದೇಶವನ್ನು ಬೆಳವಣಿಗೆಯ ಹೆಸರಿನಲ್ಲಿ ದುರಂತದ ಅಂಚಿಗೆ ತಂದು ನಿಲ್ಲಿಸಿವೆ. ಖಾಸಗೀಕರಣದ ಇನ್ನೂ ಬೇಕು, ಇನ್ನೂ ಬೇಕೆನ್ನುವ ಅಸಹ್ಯಕರ, ಸ್ವಾರ್ಥ ಸಂಸ್ಕೃತಿ ಇಲ್ಲಿ ಸಂಪೂರ್ಣವಾಗಿ ನೆಲೆಗೊಂಡಿತು. ಇಂದಿಗೂ ಕೂಡ ಇದೇ ಪರಿಸ್ಥಿತಿ. ನಮ್ಮ ಮಾತೃಭಾಷೆಯ ಅಕ್ಷರ ಸಂಸ್ಕೃತಿ ತನ್ನ ಕವಲು ದಾರಿಯಲ್ಲಿ ಎತ್ತಲೂ ಹೊರಳಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿ ನಿಂತಿತ್ತು.

ಈ ಗೊಂದಲಮಯ ಪರಿಸ್ಥಿಯ ಲಾಭ ಪಡೆದುಕೊಂಡ ಮೇಲ್ಜಾತಿ, ಮೇಲ್ವರ್ಗಗಳು ತಮ್ಮ ಜೀವನದ ಅತ್ಯಂತ ಮೇಲ್ಮಟ್ಟವನ್ನು ತಲುಪತೊಡಗಿದ್ದವು. ಸಾವಿರಾರು ವರ್ಷಗಳಂತೆ ಈ ಕಾಲಘಟ್ಟದಲ್ಲೂ ಕೂಡ ತಳ ಸಮುದಾಯಗಳು, ಅಲ್ಪ ಸಂಖ್ಯಾತರು, ಆದಿವಾಸಿಗಳು ಎಲ್ಲಿಯೂ ಸಲ್ಲದೆ ಇದರ ಅಟ್ಟಹಾಸದಲ್ಲಿ ಸಂಪೂರ್ಣವಾಗಿ ದಿಕ್ಕೆಟ್ಟರು. ಅವರು ಅಕ್ಷರಶಹ ತಬ್ಬಲಿಗಳಾಗಿ ಬೀದಿಗೆ ಬಿದ್ದದ್ದು ಇನ್ನೂ ನಮ್ಮ ಕಣ್ಮುಂದೆ ಇದೆ. ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಸಮತಾವಾದದ ನೀತಿಗಳೇ ಬುಡಮೇಲುಗೊಂಡು ಶೇಕಡ 7 ರಿಂದ 10 ರ ವ್ಯವಸ್ಥೆಯ ಭಾಗದ ಜನಜೀವನದ ಶೈಲಿ ಉತ್ತಮಗೊಳ್ಳುವಿಕೆಯೇ ಈ ದೇಶದ ಭವಿಷ್ಯದ ದಿಕ್ಸೂಚಿ ಎನ್ನುವಂತೆ ಬಿಂಬಿಸಲಾಯಿತು. ಸೆನ್ಸೆಕ್ಸ್ ಗಳಲ್ಲಿ ಮೂಡುವ ಆ ಮಾಯಾವಿ ಅಂಕೆಸಂಖ್ಯೆಗಳೇ  ನಮ್ಮ ದೇಶದ ಅಭಿವ್ರುದ್ದಿಯ ಮಾನದಂಡಗಳು ಎನ್ನುವ ಸರ್ಕಾರ, ಖಾಸಗಿ ಉದ್ದಿಮೆದಾರರು, ಮಧ್ಯಮ ,ಮೇಲ್ವರ್ಗ, ಹಾಗೂ ದೃಶ್ಯ ಮಾಧ್ಯಮ ಗಳು ಇವರೆಲ್ಲರ ಅಜ್ಞಾನದ, ಗೊತ್ತು ಗುರಿಯಿಲ್ಲದ, ಅಮಾನವೀಯ ಭಾಷ್ಯೆಗಳೇ ಕಳೆದ 20 ವರ್ಷಗಳಿಂದ ಚಾಲ್ತಿಯಲ್ಲಿತ್ತು. ಅಲ್ಲದೇ ಇದೇ ಈ ದೇಶವನ್ನು ಪೊರೆದಿತ್ತು. ಇದರ ದುರಂತ ಈಗ ನೋಡುತ್ತಿದ್ದೇವೆ.

ಈ ದೇಶದ ಶೇಕಡ 70 ರಷ್ಟು ಜನಸಂಖ್ಯೆ ಇಂದು ಅತಂತ್ರ ಸ್ಥಿತಿಯಲ್ಲಿ ನರಳುತ್ತಿವೆ. ವರ್ತಮಾನ ಭೀಕರವಾಗಿಯೂ, ಭವಿಷ್ಯವೇ ಇಲ್ಲದ ಅವರ ದಿನದ ಅದಾಯದ ಮೇಲೆ ಅಸಹ್ಯಕರ ಲೆಕ್ಕಾಚಾರಗಳು ನಡೆಯುತ್ತಿವೆ. ಇನ್ನೊಂದು ನೆಲೆಯಲ್ಲಿ ಈ ಜಾಗತೀಕರಣವೆಂಬ ಪೆಡಂಭೂತ ಸಕಲ ಸರ್ಕಾರೀ ಮರ್ಯಾದೆಗಳೊಂದಿಗೆ ತನ್ನ ದಾಪುಗಾಲನ್ನು ಇಡುತ್ತ ಮನೆಯ ಅಂಗಳವನ್ನು ದಾಟಿ, ವರಾಂಡವನ್ನು ದಾಟಿ, ನಡುಮನೆಗೆ ಬಂದು ಕೂತಾಗಿದೆ. ಈ ಕಾಲಘಟ್ಟದುದ್ದಕ್ಕೂ ಈ ಪೆಡಂಭೂತದ ವಿರುದ್ಧ ಹೋರಾಡಲು ಅಪಾರ ತಿಳುವಳಿಕೆ, ಸಿದ್ಧತೆಗಳು, ಪೂರ್ವ ಯೋಜನೆಗಳು, ನಿರಂತರವಾಗಿ ಸಂಘರ್ಷವನ್ನು ನಡೆಸುವ ಮಾನಸಿಕ ಸಿದ್ದತೆಗಳು ಇರಬೇಕಾದ ಜಾಗದಲ್ಲಿ ಪ್ರಗತಿಪರ ಸಂಘಟನೆಗಳು, ಚಿಂತಕರು, ಎಡಪಂಥೀಯ ಶಕ್ತಿಗಳು ಬಳಸಿದ್ದು ಉಳ್ಳಾಗಡ್ಡಿಯನ್ನು ಹೆಚ್ಚಲು ಬಳಸುವ ಮೊಂಡು ಚಾಕುವನ್ನು. ಇದರ ಫಲವಾಗಿ ನಾವೆಲ್ಲ ಅನೇಕ, ಸುದೀರ್ಘ ಪ್ರತಿರೋಧಗಳ ಮಧ್ಯೆಯೂ ಸೋಲೊಪ್ಪಿಕ್ಕೊಳ್ಳಬೇಕಾಯಿತು. ಅಪಹಾಸ್ಯಕ್ಕೀಡಾಗಬೇಕಾಯಿತು.

ಇಲ್ಲಿ ಕುತೂಹಲಕರ ಸಂಗತಿಯೆಂದರೆ ಇದೇ ಕಾಲ ಘಟ್ಟದಲ್ಲಿ ಘಟಿಸಿದ ಸಂಘ ಪರಿವಾರದ ವ್ಯವಸ್ಥಿತ, ಅಪಾರ ಸಿದ್ಧತೆಗಳನ್ನೊಳಗೊಂಡ, ಪೂರ್ವ ನಿಯೋಜಿತ ಕೋಮುವಾದದ ಸರಣಿ ಹತ್ಯೆಗಳ ವಿರುದ್ಧ ತಮ್ಮ ಎಲ್ಲ ಮಿತಿಗಳ ನಡುವೆಯೂ, ಈ  ಪ್ರಗತಿಪರ ಸಂಘಟನೆಗಳು, ಚಿಂತಕರು, ಜಾತ್ಯಾತೀತ ಶಕ್ತಿಗಳು 20 ವರ್ಷಗಳ ಕಾಲ ಬಿಡಿ, ಬಿಡಿಯಾಗಿ, ಸದರಿ ಸಂಘಟಿತ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ನಿರಂತರವಾಗಿ ತಮ್ಮ ಮಿತಿಯಲ್ಲೇ ನಡೆಸಿದ ತಮ್ಮ ಅಸಂಘಟಿತ ಹೋರಾಟದಲ್ಲಿ ತಮ್ಮೆಲ್ಲ ಶಕ್ತಿಯನ್ನು ಪೋಲು ಮಾಡಿಕೊಳ್ಳಬೇಕಾಗಿ ಬಂದಿರುವುದೂ ಕೂಡ ಈ ಜಾಗತೀಕರಣದ ಯಶಸ್ಸಿಗೆ ಒಂದು ಕಾರಣ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಇಂದಿನ  ಅಡ್ಡಾದಿಡ್ಡಿಯಾಗಿಯೇ, ಗೊತ್ತು ಗುರಿಯಿಲ್ಲದೆಯೇ ,ಯೋಜನೆಗಳು, ಮುಖ್ಯವಾಗಿ ಕನಸುಗಳು ಇಲ್ಲದ ಕೇವಲ ಸಿನಿಕತನದ ಮನಸ್ಥಿತಿ  ಕೂಡ ಮತ್ತೊಂದು ದುರಂತಕ್ಕೆ ನಾಂದಿ ಹಾಡಲಿದೆ.

ಅನಗತ್ಯವಾಗಿ ಇಷ್ಟೆಲ್ಲ ಚರ್ವಿತ ಚರ್ವಣ ಪೀಠಿಕೆ ಯಾತಕ್ಕೆ ಹೇಳಬೇಕಾಯಿತು ಎಂದರೆ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವದ ನಮ್ಮ ಪ್ರಧಾನ ಮಂತ್ರಿ ಮನಮೋಹ ಸಿಂಗ್ ರವರಿಗೆ ಇಷ್ಟೆಲ್ಲಾ ಸಂಕೀರ್ಣತೆ, ಗೋಜಲುಗಳು, ಸಾಮಾಜಿಕ ನ್ಯಾಯದ ವಿವಿಧ ಮಜಲುಗಳು 1992 ರಲ್ಲೂ ಅರ್ಥವಾಗಿರಲಿಲ್ಲ, 2001 ರಲ್ಲೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ, 2012ರ ವೇಳೆಗೂ ಏನೂ ತೋಚದೆ ಸಂಪೂರ್ಣ ಕಂಗೆಟ್ಟ ಸ್ಥಿತಿಯಲ್ಲಿ, ಒಬ್ಬಂಟಿತನದ, ಗೊಂದಲದ, ತಬ್ಬಲಿತನದ ಮನಸ್ಥಿಯಿಂದ ಈ ದೇಶವನ್ನು ಒಂದಲ್ಲ ಒಂದು ರೀತಿ ತಳಮಳಗಳ ಗೂಡಾಗಿಸಿರಿದ್ದಾರೆ ಈ ನಮ್ಮೆಲ್ಲರ ಪ್ರೀತಿಯ ಮನಮೋಹನ ಸಿಂಗ್. ಇದಕ್ಕೆ ಮೂಲಭೂತ ಕಾರಣ ಇವರು ರಾಜಕೀಯ ನಾಯಕರಲ್ಲದಿರುವುದು. ಇದಕ್ಕೆ ಮೂಲಭೂತ ಕಾರಣ ಇವರ ನಾಯಕಿ ಸೋನಿಯಾ ಗಾಂಧಿ ರಾಜಕೀಯ ನಾಯಕಿಯಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ ವಿಶ್ವವಲಯದಲ್ಲಿ ಭಾರತದ ಅತ್ಯಂತ ಪ್ರಭಾವಿ ರಾಜಕಾರಣಿಗಳು ಎಂದು ಗುರುತಿಸಿಕೊಳ್ಳುವ ಇವರಿಬ್ಬರೂ ರಾಜಕಾರಣದ ಮೂಲಭೂತ ಕರ್ತವ್ಯಗಳಾದ ನಿರಂತರ ಜನಸಂಪರ್ಕ ಹಾಗೂ ಅವರೊಂದಿಗೆ ನಿರಂತರ ಸಂವಾದದ ನೀತಿಗಳನ್ನು ಕಳೆದ 20 ವರ್ಷಗಳಿಂದ ಮಾಡದೇ ಇರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಇವರಿಬ್ಬರೂ ಸದನದಲ್ಲಿ ಆತ್ಮಸಾಕ್ಷಿಯಿಂದ, ಅಧಿಕೃತ ಅಂಕಿಅಂಶಗಳಿಂದ ಸುಧೀರ್ಘವಾಗಿ ಮಾತನಾಡುವ ಮೂಲಭೂತ ಅಗತ್ಯವನ್ನೇ ಮರೆತಂತಿರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಈ ದೇಶದ ಸಂಕೀರ್ಣತೆಯನ್ನು, ಅದರ ಗೊಂದಲಗಳು, ಇಲ್ಲಿನ ಪ್ರಛ್ಛನ್ನ ಜಾತೀಯತೆ, ಅಂಕೆಗೆ ಸಿಗದ ಕೋಮುವಾದ,  ಅದರ ಗುಪ್ತ ಕಾರ್ಯಸೂಚಿಗಳು, ಜಾತಿ ಮೀರಿದ ಭ್ರಷ್ಟತೆ. ಇವೆಲ್ಲವನ್ನೂ ಸರಳವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ದೇಶದ ಪ್ರಭಾವಿ ವ್ಯಕ್ತಿಗಳೆನಿಸಿಕೊಂಡ ಇವರಿಬ್ಬರಿಗೂ ಇಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳು, ಆಂತರಿಕ ಬಿಕ್ಕಟ್ಟು ಇಂದಿಗೂ ನಮ್ಮ ಪ್ರೀತಿಯ ಮನಮೋಹನ ಸಿಂಗ್ ರವರಿಗೆ ಅರ್ಥವಾಗಿಲ್ಲ, ಗೊತ್ತಿಲ್ಲ, ಇನ್ನು ಪಳಗಿಸಿಕೊಳ್ಳುವ ಮಾತಂತೂ ಈ ಶತಮಾನದಲ್ಲಿ ಸಾಧ್ಯವಿಲ್ಲದ್ದು ಬಿಡಿ. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳನ್ನು, ಆಂತರಿಕ ಬಿಕ್ಕಟ್ಟುಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ದೇಶದ ಅತ್ಯಂತ ಪ್ರಭಾವಿ ನಾಯಕಿ ಸೋನಿಯಾ ಗಾಂಧಿಯವರಿಗೆ ಅದನ್ನು ಪಳಗಿಸುವ ಮಂತ್ರದಂಡ ಕಾಲ ಕಾಲಕ್ಕೆ ಕೈಕೊಡುತ್ತಿರುವುದು. ಅಲ್ಲದೆ ಇದಕ್ಕೆ ಸೂಕ್ತ ರಾಜಕಾರಣಿಗಳನ್ನು ತನ್ನ ಅಪ್ತವಲಯದಲ್ಲಿ ಬಿಟ್ಟುಕೊಳ್ಳದಿರುವುದು,

ಇದೆಲ್ಲದರ ಫಲವೇ ಇಂದಿನ ಗೋಜಲು ಸ್ಥಿತಿ. ಇದೆಲ್ಲದರ ಫಲವೇ ಇಂದು ಇನ್ನೇನು ದಿಲ್ಲಿ ಮಾಯಾವಿಯ ಗದ್ದುಗೆ ತಮ್ಮ ಕೈಯಳತಲ್ಲಿದೆ, ಕೊಂಚ ಶ್ರಮ ಪಟ್ಟರೆ ಸಾಕು ಅದನ್ನು ನಾವು ಹತ್ತಿ ಕೂಡಬಹುದು ಎನ್ನುವ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಅಡ್ವಾನಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನರೇಂದ್ರ ಮೋದಿ ತರಹದ ಕೋಮುವಾದಿಗಳ ಗುಂಪು. ಇದೇನಾದರು ಸಾಧ್ಯವಾದರೆ ನಮ್ಮೆಲ್ಲರ ಪ್ರೀತಿಯ ಅಪಾರ ಪ್ರತಿಭೆಯ, ಪ್ರಾಮಾಣಿಕತೆಯ, ಸರಳ ವ್ಯಕ್ತಿತ್ವದ ಮನಮೋಹನ ಸಿಂಗ್ ಹಾಗೂ ಪ್ರಭಾವಿ ನಾಯಕಿ ಎನಿಕೊಂಡ ಸೋನಿಯ ಗಾಂಧಿ ಹಾಗೂ ದಿವಾಳಿ ಎದ್ದ ಕಾಂಗ್ರೆಸ್ ಪಕ್ಷ ಈ ದುರಂತದ ಅಪವಾದವನ್ನು ನೇರವಾಗಿ ಹೊರಬೇಕಾಗುತ್ತದೆ. ಜೊತೆಗೆ ಪ್ರಜ್ಞಾವಂತರೆನಿಸಿಕೊಂಡ, ಪ್ರಗತಿಪರರೆನಿಸಿಕೊಂಡವರೆಲ್ಲ ಇದಕ್ಕೆ ಹೊಣೆಗಾರರಾಗಬೇಕಾಗುತ್ತದೆ.

ದೃಶ್ಯ 3 : ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೇ ಕಾಂಗ್ರೆಸ್ ನವರ ಸೋಮಾರಿತನ ,ಜಡತ್ವ, ಕಂಗಾಲುತನ, ದಿಕ್ಕು ತಪ್ಪಿದ ಸ್ಥಿತಿ, ಕುಮಾರಸ್ವಾಮಿಯವರು ತಮ್ಮ ಆತ್ಮಹತ್ಯಾತ್ಮಕ, ಸ್ವಯಂಕೃತ ಅಪರಾಧಗಳನ್ನು ಕಾಲ ಕಾಲಕ್ಕೆ ತಿದ್ದಿಕೊಳ್ಳದೆ ಮತ್ತೆ ಮತ್ತೆ ಅದಕ್ಕೆ ಕೈ ಹಾಕುತ್ತಿರುವ, ನಿಗೂಢ, ಅನೈತಿಕ ನಡೆಗಳು, ಇನ್ನು ಶ್ರೀರಾಮುಲು ತನ್ನ ಅಸಹ್ಯಕರ, ಭ್ರಷ್ಟ ಗೆಲುವನ್ನೇ ಮುಂದಿಟ್ಟುಕೊಂಡು, ಅಮಾಯಕ ಹಿಂದುಳಿದವರನ್ನು ಮುಂದಿಟ್ಟುಕೊಂಡು ಹುಟ್ಟು ಹಾಕಲಿರುವ  ಅನಾಹುತಕಾರಿ, ಪ್ರಜಾಪ್ರ್ಭತ್ವ ವಿರೋಧಿ ನಿರ್ಧಾರಗಳು, ಈ ಕರ್ನಾಟಕ ರಾಜ್ಯವೆನ್ನುವುದು ಆ ದೇವರು ನನಗೆ ಬರೆದುಕೊಟ್ಟ ಜಹಗೀರು, ಇದರ ಒಡೆತನ ನನ್ನ ಆಜನ್ಮಸಿದ್ಧ ಹಕ್ಕು ಎನ್ನುವಂತೆ ಅತ್ಯಂತ ಕುತಂತ್ರ, ಮೂಢಮಯ, ಭ್ರಷ್ಟ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪ, ಇವರೆಲ್ಲರ ಈ ಸ್ವಾರ್ಥ ನಡೆಗಳು ಮುಂಬರಲಿರುವ ದಿನಗಳಲ್ಲಿ ನಮ್ಮ ರಾಜ್ಯದ ದಿಕ್ಸೂಚಿಯನ್ನು ಸೂಚಿಸುತ್ತವೆ.

ದೃಶ್ಯ 4 : ಇಷ್ಟೆಲ್ಲ  ಹತಾಶೆಯ, ಆತಂಕದ  ಮಾತುಗಳೇಕೆಂದರೆ, ಜನ ಸಾಮಾನ್ಯನಾದ ನನ್ನಂತವನ ಆತಂಕವೇನೆಂದರೆ ಇಂದಿಗೆ 5 ಅಥವಾ 10 ವರ್ಷಗಳ ನಂತರ ಜನತೆ “ಆ ಯಡಿಯೂರಪ್ಪನವರ ಸರ್ಕಾರವೇ ಪರವಾಗಿಲ್ಲ ಮಾರಾಯ್ರೆ ಕಡೇ ಪಕ್ಷ ಸ್ಕೂಲ್ ಮಕ್ಕಳಿಗೆ ಸೈಕಲ್ ಕೊಡಿಸಿದರು ,ಸಾರಾಯಿ ಬಂದು ಮಾಡಿಸಿದರು,” ಎನ್ನುವ ಸ್ಥಿತಿಗೆ ನಮ್ಮ ರಾಜ್ಯ ಬಂದು ತಲುಪಿದರೆ ನಾವೆಲ್ಲ ಅವಮಾನದಿಂದ, ಈ ಸ್ಥಿತಿಗೆ ಸಾಕ್ಷಿಗಳಾಗಿ, ಅಸಹಾಯಕ ಪ್ರೇಕ್ಷಕರಾಗಿದ್ದ ಅಪವಾದಗಳನ್ನು ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡು ಎಲ್ಲಿಗೆ ಹೋಗಬೇಕಾಗುತ್ತದೆ ಎನ್ನುವುದು.