Tag Archives: ಕೆ.ಎಚ್.ರಂಗನಾಥ್

ಅರ್ಹತೆಯಿದ್ದ ನಾಯಕ – ಕೆ.ಎಚ್.ರಂಗನಾಥ್

-ಚಿದಂಬರ ಬೈಕಂಪಾಡಿ

ಯಾವ ಕಾಲಕ್ಕೂ ಮರೆಯಲಾಗದ ಸಜ್ಜನ ರಾಜಕಾರಣಿ ಕೆ.ಎಚ್.ರಂಗನಾಥ್ ಅನಿವಾರ್ಯವಾಗಿ ರಾಜಕೀಯ ರಂಗದಿಂದ ಮರೆಯಾಗಿದ್ದಾರೆ. ರಾಜಕೀಯ ವೇಗ ಹೆಚ್ಚಿಸಿಕೊಂಡು ಹೊಸರೀತಿಯ ರಾಜಕಾರಣ ಅದರಲ್ಲೂ ಯುವಪೀಳಿಗೆಯ ಆತುರದ ಮಹತ್ವಾಕಾಂಕ್ಷೇಯ ರಾಜಕೀಯದಿಂದ ಬೇಸರಗೊಂಡು ‘ನನಗೆ ಈ ರಾಜಕೀಯ ಒಗ್ಗುವುದಿಲ್ಲ’ ಅಂತ ತಾವೇ ನಿರ್ಧರಿಸಿಕೊಂಡು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಇತ್ತೀಚಿನ ಯಾವುದೇ ಬೆಳವಣಿಗೆಯ ಬಗೆಯೂ ಅವರು ಪ್ರತಿಕ್ರಿಯೆ ನೀಡದೆ ಇದ್ದುದೇ ಅವರ ನಿರ್ಲಿಪ್ತತೆಗೆ ಸಾಕ್ಷಿ.

ಕರ್ನಾಟಕದ ಮಟ್ಟಿಗೆ ದಲಿತ ನಾಯಕರಲ್ಲಿ ಗಟ್ಟಿ ಧ್ವನಿ ಕೆ.ಎಚ್.ರಂಗನಾಥ್ ಅವರದು. ಮುಚ್ಚುಮರೆಯಿಲ್ಲದ ಮುಕ್ತ ಮಾತುಗಳಿಗೆ ಹೆಸರಾಗಿದ್ದ ರಂಗನಾಥ್ ದಲಿತರು ತಪ್ಪು ಮಾಡಿದಾಗಲೂ ಸಹಿಸಿಕೊಂಡವರಲ್ಲ. ಈ ಕಾರಣಕ್ಕಾಗಿಯೇ ದಲಿತರ ಕೋಪಕ್ಕೂ ಗುರಿಯಾಗಿದ್ದರು ಎನ್ನುವುದು ವಿಪರ್ಯಾಸ. ಸಮಾಜವಾದಿ ಚಿಂತನೆ ಮೂಸೆಯಲ್ಲಿ ಬದುಕು ರೂಪಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಬೆಳವಣಿಗೆ ಕಂಡುಕೊಂಡವರು. ಇಂದಿರಾ ಗಾಂಧಿ ಅವರಿಗೆ ನಿಷ್ಠರಾಗಿ ಸ್ವಚ್ಚರಾಜಕಾರಣ ಮಾಡಿದವರು.

ಸಾಮಾಜಿಕ ಸುಧಾರಣೆಯಲ್ಲಿ ಅದರಲ್ಲೂ ಕಾಂಗ್ರೆಸ್ ಪಕ್ಷದ ರಾಜಕಾರಣದಲ್ಲಿ ಕರ್ನಾಟಕ ಮರೆಯಲಾಗದ ರಾಜಕಾರಣಿ ಡಿ.ದೇವರಾಜ ಅರಸು ಸಂಪುಟದಲ್ಲಿ ಮಂತ್ರಿಯಾಗುವ ಮೂಲಕ ಅಧಿಕಾರ ಹಗ್ಗ ಹಿಡಿದು ಮುನ್ನಡೆದ ಅಜಾತಶತ್ರು. ಬಿ.ರಾಚಯ್ಯ, ರಂಗನಾಥ್ ದಲಿತರ ಧ್ವನಿಯಾಗಿ ಅವರ ಏಳಿಗೆಯ ನಿಟ್ಟಿನಲ್ಲಿ ಗಟ್ಟಿಯಾದ ಬುನಾದಿ ಹಾಕಿಕೊಟಿದ್ದಾರೆ, ಆದರೆ ದಲಿತರ ನಿರೀಕ್ಷೆಯನ್ನು ಮೀರುವಷ್ಟು ಸಾಧ್ಯವಾಗಿರಲಿಕ್ಕಿಲ್ಲ, ಯಾಕೆಂದರೆ ಅವರೇ ಹಾಕಿಕೊಂಡಿದ್ದ ಮಿತಿಗಳೂ ಕಾರಣವಿರಬಹುದು.

ರಂಗನಾಥ್ ಅವರಿಗೆ ದಲಿತರು ಎನ್ನುವ ಅನುಕಂಪವಾಗಲೀ, ಅವರ ರಾಜಕೀಯ ಮುತ್ಸದ್ದಿತನಕ್ಕೆ ದಲಿತ ಎನ್ನುವ ಮೀಸಲಾತಿಯ ಅಗತ್ಯವಿರಲಿಲ್ಲ ಕೊನೆತನಕವೂ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಅರಸು ಅವರಿಂದ ಹಿಡಿದು ಎಸ್.ಎಂ.ಕೃಷ್ಣ ಅವರತನಕದ ಮುಖ್ಯಮಂತ್ರಿಗಳ ಜೊತೆ ಬೇರೆ ಬೇರೆ ಹುದ್ದೆಗಳನ್ನು ನಿರ್ವಹಿಸಿದ್ದ ರಂಗನಾಥ್ ವಹಿಸಿಕೊಂಡ ಹುದ್ದೆಗಳಿಗೆ ನ್ಯಾಯ ಒದಗಿಸಿದ್ದರು. ಅರಣ್ಯ ಮತ್ತು ಶಿಕ್ಷಣ ಮಂತ್ರಿಗಳಾಗಿ ರಂಗನಾಥ್ ಹೆಚ್ಚು ಗಮನ ಸೆಳೆದಿದ್ದರು. ವಿಧಾನ ಸಭೆಯ ಸ್ಪೀಕರ್ ಆಗಿ ಕಲಾಪವನ್ನು ನಡೆಸಿದ ರೀತಿಯಂತೂ ಮಾದರಿ. ಸಂಸದರಾಗಿ ಒಂದು ಅವಧಿಗೆ ಅವರು ದುಡಿದ ಪರಿಯೂ ಸ್ಮರಣೀಯ.

ಯಾಕೆ ರಂಗನಾಥ್ ಕರ್ನಾಟಕದ ರಾಜಕೀಯದಲ್ಲಿ ಬಹುಮುಖ್ಯರಾಗುತ್ತಾರೆ ಅಂದರೆ ಅವರು ಅಧಿಕಾರವಿದ್ದಾಗ, ಅಧಿಕಾರವಿಲ್ಲದಿದ್ದಾಗ ನಡೆದುಕೊಂಡ ರೀತಿ-ನೀತಿಗಳು. ಕರ್ನಾಟಕದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಮೈದುಂಬಿಸಿಕೊಂಡಿದ್ದರೂ ಆ ಹುದ್ದೆಯನ್ನು ಅಲಂಕರಿಸಲಾಗದೆ ಹೋದ ದುರಂತ ನಾಯಕ. ಇದೇ ಮಾತು ಬಿ.ರಾಚಯ್ಯ ಅವರಿಗೂ ಅನ್ವಯಿಸುತ್ತದೆ.

ರಾಜಕೀಯದ ಏಳು-ಬೀಳು, ಸಮೀಕರಣಗಳಿಂದಾಗಿಯೇ ರಂಗನಾಥ್ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾದರು. ಈಗ ಹುದ್ದೆ ವಹಿಸಲು ಅರ್ಹರನ್ನು ಹುಡುಕಬೇಕು, ಆದರೆ ಅವರ ಕಾಲಘಟ್ಟದಲ್ಲಿ ಅರ್ಹರೇ ಹಲವು ಮಂದಿ. ಅವರೆಲ್ಲರನ್ನು ಗಾಳಿಸಿ, ರಾಜಕೀಯ ಲಾಭ-ನಷ್ಟಗಳನ್ನು ಅಳೆದು ತೂಗಿ, ಕಳೆದು ಕೂಡಿಸಿ ಫಲಿತಾಂಶ ಹೊರಹಾಕುವ ಪ್ರಕ್ರಿಯೆಯಲ್ಲಿ ರಂಗನಾಥ್ ಅವಕಾಶ ಕಳೆದುಕೊಳ್ಳುತ್ತಲೇ ಹೋದರು ಕೊನೆತನಕವೂ.

ಎಂಭತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆಯವರ ಸಾರಥ್ಯದಲ್ಲಿ ಜನತಾ ಸರಕಾರ ಪಾರುಪತ್ಯೆ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳುವಲ್ಲಿ ರಂಗನಾಥ್ ವಹಿಸಿದ್ದ ಪಾತ್ರ ಕಡೆಗಣಿಸುವಂಥದ್ದಲ್ಲ. ವಿಧಾನಸಭೆಯ ಒಳಗೆ-ಹೊರಗೆ ರಂಗನಾಥ್ ನಡೆದುಕೊಂಡ ರೀತಿ ಮಾದರಿ.

ಓರ್ವ ಶಿಕ್ಷಣ ಮಂತ್ರಿಯಾಗಿ ಕರ್ನಾಟಕವನ್ನು ಸಂಪೂರ್ಣ ಸಾಕ್ಷರತಾ ರಾಜ್ಯವನ್ನಾಗಿ ರೂಪಿಸುವಲ್ಲಿ ರಂಗನಾಥ್ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಸಾಕ್ಷರತಾ ಆಂದೋಲನಕ್ಕೆ ಪೂರ್ವಭಾವಿಯಾಗಿ ಅನಕ್ಷರಸ್ಥರ ಜನಗಣತಿಗೆ ಚಾಲನೆಕೊಟ್ಟದಿನದಿಂದ ಅಧಿಕಾರ ಕಳೆದುಕೊಳ್ಳುವ ದಿನಗಳವರೆಗೆ ರಂಗನಾಥ್ ಈ ಆಂದೋಲನದ ಭಾಗವಾಗಿಯೇ ಇದ್ದವರು.

ನಾನು ಎಂಭತ್ತರ ದಶಕದಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟು ವರದಿಗಾರನಾಗಿ ಕಾಯಕ ನಿರ್ವಹಿಸುವ ಕಾಲಕ್ಕೆ ರಂಗನಾಥ್ ಈ ನಾಡಿನ ಒಬ್ಬ ಹಿರಿಯ ನಾಯಕ. ಅವರನ್ನು ಹತ್ತಿರದಿಂದ ನೋಡಿ, ಅವರ ಮಾತುಗಳನ್ನು ನೇರವಾಗಿ ಓದುಗರಿಗೆ ತಿಳಿಸುವ ಸ್ವಾತಂತ್ರ್ಯಮಾತ್ರ ಇದ್ದ ಕಾಲವದು. ಆದಿನಗಳಿಂದಲೇ ರಂಗನಾಥ್ ಅವರನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ಅವರ ಮಾತುಗಳು ತೂಕದವು. ಈಗಿನ ಹಾಗೆ ಮಾಧ್ಯಮಗಳ ಬೆಳಕಲ್ಲಿ ಹೊಳೆಯಲು ಹಾತೊರೆಯುವಂಥ ಮಾತುಗಳಾಗಿರಲಿಲ್ಲ. ಅವರು ಪತ್ರಿಕಾಗೋಷ್ಟಿ ನಡೆಸುತ್ತಿದ್ದ ಸಂದರ್ಭಗಳನ್ನು ನೆನಪಿಸಿಕೊಂಡರೆ ಅಂದಿನ ದಿನಗಳು ಮತ್ತೆ ಬರಲಾರವು ಅನ್ನಿಸುತ್ತದೆ. ಮಂತ್ರಿಯಾಗಿ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಮಾತಿನ ವರಸೆ, ಬದ್ಧತೆ, ಖಚಿತತೆ ಅನನ್ಯವಾದುದು. ಗಂಭೀರ ಮತ್ತು ಚಿಂತನೆಗೆ ಗ್ರಾಸವಾಗುವ ಹೇಳಿಕೆಗಳು ಅವರಿಂದ ಬರುತ್ತಿದ್ದವು. ರೋಚಕತೆ ಅಥವಾ ನಾಯಕರನ್ನು ಮೆಚ್ಚಿಸುವ ಗೋಜಿಗೆ ರಂಗನಾಥ್ ಹೋಗುತ್ತಿರಲಿಲ್ಲ. ಮನರಂಜನೆ ಕೊಡುವ ಪ್ರಶ್ನೆಗಳಿಗೆ ಅವರ ಗೋಷ್ಟಿಗಳಲ್ಲಿ ಅವಕಾಶವಿರಲಿಲ್ಲ.

ಹಾಗೆಯೇ ರಂಗನಾಥ್ ಅವರು ಮಂತ್ರಿಯಾಗಿ ಜಿಲ್ಲಾ ಪ್ರವಾಸ ಮಾಡುತ್ತಿದ್ದ ಸಂದರ್ಭ, ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯನ್ನು ನೆನಪಿಸಿಕೊಂಡರೆ ಈಗ ಅದೆಷ್ಟು ಬದಲಾಗಿ ಹೋಗಿದೆ ಅನ್ನಿಸುತ್ತದೆ.ಅವರು ಪ್ರವಾಸ ಬರುತ್ತಿದ್ದಾರೆ ಅಂದರೆ ಸಾಕು ಜಿಲ್ಲಾಧಿಕಾರಿ ಸಹಿತ ಇಲಾಖೆ ಅಧಿಕಾರಿಗಳು ದಿಗಿಲುಗೊಳ್ಳುತ್ತಿದ್ದರು. ರಂಗನಾಥ್ ಕಾರಿನಿಂದ ಇಳಿದು ಬರುತ್ತಿದ್ದಂತೆಯೇ ಅಧಿಕಾರಿ ವಲಯದಲ್ಲಿ ವಿದ್ಯುತ್ ಸಂಚಲನದ ಅನುಭವವಾಗುತ್ತಿತ್ತು. ಕೇಳುವ ಪ್ರಶ್ನೆಗಳಿಗೆ ತಟ್ಟನೆ ಉತ್ತರ ಹೇಳಬೇಕು, ಸುಳ್ಳು ಹೇಳಿದರಂತ ದೂರ್ವಾಸರಾಗಿಬಿಡುತ್ತಿದ್ದರು. ಈಗಿನಂತೆ ಮಂತ್ರಿಗಳ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಾ, ದೇಶಾವರಿ ನಗೆಬೀರುತ್ತಾ ಮಂತ್ರಿಗಳನ್ನು ಏಮಾರಿಸುವ ದಡ್ದತನವನ್ನು ಅಧಿಕಾರಿಗಳು ಮಾಡುವ ಗೋಜಿಗೆ ಹೋಗುತ್ತಿರಲಿಲ್ಲ.

ಪತ್ರಿಕಾಗೋಷ್ಠಿಗಳಲ್ಲೂ ತೂಕದ ಪ್ರಶ್ನೆಗಳಿಗೆ ಮಾತ್ರ ಅವಕಾಶ, ಅವರಿಂದಲೂ ತೂಕದ ಮಾತುಗಳ ಉತ್ತರ ನಿರೀಕ್ಷಿಸಬಹುದಾಗಿತ್ತು. ಸ್ಪೀಕರ್ ಹುದ್ದೆ ನಿರ್ವಹಿಸಿದ ಸಂದರ್ಭದಲ್ಲೂ ರಂಗನಾಥ್ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಹಿತಾಸಕ್ತಿಯನ್ನು ಕಾಪಾಡುತ್ತಿದ್ದರು. ಸಚಿವರುಗಳು ಉಡಾಫೆ ಉತ್ತರ ಕೊಡುವ ಯತ್ನ ಮಾಡಿದರೆ ಸಿಟ್ಟಾಗುತ್ತಿದ್ದರು. ಅವರ ಕಾಲದಲ್ಲಿ ವಿಧಾ ಸಭೆಯ ಕಲಾಪಕ್ಕೂ ಕಳೆಯಿತ್ತು. ಸ್ಪೀಕರ್ ಹುದ್ದೆಯ ಘನತೆ ಮತ್ತು ಪಾವಿತ್ರ್ಯತೆಯನ್ನು  ಅವರು ಎತ್ತಿಹಿಡಿದಿದ್ದರು.

ಮುಗಿಸುವ ಮುನ್ನ ಹೇಳಲೇಬೇಕಾದ ಮಾತು: ಕೆ.ಎಚ್.ರಂಗನಾಥ್ ಅವರಲ್ಲಿ ನಾಡನ್ನು ಕಟ್ಟುವ ನಿಟ್ಟಿನಲ್ಲಿ ಅವರದ್ದೇ ಆದ ಕನಸುಗಳಿದ್ದವು. ನಿಷ್ಠುರವಾದಿಯಾಗಿ ಕೊನೆತನಕವೂ ನಡೆದುಕೊಂಡು ಕನಸುಗಳೊಂದಿಗೆ ಕಣ್ಮರೆಯಾದರು.

(ಚಿತ್ರಕೃಪೆ: ದಿ ಹಿಂದು)