– ಪರಶುರಾಮ ಕಲಾಲ್
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕೋದ್ಯಮ ಇವತ್ತು ತನ್ನ ಮೂಲ ಅಸ್ತಿತ್ವ ಉಳಿಸಿಕೊಳ್ಳಲು ಸೆಣಸಾಡುತ್ತಿದೆ.
ಒಂದು ಕಡೆ 2ಜಿ ಸ್ಟೆಕ್ರಮ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಡದ ಹಗರಣಗಳು ಬಯಲಾಗುವುದಕ್ಕೆ ಕಾರಣವಾಗಿ ಆಳುವವರ ಕಣ್ಣಿಗೆ ಖಳನಾಗಿ ಕಾಣತೊಡಗಿದೆ. ಪಿ.ಸಾಯಿನಾಥ್ ಅವರ ಬರಹಗಳಿಂದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿದರ್ಭ ಪ್ಯಾಕೇಜ್ ಘೋಷಿಸಿದ ಉದಾಹರಣೆಯು ನಮ್ಮ ಮುಂದಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿ ಪತ್ರಿಕಾರಂಗ ಈ ವಿಷಯಗಳಲ್ಲಿ ಕೆಲಸ ಮಾಡಿ ಸೈ ಅನ್ನಿಸಿಕೊಂಡಿದೆ.
ಇಷ್ಟು ಮಾತ್ರ ಆಗಿದ್ದರೆ ಸಮಸ್ಯೆ ಏನೋ ಇಲ್ಲ. ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಟು ಅವರ ಹೇಳಿಕೆಯನ್ನು ಅತ್ಯುಗ್ರವಾಗಿ ಖಂಡಿಸಿ ಬಿಡಬಹುದಿತ್ತು. ಆದರೆ ಕಾವಲು ನಾಯಿಯಾಗಿ ಕೆಲಸ ಮಾಡುವ ಜೊತೆಗೆ ರಾಜಕಾರಣಿಗಳ, ಕಾರ್ಪೊರೇಟ್ ಸಂಸ್ಥೆಗಳ ಮುದ್ದಿನ ನಾಯಿ ಆಗಿಯೂ ಕೆಲಸ ಮಾಡಿರುವ ಉದಾಹರಣೆಗಳು ಇವೆಯಲ್ಲಾ? ಇವೆಲ್ಲವಕ್ಕೂ ಏನು ಹೇಳಬೇಕು. ದೆಹಲಿಯ ಶಾಲೆಯ ಶಿಕ್ಷಕಿ ಉಮಾ ಖುರಾನ ಪ್ರಕರಣವಾಗಲಿ, ಅಥವಾ ವೈದ್ಯರ ಪುತ್ರಿ ಅರುಶಿ ಕೊಲೆ ಪ್ರಕರಣದ ಬಗ್ಗೆ ವಿದ್ಯುನ್ಮಾನ ಮಾಧ್ಯಮ ನಡೆದುಕೊಂಡು ರೀತಿ ಹೇಗಿತ್ತು? ಈ ವಿದ್ಯುನ್ಮಾನ ಮಾಧ್ಯಮಗಳ ಹುಳುಕುಗಳನ್ನು ಇವೆಲ್ಲಾ ಬಯಲುಗೊಳಿಸಿಲ್ಲವೇ? ಕಾರ್ಪೊರೇಟ್ ಕಂಪನಿಗಳು ಮತ್ತು ಪತ್ರಕರ್ತರ ನಡುವೆ ಇರುವ ಅನೈತಿಕ ಸಂಬಂಧ ನೀರಾ ರಾಡಿಯ ಪ್ರಕರಣ ಬಯಲಿಗೆ ತಂದಿತು. ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆಯುವವರು ಇವುಗಳನ್ನು ಕೂಡಾ ಗಮನಿಸಬೇಕಾಗುತ್ತದೆ.
ಪತ್ರಿಕೋದ್ಯಮದ ಅಲಿಖಿತ ನಿಯಮಗಳನ್ನು ಎಷ್ಟು ಪತ್ರಿಕೆಗಳು ಪಾಲಿಸುತ್ತಿವೆ? ಕೋಮು ಸಂಘರ್ಷ ನಡೆದಾಗ ಎರಡು ಕೋಮುಗಳ ಹೆಸರುಗಳನ್ನು ಬಯಲುಗೊಳಿಸಬಾರದು ಎಂದಿದೆ. ಎಷ್ಟು ಪತ್ರಿಕೆಗಳು ಈ ನಿಯಮಕ್ಕೆ ಬದ್ಧವಾಗಿವೆ? ಕೋಮು ಹೆಸರು ಹೇಳದಿದ್ದರೂ ಆಸ್ಪತ್ರೆಗೆ ದಾಖಲಾದವರು, ಬಂಧಿತರ ಹೆಸರನ್ನು ಒಂದು ಕೋಮು ದೃಷ್ಠಿಯಲ್ಲಿಟ್ಟುಕೊಂಡು ಪ್ರಕಟಿಸುತ್ತವೆಯಲ್ಲ? ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಹೆಸರನ್ನು ಪ್ರಕಟಿಸಬಾರದು. ಆಕೆಯ ಫೋಟೋ ಹಾಕಬಾರದು ಎಂದಿದೆ. ಈಗ ಅದು ಪಾಲಿಸಲಾಗುತ್ತಿದೆಯೆ? ಕೆಲವು ಟಿವಿ ಚಾನಲ್ಗಳಂತೂ ಅವರನ್ನು ಸಂದರ್ಶನ ಮಾಡಿ ಅಸಹ್ಯ ಪ್ರಶ್ನೆ ಕೇಳುವ ಮೂಲಕ ಎಲ್ಲವನ್ನೂ ಬಟ್ಟಾಬಯಲಾಗಿಸಿ, ರಂಜನೆ ಒದಗಿಸುತ್ತಿಲ್ಲವೇ?
ಇನ್ನು, ಕಾಸಿಗಾಗಿ ಸುದ್ದಿ ಪ್ರಕಟಿಸದ ಕನ್ನಡ ದಿನಪತ್ರಿಕೆಗಳು ಈಗ ಯಾವು ಉಳಿದಿವೆ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಸು ತೆಗೆದುಕೊಂಡು ಚುನಾವಣೆ ಸುದ್ದಿ ಬರೆದು ಹಣ ಮಾಡಿಲ್ಲವೇ? ಪತ್ರಿಕಾ ಮಾಲೀಕರೇ ಈ ಅಡ್ಡ ಹಾದಿ ಹಿಡಿದ ಮೇಲೆ ಬಿಡಿ ಸುದ್ದಿಗಾರರು, ವರದಿಗಾರರು ಅದೇ ಹಾದಿ ತುಳಿದರೆ ಇದನ್ನು ಟೀಕಿಸುವ ನೈತಿಕತೆ ಪತ್ರಿಕಾ ಮಾಲೀಕರಿಗೆ ಎಲ್ಲಿದೆ? ಪ್ರಶ್ನಿಸುವ ಹಕ್ಕನ್ನು ಸಂಪಾದಕರು ಕಳೆದುಕೊಂಡಂತಾಗಲಿಲ್ಲವೇ?
ಸಂಪಾದಕರು, ಸಂಪಾದಕರ ಬಳಗ ಆಕ್ರಮವೆಸಗಿ, ಒಂದು ಪತ್ರಿಕೆಯಿಂದ ಹೊರ ಬಂದ ಮೇಲೆ ಅವರಿಗೆ ರತ್ನಗಂಬಳಿ ಹಾಸಿ ಮತ್ತೊಂದು ಪತ್ರಿಕೆ ಅವಕಾಶ ಮಾಡಿಕೊಡುತ್ತಿರುವುದನ್ನು ನೋಡಿದರೆ ಈ ಆಕ್ರಮವೆಸಗುವವರು ಪತ್ರಿಕೆಯ ಮಾಲೀಕರಿಗೆ ಬೇಕು ಎಂದಾಗುವುದಿಲ್ಲವೇ? ಅವರು ಈ ಆಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದೇ ಅರ್ಥವಲ್ಲವೇ? ಪತ್ರಿಕೋದ್ಯಮ ಇಂತಹ ವಿಷವರ್ತುಲದಲ್ಲಿ ಸಿಲುಕಿ ಹಾಕಿಕೊಂಡಿದೆ.
ಭಾರತೀಯ ಪತ್ರಿಕಾ ಮಂಡಳಿ ನಿಯಮಗಳನ್ನು ಉಲ್ಲಂಘಿಸಿದ ಅನೇಕ ಉದಾಹರಣೆಗಳು ಇವೆ. ಎಷ್ಟೇ ಆಗಲಿ ಈ ಮಂಡಳಿ ಹಲ್ಲಿಲ್ಲದ ಹಾವು. ಛೀಮಾರಿ ಹಾಕುವುದನ್ನು ಬಿಟ್ಟು ಬೇರೇನೋ ಅದರಿಂದ ಸಾಧ್ಯವಿಲ್ಲ. ತಪ್ಪೊಪ್ಪಿಗೆಯನ್ನು ಸಣ್ಣದಾಗಿ ಪ್ರಕಟಿಸಿ ಕೈತೊಳೆದುಕೊಂಡು ಏನೋ ಆಗಿಲ್ಲ ಎನ್ನುವಂತೆ ವರ್ತಿಸಿಲ್ಲವೇ? ಕೆಲವರು ಸ್ವಯಂ ನೈತಿಕತೆಯ ಪಾಠ ಹೇಳುತ್ತಿದ್ದಾರೆ. ಈ ಸ್ವಯಂ ನೈತಿಕತೆಯ ಪಾಠ ಇವತ್ತು ಯಾರು ಪಾಲಿಸುತ್ತಾರೆ. ಯಾರಿಗೆ ಈ ಉಪದೇಶ? ಈ ಕುರಿತ ಮುಖಾಮುಖಿ ಮಾತ್ರ ವಸ್ತುನಿಷ್ಠತೆಗೆ ಹತ್ತಿರ ಬರಲು ಸಾಧ್ಯವಾಗುತ್ತದೆ.