Tag Archives: ಫೋಸ್ಕೋ

ಭೂ ಸ್ವಾಧೀನ ವಿರೋಧಿ ಸಮಾವೇಶ

-ಅರುಣ್ ಜೋಳದಕೂಡ್ಲಿಗಿ

ಅಕ್ಟೋಬರ್ 17 ರಂದು ಗದಗಿನಲ್ಲಿ ರಾಜ್ಯಮಟ್ಟದ ಭೂಸ್ವಾಧೀನ ವಿರೋಧಿ ಸಮಾವೇಶ ನಡೆಯಿತು. ಇಂದು ಜಾತಿವಾದಿ,ಕೋಮುವಾದಿ ಬೆಂಬಲಿತ ಸಮಾವೇಶಗಳು ನಡೆವ ಹೊತ್ತಲ್ಲಿ ಇಂತಹದ್ದೊಂದು ಸಮಾವೇಶ ಸಾಂಸ್ಕೃತಿಕವಾಗಿ ಮಹತ್ವದ ಸಂಗತಿ. ಒಂದೆಡೆ ಭೂ ಕಬಳಿಕೆಯ ಆರೋಪ ಹೊತ್ತು ಆಳುವವರು ಜೈಲು ಸೇರಿದ್ದಾರೆ. ಕೆಲವರು ಸರದಿಯಲ್ಲಿದ್ದಾರೆ. ಇನ್ನೊಂದೆಡೆ ಹೋರಾಟ ಕೂಗು ಕೆಲಸಕ್ಕೆ ಬಾರದ್ದು ಎಂದು ಸಿನಿಕರಾದ ಜನ ಮೌನವಾಗಿದ್ದಾರೆ. ಮತ್ತೊಂದೆಡೆ ಜನಪರವಾದ ಪ್ರಾಮಾಣಿಕ ಕೆಲ ಮನಸ್ಸುಗಳು ಒಂದೆಡೆ ಸೇರಿ ಭೂ ಸ್ವಾದೀನವನ್ನು ವಿರೋಧಿಸುತ್ತಿದ್ದಾರೆ. ಇವು ಕರ್ನಾಟಕವನ್ನು ಅರ್ಥ ಮಾಡಿಕೊಳ್ಳಬಹುದಾದ ವೈರುಧ್ಯದ ಚಿತ್ರಗಳು.

ಪೋಸ್ಕೋದಂತಹ ದೈತ್ಯ ಕಂಪನಿ ಬಾಲ ಮುದುರಿಕೊಂಡು ಹಿಂದೆ ಸರಿವಂತೆ ಎಚ್ಚರಿಕೆ ನೀಡಿದ ನೆಲದಲ್ಲಿಯೇ ಈ ಸಮಾವೇಶ ನಡೆದದ್ದು ಅರ್ಥಪೂರ್ಣ. ಇದನ್ನು ಕರ್ನಾಟಕದಾದ್ಯಂತ ವಿಸ್ತರಿಸಬೇಕಿದೆ. ಪ್ರಭುತ್ವವನ್ನು ಹಾಡಿ ಹೊಗಳುವ ಸ್ವಾಮೀಜಿಗಳ ಪೈಕಿ, ಗದಗದ ತೋಂಟದ ಸಿದ್ದಲಿಂಗ ಸ್ವಾಮಿಗಳು ಭಿನ್ನವಾಗಿ ನಿಲ್ಲುತ್ತಾರೆ. ಸ್ವಾಮೀಜಿಗಳು ರೈತಪರವಾಗಿ ಪ್ರಭುತ್ವದ ಕಿವಿಹಿಂಡುವ ಗುಣ ಪಡೆದರೆ ಆಗಬಹುದಾದ ಪರಿಣಾಮಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಅವರು ಮಾತನಾಡುತ್ತಾ ಹೊಲ ಕೆಲವರಿಗೆ ಸೇರಿದ್ದರೆ ಈ ನೆಲ ಎಲ್ಲರಿಗೂ ಸೇರಿದ್ದು. ಹಾಗಾಗಿ ನಾವು ನೆಲದ ಬಗ್ಗೆ ಮಾತನಾಡುತ್ತಿದ್ದೇವೆ, ನೆಲವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದು ಇಡೀ ಸಮಾವೇಶದ ಆಶಯವನ್ನು ತಾತ್ವಿಕವಾಗಿ ಮಂಡಿಸಿದರು.

ಈ ಸಮಾವೇಶವನ್ನು ಉದ್ಘಾಟನೆ ಮಾಡಿದ್ದು ಹಿರಿಯ ಸ್ವಂತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿಯವರು. ಅನ್ನಕೊಡುವ ರೈತರ ಭೂಮಿಯನ್ನು ಕಸಿಯುವುದು ಕೆಚ್ಚಲನ್ನೇ ಕೊಯ್ಯುವಂತಹ ಹೇಯ ಕೃತ್ಯ ಇದನ್ನು ತಡೆಯಬೇಕೆಂಬ ಆತಂಕ ವ್ಯಕ್ತಪಡಿಸಿ, ಸಮಾವೇಶದ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದರು. ಸಿದ್ದನಗೌಡ ಪಾಟೀಲರು ಜಾಗತೀಕರಣದಿಂದಾಗಿ ಭೂಕೇಂದ್ರೀಕರಣವಾಗುತ್ತಿದೆ, ಸರಕಾರದಿಂದ ಅಧಿಕೃತವಾಗಿ, ಖಾಸಗಿಯವರಿಂದ ಅನಧಿಕೃತವಾಗಿ ಭೂ ಒತ್ತುವರಿಗಳು ನಡೆಯುತ್ತಲೇ ಇವೆ. ಇಂತಹ ಒತ್ತುವರಿಗಳನ್ನು ಪ್ರಜ್ಞಾವಂತರೆಲ್ಲಾ ವಿರೋಧಿಸಬೇಕಿದೆ ಎಂದರು. ಮಾವಳ್ಳಿ ಶಂಕರ್, ಬಾಬಾಗೌಡ ಪಾಟೀಲ್, ಮಾರುತಿ ಮಾನ್ಪಡೆ, ಶೌಕತ್ ಆಲಿ ಆಲೂರು, ರುದ್ರಮುನಿ ಆರದಗೆರೆ ಮುಂತಾದವರು ಸಮಾವೇಶದ ಆಶಯಗಳನ್ನು ಬೇರೆ ಬೇರೆ ನೆಲೆಯಲ್ಲಿ ವಿವರಿಸಿದರು.

ರಹಮತ್ ತರೀಕರೆಯವರು ಜನಸಮುದಾಯ ಯಾವುದನ್ನು ವಿರೋಧಿಸಬೇಕೆಂದು ಸಮಾವೇಶ ಮಾಡುತ್ತಿದ್ದೇವೆಯೋ ಯಾವುದು ಬೇಕು ಎಂದು ಕೂಡ ಹಕ್ಕೋತ್ತಾಯದಂತೆ ಕೇಳಬೇಕಾಗಿದೆ, ಹಲವು ಚಳವಳಿಗಳ ಏಕೀಕರಣವಾಗಬೇಕಿದೆ ಎಂದರು. ಟಿ. ಆರ್. ಚಂದ್ರಶೇಖರ್ ಅವರು ಗದಗ ಜಿಲ್ಲೆಯ ಅಭಿವೃದ್ಧಿಯ ಸಾದ್ಯತೆಗಳ ಬಗ್ಗೆ ತುಂಬಾ ವಾಸ್ತವವಾಗಿ ಮಾತನಾಡಿದರು. ಕೇಂದ್ರದ ಭೂ ಸ್ವಾಧೀನ ಮಸೂದೆ ಮತ್ತು ರೈತರ ಹಿತಾಸಕ್ತಿ ಕುರಿತಂತೆ ಕೆ.ಪಿ. ಸುರೇಶ್ ಅವರು ವ್ಯಂಗ್ಯಬರಿತ ವಿಷಾಧವನ್ನು ವ್ಯಕ್ತಪಡಿಸಿದರು. ಕೃಷಿ ವಲಯ: ಜಾಗತಿಕ ಬಂಡವಾಳದ ಹರವಿನ ನೆಲೆಗಳು ಕುರಿತಂತೆ ಶಿವಸುಂದರ್ ಕಟುವಾದ ಸತ್ಯಗಳನ್ನು ಬಯಲಿಗೆಳೆದರು. ಜಿ. ರಾಮಕೃಷ್ಣ ಅವರು ಕನರ್ಾಟಕದ ಸದ್ಯದ ನಡೆಯ ಬಗ್ಗೆ ವಿಮಶರ್ಾತ್ಮಕವಾಗಿ ಚಚರ್ಿಸಿದರು. ಹೀಗೆ ಇಡೀ ಸಮಾವೇಶ ವರ್ತಮಾನ ಮತ್ತು ಭವಿಷ್ಯದಲ್ಲಿ ರೈತಸಮುದಾಯ ಎದುರಿಸಬೇಕಾದ ಬಿಕ್ಕಟ್ಟುಗಳು ಮತ್ತು ಅವುಗಳನ್ನು ಬಿಡಿಸಿಕೊಳ್ಳಲು ಇರಬಹುದಾದ ದಾರಿಗಳನ್ನು ಕುರಿತಂತೆ ಒಂದು ಗಂಭೀರ ಚರ್ಚೆ ಸಾದ್ಯವಾಯಿತು.

ಈ ಸಮಾವೇಶದಲ್ಲಿ ರೈತ ಸಮುದಾಯ, ರೈತಪರ ಜನ ಹೆಚ್ಚಾಗಿಯೇ ಸೇರಿದ್ದರು. ವೆಂಕಟೇಶಯ್ಯ, ಇಪ್ಟಾ, ಸಮುದಾಯ ತಂಡಗಳ ಹೋರಾಟದ ಹಾಡುಗಳು ಈ ಸಮಾವೇಶದ ಆಶಯವನ್ನು ವಿಸ್ತರಿಸುವಂತಹ ಶಕ್ತಿ ಪಡೆದಿದ್ದವು. ಮುತ್ತು ಹಾಳಕೇರಿ, ಹು.ಬಾ. ವಡ್ಡಟ್ಟಿ ಅವರಿಂದ ಪೋಸ್ಕೋ ಹೋರಾಟದ ಛಾಯಚಿತ್ರ ಮತ್ತು ಪತ್ರಿಕಾ ವರದಿಗಳ ಪ್ರದರ್ಶನ ಸಮಾವೇಶದ ಪರಿಣಾಮವನ್ನು ಹೆಚ್ಚಿಸುವಂತಿದ್ದವು. ಅಂತೆಯೇ ಭೀಮೇಶ ತಂಡದಿಂದ `ಭೂಮಿ ಕೊಡುವ ಮಾತಾಯಿತು’ ನಾಟಕ ಸದ್ಯದ ರೈತರ ಸ್ಥಿತಿಗೆ ಕನ್ನಡಿ ಹಿಡಿಯುವಂತಿತ್ತು.

ಈ ಸಮಾವೇಶ ಹಲವು ಸಂಘಟನೆಗಳ ಫಲ. ಹೀಗೆ ಒಂದು ಸಮಾನ ಉದ್ದೇಶ ಸಾಧನೆಗಾಗಿ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದು ಕೂಗಿಗೆ ತಮ್ಮ ದ್ವನಿ ಸೇರಿಸುವ ಅಗತ್ಯವಿದೆ. ಹಲವು ಸಂಘಟನೆಗಳ ಏಕೀಕರಣಕ್ಕೆ ಕಾರಣವಾದ ಗದಗದ ಭೂ ಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿಯವರನ್ನು ಈ ಸಂದರ್ಭದಲ್ಲಿ ನೆನೆಯಬಹುದು. ಎಲ್ಲರನ್ನೂ ಒಂದೆಡೆ ಸೇರಿಸುವುದರಲ್ಲಿ ಬಸವರಾಜ ಸೂಳಿಬಾವಿ ಅವರ ಶ್ರಮ ಹೆಚ್ಚಿನದು. ಹೀಗೆ ಕರ್ನಾಟಕದಾದ್ಯಾಂತ ಈ ಸಮಾವೇಶವನ್ನು ವಿಸ್ತರಿಸುವ ಮತ್ತು ಆ ಮೂಲಕ ರೈತರಲ್ಲಿ ಒಂದು ಬಗೆಯ ಹೊಸ ಸಂಚಲನವನ್ನು ಉಂಟುಮಾಡುವ ಅಗತ್ಯವಿದೆ. ಇದಕ್ಕೆ ಆಯಾ ಭಾಗದ ಪ್ರಜ್ಞಾವಂತ ಜನ ಕೈ ಜೋಡಿಸಬೇಕಾಗಿದೆ. ಇದು ಸದ್ಯದ ಕರ್ನಾಟಕದಲ್ಲಿ ಆಗಲೇಬೇಕಾದ ಕೆಲಸಗಳಲ್ಲಿ ಪ್ರಮುಖವಾದುದು.