Tag Archives: ಮಡೆಸ್ನಾನ

ಮಡೆಸ್ನಾನ ಎಂಬ ವಿಕೃತಿ

 -ಡಾ. ಎನ್ ಜಗದೀಶ್ ಕೊಪ್ಪ

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಮಡೆಸ್ನಾನ ಎಂಬ ಅನಾಗರೀಕ ಸಂಸ್ಕೃತಿಯ ಆಚರಣೆ ಇಡೀ ನಾಗರೀಕ ಜಗತ್ತು ತಲೆ ತಗ್ಗಿಸುವಂತಹದ್ದು. ಪುರೋಹಿತಶಾಹಿ ಮನಸ್ಸುಗಳು ವರ್ತಮಾನದ ಜಗತ್ತನ್ನು 18 ನೇ ಶತಮಾನಕ್ಕೆ ಕೊಂಡೊಯ್ಯುತ್ತಿರುದು ನಿಜಕ್ಕೂ ಇದೊಂದು ಸಾಂಸ್ಕೃತಿಕ ದಿಗ್ಭ್ರಮೆ.(ಕಲ್ಚರಲ್ ಶಾಕ್)

ಒಂದು ಸಮುದಾಯದ ಧಾರ್ಮಿಕ ನಂಬಿಕೆಗಳು ಎಂಬ ಆಧಾರದ ಮೇಲೆ ಸರ್ಕಾರ ಇಂತಹ ಅಮಾನುಷ, ಅನಾಗರೀಕ ಆಚರಣೆಗೆ ಅವಕಾಶ ಕಲ್ಪಿಸಿರುವುದು ಸರ್ಕಾರದ ಮನೋ ಇಂಗಿತವನ್ನು ಅನಾವರಣಗೊಳಿಸಿದೆ.

ಈ ಹಿಂದೆ ಈ ದೇಶದ ಉದ್ದಗಲಕ್ಕೂ ಇದ್ದ ದೇವದಾಸಿ ಪದ್ಧತಿ, ಬಾಲ್ಯ ವಿವಾಹ ಪದ್ಧತಿ, ಸತಿಸಹಗಮನ ಇವೆಲ್ಲವೂ ಆಯಾ ಸಮುದಾಯಗಳ ಧಾರ್ಮಿಕ ನಂಬಿಕೆಗಳೇ ಆಗಿದ್ದವು. ಧಾರ್ಮಿಕ ಆಚರಣೆಯ ನೆಪದಲ್ಲಿ ಇಂತಹ ಅನಿಷ್ಟ ಪದ್ಧತಿಗಳನ್ನು ಮತ್ತೇ ಆಚರಣೆಗೆ ತರಲು ಸಾಧ್ಯವೆ?

ಇತಿಹಾಸದ ಪ್ರಜ್ಙೆ ಇಲ್ಲದವರು ಮಾತ್ರ ಇಂತಹ ಅನಾಗರೀಕ ಜಗತ್ತಿನಲ್ಲಿ ಬದುಕ ಬಲ್ಲರು. ಪೇಜಾವರ ಸ್ವಾಮೀಜಿ ಹಾಗೂ ಸಚಿವ ವಿ.ಎಸ್. ಆಚಾರ್ಯ ಇವುಗಳನ್ನು ಸಮರ್ಥಿಸುವ ಬಗೆ ನೋಡಿದರೆ, ನಾಳೆ ಇವರು ಭವಿಷ್ಯದಲ್ಲಿ ಎಂಜಲು ಎಲೆ ಮಾತ್ರವಲ್ಲ, ಬ್ರಾಹಣರ ಹೇಸಿಗೆಯ ಮೇಲೂ ಈ ನೆಲದ ಶೂದ್ರ ಮತ್ತು ದಲಿತರನ್ನ ಉರುಳಾಡಿಸಬಲ್ಲರು ಎನಿಸುತ್ತಿದೆ.

19 ನೇ ಶತಮಾನದ ಆದಿಯಿಂದ ಹಿಡಿದು, ರಾಜಾರಾಮ ಮೋಹನರಾಯ್, ನಾರಾಯನಗುರು, ಮಹಾತ್ಮ ಪುಲೆ, ಸಾಹು ಮಹರಾಜ್, ಅಂಬೇಡ್ಕರ್, ಪೆರಿಯಾರ್, ಗಾಂಧಿ, ಇಂತಹ ಮಹಾತ್ಮರ ಸಾಮಾಜಿಕ ಸುಧಾರಣೆಗಳಿಗೆ ಯಾವುದೇ ಅಳುಕಿಲ್ಲದೆ ತಿಲಾಂಜಲಿ ಇತ್ತು, ನಾಚಿಕೆಯಿಲ್ಲದೆ ಅನಿಷ್ಟ ಪದ್ಧತಿಯನ್ನ  ಸಮರ್ಥಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ, ಇವರುಗಳಿಗೆ ಆತ್ಮಸಾಕ್ಷಿ ಇಲ್ಲವೆನಿಸುತ್ತದೆ. ಅತ್ಯಂತ ನೋವಿನ, ಹಾಗೂ ಸಿಟ್ಟುಗಳ ಈ ಕ್ಷಣದಲ್ಲಿ ಅಲ್ಲಮನ ವಚನ ನೆನಪಾಗುತ್ತಿದೆ.

ತನು ಬತ್ತಲಿದ್ದರೇನೊ ಮನ ಶುಚಿಯಾಗದನ್ನಕ್ಕರ?
ಮಂಡೆ ಬೋಳಾದಡೆನೊ, ಭಾವ ಬಯಲಾಗದನ್ನಕ್ಕರ?
ಭಸ್ಮವ ಹೂಸಿದಡೇನೊ,
ಕರುಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ?
ಇಂತೀ ಆಶೆಯ ವೇಷದ ಭಾಷೆಗೆ,
ಗುಹೇಶ್ವರಾ ನೀ ಸಾಕ್ಷಿಯಾಗಿ ಛೀ ಎಂಬೆನು.

ಹಿಂದು ಪರ ಸಂಘಟನೆಗಳ ಮರೆಮಾಚಿದ ಎಲ್ಲಾ ನಿಲುವಳಿಗಳಿಗಳನ್ನ ( ಹಿಡನ್ ಅಜೆಂಡ) ವೈವಸ್ಥಿತವಾಗಿ ಜಾರಿಗೆ ತರುತ್ತಿವ ಈ ಸರ್ಕಾರಕ್ಕೆ ಗೋಮಾಂಸ ಭಕ್ಷಣೆ ದಲಿತರ, ಹಿಂದುಳಿದ ಸಮುದಾಯದ ಆಹಾರ ಸಂಸ್ಕೃತಿ, ಅದೇ ರೀತಿ ದೇವಸ್ಥಾನದಲ್ಲಿ ಕುರಿ ಕೋಳಿ ಮೇಕೆ ಕಡಿಯುವುದು ಶೂದ್ರರ ಧಾರ್ಮಿಕ ಹಕ್ಕು ಎಂದು ಏಕೆ ಅರ್ಥವಾಗುತ್ತಿಲ್ಲ? ಅವುಗಳ ಮೇಲೆ ನಿಷೇಧ ಹೇರುವ ಇವರಿಗೆ ಇದು ಏಕೆ ಸಾಧ್ಯವಾಗುತ್ತಿಲ್ಲ? ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನು ಅರ್ಥೈಸಿಕೊಂಡು ಬರುತ್ತಿರುವ ಈ ವೈದಿಕ ಮನಸ್ಸುಗಳಿಗೆ ಕೇಳಬೇಕಾಗಿದೆ. ಹೊಟ್ಟೆಗೆ ಏನು ತಿನ್ನುತಿದ್ದೀರಿ? ಎಂದು. ಏಕೆಂದರೆ, ಅನ್ನ ತಿನ್ನುವವರು ಮಾಡುವ ಅಥವಾ ಸಮರ್ಥಿಸುವ ಕ್ರಿಯೆ ಇದಲ್ಲ.

ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ?
ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ?
ದಾಳಿಕಾರಂಗೆ ಧರ್ಮವುಂಟೆ? ಕನ್ನಗಳ್ಳಂಗೆ ಕರುಳುಂಟೆ?

ಇದು ಅಲ್ಲಮ 11ನೇ ಶತಮಾನದಲ್ಲಿ ಎತ್ತಿದ ಪ್ರಶ್ನೆ, ಈಗ ಇದು ನನ್ನದೂ ಕೂಡ ಹೌದು.