Tag Archives: ಮೊಕಮೆಘಾಟ್

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 9)


– ಡಾ.ಎನ್.ಜಗದೀಶ್ ಕೊಪ್ಪ   


ಜಿಮ್ ಕಾರ್ಬೆಟ್ ಮೊಕಮೆಘಾಟ್ ನಿಲ್ದಾಣಕ್ಕೆ ಬಂದ ಐದನೇ ವರ್ಷಕ್ಕೆ ಸರಿಯಾಗಿ ಅವನ ಮೇಲಧಿಕಾರಿ ಸ್ಟೋರರ್‌ಗೆ ಬಡ್ತಿಯಾದ ಪ್ರಯುಕ್ತ ಬೇರೆಡೆ ವರ್ಗಾವಣೆಯಾಯಿತು. ಖಾಲಿಯಾದ ಆ ಸ್ಥಾನಕ್ಕೆ ರೈಲ್ವೆ ಇಲಾಖೆ ಕಾರ್ಬೆಟ್‌ನನ್ನು ನೇಮಿಸಿತು. ಸ್ಟೋರರ್ ವಾಸವಾಗಿದ್ದ ಬಂಗಲೆಯನ್ನು ಇಲಾಖೆಯಿಂದ ಖರೀದಿಸಿದ ಕಾರ್ಬೆಟ್  ಮೂವರು ಸೇವಕರನ್ನು ನೇಮಿಸಿಕೊಂಡು ಹೊಸ ಮನೆಯಲ್ಲಿ ವಾಸಿಸತೊಡಗಿದ. ಮೂವರು ಸೇವಕರಲ್ಲಿ ಒಬ್ಬ ಅಡುಗೆ ಮಾಡಲು, ಮತ್ತೊಬ್ಬ ಮನೆಗೆ ನೀರು ತರುವುದು, ಕಸಗುಡಿಸುವುದು ಇತ್ಯಾದಿ ಕೆಲಸಗಳಿಗೆ, ಇನ್ನೊಬ್ಬನನ್ನು ವಿದ್ಯುತ್ ಮತ್ತು ಫ್ಯಾನ್ ಇಲ್ಲದ ಆ ಕಾಲದಲ್ಲಿ ಕಾರ್ಬೆಟ್ ಗೆ ಗಾಳಿ ಬೀಸುವುದಕ್ಕೆ ನೇಮಕ ಮಾಡಲಾಗಿತ್ತು. ಪಂಖ ಎಂದು ಕರೆಯುತ್ತಿದ್ದ, ಬೀಸಣಿಗೆ ಆಕಾರದ ಬೃಹತ್ ಪರದೆಯೊಂದನ್ನು ಮಲುಗುವ ಮಂಚದ ಮೇಲೆ ತೂಗುಹಾಕಿ ಅದರ ಹಗ್ಗವನ್ನು ಮನೆಯ ಹೊರಗಡೆ ಇಳಿಬಿಡಲಾಗುತ್ತಿತ್ತು. ಮಾಲಿಕ ಮಲಗಿದಾಗ ಸೇವಕ ಹಗ್ಗವನ್ನು ಜಗ್ಗುತ್ತಿರಬೇಕು. ಈ ವ್ಯವಸ್ಥೆ ಆ ಕಾಲದಲ್ಲಿ ಉತ್ತರ ಭಾರತದ ಶ್ರೀಮಂತರು, ಬ್ರಿಟಿಷ್ ಅಧಿಕಾರಿಗಳು, ಸಂಸ್ಥಾನದ ದೊರೆಗಳ ಅರಮನೆಗಳಲ್ಲಿ ಚಾಲ್ತಿಯಲ್ಲಿತ್ತು.

ಬೆಳಿಗ್ಗೆ ಎದ್ದು ಉಪಹಾರ ಸೇವಿಸಿ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿ, ನಂತರ ಕಛೇರಿಯಲ್ಲಿ ಕುಳಿತು ಲೆಕ್ಕ ಪತ್ರ ನೋಡುವುದು, ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ, ಒಂದು ಗಂಟೆ ನಿದ್ರೆ ಮಾಡಿ ಮತ್ತೇ ಕೆಲಸದ ಸ್ಥಳಕ್ಕೆ ಹೊರಡುವುದು, ನಂತರ ಆ ದಿನದ ವಿವರಗಳನ್ನು ಕೇಂದ್ರ ಕಛೇರಿಗೆ ಟೆಲಿಗ್ರಾಮ್ ಮೂಲಕ ಕಳಿಸಿ ಬರುವುದು, ಇವೆಲ್ಲವೂ ಕಾರ್ಬೆಟ್‌ನ ದಿನಚರಿಯಾಗಿತ್ತು. ಮನೆಗೆ ಬಂದ ನಂತರ ಸ್ನಾನ ಮಾಡಿ, ರಾತ್ರಿ ಊಟದ ನಂತರ ಪುಸ್ತಕ ಓದಿ ಮಲಗುವುದು ಕಾರ್ಬೆಟ್‌ಗೆ ರೂಢಿಯಾಗಿತ್ತು. ಬೆಳದಿಂಗಳ ದಿನಗಳಲ್ಲಿ ಗಂಗಾ ನದಿಯಲ್ಲಿ ಮೀನು ಶಿಕಾರಿಗೆ ಸಹ ಹೋಗುತ್ತಿದ್ದನು. ಮೊಕಮೆಘಾಟ್‌ಗೆ ಬಂದ ನಂತರ ಕಾರ್ಬೆಟ್ ಬದುಕಿನಲ್ಲಿ  ಮತ್ತೊಂದು ಬದಲಾವಣೆಯಾಯಿತು., ಗಂಗಾನದಿಯ ತೀರಕ್ಕೆ ಬರುತಿದ್ದ ಬಗೆ ಬಗೆಯ ಪಕ್ಷಿಗಳು ಮತ್ತು ಪತಂಗಗಳ ಬಗ್ಗೆ ಕಾರ್ಬೆಟ್ ಅಪಾರ ಆಸಕ್ತಿ ಬೆಳಸಿಕೊಂಡ. ಅವುಗಳ ಜೀವನ ಕುರಿತು ಅಧ್ಯಯನ ಮಾಡತೊಡಗಿದ.

ಮೊಕಮೆಘಾಟ್ ಪ್ರಮುಖ ರೈಲ್ವೆ ಜಂಕ್ಷನ್ ಆದ ಪರಿಣಾಮ ಸದಾ ವಿವಿಧ ಬಗೆಯ ಸಂಸ್ಕೃತಿ, ಭಾಷೆಯ ಜನರಿಂದ ತುಂಬಿ ತುಳುಕುತ್ತಿತ್ತು. ಅವೆರೆಲ್ಲರ ಆಚಾರ, ವಿಚಾರ, ಆಹಾರ, ಉಡುಪು, ಇವೆಲ್ಲವನ್ನು ಕಾರ್ಬೆಟ್ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಬ್ರಿಟಿಷ್ ಸರ್ಕಾರ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಇಂಗ್ಲೆಂಡ್‌ನಲ್ಲಿ ಯುವಕರನ್ನು ನೇಮಕ ಮಾಡಿ ಅವರುಗಳನ್ನು ತರಬೇತಿಗಾಗಿ ದೊಡ್ಡ ದೊಡ್ಡ ನಿಲ್ದಾಣಗಳಿಗೆ ಕಳಿಸುತ್ತಿದ್ದರು. ಮೊಕಮೆಘಾಟ್ ನಿಲ್ದಾಣದಲ್ಲಿ ಸರಕು ಸಾಗಾಣಿಕೆ ನಿರ್ವಹಣೆ ಕುರಿತಂತೆ ಕಾರ್ಬೆಟ್ ಬಳಿ ತರಬೇತಿ ಪಡೆಯಲು ಪ್ರತಿ ವರ್ಷ 30 ಮಂದಿ ಯುವಕರು ಬರುತ್ತಿದ್ದರು. ಕಾರ್ಬೆಟ್ ಅವರಿಗೆ ವ್ಯವಹಾರದ ಜೊತೆಗೆ  ಭಾರತೀಯ ಜನರು, ಅವರ ವಿಭಿನ್ನ ಸಂಸ್ಕೃತಿ, ಭಾಷೆ, ಇಲ್ಲಿನ ಭೌಗೋಳಿಕ ಪರಿಸರ ಎಲ್ಲವನ್ನು ಪರಿಚಯಿಸುತ್ತಿದ್ದ. ಧರ್ಮ, ಜಾತಿ ಇವುಗಳ ಸೂಕ್ಷ್ಮತೆಯನ್ನು ವಿವರಿಸಿ ಇಲ್ಲಿನ ಜನತೆಯೊಂದಿಗೆ ಹೇಗೆ ವರ್ತಿಸಬೇಕು ಮತ್ತು ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ ಹೇಳಿಕೊಡುತ್ತಿದ್ದ.

ಕಾರ್ಬೆಟ್‌ನ ಬದುಕು ನೆಮ್ಮದಿಯತ್ತ ಸಾಗತೊಡಗಿದಂತೆ, ಅವನ ತಾಯಿ ಮತ್ತು ಸಹೋದರಿ ಮ್ಯಾಗಿ ಇಬ್ಬರೂ ಮೊಕಮೆಘಾಟ್‌ಗೆ ಬಂದು ಅವನ ಮನೆಯಲ್ಲಿ ತಿಂಗಳುಗಳ ಕಾಲ ಇದ್ದು ಹೋಗುತ್ತಿದ್ದರು. ಕಾರ್ಬೆಟ್ ತಾನು ಉಳಿಸಿದ ಹಣವನ್ನು ತಾಯಿಗೆ ರವಾನಿಸುತಿದ್ದ. ಆಕೆ ಈ ಹಣವನ್ನು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸುತ್ತಿದ್ದಳು. ಕಾರ್ಬೆಟ್ ಜೀವನದುದ್ದಕ್ಕೂ ವಿವಾಹವಾಗದೇ ಬ್ರಹ್ಮಚಾರಿಯಾಗಿ ಏಕೆ ಉಳಿದ ಎಂಬುದಕ್ಕೆ ಅವನ ಜೀವನದಲ್ಲಿ ಯಾವ ಸುಳಿವೂ ಸಿಗುವುದಿಲ್ಲ. ಒಮ್ಮೆ ಮಾತ್ರ ನೈನಿತಾಲ್ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಒಬ್ಬ ಆಂಗ್ಲ ಯುವತಿಯತ್ತ ಆಸಕ್ತಿ ತೋರಿದ್ದು ಬಿಟ್ಟರೆ, ಪ್ರೇಮ ವಿಫಲತೆಯ ಸುಳಿವು ಸಹ ಅವನ ಬದುಕಿನಲ್ಲಿ ಸಿಗುವುದಿಲ್ಲ. ಅಕ್ಕ ಮ್ಯಾಗಿ ಅವಿವಾಹಿತಳಾಗಿ ಉಳಿದದ್ದು ಕಾರ್ಬೆಟ್ ಸಹ ಬ್ರಹ್ಮಚಾರಿಯಾಗಿ ಉಳಿಯಲು ಕಾರಣವಿರಬೇಕೆಂದು ಊಹಿಸಲಾಗಿದೆ.

ಒಬ್ಬ ಅನನುಭವಿ ಯುವಕನಾಗಿ ಮೊಕಮೆಘಾಟ್‌ಗೆ ಬಂದ ಕಾರ್ಬೆಟ್ ಅಧಿಕಾರಿಯಾಗಿ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡಿದ್ದ. ಅವನಿಗೆ ಸಿಕ್ಕ ಕೆಲಸಗಾರರು ಅವನ ಜವಬ್ದಾರಿಯನ್ನು ಹಗುರಗೊಳಿಸಿದ್ದರು. ಚಮರಿ ಎಂಬ ಮಧ್ಯ ವಯಸ್ಸಿನ ಮೇಸ್ತ್ರಿ ಕಾರ್ಮಿಕರ ಉಸ್ತುವಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಕಾರ್ಬೆಟ್ ನ ಜೀವನ  ಆರಾಮವಾಗಿರುವಂತೆ ನೋಡಿಕೊಂಡಿದ್ದ. ಚಮರಿ ಎಂಬ ಅತ್ಯಂತ ಕೆಳಜಾತಿಯ ಸಹೃದಯದ ವ್ಯಕ್ತಿ ಕಾರ್ಬೆಟ್‌ಗೆ ಮೇಸ್ತ್ರಿಯಾಗಿ ಸಿಕ್ಕಿದ್ದು ಕೂಡ ಆಕಸ್ಮಿಕ. ಪ್ರಾರಂಭದ ದಿನಗಳಲ್ಲಿ ಒಂದು ದಿನ ಮಾಸಿದ ಹರಕಲು ಬಟ್ಟೆಯ, ಕುರುಚಲು ಗಡ್ಡದ ಈ ವ್ಯಕ್ತಿ ತನ್ನ ಪತ್ನಿಯೊಂದಿಗೆ ಬಂದು ಕಾರ್ಬೆಟ್‌ನಲ್ಲಿ ಕೂಲಿ ಕೆಲಸ ಕೇಳಿದ. ಕಾರ್ಬೆಟ್ ಇಬ್ಬರಿಗೂ ಗುದ್ದಲಿ ಮತ್ತು ಬುಟ್ಟಿಯನ್ನು ಕೊಟ್ಟು ರೈಲ್ವೆ ವ್ಯಾಗನ್ ಗಳಿಗೆ ಕಲ್ಲಿದ್ದಲು ತುಂಬುವಂತೆ ಹೇಳಿ ಇಡೀ ದಿನ ಅವರಿಬ್ಬರ ಕಾರ್ಯವನ್ನು ಗಮನಿಸತೊಡಗಿದ. ಮಧ್ಯಾಹ್ನದ ವೇಳೆಗೆ ಅಂಗೈಯಲ್ಲಿ ಬೊಕ್ಕೆ ಬಂದರೂ ಕೂಡ, ತನ್ನ ಬಾಯಿಂದ ಗಾಳಿ ಬೀಸಿಕೊಂಡು ಚಮರಿ ಕಲ್ಲಿದ್ದಲು ತಂಬುವುದನ್ನು ಕಾರ್ಬೆಟ್ ಗಮನಿಸಿದ್ದ.

ಮಾರನೇ ದಿನ ಎಲ್ಲಾ ಕಾರ್ಮಿಕರು ಕೆಲಸಕ್ಕೆ ಕಾಯುತ್ತಿರುವಾಗ, ಚಮರಿ ಗಾಯವಾಗಿರುವ ತನ್ನ ಎರಡು ಅಂಗೈಗಳಿಗೆ ಹೊಲಸು ಬಟ್ಟೆಯ ಚೂರನ್ನು ಸುತ್ತಿಕೊಂಡು ತನ್ನ ಪತ್ನಿಯೊಂದಿಗೆ ಅಂದಿನ ಕೂಲಿಗಾಗಿ ಕಾಯುತಿದ್ದ. ಸ್ಥಳಕ್ಕೆ ಬಂದು ಎಲ್ಲರಿಗೂ ಕೆಲಸ ಹಂಚಿದ ಕಾರ್ಬೆಟ್, ಚಮರಿಯನ್ನು ಕಚೇರಿಗೆ ಬಂದು ಕಾಣುವಂತೆ ಹೇಳಿ ಕಚೇರಿಯತ್ತ ತೆರಳಿದ.

ಬಹುಶಃ ನಾನು ಈ ಕೆಲಸಕ್ಕೆ ಅನರ್ಹ ಎಂದು ಸಾಹೇಬರಿಗೆ ಅನಿಸಿರಬೇಕು, ನಿನ್ನೆಯ ಕೂಲಿ ಹಣಕೊಟ್ಟು ಕಳಿಸುತ್ತಾರೆ ಎಂದುಕೊಳ್ಳುತ್ತಾ ಕಚೇರಿಗೆ ಹೋದ ಚಮರಿಯನ್ನು ಹತ್ತಿರ ಕರೆದು ಏನು ಓದಿದ್ದೀಯಾ ಎಂದು ಕಾರ್ಬೆಟ್ ಕೇಳಿದ. ನಾಲ್ಕನೇ ತರಗತಿ ಓದಿದ್ದೇನೆ ಎಂದು ಚಮರಿ ತಿಳಿಸುತ್ತಿದ್ದಂತೆ, ಇಂದಿನಿಂದ ನೀನು ಕಲ್ಲಿದ್ದಲು ತುಂಬುವ ಬದಲು ಯಾವ ತಂಡ ಎಷ್ಟು ಕೆಲಸ ನಿರ್ವಹಿಸಿದೆ ಎಂಬುದನ್ನು ಬರೆದುಕೊ ಎಂದು ತಿಳಿಸಿದ ಕಾರ್ಬೆಟ್ ಗಾಯಗೊಂಡಿದ್ದ ಅವನ ಅಂಗೈಗಳಿಗೆ ಮುಲಾಮು ಹಚ್ಚಿ, ಒಂದು ಪೆನ್ಸಿಲ್ ಹಾಗೂ ಪುಸ್ತಕ ಕೊಟ್ಟು ಕೂಲಿಗಾರರ ಕೆಲಸದ ಬಗ್ಗೆ ಹೇಗೆ ಲೆಕ್ಕ ಬರೆದುಕೊಳ್ಳಬೇಕೆಂದು ವಿವರಿಸಿದ. ಅನಿರೀಕ್ಷಿತವಾಗಿ ಸಿಕ್ಕ ಈ ಭಾಗ್ಯಕ್ಕೆ ಬೆರಗಾದ ಚಮರಿ ಪೆನ್ಸಿಲ್ ಅನ್ನು ತನ್ನ ಕಿವಿಗೆ ಸಿಕ್ಕಿಸಿ, ಪುಸ್ತಕವನ್ನು ಕಂಕುಳಲ್ಲಿ ಇರಿಸಿಕೊಂಡು, ಕಾರ್ಬೆಟ್‌ಗೆ ಒಂದು ದೀರ್ಘದಂಡ ನಮಸ್ಕಾರ ಹಾಕಿ ಮೇಲೆದ್ದಾಗ ಅವನ ಕಣ್ಣಾಲಿಗಳು ನೀರಾಗಿದ್ದವು. ಮುಂದಿನ ದಿನಗಳಲ್ಲಿ ಚಮರಿ ಎಷ್ಟೊಂದು ಶ್ರದ್ಧೆಯಿಂದ ಕೆಲಸ ಮಾಡುತಿದ್ದನೆಂದರೆ, ಕಾರ್ಬೆಟ್ ಅವನ ಪ್ರಾಮಾಣಿಕತೆ, ಬದ್ಧತೆ ಇವೆಲ್ಲವನ್ನು ಗಮನಿಸಿ, ಒಂದೇ ವರ್ಷದಲ್ಲಿ ಅವನ ಸಂಬಳವನ್ನು 15 ರೂಪಾಯಿಂದ 40 ರೂಪಾಯಿಗೆ ಹೆಚ್ಚಿಸಿದ.

ಚಮರಿ ಜಾತಿಯಿಂದ ಅಸ್ಪೃಶ್ಯನಾಗಿದ್ದು, ಅವನ ಕೈ ಕೆಳಗೆ ಅನೇಕ ಮೇಲ್ಜಾತಿಯ ಕಾರ್ಮಿಕರು ದುಡಿಯುತ್ತಿದ್ದರು. ಎಲ್ಲರನ್ನು ಗೌರವದಿಂದ ಕಾಣುವುದು ಅವನ ವಿಶಿಷ್ಟ ಗುಣವಾಗಿತ್ತು. ತನಗೆ ಬರುತ್ತಿದ್ದ ನಲವತ್ತು ರೂಪಾಯಿ ಸಂಬಳದಲ್ಲಿ ಕೇವಲ ಹದಿನೈದು ರೂಪಾಯಿಗಳನ್ನು ತಾನು ಮತ್ತು ತನ್ನ ಪತ್ನಿಯ ಜೀವನ ನಿರ್ವಹಣೆಗೆ ಇಟ್ಟುಕೊಂಡು ಉಳಿದ ಹಣವನ್ನು ಬಡವರಿಗೆ ಪ್ರತಿ ನಿತ್ಯ ಊಟಹಾಕುವುದು, ಬಡ ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಭರಿಸುವುದು ಹೀಗೆ ಖರ್ಚು ಮಾಡುತ್ತಿದ್ದ. ಇದನ್ನು ಗಮನಿಸಿದ ಕಾರ್ಬೆಟ್ ಒಮ್ಮೆ ಚಮರಿಯನ್ನು ಪ್ರಶ್ನಿಸಿ ಒಂದಿಷ್ಟು ಹಣ ಉಳಿಸುವಂತೆ ಹೇಳಿ, ಒಳ್ಳೆಯ ಬಟ್ಟೆ ಧರಿಸುವಂತೆ ಸಲಹೆ ನೀಡಿದ. ಇದಕ್ಕೆ ಉತ್ತರಿಸಿದ ಚಮರಿ, “ಮಹಾರಾಜ್, ಮಕ್ಕಳಿಲ್ಲದ ನನ್ನ ಕುಟುಂಬಕ್ಕೆ ಹದಿನೈದು ರೂ ಸಾಕು, ಉಳಿತಾಯ ಮಾಡಿ ಏನು ಮಾಡಲಿ? ನಿಮ್ಮ ದಯೆಯಿಂದ ನಾಲ್ಕಾರು ಜನಕ್ಕೆ ಸಹಾಯ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಪುಣ್ಯ ಎಂದು ಭಾವಿಸಿದ್ದೇನೆ. ನೀವೆ ಇಲ್ಲಿ ನಮ್ಮ ನಡುವೆ ಸಾಮಾನ್ಯ ಧಿರಿಸು ತೊಟ್ಟು ಕೆಲಸ ಮಾಡುವಾಗ ನಾನು ಹೇಗೆ ಒಳ್ಳೆಯ ಬಟ್ಟೆ ಧರಿಸಲಿ?” ಎಂದ.

ಚಮರಿಯ ಈ ಮನೋಭಾವಕ್ಕೆ  ಮನಸೋತ ಕಾರ್ಬೆಟ್ ಅವನನ್ನು ಆತ್ಮೀಯ ಸೇವಕನನ್ನಾಗಿ ಮಾಡಿಕೊಂಡಿದ್ದ. ಚಮರಿಯ ಬಗ್ಗೆ ಕಾರ್ಬೆಟ್‌ಗೆ ಅಗಾಧ ನಂಬಿಕೆಯಿತ್ತು. ನಾಲ್ಕು ವರ್ಷಗಳ ಕಾಲ ಇಡೀ ಜವಬ್ದಾರಿಯನ್ನ ಚಮರಿಗೆ ವಹಿಸಿ ಕಾರ್ಬೆಟ್ ಯುದ್ಧಭೂಮಿಗೂ ಸಹ  ತೆರಳಿದ್ದ. ಬೇಸಿಗೆಯ ಆ ದಿನಗಳಲ್ಲಿ ವಾಂತಿ, ಭೇಧಿ, ಕಾಲಾರಾದಂತಹ ಸಾಂಕ್ರಾಮಿಕ ರೋಗ ಹರಡುವುದು ಸಾಮಾನ್ಯವಾಗಿತ್ತು. ಅಂತಹ ದಿನಗಳಲ್ಲಿ ಚಮರಿ ಹಗಲು ರಾತ್ರಿ ಕಾರ್ಬೆಟ್ ಜೊತೆ ನಿಂತು ಕಾಯಿಲೆಗೆ ತುತ್ತಾದ ಕಾರ್ಮಿಕರನ್ನು ಶುಶ್ರೂಶೆ ಮಾಡುತಿದ್ದ. ಆತ ಎಂತಹ ದುರ್ದೈವಿಯೆಂದರೆ, ಕಾರ್ಬೆಟ್ ಬಳಿ 20 ವರ್ಷ ಕೂಲಿ ಕೆಲಸ ಮಾಡಿದ ಮೂರು ಮಕ್ಕಳ ತಾಯಿಯಾಗಿದ್ದ ವಿಧವೆ ಪ್ರಭಾವತಿಯನ್ನು ಕಾಲರಾ ರೋಗದಿಂದ ಉಳಿಸಲು ಹೋಗಿ ತಾನೇ ಆ ಸಾಂಕ್ರಮಿಕ ರೋಗಕ್ಕೆ ತುತ್ತಾದ. ಕೊನೆಗೆ ಸಾವು ಬದುಕಿನ ನಡುವೆ ಹೋರಾಡಿ, ಅಂತಿಮವಾಗಿ ಚಮರಿ ಕಾರ್ಬೆಟ್ ತೊಡೆಯ ಮೇಲೆ ಶುಶ್ರೂಷೆ ಮಾಡುತಿದ್ದಾಗಲೇ ಅಸುನೀಗಿದ.

ಚಮರಿ ಕಾರ್ಬೆಟ್‌ನ ಸಹಾಯಕನಾಗಿ ಮೊಕಮೆಘಾಟ್ ಪಟ್ಟಣದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದ. ಅವನ ಸಾವಿನ ಸುದ್ಧಿ ತಿಳಿಯುತ್ತಿದ್ದಂತೆ ಇಡೀ ಪಟ್ಟಣದಲ್ಲಿ ಬಂದ್ ಆಚರಿಸಲಾಯಿತು. ಕಾರ್ಬೆಟ್ ನೇತೃತ್ವದಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಎಲ್ಲಾ ವರ್ಗದ ಜನ ಪಾಲ್ಗೊಂಡು ಚಮರಿಗೆ ಅಂತಿಮ ನಮನ ಸಲ್ಲಿಸಿದರು. ಕಾರ್ಬೆಟ್ ತನ್ನ ಆತ್ಮ ಚರಿತ್ರೆಯಂತಿರುವ “ಮೈ ಇಂಡಿಯ” ಕೃತಿಯಲ್ಲಿ ಚಮರಿಯ ಬಗ್ಗೆ ಆದ್ರ ಹೃದಯದಿಂದ ಬರೆದುಕೊಂಡಿದ್ದಾನೆ.

ಇಂತಹದ್ದೇ ಇನ್ನೊಂದು ಹೃದಯಸ್ಪರ್ಶಿ ಘಟನೆಯನ್ನು ಕಾರ್ಬೆಟ್ ದಾಖಲಿಸಿದ್ದಾನೆ. ಅದು ವ್ಯಾಪಾರಿಯೊಬ್ಬನ ನೋವಿನ ಕಥನ.

ಅದು ಬಿರು ಬೇಸಿಗೆಯ ಒಂದು ಸಂಜೆ ಸಮಯ. ಗಯಾ ಮಾರ್ಗವಾಗಿ ಮುಜಾಪುರ್ ನಗರದಿಂದ ಬಂದ ರೈಲು ಸಮಾರಿಯ ಘಾಟ್ ತಲುಪಿದ ತಕ್ಷಣ ಪ್ರಯಾಣಿಕರು ತಮ್ಮ ಸಾಮಾನುಗಳೊಂದಿಗೆ ದೋಣಿಯನ್ನೇರಿ ಮೊಕಮೆಘಾಟ್‌ನತ್ತ ಪ್ರಯಾಣ ಬೆಳಸಿದರು. ಕಾರ್ಬೆಟ್ ಗಂಗಾ ನದಿಯ ತಟದಲ್ಲಿ ಎಲ್ಲರ ಚಲನ ವಲನ ವೀಕ್ಷಿಸುತ್ತಾ ನಿಂತಿದ್ದ. ಒಬ್ಬ ವ್ಯಕ್ತಿ ಮಾತ್ರ ಯಾವ ಕಡೆಗೂ ಪ್ರಯಾಣ ಬೆಳಸದೇ, ಮುಸ್ಸಂಜೆಯಲ್ಲಿ ಬಟ್ಟೆಯ ಗಂಟಿನೊಂದಿಗೆ ನದಿಯ ತಟದಲ್ಲಿ ಏಕಾಂಗಿಯಾಗಿ ಕುಳಿತಿರುವುದು ಕಾರ್ಬೆಟ್  ಗಮನಕ್ಕೆ ಬಂತು. ಕಾರ್ಬೆಟ್ ಅವನ ಹತ್ತಿರ ತೆರಳಿದಾಗ ಅವನು ಯಾವುದೋ ಕಾಯಿಲೆಯಿಂದ ಬಳಲುತ್ತಿರುವ ರೋಗಿಯೆಂಬುದು ಮೇಲ್ನೋಟಕ್ಕೆ ಕಾಣುತ್ತಿತ್ತು. ಪ್ರಯಾಣ ಮಾಡದೇ ಏಕೆ ಇಲ್ಲಿ ಕುಳಿತಿದ್ದೀಯಾ? ಎಲ್ಲಾ ರೈಲುಗಳು ಹೊರಟು ಹೋದವು ಎಂದು ಕಾರ್ಬೆಟ್ ಪ್ರಶ್ನಿಸುತ್ತಿದ್ದಂತೆ ಆ ರೋಗಿ ತನ್ನ ಬದುಕಿನ ವೃತ್ತಾಂತವನ್ನೆಲ್ಲಾ ಹೇಳಿ ಆತ್ಮಹತ್ಯೆ ಮಾಡಿಕೊಳ್ಳಲು ಕುಳಿತಿರುವುದಾಗಿ ತಿಳಿಸಿದ.

ಗಯಾ ಪಟ್ಟಣದಲ್ಲಿ ಬೇಳೆಕಾಳುಗಳ ಪ್ರಸಿದ್ಧ ವ್ಯಾಪಾರಿಯಾಗಿದ್ದ ಲಾಲಾಜಿ ಎಂಬ ಹೆಸರಿನ ಆತ ತನ್ನ ಗೆಳೆಯನೊಬ್ಬನನ್ನು ವ್ಯಾಪಾರಕ್ಕೆ ಪಾಲುದಾರನನ್ನಾಗಿ ಮಾಡಿಕೊಂಡಿದ್ದ. ಒಮ್ಮೆ ತೀರ್ಥಯಾತ್ರೆ ಹೋಗುವ ಸಲುವಾಗಿ ಗೆಳೆಯನಿಗೆ ವ್ಯಾಪಾರದ ಜವಾಬ್ದಾರಿ ವಹಿಸಿ, ತೀರ್ಥಯಾತ್ರೆ ಮುಗಿಸಿ ಬರುವದರೊಳಗೆ ಅವನ ಗೆಳೆಯ ಅಂಗಡಿಯ ದಾಸ್ತಾನು ಖಾಲಿ ಮಾಡಿ ಹಣದೊಂದಿಗೆ ಪರಾರಿಯಾಗಿದ್ದ. ಅಂಗಡಿ ಹಾಗೂ ಅದರಲ್ಲಿ ಇದ್ದ ಅಲ್ಪ ಸ್ವಲ್ಪ ಸಾಮಾನುಗಳನ್ನು ಮಾರಿ ಹಾಕಿ ಎಲ್ಲಾ ಸಾಲ ತೀರಿಸಿ, ತಾನು ವ್ಯವಹಾರ ನಡೆಸುತ್ತಿದ್ದ ಸಗಟು ವ್ಯಾಪಾರದ ಅಂಗಡಿಯಲ್ಲಿ ತಿಂಗಳಿಗೆ ಏಳು ರೂಪಾಯಿ ಸಂಬಳಕ್ಕೆ ಲಾಲಾಜಿ ದುಡಿಯತೊಡಗಿದ. ಇದೇ ಸಂದರ್ಭದಲ್ಲಿ ಅವನ ಪತ್ನಿ ಕೂಡ ತೀರಿ ಹೋದಳು. ಇರುವ ಏಕೈಕ ಮಗನೊಂದಿಗೆ ವಾಸಿಸುತ್ತಿದ್ದ ಲಾಲಾಜಿ ಕಾಲಾರಾ ರೋಗದ ಸೋಂಕಿಗೆ. ಬಲಿಯಾದ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದ ಆತ, ತಾನು ಸತ್ತರೆ ಮಗನಿಗೆ ನನ್ನ ಅಂತ್ಯ ಸಂಸ್ಕಾರ ಹೊರೆಯಾಗುತ್ತದೆ ಎಂದು ಭಾವಿಸಿ ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಗಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಸಿ ಬಂದು ಕುಳಿತಿದ್ದ.

ನಡೆಯಲು ನಿಶ್ಯಕ್ತನಾಗಿದ್ದ ಅವನನ್ನು ಎಬ್ಬಿಸಿ ನಿಧಾನವಾಗಿ ನಡೆಸಿಕೊಂಡು ತನ್ನ ಮನೆಗೆ ಕರೆದೊಯ್ದ ಕಾರ್ಬೆಟ್ ಆ ರಾತ್ರಿ ಅವನಿಗೆ ಚಿಕಿತ್ಸೆ ನೀಡಿದ. ಆ ವೇಳೆಗಾಗಲೇ ಕಾರ್ಬೆಟ್ ಬಳಿ ಮೂವರು ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಲಾಲಾಜಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಯಿತು. ಅಂತಿಮವಾಗಿ ತನ್ನ ಮನೆಯ ಹೊರ ಆವರಣದಲ್ಲಿದ್ದ ಕೊಠಡಿಯಲ್ಲಿ ಅವಕಾಶ ಕಲ್ಪಿಸಿದ. ಮೊದಲ ಎರಡು ಮೂರು ದಿನ ಲಾಲಾಜಿ ಬದುಕುತ್ತಾನೆ ಎಂಬ ಯಾವ ನಂಬಿಕೆಯೂ ಕಾರ್ಬೆಟ್‌ಗೆ ಇರಲಿಲ್ಲ. ಒಂದು ವಾರದ ನಂತರ ನಿಧಾನವಾಗಿ ಚೇತರಿಸಿಕೊಂಡ ಲಾಲಾಜಿಯನ್ನು ಮನೆಯ ಮುಂದಿನ ಆವರಣದಲ್ಲಿ ಕೂರಿಸಿಕೊಂಡು ಆತ್ಮ ವಿಶ್ವಾಸ ತುಂಬಿದ ಕಾರ್ಬೆಟ್, ನೀನೇಕೆ ಮತ್ತೇ ವ್ಯಾಪಾರ ಆರಂಭಿಸಬಾರದು ಎಂದು ಕೇಳಿದ.

ನನಗೆ ವ್ಯಾಪಾರ ಮಾಡಲು 500 ರೂಪಾಯಿ ಬಂಡವಾಳ ಬೇಕು. ಭದ್ರತೆಯಿಲ್ಲದೆ ಯಾರೂ ಸಾಲ ಕೊಡುವುದಿಲ್ಲ, ಜೊತೆಗೆ ನನ್ನ ಬಳಿ ಮೈ ಮೇಲಿನ ಈ ಬಟ್ಟೆಗಳನ್ನು ಹೊರತುಪಡಿಸಿದರೆ, ಬೇರೇನೂ ಆಸ್ತಿ ಇಲ್ಲ. ಹಾಗಾಗಿ ಮತ್ತೆ ಗಯಾ ಪಟ್ಟಣಕ್ಕೆ ಹೋಗಿ ಅಂಗಡಿಯಲ್ಲಿ ದುಡಿಯುತ್ತೀನಿ, ಎಂದು ಲಾಲಾಜಿ ನುಡಿದಾಗ ತಕ್ಷಣಕ್ಕೆ ಕಾರ್ಬೆಟ್ ಯಾವ ಪ್ರತಿಕ್ರಿಯೆ ನೀಡಲಿಲ್ಲ.

ಒಂದು ತಿಂಗಳ ನಂತರ ಒಂದು ದಿನ ಲಾಲಾಜಿ ತನ್ನ ಬಟ್ಟೆಗಳನ್ನು ಸ್ವಚ್ಛಗೊಳಿಸುಕೊಂಡು ತನ್ನೂರಿಗೆ ಹೊರಡಲು ಸಿದ್ಧನಾಗಿ ಕುಳಿತಿದ್ದ. ಸಂಜೆ ಮನೆಗೆ ಬಂದ ಕಾರ್ಬೆಟ್ ಲಾಲಾಜಿಗೆ ಗಯಾಕ್ಕೆ ತೆರಳಲು ರೈಲ್ವೆ ಟಿಕೇಟು, ಒಂದಿಷ್ಟು ಹಣ್ಣು ಹಂಪಲುಗಳನ್ನು ನೀಡಿದ. ನಂತರ ಬೇರೆ ಲಕೋಟೆಯಲ್ಲಿ ಇಟ್ಟಿದ್ದ ನೂರು ರೂಪಾಯಿಗಳ 5 ನೋಟುಗಳನ್ನು ನೀಡಿ, ನಿನ್ನ ಮೇಲೆ ವಿಶ್ವಾಸವಿದೆ, ಹೋಗಿ ವ್ಯಾಪಾರ ಮುಂದುವರಿಸು ಎಂದು ಹೆಗಲ ಮೇಲೆ ಕೈಯಿಟ್ಟು ಹೇಳಿದ. ಆ ಕ್ಷಣದಲ್ಲಿ ಲಾಲಾಜಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚಲಿಲ್ಲ. ಆ ಕಾಲದಲ್ಲಿ 500 ರೂಪಾಯಿ ಎಂದರೆ ಸಾಮಾನ್ಯ ಮೊತ್ತವಾಗಿರಲಿಲ್ಲ. ಲಾಲಾಜಿ ಕಾರ್ಬೆಟ್ ನ ಕಾಲುಮುಟ್ಟಿ ನಮಸ್ಕರಿಸಿ, ಅವನೆದುರು ಕೈ ಮುಗಿಯುತ್ತಾ ಶಿಲೆಯಂತೆ ನಿಂತುಬಿಟ್ಟ.. ಕಾರ್ಬೆಟ್ ಅವನನ್ನು ಸಮಾಧಾನ ಪಡಿಸಿ ತಾನೇ ನಿಲ್ದಾಣವರೆಗೆ ಹೋಗಿ ರೈಲು ಹತ್ತಿಸಿ ಬಂದ. ತನ್ನ ಉಳಿತಾಯದ ಹಣವನ್ನು ಲಾಲಾಜಿಗೆ ನೀಡುವಾಗ ಕಾರ್ಬೆಟ್‌ಗೆ ಏನೂ ಅನಿಸಲಿಲ್ಲ. ಭಾರತದ ಬಡಜನತೆಯ ಜೊತೆ ಹಲವಾರು ವರ್ಷ ಒಡನಾಡಿದ ಅನುಭವವಿತ್ತು. ತನ್ನಿಂದ ಸಹಾಯ ಪಡೆದ ಈ ಜನತೆ ಎಂದೂ ಮೋಸ ಮಾಡುವುದಿಲ್ಲ ಎಂಬ ವಿಶ್ವಾಸ, ನಂಬಿಕೆ ಅವನ ಮನದಲ್ಲಿ ಬಲವಾಗಿ ಬೇರೂರಿತ್ತು.

ಅವನ ನಂಬಿಕೆ ಹುಸಿಯಾಗಲಿಲ್ಲ. ಹನ್ನೊಂದು ತಿಂಗಳ ನಂತರ ಒಂದು ಸಂಜೆ ದಿನದ ಕಾರ್ಯವನ್ನೆಲ್ಲಾ ಮುಗಿಸಿ, ಸ್ನಾನ ಮಾಡಿ ಮನೆಯ ಮುಂದೆ ಕಾರ್ಬೆಟ್ ಕುಳಿತಿದ್ದಾಗ, ಕೋಟು, ಟೋಪಿ, ಕಚ್ಚೆ ಹಾಕಿದ್ದ ಒಬ್ಬ ವ್ಯಕ್ತಿ ಹಣ್ಣಿನ ಬುಟ್ಟಿ ಹಿಡಿದು ಮುಂದೆ ಬಂದು ನಿಂತಾಗ ಕಾರ್ಬೆಟ್‌ಗೆ ತಕ್ಷಣ ಗುರುತು ಹಿಡಿಯಲಾಗಲಿಲ್ಲ. ಸಾಹೇಬ್ ನಾನು ಲಾಲಾಜಿ ಎನ್ನುತ್ತಾ ಕಾರ್ಬೆಟ್ ಕಾಲಿಗೆ ನಮಸ್ಕರಿಸಿದ ಅವನು ಕಾಲು ಬಳಿ ಕುಳಿತಾಗ ಕಾರ್ಬೆಟ್‌ಗೆ ಲಾಲಾಜಿ ಬಗ್ಗೆ ನಿಜಕ್ಕೂ ಅಚ್ಚರಿಯಾಯಿತು.

ಗಯಾ ಪಟ್ಟಣದಲ್ಲಿ ಪುನಃ ಬೇಳೆ ಕಾಳು ವ್ಯಾಪಾರದಲ್ಲಿ ಯಶಸ್ವಿಯಾಗಿರುವ ಕಥೆಯನ್ನು ಹೇಳುತ್ತಾ ಕಾರ್ಬೆಟ್ ನೀಡಿದ್ದ 500 ರೂಪಾಯಿಗಳ ಜೊತೆಗೆ 125 ರೂಪಾಯಿ ಬಡ್ಡಿ ಸೇರಿಸಿ ತಂದಿದ್ದ ಹಣವನ್ನು ಲಾಲಾಜಿ, ಕಾರ್ಬೆಟ್ ಗೆ ನೀಡಿದ. ಕಾರ್ಬೆಟ್ ಬಡ್ಡಿ ಹಣ ನಿರಾಕರಿಸಿ, ಕೇವಲ ತಾನು ನೀಡಿದ್ದ 500 ರೂಗಳನ್ನು ಮಾತ್ರ ಅವನಿಂದ ಪಡೆದುಕೊಂಡ.

ಕಾರ್ಬೆಟ್ ನೀಡಿದ ಬಂಡವಾಳದಿಂದ ಗಯಾ ಪಟ್ಟಣದಲ್ಲಿ ದೊಡ್ಡ ವ್ಯಾಪಾರಿಯಾಗಿ ಮರುಜನ್ಮ ಪಡೆದ ಲಾಲಾಜಿ, ಮುಂದೆ ಮೊಕಮೆಘಾಟ್‌ನಲ್ಲಿ ಕಾರ್ಬೆಟ್ ಸೇವೆ ಸಲ್ಲಿಸಿದ ಹನ್ನೆರೆಡು ವರ್ಷಗಳ ಕಾಲ ತಪ್ಪದೇ ಬೇಸಿಗೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳನ್ನು ಹೊತ್ತು ತರುತ್ತಿದ್ದ. ಕೆಲವೊಮ್ಮೆ ರೈಲಿನಲ್ಲಿ ಪಾರ್ಸಲ್ ಕಳಿಸುವುದರ ಮೂಲಕ ಕಾರ್ಬೆಟ್‌ನ ಋಣವನ್ನು ಸಂದಾಯ ಮಾಡುತಿದ್ದ.

ಬುದ್ದು, ಚಮರಿ, ಲಾಲಾಜಿಯಂತಹ ವ್ಯಕ್ತಿಗಳು ಕಾರ್ಬೆಟ್ ಬದುಕಿನಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವಗಳೊಂದಿಗೆ ಅಳಿಸಲಾರದ ನೆನಪಾಗಿ ಉಳಿದುಹೋದರು. ಅಲ್ಲದೆ ಬಡವರ ಬಗ್ಗೆ ಕಾರ್ಬೆಟ್ ಗೆ ಇದ್ದ ಮನೋಧರ್ಮವನ್ನು ಮತ್ತಷ್ಟು ಸಧೃಡಗೊಳಿಸಿದರು. ಈ ಕಾರಣದಿಂದಲೇ ಅವನು ಮುಂದಿನ ದಿನಗಳಲ್ಲಿ ಕಲಾದೊಂಗಿ ಬಳಿಯ ಚೋಟಾಹಲ್ದಾನಿ ಹಳ್ಳಿಯಲ್ಲಿ ತಾನು ಖರೀದಿಸಿದ್ದ ಸಾವಿರಾರು ಎಕರೆ ಭೂಮಿಯನ್ನು ಬಡ ರೈತರಿಗೆ ಉಚಿತವಾಗಿ ಹಂಚಲು ಸಾಧ್ಯವಾಯಿತು.

(ಮುಂದುವರೆಯುವುದು)