Tag Archives: ಮೋಟಮ್ಮ

‘ಸರಿತಾ ಅವರ ಮನೆಗೆ ಹೋಗಿದ್ದೇಕೆ?’

-ಭೂಮಿ ಬಾನು

ಮೊನ್ನೆ ವಿಧಾನಸಭೆಯಲ್ಲಿ ನಡೆದ ಅಸಹ್ಯಕರ ಘಟನೆಯಲ್ಲಿ ಸವದಿ ಮತ್ತು ಸಿ.ಸಿ ಪಾಟೀಲರ ಬದಲಿಗೆ ಬೇರೆ ಕೋಮಿನ ಬೇರೆ ಯಾರೇ ಇದ್ದರೂ ಇತರೆ ರಾಜಕೀಯ ಮುಖಂಡರ ಪ್ರತಿಕ್ರಿಯೆ ಬೇರೆಯೇ ಇರುತ್ತಿತ್ತು. ಕಾರಣ ಈ ಹೊತ್ತು ಸ್ವಜಾತಿ ಪ್ರೇಮ ಭ್ರಷ್ಟನನ್ನು, ಲಂಪಟನನ್ನೂ ಸಮರ್ಥಿಸುವ ಮಟ್ಟಿಗೆ ವ್ಯಾಪಿಸಿದೆ.

ಇತ್ತೀಚೆಗೆ ತಮ್ಮ ಸ್ವಜಾತಿ ಪ್ರೇಮವನ್ನು ವಿಧಾನ ಪರಿಷತ್ತಿನಲ್ಲಿ ಢಾಳಾಗಿ ಪ್ರದರ್ಶನಕ್ಕಿಟ್ಟವರು ವಿರೋಧ ಪಕ್ಷದ ನಾಯಕಿ ಶ್ರೀಮತಿ ಮೋಟಮ್ಮ. ಕಾಂಗ್ರೆಸ್ ನಲ್ಲಿರುವ ದಲಿತ ಸಮುದಾಯದ ನಾಯಕರ ಪೈಕಿ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿದವರು ಮೋಟಮ್ಮ. ಪಕ್ಷದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಅದು ಪಕ್ಷದ ಚೌಕಟ್ಟಿನಲ್ಲಿ ಒಬ್ಬ ಕಾರ್ಯಕರ್ತನಿಗೆ ಸಿಗಬಹುದಾದ ಅತ್ಯುನ್ನತ ಸ್ಥಾನ. ಸದ್ಯ ಅವರು ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರು.

ತಮ್ಮ ಮಾತಿಗೆ ಹೆಚ್ಚಿನ ಮಹತ್ವ ಇರುತ್ತದೆ, ತಾವು ಯಾರೋ ಹೇಳಿದ ಮಾತನ್ನು ಕೇಳಿ ಸದನದಲ್ಲಿ ಮಾತನಾಡಿದರೆ ತಪ್ಪಾಗುತ್ತದೆ ಎಂಬ ಜಾಣ್ಮೆ ಅವರಿಗಿಲ್ಲ ಎನಿಸುತ್ತದೆ.

ಮೈಸೂರು ವಿಶ್ವವಿದ್ಯಾನಿಲಯ ಸಂಶೋಧನಾ ವಿದ್ಯಾರ್ಥಿ ಸರಿತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭವಾದ ಚರ್ಚೆಯಲ್ಲಿ ಪಾಲ್ಗೊಂಡ ಮೋಟಮ್ಮ, “ಸರಿತಾ ಅವರು ಪ್ರೋ. ಶಿವಬಸವಯ್ಯ ನವರ ಮನೆಗೆ ಆತನ ಪತ್ನಿ ಇಲ್ಲದಿರುವಾಗ ಹೋಗಿದ್ದು ತಪ್ಪು. ಅವರೇಕೆ ಹೋಗಬೇಕಿತ್ತು?’ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆ ಕೇಳುವಾಗ ಮೋಟಮ್ಮನವರಿಗೆ ಪ್ರಕರಣದ ಪೂರ್ಣ ವಿವರ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಸರಿತಾ ಅವರ ಮನೆಗೆ ಅವರ ಗೈಡ್ ಪ್ರೊ. ಶಿವಬಸವಯ್ಯ ಭೇಟಿ ನೀಡಿದಾಗ ನಡೆದದ್ದು ಆ ಘಟನೆ. ಸರಿತಾ ತನ್ನ ಗೈಡ್ ಮನೆಗೆ ಹೋಗಿರಲಿಲ್ಲ. ಒಂದು ಪಕ್ಷ ತನ್ನ ಗೈಡ್ ಮನೆಗೆ ಹೋದರೂ ಅದರಲ್ಲಿ ತಪ್ಪೇನು? ಹೋದ ತಕ್ಷಣ ಅವರ ಮೇಳೆ ಲೈಂಗಿಕ ದೌರ್ಜನ್ಯ ನಡೆಸಲು ಅನುಮತಿ ನೀಡಿದಂತೆಯೇ?

ಒಬ್ಬ ಮಹಿಳೆ ತನ್ನಮೇಲೆ ಆದ ದೌರ್ಜನ್ಯವನ್ನು ಪ್ರಶ್ನೆ ಮಾಡಲು ಬೀದಿಗಿಳಿಯುವುದೇ ಅಪರೂಪ. ಹಾಗೆ ಮಾಡಬೇಕೆಂದರೆ ಧೈರ್ಯ, ಪತಿಯ ಬೆಂಬಲ ಬೇಕಾಗುತ್ತದೆ. ಇಷ್ಟೆಲ್ಲದರ ನಡುವೆ ತನ್ನ ಮೇಲೆ ದೌರ್ಜನ್ಯ ಆಗಿದೆ ಎಂದು ಪದೇ ಪದೇ ಹೇಳಿಕೊಳ್ಳುವುದೇ ಹಿಂಸೆಯ ಕೆಲಸ. ಅಷ್ಟರ ಮೇಲೆ ಹೀಗೆಲ್ಲಾ ಅನ್ನಿಸಿಕೊಳ್ಳಬೇಕೆ? ಅದೂ ಮತ್ತೊಬ್ಬ ಮಹಿಳೆಯಿಂದ!

ಶಿವಬಸವಯ್ಯ ದಲಿತರಿರಬಹುದು. ಆದರೆ ಅವರ ಮೇಲೆ ಕೇಳಿ ಬಂದ ಆರೋಪಗಳನ್ನು ಎದುರಿಸಲಾರದಷ್ಟು ನಿಶಕ್ತರೇನಲ್ಲ. ಯಾವ ದಲಿತ ಸಂಘಟನೆಗಳ, ದಲಿತ ನಾಯಕರ ಬೆಂಬಲವೂ ಅವರಿಗೇನು ಅಗತ್ಯವಿರಲಿಲ್ಲ. ವಿಚಿತ್ರ ನೋಡಿ, ಈ ಆರೋಪ ಕೇಳಿ ಬಂದ ಮರುದಿನವೇ ಮೈಸೂರಿನ ಕೆಲ ದಲಿತ ಸಂಘಟನೆಗಳು ಅವರ ಬೆಂಬಲಕ್ಕೆ ನಿಂತವು, ಸರಿತಾ ಬಗ್ಗೆ ಆರೋಪ ಮಾಡಿದವು.

ಇಷ್ಟೆಲ್ಲಾ ಆದ ನಂತರ, ವಿಶ್ವವಿದ್ಯಾನಿಲಯ ತನಿಖೆ ನಡೆಸಿತು. ಫ್ರೊ. ಶಿವಬಸವಯ್ಯ ತಪ್ಪಿತಸ್ಥ ಎಂದು ತನಿಖೆ ನಡೆಸಿದ ಸಮಿತಿ ವರದಿ ನೀಡಿತು. ಅದರ ಆಧಾರದ ಮೇಲೆ ಅವರ ಒಂದಿಷ್ಟು ಇಂಕ್ರಿಮೆಂಟ್‌ಗಳನ್ನು ಕಟ್ ಮಾಡಿ, ಚಾಮರಾಜನಗರಕ್ಕೆ ವರ್ಗಮಾಡಿದರು. ಅದು ಶಿಕ್ಷೆಯೆ?

ಸರಿತಾ ಮತ್ತು ಅವರ ಪತಿ ಪ್ರಕಾರ ಅದು ತೀರಾ ಕನಿಷ್ಟ ಶಿಕ್ಷೆ. ಅವರ ಮೇಲಿರುವ ಆರೋಪಗಳು ಸಾಬೀತಾಗಿರುವ ಕಾರಣ ಇನ್ನೂ ಹೆಚ್ಚಿನ ಶಿಕ್ಷೆಗೆ ಅವರು ಗುರಿಯಾಗಬೇಕಿತ್ತು ಎನ್ನುವುದು ಅವರ ವಾದ. ಆದರೆ ಮೋಟಮ್ಮ ಈ ಹಂತದಲ್ಲಿ ‘ಸರಿತಾ ಅವರ ಮನೆಗೆ ಹೋಗಿದ್ದೇಕೆ’ ಎಂದು ಅಸಂಬದ್ಧ ಪ್ರಶ್ನೆ ಕೇಳಿ ತಾವೆಷ್ಟು ಸಣ್ಣವರು ಎಂದು ತೋರಿಸಿದ್ದಾರೆ.

ಯಡಿಯೂರಪ್ಪನ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗ ಅವರ ಬೆಂಬಲವಾಗಿ ಒಂದಿಷ್ಟು ಮಠಾಧೀಶರು, ಒಂದು ಜಾತಿಯ ಬಂಧುಗಳು ನಿಂತುಕೊಳ್ಳುತ್ತಾರೆ. ಅವರಾರಿಗೂ ತಮ್ಮ ಜಾತಿಯ ರಾಜಕಾರಣಿಯೊಬ್ಬ ಇಂತಹ ಆರೋಪ ಎದುರಿಸಬೇಕಾಯಿತಲ್ಲ ಎಂಬ ಕಾರಣಕ್ಕ ಕನಿಷ್ಟ ನಾಚಿಕೆಯೂ ಇರುವುದಿಲ್ಲ. ಲೋಕಾಯುಕ್ತ ಸಂಸ್ಥೆ ಗೃಹ ಮಂತ್ರಿ ಆರ್. ಅಶೋಕ್ ವಿರುದ್ಧ ಪ್ರಕರಣ ದಾಖಲು ಮಾಡಿದಾಗಲೂ ಜೆಡಿಎಸ್ ಪಕ್ಷದ ಹೆಚ್.ಡಿ. ರೇವಣ್ಣ ‘ಅಶೋಕ್ ರಾಜೀನಾಮೆ ಕೊಡುವ ಅಗತ್ಯವೇನಿಲ್ಲ’ ಎನ್ನುತ್ತಾರೆ.

ಈ ವರ್ತನೆಯ ಮುಂದುವರಿದ ಭಾಗವಾಗಿಯೇ ಮೋಟಮ್ಮನ ಈ ಪ್ರತಿಕ್ರಿಯೆಯನ್ನು ಗ್ರಹಿಸಬೇಕು. ಅಮಾಯಕ ದಲಿತರು ಉಳ್ಳವರ ಸಂಚಿಗೆ ಬಲಿಯಾಗಿ ಅನೇಕಬಾರಿ ವಿನಾಕಾರಣ ಆರೋಪಗಳಿಗೆ ಗುರಿಯಾಗುತ್ತಾರೆ. ಅಂತಹ ಪ್ರಕರಣಗಳಲ್ಲಿ ಅವರ ಬೆಂಬಲಕ್ಕೆ ಕೆಲವರು ನಿಲ್ಲಬೇಕಾಗುತ್ತದೆ. ಅದು ಕೇವಲ ದಲಿತ ಸಂಘಟನೆಗಳ ಕೆಲಸ ಮಾತ್ರ ಅಲ್ಲ. ಎಲ್ಲಾ ಪ್ರಜ್ಞಾವಂತರೂ ದಲಿತರ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ.

ಮೋಟಮ್ಮ ಇನ್ನೂ ಮುಂದೆ ಹೋಗಿ, ಸಂಘ ಪರಿವಾರದ ವಕ್ತಾರರಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ವಸ್ತ್ರಸಂಹಿತೆ ಬೇಕು ಎಂದಿದ್ದಾರೆ. ಆ ಮೂಲಕ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸಬಹುದು ಎನ್ನುವುದು ಅವರ ಲೆಕ್ಕಾಚಾರ. ಆದಷ್ಟು ಬೇಗ, ಮೋಟಮ್ಮ ಸಂಘ ಪರಿವಾರ ಸೇರಿಕೊಳ್ಳುವುದು ಉತ್ತಮ.

ಇಷ್ಟೆಲ್ಲಕ್ಕೂ ಕಾರಣ ಒಂದು ನಿರ್ದಿಷ್ಟ ‘ಜನಪರ ಸಿದ್ಧಾಂತ’ ಇಲ್ಲದ ಪಕ್ಷದಲ್ಲಿ ಅವರು ಇದ್ದದ್ದು. ಕಾಂಗ್ರೆಸ್ ಗೆ ಇತರೆ ಪ್ರಮುಖ ಪಕ್ಷಗಳ ಹಾಗೆ (ಬಿಜೆಪಿ, ಎಡ ಪಕ್ಷ) ಒಂದು ಸಿದ್ಧಾಂತ ಇಲ್ಲ. ಆ ಪಕ್ಷದಲ್ಲಿ ಕಟ್ಟಾ ಹಿಂದೂವಾದಿಗಳು, ಜಾತಿವಾದಿಗಳು, ಕೋಮುವಾದಿಗಳು..ಹೀಗೆ ಎಲ್ಲರೂ ಇದ್ದಾರೆ. ಚುನಾವಣೆ ಬಂದಾಗ ಅವರು ತಾವು ಸೆಕುಲರ್ ಎಂದು ಹೇಳಿಕೊಂಡರೂ ಅದು ಕೇವಲ ಸ್ಟಂಟ್.

ಆದರೆ ಬಿಜೆಪಿಗೆ ಅಂತಹ ತೊಂದರೆ ಇಲ್ಲ. ಕಾರಣ ಅವರ ಸಿದ್ಧಾಂತ ನಿರೂಪಿಸುವ ಕೆಲಸವನ್ನು ಆರ್.ಎಸ್.ಎಸ್. ಎಂಬಂತಹ ಕೋಮುವಾದಿ ಸಂಘಟನೆ ಮಾಡುತ್ತದೆ. ಅದೆಷ್ಟೇ ಅಪಾಯಕಾರಿ ಸಿದ್ಧಾಂತವಾದರೂ, ತನ್ನ ಕಾರ್ಯಕರ್ತರನ್ನು ಅದಕ್ಕೆ ಬದ್ಧರನ್ನಾಗಿ ಮಾಡುವಲ್ಲಿ ಒಂದಿಷ್ಟು ಪ್ರಯತ್ನಗಳು ನಡೆಯುತ್ತವೆ. ಅಂತೆಯೇ ಎಡ ಪಕ್ಷಗಳಿಗೆ ಒಂದು ಪ್ರಬಲ ಸಿದ್ಧಾಂತ ಇದೆ. ತಮ್ಮ ಗಳಿಕೆ ಇಂತಿಷ್ಟನ್ನು ಸಂಘಟನೆಗೆಂದೇ ಕೊಟ್ಟು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಪರಂಪರೆ ಇದೆ.

ಆದರೆ ಇದಾವುದೂ ಇಲ್ಲದಿರುವುದು ಕಾಂಗ್ರೆಸ್. ಅದೇ ಕಾರಣಕ್ಕೆ ಮೋಟಮ್ಮ ನಂತಹವರು ನಾಲ್ಕು ದಶಕಗಳ ಕಾಲ ಅಲ್ಲಿಯೇ ಇದ್ದರೂ ಆರ್.ಎಸ್.ಎಸ್. ವಕ್ತಾರರಂತೆ ಮಾತನಾಡುವುದು.