Tag Archives: ಯಡಿಯೂರಪ್ಪ

ಜನ ತಮ್ಮ ಜಾಣತನ ತೋರಿಸಬೇಕು…

ಭೂಮಿ ಬಾನು

ಕರ್ನಾಟಕ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಆರೋಪದ ಪ್ರಕರಣವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಇನ್ನಷ್ಟೆ ತನಿಖೆ ಆರಂಭವಾಗಬೇಕು.

ಕೆಲವು ತಿಂಗಳುಗಳ ಹಿಂದೆ ರಾಜ್ಯಪಾಲರು ಇದೇ ಯಡಿಯೂರಪ್ಪನ ವಿರುದ್ಧ ಕೇಸು ದಾಖಲಿಸಲು ಅನುಮತಿ ನೀಡಿದಾಗ, ಆ ಹೊತ್ತಿಗೆ ಅದು ದೊಡ್ಡ ಸುದ್ದಿ. ಕೆಲ ಸುದ್ದಿ ಪತ್ರಿಕೆಗಳು ರಾಜ್ಯಪಾಲರ ತೀರ್ಮಾನವನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದವು.

ಮುಖ್ಯಮಂತ್ರಿ ಆದಾಕ್ಷಣ ಯಡಿಯೂರಪ್ಪ ಸ್ವಾಭಾವಿಕ ಕಾನೂನು ಪರಿಧಿಯಲ್ಲಿ ಬರುವುದಿಲ್ಲ ಎಂಬಂತೆ ಆ ಪತ್ರಿಕೆಗಳು ಭಾವಿಸಿದಂತಿತ್ತು. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೆ. ಮುಖ್ಯಮಂತ್ರಿ ಆಗಿರುವ ಕಾರಣ ಅವರ ಮೇಲೆ ರಾಜ್ಯದ ಆಡಳಿತದ ಜವಾಬ್ದಾರಿ ಇರುತ್ತದೆ. ಅವರ ವಿರುದ್ಧ ಕೇಸು ದಾಖಲಿಸುವಾಗ ರಾಜ್ಯಪಾಲರಿಂದ ಅನುಮತಿ ಎನ್ನುವುದು ತೀರಾ ತಾಂತ್ರಿಕ ಅಗತ್ಯ. ಅಷ್ಟನ್ನು ರಾಜ್ಯಪಾಲರು ನಿಭಾಯಿಸಿದ್ದರು. Of course ಆ ರಾಜ್ಯಪಾಲರಿಗೆ ಬೇರೆ ಸಂದರ್ಭಗಳಲ್ಲಿ ರಾಜಕೀಯ ಹಿತಾಸಕ್ತಿಗಳು ಇದ್ದವು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಕೇಸು ದಾಖಲಿಸಲು ಅನುಮತಿ ನೀಡಿದ ಮಾತ್ರಕ್ಕೆ ಅವರನ್ನು ಕೇಂದ್ರ ಸರಕಾರ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದೆಲ್ಲ ಪತ್ರಿಕೆಗಳು ಬರೆದಿದ್ದವು.

ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಲೋಕಾಯುಕ್ತ ಪೊಲೀಸರು ಯಡಿಯೂರಪ್ಪನ ವಿರುದ್ಧ ದೂರು ದಾಖಲಿಸಿದ್ದು ಸಂಪಾದಕೀಯಕ್ಕೆ ವಸ್ತುವಾಗಲಿಲ್ಲ. ಕಾರಣ ಯಡಿಯೂರಪ್ಪ ಈಗ ಮುಖ್ಯಮಂತ್ರಿ ಅಲ್ಲ. ಮತ್ತು, ಅವರ ವಿರುದ್ಧ ಕೇಸು ದಾಖಲಾಗುವುದು, ಭ್ರಷ್ಟಾಚಾರ ಆರೋಪ ಕೇಳಿಬರುವುದು ಹೊಸತೇನೂ ಅಲ್ಲವಲ್ಲ.

ಅಂತೆಯೇ ಯಡಿಯೂರಪ್ಪನವರಿಗೂ ಈ ಆರೋಪಗಳು, ಕೇಸುಗಳು ಸಾಮಾನ್ಯ ಎಂಬಂತಾಗಿದೆ. ಪತ್ರಕರ್ತರೊಡನೆ ಮಾತನಾಡುತ್ತ “ಈಗಷ್ಟೆ ಎಫ್ ಐ ಆರ್ ದಾಖಲಾಗಿದೆ. ತನಿಖೆಯಾಗಲಿ” ಎಂದರು.

ಲೋಕಾಯುಕ್ತರು ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಎಫ್ ಐ ಆರ್ ದಾಖಲಿಸಿರುವುದು ಇದೇ ಮೊದಲು. ಜಾತ್ಯತೀತ ಜನತಾ ದಳದ ವೈ.ಎಸ್.ವಿ ದತ್ತ ದೂರು ದಾಖಲಿಸಿದ್ದಾರೆ. ಲೋಕಾಯುಕ್ತ ವಿಶೇಷ ಕೋರ್ಟ್ ಲೋಕಾಯುಕ್ತ ಪೊಲೀಸರಿಗೆ ತನಿಖೆಗೆ ಒಪ್ಪಿಸಿದೆ.

ಒಂದಂತೂ ಸತ್ಯ, ಯಡಿಯೂರಪ್ಪ ತಮಿಳುನಾಡಿನ ಎ.ರಾಜಾ, ಕನಿಮೊಳಿ, ಅಥವಾ ಕರ್ನಾಟಕದ ಕಟ್ಟಾ ಸುಬ್ರಮಣ್ಯ ನಾಯ್ಡುಗಳಂತೆ ಜೈಲಿಗೆ ಹೋಗದೇ ಇರಬಹುದು, ಆದರೆ ಕಾನೂನಿನ ಗಾಳ ಅವರ ಸುತ್ತ ಸದಾ ಜಾಗೃತವಾಗಿರುತ್ತದೆ. ಆ ಕಾರಣ ಅವರು ಈಗಿನ ‘ವಿಶ್ರಾಂತಿ ಜೀವನದಲ್ಲೂ’ ಶಾಂತಿಯಿಂದ ಇರಲು ಸಾಧ್ಯವಿಲ್ಲ.

ಇಷ್ಟಕ್ಕೆಲ್ಲ ಕಾರಣ ಅತಿ ಆಸೆ. ಯಡಿಯೂರಪ್ಪ ಮುಖ್ಯಮಂತ್ರಿ ಆದ ತಕ್ಷಣವೇ ಮಕ್ಕಳು ರಿಯಲ್ ಎಸ್ಟೇಟ್ ದಂಧೆಗೆ ಇಳಿಯುತ್ತಾರೆ. ಭಾರಿ ಮೊತ್ತದ ವ್ಯವಹಾರಗಳಿಗೆ ಕೈ ಹಾಕುತ್ತಾರೆ. ಹಾಗೆಯೇ ಅವರ ಶಿಕ್ಷಣ ಸಂಸ್ಥೆಗಳಿಗೆ ಕೋಟಿಗಟ್ಟಲೆ ಹರಿದು ಬರುತ್ತದೆ. ಇದೆಲ್ಲವೂ ಅಧಿಕಾರ ದುರುಪಯೋಗದ ಫಲ ಎನ್ನುವುದು ಎಂತಹ ದಡ್ಡನಿಗೂ ಗೊತ್ತಾಗುತ್ತದೆ. ಆದರೆ ಜನ ತಮ್ಮ ಜಾಣತನವನ್ನು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ತೋರಿಸಬೇಕಷ್ಟೆ.

(ಚಿತ್ರಕೃಪೆ: ವಿಕಿಪೀಡಿಯ)