Tag Archives: ರಾಹುಲ್ ಗಾಂಧಿ

ರಾಹುಲ್, ಅಖಿಲೇಶ್ : ಗೆಲುವು ಕೊಡುವ ಸೌಂದರ್ಯ


-ಬಿ. ಶ್ರೀಪಾದ ಭಟ್


 

“ನೀನು ಶ್ರೇಷ್ಟನಾಗುವುದು ಮಹಾತ್ವಾಕಾಂಕ್ಷೆಯಿದ್ದಾಗ. ಅದರೆ ಅದರ ಜೊತೆಗೆ ಬರುವ ಖಾಯಿಲೆಗಳಿಂದ ಮುಕ್ತನಾದಾಗ. ಮಾಡುವ ಕೆಲಸಗಳು ಪವಿತ್ರವಾಗಿರಬೇಕೆಂದು ಅರಿವಾದಾಗ.” – ಲೇಡಿ ಮ್ಯಾಕ್ ಬೆತ್ ( ಅನು.:ರಾಮಚಂದ್ರ ದೇವ )

ಸಾಮಾನ್ಯವಾಗಿ ವ್ಯಕ್ತಿಯೊಬ್ಬನ ಸೌಂದರ್ಯ ಅವನ/ಅವಳ ದೈಹಿಕ ಅಂದದ ಮೂಲಕ ಅಳೆಯುತ್ತೇವೆ. ಅಥವ ಅಳೆಯಲ್ಪಡುತ್ತದೆ. ಅವರ ಬಣ್ಣ, ಎತ್ತರ, ಕಣ್ಣು, ಮೂಗು, ತೂಕ, ಹೀಗೆ ಅನೇಕ ಸಂಗತಿಗಳು ಗಣನೆಗೆ ಒಳಪಡುತ್ತವೆ .ಈ ಬಾಹ್ಯ ಸೌಂದರ್ಯ ಹೆಚ್ಚಾಗಿ ಆಕರ್ಷಣೆಗೆ ಪರಿಗಣಿತವಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಜನಪ್ರಿಯ ವ್ಯಕ್ತಿಗಳಾದ ಅನೇಕ ಸಿನಿಮಾ ನಟ/ನಟಿಯರು, ಆಟಗಾರರು, ಅಥ್ಲೀಟ್ ಗಳು ,ರಾಜಕಾರಣಿಗಳು ಅಥವಾ ನಾವು ದಿನ ನಿತ್ಯ ಮುಖಾಮುಖಿಯಾಗುವ ವ್ಯಕ್ತಿಗಳು, ಹೀಗೆ ಈ ಬಾಹ್ಯ ಸೌಂದರ್ಯದ ಆಕರ್ಷಣೆಗೆ, ಮನಸೋಲುವಿಕೆಗೆ ಅನೇಕ ಮಜಲುಗಳಿವೆ .ಇದು ಸಹಜವಾದದ್ದು. ಇದರಲ್ಲಿ ಅಂತಹ ವಿಶೇಷವೇನಿಲ್ಲ. ಆದರೆ ವ್ಯಕ್ತಿಯೊಬ್ಬನ ದೈಹಿಕ ಸೌಂದರ್ಯವನ್ನು ಮೀರಿ, ದೈಹಿಕ ಆಕರ್ಷಣೆಯ ಕೊರತೆಯಿದ್ದರೂ, ತಮ್ಮ ಅನೇಕ ದೈಹಿಕ ನೂನ್ಯತೆಗಳ ನಡುವೆಯೂ ತನ್ನ ಕಾರ್ಯಕ್ಷೇತ್ರದಲ್ಲಿನ ಸಾಧನೆಯಿಂದ ಅವನು/ಅವಳು ಆಕರ್ಷಕವಾಗಿ ಕಂಗೊಳಿಸುವುದು ನಿಜಕ್ಕೂ ವಿಶೇಷವೆನಿಸುತ್ತದೆ.

ಇತ್ತೀಚೆಗೆ “ಪಾನ್ ಸಿಂಗ್ ಟೋಮರ್” ಎನ್ನುವ ಹಿಂದಿ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ ಇರ್ಫ಼ಾನ್ ಖಾನ್ ಅತ್ಯಂತ ಸಾಧಾರಣ ರೂಪಿನ ನಟ. ಹತ್ತರಲ್ಲೊಬ್ಬ. ಆದರೆ ತನ್ನ ಶ್ರೇಷ್ಟ ನಟನೆಯ ಮೂಲಕ, ಆ ಚಿತ್ರದ ಗೆಲುವಿನ ಮೂಲಕ, ಇಂದು ಆಕರ್ಷಕ ನಟನಾಗಿ ಮೇಲೇರುತ್ತಿದ್ದಾನೆ. ಇದೇ ಮಾತು ನಾಸಿರುದ್ದೀನ್ ಶಾ ಹಾಗೂ ಓಂಪುರಿ ಅವರಂತಹ ಸಾಧಾರಣ ರೂಪಿನ ಶ್ರೇಷ್ಟ ನಟರಿಗೂ ಅನ್ವಯಿಸುತ್ತದೆ. ಇದೇ ಮಾತು ಸ್ಮಿತಾ ಪಾಟೀಲ್‌ಳಂತಹ ಅದ್ಭುತ ನಟಿಗೆ ಕೂಡ ಅನ್ವಯಿಸುತ್ತದೆ. ಸುಂದರಿಯರಾದ, ಮಾದಕ ರೂಪಿನ ಶ್ರೀದೇವಿ. ಜಯಪ್ರದ ಅವರಿಗಿಂತಲೂ ಕಪ್ಪಗಿನ ಅನಾಕರ್ಷಕ ರೂಪಿನ ಸ್ಮಿತಾ ಪಾಟೀಲ್, ಶಬನ ಅಜ್ಮಿ‌ರಂತಹ ಅದ್ಭುತ ನಟಿಯರು ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಕನಸಿನ ರಾಣಿಯರಾಗಿದ್ದರು. ಇದಕ್ಕೆ ಕಾರಣ ಅವರ ಮನೋಜ್ನ ಅಭಿನಯದ ಸೌಂದರ್ಯ. ಅವರ ಬುದ್ಧಿಜೀವಿ ವ್ಯಕ್ತಿತ್ವ. ಇದೇ ಮಾತು ನಮ್ಮ ಪಿ.ಟಿ.ಉಷಾ ಎನ್ನುವ ಅದ್ಭುತ ಆಟಗಾರ್ತಿ ಬಗೆಗೂ ನಿಜ. ನೋಡಲಿಕ್ಕೆ ಕಪ್ಪಗೆ, ತೆಳ್ಳಗೆ, ಅತ್ಯಂತ ಸಾಧಾರಣ ರೂಪಿನ ಹುಡುಗಿಯಾಗಿದ್ದ ಈ ಪಿ.ಟಿ.ಉಷಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೇಟಿಕ್ಸ್‌ನಲ್ಲಿ ಗೆಲ್ಲತೊಡಗಿದಾಗ ಅವಳ ವ್ಯಕ್ತಿತ್ವವೇ ಆಕರ್ಷಕವಾಗಿ ಕಂಗೊಳಿಸತೊಡಗಿತು. ಅವಳ ಕಪ್ಪಗಿನ ಸಾಧಾರಣ ರೂಪ ನೇಪಥ್ಯಕ್ಕೆ ಸರೆಯಿತು.

ತನ್ನ ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ದೇಹದಿಂದ ಅನಾಕರ್ಷಕವಾಗಿ ಕಂಡುಬರುತ್ತಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ “ಅಖಿಲೇಶ್ ಸಿಂಗ್ ಯಾದವ್” ತಾನು ಹಗಲಿರುಳೂ ದುಡಿದು ,ಹಾದಿ ತಪ್ಪಿದ, ಸೋತಿದ್ದ ಸಮಾಜವಾದಿ ಪಕ್ಷವನ್ನು ತಳಮಟ್ಟದಿಂದ ,ಕಾರ್ಯಕರ್ತರ ಮೂಲಕ ಮರಳಿ ಅಖಾಡಕ್ಕೆ ಕರೆತಂದು 2012ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಹುಮತ ಗಳಿಸುವಂತೆ ಮಾಡಿ ಮತ್ತೆ ಅಧಿಕಾರವನ್ನು ತಂದು ಕೊಟ್ಟಿದ್ದಾನೆ. ಈ ಮೂಲಕ ಸಮಾಜವಾದಿ ಪಕ್ಷದ ಗೆಲುವಿನ ರೂವಾರಿಯಾಗಿದ್ದಾನೆ. ಇನ್ನು ಮುಂದಿನ ಒಂದು ತಿಂಗಳು ಈ ಅಖಿಲೇಶ ಯಾದವ್ ಸುದ್ದಿ ಮಾಧ್ಯಮಗಳ ಕೇಂದ್ರ ಬಿಂದು. ಈ ಅಖಿಲೇಶ್ ತನ್ನ ಈ ಸ್ವಯಾರ್ಜಿತ ಗೆಲುವಿನ ಮೂಲಕ ಸಹಜವಾಗಿಯೇ ಆಕರ್ಷಕವಾಗಿ ಕಾಣತೊಡಗಿದ್ದಾನೆ. ಮೇಲ್ಕಾಣಿಸಿದ ಆತನ ಸಾಧಾರಣ ರೂಪ ಇಂದು ಅಸಾಧಾರಣವಾಗಿಯೂ, ಸುಂದರವಾಗಿಯೂ ಕಾಣಲ್ಪಡತೊಡಗುತ್ತದೆ. ಎಲ್ಲರೂ ಈ ಅಖಿಲೇಶ್ ಯಾದವ್‌ನಲ್ಲಿ ನಾಯಕನ ರೂಪು ಕಾಣತೊಡಗಿದ್ದಾರೆ.ಇದೇ ಗೆಲುವಿನ ಗಮ್ಮತ್ತು. ಆದೇ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ದೈಹಿಕವಾಗಿ ಆಕರ್ಷಕವಾಗಿದ್ದ, ಕಣ್ಣು, ಮೂಗು, ಬಣ್ಣ, ಎತ್ತರ, ಧ್ವನಿ ಮುಂತಾದವುಗಳೆನ್ನೆಲ್ಲಾ ಸಮರೂಪವಾಗಿ ಪಡೆದಿದ್ದ, ತನ್ನ 42ರ ವಯಸ್ಸಿನಲ್ಲಿಯೂ ಅತ್ಯಂತ ಸುಂದರನಾಗಿ ಕಾಣುತ್ತಿದ್ದ ಈ ರಾಹುಲ್ ಗಾಂಧಿಯ ಡ್ರೆಸ್ ಕೋಡ್ ಕೂಡ ಅತನ ಸುಂದರ ರೂಪಿಗೆ ಮೆರುಗು ನೀಡುತ್ತಿತ್ತು. ಅತನ ಕುರುಚಲು ಗಡ್ದ ಸಹ! ಆದರೆ ಏನಾಯಿತು? ರಾಹುಲ್ ಗಾಂಧಿ ತನ್ನ ರಾಜಕೀಯ ಸ್ಥಾನಮಾನವನ್ನು,ತನ್ನ ಘನತೆಯನ್ನು ಪಣಕ್ಕಿಟ್ಟು ಹೋರಾಡಿದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ದಯನೀಯವಾಗಿ ಸೋಲನ್ನು ಅನುಭವಿಸಿ ಹೆಚ್ಚೂ ಕಡಿಮೆ ನೆಲ ಕಚ್ಚಿದೆ. ಅಲ್ಲದೆ ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿದೆ. ಇದರ ವಿಶ್ಲೇಷಣೆಗೆ ಬೇರೆಯೆದೇ ವೇದಿಕೆ ಬೇಕಾಗುತ್ತದೆ.ಆದರೆ ಇಂದು ಈ ತನ್ನ ಹೀನಾಯ ಸೋಲಿನ ಮೂಲಕ ಸುಂದರನಾದ ರಾಹುಲ್ ಗಾಂಧಿ ಅತ್ಯಂತ ಅನಾಕರ್ಷಕವಾಗಿ ಕಾಣತೊಡಗಿದ್ದಾನೆ. ಈ ರಾಹುಲ್ ಗಾಂಧಿ ಎನ್ನುವ ಕಾಂಗ್ರೆಸ್ ಯುವರಾಜ ರಾಜಕೀಯ ಯುದ್ಧದಲ್ಲಿ ಸೋತಂತಹ ದಿನಗಳಲ್ಲಿ ಇಂದು ಆತನ ಮನಮೋಹಕ ಬಣ್ಣ, ಹೊಳಪು, ಸುಂದರ ಕಾಯ ಯಾವುದೂ ಈತನನ್ನು ಮೇಲಕ್ಕೆತ್ತಲಾರವು. ಗೆಲುವಿಗೆ ಮಾತ್ರ ಆ ಸಾಧ್ಯತೆ ಇತ್ತು. ಇದು ಅಖಿಲೇಶ್ ಯಾದವ್ ಪಾಲಿಗೆ ನಿಜವೆಂದು ಸಾಬೀತಾಗಿದೆ. ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ಅನಾಕರ್ಷಕ ಅಖಿಲೇಶ್ ಯಾದವ್ ತನ್ನ ಗೆಲುವಿನ ಮೂಲಕ ಆಕರ್ಷಕವಾಗಿ ಎಲ್ಲರ ಕಣ್ಮಣಿಯಾಗಿ ಕಂಗೊಳಿಸುತ್ತಿದ್ದರೆ ಆಕರ್ಷಕ, ಸುಂದರ ಪುರುಷ ರಾಹುಲ್ ಗಾಂಧಿ ತನ್ನ ಹೀನಾಯ ಸೋಲಿನೊಂದಿಗೆ ಮೂಲೆಗೆ ತಳ್ಳಲ್ಪಟ್ಟಿದ್ದಾನೆ. ಅನಾಕರ್ಷಕವಾಗಿ ಕಾಣುತ್ತಿದ್ದಾನೆ. ಇದೇ ಪ್ರಾಮಾಣಿಕ ಗೆಲುವಿನ ಮನಮೋಹಕ ಆದರೆ ನಿಷ್ಟುರ ಕಠೋರ ದೃಶ್ಯಗಳು.

ಇಂದು ಯಶಸ್ಸಿನ ಅಲೆಯ ಮೇಲಿರುವ ಅಖಿಲೇಶ್ ಸಿಂಗ್ ಯಾದವ್‌ಗೆ ಮ್ಯಾಕ್ ಬೆತ್ ನಾಟಕದಲ್ಲಿ ಬ್ಯಾಂಕೋ ಹೇಳಿದ “ಹೊಸ ಗೌರವಗಳು ಅವನಿಗೆ ಸಂದಿವೆ, ಅವು ಹೊಸ ಬಟ್ಟೆಗಳಂತೆ; ದೇಹಕ್ಕೆ ಒಗ್ಗುವುದು ಉಪಯೋಗಿಸತೊಡಗಿದ ಮೇಲೆ,”ಎನ್ನುವ ಮನೋಜ್ಞ ಮಾತುಗಳು ಅರ್ಥವಾದರೆ ಎಷ್ಟು ಚೆನ್ನ! ರಾಮ ಮನೋಹರ ಲೋಹಿಯಾ ಅವರನ್ನು ಓದತೊಡಗಿದರೆ ಎಷ್ಟು ಚೆನ್ನ! ಒಂದು ವರ್ಷದ ನಂತರ ಲೋಹಿಯಾರ ಕೆಲವು ಮಾತುಗಳನ್ನು ತನ್ನ ತೊದಲು ನುಡಿಗಳಲ್ಲಿ ಹೇಳುವಂತಾದರೆ ಎಷ್ಟು ಚೆನ್ನ! ಬುಂದೇಲಖಂಡ, ಪೂರ್ವಾಂಚಲದಲ್ಲಿನ ಅನೇಕ ದಲಿತರ ಓಟುಗಳು ಈ ಬಾರಿ ಸಮಾಜವಾದಿ ಪಕ್ಷಕ್ಕೆ ಸಂದಿದ್ದರ ಹಿಂದಿನ ಸಾಮಾಜಿಕತೆ ಈ ಅಖಿಲೇಶ್ ಅರ್ಥ ಮಾಡಿಕೊಂಡರೆ, ಮುಸ್ಲಿಂರ ಓಟ್ ಬ್ಯಾಂಕ್ ಹೇಗೆ ಮತ್ತು ಏಕೆ ಸಂಘಟಿತವಾಗಿ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿತು ಎನ್ನುವುದನ್ನು ಈ ಅಖಿಲೇಶ್ ಅರಿತರೆ, ಯಾದವರು ಇಂದು ಒಂದು ಹಿಂದುಳಿದ ಜಾತಿಯಾಗಿ ಉಳಿದಿಲ್ಲ ಅದು ಒಂದು ಮಧ್ಯಮ ವರ್ಗದ, ಬಲಿಷ್ಟ ದಬ್ಬಾಳಿಕೆಯ ಜಮೀನ್ದಾರಿ ಜಾತಿಯಾಗಿ ಮೆರೆಯುತ್ತಿದೆ ಎನ್ನುವುದರ ಹಿನ್ನೆಲೆಯ ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳನ್ನು ಮನನ ಮಾಡಿಕೊಂಡರೆ, ಎಷ್ಟು ಚೆನ್ನ ಅಲ್ಲವೆ? ಇದೆಲ್ಲದಕ್ಕಿಂತ ಮುಖ್ಯವಾದದ್ದು ಅಖಿಲೇಶ್ ಸಿಂಗ್ ಯಾದವ್ ಎನ್ನುವ ಯುವ ನಾಯಕನಿಗೆ 25 ರಿಂದ 30 ರ ವಯಸ್ಸಿನ ಆಜುಬಾಜಿರುವ ಶೇಕಡ 35 ರಷ್ಟು ಯವ ಜನಾಂಗ ಇಂದು ಸಂಪೂರ್ಣವಾಗಿ ಬೆಂಬಲಿಸಿದೆ. ಈ ಯವ ಜನತೆಯ ಬೆಂಬಲವೇ ಇವತ್ತಿನ ಸಮಾಜವಾದಿ ಪಕ್ಷದ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ್ದು, ಬಲು ದೊಡ್ಡ ತಿರುವು ನೀಡಿದ್ದು. ಸಹಜವಾಗಿಯೇ Generation next ಹುಡುಗನಂತಿರುವ ಯುವರಾಜ “ರಾಹುಲ್ ಗಾಂಧಿ”ಯನ್ನು ಏತಕ್ಕೆ ಕೈ ಬಿಟ್ಟು ಅಖಿಲೇಶ್ ಸಿಂಗ್ ಯಾದವ್ ನನ್ನು ಕೈ ಹಿಡಿದರು ಎನ್ನುವುದರ ಒಳ ನೋಟಗಳನ್ನು ಈ ಅಖಿಲೇಶ್ ಅರ್ಥ ಮಾಡಿಕೊಂಡ ದಿನ, ಮುಂದಿನ ಎರಡು ವರ್ಷಗಳಲ್ಲಿ ತನಗೆ ಅರ್ಥವಾದಷ್ಟನ್ನು, ದಕ್ಕಿದಷ್ಟನ್ನು ಕಾರ್ಯರೂಪಕ್ಕೆ ತರುವ ಯೋಜನೆಗಳ Blue print ಅನ್ನು ಈ ಅಖಿಲೇಶ್ ಸಿಂಗ್ ಯಾದವ್ ತಯಾರಿಸಿಕೊಂಡ ದಿನ ನಿಜಕ್ಕೂ ಉತ್ತರ ಪ್ರದೇಶದ ಭವಿಷ್ಯದ ಅರ್ಥಪೂರ್ಣ ಕನುಸುಗಳು ಸಾಕಾರಗೊಳ್ಳಬಹುದೇನೋ ಎನ್ನುವ ಅನುಮಾನಗಳ ಬೀಜ ಹುಟ್ಟಿಕೊಳ್ಳುವ ಹೊಸ ಚಿಂತನೆಗಳಿಗೆ ನಾಂದಿ ಹಾಡಿದಂತಾಗುತ್ತದೆ.

ಕಡೆಯದಾಗಿ ಈ ಅಖಿಲೇಶ್ ಸಿಂಗ್ ಯಾದವ್, “ನಾನು ಉತ್ತರ ಪ್ರದೇಶದ ಎಲ್ಲಾ ವರ್ಗಗಳ ,ಜಾತಿಗಳ ಪ್ರತಿನಿಧಿ ಆಗಿರುವವರೆಗೂ ಇಲ್ಲಿ ಇನ್ನೆಂದೂ ಗೂಂಡಾ ರಾಜ್ ತಲೆಯತ್ತಲಾರದು, ಇಲ್ಲಿ ಇನ್ನೆಂದೂ ದಲಿತರ ಹತ್ಯಾಕಾಂಡಗಳು ನಡೆಯಲಾರವು, ಸಾಚಾರ್ ಕಮಿಟಿಯನ್ನು ಜಾರಿಗೊಳಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ,” ಎಂದು ಮೊದಲು ಘೋಷಿಸಿಲೇಬೇಕು. ಏಕೆಂದರೆ ಇದು minimum requirement ಗೆದ್ದ ನಾಯಕನಿಂದ. ಏಕೆಂದರೆ “ನೇತಾಜಿ”ಗೆ ವಯಸ್ಸಾಗಿದೆ. ಅವರು ಇದನ್ನು ಹೇಳುವುದಿರಲಿ ಇಂತಹ ಮಾತುಗಳೂ ಕೂಡ ನೆನಪಿರಲಾರವು.

(ಚಿತ್ರಕೃಪೆ: ವಿಕಿಪೀಡಿಯ, ದಿ ಹಿಂದು)

Anna_Hazare

ಅಣ್ಣಾ… ನಿನ್ನ ಉಪವಾಸ ಮಲಿನ ಮನಸ್ಸುಗಳನ್ನು ತಿಳಿಗೊಳಿಸಲಿ.

– ಚಿದಂಬರ ಬೈಕಂಪಾಡಿ

ಅಂದು ಬದುಕಿಗೆ ವಿದಾಯ ಹೇಳಲು ಕಾಗದ ಬರೆದಿಟ್ಟು ಆತ್ಮಹತ್ಯೆಗೆ ಮುಂದಾಗಿದ್ದ ಅಣ್ಣಾ ಹಜಾರೆ ಅನೇಕ ದಶಕಗಳಿಂದ ನಖ ಶಿಖಾಂತ ಹರಡಿಕೊಂಡಿರುವ ಭ್ರಷ್ಟಾಚಾರದ ಬೇರನ್ನು ಕೀಳಲು ಪಣತೊಟ್ಟದ್ದು ಐತಿಹಾಸಿಕ ಘಟನೆ. ಹದಿಮೂರು ದಿನಗಳ ಕಾಲ ರಾಮಲೀಲಾ ಮೈದಾನದಲ್ಲಿ ಉಪವಾಸ ಮಾಡಿದ ಅಣ್ಣಾ ಚರಿತ್ರೆಯ ಪುಟಗಳಲ್ಲಿ ದಾಖಲಾಗುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಪರಮಾಧಿಕಾರ ಹೊಂದಿದೆ, ಅಂಥ ಸಂಸತ್ತನ್ನೇ ನಡುಗಿಸಿದವರು ಅಣ್ಣಾ ಎಂದು ಅವರನ್ನು ಸುತ್ತುವರಿದಿದ್ದವರು ಬೆನ್ನುತಟ್ಟಿಕೊಳ್ಳಬಹುದು. ಸಂವಿಧಾನಿಕ ಸಂಸ್ಥೆಯ ಗಡಿದಾಟಿ ಹೋಗುವುದು ಕೂಡಾ ಐತಿಹಾಸಿಕ ಘಟನೆ, ಅಂಥ ಯತ್ನ ನಡೆದದ್ದು ಮಾತ್ರ ವಿಷಾದನೀಯ.

ಹಳ್ಳಿಗಾಡಿನ ಅಣ್ಣಾ ದಿಲ್ಲಿವಾಲಾಗಳು ತಡಬಡಾಯಿಸುವಂತೆ ಮಾಡಿದರು ನಿಜ, ಅಣ್ಣಾ ಅವರ ಹೋರಾಟಕ್ಕೆ ಮಂಡಿಯೂರಿದ ಸರ್ಕಾರ ಕೂಡಾ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ. ಆದರೆ ಈ ದಾಖಲೆ ಋಣಾತ್ಮಕ ಸಂದೇಶವನ್ನು ರವಾನಿಸುತ್ತದೆ ಎನ್ನುವುದನ್ನು ಮರೆಯಬಾರದು. ಒಂದು ವಿಮಾನ ಅಪಹರಣ ಮಾಡಿ ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟುಕೊಂಡು ಬೇಡಿಕೆಗಳ ಈಡೇರಿಕೆಗಾಗಿ ಆಡಳಿತ ವ್ಯವಸ್ಥೆಯನ್ನು ಮಂಡಿಯೂರುವಂತೆ ಮಾಡುವ ಕ್ರಮಕ್ಕಿಂತ ಭಿನ್ನವಾದುದು ರಾಮಲೀಲಾ ಮೈದಾನದ ಸತ್ಯಾಗ್ರಹ ಎಂದು ಅನೇಕರಿಗೆ ಅನ್ನಿಸಿದರೆ ತಪ್ಪಲ್ಲ.

ಕಾಂಗ್ರೆಸ್ ಪಕ್ಷದ ಭವಿಷ್ಯದ ಕುಡಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅಣ್ಣಾ ಅವರ ಸತ್ಯಾಗ್ರಹವನ್ನು ಕಟುವಾಗಿ ಟೀಕಿಸಿದ್ದು ಒಂದು ವರ್ಗವನ್ನು ಸಿಟ್ಟಿಗೇಳಿಸಿತು. ‘ಬೆವಕೂಫ್ ’ ಎನ್ನುವ ದಾಟಿಯಲ್ಲಿ ರಾಮಲೀಲಾ ಮೈದಾನದಿಂದ ಬುದ್ಧಿವಂತರು ಕಿರುಚಿಕೊಂಡಾಗ ಸ್ವತ: ಅಣ್ಣಾ ಅವರು ಕೇಳಿಸಿಕೊಂಡಿದ್ದರೆ ಕ್ಷಮೆಯಾಚಿಸುತ್ತಿದ್ದರೇನೋ ?. ಯಾಕೆಂದರೆ ಇಳಿವಯಸ್ಸಿನ ಅಣ್ಣಾ ಪ್ರಧಾನಿಯರ ಬಗ್ಗೆ ಆಡಿದ ಮಾತಿಗೆ ಮನನೊಂದುಕೊಂಡರು. ಸಂಸತ್ತಿನ ಹೊರಗಿರುವವರ ಹಟಮಾರಿತನದ ಬೇಡಿಕೆಗಳನ್ನು ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಥ ಬೇಡಿಕೆಗಳು ಮಂಡನೆಯಾಗಲು ಅನುವಾಗುತ್ತದೆ ಎನ್ನುವ ರಾಹುಲ್ ಧ್ವನಿ ತಳ್ಳಿಹಾಕುವಂತಿಲ್ಲ.

ಭ್ರಷ್ಟಾಚಾರಿಗಳ ಕುತ್ತಿಗೆಗೆ ಕುಣಿಕೆ ಹಾಕಲು ಅಗತ್ಯವಾದ ಹಗ್ಗಹೊಸೆಯಲು ಸಂಸತ್ತು ಒಪ್ಪಿಕೊಂಡಿತು ನಿಜ, ಆದರೆ ಇಂಥ ಹಗ್ಗ ಹೊಸೆಯುವವರಲ್ಲಿ  ಲಾಲೂ, ಪಾಸ್ವಾನ್, ಅಮರ್ ಸಿಂಗ್ ಮುಂತಾದವರು ಕೈಜೋಡಿಸುತ್ತಾರೆ ಎಂದಾದಾಗ ಒಂದಷ್ಟು ಸಂಶಯಗಳು ಮೂಡುವುದು ಸಹಜ. ಯಾಕೆಂದರೆ ಇಂಥವರು ಬಿಳಿ ದಿರಿಸು ತೊಟ್ಟು ಹೊಳೆದರೂ ಅವರ ಮೈಮೇಲಿನ ಕಲೆಗಳು ಮಾತ್ರ ಮರೆಯಾಗುವುದಿಲ್ಲ. ಜನರ ನೆನಪುಗಳು ಬಹುಕಾಲ ಬಾಳುವಂಥವಲ್ಲ ಅಂದುಕೊಂಡರೂ ಇವರನ್ನು ಮೆತ್ತಿಕೊಂಡಿರುವ ಹಗರಣಗಳು ಮರೆತುಬಿಡುವಂಥವಲ್ಲ.

ಅಣ್ಣಾ ಟೀಮಿನ ಸಚ್ಚಾರಿತ್ರ್ಯರ ನಡುವೆಯೇ ಪ್ರಶ್ನಿಸಲು ಅರ್ಹರ ಮುಖಗಳಿರುವುದೂ ಸತ್ಯ. ಒಂದು ಕಾಲದಲ್ಲಿ ಜನರಿಂದ ಮೆಚ್ಚುಗೆ ಗಳಿಸಿದವರು ಸ್ವಯಂಸೇವೆಯ ಹೆಸರಲ್ಲಿ ಸುಂದರವಾದ ಬದುಕು ಸವೆಸಿದರೆ ಅದನ್ನು ಉದಾರವಾಗಿ ಕಾಣಲು ಸಾಧ್ಯವೇ?. ಭಾರತದ ಹಳ್ಳಿಯ ಜನರ ಜೋಲು ಮುಖ, ಕೊಳಚೆ, ಜೋಪಡಿಯ ಮುಗ್ಧ ಮಕ್ಕಳನ್ನು ಸಾಗರದಾಚೆ ತೋರಿಸಿ ಬದುಕುವ ಈ ನೆಲದ ಜೀವಗಳ ಬಗ್ಗೆ ಕನಿಕರ ಪಡಬೇಕಲ್ಲವೇ?.

ಇದೆಲ್ಲವನ್ನು ಬದಿಗಿಟ್ಟು ಅಣ್ಣಾ ಸೂತ್ರಗಳನ್ನು ಒಪ್ಪಿಕೊಂಡ ಮಾತ್ರಕ್ಕೇ ದೇಶ, ರಾಜ್ಯ, ಜಿಲ್ಲಾಮಟ್ಟದಲ್ಲಿಹಾಸುಹೊಕ್ಕಾಗಿ ಹೆಣೆದುಕೊಂಡಿರುವ ಭ್ರಷ್ಟಾಚಾರದ ಸುಕ್ಕುಗಳು ಬಿಡಿಸಿಕೊಳ್ಳುತ್ತವೆ ಎಂದಾಗಲೀ, ಹಳ್ಳಿಯ ಪಂಚಾಯಿತಿ ಕಚೇರಿಯ ಗುಮಾಸ್ತ ಮಿಸ್ಟರ್ ಕ್ಲೀನ್ ಆಗಿಬಿಡುತ್ತಾನೆ ಅಂದುಕೊಳ್ಳುವಂತಿಲ್ಲ. ಒಂದಷ್ಟು ಮಂದಿ ರಾಮಲೀಲಾ ಮೈದಾನದಲ್ಲಿ ಟಿವಿ ಕ್ಯಾಮರಾಗಳ ಮುಂದೆ ಪ್ರಮಾಣ ಮಾಡಿದ ಮಾತ್ರಕ್ಕೆ ಭ್ರಷ್ಟಾಚಾರ ಸಾರಾಸಗಟಾಗಿ ಅಳಿಸಿಹೋಗುತ್ತದೆ ಅಂದುಕೊಳ್ಳುವುದು ಮೂರ್ಖತನವಾಗುತ್ತದೆ.

Anna_Hazare

Anna_Hazare

ಭೂಮಿ ನೋಂದಾವಣೆ ಮಾಡುವ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಂಚಗುಳಿತನ ಇಲ್ಲವೇ ಇಲ್ಲವೆಂದು ಹೇಳಿದರೆ ಯಾರಾದರೂ ನಂಬಲು ಸಾಧ್ಯವೇ?. ಈ ಕಚೇರಿಗಳನ್ನು ಲಂಚಮುಕ್ತವನ್ನಾಗಿಸಲು ಕಾನೂನುಗಳಿಂದ ಸಾಧ್ಯವೇ ?. ಅಣ್ಣಾ ತಂಡ ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಲಂಚ ಯಾವ ಸ್ವರೂಪದಲ್ಲಿ ಸಂದಾಯವಾಗಬೇಕೋ ಸಂದಾಯವಾಗುತ್ತದೆ. ಪ್ರಾದೇಶಿಕ ಸಾರಿಗೆ ಕಚೇರಿ, ಲೋಕೋಪಯೋಗಿ, ಕೃಷಿ, ಅರಣ್ಯ, ತೆರಿಗೆ, ಶಿಕ್ಷಣ ಹೀಗೆ ಸರ್ಕಾರದ ಕಚೇರಿಗಳು ಭ್ರಷ್ಟಾಚಾರದ ಕೊಂಪೆಗಳಾಗಿವೆ ಎಂದು ಹೆಸರು ಕೂಗಿ ಕರೆಯಬೇಕೇ?. ಲೋಕಾಯುಕ್ತ, ಲೋಕಪಾಲ ಅಥವಾ ಅಣ್ಣಾ ತಂಡದ್ದೇ ಕಾನೂನು ಬಂದರೂ ಭ್ರಷ್ಟ ಕೈಗಳು ಶುದ್ಧವಾಗುವುದಿಲ್ಲ. ಯಾಕೆಂದರೆ ಇಲ್ಲಿ ಕೆಲಸ ಮಾಡುವ ಮನಸ್ಸುಗಳು ಭ್ರಷ್ಟವಾಗಿಬಿಟ್ಟಿವೆ ಅನ್ನಿಸುವುದಿಲ್ಲವೇ?. ಕೈಗಳನ್ನು ನಿಯಂತ್ರಿಸುವ ಮನಸ್ಸುಗಳೇ ಮಲಿನವಾಗಿರುವುದರಿಂದ ಅಲ್ಲಿಂದ ರವಾನೆಯಾಗುವ ಸಂದೇಶಗಳೇನು?.

ಮುಗ್ಧ ಅಣ್ಣಾ ಕೊಟ್ಟ ಭ್ರಷ್ಟಾಚಾರ ನಿಯಂತ್ರಣ ಸಂದೇಶವನ್ನು ಅರ್ಥೈಸುವಲ್ಲೂ ಶಾಸಕಾಂಗದೊಳಗೆ ಕೆಲಸ ಮಾಡುವ ಕೆಲವು ಮನಸ್ಸುಗಳು ಎಡವಿದವು. ಸಂಸತ್ತನ್ನೇ ಹೈಜಾಕ್ ಮಾಡುವ ತಂತ್ರವೆಂದು ಟೀಕಿಸಿದ್ದು ಸ್ವಲ್ಪಮಟ್ಟಿಗೆ ಸತ್ಯಕ್ಕೆ ಹತ್ತಿರವಾದರೂ ಸಂಸತ್ತಿನೊಳಗೆ ನಡೆದುಕೊಳ್ಳುವ ನಡವಳಿಕೆಗಳೂ ಕೆಲವೊಮ್ಮೆ ಸಂಯಮದ, ನಡವಳಿಕೆಯ ಗೆರೆ ದಾಟಿರುವುದೂ ನಿಜ. ಓಟಿಗಾಗಿ ನೋಟು, ಚುನಾಯಿತ ಜನಪ್ರತಿನಿಧಿಗಳು ಕುದುರೆಗಳಂತೆ ಬಿಕರಿಯಾಗುವುದು, ಆಮಿಷಗಳಿಗೆ ಬಲಿಯಾಗಿ ಬಟ್ಟೆ ಬದಲಿಸಿದಷ್ಟೇ ಸುಲಭವಾಗಿ ಪಕ್ಷಾಂತರ ಮಾಡುವುದು ಕೂಡಾ ಭ್ರಷ್ಟಾಚಾರದಷ್ಟೇ ಅನಿಷ್ಟವಾದುದು ಎಂದರೆ ಯಾರೂ ಸಿಟ್ಟಾಗಬೇಡಿ.

ಅಸಾಮಾನ್ಯ ಕಳ್ಳನನ್ನು ಹಿಡಿಯಲು ಕಳ್ಳನಿಂದ ಮಾತ್ರ ಸಾಧ್ಯ. ಅಸಾಮಾನ್ಯ ಕಳ್ಳನ ಕಳವಿನ ತಂತ್ರಗಳು ಸಾಮಾನ್ಯ ಕಳ್ಳನಿಗೆ ಮಾತ್ರ ಗೊತ್ತಿರಲು ಸಾಧ್ಯ ಹೊರತು ಕಳ್ಳನಲ್ಲದಿದ್ದವನಿಗೆ ಗೊತ್ತಿರಲು ಅಸಾಧ್ಯ. ಭ್ರಷ್ಟಾಚಾರವನ್ನು ಹತ್ತಿಕ್ಕಲು ಅಣ್ಣಾ ಹಜಾರೆ ಉಪವಾಸ ಮಾಡಿ ಮಸೂದೆ ಜಾರಿಗೆ ಒತ್ತಾಯಿಸಿದ್ದು ಇತಿಹಾಸದ ಒಂದು ಪುಟವಾಗಿ ಪ್ರಸ್ತುತವಾಗುತ್ತದೆ ನಿಜ, ಆದರೆ ಭ್ರಷ್ಟಾಚಾರ ಅಳಿಸಿ ಹಾಕುವುದು ಹಜಾರ್ ಅಣ್ಣಾಗಳು ಉಪವಾಸ ಮಾಡಿದ ಮಾತ್ರಕ್ಕೇ ಸಾಧ್ಯವಿಲ್ಲ. ಯಾಕೆಂದರೆ ಭ್ರಷ್ಟಾಚಾರದಿಂದಲೇ ಕೋಟ್ಯಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಗೆ ಕಾಯಿದೆ-ಕಾನೂನುಗಳು ನೆಪವಾಗಬಹುದೇ ಹೊರತು ಪರಿಹಾರ ಕೊಡಲಾರವು. ಹಳ್ಳಿಯ ಸಾಮಾನ್ಯನಿಂದ ಹಿಡಿದು ದಿಲ್ಲಿಯ ಅಸಾಮಾನ್ಯನವರೆಗೆ; ಹಳ್ಳಿಯ ಪುಟ್ಟ ಪಂಚಾಯಿತಿಯಿಂದ ಸಂಸತ್ತಿನೊಳಗೆ ಕುಳಿತುಕೊಳ್ಳುವವರತನಕ; ಹಳ್ಳಿಯ ಮರದ ಕೆಳಗೆ ಕುಳಿತು ಕಾಲಕಳೆಯುವವರಿಂದ ಹಿಡಿದು ರಾಮಲೀಲಾ ಮೈದಾನದಲ್ಲಿ ನಿಂತು ಮಾತನಾಡಬಲ್ಲವರತನಕ ಮನಸ್ಸುಗಳು ತಿಳಿಯಾಗಬೇಕು. ಭ್ರಷ್ಟ ಕೈಗಳಿಗಿಂತಲೂ ಮಲಿನಗೊಂಡಿರುವ ಮನಸ್ಸುಗಳು ಅಪಾಯಕಾರಿ.

ಅಣ್ಣಾ ನಿರ್ಮಲ ಮನಸ್ಸಿನಿಂದ ಮಾಡಿದ ಉಪವಾಸದಿಂದ ಅವರ ದೇಹ ದಣಿಯಿತು, ಸರ್ಕಾರ ಮಣಿಯಿತು ನಿಜ. ಇದಿಷ್ಟೇ ಅಣ್ಣಾ ಅವರ ದೇಹದಂಡನೆಗೆ ಸಿಕ್ಕ ಪ್ರತಿಫಲ ಅಂದುಕೊಳ್ಳಬೇಕೇ?ಖಂಡಿತಕ್ಕೂ ಅಣ್ಣಾ ಮಾಡಿದ ಉಪವಾಸ ಸಾರ್ಥಕವಾಗಬೇಕಾದರೆ ಮಲಿನಗೊಂಡಿರುವ ಮನಸ್ಸುಗಳು ಪರಿಶುದ್ಧವಾಗಬೇಕು. ಅಂಥ ಮನಸ್ಸುಗಳು ಮೊಳಕೆಯೊಡೆಯಲು ರಾಮಲೀಲಾ ಮೈದಾನದಲ್ಲಿ ಅಣ್ಣಾ ಮಲಗಿ ಕಳೆದ ದಿನಗಳು ಪ್ರೇರಣೆಯಾಗಲಿ, ಅಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ)