Tag Archives: ಲೋಕಪಾಲ ಮಸೂದೆ

Sansad_Bhavan

ಸಂಸತ್ತಿನ ಪರಮಾಧಿಕಾರ ಎಂದರೆ ಏನು?

ಅರವಿಂದ ಚೊಕ್ಕಾಡಿ

ಅಣ್ಣಾ ಹಜಾರೆ ಉಪವಾಸ ಮಾಡುವುದು, ಚಿದಂಬರಂ, ಕಪಿಲ್ ಸಿಬಲ್, ಮನಮೋಹನ್ ಸಿಂಗ್ ಎಲ್ಲ ಸೇರಿಕೊಂಡು ಸಂಸತ್ತಿನ ಪರಮಾಧಿಕಾರ ಎನ್ನುವುದು ; ಇದೆಲ್ಲ ಒಟ್ಟಾಗಿ ಒಂದು ದಾರಿ ತಪ್ಪಿಸುವ ವ್ಯವಸ್ಥೆ ನಿರ್ಮಾಣ ಆಗಿದೆ.

Sansad_Bhavan

Sansad_Bhavan

ಅಣ್ಣಾ ಹಜಾರೆ ಅವರ ಕಡೆಯಲ್ಲಿ ಒಂದು ಸಮಸ್ಯೆ ಇದೆ. ಇವತ್ತು ಅಣ್ಣಾ ಹಜಾರೆ ಅವರ ಹಿಂದೆ ಇರುವುದು ಭ್ರಷ್ಟಾಚಾರದ ಬಗ್ಗೆ ರೋಸಿ ಹೋಗಿರುವ ಜನರ ಆಕ್ರೋಶದ-ಆವೇಶದ ಬೆಂಬಲ ಹೊರತು ಪ್ರಜ್ಞಾವಂತವಾದ ಭ್ರಷ್ಟಾಚಾರದ ವಿರುದ್ಧದ ಅರಿವಲ್ಲ. ಅಂತಹ ಅರಿವನ್ನು ರಾಷ್ಟ್ರವ್ಯಾಪಿಯಾಗಿ ಉಂಟು ಮಾಡುವ ಪ್ರಯತ್ನವನ್ನು ಅಣ್ಣಾ ಹಜಾರೆಯವರ ತಂಡ ಮಾಡಿಲ್ಲ. ಒಂದು ರೀತಿ ಪೂರ್ವ ಸಿದ್ಧತೆ ಸಾಕಷ್ಟಿಲ್ಲದ ಹೋರಾಟ. ಇದರಿಂದಾಗಿ ಏನಾಗಿದೆಯೆಂದರೆ ಏನು ನಡೆಯುತ್ತಿದೆ, ತಾವು ಪ್ರಜ್ಞಾಪೂರ್ವಕವಾಗಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡುವುದಕ್ಕೂ ಜನರಿಗೆ ಪುರುಸೊತ್ತಿಲ್ಲ. ಯೋಚನೆ ಮಾಡುವುದಕ್ಕೆ ಜನರಿಗೆ ಪುರುಸೊತ್ತು ಕೊಡದೆ ಅಣ್ಣಾ ಅವರ ತಂಡ ತಾನು ಮಾಡುತ್ತಿರುವುದು ಎಲ್ಲವೂ ಸರಿಯಾಗಿಯೇ ಇದೆ; ಜನರು ತಮ್ಮ ನಿಲುವನ್ನು ವಿಮರ್ಶಿಸಬೇಕಾದ ಅಗತ್ಯವೇ ಇಲ್ಲ ಎನ್ನುವ ಧೋರಣೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಹೋಗುತ್ತಿದೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಹೋರಾಟಗಾರ ತನ್ನ ನಿಲುವಿನ ಬಗ್ಗೆ ಯೋಚನೆ ಮಾಡಲೂ ಜನರಿಗೆ ಪುರುಸೊತ್ತು ಕೊಡದೆ ಜನರ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇನೆಂದು ಹೇಳುವುದು ಸರಿಯಲ್ಲ. ನಿಜವಾಗಿ ಅಣ್ಣಾ ಭ್ರಷ್ಟಾಚಾರದ ವಿರುದ್ಧ ವಿದ್ದಾರೆ ಎಂಬುದನ್ನು ಬಿಟ್ಟರೆ ಅವರ ಖಚಿತವಾದ ಬೇಡಿಕೆ ಏನು, ಅವರ ಯಾವ ಬೇಡಿಕೆಯನ್ನು ಸರಕಾರ ಒಪ್ಪುತ್ತಿಲ್ಲ, ಯಾಕೆ ಒಪ್ಪುತ್ತಿಲ್ಲ, ಸರಕಾರ ಜಾರಿಗೊಳಿಸಲು ಹೊರಟಿರುವ ಲೋಕಪಾಲ ಮಸೂದೆಯು ಹೇಗಿದೆ ಎನ್ನುವ ಬಗ್ಗೆಯೆಲ್ಲ ಬಹಳ ಮಂದಿಗೆ ಗೊತ್ತಿಲ್ಲ. ಭ್ರಷ್ಟಾಚಾರ ವಿರುದ್ಧ ವಿದ್ದಾರೆ ಎಂಬ ಕಾರಣಕ್ಕಾಗಿ ಅಣ್ಣಾ ಅವರನ್ನು ಕಣ್ಣು ಮುಚ್ಚಿ ಬೆಂಬಲಿಸುತ್ತಿದ್ದಾರೆ. ಭ್ರಷ್ಟಾಚಾರದ ವ್ಯಾಪ್ತಿ ಎಷ್ಟೇ ಎಷ್ಟೇ ಬಲಿಷ್ಠವಿದ್ದರೂ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಧಿಕಾರದಲ್ಲಿರುವಾಗ ಲೋಕಪಾಲರಿಂದ ಅವರನ್ನು ಹೊರಗಿಡಬೇಕು. ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಅಗತ್ಯವಾಗಿದೆ. ಪ್ರಧಾನಮಂತ್ರಿಗಿಂತ ಲೋಕಪಾಲರ ಮೇಲೆ ನಮಗೆ ಜಾಸ್ತಿ ವಿಶ್ವಾಸ ಎಂದಾದರೆ ಅಂತಹ ಲೋಕಪಾಲರನ್ನು ನೇಮಿಸಲು ಸರಕಾರಕ್ಕಾಗಲಿ, ಸಂಸತ್ತಿಗಾಗಲಿ ಅಧಿಕಾರವೂ ಇರಬಾರದಲ್ಲವೆ? ಪ್ರಧಾನಿಯ ಮೇಲೆಯೇ ಕನಿಷ್ಠ ಮಟ್ಟದ ವಿಶ್ವಾಸವೂ ಇಲ್ಲದ ರಾಷ್ಟ್ರವು ಸಂಸದೀಯ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯಲಾರದು. ಇದನ್ನು ಅಣ್ಣಾ ಅವರು ಅರ್ಥಮಾಡಿಕೊಳ್ಳುತ್ತಿಲ್ಲ. ಮೇಲಾಗಿ ಸರಕಾರ ಈಗಾಗಲೇ ಒಂದು ಲೋಕಪಾಲ ಮಸೂದೆಯನ್ನು ತರಲು ಹೊರಟಿರುವಾಗ ಮೊದಲು ಅದನ್ನು ಜಾರಿಗೆ ಬರಲು ಅವಕಾಶವನ್ನು ಕೊಟ್ಟು ನಂತರ ಅಗತ್ಯವಿರುವ ತಿದ್ದುಪಡಿಗಳಿಗಾಗಿ ಒತ್ತಡವನ್ನು ತರಬಹುದಾಗಿತ್ತು. ಆದರೆ ಅಣ್ಣಾ ಅವರ ತಂಡ ಒತ್ತಡಕ್ಕಿಂತ ಹೆಚ್ಚಾಗಿ ಪ್ರತಿಸರ್ಕಾರದ ಸ್ಟೈಲ್‌ನಲ್ಲಿ ವರ್ತಿಸುತ್ತಿರುವುದು ಸರಿಯಾಗಿಲ್ಲ.

Anna_Hazare

Anna_Hazare

ಇಷ್ಟೆಲ್ಲ ಆದರೂ ಅಣ್ಣಾ ಅವರ ತಂಡಕ್ಕೆ ಇರಬೇಕಾದ ಜವಾಬ್ದಾರಿಗಿಂತ ಹೆಚ್ಚಿನ ಜವಾಬ್ದಾರಿ ಭಾರತ ಸರಕಾರಕ್ಕೆ ಇರುತ್ತದೆ. ಜಾಣತಂತ್ರವನ್ನು ಬಳಸಬಹುದು ಎನ್ನುವುದಾದರೆ ಸರಕಾರವು ಅಣ್ಣಾ ಅವರು ಹೇಳಿದ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬಹುದಾಗಿತ್ತು. ಆ ಮಸೂದೆ ಲೋಕಸಭೆಯಲ್ಲಾಗಲಿ, ರಾಜ್ಯ ಸಭೆಯಲ್ಲಾಗಲಿ ಸ್ವೀಕೃತವಾಗುತ್ತಲೇ ಇಲ್ಲ. ಆಗ ಕೇಂದ್ರ ಸರಕಾರವು ಸುಲಭವಾಗಿ ತಾನು ಮಾಡುವ ಅಪರಾಧಕ್ಕೆ ಬಿಜೆಪಿಯನ್ನೂ ಎಳೆದುಕೊಂಡೇ ಹೊಂಡಕ್ಕೆ ಬೀಳಬಹುದಾಗಿತ್ತು! ಮಸೂದೆಯನ್ನು ಅನುಮೋದಿಸದಿರುವ ಜವಾಬ್ದಾರಿ ಸಂಸತ್ತಿಗೆ ಬರುತ್ತಿತ್ತು. ಸರಕಾರ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಅಥವಾ ಅಣ್ಣಾ ಅವರನ್ನು ಅವರ ಪಾಡಿಗೆ ಸತ್ಯಾಗ್ರಹ ಮಾಡಲು ಬಿಟ್ಟು ತಾನು ತನ್ನ ಪಾಡಿಗೆ ಮಸೂದೆಯನ್ನು ಮಂಡಿಸಿ ತಾನು ಎಷ್ಟನ್ನು ಮಾಡಲು ಸಾಧ್ಯವಾಗುತ್ತಿದೆ ಎನ್ನುವುದನ್ನು ರಾಷ್ಟ್ರಕ್ಕೆ ವಿವರಿಸಬಹುದಾಗಿತ್ತು.

ಆದರೆ ಸರಕಾರವು ತನ್ನ ನಡವಳಿಕೆಯಿಂದ ತಾನು ಭ್ರಷ್ಟಾಚಾರದ ಪರವಾಗಿದ್ದೇನೆ ಎಂಬ ಕೆಟ್ಟ ವರ್ಚಸ್ಸು ತನಗೆ ಬರುತ್ತದೆ ಎನ್ನುವುದನ್ನೂ ಲೆಕ್ಕಿಸದೆ ಅಣ್ಣಾ ಅವರ ಮೇಲೆ ಹರಿಹಾಯಲು ಶುರು ಮಾಡಿತು. ಸರಕಾರದ ಕಡೆಯಿಂದ ಮಾತನಾಡಿದವರೆಲ್ಲ ಸಂಸತ್ತಿನ ಪರಮಾಧಿಕಾರ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡೇ ಮಾತನಾಡಿದರು. ನಿಜವಾಗಿಯೂ ಸಂಸತ್ತಿಗೆ ಆ ರೀತಿಯ ಪರಮಾಧಿಕಾರ ಇರುವುದಾದರೆ ‘ಪ್ರತಿಭಟನೆಯನ್ನು ಮಾಡತಕ್ಕದ್ದಲ್ಲ’ ಎಂದು ಸಂಸತ್ತು ಒಂದು ನಿರ್ಣಯವನ್ನು ಅಂಗೀಕರಿಸಬೇಕಾಗಿತ್ತು. ಕನಿಷ್ಠ ಪಕ್ಷ ಕೇಂದ್ರ ಕ್ಯಾಬಿನೆಟ್ ಈ ರೀತಿಯ ನಿರ್ಣಯವನ್ನು ಮಾಡಬೇಕಾಗಿತ್ತು. ಅಥವಾ ರಾಷ್ಟ್ರಪತಿಯವರು ಸುಗ್ರೀವಾಜ್ಞೆಯನ್ನು ಮಾಡಬೇಕಾಗಿತ್ತು. ಆದರೆ ಆ ಮೂರನ್ನೂ ಮಾಡಲು ಆಗುವುದಿಲ್ಲ. ಯಾಕೆಂದರೆ ಆ ರೀತಿ ನಿರ್ಣಯವನ್ನು ಮಾಡಿದರೆ ಅಂತಹ ನಿರ್ಣಯವು ತಾನೇ ತಾನಾಗಿ ಅಸಾಂವಿಧಾನಿಕವೆಂದು ಪರಿಗಣಿಸಲ್ಪಟ್ಟು ಸಂವಿಧಾನದ ಪರಮೋಚ್ಛ ಆದೇಶಾನುಸಾರ ತಾನೇ ತಾನಗಿ ರದ್ದಾಗುತ್ತದೆ. ಆ ಕಾರಣಕ್ಕಾಗಿಯೇ ಸಂಸತ್ತಿನ ಸರ್ವೋಚ್ಛ ಅಧಿಕಾರ ಎಂದು ಚಿದಂಬರಂ ಹೇಳುತ್ತಾರೆ, ಕಪಿಲ್ ಸಿಬಲ್ ಹೇಳುತ್ತಾರೆ, ಮನಮೋಹನ್ ಸಿಂಗ್ ಹೇಳುತ್ತಾರೆ. ನಮಗೂ ಹೇಳಲು ಅಧಿಕಾರವಿರುವುದರಿಂದ ನಾನು, ನೀವು ಎಲ್ಲರೂ ಹೇಳಬಹುದು. ಆದರದು ಹೇಳಿಕೆಯಾಗಿ ‘ಚರ್ಚೆ’ ಆಗುತ್ತದೆಯೆ ಹೊರತು ನಿರ್ಣಯ ಆಗುವುದಿಲ್ಲ.

ಸಂಸತ್ತಿನ ಸರ್ವೋಚ್ಛ ಅಧಿಕಾರವು ಸಂವಿಧಾನದಿಂದ ನಿಯಂತ್ರಿತವಾಗಿದೆ. ಸಂವಿಧಾನದ ಮೂಲ ತತ್ವಗಳನ್ನು ಸಂಸತ್ತು ಕೂಡ ರದ್ದುಪಡಿಸುವ ಹಾಗಿಲ್ಲ. ಸಂಸತ್ತು ಒಂದು ಒಂದು ನಿರ್ಣಯವನ್ನು ಮಾಡಿ ಭಾರತ ಸಂವಿಧಾನವನ್ನು ರದ್ದುಪಡಿಸಿ ಮಿಲಿಟರಿ ಆಡಳಿತವನ್ನು ಜಾರಿಗೆ ತರಲು ಆಗುವುದಿಲ್ಲ. ಭಾರತದ ಭೂ, ಜಲ, ವಾಯು ವ್ಯಾಪ್ತಿಯಲ್ಲಿ ಸಂವಿಧಾನದ ಮೂಲ ತತ್ವಗಳನ್ನು ಉಲ್ಲಂಘಿಸುವ ಯಾವ ಆದೇಶವನ್ನು ಯಾರೇ ಮಾಡಿದರೂ ಅದು ಸಂವಿಧಾನದ ಪರಮೋಚ್ಛ ಆದೇಶಾನುಸಾರ ರದ್ದಾಗುತ್ತದೆ.

ಇಂಥಲ್ಲಿ ‘ಪ್ರಜಾಪ್ರಭುತ್ವ’ ಎನ್ನುವುದು ಸಂವಿಧಾನದ ಮೂಲ ತತ್ವವಾಗಿದೆ. ‘ಪ್ರಜಾಪ್ರಭುತ್ವ’ ಎಂದ ತಕ್ಷಣ ತಾನೇ ತಾನಾಗಿ ಆಡಳಿತವನ್ನು ಪ್ರತಿಭಟಿಸುವ ಹಕ್ಕು ಜನರಿಗೆ ಪ್ರಾಪ್ತವಾಗುತ್ತದೆ. ಸರ್ವೋಚ್ಛ ಅಧಿಕಾರದ ಬಗ್ಗೆ ಸಂವಿಧಾನ ಏನು ಹೇಳುತ್ತದೆ? ಸಂವಿಧಾನದ ಶಬ್ದ ಪ್ರಾರಂಭವಾಗುವುದೇ ‘We the people of India…’ ಎಂದು. ಸಂವಿಧಾನವು ಆಡಿರುವ ಈ ಶಬ್ದಕ್ಕೆ ಸಂವಿಧಾನದ ಉದ್ದಕ್ಕೂ ವಿವರಣೆಗಳು ಸಿಗುತ್ತವೆ. ಈ ಮಾತಿನ ಮುಖಾಂತರ ಸಂವಿಧಾನವು ರಾಷ್ಟ್ರದ ಸರ್ವೋಚ್ಛ ಅಧಿಕಾರವನ್ನು ರಾಷ್ಟ್ರದ ಜನರದ್ದು ಎಂದು ತಿಳಿಸುತ್ತದೆ. ಜನತಾ ಪರಮಾಧಿಕಾರವನ್ನು ಧಿಕ್ಕರಿಸುವ ಅಧಿಕಾರ ಸಂಸತ್ತಿಗಿಲ್ಲ. ಹಾಗಾದರೆ ಅಣ್ಣಾ ಹಜಾರೆ ರಾಷ್ಟ್ರದ ಜನರ ಸಮಗ್ರ ಪ್ರತಿನಿಧಿಯೇ ಎಂದು ಕೇಳಿದರೆ ‘ಅಲ್ಲ’ ಎನ್ನುವುದೇ ಉತ್ತರವಾಗಿದೆ. ಯಾವ ರಾಷ್ಟ್ರದಲ್ಲಿಯೂ ಒಬ್ಬ ಹೋರಾಟಗಾರ ಎಲ್ಲ ಜನರ ಅಧಿಕೃತ ಪ್ರತಿನಿಧಿಯಾಗಿರುವುದಿಲ್ಲ. ಆದರೆ ಒಬ್ಬ ವ್ಯಕ್ತಿ ಒಂಟಿಯಾಗಿದ್ದಾಗಲೂ ಕೂಡ ಅವನಿಗಿರುವ ಪರಮಾಧಿಕಾರವನ್ನು ಚಲಾಯಿಸಲು ಹಕ್ಕುಳ್ಳವನೇ ಆಗಿದ್ದಾನೆ. ಅಣ್ಣಾ ಅವರು ಅದನ್ನೇ ಮಾಡುತ್ತಿದ್ದಾರೆ. ಅಣ್ಣಾ ಸಂಸತ್ತಿನ ಅಧಿಕಾರವನ್ನು ನಿರಾಕರಿಸಿಲ್ಲ. ಸಂಸತ್ತು ಇಂಥಾದ್ದನ್ನು ಮಾಡಬೇಕು ಎನ್ನುತ್ತಿದ್ದಾರೆ. ಸಂಸತ್ತನ್ನು ‘ಡಿಕ್ಟೇಟ್’ ಮಾಡುತ್ತಿದ್ದಾರೆ ಎಂದು ಸರಕಾರ ಭಾವಿಸುವುದಾದರೆ ಆ ರೀತಿ ‘ಡಿಕ್ಟೇಟ್’ ಮಾಡುವ ಹಕ್ಕು ಅಣ್ಣಾ ಅವರಿಗೆ ಇದೆ. ಅದನ್ನು ಸ್ವೀಕರಿಸದೆ ಇರುವ ಹಕ್ಕು ಸಂಸತ್ತಿಗೂ ಇದೆ. ಆದರೆ ‘ಡಿಕ್ಟೇಟ್’ ಮಾಡಲು ಅಣ್ಣಾ ಅವರಿಗಿರುವ ಹಕ್ಕನ್ನು ಮೊಟಕುಗೊಳಿಸುವ ಅಧಿಕಾರ ಸಂಸತ್ತಿಗೂ ಇಲ್ಲ. ಇವರಿಗೆ ಸಂಸತ್ತು ಕಲಾಪ ನಡೆಯುವಾಗ ಕಲಾಪದಲ್ಲಿ ಭಾಗವಹಿಸಬೇಕೆಂಬ ಅರಿವು ಇಲ್ಲ. ಬಾಂಗ್ಲಾ ದೇಶದವನು ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ನಿಂತು ಭಾರತದ ಲೋಕಸಭೆಗೆ ಆರಿಸಿ ಬಂದರೆ ಸಂಸತ್ತಿನ ಪರಮಾಧಿಕಾರದ ಉಲ್ಲಂಘನೆ ಎನಿಸುವುದಿಲ್ಲ. ರಾಷ್ಟ್ರದ ಸಂಪತ್ತಿನ ಮಹಾನ್ ಸಂರಕ್ಷಕನಾಗಿ ಸಂಸತ್ತು ಕಾರ್ಯನಿರ್ವಹಿಸಬೇಕೆಂದು ಸಂವಿಧಾನವು ನೀಡಿದ ಆದೇಶವನ್ನು ಪಾಲಿಸಲು ಆಗುವುದಿಲ್ಲ. ಪ್ರತಿಭಟನೆ ಮಾಡಿದರೆ ಸಂಸತ್ತಿನ ಪರಮಾಧಿಕಾರದ ಪ್ರಶ್ನೆ ಬರುತ್ತದೆ. ಶೇಮ್, ಶೇಮ್.

(ಚಿತ್ರ-ಕೃಪೆ : ವಿಕಿಪೀಡಿಯ)