Tag Archives: ವಕೀಲ

ಕರಿಕೋಟಿನ ದಂಡು ಪಾಳ್ಯದ ಗ್ಯಾಂಗ್


– ಡಾ.ಎನ್.ಜಗದೀಶ ಕೊಪ್ಪ


 

ಗೆಳೆಯರೇ,

ಮಾರ್ಚ್ ಎರಡರ ಶುಕ್ರವಾರ, ಅಂದರೆ ಈ ದಿನ, ಕರ್ನಾಟಕದ ಪಾಲಿಗೆ ಕಪ್ಪು ಚುಕ್ಕೆಯ ದಿನ ಮಾತ್ರವಲ್ಲ, ಕರಾಳ ದಿನವೂ ಕೂಡ ಹೌದು. ಈ ದಿನ ಬೆಂಗಳೂರಿನಲ್ಲಿ ಕಪ್ಪುಕೋಟಿನ ಕೆಲವು ವಕೀಲರು ನಡೆಸಿರುವ ದಾಂಧಲೆ, ಗೂಂಡಾಗಿರಿ, ಮತ್ತು ಮಾಧ್ಯಮದವರು, ಪೋಲಿಸರು, ವಿದ್ಯಾರ್ಥಿಗಳ ಮೇಲೆ ಅವರು ನಡೆಸಿರುವ ಅಮಾನುಷ ಹಲ್ಲೆ ಈ ಕೃತ್ಯಗಳನ್ನು ಗಮನಿಸಿದಾಗ ಇಡೀ ನಾಗರೀಕ ಜಗತ್ತು ತಲೆತಗ್ಗಿಸುವಂತಿತ್ತು.

ಇವರುಗಳು ವಕೀಲರೊ? ಅಥವಾ ದಂಡುಪಾಳ್ಯದ ಗ್ಯಾಂಗಿನ ಸದಸ್ಯರೊ? ಎಂಬ ಅನುಮಾನ ಕಾಡತೊಡಗಿದೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲರು ಎನಿಸಿಕೊಂಡ ಕೆಲ ಗೂಂಡಾಗಳು ವರ್ತಿಸುತ್ತಿರುವ ವೈಖರಿ ನಿಜಕ್ಕೂ ನಾಗರೀಕರಲ್ಲಿ ಜಿಗುಪ್ಸೆ ಮೂಡಿಸಿತ್ತು. ಅದು ಈ ದಿನ ಪರಕಾಷ್ಟೆ ಮುಟ್ಟಿತು.

ಕಳೆದ ತಿಂಗಳು ಬೆಂಗಳೂರು ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ವಕೀಲರುಗಳು ಸತತ ಏಳುಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ನಾಗರೀಕರ ಮೇಲೆ ಹಲ್ಲೆ ನಡೆಸಿದಾಗ ಪೋಲಿಸರು ಮತ್ತು ಸರ್ಕಾರ ತಮ್ಮ ನಿಷ್ಕ್ರಿಯತೆಯನ್ನು ಬದಿಗಿಟ್ಟು ಆ ದಿನವೇ ಕಠಿಣ ಕ್ರಮ ತೆಗೆದುಕೊಂಡಿದ್ದರೆ, ನಾವುಗಳು ಈ ದಿನದ ಈ ಕರಾಳ ಕೃತ್ಯಕ್ಕೆ ಸಾಕ್ಷಿಯಾಗಬೇಕಿರಲಿಲ್ಲ.

ನನ್ನ ಮೂರು ದಶಕಗಳ ಪತ್ರಿಕೋದ್ಯಮದ ವೃತ್ತಿಯಲ್ಲಿ ಹಲವಾರು ವಕೀಲರನ್ನು ನೋಡಿದ್ದೇನೆ. ಇವತ್ತಿಗೂ, ಬೆಂಗಳೂರಿನ ಸಿ.ಎಚ್. ಹನುಮಂತರಾಯ, ಪ್ರೊ. ರವಿವರ್ಮಕುಮರ್, ಸಿ.ಎಸ್. ದ್ವಾರಕನಾಥ್, ಎಂ.ಸಿ. ನಾಣಯ್ಯ, ಎ.ಕೆ. ಸುಬ್ಬಯ್ಯ, ಮಂಡ್ಯದ ಕೇಶವಮೂರ್ತಿ, ಮೈಸೂರಿನ ರಾಧಾಮಣಿ, ಧಾರವಾಡದ ಬಸವಪ್ರಭು ಹೊಸಕೇರಿ ಮುಂತಾದ ಹಿರಿಯ ವಕೀಲರು ನನ್ನ ಗೆಳೆಯರಾಗಿದ್ದಾರೆ ನಿಜ. ಆದರೆ, ಇವರ್ಯಾರು ತಮ್ಮ ವೃತ್ತಿಯ ಘನತೆಯನ್ನಾಗಲಿ, ಅಥವಾ ಸಾರ್ವಜನಿಕ ಬದುಕಿನಲ್ಲಿ ಒಬ್ಬ ನಾಗರೀಕನಿಗೆ ಇರಬೇಕಾದ ಜವಬ್ದಾರಿಗಳನ್ನಾಗಲಿ ಮರೆತು ಎಂದೂ ಕೀಳಾಗಿ ವರ್ತಿಸಿದವರಲ್ಲ. ಏನಾಗಿದೆ ಈ ಯುವ ವಕೀಲರಿಗೆ? ಇವರ ವರ್ತನೆಯನ್ನ ವೀಕ್ಷಿಸಿದರೆ, ಇವರುಗಳು ವಿಶ್ವವಿದ್ಯಾಲಯಗಳಿಂದ ಕಾನೂನು ಪದವಿ ಪಡೆದು ಬಂದವರಂತೆ ಕಾಣುವುದಿಲ್ಲ, ಬದಲಾಗಿ ಯಾವುದೋ ಕೊಳಚೆಗೇರಿಯಲ್ಲಿ ಮಚ್ಚು ಲಾಂಗುಗಳ ಜೊತೆ ಬೆಳೆದು ಬಂದವರಂತೆ ಭಾಸವಾಗುತ್ತಾರೆ.

ಕಳೆದ ತಿಂಗಳು 17ರಂದು ಇವರುಗಳ ಮುಷ್ಕರದಿಂದ ಸಾರ್ವಜನಿಕರಿಗೆ ಆದ ತೊಂದರೆಯನ್ನು ಪರಿಣಾಮಕಾರಿಯಾಗಿ ಬಿತ್ತರಿಸಿದ ದೃಶ್ಯ ಮಾಧ್ಯಮಗಳ ಮೇಲೆ ಸೇಡಿನ ಭಾವನೆಯನ್ನು ಜೀವಂತವಾಗಿ ಇರಿಸಿಕೊಂಡಿದ್ದ ಈ ವಕೀಲರು ಈ ದಿನ ಏಕಾಏಕಿ ಕ್ಯಾಮರಾಮೆನ್‌ಗಳ ಮೇಲೆ ಮೃಗಗಳಂತೆ ಮುಗಿಬಿದ್ದು ಹಲ್ಲೆ ನಡೆಸಿದ ಕ್ರಮ ಇಡೀ ವಕೀಲರ ಸಮುದಾಯವೇ ತಲೆ ತಗ್ಗಿಸುವ ಸಂಗತಿ. ಕಳೆದ ತಿಂಗಳ ಘಟನೆಯನ್ನು ಮಾಧ್ಯಮದಲ್ಲಿ ಬಹಿರಂಗವಾಗಿ ಖಂಡಿಸಿದ್ದ ಪೊ.ರವಿವರ್ಮಕುಮಾರ್‌ರವರಿಗೆ ಇದೇ ಗೂಂಡಗಳು ಜೀವ ಬೆದರಿಕೆ ಹಾಕಿದ್ದನ್ನು ಸಹ ಇಲ್ಲಿ ನೆನೆಯಬಹುದು.

ಕಳೆದ ಒಂದು ದಶಕದಿಂದ ವಕೀಲಿ ವೃತ್ತಿಗೆ ಬರುತ್ತಿರುವ ಬಹುತೇಕ ಮಂದಿ ನಾಲಾಯಕ್ಕಾದವರು. ( ಈ ಬಗ್ಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಾನು ಬರೆದ  “ನಿಂತ ನೀರಾಗಿ ಕೊಳೆತವರು” ಎಂಬ ಲೇಖನ ಇದೇ ವರ್ತಮಾನದಲ್ಲಿ ಪ್ರಕಟವಾಗಿದೆ ಗಮನಿಸಿ.)

ಈ ದಿನ ಬೆಳಿಗ್ಗೆ 10 ಗಂಟೆಯಿಂದಲೇ ಕಾವೇರಿ ಭವನದ ಹಿಂಭಾಗದ ಸಿವಿಲ್ ನ್ಯಾಯಾಲಯ ಸಂಕೀರ್ಣ ರಣರಂಗವಾಗಿಹೋಯಿತು. ಖೈದಿಗಳನ್ನು ವಿಚಾರಣೆಗೆ ಕರೆತಂದ ಪೋಲಿಸರು ಮತ್ತು ನ್ಯಾಯಾಲಯದ ವಿಚಾರಣೆಗೆ ಆಗಮಿಸಿದ ನಾಗರೀಕರನ್ನು ಸಂಜೆಯವರೆಗೂ ಒತ್ತೆಯಾಳುಗಳಾಗಿ ಇರಿಸಿಕೊಂಡು ವಕೀಲರು ನಡೆಸುತಿದ್ದ ದಾಂಧಲೆಯನ್ನು, ವಾಹನಗಳಿಗೆ ಬೆಂಕಿ ಹಚ್ಚಿ, ಪೋಲಿಸರತ್ತ ಕಲ್ಲು ತೂರುತಿದ್ದ ಅವರ ಕ್ರಿಯೆಯನ್ನು ಗಮನಿಸುತ್ತಿದ್ದರೆ, ಈ ರಾಜ್ಯದಲ್ಲಿ ಸರ್ಕಾರವೆಂಬುದು ಅಸ್ತಿತ್ವದಲ್ಲಿ ಇದೆಯಾ? ಎಂಬ ಪ್ರಶ್ನೆ ಮನಸಿನಲ್ಲಿ ಒಮ್ಮೆ ಹಾದುಹೋಯಿತು.

ರಾಜಧಾನಿಯಲ್ಲಿ ಘಟನೆ ಸಂಭವಿಸಿ ಮೂರು ಗಂಟೆಗಳ ನಂತರವೂ, ಗುಪ್ತಚರ ಇಲಾಖೆಯನ್ನು ತನ್ನ ಬಳಿ ಇಟ್ಟುಕೊಂಡ ಒಬ್ಬ ಮುಖ್ಯಮಂತ್ರಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉತ್ತರ ನೀಡುತ್ತಾನೆ, ಪತ್ರಕರ್ತರ ಪ್ರಶ್ನೆಗೆ ಯಾವ ಉತ್ತರವನ್ನು ನೀಡದ ಒಬ್ಬ ಗೃಹಸಚಿವ ಪೇಲವ ನಗೆ ಬೀರುತ್ತಾನೆ, ಇಡೀ ನಗರದ ರಕ್ಷಣೆ ಹೊತ್ತ ಒಬ್ಬ ಪೋಲಿಸ್ ಆಯುಕ್ತ ಘಟನಾ ಸ್ಥಳಕ್ಕೆ ತೆರಳಿ ಒಬ್ಬ ಪೋಲಿಸ್ ಪೇದೆಯಂತೆ ಅಸಹಾಯಕನಾಗಿ ನಿಂತು ಮಾತಿಲ್ಲದೆ ತೆರಳುತ್ತಾನೆ ಅಂದರೆ, ಇವರುಗಳ ವರ್ತನೆಯನ್ನು ಹೇಗೆ ವ್ಯಾಖ್ಯಾನಿಸಬೇಕು, ಅಥವಾ ಹೇಗೆ ಅರ್ಥೈಸಿಕೊಳ್ಳಬೇಕು ನೀವೇ ನಿರ್ಧರಿಸಿ.

ಇದೀಗ ರಾಜ್ಯ ಸರ್ಕಾರ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ಇದೊಂದು ತಿಪ್ಪೆ ಸಾರಿಸುವ ಕ್ರಮ ಅಷ್ಟೇ. ಕರ್ನಾಟಕದ ಇತಿಹಾಸದಲ್ಲಿ ಯಾವ ನ್ಯಾಯಾಂಗದ ತನಿಖೆಯ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ ಅಥವಾ ವರದಿ ಅನ್ವಯ ಯಾರಿಗೆ ಶಿಕ್ಷೆಯಾಗಿದೆ ಎಂಬುದನ್ನು ಬಲ್ಲವರು ಉತ್ತರಿಸಬೇಕಾಗಿದೆ.

ಕೊನೆಯ ಮಾತು- ಈ ದಿನದ ಘಟನೆ ಕುರಿತಂತೆ ನಮ್ಮ ದೃಶ್ಯ ಮಾಧ್ಯಮಗಳು ವರದಿ ಮಾಡುವಾಗ ಬಳಸಿದ ಭಾಷೆ ವೃತ್ತಿಗೆ ಘನತೆ ತರುವಂತಿರಲಿಲ್ಲ. ವಿಶೇಷವಾಗಿ ಸುವರ್ಣವಾಹಿನಿಯ ರಂಗನಾಥ್ ಭಾರಧ್ವಜ್ ಮತ್ತು ಪಬ್ಲಿಕ್ ಟಿ.ವಿ.ಯ ನಮ್ಮ ರಂಗಣ್ಣ ತೀವ್ರ ಭಾವೋಧ್ವೇಗಕ್ಕೆ ಒಳಗಾಗಿ ಒರಟು ಭಾಷೆಯನ್ನು ಬಳಸಿದರು. ಇಡೀ ಘಟನಾವಳಿಗಳನ್ನು ಸಂಯಮದಿಂದ ವರದಿ ಮಾಡಿದ ಕೀರ್ತಿ ಟಿ.ವಿ.9  ವರದಿಗಾರ ಕಿರಣ್‌ಗೆ ಸಲ್ಲಬೇಕು.

(ಚಿತ್ರಕೃಪೆ: ಹಿಂದು, ಸಿಎನ್‍ಎನ್-ಐಬಿಎನ್)

Karnataka High Court

ನಿಂತ ನೀರಾಗಿ ಕೊಳೆತವರು

ಕಳೆದ ವಾರ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಭವಿಸಿದ ಆಘಾತಕಾರಿ ಸಂಗತಿ ಯಾವುದೇ ಕನ್ನಡ ಮಾಧ್ಯಮಗಳಲ್ಲಿ ಸುದ್ಧಿಯಾಗಲಿಲ್ಲ. ಆದರೆ, ಎಲ್ಲಾ ಇಂಗ್ಲೀಷ್ ಪತ್ರಿಕೆಗಳು ಇದನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿ ಜೊತೆಗೆ ಸಂಪಾದಕೀಯ ಬರೆದು ಆತಂಕ ವ್ಯಕ್ತಪಡಿಸಿದವು.

ಕರ್ನಾಟಕದಲ್ಲಿ ಖಾಲಿ ಇರುವ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನೇಮಕ ಮಾಡುವ ಉದ್ದೇಶದಿಂದ ರಾಜ್ಯ ಹೈಕೋರ್ಟ್, ಏಳು ವರ್ಷ ಸೇವೆ ಸಲ್ಲಿಸಿರುವ ವಕೀಲರಿಗಾಗಿ ಅರ್ಹತೆ ಪರೀಕ್ಷೆಯೊಂದನ್ನು ಕಳೆದ ವಾರ ಏರ್ಪಡಿಸಿತ್ತು. 518 ಮಂದಿ ವಕೀಲರು ಪಾಲ್ಗೊಂಡಿದ್ದ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಒಬ್ಬ ವಕೀಲ ಮಾತ್ರ. ಉಳಿದ 517 ಮಂದಿ ವಿಫಲರಾಗಿರುವುದು ಇವರ ವಕೀಲಿ ವೃತ್ತಿ ಬಗೆಗಿನ ಬದ್ಧತೆ ಮತ್ತು ಅಧ್ಯಯನದ ಕೊರತೆಯನ್ನು ಅನಾವರಣಗೊಳಿಸಿದೆ.

ಈ ಕುರಿತಂತೆ ಆತಂಕ ವ್ಯಕ್ತಪಡಿಸಿರುವ ಬಹುತೇಕ ಸುದ್ದಿ ಮಾಧ್ಯಮಗಳು, ದೇಶದ ಅತ್ಯಂತ ಪ್ರತಿಷ್ಠಿತ ಕಾನೂನು ಕಾಲೇಜು ಇರುವ ಬೆಂಗಳೂರಿನಲ್ಲಿ ಇಂತಹ ಸಂಗತಿ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸುವುದರ ಜೊತೆಗೆ, ಇಂದಿಗೂ ಭಾರತದ ಅನೇಕ ಕೆಳಹಂತದ ನ್ಯಾಯಾಲಯಗಳಲ್ಲಿ ಸಂಕ್ಷಿಪ್ತವಾಗಿ ತೀರ್ಪು ಬರೆಯಲಾರದ ನ್ಯಾಯಾಧೀಶರುಗಳಿದ್ದಾರೆ ಎಂದು ವ್ಯಂಗ್ಯವಾಡಿವೆ.

ಇಂದು ಕಾನೂನು ಜ್ಞಾನಶಿಸ್ತುಗಳಲ್ಲಿ ಒಂದಾಗಿದ್ದು ಹಲವು ಶಾಖೆಗಳಾಗಿ ಕವಲೊಡೆದಿದೆ. ಕಾನೂನು ಪದವಿಯ ಸಂದರ್ಭದಲ್ಲಿ ಹನ್ನೆರಡಕ್ಕೂ ಮೇಲ್ಪಟ್ಟ ವಿವಿಧ ವಿಷಯಗಳ ಕಾನೂನನ್ನು ಅಧ್ಯಯನ ಮಾಡುವುದು ಕಡ್ಡಾಯ. ಪದವಿಯ ನಂತರ ಯಾವುದೇ ವ್ಯಕ್ತಿ ವೃತ್ತಿಯ ಸಂದರ್ಭದಲ್ಲಿ ತನಗೆ ಇಷ್ಟವಾದ ಕಾನೂನು ಶಾಖೆಯೊಂದನ್ನು ಮುಂದುವರಿಸಿಕೊಂಡು ಹೋಗುತ್ತಾನೆ. ಇದು ಕಾನೂನು ಪರಿಣಿತಿಯಲ್ಲಿ ಅವಶ್ಯ ಕೂಡ ಹೌದು. ಹಾಗಾಗಿ ಇಂದು ನಾವು ಎಲ್ಲೆಡೆ ಕ್ರಿಮಿನಲ್ ಲಾ, ಸಿವಿಲ್ ಲಾ, ಕಂಪನಿ ಲಾ, ಅಂತಾರಾಷ್ಟ್ರೀಯ ಕಾನೂನು, ಹಿಂದೂ ಕಾನೂನು ಹೀಗೆ ಈ ವಿಷಯಗಳಲ್ಲಿ ಪರಿಣಿತ ಹಾಗೂ ತಜ್ಞ ವಕೀಲರನ್ನು ನಾವು ಕಾಣುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ಪರಿವರ್ತನಾ ಮತ್ತು ಚಲನಶೀಲವಾದ ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಪರಿಷ್ಕರಣೆಗೆ ಒಳಗಾಗುತ್ತಿರುವ ಕಾನೂನುಗಳ ಬಗ್ಗೆ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡವರು ಅಧ್ಯಯನ ಮಾಡುವುದು ಅಗತ್ಯ.ವಿಲ್ಲ ಎಂದು ಭಾವಿಸುವುದು ಅವಿವೇಕತನದ ಪರಮಾವಧಿಯಾಗುತ್ತದೆ.

ವರ್ತಮಾನದ ವಕೀಲಿ ವೃತ್ತಿ ಆಶಾದಾಯಕ ವೃತ್ತಿಯಾಗಿಲ್ಲ. ಆದರೂ ಕಾನೂನು ಅಧ್ಯಯನಕ್ಕೆ ಯುವ ಜನಾಂಗ ಆಸಕ್ತಿ ತೋರುತ್ತಿದ್ದು, ಪದವಿಯ ನಂತರ ಸ್ವತಂತ್ರ ವೃತ್ತಿಗಿಂತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ದೊರೆಯುತ್ತಿರುವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ದಶಕಗಳ ಹಿಂದೆ ಕಾನೂನು ಪದವಿ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ನಮ್ಮ ವಕೀಲರಿಗೆ ವೃತ್ತಿ ಮತ್ತು ಅದರ ಘನತೆಗಿಂತ ಸಂಘಟನೆ ಮತ್ತು ರಾಜಕೀಯ ಮುಖ್ಯವಾಗಿದೆ.

Karnataka High Court

Karnataka High Court

ಕರ್ನಾಟಕದಲ್ಲಿ ಇಂದು ವಕೀಲರ ಸಂಘ, ವಕೀಲರ ಪರಿಷತ್ ಹೀಗೆ ಹಲವು ಬಣಗಳು ಹುಟ್ಟಿಕೊಂಡು ಇವುಗಳ ಚುನಾವಣೆ ಮತ್ತು ಚುನಾವಣೆಯ ಸಂದರ್ಭದಲ್ಲಿ ವಕೀಲರ ವರ್ತನೆ ಯಾವ ರಾಜಕೀಯ ಪಕ್ಷಕ್ಕೂ ಕಡಿಮೆ ಇಲ್ಲ. ತಮ್ಮ ವೃತ್ತಿಯ ಘನತೆ ತೊರೆದು ರಾಜಕೀಯ ಪಕ್ಷಗಳೊಂದಿಗೆ ಹಲವು ವಕೀಲರು ಗುರುತಿಸಿಕೊಂಡಿದ್ದರೆ, ಮತ್ತಷ್ಟು ವಕೀಲರು ಯಾವ ಅಳುಕೂ ಇಲ್ಲದೆ ಕೋಮುವಾದಿ ಪಕ್ಷಗಳೊಂದಿಗೆ ಕೈ ಜೋಡಿಸಿ ಬೀದಿಗಿಳಿದು ಪ್ರತಿಭಟಿಸುವುದು, ರಸ್ತೆತಡೆ ಮಾಡುವುದನ್ನು ನಾವು ಕಾಣುತ್ತಿದ್ದೇವೆ.

ಇವರೆಲ್ಲರೂ ಒಮ್ಮೆ ತಮ್ಮ ಅರ್ಹತೆಯ ಬಗ್ಗೆ ತಮ್ಮ ತಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಹಾಕಿಕೊಳ್ಳುವುದು ಒಳಿತು. ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡ ಪ್ರತಿ ಮೂರು ವರ್ಷಕ್ಕೊಮ್ಮೆ ಇವರಿಗೆಲ್ಲಾ ಕಡ್ಡಾಯವಾಗಿ ಪರೀಕ್ಷೆ ನಡೆಸಿ ವಕೀಲಿ ವೃತ್ತಿಗೆ ಅನುಮತಿ ನೀಡುವುದನ್ನು ಚಾಲನೆಗೆ ತಂದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಒಂದಿಷ್ಟು ಸುಧಾರಣೆ ಕಾಣಬಹುದು. ಇಂತಹ ದುರ್ಗತಿ ಕೇವಲ ವಕೀಲ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ.

ಕಳೆದ ಆಗಸ್ಟ್ 15ರಂದು ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಖಾಸಗಿ ಚಾನಲ್ ಒಂದು ನಮ್ಮ ಸರಕಾರಿ ಶಾಲಾ ಶಿಕ್ಷಕರಿಗೆ, ಸ್ವತಂತ್ರ ಬಂದು ಎಷ್ಟು ವರ್ಷಗಳಾದವು?, ಮಹಾತ್ಮಗಾಂಧಿಯ ಪೂರ್ಣ ಹೆಸರೇನು?, ನೆಹರು ಪುತ್ರಿ ಯಾರು?, ಜಲಿಯನ್ ವಾಲಾಬಾಗ್ ಎಲ್ಲಿದೆ? ಎಂಬ ಪ್ರಶ್ನೆಗಳನ್ನು 50ಕ್ಕೂ ಹೆಚ್ಚು ಶಿಕ್ಷಕರ ಎದುರು ಇಟ್ಟಿತ್ತು. ಇವುಗಳಿಗೆ ಒಂದಿಬ್ಬರು ಹೊರತುಪಡಿಸಿದರೆ ಉಳಿದವರೆಲ್ಲಾ ಕ್ಯಾಮೆರಾ ಎದುರು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದರು. ಇವರೆಲ್ಲಾ ನಮ್ಮ ಸಮಾಜದ ಭಾಗವಾಗಿರುವುದು ವರ್ತಮಾನದ ದುರಂತಗಳಲ್ಲಿ ಒಂದು.

– ಡಾ.ಎನ್.ಜಗದೀಶ್ ಕೊಪ್ಪ