Tag Archives: ಸುಬ್ರಹ್ಮಣ್ಯ

ಪ್ರಗತಿಪರರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲು ಪಾಸ್ ಪೋರ್ಟ್ ಬೇಕಾ?

ಭೂಮಿ ಬಾನು

“ನೀವು ಉತ್ತರ ಕೊಡ್ರಿ. ನೀವ್ಯಾಕೆ ಇಲ್ಲಿಗೆ ಬಂದ್ರಿ. ನಾನೂರು ಕಿಲೋಮೀಟರ್ ದೂರದಿಂದ ಇಲ್ಲಿಗೆ ಬಂದು ಇಲ್ಲಿಯ ಸ್ಥಳೀಯರ ಭಾವನೆ ಕೆರಳಿಸ್ತೀರಾ…?”

“ನೀವು ಸುಮ್ಮನೆ, ಎಸಿ ಯವರಿಗೆ ಮನವಿ ಕೊಟ್ರಲ್ಲಾ. ಅಷ್ಟು ಸಾಕು. ಮತ್ತೇಕೆ ಇಲ್ಲಿಗೆ ಬಂದಿರಿ…?”

“ನಾನೂ ಈ ಸ್ಟೇಷನ್ ಗೆ ಹೊಸಬ. ನನಗೂ ಮಡೆಸ್ನಾನ ಅಂದರೆ ಗೊತ್ತಿರಲಿಲ್ಲ. ನಾನು ಒಂದು ಗಂಟೆ ನಿಂತು ನೋಡಿದೆ. ಅಲ್ಲಿ ಅವರು ಅವರ ಇಚ್ಛೆಯಂತೆ ಹಾಗೆ ಮಾಡ್ತಾರೆ. ಯಾರ ಒತ್ತಾಯವಿಲ್ಲ. ಎಲ್ಲಾ ಜಾತಿಯವರೂ ಇದ್ದಾರೆ. ಸರಕಾರ, ಪೊಲೀಸ್ ಏನಾದ್ರು ಬಲವಂತದಿಂದ ಹಾಗೆ ಮಾಡಿಸುತ್ತಿದೆಯಾ..?”

“ಇದು ಪೊಲೀಸ್ ಸ್ಟೇಷನ್. ನಿಮ್ಮಪ್ಪನ ಮನೆ ಅಲ್ಲ…”

ಬುಧವಾರ ಮಧ್ಯಾಹ್ನ ಸಮಯ ಸುದ್ದಿ ವಾಹಿನಿಯಲ್ಲಿ ಬಿತ್ತರವಾದ ಸುದ್ದಿಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅಧಿಕಾರಿ ಹಲ್ಲೆಗೊಳಗಾಗ ಕೆ.ಎಸ್ ಶಿವರಾಂ ಮತ್ತಿತತರೊಂದಿಗೆ ಮಾತನಾಡುತ್ತ ಕೇಳಿಬಂದ ವಾಕ್ಯಗಳಿವು. ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಮುಖಂಡರಾದ ಶಿವರಾಂ ಈಗಾಗಲೇ ಮಡೆಸ್ನಾನ ಆಚರಣೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ್ದರು. ನ್ಯಾಯಾಲಯದಲ್ಲಿ ಈ ಪದ್ಧತಿ ಆಚರಣೆಯನ್ನು ಪ್ರಶ್ನಿಸುವ ಉದ್ದೇಶದಿಂದ ಪ್ರತ್ಯಕ್ಷವಾಗಿ ದೇವಾಲಯದಲ್ಲಿ ನಡೆಯುವ ಆಚರಣೆ ಬಗ್ಗೆ ತಿಳಿದುಕೊಳ್ಳಲು ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು.

ದೇವಾಲಯ ಪ್ರವೇಶಕ್ಕೆ ನಿರ್ಬಂಧವಿಲ್ಲ. ಪ್ರವೇಶ ದ್ವಾರದ ಹತ್ತಿರ ಅವರು ತಮ್ಮನ್ನು ಮಾತನಾಡಿಸಿದ ಸುದ್ದಿ ವಾಹಿನಿ ವರದಿಗಾರರಿಗೆ ಬೈಟ್ ಕೊಡುತ್ತಿರುವಾಗ ಏಳೆಂಟು ಜನ ಅವರ ಮೇಲೆ ಎರಗಿದರು. ಹಿಗ್ಗಾ ಮುಗ್ಗಾ ಥಳಿಸಿದರು. ಒಬ್ಬ ಮಹಾಶಯನಂತೂ ಶಿವರಾಂ ಅವರ ಮುಖಕ್ಕೆ ವಸ್ತ್ರವನ್ನು ಮುಚ್ಚಿ ಅವರ ಮೇಲೆ ದಾಳಿಗೆ ಇಳಿಯುತ್ತಾನೆ.

ಈ ದಾಳಿ ಕೆಲವೇ ಕ್ಷಣಗಳಲ್ಲಿ ಸುದ್ದಿಯಾಯಿತು. ಪ್ರತಿಕ್ರಿಯೆಗಳು ವ್ಯಕ್ತವಾದವು. ಶಿವರಾಂ ಮತ್ತವರ ಸ್ನೇಹಿತರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅಲ್ಲಿದ್ದ ಅಧಿಕಾರಿ ದಾಳಿಗೆ ಒಳಗಾದವರನ್ನೇ ಹೀಯಾಳಿಸಿ ಮಾತನಾಡಿದ್ದೂ ಜಗಜ್ಜಾಹೀರಾಗಿದೆ. ಈ ರಾಜ್ಯದ ಗೃಹಮಂತ್ರಿಗೆ ಒಂದಿಷ್ಟು ಕಾನೂನು ಪ್ರಜ್ಞೆ ಇದ್ದಿದ್ದರೆ ಆ ಅಧಿಕಾರಿ ಈ ಹೊತ್ತಿಗೆ ಅಮಾನತ್ತಾಗಬೇಕಿತ್ತು. ದಾಳಿ ಮಾಡಿದವರನ್ನು ಹಿಡಿಯದೆ, ದೂರು ಕೊಟ್ಟು ರಕ್ಷಣೆ ಕೋರಲು ಬಂದವರನ್ನು ಹೀಗೆ ನಡೆಸಿಕೊಳ್ಳುವುದಾದರೆ, ರಾಜ್ಯದ ಜನತೆ ಅದ್ಯಾವ ಧೈರ್ಯದ ಮೇಲೆ ಪೊಲೀಸ್ ವ್ಯವಸ್ಥೆಗೆ ವಿಶ್ವಾಸ ಇಡಬೇಕು? ಈ ಪೊಲೀಸಪ್ಪ ಹೇಳುವುದನ್ನು ನೋಡಿದರೆ, ಸುಬ್ರಹ್ಮಣ್ಯಕ್ಕೆ ಹೋಗುವ ಯಾವುದೇ ಪ್ರಗತಿಪರ ಚಿಂತಕರಿಗೆ ಪಾಸ್ ಪೋರ್ಟ್ ಬೇಕು, ಪೊಲೀಸರ ವಿಶೇಷ ಅನುಮತಿ ಬೇಕು.

ಮಡೆಸ್ನಾನ (ಎಂಜಲು ಸ್ನಾನ) ಅವಮಾನಕರ. ಪದ್ಧತಿ ಆಚರಣೆ ನಡೆಸುವವರು ಅವರು ಸ್ವ ಇಚ್ಚೆಯಿಂದಲೇ ಮಾಡುತ್ತಿರಬಹುದು. ಕೆಲ ವರ್ಷಗಳ ಹಿಂದೆ ಬೆತ್ತಲೆ ಸೇವೆ ಮಾಡುತ್ತಿದ್ದವರೂ ಇಚ್ಚೆಯಿಂದಲೇ ಮಾಡುತ್ತಿದ್ದರು! ಹಾಗಂತ ಅಂತಹದೊಂದು ಅನಿಷ್ಟ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಬೇಕಾ? ಮತ್ತೊಬ್ಬನ ಎಂಜಲ ಮೇಲೆ ಉರುಳಾಡುವುದೆಂದರೆ ಅದು ಅಸಹ್ಯ, ಅವಮಾನಕರ ಎಂದು ಗ್ರಹಿಸದಷ್ಟು ಮೂಢರೇ ನಾವು? ಮೊದಲು ಬ್ರಾಹ್ಮಣರು ಉಂಡೇಳುತ್ತಾರೆ. ನಂತರ ಬ್ರಾಹ್ಮಣರನ್ನು ‘ಮೊದಲುಗೊಂಡು’ ಇತರರು ಅವರು (ಬ್ರಾಹ್ಮಣರು) ಉಂಡ ಎಲೆಗಳ ಮೇಲೆ ಉರುಳುತ್ತಾರೆ. ಅನೇಕರು ಈ ವಿಚಾರವಾಗಿ ವಾದ ಮಂಡಿಸುವಾಗ ಅನಗತ್ಯ ಗೊಂದಲ ಸೃಷ್ಟಿಸುತ್ತಾರೆ. ಈ ಪದ್ಧತಿ ಪ್ರಕಾರ ಕೇವಲ ದಲಿತರು ಸೇವೆ ಮಾಡುವುದಿಲ್ಲ. ಬ್ರಾಹ್ಮಣರೂ ಮಾಡುತ್ತಾರೆ. ಹಾಗಾಗಿ ಇದು ದಲಿತ, ಹಿಂದುಳಿದವರನ್ನು ಶೋಷಿಸುವ ಕೃತ್ಯ ಅಲ್ಲ ಎಂದು ವಾದಿಸುತ್ತಾರೆ. ಬ್ರಾಹ್ಮಣರೂ ಸೇವೆ ಮಾಡುತ್ತಾರೆ ಎಂದಾಕ್ಷಣ ಉಳಿದವರಿಗೆ ಅದು ಅವಮಾನವಲ್ಲ ಎಂದು ಗ್ರಹಿಸಬೇಕೆ?

ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ಅಲ್ಲಿ ಬ್ರಾಹ್ಮಣರು ಉಂಡೆಲೆಗಳ ಮೇಲೆ ಬ್ರಾಹ್ಮಣರೂ ಸೇರಿದಂತೆ ಇತರರು ಉರುಳುತ್ತಾರೆ. ಇದೇ ಬ್ರಾಹ್ಮಣರು, ದಲಿತ ಅಥವಾ ಹಿಂದುಳಿದವರು ಉಂಡೆದ್ದ ಎಲೆಗಳ ಮೇಲೆ ಉರುಳಲು ಸಿದ್ಧರೇ?

ಸುಬ್ರಹ್ಮಣ್ಯದ ವರದಿಗಾರರೊಬ್ಬರ ಪ್ರಕಾರ ಶಿವರಾಂ ಅವರ ಮೇಲೆ ದಾಳಿ ಮಾಡಿದವರು ದಲಿತರಂತೆ. ಇದನ್ನೂ ಒಂದು ತಂತ್ರವಾಗಿಯೇ ನೋಡಬೇಕು. ದಾಳಿಯಂತಹ ದೈಹಿಕ ಶ್ರಮ ಬಯಸುವ ಕೆಲಸಗಳಿಗೆ ಬೇಕಾಗುವವರು ಅವರೇ. ಪಾಪ ಅವರಿಗೆ ಅದರಿಂದ ಉಂಟಾಗುವ ಕಾನೂನು ಪರಿಣಾಮಗಳ ಅರಿವು ಇರುವುದಿಲ್ಲ. ಅವರ ಮುಗ್ಧತೆ, ಅಮಾಯಕತೆಯ ಲಾಭ ಪಡೆಯುವವರು ಬುದ್ದಿವಂತರು.