Tag Archives: ಸೋಮಣ್ಣ

ತನಿಖೆಗೆ ಆದೇಶ

– ವರ್ತಮಾನ ಬಳಗ

ಸಚಿವ ವಿ.ಸೋಮಣ್ಣ ವಿರುದ್ಧದ ಆರೋಪಗಳ ತನಿಖೆಗೆ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ. ಅಪರಾಧ ದಂಡ ಸಂಹಿತೆ 156 (3) ವಿಧಿ ಅಡಿ ನ್ಯಾಯಾಧೀಶರಿಗೆ ಪ್ರದತ್ತವಾದ ಅಧಿಕಾರದ ಅನ್ವಯ ಪ್ರಕರಣ ದಾಖಲಿಸಲು ಆದೇಶಿಸಿದೆ. ಇನ್ನು ಮುಂದೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.
ರವಿಕೃಷ್ಣಾ ರೆಡ್ಡಿ ನೀಡಿದ ದೂರಿನ ವಿಚಾರಣೆ ಆರಂಭವಾದಾಗಿನಿಂದ ಸಚಿವ ಸೋಮಣ್ಣ ಅಲ್ಲಲ್ಲಿ ಪ್ರತಿಕ್ರಿಯಿಸಿದ್ದಾರೆ. ಸುವರ್ಣ 24/7 ನ ಸಂದರ್ಶನದಲ್ಲಿ (ಟಾರ್ಗೆಟ್) ಸೋಮಣ್ಣ ತಮ್ಮನ್ನು ಸರ್ಮಥಿಸಿಕೊಳ್ಳುವ ಪ್ರಯತ್ನ ಮಾಡುವ ಭರದಲ್ಲಿ ತಪ್ಪನ್ನೂ ಒಪ್ಪಿಕೊಂಡರು. ತಾವು (ತಮ್ಮ ಪತ್ನಿ ಹೆಸರಿನಲ್ಲಿ) ಕೊಂಡ ಜಮೀನು ಡಿನೋಟಿಫೈ ಆಗಿಲ್ಲ ಎನ್ನುವ ಮಾಹಿತಿ ಅವರಿಗೆ ತಿಳಿದಿರಲಿಲ್ಲವಂತೆ. ಆ ಕಾರಣ ತಪ್ಪು ಆಗಿದ್ದರೂ ಅದು ಅವರಿಂದ ಆದದ್ದಲ್ಲ ಎನ್ನುವ ಸಮರ್ಥನೆ ಅವರದು.

ಧರ್ಮ ಸಿಂಗ್ ಅವರೇ ಡಿನೋಟಿಫೈ ಮಾಡಿದ್ದು, ನಂತರ ಅನಾವಶ್ಯಕವಾಗಿ ಯಡಿಯೂರಪ್ಪನವರ ಹೆಸರನ್ನು ತರಲಾಗಿದೆ ಎಂದು ಅವರು ಆರೋಪಿಸಿದರು. ಧರ್ಮ ಸಿಂಗ್ ಮೊದಲು ಡಿನೋಟಿಫೈಗೆ ಆದೇಶ ನೀಡಿದ್ದೇ ಆದರೆ ಅವರೂ ತಪ್ಪಿತಸ್ಥರೇ. ಪ್ರಕರಣ ವಿಚಾರಣೆ ವೇಳೆಯಲ್ಲಿ ನಿಜ ತಪ್ಪಿತಸ್ಥರ ಹೆಸರು ಬಯಲಾಗಲಿ.

ಆದೇಶ ಡಿನೋಟಿಫೈ ಆದೇಶ ಹೊರಬಂದದ್ದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ. ಅವರ ಆದೇಶದ ಅನ್ವಯ 22 ಗುಂಟೆ ಜಮೀನು ಡಿನೋಟಿಫೈ ಆಯಿತು. ಆ ಹೊತ್ತಿಗಾಗಲೇ ಸೋಮಣ್ಣ ಕುಟುಂಬದವರು ಶಾಲೆ ಕಟ್ಟಡ ಕಟ್ಟಿಯಾಗಿತ್ತು ಎನ್ನುವುದು ಗಮನಾರ್ಹ. ಒಬ್ಬ ಮಂತ್ರಿಯ ಮನೆಯವರು ಭೂಮಿಯ ಮೂಲ ದಾಖಲಾತಿಗಳನ್ನು ಗಮನಿಸದೇ ಕೊಳ್ಳುತ್ತಾರೆ ಎನ್ನುವುದು ನಂಬುವಂತಹ ಸಂಗತಿಯೆ? ಅವರು ಪ್ರಸ್ತುತ ಜಮೀನು ನೋಟಿಫೈ ಆಗಿದೆ ಎಂದು ತಿಳಿದೇ ಅದನ್ನು ಕೊಂಡದ್ದು ಮತ್ತು ಅದನ್ನು ಡಿನೋಟಿಫೈ ಮಾಡುವ ಸಾಮರ್ಥ್ಯ ಅವರಲ್ಲಿ ಇರುವ ಕಾರಣವೇ ಅಂತಹದೊಂದು ವ್ಯವಹಾರಕ್ಕೆ ಕೈ ಹಾಕಿದ್ದು ಎನ್ನುವುದನ್ನು ತಿಳಿಯಲು ಎಂಥವರಿಗೂ ಕಷ್ಟವಾಗಲಿಕ್ಕಿಲ್ಲ.

ಬಿಡಿಎ ವ್ಯಾಪ್ತಿಯಲ್ಲಿದ್ದ ಜಮೀನನ್ನು ಪರಭಾರೆ ಮಾಡಿದ್ದು ತಪ್ಪು. ಪರಭಾರೆ ಮಾಡಿಸಿಕೊಂಡದ್ದೂ ತಪ್ಪು. ಜಮೀನಿನ ಮೂಲ ಮಾಲೀಕ, ತಾನು ತನ್ನ ಜಮೀನನ್ನು ಸೋಮಣ್ಣನವರ ಕುಟುಂಬಕ್ಕೆ (ಕಾನೂನು ಬಾಹಿರವಾಗಿ) ಮಾರಾಟ ಮಾಡಿದ ಮೇಲೆ ಅದ್ಯಾವ ಆಧಾರದ ಮೇಲೆ ಡಿನೋಟಿಫೈ ಮಾಡಿ ಎಂದು ಮನವಿ ಸಲ್ಲಿಸಿದರು?

ಈಗಾಗಲೇ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ ಪ್ರಕರಣ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಹಾಗಿರುವಾಗ ಕೆಲವು ಮಾಧ್ಯಮ ಸಂಸ್ಥೆಗಳು ಮಾತ್ರ ಸೋಮಣ್ಣ ನಿರಪರಾಧಿ ಎನ್ನುವ ತೀರ್ಪನ್ನು ನ್ಯಾಯಾಲಯಕ್ಕೆ ಮೊದಲೇ ನೀಡುವ ಅವಸರ ತೋರಿದ್ದಾರೆ. ಅವರು ಹೇಳುವುದು ಇದು ಹಳೇ ಪ್ರಕರಣ. ಗಾಯಗಳಿಗೆ ಸೂಕ್ತ ಚಿಕಿತ್ಸೆ ಕೊಡದೇ ಇದ್ದರೆ ಅವು ಎಷ್ಟು ಕಾಲದ ನಂತರವಾದರೂ ಮರುಕಳಿಸಿಬಹುದು. ಅಂತೆಯೇ ಇದು. ಸೋಮಣ್ಣ ತಮ್ಮ ಮಾತಿನ ಧಾಟಿಯಲ್ಲಿ ‘ಪುಡಗೋಸಿ 22 ಗುಂಟೆ’ ಜಮೀನು ಎನ್ನುತ್ತಾರೆ. ಅವರಿಗೆ ಬೆಂಗಳೂರೆಂಬ ಊರಲ್ಲಿ 22 ಗುಂಟೆ ಪುಡಗೋಸಿ! ಯಾರ ಕಿವಿ ಮೇಲೆ ಹೂ ಮುಡಿಸುವ ಪ್ರಯತ್ನವಿದು?

ಸೋಮಣ್ಣ ತಾವು ತಪ್ಪಿತಸ್ಥರೆಂದು ಸಾಬೀತಾದರೆ ರಾಜಕಾರಣವನ್ನೇ ಬಿಡುತ್ತಾರಂತೆ. ಬೆಂಗಳೂರನ್ನೇ ಬಿಟ್ಟು ಬೇರೆಡೆಗೆ ಹೋಗುವುದಾಗಿಯೂ ಹೇಳಿದರು. ತಪ್ಪಿತಸ್ಥರೆಂದು ನ್ಯಾಯಾಲಯದಲ್ಲಿ ಸಾಬೀತಾದರೆ ಬೆಂಗಳೂರನ್ನು ಬಿಡುವ ಸಂದರ್ಭ ಎದುರಾಗಲಿಕ್ಕಿಲ್ಲ.

ಚಿತ್ರ: ದಿ ಹಿಂದು

 

ಬಿಎಸ್ ವೈ, ಸೋಮಣ್ಣ ವಿರುದ್ಧ ದೂರು

ಗುರುವಾರ ಲೋಕಾಯುಕ್ತ ಕೋರ್ಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಸೋಮಣ್ಣ ವಿರುದ್ಧ ಭೂಹಗರಣದ ದೂರು ದಾಖಲಾಯಿತು. ವರ್ತಮಾನ ಬಳಗದ ರವಿಕೃಷ್ಣಾರೆಡ್ಡಿ ಖಾಸಗಿ ದೂರನ್ನು ದಾಖಲಿಸಿದ್ದಾರೆ. ಕೆಂಗೇರಿ ಸಮೀಪ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವ ದಾಖಲೆಗಳು ಲಭ್ಯವಾಗಿವೆ.  ತೀವ್ರ ಅನಾರೋಗ್ಯದ ಕಾರಣ ರವಿಕೃಷ್ಣಾ ರೆಡ್ಡಿ ಅವರಿಗೆ ಇಲ್ಲಿ ವಿಸ್ತೃತ ಲೇಖನ ಬರೆಯಲು ಸಾಧ್ಯವಾಗಿಲ್ಲ. ಆದ್ದರಿಂದ ದೂರು ದಾಖಲಾದ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನ ಇಲ್ಲಿ ನೀಡಿದ್ದೇವೆ.

 

 

 

 

 

 

ಚಿತ್ರಕೃಪೆ: ಪ್ರಜಾವಾಣಿ, ಉದಯವಾಣಿ, ವಿಜಯ ಕರ್ನಾಟಕ