Tag Archives: ಹಂಪಿ

ಟಿ.ಆರ್.ಸಿ ಅಮಾನತು: ಯಾರ ಮಸಲತ್ತು?

-ಪರುಶುರಾಮ ಕಲಾಲ್
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಕ್ಷಿ ಪ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದವರಲ್ಲಿ ಟಿ.ಆರ್. ಚಂದ್ರಶೇಖರ್ ಒಬ್ಬರು. ಅವರನ್ನು ಈಗ ತಾಂತ್ರಿಕ ಕಾರಣವೊಂದರ ನೆಪದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ  ಅಮಾನತ್ತುಗೊಳಿಸಿದೆ. ಕನ್ನಡ ವಿವಿಯಲ್ಲಿ ಇದೊಂದು ಕೆಟ್ಟ ಬೆಳವಣಿಗೆ. ಕುತ್ಸಿತ ಮನಸ್ಸುಗಳು ಹಾಗೂ ವಿಘ್ನ ಸಂತೋಷಿಗಳು ಮಾತ್ರ ಇಂತಹ ನಿರ್ಣಯ ಕೈಗೊಳ್ಳಬಲ್ಲರು.

ರಾಯಚೂರು ಜಿಲ್ಲಾ ಪಂಚಾಯತ್ ಹಾಗು ಯುನಿಸೆಫ್ ಜಂಟಿಯಾಗಿ ನಡೆಸಿದ ಅಭಿವೃದ್ಧಿ ಯೋಜನೆಯಲ್ಲಿ ವಿಶ್ವವಿದ್ಯಾಲಯದ ಅನುಮತಿ ಪಡೆಯದೆ ಚಂದ್ರಶೇಖರ್ ಅವರು ನೋಡಲ್ ಅಧಿಕಾರಿಯಾಗಿ ಕೆಲಸ ಮಾಡಿರುವುದು ತಪ್ಪೆಂದು ತೀರ್ಮಾನಿಸಿ, ಕನ್ನಡ ವಿಶ್ವವಿದ್ಯಾಲಯ ಕಾರ್ಯ ಕಾರಿ ಸಮಿತಿ ಅಮಾನತ್ತುಗೊಳಿಸಿದೆ. ವಾಸ್ತವವೆಂದರೆ ಅದನ್ನು ಯಾರ ಗಮನಕ್ಕೂ ತಂದಿಲ್ಲ ಎನ್ನುವುದು ಮಾತ್ರ ಅಪ್ಪಟ ಸುಳ್ಳಾಗಿದೆ.
ರಾಯಚೂರು ಜಿಲ್ಲಾ ಪಂಚಾಯತ್ ಹಾಗು ಯುನಿಸೆಫ್ ಜಂಟಿಯಾಗಿ ನಡೆಸಲು ಉದ್ದೇಶಿಸಿದ ಯೋಜನೆ (ಟುವರ್ಡ್ಸ್ ಎ ಚೈಲ್ಡ್ ಫ್ರೆಂಡ್ಲಿ ಡಿಸ್ಟಿಕ್ಟ್-ವಿಲೇಜ್ ಲೆವೆಲ್ ಮೈಕ್ರೋ ಪ್ಲಾನಿಂಗ್ ಅಂಡ್ ಕನ್ವರ್ಜೆಂಟ್ ಮಾನಿಟರಿಂಗ್ ಆಫ್ ಬೇಸಿಕ್ ಸರ್ವೇಸ್ ಇನ್ ರಾಯಚೂರು ಡಿಸ್ಟಿಕ್) ಈ ಯೋಜನೆಯಲ್ಲಿ ಪಾಲ್ಗೊಳ್ಳುವ ತಮ್ಮ ಇರಾದೆಯನ್ನು ಪ್ರಸ್ತಾಪವೊಂದರ ಮೂಲಕ ವಿಭಾಗದ ಗಮನಕ್ಕೆ ತಂದಿದ್ದಾರೆ. 2008 ನವೆಂಬರ್ 26ರಂದು ನಡೆದ ವಿಭಾಗದ ಸಭೆಯಲ್ಲಿ ಈ ಪ್ರಸ್ತಾವನೆ ಕುರಿತು ಚರ್ಚಿಸಲಾಗಿದೆ. ಈ ಯೋಜನೆಯ ಬಗ್ಗೆ ವಿಭಾಗದ ಅನುಮತಿಯನ್ನು ಪಡೆದಿದ್ದಾರೆ. ಈ ಸಭೆಯ ನಡಾವಳಿಯ ಪ್ರತಿಯನ್ನು ಆಡಳಿತಾಂಗಕ್ಕೂ ಕಳಿಸಲಾಗಿದೆ.
2008-09ರಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿ ಅದೇ ವರ್ಷ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಯೋಜನೆ ಪೂರ್ಣಗೊಳಿಸಿರುವುದನ್ನು ವಿವಿ ಗಮನಕ್ಕೆ ತಂದಿದ್ದಾರೆ. ವಿವಿ ಗಮನಕ್ಕೆ ತರದೇ ಈ ಯೋಜನೆಯ ಜವಾಬ್ದಾರಿ ನಿರ್ವಹಿಸುವ ಉದ್ದೇಶ ಟಿ.ಆರ್. ಚಂದ್ರಶೇಖರ್ ಅವರಿಗಿದ್ದರೆ ಯೋಜನೆ ಪ್ರಸ್ತಾವನೆಯನ್ನೇ ವಿಭಾಗಕ್ಕೆ ಸಲ್ಲಿಸುತ್ತಿರಲಿಲ್ಲ. ವಾರ್ಷಿಕ ವರದಿಯಲ್ಲಿ ಇದನ್ನು ದಾಖಲಿಸುತಲೂ ಇರಲಿಲ್ಲ.
ತಪ್ಪಿತಸ್ಥ ವ್ಯಕ್ತಿ ಮುಂದೆ ನಡೆಯಲಿರುವ ತನಿಖೆಯನ್ನು ಪ್ರಭಾವಿಸಬಹುದೆನ್ನುವ ಕಾರಣಕ್ಕಾಗಿ ತನಿಖೆಗೆ ಮುನ್ನ ವ್ಯಕ್ತಿಯನ್ನು ಸೇವೆಯಿಂದ ಅಮಾನತ್ತುಗೊಳಿಸುವ ಕ್ರಮವಿದೆ. ಟಿ.ಆರ್. ಚಂದ್ರಶೇಖರ್ ಅವರು ವಿವಿ ಆಡಳಿತಾಂಗದ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಅವರು ಅಧ್ಯಾಪಕರು ಮಾತ್ರ. ತನಿಖೆ ನಡೆಸಿ, ತಪ್ಪಿತಸ್ಥರೆಂದು ತೀರ್ಮಾನವಾಗುವ ಮುಂಚೆಯೇ ಅಮಾನತ್ತು ಮಾಡಿರುವುದರ ಹಿಂದಿನ ಉದ್ದೇಶ ಏನು?
1996ರಲ್ಲಿ ಕನ್ನಡ ವಿವಿಯಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗ ಸ್ಥಾಪನೆಗೊಂಡಾಗ ವಿಭಾಗದ ಉದ್ದೇಶವೇ ಅಭಿವೃದ್ಧಿ ಸಿದ್ಧಾಂತ ಮತ್ತು ಆಚರಣೆಯನ್ನು ಅಧ್ಯಯನ ಮಾಡುವುದು. ಅಭಿವೃದ್ಧಿ ಪಾಲುದಾರರಿಗೆ ತರಬೇತಿ ನೀಡುವುದು. ಅಭಿವೃದ್ಧಿ ತಜ್ಞರ ರೂಪದಲ್ಲಿ ವಿವಿಧ ಸಂಘ, ಸಂಸ್ಥೆಗಳಿಗೆ ನೆರವು ನೀಡುವುದೇ ಆಗಿತ್ತು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಮತ್ತು ಮುಂಬಯಿ ಕರ್ನಾಟಕದ  ಪ್ರದೇಶಗಳ ಜಿಲ್ಲಾ ಪಂಚಾಯತ್ಗಳೊಂದಿಗೆ ಸೇರಿಕೊಂಡು ಅಭಿವೃದ್ಧಿ ಕಾರ್ಯಕ್ರಮಗಳ ಮೌಲ್ಯಮಾಪನ, ಜನಯೋಜನೆ ಸಿದ್ದಪಡಿಸುವುದು, ಅಭಿವೃದ್ಧಿ ಪಾಲುದಾರರಿಗೆ ತರಬೇತಿ ನೀಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇಲ್ಲೂ ಕೂಡ ವಿಭಾಗದ ಉದ್ದೇಶದ ಭಾಗವಾಗಿಯೇ ಡಾ. ಟಿ.ಆರ್. ಚಂದ್ರಶೇಖರ್ ಯುನಿಸೆಫ್ ಯೋಜನೆಯಲ್ಲಿ ಪಾಲ್ಗೊಂಡಿದ್ದರು. ಯುನಿಸೆಫ್ ಮತ್ತು ಜಿಲ್ಲಾ ಪಂಚಾಯ್ತಿಯು ಜಂಟಿಯಾಗಿ ಕೈಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವು ಎರಡೂ ಸರ್ಕಾರಿ  ಸಂಸ್ಥೆಗಳೇ ಆಗಿವೆ. ಲೆಕ್ಕಪತ್ರಗಳನ್ನು ಐ.ಎ.ಎಸ್. ಅಧಿಕಾರಿಗಳು ಧೃಢೀಕರಿಸಿದ್ದಾರೆ. ಅವರು ಯಾವ ಆರೋಪವನ್ನೂ ಸಹ ಮಾಡಿಲ್ಲ. ಟಿ.ಆರ್.ಚಂದ್ರಶೇಖರ್ ಅವರೇ ಸಲ್ಲಿಸಿದ ವಾರ್ಷಿಕ  ವರದಿಯನ್ನು ಉಲ್ಲೇಖಿಸಿಯೇ ಅಮಾನತ್ತು ಶಿಕ್ಷೆ ನೀಡಲಾಗಿದೆ.
ಯೊಜನೆಗಳ ನಿರ್ವಹಣೆಗಾಗಿ ವಿಶ್ವವಿದ್ಯಾಲಯದ ಧನ ಸಹಾಯ ಪಡೆದುಕೊಂಡು ಯೋಜನೆಯನ್ನು ಪೂರ್ಣಗೊಳಿಸದಿರುವ, ಯೋಜನೆಗಾಗಿ ಪಡೆದ ಹಣದ ಹೊಂದಾಣಿಕೆಯನ್ನು ವರ್ಷಾನುಗಟ್ಟಲೆ ಮಾಡದಿರುವ ಹಲವಾರು ಪ್ರಕರಣಗಳು ಕನ್ನಡ ವಿವಿಯಲ್ಲಿ ಇವೆ. ಈ ಬಗ್ಗೆ ಹಲವಾರು ಬಾರಿ ಕನ್ನಡ ವಿವಿ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಗಳೂ ಆಗಿವೆ. ಇವುಗಳ ಬಗ್ಗೆ ವಿವಿ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎನ್ಜಿಓಗಳೊಂದಿಗೆ ಯೋಜನೆಯನ್ನು ಹಂಚಿಕೊಂಡು ಅಲ್ಲೂ ಇಲ್ಲೂ ಲಾಭ ಮಾಡಿಕೊಂಡವರೂ  ವಿ.ವಿ.ಯಲ್ಲಿ ಇದ್ದಾರೆ. ಸರ್ಕಾರಿ ಸಾರ್ವಜನಿಕ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಯೋಜನೆ ಪೂರ್ಣಗೊಳಿಸಿದವರಿಗೆ ಮಾತ್ರ ಈ ಶಿಕ್ಷೆ ನೀಡಲಾಗಿದೆ.
ಟಿ.ಆರ್. ಚಂದ್ರಶೇಖರ್ ಅವರ ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ಸಮಾಜೋಮುಖಿ ಅಭಿವೃದ್ಧಿ ಬರಹಗಳು ಸರ್ಕಾರದ ಆರ್ಥಿಕ ನೀತಿಯ ವಿರುದ್ಧ ನೇರ ಟೀಕೆಯಿಂದ ಕೂಡಿರುತ್ತಿದ್ದವು. ಅವರು ಕನ್ನಡ ವಿವಿಯ 80 ಏಕರೆ ಭೂಮಿಯ ಪರಭಾರೆ ವಿರುದ್ಧ ಹೋರಾಟದ ಮಂಚೂಣಿಯಲ್ಲಿದ್ದರು. ಆಡಳಿತಾಂಗದ ನಿರ್ಣಯವನ್ನು ಸದಸ್ಯರಾಗಿ ತಡೆ ಹಿಡಿಯುವ ಕೆಲಸ ಮಾಡಿದರು. ಆತ್ಮ ಸಾಕ್ಷಿಯಂತೆ ಕೆಲಸ ಮಾಡಿದ್ದ ಅವರ ನಿಲುವಿನಿಂದಾಗಿ ಭಗ್ನಗೊಂಡಿದ್ದ ಮನಸ್ಸುಗಳು ತಾಂತ್ರಿಕ ಕಾರಣವನ್ನು ಹೆಕ್ಕಿ ತೆಗೆದು, ಅವರ 17 ವರ್ಷದ ವಿವಿಯ ಸೇವೆಯನ್ನು ಪರಿಗಣಿಸಿದೇ ಅಮಾನತ್ತು ಎನ್ನುವ ಘೋರ ಶಿಕ್ಷೆಯನ್ನು ನೀಡಿ ಕೇಕೇ ಹಾಕಿ ನಕ್ಕಿವೆ. ಕನ್ನಡ ವಿವಿಯಲ್ಲಿ ಚೂರುಪಾರು ಮಾನ ಮರ್ಯಾದೆಯಿಂದ ಕೂಡಿದವರು ಕನ್ನಡ ವಿವಿಯ ಗೌರವ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಅಂತವರ ಮನಸ್ಸುಗಳನ್ನು ಜಡಗೊಳಿಸಿ, ಅಧ್ಯಾಪಕರನ್ನು  ಗುಮಾಸ್ತರನ್ನಾಗಿ ಮಾಡಿ ಹಾಕಲಿದೆ ಈ ಅಮಾನತ್ತು ಎಂಬ ನಿರ್ಣಯ. ಇದೊಂದು ಯಕಶ್ಚಿತ ಘಟನೆ ಎಂಬಂತೆ ವಿಶ್ವವಿದ್ಯಾಲಯದ ಅಧ್ಯಾಪಕರು ಯೋಚಿಸುತ್ತಿದ್ದಾರೆ. ಅವರು ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ಬಲಿಗಳು ಅವರೇ ಆಗಲಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ  ಕಾರ್ಯಕಾರಿ ಸಮಿತಿಯು ಕೂಡಲೇ ಅಮಾನತ್ತು ಹಿಂತೆಗೆದುಕೊಳ್ಳುವ ಮೂಲಕ ವಿವಿಯ ಘನತೆ ಉಳಿಸಿಕೊಳ್ಳಬೇಕು.

ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ!

-ಪರಶುರಾಮ ಕಲಾಲ್.

ಹಂಪಿ ಎಂದೊಡನೆ ಅನೇಕರಿಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯದಾಚೆಗೂ ಹಂಪಿ ಎನ್ನುವುದು ಇತ್ತು ಎಂದು ನಾವು ಯೋಚಿಸಲಾರದಷ್ಟು ಕಳೆದ 60 ವರ್ಷದಲ್ಲಿ ಇತಿಹಾಸಕಾರರೆಂಬ ಕೆಲವು ಭಯೋತ್ಪಾದಕರು ಹಂಪಿಗೆ ವಿಜಯನಗರದ ಪಟ್ಟ ಕಟ್ಟಿ ಅಲ್ಲಿಯೇ ಬಿಡಾರ ಹೂಡಿ ಬಿಟ್ಟಿದ್ದಾರೆ.

ಶಿಲಾಯುಗದ ಕಾಲದಲ್ಲೂ ಹಂಪಿ ಜೀವಂತವಾಗಿತ್ತು ಎನ್ನುವುದಕ್ಕೆ ಅನೇಕ ಪ್ರಾಚೀನ ಕುರುಹುಗಳು ಸಾಕಷ್ಟು ದೊರಕಿವೆ. ಕಲ್ಲುಗುಂಡುಗಳನ್ನು ಪೇರಿಸಿಟ್ಟಂತೆ ಕಾಣುವ ಸಾಲು ಸಾಲು ಬೆಟ್ಟಗಳು, ಇವುಗಳನ್ನು ಸೀಳಿಕೊಂಡು ಹರಿಯುವ ತುಂಗಭದ್ರೆ, ಇತಿಹಾಸ ನಿರ್ಮಾಣಕಾರರು ಎಂದು ಅಹಂಕಾರ ಪ್ರದರ್ಶಿಸುತ್ತಾ ಬಂದವರನ್ನು ಕೆಲವೊಮ್ಮೆ ಉಕ್ಕಿ ಹರಿದು ಅವರ ಸೊಕ್ಕು ಮುರಿದು ಹಾಕುತ್ತಾ ಬಂದಿದ್ದಾಳೆ ಈ ಪುಣ್ಯಾತಗಿತ್ತಿ.

ಹಂಪಿಯು ಜನಪದರಿಗೆ ಪಂಪಾಪತಿ, ಹಂಪಮ್ಮರ ನೆಲೆ ಎನಿಸಿದೆ. ತುಂಗಭದ್ರೆಯು ಇವರಿಗೆ ಹಂಪಿ ಹೊಳೆಯಾಗಿದೆ. ಹಂಪಿಯಲ್ಲಿ ನಡೆಯುವ ಫಲಪೂಜೆಯು ಪಂಪಾಪತಿ-ಹಂಪಮ್ಮರ ನಿಶ್ಚಿತಾರ್ಥವಾದರೆ ಜಾತ್ರೆಯು ಅವರ ವಿವಾಹವಾಗಿದೆ. ಜನರು ತಮ್ಮ ಮನೆಯೊಂದರ ಮದುವೆ ಸಂಭ್ರಮ ಎನ್ನುವಂತೆ ಇದರಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಪಟ್ಟಣದ ಎಲ್ಲಮ್ಮ, ಹತ್ತುಕೈ ತಾಯಮ್ಮ ಶಕ್ತಿದೇವತೆಗಳು ಇವತ್ತಿಗೂ ಕುರಿ-ಕೋಳಿ ಬೇಡುತ್ತಿವೆ. ಜನರು ಅವರ ಕೋರಿಕೆ ಈಡೇರಿಸಿ ಎಡೆ ಹಾಕುತ್ತಾರೆ. ರಾಮಾಯಣ, ಮಹಾಭಾರತ ಕಥೆಯಂತೂ ಹಂಪಿ ತುಂಬಾ ವ್ಯಾಪಿಸಿ ಬಿಟ್ಟಿದೆ. ಸೀತೆ ಸೆರಗು, ವಾಲಿ ಗವಿ, ರಾವಣ ಉಚ್ಚೆ ಹೊಯ್ದ ಹೊಂಡ ಇತ್ಯಾದಿ.

ನಾನು ಸಣ್ಣವನಿದ್ದಾಗ ಅವುಟುಗಾಲು ಭರಮಪ್ಪ ಎನ್ನುವ ವಯಸ್ಸಾದ ವ್ಯಕ್ತಿಯೊಬ್ಬ ಹಂಪಿ ತೋರಿಸಲು ಕರೆದೊಯ್ದು ವಿಜಯ ವಿಠ್ಠಲ ದೇವಸ್ಥಾನದ ಹಿಂದೆ ನದಿಯಲ್ಲಿ ನಿಂತಿರುವ ಕಲ್ಲು ಕಂಭಗಳನ್ನು ತೋರಿಸಿ ಆ ಕಡೆ ಇರುವುದೇ ಲಂಕಾ ಪಟ್ಟಣ ಎಂದು ಹೇಳಿದ್ದ. ಆತ ಹೇಳಿದ್ದ ಪ್ರದೇಶ ಋಷ್ಯಮೂಕ ಪರ್ವತವಾಗಿತ್ತು. ಅಲ್ಲಿಗೆ ಯಾರೂ ಹೋಗಿಲ್ಲ, ಹೋದವರು ಹಿಂದಕ್ಕೆ ಬಂದಿಲ್ಲ ಎಂದು ಹೇಳಿ ನನ್ನನ್ನು ಆ ಪ್ರದೇಶದ ಬಗ್ಗೆ ಭಯಭೀತಿ ಉಂಟಾಗುವಂತೆ ಮಾಡಿದ್ದ. ಸೇತುವೆ ಯಾಕೆ ಹಾಳಾಯಿತು ಎಂದು ಬಾಲಕನ ಸಹಜ ಕುತೂಹಲದಿಂದ ಆಗ ಕೇಳಿದ್ದೆ. ರಾವಣ ಸತ್ತ ನಂತರ ರಾಮ ವಾಪಸ್ಸು ಬಂದಾಗ ಇನ್ನೂ ಸೇತುವೆ ಯಾಕೆ ಬೇಕು, ಇದನ್ನು ಹೊಡೆದಾಕಿ ಎಂದು ವಾನರ ಸೇನೆಗೆ ತಿಳಿಸಿದ. ಅದರಂತೆ ಸೇತುವೆ ಹೊಡೆದು ಹಾಕಲಾಯಿತು. ಹಂಪಿಯಲ್ಲಿರುವ ಕಲ್ಲುಬಂಡೆಗಳ ಬೆಟ್ಟಗಳು ಸೇತುವೆ ನಿರ್ಮಾಣಕ್ಕೆಂದು ತರಲಾಗಿತ್ತು. ಹೆಚ್ಚಾಗಿದ್ದರಿಂದ ಅವುಗಳನ್ನು ಎಲ್ಲಿ ಬೇಕು ಅಲ್ಲಿ ಚೆಲ್ಲಿದ್ದರಿಂದ ಇಷ್ಟೊಂದು ಕಲ್ಲುಗುಂಡುಗಳ ಬೆಟ್ಟಗಳಾಗಿವೆ ಎಂದು ಸಹ ಹೇಳಿದ್ದ.

ಸೇತುವೆ ಪುನಃ ಕಟ್ಟಲು ಬರುವುದಿಲ್ಲವೇ? ನಾನು ಕೇಳಿದ್ದೆ. ಸೇತುವೆಯನ್ನು ಇನ್ನು ಮುಂದೆ ಯಾರೋ ಕಟ್ಟಲು ಆಗುವುದಿಲ್ಲ, ಕಟ್ಟಿದರೆ ಆ ಸೇತುವೆ ಉಳಿಯುವುದಿಲ್ಲ, ಇಂತಹ ಸೇತುವೆ ಕಟ್ಟುವವರೆಲ್ಲಾ ರಕ್ತಕಾರಿ ಸತ್ತು ಹೋಗಿದ್ದಾರೆ, ಎಲ್ಲಿಯಾದರೂ ದೈವಕ್ಕೆ ಎದುರಾಗಿ ಉಳಿಯುವುದು ಉಂಟೇ ಎನ್ನುವುದು ಆತನ ಮಾತಿನ ತಾತ್ಪರ್ಯವಾಗಿತ್ತು.

ಇದೆಲ್ಲಾ ಈಗ ನೆನಪು ಮಾಡಿಕೊಳ್ಳುವುದಕ್ಕೆ ಕಾರಣ, ಹಂಪಿ ತಳವಾರ ಘಟ್ಟ-ಆನೆಗೊಂದಿ ಸೇತುವೆ ಕುಸಿದು 30ಕ್ಕೂ ಹೆಚ್ಚು ಕಾರ್ಮಿಕರು ಜಲಸಮಾಧಿಯಾದ ದುರಂತ ಘಟಿಸಿದ್ದರಿಂದ.

ನಾನು ತಳವಾರ ಘಟ್ಟದ ಒಂದು ಕಲ್ಲುಗುಂಡಿನ ಮೇಲೆ ಕುಳಿತು ಇದನ್ನೆಲ್ಲಾ ನೆನಪು ಮಾಡಿಕೊಳ್ಳುವ ಹೊತ್ತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಬಂದರು. ದೋಣಿ ಹತ್ತಿ ಹೊಳೆಯಲ್ಲಿ ಒಂದು ಸುತ್ತು ವಿಹಾರ ನಡೆಸಿದರು. ಅದನ್ನೇ ನಮ್ಮ ಪತ್ರಕರ್ತ ಮಿತ್ರರು ಫೋಟೊ ತೆಗೆದು ಪರಿಶೀಲನೆ, ಕಾರ್ಯಾಚರಣೆ ಉಸ್ತುವಾರಿ ಎಂದೆಲ್ಲಾ ಬರೆದು ಹಾಕಿದರು.

ಆನೆಗೊಂದಿ-ಹಂಪಿಯ ನಡುವೆ ಯಾವುದೋ ರಾಜ ನಿರ್ಮಿಸಿದ್ದ ಕಲ್ಲಿನ ಸೇತುವೆ, ವಿರೂಪಾಪುರ ಗಡ್ಡೆಗೆ ಸಂಪರ್ಕಿಸಲು ಋಷ್ಯಮೂಕ ಪರ್ವತಕ್ಕೆ ಹೊಂದಿಕೊಂಡಿದ್ದ ಕಲ್ಲಿನ ಸೇತುವೆ ಯಾಕೆ ಹಾಳಾದವು? ಈಗಲೂ ಅವಶೇಷಗಳಾಗಿ ಶತಮಾನದುದ್ದಕ್ಕೂ ಸೇತುವೆ ಹೊತ್ತಿದ್ದ ಕಲ್ಲಿನ ಬಂಡೆಗಳು ಇನ್ನೂ ಸಾಕ್ಷಿಯಾಗಿ ನಿಂತುಕೊಂಡು ಚರಿತ್ರೆಯ ಇಂತಹ ಕಥೆಗಳನ್ನು ತಮ್ಮದೇ ಆದ ರೀತಿಯಲ್ಲಿ ಕಟ್ಟಿಕೊಡುತ್ತಿವೆ. ಇದನ್ನು ಕೇಳುವ ಸೂಕ್ಷ್ಮ ಮನಸ್ಸನ್ನು ನಾವು ಕಳೆದುಕೊಂಡಿದ್ದೇವೆಯೇ? ಇತಿಹಾಸ ಎಂದೊಡನೆ ಭೂತ ಮೈವೆತ್ತವರಂತೆ ಆಡುವುದು ಬಿಟ್ಟು ಬೇರೇನೂ ನಮಗೆ ಕಾಣಿಸುತ್ತಿಲ್ಲ ಯಾಕೇ?

ಯುನೆಸ್ಕೋ ಪ್ರತಿನಿಧಿ ಜಿಂಕು ತಾನಿಗುಚ್ಚಿ ಈ ಹಿಂದೆ ಹಂಪಿಗೆ ಬಂದಿದ್ದಾಗ ಆಕೆಯೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತು (ಪತ್ರಕರ್ತನಾಗಿದ್ದರಿಂದ). ಆಕೆಯೇ ಮುಂದೆ ಹಂಪಿಯನ್ನು ವಿಶ್ವಪರಂಪರೆಯ ಆಪಾಯದ ಸ್ಮಾರಕಗಳ ಪಟ್ಟಿಯಲ್ಲಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಚಳಿ ಜ್ವರ ಬರುವಂತೆ ಮಾಡಿದ ಪುಣ್ಯಾತಗಿತ್ತಿ.

ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬ ಈ ಯುನೆಸ್ಕೂ ಹೆಂಗಸಿಗೆ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಏನೂ ಅರ್ಥವಾಗುತ್ತಿಲ್ಲ, ಸ್ವಲ್ಪ ನೀವೇ ಮಾತನಾಡಿ ಒಪ್ಪಿಸಿ, ಪ್ರೆಸ್‌ನವರೆಂದರೆ ಆಕೆ ಗೌರವ ಕೊಡುತ್ತಾಳೆ ಎಂದು ಪುಸಲಾಯಿಸಿ ನನ್ನನ್ನು ಆಕೆಯ ಬಳಿ ಬಿಟ್ಟಿದ್ದ.

ಹಂಪಿಯ ವಿಜಯನಗರ ಇತಿಹಾಸದ ಬಗ್ಗೆ ನಾನು ಪ್ರಸ್ತಾಪಿಸುತ್ತಿದ್ದಂತೆ ಅದನ್ನು ತಕ್ಷಣವೇ ಕತ್ತರಿಸಿದ ಆಕೆ, “ನಿಮಗೆಲ್ಲಾ ಏನಾಗಿದೆ ನನಗೆ ಅರ್ಥ ಆಗುತ್ತಿಲ್ಲ. ಹಂಪಿ ಒಂದು ಸ್ಮಾರಕಗಳ ಗುಚ್ಛ. ಕಲ್ಲುಬಂಡೆಗಳ ಸಾಲು ಸಾಲು ಗುಡ್ಡಗಳು, ಭೌಗೋಳಿಕ ನಿಸರ್ಗ ಸಹಜ ಸುಂದರ ಪ್ರದೇಶ. ಇದನ್ನು ಹೀಗೆಯೇ ಉಳಿಸಿಕೊಳ್ಳುವುದು ಬಿಟ್ಟು ಪ್ರವಾಸೋದ್ಯಮದ ಹೆಸರಲ್ಲಿ ಹಣ ಮಾಡುವುದಕ್ಕೆ ಇದೆಲ್ಲಾ ಯಾಕೇ ಬೇಕು? ಸೇತುವೆ ಜನರಿಗೆ ಬೇಕು ಎಂದು ನೀವು ಹೇಳುತ್ತೀರಿ? ಪಾಪ ಅವರು ದೋಣಿಯಲ್ಲಿ ಓಡಾಡುತ್ತಿಲ್ಲವೇ? ಪ್ರವಾಸೋದ್ಯಮದ ಹೆಸರಲ್ಲಿ ಇಲ್ಲಿಗೆ ಮಜ ಮಾಡಲು ಬರುವ ಪ್ರವಾಸಿಗರಿಗೆ ಇದೆಲ್ಲಾ ಮಾಡಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆ ಇರುವ ಪ್ರದೇಶವನ್ನು ಸಂರಕ್ಷಿಸುವುದೆಂದರೆ ಇದೇ ಏನು? ನಿಮ್ಮ ಸರ್ಕಾರಗಳಿಗೆ ಬುದ್ಧಿ ನೀವೇ ಹೇಳಬೇಕು.” ಒಂದೇ ಉಸಿರಿನಲ್ಲಿ ಆಕೆ ಹೇಳಿ ಸುಮ್ಮನೆ ನಿಂತಳು. ಜಪಾನ್ ದೇಶದವಳಾದ ಆಕೆ ಈಗ ಪ್ಯಾರಿಸ್‌ನಲ್ಲಿದ್ದಾಳೆ. ತೆಳ್ಳಗೆ, ಬೆಳ್ಳಗೆ ಬಳ್ಳಿಯಂತೆ ಇರುವ ಸುಂದರಿಯೊಬ್ಬಳ ದೇಹದಲ್ಲಿ ಇಷ್ಟೊಂದು ಶಕ್ತಿ ಇದೆಯೇ? ಆಕೆಯ ಆಲೋಚನಾ ಶಕ್ತಿಗೆ ಬೆರಗಾಗಿ ಬಿಟ್ಟೆ. ಆಕೆಗೆ ನನ್ನ ಸಹಮತ ಇದೆ ಎನ್ನುವುದನ್ನು ಸೂಚಿಸಿ ವಿದಾಯ ಹೇಳಿದಾಗ ವಿಷಾದದ ನಗೆಯಲ್ಲಿಯೇ “ನಿಮ್ಮಂತವರ ಅಗತ್ಯ ಹಂಪಿಗೆ ಇದೆ,” ಎಂದೇ ಹೇಳಿ ಕಣ್ಣು ಮಿಂಚಿಸಿದಳು. ಒಡನೆ ಅಧಿಕಾರ ವರ್ಗ ಕಂಡೊಡನೆ ದುರ್ಗಿಯಂತೆ ಪುನಃ ಕದಲಿ ಮಾತಿನ ಕಾಳಗಕ್ಕೆ ಇಳಿದು ಬಿಟ್ಟಳು.

“ಕಾಲಿದ್ದವರು ಹಂಪಿಯನ್ನು ನೋಡಬೇಕು,” ಎಂದು ಜನಪದರು ಹೇಳುತ್ತಿರುವ ಮಾತು ನನಗೆ ಅರ್ಥವತ್ತಾಗಿ ಕಾಣತೊಡಗಿ, ದುರ್ಗಮ ಹಂಪಿಯಲ್ಲಿ ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು ಎನ್ನುವ ಅನುಭೂತಿಯೊಂದನ್ನು ಜಿಂಕು ತಾನಿಗುಚ್ಛಿ ಮೂಡಿಸಿ ಬಿಟ್ಟಿದ್ದಳು. ಅವುಟುಗಾಲು ಭರಮಪ್ಪ ಅದಕ್ಕೊಂದು ದೇಶಿ ಪರಂಪರೆ ಜೋಡಿಸಿ ಬಿಟ್ಟಿದ್ದ.

ನಂತರ ಹಂಪಿಯ ಕಲ್ಲುಬಂಡೆಗಳ ಬೆಟ್ಟಗಳನ್ನು ಏರುವುದು. ದುರ್ಗಮ ಪ್ರದೇಶಕ್ಕೆ ನುಗ್ಗುವುದು. ಸ್ಮಾರಕಗಳನ್ನು ಪತ್ತೆ ಹಚ್ಚಿ ಅವುಗಳ ಕಥಾನಕವನ್ನು ತೀರಾ ಆಪ್ತವಾಗಿ ಕೇಳಿಸಿಕೊಳ್ಳುವ ಹೊಸ ಬಗೆಯ ಕಥಾನಕ ನನ್ನದಾಯಿತು.

ಇಂತಹ ಒಂದು ಸಾಹಸವನ್ನು ಸ್ನೇಹಿತ ಬಣಗಾರ್, ಸಿದ್ದಲಿಂಗಪ್ಪ ಇವರ ಜೊತೆ ಕೈಗೊಂಡಿದ್ದಾಗ ದುರ್ಗಮ ಬೆಟ್ಟ ಏರಿ ದಾರಿ ಕಾಣದೇ ಇಳಿಯಲೂ ಬಾರದೆ ಕಂಗಾಲಾಗಿ ಹೇಗೋ ಮಾಡಿ ಸಮತಟ್ಟು ಪ್ರದೇಶ ಕಂಡುಕೊಂಡು ಅಲ್ಲಿಂದ ಚಾರಣ ಮುಂದುವರೆಸಿ ಇನ್ನೇನೋ ವಾಪಾಸ್ಸಾಗಬೇಕು ಎಂದಾಗ ದಿನಗೂಲಿಗಳು ಹೇಳಿದ್ದ ಭೈರವ ಮೂರ್ತಿ ಕೊನೆಗೂ ಪತ್ತೆಯಾಗಿ ಬಿಟ್ಟಿತು. 12 ಅಡಿಯಷ್ಟು ಎತ್ತರದ ಭವ್ಯ ವೀರಭದ್ರ ದೇವರ ಮೂರ್ತಿ ಅಂತೂ ಕೊನೆಗೆ ಬಂದಿರಲ್ಲ ಎಂದು ನಮ್ಮನ್ನು ನೋಡಿ ನಕ್ಕಂತಾಯಿತು. ಪಕ್ಕಾ ನಾಸ್ತಿಕನಾದ ನನಗೆ ಎಂಥದ್ದೋ ಧನ್ಯತಾ ಭಾವ ಆವರಿಸಿ, ಏನೋ ಕಂಡುಕೊಂಡ ಏನೆಲ್ಲಾ ಭಾವನೆಗಳು ನನ್ನ ಬೇಸರ, ಆಯಾಸವನ್ನು ದೂರ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸಿ ಬಿಟ್ಟವು. ಇದು ಸ್ನೇಹಿತರ ಅನುಭವವೂ ಆಗಿತ್ತು. ಅಲ್ಲಿಂದ ಹೊರ ಬರಲು ಮನಸ್ಸಿಲ್ಲದ ಮನಸ್ಸಿನಿಂದ ಗುಡ್ಡ ಇಳಿಯುವಾಗ ದಾರಿ ಸುಗಮವಾಗಿತ್ತು. ಮನಸ್ಸು ನಿರಾಳವಾಗಿತ್ತು. ಗುಡ್ಡದ ಬದಿಯಲ್ಲಿ ನೀರು ಹಾಗೂ ಬಿಸ್ಕಿಟ್ ಹಿಡಿದು ನಮಗಾಗಿ ಕಾಯುತ್ತಿದ್ದ ಕೇಂದ್ರ ಪುರಾತತ್ವ ಇಲಾಖೆಯ ದಿನಗೂಲಿಗಳು ನಮ್ಮ ಪುರಾತನರಾಗಿ ಕಾಣಿಸಿಕೊಂಡು ಬಾಯಾರಿದ್ದ ನಮಗೆ ಅಮೃತವನ್ನು ಧಾರೆ ಎರೆದು ಮತ್ತೊಂದು ಧನ್ಯತಾಭಾವ ಮೂಡಿಸಿಬಿಟ್ಟು ಮನುಷ್ಯ ಮನುಷ್ಯರ ಮಧ್ಯೆ ಮಾನವೀಯ ಸೇತುವೆ ಮುಖ್ಯ ಎಂದೇ ಕ್ರಿಯೆ ಮೂಲಕ ತೋರಿಸಿಬಿಟ್ಟರು. “ಇವತ್ತಿನ ಸಂದರ್ಭದಲ್ಲಿ ನಮಗೆ ಯಾವ ಸೇತುವೆ ಬೇಕು? ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ,” ಎನಿಸಿಬಿಟ್ಟಿತು.

(ಚಿತ್ರಗಳು: ಲೇಖಕರದು)