Tag Archives: ಅಂಬಾರಿ

ಅಲ್ಲಾ ನೆನಪಿನಲ್ಲಿ ಅಂಬಾರಿ

ಇಂದು ನಾಡಿನೆಲ್ಲೆಡೆ ವಿಜಯ ದಶಮಿ. ನನ್ನ ಸೀಮೆಯಾದ ಮೈಸೂರು ಹಾಗೂ ಬಳ್ಳಾರಿಯ ಹೊಸಪೇಟೆಯ ಸುತ್ತಮುತ್ತ ಈ ಹಬ್ಬಕ್ಕೆ ವಿಶೇಷವಿದೆ. ದಸರಾ ಮೂಲತಃ ವಿಜಯನಗರ ಅರಸರು ಹುಟ್ಟಿ ಹಾಕಿದ ಹಬ್ಬ. ಹಂಪಿಯಲ್ಲಿ ದಸರಾ ನಡೆಯುತಿದ್ದ ಸಮಯದಲ್ಲೇ ಶ್ರಿರಂಗಪಟ್ಟಣದಲ್ಲಿ ವಿಜಯನಗರ ದೊರೆಗಳ ದಂಡನಾಯಕರು ಪ್ರಾರಂಭಿಸಿದ ಈ ನಾಡ ಹಬ್ಬವನ್ನು ಮುಂದೆ ಯದುವಂಶದ ದೊರೆಗಳು ಮೈಸೂರಿನಲ್ಲಿ ಮುಂದುವರಿಸಿದರು.

ಇವತ್ತಿಗೂ ಹೊಸಪೇಟೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಂದು ವಿಜಯನಗರದ ದೊರೆಗಳಿಗೆ ಸೈನಿಕರಾಗಿದ್ದ ವಾಲ್ಮೀಕಿ ಜನಾಂಗದ ಮನೆಗಳಲ್ಲಿ ಇರುವ ಕತ್ತಿ ಗುರಾಣಿ, ಭರ್ಜಿ ಮುಂತಾದವುಗಳಿಗೆ ಆಯುಧ ಪೂಜೆಯ ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ಇತ್ತೀಚಿಗಿನ ದಿನಗಳಲ್ಲಿ ಸರ್ಕಾರ ಮತ್ತು ಖಾಸಗಿ ಕಂಪನಿಗಳ ಪ್ರಾಯೋಜಕತ್ವ ಪಡೆದು ವಿಜೃಂಭಣೆಯಿಂದ ನಡೆದರೂ ಸಹ ಸ್ಥಳೀಯರ ಪಾಲಿಗೆ ಇದೊಂದು ಮದುವಣಗಿತ್ತಿ ಇಲ್ಲದ ಮದುವೆಯಂತೆ. 60 ರ ದಶಕದಲ್ಲಿ ಅಂಬಾರಿಯಲ್ಲಿ ಕುಳಿತು ಸಾಗುತಿದ್ದ ನನ್ನ ನಾಡಿನ ಅಂದಿನ ದೊರೆಯನ್ನು ನೋಡುವುದೇ ಪುಣ್ಯವೆಂದು ನನ್ನ ಹಿರೀಕರು ನಂಬಿದ್ದರು. ದೊರೆಯಿಲ್ಲದ ಅಂಬಾರಿ ಬಗ್ಗೆ ನನ್ನ ಜನಕ್ಕೆ ಈಗ ಆಸಕ್ತಿ ಕಡಿಮೆ.

ಮಂಡ್ಯ ಜಿಲ್ಲೆಯ ನನ್ನೂರಿಂದ ಎತ್ತಿನ ಬಂಡಿಯಲ್ಲಿ ಹೋಗಿ ಮೈಸೂರು ಬೀದಿಯಲ್ಲಿ ನನ್ನಪ್ಪನ ಹೆಗಲ ಮೇಲೆ ಕುಳಿತು ಅಂಬಾರಿಯಲ್ಲಿ ಸಾಗುತಿದ್ದ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಅವರ ಹಿಂಬದಿಯಲ್ಲಿ ಕೂರುತಿದ್ದ ಬಾಲಕ ಶ್ರಿಕಂಠದತ್ತ ಒಡೆಯರ್ ಇವರ ದೃಶ್ಯಗಳ ನೆನಪು ಇಂದಿಗೂ ನನ್ನಲ್ಲಿ ಹಸಿರಾಗಿವೆ.

ಹಳೆಯ ಸಂಗತಿಗಳು ಏನೇ ಇರಲಿ, ಒಂಬತ್ತು ದಿನಗಳ ನವರಾತ್ರಿಯ ಸಡಗರ ಮುಕ್ತಯಗೊಳ್ಳುವುದು ದಸರಾ ಅಂಬಾರಿಯ ಮೆರವಣಿಗೆಯೊಂದಿಗೆ. ಈಗ ನಡೆಯುತ್ತಿರುವ ಅಂಬಾರಿ ಮೆರವಣಿಗೆಯಲ್ಲಿ ನಾವು ಗಮನಿಸಬೇಕಾದ ಒಂದು ವಿಶೆಷವಿದೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಪ್ರತಿಮೆ ಹೊತ್ತು ಸಾಗುವ ಬಲರಾಮ ಎಂಬ ಆನೆಯ ಮಾವುತ ಹಾಗೂ ಅದರ ಕಾವಡಿಗಳು ಮುಸಲ್ಮಾನರು ಎಂಬುದು ವಿಶೇಷ. ನಮ್ಮ ಗಮನವೆಲ್ಲಾ ಅಂಬಾರಿ ಮತ್ತು ಅದನ್ನು ಹೊತ್ತ ಆನೆ ಬಗ್ಗೆ ಕೇಂದ್ರೀಕೃತವಾಗುವುದರಿಂದ ನಾವು ಅವರನ್ನು ಗಮನಿಸುವುದಿಲ್ಲ. ಅದು ತಪ್ಪಲ್ಲ. ಏಕೆಂದರೆ, ನಮ್ಮ ಸಂಸ್ಕೃತಿಯ ಗ್ರಹಿಕೆಯ ನೆಲೆಗಟ್ಟೆ ಅಂತಹದು. ಮೆರವಣಿಗೆಯಲ್ಲಿ ಸಾಗುವ ಮದುಮಗ ಮಾತ್ರ ನಮಗೆ ಮುಖ್ಯವಾಗುತ್ತಾನೆ. ಅವನ ಮುಖ ನಮಗೆ ಕಾಣಲಿ ಎಂದು ತಲೆಮೇಲೆ ದೀಪ ಹೊತ್ತು ಕತ್ತಲೆಯಲಿ ಉಳಿದು ಹೋದವರು ಎಂದೂ ನಮಗೆ ಮುಖ್ಯರಾಗುವುದಿಲ್ಲ. ಅಂತಹದೇ ಕಥೆ ಈ ಅನಾಮಿಕರದು.

ಬಲರಾಮನ ಮಾವುತ ಝಕಾವುಲ್ಲಾ ಸರ್ಕಾರಿ ಸೇವೆಯಿಂದ ನಿವೃತ್ತನಾಗಿ ಎಷ್ಟೋ ವರ್ಷಗಳು ಸಂದಿವೆ, ಆದರೂ ಅಂಬಾರಿ ಮೆರವಣಿಗೆಗಾಗಿ ತಾನು ಪಳಗಿಸಿದ ಆನೆ ಬಲರಾಮನ ಸಂಗಾತಿಯಾಗಿ ತಿಂಗಳು ಕಾಲ ಮೈಸೂರಿನಲ್ಲಿದ್ದು ತನ್ನ ಸೇವೆ ಮುಗಿಸಿ ಎಲೆ ಮರೆ ಕಾಯಿಯಂತೆ ತನ್ನೂರಿಗೆ ಹೊರಟುಬಿಡುತ್ತಾನೆ. ಕಾವಡಿಗಳಾಗಿ ಕೆಲಸ ಮಾಡುವ ಪಾಷ ಮತ್ತು ಅಕ್ರಂ ಆನೆಯೊಂದಿಗೆ ಅರಣ್ಯದ ಬಿಡಾರ ಸೇರುತ್ತಾರೆ.

ಆನೆಗಳನ್ನು ಸದ್ದು ಗದ್ದಲ ಹಾಗೂ ಅಪಾರ ಜನಸ್ತೋಮದ ನಡುವೆ ಶಾಂತ ಸ್ಥಿತಿಯಲ್ಲಿ ಇರುವಂತೆ ನಿಯಂತ್ರಿಸುವುದು ಸುಲಭದ ಸಂಗತಿಯಲ್ಲ. ಅವುಗಳ ಮನಸ್ಸನ್ನು ಅರಿತು, ಆ ಮೂಕ ಪ್ರಾಣಿಗಳ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಮಾವುತನಿಗೆ ಇರಬೇಕು. ಇದಕ್ಕಾಗಿ ದಸರಾ ಮುನ್ನಾ ತಿಂಗಳುಗಟ್ಟಳೆ ಅವುಗಳ ಜೊತೆ ಒಡನಾಡಿ ಅವುಗಳು ಶಾಂತರೀತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ.

ದಸರ ಹಿಂದಿನ ದಿನದ ಬೆಳಿಗ್ಗೆಯಿಂದಲೇ ಆನೆಗಳ ಶೃಂಗಾರ ಕಾರ್ಯ ಆರಂಭವಾಗುತ್ತದೆ.ಆ ಕ್ಷಣದಿಂದ ಇವರಿಗೆ ಊಟ ನಿದ್ರೆ ಸೇರುವುದಿಲ್ಲ. ಅಂಬಾರಿಯ ಮೆರವಣಿಗೆ ದಿನದಂದು ಉಪವಾಸವಿದ್ದು , ಮೆರವಣಿಗೆ ಆರಂಭವಾಗುವ ಹೊತ್ತಿನಲ್ಲಿ ಇವರು ಅಲ್ಲಾನನ್ನು ನೆನೆದು ಪ್ರಾರ್ಥಿಸುತ್ತಾರೆ. ತಾಯಿ ಚಾಮುಂಡೇಶ್ವರಿಗೆ, ಚಿನ್ನದ ಅಂಬಾರಿಗೆ ಏನೂ ಧಕ್ಕೆಯಾಗಂತೆ ಅಲ್ಲಾನನ್ನು ಬೇಡಿಕೊಂಡು ಇವರು ಹೊರಟರೆ, ಊಟ ಮಾಡುವುದು ಸಂಜೆ ಅಂಬಾರಿ ಸುಸೂತ್ರವಾಗಿ ಬನ್ನಿ ಮಂಟಪ ತಲುಪಿ ವಾಪಸ್ ಅರಮನೆ ಆವರಣಕ್ಕೆ ಬಂದ ನಂತರವೇ..

ತಮ್ಮ ಧರ್ಮ ಅಥವಾ ಸಂಸ್ಕೃತಿಯಲ್ಲದ ಒಂದು ನಾಡ ಹಬ್ಬಕ್ಕೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಈ ಅನಾಮಿಕ ಜೀವಗಳೆಲ್ಲಿ? ಹಿಂದು ಧರ್ಮದ ರಕ್ಷಣೆಯ ಹೆಸರಿನಲ್ಲಿ ಮೂರು ಕಾಸಿನ ಚಿಂತನೆಗಳ ತಲೆ ತುಂಬಾ ಹೊತ್ತು ವಿಷ ಬಿತ್ತುವ ಮೂಲಭೂತವಾದಿಗಳೆಲ್ಲಿ? ಸುಮ್ಮನೆ ಒದು ಕ್ಷಣ ಯೋಚಿಸಿ.

ಇವತ್ತಿಗೂ ಮಾವುತ ಕಾಯಕದಲ್ಲಿ ಹೆಚ್ಚಿನ ಮಂದಿ ಮುಸ್ಲಿಮರು ತೊಡಗಿಕೊಂಡಿದ್ದು, ಜೊತೆಗೆ ಅನಕ್ಷರಸ್ತರಾಗಿದ್ದಾರೆ. ಇಂತಹ ಮಾವುತರು, ಕಾವಡಿಗಳು ಮತ್ತು ಶಿವಮೊಗ್ಗದ ಆಂಜನೇಯ ದೇವಸ್ಥಾನಕ್ಕೆ ಬೆಳಗಿನ ಪೂಜೆಗೆ ಕಳೆದ 60-70 ವರ್ಷಗಳಿಂದ ಹೂವು ಪೂರೈಸುವ ಮುಸ್ಮಿಂ ಕುಟುಂಬ ಹಾಗೂ ಗುಜರಾತಿನ ರಿಪ್ಲಿಕಾ ರಸ್ತೆಯಲ್ಲಿರುವ ಶ್ರೀ ರಾಮ ದೇಗುಲಕ್ಕೆ ಎಣ್ಣೆ ಬತ್ತಿ ಪೂರೈಸುವ ಬಡ ಮುಸಲ್ಮಾನ ಇವರನ್ನು ನೆನದಾಗ ಜಾತಿಯ ಬಗ್ಗೆ, ಧರ್ಮದ ಬಗ್ಗೆ ಮಾತನಾಡುವುದು ಕೂಡ ಅಪಮಾನ ಮತ್ತು ಅಮಾನುಷ ಎಂದು ಒಮ್ಮೇಲೆ ಅನಿಸಿಬಿಡುತ್ತದೆ.

-ಡಾ.ಎನ್. ಜಗದೀಶ್ ಕೊಪ್ಪ
(ಮಾವುತರ ಬಗ್ಗೆ ಗಮನ ಸೆಳೆದ ಪ್ರಜಾವಾಣಿಯ ರಾಜೇಶ್ ಶ್ರೀವನ ಇವರಿಗೆ ನನ್ನ ಕೃತಜ್ಙತೆಗಳು.)

pic courtesy: gulfkannada.com, mahensimmha.blogspot.com