Tag Archives: ಆದಿಮ

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – ಕೊನೆ ಕಂತು


– ಎನ್.ಎಸ್. ಶಂಕರ್


 

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 5
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 6

 

2002ರ ನಾಗಲಾಪಲ್ಲಿ ದುರಂತದ ವೇಳೆಗೆ ದಲಿತ ಸಂಘದೊಳಗಿನ ಎಡಗೈ- ಬಲಗೈ ಒಡಕು ಮುಗಿದು, ಬಲಗೈ ಸಮುದಾಯದ ಒಳಗೇ ವಿಭಜನೆಯ ಸೊಲ್ಲು ಏಳತೊಡಗಿತ್ತು. ಉತ್ತರವಾಗಿ, ಮೊಟ್ಟ ಮೊದಲ ಒಡಕಿನ ಸಂದರ್ಭದಲ್ಲೇ ಕ್ಷೀಣವಾಗಿ ಆರಂಭವಾಗಿದ್ದ ‘ದಲಿತ ಸಂಘಟನೆ ವಿಸರ್ಜನೆ’ಯ ಸೊಲ್ಲು ಈಗ ಗಟ್ಟಿಯಾಗತೊಡಗಿತು. (86- 87ರಲ್ಲೇ ರಾಮಯ್ಯ, ‘ದಲಿತ ಚಳವಳಿಯ ಹೆಣದ ಮೆರವಣಿಗೆ ಮಾಡಬೇಕಾ?’ ಎಂಬ ಪ್ರಶ್ನೆಯೆತ್ತಿದ್ದರು.) ಇದೀಗ ಕೋಲಾರದ ಒಂದು ಸಭೆಯಲ್ಲಿ ರಾಮಯ್ಯ, ಗೋವಿಂದಯ್ಯ ಇಬ್ಬರೂ ‘ದಲಿತ ಚಳವಳಿ ಸತ್ತಿದೆ. ಇನ್ನು ಅದನ್ನು ವಿಧ್ಯುಕ್ತವಾಗಿ ದಫನ್ ಮಾಡುವುದೊಂದೇ ಮಾರ್ಗ. ಈಗ ಸಂಘರ್ಷ ಸಮಿತಿಯನ್ನು ವಿಸರ್ಜಿಸಿ  ಒಂದು ವರ್ಷ ಪೂರ್ತಿ ರಾಜ್ಯಾದ್ಯಂತ ಓಡಾಡೋಣ; ಮರು ಸಂಘಟನೆ ಮಾಡೋಣ. ಅದೊಂದೇ ದಾರಿ’ ಎಂಬ ಚಿಂತನೆ ಮುಂದಿಟ್ಟರು.

ನಾಗಲಾಪಲ್ಲಿ ಪ್ರತಿಭಟನೆ ಸಮಯದಲ್ಲಿ ಒಗ್ಗೂಡಿದ ಎಲ್ಲ ಮುಂದಾಳುಗಳು ಮತ್ತೆ ಇದೇ ಚರ್ಚೆಯನ್ನು ಕೈಗೆತ್ತಿಕೊಂಡರು. ಆಗ ಡಿ.ಜಿ. ಸಾಗರ್ ದಸಂಸ ರಾಜ್ಯ ಸಂಚಾಲಕರು. ಈ ವಿಸರ್ಜನೆಯ ಪ್ರಸ್ತಾಪವನ್ನು ಸಮಿತಿ ಪದಾಧಿಕಾರಿಗಳ ಮುಂದಿಟ್ಟು ‘ಬೇಡಿಕೊಂಡಾದರೂ ಒಪ್ಪಿಸೋಣ’ ಎಂಬ ಸೂಚನೆ- ಮುಖ್ಯವಾಗಿ ಗೋವಿಂದಯ್ಯನವರಿಂದ- ಬಂತು. ಕೆಲವೇ ದಿನಗಳಲ್ಲಿ ಈ ಚಿಂತನೆಗೆ ಅಂತಿಮ ರೂಪ ಕೊಡಲು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂದಿನ ‘ಸಂಸ’ ಬಯಲು ರಂಗಮಂದಿರದ ಕಟ್ಟೆಯ ಮೇಲೆ ದಲಿತ ಮುಂದಾಳುಗಳು ಸಭೆ ಸೇರಿದರು. ಅಲ್ಲಿ ಚರ್ಚೆ ಆರಂಭವಾದಾಗ ಆ ವೇಳೆಗಿನ್ನೂ ದೇವನೂರ ಮಹಾದೇವ ಸಭೆಗೆ ಬಂದಿರಲಿಲ್ಲ. ಮಾತಾಡುತ್ತ ಆಡುತ್ತ ಬಹುತೇಕ ಎಲ್ಲರೂ ಆ ಚಿಂತನೆಗೆ ಸಹಮತ ವ್ಯಕ್ತಪಡಿಸಿದರು. ಆದರೆ ಮಹಾದೇವ ಬರಬರುತ್ತಿದ್ದಂತೆಯೇ ‘ಈಗ ದಲಿತರಿಗೆ ಇದೊಂದು ದನಿಯಾದರೂ ಇದೆ. ಇದೂ ಇಲ್ಲವಾದರೆ ದಲಿತರು ತಬ್ಬಲಿಗಳಾಗಬಹುದು, ಬೇಡ ಬೇಡ’ ಎನ್ನುತ್ತ ವಿಸರ್ಜನೆಯ ಸೂಚನೆಯನ್ನು ತಳ್ಳಿಹಾಕಿ ಎಲ್ಲರನ್ನೂ ಎಬ್ಬಿಸಿಯೇಬಿಟ್ಟರು…

(‘ಹಾಗೇಕೆ ಮಾಡಿದಿರಿ?’ ಎಂದು ಈಗ ಕೇಳಿದ್ದಕ್ಕೆ ದೇವನೂರು ನೀಡಿದ ಸ್ಪಷ್ಟನೆ: ‘ನಾನು ಆ ಸಮಯದಲ್ಲಿ ದಸಂಸ ಪದಾಧಿಕಾರಿಯೂ ಅಲ್ಲ, ಏನೂ ಅಲ್ಲ. ಕೇವಲ ಹಿತೈಷಿ ಅಷ್ಟೇ. ಆದರೆ ನಾನೊಬ್ಬ ತೀರ್ಮಾನಿಸಿದರೆ ಸಂಘಟನೆಯನ್ನು ಸುಲಭವಾಗಿ ವಿಸರ್ಜಿಸಬಹುದು ಅಂತ ಮಿಕ್ಕವರು ತಿಳಿದುಕೊಂಡಿದ್ದರು. ಹಾಗಲ್ಲ. ಎಲ್ಲರೂ ಒಪ್ಪಿದರೆ ವಿಸರ್ಜನೆಯೇ ಒಳ್ಳೆಯದು ಎಂದು ನಾನೂ ಪ್ರಯತ್ನ ಮಾಡಿ ಸುಸ್ತಾಗಿದ್ದೆ. ಮೊದಲ ಒಡಕಿನ ಸಮಯದಲ್ಲೇ ನಾನು, ಸಿದ್ದಲಿಂಗಯ್ಯ ವಿಭಜನೆ ತಪ್ಪಿಸಲು ಕೈ ಕಾಲು ಹಿಡಿದು ಗೋಗರೆದರೂ ಯಾರೂ ನಮ್ಮ ಮಾತು ಕೇಳಿರಲಿಲ್ಲ. ಈಗ ನಾವು ಹಟ ಹಿಡಿದರೆ ಅದು ನಮ್ಮ ಅಹಂಕಾರವಾಗುತ್ತದೆ. ಹೆಚ್ಚೆಂದರೆ ನಮ್ಮದೇ ಒಂದು ‘ದಲಿತ ಸಂಘರ್ಷ ವಿಸರ್ಜನಾ ಸಮಿತಿ’ ಅಂತ ಸೃಷ್ಟಿಯಾಗಬಹುದಿತ್ತು..’) ಅಂತೂ ಸಂಘಟನೆಯನ್ನು ಮುರಿದು ಮತ್ತೆ ಕಟ್ಟುವ ನೈತಿಕ ತ್ರಾಣ ಯಾರಲ್ಲೂ ಉಳಿದಿರಲಿಲ್ಲ ಎಂಬುದು ಸ್ಪಷ್ಟವಾಯಿತು.

ಇದಾದ ಮೇಲೂ ಅದೇ ಚಿಂತನೆಯಿಂದ ಸ್ಫೂರ್ತಿ ಪಡೆದಂತೆ, ಮಹಾದೇವ ಮತ್ತು ಸಿದ್ದಲಿಂಗಯ್ಯ ಇಬ್ಬರೂ ಸೇರಿ ರಾಜ್ಯಾದ್ಯಂತ ಒಂದು ವರ್ಷ ಕಾಲ ಪ್ರವಾಸ ಮಾಡಿ ಎಲ್ಲರನ್ನೂ ಮಾತಾಡಿಸುತ್ತ, ಗಾಯಗಳನ್ನು ವಾಸಿ ಮಾಡುತ್ತ ಸಂಘಟನೆಯನ್ನು ಹೊಸದಾಗಿ ಕಟ್ಟುವ ಪ್ರಯತ್ನ ಮಾಡುವುದಾಗಿ ಒಂದು ಹೇಳಿಕೆ ನೀಡಿದರು (2004). ಅದಾಗಿ ಹದಿನೈದೇ ದಿನಕ್ಕೆ ಬಲಗೈ ಗುಂಪಿನಲ್ಲೇ ದೊಡ್ಡ ಒಡಕು ಸಂಭವಿಸಿ ಸಾಗರ್- ಲಕ್ಷ್ಮೀನಾರಾಯಣ ನಾಗವಾರ ಬಣಗಳು ಉದ್ಭವಿಸಿದವು. ಅಷ್ಟೇ ಅಲ್ಲ, ಮರುಸಂಘಟನೆಯ ಹೇಳಿಕೆಗೆ ಸಹಿ ಹಾಕಿದ್ದ ಸಿದ್ದಲಿಂಗಯ್ಯ, ನಾಗವಾರ ನೇತೃತ್ವದ ಸಮಾವೇಶದಲ್ಲಿ ಹಾಜರಾಗಿ ಒಂದು ಬಣದೊಂದಿಗೆ ಅಳುಕಿಲ್ಲದೆ ಗುರುತಿಸಿಕೊಂಡೂ ಬಿಟ್ಟರು! ಅತ್ತ ಒಂದೇ ವರ್ಷದಲ್ಲಿ ದೇವನೂರು ‘ಸರ್ವೋದಯ’ದಲ್ಲಿ ಮುಳುಗಿಹೋದರು…!

ಅಲ್ಲಿಂದಾಚೆಗೆ ದಲಿತ ಸಂಘಟನೆ ‘ಎತ್ತಿ ಬಿಸಾಡಿದ ಗಾಜಿನಂತೆ’ ಚುಪ್ಪಾನ ಚೂರಾಗುತ್ತ ಛಿದ್ರಛಿದ್ರವಾಯಿತು. ಲೆಟರ್‌ಹೆಡ್ ಸಂಸ್ಥೆಗಳು ಅಣಬೆಯಂತೆ ತಲೆಯೆತ್ತಿದವು. ಸಂಘಟನೆಯ ಕಿರಿಯ ಗೆಳೆಯರೊಬ್ಬರು ಹೇಳಿದಂತೆ- ಇಂದು ಅಂಥ 360 ಲೆಟರ್‌ಹೆಡ್ ಸಂಸ್ಥೆಗಳು ಅಸ್ತಿತ್ವದಲ್ಲಿವೆ…!

ರೈತಸಂಘದ ಒಡಲಲ್ಲೂ ಇಂಥದೇ ಒಡಕಿನ ಪುರಾಣವಿರಬಹುದೆಂಬ ಸೂಚನೆ ಕಡಿದಾಳು ಶಾಮಣ್ಣನವರ ಪುಸ್ತಕದಲ್ಲಿ ಸಿಕ್ಕುತ್ತದೆ.

ಇಂದು ದಲಿತ ಹೋರಾಟದ ಮೂರು ಮಾದರಿಗಳು ನಮ್ಮ ಕಣ್ಣ ಮುಂದಿವೆ. ಒಂದು: ಇದೇ ಲೆಟರ್‌ಹೆಡ್ ಸಂಸ್ಥೆಗಳ ‘ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ರೋಲ್ಕಾಲ್’ನ ಮಾದರಿ. ಎರಡನೆಯದು- ಎಷ್ಟೇ ಕ್ಷೀಣ ಪ್ರಯತ್ನದಂತಿದ್ದರೂ, ಚಳವಳಿಯ ಮುಂದುವರಿಕೆಯಂತೆಯೇ ಕಾಣುವ- ಕೋಟಿಗಾನಹಳ್ಳಿ ರಾಮಯ್ಯನವರ ‘ಆದಿಮ’ದ ಸಾಂಸ್ಕೃತಿಕ ಮರುಎಚ್ಚರದ ಪ್ರಯೋಗ. ಮೂರನೆಯದು ರೈತಸಂಘದ ಪುಟ್ಟಣ್ಣಯ್ಯನವರನ್ನು ಒಳಗೊಂಡ ದೇವನೂರರ ಚುನಾವಣಾಕೇಂದ್ರಿತ ರಾಜಕೀಯದ ಮಾದರಿ. (ಕರ್ನಾಟಕದಲ್ಲಿ ಬಿಎಸ್ಪಿ ಪ್ರಯತ್ನಗಳೂ ಮೊದಲ ಹಾಗೂ ಮೂರನೇ ಮಾದರಿಗಳಲ್ಲಿ ಹಂಚಿಹೋದದ್ದನ್ನು ಕಾಣಬಹುದು.)

ಆಗ ಆ ಚಳವಳಿಗಳು ನನ್ನ ಪೀಳಿಗೆಯಲ್ಲಿ ಸಮಾನತೆಯ, ಸಮಾಜ ಪರಿವರ್ತನೆಯ ಮಹಾ ಕನಸು ಬಿತ್ತಿದ್ದವು. ಒಂದು ಇಡೀ ತಲೆಮಾರಿನ ಜನರಲ್ಲಿ, ಸ್ವಂತದ್ದನ್ನು ಮೀರಿದ ಸ್ಪಂದನ ಹುಟ್ಟಲು ಕಾರಣವಾಗಿದ್ದವು. ಅಷ್ಟಕ್ಕಾದರೂ ಅವು ಇಂದಿಗೂ ಜೀವಂತವಾಗಿ ಉಳಿದು ಬರಬೇಕಿತ್ತು ಎಂದು ಆಸೆಪಟ್ಟರೆ ನನ್ನ ನಿಟ್ಟುಸಿರನ್ನು ಯಾರೂ ಅಪಹಾಸ್ಯ ಮಾಡಲಾರರು ಅಂದುಕೊಂಡಿರುವೆ. ಆದರೆ ಚಳವಳಿಗಳ ದೋಣಿಯಲ್ಲಿ ಒಡಕು ಮೂಡಿದ ಕೂಡಲೇ ದೋಣಿ ಮುಳುಗುವುದು ನಿಶ್ಚಯವಾಯಿತು. ಒಡಕನ್ನು ಜೀರ್ಣಿಸಿಕೊಳ್ಳುವ ಆತ್ಮಬಲ ಯಾವ ಚಳವಳಿಗೂ ಇರುವುದಿಲ್ಲ ಎಂದು ಮತ್ತೊಮ್ಮೆ ಸಾಬೀತಾಯಿತು. ಯಾಕೆಂದರೆ ಎಲ್ಲ ಒಡಕಿನ ಮೂಲ- ಸ್ವಾರ್ಥ ಮಾತ್ರ. ಪ್ರೊಫೆಸರರು ಸ್ವತಃ ಎಷ್ಟು ದೈತ್ಯಬಲದವರಾದರೂ, ಅಂತಾರಾಷ್ಟ್ರೀಯ ರೈತ ನಾಯಕರಾಗಿ ಬೆಳೆದರೂ, ರೈತಸಂಘದ ಒಡಕಿನ ನಂತರ (80ರ ದಶಕದ ಉತ್ತರಾರ್ಧ ಮತ್ತು 90ರ ದಶಕಗಳಲ್ಲಿ) ಏನು ಹೋರಾಟ ಮಾಡಿದರೂ ಅದು ನರಪೇತಲನ ಕುಸ್ತಿಯಂತೆ ಕಂಡಿದ್ದು ಅವರ ತಪ್ಪೇನಲ್ಲ.

ಚಳವಳಿಗಳು ಇಂದು ನೆಲೆ ಕಳೆದುಕೊಂಡಿದ್ದರೆ ಅದರ ಹಿಂದಿರುವ- ಅನಿವಾರ್ಯವೂ ಅಗೋಚರವೂ ಆದ ಚಾರಿತ್ರಿಕ ಒತ್ತಾಯವನ್ನೂ ಮರೆಯುವಂತಿಲ್ಲ. ಯಾವ ಸಮಾಜವೂ ತನ್ನ ದಿಕ್ಕು ಮತ್ತು ಜಾಯಮಾನಕ್ಕೆ ಎದುರಾಗುವ ಸವಾಲುಗಳನ್ನು ತಾಳಿಕೊಳ್ಳುವುದು ಸಂಕ್ರಮಣ ಕಾಲದಲ್ಲಿ ಮಾತ್ರ. ಆ ಕಾಲ ಜಾರಿದಂತೆ, ಇಡೀ ಸಮಾಜವೇ ಸಹಸ್ರ ಸಹಸ್ರ ಸ್ಥೂಲ ಸೂಕ್ಷ್ಮ ವಿಧಾನಗಳಲ್ಲಿ ತಿರುಗೇಟು ಕೊಡುವ ಮೂಲಕ ತನ್ನ ಮೂಲ ‘ಸಹಜ’ ರೂಪಕ್ಕೆ ಮರಳಲು ಹವಣಿಸುತ್ತದೆ. 90ರ ದಶಕದ ಜಾಗತೀಕರಣದ ನಂತರ ನಾವೀಗ ಕೈ ಚೆಲ್ಲಿ ವೀಕ್ಷಿಸುತ್ತಿರುವುದು ಈ ಛಚಿಛಿಞಟಚಿ- ತಿರುಗೇಟನ್ನೇ. 70-80ರ ದಶಕಗಳ ಕಲಮಲಕ್ಕೆ ಈಗಿನ ಎರಡು ದಶಕಗಳು ನೀಡುತ್ತಿರುವ ಮಾರುತ್ತರವಿದು. ರೈತಸಂಘ, ಫ್ಯೂಡಲ್ ಜಾತಿಗಳ ಒಕ್ಕೂಟವಾಗಿ ಹುಟ್ಟಿ ಅದನ್ನು ಮೀರಲು ಹೆಣಗಿ ಸೋತದ್ದಾಗಲೀ; ಅಥವಾ ಜಾತ್ಯತೀತ ಆಶಯವಾಗಿ ಹುಟ್ಟಿದರೂ ಹೊರಳಿ ಬಂದು ಜಾತಿಯಲ್ಲೇ ಹೂತುಹೋದ ದಲಿತ ಸಂಘವಾಗಲೀ- ಇವೆರಡರ ಹಿಂದೆಯೂ ಕಾಣುವುದು ಈ ಚಾರಿತ್ರಿಕ ಒತ್ತಾಯದ ಚಿಹ್ನೆಗಳೇ ತಾನೇ?

ಇಂದು ಆ ಅಳಿದುಳಿದ ಚಳವಳಿಗಳು- ಒಂದು ಕಡೆ ರೈತರ ಸರಣಿ ಆತ್ಮಹತ್ಯೆ, ಇನ್ನೊಂದು ಕಡೆ ದಲಿತರ ಜಲಿಯನ್ವಾಲಾಬಾಗ್ ಎನಿಸಿದ ಕಂಬಾಲಪಲ್ಲಿ ಮಾರಣಹೋಮದಂಥ- ವಿರಾಟ್ ದುರಂತಗಳೆದುರು ನಿಸ್ಸಹಾಯಕವಾದ ಸ್ಥಿತಿಯಲ್ಲಿವೆ. ಅಂದರೆ ಚಳವಳಿಗಳ ಪ್ರಾಣಶಕ್ತಿ ಇಂಗಿಹೋಗಿದೆ. ‘ಸರ್ವೋದಯ’ದ ಸ್ವರೂಪದಲ್ಲಿ ಉಳಿದಿರುವುದು ಅದರ ಸಿಪ್ಪೆಹೊಟ್ಟು ಮಾತ್ರ . ಆ ದಿನಗಳಲ್ಲಿ ‘ಕಣ್ಣೆದುರೇ ಕಳೆದುಹೋದ ಸಮಾಜವಾದಿ ಚಳವಳಿಯನ್ನು’ ನೆನೆಸಿಕೊಂಡು ದೇವನೂರ ಮಹಾದೇವ ‘ನಾನು ಅತ್ತೆ’ ಎಂದು ಬರೆದಿದ್ದರು.

ವಿಷಾದವೆಂದರೆ, ಈಗ ನಮ್ಮ ‘ಕಣ್ಣೆದುರೇ ಕಳೆದುಹೋದ ಚಳವಳಿಗಳನ್ನು’ ನೆನೆದು ಅಳುವವರೂ ಉಳಿದಿಲ್ಲ…

(ಮುಗಿಯಿತು)