Tag Archives: ಎಂ.ಎಂ. ಕಲ್ಬುರ್ಗಿ

ಕಲ್ಬುರ್ಗಿಯವರ ಕನ್ನಡದ ಕನಸುಗಳು

-ಡಾ.ಎನ್. ಜಗದೀಶ್ ಕೊಪ್ಪ

ಇದೇ ನವಂಬರ್ 11ರಿಂದ ಮೂಡಬಿದರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಈ ಬಾರಿ ಕನ್ನಡದ ಹಿರಿಯ ಸಂಶೋಧಕ, ಚಿಂತಕ, ಡಾ.ಎಂ.ಎಂ. ಕಲ್ಬುರ್ಗಿಯವರಿಗೆ ದೊರೆತಿದೆ. ಕನ್ನಡದ ಅತ್ಯುನ್ನುತ ಪ್ರಶಸ್ತಿಯಾದ ನೃಪತುಂಗ ಪ್ರಶಸ್ತಿಗೂ ಪಾತ್ರರಾಗಿರುವ ಇವರು ನುಡಿ ಸಮ್ಮೇಳನಕ್ಕೆ ಮುನ್ನ ತಮ್ಮ ಕನ್ನಡದ ಕನಸುಗಳನ್ನ ಧಾರವಾಡದ ತಮ್ಮ ಮನೆಯಲ್ಲಿ ನನ್ನೊಂದಿಗೆ ಹಂಚಿಕೊಂಡರು.

ತಮ್ಮ ಶಿಸ್ತುಬದ್ಧ ಬರವಣಿಗೆ, ಸಂಶೋಧನೆ, ಚಿಂತನೆಯ ಬದುಕಿನ ಮೂಲಕ ಕರ್ನಾಟಕದಲ್ಲಿ ಮನೆ ಮಾತಾದವರು ಡಾ.ಎಂ.ಎಂ.ಕಲ್ಬುರ್ಗಿಯವರು. ಕನ್ನಡ ಪ್ರಾದ್ಯಾಪಕರಾಗಿ, ಹಂಪಿ ಕನ್ನಡ ವಿ.ವಿ ಯ ಉಪಕುಲಪತಿಯಾಗಿ, ಇವಲ್ಲಕಿಂತ ಹೆಚ್ಚಾಗಿ ಸಂಶೋಧಕರಾಗಿ ನಿರಂತರ 50 ವರ್ಷಗಳ ಕಾಲ ಕನ್ನಡದ ನಾಡು, ನುಡಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಕಲ್ಬುಗಿಯವರ ಸಾಧನೆಗೆ ಈ ಬಾರಿಯ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನೃಪತುಂಗ ಪ್ರಶಸ್ತಿ  ನಿಜವಾದ ಪ್ರತಿಫಲಗಳೆಂದರೆ ತಪ್ಪಾಗಲಾರದು.

ಕನ್ನಡನಾಡಿನ ಇತಿಹಾಸ, ಭಾಷೆ, ಶಾಸನ ಮತ್ತು ಸಾಂಸ್ಕೃತಿಕ ಚರಿತ್ರೆಗಳನ್ನ ಅಧ್ಯಯನ ನಡೆಸಿ  ತಮ್ಮ ಖಚಿತ ಅಭಿಪ್ರಾಯಗಳನ್ನು ಕನ್ನಡಕ್ಕೆ ನೀಡಿರುವ ಇವರು ಇಂದಿಗೂ ಕನ್ನಡದ ಬೆಳವಣಿಗೆಯ ಬಗ್ಗೆ ಅಪಾರ ಕನಸುಗಳನ್ನು ಹೊಂದಿದ್ದಾರೆ. ಮಾರ್ಗ ಎಂಬ ಹೆಸರಿನಲ್ಲಿ ನಾಲ್ಕು ಬೃಹತ್ ಸಂಪುಟಗಳಲ್ಲಿ ಪ್ರಕಟವಾಗಿರುವ ಇವರ ಸಂಶೋಧನಾ ಲೇಖನಗಳು ಕನ್ನಡದ ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಇವತ್ತಿಗೂ  ದಿಕ್ಸೂಚಿಯಾಗಬಲ್ಲವು.

ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಅಳವಡಿಸಲು ಮೀನ ಮೇಷ ಎಣಿಸುತ್ತಿರುವ ಸರ್ಕಾರದ ಬಗ್ಗೆ ತಮ್ಮ ಅತೃಪ್ತಿಯನ್ನ ಹೊರ ಹಾಕಿದ ಕಲ್ಬುರ್ಗಿಯವರು, “ಕನ್ನಡದ ಅಸ್ಮಿತೆಯ ಬಗ್ಗೆ ನಮ್ಮೆಲ್ಲರಿಗೂ ವಿಸ್ಮೃತಿ ಆವರಿಸಿಕೊಂಡಿದೆ ಎಂದರಲ್ಲದೆ, ಸರ್ಕಾರಕ್ಕೆ ಮತ್ತು ಕನ್ನಡದ ಶಿಕ್ಷರಿಗೆ ಇಚ್ಛಾಶಕ್ತಿಯ ಕೊರತೆಯಿದೆ, ನನ್ನ ಅಧ್ಯಕ್ಷೀಯ ಭಾಷಣ ಇದೇ ವಿಷಯವನ್ನು ಒಳಗೊಂಡಿರುತ್ತದೆ,” ಎಂಬ ಸೂಚನೆ ನೀಡಿದರು.

“ನಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನಾವು ಕನ್ನಡದಲ್ಲಿ ಕೊಡದೇ ಹೋದರೆ ಕನ್ನಡ ಭಾಷೆಗೆ ಭವಿಷ್ಯವಿಲ್ಲ ಎಂಬುದನ್ನ ಕನ್ನಡಿಗರು ಅರಿಯಬೇಕಲ್ಲದೆ, ಯಾವ ಕಾರಣಕ್ಕೂ ಕನ್ನಡ ಶಾಲೆಗಳನ್ನು ಸರ್ಕಾರ ಮುಚ್ಚಕೂಡದು,” ಎಂದ ಕಲ್ಬುರ್ಗಿಯವರು, ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ನಮ್ಮ ಜನ ಸಾಮಾನ್ಯರಲ್ಲಿ ಇರುವ ನಕರಾತ್ಮಕ ಧೋರಣೆಯನ್ನ ಹೋಗಲಾಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕೆಂದರು.

ಶಿವಶರಣರ ವಚನಗಳನ್ನು ಬಾರತೀಯ ಇತರೆ ಭಾಷೆಗೆ ಅನುವಾದಿಸುತ್ತಿರುವ ಯೋಜನೆ ಬಗ್ಗೆ ಮಾಹಿತಿ ನೀಡುತ್ತಾ, “ವಚನಗಳು ಯಾವುದೇ ಒಂದು ಧರ್ಮಕ್ಕೆ ಅಥವಾ ಜಾತಿಯ ಸಮುದಾಯಕ್ಕೆ ಸೀಮಿತವಾಗಿಲ್ಲ, ಜಾತಿ ಧರ್ಮ, ಶ್ರೇಣೀಕೃತ ಸಮಾಜದ ಗಡಿ ರೇಖೆಗಳನ್ನು ದಾಟಿ ನಮ್ಮ ಶರಣರು ವಚನ ರಚನೆ ಮಾಡಿದ್ದಾರೆ. ಇವುಗಳ ಮೂಲಕ  ನಿಜವಾದ ಕನ್ನಡದ ಧರ್ಮವನ್ನು ಭಾರತಕ್ಕೆ ಮತ್ತು ಇಡೀ ಜಗತ್ತಿಗೆ ತೋರಿಸಬೇಕು, ಇದು ನನ್ನಾಸೆ,” ಎನ್ನುತ್ತಾ ಕ್ಷಣ ಕಾಲ ಕಲ್ಬುರ್ಗಿಯವರು ಭಾವುಕರಾದರು.

ಗದಗದ ತೊಂಟದಾರ್ಯ ಮಠದ ಸ್ವಾಮೀಜಿ ಹಾಗೂ ಮೈಸೂರಿನ ಜೆ.ಎಸ್.ಎಸ್. ಮಠದ ಸ್ವಾಮೀಜಿ ಈ ಇಬ್ಬರೂ ಕಲ್ಬುರ್ಗಿಯವರ ಶಿಷ್ಯರು. (ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಕನ್ನಡ ಎಂ.ಎ. ಮಾಡಿದವರು.) ಹಾಗಾಗಿ ಈ ಎರಡು ಮಠಗಳ ಮೂಲಕ ವಚನಕಾರರ ಬಗ್ಗೆ, ಅವರ ಚಿಂತನೆಗಳ ಬಗ್ಗೆ ಹಲವಾರು ಕೃತಿಗಳು ಹೊರಬಂದಿದ್ದು ಇದಕ್ಕೆ ಪ್ರೇರಣೆಯಾದವರು ಕಲ್ಬುರ್ಗಿಯವರು.

ಕಟು ವಾಸ್ತವ ಸತ್ಯಗಳನ್ನು ಮುಚ್ಚು ಮರೆಯಿಲ್ಲದೆ ಹೇಳುವ ಇವರು ಕಳೆದ ತಿಂಗಳು ಅಲೆಮಾರಿ ಬುಡಕಟ್ಟು ಜನಾಂಗದ ಸಮಾವೇಶ ಧಾರವಾಡದಲ್ಲಿ ನಡೆದಾಗ, ಹಿಂದುಳಿದ ಜಾತಿಯ ಬೇಡ ಜಂಗಮರ ಉದ್ಯೋಗದ ಹಕ್ಕುಗಳನ್ನು ಕಸಿದ ಲಿಂಗಾಯತ ಜಂಗಮರನ್ನು ನೇರವಾಗಿ ತರಾಟೆಗೆ ತಗೆದುಕೊಂಡರು.

ಧಾರವಾಡದಲ್ಲಿ ಶತಮಾನದ ಇತಿಹಾಸವುಳ್ಳ ಹಾಗೂ ಇದೀಗ ಕೃಷಿ ವಿ.ವಿ.ಯ ಮೇಲ್ವಿಚಾರಣೆಯಲ್ಲಿರುವ ಕಲೆಗೇರಿ ಎಂಬ ಕೆರೆಗೆ, ವಿಶ್ವೇಶ್ವರಯ್ಯನವರ ಹೆಸರಿಡಲು ಜಿಲ್ಲಾಡಳಿತ ಮುಂದಾದ ಸಂದರ್ಭದಲ್ಲಿ, ಕಲ್ಲ ಎಂಬ ಅನಕ್ಷರಸ್ತ ರೈತ ಕಟ್ಟಿಸಿದ ಈ ಕೆರೆಗೆ ಕಲಗೇರಿ ಎಂಬ ಹೆಸರು ಬಂದಿದೆ. ಯಾವ ಕಾರಣಕ್ಕೂ ಹೆಸರು ಬದಲಿಸಿ ಇತಿಹಾಸಕ್ಕೆ ಅಪಚಾರವೆಸಗಕೂಡದು ಎಂದು ಇವರು ಹೇಳಿಕೆ ನೀಡಿದ ಕೂಡಲೇ ಧಾರವಾಡ ಜಿಲ್ಲಾಡಳಿತ ತನ್ನ ನಿರ್ಣಯ ಕೈಬಿಟ್ಟಿತು.  ಇಂತಹ ಸಂಶೋಧನೆಗಳ ಮೂಲಕ ಚಿತ್ರದುರ್ಗ ಜಿಲ್ಲೆಯ ಸೂಳೆಕೆರೆ ಹೆಸರನ್ನು ಶಾಂತಿಸಾಗರ ವೆಂದು ಕರೆಯಲು ಹೊರಟಿದ್ದ ಸರ್ಕಾರದ ನಡೆಯನ್ನು ತಡೆದವರು ಕಲ್ಬುರ್ಗಿಯವರು. ಅವರ ದೃಷ್ಟಿಯಲ್ಲಿ ದೇಹ ಮಾರುವ ವೃತ್ತಿಯಲ್ಲಿದ್ದರೂ ಕೂಡ ತನ್ನ ಜನರಿಗೆ ಒಳಿತಾಗಲೆಂದು ಬಯಸಿ ದುಡಿದ ಹಣವನ್ನು ಕೆರೆ ಕಟ್ಟಲು ಬಳಸಿದ ಆಕೆಯ ಹೃದಯವಂತಿಕೆಯನ್ನು ನಾವು ಮರೆಯಬಾರದು. ಇದು ಒಂದರ್ಥದಲ್ಲಿ ನಿಜ ಕೂಡ ಹೌದು.

(ದಿನಾಂಕ 9-11-11 ರಂದು ಉದಯ ಟಿ.ವಿ ಗೆ ನಡೆಸಿದ ಸಂದರ್ಶನದ ಸಂಕ್ಷಿಪ್ತ ಮಾತುಕಥೆಯ ಸಾರಾಂಶ)

(ಚಿತ್ರಗಳು: ಲೇಖಕರದು ಮತ್ತು ಹು.ಭಾ.ವಡ್ಡಟ್ಟಿ)