Tag Archives: ಕಲೆ

ಸಾಮುದಾಯಿಕ ಹಾದಿಯಾಗಿ ಸಂಗೀತ

-ಭಾರತೀ ದೇವಿ. ಪಿ

ಸಂಗೀತ ಕುರಿತಾದ ಸಂಕಥನಗಳಲ್ಲಿ ನಾವು ಮತ್ತೆ ಮತ್ತೆ ‘ಸಂಗೀತ ಆತ್ಮದ ಭಾಷೆ, ಅದಕ್ಕೆ ಕಾಲ ದೇಶಗಳ ಹಂಗಿಲ್ಲ, ಅದರ ಭಾಷೆ ವಿಶ್ವಾತ್ಮಕವಾದುದು’ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಹೀಗೆ ದೇಶ ಭಾಷೆಗಳಾಚೆಗೆ ಎಲ್ಲರನ್ನು ತಲುಪುವ ವಿಶೇಷ ಗುಣ ಸಂಗೀತಕ್ಕಿದೆ, ಏಕೆಂದರೆ ಅದು ಭಾಷೆಯನ್ನು ಸಂಕೋಲೆಯಾಗಿ ಮಾಡಿಕೊಂಡಿಲ್ಲ. ಆದರೆ ತಾಂತ್ರಿಕವಾಗಿ ಸುಸಜ್ಜಿತವಾದ, ಶ್ರೇಷ್ಠ ಅಭಿರುಚಿ ತಮ್ಮದೆಂದುಕೊಂಡ ಕೇಳುಗರಿಂದ ತುಂಬಿಕೊಂಡಿರುವ ಸಭಾಂಗಣದಲ್ಲಿ ಕುಳಿತಾಗೆಲ್ಲ ಈಚೆಗೆ ವಿಚಿತ್ರ ಕಸಿವಿಸಿಯಾಗುತ್ತದೆ. ಇಂತಹ ವಿಶ್ವಾತ್ಮಕ ಭಾಷೆಯಾದ ಸಂಗೀತದ ಒಂದು ಪ್ರಭೇದವಾದ ‘ಶಾಸ್ತ್ರೀಯ’ ಎನಿಸಿಕೊಂಡಿರುವ ಸಂಗೀತ ಕೆಲವೇ ನಿರ್ದಿಷ್ಟ ಗುಂಪಿನ ಜನರ ಅಭಿರುಚಿಯ ಸಂಗತಿಯಾಗಷ್ಟೇ ಸೀಮಿತಗೊಳ್ಳುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಹೀಗೆ ನನ್ನಲ್ಲಿ ಎದ್ದ ಹಲವು ಪ್ರಶ್ನೆ ಮತ್ತು ಆತಂಕಗಳನ್ನು ಅವಲೋಕಿಸುವ ಲೌಡ್ ಥಿಂಕಿಂಗ್‍ನ ರೂಪದಲ್ಲಿ ಇಲ್ಲಿನ ನನ್ನ ಅಭಿಪ್ರಾಯಗಳಿವೆ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸುತ್ತೇನೆ.

ಕಲೆಯ ಹಾದಿ ಆತ್ಮಸಾಕ್ಷಾತ್ಕಾರದ ಹಾದಿ ಎಂದು ಭಾವಿಸಿಕೊಂಡಾಗ ಅದು ವೈಯಕ್ತಿಕ ಸಾಧನೆಯ ಪಥವಾಗುತ್ತದೆ. ತನ್ನ ಸಾಧನೆ, ಅದರ ಮೂಲಕ ಪಡೆಯುವ ಪಕ್ವತೆ, ಸಹೃದಯನೊಂದಿಗೆ ನಡೆಸುವ ಅನುಸಂಧಾನ ಇವು ಒಂದು ವಲಯದೊಳಗೆ ನಡೆಯುವಂಥವು. ಇದರಾಚೆಗೆ ಒಂದು ಸಾಮುದಾಯಿಕ ಆಯಾಮ ಸಂಗೀತ ಸೇರಿದಂತೆ ಲಲಿತಕಲೆಗಳಿಗೆ ಇದೆ. ಇದು ಸಂಸ್ಕಾರ, ರಂಜನೆ, ಭಕ್ತಿ, ಆತ್ಮ ನಿರೀಕ್ಷಣೆಯಾಚೆಗಿನ ಎಲ್ಲರೊಂದಿಗೆ ಒಂದಾಗಿ ತನ್ನನ್ನು ಗುರುತಿಸಿಕೊಳ್ಳುವ ಬಗೆ. ಆದರೆ ಶಾಸ್ತ್ರೀಯ ಸಂಗೀತದ ಇಂದಿನ ಬೆಳವಣಿಗೆಯನ್ನು ಕಂಡಾಗ ಅದು ವೈಯಕ್ತಿಕ ಸಾಧನೆಯ, ಶೋಧನೆಯ ದಾರಿಯಾಗಿ ಕಾಣುತ್ತಿದೆ. ಒಂದೇ ಬಗೆಯ ಶ್ರೋತೃಗಳು, ಸಂಘಟನೆ, ಪ್ರಸ್ತುತಿಯಲ್ಲಿ ಏಕರೂಪತೆ ಕಾಣುತ್ತಿದೆ. ಇವುಗಳು ಬಹುತ್ವದಿಂದ ದೂರವಾಗಿವೆ.

ವೈವಿಧ್ಯ ಮತ್ತು ಬಹುತ್ವ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಗಮನಾರ್ಹವಾದ ಮತ್ತು ಮುಖ್ಯವಾದ ಸಂಗತಿಗಳು. ಕೇವಲ ಹಾಡುವ ಬಗೆ, ಕೌಶಲಗಳಲ್ಲಿ ಮಾತ್ರ ವೈವಿಧ್ಯ ವ್ಯಕ್ತವಾದರೆ ಸಾಕೆ? ಕುಮಾರ ಗಂಧರ್ವರು ತತ್ವಪದಗಳೊಂದಿಗೆ ಮಾಡಿಕೊಂಡ ಅನುಸಂಧಾನ, ಹಿಂದೆ ಶಾಸ್ತ್ರೀಯ ಸಂಗೀತದೊಡನೆ ನಾಟ್ಯ ಸಂಗೀತದ ಅಂಶಗಳು ಬೆರೆತು ಪರಸ್ಪರ ಕೊಡುಕೊಳ್ಳುಗಳ ಮೂಲಕ ಶ್ರೀಮಂತಗೊಂಡ ಬಗೆ ಇವುಗಳಿಂದ ಕಲಿಯುವುದು ಸಾಕಷ್ಟಿದೆ. ವೈವಿಧ್ಯ ಮತ್ತು ಒಳಗೊಳ್ಳುವಿಕೆ ಶಾಸ್ತ್ರೀಯ ಸಂಗೀತದ ಕಸುವನ್ನು ಹೆಚ್ಚಿಸುತ್ತದೆ.

ಶಾಸ್ತ್ರೀಯ ಸಂಗೀತದ ಬೇರುಗಳಿರುವುದು ಸಮುದಾಯದಲ್ಲಿ. ಆದರೆ ಇಂದು ಅದು ಬೇರಿನಿಂದ ಸಾಕಷ್ಟು ದೂರ ಕ್ರಮಿಸಿದೆ. ತಂತ್ರಜ್ಞಾನದ ಬೆಂಬಲದೊಂದಿಗೆ ಹೊಸತನಕ್ಕೆ ಒಡ್ಡಿಕೊಂಡಿರುವ ಸಂಗೀತ ಮತ್ತೆ ಬೇರುಗಳೆಡೆಗೆ ಸಾಗದ ಹೊರತು ಶುಷ್ಕವಾಗಿಬಿಡುತ್ತದೆ. ಹಿಂದಿನ ಗಂಗೂಬಾಯಿಯವರಲ್ಲಾಗಲೀ, ಭೀಮಸೇನ ಜೋಶಿಯವರಲ್ಲಾಗಲೀ ಕಾಣುವ ಕಸುವು ಇಂದಿನ ಹಾಡುಗಾರರಲ್ಲಿ ಕಾಣಲಾಗುತ್ತಿಲ್ಲ ಎಂದು ಹೇಳುವಾಗ ನಮ್ಮ ಗಮನ ಸಾಗಬೇಕಾದುದು ಈ ಕಡೆಗೆ. ವಿಶಾಲವಾಗುವ, ಎತ್ತರಕ್ಕೇರುವ ಹುಮ್ಮಸ್ಸಿನಲ್ಲಿ ಆಳಕ್ಕಿಳಿಯುವ, ಬೇರುಗಳನ್ನು ತಡಕುವ ಹಾದಿ ಹಿನ್ನಡೆಯ ಹಾದಿಯಲ್ಲ; ಅದು ಜೀವರಸವನ್ನು ಮತ್ತೆ ಪಡೆಯುವ ಹಾದಿಯಾಗುತ್ತದೆ. ಹೀಗೆ ಮತ್ತೆ ಮತ್ತೆ ಅದು ಭೇಟಿ ನೀಡಬೇಕಾಗಿರುವುದು ಮರಳಿ ಸಮುದಾಯದ ಕಡೆಗೇ.

ಸಂಗೀತ ಹೃದಯದ ಭಾಷೆ ಎನ್ನುವುದು ಅದರ ನಿರೂಪಣೆಗೆ ಸಂಬಂಧಿಸಿದ ಸಂಗತಿ. ಹೃದಯದ ಭಾಷೆಗೆ ವಿಚಾರದ ಹಂಗಿಲ್ಲ ಎನ್ನುವುದೂ ನಿಜ. ಆದರೆ ಹೃದಯ ತಟ್ಟುವುದರಾಚೆಗೆ ನಮ್ಮ ಪ್ರಜ್ಞೆಯನ್ನು ತಟ್ಟಬಲ್ಲ ಗುಣ, ಶಕ್ತಿ ಸಂಗೀತಕ್ಕಿಲ್ಲವೇ? ಆದರೆ ಇಂದು ಸಂಗೀತ ಬಲ್ಲವರಲ್ಲಿ ಬಹುಪಾಲು ಜನ ಅದರ ವೈಚಾರಿಕ ಆಯಾಮದ ಕುರಿತು ಯೋಚಿಸಿದಂತಿಲ್ಲ. ಯಾವುದೇ ಸಾಮಾಜಿಕ ಸಂಗತಿಗಳ ಬಗೆಗೆ ಅವರ ದನಿ ಕೇಳುವುದಿಲ್ಲ. ಇಂದಿನ ರಿಯಾಲಿಟಿ ಶೋಗಳ, ಸಿನೆಮಾಗಳ ಜನಪ್ರಿಯ ಹಾಡುಗಾರರಿಂದ ಹಿಡಿದು ಶಾಸ್ತ್ರೀಯ ಸಂಗೀತಗಾರರವರೆಗೆ ಸಾಮಾಜಿಕ ಸಂಗತಿಗಳಿಗೆ ಸಂಗೀತಗಾರರು ಸ್ಪಂದಿಸಿದ್ದು ಕಡಿಮೆ. ಸಂಗೀತಕ್ಕಿರುವ ಸಾಮಾಜಿಕ ಆಯಾಮ ಸಹೃದಯರ ರಂಜನೆಗಷ್ಟೇ ಸೀಮಿತವೇ? ಅದರಾಚೆಗೆ ಸಮಾಜದೊಂದಿಗೆ ಸಂಗೀತಗಾರರು ಯಾವ ಬಗೆಯಲ್ಲಿ ಸ್ಪಂದಿಸಬಹುದು? ಸಂಗೀತ ಕಲಿಕೆ, ಕೇಳ್ಮೆ ಮತ್ತು ಪ್ರಸ್ತುತಿಯಲ್ಲಿ ಸಂಗೀತದ ಪ್ರಜಾಪ್ರಭುತ್ವೀಕರಣ ನಡೆಸಬಹುದಾದ ಬಗೆ ಯಾವುದು?

ಈ ಪ್ರಶ್ನೆಗಳೊಂದಿಗೆ ಹೊರಟಾಗ ಸಂಗೀತ ದೈವಿಕವಾದದ್ದು, ಅದು ಆತ್ಮದ ಭಾಷೆ ಎಂಬೆಲ್ಲ ಮಾತುಗಳನ್ನು ಮರುಪ್ರಶ್ನೆಗೊಳಪಡಿಸಬೇಕಾಗುತ್ತದೆ. ಸಂಗೀತ ಶ್ರೇಷ್ಠವಾದ ಕಲೆ ನಿಜ, ಅದಕ್ಕೆ ಅದರದೇ ಆದ ಸ್ಥಾನ, ಗೌರವ ಇದೆ. ಆದರೆ ಯಾವುದನ್ನೇ ಆಗಲಿ ಅದು ಉಳಿದವುಗಳಿಗಿಂತ ಶ್ರೇಷ್ಠ ಎನ್ನುವ ಮಾತು ಶ್ರೇಣೀಕರಣವನ್ನು ಪೋಷಿಸುವ ಮಾತಾಗುವಂತೆಯೇ ನಿಧಾನಕ್ಕೆ ಶ್ರೇಷ್ಠವೆನಿಸಿಕೊಂಡದ್ದರ ಬೇರನ್ನು ಶಿಥಿಲಗೊಳಿಸುವ ಬಗೆಯೂ ಆಗುತ್ತದೆ. ನಮ್ಮ ಶಾಸ್ತ್ರೀಯ ಪ್ರಭೇದಗಳು ಶ್ರೇಷ್ಠತೆಯ ಕಲ್ಪನೆ ಮತ್ತು ವ್ಯಸನದಿಂದ ಹೊರಬಂದ ಹೊರತು ಅವುಗಳಿಂದ ಹೊಸದೇನನ್ನೂ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ.

ಇಂದಿಗೂ ಶಾಸ್ತ್ರೀಯ, ಜನಪದ ಮತ್ತು ಜನಪ್ರಿಯ ಸಂಗೀತ ಇವುಗಳ ನಡುವೆ ಸ್ಪಷ್ಟ ಶ್ರೇಣೀಕರಣ ಮನೆ ಮಾಡಿರುವುದು ಕಾಣುತ್ತದೆ. ಯಾವುದೇ ಸಾಂಸ್ಕೃತಿಕ ಉತ್ಸವ ನಡೆಯಲಿ, ಇವುಗಳಿಗೆ ದೊರೆಯುವ ವೇದಿಕೆಗಳೇ ಬೇರೆ, ಇವುಗಳ ಕೇಳುಗ ವರ್ಗವೇ ಬೇರೆ. ಅವುಗಳ ನಡುವಣ ವೈಶಿಷ್ಟ್ಯವನ್ನು ಮೆಚ್ಚುತ್ತಲೇ ಒಂದು ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ. ಈ ಬಗೆಯ ‘ವಾಟರ್ ಟೈಟ್ ಕಂಪಾರ್ಟ್‍ಮೆಂಟ್ಸ್’ ಪರಸ್ಪರ ಪ್ರಭಾವ ಪಡೆಯುವುದರಿಂದ ನಮ್ಮನ್ನು ತಡೆಯುತ್ತದೆಯೇ? ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಜನರಿಗೆ ಬೇಕಾದಂತೆ ಹಾಡುವವರನ್ನು ಜನರನ್ನು ಓಲೈಸುವವರು ಎಂದು ಅಸಡ್ಡೆಯಿಂದ ಕಾಣುವವರಿದ್ದಾರೆ. ಕಟ್ಟುನಿಟ್ಟಾಗಿ ಪಾಠಾಂತರಕ್ಕೆ ಕಟ್ಟುಬಿದ್ದವರಿದ್ದಾರೆ. ಇವು ಸಂಗೀತವನ್ನು ಸದಾ ಒಂದು ಅಲ್ಪಸಂಖ್ಯಾತ ವರ್ಗದ ಚಟುವಟಿಕೆಯಾಗಿ ನಿರ್ದಿಷ್ಟಗೊಳಿಸುತ್ತದೆಯೇ? ಇದರಿಂದ ಸಂಗೀತ ಕ್ಷೇತ್ರ ಪಡೆಯುವುದೇನು ಮತ್ತು ಕಳೆದುಕೊಳ್ಳುವುದೇನು?

ಈ ಬಗ್ಗೆ ಇಂದು ಸಂಗೀತ ಕ್ಷೇತ್ರದಲ್ಲಿ ಮನೆಮಾಡಿರುವುದು ತುಂಬಾ ಸರಳೀಕೃತವಾದ ಗ್ರಹಿಕೆ. ಜನರನ್ನು ಮೆಚ್ಚಿಸಲು ಹೋದಾಗ ಸಂಗೀತ ಜಾಳುಜಾಳಾಗುತ್ತದೆ, ಜನಪ್ರಿಯತೆಗೆ ಮಾರುಹೋದ ಸಂಗೀತಗಾರ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತಾನೆ ಎಂಬ ಭಾವನೆ. ಈ ತಿಳುವಳಿಕೆಯನ್ನು ಮರುಪರಿಶೀಲನೆಗೆ ಒಡ್ಡಬೇಕಾಗುತ್ತದೆ. ಶುದ್ಧ ಎಂಬುದು ಯಾವುದು? ಸಂಗೀತ ಹಿಂದೆಂದೋ ಇದ್ದಂತೆ ಇಂದು ಇಲ್ಲ. ಕಾಲಕ್ಕನುಗುಣವಾಗಿ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಬದಲಾವಣೆಗಳನ್ನು ಒಳಗು ಮಾಡಿಕೊಂಡಿದೆ. ಅಲ್ಲದೆ, ತಮ್ಮ ತನವನ್ನು ಬಿಟ್ಟುಕೊಡದೆಯೂ ಜನರನ್ನು ಸೆಳೆಯುವ ಅನ್ನುವುದಕ್ಕಿಂತ ಹೆಚ್ಚಾಗಿ ಒಳಗು ಮಾಡಿಕೊಳ್ಳುವ ಬಗೆಯಲ್ಲಿ ಸಂಗೀತದ ಪ್ರಸ್ತುತಿ ಸಾಧ್ಯವಿಲ್ಲವೇ? ಒಂದು ನಿರ್ದಿಷ್ಟ  ವರ್ಗಕ್ಕೆ ಸೀಮಿತವಾಗಿದ್ದಾಗ ಅದು ಬಹಳ ಮುಂದೆ ಹೋಗುವುದು ಕಷ್ಟವಾಗುತ್ತದೆ. ಕಾಲಕ್ಕನುಗುಣವಾಗಿ ಬದಲಾಗುವ ಬಗೆಯಲ್ಲಿ ಸಂಗೀತ ಹೆಚ್ಚು ಜನಮುಖಿಯಾಗಬೇಕು. ಇಂದಿನ ಸಂಗೀತದ ಕುರಿತು ಹಳಹಳಿಕೆಯ ಮಾತಾಡುವಾಗ ಈ ಸಂಗತಿ ನಮ್ಮ ದೃಷ್ಟಿಯಿಂದ ತಪ್ಪಿ ಹೋಗಬಾರದು. ಸಂಗೀತದ ಎಲ್ಲ ಪ್ರಭೇದಗಳ ಪ್ರಜಾಪ್ರಭುತ್ವೀಕರಣ ಸಮಾನತೆಯ ದೃಷ್ಟಿಯಿಂದ ಮಾತ್ರವಲ್ಲ, ಸಂಗೀತದ ಬೆಳವಣಿಗೆಯ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ.