Tag Archives: ಕೊಡಗು

ಕೊಡಗಿನಲ್ಲಿ ಅಕ್ರಮ ಅರಣ್ಯ ಲೂಟಿಗೆ ಪಾಲುದಾರನಾದ ಸರ್ಕಾರ

ವಿ. ಪ್ರಶಾಂತ್ ಮಿರ್ಲೆ
ವಕೀಲರು

ರಾಜ್ಯದಲ್ಲಿ ಇರುವ 4,10,775 ಹೆಕ್ಟೆರ್ ಅರಣ್ಯಪ್ರದೇಶದಲ್ಲಿ ಸುಮಾರು 1/3 ರಷ್ಟು ಪ್ರದೇಶವ್ಯಾಪ್ತಿಯನ್ನು ಹೊಂದಿರುವ ಕೊಡಗು ಜಿಲ್ಲೆಯು, ನೆಚ್ಚಿನ ಪ್ರವಾಸತಾಣವಾಗಿ ನಿಸರ್ಗದ ರಸದೌತಣವನ್ನು ನೀಡುತ್ತಿದೆ. ಈ ಪ್ರದೇಶಗಳಲ್ಲಿ ಕಂಡುಬರುವ ಜಮ್ಮಾ ಮತ್ತು ಬಾಣೆ ಜಮೀನುಗಳು ಕೃಷಿ ಜಮೀನುಗಳಿಗೆ ಸುತ್ತುವರೆದ ಕಾಡು ಪ್ರದೇಶಗಳಾಗಿರುತ್ತವೆ. ಐತಿಹಾಸಿಕವಾಗಿ ಅವಲೋಕಿಸಿದಾಗ, ಹಿಂದಿನ ಕೊಡಗಿನ ಮಹಾರಾಜರು ಕಾಡುಗಳ ರಕ್ಷಣೆಯ ಹೊಣೆಯನ್ನು ಸಾಗುವಳಿದಾರರಿಗೆ ವಹಿಸಿಕೊಟ್ಟವುಗಳಾಗಿರುತ್ತವೆ, ಈ ಪ್ರದೇಶಗಳಲ್ಲಿ ನಿಯಮಗಳ ಅನುಸಾರವಾಗಿ ಸಾಗುವಳಿದಾರರಿಗೆ ತಮ್ಮ ಸ್ವಂತ ಅಥವಾ ಗೃಹಕೃತ್ಯಗಳಿಗಷ್ಟೇ ಉಪಯೋಗಿಸುವ ಅವಕಾಶವನ್ನು ಹೊರತುಪಡಿಸಿ ಅವುಗಳ ಮೇಲಿನ ಹಕ್ಕನ್ನು ಮಹಾರಾಜರೇ (ಅಂದರೆ ಸರ್ಕಾರವೇ) ಕಾಯ್ದಿರಿಸಿಕೊಂಡಿದ್ದರು. ಪ್ರತಿ ಸಾಗುವಳಿದಾರನ ಕೃಷಿ ಜಮೀನಿಗೆ ಒತ್ತಾಗಿ 50 ರಿಂದ 200 ಹೆಕ್ಟೆರ್‌ಗಳಷ್ಟು ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಹೊಂದಿರುತ್ತಾರೆ. ಇಮ್ದು ಇಂತಹ ಅರಣ್ಯ ಪ್ರದೇಶಗಳಲ್ಲಿ ಸುಮಾರು 30.000 ಹೆಕ್ಟೆರ್‌ಗಳಷ್ಟು ಪ್ರದೇಶವು ಕಾಫಿ ಬೆಳೆಯ ಹೆಸರಿನಲ್ಲಿ ಒತ್ತುವರಿಯಾಗಿದೆ. ಅದರಲ್ಲಿ ಸಾಕಷ್ಟು ಪ್ರದೇಶವು ಬೇರೆಯವರಿಗೆ ಪರಭಾರೆಯೂ ಆಗಿದೆ.

ಇದಕ್ಕೂ ಮಿಗಿಲಾಗಿ, ನೂರಾರು ಹೆಕ್ಟೆರ್ ಪ್ರದೇಶಗಳು ಜಮ್ಮಾ-ಬಾಣೆ ಜಮೀನಿನ ಹೆಸರಿನಲ್ಲಿ ಸಾಗುವಳಿದಾರರಿಂದಲೇ ಒತ್ತುವರಿಯಾಗಿ, ಆಸುಪಾಸಿನ ಹೇರಳ ಪ್ರಮಾಣದ ಅರಣ್ಯ ಪ್ರದೇಶವನ್ನು ಬರಿದು ಮಾಡಲು ಹೊರಟಿರುವುದು ಆಘಾತಕಾರಿ ಬೆಳವಣಿಗೆ!.

ಹಲವು ಸಂದರ್ಭಗಳಲ್ಲಿ, ಜಮ್ಮಾ-ಬಾಣೆ ಜಮೀನುಗಳ ಹಿಡುವಳಿದಾರರ ಗುಂಪಿನ ಹಕ್ಕೊತ್ತಾಯದಿಂದಾಗಿ, ಸರ್ಕಾರ ಮತ್ತು ಹಿಡುವಳಿದಾರರ ನಡುವೆ ಕಾನೂನು ಸಮರಗಳು ಏರ್ಪಟ್ಟು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಮ್ಮಾ-ಬಾಣೆ ಜಮೀನಿನ ಮೇಲಿನ ಸರ್ಕಾರದ ಹಕ್ಕನ್ನು ಧೃಡೀಕರಿಸಿವೆ. ಈ ತೀರ್ಪುಗಳ ಅನ್ವಯ ಸರ್ಕಾರ ಜಮ್ಮಾ-ಬಾಣೆ ಜಮೀನುಗಳ ಅಕ್ರಮಗಳನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ಕಟ್ಟು-ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಿತು. ಆದರೂ, ಹಿಡುವಳಿದಾರರು ತಮ್ಮ ರಾಜಕೀಯ ಪ್ರಭಾವ ಬೀರಿ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಪ್ರಸ್ತುತ ಸರ್ಕಾರವು ಸದರಿ ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಸಕ್ರಮಗೊಳಿಸಿ ಹಿಡುವಳಿದಾರರಿಗೆ ಹಕ್ಕನ್ನು ಪ್ರಾಪ್ತಿಮಾಡುವ ಹೊಸ ನಿಯಮವನ್ನು ಜಾರಿಗೆ ತರುವ ನಡೆ ಸಂಶಯಾಸ್ವದವಾಗಿದೆ. ಮುಖ್ಯವಾದ ಸಂಗತಿಗಳೆಂದರೆ, ರಾಜ್ಯದ ಭೂ ಸುಧಾರಣೆ ಕಾಯಿದೆಯ ಅಡಿಯಲ್ಲಿ ಸಾಮಾನ್ಯನು ಹೊಂದುವ ಗರಿಷ್ಟ ವ್ಯವಸಾಯದ ಭೂಮಿತಿಯು 54 ಎಕರೆಗಳು ; ಇದಕ್ಕಿಂತ ಹೆಚ್ಚಿನ ಭೂಮಿಯು ಸರ್ಕಾರಕ್ಕೆ ನಿಹಿತವಾಗುತ್ತದೆ. ಆದರೆ, 100 ಎಕರೆಗಳಿಗೂ ಹೆಚ್ಚು ಜಮೀನುಗಳನ್ನು ಹೊಂದಿರುವವರನ್ನು ಭೂಪರಿಮಿತಿಯಿಂದ ವಿನಾಯ್ತಿ ನೀಡಿ ಸಕ್ರಮಗೊಳಿಸುವ ಸರ್ಕಾರದ ಪ್ರಯತ್ನ ಎಷ್ಟು ಸರಿ?. ಜಮ್ಮಾ-ಬಾಣೆ ಪ್ರದೇಶಗಳನ್ನು ಪ್ಲಾಂಟೇಶನ್ ಹೆಸರಿನಲ್ಲಿ ಸಕ್ರಮ ಮಾಡುವುದಾದರೆ ಇದಕ್ಕೆ ಕಾನೂನಿನ ಮಾನ್ಯತೆ ಇದೆಯೇ? ಇದು ಸರ್ಕಾರ ಉಳ್ಳವರ ಪರವಾದ ಧೋರಣೆ ಅಲ್ಲವೇ? ಯಾವುದೇ ಅಕ್ರಮ-ಸಕ್ರಮಗೊಳಿಸುವಲ್ಲಿ ಸೂಕ್ತ ಮಾನದಂಡಗಳು, ಪರಿಸರ ಕಾಳಜಿ ನಿಯಮಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಮಾಲಿನ್ಯಕ್ಕೆ ಸರ್ಕಾರವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಇದಕ್ಕೆ ಸರ್ಕಾರದ ಉತ್ತರವೇನು?

ಹಿಂದಿನ ಮಹಾರಾಜರಿಂದ ಇಂದಿನ ಸರ್ಕಾರಗಳು ತಮ್ಮ ಸ್ವಾಮ್ಯಕ್ಕೆ ಒಳಪಟ್ಟ ಅರಣ್ಯ ಪ್ರದೇಶಗಳನ್ನು ಜನರ ಅವಶ್ಯಕತೆಗಳನ್ನು ಮೀರಿ ದುರ್ಬಳಕೆ ಮಾಡದಂತೆ ತಡೆಯುವುದಕ್ಕಾಗಿ ಹಲವು ನಿಯಮಗಳನ್ನು ಜಾರಿಗೆ ತಂದಿವೆ. ಪ್ರಾದೇಶಿಕವಾಗಿ ತಮ್ಮ ಕೃಷಿ ಜಮೀನುಗಳಿಗೆ ಸುತ್ತುವರೆದ ಕಾಡು ಪ್ರದೇಶಗಳನ್ನು ಗುರ್ತಿಸಿ ಸೀಮಿತ ನಿರ್ಬಂಧಿತ ಹಕ್ಕುಗಳೊಂದಿಗೆ, ಅಂದರೆ 1) ಕಂದಾಯ ಮುಕ್ತವಾಗಿ,  2) ಜಾನುವಾರುಗಳ ಮೇವಿಗಾಗಿ,, 3) ಮರಗಳಿಂದ  ಎಲೆ ಗೊಬ್ಬರವನ್ನು  ತೆಗೆದುಕೊಳ್ಳಲು, 4) ಕೃಷಿ ಉತ್ಪನ್ನ  ಮತ್ತು ಗೃಹ ಉಪಯೋಗಕ್ಕಾಗಿ ಕಟ್ಟಿಗೆ  ಮತ್ತು  ಮರ ಮುಟ್ಟುಗಳನ್ನು  ತೆಗೆದುಕೊಳ್ಳುಲು ಕೃಷಿಕರಿಗೆ ಅವಕಾಶ, ಇವನ್ನು ಹೊರತುಪಡಿಸಿ ಅವುಗಳ ಮೇಲಿನ ಹಕ್ಕನ್ನು ಸರ್ಕಾರವೇ ಕಾಯ್ದಿರಿಸಿಕೊಂಡಿರುತ್ತದೆ. ಇಂತಹ  ಅರಣ್ಯ ಪ್ರದೇಶಗಳನ್ನು ನಮ್ಮ ರಾಜ್ಯದಲ್ಲಿ  ಪ್ರಾದೇಶಿಕವಾಗಿ ಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಅವುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮ್ಕಿ, ಕಾನೆ ಮತ್ತು ಬಾಣೆ ಜಮೀನುಗಳೆಂತಲು; ಉತ್ತರ ಕನ್ನಡ  ಜಿಲ್ಲೆಯಲ್ಲಿ ಹಾಡಿ ಮತ್ತು ಬೆಟ್ಟದ ಜಮೀನು  ಜಮೀನುಗಳೆಂತಲೂ; ಮೈಸೂರು ಪ್ರದೇಶದಲ್ಲಿ ಕಾನೆ ಮತ್ತು ಸೊಪ್ಪಿನ ಬೆಟ್ಟದ ಜಮೀನುಗಳೆಂತಲೂ; ಕೊಡಗು ಜಿಲ್ಲೆಯಲ್ಲಿ ಜಮ್ಮಾ ಮತ್ತು ಬಾಣೆ ಜಮೀನುಗಳೆಂತಲೂ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೋತ್ಸಾಲ್ ಜಮೀನುಗಳೆಂತಲೂ ಅನ್ನುತ್ತಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ-1964ರ ಕಲಮು 79(2)ರ ಅಡಿಯಲ್ಲಿ ಈ ಅರಣ್ಯ ಪ್ರದೇಶಗಳ ಮೇಲಿನ ನಿಬಂಧಿತ ಉನ್ಮುಕ್ತಿಗಳ ಅನುಭೋಗವನ್ನು ಮಾನ್ಯಮಾಡಿದೆ.

ಪ್ರಸ್ತುತದಲ್ಲಿ, ರಾಜ್ಯದಲ್ಲಿ ಇರುವ 4,10,775 ಹೆಕ್ಟೆರ್ ಅರಣ್ಯಪ್ರದೇಶದಲ್ಲಿ ಸುಮಾರು 1/3 ರಷ್ಟು ಪ್ರದೇಶವ್ಯಾಪ್ತಿಯನ್ನು ಕೊಡಗು ಜಿಲ್ಲೆಯೇ ಹೊಂದಿದೆ. ಐತಿಹಾಸಿಕವಾಗಿ ಅವಲೋಕಿಸಿದಾಗ, ಹಿಂದಿನ ಕೊಡಗಿನ ಮಹಾರಾಜರು ಕಾಡುಗಳ ರಕ್ಷಣೆಯ ಹೊಣೆಯನ್ನು ಜಮ್ಮಾ ಸೇವಕರಿಗೆ, ಕೆಲಸದಾಳುಗಳಿಗೆ ನಂತರದ ಕಾಲದಲ್ಲಿ ಬ್ರಿಟಿಷರ ಆಡಳಿತದಲ್ಲಿ ತಮ್ಮ ಸೈನ್ಯದಲ್ಲಿ ಸೇವೆ ಸಲ್ಲಿಸಿದವರಿಗೆ ದಾನವಾಗಿ ಅಥವಾ ಉಂಬಳಿಯಾಗಿ ಸಾಗು ಭೂಮಿಯನ್ನು ನೀಡಿ, ಅದರಲ್ಲೂ ಮುಖ್ಯವಾಗಿ ಸಾಗುವಳಿಗೆ (ಕೃಷಿಗೆ) ಒಳಪಟ್ಟ ಜಮೀನಿಗೆ ಒತ್ತಾಗಿ ಸುತ್ತುವರೆದಿರುವ ಕಾಡು ಪ್ರದೇಶವನ್ನು ಆಯಾ ಸಾಗುವಳಿದಾರರಿಗೆ ಮೇಲ್ವಿಚಾರಣೆ ನೀಡಿ ಆ ಪ್ರದೇಶಗಳನ್ನು ತಮ್ಮ ಸ್ವಂತ ಅಥವಾ ಗೃಹಕೃತ್ಯಗಳಿಗಷ್ಟೇ ಬಳಸಿಕೊಳ್ಳುವ ಅವಕಾಶವನ್ನು ಹೊರತುಪಡಿಸಿ ಮಿಕ್ಕ ಹಕ್ಕುಗಳನ್ನು  ಮಹಾರಾಜರೇ ಕಾಯ್ದಿರಿಸಿಕೊಂಡಿದ್ದರು. ಇಂದಿಗೂ ಸಹ ಇವುಗಳ ಹಕ್ಕುಗಳನ್ನು (ಸಾರ್ವಭೌಮಿಕೆಯನ್ನು) ಸರ್ಕಾರವೇ ಕಾಯ್ದಿರಿಸಿಕೊಂಡಿದೆ.

ಆದರೇ, ಇತ್ತೀಚಿನ ದಿನಗಳಲ್ಲಿ ಕಾಫಿ ಅಥವಾ ಕಾರ್ಡಮಾಮ್ (ಏಲಕ್ಕಿ) ಅಥವಾ ಇತರೇ ಬೆಳೆಗಳನ್ನು ಬೆಳೆಯುವ ಅತೀ ಆಸೆಯಿಂದ ತಮ್ಮ ಕೃಷಿ ಜಮೀನಿಗೆ ಸುತ್ತುವರೆದ ಜಮ್ಮಾ-ಬಾಣೆ ಪ್ರದೇಶಗಳನ್ನು ಸಾಗುವಳಿಗೆ ಪರಿವರ್ತಿಸುವ ಕಾರಣ ನೀಡಿ ಕಂದಾಯ ಇಲಾಖೆಯಿಂದ ಅಕ್ರಮವಾಗಿ ಪ್ರಮಾಣ ಪತ್ರಗಳನ್ನು (ಸಿ.ಆರ್.ಸಿ ಮತ್ತು ಸಿ.ಡಿ.ಆರ್.ಸಿ) ಪಡೆದು ಕರನಿರ್ಧರಣೆಗೆ ಒಳಪಡಿಸಿ ಕಂದಾಯ ಪಾವತಿಸುವ ಮೂಲಕ ಹಕ್ಕು ಸಾಧಿಸುವುದು ಮತ್ತು ಮಾರಾಟ ಮಾಡುವುದನ್ನು ಮಾಡಲಾಗಿದೆ. (ಕಾನೂನುಬದ್ದವಾಗಿ ಈ ಬಾಣೆ ಜಮೀನುಗಳನ್ನು ವರ್ಗಾಯಿಸುವಂತಿಲ್ಲ). ಹಲವುಬಾರಿ ಇಂತಹ ಅಕ್ರಮಗಳ ವಿರುದ್ದ ಪರಿಸರವಾದಿಗಳ ಪ್ರತಿಭಟನೆಗಳು ನಡೆದೂ ಇದ್ದವು.

ಕಾರಣ, ಜಮ್ಮಾ-ಬಾಣೆ ಜಮೀನುಗಳು ಸೇರಿದಂತೆ ಸುಮಾರು 1,34,657 ಹೆಕ್ಟೆರ್ ವಿಸ್ತೀರ್ಣದಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಜಮ್ಮಾ-ಬಾಣೆಗಳ ಹಿಡುವಳಿದಾರರಿಂದ ಸುಮಾರು 30.000 ಹೆಕ್ಟೆರ್‌ಗಳಷ್ಟು ಪ್ರದೇಶ ಅರಣ್ಯಪ್ರದೇಶದ ಕಾಫಿ ಬೆಳೆಯ ಹೆಸರಿನಲ್ಲಿ ಒತ್ತುವರಿಯಾಗಿದೆ. ಹಲವು ಸಂದರ್ಭಗಳಲ್ಲಿ, ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯ ಅಕ್ರಮ-ಸಕ್ರಮ ಮಾಡಿಸಿಕೊಳ್ಳುವ ಪ್ರಯತ್ನದಿಂದ, ಸರ್ಕಾರ ಮತ್ತು ಹಿಡುವಳಿದಾರರ ನಡುವೆ ಕಾನೂನು ಸಮರಗಳು ಏರ್ಪಟ್ಟು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಮ್ಮಾ-ಬಾಣೆ ಜಮೀನಿನ ಮೇಲಿನ ಸರ್ಕಾರದ ಹಕ್ಕನ್ನು ಧೃಡೀಕರಿಸಿವೆ. ಈ ತೀರ್ಪುಗಳ ಅನ್ವಯ ಸರ್ಕಾರ ಜಮ್ಮಾ-ಬಾಣೆ ಜಮೀನುಗಳ ಅಕ್ರಮಗಳನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ಕಟ್ಟು-ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಿತು. ಉದಾಹರಣೆಗೆ ದಿನಾಂಕ 31.10.2006ರಲ್ಲಿ ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿಗಳು ಸುತ್ತೋಲೆಯನ್ನು ಹೊರಡಿಸಿ, “ಕೊಡಗು ಜಿಲ್ಲೆಯಲ್ಲಿನ ಬಾಣೆ  ಜಮೀನುಗಳ ಬಗ್ಗೆ ನೀಡಿರುವ ವಿಶೇಷಾಧಿಕಾರ ಸೀಮಿತವಾಗಿದ್ದು, ಈ ಜಮೀನುಗಳ ಪರಿವರ್ತನೆಗೆ ಅವಕಾಶವಿಲ್ಲ. ಆದ್ದರಿಂದ, ಈ ಜಮೀನುಗಳನ್ನು ಪರಿವರ್ತನೆಗಳನ್ನು ಕೋರಿ ಬರುವ ಪ್ರಸ್ತಾವನೆಗಳನ್ನು ಪರಿಗಣಿಸದಿರುವಂತೆ,” ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಆ ಜಿಲ್ಲೆಯ ಎಲ್ಲಾ ಸಂಬಂಧಿತ ಕಂದಾಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಬಾಣೆ ಜಮೀನುಗಳಿಗೆ ಈಗಾಗಲೇ ಅನುಮತಿಯನ್ನು ನೀಡಿದ್ದಲ್ಲಿ ಅದನ್ನು ರದ್ದುಪಡಿಸಿ ಆ ಜಮೀನುಗಳನ್ನು ಬಾಣೆ ಜಮೀನುಗಳನ್ನಾಗಿಯೆ ಮುಂದುವರೆಸಲೂ ಸಹ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದರು.

Karnataka High Court

Karnataka High Court

ಇಷ್ಟಲ್ಲದೆ, ಕರ್ನಾಟಕದ ಉಚ್ಛ ನ್ಯಾಯಾಲಯ ದಿನಾಂಕ 22-10-1993ರಂದು ನೀಡಿದ  ತೀರ್ಪನ್ನು ಉಲ್ಲೇಖಿಸುತ್ತಾ, ಜಮ್ಮಾ ಬಾಣೆ ಜಮೀನನ್ನು ಹೊದಿರುವವರು ಅದರ ಒಡೆಯರಾಗಲು ಸಾಧ್ಯವಿಲ್ಲ. ಆದ್ದರಿಂದ, ಅವರು ಬರೀ ವಿಶೇಷಾಧಿಕಾರಗಳಿಗೆ ಮಾತ್ರ ಅರ್ಹರು ಮತ್ತು ಸದರಿ ಬಾಣೆ ಜಮೀನನ್ನು ಮಾರಾಟ ಮಾಡುವ ಹಕ್ಕು ಅವರಿಗಿರುವುದಿಲ್ಲ. ಕರ್ನಾಟಕ ಭೂಕಂದಾಯ ಅಧಿನಿಯಮದ ಪರಿಛ್ಛೇದ 79 ರಲ್ಲಿಯೂ ಈ ವಿಶೇಷಾಧಿಕಾರಗಳನ್ನು ರಕ್ಷಿಸಲಾಗಿದ್ದು ಅನುಭವದಾರರು ಬಾಣೆ ಜಮೀನಿನ ಮಾಲೀಕತ್ವದ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಇದು ಕರ್ನಾಟಕದ ಉಚ್ಛ ನ್ಯಾಯಾಲಯದ ಪೂರ್ಣಪೀಠದ ತೀರ್ಪಾಗಿದ್ದು. ಇದನ್ನು ಯಾರೂ ಪ್ರಶ್ನಿಸಿಲ್ಲವಾದ್ದರಿಂದ ಇಂದಿಗೂ ನಿರ್ಣಾಯಕವಾಗಿದೆ ಎಂದು ಹೇಳಲಾಗಿತ್ತು.

ಆದರೂ, ಹಿಡುವಳಿದಾರರು ತಮ್ಮ ರಾಜಕೀಯ ಪ್ರಭಾವ ಬೀರಿ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಇದೇ ಸಮಯವನ್ನರಿತ ಕೆಲವು ಕೊಡವ ರಾಜಕಾರಣಿಗಳು ಈ ವಿಷಯವನ್ನು ರಾಜಕೀಯಗೊಳಿಸಿದರು. ಕೆಲವು ರಾಜಕಾರಣಿಗಳು ಕೊಡಗನ್ನು ಅರಣ್ಯ ಪ್ರದೇಶವಾಗಿ ಗುರ್ತಿಸಿ ಅಮೇರಿಕಾಗೆ ಮಾರಾಟ ಮಾಡಲು ಹೊರಟ್ಟಿದ್ದಾರೆ ಎಂದು ತರ್ಕಕ್ಕೆ ನಿಲ್ಲದ ಹೇಳಿಕೆ ನೀಡಿ ಜನತೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರೆ, ಇನ್ನೂ ಕೆಲವರು ಪ್ರತ್ಯೇಕ ರಾಜ್ಯದ ಬೇಡಿಕೆಗಳಿಗೆ ಈ ವಿಷಯವನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸಿದರು, ಮತ್ತು ಈಗಲೂ ಪ್ರಯತ್ನಿಸುತ್ತ ಇದ್ದಾರೆ. ಇವುಗಳ ಪರಿಣಾಮವೆ ಕೊಡಗಿನಲ್ಲಿ 2006ನೇ ಇಸವಿಯ ನವೆಂಬರ್ ಒಂದರಂದು ನಡೆದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಘಟಿಸಿದ ಅನುಚಿತ ಘಟನೆಗಳು.

ಆದರೆ ಹಾಲಿ ಸರ್ಕಾರವು ಸಮಯಸಾಧಕನಂತೆ ತನ್ನ ಆಡಳಿತ ಅವಧಿಯ ಪ್ರಾರಂಭದಲ್ಲಿ ಕೊಡಗು ಜಿಲ್ಲೆಯಲ್ಲಿರುವ ಜಮ್ಮಾ ಬಾಣೆಗೆ ಜಮೀನಿನ ಒಡೆತನ ಸರ್ಕಾರಕ್ಕೆ ಸೇರಿದೆ ಎಂದು ಹೊರಡಿಸಲಾಗಿರುವ ಸುತ್ತೋಲೆಯನ್ನು ರದ್ದುಗೊಳಿಸಿ ದಿನಾಂಕ 31.10.2006ಕ್ಕಿಂತ ಮುಂಚಿತವಾಗಿ ಪರಿವರ್ತಿಸಲ್ಪಟ್ಟ ಜಮೀನುಗಳಿಗೆ ಹಕ್ಕು ಪ್ರಾಪ್ತಿ ಮಾಡಿ ಸಕ್ರಮಗೊಳಿಸಿತ್ತು. ಈಗ, ಮತ್ತೂ ಮುಂದುವರಿದು ದಿನಾಂಕ 04.11.2011ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಮ್ಮಾ ಬಾಣೆ ಅರಣ್ಯ ಇಲಾಖೆಗೆ ಸೇರಿದ್ದಲ್ಲ: ಬದಲಿಗೆ ಹಿಡುವಳಿದಾರರಿಗೆ ಸೇರಿದ್ದು ಎಂದು ನಿಯಮಗಳಿಗೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸರ್ಕಾರದ ಈ ನಡೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿಯವರು ಕೊಡಗಿನ ಬೆ.ಜೆ.ಪಿ.ಯ ಶಾಸಕರ ಮತ್ತು ಅವರ ಬೆಂಬಲಿತ ಜಮ್ಮಾ ಬಾಣೆ ಹಿಡುವಳಿದಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು, ತಮ್ಮ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನಕ್ಕೆ ಎಳ್ಳು-ನೀರು ಬಿಟ್ಟಿದ್ದು, ಇದು ಸಂಪೂರ್ಣವಾಗಿ ಭೂಮಾಲೀಕರ ಹಿತಕಾಯುವ ವಿವೇಚನೆಯಿಲ್ಲದ ಕ್ರಮವಾಗಿದೆ. ಅರಣ್ಯ ರಕ್ಷಣೆಯ ಜವಾಬ್ದಾರಿ ಹೊತ್ತ ಸರ್ಕಾರ ಸ್ವಷ್ಟ ಕಾರಣವಿಲ್ಲದೆ ಕೇವಲ ತಮ್ಮ ಬೆಂಬಲಿತ ಮತದಾರರ ಹಿತಕಾಯುವುದು, ಅದೂ ಅಕ್ರಮವೆಂದು ತೋರಿದ ಕ್ರಮದಿಂದ, ಎಷ್ಟು ಸರಿ?

ಇಲ್ಲಿ ಈಗ ಮುಖ್ಯವಾಗಿ, ಕಂದಾಯ ದಾಖಲೆಗಳಲ್ಲಿ ತೋರಿಸಿರುವ ವಿಸ್ತೀರ್ಣಕ್ಕಿಂತ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಅರಣ್ಯ ಪ್ರದೇಶದ ಹಿಡಿತವನ್ನು ತಪ್ಪಿಸಿ, ಅದರ ದುರ್ಬಳಕೆಯನ್ನು ರಕ್ಷಿಸಬೇಕಾಗಿದೆ. ಹಾಗೂ ಮುಖ್ಯ ಹೆದ್ದಾರಿಗಳಿಗೆ ಹೊಂದಿಕೊಂಡಂತಿರುವ ಬಾಣೆ ಜಮೀನುಗಳನ್ನು ಅಥವಾ ಅರಣ್ಯ ಪ್ರದೇಶಗಳನ್ನು ರೆಸಾರ್ಟ್‌ಗಳಿಗಾಗಿ, ಅಪಾರ್ಟ್‌ಮೆಂಟ್‌ಗಳಿಗಾಗಿ, ನಿವೇಶನಗಳಿಗಾಗಿ ಮತ್ತು ವಿಲ್ಲಾಸ್‌ಗಳಿಗಾಗಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಕ್ರಮವಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ ಮತ್ತು ಕೆಲವು ಜಾಗಗಳಲ್ಲಿ ಅಕ್ರಮವಾಗಿ ಗಣಿಗಾರಿಕೆಯನ್ನೂ ನೆಡೆಸುತ್ತಿದ್ದಾರೆ. ಇವುಗಳನ್ನು ಸಹ ನಿಯಂತ್ರಿಸಬೇಕಿದೆ.

ಎಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ರಾಜ್ಯದಲ್ಲಿ ವ್ಯಕ್ತಿಯೊಬ್ಬ ಹೊಂದಿರಹುದಾದ ಕೃಷಿಭೂಮಿಯ ಭೂಮಿತಿಯು ಗರಿಷ್ಟ 54 ಎಕರೆಗಳನ್ನು ಮೀರುವಂತಿಲ್ಲ. ಆದರೆ, ಕೊಡಗಿನ ಪ್ರದೇಶದಲ್ಲಿ ಪ್ರತಿ ಸಾಗುವಳಿದಾರು ತನ್ನ ಕೃಷಿ ಜಮೀನಿಗೆ (ಕೃಷಿ ಜಮೀನನ್ನು ಹೊರತುಪಡಿಸಿ) ಒತ್ತಾಗಿ 50 ರಿಂದ 200 ಹೆಕ್ಟೆರ್‌ಗಳಿಗಿಂತ ಮಿಗಿಲಾಗಿ (ಅಂದರೆ 100 ರಿಂದ 500 ಎಕರೆಗಳಿಗೂ ಮಿಗಿಲಾಗಿ) ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಹೊಂದಿರುತ್ತಾರೆ. ಈ ಹಿಡುವಳಿಯನ್ನು ಕಾನೂನುಬದ್ದಗೊಳಿಸಿದಾಗ ನಿಯಮಬದ್ಧನಾಗಿ ರಾಜ್ಯದಲ್ಲಿ ಸಾಮಾನ್ಯನ ಹಿಡುವಳಿ ಹೊಂದುವ ಭೂಮಿಯ ಪ್ರಮಾಣಕ್ಕಿಂತ ಹೆಚ್ಚಾಗಿ ಇರುವುದರಿಂದ ಬಾಣೆ ಜಮೀನಿನ ಒಡೆತನ ಕಾನೂನಿಗೇ ವಿರುದ್ಢವಾಗಿರುತ್ತದೆ.

ಈ ಎಲ್ಲಾ ಕಾರಣಗಳಿಂದಲೇ, 100 ಎಕರೆಗಳಿಗೂ ಹೆಚ್ಚು ಜಮೀನುಗಳನ್ನು ಹೊಂದಿರುವವರನ್ನು ಭೂಪರಿಮಿತಿಯಿಂದ ವಿನಾಯ್ತಿ ನೀಡಿ ಸಕ್ರಮಗೊಳಿಸುವ ಸರ್ಕಾರದ ಪ್ರಯತ್ನ ಎಷ್ಟು ಸರಿ?. ಜಮ್ಮಾ-ಬಾಣೆ ಪ್ರದೇಶಗಳನ್ನು ಪ್ಲಾಂಟೇಶನ್ ಹೆಸರಿನಲ್ಲಿ ಸಕ್ರಮ ಮಾಡುವುದಾದರೆ ಇದಕ್ಕೆ ಕಾನೂನಿನ ಮಾನ್ಯತೆ ಇದೆಯೇ? ಯಾವುದೇ ಅಕ್ರಮ-ಸಕ್ರಮಗೊಳಿಸುವಲ್ಲಿ ಸೂಕ್ತ ಮಾನದಂಡಗಳನ್ನು, ನಿಯಮಗಳನ್ನು, ಪರಿಸರ ಸಂಬಂಧಿ ವಿಷಯಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಈ ಎಲ್ಲಾ ಅಕ್ರಮಗಳಿಗೆ  ಸರ್ಕಾರವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಇದು ಸರಿಯೇ?

(ಚಿತ್ರಕೃಪೆ: ವಿಕಿಪೀಡಿಯ)