Tag Archives: ಜಗದೀಶ ಕೊಪ್ಪ

ಬೆತ್ತಲಾದರು, ನಮ್ಮ ಕರ್ನಾಟಕದ ನಕಲಿ ಬಸವಣ್ಣ


– ಡಾ.ಎನ್. ಜಗದೀಶ್ ಕೊಪ್ಪ


 

ನಮ್ಮ ಕರ್ನಾಟಕ ಸರ್ಕಾರದ ಘನವೆತ್ತ ಅಬಕಾರಿ ಸಚಿವರಾದ ಸಿ.ರೇಣುಕಾಚಾರ್ಯರಿಂದ, ಬಾಡಿಗೆ ಜನರ ಸಮಾವೇಶಗಳಲ್ಲಿ, ದೇವರಾಜ ಅರಸುವಿನಿಂದ ಹಿಡಿದು, ಗಾಂಧಿ, ಬುದ್ಧ, ಅಂಬೇಡ್ಕರ್‌ವರೆಗೆ ಹೋಲಿಕೆಯಾಗಿ, ನಂತರ ಒಮ್ಮೊಮ್ಮೆ ಒಳಗಿರುವ ಪರಮಾತ್ಮ ಹೆಚ್ಚಾದಾಗ, ಕರ್ನಾಟಕದ ಬಸವೇಶ್ವರ ಎಂದೆಲ್ಲಾ ಹಾಡಿ ಹೊಗಳಿಸಿಕೊಂಡಿದ್ದ, ಲಿಂಗಾಯತ ಸಮುದಾಯದ ಮಹಾನ್ ನಾಯಕ(?) ಯಡಿಯೂರಪ್ಪಗೆ ಸಿ.ಬಿ.ಐ. ನೇಣಿನ ಕುಣಿಕೆ ಹತ್ತಿರವಾಗುತ್ತಿದೆ. ಶುಕ್ರವಾರ ಬೆಳಿಗ್ಗೆ ಸಿ.ಇ.ಸಿ. ತನ್ನ ವರದಿಯನ್ನ ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸುತ್ತಿದ್ದಂತೆ, ಯಡಿಯೂರಪ್ಪನವರ ರಾಜಕೀಯದ ಅಂತಿಮ  ಅಧ್ಯಾಯ ಆರಂಭಗೊಂಡಿದೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಂತಹ ಅಧ್ವಾನದ, ಭ್ರಷ್ಟಾಚಾರದ ಶಿಖರದಂತಿರುವ ಮುಖ್ಯಮಂತ್ರಿಯನ್ನು ಯಾರೂ ನೋಡಿರಲಿಲ್ಲ. ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಯಾವ ಅಳುಕು ಇಲ್ಲದೆ, ಭಂಡತನದಿಂದ ಜಾತಿ ಮತ್ತು ಧರ್ಮದ ರಾಜಕೀಯ ಮಾಡಿದ ಮುಖ್ಯಮಂತ್ರಿ ಎಂದರೆ, ಅದು ಯಡಿಯೂರಪ್ಪ ಮಾತ್ರ.

ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡು ಜೈಲು ಸೇರಿದ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಒಳಗಾದ ಈ ವ್ಯಕ್ತಿಗೆ ಇನ್ನಾದರೂ ಬುದ್ಧಿ ಬರಬಹುದು ಎಂದು ಜನತೆ ನಿರೀಕ್ಷಿಸಿದ್ದರು. ಆದರೆ, ಈ ಮನುಷ್ಯ ಮಾಡಿದ್ದೇನು? ಜೈಲಿನಿಂದ ಹೊರಬರುವಾಗಲೇ, ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಜೈಲು ಸೇರಿ ನಂತರ ಬಿಡುಗಡೆಗೊಂಡಂತೆ ತನ್ನ ಎರಡು ಬೆರಳು ಎತ್ತಿ ತೋರಿಸಿಕೊಂಡು ಹೊರಬಂದ ಬಗೆಯನ್ನು ಗಮನಿಸಿದ ಕರ್ನಾಟಕದ ಜನತೆ ಅಂದೇ ತೀರ್ಮಾನಿಸಿಬಿಟ್ಟಿತು, ಇದೊಂದು ಅವಿವೇಕತನದ ಪರಕಾಷ್ಟೆ ಮತ್ತು ರಿಪೇರಿಯಾಗದ ಗಿರಾಕಿ  ಎಂದು.

ಪರಪ್ಪನ ಅಗ್ರಹಾರದ ಜೈಲು ಪಾಲಾಗುತಿದ್ದಂತೆ, ಇಲ್ಲಸಲ್ಲದ ರೋಗದ ನೆಪದಲ್ಲಿ ಜಯದೇವ ಆಸ್ಪತ್ರೆ, ನಂತರ ಬೆಡ್‌ಶೀಟ್ ಮರೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸೇರಿ ನಾಟಕವಾಡಿದ ಇದೇ ಯಡಿಯೂರಪ್ಪ, ಬಿಡುಗಡೆಯ ನಂತರ ಮುಖ್ಯಮಂತ್ರಿ ಕುರ್ಚಿಗಾಗಿ, ಇಡೀ ದೇಶ ಮತ್ತು ರಾಜ್ಯವನ್ನು ಹುಚ್ಚುನಾಯಿ ಕಡಿದ ವ್ಯಕ್ತಿಯಂತೆ ತಿರುಗುವುದನ್ನು ಗಮನಿಸಿದರೆ, ಈ ವ್ಯಕ್ತಿಯ ಆಕಾಂಕ್ಷೆ, ಅಧಿಕಾರದ ಲಾಲಸೆ ಯಾವ ಮಟ್ಟದಲ್ಲಿದೆ ಎಂಬುದನ್ನ ನೀವೇ ಊಹಿಸಬಹುದು.

ಅಧಿಕಾರದ ಚುಕ್ಕಾಣಿ ಹಿಡಿದ ಯಾವುದೇ ನಾಯಕನ ಸುತ್ತ ಒಳ್ಳೆಯ ಅಧಿಕಾರಿಗಳ ವರ್ಗ, ಅಥವಾ ಸಹೋದ್ಯೋಗಿಗಳು ಇರಬೇಕು. ಆದರೆ, ಯಡಿಯೂರಪ್ಪನವರ ಬಳಿ ಇದ್ದವರ ಪಟ್ಟಿಯನ್ನ ಒಮ್ಮೆ ಹಾಗೇ ಗಮನಿಸಿ ನೋಡಿ, ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ಯಮಣ್ಯ ನಾಯ್ಡು, ಹರತಾಳು ಹಾಲಪ್ಪ, ಲಕ್ಷಣ ಸವಡಿ, ಸಿ.ಸಿ.ಪಾಟೀಲ್, ಕೃಷ್ಣ ಪಾಲೇಮರ್, ಜನಾರ್ಧನ ರೆಡ್ಡಿ,… ಇವರುಗಳ ಪುರಾಣವನ್ನು ನಿಮಗೆ ಬಿಡಿಸಿ ಹೇಳಬೇಕಿಲ್ಲ. ಹೋಗಲಿ ಒಳ್ಳೆಯ ರಾಜಕೀಯ ಸಲಹೆಗಾರರು ಇದ್ದರೆ? ಅದೂ ಇಲ್ಲ. ಯಡ್ಡಿಯ ರಾಜಕೀಯ ಕಾರ್ಯದರ್ಶಿಯಾಗಿದ್ದ ಬಿ.ಜೆ. ಪುಟ್ಟಸ್ವಾಮಿ ಎಂಬ ಆಸಾಮಿ ತನ್ನ ಹುದ್ದೆಯ ಜವಾಬ್ದಾರಿಯನ್ನು ಮರೆತು ಯಡಿಯೂರಪ್ಪನ ಪರವಾಗಿ ದೇವೇಗೌಡರ ಕುಟುಂಬದ ವಿರುದ್ಧ ಬೊಗಳುವ ನಾಯಿಯಾಗಿ ಕೆಲಸ ಮಾಡಿದ್ದೇ ಹೆಚ್ಚು. ಈತನ ಪುರಾಣ ಕೂಡ ರೋಚಕವಾದುದು, ಜೊತೆಗೆ ಅದೊಂದು ದೊಡ್ಡ ಅಧ್ಯಾಯ.

ಈತ ಮಂಡ್ಯ ಜಿಲ್ಲೆ ಮದ್ದೂರು ತಾಲೋಕಿನ ಪ್ರಮುಖ ಹೋಬಳಿ ಕೇಂದ್ರವಾದ ನನ್ನೂರಾದ ಕೊಪ್ಪ ಗ್ರಾಮದಿಂದ ಐದು ಕಿ.ಮಿ. ದೂರವಿರುವ ಬೆಕ್ಕಳಲೆ ಗ್ರಾಮದವನು. ಮಂಡ್ಯ ಹಾಗೂ ತುಮಕೂರು ಜಿಲ್ಲೆಯನ್ನು ಬೇರ್ಪಡಿಸುವ ಶಿಂಷಾ ನದಿ ತೀರದ ಕಟ್ಟಕಡೆಯ ಆ ಗ್ರಾಮದಿಂದ ಬಂದ ಈ ವ್ಯಕ್ತಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದು, 1966ರಲ್ಲಿ ಬೆಂಗಳೂರಿನ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ ( ಈಗಿನ ಬಿ.ಡಿ.ಎ.) ನಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆಗೆ ಸೇರಿದವನು. 1976ರಲ್ಲಿ ತಾನೇ ನಾಯಕನಾಗಿ ನಟಿಸಿ, ನಿರ್ಮಿಸಿದ ಕನ್ನಡ ಚಿತ್ರವೊಂದರ ಮೂಲಕ ಬರೋಬ್ಬರಿ 36 ಲಕ್ಷ ಕಳೆದುಕೊಂಡವನು (ಜಯಂತಿ ಈ ಚಿತ್ರದ ನಾಯಕಿ). ನಿವೃತ್ತಿಯ ದಿನ ಹತ್ತಿರವಾಗುತಿದ್ದಂತೆ ತನ್ನ ಗಾಣಿಗ ಜಾತಿಸಮುದಾಯವನ್ನು ರಾಜ್ಯಾದ್ಯಂತ ಸಂಘಟಿಸಿ, ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣರ ಬೆಂಬಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು  ಎಂ.ಎಲ್.ಸಿ. ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷನಾಗಿ ಅಧಿಕಾರದ ರುಚಿ ಕಂಡವನು. ಹತ್ತು ವರ್ಷದ ಹಿಂದೆ ಬೃಹತ್ ಉದ್ದಿಮೆದಾರನಾಗಲು ಹೊರಟು, ಮೈಸೂರಿನ ವಿಮಾನ ನಿಲ್ದಾಣದ ಎದುರು (ನಂಜನಗೂಡು ರಸ್ತೆಯ ಮಂಡಕಳ್ಳಿ ಬಳಿ) ಪ್ಲಾಸ್ಟಿಕ್ ಚೀಲ ತಯಾರಿಸುವ ಫ್ಯಾಕ್ಟರಿ ತೆಗೆದು ಮುಚ್ಚಿದವನು ( ಬಿ.ಜೆ.ಪಿ. ಸ್ಯಾಕ್ಸ್ ಪ್ರೈ ಲಿಮಿಟೆಡ್). ಇದಕ್ಕಾಗಿ ಕೆ.ಎಸ್.ಎಫ್.ಸಿ.ಯಿಂದ ಮಾಡಿದ ಸಾಲ ಒಂದೂವರೆ ಕೋಟಿ ರೂಪಾಯಿಗೂ ಅಧಿಕ. ಈಗ ಅಂದಾಜು ಮೂರು ಕೋಟಿ ರೂ ದಾಟಿರಬಹುದು. ಸಾಲ ತೀರಿಸಲಾಗದೇ, ಯಡಿಯೂರಪ್ಪನ ಮೊರೆ ಹೊಕ್ಕ ಈತ ಸುದ್ದಿಗೋಷ್ಟಿಯಲ್ಲಿ ಸತ್ಯ ಹರಿಶ್ಚಂದ್ರನ ತುಂಡಿನಂತೆ ಮಾತನಾಡುವುದನ್ನು ನೀವೆಲ್ಲಾ ಗಮನಿಸಿದ್ದೀರಿ.

ಈವರೆಗೆ ಯಡಿಯೂರಪ್ಪ ಮಾಡಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಕೇವಲ ಕರ್ನಾಟಕದಲ್ಲಿ ಮಾತ್ರ ಸುದ್ಧಿಯಾಗುತಿತ್ತು. ಈಗ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿ ರಾಷ್ಟ್ರಮಟ್ಟದ ಚರ್ಚೆಯಾಗಿ ಮಾರ್ಪಟ್ಟು ಕರ್ನಾಟಕದ ಜನತೆ ತಲೆತಗ್ಗಿಸುವಂತಾಗಿದೆ. ಇಷ್ಟೆಲ್ಲಾ ಅಪರಾಧ ಮಾಡಿಯೂ, ಯಡಿಯೂರಪ್ಪ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವ ದಾಟಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹನ್ನೆರೆಡು ವರ್ಷ ಅನ್ನ ಕಾಣದ ವ್ಯಕ್ತಿ ಭಕ್ಷಭೋಜನದ ತಟ್ಟೆಯ ಎದರು ಕುಳಿತು ತಿನ್ನುವಂತೆ, ಮುಖ್ಯಮಂತ್ರಿಯ ಗಾದಿಯಲ್ಲಿ ಕುಳಿತು, ದೇಣಿಗೆ ಹೆಸರಿನಲ್ಲಿ, ತಾನು, ತನ್ನ ಮಕ್ಕಳು, ಅಳಿಯ ಸೇರಿ ಎಂಜಲು ಕಾಸಿಗೆ ಕೈಯೊಡ್ಡಿದ ರೀತಿ ನಿಜಕ್ಕೂ ಸಾರ್ವಜನಿಕವಾಗಿ ಅಸಹ್ಯ ಮೂಡಿಸುವಂತಹದ್ದು.

ಇಡೀ ಯಡಿಯೂರಪ್ಪನವರ ಕುಟುಂಬವನ್ನು ದಾರಿ ತಪ್ಪಿಸಿದ್ದು ಮಾಲೂರಿನ ಶಾಸಕ ಕೃಷ್ಣಯ್ಯ ಶೆಟ್ಟಿ ಎಂಬಾತ. ಸದಾ ತಿರುಪತಿ ತಿಮ್ಮಪ್ಪನ ಧ್ಯಾನದಲ್ಲಿರುವ ಈತ ಕೈಯಲ್ಲಿ ಉಂಡೆನಾಮ ಹಿಡಿದು ತಿರುಗುವ ಆಸಾಮಿ. ನೀವು ಯಾಮಾರಿದರೆ, ಹಣೆಗೆ ಮಾತ್ರವಲ್ಲ, ಮುಕುಳಿಗೂ ನಾಮ ಬಳಿಯುವಲ್ಲಿ ನಿಸ್ಸೀಮ.

ತನ್ನ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ಪಡೆದರೆ ತಪ್ಪೇನು ಎಂದು ವಾದಿಸುವ ಯಡಿಯೂರಪ್ಪನವರಿಗೆ ನಮ್ಮ ಪ್ರಶ್ನೆ ಇಷ್ಟೆ: ನಲವತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು, ಶಾಸಕನಾದಾಗ, ವಿರೋಧಪಕ್ಷದ ನಾಯಕನಾದಾಗ, ಅಥವಾ ಉಪಮುಖ್ಯಮಂತ್ರಿಯಾಗಿದ್ದಾಗ ಬಾರದ ದೇಣಿಗೆ ಮುಖ್ಯಮಂತ್ರಿಯಾದಾಗ ಹೇಗೆ ಬಂತು?

ದೇಣಿಗೆ ಪಡೆದದ್ದು ಸತ್ಯವೇ ಆಗಿದ್ದರೆ, ಸುದ್ದಿ ಬಹಿರಂಗವಾಗುತಿದ್ದಂತೆ ರಾತ್ರೋರಾತ್ರಿ ಬೆಂಗಳೂರಿನ ರಾಜಮಹಲ್ ವಿಲಾಸ ಬಡಾವಣೆಯ ಮೈಸೂರು ಬ್ಯಾಂಕಿನಿಂದ 20 ಕೋಟಿ ಹಣವನ್ನು ತೆಗೆದು ಖಾತೆ ಮುಚ್ಚಿದ್ದು ಏಕೆ? ಅಕ್ರಮಗಳ ಕುರಿತು ಧಾರವಾಡದ ಎಸ್.ಆರ್. ಹಿರೇಮಠ ಸಿ.ಇ.ಸಿ.ಗೆ ದಾಖಲೆ ಸಲ್ಲಿಸುತಿದ್ದಂತೆ ಗಣಿ ಉದ್ಯಮಿ ಪ್ರವೀಣ್ ಚಂದ್ರ ಎಂಬುವರಿಂದ ಪಡೆದ ಐದು ಕೋಟಿ ದೇಣಿಗೆ ಹಣವನ್ನು ಈಗ ಸಾಲ ಎಂದು ವಾದಿಸುತ್ತಿರುವುದಾದರು ಏಕೆ? 

ಕರ್ನಾಟಕದ ಜನತೆಯನ್ನು ಯಡಿಯೂರಪ್ಪ ಕಿವಿಗೆ ಹೂ ಮುಡಿಯುವ ಗಿರಾಕಿಗಳು ಎಂದು ಭಾವಿಸಿದಂತಿದೆ.

ತಾನು ಹಂಚಿದ ಎಂಜಲು ಪ್ರಸಾದ ತಿಂದು, ಬಹುಪರಾಕು ಹೇಳುವ ಕೆಲವು ಮಾನಗೆಟ್ಟ ಮಠಾಧೀಶರು ಮತ್ತು ಲಿಂಗಾಯುತ ನಾಯಕರಿಂದ ಆಧುನಿಕ ಬಸವೇಶ್ವರ ಎಂದು ಹಾಡಿ ಹೊಗಳಿಸಿಕೊಳ್ಳುವ ಯಡಿಯೂರಪ್ಪ ಒಮ್ಮೆ ಗಾಲಿ ಜನಾರ್ಧನ ರೆಡ್ಡಿಯನ್ನು ನೆನಪಿಸಿಕೊಳ್ಳುವುದು ಒಳಿತು. ತಾನು ಅಪ್ಪಟ 24 ಕ್ಯಾರೆಟ್ ಚಿನ್ನ ಎಂದು ಘೋಷಿಸಿಕೊಂಡಿದ್ದ ಈ ಗಣಿಕಳ್ಳ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಾ, ತುಕ್ಕುಹಿಡಿಯುವ ಕಬ್ಬಿಣವಾಗಿದ್ದಾನೆ. ಈತನ ಅಮೇದ್ಯ ತಿಂದು ಬಳ್ಳಾರಿಯ ಬೀದಿ, ಬೀದಿಯಲ್ಲಿ ಆಧುನಿಕ ಕೃಷ್ಣದೇವರಾಯ ಎಂದು ಹಾಡಿ ಹೊಗಳಿದ ನಾಯಿ ನರಿಗಳೆಲ್ಲಾ ಈಗ ಚೆಲ್ಲಾಪಿಲ್ಲಿಯಾಗಿವೆ.

ತಾನು ಎಸಗಿರುವ ಅಕ್ಷಮ್ಯ ಅಪರಾಧಗಳಿಗೆ ಯಾವ ಯಜ್ಞವಾಗಲಿ, ದೇವರಾಗಲಿ ರಕ್ಷಣೆಗೆ ಬರಲಾರವು. ಈ ಸತ್ಯವನ್ನು ಅರಿತು, ಕಾನೂನಿನ ಮುಂದೆ ತಲೆಬಾಗಿ, ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ನಿವೃತ್ತಿಯಾಗುವುದೊಂದೇ ಈಗ ಯಡಿಯೂರಪ್ಪನವರ ಪಾಲಿಗೆ ಉಳಿದಿರುವ ಏಕೈಕ ಮಾರ್ಗ. ಅದನ್ನು ಹೊರತು ಪಡಿಸಿ, ನನ್ನ ಈ ಅವಸ್ಥೆಗೆ ವಿರೋಧ ಪಕ್ಷಗಳು ಕಾರಣ, ನನ್ನ ಪಕ್ಷದ ಹಿತಶತ್ರುಗಳು ಕಾರಣ ಎಂದು ಬೊಬ್ಬಿರಿದರೆ, ಅದನ್ನು ಜಾಣತನವೆಂದು ಕರೆಯುವುದಿಲ್ಲ. ಬದಲಿಗೆ, ಹುಚ್ಚುತನ ಎಂದು ಕರೆಯಲಾಗುತ್ತದೆ.


ಕಳೆದ ಶುಕ್ರವಾರ Central Empowered Committee ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿ ನಮ್ಮ ಓದುಗರಿಗೆ ಇಲ್ಲಿ ಲಭ್ಯವಿದೆ.

ಜೀವನದಿಗಳ ಸಾವಿನ ಕಥನ -12

– ಜಗದೀಶ್ ಕೊಪ್ಪ

ಅಣೆಕಟ್ಟುಗಳ ನಿರ್ಮಾಣದ ವಿಷಯದಲ್ಲಿ, ಜಗತ್ತಿನ ಬಹುತೇಕ ಸರಕಾರಗಳು, ಅಣೆಕಟ್ಟು ನಿರ್ಮಾಣ ಸಂಸ್ಥೆಗಳು ವಾಸ್ತವಿಕ ಅಂಕಿ ಅಂಶಗಳನ್ನು ಮರೆಮಾಚುತ್ತಿರುವುದು ಕೂಡ ಹಲವಾರು ಅನಾಹುತಗಳಿಗೆ ಕಾರಣವಾಗಿದೆ. ವಾಸ್ತವವಾಗಿ ಕಾಮಗಾರಿ ವೆಚ್ಚ, ನಿರ್ಮಾಣದ ಅವಧಿ, ವಾಸ್ತವವಾಗಿ ಸಂಗ್ರಹವಾಗುವ ನೀರಿನ ಪ್ರಮಾಣ, ಕಾಮಗಾರಿ ಸ್ಥಳದ ಭೂಮಿಯ ಲಭ್ಯತೆ ಹಾಗೂ ಕಾಮಗಾರಿಗೆ ಈ ಭೂಮಿ ಸೂಕ್ತವೆ ಎಂಬ ಅಂಶ ಇವೆಲ್ಲವುಗಳಲ್ಲಿ ಸತ್ಯಕ್ಕಿಂತ ಸುಳ್ಳಿನ ಪ್ರಮಾಣ ಅಧಿಕವಾಗಿದೆ. ಹಾಗಾಗಿ ಜಗತ್ತಿನ ಯಾವೊಂದು ಅಣೆಕಟ್ಟು ತನ್ನ ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಇತಿಹಾಸವಿಲ್ಲ. ಅಷ್ಟೇ ಏಕೆ ಪೂರ್ವ ನಿಗತ ವೆಚ್ಚದೊಳಗೆ ಮುಗಿದ ಉದಾಹರಣೆಗಳಿಲ್ಲ. ಅಣೆಕಟ್ಟು ನಿರ್ಮಾಣಕ್ಕಿಂತ  ಮಿಗಿಲಾಗಿ, ಅಣೆಕಟ್ಟು ಸ್ಥಳ ಹಾಗೂ ಹಿನ್ನೀರಿನಲ್ಲಿ ಮುಳುಗುವ ಪ್ರದೇಶಗಳಿಂದ ಸಂತ್ರಸ್ತರಾಗುವ ಜನತೆಯ ಬಗ್ಗೆ ನಿಜವಾದ ಅಂಕಿ ಅಂಶಗಳನ್ನು ಮುಚ್ಚಿಡುತ್ತಾ ಬಂದಿರುವುದು, ಜಾಗತಿಕವಾಗಿ ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಈಗಾಗಲೇ ಆಯಾ ದೇಶಗಳಲ್ಲಿ ತಾಂಡವವಾಡುತ್ತಿರುವ ಬಡತನ ನಿವಾರಣೆ ಅಲ್ಲಿನ ಸರಕಾರಗಳಿಗೆ ಸವಾಲಾಗಿರುವ ಸಂದರ್ಭದಲ್ಲಿ ಹೊಸದಾಗಿ ಉದ್ಭವವಾಗುವ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಮತ್ತೊಂದು ತೊಡಕಾಗಿದೆ.

ಅಣೆಕಟ್ಟು ವಿಷಯದಲ್ಲಿ ಕೇವಲ ಲಾಭವನ್ನೇ ಗುರಿಯಾಗಿರಿಸಿಕೊಂಡ ಬಹುರಾಷ್ಟ್ರೀಯ ನಿರ್ಮಾಣ ಕಂಪನಿಗಳಿಗೆ ಉತ್ತರದಾಯಕತ್ವದ ಪ್ರಶ್ನೆಯೇ ಎದುರಾಗುವ ಸಂಭವವಿಲ್ಲದೆ ಇರುವುದರಿಂದ, ತಾಂತ್ರಿಕವಾಗಿ ಅಥವಾ ಗುಣಮಟ್ಟದಲ್ಲಿ ಕಳಪೆ ಇದ್ದರೂ ಕೂಡ, ಮುಂದೆ ಸಂಭವಿಸುವ ಅವಘಡಗಳಿಗೆ ಇವು ಹೊಣೆಹೊರುವ, ಹೊತ್ತಿರುವ ಸಂಧರ್ಭ ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು. ಯಾವುದೇ ಸ್ಥಳದಲ್ಲಿ ಅಣೆಕಟ್ಟುಗಳನ್ನು ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದರೂ, ಪ್ರತಿಯೊಂದು ಅಣೆಕಟ್ಟಿನ ಸ್ಥಳಕ್ಕೆ ತನ್ನದೇ ಆದ ಲಕ್ಷಣಗಳಿರುತ್ತವೆ. ಕೆಲವೊಂದು ಸ್ಥಳಗಳು ಅಣೆಕಟ್ಟು ನಿರ್ಮಾಣಕ್ಕೆ ಯೋಗ್ಯವಾಗಿರುವುದಿಲ್ಲ. ಅಲ್ಲಿನ ಭೂಮಿಯ ಗುಣಮಟ್ಟ, ಮಣ್ಣಿನ ಗುಣ, ಸಂಗ್ರಹವಾಗುವ ನೀರಿನ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಆದರೆ ಯಾವೊಂದು ಸರಕಾರ ಮತ್ತು ಅಣೆಕಟ್ಟು ನಿರ್ಮಾಣ ಸಂಸ್ಥೆಗಳು ಇವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದಕ್ಕೆ ಜ್ವಲಂತ ಉದಾಹರಣೆಗಳೆಂದರೆ, 1990ರಲ್ಲಿ ವಿಶ್ವಬ್ಯಾಂಕ್ ತಾನು ಆರ್ಥಿಕ  ನೆರವು ನೀಡಿದ್ದ 49 ಅಣೆಕಟ್ಟುಗಳ ಸಮೀಕ್ಷೆ ನಡೆಸಿದಾಗ ಇವುಗಳಲ್ಲಿ 36 ಅಣೆಕಟ್ಟುಗಳು ಪ್ರಶಸ್ತವಾದ ಸ್ಥಳಗಳಲ್ಲಿ ನಿರ್ಮಾಣ ವಾಗಿರಲಿಲ್ಲ. ಅಮೇರಿಕಾದೇಶದ ಟೆಟಾನ್ ನದಿಗೆ ದಕ್ಷಿಣ ಪ್ರಾಂತ್ಯದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಯೋಜನೆಗೆ ಕಾಮಗಾರಿ ಆರಂಭಿಸಿದಾಗ ಭೂಗರ್ಭ ಶಾಸ್ತ್ರಜ್ಞರು, ಈ ಸ್ಥಳ ಅಣೆಕಟ್ಟು ಕಾಮಗಾರಿಗೆ ಯೋಗ್ಯವಲ್ಲ ಎಂದು ನೀಡಿದ್ಥೆಚ್ಚರಿಕೆಯನ್ನು ನಿರ್ಲಕ್ಷಿಸಿ, 1970ರಲ್ಲಿ 270 ಅಡಿ ಎತ್ತರದ ಅಣೆಕಟ್ಟು ನಿರ್ಮಾಣ  ಕಾರ್ಯ ಪ್ರಾರಂಭವಾಯಿತು.

1970ರಲ್ಲಿ ಆರಂಭವಾದ ಕಾಮಗಾರಿ 1976ರಲ್ಲಿ ಮುಕ್ತಾಯವಾಗಿ, ಅದೇ ಜೂನ್ ತಿಂಗಳಿನಲ್ಲಿ ಚಾಲನೆ ನೀಡಿದಾಗ, ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಒತ್ತಡದಿಂದ ಅಣೆಕಟ್ಟಿನ ಬಲಭಾಗದ ಭೂಮಿಯಲ್ಲಿ ದೊಡ್ಡ ಬಾವಿಯಾಕಾರದ ರಂಧ್ರವೊಂದು ನಿರ್ಮಾಣವಾಗಿ  ಜಲಾಶಯದ ನೀರು ಅದರೊಳಗೆ ಹರಿಯತೊಡಗಿತು. ಮರುದಿನ ಅಣೆಕಟ್ಟಿನ 270 ಅಡಿ ಎತ್ತರದ ತಡೆಗೋಡೆ ಹೊರತುಪಡಿಸಿ ಅದಕ್ಕೆ ಹೊಂದಿಕೊಂಡಿದ್ದ ಭೂಮಿ ಕೊಚ್ಚಿಹೋದ ಪರಿಣಾಮ ಸುಮಾರು 20 ಅಡಿ ಎತ್ತರದ ಅಣೆಕಟ್ಟಿನ ಗೋಡೆ ಮಗುಚಿಬಿತ್ತು.

ಇದರಿಂದ ನಾಲ್ಕುಸಾವಿರ ಮನೆಗಳು, ಮೂರು ಪಟ್ಟಣಗಳು ಈ ದುರಂತದಲ್ಲಿ ನಿರ್ನಾಮವಾದವು. ಅಪಾತವನ್ನು ಅರಿತ ಅಲ್ಲಿನ ಸರಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವ ಸಾವು ನೋವೂ ಸಂಭವಿಸಲಿಲ್ಲ. ಆದರೆ ನೂರು ಕೋಟಿ ಡಾಲರ್ ಹಣ ನೀರಿನಲ್ಲಿ ಹೋಮಮಾಡಿದಂತಾಗಿ ಸಾಲದ ಹೊರೆ ಹೊರಬೇಕಾಯ್ತು. ಇಂತಹದ್ದೇ ಇನ್ನೊಂದು ಘಟನೆ ಸಂಭವಿಸಿದ್ದು ಗ್ವಾಟೆಮಾಲಾದಲ್ಲಿ. ಭೂಕಂಪ ಪೀಡಿತ ಈ ರಾಷ್ಟ್ರದಲ್ಲಿ 1974ರಲ್ಲಿ ಜರ್ಮನ್ ಹಾಗೂ ಸ್ವಿಟ್ಜರ್ಲ್ಯಾಂಡ್ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಕೈಗೆತ್ತಿಕೊಂಡ ಚಿಕ್ಸೊಯ್ ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟಿಗೆ ಗ್ವಾಟೆಮಾಲಾ ಸರಕಾರ, ಅಮೆರಿಕಾದ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ 105 ಮಿಲಿಯನ್ ಡಾಲರ್ ಸಾಲ ಪಡೆದು ಕಾಮಗಾರಿ ಪ್ರಾರಂಭಿಸಿತು.

1976ರಲ್ಲಿ ಜಲಾಶಯದಿಂದ 26 ಕಿ.ಮೀ. ದೂರದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಹರಿಸಲು ನಿರ್ಮಿಸಿದ  ಸುರಂಗ ಕಾಲುವೆಗಳು ಭೂಕಂಪದ ಪರಿಣಾಮ ಮಣ್ಣು ಕುಸಿತದಲ್ಲಿ ಮುಚ್ಚಿಹೋದವು. ಮತ್ತೆ ಇವನ್ನು ದುರಸ್ತಿಗೊಳಿಸಿ, ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಾಗ, ಗ್ವಾಟೆಮಾಲ ಸರಕಾರ ಅಂದಾಜಿಸಿದ್ದ ನಿರ್ಮಾಣ  ವೆಚ್ಚಕ್ಕಿಂತ 375 ಪಟ್ಟು ಹಣ ಹೆಚ್ಚು ಖರ್ಚಾಯಿತ. ಆ ನಂತರವೂ ಸಂಭವಿಸಿದ ವಿವಿಧ ಅವಘಡಗಳಿಂದ 270 ಕೋಟಿ ಡಾಲರ್ ವೆಚ್ಚದಲ್ಲಿ ಮುಗಿಯಬೇಕಿದ್ದ ಅಣೆಕಟ್ಟು ನಿರ್ಮಾಣ , 1988ರಲ್ಲಿ ಅಂತಿಮಗೊಂಡಾಗ 944 ಕೋಟಿ ಡಾಲರ್ ಹಣವನ್ನು ನುಂಗಿಹಾಕಿ, ಗ್ವಾಟೆಮಾಲ ರಾಷ್ಟ್ರವನ್ನು ಅಮೆರಿಕಾದ ಶಾಶ್ವತ ಸಾಲಗಾರನನ್ನಾಗಿ ಮಾಡಿತು.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಮತ್ತೊಂದು ಹಗಲು ದರೋಡೆಯೆಂದರೆ, ನದಿಯೊಂದಕ್ಕೆ ಅಡ್ಡಲಾಗಿ ನಿರ್ಮಿ ಸಲಾಗುವ ಅಣೆಕಟ್ಟಿಗೆ ಮುನ್ನ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ನೀಡುವ ತಪ್ಪು ಮಾಹಿತಿ. ಯಾವುದೇ ಬಹುರಾಷ್ಟ್ರೀಯ ನಿರ್ಮಾಣ  ಸಂಸ್ಥೆಗಳು, ನದಿಯ ಪಾತ್ರದಲ್ಲಿ ಸುರಿಯುವ ಸರಾಸರಿ ಮಳೆಯ ಪ್ರಮಾಣವನ್ನು ಹಿಂದಿನ 20-30 ವರ್ಷಗಳಿಂದ ಹಿಡಿದು ಮುಂದಿನ 50 ವರ್ಷಗಳವರೆಗೂ ಲೆಕ್ಕಾಚಾರ ಹಾಕಿ, ನಂತರ ನದಿಯ ನೀರಿನ ಪ್ರಮಾಣವನ್ನು ಅಂದಾಜು ಮಾಡಬೇಕು.ಆದರೆ ಯಾವುದೋ ಒಂದು ವರ್ಷದ ಮಳೆಯ ಪ್ರಮಾಣವನ್ನು ಹಾಗೂ ನದಿ ನೀರಿನ ಹರಿಯುವಿಕೆಯ ಅಂಕಿ ಅಂಶಗಳನ್ನು ಸಂಗ್ರಹಿಸಿ, ಅಣೆಕಟ್ಟು ನಿರ್ಮಿಸಲು ಸರಕಾರಗಳನ್ನು ಪುಸಲಾಯಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇಂತಹ ತಪ್ಪು ಲೆಕ್ಕಾಚಾರಗಳಿಂದಾಗಿ ಜಗತ್ತಿನ ಬಹುತೇಕ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರವಾಗುತ್ತಿಲ್ಲ.

ಜೊತೆಗೆ ವಿುದ್ಯುತ್ ಉತ್ಪಾದನೆ ಕೂಡ ಸಾಧ್ಯವಾಗಿಲ್ಲ. ಸ್ಪೇನ್ ದೇಶದಲ್ಲಿ ಗೌಡಿಯಾಲ ಮತ್ತು ಟ್ಯಾಗೂಸ್ ನದಿಗೆ 1950ರ ದಶಕದಲ್ಲಿ ಜನರಲ್ ಫ್ರಾಂಕೋಸ್ ಅಧಿಕಾರದ ಅವಧಿಯಲ್ಲಿ ನಿರ್ಮಿಸಲಾದ ಎರಡು ಅಣೆಕಟ್ಟುಗಳ ಜಲಾಶಯಗಳು 2000ದ ಇಸವಿಯವರೆಗೆ ತಮ್ಮ ಸಾಮಥ್ರ್ಯದ ಶೇ.17ರಷ್ಟು ನೀರನ್ನು ಮಾತ್ರ ಸಂಗ್ರಹಿಸಿದ್ದು, ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗಿಲ್ಲ. ವಿಶ್ವ ಬ್ಯಾಂಕ್ ಸಂಗ್ರಹಿಸಿರುವ ಮಾಹಿತಿ ಪ್ರಕಾರ 2000ದ ಅಂತ್ಯದ ವೇಳೆಗೆ ತಾನು ಸಾಲ ನೀಡಿದ 25 ಬೃಹತ್ ಜಲಾಶಯಗಳು ಕೇವಲ ಅರ್ಧದಷ್ಟು ಪ್ರಮಾಣದ ನೀರನ್ನು ಸಂಗ್ರಹಿಸಿರುವುದಾಗಿ ಬಹಿರಂಗಪಡಿಸಿದೆ. ಇವುಗಳಲ್ಲಿ ಥಾಯ್ಲೆಂಡ್ ದೇಶದ 7 ಅಣೆಕಟ್ಟುಗಳು, ಭಾರತದ ನರ್ಮದಾ ಸರೋವರದ ಅಣೆಕಟ್ಟು, ಅಮೆರಿಕಾದ ಕೊಲರಾಡೊ ನದಿಗೆ ನಿಮರ್ಿಸಲಾದ ಹೂವರ್ ಅಣೆಕಟ್ಟು ಸೇರಿರುವುದು ಗಮನಾರ್ಹ ಸಂಗತಿ.

(ಮುಂದುವರಿಯುವುದು)

ಜೀವನದಿಗಳ ಸಾವಿನ ಕಥನ – 7

ಡಾ.ಎನ್.ಜಗದೀಶ್ ಕೊಪ್ಪ

ಇದು ಗುಜರಾತ್‌ನ ನರ್ಮದಾ ಸರೋವರ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಸ್ಥಳಾಂತರಗೊಂಡ ಸ್ಥಳೀಯ ನಿವಾಸಿಗಳ ನೋವಿನ ಕಥನ.

“ಅಣೆಕಟ್ಟು ನಿರ್ಮಾಣಕ್ಕಾಗಿ ಸರಕಾರ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿತು. ನಾವು ಬದುಕಿ ಬಾಳಿದ್ದ ಪವರ್ಟ ಎಂಬ ಗ್ರಾಮದಿಂದ ನೂರಾರು ಕಿ.ಮೀ. ದೂರದ ಮಣಿಬೇಲಿ ಎಂಬ ಪ್ರದೆಶಕ್ಕೆ ನಮ್ಮ ಕುಟುಂಬಗಳನ್ನು ಸ್ಥಳಾಂತರಿಸಿದೆ. ನದಿ, ಅರಣ್ಯಗಳಿಂದ ಸುತ್ತುವರೆದಿದ್ದ ನಮ್ಮ ಗ್ರಾಮಕ್ಕೆ ತೀರ ವಿರುದ್ಧವಾದ ಪ್ರಾದೇಶಿಕ ಲಕ್ಷಣಗಳುಳ್ಳ ಅಪರಿಚಿತ ಗುಡ್ಡ ಗಾಡು ಪ್ರದೇಶ ಈ ಮಣಿಬೇಲಿ. ನಮ್ಮ ಮಕ್ಕಳು ನದಿಯಲ್ಲಿ ಈಜಾಡಿ, ದನ ಕರುಗಳನ್ನು ಮೇಯಿಸಿಕೊಂಡು, ಅರಣ್ಯದಿಂದ ಉರುವಲು ಕಟ್ಟಿಗೆಗಳನ್ನು ತರುತ್ತಿದ್ದರು. ನಾವಿದ್ದ ಪವರ್ಟ ಗ್ರಾಮದ ಭೂಮಿ ಫಲವತ್ತಾಗಿತ್ತು. ಆ ಭೂಮಿ ಯಾವುದೇ ಗೊಬ್ಬರ ಬೇಡುತ್ತಿರಲಿಲ್ಲ.

“ಈಗ ಇಲ್ಲಿ ಈ ಹೊಸ ಪ್ರದೇಶದಲ್ಲಿ ಕುಡಿಯುವ ನೀರಿನಿಂದ ಹಿಡಿದು ದನಕರುಗಳಿಗೂ ಸಹ ನಾವು ಕೊಳವೆ ಬಾವಿಯನ್ನು ಆಶ್ರಯಿಸಬೇಕಾಗಿದೆ.

“ನಾವಿದ್ದ ಗ್ರಾಮದಲ್ಲಿ ದೊರೆಯುತ್ತಿದ್ದ ಬಿದಿರು, ನಾರು, ಗಿಡ ಮೂಲಿಕೆ ಸಸ್ಯಗಳು, ಕಾಡು ಪ್ರಾಣಿಗಳು ನಮ್ಮ ದಿನ ನಿತ್ಯದ ಅವಶ್ಯಕತೆಗಳನ್ನು ಪೂರೈಸುತ್ತಿದ್ದವು. ಈಗ ಈ ಅಪರಿಚಿತ ಸ್ಥಳದಲ್ಲಿ ಎಲ್ಲದಕ್ಕೂ ಹಣ ತೆರಬೇಕಾಗಿದೆ. ಮೊದಲೇ ಅನಕ್ಷರಸ್ಥ, ಬಡವರಾದ ನಾವು ಹಣ ಎಲ್ಲಿಂದ ತರಬೇಕು? ಇಲ್ಲಿಗೆ ಬಂದ ಮೊದಲ ವರ್ಷದಲ್ಲೇ 38 ಮಕ್ಕಳು ಸಾವನ್ನಪ್ಪಿದವು. ಹತ್ತಿರದ ಪಟ್ಟಣಕ್ಕೆ ಹೋಗಬೇಕಾದರೆ ಬಸ್ ಹಿಡಿದು ಹೋಗಬೇಕು. ಪುನರ್ವಸತಿ ಪ್ರದೇಶದಲ್ಲಿ ನಮಗೆ ನೀಡಲಾಗುತ್ತಿದೆ ಎಂದು ಹೇಳಿದ್ದ ಭೂಮಿ, ನಿವೇಶನ, ರಸ್ತೆ, ನೀರು, ವಿದ್ಯುತ್ ಇವಲ್ಲಾ ಕನಸಿನ ಮತಾಗಿದೆ. ಸರಕಾರವನ್ನು ಎದುರಿಸಲಾಗದ ಅಸಹಾಯಕ ಸ್ಥಿತಿಯಲ್ಲಿರುವ ನಾವು ಒಂದು ರೀತಿಯ ಬಯಲು ಬಂಧೀಖಾನೆಯ ಖೈದಿಗಳು.”

ಇದು 1992 ರಲ್ಲಿ ಪುನರ್ವಸತಿ ಪ್ರದೇಶಕ್ಕೆ ಭೇಟಿ ನೀಡಿದ ಪತ್ರಕರ್ತರ ತಂಡಕ್ಕೆ ಗ್ರಾಮಸ್ಥರು ಹೇಳಿಕೊಂಡ ನೋವಿನ ಕತೆ. ಇಂತಹ ದುರಂತ ಕೇವಲ ಭಾರತಕ್ಕೆ ಅಥವಾ ಗುಜರಾತ್‌ಗೆ ಸೀಮಿತವಾಗಿಲ್ಲ. ಇದು ಜಗತ್ತಿನೆಲ್ಲೆಡೆ ಅಣೆಕಟ್ಟು ನಿರ್ಮಾಣದ ನೆಪದಲ್ಲಿ ಅತಂತ್ರರಾದವರ ಆಕ್ರಂದನ.

ಕಳೆದ 70 ವರ್ಷಗಳ ಅವಧಿಯಲ್ಲಿ ಈ ರೀತಿ ನಿರಾಶ್ರಿತರಾದವರಲ್ಲಿ ಬಹುತೇಕ ಮಂದಿ ಅರಣ್ಯವಾಸಿಗಳು ಕೃಷಿಕಾರ್ಮಿಕರು ಮತ್ತು ಬಡ ಗ್ರಾಮಸ್ಥರು. ಯಾವುದೇ ರಾಜಕೀಯ ಇಲ್ಲವೆ ಹೋರಾಟದ ಬಲವಿಲ್ಲದವರು.

ಮೇಲ್ನೋಟಕ್ಕೆ ನಮಗೆ ಕಾಣಸಿಗುವವರು ಇಂತಹವರು ಮಾತ್ರ. ಪರೋಕ್ಷವಾಗಿ, ಅಣೆಕಟ್ಟು ನಿರ್ಮಾಣವಾದ ನಂತರ ಸಿಬ್ಬಂದಿ ವಸತಿಗಾಗಿ ನಿರ್ಮಿಸಿದ ಪಟ್ಟಣಕ್ಕೆ, ರಸ್ತೆಗೆ, ವಿದ್ಯುತ್ ಕಂಬ ಮತ್ತು ವಿದ್ಯುತ್ ಸರಬರಾಜು ಮುಂತಾದ ವ್ಯವಸ್ಥೆಗಳಿಗೆ ಭೂಮಿ ಕಳೆದುಕೊಂಡ ನತದೃಷ್ಟರು ಅಣೆಕಟ್ಟು ನಿರ್ಮಾಣದಿಂದ ನಿರ್ವಸತಿಗರಾದವರ ಪಟ್ಟಿಯಲ್ಲಿ ಬರುವುದಿಲ್ಲ. ಇವರೆಲ್ಲ ಈಗ ನಗರದಿಂದ ನಗರಕ್ಕೆ ಚಲಿಸುವ ವಲಸೆ ಕಾರ್ಮಿಕರಾಗಿ ಇಲ್ಲವೇ ಕೊಳೆಗೇರಿಗಳ ನಿವಾಸಿಗಳಾಗಿ ಬದುಕು ದೂಡುತ್ತಿದ್ದಾರೆ. ನಿಸರ್ಗದ ಕೊಡುಗೆಗಳಾದ ನೀರು, ನದಿಯಲ್ಲಿ ದೊರೆಯುವ ಮೀನು, ತಮ್ಮ ದನ ಕರುಗಳಿಗೆ ದೊರೆಯುತ್ತಿದ್ದ ಹಸಿರು ಮೇವು, ಕಾಡಿನಲ್ಲ ಸಿಗುತ್ತಿದ್ದ ಹಲವು ಬಗೆಯ ಹಣ್ಣುಗಳಿಂದ ವಂಚಿತರಾದ ಇವರ ಬದುಕಿನ ನೋವು, ಕಣ್ಣೀರು ಆಧುನಿಕ ಯುಗದ ಅಬ್ಬರದ ನಡುವೆ ನಿಶ್ಯಬ್ಧವಾಗಿದೆ.

ಈವರೆಗೆ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಅಣೆಕಟ್ಟು ನಿರ್ಮಾಣದಿಂದ ನಿರಾಶ್ರಿತರಾಗಿರುವ ಕುಟುಂಬಗಳ ಬಗ್ಗೆ, ಜನಸಂಖ್ಯೆಯ ಬಗ್ಗೆ ಖಚಿತ ಮಾಹಿತಿಯನ್ನು ಯಾವುದೇ ಸರಕಾರಗಳು ಬಹಿರಂಗಗೊಳಿಸಿಲ್ಲ.  ಇವರು ನೀಡುವ ಸಂಖ್ಯೆಗೂ, ನಿಜವಾಗಿ ನಿರ್ವಸತಿಗರಾದವರ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಭಾರತ ಮತ್ತು ಚೀನಾ ದೇಶಗಳಲ್ಲಿ ಅತಂತ್ರರಾದಷ್ಟು ಜನ ಬೇರಾವ ದೇಶಗಳಲ್ಲೂ ಆಗಿಲ್ಲ. ದೆಹಲಿ ಮೂಲದ ಸಾಮಾಜಿಕ ಅಧ್ಯಯನ ಸಂಸ್ಥೆಯ ಸಮೀಕ್ಷೆ ಪ್ರಕಾರ 1947 ರಿಂದ 2000 ಇಸವಿಯವರೆಗೆ ಭಾರತದಲ್ಲಿ ಒಂದೂವರೆ ಕೋಟಿ ಜನ ತಮ್ಮ ನೆಲೆ ಕಳೆದುಕೊಂಡಿದ್ದಾರೆ. ಕಳೆದ 10 ವರ್ಷಗಳಿಂದೀಚೆಗೆ ಅಂದಾಜು 50 ಲಕ್ಷ ಜನತೆ ನಿರಾಶ್ರಿತರಾಗಿದ್ದಾರೆ. ವಿಶ್ವಬ್ಯಾಂಕ್‌ಗೆ ಚೀನಾ ಸರಕಾರ ನೀಡಿದ ಮಾಹಿತಿಯಂತೆ 1950 ರಿಂದ 1989 ರವರೆಗೆ 1 ಕೋಟಿ 20 ಲಕ್ಷ ಜನರು ಚೀನಾದಲ್ಲಿ ಅತಂತ್ರರಾಗಿದ್ದಾರೆ ಎಂದು ತಿಳಿಸಿದೆ. ಆದರೆ ಚೀನಾದಲ್ಲಿ ಈ ಕುರಿತಂತೆ ಹಲವು ದಶಕಗಳ ಕಾಲ ಅಧ್ಯಯನ ನಡೆಸಿರುವ ಸಮಾಜ ಶಾಸ್ತ್ರಜ್ಞ ಡೈಕ್ವಿಂಗ್, 4 ರಿಂದ 6 ಕೋಟಿ ಜನತೆ ಚೀನಾದಲ್ಲಿ ಅಣೆಕಟ್ಟು ನಿರ್ಮಾಣದಿಂದ ಅತಂತ್ರರಾಗಿದ್ದಾರೆ ಎಂದು ದೃಢಪಡಿಸಿದ್ದಾನೆ.

ಸಾಮಾನ್ಯವಾಗಿ ಅಣೆಕಟ್ಟು ನಿರ್ಮಾಣವಾಗುವ ಅರಣ್ಯ ಅಥವಾ ನದಿಯ ಇಕ್ಕೆಲಗಳ ಸರಕಾರಿ ಭೂಮಿಯಲ್ಲಿ ವಾಸಿಸುವ ಅಥವಾ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಮಂದಿ ಬಡವರಾಗಿದ್ದು, ಅವರ ಬಳಿ ಈ ಭೂಮಿಯ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿರುವುದಿಲ್ಲ. ಹಾಗಾಗಿ ಇವರು ಯಾವುದೇ ಪರಿಹಾರದಿಂದ ವಂಚಿತರಾಗಿದ್ದು, ಸರಕಾರದ ನಿರ್ವಸತಿಗರ ಪಟ್ಟಿಯಲ್ಲಿ ಇವರು ಸೇರುವುದಿಲ್ಲ. ಇಂತಹ ನತದೃಷ್ಟ ಕುಟುಂಬಗಳ ಅಂಕಿ-ಅಂಶ ಈವರೆಗೆ ನಿಖರವಾಗಿ ಎಲ್ಲಿಯೂ ಸಿಗದ ಕಾರಣ ಖಚಿತ ಅಂಕಿ-ಅಂಶಗಳಿಗೆ ತೊಡಕಾಗಿದೆ. ಇದಕ್ಕೆ ಜ್ವಲಂತ ಉದಾಹರಣೆ ಗುಜರಾತ್‌ನ ನರ್ಮದಾ ಅಣೆಕಟ್ಟಿನ ಯೋಜನೆ.

1961 ರಲ್ಲಿ ಅಣೆಕಟ್ಟು ಕಾಮಗಾರಿ ಸಿಬ್ಬಂದಿ ವಸತಿ ನಿರ್ಮಾಣಕ್ಕಾಗಿ ಜಾಗ ತೆರವುಗೊಳಿಸಿದ 800 ಕುಟುಂಬಗಳಿಗೆ ಇಂದಿಗೂ ಪರಿಹಾರ ದೊರೆತಿಲ್ಲ. ಅವರು ವಾಸಿಸುತ್ತಿದ್ದ ನಿವೇಶನ-ಮನೆಗೆ ಹಕ್ಕು ಪತ್ರ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಹೋದ ಅಭಯಾರಣ್ಯದಲ್ಲಿ ಕಾಡಿನ ಕಿರು ಉತ್ಪನ್ನಗಳನ್ನೇ ನಂಬಿ ಬದುಕಿದ್ದ 10 ಸಾವಿರ ಆದಿವಾಸಿಗಳನ್ನು ಯಾವುದೇ ಪರಿಹಾರ ಅಥವಾ ನಿವೇಶನ ನೀಡದೆ ಒಕ್ಕಲೆಬ್ಬಿಸಲಾಯಿತು.

1 ಲಕ್ಷದ 40 ಸಾವಿರ ರೈತರು ನರ್ಮದಾ ಅಣೆಕಟ್ಟು ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿದ್ದಾರೆ. ಇವರಲ್ಲಿ 25 ಸಾವಿರ ರೈತರ ಜಮೀನು 5 ಎಕರೆಗಿಂತ ಕಡಿಮೆ. ಇವರನ್ನು ನಂಬಿ ಬದುಕಿದ್ದ ಕೃಷಿ ಕಾರ್ಮಿಕರು ನಗರಗಳತ್ತ ವಲಸೆ ಹೋದರು. ಕೃಷಿಭೂಮಿಯಲ್ಲದೆ ಅನೇಕ ನಗರ-ಪಟ್ಟಣಗಳು, ಹಳ್ಳಿಗಳೂ ನರ್ಮದಾ ಸರೋವರದ ಹಿನ್ನೀರಿನಲ್ಲಿ ಮುಳುಗಡೆಯಾದವು. ಈ ನಗರ- ಪಟ್ಟಣಗಳಲ್ಲಿ ಬದುಕಿದ್ದ ಅನೇಕ ವ್ಯಾಪಾರಿಗಳು, ಕಾರ್ಮಿಕರು ಯಾವುದೇ ಪರಿಹಾರಕ್ಕೆ ಅನರ್ಹರಾಗಿದ್ದರು. ಜಲಾಶಯ ನಿರ್ಮಾಣವಾದ ನಂತರ ನದಿ ನೀರು ಸಮುದ್ರ ಸೇರುವವರೆಗಿನ ನದಿ ಇಕ್ಕೆಲಗಳಲ್ಲಿ ಮೀನುಗಾರಿಕೆಯನ್ನೇ ನಂಬಿ ಜೀವಿಸಿದ್ದ ಮೀನುಗಾರರ ಕುಟುಂಬಗಳೂ ಸಹ ಈ ವೃತ್ತಿಯಿಂದ ವಂಚಿತರಾಗಿ, ಅನಿವಾರ್ಯವಾಗಿ ಬೇರೆ ವೃತ್ತಿಯನ್ನು ಆಯ್ಕೆ ಮಾಡಕೊಳ್ಳಬೇಕಾಯಿತು. 1985 ರಲ್ಲಿ ವಿಶ್ವಬ್ಯಾಂಕ್ ನರ್ಮದಾ ಅಣೆಕಟ್ಟು ಯೋಜನೆಗೆ ಸಾಲ ನೀಡುವ ಸಂದರ್ಭದಲ್ಲಿ, ಯೋಜನೆಯಿಂದ ನಿರಾಶ್ರಿತವಾಗುವ ಕುಟುಂಬಗಳ ಸಂಖ್ಯೆ 6,603 ಎಂದು ತಿಳಿಸಿತ್ತು. 1996 ರಲ್ಲಿ ಇದೇ ವಿಶ್ವಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಈ ಯೋಜನೆಯಿಂದ 41,500 ಕುಟುಂಬಗಳು ತಮ್ಮ ಮನೆ, ಜಮೀನುಗಳನ್ನು ಕಳೆದುಕೊಂಡಿವೆ ಎಂದು ತಿಳಿಸಿತು.

ಇವೆಲ್ಲವೂ ಮೇಲ್ನೋಟಕ್ಕೆ ತಕ್ಷಣದ ಪರಿಣಾಮವೆನಿಸಿದರೂ, ದೀರ್ಘಾವಧಿ ಕಾಲದಲ್ಲಾಗುವ ಸಾಮಾಜಿಕ ಪರಿಣಾಮಗಳನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂತಹ ದೀರ್ಘಕಾಲಿಕ ಸಾಮಾಜಿಕ ಪರಿಣಾಮಗಳಿಂದ ಬಳಲುವವರು ಜಲಾಶಯ ಅಥವಾ ಅಣೆಕಟ್ಟುಗಳ ಕೆಳಗಿನ ನದಿಪಾತ್ರದ ಜನರು.

ಆಫ್ರಿಕಾ ಖಂಡದ ನೈಜೀರಿಯಾದಲ್ಲಿ ನದಿಯ ಪ್ರವಾಹವನ್ನು ತಡೆಗಟ್ಟುವ ಉದ್ದೇಶದಿಂದ ನೈಜಿರ್ ನದಿಗೆ ಕಟ್ಟಲಾದ ಕ್ವೆಂಜೆ (kainji) ಅಣೆಕಟ್ಟಿನಿಂದ, ನದಿಯ ನೀರಿನ ಹರಿಯುವಿಕೆ ಸ್ಥಗಿತಗೊಂಡ ಪರಿಣಾಮ 50 ಸಾವಿರ ಮಂದಿ ಅನಾಥರಾಗುವ ಸ್ಥಿತಿ ಬಂತು. ನದಿಯ ಇಕ್ಕೆಲಗಳಲ್ಲಿ ವ್ಯವಸಾಯ, ಜಾನುವಾರು ಸಾಕಾಣಿಕೆ, ಮೀನುಗಾರಿಕೆ ವೃತ್ತಿಯಿಂದ ಬದುಕಿದ್ದ ಈ ಜನತೆ ತಮ್ಮ ಮೂಲ ಕಸುಬುಗಳಿಂದ ವಂಚಿತರಾದರು. ಈ ಪ್ರದೇಶವೊಂದರಲ್ಲೇ ವರ್ಷವೊಂದಕ್ಕೆ 1 ಲಕ್ಷ ಟನ್ ಕುರಿ, ಮೇಕೆ, ದನದ ಮಾಂಸ ಯೂರೋಪ್ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. 1968 ರಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ ಈ ಪ್ರಮಾಣ ಕೇವಲ 30 ಸಾವಿರ ಟನ್‌ಗೆ ಕುಸಿಯಿತು.

ಇದೇ ನೈಜೀರಿಯಾದಲ್ಲಿ ಸೊಕೊಟೊ ನದಿಗೆ ಕಟ್ಟಲಾದ ಬಕಲೋರಿ ಅಣೆಕಟ್ಟಿನಿಂದಾಗಿ, 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಭತ್ತ ಹಾಗೂ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಮೆಕ್ಕೆಜೋಳ, ಹತ್ತಿ ಇತರೆ ಬೆಳೆಗಳ ಚಟುವಟಿಕೆ ಸ್ತಬ್ಧಗೊಂಡವು.

ಇದಕ್ಕಿಂತ ಭಿನ್ನವಾದ ಸಾಮಾಜಿಕ ಹಾಗೂ ನೈಸರ್ಗಿಕ ದುರಂತವೆಂದರೆ ಬ್ರೆಜಿಲ್ ದೇಶದ್ದು. ವಿಶ್ವಬ್ಯಾಂಕ್ ನೆರವಿನಿಂದ ನಿರ್ಮಿಸಲಾದ ಸೊಬ್ರಾಡಿನೊ ಅಣೆಕಟ್ಟಿನ ಹಿನ್ನೀರಿನಿಂದ 70 ಸಾವಿರ ಮಂದಿ ಸ್ಥಳಾಂತರಗೊಂಡರೆ, 25 ಸಾವಿರ ಹೆಕ್ಟೇರ್ ಕೃಷಿಭೂಮಿ ಮುಳುಗಡೆಯಾಯಿತು.

ಸಾವೊ ಪ್ರಾನ್ಸಿಸ್ಕೊ ನದಿಗೆ ಕಟ್ಟಿದ ಅಣೆಕಟ್ಟಿನ ಕೆಳಗೆ 800 ಕಿ.ಮೀ. ಉದ್ದದ ನದಿ ಪಾತ್ರದಲ್ಲಿ ಬೆಳೆಯಲಾಗುತ್ತಿದ್ದ ಭತ್ತದ ಬೆಳೆಗೆ ಸಮರ್ಪಕ ನೀರಿಲ್ಲದೆ, ಭತ್ತದ ಕೃಷಿಯನ್ನೇ ರೈತರು ಕೈ ಬಿಡಬೇಕಾಯಿತು. ಇದರಿಂದಾಗಿ 50 ಸಾವಿರ ಮಂದಿ ಕೃಷಿಕರು, ಮತ್ತು ಕೃಷಿ ಕೂಲಿ ಕಾರ್ಮಿಕರು ಅತಂತ್ರರಾದರು. ಇವರಿಗೆ ಬೇರೆಡೆ ಕೃಷಿಗೆ ಯೋಗ್ಯವಾದ ಭೂಮಿಯನ್ನು ನೀಡಲಾಗುವುದೆಂದು ವಿಶ್ವಬ್ಯಾಂಕ್ ಮತ್ತು ಬ್ರೆಜಿಲ್ ಸರಕಾರ ಜಂಟಿಯಾಗಿ ನೀಡಿದ್ದ ಆಶ್ವಾಸನೆ ಕೇವಲ ಭರವಸೆಯಾಗಿಯೇ ಉಳಿಯಿತು.

ಅಣೆಕಟ್ಟು ನಿರ್ಮಾಣವಾಗಿ, ಜಲಾಶಯದಿಂದ ಹೊರಬಿದ್ದ ನೀರಿನ ಪರಿಣಾಮ 6 ವರ್ಷಗಳ ನಂತರ ಕಾಣಿಸಿಕೊಂಡು, 40 ಸಾವಿರ ಮಂದಿ ವಿವಿಧ ರೋಗಗಳಿಂದ ಬಳಲಿದರು. ಈ ನೀರನ್ನು ಕುಡಿದ ಬಹುತೇಕ ಮಂದಿ ಹೊಟ್ಟೆನೋವಿನಿಂದ, ಚರ್ಮದ ಖಾಯಿಲೆಯಿಂದ ನರಳಿದರೆ, ಸಾವಿರಾರು ಮಕ್ಕಳು ನಿರಂತರ ಬೇಧಿಯಿಂದ ನಿತ್ರಾಣರಾಗಿ ಅಸುನೀಗಿದರು. ಇವೆಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀಯರ ಗುಪ್ತಾಂಗಗಳಲ್ಲಿ ಉಂಟಾದ ತುರಿಕೆ, ಗಾಯದಿಂದ ರಕ್ತ, ಕೀವು ಸೋರುವಂತಾಯಿತು. ಈ ಜನತೆಯ ಮುಖ್ಯ ಆಹಾರವಾಗಿದ್ದ ಮೀನು, ಸೀಗಡಿಗಳಿಂದ ಸಿಗುತ್ತಿದ್ದ ಪ್ರೋಟೀನ್‌ನಿಂದ ಮತ್ತು ವಿಟಮಿನ್‌ಗಳಿಂದ  ಸಶಕ್ತರಾಗಿದ್ದ ಇವರು, ತಾವು ಯಾವ ಖಾಯಿಲೆಯಿಂದ, ಯಾವ ಕಾರಣಕ್ಕಾಗಿ ಬಳಲುತ್ತಿದ್ದೇವೆ ಎಂಬುದನ್ನು ಅರಿಯಲಾಗದೆ ಅಸುನೀಗಿದರು.

(ಮುಂದುವರಿಯುವುದು)

ದಂತಗೋಪುರದ ದಂಡನಾಯಕರು

 ಡಾ.ಎನ್. ಜಗದೀಶ್ ಕೊಪ್ಪ

                   ಅವರು ಈ ಕಗ್ಗತ್ತಲಿನಲ್ಲಿ ಹಾಡಬಲ್ಲರೆ?
ಹೌದು ಹಾಡಬಲ್ಲರು
ಕಗ್ಗತ್ತಲನ್ನು ಕುರಿತು ಮಾತ್ರ
ಅವರು ಹಾಡಬಲ್ಲರು
ಬರ್ಟೋಲ್ ಬ್ರೆಕ್ಟ್

ಈ ಅಂಕಿ ಅಂಶವನ್ನು ನೀವು ನಂಬಲೇಬೇಕು. ಈ ದೇಶದ ನಗರ ಪ್ರದೇಶದ ವ್ಯಕ್ತಿ ದಿನವೊಂದಕ್ಕೆ 33 ರೂಗಳನ್ನು ಹಾಗೂ ಗ್ರಾಮಾಂತರ ಪ್ರದೇಶದ ವ್ಯಕ್ತಿ 26 ರೂ ಗಿಂತ ಹೆಚ್ಚು ಖರ್ಚು ಮಾಡಿದರೆ, ಅವರು ಬಡವರಲ್ಲ. ಭಾರತದ ಜನತೆ ಬೆಚ್ಚಿ ಬೀಳಿಸುವ ಈ  ವರದಿಯನ್ನು ನಮ್ಮ ಕೇಂದ್ರ ಯೋಜನಾ ಆಯೋಗ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರದ ಮೂಲಕ ಸಲ್ಲಿಸಿದೆ.

ನಮ್ಮನ್ನಾಳುವ ಜನನಾಯಕರು ವಾಸ್ತವದ ಬದುಕಿನಿಂದ ಎಷ್ಟು ದೂರವಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕು. ಅತ್ಯಂತ ನೋವಿನ ಸಂಗತಿಯೆಂದರೆ, ಈ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಡಾ. ಮನಮೋಹನ್‌ ಸಿಂಗ್ ಸಾಧಾರಣ ವ್ಯಕ್ತಿಯಲ್ಲ. ಜಗತ್‌ಪ್ರಸ್ದಿದ್ಧ ಲಂಡನ್ ಸ್ಕೂಲ್ ಆಪ್ ಎಕಾನಾಮಿಕ್ಸ್ ಸಂಸ್ಥೆಯಿಂದ ಡಾಕ್ಟರೇಟ್ ಪಡೆದವರು. ಜೊತೆಗೆ ಅರ್ಥಶಾಸ್ರದ ಪಿತಾಮಹ ಎನಿಸಿಕೊಂಡ ಆಡಂ ಸ್ಮಿತ್ ಹೆಸರಿನಲ್ಲಿ ಇರುವ ಚಿನ್ನದ ಪದಕ ಪಡೆದ ಪ್ರಥಮ ಏಷ್ಯಾದ ವ್ಯಕ್ತಿ. ಇವೆಲ್ಲಕಿಂತ ಹೆಚ್ಚಾಗಿ ಇಡೀ ಜಗತ್ತೇ  ಗೌರವಿಸುವ ಶ್ರೇಷ್ಟ ಆರ್ಥಿಕ ತಜ್ಙ. ಇಂತಹ ವ್ಯಕ್ತಿಯ ಉಸ್ತುವಾರಿಯಲ್ಲಿರುವ , ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಮತ್ತೋರ್ವ ಆರ್ಥಿಕ ತಜ್ಙ ಮೊಂಟೆಕ್ ಸಿಂಗ್ ಅಹ್ಲುವಾಲಿಯ ನ್ಯಾಯಲಯಕ್ಕೆ ನೀಡಿರುವ ವರದಿ ಇಡೀ ದೇಶಾದ್ಯಂತ ನಗೆಪಾಟಲಿಗೀಡಾಗಿದೆ.

1921 ರ ಡಿಸಂಬರ್ 12 ರಂದು ನಡೆದ ಕಾಂಗ್ರೆಸ್ ಅಧೀವೇಶನದಲ್ಲಿ ಮಾತನಾಡಿದ್ದ ಗಾಂಧೀಜಿ ಹೇಳಿದ್ದ ಮಾತುಗಳು ಇವು, “ಒಂದು ದೇಶ ಎಷ್ಡು ಸದೃಡವಾಗಿದೆ ಎಂಬುದು ನಿರ್ಧಾರವಾಗುವುದು ಆ ದೇಶದಲ್ಲಿರುವ ಕೋಟ್ಯಾಧೀಶ್ವರರ ಆಧಾರದ ಮೇಲಲ್ಲ, ಆ ದೇಶದಲ್ಲಿ ಎಷ್ಟು ಮಂದಿ ಬಡವರು ಬಡತನದ ಸುಳಿಯಿಂದ ಹೊರ ಬಂದಿದ್ದಾರೆ ಎಂಬುವುದರ ಆಧಾರದ ಮೇಲೆ.” ಇಂತಹ ಕಟು ವಾಸ್ತವದ ಗ್ರಹಿಕೆಗಳನ್ನು ಮರೆತ ನಮ್ಮ ನಾಯಕರ ಬೌದ್ಧಿಕ ಸ್ಥಿರತೆ ಬಗ್ಗೆ ಈಗ ಸಂಶಯ ಉಂಟಾಗುತ್ತಿದೆ.

ಸ್ವತಃ ಕೇಂದ್ರ ಸರ್ಕಾರ ಧೃಡಪಡಿಸಿರುವ ಅಂಕಿ ಅಂಶದ ಆಧಾರದ ಪ್ರಕಾರ ಭಾರತದಲ್ಲಿ ಶೇ.49ರಷ್ಟು ಮಂದಿ ಬಡವರಿದ್ದಾರೆ. ಸರ್ಕಾರದ ಮಾಹಿತಿಯನ್ನು ಹೊರತು ಪಡಿಸಿದರೆ, ವಾಸ್ತವವಾಗಿ ಈ ದೇಶದಲ್ಲಿ ಶೇ.72 ರಷ್ಟು ಮಂದಿ ಬಢವರು ಇರುವುದು ಸತ್ಯ.

ಬಡತನದ ಬಗ್ಗೆ ಯಾವ ಅನುಭವವಾಗಲಿ, ತಿಳಿದುಕೊಳ್ಳುವ ಮನಸ್ಸಾಗಲಿ ಇಲ್ಲದಿರುವ ಈ ನಾಯಕರು ಒಮ್ಮೆ ತಮ್ಮ ಕುಟುಂಬದ ಪರವಾಗಿ ದಿನಸಿ ಅಂಗಡಿಗೆ, ಅಥವಾ  ತರಕಾರಿ ಅಂಗಡಿಗೆ ಇಲ್ಲವೇ, ಮಧ್ಯಮ ವರ್ಗದ ಹೊಟೇಲ್ ಗೆ ಹೋಗಿ ಬಂದಿದ್ದರೆ ವಾಸ್ತವ ಸ್ಥಿತಿ ಏನೆಂಬುದು ಅರ್ಥವಾಗುತಿತ್ತು.

ಬಡತನ ಕೇವಲ ಹಸಿವಿನ ವಿಚಾರ ಮಾತ್ರವಲ್ಲ, ಅದೊಂದು ಸಮಾಜದ ಬಹುಮುಖಿ ಕೊರತೆ, ಜೊತೆಗೆ ಮೈ ಮತ್ತು ಮನಸ್ಸುಗಳನ್ನು ನಿರಂತರವಾಗಿ ಸುಡುವ ಸಮಸ್ಯೆ ಎಂದು ವಿಶ್ಲೇಷಿಸಿದವರು ಅಮಾರ್ತ್ಯ ಸೇನ್. ಅಲ್ಲಿಯವರೆಗೆ ಜಾಗತೀಕರಣದ ಹುಚ್ಚು ಹೊಳೆಯಲ್ಲಿ ತೇಲುತ್ತಿರುವ ಈ ಜಗತ್ತಿಗೆ ಬಡತನದ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ, ಇಂದಿಗೂ ಇಲ್ಲ.

ಇವತ್ತಿಗೂ ಭಾರತದ 120 ಕೋಟಿ ಜನಸಂಖೈಯಲ್ಲಿ ಶೇ.70 ರಷ್ಟು ಮಂದಿ ಬಡವರಾಗಿ ಉಳಿದಿದ್ದಾರೆ. ಇದು ವಾಸ್ತವಿಕ ಆಧಾರದ ಸಂಖ್ಯೆ. ಆದರೆ ಸರ್ಕಾರದ ಅಂಕಿ ಅಂಶಗಳಲ್ಲಿ ಶೇ 44 ರಷ್ಟು ಮಾತ್ರ. ಈಗ ಇದು ಶೇ. 37 ಕ್ಕೆ ಇಳಿದಿದೆಯಂತೆ.  ಹೆಬ್ಬೆಟ್ಟಿನ ಸಹಿ ಹಾಕುತಿದ್ದ ಅನಕ್ಷರಸ್ತನಿಗೆ ಅವನ ಹೆಸರು ಬರೆಯಲು ಕಲಿಸಿ ಸಾಕ್ಷರ ಎಂದು ಹಣೆಪಟ್ಟಿ ಕಟ್ಟಿ  ದೇಶದಲ್ಲಿ ಅನಕ್ಷರತೆ ತೊಲಗಿತು ಎಂದು ಅಂತರಾಷ್ಟೀಯ ಮಟ್ಟದಲ್ಲಿ ಡಂಗೂರ ಸಾರಿದ ಕಥೆಯಷ್ಟು ಸುಲಭವಲ್ಲ ಈ ಸಂಗತಿ. ಭಾರತದ ಬಡ ಬೊರೇಗೌಡ ಅವಿದ್ಯಾವಂತ ಅಥವಾ ವಿದ್ಯಾವಂತ ಯಾವ ವರ್ಗಕ್ಕೆ ಸೇರಿದರೂ ಗಳಿಸುವುದು ಇಲ್ಲವೇ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ನಿಜವಾದ ಬಡವನನ್ನು ಬಡವನಲ್ಲವೆಂದು ಘೋಷಿಸಿ ಅವನ ಸವಲತ್ತುಗಳನ್ನು ಕಿತ್ತುಕೊಳ್ಳುವುದು ಅಮಾನವೀಯ ಮತ್ತು ಅಮಾನುಷ ಕೃತ್ಯ.

ಈ ಕಾರಣಕ್ಕಗಿಯೆ ಪತ್ರಕರ್ತ ಪಿ.ಸಾಯಿನಾಥ್ ಕಳೆದ 20 ವರ್ಷಗಳಲ್ಲಿ ನಮ್ಮ ಅರ್ಥಶಾಸ್ರ ಮತ್ತು ಅರ್ಥಶಾಸ್ರಜ್ಞರುಗಳ ಯಶಸ್ಸ್ಸು ಎಂದರೆ, ಜನಸಾಮಾನ್ಯರ ಬದುಕಿಗೆ ಸಂಬಂಧವಿರದಂತೆ ಅರ್ಥವ್ಯವಸ್ಥೆಗಳನ್ನು ರೂಪಿಸಿರುವುದು ಎಂದು ಗೇಲಿ ಮಾಡಿದ್ದಾರೆ.

ತೆಂಡೂಲ್ಕರ್ ಸಮಿತಿಯ ಆಧಾರದ ಮೇಲೆ ವರದಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ, ಜೊತೆಗೆ ಈ ಅಂಕಿ ಅಂಶ ಬದಲಾಗುವ ಸಾಧ್ಯತೆ ಕೂಡ ಇದೆ. ಭಾರತದ ನಾಗರೀಕ ತೆಗೆದುಕೊಳ್ಳುವ ಆಹಾರದ ಪ್ರಮಾಣದ ಆಧಾರದ ಮೇಲೆ ಆಂದರೆ, ಮನುಷ್ಯನೊಬ್ಬನಿಗೆ  ದಿನವೊಂದಕ್ಕೆ ನಗರ ಪ್ರದೇಶದಲ್ಲಿ 2100 ಕ್ಯಾಲೋರಿ ಮತ್ತು ಗ್ರಾಮೀಣ ಪ್ರದೇಶದಲ್ಲಿ 2400 ಕ್ಯಾಲೋರಿ ಗಳಷ್ಟು ಪ್ರಮಾಣದ ಆಹಾರದ ಅಗತ್ಯವಿದೆ. ಸಧ್ಯ ಭಾರತದಲ್ಲಿ1100 ರಿಂದ  1600 ರಷ್ಟು ಕ್ಯಾಲೋರಿ ಅಹಾರ ಮಾತ್ರ ದೊರೆಯುತ್ತಿದೆ. ಇವತ್ತಿಗೂ ಹಸಿವಿನಿಂದ ದಿನವೊಂದಕ್ಕೆ 10 ಸಾವಿರಕ್ಕೂ ಅಧಿಕ ಮಕ್ಕಳು ಭಾರತದಲ್ಲಿ ಸಾಯುತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ವಿಭಾಗದ ವರದಿಯಲ್ಲಿ ತಿಳಿಸಲಾಗಿದೆ. ಈವರೆಗೆ 2ಲಕ್ಷದ 45 ಸಾವಿರದ ಅಧಿಕ ರೈತರು ಸಾವಿಗೆ ಶರಣಾಗಿದ್ದಾರೆ. ಇಂತಹ ಕಟು ವಾಸ್ತವ ಸಂಗತಿಗಳು ನಮ್ಮೆದುರು ಇದ್ದಾಗಲೂ ಕೂಡ ಅಂತರಾಷ್ಟೀಯ ಸಮುದಾಯದೆದುರು ಭಾರತದಲ್ಲಿ ಬಡತನವಿಲ್ಲ ಎಂದು ತೋರ್ಪಡಿಸಿಕೊಳ್ಳಲು ಈ ನಾಟಕದ ಅವಶ್ಯಕತೆ ಇರಲಿಲ್ಲ. ಇಲ್ಲಿಯ ಬಡವನೊಬ್ಬ ಸಾಯಲು ನಿರ್ಧರಿಸಿ ವಿಷ ಕೊಳ್ಳಲು ಹೋದರೆ, ಮಾರುಕಟ್ಟೆಯಲ್ಲಿ ಆತನಿಗೆ  26 ರೂಪಾಯಿಗೆ ವಿಷ ಕೂಡ ಸಿಕ್ಕುವುದಿಲ್ಲ.

ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ಅರ್ಥಶಾಸ್ರಜ್ಞೆ ಉತ್ಸಾ ಪಟ್ನಾಯಕ್ ವರ್ತಮಾನದ ಬೆಲೆ ಸೂಚ್ಯಂಕ ಆಧರಿಸಿ ಆಹಾರಕ್ಕಾಗಿ ಕನಿಷ್ಠ ಗ್ರಾಮಾಂತರ ಪ್ರದೇಶದಲ್ಲಿ 36 ರೂಪಾಯಿಗಳು, ನಗರ ಪ್ರದೇಶದಲ್ಲಿ 60 ರೂಪಾಯಿಗಳನ್ನು ಮನುಷ್ಯನೊಬ್ಬ ಖರ್ಚು ಮಾಡಬೇಕಾಗಿದೆ ಎಂದಿದ್ದಾರೆ.

ಈ ದೇಶದ ಅಸಮಾನತೆಯ ಬಗ್ಗೆ ಎಲ್ಲಗೂ ತಿಳಿದಿದೆ. ಜಿಂದಾಲ್ ಸಮೂಹದ ಅಧ್ಯಕ್ಷ ನವೀನ್ ಜಿಂದಾಲ್ ವಾರ್ಷಿಕವಾಗಿ 69 ಕೋಟಿ, ರಿಲೆಯನ್ಸ್ ಸಮೂಹದ ಮುಖೇಶ್ ಅಂಬಾನಿ 42 ಕೋಟಿ, ಅನಿಲ್ ಅಂಬಾನಿ 35 ಕೋಟಿ ಸಂಬಳ ಪಡೆಯುತಿದ್ದಾರೆ. ನಮ್ಮ ಕೆಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿ ತಿಂಗಳಿಗೆ ಪ್ರವಾಸ ಭತ್ಯ, ಮನೆಬಾಡಿಗೆ ಭತ್ಯ ಹೊರತುಪಡಿಸಿ, 1ಲಕ್ಷದ 20 ಸಾವಿರ ಸಂಬಳ ಪಡೆಯುತಿದ್ದಾನೆ.

ಇದೇ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ದಿನವೊಂದಕ್ಕೆ ಕನಿಷ್ಟ 100 ಕೂಲಿ ನಿಗದಿಪಡಿಸಿರುವಾಗ , ಆಹಾರಕ್ಕಾಗಿ 26 ರುಪಾಯಿಯನ್ನು ಹೇಗೆ ನಿರ್ಧರಿಸಿತು?

ಮುಕ್ತ ಮಾರುಕಟ್ಟೆಯ ಪ್ರಭುತ್ವದ ಈ ಜಗತ್ತಿನಲ್ಲಿ ಬಡವರಿಗೆ ನೀಡುವ ಉಚಿತ ಶಿಕ್ಷಣ ಆರೋಗ್ಯ, ಸಬ್ಸಿಡಿಯುಕ್ತ ಆಹಾರಧಾನ್ಯ ಎಲ್ಲವೂ ವಿಶ್ವ ವಾಣಿಜ್ಯ ಸಂಘಟನೆ ಹಾಗೂ ಅದರ ಕೂಸುಗಳಾದ ವಿಶ್ವಬ್ಯಾಂಕ್ ಮತ್ತು ಅಂತರಾಷ್ಟೀಯ ನಿಧಿ  ಸಂಸ್ಥೆ ಇವುಗಳ ಕೆಂಗಣ್ಣಿಗೆ ಗುರಿಯಾಗಿವೆ. ಭಾರತ ಈಗ ಎಲ್ಲಾ ಸಬ್ಸಿಡಿಗಳನ್ನು ತೆಗೆದುಹಾಕಬೇಕಾಗಿದೆ. ಆ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆ ಇದಾಗಿದೆ. 12 ನೇ ಪಂಚವಾರ್ಷಿಕ ಯೋಜನೆಯ ರೂಪು ರೇಷೆಗಳನ್ನು ಗಮನಿಸಿದರೆ, ಭಾರತದ ಪ್ರಜಾಪ್ರಭುತ್ವವನ್ನು ಬಂಡವಾಳಶಾಹಿಗಳ  ಮಾರುಕಟ್ಟೆಯ ಪ್ರಭುತ್ವಕ್ಕೆ ಬಲಿ ಕೊಡುವ ಸಂಚು ನಡೆದಿದೆ ಎಂದು ಊಹಿಸಬಹುದು.

1990 ರ ದಶಕದಲ್ಲಿ ಜಾಗತೀರಣಕ್ಕೆ ಬಾರತದ ಹೆಬ್ಬಾಗಿಲನ್ನು ತೆರೆದವರು ಇದೇ ಮನಮೋಹನ್ ಸಿಂಗ್. ಜಾಗತೀಕರಣದ ಒಳಿತು, ಕೆಡಕುಗಳು ಏನೇ ಇರಲಿ, ವೈರುಧ್ಯಗಳನ್ನು ಸೃಷ್ಟಿಸಿ, ಉಳ್ಳವರ ಭಾರತ ಮತ್ತು ನರಳುವವರ ಭಾರತ ಎಂಬ ಎರಡು ಭಾರತ ಗಳು ಸೃಷ್ಟಿಯಾಗಿರುವುದು ಸತ್ಯ. ಬಡವರ ನಿರ್ಮೂಲನೆ ಮಾಡುವುದರ ಮೂಲಕ ಬಡತನ ನಿರ್ಮೂಲನೆ ಮಾಡುವುದು ಈಗಿನ ಗುರಿಯಾಗಿದೆ.

ಇಲ್ಲಿ ಗಾಳಿ, ನೀರು, ಸೇರಿದಂತೆ ಎಲ್ಲವೂ ಮಾರಾಟದ ಸರಕುಗಳಾಗಬೇಕು. ಆಗಲೇ ಜಾಗತೀಕರಣಕ್ಕೆ, ಹಾಗೂ ಅದರ ಪ್ರತಿಪಾದಕರಿಗೆ ನೆಮ್ಮದಿ.

ಜೀವನದಿಗಳ ಸಾವಿನ ಕಥನ – 6

– ಡಾ.ಎನ್.ಜಗದೀಶ್ ಕೊಪ್ಪ

ಜಲಾಶಯದಲ್ಲಿ ಸಂಗ್ರಹವಾಗುವ ನೀರಿನಲ್ಲಿ ನಡೆಯುವ ತೀವ್ರತರವಾದ ರಾಸಾಯನಿಕ ಕ್ರಿಯೆಯಿಂದಾಗಿ ನೀರಿನ ಗುಣಮಟ್ಟದ ಬದಲಾವಣೆಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಜಲಾಶಯಗಳಲ್ಲಿ ತಿಂಗಳು ಇಲ್ಲವೆ ವರ್ಷಾನುಗಟ್ಟಲೆ ಶೇಖರವಾಗುವ ನೀರು ಜಲಚರಗಳಿಗಷ್ಟೇ ಅಲ್ಲ, ಅದು ಕುಡಿಯಲು ಹಾಗೂ ಕೃಷಿಚಟುವಟಿಕೆಗೆ ಬಳಸುವ ಗುಣಮಟ್ಟ ಹೊಂದಿರುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಮತ.

ಸಾಮಾನ್ಯವಾಗಿ ಜಲಾಶಯದಿಂದ ಬಿಡುಗಡೆಯಾಗಿ ಹರಿಯುವ ನೀರು ಬೇಸಿಗೆಯಲ್ಲಿ ತಣ್ಣಗೆ, ಚಳಿಗಾಲದಲ್ಲಿ ಬೆಚ್ಚಗಿನ ಉಷ್ಣಾಂಶವನ್ನು ಹೊಂದಿರುತ್ತದೆ. ಈ ರೀತಿಯ ಪ್ರಕ್ರಿಯೆ ನೀರಿನಲ್ಲಿ ಬಿಡುಗಡೆಯಾಗುವ ಆಮ್ಲಜನಕದ ಮೇಲೆ ಅವಲಂಬಿತವಾಗಿರುತ್ತದೆ. ನೀರಿನ ಈ ವ್ಯತ್ಯಾಸದಿಂದಾಗಿ ಸಿಹಿ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತಿದ್ದ ಸೀಗಡಿ ಹಾಗೂ ಅನೇಕ ಜಲಚರ ಪ್ರಭೇದಗಳಿಗೆ ಮಾರಕವಾಗಿದೆ.

ಜಲಾಶಯದಲ್ಲಿ ಮೊದಲ ವರ್ಷ ಶೇಖರಗೊಳ್ಳುವ ನೀರು, ಅತ್ಯಂತ ಹೆಚ್ಚಿನ ರೀತಿಯಲ್ಲಿ ರಾಸಾಯನಿಕ ಕ್ರಿಯೆಗೆ ಒಳಪಡುತ್ತದೆ. ಹಿನ್ನೀರಿನಲ್ಲಿ ಮುಳುಗಡೆಯಾಗುವ ಭೂಮಿ, ಅಲ್ಲಿನ ಅರಣ್ಯ ಪ್ರದೇಶ, ಗಿಡ-ಮರ, ನೀರಿನಲ್ಲಿ ಸತ್ತ ಪ್ರಾಣಿಗಳ ಅವಶೇಷಗಳ ಕೊಳೆಯುವಿಕೆಯಿಂದಾಗಿ ನೀರಿನಲ್ಲಿ ಅತ್ಯಧಿಕ ಮಟ್ಟದ ಮಿಥೇನ್ ಅನಿಲ ಮತ್ತು ಇಂಗಾಲಾಮ್ಲ ಬಿಡುಗಡೆಯಾಗುತ್ತದೆ.

1964ರಲ್ಲಿ ದಕ್ಷಿಣ ಅಮೆರಿಕಾದ ಬ್ರೊಕೊಪಾಂಡೊ ಎಂಬ ಅಣೆಕಟ್ಟು ನಿರ್ಮಾಣವಾದಾಗ, ಸುರಿನಾಮ್ ಪ್ರದೇಶದ 1,500 ಚ.ಕಿ.ಮೀ. ಮಳೆಕಾಡು ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋಯಿತು. ಜಲಾಶಯದಲ್ಲಿ ಮೊದಲ ವರ್ಷ ಶೇಖರವಾದ ನೀರಿನಲ್ಲಿ ಹೈಡ್ರೊಜನ್ ಸಲ್ಫೈಡ್ ಅತ್ಯಧಿಕ ಮಟ್ಟದಲ್ಲಿ ಉತ್ಪಾದನೆಯಾದ್ದರಿಂದ ನೀರಿನ ದುರ್ವಾಸನೆಯಿಂದಾಗಿ, ಮೊದಲ ಎರಡು ವರ್ಷಗಳ ಕಾಲ ಅಣೆಕಟ್ಟು ನಿರ್ವಹಣಾ ಸಿಬ್ಬಂಧಿ ಮುಖವಾಡ ತೊಟ್ಟು ಕಾರ್ಯ ನಿರ್ವಹಿಸಬೇಕಾಯಿತು. ಜೊತೆಗೆ ವಿದ್ಯುತ್ ಉತ್ಪಾದನೆಗಾಗಿ ಟರ್ಬೈನ್ ಇಂಜಿನ್ನಿಗೆ ಕೊಳವೆ ಮೂಲಕ ನೀರು ಹಾಯಿಸಿದ ಪ್ರಯುಕ್ತ, ಕೊಳವೆ ಹಾಗೂ ಇಂಜಿನ್ಗಳು ತುಕ್ಕು ಹಿಡಿದು 1971 ರಲ್ಲಿ ಇವುಗಳ ದುರಸ್ತಿಗೆ 40 ದಶಲಕ್ಷ ಡಾಲರ್ ಹಣ ಖರ್ಚಾಯಿತು. ಇದು ಅಣೆಕಟ್ಟು ನಿರ್ಮಾಣ ವೆಚ್ಚದ ಶೇ.1.7 ರಷ್ಟಿತ್ತು. ನಂತರ ಜಲಾಶಯದ ಕೆಳಭಾಗದ 110 ಕಿ.ಮೀ. ದೂರದಲ್ಲಿ ಹರಿವ ನೀರಿನಲ್ಲಿ ಆಮ್ಲಜನಕ ಉತ್ಪತ್ತಿಯಾಗಿ ನೀರಿನ ಗುಣ ಮಟ್ಟ ಸುಧಾರಿಸಿತು.

ಇಂತಹದೇ ನೈಸರ್ಗಿಕ ದುರಂತ ಬ್ರೆಜಿಲ್‌ನಲ್ಲೂ ಸಹ ಸಂಭವಿಸಿತು. ಬಲ್ಖಿನಾ ಅಣೆಕಟ್ಟು ನಿರ್ಮಾಣದಿಂದಾಗಿ ಅಲ್ಲಿನ 2,250 ಚ.ಕಿ.ಮೀ. ಅರಣ್ಯ(ಮಳೆಕಾಡು) ಪ್ರದೇಶ ಜಲಾಶಯದಲ್ಲಿ ಮುಳುಗಿತು. ಇದರಿಂದಾಗಿ ಅಣೆಕಟ್ಟು ನಿರ್ವಹಣಾ ವೆಚ್ಚ ಶೇ. 9ರಷ್ಟು ಅಧಿಕಗೊಂಡಿತು.

ಅರ್ಜೆಂಟೈನಾ, ಪೆರುಗ್ವೆ ದೇಶಗಳ ನಡುವೆ ಯುಕ್ರಿಟಾ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಜಲಾಶಯದ ನೀರಿನ ರಾಸಾಯನಿಕ ಕ್ರಿಯೆಯಿಂದ 1,200ರಷ್ಟು ಜಲಚರ ಪ್ರಬೇಧಗಳು ಸತ್ತುಹೋದವು.  ಕೆನಡಾ, ಫಿನ್ಲ್ಯಾಂಡ್, ಥಾಯ್ಲೆಂಡ್ ದೇಶಗಳ ಜಲಾಶಯಗಳಲ್ಲಿ ಬೆಳೆದ ಮೀನುಗಳಲ್ಲಿ ಹೆಚ್ಚಿನ ಮಟ್ಟದ ಪಾದರಸದ ಅಂಶವಿರುವುದು ಕಂಡುಬಂದಿತು.

ಇವೆಲ್ಲವುಗಳಿಗಿಂತ ಗಂಭೀರ ಸಂಗತಿಯೆಂದರೆ, ಜಲಾಶಯದ ನೀರು ಆವಿಯಾಗುವಿಕೆಯ ಪ್ರಮಾಣ ಆತಂಕವನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಹಾಗೂ ಸೂರ್ಯನ ಪ್ರಖರ ಬಿಸಿಲಿನ ಶಾಖದಿಂದ ಜಲಾಶಯದ ನೀರು ಆವಿಯಾಗುವ ಪ್ರಮಾಣ ಒಂದೇ ಸಮನೆ ಹೆಚ್ಚುತ್ತಿದೆ. ಜಗತ್ತಿನ ಎಲ್ಲಾ ಜಲಾಶಯಗಳಲ್ಲಿ ಶೇಖರವಾಗಿರುವ ನೀರಿನಲ್ಲಿ 170 ಘನ ಚ.ಕಿ.ಮೀ.ನಷ್ಟು ನೀರು ವಾರ್ಷಿಕವಾಗಿ ಆವಿಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದು ಜಗತ್ತಿನಲ್ಲಿ ಬಳಕೆಯಾಗುತ್ತಿರುವ ಕುಡಿಯುವ ನೀರಿನ ಪ್ರಮಾಣದ ಶೇ.7 ರಷ್ಟು. ಈಜಿಪ್ಟ್ನ ನೈಲ್ ನದಿಯ ನಾಸರ್ ಜಲಾಶಯದಿಂದ ಆವಿಯಾಗುವ ನೀರಿನ ಪ್ರಮಾಣ 11.2 ಘನ ಚ.ಕಿ.ಮೀ. ಅಂದರೆ ಈ ನೀರು ಆಫ್ರಿಕಾ ಖಂಡದ ಎಲ್ಲಾ ರಾಷ್ಟ್ರಗಳು ಗೃಹ ಬಳಕೆಗೆ ಉಪಯೋಗಿಸುತ್ತಿರುವ ಪ್ರಮಾಣದಷ್ಟು.

ಮೀನು ಸಂತತಿಯ ಅವಸಾನ

ಅಭಿವೃದ್ಧಿ ಯುಗದ ರಭಸದ ಬೆಳವಣಿಗೆಯಲ್ಲಿ, ನಮ್ಮಗಳ ಚಿಂತನಾ ಲಹರಿ ನಾಗಾಲೋಟದಲ್ಲಿ ಓಡುತ್ತಿರುವಾಗ, ಅಭಿವೃದ್ಧಿಯ ಯೋಜನೆಯಿಂದಾಗುವ ಸಾಫಲ್ಯದ ಜೊತೆ ಅನಾಹುತಗಳ ಕಡೆಗೂ ನಮ್ಮ ಗಮನವಿರಬೇಕು. ಜೀವಜಾಲದ ಸೂಕ್ಷ್ಮತೆಯನ್ನು ಸಾವಧಾನವಾಗಿ ಅವಲೋಕಿಸುವ ಗುಣವೇ ನಮ್ಮಿಂದ ದೂರವಾಗಿದೆ. ಅಣೆಕಟ್ಟು, ಜಲಾಶಯ, ಅವುಗಳಿಂದ ದೊರೆಯುವ ನೀರು, ವಿದ್ಯುತ್ ಮಾತ್ರ ನಮ್ಮ ಕೇಂದ್ರ ಗುರಿಯಾಗಿದೆ. ನದಿಯ ನೀರಿನ ಓಟಕ್ಕೆ ತಡೆಯೊಡ್ಡಿದ ಪರಿಣಾಮ ಸಾವಿರಾರು ಜಾತಿಯ ಮೀನುಗಳ ಸಂತತಿಗೆ ನಾವು ಅಡ್ಡಿಯಾಗಿದ್ದೇವೆ ಎಂಬ ಅಂಶವೇ ನಮಗೆ ಮರೆತು ಹೋಗಿರುವುದು ವರ್ತಮಾನದ ದುರಂತ.

ಅಮೆರಿಕಾದ ಕೊಲಂಬಿಯಾ ನದಿಯೊಂದರಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮೊದಲು 10 ರಿಂದ 16 ದಶಲಕ್ಷದಷ್ಟಿದ್ದ ಸಾಲ್ಮನ್ ಜಾತಿಯ ಮೀನುಗಳ ಸಂಖ್ಯೆ ನಂತರದ ದಿನಗಳಲ್ಲಿ 1.5 ದಶಲಕ್ಷಕ್ಕೆ ಇಳಿಯಿತು. ಈ ನದಿಯುದ್ದಕ್ಕೂ 30 ಕ್ಕೂ ಹೆಚ್ಚು ಚಿಕ್ಕ ಮತ್ತು ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು, ಮೀನುಗಾರಿಕೆಯಿಂದ ದೊರೆಯುತ್ತಿದ್ದ 6.5 ಶತಕೋಟಿ ಡಾಲರ್ ಆದಾಯಕ್ಕೆ ಧಕ್ಕೆಯಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಪಾಕಿಸ್ತಾನದಲ್ಲಿ ಹಲ್ಸಾ ಎಂಬ ಅಪರೂಪದ ಮೀನಿನ ಸಂತತಿ ಸೇರಿದಂತೆ ಮೊಸಳೆ, ಡಾಲ್ಫಿನ್, ಸೀಗಡಿ ಇವುಗಳ ಸಂತಾನೋತ್ಪತ್ತಿ ಕುಂಠಿತಗೊಂಡಿದೆ.

ಇವುಗಳ ಸಂತಾನೋತ್ಪತ್ತಿಗಾಗಿ ಹಾಗೂ ನದಿ ಮತ್ತು ಜಲಾಶಯಗಳ ನೈಸರ್ಗಿಕ ಪರಿಸರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಜಗತ್ತಿನ ಬಹುತೇಕ ರಾಷ್ಟ್ರಗಳು ವಾರ್ಷಿಕವಾಗಿ ಕೋಟ್ಯಾಂತರ ಹಣವನ್ನು ವ್ಯಯಿಸುತ್ತಿವೆ.

ಅಮೆರಿಕಾ ದೇಶವೊಂದೆ ಸಾಲ್ಮನ್ ಜಾತಿಯ ಮೀನಿನ ರಕ್ಷಣೆಗಾಗಿ ಕೊಲಂಬಿಯಾ ನದಿ ಪಾತ್ರದಲ್ಲಿ 350 ದಶಲಕ್ಷ ಡಾಲರ್ ಹಣವನ್ನು ಪ್ರತಿ ವರ್ಷ ಖರ್ಚು ಮಾಡುತ್ತಿದೆ.

ಸರಕಾರಗಳು ಏನೇ ಕಸರತ್ತು ನಡೆಸಿದರೂ ಮೀನುಗಳ ಸಂತಾನೋತ್ಪತ್ತಿ ಯೋಜನೆ ವಿಫಲವಾಗಿದೆ. ಸಮುದ್ರದ ಉಪ್ಪು ನೀರಿನಿಂದ ಹೊರ ಬರುತ್ತಿದ್ದ ಹಲವು ಜಾತಿಯ ಮೀನುಗಳು, 15 ದಿನಗಳ ಕಾಲ ಸತತವಾಗಿ ನದಿಗಳಲ್ಲಿ ಈಜಿ, ಸಿಹಿನೀರಿನಲ್ಲಿ ಸಂತಾನೋತ್ಪತ್ತಿ ನಡೆಸಿ ಮತ್ತೆ ತಮ್ಮ ಮರಿಗಳೊಂದಿಗೆ ಸಮುದ್ರ ಸೇರುತ್ತಿದ್ದವು. ಅವುಗಳ ಸರಾಗ ಹಾಗೂ ಸುದೀರ್ಘ ಪಯಣಕ್ಕೆ ಅಣೆಕಟ್ಟು ಅಡ್ಡ ಬಂದ ಪ್ರಯುಕ್ತ ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆಗೆ ಕುತ್ತು ಬಂದಿತು. ಕೆಲವು ರಾಷ್ಟ್ರಗಳಲ್ಲಿ ಅಣೆಕಟ್ಟು ಪ್ರದೇಶದ ಪಕ್ಕದಲ್ಲಿ ನದಿಗೆ ಬೈಪಾಸ್ ರೀತಿಯಲ್ಲಿ ಕೃತಕ ನದಿ ನಿರ್ಮಿಸಿ ಮೀನುಗಳ ಸಂತಾನೋತ್ಪತ್ತಿಗೆ ಪ್ರಯತ್ನಿಸಿದರೂ ಕೂಡ ಈ ಯೋಜನೆ ವಿಫಲವಾಯ್ತು.

ಇಷ್ಟೆಲ್ಲಾ ಅನಾಹುತಗಳ ಹಿಂದೆ, ಅಣೆಕಟ್ಟು ನಿರ್ಮಾಣಕ್ಕೆ ಮುನ್ನ, ಪರಿಸರದ ಮೇಲಿನ ಪರಿಣಾಮ, ಯೋಜನೆಯ ಸಾಧ್ಯತೆಗಳ ಬಗ್ಗೆ ಸಮೀಕ್ಷಾ ವರದಿ ತಯಾರಿಸುವ ಅಂತರಾಷ್ಟ್ರೀಯ ಮಾಫಿಯಾ ಒಂದಿದೆ. ಇದು ಬಹುರಾಷ್ಟ್ರ ಕಂಪನಿಗಳ, ಸಾಲನೀಡುವ ವಿಶ್ವಬ್ಯಾಂಕ್ನ ಕೈಗೊಂಬೆಯಂತೆ ವರ್ತಿಸುತ್ತಿದೆ.

ಪರಿಸರದ ಮೇಲಿನ ಪರಿಣಾಮ ಕುರಿತು ನಡೆಸಲಾಗುವ ಬಹುತೇಕ ಅಧ್ಯಯನಗಳು ಅಮೆರಿಕಾದ ಪ್ರಭಾವದಿಂದ ಪ್ರೇರಿತಗೊಂಡು, ಅಣೆಕಟ್ಟುಗಳ ನಿರ್ಮಾಣದಿಂದ ಆಗಬಹುದಾದ ವಾಸ್ತವ ಚಿತ್ರಣವನ್ನು ಮರೆಮಾಚಲಾಗುತ್ತದೆ.

ಇತ್ತೀಚೆಗಿನ ವರ್ಷಗಳಲ್ಲಿ ಅಣೆಕಟ್ಟು ಕುರಿತಾದ ನೈಸರ್ಗಿಕ ಪರಿಣಾಮ ಹಾಗೂ ಸಾಧಕ-ಬಾಧಕ ಕುರಿತ ವರದಿ ನೀಡುವ ಹಾಗೂ ಅಣೆಕಟ್ಟು ನಿರ್ಮಾಣ ಕಾಮಗಾರಿ ಕುರಿತು ಸಲಹೆ ನೀಡುವ ವೃತ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಪ್ರಮಾಣದ ದಂಧೆಯಾಗಿ ಬೆಳೆದಿದೆ. 1990ರ ದಶಕದಲ್ಲಿ ಬ್ರಿಟೀಷ್ ಕನ್ಸಲ್ಟೆಂಟ್ ಬ್ಯೂರೊ ಎನ್ನುವ ಸಂಸ್ಥೆ 2.5 ಬಿಲಿಯನ್ ಡಾಲರ್ ಹಣವನ್ನು ಕೇವಲ ವರದಿ ಮತ್ತು ಸಲಹೆ ನೀಡುವುದರ ಮೂಲಕ ಗಳಿಸಿತ್ತು.

ಕಳೆದ ಒಂದು ದಶಕದಿಂದ ಅಣೆಕಟ್ಟು ಕಾಮಗಾರಿ ನಿರ್ವಹಿಸುವ ಬೃಹತ್ ಕಂಪನಿಗಳು ತಾವೇ ಇಂತಹ ಸಲಹಾ ಸಂಸ್ಥೆಗಳನ್ನು ಸೃಷ್ಟಿಸಿಕೊಂಡಿದ್ದು, ಸಾಮಾನ್ಯವಾಗಿ ಇಂತಹ ಸಂಸ್ಥೆಗಳು ನೀಡುವ ವರದಿ ಅಣೆಕಟ್ಟು ನಿರ್ಮಾಣಕ್ಕೆ ಪೂರವಾಗಿರುತ್ತವೆ. ವರದಿಯಲ್ಲಿ ಕಾಣಿಸುವ ಮುಳುಗಡೆಯಾಗುವ ಪ್ರದೇಶ, ಅರಣ್ಯ, ಒಕ್ಕಲೆಬ್ಬಿಸುವ ಜನವಸತಿ ಪ್ರದೇಶ, ಅವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ರೂಪಿಸುವ ಅಂದಾಜು ವೆಚ್ಚ ಇವೆಲ್ಲವೂ ನೈಜ ಸ್ಥಿತಿಯಿಂದ ದೂರವಾಗಿರುತ್ತವೆ. ಸರಕಾರಗಳು, ಅದರ ಮಂತ್ರಿಗಳು, ಅಧಿಕಾರಿಶಾಹಿ ಹೀಗೆ ಎಲ್ಲವನ್ನೂ, ಎಲ್ಲರನ್ನೂ ಏಕ ಕಾಲಕ್ಕೆ ನಿಭಾಯಿಸುವ ಕುಶಲತೆಯನ್ನು ಹೊಂದಿರುವ ಈ ಸಲಹಾ ಸಂಸ್ಥೆಗಳು, ಮಾಧ್ಯಮಗಳನ್ನು ದಿಕ್ಕು ತಪ್ಪಿಸುವ ಕಲೆಯನ್ನೂ ಸಹ ಕರಗತ ಮಾಡಿಕೊಂಡಿವೆ.

ಇದಕ್ಕೆ ಸ್ಪಷ್ಟ ಉದಾಹರಣೆಗಳೆಂದರೆ, ಥಾಯ್ಲೆಂಡ್‌ನ ನ್ಯಾಮ್ ಚೋಆನ್ ಅಣೆಕಟ್ಟು ನಿರ್ಮಾಣದ ಸಮಯ ಜೈವಿಕ ಪರಿಸರ ನಾಶವಾಗುವ ಪ್ರಮಾಣ ಕುರಿತಂತೆ ನೀಡಿದ ವರದಿಯಲ್ಲಿ 122 ಜಾತಿ ವನ್ಯ ಮೃಗಗಳ ಸಂತತಿಗೆ ಧಕ್ಕೆಯಾಗಲಿದೆ ಎಂದು ಹೇಳಲಾಗಿತ್ತು. ವಾಸ್ತವವಾಗಿ ರಾಯಲ್ ಫಾರೆಸ್ಟ್ ಡಿಪಾರ್ಟ್‌ಮೆಂಟ್ ನಡೆಸಿದ ಸಮೀಕ್ಷೆಯಲ್ಲಿ 338 ಜೈವಿಕ ವೈವಿಧ್ಯತೆಗಳಿಗೆ ಅಪಾಯವಾಗುವ ಸೂಚನೆ ಕಂಡು ಬಂತು,.

ಭಾರತದ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಈ ಮೂರು ರಾಜ್ಯಗಳಲ್ಲೂ ಹರಿಯುವ ನರ್ಮದಾ ನದಿಗೆ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದಕ್ಕೆ ವಿಶ್ವಬ್ಯಾಂಕ್ ಹಣಕಾಸಿನ ನೆರವು ನೀಡಿದೆ. ಅಣೆಕಟ್ಟು ನಿರ್ಮಾಣದ ನೈಸರ್ಗಿಕ ಪರಿಣಾಮ ಕುರಿತಂತೆ ವಿಶ್ವಬ್ಯಾಂಕ್ ತಾನೇ ನಿಯೋಜಿಸಿದ್ದ ಸಂಸ್ಥೆಯಿಂದ ವರದಿ ತಯಾರಿಸಿದ್ದು, ಈವರೆಗೆ ಈ ವರದಿಯನ್ನು ಸಾರ್ವಜನಿಕವಾಗಿ ಇರಲಿ ಭಾರತ ಸರಕಾರಕ್ಕೂ ನೀಡಿಲ್ಲ.

ಹೀಗೆ ಅಣೆಕಟ್ಟು ನಿರ್ಮಾಣದ ಹಿಂದೆ ಅಗೋಚರ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳು ಎಲ್ಲಾ ಅಡೆ-ತಡೆಗಳನ್ನು ಧ್ವಂಸ ಮಾಡುವಷ್ಟು ದೈತ್ಯ ಶಕ್ತಿಯನ್ನು ಪಡೆದಿವೆ.

(ಮುಂದುವರಿಯುವುದು)

ಈ ಸರಣಿಯ ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ