Tag Archives: ಜಾತ್ರೆ

ಇಲ್ಲದ ದೇವರುಗಳ ಸುತ್ತ ಮುತ್ತ

-ವಿಶ್ವಾರಾಧ್ಯ ಸತ್ಯಂಪೇಟೆ

ದೇವರುಗಳ ಬಗೆಗೆ ನನಗೆ ಆರಂಭದಿಂದಲೂ ಅಷ್ಟಕಷ್ಟೆ. ಇದಕ್ಕೆಲ್ಲ ಮುಖ್ಯವಾಗಿ ನನ್ನ ಮನೆಯೊಳಗೆ ನಡೆಯುತ್ತಿದ್ದ ಚರ್ಚೆಗಳು, ಪುಸ್ತಕಗಳ ಓದು ಕೂಡ ಕಾರಣವಾಗಿರಬಹುದು. ಅಂದಂತೆ ನನಗೆ ಆಗಾಗ ಅವರಿವರ ಮೈಮೇಲೆ ಬರುತ್ತಿದ್ದ ದೇವರುಗಳು, ಹೆಜ್ಜೆಗೂ ಸಿಕ್ಕುವ ದೇವರುಗಳು, ಎಳ್ಳು ನೀರು ಕಾಣದೆ ಬೇಕಾಬಿಟ್ಟಿಯಾಗಿ ಅಲ್ಲಲ್ಲಿ ಬಿದ್ದಿರುವ ದೇವರುಗಳನ್ನು ನೋಡಿದಾಗಲೆಲ್ಲ ಹಳಹಳಿಯಾಗುತ್ತಿತ್ತು. ತಲೆಯ ಮೇಲೆ ಗುಡಿಯನ್ನು ಹೊತ್ತುಕೊಂಡು ಬಂದು ಅವರಿವರ ಅಂಗಳದಲ್ಲಿ ದೇವರನ್ನು ನಿಲ್ಲಿಸಿ ಮೈಮೇಲೆ ಬಾಸುಂಡೆ ಬರುವಂತೆ ಹೊಡಕೊಳ್ಳುತ್ತಿದ್ದ ಪೋತರಾಜರ ಬಾರುಕೋಲಿನ ‘ಚಟಲ್’ ‘ಚಟಲ್’ ಶಬ್ಧ ಕಿವಿಗೆ ಬೀಳುತ್ತಿತ್ತು. ಆಗ ಪೋತರಾಜರ ಮೈಮೇಲೆ ಬಾಸುಂಡೆ ಅಥವಾ ರಕ್ತ ಚಿಲ್ಲನೆ ಚಿಮ್ಮಿನಿಲ್ಲುತ್ತಿತ್ತು. ರಕ್ತ ಬರುತ್ತಿರುವಂತೆ ಅಂಗಳ ತುಂಬೆಲ್ಲ ಓಡಾಡುತ್ತ ಪೋತರಾಜ ಏನೇನೋ ಹೇಳುತ್ತಿದ್ದ. ಆತ ಕಣ್ಣು ಕೆಂಪಗೆ ಮಾಡಿಕೊಂಡು ನಾಲಿಗೆ ಹೊರಚಾಚಿ ವಿಕಾರವಾಗಿ ಅರಚುತ್ತಿದ್ದ. ಇದನ್ನು ನಾನು ನೋಡಿ ಭಯದಿಂದ ನಡುಗುತ್ತಿದ್ದೆ. ಅಂಗೈಯನ್ನು ಮುಂದೆ ಚಾಚಿ ದೇವರಿಗಾಗಿ ದಾನವನ್ನು ಬೇಡುತ್ತಿದ್ದ. ಆತನ ಹೆಂಡತಿ ಮನೆಮನೆಗೆ ಹೋಗಿ ಮರದ ಮೂಲಕ ಕಾಳು ಪದಾರ್ಥಗಳನ್ನು ದಾನವಾಗಿ ಪಡೆಯುವುದು ನೋಡಿದಾಗಲೆಲ್ಲ. ದೇವರಂತ ದೇವರು ಭಿಕ್ಷೆ ಬೇಡುತ್ತಾನೆಯೆ? ಎಂದನ್ನಿಸುತ್ತಿತ್ತು.

ದಿನ ನಿತ್ಯದ ಮಲವಿಸರ್ಜನೆಗೆ ನಾನು ಬೇಕಂತಲೆ ಊರಿನಿಂದ ಒಂದು ಕಿ.ಮಿ.ದೂರ ಇರುವ ಬಯಲಿಗೆ ಚರಿಗೆ ಹಿಡಿದುಕೊಂಡು ಹೋಗುತ್ತಿದ್ದೆ. ಇದು ನಿರಂತರವೂ ನಮ್ಮ ಊರಿನ ಜನರೆಲ್ಲ ರೂಢಿಸಿಕೊಂಡು ಬಂದಿದ್ದ ಸಂಗತಿಯಾಗಿತ್ತು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಮಧ್ಯಾಹ್ನದಲ್ಲಿ ಯಾರೋ ಒಬ್ಬರು ‘ಕೆರೆಯ ಕೆಳಗಡೆಯ ಗದ್ದೆಗಳಲ್ಲಿ ಮಣ್ಣು ಅಗೆಯುವಾಗ ಚಾಮುಂಡಿಯ ವಿಗ್ರಹ ಕಾಣಿಸಿಕೊಂಡಿದೆ’ ಎಂದು ಹೇಳುತ್ತ ನಡೆದಿದ್ದರು.

ಕುತೂಹಲ ತಡೆಯದ ನಾನು ಆ ಜಾಗಕ್ಕೆ ಹೋಗುವಷ್ಟರಲ್ಲಿ ಜನ ಜಾತ್ರೆಯಲ್ಲಿ ನೆರೆದಂತೆ ನೆರೆದು ಬಿಟ್ಟಿದ್ದರು. ಬಹಳ ವರ್ಷಗಳಿಂದ ಕಾಣಿಸಿಕೊಂಡ ‘ಚಾಮುಂಡಿ’ ನೆಲದಲ್ಲಿ ಸಿಕ್ಕಿರುವುದು ಊರಿನ ಎಲ್ಲರಿಗೂ ಒಳ್ಳೆಯದಾಗುವ ಲಕ್ಷಣ ಎಂದೆಲ್ಲ ಹೇಳುತ್ತಿದ್ದರು. ಅದಾಗಲೆ ಸಿಕ್ಕವಿಗ್ರಹಕ್ಕೆ ಕುಂಕುಮ, ಅರಿಶಿಣದ ಭಂಡಾರ ಚೆಲ್ಲಿದ್ದರು. ಕಾಯಿ, ಕರ್ಪೂರ ಊದುಬತ್ತಿ ಬೆಳಗಿದ್ದರು. ನಾಳೆ ಮಧ್ಯಾಹ್ನದ ಹೊತ್ತು ದೇವಿ ಚಾಮುಂಡಿಗೆ ವಿಶೇಷ ಪೂಜೆ ಇರುವುದಾಗಿ ಒಂದು ಕೋಣವನ್ನು ಬಲಿ ಕೊಡಬೇಕೆಂತಲೂ ಹೇಳುತ್ತಿದ್ದರು.

ಆದರೆ ಹೀಗೆ ಕೋಣವನ್ನು ಬಲಿ ಕೊಡುವ ಸಂದರ್ಭದಲ್ಲಿ ಯಾರೂ ಪರ ಊರಿನವರು ಅಲ್ಲಿ ಇರಬಾರದೆಂದು ಹೇಳಿದರು. ಒಂದು ವೇಳೆ ಅಂಥವರಿಗೆನಾದರೂ ಕೋಣ ಬಲಿ ಕೊಡುವಾಗ ಅದರ ರಕ್ತ ಹತ್ತಿದರೆ ಅವರನ್ನೆ ಬಲಿ ಕೊಡುವುದಾಗಿ ಹೇಳಿದ್ದರು. ಸತ್ಯಂಪೇಟೆಯಿಂದ ಶಹಾಪುರಕ್ಕೆ ವಲಸೆ ಬಂದಿರುವ ನಾನು ಮರುದಿನ ಅದರ ಸುತ್ತ ಮುತ್ತ ಕೂಡ ಸುಳಿಯದೆ ಬಹು ದೂರ ಉಳಿದು ಬಿಟ್ಟಿದ್ದೆ. ಮತ್ತೊಂದು ತಮಾಷೆಯ ಸಂಗತಿಯೆಂದರೆ ನಾನು ನಿತ್ಯವೂ ಕಕ್ಕಸಿಗೆ ಹೋಗಿ ಕೂಡುತ್ತಿದ್ದ ಬಯಲಿನ ಜಾಗ ಆ ಚಾಮುಂಡಿ ದೇವಿ ವಾಸವಾಗಿದ್ದ ಸ್ಥಾನವೇ ಆಗಿತ್ತು!

ದೇವರುಗಳಲ್ಲಿ ನಾನಾ ಬಗೆಯವು. ಕೆಲವು ಪಕ್ಕಾ ಸಸ್ಯಹಾರಿಯಾದರೆ ಇನ್ನು ಕೆಲವು ಮಾಂಸಾಹಾರಿಗಳು. ಕುರಿಕೋಳಿ ಬಲಿ ಕೆಲವಕ್ಕೆ ಬೇಕಾದರೆ ಕೋಣಗಳು ಕೆಲವಕ್ಕೆ ಆಹಾರ. ಮತ್ತೆ ಹಲವು ದೇವರಿಗೆ ಸಕ್ಕರೆ, ದೀಪ, ಧೂಪ ಇವಿಷ್ಟಿದ್ದರೆ ನಮ್ಮ ಇಷ್ಟಾರ್ಥವನ್ನು ಕೊಡಮಾಡಬಲ್ಲವು. ನಾನೀಗ ವಾಸಿಸುವ ಶಹಾಪುರದ ಕುಂಬಾರ ಓಣಿಯಲ್ಲಿ ನನ್ನ ತಂದೆ ಒಂದು ಹಳೆಯ ಮನೆಯನ್ನು ಖರೀದಿಸಿದ್ದರು. ಅದು ಸಂಪೂರ್ಣ ಸುಸಜ್ಜಿತ ಕಟ್ಟಡವಾಗಿರಲಿಲ್ಲ. ಗುಂಡು ಜಂತಿಯ, ಮಣ್ಣಿನ ಮನೆಯಾಗಿತ್ತು. ಎಡಕ್ಕಾಗಲಿ -ಬಲಕ್ಕಾಗಲಿ ಯಾವುದೆ ಕಿಟಕಿಗಳಿಲ್ಲದ ಹೊರಗಿನ ಗಾಳಿ ಬೆಳಕು ಇಲ್ಲದ ಉದ್ದಕ್ಕೆ ರೈಲುಡಬ್ಬಿಗಳಂತೆ ಮೂರು ರೂಮಿನ ಕಟ್ಟಡವಾಗಿತ್ತು. ಇಂಥ ರೂಮುಗಳ ರಿಪೇರಿ ಕೆಲಸಕ್ಕೆ ನನ್ನ ತಂದೆ ಗೌಂಡಿಗಳ ಜೊತೆಗೆ ನನ್ನನ್ನು ಅಲ್ಲಿ ಕುಳ್ಳಿರಿಸಿ ಹೋಗಿದ್ದರು. ಈ ಮನೆಯ ಮುಂದೆ ಕಾಲು ದಾರಿ ಇದ್ದುದ್ದರಿಂದ ಬಹಳಷ್ಟು ಜನ ಅಲ್ಲಿ ತಿರುಗಾಡುತ್ತಿದ್ದರು. ಕೂಸುಗಳನ್ನು ಮಗ್ಗುಲಲ್ಲಿ ಹೊತ್ತುಕೊಂಡ ತಾಯಂದಿರಂತೂ ಇಲ್ಲಿ ಹೇರಳವಾಗಿಯೆ ಹೋಗಿ ಬರುತ್ತಿದ್ದರು. ಇದನ್ನೆಲ್ಲ ನೋಡುತ್ತ ನಾನು ಮನೆಯ ಒಳಹೊರಗೆ ತಿರುಗಾಡುತ್ತಿದ್ದಾಗ ಒಬ್ಬ ತಾಯಿ ಬಂದು ‘ಇಗಾ ಎಪ್ಪಾ, ನಿಮ್ಮಮನ್ಯಾಗ ಏಳುಮಕ್ಕಳ ತಾಯಮ್ಮ ಅದಾಳ. ಆಕಿಗಿ ಸಕ್ಕರೆ ಹಾಕಿದೀಪಾ ಮುಡಸು. ನಮ್ಮಮನ್ಯಾಗ ಚುಕ್ಕೋಳು ಅಳಕತ್ಯಾವ’ – ಎಂದು ಒಂದೇ ಉಸುರಿನಲ್ಲಿ ಹೇಳುತ್ತ ನನ್ನ ಅಪ್ಪಣೆಗೂ ಕಾಯದೆ ಸಣ್ಣ ಸಕ್ಕರೆ ಚೀಟು, ಚಿಟಿಕೆ ದೀಪದ ಎಣ್ಣೆ, ಬತ್ತಿ ಕೊಟ್ಟು ಹೋಗಿಯೆಬಿಟ್ಟಳು.

ಇದನ್ನು ತಕ್ಕೊಂಡು ನಾನೇನು ಮಾಡಬೇಕು? ಗೊತ್ತಾಗಲಿಲ್ಲ. ಮನೆ ಒಳಕ್ಕೆ ದೀಪದ ಎಣ್ಣೆಯ ಗಿಂಡಿ, ಊದು ಬತ್ತಿ , ಸಕ್ಕರೆ ಚೀಟು ಹಿಡಕೊಂಡು ಒಳಹೋದೆ. ನನ್ನನ್ನು ನೋಡಿ ಗೌಂಡಿ ನಾಗಪ್ಪ ‘ಏನ್ರಿ…. ದೀಪಾ ಯಾರಿಗೆ ಮುಡಸಬೇಕು? ಎಲ್ಲಿ ಮುಡಸಬೇಕು?’ ಎಂದು ಕೇಳಿದ. ನನಗೂ ಇದೆಲ್ಲ ಹೊಸದಾದ್ದರಿಂದ ಆತನಿಗೆ: ಯಾರೋ ಒಬ್ಬ ಹೆಣ್ಣು ಮಗಳು ಬಂದು ಇದೆಲ್ಲ ಕೊಟ್ಟು ಏಳು ಮಕ್ಕಳ ತಾಯಮ್ಮಳ ಮುಂದೆ ದೀಪ ಮುಡಿಸರೀ ಎಂದು ಹೇಳಿಹೋದದ್ದಾಗಿ ಹೇಳಿದೆ. ಇಬ್ಬರೂ ಕೂಡಿ ಕತ್ತಲಲ್ಲಿ ದೀಪಹಚ್ಚಿ ಆ ಏಳುಮಕ್ಕಳ ತಾಯಿಯನ್ನು ಹುಡುಕ ತೊಡಗಿದೆವು. ಕೊನೆಯ ರೂಮಿನ, ನಟ್ಟನಡುವಿನ ಗೋಡೆಯ ಒಂದು ಮಾಡದಲ್ಲಿ ಆಕೆ ವಾಸವಾಗಿದ್ದ ಲಕ್ಷಣಗಳು ಗೋಚರಿಸ ತೊಡಗಿದವು. ಏಕೆಂದರೆ ಆ ಮಾಡ ಆಗಲೇ ದೀಪ ಹಚ್ಚಿಹಚ್ಚಿ ಕರ್ರಗಾಗಿತ್ತು. ಎಣ್ಣೆ ಚೆಲ್ಲಿಚೆಲ್ಲಿ ಮಾಡದಲ್ಲಿ ಒಂಥರಾ ಮೇಣದಂತಹ ಜಿಗುಟು ಹತ್ತಿಕೊಂಡಿತ್ತು. ಇದನ್ನು ಗುರುತಿಸಿದ ಗೌಂಡಿಯೆ ‘ಇಲ್ಯಾದ್ರಿ….. ಧಣಿ. ದೀಪ ಮುಡಸ್ರೀಮತ್ತ. ಖರೆವಂದ್ರ ಏಳುಮಕ್ಕಳ ತಾಯಿ ಬಲು ಖೋಡಿ ಹೆಣ್ಮಗಳು. ಚುಕ್ಕೋರು ಚುಣಗರು ಯಾರಾದರೂ ತನ್ನ ಮುಂದಹಾದು ಹೋದ್ರ ಅವ್ರಿಗಿ ಅಳಸಲಾರದೆ ಬಿಡಂಗಿಲ್ಲ. ಯಾವಾಗ ಆ ಮನೆಯವ್ರೂ ಸಕ್ಕರಿ ಕೊಟ್ಟು ದೀಪ ಹಚ್ಚತಾರೋ ಆವಾಗ ಮಾತ್ರ ಆಕಿ ಸುಮ್ನ ಆಗಾಕಿ’ ಎಂದು ಹೇಳಿದಾಗ, ಈಕೆ ಮಹಾಗಾಟಿ ಹೆಣ್ಣುಮಗಳಿರಬೇಕು ಎಂದುಕೊಂಡೆ.

ನನ್ನ ತಾಯಿ ಸ್ವಲ್ಪ ಜಾಸ್ತಿಯೆ ಸೆನ್ಸಿಟಿವ್ ಇರುವಾಕೆ. ದೇವರು ಎಂಬ ಪದವೆ ಆಕೆಗೆ ಅಪ್ಯಾಯಮಾನ. ಗೌರವ, ಪ್ರೀತಿ, ಭಕ್ತಿ. ಇದೆಲ್ಲಕ್ಕೂ ನನ್ನ ಮಕ್ಕಳಿಗೆ ಮರುಗಳಿಗೆ ಒಳ್ಳೆಯದಾಗಲಿ, ಯಾವುದೆ ತೊಂದರೆ ಬರದಿರಲಿ ಎಂಬುದೆ ಆಕೆಯ ಹೆಬ್ಬಯಕೆ. ಬಹುಶಃ ಇಂಥ ಮನಸ್ಥಿತಿ ಇರುವ ನನ್ನ ಅವ್ವನ ಕೈಗೆ ಈ ಏಳು ಮಕ್ಕಳ ತಾಯಮ್ಮ ಸಿಕ್ಕರೆ ಏನೋನೋ ಆವಾಂತರಗಳು ಘಟಿಸಬಹುದು ಎಂದೆನಿಸಿತು. ನನ್ನ ತಾಯಿ ನಿತ್ಯ ದೀಪ ಮುಡಿಸುತ್ತ, ಮುಡಿಸುತ್ತ ದೇವರನ್ನೆ ತನ್ನ ಮೈಮೇಲೆ ಆಹ್ವಾನಿಸಿ ಕೊಂಡರೆ? ಎಂದು ಕ್ಷಣ ಯೋಚಿಸಿದೆ. ದಿಗಿಲಾಯಿತು. ಆಗ ತಕ್ಷಣವೆ ನಮ್ಮ ಆಯಿ ನೆನಪಾದಳು. ಯಾವಾಗಲೋ ಒಂದು ಸಲ ಇದೆ ಏಳುಮಕ್ಕಳ ತಾಯಮ್ಮನ ವಿಷಯ ಬಂದಾಗ ಯಾರಿಗೋ ಹೇಳುತ್ತಿದ್ದಳು. ‘ಆಕಿ ಏಳು ಮಕ್ಕಳ ಹಡದಿರಬೇಕು. ನಾನು ಆಕೀಗಿಂತಲೂ ಎರಡು ಹೆಚ್ಚು ಮಕ್ಕಳ್ನಹಡದೀನಿ. ಯಾವ್ದು ಹೇಳಿತನ, ಉನೇಕಿ. ಕೆಲಸಕ್ಕಬರಲಾರದ್ದ. ದುಡುದು ಉಣ್ಣೋದು ಬಿಟ್ಟು ಇಂಥದ್ದಕ್ಕೆಲ ಗಂಟಬಿದ್ದಾವ’ ಎಂಬ ಮಾತುಗಳು ನೆನಪಿಗೆ ಬಂದವು. ಒಡನೆಯೆ ಈ ಏಳು ಮಕ್ಕಳ ತಾಯಮ್ಮನ ಮಾಡವನ್ನು ಮುಚ್ಚುವಂತೆನಾಗಪ್ಪ ಗೌಂಡಿಗೆ ಹೇಳಿದೆ. ಆತ ”ಏ ಎಪ್ಪಾ ಎಂಥ ಮಾತ್ಹೇಳ್ತೋ ಧಣಿ. ದೇವರ್ನ ಮುಚ್ಚು ಅಂತೇಲ್ಲಪ್ಪೋ! ನೀ ಬೇಕಾದ್ದಹೇಳ ನಾಮಾಡ್ತೀನಿ. ಈ ಕೆಲಸ ಮಾತ್ರನನ್ನಿಂದ ಸುತಾರಾಂ ಆಗೋದಿಲ್ಲ” ಎಂದು ಕೈ ಜಾಡಿಸಿ ಗೋಣು ಅಲ್ಲಾಡಿಸಿಬಿಟ್ಟ.

ಆಗ ಅನಿವಾರ್ಯವಾಗಿ ನಾನೇ ಆತನ ಹಳೆಯ ಜೋಡುಗಳನ್ನು ಆ ಮಾಡದಲ್ಲಿಟ್ಟು ಕಲ್ಲು ಸಿಮೆಂಟ್ನಿಂದ ಮುಚ್ಚಿಬಿಟ್ಟೆ! ಏಳು ಮಕ್ಕಳ ತಾಯಮ್ಮ ನಮ್ಮ ಮನೆಯ ಮಾಡದಲ್ಲಿ ಯಾರಿಗೂ ಗೊತ್ತಿಲ್ಲದಂತೆ ಮಟ್ಟಸವಾಗಿ ಕುತುಗೊಂಡು ಸುಮಾರು ವರ್ಷಗಳೆ ಉರುಳಿ ಹೋಗಿವೆ. ಇದೆಲ್ಲ ಗೊತ್ತಿಲ್ಲದ ಕೆಲವು ಹೆಣ್ಣುಮಕ್ಕಳು ಆಗಾಗ ನಮ್ಮ ಮನಿಗಿ ಬಂದು ಸಕ್ಕರಿ ಚೀಟು, ಎಣ್ಣೆಯ ಗಿಂಡಿಹಿಡಕೊಂಡು ಏಳುಮಕ್ಕಳ ತಾಯಮ್ಮನನ್ನು ಹುಡುಕುತ್ತ ಬಂದರೆ ”ಒಂಭತ್ತು ಮಕ್ಳನ್ನ ಹಡದ ನಮ್ ಆಯಿ ಈ ಮನಿಗೆ ಬಂದಮ್ಯಾಲ ಏಳುಮಕ್ಕಳ ತಾಯಮ್ಮ ನಮ್ಮನಿಯಿಂದ ಹೊಂಟಹೋಗ್ಯಾಳ!” ಎಂದು ಸಲೀಸಾಗಿ ಹೇಳುತ್ತಿದ್ದೆ. ಆದರೆ ನನ್ನೆದುರಿಗೆ ಬಂದು ನಿಂತೋರೆಲ್ಲ ಕೇಳಬಾರದ್ದನ್ನ ಏನೋ ಕೇಳಿವಿ ಎಂಬಂತೆ ಕ್ಷಣ ಸ್ಥಂಭಿಬೂತರಾಗಿ ನಿಂತುಬಿಡುತ್ತಿದ್ದರು.ನಾನು ಚಿಕ್ಕವನಿದ್ದಾಗ ಸವಾರಿ ಬಂಡಿ ಕಟ್ಟಿಕೊಂಡು ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರೆಗೆ ಹೋಗುತ್ತಿದ್ದೆವು. ಕೃಷ್ಣಾಪುರ, ಖಾನಾಪುರ ಊರುಗಳನ್ನು ಹಾಯ್ದು ಅಬ್ಬೆ ತುಮಕೂರಿಗೆ ಹೋಗಬೇಕಾಗುತ್ತಿತ್ತು. ದಾರಿಯಲ್ಲಿ ಹೋಗುವಾಗ ಟೊಂಕಮಟ ಎತ್ತರದ ಕಲ್ಲುಗಳಿಂದ ಕೂಡಿದ ಒಂದು ದಿಬ್ಬ ಬರುತ್ತದೆ. ಆ ದಿಬ್ಬದ ಸುತ್ತಲೂ ಅಮರಿ ಗಿಡದ ತೊಪ್ಪಲು ಬಿದ್ದಿರುತ್ತಿತ್ತು. ಆ ದಾರಿಯಲ್ಲಿ ಹೋಗುವವರು ಬರುವವರು ಒಂದೆ ಸಮ ಕ್ಯಾಕರಿಸಿ ಉಗುಳುತ್ತ, ಒಂದೆರಡು ಕಲ್ಲುಹೊಡೆದು, ಅಮರಿ ತಪ್ಪಲ ಅದರ ಮ್ಯಾಲೆ ಹಾಕಿ ಬರುತ್ತಿದ್ದರು. ಇದೆಲ್ಲ ಏನು? ಎಂದು ನಾನು ಸಹಜವಾಗಿ ಕೇಳಿದ್ದಕ್ಕೆ ಅಂದು ನನ್ನ ಜೊತೆಗೆ ಇದ್ದನಮ್ಮಮುತ್ಯಾ ‘ಇ(ವಿ)ಕಾರಗೇಡಿಗಳು. ಯಾವ್ದೂ ಗೊತ್ತಿಲ್ಲ ಇವಕ್ಕ. ಇದು ಉಗುಳು ಮಾರಿ ದೇವರಂತ! ಅದಕ್ಕ ಕ್ಯಾಕರಿಸಿ ಉಗುಳಿ ಮಂದೆಹೋಗ್ತಾರಂತ!’ ಎಂದು ಆತ ಸಲೀಸಾಗಿ ಹೇಳಿಬಿಟ್ಟ. ಆದರೆ ಉಗುಳಿಸಿಕೊಳ್ಳುವ ದೇವರೂನಮ್ಮಲ್ಲಿ ಇದ್ದಾನೆಯೆ? ಎಂಬುದಕ್ಕೆ ನನಗಿನ್ನೂ ಸ್ಷಷ್ಟ ಉತ್ತರ ಸಿಕ್ಕಿಲ್ಲ.

ಸತ್ಯಂ ಪೇಟೆಯ ನಮ್ಮಮನೆಯ ಹಿಂದುಗಡೆಯಿಂದ ನಮ್ಮ ತೋಟಕ್ಕೆ ಹೋಗುವ ಮಾರ್ಗದಲ್ಲೆಲ್ಲ ಮೂಟಿಗಟ್ಟಲೆ ಅಕ್ಕಿ ಅನಾಜನ್ನು ಅಲ್ಲಲ್ಲಿ ಇಟ್ಟಿದ್ದರು. ಕೆಲವು ಕಡೆ ಈಚಲ ಚಾಪೆಗಳು, ಈಚಲ ಪುಟ್ಟಿ, ಮೊರ ಎಲ್ಲವನ್ನು ಬಿಟ್ಟುಹೋಗಿದ್ದರು. ಯಾರು ಕೇಳದೆ ಅನಾಥವಾಗಿದ್ದರೂ ಇವನ್ನು ತೆಗೆದುಕೊಳ್ಳುವುದಿರಲಿ, ಅದರ ಕಡೆ ಯಾರೂ ತಲೆ ಎತ್ತಿ ಕೂಡ ನೋಡುತ್ತಿರಲಿಲ್ಲ. ಏಕೆಂದರೆ ಮರಗಮ್ಮ ದೇವರ ಹೆಸರಿನ ಮೇಲೆ ಇವೆಲ್ಲ ಮಾಡಿ ಇಳಿಸಿ ಇಟ್ಟುಹೋಗಿದ್ದರಂತೆ. ಇವನ್ನು ಮುಟ್ಟಿದರೆ ಅಥವಾ ಉಪಯೋಗಿಸಿದರೆ ಅವರಿಗೆ ತೊಂದರೆ ತಪ್ಪಿದ್ದಲ್ಲ ಎಂಬ ನಂಬಿಕೆ ಇರುವುದರಿಂದ ಅದನ್ನು ಯಾರೂ ಬಳಸಿಕೊಳ್ಳುತ್ತಿರಲಿಲ್ಲ. ನಮ್ಮಮನೆಗೆ ಆಗಾಗ ಬರುತ್ತಿದ್ದ ಹಣಮಂತನಿಗೆ ಇವನ್ನೆಲ್ಲ ಮನೆಗೆ ಒಯ್ದು ಉಪಯೋಗಿಸು ಎಂದು ನನ್ನ ತಂದೆ ಹೇಳಿದಾಗ ಆತ ಭಯದಿಂದ ಗಡಗಡ ನಡುಗಿದ. ನನಗೆ ಇದೆಲ್ಲ ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ನನ್ನ ತಂದೆ ಮಾತ್ರ ಅಲ್ಲಲ್ಲಿ ದಾರಿಗುಂಟ ಇಟ್ಟಿದ್ದ ಅಕ್ಕಿಯ ಅನಾಜನ್ನು, ಈಚಲ ಚಾಪೆ, ಪುಟ್ಟಿ, ಮೊರಗಳನ್ನು ನಮ್ಮ ಮನೆಗೆ ತರಿಸಿದ್ದರು. ಸುಮಾರು ಮೂರ್ನಾಲ್ಕು ವರ್ಷಳಾದರೂ ನಾವೆಲ್ಲ ನಮ್ಮ ಮನೆಯಲ್ಲಿ ಈ ಈಚಲು ಚಾಪೆಗಳನ್ನೆಹಾಸಿ ಮಲಗುತ್ತಿದ್ದೇವು. ಅಕ್ಕಿಯನ್ನು ಬಳಸಿಕೊಂಡು ಅನ್ನಮಾಡಿ ಊಟಮಾಡಿದ್ದೇವು. ಈಚಲ ಪುಟ್ಟಿಗಳಂತೂ ಹೆಂಡಿ ಕಸವನ್ನು ಹೊತ್ತು ಹಾಕಲು ಉಪಯೋಗಿಸಿಕೊಂಡಿದ್ದೇವು.

ದೇವರುಗಳು ನಮ್ಮಂತೆ ಬಟ್ಟೆ ಉಟ್ಟುಕೊಳ್ಳುತ್ತವೆ. ನಾವು ಯಾವ ಆಹಾರವನ್ನು ಸೇವಿಸುತ್ತೇವೆಯೋ ಅದನ್ನು ಅವು ಸೇವಿಸುತ್ತವೆ. ನಮ್ಮಂತೆಯೆ ಕೆಲವು ದೇವರು ಉಗ್ರ. ಕೆಲವು ಸಂಭಾವಿತ. ಜೊತೆಗೆ ನಮ್ಮ ಐಸತ್ತಿಗೆ (ನಮ್ಮನಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ) ತಕ್ಕಂತೆ ತಾಮ್ರದ, ಕಂಚಿನ, ಹಿತ್ತಾಳಿಯ, ಕೆಲವರಲ್ಲಿ ಬಂಗಾರದ ದೇವರೂ ಉಂಟು. ಕೆಲವು ದೇವರ ಮುಂದೆ ಶಂಖ ಊದಬೇಕು. ತಾಳ ಮದ್ದಳೆ ಬಾರಿಸಬೇಕು. ಜಾಗಟೆ ಠಣಗುಡುತ್ತಿರಬೇಕು. ಸತತ ಭಜನೆಯ ತಾಳಗಳು ಕೆಲವಕ್ಕೆ ಬೇಕು. ಇತ್ತೀಚೆಗೆ ಕೆಲವು ದೇವರಿಗೆ ಸತತವಾಗಿ ಎಚ್ಚರದಿಂದ ಇರುವಂತೆ ನೋಡಿಕೊಳ್ಳಲು ಲೌಡ್ ಸ್ಪೀಕರ್ ಹಾಗೆ ಹಾಡುತ್ತಿರಬೇಕು.

ಗಣಪತಿಯ ಹಬ್ಬ ಬಂದಾಗಲಂತೂ ಎಲ್ಲಾ ಕೆಲಸ ಬೊಗಸೆ ಬಿಟ್ಟು ಆತನ ಚತುರ್ಥಿಯನ್ನು ಆಚರಿಸುತ್ತಾರೆ. ತಮ್ಮ ಬದುಕಿಗೆ ವಿಘ್ನಗಳು ಬರಬಾರದೆಂದು ಆತನ ಮೊರೆಹೋಗುತ್ತಾರೆ. ಆಶ್ಚರ್ಯವೆಂದರೆ ಅಪ್ಪಿತಪ್ಪಿಯೂ ಗಣೇಶನಂಥ ರೂಪ ಇರುವ ಮಗನನ್ನು ದಯಪಾಲಿಸು ಎಂದು ಯಾರು ಬೇಡಿಕೊಳ್ಳುವುದಿಲ್ಲ. ಗಣಪತಿಯ ಮುಂದೆ ನಮ್ಮ ಭಕ್ತಿಯನ್ನು ಪ್ರದರ್ಶಿಸಲು ಕುಣಿಯುತ್ತೇವೆ. ಕುಡಿಯುತ್ತೇವೆ. ನಮ್ಮ ಗಣಪನಿಗಂತೂ ಇತ್ತೀಚೆಗೆ ನಾನಾ ವೇಷ ತೊಡಿಸಿ ಸಂಭ್ರಮಪಡುತ್ತೇವೆ. ಹೀಗೆ ದೇವರು ಕೆಲವರಿಗೆ ಹೊಟ್ಟೆಪಾಡನ್ನು ಪೂರೈಸುವ ಕಚ್ಚಾ ವಸ್ತು. ಆ ಕಚ್ಚಾ ವಸ್ತುವನ್ನು ಸಿಂಗರಿಸಿ, ಇಲ್ಲದ ಕಥೆಗಳನ್ನೆಲ್ಲ ಪೋಣಿಸಿ, ಸ್ಥಳಪುರಾಣಗಳನ್ನು ಹೇಳುತ್ತ ಹೋದರೆ ಸಾಕು ನೋಡನೋಡುವಷ್ಟರಲ್ಲಿ ಆ ದೇವರು ಪ್ರಖ್ಯಾತನಾಗುತ್ತಾನೆ.

ನಾವು ಬೇಡಿಕೊಂಡದ್ದನ್ನೆಲ್ಲ ಕೊಡುವ ದೇವರಿದ್ದರಂತೂ ಆ ದೇವರಿಗೆ ಇರುವೆ ಮುತ್ತಿದಂತೆ ಜನ ಮುತ್ತುತ್ತಾರೆ.  ತಿರುಪತಿಯ ತಿಮ್ಮಪ್ಪನ ಹುಂಡಿಗೆ ಇಂದುಬೀಳುವ ಚಿನ್ನಾಭರಣ ದುಡಿದು ಗಳಿಸಿದ್ದಂತೂ ಖಂಡಿತ ಅಲ್ಲ. ಅದು ಪಾಪದ ಆಭರಣ. ಇಲ್ಲದಿದ್ದರೆ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರ ಖಚಿತವಾದ ಕಿರೀಟವನ್ನು ಬಳ್ಳಾರಿಯ ರೆಡ್ಡಿಗಳು ಕೊಟ್ಟಾಗ ಆತ ಅದನ್ನು ಗಪ್ ಚುಪ್ ಪಡಕೊಳ್ಳುತ್ತಿರಲಿಲ್ಲ.

ಕೆಲವು ದೇವರುಗಳಂತೂ ಆಗಾಗ ಮನುಷ್ಯರು ನಡೆಸುವಂತೆ ಗಿಮಿಕ್ ನಡೆಸುತ್ತವೆ. ತಮ್ಮ ನಿರ್ಜೀವವಾದ ಕಣ್ಣಿನಿಂದ ನೀರನ್ನು ಉದುರಿಸುತ್ತವೆ. ಫೋಟೋಗಳ ಒಳಗಿಂದ ಒಣ ಭಸ್ಮವನ್ನು ಉದುರಿಸುತ್ತವೆ. ವರ್ಷಕ್ಕೊಂದು ಬಾರಿ ಮಾತ್ರ ತಾನು ಜ್ಯೋತಿಯಾಗಿ ಮಾತ್ರ ಕಾಣಿಸಿಕೊಳ್ಳುವುದಾಗಿ ಪ್ರಕಟಿಸಿದ ಅಯ್ಯಯ್ಯಪ್ಪ ಸ್ವಾಮಿಯ ಕತೆಯಂತೂ ಹೇಳಲಾಸಲ್ಲ. ಸುಮಾರು ವರ್ಷಗಳಿಂದ ಜ್ಯೋತಿಯ ಹೆಸರಿನಲ್ಲಿ ಎಲ್ಲರನ್ನು ಕೋತಿಮಾಡಿದ ಅಯ್ಯಪ್ಪ ಗಿಮಿಕ್ ಮಾಡದೆ ಇದ್ದರೆ ಆತನನ್ನು ಯಾರು ಕೇಳುತ್ತಿರಲಿಲ್ಲ. ವರ್ಷಕ್ಕೊಂದು ಸಲ ಕರಿಬಟ್ಟೆ ಹಾಕಿಕೊಂಡು , ಹೆಣ್ಣುಮಕ್ಕಳನ್ನು ಮುಟ್ಟಿಸಿಕೊಳ್ಳದೆ ಅವರು ಮಾಡಿದ ಅಡುಗೆಯನ್ನು ಉಣ್ಣದೆ ಕಟ್ಟು ನಿಟ್ಟಿನವೃತ ಮಾಡಿದರೆ ಅಯ್ಯಪ್ಪ ಅವರಿಗೆ ಒಲಿಯುತ್ತಾನಂತೆ. ಈಮಹಾಶಯ ಯಾರಿಗೆ ಒಲಿದಿದ್ದಾನೋ ಬಿಟ್ಟಿದ್ದಾನೋ ಒಂದೂ ಗೊತ್ತಾಗಿಲ್ಲ. ಆದರೆ ಈತನ ದರ್ಶನಕ್ಕೆ ಹೋದ ಸಹಸ್ರಾರು ಮಂದಿ ಮಾತ್ರ ಹುಳು ಸತ್ತಂತೆ ಜನರ ಕಾಲ್ತುಳಿತಕ್ಕೆಸಿಕ್ಕು ಪರಲೋಕ ಸೇರಿದ್ದಂತೂ ಖಚಿತ!

ನಮ್ಮ ದೇಶದ ದೇವರುಗಳಿಗೆ ದಿನ ನಿತ್ಯವೂ ಮುಂಜಾನೆ ಬೆಳಗ್ಗೆ ಎದ್ದುನಾವೇ ಅವುಗಳನ್ನ ‘ಎದ್ದೇಳು ಮಂಜುನಾಥ… ಏಳು ಬೆಳಗಾಯಿತು’ ಎನ್ನಬೇಕು. ಆತನಿಗೆ ಮೊಸರು, ತುಪ್ಪ, ಬೆಣ್ಣೆಗಳ ಮೂಲಕ ಸ್ನಾನ ಮಾಡಿಸಬೇಕು. ದೀಪ ಮುಡಿಸಬೇಕು. ಧೂಪ ಹಚ್ಚಬೇಕು. ಆತವಾಸವಾಗಿರುವ ಗುಡಿಯ ಬಾಗಿಲು ತೆಗೆದಾಗ ಮಾತ್ರ ಎಲ್ಲರಿಗೂ ಆತ ದರ್ಶನಭಾಗ್ಯ ಕರುಣಿಸುತ್ತಾನೆ. ಇದೆಲ್ಲಕ್ಕಿಂತ ಮುಖ್ಯವಾಗಿ ದಿನವೂ ಈ ದೇವರುಗಳಿಗೆ ಬೆಳಗ್ಗೆ ಆಹ್ವಾನ ಮಂತ್ರಗಳ ಮೂಲಕ ದೇವರು ಆಯಾ ಮೂರ್ತಿಗಳ ಒಳಗಡೆ ಬರುವಂತೆ ಪ್ರತಿಷ್ಠಾಪನೆ ಮಾಡಬೇಕು. ರಾತ್ರಿ ಗುಡಿಗೆ ಕೀಲಿ ಹಾಕಿನಡೆದಾಗ ಮತ್ತೆ ವಿಸರ್ಜನೆಮಂತ್ರ ಹೇಳಬೇಕು. ನಮ್ಮ ದೇವರುಗಳು ಈಗ ಪೂಜಾರಿ ಹೇಳಿದಂತೆ ಬಾ ಅಂದಾಗ ಬರುತ್ತಾನೆ. ಹೋಗು ಎಂದಾಗ ಎದ್ದು ಹೋಗುತ್ತಾನೆ.ಇಂಥ ದೇವರಿಗಾಗಿಯೆ ನಾವುಗಳೆಲ್ಲ ಭಜನೆ ಮಾಡಿದ್ದೇವೆ. ಕೀರ್ತನೆ ಕೇಳಿದ್ದೇವೆ. ಜಪ ಮಾಡಿದ್ದೇವೆ. ಊಟ ಬಿಟ್ಟು ಉಪವಾಸ ಇದ್ದು ದೇವರನ್ನು ಒಲಿಸಿಕೊಳ್ಳುವ ಕಸರತ್ತು ಮಾಡಿದ್ದೇವೆ. ಸಹಸ್ರಾರು ಬಿಳಿಯ ಹಾಳೆಯ ಮೇಲೆಲ್ಲ ದೇವರ ಹೆಸರನ್ನು ಬರೆಬರೆದು ಸಂತೃಪ್ತರಾಗಿದ್ದೇವೆ. ಹೋಮ-ಹವನಗಳಿಂದ ದೇವರನ್ನು ಮತ್ತಷ್ಟು ಖುಷಿಪಡಿಸಲು ಯತ್ನಿಸಿದ್ದೇವೆ. ನಿಗಿ ನಿಗಿಯಾಗಿ ಹೊಳೆಯುವ ಬೆಂಕಿಯ ಕೆಂಡವನ್ನು ದೇವರಿಗಾಗಿ ತುಳಿದಿದ್ದೇವೆ. ಮೈ ಮೇಲೆ ಬಾಸುಂಡೆ ಬರುವಂತೆ ಚಾಟಿಯಿಂದ ಹೊಡಕೊಂಡಿದ್ದೇವೆ. ಗಲ್ಲದ, ತುಟಿಯ ಒಳಗಡೆ ಕಿರುಬೆರಳ ದಪ್ಪದ ಸಣ್ಣನೆಯ ಕಬ್ಬಿಣದ ತುಂಡನ್ನು ಸಿಕ್ಕಿಸಿಕೊಂಡಿದ್ದೇವೆ. ಚೂಪಾದ ಮುಳ್ಳಾವಿಗೆಯ ಮೇಲೆ ಒಂಟಿ ಕಾಲಿನಲ್ಲಿ ನಿಂತಿದ್ದೇವೆ. ಮಡಿ ಬಟ್ಟೆ ಉಟ್ಟು , ಕೆಲವು ಸಲ ದಶಾ ಬತ್ತಲೆಯಿಂದಲೂ ಪೂಜಿಸಿದ್ದೇವೆ. ಆದರೆ ದೇವರೆಂಬ ಆ ದೇವರು ಯಾರಿಗೂ ದರ್ಶನ ಭಾಗ್ಯ ಕರುಣಿಸಿಲ್ಲ.

ವಿಜ್ಞಾನದ ಇಂದಿನ ಯುಗದಲ್ಲಿ ಯೂಮಡಿಕೆ ದೈವ. ಮರದೈವ. ಬೀದಿಯ ಕಲ್ಲು ದೈವ. ಹಣಿಗೆ ದೈವ. ಬಿಲ್ಲ ನಾರಿ ದೈವ. ದೈವದೈವೆಂಬುದು ಕಾಲಿಡಲಿಂಬಿಲ್ಲ ಎನ್ನುವಷ್ಟು ಲಿಬಿಲಿಬಿ ಗುಟ್ಟುತ್ತಿವೆ. ದೇವರೆಂಬ ಈ ಕಸವನ್ನು ತೆಗೆದುಹಾಕಲು ವಿಚಾರದ ಕಸುವು ಬೇಕು. ಆ ಕಸುವು ಯಾರು ನಮ್ಮಲ್ಲಿ ತುಂಬಲು ಸಾಧ್ಯವಿಲ್ಲ. ಅದನ್ನು ನಾವು ನಾವೇ ನಮ್ಮಲ್ಲಿಯೇ ತಂದು ಕೊಳ್ಳಬೇಕು. ‘ಜ್ಞಾನದ ಬಲದಿಂದ ಅಜ್ಞಾನದ ಕೇಡುನೋಡಯ್ಯ. ಸತ್ಯದ ಬಲದಿಂದ ಅಸತ್ಯದ ಕೇಡನೋಡಯ್ಯ. ಜ್ಯೋತಿಯ ಬಲದಿಂದ ತಮಂಧದ ಕೇಡನೋಡಯ್ಯ’ ಎಂದು ತಿಳಿದು ನಡೆಯಬೇಕು.’ತನ್ನ ಬಿಟ್ಟು ದೇವರಿಲ್ಲ ಮಣ್ಣಬಿಟ್ಟು ಮಡಕೆ ಇಲ್ಲ’ ಎಂಬ ಜಾನಪದ ಮಹಿಳೆಯ ಮಾತಿಗೆ ಕಿವಿಗೊಡಬೇಕು. ‘ಸಣ್ಣನೆಯ ಮಳಲೊಳಗೆ. ನುಣ್ಣನೆಯ ಶಿಲೆಯೊಳಗೆ. ಬಣ್ಣಿಸುತ ಬರೆದ ಪಟದೊಳಗೆ ಇರುವಾತ ತನ್ನೊಳಗೆ ಇರನೆ ಸರ್ವಜ್ಞ’ ಎಂಬ ಕವಿಯ ಮಾತನ್ನು ನೆನೆಯುತ್ತ ನಮ್ಮ ಮನಸ್ಸಿನ ಕತ್ತಲೆಯನ್ನು ಹೊಡೆದೋಡಿಸಬೇಕು.

‘ಸತ್ತ ಕಲ್ಗಳ ಮುಂದೆ ಅತ್ತು ಕರೆಯದೆ ಜೀವದಾತೆಯನ್ನು ಕೂಗುವ ಮಾನವೀಯತೆ’ ನಾವು ಮೈಗೂಡಿಸಿಕೊಳ್ಳಬೇಕು ಎಂದು ಈಗ ಇನ್ನಷ್ಟು ಸ್ಪಷ್ಟವಾಗತೊಡಗಿದೆ.

(ಚಿತ್ರಕೃಪೆ : ಡಿ.ಜಿ. ಮಲ್ಲಿಕಾರ್ಜುನ್)