Tag Archives: ಜ್ವಾಲಾಮುಖಿ

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ-5

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


40ಕೋಟಿ ವರ್ಷಗಳು. ಇಲ್ಲಿಂದ ಮುಂದಿನ 10 ಕೋಟಿ ವರ್ಷಗಳ ಅವಧಿಯಲ್ಲಿ ಬಂಡೆಗಳು ಒಂದೆಡೆ ಸರಿಯಲು ಆರಂಭಿಸಿದವು. ಇದೇ ಸಂದರ್ಭದಲ್ಲಿ ಸಾಗರಜೀವಿಗಳು ಭೂಮಿಯ ಮೇಲೆ ಕಾಲಿಟ್ಟವು. ಓಜೋನ್ ಪದರ ಭೂಮಿಯನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತಿದ್ದರಿಂದಾಗಿ ಜೀವಿಗಳು ಸಾಗರ ತೊರೆದು ಭೂಮಿಯತ್ತ ಹೆಜ್ಜೆ ಇಟ್ಟವು.

30 ಕೋಟಿ ವರ್ಷಗಳ ಹೊತ್ತಿಗೆ ಭೂಮಿ ಜೌಗು ಪ್ರದೇಶಗಳಿಂದ ಕೂಡಿತ್ತು. 16 ದಶಲಕ್ಷ ವರ್ಷಗಳ ಕಾಲ ಇದೇ ಸ್ಥಿತಿ ಇತ್ತು. ಈ ಪರಿಸರದಿಂದಾಗಿ ಕೊಳೆತ ಸಸ್ಯಕಾಶಿ ಕಲ್ಲಿದ್ದಿಲಾಗಿ, ಸತ್ತ ಸಾಗರ ಜೀವಿಗಳು ತೈಲವಾಗಿ ಪರಿವರ್ತನೆಗೊಂಡವು.

ಈ ಹೊತ್ತಿಗೆ ಭೂಮಿಯ ಮೇಲೆ ಸಹಸ್ರಪದಿ, ಏರೋಪ್ಲೇನ್ ಚಿಟ್ಟೆ, ಸರೀಸೃಪಗಳು ಕಾಣಿಸಿಕೊಂಡಿದ್ದವು. ಜೀವಗೋಳ ರೂಪುಗೊಂಡಿತು ಎನ್ನುವ ಹೊತ್ತಿಗೆ ದೊಡ್ಡದೊಂದು ಸವಾಲು ಎದುರಾಗಿತ್ತು.

ಭೂಮಿ ತನ್ನ ಒಡಲಲ್ಲಿ ಅದೆಷ್ಟು ಬೆಂಕಿಯನ್ನಿಟ್ಟುಕೊಂಡಿತ್ತೊ ಅದು ತನ್ನ ಹುಟ್ಟಿನಿಂದಲೂ ಜ್ವಾಲಾಮುಖಿಗಳನ್ನು ಸಿಡಿಸುತ್ತಲೇ ಬಂದಿತ್ತು. ಭೂಮಿಯ ಮೇಲೆ ಇನ್ನೇನು ಜೀವವಿಕಾಸವಾಗುತ್ತಿದೆ ಎಂಬ ಕಾಲಕ್ಕೆ ಬೆಂಕಿಯುಗುಳಿ ಭೂಮಿಯನ್ನು ಅಲ್ಲೋಲಕಲ್ಲೋಲ ಮಾಡಿಬಿಟ್ಟಿತು. ಇದು ಕೂಡ ವಿಕಾಸದ ಒಂದು ಹಂತವೇ ಆಗಿತ್ತು.

10 ಕೋಟಿ ವರ್ಷಗಳ ಕಾಲ ನಿರಾತಂಕವಾಗಿ ಜ್ವಾಲಾಮುಖಿಗಳಿಂದ ಲಾವಾರಸ ಹೊರಬೀಳುತ್ತಲೇ ಇತ್ತು. ಒಂದೆಡೆ ಶಾಖ ಮತ್ತೊಂದೆಡೆ ವಿಷಾನಿಲ ಹರಡಿ ಭೂಮಿಯ ಮೇಲಿದ್ದ ಶೇ.95ರಷ್ಟು ಜೀವಿಗಳು ನಾಶವಾದವು. ಭೂಮಿಯ ಅಲ್ಲಿಯವರೆಗಿನ ಇತಿಹಾಸದಲ್ಲಿ ಇಂಥ ವಿದ್ಯಮಾನ ಜರುಗೇ ಇರಲಿಲ್ಲ.

ಈ ವಿಚಿತ್ರ ಬೆಳವಣಿಗೆ ನಂತರ ಒಂದು ಮಹಾಖಂಡ ಸೃಷ್ಟಿ ಆಯಿತು. ಅದೇ ಪೆನ್‍ಜಿಯಾ.

24 ಕೋಟಿ ವರ್ಷಗಳು. ಭೂಮಿಯ ವಾತಾವರಣದಲ್ಲಿ ಹಲವು ಮಹತ್ವದ ಬದಲಾವಣೆ ಆಗಲಾರಂಭಿಸಿದ್ದವು. ಆಮ್ಲಜನಕ ಮತ್ತುಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಿತು. ಇತ್ತ ಲಾವಾರಸ, ವಿಷಾನಿಲದ ಪರಿಸರದಲ್ಲೂ ಬದುಕುಳಿದ ಕೆಲ ಜೀವಿಗಳು ಭಯಾನಕವಾಗಿ ಬೆಳೆದು ನಿಂತಿದ್ದವು.

ಅವೇ ಡೈನೊಸಾರ್‌ಗಳು.

ಇಂತಹ ಜೀವಿಗಳು ಭೂಮಿಯ ಮೇಲಿದ್ದವು ಎಂಬುದು ತಿಳಿದು ಬಂದಿದ್ದು ಇಂಗ್ಲೆಂಡಿನಲ್ಲಿ ಪತ್ತೆಯಾದ ಪಳೆಯುಳಿಕೆಯಿಂದ. 1822 ರಲ್ಲಿ ಮೇರಿ ಮತ್ತು ಮ್ಯಾಂಟಲ್ ಎಂಬುವವರಿಗೆ ಮೂಳೆಯೊಂದು ಸಿಕ್ಕಿತ್ತು. ಮೊದಮೊದಲು ಅದೇನು? ಯಾವ ಪ್ರಾಣಿಯ ಮೂಳೆ ಎಂಬುದು ಸ್ಪಷ್ಟವಾಗಿರಲಿಲ್ಲ. ಅಧ್ಯಯನ ಮಾಡುತ್ತ ಹೋದಂತೆ ಅದು ದೈತ್ಯ ಹಲ್ಲಿಯ ಹಲ್ಲು ಎಂದು ಕಂಡುಕೊಂಡರು.

ನಂತರದ ದಿನಗಳಲ್ಲಿ ಯೂರೋಪ್ ಮತ್ತು ಅಮೆರಿಕಾಗಳಲ್ಲಿ ದೈತ್ಯಜೀವಿಗಳ ಪಳೆಯುಳಿಕೆಗಳು ಪತ್ತೆಯಾದವು. ನಮ್ಮ ಕಾಲದ ಹಲ್ಲಿಗಳಿಗೆ ಹೋಲಿಸಿ ಇವುಗಳಿಗೆ ಡೈನೊಸಾರ್, ಅಂದರೆ ದೈತ್ಯ ಹಲ್ಲಿಗಳೆಂದು ಕರೆದರು.

18 ಕೋಟಿ ವರ್ಷಗಳಿಂದ – 10 ಕೋಟಿ ವರ್ಷಗಳ ಅವಧಿಯಲ್ಲಿ ಜ್ವಾಲಾಮುಖಿಗಳ ಚಟುವಟಿಕೆಯಿಂದ ಪೆನ್‍ಜಿಯಾ ಮಹಾಖಂಡ ಒಡೆದು ಏಳು ಖಂಡಗಳಾಗಿ ಬೇರ್ಪಟ್ಟು ಭೂಮಿಯ ಬೇರೆಬೇರೆ ಭಾಗಗಳತ್ತ ಚಲಿಸಿದವು. ಪ್ರತಿಖಂಡದಲ್ಲೂ ಡೈನೊಸಾರ್‌ಗಳು ಹಂಚಿಹೋದವು. ಜ್ವಾಲಾಮುಖಿಗಳು ಇನ್ನೂ ಕ್ರಿಯಾಶೀಲವಾಗಿದ್ದವು. ಜಾಗತಿಕ ತಾಪಮಾನ ಹೆಚ್ಚಿತು. ಇಂಗಾಲದ ಪ್ರಮಾಣ ಶೇ.500 ರಷ್ಟು ಹೆಚ್ಚಾಗಿ ಹಸಿರುಮನೆ ಪರಿಣಾಮ ಉಂಟಾಯಿತು.ಡೈನೊಸಾರ್‌ಗಳು ಅಷ್ಟು ದೈತ್ಯಾಕಾರವಾಗಿ ಬೆಳೆಯಲು ಕಾರಣ ಅವು ಈಗಿನ ಹಲ್ಲಿಗಳಂತೆ ತಂಪು ರಕ್ತದ ಜೀವಿಗಳಾಗಿರಲಿಲ್ಲ. ಬಿಸಿರಕ್ತದ ಪ್ರಾಣಿಗಳಾಗಿದ್ದವು. ಜೊತೆಗೆ ಯಥೇಚ್ಚವಾಗಿದ್ದ ಆಹಾರ, ಆಮ್ಲಜನಕದಿಂದ ಕೂಡಿದ ವಾತಾವರಣ ಡೈನೊಸಾರ್‌ಗಳು ಗಾತ್ರದಲ್ಲಿ ಅಗಾಧವಾಗಿ ಬೆಳೆಯುವಂತೆ ಮಾಡಿದವು ಎಂಬುದು ಜೀವವಿಜ್ಞಾನಿಗಳ ಅಭಿಪ್ರಾಯ.

ಇದರ ಫಲವಾಗಿ ಎಲ್ಲ ಭೂಖಂಡಗಳಲ್ಲಿ ಕಾಡು ಬೆಳೆದು ನಿಂತಿತು. ಈ ಹಸಿರಿನ ಪೋಷಣೆಯಲ್ಲಿ ಡೈನೊಸಾರ್‌ಗಳ ದೇಹ ಮತ್ತಷ್ಟು ಹಿಗ್ಗಿತು. ಆದರೆ ಈ ಸುಖದ ದಿನಗಳು ಡೈನೊಸಾರ್‌ಗಳ ಪಾಲಿಗೆ ತುಂಬಾ ದಿನಗಳ ಕಾಲ ಇರಲಿಲ್ಲ. ಅಂಥದ್ದೊಂದು ದುರಂತವೊಂದನ್ನು ಡೈನೊಸಾರ್‌ಗಳು ಎದುರಿಸಬೇಕಾಗುವ ಕಾಲ ಸನ್ನಿಹಿತವಾಗಿತ್ತು.

ಜ್ವಾಲಾಮುಖಿ ಕೊಟ್ಟ ಸಂಪತ್ತು

10ಕೋಟಿ ವರ್ಷಗಳಾದಾಗಲೂ ಭೂಮಿಯ ಬಹುತೇಕ ಎಲ್ಲಾ ಬದಲಾವಣೆಗಳಿಗೆ ಪ್ರಮುಖ ಕಾರಣವಾದ ಜ್ವಾಲಾಮುಖಿಗಳು ತಮ್ಮ ಕಾವು ಕಳೆದುಕೊಳ್ಳದೆ ಇನ್ನೂ ಜೀವಂತವಾಗಿದ್ದವು. ಶಿಲೆಗಳ ರಚನೆಗೆ, ಖಂಡಗಳ ರಚನೆಗೆ ಮತ್ತು ಅವುಗಳ ಅಲೆತಕ್ಕೆ ಕಾರಣವಾದ ಈ ಜ್ವಾಲಾಮುಖಿಗಳೇ ಅಮೂಲ್ಯವಾದ ಖನಿಜಗಳನ್ನು ಭೂಮಿಗೆ ನೀಡಿದವು. ಆ ಪೈಕಿ ಅತ್ಯಮೂಲ್ಯ ಹರಳು ವಜ್ರವೂ ಒಂದು.

ಮನುಷ್ಯ ಬಹಳ ವರ್ಷಗಳ ಕಾಲ ನದಿತಟಗಳಲ್ಲಿ ಸಿಗುತ್ತಿದ್ದ ಬೆಲೆಬಾಳುವ ಕಲ್ಲುಗಳನ್ನು ಸಂಗ್ರಹಿಸಿ ಬಳಸಿಕೊಂಡ. ಆದರೆ ಈ ಕಲ್ಲುಗಳ ಮೂಲವೆಲ್ಲಿ ಎಂಬುದು ತಿಳಿದಿರಲಿಲ್ಲ. 1869ರಲ್ಲಿ ದಕ್ಷಿಣ ಆಫ್ರಿಕಾ ಕಿಂಬರ್ಲಿಯಲ್ಲಿ ಬೃಹತ್ ಗಾತ್ರದ ವಜ್ರದ ಕಲ್ಲು ಸಿಕ್ಕಿತು. ಉದ್ದುದ್ದವಾಗಿದ್ದು ಹಳದಿ ಬಣ್ಣದಿಂದ ಕೂಡಿದ್ದ ಈ ಕಲ್ಲನ್ನು ಹೆನ್ರಿ ಕಾರ್ವಿಲ್ ಲೀವಿಸ್ ಅಧ್ಯಯನ ಮಾಡಿದರು. ಈ ವಿಶಿಷ್ಟ ಬೆಲೆಬಾಳುವ ಕಲ್ಲು ಜ್ವಾಲಾಮುಖಿಯ ಕೊಡುಗೆ ಎಂಬುದು ಆ ಅಧ್ಯಯನದಿಂದ ಸ್ಪಷ್ಟವಾಯಿತು. ಈಗ ವಜ್ರದ ಗಣಿಗಳು ಎಂದು ಕರೆಸಿಕೊಳ್ಳುತ್ತಿರುವ ಜಾಗಗಳು ಕೋಟಿ ವರ್ಷಗಳ ಹಿಂದಿದ್ದ ಪರ್ವತಗಳು ಎಂಬುದು ತಿಳಿಯಿತು.

ಆದರೆ ಇವು ಸಾಮಾನ್ಯ ಜ್ವಾಲಾಮುಖಿಗಳಾಗಿರಲಿಲ್ಲ. 100 ಮೈಲು ಆಳದ ವಿಶಿಷ್ಟ ಪರ್ವತಗಳು. ಇಲ್ಲಿ ಲಾವಾರಸ ಗಂಟೆಗೆ 3000 ಮೈಲಿ ವೇಗದಲ್ಲಿ ಹೊರಚಿಮ್ಮುತ್ತಿತ್ತು. ಅತಿಯಾದ ಶಾಖ, ವೇಗ, ಒತ್ತಡದಲ್ಲಿ ಲಾವ ವಜ್ರವಾಗಿ ರೂಪಾಂತರವಾಗಿತ್ತು. ಡೈನೊಸಾರ್‌ಗಳ ಕಾಲದಲ್ಲಿ ಸೃಷ್ಟಿಯಾದ ಈ ವಜ್ರಗಳು ಇಂದಿಗೂ ನಮ್ಮೊಂದಿಗೆ ಇವೆ. ಆದರೆ ಡೈನೊಸಾರ್‌ಗಳಿಗೆ ಅಷ್ಟು ಅದೃಷ್ಟವಿರಲಿಲ್ಲ.

65 ದಶಲಕ್ಷ ವರ್ಷಗಳು. ಹಸಿರು ಹೆಚ್ಚಿದ ಕಾಲ, ಜೀವಿಗಳು ಹಿಂದೆಂದಿಗಿಂತ ಹೆಚ್ಚು ವಿಕಾಸ ಕಂಡ ಕಾಲ. ಆದರೆ ಡೈನೊಸಾರ್‌ಗಳ ಪಾಲಿಗೆ ಕೆಟ್ಟಕಾಲ. ಕೇವಲ ಈ ದೈತ್ಯಜೀವಿಗಳಿಗಷ್ಟೇ ಅಲ್ಲ ಭೂಮಿಯ ಮೇಲಿದ್ದ ಶೇ. 70 ರಷ್ಟು ಜೀವಿಗಳೆಲ್ಲ ಕಣ್ಮರೆಯಾದಂಥ ಕಾಲ. ಇದು ಹೇಗಾಯಿತು ಎಂಬ ಪ್ರಶ್ನೆಗೆ ಉತ್ತರ ಬಹಳ ಕಾಲ ನಿಗೂಢವಾಗಿಯೇ ಇತ್ತು.

ಭೂಮಿ ಎಷ್ಟೊಂದು ವೈಪರೀತ್ಯಗಳ ನಡುವೆ ಒಂದು ಚೆಂದದ ಗ್ರಹವಾಗುತ್ತಿದ್ದ ಕಾಲದಲ್ಲಿ ಭಾರೀ ಅನಾಹುತವೊಂದು ಸಂಭವಿಸಿತು. ಅದೇ ಭೂಮಿಯ ಮೇಲಿದ್ದ ಅಸಂಖ್ಯ ಜೀವರಾಶಿಯನ್ನು ನಾಶಮಾಡಿಬಿಟ್ಟಿತು. ಆದರೆ ಆಪತ್ತು ಹೇಗೆ ಬಂತು? ಎಲ್ಲಿಂದ ಬಂತು? ವಾಸ್ತವವಾಗಿ ಅದು ಏನಾಗಿತ್ತು?

ಬಂದೆರಗಿದ ಆಪತ್ತು

ಈ ಪ್ರಶ್ನೆ ಹಲವಾರು ವರ್ಷಗಳ ಕಾಲ ವಿಜ್ಞಾನಿಗಳನ್ನು ಕಾಡಿತ್ತು. ಆದರೆ ಉತ್ತರ ಅಮೆರಿಕದ ಕೊಲರ‍್ಯಾಡೋದಲ್ಲಿ ಪತ್ತೆಯಾಯಿತು. ಲೂಯಿಸ್ ಮತ್ತು ವಾಲ್ಟರ್ ಅಲ್ವಾರೆಜ್ ಎಂಬ ತಂದೆ ಮಗನ ಜೋಡಿ 1980ರಲ್ಲಿ ಒಂದು ವಸ್ತುವನ್ನು ಪತ್ತೆ ಮಾಡಿದರು. ಅದರ ಹೆಸರು ಇರಿಡಿಯಂ. ಈ ಅಪೂರ್ವ ವಸ್ತು ಸಾಮಾನ್ಯವಾಗಿ ಕಂಡುಬರುವುದು ಉಲ್ಕೆಗಳಲ್ಲಿ. ಲೂಯಿಸ್ ವಾಲ್ಟರ್ ಅವರ ಅಧ್ಯಯನ ಆಧರಿಸಿ ಡೈನೊಸಾರ್‌ಗಳಿಂದ ತುಂಬಿದ್ದ ಈ ಗ್ರಹಕ್ಕೆ ಸಾವಾಗಿ ಬಂದಿದ್ದು ಉಲ್ಕೆಗಳು ಎಂದು ಪ್ರತಿಪಾದಿಸಿದರು.

ಒಂದು ಸೆಕೆಂಡಿಗೆ ಸುಮಾರು 30 ಮೈಲಿ ವೇಗದಲ್ಲಿ ಬಂದಪ್ಪಳಿಸಿದ ಉಲ್ಕೆಗಳು ಭೂಮಿಯನ್ನು ದೊಡ್ಡದೊಡ್ಡ ಕುಳಿಗಳಿಂದ ಅಗಾಧ ಧೂಳಿನಿಂದ ತುಂಬಿದವು ಎಂದು ಹೇಳಿದರು.

ಹತ್ತು ವರ್ಷಗಳ ಕಾಲ ಈ ಬಗ್ಗೆ ವಾದವಿವಾದಗಳು ನಡೆದವು. 1990ರಲ್ಲಿ 100 ಮೈಲಿ ವಿಶಾಲವಾದ ಕ್ರೇಟರ್ ಪತ್ತೆಯಾಗಿ ಲೂಯಿಸ್-ವಾಲ್ಟರ್ ಸಿದ್ಧಾಂತಕ್ಕೆ ಬಲ ಸಿಕ್ಕಿತು.

ಒಟ್ಟಾರೆ ಉಲ್ಕೆಗಳು, ಜೊತೆಜೊತೆಗೆ ಲಾವಾರಸ ಹಲವು ಸಾವಿರ ಜೀವಿಗಳನ್ನು ಕೊಂದವು.

ಲಾವಾರಸ ಮತ್ತು ಧೂಳಿನ ರಾಶಿಯಿಂದ ಶಿಲಾಪದರಗಳ ರಚನೆಯೂ ಆಯಿತು. ಭಾರತದ ಅಜಂತಾ ಎಲ್ಲೋರ ಸೇರಿದಂತೆ ಇನ್ನು ಕೆಲ ದೇವಸ್ಥಾನಗಳು ಇಂಥ ಶಿಲಾಪದರುಗಳಿರುವಲ್ಲೇ ನಿರ್ಮಾಣವಾಗಿವೆ.

ಹೀಗೆ ಭೂಮಿಯ ಮೇಲಿನ ಲಾವಾರಸ, ಮೇಲಿಂದ ಬಿದ್ದ ಉಲ್ಕೆಗಳು ದೈತ್ಯಜೀವಿಗಳನ್ನು, ಸೂಕ್ಷ್ಮಜೀವಿಗಳನ್ನು ಇಲ್ಲವಾಗಿಸಿದವು. ಆದರೆ ಹೊಸಜಗತ್ತು ಹುಟ್ಟಿಕೊಳ್ಳುತ್ತಿತ್ತು. ಅದೇ ಸಸ್ತನಿಗಳ ಮನುಷ್ಯನ ಜಗತ್ತು…

50 ದಶಲಕ್ಷ ವರ್ಷಗಳು. ಭೂಮಿ ಭಾರೀ ದುರಂತದಿಂದ ಚೇತರಿಸಿಕೊಳ್ಳುತ್ತಿತ್ತು. 4.4 ಶತಕೋಟಿ ವರ್ಷಗಳ ಬಳಿಕ ಸಸ್ತನಿಗಳು, ಮನುಷ್ಯನ ಪೂರ್ವಜರು ವಿಕಾಸ ಹೊಂದುತ್ತಿದ್ದರು.

(ಮುಂದುರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ: