Tag Archives: ಟಿ.ವಿ.

ಮೂರ್ಖರ ಪೆಟ್ಟಿಗೆ ಹಾಗೂ ಜನಪ್ರಿಯ ಸಂಸ್ಕೃತಿಯ ಭರಾಟೆ


-ಡಾ.ಎಸ್.ಬಿ. ಜೋಗುರ


ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗ ಸದ್ದೇ ಇಲ್ಲದೆ  ಸಾಗಿಬರುವ ಪರಂಪರೆಯೊಂದು ಈಗ ಮಾಧ್ಯಮಗಳ ಗದ್ದಲಗಳಲ್ಲಿ ಕಳೆದು ಹೋಗಿದೆ. ಈ ಜನಪ್ರಿಯ ಮಾಧ್ಯಮಗಳು ಜನಸಾಮಾನ್ಯನನ್ನು ಪ್ರಭಾವಿಸುತ್ತಲೇ ತನ್ನ ತೆಕ್ಕೆಗೆ ಅಪಾರ ಪ್ರಮಾಣದ ಜನಸಮೂಹವನ್ನು ತೆಗೆದುಕೊಂಡು ಪ್ರವಾಹದೋಪಾದಿಯಲ್ಲಿ ಸಾಗುತ್ತಿದೆ.  ಮಧ್ಯಮವರ್ಗದ ಮನೆಯೊಳಗಿನ ಬಹುತೇಕ ಪರಿಕರಗಳು ಟಿ.ವಿ. ಜಾಹೀರಾತುಗಳ ಪ್ರಭಾವದಿಂದ ಎಂಟ್ರಿ ಪಡೆದವುಗಳಾಗಿವೆ.  ಅತ್ಯಂತ ಪ್ರಭಾವಿ ಮಾಧ್ಯಮವಾದ ಟಿ.ವಿ.ಯು ವೀಕ್ಷಕರ ಮನ:ಸ್ಥಿತಿ ಮತ್ತು ಅವರು ಮೂರ್ಖರ ಪೆಟ್ಟಿಗೆಯ ಮುಂದೆ ಕುಳಿತುಕೊಳ್ಳುವ ಮೂಲಕ ಪಡೆಯುವ ಮತ್ತು ಹಿಂತಿರುಗಿ ಕೊಡುವ ಸಂಗತಿಗಳಾದರೂ ಯಾವುವು?

ಬ್ರಿಟಿಷ್ ಫಿಲ್ಮ್ ಸಂಸ್ಥೆ ಈ ಬಗ್ಗೆ ಒಂದು ನಿಖರವಾದ ಅಧ್ಯಯನವನ್ನು ಮಾಡಿದೆ. ಈ  ಬಗ್ಗೆ  ‘An introduction to studying popular culture’ ಎನ್ನುವ ಕೃತಿಯಲ್ಲಿ ಡೊಮೆನಿಕ್ ಸ್ಟ್ರಿನಟಿ ಎನ್ನುವ ಲೇಖಕರು ಚರ್ಚಿಸಿದ್ದಾರೆ. ಯುರೋಪದ ಪ್ರಮುಖ ರಾಷ್ಟ್ರಗಳಲ್ಲಿ ಹಗಲು ಹೊತ್ತಿನಲ್ಲಿ ಹೆಚ್ಚು ದೂರದರ್ಶನವನ್ನು ವೀಕ್ಷಣೆ ಮಾಡುವವರಿಗೆ ಒಂದು ಬಗೆಯ ತಪ್ಪಿತಸ್ಥ ಪ್ರಜ್ಞೆ ಕಾಡುವ ಬಗ್ಗೆ ಅಧ್ಯಯನದಲ್ಲಿ ತಿಳಿದುಬಂದಿದೆ. ಜೊತೆಗೆ ಹೆಚ್ಚೆಚ್ಚು ದೂರದರ್ಶನವನ್ನು ವೀಕ್ಷಿಸುವುದು ಆರೋಗ್ಯಕರವೂ ಅಲ್ಲ ಎನ್ನುವ ಬಗ್ಗೆ ಆ ಅಧ್ಯಯನ ತೋರಿಸಿಕೊಟ್ಟಿದೆ. ಸದ್ಯದ ಸಂದರ್ಭದಲ್ಲಿ ಬದುಕು ಅನೇಕ ಬಗೆಯ ಬವಣೆಗಳಿಂದ ಸುತ್ತುವರೆದಿದೆ. ಪ್ರಾಥಮಿಕ ಶಾಲೆಯಲ್ಲಿ ಓದುವ ವಿದ್ಯಾರ್ಥಿಯಿಂದ ಹಿಡಿದು ಮಸಣ ಮಾರ್ಗದಿ ದಿನಗಳೆಣೆಸುವವರ ತನಕ ಎಲ್ಲರೂ ಉದ್ವೇಗದ ವಾತಾವರಣದಲ್ಲಿ ದಿನದೂಡುವ ನಡುವೆ ಕೊಂಚ ರಿಲ್ಯಾಕ್ಸ್ ಆಗಲು ಕಂಡುಕೊಂಡ ರೆಡಿಮೇಡ್ ಮಾರ್ಗ ಈ ಟಿ.ವಿ. ವೀಕ್ಷಣೆ. ಆ ಸಂಶೋಧನೆಯಲ್ಲಿ ಕಂಡುಬಂದ ಇನ್ನೊಂದು ಸಂಗತಿಯೆಂದರೆ ಪುರುಷರು ಹೆಚ್ಚಾಗಿ ಸಾಹಸದ ಸನ್ನಿವೇಶಗಳು, ವಾಸ್ತವಿಕ ಘಟನೆಗಳು, ಕ್ರೀಡೆಯನ್ನು ಹೆಚ್ಚಾಗಿ ವೀಕ್ಷಣೆ ಮಾಡಿದರೆ, ಮಹಿಳೆಯರು ರಿಯಾಲಿಟಿ ಶೋ, ನಾಟಕ ಮುಂತಾದವುಗಳನ್ನು ನೋಡುವ ಬಗ್ಗೆ ತಿಳಿದುಬಂದಿದೆ. ರಿಮೋಟ್ ಕಂಟ್ರೊಲ್ ಮೇಲಿನ ಅಧಿಪತ್ಯದಲ್ಲಿ 46 ಪ್ರತಿಶತ ಪುರುಷರದಾಗಿದ್ದರೆ, 22 ಪ್ರತಿಶತ ಮಹಿಳೆಯರದಾಗಿದೆ. ಯುವಕರು ಮಾತ್ರ ಹೆಚ್ಚಾಗಿ ಗ್ಲಾಮರಸ್ ಇಲ್ಲವೇ ಹಿಂಸಾತ್ಮಕವಾದ ಕಾರ್ಯಕ್ರಮಗಳನ್ನು ನೋಡುವುದಿದೆ.

ದೂರದರ್ಶನದ ಕೆಲ ಹಿಂಸಾತ್ಮಕ ಕಾರ್ಯಕ್ರಮಗಳ ವೀಕ್ಷಣೆ ಯುವಜನಾಂಗದ ಅಶಾಂತಿಗೆ ಪರೋಕ್ಷವಾಗಿ ಕಾರಣವಾಗುವ ಬಗ್ಗೆ ಮತ್ತೊಂದು ಸಮೀಕ್ಷಾ ಅಧ್ಯಯನವು ತಿಳಿಸಿರುವುದಿದೆ. ಆ ಕುರಿತು ಮಾರ್ಚ್ 19-1999 ರಲ್ಲಿ ಗಾರ್ಡಿಯನ್ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. ಬ್ರಿಟಿಷ ಯುವಕರು ಅದರಲ್ಲೂ 17 ವರ್ಷ ವಯೋಮಿತಿಯ ಒಳಗಿನವರು ಪುಸ್ತಕಗಳನ್ನು ಓದುವ ಬಗ್ಗೆ ರೇಜಿಗೆ ಬೆಳೆಸಿಕೊಂಡಿದ್ದಾರೆ. ಬಹುತೇಕ ಮಕ್ಕಳು ತಮ್ಮ ಬೆಡ್ ರೂಮಲ್ಲಿ ಒಂದು ಟಿ.ವಿ.ಯನ್ನು ಹೊಂದಿರುವರು. ಅವರು ಬೆಳೆಯುತ್ತಿರುವುದೇ ಈ ಬೆಡ್ ರೂಮ್ ಸಂಸ್ಕೃತಿಯಲ್ಲಿ ದಿನಕ್ಕೆ 5-6 ಘಂಟೆ ತಮ್ಮ ಅಮೂಲ್ಯವಾದ ಸಮಯವನ್ನು ಟಿ.ವಿ.ಮುಂದೆ ಕಳೆಯುವುದಿದೆ. ಎಂದು ಅದು ವರದಿ ಮಾಡಿತ್ತು. ಈ ಮಾತು ನಮ್ಮ ಯುವಕರಿಗೂ ಅನ್ವಯಿಸುತ್ತದೆ. ಆದರೆ ಯುರೋಪದ ರಾಷ್ಟ್ರಗಳಿಗಿಂತಲೂ ನಮ್ಮ ಸಂಸ್ಕೃತಿ, ಸಾಮಾಜಿಕ ಪರಿಸರ ವಿಭಿನ್ನ. ಅಜ್ಜಿ ಹೇಳುವ ಕಥೆಗಳಲ್ಲಿಯೆ ಸುಖ ಕಾಣುವ ಜಮಾನಾ ಒಂದಿತ್ತು. ಮಕ್ಕಳಾಡುವ ತೊದಲು ನುಡಿಯೆ ಮನರಂಜನೆಯಾಗಿದ್ದ ದಿನಗಳೂ ಹೋದವು.. ಭಜನೆ..ಕೀರ್ತನೆ..ಗಳೂ ಇಂದಿನ ಯುವಜನತೆಗೆ ಮನರಂಜನೆಯನ್ನು ನೀಡುವ ತಾಕತ್ತನ್ನು ಕಳೆದುಕೊಂಡವು.

ಈಗ ಒಂದೇ ಒಂದು ಬಟನ್ ಒತ್ತುವ ಮೂಲಕ ನೂರಾರು ಗ್ಲಾಮರಸ್ ಚಾನೆಲ್‌ಗಳು ನಮ್ಮ ಯುವಕರ ಎದುರು ಬಿಚ್ಚಿಕೊಳ್ಳುತ್ತವೆ. ಸರಿ-ತಪ್ಪುಗಳ ಎಗ್ಗಿಲ್ಲದೇ ಇಷ್ಟವಾಗುವ ಕಾರ್ಯಕ್ರಮಗಳನ್ನು ನಿರಂತರವಾಗಿ ವೀಕ್ಷಿಸುವ ಮೂಲಕ ಟಿ.ವಿ. ಮತ್ತು ಅಲ್ಲಿಯ ಜಾಹೀರಾತುಗಳು ಸೃಷ್ಟಿಸಲು ಬಯಸಿರುವ ವೀಕ್ಷಕರಾಗಿ ಮಾರ್ಪಾಡು ಹೊಂದುತ್ತಾರೆ. ಬಡ ಮತ್ತು ಮಧ್ಯಮ ವರ್ಗದ ಯುವಕರಂತೂ ಈ ಗ್ಲಾಮರ್ ಲೋಕದ ಪರಿಧಿಗೆ ಬಂದ ಮಿಂಚುಹುಳದಂತಾಗುತ್ತಾರೆ. ಇತ್ತೀಚಿಗೆ ಒಂದು ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಆಮೇಲೆ ವಿಕ್ಷಿಪ್ತನಾಗಿ ಆಸ್ಪತ್ರೆ ಸೇರಿರುವ ಬಳ್ಳೆಹಾಡಿಯ ಹುಡುಗ ರಾಜೇಶನೂ ಒಂದು ಉದಾಹರಣೆ. ಯುರೋಪದಂತಹ ರಾಷ್ಟಗಳಲ್ಲಿ ಈಗೀಗ ಜನತೆ ದೂರದರ್ಶನದ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ಒಂದು ಬಗೆಯ ಮಾರಲ್ ಗಿಲ್ಟ್ ಅಂದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಆ ಬಗೆಯ ಮನ:ಸ್ಥಿತಿ ಇನ್ನೂ ಒಡಮೂಡಿಲ್ಲ. ಹಾಗಾಗಿಯೆ ವೀಕ್ಷಕನ ಆಯುಷ್ಯದಷ್ಟೇ ದೀರ್ಘವಾದ ಧಾರವಾಹಿಗಳು ನಮ್ಮಲ್ಲಿ ತಯಾರಾಗುತ್ತವೆ. ನಮ್ಮಲ್ಲಿಯ ಟಿ.ವಿ.ವೀಕ್ಷಕರಿಗೆ ಇಂದಿಗೂ ಯಾವ ಕಾರ್ಯಕ್ರಮವನ್ನು ಆಯ್ಕೆ ಮಾಡಿಕೊಂಡು ನೋಡಬೇಕು ಎನ್ನುವ ಬಗ್ಗೆ ಸ್ಪಷ್ಟವಾದ ಸೂತ್ರಗಳಿಲ್ಲ. ದಿನದ 24 ಘಂಟೆಯೂ ಮನೆಯಲ್ಲಿ ವಕ್ಕರಿಸಿರುವ ಟಿ.ವಿ. ತರ್ಕಸಮ್ಮತವಾತ ಕಾರ್ಯಕ್ರಮಗಳ ಆಯ್ಕೆಗೆ ನಮ್ಮ ವೀಕ್ಷಕರಿಗೆ ಅವಕಾಶ ಮಾಡಿಕೊಟ್ಟಿರುವದಿದೆಯೆ.? ಎನ್ನುವುದು ಇನ್ನೊಂದು ಪ್ರಶ್ನೆ. ಟಿ.ವಿ.ಯಲ್ಲಿ ಬರುವ ಖಾಸಗಿ ಚಾನೆಲ್‌ಗಳ ಗುರಿ ಮಾತ್ರ ಕೈಗೂಡಿದಂತಾಗಿದೆ. ಜನಪ್ರಿಯ ಸಂಸ್ಕೃತಿಯ ಹೆಸರಲ್ಲಿ ಬೃಹತ್ ಪ್ರಮಾಣದ ವೀಕ್ಷಕರನ್ನು ಗ್ಲಾಮರಸ್ ಆಗಿರುವ ಜಾಹೀರಾತುಗಳ ಮೂಲಕ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಸಿಲುಕಿಸಿರುವುದಂತೂ ಹೌದು. ಭಾರತದಂತಹ ರಾಷ್ಟ್ರದಲ್ಲಿ ಭಾವುಕ ಪ್ರೇಕ್ಷಕರ ಸಂಖ್ಯೆ ಅಪಾರ. ಅಲ್ಲಿಯ ಕಾರ್ಯಕ್ರಮಗಳು ಇವರನ್ನು ಹೆಜ್ಜೆ ಹೆಜ್ಜೆಗೂ ಹಿಂಬಾಲಿಸುವುದಿದೆ. ಹಾಗಾಗಿಯೆ ಇಂದಿನ ಕೌಟುಂಬಿಕ ಪರಿಸರದಲ್ಲಿ ಧಾರವಾಹಿಯ ಅನೇಕ ಪಾತ್ರಗಳು ಸುತ್ತಿ ಸುಳಿಯುತ್ತವೆ.

ಸಿನೇಮಾ ದಿನಾಲು ಕೈಗೆಟಕುವದಿಲ್ಲ. ಎಟಕಿದರೂ ದಿನಾಲು ಸಿನೇಮಾ ನೋಡುವವರನ್ನು ಈ ಸಮಾಜ ಸಾಮಾನ್ಯವಾಗಿ ಸಹಿಸುವುದಿಲ್ಲ. ಟಿ.ವಿ.ಹಾಗಲ್ಲ ದಿನದ 24 ಘಂಟೆ ತೀರಾ ಸುಲಭವಾಗಿ ಎಟಕಬಹುದಾದ ಸಾಧನ. ಪರಿಣಾಮವಾಗಿ ಆ ಕುಟುಂಬದಲ್ಲಿರುವ ಎಲ್ಲ ವಯೋಮಾನದವರು ಅವರವರಿಗೆ ಬೇಕಾದ ಕಾರ್ಯಕ್ರಮಗಳನ್ನು ನೋಡಿ ಹಗುರಾಗುತ್ತಾರೆ. ಅಲ್ಲಿ ಬರುವ ಜಾಹೀರಾತುಗಳು ಮಾತ್ರ ಆ ಮನೆಯ ಯಜಮಾನನ ಪಾಲಿಗೆ ಪರೋಕ್ಷವಾಗಿ ಭಾರವಾಗುತ್ತವೆ. ಲೆವಿಸ್ ಎನ್ನುವ ಚಿಂತಕರು ಈ ಟಿ.ವಿ ವೀಕ್ಷಕರ ಮೇಲೆ ಬೀರಬಹುದಾದ ಪ್ರಭಾವವನ್ನು ಹೀಗೆ ಚರ್ಚಿಸಿರುವರು. ಅವರು ಹೇಳುವಂತೆ:

  • ಟಿ.ವಿ. ವೀಕ್ಷಕರ ಆಲೋಚನೆಗಳ ಮೆಲೆ ಪ್ರಭಾವ ಬೀರಬಹುದೇ ಹೊರತು ಅವರ ವರ್ತನೆಗಳ ಮೇಲಲ್ಲ.
  •  ಅದು ಬೀರುವ ಪ್ರಭಾವ ಅತ್ಯಂತ ಸಂಕೀರ್ಣವಾದುದು. ಅದು ಹೀಗೆ ಎಂದು ಖಚಿತವಾಗಿ ಹೇಳಲಾಗದು.
  •  ವೀಕ್ಷಕರು ವಿಭಿನ್ನವಾಗಿರುತ್ತಾರೆ ಹಾಗೆಯೆ ಪ್ರಭಾವವೂ ಭಿನ್ನವೇ.
  •  ವೀಕ್ಷಕರನ್ನು ಖಾಲಿ ಪಾತ್ರೆಗಳೆಂದು ತಿಳಿಯುವುದೇ ಹೆಚ್ಚೆಚ್ಚು ಮಾರಕ ಪರಿಣಾಮಗಳಾಗಲು ಕಾರಣ.
  •  ವೀಕ್ಷಕರ ಸಾಮಾಜಿಕ ಸಂದರ್ಭವನ್ನು ನಿರ್ಲಕ್ಷಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.

ವೀಕ್ಷಕರಲ್ಲಿ ಎಲ್ಲ ರೀತಿಯ ಮನೋಭಾವ, ಸ್ತರ, ಶಿಕ್ಷಣ, ವರ್ಗದವರಿದ್ದಾರೆ. ಅವರ ನಿರೀಕ್ಷೆಗಳ ಅಧ್ಯಯನದ ಮೂಲಕ ಕಾರ್ಯಕ್ರಮಗಳು ರೂಪುಗೊಳ್ಳಬೇಕು. ಜೊತೆಗೆ ವಸ್ತುನಿಷ್ಟವಾಗಿ ಟಿ.ವಿ. ಪ್ರೇಕ್ಷಕರ ಮೇಲೆ ಬೀರಬಹುದಾದ ಪ್ರಭಾವವನ್ನು ಅಧ್ಯಯನ ಮಾಡದೇ ಭಾವನೆಗಳನ್ನು ಕೆರಳಿಸಬಹುದಾದ, ಹಿಂಸಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬಾರದು. ಅತಿ ಮುಖ್ಯವಾಗಿ ವೀಕ್ಷಕರು ಯಾವಾಗಲೂ ಸಿನಿಕರಾಗಿರುತ್ತಾರೆ, ಕಾರ್ಯಕ್ರಮಗಳಲ್ಲಿ ತೋರಿಸುವ ಪ್ರತಿಯೊಂದು ಸಂಗತಿಯನ್ನು ಅವರು ಪ್ಯಾಸ್ಸಿವ್ ಆಗಿ ತೆಗೆದುಕೊಳ್ಳುತ್ತಾರೆ ಎಂದು ಭಾವಿಸಬಾರದು. ಮೂರ್ಖರ ಪೆಟ್ಟಿಗೆಯ ಮುಂದಿರುವವರೆಲ್ಲಾ ಮೂರ್ಖರಲ್ಲ.