Tag Archives: ನ್ಯಾಯಾಧೀಶರ ಹುದ್ದೆಗಾಗಿ ಪರೀಕ್ಷೆ

Karnataka High Court

ನಿಂತ ನೀರಾಗಿ ಕೊಳೆತವರು

ಕಳೆದ ವಾರ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಭವಿಸಿದ ಆಘಾತಕಾರಿ ಸಂಗತಿ ಯಾವುದೇ ಕನ್ನಡ ಮಾಧ್ಯಮಗಳಲ್ಲಿ ಸುದ್ಧಿಯಾಗಲಿಲ್ಲ. ಆದರೆ, ಎಲ್ಲಾ ಇಂಗ್ಲೀಷ್ ಪತ್ರಿಕೆಗಳು ಇದನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿ ಜೊತೆಗೆ ಸಂಪಾದಕೀಯ ಬರೆದು ಆತಂಕ ವ್ಯಕ್ತಪಡಿಸಿದವು.

ಕರ್ನಾಟಕದಲ್ಲಿ ಖಾಲಿ ಇರುವ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನೇಮಕ ಮಾಡುವ ಉದ್ದೇಶದಿಂದ ರಾಜ್ಯ ಹೈಕೋರ್ಟ್, ಏಳು ವರ್ಷ ಸೇವೆ ಸಲ್ಲಿಸಿರುವ ವಕೀಲರಿಗಾಗಿ ಅರ್ಹತೆ ಪರೀಕ್ಷೆಯೊಂದನ್ನು ಕಳೆದ ವಾರ ಏರ್ಪಡಿಸಿತ್ತು. 518 ಮಂದಿ ವಕೀಲರು ಪಾಲ್ಗೊಂಡಿದ್ದ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಒಬ್ಬ ವಕೀಲ ಮಾತ್ರ. ಉಳಿದ 517 ಮಂದಿ ವಿಫಲರಾಗಿರುವುದು ಇವರ ವಕೀಲಿ ವೃತ್ತಿ ಬಗೆಗಿನ ಬದ್ಧತೆ ಮತ್ತು ಅಧ್ಯಯನದ ಕೊರತೆಯನ್ನು ಅನಾವರಣಗೊಳಿಸಿದೆ.

ಈ ಕುರಿತಂತೆ ಆತಂಕ ವ್ಯಕ್ತಪಡಿಸಿರುವ ಬಹುತೇಕ ಸುದ್ದಿ ಮಾಧ್ಯಮಗಳು, ದೇಶದ ಅತ್ಯಂತ ಪ್ರತಿಷ್ಠಿತ ಕಾನೂನು ಕಾಲೇಜು ಇರುವ ಬೆಂಗಳೂರಿನಲ್ಲಿ ಇಂತಹ ಸಂಗತಿ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸುವುದರ ಜೊತೆಗೆ, ಇಂದಿಗೂ ಭಾರತದ ಅನೇಕ ಕೆಳಹಂತದ ನ್ಯಾಯಾಲಯಗಳಲ್ಲಿ ಸಂಕ್ಷಿಪ್ತವಾಗಿ ತೀರ್ಪು ಬರೆಯಲಾರದ ನ್ಯಾಯಾಧೀಶರುಗಳಿದ್ದಾರೆ ಎಂದು ವ್ಯಂಗ್ಯವಾಡಿವೆ.

ಇಂದು ಕಾನೂನು ಜ್ಞಾನಶಿಸ್ತುಗಳಲ್ಲಿ ಒಂದಾಗಿದ್ದು ಹಲವು ಶಾಖೆಗಳಾಗಿ ಕವಲೊಡೆದಿದೆ. ಕಾನೂನು ಪದವಿಯ ಸಂದರ್ಭದಲ್ಲಿ ಹನ್ನೆರಡಕ್ಕೂ ಮೇಲ್ಪಟ್ಟ ವಿವಿಧ ವಿಷಯಗಳ ಕಾನೂನನ್ನು ಅಧ್ಯಯನ ಮಾಡುವುದು ಕಡ್ಡಾಯ. ಪದವಿಯ ನಂತರ ಯಾವುದೇ ವ್ಯಕ್ತಿ ವೃತ್ತಿಯ ಸಂದರ್ಭದಲ್ಲಿ ತನಗೆ ಇಷ್ಟವಾದ ಕಾನೂನು ಶಾಖೆಯೊಂದನ್ನು ಮುಂದುವರಿಸಿಕೊಂಡು ಹೋಗುತ್ತಾನೆ. ಇದು ಕಾನೂನು ಪರಿಣಿತಿಯಲ್ಲಿ ಅವಶ್ಯ ಕೂಡ ಹೌದು. ಹಾಗಾಗಿ ಇಂದು ನಾವು ಎಲ್ಲೆಡೆ ಕ್ರಿಮಿನಲ್ ಲಾ, ಸಿವಿಲ್ ಲಾ, ಕಂಪನಿ ಲಾ, ಅಂತಾರಾಷ್ಟ್ರೀಯ ಕಾನೂನು, ಹಿಂದೂ ಕಾನೂನು ಹೀಗೆ ಈ ವಿಷಯಗಳಲ್ಲಿ ಪರಿಣಿತ ಹಾಗೂ ತಜ್ಞ ವಕೀಲರನ್ನು ನಾವು ಕಾಣುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ಪರಿವರ್ತನಾ ಮತ್ತು ಚಲನಶೀಲವಾದ ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಪರಿಷ್ಕರಣೆಗೆ ಒಳಗಾಗುತ್ತಿರುವ ಕಾನೂನುಗಳ ಬಗ್ಗೆ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡವರು ಅಧ್ಯಯನ ಮಾಡುವುದು ಅಗತ್ಯ.ವಿಲ್ಲ ಎಂದು ಭಾವಿಸುವುದು ಅವಿವೇಕತನದ ಪರಮಾವಧಿಯಾಗುತ್ತದೆ.

ವರ್ತಮಾನದ ವಕೀಲಿ ವೃತ್ತಿ ಆಶಾದಾಯಕ ವೃತ್ತಿಯಾಗಿಲ್ಲ. ಆದರೂ ಕಾನೂನು ಅಧ್ಯಯನಕ್ಕೆ ಯುವ ಜನಾಂಗ ಆಸಕ್ತಿ ತೋರುತ್ತಿದ್ದು, ಪದವಿಯ ನಂತರ ಸ್ವತಂತ್ರ ವೃತ್ತಿಗಿಂತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ದೊರೆಯುತ್ತಿರುವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ದಶಕಗಳ ಹಿಂದೆ ಕಾನೂನು ಪದವಿ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ನಮ್ಮ ವಕೀಲರಿಗೆ ವೃತ್ತಿ ಮತ್ತು ಅದರ ಘನತೆಗಿಂತ ಸಂಘಟನೆ ಮತ್ತು ರಾಜಕೀಯ ಮುಖ್ಯವಾಗಿದೆ.

Karnataka High Court

Karnataka High Court

ಕರ್ನಾಟಕದಲ್ಲಿ ಇಂದು ವಕೀಲರ ಸಂಘ, ವಕೀಲರ ಪರಿಷತ್ ಹೀಗೆ ಹಲವು ಬಣಗಳು ಹುಟ್ಟಿಕೊಂಡು ಇವುಗಳ ಚುನಾವಣೆ ಮತ್ತು ಚುನಾವಣೆಯ ಸಂದರ್ಭದಲ್ಲಿ ವಕೀಲರ ವರ್ತನೆ ಯಾವ ರಾಜಕೀಯ ಪಕ್ಷಕ್ಕೂ ಕಡಿಮೆ ಇಲ್ಲ. ತಮ್ಮ ವೃತ್ತಿಯ ಘನತೆ ತೊರೆದು ರಾಜಕೀಯ ಪಕ್ಷಗಳೊಂದಿಗೆ ಹಲವು ವಕೀಲರು ಗುರುತಿಸಿಕೊಂಡಿದ್ದರೆ, ಮತ್ತಷ್ಟು ವಕೀಲರು ಯಾವ ಅಳುಕೂ ಇಲ್ಲದೆ ಕೋಮುವಾದಿ ಪಕ್ಷಗಳೊಂದಿಗೆ ಕೈ ಜೋಡಿಸಿ ಬೀದಿಗಿಳಿದು ಪ್ರತಿಭಟಿಸುವುದು, ರಸ್ತೆತಡೆ ಮಾಡುವುದನ್ನು ನಾವು ಕಾಣುತ್ತಿದ್ದೇವೆ.

ಇವರೆಲ್ಲರೂ ಒಮ್ಮೆ ತಮ್ಮ ಅರ್ಹತೆಯ ಬಗ್ಗೆ ತಮ್ಮ ತಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಹಾಕಿಕೊಳ್ಳುವುದು ಒಳಿತು. ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡ ಪ್ರತಿ ಮೂರು ವರ್ಷಕ್ಕೊಮ್ಮೆ ಇವರಿಗೆಲ್ಲಾ ಕಡ್ಡಾಯವಾಗಿ ಪರೀಕ್ಷೆ ನಡೆಸಿ ವಕೀಲಿ ವೃತ್ತಿಗೆ ಅನುಮತಿ ನೀಡುವುದನ್ನು ಚಾಲನೆಗೆ ತಂದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಒಂದಿಷ್ಟು ಸುಧಾರಣೆ ಕಾಣಬಹುದು. ಇಂತಹ ದುರ್ಗತಿ ಕೇವಲ ವಕೀಲ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ.

ಕಳೆದ ಆಗಸ್ಟ್ 15ರಂದು ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಖಾಸಗಿ ಚಾನಲ್ ಒಂದು ನಮ್ಮ ಸರಕಾರಿ ಶಾಲಾ ಶಿಕ್ಷಕರಿಗೆ, ಸ್ವತಂತ್ರ ಬಂದು ಎಷ್ಟು ವರ್ಷಗಳಾದವು?, ಮಹಾತ್ಮಗಾಂಧಿಯ ಪೂರ್ಣ ಹೆಸರೇನು?, ನೆಹರು ಪುತ್ರಿ ಯಾರು?, ಜಲಿಯನ್ ವಾಲಾಬಾಗ್ ಎಲ್ಲಿದೆ? ಎಂಬ ಪ್ರಶ್ನೆಗಳನ್ನು 50ಕ್ಕೂ ಹೆಚ್ಚು ಶಿಕ್ಷಕರ ಎದುರು ಇಟ್ಟಿತ್ತು. ಇವುಗಳಿಗೆ ಒಂದಿಬ್ಬರು ಹೊರತುಪಡಿಸಿದರೆ ಉಳಿದವರೆಲ್ಲಾ ಕ್ಯಾಮೆರಾ ಎದುರು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದರು. ಇವರೆಲ್ಲಾ ನಮ್ಮ ಸಮಾಜದ ಭಾಗವಾಗಿರುವುದು ವರ್ತಮಾನದ ದುರಂತಗಳಲ್ಲಿ ಒಂದು.

– ಡಾ.ಎನ್.ಜಗದೀಶ್ ಕೊಪ್ಪ