Tag Archives: ಪರಿಸರ

ನಮ್ಮ ಪರಿಸರ – ನೆಲ ಜಲ : 2

– ಪ್ರಸಾದ್ ರಕ್ಷಿದಿ

ನಮ್ಮ ಪರಿಸರ – ನೆಲ ಜಲ : 1

ಈ ಮೊದಲಿನ ಎರಡು ಸಂಗತಿಗಳು ಪೂರ್ವ ಪಶ್ಚಿಮ ತುದಿಗಳಾದರೆ, ಇನ್ನೊಂದು ನಾವೀಗ ಹೆಚ್ಚಾಗ ರೂಪಿಸಿಕೊಂಡಿರುವ ಆಧುನಿಕ ಕೃಷಿ. ಸಾಕಷ್ಟು ರಸಗೊಬ್ಬರ, ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು, ಹೆಚ್ಚು ನೀರು, ತರಹೇವಾರಿ ಕೃಷಿವಿಷಗಳನ್ನೆಲ್ಲ ಬಳಸಿ ಬೆಳೆಯುವ, ಸಾಕಷ್ಟು ಯಂತ್ರೋಪಕರಣಗಳನ್ನು ಉಪಯೋಗಿಸಲು ಅವಕಾಶವಿರುವ ಕೃಷಿಯೇ ಈ ಆಧುನಿಕ ಕೃಷಿ.

ಆಧುನಿಕ ಕೃಷಿಯ ಸಮರ್ಥಕರು ನೀಡುವ ಅತಿ ಮುಖ್ಯ ಉದಾಹರಣೆಯೆಂದರೆ ಸ್ವಾತಂತ್ರ್ಯೋತ್ತರ ಭಾರತದ ಆಹಾರ ಪರಿಸ್ಥಿತಿ. ಸುಮಾರು ಎಪ್ಪತ್ತರ ದಶಕದವರೆಗೂ ಭಾರತದ ಆಹಾರ ಮಂತ್ರಿಯೆಂದರೆ ಭಿಕ್ಷಾನ್ನ ಮಂತ್ರಿಯೆಂದೇ ಪ್ರಖ್ಯಾತ!. ಆಗ ಅಮೆರಿಕಾ ಕೊಟ್ಟರೆ ಮಾತ್ರ ನಮಗೆ ಅನ್ನ ಎಂಬ ಪರಿಸ್ಥಿತಿ, ”ಆದರೆ ಈಗ ನೋಡಿ ನಾವು ಆಹಾರವನ್ನು ರಫ್ತು ಮಾಡುತ್ತಿದ್ದೇವೆ.  ಜನಸಂಖ್ಯೆಯ ಅಗಾಧ ಏರಿಕೆಯ ಜೊತೆಯಲ್ಲೇ ಆಹಾರ ದಾಸ್ತಾನು ಕೂಡಾ ಅದೇ ಪ್ರಮಾಣದಲ್ಲಿ ಹೆಚ್ಚಿದೆ …” ಇತ್ಯಾದಿ. ಇದು ಅಂಕಿ ಅಂಶಗಳ ಮತ್ತು ಆಹಾರದ ಲಭ್ಯತೆಯ ಮಟ್ಟದಲ್ಲಿ ಖಂಡಿತ ನಿಜ. ಆದರೆ ಇದಕ್ಕೆ ಆಧುನಿಕ ಕೃಷಿ ಪದ್ಧತಿ ಒಂದೇ ಕಾರಣವಲ್ಲ. ಇತ್ತೀಚಿನ ವರ್ಷಗಳಲ್ಲಿ ಆದ ನಮ್ಮ ಅನೇಕ ಹೊಸ ನೀರಾವರಿ ಯೋಜನೆಗಳು ಮತ್ತು ಅದರಿಂದಾದ ಕೃಷಿ ಭೂಮಿಯ ವಿಸ್ತರಣೆ, ಹಾಗೂ ನಾವು ಹೊಸದಾಗಿ ಕೃಷಿಗೆ ಒಳಪಡಿಸಿದ ಅರಣ್ಯ ಭೂಮಿಯ ಪ್ರಮಾಣ ಇವುಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ಮಾಡಿದರಷ್ಟೇ ಸರಿಯಾದ ಚಿತ್ರಣ ದೊರೆತೀತು. ಈ ಆಧುನಿಕ ಕೃಷಿಯನ್ನೇ ವೈಜ್ಞಾನಿಕವೆಂದು ನಂಬಿಕೊಂಡವರಿಂದ ಈ ಸಮೀಕ್ಷೆ- ಅಧ್ಯಯನಗಳು ನಡೆದಲ್ಲಿ ಯಾವುದೇ ಪ್ರಯೋಜನವಿಲ್ಲ. ಇತ್ತೀಚೆಗೆ ನಮ್ಮ ಹತ್ತಿರದ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯೊಬ್ಬರಿಗೆ ಅವರ ಸಂಶೋಧನೆಯ ಕೆಲವು ಲೇಖನಗಳನ್ನು ಪ್ರಕಟಿಸಲು ಅವರ ನಿರ್ದೇಶನಾಲಯದಿಂದ ಅನುಮತಿ ಸಿಗಲಿಲ್ಲ. ಯಾಕೆಂದರೆ ಅವರ ಸಂಶೋಧನೆಯ ಫಲಶ್ರುತಿ, ಸರ್ಕಾರ ಪ್ರಚಾರ ಮಾಡುತ್ತಿದ್ದ ವಿಷಯಗಳ ಹಾಗೂ ಕೆಲವು ಕಂಪೆನಿಗಳ ಹಿತಾಸಕ್ತಿಯ ವಿರುದ್ಧವಾಗಿತ್ತು. ಅವರ ಅಭಿಪ್ರಾಯ ಹೀಗಿತ್ತು  “ಈಗ ನಮ್ಮ ಮುಂದಿರುವುದು ಕೆಲವು ಕೃಷಿ ಪದ್ಧತಿಗಳು,  ಸಾಂಪ್ರದಾಯಿಕ ಕೃಷಿ, ಸಾವಯವ ಕೃಷಿ,  ಮತ್ತು ಆಧುನಿಕ ಕೃಷಿ ಇತ್ಯಾದಿ… ವೈಜ್ಷಾನಿಕ ಕೃಷಿ ಎನ್ನುವುದು ನಾವಿನ್ನು ಕಂಡುಕೊಳ್ಳಬೇಕಾದ ಮತ್ತು ನಿರಂತರ ಹುಡುಕಾಟದಲ್ಲಿರಬೇಕಾದ ಮಾರ್ಗ ಅಷ್ಟೆ” ಎಂದು. ಈ ನಿರಂತರ ಹುಡುಕಾಟದ ಕ್ರಿಯೆ ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯವಾಗಬೇಕಾದ ವಿಷಯ. ಅದಲ್ಲದೆ ಆ ವಿಜ್ಞಾನಿ ಮತ್ತೂ ಮುಂದುವರಿದ”  ಆಧುನಿಕ ಕೃಷಿಯೆನ್ನುವುದು ದೊಡ್ಡ ಪ್ರಮಾಣದ ಕೃಷಿಗೆ ಅನುಕೂಲಕರವಾಗಿದೆ, ಯಾಕೆಂದರೆ ಯಂತ್ರಗಳು, ನೀರಾವರಿ, ಸುಧಾರಿತ ಬೀಜಗಳು, ಹಾಗೇ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ-ಕೀಟನಾಶಕ, ಕಳೆನಾಶಕ ಮುಂತಾದವುಗಳ ಬಳಕೆ ಇದಕ್ಕೆ ಬೇಕಾಗುವ ದೊಡ್ಡ ಪ್ರಮಾಣದ ಭಂಡವಾಳ ಹೂಡಿಕೆ ಎಲ್ಲವನ್ನೂ ಒಳಗೊಂಡು ಕೈಗಾರಿಕೆ ಆಧಾರಿತ ಕೃಷಿಯಾಗಿದೆ” ಎಂದರು. ಈ ಎಲ್ಲ ಕಾರಣಗಳಿಗಾಗಿಯೇ ಈ ಆಧುನಿಕ ಕೃಷಿ ನಮ್ಮನ್ನಾಳುವವರಿಗೂ ಅತ್ಯಂತ ಆಪ್ಯಾಯಮಾನವಾದದ್ದಾಗಿದೆ.

ಇದೀಗ ಇನ್ನೊಂದು ಮಧ್ಯಮ ಮಾರ್ಗವಾದ ‘ಸಾವಯವ ಕೃಷಿ’ಗೆ ಬರೋಣ. ಈಗ ಸರ್ಕಾರವೇ  ಸಾವಯವ ಕೃಷಿಯ ಬಗ್ಗೆ ಆಸಕ್ತಿ ತೋರಿದೆಯೆಂದರೆ, ಸರ್ಕಾರಕ್ಕೆ ಈ ಆಧುನಿಕ ಕೃಷಿಯ ಅನಾಹುತಗಳು ಅರ್ಥವಾಗಿ ಸಾವಯವ ಕೃಷಿಯ ಪ್ರತಿಪಾದಕನಾಗಿದೆ ಎಂದುಕೊಂಡರೆ  ಅದು ನಮ್ಮ ದಡ್ಡತನವಷ್ಟೆ. ಯಾವುದೇ ಸರ್ಕಾರಕ್ಕೂ ಯಾವಾಗಲೂ ಬೃಹತ್ ಯೋಜನೆಗಳೇ ಅಚ್ಚುಮೆಚ್ಚು. ಯೋಜನೆಗಳ ಗಾತ್ರ ಹಿರಿದಾದಷ್ಟೂ ಆಳುವವರ ಹಿತವೂ ದೊಡ್ಡ ಪ್ರಮಾಣದಲ್ಲಿ ರಕ್ಷಣೆಯಾಗುತ್ತದೆ. ಇದಕ್ಕೆ ಆಧುನಿಕ ಹಾಗೂ ಹೈಟೆಕ್ ಕೃಷಿಯ ದೊಡ್ಡ ಕಂಪೆನಿಗಳೇ ಸೂಕ್ತವಾದದ್ದು. ಹೀಗಿದ್ದೂ ಸರ್ಕಾರ ಈಗೇಕೆ ಸಾವಯವದ ಧ್ವನಿಯೆತ್ತಿದೆ? ವೈಯಕ್ತಿಕ ಮಟ್ಟದಲ್ಲಿ ಈ ರೀತಿ ಯೋಚಿಸುವ ಕೆಲವರು ಶಾಸಕರೋ ಮಂತ್ರಿಗಳೋ ಇರಬಹುದು, ಆದರೆ ಒಟ್ಟೂ ಆಡಳಿತ ಯಂತ್ರ ಯಾವತ್ತೂ ದೊಡ್ಡ ಪ್ರಮಾಣದ ಆಧುನಿಕ ಕೃಷಿಯ ಪರವೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರ್ಯಾಯ ಕೃಷಿಗೆ ಮತ್ತು ಪರ್ಯಾಯ ಆರೋಗ್ಯ ಪದ್ಧತಿಗೆ ಸಿಗುತ್ತಿರುವ ಪ್ರಚಾರ ಜೊತೆಗೆ ಅಂತಾರಾಷ್ಟ್ರೀಯಮಟ್ಟದಲ್ಲೂ ಈ ಬಗ್ಗೆ ಮೂಡುತ್ತಿರುವ ಜಾಗೃತಿ ಹಾಗೂ ನಮ್ಮಲ್ಲೂ ಕೃಷಿಕರಲ್ಲಿ ಹಾಗೂ ಸಮಾಜದ ಅನೇಕ ವಲಯಗಳಲ್ಲಿ ಹೆಚ್ಚುತ್ತಿರುವ ತಿಳುವಳಿಕೆ, ಇವೆಲ್ಲವುಗಳಿಂದ ಸರ್ಕಾರದ ಮೇಲೆ ಬೀಳುತ್ತಿರುವ ಒತ್ತಡದಿಂದಾಗಿ  ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ ಯಷ್ಟೆ

ಇರಲಿ, ಸರ್ಕಾರ ಉದ್ದೇಶ ಒಳ್ಳೆಯದೆಂದೇ ಇಟ್ಟುಕೊಳ್ಳೋಣ. ಸರ್ಕಾರ ಹೇಳುವಂತಹ ಅಥವಾ ನಾವು ಅಂದುಕೊಂಡಿರುವಂತಹ ಸಾವಯವ ಕೃಷಿ ಅಂದರೇನು? ರಾಸಾಯನಿಕ ವಸ್ತುಗಳನ್ನು ಅಂದರೆ ರಸಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳನ್ನು ಉಪಯೋಗಿಸದೆ, ಹಟ್ಟಿಗೊಬ್ಬರ- ಸಸ್ಯಜನ್ಯ ಕೀಟನಾಶಕಗಳು, ಸಾವಯವಗೊಬ್ಬರ ಇತ್ಯಾದಿಗಳನ್ನು ಮಾತ್ರ ಬಳಸಿ ಆದಷ್ಟೂ ಸ್ಥಳೀಯವಾಗಿ ಲಭ್ಯವಾಗುವ ಸಾವಯವ ತ್ಯಾಜ್ಯವಸ್ತುಗಳನ್ನು ಉಪಯೋಗಿಸಿ ಮಾಡುವ ಕೃಷಿ. (ರಾಸಾಯನಿಕಗಳೇ ಆಗಿರುವ ಸುಣ್ಣ, ಬೊಡೊ ಮಿಶ್ರಣ ಇವುಗಳ ಬಳಕೆ  ಇಲ್ಲಿ ನಿಷಿದ್ಧವಲ್ಲ ಕೆಲವರು ರಂಜಕಯುಕ್ತ ಗೊಬ್ಬರವಾದ ರಾಕ್ ಫಾಸ್ಫೇಟಿಗೂ ಅದು ಕಲ್ಲಿನ ಪುಡಿಯೆಂದು ವಿನಾಯಿತಿ ನೀಡಿದ್ದಾರೆ) ಇದರೊಂದಿಗೆ ಇತರ ಪೂರಕ ಚಟುವಟಿಕೆಗಳನ್ನು ಅಂದರೆ ಹೈನುಗಾರಿಕೆ, ಕೋಳಿಸಾಕಣೆ ಇತ್ಯಾದಿಗಳನ್ನು ಮಾಡಿದರೆ ಇನ್ನೂ ಒಳ್ಳೆಯದು. ಸಣ್ಣ ಮತ್ತು ಮಧ್ಯಮ ಗಾತ್ರದ ಹಿಡುವಳಿಗಳು ಇದಕ್ಕೆ ಹೆಚ್ಚು ಅನುಕೂಲದ್ದಾಗಿರುತ್ತವೆ.

ಹೀಗಿರುವಾಗ ಸಣ್ಣ ಮತ್ತು ಮಧ್ಯಮ ಕೃಷಿಕರು ಒಂದೆರಡು ದನಕರುಗಳನ್ನು ಜೊತೆಯಲ್ಲಿ ಕುರಿಕೋಳಿಗಳನ್ನು ಸಾಕುತ್ತ ಸಾವಯವ ಗೊಬ್ಬರ ತಯಾರಿಸಿ ಉಪಯೋಗಿಸುತ್ತಾ, ಅತಿ ಕಡಿಮೆ ರಾಸಾಯನಿಕ ಅಥವಾ ರಾಸಾಯನಿಕರಹಿತ ಕೃಷಿ ಮಾಡುತ್ತಾ ತಾನೂ ಆರೋಗ್ಯವಂತನಾಗಿ- ಭೂಮಿ ಮತ್ತು ಸಮಾಜದ ಎಲ್ಲರ ಆರೋಗ್ಯವನ್ನು ಕಾಪಾಡುತ್ತ ಸುಖವಾಗಿ ಇರಬಹುದಾಗಿತ್ತಲ್ಲವೇ?.  ಆದರೆ ನಾವೆಂದುಕೊಂಡಂತೆ ಪರಿಸ್ಥಿತಿ ಅಷ್ಟು ಸರಳವಾಗಿ ಖಂಡಿತ ಇಲ್ಲ. ಒಂದೆಡೆ ಪರಿಸರ ಪ್ರಿಯರು, ಕೃಷಿಪಂಡಿತರುಗಳು, ಭಾನುವಾರದ ಕೃಷಿಕರು, ಹವ್ಯಾಸಿ ಕೃಷಿಕರು, ಹಾಗೂ ಅನೇಕ ಸಂಘಟನೆಗಳು-ಸಹಜಕೃಷಿ, ಸಾವಯವ ಕೃಷಿ, ನೆಲಜಲ ಸಂರಕ್ಷಣೆ ಮುಂತಾದುವುಗಳ ಬಗ್ಗೆ ನಡೆಸುವ ಕಾರ್ಯಕ್ರಮಗಳು, ವಿಚಾರಸಂಕಿರಣಗಳು, ಚಳುವಳಿಗಳು, ಜೊತೆಗೆ ಹಲವು ಕೃಷಿಪತ್ರಿಕೆಗಳಲ್ಲಿ ನಿರಂತರವಾಗಿ ಬರುತ್ತಿರು ಲೇಖನಗಳು, ಇವೆಲ್ಲವುಗಳಿಂದ ಸಾವಯವ ಕೃಷಿಗೆ ಸಿಕ್ಕಿದ ಪ್ರಚಾರದಿಂದಾಗಿ, ಸಾವಯವ ಪರಿಸರ ಸ್ನೇಹಿವಸ್ತುಗಳ ದೊಡ್ಡ ಉತ್ಪಾದಕರುಗಳೇ ಹುಟ್ಟಿಕೊಂಡಿದ್ದಾರೆ. ಇವರುಗಳು ಮುದ್ರಿಸಿ ಹಂಚುತ್ತಿರುವ ಕರಪತ್ರಗಳು ಯಾವುದೇ ದೊಡ್ಡ ರಾಸಾಯನಿಕ ಕಂಪೆನಿಗಳ ಪ್ರಚಾರ ಸಾಮಗ್ರಿಯನ್ನೂ ನಾಚಿಸುವಂತಿದೆ. ರಾಸಾಯನಿಕ ವಸ್ತುಗಳಿಗೆ ಹೋಲಿಸಿದರೆ ಇವುಗಳ ಬೆಲೆಯೂ ದುಬಾರಿಯಾಗಿದೆ. ಈ ವಿಚಾರ ಆಯರ್ವೆದ ಔಷಧಿಗಳಂತಹ ವೈದ್ಯಕೀಯ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಸದ್ಯಕ್ಕಂತೂ ಇವುಗಳಲ್ಲಿ ಯಾವುದು ನಿಜವಾದ ಸಾವಯವ ಅಥವಾ ಪರಿಸರ ಸ್ನೇಹಿ ಎಂದು ನಿರ್ಧರಿಸಲು ಯಾವುದೇ ಮಾನದಂಡವೂ ಇಲ್ಲ. ವೈಯಕ್ತಿಕ ಪರಿಚಯ, ಅನುಭವ ನಂಬಿಕೆಗಳನ್ನಾಧರಿಸಿ ಇವುಗಳನ್ನು ಕೊಳ್ಳಬೇಕಷ್ಟೆ.

ಈ ಬಗ್ಗೆ ನಡೆಯುವ ಚರ್ಚೆ, ಸಭೆ, ವಿಚಾರ ಸಂಕಿರಣಗಳನ್ನು ಗಮನಿಸಿದರೆ ಅಲ್ಲಿ ಮತ್ತೆ ಮತ್ತೆ ಅದೇ ತಜ್ಞರುಗಳು ಅದೇ ಜನರು ಇರುತ್ತಾರೆ. ಉದಾಹರಣೆಗೆ ನಮ್ಮ ಜನ ಕೃಷಿಯ ವಸ್ತುಗಳು ಮಾರುಕಟ್ಟೆಯಲ್ಲಿ ಇತರ ಉತ್ಪನ್ನಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಬೇಕೆಂದು ‘ಫುಕುವೋಕಾ’ ಹೇಳುತ್ತಾರೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಸಹಜ-ಸಾವಯವಗಳಂತಹ ಯಾವ ಪದ್ಧತಿಯ ಉತ್ಪನ್ನಗಳು ಕೂಡಾ ಬೆಲೆಯಲ್ಲಿ ಇತರ ಉತ್ಪನ್ನಗಳೊಂದಿಗೆ ಸ್ಪರ್ದಿಸಲಾರವು. ಒಂದುವೇಳೆ ಇವುಗಳೆಲ್ಲವನ್ನೂ ಮೀರಿ ಸಾವಯವ ಕೃಷಿ ಮಾಡುವ ಉಮೇದಿನಲ್ಲಿರುವ ಕೃಷಿಕ ಹೊರಗಿನಿಂದ ಕೋಳಿಗೊಬ್ಬರವನ್ನೋ ಕೊಟ್ಟಿಗೆ ಗೊಬ್ಬರವನ್ನೋ ಖರೀದಿಸಿ ಉಪಯೋಗಿಸಬಯಸಿದರೆ ಇಂದು ಅದರಲ್ಲಿ ಬೆರೆತಿರುವ ರಾಸಾಯನಿಕಗಳು ಮತ್ತು ಹನುಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ. ಯಾಕೆಂದರೆ ಹಾಲು, ಮೊಟ್ಟೆ ಮಾಂಸದ ಅಧಿಕ ಇಳುವರಿಗಾಗಿ ಈ ಪ್ರಾಣಿಗಳಿಗೆ ತಿನ್ನಿಸಿದ ಆಹಾರ, ಕೊಡುವ ಔಷಧಿ-ಇಂಜೆಕ್ಷನ್ ಗಳನ್ನು ನೋಡಿದರೆ ಗಾಬರಿಯಾಗುವಂತಿದೆ. ಇತ್ತೀಚೆಗೆ ಆ್ಯಂತೋರಿಯಂ ಬೆಳೆ ಆರಂಭಿಸಿದ ಕೃಷಿಕರೊಬ್ಬರು ಕೋಳಿಗೊಬ್ಬರ ಬಳಸಿ ಅದರಿಂದಾಗಿ ಸಾವಿರಾರು ಗಿಡಗಳನ್ನು ಕಳೆದುಕೊಂಡರು. ಪರೀಕ್ಷಿಸಿದಾಗ ಅವರು ಬಳಸಿದ ಕೋಳಿ ಗೊಬ್ಬರವೇ ಸೋಂಕಿನಿಂದ ವಿಷಮಯವಾಗಿತ್ತು. ಉಳಿದ ಗಿಡಗಳನ್ನು ಉಳಿಸಿಕೊಳ್ಳಲು ಮತ್ತೊಂದಷ್ಟು ವಿಷನಿವಾರಕಗಳನ್ನು ಸುರಿಯುವುದು ಅನಿವಾರ್ಯವಾಯ್ತು.

ನಾನು ಇದನ್ನೆಲ್ಲಾ ಮತ್ತೆ ಮತ್ತೆ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮ ಕೃಷಿ ವಿಷಮಯವಾಗುತ್ತ ಹೋದಂತೆ ನೆಲಜಲಗಳೂ ಜೊತೆಯಲ್ಲಿ ವಾತಾವರಣವೂ ವಿಷಮಯವಾಗತ್ತ ಹೋಗುತ್ತದೆ. ಇದಕ್ಕೆ ಪರಿಹಾರ ಕಂಡುಹಿಡಿಯಲು ಸಮಗ್ರವಾದ, ಅಂದರೆ ನಮ್ಮ ಕೃಷಿಪದ್ಧತಿಗಳು, ಕೈಗಾರಿಕೋಧ್ಯಮಗಳು, ನಮ್ಮ ಸಾಮಾಜಿಕ- ಸಾಂಸ್ಕೃತಿಕ ಸಂಬಂಧಗಳು ಇವುಗಳನ್ನೆಲ್ಲ ಗಮನಿಸಿ ರೂಪಿಸಲಾಗುವ ನೀತಿಯೊಂದು ಇಡೀ ಜಗತ್ತಿಗೇ ಅನ್ವಯವಾಗುವಂತೆ ಇರದಿದ್ದರೆ, ಅಥವಾ ಪ್ರತಿಯೊಂದು ಸಮಸ್ಯೆಯನ್ನೂ ಪ್ರತ್ಯೇಕವಾಗಿ ಪರಿಗಣಿಸಿ ಪರಿಹಾರ ಹುಡುಕಲು ಪ್ರಯತ್ನಿಸಿದರೆ ಹುತ್ತವ ಬಡಿದಷ್ಟೇ ಫಲ ದೊರೆತೀತು.

ನಮ್ಮಲ್ಲಿ ಕೇಂದ್ರ- ರಾಜ್ಯಗಳೆರಡರಲ್ಲೂ ಪರಿಸರ ಇಲಾಖೆ ಇದೆ, ಮಂತ್ರಿಗಳೂ ಇದ್ದಾರೆ. ಆ ಇಲಾಖೆಯ ಅಡಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದೆ. ಅದಕ್ಕಷ್ಟು ಆಡಳಿತಯಂತ್ರ ಸಿಬ್ಬಂದಿ ಎಲ್ಲವೂ ಇವೆ. ಈ ಇಲಾಖೆ ಮಾಲಿನ್ಯ ನಿಯಂತ್ರಣಕ್ಕಿಂತ ಸುದ್ದಿ ಮಾಡಿದ್ದೇ ಹೆಚ್ಚು. ನಮ್ಮ ಮಲೆನಾಡಿನ ಮಟ್ಟಿಗೆ ಅದೂ ಕಾಫಿ ಬೆಳೆಯುವ ಪ್ರದೇಶದಲ್ಲಿ ಕಾಫಿ ಪಲ್ಪರ್ ನೀರಿನ ಬಗ್ಗೆ ಇವರು ಸುದ್ದಿ ಮಾಡಿದಷ್ಟು ಬೇರಾವುದೇ ಕೈಗಾರಿಕಾ ಮಾಲಿನ್ಯದ ಬಗ್ಗೆ ಮಾಡಿದ್ದಿಲ್ಲ. ಕಾಫಿ ಹಣ್ಣಿನ ಸಂಸ್ಕರಣೆ ಅಂದರೆ ಪಲ್ಪಿಂಗ್ ಮಾಡುವಾಗ ಬರುವ ತ್ಯಾಜ್ಯ ನೀರನ್ನು ನೇರವಾಗಿ ಹೊಳೆಗಳಿಗೆ ಬಿಡುವುದರಿಂದ ಹೊಳೆನೀರು ಕಲುಷಿತವಾಗುತ್ತದೆ. ಕೊಳೆತನೀರಿನ ವಾಸನೆಯುಂಟಾಗುವುದಲ್ಲದೆ ಜಲಚರಗಳು ಸಾಯುತ್ತವೆ. ಜನ ಜಾನುವಾರುಗಳು ಕುಡಿಯಲು ಆ ನೀರು ಯೋಗ್ಯವಾಗಿರುವುದಿಲ್ಲ. ಇದನ್ನು ನಿಲ್ಲಿಸಬೇಕೆಂದು ಜನರೇ ಅನೇಕ ಸಾರಿ ಪ್ರತಿಭಟನೆಯನ್ನೂ ಮಾಡಿದ್ದಾರೆ-ಮಾಡುತ್ತಿದ್ದಾರೆ. ಈ ನೀರನ್ನು ಹೊಳೆಗೆ ಬಿಡದಂತೆ ತಡೆಯಬೇಕಾದ್ದು ಸರ್ವಥಾ ಯೋಗ್ಯವಾದ ಕೆಲಸ. ಆದರೆ ಈ ನೀರಿನ ಮರುಬಳಕೆಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ತಯಾರಿಸಿರುವ ಯೋಜನೆಗಳು ತುಂಬ ದುಬಾರಿಯಾದವು. ಇಂದಿನ ಕಾಫಿ ಬೆಳೆ ಮತ್ತು ಬೆಲೆಗಳ ಪರಿಸ್ಥಿತಿಯಲ್ಲಿ ಈ ನೀರು ಸಂಸ್ಕರಣಾ ವಿಧಾನವನ್ನು ಅನುಸರಿಸುವುದು ದೊಡ್ಡ ಬೆಳೆಗಾರರಿಗೂ ಕಷ್ಟ.

ಆದರೆ ಈಗ ಹೆಚ್ಚಿನ ಎಲ್ಲಾ ಬೆಳೆಗಾರರೂ ಸಮಸ್ಯೆಯನ್ನು ಅರ್ಥಮಾಡಿಕೊಂಡು ಈ ತ್ಯಾಜ್ಯ ನೀರನ್ನು ದೊಡ್ಡ ದೊಡ್ಡ ಇಂಗುಗುಂಡಿಗಳನ್ನು ಮಾಡಿ ಸಂಗ್ರಹಿಸಿಟ್ಟು ನಂತರ ತೋಟಕ್ಕೆ ಗೊಬ್ಬರವಾಗಿ ಬಳಸುತ್ತಿದ್ದಾರೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಈ ತ್ಯಾಜ್ಯ ನೀರಿನಲ್ಲಿ ಯಾವುದೇ ರಾಸಾಯನಿಕ ವಸ್ತುಗಳು ಇರುವುದಿಲ್ಲ. ಶುದ್ಧ ಸಾವಯವ ಪದಾರ್ಥಗಳಾದ ಕಾಫಿ ಹಣ್ಣಿನ ಅಂಟು ಮತ್ತು ಸಿಪ್ಪೆ ಮಾತ್ರ ಇರುತ್ತದೆ. ಈ ತ್ಯಾಜ್ಯ ನೀರಿನ ಸಂಸ್ಕರಣೆಗೆ ದುಬಾರಿಯಲ್ಲದ ಸರಳವಿಧಾನವೊಂದನ್ನು ಕಂಡುಹಿಡಿಯಬೇಕಾದ ಅಗತ್ಯವಿದೆ. ಆದರೆ ಕೃಷಿವಿಷಗಳಿಂದ ಆಗುತ್ತಿರುವ ನೆಲ ಜಲ ಮಾಲಿನ್ಯವನ್ನು ತಡೆಯಲು ಯಾವುದೇ ಪ್ರಯತ್ನವನ್ನು ಮಾಡದೆ, ಎಂತಹದೇ ಘನಘೋರ ವಿಷವನ್ನೂ ಮಾರಾಟ ಮಾಡುತ್ತಿದ್ದರೂ ಅದರಿಂದ ಪರಿಸರಕ್ಕಾಗುವ ಹಾನಿಯ ಬಗ್ಗೆ ತುಟಿಬಿಚ್ಚದ ಈ ಪರಿಸರ ಮಾಲಿನ್ಯ ನಿಂತ್ರಣ ಮಂಡಳಿ ಅಧಿಕಾರಿಗಳು, ಕಾಫಿ ತೋಟಗಳಿಗೆ ಬಂದು ಪಲ್ಪಿಂಗ್ ತ್ಯಾಜ್ಯ ನೀರನ್ನು ಬೇರಡೆಗೆ ಹರಿಯದಂತೆ ಸಂಗ್ರಹಿಸಿ ಇಟ್ಟಿದ್ದರೂ ಸಹ ಅದರಿಂದ ವಾಸನೆ ಬರುತ್ತಿದೆ- ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದೆಲ್ಲ ಹೆದರಿಸಬಲ್ಲರು. ಪಲ್ಪಿಂಗ್ ಯೂನಿಟ್ ನ ಯಂತ್ರಗಳನ್ನು ಮುಟ್ಟುಗೋಲು ಹಾಕಿ ವಶಪಡಿಸಿಕೊಳ್ಳುವ ಅಧಿಕಾರ ಈ ಅಧಿಕಾರಿಗಳಿಗೆ ಇರುವುದರಿಂದ ಅನೇಕ ಕಾಫಿ ಬೆಳೆಗಾರರು ಇವರೊಂದಿಗೆ ಹೊಂದಾಣಿಕೆಗೆ ಮೊರೆ ಹೋಗಿದ್ದಾರೆ.

ಕಾಫಿ ಬೆಳೆಯಲ್ಲೇ ಬಳಕೆಯಾಗುವ ಕೃಷಿವಿಷಗಳ ವಿಚಾರ ಹೇಳುವುದಾದರೆ ರೋಬಸ್ಟಾ ಕಾಫಿ ನೂರಕ್ಕೆ ನೂರರಷ್ಟು ವಿಷಮುಕ್ತವಾಗಿದೆ. ರಾಸಾಯನಿಕ ಗೊಬ್ಬರದ ಬಳಕೆಯನ್ನು ಬಿಟ್ಟರೆ ಇದು ಸಂಪೂರ್ಣ ಸಾವಯವ ಕೃಷಿಯೇ ಸರಿ. ಅರೇಬಿಕಾ ಕಾಫಿ ಬೆಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಷ ಬಳಕೆಯಾಗುತ್ತದೆ. ಕಾಫಿ ಬೆಳೆಯೊಂದಿಗೆ ಹೋಲಿಸಿದಲ್ಲಿ  ಟೀ ಯಂತಹ ಇತರ ಪ್ಲಾಂಟೇಷನ್ ಬೆಳೆಗಳಿಗೆ ಬಳಸುವ ವಿಷದಪ್ರಮಾಣ ಅಪಾರ.(ರೋಬಸ್ಟಾ ಕಾಫಿ ಬೆಳೆಗೆ ಇತ್ತೀಚೆಗೆ ‘ಬೆರಿ ಬೋರರ್’ ಎಂಬ ಕಾಯಿಕೊರಕ ಕೀಟವೊಂದು ಅಪಾರ ಹಾನಿಮಾಡುತ್ತಿದ್ದು ಈಗ ಅದರ ನಿಯಂತ್ರಣಕ್ಕಾಗಿ  ಕೆಲವೆಡೆ ವಿಷ ಬಳಸಲು ಪ್ರಾರಂಭಿಸಿದ್ದಾರೆ)

ಇನ್ನು ಹೈಟೆಕ್ ಕೃಷಿಯ ಹೆಸರಲ್ಲಿ ಬರುವ Growth promoter ಗಳು Plant harmone ಗಳು, Soil conditionerಗಳು, Foliar sprayಗಳು, weedicideಗಳು ಇವುಗಳಲ್ಲೆಲ್ಲಾ ಇರುವ ವಸ್ತುಗಳೇನು? ಇವುಗಳ ಧೀರ್ಘಕಾಲದ ಬಳಕೆಯಿಂದ ಆಗುವ ಪರಿಣಾಮಗಳೇನು? ಇತ್ಯಾದಿಗಳಬಗ್ಗೆ ನಮ್ಮಲ್ಲಿ ಯಾವದೇ ಮಾಹಿತಿಯೂ ಇಲ್ಲದೆ, ಅದನ್ನು ತಯಾರಿಸಿದ ಕಂಪೆನಿಗಳು ಹೇಳಿದ್ದನ್ನೇ ನಂಬಿಕೊಂಡು ನಾವು ಕೂತಿದ್ದೇವೆ. ನಮ್ಮ ಪರಿಸರ-ಆರೋಗ್ಯ ಇಲಾಖೆಗಳಂತೂ ಈ ಕಂಪೆನಿಗಳ ವಿರುದ್ಧ ಚಕಾರವನ್ನೂ ಎತ್ತಲಾರವು ಯಾಕೆಂದರೆ ಈ ಕಂಪೆನಿಗಳು ಸರ್ಕಾರಗಳಿಗಿಂತ ದೊಡ್ಡವು!!

ಅರುವತ್ತರ ದಶಕದಲ್ಲಿ ಕೊಡಗಿನ ಕಾಫಿ ತೋಟಗಳಲ್ಲಿ Gormex ಎಂಬ ಕಳೆನಾಶಕವನ್ನು ವ್ಯಾಪಕವಾಗಿ ಉಪಯೋಗಿಸಿದರು. ಕೇವಲ ಒಂದು ವರ್ಷದಲ್ಲೇ ಕಾಫಿ ಗಿಡಗಳು ಒಣಗಲಾರಂಭಿಸಿದವು. ಇದಕ್ಕೆ ಅವರು ಉಪಯೋಗಿಸಿದ ಕಳೆನಾಶಕವೇ ಕಾರಣವೆಂದು ಗೊತ್ತಾಗುವಷ್ಟರಲ್ಲಿ ಕಾಫಿ ತೋಟಗಳಿಗೆ ಅಪಾರ ಹಾನಿಯಾಗಿತ್ತು. ಕಾಫಿ ತೋಟಗಳಿಗಾದ ಹಾನಿಯ ಅಂದಾಜು ಲೆಕ್ಕವೇನೋ ಸಿಕ್ಕಿತು. ಆದರೆ ಒಟ್ಟು ಪರಿಸರದ ಮೇಲೆ ಆದ ಪರಿಣಾಮವೇನು? ಯಾರಿಗೂ ತಿಳಿಯಲಿಲ್ಲ. ಆ ಕಳೆನಾಶಕವನ್ನು ತಯಾರಿಸಿದ-ವಿತರಿಸಿದ ಕಂಪೆನಿಗಳೂ ಶಿಕ್ಷೆಗೊಳಗಾಗಲಿಲ್ಲ. ಈಗ ನಮ್ಮ ಕಣ್ಣೆದುರಿಗೇ ‘ಎಂಡೋಸಲ್ಫಾನ್’ ಎಂಬ ಕೀಟನಾಶಕದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಪ್ರಚಾರ ನಡೆದಿದ್ದರೂ ಅದನ್ನು ತಯಾರಿಸುವ ಕಂಪೆನಿಯ ಕೂದಲೂ ಕೊಂಕಿಲ್ಲ!

ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುತ್ತ-ನಿಯಂತ್ರಿಸುತ್ತ ನಗರ ಪ್ರದೇಶಗಳಲ್ಲಿ ಸುದ್ದಿ ಮಾಡುತ್ತಿರುವ ನಮ್ಮ ಸರ್ಕಾರಿ  ಅಧಿಕಾರಿಗಳು,  ಬಡ ಮೀನು ಮಾರಾಟಗಾರರಿಂದ ಸಣ್ಣ ವ್ಯಾಪಾರಿಗಳಿಂದ ಪ್ಲಾಸ್ಟಿಕ್ ಚೀಲಗಳನ್ನು ಕಿತ್ತು ದಂಡ ಹಾಕುತ್ತ ಸುದ್ಧಿ ಶೂರರಾಗುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಖಂಡಿತ ಬೇಕು. ಆದರೆ ಇವರು ಅದನ್ನು ತಯಾರಿಕಾ ಹಂತದಲ್ಲೇಕೆ ನಿಷೇಧಿಸುತ್ತಿಲ್ಲ? ಅದರೊಂದಿಗೆ ಅದಕ್ಕಿಂತಲೂ ಮುಖ್ಯವಾದ ಮತ್ತು ಹೆಚ್ಚು ಅಪಾಯಕಾರಿಯಾದ ಇತರೆ ಮಾಲಿನ್ಯಗಳ ಬಗ್ಗೆ ಈ ಅಧಿಕಾರಿಗಳೇಕೆ ಕ್ರಮ ಕೈಗೊಳ್ಳುತ್ತಿಲ್ಲ?

ಯಾಕೆಂದರೆ ಈ ರೀತಿಯ ಅಧ್ವಾನಗಳಿಗೆ ಅಧಿಕಾರಿಗಳು ಮಾತ್ರವೇ ಕಾರಣರಲ್ಲ. ಆಡಳಿತಗಾರರಲ್ಲಾಗಲೀ ನೀತಿ ನಿರೂಪಕರಾದ ನಮ್ಮ ಜನ ಪ್ರತಿನಿಧಿಗಳಲ್ಲಾಗಲೀ ಯಾವುದೇ ಖಚಿತ ನೀತಿಯಾಗಲೀ ಸಮಗ್ರ ದೃಷ್ಟಿಕೋನವಾಗಲೀ ಇರುವುದು ವಿರಳ. ಯಾವುದೇ ವಿಷಯದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಜನರಿಂದ ಪ್ರತಿರೋಧ ಬಂದರೆ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ,  ಸರ್ಕಾರ ಎಚ್ಚರವಾಗುತ್ತದೆ. ಆದರೆ ಏನು ಮಾಡಬೇಕೆಂದು ಸ್ಪಷ್ಟತೆಯಾಗಲಿ ಅಥವಾ ಅದಕ್ಕೆ ತಕ್ಕ ಸಿದ್ದತೆಯಾಗಲಿ ಇಲ್ಲದಿರುವುದರಿಂದ ತುರ್ತಾಗಿ ಯಾರಾದರೂ ಐ.ಎ.ಎಸ್ ಅಧಿಕಾರಿಗಳೋ ಇನ್ನಿತರರೋ ಈ ಬಗ್ಗೆ ಒಂದು ಕಾರ್ಯಕ್ರಮವನ್ನು ರೂಪಿಸುತ್ತಾರೆ.  ಆ ಕಾರ್ಯಕ್ರಮಕ್ಕಾಗಿ ಒಂದಷ್ಟು ಹಣ ಮಂಜೂರಾಗುತ್ತದೆ. ಅಷ್ಟರಲ್ಲೇ ಆ ಕಾರ್ಯಕ್ರಮದಿಂದ ಲಾಭಪಡೆದವರು ದೊಡ್ಡ ಪ್ರಚಾರವನ್ನು, ಲಾಭ ದೊರೆಯದವರೋ, ಅಥವಾ ವಿರೋಧ ಪಕ್ಷದವರೋ ಅವ್ಯಾಹತ ಟೀಕೆಯನ್ನು  ಪ್ರಾರಂಭಿಸುತ್ತಾರೆ. ಸ್ವಲ್ಪ ಸಮಯದಲ್ಲೇ ಸರ್ಕಾರ ಇಂತಹದೇ ಇನ್ನೊಂದು ಕಾರ್ಯಕ್ರಮವನ್ನು ಪ್ರಾರಂಭಿಸಿರುತ್ತದೆ. ಆ ವೇಳೆಗಾಗಲೇ ಹಳೆಯ ಕಾರ್ಯಕ್ರಮವನ್ನು ಜನರು ಮರೆತಿರುತ್ತಾರೆ. ಉದಾ: ದಶಕಗಳಿಂದ ನಡೆಯುತ್ತಿರುವ ನಮ್ಮ ರಾಷ್ಟ್ರೀಯ ಸಾಕ್ಷರತಾ ಆಂದೋಲನವನ್ನು ನೆನಪಿಸಿಕೊಳ್ಳಿ.

ಕೃಷಿಯಲ್ಲಿ ಯಾವುದೇ ಹೊಸ ಬದಲಾವಣೆಯನ್ನು ಮಾಡುವುದು ಅಥವಾ ಹೊಸ ವಸ್ತುವನ್ನು ಬಳಕೆಮಾಡುವುದನ್ನು ಆರಂಭಿಸುವುದಾದರೆ, (ಇದು ಪ್ರಕೃತಿಯ ಎಲ್ಲ ಜೀವರಾಶಿಗಳ ವಿಚಾರದಲ್ಲು ಅನ್ವಯವಾಗುತ್ತದೆ) ಅದಕ್ಕೆ ಹಲವು ವರ್ಷಗಳ ತಾಳ್ಮೆಯ ಅಧ್ಯಯನ, ಪ್ರಯೋಗ ಮತ್ತು ವಸ್ತುನಿಷ್ಟ ಮೌಲ್ಯಮಾಪನದ ಅಗತ್ಯವಿದೆ. ಬಹುವಾರ್ಷಿಕ ಬೆಳೆಗಳ ವಿಚಾರದಲ್ಲಂತೂ ಇದು ಹೆಚ್ಚು ಅಗತ್ಯ. ಯಾಕೆಂದರೆ ಬಹುವಾರ್ಷಿಕ ಬೆಳೆಗಳ ಮೇಲೇನಾದರೂ ಪ್ರತಿಕೂಲ ಪರಿಣಾಮವಾದರೆ ಸರಿಪಡಿಸಿಕೊಳ್ಳಲು ವರ್ಷಗಳೇ ಬೇಕು. ಆದ್ದರಿಂದ ಈ ಕಂಪೆನಿಗಳು ಮತ್ತವರ ಮಾರಾಟಗಾರರು ಹೇಳಿದ್ದನ್ನೇ ನಂಬಿಕೊಂಡು ಕೂರದೆ, ಯಾವುದೇ ಹೊಸ ಪದ್ಧತಿಯನ್ನೋ, ಹೊಸವಸ್ತುನ್ನೋ ಬಳಸುವುದು ಅನಿವಾರ್ಯವಾದಾಗ ಇಲ್ಲವೇ ಹೊಸ ಪ್ರಯೋಗ ಮಾಡುವಾಗ ಸಣ್ಣ ಪ್ರಮಾಣದಲ್ಲಿ-ಸಣ್ಣಪ್ರದೇಶದಲ್ಲಿ ಪ್ರಯೋಗಮಾಡಿ ನೋಡುವುದು ಒಳ್ಳೆಯದು.

ನಮ್ಮ ಜಿಲ್ಲೆಯ ದೊಡ್ಡ ಕಾಫಿ ತೋಟವೊಂದರ ಮ್ಯಾನೇಜರ್ ಒಬ್ಬರು ವಿದೇಶಕ್ಕೆ- ಕಾಫಿಬೆಳೆಯುವ ದೇಶಗಳಿಗೆ ಹೋದರು. ವರ್ಷವಿಡೀ ಮಳೆಬೀಳುವ ಹೆಚ್ಚುಕಾಲ ಮೋಡದ ವಾತಾವರಣವಿರುವ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾ ದೇಶಗಳ ಕೆಲವು ಭಾಗಗಳಲ್ಲಿ  ಕಾಫಿಯನ್ನು ನೆರಳಿಲ್ಲದೆ ಬಯಲಿನಲ್ಲಿ ಬೆಳೆಯುತ್ತಾರೆ. ಅದನ್ನು ನೋಡಿದ ಮ್ಯಾನೇಜರ್ ಸಾಹೇಬರು ಇಲ್ಲಿ ಬಂದು ‘ಕಾಫಿಗೆ ನೆರಳಿನ ಅಗತ್ಯವೇ ಇಲ್ಲ. ಮರಗಳನ್ನೆಲ್ಲಾ ಕಡಿಸಿದರೆ ತೋಟ ನಿರ್ವಹಣೆಯ ಖರ್ಚುನಲ್ಲಿ ಎಷ್ಟೋ ಉಳಿತಾಯವಾಗುತ್ತದೆ’ ಎಂದು ವರ್ಷದಲ್ಲಿ 4-5 ತಿಂಗಳು ಮಾತ್ರವೇ ಮಳೆ ಬೀಳುವ ನಮ್ಮ ಈ ಪ್ರದೇಶದಲ್ಲಿನ ತೋಟದ ಮರಗಳನ್ನೆಲ್ಲಾ ಕಡಿಸಿದರು! ತೋಟ ಸಂಪೂರ್ಣವಾಗಿ ನಾಶವಾಯ್ತು. ಮತ್ತೊಮ್ಮೆ ನೆರಳು ಮರಗಳನ್ನು ನೆಟ್ಟು ಬೆಳೆಸಿ ಹಲವು ವರ್ಷಗಳ ನಂತರ ಈಗ ಅಲ್ಲಿ  ತೋಟ ಎಬ್ಬಿಸಿದ್ದಾರೆ. ಭಾರತದ ಕಾಫಿ ತೋಟಗಳ ಚರಿತ್ರೆಯನ್ನವರು ಸ್ವಲ್ಪ ಅಭ್ಯಾಸ ಮಾಡಿದ್ದರೆ, ಈ ಹಿಂದೆಯೇ ಕೊಡಗಿನಲ್ಲಿ ಅಂದರೆ ಈ ಶತಮಾನದ ಆದಿಭಾಗದಲ್ಲೇ ಕೆಲವರು ಬ್ರಿಟಿಷ್ ಕಾಫಿ ಬೆಳೆಗಾರರು ಈ ಪ್ರಯೋಗ ಮಾಡಿ ಕೈ ಸುಟ್ಟುಕೊಂಡದ್ದು ತಿಳಿಯುತ್ತಿತ್ತು.

ಹೀಗೆ ನಮ್ಮ ಹಿರಿಯರು ಇಷ್ಟು ವರ್ಷಗಳಿಂದ ಏನೇನು ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ, ಈ ಪದ್ಧತಿಗಳು ಯಾಕೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ? ಎಂದೆಲ್ಲಾ ಯೋಚಿಸದೆ ನಮ್ಮ ಪಾರಂಪರಿಕ ಜ್ಞಾನವನ್ನೆಲ್ಲಾ ಕಡೆಗಣಿಸಿ ನಮ್ಮ ಹಿರಿಯರಿಗೆಲ್ಲ ಬುದ್ಧಿಯೇ ಇರಲಿಲ್ಲವೆಂದುಕೊಂಡು ಏನೇನೋ ಮಾಡಹೊರಟರೆ ಅನಾಹುತ ತಪ್ಪಿದ್ದಲ್ಲ. ನನ್ನ ಅನುಮಾನ ನಿಜವಾಗುತ್ತಿದೆ. ಸರ್ಕಾರ ಸಾವಯವ ಕೃಷಿ ಅಭಿವೃದ್ಧಿಗಾಗಿ ಒಂದು ಯೋಜನೆಯನ್ನು ಸಿದ್ಧಪಡಿಸಿ ಪ್ರತಿ ಜಿಲ್ಲೆಗೊಂದು ಸಂಘಟನೆ ಅಥವಾ ವ್ಯಕ್ತಿಗಳಿಗೆ ಇದನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ವಹಿಸಲಿದೆಯೆಂದು ಸುದ್ದಿ ಬಂದಿದೆ. ಈ ವ್ಯಕ್ತಿಗಳ ಅಥವಾ ಸಂಘಸಂಸ್ಥೆಗಳ ಆಯ್ಕೆಗೆ ಸರ್ಕಾರ  ಯಾವ ಮಾನದಂಡ ಬಳಸಿದೆಯೆಂದು ಗೊತ್ತಿಲ್ಲ. ಈ ಸಂಸ್ಥೆ ಅಥವಾ ವ್ಯಕ್ತಿಗಳು ಸುಮಾರು ಐದು ನೂರು ಎಕರೆ ವಿಸ್ತೀರ್ಣ ಕೃಷಿಭೂಮಿ ಇರುವಂತಹ ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಸಾವಯವ ಕೃಷಿಗೆ ಒಳಪಡಿಸಿ ಅಧ್ಯಯನ, ಪ್ರಚಾರ ಇತ್ಯಾದಿಗಳಲ್ಲಿ ತೊಡಗುವುದು ಈ ಯೋಜನೆಯ ಉದ್ದೇಶ. ಈ ತಲೆಕೆಳಗಾದ ಯೋಜನೆಗೆ ಸಲಹೆ ನೀಡಿದವರು ಯಾರೋ ತಿಳಿಯದು.

ಸರ್ಕಾರ ನಿಜವಾದ ಕಾಳಜಿ ಇದ್ದರೆ ಈ ರೀತಿ ಪ್ರತಿಜಿಲ್ಲೆಯಲ್ಲೂ ಪ್ರಯೋಗ ನಡೆಸಬೇಕಾದ್ದು ಸಾವಯವ ಕೃಷಿಯ ಬಗ್ಗೆ ಅಲ್ಲ. ಒಂದಷ್ಟು ಜನ ವಿಜ್ಞಾನಿಗಳು, ಪರಿಸರ ತಜ್ಞರು,  ಆರ್ಥಿಕತಜ್ಞರು,  ಆಡಳಿತಗಾರರು,  ಜೊತೆಗೆ ಖಡ್ಡಾಯವಾಗಿ ಕೆಲವರು ಪಾರಂಪರಿಕ ಕೃಷಿಕರು ಇವರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ, ಆ ಸಮಿತಿಯ ಉಸ್ತುವಾರಿಯಲ್ಲಿ ಆಧುನಿಕ ಕೃಷಿಯಬಗ್ಗೆ,  ಅದರ ಒಳಸುರಿಗಳ ಬಗ್ಗೆ ವಸ್ತು ನಿಷ್ಟವಾದ ಅಧ್ಯಯನಮಾಡಿ ಮೌಲ್ಯಮಾಪನ ನಡೆಸಿ, ಹೊಸತಳಿಗಳು ಕೃಷಿವಿಷಗಳು ಇನ್ನಿತರ ಯಾವುದೇ ಒಳಸುರಿಗಳಿಗೆ ಸಾವಯವ ಪರ್ಯಾಯಗಳನ್ನು ಹುಡುಕಬೇಕು. ಇನ್ನೊಂದು ಮುಖ್ಯವಾದ ವಿಚಾರವೆಂದರೆ ಈಗ ಸಾವಯವ, ಪರಿಸರಸ್ನೇಹಿ,  ಆಯುರ್ವೇದ , ಇತ್ಯಾದಿ ಹೆಸರುಗಳಲ್ಲಿ ಬರುತ್ತಿರುವ ವಸ್ತುಗಳ ಬಗ್ಗೆಯೂ ಮೌಲ್ಯಮಾಪನ ನಡೆಸಿ ಅದರ ಗುಣಾವಗುಣಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಒಂದೇ ವಸ್ತುವಿನ ಬಗ್ಗೆ ನಡೆಸಿದ ಪ್ರಯೋಗಗಳಲ್ಲಿ ಭಿನ್ನವಾದ ಅಭಿಪ್ರಾಯಗಳಿದ್ದರೆ, ಇನ್ನೂ ಹೆಚ್ಚಿನ ಪ್ರಯೋಗಕ್ಕೆ ಒಳಪಡಿಸಬೇಕು. ಈ ಎಲ್ಲ ಪ್ರಯೋಗಳ ವಿವರಗಳು ಕೃಷಿಕರಿಗೆ ಲಭ್ಯವಗಾಬೇಕು. ಈ ಪ್ರಕ್ರಿಯೆ ನಿರಂತರವಾಗಿದ್ದು ಆಧುನಿಕ ಜ್ಞಾನವನ್ನು ಪಾರಂಪರಿಕ ಜ್ಞಾನದೊಂದಿಗೆ ಮೇಳೈಸಿ ನಮ್ಮ ಕೃಷಿ ಪದ್ಧತಿಗಳಿಂದ ಪರಿಸರದ ಮೇಲಾಗುವ ಹಾನಿಯನ್ನು ಕನಿಷ್ಟ ಮಟ್ಟಕ್ಕಿಳಿಸುವ ಪ್ರಯತ್ನ ನಿರಂತರವಾಗಬೇಕು.

ಈ ಕಾರ್ಯದಲ್ಲಿ ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳು ಇದರೊಂದಿಗೆ ಸೇರಿ ಕೆಲಸ ಮಾಡಿ ಸರಿಯಾದ ಮಾಹಿತಿ ನೀಡುವಂತೆ ಸಾರ್ವಜನಿಕರು ಸರ್ಕಾರ  ಮೇಲೆ ಮತ್ತು ಈ ವಿಜ್ಞಾನ ಕೇಂದ್ರಗಳ ಮೇಲೆ ಒತ್ತಡ ತರಬೇಕು. ಈ ರೀತಿಯಲ್ಲಿ ಸಂಶೋಧನಾ ಕೇಂದ್ರಗಳನ್ನೊಗೊಂಡ ಸಮಿತಿಯಿಂದ ಮೌಲ್ಯಮಾಪನವಾಗದ ಯಾವುದೇ ಹೊಸ ವಸ್ತುವನ್ನು ಮಾರಾಟಕ್ಕೆ-ಬಳಕೆಗೆ ತರಬಾರದು. ಅನಂತರವೂ ಬಳಕೆಯ ಸಂದರ್ಭದಲ್ಲಿ ಏನಾದರೂ ತೊಂದರೆ ಕಂಡು ಬಂದರೆ ಅದನ್ನು ತಯಾರಿಸಿದ ಕಂಪೆನಿ ಮತ್ತು ಮೌಲ್ಯಮಾಪನ ಮಾಡಿದ ಸಂಸ್ಥೆಗಳನ್ನು ಜವಾಬ್ದಾರರನ್ನಾಗಿ ಮಾಡಬೇಕು. ಹಾಗಾದಲ್ಲಿ ಭೂಮಿಗೆ ವಿಷವುಣಿಸುವ ಪ್ರಮಾಣ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದೀತು.

ಸರ್ಕಾರ ಈಗ ಮಾಡುತ್ತಿರುವ ಯೋಜನೆ ಕೇವಲ ‘ಶೋಕೇಸ್’ನಲ್ಲಿಟ್ಟ ಸಾವಯವ ಕೃಷಿ ಆದೀತು. ನಗರ ಮಧ್ಯದ  ರೆಸಾರ್ಟ್ ಳಲ್ಲಿ ಹಾಕಿದ ಹಳ್ಳಿಯ ಸೆಟ್ನಂತೆ ಅಥವಾ ಇತ್ತೀಚೆಗೆ ಕೃಷಿಮೇಳಗಳಲ್ಲಿ ಕಾಣಸಿಗುವ ‘ಭತ್ತಕುಟ್ಟವುದು,  ಮೊರದಲ್ಲಿ ಕೇರುವುದು, ರಾಟಾಳ ಯಂತ್ರದಲ್ಲಿ ಮರಗೆಲಸ’ ಇತ್ಯಾದಿಗಳನ್ನೊಳಗೊಂಡು ‘ಜಾತ್ರೆಸ್ಟಾಲ್’ಗಳಂತೆ ಕಂಗೊಳಿಸಿ ಮತ್ತೊಂದಷ್ಟು  ಸರ್ಕಾರಿ ಪರಿಸರ ಪ್ರಿಯರನ್ನು ಹುಟ್ಟುಹಾಕಲು ನೆರವಾದೀತು.

ಈ ಯೋಜನೆಗೆ ಅಥವಾ ಯಾವುದೇ ಯೋಜನೆಗೆ ಆರ್ಥಿಕ ತಜ್ಞರುಗಳ ಅಗತ್ಯವನ್ನು ಹೇಳಿದೆ. ಆರ್ಥಿಕತಜ್ಞರೆಂದರೆ ನಮಗೆ ಈ ಕೆಲಸಕ್ಕೆ ಅಂತರಾಷ್ಟ್ರೀಯ ಮಟ್ಟದ ದೊಡ್ಡ ಆರ್ಥಿಕ ತಜ್ಞರ ಅಗತ್ಯವೇನೂ ಇಲ್ಲ. ಆದರೆ ಯಾವುದೇ ಬೆಳೆಯಲ್ಲೂ ಕನಿಷ್ಟ ಖರ್ಚಿನೊಂದಿಗೆ ಪಡೆಯಬಹುದಾದ ಬೆಳೆಗಳು, ಅದರಿಂದ ಸಿಗಬಹುದಾದ ಕನಿಷ್ಟ ಲಾಭದ ಸರಳ ಲೆಕ್ಕಾಚಾರವನ್ನು ಮಾಡಬಲ್ಲವರ ಅಗತ್ಯ ಖಂಡಿತ ಇದೆ. ನಮ್ಮ ಕೃಷಿ ಆರ್ಥಿಕತೆಯಲ್ಲಿ 10-15 ವರ್ಷಗಳಷ್ಟು ಧೀರ್ಘಕಾಲದ ಅನುಭವಗಳಿಂದ ವಾರ್ಷಿಕ ಎಕರೆವಾರು ಸರಾಸರಿ ಆದಾಯ,  ಒಂದು ಸಣ್ಣ ಕುಟುಂಬಕ್ಕೆ ಸಾಧಾರಣ ಮಟ್ಟದ ಜೀವನ ನಡೆಸಲು ಅಗತ್ಯವಾಗುವ ಆದಾಯದ ಪ್ರಮಾಣ, ಇದನ್ನೆಲ್ಲ ಗಮನಿಸಿ ಮಾಡಬಹುದಾದ ಕೃಷಿ ಮತ್ತು ಅದಕ್ಕೆ ಅಗತ್ಯವಾದ ಹಿಡುವಳಿಯ ಗಾತ್ರ ಇವುಗಳನ್ನೆಲ್ಲ ಅಂದಾಜು ಮಾಡಬಲ್ಲವರಿರಬೇಕು. ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗಬಹುದು. ಈ ರೀತಿಯ ಲೆಕ್ಕಾಚಾರಗಳನ್ನು ಮಾಡಬಲ್ಲ ಜನರು ಖಂಡಿತವಾಗಿ ನಮ್ಮ ನಡುವೆಯೇ ಇದ್ದಾರೆ. ಆದರೆ ಈ ಎಲ್ಲ ಕೆಲಸಗಳನ್ನು ಯಾವುದೇ ಸರ್ಕಾರ ಮಾಡೀತೆಂದು ನಿರೀಕ್ಷಿಸುವುದೇ ನಮ್ಮ ಮೂರ್ಖತನವಿರಬಹುದು!

ನಮ್ಮ ಕೃಷಿ ಉದ್ದಿಮೆದಾರರು, ಅಂದರೆ ಇವರು ನಿಜವಾದ ರೈತರಲ್ಲ- ಕೃಷಿಯನ್ನು ಒಂದು ಉದ್ದಿಮೆಯನ್ನಾಗಿ ನಡೆಸುವವರು. ಇವರಲ್ಲಿ ದೊಡ್ಡ ಕಾಫಿ, ಟೀ, ರಬ್ಬರ್ ಬೆಳೆಗಾರರು, ದೊಡ್ಡ ಪ್ರಮಾಣದ ಬೀಜ ಉತ್ಪಾದಕರು. ನೂರಾರು ಎಕರೆ ಕಬ್ಬು, ಹತ್ತಿ, ಬೆಳೆಯುವವರು, ಹೈಟೆಕ್ ಕೃಷಿಯ ಫಲ ಪುಷ್ಪ ಬೆಳೆಯುವವರು ಇದ್ದಾರೆ. ಇವರು ಹೂಡುವ ಭಂಡವಾಳವೂ ಕೋಟಿಗಳ ಲೆಕ್ಕದಲ್ಲಿರುತ್ತದೆ. ಇವರು ಕೃಷಿಯನ್ನು ಉದ್ದಿಮೆಯೆಂದೇ ಪರಿಗಣಿಸಿ  ಮ್ಯಾನೇಜ್ ಮೆಂಟ್ ಶಿಸ್ತಿಗೆ ಅಳವಡಿಸಿ ಶುದ್ಧ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಸಮರ್ಥವಾಗಿ ನಡೆಸಲು ಪ್ರಯತ್ನಿಸುತ್ತಾ ಇರುವುದರಿಂದ, ಕಡಿಮೆ ಮಾನವ ಶ್ರಮದ ಬಳಕೆ- ಹೆಚ್ಚು ಯಾಂತ್ರೀಕರಣದ ಕಡೆಗೇ ಒಲವುಳ್ಳವರಾಗಿರುತ್ತಾರೆ.

ಆದ್ದರಿಂದ ಈ ದೊಡ್ಡ ಕೃಷಿ ಉದ್ಯಮಿಗಳು ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪರಿಸರದ ಬಗ್ಗೆ, ನೆಲ-ಜಲಗಳ ಬಗ್ಗೆ ಕಾಳಜಿಯನ್ನು ಅದೂ ಕೂಡಾ ಹೊರಗಿನ ಒತ್ತಡಗಳಿಗೆ ಮಣಿದು ವಹಿಸುತ್ತಾರೆಯೇ ವಿನಃ ಸ್ವಯಂ ಸ್ಪೂರ್ತಿಯಿಂದಲ್ಲ.  ವಿಪರ್ಯಾಸವೆಂದರೆ ಅನೇಕ ಬಾರಿ ಪ್ರತಿಷ್ಟಿತ ಕ್ಲಬ್ ನಲ್ಲಿ ಪರಿಸರ ಸಂರಕ್ಷಣೆಯಬಗ್ಗೆ ನಡೆಯುವ ಸಭೆ- ವಿಚಾರಸಂಕಿರಣಗಳಿಗೆ ಇವರಲ್ಲಿ ಕೆಲವರು ಪ್ರಾಯೋಜಕರೂ ಆಗಿರುತ್ತಾರೆ! ಈ ಕೃಷಿ ಉದ್ಯಮಿಗಳಲ್ಲಿ ಹೆಚ್ಚಿನವರಿಗೆ ಬೇರೆ ಅನೇಕ ಉದ್ಯಮಗಳಿವೆ. ಇವರಿಗೆ ಕೃಷಿ ಇವರ ಒಟ್ಟು ವ್ಯವಹಾರಗಳ ಒಂದು ಭಾಗ ಮಾತ್ರವಾಗಿದ್ದು ಕೃಷಿಯಿಂದಲೇ ಬದುಕಬೇಕಾದ ಅನಿವಾರ್ಯತೆಯಲ್ಲಿ ಇವರು ಇಲ್ಲ.

ಆದರೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಸಣ್ಣ ಮತ್ತು ಮಧ್ಯಮ ಕೃಷಿಕರು ಹಾಗೂ ಕೃಷಿ ಕೂಲಿಗಾರರ ಪರಿಸ್ಥಿತಿಯೇ ಬೇರೆ. ಇವತ್ತು ಮೆಣಸಿನಕಾಯಿಯನ್ನೋ ತರಕಾರಿಯನ್ನೋ ಬೆಳೆಯುತ್ತಿರುವ ರೈತನನ್ನು ನೋಡಿದಾಗ ಕೊಂಡು ತಿನ್ನುವವನೇ ಸುಖಿ ಎನ್ನಿಸಿದರೆ ಆಶ್ಚರ್ಯವಿಲ್ಲ. ಹೀಗಾಗಿ ರೈತರು ಅದು ಸಾಂಪ್ರದಾಯಿಕವೋ, ಸಾವಯವವೋ, ಇಲ್ಲ ಆಧುನಿಕವೋ ಇತ್ಯಾದಿಗಳ ಗೋಜಿಗೆ ಹೋಗದೆ ಎಲ್ಲಿ ಕಾಸು ಸಿಗುತ್ತದೆಯೋ ಅಲ್ಲಿಗೆ, ಅದು ಶುಂಠಿಯೋ ಬಜೆಯೋ ಅರಶಿನವೋ ಅಥವಾ ಅವನಿಗೆ ಸಂಬಂಧವೇ ಇಲ್ಲದ ಇನ್ನೇನೋ ಬೆಳೆಯೋ ಯಾವುದೇ ಆಗಲಿ, ಎಂಥ ಘನಘೋರ ವಿಷವಾಗಲಿ ತಂದು ಸುರಿದು ಬೆಳೆ ಬೆಳೆಯಲು ಮುನ್ನುಗ್ಗುತ್ತಾರೆ. ಅದಕ್ಕಾಗಿ ನಾಳಿನ ಚಿಂತೆ ಮರೆತು ಮನೆಯನ್ನೋ, ಜಮೀನನ್ನೋ, ಇದ್ದರೆ ಇದ್ದ ಚಿನ್ನವನ್ನೋ ಅಡವಿಟ್ಟು ಲೇವಾದೇವಿಗಾರರಿಂದ ಅಧಿಕ ಬಡ್ಡಿಯ ಸಾಲ ಪಡೆದು ಕೃಷಿಗಿಳಿಯುತ್ತಾರೆ. ಏನಾದರೂ ಹೆಚ್ಚು ಕಮ್ಮಿಯಾದಲ್ಲಿ ಹೇಗೂ ಕೃಷಿಗೆ ತಂದ ವಿಷವಂತೂ ಇದ್ದೇ ಇದೆ ಕುಡಿಯಲು!

(ಮುಂದುವರೆಯುವುದು)

(ಚಿತ್ರಕೃಪೆ: ವಿಕಿಪೀಡಿಯ)

ನಮ್ಮ ಪರಿಸರ – ನೆಲ ಜಲ : 1

ನಮ್ಮ ಪರಿಸರ – ನೆಲ ಜಲ : 1

– ಪ್ರಸಾದ್ ರಕ್ಷಿದಿ

ನೀರಿನ ಬೆಲೆ ಹಾಲಿಗಿಂತ ದುಬಾರಿ ಯಾಕೆ?  ಶುಂಠಿ ಬೇಸಾಯ ಯಾರಿಗೆ ಆದಾಯ? ಎಂಡೋಸಲ್ಫಾನ್ ಬಳಕೆಯಿಂದ ನರಕವಾದ “ಸ್ವರ್ಗ” (ಸ್ವರ್ಗ ಎನ್ನುವುದು ಕಾಸರಗೋಡು ತಾಲ್ಲೂಕಿನ ಒಂದು ಊರು). ಇತ್ಯಾದಿ ಶೀರ್ಷಿಕೆ-ಬರಹಗಳನ್ನು, ನಾವು ಪ್ರತಿನಿತ್ಯ ಪತ್ರಿಕೆಗಳಲ್ಲಿ ಕಾಣುತ್ತೇವೆ. ಇತರೆ ಮಾಧ್ಯಮಗಳಲ್ಲೂ, ಹಾಳಾಗುತ್ತಿರುವ ನಮ್ಮ ನೆಲ, ಜಲ, ಗಾಳಿ, ಪರಿಸರ, ಆರೋಗ್ಯಗಳ ಬಗ್ಗೆ, ವರದಿಗಳು ಚರ್ಚೆಗಳು, ನುಡಿಚಿತ್ರಗಳು, ಜೊತೆಗೆ ದಿನನಿತ್ಯ ಅದಕ್ಕೆಂದೇ ಮೀಸಲಾದ ಕಾರ್ಯಕ್ರಮಗಳು, ಇವುಗಳಿಗೆಲ್ಲ ಲೆಕ್ಕವೇ ಇಲ್ಲ. ಇವೆಲ್ಲದರ ಜೊತೆಯಲ್ಲಿ ಇದೇ ವಿಷಯಗಳ ಬಗ್ಗೆ ಪ್ರಕಟವಾಗುತ್ತಿರುವ ಪುಸ್ತಕಗಳ ಸಂಖ್ಯೆಯೂ ಕಡಮೆಯೇನಲ್ಲ.

ಇವುಗಳ ಜೊತೆಗೆ ನೆಲ, ಜಲ, ಪರಿಸರ ಸಂರಕ್ಷಣೆಯನ್ನೇ ಕಾಯಕವನ್ನಾಗಿಸಿಕೊಂಡ ಅನೇಕ ವ್ಯಕ್ತಿಗಳು ಹಲವು ಸಂಘಸಂಸ್ಥೆಗಳು ಇವೆ. ಇವುಗಳಲ್ಲಿ ಕೆಲವು ಸದ್ದಿಲ್ಲದೆ ಕೆಲಸ ಮಾಡುತ್ತ ಇನ್ನುಕೆಲವು ಬರೀ ಸದ್ದನ್ನೇ ಮಾಡುತ್ತ ಮುಂದುವರಿಯುತ್ತಿವೆ. ಪರಿಸರ ಸಂರಕ್ಷಣೆಗೆಂದೇ ಕೇಂದ್ರ ಸರ್ಕಾರದ ಸಂಪುಟ ದರ್ಜೆ ಸಚಿವಾಲಯವೂ ಇದೆ. ಈ ವರ್ಷ ಕರ್ನಾಟಕ  ಸರ್ಕಾರ ಸಾವಯವ ಕೃಷಿ ಅಭಿವೃದ್ಧಿಗಾಗಿ ಹಲವು ಕೋಟಿ ರೂಪಾಯಿಗಳ ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿದೆಯೆಂಬ ಸುದ್ದಿಯೂ ಇತ್ತೀಚೆಗೆ ಕೇಳಿ ಬಂದಿದೆ. ಅದರ ಅನುಷ್ಠಾನಕ್ಕಾಗಿಯೇ ಹಲವಾರು ಸಂಸ್ಥೆಗಳು ಹುಟ್ಟಿಕೊಳ್ಳುವ ಸಾಧ್ಯತೆಗಳು ಇವೆ.

ಇನ್ನು ನಮ್ಮಲ್ಲಿ ‘ಫುಕುವೋಕಾ’ನ ಶಿಷ್ಯರು, ತದ್ರೂಪಿಗಳು, ಸಮರ್ಥಕರು ಹಾಗೂ ವಿರೋಧಿಗಳು ಇವರುಗಳಿಗೇನೂ ಕೊರತೆಯಿಲ್ಲ.  Do nothing Farming ಎನ್ನುವುದನ್ನು ಅಪಹಾಸ್ಯಕ್ಕೀಡಾಗುವಷ್ಟು ಅಧ್ವಾನವನ್ನು ಇವರಲ್ಲಿ ಹಲವರು ಈಗಾಗಲೇ ಎಬ್ಬಿಸಿದ್ದಾರೆ. ಈ ಬಗ್ಗೆ ಮುಂದೆ ಬರೆಯುತ್ತೇನೆ. ಆದರೆ ‘ಫುಕುವೋಕಾ’ನ ವಿಚಾರ ನಮಗೆ ಹೊಸದೇನಲ್ಲ. ನಮ್ಮಜ್ಜನ ಕಾಲದಲ್ಲಿ ಹೀಗೆಯೇ ಕೃಷಿ ನಡೆದಿತ್ತು, ನಮ್ಮ ಹಳೆಯ ಗ್ರಂಥದಲ್ಲಿ ಹೀಗೆ ಹೇಳಿದೆ ಎಂದು ಒಳ್ಳೆಯದೇನಾದರೂ ವಿಚಾರ ಬಂದರೆ ಅದು ನಮ್ಮಲ್ಲಿ ಹಿಂದೆಯೇ ಇತ್ತು ಎಂದೂ ಕೆಟ್ಟದ್ದೇನಾದರೂ ಇದ್ದರೆ ಅದು ಹೊರಗಿನವರಿಂದ ಬಂತು ಎಂದು ಹೇಳುತ್ತ ಭಾರತದ ಗತಕಾಲದ ಶ್ರೇಷ್ಟತೆಯಲ್ಲೇ ಇಂದೂ ಮುಳುಗಿರುವವರ ಬಗ್ಗೆ ಹೇಳದಿರುವುದೇ ಕ್ಷೇಮ. ಆದರೆ ನಮ್ಮಲ್ಲಿ ಒಳ್ಳೆಯದೇನೂ ಇರಲೇ ಇಲ್ಲವೆಂದು ನನ್ನವಾದವಲ್ಲ. ಆ ಒಳ್ಳೆಯದನ್ನು ನಮಗೆ ಯಾಕೆ ಉಳಿಸಿಕೊಂಡು ಬರಲಾಗಲಿಲ್ಲ, ಅದಕ್ಕೆ ಕಾರಣಗಳೇನು? ಇತ್ಯಾದಿಗಳನ್ನೆಲ್ಲ ನಮ್ಮ ನಡುವೆಯೇ ಹುಡುಕಬೇಕಲ್ಲವೇ? ಇದು ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯಿಸುತ್ತದೆ.

ನಮ್ಮ ಪರಿಸರ ಎಂದಾಗ, ನಮಗೆ ತಟ್ಟನೆ ಮನಸ್ಸಿಗೆ ಬರುವುದು ನಮ್ಮ ಕಾಡುಗಳು, ಹೊಳೆ, ನದಿ ಕೆರೆ, ಸಮುದ್ರ, ಗಾಳಿ, ಆಕಾಶ, ಅನಂತರ ಪ್ರಾಣಿಗಳು, ಮತ್ತು ಕೊನೆಯದಾಗಿ ಮನುಷ್ಯನೆಂಬ ಪ್ರಾಣಿ. ಇವುಗಳಲ್ಲಿ ಯಾರ ಅಂಕೆಯಲ್ಲೂ ಇಲ್ಲದ  ಆದರೆ ಎಲ್ಲವನ್ನೂ ಕಾಲಬದ್ಧ, ನಿಯಮಬದ್ಧವಾಗಿ ನಡೆಸುವ ಪ್ರಕೃತಿ ಒಂದೆಡೆಯಾದರೆ, ತನ್ನ ಅಲ್ಪಜ್ಞಾನವನ್ನೇ ಮಹಾನ್ ಸಾಧನೆಯೆಂದು ನಂಬಿ ಪ್ರಕೃತಿಯನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತಿರುವ ಮನುಷ್ಯ ಇನ್ನೊಂದೆಡೆಯಲ್ಲಿದ್ದಾನೆ.  ಪ್ರಕೃತಿ ತನ್ನ ಅಗಾಧವಾದ ಸಾಮರ್ಥ್ಯದೊಡನೆ ಪ್ರಕೋಪ-ವಿಕೋಪಗಳನ್ನುಂಟುಮಾಡುತ್ತ ಮತ್ತೆ ಅದೇ ಅದ್ಭುತ ರೀತಿಯಲ್ಲಿ ತನ್ನನ್ನು ತಾನೇ ಪುನಶ್ಚೇತನಗೊಳಿಸಿಕೊಳ್ಳುತ್ತ, ಬೇಡವಾದದ್ದನ್ನು ನಿರ್ದಾಕ್ಷಿಣ್ಯವಾಗಿ ನಿವಾರಿಸಿಕೊಳ್ಳುತ್ತ, ಬೇಕಾದ ಹೊಸತನ್ನು ಸೃಷ್ಟಿಸಿಕೊಳ್ಳುತ್ತ ಇದೆ. ಆದರೆ ಮನುಷ್ಯನೆಂಬ ಪ್ರಾಣಿ ಜಗತ್ತಿನ ಎಲ್ಲವೂ ತನ್ನ ಉಪಯೋಗಕ್ಕಾಗಿಯೇ ಇದೆಯೆಂಬ ಅಹಂಕಾರದಿಂದ ಮಾಡಿರುವ, ಮಾಡುತ್ತಿರುವ ಅನಾಹುತಗಳು ಬಲುದೊಡ್ಡವು.  ನಾವು ಯೋಚಿಸಬೇಕಿರುವುದು, ಪ್ರಕೃತಿಗೆ ಇರುವ-ತನಗೆ ಬೇಡವಾದದ್ದನ್ನು  ನಿರ್ದಾಕ್ಷಿಣ್ಯವಾಗಿ ನಿವಾರಿಸಿಬಿಡುವ ಅಗಾಧ ಶಕ್ತಿಯ ಬಗ್ಗೆ. ಆದ್ದರಿಂದ ಪ್ರಕೃತಿಗೆ ಬೇಡವಾದದ್ದರಲ್ಲಿ ಮನುಷ್ಯನೇ ಮೊದಲಿಗನಾಗನಹುದೆಂಬ ಭಯ ಮತ್ತು ಎಚ್ಚರದಿಂದ ನಾವು ವರ್ತಿಸಬೇಕಾಗಿದೆ.

ಪ್ರಕೃತಿಯಲ್ಲಿ ಒಂದಾಗಿ, ಸಹಜವಾಗಿ ಇತರ ಪ್ರಾಣಿಗಳಂತೆ ಬದುಕುವುದನ್ನು ಬಿಟ್ಟು ಈ ಮನುಷ್ಯ ಬಹಳದೂರ ಬಂದಿದ್ದಾನೆ. ಅತ್ಯಂತ ಜಟಿಲ ಹಾಗೂ ಸಂಕೀರ್ಣ ಜೀವನಕ್ರಮದ ಬುದ್ಧಿವಂತನೆನಿಸಿದ್ದಾನೆ. ಈಗ ಮನುಷ್ಯನಿಗೆ ಸಾಮಾಜಿಕ,  ಆರ್ಥಿಕ,  ಸಾಂಸ್ಕೃತಿಕವಾದ ಭಿನ್ನತೆಗಳು ಮತ್ತು ಕಾಲ ದೇಶಗಳ ವೈವಿದ್ಯತೆಗಳೂ ಸೇರಿಕೊಂಡಿವೆ. ಹಾಗಾಗಿ ನಾವು ಪರಿಸರದ ಬಗ್ಗೆ ಮಾತಾಡುವಾಗಲೆಲ್ಲ ಈ ವಿಷಯಗಳನ್ನೆಲ್ಲ ಮರೆತು ಅಥವಾ ಬಿಟ್ಟು ಆಯಾ ಸಂದರ್ಭದಲ್ಲಿ ಒಂದೊಂದೇ ವಿಷಯವನ್ನು ಪ್ರತ್ಯೇಕವಾಗಿ ಕಂಡುಕೊಂಡು ಪರಿಹಾರ ಹುಡುಕುತ್ತಾ ಹೋದರೆ ರೋಗಕ್ಕಿಂತ ಚಿಕಿತ್ಸೆಯೇ ಭಯಾನಕವಾದೀತು. ಹಾಗಾಗಿ ನಮ್ಮ ಪರಿಸರ ಪ್ರಜ್ಞೆಯೂ ಕೂಡಾ ನಮ್ಮ ಕಾಲದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳೊಂದಿಗೆ, ಪ್ರತಿಯೊಂದನ್ನು ಸಮಗ್ರವಾಗಿ ಗ್ರಹಿಸುತ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕೃಷಿ, ಉದ್ಯಮ, ವಿದ್ಯಾಭ್ಯಾಸ, ಆಡಳಿತ, ಆರ್ಥಿಕತೆ,  ಮತ್ತು ಸಾಂಸ್ಕೃತಿಕ ರೂಪುರೇಷೆಗಳನ್ನು ಪುನರ್ ಪರಿಶೀಲಿಸುತ್ತ  ಪುನರ್ರಚಿಸುತ್ತ ಸಾಗಬೇಕಾಗಿದೆ.

ಮೊದಲನೆಯದಾಗಿ ನಮ್ಮ ಕೃಷಿವಲಯದ ಬಗ್ಗೆ ಯೋಚಿಸೋಣ. ಸಧ್ಯದಲ್ಲಿ ಪರಿಸರ ಪ್ರಿಯರೆಲ್ಲರ ಬಾಯಲ್ಲಿ ಯಾವಾಗಲೂ ಕೇಳುತ್ತಿರುವ ಮತ್ತು ಸಾಕಷ್ಟು ಚರ್ಚೆಗೂ ಒಳಗಾಗಿರುವ ವಿಷಯವೆಂದರೆ  ” ಸಹಜ ಕೃಷಿ”. ಇದೊಂದು ಆದರ್ಶಸ್ಥಿತಿ. ಧ್ಯಾನದಂತಹ ಕ್ರಿಯೆ. ನೀರಿನಲ್ಲಿ ಮೀನಿನಂತೆ ಸಹಜವಾಗಿ ಬದುಕುವ ಗತಿ. ಇಲ್ಲಿ ಕೃಷಿಕ ಸಂಪೂರ್ಣವಾಗಿ ಪ್ರಕೃತಿಯ ಭಾಗವೇ ಆಗಿರುತ್ತಾನೆ. ಈ ಸಹಜ ಕೃಷಿಯು ನಮ್ಮ ಇಂದಿನ ಪರಿಸ್ಥಿತಿಯಲ್ಲಿ  ಕೆಲವೇ ಕೆಲವರಿಗೆ (ಅದೂ ಕೂಡಾ ಪೂರ್ಣವಾಗಿ ಅಲ್ಲ) ಸಾಧ್ಯವಾಗಬಹುದು. ಇಂತಹವರಲ್ಲಿ ಜಪಾನಿನ ‘ಫಕುವೋಕಾ’ ನಮ್ಮವರೇ ಆದ ‘ಚೇರ್ಕಾಡಿ ರಾಮಚಂದ್ರರಾಯರು’ ಬರುತ್ತಾರೆ.

ಚೇರ್ಕಾಡಿ ರಾಮಚಂದ್ರರಾಯರು

ಯಾಕೆಂದರೆ ಇವರು ಯಾವುದೇ ಆಧುನಿಕ ಸೌಲಭ್ಯಗಳನ್ನು ಬಯಸದೆ ಎಣ್ಣೆದೀಪ ಉರಿಸುತ್ತ,ಬಾವಿಯಿಂದ ನೀರನ್ನು ಸೇದಿ ಬಳಸುತ್ತ, ತಮ್ಮ ಆಹಾರವನ್ನು ತಾವೇ ಬೆಳೆದುಕೊಂಡು ಎಲ್ಲ ಕೆಲಸಗಳನ್ನು ತಾವೇಮಾಡುತ್ತ ನಮ್ಮ ಪ್ರಾಚೀನ ಕಾಲದ ಋಷಿಮುನಿಗಳಂತೆ ಬದುಕಿದವರು. ಆದ್ದರಿಂದಲೇ ಇರಬೇಕು ಫುಕುವೋಕಾ ಹೇಳಿದ್ದು ನನ್ನ ತೋಟ, ಮನೆ ಆಧುನಿಕರಿಗೆ ಎಷ್ಟು ಕುತೂಹಲ ತಂದಿದೆಯೋ ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ವ್ಯಕ್ತಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು. (ನಮ್ಮ ಮಠ ಮಾನ್ಯರುಗಳು ಈ ಆಧ್ಯಾತ್ಮಿಕ ಗುಂಪಿಗೆ ಸೇರುವುದಿಲ್ಲ) ಹಾಗಾಗಿ ಈ ‘ಸಹಜ ಕೃಷಿ’ ಒಂದು ಆದರ್ಶವಾಗಿ ಉಳಿದೀತೆ ಹೊರತು, ಸಾರ್ವತ್ರಿಕ ಆಚರಣೆಗೆ ಬರುವುದು ಕಷ್ಟ,

ಎರಡನೆಯದಾಗಿ ನಾವೀಗ ಎಲ್ಲಡೆ ಕಾಣುವ- ಕೇಳುವ, ಇತ್ತೀಚೆಗಂತೂ ಕಿವಿಗೆ ಅಪ್ಪಳಿಸುತ್ತಿರುವ ‘ಹೈಟೆಕ್ ತಂತ್ರಜ್ಞಾನ’ ಮತ್ತು ‘ಹೈಟೆಕ್ ಕೃಷಿ’ ಈ ಹೈಟಕ್ ತಂತ್ರಜ್ಞಾನವೆಂಬುದು ನಮ್ಮ ಜೀವನದ ಎಲ್ಲ ರಂಗಗಳನ್ನು ಪ್ರವೇಶಿಸಿದಂತೆಯೇ ಅಗಾಧ ಪ್ರಮಾಣದಲ್ಲಿ ಕೃಷಿ ವಲಯವನ್ನು ಆವರಿಸಿಕೊಳ್ಳುತ್ತಿದೆ.

ಒಂದುಕಡೆ ಸಾವಯವ ಕೃಷಿಯ ಬಗ್ಗೆ ಮಾತನಾಡುವ ಸರ್ಕಾರ ಈ ಹೈಟೆಕ್ ಕೃಷಿಗೆ ನೀಡುತ್ತಿರುವ ಸವಲತ್ತು ಮತ್ತು ಪ್ರಚಾರ ಊಹೆಗೂ ಮೀರಿದ್ದು. ಸರ್ಕಾರ ಕೃಷಿ ಇಲಾಖೆಯ ವಿಜ್ಷಾನಿಗಳು, ಅಧಿಕಾರಿಗಳು, ತಂತ್ರಜ್ಜಾನರು ಸಾಲು ಸಾಲುಗಳಲ್ಲದೆ, ಈ ಹೈಟೆಕ್ ತಂತ್ರಜ್ಞಾನದ ಪ್ರಚಾರ, ಮಾರಾಟ, ನಿರ್ವಹಣೆ ಮತ್ತು ತಾಂತ್ರಿಕಸಲಹೆಗಾಗಿ ದೊಡ್ಡ ಪಡೆಯನ್ನೇ ನಿರ್ಮಿಸಿರುವ   ಬೃಹತ್ ವ್ಯಾಪಾರಿ ಸಂಸ್ಥೆಗಳು, ಇವರೆಲ್ಲರೂ ಸೇರಿ ಕೃಷಿಕರಿಗೆ ಒಡ್ಡುತ್ತಿರುವ ಆಮಿಷಗಳು ಹಲವಾರು. ನೀಟಾಗಿ ಡ್ರೆಸ್ ಮಾಡಿ ಸರ್ಜರಿ ಆಪರೇಷನ್ಗೆಹೊರಟ ತಜ್ಞವೈದ್ಯರಂತೆ ಕಂಗೊಳಿಸುತ್ತ ಕೃಷಿ ಕ್ಷೇತ್ರ’ಕ್ಕೆ ಭೇಟಿನೀಡುವ ‘ತಾಂತ್ರಿಕ ಸಲಹೆಗಾರರು’ , ‘ಕ್ಷೇತ್ರ ಪರಿವೀಕ್ಷಕರು’ ಇವರನ್ನೆಲ್ಲ ಕಂಡಾಗ, ನಮ್ಮ ಕೃಷಿವಲಯ ಇಷ್ಟೊಂದು ಸಮೃದ್ಧವಾಗುದೆಯೇ? ಎಂದು.

ಅನ್ನಿಸದೆ ಇರದು. ಆದರೆ ಹೌದು ಅವರ ಪಾಲಿಗೆ ನಮ್ಮ ಕೃಷಿಕ್ಷೇತ್ರ ಖಂಡಿತವಾಗಿಯೂ ಸಮೃದ್ಧವಾಗಿದೆ! ಅವರು ಬಳಸುವ ನುಡಿಗಟ್ಟುಗಳನ್ನು ಗಮನಿಸಿ, ತೋಟ ಹೊಲ ಗದ್ದೆಗಳ ಬದಲಾಗಿ. ‘ಕೃಷಿ ಕ್ಷೇತ್ರ’  ‘ಕೃಷಿಉದ್ಯಮ’  ಜೊತೆಗೆ  ‘ಅಗ್ರಿಕ್ಲಿನಿಕ್’ ‘ಅಗ್ರಿಟೆಕ್ನಿಕ್’ ಇತ್ಯಾದಿ ಮಾಯಾಜಾಲದ ತಾಂತ್ರಿಕ ಪದಗಳು. ಇವುಗಳೊಂದಿಗೆ ಅವರು ತಯಾರಿಸಿಕೊಂಡ ತಜ್ಞವರದಿಗಳು,  ಸಂಶೋಧನಾ ಪ್ರಬಂಧಗಳು. ಇವುಗಳೆಲ್ಲವೂ ಸೇರಿ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡದ ‘ತೋಟ,  ಗದ್ದೆ, ಹೊಲಗಳೆಲ್ಲ ಮಾಯವಾಗಿಬಿಟ್ಟರೆ ಆಶ್ಚರ್ಯವೇನೂ ಇಲ್ಲ. ಸದ್ಯಕ್ಕೆ ಇವರನ್ನೆಲ್ಲ ನೋಡುತ್ತ ರೈತ ದಂಗಾಗಿರುವುದಂತೂ ನಿಜ.

(ಮುಂದುವರೆಯುವುದು)