Tag Archives: ಪೂನಾ ಒಪ್ಪಂದ

ಬೂದಿ ಮಾತ್ರ ಬಲ್ಲದು ಬೇಯುವ ಬೇಗೆಯನ್ನು

-ಡಾ.ಎಚ್.ಎಸ್. ಅನುಪಮಾ
-ಕೆ.ಎಲ್. ಚಂದ್ರಶೇಖರ್ ಐಜೂರ್

1932 ಸೆಪ್ಟೆಂಬರ್ 24 ರಂದು ಹಿಂದೂ ಮುಖಂಡರು ಹಾಗೂ ಅಂಬೇಡ್ಕರ್ ಸೇರಿದಂತೆ ಶೋಷಿತ ವರ್ಗಗಳ ಮುಖಂಡರ ನಡುವೆ ಏರ್ಪಟ್ಟ ಪೂನಾ ಒಪ್ಪಂದ ಐತಿಹಾಸಿಕವೆಂದು ಪರಿಗಣಿಸಲ್ಪಟ್ಟಿದೆ. ಅದು ಐತಿಹಾಸಿಕವಾಗಿದ್ದು ಒಂದಲ್ಲ ಹಲವು ಕಾರಣಗಳಿಗೆ. ಹಿಂದೂಧರ್ಮದ ಅಸ್ಪೃಶ್ಯತೆ ಕಳಂಕವನ್ನು ತೊಡೆದುಹಾಕಲು ಮತ್ತು ಮೇಲ್ಜಾತಿ ಹಿಂದೂಗಳ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಬೇಕೆಂದು 1932ರ ಸೆಪ್ಟೆಂಬರ್ 20 ರಂದು ಗಾಂಧಿ ಪೂನಾದ ಯರವಾಡಾ ಜೈಲಿನಲ್ಲಿ ಆಮರಣಾಂತ ಉಪವಾಸ ಶುರುಮಾಡಿದರು. ಎರಡನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಶೋಷಿತ ಸಮುದಾಯಗಳಿಗೆ ಹಿಂದೂಗಳಿಂದ ಪ್ರತ್ಯೇಕ ಮತದಾನ ವ್ಯವಸ್ಥೆ ನೀಡಿದ್ದನ್ನು ಅವರು ಒಪ್ಪಿರಲಿಲ್ಲ. ಅದರ ರದ್ದತಿಗೆ ಅಂಬೇಡ್ಕರ್ ಮತ್ತಿತರ ನಾಯಕರ ಮನವೊಲಿಸುವುದು ಉಪವಾಸದ ಹಿಂದಿನ ಮತ್ತೊಂದು ಉದ್ದೇಶವಾಗಿತ್ತು. ಕೊನೆಗೆ ಸೆಪ್ಟೆಂಬರ್ ೨೪ನೇ ತಾರೀಕು ಹಿಂದೂ ಮುಖಂಡರು ಮತ್ತು ಅಂಬೇಡ್ಕರ್ ಸಹವರ್ತಿಗಳ ನಡುವೆ ಒಪ್ಪಂದವೇರ್ಪಟ್ಟು ಪ್ರತ್ಯೇಕ ಮತದಾನ ವ್ಯವಸ್ಥೆಯ ಬದಲಾಗಿ ಶೋಷಿತ ಸಮುದಾಯಗಳಿಗೆ ಸ್ಥಾನ ಮೀಸಲು, ಮೀಸಲು ಕ್ಷೇತ್ರಗಳಲ್ಲಿ ಎರಡು ಹಂತದ ಚುನಾವಣೆ, ಕೆಲಕಾಲಾವಧಿಯ ನಂತರ ಪ್ರಾಥಮಿಕ ಚುನಾವಣೆ ರದ್ದತಿ, ಮೀಸಲು ಸ್ಥಾನಗಳ ಏರಿಕೆ ಮಾಡಲಾಯಿತು. ಗಾಂಧಿ ಉಪವಾಸ ಕೂತ ನಂತರ ಹಿಂದೂ ದೇವಾಲಯಗಳು ದಲಿತರಿಗೆ ಪ್ರವೇಶ ನೀಡಬೇಕೆಂಬ ಶೋಷಿತರ ಕೂಗಿಗೆ ಜೀವಬಂದು ದೇಶದ ಅಲ್ಲಲ್ಲಿ ಅಸ್ಪೃಶ್ಯತೆ ಆಚರಿಸುವುದಿಲ್ಲವೆಂದು ಪಣತೊಟ್ಟ ಸಾರ್ವಜನಿಕ ಪ್ರಕಟಣೆಗಳು ಹೊರಬಿದ್ದವು. ದೇಶಾದ್ಯಂತ ಅಸ್ಪೃಶ್ಯತೆ ಪಾಪ ಎಂದು ಸವರ್ಣೀಯ ಹಿಂದೂಗಳೆಲ್ಲ ಭಾವಿಸಿ ಅದಿನ್ನು ಮಾಯವಾಗೇ ಬಿಟ್ಟಿತೇನೋ ಎಂಬಂತಹ ವಾತಾವರಣವು ಕೆಲಕಾಲ ಮೂಡಿತು.

ಬೂದಿ ಮಾತ್ರ ಬಲ್ಲದು ಬೇಯುವ ಬೇಗೆಯನ್ನು. ಕಡತದ ಹೊಟ್ಟೆಯೊಳಗೆ ಅವಿತು ಕೂತಿದ್ದ ಕಾಗದದ ಮೇಲಿನ ಅಂಕಿಅಂಶಗಳು ರೋಚಕ ಕತೆಗಳನ್ನು ಹೇಳುತ್ತಿದ್ದರೆ, ವಾಸ್ತವ ಮಾತ್ರ ತನ್ನ ಎಂದಿನ ವಿಕೃತ ಮುಖವನ್ನೇ ಹೊದ್ದು ಕುಣಿಯುತ್ತಿತ್ತು. ಶೋಷಿತರಿಗೆ ದೇವಾಲಯ ಪ್ರವೇಶದ ಹೆಸರಿನಲ್ಲಿ ಹೆಸರೇ ಇಲ್ಲದೆ ಶಿಥಿಲಗೊಂಡ, ಕುಸಿದು ಬೀಳುತ್ತಿರುವ, ಯಾರೂ ಹೋಗದ ಪಾಳು ದೇವಾಲಯಗಳು ಮಹಾತ್ಮನಿಗೆ ಬೆಂಬಲ ತೋರಿಸುವ ನೆಪದಲ್ಲಿ ಸೇರಿಕೊಂಡಿದ್ದನ್ನು ಗುರುತಿಸಿದ ಅಂಬೇಡ್ಕರ್, ಅದರಲ್ಲಿ ಗಾಂಧೀಜಿಯ ಕ್ರಿಯಾಕ್ಷೇತ್ರವಾದ ಗುಜರಾತಿನ ಒಂದೇ ಒಂದು ದೇವಾಲಯವೂ ಇಲ್ಲವೆಂದು, ಅದು ಅಂದಿಗೂ ಸಾಮಾಜಿಕವಾಗಿ ಅಷ್ಟೇ ಗಡುಸಾಗಿ, ಪ್ರತಿಗಾಮಿಯಾಗಿ ಉಳಿದಿರುವುದನ್ನು ಗುರುತಿಸಿದ್ದರು. ಅಂಬೇಡ್ಕರ್‌ಗೆ ಎಂದೋ ಗೊತ್ತಾಗಿದ್ದ ಹಿಂದೂ ಧರ್ಮ ಮತ್ತು ಅಸ್ಪೃಶ್ಯರ ವಿಮೋಚನೆ ಒಟ್ಟೊಟ್ಟಿಗೆ ಚಲಿಸಲಾರವು ಎಂಬ ಕಹಿ ಸತ್ಯವನ್ನು ಗಾಂಧಿ ಪಾಳಯ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಹಿಂದೂ ಧರ್ಮದ ಮೂಲಕವೇ ಅಸ್ಪೃಶ್ಯತೆಯನ್ನು ತೊಡೆದು ಹಾಕುವೆನೆಂಬ ಹುಂಬ ವಿಶ್ವಾಸದಲ್ಲಿ ಗಾಂಧಿ ನಿಂತಿದ್ದರು. ನಂತರ ನಡೆದ ವಿದ್ಯಮಾನಗಳು “ಪೂನಾ ಒಪ್ಪಂದಕ್ಕೆ ಸಹಿಮಾಡಿದ್ದು ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು,” ಎಂದು ಅಂಬೇಡ್ಕರ್ ಪರಿತಪಿಸುವಂತೆ ಮಾಡಿದವು. ಅಂಬೇಡ್ಕರ್ ಹಾಗೆ ಭಾವಿಸಲು ಕಾರಣವಾದ ಘಟನೆಗಳನ್ನು ಒಪ್ಪಂದದ ನಂತರದ ಘಟನೆಗಳಲ್ಲಿ ಹುಡುಕಬೇಕು. ಸೆಪ್ಟೆಂಬರ್ ಕೊನೆಯಿಂದ 1933 ಏಪ್ರಿಲ್‌ವರೆಗೆ ನಡೆದಿದ್ದನ್ನು ಅವರ ಜೀವನಚರಿತ್ರೆಯಿಂದ ನೋಡಿದರೆ ಇದು ಸ್ಪಷ್ಟವಾಗುತ್ತದೆ.

1930ರಲ್ಲಿ ನಾಸಿಕದ ಕಾಳಾರಾಮ್ ದೇವಾಲಯ ಪ್ರವೇಶ, 1931ರಲ್ಲಿ ಕೇರಳದ ಕೆಳಪ್ಪನ್ ಅವರ ಗುರುವಾಯೂರು ದೇವಾಲಯ ಪ್ರವೇಶಕ್ಕೆ ನಡೆಸಿದ ಪ್ರಯತ್ನಗಳು ಕಾಂಗ್ರೆಸ್ಸಿನ ಗಮನ ಸೆಳೆಯದೇ ಹೋಗಿದ್ದವು. ಗಾಂಧಿ ಉಪವಾಸ ಶುರುಮಾಡಿದ ಮರುದಿನವೇ ಮಲಬಾರ್‌ನ ಕೆಳಪ್ಪನ್ ಅಸ್ಪೃಶ್ಯರ ದೇವಾಲಯ ಪ್ರವೇಶ ಕುರಿತು ಗುರುವಾಯೂರು ದೇವಸ್ಥಾನದೆದುರು ಉಪವಾಸ ಕುಳಿತರು. ಅವರಿಗೆ ಗಾಂಧಿ ತಾವಿಬ್ಬರೂ 1933 ಜನವರಿ ಒಂದರಿಂದ ಒಟ್ಟಿಗೇ ಉಪವಾಸ ಶುರು ಮಾಡೋಣವೆಂದು ಹೇಳಿದ್ದರಿಂದ, ದೇವಾಲಯ ಪ್ರವೇಶಕ್ಕಿಂತ ಅವರ ಜೀವವೇ ದೊಡ್ಡದೆಂದೂ, ಉಪವಾಸ ನಿಲ್ಲಿಸಬೇಕೆಂದೂ ಅಂಬೇಡ್ಕರ್ ಕೇಳಿಕೊಂಡಿದ್ದರಿಂದ ಉಪವಾಸ ನಿಲ್ಲಿಸಿದ್ದರು.

1932 ಸೆಪ್ಟೆಂಬರ್ 26: ನಾಸಿಕ್ ದೇವಾಲಯ ಪ್ರವೇಶ ಹೋರಾಟ ಮಾಡಿದ್ದರೂ ಅಂಬೇಡ್ಕರ್ ಈ ವೇಳೆಗೆ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದರು. ತನ್ನ ಜನ ದೇವಾಲಯ ಪ್ರವೇಶಕ್ಕಿಂತ ರಾಜಕೀಯ ಅಧಿಕಾರ ಪಡೆಯಲು, ಲೌಕಿಕ ಸವಲತ್ತುಗಳನ್ನು ಪಡೆಯಲು ಮೊದಲು ಶ್ರಮಿಸಬೇಕು ಎಂದು ಭಾವಿಸಿದ್ದರು. ಮುಂಬಯಿಯ ಸಭೆಯೊಂದರಲ್ಲಿ ಮಾತನಾಡುತ್ತ, “ಕುತ್ತಿಗೆಯ ಸುತ್ತಲಿನ ತುಳಸಿಮಾಲೆ ನಿಮ್ಮನ್ನು ಸಾಲಗಾರರ ಕೈಯಿಂದ ಪಾರುಮಾಡುವುದಿಲ್ಲ. ರಾಮಭಜನೆ ಹಾಡಿದರೆ ಮನೆ ಬಾಡಿಗೆ ಕಡಿಮೆಯಾಗುವುದಿಲ್ಲ. ಪಂಢರಾಪುರ ಯಾತ್ರೆ ತಿಂಗಳ ಕೊನೆಗೆ ಸಂಬಳ ತರುವುದಿಲ್ಲ. ದೇವಾಲಯ ಪ್ರವೇಶ ನಿಮ್ಮ ಆಹಾರಕ್ಕೆ, ಉಡುವ ಬಟ್ಟೆಗೆ, ಶಿಕ್ಷಣಾವಕಾಶಕ್ಕೆ, ರೋಗದ ಮದ್ದಿಗೆ ಹಣ ನೀಡುವುದಿಲ್ಲ. ಬಹುಪಾಲು ಜನ ಅರ್ಥವಾಗದ ಬದುಕಿನ ನಿಗೂಢಗಳ ಕುರಿತು ಮೂಢನಂಬಿಕೆಗಳಲ್ಲಿ ಮುಳುಗಿರುವುದರಿಂದ ಕೆಲವರು ಅದೇ ಅವಕಾಶ ಬಳಸಿ ಸಮಾಜವಿರೋಧಿ ಕೆಲಸದಲ್ಲಿ ತೊಡಗಿದ್ದಾರೆ. ಆದ್ದರಿಂದ ನಿಮ್ಮ ಹೋರಾಟ ರಾಜಕೀಯ ಮತ್ತು ಆರ್ಥಿಕ ಶಕ್ತಿ ಬೆಳೆಸಿಕೊಳ್ಳುವತ್ತ ಇರಲಿ,” ಎಂದು ಸ್ಪಷ್ಟವಾಗಿ ಹೇಳಿದರು.

ಅಕ್ಟೋಬರ್ 19ರಂದು ಮುಖ್ಯವಾದ ಕ್ರಿಮಿನಲ್ ಕೇಸೊಂದರ ಸಲುವಾಗಿ ಸಾವಂತವಾಡಿಯ ಕೋರ್ಟಿಗೆ ಹೊರಟಿದ್ದ ಅಂಬೇಡ್ಕರ್ ದಾರಿಯಲ್ಲಿ ಗಾಂಧೀಜಿಯನ್ನು ಯರವಾಡಾ ಜೈಲಿನಲ್ಲಿ ಭೇಟಿಯಾದರು. ಅಸ್ಪೃಶ್ಯತೆ ವಿರೋಧಿ ಸಂಘದಲ್ಲಿರಬೇಕಾದ ವ್ಯಕ್ತಿಗಳ ಕುರಿತು ಮಾತನಾಡುತ್ತಾ ಅದರ ವಿವಿಧ ಸಮಿತಿಗಳಲ್ಲಿ ಅಸ್ಪೃಶ್ಯರೇ ಹೆಚ್ಚು ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳಬೇಕೆಂದು ಹೇಳಿದರು. ಗಾಂಧೀಜಿ ಬಳಿ ಶೋಷಿತ ಸಮುದಾಯಗಳ ಸಬಲೀಕರಣ ಯತ್ನಗಳು ಇತ್ತೀಚೆಗೆ ಕಡಿಮೆಯಾಗಿರುವ ಬಗ್ಗೆ, ವಿಶೇಷ ಗಣತಿಯ ಅವಶ್ಯಕತೆ ಕುರಿತು ಗಮನ ಸೆಳೆದರು. ಅಸ್ಪೃಶ್ಯತೆ ವಿರೋಧಿ ಸಂಘದ ಚಟುವಟಿಕೆಗಳು ಮುಖ್ಯವಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಉನ್ನತಿಗೆ ಶ್ರಮಿಸುವಂಥವಾಗಿರಬೇಕೆಂದು ಸೂಚಿಸಿದರು.

ಅಕ್ಟೋಬರ್ 28ಕ್ಕೆ ಮುಂಬಯಿಯ ಮತ್ತೊಂದು ಸಭೆಯಲ್ಲಿ ಮಾತನಾಡುತ್ತಾ, “ದೇವಾಲಯ ಪ್ರವೇಶ ಮತ್ತು ಸಹಪಂಕ್ತಿ ಭೋಜನದ ಸಂಭ್ರಮದಲ್ಲಿ ಕಳೆದುಹೋಗಬೇಡಿ. ನಿಮ್ಮ ಕಷ್ಟಗಳು ಪೂರ್ವ ಜನ್ಮದ ಕರ್ಮವೆಂದು ನೀವು ಭಾವಿಸದೇ ಇದ್ದರೆ ಒಳ್ಳೆಯದು. ನಿಮ್ಮ ಬಡತನ ಅನಿವಾರ್ಯವೆಂಬ ಭಾವನೆ ತಪ್ಪು. ನಿಮ್ಮನ್ನೇ ನೀವು ಗುಲಾಮರೆಂದು ಭಾವಿಸಿಕೊಳ್ಳುವುದನ್ನು ಮೊದಲು ನಿಲ್ಲಿಸಿ,” ಎಂದರು.

ನವೆಂಬರ್ 7: ಮೂರನೆಯ ದುಂಡುಮೇಜಿನ ಪರಿಷತ್ತಿನ ಸಲುವಾಗಿ ಲಂಡನ್ನಿಗೆ ಹೊರಟರು. ಹಡಗಿನಲ್ಲಿ ಪ್ರಯಾಣಿಸುವಾಗ ಮಿತ್ರನಿಗೆ ಪತ್ರವೊಂದರಲ್ಲಿ, “ನನಗೆ ಶುಭವಿದಾಯ ಹೇಳಲು ಅಪಾರ ಜನ ಸೇರಿದ್ದರು. ನನ್ನ ಮನಸ್ಸು ಏಕಾಂತ ಮತ್ತು ಪ್ರಶಾಂತ ವಾತಾವರಣಕ್ಕಾಗಿ ಹಾತೊರೆಯುತ್ತಿದೆ. ಅಭಿಮಾನಿಗಳ ಈ ತೆರನ ಮೂರ್ತಿಪೂಜೆ ಉಸಿರುಕಟ್ಟಿಸುತ್ತಿದೆ,” ಎಂದು ಬರೆದರು. ಆ ವೇಳೆಗೆ ಹರಿಜನ ಚಳುವಳಿಯ ಕುರಿತು ಗಾಂಧೀಜಿ ನೀಡಿದ ಹೇಳಿಕೆಗಳನ್ನು ತಿಳಿದುಕೊಂಡು, “ಗಾಂಧಿ ನಮ್ಮ ದಾರಿಗೆ ಬರುತ್ತಿದ್ದಾರೆ, ಆದರೆ ಗಾಂಧೀಜಿಯ ಮನಸ್ಸು ಅಂತರ್ಜಾತಿ ವಿವಾಹ ಮತ್ತು ಸಹಭೋಜನವನ್ನು ಒಪ್ಪುವಷ್ಟು ಇನ್ನೂ ಮಾಗಿಲ್ಲ,” ಎಂದು ಬರೆದರು.

ಆ ಹಡಗಿನಲ್ಲಿಯೇ ಅಂಬೇಡ್ಕರರಿಗೆ ಒಂದು ಕಹಿ ಅನುಭವವಾಯಿತು. ಸರ್ ಪಟ್ಟಾನಿ ಎನ್ನುವವರ ಭೇಟಿಯಾಯಿತು. ಆತ ಮಾತನಾಡುತ್ತಾ “ಅಂದು ಮುಂಬಯಿ ಸಭೆಯಿಂದ ಅರ್ಧಕ್ಕೇ ಎದ್ದು ಹೋದೆ. ನಂತರ ಏನು ನಡೆಯಿತು?” ಎಂದು ಪ್ರಶ್ನಿಸಿದರು. ಅಂಬೇಡ್ಕರ್ “ನಡುವೆ ಏಕೆ ಎದ್ದು ಹೋದಿರಿ?” ಎಂದು ಕೇಳಿದಾಗ, “ಹಿಂದೂ ಧರ್ಮಗ್ರಂಥಗಳ ಪ್ರಕಾರ ಒಳ್ಳೆಯ ವ್ಯಕ್ತಿಗೆ ದುಷ್ಟನೊಬ್ಬ ಮಾನಹಾನಿ ಆಗುವಂತೆ ಮಾತನಾಡುತ್ತಿದ್ದರೆ ಆ ಸ್ಥಳ ಬಿಟ್ಟು ಎದ್ದು ಹೋಗಬೇಕು ಅಥವಾ ದುಷ್ಟನ ನಾಲಿಗೆ ಎಳೆದು ಕತ್ತರಿಸಬೇಕು. ಅದಕ್ಕೇ ಎದ್ದು ಹೋದೆ,” ಎಂದರು. ಸಿಟ್ಟಿನಿಂದ ಉರಿದು ಹೋದರೂ ತೋರಗೊಡದ ಅಂಬೇಡ್ಕರ್ ವ್ಯಂಗ್ಯದ ದನಿಯಲ್ಲಿ ತಣ್ಣಗೆ, “ನಿಮ್ಮ ಹಿಂದೂ ಧರ್ಮ ಗ್ರಂಥಗಳು ಹೊಗಳುಭಟ್ಟರಿಗೆ, ಸೋಗಲಾಡಿಗಳಿಗೆ ಏನು ಶಿಕ್ಷೆ ವಿಧಿಸಿವೆ ನೈಟ್ ಸಾಹೇಬರೇ?” ಎಂದು ಕೇಳಿದಾಗ ಆತ, “ನೀವು, ಯಾರ ಬಗ್ಗೆ ಏನು ಮಾತನಾಡುತ್ತಿದ್ದೀರಿ ಎಂದು ಗೊತ್ತು ತಾನೇ?” ಎಂದರು. ಅಂಬೇಡ್ಕರ್, “ನಾನು ಯಾರ ಬಗ್ಗೆ ಮಾತನಾಡುತ್ತಿದ್ದೀನೆಂದು ನನಗೂ ಗೊತ್ತು, ನಿಮಗೂ ಗೊತ್ತು. ಗಾಂಧಿಯ ಸುತ್ತ ತುಂಬಿಹೋಗಿರುವ ಹೊಗಳುಭಟ್ಟರನ್ನು ಮೊದಲು ಆಚೆ ಸರಿಸಿ,” ಎಂದು ಖಾರವಾಗಿ ಹೇಳಿದರು. ಅವರ ಕಾವೇರಿದ ಚರ್ಚೆಯನ್ನು ತಣಿಸಲು ಹಡಗಿನ ಪೊಲೀಸ್ ಆಫೀಸರ್ ಬರಬೇಕಾಯಿತು.

ನವೆಂಬರ್ 14: ಅಸ್ಪೃಶ್ಯತಾ ವಿರೋಧಿ ಸಂಘದ ಅಧ್ಯಕ್ಷ ಠಕ್ಕರ್ ಬಾಪಾಗೆ ಅಂಬೇಡ್ಕರ್ ಒಂದು ಪತ್ರ ಬರೆದರು. ಅಸ್ಪೃಶ್ಯತೆ ನಿವಾರಣೆಗಾಗಿ ಹಿಂದೂ ಸಮಾಜ ಸುಧಾರಕರಿಗೆ ನೀಡಿದ ಅತಿಮೌಲಿಕ ಸಲಹೆ ಎಂದು ಪರಿಗಣಿಸಲಾಗಿರುವ ಆ ಪತ್ರದ ಸಾರಾಂಶ ಹೀಗಿದೆ: “ಸ್ಪೃಶ್ಯ-ಅಸ್ಪೃಶ್ಯರು ಕಾನೂನಿನಿಂದಾಗಲೀ, ಪ್ರತ್ಯೇಕ ಅಥವಾ ಒಂದೇ ಮತಪಟ್ಟಿಯಿಂದಾಗಲೀ ಒಂದಾಗಲು ಸಾಧ್ಯವಿಲ್ಲ. ಅವರನ್ನು ಒಟ್ಟಿಗೆ ಬಂಧಿಸಬಲ್ಲದ್ದು ಒಂದೇ – ಪ್ರೀತಿ. ಶೋಷಿತ ಸಮುದಾಯಗಳು ತಮ್ಮ ಕಷ್ಟದಿಂದ ಮುಕ್ತಿ ಹೊಂದಬೇಕಾದರೆ ಮೇಲ್ಜಾತಿ ಹಿಂದೂ ಯೋಚಿಸುವಂತೆ ಮಾಡಿ ಆತ ಬದಲಾಗುವಂತೆ ಮಾಡಬೇಕು. ಮೇಲ್ಜಾತಿ ಹಿಂದೂಗಳ ಮನಸ್ಥಿತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಬೇಕಿದೆ. ಅಸ್ಪೃಶ್ಯತೆ ವಿರೋಧಿ ಸಂಘವು ಶೋಷಿತ ಸಮುದಾಯಗಳಿಗೆ ನೀರು, ರಸ್ತೆ, ಶಾಲೆಗಳನ್ನು ಬಳಸುವ ಅವಕಾಶ ಮಾಡಿಕೊಡಬೇಕು. ಇದು ಹಿಂದೂ ಸಮಾಜದಲ್ಲಿ ಕ್ರಾಂತಿಯನ್ನುಂಟುಮಾಡಿದಂತೆ. ಅದಕ್ಕಾಗಿ ನಿಮ್ಮ ಸಂಘಕ್ಕೆ ಕಾರ್ಯಕರ್ತರ ಸೇನೆಯೇ ಬೇಕಾಗುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವವರು ಬೇಕಾಗಿದ್ದಾರೆ. ಇಂತಹ ಕಾರ್ಯಕ್ರಮ ಸಮಾಜದಲ್ಲಿ ಅಶಾಂತಿ ಮತ್ತು ಹಿಂಸಾತ್ಮಕ ಸನ್ನಿವೇಶ ಸೃಷ್ಟಿಸುತ್ತದೆ ಎನ್ನುವುದು ನಿಜವಾದರೂ ಅಸ್ಪೃಶ್ಯತೆ ನಿವಾರಣೆಗೆ ಕನಿಷ್ಟ ಪ್ರತಿರೋಧ ವಿಧಾನ ಉಪಯೋಗವಾಗುವುದಿಲ್ಲ. ಸವರ್ಣೀಯರ ಸಾಂಪ್ರದಾಯಿಕ ರೂಢಿನಿಯಮಗಳ ವಿರುದ್ಧ ಪ್ರಹಾರ ಮಾಡಬೇಕು. ಆಗ ತುರ್ತುಸ್ಥಿತಿಯೊಂದು ಹುಟ್ಟುತ್ತದೆ. ಈ ತುರ್ತು ಹಿಂದೂವನ್ನು ಯೋಚಿಸಲು ಹಚ್ಚುತ್ತದೆ. ಆಗ ಆತ ಬದಲಾವಣೆಯನ್ನು ಸುಲಭವಾಗಿ ಒಪ್ಪಿಕೊಳ್ಳಬಲ್ಲ. ಕನಿಷ್ಠ ಪ್ರತಿರೋಧ ಅಥವಾ ಮೌನ ಕ್ರಾಂತಿ ಯಾವ ತುರ್ತನ್ನೂ ಹುಟ್ಟಿಸುವುದಿಲ್ಲ. ಕಾಳಾರಾಮ್ ದೇವಾಲಯ ಪ್ರವೇಶ, ಚೌಡರ್ ಕೆರೆ, ಗುರುವಾಯೂರು ಪ್ರವೇಶ ಹೋರಾಟಗಳು ಸಮಾಜ ಸುಧಾರಕರು ವರ್ಷಗಟ್ಟಲೆ ಸಾಧಿಸಲಾಗದ್ದನ್ನು ಕೆಲವೇ ದಿನಗಳಲ್ಲಿ ಸಾಧಿಸಿವೆ.

“ಶೋಷಿತ ಸಮುದಾಯಗಳ ದೀನ ಸ್ಥಿತಿಗೆ, ಬಡತನಕ್ಕೆ ಸಮಾನ ಅವಕಾಶ ಸಿಗದಿರುವುದೇ ಮುಖ್ಯ ಕಾರಣ. ಸಂಘವು ಈ ಬಗ್ಗೆ ಕೆಲಸ ಮಾಡಲು ಶೋಷಿತ ಸಮುದಾಯಗಳ ಕಾರ್ಯಕರ್ತರನ್ನೇ ತಯಾರು ಮಾಡಬೇಕು. ಸ್ವತಃ ನೋವುಂಡವರು ಸವರ್ಣೀಯ ಕಾರ್ಯಕರ್ತರಿಗಿಂತ ಹೆಚ್ಚು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಬಲ್ಲರು. ಟಾಲ್‌ಸ್ಟಾಯ್ ಹೇಳಿದಂತೆ “ಪ್ರೀತಿಸಬಲ್ಲವನು ಮಾತ್ರ ಸೇವೆ ಮಾಡಬಲ್ಲ.” ಆದ್ದರಿಂದ ಸಂಬಳ ಪಡೆವ ಕೆಲಸಗಾರರು ಈ ವಿಷಯದಲ್ಲಿ ಉತ್ತಮ ಆಯ್ಕೆಯಾಗಲಾರರು.

ಡಿಸೆಂಬರ್ 1932: ಅಂಬೇಡ್ಕರ್ ಲಂಡನ್ ಬಿಡುವ ವೇಳೆಗೆ ಭಾರತದಲ್ಲಿ ದೇವಾಲಯ ಪ್ರವೇಶ ವಿಚಾರ ಬಿಸಿಸುದ್ದಿಯಾಗಿತ್ತು. ಜನವರಿ ಒಂದರಿಂದ ಗುರುವಾಯೂರು ದೇವಾಲಯ ಪ್ರವೇಶದ ಸಲುವಾಗಿ ಕೆಳಪ್ಪನ್ ಜೊತೆಗೆ ತಾನೂ ಉಪವಾಸ ಕೂರುವೆನೆಂದು ಹೇಳಿ ಗಾಂಧಿ ಸಂಚಲನ ಮೂಡಿಸಿದ್ದರು. ಆದರೆ ಗಾಂಧಿ ಅನುಯಾಯಿಗಳಲ್ಲಿ ಭಿನ್ನಮತ ಶುರುವಾಗಿತ್ತು. ಪೂನಾ ಒಪ್ಪಂದದ ಮೊದಲು ಗಾಂಧಿ ಉಪವಾಸ ನಿಲ್ಲಿಸಲಿ ಎಂಬ ಅನುಕಂಪದಿಂದ ಸುಧಾರಣೆ ಮಾಡಹೊರಟ ಕೆಲವರು ಈಗ ನಿಜ ಬಣ್ಣ ತೋರಿದರು. ಕೇರಳದ ಜಾಮೊರಿನ್ ದೊರೆ ಗುರುವಾಯೂರು ದೇವಸ್ಥಾನಕ್ಕೆ ಅಸ್ಪೃಶ್ಯರ ಪ್ರವೇಶ ನಿರಾಕರಿಸಿದ. ಆ ಹಿಂದೂ ರಾಜನ ಅರಮನೆಯ ಎಷ್ಟೋ ಆಚರಣೆಗಳಲ್ಲಿ ಮುಸ್ಲಿಮರು ಇರುತ್ತಿದ್ದರು. ಪೊನ್ನಾನಿ ತಾಲೂಕಿನ ಜನರೆದುರು ಆಯ್ಕೆಯನ್ನಿಟ್ಟು ಬಹುಸಂಖ್ಯಾತರು ಬಯಸಿದಂತೆ ಮಾಡಿ ಎಂದು ಗಾಂಧಿ ಒಂದು ಸಲಹೆ ಮುಂದಿಟ್ಟರು. ಬಹುಸಂಖ್ಯಾತರು ಅಸ್ಪೃಶ್ಯರ ದೇವಾಲಯ ಪ್ರವೇಶವನ್ನು ಸಮ್ಮತಿಸಿದರು. ಆದರೂ ಜಾಮೊರಿನ್ ಜಗ್ಗಲಿಲ್ಲ. ಇದೇ ಸಮಯಕ್ಕೆ ರಂಗಾ ಅಯ್ಯರ್ ಸೆಂಟ್ರಲ್ ಅಸೆಂಬ್ಲಿಯಲ್ಲಿ ದೇವಾಲಯ ಪ್ರವೇಶ ಸುಲಭಗೊಳಿಸಲು ಅಸ್ಪೃಶ್ಯತಾ ನಿಷೇಧ ಕಾಯ್ದೆ ಮಂಡಿಸಿದ್ದರು. ರಾಜಾ, ಗ್ಯಾನ್ ಪ್ರಸಾದ್ ಸಿಂಗ್, ಮಿತ್ರ ಮೊದಲಾದವರೂ ಅವರ ಜೊತೆಗಿದ್ದರು. ಆ ಸಮಯದಲ್ಲಿ ಗಾಂಧಿ ಗುರುವಾಯೂರು ಉಪವಾಸ ಮುಂದೂಡಿರುವುದಾಗಿ, ಗವರ್ನರ್ ಜನರಲ್ ಅವರ ನಿರ್ಧಾರಕ್ಕಾಗಿ ಕಾಯುವುದಾಗಿ ಪ್ರಕಟಿಸಿದಾಗ ಅವರ ನಡೆ ಅಂಬೇಡ್ಕರ್ ಬೆಂಬಲಿಗರಲ್ಲಿ ಅನುಮಾನ ಹುಟ್ಟಿಸಿತು.

ಜನವರಿ 23, 1933: ಭಾರತಕ್ಕೆ ವಾಪಸಾದ ಅಂಬೇಡ್ಕರ್ ಸಂದರ್ಶನವೊಂದರಲ್ಲಿ ದೇವಾಲಯ ಪ್ರವೇಶ ಮಸೂದೆ ಬಗ್ಗೆ ಪ್ರತಿಕ್ರಿಯಿಸುತ್ತಾ, “ವೈಸ್‌ರಾಯ್ ತಕ್ಷಣಕ್ಕೆ ಒಪ್ಪಿಗೆ ನೀಡುವ ಲಕ್ಷಣಗಳಿಲ್ಲ. ದೇವಾಲಯ ಪ್ರವೇಶದ ಸಲುವಾಗಿ ಗಾಂಧಿ ತಮ್ಮ ಜೀವ ಕೊಡುವುದು ಬೇಡ. ವೈಸ್‌ರಾಯ್ ಕೂಡಾ ಶಾಸನ ಸಭೆಯಲ್ಲಿ ಈ ಚರ್ಚೆಯನ್ನು ತಡೆಹಿಡಿಯದೇ ಜನಹಿತವಿದೆ ಎನಿಸಿದಲ್ಲಿ ವಿಟೊ ಬಳಸಿಯಾದರೂ ಮಸೂದೆ ಜಾರಿಗೊಳಿಸಬೇಕು,” ಎಂದು ತಿಳಿಸಿದರು.

ಮುಂಬಯಿಯಲ್ಲಿ ಇಳಿದ ಕೂಡಲೇ ಗಾಂಧಿ ಯರವಾಡಾ ಜೈಲಿನಲ್ಲಿ ತಮ್ಮನ್ನು ಭೇಟಿಯಾಗುವಂತೆ ಟೆಲಿಗ್ರಾಂ ಕಳಿಸಿದರು. ದೆಹಲಿಗೆ ಹೋಗಿ ಹಿಂದಿರುಗುತ್ತಾ ಫೆಬ್ರುವರಿ 4ರ ಮಧ್ಯಾಹ್ನ ಅಂಬೇಡ್ಕರ್ ಗಾಂಧಿ ಭೇಟಿಯಾದರು. ಎದ್ದು, ಕೈ ಕುಲುಕಿ ಬರಮಾಡಿಕೊಂಡ ಗಾಂಧಿ ದೇವಾಲಯ ಪ್ರವೇಶ ಕುರಿತು ಮಾತು ಶುರುಮಾಡಿ ಸುಬ್ಬರಾಯನ್ ಮತ್ತು ರಂಗಾ ಅಯ್ಯರ್ ಮಂಡಿಸುವ ಮಸೂದೆಗೆ ಬೆಂಬಲ ನೀಡಬೇಕೆಂದು ಕೋರಿದರು. ಅದನ್ನು ನೇರಾನೇರ ನಿರಾಕರಿಸಿ ಅಂಬೇಡ್ಕರ್ ಹೇಳಿದ ಮಾತುಗಳು ಮಾರ್ಮಿಕವಾಗಿವೆ:

“ಆ ಮಸೂದೆ ಅಸ್ಪೃಶ್ಯತೆ ಪಾಪ ಎನ್ನುವುದಿಲ್ಲ. ಅಸ್ಪೃಶ್ಯರನ್ನು ದೇವಾಲಯದೊಳಗೆ ಬಿಡಿ ಎನ್ನುತ್ತದೆಯೇ ಹೊರತು ದೇವಾಲಯ ಪ್ರವೇಶ ಅವರ ಹಕ್ಕು ಎನ್ನುವುದಿಲ್ಲ. ಶೋಷಿತ ಸಮುದಾಯಗಳು ವರ್ಣ ವ್ಯವಸ್ಥೆಯ ಶೂದ್ರರಾಗಲು ಇಚ್ಛಿಸುವುದಿಲ್ಲ. ನಾನು ಹಿಂದೂ ಎಂದು ಕರೆದುಕೊಳ್ಳಬಯಸುವುದಿಲ್ಲ. ಯಾವ ವ್ಯವಸ್ಥೆ ನನ್ನನ್ನು ಕೀಳಾಗಿ ಕಂಡಿದೆಯೋ ಅದರ ಬಗ್ಗೆ ನಾನೇಕೆ ಹೆಮ್ಮೆ ಪಡಲಿ? ಜಾತಿವ್ಯವಸ್ಥೆ ಹೀಗೇ ಮುಂದುವರೆಯುವುದಾದರೆ ದೇವಾಲಯ ಪ್ರವೇಶದಿಂದ ಏನೂ ಲಾಭವಿಲ್ಲ.”

ಗಾಂಧಿ ಉತ್ತರಿಸಿದರು: “ವರ್ಣ ವ್ಯವಸ್ಥೆ ಕೆಟ್ಟ ವ್ಯವಸ್ಥೆಯಲ್ಲ. ಮೇಲ್ಜಾತಿ ಹಿಂದೂಗಳು ತಮ್ಮ ಪಾಪ ತೊಳೆದುಕೊಳ್ಳಲು, ಹಿಂದೂ ಧರ್ಮವನ್ನು ಶುದ್ಧೀಕರಣಗೊಳಿಸಿಕೊಳ್ಳಲು ಒಂದು ಅವಕಾಶ ಕೊಡಿ. ಈ ಸುಧಾರಣೆಯಾದರೆ ಅಸ್ಪೃಶ್ಯರೂ ಸಮಾಜದಲ್ಲಿ ಉನ್ನತಿ ಹೊಂದಬಹುದು. ನೀವೀಗ ದೇವಾಲಯ ಪ್ರವೇಶ ವಿರೋಧಿಸಿದರೆ ಸನಾತನಿಗಳು ಮತ್ತು ಸರ್ಕಾರ ಅದರ ದುರ್ಲಾಭ ಪಡೆಯುತ್ತಾರೆ.”

ಅಂಬೇಡ್ಕರ್ ಒಪ್ಪಲಿಲ್ಲ. ಅವರ ಅಭಿಪ್ರಾಯ ಭಿನ್ನವಾಗಿತ್ತು.

“ಅಸ್ಪೃಶ್ಯರು ಆರ್ಥಿಕ, ಶೈಕ್ಷಣಿಕ, ರಾಜಕೀಯ ಉನ್ನತಿ ಸಾಧಿಸಿದರೆ ದೇವಾಲಯ ಪ್ರವೇಶ ತಾನೇ ತಾನಾಗಿ ಸಾಧ್ಯವಾಗುತ್ತದೆ. ಬಹಿಷ್ಕೃತರು ಜಾತಿ ವ್ಯವಸ್ಥೆಯ ಉಪಉತ್ಪನ್ನಗಳು. ಜಾತಿ ವ್ಯವಸ್ಥೆ ಇರುವ ತನಕ ಅವರೂ ಇರುತ್ತಾರೆ. ಜಾತಿಪದ್ಧತಿ ನಾಶವಾಗದೇ ಅವರ ಉದ್ಧಾರ ಸಾಧ್ಯವೇ ಇಲ್ಲ. ಹಿಂದೂ ನಂಬಿಕೆಯಿಂದ ಜಾತಿಯೆಂಬ ಹೇಯ ಮತ್ತು ಕ್ರೂರ ತತ್ವವನ್ನು ತೆಗೆದುಹಾಕುವವರೆಗೆ ಹಿಂದೂ ಧರ್ಮ ಉಳಿಯುವುದಿಲ್ಲ,” ಎಂದು ಫೆಬ್ರವರಿ 11 ರಂದು ಹೊರಬಂದ “ಹರಿಜನ” ಮೊದಲ ಸಂಚಿಕೆಯಲ್ಲಿ ಅಂಬೇಡ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಫೆಬ್ರವರಿ 12ರಂದು “ಪ್ರಿಯ ಮಹಾತ್ಮಾಜೀ..” ಎಂದು ಪತ್ರ ಶುರುಮಾಡಿದ ಅಂಬೇಡ್ಕರ್ ಹೀಗೆ ಬರೆದರು: “ಪಾಪ ಮತ್ತು ಅನೈತಿಕತೆಯನ್ನು ಬಹುಸಂಖ್ಯಾತರು ಒಪ್ಪಿಕೊಂಡಿದ್ದಾರೆಂದು ತಾಳಲಾಗುವುದಿಲ್ಲ. ಅಸ್ಪೃಶ್ಯತೆ ಪಾಪ ಮತ್ತು ಅನೈತಿಕವಾಗಿದ್ದಲ್ಲಿ ಬಹುಸಂಖ್ಯಾತರ ಮರ್ಜಿ ಹಿಡಿಯದೇ ನೀವು ಅದನ್ನು ನಾಶಗೊಳಿಸಬೇಕು. ಆದರೆ ನಿಮ್ಮ ಮಸೂದೆ ಅದನ್ನು ಹೇಳುವುದಿಲ್ಲ. ಶೋಷಿತ ವರ್ಗಗಳ ಮುಕ್ತಿ ಮಾರ್ಗ ಶಿಕ್ಷಣ, ಉದ್ಯೋಗ, ಆರ್ಥಿಕ ಉನ್ನತಿಯಲ್ಲಿದೆಯೇ ಹೊರತು ದೇವಾಲಯ ಪ್ರವೇಶದಲ್ಲಿಲ್ಲ. ದೇವಾಲಯಗಳ ಬಾಗಿಲು ತೆರೆಯಬೇಕೋ ಬಿಡಬೇಕೋ ಎನ್ನುವುದು ನೀವು ಚರ್ಚಿಸಬೇಕಾದ ವಿಚಾರ. ನಾವದಕ್ಕೆ ಹೋರಾಟ ಮಾಡುವುದಿಲ್ಲ. ಮನುಷ್ಯನನ್ನು ಕೀಳಾಗಿ ಕಾಣುವುದು ಸಭ್ಯನಡತೆಯಲ್ಲ ಎಂದು ನೀವು ಭಾವಿಸಿದರೆ ದೇವಾಲಯಗಳ ಬಾಗಿಲು ತೆರೆಯಿರಿ. ಸಭ್ಯತೆಗಿಂತ ಹಿಂದೂ ಆಗಿ ಉಳಿಯುವುದೇ ಮುಖ್ಯವಾದಲ್ಲಿ ನಿಮ್ಮ ದೇವಾಲಯಗಳ ಬಾಗಿಲು ಹಾಕಿಕೊಳ್ಳಿ, ನಮಗೆ ಒಳಬರಬೇಕಾದ ತುರ್ತು ಇಲ್ಲ. ಸಾಮಾಜಿಕ ಅಸಮಾನತೆಯನ್ನು ಪ್ರತಿಪಾದಿಸುವ ಧರ್ಮವನ್ನು ಸಹಿಸಲಾಗದು ಎಂದು ಅಸ್ಪೃಶ್ಯರು ನಿರ್ಧರಿಸಿದ್ದಾರೆ. ಹಿಂದೂ ಧರ್ಮ ಸಮಾನತೆಯನ್ನು ಒಪ್ಪಿಕೊಳ್ಳುವುದಾದರೆ ಅಸ್ಪೃಶ್ಯರನ್ನು ಪರದೇಶಿಗಳಂತೆ ನೋಡುವುದನ್ನು ನಿಲ್ಲಿಸಬೇಕು. ದೇವಾಲಯ ಪ್ರವೇಶ ನೀಡಿದರಷ್ಟೇ ಸಾಲದು, ಚಾತುರ್ವರ್ಣ್ಯ ತತ್ವವನ್ನೂ ಕೈಬಿಡಬೇಕು. ಅಸಮಾನತೆ, ತಾರತಮ್ಯ ಮತ್ತು ಜಾತಿ ಪದ್ಧತಿಯ ಮೂಲ ವರ್ಣಾಶ್ರಮ ಧರ್ಮದ ಬೇರುಗಳಲ್ಲಿ ಅಡಗಿ ಕೂತಿವೆ. ನಾನೀಗ ದೇವಾಲಯ ಪ್ರವೇಶ ಮಸೂದೆಗೆ ಸಹಮತ ಸೂಚಿಸಿ ನಂತರ ಚಾತುರ್ವರ್ಣ್ಯ ಮತ್ತು ಜಾತಿಪದ್ಧತಿಯ ನಾಶಕ್ಕೆ ಹೋರಾಡಿದರೆ ಗಾಂಧಿ ಯಾವ ಕಡೆ ನಿಲ್ಲುತ್ತಾರೆ? ಅವರು ವರ್ಣಾಶ್ರಮ ಬೆಂಬಲಿಸಿ ವಿರೋಧಿ ಪಾಳಯದಲ್ಲಿ ನಿಲ್ಲುವುದಾದರೆ ನಾನೀಗ ಅವರ ಜೊತೆ ನಿಲ್ಲಲಾರೆ.”

ಗಾಂಧಿ-ಅಂಬೇಡ್ಕರ್ ದಾರಿ ಸ್ಪಷ್ಟವಾಗಿ ಬೇರೆಯಾಗಿದ್ದು ಹೀಗೆ. ರಂಗಾ ಅಯ್ಯರ್ ದೇವಾಲಯ ಪ್ರವೇಶ ಮಸೂದೆಯನ್ನು ಕಟ್ಟಾ ಸನಾತನಿಗಳಷ್ಟೇ ಅಲ್ಲ, ಅರೆ ಸನಾತನಿಗಳು, ಸನಾತನ ಸಮಾಜ ಸುಧಾರಕರೂ ವಿರೋಧಿಸಿದರು. ಕಾನೂನು ಧಾರ್ಮಿಕ ವಿಷಯಗಳಲ್ಲಿ ತಲೆಹಾಕಬಾರದು ಎನ್ನುವುದು ಅವರ ವಾದವಾಗಿತ್ತು. ಪಂಡಿತ ಮದನ ಮೋಹನ ಮಾಳವೀಯ ಅವರಂತೂ ಕೋಪಾವಿಷ್ಟರಾಗಿ ದೇವಾಲಯ ವಿಚಾರದಲ್ಲಿ ಕಾನೂನು ಪರೋಕ್ಷವಾಗಿಯೂ ಹಸ್ತಕ್ಷೇಪ ಮಾಡಬಾರದು ಎಂದು ಗುಡುಗಿ ಪೂನಾ ಒಪ್ಪಂದ ಇದಕ್ಕೆ ಅನ್ವಯಿಸುವುದಿಲ್ಲವೆಂದು ಹೇಳಿದರು! ಹೀಗೆ ಯಾವ ಉದ್ದೇಶಕ್ಕಾಗಿ ಗಾಂಧಿ ಉಪವಾಸ ಕೂತು ಪೂನಾ ಒಪ್ಪಂದಕ್ಕೆ ಸಹಿ ಪಡೆದಿದ್ದರೋ ಅದರ ಸೋಲಿನ ಮೊದಲ ಹೆಜ್ಜೆಯಾಗಿ ಮಾರ್ಚ್ 24ರಂದು ರಂಗಾ ಅಯ್ಯರ್ ಅವರ ದೇವಾಲಯ ಪ್ರವೇಶ ಮಸೂದೆ ಬಿದ್ದುಹೋಯಿತು.

ಈ ಹೊತ್ತಿಗೆ ಪೂನಾ ಒಪ್ಪಂದದ ನಿಜ ಬಣ್ಣ ಬಯಲಾಗತೊಡಗಿತ್ತು. ಹೆಚ್ಚು ಕಡಿಮೆ ಪೂನಾ ಒಪ್ಪಂದ ಅಂಗೀಕರಿಸಿದ್ದ ಎಲ್ಲ ಹಿಂದೂ ರಾಜಕೀಯ ಮುಖಂಡರು ಅದನ್ನು ವಿರೋಧಿಸತೊಡಗಿದ್ದರು. ಗಾಂಧೀಜಿ ಶುರುಮಾಡಿದ ಹರಿಜನ ಚಳುವಳಿಯ ಉತ್ಸಾಹ ಇಂಗಿಹೋಗತೊಡಗಿತ್ತು. ಪೂನಾಕ್ಕೆ ಗಾಂಧೀಜಿಯನ್ನು ನೋಡಲು ಬಂದು ಅವರೆದೆಯ ಮೇಲೆ ಮುಖವಿಟ್ಟು ಬಿಕ್ಕಿದ್ದ ಟ್ಯಾಗೋರ್ ಈಗ ಬೇರೆ ಹಾಡು ಶುರುಮಾಡಿದ್ದರು. ಪೂನಾ ಒಪ್ಪಂದವನ್ನು ಸೆಪ್ಟೆಂಬರ್ 26ರಂದು ದೆಹಲಿಯಲ್ಲಿ ಪ್ರತ್ಯೇಕ ಸಮ್ಮೇಳನ ಮಾಡಿ ಅಂಗೀಕರಿಸಿದ್ದ ಹಿಂದೂ ಮಹಾಸಭಾದ ಮುಖಂಡರು ಅದಕ್ಕೆ ತಿದ್ದುಪಡಿಯಾಗಬೇಕೆಂದು ಬಯಸಿದರು. ಪಂಜಾಬಿನಲ್ಲಿ ಅಸ್ಪೃಶ್ಯತೆ ಸಮಸ್ಯೆಯೇ ಇಲ್ಲದಿರುವುದರಿಂದ ಅಲ್ಲಿ ಅದನ್ನು ಅನ್ವಯಿಸಬಾರದೆಂದು ಹೇಳಿದರು. ಬಂಗಾಳ ಶಾಸನಸಭೆ ಪ್ರಸ್ತಾವವೊಂದನ್ನು ಅಂಗೀಕರಿಸಿ ಪೂನಾ ಒಪ್ಪಂದ ರದ್ದತಿಗೆ ಒತ್ತಾಯಿಸಿತು. ಬಂಗಾಳದ ಒಬ್ಬ ಹಿಂದೂ ಪ್ರತಿನಿಧಿಯೂ ಪೂನಾ ಒಪ್ಪಂದದಲ್ಲಿ ಭಾಗೀದಾರ ಆಗಿಲ್ಲದಿರುವುದರಿಂದ ಅದು ತಮಗೆ ಅನ್ವಯಿಸುವುದಿಲ್ಲ ಎನ್ನುವುದು ಅವರ ವಾದವಾಗಿತ್ತು. ಬ್ರಿಟಿಷ್ ಸರ್ಕಾರ ಈ ಬಗ್ಗೆ ಅಂಬೇಡ್ಕರರಿಗೆ ಪತ್ರ ಬರೆಯಿತು. ಅದಕ್ಕೆ ಉತ್ತರಿಸುತ್ತ ಅವರು, “ಪೂನಾ ಒಪ್ಪಂದದ ಸಮಯದಲ್ಲಿ ಸಂಧಾನಕಾರರಾಗಿ ಅನೇಕ ಬಂಗಾಳಿ ಹಿಂದೂಗಳು ಪ್ರಮುಖ ಪಾತ್ರ ವಹಿಸಿರುವಾಗ ಹೀಗೆ ಹೇಳುತ್ತಿರುವುದು ತಪ್ಪು. ಬ್ರಿಟಿಷ್ ಸರ್ಕಾರ ತೆಗೆದುಕೊಳ್ಳುವ ತೀರ್ಮಾನವು ಪೂರಾ ಬ್ರಿಟಿಷ್ ಇಂಡಿಯಾಕ್ಕೆ ಅನ್ವಯವಾಗುವಾಗ ಬಂಗಾಳವು ತಪ್ಪಿಸಿಕೊಳ್ಳಲಾರದು. ಅಷ್ಟೇ ಅಲ್ಲ, ಬಂಗಾಳದ ಶೋಷಿತ ಸಮುದಾಯಗಳ ಮುಖಂಡರು 50 ಸ್ಥಾನ ಬಯಸಿದ್ದಾಗ 30 ಸ್ಥಾನಕ್ಕೆ ಅವರನ್ನು ತೃಪ್ತಗೊಳಿಸಿ ಪೂನಾ ಒಪ್ಪಂದಕ್ಕೆ ಬದ್ಧರಾಗಿರುವಂತೆ ಒಪ್ಪಿಸಿದ್ದೇನೆ. ಅಲ್ಲಷ್ಟೇ ಅಲ್ಲ, ಮುಂಬಯಿ, ಬಿಹಾರ್, ಪಂಜಾಬ್, ಉತ್ತರ ಪ್ರದೇಶ, ಒರಿಸ್ಸಾದ ಶೋಷಿತ ಸಮುದಾಯವೂ ಸ್ಥಾನಸಂಖ್ಯೆಯ ಕುರಿತು ಅಸಮಾಧಾನ ಹೊಂದಿವೆ,” ಎಂದು ಬರೆದರು.

ಜಂಟಿ ಸಂಸದೀಯ ಸಮಿತಿಯಲ್ಲಿ ಭಾಗವಹಿಸಲು ಏಪ್ರಿಲ್‌ನಲ್ಲಿ ಮತ್ತೆ ಲಂಡನ್ನಿಗೆ ಹೊರಟ ಅಂಬೇಡ್ಕರ್‌ರನ್ನು ಗಾಂಧಿ ಯರವಾಡಾ ಜೈಲಿನಲ್ಲಿ ಮತ್ತೆ ಭೇಟಿ ಮಾಡುವಂತೆ ಕೇಳಿದರು. ಯರವಾಡಾದಲ್ಲಿ ಗಾಂಧೀಜಿಯ ಜೊತೆ ಪ್ರಾಥಮಿಕ ಚುನಾವಣೆ ಹಾಗೂ ಅಭ್ಯರ್ಥಿಗಳ ಪಟ್ಟಿ ತಯಾರಿಯ ಕುರಿತು ಚರ್ಚೆಯಾಯಿತು. ಸಾರ್ವತ್ರಿಕ ಚುನಾವಣೆ ಎದುರಿಸುವ ಶೋಷಿತ ಸಮುದಾಯದ ಅಭ್ಯರ್ಥಿ ಪ್ರಾಥಮಿಕ ಹಂತದಲ್ಲಿ ಕನಿಷ್ಠ 25% ಮತ ಗಳಿಸಿರಬೇಕು ಎಂದು ಅಂಬೇಡ್ಕರ್ ಹೇಳಿದರು. ಆ ವಿಷಯದ ಕುರಿತು ಅಂಬೇಡ್ಕರ್ ಅವರ ಲಂಡನ್ ವಿಳಾಸಕ್ಕೆ ಪತ್ರ ಬರೆಯುವುದಾಗಿ ಹೇಳಿದ ಗಾಂಧಿ, ಅಂಬೇಡ್ಕರ್ ಕೈಗೆ ಹೂಗುಚ್ಛವನ್ನಿತ್ತು ಮಾತನ್ನು ಅಸ್ಪೃಶ್ಯತೆ ನಿವಾರಣೆ ಕಡೆಗೆ ತಿರುಗಿಸಿದರು.

*****

ಒಂದು ವೇಳೆ ಪೂನಾ ಒಪ್ಪಂದದ ಸಂದರ್ಭದಲ್ಲಿ ಅಂಬೇಡ್ಕರ್ ತಮ್ಮ ನಿಲುವನ್ನು ಕೊಂಚವೂ ಬದಲಿಸದೆ ಕಠಿಣವಾಗಿ ಉಳಿದುಬಿಟ್ಟಿದ್ದಿದ್ದರೆ ಉಪವಾಸದಿಂದ ಬಳಲಿ ಮಲಗಿದ್ದ ಗಾಂಧಿ ತೀರಿಕೊಳ್ಳುವ ಸಾಧ್ಯತೆಗಳಿದ್ದವು. ಆಗ ಅಂಬೇಡ್ಕರರನ್ನು ಖಳನನ್ನಾಗಿಸಿ, ಈ ದೇಶದಲ್ಲಿ ಶೋಷಿತರ ಮಾರಣಹೋಮವೇ ನಡೆದುಹೋಗುತ್ತಿತ್ತು. ಬಹುಶಃ ಅಂಬೇಡ್ಕರರಿಗಿದ್ದ ದೂರದೃಷ್ಟಿ ಈ ದುರಂತ ಸಂಭವಿಸದಂತೆ ನೋಡಿಕೊಂಡಿತು.

ಹೀಗೆ ಪೂನಾ ಒಪ್ಪಂದವು ರಾಜಕೀಯ ಒಪ್ಪಂದವಾಗಿದ್ದರೂ ಅದಕ್ಕೆ ವಿಶಾಲ ಧಾರ್ಮಿಕ, ಸಾಮಾಜಿಕ ಆಯಾಮಗಳಿದ್ದವು. ಅದರ ಪರಿಣಾಮದ ಬಗ್ಗೆ ಒಪ್ಪಂದದ ಆರಂಭದ ದಿನಗಳಲ್ಲಿ ಉತ್ಸಾಹಿತರಾದಂತೆ ಕಂಡುಬಂದ ಅಂಬೇಡ್ಕರ್ ನಂತರ ಕ್ರಮೇಣ ಯಥಾಸ್ಥಿತಿ ಮುಂದುವರೆದಿದ್ದನ್ನು ಖಿನ್ನತೆಯಿಂದ ಗಮನಿಸುತ್ತಾರೆ. ದಿನಕಳೆದಂತೆ ಅಸ್ಪೃಶ್ಯತೆ ನಿವಾರಣೆ ಅಷ್ಟು ಸುಲಭವಲ್ಲವೆಂದೂ, ಅದರ ಬೇರು ನಾಶವಾಗದೇ ಬರಿಯ ಟೊಂಗೆಗಳನ್ನು ಕಡಿದು ಉಪಯೋಗವಿಲ್ಲವೆಂದೂ ಅವರಿಗೆ ಮನದಟ್ಟಾಗುತ್ತದೆ. ಕಲಿತ, ತಿಳಿದ, ಪ್ರಭಾವಿ ಅಧಿಕಾರಸ್ಥರಾದ ತಾವೇ ತಾರತಮ್ಯ ಎದುರಿಸುತ್ತಿರಬೇಕಾದರೆ ಹಳ್ಳಿಹಳ್ಳಿಗಳಲ್ಲಿ ಬದುಕಿರುವ ಕೋಟ್ಯಂತರ ಬಡ ಶೋಷಿತರ ಪಾಲಿಗೆ ದೇವಾಲಯ ಪ್ರವೇಶದಂತಹ ಕಣ್ಣೊರೆಸುವ ತಂತ್ರಗಳು ಶಾಶ್ವತ ಪರಿಹಾರ ಒದಗಿಸಲಾರವು ಎಂದೆನಿಸಿ ಮತಾಂತರ ನಿರ್ಧಾರಕ್ಕೆ, ಸ್ಥಾನಮೀಸಲು ಹೋರಾಟಕ್ಕೆ ತಾತ್ವಿಕ ನೆಲೆ ಒದಗಿಸುತ್ತದೆ.

ಹೀಗೆ ಪೂನಾ ಒಪ್ಪಂದವು ಸ್ವಾತಂತ್ರ್ಯ ಹೋರಾಟ, ಗಾಂಧಿ-ಅಂಬೇಡ್ಕರ್ ಸಂಘರ್ಷ, ಹಿಂದೂ ಸಮಾಜ ಸುಧಾರಣೆಯ ಕಷ್ಟಗಳು, “ಹರಿಜನ”ರಿಂದ ಆತ್ಮಾಭಿಮಾನಿ “ದಲಿತ”ರ ಹುಟ್ಟು, ಅಂಬೇಡ್ಕರರ ಮತಾಂತರ ಒಲವಿಗೆ ಕಾರಣಗಳನ್ನು ಅನಾವರಣಗೊಳಿಸುತ್ತ ಇತಿಹಾಸದ ಪುಟಗಳನ್ನು ಏಕೆ ಮತ್ತೆಮತ್ತೆ ತಿರುವಿ ಹಾಕಬೇಕೆಂದು ಸ್ಪಷ್ಟಪಡಿಸುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)