Tag Archives: ಬದುಕು ಜಟಕಾ ಬಂಡಿ

ಬದುಕು ಜಟಕಾ ಬಂಡಿ

– ದಿನೇಶ್ ಕುಮಾರ್. ಎಸ್. ಸಿ

ನಂಗೆ ನನ್ನ ಹೆಂಡತಿ ಬೇಕು ಸಾರ್, ತುಂಬಾ ಒಳ್ಳೆಯವಳು ಸಾರ್…
ಹೀಗಂತನೇ ಮಾತು ಶುರುಮಾಡಿದ ವಾಸುದೇವ. ನೋಡಕ್ಕೆ ಚೆನ್ನಾಗಿದ್ದಾನೆ. ಆರು ವರ್ಷದ ಮುದ್ದಾದ ಮಗಳಿದ್ದಾಳೆ. ಹೆಂಡತಿ ಮನೆ ಬಿಟ್ಟು ತವರಿಗೆ ಹೋಗಿ ಕುಳಿತಿದ್ದಾಳೆ. ವಾಪಾಸು ಬರುವ ಯಾವ ಸಾಧ್ಯತೆಯೂ ಇಲ್ಲದೆ ಅವನು ನನ್ನ ಬಳಿ ಬಂದಿದ್ದ. ಇವನದೊಂದು ಸಮಸ್ಯೆಯಿದೆ, ಏನಾದರೂ ಮಾಡೋದಕ್ಕೆ ಸಾಧ್ಯನಾ ನೋಡಿ ಅಂತ ಗೆಳತಿಯೊಬ್ಬಳು ನನ್ನ ಬಳಿ ಕಳಿಸಿದ್ದಳು.

ಏನಾಯ್ತು? ಯಾಕಾಯ್ತು? ಮಾಮೂಲಿ ಪ್ರಶ್ನೆಗಳು ನನ್ನಿಂದ. ಹತ್ತು ವರ್ಷಗಳ ಸಂಸಾರ, ಆರು ವರ್ಷದ ಮಗಳು, ಸರ್ಕಾರಿ ಉದ್ಯೋಗದಲ್ಲಿರುವ ಗಂಡ ಎಲ್ಲ ಬಿಟ್ಟು ಆ ಹೆಣ್ಣುಮಗಳೇಕೆ ತವರಿಗೆ ಹೋಗಿದ್ದಾಳೆ? ಇದು ನನ್ನ ಸಹಜ ಕುತೂಹಲ.
ಒಂದು ಮಿಸ್ಟೇಕು ಸಾರ್. ಇವಳ ಕಡೆ ಗಮನ ಕಡಿಮೆಯಾಗಿ ಹೋಗಿತ್ತು. ನನ್ನ ಕೆಲಸ ನೋಡಿ, ಊರೂರು ಸುತ್ತಬೇಕು. ಬೆಳಿಗ್ಗೆನೇ ಮನೆ ಬಿಡಬೇಕು, ಗಂಟೆಗಟ್ಟಲೆ ಪ್ರಯಾಣ. ರಾತ್ರಿ ಆಯಾಸವಾಗಿರುತ್ತೆ ಮನೆ ತಲುಪುವಷ್ಟರಲ್ಲಿ. ಇವಳನ್ನು ಮಾತಾಡಿಸುವಷ್ಟೂ ಪುರುಸೊತ್ತು ಇರಲಿಲ್ಲ. ಮನೇಲಿ ಅಮ್ಮ ಮತ್ತು ಇವಳಿಗೆ ಅಷ್ಟಕ್ಕಷ್ಟೆ. ಏನೇನು ಜಗಳ ಆಗ್ತಾ ಇದ್ವೋ ಗೊತ್ತಿಲ್ಲ.

ಅವನು ಹೇಳ್ತಾ ಹೋದ. ಮಧ್ಯೆ ಮಧ್ಯೆ ಕೊಂಚ ಸೆಲ್ಫ್ ಡೆಫೆನ್ಸ್ಗಾಗಿ ಸುಳ್ಳು, ಅಥವಾ ಹಾರಿಕೆಯ ಮಾತು. ಎಷ್ಟೇ ದೊಡ್ಡ ಫಟಿಂಗರು ತಲೆಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದರೂ ಧ್ವನಿಯ ವೈಬ್ರೇಷನ್ನಿಂದಲೇ ಗೊತ್ತಾಗಿಬಿಡುತ್ತೆ ನನಗೆ ಅದು ಸುಳ್ಳು ಅಂತ. ಹೀಗಾಗಿ ಮಧ್ಯೆ ಮಧ್ಯೆ ಕೆಣಕು ಪ್ರಶ್ನೆಗಳು ನನ್ನಿಂದ. ಅವನು ಮುಂದುವರೆಸುತ್ತಾ ಹೋದ. ನನ್ನ ಪ್ರಶ್ನೆಗಳು ಜೋರಾದ ನಂತರ ಪೂತರ್ಿ ಶರಣಾಗತನಂತೆ ಸತ್ಯವನ್ನಷ್ಟೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದವನಂತೆ ಕರುಣಾಜನಕವಾಗಿ ಮಾತನಾಡತೊಡಗಿದ.

ಈ ನಡುವೆ ಅವನು ಬಂದ ಸಾರ್. ಬಾಂಬೆಯವನು. ಯಾರೋ ಏನೋ ಗೊತ್ತಿಲ್ಲ. ಇವಳಿಗೆ ಇಂಟರ್ನೆಟ್ನಿಂದ ಪರಿಚಯ. ಅವನು ಬ್ರಾಥಲ್ ನಡೆಸ್ತಾನೆ ಸಾರ್, ನಂಗೊತ್ತು, ನಾ ತನಿಖೆ ಮಾಡಿದ್ದೇನೆ. ನನ್ನ ಹತ್ರ ಪ್ರೂಫ್ ಇದೆ. ಒಂದ್ ದಿನ ಇವಳ ಮೊಬೈಲ್ ಚೆಕ್ ಮಾಡಿದಾಗ ಎಲ್ಲ ಡೀಟೇಲ್ಸು ಗೊತ್ತಾಯ್ತು. ನನ್ನ ಫ್ರೆಂಡ್ ಅಂತಾಳೆ, ಹೇಗೆ ನಂಬೋದು ಸಾರ್. ಅವನ ಜತೆ ಫೋನಲ್ಲಿ ಮಾತಾಡಿದೆ. ಕೆಟ್ಟದಾಗಿ ಮಾತಾಡಿದ ನಂಜೊಂತೆ, ಬೇಕಾದ್ರೆ ನೋಡಿ ನಾ ರೆಕಾರ್ಡ್ ಮಾಡ್ಕೊಂಡಿದ್ದೀನಿ..

ಮಾತು ಮಾತಿನ ನಡುವೆ ಅವನು ತನ್ನ ಸಾಕ್ಷ್ಯಗಳನ್ನೆಲ್ಲ ನನ್ನ ಮುಂದೆ ಮಂಡಿಸುತ್ತಿದ್ದ. ಬಾಂಬೆಯವನ ಫೇಸ್ ಬುಕ್ ಪೇಜ್ನ ಲಿಂಕುಗಳು, ಅವನು ನಡೆಸುವ ಗ್ರೂಪ್ನ ವಿವರಗಳು, ಇತ್ಯಾದಿ ಇತ್ಯಾದಿ…

ಅವನು ತನ್ನ ಸಾಕ್ಷ್ಯಗಳ ಕುರಿತು ತೋರುತ್ತಿದ್ದ ವಿಪರೀತ ಆಸಕ್ತಿಯಿಂದಲೇ, ಅವನ ಸಾಕ್ಷ್ಯಗಳ ಮೇಲೆ ನನಗೆ ಆಸಕ್ತಿ ಹೊರಟುಹೋಗಿತ್ತು. ಅವುಗಳನ್ನೆಲ್ಲ ನಿರ್ಲಕ್ಷ್ಯದಿಂದ ಪಕ್ಕಕ್ಕೆ ಸರಿಸಿ, ಮುಂದೇನಾಯ್ತು ಹೇಳು ಅಂದೆ.

ಒಂದ್ ತಪ್ ಕೆಲಸ ಮಾಡಿಬಿಟ್ಟೆ ಸಾರ್. ಒಂದು ಮಹಿಳಾ ಸಂಘದ ಅಧ್ಯಕ್ಷರೊಬ್ಬರಿದ್ದಾರೆ ಸಾರ್ ವಿಜಯಮ್ಮ ಅಂತ. ಅವರ ಹತ್ರ ಹೇಳ್ಕೊಂಡೆ. ಅವರು ನಿನ್ನ ಸಮಸ್ಯೆಗೆ ಪರಿಹಾರ ಆಗಬೇಕು ಅಂದ್ರೆ ಒಂದು ಟೀವಿ ಶೋಗೆ ಹೋಗಬೇಕು. ಅನುರಾಧ ಅಂತ ಫಿಲ್ಮ್ ಆಕ್ಟರ್ ಗೊತ್ತರು ತಾನೇ ನಿಂಗೆ? ಸೀರಿಯಲ್ನಲ್ಲೂ ಮಾಡ್ತಾರೆ. ತುಂಬಾ ಒಳ್ಳೆಯವರು. ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ? ಅವರೇ ಕಾರ್ಯಕ್ರಮ ನಡೆಸಿಕೊಡೋದು. ಅವರಿಗೆ ಒಂಥರಾ ಡಿವೈನ್ ಶಕ್ತಿಗಳಿವೆ ಅಂತಾರೆ. ಅವರ ಕೊರಳಲ್ಲಿ ದಪ್ಪದಪ್ಪ ರುದ್ರಾಕ್ಷಿ ಮಾಲೆ ಇರುತ್ತೆ, ಎದುರಿಗೆ ಕೂತವರ ನೆಗಟಿವ್ ಎನರ್ಜಿನೆಲ್ಲ ಆ ಮಣಿಗಳು ಹೀರಿ ಬಿಡ್ತಾವಂತೆ. ಎಲ್ಲರ ಸಮಸ್ಯೆಗಳನ್ನು ಮಾತಾಡಿ ಬಗೆಹರಿಸಿಬಿಡ್ತಾರೆ, ನಿಮ್ಮಿಬ್ಬರ ಸಮಸ್ಯೆ ಪರಿಹಾರವಾಗುತ್ತೆ. ಆದ್ರೆ ಒಂದು ಕಂಡಿಷನ್, ನಿನ್ನ ಹೆಂಡತಿಗೆ ಅಲ್ಲಿಗೆ ಹೋಗೋದು ಗೊತ್ತಾಗೋದು ಬೇಡ, ಹೋದ ಮೇಲೆ ಹೇಗೂ ಗೊತ್ತಾಗುತ್ತೆ. ಏನಾದ್ರೂ ಬೇರೆ ಕಾರಣ ಹೇಳಿ ಕರೆದುಕೊಂಡು ಬಂದುಬಿಡು. ಬಾಂಬೆಯವನ ಫೋನ್ ನಂಬರ್ ಕೊಡು, ಅವನನ್ನು ಕರೆಸೋ ಜವಾಬ್ದಾರಿ ಚಾನಲ್ ನವರದ್ದು. ಅವರು ಹೇಗಾದ್ರೂ ಕರೆಸಿಕೊಳ್ತಾರೆ…

ವಿಜಯಮ್ಮ ಹೇಳಿದ್ದನ್ನು ನಾನು ನಂಬಿದೆ ಸಾರ್, ಅವರು ಹೇಳಿದ ಹಾಗೇನೇ ಮಾಡಿದೆ.
ವಿಷಯನೂ ಹೇಳದೇ ಹೆಂಡತಿನಾ ಯಾಕ್ ಕರ್ಕೊಂಡ್ ಹೋದೆ? ಅಂತ ರೇಗಿದೆ.
ಏನ್ ಮಾಡಲಿ ಸಾರ್, ಅದೇ ನಾನ್ ಮಾಡಿದ ತಪ್ಪು ಎನ್ನುತ್ತ ತಲೆತಗ್ಗಿಸಿಕೊಂಡ. ಕಥೆ ಮುಂದುವರೆಯಿತು.

ಮುಂದಿನದ್ದನ್ನು ನಾನೂ ಟೀವಿಯಲ್ಲಿ ನೋಡಿದ್ದೆ. ಕೌಟುಂಬಿಕ ಸಮಸ್ಯೆಗಳನ್ನು ಒಂಥರಾ ಹಳ್ಳಿ ಪಂಚಾಯ್ತಿ ರೀತಿಯಲ್ಲಿ ಬಗೆಹರಿಸುವ ಕಾರ್ಯಕ್ರಮ ಅದು. ಕಾರ್ಯಕ್ರಮದಲ್ಲಿ ಜಗಳ ಆಗುತ್ತೋ ಅಥವಾ ಜಗಳಕ್ಕಾಗಿ ಕಾರ್ಯಕ್ರಮ ಮಾಡ್ತಾರೋ ಗೊತ್ತಾಗೋದೇ ಇಲ್ಲ. ನಿರೂಪಕಿ ಜಗಳ ಮಾಡಿಕೊಂಡು ಬಂದವರನ್ನು ಪ್ರಶ್ನೆ ಕೇಳುವ ಧಾಟಿಯಲ್ಲೇ ಜಗಳ ಮಾಡಿಸುವ ಸಂಚು ಕಾಣಿಸುತ್ತದೆ. ಆಮೇಲೆ ಚಪ್ಪಲಿಯಲ್ಲಿ ಹೊಡೆಯೋ ಪ್ರೋಗ್ರಾಂ. ಕ್ಯಾಮೆರಾಗಳು ಎಲ್ಲಾ ದಿಕ್ಕುಗಳಿಂದಲೂ ಓಡಾಡುತ್ತೆ. ನಿರೂಪಕಿ ಮಾತ್ರ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿರುತ್ತಾರೆ. ನೆಗೆಟಿವ್ ಎನರ್ಜಿ ಹೀರುವ ಮಣಿಗಳು ಫಳಫಳ ಹೊಳೆಯುತ್ತಾ ಇರುತ್ತವೆ.

ಇವನ ವಿಷಯದಲ್ಲಿ ನಡೆದದ್ದೂ ಅದೇನೇ. ಬಾಂಬೆಯವನನ್ನು ಚಾನಲ್ ನವರೇ ಪುಸಲಾಯಿಸಿ ಏರ್ ಟಿಕೆಟ್ ಮಾಡಿಸಿ ಕರೆಸಿಕೊಂಡಿದ್ದರು. ಹೀಗೆ ಕ್ಯಾಮೆರಾಗಳ ಎದುರು, ಲಕ್ಷಾಂತರ ಕಣ್ಣುಗಳ ಮುಂದೆ ತನ್ನನ್ನು ತಾನು ಸಮರ್ಥಿಸಿಸಿಕೊಳ್ಳಬೇಕಾದ ಅಸಹಾಯಕತೆಯಿಂದಾಗಿ ಈಕೆ ಕಂಗೆಟ್ಟಿದ್ದಳು. ಅನುರಾಧರಿಂದ ಪ್ರಶ್ನೆಗಳ ಕೂರಂಬು ತೂರಿಬರುತ್ತಲೇ ಇತ್ತು. ಆಕೆ ಅಳ್ತಾ ಇದ್ದಳು, ತನ್ನನ್ನು ಯಾವುದೋ ಜ್ಯೋತಿಷಿ ಬಳಿ ಕರೆದುಕೊಂಡು ಹೋಗುವುದಾಗಿ ಹೇಳಿ ಇಲ್ಲಿಗೆ ಕರೆತಂದು ಮರ್ಯಾದೆ ಕಳೆದ ಗಂಡನ ಮೇಲೆ ಅಸಹನೆಯಿಂದ ಮಿಡುಕುತ್ತಿದ್ದಳು. ಪರಪುರುಷನ ಜತೆ ಸ್ನೇಹ ಮಾಡಿದ ಹೆಂಡತಿಯ ಮೇಲೆ ಸೇಡು ತೀರಿಸಿಕೊಂಡ ವಿಕೃತ ಸಂತೋಷ ಇವನ ಮುಖದಲ್ಲಿ.

ಚರ್ಚೆ ನಡೆಯುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಇವನ ತಮ್ಮ ಸಭಿಕರ ಸಾಲಿನಿಂದ ಎದ್ದುಬಂತು ಬಾಂಬೆಯವನ ಮೇಲೆ ಎರಗಿ ದಾಳಿ ಮಾಡುತ್ತಾಳೆ. ಅದರಿಂದ ಸ್ಫೂರ್ತಿ ಪಡೆದ ಇವನು ಹೆಂಡತಿಯನ್ನೇ ಎಲ್ಲರ ಎದುರು ಬಾರಿಸುತ್ತಾನೆ. ಇಬ್ಬರೂ ನೆಲದ ಮೇಲೆ ಬಿದ್ದು ಒದ್ದಾಡುತ್ತಾರೆ. ಅನುರಾಧ ಗಲಾಟೆ ಮಾಡಬೇಡಿ ಎಂದು ಹಣೆಹಣೆ ಚಚ್ಚಿಕೊಂಡು ಹೇಗೋ ಒಂದು ಬ್ರೇಕ್ನ ಬಳಿಕ ಎಲ್ಲರನ್ನೂ ಸಮಾಧಾನಪಡಿಸುತ್ತಾಳೆ.

ಏನಮ್ಮಾ, ಕಡೆದಾಗಿ ಕೇಳ್ತಾ ಇದ್ದೀನಿ, ಏನ್ ಮಾಡ್ತೀಯಾ? ಎಂದು ನಿರೂಪಕಿ ಘಟವಾಣಿ ಹೆಂಗಸಿನ ಶೈಲಿಯಲ್ಲಿ ಈಕೆಯನ್ನು ಕೇಳುತ್ತಾಳೆ. ನಾನು ಬಾಂಬೆಯವನ ಜತೆ ಹೋಗ್ತೀನೋ ಇಲ್ವೋ ಗೊತ್ತಿಲ್ಲ, ಆದರೆ ನನ್ನನ್ನು ಇಲ್ಲಿಗೆ ತಂದು ಮಯರ್ಾದೆ ಕಳೆದ ಗಂಡನ ಮನೆಗಂತೂ ಹೋಗಲಾರೆ ಎಂದು ಆಕೆ ಅಲ್ಲಿಂದ ಎದ್ದುಹೋಗುತ್ತಾಳೆ. ಮತ್ತೆ ಒಂದಷ್ಟು ಗಲಾಟೆ, ಪೊಲೀಸರು, ರಂಪಾಟ. ಅಲ್ಲಿಗೆ ಎಪಿಸೋಡು ಮುಗಿಯುತ್ತದೆ.

ಇವನು ನನ್ನ ಬಳಿ ಬರುವುದಕ್ಕೂ ಮುನ್ನವೇ, ನನ್ನ ಗೆಳತಿ ಈ ಕಾರ್ಯಕ್ರಮದ ವಿಡಿಯೋ ಲಿಂಕ್ಗಳನ್ನು ನನಗೆ ಕಳುಹಿಸಿದ್ದಳಾದ್ದರಿಂದ ಈ ಎಲ್ಲ ಕದನವನ್ನೂ ನೋಡಿದ್ದೆ.
ಅಲ್ಲಪ್ಪ, ಆ ಹೆಣ್ಣುಮಗಳ ಮೇಲೆ ಹಾಗೆ ಕೈ ಮಾಡಿದೆಯಲ್ಲ, ಅಸಹ್ಯ ಅನ್ನಿಸಲ್ವಾ ನಿನ್ನ ಮೇಲೆ ನಿನಗೆ? ಅಂತ ಕೇಳಿದೆ. ನಿಜ ಹೇಳಬೇಕೆಂದರೆ ಇವನನ್ನು ಎದುರಿಗೆ ಕೂರಿಸಿಕೊಂಡು ಮಾತಾಡ್ತಾ ಇದ್ದಿದ್ದಕ್ಕೇ ನನಗೆ ನನ್ನ ಮೇಲೆ ಅಸಹ್ಯ ಹುಟ್ಟುವಂತಾಗಿತ್ತು. ಸಾರ್, ತಪ್ಪಾಯ್ತು, ಹಾಗೆ ಮಾಡಬಾರದಿತ್ತು ಎನ್ನುತ್ತ ಮುಷ್ಠಿ ಬಿಗಿಹಿಡಿದು ತನ್ನ ಬಲಗೈಗೆ ಶಿಕ್ಷೆ ಕೊಡುತ್ತಿರುವಂತೆ ತಿರುಚಿದ.
ಏನ್ ಮಾಡಲಿ ಸಾರ್, ಪ್ರೋಗ್ರಾಂನವರು ಮೊದಲೇ ನನ್ನ ತಮ್ಮನ ಜತೆ ಮಾತಾಡಿದ್ದರಂತೆ. ನಾವು ಸಿಗ್ನಲ್ ಕೊಡ್ತೀವಿ. ಅವಾಗ ಬಂದು ಬಾಂಬೆಯವನಿಗೆ ನಾಲ್ಕು ತದುಕು. ಉಳಿದದ್ದು ನಾವು ನೋಡ್ಕೋತೀವಿ ಅಂತ. ನಾವು ಮಾತಾಡೋ ಟೈಮಿನಲ್ಲಿ ಸಿಗ್ನಲ್ ಬಂದಿದೆ. ಅವನು ಬಂದು ಹೊಡೆದ. ಅದನ್ನು ಇವಳು ಪ್ರತಿಭಟಿಸಿದ್ದು ನಂಗೆ ಸರಿ ಅನಿಸಲಿಲ್ಲ, ಕೋಪದಿಂದ ಹೊಡೆದೆ ಸಾರ್, ಹೊಡೀಬಾರದಿತ್ತು ಸಾರ್ ಅಂದ.

ಸರಿ, ಆಮೇಲೇನಾಯ್ತು, ಅದನ್ನಾದ್ರೂ ಹೇಳು ಅಂದೆ.
ಇನ್ನೇನ್ ಸಾರ್, ಎಲ್ಲಾ ಮುಗಿದುಹೋಯ್ತು. ಇವಳು ಹೋಗಿ ತವರು ಮನೆಯಲ್ಲಿ ಕೂತ್ಕೊಂಡಳು. ವಾಪಾಸ್ ಬಾ ಅಂತ ಫೋನ್ ಮಾಡಿ ಹೇಳಿದೆ. ಕೇಳಲಿಲ್ಲ. ಅವಳು ರಸ್ತೆಯಲ್ಲಿ ಓಡಾಡದಂತೆ ಆಗೋಗಿದೆ ಸಾರ್. ನಿಮಗೇ ಗೊತ್ತಲ್ವಾ ಸಾರ್, ನಮ್ಮ ಎಪಿಸೋಡು ಮೂರು ದಿನ ಪ್ರಸಾರ ಮಾಡಿದ್ರು ಚಾನಲ್ನಲ್ಲಿ. ಅದರ ಮೇಲೆ ರಿಪೀಟ್ ಟೆಲಿಕಾಸ್ಟ್ಗಳು ಬೇರೆ. ತುಂಬಾ ಜನ ನೋಡಿದ್ದಾರೆ. ಯಾರು ಸಿಕ್ಕರೂ ನೀವು ಟೀವಿಯಲ್ಲಿ ಬಂದಿದ್ರಿ ಅಲ್ವಾ ಅಂತಾರೆ. ನನಗೇ ತಲೆ ಎತ್ತಿಕೊಂಡು ತಿರುಗಾಡೋದಕ್ಕೆ ಸಾಧ್ಯವಾಗ್ತಾ ಇಲ್ಲ. ಇನ್ನು ಅವಳ ಕಥೆ ನೀವೇ ಯೋಚನೆ ಮಾಡಿ ಸಾರ್.

ಸಾರ್, ಶೂಟಿಂಗ್ ಆದ ಮೇಲೆ ನಾನು ಮಾಡಿದ್ದು ತಪ್ಪು ಅಂತ ನಂಗೆ ಗೊತ್ತಾಯ್ತು. ಶೋನ ದಯವಿಟ್ಟು ಪ್ರಸಾರ ಮಾಡಬೇಡಿ. ಮಾಡಿದರೆ ನಾನು, ನನ್ನ ಹೆಂಡ್ತಿ ಒಂದಾಗೋದಕ್ಕೆ ಇರೋ ಕಡೆಯ ಅವಕಾಶನೂ ಹಾಳಾಗುತ್ತೆ ಅಂತ ಪರಿಪರಿಯಾಗಿ ಬೇಡಿಕೊಂಡೆ ಸಾರ್. ಅವರು ಕೇಳಲೇ ಇಲ್ಲ. ಕೋಟರ್ಿನಲ್ಲಿ ಸ್ಟೇ ತಗೊಳ್ಳೋದಕ್ಕೆ ಸಮಯ ಇರಲಿಲ್ಲ ಸಾರ್, ರಜೆ ಬಂದಿತ್ತು. ಕಡೆಗೆ ಗಾಂಧಿನಗರದಲ್ಲಿ ಇದ್ದಾರಲ್ಲ ಸಾರ್, ಫೇಮಸ್ ಲಾಯರ್ ಎಸ್.ಸಿ. ಮಥುರಾನಾಥ್ ಅಂತ. ಅವರ ಬಳಿ ಹೋದೆ. ಅವರು ಒಂದು ಲೀಗಲ್ ನೋಟಿಸ್ ಕೊಟ್ರು ಚಾನಲ್ಗೆ. ಯಾವುದೇ ಕಾರಣಕ್ಕೂ ಪ್ರಸಾರ ಮಾಡಬಾರದು ಅಂತ. ಅವರು ಕ್ಯಾರೇ ಅನ್ನಲಿಲ್ಲ ಸಾರ್, ಪ್ರಸಾರ ಮಾಡೇಬಿಟ್ರು.

ಅದ್ಸರಿ ಈಗೇನ್ ಮಾಡೋದು? ಏನ್ ಮಾಡಿದರೆ ನಿನ್ನ ಪತ್ನಿ ವಾಪಾಸ್ ಬರ್ತಾಳೆ ಅಂದುಕೊಂಡಿದ್ದೀಯಾ?
ಗೊತ್ತಾಗ್ತಾ ಇಲ್ಲ ಸಾರ್. ತುಂಬಾ ಜನರ ಹತ್ರ ಹೋಗಿ ಕೇಳಿದೆ. ಎಲ್ಲರೂ ಬೇರೆಬೇರೆಯಾಗಿಬಿಡಿ, ಲೀಗಲ್ ಆಗಿ ಸೆಪರೇಟ್ ಆಗಿಬಿಡಿ ಅಂತಾರೆ. ಅವರಿಗೇನ್ ಗೊತ್ತು ಸಾರ್. ನನ್ನ ಹೆಂಡತಿ ಒಳ್ಳೆಯವಳು. ಹತ್ತು ವರ್ಷ ಸಂಸಾರ ಮಾಡಿದ್ದೀನಿ ಸಾರ್. ಮಗು ತಾಯಿ ನೆನಪಿಸಿಕೊಂಡು ಅಳುತ್ತೆ. ಕೌನ್ಸಿಲಿಂಗ್ ಮಾಡಿಸ್ತಾ ಇದ್ದೀನಿ. ಸರಿ ಹೋಗ್ತಾ ಇಲ್ಲ. ನಂಗೆ ಅವಳು ಬೇಕು ಸಾರ್, ಅವಳು ಬೇಕು….
ಇವನು ಇಷ್ಟೆಲ್ಲ ಮಾತನಾಡುವಾಗ ಡಾ. ನೀಲಾ ನೆನಪಾದರು. ಮಹಿಳೆಯರಿಗೆ ಸಂಬಂಧಿಸಿದ ಎನ್ಜಿಓದಲ್ಲಿ ಕೆಲಸ ಮಾಡ್ತಾ ಇರೋರು ಅವರು. ಲೈಂಗಿಕ ಶೋಷಿತ ಹೆಣ್ಣುಮಕ್ಕಳ ಬಗ್ಗೆ ಹೆಚ್ಚು ಕೆಲಸಮಾಡಿದವರು. ಅವರು ಇವನಿಗೂ ಪರಿಚಯವಿತ್ತು. ಸಮಸ್ಯೆ ಹೀಗಿದೆ ಮೇಡಂ, ಬನ್ನಿ ಮಾತಾಡೋಣ ಅಂದೆ, ಮಾರನೇ ದಿನವೇ ಅವರೂ ಬಂದರು. ಮತ್ತೆ ಅವರೆದುರು ಎಲ್ಲ ವಿಷಯಗಳು ಪ್ರಸ್ತಾಪವಾದವು. ಇವನ ಬ್ಯಾಗ್ ತುಂಬಾ ಬಾಂಬೆಯವನ ವಿರುದ್ಧದ ಸಾಕ್ಷ್ಯಗಳು.

ನಾನೂ, ಮೇಡಂ ಇಬ್ಬರೂ ರೇಗಿದೆವು. ನಿಮ್ಮ ಸಾಕ್ಷ್ಯಗಳನ್ನೆಲ್ಲ ಮೊದಲು ಬೆಂಕಿಗೆ ಹಾಕಿ ಆಮೇಲೆ ನಿಮ್ಮಿಬ್ಬರ ಸಂಬಂಧ ಸುಧಾರಿಸಿಕೊಳ್ಳೋದಕ್ಕೆ ಪ್ರಯತ್ನಪಡು. ನಿನ್ನ ಸಾಕ್ಷ್ಯಗಳು ನಿನ್ನ ವಿರುದ್ಧವೇ ಕೆಲಸ ಮಾಡಿವೆ. ಅವುಗಳಿಂದಾಗಿಯೇ ನೀನು ಕೆಟ್ಟಿದ್ದೀಯ. ನಿನ್ನನ್ನು ನೀನು ಸಮಥರ್ಿಸಿಕೊಳ್ಳುವುದಕ್ಕೆ ಅವಳನ್ನು ಕೆಟ್ಟವಳನ್ನಾಗಿಮಾಡಬೇಕಿತ್ತು. ಅದನ್ನು ನೀನು ಯಶಸ್ವಿಯಾಗಿ ಮಾಡಿದ್ದೀ. ಇನ್ನೇನೂ ಉಳಿದಿಲ್ಲ. ಆಕೆಗೆ ಬದುಕುವ ಮಾರ್ಗವನ್ನೇ ಬಂದ್ ಮಾಡಿದ್ದೀಯ. ಅವಳು ಈಗ ನಿನ್ನ ಜತೆ ನಾಯಿಯಂತೆ ಬದುಕಿರುತ್ತಾಳೆ ಅನ್ನೋದು ನಿನ್ನ ಲೆಕ್ಕಾಚಾರವಾಗಿದ್ದಿರಬೇಕು. ಆದರೆ ಅವಳ ಕಣ್ಣಿನಲ್ಲಿ ನೀನು ಪಾತಾಳಕ್ಕೆ ಇಳಿದುಹೋಗಿದ್ದೀಯಾ. ಹಾಗಾಗಿ ಅವಳು ನಿನ್ನ ಜತೆ ಬದುಕೋದು ಸಾಧ್ಯವೇ ಇಲ್ಲ ಅನ್ನಿಸುತ್ತೆ.

ನಾವಿಬ್ಬರೂ ಅಥವಾ ಇಡೀ ಸಮಾಜವೇ ಬಂದು ಅವಳ ಎದುರು ನಿಂತು, ನಿನ್ನ ತಪ್ಪುಗಳನ್ನು ಮನ್ನಿಸಿ ನಿನ್ನ ಜತೆ ಸಂಸಾರ ಮುಂದುವರೆಸಲು ಹೇಳಿದರೂ ಆಕೆ ಕೇಳಲಾರಳೇನೋ. ಹೀಗಾಗಿ ನಾವು ಮಾತಾಡೋದೂ ಸರಿಯಲ್ಲ. ನಿನ್ನ ಪರವಾಗಿ ಮಾತನಾಡೋದಕ್ಕೂ ಏನೂ ಉಳಿದಿಲ್ಲ.

ಈಗ ನಿನಗಿರೋದು ಒಂದೇ ದಾರಿ. ಅವಳ ಕಾಲು ಹಿಡಿದು ಅವಳನ್ನು ಒಪ್ಪಿಸೋದು. ನಿನ್ನ ಮೇಲಿಟ್ಟ ನಂಬಿಕೆಯನ್ನು ನೀನು ಒಡೆದು ಚೂರು ಮಾಡಿದ್ದೀ. ಅದನ್ನು ಸರಿಪಡಿಸಿಕೊಳ್ಳುವುದು ಒಂದು ಭೇಟಿ, ಒಂದು ಸಿಟ್ಟಿಂಗ್ನಲ್ಲಿ ಆಗುವ ಕೆಲಸವಲ್ಲ. ನೋಡು ಪ್ರಯತ್ನಪಡು, ಉಳಿದದ್ದು ನಿನಗೆ ಸೇರಿದ್ದು…
ಹೀಗೆಂದು ನಾವು ಸುಮ್ಮನಾದೆವು.

ಅವಳು ಒಪ್ಪದಿದ್ದರೆ ನನ್ನ ಮಗಳ ಕತೆ? ಅವಳು ಮಾನಸಿಕ ಅಸ್ವಸ್ಥೆಯಾಗಿಬಿಡ್ತಾಳೆ ಸಾರ್ ಎಂದು ಅವನು ಬಿಕ್ಕಿದ.

ನಮ್ಮ ಬಳಿ ಉತ್ತರವಿರಲಿಲ್ಲ. ಟಿವಿ ಕಾರ್ಯಕ್ರಮದ ನಿರೂಪಕಿ ಅನುರಾಧಾ ಅವರನ್ನೇ ಕೇಳಬೇಕೆನಿಸಿತು. ಆಕೆ ಈಗೀಗ ತುಂಬಾ ಬಿಜಿ. ರಾಜಕೀಯ ಪಕ್ಷವೊಂದರ ಕಾರ್ಯಕತರ್ತೆಯಾಗಿ ಅವರು ಸಮಾಜಸೇವೆಯಲ್ಲಿ ತೊಡಗಿದ್ದಾರೆ.